ಯಾವುದೇ ಜನತೆಯ ಯಾವುದೇ ಕಾಲದ ಇತಿಹಾಸವೆಂದರೆ ಅದು ಅದರ ಸಾಮಾಜಿಕ ಇತಿಹಾಸ, ಸಾಂಸ್ಕೃತಿಕ ಇತಿಹಾಸ. ಅವರು ಬೆಳೆಸಿದ ಸಂಸ್ಥೆಗಳಲ್ಲಿ ಅವರು ರೂಢಿಸಿದ್ದ ವ್ಯವಸ್ಥೆ, ಅವರ ಜೀವನ ರೀತಿ, ನಂಬಿಕೆಗಳು, ನೈತಿಕ ಮಲ್ಯಗಳು ಇದರಲ್ಲಿ ಅಭಿವ್ಯಕ್ತವಾಗಿರುತ್ತವೆ. ಕಳೆದ ನೂರು ವರ್ಷಗಳಲ್ಲಿ ಪೂರ್ವ ಏಷ್ಯಾದ ನಿವಾಸಿಗಳ ವಿಷಯದಲ್ಲಿ ಈ ಮಾತು ನಿಜ. ದೂರಪ್ರಾಚ್ಯದ ಜನರ ದೈನಂದಿನ ಜೀವನ, ಜೀವನ ನಿರ್ವಹಣೆ, ಸಾಂಘಿಕ ಜೀವನ ರೀತಿ, ವಿಚಾರಧಾರೆ, ಮನೋಭಾವ, ಇತಿಹಾಸ, ರಾಜಕೀಯ, ಕ್ರಾಂತಿ, ಯುದ್ಧಗಳಂಥ ರೂಢಿಗತ ವಿಷಯಗಳನ್ನು ಗಮನಿಸಿದಾಗ, ಹಳೆಯ ಹಾಗೂ ನಿಶ್ಚಲ ಪೌರ್ವಾತ್ಯರ ಮೇಲೆ ಆದ ಪಶ್ಚಿಮದ ಪ್ರಭಾವದ ಅರಿವಾಗುತ್ತದೆ. ಪೂರ್ವ ಏಷ್ಯಾದ ಮಟ್ಟಿಗೆ ಇದು ವೈಲಕ್ಷಣವಲ್ಲ. ಏಕೆಂದರೆ ಪಶ್ಚಿಮದ ಪ್ರಾಚೀನ ಸಂಸ್ಥೆಗಳ ಮೇಲೆ ಆಧುನಿಕ ಜೀವನ ರೀತಿಯ ಪ್ರಭಾವವಾಗಿರುವುದು ಕಂಡುಬರುತ್ತದೆ; ಪಶ್ಚಿಮದ ಆಧುನಿಕ ಇತಿಹಾಸವೂ ಸಹ ತೌಲನಿಕ ಸಂಸ್ಕೃತಿ ಅಧ್ಯಯನ. ಪೂರ್ವಕ್ಕೆ ವಿರುದ್ಧವಾಗಿ ನಾವು ಇಂದು ಯಾವುದನ್ನು ಪಶ್ಚಿಮ ಎನ್ನುತ್ತೇವೆಯೋ ಅದು, ಯಂತ್ರಗಳ ಬಳಕೆಯ ಮೂಲಕ ಉತ್ಪಾದನೆ ಹಾಗೂ ಹಂಚಿಕೆಗೆ ಅನ್ವಯಿಸಲಾದ ವೈಜ್ಞಾನಿಕ ಸಂಶೋಧನೆಗಳ ಪರಿಣಾಮ. ಈಗ ಪೂರ್ವಕ್ಕೆ ಹೊಸದೆಂದು ತೋರುತ್ತಿರುವುದು ೧೫೦ ವರ್ಷಗಳ ಹಿಂದೆ ಪಶ್ಚಿಮಕ್ಕೆ ಹೊಸದೆಂದು ಗೋಚರಿಸಿತ್ತು. ಪಶ್ಚಿಮದಲ್ಲಿ ಆರ್ಥಿಕ ಸ್ಥಿತಿಯಲ್ಲಿ ಕುಸಿತ, ಹಳೆಯ ನೈತಿಕ ಮಲ್ಯಗಳ ಕುಸಿತ,ಕುಟುಂಬ ಹಾಗೂ ಚರ್ಚ್‌ನ ನಿಯಂತ್ರಣದಲ್ಲಿ ಶಿಥಿಲತೆ ಕಂಡುಬಂದಿರುವುದು ಯಾಂತ್ರಿಕ ಯುಗದ ಪರಿಣಾಮ. ಆದರೆ ಪೂರ್ವದಲ್ಲಿ ಕಂಡುಬಂದಷ್ಟು ತೀವ್ರತೆ ಅಲ್ಲಿ ಗೋಚರಿಸಲಿಲ್ಲ. ಪಶ್ಚಿಮದಲ್ಲಿ ಸಮಾಜ ಸಂಸ್ಥೆಗಳಿಗೆ ಹೊಂದಿಕೊಳ್ಳಲು ಹೊಸ ಶಕ್ತಿಗಳಿಗೆ ಸ್ವಲ್ಪ ಅವಕಾಶವಿತ್ತು. ಯಾಂತ್ರಿಕ ಔದ್ಯಮಿಕತೆ ಕಡ್ಡಾಯವಾಗಿಯಲ್ಲದೇ ಪಶ್ಚಿಮದ ಅಧಿಕಾರದ ಬಲದಿಂದ ಪೂರ್ವವನ್ನು ಪ್ರವೇಶಿಸಿತು. ಯಂತ್ರಗಳ ಹೊರಹೊಮ್ಮುವ ಶಕ್ತಿ ಆಯುಧಗಳ ರೂಪದಲ್ಲಿ ಕಂಡುಬಂತು. ಹೊಂದಾಣಿಕೆ ಮಾಡಿಕೊಳ್ಳಲು ಆಯ್ಕೆ ಅಥವಾ ಅವಕಾಶದ ಪ್ರಶ್ನೆಯೇ ಉದ್ಭವಿಸಲಿಲ್ಲ. ಪಾಶ್ಚಾತ್ಯೀಕರಣದೊಂದಿಗೆ ಅವರ ರಾಜಕೀಯ ಮತ್ತು ಸೈನ್ಯಬಲದ ಮೇಲುಗೈ ಇತ್ತು, ಅದರ ಆಳ್ವಿಕೆಯೂ ಇತ್ತು. ಪೂರ್ವವು ದುರದೃಷ್ಟವಶಾತ್ ಎಲ್ಲ ಸಾಮಾಜಿಕ ತೊಂದರೆ ಗಳಿಗೂ ಗುರಿಯಾಯಿತು.

೧೯ನೆಯ ಶತಮಾನಕ್ಕಿಂತ ೫೦೦ ವರ್ಷ ಪೂರ್ವದಲ್ಲಿ ಪೂರ್ವ ಏಷ್ಯಾದಲ್ಲಿ ಸ್ಥಿರತೆ ಇತ್ತು. ಆಗಲೂ ಯುದ್ಧ, ಆಂತರಿಕ ಅಲ್ಲೋಲ ಕಲ್ಲೋಲ, ನೈಸರ್ಗಿಕ ಪ್ರಕೋಪ, ಜನಾಂಗಗಳ ರಾಷ್ಟ್ರಗಳ ಹೊಸ ಮಾದರಿಗಳು, ಚಂಗೇಸ್‌ಖಾನನ ದಾಳಿಯಿಂದೊದಗಿದ ವಿಪತ್ತು ಎಲ್ಲವೂ ಇತ್ತು. ಆದರೆ ಅದೇ ೫೦೦ ವರ್ಷಗಳ ಅವಧಿಯಲ್ಲಿ ಯೂರೋಪ್‌ಗೆ ಹೋಲಿಸಿದರೆ ಪೂರ್ವ ಏಷ್ಯಾದಲ್ಲಿ ಶಾಂತಿ, ಸುವ್ಯವಸ್ಥೆ ಇತ್ತು. ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿಯೂ, ಸಂಘಟನೆಗಳು, ನಂಬಿಕೆಗಳು ಹಾಗೂ ಆಚರಣೆಗಳಲ್ಲಿ ಮಾರ್ಪಾಡುಗಳಾಗಿರಲಿಲ್ಲ. ಈ ವೇಳೆಗೆ ಯುರೋಪಿನಲ್ಲಿ ಜಮೀನ್ದಾರಿಕೆ ಹೋಗಿ ವಾಣಿಜ್ಯ ಕ್ರಾಂತಿಯಾಗಿ ಬಂಡಾಳಶಾಹಿತ್ವ ಕಾಲಿಟ್ಟಿತು. ಸುಧಾರಣೆ ಹಾಗೂ ಧಾರ್ಮಿಕ ಹೋರಾಟಗಳು ನಡೆದವು. ಪಶ್ಚಿಮವನ್ನು ತಿದ್ದುವ ಶಕ್ತಿಯಾಗಿ ರಾಷ್ಟ್ರೀಯತೆ ಬೆಳೆಯಿತು. ಇಂಥದಾವುದೂ ಪೂರ್ವ ಏಷ್ಯಾದಲ್ಲಿ ಗೋಚರಿಸಲಿಲ್ಲ. ೧೯ನೆಯ ಶತಮಾನದಲ್ಲಿ ಪೂರ್ವ ಏಷ್ಯಾದಲ್ಲಿ ಬದಲಾವಣೆಗಳೇ ಇಲ್ಲದ ಪರಿಸ್ಥಿತಿ ಹಾಗೂ ಹಳೆಯ ಕಂದಾಚಾರಗಳು ಅವಗುಣಗಳಾಗಿದ್ದರೂ, ಇದರಲ್ಲಿ ಮೆಚ್ಚುವಂಥ ಅಂಶಗಳು ಇದ್ದವು.

ಬದಲಾಗದ ಪೂರ್ವ ಎಂದು ೧೯ನೆಯ ಶತಮಾನದ ಪಾಶ್ಚಿಮಾತ್ಯ ಬರಹಗಾರರು ಕರೆಯುತ್ತಿದ್ದರೂ ಅವರ ಮಾತನ್ನು ತಪ್ಪು ಎನ್ನುವಂತಿಲ್ಲ. ಆದರೂ ಅವರದು ಆತುರದ ನಿರ್ಧಾರವಾಗಿತ್ತು. ಪೂರ್ವ ಹಳೆಯ ಪದ್ಧತಿಯದಾದರೂ ಅದಕ್ಕೆ ಸಾಂಸ್ಕೃತಿಕ ಭ್ರಮಾಧೀನತೆ ಕಾರಣವಲ್ಲ. ಸಂಪ್ರದಾಯಶರಣತೆ ಅದೊಂದಕ್ಕೇ ಮೀಸಲಾದ ಲಕ್ಷಣವಾಗಿರಲಿಲ್ಲ. ಪಶ್ಚಿಮದ ಸಂಸ್ಕೃತಿ ಹಾಗೂ ಸಮಾಜ, ಬೆಳವಣಿಗೆಯ ಪ್ರಾರಂಭಿಕ ಘಟ್ಟದಲ್ಲಿದ್ದುದರಿಂದ ಪಶ್ಚಿಮ ಹೆಚ್ಚು ಮಾರ್ಪಾಡು ಹೊಂದಿತು. ಆದರೆ ಅಲ್ಲಿಯೂ ಮೂಲಭೂತ ಮಾರ್ಪಾಡು ಗಳು ಅಪರೂಪವಾಗಿ ಆದವು. ೧೯ನೆಯ ಶತಮಾನಕ್ಕೆ ಮುಂಚೆ ಸಾಮಾಜಿಕ ಜೀವನದ ವ್ಯವಸ್ಥೆ ಎಲ್ಲೆಡೆಗೂ ನಿಶ್ಚಲವೇ ಆಗಿತ್ತು; ಅದರ ಪ್ರಮಾಣ ಮಾತ್ರ ಪೂರ್ವ-ಪಶ್ಚಿಮ ಗಳೆರಡರಲ್ಲೂ ವಿಭಿನ್ನವಾಗಿತ್ತು. ಯುರೋಪ್-ಅಮೆರಿಕಗಳಿಂದ ಪೌರ್ವಾತ್ಯ ದೇಶಗಳಿಗೆ ತೆರಳಿದವರು ೧೯ನೆಯ ಶತಮಾನವೊಂದರ ಆಧಾರ ಮಾತ್ರದಿಂದಲೇ ಅದರ ಗುಣಮಟ್ಟವನ್ನು ನಿರ್ಧರಿಸಲೆತ್ನಿಸಿದರು. ಪೂರ್ವದಲ್ಲಿ ಮಾರ್ಪಾಡಿಗೆ ಹೆಚ್ಚಿನ ಅವಕಾಶವಿರಲಿಲ್ಲ. ಜಪಾನಿಯರು, ಚೀನಿಯರು ಅಥವಾ ಕೊರಿಯನ್‌ರು ತಮ್ಮ ಜೀವನ ರೀತಿಯ ಬಗ್ಗೆ ವಸ್ತುನಿಷ್ಠವಾಗಿ ಯೋಚಿಸುವವರಾಗಿದ್ದಿದ್ದರೆ ಹಾಗೂ ಯುರೋಪ್, ಅಮೆರಿಕಾ ಹಾಗೂ ಏಷ್ಯಾದ ಇತರೆಡೆಗಳಲ್ಲಿ ಕಾಣಬರುತ್ತಿದ್ದುದನ್ನು ಗಮನಿಸಬಲ್ಲ ವರಾಗಿದ್ದರೆ, ತಮ್ಮ ಜನಾಂಗ ಅಥವಾ ಸಂಸ್ಕೃತಿಯ ಛಲವನ್ನು ಬಿಟ್ಟು, ಬದಲಾವಣೆ ಯಿಂದಾಗುವ ಲಾಭ ಏನೂ ಇಲ್ಲ ಎಂಬುದನ್ನು ಅರಿತಿರುತ್ತಿದ್ದರು. ಸಂಸ್ಕೃತಿಯ ಅವಿಭಾಜ್ಯ ಅಂಗಗಳಾದ ಕಲೆ, ತತ್ವಜ್ಞಾನ, ಧರ್ಮ, ಸಾಮಾಜಿಕ ಪ್ರತಿಸ್ಪಂದನ ಯಾವುದರಲ್ಲೂ ಪೂರ್ವ ಪಶ್ಚಿಮಕ್ಕೆ ಕಡಿಮೆಯಿರಲಿಲ್ಲ. ರಾಜಕೀಯ ಅಭಿವೃದ್ದಿಯ ಪೂರ್ವದಲ್ಲೂ ಪಶ್ಚಿಮದಷ್ಟೇ ಆಗಿತ್ತು. ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದಲೂ ಪೌರ್ವಾತ್ಯರು ಮುಂದುವರಿದಿದ್ದರು. ೧೮ನೆಯ ಶತಮಾನದ ಮಧ್ಯಭಾಗದಲ್ಲಿ ಇಂಗ್ಲೆಂಡ್‌ಗಿಂತ ಚೀನದಲ್ಲಿ ವ್ಯಕ್ತಿ ಅಥವಾ ಸ್ವತ್ತಿನ ವಿರುದ್ಧದ ಅಪರಾಧಗಳ ಸಂಖ್ಯೆ ಕಡಿಮೆ ಇತ್ತು. ಉತ್ಪಾದನಾ ತಂತ್ರಜ್ಞಾನ ಪಶ್ಚಿಮದ ವೈವಿಧ್ಯವಾಗಿದ್ದರೂ ೧೮ನೆಯ ಶತಮಾನದ ಉತ್ತರಾರ್ಧದವರೆಗೆ ಪೌರ್ವಾತ್ಯರು ಪಾಶ್ಚಿಮಾತ್ಯರಿಂದ ಕಲಿಯಬಹುದಾದದ್ದು ಹೆಚ್ಚನದೇನೂ ಇರಲಿಲ್ಲ.

ಪೂರ್ವದ ಹಿಂದುಳಿದಿರುವಿಕೆಯ ಕುರಿತ ಪಶ್ಚಿಮದ ಭಾವನೆ ತೀರ ಇತ್ತೀಚಿನದು. ೧೮ನೆಯ ಶತಮಾನದ ಯುರೋಪಿನ ರಾಜಕೀಯ ಹಾಗೂ ತತ್ವಜ್ಞಾನದ ಸಾಹಿತ್ಯದಲ್ಲಿ ಚೀನಾವನ್ನು ಮಾದರಿಯಾಗಿ ಚಿತ್ರಿಸಲಾಗಿತ್ತು. ಸಾಂಸ್ಕೃತಿಕ ಔನ್ನತ್ಯದ ದಿನಗಳ ಚೀನಾ ಮಾದರಿಯದಾಗಿ ಕಂಡದ್ದು ಸರಿಯೇ. ಆದರೆ ಪೌರ್ವಾತ್ಯ ದೇಶಗಳು ಹಿಂದುಳಿದವುಗಳು ಎಂದರೆ ಯಂತ್ರಶಕ್ತಿ, ಆಧುನಿಕ ಔಷಧಿಶಾಸ್ತ್ರ, ರೋಗಪ್ರತಿರೋಧ, ಸಾರಿಗೆ ಸಂಪರ್ಕ, ಮುದ್ರಣ, ಸಾಕ್ಷರತೆಯಂಥ ಆನ್ವಯಿಕ ಶಾಸ್ತ್ರಗಳ ಸಂಬಂಧಿ ವಿಷಯಗಳ ಕುರಿತಂತೆ ಈ ಮಾತು ಅನ್ವಯಿಸುತ್ತದೆ. ಹಣಕಾಸು ವಿಷಯದಲ್ಲಿ ೧೫೦ ವರ್ಷಗಳ ಹಿಂದೆ ಯುರೋಪ್- ಅಮೆರಿಕಾಗಳಲ್ಲಿದ್ದ ರೀತಿ ಈಗಲೂ ಇಲ್ಲಿ ಕಂಡುಬರುತ್ತದೆ. ಈ ಅರ್ಥ ದಲ್ಲಿ ಪೂರ್ವ ಹಿಂದುಳಿದಿದೆ. ಪಶ್ಚಿಮ ೧೫೦-೨೦೦ ವರ್ಷಗಳ ಹಿಂದೆಯೇ ಭೂತದಿಂದ ಹೊರಬಂದಿತು. ಪೂರ್ವ ಆ ಬಗ್ಗೆ ಈಗ ಎಚ್ಚರಗೊಳ್ಳುತ್ತಿದೆ. ಈ ಎರಡು ಗೋಲಾರ್ಧ ಗಳ ನಡುವಣ ಅಂತರ, ಕಾಲಕ್ಕೆ ಸಂಬಂಧಿಸಿದ್ದೇ ಹೊರತು ಜೀವನದ ತಿರುಳಿನದಲ್ಲ.

ಪೂರ್ವವು ಭೂತದಿಂದ ಈಚೆ ಬರಲು ಯತ್ನಿಸುತ್ತಿದೆ ಅಥವಾ ಅದರ ಮೇಲೆ ಅಂಥ ಒತ್ತಡ ಬಂದಿದೆ. ಇದೇ ಪೂರ್ವ ಏಷ್ಯಾದ ಆಧುನಿಕ ಇತಿಹಾಸ ಹಾಗೂ ಇದೇ ಅದರ ಭವಿಷ್ಯವನ್ನು ತಿದ್ದುವಂಥದ್ದು.

ಯುರೋಪಿನಲ್ಲಿರುವಂತೆ ಏಷ್ಯಾದಲ್ಲಿ ನಿಖರವಾದ ಭೌಗೋಳಿಕ ವಿಭಾಗ ಗಳಿಲ್ಲ. ಪೂರ್ವ ಎಂದು ನಿಖರವಾಗಿ ಗುರುತಿಸಬಹುದಾದ ಒಂದೇ ಪ್ರದೇಶವಿಲ್ಲ. ಪೂರ್ವ ಎಂದು ಕರೆಯಲಾಗುತ್ತಿದ್ದರೂ ಯುರೋಪಿನಂತೆಯೇ ಸಾಕಷ್ಟು ಭಿನ್ನತೆಗಳಿವೆ. ತುರ್ಕಸ್ತಾನ ಮತ್ತು ಚೀನಾ ಎರಡೂ ಏಷ್ಯಾದ ರಾಷ್ಟ್ರಗಳೇ ಆದರೂ ಲಾತ್ವಿಯಾ ಹಾಗೂ ಇಟಲಿಗಳಲ್ಲಿರುವಷ್ಟೇ ಅಂತರ ಇವೆರಡರಲ್ಲಿದೆ. ಭಾರತ-ಚೀನಾಗಳ ನಡುವಣ ಅಂತರ ಜರ್ಮನಿ-ಫ್ರಾನ್ಸ್‌ಗಳಿಗಿಂತ ಅಧಿಕವಾಗಿದೆ. ಜರ್ಮನಿ ಹಾಗೂ ಫ್ರಾನ್ಸ್‌ಗಳ ನಡುವೆ ಗ್ರೀಸ್ ಹಾಗೂ ರೋಮ್ ಪರಂಪರೆ, ಕ್ರಿಶ್ಚಿಯನ್ ಮತ ಹಾಗೂ ಪುನರುತ್ಥಾನಗಳ ಸಾಮ್ಯವಾದರೂ ಇದೆ; ಯುರೋಪ್‌ನಲ್ಲಿ ರಷ್ಯಾದ ಪಶ್ಚಿಮದ ಭಾಗದಲ್ಲಿ ಏಷ್ಯಾದಲ್ಲಿರುವುದಕ್ಕಿಂತ ಹೆಚ್ಚಿನ ಸಾಂಸ್ಕೃತಿಕ ಏಕತೆ ಕಂಡುಬರುತ್ತದೆ. ಏಷ್ಯಾದ ದೇಶಗಳಲ್ಲಿ ಕಂಡುಬರುವ ಸಾಮ್ಯಗಳು ಮೂರೇ ಮೂರು; ನಿವಾಸಿಗಳು ಬಿಳಿಯರಲ್ಲ, ಜಪಾನ್ ಹೊರತುಪಡಿಸಿ ಉಳಿದೆಲ್ಲವೂ ಇನ್ನೂ ಔದ್ಯಮಿಕವಾಗಿಲ್ಲ. ಜಪಾನ್ ಹೊರತುಪಡಿಸಿ ಉಳಿದೆಲ್ಲವೂ ಪಾಶ್ಚಾತ್ಯರ ಪ್ರಭುತ್ವಕ್ಕೆ ಒಳಪಟ್ಟಿದ್ದು, ಅದರ ಛಾಯೆ ಈಗಲೂ ಅವುಗಳಲ್ಲಿ ಕಂಡುಬರುತ್ತದೆ. ಕಳೆದ ಪೀಳಿಗೆಯ ಜನ ಅನುಭವಿಸಿದ ಏರಿಳಿತದ ತೀವ್ರತೆ, ಈ ಸಾಮ್ಯಗಳನ್ನು ಬಿಟ್ಟರೆ ಜಗತ್ತಿನ ಇತರ ಪ್ರದೇಶಗಳು, ಜನಾಂಗಗಳಿಗಿಂತ ವಿಭಿನ್ನವಾಗಿ ಪೂರ್ವದ್ದು ಎಂದು ವೈಶಿಷ್ಟ್ಯಪೂರ್ಣವಾಗಿ ಗುರುತಿಸುವಂಥದು ಯಾವುದೂ ಇಲ್ಲ.

ಏಷ್ಯಾದಲ್ಲಿ, ಒಂದೇ ಬಗೆಯಾಗಿರುವ ಪ್ರದೇಶವನ್ನು ಗುರುತಿಸಬಹುದಾಗಿದೆ. ಈ ಭಾಗದಲ್ಲಿ ಜಪಾನ್, ಕೊರಿಯಾ, ಚೀನಾ ಸೇರುತ್ತವೆ. ಭೌಗೋಳಿಕ ಸ್ವರೂಪದ ಸಾಮ್ಯದಿಂದಷ್ಟೇ ಅಲ್ಲದೇ ಸಾಂಸ್ಕೃತಿಕ-ಸಾಮಾಜಿಕ ಸಾಮ್ಯತೆಯಿಂದಾಗಿಯೂ ಅವುಗಳನ್ನು ಒಂದೇ ಗುಂಪು ಎಂದು ಪರಿಗಣಿಸಬಹುದು. ಈ ಪ್ರದೇಶದ ಅಂಚಿನಲ್ಲಿ ಫ್ರೆಂಚ್ ಇಂಡೋಚೀನಾ, ಸಯಾಮ್, ಬರ್ಮಾ, ಫಿಲಿಪೈನ್ಸ್, ಇಂಡೋನೇಷ್ಯಾ ಹಾಗೂ ಮಲಯಾ ಇವೆ. ಚೀನ, ಕೊರಿಯಾ ಹಾಗೂ ಜಪಾನ್‌ಗಳ ಪ್ರಭಾವ ಇವುಗಳ ಮೇಲಾಗಿದ್ದರೂ ಇವುಗಳನ್ನು ಅವುಗಳೊಂದಿಗೆ ಒಗ್ಗೂಡಿಸುವಷ್ಟು ತೀವ್ರತರವಾಗಿಲ್ಲ. ಪ್ರಾಯೋಗಿಕವಾಗಿ, ತರ್ಕಬದ್ಧವಾಗಿ ಹಾಗೂ ಸಾಂಸ್ಕೃತಿಕವಾಗಿಯೂ ಜಪಾನ್, ಕೊರಿಯಾ, ಚೀನಾ ದೂರ ಪ್ರಾಚ್ಯ ಅಥವಾ ಪೂರ್ವ ಏಷ್ಯಾ ಎನಿಸಿಕೊಂಡಿವೆ. ಪ್ರಸ್ತುತ ಲೇಖನದಲ್ಲಿ ಚೀನಾ ಹಾಗೂ ಜಪಾನ್ ದೇಶಗಳ ಸಂಸ್ಕೃತಿ ಹಾಗೂ ರಾಜಕೀಯ ಕುರಿತು ಚರ್ಚೆ ನಡೆಸಲಾಗಿದೆ.

ಚೀನಾ

ಪೂರ್ವ ಏಷ್ಯಾದ ಕೆಲವು ಪ್ರದೇಶಗಳೇ ಚೀನಾ. ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೂ ಇದು ಹಾಗೆಯೇ ಇತ್ತು. ೧೯ನೆಯ ಶತಮಾನದ ಮಧ್ಯಭಾಗ ಹಾಗೂ ೨ನೆಯ ಜಾಗತಿಕ ಯುದ್ಧದ ಸಮಯದವರೆಗಿನ ಅವಧಿಯಲ್ಲಿ ಪಶ್ಚಿಮದಿಂದ ಚೀನಾ ಕಾಣಿಸಿಕೊಳ್ಳುವವರೆಗೂ ಇದು ಹಾಗೇ ಇತ್ತು. ಈಗಲೂ ಇದು ಹಾಗೆಯೇ ಇದೆ. ಕಾರಣ ರಷ್ಯಾ ಹಾಗೂ ಸಂಯುಕ್ತ ಸಂಸ್ಥಾನಗಳಂತೆ ಚೀನಾ ಒಂದು ದೇಶ ಎನ್ನುವುದಕ್ಕಿಂತ ಹೆಚ್ಚಾಗಿ ಒಂದು ಖಂಡ. ಜಗತ್ತಿನಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ನಾಡು. ಇಲ್ಲಿಯದು ಪ್ರಾಚೀನತಮ ಸಂಸ್ಕೃತಿ. ೧೯ನೆಯ ಶತಮಾನದ ಮಧ್ಯಭಾಗದಲ್ಲೂ ಸಾಂಪ್ರದಾಯಿಕ ರೀತಿಯಲ್ಲೇ ಸಾಗಿ ಬಂದು ಉಳಿದ ಪ್ರಾಚೀನತಮ ಸಂಸ್ಕೃತಿ ಎಂದು ಪರಿಗಣಿಸಲಾಗಿತ್ತು. ಆದ್ದರಿಂದ ಚೀನಾ ಎಂದೆಂದಿಗೂ ಪೂರ್ವ ಏಷ್ಯಾದ ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ಪ್ರತಿನಿಧಿಯಾಗಿ ಉಳಿಯಬಲ್ಲದು.

ಪಶ್ಚಿಮದ ಪ್ರಭಾವವಾಗುವವರೆಗೆ ಇಡೀ ಪ್ರದೇಶದ ಸಾಮಾಜಿಕ ವ್ಯವಸ್ಥೆ, ಸಂಸ್ಕೃತಿ, ಜೀವನ ರೀತಿಗೆ ಚೀನಾ ದೇಶವೇ ಮಾದರಿಯಾಗಿತ್ತೇ? ಈ ಬಗ್ಗೆ ಚರ್ಚಿಸುವ ಮುನ್ನ ಒಂದು ಎಚ್ಚರಿಕೆಯ ನುಡಿ.

‘ಪೂರ್ವದ ಆತ್ಮ’ ‘ಪೂರ್ವದ ಚೇತನ’ ಎಂದು ಚೀನಾದ ಬಗ್ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿತ್ತು. ಪಾಶ್ಚಾತ್ಯದ ಪಾಲಿಗೆ ಇದು ಪರಿಭಾಷೆಗೆ ನಿಲುಕದ, ಅತೀತವಾದ, ಅಳತೆಗೆ ನಿಲುಕವಂಥದು ಎನಿಸಿತ್ತು. ಇದು ಕೇವಲ ಆಲಂಕಾರಿಕವಲ್ಲದಿದ್ದರೂ ಸಾಕಷ್ಟು ಉತ್ಪ್ರೇಕ್ಷೆ ಇತ್ತು. ಯುರೋಪಿಯನ್‌ರಾಗಲಿ, ಅಮೆರಿಕನ್‌ರಾಗಲಿ ಪೂರ್ವವನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಪ್ರಯತ್ನಿಸಲೇ ಇಲ್ಲ; ಅಥವಾ ಅದನ್ನು ಅದರ ದೃಷ್ಟಿಕೋನದಿಂದ ನೋಡಲಿಲ್ಲ. ಪೂರ್ವವನ್ನು ಅತೀತವೆಂದು ಕಲ್ಪಿಸಿಕೊಳ್ಳುವುದರಲ್ಲಿ ಅವರಿಗೆ ಆನಂದವಿತ್ತು. ಪರಿಣಾಮವೆಂದರೆ ಪೂರ್ವ, ಅಲ್ಲಿಯ ವಾಸಿಗಳು, ಅವರ ಜೀವನ ರೀತಿಯ ತಪ್ಪು ಚಿತ್ರಣ. ವಾಸ್ತವವೆಂದರೆ ಪೂರ್ವವೇನೂ ಪಶ್ಚಿಮಕ್ಕಿಂತ ಹೆಚ್ಚು ವರ್ಣಮಯವಾಗಿಲ್ಲ, ಆಧ್ಯಾತ್ಮಿಕವಾಗಿಲ್ಲ. ಎರಡರಲ್ಲೂ ಜೀವನ ಹಾಗೂ ಪರಿಸರ ಎರಡು ವಿಷಯಗಳಲ್ಲಿಯೂ ವರ್ಣಮಯ ಅಂಶಗಳೂ ಇವೆ, ನಿಸ್ಸಾರ ಅಂಶಗಳೂ ಇವೆ. ಅಂತೆಯೇ ಲೌಕಿಕ ಹಾಗೂ ಆಧ್ಯಾತ್ಮಿಕ ವಿಷಯಗಳು; ಅಲ್ಲದೇ ಎಲ್ಲೆಡೆಗೂ ಜನ ಪಾರಲೌಕಿಕವಾಗಿರುವುದಕ್ಕಿಂತ ಹೆಚ್ಚಾಗಿ ಲೌಕಿಕರೇ ಆಗಿದ್ದಾರೆ.

ಮಾನವ ಸಂಬಂಧಗಳು ಸೇರಿರುವ ಸಾಮಾಜಿಕ ಸಂಸ್ಥೆಗಳಲ್ಲಿ ವಿಭಿನ್ನತೆ ಗೋಚರಿಸುತ್ತದೆ. ಕಾಲವೂ ಕೆಲವು ಸಲ ತಪ್ಪು ಗ್ರಹಿಕೆಗೆ ಕಾರಣವಾಗುತ್ತದೆ. ಕಳೆದ ನೂರು ವರ್ಷಗಳ ಅವಧಿ ಯಲ್ಲಿ ಪೂರ್ವ-ಪಶ್ಚಿಮಗಳ ನಡುವಣ ವೈರುಧ್ಯಗಳು ಸ್ಪಷ್ಟವಾಗಿ ಗೋಚರಿಸಿವೆ. ಆಧುನಿಕ ಪಾಶ್ಚಿಮಾತ್ಯರು ಸೀಮಿತ ಅವಧಿಯನ್ನು ಮಾನದಂಡವಾಗಿರಿಸಿಕೊಂಡು ತಮ್ಮ ನಿರ್ಧಾರ ಗಳನ್ನು ಮಾಡುತ್ತಾರೆ; ಅಂಥ ನಿರ್ಧಾರಗಳು ಅವರಿಗೆ ಅನುಕೂಲಕರವಾಗಿರುವುದು ಸಹಜ. ಕೈಗಾರಿಕೆಯ ರೂಪದಲ್ಲಿ ವಿಜ್ಞಾನ ಎಲ್ಲೆಲ್ಲೂ ಪ್ರವೇಶ ಪಡೆದು ರೋಗದಿಂದ ಮುಕ್ತಿ, ಕೆಲಸದಿಂದ ಮುಕ್ತಿ ದೊರಕಿದೆ, ಪ್ರಕೃತಿಯನ್ನು ಮಣಿಸಲಾಗಿದೆ. ಇದರಿಂದ ಪೂರ್ವಪಶ್ಚಿಮಗಳ ನಡುವಣ ಕಂದಕ ಅಗಲವಾಗಿದೆ. ಅಲ್ಲದೇ ೨೯ನೆಯ ಶತಮಾನದ ಪಶ್ಚಿಮ, ೧೮ನೆಯ ಶತಮಾನದ ಪಶ್ಚಿಮಗಳ ನಡುವೆಯೇ ಕಂದಕ ಏರ್ಪಟ್ಟಿದೆ. ಇದಕ್ಕೆ ಅವರವರ ಆತ್ಮಪ್ರತಿಷ್ಠೆಯೇ ಕಾರಣ.

ಇತ್ತೀಚಿನವರೆಗೂ ಜನ ಪ್ರಕೃತಿಯ ಕೃಪಾಪೋಷಿತರೇ ಆಗಿದ್ದರು. ಬಹುಪಾಲು ಜನ ಕೃಷಿಕರಾಗಿದ್ದು, ಹೊಟ್ಟೆಪಾಡಿಗಾಗಿ ಬೆವರು ಸುರಿಸಿ ಮಣ್ಣಿನಲ್ಲಿ ಗೇಯುತ್ತಿದ್ದರು. ಕುಶಲ ಕರ್ಮಿಗಳಾದವರು ಸಾಧನ ಸಲಕರಣೆಗಳ ಸಹಾಯದಿಂದ ಕೈಗಾರಿಕೆಯಲ್ಲಿ ತೊಡಗಿದ್ದರು. ಯಾಂಗತ್ಸೆ ಅಥವಾ ಗಂಗಾನಂದಿ ದಂಡೆಯಲ್ಲಿಯ ರೈತನಿಗೂ ಹಾಗೂ ರೈನ್ ಅಥವಾ ದಾನೂಬೆ ನದಿ ದಂಡೆಯ ರೈತನಿಗೂ ಹೆಚ್ಚಿನ ವ್ಯತ್ಯಾಸವೇನಿರಲಿಲ್ಲ. ಇಂದಿನ ಅಥವಾ ಆತನ ೧೬ನೆಯ ಶತಮಾನದ ಪೂರ್ವಿಕರಿಗಿಂತ ಹೆಚ್ಚು ಸರಳವಾಗಿ ಅವರು ಪರಸ್ಪರರನ್ನು ಅರ್ಥ ಮಾಡಿಕೊಳ್ಳಬಲ್ಲವರಾಗಿದ್ದರು.

ಚೀನಾ ಸಂಸ್ಕೃತಿಯ ವೈಲಕ್ಷಣವೆಂದರೆ ಅವರ ಪ್ರಾಚೀನತೆ. ೧೦೦೦ ವರ್ಷಗಳ ಹಿಂದಿನ ಜೀವನ ರೀತಿಯೇ ಅಲ್ಲಿಯ ಜನಜೀವನದಲ್ಲಿ ಈಗಲೂ ಕಂಡುಬರುವುದೇ ಅವರ ವೈಶಿಷ್ಟ್ಯ. ೧೯೧೧ ಅಥವಾ ೧೯೫೦ರವರೆಗೂ ಚೀನಿಯರು ೧೦ನೆಯ ಶತಮಾನ ದಲ್ಲಿಯ ತಮ್ಮ ಪೂರ್ವಿಕರ ರೀತಿಯಲ್ಲಿಯೇ ಬಾಳುತ್ತಿದ್ದರು. ಅವರ ಸಾಮಾಜಿಕ ಸಂಸ್ಥೆಗಳು, ಮೂಲಭೂತ ನಂಬಿಕೆಗಳು, ಹೊಟ್ಟೆಪಾಡಿನ ಉದ್ಯೋಗಗಳು, ಮನೋರಂಜನೆ, ಹವ್ಯಾಸ ಎಲ್ಲವೂ ಒಂದೇ ಆಗಿದ್ದು, ೧೦ನೆಯ ಶತಮಾನದ ಒಬ್ಬ ಚೀನಿಯನನ್ನು ೧೯ನೆಯ ಶತಮಾನದಲ್ಲಿ ಕೊಂಡೊಯ್ದಿದ್ದರೂ, ಹೊಂದಿಕೊಳ್ಳಲು ಅವನಿಗೆ ಹೆಚ್ಚಿನ ತೊಂದರೆಯೇನೂ ಆಗದು ಎಂಬ ಮಾತಿನ ಸಾದೃಶ್ಯವಿತ್ತು.

ಉತ್ತರದ ಕಡೆಯಿಂದ ಆದಿವಾಸಿಗಳು ಆಕ್ರಮಿಸಿ, ಪರಕೀಯ ಕುಲಗಳು ಸಿಂಹಾಸನ ವನ್ನೇರಿದರೂ ಅಲ್ಲಿಯ ಸಾಮಾಜಿಕ ಸಂಸ್ಥೆಗಳಲ್ಲಾಗಲೀ, ಜೀವನ ರೀತಿಯಲ್ಲಾಗಲೀ ಬದಲಾವಣೆಗಳಾಗಿಲ್ಲ. ಏಕೆಂದರೆ ಚೀನಾದ ಸಂಸ್ಕೃತಿ ಆ ವೇಳೆಗಾಗಲೇ ನೆಲೆಗೊಂಡಿದ್ದು ತುಂಬಾ ಅಭಿವೃದ್ದಿಗೊಂಡಿತ್ತು ಮತ್ತು ಆ ದೇಶವನ್ನು ಗೆದ್ದವರ ನಾಗರಿಕತೆ ಅದಕ್ಕಿಂತ ಕೆಳಮಟ್ಟದ್ದಾಗಿದ್ದು, ಪರಾಭವಗೊಂಡ ಚೀನಾ ದೇಶೀಯರು ಅವರನ್ನನುಸರಿಸುವ ಬದಲು ಅವರೇ ಚೀನಾ ಸಂಸ್ಕೃತಿಯನ್ನು ಅನುಸರಿಸುತ್ತಿದ್ದರು. ಪರಕೀಯರು ಈ ನಾಡನ್ನಾಳಿದರೂ ಜೀವನ ರೀತಿ ಮಾತ್ರ ದೇಶೀಯವೇ ಆಗಿತ್ತು. ಮಂಚೂಗಳು ೧೭ನೆಯ ಶತಮಾನದಲ್ಲಿ ಉತ್ತರದ ಕಡೆಯಿಂದ ದಾಳಿ ಮಾಡಿ ಸುಮಾರು ೨೫೦ ವರ್ಷಗಳ ಕಾಲ ಆಳಿದರು. ಆದರೆ ಚೀನಿಯರ ವಿಚಾರಧಾರೆ, ನಂಬಿಕೆಗಳು, ಆಚರಣೆಗಳಿಗೆ ಯಾವುದೇ ಧಕ್ಕೆ ತಟ್ಟಲಿಲ್ಲ. ಮಂಚೂಗಳು ಮುಂದಿನ ೫೦ ವರ್ಷಗಳಲ್ಲಿ ಚೀನಿ ಪದ್ಧತಿಗನುಗುಣವಾಗಿ ಆಳ್ವಿಕೆ ನಡೆಸಿದರು. ಚೀನಿಯರಿಗಿಂತ ಮಿಗಿಲೆನಿಸುವಷ್ಟು ಅವರೊಂದಿಗೆ ಮಿಳಿತವಾಗಿ ಸ್ಪಂದಿಸಿದರು. ೧೯೧೧ರ ನಂತರದ ದಶಕದಲ್ಲಿ ಅವರನ್ನು ಕಿತ್ತೆಸೆದಾಗ ಅವರಂಥವರು ಇನ್ನಿಲ್ಲ ಎನಿಸಿತು.

ಚೀನಾದ ಇತಿಹಾಸದ ಸಂಪ್ರದಾಯವೇ ಇದು. ತಮ್ಮನ್ನು ಸೋಲಿಸಿದವರನ್ನೂ ಒಗ್ಗಿಸಿಕೊಳ್ಳುವಂಥವರು ಎಂಬ ಭಾವನೆ ಇತಿಹಾಸದುದ್ದಕ್ಕೂ ಚೀನಿಯರ ಬಗ್ಗೆ ಮೂಡಿದೆ. ಇದಕ್ಕೆ ಕಾರಣ ಚೀನಿ ಸಂಸ್ಕೃತಿಯ ಆಳ ಹಾಗೂ ವಿಕಾಸ. ಆಕ್ರಮಣಕಾರರಲ್ಲಿ ದಾಳಿಯ ಸಾಮರ್ಥ್ಯ ಬಿಟ್ಟರೆ ನಾಗರಿಕತೆಯ ದೃಷ್ಟಿಯಿಂದ ಹೇಳಿಕೊಳ್ಳುವಂಥದೇನೂ ಇರಲಿಲ್ಲ. ದೇಹದಾರ್ಢ್ಯವಿದ್ದರೂ ಸಂಸ್ಕೃತಿ, ತಂತ್ರಜ್ಞಾನದಲ್ಲಿ ಅಸಮರ್ಥರಾಗಿದ್ದರು. ತಮ್ಮನ್ನು ಗೆದ್ದವರನ್ನು ಒಗ್ಗಿಸಿಕೊಳ್ಳುವವರು ಎಂಬ ಮಾತೇ ಯಾವಾಗಲೂ ಚೀನಿಯರ ಬಗ್ಗೆ ಹೊಂದುವುದಿಲ್ಲ. ಏಕೆಂದರೆ ಅನುಸಂಧಾನಗಳಿಂದಾಗಿ ಜಗತ್ತು ನಿಕಟವಾಗುತ್ತಿರುವಂತೆ ಚೀನಿಯರು ಯುರೋಪ್, ಜಪಾನ್ ಹಾಗೂ ರಷ್ಯಾಗಳಂಥ ಉನ್ನತ ಸಂಸ್ಕೃತಿಗಳ, ಅವುಗಳ ಉನ್ನತಮಟ್ಟದ ದಕ್ಷತೆಯ ಹಾಗೂ ತಂತ್ರಜ್ಞಾನದ ಸಂಪರ್ಕ ಪಡೆದಿದ್ದಾರೆ. ೨೦೦೦ ವರ್ಷಗಳಷ್ಟು ಹಿಂದೆ ಇದ್ದ ಪ್ರಾಚೀನ ಚೀನಾ ಸಂಸ್ಕೃತಿ ಸಾಕಷ್ಟು ಶುಷ್ಕವಾಗಿದೆ, ಏರುಪೇರಾಗಿದೆ, ಆಕ್ರಮಣಗಳಿಂದಾಗಿ ಬಿರುಕುಬಿಟ್ಟಿದೆ. ಈಗ ಅದನ್ನು ಗೆಲ್ಲುವವರು ಯಾರಾದರೂ ಇದ್ದರೆ, ಅವರಲ್ಲಿ ಹೆಚ್ಚಿನ ಉತ್ಕೃಷ್ಟತೆಯೇನೂ ಇಲ್ಲದಿರುವುದರಿಂದ ಆ ಜೀವನ ರೀತಿಗಾಗಿ ಹಾತೊರೆಯುವುದಿಲ್ಲ.

ಕನ್ಫ್ಯೂಶಿಯನಿಸಂ

ಚೀನಿ ಸಂಸ್ಕೃತಿಯ ಮುಂದುವರಿಕೆ ಹಾಗೂ ಉಳಿಯುವಿಕೆಗೆ ಅದರ ಸಾಂಪ್ರದಾಯಿಕತೆಯೇ ತಳಹದಿ. ೨೦೦೦ ವರ್ಷಗಳ ಹಿಂದೆ ಒಳಿತು, ಕೆಡುಕು, ಸತ್ಯ-ಮಿಥ್ಯ, ಮಾನವರ ಪರಸ್ಪರ ಸಂಬಂಧಗಳಲ್ಲಿನ ಔಚಿತ್ಯ-ಅನೌಚಿತ್ಯ, ಮಾನವನಿಗೆ ರಾಜ್ಯ ಹಾಗೂ ಸಮಾಜದೊಂದಿಗಿನ ಸಂಬಂಧದ ಕುರಿತು ಜಾಗತಿಕವಾದ ಸಮ್ಮತಿ ಇತ್ತು. ಕನ್‌ಫ್ಯೂಶಿಯಸ್(ಕ್ರಿ.ಶ.೬ನೆಯ ಶ.) ಹಾಗೂ ಆತನ ಶಿಷ್ಯರ ಬೋಧನೆಗಳಿಂದ ಸಂಪ್ರದಾಯ ರೂಪುಗೊಂಡಿತು. ನಂತರ ಮುಂದಿನ ಶತಮಾನಗಳಲ್ಲಿ ಪ್ರತಿಯೊಂದು ಧರ್ಮ ಹಾಗೂ ತತ್ವಜ್ಞಾನದಂತೆ ಕಾಲಧರ್ಮ ಕ್ಕನುಗುಣವಾಗಿ ಆ ಬೋಧನೆಗಳನ್ನು ತಿದ್ದುಪಡಿ ಮಾಡಲಾಯಿತು. ಅರ್ಥವಿವರಣೆ, ಮರು ಅರ್ಥವಿವರಣೆ ನೀಡಲಾಯಿತು. ಆದರೂ ಮೂಲಸತ್ವ ಹಾಗೇ ಇದ್ದು ಚೀನಾ ಸಂಸ್ಕೃತಿ ಹಾಗೂ ಅದರ ಸುತ್ತಣ ಜನಜೀವನದ ಮೇಲೆ ತನ್ನ ಮುದ್ರೆ ಒತ್ತಿದೆ.

ಕನ್‌ಫ್ಯೂಶಿಯನಿಸಂ ಎಂಬುದು ಒಂದು ಧರ್ಮ ಎಂಬ ನಂಬಿಕೆ ವ್ಯಾಪಕವಾಗಿ ಪ್ರಚಾರದಲ್ಲಿದ್ದರೂ, ಅದು ಧರ್ಮವಾಗಿರದೇ ಅದೊಂದು ಸಾಮಾಜಿಕ ಹಾಗೂ ರಾಜಕೀಯ ವಿಚಾರಧಾರೆಯಾಗಿದ್ದು ಅದೊಂದು ನೀತಿಸಂಹಿತೆಯಾಗಿತ್ತು. ವಿಶ್ವದೊಂದಿಗಿನ ಅಥವಾ ಬದುಕಿನಾಚೆಗೆ ಅಥವಾ ಉನ್ನತವಾದುದರ ಜೊತೆಗೆ ಮಾನವನಿಗಿರುವ ಸಂಬಂಧದ ಕುರಿತು ವ್ಯವಹರಿಸುವುದಿಲ್ಲ. ಕನ್‌ಫ್ಯೂಶಿಯಸ್‌ನ ಪ್ರಕಾರ, ಆತನೆಯ ಇನ್ನೂ ಈ ಲೋಕದ ಸಮಸ್ಯೆಗಳ ಹಾಗೂ ಬದುಕಿನ ಪಾರವನ್ನರಿಯದಿರುವಾಗ ಪರಲೋಕ ಹಾಗೂ ಮರಣದ ತರುವಾಯದ ಕುರಿತು ಮಾತನಾಡುವ ಅಧಿಕಾರವೇ ಇಲ್ಲ. ಅಂದಿನಿಂದ ಇಂದಿನವರೆಗೂ ಚೀನಿಯರು ಪಾರಲೌಕಿಕ ಹಾಗೂ ಅತೀತದ ಕುರಿತು ಇತರರಷ್ಟು ಹಚ್ಚಿ ಕೊಂಡಿಲ್ಲ. ಬಹುಶಃ ಕನ್‌ಫ್ಯೂಶಿಯಸ್‌ನ ಪ್ರಭಾವದಿಂದಾಗಿಯೇ ಅವರಲ್ಲಿ ವೈಚಾರಿಕತೆ ಹಾಗೂ ಮಾನವೀಯತೆ ಮೈಗೂಡಿರಬೇಕು. ಅವರ ಮಟ್ಟಿಗೆ ತಾರ್ಕಿಕತೆಯೇ ಉತ್ತಮ ಮಾರ್ಗ, ಮಾನವ ಕಲ್ಯಾಣವೇ ಉತ್ಕೃಷ್ಟ ಸಾಧನೆ. ಧರ್ಮ ಹಾಗೂ ದೃಷ್ಟಿಕೋನಗಳ ವಿಷಯದಲ್ಲಿ ಅವರು ಸಹಿಷ್ಣುಗಳು. ಅಪರೂಪದ ಸಂದರ್ಭಗಳಲ್ಲಿ ಅವರು ವಿಭಿನ್ನ ನಂಬಿಕೆಗಳ ಜನರನ್ನು ಹಿಂಸಿಸಿರಬಹುದಾದರೂ ಅದರ ಕಾರಣ ಧರ್ಮ ಅಥವಾ ತತ್ವಜ್ಞಾನ ಅಥವಾ ರಾಜಕೀಯವಾದುದಾಗಿರಲಿಲ್ಲ. ಅದು ಸ್ವಯಂ ರಕ್ಷಣೆಯ ಉದ್ದೇಶದಿಂದಾದು ದಾಗಿತ್ತು. ಏಷ್ಯಾ ಖಂಡದ ಮೇಲೆ ಯುರೋಪಿಯನ್‌ರ ಆಳ್ವಿಕೆ ಆರಂಭವಾಗುವವರೆಗೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದುವುದು ನಿಷಿದ್ಧ ವಾಗಿರಲಿಲ್ಲ ಅಥವಾ ಶಿಕ್ಷಾರ್ಹವೆನಿಸುತ್ತಿರಲಿಲ್ಲ. ಏಷ್ಯಾದಲ್ಲಿ ಮಿಲಿಟರಿ ಪ್ರವೇಶವಾಗುವುದಕ್ಕೆ ಚರ್ಚ್ ಪ್ರಮುಖ ಕಾರಣ ಎಂಬುದನ್ನರಿತಿದ್ದ ಚೀನಿಯರು ಪಶ್ಚಿಮದ ಧಾರ್ಮಿಕ ಆಯಾಮ ಹಾಗೂ ಮಿಲಿಟರಿ ಆಯಾಮ ಎಂದು ಪ್ರತ್ಯೇಕವಾಗಿ ಪರಿಗಣಿಸುವ ಗೋಜಿಗೆ ಹೋಗಲಿಲ್ಲ.

ಉತ್ತಮ ಸರ್ಕಾರ, ಉತ್ತಮ ಸರ್ಕಾರದಿಂದ ಸುರಕ್ಷಿತ ನಾಡು, ಸುಸ್ಥಿರ ಸಮಾಜ, ಸಂತುಷ್ಟ ಜನತೆ ಎಂಬುದು ಕನ್‌ಫ್ಯೂಶಿಯಸ್‌ನ ದೃಷ್ಟಿಕೋನವಾಗಿತ್ತು. ಉತ್ತಮ ಸರ್ಕಾರವಿಲ್ಲದಿದ್ದರೆ ಸಮಾಜದ ಕಟ್ಟುಪಾಡು ಶಿಥಿಲಗೊಂಡು ಜನ ಗಲಭೆ ಎದ್ದು ಅರಾಜಕತೆ ತಾಂಡವವಾಡುತ್ತದೆ ಎಂಬುದು ಅವರ ಅಭಿಮತ. ಅವರ ಮಟ್ಟಿಗೆ ಸರ್ಕಾರ ಸಮೃದ್ಧವಾಗಿ ಆಹಾರ ಒದಗಿಸಬೇಕು, ಶಸ್ತ್ರಸಜ್ಜಿತವಾಗಿದ್ದು ಜನತೆಯ ವಿಶ್ವಾಸವನ್ನು ಗಳಿಸಬೇಕು.

ಜನತೆಯ ಕಲ್ಯಾಣವೇ ಸರ್ಕಾರದ ಗುರಿ. ಆಡಳಿತ ಸಮರ್ಥರ ಕೈಯಲ್ಲಿದ್ದರೆ ಮಾತ್ರ ಇದು ಸಾಧ್ಯ. ಆಡಳಿತದಲ್ಲಿ ಪ್ರತಿಭಾವಂತರಿಗೆ ಅವಕಾಶವಿರಬೇಕು. ಆಡಳಿತಕ್ಕೆ ಪ್ರಮುಖ ಅರ್ಹತೆಯಾದ ಸಾಮರ್ಥ್ಯ ಎಂಬುದು ಸಮಾಜದ ಯಾವುದೊಂದು ಸಮುದಾಯಕ್ಕೆ ಸೀಮಿತವಾದುದಲ್ಲ. ಆಡಳಿತಗಾರರನ್ನು ಸಮಾಜದ ಎಲ್ಲ ವರ್ಗಗಳಿಂದ ಸುಶಿಕ್ಷಿತ, ಕೃಷಿಕ ಎಲ್ಲ ವರ್ಗಗಳಿಗೂ ಸಮಾನವಾಗಿ ಆಯ್ಕೆ ಮಾಡಬೇಕು. ಸಚ್ಚಾರಿತ್ರ್ಯ ಹಾಗೂ ಜ್ಞಾನದ ಫಲವಾಗಿ ಬರುವಂಥದು ಸಾಮರ್ಥ್ಯ. ಸಚ್ಚಾರಿತ್ರ್ಯದ ಹಾಗೂ ಬೌದ್ದಿಕ ಶಿಕ್ಷಣವನ್ನು, ಅದನ್ನು ಅರಗಿಸಿಕೊಳ್ಳುವ ಶಕ್ತಿ ಇರುವವರಿಗೆಲ್ಲ ಮುಕ್ತವಾಗಿರಿಸಬೇಕು. ಎಲ್ಲರನ್ನೂ ಶಿಕ್ಷಣಕ್ಕೊಳಪಡಿಸಬೇಕೆಂದಿಲ್ಲ. ಆದರೆ ಕಲಿಯುವ ಸಾಮರ್ಥ್ಯ ಹಾಗೂ ಅರ್ಹತೆ ಮೂಲದಲ್ಲಿಯೇ ಇರುವವರಿಗೆಲ್ಲ ಶಿಕ್ಷಣ ಪಡೆಯಲು ಅವಕಾಶವಿರಬೇಕು. ಸರಿಯಾಗಿ ಶಿಕ್ಷಣ ಪಡೆದವರು, ತಮ್ಮ ಶಿಕ್ಷಣದ ರೀತಿಗನುಸಾರವಾಗಿ ಸರ್ಕಾರದ ಪ್ರಕಾರ್ಯಗಳನ್ನು ನಡೆಸಿದರೆ ಅವರು ತಮ್ಮ ಮೇಲ್ಪಂಕ್ತಿಯಿಂದ ತಮ್ಮ ಪ್ರಜೆಗಳಿಗೆ ಪ್ರೇರಣೆಯಾಗಬಲ್ಲರು. ಜನರಿಗೆ ಪ್ರೇರಣೆ ನೀಡಲು ಹಾಗೂ ಜನರ ಒಳಿತಿಗಾಗಿ ಆಳುವವರ ಕರ್ತವ್ಯ ಇದಾಗಿತ್ತು.

ಕನ್‌ಫ್ಯೂಶಿಯಸ್‌ನ ತರುವಾಯ ಸರಿಯಾಗಿ ೨೦೦ ವರ್ಷಗಳ ನಂತರ ಆತನ ರಾಜಕೀಯ ವಿಚಾರಧಾರೆಯನ್ನೇ ಎತ್ತಿಹಿಡಿದ ಮೆನ್‌ಷಿಯಸ್, ಚೀನಿ ವಿಚಾರಧಾರೆಯ ವಿಕಾಸಕ್ಕೆ ಕಾರಣರಾದವರಲ್ಲಿ ಪ್ರಮುಖ. ಕ್ರಾಂತಿಯ ಬಗ್ಗೆ ವೈಚಾರಿಕತೆಯನ್ನು ತುಂಬಿ ಮೆನ್‌ಷಿಯಸ್, ಕನ್‌ಪ್ಯೂಶಿಯಸ್‌ನ ವಿಚಾರಗಳಲ್ಲಿ ಸೂಚ್ಯವಾಗಿದ್ದುದನ್ನು ವಿವರಿಸಿದ. ಉತ್ತಮ ಸರ್ಕಾರ ನೀಡುವುದೇ ರಾಜನ ಆದ್ಯಕರ್ತವ್ಯ. ಅವನ ಸ್ವರೂಪ ಉತ್ತಮ ವಾಗಿರಬೇಕು. ರಾಜ ಸ್ವರ್ಗಸಂತಾನ. ತನ್ನ ಉನ್ನತ ಹುದ್ದೆಯಲ್ಲಿಯ ತನ್ನ ಕರ್ತವ್ಯಗಳ ಕುರಿತು ದೇವರಿಗೆ ಉತ್ತರಿಸಬೇಕಾದುದು ಅವನ ಹೊಣೆಯಾಗಿರುತ್ತದೆ. ಅವನ ದೋಷಪೂರ್ಣ ಆಳ್ವಿಕೆಯಿಂದಾಗಿ ಜನ ಭ್ರಷ್ಟರಾಗಿ, ತನ್ನಲ್ಲಿರಿಸಲಾದ ವಿಶ್ವಾಸಕ್ಕೆ ಅವನು ದ್ರೋಹ ಬಗೆದಂತಾಗುವುದಷ್ಟೇ ಅಲ್ಲ, ಸೃಷ್ಟಿಯ ನಿಯಮಗಳನ್ನು ಅಲಕ್ಷಿಸಿದಂತಾಗುತ್ತದೆ, ಉಲ್ಲಂಘಿಸಿದಂತಾಗುತ್ತದೆ. ಅಂಥ ದುರಾಕ್ರಮಿಯನ್ನು ಕಿತ್ತೊಗೆಯುವುದು ಹಕ್ಕು ಅಷ್ಟೇ ಅಲ್ಲ, ನೈತಿಕ ಹೊಣೆಯೂ ಆಗುತ್ತದೆ.

ಪ್ರಜೆಗಳ ಸಮ್ಮತಿಯಿಂದಾದ ಸರ್ಕಾರದ ಕುರಿತ ರಾಜಕೀಯ ಸಿದ್ಧಾಂತ ಎಂದು ಇದನ್ನು ಸ್ಥೂಲವಾಗಿ ಗುರುತಿಸಬಹುದು. ಇದು ನಿಧಾನಗತಿಯಲ್ಲಿ ಹಾಗೂ ಆತಂಕಕಾರಿ ಯಾಗಿಯೇ ಪ್ರಾರಂಭವಾಗುತ್ತದೆ. ಒಂದು ಆಳ್ವಿಕೆ ಅವಿಧೇಯತೆಗೆ ಗುರಿಯಾಗುವುದಕ್ಕೆ ಮುಂಚಿನ ಹಂತದಲ್ಲಿ ಕಟ್ಟುಪಾಡುಗಳನ್ನು ಅತಿಯಾಗಿ ಉಲ್ಲಂಘಿಸಿ, ಅದನ್ನು ಕಿತ್ತೆಸೆದರೆ ಸಾಕೆಂಬ ಮನೋಭಾವಕ್ಕೆ ಎಡೆ ದೊರಕುವ ವಿರೋಧ ಬೆಳೆಯುತ್ತದೆ. ಆದರೂ ತತ್ವ ಎಂಬುದಿದೆ. ಕನ್‌ಫ್ಯೂಶಿಯಸ್ ವಿಚಾರಧಾರೆಯ ತಿರುಳಾಗಿರುವ ಈ ವಿಚಾರಧಾರೆ, ಚೀನೀ ದೃಷ್ಟಿಕೋನದ ಮೂಲಬೇರು. ಇದು ಪ್ರಾಚೀನ ಚೀನಾದ ರಾಜನೀತಿಯ ಪ್ರಬುದ್ಧತೆಯನ್ನು ತೋರಿಸುತ್ತದೆ. ಇದು ನಿಧಾನಗತಿಯಲ್ಲೇ ಇದ್ದರೂ, ಯುರೋಪ್ ಇನ್ನೂ ರಾಜಕೀಯವಾಗಿ ಪ್ರಾರಂಭಿಕ ವೈಯಕ್ತಿಕ ಸರ್ವಾಧಿಕಾರದ ಹಿಡಿತದಲ್ಲೇ ಇದ್ದಾಗ, ಚೀನಾದಲ್ಲಿ ಈ ಪದ್ಧತಿ ಪ್ರಚಲಿತವಿತ್ತು ಎಂಬುದು ಗಮನಿಸಬೇಕಾದ ಅಂಶ.

ಕನ್‌ಫ್ಯೂಶಿಯಸ್ ವಿಚಾರಧಾರೆ ಚೀನಿ ಜನಜೀವನದ ಮೇಲೆ ಗಾಢ ಪ್ರಭಾವ ಬೀರಿದೆ. ಅದೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ತೀವ್ರವಾಗಿದೆ. ಶಿಕ್ಷಣವು ಆಳುವ ವರ್ಗದ ಪ್ರಮುಖ ಅಗತ್ಯತೆಯಾಗಿತ್ತು. ಮೇಲ್ವರ್ಗದ ಪ್ರತಿಷ್ಠೆಯ ಸಂಕೇತವಾಗಿತ್ತು. ಹಲವಾರು ಶತಕಗಳ ಕಾಲ ಶ್ರೀಮಂತವರ್ಗ ಹಾಗೂ ಆಳುವ ವರ್ಗಗಳೆರಡು ಬುದ್ದಿಜೀವಿಗಳನ್ನು ಒಳಗೊಂಡಿದ್ದವು.

ಶಿಕ್ಷಣ

ಶಿಕ್ಷಣಕ್ಕೆ ಪ್ರಾಧಾನ್ಯ ನೀಡಿರುವುದರಲ್ಲಿ ಎರಡು ಅಂಶಗಳು ಅಡಕವಾಗಿವೆ. ಮೊದಲನೆ ಯದಾಗಿ ಉದ್ಯೋಗಿಗಳ ಆಯ್ಕೆಯ ಸಮಯದಲ್ಲಿ ನಡೆಸಲಾಗುತ್ತಿದ್ದ ಪರೀಕ್ಷೆ. ಈ ಪರೀಕ್ಷಾ ಪದ್ಧತಿಯನ್ನು, ಮಂಚು ರಾಜವಂಶವನ್ನು ಕಿತ್ತೆಸೆದು ಹಳೆಯ ವ್ಯವಸ್ಥೆಯನ್ನು ಕೈಬಿಟ್ಟ ಮೇಲೆ ೧೯೧೧ರಲ್ಲಿ ತೆಗೆದುಹಾಕಲಾಯಿತು. ೨೦೦೦ ವರ್ಷಗಳ ಹಿಂದೆ ಮಾತ್ರ ಪರೀಕ್ಷೆಯಲ್ಲಿ ಪಾಸಾದ ನಂತರವೇ ಸರ್ಕಾರಿ ಕಚೇರಿಗಳಿಗೆ ಕೆಲಸಕ್ಕೆ ಸೇರಿಸಿಕೊಳ್ಳಲಾಗುತ್ತಿತ್ತು. ರಾಜವಂಶಗಳ ಪತನಕಾಲದಲ್ಲಿ, ರಾಜಕೀಯಸ್ಥಿತಿ ಅಸ್ಥಿರತೆಗೊಂಡಾಗ ಆ ಪದ್ಧತಿಯನ್ನು ತುಸು ಅತಿಕ್ರಮಿಸಿರಬಹುದೇ ಹೊರತು, ಆ ನಿಯಮವನ್ನು ಕೈಬಿಟ್ಟಿರಲಿಲ್ಲ. ಪರೀಕ್ಷೆಗಳನ್ನು ಪ್ರತಿವರ್ಷ ಸ್ಥಳೀಯವಾಗಿ ಪ್ರಾಂತೀಯವಾಗಿ ಹಾಗೂ ರಾಷ್ಟ್ರಮಟ್ಟದಲ್ಲಿ ನಡೆಸಲಾಗುತ್ತಿತ್ತು. ಅದರಲ್ಲಿ ಮೂರು ಬೌದ್ದಿಕ ಹಂತಗಳಿದ್ದವು. ಎಂದರೆ ಈಗಿನ ಪದವಿ, ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಪದವಿಗಳಿಗೆ ಅವು ಸಮನಾಗಿರುತ್ತಿದ್ದವು. ಅವು ಕನ್‌ಫ್ಯೂಶಿಯಸ್ ಪಂಥದ ಮೇಲೆ ಆಧಾರಿತವಾಗಿದ್ದು ಅದರಲ್ಲಿ ತತ್ವಜ್ಞಾನ, ನೀತಿಸಂಹಿತೆ, ಸಾಹಿತ್ಯ, ಕಲೆ ಅದರಲ್ಲೂ ವಿಶೇಷವಾಗಿ ಅಂದವಾದ ಬರವಣಿಗೆ ಕಲೆಯೂ ಸೇರಿರುತ್ತಿದ್ದವು. ಅಂದಬರಹದ ಕಲೆ ಚೀನೀಯರ ಪ್ರಕಾರ ಉತ್ಕೃಷ್ಟ ಕಲೆ. ಅವುಗಳನ್ನು ಅತ್ಯಂತ ಸಾಂಪ್ರದಾಯಿಕವಾಗಿ ನಡೆಸಲಾಗುತ್ತಿತ್ತು ಹಾಗೂ ವರ್ಷದ ಮಹತ್ವಪೂರ್ಣ ಸಮಾರಂಭ ಎಂದು ಭಾವಿಸಲಾಗಿತ್ತು. ಪರೀಕ್ಷೆಯಲ್ಲಿನ ಯಶಸ್ಸು, ಚೀನಿಯನೊಬ್ಬ ಆಸೆಪಟ್ಟು ಎದುರು ನೋಡುತ್ತಿದ್ದ ಉದ್ಯೋಗರಂಗಕ್ಕೆ ಪ್ರವೇಶ ದೊರಕಿಸಿಕೊಡುತ್ತಿತ್ತು. ಪರೀಕ್ಷೆಯಲ್ಲಿ ಪಾಸು ಮಾಡುವ ಮಗ ಕುಟುಂಬಕ್ಕೇ ಕೀರ್ತಿಕಳಶವಾಗುತ್ತಿದ್ದ. ಕ್ಷೌರಿಕರು ಹಾಗೂ ಕಲಾಕಾರರನ್ನು ಹೊರತುಪಡಿಸಿ ಸಮಾಜದ ಎಲ್ಲ ವರ್ಗದ ಜನರು ಶಿಕ್ಷಣ ಪಡೆಯಬಹುದಿತ್ತು. ಬಡವರು ತಮ್ಮ ಮಕ್ಕಳಿಗೆ ಉಪಾಧ್ಯಾಯರನ್ನು ಗೊತ್ತು ಮಾಡುವ ಆರ್ಥಿಕ ಸಾಮರ್ಥ್ಯ ಹೊಂದಿರ ದಿದ್ದುದರಿಂದ ಶಿಕ್ಷಣ ಪಡೆಯುವಲ್ಲಿ ಬಡತನ ಅವರಿಗೆ ಅಡ್ಡಿಯಾಗುತ್ತಿತ್ತು. ಆದರೂ ಸಮಾನತೆಯ ತತ್ವವು ಚೀನಿ ಸಮಾಜದಲ್ಲಿ ಗೋಚರಿಸುತ್ತಿತ್ತು.

ಪರೀಕ್ಷಾ ಪದ್ಧತಿ ರಾಜಕೀಯರಂಗದ ಬೀಗದಕೈಯಂತಾಯಿತು. ಹೀಗೆ ಶಿಕ್ಷಣ ಪಾಂಡಿತ್ಯದ ಸ್ವತ್ತಾಗಿ ಚೀನಾದಲ್ಲಿ ಹೊಸ ವಿಚಾರಗಳಿಗೆ ಹಾದಿ ಇಲ್ಲದಂತಾಯಿತು. ಕೊನೆಯಲ್ಲಿ ಶುಷ್ಕ ಪ್ರೌಢಿಮೆ ಮಾತ್ರ ಉಳಿಯಿತು. ಚೀನಾ ಹಲವು ಶತಮಾನಗಳ ಕಾಲ ಕಲೆ-ವಿಜ್ಞಾನಗಳ ಕುರಿತ ಹೊಸ ವಿಚಾರಗಳು, ಹೊಸ ಅಭಿವ್ಯಕ್ತಿಗಳು, ಮಹತ್ವದ ಅಭಿವೃದ್ದಿಗಳಿಲ್ಲದೇ ಬಡವಾಯಿತು; ಬೌದ್ದಿಕ ಸ್ಥಗಿತತೆ ಕಂಡುಬಂತು.

ಶಿಕ್ಷಣಕ್ಕೆ ನೀಡಿದ ಪ್ರಾಮುಖ್ಯದಿಂದಾಗಿ ಚೀನಾದಲ್ಲಿ ಕಂಡುಬಂದ ಎರಡನೆಯ ಪರಿಣಾಮವೆಂದರೆ ಚೀನಿ ಸಂಪ್ರದಾಯದ ಸಂರಕ್ಷಣೆ ಹಾಗೂ ಪೀಳಿಗೆಯಿಂದ ಪೀಳಿಗೆ ಅದನ್ನು ಉಳಿಸಿಕೊಂಡು ಬಂದದ್ದು. ಈ ಸ್ವದೇಶಿ ಗುಣವೇ ಚೀನೀಯರನ್ನು ಇತರರಿಗಿಂತ ವಿಭಿನ್ನಗೊಳಿಸುತ್ತದೆ. ಕನ್‌ಫ್ಯೂಶಿಯಸ್ ವಿಚಾರಧಾರೆಯ ಒಂದು ತಂಡದ ಪ್ರಧಾನದಿಂದಾಗಿ ಜನತೆ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡು ಸಾಮಾಜಿಕ ಸ್ತರದಲ್ಲಿ ಮೇಲ್ಮಟ್ಟಕ್ಕೇರಲು ಬಯಸುವಂತಾಯಿತು. ಅದನ್ನು ನೆಯರವಾಗಿ ಪಡೆಯಲಾಗದವರು, ಅದರ ಗಾಢ ಪ್ರಭಾವ ಕ್ಕೊಳಗಾದರು. ಇದು ಕೇವಲ ಜ್ಞಾನದ ಹಾದಿ ಮಾತ್ರವಾಗಿರದೇ ನೈತಿಕ ಮಲ್ಯಗಳು ಹಾಗೂ ಸೌಜನ್ಯದ ಲಕ್ಷಣಗಳನ್ನು ಹೊಂದಿದ್ದುದರಿಂದ ಜನತೆ ಇದನ್ನನುಸರಿಸಲು ಹಾತೊರೆಯುವಂತಾಯಿತು. ರೈತ ಮಗನಿಗೆ ಓದುವುದನ್ನು ಹೇಳಿಕೊಡಲು ಸಾಧ್ಯವಿರಲಿಲ್ಲವಾದರೂ ಜನರೊಂದಿಗೆ ವರ್ತಿಸಬೇಕಾದ ರೀತಿಯನ್ನು ತಿಳಿಸಿಕೊಡುತ್ತಿದ್ದ.

ಚೀನಿ ಭಾಷೆಯ ಬಗೆಗೆ ಇಲ್ಲಿ ತುಸುವಾದರೂ ಹೇಳಲೇಬೇಕು. ಏಕೆಂದರೆ ಅದರ ಬಗೆಗೆ ತುಂಬಾ ತಪ್ಪು ಗ್ರಹಿಕೆ ಇದೆ. ಚೀನಾದ ಪ್ರತಿಯೊಂದು ಜಿಲ್ಲೆಯಲ್ಲಿ ಬೇರೆ ಬೇರೆ ಭಾಷೆ ಇದೆ. ಒಂದು ಭಾಗದ ಚೀನಿಯನಾಡಿದ್ದು ಇನ್ನೊಂದು ಭಾಗದವನಿಗೆ ಅರ್ಥ ವಾಗುವುದಿಲ್ಲ ಎಂಬ ತಪ್ಪು ಕಲ್ಪನೆ ಇದೆ. ವಾಸ್ತವವಾಗಿ ಮುಕ್ಕಾಲುಪಾಲು ಚೀನಿಯರಾಡುವ ಭಾಷೆ ಒಂದೇ. ಅದು ಮಾಂಡರಿನ್; ಹಳೆಯ ರಾಜಸ್ಥಾನದ ಭಾಷೆ. ಇಂಗ್ಲಿಷನ್ನು ಹೊರತುಪಡಿಸಿದರೆ ಮಾಂಡರಿನ್ ಬಹುಜನರ ಭಾಷೆ. ಮಾಂಡರಿನ್ ಅಲ್ಲದೇ ಕಾಂಟೊನೀಸ್ ಭಾಷೆ ವಾನ್‌ಟಂಗ್ ನಿವಾಸಿಗಳ ಆಡುಭಾಷೆ; ಫ್ಯೂಕಿನ್‌ನ ಜನರಾಡುವ ಭಾಷೆ ಫ್ಯುಕಿನೀಜ್, ಶಾಂಘಾಯ್‌ನ ಜನರ ಭಾಷೆ ಶಾಂಘಾಯ್. ಇವೆಲ್ಲ ಕರಾವಳಿ ಪ್ರದೇಶಗಳಾದುದರಿಂದ, ಆ ಪ್ರದೇಶಕ್ಕೆ ಬಂದ ವಿದೇಶಿಯರು, ಇಡೀ ದೇಶದಲ್ಲೆಲ್ಲ ಬೇರೆ ಭಾಷೆಯನ್ನೇ ಆಡುತ್ತಾರೆ ಎಂದು ಭಾವಿಸಿದರು. ಹೀಗಾಗಿ ನೂರುಮೈಲಿ ಅಂತರದ ಊರುಗಳಲ್ಲಿ ಹುಟ್ಟಿದ ಚೀನಿಯರಿಗೆ ಪರಸ್ಪರರ ಭಾಷೆ ಅರ್ಥವಾಗುವುದಿಲ್ಲ ಎಂಬ ಪ್ರತೀತಿ ಇತ್ತು. ಪ್ರಾದೇಶಿಕವಾಗಿ, ಗ್ರಾಮಾಂತರ ಭಾಗಗಳಲ್ಲಿ ಉಪಭಾಷಾಭೇದ ಇರಬಹುದಾದರೂ ಭಾಷಾ ಸಮೂಹದಲ್ಲಿ ಅಂಥ ವ್ಯತ್ಯಾಸ ಕಂಡುಬಾರದು.

ಆಡುಭಾಷೆಯ ವಿಷಯ ಏನೇ ಇರಲಿ, ಶಿಷ್ಟ ಸಾಹಿತ್ಯ ನಿರ್ಮಾಣವಾದ ಗ್ರಾಂಥಿಕ ಭಾಷೆಯಂತೂ ದೇಶಾದ್ಯಂತ ಒಂದೇ ಆಗಿದೆ. ಹೀಗಾಗಿ ದೇಶದ ಯಾವ ಭಾಗದಲ್ಲಿ ನೆಲೆಸಿದವನಾದರೂ ಸುಶಿಕ್ಷಿತ ಚೀನಿಯನೊಬ್ಬನಿಗೆ ಚೀನಿ ವಿಚಾರಗಳನ್ನು ಅರಿಯಲು ಯಾವುದೇ ಅಡ್ಡಿಯೂ ಇಲ್ಲ. ಆದರೂ ಚೀನಿ ಭಾಷೆ ಒಂದೇ. ಚೀನಾವನ್ನು ರೂಪಿಸುವಲ್ಲಿ ತಾವೋ ಮತ್ತು ಬೌದ್ಧಪಂಥಗಳ ಪ್ರಭಾವ ಹಿರಿದು. ಲಾವೋತ್ಸೆ  ಕನ್‌ಫ್ಯೂಶಿಯಸ್‌ನ ಸಮಕಾಲೀನನಾಗಿದ್ದು ತಾವೋ ಪಂಥವನ್ನು ಹುಟ್ಟುಹಾಕಿದ. ಇದು ಅತ್ಯಂತ ಸೂಕ್ಷ್ಮವಾದ ಆಧ್ಯಾತ್ಮಿಕ ತತ್ವವಾಗಿದ್ದು, ಸುಲಭ ಗ್ರಾಹ್ಯವಲ್ಲದಿರುವುದರಿಂದ ವಿವಾದಾತ್ಮಕ ಅರ್ಥವಿವರಣೆಗಳಿಗೆ ದಾರಿ ಮಾಡಿಕೊಡುತ್ತದೆ. ಇದರ ಮುಖ್ಯ ಸಿದ್ಧಾಂತ ಅನಾಸಕ್ತಿ. ತಾವೋ ಎಂದರೆ ದಾರಿ. ಅದನ್ನು ಅನುಸರಿಸುವ ಬದಲು ಅದು ಕೊಂಡೊಯ್ದತ್ತ ಹೋಗುವವನಿಗೆ ಜೀವನ ಆನಂದದಾಯಕ. ತಾತ್ವಿಕವಾಗಿ ಹೇಳುವುದಾದರೆ ಇದು ನಿಷ್ಕರ್ಮತತ್ವ ಆಧಾರಿತ. ರೂಢಿಯಲ್ಲಿ ಅಶಿಕ್ಷಿತರಿಗೆ ಇದು ಮೂಢನಂಬಿಕೆಗಳ ಮಾಂತ್ರಿಕತೆಯ ಸ್ವರೂಪದ್ದಾಗಿ ತೋರಿದೆ. ತತ್ವಜ್ಞಾನದಲ್ಲಿ ಆಸಕ್ತಿ ಇರುವವರಿಗೆ ಇದು ಹಿಡಿಸುವುದಾದರೂ ಅವರ ಸಂಖ್ಯೆ ಕಡಿಮೆ. ವಿಚಾರವಾದಿಗಳಿರುವರಾದರೂ ಅವರ ಮೇಲೆ ಇದರ ಪ್ರಭಾವ ಸ್ವಲ್ಪ.

ಕ್ರಿಸ್ತಶಕೆಯ ಪ್ರಾರಂಭವಾದ ಕೂಡಲೇ ಬೌದ್ಧಧರ್ಮವು ಭಾರತದಿಂದ ಚೀನಾದತ್ತ ಪ್ರಯಾಣ ಬೆಳೆಸಿದ್ದರೂ, ಕೆಲವು ಶತಮಾನಗಳವರೆಗೂ ಅಲ್ಲಿ ನೆಲೆಯೂರುವುದು ಅದಕ್ಕೆ ಸಾಧ್ಯವಾಗಲಿಲ್ಲ. ಕನ್‌ಫ್ಯೂಷಿಯಸ್ ಧರ್ಮವು ಲೌಕಿಕತೆ, ವೈಚಾರಿಕತೆ, ಮಾನವೀಯತೆಯ ತತ್ವಗಳನ್ನು ಹೊಂದಿದ್ದರೂ ಲೌಕಿಕ ಜಗತ್ತಿನ ವಸ್ತುಗಳು ಹಾಗೂ ಜೀವನದ ವಿಷಯ ಗಳನ್ನು ಕುರಿತು ವಿವೇಚಿಸಲಾಗುತ್ತಿತ್ತು. ಮನುಷ್ಯ ಮನುಷ್ಯರ ನಡುವಣ ಸಂಬಂಧಗಳು, ಲೌಖಿಕ ಜೀವನದ ವ್ಯವಹಾರಗಳ ಕುರಿತು ವಿಮರ್ಶಿಸಲಾಗುತ್ತಿತ್ತು. ಆದರೆ ಬೌದ್ಧ ಧರ್ಮದಲ್ಲಿ ಜೀವನ ನಿರಂತರ ವ್ಯವಸ್ಥೆಯ ಒಂದು ಸಣ್ಣ ತುಣುಕಾಗಿದ್ದು, ಕಾಲದಲ್ಲಿಯ ಒಂದು ಕ್ಷಣ ಎಂದು ಪರಿಗಣಿಸಲಾಗುತ್ತಿತ್ತು. ಆಳವಾಗಿ ಅಧ್ಯಯನ ಮಾಡಿದಾಗಲೂ ಕೂಡ ಇದನ್ನು ತಾವೋ ಪಂಥದೊಂದಿಗೆ ಹೋಲಿಸಲಾಗದು. ಇದು ಪ್ರಾಪಂಚಿಕತೆ ಹಾಗೂ ಜೀವನವನ್ನು ಪೂರ್ತಿಯಾಗಿ ನಿರಾಕರಿಸುವಂತಹುದು.

ಸಮಾಜ ಮತ್ತು ಆರ್ಥಿಕತೆ

ಇಂತಹ ಸಂಪ್ರದಾಯಗಳ ಮಧ್ಯೆ ಚೀನಿಯರ ಜೀವನ ಹೇಗೆ ರೂಪಗೊಂಡಿತು? ಯಾವ ಸಂಸ್ಥೆಗಳ ಮೂಲಕ ಕಾರ್ಯ ನಿರ್ವಹಿಸುತ್ತಿತ್ತು? ಆದರೆ ಉದ್ಯಮರಹಿತ ಸಮಾಜದ ಎಲ್ಲ ಲಕ್ಷಣಗಳನ್ನು ಇದು ಹೊಂದಿತ್ತು ಎಂದು ಮಾತ್ರ ಹೇಳಬಹುದು. ಇನ್ನೊಂದು ವಿಧದಲ್ಲಿ ಹೇಳುವುದಾದರೆ ಅಲ್ಲಿ ಸಮನ್ವಯತೆಯಾಗಲಿ ಪರಿಣಾಮಕಾರಿಯಾದ ಕೇಂದ್ರೀಕರಣವಾಗಲೀ ಇರಲಿಲ್ಲ. ಚಿಕ್ಕ ವ್ಯಾಪಾರಿ ಪಟ್ಟಣಗಳು ಹಾಗೂ ಕೃಷಿಕ ಗ್ರಾಮಗಳು, ಉದ್ಯೋಗಿಗಳು, ವ್ಯಾಪಾರಿಗಳು, ಕುಶಲಕರ್ಮಿಗಳು, ಕೃಷಿಕರಿಂದ ಕೂಡಿದ ಈ ನಾಡಿನ ಸಮನ್ವಯತೆಯಾಗಲಿ ಕೇಂದ್ರೀಕರಣವಾಗಲಿ ಬೇಕಾಗಿರಲಿಲ್ಲ.

ಇತ್ತೀಚಿನವರೆಗೂ ಚೀನಾವನ್ನು ಚಿಕ್ಕ ಚಿಕ್ಕ ಭಾಗಗಳ ಒಕ್ಕೂಟವೆಂದು, ಒಂದಕ್ಕೊಂದು ಹೊಂದಿಕೊಂಡಂತಿದ್ದರೂ ಶಿಥಿಲತೆಯ ಮಧ್ಯೆಯೇ ಹೊಂದಿಕೊಂಡ ಘಟಕಗಳ ನಾಡು ಎಂದು ಹೇಳಲಾಗುತ್ತಿತ್ತು. ಪ್ರತಿಯೊಂದು ಘಟಕವನ್ನು ಒಂದೊಂದು ಮಾರುಕಟ್ಟೆ ಊರು ಎಂದು ಗುರುತಿಸಲಾಗುತ್ತಿತ್ತು. ಸುತ್ತಮುತ್ತಲಿನ ಗ್ರಾಮಗಳಿಂದ ಆಹಾರ ಧಾನ್ಯಗಳನ್ನು ಮಾರುವಂತಹ ಪದ್ಧತಿ ಜರಿಯಲ್ಲಿತ್ತು. ಉಳಿದೆಲ್ಲ ವಿಷಯಗಳಲ್ಲಿ ಪ್ರತಿಯೊಂದು ಘಟಕವು ಸ್ವಾವಲಂಬಿಯೇ ಆಗಿತ್ತು. ಆಯಾ ಊರಿನಲ್ಲಿ ಉತ್ಪಾದಿಸುತ್ತಿದ್ದುದನ್ನು ಅಲ್ಲಿಯೇ ಬಳಸುತ್ತಿದ್ದರು. ಎಂದರೆ ಆಯಾ ಪ್ರದೇಶದ ಜನರಿಗೆ ಬೇಕಾಗುತ್ತಿದ್ದುದನ್ನು ಅಲ್ಲಲ್ಲಿಯೇ ಉತ್ಪಾದಿಸಲಾಗುತ್ತಿತ್ತು.

ಈ ರೀತಿಯ ಸಂಘಟಿತ ಸಮಾಜಕ್ಕೆ ಅದರದೇ ಆದ ಲಾಭಗಳೂ ಇವೆ, ಹಾನಿಗಳೂ ಇವೆ. ಒಂದು ವಿಭಾಗದ ಸಹಾಯ ದೊರಕದಿದ್ದರೆ ತಲೆಯ ಮೇಲೆ ಕೈ ಹೊತ್ತು ಕೊಡುವ ಪರಿಸ್ಥಿತಿ ಒದಗುವುದಿಲ್ಲ. ಉದಾಹರಣೆಗೆ ಚೀನಾ ದಾಳಿಗಳಿಗೆ ಗುರಿಯಾದಾಗ, ಒಂದು ಪ್ರಾಂತ್ಯದ ಮೇಲೆ ದಾಳಿಯಾಗಿ ಅದು ನಾಶ ಹೊಂದಿದರೂ ಅದರ ಪರಿಣಾಮ ಯಾವುದೇ ವಿಧದಲ್ಲೂ ಇನ್ನೊಂದು ಪ್ರಾಂತ್ಯದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಆಧುನಿಕ ಯುರೋಪ್ ಅಥವಾ ಅಮೆರಿಕಾದಲ್ಲಿ ರಾಜಧಾನಿ ಮತ್ತು ಕೆಲವು ಕೈಗಾರಿಕಾ ನಗರಗಳು ಅಥವಾ ಸಾಗಣೆ ಕೇಂದ್ರಗಳು ನಾಶವಾದರೆ ಇಡೀ ದೇಶ ಅಸ್ತವ್ಯಸ್ತಗೊಳ್ಳುತ್ತಿತ್ತು. ಇನ್ನೊಂದು ವಿಧದಲ್ಲಿ ವಿಕೇಂದ್ರೀಕೃತ ವ್ಯವಸ್ಥೆಯ ಸಮಾಜದಲ್ಲಿ ಪ್ರತಿಯೊಂದು ಪ್ರದೇಶವು ತನ್ನ ಸ್ವಂತದ ಸಂಪನ್ಮೂಲಗಳ ಮಿತಿಯಲ್ಲೇ ಬದುಕುತ್ತಿತ್ತು. ಒಂದು ಪ್ರದೇಶ ಬರಗಾಲ ಪೀಡಿತವಾಗಿ ಜನ ತೊಂದರೆಗೆ ಒಳಗಾದರೆ, ಇನ್ನೊಂದು ಪ್ರದೇಶದಲ್ಲಿ ಸಮೃದ್ದಿ ಸೂರೆಯಾಗುತ್ತಿತ್ತು. ಸರಕು ಸಾಗಣೆ ಸೌಲಭ್ಯದ ಕಾರಣದಿಂದಾಗಿ ಸಮೃದ್ದಿಯಿರುವ ನೆರೆಯ ನಾಡಿನಿಂದ ಬರಗಾಲ ಪೀಡಿತ ಪ್ರದೇಶಕ್ಕೆ ಹೆಚ್ಚಾಗಿ ಇರುವ ಸರಕುಗಳನ್ನು ಸಾಗಿಸಬಹುದು. ಚೀನಾದಲ್ಲಿ ಆಗೀಗ ಸಂಭವಿಸುವ ಬರಗಾಲಗಳ ಸಂದರ್ಭದಲ್ಲಿ ಈ ಅಂಶಗಳು ಅನುಭವಕ್ಕೆ ಬಂದಿವೆ. ಆಂತರಿಕ ಅಥವಾ ಹೊರಗಿನ ಶತ್ರುಗಳ ದಾಳಿ, ನೈಸರ್ಗಿಕ ಪ್ರಕೋಪಗಳು ಅಥವಾ ನೈಸರ್ಗಿಕ ಸಂಪನ್ಮೂಲಗಳ ಅಸಮತೋಲನ ಇವುಗಳಿಗೆ ದೇಶದ ಸಮಷ್ಟಿ ಶಕ್ತಿಯನ್ನು ಒಗ್ಗೂಡಿಸಲಾಗುವುದು. ಒಟ್ಟಿನಲ್ಲಿ ಹೇಳುವುದಾದರೆ ಉದ್ಯಮಶೀಲ ನಾಡಾಗಿ ಸಂಘಟಿತವಾಗದ ಒಂದು ದೇಶ ಸಮಾನ ಪರಂಪರೆ ಮತ್ತು ಸಮಾನ ನಂಬಿಕೆಗಳನ್ನು ಹೊಂದಿದ ನಾಡು ಎಂದು ಗುರುತಿಸಿದುದರ ಹೊರತಾಗಿ ಏಕತೆಯುಳ್ಳ ನಾಡು ಎಂದು ಕರೆಯಲಾಗದು. ನವೀನ ಅರ್ಥದಲ್ಲಿ ಅದನ್ನು ರಾಷ್ಟ್ರ ಎಂದು ಕರೆಯಲಾಗದು.