ಪ್ರಾಚೀನ ಆಗ್ನೇಯ ಏಷ್ಯಾದಲ್ಲಿ ರಾಜ್ಯ

ಆಗ್ನೇಯ ಏಷ್ಯಾ ರಾಜ್ಯಗಳು, ಸಾಮೂಹಿಕ ಒಳಿತಿಗಾಗಿ ಒಗ್ಗೂಡಿದ ಜನತೆಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪ್ರಕ್ರಿಯೆಗಳಿಂದ ಸೃಷ್ಟಿಯಾಗಿರದಿದ್ದರೆ ಅವು ಹುಟ್ಟಿದ್ದೆಂತು! ಭಾರತೀಯ ರಾಜರು ಈ ಪ್ರದೇಶವನ್ನು ಗೆದ್ದು ಅಲ್ಲಿ ರಾಜ್ಯಗಳನ್ನು ಸ್ಥಾಪಿಸಿದರೆಂಬುದು ಕೆಲವರ ವಾದ, ಈ ಪ್ರದೇಶದ ಮಾರ್ಗವಾಗಿ ಹೆಚ್ಚಾದ ಅಂತಾರಾಷ್ಟ್ರೀಯ ವ್ಯಾಪಾರ ದಿಂದಾಗಿ ಆರ್ಥಿಕ ಬದಲಾವಣೆ ಉಂಟಾಗಿ ಇವು ಹುಟ್ಟಿದವು ಎಂಬುದು ತುಸು ಒಪ್ಪತಕ್ಕ ಮಾತು. ಕೆಲ ಕ್ರಿಯಾಶೀಲ ಧುರೀಣರು ಈ ಅವಕಾಶವನ್ನು ಬಳಸಿಕೊಂಡು ಹೊಸದಾಗಿ ಆರ್ಥಿಕ ಸಂಪನ್ಮೂಲಗಳನ್ನು ಗಳಿಸಿ ತಮ್ಮ ಪ್ರಾಂತಗಳನ್ನು ವಿಸ್ತರಿಸಿದರು.

ರಾಜ್ಯದ ಉಗಮ

ಫ್ಯೂನಾನ್‌ನ ಅರಸೊತ್ತಿಗೆ ಕುರಿತು ವಿಶ್ಲೇಷಿಸುವಾಗ ಡಿ.ಜಿ.ಹಾಲ್ ರಾಜ್ಯ ಹೇಗೆ ರೂಪುತಳೆದಿರಬಹುದು ಎಂಬುದನ್ನು ತೋರಿಸಿದ್ದಾನೆ. ಫ್ಯೂನಾನ್‌ನ ಸ್ಥಾಪನೆಗೆ ಸೈನ್ಯಬಲವೇ ಜೀವನಾಡಿಯಾಗಿತ್ತು. ತಮ್ಮ ತಮ್ಮಲ್ಲೇ ಸ್ಪರ್ಧಿಸುತ್ತಿದ್ದ ಚಿಕ್ಕ ಚಿಕ್ಕ ಪಾಳೆಯಗಾರರು ಒಬ್ಬರನ್ನೊಬ್ಬರು ಸೋಲಿಸಿ, ಆ ಗೆದ್ದ ರಾಜ್ಯಗಳಿಗೆ ತಂತಮ್ಮ ಮಕ್ಕಳು, ಸಂಬಂಧಿಕರು ಹಾಗೂ ಸ್ನೇಹಿತರನ್ನೇ ಮುಖ್ಯಸ್ಥರನ್ನಾಗಿಸಿದರು. ಹೀಗೆ ರಚಿತವಾದ ಪ್ರತಿಯೊಂದ ಹೊಸ ಘಟಕದಿಂದಾಗಿ ಕೇಂದ್ರ ರಾಜ್ಯದ ಆರ್ಥಿಕ ಬೆಂಬಲಕ್ಕೆ ನಿಂತಿತ್ತು.

ಹೊಸ ಭಾಗಗಳನ್ನು ಗೆಲ್ಲುವುದು, ಹೊಸ ರಾಜ್ಯ ರಚನೆ ಇಂಥ ಘಟನೆಗಳ ಸರಣಿ ಯಲ್ಲಿ ಒಗ್ಗೂಡಿದ ಘಟನಾವಳಿಗಳನ್ನು ಯಾರಾದರೂ ಊಹಿಸಬಹುದು. ಮೊದಲನೆ ಯದಾಗಿ, ಕೇಂದ್ರ ರಾಜ್ಯದೊಳಗಿನ ಒಬ್ಬಬ್ಬ ಪಾಳೆಯಗಾರನಿಗೆ ವಿಜಯದಿಂದಾಗಿ ಬಂದ ಆರ್ಥಿಕ ಸಂಪನ್ಮೂಲಗಳು, ಆರ್ಥಿಕ ಬಲದಿಂದಾಗಿ ಹೆಚ್ಚಿನ ಜನಶಕ್ತಿಯನ್ನು ಸಂಘಟಿಸಿ ತನ್ಮೂಲಕ ರಾಜ್ಯ ವಿಸ್ತರಿಸುವುದಕ್ಕೆ ದಾರಿಯಾಯಿತು. ಹೆಚ್ಚಿನ ಜನಶಕ್ತಿಯಿಂದಾಗಿ ಸಂಪತ್ತಿನ ಗಳಿಕೆ ಹಾಗೂ ಆಡಳಿತ ನಿಯಂತ್ರಣ ಸಾಧಿಸಲು ಸಾಧ್ಯವಾಯಿತು. ಇಂಥ ಸಂಕ್ರಮಣಕಾಲ ಪೀಳಿಗೆಗಳುದ್ದಕ್ಕೂ ಮುಂದುವರಿದಿರಬಹುದಾಗಿದ್ದರೂ ಅದು ಅಸ್ಥಿರ ವಾಗಿತ್ತು. ಏಕೆಂದರೆ ಆರ್ಥಿಕ ನಿಯಂತ್ರಣ, ರಾಜಕೀಯ ಅಧಿಕಾರದ ಸಾಧನೆಗಾಗಿ ಸೈನ್ಯಶಕ್ತಿಯನ್ನು ಅಪಾರವಾಗಿ ಬಳಸಬೇಕಾಗುತ್ತಿತ್ತು. ರಾಜಕೀಯ ಸ್ಥಿರತೆಗೆ ಇತರ ಅಂಶಗಳು ಹೆಚ್ಚಿನ ಪರಿಣಾಮ ಬೀರಿದಾಗ ಸೈನ್ಯಶಕ್ತಿಯ ಬಳಕೆ ಕಡಿಮೆಯಾಯಿತು.

ಆಗ್ನೇಯ ಏಷ್ಯಾದಲ್ಲಿ ಫ್ಯೂನಾನ್ ಸ್ಥಾಪಿತವಾದುದರಿಂದ ಅಂತಾರಾಷ್ಟ್ರೀಯ ವಾಣಿಜ್ಯ ಹಾಗೂ ನೌಕಾಸಂಚಾರ ಅಭಿವೃದ್ದಿಯಾಗಿ ಇಂಡೋಚೀನಾದ ಕರಾವಳಿಯಲ್ಲಿ ಫ್ಯೂನಾನ್ ದಂಥ ಸುರಕ್ಷಿತ ಬಂದರು ಹುಟ್ಟಿತು. ಇದರಿಂದ ರಾಜ್ಯರಚನೆಗೆ ಅಗತ್ಯವಾದ ಆರ್ಥಿಕ ಸಂಪನ್ಮೂಲಗಳನ್ನು, ಹಡಗು ಸಂಚಾರದಿಂದ ಬಂದ ಆದಾಯ ಒದಗಿಸಿಕೊಟ್ಟಿತು. ಕ್ರಿ.ಶ. ಒಂದು ಅಥವಾ ಎರಡನೆಯ ಶತಮಾನದ ವೇಳೆಗೆ ರಾಜ್ಯಗಳ ಒಗ್ಗೂಡುವಿಕೆ ಆ ಪ್ರದೇಶದುದ್ದಕ್ಕೂ ವ್ಯಾಪಿಸಿತು. ಆಗ್ನೇಯ ಏಷ್ಯಾದ ರಾಜ್ಯದ ಮೂಲಭೂತ ಸ್ವರೂಪವೆಂದರೆ ನದೀಕೊಳ್ಳ ಪ್ರದೇಶದ ರಾಜ್ಯ. ಆಗ್ನೇಯ ಏಷ್ಯಾದ ಬಹುಭಾಗ ಸಸ್ಯ ಸಮೃದ್ಧವಾಗಿತ್ತು. ನದಿಗಳಿಂದಾಗಿ ಉತ್ತಮ ಒಳನಾಡು ಸಾರಿಗೆ ಸಾಧ್ಯವಾಯಿತು. ಪ್ರತಿಯೊಂದು ನದಿ ಕಣಿವೆಗೆ ಉತ್ತಮ ಸುಭದ್ರತೆ ಇದ್ದುದರಿಂದ ರಾಜ್ಯರಚನೆಗೆ ಅನುಕೂಲವಾಯಿತು. ಪಾಳೆಯಗಾರರು ನದಿಗಳ ಮುಖಜ ಭೂಮಿಗಳ ಮೇಲೆ ಸೈನ್ಯ ಶಕ್ತಿಯ ಸಹಾಯದಿಂದ ಪ್ರಭುತ್ವ ಹೊಂದಿ, ಜಲಮಾರ್ಗಗಳ ಮೂಲಕ ಸಾಗುವ ವ್ಯಕ್ತಿಗಲು ಹಾಗೂ ಸರಕುಗಳ ಮೇಲೆಯೂ ಹಿಡಿತ ಸಾಧಿಸಿದರು. ಇಂಥ ಪ್ರಾಂತಗಳು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿದ್ದು, ಆಂತರಿಕವಾಗಿ ಪೂರೈಸಿಕೊಳ್ಳಲಾಗದ ಅಗತ್ಯಗಳಿಗಾಗಿ ಮಾತ್ರ ಅಂತರ್ ರಾಷ್ಟ್ರೀಯ ವ್ಯಾಪಾರ ಹಾಗೂ ವಿನಿಮಯವನ್ನು ಅವಲಂಬಿಸಿದ್ದರು.

ಆಗ್ನೇಯ ಏಷ್ಯಾದ ಬಹುಭಾಗವನ್ನು ವ್ಯಾಪಿಸಿದ್ದ ಚಿಕ್ಕಪುಟ್ಟ ಪ್ರಾಂತಗಳ ರಾಜ್ಯ ಸಂಘಟನೆಯ ಮಾದರಿ ಇದೇ ರೀತಿಯದಾಗಿತ್ತು. ಇಂಥ ಪ್ರಾಂತಗಳ ಮಧ್ಯೆ, ರಾಜಕೀಯ ವಾಗಿ ಸಂಘಟಿತವಾಗದ, ಚದುರಿದ ಜನಸಂಖ್ಯೆಯುಳ್ಳ ಸುಮಾತ್ರಾ ಹಾಗೂ ಫಿಲಿಫೈನ್‌ಗಳ ಪ್ರದೇಶಗಳಿದ್ದವು. ಇಂಥ ಚಿಕ್ಕ ಪ್ರದೇಶಗಳಿಂದಾಗಿ ಆಗ್ನೇಯ ಏಷ್ಯಾದಲ್ಲಿ ಅಧಿಕಾರ ಕೇಂದ್ರಗಳ ಸ್ಥಳಾಂತರ ನಿರಂತರವಾಗಿ ನಡೆದೇ ಇತ್ತು. ಆರ್ಥಿಕ ಸಂಪನ್ಮೂಲ, ರಾಜಕೀಯ ಧುರೀಣತ್ವ ಹೆಚ್ಚಾಗಿದ್ದ ರಾಜ್ಯಗಳು ಆ ಪ್ರದೇಶದ ಮೇಲೆ ಅಧಿಕಾರವನ್ನು ಸ್ಥಾಪಿಸಿದವು.

ಈ ಮೂಲಭೂತ ಸಂಘಟನೆಯಿಂದ ವ್ಯಕ್ತವಾಗುವ ಅಂಶವೇನೆಂದರೆ ರಾಜಕೀಯ ಹಾಗೂ ಸೈನ್ಯಬಲವಿದ್ದ ಕೆಲವು ಪ್ರದೇಶಗಳು ತಮ್ಮ ಗಡಿಗಳನ್ನು ಗುರುತಿಸಿಕೊಂಡು, ಆರ್ಥಿಕಬಲದ ಆಧಾರದಿಂದ ರಾಜ್ಯವನ್ನು ವಿಸ್ತರಿಸಲು ಸಮರ್ಥವಾದವು. ಮೆಕಾಂಗ್ ಹಾಗು ಇರಾವತಿ ನದೀಬಯಲುಗಳ ಪ್ರದೇಶಗಳಲ್ಲಿ ನೀರಾವರಿ ಕೃಷಿಯ ಆಧುನಿಕ ತಂತ್ರಜ್ಞಾನದ ಬಳಕೆಯಿಂದಾಗಿ ಆಧುನಿಕ ಸಮಾಜಗಳು ಹುಟ್ಟಿ ನಿಶ್ಚಿತಸ್ವರೂಪದ ಪ್ರಾಂತ ಗಳು ಉಗಮ ಹೊಂದಿದವು. ಅಕ್ಕಿ ಸಾಗುವಳಿ ಪ್ರಮುಖವಾಗಿದ್ದ ಇಂಥ ಪ್ರಾಂತಗಳಲ್ಲಿ ಸ್ಥಿರತೆ, ಸಂಘಟನೆ, ಸಹಕಾರ ಹಾಗೂ ನಿಯಂತ್ರಣ ಅತ್ಯಗತ್ಯವಾಗಿತ್ತು. ಈ ಕೃಷಿ ನಾಡುಗಳಲ್ಲಿ ಧಾರ್ಮಿಕ ಕ್ಷೇತ್ರಕ್ಕೆ, ಕೃಷಿ ಉತ್ಪಾದನೆಗೆ ಹೆಚ್ಚು ಪ್ರಾಧಾನ್ಯ ನೀಡಲಾಯಿತು. ಮೆಕಾಂಗ್(ಈಗಿನ ಕಾಂಬೊಡಿಯಾ)ನಲ್ಲಿ ಬೆಳೆದುಬಂದ ಖೀಮರ್ ಸಾಮ್ರಾಜ್ಯ ಇದಕ್ಕೊಂದು ಉತ್ತಮ ಉದಾಹರಣೆ.

ಕೃಷಿಗೆ ಅನುಕೂಲಕರವಾಗಿಲ್ಲದಿರುವಲ್ಲಿ ಅಂತರ್ ರಾಷ್ಟ್ರೀಯ ವ್ಯಾಪಾರ ಮಾರ್ಗಗಳಿಗೆ ಅವಕಾಶ ದೊರೆತು, ತನ್ಮೂಲಕವಾಗಿ ಸಂಪನ್ಮೂಲಗಳು ಹೆಚ್ಚಿದವು. ಅಂತರ್ ರಾಷ್ಟ್ರೀಯ ವ್ಯಾಪಾರಕ್ಕೇ ಹೆಚ್ಚಿನ ಮಹತ್ವವಿದ್ದುದರಿಂದಾಗಿ ಹಿನ್ನಾಡುಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸದಿದ್ದುದರಿಂದಾಗಿ ಮಲಕ್ಕಾದಂತ ನಗರ ರಾಜ್ಯಗಳು ನಿರ್ಮಾಣವಾದವು. ನೆಂಟಸ್ತಿಕೆಯ ಸಂಘಟನೆಗಳಿಂದ ರೂಪಪಡೆಯುವ ಮಧ್ಯಂತರ ಕಾಲದಲ್ಲಿ ಅಂತರಾಷ್ಟ್ರೀಯ ವ್ಯಾಪಾರದ ಪರಿಣಾಮವಾದ ಆರ್ಥಿಕ ಅಭಿವೃದ್ದಿಗೆ ಹೆಚ್ಚಿಗೆ ಮಹತ್ವ ದೊರೆಯಿತು. ಕೈಗಾರಿಕೆಯ ಅವಕಾಶಗಳು ಬಂದಂತೆಲ್ಲ ಆಯಾ ನೆಂಟಸ್ತಿಕೆ ಸಮುದಾಯಗಳು ಒಂದಾಗಿ ಹಣದ ವ್ಯವಹಾರಗಳನ್ನು ನಿಯಂತ್ರಿಸತೊಡಗಿದರು. ಇದೇ ರಾಜ್ಯನಿರ್ಮಾಣಕ್ಕೆ ದಾರಿಯಾಯಿತು. ಈ ಸಮುದ್ರಮಾರ್ಗಗಳ ವ್ಯಾಪಾರಿ ನಾಡುಗಳು ವಿದೇಶಗಳ ಸಂಪರ್ಕದಿಂದಾಗಿ ಅಂತರ್ ರಾಷ್ಟ್ರೀಯ ವ್ಯಾಪಾರಕ್ಕೂ ಹೆಚ್ಚು ನಿಕಟವಾದವು.

ಅರಸೊತ್ತಿಗೆಯ ಹುಟ್ಟು, ಆಡಳಿತ ರೀತಿ ಇವುಗಳ ಬಗ್ಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೂ ಅರಸೊತ್ತಿಗೆ ಬಂದರೂ ಪ್ರಾದೇಶಿಕ ಸ್ವರೂಪದ ರಾಜ್ಯದ ಉದಯಕ್ಕೇನೂ ಆತುರ ಕಂಡುಬರಲಿಲ್ಲ. ಈ ನಾಡುಗಳ ಮೇಲೆ ಭಾರತ, ಚೀನಾಗಳ ಸಂಸ್ಕೃತಿಗಳ ಪ್ರಭಾವ ವಿತ್ತೆಂಬುದನ್ನು ಇತಿಹಾಸತಜ್ಞರರು ಒತ್ತಿ ಹೇಳಿದ್ದಾರೆ. ಭಾರತ ಮತ್ತು ಚೀನಾಗಳಿಗೆ ಈ ನಾಡುಗಳ ಮೇಲೆ ಹಿಡಿತವಿತ್ತು ಎಂದು ಹೇಳಿದರೂ, ಜಿ. ಕೋರ್ಡ್ಸ್‌ನ ಮೇರೆಗೆ ಇಂಡೋ ಚೀನಾ ತನ್ನದೇ ಆದ ಭಾರತ ಮೂಲದ(ವಿಯಟ್ನಾಂ ಹೊರತಾಗಿ) ನಾಗರಿಕತೆಯನ್ನು ಹೊಂದಿತ್ತು. ಸ್ವತಂತ್ರವಾದ ಮೇಲೆ ಚೀನಾದ ನಾಗರಿಕತೆಯನ್ನು ರೂಢಿಸಿಕೊಂಡಿತು. ವಿಯಟ್ನಾಂನಲ್ಲಿ ಭಾರತೀಯ ಭೌದ್ಧಧರ್ಮ ಹನ್ನೊಂದನೆಯ ಶತಮಾನದವರೆಗೂ ಪ್ರಭಾವಶಾಲಿಯಾಗಿದ್ದರೂ ೯ನೆಯ ಶತಮಾನದಲ್ಲಿ ಕಾಣಿಸಿಕೊಂಡ ಚೀನಿ ಬೌದ್ಧಧರ್ಮ ಹೆಚ್ಚಿನ ಪ್ರಭಾವ ಬೀರಿತು. ಅಲ್ಲಿ ಒಂದು ಸ್ವತಂತ್ರ ಸಂಸ್ಕೃತಿ ಬೆಳೆಯಿತು.

ರಾಜ್ಯಗಳ ಸಂಘಟನೆಯಾದಂತೆ ಕಾಲಕ್ರಮೇಣ ಭಾರತ ಅಥವಾ ಚೀನಾಗಳ ಸಂಸ್ಕೃತಿಯೂ ರೂಢಿಗತವಾಯಿತು. ಆಗ್ನೇಯ ಏಷ್ಯಾದ ಉದಯವೆಂದರೆ ನಗರಗಳು ಹಾಗೂ ಹಿನ್ನಾಡುಗಳ ನಡುವಣ ಸಂಬಂಧ. ವ್ಯಾಪಾರಿ ಕೇಂದ್ರಗಳು; ಅಲ್ಲಿ ವಾಸಿಸುತ್ತಿದ್ದ ಕಾರಣ ಮಾತ್ರದಿಂದಲೇ ಸ್ಥಳೀಯರಿಗೆ ತಮ್ಮ ಸಮಾಜದ ಸಂಪರ್ಕ ತಪ್ಪಿ ಹೋತು. ಎರಡನೆಯ ಹಂತದಲ್ಲಿ ನಗರಗಳು, ಹಿನ್ನಾಡುಗಳು ಒಂದಾದವು; ಬೇಸಾಯ ಪ್ರಾರಂಭ ವಾಯಿತು. ಹಿಂದೂಧರ್ಮ ಸ್ವೀಕಾರ, ನಗರೀಕರಣ, ರಾಜ್ಯ ರಚನೆ ಸೇರಿಕೊಂಡವು. ಈ ಬದಲಾವಣೆಗಳ ಪರಿಣಾಮವೆಂದರೆ ಪಾಳೆಯಗಾರರ ಗುಡಿಸಲುಗಳು ಅರಮನೆಗಳಾಗಿ ಮಾರ್ಪಟ್ಟವು; ದೈವದ ಮನೆ ದೇವಸ್ಥಾನವಾಯಿತು; ದೈವಶಿಲೆ ಲಿಂಗವಾಯಿತು; ಗ್ರಾಮದೈವ ಗಳು ಲೋಕಪಾಲಕರೆನಿಸಿ ನಾಡರಕ್ಷಕರೆನಿಸಿ ದಿಕ್ಪಲಕರಾದರು. ಗ್ರಾಮೀಣ ಸ್ವರೂಪ ಹೋಗಿ ನಗರರಾಜ್ಯ ಬಂತು. ಈ ಬದಲಾವಣೆಯ ಒಟ್ಟಾರೆ ಪ್ರಕ್ರಿಯೆ ಎಂದರೆ ಸಂಸ್ಕೃತಿ ನಾಗರಿಕತೆಯಾಗಿ ಮಾರ್ಪಟ್ಟಿತು.

ಘಟನೆಗಳ ಕಾಲಚಕ್ರ ಬರ್ಮಾದಲ್ಲಿ ಮಾತ್ರ ಗೋಚರಿಸಿದರೂ ಅದನ್ನೇ ಇಡೀ ಆಗ್ನೇಯ ಏಷ್ಯಾಕ್ಕೆ ಅನ್ವಯಿಸಬಹುದು. ಏಕೆಂದರೆ ಪ್ರತಿಯೊಂದ ಘಟನೆಯ ಸುರುಲಿಯ ಪ್ರಾರಂಭದಲ್ಲೂ ರಾಜಕೀಯ ಅಧಿಕಾರ ಹಾಗೂ ಆರ್ಥಿಕ ನಿಯಂತ್ರಣ ಶಕ್ತಿಶಾಲಿ ಪಟ್ಟಣಗಳು ಹಾಗೂ ಪಾಳೆಯಗಾರರ ಕೈಯಲ್ಲಿದ್ದವು. ಎರಡನೆಯ ಹಂತದಲ್ಲಿ ಶೂರ, ಗುಣಸಂಪನ್ನ ಧುರೀಣ ಕಾಣಿಸಿಕೊಂಡ. ತನ್ನ ಸೈನ್ಯ ಬಲ ಹಾಗೂ ನಂಬಿಗಸ್ತರ ತಂಡದೊಂದಿಗೆ ಅಧಿಕಾರವನ್ನು ರೂಢಿಸಿಕೊಂಡು, ರಾಜಧಾನಿ, ರಾಜಸ್ಥಾನ, ಆಡಳಿತ, ಸೈನ್ಯ ಎಲ್ಲವನ್ನೂ ಒಳಗೊಂಡ ಪ್ರಾಂತವನ್ನು ಕಟ್ಟಿದ. ಈ ಇತಿಹಾಸ ಚಕ್ರದ ಉತ್ಕರ್ಷದ ಕಾಲದಲ್ಲಿ ರಾಜ್ಯದ ಅಧಿಕಾರ ಸೂತ್ರಗಳ ಕೇಂದ್ರೀಕರಣ, ಆದಾಯ ಸಂಗ್ರಹಣೆ ನಡೆಯಿತು. ಕೆಲಕಾಲದಲ್ಲೇ ರಾಜಸ್ಥಾನದಲ್ಲಿ ಅಂತಃಕಲಹಗಳು ಹುಟ್ಟಿ, ದುರ್ಬಲತೆ ಕಾಣಿಸಿಕೊಂಡು ಅಧಿಕಾರ ನಿಯಂತ್ರಣ ಶಿಥಿಲವಾಗಿ ಸೈನ್ಯಶಕ್ತಿ ಕುಂದಿತು. ಸಾಮಂತರಾಜ್ಯಗಳು ತಮ್ಮನ್ನು ತಾವು ಸ್ವತಂತ್ರವೆಂದು ಘೋಷಿಸಿಕೊಂಡವು. ಮತ್ತೆ ಅಧಿಕಾರ ಹಂಚಿಹೋಗಿ, ಸ್ಥಾನೀಯ ಆಡಳಿತ ಹುಟ್ಟಿ ಮತ್ತೊಬ್ಬ ಉತ್ತಮ ಧುರೀಣನ ಆಗಮನವನ್ನು ಪ್ರತೀಕ್ಷಿಸಬೇಕಾದ ಸ್ಥಿತಿ ಒದಗಿತು.

ರಾಜ್ಯ ಸಂಘಟನೆ

ಆಗ್ನೇಯ ಏಷ್ಯಾ, ಪ್ರಾಚ್ಯರ ಪ್ರಭುತ್ವದ ಮಾದರಿಯನ್ನು ಅನುಸರಿಸಲಿಲ್ಲ. ನೀರಾವರಿ ಪ್ರಧಾನ ನಾಡುಗಳಾದ ಕಾಂಬೋಡಿಯಾ, ಜವಾ ಹಾಗೂ ಭಾಗಶಃ ವಿಯಟ್ನಾಂಗಳಲ್ಲಿ ಉತ್ತಮ ಆರ್ಥಿಕತೆಯ ತಳಹದಿ ಎನಿಸಿದ ಕಾರ್ಯ ವಿತರಣೆ ಪದ್ಧತಿ, ಸಾಗುವಳಿಯ ಉತ್ತಮ ತಂತ್ರಜ್ಞಾನ ಹಾಗೂ ದೊಡ್ಡ ಪ್ರಮಾಣದಲ್ಲಿ ಸಹಕಾರ-ಇವುಗಳನ್ನು ಅನುಸರಿಸ ಲಾಯಿತು. ಮೊದಲಿನ ಆಗ್ನೇಯ ಏಷ್ಯಾ ನಾಡುಗಳನ್ನು ಗಮನಿಸಿದರೆ ಕಾಂಬೋಡಿಯಾದಲ್ಲಿ ಕಟ್ಟಡ ನಿರ್ಮಿತಿ, ನೀರು ಪೂರೈಕೆ ವ್ಯವಸ್ಥೆಯಲ್ಲಿ ಸಾಕಷ್ಟು ಮುಂದುವರಿದಿದ್ದರೂ ಹಳೆಯ ಆಗ್ನೇಯ ಏಷ್ಯಾದ ನಾಡುಗಳಲ್ಲಿ ಹೈಡ್ರಾಲಿಕ್ ಕೆಲಸಗಳ ವ್ಯವಸ್ಥಾಪನೆಯಾಗಲೀ, ಇತರ ಕೈಗಾರಿಕೆಗಳಾಗಲೀ ಇರಲಿಲ್ಲ.

ಮುಂಚಿನ ಆಗ್ನೇಯ ಏಷ್ಯಾಕ್ಕೆ ನಿಶ್ಚಿತ ಪ್ರಾದೇಶಿಕ ಗಡಿ ಇರಲಿಲ್ಲ. ರಾಜಧಾನಿಯ ಸುತ್ತ ಹಲವಾರು ಘಟಕಗಳು ಇದ್ದವು; ಅಧಿಕಾರಶಾಹಿ ಅರಸೊತ್ತಿಗೆ ಇರಲಿಲ್ಲ; ಆದರೆ ಆದಾಯ ಕುದುರಿಸುವ ಪ್ರದೇಶಗಳಿದ್ದು ಅವುಗಳ ಧುರೀಣ, ಆದಾಯವನ್ನು ಪ್ರಮುಖರಿಗೆ ಒಬ್ಬೊಬ್ಬರಿಗೆ ವಿತರಿಸುತ್ತಿದ್ದ, ಅವರಲ್ಲಿ ಪ್ರತಿಯೊಬ್ಬರೂ ರಾಜಮನೆತನದೊಡನೆ ವೈಯಕ್ತಿಕ ಸಂಬಂಧವನ್ನು ಹೊಂದಿದ್ದು ಮನ್ನಣೆಗೆ ಪಾತ್ರರಾಗಿರುತ್ತಿದ್ದರು. ಹಳ್ಳಿಗರು ಅರಮನೆಯ ಭೂಮಿಗಳಲ್ಲಿ ಉಳುಮೆ ಮಾಡುತ್ತಿದ್ದರು. ರಾಜಧಾನಿಯಿಂದ ದೂರವಾದ ಪ್ರದೇಶಗ ಳಲ್ಲಿಯೂ ಕೆಲವು ಸಲ ಗ್ರಾಮೀಣರು ನೆಲೆಗೊಂಡಿರುತ್ತಿದ್ದರು. ಪ್ರಾಂತದ ದೂರ ಭಾಗ ಗಳಲ್ಲಿ ಗೆದ್ದ ಪರಕೀಯ ಪ್ರದೇಶಗಳಿದ್ದವು. ಅಲ್ಲಿಂದ ಮುಂದುವರಿದ ಕರಾವಳಿ ಪ್ರದೇಶಗಳ ಮೇಲೆ ಪ್ರಾಂತ ನಿಯಂತ್ರಣವಿತ್ತು. ದೂರದ ಕರಾವಳಿ ಅಥವಾ ಬಂದರು ಪಟ್ಟಣಗಳ ಮೇಲೆ ನಿಯಂತ್ರಣ ನಿರಂತರವಾಗಿರಲಿಲ್ಲ ಮತ್ತು ಹಿನ್ನಾಡುಗಳ ರಾಜ್ಯ ನಿಯಂತ್ರಣದಲ್ಲಿದ್ದವು.

ಕಟ್ಟುನಿಟ್ಟಾದ ರಚನೆ ಇಲ್ಲದಿದ್ದುದರಿಂದ ಪ್ರಾಚೀನ ಆಗ್ನೇಯ ಏಷ್ಯಾದ ಉಳಿಯುವಿಕೆ ಸಾಧ್ಯವಾಯಿತು. ಉದಾಹರಣೆಗೆ ೧೭೬೭ರಲ್ಲಿ ಅಯೂಧ್ಯಾ(ಥೈಲ್ಯಾಂಡ್) ನಾಶವಾದರೂ ಥಾಯ್ ರಾಜಕೀಯ ಇತಿಹಾಸಕ್ಕೆ ವ್ಯತ್ಯಯ ಉಂಟಾಗಲಿಲ್ಲ.. ಬ್ಯಾಂಕಾಕ್‌ನ ಹೊಸ ಅಂಶಗಳೆಂದರೆ ರಾಜವಂಶ, ರಾಜಧಾನಿ ಮಾತ್ರ.

ರಾಜ ಹಾಗೂ ಆತನ ಸಾಮಂತರ ನಡುವಣ ಪಿತೃ ಸಂಬಂಧದ ಮೇಲೆ ರಾಜಡಳಿತ ವ್ಯವಸ್ಥೆ ಆಧಾರಿತವಾಗಿತ್ತು. ವಿಶಿಷ್ಟ ಸೇವೆಗಳಿಗಾಗಿ ರಾಜಮನೆತನದವರಿಗೆ ನಾಡಿನ ಕೆಲವು ಭಾಗಗಳ ಮೇಲಣ ಅಧಿಕಾರವನ್ನು ವಹಿಸಿಕೊಡಲಾಗುತ್ತಿತ್ತು. ಆದರೆ ವಿಧೇಯತೆ ಪ್ರಧಾನ ಅಂಶವಾಗಿತ್ತು. ನೆಂಡಸ್ತಿಕೆ ಬೆಳೆಸಿ ರಾಜಮನೆತನದೊಡನೆ ನಿಕಟಸಂಪರ್ಕ ಹೊಂದುವರ ಮನೋಭಾವದಿಂದಾಗಿ ರಾಜಕೀಯ ಬೆಂಬಲವನ್ನು ವಿಸ್ತರಿಸಿಕೊಳ್ಳಲಾಗುತ್ತಿತ್ತು.

ನಾಡಿನ ಸಿದ್ಧತೆಯನ್ನು ಕಾಪಾಡುವುದೇ ಅಡಳಿತದ ಮಹತ್ವದ ಕಾರ್ಯವಾಗಿತ್ತು. ಪ್ರತಿಯಾಗಿ ಸರ್ಕಾರ ನೀಡುತ್ತಿದ್ದ ರಕ್ಷಣೆ ಹಾಗೂ ಸೇವೆಯಿಂದಾಗಿ ಗ್ರಾಮೀಣ ಜೀವನ ನಿರಾತಂಕವಾಗಿರುತ್ತಿತ್ತು. ರಸ್ತೆ ಅಣೆಕಟ್ಟು ನಿರ್ಮಾಣಗಳಂಥ ಕಾಮಗಾರಿಗಳಿಗಾಗಿ ರಾಜ ಗ್ರಾಮೀಣ ಕಾರ್ಮಿಕರನ್ನು ತೆಗೆದುಕೊಳ್ಳುತ್ತಿದ್ದ. ಸುಲಿಗೆ ಅಥವಾ ಪರಕೀಯ ಆಕ್ರಮಣ ಗಳಿಂದಾಗಿ ರಾಮೀಣ ಜೀವನಕ್ಕೆ ಅಡ್ಡಿ ಒದಗಿದರೆ ಆಡಳಿತದ ಹಿಡಿತ ತಪ್ಪತ್ತಿತ್ತು. ರಾಜ ಹಾಗೂ ಆತನ ಅನುಚರರು ಕಾರ್ಮಿಕರಿಗಾಗಿ, ರಕ್ಷಣ ದಳಕ್ಕಾಗಿ, ಕರಭಾರ ಹೇರುವುದಕ್ಕಾಗಿ ಗ್ರಾಮಗಳಿಗೆ ಮೇಲಿಂದ ಮೇಲೆ ಬರುತ್ತಿದ್ದರೆ ಹಿಡಿತ ತಪ್ಪಿ, ರೈತರು ಸ್ಥಳಾಂತರ ಹೊಂದುತ್ತಿದ್ದರು. ರಾಜವಂಶದ ತುಸು ನಿರ್ಲಕ್ಷ್ಯದಿಂದಾಗಿ ಹಳ್ಳಿಗಳ ಮೇಲಣ ಅಂಕೆ ತಪ್ಪಿ ಸುಲಿಗೆಗಾರರು ಬಂದು, ರಸ್ತೆಗಳು ಹಾಳಾಗಿ, ಸಂಪ್ರದಾಯಿಕತೆ ಹದಗೆಟ್ಟು, ಅಧಿಕಾರ ಭ್ರಷ್ಟವಾದ ಉದಾಹರಣೆಗಳೂ ಇಲ್ಲದಿಲ್ಲ.

ಪ್ರಾಚೀನ ರಾಜ್ಯ ಜನಪ್ರಿಯ ರಾಜ್ಯವಾಗಿರಲಿಲ್ಲ. ಎಂದರೆ ಜನತೆಯ ಇಚ್ಛೆ ಹಾಗು ಒಪ್ಪಿಗೆಯ ಮೇರೆಗೆ ರಾಜ್ಯ ಹುಟ್ಟಲಿಲ್ಲ. ಆದರೆ ಜನತೆಯ ಒಪ್ಪಿಗೆಯನ್ನಲ್ಲದಿದ್ದರೂ ವಿದ್ಯುತಕ್ತವಾದ ಅಂಗೀಕಾರವನ್ನಾದರೂ ಪಡೆಯುವ ದಾರಿ ಹುಡುಕಬೇಕಿತ್ತು. ಒತ್ತಾಯ ಅಥವಾ ಬಲಾತ್ಕಾರ ಪ್ರಯೋಗದಿಂದ ಅಂಗೀಕಾರವನ್ನು ಪಡೆಯಬಹುದಿತ್ತಾದರೂ ರಾಜ್ಯದ ಸ್ಥಿರತೆಗೆ ಆಡು ಪ್ರಯೋಜನಕಾರಿಯಾಗಿರಲಿಲ್ಲ. ಪ್ರಾಚೀನ ಆಗ್ನೇಯ ಏಷ್ಯಾ ದಲ್ಲಿ ರಾಜನಿಗೆ ಅತಿಮಾನವತೆಯನ್ನು ಆರೋಪಿಸಿ, ಹಿಂದೂ ರಾಜನೀತಿ ಪರಿಕಲ್ಪನೆಯಂತೆ ರಾಜ್ಯವನ್ನು ವಿಶ್ವಕೂಈಕ ರಾಜನನ್ನು ಅದರ ಅಧಿಪತಿಗೂ ಹೊಳಿಸುವ ಪದ್ದತಿ ಪ್ರಚಲಿತವಿತ್ತು.

ಮುಂದಾಳತ್ವ ಹಾಗೂ ಆಡಳಿತ

ಆಗ್ನೇಯ ಏಷ್ಯಾದ ಪ್ರಾಚೀನ ನಾಡುಗಳಲ್ಲಿ ಧುರೀಣತ್ವದ ವ್ಯಾಪ್ತಿ ಸೀಮಿತವಾಗಿತ್ತು. ಈಗಿನ ಸರ್ಕಾರಗಳಿಂದ ನಿರೀಕ್ಷಿಸುವಂಥ ಉತ್ಸಾಹಶಾಲಿ ರಾಜಕೀಯ ಧುರೀಣತ್ವಕ್ಕೆ ಆಗ ಅವಕಾಶ ಕಡಿಮೆ. ರಾಜನ ಅಧಿಕಾರಕ್ಕೆ ಕಾನೂನಿನ ಕಟ್ಟುಪಾಡಿರಲಿಲ್ಲ. ಆದರೂ ಗ್ರಾಮೀಣ ಜನತೆಯ ಮೇಲೆ ಆತನ ಅಧಿಕಾರ ಸೀಮಿತವಾಗೇ ಇತ್ತು. ಏಕೆಂದರೆ ಒಣಭೂಮಿ ಬೇಸಾಯಗಾರರು, ರಾಜನ ದಬ್ಬಾಳಿಕೆ ಹೆಚ್ಚಿದರೆ ಬೇರೆ ಪ್ರದೇಶಗಳಿಗೆ ಹೋಗುತ್ತಿದ್ದರು. ಬರ್ಮಾ ಹಾಗೂ ಆಗ್ನೇಯ ಏಷ್ಯಾದ ಬಹುತೇಕ ಪ್ರದೇಶಗಳಿಗೆ ಮನುಸಂಹಿತೆ ಮಾರ್ಗದರ್ಶಿಯಾಗಿತ್ತು. ವಿಯಟ್ನಾಂನಲ್ಲಿ ಚೀನಿ ಸಂಹಿತೆಗಳನ್ನು ಅನುಸರಿಸಲಾಗುತ್ತಿತ್ತು. ಆದರೆ ಕಾನೂನಿನ ವಿಷಯದಲ್ಲಿ ಭಾರತದ ಕಾನೂನು ವಿಚಾರಧಾರೆಯನ್ನು ಬಳಸಲಾಗುತ್ತಿತ್ತು. ಆಗ್ನೇಯ ಏಷ್ಯಾದಲ್ಲಿ ನಡಾವಳಿಗಳನ್ನು ರೂಪಿಸಲು ಆಯಾ ಸಾಮಾಜಿಕ ಪರಿಸ್ಥಿತಿಗನುಗುಣವಾಗಿ, ಭಾರತೀಯ ಪರಿಕಲ್ಪನೆಗಳೊಂದಿಗೆ ಅನುಸರಿಸಬೇಕಾದ ಸ್ಥಳೀಯ ರೀತಿರಿವಾಜುಗಳನ್ನು ಸೇರಿಸಲಾಗುತ್ತಿತ್ತು. ಆದರೆ ಊಳಿಗಮಾನ್ಯ ಪದ್ಧತಿಯಿಂದಾಗಿ, ಪ್ರಚಲಿತವಿದ್ದ ಮೂಲಭೂತ ಸಾಮಾಜಿಕ ವ್ಯವಸ್ಥೆಯನ್ನು ಮೀರಿ ಸರ್ಕಾರದ ಚಟುವಟಿಕೆ ಕುಂಠಿತವಾಯಿತು.

ಜಲಮಾರ್ಗ ವಾಣಿಜ್ಯವುಳ್ಳ ನಾಡುಗಳಲ್ಲಿ ವ್ಯಾಪಾರವನ್ನು ಕ್ರಮಬದ್ಧಗೊಳಿಸಲಾಗಿತ್ತು. ಮಲಕ್ಕಾದಲ್ಲಿ ಇದಕ್ಕಾಗಿ ಲಿಖಿತ ಕಾನೂನುಗಳಿದ್ದವು. ಭೂಹಂಚಿಕೆ ಮಾಡುವ ಮೂಲಕ ಆಡಳಿತವನ್ನು ವ್ಯವಸ್ಥೆಗೊಳಿಸಲಾಗಿತ್ತು. ಎಂದರೆ ತೆರಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಬೇಕಾದ ಸೇವೆಗಳನ್ನು ಹೊರತುಪಡಿಸಿ ಉಳಿದ ವಿಷಯಗಳಲ್ಲಿ ಪ್ರತಿಯೊಂದು ಉಪಭಾಗವೂ ಸ್ವಾಯತ್ತ ಅಧಿಕಾರವನ್ನು ಹೊಂದಿತ್ತು. ಆಡಳಿತಾತ್ಮಕ ವಿಭಾಗಗಳನ್ನು ಅಧೀನ ಪ್ರದೇಶಗಳು(ಹಿರಿಯ ಸರ್ಕಾರಿ ಉದ್ಯೋಗಿಗಳು ಹಾಗೂ ಸನ್ಯಾಸಿಮಠಗಳ ಪೋಷಣೆಗಾಗಿ ಗ್ರಾಮಗಳು), ಸ್ವತಂತ್ರ ಗ್ರಾಮಗಳು, ಪ್ರಮುಖ ಪ್ರಾಂತಗಳು ಹೀಗೆ ಶ್ರೇಣಿಗತವಾಗಿ ವ್ಯವಸ್ಥೆಗೊಳಿಸಲಾಗಿದ್ದು ಆ ಪೈಕಿ ಪ್ರತಿಯೊಂದೂ ಸ್ವಾವಲಂಬಿ, ಸ್ವಾಯತ್ತ ಘಟಕವಾಗಿತ್ತು. ತುರ್ತುಸಂದರ್ಭಗಳನ್ನು ಹೊರತುಪಡಿಸಿ ದೈನಂದಿನ ಆಡಳಿತ ದಲ್ಲಿ ಸರ್ಕಾರದ ಹೆಚ್ಚಿನ ಹಸ್ತಕ್ಷೇಪವಿಲ್ಲದಂತೆ ಸಣ್ಣ ಸಣ್ಣ ಘಟಕಗಳಲ್ಲಿ ಸ್ವಾವಲಂಬನೆ ನೆಲೆಸಿರುವ ರೀತಿಯ ಆಡಳಿತ ಹಾಗೂ ಸಾಮಾಜಿಕ ವ್ಯವಸ್ಥೆ ಇತ್ತು.

ಪ್ರಾಚೀನ ಆಗ್ನೇಯ ಏಷ್ಯಾದ ಶ್ರೀಮಂತ ವೈಶ್ಯರ ಪ್ರಾಬಲ್ಯದಿಂದಾಗಿ ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುವಲ್ಲಿಯೂ ಅವರ ಪಾತ್ರವಿತ್ತು. ವ್ಯಾಪಾರಿಗಳು ರಾಜಮನೆತನಕ್ಕೆ ಸಂಬಂಧಪಟ್ಟವರಾಗಿರಲಿಲ್ಲ. ಅಲ್ಲದೇ ಆ ಪೈಕಿ ಕೆಲವರು ಅರಬರು, ಚೀನಿಯರು, ಭಾರತೀಯರು, ಯುರೋಪಿಯನ್‌ರು ಆಗಿದ್ದರು. ಆದರೂ ಸಮುದ್ರ ವ್ಯಾಪಾರವುಳ್ಳ ನಾಡುಗಳಲ್ಲಿ ಅವರು ಅಧಿಕಾರ ಸ್ಥಾನಗಳಲ್ಲಿದ್ದರು. ವೈಯಕ್ತಿಕ ಸಂಪತ್ತಿಗೆ ಪ್ರಾಧಾನ್ಯವುಳ್ಳ ಈ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ, ಪ್ರಭಾವಗಳಿಗೆ ಅವಕಾಶವಿದ್ದು ವ್ಯಾಪಾರಿಗಳು ಅಧಿಕಾರ ಚಲಾವಣೆಯಲ್ಲಿ ಏರುಪೇರುಗಳನ್ನು ಉಂಟುಮಾಡುವ ಸಾಮರ್ಥ್ಯವುಳ್ಳವರಾಗಿದ್ದರು. ತಮ್ಮನ್ನು ಅಲಕ್ಷಿಸಿದಾಗ, ನಿಂದಿಸಿದಾಗ ಪ್ರತಿಸ್ಪರ್ಧೆಗಳನ್ನು ಹುಟ್ಟುಹಾಕಿ, ತಮಗೆ ಮನ್ನಣೆ ದೊರೆತಾಗ ರಾಜನೊಂದಿಗೆ ಉತ್ತಮ ಸಂಬಂಧವೇರ್ಪಡುವುದಕ್ಕೆ ಸಹಾಯಕ ರಾಗುತ್ತಿದ್ದರು. ರಾಜಕೀಯ ಪ್ರಭುತ್ವ ಕೆಲವು ಬಾರಿ ಈ ಶ್ರೀಮಂತ ವಣಿಕ ವರ್ಗಕ್ಕೆ ವಿರುದ್ಧವಾಗಿತ್ತು. ೧೫೮೯ರಲ್ಲಿ ಸುಲ್ತಾನನು ರಾಜಕೀಯವಾಗಿ ಅಧಿಕಾರ ಗಿಟ್ಟಿಸಿಕೊಂಡಿದ್ದ ವ್ಯಾಪಾರಿಗಳನ್ನು ದಂಡಿಸಿದುದಲ್ಲದೆ ಉಳಿದವರ ಚಟುವಟಿಕೆಗಳನ್ನು ನಿಯಂತ್ರಿಸಿದನು. ಆದರೂ ದುರ್ಬಲ ರಾಜರು ಅಧಿಕಾರಕ್ಕೆ ಬಂದಾಗ ವ್ಯಾಪಾರಿಗಳು ಮತ್ತೆ ತಮ್ಮ ಹಿಡಿತವನ್ನು ಸಾಧಿಸಿದರು.

ಪ್ರಾಚೀನ ಆಗ್ನೇಯ ಏಷ್ಯಾದಲ್ಲಿ ರಾಜ್ಯರಚನೆ ಒಂದೇ ರೀತಿಯದಾಗಿರಲಿಲ್ಲ. ಎಲ್ಲ ಪ್ರದೇಶಗಳಲ್ಲೂ ರಾಜ್ಯಗಳಿರಲಿಲ್ಲ. ರಾಜ್ಯಗಳಿದ್ದಲ್ಲಿ ಅವು ಸರಿಯಾಗಿ ವ್ಯವಸ್ಥೆಗೊಂಡಿರ ಲಿಲ್ಲ. ರಾಜ್ಯ, ಗ್ರಾಮೀಣ ಜನತೆಯಿಂದ ಕೂಡಿತ್ತು. ಕೆಲವು ಭಾಗಗಳಲ್ಲಿ ಜಲವ್ಯಾಪಾರ ಸಂಪನ್ಮೂಲಗಳಿಂದ ಹಾಗೂ ಕೃಷಿ ಉತ್ಪನ್ನಗಳಿಂದ ರಾಜ್ಯ ನಡೆಯುತ್ತಿದ್ದರೂ ಗ್ರಾಮೀಣ ಜನತೆಯ ಮೇಲೆ ಅಧಿಕಾರ ನಡೆಸುವುದು ಸಾಧ್ಯವಾಗಲಿಲ್ಲ. ಆದರೆ ಪರಿಸ್ಥಿತಿ ವಿರುದ್ಧ ವಾಗಿತ್ತು. ಸಂಘಟನೆ ಹಾಗೂ ನೆಮ್ಮದಿ ಬೇಕೆಂಬ ರೈತರ ಮನೀಷೆಗನುಗುಣವಾಗಿ ರಾಜ್ಯ ಹುಟ್ಟಿತು; ಆದರೆ ನಿರಂಕುಶತ್ವವಿರಲಿಲ್ಲ; ಅವ್ಯವಸ್ಥೆಯಿತ್ತು, ದಬ್ಬಾಳಿಕೆಯಿರಲಿಲ್ಲ; ಅರಾಜಕತೆಯಿತ್ತು. ಪ್ರಾಚೀನ ಆಗ್ನೇಯ ಏಷ್ಯಾದಲ್ಲಿ ನೆಮ್ಮದಿ ಮೂರು ಹಂತಗಳಲ್ಲಿತ್ತು. ಪರಿಸರದೊಡನೆ ಹೊಂದಿಕೊಂಡು ಅದನ್ನು ಕೃಷಿ ಉತ್ಪಾದನೆಗೆ ಬಳಸಿಕೊಂಡು ಬಾಳುತ್ತಿದ್ದ ಗ್ರಾಮೀಣ ಜನತೆಯಲ್ಲಿ; ಸರ್ಕಾರ ಸುಲಿಗೆಗಾರರನ್ನು ನಿಯಂತ್ರಿಸಿ ಸಾಮಾಜಿಕ ಸ್ಥಿರತೆಯನ್ನು ಕಾಪಾಡಿದ್ದುದರಿಂದ ಸಾಮಾಜಿಕ ಸ್ತರದಲ್ಲಿ; ರಾಜ್ಯಕ್ಕೆ, ಜನತೆಗೆ ಸಂಬಂಧಿಸಿದಂತೆ ರಾಜನು ಅವರ ಪರವಾಗಿ ದೇವತೆಗಳಲ್ಲಿ ಪ್ರಾರ್ಥಿಸಿದುದರಿಂದ ರಾಜ್ಯದಲ್ಲಿ. ವಿಯಟ್ನಾಂ ವಿಷಯ ದಲ್ಲಿ ಮಾತ್ರ ಗ್ರಾಮ ಹಾಗೂ ರಾಜಸ್ಥಾನದ ಮಧ್ಯೆ ಸಾಮಾಜಿಕವಾಗಿ ಆತಂಕಕಾರಿ ಸಂಬಂಧ ಕಾಣುತ್ತಿತ್ತು. ಚೀನಾದಿಂದ ಸ್ವಾತಂತ್ರವಾದೊಡನೆ ವಿಯಟ್ನಾಮಿಯರು ಮಾಡಿದ ಮೊದಲ ಕೆಲಸವೆಂದರೆ ಎಲ್ಲ ವಿಯಟ್ನಾಮಿಯರನ್ನು ಸಾಂಸ್ಕೃತಿಕವಾಗಿ ಹಾಗೂ ರಾಜಕೀಯ ವಾಗಿ ಒಂದುಗೂಡಿಸಿದ್ದು. ಇದರಿಂದ ಪ್ರಾಚೀನವಾದ ಕ್ರಿ.ಪೂ.ಮೂರನೆಯ ಶತಮಾನದ ಸ್ಥಳಕ್ಕೆ ವಿಯಟ್ನಾಮಿನ ರಾಜಧಾನಿಯನ್ನು ಸ್ಥಳಾಂತರಿಸುವ ಮೂಲಕ ವಿಯಟ್ನಾಮಿನ ಸಂಪ್ರದಾಯಶೀಲತೆಯನ್ನು ಎತ್ತಿಹಿಡಿಯಲಾಯಿತು.

ಆದರೂ ವಿವಿಧ ಚೀನಿ ಸಂಪ್ರದಾಯಗಳು ಪುನಃ ತಲೆ ಎತ್ತಿ ವಿಯಟ್ನಾಂ ರಾಜಸ್ಥಾನ ತನ್ನ ಜನರೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿತು. ಕೆಲವು ಪ್ರದೇಶಗಳಲ್ಲಿ ಮಾತ್ರ ಸಂಪ್ರದಾಯಶೀಲ ನಾಡುಗಳು ಲೌಕಿಕ ಹಾಗೂ ವಿಶ್ವದ ಇತರೆಡೆಗಳ ಸೌಖ್ಯವನ್ನು ಕಾಯ್ದುಕೊಂಡು ಬರುವಲ್ಲಿಯ ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದವು. ಮುಂಚಿನ ಆಗ್ನೇಯ ಏಷ್ಯಾ ಸಮಾಜದ ಅಗತ್ಯಗಳ ಬಗ್ಗೆ ಮನವಾಗುಳಿದ ಅಂತಾರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಗೆ ಪ್ರತಿಸ್ಪಂದಿಸಿದವು. ಪ್ರಾಚೀನ ಆಗ್ನೇಯ ಏಷ್ಯಾ ಸಾಂಸ್ಥಿಕವಾಗಿ ದುರ್ಬಲವಾಗಿಯೇ ಇದ್ದು ಲಭ್ಯವಿದ್ದ ಸೀಮಿತ ಸಂಪನ್ಮೂಲಗಳನ್ನು ರೂಢಿಸಿಕೊಳ್ಳುವಲ್ಲಿ ರಾಜನಿಗಿದ್ದ ಸಾಮರ್ಥ್ಯವನ್ನೇ ಅವಲಂಬಿಸಿತ್ತು. ರಾಜ್ಯಗಳಾದರೋ ಯುರೋಪಿಯನ್‌ರ ಸವಾಲನ್ನು ಎದುರಿಸುವಷ್ಟು ಸಮರ್ಥವಾಗಿರಲಿಲ್ಲ.

 

ಪರಾಮರ್ಶನಗ್ರಂಥಗಳು

೧. ನಿಕೋಲಸ್, ಟಾರ್ ಲಿಂಗ್,  ೧೯೯೨. ದಿ ಕೇಂಬ್ರಿಡ್ಜ್ ಹಿಸ್ಟರಿ ಆಫ್ ಸೌತ್ ಈಸ್ಟ್ ಏಷ್ಯಾ, ಸಂಪುಟ ೧, ಕೇಂಬ್ರಿಡ್ಜ್.

೨. ಟಾಟೇ ಡಿ.ಜೆ.ಎಂ., ೧೯೭೭. ದಿ ಮೇಕಿಂಗ್ ಆಫ್ ಮಾಡರ್ನ್ ಸೌತ್ ಈಸ್ಟ್ ಏಷ್ಯಾ, ಸಂಪುಟ ೧, ಕೌಲಾಲಂಪುರ.