ಅಬಾಸಿದರಿಂದ ಪೋಷಿತವಾದ, ಅವರ ಆಳ್ವಿಕೆಯ ಪ್ರತೀಕಗಳಾದ ಸಾಂಸ್ಕೃತಿಕ ಚಟುವಟಿಕೆಗಳು, ಅವರ ಆಳ್ವಿಕೆಯ ಐತಿಹಾಸಿಕ ಬುನಾದಿಯಾದವು. ರಾಜಸ್ಥಾನದಲ್ಲಿ ತಮ್ಮ ಹಿರಿಯರ ಕಲಾತ್ಮಕ ಹಾಗೂ ಸಮಾರಂಭೋಚಿತವಾದ ವಿಷಯಗಳನ್ನು ಆಯ್ದು ಕೊಂಡು ಹಾಗೂ ಅವುಗಳನ್ನು ರಾಜ್ಯದ ಹೊಸ ಪದ್ಧತಿಯೊಂದಿಗೆ ಸೇರಿಸಿ ಅರಬ್- ಮುಸಲ್ಮಾನ್ ಚಕ್ರಾಧಿಪತ್ಯದ ಶ್ರೇಷ್ಠತೆಯನ್ನು ಬಿಂಬಿಸಲಾಯಿತು. ಹಲವಾರು ಪಶ್ಚಿಮ ಏಷ್ಯಾ ಸಂಸ್ಕೃತಿಗಳಿಗೆ ಆಶ್ರಯ ನೀಡಿ ತನ್ನ ಜಾಗತಿಕತೆಯನ್ನು ಪ್ರದರ್ಶಿಸಿತು. ಎಂದರೆ, ಆ ಅರಬರ ರಾಜಕೀಯ ಹಾಗೂ ಐತಿಹಾಸಿಕ ಸಂಪ್ರದಾಯಗಳು, ಇರಾನಿನ ಆದತ್ ಸಾಹಿತ್ಯ, ಮೆಡಿಟರೇನಿಯನ್ ತತ್ವಜ್ಞಾನ ಹಾಗೂ ವಿಜ್ಞಾನ ಇತ್ಯಾದಿ. ಚಕ್ರಾಧಿಪತ್ಯದ ಸಂಸ್ಕೃತಿಯು ಅಧಿಕಾರವನ್ನು ದೈವಿಕ ಕೊಡುಗೆ ಎಂದು ಭಾವಿಸಿತು. ಸಮಾಜದಲ್ಲಿ ತಾರತಮ್ಯವನ್ನು ಒತ್ತಿ ಹೇಳಿತು. ಒಡೆಯರ ಜವಾಬ್ದಾರಿ ಹಾಗೂ ಸಾಮಾನ್ಯ ವರ್ಗದ ಅಧೀನತೆ ಇದು ನೀತಿಯಾಗಿತ್ತು. ಹೊಸ ಸಂಸ್ಕೃತಿ, ಧಾರ್ಮಿಕತೆ, ಹೊಸ ಭಾಷೆ, ಸಾಹಿತ್ಯಿಕ ಅಭಿವ್ಯಕ್ತಿ, ಲೌಖಿಕ ಅಧಿಕಾರ ಹಾಗೂ ಸಂಪತ್ತಿನ ಮೇಲೆ ಆಧಾರಿತವಾದ ಐತಿಹಾಸಿಕ ಮಲಿಕತೆಯನ್ನು ಒತ್ತಿ ಹೇಳಿತು. ಲೌಖಿಕ ವಸ್ತುಗಳನ್ನು ಬೇಕೆಂದಿದ್ದು ಸೂಕ್ತವೇ ಅಲ್ಲವೆ ಎಂಬ ಪ್ರಾಚೀನ ಚರ್ಚೆಯ ಬಗ್ಗೆ ಅಬಾಸಿದ್ ಚಕ್ರಾಧಿಪತ್ಯದ ಸಂಸ್ಕೃತಿ ಸಕಾರಾತ್ಮಕವಾಗಿತ್ತು. ಹೀಗೆ ಹಿಂದಿನ ಕಾಲದಂತೆ ಒಂದು ಸಾಮ್ರಾಜ್ಯ ರಚನೆಯಾಗಿ ಒಂದು ಹೊಸ ಸಂಸ್ಕೃತಿ ನಾಗರಿಕತೆ ಕಾಣಿಸಿಕೊಂಡಿತು ಮತ್ತು ಸಾಮ್ರಾಜ್ಯ ಕಾಲ ಎಂದರೆ ರಾಜಕೀಯ ಸಂಘಟನೆ ಅಷ್ಟೇ ಅಲ್ಲದೆ ನೈತಿಕ ಹಾಗೂ ಸಾಂಸ್ಕೃತಿಕ ಪ್ರತೀಕವಾಯಿತು.

ಹೊಸ ನಗರ ಕೇಂದ್ರಗಳು, ಆರ್ಥಿಕ ಅಭಿವೃದ್ದಿ, ಆಧುನಿಕ ಸಮುದಾಯಗಳ ರಚನೆ ಇವುಗಳನ್ನು ಒಳಗೊಂಡ ಪಶ್ಚಿಮ ಏಷ್ಯಾ ಪ್ರದೇಶದುದ್ದಕ್ಕೂ ವ್ಯಾಪಿಸಿದ ಹೊಸ ಸಾಮ್ರಾಜ್ಯವನ್ನು ಸ್ಥಾಪಿಸಿದ ಸಾಮಾಜಿಕ ಪ್ರಕ್ರಿಯೆಯು ಪ್ರಮುಖವಾಗಿ ಆಧಾರಗಳಿಂದ, ಧಾರ್ಮಿಕ ಪ್ರಮುಖರು ಮುಂದಾಳುಗಳಾಗಿರುವ ಮತೀಯ ಸಮುದಾಯಗಳು ಸಂಘಟಿತವಾಗಿರುವ ಒಂದು ಸ್ವತಂತ್ರ ನಾಗರಿಕ ಜನ ಜೀವನದ ಸೃಷ್ಟಿಯಾಯಿತು. ಆದರೆ ಇವರಲ್ಲಿ ಚಕ್ರಾಧಿಪತ್ಯವನ್ನು ವಿರೋಧಿಸುವ ಪ್ರವೃತ್ತಿ ಕಂಡುಬಂತು. ಪ್ರವಾದಿಯ ಕುಟುಂಬದವರು ಅಥವಾ ಜೊತೆಗಾರರು ಮತ್ತು ಅವರ ಉತ್ತರಾಧಿಕಾರಿಗಳು, ಕುರಾನಿನ ಪಾಠಕರು, ಮುಸಲ್ಮಾನ ಕಾನೂನು ಹಾಗೂ ಇತಿಹಾಸತಜ್ಞರು, ಸೂಫಿ ಪಂಥೀಯರು ಹಲವಾರು ಶಿಷ್ಯರನ್ನೂ, ವಿದ್ಯಾರ್ಥಿಗಳನ್ನೂ ಹಾಗೂ ಅನುಯಾಯಿಗಳನ್ನೂ ಸಂಪಾದಿಸಿದರು; ಇದರಿಂದ ಶಿಯಾ ಮತ್ತು ಖಾರೀಜಿ ಸಂಘಗಳು, ಸುನ್ನಿ ಪಂಥ ಹಾಗೂ ಸುನ್ನಿ ಶಿಷ್ಯ ಪರಂಪರೆ ಹುಟ್ಟಿಕೊಂಡವು. ಈ ಗುಂಪುಗಳು ಚಿಕ್ಕದಾಗಿದ್ದು, ದೀಕ್ಷೆ ಪಡೆದವನಿಗೆ ಮಾತ್ರ ಪ್ರವೇಶವಿದ್ದ ಪಂಥಗಳಾಗಿದ್ದವು. ಆ ಪೈಕಿ ಕೆಲವು ಗುಂಪುಗಳು ಸಾಮೂಹಿಕ ಅನುಯಾಯಿತ್ವವನ್ನು ಸಂಪಾದಿಸಿದವು. ಖಲೀಫರ ಸಂಪ್ರದಾಯಕ್ಕೆ ವಿರುದ್ಧವಾಗಿ ಈ ಎಲ್ಲ ಗುಂಪುಗಳು ಪ್ರವಾದಿ ಮಹಮ್ಮದ ಸಂಪ್ರದಾಯಕ್ಕೆ ಸೇರುವುದಾಗಿ ಹಾಗೂ ಇಸ್ಲಾಮಿನ ತತ್ವಗಳನ್ನು ಪಾಲಿಸುವುದಾಗಿ ಘೋಷಿಸಿದರು. ಶಿಯಾಗಳು ಹಾಗೂ ಖಾರೀಜಿ ಗಳು ಮೊದಲಿಗೆ ಖಲೀಫ್ ಸಂಪ್ರದಾಯವನ್ನು ತೀವ್ರವಾಗಿ ವಿರೋಧಿಸಿದರು. ಆದರೆ, ೯ನೆಯ ಶತಮಾನದ ವೇಳೆಗೆ, ೧೨ ಶಿಯಾ ಮತ್ತು ಹಲವು ಖಾರೀಜಿಗಳ ಉದ್ಧಾರಕನು ಆವತರಿಸುವನೆಂಬ ಕನಸು-ಆಸೆ ಭಗ್ನವಾಗಿ ಅದು ಅವರು ಮೋಕ್ಷಾಕಾಂಕ್ಷಿ ಗಳಾಗಿ, ರಾಜಕೀಯ ಆಕಾಂಕ್ಷೆಗಳನ್ನು ಸ್ಥಳೀಯ ಸಾಮುದಾಯಿಕ ವ್ಯವಹಾರಗಳಿಗೆ ರೂಪಾಂತರ ಗೊಳಿಸಿಕೊಂಡರು ಹಾಗೂ ಧಾರ್ಮಿಕ ಜೀವನ ನಡೆಸತೊಡಗಿದರು. ವೈಯಕ್ತಿಕ ವರ್ತನೆ ಗಳಿಗೆ ರೂಪಾಂತರಿಸಿದರು. ಆಸೆಗಳನ್ನು ಕಳೆದುಕೊಂಡು ಶೋಕ ವಾತಾವರಣದಲ್ಲಿ ಬಾಳಿದರು. ಲೌಕಿಕದಲ್ಲಿ ಇದ್ದುಕೊಂಡೇ ಪ್ರಾಪಂಚಿಕ ಜೀವನದಿಂದ ವಿರಕ್ತರಾದರು. ತಾತ್ವಿಕವಾಗಿ ಖಲೀಫ ಸಿದ್ಧಾಂತವನ್ನು ಬೆಂಬಲಿಸಿದ ಸುನ್ನಿಗಳು ಕೂಡ ಸಾರ್ವಜನಿಕ ಬಂಧನಗಳಿಂದ ದೂರ ಉಳಿದು ಚಿಕ್ಕಚಿಕ್ಕ ಸಮುದಾಯಗಳ ಜೀವನ ಹಾಗೂ ವೈಯಕ್ತಿಕ ಧಾರ್ಮಿಕ ಆಚರಣೆಯ ಮೇಲೆ ಗಮನವನ್ನು ಕೇಂದ್ರೀಕರಿಸಿದರು. ನಗರ ಜೀವನದಲ್ಲಿ ಉಂಟಾದ ಬೃಹತ್ ಪ್ರಶ್ನೆ ಎಂದರೆ ಅಮರತ್ವದ ದೃಷ್ಟಿಯಿಂದ ಈ ಜೀವನದಲ್ಲಿ ಬದುಕಬೇಕಾದ ಮುಸಲ್ಮಾನನೋ ಅಥವಾ ಆಂತರಿಕ ಶ್ರದ್ಧೆಯಿಂದ ಮುಸಲ್ಮಾನ ಪಂಥಕ್ಕೆ ತಾನು ಮಾಡಬೇಕಾದ ಕರ್ತವ್ಯಗಳನ್ನು ನೆರವೇರಿಸುವವನು ನಿಜವಾದ ಮುಸಲ್ಮಾನನೋ ಅಥವಾ ದೇವರೊಂದಿಗೆ ಆಧ್ಯಾತ್ಮ ಸಂಬಂಧವನ್ನು ಹೊಂದಿರುವವನು ನಿಜವಾದ ಮುಸಲ್ಮಾನನೋ? ೭ ಹಾಗೂ ೧೦ನೆಯ ಶತಮಾನಗಳ ನಡುವಣ ಅವಧಿಯಲ್ಲಿ ಈ ಪ್ರಶ್ನೆಗಳಿಗೆ ಮುಸಲ್ಮಾನ ನಗರ ಜನಾಂಗಗಳ ಉತ್ತರ, ಕುರಾನಿನ ಭಾಷ್ಯ, ಹಾದಿತ್ ಮುಸಲ್ಮಾನ ವಿಚಾರಧಾರೆ ಹಾಗೂ ತತ್ವಗಳು ಮತ್ತು ಪಾರಮಾರ್ಥಿಕ ಉಪನ್ಯಾಸಗಳಲ್ಲಿ ವ್ಯಕ್ತವಾಗಿ ಅವು ಇಸ್ಲಾಂ ಧರ್ಮದಲ್ಲಿ ಗ್ರೀಸ್, ಇರಾನ್ ಅರೇಬಿಯಾ ಪರಂಪರೆಗಳನ್ನು ಸೇರಿಸಿದವು. ಪಶ್ಚಿಮ ಏಷ್ಯಾದ ಧರ್ಮಗಳಿಗೆ ಹೊಸ ಉನ್ನತ ಸಾಂಸ್ಕೃತಿಕ ಏಕದೇವತ್ವ ದೃಷ್ಟಿಯನ್ನು ನೀಡಿದವು.

ಇಸ್ಲಾಂ ಸಂಸ್ಕೃತಿಯ ಚಕ್ರಾಧಿಪತ್ಯದ ಹಾಗೂ ನಾಗರಿಕ ದೃಷ್ಟಿಕೋನಗಳು ಪರಸ್ಪರ ನಿಕಟಸಂಬಂಧವುಳ್ಳವುಗಳಾಗಿದ್ದವು. ರಾಜಸ್ಥಾನದಲ್ಲಿ ಕುರಾನಿನ ಧಾರ್ಮಿಕ ಔನ್ನತ್ಯಕ್ಕೆ ಬೆಲೆಯಿತ್ತು; ಹಾದಿತ್‌ಗೆ ಮಾನ್ಯತೆಯಿತ್ತು ಹಾಗೂ ಮುಸಲ್ಮಾನ ಐತಿಹಾಸಿಕ ಸಂಪ್ರದಾಯಕ್ಕೆ ಗೌರವವಿತ್ತು. ಕಾನೂನು, ರಾಜಕೀಯ ಹಾಗೂ ನಿಯಂತ್ರಣಾತ್ಮಕ ಮತ್ತು ನೈತಿಕ ಪ್ರಕ್ರಿಯೆ ಗಳನ್ನು ನಿರ್ವಹಿಸುತ್ತಿತ್ತು. ರಾಜ್ಯದಲ್ಲಿ ಹಲವಾರು ಕಾನೂನುತಜ್ಞರನ್ನು ಹಾಗೂ ನ್ಯಾಯ ವಾದಿಗಳನ್ನು ನೆಯಮಿಸಿಕೊಳ್ಳಲಾಯಿತು. ಮುತಾಜಿಲಿ ತತ್ವಜ್ಞಾನವು ನಗರ ವಿಜ್ಞಾನದಷ್ಟೇ ಶ್ರೇಷ್ಠವಾಗಿತ್ತು. ಅಂತೆಯೇ ನಗರಗಳ ಉಲ್ಮಾಗಳು ಹಾಗೂ ಸೂಫಿಗಳು ರಾಜಸ್ಥಾನದ ಸಂಸ್ಕೃತಿಯ ಹಲವು ಅಂಗಗಳನ್ನು ಸ್ವೀಕರಿಸಿದರು. ಅರಮನೆ ಹಾಗೂ ಮಸೀದಿಗಳ ಗುರುತುಗಳೂ, ಖಲೀಫರ ಅಧಿಕಾರದ ಮನ್ನಣೆ, ಅರಬ್ ಭಾಷೆ, ಕಾವ್ಯ ಹಾಗೂ ಇತಿಹಾಸದ ಮಹತ್ವ, ಸಾಂಸ್ಕೃತಿಕ ಆಧುನಿಕ ಪ್ಲೇಟೋ ತತ್ವಜ್ಞಾನದ ವಿಚಾರಗಳನ್ನು ನಗರದ ಜನತೆ ಸ್ವೀಕರಿಸಿದರು. ಸಾಂಸ್ಕೃತಿಕ ಆಸಕ್ತಿಗಳು ಸಮಾನವಾಗಿದ್ದರೂ ಎರಡೂ ತಂಡಗಳಲ್ಲಿ ಕೆಲವು ಮೂಲಭೂತ ಮಲ್ಯಗಳ ಬಗ್ಗೆ ವಿರೋಧವಿತ್ತು. ಹಲಬಾಲಿಗಳು ಖಲೀಫರ ಧಾರ್ಮಿಕ ಅಧಿಕಾರವನ್ನು ಅವಹೇಳನೆ ಮಾಡಿದರು. ರಾಜ್ಯ ಮತ್ತು ಧಾರ್ಮಿಕ ಸಮುದಾಯ ಗಳ ಮಧ್ಯೆ ಅಂತರವನ್ನು ಗುರುತಿಸಿದರು. ಖಲೀಫ್ ಮತ್ತು ಉಲ್ಮಾಗಳ ನಡುವಣ ೯ನೆಯ ಶತಮಾನದಲ್ಲಿಯ ಹೋರಾಟದಿಂದ ಇಸ್ಲಾಂ ಸಮಾಜದಲ್ಲಿ ಖಲೀಫರು ಮತ್ತು ರಾಜಸ್ಥಾನ, ಉಲ್ಮಾಗಳು ಹಾಗೂ ಸೂಪಿಗಳು ಎಂಬ ೨ ಸಂಯುಕ್ತ ತಂಡಗಳು ಇದ್ದುದು ಸ್ಪಷ್ಟವಾಯಿತು ಹಾಗೂ ಚಕ್ರಾಧಿಪತ್ಯ ಮತ್ತು ನಗರ ಜನತೆ, ರಾಜಕೀಯ ಮತ್ತು ಮತೀಯ ಲೌಕಿಕ ಪಾರಲೌಕಿಕ, ಇಂಥ ಎರಡು ಬಗೆಯ ಪ್ರಮುಖದಿಂದ ಮುನ್ನಡೆಯಿತೆಂಬುದು ಸ್ಪಷ್ಟವಾಗುತ್ತದೆ. ಆ ಕಾಲದಿಂದ ಇಸ್ಲಾಂ ಸಮಾಜವನ್ನು ಸಾಂಸ್ಕೃತಿಕವಾಗಿ ಮನ್ನಣೆ ಪಡೆದ ತತ್ವದ ಆಧಾರದ ಮೇಲೆ ಅಲ್ಲದಿದ್ದರೂ ಪ್ರತ್ಯೇಕ ರಾಜ್ಯ ಹಾಗೂ ಧಾರ್ಮಿಕ ಸಂಸ್ಥೆಗಳು ಎಂದು ಪ್ರತ್ಯೇಕವಾಗಿ ಗುರುತಿಸಲಾಗುತ್ತಿದೆ.

೯ನೆಯ ಶತಮಾನದ ಅಂತ್ಯದ ವೇಳೆಗೆ ಇಸ್ಲಾಂ ಪ್ರಮುಖರು ಹಾಗೂ ಅವರ ಸಾಂಸ್ಕೃತಿಕ ದೃಷ್ಟಿಕೋನ ಒಂದು ಸೀಮಿತ ವರ್ಗದ ಜನತೆಯನ್ನು ಪ್ರತಿನಿಧಿಸುತ್ತಿದ್ದು ಅದರಲ್ಲಿ ಪ್ರಸ್ತುತ ಧಾರ್ಮಿಕ ಪ್ರಮುಖರು, ಅರಬರ ಮುಸಲ್ಮಾನ ಪಟ್ಟಣಗಳ ಹಾಗೂ ಮತಾಂತರ ಗೊಂಡ ಗ್ರಾಮೀಣ ಪ್ರದೇಶದ ಜನರು ಮಾತ್ರ ಸೇರಿದ್ದರು. ಈ ಧಾರ್ಮಿಕ ಪ್ರಮುಖರ ಪ್ರಭಾವ ಹಾಗೂ ಸಾಂಸ್ಕೃತಿಕ ಪ್ರಭಾವಗಳು ೯ ಹಾಗೂ ೧೦ನೆಯ ಶತಮಾನದಲ್ಲಿ ಅಬಾಸಿದ್ ಸಾಮ್ರಾಜ್ಯ ಒಡೆದು ಹೋದ ಮೇಲೆ ಸಾಮೂಹಿಕ ಇಸ್ಲಾಂ ಸಮಾಜವಾಗಿ ಮೈದಳೆದವು. ಅಬಾಸಿದ್ ಸಾಮ್ರಾಜ್ಯವು ಹೊರಗಿನ ದಾಳಿಗಳಿಂದ ನಾಶವಾಗಿರದೆ ಅದರ ಮೂಲಭೂತ ಸಂಸ್ಥೆಗಳ ಉತ್ಕ್ರಾಂತಿಯ ಫಲದಿಂದಾಗಿತ್ತು. ಅಧಿಕಾರದ ಸಹಾಯದ ಅಭಾವ ತೋರಿದಾಗ ಹಾಗೂ ಸೈನ್ಯ ಬಲದ ಮೇಲೆ ಹೆಚ್ಚು ಹೆಚ್ಚಾಗಿ ಅವಲಂಬಿಸಬೇಕಾಗಿ ಬಂದಾಗ ಖಲೀಫ ಸಾಮ್ರಾಜ್ಯವು ಲೌಖಿಕ ಅಧಿಕಾರವನ್ನು ಪ್ರತಿನಿಧಿಸಬೇಕೆ ಅಥವಾ ಧಾರ್ಮಿಕ ಮಲ್ಯಗಳನ್ನು ಪ್ರತಿನಿಧಿಸಬೇಕೆ ಎಂಬ ಸಂದಿಗ್ಧದಲ್ಲಿ ತೊಡಗಿ ಕೊನೆಗೆ ರಾಜಕೀಯ ಪ್ರಭಾವವನ್ನೇ ಆಶ್ರಯಿಸಿತು. ಸೈನ್ಯ ಹಾಗೂ ಆಡಳಿತ ಎರಡೂ ಸ್ವತಂತ್ರ ವರ್ಗಗಳಾಗಿ ಒಡೆದವು. ಗುಂಪು ಕಲಹಗಳಿಂದಾಗಿ ಕೇಂದ್ರಸರ್ಕಾರ ಹಾಗೂ ಪ್ರಾಂತಗಳ ಆಡಳಿತಗಳ ಮೇಲೆ ನಿಯಂತ್ರಣ ಸಾಧಿಸುವುದು ಖಲೀಫರಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಸ್ವತಂತ್ರ ಯುದ್ಧವೀರರು ಸಾಮ್ರಾಜ್ಯ ಹೇಳಹೆಸರಿಲ್ಲದಂತಾಯಿತು. ಈ ಒಡಕಿನ ಪ್ರಕ್ರಿಯೆಯಲ್ಲಿ ಅಧಿಕಾರಶಾಹಿಗಳು ಹಾಗೂ ಭೂಒಡೆಯರು ನಾಶವಾಗಿ ಕೇಂದ್ರಸರ್ಕಾರದೊಂದಿಗೆ ಸೇರಲು ಇಚ್ಛಿಸದ ಅಲೆಮಾರಿ ಧಾರ್ಮಿಕ ಪರಂಪರೆ ಗುಲಾಮ ಸೈನಿಕರು ಹಾಗೂ ಸ್ಥಳೀಯ ಯುದ್ಧವೀರರಿಗೆ ಅಧಿಕಾರ ಸಿಕ್ಕಿತು.

ಅಬಾಸಿದ್ ಸಾಮ್ರಾಜ್ಯ ಅವಸಾನವಾದ ಮೇಲೆ ರಾಜ್ಯಗಳು, ಧಾರ್ಮಿಕ ಪ್ರಮುಖರು ಹಾಗೂ ಸಂಸ್ಥೆಗಳು ಹೆಚ್ಚು ಎದ್ದು ಕಾಣತೊಡಗಿದವು. ಅಬಾಸಿದ್ ಸಾಮ್ರಾಜ್ಯದ ನಂತರ ಬಂದ ರಾಜ್ಯಗಳು ಜತ್ಯತೀತ ಆಳ್ವಿಕೆಯನ್ನು ಪ್ರಾರಂಭಿಸಿದವು. ಮುಸಲ್ಮಾನ ಧಾರ್ಮಿಕ ಸಂಘಗಳು ಜನತೆಯನ್ನು ಸಾಮೂಹಿಕ ಇಸ್ಲಾಂ ಸಮಾಜವನ್ನಾಗಿ ಸಂಘಟಿಸುವ ಕಾರ್ಯವನ್ನು ಕೈಗೊಂಡವು. ೧೦ರಿಂದ ೧೩ನೆಯ ಶತಮಾನದವರೆಗೆ ಅರಾಜಕತೆಯಿಂದಾಗಿ ಹಳೆಯ ಸಾಮ್ರಾಜ್ಯ ಹೋಗಿ ಹೊಸ ಸಾಮ್ರಾಜ್ಯಗಳು ಹಾಗೂ ಹೊಸ ಧಾರ್ಮಿಕ ಪ್ರಮುಖರು ಬಂದರು. ಪಶ್ಚಿಮ ಏಷ್ಯಾವನ್ನು ತುರ್ಕಿಸ್ತಾನದ ಅಲೆಮಾರಿ ಯೋಧರು ಗೆದ್ದು ಗುಲಾಮ ಯುದ್ಧವೀರರು ಆಳರಸರಾದರು. ಅವರು ಹಲವಾರು ಪಶ್ಚಿಮ ಏಷ್ಯಾ ಪ್ರಾಂತಗಳನ್ನು ಗೆದ್ದರು. ಚಕ್ರಾಧಿಪತ್ಯದ ನಂತರದ ಕಾಲದಲ್ಲಿ ಅಬಾಸಿದ್ ಖಲೀಫರಿಗೆ ನಾಮಮಾತ್ರ ಅಧಿಕಾರ ದಕ್ಕಿತು. ಗುವಾಹಿದ್ ಛೆಯಾವಿದೆ ಮತ್ತು ಸುಲ್ ಸುಕ್ ಸುಲ್ತಾನರು ನಿಜವಾದ ರಾಜಕೀಯ ಆಳ್ವಿಕೆಯನ್ನು ಸಂಘಟಿಸಿದರು.

ಸುಲ್‌ಜುಕ್‌ರ ಆಳ್ವಿಕೆಯಲ್ಲಿ ಸಂಸ್ಥೆಗಳು ಒಂದು ನಿಶ್ಚಿತ ಮಾದರಿಯಲ್ಲಿ ರೂಪು ಗೊಂಡವು. ಇಲ್ಲಿ ಆಳುವವರ ಅಧಿಕಾರವು ಒಬ್ಬ ಗುಲಾಮ ರಕ್ಷಕನ ಕೈಯಲ್ಲಿದ್ದು ಅಲೆಮಾರಿ ಜನಾಂಗಗಳು ಆಡಳಿತವನ್ನು ನಡೆಸುತ್ತಿದ್ದವು. ರಾಜಸ್ಥಾನದ ಅಧಿಕಾರಿಗಳು ಹಾಗೂ ಉಲ್ಮಾಗಳು ಆಡಳಿತಕ್ಕೆ ಸಹಾಯಕರಾಗಿದ್ದರು. ಪ್ರಾಂತಗಳಲ್ಲಿಯ ರಾಜ್ಯಪಾಲರು, ಸೈನ್ಯ, ಅಧಿಕಾರ ಹಾಗೂ ಹಣಕಾಸು ಅಧಿಕಾರಿಗಳು ಸುಲ್ತಾನರ ಪ್ರತಿನಿಧಿಗಳಾಗಿದ್ದರು. ಗ್ರಾಮೀಣ ಆದಾಯದ ಮೇಲೆ ನಿಯಂತ್ರಣ ಸಾಧಿಸುವುದಕ್ಕೆ ಇಕ್ತಾಗಳನ್ನು ವ್ಯಾಪಕವಾಗಿ ಏರ್ಪಡಿಸಲಾಗಿತ್ತು. ಆದರೆ ರಾಜಕೀಯ ಸುವ್ಯವಸ್ಥೆಯನ್ನು ತರುವಲ್ಲಿ ಈ ಸಂಸ್ಥೆಗಳು ಸಮರ್ಥವಾಗಿರಲಿಲ್ಲ. ಪರಸ್ಪರ ಸ್ಪರ್ಧಿಸುತ್ತಿದ್ದ ಮೇಲ್ವರ್ಗದ ಮನೆತನಗಳು, ಬುಡಕಟ್ಟುಗಳ ರಾಜರು ಹಾಗೂ ಗುಲಾಮ ಪ್ರಮುಖರ ನಡುವಣ ವಿವಾದಗಳಿಂದಾಗಿ ಅಧಿಕಾರದ ಕೇಂದ್ರೀಕರಣ ಸಾಧಾರಣವಾಗಿರಲಿಲ್ಲ. ಇಕ್ತಾ ವ್ಯವಸ್ಥೆಯ ಆಡಳಿತದಲ್ಲಿ ತೆರಿಗೆ ಸಂಗ್ರಹಣೆಯ ಹಕ್ಕು ಸೈನ್ಯ ಪ್ರಮುಖರಲ್ಲಿ ನಿಹಿತವಾಗಿದ್ದು, ಇದು ಕೂಡ ಅಧಿಕಾರ ವಿಭಜಿತವಾಗುವುದಕ್ಕೆ ಕಾರಣವಾಯಿತು. ಹೀಗಾದರೂ ಸುಲ್ತಾನ ಆಳಿಕೆ, ಗುಲಾಮ ಮಿಲಿಟರಿ ದಳಗಳು ಇಕ್ತಾ ಆಡಳಿತ-ಇವು ಕಾರ್ಯಸೂತ್ರವನ್ನು ರಚಿಸುವಂಥ ಮಾದರಿಯ ಸರ್ಕಾರವನ್ನು ರೂಪಿಸಿದವು.

ಈ ಸಂಸ್ಥೆಗಳ ಒಗ್ಗೂಡುವಿಕೆಯು ಅಧಿಕಾರದ ಚಲಾವಣೆಯನ್ನು ಪರಿಭಾವಿಸುವ, ತರ್ಕಬದ್ಧವಾಗಿ ನೋಡುವ ಹಾಗೂ ಅಧಿಕೃತಗೊಳಿಸುವ ಪರಿಕಲ್ಪನೆಗಳನ್ನು ಬೆಸೆಯುವ ಕೊಂಡಿಯಾಗಿತ್ತು. ಸರ್ಕಾರದ ೩ ಪರಿಕಲ್ಪನೆಗಳಿಗೆ ಸಾಮಾನ್ಯ ಮನ್ನಣೆ ದೊರೆಯಿತು. ಮೊದಲನೆಯದೆಂದರೆ ಮುಸಲ್ಮಾನ. ಮುಸಲ್ಮಾನ ಎಂಬುದರಲ್ಲಿ ಖಲೀಫ ಎಂಬುದು ಮುಸಲ್ಮಾನ ಪಂಥವನ್ನು ಎತ್ತಿ ಹಿಡಿಯಲು, ಪ್ರವಾದಿಯಿಂದ ಆಜ್ಞೆ ಪಡೆದ ಹಾಗೂ ಭಗವಂತನ ಆಜ್ಞಾಯನ್ನು ಶಿರಸಾವಹಿಸಿ ನೆರವೇರಿಸಲು ಮುಸಲ್ಮಾನರನ್ನು ಸಂರಕ್ಷಿಸುವ, ಜಿಹಾದನ್ನು ತಡೆಗಟ್ಟುವ ಒಂದು ಪಂಥ. ಎಲ್ಲ ಕಾನೂನುಸಮ್ಮತ ಅಧಿಕಾರವನ್ನೂ ಖಲೀಫರು ಸುಲ್ತಾನರಿಗೆ ನೀಡಿ, ಸುಲ್ತಾನರು ಅದನ್ನು ತಮ್ಮ ಅಧೀನ ಅಧಿಕಾರಿಗಳಿಗೆ ನೀಡುತ್ತಾರೆ. ಆದರೂ ಸುಲ್ತಾನರು ಇಸ್ಲಾಂ ನ್ಯಾಯವನ್ನು, ಶಿಕ್ಷಣವನ್ನು ಎತ್ತಿ ಹಿಡಿದು ಉಲ್ಮಾವನ್ನು ಬೆಂಬಲಿಸಿ ಶೋಷಣೆಯನ್ನು ತಡೆಗಟ್ಟಬೇಕಾಗುತ್ತದೆ. ಶರಿಯಾವನ್ನು ಎತ್ತಿಹಿಡಿಯುವ ರಾಜನು, ಅವನು ಅಧಿಕಾರಕ್ಕೆ ಬಂದ ರೀತಿ ಹೇಗೇ ಇದ್ದರೂ ಮನ್ನಣೆಗೆ ಪಾತ್ರನಾಗುತ್ತಾನೆ. ಎರಡನೆಯದಾಗಿ ಸರ್ಕಾರವನ್ನು ವೈಯಕ್ತಿಕ ರೂಪವಾಗಿ ಗುರುತಿಸಲಾಗುತ್ತದೆ. ತಮ್ಮ ಒಡೆಯರಿಗೆ ಹಾಗೂ ಆಶ್ರಯದಾತರಿಗೆ ವಿಧೇಯಕರಾದ ಗುಲಾಮರು ಹಾಗೂ ಅನುಯಾಯಿಗಳ ಮೇಲೆ ಸಾಮ್ರಾಜ್ಯಗಳನ್ನು ಕಟ್ಟಲಾಗಿತ್ತು. ಒಬ್ಬ ಅಧೀನ ಅಧಿಕಾರಿಯು ತನ್ನನ್ನು ತಾನು ಎಂದೂ ರಾಜ್ಯದ ಕರ್ತವ್ಯಪಾಲಕನೆಂದು ಭಾವಿಸಲು ಆಗುತ್ತಿರಲಿಲ್ಲ; ಆದರೆ ರಾಜನ ಒಬ್ಬ ಉತ್ತಮ ಸೇವಕನೆಂದು ಭಾವಿಸಲಾಗು ತ್ತಿತ್ತು. ಗುಲಾಮಗಿರಿ ಎಂಬುದು ಪ್ರತ್ಯಾಯೋಜಿತ ಅಧಿಕಾರ ಎಂಬ ಗೌರವಯುತ ಪರಿಕಲ್ಪನೆಯ ವೈಯಕ್ತಿಕ ಬಾಧ್ಯತೆಯ ಪರಿಣಾಮಕಾರಿ ಅಭಿವ್ಯಕ್ತಿಯಾಗಿತ್ತು.

ಸರ್ಕಾರ ಎಂಬುದು ಇನ್ನೊಂದು ಅರ್ಥದಲ್ಲಿ ವೈಯಕ್ತಿಕ ರೂಪದಲ್ಲಿ ಪರಿಗಣಿತ ವಾಗುತ್ತಿತ್ತು. ರಾಜ್ಯವನ್ನು, ಆಳುವ ವ್ಯಕ್ತಿಯೊಡನೆ ಗುರುತಿಸಲಾಗುತ್ತಿತ್ತು. ಆಗಿನ ಎಲ್ಲ ರಾಜಕೀಯ ಸಾಹಿತ್ಯದಲ್ಲಿ ಎಂದರೆ ಮುಸಲ್ಮಾನ, ಪರ್ಷಿಯನ್ ಹಾಗೂ ಗ್ರೀಸ್ ಸಾಹಿತ್ಯಗಳಲ್ಲಿ ರಾಜನನ್ನು ಪರಿಪೂರ್ಣ ಮಾನವನನ್ನಾಗಿ ಚಿತ್ರಿಸಲಾಗುತ್ತಿತ್ತು ಹಾಗೂ ಅದನ್ನು ಬುದ್ದಿಮತ್ತೆ ಹಾಗೂ ಸದ್ಗುಣಗಳ ಪ್ರತಿಮೂರ್ತಿಯಾಗಿರುತ್ತಿದ್ದನು. ತನ್ನ ಅಧೀನ ಅಧಿಕಾರಿಗಳ ದುರಾಲೋಚನೆಗಳನ್ನು ತಡೆಗಟ್ಟಿ ಪ್ರಜೆಗಳಲ್ಲಿ ಒಳ್ಳೆಯತನವನ್ನು ಮೂಡಿಸುವಂಥ ವನಾಗಿರುತ್ತಿದ್ದನು. ಸರ್ಕಾರವು ವೈಯಕ್ತಿಕ ಅನುಬಂಧಗಳ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು ಧಾರ್ಮಿಕ ಆದರ್ಶಗಳನ್ನು ನೆರವೇರಿಸುವ ಕಾರಣದಿಂದಲೇ ಮನ್ನಣೆಗೆ ಪಾತ್ರವಾಗುತ್ತಿತ್ತು.

೩ನೆಯ ಹಂತದಲ್ಲಿ ಸರ್ಕಾರವನ್ನು ಪ್ರಾಚೀನ ಸಾಮ್ರಾಜ್ಯಗಳ ಐತಿಹಾಸಿಕ ತಲೆಮಾರು ಎಂದು ಪರಿಗಣಿಸಿ ಧಾರ್ಮಿಕ ಉದ್ದೇಶಗಳ ನೆರವೇರಿಕೆಗೆ ಮೀಸಲು ಎಂದು ಪರಿಗಣಿಸ ಲಾಗುತ್ತಿತ್ತು. ಅರಬ್ ಹಾಗೂ ಪರ್ಷಿಯನ್ ಪ್ರಾದೇಶಿಕ ವಾಸ್ತುಶಿಲ್ಪ, ಕಲೆ ಹಾಗು ಭಾವಚಿತ್ರಗಳು ರಾಜಕೀಯ ಆಳ್ವಿಕೆಗೆ ಹಾಗೂ ದೈವದತ್ತ ಆದೇಶಕ್ಕೆ ರಾಜನಲ್ಲಿ ರಕ್ತಗತವಾಗಿ ಇರುವ ವೈಭವಕ್ಕೆ, ಅಧಿಕಾರದ ಚಲಾವಣೆಗೆ, ಪಾರಮಾರ್ಥಿಕದ ನಯನಾಜೂಕಿನ ಸಮರ್ಥನೆಗೆ ಇರುವ ಸಂಬಂಧದ ಪ್ರತೀಕಗಳಾಗಿದ್ದವು. ಸುಲ್ತಾನರ ಆಳ್ವಿಕೆಯಲ್ಲಿ ಪ್ರಾಚೀನ ಪರ್ಷಿಯನ್ ಹಾಗೂ ತುರ್ಕ ರಾಜರೊಡನೆ ಈ ರಾಜರಿಗೆ ಇದ್ದ ವಂಶಾನುಗತ ಸಂಬಂಧ ಹಾಗೂ ಪೌರಾಣಿಕ ಸಂಬಂಧಗಳನ್ನು ಗುರುತಿಸಲು ಬಂದ ಐತಿಹಾಸಿಕ ಕೃತಿಗಳಿಗೆ ಪುಷ್ಟಿ ದೊರೆಯಿತು. ರಾಜನನ್ನು ದೇವರ ಸ್ವಂತ ಸೇವಕನೆಂಬಂತೆ ಪರಿಗಣಿಸಿ ಆತನಿಗೆ ಜಗತ್ತಿನ ಪೋಷಣೆಯ ಕಾರ್ಯವನ್ನು, ಪ್ರಜೆಗಳ ಭವಿಷ್ಯವನ್ನು ನಿರ್ಧರಿಸುವ ಅಧಿಕಾರವನ್ನು ವಹಿಸಲಾಗಿತ್ತು. ರಾಜನು ಸಮಾಜದ ವ್ಯವಸ್ಥಾಪಕನಾಗಿದ್ದ; ನಾಗರಿಕತೆಯ ಹರಿಕಾರನಾಗಿದ್ದ. ನಿಸರ್ಗದ ಸ್ವರೂಪದ ಮೇಲೆ ಪರಿಣಾಮ ಬೀರಬಲ್ಲ ಮಾಂತ್ರಿಕ ಶಕ್ತಿ ಆತನಿಗಿತ್ತು. ಸರ್ವಾಧಿಕಾರ ನಡೆಯುತ್ತಿದ್ದರೂ ರಾಜ್ಯಗಳು ವಿಶ್ವದ ಪ್ರತೀಕವಾಗಿದ್ದವು. ದೈನಂದಿನ ಜೀವನಕ್ಕಷ್ಟೇ ಅಲ್ಲದೆ ಸಾಮಾಜಿಕ ವ್ಯವಸ್ಥೆಯ ಪಾರಮಾರ್ಥಿಕ ಪೂರ್ಣತೆಗೂ ಅದು ಅಗತ್ಯವಾಗಿತ್ತು. ದೊಡ್ಡ ಸಾಮ್ರಾಜ್ಯಗಳು ನಾಶವಾದರೂ ಅನೆಯಕ ಸೈನ್ಯ ಶಕ್ತಿಯುಳ್ಳ ಮುಖಂಡರು ಸ್ವತಂತ್ರರಾದರು. ಭೂಮಿಯ ನಿಯಂತ್ರಣ ಇಕ್ತಾಗಳಲ್ಲಿ ವಿತರಣೆಗೊಂಡರೂ, ಸ್ಥಳೀಯ ಗಣ್ಯರಿಗೆ ಹಾಗೂ ಸೈನ್ಯಾಧಿಕಾರಿಗಳಿಗೆ ಅಧಿಕಾರ ಕೊಟ್ಟರೂ, ರಾಜ್ಯವು ಮಾನವ ಅಧಿಕಾರಕ್ಕಿಂತ ಪಾರಲೌಕಿಕ ಆದೇಶಕ್ಕೆ ಬದ್ಧವಾಗಿರುವ ವ್ಯವಸ್ಥೆಯೇ ಮುಂದುವರಿಯಿತು. ಹೀಗೆ ಸುಲ್ತಾನರಿಗೆ ಇಸ್ಲಾಂ ಪ್ರಕಾರ್ಯಗಳು ಹಾಗೂ ಪರಿಗಣನೆಗಳಿದ್ದರೂ ಇದಕ್ಕೆ ಸಮಾಂತರವಾಗಿ ಇಸ್ಲಾಮೇತರ ಪರ್ಷಿಯನ್ ಹಾಗೂ ತುರ್ಕಿಷ್ ರಾಜಕೀಯ ಪರಿಕಲ್ಪನೆಗಳು ಹುಟ್ಟಿಕೊಂಡವು. ಒಂದು ಇಸ್ಲಾಮಿಕ್ ರಾಜ್ಯವು ಇಸ್ಲಾಮೇತರ ಪ್ರಾದೇಶಿಕ ಹಾಗೂ ಸಾಂಸ್ಕೃತಿಕ ಅಭಿವ್ಯಕ್ತಿಯೂ ಆಗಿರುತ್ತಿತ್ತು.

ರಾಜ್ಯಗಳು ಸೈನ್ಯಾಡಳಿತಕ್ಕೆ ಒಳಪಟ್ಟ ಮೇಲೆ ಹಾಗೂ ಜತ್ಯತೀತವಾದ ಮೇಲೆ ಇಸ್ಲಾಮಿಕ್ ಧಾರ್ಮಿಕ ಸಂಘಗಳು ಪಶ್ಚಿಮ ಏಷ್ಯಾದ ಮತೀಯ ಸಂಘಗಳಿಗೆ ಜಾಗತಿಕ ಬುನಾದಿಯನ್ನೇ ಹಾಕಿದ್ದವು. ೯ನೆಯ ಶತಮಾನದವರೆಗೆ ಇಸ್ಲಾಂ ಧರ್ಮವು ಅರಬ ಜನರ ಧರ್ಮವಾಗಿದ್ದು ನಗರಗಳ ಜನಸಮುದಾಯಗಳನ್ನು ಒಂದುಗೂಡಿಸಿಕೊಂಡಿತು. ಆದರೆ ೧೦ರಿಂದ ೧೩ನೆಯ ಶತಮಾನಗಳವರೆಗೆ ಪಶ್ಚಿಮ ಏಷ್ಯಾದ ಜನರೆಲ್ಲಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ಇದರ ಕಾರಣವೆಂದರೆ ಅರಬ ಸಾಮ್ರಾಜ್ಯದ ವಿಘಟನೆಯಾಯಿತು ಹಾಗು ವಿದೇಶಿ ಮಿಲಿಟರಿ ಪ್ರಮುಖರು ಆ ಸ್ಥಾನವನ್ನು ಆಕ್ರಮಿಸಿದರು. ಭೂಮಾಲೀಕರ ಹಾಗೂ ಆಡಳಿತ ವರ್ಗದವರ ಆಳ್ವಿಕೆ ಪ್ರಾರಂಭವಾಯಿತು. ಇದರಿಂದಾಗಿ ಮುಸಲ್ಮಾನ ಧಾರ್ಮಿಕ ಮುಖಂಡರು ಮೇಲ್ವರ್ಗದ ಜನರನ್ನು ಇಸ್ಲಾಂ ಧರ್ಮಕ್ಕೆ ಪರಿವರ್ತಿಸಿ ಅವರಿಗೆ ಮುಖಂಡತ್ವ ನೀಡಿದರು. ಧಾರ್ಮಿಕ ಸಂಘಗಳ ಮೇಲೆ ಆಧಾರಿತವಾದ ಮತೀಯ ಸಂಸ್ಥೆಗಳ ವಿವಿಧ ರೂಪಗಳು ಖಲೀಫರ ಅವಧಿಯಲ್ಲಿ ರೂಪುಗೊಂಡವು.

೧೦ರಿಂದ ೧೩ನೆಯ ಶತಮಾನದ ಅವಧಿಯಲ್ಲಿ ಪಶ್ಚಿಮ ಏಷ್ಯಾದ ಜನತೆ ಸುನ್ನಿ ವಿಚಾರಧಾರೆ, ಸೂಫಿ ಸೋದರತ್ವ ಭಾವನೆ, ಶಯೀ ಪಂಥ ಹಾಗೂ ಇತರ ಮುಸಲ್ಮಾನ ಗುಂಪುಗಳೊಡನೆ ಗುರುತಿಸಲ್ಪಟ್ಟರು. ಮತ ಕುರಿತಾದ ವಿಚಾರಧಾರೆಯ ಗುಂಪುಗಳಲ್ಲಿ, ೮ ಹಾಗೂ ೯ನೆಯ ಶತಮಾನಗಳ ಕಾನೂನುತಜ್ಞರ ನಡುವೆ ನಡೆದ ಚರ್ಚೆಯ ಫಲವಾಗಿ ರೂಪುಗೊಂಡ ಕಾನೂನು ಸಂಹಿತೆಗಳಿಗೆ ಬದ್ಧರಾದ ಪರಿಣತರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿದರು. ಕಾನೂನು ಶಾಲೆಗಳು ಹಾಗೂ ಉಲ್ಮಾಗಳು ಉನ್ನತ ಶಿಕ್ಷಣ ವನ್ನು ಪ್ರಾರಂಭಿಸಿ ಶಿಕ್ಷಕರನ್ನು ಹಾಗೂ ನ್ಯಾಯಾಡಳಿತಾಧಿಕಾರಿಗಳನ್ನು ತರಬೇತುಗೊಳಿಸಿದರು. ಆ ಕಾನೂನು ಶಾಲೆಗಳಿಂದ ನೋಟರಿಗಳು ಹಾಗೂ ನ್ಯಾಯಾಧೀಶರು ರೂಪ ತಳೆದರು, ಅಲ್ಲದೆ ಈ ವೈಚಾರಿಕ ಪಂಥಗಳಿಗೆ, ಜನಪ್ರಿಯತೆಯಿಂದಾಗಿ ಹಲವಾರು ಅನುಯಾಯಿಗಳು ದೊರೆತರು. ವಿದ್ಯಾರ್ಥಿಗಳು ತಮ್ಮನ್ನು ತಾವು ತಮ್ಮ ಗುರುಗಳ ಶಿಷ್ಯರೆಂದು ಸೃಷ್ಟಿ ಯಾದವೋ ಆ ವರ್ಗಗಳು ಅದರಲ್ಲೂ ವಿಶೇಷವಾಗಿ ವ್ಯಾಪಾರಿಗಳು ಹಾಗೂ ಕುಶಲ ಕರ್ಮಿಗಳ ವರ್ಗಗಳಿಂದ ಆಶ್ರಯದಾತರು ಹಾಗೂ ಪೋಷಕರು ದೊರೆತರು. ಸೂಫಿ ತತ್ವದ ಪ್ರಕಾರ ಪ್ರತಿಯೊಬ್ಬ ಶಿಕ್ಷಕನಿಗೆ ಅವನ ಶಿಷ್ಯರೇ ಆಧಾರ. ಸಾಮಾನ್ಯ ವಾಸಸ್ಥಳಗಳಲ್ಲಿ ವಾಸಿಸುತ್ತಿದ್ದ ಸೂಫಿ ಗುಂಪುಗಳು ಖಾನಕ್‌ಗಳೆಂದು ಹೆಸರಾದವು. ೧೨ ಮತ್ತು ೧೩ನೆಯ ಶತಮಾನಗಳಲ್ಲಿಯ ಸೂಫಿ ಗುರುಗಳು ತಮ್ಮನ್ನು ತಾವು ಮೊದಲಿನ ಗುರುಗಳ ಉತ್ತರಾಧಿಕಾರಿಗಳೆಂದು ಕರೆದುಕೊಳ್ಳಲು ಪ್ರಾರಂಭಿಸಿದ ಮೇಲೆ ತಾರೀಖ್‌ಗಳು ಅಥವಾ ಸೋದರತ್ವ ಸಂಘಗಳು ರಚಿತವಾದವು. ಒಬ್ಬನೆಯ ಗುರುವಿನಿಂದ ಬಂದವರು ತಮ್ಮನ್ನು ತಾವು ಒಂದೇ ಆಧ್ಯಾತ್ಮ ಸಿದ್ಧಾಂತಕ್ಕೆ ಸೇರಿದವರೆಂದು ಭಾವಿಸಿದರು ಹಾಗೂ ಅದೇ ಉನ್ನತಾಧಿಕಾರವನ್ನು ಅಂಗೀಕರಿಸಿದ ದೊಡ್ಡ ಧಾರ್ಮಿಕ ಆಂದೋಳನದ ಘಟಕ ವೆಂದು ಭಾವಿಸಿದರು. ಇಂತಹ ಸಂಘಟನೆಗಳು ಪ್ರಾದೇಶಿಕ ಹಾಗೂ ವಿಶ್ವವ್ಯಾಪಿ ಸೋದರತ್ವ ಸಂಘಗಳಾದವು.

ಇಸ್ಲಾಮಿಕ್ ಸಂಘಟನೆಗಳು ಹಾಗೂ ಪರಿಗಣನೆಗಳು ಬೇರೆ ಹೆಸರಿನಲ್ಲಾದರೂ ಗ್ರಾಮೀಣ ಸಮಾಜಗಳಲ್ಲೂ ಸಂಸ್ಥೆಗಳಾಗಿ ರಚಿತವಾದವು. ಪಶ್ಚಿಮ ಏಷ್ಯಾದ ವಂಶಗಳು, ಮನೆತನಗಳು, ಸ್ವತಂತ್ರ ಪಾಳೆಯಗಾರರ ನೇತೃತ್ವದಲ್ಲಿ ಇದ್ದ ಗ್ರಾಮೀಣ ಸಮುದಾಯಗಳು, ಬುಡಕಟ್ಟು ಸಂಪ್ರದಾಯದ ಮೂಲಕ ಮನ್ನಣೆಗೆ ಪಾತ್ರವಾಗಿ, ಪ್ರಾಚೀನ ಸಂಸ್ಕೃತಿಯನ್ನು ಅಂಗೀಕರಿಸಿದ ಕಾರಣದಿಂದಾಗಿ ಸಾಮಾಜಿಕ ವ್ಯವಸ್ಥೆಯ ಬೆನ್ನೆಲುಬಾಗಿ ಮುಂದುವರೆದವು. ಮೂಲ ಮನೆತನ ಹಾಗೂ ಅವುಗಳ ವ್ಯಾಪಕ ರೂಪದ ರಚನೆಗಳನ್ನು ಅರಬ್ ಹಾಗೂ ತುರ್ಕಿಸ್ತಾನಗಳ ವಲಸೆಗಾರರು ಮತ್ತೆ ಜರಿಗೆ ತಂದರು. ಈ ಸಮಾಜಗಳಲ್ಲಿ, ವಿಭಾಗ ರೂಪದಲ್ಲಿದ್ದ ಜನರನ್ನು ಧಾರ್ಮಿಕ ಹಾಗೂ ರಾಜಕೀಯ ಆಂದೋಳನಗಳಿಗೆ ಸಂಘಟಿತ ಗೊಳಿಸಲು ಮುಸಲ್ಮಾನ ಧಾರ್ಮಿಕ ಮುಖಂಡತ್ವ ಹಾಗೂ ಮುಸಲ್ಮಾನ ಚಿಹ್ನೆಗಳನ್ನು ಬಳಸಲಾಯಿತು. ಅರಬ ಮುಸಲ್ಮಾನ ಆಂದೋಳನ ಎಂದಿನಿಂದಲೂ ಇರುವಂಥದೇ. ಇದಲ್ಲದೆ ಅಸ್ಥಿರವಾಗಿದ್ದ ಇಸ್ಲಾಂ ಸಮಾಜದ ಸಂಘಟನೆಗೆ ಪೂರ್ವ ಅರೇಬಿಯಾದ ಖಾರಿಜಿಗಳು, ಬಯಲು ಪ್ರದೇಶದ ಕರಾವತಿಗಳು, ಪಶ್ಚಿಮ ಇರಾನಿನ ಸಫಾವಿದ್‌ರು ಮುಸಲ್ಮಾನ ಧಾರ್ಮಿಕ ಮುಖಂಡರೆನಿಸಿದರು ಹಾಗೂ ಗ್ರಾಮೀಣ ಸಂಘಟನೆಯ ಪ್ರತೀಕವಾದರು.

ಗ್ರಾಮೀಣ ಸಮುದಾಯಗಳಲ್ಲಿ ಸೂಫಿಗಳನ್ನು ಗೌರವಿಸುವುದಕ್ಕೆ ಹಾಗೂ ಮಸೀದಿಗಳಲ್ಲಿ ಪೂಜೆ ಸಲ್ಲಿಸಿ ಇಸ್ಲಾಂ ಪಂಥೀಯರನ್ನು ವ್ಯಾಪಕವಾಗಿ ಅಂಗೀಕರಿಸಿದ ಬಗ್ಗೆ ಆಧಾರಗಳಿವೆ. ೧೩ನೆಯ ಶತಮಾನಕ್ಕೆ ಪೂರ್ವದಲ್ಲಿ ಸೂಫಿಗಳನ್ನು ಮಾನವ ಹಾಗೂ ದೇವರ ನಡುವಿನ ಕೊಂಡಿ ಎಂದು ಗೌರವಿಸುವ ಪದ್ಧತಿ ಇದ್ದು ಇಸ್ಲಾಂ ಪೂರ್ವದ ಮಾಂತ್ರಿಕ ಪದ್ಧತಿಗಳನ್ನು, ಮೂಢನಂಬಿಕೆಗಳನ್ನು ಇಸ್ಲಾಮಿನ ಭಾಗವಾಗಿ ಅಂಗೀಕರಿಸಲಾಗಿತ್ತು. ಸೂಫಿಗಳನ್ನು ಸಾಮಾನ್ಯವಾಗಿ ಸಾಧುಗಳೆಂದು ನಂಬಲಾಗಿತ್ತು ಮತ್ತು ಅವರನ್ನು ಲೌಕಿಕ ಹಾಗೂ ಪಾರಲೌಕಿಕಗಳ ನಡುವಣ ಮಧ್ಯಸ್ಥಗಾರರೆಂದೂ, ಚಮತ್ಕಾರಗಳನ್ನು ಮಾಡುವವರೆಂದೂ, ವರಪ್ರದಾಯಕರೆಂದೂ ಗೌರವಿಸಲಾಗುತ್ತಿತ್ತು. ಈ ನಂಬಿಕೆಯ ಆಧಾರದಿಂದ ಸೂಫಿಗಳು ವಿವಾದಗಳನ್ನು ಬಗೆಹರಿಸುವವರಾಗಿ, ಮುಖ್ಯಸ್ಥರನ್ನು ಆರಿಸುವವರಾಗಿ ಸುದೂರದ ವ್ಯಾಪಾರಗಳನ್ನು ಸಂಘಟಿಸುವವರಾಗಿ, ಯುವಕರ ಶಿಕ್ಷಕರಾಗಿ, ರೋಗಗಳನ್ನು ಗುಣಪಡಿಸು ವವರಾಗಿ, ಕಠಿಣ ಸನ್ನಿವೇಶಗಳಲ್ಲಿ ಸಭೆ ಸಮಾರಂಭಗಳಲ್ಲಿ ಮದುವೆ ಕಾರ್ಯಗಳಲ್ಲಿ ನೇತೃತ್ವ ವಹಿಸುವವರಾಗಿ, ಹಬ್ಬಗಳನ್ನು ಆಚರಿಸುವವರಾಗಿ, ಯಂತ್ರರಕ್ಷೆಗಳನ್ನು ಅನುಗ್ರಹಿಸುವವರಾಗಿ ಮಾಟ ಮಂತ್ರ ಮಾಡುವವರಾಗಿ ಅಲ್ಲದೆ ಪಾರಮಾರ್ಥಿಕ ಹಾಗೂ ದೈವಿಕ ಲೋಕದೊಂದಿಗೆ ಮಾನವರನ್ನು ಬೆಸೆಯುವ ಕೊಂಡಿಗಳಾಗಿ ಕಾರ್ಯ ನಿರ್ವಹಿಸು ತ್ತಿದ್ದರು. ಈ ಪ್ರಕಾರದ ಸೂಫಿ ಪಂಥವು ಸಮಾಧಿಗಳನ್ನು ಗೌರವಿಸುವ, ಸಾಧು ಸನ್ಯಾಸಿಗಳ ಶಿಷ್ಯರನ್ನು ಉತ್ತರಾಧಿಕಾರಿಗಳೆಂದು ಗೌರವಿಸುವ, ಸಮಾಧಿಯ ಸುತ್ತ ಹಬ್ಬಗಳನ್ನು ಬಲಿಗಳನ್ನು ನಡೆಸುವ ಸಂಪ್ರದಾಯಗಳಿಗೆ ಹಾದಿ ಮಾಡಿಕೊಟ್ಟಿತು. ಇಂತಹ ಸಂದರ್ಭಗಳಲ್ಲಿ ಇಸ್ಲಾಂ ಮತವು ಸಾಮುದಾಯಿಕವಾಗಿ ಕಾರ್ಯ ನಡೆಸಿದ ಸಂಘಟಿತ ಸಂಘವೊಂದರ ರಚನೆಗೆ ಕಾರಣವಾಗಿದ್ದರೂ ತಮ್ಮ ತಮ್ಮ ರಕ್ತಸಂಬಂಧಗಳು ಪ್ರಾದೇಶಿಕ, ಭಾಷಿಕ, ಯಹೂದಿಯೇತರ ಹಾಗೂ ಇತರ ಇಸ್ಲಾಮೇತರ ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿದ್ದ ವಿಭಿನ್ನ ಬಗೆಯ ಜನರ ಮಧ್ಯೆ ವಿಶಿಷ್ಟ ಗುರುತು ಉಳಿಸಿಕೊಂಡು ಬಂದ ಪಂಥವಾಗಿ ಗೋಚರಿಸಿತು.

೧೩ನೆಯ ಶತಮಾನದ ವೇಳೆಗೆ ಮುಸಲ್ಮಾನ ಸಮಾಜಗಳು ರಾಜ್ಯಗಳಾಗಿ, ನಗರಗಳ ಧಾರ್ಮಿಕ ಸಂಘಗಳಾಗಿ, ಗ್ರಾಮೀಣ ಧಾರ್ಮಿಕ ಗುಂಪುಗಳಾಗಿ ಸಂಘಟಿತವಾಗಿದ್ದವು. ಪ್ರತಿಯೊಂದೂ ಶರಿಯಾ, ಸೂಫಿ ಅಥವಾ ಶ್ರಯಿನ್ ಸೂಫಿ ಎಂಬ ತನ್ನದೇ ಆದ ಇಸ್ಲಾಂ ರೂಪಾಂತರವನ್ನು ಹೊಂದಿತು. ಸುಲ್‌ಜುಕ್ ಅವಧಿಯ ಉತ್ತರಾರ್ಧದ ವೇಳೆಗೆ ಇಸ್ಲಾಂ ಸಂಸ್ಥೆಗಳ ವಿವಿಧ ಪ್ರಕಾರಗಳು, ರಾಜ್ಯದ ಮತೀಯ ಹಾಗೂ ಧಾರ್ಮಿಕ ಸಂಸ್ಥೆಗಳ ಆಂತರಿಕ ಸಂಬಂಧದ ಮೂಲಕ ಪರಿಭಾವಿಸಲಾದ ಒಂದು ದೊಡ್ಡ ವ್ಯವಸ್ಥೆಯಾಗಿ ಒಗ್ಗೂಡಿದವು. ಈ ವ್ಯವಸ್ಥೆಯ ವಿಶಿಷ್ಟ ಲಕ್ಷಣ ಎಂದರೆ ಇದು ರಾಜ್ಯದ ಮಿಲಿಟರಿ, ಸ್ಥಳೀಯ ಉಲ್ಮಾ ಹಾಗೂ ಸೂಫಿ ಪ್ರಮುಖರ ಒಕ್ಕೂಟವಾಗಿತ್ತು.

ಅಲೆಮಾರಿ ಹಾಗು ಗುಲಾಮರ ಮಿಲಿಟರಿ ಪ್ರಮುಖರು ಆಳ್ವಿಕೆಗಾಗಿ ಉಲ್ಮಾದೊಂದಿಗೆ ಒಗ್ಗೂಡುವುದನ್ನು ಬಯಸಿದರು. ಕೃಷಿ ಪ್ರಧಾನ ಸಾಮ್ರಾಜ್ಯವನ್ನು ಆಳಿದ ಅನುಭವವಿಲ್ಲದ ಸಿಲ್‌ಜುಕ್‌ರು ಬುಡಕಟ್ಟು ಗುಂಪುಗಳ ಧುರೀಣರಾಗಿದ್ದರು. ಆಡಳಿತಗಾರರು, ಹಣಕಾಸು ಅಧಿಕಾರಿಗಳು, ಭೂಮಾಲೀಕರು ಹಾಗೂ ಇತರ ತಾಂತ್ರಿಕ ವರ್ಗದವರೂ ಮಹತ್ವದವ ರಾಗಿದ್ದರು. ಅಲ್ಲದೆ ಅಲೆಮಾರಿ ಹಾಗೂ ಗುಲಾಮ ಪ್ರಮುಖರು ತಮ್ಮ ಆಳಿಕೆಯ ಯಥಾರ್ಥತೆಗೆ ಮನ್ನಣೆ ದೊರಕಿಸಿಕೊಳ್ಳುವುದಕ್ಕಾಗಿ ರಾಜಕೀಯ ಹಾಗೂ ಮಾನಸಿಕ ಕಾರಣಗಳಿಗೆ ಉಲ್ಮಾಗಳನ್ನು ಬಯಸಿದರು. ಉಲ್ಮಾಗಳು ಸಂಪ್ರದಾಯದ ರಕ್ಷಕರಾಗಿದ್ದರು. ತಾಂತ್ರಿಕತೆ, ಸಾಕ್ಷರತೆ ಹಾಗೂ ಸಾಮಾಜಿಕ ಜ್ಞಾನದ ಕೊರತೆಯಿದ್ದ ಸುಲ್‌ಜುಕ್‌ರ ಪಾಲಿಗೆ ಉತ್ತಮ ಜೀವನದ ಪ್ರತೀಕಗಳಾಗಿದ್ದರು. ಉಲ್ಮಾಗಳು ಸಾಮಾಜಿಕವಾಗಿ ಹಾಗೂ ನೈತಿಕವಾಗಿ ತಮ್ಮನ್ನು ತಿದ್ದಬೇಕೆಂದು, ತಮಗೆ ಮಾರ್ಗದರ್ಶಿಗಳಾಗಬೇಕೆಂದು ಅವರು ಬಯಸಿದರು. ಹೀಗೆ ವಿಜಯಿಗಳೇ ತಮ್ಮ ಪ್ರಜೆಗಳ ವಶರಾದರು.

ಇನ್ನೊಂದೆಡೆ ಉಲೇಮಗಳು ಮಿಲಿಟರಿ ಆಳ್ವಿಕೆಯ ಅಗತ್ಯವನ್ನು ತಿಳಿದುಕೊಂಡರು. ಮಿಲಿಟರಿ ಆಳ್ವಿಕೆಯಿಂದ ಮಾತ್ರವೇ ವ್ಯಾಪಾರ ಮಾರುಕಟ್ಟೆಗಳು ಸುರಕ್ಷಿತವಾಗಬಹುದು. ಅಲೆಮಾರಿಗಳು ಹಾಗೂ ದರೋಡೆಕೋರರಿಂದ ಗ್ರಾಮಗಳನ್ನು ರಕ್ಷಿಸಬಹುದಾಗಿತ್ತು. ಸಮುದಾಯಗಳು ನಿಯಂತ್ರಿಸಲಾಗದ ವಿವಾದಗಳಿಗೆ ಮಧ್ಯಸ್ಥಗಾರರಾಗಲು, ಗುಂಪು ಕಲಹ ಹಾಗೂ ಗುಂಪುಗಳ ಹೊಡೆದಾಟ ಇವುಗಳನ್ನು ಹತ್ತಿಕ್ಕಲು ಒಂದು ಬಲಿಶಾಲಿ ಪ್ರಾಂತವನ್ನು ಬಯಸಿದರು. ಇದರ ಇನ್ನೊಂದು ಕಾರಣವೆಂದರೆ ರಾಜಡಳಿತದಲ್ಲಿ ಭಾಗವಹಿಸಿ ತಾವು ಸ್ಥಳೀಯ ಪ್ರಮುಖರಾಗಿರುವುದಕ್ಕಿಂತ ಚಕ್ರಾಧಿಪತ್ಯದ ವರ್ಗವಾಗಬೇಕೆಂಬ ಬಯಕೆಯಿಂದ ಮಿಲಿಟರಿ ಆಳ್ವಿಕೆಯಲ್ಲಿ ಆಸಕ್ತರಾದರು. ಅವರ ಸ್ಥಳೀಯ ಅಧಿಕಾರವನ್ನು ಒಳಗೊಳ್ಳುವಂಥ ಸ್ಥಾನಮಾನಗಳನ್ನು ರಾಜ್ಯ ಅವರಿಗೆ ನೀಡಿತು. ಅಂತಿಮವಾಗಿ ಮಿಲಿಟರಿ ಪ್ರಮುಖರು ಸುನ್ನಿ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳಿಗೆ ಉತ್ತಮ ಬೆಂಬಲ ನೀಡಿದರು.

ಇಂತಹ ಕಾರ್ಯವನ್ನು ಸಾಧಿಸಲು ಗಜನಾವಿದರು ಹಾಗೂ ಸುಲ್‌ಜುಕರು ಮಸೀದಿಗಳನ್ನು ಉಳಿಸಿಕೊಂಡರು, ಮದರಸಗಳನ್ನು ಹಾಗೂ ಖಾನಕ್‌ಗಳನ್ನು ಕಟ್ಟಿದರು, ವಕ್ಫ್‌ಗಳನ್ನು ಬೆಳೆಸಿದರು, ಅಧಿಕಾರ ಸ್ಥಾನಗಳಿಗೆ ಕಾನೂನು ಶಾಲೆಗಳ ಸದಸ್ಯರನ್ನು ನೆಯಮಿಸಿದರು. ಸುಲ್‌ಜುಕರು ಶಾಯೀ ಪಂಥವನ್ನು ಹತ್ತಿಕ್ಕಿ ಸುನ್ನಿ ಇಸ್ಲಾಮರಿಗೆ ಬೆಂಬಲ ನೀಡಿದರು. ಇದಕ್ಕೆ ಪ್ರತಿಯಾಗಿ ಉಲ್ಮಾಗಳು ಈಗಾಗಲೇ ಪ್ರತಿಷ್ಠಾಪಿತವಾದ ಆಳ್ವಿಕೆಗಳ ಶ್ರೇಷ್ಠತೆಯನ್ನು ಪ್ರಚುರಪಡಿಸಿದರು. ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ರಾಜಕುಮಾರರನ್ನು ಬೆಂಬಲಿಸಿದರು. ರಾಜಡಳಿತಕ್ಕೆ ಹುದ್ದೆಗಳನ್ನು ಒದಗಿಸಿದರು; ತೆರಿಗೆಗೆ ಅನುಕೂಲ ಕಲ್ಪಿಸಿದರು. ಅಲೆಮಾರಿ ಹಾಗೂ ಗುಲಾಮರು ಗೆದ್ದ ರಾಜ್ಯಗಳನ್ನು ಇಸ್ಲಾಂ ಸಮಾಜದ ಉತ್ತಮ ಹಾಗೂ ಅಗತ್ಯದ ಭಾಗಗಳೆಂದು ಪರಿಗಣಿಸಿದರು. ಧಾರ್ಮಿಕ ಪ್ರಮುಖರು ಮಿಲಿಟರಿ ಆಳ್ವಿಕೆ ಹಾಗೂ ನಗರದ ಜನತೆಯ ಮಧ್ಯೆ ಮಧ್ಯಸ್ಥಗಾರರಾಗಿದ್ದರೂ ವೈಚಾರಿಕತೆ ಹಾಗೂ ಆರ್ಥಿಕ ತಳಹದಿ ಪೂರ್ವ ಸ್ವತಂತ್ರವಾಗಿರಬೇಕೆಂಬುದನ್ನು ಅಲಕ್ಷಿಸಿದರು. ಹೀಗೆ ರಾಜ್ಯದ ಪ್ರಮುಖರು ಹಾಗೂ ಧಾರ್ಮಿಕ ಪ್ರಮುಖರ ಸಹಯೋಗಿತ್ವದಿಂದಾಗಿ ಸಮಾಜದ ಉಳಿದ ವರ್ಗಗಳು ನಿಯಂತ್ರಣಕ್ಕೆ ಬಂದವು.

ಚಕ್ರಾಧಿಪತ್ಯದ ನಂತರದ ಅವಧಿಯಲ್ಲಿ ರಾಜ್ಯ ಸಂಘಟನೆಯ ಹೊಸ ರೂಪಗಳು ಸಾಮುದಾಯಿಕ ಜೀವನ ಹಾಗೂ ಸಂಸ್ಕೃತಿ ಒಗ್ಗೂಡಿ ಒಂದು ಹೊಸ ವ್ಯವಸ್ಥೆಯಾಗಿ ರೂಪುಗೊಂಡವು. ಚಕ್ರಾಧಿಪತ್ಯದ ತರುವಾಯದ ಸರ್ಕಾರದ ಹಾಗೂ ಸಮಾಜ ಮೊದಲಿನ ಆಳ್ವಿಕೆಗಿಂತ ತುಂಬ ವಿಭಿನ್ನವಾಗಿತ್ತು. ಅಬಾಸಿದರ ಕಾಲದಲ್ಲಿ ಪಶ್ಚಿಮ ಏಷ್ಯಾದ ಭೂ ಒಡೆತನ ಅಧಿಕಾರಶಾಹಿತ್ವ ಹಾಗೂ ವ್ಯಾಪಾರಿ ಪ್ರಮುಖರಿಂದ ಬೆಂಬಲ ಪಡೆದ ಜಾಗತಿಕ ಸಾಮ್ರಾಜ್ಯವಿತ್ತು. ಚಕ್ರಾಧಿಪತ್ಯದ ನಂತರದ ಅವಧಿಯಲ್ಲಿ ಪಶ್ಚಿಮ ಏಷ್ಯಾದ ಪ್ರದೇಶದಲ್ಲಿದ್ದ ಏಕತೆ ಸಾಮ್ರಾಜ್ಯದಲ್ಲಿ ಕಂಡುಬರಲಿಲ್ಲ; ಆದರೆ ಸಾಮಾಜಿಕ ಹಾಗೂ ರಾಜಕೀಯ ಸಂಘಟನೆಯ ಕೆಲವು ರೂಪಗಳಾಗಿ ಸಾರ್ವತ್ರಿಕ ಮಲ್ಯಗಳು ಹಾಗೂ ಪ್ರತೀಕಗಳ ಕುರಿತಾದ ನಿಷ್ಠೆಯಾಗಿ ಪಸರಿಸಿತು. ಪಶ್ಚಿಮ ಏಷ್ಯಾದ ಇತಿಹಾಸದಲ್ಲಿ ಮೊದಲ ಬಾರಿಗೆ ಇರಾಕ್ ಹಾಗೂ ಇರಾನ್‌ನ ಜನರು ಅದೇ ಸಾಮ್ರಾಜ್ಯಕ್ಕೆ ಅಲ್ಲದಿದ್ದರೂ ಒಂದೇ ಸಂಸ್ಕೃತಿ, ಧರ್ಮ ಹಾಗೂ ಒಂದೇ ವಿಧದ ರಾಜಕೀಯ ಸಮಾಜಕ್ಕೆ ಸೇರಿದ್ದರು. ಹೀಗೆ ಇಸ್ಲಾಂ ಧರ್ಮ ಒಂದೇ ಸಾಮ್ರಾಜ್ಯವನ್ನಲ್ಲದಿದ್ದರೂ ಜಾಗತಿಕ ಸಮಾಜವನ್ನು ನಿರ್ಮಾಣ ಮಾಡಿತು.

ಇರಾಕ್ ಹಾಗೂ ಇರಾನಿನಲ್ಲಿ ನಿರ್ಮಾಣವಾದ ಇಂಥ ಹೊಸ ಬಗೆಯ ಇಸ್ಲಾಂ ಸಮಾಜವು ಪಶ್ಚಿಮ ಏಷ್ಯಾದ ಇತಿಹಾಸದಲ್ಲಿ ರಚನಾತ್ಮಕ ಯುಗವನ್ನು ಪ್ರಾರಂಭಿಸಿತು. ಕಾಲಕ್ರಮೇಣ ಪಶ್ಚಿಮ ಏಷ್ಯಾದ ಸಮಾಜಗಳು ಇಸ್ಲಾಂ ಧರ್ಮದವುಗಳಾಗಿ ಗುರುತಿಸಲ್ಪಟ್ಟವು. ಸದ್ವರ್ತನೆಯ ಹಾಗೂ ಪ್ರವಾದಿ ಮುಂದಾಳುಗಳ ಮೂಲಕ ಅರೇಬಿ ಯಾದಲ್ಲಿ ಇಸ್ಲಾಂ ಬುಡಕಟ್ಟು ಸ್ವರೂಪದ ಸಮಾಜ ನಿರ್ಮಾಣವಾಗಿತ್ತು. ದಿಗ್ವಿಜಯ ಹಾಗೂ ನಗರೀಕರಣ ದಿಂದಾಗಿ ಇಸ್ಲಾಂ ಧರ್ಮದ ಶ್ರೇಷ್ಠ ಮಟ್ಟದ ನಾಗರಿಕತೆಯ ಕಾರಣಕರ್ತರಾದ ಖಲೀಫರು, ಉಲ್ಮಾಗಳು ಹಾಗೂ ಸೂಫಿಗಳಿಗೆ ಮತ್ತು ಜಾಗತಿಕ ಸಾಮ್ರಾಜ್ಯಕ್ಕೆ ಆಸ್ಪದ ದೊರೆಯಿತು. ಸಾಮ್ರಾಜ್ಯದಲ್ಲಿ ಏಕತೆ ಮಾಯವಾಗಿದ್ದುದರಿಂದಾಗಿ ಪಶ್ಚಿಮ ಏಷ್ಯಾ ಸಮಾಜವು, ಚಕ್ರಾಧಿಪತ್ಯದ ನಂತರದ ಅಥವಾ ಸುಲ್‌ಜುಕದ ಮನೋಭಾವದ ರಾಜ್ಯ, ಸಾಮಾಜಿಕ ಹಾಗೂ ಧಾರ್ಮಿಕ ಸಂಸ್ಥೆಗಳು ಮತ್ತು ಮುಸಲ್ಮಾನ ಧರ್ಮೀಯರಾಗಿ ಪುನರ್ ನಿರ್ಮಾಣವಾಗುವಂತಾಯಿತು.

ಮುಂದೆ ಬಂದ ಇಸ್ಲಾಂ ಸಮಾಜಗಳ ಅಭಿವೃದ್ದಿಯ ವಿಷಯದಲ್ಲಿ ಈ ಸಮಾಜಕ್ಕೆ ವಿಲಕ್ಷಣ ಮಹತ್ವವಿದೆ. ಏಕೆಂದರೆ ಇಲ್ಲಿ ಹುಟ್ಟಿದ ಸಾಮಾಜಿಕ ಹಾಗೂ ಧಾರ್ಮಿಕ ವಿಚಾರಗಳು ಈಗಿನ ಇಸ್ಲಾಂ ಪ್ರದೇಶಗಳಲ್ಲಿ ಈಗಲೂ ಆಚರಣೆಯಲ್ಲಿ ಉಳಿದಿವೆ. ಹಾದಿತ್ ಮತ್ತು ಕಾನೂನುಗಳಲ್ಲಿರುವ ಇಸ್ಲಾಂ ಸಂಪ್ರದಾಯಗಳು, ನೈತಿಕ ಹಾಗೂ ಆಧ್ಯಾತ್ಮಿಕ ಆತ್ಮೋನ್ನತಿಯ ಸೂಫಿ ಪದ್ಧತಿಗಳು, ಧಾರ್ಮಿಕ ಮುಖಂಡತ್ವ ಕುರಿತ ಶಯೀ ಪಂಥದ ಪರಿಕಲ್ಪನೆಗಳು, ಮಾಂತ್ರಿಕತೆಯ ಕುರಿತ ವಿಚಾರಗಳು, ಖ್ಯಾತ ಸಾಧುಗಳ ಪೂಜೆ ಹಾಗೂ ಮಾಂತ್ರಿಕ ಆಚರಣೆಗಳು ಮತ್ತು ಸಾಮಾಜಿಕವಾದ ಸುಧಾರಣಾಪರ ಇಸ್ಲಾಂ ಆದರ್ಶಗಳು ಈ ಕಾಲದಲ್ಲಿ ಪ್ರಾರಂಭವಾದವು. ಇದಲ್ಲದೆ ಇಸ್ಲಾಂ ಸಾಮಾಜಿಕ ಸಂಘಟನೆಯ ಮೂಲಭೂತ ಅಂಶಗಳಾದ ಪ್ರಾಂತಗಳು, ಕಾನೂನು ಶಾಲೆಗಳು, ಸೂಫಿ ಸಂಘಟನೆಯ ಈ ಕಾಲದಲ್ಲಿಯೇ ಸೃಷ್ಟಿಯಾದವು. ಅಂತಿಮವಾಗಿ ರಾಜ್ಯ ಸಮಸ್ಥೆಗಳು ಹಾಗೂ ಮುಸಲ್ಮಾನ್ ಧಾರ್ಮಿಕ ಸಮುದಾಯಗಳ ನಡುವೆ ಪ್ರತ್ಯೇಕತೆ ಈ ಕಾಲದಲ್ಲಿಯೇ ಕಾಣಿಸಿಕೊಂಡಿತು. ಈ ಅವಧಿಯುದ್ದಕ್ಕೂ ಮುಸಲ್ಮಾನೇತರ ಸಾಮಾಜಿಕ ಹಾಗೂ ಆರ್ಥಿಕ ಸಂಘಟನೆಗಳು ಮತ್ತು ಮುಸಲ್ಮಾನೆಯತರ ಸಂಸ್ಕೃತಿಗಳಿಂದಾಗಿ ಹೊಸದೊಂದು ಸಾಮಾಜಿಕ ಹಾಗು ಮತೀಯ ಪ್ರಕಾರ ಆವಿರ್ಭವಿಸಿ ಇಸ್ಲಾಂ ಸಮಾಜದ ಕುರಿತು ಸಂದಿಗ್ಧತೆಯನ್ನು ಮೂಡಿಸಿತು. ಇಸ್ಲಾಂ ಧರ್ಮ ಸ್ಥಾಪಿತವಾದಲ್ಲೆಲ್ಲ ಅದರ ಸಂಸ್ಥೆಗಳು, ಸಾಂಸ್ಕೃತಿಕ ಪರಿಕಲ್ಪನೆಗಳು ಸ್ಥಳೀಯ ಪದ್ಧತಿಗಳೊಡನೆ ಒಂದುಗೂಡಿ ಹೊಸ ಇಸ್ಲಾಂ ಸಮಾಜಗಳು ನಿರ್ಮಾಣವಾದವು. ಆ ಪ್ರತಿಯೊಂದಕ್ಕೂ ಪಶ್ಚಿಮ ಏಷ್ಯಾದ ಇಸ್ಲಾಂ ಧರ್ಮವೇ ತಾಯಿಬೇರಾಗಿತ್ತು.