ಎಡಪಂಥೀಯ ಸಾಹಿತ್ಯ ಮತ್ತು ಕಲೆ

ಚೀನಾದ ನವ ಕ್ರಾಂತಿಕಾರಿ ಸಾಹಿತ್ಯ ಮತ್ತು ಕಲೆಯು ಕ್ರಾಂತಿಕಾರಿ ಸ್ಫೂರ್ತಿಯನ್ನು ಚೀನಾದಾದ್ಯಂತ ಪಸರಿಸುವಲ್ಲಿ ಮಹತ್ತದ ಪಾತ್ರ ವಹಿಸಿತು. ಮಾವೋ, ಬಾ ಜಿನ್, ಲೂ ಜುನ್ ಮತ್ತು ಲಾವೋ ಶೆ ಮುಂತಾದ ಖ್ಯಾತ ಬರಹಗಾರರ ಮುಂದಾಳತ್ವ ದಲ್ಲಿ ಚೀನಾದ ಎಡಪಂಥೀ ಬರಹಗಾರರ ಕೂಟವೊಂದನ್ನು ರಚಿಸಲಾಯಿತು. ತಮ್ಮ ಸಮಾಜದ ನಿಜ ಜೀವನದೊಂದಿಗೆ ಸಂಬಂಧಗಳನ್ನಿಟ್ಟುಕೊಲ್ಳದೆ ‘‘ಬಾಯಮಾತಿನ ಸಮಾಜವಾದಿಗಳಾದಲ್ಲಿ’’ ಬರಹಗಾರರು ‘ಗೊಡ್ಡು ಸಾಹಿತಿ’ಗಳಾಗಿ ಬಿಡುತ್ತಾರೆಂದು ಬರಹಗಾರರ ಕೂಟದ ನಾಯಕರಾದ ಲೂ ಜೂನ್ ಅವರು ಯುವ ಬರಹಗಾರರನ್ನು ಸದಾ ಎಚ್ಚರಿಸುತ್ತಿದ್ದರು. ಈ ಬರಹಗಾರರು ಸಾವಿರಾರು ವರ್ಷಗಳಿಂದ ಚೀನಿ ಸಮಾಜದಲ್ಲಿ ಮೈಗೂಡಿ ಬಂದಿದ್ದ ಪಾಳೇಗಾರಿ ಸಮಾಜದ ಕ್ರೌರ್ಯ ಮತ್ತು ಬರ್ಬರತೆಗಳನ್ನು ತಮ್ಮ ಸಾಹಿತ್ಯದಲ್ಲಿ ಚಿತ್ರಿಸಿ ಹಳೆಯ ಮಲ್ಯಗಳ ವಿರುದ್ಧ ಸಮರ ಸಾರಿದರು. ಸಮಕಾಲೀನ ಚಿತ್ರವನ್ನು ಎತ್ತಿಹಿಡಿದು ದುಡಿಯುವ ವರ್ಗದ ಆಶೋತ್ತರಗಳನ್ನು ಸಾಹಿತ್ಯ ಮತ್ತು ಕಲೆಯು ಪ್ರತಿನಿಧಿಸಬೇಕೆಂಬ ಸಮತಾವಾದದ ಪರಿಕಲ್ಪನೆಯ ತಳಪಾಯದ ಮೇಲೆ ಸಾಹಿತ್ಯ ರಚನೆ ಮಾಡಿದರು. ಈ ಕೂಟವು ದೇಶ ವಿದೇಶದ ಕ್ರಾಂತಿಕಾರಿ ಮತ್ತು ಪ್ರಗತಿಪರ ಸಾಹಿತ್ಯವನ್ನು ಅಭ್ಯಸಿಸುತ್ತಾ ಯುವಬರಹಗಾರರನ್ನು ಅದರಲ್ಲೂ ವಿಶೇಷವಾಗಿ ರೈತಾಪಿ ಮತ್ತು ಕಾರ್ಮಿಕ ಸ್ತರದಿಂದ ಬಂದವರನ್ನು ಉತ್ತೇಜಿಸುತ್ತಾ ಪುಸ್ತಕ ಮತ್ತು ಪತ್ರಿಕೆಗಳನ್ನು ಹೊರತಂದಿತು. ಶತಮಾನಗಳಿಂದ ಮುಚ್ಚಿಟ್ಟಿದ್ದ ದುಡಿಯುವ ಜನತೆಯ ಸಂಕಷ್ಟ ಮತ್ತು ಬೇಗುದಿಗಳನ್ನು ಚಿತ್ರಿಸುವ ಮೂಲಕ ಸಾಹಿತ್ಯ ಮತ್ತು ಕಲೆಯನ್ನು ಒಂದು ಪರಿಣಾಮಕಾರಿ ಕ್ರಾಂತಿಕಾರಿ ಸಾಧನವನ್ನಾಗಿ ಬಳಿಸಿಕೊಳ್ಳುವಲ್ಲಿ ಈ ಬರಹಗಾರರು ಯಶಸ್ವಿಯಾದರು.

ಲಾಂಗ್ ಮಾರ್ಚ್ (ದೀರ್ಘ ನಡಿಗೆ)

ಮಾವೋ ಅವರು ಮುಂದಿರಿಸಿದ್ದ ಚೀನಾ ಕ್ರಾಂತಿಯ ಮತ್ತು ಚೀನಾದ ಕ್ರಾಂತಿಕಾರಿ ಯುದ್ಧದ ಕುರಿತಾದ ಸರಿಯಾದ ಮಾರ್ಗದರ್ಶಿ ನೀತಿಯನ್ನು ಕಮ್ಯುನಿಸ್ಟ್ ಪಕ್ಷದ ದುಸ್ಸಾಹಸವಾದಿ ನಾಯಕ ವಾಂಗ್ ಮಿಂಗ್ ಅವರು ಕಡೆಗಣಿಸಿದರು. ತನ್ನ ಶಕ್ತಿಯನ್ನು ತಪ್ಪಾಗಿ ಅಂದಾಜು ಮಾಡಿದ ಕೆಂಪು ಸೇನೆಯು ಶತ್ರು ಸೇನೆಯ ಮೇಲೆ ಏಕಾ ಏಕಿ ದಾಳೀ ನಡೆಸಲು ಯತ್ನಿಸಿ, ಅತ್ಯಂತ ಕಷ್ಟಕರವಾದ ವಾತಾವರಣದಲ್ಲಿ ಗೆರಿಲ್ಲಾ ಯುದ್ದ ಕಾರ್ಯಾಚರಣೆಯನ್ನು ನಡೆಸಿದ ಪರಿಣಾಮ, ಕೆಂಪು ಸೇನೆ ಮತ್ತು ಕೌಮಿಂಟಾಂಗ್ ನೆಲೆಗಳಲ್ಲಿ ಕ್ರಾಂತಿಕಾರಿ ಶಕ್ತಿಗಳು ಅತಿದೊಡ್ಡ ನಷ್ಟವನ್ನನುಭವಿಸಿದವು. ೩,೦೦,೦೦೦ದಷ್ಟಿದ್ದ ಕೆಂಪುಸೇನೆಯು ದಿಢೀರನೆ ಕೇವಲ ೩೦,೦೦೦ಕ್ಕಿಳಿಯಿತು ಮತ್ತು ೩,೦೦,೦೦೦ರಷ್ಟಿದ್ದ ಕಮ್ಯುನಿಸ್ಟ್ ಪಕ್ಷದ ಸದಸ್ಯರ ಸಂಖ್ಯೆಯು ಬೆಚ್ಚಿಬೀಳುವಂತೆ ಕೇವಲ ೪೦,೦೦೦ಕ್ಕಿಳಿಯಿತು. ಇದರಿಂದಾಗಿ ಚೀನಿ ಕಮ್ಯುನಿಸ್ಟ್ ಪಕ್ಷವು ಇನ್ನಿಲ್ಲದಂತೆ ನೆಲ ಕಚ್ಚುವಂತಾಯಿತು.

ವಾಂಗ್ ಮಿಂಗ್‌ರ ದುಷ್ಟನೀತಿಯ ಅಪಾಯವನ್ನು ಗಂಭೀರವಾಗಿ ಗಮನಿಸಿದ ಕಮ್ಯುನಿಸ್ಟ್ ಪಕ್ಷ ಅವರನ್ನು ನಾಯಕತ್ವದಿಂದ ಕಿತ್ತೊಗೆದು ತನ್ನ ಇಡೀ ಸೇನೆಯನ್ನು ದೇಶದ ಉದ್ದಗಲಕ್ಕೂ ಸಂಚರಿಸಿ ಶತ್ರು ಸೇನೆಯ ಜಂಘಾಬಲವನ್ನು ಉಡುಗಿಸಲು ಲಾಂಗ್ ಮಾರ್ಚ್(ದೀರ್ಘ ನಡಿಗೆ)ಯನ್ನು ಕೈಗೊಂಡಿತು. ಅವರ ಸ್ಥಾನದಲ್ಲಿ ಮಾವೋ ಜೆಡಾಂಗ್ ಅವರನ್ನು ನೇಮಿಸಿದ್ದರಿಂದ ಪಕ್ಷ ಮತ್ತು ಕೆಂಪು ಸೇನೆಗಳು ಅಪಾಯಕಾರಿ ಸ್ಥಿತಿಯಿಂದ ಪಾರಾಗಿ ಬಂದವು. ಚೀನಾದ ಕಮ್ಯುನಿಸ್ಟ್ ಪಕ್ಷದ ಇತಿಹಾಸದಲ್ಲಿ ಇದೊಂದು ಅತ್ಯಂತ ನಿರ್ಣಾಯಕ ತಿರುವಿನ ಘಟ್ಟವೆಂದೇ ಪರಿಗಣಿಸಲ್ಪಟ್ಟಿದೆ. ಬೆಟ್ಟ ಗುಡ್ಡಗಳು, ನದಿ ಕಾಲುವೆಗಳು ಮತ್ತು ತುಂಬಾ ಪ್ರಯಾಸಕರವಾದ ಮತ್ತು ಅಪಾಯಕಾರಿಯಾದ ಹಾದಿಗಳನ್ನು ಸವೆಸಿ ಸುಮಾರು ೮,೦೦೦ ಮೈಲುಗಳನ್ನು ಕ್ರಮಿಸಿದ ಕೆಂಪು ಸೇನೆಯು ಅಂತಿಮವಾಗಿ ಶತ್ರುಗಳ ಮುತ್ತಿಗೆ ಮತ್ತು ಆಕ್ರಮಣವನ್ನು ದಿಕ್ಕೆಡಿಸಿ ಪುಡಿಗಟ್ಟಿದ ನಂತರ ಉತ್ತರ ಶಾಂಕ್ಸಿಯನ್ನು ತಲುಪಿದವು.

ಮೈನವಿರೇಳಿಸುವ ಸಾಹಸ ಕಾರ್ಯಗಳು, ಅಸಾಧಾರಣವಾದ ವ್ಯೂಹ ಮತ್ತು ತಂತ್ರಗಳು, ಮಾನವ ಚರಿತ್ರೆಯಲ್ಲೇ ಕೇಳರಿಯದಂತಹ ನಡೆಗಳು ಮತ್ತು ದಿಗ್ಭ್ರಮೆ ಮೂಡಿಸುವ ಚಾಕಚಕ್ಯತೆಗಳನ್ನು ಪ್ರದರ್ಶಿಸಿದ ಕೆಂಪು ಸೇನೆಯ ಪ್ರಧಾನ ಮೂರು ದೊಡ್ಡ ತುಕಡಿಗಳು ವಿಸ್ಮಯಗೊಳಿಸುವಂತಹ ಕಾರ್ಯಚರಣೆಯನ್ನು ಪೂರ್ಣಗೊಳಿಸಿದವು. ಇದೇ ಸಮಯದಲ್ಲಿ ಮಾವೋ ಜೆಡಾಂಗ್ ಅವರ ಅಧ್ಯಕ್ಷತೆಯಲ್ಲಿ ಕೇಂದ್ರೀಯ ಕ್ರಾಂತಿಕಾರಿ ಮಿಲಿಟರಿ ಆಯೋಗವನ್ನು ರಚಿಸಲಾಯಿತು.

ಕೆಂಪು ಸೇನೆಯು ಕಾಲಡಿಯಿಟ್ಟಲ್ಲೆಲ್ಲ ಭೂಮಿಯನ್ನು ಪುನರ್ ಹಂಚಿಕೆ ಮಾಡಿತು, ತೆರಿಗೆಗಳನ್ನು ಕಡಿಮೆ ಮಾಡಲಾಯಿತು. ಸಾಮೂಹಿಕ ಸಂಸ್ಥೆಗಳನ್ನು ಬೃಹತ್ ಮಟ್ಟದಲ್ಲಿ ಸ್ಥಾಪಿಸಲಾಯಿತು. ೧೯೩೩ರಲ್ಲೇ ಸುಮರು ೧,೦೦೦ಕ್ಕಿಂತಲೂ ಹೆಚ್ಚು ಕ್ರಾಂತಿಕರಿ ಸಹಕಾರಿ ಮಂಡಳಿಗಳು ಕಿಯಾಂಗ್ಸಿ ಪ್ರಾಂತ್ಯವೊಂದರಲ್ಲೇ ಇದ್ದವು. ನಿರುದ್ಯೋಗ, ಆಫೀಮು, ವೇಶ್ಯಾವಾಟಿಕೆ, ಮಕ್ಕಳ ಗುಲಾಮತನ ಮತ್ತು ಕಡ್ಡಾಯ ಮದುವೆಯಂತಹ ಪಿಡುಗುಗಳನ್ನು ನಿರ್ಮೂಲನೆ ಮಾಡಲಾಯಿತು. ಶಾಂತಿಯುತ ಪ್ರದೇಶಗಳಲ್ಲಿನ ಕಾರ್ಮಿಕರು ಮತ್ತು ಬಡ ರೈತಾಪಿಯ ಜೀವನ ಗುಣಮಟ್ಟವು ಅಗಾಧ ಮಟ್ಟದ ಶಿಕ್ಷಣ ಪಡೆಯುವುದರೊಂದಿಗೆ ಮಹತ್ತರ ರೀತಿಯಲ್ಲಿ ಅಭಿವೃದ್ದಿ ಕಂಡಿತು.

‘ಕ್ರಾಂತಿಯೆಂದರೆ ಅದೇನೂ ಟೀ ಪಾರ್ಟಿಯಲ್ಲ’ ಎಂದು ಮಾವೋ ಹೇಳುತ್ತಿದ್ದರು. ಕ್ರಾಂತಿಗೂ ಮುನ್ನ ಸಾಮಾನ್ಯ ಜನತೆಯ ಮೇಲೆ ಹಿಂಸಾತ್ಮಕ ಮತ್ತು ಮಾರಣಾಂತಿಕ ವಿಧಾನಗಳನ್ನು ಅನುಸರಿಸುತ್ತಿದ್ದ ಭೂಮಾಲೀಕರು ಮತ್ತು ಇತರೆ ವರ್ಗ ಶತ್ರುಗಳು ಕ್ರಾಂತಿಯ ನಂತರದಲ್ಲಿ ಸರಿದಾರಿಗೆ ಬಾರದಿದ್ದಾಗ ಕೆಂಪು ಸೇನೆಯು ಅವರನ್ನು ದಂಡಿಸುತ್ತಿತ್ತು.

ಮಾವೋ ಮತ್ತು ಕೆಂಪು ಸೇನೆಯ ಕುರಿತು ಚೀನಾದ ಜನರು ಅಪಾರ ಪ್ರೀತಿ ಮತ್ತು ಅಭಿಮಾನ ಹೊಂದಿದ್ದರು. ಕೆಂಪು ಸೇನೆಯು ಜನತೆಯ ಹಿತರಕ್ಷಕನೆಂದು ಜನತೆಯನ್ನು ಮುನ್ನಡೆಸುವ ಜನತಾ ಸೈನ್ಯವೆಂದು ಚೀನಾದ ಎಲ್ಲೆಡೆ ತಿಳಿದಿದ್ದು ಅವರ ಅಗಮನಕ್ಕಾಗಿ ಜನರು ಕಾತರದಿಂದ ಕಾಯುತ್ತಿದ್ದರು

ಮಾವೋರವರ ಪತ್ನಿ ಮತ್ತು ಸಹೋದರಿಯ ಕೊಲೆ

ಇದೇ ಸಮಯದಲ್ಲಿ ಚೀನಾದ ಕಾರ್ಮಿಕರು ಮತ್ತು ರೈತರ ಕ್ರಾಂತಿಕಾರಿ ಸಮಿತಿಯೊಂದನ್ನು ರಚಿಸಿ ಅದಕ್ಕೆ ಮಾವೋ ಅವರನ್ನು ಅಧ್ಯಕ್ಷರನ್ನಾಗಿ ಚುನಾಯಿಸಲಾಯಿತು. ಕೆಂಪು ಸೇನೆಯು ಹ್ಯೂನಾನ್‌ನಲ್ಲಿ ಅಗಾಧ ಪ್ರಭಾವ ಹೊಂದಿತ್ತು. ಮಾವೋ, ಜು ಡೆ ಮತ್ತು ಇತರೆ ಕೆಂಪು  ನಾಯಕರನ್ನು ಜೀವಂತವಾಗಿ ಹಿಡಿದುಕೊಟ್ಟವರಿಗೆ ಅಥವಾ ಸತ್ತ ದೇಹವನ್ನು ತಂದುಕೊಟ್ಟವರಿಗೆ ಕೌಮಿಂಟಾಂಗ್ ತಾನು ದೊಡ್ಡ ಬಹುಮಾನ ನೀಡುವುದಾಗಿ ಘೋಷಿಸಿತು. ಜಿಯಾಂಗ್ಟನ್‌ನಲ್ಲಿದ್ದ ಮಾವೋರವರ ಜಮೀನನ್ನು ಕೌಮಿಂಟಾಂಗ್ ಮುಟ್ಟುಗೋಲು ಹಾಕಿಕೊಂಡಿತು. ಮಾವೋರವರ ಪತ್ನಿ, ಸಹೋದರಿ ಮತ್ತು ಇಬ್ಬರು ಸಹೋದರರನ್ನು ಬಂಧಿಸಿ ಪತ್ನಿ ಮತ್ತು ಸಹೋದರಿಯನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲ ಲಾಯಿತು.

ಜಪಾನಿನ ಆಕ್ರಮಣ ಮತ್ತು ಕೌಮಿಂಟಾಂಗ್ನೊಂದಿಗೆ ಪುನರ್ ಸಖ್ಯತೆ

೧೯೩೬ರ ಜಪಾನಿ ಆಕ್ರಮಣಕ್ಕೆ ಪ್ರತಿಯಾಗಿ ಕೌಮಿಂಟಾಂಗ್ ನಾಯಕ ಚಿಯಾಂಗ್ ಕೈ ಶೆಕ್‌ರು ಪ್ರತಿರೋಧಿಸಲಿಲ್ಲ. ಬದಲಿಗೆ ಕಮ್ಯುನಿಸ್ಟರನ್ನು ಸದೆ ಬಡಿಯಲು ಮತ್ತು ದೇಶದೊಳಗೆ ಆಂತರಿಕ ಗಲಭೆ ನಡೆಸಲಾರಂಭಿಸಿದ್ದರಿಂದ ಕೌಮಿಂಟಾಂಗ್‌ನ ಇತರೆ ನಾಯಕರು ಕುಪಿತಗೊಂಡರು. ಈ ಹಿನ್ನೆಲೆಯಲ್ಲಿ ಚಿಯಾಂಗ್ ಕೈ ಶೆಕ್ ಅವರನ್ನು ಕೌಮಿಂಟಾಂಗ್ ಸೇನೆಯು ಬಂಧಿಸಿತು. ಜಪಾನಿನ ವಿರುದ್ಧ ಕೌಮಿಟಾಂಗ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಮತ್ತಮ್ಮೆ ಒಗ್ಗಟ್ಟಿನಿಂದ ಹೋರಾಡುವಲ್ಲಿ ಮಾವೋ ಜೆಡಾಂಗ್ ಮತ್ತು ಚೌ ಎನ್ ಲಾಯ್ ಅವರು ಜರಿಗೆ ತಂದೆ ಶಾಂತಿಯುತ ಒಪ್ಪಂದವು ಚಾರಿತ್ರಿಕ ಪಾತ್ರವನ್ನು ವಹಿಸಿತೆಂದರೆ ಉತ್ಪೇಕ್ಷೆಯೆನಿಸದು.

೧೯೩೬ರಲ್ಲಿ ರಚಿಸಿದ ‘‘ಚೀನಾ ಕ್ರಾಂತಿಕಾರಿ ಯುದ್ಧ ತಂತ್ರದಲ್ಲಿನ ಸಮಸ್ಯೆಗಳು’’ ಎಂಬ ಪ್ರಬಂಧದಲ್ಲಿ ಚೀನಾದ ಕ್ರಾಂತಿಕಾರಿ ಯುದ್ಧದ ಗುಣಲಕ್ಷಣಗಳು, ನಿಯಮಗಳು, ವ್ಯೂಹ ಮತ್ತು ತಂತ್ರಗಳನ್ನು ಅವರು ಸವಿವಿವರವಾಗಿ ವಿಶ್ಲೇಷಿಸಿ ಮಿಲಿಟರಿ ವ್ಯವಹಾರಗಳಲ್ಲಿ ದುಸ್ಸಾಹಸವಾದವನ್ನು ಗಂಭೀರವಾಗಿ ಟೀಕಿಸಿದ್ದಾರೆ. ‘ಆಚರಣೆಯನ್ನು ಕುರಿತು’ ಮತ್ತು ‘ವೈರುಧ್ಯವನ್ನು ಕುರಿತು’ ಎಂಬ ತತ್ವಶಾಸ್ತ್ರೀಯ ಕೃತಿಗಳಲ್ಲಿ ಅವರು ಚೀನಾದ ಕ್ರಾಂತಿಯನ್ನು ತತ್ವಶಾಸ್ತ್ರದ ನೆಲೆಗಟ್ಟಿನಲ್ಲಿ ವಿವರಿಸಿದ್ದಾರೆ ಮತ್ತು ವ್ಯಕ್ತಿನಿಷ್ಠತೆಯಂತಹ ತಪ್ಪುಗಲನ್ನು ಮತ್ತು ವಿಶೇಷವಾಗಿ ಸಿದ್ಧಾಂತಗಳ ಬಗೆಗಿನ ಅಂಧಶ್ರದ್ಧೆಯನ್ನು ಬಯಲಿಗೆಳೆದು ಟೀಕಿಸಲು ಮಾರ್ಕ್ಸ್‌ವಾದಿ ಪ್ರಜ್ಞೆಯ ಸಿದ್ಧಾಂತ ಮತ್ತು ದ್ವಂದ್ವಾತ್ಮಕತೆಯನ್ನು ಅಳವಡಿಸಿದ್ದಾರೆ. ಈ ಕೃತಿಗಳ ಮೂಲಕ ಮಾವೋ ಜೆಡಾಂಗ್ ಅವರು ಮಾರ್ಕ್ಸ್‌ವಾದ- ಲೆನಿನ್‌ವಾದವನ್ನು ಮತ್ತಷ್ಟು ಅಭಿವೃದ್ದಿಪಡಿಸಿ ಶ್ರೀಮಂತಗೊಳಿಸಿದರು.

೧೯೩೭ರಲ್ಲಿ ಜಪಾನ್ ವಿರುದ್ಧ ಯುದ್ಧ ಸಮಯದಲ್ಲಿ ಐಕ್ಯರಂಗದೊಳಗೆ ಪಕ್ಷದ ಸ್ವತಂತ್ರತೆಯನ್ನು ಉಳಿಸಿಕೊಳ್ಳುವ ಕುರಿತು ಪಕ್ಷದ ನಿಲುಮೆ ಮತ್ತು ಯುದ್ಧದ ದೀರ್ಘವಧಿ ಸ್ವಭಾವಗಳ ಕುರಿತು ಅತ್ಯಂತ ಪ್ರಮುಖ ವಿಚಾರವನ್ನು ಮಾವೋ ಮಾಡಿದರು. ಗುಡ್ಡಗಾಡು ಪರ್ವತಗಳಲ್ಲಿ ಸ್ವತಂತ್ರವಾದ ಗೆರಿಲ್ಲಾ ಯುದ್ಧಕ್ಕಾಗಿ ಜನತೆ ಯನ್ನು ಅಣಿಗೊಳಿಸುವ ಬಗ್ಗೆ ಮತ್ತು ಶತ್ರು ನೆಲೆಗಳ ಹಿಂದೆಯೇ ಜಪಾನ್ ವಿರೋಧಿ ನೆಲೆಗಳನ್ನು ಸ್ಥಾಪಿಸುವ ಕುರಿತಾದ ಹಲವು ಪ್ರಧಾನ ವಿಷಯಗಳನ್ನು ಅವರು ಚರ್ಚಿಸಿದರು. ೧೯೩೮ರಲ್ಲಿ ಮಾವೋರವರು ‘ಜಪಾನ್ ವಿರುದ್ಧದ ಗೆರಿಲ್ಲಾ ಯುದ್ಧದಲ್ಲಿನ ವ್ಯೂಹದ ಸಮಸ್ಯೆಗಳು’, ‘ದೀರ್ಘಾವಧಿ ಯುದ್ಧ’ದ ಕುರಿತು ಮತ್ತು ಇತರೆ ಮಿಲಿಟರಿ ಕೃತಿಗಳನ್ನು ರಚಿಸಿ ‘ರಾಷ್ಟ್ರೀಯ ದೌರ್ಜನ್ಯ’ ಮತ್ತು ‘ದಿಢೀರ್ ಜಯ’ ಎಂಬ ತಪ್ಪಾದ ಸಿದ್ಧಾಂತಗಳನ್ನು ಟೀಕಿಸಿದರು.

ಜಪಾನ್ ವಿರೋಧಿ ಯುದ್ಧ ಮತ್ತು ಮಹಾನ್ ಉತ್ಪಾದನಾ ಆಂದೋಲನ

ಜಪಾನ್ ವಿರೋಧಿ ಯುದ್ಧವು ಪ್ರಾರಂಭವಾದ ನಂತರ ಮಾವೋ ಜೆಡಾಂಗ್ ಅವರ ಅಧ್ಯಕ್ಷತೆಯಲ್ಲಿ ಕಮ್ಯುನಿಸ್ಟ್ ಪಕ್ಷವು ಮೈತ್ರಿಕೂಟದಲ್ಲಿದ್ದರೂ ಸ್ವತಂತ್ರ ತತ್ವಕ್ಕೆ ಅಂಟಿಕೊಂಡು ಶತ್ರುಸೇನೆಯ ಹಿಂದೆಯೇ ಗೆರಿಲ್ಲಾ ಯುದ್ಧತಂತ್ರದಲ್ಲಿ ಜನತೆಯನ್ನು ಅಣಿಗೊಳಿಸುತ್ತಾ ಸತತವಾಗಿ ವಿಶಾಲವಾದ ಜಪಾನ್ ವಿರೋಧಿ ನೆಲೆಗಳನ್ನು ಸ್ಥಾಪಿಸಿತು. ಕೆಲವೊಂದು ನೆಲೆಗಳು ಮಾತ್ರ ಸಮತಟ್ಟಾದ ಪ್ರದೇಶಗಳಲ್ಲಿದ್ದುದನ್ನು ಹೊರತುಪಡಿಸಿದರೆ ಬಹುತೇಕ ಎಲ್ಲ ನೆಲೆಗಳು ಪರ್ವತ ಪ್ರದೇಶಗಳಲ್ಲಿ ಹರಡಿಕೊಂಡಿದ್ದವು. ಕಮ್ಯುನಿಸ್ಟ್ ಪಕ್ಷವು ಪ್ರಾಬಲ್ಯ ಹೊಂದಿದ್ದ ಗೆರಿಲ್ಲಾ ನೆಲೆಗಳ ಮೇಲೆ ಜಪಾನಿ ಸೇನೆಯು ತನ್ನ ಆಕ್ರಮಣಕಾರಿ ದಾಳಿಯನ್ನು ನಡೆಸಿರುವಾಗಲೇ ಕೌಮಿಂಟಾಂಗ್ ಕೂಡ ಇದೇ ನೆಲೆಗಳ ವಿರುದ್ಧ ತನ್ನ ಆರ್ಥಿಕ ದಿಗ್ಬಂಧನವನ್ನು ವಿಧಿಸುವ ಅತಿರೇಖ ನೀತಿಯನ್ನನುಸರಿಸಿತು. ಇದರಿಂದಾಗಿ ೧೯೪೧ರ ಹೊತ್ತಿಗೆ ಈ ಮೂಲ ನೆಲೆಗಳು ಗಂಭೀರವಾದ ಆರ್ಥಿಕ ಸಂಕಷ್ಟಗಳಿಂದ ನರಳಲಾರಂಭಿಸಿದವು. ಈ ಪರಿಸ್ಥಿತಿಯನ್ನೆದುರಿಸಲು ಮಾವೋ ಜೆಡಾಂಗ್ ಮತ್ತು ಕೇಂದ್ರೀಯ ಸಮಿತಿಯು ಈ ನೆಲೆಗಳಲ್ಲಿನ ಸೇನೆ ಮತ್ತು ಜನತೆಯನ್ನು ಕರೆದು ಅವಶ್ಯ ಆಹಾರ ಮತ್ತು ಉಡುಪುಗಳಿಗಾಗಿ ತಮ್ಮದೇ ಕೈಯಾರೇ ಕೆಲಸ ಮಾಡಲು ಅಣಿಗೊಳಿಸಿ ಅವರನ್ನು ಒಂದು ಮಹಾನ್ ಉತ್ಪಾದನಾ ಆಂದೋಲನದಲ್ಲಿ ಭಾಗಿಯಾಗು ವಂತೆ ಮಾಡಿದರು. ಈ ರೀತಿಯಲ್ಲಿ ಅವರು ಸ್ವಾವಲಂಬಿ ಆರ್ಥಿಕತೆಯನ್ನು ಅಭಿವೃದ್ದಿಪಡಿಸಿ ಆಹಾರ ಸರಬರಾಜನ್ನು ಖಾತರಿಗೊಳಿಸಿ ಗಂಭೀರವಾಗಿದ್ದ ಆರ್ಥಿಕ ಮತ್ತು ಹಣಕಾಸಿನ ಮುಗ್ಗಟ್ಟಿನಿಂದ ಹೊರ ಬರುವಂತಾದರು.

ಹಡಗು ನಿಲ್ದಾಣಗಳಿಲ್ಲದಿದ್ದರೂ ಶತ್ರುಸೇನೆಯ ದಿಗ್ಬಂಧನದ ನಡುವೆಯೂ ಕಿಯಾಂಗ್ಸಿಯಂತಹ ಪ್ರಾಂತ್ಯಗಳಲ್ಲಿ ಆಧುನಿಕ ಕೈಗಾರಿಕಾ ನೆಲೆಗಳನ್ನು ಕಮ್ಯುನಿಸ್ಟ್ ಪಕ್ಷವು ಸ್ಥಾಪಿಸತೊಡಗಿತು. ಚೀನಾದ ಶ್ರೀಮಂತ ಟಂಗ್‌ಸ್ಟನ್ ಗಣಿಗಳು, ಪ್ರಿಂಟಿಂಗ್ ಘಟಕ ಗಳು, ಜವಳಿ ಗಿರಣಿಗಳು, ನೇಯುವ ಘಟಕಗಳು, ಯಂತ್ರದ ಫಲಕಗಳು ಇತ್ಯಾದಿ ಕೈಗಾರಿಕೆಗಳನ್ನು ಮತ್ತು ಸಾಮೂಹಿಕ ಸಹಕಾರಿ ಮಂಡಳಿಗಳನ್ನು ಅಗಾಧ ಪ್ರಮಾಣದಲ್ಲಿ ಕೆಂಪು ಸೇನೆಯು ಸ್ಥಾಪಿಸಿ ರಫ್ತು ವಹಿವಾಟನ್ನು ನಡೆಸುತ್ತಿತ್ತು.

ಚೀನಾದ ಭವಿಷ್ಯತ್ತನ್ನು ಕುರಿತಾದ ಎರಡು ದಾರಿಗಳು

‘ನಮ್ಮ ದೇಹವನ್ನು ಹರಿದು ಮುಕ್ಕುವ ಪಾಳೇಗಾರರಿಗೆ ಧಿಕ್ಕಾರ!’, ‘ನಮ್ಮ ರಕ್ತಕುಡಿಯುವ ಮಿಲಿಟರಿಗೆ ಧಿಕ್ಕಾರ!’, ‘ಚೀನಾವನ್ನು ಜಪಾನ್‌ಗೆ ಮಾರುವ ದ್ರೋಹಿಗಳಿಗೆ ಧಿಕ್ಕಾರ!’, ‘ಜಪಾನ್ ವಿರೋಧಿ ಐಕ್ಯರಂಗಕ್ಕೆ ಜಯವಾಗಲಿ!’, ‘ಚೀನಾದ ಕ್ರಾಂತಿ ಚಿರಾಯುವಾಗಲಿ!’, ‘ಚೀನಾದ ಕೆಂಪು ಸೇನೆ ಚಿರಾಯುವಾಗಲಿ!’ ಇವೇ ಮುಂತಾದ ದೇಶ ಪ್ರೇಮಿ ಕೂಗು ಚೀನದ ಬೀದಿ ಬೀದಿಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಮುಗಿಲು ಮುಟ್ಟಿತ್ತು.

ದ್ವಿತೀಯ ಮಹಾಯುದ್ಧ ಸಮಯದಲ್ಲಿ ಸ್ಟಾಲಿನ್ ಗ್ರಾಡ್‌ನ ಐತಿಹಾಸಿಕ ಯುದ್ಧ ರಂಗದಲ್ಲಿ ನಾಜಿ ಆಕ್ರಮಣಕಾರರ ವಿರುದ್ಧ ರಷ್ಯಾದ ಕೆಂಪು ಸೈನಿಕರು ಹಿಡಿತ ಸಾಧಿಸಿದರು. ಆಗ ಜಪಾನ್‌ನ ಶಕ್ತಿಯು ಕ್ಷೀಣಗೊಂಡು ಚೀನಾದಲ್ಲಿನ ತನ್ನ ಪ್ರಾಬಲ್ಯವನ್ನು ಅದು ಶರಣಾಗತಿಯ ಹಂತಕ್ಕೆ ತಂದು ನಿಲ್ಲಿಸಿತು. ಸಾಮ್ರಾಜ್ಯಶಾಹಿ ಜಪಾನ್ ಸ್ವಾಭಾವಿಕವಾಗಿ ಹಿಂಜರಿದು ಚೀನಾವು ಗೆದ್ದೇ ಗೆಲ್ಲುವುದೆಂದು ಖಾತರಿಯಾದಾಗ ಚಿಯಾಂಗ್ ಕೈ ಶೆಕ್‌ನು ಅಧಿಕಾರದ ಗದ್ದುಗೆಯೇರಲು ಇದೇ ಸೂಕ್ತ ಸಮಯವೆಂದು ತನ್ನ ನಡೆಗಳನ್ನು ಕ್ಷಿಪ್ರ ಗತಿಯಲ್ಲಿ ನಡೆಸಲಾರಂಭಿಸಿದನು. ಚೀನಾವು ಗತಕಾದಲ್ಲಿ ವೈಭವದಿಂದ ಕೂಡಿತ್ತೆಂದು ಸಂಕಟ ಮತ್ತು ಅನೈಕ್ಯತೆಗಳ ಪ್ರಪಾತದಲ್ಲಿ ಸಿಲುಕಿ ನರಳುತ್ತಿರುವ ಚೀನಾವನ್ನು ರಕ್ಷಿಸಿ ಅದಕ್ಕೆ ಗತಕಾಲದ ವೈಭವವನ್ನು ಮತ್ತೆ ಧರಿಸಬೇಕೆಂದು ೧೯೪೩ರಲ್ಲಿ ತನ್ನ ‘ಚೀನಾದ ಅದೃಷ್ಟ’ ಎಂಬ ಕೃತಿಯ ಮೂಲಕ ಪ್ರತಿಪಾದಿಸಿದನು. ಅವರ ಸಿದ್ಧಾಂತದಲ್ಲಿ ಪ್ರಮುಖ ವಾದದ್ದು ವಿಧೇಯತೆ. ತಂದೆಯಲ್ಲಿ ಮಗನ ವಿಧೇಯತೆ, ಗಂಡನಲ್ಲಿ ಹೆಂಡತಿಯ ವಿಧೇಯತೆ ಮತ್ತು ದೊರೆಯಲ್ಲಿ ಜನತೆಯ ವಿಧೇಯತೆ. ಇಲ್ಲಿ ದೊರೆಯೆಂದರೆ ಚಿಯಾಂಗ್ ಕೈ ಶೆಕ್ ಎಂದೇನೂ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ! ಗ್ರಾಮೀಣ ಪ್ರದೇಶ ದಲ್ಲಿ ಪಾಳೇಗಾರಿ ಶೋಷಣೆ ಮತ್ತು ದಬ್ಬಾಳಿಕೆಗಳನ್ನು ಹಾಗೂ ನಗರಗಳಲ್ಲಿ ಆಧುನಿಕ ಕೈಗಾರಿಕೆ ಮತ್ತು ವಾಣಿಜ್ಯದ ಮೇಲೆ ಅಧಿಕಾರಶಾಹಿ-ಬಂಡವಾಳಶಾಹಿ ನಿಯಂತ್ರಣಗಳನ್ನು ಸಮರ್ಥಿಸುತ್ತಾ ಚೀನಾದ ದುರಾದೃಷ್ಟಗಳಿಗೆಲ್ಲ ಅಸಮಾನ ಒಪ್ಪಂದಗಳು ಮಾತ್ರವೇ ಕಾರಣವೆಂದು ಪ್ರತಿಪಾದಿಸಲಾಯಿತು. ಚೀನಾಕ್ಕೆ ಸಮಾಜವಾದ, ಉದಾರವಾದ ಮತ್ತು ಮಾರ್ಕ್ಸ್‌ವಾದವನ್ನು ಪರಿಚಯಿಸಿದ್ದಕ್ಕಾಗಿ ಮೇ ನಾಲ್ಕರ ಚಳುವಳಿಯನ್ನು ಅವರು ಖಂಡಿಸಿದರು. ಚೀನಾದ ಕಮ್ಯುನಿಸ್ಟ್ ಪಕ್ಷವು ಒಂದು ಹೊಸ ತರಹದ ಯುದ್ಧಕೋರನೆಂದು ಜರೆಯಲಾಯಿತು. ಜನರು ಗತಕಾಲದೊಳಗೆ ಹುದುಗಿ ತಾಳ್ಮೆಯಿಂದ ಜೀವನದ ಸಂಪೂರ್ಣ ಸಂತೋಷಕ್ಕಾಗಿ ಕಾಯಬೇಕೆಂದು ಹೇಳಲಾಯಿತು.

ಈ ಪ್ರತಿಗಾಮಿ ವಿಚಾರಧಾರೆಯನ್ನು ಹೋಗಲಾಡಿಸಲು ಕೌಮಿಂಟಾಂಗ್ ಆಳ್ವಿಕೆಯನ್ನು ತಕ್ಷಣದಲ್ಲೇ ಪ್ರಜಸತ್ತಾತ್ಮಕ ಮೈತ್ರಿ ಸರ್ಕಾರವನ್ನಾಗಿ ಪುನರ್ರ‍ಚಿಸಬೇಕೆಂದು ಚೀನಿ ಕಮ್ಯುನಿಸ್ಟ್ ಪಕ್ಷವು ಪ್ರಸ್ತಾವನೆ ಮುಂದಿಟ್ಟಿತ್ತು. ಮಾವೋ ಅವರು ಜನವರಿ ೧೯೪೦ರ ತಮ್ಮ ನವ ಪ್ರಜಪ್ರಭುತ್ವದ ಕುರಿತ ಲೇಖನದಲ್ಲಿ ಇದನ್ನು ಪ್ರತಿಪಾದಿಸಿ, ಚೀನಾದ ಕ್ರಾಂತಿಯು ಎರಡು ಹಂತಗಳಲ್ಲಿ, ಮೊದಲ ಹಂತದಲ್ಲಿ ಬಂಡವಾಳಶಾಹಿ ಪ್ರಜಸತ್ತಾತ್ಮಕ ಕ್ರಾಂತಿ ಮತ್ತು ನಂತರದಲ್ಲಿ ಸಮಾಜವಾದಿ ಕ್ರಾಂತಿಯಾಗಿ ಮುನ್ನಡೆಯಬೇಕೆಂದು ವಿವರಿಸಿದ್ದರು.

ಅದರಂತೆ ಪ್ರಥಮ ಹಂತದಲ್ಲಿ ಸಾಮ್ರಾಜ್ಯಶಾಹಿ ಮತ್ತು ಪಾಳೇಗಾರಿ ದಬ್ಬಾಳಿಕೆಗಳಿಂದ ಚೀನಾವನ್ನು ಮುಕ್ತಿಗೊಳಿಸಿ ಅದನ್ನೊಂದು ಸ್ವತಂತ್ರ, ಪ್ರಜಸತ್ತಾತ್ಮಕ ರಿಪಬ್ಲಿಕ್ ರಾಷ್ಟ್ರ ವನ್ನಾಗಿ ಪರಿವರ್ತಿಸುವುದು, ಆರ್ಥಿಕವಾಗಿ, ಸಾರ್ವಜನಿಕ ಉದ್ದಿಮೆಗಳು ಸಮಾಜವಾದಿ ಗುಣವನ್ನು ಹೊಂದಿದ್ದು ಅವು ಒಟ್ಟಾರೆ ಆರ್ಥಿಕದಲ್ಲಿ ಚಾಲಕ ಶಕ್ತಿಯಾಗಿ ಕಾರ್ಯ ನಿರ್ವಹಿಸುವುದು. ಆದರೆ ರಿಪಬ್ಲಿಕ್ ಸರ್ಕಾರವು ಬಂಡವಾಳಗಾರ ಖಾಸಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ. ಜನತೆಯ ಜೀವನಾಧಾರಗಳ ಮೇಲೆ ಪ್ರಾಬಲ್ಯ ಹೊಂದಿಲ್ಲದಿರುವಂತಹ ಬಂಡವಾಳಶಾಹಿ ಉತ್ಪಾದನೆಯ ಬೆಳವಣಿಗೆಗೆ ತಡೆಯೊಡ್ಡುವುದಿಲ್ಲ. ಆದರೂ ದೊಡ್ಡ ಭೂಮಾಲೀಕರ ಭೂಮಿಯನ್ನು ಕಿತ್ತು ಭೂಹೀನರಿಗೆ ನೀಡಿ ಗ್ರಾಮೀಣ ಪ್ರದೇಶದಲ್ಲಿ ಪಾಳೇಗಾರಿ ಸಂಬಂಧಗಳನ್ನು ಕಿತ್ತೊಗೆಯಲಾಗುವುದೆಂದು ಮಾವೋ ಪ್ರತಿಪಾದಿಸಿದ್ದರು.

ಹೊಸ ಪ್ರಜಪ್ರಭುತ್ವಕ್ಕೆ ರಿಪಬ್ಲಿಕ್ ಸರ್ಕಾರದ ಸಂಸ್ಕೃತಿಯ ಮೂರು ವಿಶಿಷ್ಟ ಅಂಶಗಳನ್ನು ಈ ರೀತಿ ವಿವರಿಸಲಾಗಿತ್ತು.

೧. ರಿಪಬ್ಲಿಕ್ ಸರ್ಕಾರವು ರಾಷ್ಟ್ರೀಯವಾದಿಯಾಗಿದ್ದು, ಸಾಮ್ರಾಜ್ಯಶಾಹಿ ದಬ್ಬಾಳಿಕೆಯನ್ನು ವಿರೋಧಿಸಿ ಚೀನಾದ ಘನತೆ ಮತ್ತು ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತದೆ.

೨. ಅದು ವೈಜ್ಞಾನಿಕವಾಗಿದ್ದು, ಎಲ್ಲ ಪಾಳೇಗಾರಿ ಮತ್ತು ಮೂಢನಂಬಿಕೆ ವಿಚಾರಗಳನ್ನು ವಿರೋಧಿಸುತ್ತಾ ಅಧ್ಯಯನ ಮತ್ತು ಆಚರಣೆಯ ಮೂಲಕ ಸತ್ಯ ಶೋಧನೆಯಲ್ಲಿ ತೊಡಗುತ್ತದೆ.

೩. ಅದು ವಿಶಾಲ ಜನಸಮೂಹಗಳಿಗೆ ಸೇರಿದ್ದು, ಪ್ರಜಸತ್ತಾತ್ಮಕವಾಗಿರುತ್ತದೆ.

ಹೀಗೆ ಕೌಮಿಂಟಾಂಗ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ಎರಡು ನಿಲುವುಗಳು ಒಂದಕ್ಕೊಂದು ಪ್ರಬಲ ವಿರೋಧವಾಗಿದ್ದವು.

ಚೀನಾ ಜನತಾ ಗಣರಾಜ್ಯದ ಉದಯ

ಜಪಾನ್ ಚೀನಾದ ನೆಲದಿಂದ ನಿರ್ವಾಹವಿಲ್ಲದೆ ಕಾಲುಕಿತ್ತ ಮೇಲೆ ಕೆಂಪು ಸೇನೆಯು ಕೌಮಿಂಟಾಂಗ್ ಮೇಲೆ ಸಂಪೂರ್ಣ ಸಮರ ಸಾರಿತು. ಚೌ ಎನ್ ಲಾಯ್ ಮತ್ತು ಜು ಡೆಯವರೊಂದಿಗೆ ಮಾವೋ ಅವರು ದೊಡ್ಡ ಮಟ್ಟದ ಶಸ್ತ್ರಾಸ್ರಗಳೊಂದಿಗೆ ಶತ್ರು ಸೇನೆಯನ್ನು ತುಂಡರಿಸಿ, ರಾಜಕೀಯ ಮತ್ತು ಮಿಲಿಟರಿ ಕಾರ್ಯಾಚರಣೆಗಳನ್ನು ಜೊತೆ ಜೊತೆಯಾಗಿ ನಡೆಸಿದರು. ೧೯೪೮ ಸೆಪ್ಟೆಂಬರ್ ಮತ್ತು ೧೯೪೯ರ ಜನವರಿ ನಡುವೆ ಜನತೆ ವಿಮೋಚನಾ ಸೇನೆಯು ವಿಜಯ ಗಳಿಸಿ ಕೌಮಿಂಟಾಂಗ್ ಸೇನೆಯ ಮುಖ್ಯ ಶಕ್ತಿಗಳನ್ನು ಇನ್ನಿಲ್ಲದಂತೆ ನಾಶಪಡಿಸಿತು. ಯಾಂಗ್ಚೆ ನದಿಯುದ್ದಕ್ಕೂ ಜನತಾ ವಿಮೋಚನಾ ಸೇನೆಯು ವಿಜಯ ದುಂದುಭಿಯನ್ನು ಮೊಳಗಿಸುತ್ತಾ ಕೌಮಿಂಟಾಂಗ್ ನ ಪ್ರತಿಗಾಮಿ ಆಡಳಿತವನ್ನು ಬುಡಸಮೇತ ಕಿತ್ತೊಗೆಯಿತು. ಸೇನೆಗೆ ನಿರ್ದೇಶನ ನೀಡುತ್ತಲೇ ಮಾವೋ ಅವರು ಲಿಯೋ ಶಾವೋಕಿ, ರೆನ್ ಬಿಶಿ ಮತ್ತು ಇತರರೊಡನೆ ವಿಮೋಚನೆಯಾದ ಪ್ರದೇಶಗಳಲ್ಲಿ ಭೂ ಸುಧಾರಣೆ ಮತ್ತು ಆರ್ಥಿಕ ಪುನರ್ ರಚನಾ ಕಾರ್ಯಗಳನ್ನು ಹಮ್ಮಿಕೊಂಡು ಸೇನೆಗೆ ನಿರಂತರವಾಗಿ ಮಾನವ ಸಂಪನ್ಮೂಲ ಮತ್ತು ಇತರೆ ಅವಶ್ಯ ಸಂಪನ್ಮೂಲಗಳು ದೊರೆಯುವಂತೆ ನೋಡಿಕೊಂಡರು.

ಗ್ರಾಮೀಣ ಕೇಂದ್ರಿತ ಯುದ್ಧವನ್ನು ನಗರಗಳತ್ತ ಕೇಂದ್ರೀಕರಿಸಿ ರಾಷ್ಟ್ರವ್ಯಾಪಿ ವಿಜಯದ ಖಾತರಿಗಾಗಿ ಅವಿರತವಾಗಿ ಶ್ರಮಿಸಿದರು. ವಿಜಯದ ನಂತರ ತಕ್ಷಣದ ಮೂಲ ನೀತಿಗಳನ್ನು ರಚಿಸಿದ ೧೯೪೯ ಸೆಪ್ಟೆಂಬರ್‌ನಲ್ಲಿ ಚೀನಿ ಜನತೆಯ ರಾಜಕೀಯ ಸಮಾಲೋಚಕ ಸಮಾವೇಶದ ಅಧ್ಯಕ್ಷರಾಗಿ ಮಾವೋ ಕಾರ್ಯ ನಿರ್ವಹಿಸಿದರು.

ಚೀನಾದ ಜನತೆ ಎದ್ದು ನಿಂತಿದ್ದಾರೆ, ಎಲ್ಲ ಸಂಕಷ್ಟಗಳಲ್ಲೂ, ದೊಡ್ಡ ಮಟ್ಟದ ಆರ್ಥಿಕ ಮತ್ತು ಸಾಂಸ್ಕೃತಿಕ ನಿರ್ಮಾಣ ಕಾರ್ಯದಲ್ಲೂ, ಹಳೆಯ ಚೀನಾದ ಪರಂಪರೆಯಾಗಿರುವ ಬಡತನ ಮತ್ತು ಅನಕ್ಷರತೆಯನ್ನು ವಿನಾಶಗೊಳಿಸುವುದಲ್ಲೂ ಹಾಗೂ ಚೀನಾ ಜನತೆಯ ಜೀವನ ಗುಣಮಟ್ಟವನ್ನು ಉತ್ತಮಪಡಿಸುವಲ್ಲಿ ಇಡೀ ರಾಷ್ಟ್ರವನ್ನು ಚೀನಾ ಜನತಾ ರಿಪಬ್ಲಿಕ್‌ನ ಕೇಂದ್ರ ಸರ್ಕಾರವು ಮುನ್ನಡೆಸುವುದು.

ಎಂದು ಮಾವೋ ಘೋಷಿಸಿದರು. ಮಾವೋ ಅವರನ್ನು ಸರ್ಕಾರದ ಅಧ್ಯಕ್ಷರಾಗಿ ಚುನಾಯಿಸಿದ ನಂತರ ಅದೇ ವರ್ಷದ ಅಕ್ಟೋಬರ್ ೧ ರಂದು ಯನ್ಮಾನ್ಮೆನ್ ಚೌಕದಲ್ಲಿ ‘ಚೀನಾ ಜನತಾ ರಿಪಬ್ಲಿಕ್’ ಆಗಿದೆಯೆಂದು ಘೋಷಿಸಿದರು. ಚೀನಾ ಜನತೆಯು ತಮ್ಮ ಸಾಮಾಜಿಕ ಕ್ರಾಂತಿ ಮತ್ತು ರಾಷ್ಟ್ರ ನಿರ್ಮಾಣ ಕಾರ್ಯಗಳಲ್ಲಿ ಅದ್ವಿತೀಯ ಯಶಸ್ಸು ಗಳಿಸಲು ಲಿಯೋ ಶಾವೋಕಿ, ಚೌ ಎನ್ ಲಾಯ್, ಜು ಡೆ, ಚೆನ್ ಯುನ್, ಡೆಂಗ್ ಜೆಯೋಪಿಂಗ್ ಮತ್ತು ಇತರರೊಂದಿಗೆ ಮಾವೋ ನಾಯಕತ್ವ ನೀಡಿದರು.

ಕೆಂಪು ಸೇನೆಯು ಅತ್ಯಂತ ಕಷ್ಟಕರ ಹಾದಿಯನ್ನು ಸವೆಸಿ, ಅತೀವ ದಾಳಿಗಳನ್ನೆದುರಿಸಿ, ಜನತೆಯ ಸ್ನೇಹ ಸಂಪಾದಿಸಿ ವಿಜಯ ಪತಾಕೆಯನ್ನು ಹಾರಿಸಿ ಬರುವಂತೆ ಸಾಧ್ಯವಾದದ್ದು ಮೊದಲನೆಯದಾಗಿ ಕಮ್ಯುನಿಸ್ಟ್ ಪಕ್ಷದ ಸರಿಯಾದ ನಾಯಕತ್ವದಿಂದಾಗಿ, ಎರಡನೆಯದಾಗಿ, ಚೀನಾದ ಸೋವಿಯತ್ಜನತೆಯ ಮೂಲ ಕಾರ್ಯಕರ್ತರ ಮಹಾನ್ ಪರಿಣತೆ, ಧೈರ್ಯ, ಅಚಲತೆ ಮತ್ತು ಅತಿ ಮಾನವ ಶತಪ್ರಯತ್ನ ಮತ್ತು ಕ್ರಾಂತಿಕಾರಿ ಧ್ಯೇಗಳು, ಮಾರ್ಕ್ಸ್‌ವಾದಿ-ಲೆನಿನ್‌ವಾದಿ ತತ್ವದ ಸಾರವನ್ನು ಚೀನಾದ ಮಣ್ಣಿಗೆ ಅಳವಡಿಸಿದ ಯಶಸ್ಸು ಪಕ್ಷದ ನಾಯಕತ್ವಕ್ಕೆ ಸೇರಿದ್ದು.

ಅಲ್ಪಸಂಖ್ಯಾತ ಬುಡಕಟ್ಟುಗಳು

ಮಾವೋ ಅವರು ಅಲ್ಪಸಂಖ್ಯಾತ ಜನತೆಯು ಒಗ್ಗೂಡಿ ತಮ್ಮ ಏಳಿಗೆ ಕಾಣಲು ಎಲ್ಲ ಕ್ರಮ ಜರಿಗೆ ತಂದರು. ರಾಷ್ಟ್ರದ ವಿವಿಧ ಭಾಗಗಳಿಂದ ಬುಡಕಟ್ಟು ಗುಂಪುಗಳ ಪುರುಷರು ಮತ್ತು ಮಹಿಳೆಯರನ್ನು ತರಬೇತಿ ನೀಡಲು ಯಾನಾನ್‌ನಲ್ಲಿ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಚೀನಾದ ಕ್ರಾಂತಿ ಸಮಯದಲ್ಲಿ ರಾಷ್ಟ್ರೀಯತೆಗಳ ನಡುವೆ ಸಮಾನತೆ ಮತ್ತು ಐಕ್ಯತೆಯನ್ನು ಸಾಧಿಸಿ ಜಪಾನಿ ಆಕ್ರಮಣಕಾರರನ್ನು ಹಿಮ್ಮೆಟ್ಟಿಸಲು ಸಾಧ್ಯವಾಯಿತು. ಹ್ಯಾನ್ಸ್ ಜನಾಂಗದಂತೆಯೇ ಮಂಗೋಲಿಯನ್ನರು ಮತ್ತು ಹೂಯಿಸ್‌ರು ಸಹ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಸಮಾನ ಹಕ್ಕುಗಳನ್ನು ಹೊಂದಿ ದ್ದಾರೆ. ಮಂಗೋಲಿಯನ್ನರು ಮತ್ತು ಹೂಯಿಸ್ ಅವರಿಗಾಗಿ ಪ್ರಾಧಿಕಾರ ಪ್ರದೇಶಗಳನ್ನು ಸ್ಥಾಪಿಸಿ ಅವರ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳನ್ನು ಗೌರವಿಸಲಾಗುತ್ತಿದೆ.

ರಷ್ಯಾದ ಪ್ರಭಾವ

ಚೀನಾದ ಎಲ್ಲ ಭಾಗದ ಯುವಕರಲ್ಲೂ ಮಾರ್ಕ್ಸ್‌ವಾದದ ಪ್ರಭಾವವು ಒಂದು ತತ್ವಶಾಸ್ತ್ರವಾಗಿ ಮತ್ತು ಧಾರ್ಮಿಕತೆಗೆ ಪರ್ಯಾಯವಾಗಿ ಪ್ರತಿಧ್ವನಿಸುತ್ತಿತ್ತು. ಲೆನಿನ್ ನನ್ನು ಬಹುತೇಕ ಪೂಜಿಸುವಷ್ಟರ ಮಟ್ಟಿನ ಪ್ರೀತಿಯಿತ್ತು ಮತ್ತು ಸ್ಟಾಲಿನ್‌ರು ಚೀನಾದಲ್ಲಿ ವಿದೇಶಿ ನಾಯಕರಲ್ಲೇ ಅತಿ ಹೆಚ್ಚಿನ ಪ್ರಚಾರ ಪಡೆದಿದ್ದ ನಾಯಕರೆನಿಸಿದ್ದರು. ಮ್ಯಾಕ್ಸಿಂ ಗಾರ್ಕಿಯವರ ಸಾಹಿತ್ಯವು ಅತ್ಯಂತ ಜನಪ್ರಿಯತೆ ಪಡೆದಿತ್ತು. ಚೀನಾದ ಕ್ರಾಂತಿಯು ಪ್ರತ್ಯೇಕವಲ್ಲವೆಂದು ತಮ್ಮೊಡನೆ ರಷ್ಯಾದಿಂದ ಮಾತ್ರವಲ್ಲ ಪ್ರಪಂಚದ ಎಲ್ಲೆಡೆ ಅಸಂಖ್ಯಾತ ಕಾರ್ಮಿಕರು ತಮ್ಮ ಹೋರಾಟವನ್ನು ಅತ್ಯಂತ ಕಾತರದಿಂದ ಎದುರು ನೋಡುತ್ತಿದ್ದು, ಸಮಯ ಬಂದಾಗ ತಮ್ಮನ್ನು ಉತ್ತುಂಗಕ್ಕೇರಿಸುವರೆಂದು ಚೀನಾದ ಕೆಂಪು ಹೋರಾಟಗಾರರು ನಂಬಿದ್ದರು. ಚೀನಾದ ಕೆಂಪು ಸೇನೆಯನ್ನು ರಷ್ಯಾದ ಮಿಲಿಟರಿ ರೀತಿಯಲ್ಲೇ ನಿರ್ಮಿಸಲಾಯಿತು ಮತ್ತು ಅದರ ವ್ಯೂಹ ಮತ್ತು ತಂತ್ರಗಳ ಬಹುತೇಕ ಪಾಲು ರಷ್ಯಾದ ಅನುಭವದಿಂದ ಪಡೆದದ್ದಾಗಿತ್ತು.

ಮಾನವ ಇತಿಹಾಸದ ನವೀನ ಯುಗದಲ್ಲಿ ವಿಶ್ವದಲ್ಲಿ ದುಡಿಯುವ ಜನತೆಯು ಕ್ರಾಂತಿಯ ಸಿದ್ಧಾಂತ ಮತ್ತು ವ್ಯೂಹವನ್ನು ಲೆನಿನ್‌ರಂತೇನೂ ಮಾವೋ ಅವರು ರೂಪಿಸಬೇಕಿರಲಲ್ಲ. ಕಮ್ಯುನಿಸ್ಟ್ ಅಂತಾರಾಷ್ಟ್ರೀಯ (ಕಮ್ಯುನಿಸ್ಟ್ ಇಂಟರ್‌ನ್ಯಾಷನಲ್)ವು ಚೀನಾದ ನಿರ್ದಿಷ್ಟ ಪರಿಸ್ಥಿತಿ ಗಳಿಗನುಗುಣವಾಗಿ ರೂಪಿಸಿದ ದುಡಿಯುವ ಜನತೆಯ ಕ್ರಾಂತಿಯ ಸಿದ್ಧಾಂತ ಮತ್ತು ವ್ಯೂಹವನ್ನು ಮಾವೋ ನೇರವಾಗಿ ಅನುಷ್ಠಾನಗೊಳಿಸಬೇಕಾಗಿತ್ತು. ಅಂತಿಮವಾಗಿ ರಾಜಕೀಯ ಸಿದ್ಧಾಂತ, ವ್ಯೂಹಾತ್ಮಕ ನಿಲುಮೆ ಮತ್ತು ಚೀನಾದ ಕಮ್ಯುನಿಸ್ಟರ ನಾಯಕತ್ವ ಇವೆಲ್ಲವೂ ಕಮ್ಯುನಿಸ್ಟ್ ಅಂತಾರಾಷ್ಟ್ರೀಯದ ನಿರಂತರ ಮಾರ್ಗದರ್ಶನದಲ್ಲಿ ನಡೆಯುತ್ತಿತ್ತು.

ಮಾವೋ ಮತ್ತು ಕ್ರಾಂತಿ

ಮಾವೋ ಅವರು ಕಮ್ಯುನಿಸ್ಟ್ ಪಕ್ಷದ ಮೂರು ಬಹುಮುಖ್ಯ ಕಾರ್ಯಶೈಲಿಗಳಿಗೆ ಒತ್ತು ನೀಡಿದರು. ಆಚರಣೆಯೊಂದಿಗೆ ಸಿದ್ಧಾಂತವನ್ನು ಐಕ್ಯಗೊಳಿಸುವುದು, ಜನತೆಯೊಂದಿಗೆ ಹತ್ತಿರದ ಸಂಬಂಧ ಹೊಂದುವುದು ಮತ್ತು ಸ್ವವಿಮರ್ಶೆಯನ್ನು ಮಾಡಿಕೊಳ್ಳುವುದು. ಅವರು ಅಧ್ಯಕ್ಷರಾಗಿ ಚುನಾಯಿತರಾದ ಮಹಾಧಿವೇಶನದಲ್ಲಿ ಚೀನಾದ ಕ್ರಾಂತಿಯ ವಾಸ್ತವಗಳೊಂದಿಗೆ ಮಾರ್ಕ್ಸ್‌ವಾದ – ಲೆನಿನ್‌ವಾದ ಮೂಲತತ್ವಗಳನ್ನು ಐಕ್ಯಗೊಳಿಸುವ ಮಾವೋ ಜಿಡಾಂಗ್ ಆಲೋಚನೆಯನ್ನು ಚೀನಾ ಕಮ್ಯುನಿಸ್ಟ್ ಪಕ್ಷದ ಮಾರ್ಗದರ್ಶಿ ಸಿದ್ಧಾಂತವೆಂದು ಅಂಗೀಕರಿಸಲಾಯಿತು. ಅವರನ್ನು ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಚುನಾಯಿಸಲಾಯಿತು.

ಮಾವೋ ಜೆಡಾಂಗ್ ಚೀನಾದ ಸ್ವಂತ ಮಣ್ಣಿನಿಂದ ಉದ್ಭವವಾಗಿರುವ ಮಹಾನ್ ನಾಯಕ. ಅವರನ್ನು ಅಕಸ್ಮಾತ್ತಾಗಿ ಉದಯವಾದ ನಾಯಕನೆಂದೋ, ಹುಟ್ಟಿನಿಂದಲೇ ಆದ ನಾಯಕನೆಂದೋ, ದೇವತಾ ಮನುಷ್ಯ ಅಥವಾ ಅವರನ್ನು ಅನುಸರಿಸಲು ಸಾಧ್ಯವೇ ಇಲ್ಲದವರೆಂದೋ ಭಾವಿಸುವಂತಿಲ್ಲ. ಮಾವೋ ಚೀನಾದ ಜನತೆಯಲ್ಲಿ ಜನಿಸಿದ, ಅವರೊಡನೆ ರಕ್ತ ಮಾಂಸಗಳ ಬಂಧವನ್ನಿರಿಸಿದ್ದ ಮತ್ತು ಚೀನಾದ ಭೂ ಮತ್ತು ಸಮಾಜ ದಲ್ಲಿ ಆಳವಾಗಿ ಬೇರೂರಿದ ನಾಯಕ.

ಅಧ್ಯಕ್ಷ ಮಾವೋ ಹೇಳುವಂತೆ ಅವರು ಹುಟ್ಟಿ ಬೆಳೆದದ್ದು ಹಿಂದುಳಿದ ಗ್ರಾಮೀಣ ಪ್ರದೇಶದಲ್ಲಿ ಮತ್ತು ಅವರು ಯುವಕರಾಗಿದ್ದಾಗ ತುಂಬಾ ಅಂಧಶ್ರದ್ಧೆಯನ್ನು ಹೊಂದಿದ್ದರು ಮತ್ತು ಆಲೋಚನೆಗಳಲ್ಲಿ ಹಿಂದುಳಿದಿದ್ದರು. ಚೀನಾದ ಪಾಳೇಗಾರಿ ಸಂಸ್ಕೃತಿಯ ದೌರ್ಬಲ್ಯಗಳನ್ನು ಮಾವೋ ಅಪ್ರಜ್ಞಾಪೂರ್ವಕವಾಗಿ ಹೊಂದಿದ್ದರು. ಆದರೆ ಸತತ ಪರಿಶ್ರಮ, ಶ್ರದ್ಧೆ ಮತ್ತು ನಿರಂತರ ಹೋರಾಟಗಳಿಂದ ತಮ್ಮನ್ನು ಪರಿವರ್ತನೆಗೆ ಒಡ್ಡಿಕೊಂಡು ಅಭೂತಪೂರ್ವ ಕ್ರಾಂತಿಯ ಸಾಕಾರಕ್ಕೆ ಮಹಾನ್ ಕೊಡುಗೆ ನೀಡಿ ಅದ್ವಿತೀಯ ನಾಯಕನೆನಿಸಿದರು.

ಮಾವೋ ಅವರ ಅನಿಸಿಕೆಗಳನ್ನು ಎಲ್ಲರೂ ಒಪ್ಪದಿದ್ದಾಗ ಅವರು ಕಾಯುತ್ತಿದ್ದರು. ಹತ್ತು ವರ್ಷಕಾಲದ ಆಂತರಿಕ ಯುದ್ಧ ನಡೆಯುತ್ತಿದ್ದಾಗ ಕಮ್ಯುನಿಸ್ಟ್ ಪಕ್ಷದಲ್ಲಿ ಬಹುತೇಕರು ದೊಡ್ಡ ನಗರಗಳನ್ನು ದಾಳಿ ಮಾಡಬೇಕೆಂದಾಗ, ಅವರ ಸೇನೆ ಕಡಿಮೆಯಿರುವುದರಿಂದ ಅಂತಹ ದಾಳಿ ಸದ್ಯದಲ್ಲಿ ಬೇಡವೆಂದು ಮಾವೋ ಹೇಳಿದರು. ದೊಡ್ಡ ನಗರಗಳ ಮೇಲೆ ದಾಳಿ ನಡೆಸುವುದಕ್ಕಿಂತ ಮೂಲ ನೆಲೆಗಳನ್ನು ಬಲಗೊಳಿಸಬೇಕೆಂದು ಅವರು ಹೇಳಿದರೂ ಸಹ ಪಕ್ಷದಲ್ಲಿ ಬಹುತೇಕ ಸದಸ್ಯರ ಅಭಿಪ್ರಾಯ ಇದಕ್ಕೆ ವಿರುದ್ಧವಾಗಿತ್ತು. ಇದರಿಂದಾಗಿ ಸೇನೆಯು ಸೋಲನ್ನನುಭವಿಸಬೇಕಾಯಿತು. ಆಗ ತಮ್ಮ ತಂತ್ರವನ್ನು ಬದಲಿಸೋಣವೆಂದು ಮಾವೋ ಪ್ರಸ್ತಾವನೆ ಇಟ್ಟಾಗ ಅದಕ್ಕೆ ಪಕ್ಷದ ಅನುಮೋದನೆ ದೊರಕಿ ಸೇನೆಯು ಗೆದ್ದಿತು. ಹೀಗೆ ಬಹುಸಂಖ್ಯಾತರ ತೀರ್ಮಾನವನ್ನು ಅನುಸರಿಸಿ ಅವಕಾಶ ಸಿಕ್ಕಾಗ ತಮ್ಮ ದೃಷ್ಟಿಕೋನವನ್ನು ಸಾಬೀತು ಮಾಡುತ್ತಿದ್ದರು.

ಪಕ್ಷದ ಮುಂದಾಳುಗಳು ಆರಂಭದಲ್ಲಿ ಮಾವೋ ಅವರ ಈ ಮುಂಚಿನ ದೃಷ್ಟಿಕೋನ ವನ್ನು ಒಪ್ಪಿದ್ದಲ್ಲಿ ಕ್ರಾಂತಿಯು ಇಷ್ಟೊಂದು ದೊಡ್ಡ ನಷ್ಟಗಳನ್ನು ಅನುಭವಿಸಬೇಕಾಗಿರಲಿಲ್ಲ. ಆದರೆ ಹಿಂದುಳಿದ ಚೀನಾ ಸಮಾಜದ ಪ್ರಭಾವವು ಪಕ್ಷ ಮತ್ತು ಕ್ರಾಂತಿಕಾರಿ ಸಂಘಟನೆಗಳ ಒಳಗೆ ಪ್ರತಿಬಿಂಬಿತವಾಗಿತ್ತು.

ಮಾವೋ ಜೆಡಾಂಗ್ ಚಿಂತನೆ

ಮಾವೋ ಓದಿದ್ದು, ಅವರು ಕೈಗೊಂಡ ಆಚರಣೆಗಳೂ, ಅವರ ಕಾರ್ಯಸಾಧನೆ ಮತ್ತು ಅವರು ನುಡಿದಿರುವುದೆಲ್ಲವನ್ನು ಸ್ವಲ್ಪವೂ ವ್ಯತ್ಯಾಸವಿಲ್ಲದಂತೆ ಅನುಸರಿಸುವುದೇ ಮಾವೋ ಅವರ ಸಿದ್ಧಾಂತವಲ್ಲ. ಮಾವೋ ಜೆಡಾಂಗ್ ಚಿಂತನೆಯ ಮೂಲ ಅಂಶವೆಂದರೆ ವಾಸ್ತವಾಂಶಗಳಿಂದ ಸತ್ಯವನ್ನು ಹುಡುಕಿ ಚೀನಾ ಕ್ರಾಂತಿಯ ವಾಸ್ತವ ಆಚರಣೆಯೊಂದಿಗೆ ಮಾರ್ಕ್ಸ್‌ವಾದ – ಲೆನಿನ್‌ವಾದದ ಸಾರ್ವತ್ರಿಕ ಸತ್ಯವನ್ನು ಐಕ್ಯಗೊಳಿಸುವುದು.

ಮಾರ್ಕ್ಸ್ ಮತ್ತು ಲೆನಿನ್ ಅವರ ಜೀವಿತಾವಧಿಯಲ್ಲಿ ಪ್ರಪಂಚದಲ್ಲೆಲ್ಲೂ ರೂಪಿಸಿರ ದಿದ್ದ ವ್ಯೂಹಾತ್ಮಕ ತತ್ವಾದ ಗ್ರಾಮೀಣ ನೆಲೆಗಳಿಂದ ನಗರಗಳನ್ನು ಸುತ್ತುವರಿಯುವುದನ್ನು ಮಾರ್ಕ್ಸ್ ಮತ್ತು ಲೆನಿನ್ ಎಲ್ಲೂ ಹೇಳಿರಲಿಲ್ಲ. ಆದರೆ ಚೀನಾದ ವಾಸ್ತವ ಪರಿಸ್ಥಿತಿಯಲ್ಲಿ ಕ್ರಾಂತಿಯ ಹಾದಿಯೇ ಅದೆಂದು ಮಾವೋ ಗುರುತಿಸಿದರು. ದೇಶವನ್ನು ಪ್ರತ್ಯೇಕ ಪಾಳೇಗಾರರು ವಿಭಜಿಸಿ ಹಂಚಿಕೊಂಡಿದ್ದಾಗ, ಶತ್ರುಗಳ ಹಿಡಿತವು ದುರ್ಬಲವಾಗಿರುವ ಪ್ರದೇಶಗಳಲ್ಲಿ ಕ್ರಾಂತಿಕಾರಿ ನೆಲೆಗಳನ್ನು ಸ್ಥಾಪಿಸಿ ಜನತೆಯನ್ನು ಮುನ್ನಡೆಸಿ, ಹಳ್ಳಿಗಾಡಿನಿಂದ ನಗರಗಳನ್ನು ಸುತ್ತುವರಿದು ಅಂತಿಮವಾಗಿ ಅಧಿಕಾರ ಗ್ರಹಣ ಮಾಡುವಲ್ಲಿ ಮಾವೋ ಯಶಸ್ವಿಯಾದರು. ಲೆನಿನ್ ಅವರ ನೇತೃತ್ವದಲ್ಲಿ ಬೋಲ್ಷೆವಿಕ್ ಪಕ್ಷವು ಸಹ ಸಾಮ್ರಾಜ್ಯಶಾಹಿ ಸರಪಳಿಯ ದುರ್ಬಲ ಕೊಂಡಿಯಲ್ಲಿ ತನ್ನ ಕ್ರಾಂತಿಯನ್ನು ಸಾಧಿಸಿದ ರೀತಿಯಲ್ಲಿಯೇ ಇದಾಗಿತ್ತು.

ಕಾಮ್ರೇಡ್ ಮಾವೋ ಜೆಡಾಂಗ್‌ರ ಏಳಿಗೆ ಮತ್ತು ಚಿಂತನೆಗಳು ಬರೇ ಅವರದು ಮಾತ್ರವಾಗಿರಲಿಲ್ಲ. ಮಾವೋ ಅವರ ಚಿಂತನೆ ಕುರಿತು ಚೀನಾ ಕಮ್ಯುನಿಸ್ಟ್ ಪಕ್ಷದ ಅಭಿಪ್ರಾಯ ಇಂತಿದೆ,

ಅದು ಸಹಪಾಠಿ ಕಾಮ್ರೇಡುಗಳು, ಪಕ್ಷ ಮತ್ತು ಜನತೆಯದು. ಅರ್ಧಶತಮಾನಕ್ಕೂ ಹೆಚ್ಚಿನ ಕಾಲ ಚೀನಾ ಜನತೆಯ ಕ್ರಾಂತಿಕಾರಿ ಹೋರಾಟದ ಅನುಭವದ ಘನೀಕರಣವೇ ಅವರ ಚಿಂತನೆಯಾಗಿದೆ. ಇತಿಹಾಸ ಜನರಿಂದಾಗುತ್ತದೆಯೇ ಹೊರತು ಒಬ್ಬ ವ್ಯಕ್ತಿಯಿಂದಲ್ಲ. ಆದರೆ, ಅಸಾಧಾರಣ ವ್ಯಕ್ತಿಯೊಬ್ಬನನ್ನು ಜನತೆ ಗೌರವಿಸಬೇಕೇ ಹೊರತು ಕುರುಡಾಗಿ ದೇವರಂತೆ ಪೂಜಿಸುವುದಲ್ಲ. ಜನತೆಯೇ ನಿಜವಾದ ಹೀರೋಗಳು. ಅವರನ್ನು ಸನ್ನದ್ಧಗೊಳಿಸಿ ಅವರ ಮೇಲೆ ಅವಲಂಬಿತರಾಗುವುದರಿಂದ ನಾವು ಪರ್ವತ ಮತ್ತು ಸಾಗರಗಳನ್ನೇ ಪುನರ್ ನಿರ್ಮಿಸಬಹುದು.

ಮಾವೋ ಅವರೇ ಹೇಳುವಂತೆ ಸಶಸ್ತ್ರ ಹೋರಾಟಕ್ಕೆ ಒತ್ತು ನೀಡುವುದೆಂದರೆ ಇತರೆ ರೂಪದ ಹೋರಾಟಗಳನ್ನು ಕೈಬಿಡುವುದೆಂದು ಅರ್ಥವಲ್ಲ. ಇತರೆ ರೂಪದ ಹೋರಾಟಗಳ ಸಹಯೋಗವಿಲ್ಲದಿದ್ದಲ್ಲಿ ಸಸಶ್ತ್ರ ಹೋರಾಟ ಯಶಸ್ವಿಯಾಗುವುದಿಲ್ಲ. ಗ್ರಾಮೀಣ ನೆಲೆಗಳಲ್ಲಿ ಕಾರ್ಯೋನ್ಮುಖವಾಗುವುದಕ್ಕೆ ಒತ್ತು ನೀಡುವುದೆಂದರೆ ಇನ್ನೂ ಶತ್ರುಗಳ ಆಳ್ವಿಕೆಯಲ್ಲಿರುವ ನಗರಗಳು ಮತ್ತು ಇತರೆ ವಿಶಾಲ ಗ್ರಾಮೀಣ ಪ್ರದೇಶಗಳಲ್ಲಿನ ನಮ್ಮ ಕೆಲಸವನ್ನು ಬಿಟ್ಟುಬಿಡುವುದೆಂದು ಅರ್ಥವಲ್ಲ. ಬರೇ ನಗರಗಳು ಮತ್ತು ಇತರೆ ವಿಶಾಲ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸದಿದ್ದರೆ ನಮ್ಮ ಸ್ವಂತ ಗ್ರಾಮೀಣ ನೆಲೆಗಳೇ ಪ್ರತ್ಯೇಕಗೊಂಡು ಕ್ರಾಂತಿಯೂ ಇನ್ನಷ್ಟು ಸೋಲನುಭವಿಸುತ್ತದೆ. ಮಿಗಿಲಾಗಿ, ಕ್ರಾಂತಿಯ ಅಂತಿಮ ಗುರಿಯೆಂದರೆ ಎಲ್ಲ ನಗರಗಳು, ಶತ್ರುಗಳ ಪ್ರಧಾನ ನೆಲೆಗಳನ್ನು ವಶಪಡಿಸಿ ಕೊಳ್ಳುವುದು. ನಗರಗಳಲ್ಲಿ ಅಗತ್ಯ ಕೆಲಸ ಮಾಡದೇ ಈ ಗುರಿಯನ್ನು ಸಾಧಿಸಲಾಗುವುದಿಲ್ಲ. ಇದು ಸಶಸ್ತ್ರ ಹೋರಾಟವನ್ನು ಕುರುಡು ಕುರುಡಾಗಿ ನಕಲು ಮಾಡುವವರಿಗೆ ಎಚ್ಚರಿಕೆಯ ಪಾಠದಂತಿದೆ.

ಮಾವೋ ಅವರ ವ್ಯಕ್ತಿತ್ವ ಮತ್ತು ಕೊಡುಗೆ

ಮಾವೋ ಅವರ ವಜ್ರದಂಥಹ ಕಠಿಣ ನಿರ್ಧಾರಗಳು ಮತ್ತು ಅಚಲ ವಿಶ್ವಾಸದ ಭದ್ರಕೋಟೆಯೊಳಗೆ ಅಂತಃಕರುಣೆ, ಸಾಮಾಜಿಕ ಕಳಕಳಿ, ಪ್ರೀತಿ ವಿಶ್ವಾಸ ತುಂಬಿತುಳುಕುತ್ತಿದ್ದವು. ಎಲ್ಲ ಕಮ್ಯುನಿಸ್ಟ್ ಧ್ಯೇಯಕ್ಕೆ ತಕ್ಕಂತೆ ಅವರೊಬ್ಬ ಮಹಾನ್ ಮಾನವತಾವಾದಿಯಾಗಿದ್ದರು.

ಮಾವೋ ಎಂತಹವರನ್ನೂ ಸೂಜಿಗಲ್ಲಿನಂತೆ ಸೆಳೆಯುವ ಅತ್ಯಾಕರ್ಷಣೆಯನ್ನು ಹೊಂದಿದ್ದರು. ಅವರು ಚೀನಾದ ಸಾಮಾನ್ಯ ರೈತನೊಬ್ಬನ ಸರಳತೆ ಮತ್ತು ವೇಷವನ್ನು ಹೊತ್ತಂತ್ತಿದ್ದು, ಅವರ ಜೀವಂತ ಹಾಸ್ಯ ಚಟಾಕಿ ಮತ್ತು ಗುಂಡು ಹೊಡೆದಂತೆ ನಗುವ ಪ್ರೀತಿಯನ್ನು ಸದಾ ಅವರಲ್ಲಿ ಕಾಣಬಹುದಿತ್ತು. ತಮ್ಮ ಸರಳ ಮಾತಿನಂತೆಯೇ ಸರಳ ಬದುಕು ನಡೆಸುತ್ತಿದ್ದರು. ಅವರು ಚೀನಿ ಜನಪದ ವಿದ್ವಾಂಸ, ತತ್ವಶಾಸ್ತ್ರ ಮತ್ತು ಇತಿಹಾಸದ ಶ್ರದ್ಧಾ ವಿದ್ಯಾರ್ಥಿ, ಅದ್ಭುತ ಮಾತುಗಾರ, ಒಳ್ಳೆಯ ನೆನಪಿನ ಶಕ್ತಿ ಮತ್ತು ಅಸಾಧಾರಣ ಏಕಾಗ್ರತಾ ಶಕ್ತಿಯನ್ನು ಹೊಂದಿರುವ ಸಮರ್ಥ ಬರಹಗಾರರೂ ಆಗಿದ್ದರೂ. ತನ್ನ ವೈಯಕ್ತಿಕ ಸ್ವಭಾವ ಮತ್ತು ವೇಷದಲ್ಲಿ ಗಮನ ಹರಿಸದವರಂತೆ ಕಂಡುಬಂದರೂ ಕೆಲಸದ ವಿವರಗಳ ಕುರಿತು ಆಶ್ಚರ್ಯಕರವಾದ ಕಾರ್ಯತಂತ್ರ, ದಣಿವೇ ಇಲ್ಲದ ದೈತ್ಯ ಮಾನವ ಮತ್ತು ರಾಜಕೀಯ ತಂತ್ರದ ಮಹಾನ್ ಶಕ್ತಿಯಾಗಿದ್ದರು. ಮಾವೋ ಅವರ ಲಕ್ಸುರಿ ವಸ್ತುವೆಂದರೆ ಸೊಳ್ಳೆ ಪರದೆ. ಅದನ್ನು ಬಿಟ್ಟರೆ ಅವರು ಕೆಂಪು ಸೇನೆಯ ನಾಯಕತ್ವದ ನಂತರ, ಭೂಮಾಲೀಕರು, ಅಧಿಕಾರಿಗಳೂ ಮತ್ತು ತೆರಿಗೆ ಅಧಿಕಾರಿಗಳ ಸಾವಿರಾರು ಆಸ್ತಿಗಳನ್ನು ಕಸಿದುಕೊಂಡ ನಂತರವೂ ಮಾವೋ ಅವರಲ್ಲಿದ್ದದ್ದು ಕೇವಲ ಹೊದಿಕೆಗಳು ಮತ್ತು ಎರಡು ಹತ್ತಿ ಸಮವಸ್ತ್ರಗಳಷ್ಟೆ. ಅವರು ಸಾಮಾನ್ಯ ಕೆಂಪು ಸೈನಿಕನಂತೆ ತಮ್ಮ ಕೋಟಿನ ಕುತ್ತಿಗೆ ಪಟ್ಟಿಗೆ ಎರಡು ಕೆಂಪು ಪಟ್ಟಿಗಳನ್ನು ಧರಿಸಿ ಕೊಳ್ಳುತ್ತಿದ್ದರಷ್ಟೆ. ಮಾರ್ಕ್ಸ್‌ವಾದವು ಅವರ ಆಲೋಚನೆಯಲ್ಲಿ ಕೇಂದ್ರ ವಿಷಯ ವಾಗಿದ್ದರು, ವರ್ಗ ವೈಷಮ್ಯವು ಅವರಲ್ಲಿ ಮೂಲತಃ ಅವರ ತತ್ವಶಾಸ್ತ್ರ ಕಾರ್ಯಾಸಕ್ತಿಯಿಂದ ಮತ್ತು ನಿರಂತರ ಶ್ರದ್ಧೆಯಿಂದ ಗಳಿಸಿರುವ ಬೌದ್ದಿಕ ಸಂಪತ್ತಾಗಿತ್ತೆಂದು ಕೆಲವು ಬರಹಗಾರರು ವಿಶ್ಲೇಷಿಸುತ್ತಾರೆ. ಅವರು ನಿಧನ ಹೊಂದಿದ ಕಾಮ್ರೇಡುಗಳ ಬಗ್ಗೆ ಮಾತನಾಡುವಾಗ ಅಥವಾ ತಮ್ಮ ಯುವ ಜೀವನದ ನೆನಪು ಮಾಡಿಕೊಳ್ಳುವಾಗ ಅಥವಾ ಹಸಿವಿನಿಂದ ನರಳುತ್ತಿರುವ ಜನರು ಭೂಮಾಲೀಕರಲ್ಲಿ ಆಹಾರ ಕೇಳಿ ತಲೆ ಕಳೆದುಕೊಂಡ ಘಟನೆಗಳನ್ನು ಸ್ಮರಿಸುವಾಗ ಅವರ ಕಣ್ಣುಗಳಲ್ಲಿ ನೀರು ತುಂಬುತ್ತಿತ್ತು.

ಮಾವೋ ಅವರ ಜನಪರ ಕಾಳಿಜಿಯನ್ನು ಬಿಂಬಿಸುವ ಉದಾಹರಣೆಯನ್ನು ಹೇಳಬಹುದಾದಲ್ಲಿ, ಒಂದೊಮ್ಮೆ ಇವರ ಸಹಾಯಕನು ಮಾವೋ ತಿಂದು ತಿಳಿಸಿದ್ದ ಆಹಾರವನ್ನು ಬಿಸಾಡಿ ಮುಂದಿನ ಊಟಕ್ಕೆ ತಾಜ ಆಹಾರವನ್ನು ಸಿದ್ಧ ಮಾಡಿ ಇಡುತ್ತಿದ್ದನಂತೆ. ಇದನ್ನು ಗಮನಿಸಿದ ಮಾವೋ ಜನರು ಬೆಳೆಯುವ ಪ್ರತಿ ಅನ್ನದ ಕಾಳಿಗೂ ಹೋರಾಟ ನಡೆಯುತ್ತದೆ. ಆದ್ದರಿಂದ ಉಳಿದದ್ದನ್ನು ಬಿಸಾಡದೆ ಮುಂದಿನ ಊಟಕ್ಕೆ ಬಡಿಸು ಎಂದು ಅವನಿಗೆ ಹೇಳಿದರಂತೆ.

ಮಾವೋ ಹಗಲು ರಾತ್ರಿ ನಿರಂತರವಾಗಿ ಅಧ್ಯಯನ ನಡೆಸುತ್ತಿದ್ದರೂ ಸಮಾಧಾನ ಗೊಳ್ಳುತ್ತಿರಲಿಲ್ಲ. ಗೆರಿಲ್ಲಾ ಯುದ್ಧ ತಂತ್ರವನ್ನು ವ್ಯೂಹಾತ್ಮಕವಾಗಿ ಉನ್ನತ ಮಟ್ಟಕೇರಿಸಿ, ಪಕ್ಷದೊಳಗೆ ಮತ್ತು ಹೊರಗಡೆ ಗೆರಿಲ್ಲಾ ಯುದ್ಧ ತಂತ್ರದ ಪ್ರಾಮುಖ್ಯತೆಯನ್ನು ಕಡೆಗಣಿಸುವವರ ಕಣ್ಣು ತೆರೆಸಿದರು. ಮಾವೋ ಅವರ ಈ ಪ್ರಧಾನ ಮಿಲಿಟರಿ ಕೃತಿಗಳು ಮಾಕ್ಸ್ ವಾದದ ಮಿಲಿಟರಿ ಸಿದ್ಧಾಂತಕ್ಕೆ ಅವರು ನೀಡಿರುವ ಮಹತ್ತರ ಕೊಡುಗೆಯೆನಿಸಿವೆ. ಇಡೀ ಪಕ್ಷವು ಮಾರ್ಕ್ಸ್‌ವಾದ ಮತ್ತು ಲೆನಿನ್ ವಾದವನ್ನು ಓದುವಂತೆ ಅನುವುಗೊಳಿಸಲು ಕ್ರಮ ಕೈಗೊಂಡು ಸಿದ್ಧಾಂತವನ್ನು ಕೇವಲ ಒಂದು ಶಾಸ್ತ್ರಾಂಧತೆಯಾಗಿ ಅನುಸರಿಸದೆ ಅದನ್ನು ಚೀನಾದ ವಾಸ್ತವಕ್ಕಾನುಗುಣವಾಗಿ ಆಚರಣೆಗೆ ತರಬೇಕೆಂದು ಅವರು ಒತ್ತಾಯಿಸಿದರು. ಗುರಿ, ಕಾರ್ಯ, ಪ್ರೇರಣಾ ಶಕ್ತಿ, ಗುಣಲಕ್ಷಣಗಳನ್ನು ನಿರ್ದಿಷ್ಟಗೊಳಿಸಿ ಮತ್ತು ಹೊಸ ಪ್ರಜಪ್ರಭುತ್ವ ಕ್ರಾಂತಿಯ ಭವಿಷ್ಯತ್ತಿನ ಅಂದಾಜು ಮಾಡುತ್ತಾ ಮಾವೋ ಅವರು ಅದರ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪಷ್ಟ ಚಿತ್ರಣವನ್ನು ಕಟ್ಟಿಕೊಟ್ಟರು.

ವಾಸ್ತವಾಂಶಗಳಿಂದ ಸತ್ಯವನ್ನು ಹುಡುಕುವುದೇ ಅವರ ಧ್ಯೇಯವಾಗಿತ್ತು. ಅದೆಂತಹ ವಿಶ್ವಾಸ ಕುಗ್ಗಿಸುವಂತಹ ಸೋಲುಗಳೇ ಬಂದರೂ ಹೆದರಬಾರದು. ಅವರೇ ಹೇಳುವಂತೆ ‘‘ನಾವಾಗಿ ನಾವೇ ಎದ್ದು ನಿಲ್ಲಬೇಕು, ರಕ್ತ ಒರೆಸಿಕೊಳ್ಳಬೇಕು, ಕುಸಿದು ನೆಲ ಕಚ್ಚಿರುವ ನಮ್ಮ ಕಾಮ್ರೇಡುಗಳನ್ನು ಮಣ್ಣು ಮಾಡಬೇಕು ಮತ್ತು ಪುನಃ ಯುದ್ಧಭೂಮಿಗೆ ಹೋಗಬೇಕು. ಇಂತಹ ಇಚ್ಛಾಶಕ್ತಿ ಮತ್ತು ಧೈರ್ಯವನ್ನು ನಾವು ಹೊಂದಿರಬೇಕು.’’ ಮಾವೋ ಅವರ ವ್ಯಕ್ತಿ ಚಿತ್ರಣಕ್ಕೆ ಐದು ತರಹದ ಪ್ರೇಮಗಳಿಂದ ಜೀವ ತುಂಬಲಾಗುತ್ತದೆ. ಅವೆಂದರೆ ದೇಶ ಪ್ರೇಮ, ಜನತೆಯ ಮೇಲಿನ ಪ್ರೇಮ, ಶ್ರಮದ ಕುರಿತಾದ ಪ್ರೇಮ, ವಿಜ್ಞಾನದ ಪ್ರೇಮ ಮತ್ತು ಸಾಮೂಹಿಕ ಆಸ್ತಿಯ ಪ್ರೇಮ.

ಮಾವೋ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷವು ಮಾರ್ಕ್ಸ್‌ವಾದ – ಲೆನಿನ್‌ವಾದಕ್ಕೆ ನೀಡಿರುವ ಮಹಾನ್ ಕೊಡುಗೆಯೆಂದರೆ ಕ್ರಾಂತಿಕಾರಿಯಾದ ಮೂರು ಪ್ರಧಾನ ಅಂಶಗಳು : ಐಕ್ಯತಾ ರಂಗ, ಸಶಸ್ತ್ರ ಹೋರಾಟ ಮತ್ತು ಬಲಿಷ್ಠ ಕಮ್ಯುನಿಸ್ಟ್ ಪಕ್ಷ. ಈ ಎಲ್ಲ ಅಂಶಗಳನ್ನು ಬದಿಗಿರಿಸಿ ಬರೇ ಸಶಸ್ತ್ರ ಹೋರಾಟವೇ ಮಾವೋ ಅವರ ಸಿದ್ಧಾಂತವೆನ್ನುವುದು ಕೆಲವರ ತಪ್ಪು ಗ್ರಹಿಕೆಯಾಗಿದೆ.

ಚೀನಾ ಸಮಾಜವನ್ನು ಆಳವಾಗಿ ಅಧ್ಯಯನ ಮಾಡಿ ಚೀನಾದ ಕ್ರಾಂತಿಗೆ ಸೂಕ್ತ ವ್ಯೂಹವನ್ನು ಅನುಸರಿಸಿದ್ದು ಅವರ ಅತಿ ದೊಡ್ಡ ಕೊಡುಗೆಯಾಗಿದೆ. ಏಷ್ಯಾದ ಮಹಾನ್ ಕ್ರಾಂತಿಕಾರಿಗಳಾದ ಚೌನ್ ಎನ್ ಲಾಯ್ , ಜು ಡೆ ಮತ್ತು ಮಾವೋ ಜೆಡಾಂಗ್ ಅವರು ಸಾಮ್ರಾಜ್ಯಶಾಹಿ ಮತ್ತು ಚೀನಾದ ಪ್ರತಿಗಾಮಿಗಳ ವಿರುದ್ಧ ಹೋರಾಟದಲ್ಲಿ ತಮ್ಮದೇ ಆದ ಅಸಾಧಾರಣ ಕೊಡುಗೆಯನ್ನು ನೀಡಿ ಚೀನಾವನ್ನು ಅಂತೆಯೇ ಜಾಗತಿಕ ಕಮ್ಯುನಿಸ್ಟ್ ಚಳುವಳಿಯನ್ನು ಹಿಂದೆಂದಿಗಿಂತಲೂ ಅತಿ ಎತ್ತರಕ್ಕೆ ಕೊಂಡೊಯ್ದಿದ್ದಾರೆ.

 

ಪರಾಮರ್ಶನಗ್ರಂಥಗಳು

೧. ಎಡ್ಗರ್ ಸ್ನೋ, ರೆಡ್ ಸ್ಟಾರ್ ಓವರ್ ಚೀನಾ,  ಪೆಂಗ್ವಿನ್ ಬುಕ್ಸ್.

೨. ಸು ಕೈಮಿಂಗ್, ಮಾಡ್ರನ್ ಚೀನಾ ಟಾಪಿಕಲ್ ಹಿಸ್ಟರಿ, (೧೮೪೦೧೯೪೦),  ಬೀಜಿಂಗ್: ನ್ಯೂ ವರ್ಲ್ಡ್ ಪ್ರೆಸ್.

೩. ಸಿಪಿಸಿ ಇತಿಹಾಸದ ಮೇಲಿನ ನಿರ್ಣಯ (೧೯೪೯೮೧), ಚೀನಾದ ದಸ್ತಾವೇಜುಗಳು, ಪ್ರಥಮ ಮುದ್ರಣ ೧೯೮೧, ಬೀಜಿಂಗ್ : ಫಾರೀನ್ ಲಾಂಗ್ವೇಜ್ ಪ್ರೆಸ್.

೪. ನಂಬೂದರಿಪಾದ್ ಇ.ಎಂ.ಎಸ್., ಸೆಪ್ಟೆಂಬರ್ ೧೯೭೬. ಕ್ರಾಂತಿಯ ಸಿದ್ಧಾಂತ ಮತ್ತು ತಂತ್ರಕ್ಕೆ ಮಾವೋ ಜೆಡಾಂಗ್ ಅವರ ಕೊಡುಗೆ,  ಸೋಷಿಯಲ್ ಸೈಂಟಿಸ್ಟ್.

೫. ಜರ್ನಿ ಇನ್ ಟು ರೆವಲ್ಯೂಷನರಿ ಚೀನಾ, ೧೯೮೪, ಪ್ರಥಮ ಮುದ್ರಣ,  ಬೀಜಿಂಗ್ ರಿವ್ಯೂ