ಪಶ್ಚಿಮ ಏಷ್ಯಾ ಮತ್ತು ಯುರೋಪಿನ ಉದಯ (೧೩ರಿಂದ ೧೯ನೆಯ ಶತಮಾನ): ೧೩ರಿಂದ ೧೯ನೆಯ ಶತಮಾನದವರೆಗೆ ಪಶ್ಚಿಮ ಏಷ್ಯಾದ ಇಸ್ಲಾಂ ಸಮಾಜಗಳ ಸ್ವರೂಪವು ಸಂಕೀರ್ಣವಾದುದಾಗಿತ್ತು. ವಿಭಿನ್ನ ಬಗೆಯ ಸಮುದಾಯಗಳು ಒಂದು ದೊಡ್ಡ ವ್ಯವಸ್ಥೆ ಯಲ್ಲಿ ಒಂದುಗೂಡಿ ಒಂದು ಆಳಿಕೆಗೆ ಒಳಪಟ್ಟಿದ್ದುದು ಕಂಡುಬರುತ್ತದೆ. ಇಸ್ಲಾಮಿಕ್ ರಾಜ್ಯಗಳು ಅಸಂಖ್ಯ ಪಂಥಗಳು, ಗ್ರಾಮೀಣ ಹಾಗೂ ಬುಡಕಟ್ಟುಗಳ ಜನಾಂಗಗಳು, ನಾಗರಿಕ ಜಮತ್‌ಗಳು, ಸೂಫಿ ಸೋದರ ಸಂಘಗಳು, ಪಂಥಗಳು ಹಾಗೂ ಊಳಿಗಮಾನ್ಯ ಸಂಘಗಳು ಒಂದುಗೂಡಿ ಆದ ಪ್ರಾಂತಗಳಾಗಿದ್ದವು. ಇಂಥ ಪ್ರಾಂತಗಳನ್ನು ಬುಡಕಟ್ಟು ಗ್ರಾಮ ಮತ್ತು ನಾಗರಿಕ ಸಮುದಾಯ, ಮುಸಲ್ಮಾನ ಧಾರ್ಮಿಕ ಸಂಘ ಮತ್ತು ರಾಜ್ಯ ಹೀಗೆ ಪರಸ್ಪರ ಪ್ರತಿಸ್ಪಂದಿಸುವ ಸಂಕೀರ್ಣ ವ್ಯವಸ್ಥೆ ಎಂದು ಭಾವಿಸಬೇಕಾಗುತ್ತದೆ.

ಇಸ್ಲಾಂ ವ್ಯವಸ್ಥೆಯ ರಾಜ್ಯವು ಸುಲ್‌ಜುಕ್ ಕಾಲದ ಇಸ್ಲಾಂ ಸಮಾಜದ ಮಾದರಿಯ ಮೇಲೆ ನಿರ್ಮಾಣವಾಗಿತ್ತು. ಮೊದಲಿನ ಇಸ್ಲಾಂ ಮಾದರಿಯು ಸಾಕಷ್ಟು ಮಾರ್ಪಾಟು ಹೊಂದಿದ್ದರೂ, ಇರಾನ್ ಹಾಗೂ ತುರ್ಕಿಸ್ತಾನಗಳ ವಲಸೆಗಾರರಿಂದ ಕೂಡಿದ್ದರೂ, ದಿಗ್ವಿಜಯಗಳಿಂದಾಗಿ ಏಷ್ಯಾದ ಒಳಭಾಗಕ್ಕೆ ಬಂದಿದ್ದರೂ ಅದು ಎನಟೋಲಿಯ ಮೂಲಕವಾಗಿ ಬಾಲ್ಕನ್‌ನಲ್ಲಿಯ ಅಟ್ಟೊಮನ್ ಸಾಮ್ರಾಜ್ಯಕ್ಕೆ ಸೇರಿತ್ತು. ಮಾದರಿ ಒಂದೇ ಆಗಿದ್ದರೂ ರಾಜ್ಯ ಸಂಘಟನೆ, ಧಾರ್ಮಿಕ ಸಂಸ್ಥೆಗಳು, ಅಂಗೀಕಾರಾರ್ಹತೆಯ ಕುರಿತ ಧಾರ್ಮಿಕ ನಂಬಿಕೆಗಳು, ಪರಿಕಲ್ಪನೆಗಳು ವಿಭಿನ್ನವಾಗಿದ್ದವು. ಅಟ್ಟೊಮನ್ ಸಾಮ್ರಾಜ್ಯದಲ್ಲಿ ಸರ್ಕಾರ ಕೇಂದ್ರೀಕೃತವಾಗಿತ್ತು. ಇರಾನ್ ಹಾಗೂ ಅರಬ್ ದೇಶಗಳ ಕೆಲವು ಭಾಗಗಳಲ್ಲಿ ರಾಜ್ಯಗಳು ದುರ್ಬಲವಾಗಿದ್ದವು. ಏಕೆಂದರೆ ಬುಡಕಟ್ಟು ಸಮಾಜಗಳ ಪ್ರತಿರೋಧ ಅವುಗಳಿಗೆ ಇತ್ತು. ಅಟ್ಟೊಮನ್ ಸಾಮ್ರಾಜ್ಯ ಹಾಗೂ ಸಫಾವಿದ್ ಇರಾನ್‌ಗಳಲ್ಲಿ ಧಾರ್ಮಿಕ ಪ್ರಮುಖರ ನಿಯಂತ್ರಣ ರಾಜ್ಯದ ಮೇಲೆ ಗಣನೀಯವಾಗಿತ್ತು. ಈ ಎರಡೂ ಸಾಮ್ರಾಜ್ಯಗಳಲ್ಲಿ ಇಸ್ಲಾಂ ಹಾಗೂ ಆಧುನಿಕತೆಯ ಗುಣಗಳ ಸಂಗಮಕ್ಕೆ ಮಹತ್ವ ಸಿಕ್ಕಿತು. ಪಶ್ಚಿಮ ಏಷ್ಯಾದ ಅರಬ ಪ್ರಾಂತಗಳಲ್ಲಿ ಇಸ್ಲಾಂ ತತ್ವಗಳಿಗೆ ಪ್ರಾಶಸ್ತ್ಯ ಅಟ್ಟೊಮನ್ ಸಾಮ್ರಾಜ್ಯ, ಏಷ್ಯಾದ ಒಳನಾಡು ಹಾಗೂ ಇರಾನ್‌ಗಳಲ್ಲಿ ಉಲ್ಮಾ ಇಸ್ಲಾಂ ಪ್ರಮುಖವಾಗಿತ್ತು. ಈ ವೈವಿಧ್ಯಗಳನ್ನು ಪೂರ್ಣವಾಗಿ ತಿಳಿದುಕೊಳ್ಳಬೇಕಾದರೆ ಆಯಾ ಪ್ರಾದೇಶಿಕ ಸಮಾಜಗಳನ್ನು ನಿರ್ದಿಷ್ಟ ಲಕ್ಷಣದೊಂದಿಗೆ ಮಾತ್ರವಲ್ಲದೆ ರಾಜ್ಯ ಧರ್ಮ ಹಾಗೂ ಸಾಮುದಾಯಿಕತೆ ಮತ್ತು ಸಂಸ್ಕೃತಿಗಳು ಪ್ರತಿಕ್ರಿಯಿಸುವ ಇಡೀ ವ್ಯವಸ್ಥೆಯೊಂದಿಗೆ ಹೋಲಿಸಿ ನೋಡಬೇಕಾಗುತ್ತದೆ.

ಇರಾನ್ ಸಂಸ್ಕೃತಿ (೧೩ರಿಂದ ೧೮ನೆಯ ಶತಮಾ) (ಯುರೋಪಿಯನ್ನರ ಆಗಮನ ದವರೆಗೆ): ಇರಾನ್ ಮಾದರಿಯ ಇಸ್ಲಾಂ ಸಮಾಜವೆಂದರೆ ರಾಜ್ಯ, ಧರ್ಮ ಹಾಗೂ ಗುಡ್ಡಗಾಡು ಜನರ (ಉಯ್ ಮಾಕ್) ನಡುವಣ ಸಂಬಂಧವೆಂದು ಭಾವಿಸಬೇಕು. ೧೫೦೦ರ ಸಫಾವಿದ್ ವಿಜಯವೇ ಇರಾನ್‌ಗೆ ರೂಪಕೊಟ್ಟಿತು. ಸಫಾವಿದರು ಉಯ್‌ಮಾಕ್ ಹಾಗೂ ಗುಡ್ಡ ಗಾಡು ಜನರ ಧಾರ್ಮಿಕ ಧುರೀಣರಾಗಿದ್ದರು. ಈ ಸಾಮ್ರಾಜ್ಯವನ್ನು ಕ್ರಮೇಣ ಗುಲಾಮ ಬಲ ಹಾಗೂ ಅಧಿಕಾರಶಾಹಿ ಆಡಳಿತ ಆಧಾರದ ಮೇಲೆ ಮರುನಿರ್ಮಿಸಲಾಯಿತು. ಸಫಾವಿದ್ ಆಳ್ವಿಕೆ ಎಂದರೆ ಉಯಿಮಾಕ್ ಪ್ರಾಂತಗಳಾಗಿ ರೂಪಪಡೆದ ಸಮಾಜಕ್ಕೆ ಸಾರ್ವಭೌಮತ್ವವನ್ನು ಆರೋಪಿಸಿದಂತೆ ಇತ್ತು. ಇರಾನದ ಪ್ರತಿಯೊಂದು ಪ್ರದೇಶ ಶಹಾನ ಸಾರ್ವಭೌಮತ್ವಕ್ಕೆ ಒಳಪಟ್ಟಿದ್ದರೂ ಅದನ್ನು ಗುಡ್ಡಗಾಡು ರಾಜ್ಯ, ಏಷ್ಯಾ ಒಳನಾಡಿನ ಮಂಗೋಲಿಯನ್ ಕುಟುಂಬಗಳಿಗೆ ಸೇರಿದ ಯೋಧರು ಆಳುತ್ತಿದ್ದು ಅವರದೇ ಸ್ಥಳೀಯ ಸರ್ಕಾರ, ಹಣಕಾಸು ವ್ಯವಸ್ಥೆ, ಸ್ಥಳೀಯ ಜನರ ಮೇಲೆ ತೆರಿಗೆ ಪದ್ಧತಿ ಇತ್ತು. ಅಲ್ಲಿಯ ರಾಜಕೀಯಶಕ್ತಿ ಚಕ್ರಾಧಿಪತ್ಯದ ರಾಜ್ಯ ಹಾಗೂ ಗುಡ್ಡಗಾಡು ಸಮಾಜಗಳ ನಡುವೆ ವಿಭಜಿತವಾಗಿತ್ತು.

ಕೇಂದ್ರ ಸರ್ಕಾರವು ಮುಸಲ್ಮಾನ ರೀತಿಯಲ್ಲಿ ತನ್ನ ಆಳಿಕೆಯನ್ನು ಅಧಿಕೃತಗೊಳಿಸಲು ಯತ್ನಿಸಿತು. ಸಫಾವಿದ್‌ರು ತಮ್ಮ ಅರಸರು ೭ನೆಯ ಇಮಾಮನ ವಂಶದವರಾಗಿದ್ದುದರಿಂದ ದೇವಾಂಶಸಂಭೂತರೆಂಬ ವಾದದ ಮೇಲೆ ಆಧಾರಿತವಾಗಿತ್ತು. ಸೂಫಿ ಆಂದೋಲನದ ಮುಂದಾಳತ್ವ ವಹಿಸಿ ತಮ್ಮ ಅನುಯಾಯಿಗಳೆಲ್ಲರೂ ತಮಗೆ ಸಂಪೂರ್ಣ ವಿಧೇಯ ರಾಗಿರಬೇಕೆಂದು ಬಯಸಿದರು. ರಾಜ್ಯದ ಗೌರವವನ್ನು ಎತ್ತಿ ಹಿಡಿಯುವುದಕ್ಕಾಗಿ ಸಫಾವಿದರು ರಾಜಸ್ಥಾನದ ಚಿತ್ರ, ವರ್ಣಚಿತ್ರಗಳು, ಪ್ರಾಚೀನ ಪರ್ಶಿಯನ್ ಸಂಪ್ರದಾಯ ಹಾಗೂ ಇಸ್ಲಾಂನ ಗುರುತುಗಳನ್ನು ಸೂಚಿಸುವ ಚಿರಸ್ಥಾಯಿ ವಾಸ್ತುಶಿಲ್ಪಕ್ಕೆ ಪ್ರಾಶಸ್ತ್ಯ ನೀಡಿ ಇರಾನ್-ಇಸ್ಲಾಂ ಮಾದರಿಯ ಸಂಸ್ಕೃತಿಯನ್ನು ಪುಷ್ಟೀಕರಿಸಿದರು. ಆಳ್ವಿಕೆಯ ಮುಖ್ಯ ಗುರುತು ಮುಸಲ್ಮಾನೀಯವೇ ಆಗಿದ್ದರೂ ಸ್ವತಂತ್ರ ಇರಾನದ ಸಾಂಸ್ಕೃತಿಕ ಪರಂಪರೆಯ ಚಿಹ್ನೆಗಳನ್ನೂ ಒಳಗೊಂಡಿತ್ತು.

ಸಫಾವಿದರ ಆಳ್ವಿಕೆಯಲ್ಲಿ ಇರಾನ್ ಸುನ್ನಿಯಿಂದ ಶೈ ಇಸ್ಲಾಂ ಮತಕ್ಕೆ ಪರಿವರ್ತಿತವಾಯಿತು. ಸಫಾವಿದರು ಇರಾನನ್ನು ಗೆದ್ದ ಮೇಲೆ ಶೈ ಪಂಥವನ್ನು ಇರಾನಿನ ಅಧಿಕೃತ ಧರ್ಮವನ್ನಾಗಿ ಮಾಡಿ ಶೈ ಉಲ್ಮಾಗಳ ಶ್ರೇಣಿಯನ್ನು(ಇರಾಕದಿಂದ ಆಮದು ಮಾಡಿಕೊಂಡ) ಸೃಜಿಸಿದರು ಹಾಗೂ ಎದುರಾಳಿ ಧಾರ್ಮಿಕ ಆಂದೋಲನಗಳನ್ನು ಒತ್ತಾಯಪೂರ್ವಕವಾಗಿ ಹತ್ತಿಕ್ಕಿದರು. ಸುನ್ನಿ ಉಲ್ಮಾಗಳು, ಸೂಫಿಗಳು, ಸಫಾಯಿದ್ ಬೆಂಬಲಿಗರನ್ನು ಗಡಿಪಾರು ಮಾಡಿದರು. ೧೭ನೆಯ ಶತಮಾನದ ವೇಳೆಗೆ ಸಫಾವಿದರು ಏಕದೇವತ್ವ ನಂಬಿಕೆಯ ಪಂಥವನ್ನು ಕಟ್ಟಿ, ಇಸ್ಲಾಂ ನಂಬಿಕೆ ಹಾಗೂ ಸಂಘಟನೆಯ ಪ್ರತಿಸ್ಪರ್ಧಿ ಬಣಗಳನ್ನು ಇಲ್ಲವಾಗಿಸಿದರು.

ಆದರೂ ರಾಜ್ಯ ಹಾಗೂ ಶೈ ಉಲ್ಮಾಗಳ ನಡುವಣ ಸಂಬಂಧ ಸಂದಿಗ್ಧವಾಗಿಯೇ ಇತ್ತು. ಇತಿಹಾಸ ದೃಷ್ಟಿಯಿಂದ ಇರಾನದ ಉಲ್ಮಾಗಳು ರಾಜ್ಯದ ಬೆಂಬಲವನ್ನೇ ಅವಲಂಬಿಸಿದ್ದರು. ರಾಜಕೀಯ ಹಾಗೂ ಧಾರ್ಮಿಕ ಸ್ಥಾನಗಳಿಗೆ ನೆಯಮಕಗೊಂಡರು. ಧಾರ್ಮಿಕ ದೇವಸ್ಥಾನಗಳಿಗೆ ದೇಣಿಗೆ ಪಡೆದರು. ಆಳರಸರು ಹಾಗೂ ಜನತೆಯ ಮಧ್ಯೆ ಮಧ್ಯಸ್ಥಗಾರರ ಪಾತ್ರ ವಹಿಸಿದರು. ಒಟ್ಟಿನಲ್ಲಿ ಸಫಾವಿದರಿಗೆ ಅಧೀನರಾಗಿ, ಗುಡ್ಡಗಾಡಿನ ಹಾಗೂ ಧಾರ್ಮಿಕ ಪ್ರತಿಸ್ಪರ್ಧಿಗಳ ವಿರುದ್ಧ ಕೇಂದ್ರಾಡಳಿತಗಾರರನ್ನು ಬೆಂಬಲಿಸಿ, ಸುನ್ನಿ ಹಾಗೂ ಸೂಫಿಗಳಿಗೆ ಕಿರುಕುಳ ಕೊಡಲು ಮುಂದಾದರು. ರಾಜ್ಯ ನಿಯಂತ್ರಣದಿಂದ ಹೊರಬಂದು ಸ್ವತಂತ್ರರಾಗಲು ಉಲ್ಮಾಗಳ ಹವಣಿಕೆ, ಸಫಾವಿದ್ ಆಳ್ವಿಕೆಯ ಕಾನೂನು ಸಮ್ಮತತೆಯ ಬಗ್ಗೆ ಸಂದೇಹ ಹೀಗೆ ಧರ್ಮ ಸಂಬಂಧಿ ಹಾಗೂ ಸಾಮಾಜಿಕ ಸೂಚನೆ ಗಳಿದ್ದವು. ಸಫಾವಿದ ಅವನತಿಯಾಗಿ ಕೊನೆಗೆ ನಶಿಸಿಹೋದ ಮೇಲೆ, ಅರಸರಲ್ಲದೆ ಮುಜಹಿದರೇ ಇಸ್ಲಾಂ ಸಮುದಾಯದ ನಿಜವಾದ ಮುಖಂಡರು ಎಂಬುದು ಕೆಲವು ಉಲೇಮಗಳ ವಾದವಾಗಿತ್ತು. ಇಮಾಂ ಇಲ್ಲದಾಗ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಮಾರ್ಗ ದರ್ಶನ ನೀಡುವಂಥ ಬುದ್ದಿಮತ್ತೆ ಅವರಿಗಿತ್ತು. ಇವರ ಮೇರೆಗೆ ಅವರ ಉಪದೇಶವನ್ನು ಅನುಸರಿಸುವುದು ಜನರ ಕರ್ತವ್ಯ.

ಇರಾನಿನ ಶೈ ಉಲೇಮಗಳು ಸುನ್ನಿ ಉಲೇಮಗಳಿಗಿಂತ ಹಲವು ಬಗೆಯಲ್ಲಿ ವಿಭಿನ್ನರಾಗಿದ್ದರು. ಇರಾನಿನ ಉಲ್ಮಾಗಳಲ್ಲಿ ಶಯೀ ಉಲ್ಮಾಗಳಿಗಿಂತ ಸುಸಂಗತ ಸಂಘಟನೆ ಇತ್ತು. ಆಧ್ಯಾತ್ಮಿಕ ಹಾಗೂ ಬೌದ್ದಿಕ ಪರಂಪರೆಯುಳ್ಳ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು. ದೇಶದ ಗಡಿರೇಖೆಗಳ ದೃಷ್ಟಿಯಿಂದಲೇ ಅವರ ಸಂಘಟನೆ ವ್ಯವಸ್ಥಿತವಾಗಿತ್ತು. ಪರಸ್ಪರ ಅಭಿವ್ಯಕ್ತಿ ಯಾವಾಗಲೂ ಸುಸಂಗತವಾಗಿತ್ತು. ಸಾಮಾನ್ಯ ಜನತೆಯ ಮೇಲೆ ಅವರ ಅಧಿಕಾರ ಅಪಾರವಾಗಿತ್ತು. ಅಟ್ಟೊಮನ್ ಸಾಮ್ರಾಜ್ಯ, ಭಾರತ ಹಾಗೂ ಇಂಡೋನೆಯಷಿ ಯಾಗಳ ಉಲ್ಮಾಗಳಂತೆ ಇರಲಿಲ್ಲ ಮತ್ತು ಸೂಫಿ ಅಥವಾ ಸುಧಾರಕರ ಪಂಥಗಳಿದ್ದವು. ಹೀಗೆ ೧೮ನೆಯ ಶತಮಾನಕ್ಕಿಂತ ಮುಂಚೆಯೇ ಇರಾನ್ ಸಮಾಜದಲ್ಲಿ ಕೇಂದ್ರೀಕೃತ ಅರಸೊತ್ತಿಗೆ ಅಲ್ಲದೆ ಗುಡ್ಡಗಾಡು ಜನರಲ್ಲಿ ಅಧಿಕಾರ ವಿತರಣೆಯಾಗಿ ಆಳರಸರು ಬೆಂಬಲ ನೀಡಿ ಏಕದೇವ ಪರಿಕಲ್ಪನೆಯ ಧಾರ್ಮಿಕ ಆಡಳಿತ ಸ್ಥಾಪಿತವಾಯಿತು.

ಅಟೊಮನ್ ಸಾಮ್ರಾಜ

೧೧ನೆಯ ಶತಮಾನದಲ್ಲಿ ಸುಲ್‌ಜುಕ್ ಹಾಗೂ ಇತರ ಗುಡ್ಡಗಾಡು ಆಡಳಿತಗಾರರು ಪಶ್ಚಿಮ ಏಷ್ಯಾದ ಅನಟೋಲಿಯ ಹಾಗೂ ಅರಬ ಪ್ರದೇಶಗಳ ಮೇಲೆ ದಾಳಿ ಮಾಡುವುದರೊಂದಿಗೆ ಹಾಗೂ ತುರ್ಕೀಯರು ಮತ್ತು ಯುರೋಪಿಯನ್ ಧರ್ಮಯೋಧರ ನಡುವಣ ಯುದ್ಧಗಳು ಹಾಗೂ ೧೩ನೆಯ ಶತಮಾನದಲ್ಲಿ ಯುರೋಪಿನ ಮೇಲೆ ಆದ ಮಂಗೋಲಿಯನ್ ಮತ್ತು ತಾತಾರ್ ದಾಳಿಗಳು, ೧೪ ಹಾಗೂ ೧೫ನೆಯ ಶತಮಾನದಲ್ಲಿ ಯುರೋಪಿಯನ್ನರು, ಅಟೊಮನ್ ತುರ್ಕರು ಕ್ರೂರಿಗಳು ಅಶಿಕ್ಷಿತ ಅಲೆಮಾರಿಗಳೆಂದು ಭಾವಿಸಲು ಕಾರಣವಾಯಿತು. ಇದೇ ಭಾವನೆ ಆಧುನಿಕ ಕಾಲದವರೆಗೆ ಮುಂದುವರಿದು ಪಾಶ್ಚಾತ್ಯ ಇತಿಹಾಸಕಾರರು ಅಟೊಮನ್ ಇತಿಹಾಸವನ್ನು ಇದೇ ದೃಷ್ಟಿಕೋನದ ಮೇರೆಗೆ ವಿವರಿಸಿದಂತಾಗಿದೆ.

ಅಟೊಮನ್ ಸಂಸ್ಥೆಗಳು

ಯುರೋಪ್, ಏಷ್ಯಾ ಮತ್ತು ಆಫ್ರಿಕಾಗಳ ವಿಶಾಲ ಸಾಮ್ರಾಜ್ಯಕ್ಕೆ ಅಟ್ಟೊಮನ್ ತುರ್ಕರು ರಾಜರಾದ ಮೇಲೆ, ಅವರ ಸಂಸ್ಥೆಗಳು ಬಹಳ ಮಾರ್ಪಾಟು ಹೊಂದಿ ಬೆಜೆನ್ ಟೈನ್ ಸಾಮ್ರಾಜ್ಯದ ಅಂಶಗಳನ್ನು ಅಳವಡಿಸಿಕೊಂಡವು. ಸಾಂಸ್ಕೃತಿಕವಾಗಿ ಅಟ್ಟೊಮನ್ ಪರಂಪರೆ ಮುಸಲ್ಮಾನ್ ಪರ್ಶಿಯನ್ ಹಾಗೂ ಅರಬ ಮಾದರಿಯದು; ರಾಜಕೀಯವಾಗಿ ಮುಸಲ್ಮಾನ ಹಾಗೂ ಬೆಜೆನ್‌ಟೈನ್ ಮಾದರಿಯದು.

ಮುಸಲ್ಮಾನ ಸಂಸ್ಥೆಗಳು

ಅಟ್ಟೊಮನ್ ಪ್ರಾಂತವು ಇತಿಹಾಸದುದ್ದಕ್ಕೂ ಆಧ್ಯಾತ್ಮಿಕವಾದುವೆಂದೇ ಪ್ರಚಲಿತ. ಅದರ ಮೂಲಭೂತ ಕಾನೂನು ಶರಿಯತ್; ಅದು ಕುರಾನ್ ಆಧಾರಿತ. ಅವರ ರಾಜಸ್ತಾನ ಹಾಗೂ ನ್ಯಾಯಾಂಗಗಳು ಮುಸಲ್ಮಾನ ಮಾದರಿಯವು. ಮುಸಲ್ಮಾನ ಸಂಸ್ಥೆಯ ಹೆಸರಿನಲ್ಲೇ ಆಡಳಿತ, ಕಾನೂನು, ನ್ಯಾಯಾಂಗ ವ್ಯವಸ್ಥೆ ನಡೆಯುತ್ತಿತ್ತು. ಈ ಪ್ರಾಂತದ ಮುಖ್ಯ ಸ್ಥಾನದಲ್ಲಿ ಉಲ್ಮಾಗಳೆಂಬ ಸುಶಿಕ್ಷಿತ ಮುಸಲ್ಮಾನರಿದ್ದು, ಅವರು ಪವಿತ್ರ ಮುಸ್ಲಿಂ ಸಿದ್ಧಾಂತ ಹಾಗೂ ಪ್ರಾಚೀನ ಅರಬ ಸಾಹಿತ್ಯದ ಬಗ್ಗೆ ಪರಿಣಿತರಾಗಿದ್ದು, ಇಲ್ಲಿ ಧಾರ್ಮಿಕವಾಗಿ ಹಾಗೂ ಕಾನೂನುಬದ್ಧವಾಗಿ ಸ್ತರಗಳು ಇದ್ದವು. ಕಾದೀಜ್ (ಮುಸಲ್ಮಾನ ನ್ಯಾಯಾಧೀಶರು) ಹಾಗೂ ಮಫ್ತಿಗಳೆಂಬ(ಹಿರಿಯ ನ್ಯಾಯಾಧೀಶರಿಗೆ ಇರುವ ಅಧಿಕಾರವನ್ನು ಪಡೆದ ಮುಸಲ್ಮಾನ ನ್ಯಾಯವಾದಿಗಳು) ಹುದ್ದೆಗಳೂ ಇದ್ದವು. ಈ ಅಧಿಕಾರಯುತ ಮುಸಲ್ಮಾನ ಸಂಸ್ಥೆಗಳ ಮುಖ್ಯಸ್ಥ ಪ್ರಮುಖ ಮಫ್ತಿಯಾಗಿದ್ದು ಆತ ಕಾನ್‌ಸ್ಟಾಂಟಿನೋಪಲಿನಲ್ಲಿ ನೆಲೆಸಿದ್ದು ಆತನಿಗೆ ಶೇಖ್ ಇಸ್ಲಾಂ ಎಂಬ ಹೆಸರಿತ್ತು. ಅಟೊಮನ್ ಸುಲ್ತಾನ ಅಥವಾ ಆತನ ಮಂತ್ರಿಗಳ ಯಾವುದೇ ಕಾನೂನು ಅಥವಾ ಅಧಿಕಾರದ ಕೃತ್ಯವು ಶರಿಯತ್‌ಗೆ ವಿರೋಧವಾದುದೆಂದು ಹೇಳುವ ಅಧಿಕಾರ ಇಸ್ಲಾಂ ಶೇಖನಿಗಿತ್ತು. ಹೀಗಾಗಿ ಆತ ಹಾಗೂ ಉಲ್ಮಾಗಳು ಸರ್ಕಾರದ ಮೇಲೆ ಶಕ್ತಿಯುತವಾದ ನಿಯಂತ್ರಣವನ್ನು ಹೊಂದಿದ್ದರು.

ಮಸೀದಿಗಳು, ಶಾಲೆಗಳು, ನ್ಯಾಯಾಲಯಗಳು ಹಾಗೂ ದರವೇಶಿಗಳೆಂದು ಹೆಸರಾದ ಹಿರಿಯ ಮುಸಲ್ಮಾನ ಧಾರ್ಮಿಕ ವ್ಯವಸ್ಥೆ ಹಲವು ಉಲ್ಮಾಗಳಿಗೆ ನಿಕಟವಾಗಿ ಸಂಬಂದಿ ಸಿದ್ದು, ಸಾಮ್ರಾಜ್ಯದಲ್ಲಿಯ ಮುಸಲ್ಮಾನ ಜನಜೀವನದ ಪ್ರತಿಯೊಂದು ಹಂತದಲ್ಲಿಯೂ ಅದರ ಪ್ರಭಾವ ಇತ್ತು. ಹಳೆಯ ಸಂಪ್ರದಾಯದ ಧಾರ್ಮಿಕ ಕಾನೂನಿಗೆ ಬದ್ಧವಾಗಿರುವ ಅಟ್ಟೊಮನ್ ಮುಸಲ್ಮಾನ ಸಮಾಜವು ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ತುಂಬ ಸಾಂಪ್ರದಾಯಿಕ ಮಾದರಿಯಾಗಿದ್ದು ಯಾವುದೇ ಸುಧಾರಣೆ ಹಾಗೂ ಮೂಲಭೂತ ಬದಲಾವಣೆಯನ್ನು ವಿರೋಧಿಸುತ್ತಿತ್ತು.

ಮಿಲ್ಹತ್ ವ್ಯವಸ್ಥೆ

ಮುಸಲ್ಮಾನ ಧಾರ್ಮಿಕ ಸಂಸ್ಥೆಗಳು ಮತ್ತು ದರವೇಶಿ ಸಂಘಟನೆಗಳು ಮಾತ್ರವೇ ಸಂಪ್ರದಾಯಶೀಲ ಅಥವಾ ತೀವ್ರವಾಗಿ ಪ್ರತಿಸ್ಪಂದಿಸುವಂಥವುಗಳಾಗಿರಲಿಲ್ಲ. ಕ್ರಿಶ್ಚಿಯನ್ನರು ಶರಿಯತ್‌ಗೆ ಶರಣಾಗಲು ಸಾಧ್ಯವಿಲ್ಲದಿರುವುದರಿಂದ ಮತ್ತು ಇಸ್ಲಾಂ ಧಾರ್ಮಿಕ ನ್ಯಾಯಾಲಯಗಳನ್ನು ಒಪ್ಪದಿದ್ದುದರಿಂದ, ಕ್ರಿಶ್ಚಿಯನ್ನರನ್ನು ಹಾಗೂ ಯಹೂದಿಯನ್ನರನ್ನು ಚಕ್ರಾಧಿಪತ್ಯಕ್ಕೆ ಒಳಪಡಿಸುವುದಕ್ಕಾಗಿ ಅಟ್ಟೊಮನ್ ಸರ್ಕಾರದ ಮಿಲ್‌ಹತ್ ವ್ಯವಸ್ಥೆಯನ್ನು ಜರಿಗೆ ತಂದಿತು. ಅರಬ ಸಂಪ್ರದಾಯ ಹಾಗೂ ಬೆಜೆನ್‌ಟೈನ್ ಪದ್ಧತಿಗಳು ವಿದೇಶಿ ಯರಿಗೆ ಸಂಬಂಧಪಟ್ಟಂತೆ ಮತ ನಿಯಮಗಳಿಗೆ ಅನುಸಾರವಾಗಿ ಅಟ್ಟೊಮನ್ ಸುಲ್ತಾನರು ಮುಸಲ್ಮಾನೇತರ ಪ್ರಜೆಗಳಿಗೆ ವಿವಿಧ ಧಾರ್ಮಿಕ ಪಂಥಗಳ ಪ್ರಮುಖರ ಧುರೀಣತ್ವದಲ್ಲಿ ಸೀಮಿತ ಸ್ವಾತಂತ್ರ್ಯವನ್ನು ನೀಡಿದರು. ಸಂಪ್ರದಾಯಬದ್ಧ ಚರ್ಚುಗಳ ಸದಸ್ಯರು, ಅವರು ಅಲ್‌ಬೇನಿಯನ್ ಅರಬ ಬಲ್ಗರ್ ರುಮೇನಿಯನ್ ಅಥವಾ ಗ್ರೀಕ್ ರಾಷ್ಟ್ರೀಯರಾಗಿದ್ದರೂ ಕಾನ್‌ಸ್ಟಾಂಟಿನೋಪಲ್ಲಿನ ಗ್ರೀಕ್ ಸಂಪ್ರದಾಯಬದ್ಧ ಚರ್ಚಿಗೆ ಒಳಪಟ್ಟಿದ್ದರು. ಗ್ರೆಗೋರಿಯನ್ ಅರಮೇನಿಯನ್ ಚರ್ಚಿನ ಸದಸ್ಯರು ಅರಮೇನಿಯನ್ ಚರ್ಚಿಗೆ ಒಳಪಟ್ಟಿದ್ದರು. ಇದೇ ರೀತಿ ಇತರ ಮುಸಲ್ಮಾನೆಯತರ ಧಾರ್ಮಿಕ ಗುಂಪುಗಳು ತಮ್ಮ ಪ್ರಮುಖ ಧಾರ್ಮಿಕ ಗುರುಗಳ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿದ್ದರು. ಮಿಲ್‌ಹತ್ ವ್ಯವಸ್ಥೆಯಲ್ಲಿ ಚರ್ಚಿಗೆ ಹೆಚ್ಚಿನ ಅಧಿಕಾರಗಳನ್ನು ನೀಡಲಾಯಿತು. ಹೀಗಾಗಿ ಪಾದ್ರಿಗಳಿಗೆ ಸಾಮಾನ್ಯ ಜನತೆಯ ಮೇಲೆ ಗಾಢಪ್ರಭಾವ ಬೀರಲು ಸಾಧ್ಯವಾಯಿತು.

ಮುಸಲ್ಮಾನ ಸಂಸ್ಥೆಗಳು ಹಾಗೂ ಮಿಲ್ಹತ್ ವ್ಯವಸ್ಥೆ: ಅಟ್ಟೊಮನ್ ಸಾಮ್ರಾಜ್ಯದುದ್ದಕ್ಕೂ ಮುಸಲ್ಮಾನ ಹಾಗೂ ಕ್ರಿಶ್ಷಿಯನ್ನರ ಮೇಲೆ ಸಮಾನವಾಗಿಯೇ ಸಂಪ್ರದಾಯಶೀಲ ಪ್ರಮುಖರು ಹಿಡಿತ ಸಾಧಿಸಲು ಕಾರಣವಾದವು. ಈ ಸಮಯದಲ್ಲಿ ಯುರೋಪಿನಲ್ಲಿ ಪುನರುತ್ಥಾನ ಹಾಗೂ ಸುಧಾರಣೆಯ ಪರಿಣಾಮವಾಗಿ ಅತೀಂದ್ರಿಯ ಶಕ್ತಿ ಪುರೋಹಿತ ವರ್ಗದ ನಿರಂಕುಶತ್ವವನ್ನು ಪ್ರಶ್ನಿಸಲಾಗುತ್ತಿತ್ತು. ತುರ್ಕಿಯಲ್ಲದ ವರ್ಗದವರು ಮುಸಲ್ಮಾನ ಹಾಗೂ ಕ್ರಿಶ್ಚಿಯನ್ನರಿಬ್ಬರನ್ನು ನಿಯಂತ್ರಿಸಿ ಬೆಳೆಯುತ್ತಿದ್ದರೂ ಉಲೇಮಗಳನ್ನು ಎದುರು ಹಾಕಿಕೊಳ್ಳಲಾಗಲಿಲ್ಲ. ಏಕೆಂದರೆ ಅದರ ಬೆಂಬಲದಿಂದಲೇ ಅದರ ಅಧಿಕಾರ ನಡೆಯುತ್ತಿತ್ತು. ಕ್ರಿಶ್ಚಿಯನ್ ಮಧ್ಯಮ ವರ್ಗಕ್ಕೆ ಸೇರಿದ ವ್ಯಾಪಾರಿಗಳು ಹಾಗೂ ಉದ್ಯೋಗಿಗಳು ತುರ್ಕಿ ಅಧಿಕಾರಿಗಳ ದಬ್ಬಾಳಿಕೆಯಿಂದ ರಕ್ಷಣೆ ಪಡೆದುದರಿಂದ ಇಟಲಿ ನಗರ ರಾಜ್ಯಗಳಲ್ಲಿ ಹಾಗೂ ಪಶ್ಚಿಮ ಯುರೋಪಿನ ರಾಷ್ಟ್ರಿಯ ಪ್ರಾಂತಗಳಲ್ಲಿ ಪಾದ್ರಿಗಳ ವಿರುದ್ಧ ಬೌದ್ದಿಕವಾದ ಹಾಗೂ ಧಾರ್ಮಿಕವಾದ ಕ್ರಾಂತಿಗೆ ತೊಡಗಿ ಅವರನ್ನು ಎದುರು ಹಾಕಿಕೊಳ್ಳಲು ಸಾಧ್ಯವಾಗಲಿಲ್ಲ. ಕ್ರಿಶ್ಚಯನ್ ಪಾದ್ರಿಗಳು ಕ್ರಿಶ್ಚಿಯನ್ನರ ಮೇಲೆ ಅಧಿಕಾರ ವ್ಯಾಪ್ತಿಯುಳ್ಳ ಕೋರ್ಟುಗಳಲ್ಲಿನ ನ್ಯಾಯ ನಿರ್ಣಯಕ್ಕೆ ಹಾಗೂ ಅದರ ಜರಿಗಾಗಿ ಸುಲ್ತಾನ ಸರ್ಕಾರವನ್ನೇ ಅವಲಂಬಿಸಿದುದರಿಂದ ಹಾಗೂ ಪಾದ್ರಿಗಳ ಹಿತಾಸಕ್ತಿಗಳ ನಿರ್ವಹಣೆಗಾಗಿ ಸುಲ್ತಾನರನ್ನೇ ಆಶ್ರಯಿಸಬೇಕಾಗುತ್ತಿತ್ತು.

ಅಟ್ಟೊಮನ್ ಆಡಳಿತ ಪದ್ಧತಿ ಹಾಗೂ ಸಾಮಾಜಿಕ ಸಂಘಟನೆ ಪ್ರಗತಿಗೆ ಅಡ್ಡಿ ಯಾಯಿತು. ಕ್ರಿಶ್ಚಿಯನ್ ಹಾಗೂ ಮುಸಲ್ಮಾನ ಸಂಪ್ರದಾಯಶೀಲತೆ, ಪ್ರಗತಿ ವಿರೋಧಿ ನೀತಿಯು, ಪಶ್ಚಿಮ ಯುರೋಪಿನಲ್ಲಿ ಸಮೀಪ ಪ್ರಾಚ್ಯವು ಶೀಘ್ರಗತಿಯ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗದಿರುವುದಕ್ಕೆ ಬಹುಮಟ್ಟಿಗೆ ಕಾರಣವಾಯಿತು.

ಜೆನಿಸರಿಗಳು

ಅಟ್ಟೊಮನ್ ಸುಲ್ತಾನರು ಸೃಜಿಸಿದ ಎರಡು ಪ್ರಮುಖ ಸಂಸ್ಥೆಗಳೆಂದರೆ ಜೆನಿಸರಿಗಳ ಮಿಲಿಟರಿ ಸಂಘಟನೆ ಹಾಗೂ ಆಳುವ ವರ್ಗ ಎನಿಸಿದ ನಾಗರೀಕ ಸೇವೆ. ಅಟ್ಟೊಮನ್ ಧುರೀಣರು ಅನಟೋಲಿಯಾದಲ್ಲಿ ಕೈದಿಗಳನ್ನು ಸೈನ್ಯ ತಂಡಗಳಿಗೆ ಸೇರಿಸಿಕೊಳ್ಳುವ ಮೂಲಕ ಈ ಸಂಸ್ಥೆಗಳನ್ನು ಬಳಕೆಗೆ ತಂದರು. ಆ ತರುವಾಯ ಬಾಲ್ಕನ್ ವ್ಯಾಜ್ಯದಲ್ಲಿ ತುರ್ಕರು ಹಿರಿಯ ಮಫ್ತಿಯ ಧಾರ್ಮಿಕ ಒಪ್ಪಿಗೆಯ ಮೇರೆಗೆ ಕ್ರಿಶ್ಚಿಯನ್ನರಿಂದ ನಿರ್ದಿಷ್ಟ ಪ್ರಮಾಣದ ಗಂಡು ಹುಡುಗರನ್ನು ಕಾಣಿಕೆಯಾಗಿ ಪಡೆದರು. ಅವರನ್ನು ಅವರ ಕ್ರಿಶ್ಚಿಯನ್ ಕುಟುಂಬದಿಂದ ಸಂಪೂರ್ಣವಾಗಿ ಬೇರ್ಪಡಿಸಿ ಸುಲ್ತಾನರ ಗುಲಾಮರನ್ನಾಗಿ ಮಾಡಲಾಯಿತು. ಈ ಮಕ್ಕಳನ್ನು ಮುಸಲ್ಮಾನರಾಗಿಯೇ ಬೆಳೆಸಿ ಮುಸಲ್ಮಾನ ಧರ್ಮ ಶ್ರದ್ಧೆಯನ್ನು ಹಾಗೂ ಸುಲ್ತಾನನ ಬಗ್ಗೆ ರಾಜನಿಷ್ಠೆಯನ್ನು ಅವರಲ್ಲಿ ಬೆಳೆಸಲಾಯಿತು. ಆ ಪೈಕಿ ಸಮರ್ಥರಾದವರನ್ನು ಅರಮನೆಯ ಕಾವಲಿಗಾಗಿ ಸೇರಿಸಿ, ರಾಜ್ಯದ ಅಧಿಕಾರ ಸ್ಥಾನಗಳಲ್ಲಿ ಆಡಳಿತಗಾರರನ್ನಾಗಿ ನೆಯಮಿಸಲಾಯಿತು. ಉಳಿದವರನ್ನು ಮಿಲಿಟರಿ ಶಿಕ್ಷಣದಲ್ಲಿ ತರಬೇತುಗೊಳಿಸಿ ಜೆನಿಸರಿ ಸೈನ್ಯದಳದ ಸದಸ್ಯರನ್ನಾಗಿ ಮಾಡಲಾಯಿತು. ೧೫ ಹಾಗೂ ೧೬ನೆಯ ಶತಮಾನದಲ್ಲಿ ಇವರು ಯುರೋಪಿನ ಉತ್ತಮ ಹಾಗೂ ನುರಿತ ಸೈನಿಕರೆಂದು ಹೆಸರಾದರು. ತುರ್ಕರಲ್ಲದ ಹಾಗೂ ಮುಸಲ್ಮಾನರಲ್ಲದ ಪ್ರಜೆಗಳಿಂದ ಮಿಲಿಟರಿ ಹಾಗೂ ಅಧಿಕಾರಿ ತಂಡವನ್ನು ಸಂಘಟಿಸಿದ ಅಟ್ಟೊಮನ್ ಸುಲ್ತಾನರು ಸಾಮ್ರಾಜ್ಯದ ಮೇಲೆ ಉತ್ತಮ ನಿಯಂತ್ರಣವನ್ನು ಸಾಧಿಸಿದರು. ಸೈನ್ಯ ದಳದಲ್ಲಿ ಸಾಮಾನ್ಯವಾಗಿರುವ ಭ್ರಷ್ಟಾಚಾರ, ಪ್ರಮುಖವಾಗಿ ಆಳುವ ವರ್ಗದಲ್ಲಿ ನಿಷ್ಠೆ ಕಡಿಮೆಯಾದಾಗ ಜೆನಿಸರಿ ಸಂಘಟನೆ ಶಿಥಿಲಗೊಂಡಿತು.

ದೇಖತಾಷ್ ದರವೇಶಿಗಳ ಧರ್ಮ ಪಂಥದೊಡನೆ ಜೆನಿಸರಿಗಳಿಗೆ ನಿಕಟ ಸಂಬಂಧವಿತ್ತು. ಅವರ ಆಫಾ ಅಥವಾ ಮುಖ್ಯಸ್ಥನು ಜೆನಿಸರಿ ಸಂಘಟನೆಯಲ್ಲಿ ಕರ್ನಲ್ ಎಂಬ ಪದವಿ ಯನ್ನು ಹೊಂದಿದ್ದನು. ದರವೇಶಿಗಳು ಜೆನಿಸರಿಗಳ ಬ್ಯಾಂಕುಗಳಲ್ಲಿ ಹಾಗೂ ಯುದ್ಧ ಭೂಮಿಯ ಸೈನ್ಯದ ತುಕಡಿಗಳಲ್ಲಿ ಮಿಲಿಟರಿ ಘಟಕಗೊಂದಿಗೆ ಸೇರ್ಪಡೆಯಾಗಿದ್ದರು. ಹೀಗೆ ಜೆನಿಸರಿಗಳು, ಉಲೇಮಗಳು ಮಫ್ತಿಗಳು ಹಾಗೂ ಕಾದಿಗಳಂಥ ಮುಸಲ್ಮಾನ ಸಂಘಟನೆಗಳೊಂದಿಗೆ ನಿಕಟವಾಗಿ ಸೇರಿಕೊಂಡಿದ್ದು, ಸುಲ್ತಾನರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ರಾಜಕೀಯ ಅಧಿಕಾರ ಸ್ಥಾನಗಳನ್ನು ಸಂಪಾದಿಸಿದರು. ೧೭ನೆಯ ಶತಮಾನದಲ್ಲಿ ಸುಲ್ತಾನರ ಪ್ರಾಬಲ್ಯ ಕುಗ್ಗಿ ಜೆನಿಸರಿಗಳಿಗೆ ಹೆಚ್ಚಿನ ಕುಮ್ಮಕ್ಕು ಲಭಿಸಿತು. ಜೆನಿಸರಿ ಅಧಿಕಾರಿಗಳು, ಮುಸಲ್ಮಾನರು ಸಂದಾಯ ಮಾಡುತ್ತಿದ್ದ ತೆರಿಗೆಗಳಿಂದಲೂ ಕೂಡ ವಿನಾಯಿತಿ ಪಡೆದಿದ್ದರು. ಜೆನಿಸರಿಗಳು ಸಾಮ್ರಾಜ್ಯದಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದ್ದರೂ ಸರ್ಕಾರಕ್ಕೆ ಹಣಕಾಸಿನ ಬಿಕ್ಕಟ್ಟು ಒದಗಿದಾಗಲೆಲ್ಲ ಅದರ ಪರಿಣಾಮ ಇದರ ಮೇಲೆ ಆಗುತ್ತಿತ್ತು. ಕ್ರಮೇಣವಾಗಿ ಜೆನಿಸರಿ ಸಂಘಟನೆಯ ಸ್ವರೂಪ ಬದಲಾಯಿತು. ಅಧಿಕಾರಿಗಳಿಗೆ ಇದ್ದ ಅವಕಾಶಗಳನ್ನು ನೋಡಿ ಹಲವಾರು ಜನ ತುರ್ಕರು ತಮ್ಮ ಮಕ್ಕಳನ್ನು ಜೆನಿಸರಿ ದಳಕ್ಕೆ ಸೇರಿಸಲು ಬಯಸಿದರು. ೧೭ನೆಯ ಶತಮಾನದ ಅಂತ್ಯ ಭಾಗದಲ್ಲಿ ಜೆನಿಸರಿಗಳು ಕ್ರಿಶ್ಚಿಯನ್ ಕುಟುಂಬಗಳಿಂದ ಸೈನ್ಯ ಭರ್ತಿ ಮಾಡಿಕೊಳ್ಳುವುದನ್ನು ನಿಲ್ಲಿಸಿದರು. ಈ ವೇಳೆಗೆ ಸರಿಯಾಗಿ ವೇತನ ಪಡೆಯದ ಜೆನಿಸರಿ ಜನರು ಕುಶಲಕಲೆಗಳು ಹಾಗೂ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ಮಧ್ಯಯುಗದ ಯುರೋಪಿನಲ್ಲಿ ಕುಶಲಕಲೆಗಳು ಹಾಗೂ ವ್ಯಾಪಾರ ಸಂಘಗಳಂಥ ‘‘ನಿಗಮ’’ಗಳಲ್ಲಿ ಪ್ರಮುಖರಾದರು. ಶಕ್ತಿಶಾಲಿಯಾದ ಧಾರ್ಮಿಕ ಸಂಘಟನೆಯೊಂದರ ನಿಕಟ ಸಂಬಂಧ ಹೊಂದಿದ ಈ ವಿಶೇಷವಾದ ಮಿಲಿಟರಿ ಸಂಘಟನೆಯು ಕೊನೆಯಲ್ಲಿ ಮಹತ್ವಪೂರ್ಣ ಆರ್ಥಿಕ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಬೆಳೆಸಿತು. ಹೀಗೆ ಇದು ಒಂದು ಶಕ್ತಿಶಾಲಿಯಾದ ರಾಜಕೀಯ ಸಂಘಟನೆಯಾಗಿ ಬೆಳೆಯಿತು. ಜೆನಿಸರಿಗಳು, ದಂಗೆಗಳು ಹಾಗೂ ಬಂಡಾಯಗಳ ಮೂಲಕ ದಿವಾನ್ ಹಾಗೂ ವಜೀರರನ್ನು ಕೆಲಸದಿಂದ ತೆಗೆಯುವಂತೆ ಸುಲ್ತಾನರನ್ನು ಒತ್ತಾಯಿಸಿದರಲ್ಲದೆ ಸುಲ್ತಾನರನ್ನೇ ಕಿತ್ತೆಸೆದರು. ಇದನ್ನು ಇತಿಹಾಸಕಾರರು ಪ್ರಾಕ್ಟೋರಿಯನ್ ಗಾರ್ಡ್ ಎಂದು ಕರೆದಿದ್ದಾರೆ. ಜೆನಿಸರಿ ದಳವು ಇತರ ಅಟ್ಟೊಮನ್ ಸಂಘಟನೆಗಳೊಂದಿಗೆ ಸಂಯೋಜಿತವಾಗಿದ್ದು ಯಾವುದೇ ಸೈನ್ಯ ದಳಕ್ಕಿಂತ ಹೆಚ್ಚಿನ ಸಂಪರ್ಕಗಳನ್ನು ಹೊಂದಿತ್ತು.

ಜೆನಿಸರಿ ದಳದಲ್ಲಿ ಬೆಳೆಯುತ್ತಿದ್ದ ಭ್ರಷ್ಟಾಚಾರದೊಂದಿಗೆ ಅಟ್ಟೊಮನ್ ಸಾಮ್ರಾಜ್ಯದ ಸೈನ್ಯ ಶಕ್ತಿಯಲ್ಲಿ ಶಿಥಿಲತೆ ಉಂಟಾಯಿತು. ಇದರಿಂದ ಪರಕೀಯ ಆಕ್ರಮಣಕಾರರಿಗೆ ಅವಕಾಶ ಲಭಿಸಿತು. ಇದರಿಂದ ಸರ್ಕಾರದ ವ್ಯವಸ್ಥಿತ ಸ್ವರೂಪಕ್ಕೆ ಭಂಗ ಉಂಟಾಯಿತು.

೧೮೨೬ರವರೆಗೂ ಇದು ಮುಂದುವರೆದು ತರುವಾಯ ಅಟ್ಟೊಮನ್ ರಾಜ್ಯ ಅದರ ಅಪಾಯಕಾರಿ ಹೋರಾಟದಿಂದ ಮುಕ್ತವಾಯಿತು. ಆಳುವ ಪಕ್ಷದ ಉಲ್ಮಾಗಳು ಹಾಗೂ ಸದಸ್ಯರು ಮಹಮ್ಮದ್ ೨ನೆಯ ಸುಲ್ತಾನನ ಅಸ್ತಿತ್ವಕ್ಕೆ ಬಾಧೆ ಬಂದಿರುವುದನ್ನು ಮನಗಂಡು ಜೆನಿಸರಿ ದಳದ ಮುಕ್ತಾಯಕ್ಕೆ ನಾಂದಿ ಹಾಡಿದರು.

ಆಳುವ ಪಕ್ಷ

ಅಟ್ಟೊಮನ್ ರಾಜ್ಯದ ಆದಿಕಾಲದ ಸುಲ್ತಾನರು ಪರಿಣಾಮಕಾರಿ ಆಡಳಿತ ವ್ಯವಸ್ಥೆಯನ್ನು ಹೊಂದಿದ್ದು ಅಲ್ಲಿ ಸೇವೆ, ಅನುಭವ, ತರಬೇತಿ ಹಾಗೂ ಸಾಮರ್ಥ್ಯದ ಮೇಲೆ ಬಡ್ತಿ ಅವಕಾಶಗಳನ್ನು ಕಲ್ಪಿಸಲಾಗುತ್ತಿತ್ತು. ಹೀಗೆ ಹಂತಹಂತವಾಗಿ ಉನ್ನತ ಸ್ಥಾನಕ್ಕೆ ಏರುತ್ತಿದ್ದ ವ್ಯವಸ್ಥೆಯನ್ನು ಸುಲ್ತಾನ ಸುಲೇಮಾನ್ ದಿ ಮ್ಯಾಗ್ನಿಶಿಯಂಟ್ (೧೫೨೦-೬೬) ಕೊನೆಗೊಳಿಸಿ ಆಸ್ಥಾನದಲ್ಲಿ ಕೇವಲ ಮಸ್ಥಾನ್ ಎಂಬ ಕೆಳ ಹುದ್ದೆಯಲ್ಲಿದ್ದ ಒಬ್ಬ ಪ್ರೀತಿ ಪಾತ್ರನನ್ನು ಉನ್ನತ ವಜೀರ್ ಹುದ್ದೆಗೆ ನೆಯಮಿಸಿದನು. ಒಂದನೆಯ ಸುಲೇಮಾನನು ಅಧಿಕಾರ ಸ್ಥಾನಗಳಿಗೆ ನೆಯಮಕಾತಿ ಮಾಡುವಲ್ಲಿ ಪೂರ್ವ ನಿದರ್ಶನದ ನಿಯಮಗಳನ್ನು ಉಲ್ಲಂಘಿಸಿದನಷ್ಟೇ ಅಲ್ಲದೆ, ತನಗೆ ಪ್ರೀತಿ ಪಾತ್ರರಾದವರನ್ನು ಉನ್ನತ ಹುದ್ದೆಗಳಿಗೆ, ವಿಶೇಷ ಹಕ್ಕುಗಳಿಗೆ ಹಕ್ಕುದಾರರನ್ನಾಗಿ ಮಾಡಲು ಮುಂದಾದನು. ಈ ಪದ್ಧತಿ ಆತನ ತರುವಾಯ ಬಂದ ರಾಜರಲ್ಲೂ ಮುಂದುವರೆದು ಆಳುವ ಪಕ್ಷದ ರಾಜನಿಷ್ಠೆ ಹಾಗೂ ದಕ್ಷತೆಗೆ ಭಂಗ ಉಂಟಾಗಿ ಇಡಿ ಸಾಮ್ರಾಜ್ಯದ ತುಂಬ ಭ್ರಷ್ಟಾಚಾರ ತಾಂಡವವಾಡಿತು. ಅಧಿಕಾರ ಸ್ಥಾನಗಳನ್ನು ಹಾಗೂ ಅವಕಾಶಗಳನ್ನು ಖರೀದಿಸುವ ವಿಷಯ ನಿತ್ಯದ ಮಾತಾಯಿತು. ಇದಕ್ಕೆ ಬಡ್ಡಿಗೆ ಸಾಲಕೊಡುವ ಒಟ್ಟೊಮನ್ನಿನ ಜನರು ಹಾಗೂ ವಿದೇಶಿ ವ್ಯಾಪಾರಿ ಬ್ಯಾಂಕರುಗಳು ಹಣ ಸಹಾಯ ಮಾಡಿ ಸುಲ್ತಾನನ ಮುಸಲ್ಮಾನ ಹಾಗೂ ಕ್ರಿಶ್ಚಿಯನ್ ರೈತರಿಗೆ ಹಾಗೂ ನಗರಗಳ ಕಾರ್ಮಿಕರಿಗೆ ಬಡ್ಡಿಸಹಿತ ಸಾಲವನ್ನು ನೀಡಿದರು.

ಚಕ್ರಾಧಿಪತ್ಯದ ಸ್ಥಾನ

ಆಡಳಿತ ಯಂತ್ರದಲ್ಲಿ ಉಂಟಾದ ಇಂತಹ ಭ್ರಷ್ಟಾಚಾರಕ್ಕೆ ಚಕ್ರಾಧಿಪತ್ಯದ ಅಟ್ಟೊಮನ್ ಅರಮನೆಗೆ ಸಂಬಂಧ ಇತ್ತು. ಸುಲ್ತಾನರ ಅರಮನೆಗಳಲ್ಲಿ ಹೆಂಗಸರು, ಗುಲಾಮರು, ಖೋಜಗಳು, ಆಸ್ಥಾನ ವಿದೂಷಕರು ಹಾಗೂ ಅರಮನೆಯ ಕೈಂಕರ್ಯದ ಸದಸ್ಯರ ಒಂದು ದೊಡ್ಡ ಸಮುದಾಯವೇ ಇತ್ತು. ಒಂದನೆಯ ಸುಲೇಮಾನನ ತರುವಾಯದ ರಾಜರು ಆಡಳಿತ ಸೂತ್ರಗಳನ್ನು ಕೈಬಿಟ್ಟು ಅಂತಃಪುರದ ಕೈಗೊಂಬೆಗಳಾದರು. ಉತ್ತಮ ಶಿಕ್ಷಣ ಸೌಕರ್ಯದಿಂದ ವಂಚಿತರಾದ ಇವರು ಅಜ್ಞಾನಿಗಳಾದ ಗುಲಾಮರು ಹಾಗೂ ಖೋಜಗಳೊಂದಿಗೆ ಸೇರಿಕೊಂಡು ಅಸಂಖ್ಯ ಅಪವಾದಗಳಿಗೆ ಗುರಿಯಾಗಿ, ಕೇರಳ ಅಧಿಕಾರಿಗಳನ್ನು ನೆಯಮಿಸುವ ಹಾಗೂ ತೆಗೆದುಹಾಕುವ ಅಧಿಕಾರಕ್ಕೆ ಮಾತ್ರ ಹಕ್ಕುದಾರರಾಗಿ ಉಳಿದರು. ೧೫೭೮ರಿಂದ ೧೬೫೬ರವರೆಗಿನ ೭೦ ವರ್ಷಗಳ ಸುಧೀರ್ಘ ಅವಧಿಯ ೮ ಸುಲ್ತಾನರ ಆಳಿಕೆಯಲ್ಲಿ ಅಂತಃಪುರದ ಸ್ತ್ರೀಯರು ತಮ್ಮ ಪ್ರೀತಿಪಾತ್ರರ ಮೂಲಕ ಇಡಿಯ ಸಾಮ್ರಾಜ್ಯವನ್ನು ಆಳಿದರು. ಆ ಪ್ರತಿಸ್ಪರ್ಧಿಗಳ ನಿಯಂತ್ರಣಕ್ಕೆ ಒಳಗಾದ ಇವರು ಆ ಮೇರೆಗೆ ಉನ್ನತ ಸ್ಥಾನಗಳಿಗೆ ನೆಯಮಕಾತಿಗಳನ್ನು ಮಾಡಿದರು. ಅಂತಃಪುರದ ಸದಸ್ಯರು, ತಮ್ಮ ದುರಾಸೆಯ ಗುಣದಿಂದಾಗಿ ಸರ್ಕಾರ ಹಾಗೂ ಸಾಮ್ರಾಜ್ಯದ ಸಂಪತ್ತನ್ನು ಸೂರೆ ಮಾಡಿದರು. ಆಳುವ ಪಕ್ಷ ಮುಸಲ್ಮಾನ ಸಂಘಟನೆ ಹಾಗೂ ಜೆನಿಸರಿ ದಳಗಳಲ್ಲಿ ನೈತಿಕ ಹಾಗೂ ಆರ್ಥಿಕ ಭ್ರಷ್ಟಾಚಾರ ಉಂಟಾಯಿತು.

೧೮ನೆಯ ಶತಮಾನದ ಮೊದಲ ಭಾಗದಲ್ಲಿ ಅಟ್ಟೊಮನ್ ಸಾಮ್ರಾಜ್ಯದಲ್ಲಿ ಭ್ರಷ್ಟಾಚಾರ ಪರಮಾವಧಿಗೆ ಏರಿದರೂ ಹಾಗೂ ಅದನ್ನು ನಿವಾರಿಸುವುದು ಅಸಾಧ್ಯ ವಾಗಿದ್ದರೂ ಇದಕ್ಕೆ ತುರ್ಕರಾಗಲೀ ಅಥವಾ ಮುಸಲ್ಮಾನರಾಗಲೀ ಹೊಣೆಯಾಗಿರಲಿಲ್ಲ. ಭ್ರಷ್ಟಾಚಾರ ಎಂಬುದು ಒಂದು ಸಾಮಾಜಿಕ ಪಿಡುಗಾಗಿದ್ದು ಇದು ಭೂತ ಹಾಗೂ ವರ್ತಮಾನಗಳೆರಡರಲ್ಲೂ ರಾಜ ಮನೆತನಗಳಲ್ಲಿ, ಪ್ರಜಪ್ರಭುತ್ವಗಳಲ್ಲಿ, ಸಾಮ್ರಾಜ್ಯಗಳಲ್ಲಿ ಹಾಗೂ ಪ್ರಾಂತಗಳಲ್ಲಿ ಎಲ್ಲೆಡೆಗಳೂ ಇರುವಂತಿವೆ. ಅಧಿಕಾರಶಾಹಿ ಇರಲಿ ಅಥವಾ ಪ್ರಜಸತ್ತೆ ಇರಲಿ ಹಲವರನ್ನು ಕೆಲವರು ಶೋಷಿಸುವುದು ಸಾಮಾಜಿಕ ಸಂಘಟನೆಯಲ್ಲಿ ನಡೆದೇ ಇರುತ್ತದೆ. ಅಟ್ಟೊಮನ್ ಸಾಮ್ರಾಜ್ಯದ ಉದಯದೊಂದಿಗೆ ಭ್ರಷ್ಟಾಚಾರ ಹುಟ್ಟಿ ಬೆಳೆದು ಅದರ ಎಲ್ಲ ಸದಸ್ಯರಿಗೂ ಹರಡಿತು. ಒಂದು ತುರ್ಕಿ ಗಾದೆಯಲ್ಲಿ ಅಲ್ಲಿಯ ವ್ಯವಹಾರಗಳ ಸ್ಥಿತಿ ಸ್ಪಷ್ಟವಾಗಿ ವ್ಯಕ್ತವಾಗಿದೆ; ‘‘ಮೀನು ತಲೆಯ ಭಾಗದಿಂದಲೇ ಕೊಳೆಯಲು ಪ್ರಾರಂಭಿಸುತ್ತದೆ.’’ ಒಂದನೆಯ ಮಹಾಯುದ್ಧದ ವೇಳೆಗೆ ಈ ಸಂಘಟನೆ ವಿಘಟಿತವಾಗಿ ಇಡಿಯ ಸಮೀಪ ಪ್ರಾಚ್ಯದಲ್ಲಿ ಸುಮಾರು ೩೦೦ ವರ್ಷಗಳವರೆಗೂ ವ್ಯಾಪಿಸಿತು.

ಕರಾರು ಒಪ್ಪಂದ

ಅರಬ ಹಾಗೂ ಬೆಜೆನ್‌ಟೈನರ ಪದ್ಧತಿಗಳಿಂದ ಹುಟ್ಟಿಕೊಂಡ ಇನ್ನೊಂದು ಅಟ್ಟೊಮನ್ ಸಂಘಟನೆ ಮೊದಲು ಅಟ್ಟೊಮನ್ ರಾಜ್ಯದ ಹಿತಾಸಕ್ತಿಗಳನ್ನು ಪೂರೈಸಿ ಅಲ್ಲಿಯ ಜನರಿಗೆ ಲಾಭದಾಯಕವಾಗಿ ಪರಿಣಮಿಸಿತು. ಆದರೆ ಕೂಡಲೇ ವಿದೇಶೀಯರ ಶೋಷಣೆಗೆ ಗುರಿಯಾಯಿತು. ಸಮೀಪ ಪ್ರಾಚ್ಯದ ಇತರ ನಗರಗಳಂತೆಯೇ ಕಾನ್‌ಸ್ಟಾಂಟಿ ನೋಪಲ್ ಉತ್ಪಾದನೆ, ವಾಣಿಜ್ಯ ಹಾಗೂ ಸಾಗಾಣಿಕೆಯ ಕೇಂದ್ರ ಸಾಧನವಾಗಿತ್ತು. ಆಮದು, ರಫ್ತು ಹಾಗೂ ಸಾಗಾಣಿಕೆ ವ್ಯಾಪಾರದ ಮೇಲೆ ಅದರ ಆರ್ಥಿಕ ಸ್ಥಿತಿ ನೆಲೆಗೊಂಡಿತ್ತು. ತರುವಾಯ ವಿದೇಶಿ ವ್ಯಾಪಾರಿಗಳನ್ನು ಹಾಗೂ ನಾವಿಕರನ್ನು ಬೆಂಬಲಿಸು ವುದು ಅನಿವಾರ್ಯವಾಯಿತು. ಕಾನ್‌ಸ್ಟಾಂಟಿನೋಪಲನ್ನು ವಶಪಡಿಸಿಕೊಂಡ ಮೇಲೆ ತುರ್ಕರು ಇದನ್ನು ಮನಗಂಡರು. ಆದರೆ ಅವರ ಹಕ್ಕುಗಳನ್ನು ಹಾಗೂ ವಿಶೇಷ ಸೌಲಭ್ಯಗಳನ್ನು ಸುಲ್ತಾನನು ಇಟಲಿಯ ನಗರ ರಾಜ್ಯಗಳ ವ್ಯಾಪಾರಿಗಳಿಗೆ ಕೊಡಮಾಡಿದನು. ಮುಂದಿನ ಶತಮಾನದಲ್ಲಿ ಸಮೀಪ ಪ್ರಾಚ್ಯದಲ್ಲಿ ಫ್ರೆಂಚರ ವ್ಯಾಪಾರ ವಿಸ್ತರಿಸಿ ಫ್ರಾನ್ಸಿನ ಒಂದನೆಯ ಫ್ರಾನ್ಸಿಸ್ ಹಾಗೂ ಸುಲ್ತಾನ ಸುಲೇಮಾನರು ಹಾಪ್ಸ್ ಬರ್ಗ್ ಸಾಮ್ರಾಟನಾದ ೫ನೆಯ ಚಾರ್ಲ್ಸ್ ಜೊತೆ ಯುದ್ಧದಲ್ಲಿ ತೊಡಗಿದ್ದಾಗ ೧೫೩೫ರಲ್ಲಿ ಫ್ರಾನ್ಸ್ ಹಾಗೂ ಅಟ್ಟೊಮನ್ ಸಾಮ್ರಾಜ್ಯಗಳ ಮಧ್ಯೆ ಸ್ನೇಹ ಹಾಗೂ ವಾಣಿಜ್ಯ ಸಂಬಂಧಗಳ ಕುರಿತ ಒಂದು ಒಪ್ಪಂದಕ್ಕೆ ಸಹಿ ಹಾಕಿದರು. ಇದೇ ಒಪ್ಪಂದವು ೨೦ನೆಯ ಶತಮಾನದವರೆಗೂ ಮುಂದುವರಿಯಿತು. ಇದು ಹಾಗೂ ತರುವಾಯದ ಒಪ್ಪಂದಗಳನ್ನು ಕರಾರುಗಳು, ಒಪ್ಪಂದಗಳು, ಹಕ್ಕುಗಳು ಹಾಗೂ ವಿಶೇಷ ಹಕ್ಕುಗಳ ರೂಪದಲ್ಲಿ ತಯಾರಿಸಲಾಯಿತು. ಅಟ್ಟೊಮನ್ ಆಸ್ಥಾನದ ಅಧಿಕಾರ ವ್ಯಾಪ್ತಿಯಲ್ಲಿ ವಿದೇಶೀಯರು ವಿಭಿನ್ನ ಬಗೆಯ ತೆರಿಗೆಗಳಿಂದ ವಿನಾಯಿತಿ ಪಡೆದುದರಿಂದ ಈ ವಿಶೇಷವಾದ ಹೆಸರನ್ನು ನೀಡಲಾಯಿತು. ಕಾಲ ಸರಿದಂತೆ ಮುಸಲ್ಮಾನೇತರ ಕೆಲವು ರಾಜ್ಯಗಳು, ದುರ್ಬಲವಾಗುತ್ತಿದ್ದ ಅಟ್ಟೊಮನ್ ಸರ್ಕಾರದ ಅಸಾಮರ್ಥ್ಯದ ಹಾಗೂ ಅಧಿಕಾರವನ್ನು ಪ್ರಬಲಗೊಳಿಸುತ್ತಿದ್ದ ಪಾಶ್ಚಿಮಾತ್ಯ ರಾಜ್ಯಗಳ ಪ್ರಯೋಜನ ಪಡೆದು, ಇಂತ ಕರಾರು ಒಪ್ಪಂದದ ಹಕ್ಕುಗಳು ಹಾಗೂ ವಿಶೇಷ ಹಕ್ಕುಗಳನ್ನು ಸಂಪಾದಿಸಿದವು. ಸಮೀಪ ಪ್ರಾಚ್ಯ ಪ್ರದೇಶದಲ್ಲಿ ಬೆಳೆಯುತ್ತಿದ್ದ ಪಾಶ್ಚಿಮಾತ್ಯ ರಾಜ್ಯಗಳ ರಾಜಕೀಯ ಹಾಗೂ ಆರ್ಥಿಕ ಚಟುವಟಿಕೆಗಳಿಂದಾಗಿ ಅಟ್ಟೊಮನ್ ಸಾಮ್ರಾಜ್ಯದಲ್ಲಿ ವಿದೇಶಿ ತಂಡಗಳು ಹೆಚ್ಚು ಹೆಚ್ಚಾಗಿ ಬೆಳೆದು ಅವರ ಹಕ್ಕುಗಳು ಹಾಗೂ ವಿಶೇಷ ಹಕ್ಕುಗಳು ಸುಲ್ತಾನನ ಸರ್ಕಾರದ ಪ್ರಭುತ್ವವನ್ನೇ ಆಕ್ರಮಿಸಿದವು.

ಊಳಿಗಮಾನ್ಯ ಭೂ ವ್ಯವಸ್ಥೆ

ಅಟ್ಟೊಮನ್ ಪ್ರಾಂತದಲ್ಲಿಯ ಊಳಿಗಮಾನ್ಯ ಪದ್ಧತಿ ಹಾಗೂ ಭೂ ಆರ್ಜನೆಯು ಮಧ್ಯ ಹಾಗೂ ಪಶ್ಚಿಮ ಯುರೋಪಿನಲ್ಲಿಯ ಪದ್ಧತಿಗಿಂತ ವಿಭಿನ್ನವಾಗಿ ರಷ್ಯಾ ಮಸ್ಕೊವೈಟ್ ರಾಜ್ಯದ ಪದ್ಧತಿಯನ್ನು ಹೋಲುತ್ತದೆ. ಒಂದು ಮಹತ್ವದ ವಿಭಿನ್ನತೆ ಎಂದರೆ ತುರ್ಕರ ವ್ಯವಸ್ಥೆಯಲ್ಲಿ ವಂಶಪಾರಂಪರ್ಯವಾದ ಭೂ ಒಡೆತನ ಇರಲಿಲ್ಲ. ಸುಲ್‌ಜುಕ್ ತುರ್ಕರು ಈ ಪದ್ಧತಿಯನ್ನು ಸೃಜಿಸಿದ ಮೇಲೆ ಇದು ರೂಪ ಪಡೆಯಿತು. ಇದು ಬೆಜೆನ್‌ಟೈನ್ ಪ್ರಾಂತದಲ್ಲಿಯ ಪದ್ಧತಿಯನ್ನೇ ಹೋಲುತ್ತದೆ. ಪಾಶ್ಚಿಮಾತ್ಯ ರೋಮನ್ ಸಾಮ್ರಾಜ್ಯದಲ್ಲಿ ನಾಗರಿಕ ಸಮಾಜ ಹಾಗೂ ಹಣಕಾಸು ವ್ಯವಸ್ಥೆ ಕುಸಿದ ಮೇಲೆ ಕೇಂದ್ರೀಕೃತ ಚಕ್ರಾಧಿಪತ್ಯದ ಚೌಕಟ್ಟಿನಲ್ಲಿ ಇದ್ದ ದೊಡ್ಡ ನಗರ ಪ್ರದೇಶಗಳನ್ನು ಹೊಂದಿದ ಊಳಿಗಮಾನ್ಯ ಪದ್ಧತಿಯ ಸಮಾಜವು, ಪಶ್ಚಿಮ ಯುರೋಪಿನಲ್ಲಿ ಇದ್ದ ಊಳಿಗಮಾನ್ಯ ಪದ್ಧತಿಗಿಂತ ವಿಭಿನ್ನವಾದ ವ್ಯಾಪಾರಿ ಹಣಕಾಸು ವ್ಯವಸ್ಥೆಯನ್ನು ಬೆಳೆಸಿತು.

ಜಮೀನ್ದಾರರೆಂದು ಜಮೀನು ಹಕ್ಕು ನೀಡುವ ಬದಲು ತುರ್ಕಿಸ್ತಾನದ ಮಿಲಿಟರಿ ಹಾಗೂ ನಾಗರಿಕ ಪ್ರಮುಖರಿಗೆ ಆಯಾ ಪ್ರದೇಶಗಳಿಗೆ ತಕ್ಕಂತೆ ತೆರಿಗೆಯ ಹಕ್ಕುಗಳನ್ನು ನೀಡಲಾಯಿತು. ಸೇವೆಗಳಿಗೆ ಪ್ರತಿಯಾಗಿ ಈ ಅನುದಾನಗಳನ್ನು ನೀಡಲಾಯಿತು ಹಾಗೂ ರಾಜನು ಕೇಳಿದಾಗ ಸೈನ್ಯವನ್ನು ಒದಗಿಸಬೇಕೆಂಬುದು ಬಾಧ್ಯತೆಯಾಗಿತ್ತು. ಹೀಗೆ ಸೃಷ್ಟಿಯಾದ ಊಳಿಗಮಾನ್ಯ ತಂಡಗಳು ಸ್ಟಾಹಿಸ್ ಎಂದು ಹೆಸರಾಗಿದ್ದು ಅಟ್ಟೊಮನ್ ಸಾಮ್ರಾಜ್ಯದ ಆಗಿನ ಸೈನ್ಯದಲ್ಲಿ ಮಹತ್ವದ ಸ್ಥಾನ ಪಡೆದಿದ್ದವು. ಪ್ರಾಚೀನ ಅಟ್ಟೊಮನ್ ಸಾಮ್ರಾಜ್ಯದಲ್ಲಿ ಸಮರ್ಥ ಮಿಲಿಟರಿ ಪರಿಣತರಿಗೆ ಊಳಿಗಮಾನ್ಯ ಅನುದಾನಗಳನ್ನು ನೀಡಲಾಗಿದ್ದು ಭ್ರಷ್ಟಾಚಾರ ಕಾರಣದಿಂದಾಗಿ ಈ ಅನುದಾನಗಳನ್ನು ರಾಜಸ್ಥಾನದ ಪ್ರೀತಿ ಪಾತ್ರರಿಗೆ, ಆಸ್ಥಾನಿಕರಿಗೆ, ಅಂತಃಪುರದ ಖೋಜಗಳಿಗೆ ನೀಡಲಾಯಿತು. ಸರ್ಕಾರದ ಹುದ್ದೆಗಳಂತೆಯೇ ಇವುಗಳನ್ನು ಕೂಡ ಮಾರಾಟದ ವಸ್ತುಗಳಂತೆ ಪರಿಗಣಿಸಲಾಯಿತು. ಆಳುವ ಪಕ್ಷ ಹಾಗೂ ಮುಸಲ್ಮಾನ ಧರ್ಮಸಂಸ್ಥೆಗಳಂತೆಯೇ ಮಿಲಿಟರಿ ಊಳಿಗಮಾನ್ಯ ಪದ್ಧತಿಯು ಕೂಡ ಭ್ರಷ್ಟಾಚಾರದಿಂದ ಹೊರತಾಗಿ ಉಳಿಯಲಿಲ್ಲ.

ಪಶ್ಚಿಮ ಏಷ್ಯಾ ಸಮಾಜಗಳುಆಧುನಿಕತೆ ಮತ್ತು ಸುಧಾರಣೆ

೧೮ನೆಯ ಶತಮಾನದ ವೇಳೆಗೆ(ಅಟ್ಟೊಮನ್ ಇರಾನ್ ಹಾಗೂ ಅರಬಸ್ಥಾನ) ಪಶ್ಚಿಮ ಏಷ್ಯಾ ಸಮಾಜಗಳ ವಿಕಾಸ ಯುರೋಪಿಯನ್ ಆಕ್ರಮಣಗಳಿಂದಾಗಿ ಬದಲಾವಣೆ ಹೊಂದಿತು. ಯುರೋಪಿಯನ್ ದಾಳಿಗಳು ಈ ಸಮಾಜಗಳ ಆಂತರಿಕ ಸ್ವರೂಪವನ್ನು ಬಹುಮಟ್ಟಿಗೆ ಬದಲಿಸಿದವು. ಪ್ರತಿಯೊಂದು ಸಂದರ್ಭದಲ್ಲಿಯೂ ಯುರೋಪಿಯನ್ ಪರಿಣಾಮ ವಿಭಿನ್ನವೇ ಆಗಿತ್ತು. ಪಶ್ಚಿಮ ಏಷ್ಯಾದ ಮುಸಲ್ಮಾನ ಸಮುದಾಯಗಳಲ್ಲಿ ಇದ್ದ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿಭಿನ್ನತೆಗಳು ಸೇರಿ, ತತ್ಕಾಲೀನ ಮುಸಲ್ಮಾನ ಸಮುದಾಯದಲ್ಲಿ ವಿಭಿನ್ನ ಪ್ರಕ್ರಿಯೆಗಳು ಹುಟ್ಟಿಕೊಂಡವು. ೧೯ ಹಾಗೂ ೨೦ನೆಯ ಶತಮಾನಗಳಲ್ಲಿ ಯುರೋಪಿನ ಪ್ರಭಾವ ಎಲ್ಲ ನಾಗರಿಕತೆಗಳಿಗೂ ಹರಡಿ ಅವುಗಳಲ್ಲಿ ಬಹುಮಟ್ಟಿಗೆ ಬದಲಾವಣೆಗಳನ್ನು ತಂದು ಆಧುನಿಕ ಕಾಲಕ್ಕೂ ಅಳವಡಿಸಿದವು. ಈ ಪ್ರಭಾವಕ್ಕೆ ಸ್ಥಳೀಯ ಧಾರ್ಮಿಕ ಪ್ರಮುಖರ ಕೊಡುಗೆಯೂ ಇದೆ. ಪಶ್ಚಿಮ ಏಷ್ಯಾ ಸಮಾಜಗಳಲ್ಲಿ ಕಂಡುಬಂದ ಮಾರ್ಪಾಡುಗಳು, ತಮ್ಮ ತಮ್ಮ ಸಮುದಾಯಗಳಲ್ಲಿ ಅಧಿಕಾರ ಸ್ಥಾನವನ್ನು ಪಡೆಯುವುದಕ್ಕಾಗಿ ಯುರೋಪಿಯನ್ನರು ತಂದ ಒತ್ತಡ ಅಥವಾ ನೀಡಿದ ಪೋತ್ಸಾಹದಿಂದಾಗಿ ಕಾಣಿಸಿಕೊಂಡ ಅವರವರ ಹಿತಾಸಕ್ತಿಗಳು, ಪರಿಭಾವನೆಗಳು, ಪ್ರತಿಕ್ರಿಯೆಗಳ ರೂಪದಲ್ಲಿವೆ. ಪಶ್ಚಿಮ ಏಷ್ಯಾ ದೇಶಗಳಲ್ಲಿ ಈ ಧಾರ್ಮಿಕ ಪ್ರಮುಖರು ಪ್ರಾರಂಭದಲ್ಲಿ ರಾಜಕೀಯ ಅಥವಾ ಸಾಂಸ್ಕೃತಿಕ ಪರರಾಗಿದ್ದು ಯುರೋಪಿನ ಪ್ರಭಾವವನ್ನು ಹಣಕಾಸು ದೃಷ್ಟಿಯಿಂದ ನೋಡುವ ಬದಲು ಸಾಮಾಜಿಕ ಹಾಗೂ ಸಾಂಸ್ಕೃತಿಕ ದೃಷ್ಟಿಕೋನದಿಂದ ನೋಡಲು ಬಯಸಿದರು. ಪಶ್ಚಿಮ ಏಷ್ಯಾದ ಸಮಾಜಗಳಲ್ಲಿ ಆರ್ಥಿಕ ಪ್ರಭಾವಗಳು ಸಹಜವಾಗಿಯೇ ರಾಜಕೀಯ ಹಾಗೂ ಸಾಂಸ್ಕೃತಿಕ ಪ್ರತಿಕ್ರಿಯೆಗಳಿಗೆ ದಾರಿ ಮಾಡಿಕೊಟ್ಟಿತು. ಪ್ರತಿಯೊಂದು ಪ್ರದೇಶದಲ್ಲೂ ಕಂಡುಬರುವ ಆರ್ಥಿಕ ಹಾಗೂ ತಂತ್ರಜ್ಞಾನದ ಅಂಶಗಳು ಆಧುನಿಕತೆಯ ವಿಭಿನ್ನ ರೂಪಗಳಲ್ಲಿಯೇ ವ್ಯಕ್ತವಾಗಿವೆ, ಸೇರಿವೆ, ಹಾಗೂ ಸಂಬಂಧ ಹೊಂದಿವೆ. ಹೀಗಾಗಿ ಅಟ್ಟೊಮನ್ ಸಾಮ್ರಾಜ್ಯ ಅರಬಸ್ಥಾನ ಹಾಗೂ ಇರಾನಿನ ಮೇಲೆ ಆಗಿರುವ ಯುರೋಪಿನ ಪ್ರಭಾವವನ್ನು ಗುಣಿಸಿ ನೋಡುವ, ಆಧುನಿಕ ಸುಧಾರಣೆಗಳಿಗೆ ಅವು ಪ್ರತಿಕ್ರಿಯಿಸುವ ರೀತಿಯನ್ನು ಗಮನಿಸುವ ಪ್ರಯತ್ನ ಇಲ್ಲಿದೆ. ಹಣಕಾಸು ಹಾಗೂ ತಂತ್ರಜ್ಞಾನದ ಪರಿವರ್ತನೆಯ ಮಹತ್ವವನ್ನು ಸರಿಯಾಗಿ ಅಂದಾಜು ಮಾಡಲಿಕ್ಕಿಲ್ಲವೆಂಬ ಭಯದಿಂದಾಗಿ ಈ ಸಮಾಜಗಳ ಆಧುನಿಕತೆಯಲ್ಲಿ ಐತಿಹಾಸಿಕ ಪ್ರಮುಖರು, ಸಂಸ್ಥೆಗಳು, ಸಾಂಸ್ಕೃತಿಕತೆ ಮುಂದುವರಿದ ಬಗ್ಗೆ  ಇಲ್ಲಿ ಚರ್ಚಿಸಲಾಗಿದೆ.

ಒಟ್ಟಿನಲ್ಲಿ ಹೇಳುವುದಾದರೆ ಪಶ್ಚಿಮ ಏಷ್ಯಾದ ಇಸ್ಲಾಂ ಸಮುದಾಯಗಳ ಆಧುನಿಕ ರೂಪಾಂತರದ ಇತಿಹಾಸವು ಹಲವು ಹಂತಗಳಲ್ಲಿದೆ ಹಾಗೂ ಮುಸಲ್ಮಾನ ಸಮುದಾಯದುದ್ದಕ್ಕೂ ಕೆಲವು ಸಾಮಾನ್ಯ ಲಕ್ಷಣಗಳನ್ನು ಪ್ರಕಟಪಡಿಸಿದೆ. ಮೊದಲನೆ ಹಂತವೆಂದರೆ ೧೮ನೆಯ ಶತಮಾನದ ಉತ್ತರಾರ್ಧದಿಂದ ೨೦ನೆಯ ಶತಮಾನದ ಪೂರ್ವಾರ್ಧದ ಸಂದರ್ಭದಲ್ಲಿ ಮುಸಲ್ಮಾನ ಸಾಮ್ರಾಜ್ಯದ ವ್ಯವಸ್ಥೆ ವಿಭಜಿತವಾಯಿತಲ್ಲದೆ ಅದರ ಮೇಲೆ ಯುರೋಪಿನ ವಾಣಿಜ್ಯ ಹಾಗೂ ಪ್ರಾದೇಶಿಕ ಪ್ರಭುತ್ವ ಸ್ಥಾಪಿತವಾಯಿತು. ಈ ಘಟ್ಟದಲ್ಲಿ ರಾಜಕೀಯ, ಧಾರ್ಮಿಕ ಹಾಗೂ ಗುಡ್ಡಗಾಡು ಜನರ ಮುಖಂಡರು ಹೊಸ ತತ್ವಗಳನ್ನು ಹಾಗೂ ತಮ್ಮ ಸಮುದಾಯದ ಆಂತರಿಕ ಬೆಳವಣಿಗೆಗೆ ಅಗತ್ಯವಿರುವ ಹೊಸ ಧಾರ್ಮಿಕ ನಿಲುವುಗಳನ್ನು ಪರಿಭಾಷಿಸಲು ಯತ್ನಿಸಿದರು. ಈ ಪ್ರತಿಕ್ರಿಯೆಗಳ ಫಲವಾಗಿ ೨೦ನೆಯ ಶತಮಾನದಲ್ಲಿ ಅಭಿವೃದ್ದಿಯ ಎರಡನೆಯ ಘಟ್ಟ ರೂಪ ಪಡೆಯಿತು. ಇದೇ ರಾಷ್ಟ್ರೀಯ ಸರ್ಕಾರಗಳ ನಿರ್ಮಾಣ. ಇದರ ಮೂಲಕ ಪಶ್ಚಿಮ ಏಷ್ಯಾದ ಧಾರ್ಮಿಕ ಪ್ರಮುಖರು, ತಮ್ಮ ಸಮುದಾಯಗಳಿಗೆ ಹೊಸ ರಾಜಕೀಯ ಸ್ವರೂಪವನ್ನು ನೀಡಲು ಯತ್ನಿಸಿದರು ಹಾಗೂ ಧಾರ್ಮಿಕ ಅಭಿವೃದ್ದಿ ಹಾಗೂ ಸಾಮಾಜಿಕ ಬದಲಾವಣೆಯನ್ನು ತರಲು ಮುಂದಾದರು. ರಾಷ್ಟ್ರೀಯ ಸರ್ಕಾರ ನಿರ್ಮಾಣದ ಘಟ್ಟವು ಮೊದಲನೆ ಮಹಾಯುದ್ಧದ ತರುವಾಯ ಪ್ರಾರಂಭವಾಗಿ ಈಗಿನವರೆಗೂ ಅಸ್ತಿತ್ವದಲ್ಲಿದೆ. ರಾಷ್ಟ್ರೀಯ ಸರ್ಕಾರಗಳು ಒಗ್ಗೂಡುವುದರಿಂದಾಗಿ ಎಲ್ಲ ಪಶ್ಚಿಮ ಏಷ್ಯಾ ದೇಶಗಳ ಸುಧಾರಣೆಯ ನಂತರದ ಘಟ್ಟ ಪ್ರಾರಂಭವಾಯಿತು.

 

ಪರಾಮರ್ಶನಗ್ರಂಥಗಳು

೧. ಚೌಧುರಿ ಕೆ.ಎನ್., ೧೯೯೦. ಏಷ್ಯಾ ಬಿಫೋರ್ ಯುರೋಪ್ : ಇಕಾನಾಮಿ ಆಂಡ್ ಸಿವಿಲಿಜೇಶನ್ ಆಫ್ ದಿ ಇಂಡಿಯನ್ ಓಶನ್ ಫ್ರಂ ದಿ ರೈಸ್ ಆಫ್ ಇಸ್ಲಾಂ ೧೭೫೦, ಕೇಂಬ್ರಿಡ್ಜ್

೨. ಲಿಪಿಡಸ್  ಇರಾ ಎಂ., ೧೯೮೮. ಹಿಸ್ಟರಿ ಆಫ್ ಇಸ್ಲಾಮಿಕ್ ಸೊಸೈಟೀಸ್, ಕೇಂಬ್ರಿಡ್ಜ್