ಪ್ರಾರಂಭಿಕ ಮುಸಲ್ಮಾನ ಪಂಥದ ಧುರೀಣರು ಮಕ್ಕಾದ ವಾಣಿಜ್ಯ ಸಮೂಹಕ್ಕೆ ಸೇರಿದವರು. ಅಲ್ಲಿ ವ್ಯಾಪಾರಿಗಳಾಗಿದ್ದವರೇ ಧಾರ್ಮಿಕ ಹಾಗೂ ಮಿಲಿಟರಿ ಮುಂದಾಳು ಗಳಾದರು. ಶ್ರೀಮಂತ ಹಾಗೂ ಸಮೃದ್ಧ ಪ್ರದೇಶವಾಗಿದ್ದ ನೈರುತ್ಯ ಏಷ್ಯಾವನ್ನು ವಶಪಡಿಸಿಕೊಂಡು ಅರಬ್ ಅಲೆಮಾರಿ ಜನರ ಸೈನ್ಯ ಕಟ್ಟಿದ ಈ ವ್ಯಾಪಾರಿ ಯೋಧರು ಆರ್ಥಿಕ ಅಭಿವೃದ್ದಿಗೆ ಸುಭದ್ರತೆ ಹಾಗೂ ಸುವ್ಯವಸ್ಥೆ ಅಗತ್ಯವೆಂದು ಕಂಡುಕೊಂಡು, ಆ ಪ್ರದೇಶವನ್ನು ರಾಜಕೀಯವಾಗಿ ಸಂಘಟಿಸಲು ಮುಂದಾದರು. ಇಸ್ಲಾಂ ಧರ್ಮದ ಧುರೀಣರು ತಮ್ಮ ದಿಗ್ವಿಜಯಗಳಿಗೆ ಒಳ್ಳೆಯ ತರಬೇತಾದ ಮಿಲಿಟರಿ ಸೇನೆಗಳನ್ನು ಬಳಸಿಕೊಂಡು, ಭೂಮಾಲೀಕರನ್ನು ಹಾಗೂ ರೈತರನ್ನು ಅರೇಬಿಯಾದ ಅಲೆಮಾರಿಗಳಾದ ಬಿಡಾವಿಗಳ ಆಕ್ರಮಣ ಹಾಗೂ ಸುಲಿಗೆಯಿಂದ ರಕ್ಷಿಸಿ, ವ್ಯಾಪಾರಿಗಳಿಗೆ ಹಾಗೂ ನಗರಗಳ ಕುಶಲಕರ್ಮಿಗಳು ಬಳಸುತ್ತಿದ್ದ ವ್ಯಾಪಾರ ಮಾರ್ಗಗಳ ಗುಂಟ ಸುಭದ್ರತೆಯನ್ನು ಒದಗಿಸಿದರು. ಧಾರ್ಮಿಕ ಉತ್ಸಾಹ ಹಾಗೂ ಆರ್ಥಿಕ ಅಸಕ್ತಿಯಿಂದಾಗಿ ಪೂರ್ವ-ಪಶ್ಚಿಮವಾಗಿ ಇನ್ನಷ್ಟು ಅವರ ಸಾಮ್ರಾಜ್ಯ ಬೆಳೆಯಲು ಆಸ್ಪದವಾಯಿತು. ಮುಸಲ್ಮಾನ ಸೈನಿಕರು ಪರ್ಶಿಯಾದ(ಇರಾನ್) ಉತ್ತರ ಹಾಗೂ ಪೂರ್ವ ಭಾಗಗಳನ್ನು ಗೆದ್ದರು. ಈಜಿಪ್ಟ್‌ದಿಂದ ಪಶ್ಚಿಮದ ಕಡೆ ಸಾಗಿ ಉತ್ತರ ಆಫ್ರಿಕಾ, ಸ್ಪೇನ್‌ಗಳನ್ನು ಗೆದ್ದು ಫ್ರಾನ್ಸ್‌ನಲ್ಲಿ ಅಡಿಯಿಟ್ಟರು. ಆದರೆ, ೭೩೨ರಲ್ಲಿ ಎಂದರೆ ಮೊಹಮ್ಮದ್‌ನ ನಿಧನಾನಂತರ ಸರಿಯಾಗಿ ೧೦೦ ವರ್ಷಗಳಾದಾಗ ಟೂರ್ಸ್ ಕಾಳಗದಲ್ಲಿ ಚಾರ್ಲ್ಸ್ ಮಾರ್ಟಲ್‌ನಿಂದ ಪ್ರತಿಹತರಾದರು.

ಈ ವಿಜಯಗಳಿಂದಾಗಿ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಏಕಮುಖವಾಗಿದ್ದ ವ್ಯಾಪಾರ ಮಾರ್ಗಗಳ ಜಲ ಅರಬರ ಕೈವಶವಾಯಿತು. ಮುಸಲ್ಮಾನ ವ್ಯಾಪಾರಸ್ಥರು ಕೂಡಲೇ ಈ ರಾಜಕೀಯ ಪರಿಸ್ಥಿತಿಯ ಪ್ರಯೋಜನ ಪಡೆದು ಭೂಮಾರ್ಗ-ಜಲಮಾರ್ಗಗಳೆರಡರಲ್ಲೂ ಪೂರ್ವಪಶ್ಚಿಮಕ್ಕೆ ತಮ್ಮ ವ್ಯಾಪಾರವನ್ನು ವಿಸ್ತರಿಸಿದರು. ಅರಬರು ಭಾರತದ ಈಸ್ಟ್ ಇಂಡಿಯಾ ಹಾಗೂ ಪೂರ್ವ ಆಫ್ರಿಕಾದ ವ್ಯಾಪಾರ ಮಾರ್ಗಗಳ ಮೇಲೆ ನಿಯಂತ್ರಣ ಸಾಧಿಸಿದರು. ಅರಬ್ ವ್ಯಾಪಾರಿಗಳು ದೂರದ ಕ್ಯಾಂಟೊನ್‌ನಲ್ಲಿ ತಮ್ಮ ಶಾಖೆಗಳನ್ನು ಸ್ಥಾಪಿಸಿ, ಕಕೇಸಿಯನ್ ಮತ್ತು ಕ್ಯಾಸ್ಪಿಯನ್ ಸಮುದ್ರದ ಉತ್ತರ ಭಾಗದಿಂದ ವೋಲ್ಗಾ ಮತ್ತು ಡಾನ್‌ವರೆಗೆ ಹಾಗೂ ಬಾಲ್ಕನ್‌ನ ಪಶ್ಚಿಮ ಭಾಗದಿಂದ ದಕ್ಷಿಣ ಇಟಲಿ ಹಾಗೂ ಸ್ಪೇನ್‌ವರೆಗೆ ತಮ್ಮ ಕಾರ್ಯಾಚರಣೆಗಳನ್ನು ವಿಸ್ತರಿಸಿದರು. ಇಂಥಾ ಸಂಪತ್ಸಮೃದ್ದಿಯಿಂದಾಗಿ ಪಶ್ಚಿಮ ಏಷ್ಯಾದ ದಕ್ಷಿಣ ಭಾಗದಲ್ಲಿ ಇಸ್ಲಾಂನ ಹೊಸ ಸಂಸ್ಕೃತಿಯ ಉದಯವಾಯಿತು.

ಅರಬರು ಒಂದು ವಿಷಯದಲ್ಲಿ ಪರಾಜಿತರಾದರು. ಅವರು ಅನಟೋಲಿಯಾದಿಂದ ಬೈಜೆನ್‌ಟೈನ್ ಸೈನ್ಯವನ್ನು ಹೊರಗಟ್ಟಿ ಕಾನ್‌ಸ್ಟಾಂಟಿನೋಪಲನ್ನು ವಶಪಡಿಸಿಕೊಂಡು ಉತ್ತರದ ವ್ಯಾಪಾರ ಮಾರ್ಗಗಳನ್ನು ವಶಪಡಿಸಿಕೊಳ್ಳುವವರೆಗೆ ಉತ್ತರದ ವ್ಯಾಪಾರ ಮಾರ್ಗಗಳನ್ನು ವಶಪಡಿಸಿಕೊಳ್ಳುವುದು ಅವರಿಗೆ ಸಾಧ್ಯವಾಗಲಿಲ್ಲ. ೧೧ನೆಯ ಶತಮಾನದಲ್ಲಿ ತುರ್ಕಿ ಗುಡ್ಡಗಾಡು ಪಂಗಡಗಳು ಪಶ್ಚಿಮ ಏಷ್ಯಾದ ಉತ್ತರ ಭಾಗದಲ್ಲಿ ಪ್ರಭಾವ ಶಾಲಿಯಾಗಲು ಮತ್ತು ಧಾನೋಬಿ ಹಾಗೂ ದಕ್ಷಿಣ ರಷ್ಯಾದ ನದಿಗಳ ಮೂಲಕ ಪೂರ್ವ ಯುರೋಪಿನ ವ್ಯಾಪಾರ ಮಾರ್ಗಗಳಿಂದ ಪ್ರಯೋಜನ ಪಡೆಯಲು ಅನಟೋಲಿಯವನ್ನು ವಶಪಡಿಸಿಕೊಳ್ಳುವವರೆಗೆ ಬೈಜೆನ್‌ಟೈನ್ ಸಾಮ್ರಾಜ್ಯ ಮುಂದುವರಿಯಿತು.

ಪಶ್ಚಿಮ ಏಷ್ಯಾಗೆ ಸಂಬಂಧಿಸಿದಂತೆ ಅರಬ ದಿಗ್ವಿಜಯದ ಫಲಿತಾಂಶ ರಾಜಕೀಯ ಸ್ವರೂಪದ್ದಾಗಿರಲಿಲ್ಲ. ಆರ್ಥಿಕ ಸ್ವರೂಪದ್ದೂ ಆಗಿರಲಿಲ್ಲ. ಆದರೆ ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕವಾಗಿ ಪ್ರಯೋಜನವಾಯಿತು. ಪಶ್ಚಿಮ ಏಷ್ಯಾದ ಬಹುಪಾಲು ಜನರು ಮುಸಲ್ಮಾನರಾಗಿ ಮಾರ್ಪಟ್ಟರು. ಮುಸಲ್ಮಾನ ಧರ್ಮ ಈಜಿಪ್ಟ್‌ನಿಂದ ಉತ್ತರ ಆಫ್ರಿಕಾ ಹಾಗೂ ಸ್ಪೇನ್‌ವರೆಗೆ ಮತ್ತು ಭಾರತ ಈಸ್ಟ್ ಇಂಡಿಯಾ ಹಾಗೂ ಚೀನಾದ ಮುಸಲ್ಮಾನರು ರಾಜಕೀಯದಲ್ಲಿ ಮಹತ್ವದ ಪಾತ್ರವನ್ನೇ ವಹಿಸುತ್ತಾರೆ. ಏಷ್ಯಾದ ಅಲೆಮಾರಿಗಳು, ದಕ್ಷಿಣ ರಷ್ಯಾ ಮತ್ತು ಪಶ್ಚಿಮ ಏಷ್ಯಾ ಪ್ರದೇಶಗಳಲ್ಲಿ ತುರೇನಿಯನ್ನರು, ಮುಂಗೋಲರು, ತುರ್ಕಿಸ್ತಾನದವರು, ಟಾಟಾರ್ ಜನಾಂಗದವರು ಮುಸಲ್ಮಾನರಾದರು. ಮುಸಲ್ಮಾನ ತತ್ವಜ್ಞಾನ, ಕಾನೂನು, ನೀತಿ ಸಂಹಿತೆ, ಸಾಮಾಜಿಕ ಸಂಸ್ಥೆಗಳು ಮತ್ತು ಸಂಪ್ರದಾಯಗಳು ಪಶ್ಚಿಮ ಏಷ್ಯಾದ ತುಂಬ ಪ್ರಾಧಾನ್ಯ ಪಡೆದವು. ಮುಸಲ್ಮಾನ ಪಂಥ ಸ್ಥಾಪಿಸಿದ ಹೊಸ ಜೀವನ ರೀತಿಯಿಂದಾಗಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಮತೀಯರು ಹಾಗೂ ಮುಸಲ್ಮಾನ ಬಹುಸಂಖ್ಯಾತರ ಜೀವನ ರೀತಿಯಲ್ಲಿ ದೊಡ್ಡ ಅಂತರವುಂಟಾಯಿತು. ಆ ಅಂತರ ಈವರೆಗೂ ಹಾಗೆಯೇ ಉಳಿದುಕೊಂಡು ಬಂದಿದೆ. ಯುರೋಪಿಯನ್ ಹಾಗೂ ಪಶ್ಚಿಮ ಏಷ್ಯಾದ ಸಂಸ್ಕೃತಿಗಳಲ್ಲಿ ಅಂತರ ಉಂಟಾದುದಕ್ಕೆ ಮುಸಲ್ಮಾನ ಪಂಥದ ಉದಯ ಬಹುಮಟ್ಟಿಗೆ ಕಾರಣವಾಯಿತು.

ಅರಬ ಮುಸಲ್ಮಾನರು ಪಶ್ಚಿಮ ಏಷ್ಯಾದ ಪ್ರದೇಶಗಳಲ್ಲಿ ರಾಜಕೀಯವಾಗಿ ಅಥವಾ ಸಾಂಸ್ಕೃತಿಕವಾಗಿ ಏಕತೆಯನ್ನು ತೋರಲು ಸಾಧ್ಯವಾಗಿರಲಿಲ್ಲ. ಪಶ್ಚಿಮ ಏಷ್ಯಾದ ಉತ್ತರ ಭಾಗದಲ್ಲಿ ಬೈಜೆನ್‌ಟೈನ್‌ರ ನಿಯಂತ್ರಣದಿಂದಾಗಿ ೧೧ನೆಯ ಶತಮಾನದವರೆಗೂ ಕ್ರಿಶ್ಚಿಯನ್ ಧರ್ಮವೇ ಉಳಿದುಕೊಂಡಿತ್ತು. ೯ನೆಯ ಶತಮಾನದಲ್ಲಿ ಸ್ಕ್ಯಾಂಡಿನೆಯವಿಯಾದ ವರಂಗಿಯನ್‌ರು ಕೀವ್‌ದಲ್ಲಿ ಸ್ಥಾಪಿಸಿದ ಮೊದಲ ರಷ್ಯನ್ ರಾಜ್ಯವು ಕಪ್ಪು ಸಮುದ್ರದಿಂದ ಬಾಲ್ಟಿಕ್‌ವರೆಗೆ ನದಿ ವ್ಯಾಪಾರ ಮಾರ್ಗವನ್ನು ವಶಪಡಿಸಿಕೊಂಡಿದ್ದು, ಕಾನ್‌ಸ್ಟಾಂಟಿನೋಪಲ್‌ನ ವ್ಯಾಪಾರ ವಿಸ್ತರಣೆಗೆ ಸಹಾಯಕವಾಯಿತಲ್ಲದೇ, ದಕ್ಷಿಣದಲ್ಲಿ ಅರಬರಿಂದ ಹಾನಿಗೊಳಗಾಗಿದ್ದ ಬೈಜೆನ್‌ಟೈನ್‌ಗೆ ಆರ್ಥಿಕವಾಗಿ ಅನುಕೂಲ ಮಾಡಿಕೊಟ್ಟಿತು. ತರುವಾಯ ಪಶ್ಚಿಮ ಏಷ್ಯಾ ಪ್ರದೇಶವು ಇಬ್ಬರು ರಾಜಕೀಯ ಹಾಗೂ ಆರ್ಥಿಕ ಪ್ರತಿಸ್ಪರ್ಧಿಗಳಲ್ಲಿ ವಿಭಜಿತವಾಯಿತು. ಅಧಿಕಾರಕ್ಕಾಗಿ ಅವರಿಬ್ಬರೂ ನಡೆಸುತ್ತಿದ್ದ ಹೋರಾಟ ಧಾರ್ಮಿಕ ಸಂಘರ್ಷದಿಂದಾಗಿ ಇನ್ನಷ್ಟು ತೀವ್ರವಾಯಿತು. ಮಧ್ಯ ಏಷ್ಯಾದಿಂದ ತುರ್ಕಿಸ್ತಾನದ ಆದಿವಾಸಿ ಅಲೆಮಾರಿಗಳು ಆಕ್ರಮಣ ಮಾಡುವವರೆಗೆ ಕ್ರಿಶ್ಚಿಯನ್ ಮತ್ತು ಮುಸಲ್ಮಾನರ ಮಧ್ಯೆ ಅಹಿತಕರ ಸಮತೋಲನ ಏರ್ಪಟ್ಟಿತು.

ಎಂಟನೆಯ ಶತಮಾನದಲ್ಲಿ ರಾಜಮನೆತನಗಳಲ್ಲಿಯ ಆಂತರಿಕ ಕಾರಣದಿಂದಾಗಿ ಅರಬರ ಅಧಿಕಾರ ತಗ್ಗಿತು. ಡಮಾಸ್ಕಸ್‌ನ ಖಲೀಫರನ್ನು ೭೫೦ರಲ್ಲಿ ಅಬಾಸಿದ್ ಖಲೀಫ್ ರಾಜ್ಯವು ೧೨೫೮ರಲ್ಲಿಯ ಟಾಟರ್ ದಾಳಿಯವರೆಗೂ ಮುಂದುವರಿದರೂ ವಿಸ್ತಾರವಾದ ಮುಸಲ್ಮಾನ ಸಾಮ್ರಾಜ್ಯದ ಮೇಲೆ ನಿಯಂತ್ರಣ ಸಾಧಿಸಲು ಆ ರಾಜರು ಸಮರ್ಥರಾಗಿರಲಿಲ್ಲ. ಇಸ್ಲಾಮಿಕ್ ಸ್ಪೇನ್ ಅಬಾಸಿದರನ್ನು ಮನ್ನಿಸಲು ನಿರಾಕರಿಸಿತು. ಮುಸಲ್ಮಾನ ಈಜಿಪ್ಟಿಯನ್ನರು ೧೦ನೆಯ ಶತಮಾನದಲ್ಲಿ ತಾವು ಸ್ವತಂತ್ರರೆಂದು ಘೋಷಿಸಿ ಪ್ರತಿಸ್ಪರ್ಧಿಯಾಗಿ ಫಾತಿಮಾ ಖಲೀಫ್ ಸಾಮ್ರಾಜ್ಯವನ್ನು ಸ್ಥಾಪಿಸಿದರು. ೯ನೆಯ ಶತಮಾನದ ಆದಿಭಾಗದ ಅತ್ಯಂತ ಅಭ್ಯುದಯದ ರಾಜಕೀಯ ಅಧಿಕಾರದ ತರುವಾಯ ಮಾಸೂನ್ ಅಲ್ ರಶೀದ್‌ನ ಆಳ್ವಿಕೆಯಲ್ಲಿ ಪಶ್ಚಿಮ ಏಷ್ಯಾದ ಅರಬ ಪ್ರದೇಶಗಳ ಮೇಲೆ ನಿಯಂತ್ರಣವನ್ನು ಸಾಧಿಸಲು ಸಾಧ್ಯವಿಲ್ಲದಷ್ಟು ಅಬಾಸಿದ್ ಖಲೀಫ್ ಸಾಮ್ರಾಜ್ಯ ದುರ್ಬಲವಾಯಿತು. ಈ ಕಾರಣದಿಂದಾಗಿ ಅವರು ತುರೇನಿಯನ್ ಅಲೆಮಾರಿ ಪಂಗಡವಾದ ಸಿಲ್‌ಜುಕ್ ತುರ್ಕರ ಮಿಲಿಟರಿ ತಂಡಗಳನ್ನು ಸಹಾಯಕ್ಕಾಗಿ ನೆಯಮಿಸಿಕೊಳ್ಳಬೇಕಾಯಿತು.

೧೦ನೆಯ ಶತಮಾನದಲ್ಲಿ ಅಬಾಸಿದ್ ಅರಸರು ಸಿಲ್‌ಜುಕ್ ತುರ್ಕರ ಕೈಗೊಂಬೆ ಗಳಾಗಿಯೇ ಇದ್ದರು. ೯ನೆಯ ಶತಮಾನದಲ್ಲಿ ತುರ್ಕ ಆದಿವಾಸಿಗಳು ಏಷ್ಯಾ ಮೈನರಿನ ಪೂರ್ವ ಭಾಗದಲ್ಲಿ ಬಹು ಸಂಖ್ಯೆಯಲ್ಲಿ ಪ್ರವೇಶಿಸತೊಡಗಿದರು. ೧೦೭೧ರಲ್ಲಿ ಮೆನ್‌ಜಿಕರ್ಟ್ ಯುದ್ಧದಲ್ಲಿ ಅವರ ವಿರುದ್ಧ ದಾಳಿ ಮಾಡಲು ಕಳಿಸಲಾದ ಬೈಜೆನ್‌ಟೈನ್ ಸೈನ್ಯವು ಪರಾಭವಗೊಂಡಿತು. ೬೩೬ರ ಯಾರ್‌ಮುಖ ಯುದ್ಧದಲ್ಲಿ ಬೈಜೆನ್‌ಟೈನ್ ಸೈನ್ಯದ ಮೇಲೆ ಅರಬರು ಸಾಧಿಸಿದ ವಿಜಯದಿಂದ ಸಿರಿಯಾ ಮತ್ತು ಪ್ಯಾಲೆಸ್ತೈನ್‌ನಲ್ಲಿ ೧೯೧೮ರಲ್ಲಿ ಅಟೋಮನ್ ಸೈನ್ಯದ ವಿರುದ್ಧ ಬ್ರಿಟಿಷರ ವಿಜಯದವರೆಗಿನ ಘಟನೆಗಳ ಪೈಕಿ ಪಶ್ಚಿಮ ಏಷ್ಯಾದ ಸುದೀರ್ಘ ಇತಿಹಾಸದಲ್ಲಿ ತುರ್ಕರ ವಿಷಯವು ನಿರ್ಣಾಯಕ ಯುದ್ಧವಾಗಿದೆ. ನೈರುತ್ಯದಲ್ಲಿ ಯಾರ್‌ಮುಖ ಯುದ್ಧವು, ಇಸ್ಲಾಮಿನ ವಿಜಯವನ್ನು ಖಚಿತಪಡಿಸಿದರೆ, ಮೆನ್‌ಜಿಕರ್ಟ್‌ನಲ್ಲಿಯ ತುರ್ಕರ ವಿಜಯವು ಪೂರ್ವ ಏಷ್ಯಾ ಮೈನರಿನಲ್ಲಿಯ ಮುಸಲ್ಮಾನ ಧರ್ಮ ಹಾಗೂ ಸಂಸ್ಕೃತಿಯ ಪ್ರಾಬಲ್ಯದ ಬಗ್ಗೆ ಮುನ್ಸೂಚನೆ ನೀಡಿತು.

ಸಿಲ್‌ಜುಕ್ ತುರ್ಕರು ಪೂರ್ವ ಹಾಗೂ ಮಧ್ಯ ಏಷ್ಯಾ ಮೈನರಿನ ಮೇಲೆ ತಮ್ಮ ಒಡೆತನ ಸ್ಥಾಪಿಸಿದಲ್ಲಿ ಮುಸಲ್ಮಾನ ತುರ್ಕಿಷ್ ರಾಜ್ಯವನ್ನು ಸ್ಥಾಪಿಸಿದುದರಿಂದ ಸಮೀಪ ಪ್ರಾಚ್ಯದ ಉತ್ತರದ ಭಾಗದವರೆಗೆ ಇಸ್ಲಾಂ ಸಂಸ್ಕೃತಿ ಹರಡಲು ಆರಂಭವಾಯಿತು. ತುರ್ಕಿಷ್ ಮುಸಲ್ಮಾನರ ಅಧಿಕಾರವು ಪಶ್ಚಿಮದವರೆಗೆ ವಿಸ್ತರಿಸಿದುದರಿಂದ ಭೀತನಾದ ಬೈಜೆನ್‌ಟೈನ್ ದೊರೆ ೧ನೆಯ ಅಲೆಕ್ಸಿಯಸ್‌ನು ೧೦೯೪ರಲ್ಲಿ ನಾಸ್ತಿಕರಾಗಿದ್ದ ತುರ್ಕರ ವಿರುದ್ಧ ಹೋರಾಡು ವುದಕ್ಕಾಗಿ ಪಶ್ಚಿಮದಿಂದ ಮಿಲಿಟರಿ ಸಹಾಯ ನೀಡಬೇಕೆಂದು ಎರಡನೆಯ ಪೋಪ್ ಅರ್ಬನ್‌ರನ್ನು ಕೋರಿದನು. ಈ ಕೋರಿಕೆಯಿಂದಾಗಿ ಧರ್ಮಯುದ್ಧಗಳ ಪ್ರಾಶಸ್ತ್ಯ ತಗ್ಗಿ, ತತ್ಪರಿಣಾಮವಾಗಿ ಮುಂದೆ ಬೈಜೆನ್‌ಟೈನ್ ಸಾಮ್ರಾಜ್ಯ ಹಾಗೂ ಪಶ್ಚಿಮ ಏಷ್ಯದಲ್ಲಿ ಪ್ರಮುಖವಾಗಿದ್ದ ಕ್ರಿಶ್ಚಿಯನ್ ಧರ್ಮದ ಉಳಿವಿಗೆ ತೊಂದರೆ ಉಂಟಾಯಿತು.

ಧರ್ಮಯೋಧರು, ತುರ್ಕರು ಹಾಗೂ ಟಾಟರರು

೧೧ನೆಯ ಶತಮಾನದ ಅಂತ್ಯದ ವೇಳೆಗೆ ಪೂರ್ವದ ಕಡೆ ವಿಸ್ತರಿಸಲು ಯುರೋಪಿಗೆ ಅನುಕೂಲ ಪರಿಸ್ಥಿತಿ ಒದಗಿತು. ಇಟಲಿಯ ನಗರ ಪ್ರದೇಶಗಳಲ್ಲಿ ಕೈಗಾರಿಕೆ ಹಾಗೂ ವಾಣಿಜ್ಯ ಕೇಂದ್ರಗಳು ಬೆಳವಣಿಗೆ ಹೊಂದಿದ್ದು, ವೆನಿಸ್, ಜಿನೀವಾಗಳ ವ್ಯಾಪಾರಿಗಳು, ಬ್ಯಾಂಕರರು, ಹಡಗು ಮಾಲೀಕರು ತಮ್ಮ ಆರ್ಥಿಕ ಚಟುವಟಿಕೆಗಳನ್ನು ಏಷ್ಯಾ ಮೈನರಿನಲ್ಲಿ ವಿಸ್ತರಿಸಲು ಅವಕಾಶಕ್ಕಾಗಿ ಕಾಯುತ್ತಿದ್ದರು. ಉತ್ಪಾದನೆ ಹಾಗೂ ವಾಣಿಜ್ಯ ಬೆಳೆದಂತೆ ಇಟಲಿ ನಗರ ಪ್ರದೇಶಗಳ ಆಳುವ ವರ್ಗದವರು, ಪೂರ್ವ ಮೆಡಿಟರೇನಿಯನ್ ಸಮುದ್ರ ಹಾಗೂ ಕಪ್ಪು ಸಮುದ್ರಗಳಲ್ಲಿ ಜಲಮಾರ್ಗ ಹಾಗೂ ವಾಣಿಜ್ಯ ಕೇಂದ್ರಗಳನ್ನು ಪಡೆಯಲು ಹವಣಿಸಿದರು. ಅಷ್ಟರಲ್ಲಿ ಪಶ್ಚಿಮ ಹಾಗು ಮಧ್ಯ ಯುರೋಪಿನ ರಾಜಕೀಯ ಹಾಗೂ ಆರ್ಥಿಕ ವ್ಯವಸ್ಥೆ ಪ್ರಮುಖವಾಗಿ ಜಮೀನ್ದಾರಿ ಸ್ವರೂಪದ್ದಾಗಿತ್ತು. ಸಂಪತ್ತು ಹಾಗು ಅಧಿಕಾರ, ಮುಖ್ಯವಾಗಿ ಭೂಮಾಲೀಕರ ನಿಯಂತ್ರಣದಲ್ಲಿದ್ದು, ಕೈಗಾರಿಕೆ ಹಾಗೂ ವಾಣಿಜ್ಯ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ದಿಗೊಂಡಿರದಿದ್ದುದರಿಂದ, ಇರುವ ಪ್ರದೇಶ ಬೆಳೆಯುತ್ತಿದ್ದ ಜನಸಂಖ್ಯೆಗೆ ಸಾಕಾಗದೆ ಕೃಷಿ ವಿಧಾನಗಳು, ಆ ಪ್ರಮಾಣಕ್ಕೆ ತಕ್ಕಂತೆ ಆಹಾರವನ್ನು ಒದಗಿಸಲು ಅಸಮರ್ಥವಾಗಿದ್ದವು. ರಾಜಕೀಯ ಅಶಾಂತಿ ಹಾಗೂ ಸಾಮಾಜಿಕ ಅಭದ್ರತೆ ರೈತರು ಹಾಗೂ ಪುರ ಜನರಲ್ಲಿ ಆತಂಕ ಉಂಟು ಮಾಡಿತು. ಕೃಷಿಕರು ಹಾಗೂ ವಾಣಿಜ್ಯ ವ್ಯವಹಾರಗಳಿಗೆ ಹೆಚ್ಚಿನ ಅವಕಾಶ ದೊರೆಯಿತು. ಮಹಮ್ಮದೀಯರು ಹಾಗೂ ಕ್ರಿಶ್ಚಿಯನ್ನರ ಮಧ್ಯ ಪ್ರತಿಸ್ಪರ್ಧೆ ಬೆಳೆದು, ಧರ್ಮಯೋಧರಿಗೆ ಭಾವನಾತ್ಮಕವಾದ ವಿಚಾರ ಧಾರೆಯನ್ನು ಬೆಳೆಸಲು ಆಸ್ಪದ ಕೊಟ್ಟಿತು.

ಧರ್ಮಯುದ್ಧಗಳ ೨೦೦ ವರ್ಷಗಳ ಅವಧಿಯಲ್ಲಿ ಬೈಜೆನ್‌ಟೈನ್ ಆಳರಸರು ಹಾಗೂ ಅಬಾಸಿದ್ ಖಲೀಫರು ಯುರೋಪಿಯನ್ ಹಾಗೂ ಏಷ್ಯಾದ ಆಕ್ರಮಣಕಾರರನ್ನು ಎದುರಿಸಲು ಅಸಫಲರಾಗಿದ್ದರು. ರಾಜಕೀಯ ಏಕತೆ ಇಲ್ಲವಾಗಿತ್ತು. ಅಧಿಕಾರ ತುಂಡು ತುಂಡಾಗಿ ವಿಭಜಿತವಾಗಿ, ಪರಸ್ಪರರಲ್ಲಿ ಕಲಹ ನಡೆಯುತ್ತಲೇ ಇದ್ದವು. ಕಾನ್ ಸ್ಟಾಂಟಿನೋಪಲ್ ಹಾಗೂ ಬಾಲ್ಕನ್‌ನಲ್ಲಿ, ಪ್ಯಾಲೆಸ್ತೈನ್ ಹಾಗೂ ಸಿರಿಯಾದಲ್ಲಿ ಈಜಿಪ್ಟ್‌ನ ಮ್ಯಾಮುಲಕರ್‌ನಲ್ಲಿ ಸಂಘರ್ಷಗಳು ನಡೆದೇ ಇದ್ದವು. ಇದಲ್ಲದೆ, ದೂರದ ಮಂಗೋಲಿಯಾದ ಟಾಟರರು, ಪಶ್ಚಿಮ ಏಷ್ಯಾದ ಮೇಲೆ ಆಕ್ರಮಣ ಮಾಡಿದರು.

೧೦೯೪ರಿಂದ ೧೨೯೪ರವರೆಗಿನ ೨೦೦ ವರ್ಷಗಳ ಅವಧಿಯಲ್ಲಿ ಕ್ಷೋಭೆ ಹಾಗೂ ನಾಶವನ್ನು ಅನುಭವಿಸಿದರೂ ಈ ನಾಗರಿಕತೆಗಳು ಉಳಿದು ಬಂದ ಬಗೆಯನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಏಕೆಂದರೆ, ಬೈಜೆನ್‌ಟೈನ್ ಸಾಮ್ರಾಜ್ಯ ಹಾಗೂ ಅಬಾಸಿದ್ ಖಲೀಫರಂಥ ತೀವ್ರ ಪ್ರತಿಸ್ಪರ್ಧಿಗಳಿಂದ ಸಂರಕ್ಷಿತವಾದ ಈ ಸಂಸ್ಕೃತಿಗಳು ತರುವಾಯ ತೊಂದರೆಗಳ ಸುಳಿಗೆ ಸಿಲುಕಿದಂತಾಯಿತು. ವೆನಿಸ್‌ನ ವ್ಯಾಪಾರಿ ಬ್ಯಾಂಕರರಿಂದ ಧನಸಹಾಯ ಪಡೆದು ೪ನೆಯ ಧರ್ಮಯುದ್ಧವನ್ನು ಬೈಜೆನ್‌ಟೈನ್ ಸಾಮ್ರಾಜ್ಯದ ವಿರುದ್ಧ ನಡೆಸಲಾಯಿತು. ೧೨೦೪ರಲ್ಲಿ ಯುರೋಪಿಯನ್ ಧರ್ಮಯೋಧರು ಕಾನ್‌ಸ್ಟಾಂಟಿ ನೋಪಲನ್ನು ವಶಪಡಿಸಿಕೊಂಡು ಬೈಜೆನ್‌ಟೈನ್ ಆಳರಸರನ್ನು ಹೊಡೆದಟ್ಟಿ, ಯುರೋಪಿ ಯನ್ ಪ್ರಾಂತ್ಯಗಳನ್ನು ‘‘ರುಮೇನಿಯಾದ ಲ್ಯಾಟಿನ್ ಸಾಮ್ರಾಜ್ಯ’’ ಎಂದು ಹೆಸರಾದ ಊಳಿಗಮಾನ್ಯ ರಾಜ್ಯದ ಜಹಗೀರುಗಳನ್ನಾಗಿ ವಿಭಜಿಸಿದರು. ರಾಜ್ಯಭ್ರಷ್ಟರಾದ ಬೈಜೆನ್‌ಟೈನ್ ಅಧಿಕಾರಿಗಳು ಏಷ್ಯ ಮೈನರಿಗೆ ಹೋಗಿ ಅಲ್ಲಿಯ ಸೀಮಿತ ಕ್ಷೇತ್ರದಲ್ಲಿ ಚಕ್ರಾಧಿಪತ್ಯದ ಸಾಮ್ರಾಜ್ಯವನ್ನು ಕನಸು ಕಾಣುತ್ತಾ, ಕಾನ್‌ಸ್ಟಾಂಟಿನೋಪಲಿಗೆ ಹಿಂದಿರುಗುವವರೆಗೆ ಎಂದರೆ ೧೨೬೧ರವರೆಗೆ ಅದವಲ್ಲೇ ಇದ್ದರು. ಬೈಜೆನ್‌ಟೈನ್ ಸಾಮ್ರಾಜ್ಯದ ಕೈಗಾರಿಕೆ, ಆರ್ಥಿಕ ಅಭಿವೃದ್ದಿಗೆ ಬಿದ್ದ ಪೆಟ್ಟು ಈಗಾಗಲೇ ರಷ್ಯ ಹಾಗೂ ಪೂರ್ವ ಯುರೋಪಿನ ಟಾಟರ ಆಕ್ರಮಣದಿಂದಾಗಿ ನಲುಗಿದ್ದ ಸಮೀಪ ಪ್ರಾಚ್ಯ ಪ್ರದೇಶಕ್ಕೆ ನಾಶವನ್ನೇ ತಂದೊಡ್ಡಿತು. ಟಾಟರರು ಕೆಪನ್ ರಷ್ಯಾಕ್ಕೂ ಅಷ್ಟೇ ಮಾರಕವಾಗಿದ್ದರು. ೧೨೪೦ರಲ್ಲಿ ಮಂಗೋಲರು ಕೆಪ್‌ನನ್ನು ವಶಪಡಿಸಿಕೊಂಡು ನಾಶಗೊಳಿಸಿ, ಕಾನ್‌ಸ್ಟಾಂಟಿನೋಪಲ್ ಹಾಗೂ ರಷ್ಯಾಗಳ ನಡುವೆ ದೀರ್ಘಕಾಲದಿಂದ ಇದ್ದ ಉತ್ತಮ ವಾಣಿಜ್ಯವನ್ನು ನಿಲ್ಲಿಸಿದರು. ೧೩ನೆಯ ಶತಮಾನದ ಪ್ರಾರಂಭದ ದಶಕಗಳಲ್ಲಿ ಉತ್ತಮವಾಗಿ ಅಭಿವೃದ್ದಿ ಗೊಂಡಿದ್ದ ಅನಾಟೋಲಿಯದ ಸಿಲ್ ಜುಕ್ ಸಾಮ್ರಾಜ್ಯವನ್ನು ಮಂಗೋಲಿಯಾದ ಖಾನರು ವಶಪಡಿಸಿಕೊಂಡರು. ಮಂಗೋಲಿಯಾದ ಈ ಅಲೆಮಾರಿಗಳು ಸಿಲ್‌ಜುಕ್ ತುರ್ಕರು ಈವರೆಗೆ ಸಾಧಿಸಿದ ರಾಜಕೀಯ ಸುರಕ್ಷತೆಯನ್ನು ಹಾಳುಮಾಡಿ, ದಕ್ಷಿಣ ರಷ್ಯಾವನ್ನು ಟಾಟರರು ವಶಪಡಿಸಿಕೊಂಡುದರಿಂದ ಉಂಟಾದ ಆರ್ಥಿಕ ಗೊಂದಲವನ್ನು ಇನ್ನಷ್ಟು ಹೆಚ್ಚಿಸಿದರು.

ನೈರುತ್ಯ ಏಷ್ಯಾದಲ್ಲಿ ಧರ್ಮಯೋಧರು ಇಟಲಿಯ ವ್ಯಾಪಾರಿಗಳಿಗೆ ಪೂರ್ವದ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಟ್ಟರು. ಕ್ರಿಶ್ಚಿಯನ್ನರು ಹಾಗೂ ಸಿರಿಯ, ಪಾಲೆಸ್ತೈನ್ ಮತ್ತು ಈಜಿಪ್ಟಿನ ಮುಸಲ್ಮಾನರಿಗೂ ಆಗಾಗ ಯುದ್ಧಗಳು ಆಗುತ್ತಿದ್ದರೂ, ಅರಬ ರಾಜ್ಯಗಳ ಮುಸಲ್ಮಾನ ವ್ಯಾಪಾರಿಗಳಿಗೂ ನಿಕಟವಾದ ವ್ಯಾಪಾರ ಸಂಬಂಧ ಏರ್ಪಟ್ಟಿತು. ಕ್ರಿಶ್ಚಿಯನ್ನರು ಮೆಡಿಟರೇನಿಯನ್ ಜಲಮಾರ್ಗವನ್ನು ವಶಪಡಿಸಿಕೊಂಡರೆ, ಮುಸಲ್ಮಾನ ವ್ಯಾಪಾರಿಗಳು ನೈರುತ್ಯ ಏಷ್ಯಾದಿಂದ ಭಾರತ ಹಾಗೂ ಚೀನಾವರೆಗಿನ ಭೂ ಹಾಗೂ ಜಲಮಾರ್ಗಗಳೆರಡರ ಮೇಲೂ ಹಿಡಿತ ಸಾಧಿಸಿದರು. ಪಶ್ಚಿಮ ಏಷ್ಯಾದ ಅರಬ ದೇಶಗಳಲ್ಲಿ ಧರ್ಮಯೋಧರು ಈ ರೀತಿಯ ವ್ಯಾಪಾರವನ್ನು ಘೋಷಿಸಿ ವ್ಯಾಪಾರಿ ವರ್ಗದ ಅಭ್ಯುದಯಕ್ಕೆ ಕಾರಣರಾದರು. ೧೨೫೮ರಲ್ಲಿ ಹುಲಗು ಎಂಬ ಟಾಟರನು ಮೆಸಪಟೋಮಿಯದ ಮೇಲೆ ದಾಳಿ ಮಾಡಿ ೧೩ನೆಯ ಶತಮಾನದಲ್ಲಿ ಅದನ್ನು ನಾಶಗೊಳಿಸಿ, ನೀರಾವರಿ ವ್ಯವಸ್ಥೆಯನ್ನು ಹಾಳುಗೆಡವಿ ಬಾಗ್ದಾದ್ ನಗರವನ್ನು ಕೊಳ್ಳೆ ಹೊಡೆದು ಅಬಾಸಿದ್ ಖಲೀಫರ ಅಳ್ವಿಕೆಗೆ ಕೊನೆ ತಂದನು.

೧೪ನೆಯ ಶತಮಾನವು ಪ್ರಾರಂಭವಾಗುವ ವೇಳೆಗೆ ಯಾವ ರಾಜ್ಯವೂ ಪಶ್ಚಿಮ ಏಷ್ಯಾಕ್ಕೆ ಸುವ್ಯವಸ್ಥಿತ ಹಾಗೂ ರಕ್ಷಣೆಯನ್ನು ಕೊಡುವಷ್ಟು ಪ್ರಬಲವಾಗಿರಲಿಲ್ಲ. ಹೀಗಾಗಿ ಅಲ್ಲಿಯ ರಾಜಕೀಯ ಸ್ಥಿತಿ ಅವ್ಯವಸ್ಥಿತವಾಗಿತ್ತು. ೧೨೬೧ರಲ್ಲಿ ಕಾನ್‌ಸ್ಟಾಂಟಿನೋಪಲ್‌ನಲ್ಲಿ ಮತ್ತೆ ಸ್ಥಾಪಿತವಾದ ಬೈಜೆನ್‌ಟೈನ್ ಆಳರಸರು ತಮ್ಮನ್ನು ಬೆದರಿಸುತ್ತಿದ್ದ ಸರ್ಬ್ ಹಾಗೂ ಬಲ್‌ಗರ್ ಹಾಗೂ ವೆನೆಯಷಿಯನ್ ಜನರಿಂದಾಗಿ, ಬಾಲ್ಕನ್ ದ್ವೀಪಕಲ್ಪದ ಕೆಲವು ಭಾಗಗಳ ಮೇಲೆ ಮಾತ್ರ ಹಿಡಿತ ಹೊಂದಲು ಸಮರ್ಥರಾಗಿ, ವಾಯುವ್ಯ ಏಷ್ಯಾ ಮೈನರಿನ ಮೇಲೆ ಸೀಮಿತ ಪ್ರಮಾಣದಲ್ಲಿ ಮಾತ್ರ ಹಿಡಿತ ಸಾಧಿಸಿದರು. ಅನಟೋಲಿಯ ದ್ವೀಪಕಲ್ಪ ವನ್ನು ಚಿಕ್ಕ ಚಿಕ್ಕ ತುರ್ಕ ಊಳಿಗಮಾನ್ಯ ರಾಜ್ಯಗಳನ್ನಾಗಿ ವಿಭಜಿಸಲಾಗಿದ್ದು ಆ ಪೈಕಿ  ಯಾರೊಬ್ಬರಿಗೂ ಇಡಿಯಾಗಿ ಅಧಿಕಾರ ಹೊಂದಲು ಸಾಧ್ಯವಾಗಲಿಲ್ಲ. ತುರುಕರು, ಅತಾಬೇಗರು ಸಿರಿಯನ್ ಮರುಭೂಮಿ ಹಾಗೂ ಮೆಸಪಟೋಮಿಯಗಳನ್ನು ಆಳಿದರು. ಪಾಲೆಸ್ತೈನ್ ಹಾಗೂ ಭಾಗಶಃ ಸಿರಿಯಾದ ಮೇಲೆ ನಿಯಂತ್ರಣ ಹೊಂದಿದ ಈಜಿಪ್ತ್‌ನ ಸುಲ್ತಾನರು ದಕ್ಷಿಣ ಏಷ್ಯಾ ಮೈನರಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರು. ಪೂರ್ವ ಮೆಡಿಟರೇನಿಯನ್ ಹಾಗೂ ಎಡಿಯನ್ ಪ್ರದೇಶಗಳ ವ್ಯಾಪಾರ ಮಾರ್ಗಗಳ ಮೇಲೆ ನಿಯಂತ್ರಣ ಸಾಧಿಸಲು ಇಟಲಿ ರಾಜ್ಯಗಳು ಹಾಗೂ ಧರ್ಮಯೋಧರ ಗುಂಪುಗಳ ನಡುವೆ ಪ್ರತಿಸ್ಪರ್ಧೆ ಇದ್ದೇ ಇತ್ತು.

ಉತ್ತರದಲ್ಲಿ ಸಮೀಪ ಪ್ರಾಚ್ಯದುದ್ದಕ್ಕೂ ಹರಡಿದ್ದ ವಿಶಾಲ ಮಂಗೋಲ ಸಾಮ್ರಾಜ್ಯದ ಟಾಟರರು ಪೋಲಾಂಡಿನಿಂದ ಮಂಗೋಲಿಯಯವರೆಗೆ ಯುರೋಪಿಯನ್ ಬಯಲು ಪ್ರದೇಶದ ಮೇಲೆ ನಿಯಂತ್ರಣವನ್ನು ಹೊಂದಿದ್ದರು. ಯುರೋಪ್ ಹಾಗೂ ಏಷ್ಯಾಗಳ ನಡುವಣ ಉತ್ತರ ಕಾರವಾನ್ ಮಾರ್ಗಗಳು ಟಾಟರರ ಹಿಡಿತದಲ್ಲಿದ್ದವು. ಕಾನ್ ಸ್ಟಾಂಟಿನೋಪಲ್, ರಷ್ಯಾದ ನದಿ ಮಾರ್ಗಗಳು ಹಾಗೂ ಏಷ್ಯಾದ ಭೂ ಮಾರ್ಗಗಳೆರಡರ ವ್ಯಾಪಾರವನ್ನು ಕಳೆದುಕೊಂಡಿತ್ತು. ಮುಸಲ್ಮಾನರಾಗಲಿ, ಕ್ರಿಶ್ಚಿಯನ್ನರಾಗಲಿ, ಅರಬರಾಗಲಿ ಅಥವಾ ಗ್ರೀಕರಾಗಲಿ, ಯುರೋಪಿಯನ್ನರಾಗಲಿ ಅಥವಾ ಏಷ್ಯಾನ್ ಮಂಗೋಲರಾಗಲಿ ಪಶ್ಚಿಮ ಏಷ್ಯಾವನ್ನು ವಶಪಡಿಸಿಕೊಂಡು ಅಲ್ಲಿಯ ಜನರ ಸುರಕ್ಷತೆ ಹಾಗೂ ಆರ್ಥಿಕ ಏಳಿಗೆಗೆ ಅಗತ್ಯವಿದ್ದ ರಾಜಕೀಯ ಏಕತೆಯನ್ನು ಸಾಧಿಸಲು ಸಮರ್ಥರಾಗಿರಲಿಲ್ಲ. ಪಶ್ಚಿಮ ಏಷ್ಯಾ ಮೈನರಿನ ತುರ್ಕರು ಮುಂದಿನ ೧೫೦ ವರ್ಷಗಳಲ್ಲಿ ಸಮೀಪ ಏಷ್ಯಾ ಬಾಲ್ಕನ್ ನಡುಗಡ್ಡೆ, ಈಜಿಪ್ಟ್, ಉತ್ತರ ಆಫ್ರಿಕಾದ ಬಹುಭಾಗವನ್ನು ಕೇಂದ್ರೀಕೃತ ಆಡಳಿತ ನಿಯಂತ್ರಣಕ್ಕೊಳಪಡಿಸಲು ಸಾಧ್ಯವಾಯಿತು.

ಪಶ್ಚಿಮ ಏಷ್ಯಾ ಸಮಾಜದಲ್ಲಿ ಇಸ್ಲಾಂ ಪಂಥದ ಉದಯ (ಕ್ರಿ..೬೦೦ ರಿಂದ ೧೨೦೦)

ಪಶ್ಚಿಮ ಏಷ್ಯಾದಲ್ಲಿ ಇಸ್ಲಾಂ ನಾಗರಿಕತೆಯನ್ನು ಸ್ಥಾಪಿಸಲು ೭ನೆಯ ಶತಮಾನದಿಂದ ೧೩ನೆಯ ಶತಮಾನದವರೆಗಿನ ಎಂದರೆ ೬೦೦ ವರ್ಷಗಳಷ್ಟು ಸಮಯ ಹಿಡಿಯಿತು. ಎಷ್ಟೇ ಭಿನ್ನತೆಯಿದ್ದರೂ ಇಸ್ಲಾಂ ನಾಗರಿಕತೆ ಪ್ರಾಚೀನ ಪಶ್ಚಿಮ ಏಷ್ಯಾ ಮೂಲದ ಸಂಘಟನೆಗಳು ಹಾಗೂ ಸಂಸ್ಕೃತಿಗಳ ಚೌಕಟ್ಟಿನ ಎರಕವಾಗಿತ್ತು. ಪಶ್ಚಿಮ ಏಷ್ಯಾ ಸಮಾಜವು ಹಲವು ಹಂತಗಳಲ್ಲಿ ಸಂಘಟಿತವಾಯಿತು. ಪ್ರಾರಂಭದಲ್ಲಿ ತುಂಡುತುಂಡಾದ ವಂಶಾನುಗತವಾದ ಆದಿವಾಸಿಗಳ ಹಾಗೂ ಗ್ರಾಮೀಣ ಗುಂಪುಗಳ ಸುತ್ತ ಬೆಳೆದ ಸ್ಥಳೀಯ ಸೀಮಿತ ಕ್ಷೇತ್ರದ ಅಸಂಖ್ಯ ಸಮುದಾಯಗಳಿದ್ದವು. ಮಾರುಕಟ್ಟೆ ವಿನಿಮಯಗಳು ಯಹೂದಿಯರು, ಕ್ರಿಶ್ಚಿಯನ್ನರು ಅಥವಾ ಜೊರಾಸ್ಟ್ರಿಯನ್ನರಂತಹ ದೊಡ್ಡ ಧರ್ಮದ ಸಂಘಟನೆಗಳ ಮೂಲಕ ಈ ಸಮುದಾಯಗಳು ಒಗ್ಗೂಡಿದವು. ಬೈಜೆನ್‌ಟೈನ್ ಹಾಗೂ ಸೆಸೇನಿಯನ್ ಸಾಮ್ರಾಜ್ಯಗಳ ಆಳ್ವಿಕೆಯಲ್ಲಿ ಬೃಹತ್ ಪ್ರಮಾಣದ ಆರ್ಥಿಕ ವ್ಯವಸ್ಥೆ ಹಾಗೂ ಧಾರ್ಮಿಕ ಸಂಘಟನೆಗಳು ರೂಪುಗೊಂಡವು. ಸಾಂಸ್ಕೃತಿಕವಾಗಿ, ಪ್ರಾಚೀನ ಪರಂಪರೆಯು ಏಕದೇವ ಪರಿಕಲ್ಪನೆಯ ಧರ್ಮಗಳು, ಚಕ್ರಾಧಿಪತ್ಯ ಕುರಿತ ಚಿತ್ರಕಲೆ ಮತ್ತು ಸಾಹಿತ್ಯ ತತ್ವಜ್ಞಾನ ಹಾಗೂ ವಿಜ್ಞಾನವನ್ನು ಒಳಗೊಂಡಿತ್ತು. ಈ ಸಂಕೀರ್ಣ ಸಾಂಸ್ಥಿಕ ಹಾಗೂ ಸಾಂಸ್ಕೃತಿಕ ಪರಂಪರೆಯು ಇಸ್ಲಾಂ ವ್ಯವಸ್ಥೆಯಲ್ಲೂ ಮುಂದುವರಿಯಿತು. ಎಷ್ಟೇ ಸಾಮ್ರಾಜ್ಯಗಳು ಹುಟ್ಟಿ ಅಳಿದು ಹೋದರೂ ಆರ್ಥಿಕ ಚಟುವಟಿಕೆಗಳು ಬದಲಾದರೂ ತಂತ್ರಜ್ಞಾನ ಉತ್ಪಾದನಾ ವಿಧಾನ ನೈಸರ್ಗಿಕ ಪರಿಸರದೊಂದಿಗಿನ ಮಾನವನ ಸಂಬಂಧ ಇವುಗಳ ಮೂಲಭೂತ ಅಂಶಗಳು ಹಾಗೆಯೇ ಉಳಿದಿದ್ದವು. ರಾಜ್ಯ ಸಂಘಟನೆ, ಕುಟುಂಬ ಹಾಗೂ ಧಾರ್ಮಿಕ ಸಂಸ್ಥೆಗಳ ಮೂಲಭೂತ ವಿಧಾನಗಳು ಮಾತ್ರ ಬದಲಾಗದೇ ಉಳಿದವು. ಇಸ್ಲಾಮಿಕ್ ಯುಗದ ಪ್ರಮುಖ ಬದಲಾವಣೆಗಳೆಂದರೆ ಹೊಸ ರಾಜಕೀಯ ಹಾಗೂ ಸಾಮಾಜಿಕ ವಿಚಾರಗಳು, ಹೊಸ ಧಾರ್ಮಿಕ ಸಮುದಾಯಗಳ ಸಂಘಟನೆ, ಹಳೆಯ ಕಾಲದ ಅಂಶಗಳಿಂದ ಉದಯಿಸಿದ ಹೊಸ ಸಾಂಸ್ಕೃತಿಕ ವಿನ್ಯಾಸವುಳ್ಳ ಪೀಳಿಗೆ.

ಅರೇಬಿಯಾದಲ್ಲಿ ಪಶ್ಚಿಮ ಏಷ್ಯಾ ಸಮಾಜಗಳಿಗೆ ಹೊಸ ರಾಜಕೀಯ ಹಾಗೂ ಧಾರ್ಮಿಕ ಸ್ವರೂಪ ಕೊಡುವ ಕಾರ್ಯ ಪ್ರಾರಂಭವಾಯಿತು. ಬೈಜೆನ್‌ಟೈನ್ ಹಾಗೂ ಸೆಸೇನಿಯನ್ ನಾಗರಿಕತೆಗಳ ಪ್ರಭಾವದಿಂದಾಗಿ ಅರೇಬಿಯಾವು ಇತರ ಪ್ರದೇಶದೊಡನೆ ಪೂರ್ಣವಾಗಿ ಒಗ್ಗೂಡಿರಲಿಲ್ಲ. ಅರೇಬಿಯಾವು ಮೂಲಭೂತವಾಗಿ ವಂಶಾಧಾರಿತ ಸಮಾಜ. ಇದು ವಂಶಪರಂಪರೆ ಹಾಗೂ ವ್ಯಾಪಾರಿ ಸಮುದಾಯಗಳ ಸಂಘರ್ಷ ಹಾಗೂ ಉಳಿದ ಪಶ್ಚಿಮ ಏಷ್ಯಾದ ಭಾಗದಿಂದ ಉಂಟಾದ ಸಾಂಸ್ಕೃತಿಕ ಪ್ರಭಾವಗಳು, ಮಹಮ್ಮದನಂಥ ಹೊಸ ಪ್ರವಾದಿಯ ಹುಟ್ಟಿಗೆ ಹಾಗೂ ಇಸ್ಲಾಂನಂಥ ಹೊಸ ಧರ್ಮದ ಉದಯಕ್ಕೆ ಕಾರಣವಾದವು.

ಮಹಮ್ಮದನ ಮಟ್ಟಿಗೆ ಭಗವಂತನು ಹೊಸ ಏಕದೇವತ್ವ ವಿಚಾರವನ್ನು ಸೃಷ್ಟಿಸಿದ. ಇಸ್ಲಾಂ ಧರ್ಮವು ತನ್ನ ವಿಶಿಷ್ಟ ಬೋಧನೆ, ಅಂತಿಮಗತಿಯ ಕುರಿತ ವಿಚಾರಧಾರೆ ಹಾಗೂ ಸಾಹಿತ್ಯಿಕ ಗುಣಗಳ ದೃಷ್ಟಿಯಿಂದ ಯಹೂದಿ ಹಾಗೂ ಕ್ರಿಶ್ಚಿಯನ್ ಪಂಥಗಳಿಗಿಂತ ವಿಭಿನ್ನವೆನಿಸಿತು. ಮಹಮ್ಮದನ ಯಹೂದಿ ಹಾಗೂ ಕ್ರಿಶ್ಚಿಯನ್ ಧರ್ಮ ಸಂಘಟನೆಗಳಿಗೆ ಸಮಾನಾಂತರವಾಗಿ ಮುಸಲ್ಮಾನರ ಉಮ್ಮಾ ಎಂಬ ಸಂಘಟನೆಯನ್ನೂ ಕಟ್ಟಿದನು. ಹೊಸ ಸಮಾಜ ತಾತ್ವಿಕವಾಗಿ ಪಶ್ಚಿಮ ಏಷ್ಯಾ ನಾಗರಿಕತೆಯ ರೀತಿಯನ್ನು ಹೋಲುತ್ತಿದ್ದರೂ ಒಂದು ವಿಧವಾಗಿ ವಿಭಿನ್ನವೆನಿಸಿತು. ಏಕೆಂದರೆ ಇಸ್ಲಾಂ ಧರ್ಮವು ರಾಜ್ಯ ಹಾಗೂ ಧಾರ್ಮಿಕ ಮತೀಯ ಸಂಘಟನೆಗಳನ್ನು ಒಂದುಗೂಡಿಸಿತು. ಬೈಜೆಂಟೈನ್ ಕ್ರಿಶ್ಚಿಯನ್ ಹಾಗೂ ಸಸೇನಿಯನ್ ಹಾಗೂ ಝೊರಾಸ್ಟ್ರಿಯನ್ ಸಮಾಜಗಳಂತೆ ಸೀಸರ್‌ನ ಆಳ್ವಿಕೆ ಬೇರೆ, ದೇವರ ಆಳ್ವಿಕೆ ಬೇರೆ ಎನ್ನಲಿಲ್ಲ.

ಮಕ್ಕಾ ಹಾಗೂ ಮದೀನಾಗಳಲ್ಲಿ ಮುಸಲ್ಮಾನ ಸಮುದಾಯ ಸೃಷ್ಟಿಯಾದದ್ದು, ವಂಶಾನುಗತ ಸಮಾಜದಲ್ಲಿ ಧಾರ್ಮಿಕವೆನ್ನಬಹುದಾದ ವಿನಮ್ರ ಸಮುದಾಯವೊಂದರ ಸಮಗ್ರ ಶಕ್ತಿಯ ಸೃಷ್ಟಿ ಎಂಬಂತಿತ್ತು. ಮಹಮ್ಮದ್ ಹಾಗೂ ಆತನ ಅನುಯಾಯಿಗಳು, ಭಾಗ ರೂಪದಲ್ಲಿದ್ದ ಸಮಾಜವನ್ನು, ವಂಶಾನುಗತ ಗುಂಪುಗಳಲ್ಲಿ ಅವುಗಳ ಮೂಲಭೂತ ವಂಶಗತ ಸ್ವರೂಪವನ್ನು ಕಾಪಾಡಿಕೊಂಡು ಆರ್ಥಿಕ ನಿಯಂತ್ರಣ, ರಾಜ್ಯರಚನೆ, ನೈತಿಕ ಸುಧಾರಣೆ ತರಲು ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುವ ಸಂಘಟನೆಯನ್ನಾಗಿ ರೂಪಾಂತರಗೊಳಿಸಿದರು. ಅರೇಬಿಯಾದಲ್ಲಿ ವಿಭಾಗರೂಪದ ಹಾಗೂ ಧಾರ್ಮಿಕವಾದ ಎರಡು ಹಂತದ ಸಂಘಟನೆ ಇದ್ದುದರಿಂದಾಗಿ ಮಲ್ಯಗಳು ಸಂಕೀರ್ಣಗೊಂಡವು. ಕುರಾನಿನ ಪಾರಮಾರ್ಥಿಕ ತಥ್ಯದ ಪರಿಕಲ್ಪನೆ, ಆದಿವಾಸಿ ಸಂಸ್ಕೃತಿಗೆ ವಿರುದ್ಧವಾದುದಾಗಿತ್ತು. ಆದಿವಾಸಿ ಗುಂಪುಗಳ ವೈಭವೀಕರಣ, ನಿರಂಕುಶತೆ, ಆತ್ಮಸ್ತುತಿ, ಸಂತೋಷಚಿತ್ತ, ಯೋಧನ ಪ್ರಾಧಾನ್ಯತೆಯ ಅಂಶಗಳಿಗೆ ಕುರಾನ್ ತತ್ವ ವಿರುದ್ಧವಾಗಿತ್ತು. ಧಾರ್ಮಿಕ ಸೋದರತ್ವ, ಆತ್ಮನಮ್ರತೆ, ವಿನಯ, ಆತ್ಮನಿಗ್ರಹಗಳ ಸಮುದಾಯ ಅದಾಗಿತ್ತು. ಆದರೂ,  ಪ್ರಾಯೋಗಿಕವಾಗಿ ಅರೇಬಿಕ್ ಜನರ ಕುಟುಂಬ, ವಂಶಾವಳಿ ರಚನೆ ಇಸ್ಲಾಂ ಸಮಾಜದ ಭಾಗವಾದವು. ಇಸ್ಲಾಂ ಧರ್ಮಶ್ರದ್ಧೆಯೊಂದಿಗೆ ದೇವತಾರಾಧನೆ ಮಾಡದ ಇಸ್ಲಾಂ ನೀತಿಯ ಹೊಸ ಅರ್ಥ, ಅರಬ್ಬಿ ಅಲೆಮಾರಿಗಳಲ್ಲಿ ಬಂದವು. ಅರೇಬಿಯಾದ ಮೊದಲ ಇಸ್ಲಾಂ ಸಮಾಜ, ಧಾರ್ಮಿಕ ಪಾರಮಾರ್ಥಿಕತೆ, ಲೌಖಿಕತೆಯ ಮಾರ್ಪಾಡು, ಇಸ್ಲಾಮೇತರ ಅರಬ್ಬಿ ಅಲೆಮಾರಿ ನಾಗರಿಕತೆಗಳ ಸ್ವೀಕಾರದ ಸಮನ್ವಯವಾಗಿತ್ತು. ಇಸ್ಲಾಂ ಧರ್ಮ ಪ್ರಚಾರ ಮೊದಲ ನೋಟಕ್ಕೇ, ವಂಶಾನುಗತ ಹಾಗೂ ಆದಿವಾಸಿ ಸಮಾಜಗಳಲ್ಲಿ ತೀವ್ರವಾದ ಧಾರ್ಮಿಕ ಮಲ್ಯಗಳು, ಮತೀಯ ಭಾವನೆಗಳು ವಾಸ್ತವವಾಗಿ ಹರಿಯುತ್ತವೆ ಎಂಬುದಕ್ಕೆ ಮಾದರಿಯಾಗಿತ್ತು.

ಪಶ್ಚಿಮ ಏಷ್ಯಾ ಇಸ್ಲಾಂ ಸಮಾಜ ನಿರ್ಮಾಣದ ಇನ್ನೊಂದು ಘಟ್ಟವೆಂದರೆ ಅರಬರ ವಿಜಯಗಳು ಹಾಗೂ ವಲಸೆಗಳು. ತತ್ಪರಿಣಾಮವಾಗಿ ಹೊಸ ನಗರಗಳು ಹಾಗೂ ಪಟ್ಟಣಗಳಲ್ಲಿ ಖಲೀಫರ ಹಾಗೂ ಸುಲ್ತಾನರ ಆಳ್ವಿಕೆಗೆ ನಾಂದಿಯಾಗಿ ಹೊಸ ನಾಗರಿಕ ಸಮುದಾಯಗಳು ಜನ್ಮ ತಾಳಿದವು. ವ್ಯಾಪಾರ ಬೆಳೆಯಿತು. ಕೃಷಿ ಕೆಲಸ ಹೆಚ್ಚಿತು. ಪಶ್ಚಿಮ ಏಷ್ಯಾದ ಮಿಲಿಟರಿ ನಗರಗಳು ಯೋಧ ಅರಬ, ಅಲೆಮಾರಿ ವಲಸೆಗಾರರು, ಅರಬೇತರ ಜನರೊಂದಿಗೆ ಮಿಳಿತವಾಗಿ ಹೊಸ ಮಿಶ್ರ ಸಮುದಾಯಗಳು ಹುಟ್ಟಿದವು. ಅರಬರು ನಗರವಾಸಿಗಳಾಗಿ ರೂಪಾಂತರಗೊಂಡರು. ಅವರಲ್ಲಿ ಕೆಲಸಗಾರರು, ಕುಶಲಕರ್ಮಿಗಳು, ವ್ಯಾಪಾರಿಗಳು ಹಾಗೂ ಕುರಾನ್ ಪಠಣ ಮಾಡುವ ಧಾರ್ಮಿಕ ಮುಖಂಡರು, ಕಾನೂನು ತಜ್ಞರು, ಅರೇಬಿಯನ್ ಸಾಹಿತ್ಯಾಭಿಜ್ಞರು, ಪರಮಾರ್ಥ ಬೋಧಕರು ಸೇರಿದ್ದರು. ಪಟ್ಟಣಗಳ ಜನಸಂಖ್ಯೆಯು ರಾಜಕೀಯ ಸ್ಥಾನಮಾನ, ಭೂ ಒಡೆತನ, ಬುಡಕಟ್ಟು ಜನಾಂಗದ ಮುಖಂಡತ್ವದ ಆಧಾರದ ಮೇಲೆ ವರ್ಗೀಕೃತವಾಗಿತ್ತು ಮತ್ತು ಹೊಸ ಧಾರ್ಮಿಕ ಪಂಥಗಳಾಗಿ, ರಾಜಕೀಯ ಆಂದೋಲನಗಳಾಗಿ ಸಂಘಟಿತವಾಗಿತ್ತು.

ಹೊಸ ನಗರ ಸಮುದಾಯಗಳಿಂದ ಉಗಮವಾದ ಸಂಪನ್ಮೂಲಗಳು ಹಾಗೂ ಗೊಂದಲಗಳು, ಖಲೀಫರ ಹಾಗೂ ಚಕ್ರಾಧಿಪತ್ಯದ ಆಳ್ವಿಕೆಗೆ ಹಾದಿ ಮಾಡಿದವು. ಖಲೀಫರಿಗೆ ಪಟ್ಟಣಗಳಿಂದ ಕುಶಲ ಮಾನವ ಶಕ್ತಿ ಹಾಗೂ ಆರ್ಥಿಕ ಸಂಪನ್ಮೂಲಗಳು ದೊರೆಯುತ್ತಿದ್ದವು. ಬಾಗ್ದಾದ್ ಹಾಗೂ ಇತರ ಅರಬ ಪಟ್ಟಣಗಳಲ್ಲಿದ್ದ ವಿಭಿನ್ನ ಬಗೆಯ ಜನರ ಮೇಲೆ ಆಧಾರಿತಗೊಂಡ ಆಳ್ವಿಕೆಯನ್ನು ಆರಂಭಿಸಿದರು. ನಗರದ ಸಾಮಾಜಿಕ ಪರಿವರ್ತನೆಯಿಂದಾಗಿ ಹೊಸ ಹಿತಾಸಕ್ತಿಗಳ ಗುಂಪುಗಳು ಹಾಗೂ ವರ್ಗಗಳು, ಹೊಸ ಸಂಬಂಧಗಳು, ಹೊಸ ರೂಪದ ಕೋಮು ಸಂಘಟನೆಗಳು ಹುಟ್ಟಿದವು. ಇದರಿಂದ ರಾಜಕೀಯ ಆಸಕ್ತಿಗಾಗಿ, ಖಲೀಫ ಸ್ಥಾನಕ್ಕಾಗಿ ಜಗಳಗಳು ಪ್ರಾರಂಭವಾದವು. ಮೊದಲ ಮುಸ್ಲೀಂ ಶಕೆಯಲ್ಲಿ ಯಾದವೀ ಕಲಹಗಳ ಸರಮಾಲೆ-ಅರಬ ಪ್ರಮುಖರಲ್ಲಿಯ ಒಡಕು, ಕೇಂದ್ರ ಹಾಗೂ ಸ್ಥಳೀಯ ಅಧಿಕಾರವನ್ನು ಸರಿದೂಗಿಸುವ ಬಗ್ಗೆ ಹಾಗೂ ಆಳ್ವಿಕೆಯ ಪರಿಕಲ್ಪನೆಯಲ್ಲಿ ಧಾರ್ಮಿಕ ಅಂಶಗಳಿಗೆ ಪ್ರತಿಯಾಗಿ ಇದ್ದ ರಾಜಕೀಯ ಅಂಶಗಳ ಪಾತ್ರ- ಇವೇ ಮುಂತಾದುವು ಕಲಹಗಳಿಗೆ ಕಾರಣಗಳಾಗಿದ್ದವು. ಇಸ್ಲಾಂ ಮತನಿಷ್ಠೆಯ ಕಾರಣದಿಂದಾಗಿ ಒಗ್ಗೂಡಿದ ಗುಂಪುಗಳು ಒಂದೆಡೆಯಾದರೆ, ಅರಬ ಬುಡಕಟ್ಟುಗಳ ತಾತ್ಕಾಲಿಕ ಮಿತ್ರಕೂಟಗಳು ಎದುರು ಪಕ್ಷದಲ್ಲಿದ್ದವು. ಪಂಥಾಭಿಮಾನಿಗಳಾದ ಖಾಸಿಗಳು ಹಾಗೂ ಶೈರ್ಯ ಸಮುದಾಯಗಳು ಎರಡನೆಯ ಯಾದವೀ ಕಲಹಕ್ಕೆ ಹುಟ್ಟು ಹಾಕಿದವು. ಅರಬ ಪ್ರಮುಖರಲ್ಲಿಯ ಒಡಕೂ ಕಾರಣವಾಯಿತು. ಮೂರನೆಯ ಯಾದವೀ ಕಲಹದಿಂದ ಅಬಾಸಿದ್‌ರು ಅಧಿಕಾರಕ್ಕೆ ಬಂದರು. ಇದಕ್ಕೆ ಕಾರಣ, ಸೈನ್ಯದಲ್ಲಿ ಸಕ್ರಿಯರಾಗಿದ್ದ ಸಾಮಾನ್ಯ ಸಮಾಜದೊಡನೆ ಒಂದುಗೂಡಿದ್ದ ಅರಬರಲ್ಲಿ ಆದ ವಿಭಜನೆ. ಅರಬ ಹಾಗೂ ಮುಸ್ಲಿಂರಲ್ಲಿಯ ವಿಚಾರಧಾರೆಯಲ್ಲುಂಟಾದ ವೈಷಮ್ಯ ಹೋರಾಟಕ್ಕೆ ಕಾರಣವಾಯಿತು.

ಪ್ರತಿಯೊಂದು ಯಾದವೀ ಕಲಹದ ಫಲಿತಾಂಶವೆಂದರೆ ಖಲೀಫ್ ಆಳ್ವಿಕೆಯು ರಾಜಕೀಯ ಅಧಿಕಾರವನ್ನು ಕಾಪಾಡಿಕೊಳ್ಳಲು ಸಾಂಸ್ಥಿಕ ತಂತ್ರಗಳನ್ನು ಅಭಿವೃದ್ದಿಪಡಿಸಿ, ವಂಶಪಾರಂಪರರ್ಯ ಅಳ್ವಿಕೆಯನ್ನೇ ಸ್ಥಾಪಿಸಿತು. ತನ್ನ ಸ್ಥಾನಮಾನವನ್ನು ಉಳಿಸಿಕೊಳ್ಳು ವುದಕ್ಕಾಗಿ ಖಲೀಫ ಆಳ್ವಿಕೆಯಲ್ಲಿ ಬೈಜೆಂಟೈನ್ ಮತ್ತು ಸೆಸೇನಿಯನ್ ಸಂಸ್ಥೆಗಳನ್ನು ಮತ್ತು ಅವುಗಳಿಗೆ ಹೊಸ ಇಸ್ಲಾಮಿಕ್ ಅರ್ಥ ನೀಡಲು ಚಕ್ರಾಧಿಪತ್ಯದ ಆಳ್ವಿಕೆಯ ಪರಿಕಲ್ಪನೆಗಳನ್ನು ಅವುಗಳಿಗೆ ನೀಡಲಾಯಿತು. ಉಮಾಯದರು ಹಳೆಯ ಸಾಮ್ರಾಜ್ಯಗಳ ಅಧಿಕಾರಶಾಹಿ ಅಡಳಿತವನ್ನು ಅಳವಡಿಸಿ ವಾಸ್ತುಶಿಲ್ಪಕ್ಕೆ ಆಶ್ರಯ ನೀಡಿದರು. ಇವುಗಳಲ್ಲಿ ಬೈಜೆಂಟೈನ್, ಸೆಸೇನಿಯನ್ ಮತ್ತು ಕ್ರಿಶ್ಚಿಯನ್ ಚಿಹ್ನೆಗಳನ್ನು ಮುಸ್ಲಿಂ ಮಾದರಿಯಲ್ಲಿ ಒಗ್ಗೂಡಿಸಲಾಯಿತು. ಅಬಾಸಿದರು, ಚಕ್ರಾಧಿಪತ್ಯದ ಆಳ್ವಿಕೆಗಾಗಿ ಉಮಾಯದ್ ಪ್ರವೃತ್ತಿ ಯನ್ನು ಪಶ್ಚಿಮ ಏಷ್ಯಾದ ರೀತಿಯಲ್ಲಿ ಮುಂದುವರಿಸಿದರು. ಅಳ್ವಿಕೆಗೆ ರಾಜಸ್ಥಾನವೇ ಕೇಂದ್ರಬಿಂದು. ಆಳರಸರ ಅನುಯಾಯಿಗಳು ಹಾಗೂ ಸೇವಕರ ಮೂಲಕ ಪ್ರಾಂತಗಳ ಆಳ್ವಿಕೆ ನಡೆಯಿತು. ಇಲ್ಲಿ ಸ್ಥಳೀಯ ರಾಜಕುಮಾರರಿಗೆ ಹಾಗೂ ಪಾಳೆಯಗಾರರಿಗೆ ಅಧಿಕಾರ ಹಾಗೂ ಖಲೀಫರ ಸೇವಕರೆಂಬ ಸ್ಥಾನಮಾನ ದೊರೆಯಿತು. ಅವರು ಅಧಿಕಾರ ಶಾಹಿ ತೆರಿಗೆ ವಸೂಲಿ ವಿಧಾನ ಹಾಗೂ ಅರೆ ಊಳಿಗಮಾನ್ಯ ಪದ್ಧತಿಯ ಸಮಿಶ್ರ ಮಾದರಿಯ ಆಳ್ವಿಕೆ ಪ್ರಾರಂಭಿಸಿದರೂ, ಅಬಾಸಿದ್ ಆಡಳಿತ ಪಶ್ಚಿಮ ಏಷ್ಯಾದ ಉದ್ದಗಲಕ್ಕೂ ಧಾರ್ಮಿಕ ಪ್ರಮುಖರ ಮೈತ್ರಿಕೂಟದ ಮೇಲೆ ಅವಲಂಬಿತವಾಗಿತ್ತು. ಈ ಆಳ್ವಿಕೆಯಲ್ಲಿ ಅರಬ ಸೈನಿಕರು, ಇರಾಕ್, ಈಜಿಪ್ಟ್, ಇರಾನ್‌ಗಳ ಭೂಮಾಲೀಕರು, ಯಹೂದಿ ವ್ಯಾಪಾರಿಗಳು, ಏಷ್ಯಾದ ಯುದ್ಧವೀರರು ಮುಂತಾದವರು ಕೇಂದ್ರಾಡಳಿತಕ್ಕೆ ಸಹಾಯಕರಾಗಿದ್ದರು. ಖಲೀಫರ ಕುರಿತ ನಿಷ್ಠೆ, ಕೇಂದ್ರ ಹಾಗೂ ಪ್ರಾಂತಗಳನ್ನು ಬಸಿಯುವಂತ ಅನುಯಾಯಿತನದ ಹಾಗೂ ಕೌಟುಂಬಿಕ ಕೊಂಡಿಗಳು, ಸಾಮ್ರಾಜ್ಯದ ಕುರಿತ ಸಮಾನ ಆಸಕ್ತಿ ಇವುಗಳಿಂದಾಗಿ ಧಾರ್ಮಿಕ ಪ್ರಮುಖರು ಒಗ್ಗೂಡಿದರು. ಆರ್ಥಿಕ ಬದಲಾವಣೆಯ ಅವಧಿ, ಅರಬ ವಿಜಯದಿಂದಾಗಿ ಉಂಟಾದ ಸಾಮಾಜಿಕ ಬದಲಾವಣೆ, ನಗರೀಕರಣದಿಂದಾಗಿ ಈ ಜನ ಲಭಿಸಿದರು. ಅರಬರು ಗೆದ್ದ ಪ್ರಾಂತದನ್ವಯ ಜಾಗತಿಕ ಇಸ್ಲಾಂ ಸಾಮ್ರಾಜ್ಯವನ್ನಾಗಿ ಪರಿವರ್ತಿಸಿದರು. ಈ ಆಳ್ವಿಕೆಯ ಸೂಚಕವಾಗಿ ಹಾಗೂ ಅದರ ಮನ್ನಣೆಗಾಗಿ ಅಬಾಸಿದರು ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೆಂಬಲವಿತ್ತರು. ಇದರಿಂದ ಅಳ್ವಿಕೆಯ ಐತಿಹಾಸಿಕ ಮೂಲ ದೊರಕಿ, ಇದಕ್ಕೆ ವಿಶ್ವಮಾನ್ಯತೆ ದೊರೆಯಿತು.