ಸಾಮ್ರಾಜ್ಯಶಾಹಿ ಹಾಗೂ ವಸಾಹತು ವ್ಯವಸ್ಥೆಯ ಬಗ್ಗೆ ಮಾತಾಡುವುದು ವಿಚಾರದಷ್ಟೇ ಹಳೆಯದಾಗಿದೆ. ಸಾಮ್ರಾಜ್ಯಶಾಹಿ ಮತ್ತು ವಸಾಹತುಶಾಹಿ ಪದ್ಧತಿ ಮಾನವ ಇತಿಹಾಸದಲ್ಲಿ ಪದೆಪದೆ ಕಾಣಿಸಿಕೊಂಡ ಅಂಶಗಳಾಗಿವೆ. ಆದರೂ ಮೊದಲಿನ, ಅಂದರೆ, ೧೬ನೆಯ ಶತಮಾನದವರೆಗಿನ ಸಾಮ್ರಾಜ್ಯಶಾಹಿ ಮತ್ತು ವಸಾಹತುಶಾಹಿ ಪದ್ಧತಿಗೂ ಮತ್ತು ಅನಂತರದ ಅವಧಿಯಲ್ಲಿ ವಿಜ್ಞಾನ ತಂತ್ರಜ್ಞಾನದ ಅಭಿವೃದ್ದಿ ಮತ್ತು ಭೌಗೋಳಿಕ ಸಂಶೋಧನೆಗಳ ಹಿನ್ನೆಲೆಯಲ್ಲಿ ಕಾಣಿಸಿಕೊಂಡ ಪದ್ಧತಿಗಳಲ್ಲಿ ಸ್ಪಷ್ಟ ಭೇದವಿದೆ. ೧೬ನೆಯ ಶತಮಾನದ ನಂತರ ವಸಾಹತುಶಾಹಿ ಪದ್ಧತಿ ಬಹಳ ಸುಸಂಯೋಜಿತ ಹಾಗೂ ಸುಸಂಘಟಿತವಾಗಿತ್ತು. ಇದರಿಂದಾಗ ಆಫ್ರೋ-ಏಶಿಯಾದ ಮತ್ತು ಲ್ಯಾಟಿನ್ ಅಮೆರಿಕೆಯ ಪ್ರದೇಶಗಳ ಮಾನವ ಹಾಗೂ ಭೌತಿಕ ಸಂಪನ್ಮೂಲಗಳ ಪ್ರಯೋಜನವನ್ನು ವ್ಯವಸ್ಥಿತ ರೀತಿಯಲ್ಲಿ ಪಡೆದುಕೊಳ್ಳಲು ಸಾಧ್ಯವಾಯಿತು. ಎಂತಲೇ ಆಧುನಿಕ ಯುರೋಪಿನ ವಸಾಹತು ಪದ್ಧತಿಯ ಸ್ವರೂಪ ಹಿಂದಿನ ವಸಾಹತು ಪದ್ಧತಿಗಿಂತಲೂ ವಿಶಿಷ್ಟ ಹಾಗೂ ವಿನಾಶಕಾರಿಯಾಗಿತ್ತು. ಇದು ಕೇವಲ ತನ್ನ ಸಂಪರ್ಕಗಳಿಂದ ಮಾತ್ರ ವ್ಯಾಪಕವಾಗಿರದೆ, ಲಕ್ಷಣ ಪ್ರಭಾವ ಹಾಗೂ ವಿಶ್ವದಾದ್ಯಂತ ವಸಾಹತುಗಳಲ್ಲಿನ ಜನರ ಮನಸ್ಸು ಮತ್ತು ಭೌತಿಕ ಜೀವನದ ಮೇಲಿನ ಗಾಢ ಪ್ರಭಾವಕ್ಕೆ ಸಂಬಂಧಿಸಿದಂತೆ ಕೂಡಾ ವ್ಯಾಪಕವಾಗಿತ್ತು.

ಹಿಂದಿನ ಸಾಮ್ರಾಜ್ಯಶಾಹಿ ಮತ್ತು ವಸಾಹತುಶಾಹಿ ಪದ್ಧತಿಗಳು ಒಂದು ಅರ್ಥದಲ್ಲಿ ಸರಳವಾಗಿದ್ದವು. ದಾಳಿ ಮತ್ತು ದಾಳಿ ಮಾಡಿದ ಪ್ರದೇಶವನ್ನು ಆಕ್ರಮಿಸಿಕೊಳ್ಳುವುದರಿಂದ ಅವರು ತೃಪ್ತರಾಗುತ್ತಿದ್ದರು. ಬೇರೆ ಶಬ್ದಗಳಲ್ಲಿ ಹೇಳುವುದಾದರೆ, ಅವುಗಳ ಸ್ವರೂಪ ಮತ್ತು ಶೋಷಣೆಯ ತೀಕ್ಷ್ಣತೆ ಸೀಮಿತವಾಗಿದ್ದವು. ಬಂಡವಾಳಶಾಹಿಗಿಂತ ಮೊದಲಿನ ಈ ಸಾಮ್ರಾಜ್ಯಶಾಹಿ ಪದ್ಧತಿಯಲ್ಲಿ ಕಪ್ಪಕಾಣಿಕೆ ಪಡೆಯುವುದು ಮತ್ತು ಗೆದ್ದುಕೊಂಡ ದೇಶದ ಸಂಪತ್ತನ್ನು ದೋಚಿಕೊಳ್ಳುವುದರಲ್ಲಿ ತೃಪ್ತಿ ಪಡೆಯಲಾಗುತ್ತಿತ್ತು.

೧೬ನೆಯ ಶತಮಾನದ ನಂತರದ ವಸಾಹತು ಪದ್ಧತಿಯಲ್ಲಿ ಹೊಸ ಹಾಗೂ ವಿಭಿನ್ನ ತೆರನಾದ ವಸಾಹತುಶಾಹಿ ಆಚರಣೆಗಳು ಮತ್ತು ನಿಯಂತ್ರಣಗಳ ಉದಯವಾಯಿತು. ಇವು ವಸಾಹತುಗಳಲ್ಲಿನ ಜನರ ತಳಹದಿ ಮತ್ತು ಅವರ ಆದ್ಯತೆಗಳನ್ನು ಬದಲಾಯಿಸಿತು. ಅವರು ತಮ್ಮ ಅರ್ಥವ್ಯವಸ್ಥೆಯನ್ನು ಪುನಾರಚಿಸಿದರು. ಪ್ರಚಲಿತ ಸಮಾಜೋ-ಸಾಂಸ್ಕೃತಿಕ, ರಾಜಕೀಯ ಮತ್ತು ಮಾನಸಿಕ ಚೌಕಟ್ಟುಗಳನ್ನು ಕಿತ್ತೊಗೆದರು. ಇದರಿಂದಾಗಿ ಮೂಲ ದೇಶ ಹಾಗೂ ವಸಾಹತುಗಳ ಮಧ್ಯೆ ಹಲವಾರು ಒಡಂಬಡಿಕೆಗಳಾದವು. ವಸಾಹತು ದೇಶದ ನಿವಾಸಿಗಳನ್ನು-ಯುರೋಪಿನಲ್ಲಿ ಅವರನ್ನು ಸ್ಥಳೀಯರೆಂದು (ಎಬೊರಿಜಿನ್ಸ್) ಕರೆಯಲಾಗುತ್ತಿತ್ತು – ಕಪ್ಪು, ಕೀಳು, ನಂಬಿಕೆಗರ್ಹರಲ್ಲದ, ಒರಟರು, ಲಂಪಟರು ಹಾಗೂ ಅಪ್ರಬುದ್ಧರೆಂದು ತಿಳಿಯಲಾಗಿತ್ತು. ಆದ್ದರಿಂದ ಮನುಷ್ಯರು ಮತ್ತು ಭೌತಿಕ ವಸ್ತುಗಳಿಗೆ ಸಂಬಂಧಿಸಿದಂತೆ ಹೆಚ್ಚು ಉತ್ತಮರು ಹಾಗೂ ಹೆಚ್ಚು ಸುಸಂಘಟಿತರೆಂದು ಭಾವಿಸಲಾಗಿದ್ದ ಯುರೋಪಿನ ಒಡೆಯರು ಬಹಳ ತಿರಸ್ಕಾರದ ಈ ಅಧೀನರನ್ನು ಆಗಾಗ ಬಯ್ಯುತ್ತಿದ್ದರು, ಮುದ್ದಿಸುತ್ತಿದ್ದರು, ಪ್ರೋ ಮತ್ತು ಶಿಕ್ಷಿಸುತ್ತಿದ್ದರು.

ಹೀಗಾಗಿ, ಇನ್ನೊಂದು ಗೌಣ ನೆಲೆಯಲ್ಲಿ, ಈ ಹೊಸ ವಸಾಹತುಶಾಹಿ, ವಸಾಹತು ಗಳಲ್ಲಿನ ಮೂಲನಿವಾಸಿಗಳು ಮತ್ತು ವಸಾಹತು ಒಡೆಯರನ್ನು ಇತಿಹಾಸದಲ್ಲಿನ ಅತ್ಯಂತ ಜಟಿಲ ಹಾಗೂ ತಲ್ಲಣಕಾರಿ ಸಂಬಂಧಗಳಲ್ಲಿ ಬಂಧಿಯನ್ನಾಗಿಸಿತು. ಇದರಿಂದಾಗಿ ವಸಾಹತು ಪ್ರದೇಶದ ಮಾನವ ಹಾಗೂ ಭೌತಿಕ ಸಂಪನ್ಮೂಲಗಳ ಅಭಿವೃದ್ದಿ ಕುಂಠಿತವಾಯಿತು. ಇದರ ಪರಿಣಾಮವಾಗಿ ಹಿಂದಿನ ವಸಾಹತು ಪ್ರದೇಶಗಳಲ್ಲಿ ಅಭಿವೃದ್ದಿ ಯಾಗಲಿಲ್ಲ. ೨೦ನೆಯ ಶತಮಾನದ ಪ್ರಾರಂಭದಲ್ಲಿ ಇದರ ಹೊಡೆತ ಬಹಳ ಪ್ರಬಲವಾಗಿತ್ತು. ಒಂದು ಅಂದಾಜಿನ ಪ್ರಕಾರ ಮೊದಲನೆಯ ಜಾಗತಿಕ ಯುದ್ಧದ ನಂತರ ವಿಶ್ವದ ಶೇ.೮೫ರಷ್ಟು ಭೂಭಾಗವು ಈ ತೆರನಾದ ವಸಾಹತು ಪದ್ಧತಿಯಲ್ಲಿತ್ತು. ಈ ಪದ್ಧತಿಯಡಿ ಸಾಮ್ರಾಜ್ಯಶಾಹಿ ಮತ್ತು ವಸಾಹತುಗಳ ನಡುವಿನ ಸಂಬಂಧ ವಸಾಹತುಗಳನ್ನು ಬಡವಾಗಿಸಿತು.

ವಸಾಹತು ಇರುವುದೇ ತಾಯ್ನಾಡಿನ ಲಾಭಕ್ಕಾಗಿ ಎಂಬ ಸೂಕ್ತಿಯಡಿ ಈ ಹೊಸ ವಸಾಹತುಪದ್ಧತಿ ಕೆಲಸ ಮಾಡುತ್ತಿತ್ತು. ಇಂಥ ಪದ್ಧತಿಯಲ್ಲಿ ತಾಯ್ನಾಡಿಗೆ ಅಥವಾ ಸಾಮ್ರಾಜ್ಯಶಾಹಿ ದೇಶಕ್ಕೆ ಯಾವಾಗಲೂ ಲಾಭವಾಗುತ್ತಿತ್ತು. ನಿಜ ಹೇಳಬೇಕೆಂದರೆ, ಸಾಮ್ರಾಜ್ಯ-ವಸಾಹತುಗಳ ನಡುವಿನ ಸಂಬಂಧ ಹೇಗಿತ್ತೆಂದರೆ ವಸಾಹತುಗಳನ್ನು ಹಾಳು ಮಾಡಿ ಸಾಮ್ರಾಜ್ಯ ಬೆಳೆಯುತ್ತಿತ್ತು. ಈ ವಸಾಹತುಗಳು ಕಚ್ಚಾ ಸಾಮಗ್ರಿಗಳನ್ನು ಪೂರೈಸುತ್ತಿದ್ದವಲ್ಲದೆ, ಸಿದ್ಧವಸ್ತುಗಳಿಗೆ ಮಾರುಕಟ್ಟೆಗಳಾಗಿದ್ದವು. ವಸ್ತುಗಳನ್ನು ವಸಾಹತು ಪ್ರದೇಶದಲ್ಲಿ ತಂದುಹಾಕಿ ಪಟ್ಟಣಗಳಿಗೆ ಮಾರುಕಟ್ಟೆ ಒದಗಿಸುತ್ತಿತ್ತು. ಇದರಿಂದಾಗಿ, ವಸಾಹತುಗಳು ತಮ್ಮ ಕಚ್ಚಾ ಸಾಮಗ್ರಿಗಳನ್ನು ಕಳೆದುಕೊಂಡು, ಕ್ರಮೇಣ ಬಡವಾಗುತ್ತ ಹೋದವು. ಪ್ರೋ ಪೋಷಣೆ ಹಾಗೂ ಬೇಡಿಕೆಯ ಕೊರತೆಯಿಂದಾಗಿ ಅವು ತಯಾರಿಕೆ ನಿಲ್ಲಿಸಿದವು. ಸ್ಥಾನಿಕ ಉದ್ಯಮದಲ್ಲಿನ ಯೋಜಕತ್ವ ಮತ್ತು ನವೀನತೆ ನಾಶವಾದವು. ಆದ್ದರಿಂದ, ಕ್ರಮೇಣ ಅರ್ಥವ್ಯವಸ್ಥೆಯ ಕುಸಿತ ಇಲ್ಲಿ ಕಂಡುಬರುತ್ತದೆ.

ಇಷ್ಟು ಕ್ರಮಬದ್ಧ ಹಾಗೂ ಸಂಘಟಿತವಾದ ರೀತಿಯಲ್ಲಿ ವಸಾಹತುಗಳ ಶೋಷಣೆ ನಡೆಸಲು ಕಾರಣವೇನಿರಬಹುದೆಂಬ ತರ್ಕಬದ್ಧ ಪ್ರಶ್ನೆಗಳು ಉದ್ಭವಿಸುವುದು ಸಹಜ. ಇವುಗಳನ್ನು ಉತ್ತರಿಸಬೇಕಾದರೆ, ೧೬ನೆಯ ಶತಮಾನದ ಸಮಯಕ್ಕೆ ಯುರೋಪಿನಲ್ಲಾದ ಬದಲಾವಣೆ ಮತ್ತು ವಿಶ್ವದ ಇತರ ಭಾಗಗಳಲ್ಲಿ ಅದು ಬೀರಿದ ಪರಿಣಾಮದ ಕಡೆ ನಾವು ಗಮನ ಹರಿಸಬೇಕು. ಪ್ರಪ್ರಥಮವಾಗಿ, ಪುನರುಜ್ಜೀವನದ ಫಲವಾಗಿ ಮುಕ್ತ ವಿಚಾರಧಾರೆ, ಉದಾರಮತವಾದ, ಪ್ರಶ್ನಿಸುವ ಧೋರಣೆ ಮತ್ತು ಅರಿಯದ ಜ್ಞಾನದ ಅನ್ವೇಷಣೆಗಳ ಉಗಮವಾಯಿತು. ಈ ಜ್ಞಾನೋದಯ, ವೈಜ್ಞಾನಿಕ ದೃಷ್ಟಿ ತಂದಿತಲ್ಲದೆ, ಹೊಸ ಆವಿಷ್ಕಾರ ಮತ್ತು ಸಂಶೋಧನೆಗಳಿಗೆಡೆ ಮಾಡಿಕೊಟ್ಟಿತು. ಭೂ ಭೌತಶಾಸ್ತ್ರ, ವಿಶ್ವ, ಸೃಷ್ಟಿ ಮತ್ತು ನಿಸರ್ಗದ ಬಗೆಗಿನ ಸಿದ್ಧಾಂತಗಳನ್ನು ಪ್ರಶ್ನಿಸಲಾಯಿತಲ್ಲದೆ, ಅವುಗಳಿಗೆ ಖಚಿತ ವೈಜ್ಞಾನಿಕ ವ್ಯಾಖ್ಯೆ ನೀಡಿ ಪರಿಷ್ಕರಿಸಲಾಯಿತು. ಇದು ಜ್ಞಾನ, ಸಾಹಸ ಮತ್ತು ಮಹತ್ವಾಕಾಂಕ್ಷೆಯ ಕ್ಷಿತಿಜವನ್ನು ವಿಶಾಲಗೊಳಿಸುವಲ್ಲಿ ಸಹಾಯ ಮಾಡಿತು.

ಇದೇ ಕಾಲಕ್ಕೆ, ಯುರೋಪಿನಲ್ಲಿನ ಸಾಮಾಜಿಕ-ರಾಜಕೀಯ ಮತ್ತು ಆರ್ಥಿಕ ಸ್ಥಿತಿಗಳು ಹಳೆಯ ವ್ಯವಸ್ಥೆಯ ಕಪಿಮುಷ್ಟಿಯಿಂದ ಪಾರಾಗಲು ಹೋರಾಡಿ ಯಶಸ್ವಿಯಾದವು. ಊಳಿಗಮಾನ್ಯ ಪದ್ಧತಿ ಕುಸಿತ ಮತ್ತು ಪ್ರತಿಬಂಧಿತ ಸಾಮಾಜಿಕ ವ್ಯವಸ್ಥೆ, ಸ್ವಂತ ಬಳಕೆಗೆ ಬೇಕಾಗುವುದನ್ನು ಉತ್ಪಾದಿಸಬೇಕೆಂಬ ವಿಚಾರಧಾರೆಯ ಕುಸಿತದಿಂದಾಗಿ, ಹೊಸ ಅಧಿಕಾರಿಗಳ ಹೊಸ ‘ಆರ್ಥಿಕ’ ಶ್ರೇಣೀಕರಣವಾಯಿತು. ಹೆಚ್ಚೆಚ್ಚು ಉತ್ಪಾದಿಸುವುದು ಕ್ರಮೇಣ ಬೆಳೆದು, ಆ ಹೆಚ್ಚಿನಾಂಶವನ್ನು ಮಾರುವುದಕ್ಕೆಡೆ ಮಾಡಿಕೊಟ್ಟಿತು. ದೂರದವರೆಗೆ ಹೋಗಿ ಮಾರುವುದು, ವ್ಯಾಪಾರದ ಪಟ್ಟಣಗಳು, ವಿನಿಮಯ ವ್ಯಾಪಾರದ ಬದಲು ಹಣದ ವ್ಯವಸ್ಥೆ ಮತ್ತು ಸದಾಕಾಲ ಹೊಸ ಮಾರುಕಟ್ಟೆಗಳ ಶೋಧನೆ ಕಾಣಿಸಿಕೊಂಡವು. ಈ ಬದಲಾವಣೆಗಳಿಂದಾಗಿ ಮಧ್ಯಕಾಲೀನ ಸಮಾಜ ಮತ್ತು ಅದರ ಅರ್ಥವ್ಯವಸ್ಥೆಯಲ್ಲಿ ಪ್ರಚಂಡವಾಗಿ ವ್ಯತ್ಯಾಸವಾಯಿತು.

ಈ ಬದಲಾವಣೆಗಳ ಪರಿಣಾಮ ಬಹಳ ಆಳವಾಗಿತ್ತು. ಇದು ಅರ್ಥವ್ಯವಸ್ಥೆಯನ್ನು ಮುಕ್ತಗೊಳಿಸಿತಲ್ಲದೆ, ಸಮಾಜದಲ್ಲಿ ಉದಾರ-ನೀತಿಯನ್ನು ತಂದಿತು. ಸಮಾಜದ ಈ ನಿಧಾನ ರೂಪಾಂತರ ಹಳೆಯ ಹಾಗೂ ಪ್ರಚಲಿತವಾಗಿದ್ದವುಗಳಿಗೆ ಹೊಸ ಸ್ತರಗಳನ್ನು ಸೇರಿಸಿತು. ಶ್ರೀಮಂತವರ್ಗ, ಪುರೋಹಿತವರ್ಗ ಮತ್ತು ಸಾಮಾನ್ಯರನ್ನೊಳಗೊಂಡಿದ್ದ ಹಳೆಯ ಸಮಾಜ, ಈಗ ಹೊಸ ವೃತ್ತಿಪರ ಸಮೂಹಗಳೊಂದಿಗೆ ವಿಸ್ತರಿಸಿಕೊಂಡು ಮತ್ತು ಹೊಂದಿಕೊಂಡು ಹೋಗುವುದಲ್ಲದೆ, ತಮಗೂ ಮತ್ತು ಮುಂಬರುತ್ತಿದ್ದ ಮಧ್ಯಮವರ್ಗದ ವ್ಯಾಪಾರಿಗಳು, ವೃತ್ತಿಪರರು, ಉದ್ಯಮಿಗಳು ಮತ್ತು ವ್ಯವಸ್ಥಾಪಕ ಮುಂತಾದವರ ಮಧ್ಯದ ತಡೆಗಳನ್ನು ಕಿತ್ತೊಗೆಯುವ ಪರಿಸ್ಥಿತಿ ನಿರ್ಮಾಣವಾಯಿತು. ಹೀಗಾಗಿ ಸಮಾಜದ ಊರ್ಧ್ವಮುಖಿಯ ವಿಭಜನೆಯ ಸೆಳೆತಗಳು ಒಂದು ಹೊಸ ವರ್ಗ ಮತ್ತು ಸಾಮಾಜಿಕ ವ್ಯವಸ್ಥೆಯ ಸಮಾನಾಂತರ ಔನ್ನತ್ಯಕ್ಕೆಡೆ ಮಾಡಿಕೊಟ್ಟಿತು.

ಅರ್ಥವ್ಯವಸ್ಥೆಯ ವಿಷಯದಲ್ಲಿ, ಊಳಿಗಮಾನ್ಯ ಪದ್ಧತಿಯ ಕುಸಿತದಿಂದಾಗಿ ಅಭಿವೃದ್ದಿಯನ್ನು ಮಾರುಕಟ್ಟೆಗಳು ನಿರ್ಧರಿಸುವಂತಹ ಮುಕ್ತ ಉದಾರ ಆರ್ಥಿಕ ಅಭಿವೃದ್ದಿ ಕಾಣಸಿಗುತ್ತದೆ. ಒಡೆಯ-ಆಳು ಪದ್ಧತಿ ಕಾರ್ಮಿಕರ ಮುಕ್ತ ಚಲನೆಗೆ ಎಡೆಮಾಡಿಕೊಟ್ಟಿತು. ಹೊಸ ಉದ್ಯಮಶೀಲತೆ ಮತ್ತು ಕೆಲಸದ ಹಂಚಿಕೆಗಳು, ವ್ಯಾಪಾರ ಮತ್ತು ಹೊಸ ಉತ್ಪಾದನಾ ವಿಧಾನಗಳು ಆವಿಷ್ಕಾರ ಮತ್ತು ನವೀನ ವಿಧಾನಗಳಿಗೆಡೆ ಮಾಡಿಕೊಟ್ಟವು. ಇದರಿಂದಾಗಿ ವರ್ತಕ ಬಂಡವಾಳದ ಸ್ವರೂಪ ಅಧಿಕ ಪ್ರಮಾಣದಲ್ಲಿ ವೃದ್ದಿಯಾಗುವ ಈ ಅಂಶವು ನಿತ್ಯ ಬೆಳೆಯುವ ಹೊಸ ಮಾರುಕಟ್ಟೆಗಳ ನಿರಂತರ ಶೋಧನೆಗೆ ಪ್ರೇರೇಪಿಸಿತು. ಇದರಿಂದಾಗಿ ಮೊದಲು ಯುರೋಪಿನಲ್ಲಿ ಮತ್ತು ಅನಂತರ ಯುರೋಪಿನ ಹೊರಗಡೆ ಅಫ್ರೋ-ಏಶಿಯಾದ ಮತ್ತು ಅಮೆರಿಕೆಯ ಪ್ರದೇಶಗಳಲ್ಲಿ ಹೋಗಿ ಹೊಸ ಮಾರುಕಟ್ಟೆಗಳ ನಿರಂತರ ಶೋಧನೆಯಾಯಿತು.

ಇದೇ ಸಮಯಕ್ಕೆ ಹೊಸ ವೈಜ್ಞಾನಿಕ ಹಾಗೂ ಭೌಗೋಳಿಕ ಸಂಶೋಧನೆಗಳು, ಯುರೋಪಿನ ಜನರನ್ನು, ಚಿನ್ನ, ತತ್ವೋಪದೇಶ ಮತ್ತು ವೈಭವಗಳನ್ನಿರಿಸಿಕೊಂಡು ಪೂರ್ವದೆಡೆಗೆ ತಂದವು. ಸ್ವಂತಕ್ಕೆ ಚಿನ್ನ, ಭಗವಂತನ ಉಪದೇಶ ಮತ್ತು ತಮ್ಮ ದೇಶ ಹಾಗೂ ದೊರೆಗೆ ವೈಭವವೇ ಅವರ ಉದ್ದೇಶವಾಗಿತ್ತು. ಆಪ್ರೋ-ಏಶಿಯಾದ ಭಾಗಗಳಿಗೆ ಯುರೋಪಿನವರು ವ್ಯಾಪಾರದ ಉದ್ದೇಶದಿಂದ ಬಂದರು. ಪೂರ್ವದಲ್ಲಿನ ಅಭದ್ರ ರಾಜಕೀಯ ದೃಶ್ಯ ಅವರನ್ನು ರಾಜಕೀಯ ಸಾಹಸವೆಸಗಲು ಪ್ರಚೋದಿಸಿತು. ೧೫ನೆಯ ಶತಮಾನ ಮುಗಿಯುವಷ್ಟರಲ್ಲಿ, ಪೋರ್ಚುಗೀಸರು ಪೂರ್ವದಲ್ಲಿನ ವಸಾಹತಿನ ಪ್ರಾಬಲ್ಯಕ್ಕೆ ಮಾರ್ಗ ನಿರ್ಮಿಸಿದ್ದರು. ೧೬ನೆಯ ಶತಮಾನದ ಮಧ್ಯಕಾಲಕ್ಕಾಗಲೇ ಅವರು ಕೇಪ್ ಆಫ್ ಗುಡ್‌ಹೋಪ್‌ನಿಂದ ದಕ್ಷಿಣ ಚೀನಾದ ಸಮುದ್ರದ ಮೆಕಾವ್ ದ್ವೀಪದವರೆಗೆ ಪ್ರಾಬಲ್ಯ ಹೊಂದಿದ್ದರು. ಆದರೆ ಸ್ಪೇನಿನವರು ಇಲ್ಲಿ ಬಹಳಷ್ಟು ಯಶಸ್ವಿಯಾಗಲಿಲ್ಲ. ಕಡಲ ದರೋಡೆ, ಅಪಹರಣ, ಮತಾಂತರಿಸುವುದು ಮತ್ತು ಜನರಲ್ಲಿ ಭಯ ಹುಟ್ಟಿಸುವಂಥ ಅಪರಾಧ ಮುಂತಾದ ಮಹಾಪಾತಕ ಕೆಲಸಗಳಿಂದ ಕುಖ್ಯಾತರಾಗಿದ್ದ ಪೋರ್ಚುಗೀಸರು ೧೬ನೆಯ ಶತಮಾನದ ಕೊನೆವರೆಗೂ ತಮ್ಮ ಪ್ರಾಬಲ್ಯ ಮುಂದುವರೆಸಿದರು. ಇವೇ ಗುಣಗಳು ಅವರಿಗೆ ಕೆಟ್ಟ ಹೆಸರು ತಂದವಲ್ಲದೆ, ಅವರ ಪತನಕ್ಕೆ ದಾರಿ ಮಾಡಿಕೊಟ್ಟು, ಡಚ್, ಫ್ರೆಂಚ್ ಮತ್ತು ಇಂಗ್ಲಿಷರಂಥ ಯುರೋಪಿನ ಮಹತ್ವಾಕಾಂಕ್ಷಿ ದೇಶಗಳ ಏರಿಕೆಗೆ ಕಾರಣವಾದವು.

ತಡವಾಗಿ ಬಂದ ಇಂಗ್ಲಿಷರಷ್ಟು, ಡಚ್ ಮತ್ತು ಫ್ರೆಂಚರು ಯಶಸ್ವಿಯಾಗಲಿಲ್ಲ. ಭಾರತ ಮತ್ತು ಸಿಲೋನಿನಿಂದ ಹೊರಹಾಕಲಾದ ನಂತರ ಡಚ್ಚರ ಪ್ರಾಬಲ್ಯ ಮಲಯಾದ ದ್ವೀಪಸ್ತೋಮ ಮತ್ತು ಇಂಡೋನೇಶಿಯಾದ ದ್ವೀಪಗಳಿಗೆ ಸೀಮಿತವಾಯಿತು. ಇದೇ ಗತಿಕಂಡ ಫ್ರೆಂಚರು ಕೊನೆಗೆ ಪ್ರಕ್ಷುಬ್ಧ ಹಾಗೂ ಅತಂತ್ರ ಸ್ಥಿತಿಯಲ್ಲಿ ಇಂಡೋಚೈನಾದ ಪ್ರದೇಶದಲ್ಲಿ ನೆಲೆಸಲು ನಿರ್ಧರಿಸಿದರು. ಇವುಗಳಿಗೆ ಹೋಲಿಸಿದರೆ ಏಶಿಯಾದ ಬಹಳಷ್ಟು ಭಾಗದಲ್ಲಿ ಬ್ರಿಟಿಷರು ಬಹಳ ಯಶಸ್ವಿಯಾಗಿದ್ದರು. ಪರ್ಷಿಯಾದ ಖಾರಿಯಿಂದ ಭಾರತದ ಉಪಖಂಡ, ಬರ್ಮಾ ಮತ್ತು ಮಲಯಾದಿಂದ ಚೀನಾದವರೆಗಿನ ತಮ್ಮ ಪ್ರಭಾವದಿಂದಾಗಿ, ಅವರು ಸುಮಾರು ೨೦೦ ವರ್ಷಗಳವರೆಗೆ ತಮ್ಮ ವಸಾಹತು ಸಾಮ್ರಾಜ್ಯವನ್ನು ಸಂಪೂರ್ಣ ಅಭಯಹಸ್ತದಿಂದ ಆಳಿದರು. ೧೭೫೭ರಲ್ಲಿ ಕ್ಲೈವನು ಮೀರಜಫರನಿಂದ ಖಾಸಗಿ ವ್ಯಾಪಾರಕ್ಕೆ ತೆರಿಗೆ ವಿನಾಯಿತಿ ಪಡೆದ ನಂತರ, ಪ್ಲಾಸಿ ಯುದ್ಧವಾದ ನಂತರ, ಇಂಗ್ಲಿಷರು ತಮ್ಮ ವ್ಯಾಪಾರದಲ್ಲಾಗಲಿ ಅಥವಾ ಪೂರ್ವದಲ್ಲಿನ ರಾಜಕೀಯ ಪ್ರಾಬಲ್ಯದಲ್ಲಾಗಲಿ, ಮರಳಿ ನೋಡಲಿಲ್ಲ.

೧೮ನೆಯ ಶತಮಾನ ಮುಗಿಯುವಷ್ಟರಲ್ಲಿ ಯುರೋಪಿಯನ್ನರ ಮಧ್ಯೆ ಹೆಚ್ಚೆಚ್ಚು ಪ್ರದೇಶಗಳನ್ನು ವಶಪಡಿಸಿಕೊಳ್ಳುವುದಕ್ಕೆ ಹೋರಾಟ ನಡೆಯಿತಲ್ಲದೆ, ರಾಜಕೀಯ ನಿಯಂತ್ರಣ ಮತ್ತು ಆರ್ಥಿಕ ಲಾಭ ಪಡೆಯಲು ಗೊತ್ತುಗುರಿಯಿಲ್ಲದ ಕಚ್ಚಾಟ ನಡೆದು ಅದನ್ನು ಸಮರ್ಥಿಸಿಕೊಳ್ಳಲಾಯಿತು. ಕ್ರಮೇಣ ತಮ್ಮಲ್ಲಿನ ಮಾನವ ಹಾಗೂ ಭೌತಿಕ ಸಂಪನ್ಮೂಲಗಳ ಮಿತಿಯ ಅರಿವು ಮಿತವಾಗಿದ್ದರಿಂದ, ವಸಾಹತುಗಳ ಮಾನವ ಹಾಗೂ ಭೌತಿಕ ಸಂಪನ್ಮೂಲಗಳನ್ನು ಹಿಡಿದುಕೊಂಡು ತಮ್ಮ ವ್ಯವಹಾರ ಬೆಳೆಸಿಕೊಳ್ಳಬೇಕೆಂಬ ಅರಿವು ಮೂಡಿತು. ಹೀಗಾಗಿ, ತಮ್ಮ ನಿರ್ವಹಣಾ ಚಾತುರ್ಯದ ಆಧಾರದ ಮೇಲೆ, ಯುರೋಪಿಯನ್ನರು ಏಶಿಯಾದ ಬೇರೆ ಬೇರೆ ಭಾಗಗಳಲ್ಲಿ ವ್ಯಾಪಾರದಲ್ಲಿ ಏಕಸ್ವಾಮ್ಯ ಸಾಧಿಸಿದರು. ಇದರಿಂದಾಗಿ, ಕೆಲವೊಂದು ಪುರಾತನ ಸಂಸ್ಕೃತಿಗಳನ್ನು ಅಡಗಿಸುವುದಲ್ಲದೆ, ‘‘ತಾಯ್ನಾಡನ್ನು ಶ್ರೀಮಂತಗೊಳಿಸುವುದಕ್ಕಾಗಿಯೇ ವಸಾಹತುಗಳಿರುವುದು’’ ಎಂದು ಸೂಕ್ತಿಯನ್ನು ಹೇರಲಾಯಿತು. ದೇಶಿ ಅರಸರ ಆಂತರಿಕ ವ್ಯವಹಾರಗಳಲ್ಲಿ ಅಪರೋಕ್ಷವಾಗಿ ಪಾಲ್ಗೊಳ್ಳುವುದರಿಂದ ಪ್ರಾರಂಭವಾಗಿದ್ದ ವಸಾಹತು ನಿಯಂತ್ರಣ, ಕ್ರಮೇಣ ಬದಲಾಗಿ, ಆಡಳಿತ ಮತ್ತು ರಾಜಕೀಯ ಅಧಿಕಾರದಲ್ಲಿ ನೆಯರ ಒತ್ತಡದ ಹೇರಿಕೆಯಾಗ ಹತ್ತಿತು. ೧೯ನೆಯ ಶತಮಾನದ ಮಧ್ಯಕಾಲದವರೆಗೆ ವ್ಯವಸ್ಥಿತ ರೀತಿಯಲ್ಲಿ ಸಮಾಜೋ-ಆರ್ಥಿಕ ಮತ್ತು ರಾಜಕೀಯ ಶೋಷಣೆಗಳ ಉದಯವಾಗಿತ್ತು. ಇದರಿಂದಾಗಿ ನಿಯಂತ್ರಿಸಲು ಅನುಕೂಲವಾದ ನಿಯಂತ್ರಣ ವಿಧಾನಗಳ ಮೂಲಕ ಏಶಿಯಾವನ್ನು ವಿಭಜಿಸಲಾಯಿತು.

ಒಳ್ಳೆಯ ನಿರ್ವಹಣೆ ಮತ್ತು ವ್ಯಾವಹಾರಿಕ ಜಣತನದಿಂದ ಬ್ರಿಟಿಷರು ಬಹಳಷ್ಟು ಪ್ರದೇಶವನ್ನು ತಮ್ಮ ನೆಯರ ನಿಯಂತ್ರಣದಲ್ಲಿರಿಸಿಕೊಂಡರು. ವಸಾಹತು ಪ್ರದೇಶದಲ್ಲಿ ರಾಜಕೀಯ ನಿಯಂತ್ರಣ ಮತ್ತು ಆರ್ಥಿಕ ಪ್ರಯೋಜನಗಳ ಪೂರ್ಣಸ್ವಾಮ್ಯ ಪಡೆಯಲು ಸಾಧ್ಯವೆಂಬುದಕ್ಕೆ ಭಾರತ ಒಂದು ಅತ್ಯುತ್ತಮ ಉದಾಹರಣೆ. ಸ್ಥಾನಿಕ ರಾಜರನ್ನು ತಳ್ಳಿ ಹಾಕಲಾಯಿತು ಅಥವಾ ಬದಿಗಿರಿಸಲಾಯಿತು. ಡಚ್ ನಿಯಂತ್ರಣದಲ್ಲಿದ್ದ ಇಂಡೋ ನೆಯಶಿಯಾ ಮತ್ತು ಫ್ರೆಂಚರ ನಿಯಂತ್ರಣದಲ್ಲಿದ್ದ ಇಂಡೋಚೈನಾ ಕೂಡಾ ಇಂಥ ವಸಾಹತು ಪ್ರದೇಶಗಳಾಗಿದ್ದವು. ಚೀನಾದಲ್ಲಿ ಯುರೋಪಿನ ಒಂದಕ್ಕಿಂತ ಹೆಚ್ಚು ದೇಶಗಳು, ಗೊತ್ತುಪಡಿಸಲಾದ ಪ್ರದೇಶದಲ್ಲಿ ತಮ್ಮ ವ್ಯಾಪಾರ ನಡೆಸುವ ಸೌಲಭ್ಯ ಪಡೆದು ತಮ್ಮ ಪ್ರಭಾವಲಯದ ಮೂಲಕ ಇತರ ಯುರೋಪಿಯನ್ನರ ಜೊತೆ ಬೇರೆ ತೆರನಾದ ನಿಯಂತ್ರಣ ಸಾಧಿಸಿದ್ದವು. ಇಲ್ಲಿ ಸ್ಥಾನಿಕ ಅರಸರನ್ನು ತೆಗೆದು ಹಾಕಿರಲಿಲ್ಲವಾದರೂ ಅವರು ಬಹಳಷ್ಟು ರೀತಿಯಲ್ಲಿ, ಅವಮಾನಕರ ಹಾಗೂ ಅಸಂಬದ್ಧ ಒಪ್ಪಂದಗಳಿಗೆ ಮಣಿಯುವಂತೆ ಮಾಡಲಾಯಿತು. ಇದರಲ್ಲಿ ಕುಖ್ಯಾತಿಯ ಸಾರ್ವಭೌಮ ಪ್ರದೇಶಾತೀತ ಹಕ್ಕುಗಳ ಮೂಲಕ ಯುರೋಪಿಯನ್ನರು ಸ್ಥಾನಿಕ ಅರಸರ ಪರಮಾಧಿಕಾರವನ್ನು ಬದಿಗಿರಿಸಿದರಲ್ಲದೆ, ವ್ಯಾಪಾರ ಮತ್ತು ಕರನೀಡಿಕೆಯಲ್ಲಿ ವಿನಾಯಿತಿ ಸೌಲಭ್ಯ ಪಡೆದು ಕೊಂಡರು. ನ್ಯಾಯಾಂಗ ಪ್ರಯೋಜನ ಗಳಡಿಯಲ್ಲಿ, ದಿವಾನಿ ಮತ್ತು ಫೌಜದಾರಿ ಪ್ರಕರಣಗಳಲ್ಲಿ, ನಾಡಿನ ಕಾನೂನಿನ ಪ್ರಕಾರ, ತಮಗೆ ಹಿಂಸೆಯಾಗದಂತೆ ರಕ್ಷಣೆ ಪಡೆದುಕೊಂಡರು.

ಸ್ಥಾನಿಕ ಅರಸರೊಡನೆ, ಅವರನ್ನು ಬಾಹ್ಯ ಅಥವಾ ಆಂತರಿಕ ಭಯದಿಂದ ರಕ್ಷಿಸಲು ಹಣ ಪಡೆದುಕೊಳ್ಳುವ ಒಂದು ಒಪ್ಪಂದದ ಮೂಲಕ ಸಂರಕ್ಷಿತ ರಾಜ್ಯವನ್ನು ನಿಯಂತ್ರಣ ದಲ್ಲಿಟ್ಟುಕೊಳ್ಳುವುದು ಮೂರನೆಯ ರೀತಿಯದಾಗಿತ್ತು. ಅವಿಧೇಯ ಹಾಗೂ ಸೋಮಾರಿ ಗಳಾಗಿದ್ದ ಅರಸರಿಗೆ ಇದು ಆಕರ್ಷಕವಾಗಿ ಕಂಡಿದ್ದರೂ, ಸತ್ಯಾಂಶವೆಂದರೆ, ಅವರು ತಮ್ಮ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಈ ವಿದೇಶೀಯರ ವಸಾಹತುಶಾಹಿ ಮಹತ್ವಾಕಾಂಕ್ಷೆಗೆ ಆರ್ಪಿಸಿದಂತಾಗಿತ್ತು. ಮಲಯಾ ಮತ್ತು ಟ್ರುಸಿಯಲ್ ಪ್ರಾಂತಗಳ ಇಂಥ ನಿಯಂತ್ರಣಕ್ಕೆ ಉತ್ತಮ ಉದಾಹರಣೆಗಳು.

ತಾವು ನಿಯಂತ್ರಿಸುತ್ತಿದ್ದ ‘‘ರಾಷ್ಟ್ರ ಸಂಘ’’ದಡಿಯಲ್ಲಿ, ಪಶ್ಚಿಮ ಏಶಿಯಾದಲ್ಲಿ ಈ ರೀತಿಯ ನಿಯಂತ್ರಣ ಪಡೆದುಕೊಂಡವರಲ್ಲಿ ಬ್ರಿಟಿಷರು ಹಾಗೂ ಫ್ರೆಂಚರು ಪ್ರಮುಖರು. ಮೇಲ್ನೋಟಕ್ಕೆ ಅದರ ಉದ್ದೇಶ ಸ್ವಯಮಾಡಳಿತ, ಪ್ರಜಪ್ರಭುತ್ವ ಹಾಗೂ ಗಣರಾಜ್ಯ ಸ್ಥಾಪನೆಗೆ ಅನುವಾಗುವಂತೆ, ಒಂದು ನಿರ್ದಿಷ್ಟ ಪ್ರದೇಶದ ಜನರನ್ನು ತರಬೇತುಗೊಳಿ ಸುವುದಾಗಿತ್ತು. ಈ ಬಗೆಯ ನಿಯಂತ್ರಣದ ಪ್ರಮುಖ ಉದಾಹರಣೆಗಳೆಂದರೆ, ಸಿರಿಯಾ, ಲೆಬನಾನ್, ಪ್ಯಾಲೆಸ್ಪೈನ್ ಹಾಗೂ ಇರಾಕ್. ಇದರಿಂದಾಗಿ ೨೦ನೆಯ ಶತಮಾನದ ಆರಂಭದ ಹೊತ್ತಿಗೆ ಪ್ರತಿಶತ ೭೫ರಷ್ಟು ವಾಸದ ಭೂಭಾಗ ವಸಾಹತುಶಾಹಿಗೊಳಪಟ್ಟಿತ್ತು.

ನಂತರ ಉದ್ಭವಿಸುವ ಮೂಲ ಪ್ರಶ್ನೆಯೆಂದರೆ, ವಸಾಹತು ಪದ್ಧತಿ ಏಕೆ? ಈ ಸ್ಥಿತಿಯನ್ನು ವಿವರಿಸಲು ಅನೆಯಕ ಪ್ರಯತ್ನಗಳನ್ನು ಮಾಡಲಾಗಿದೆ. ಆದರೂ ಆಧುನಿಕ ವಸಾಹತು ಪದ್ಧತಿಯ ಬೆಳವಣಿಗೆಯ ಕಾರಣಗಳನ್ನು ವಿವರಿಸುವಲ್ಲಿ ಅತಿಪ್ರಮುಖ ವಿಚಾರಧಾರೆಗಳೆಂದರೆ ಮಾರ್ಕ್ಸ್‌ವಾದಿ, ಸಾಮ್ರಾಜ್ಯವಾದಿ, ರಾಷ್ಟ್ರೀಯತಾವಾದಿ ಹಾಗೂ ನವಸಾಮ್ರಾಜ್ಯವಾದಿ ಸಿದ್ಧಾಂತಗಳಾಗಿವೆ. ಇತ್ತೀಚಿನ ವಸಾಹತೋತ್ತರ ಅಧ್ಯಯನಗಳು ಕೂಡಾ ಆಧುನಿಕ ವಸಾಹತು ಪದ್ಧತಿಯ ಬಗೆಗಿನ ಆಸಕ್ತಿ ಮತ್ತು ಪರಿಣಾಮಗಳನ್ನು ವಿವರಿಸಲೆತ್ನಿಸಿವೆ.

೧೯೧೬ರಲ್ಲಿ ಲೆನಿನ್ ತನ್ನ ‘‘ಇಂಪೀರಿಯಲಿಸಂ ದಿ ಹೈಯೆಸ್ಟ್ ಸ್ಟೇಜ್ ಆಫ್ ಕ್ಯಾಪಿಟಲಿಸಂ’’ನಲ್ಲಿ ವಸಾಹತು ಪದ್ಧತಿಯ ಸಮಸ್ಯೆಗಳನ್ನು ಕುರಿತು ಬರೆದು ಅದನ್ನು ಯುರೋಪಿನಲ್ಲಿನ ಬಂಡವಾಳಶಾಹಿಯ ಬೆಳವಣಿಗೆಗೆ ಸಂಬಂಧವಿದೆಯೆಂದು ಹೇಳಿದಾಗಿ ನಿಂದ, ಮಾರ್ಕ್ಸ್‌ವಾದಿ ಲೇಖನಗಳ ಪ್ರವಾಹ ಹೊರಹೊಮ್ಮಿತು. ವಿಶ್ವದಾದ್ಯಂತ ಮಾರುಕಟ್ಟೆಗಳನ್ನು ವಶಪಡಿಸಿಕೊಂಡು ಅಭಿವೃದ್ದಿಶೀಲ ಆಫ್ರೊ-ಏಶಿಯನ್ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆಯನ್ನು ನಿಗ್ರಹಿಸಿ, ಅವುಗಳನ್ನು ಅಧೀನರನ್ನಾಗಿಸುವ ಉದ್ದೇಶದ ಬಂಡವಾಳಶಾಹಿ ತತ್ವದ ಫಲವಾಗಿ ವಸಾಹತುಪದ್ಧತಿ ಹುಟ್ಟಿಕೊಂಡಿತೆಂದು ಆ ಲೇಖನಗಳು ಸಾಧಿಸಲೆತ್ನಿಸಿದವು. ಈ ದೇಶಗಳಲ್ಲಿ ಸಹಜ ರೀತಿಯಲ್ಲಿ ಒಂದು ಮಟ್ಟದಿಂದ ಇನ್ನೊಂದು ಮಟ್ಟಕ್ಕೆ ಆರ್ಥಿಕ ವಿಕಾಸ ಹೊಂದುವುದನ್ನು ತಡೆಯುವುದಕ್ಕೆ ಅವರ ಕ್ರಮವೇ ಕಾರಣವೆಂದು ಅವರು ವಾದಿಸಿದರು. ಬೇರೆ ಶಬ್ದಗಳಲ್ಲಿ ಹೇಳಬೇಕೆಂದರೆ, ಇತರ ದೇಶಗಳ ಆರ್ಥಿಕ ವ್ಯವಸ್ಥೆ ದುರ್ಬಲಗೊಳ್ಳು ವಂತಾಗಿ, ಅವು ಬೆಳೆಯದಂತಾಗಿ, ಕೊನೆಗೆ ತಮ್ಮ ಆರ್ಥಿಕ ಹಿತಾಸಕ್ತಿಗಾಗಿ ಅಧೀನರಾಗುವಂತೆ ಯುರೋಪಿನ ಬಂಡವಾಳಶಾಹಿಗಳು ಮಾಡಿದರು. ಹೀಗಾಗಿ ಸಾಮಗ್ರಿ-ಸಂಪನ್ಮೂಲಗಳ ಪ್ರಯೋಜನವನ್ನು ವ್ಯವಸ್ಥಿತ ರೀತಿಯಲ್ಲಿ ಪಡೆದುಕೊಳ್ಳಲಾಯಿತು. ಇದರಿಂದಾಗಿ ವ್ಯಾಪಾರ, ವಾಣಿಜ್ಯ ಮತ್ತು ಉದ್ಯಮಗಳಂಥ ದೇಶಿ ಆರ್ಥಿಕ ವ್ಯವಸ್ಥೆ ಕುಂಠಿತಗೊಂಡಿತಲ್ಲದೆ, ಅದು ಪ್ರಾಥಮಿಕ ಹಂತದಿಂದ ಮಾಧ್ಯಮಿಕ ಹಂತದೆಡೆಗೆ ಬೆಳೆಯಲು ಸಾಧ್ಯವಾಗಲಿಲ್ಲ(ಅಥವಾ ಬೆಳೆಯದಂತೆ ನೋಡಿ ಕೊಳ್ಳಲಾಯಿತು) ಎಂದು ಮಾರ್ಕ್ಸ್‌ವಾದಿಗಳು ವಾದಿಸುತ್ತಾರೆ. ಇವರ ಫಲವೆಂದರೆ ನಿರ್ವಸಾಹತೀಕರಣ ಏರ್ಪಟ್ಟಾಗ ಈ ಹಳೆಯ ವಸಾಹತು ಪ್ರದೇಶಗಳು ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಮಾನಸಿಕ ಸ್ಥಿತಿಯಲ್ಲಿ ಅಭಿವೃದ್ದಿ ಹೊಂದದೆ ಅಥವಾ ಕಡಿಮೆ ಅಭಿವೃದ್ದಿ ಹೊಂದಿದ್ದು ಇತರ ಅಭಿವೃದ್ದಿ ದೇಶಗಳಿಗಿಂತ ಸುಮಾರು ೨೦೦ ವರ್ಷಗಳಷ್ಟು ಹಿಂದುಳಿದಿದ್ದವು.

ವಸಾಹತು ಪದ್ಧತಿಯ ವೈಖರಿಯಿಂದಾಗಿ ಅಭಿವೃದ್ದಿ ಹೊಂದದ ಪರಿಸ್ಥಿತಿ ಅನಿವಾರ್ಯ ವಾಗಿತ್ತೆಂಬುದು ವಸಾಹತು ಪದ್ಧತಿ ಅಂತ್ಯಗೊಂಡ ನಂತರ ತಿಳಿದುಬಂತು. ಸಾಮ್ರಾಜ್ಯ-ವಸಾಹತು ಸಂಬಂಧದಿಂದಾಗಿ ವಸಾಹತುಶಾಹಿ ರಾಷ್ಟ್ರ ತನ್ನ ಸ್ಥಿತಿಯನ್ನು ಭದ್ರಗೊಳಿಸಲು ವಸಾಹತುಗಳ ಸಂಪನ್ಮೂಲಗಳನ್ನೆಲ್ಲ ಕಸಿದುಕೊಂಡು, ಅವುಗಳ ಅಭಿವೃದ್ದಿಯನ್ನು ಬಲಿ ಕೊಟ್ಟು ತಾನು ಬೆಳೆಯಿತು. ವಸಾಹತು ಪ್ರದೇಶದ ಸಂಪನ್ಮೂಲಗಳ ಬಳಕೆಯಿಂದಾಗಿ ವಸಾಹತು ಪ್ರದೇಶದ ಬೆಳವಣಿಗೆಯ ಸಾಧ್ಯತೆಯನ್ನು ಕಡಿಮೆಯಾಗಿಸಿದವು; ಅವು ಬಹಳ ಹಿಂದೆ ಉಳಿದವು. ಅವು ಕಚ್ಚಾಸಾಮಗ್ರಿಗಳನ್ನು ಒದಗಿಸುವ ಮತ್ತು ಸಿದ್ಧವಸ್ತುಗಳನ್ನು ಮಾರುವ ಮಾರುಕಟ್ಟೆಗಳಾದವು. ಈ ಎರಡೂ ಅಂಶಗಳಲ್ಲಿ ವಸಾಹತುಶಾಹಿ ರಾಷ್ಟ್ರಕ್ಕೆ ಲಾಭವೇ ಆಯಿತು.

ವಸಾಹತು ಪ್ರದೇಶಗಳ ಸಂಪನ್ಮೂಲಗಳನ್ನು ದೋಚುವ ಯೋಚನೆ ಹೊಂದಿದ್ದು ಅಥವಾ ಅಲ್ಲಿ ವ್ಯವಸ್ಥಿತ ರೀತಿಯಲ್ಲಿ ಶೋಷಣೆ ನಡೆಸುವ ಯೋಜನೆ ಹೊಂದಿದ್ದನ್ನು ಸಾಮ್ರಾಜ್ಯವಾದಿಗಳು ಒಪ್ಪುವುದಿಲ್ಲ. ಇದೊಂದು ತಪ್ಪಿಸಿಕೊಳ್ಳಲಾಗದ ಹಾಗೂ ಅನಿವಾರ್ಯ ಐತಿಹಾಸಿಕ ಪ್ರಕ್ರಿಯೆಯಾದ್ದರಿಂದ, ಅದು ಉದ್ದೇಶಪೂರಿತವಾದದ್ದಲ್ಲವೆಂಬುದು ಅವರ ಅಭಿಪ್ರಾಯ. ಪಶ್ಚಿಮ ಹಾಗೂ ಪೂರ್ವಭಾಗದಲ್ಲಿನ ಪರಿಸ್ಥಿತಿಯೇ ವಸಾಹತು ಪ್ರದೇಶಗಳಿಗೆ ತಾವು ಬರುವಂತೆ ಮಾಡಿತೆಂದು ಅವರು ವಾದಿಸುತ್ತಾರೆ. ೧೬ನೆಯ ಶತಮಾನದಿಂದ ಯುರೋಪಿನಲ್ಲಿನ ಸಾಮಾಜಿಕ-ಆರ್ಥಿಕ ಬದಲಾವಣೆಯ ಪ್ರಕ್ರಿಯೆಯಿಂದಾಗಿ ಯುರೋಪಿನ ಮತ್ತು ಬಿಳಿಯರು, ಐರೋಪ್ಯೇತರ ಹಾಗೂ ಬಿಳಿಯರಿಲ್ಲದ ಭಾಗಕ್ಕೆ ಚಲಿಸುವಂತೆ ಮಾಡಿತು. ಇದೊಂದು ಮಹಾನ್ ಉದ್ದೇಶವಾಗಿತ್ತು; ಬಹುಶಃ ಸುಸಂಸ್ಕೃತರನ್ನಾಗಿಸುವಂಥ ಉದ್ದೇಶ! ಕಾಲಾನುಕ್ರಮದಲ್ಲಿ ದೇಶೀಯರಿಂದ ಪಡೆದದ್ದಕ್ಕಿಂತ ಅವರಿಗೆ ಕೊಟ್ಟದ್ದೇ ಬಹಳವೆಂದೆನಿಸಿತು. ಈ ಮಾತು ಉದ್ಯಮ, ಸಾರಿಗೆ ಮತ್ತು ಸಂಪರ್ಕ(ಅದರಲ್ಲೂ ರೈಲುದಾರಿ ಮತ್ತು ತಂತಿವರ್ತಮಾನ)ಗಳು ಶಿಕ್ಷಣ, ಕಾನೂನು ಮತ್ತು ವ್ಯವಸ್ಥೆ ಮುಂತಾದವುಗಳಿಗೆ ಸಂಬಂಧಿಸಿದ್ದೆಂಬುದು ನಿಸ್ಸಂಶಯ. ಆದರೆ ಅವರು ಕೊಟ್ಟಿದ್ದಕ್ಕಿಂತ ಅಥವಾ ಕೊಡಬಯಸಿದ್ದಕ್ಕಿಂತ ತೆಗೆದುಕೊಂಡದ್ದೇ ಬಹಳವೆಂಬುದು ಸತ್ಯಸಂಗತಿ. ಅವರು ಭಾರತದಲ್ಲಿ ಅಥವಾ ಏಶಿಯಾದ ಯಾವುದೇ ಬೇರೆ ವಸಾಹತು ಪ್ರದೇಶಗಳಲ್ಲಿ ಉದ್ಯಮ, ರೈಲು, ತಂತಿ ಸಂಪರ್ಕ ಪ್ರಾರಂಭಿಸಿದ್ದು ಸಾಂದರ್ಭಿಕ ಅಗತ್ಯವಾಗಿತ್ತಲ್ಲದೆ, ವಸಾಹತು ಪ್ರದೇಶದಲ್ಲಿ ತಮ್ಮ ಹಿಡಿತವನ್ನು ಬಿಗಿಗೊಳಿಸುವುದೇ ಅವರ ಉದ್ದೇಶವಾಗಿತ್ತು. ಉದಾಹರಣೆಗೆ, ಸೈನ್ಯವನ್ನು, ಕಚ್ಚಾಸಾಮಗ್ರಿಗಳನ್ನು ಸಾಗಿಸಲು ಮತ್ತು ಯುರೋಪಿನವರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬೇಗನೆ ಹಾಗೂ ಸುರಕ್ಷಿತವಾಗಿ ತಲುಪಿಸಲು ರೈಲುಗಳನ್ನು ಪ್ರಾರಂಭಿಸಲಾಯಿತು. ಕೋಳಿ, ಪಕ್ಷಿ, ಕುರಿ ಮತ್ತು ಆಡುಗಳನ್ನು ತುಂಬಿದ ಮೂರನೆಯ ದರ್ಜೆಯ ಡಬ್ಬಿಯಲ್ಲಿ ಮಾತ್ರ ಭಾರತೀಯನಿಗೆ ಕೊಡಲು ಸ್ಥಳ ದೊರೆಯುತ್ತಿತ್ತು. ತಂತಿ ಸೌಲಭ್ಯದ ಉಪಯುಕ್ತತೆ ಕೂಡ ದೇಶೀಯರಿಗೆ ಇದೇ ರೀತಿಯದಾಗಿತ್ತು. ಉದಾಹರಣೆಗೆ ಬಾಂಬೆ, ಅಹ್ಮದಾಬಾದ್ ಪ್ರದೇಶದಲ್ಲಿ ಜವಳಿ ಗಿರಣಿಗಳ ಮೂಲಕ ಉದ್ಯಮವನ್ನು ಸ್ಥಾಪಿಸಿದ್ದು, ಭಾರತವನ್ನು ಉದ್ಯಮಶೀಲ ರಾಷ್ಟ್ರವನ್ನಾಗಿ ಮಾಡುವ ಉದ್ದೇಶದಿಂದಲ್ಲ; ತಮ್ಮ ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸಿ ಲಾಭವನ್ನು ಹೆಚ್ಚಿಸುವುದು ಅವರ ಉದ್ದೇಶವಾಗಿತ್ತು. ಯುರೋಪಿನ ಹಿರಿಯ ಅಧಿಕಾರ ವರ್ಗಕ್ಕೆ ಸಹಾಯವಾಗುವಂಥ, ಓದು ಬಲ್ಲ ಗುಮಾಸ್ತರು ಮತ್ತು ಸೇವಕರ ಒಂದು ಸೈನ್ಯವನ್ನು ತಯಾರಿಸುವ ಉದ್ದೇಶದಿಂದ ಶಿಕ್ಷಣ ಪ್ರಾರಂಭಿಸಲಾಯಿತು. ಗಂಡೆದೆಯ ಮೆಕಾಲೆ ‘‘ಕಂದುಬಣ್ಣದ ಮತ್ತು ಬಿಳಿಯ ಮನಸ್ಸಿನ ಗುಮಾಸ್ತರ ಸೈನ್ಯವೊಂದನ್ನು ಹೊಂದುವುದೇ, ಭಾರತದಲ್ಲಿ ಇಂಗ್ಲಿಷ್ ಶಿಕ್ಷಣ ಪ್ರಾರಂಭಿಸುವುದರ ಉದ್ದೇಶವಾಗಿತ್ತು’’ ಎಂದು ಹೇಳಿದ. ಇಂಗ್ಲಿಷನ್ನು ಓದಲು ಮತ್ತು ಬರೆಯಲು ಕಲಿಸಿದ ತಮ್ಮ ಒಡೆಯರಿಗೆ ವಿಧೇಯರಾಗಿರುವುದಲ್ಲದೆ ರಾಜ ಅಥವಾ ರಾಣಿಯ ಚಕ್ರಾಧಿಪತ್ಯವನ್ನು ವಿನಯ, ಪ್ರಾಮಾಣಿಕತೆ ಮತ್ತು ಕೃತಜ್ಞತೆಯಿಂದ ಅಧೀನ ಹುದ್ದೆಗಳಲ್ಲಿದ್ದು ಸತತವಾಗಿ ಸೇವೆ ಸಲ್ಲಿಸುವುದಕ್ಕೆ ಸಿದ್ಧವಿತ್ತು ಈ ಸೈನ್ಯ!

ತಾವು ಮಾಡುತ್ತಿರುವುದೇ ಸರಿಯೆಂಬುದು ಯುರೋಪಿಯನ್ನರ ನಿಲುವಾಗಿತ್ತು. ವಸಾಹತು ಪ್ರದೇಶದ ಜನರನ್ನು ಅಥವಾ ‘‘ಭೂಮಿಯ ಮೇಲಿನ ನಿರ್ಭಾಗ್ಯರನ್ನು’’ ಸುಸಂಸ್ಕೃತರನ್ನಾಗಿಸಿ ಉದ್ಧಾರ ಮಾಡುವ ‘‘ಬಿಳಿಯ ಮನುಷ್ಯನ ಹೊರೆ’’ ಹೊತ್ತ ದೇವತೆಗಳು ತಾವೆಂಬ ನಿಲುವನ್ನು ಯುರೋಪಿನವರು ಹೊಂದಿದ್ದರು. ರಾಷ್ಟ್ರೀಯತಾ ವಾದಿಗಳು ಸಹಜವಾಗಿಯಾದರೂ ಕೆಲವೊಮ್ಮೆ ಅತ್ಯುತ್ಸಾಹದಿಂದ ತಮ್ಮ ವಾದ ಮಂಡಿಸುತ್ತಿದ್ದುದರ ಜೊತೆಗೆ ಯುರೋಪಿನವರೆ ಈ ಅವರ ನಿಲುವನ್ನು ಖಂಡಿಸುತ್ತಿದ್ದರು. ದೇಶೀಯರಿಗೆ ಮೊದಲು ತಿಳಿಯದಿದ್ದಂಥದ್ದನ್ನೇನೂ ಯುರೋಪಿನವರು ನೀಡಿಲ್ಲವೆಂದು ಹೇಳಿದರಲ್ಲದೆ, ಅವರು ಉದ್ದೇಶಪೂರ್ವಕವಾಗಿ ಅಸ್ತಿತ್ವದಲ್ಲಿದ್ದ ಸಂಸ್ಕೃತಿಗಳನ್ನು ನಾಶ ಮಾಡಿದ್ದರು. ಆ ದೇಶಗಳಲ್ಲಿ ಸುಗಮವಾಗಿ ವೃದ್ದಿಯಾಗುತ್ತಿದ್ದ ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸಿ, ವಸಾಹತು ಪ್ರದೇಶಗಳಲ್ಲಿನ ಜನರ ಮಾನ, ಆಸ್ತಿ ಮತ್ತು ಸ್ವಾತಂತ್ರ್ಯ ಶೋಷಿಸಿ ದೋಚಿಕೊಂಡರೆಂದು ಆರೋಪಿಸಿದ್ದುಂಟು. ವಸಾಹತು ಆಳ್ವಿಕೆಯಲ್ಲಿನ ಅಸಮತೆಯಿಂದಾಗಿ ವಸಾಹತು ನಾಡುಗಳ ದಮನ ಮತ್ತು ದಾಸ್ಯವಾಯಿತೆಂಬುದನ್ನು ಎತ್ತಿ ಹೇಳುವುದೇ ಇದರ ಮೂಲ ಉದ್ದೇಶವಾಗಿತ್ತು.

ನವಸಾಮ್ರಾಜ್ಯವಾದಿಗಳು ದಯಾಪರತೆ ಅಥವಾ ಶೋಷಣೆ ಕುರಿತು ಅಭಿಪ್ರಾಯಗಳ ಸಮತೋಲನ ಮಾಡಲೆತ್ನಿಸಿದ್ದಾರೆ. ಇವರು ಚರ್ವಿತಚರ್ವಣಗಳ ಮತ್ತು ಜಣವಾಕ್ಸರಣಿಗಳ ಆಶ್ರಯ ಪಡೆಯುವುದಲ್ಲದೆ, ಒಂದು ತೂಕದ ಅಭಿಪ್ರಾಯವನ್ನು ನೀಡುವ ನಾಟಕವಾಡುತ್ತಾರೆ. ವಸಾಹತು ಪ್ರದೇಶಗಳಲ್ಲಿದ್ದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪದ್ಧತಿಗಳಲ್ಲಿನ ವೈರುಧ್ಯಗಳಿಂದಾಗಿ, ಈ ಪ್ರದೇಶಗಳಲ್ಲಿ ಯುರೋಪಿನ ಜನರ ಉಪಸ್ಥಿತಿ ಮತ್ತು ಆಳ್ವಿಕೆಯ ಬಗ್ಗೆ ತಪ್ಪು ಕಲ್ಪನೆಯಾಗಿದೆಯೆಂದು ಅವರು ವಾದಿಸುವುದುಂಟು. ಪದ್ಧತಿಯಲ್ಲಿಯೇ ಶೋಷಣೆಯ ಅಂಶವಿರುವುದರಿಂದ ಬಿಳಿಯ ಅರಸರ ಉದಾತ್ತ ಆದರ್ಶಗಳನ್ನು ಹಿಂದಕ್ಕೆ ತಳ್ಳಲಾಗಿರಬೇಕೆಂದು ದೇಶೀಯರು ತಪ್ಪಾಗಿ ಭಾವಿಸಿರಬೇಕು. ಬೇರೂರಿದ ಸಂಪ್ರದಾಯವಾದದ ಮೇಲೆ ಆಧುನಿಕತೆಯ ಹೇರಿಕೆ ಸವಾಲಾಗಿ, ವಿಚಾರ ಮತ್ತು ಆದರ್ಶಗಳ ಮಧ್ಯದ ಘರ್ಷಣೆಯಾಗಿರುವುದೇ ಈ ತಪ್ಪು ಕಲ್ಪನೆಗೆ ಕಾರಣವೆಂದು ಅವರು ಹೇಳುತ್ತಾರೆ. ರಾಷ್ಟ್ರೀಯತಾವಾದಿಗಳು ವಸಾಹತು ಪದ್ಧತಿಯ ಮೇಲೆ ಮಾಡುತ್ತಿರುವ ಖಂಡನೆಯ ಕಠೋರತೆಯನ್ನು ಕಡಿಮೆ ಮಾಡುವುದು ಮತ್ತು ವಸಾಹತು ದೇಶಗಳಲ್ಲಿ ಗಮನಕ್ಕೆ ಬಂದಿರದ ಬಿಳಿಯರ ಕಾರ್ಯಕ್ರಮವನ್ನು ಎತ್ತಿಹಿಡಿಯುವುದೇ ನವಸಾಮ್ರಾಜ್ಯವಾದಿ ಪಂಡಿತರ ಮೂಲ ಉದ್ದೇಶವಾಗಿದೆ.

ಇತ್ತೀಚಿನ ಅಧ್ಯಯನಗಳೆಲ್ಲ ವಸಾಹತೋತ್ತರ ವಿಷಯದ ಕಡೆಗೆ ಗಮನ ಹರಿಸಿವೆ. ಇವು ವಸಾಹತು ಪದ್ಧತಿಯ ನಂತರದ ಚಿತ್ರದಲ್ಲಿನ ವೈಪರೀತ್ಯಗಳಿಗೆ ಕಾರಣಗಳನ್ನು ಹುಡುಕುವುದಲ್ಲದೆ, ಅವುಗಳನ್ನು ವಸಾಹತುಶಾಹಿ ದಿನಗಳಿಗೆ ಜೋಡಿಸಲೆತ್ನಿಸಿದ್ದುಂಟು. ಸಾಮ್ರಾಜ್ಯವಾದದ ನಿಲುವಿನ ಛಾಯೆಯಲ್ಲಿರುವ ಈ ಸಮಾಜಗಳು ಇನ್ನೂ ವಸಾಹತು ಪದ್ಧತಿಯ ಪರಿಣಾಮ ಅವುಗಳ ಮೇಲೆ ಆದದ್ದನ್ನು ಅಭ್ಯಸಿಸುವುದು ಮತ್ತು ವಿಶ್ಲೇಷಿಸುವುದೇ ಅವರ ಪ್ರಯತ್ನ.

ಸಂಸ್ಕೃತಿಗಳ ಬೆರಕೆ ಎಂದೆನ್ನಲಾಗುವ ಅರ್ಧ ದೇಶಿ ಮತ್ತು ಅರ್ಧ ಪಾಶ್ಚಿಮಾತ್ಯ ಪದ್ಧತಿಗಳಿಂದಾಗಿ ಜನರು ನಿರ್ದಿಷ್ಟ ವ್ಯಕ್ತಿತ್ವಗಳನ್ನು ಕಳೆದುಕೊಂಡದ್ದನ್ನು ಸಮಾಜೋ-ಸಂಸ್ಕೃತಿಯ ವಿನ್ಯಾಸಗಳಿಗೆ ಹಿನ್ನೆಡೆಯಾಯಿತೆಂದು ಅವರು ಹೇಳುತ್ತಾರೆ. ವಸಾಹತು ಕಾಲದ ಮನಸ್ಥಿತಿಯಿಂದಾಗಿ ಕೆಲವು ನಿರ್ಣಯಗಳು ಏರ್ಪಟ್ಟವು. ಒಂದು ವಸಾಹತು ಪ್ರದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಕೊಟ್ಟಾಗ ಯುರೋಪಿನ ಗಣ್ಯರಿಂದ ದೇಶಿ ಗಣ್ಯರಿಗೆ ಅಧಿಕಾರದ ಹಸ್ತಾಂತರವಾಗುತ್ತದೆಂಬುದು ಕಂಡುಬಂತು. ಹಿಂದೆ ವಸಾಹತು ಪ್ರದೇಶವಾಗಿದ್ದು ಈಗ ಹೊಸದಾಗಿ ಸ್ವತಂತ್ರವಾಗಿರುವ ದೇಶಗಳಲ್ಲಿ ವಸಾಹತು ಪದ್ಧತಿಯ ಪ್ರಭಾವ ಇನ್ನೂ ಪ್ರಬಲವಾಗಿದೆ ಎಂದೆನಿಸುತ್ತದೆ.

 

ಪರಾಮರ್ಶನಗ್ರಂಥಗಳು

೧. ಫ್ರಾನ್ಸಿಸ್ ಜಿ., ೧೯೯೭. ದಿ ನ್ಯೂ ಏಷ್ಯಾನ್ ರಿನೈಝಾನ್ಸ್ ಫ್ರಂ ಕಲೋನಿಯಲಿಸಂ ಟು ದಿ ಪೋಸ್ಟ್ಕೋಲ್ಡ್ವಾರ್, ಲಂಡನ್.

೨. ಬಿಪನ್ ಚಂದ್ರ,  ೧೯೯೯. ಎಸ್ಸೇಸ್ ಆನ್ ಕಲೋನಿಯಲಿಸಂ, ಲಾಂಗ್‌ಮೆನ್: ಓರಿಯಂಟ್.

೩. ಲೆನಿನ್ ವಿ.ಐ., ೧೯೪೭. ಇಂಪೀರಿಯಲಿಸಂ, ದಿ ಹೈಯೆಸ್ಟ್ ಸ್ಟೇಜ್ ಆಫ್ ಕ್ಯಾಪಿಟಲಿಸಂ, ಮಾಸ್ಕೊ.