ಚೀನಾದ ಪಶ್ಚಿಮ ತುದಿಯಿಂದ ಆಸ್ಟ್ರೇಲಿಯಾದ ಉತ್ತರ ಕರಾವಳಿ ಮತ್ತು ಆ ಬಿಂದುವಿನಿಂದ ಭಾರತದ ದಕ್ಷಿಣ ತುದಿ ಹಾಗೂ ಚೈನಾದ ಪಶ್ಚಿಮ ತುದಿಯ ಬಿಂದು, ಈ ತ್ರಿಕೋನದಲ್ಲಿ ಬರುವ ಪ್ರದೇಶ ಎಂದರೆ ಇಂಡೋ ಪ್ಯಾಸಿಫಿಕ್ ದ್ವೀಪಕಲ್ಪ, ಇಂಡೋನೇಷಿಯನ್ ದ್ವೀಪಸ್ತೋಮ ಹಾಗೂ ಫಿಲಿಪೈನ್ಸ್ ದ್ವೀಪಸ್ತೋಮಗಳನ್ನು ಒಳಗೊಳ್ಳುವ ಪ್ರದೇಶವೇ ಆಗ್ನೇಯ ಏಷ್ಯಾ. ಬರ್ಮಾ, ಥೈಲ್ಯಾಂಡ್, ಲಾವೊಸ್, ಕಾಂಬೋಡಿಯಾ, ವಿಯೆಟ್ನಾಂ, ಇಂಡೋನೇಷ್ಯ, ಫಿಲಿಫೈನ್ಸ್, ಸಿಂಗಪೂರ್, ಮಲೇಷಿಯಾ ಹಾಗೂ ಬ್ರೂನಿ ದೇಶಗಳು ಈ ಪ್ರದೇಶದಲ್ಲಿ ಸೇರಿವೆ. ಉಷ್ಣವಲಯದ ಮಾನ್ಸೂನ್ ಹವಾಗುಣದ ಈ ದೇಶಗಳ ಭೌಗೋಳಿಕ ಸ್ವರೂಪ ಒಂದೇ ರೀತಿಯದಾಗಿದ್ದರೂ, ತದ್ವತ್ತಾಗಿಲ್ಲ ಸಿಂಗಪೂರ್ ಒಂದನ್ನು ಹೊರತುಪಡಿಸಿದರೆ ಉಳಿದೆಲ್ಲ ದೇಶಗಳೂ ಆರ್ಥಿಕವಾಗಿ ಹಿಂದುಳಿದಿದ್ದು ಸಾಂಸ್ಕೃತಿಕವಾಗಿ ತುಂಬಾ ಮುಂದುವರಿದಿದೆ. ಎರಡನೆಯ ಮಹಾಯುದ್ಧದ ತರುವಾಯ ಸ್ವತಂತ್ರವಾಗಿದ್ದ ಸರ್ಕಾರಗಳು ಆಗ್ನೇಯ ಏಷ್ಯಾದಲ್ಲಿ ಸೇರಿದವು(ಥೈಲ್ಯಾಂಡ್ ಮಾತ್ರ ವಸಾಹತು ಸಾಮ್ರಾಜ್ಯದ ನಿಯಂತ್ರಣದಲ್ಲಿರದೇ ಯಾವಾಗಲೂ ಸ್ವತಂತ್ರವಾಗಿಯೇ ಉಳಿದಿತ್ತು). ವಸಾಹತು ನಾಡಿನ ಅವಧಿಗಿಂತ ಮುಂಚೆ ಆಗ್ನೇಯ ಏಷ್ಯಾವು ಜಾಗತಿಕ ವ್ಯಾಪಾರ ವ್ಯವಸ್ಥೆಯ ಭಾಗವಾಗಿದ್ದು ಚೀನಾಕ್ಕೆ ಮಧ್ಯಪೂರ್ವದ ಹಾಗೂ ಯುರೋಪಿನ ಎಲ್ಲ ದೇಶಗಳ ಸಂಪರ್ಕ ಲಭಿಸಿತು. ಈ ಸುಸಂಧಿಯಲ್ಲಿ ಅಲ್ಲಿ ಹಿಂದೂ ಧರ್ಮ, ಬೌದ್ಧಮತ, ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ವಿವಿಧ ರೂಪಗಳಲ್ಲಿ ಕಾಣಿಸಿಕೊಂಡವು. ಇಂಥ ವಿಭಿನ್ನ ಹಾಗೂ ಸಂಕೀರ್ಣ ರಾಜಕೀಯ, ಸಾಂಸ್ಕೃತಿಕ ಹಾಗೂ ಆರ್ಥಿಕ ಸ್ವರೂಪದಿಂದಾಗಿ ಸಾಮ್ಯ ವೈಷಮ್ಯಗಳನ್ನು ಸರಿದೂಗಿಸಿಕೊಂಡು ಆಗ್ನೇಯ ಏಷ್ಯಾದ ಬಗ್ಗೆ ಅಧ್ಯಯನ ಮಾಡಬೇಕಾಗುತ್ತದೆ.

ಆಗ್ನೇಯ ಏಷ್ಯಾದ ಅನೆಯಕತೆಯ ಮುಖ್ಯ ಕಾರಣ ಅದರ ಭೌಗೋಳಿಕ ವಿಭಜನೆ. ಆಗ್ನೇಯ ಏಷ್ಯಾ ಪ್ರದೇಶ ಬಹಳ ವಿಶಾಲವಾಗಿದೆಯಷ್ಟೇ ಅಲ್ಲದೆ ಏಷ್ಯಾ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶ(ಮುಖ್ಯ ಆಗ್ನೇಯ ಏಷ್ಯಾ ಪ್ರದೇಶ ಎಂದು ಕರೆಯಲಾಗುವ) ಹಾಗೂ ಆಗ್ನೇಯ ಏಷ್ಯಾ ದ್ವೀಪದ ಪ್ರದೇಶಗಳ ನಡುವೆ ನೈಸರ್ಗಿಕವಾದ ವಿಭಜನೆ ಏರ್ಪಟ್ಟಿದೆ. ಬರ್ಮಾ, ಥೈಲ್ಯಾಂಡ್, ಲಾವೊಸ್, ಕಾಂಬೋಡಿಯಾ, ವಿಯೆಟ್ನಾಂ ದೇಶಗಳು ಇಂಡೊ-ಪ್ಯಾಸಿಫಿಕ್ ದ್ವೀಪಕಲ್ಪದಲ್ಲಿದ್ದು ಇದು ಚೀನಾದಿಂದ ನೆಯರವಾಗಿ ಸಾಗುತ್ತದೆ. ಇಂಡೋನೇಷ್ಯಾ, ಫಿಲಿಫೈನ್ಸ್, ಸಿಂಗಪೂರ್, ಬ್ರೂನಿ ಹಾಗೂ ಮಲೇಷಿಯಾಗಳು ದ್ವೀಪ ಸಮೂಹದಲ್ಲಿ ಸೇರಿರುವ ದೇಶಗಳು, ಮಲೇಷಿಯಾ ಮುಖ್ಯ ಪ್ರದೇಶಕ್ಕೆ ಸೇರಿದ್ದಾಗಿರುವುದರಿಂದ ಅದನ್ನು ದ್ವೀಪ ಸಮೂಹದಲ್ಲಿ ಸೇರಿಸಿದ ಬಗ್ಗೆ ವಿವಾದವಿದ್ದರೂ ಅಲ್ಲಿಯ ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕ, ರಾಜಕೀಯ ಅಂಶಗಳು, ಜನಜೀವನದ ರೀತಿಯು ಸುಮಾತ್ರಾ ದ್ವೀಪಸಮೂಹದ ಇತರ ದೇಶಗಳಲ್ಲಿಯ ರೀತಿಯನ್ನೇ ಹೋಲುವುದರಿಂದ ಅದನ್ನು ಆ ಗುಂಪಿಗೆ ಸೇರಿಸುವುದೇ ಸೂಕ್ತ.

ಆಗ್ನೇಯ ಏಷ್ಯಾದ ಈ ಭೌಗೋಳಿಕ ವಿಭಜನೆಯು ಧರ್ಮದಲ್ಲಿಯೂ ಕಾಣಿಸಿಕೊಂಡಿದೆ. ಮುಖ್ಯ ಪ್ರದೇಶದ ಬಹುತೇಕ ರಾಜ್ಯಗಳಲ್ಲಿ ಬೌದ್ಧಧರ್ಮವೇ ಇದೆ. ಆದರೂ ಹಿಂದೂ, ಮುಸಲ್ಮಾನ ನಿವಾಸಿಗಳು ಕ್ರಿಶ್ಚಿಯನ್ ಅಲ್ಪಮತೀಯ ನಿವಾಸಿಗಳು, ತಾವೋ ಹಾಗೂ ಕನ್‌ಪ್ಯೂಶಿಯಸ್‌ಗಳಂಥ ಚೀನಾ ಧರ್ಮಪಂಥಗಳ ನಿವಾಸಿಗಳೂ ಇದ್ದಾರೆ. ಆಗ್ನೇಯ ಏಷ್ಯಾ ದ್ವೀಪಸಮೂಹದ ಪೈಕಿ ಮಲೇಷಿಯಾ ಹಾಗೂ ಇಂಡೋನೆಯಷ್ಯಾಗಳಲ್ಲಿ ಮುಸಲ್ಮಾನರೇ ಪ್ರಧಾನವಾಗಿದ್ದರೆ, ಫಿಲಿಫೈನ್ಸ್‌ನಲ್ಲಿ ಕ್ರಿಶ್ಚಿಯನ್ ಧರ್ಮ ಹೆಚ್ಚಾಗಿ ಹರಡಿದ್ದು, ಅದರ ದಕ್ಷಿಣ ಭಾಗದಲ್ಲಿ ಮಾತ್ರ ಮುಸಲ್ಮಾನ ಪಂಥವಿದೆ. ಇದಕ್ಕೆ ಅಪವಾದವೆಂಬಂತೆ ಇಂಡೋನೇಷ್ಯಾದ ಬಾಲಿ ನಡುಗಡ್ಡೆಯಲ್ಲಿ ಹಿಂದೂಗಳೂ, ಸಿಂಗಪೂರ್ ನಲ್ಲಿ ಬೌದ್ಧರೂ, ಮಲೇಷಿಯಾದಲ್ಲಿ ಬೌದ್ಧರು ಹಾಗೂ ಹಿಂದೂ ಭಾರತೀಯರೂ ನೆಲೆಸಿದ್ದಾರೆ. ಇಂಥಾ ಧಾರ್ಮಿಕ ಸಂಕೀರ್ಣತೆ ಮಾತ್ರವಲ್ಲದೇ ಇಲ್ಲಿ ಸರ್ವಚೇತನವಾದ, ಅತೀಂದ್ರಿಯ ಸಿದ್ಧಾಂತ ಹಾಗೂ ಇತರ ಸಾಂಪ್ರದಾಯಿಕ ನಂಬಿಕೆಗಳು ರೂಢಿಯಲ್ಲಿದ್ದು ಅವು ಪ್ರಮುಖ ಧರ್ಮಗಳೊಂದಿಗೆ ಬೆರೆತು ಇಲ್ಲಿಯ ಧಾರ್ಮಿಕತೆಗೆ ಸಮನ್ವಯಿತ ಧರ್ಮದ ಸ್ವರೂಪ ನೀಡಿವೆ. ಹೀಗಿದ್ದರೂ ಇಸ್ಲಾಂ ಧರ್ಮದ ಅನುಯಾಯಿಗಳು ಅಧಿಕವಾಗಿದ್ದು, ಆಗ್ನೇಯ ಏಷ್ಯಾದ ಅದರಲ್ಲೂ ವಿಶೇಷವಾಗಿ ಇಂಡೋನೆಯಷ್ಯಾದಲ್ಲಿರುವ ಮುಸಲ್ಮಾನರು ಅತೀಂದ್ರಿಯ ಹಾಗೂ ಇತರ ಕೆಲವು ಮುಸಲ್ಮಾನೇತರ ಪದ್ಧತಿಗಳನ್ನು ಹಾಗೂ ನಂಬಿಕೆಗಳನ್ನು ರೂಢಿಸಿಕೊಂಡಿದ್ದಾರೆ.

ಯಹೂದ್ಯೇತರ ಮತಪಂಥಗಳ ವಿಭಾಗಗಳು ಆಗ್ನೇಯ ಏಷ್ಯಾದ ಭೌಗೋಳಿಕ ಹಾಗೂ ಧಾರ್ಮಿಕ ವಿಭಜನೆಯನ್ನು ಪ್ರತಿಬಿಂಬಿಸುತ್ತವೆ. ಇಸ್ಲಾಮಿಕ್ ದ್ವೀಪಸಮೂಹದಲ್ಲಿ ಮಲಯರು ಎಂದು ಕರೆಯಲಾಗುವ ಮಲಯೋ ಪಾಲಿನೇಷಿಯನ್ ಜನರು ಬಹುಸಂಖ್ಯೆಯಲ್ಲಿ ನೆಲೆಸಿದ್ದಾರೆ. ಈ ಯಹೂದ್ಯೇತರ ಹಿನ್ನೆಲೆಯಿಂದಾಗಿ ಆ ದ್ವೀಪ ಸಮೂಹದ ವಿವಿಧ ಮಲಯರ ಉಪವರ್ಗಗಳ ಸಾಂಸ್ಕೃತಿಕ ಹಾಗೂ ಭಾಷಾ ಅಭಿವೃದ್ದಿಗೆ ಯಾವುದೇ ಅಡ್ಡಿ ಉಂಟಾಗಿಲ್ಲ. ಇಂಡೋನೇಷ್ಯಾವೊಂದರಲ್ಲೇ ಸುಮಾರು ೨೫ ಪ್ರಮುಖ ಭಾಷೆಗಳಿದ್ದು, ೨೫೦ಕ್ಕೂ ಹೆಚ್ಚು ಉಪಭಾಷೆಗಳಿವೆ. ಮುಖ್ಯ ಪ್ರದೇಶದಲ್ಲಿ ನಾಲ್ಕು ಪ್ರಮುಖ ಯಹೂದ್ಯೇತರ ಗುಂಪುಗಳಿದ್ದು ಅವುಗಳಲ್ಲಿ ಸಿನ್‌ಲಾ-ಟಿಬೇಟಿಯನ್ ಸೇರು ತ್ತದೆ. ಇದರಲ್ಲಿ ಬರ್ಮಿಯರು, ಕರಿನ್‌ರು, ಚೀನಿಯರು ಸೇರುತ್ತಾರೆ. ಆಸ್ಟ್ರೋ-ಏಷಿಯಾಟಿಕ್ ಗುಂಪಿನಲ್ಲಿ ವಿಯೆಟ್ನಾಮಿಯರು, ಖೋರುಗಳು ಸೇರುತ್ತಾರೆ. ಥಾಯ್ ಗುಂಪಿನಲ್ಲಿ ಲಾವೋ ಮತ್ತು ಶಾನ್‌ರು ಸೇರುತ್ತಾರೆ. ಮಲಯೋ ಪಾಲಿನೆಯಷಿಯನ್ ಗುಂಪಿನಲ್ಲಿ ಚಾನರು ಅಧಿಕ ಪ್ರಮಾಣದಲ್ಲಿ ಸೇರುತ್ತಾರೆ. ಈ ನಾಲ್ಕು ಪ್ರಮುಖ ಗುಂಪುಗಳು ಈಗಿರುವ ದೇಶಗಳಿಗೆ ಮೂಲವಾದರೂ, ಈ ಗುಂಪುಗಳಲ್ಲೇ ಮತ್ತೆ ಒಳವಿಭಾಗಗಳಿವೆ ಹಾಗೂ ಅವುಗಳಲ್ಲಿ ಧಾರ್ಮಿಕವಾದ ಸಂಬಂಧವಿದೆ(ಉದಾಹರಣೆಗೆ ಇಂಡೋಚೀನಾದ ಅನಾಮಿಗಳು ಹಾಗೂ ಥೈಲ್ಯಾಂಡ್‌ನ ಮಾನ್-ಖಿಮ್ಸ್). ಆಗ್ನೇಯ ಏಷ್ಯಾದ ಮುಖ್ಯ ಪ್ರದೇಶದಲ್ಲಿ ೧೫೦ಕ್ಕೂ ಹೆಚ್ಚು ವಿವಿಧ ಯಹೂದ್ಯೇತರ ಗುಂಪುಗಳಿವೆ. ಆಗ್ನೇಯ ಏಷ್ಯಾದ ಬಹುಭಾಗದಲ್ಲಿ ಗುಡ್ಡಗಾಡು ಜನ ಹಾಗೂ ಯಹೂದ್ಯೇತರರು ಕಂಡುಬರುತ್ತಾರೆ. ಆ ಪೈಕಿ ಹಲವರು, ಈಗಿನ ಪ್ರಧಾನ ಯಹೂದ್ಯೇತರರು ಆಗಮಿಸುವುದಕ್ಕೆ ಮುಂಚೆ ಆ ಪ್ರದೇಶದಲ್ಲಿ ನೆಲೆಸಿದ್ದು, ಈಗಿರುವ ನಿವಾಸಿಗಳ ಆಗಮನದಿಂದಾಗಿ ದೂರದ ಪ್ರದೇಶಗಳಿಗೆ ತಳ್ಳಲ್ಪಟ್ಟರು. ಆಗ್ನೇಯ ಏಷ್ಯಾದ ಮುಖ್ಯ ಪ್ರದೇಶದ ಉತ್ತರ ಭಾಗದಲ್ಲಿ ವಿಯೋ ಎಂಬ ಗುಡ್ಡಗಾಡು ಜನರಿದ್ದು ಅವರು ಆ ಪ್ರದೇಶಕ್ಕೆ ತುಲನಾತ್ಮಕವಾಗಿ ಹೊಸಬರು. ಅವರು ಈಗಿನ ಪ್ರಮುಖ ಗುಂಪಿನಲ್ಲಿ ವಿಲೀನವಾಗಿರುವುದರಿಂದ ಅವರ ಜನಸಂಖ್ಯೆ ಗಣನೀಯವಾಗಿ ಕುಗ್ಗಿದೆ. ಆಗ್ನೇಯ ಏಷ್ಯಾಕ್ಕೆ ಜನರು ವಲಸೆ ಹೋಗುವ ವಿಧಾನದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದ್ದು, ಖ್ಯಾತ ಇತಿಹಾಸತಜ್ಞ ಡಿ.ಜಿ.ಇ. ಹಾಲ್ ಇದನ್ನು ‘‘ಜನಾಂಗಗಳ ಹಾಗೂ ಭಾಷೆಗಳ ಗೊಂದಲ’’ ಎಂದು ಬಣ್ಣಿಸಿದ್ದಾನೆ.

ಜನಾಂಗೇತರ ಅಂಶಗಳೂ ಆಗ್ನೇಯ ಏಷ್ಯಾದ ಜನರನ್ನು ವಿಭಜಿಸಿವೆ. ಈ ಅಂಶಗಳೊಂದಿಗೆ ಈಗಾಗಲೇ ಉಲ್ಲೇಖಿಸಲಾಗಿರುವ ಜನಾಂಗೇತರ ಹಾಗೂ ಭೌಗೋಳಿಕ ಅಂಶಗಳೂ ಸೇರಿ ಆಚರಣೆ, ನಂಬಿಕೆ ಹಾಗೂ ಸಂಪರ್ಕಗಳ ವಿಧಾನಗಳು ಹಾಸುಹೊಕ್ಕಾಗಿ ಸೇರಿವೆ. ಉದಾಹರಣೆಗೆ ಜನರ ವಾಸಸ್ಥಾನ ಹಾಗೂ ಕೃಷಿ ಪದ್ಧತಿಗಳಿಂದ ಮೇಲಿನ ಭೂಮಿ ಹಾಗೂ ಕೆಳಗಿನ ಭೂಮಿಯ ಗುಂಪುಗಳೆಂದು ವಿಭಜಿಸಬಹುದು. ಮೇಲಿನ ಭೂಮಿಯ ಜನರು ಸಾಮಾನ್ಯವಾಗಿ ಶುಷ್ಕ ಬೇಸಾಯ ಮಾಡುತ್ತಿದ್ದರೆ, ಕೆಳಭೂಮಿಯ ಜನರು ನೀರಾವರಿ ಸಾಗುವಳಿ ಮಾಡುತ್ತಿದ್ದರು. ಹಸಿ ಅಕ್ಕಿ ಸಾಗುವಳಿಗೆ ನೀರು ಪೂರೈಕೆ ಹಾಗೂ ನಿಯಂತ್ರಣದ ಆಧುನಿಕ ವ್ಯವಸ್ಥೆಯ ಅಗತ್ಯವಿದ್ದು, ಇದರಿಂದಾಗಿ ಭೂಮಿಯ ಒಂದು ಚಿಕ್ಕ ಘಟಕದಲ್ಲಿಯೂ ಅತ್ಯುತ್ತಮ ಇಳುವರಿ ಪಡೆಯಬಹುದಾಗಿದೆ. ತತ್ಪರಿಣಾಮವಾಗಿ ಹಳೆಯ ಆಗ್ನೇಯ ಏಷ್ಯಾದಲ್ಲಿ ಜಮೀನು ಆಧಾರಿತ ರಾಜ್ಯಗಳು ಹುಟ್ಟಿಕೊಂಡವು. ಇತಿಹಾಸದ ವಿವಿಧ ಕಾಲಗಳಲ್ಲಿ ಕೆಳಭೂಮಿಯ ಜನರನ್ನು ಕೃಷಿಕರು ಹಾಗೂ ವಣಿಕರೆಂದು ಅಥವಾ ಕೃಷಿಕರು ಹಾಗೂ ಸಮುದ್ರ ವ್ಯಾಪಾರಿಗಳೆಂದು ವಿಭಜಿಸಲಾಗಿದೆ. ಸಮುದ್ರ ವ್ಯಾಪಾರಿಗಳು ಐತಿಹಾಸಿಕವಾಗಿ ಪ್ರಾದೇಶಿಕ ಹಾಗೂ ವಿಶ್ವ ವ್ಯಾಪಾರ ವ್ಯವಸ್ಥೆಯನ್ನು ಆಶ್ರಯಿಸಿದ್ದರು; ಆ ವ್ಯವಸ್ಥೆಗೆ ಅನುಕೂಲಕರವಾಗಿದ್ದ ಆಗ್ನೇಯ ಏಷ್ಯಾ ಪ್ರದೇಶದ ಮೇಲೆ ಏಕಸ್ವಾಮ್ಯ ಸ್ಥಾಪಿಸಿದ್ದರು. ಇದರಿಂದ ಅಪಾರ ಸಂಪತ್ತು ಗಳಿಸಿ, ಈ ವ್ಯವಸ್ಥೆ ಯನ್ನಾಧರಿಸಿ ಪ್ರಬಲ ರಾಜಕೀಯ ಘಟಕಗಳನ್ನು ಕಟ್ಟಿದರು. ಈ ಆರ್ಥಿಕ ವಿಭಾಗಗಳಿಂದಾಗಿ ತೀರ ವಿಭಿನ್ನವಾದ ರಾಜಕೀಯ ಘಟಕಗಳು ಆಗ್ನೇಯ ಏಷ್ಯಾದಲ್ಲಿ ಹುಟ್ಟಿಕೊಳ್ಳಲು ಕಾರಣವಾಯಿತು.

ಪ್ರಾರಂಭಿಕ ಆಗ್ನೇಯ ಏಷ್ಯಾದತ್ತ ಒಂದು ನೋಟ

ಆಗ್ನೇಯ ಏಷ್ಯಾದ ಕೆಲವು ಪ್ರಮುಖ ಐತಿಹಾಸಿಕ ಲಕ್ಷಣಗಳನ್ನು ಹಾಗೂ ರಾಜಕೀಯವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಈ ಪ್ರದೇಶ ಬೆಳೆದುಬಂದಿರುವ ಬಗೆಯನ್ನು ವಿವರಿಸುವುದರೊಂದಿಗೆ ಈ ಪ್ರದೇಶದ ಪ್ರಾರಂಭ ಕಾಲದ ಇತಿಹಾಸವನ್ನು ನಿರೂಪಿಸುವ ಪ್ರಯತ್ನ ಇಲ್ಲಿದೆ. ಮೂಲದಲ್ಲಿ ಚೀನಿ ಆಕರಗಳ ಮೂಲಕ, ಕ್ರಿ.ಶ.೨ನೆಯ ಶತಮಾನದಷ್ಟು ಹಿಂದೆ ಫ್ಯೂನಾನ್, ಆಗ್ನೇಯ ಏಷ್ಯಾದ ಪ್ರಾಚೀನತಮ ದೇಶಗಳಲ್ಲೊಂದಾಗಿ ತ್ತೆಂಬ ಅಂಶ ಐತಿಹಾಸಿಕ ದಾಖಲೆಗಳಿಂದ ತಿಳಿಯುತ್ತದೆ. ಟಾಲೆಮಿಯ ಭೂಗೋಳಶಾಸ್ತ್ರದಲ್ಲಿ ಅದಕ್ಕಿಂತ ಪ್ರಾಚೀನ ಕಾಲದಲ್ಲೇ ಆಗ್ನೇಯ ಏಷ್ಯಾದಲ್ಲಿ ಇದ್ದುವೆಂದು ಹೇಳಲಾಗುವ ಕೆಲವು ಸ್ಥಳಗಳ ಹೆಸರುಗಳು ಸಿಗುತ್ತವೆ. ಏಕಮೇವ ರಾಜಕೀಯ ಘಟಕವಾಗಿ ಫ್ಯೂನಾನ್ ಇದ್ದ ಬಗ್ಗೆ ದೊರೆಯುವ ದಾಖಲೆಗಳ ಖಚಿತತೆ ಪ್ರಶ್ನಾತೀತವಾದುದೇನಲ್ಲ. ಪ್ರಾಚ್ಯ ಸಂಶೋಧನಾ ದಾಖಲೆಗಳು ಪುರಾತನ ಸಮಾಜಗಳ ಬಗ್ಗೆ ತಿಳಿಸಿದರೂ, ಈ ರಾಜಕೀಯ ಘಟಕದ ಬಗ್ಗೆ ತುಸುವೇ ತಿಳಿದುಬಂದಿದ್ದು ಆಗ, ನೆಂಟಸ್ತನದ ಗುಂಪುಗಳೇ ಅಧಿಕವಾಗಿದ್ದವು ಎಂದು ಗ್ರಹಿಸಲಾಗಿದೆ. ಜ್ಞಾನವಿಕಾಸವಾದಂತೆ ಈ ಸಮಾಜಗಳಲ್ಲಿದ್ದ ರಾಜಕೀಯ ಸಂಘಟನೆಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿಯಬಹುದು. ಆದ್ದರಿಂದ ಪ್ರಾರಂಭಿಕ ಆಗ್ನೇಯ ಏಷ್ಯಾದ ಬಗ್ಗೆ ಪ್ರಸ್ತಾಪಿಸುವಾಗ ರಾಜ್ಯದ ಪರಿಕಲ್ಪನೆಯ ಬಗ್ಗೆ ಹೆಚ್ಚು ಜಗರೂಕತೆ ಬೇಕಾಗುತ್ತದೆ. ಆಗ್ನೇಯ ಏಷ್ಯಾದ ಮೇಲೆ ಯುರೋಪಿಯನ್‌ರ ದಾಳಿ ಹಾಗೂ ಅಧಿಕಾರ ಪ್ರವೇಶವಾಗುವ ಪೂರ್ವದ ಅವಧಿಯನ್ನು ಪಾಳೆಯಗಾರಿಕೆಯ ಅಥವಾ ಕೃಷಿ ವ್ಯವಸ್ಥೆಯ ಸಮಾಜ ಎಂದು ಗುರುತಿಸಬಹುದು ಹಾಗೂ ಇಲ್ಲಿ ಮಧ್ಯದಲ್ಲಿ ಕಾಣಿಸಿಕೊಂಡ ಗುಂಪು ಗಳು ಸಾಮುದಾಯಿಕ ಮುಖಂಡತ್ವವನ್ನು ಕಲ್ಪಿಸಿದರೂ ರಾಜ್ಯಗಳೆಂದು ಕರೆಯಬಹುದಾದ ಈ ಪ್ರದೇಶಗಳಲ್ಲಿ ಆರ್ಥಿಕ ಹಾಗೂ ರಾಜಕೀಯ ಸಾಮರ್ಥ್ಯದ ಕೊರತೆ ಕಂಡುಬರುತ್ತಿತ್ತು. ಆಗ್ನೇಯ ಏಷ್ಯಾದ ಪ್ರಾರಂಭದ ರಾಜ್ಯಕ್ಕೆ ಅಸ್ಥಿರ ಸ್ವರೂಪವಿದ್ದು ಮುಖಂಡರು ಮೇಲಿಂದ ಮೇಲೆ ಬದಲಾಗುತ್ತಿದ್ದರು ಹಾಗೂ ಅಧಿಕಾರಕ್ಕಾಗಿ ಪೈಪೋಟಿ ಇತ್ತು.

ಪ್ರಾರಂಭಿಕ ಆಗ್ನೇಯ ಏಷ್ಯಾನ್ ರಾಜ್ಯವಾದ ಫ್ಯೂನಾನ್ ಕ್ರಿ.ಶ.೧ ಅಥವಾ ೨ನೆಯ ಶತಮಾನದಲ್ಲಿ ಇಂಡೋ-ಚೀನಾ ಪ್ರದೇಶದಲ್ಲಿ ಸ್ಥಾಪಿತವಾಯಿತು. ಇದರ ರಚನೆಯ ದಿನಾಂಕ ಇನ್ನೂ ಖಚಿತವಿಲ್ಲ. ಪ್ರಾಚೀನ, ಫ್ಯೂನಾನ್ ಧುರೀಣರು ಚೀನಾದಿಂದ ಮಧ್ಯಪೂರ್ವ ಹಾಗೂ ಯುರೋಪ್ ದೇಶಗಳಿಗೆ ಬೆಳೆಯುತ್ತಿದ್ದ ಸಮುದ್ರ ವ್ಯಾಪಾರವನ್ನು ಮತ್ತಷ್ಟು ಕುದುರಿಸಿದರು. ಫ್ಯೂನಾನ್ ಸ್ಥಾಪಿತವಾಗುವ ವೇಳೆಗೆ ಮುಖ್ಯ ಜಲಮಾರ್ಗಗಳು ಕರಾವಳಿಗುಂಟವೇ ಇದ್ದವು. ಏಕೆಂದರೆ ನೆಯರವಾದ ಸಾಗರ ಪ್ರವಾಸಕ್ಕೆ ತಕ್ಕಂತೆ ನೌಕಾಯಾನದಲ್ಲಿ ಕುಶಲತೆ, ಹಡಗುಗಳ ತಯಾರಿಕೆಯಲ್ಲಿ ಪ್ರಗತಿಯಾಗಿರಲಿಲ್ಲ. ಕರಾವಳಿ ತೀರದ ವ್ಯಾಪಾರ ಬೆಳೆದಂತೆ ಚೀನಾವನ್ನು ಬಿಟ್ಟು ಮಲಯಾ ನಡುಗಡ್ಡೆಯ ಪ್ರದೇಶವು ವ್ಯಾಪಾರ ಮಾರ್ಗಗಳ ಮೊದಲನೆಯ ಆಯಕಟ್ಟಿನ ಸ್ಥಳವಾಯಿತು. ಫ್ಯೂನಾನ್‌ನ ಬಂದರು ಪಟ್ಟಣವಾದ ಏಷ್ಯಾ ದಕ್ಷಿಣ ಚೀನಾ ಹಾಗೂ ಮಲಯಾ ನಡುಗಡ್ಡೆಗಳಿಂದ ನಡುದೂರ ದಲ್ಲಿದ್ದುದರಿಂದ, ಬೇಸಾಯದ ದೃಷ್ಟಿಯಿಂದ ಒಳ್ಳೆಯ ಹಿನ್ನೀರಿನ ಸೌಲಭ್ಯವಿದ್ದು, ಸುರಕ್ಷಿತ ಬಂದರು ಇದ್ದುದರಿಂದ ಬಹು ಬೇಗನೆಯ ಏಳಿಗೆ ಹೊಂದಿತು. ಅಲ್ಲದೇ ಆರಂಭಿಕ ಕಾಲದ ಫ್ಯೂನಾನ್‌ನ ಪ್ರಮುಖರು ಅದನ್ನು ನೆಲೆಗೊಳಿಸಿ ಒಗ್ಗೂಡಿಸಿದ್ದರು. ಪೂರ್ವ ನಿಯೋಜಿತ ಸ್ಥಳನಿಯುಕ್ತಿಯ ಪ್ರಯೋಜನ ಪಡೆದು ಫ್ಯೂನಾನ್, ಸಮುದ್ರಮಾರ್ಗ ವ್ಯಾಪಾರದಿಂದ ಬಂದ ಹೆಚ್ಚುವರಿ ಆದಾಯವನ್ನು ಒಳನಾಡಿನ ಅಕ್ಕಿ ಬೆಳೆಯುವ ಪ್ರದೇಶಗಳ ನಿಯಂತ್ರಣಕ್ಕಾಗಿ ಬಳಸಿತು. ಗುಲ್ಮಗಳ ಜವುಗು ಪ್ರದೇಶಗಳನ್ನು ಒಣಗಿಸಿ, ನೀರಾವರಿ ಸೌಲಭ್ಯ ಬಳಸಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸಿಕೊಂಡಂತೆ ತೋರುತ್ತದೆ. ವಿವಿಧ ಬಗೆಯ ಪಾಳೆಯಗಾರರು ಅಥವಾ ಮುಖ್ಯಸ್ಥರ ನಾಯಕತ್ವವಿರುವ ರಕ್ತಸಂಬಂಧ ಮೂಲಕವಾದ ನೆಂಟಸ್ತಿಕೆಯ ಗುಂಪುಗಳಿಂದಾರಂಭಿಸಿ ರಾಜಕೀಯ ಸಂಘಟನೆಯ ಪ್ರಕ್ರಿಯೆ ಹಲವಾರು ಶತಮಾನಗಳವರೆಗೆ ಮುಂದುವರಿಯಿತು. ಚಿಕ್ಕ ಚಿಕ್ಕ ಗುಂಪುಗಳಾಗಿ ಇದ್ದ ಜನಸಂಖ್ಯೆಯನ್ನು, ಈಗ ಒಕ್ಕೂಟ ಅಥವಾ ರಾಜ್ಯ ಎಂದು ಕರೆಯಲಾಗುವ ಮಾದರಿ ದೊಡ್ಡ ಘಟಕವಾಗಿ ರೂಪಿಸುವುದಕ್ಕೆ ಅಗತ್ಯವಿದ್ದ ಸಂಪನ್ಮೂಲಗಳನ್ನು ಅಭಿವೃದ್ದಿಪಡಿಸಲಾಯಿತು. ಹೀಗೆ ಸೀಮಿತವಾದ ರಕ್ತಸಂಬಂಧ ಮೂಲಕವಾದ ಗುಂಪುಗಳು, ಮುಖಂಡರು ಬದಲಾಗುತ್ತ ಹೋದಂತೆ ವಿಸ್ತಾರಗೊಂಡವು.

ಫ್ಯೂನಾನ್‌ನ ಮುಂಚಿನ ರಾಜರ ಬಗ್ಗೆ ಏನೂ ತಿಳಿಯದಿದ್ದರೂ, ಚೀನಾ ಆಕರಗಳ ಪ್ರಕಾರ, ಎರಡನೆಯ ಶತಮಾನದ ಉತ್ತಾರರ್ಧದಲ್ಲಿ, ಮೂಲ ಆಳ್ವಿಕೆಗಾರನ ವಂಶಸ್ಥನಾದ ಹೂಣ ಪೆನಾಂಗ್ ಎನ್ನುವವನು ಸುವ್ಯವಸ್ಥೆಯನ್ನು ತರುವುದಕ್ಕಾಗಿ ತನ್ನ ಸೈನ್ಯವನ್ನು ಬಳಸಿ ಸ್ಥಳೀಯ ಮುಖಂಡರಲ್ಲಿ ಕಲಹ ಹುಟ್ಟಿಸಿ, ತನ್ನ ನಿಯಂತ್ರಣವನ್ನು ಸಾಧಿಸಿ, ಗೆದ್ದ ಪ್ರದೇಶಗಳಲ್ಲಿ ತನ್ನ ಮಕ್ಕಳನ್ನು ಗವರ್ನರ್‌ರನ್ನಾಗಿ ಮಾಡಿದನು. ಫ್ಯೂನಾನ್‌ನ ವಿಸ್ತರಣೆ ಕ್ರಿ.ಶ.೫ನೆಯ ಶತಮಾನದವರೆಗೂ ಸಾಗಿದ್ದು ಆಮೇಲೆ ಅಂತಾರಾಷ್ಟ್ರೀಯ ವ್ಯಾಪಾರ ಫ್ಯೂನಾನ್‌ನಿಂದ ಮಲಕ್ಕಾ ಜಲಸಂಧಿಗೆ ಸ್ಥಳಾಂತರಗೊಂಡುದರಿಂದ ಸ್ಥಗಿತಗೊಂಡಿತು. ಹಡಗು ಕಟ್ಟುವ ಹಾಗೂ ನೌಕಾಯಾನದ ಪರಿಣತಿ ಕಾಣಿಸಿಕೊಂಡು, ದಕ್ಷಿಣ ಚೀನಾ ಸಮುದ್ರ ಮಾರ್ಗವಾಗಿ ನೆಯರ ವ್ಯಾಪಾರ ಮಾರ್ಗ ಹುಟ್ಟಿಕೊಂಡಾಗ ಕರಾವಳಿ ಜಲಮಾರ್ಗದ ಪ್ರಾಮುಖ್ಯ ತಗ್ಗಿ, ಅಂತಾರಾಷ್ಟ್ರೀಯ ಚಟುವಟಿಕೆಗಳಿಂದ ಫ್ಯೂನಾನ್‌ಗೆ ಸಿಗುತ್ತಿದ್ದ ಆದಾಯ ಇಳಿಮುಖವಾಯಿತು. ಹೀಗೆ ವ್ಯಾಪಾರ ಇಳಿಮುಖವಾದುದರಿಂದ ಫ್ಯೂನಾನಿನ ಮುಖಂಡರು ಕೃಷಿ ಉತ್ಪಾದನೆಯನ್ನು ಹೆಚ್ಚಿಸಿ, ಕೃಷಿ ಪ್ರಧಾನ ರಾಜ್ಯಕ್ಕೆ ಬೇಕಾದ ಹಿಂದೂ ರಾಜ್ಯ ತಂತ್ರವನ್ನು ಹಾಗೂ ಅದಕ್ಕೆ ತಕ್ಕ ಪದ್ಧತಿಗಳು, ಕಾನೂನು ಸಂಹಿತೆಗಳನ್ನು ಅಳವಡಿಸಿ ಕೊಂಡರು. ಅಂತಾರಾಷ್ಟ್ರೀಯ ವ್ಯಾಪಾರದಿಂದ ಬರುತ್ತಿದ್ದ ವರಮಾನ ಕುಗ್ಗಿದ್ದು ಫ್ಯೂನಾನ್‌ಗೆ ದೊಡ್ಡ ಪೆಟ್ಟು. ಅದಕ್ಕಿಂತ ವಿಸ್ತಾರವಾದ ನೀರಾವರಿ ಕೃಷಿಯನ್ನು ರೂಢಿಸಿ ಕೊಂಡರೂ ೬ನೆಯ ಶತಮಾನದ ಅಂತ್ಯದ ವೇಳೆಗೆ ದುರ್ಬಲಗೊಂಡು, ಚೀಮ್‌ರಿಂದ ವಿಭಜಿತವಾಯಿತು. ಅವರು ಮೆಕಾಂಗ್ ಬಯಲು ಪ್ರದೇಶವನ್ನು ಆಕ್ರಮಿಸಿ ಕೊಂಡರು. ಖೂನಾರ್‌ರು ವಿಸ್ತಾರವಾಗುತ್ತಿದ್ದ ಈಗಿನ ಕಾಂಬೋಡಿಯಾದ ಟಾಲ್‌ಸಾಪ್ ಕೃಷಿ ಭೂಮಿಯನ್ನು ವಶಪಡಿಸಿಕೊಂಡರು.

ಫ್ಯೂನಾನಿನ ಇತಿಹಾಸವು ವಸಾಹತು ಸಾಮ್ರಾಜ್ಯದ ಕಾಲದವರೆಗಿನ ಆಗ್ನೇಯ ಏಷ್ಯಾದ ವ್ಯಾಪಾರದ ರಾಜಕೀಯ ಹಾಗೂ ಆರ್ಥಿಕ ಸ್ಥಿತಿಯ ಏರಿಳಿತಗಳ ಚಿತ್ರವನ್ನು ನೀಡುತ್ತದೆ. ಈ ಪ್ರದೇಶದ ಇತಿಹಾಸವನ್ನು ರೂಪಿಸುವಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ವ್ಯಾಪಾರದ ಆಂದೋಲನಕ್ಕೆ ಮಹತ್ವದ ಸ್ಥಾನವಿದೆ. ದೇಶೀಯ ಕೃಷಿ ಉತ್ಪಾದನೆಯಿಂದ ಸಿಗಬಹುದಾದದ್ದಕ್ಕಿಂತ ಹೆಚ್ಚಿನ ಬಂಡವಾಳವನ್ನು ಪಡೆಯುವ ಮೂಲಗಳನ್ನು ಹಾಗೂ ತಂತ್ರವನ್ನು ಇದೇ ಕಲ್ಪಿಸಿಕೊಟ್ಟಿತು. ಅಂತಾರಾಷ್ಟ್ರೀಯ ವ್ಯಾಪಾರದಿಂದ ಒಬ್ಬ ಕೃಷಿಕ ಮುಖ್ಯಸ್ಥ ಹೆಚ್ಚಿನ ಆರ್ಥಿಕ ಸಂಪನ್ಮೂಲಗಳನ್ನು ಗಳಿಸುವಂತಾದಾಗ, ರಾಜ್ಯ ಸಂಘಟನೆ ಹಾಗೂ ಅಧಿಕಾರ ಬಲಗೊಂಡವು. ಇದಲ್ಲದೇ ಆಗ್ನೇಯ ಏಷ್ಯಾದ ಮುಖ್ಯ ಜಲಮಾರ್ಗಗಳ ಪ್ರಗತಿಗೂ ಹಾಗೂ ಮಧ್ಯ ಏಷ್ಯಾದ ಮೂಲಕವಾದ ಭೂ ಕಾರವಾನ್ ಮಾರ್ಗಗಳಲ್ಲಿ ಶಾಂತಿ ಹಾಗೂ ಸ್ಥಿರತೆ ನೆಲೆಗೊಂಡುದಕ್ಕೂ ಪರಸ್ಪರ ಸಂಬಂಧವಿತ್ತು. ಕ್ರಿ.ಶ.೪ನೆಯ ಶತಮಾನದ ವೇಳೆಗೆ ಎಂದರೆ ಅಲೆಕ್ಸಾಂಡರನು ಮಧ್ಯ ಏಷ್ಯಾದ ಬಹುಭಾಗವನ್ನು ಗೆದ್ದ ತರುವಾಯ ಸಮುದ್ರ ಮಾರ್ಗಕ್ಕಿಂತ ಭೂಮಾರ್ಗ ಬಲಗೊಂಡು ಹಡಗುಗಳಲ್ಲಿ ಪ್ರಾಣಿಗಳನ್ನು ಸಾಗಿಸುವ ಕಾಲ ಉಂಟಾಯಿತು. ಕ್ರಿ.ಪೂ.೩ನೆಯ ಶತಮಾನದ ಅಂತ್ಯದ ವೇಳೆಗೆ ಪಾರ್ಥಿಯನ್‌ರಿಂದ ಭೂಮಾರ್ಗಗಳಿಗೆ ತಡೆಯುಂಟಾಗಿ ಆಗ್ನೇಯ ಏಷ್ಯಾ ಮೂಲಕವಾಗಿ ವ್ಯಾಪಾರವನ್ನು ಭೂಮಾರ್ಗದಿಂದ ಜಲಮಾರ್ಗಕ್ಕೆ ಬದಲಿಸಲಾಯಿತು. ಕ್ರಿಸ್ತಶಕೆಯ ಪ್ರಾರಂಭದ ಶತಮಾನಗಳಲ್ಲಿ ಭೂಮಾರ್ಗಗಳು ಎಷ್ಟೇ ದುರ್ಗಮವಾಗಿದ್ದರೂ ಚೀನಾದಿಂದ ಭಾರತ ಹಾಗೂ ಮಧ್ಯ ಏಷ್ಯಾಕ್ಕೆ ಆಗ್ನೇಯ ಏಷ್ಯಾ ಮಾರ್ಗವಾಗಿ ಹೋಗು ವಾಗ ಮೆಡಿಟರೇನಿಯನ್ ಹಾಗೂ ಯುರೋಪ್‌ಗಳನ್ನು ತಲುಪುವುದಕ್ಕಿಂತ ಮುಂಚಿನ ಸಮುದ್ರಮಾರ್ಗ ಸಮಸ್ಯಾತ್ಮಕವಾಗಿದ್ದುದರಿಂದ ಭೂಮಾರ್ಗವೇ ಉತ್ತಮ ಎನಿಸಿತು. ಅಲ್ಲದೇ ೬ನೆಯ ಶತಮಾನದ ಅಂತ್ಯದವರೆಗೂ ಸಮುದ್ರಮಾರ್ಗದ ಬಳಕೆಗಾಗಿ ರೋಮನರು ಕೆಂಪು ಸಮುದ್ರಕ್ಕೆ ಕಾಲುವೆ ಕಟ್ಟಿದರು. ಭೂಮಾರ್ಗ ಸಾಧ್ಯವಿಲ್ಲದಿದ್ದಾಗ ಆಗ್ನೇಯ ಏಷ್ಯಾದ ಮೂಲಕ ಜಲಮಾರ್ಗವನ್ನು ಬಳಸಿಕೊಳ್ಳಲಾಯಿತು. ಇದರ ಪರಿಣಾಮವಾಗಿ ಆಗ್ನೇಯ ಏಷ್ಯಾದ ಹಲವು ರಾಜ್ಯಗಳಲ್ಲಿ ಅಂತಾರಾಷ್ಟ್ರೀಯ ವ್ಯಾಪಾರದಿಂದ ಆದಾಯ ಹೆಚ್ಚಿತು. ಇದರಿಂದ ಈ ಪ್ರದೇಶದ ಪ್ರಗತಿಯಾಗಿ ಅಧಿಕಾರ ಮುಂದುವರಿಯಿತು.

ಫ್ಯೂನಾನ್ ಅಸ್ತಿತ್ವದಲ್ಲಿದ್ದ ಕಾಲದಲ್ಲಿ ಕೆಲವು ರಾಜ್ಯಗಳಿದ್ದುದಾಗಿ ತಿಳಿದುಬಂದಿದೆ. ಉದಾಹರಣೆಗೆ ಮಲಯಾ ನಡುಗಡ್ಡೆಯ ಈಶಾನ್ಯ ಕರಾವಳಿಯಲ್ಲಿದ್ದ ಲಾಂಗ್ ಕಸುಕ, ಈಸ್ಥಮಸ್ ಮೂಲಕವಾಗಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಭೂಮಾರ್ಗ ವ್ಯಾಪಾರ ನಡೆ ಯುತ್ತಿದ್ದ ಸ್ಥಳದಲ್ಲಿತ್ತು. ಉತ್ತರದ ತುದಿಯಲ್ಲಿದ್ದ ಕ್ರಾ ಈಸ್ಥಮಸ್‌ನ್ನು ಕೂಡ ಸಮುದ್ರ ದಾಚೆಗಿನ ಭೂಮಾರ್ಗದ ವ್ಯಾಪಾರಕ್ಕೂ ಬಳಸಲಾಗುತ್ತಿತ್ತು. ಆದರೆ ಇಲ್ಲಿ ಕೃಷಿಗೆ ಉತ್ತಮ ಬೆಂಬಲವಿಲ್ಲದಿದ್ದುದರಿಂದ ಲಾಂಗ್ ಕಸುಕಾದಷ್ಟು ಮಹತ್ವ ಪಡೆಯಲಿಲ್ಲ. ಅಂತಾರಾಷ್ಟ್ರೀಯ ವ್ಯಾಪಾರದ ಕಾರಣದಿಂದಾಗಿ ಈ ರಾಜ್ಯ ಫ್ಯೂನಾನ್‌ನಂತೆ ಅಭಿವೃದ್ದಿ ಹೊಂದಿದ್ದರೂ, ಲಾಂಗ್ ಕಸುಕ ದಾಟಿ ಮಲಕ್ಕಾ ಜಲಸಂಧಿಯ ಮೂಲಕ ಸಮುದ್ರದಾಳದ ಜಲಮಾರ್ಗವನ್ನು ಬಳಸಲು ನೌಕಾಯಾನವನ್ನು ಅಭಿವೃದ್ದಿಪಡಿಸಿದಾಗ ತೊಂದರೆ ಗೀಡಾಯಿತು.

ಫ್ಯೂನಾನ್‌ನ ಎರಡು ಬದಿಗೂ ಕನಿಷ್ಠ ಪಕ್ಷ ಎರಡು ರಾಜ್ಯಗಳಿದ್ದವೆಂದು ಅವು ಈಗಿನ ಥೈಲ್ಯಾಂಡ್ ಹಾಗೂ ಬರ್ಮಾಗಳ ಪಶ್ಚಿಮಕ್ಕಿದ್ದ ದ್ವಾರಾವತಿ ಹಾಗೂ ವಿಯೆಟ್ನಾಂನ ಮಧ್ಯಭಾಗದಲ್ಲಿದ್ದ ಚಂಪಾ ಎಂದು ಊಹಿಸಲಾಗಿದೆ. ಚಂಪಾದ ಮೊದಲಿನ ಹೆಸರು ಲಿನ್-ಯೀ ಆಗಿರಬೇಕೆಂದು ಹಾಗೂ ಇದು ಕ್ರಿ.ಶ.೧೯೨ರಲ್ಲಿ ಸ್ಥಾಪಿತವಾಗಿರಬೇಕೆಂದು ಚೀನಾದ ದಾಖಲೆಗಳಿಂದ ತಿಳಿದುಬರುತ್ತದೆ. ಹಿಂದೆ ಚೀನಿಯರ ನಿಯಂತ್ರಣದಲ್ಲಿದ್ದ ಪ್ರದೇಶಗಳವರೆಗೆ ಪ್ರದೇಶವನ್ನು ವಿಸ್ತರಿಸಲು ಪ್ರಯತ್ನಗಳು ನಡೆದ ಬಗೆಗಿನ ಚೀನಿ ನಿರೂಪಣೆಗಳಿಂದಲೇ ಲಿನ್-ಯೀ ಬಗ್ಗೆ ಗೊತ್ತಾಗುತ್ತದೆ.

ಈಗಿನ ಥೈಲ್ಯಾಂಡ್‌ನ ಪುರಾತನ ಪ್ರದೇಶದ ರಾಜಕೀಯ ಇತಿಹಾಸ ಮಸುಕಾಗಿಯೇ ಇದೆ. ಥೈಲಾಂಡಿನ ಮಧ್ಯಭಾಗದ ಬಹುಪಾಲು ಪ್ರದೇಶವನ್ನು ವ್ಯಾಪಿಸಿದ್ದ ಮೊದಲ ಸಾಮ್ರಾಜ್ಯ ದ್ವಾರಾವತಿಯು ೭ನೆಯ ಶತಮಾನದಲ್ಲಿ ಸ್ಥಾಪಿತವಾದಂತೆ ಕಂಡುಬರುತ್ತದೆ. ಆದರೂ ಮಾನಂದಿಯ ಕೆಳದಂಡೆಯಿಂದ ಪಶ್ಚಿಮಕ್ಕೆ ಟೆನಾಪೆರಿಂ ಪರ್ವತ ಶ್ರೇಣಿಯ ಅಂಚಿನವರೆಗೆ ಹಾಗೂ ದಕ್ಷಿಣಕ್ಕೆ ಮಲಯಾ ನಡುಗಡ್ಡೆಯವರೆಗೆ ರಾಜ್ಯವನ್ನು ವಿಸ್ತರಿಸುವ ಅದರ ಪ್ರಯತ್ನ ಫಲಕಾರಿಯಾಗಲಿಲ್ಲ. ಈಸ್ಥಮಸ್ ಕ್ರಾ ದಾಟಿ ಸಾಗಾಣಿಕೆ ಮಾಡುವುದರಲ್ಲಿ ದ್ವಾರಾವತಿ ಚುರುಕಾಗಿದ್ದ ಸಾಧ್ಯತೆ ಇರಬಹುದಾದರೂ, ಅದರಿಂದ ಬರುತ್ತಿದ್ದ ಆದಾಯ ಫ್ಯೂನಾನ್‌ನಂತೆ ಅದರ ವಿಸ್ತರಣೆಗೆ ಸಹಾಯಕವಾದಂತೆ ತೋರುವುದಿಲ್ಲ. ಅಲ್ಲದೇ ಶ್ರೀಲಂಕಾದೊಂದಿಗೆ ದ್ವಾರಾವತಿಯ ದೀರ್ಘ ಕಾಲದಿಂದ ಸಂಪರ್ಕವಿಟ್ಟುಕೊಂಡಿದ್ದು ದರಿಂದಾಗಿ ಹಿಂದೂ ಧರ್ಮ, ಸಂಸ್ಕೃತಿ ಹಾಗೂ ಪದ್ಧತಿಗಳನ್ನು ಆಗ್ನೇಯ ಏಷ್ಯಾಕ್ಕೆ ಕೊಂಡೊಯ್ದ ನಾಡುಗಳಲ್ಲೊಂದಾಗಿದ್ದಿರಬೇಕು.

ಬರ್ಮಾದ ಪ್ಯೂ ಜನರೂ ಫ್ಯೂನಾನ್‌ನೊಂದಿಗೆ ಸ್ಪರ್ಧಿಸಲು ಒಂದು ರಾಜ್ಯವಾಗಿ ಸಂಘಟಿತರಾಗಿದ್ದಿರಬೇಕು. ಪ್ಯೂ ಪ್ರಾಂತದ ರಾಜಧಾನಿಯಾದ ಶ್ರೀ ಕ್ಷೇತ್ರದ ಸ್ಥಾಪನೆಯ ದಿನಾಂಕ ಕ್ರಿ.ಶ.೬೩೮ ಎಂಬುದು ಸಮ್ಮತ ಅಂಶವಾಗಿದ್ದರೂ, ಚೀನಾದಿಂದ ಹಾಗೂ ಚೀನಾ ಮಾರ್ಗವಾಗಿ ವ್ಯಾಪಾರಿ ಗುಂಪುಗಳು ಕಾರವಾನ್ ವ್ಯಾಪಾರಿಗಳನ್ನು ಸಂಧಿಸಲು ಇರಾವತಿಯವರೆಗೆ ಪಯಣಿಸುತ್ತಿದ್ದರೆಂದು ಮುಂಚಿನ ದಾಖಲೆಗಳಿಂದ ತಿಳಿದುಬರುತ್ತದೆ. ಪರಿಣಾಮಕಾರಿ ಆಡಳಿತ ನಿಯಂತ್ರಣವಿಲ್ಲದಿರುತ್ತಿದ್ದರೆ ಇಂಥ ಸಂಕೀರ್ಣ ವ್ಯಾಪಾರಿ ಸಂಬಂಧಗಳನ್ನು ಕಾಪಾಡಿಕೊಂಡು ಬರಲು ಆಗುತ್ತಿರಲಿಲ್ಲ.

ಕ್ರಿಸ್ತಶಕೆಯ ಪ್ರಾರಂಭದ ಶತಮಾನಗಳಲ್ಲಿನ ಆಗ್ನೇಯ ಏಷ್ಯಾದ ದ್ವೀಪಸ್ತೋಮದಲ್ಲಿನ ರಾಜ್ಯಗಳ ಬಗ್ಗೆ ಹೆಚ್ಚೇನೂ ವಿದಿತವಿಲ್ಲ. ಕ್ರಿ.ಶ.೪೦೦ ಅಥವಾ ಆ ತರುವಾಯದ ಕಾಲಿಮಂಥನ್(ಬರ್ಮಾ) ಮತ್ತು ಜವಾ ಎಂದರೆ ಜಕಾರ್ತಾ ಶಾಸನಗಳೇ ಮೊದಲ ದಾಖಲೆಗಳು. ಅಂತಾರಾಷ್ಟ್ರೀಯ ಹಡಗು ಮಾರ್ಗಗಳು ದಕ್ಷಿಣದ ಕಡೆಗೆ ಸ್ಥಳಾಂತರ ವಾಗುವವರೆಗೆ ರಾಜ್ಯ ರಚನೆಯ ಬಗ್ಗೆ ಅಷ್ಟೊಂದು ತೀವ್ರತೆ ಇರಲಿಲ್ಲ.

ಆಗ್ನೇಯ ಏಷ್ಯಾದ ದೇಶಗಳು ವ್ಯಾಪಾರ ಕೇಂದ್ರಗಳಾಗಿ ಅಂತಾರಾಷ್ಟ್ರೀಯ ವ್ಯಾಪಾರದ ಓಘವನ್ನು ನಿಯಂತ್ರಿಸಲು ಯತ್ನಿಸಿದುದಷ್ಟೇ ಅಲ್ಲ, ಕೃಷಿ, ಅರಣ್ಯ ಉತ್ಪನ್ನಗಳನ್ನು ಹಾಗೂ ಅಂತರರಾಷ್ಟ್ರೀಯ ವ್ಯಾಪಾರ ಕ್ಷೇತ್ರವನ್ನು ಪ್ರವೇಶಿಸಬಲ್ಲ ಉತ್ಪನ್ನಗಳನ್ನೂ ಇಲ್ಲಿ ಉತ್ಪಾದಿಸಲಾಯಿತು. ಉತ್ಪನ್ನಗಳ ಪಟ್ಟಿ ಕಾಲದಿಂದ ಕಾಲಕ್ಕೆ ಬಂದರಿನಿಂದ ಬಂದರಿಗೆ ಬದಲಾದರೂ ಮೆಣಸು, ಅಕ್ಕಿ, ಚೌಬೀನೆ, ಕರ್ಪೂರ, ತವರ, ಮಸಾಲೆ ಸಾಮಾನು, ರಾಳ, ಬೆಳೆಯುಳ್ಳ ಲೋಹಗಳು ಹಾಗೂ ಔಷಧಿಗಳು ಅದರಲ್ಲಿ ಸೇರಿರುತ್ತಿದ್ದವು. ಕ್ರಿ.ಶ.೧೪ನೆಯ ಶತಮಾನಕ್ಕಿಂತ ಪೂರ್ವದಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ಜಲದಲ್ಲಿ ಆಗ್ನೇಯ ಏಷ್ಯಾದ ಸರಕುಗಳಾದ ಕರ್ಪೂರ, ಪಕ್ಷಿ ಪಂಜರಗಳು, ಸುಗಂಧ ದ್ರವ್ಯಗಳು, ಮುತ್ತುಗಳು, ಸುಗಂಧದ ಮರಗಳು, ಚಿನ್ನ ಇವು ಸೇರಿರುತ್ತಿದ್ದವು. ಆ ತರುವಾಯ ಸಾಗುವಳಿ ಬೆಳೆಗಳಾದ ಮೆಣಸು, ಲವಂಗ ಹಾಗೂ ಅಕ್ಕಿ ವ್ಯಾಪಾರದ ಬಹುಪಾಲನ್ನು ಆಕ್ರಮಿಸಿದರೂ ಬೆಳೆಯುತ್ತಿದ್ದ ನಗರ ಜನಸಂಖ್ಯೆಗೆ ಅಕ್ಕಿ ಮುಖ್ಯ ಆಹಾರವಾಗಿ ಆ ಪ್ರದೇಶದಲ್ಲಿ ಉಳಿದುಕೊಂಡಿತು.

ಮಲಯಾ ನಡುಗಡ್ಡೆಯಿಂದ ಕ್ಯಾಂಟನ್‌ವರೆಗಿನ ಸಾಗಾಣಿಕೆಯ ಕರಾವಳಿ ಮಾರ್ಗದಲ್ಲಿ ಕೊನೆಯ ಪ್ರಮುಖ ನಿಲ್ದಾಣವಾಗಿದ್ದ, ತನ್ನ ಭೌಗೋಳಿಕ ಸ್ಥಾನಮಾನದಿಂದಾಗಿ ಮಹತ್ವ ಪಡೆದಿದ್ದ ಫ್ಯೂನಾನ್, ಹಡಗು ಕಟ್ಟುವ ಹಾಗೂ ನೌಕಾಯಾನದ ಪರಿಣತೆಯಿಂದಾಗಿ ವ್ಯಾಪಾರಿಗಳು ನೆಯರವಾಗಿ ಮಲಕ್ಕಾ ಜಲಸಂಧಿಗೆ ಹೋಗತೊಡಗಿದ ಮೇಲೆ ಅವನತಿ ಹೊಂದಿತು. ಕ್ರಿ.ಶ.೫ನೆಯ ಶತಮಾನದಲ್ಲಿ ಜಲಸಂಧಿಯ ಮೂಲಕ ಭಾರತಕ್ಕೆ ಭೇಟಿ ನೀಡಿದ ಚೀನಾ ಪ್ರವಾಸಿ ಫಾಹಿಯಾನನ ದಿನಚರಿಯಲ್ಲಿ ಅಂಥ ಪ್ರವಾಸಗಳ ಕುರಿತ ಪುರಾವೆ ಸಿಗುತ್ತದೆ. ಆ ತರುವಾಯ ಸಾಮಂತ ಸಂಸ್ಥಾನಗಳ ಕುರಿತಾದ ಚೀನಾ ದಾಖಲೆಗಳಲ್ಲಿ ಜವಾ, ಸುಮಾತ್ರಾಗಳ ದೂತರ ಬಗ್ಗೆ ಉಲ್ಲೇಖವಿದೆ. ಅದಕ್ಕಿಂತ ಮೊದಲಿನ ಆಗ್ನೇಯ ಏಷ್ಯಾದ ದೇಶಗಳ ಉಲ್ಲೇಖ ಫ್ಯೂನಾನ್‌ನಿಂದ ಪ್ರಾರಂಭವಾಯಿತು.

ಕಡಲು ಸಂಬಂಧಿ ಅಥವಾ ವಾಣಿಜ್ಯ ಪ್ರಾಂತಗಳು

ಕರಾವಳಿ ಮಾರ್ಗಗಳಿಂದ ದೂರವಾಗಿ ನೇರವಾಗಿ ಮಲಕ್ಕಾ ಜಲಸಂಧಿಗೆ ವ್ಯಾಪಾರ ಮಾರ್ಗಗಳು ಸ್ಥಳಾಂತರವಾದುದರ ದೀರ್ಘಾವಧಿ ಪರಿಣಾಮದಿಂದಾಗಿ, ಜಲಸಂಧಿಯ ಸುತ್ತ ಆಗ್ನೇಯ ಏಷ್ಯಾದ ದ್ವೀಪಸ್ತೋಮದಲ್ಲಿ ಹೊಸ ಹಾಗೂ ದೊಡ್ಡ ಕಡಲು ಸಂಬಂಧಿ ಪ್ರಾಂತಗಳ ಸೃಷ್ಟಿಯಾಯಿತು. ಈ ದೊಡ್ಡ ಪ್ರಾಂತಗಳ ಪೈಕಿ ಮೊದಲನೆಯದೆಂದರೆ ಸುಮಾತ್ರಾದ ಪಾಲೆಂಬಾಂಗ್‌ನಲ್ಲಿ ಸ್ಥಾಪಿತವಾದ ಶ್ರೀವಿಜಯ. ಅಧಿಕಾರ ಬದಲಾವಣೆ ನೆಯರವಾಗಿ ಪ್ಯೂನಾನ್‌ನಿಂದ ಶ್ರೀವಿಜಯಕ್ಕೆ ಸಾಗಲಿಲ್ಲ. ಮಲಯಾದ ಲಾಂಗ್ ಕಸುಕ, ಥೈಲ್ಯಾಂಡ್‌ನ ದ್ವಾರಾವತಿ, ವಿಯೆಟ್ನಾಂನ ಚಂಪಾ, ಬರ್ಮಾದ ಪ್ಯೂ ಮತ್ತು ಮಾನ್ ಜನರ ಅಸಂಖ್ಯ ಚಿಕ್ಕ ಚಿಕ್ಕ ರಾಜಕೀಯ ಘಟಕಗಳು, ಕ್ರಾ ಈಸ್ಥಮಸ್ ಸುತ್ತಲಿನ ಚಿಕ್ಕಪುಟ್ಟ ರಾಜ್ಯಗಳು ಫ್ಯೂನಾನ್‌ನ ಕಾಲದವುಗಳೇ. ಮಲಯಾ ಹಾಗೂ ತಾನ್ -ತೊ-ಲಿ ಎಂಬ ಬಂದರು ಪ್ರಾಂತ-ಇವು ದ್ವೀಪಸ್ತೋಮದಲ್ಲಿಯ ಶ್ರೀವಿಜಯಕ್ಕಿಂತ ಪೂರ್ವದ ವುಗಳು. ಆದರೂ ಶ್ರೀವಿಜಯವು ದ್ವೀಪಸ್ತೋಮದಲ್ಲಿ ಸಮುದ್ರ ವ್ಯಾಪಾರ ಸಂಚಾರವನ್ನು ಯಶಸ್ವಿಯಾಗಿ ನಿಯಂತ್ರಿಸಿ, ವಿಶಾಲ ಸಾಮ್ರಾಜ್ಯವನ್ನು ಸ್ಥಾಪಿಸಿತು. ಶ್ರೀವಿಜಯವು ಕ್ರಿ.ಶ.೭ರಿಂದ ೧೨ನೆಯ ಶತಮಾನದವರೆಗೆ ಮಲಕ್ಕಾ ಜಲಸಂಧಿಯನ್ನು ನಿಯಂತ್ರಿಸಿತೆಂದು ಭಾವಿಸಲಾಗಿದೆ.

ಶ್ರೀವಿಜಯದ ಏಳಿಗೆಯ ಕಾಲ ಹಾಗೂ ಅದರ ಅಧಿಕಾರದ ವ್ಯಾಪ್ತಿಯ ಭೌಗೋಳಿಕ ವಿಸ್ತಾರದ ಬಗ್ಗೆ ಪ್ರಶ್ನೆಗಳು ಹಾಗೇ ಉಳಿದರೂ, ಲಭ್ಯವಿರುವ ಸಾಕ್ಷ್ಯಾಧಾರಗಳ ಪ್ರಕಾರ, ಅಂತಾರಾಷ್ಟ್ರೀಯ ವ್ಯಾಪಾರ ಮಾರ್ಗಗಳೊಂದಿಗಿನ ಅದರ ಸಂಬಂಧದ ಆಧಾರದ ಮೇಲೆ ಅದು ಒಂದು ನಿರ್ದಿಷ್ಟ ರಾಜಕೀಯ ಹಾಗೂ ಆರ್ಥಿಕ ಸ್ವರೂಪವನ್ನು ಅನುಸರಿಸಿತ್ತು ಎಂಬುದು ತಿಳಿಯುತ್ತದೆ. ಅದು ಒಂದು ಕಡಲು ಸಂಬಂಧಿ ವ್ಯಾಪಾರಿ ಪ್ರಾಂತವೆಂದು ವರ್ಣಿಸಲಾಗಿದೆ. ಆದರೆ ಮಾನವಶಕ್ತಿ ಮೂಲವಾದ ಯಾವುದೇ ಹಿನ್ನಾಡು ಇದಕ್ಕಿರಲಿಲ್ಲ. ಆದರೆ ಮಾನವಶಕ್ತಿಗಾಗಿ ಮಲಯಾ ಸಮುದ್ರದ ಅಲೆಮಾರಿಗಳನ್ನು ಅವಲಂಬಿಸಿತ್ತು. ಶ್ರೀ ವಿಜಯದ ಮುಖ್ಯ ಕೇಂದ್ರ ಪಾಲೆಂಬಾಂಗ್ ಆಗಿದ್ದು, ಇದೊಂದು ಮೈತ್ರಿ ವ್ಯವಸ್ಥೆಯ ಒಕ್ಕೂಟ ಅಥವಾ ಜಮೀನು ಹಿಡುವಳಿದಾರರ ವ್ಯಾಪಾರ ಬಂದರುಗಳ ಸಂಘಟನೆಯಾಗಿತ್ತು. ಫ್ಯೂನಾನ್‌ನಂತೆಯೇ ಶ್ರೀವಿಜಯ ಕೂಡ ಸಾಮುದಾಯಿಕ ವ್ಯಾಪಾರದಿಂದ ಆದಾಯವನ್ನು ಪಡೆಯುತ್ತಿತ್ತು. ಇದಕ್ಕೆ ಪ್ರತಿಯಾಗಿ ಆ ಪ್ರದೇಶದಲ್ಲಿ ಕಡಲ್ಗಳ್ಳತನವನ್ನು ತಡೆಗಟ್ಟಿ ಹಡಗು ಕಟ್ಟಲು, ದುರಸ್ತಿ ಮಾಡಲು, ದಾಸ್ತಾನು ಮಾಡಲು ಹಾಗೂ ವ್ಯಾಪಾರಕ್ಕೆ ರೇವು ಸೌಕರ್ಯ ಒದಗಿಸಿತು. ಆದರೆ ಶ್ರೀವಿಜಯದ ಅಧಿಕಾರ ಶಾಶ್ವತವಾಗಿರಲಿಲ್ಲ. ಚೀನಾಕ್ಕೆ ಕಪ್ಪಕಾಣಿಕೆ ಕಳಿಸುತ್ತಿದ್ದ ದ್ವೀಪಸ್ತೋಮದ ರಾಜ್ಯ ಶ್ರೀವಿಜಯವೊಂದೇ ಆಗಿತ್ತು. ಉಳಿದ ಸಮಯದಲ್ಲಿ ದ್ವೀಪಸ್ತೋಮದ ರಾಜ್ಯಗಳು ಹಾಗೂ ಬಂದರುಗಳಿಂದ ನಿಯೋಗಗಳು ಬರುತ್ತಿದ್ದವು. ಶ್ರೀವಿಜಯವೊಂದೇ ಕಾಣಿಕೆ ಕಳಿಸುತ್ತಿದ್ದುದರಿಂದ, ಇತರರನ್ನು ತಡೆಯಲು ಅದರ ಶಕ್ತಿ ಹಾಗೂ ನಿಯಂತ್ರಣ ಸಾಕಷ್ಟಾಗಬಹುದಿತ್ತು.

ಕಡಲುಸಂಬಂಧಿ ಪ್ರಾಂತಗಳ ಕುರಿತು ಶ್ರೀವಿಜಯಕ್ಕಿದ್ದ ಪೂರ್ವ ಭಾವನೆಯಿಂದಾಗಿ, ಪಾಲೆಂಬಾಂಗ್‌ನಿಂದ ಒಳನಾಡಿನಲ್ಲಿದ್ದ ಜನರೊಂದಿಗೆ ಶ್ರೀವಿಜಯಕ್ಕೆ ಸೀಮಿತ ಸಂಪರ್ಕ ವಿದ್ದುದರಿಂದ ಅದಕ್ಕೆ ಹಿನ್ನಾಡಿನ ಮೇಲೆ ರಾಜಕೀಯ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ತಜ್ಞರು ಭಾವಿಸಿದ್ದಾರೆ. ಆದರೂ ವ್ಯಾಪಾರ ವ್ಯವಹಾರಗಳು ಅಂದಿನ ಸಾಮಾಜಿಕ ವ್ಯವಸ್ಥೆ ಎನಿಸಿದವು. ವಿವಿಧ ಜನರ ಪ್ರತಿನಿಧಿ ಮುಖಂಡರ ನಡುವಣ ಹೊಕ್ಕು ಬಳಕೆ ಸೇನಾ ನಿರ್ವಹಣೆಗೆ ಆಧಾರವಾಯಿತು.

ಆಗ್ನೇಯ ಏಷ್ಯಾದ ದ್ವೀಪಸ್ತೋಮದಲ್ಲಿ ದ್ವೀಪಾಂತರ ಹಾಗೂ ಅಂತಾರಾಷ್ಟ್ರೀಯ ವ್ಯಾಪಾರವು ಇತಿಹಾಸದುದ್ದಕ್ಕೂ ರೂಪುಗೊಂಡು ತೆಸ್ನಾಲೆ, ಮಲಕ್ಕಾ, ಬಂದೆಜರ್ ಮಸಿನ್, ಮಕಾಸರ್, ಪಾಲೆಂಬಾಂಗ್, ಬೆಂತಾಮ್, ಚೆಂಬಾನ್ ಹಾಗೂ ಆಕ್‌ಗಳಂಥ ವಾಣಿಜ್ಯ ಕೇಂದ್ರಗಳಾದ ನಗರ ರಾಜ್ಯಗಳ ಬೆಳವಣಿಗೆಗೆ ಪುಷ್ಟಿ ನೀಡಿತು. ವಾಣಿಜ್ಯ ಪ್ರಾಂತಗಳಾಗಿ ಬೆಳೆದ ರಾಜ್ಯಗಳು, ಪರಸ್ಪರ ಸ್ಪರ್ಧಿಸುತ್ತಿದ್ದ ನಗರ ರಾಜ್ಯಗಳನ್ನು ಶಕ್ತಿಶಾಲಿ ಕೇಂದ್ರವೊಂದರಲ್ಲಿಯ ಸೇನಾಶಕ್ತಿಯ ಮೂಲಕ ಒಗ್ಗೂಡಿಸಲಾಗಿದ್ದ ಒಕ್ಕೂಟಗಳಾಗಿದ್ದವು. ಮಸಾಲೆ ಸಾಮಾನುಗಳ ವ್ಯಾಪಾರ ಬೆಳೆದಂತೆ, ಉದಾಹರಣೆಗೆ ಈಗಿನ ಇಂಡೋನೇಷ್ಯಾದ ಎಂದರೆ ಪೂರ್ವದ ದ್ವೀಪಸ್ತೋಮ ಟೆಸ್ ನೌತಿ, ತನ್ನ ನಾಡಿನ ಪ್ರಧಾನ ಆಹಾರವಾಗಿದ್ದ ಅಕ್ಕಿಯನ್ನು ಆಮದು ಮಾಡಿಕೊಳ್ಳುವುದಕ್ಕಾಗಿ ಮಸಾಲೆ ಸಾಮಾನುಗಳ ಉತ್ಪಾದನೆಗೆ ಒತ್ತು ನೀಡಿತು. ಬಹುಪಾಲು ಅಕ್ಕಿಯನ್ನು ಜವಾದಿಂದ ಖರೀದಿಸಲಾಗುತ್ತಿತ್ತು. ಇತಿಹಾಸದಲ್ಲಿ ಕೆಲವು ಸಲ, ಪ್ರತಿಸ್ಪರ್ಧಿ ರಾಜ್ಯಗಳು ಕಾತರಿಸಿಯೂ, ಉತ್ತಮ ನಾಯಕತ್ವ ಸಂಘಟನೆ, ವಾಣಿಜ್ಯ ಆದಾಯ ಸರಕುಗಳಿಗಿದ್ದ ಬೇಡಿಕೆ, ಸಮುದ್ರ ವ್ಯಾಪಾರ ಮಾರ್ಗಕ್ಕೆ ಬೇಕಾದ ಭೌಗೋಳಿಕ ಲಕ್ಷಣ-ಇವುಗಳ ಕೊರತೆಯಿಂದಾಗಿ ಸಾಧ್ಯವಾಗದ ವಾಣಿಜ್ಯ ಏಕಸ್ವಾಮ್ಯವನ್ನು ಒಂದೇ ನಗರ ರಾಜ್ಯ ಸಾಧಿಸಿದ ನಿದರ್ಶನಗಳಿವೆ. ಹಳೆಯ ಕಾಲದಲ್ಲಿ ಆಗ್ನೇಯ ಏಷ್ಯಾದ ಮಲಕ್ಕಾ, ಕೊನೆಯ ಉತ್ತಮ ನಗರರಾಜ್ಯ ವಾಣಿಜ್ಯ ಕೇಂದ್ರವಾಗಿದ್ದು, ಅಲ್ಲಿಗೆ ವ್ಯಾಪಾರಸಂಬಂಧಿ ಮಾಹಿತಿ ಉತ್ತಮವಾಗಿ ಸಿಗುತ್ತಿತ್ತು.

೧೫ನೆಯ ಶತಮಾನದ ಪ್ರಾರಂಭದವರೆಗೂ, ಮಲಕ್ಕಾವು, ಮಲಯಾ ದ್ವೀಪಕಲ್ಪದಲ್ಲಿ, ನದಿ ಬಯಲು ಪ್ರದೇಶ ಪ್ರಾಂತದ ಸತ್ವಯುತವಾದ, ಆದರೆ ಗಮನಕ್ಕೆ ಬಾರದ ಒಂದು ಮೀನುಗಾರಿಕೆಯ ಗ್ರಾಮವಾಗಿತ್ತು. ಥೈಲ್ಯಾಂಡ್‌ನ ನಿಯಂತ್ರಣದಲ್ಲಿದ್ದ ಕ್ರಾ ಸಾಗಾಣಿಕೆ ಸ್ಥಳದೊಂದಿಗೆ ಸ್ಪರ್ಧಿಸಲು ಮಲಕ್ಕಾ ಜಲಸಂಧಿಯ ಮಾರ್ಗವಾಗಿ ಸುರಕ್ಷಿತ ಮಾರ್ಗವೊಂದು ಬೇಕೆಂಬ ಭಾರತದ ಇಚ್ಛೆ ಹಾಗೂ ಕಾರವಾನ್ ಮಾರ್ಗಗಳು ಕೊನೆಗೊಂಡುದರಿಂದ ಸಾಗರ ವ್ಯಾಪಾರ ಮಾರ್ಗಗಳ ಅಗತ್ಯ ಚೀನಾಕ್ಕಿದ್ದುದು. ಈ ಎರಡು ಕಾರಣಗಳಿಂದಾಗಿ ಮಲಕ್ಕಾ ಕೆಲವೇ ವರ್ಷಗಳಲ್ಲಿ ವಾಣಿಜ್ಯ ಕೇಂದ್ರವಾಗಿ ಬೆಳೆಯಲು ಸಾಧ್ಯವಾಯಿತು.

ವ್ಯಾಪಾರದಲ್ಲಿ ತೀವ್ರ ವಾಣಿಜ್ಯ ಹಿತಾಸಕ್ತಿಯಿದ್ದ ಜವಾದ ಮಜೋಪಾಹಿಟ್ ಹಾಗೂ ಸಯಾಮ್‌ದ ಆಯುಧ್ಯಾಗಳೊಡನೆ ಸ್ಪರ್ಧೆಗಿಳಿದು ಮಲಕ್ಕಾ ತನ್ನ ವಾಣಿಜ್ಯ ಪ್ರಗತಿಗೆ ಮುಂದಾಯಿತು. ಚೀನಾದ ಕೊಲ್ಲಿ ೧೪೦೩ರಲ್ಲಿ ಕಾಣಿಸಿಕೊಂಡರೂ ಮಲಕ್ಕಾದ ಭವಿಷ್ಯ ಸುರಕ್ಷಿತವಾಗಿತ್ತು. ತೈಮೂರ್ ಲಂಗ್ ನು ಮಧ್ಯ ಏಷ್ಯಾಗೆ ಹೋಗುತ್ತಿದ್ದ ಕಾರವಾನ್ ಮಾರ್ಗಗಳನ್ನು ನಿಲ್ಲಿಸಿದ್ದರಿಂದ ಅಂತಾರಾಷ್ಟ್ರೀಯ ವ್ಯಾಪಾರಕ್ಕಾಗಿ ಸಮುದ್ರ ಮಾರ್ಗ ಸಾಧಿಸುವುದಕ್ಕಾಗಿ ಆಗ್ನೇಯ ಏಷ್ಯಾ ತಲುಪುವುದೇ ಚೀನಾ ಕೊಲ್ಲಿಯ ಮಹತ್ವದ ಉದ್ದೇಶವಾಗಿತ್ತು. ಆಯುಧ್ಯಾ ಹಾಗೂ ಮಜೋಪಾಹಿಟ್‌ಗಳ ಆಕ್ರಮಣದ ತೊಂದರೆ ಯಿಲ್ಲದೆ ಮಲಕ್ಕಾಗೆ ತನ್ನ ಪ್ರಾಂತದ ವಿಸ್ತಾರಕ್ಕೆ ಅಗತ್ಯವಿದ್ದ ತಕ್ಷಣದ ರಕ್ಷಣೆಯನ್ನು ಚೀನಾದ ಕೊಲ್ಲಿ ಒದಗಿಸಿತು. ಭಾರತ ಹಾಗೂ ಮಧ್ಯ ಏಷ್ಯಾದಿಂದ ಪೂರ್ವಭಾಗದ ವಾಣಿಜ್ಯ ಮಾರ್ಗವನ್ನು ಪಡೆಯಲು ಪರಮೇಶ್ವರನು ಮಲಕ್ಕಾವನ್ನು ಮುಸಲ್ಮಾನ ಬಂದರನ್ನಾಗಿ ಪರಿವರ್ತಿಸಿದನು.

ವ್ಯಾಪಾರವನ್ನೇ ಸಂಪೂರ್ಣವಾಗಿ ಆಶ್ರಯಿಸಿದ್ದೇ ಮಲಕ್ಕಾ ಹಾಗೂ ಇತರ ನಗರ ರಾಜ್ಯಗಳ ವೈಲಕ್ಷಣ್ಯ. ಒಟ್ಟು ಜನಸಂಖ್ಯೆಯಲ್ಲಿ ವಿದೇಶೀಯರೇ ಹೆಚ್ಚಾಗಿದ್ದು ಮಲಯಾ ದೇಶೀಯರ ಸಂಖ್ಯೆ ಕಡಿಮೆಯಿತ್ತು; ಅಲ್ಲಿಯವರಲ್ಲಿ ಮಧ್ಯಮ ವರ್ಗವೇ ಇರಲಿಲ್ಲ. ಸುರಕ್ಷಿತ ಬಂದರು ಇತ್ತು; ಅಲ್ಲದೇ ಅಗ್ಗದ ಸುಂಕದ ದರಗಳು, ದುರಸ್ತಿ ಸೌಕರ್ಯ, ಸಾಕಷ್ಟು ದಾಸ್ತಾನು ಸೌಕರ್ಯ ಹಾಗೂ ಮತ್ತಿತರ ಅನುಕೂಲಗಳು ಅಂತಾರಾಷ್ಟ್ರೀಯ ಹಡಗು ವ್ಯಾಪಾರಿಗಳನ್ನು ಸೆಳೆದವು. ಇದು ಇದ್ದುದರಿಂದಲೇ ಮಲಕ್ಕಾದಂಥ ವ್ಯಾಪಾರ ಕೇಂದ್ರಗಳು ಅಂತಾರಾಷ್ಟ್ರೀಯ ವ್ಯಾಪಾರವನ್ನು ಅವಲಂಬಿಸಿದ್ದವು. ತರುವಾಯ ಸ್ಥಳೀಯ ಸಮಾಜವನ್ನು ಅಲಕ್ಷಿಸಿ ವ್ಯಾಪಾರ ವ್ಯವಸ್ಥೆಯ ನಿರ್ವಹಣೆ ಹಾಗೂ ವಿಸ್ತರಣೆಗಾಗಿ ಸಂಪನ್ಮೂಲಗಳನ್ನು ಹಂಚಿಕೆ ಮಾಡಲಾಯಿತು. ಅಕ್ಕಿ ಬೆಳೆಯುವ ನಾಡುಗಳಲ್ಲಿಯಂತೆ ಇಲ್ಲಿ ಈ ನಾಡಿನ ಸಂಸ್ಕೃತಿಯ ಬೆಳವಣಿಗೆಗೆ ಹೆಚ್ಚಿನ ಪ್ರಾಧಾನ್ಯ ಸಿಗಲಿಲ್ಲ. ವ್ಯಾಪಾರ ಕೇಂದ್ರಗಳ ಪೈಕಿ ಮಲಕ್ಕಾ ಪ್ರಮುಖವಾಯಿತು; ಏಷ್ಯಾದ ಕೂಡುಹಾದಿ ಎನಿಸಿತು. ಆದರೆ ಯುರೋಪಿಯನ್ನರು ಆಗ್ನೇಯ ಏಷ್ಯಾ ಪ್ರವೇಶಿಸಿದಾಗ ಅವರ ನಿಯಂತ್ರಣಕ್ಕೆ ಮೊದಲ ಬಲಿಯಾಯಿತು.