ಎರಡು ಸಾವಿರ ವರ್ಷಗಳ ಇತಿಹಾಸದಲ್ಲಿ ಅನ್ಯ ದೇಶೀಯ ಆಕ್ರಮಣಕಾರರಿಂದ ಹಲವು ಯುದ್ಧ ಮತ್ತು ಅತಿಕ್ರಮಣ ದಾಳಿಗಳ ನಡುವೆಯೂ ಚೀನಾವು ಅನನ್ಯವಾದ ಸಂಸ್ಕೃತಿಯನ್ನು ಬೆಳೆಸಿಕೊಂಡಿತ್ತು. ಚೀನಾದಲ್ಲಾದ ಅತಿ ಮುಖ್ಯ ಆವಿಷ್ಕಾರಗಳೆಂದರೆ ರೇಷ್ಮೆ, ಕಾಗದ, ಗನ್ ಪೌಡರ್, ಪೋರ್ಸಲಿನ್, ಪ್ರಿಂಟಿಂಗ್, ಭೂಕಂಪನ ದರ್ಶಕ ಮತ್ತು ನೌಕಾ ದಿಕ್ಸೂಚಿ. ಚೀನಾವು ರೇಷ್ಮೆ ಮತ್ತು ಇತರೆ ಮಲ್ಯಯುತ ಉತ್ಪನ್ನಗಳನ್ನು ಕ್ರಿ.ಪೂ.೨ನೆಯ ಶತಮಾನದಲ್ಲಿಯೇ ಮಧ್ಯ ಏಷ್ಯಾ ಮತ್ತು ಪಶ್ಚಿಮ ಏಷ್ಯಾಗಳ ಮುಖಾಂತರ ಯುರೋಪ್ ಮತ್ತು ಈಜಿಪ್ಟ್‌ಗಳಿಗೆ ಸಾಗಣೆ ಮಾಡುತ್ತಿತ್ತು. ಹದಿನೈದನೇ ಶತಮಾನದ ಹೊತ್ತಿಗೆ ಚಿನ್ನವನ್ನು ಹೊತ್ತ ಚೀನಾದ ನೌಕೆಗಳು ಆಗ್ನೇಯಾ ಏಷ್ಯಾ ಮತ್ತು ಪೂರ್ವ ಆಫ್ರಿಕಾದ ಕಡಲ ಬದಿಯನ್ನು ಮುಟ್ಟಿದ್ದವು. ಕೊಲಂಬಸ್ ಅಮೆರಿಕಾವನ್ನು ಕಂಡುಹಿಡಿಯುವ ಮೊದಲೇ ಮತ್ತು ಪೋರ್ಚುಗೀಸ್ ನಾವಿಕ ವಾಸ್ಕೋಡಿಗಾಮನು ಕೇಪ್ ಆಫ್ ಗುಡ್‌ಹೋಪ್‌ನ್ನು ಸುತ್ತುವ ಅರ್ಧಶತಮಾನಕ್ಕೂ ಮುಂಚೆಯೇ ಚೀನಾದ ದಣಿವರಿಯದ ನಾವಿಕರು ಅಪಾಯಕಾರಿ ಸಾಹಸವನ್ನು ಮೆರೆದಿದ್ದಾರೆ.

ಚೀನಾದ ಐದು ಮಹಾನ್ ಜನಾಂಗಗಳೆಂದರೆ ಹ್ಯಾನ್(ಚೀನೀ), ಮನ್(ಮಂಚೂ), ಮೆಂಗ್(ಮಂಗೋಲ್), ಹ್ಯು (ಮಹಮ್ಮದನ್) ಮತ್ತು ತ್ಸಾಂಗ್ (ಟಿಬೇಟನ್). ಚೀನಾವು ಹಲವು ಮಹಾನ್ ವಿಚಾರವಂತರು, ತತ್ವಜ್ಞಾನಿಗಳು, ಕವಿಗಳು, ಕಲಾವಿದರು ಮತ್ತು ಮಿಲಿಟರಿ ತಂತ್ರಜ್ಞರನ್ನು ಕಂಡಿದ್ದರೂ, ಅದರ ಸಾಮಾಜಿಕ ಮತ್ತು ರಾಜಕೀಯ ರಚನೆಯು ಮಾತ್ರ ಪಾಳೇಗಾರಿ ಭದ್ರಕೋಟೆಯನ್ನು ಛಿದ್ರಗೊಳಿಸಿ ಹೊರಬಂದಿರಲಿಲ್ಲ. ಚೀನಾದ ಭೂಮಾಲೀಕನು ಸಾಮಾನ್ಯವಾಗಿ ಭೂಮಾಲೀಕ, ಲೇವಾದೇವಿಗಾರ, ವ್ಯಾಪಾರ ಮತ್ತು ಅಧಿಕಾರಶಾಹಿ ಈ ನಾಲ್ಕೂ ಮಿಶ್ರಣದ ಶೋಷಕನಾಗಿದ್ದನು. ಸಾಮಾಜಿಕ ಶ್ರೇಣಿಯ ತಳದಲ್ಲಿ ರೈತಾಪಿಯಿದ್ದು ಯಾವುದೇ ಹಕ್ಕಿಲ್ಲದೆ ಅವರು ಕೇವಲ ಕರ್ತವ್ಯಗಳನ್ನಷ್ಟೆ ಮಾಡಬೇಕಾಗಿದ್ದಿತು. ಅವರು ಮಣ್ಣಿಗಂಟಿಕೊಂಡು ಜೀವನಾವಶ್ಯ ವಸ್ತುಗಳನ್ನು ಉತ್ಪಾದಿಸುತ್ತಾ ಶೋಷಕ ಆಳ್ವಿಕೆಯ ತಲಪಾಯವಾಗಿದ್ದರು.

ಶೋಷಿತ ವ್ಯವಸ್ಥೆಯ ವಿರುದ್ಧ ತಾಳ್ಮೆಗುಂದಿದ ಜನತೆ ಆಗಾಗ್ಗೆ ದಂಗೆಯೇಳುತ್ತಾ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಜಿಡ್ಡುಗಟ್ಟಿದ ಆರ್ಥಿಕ ವ್ಯವಸ್ಥೆಯನ್ನು ಬಲವಂತವಾಗಿ ಹೇರುವ ಪ್ರಭುತ್ವದ ವಿರುದ್ಧ ಇರಿದು ನಿಂತು ಯಶಸ್ಸು ಗಳಿಸುವ ರೈತಾಪಿ ನಾಯಕನು ರಾಜನಾಗಿ ಬರುತ್ತಿದ್ದನು. ಹೀಗೆ ವಂಶವೊಂದರ ನಂತರ ಮತ್ತೊಂದು ವಂಶ ಪಾರಂಪರ್ಯ ಪ್ರಭುತ್ವ ಅಸ್ತಿತ್ವಕ್ಕೆ ಬರುವುದರಲ್ಲಷ್ಟೆ ದಂಗೆಯು ಅಂತ್ಯ ಕಾಣುತ್ತಿತ್ತು.

ಬಂಡವಾಳಶಾಹಿ ಪೂರ್ವ ಆರ್ಥಿಕ ವ್ಯವಸ್ಥೆಯಲ್ಲಿ ರೈತರು ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರೆ, ಮಹಿಳೆಯರು ಮನೆಯಲ್ಲಿ ಬಟ್ಟೆ ನೇಯುತ್ತಿದ್ದರು ಹಾಗೂ ಕುಶಲ ಕರ್ಮಿಗಳು ಐಷಾರಾಮಿ ವಸ್ತುಗಳನ್ನು ಉತ್ಪಾದಿಸುತ್ತಿದ್ದರು. ಇಂಗ್ಲೆಂಡಿನ ಕಿಂಗ್ ಜರ್ಜ್‌ನು ವ್ಯಾಪಾರ ಸಂಬಂಧವನ್ನು ಉತ್ತಮಪಡಿಸಲು ಚೀನಾದ ಚೀನಾದ ದೊರೆಗೆ ೧೭೯೩ರಲ್ಲಿ ಸಲ್ಲಿಸಿದ ಪ್ರಸ್ಸತಾನೆಗೆ ದೊರೆ ನೀಡದ ಉತ್ತರ ಇಲ್ಲಿದೆ :

ಎಲ್ಲ ವಸ್ತುಗಳು ರಾಜನಿಗೆ ಯಥೇಚ್ಛವಾಗಿ ಸಿಗುತ್ತಿದ್ದು, ಗಡಿಯೊಳಗೆ ಕೊರತೆಯಿರುವುದೂ ಏನೂ ಇಲ್ಲ. ಆದ್ದರಿಂದ ನಮ್ಮ ಉತ್ಪನ್ನಗಳ ಬದಲಿಗೆ ಹೊರಗಡೆಯ ಅನಾಗರಿಕರು ಉತ್ಪಾದಿಸುವ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಅಗತ್ಯವೇನೂ ನಮಗಿಲ್ಲ.

ಚೀನಾದ ಇತ್ತೀಚಿನ ಇತಿಹಾಸ

ಚೀನಾದ ಮೇಲಿನ ಈ ಮೊದಲಿನ ದಾಳಿಗಳಾದ ೧೫೩೩ರಲ್ಲಿ ಪೋರ್ಚುಗೀಸರು ಮಕಾವೋಅನ್ನು ವಶಪಡಿಸಿಕೊಂಡದ್ದು, ೧೭ನೆಯ ಶತಮಾನದ ಮೊದಲನೇ ಭಾಗದಲ್ಲಿ ಡಚ್ಚರು ತೈವಾನ್ ಆಕ್ರಮಿಸಿದ್ದು ಮತ್ತು ಹೈಲಾಂಗ್ ನದಿ ಪ್ರದೇಶದಲ್ಲಿ ರಷ್ಯನ್ನರ ಆಕ್ರಮಣ, ಹಳೆಯ ಚೀನಾದ ರಾಜಕೀಯ ಮತ್ತು ಸಾಮಾಜಿಕ ಎಳೆಯನ್ನು ಮೂಲಭೂತವಾಗಿ ಘಾಸಿಗೊಳಿಸಿರಲಿಲ್ಲ. ೧೮೪೦ರಲ್ಲಿ ಗ್ರೇಟ್ ಬ್ರಿಟನ್‌ನೊಂದಿಗೆ ನಡೆದ ಪ್ರಥಮ ಆಫೀಮು ಯುದ್ಧದ ಸೋಲು ಚೀನಾವನ್ನು ಒಂದು ದೊಡ್ಡ ಸಾಮ್ರಾಜ್ಯದ ಹಂತದಿಂದ ಬರೇ ಒಂದು ಅರೆ ವಸಾಹತುಶಾಹಿಯ ಸ್ಥಿತಿಗಿಳಿಸಿತು. ಚೀನಾದ ಪಾಳೇಗಾರಿ ತಳಪಾಯವು ಬಂಡವಾಳದ ಒಳನುಸುಳುವಿಕೆಯಿಂದ ಅತಿ ಶೀಘ್ರವೇ ಶಿಥಿಲಗೊಳ್ಳ ತೊಡಗಿತು.

ಅಫೀಮು ಯುದ್ಧಗಳು

ಚೀನಾದಿಂದ ತಾನು ಆಮದು ಮಾಡಿಕೊಳ್ಳುತ್ತಿದ್ದ ಟೀ, ರೇಷ್ಮೆ ಮತ್ತು ಪೋರ್ಸಲಿನ್ ಗಳ ಬದಲಿಗೆ ಬೆಳ್ಳಿಯನ್ನು ನೀಡುತ್ತಿದ್ದ ಬ್ರಿಟಿಷ್ ವ್ಯಾಪಾರಿಗಳು ಬೆಳ್ಳಿಯನ್ನು ಉಳಿಸಿಕೊಳ್ಳಲು ಅಫೀಮನ್ನು ಪರಿಚಯಿಸಿದರು. ಹೆಚ್ಚಿನ ಆಫೀಮು ಬಳಕೆಯಿಂದಾಗಿ ಚೀನಾ ಜನತೆಯ ಹದಗೆಡುತ್ತಿರುವ ಆರೋಗ್ಯ ಮತ್ತು ದಿವಾಳಿಯಾಗುತ್ತಿರುವ ಕುಟುಂಬ ಗಳು, ಕಳ್ಳತನ ಮತ್ತು ಲಂಚ ಹೆಚ್ಚಾದದ್ದನ್ನು ಕಂಡ ಚೀನಾದ ದೊರೆ ಮತ್ತು ಅಧಿಕಾರಿ ಗಳು ಅಫೀಮು ಮಾರಾಟಕ್ಕೆ ನಿಷೇಧ ತಂದರು. ತಮ್ಮ ವ್ಯಾಪಾರ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ನೆಪವೊಡ್ಡಿ ಬ್ರಿಟಿಷ್ ಸರ್ಕಾರವು ಚೀನಾದ ಮೇಲೆ ಯುದ್ಧ ಸಾರಿತು. ಈ ಯುದ್ಧದಲ್ಲಿ ದೊರೆಯ ಅಂಜುಬುರುಕತನ ಮತ್ತು ಅಧಿಕಾರಿಗಳ ವಿಶ್ವಾಸಘಾತುಕತನ ದಿಂದ ಹಾಗೂ ಬ್ರಿಟಿಷರ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಚೀನಾವು ಸೋತು ಸುಣ್ಣವಾಸಗಿ ಹಾಂಕಾಂಗನ್ನು ಬಿಟ್ಟುಕೊಡುವುದರ ಜೊತೆಗೆ ೬ ಮಿಲಿಯನ್ ಬೆಳ್ಳಿ ಡಾಲರ್ ಗಳ ಭದ್ರತೆ ಇರಬೇಕಾಯಿತು. ಅಮೆರಿಕಾವು ಬ್ರಿಟಿಷರ ಬೆಂಬಲಕ್ಕೆ ಒಂದು ತುಕಡಿ ಸೇನೆಯನ್ನು ಚೀನಾಕ್ಕೆ ಕಳುಹಿಸಿತ್ತು. ಈ ಸೋಲಿನಿಂದಾಗಿ ಅಗಾಧ ಪ್ರಮಾಣದಲ್ಲಿ ದಕ್ಷಿಣ ಮತ್ತು ಮಧ್ಯ ಚೀನಾಗಳಿಗೆ ಆಫೀಮು ಕಳ್ಳಸಾಗಣೆಯಾಗಿ ಇದನ್ನು ಕೊಂಡುಕೊಳ್ಳಲು ಹಲವು ವ್ಯಸನಿಗಳು ತಮ್ಮ ಭೂಮಿ ಮತ್ತು ಮನೆಗಳನ್ನು, ತಮ್ಮ ಹೆಂಡತಿ ಮತ್ತು ಮಕ್ಕಳನ್ನು ಮಾರಿಕೊಂಡರು.

ಬ್ರಿಟಿಷ್ ಸೇನೆಯು ಹಳ್ಳಿಗಳಿಗೆ ನುಗ್ಗಿ ಲೂಟಿ, ದರೋಡೆ, ಅತ್ಯಾಚಾರಗಳಲ್ಲಿ ಮತ್ತು ಮಹಿಳೆಯರ ಮೇಲೆ ಲೈಂಗಿಕ ಕಿರುಕುಳಗಳಲ್ಲಿ ಹೆಚ್ಚೆಚ್ಚು ಭಾಗಿಯಾಗುತ್ತಿದ್ದಂತೆಯೇ ಬೇಸತ್ತ ಹಳ್ಳಿಗರು, ಸುತ್ತಮುತ್ತಲ ನೂರಾರು ಹಳ್ಳಿಗಳೆಲ್ಲವೂ ಒಗ್ಗೂಡಿ ಬ್ರಿಟಿಷ್ ಸೇನೆಯನ್ನು ಎದುರಿಸಿ ಓಡಿಸುತ್ತಿದ್ದವು. ಅಧಿಕಾರಿಗಳು ವಿದೇಶಿಯರಿಗೆ ಹೆದರುತ್ತಿದ್ದರೆ. ವಿದೇಶಿಯರು ಜನರಿಗೆ ಹೆದರುತ್ತಿದ್ದರು ಎಂಬುದು ಚೀನಾದಲ್ಲಿ ಮನೆಯ ಮಾತಾಗಿತ್ತು. ಅಮೆರಿಕಾ ಮತ್ತು ಬ್ರಿಟಿಷರ ವಸ್ತುಗಳಿಗೆ ಯಾವುದೇ ಅಮದು ಸುಂಕವನ್ನು ಹಾಕುವ ಸ್ವಾತಂತ್ರ್ಯವನ್ನು ಚೀನಾದ ರಾಜನು ಕಳೆದುಕೊಂಡನು. ಇದರಿಂದಾಗಿ ಕಡೆಮೆ ಬೆಳೆಯ ಬ್ರಿಟಿಷ್ ಮತ್ತು ಅಮೆರಿಕಾದ ಜವಳಿ ವಸ್ತುಗಳು ಚೀನಾ ಪ್ರವೇಶಿಸಿ, ಚೀನಾದ ಸಾಂಪ್ರದಾಯಿಕ ಗುಡಿ ಕೈಗಾರಿಕೆಗಳು, ಮಿಲಿಯಾಂತರ ನೇಕಾರರು ಮತ್ತು ಇತರೆ ಕರಕುಶಲ ಕರ್ಮಿಗಳನ್ನು ಸಾವಿನ ದವಡೆಗೆ ನೂಕಿದವು.

ಬೆಳ್ಳಿಯ ಬೆಲೆ ಗಗನಕ್ಕೇರಿದ್ದರಿಂದ ರೈತರು ಅದೇ ಕಂಧಾಯ ಕಟ್ಟಲು ದುಪ್ಪಟ್ಟು ಅಕ್ಕಿ ಮಾರಿ ಬೆಳ್ಳಿಯನ್ನು ಸಂಗ್ರಹಿಸಿ ಕಂದಾಯ ಪಾವತಿಸಬೇಕಾಗಿತ್ತು. ಭೂಮಾಲೀಕರು ಸಲಾ ಪಡೆಯಲೇಬೇಕಾದ ಬಲವಂತಕ್ಕೊಳಗಾದ ಸಣ್ಣ ರೈತರಿಗೆ ಅತಿಯಾದ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದರು. ಬೇಸಿಗೆಯಲ್ಲಿ ಪಡೆದ ಧಾನ್ಯಕ್ಕೆ ಅದೇ ವರ್ಷದ ಮಳೆಗಾಲದ ಹೊತ್ತಿಗೆ ದುಪ್ಪಟ್ಟು ಧಾನ್ಯ ನೀಡಬೇಕಾಗಿತ್ತು. ಅಸಂಖ್ಯಾತ ಕುಟುಂಬಗಳು ಭೂಮಿ ತೊರೆದು ಭಿಕ್ಷುಕರಾಗಿ ಸುತ್ತತೊಡಗಿದರು. ಬಲಿಷ್ಠರಾದವರು ಢಕಾಯಿತರ ತಂಡವನ್ನೋ ಅಥವಾ ರಹಸ್ಯವಾದ ಕ್ರಾಂತಿಕಾರಿ ಸಂಘವನ್ನೋ ಸೇರುತ್ತಿದ್ದರು. ದೊರೆಯ ನ್ಯಾಯಾಲಯವು ಅಪ್ಪಚ್ಚಿಯಾದ ಜನರ ಬದುಕನ್ನು ಹಗುರಗೊಳಿಸುವ ಬದಲು ತನ್ನ ಐಷಾರಾಮಿ ಜೀವನವನ್ನು ಇನ್ನಷ್ಟು ವಿಸ್ತರಿಸುತ್ತಾ ಬ್ರಿಟಿಷ್ ಸರ್ಕಾರಕ್ಕೆ ಭದ್ರತೆ ಒದಗಿಸಲು ಕಂದಾಯವನ್ನು ಮತ್ತಷ್ಟು ಹೆಚ್ಚಿಸಿತ್ತು. ಈ ವಿಷಮ ಪರಿಸ್ಥಿತಿಯಲ್ಲಿ ಜನರು ದಂಗೆಯೇಳತೊಡಗಿ ೧೮೪೧ ಮತ್ತು ೧೮೪೯ರ ನಡುವೆ ದೇಶದ ವಿವಿಧ ಭಾಗಗಳಲ್ಲಿ ೧೦೦ಕ್ಕೂ ಹೆಚ್ಚು ದಂಗೆಗಳು ಎದ್ದವು.

ಪ್ರಥಮ ಅಫೀಮು ಯುದ್ಧದಲ್ಲಿ ಬ್ರಿಟನ್ ಮತ್ತು ಇತರೆ ಪಾಶ್ಚಿಮಾತ್ಯ ಶಕ್ತಿಗಳು ತಾವೀಗಾಗಲೇ ಗಳಿಸಿಕೊಂಡ ಸಂಪತ್ತಿನಿಂದ ತೃಪ್ತಿ ಕಾಣಲಿಲ್ಲ. ಏಕೆಂದರೆ ಹೆಚ್ಚನ ಪ್ರತಿರೋಧವಿದ್ದರಿಂದ ಕೋಟೆಯಿಂದಾವೃತವಾದ ಗ್ವಾಂಗ್ಜೌ ಎಂಬ ನಗರವನ್ನು ಬ್ರಿಟಿಷ್ ಫ್ರೆಂಚ್ ಸೇನೆಯು ಪ್ರವೇಸಿಸಲು ಸಾಧ್ಯವಾಗಿರಲಿಲ್ಲ. ಚೀನಾವು ತನ್ನೆಲ್ಲ ಬಂದರುಗಳನ್ನು ಮುಕ್ತವಾಗಿರಿಸಿ ಬ್ರಿಟಿಷರ ವಸ್ತುಗಳಿಗೆ ಪ್ರವೇಶ ನೀಡಬೇಕೆಂದು ಬ್ರಿಟನ್ ಬಯಸಿತ್ತು. ಅತಿ ಲಾಭ ತರುವ ಅಫೀಮು ವ್ಯಾಪಾರವಿನ್ನೂ ಕಾನೂನುಬಾಹಿರವೆಂದೇ ಪರಿಗಣಿಸಿದ್ದರಿಂದ ಚೀನಾವು ಅದಕ್ಕೆ ಕಾನೂನಿನಲ್ಲಿ ಮಾನ್ಯತೆ ನೀಡಬೇಕೆಂದು ಬ್ರಿಟನ್ ಬಯಸಿತ್ತು. ಕಾನೂನುಬಾಹಿರವಾಗಿ ಹಾಂಕಾಂಗ್ ಪ್ರವೇಶಿಸಿದ ಬ್ರಿಟಿಷ್ ನೌಕೆಯನ್ನು ಚೀನಾವು ಶೋಧನೆಗೊಳಪಡಿಸಿದ್ದನ್ನು ತಮಗಾದ ಅವಮಾನವೆಂಬ ಕುಂಟು ನೆಪವೊಡ್ಡಿ ಬ್ರಿಟನ್ ಗ್ವಾಂಗ್ಜೌ ನಗರವನ್ನು ವಶಪಡಿಸಿಕೊಂಡಿತು. ಈ ಬಿಕ್ಕಟ್ಟಿನಲ್ಲಿ ಮಧ್ಯವರ್ತಿಗಳ ಸೋಗು ಧರಿಸಿ ಬಂದ ಅಮೆರಿಕಾ ಮತ್ತು ರಷ್ಯಾದ ತ್ಸಾರ್ ಮಂತ್ರಿಗಳು ಬ್ರಿಟನ್‌ಗೆ ಬೆಂಬಲ ನೀಡಿದ್ದರಿಂದ ಚೀನಾ ಅವುಗಳ ಬೇಡಿಕೆಗಳೆಲ್ಲವನ್ನು ಒಪ್ಪಿ ಅಫೀಮನ್ನು ಕಾನೂನಿನಲ್ಲಿ ಮಾನ್ಯ ಮಾಡಿತು. ಯುದ್ಧ ಮುಗಿಯುವ ಹಂತದಲ್ಲಿ ಹಳೆಯ ಬೇಸಿಗೆ ಅರಮನೆಯನ್ನು ಬ್ರಿಟಿಷ್ ಮತ್ತು ಫ್ರೆಂಚ್ ಸೇನೆಗಳು ೧೮೬೦ರ ಅಕ್ಟೋಬರ್ ನಲ್ಲಿ ನಾಶಪಡಿಸಿದವು. ‘‘ನಮ್ಮ ಯುರೋಪ್ ನಲ್ಲಿರುವ ಯಾವೊಂದು ವಸ್ತುವು ಅಂತಹ ಐಷಾರಾಮತನದ ಕಲ್ಪನೆಯನ್ನು ನಮಗೆ ನೀಡುವುದಿಲ್ಲ’’ ಎಂದು ಬ್ರಿಟಿಷ್ ಸೇನಾಧಿಕಾರಿಯು ದಾಖಲಿಸಿದ್ದಾನೆ.

ಈ ಲೂಟಿ ಮತ್ತು ಡಕಾಯಿತಿಯ ಕುರಿತು ವಿಕ್ಟರ್ ಹ್ಯೂಗೋ ತನ್ನ ಕೊಂಕು ನುಡಿಗಳಲ್ಲಿ ಹೀಗೆ ಬರೆದಿದ್ದಾರೆ :

ಇಬ್ಬರು ಡಕಾಯಿತರು, ಫ್ರಾನ್ಸ್ ಮತ್ತು ಇಂಗ್ಲೆಂಡ್, ಏಷ್ಯಾದ ಕ್ಯಾಥೆಡ್ರಲ್ ವೊಂದನ್ನು ಪ್ರವೇಶಿದರು. ಒಬ್ಬ ಲೂಟಿ ಮಾಡಿದರೆ ಮತ್ತೊಬ್ಬ ಬೆಂಕಿ ಹಚ್ಚಿದ ಇಬ್ಬರು ವಿಜಯಿಗಳಲ್ಲೊಬ್ಬ ತನ್ನ ಜೇಬು ಭರ್ತಿ ಮಾಡಿಕೊಂಡ, ಮತ್ತೊಬ್ಬ ತನ್ನ ಪೆಟ್ಟಿಗೆಗಳನ್ನು ಭರ್ತಿ ಮಾಡಿದ, ಮತ್ತವರ ತೋಳಿಗೆ ತೊಳು ಸೇರಿದ ಹುಸಿ ನಗೆ ನಗುತ್ತಾ ಯುರೋಪಿಗೆ ವಾಪಸಾದರು. ಕೆಲವು ವೇಳೆ ಸರ್ಕಾರಗಳು ಡಕಾಯಿತರಾದರೂ, ಜನರೆಂದಿಗೂ ಆಗುವುದಿಲ್ಲ.

ತೈಪಿಂಗ್ ಕ್ರಾಂತಿ

ಹತ್ತೊಂಬತ್ತನೆಯ ಶತಮಾನದಲ್ಲಿ ತೈಪಿಂಗ್ ಕ್ರಾಂತಿಯು(೧೮೫೧-೧೮೬೫) ಚೀನಾದ ಅತಿ ದೊಡ್ಡ ರೈತ ಬಂಡಾಯ ಮತ್ತು ವಿಶ್ವದ ಅತ್ಯಂತ ದೊಡ್ಡ ನಾಗರಿಕ ಯುದ್ಧವೆನಿಸಿದೆ. ಇದೊಂದು ಪ್ರಜಸತ್ತಾತ್ಮಕ ಕ್ರಾಂತಿಯಾಗಿದ್ದು ಇದು ಬಹುತೇಕ ೧೮೪೮ರ ಯುರೋಪ್ ಕ್ರಾಂತಿ ಮತ್ತು ಅಮೆರಿಕಾದ ನಾಗರಿಕ ಯುದ್ಧದ ಸಮಯದಲ್ಲೇ ಪ್ರಾರಂಭವಾಯಿತು. ಭಾರತದಲ್ಲಿ ಸಿಪಾಯಿದಂಗೆ ಎಂದು ಕರೆಯಲಾದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಇದೇ ಅವಧಿಯಲ್ಲಿ ಉತ್ತರ ಭಾರತವನ್ನೆಲ್ಲಾ ಅವರಿಸಿತ್ತು.

ಇದಕ್ಕೆ ಬೆಂಬಲವಾಗಿ ಬಡರೈತರು ಮತ್ತು ಕುಶಲಕರ್ಮಿಗಳು ಮಾತ್ರವಲ್ಲದೆ, ತಾಳಲಾಗದ ದಬ್ಬಾಳಿಕೆ ದೌರ್ಜನ್ಯಗಳಿಗೆ ತುತ್ತಾಗಿದ್ದ ರಾಷ್ಟ್ರೀಯ ಅಲ್ಪಸಂಖ್ಯಾತರು ಸಹ ಇದ್ದರು. ಈ ಕ್ರಾಂತಿಯನ್ನು ೧೮೬೪ರಲ್ಲಿ ಪುಡಿಗಟ್ಟಿದಾಗ ನೆಪೋಲಿಯನಿಕ್ ಯುದ್ಧ, ಕ್ರಿಮಿಯನ್ ಯುದ್ಧ, ಅಮೆರಿಕಾದ ನಾಗರಿಕ ಯುದ್ಧ ಮತ್ತು ಫ್ರೆಂಚ್-ಪ್ರಷ್ಯನ್ ಯುದ್ಧಗಳಲ್ಲಿ ಮಡಿದ ಒಟ್ಟು ಸಂಖ್ಯೆಯಷ್ಟು ಜನರು ಇದರಲ್ಲಿ ಹತರಾದರು.

ಚೀನಾಜಪಾನ್ ಯುದ್ಧ

ಸಾಮ್ರಾಜ್ಯಶಾಹಿ ಶಕ್ತಿಗಳು ಪ್ರಪಂಚದೆಲ್ಲೆಡೆ ದುರ್ಬಲ ರಾಷ್ಟ್ರಗಳ ಆಕ್ರಮಣ ನಡೆಸಿ ದೋಚುತ್ತಿರುವಂತೆಯೇ ಕೊರಿಯಾ ದಶದ ಮೇಲೆ ತಮ್ಮ ಹಿಡಿತ ಸಾಧಿಸಲು ಅಲ್ಲಿ ಆಂತರಿಕ ಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದವು. ೧೮೯೪-೧೮೯೫ರಲ್ಲಿ ಕೊರಿಯಾದ ಆಂತರಿಕ ಗಲಭೆಗಳನ್ನು ನಿಯಂತ್ರಿವಲ್ಲಿ ಸಹಕರಿಸಲು ಚೀನಾದ ಕಿಂಗ್ ಸರ್ಕಾರವು ಸೇನೆ ಕಳುಹಿಸಿದ್ದರಂದ ಕ್ರೋಧಗೊಂಡ ಜಪಾನ್ ಚೀನಾದ ಮೇಲೆ ಏಕಾಏಕಿ ಯುದ್ಧ ಸಾರಿತು. ಅಸಂಘಟಿತವಾಗಿದ್ದ ಚೀನಾದ ಭೂಭಾಗದ ಮೇಲೆ ಜಪಾನ್ ದಾಳಿ ನಡೆಸಿ ಬಲಹೀನವಾಗಿದ್ದ ರಾಷ್ಟ್ರವೊಂದು ಬೃಹತ್ ರಾಷ್ಟ್ರವನ್ನು ಸೋಲಿಸಿತೆಂಬುದೇ ಚೀನಾಗೆ ಇನ್ನಿಲ್ಲದ ರೀತಿಯ ಅವಮಾನವಾಗಿ ಕಾಣಲಾರಂಭಿಸಿತು. ಚೀನಾದ ಕರುಣಾಜನಕ ಸ್ಥಿತಿಯನ್ನು ಬ್ರಿಟಿಷ್ ವಿದೇಶಾಂಗ ಮಂತ್ರಿ ಲಾರ್ಡ್ ರೋಸ್ ಬೆರಿಯು ಒರಟಾಗಿ ವ್ಯಕ್ತಿಪಡಿಸಿದ್ದಾರೆ:

ಹಲವು ಟರ್ಕಿಗಳಿಗೆ ಸಮನಾಗಿರುವ ರೋಗಗ್ರಸ್ತ ಮನುಷ್ಯನೊಬ್ಬ ಅಲ್ಲಿದ್ದಾನೆ. ಭೂಮಿಯ ಮೇಲೆ ಆರ್ಮೆನಿಯನ್ನರು ನಡೆದಾಡಿರ ಬಹುದಾದಕ್ಕಿಂತಲೂ ಹೆಚ್ಚಿನ ಜನರಿದ್ದಾರೆ. ವಾಣಿಜ್ಯ ಸಂಪತ್ತಿನ ದೃಷ್ಟಿಯಲ್ಲಿ ಆಫ್ರಿಕಾದಿಂದ ಇದುವರೆಗೂ ಬಂದಿರಬಹುದಾದಕ್ಕಿಂತಲೂ ಹೆಚ್ಚಿನ ಬೆಲೆ ಕಟ್ಟಲಾಗದಂತಹ ದಂತ ಮತ್ತು ನವಿಲುಗಳ ಅಲ್ಲಿವೆ.

ಚೀನಾದ ಕ್ರಾಂತಿಯ ತಂದೆ ಡಾ.ಸನ್ಯಾತ್ ಸೆನ್

ಇಂಥಹ ಬೇಗುದಿಯಲ್ಲಿ ನರಳುತ್ತಾ ವಿದೇಶಿ ಆಕ್ರಮಣಗಳಿಗೆ ತುತ್ತಾಗಿ ರಾಜರಾಳ್ವಿಕೆಯಲ್ಲಿ ಚಿತ್ರಹಿಂಸೆಯ ಜೀವನವನ್ನು ನಡೆಸುತ್ತಾ ಹಪಹಪಿಸುತ್ತಿದ್ದ ಚೀನಾವನ್ನು ಕಿಂಗ್ ವಂಶದ ತೆಕ್ಕಿಯಿಂದ ರಕ್ಷಿಸಿ ಪ್ರಜಸತ್ತಾತ್ಮಕ ರಪಬ್ಲಿಕ್ಕನ್ನು ಸ್ಥಾಪಿಸುವ ಸಿದ್ಧಾಂತವನ್ನು ಮೊದಲಿಗೆ ಪ್ರತಿಪಾದಿಸಿದವರೆ ಡಾ. ಸನ್‌ಯಾತ್ ಸೆನ್(೧೮೬೬-೧೯೨೫). ಹಳೆಯ ಪಾಳೇಗಾರಿ ಚೀನಾದ ರೋಗಗಳೆಲ್ಲವನ್ನು ವಾಸಿ ಮಾಡಿ ಸದೃಢ, ಬಲಿಷ್ಠ ರಾಷ್ಟ್ರ ಕಟ್ಟಲು ಕೃಷಿ, ಕೈಗಾರಿಕೆ, ವಾಣಿಜ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸುಧಾರಣೆ ತರಬೇಕೆಂದು ಸನ್ ಯಾತ್ ಸೆನ್  ಅವರು ಕಿಂಗ್ ದೊರೆಯ ನ್ಯಾಯಾಲಯಕ್ಕೆ ಶಿಫಾರಸ್ಸು ಮಾಡಿದರು. ಯಾವುದೇ ಉತ್ತರ ಕಾಣದೆ ನಿರಾಶೆಯಿಂದ ರಾಜಧಾನಿ ಬೀಜಿಂಗ್‌ಗೆ ಸನ್‌ಯಾತ್ ಸೆನ್‌ರು ತೆರಳಿದಾಗ ಕಿಂಗ್ ನ್ಯಾಯಾಲಯವು ಕೊಳೆತು ನಾರುತ್ತಿರುವುದನ್ನು ಕಣ್ಣಾರೆ ಕಂಡರು. ನಂತರ ರಾಷ್ಟ್ರದಾದ್ಯಂತ ತಿರುಗುತ್ತಾ ಕ್ರಾಂತಿಕಾರಿ ವಿಚಾರಧಾರೆಗಳನ್ನು ಹರಡತೊಡಗಿದರು. ‘‘ಮಂಚು ರಾಜನ ಆಳ್ವಿಕೆಯ ಇನ್ನೇನು ಕುಸಿದು ಬೀಳುವ ಕಟ್ಟಡದಂತಿದೆ. ಹೊರಗಿನ ಯಾವೊಂದು ಶಕ್ತಿಯ ಅದರ ಕುಸಿತವನ್ನು ತಡೆ ಹಿಡಿಯಲಾರದು’’ ಎಂದು ಅವರು ೧೯೦೪ರಲ್ಲೇ ನುಡಿದಿದ್ದರು.

ಚೀನಾ ಮತ್ತು ರಷ್ಯಾಜಪಾನ್ ಯುದ್ಧ

೧೯೦೪-೦೫ರ ರಷ್ಯಾ ಜಪಾನ್ ಯುದ್ಧವು ನಡೆದದ್ದೇ ಚೀನಾದ ಈಶಾನ್ಯ ಪ್ರದೇಶ ಮತ್ತು ಕೊರಿಯಾವನ್ನು ಯಾವ ಸಾಮ್ರಾಜ್ಯಶಾಹಿ ಶಕ್ತಿಯು ನಿಯಂತ್ರಿಸಬೇಕೆಂಬ ಪ್ರಶ್ನೆಯ ಇತ್ಯರ್ಥಕ್ಕಾಗಿ, ಈ ಎರಡೂ ದೇಶಗಳು ಚೀನಾದ ಮಣ್ಣಿನ ಮೇಲೆ ಕಾದಾಡ ತೊಡಗಿ ದರೂ ಚೀನಾದ ಕಿಂಗ್ ಸರ್ಕಾರವು ಬಿಕ್ಕಟ್ಟಿನ ಸಮಯದಲ್ಲಿ ತಟಸ್ಥ ನಿಲುವು ತಳೆದು ಪ್ರೇಕ್ಷಕನಂತೆ ನೋಡುತ್ತಾ ಕುಳಿತಿತ್ತು. ಈ ಪರಿಸ್ಥಿತಿಯ ಚಿತ್ರಣ ಹೇಗಿತ್ತೆಂದರೆ ಇಬ್ಬರು ಡಕಾಯಿತರು ಒಂದೇ ಮನೆ ಮುರಿದು ಒಳನುಗ್ಗಿ ಯಾರು ಲೂಟಿ ಮಾಡಬೇಕೆಂದು ಕಾದಾಡುತ್ತಿದ್ದಾಗ ಮನೆಯೊಡೆದು ಸುಮ್ಮನೆ ನಿಂತು ಯಾವ ಡಕಾಯಿತ ಬಹುಮಾನ ಗೆಲ್ಲುವನೆಂದು ನೋಡುತ್ತಿದ್ದ ಹಾಗಿತ್ತು.

ಹೀಗೆ ಹೀನಾಯ ಸ್ಥಿತಿಯಲ್ಲಿದ್ದ ಚೀನಾವನ್ನು ೧೯೦೧ರ ಕ್ರಾಂತಿಯು ೨೦೦೦ ವರ್ಷಗಳ ಕಾಲ ಆಳಿದ್ದ ಪಾಳೇಗಾರಿ ಆಳ್ವಿಕೆಯನ್ನು ಕಿತ್ತೊಗೆದು ಚೀನಾವು ಏಷ್ಯಾದಲ್ಲೇ ಪ್ರಥಮ ರಿಪಬ್ಲಿಕ್ ಆಗಿ ಪರಿವರ್ತನೆ ಮಾಡಿತು. ಈ ಕ್ರಾಂತಿಯ ಹಿಂದೆ ಜನತೆಯ ಸಂಕಷ್ಟಗಳು ಮತ್ತು ಅಸಮಧಾನಗಳು ತಮ್ಮ ಚಟುವಟಿಕೆಗಳನ್ನು ಕ್ರಾಂತಿಕಾರಿಗಳು ಇನ್ನಷ್ಟು ತೀವ್ರಗೊಳಿಸುವಂತೆ ಪ್ರೇರೇಪಿಸಿದ್ದವು. ೧೯೦೫ ಮತ್ತು ೧೯೧೦ರ ನಡುವೆಯೇ ೧೦ಕ್ಕೂ ಹೆಚ್ಚು ಕ್ರಾಂತಿಕಾರಿ ಬಂಡಾಯಗಳು ದಕ್ಷಿಣ ಚೀನಾದ ವಿವಿಧ ಭಾಗಗಳಲ್ಲಿ ಜರುಗಿದವು. ಡಾ.ಸನ್‌ಯಾತ್ ಸೆನ್‌ರ ನಾಯಕತ್ವದಲ್ಲಿ ಸಾಯಲೂ ಸಿದ್ಧರಾದ ಕ್ರಾಂತಿ ಕಾರಿಗಳು ಚೀನಾದ ವಿಮೋಚನೆಗಾಗಿ ವೀರಾವೇಶದ ಹೋರಾಟ ನಡೆಸಿದರು. ವಿದೇಶದಲ್ಲಿದ್ದ ಡಾ.ಸನ್‌ಯಾತ್ ಸೆನ್‌ರು ವಾಪಸ್ಸಾಗಿ ಹೊಸ ರಿಪಬ್ಲಿಕ್‌ನ ಅಧ್ಯಕ್ಷರಾದರೂ ಸಹ ಅವಳ ಆಳ್ವಕೆಯು ಕಿರು ಅವಧಿಯದಾಗಿತ್ತು. ಏಕೆಂದರೆ ಕ್ರಾಂತಿಯ ಬಲಹೀನತೆ, ಆಂತರಿಕ ವಿರೋಧಿಗಳ ಮಿಲಿಟರಿ ಶಕ್ತಿ ಮತ್ತು ವಿದೇಶಿ ಶಕ್ತಿಗಳ ಬೆಂಬಲ ಇದಕ್ಕೆ ಕಾರಣವಾಗಿದ್ದವು.

ಪ್ರಥಮ ಮಹಾಯುದ್ಧದ ಪರಿಣಾಮಗಳು

ಜಪಾನ್ ದೇಶವು ಪ್ರಥಮ ಮಹಾಯುದ್ಧದಲ್ಲಿ ಚೀನಾದಲ್ಲಿ ತನ್ನ ನೆಲೆ ಮತ್ತು ಪ್ರಭಾವವನ್ನು ಮತ್ತಷ್ಟು ವಿಸ್ತರಿಸಲು ಹವಣಿಸಿತು. ಈ ಮಧ್ಯೆ ರಾಜವಂಶದ ಯೂನ್ ಶಿಕಾಂiiಯ ರಾಜಳ್ವಿಕೆಯನ್ನು ಪುನರ್ ಸ್ಥಾಪಿಸಲು ಯತ್ನಿಸಿದನು. ಸ್ವದೇಶಿ ಬಂಡವಾಳ ಗಾರರು ಮತ್ತು ದುಡಿಯುವ ವರ್ಗ ಬೆಳವಣಿಗೆಯೊಂದಿಗೆ ಚೀನಾದ ಆಧುನಿಕ ಕೈಗಾರಿಕೆಯ ತ್ವರಿತ ಬೆಳವಣಿಗೆಯನ್ನು ಕಂಡಿತು. ಯುದ್ಧ ಸಮಯದಲ್ಲಿ ೨ ಲಕ್ಷ ಚೀನಿ ಕಾರ್ಮಿಕರನ್ನು ಫ್ರಾನ್ಸ್, ಬ್ರಿಟನ್ ಮತ್ತು ಇತರೆ ರಾಷ್ಟ್ರಗಳಲ್ಲಿ ಕೆಲಸ ಮಾಡಿಸಲು ಎಳೆತರಲಾಗಿತ್ತು. ಅವರ ಪ್ರಜ್ಞೆ ಸುತ್ತಮುತ್ತಲ ಜಗತ್ತಿನ ಸಂಪರ್ಕದಿಂದಾಗಿ ಜಾಗೃತ ಗೊಂಡಿತು. ರಷ್ಯಾದಲ್ಲಿ ಕಮ್ಯುನಿಷ್ಟ್ ಆಡಳಿತದ ಪ್ರಭಾವದಲ್ಲಿ ಸಿಲುಕಿದ ಕಾರ್ಮಿಕರು ಅಲ್ಲಿಯ ಕೆಂಪುಸೇನೆಯಲ್ಲಿ ಸ್ವಯಂಪ್ರೇರಣೆಯಿಂದ ಕೆಲಸ ಮಾಡಿದ್ದಾರೆ.

ಚೀನಾದ ಜನಜೀವನದ ದುಃಸ್ಥಿತಿ

ಚೀನಾದ ಹಳ್ಳಿಗಾಡಿನಲ್ಲಿ ಶೇ.೮೦ರಷ್ಟು ಜನತೆ ವಾಸಿಸುತ್ತಿತ್ತು. ಜನಸಂಖ್ಯೆಯ ಶೇ.೧೦ರಷ್ಟಿದ್ದ ಭೂಮಾಲೀಕರು ಮತ್ತು ಶ್ರೀಮಂತ ರೈತರು ಶೇ.೨೦ – ೮೦ರಷ್ಟು ಕೃಷಿ ಭೂಮಿಯನ್ನು ಹೊಂದಿದ್ದ, ಜನಸಂಖ್ಯೆಯ ವಿಶಾಲ ಸಮೂಹವಿದ್ದ ಬಡ ರೈತಾಪಿಯು ಕೇವಲ ಶೇ.೨೦-೩೦ರಷ್ಟು ಭುಮಿಯನ್ನು ಹೊಂದಿದ್ದರು. ಹಿಡುವಳಿದಾರರು ಹೆಚ್ಚಿನ ಗೇಣಿ ನೀಡುವುದಲ್ಲದೆ ಸಾಲದ ಮೇಲೆ ಹೆಚ್ಚು ಬಡ್ಡಿ ಮತ್ತು ಎಲ್ಲ ತರಹದ ತೆರಿಗೆಗಳು ಮತ್ತು ಕಂದಾಯಗಳನ್ನು ಪಾವತಿ ಮಾಡಬೇಕಾಗಿತ್ತು. ಉದಾಹರಣೆಗೆ ಸಿಚುವಾನ್ ಪ್ರಾಂತ್ಯದಲ್ಲಿ ಕೃಷಿ ತೆರಿಗೆಯನ್ನು ೩೫ ವರ್ಷಗಳ ಮುಂಚೆಯೇ ಸಂಗ್ರಹಿಸಲಾಗುತ್ತಿತ್ತು. ತೆರಿಗೆಯ ಹೊರೆಯಿಂದ ಭೂಮಿಗೆ ಕುಸಿದು ಹೋಗುವಂತಿದ್ದ ಹಲವರು ತಮ್ಮ ಮನೆಗಳನ್ನು ತೊರೆದು ಭಿಕ್ಷುಕರಾಗುತ್ತಿದ್ದರು ಅಥವಾ ಡಕಾಯಿತರ ಗುಂಪಿಗೆ ಸೇರುತ್ತಿದ್ದರು.

ನಗರ ಪ್ರದೇಶಗಳಲ್ಲಿ ಚೀನಾದ ಮತ್ತು ವಿದೇಶಿ ಮಾಲೀಕರ ಹಿಡಿತದಲ್ಲಿರುವ ಕಾರ್ಖಾನೆಗಳೆರಡರಲ್ಲೂ ಕಾರ್ಮಿಕರನ್ನು ಗುಲಾಮರಂತೆ ಕಾಣಲಾಗುತ್ತಿತ್ತು. ಮಕ್ಕಳಿಗೂ ಮತ್ತು ಮಹಿಳೆಯರಿಗೂ ದುಡಿಯುವ ಸಮಯವು ರಾತ್ರಿಯೂ ಸೇರಿದಂತೆ ೧೨ ಘಂಟೆಗಿಂತಲೂ ಹೆಚ್ಚಿಗೆ ಇರುತ್ತಿತ್ತು. ನರಕಸದೃಶ್ಯ ದುಡಿಯುವ ವಾತಾವರಣ ಸರ್ವಾಧಿಕಾರಿ ಮೇಲ್ವಿಚಾರಕರು ಮತ್ತು ನೈರ್ಮಲ್ಯ ಸೌಲಭ್ಯ ಹಾಗೂ ಸುರಕ್ಷತಾ ಸೌಲಭ್ಯಗಳ ಕೊರತೆಯು ಜೀವನವನ್ನು ಪ್ರಪಾತಕ್ಕೆ ತಳ್ಳಿದ್ದಿತು. ಕ್ಷಯ ರೋಗವು ನಗರಗಳಲ್ಲಿ ವ್ಯಾಪಿಸುತ್ತಲಿದ್ದು ಹಲವು ಕಾರ್ಮಿಕರು ಒಂದಿಲ್ಲೊಂದು ಸಾಂಕ್ರಾಮಿಕ ರೋಗದಿಂದ ಸತ್ತು ಹೋಗುತ್ತಿದ್ದರು. ಸಣ್ಣ ವ್ಯಾಪಾರಗಾರರು ಮತ್ತು ಹಲವು ವೃತ್ತಿ ಪರರು ಹಾಗೂ ಸಂಬಳಗಾರರಿಗೂ ಜೀವನವು ಬಹಳ ಕಠಿಣತೆಯಿಂದಲೂ ಮತ್ತು ಅಭದ್ರತೆಯಿಂದಲೂ ಕೂಡಿದ್ದಿತು. ವಿಶ್ವವಿದ್ಯಾನಿಲಿಯದ ವಿದ್ಯಾರ್ಥಿಗೆ ಪದವಿಯ ನಂತರ ಕೆಲಸ ಸಿಗುತ್ತಿರಲಿಲ್ಲ. ನಿರುದ್ಯೋಗವು ಎಲ್ಲೆಡೆ ತಾಂಡವಾಡುತ್ತಿತ್ತು. ಷಾಂಗೈಯಂತಹ ನಗರದಲ್ಲಿ, ಚಳಿಗಾಲದ ಮುಂಜನೆಯಲ್ಲಿ ಪೋಲೀಸರು ನೂರಾರು ಮೃತದೇಹಗಳನ್ನು ಆಗಾಗ್ಗೆ ಸಾಗಿಸುತ್ತಿದ್ದರು. ಕರಾಳ ಈಶಾನ್ಯ ಕ್ಷಾಮದ ಪರಿಣಾಮವಾಗಿ ೩,೦೦,೦೦೦ ಜನ ಹಸಿವಿನಿಂದ ಮರಣವನ್ನಪ್ಪಿದ್ದಾರೆ. ರೆಡ್ ಕ್ರಾಸ್ ಸಂಸ್ಥೆಯ ತನ್ನ ಶೋಧನಾ ವರದಿಯಲ್ಲಿ ತಿಳಿಸಿರುವಂತೆ ಆಹಾರ ಧಾನ್ಯಗಳನ್ನು ಬೆಳೆಯುವ ಬದಲು ಅಫೀಮನ್ನು ಬೆಳೆಯಬೇಕೆಂದು ರೈತರ ಮೇಲೆ ಪಾಳೇಗಾರರು ಹೆಚ್ಚಿನ ಒತ್ತಡ ಹೇರಿದ್ದರಿಂದ ಜನ ಹಸಿವಿನಿಂದ ಸಾಯಬೇಕಾಯಿತು.

ವಿದೇಶಿ ಶಕ್ತಿಗಳ ಬೇಡಿಕೆ ಪೂರೈಸಲು ಮತ್ತು ತನ್ನ ಐಷಾರಾಮಿ ಆಳ್ವಿಕೆಯನ್ನು ನಡೆಸಲು ಕಿಂಗ್ ವಂಶದ ದೊರೆಯು ಅಗಾಧ ಪ್ರಮಾಣದ ತೆರಿಗೆಯನ್ನು ರೈತಾಪಿಯ ಮೇಲೆ ವಿಧಿಸುತ್ತಿದ್ದನು. ವಿದೇಶಿ ಜವಳಿ ಮತ್ತು ಇತರೆ ಯಂತ್ರೋತ್ಪಾದಿತ ಉತ್ಪನ್ನಗಳ ಪ್ರವೇಶವು ಚೀನಾದ ಬಹುಸಂಖ್ಯೆಯ ಕರಕುಶಲ ಕೈಗಾರಿಕೆಗಳನ್ನು ನಿರ್ನಾಮ ಮಾಡಿತು. ನೈಸರ್ಗಿಕ ವಿಕೋಪಗಳೊಂದಿಗೆ ಇಂತಹ ಆರ್ಥಿಕ ಪೈಪೋಟಿಯು ಜನತೆಯ ಮೇಲೆ ಒತ್ತಡ ತಂದಿತ್ತು. ೧೯೦೪ರಲ್ಲಿ ಅಕ್ಕಿಗಾಗಿ ಗಲಭೆಗಳು ಉದ್ಭವಿಸಿದವು. ದಾಖಲಾಗಿರುವ ಗಲಭೆಗಳ ಸಂಖ್ಯೆಯಲ್ಲಿ ೧೯೦೯ರಲ್ಲಿ ೧೧೩, ೧೯೧೦ರಲ್ಲಿ ೨೯೦ ಗಲಭೆಗಳು ನಡೆದಿವೆ. ಹೀಗೆ ಇಡೀ ರಾಷ್ಟ್ರವೇ ಒಂದು ಜಲಮುಖಿಯಂತೆ ಅಗ್ನಿಕುಂಡವಾಗಿ ಯಾವುದೇ ಸಮಯದಲ್ಲಿ ಸ್ಫೋಟಗೊಳ್ಳಲು ಸನ್ನದ್ಧವಾಗಿ ಕಾದು ಕುಳಿತಂತಿತ್ತು.

ಮಾವೋ ಜೆಡಾಂಗ್ ಅವರ ಪಾತ್ರ

ಮಾವೋ ಜೆಡಾಂಗ್ ಕ್ಸಿಯಂಗ್ಟನ್ ಕೌಂಟಿಯ ಹ್ಯೂನಾನ್ ಪ್ರಾಂತ್ಯದ ಶಾವೋಶನ್ ಗ್ರಾಮದಲ್ಲಿ ೧೮೯೩ರ ಡಿಸೆಂಬರ್ ೨೬ ರಂದು ಸಣ್ಣ ರೈತ ಕುಟುಂಬವೊಂದರಲ್ಲಿ ಜನಿಸಿದರು. ಅವರ ತಂದೆಯ ಹೆಸರು ಮಾವೋ ಶನ್ ಶೆಂಗ್ ಮತ್ತು ಅವರ ತಾಯಿಯ ಹೆಸರು ವೆ ಕಿಮೈ. ಅವರ ತಂದೆ ಬಡರೈತರಾಗಿದ್ದು, ಹೆಚ್ಚಿನ ಸಾಲದ ಕಾರಣದಿಂದಾಗಿ ಅವರಿನ್ನೂ ಯುವಕರಿದ್ದಾಗಲೇ ಸೇನೆಗೆ ಸೇರಬೇಕಾಯಿತು. ಹಲವು ವರ್ಷಗಳ ಕಾಲ ಸೈನಿಕರಾಗಿ ಸೇವೆ ಸಲ್ಲಿಸಿದರು. ಸೇನೆಯಿಂದ ಹಿಂದಿರುಗಿ ಬಂದನಂತರದ ಹಣ ಉಳಿತಾಯ ಮಾಡಿ ವ್ಯಾಪಾರದಿಂದಲೂ ಹಣಗಳಿಸಿ ತನ್ನ ಭೂಮಿಯನ್ನು ಕೊಂಡುಕೊಳ್ಳಲು ಸಫಲರಾದರು. ಮಧ್ಯಮ ರೈತರ ಸ್ಥಾನದಿಂದ ಸ್ವಲ್ಪಸ್ವಲ್ಪವೇ ಕೂಡಿಟ್ಟ ಮಿಗುತಾಯದಿಂದ ಶ್ರೀಮಂತ ರೈತನ ಸ್ಥಾನಕ್ಕೇರಲು ಮಾವೋ ತಂದೆಗೆ ಹೆಚ್ಚಿನ ಸಮಯ ಹಿಡಿಯಲಿಲ್ಲ. ಧಾನ್ಯ ಸಾಗಣೆ ಮತ್ತು ಮಾರಾಟದಿಂದ ಹಣ ಗಳಿಸಿ ಹೆಚ್ಚಿನ ಭೂಮಿಯನ್ನು ಖರೀದಿಸಿದ ಅವರು ತನ್ನ ಹೆಂಡತಿ ಮಕ್ಕಳನ್ನು ಕೂಡ ಬೇಸಾಯ ಕೆಲಸದಲ್ಲಿ ತೊಡಗಿಸಿಕೊಂಡರು.

ಮಾವೋ ಅವರ ಅಧ್ಯಯನವು ಮಗುವಾಗಿದ್ದಾಗ ಖಾಸಗಿ ಶಾಲೆಯಲ್ಲಿಯೂ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರಾಂತೀಯ ರಾಜಧಾನಿಯಾಗಿದ್ದ ಚಾಂಗ್ಸಾದ ಮಧ್ಯಮ ಶಾಲೆಯಲ್ಲಿ ನಡೆಯಿತು. ಆರು ವರ್ಷದವನಿದ್ದಾಗಲೇ ಬಾಲಕ ಮಾವೋ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾ ಹಗಲಿನಲ್ಲಿ ತತ್ವಜ್ಞಾನಿ ಕನ್‌ಪ್ಯೂಷಿಯಸ್‌ನ ಸಾಹಿತ್ಯವನ್ನು ಓದುತ್ತಾ ಬೆಳಿಗ್ಗೆ ಮತ್ತು ರಾತ್ರಿ ಹೊಲದಲ್ಲಿ ದುಡಿಯುತ್ತಿದ್ದರು. ಶಾಲೆಯ ಮಾಸ್ತರರು ತುಂಬಾ ಕಠಿಣ ಮನಸ್ಕರೆನಿಸಿದ್ದು ವಿದ್ಯಾರ್ಥಿಗಳನ್ನು ಮನಸೋ ಇಚ್ಛೆ ದಂಡಿಸುತ್ತಿದ್ದರು. ಇದರಿಂದ ಒಂದೊಮ್ಮೆ ಬೇಸತ್ತ ಮಾವೋ ಮನೆ ಶಾಲೆಗಳನ್ನು ತ್ಯಜಿಸಿ ಮೂರು-ನಾಲ್ಕು ದಿವಸ ದೂರ ಪ್ರದೇಶಕ್ಕೆ ತೆರಳಿದರು. ಹೇಗೋ ಮನೆಯವರ ಕೈಗೆ ಸಿಕ್ಕುಬಿದ್ದ ನಂತರ ಬಾಲಕ ಮಾವೋ ಅವರ ಬಂಡಾಯಕ್ಕೆ ಕಾರಣವನ್ನರಿತ ಅವರ ತಂದೆ ಮತ್ತು ಮಾಸ್ತರರು ನಂತರ ದಿನಗಳಲ್ಲಿ ಮೃದು ಧೋರಣೆ ತಳೆದರಂತೆ.

ಮಾವೋರವರ ಕುಟುಂಬದಲ್ಲಿ ಆಂತರಿಕ ಕಲಹ

ಅವರ ತಂದೆ ಸದಾ ಪುಸ್ತಕ ಜೋಡಿಸುವ, ಲೆಕ್ಕ ಇಡುವ ಕೆಲಸಗಳನ್ನು ಮಾವೋ ಅವರಿಗೆ ನೀಡುತ್ತಿದ್ದು ಅಗತ್ಯ ಹಣ ಕೊಡದೆ ಮತ್ತು ಕಡಿಮೆ ಆಹಾರ ನೀಡುತ್ತಾ ಸದಾ ಒಂದಿಲ್ಲೊಂದು ಕೆಲಸಗಳನ್ನು ಹೊರಿಸುತ್ತಿದ್ದರು ಮತ್ತು ಮುಂಗೋಪದಿಂದಾಗಿ ಮಾವೋ ಮಾತ್ತು ಅವರ ಸಹೋದರರನ್ನು ದಂಡಿಸುತ್ತಿದ್ದರು. ಅವರ ತಾಯಿ ಕರುಣಾಳುವೂ ಉದಾರವಾದಿಯೂ ಮತ್ತು ದಯಾಳವೂ ಆಗಿದ್ದು ತನ್ನ ಬಳಿಯಿದ್ದೆಲ್ಲವನ್ನೂ ಇತರರೊಡನೆ ಹಂಚಿಕೊಳ್ಳುತ್ತಿದ್ದರು. ಬಡಬಗ್ಗರನ್ನು ಕಂಡರೆ ಕನಿಕರ ಪಡುತ್ತಿದ್ದ ಅವರು ಬರಗಾಲದಲ್ಲಿ ಬಡವರು ಅಕ್ಕಿ ಕೇಳುತ್ತಾ ಬಂದಾಗ ನೀಡುತ್ತಿದ್ದರಾದರೂ ಅವರ ಗಂಡನೆದುರು ನೀಡಲು ಹೆದರುತ್ತಿದ್ದರು. ಮಾವೋ ಅವರ ತಂದೆ ದಾನಕ್ಕೆಂದೂ ಮನ್ನಣೆ ನೀಡುತ್ತಿರಲಿಲ್ಲ. ಈ ಪ್ರಶ್ನೆಯ ಮೇಲೆಯೇ ಅವರ ಮನೆಯಲ್ಲಿ ಹಲವಾರು ಬಾರಿ ಜಗಳಗಳು ನಡೆಯುತ್ತಿದ್ದವು.

ಮಾವೋ ಅವರು ದಾಖಲಿಸಿರುವಂತೆ ಅವರ ಕುಟುಂಬದಲ್ಲಿ ಎರಡು ಪಕ್ಷಗಳಿದ್ದವು. ಒಂದು ತಂದೆಯ ಆಳುವ ಪಕ್ಷ, ಇನ್ನೊಂದು ಮಾವೋ ಅವರ ತಾಯಿ ಮತ್ತು ಸಹೋದರರು ಹಾಗೂ ಕೆಲವೇಳೆ ಕಾರ್ಮಿಕರೂ ಸೇರಿದ ವಿರೋಧ ಪಕ್ಷ. ಆದರೆ ಅವರ ತಾಯಿಯು ವಿರೋಧ ಪಕ್ಷದ ಐಕ್ಯರಂಗದಲ್ಲಿದ್ದರೂ ಆಳುವ ಪಕ್ಷದೆದುರು ಮುಕ್ತವಾಗಿ ಬಂಡಾಯವೇಳದೆ ಸದಾ ಪರೋಕ್ಷವಾದ ದಾಳಿಯ ನೀತಿಯನ್ನು ಪ್ರತಿಪಾದಿಸುತ್ತಿದ್ದರು.

ಮಾವೋ ತಂದೆಯು ಹೆಚ್ಚೆಚ್ಚು ಸಂಪತ್ತನ್ನು ಗಳಿಸುತ್ತಾ ಭೂಮಿಯನ್ನು ಭೋಗ್ಯಕ್ಕೆ ತೆಗೆದುಕೊಳ್ಳುತ್ತಾ ಆ ಗ್ರಾಮದಲ್ಲೇ ಶ್ರೀಮಂತನಾಗಿ ಬೆಳೆದು ನಿಂತರು. ಅವರು ಮಾವೋ ಅವರಲ್ಲಿ ಸದಾ ತಪ್ಪುಗಳನ್ನು ಗುರುತಿಸುತ್ತಿದ್ದರು ಮತ್ತು ಸೋಮಾರಿಯೆಂದು ದೂಷಿಸು ತ್ತಿದ್ದರು. ಮಾವೋ ಅವರ ಅಸಮಾಧಾನ ತೀವ್ರಗೊಂಡಂತೆ ಅವರ ಕುಟುಂಬದಲ್ಲಿ ಆಂತರಿಕ ಹೋರಾಟವು ನಿರಂತರವಾಗಿ ಬೆಳೆಯತೊಡಗಿತು. ಮಾವೋ ಚೀನಾದ ಜನಪದ ಸಾಹಿತ್ಯದ ಮಾತುಗಳನ್ನು ಹೇರಳವಾಗಿ ಬಳಸುತ್ತಾ ಶಕ್ತಿಯುತವಾದ ವಿವಾದಗಳನ್ನು ತಂದೆಯ ಮೇಲೆ ಹೂಡುತ್ತಿದ್ದರು. ತಂದೆಯಿಂದ ಪ್ರಶ್ನೆಗೊಳಗಾಗಬಾರದೆಂದೇ ಮಾವೋ ತನ್ನ ಕೆಲಸದಲ್ಲಿ ಮತ್ತಷ್ಟು ಶ್ರದ್ಧೆ, ಶಿಸ್ತುಗಳನ್ನು ಅಳವಡಿಸಿಕೊಂಡು ಶಿಷ್ಟಾಚಾರಿಯಾದರು.

ಶಿಕ್ಷಣ ಮತ್ತು ಅಧ್ಯಯನ

ಶಾಲೆಯಲ್ಲಿ ಜನಪದ ಪುಸ್ತಕಗಳ ಮಧ್ಯೆ ಕಾನೂನುಬಾಹಿರ ಪ್ರಗತಿಪರ ಪುಸ್ತಕಗಳನ್ನು ಬಚ್ಚಿಟ್ಟುಕೊಂಡು ಮಾವೋ ಮತ್ತು ಅವರ ಸ್ನೇಹಿತರು ಓದುತ್ತಿದ್ದರು. ಪಾಳೇಗಾರಿ ರಾಜಳ್ವಿಕೆಯನ್ನು ಕಿತ್ತೊಗೆದ ೧೯೧೧ರ ಕ್ರಾಂತಿಯ ನಂತರ ಮೂಡಿ ಬಂದ ಹೊಸ ಸೇನೆಯಲ್ಲಿ ಅರ್ಧವರ್ಷ ಸೇವೆ ಸಲ್ಲಿಸಿದರು. ಹದಿನಾರು ವರ್ಷದ ಮಾವೋ ಆಧುನಿಕ ಶಿಕ್ಷಣವನ್ನು ಕಲಿಸುವ ಶ್ರೀಮಂತ ಶಾಲೆಗೆ ಒಲ್ಲದ ತಂದೆಯನ್ನು ಒಪ್ಪಿಸಿ ಸೇರಿಕೊಂಡರು. ಅಲ್ಲಿನ ಬಹುತೇಕ ವಿದ್ಯಾರ್ಥಿಗಳು ಭೂಮಾಲೀಕರ ಮಕ್ಕಳಾಗಿದ್ದು, ದುಬಾರಿ ವೆಚ್ಚದ ಬಟ್ಟೆಯನ್ನು ಧರಿಸುತ್ತಿದ್ದರು. ಯಾವಾಗಲೂ ಹರಿದ ಕೋಟು ಮತ್ತು ಬಟ್ಟೆಗಳನ್ನು ಧರಿಸಿ ಬರುತ್ತಿದ್ದ ಮಾವೋರನ್ನು ಶ್ರೀಮಂತ ವಿದ್ಯಾರ್ಥಿಗಳು ಛೇಡಿಸುತ್ತಿದ್ದರು.

ಅವರು ಜಾಗತಿಕ ಇತಿಹಾಸ, ವಿಶ್ವ ಭೂಗೋಳ, ಆಡಂ ಸ್ಮಿತ್‌ರ ‘ವೆಲ್ತ್ ಆಫ್ ನೇಷನ್’, ಡಾರ್ವಿನ್‌ರ ‘ಜೀವಿಗಳ ಉಗಮ’, ಸ್ಪೆನ್ಸರ್ ಅವರ ‘ತರ್ಕ’, ರೋಸ್ಸಿಯೋರವರ ಪುಸ್ತಕಗಳು ಮತ್ತು ಇತರೆ ರಾಷ್ಟ್ರಗಳ ಇತಿಹಾಸ ಪುಸ್ತಕಗಳನ್ನು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಓದುತ್ತಿದ್ದರು. ವಿದ್ಯಾರ್ಥಿಯಾಗಿದ್ದಾಗ ಸಮಾನ ಮನಸ್ಕರೊಂದಿಗೆ ಚೀನಾದ ಅದೃಷ್ಟವನ್ನು ಬದಲಿಸುವ ಮಹದಾಸೆಯಿಂದ ಒಂದು ಸಂಘವನ್ನು ಸ್ಥಾಪಿಸಿದರು. ಅದರಲ್ಲಿ ಮನುಷ್ಯರ ಸ್ವಭಾವ, ಮಾವನ ಸಮಾಜ, ಚೀನಾ, ಪ್ರಪಂಚ ಮತ್ತು ವಿಶ್ವ ಇಂತಹ ವಿಸ್ತಾರ ವಿಷಯಗಳ ಬಗ್ಗೆ ಮಾತ್ರವೇ ಚರ್ಚೆ ನಡೆಸುತ್ತಿದ್ದರೆ ಹೊರತು ಪ್ರೀತಿ, ಪ್ರಣಯ, ಹುಡುಗಿ ಅಥವಾ ವೈಯಕ್ತಿಕ ವಿಷಯಗಳನ್ನು ಚರ್ಚಿಸಲು ಅಲ್ಲಿ ಅವಕಾಶವಿರಲಿಲ್ಲ.

ಕಿಂಗ್ ದೊರೆಯ ಆಳ್ವಿಕೆಯ ವಿರುದ್ದ ನಡೆಯುತ್ತಿದ್ದ ಕ್ರಾಂತಿಯ ಯಶಸ್ಸಿಗೆ ವಿದ್ಯಾರ್ಥಿ ಸೇನೆ ಸೇರಲು ಕರೆ ಬಂದಾಗ ಗೊಂದಲಕ್ಕೀಡಾದ ಮಾವೋ ಅದನ್ನು ಸೇರದೆ ನೇರವಾಗಿ ರೆಗ್ಯುಲರ್ ಸೇನೆಯನ್ನು ಸೇರಿದರು. ಪಾಳೇಗಾರಿ ರಾಜಳ್ವಿಕೆಯನ್ನು ಕಿತ್ತೊಗೆದ ೧೯೧೧ರ ಕ್ರಾಂತಿಯ ನಂತರ ಮೂಡಿಬಂದ ಹೊಸ ಸೇನೆಯಲ್ಲಿ ಅರ್ಧವರ್ಷ ಸೇವೆ ಸಲ್ಲಿಸಿದರು. ೧೯೧೩ರಲ್ಲಿ ಹ್ಯೂನಾನ್ ಪ್ರಾಂತ್ಯದ ಸಾಮಾನ್ಯ ಶಾಲೆಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದ ಮಾವೋ ೧೯೧೮ರಲ್ಲಿ ಆ ಶಾಲೆಯಿಂದ ಪದವಿ ಪಡೆದರು. ಯುವಕರಾಗಿ ದ್ದಾಗ ಮಾವೋ ಜೆಡಾಂಗ್ ಅವರು ‘ಹಳೆಯ ಕಲಿಕೆ’ಯೆಂದು ಕರೆಯಲಾಗುತ್ತಿದ್ದ ಚೀನಾದ ಪಾಳೇಗಾರಿ ಸಂಸ್ಕೃತಿ ಮತ್ತು ‘ಹೊಸ ಕಲಿಕೆ’ಯಾದ ಪಾಶ್ಚಿಮಾತ್ಯ ಪ್ರಜಸತ್ತಾತ್ಕ ಸಂಸ್ಕೃತಿಗಳನ್ನು ಅಭ್ಯಸಿಸಿದರು. ಆಹಾರ ಮತ್ತು ನೀರನ್ನು ಕೊಂಡುಕೊಂಡು ಉಳಿದ ಹಣದಲ್ಲಿ ದಿನಪತ್ರಿಕೆ ಮತ್ತು ಪುಸ್ತಕಗಳನ್ನು ಖರೀದಿಸುತ್ತಿದ್ದರು. ಕನ್‌ಪ್ಯೂಸಿಯಸ್, ಕಾಂಗ್ ಯುವೈ, ಲಿಯಾಂಗ್ ಕೆಚಾವೋ, ಸನ್ ಯಾತ್ ಸೆನ್, ಟಾಲಸ್ಟಾಯ್ ಮತ್ತು ಕ್ರೊಪೊಟ್ಕಿನ ಹಾಗೂ ಇತರೆ ನವಕಾಂಟೆವಾದ ಮತ್ತು ನವಹೆಗೆಲ್‌ವಾದಗಳ ತತ್ವಶಾಸ್ತ್ರಗಳೆಲ್ಲವು ಅವರ ಮೇಲೆ ವಿಭಿನ್ನ ರೀತಿಯ ಪ್ರಭಾವ ಬೀರಿ ಅವರ ಆರಂಭಿಕ ಪ್ರಜ್ಞೆ ಮತ್ತು ಆಲೋಚನೆಗಳ ಬೆಳವಣಿಗೆಗೆ ಸಹಕಾರಿಯಾದವು. ಇಪ್ಪತ್ತು ವರ್ಷದ ಹುಡುಗಿಯೊಂದಿಗೆ ೧೪ ವರ್ಷದ ಮಾವೋರನ್ನು ಅವರ ತಂದೆತಾಯಿಗಳು ಮದುವೆ ಮಾಡಿದ್ದರೂ ಆ ವಧುವಿನೊಂದಿಗೆ ಮಾವೋ ಎಂದಿಗೂ ಜೀವನವನ್ನೇ ನಡೆಸಲಿಲ್ಲ.

ಅರ್ಪಣಾ ಮನೋಭಾವದ ಧ್ಯೇಯ ಹೊಂದಿರುವ ಸಂಸ್ಥೆಯನ್ನು ನಿರ್ಮಿಸಬೇಕೆಂದು ಅರಿತ ಅವರು ೧೯೧೮ರಲ್ಲಿ ಇತರೆ ಸ್ನೇಹಿತರೊಂದಿಗೆ ‘ನವಜನತೆಯ ಅಧ್ಯಯನ ಸಂಸ್ಥೆ’ಯನ್ನು ಸ್ಥಾಪಿಸಿದರು. ಅದರಲ್ಲಿ ೭೦ ರಿಂದ ೮೦ ಸದಸ್ಯರಿದ್ದು ಅವರಲ್ಲಿ ಅನೇಕರು ಚೀನಾದ ಕಮ್ಯುನಿಸಂ ಮತ್ತು ಚೀನಾ ಕ್ರಾಂತಿಯ ಇತಿಹಾಸದಲ್ಲಿ ಪ್ರಸಿದ್ಧ ಹೆಸರನ್ನು ಪಡೆದಿದ್ದಾರೆ. ಅದರಲ್ಲಿ ಚಿರಪರಿಚಿತರಾದ ಕಮ್ಯುನಿಸ್ಟರೆಂದರೆ ಪಕ್ಷದ ಸಂಘಟನಾ ಸಮಿತಿಯ ಕಾರ್ಯದರ್ಶಿ ಲೋ ಮಾಯಿ, ದ್ವಿತೀಯ ರಂಗದ ಕೆಂಪು ಸೇನೆಯ ಕ್ಸಿಯಾ ಕ್ಸಿ, ಸುಪ್ರಿಂ ಕೋರ್ಟ್‌ನ ನ್ಯಾಯಾಧೀಶರಾದ ಶು ಹೆಂಗ್, ಪ್ರಸಿದ್ಧ ಕಾರ್ಮಿಕ ಸಂಘಟನಾಕಾರ ಗೋ ಲಿಂಯಾಂಗ್, ಇತರರು. ಹೀಗೆ ರೋಗಗ್ರಸ್ತ ಚೀನಾವನ್ನು ಒಂದು ಮಹಾನ್ ಶಕ್ತಿಯುತ ರಾಷ್ಟ್ರವಾಗಿ ನಿರ್ಮಾಣ ಮಾಡುವ ಮಹದಾಸೆ ಇವರಲ್ಲಿ ಸದಾ ಬೆಂಕಿಯ ಕೊಳ್ಳಿಯಂತೆ ಧಗಿಧಗಿಸುತ್ತಿತ್ತು. ಹಳೆಯ ಸಾಂಪ್ರದಾಯಿಕ ಕಟ್ಟಳೆಗಳ ಸರಪಳಿಯನ್ನು ಕಿತ್ತೆಸೆದು ಅಗಾಧ ವೇಗದಲ್ಲಿ ಮುನ್ನುಗ್ಗುವ ಮಾನವ ಶಕ್ತಿಯ ಸ್ವಾತಂತ್ರ್ಯಕ್ಕಾಗಿ ಸದಾ ಆಲೋಚಿಸುತ್ತುದ್ದರು. ಸೇನೆಯಲ್ಲಿದ್ದಾಗಲೇ ಸಮಾಜವಾದದ ಬಗೆಗಿನ ಚರ್ಚೆ ನಡೆಸುತ್ತಿದ್ದರು.

ತುಕ್ಕು ಹಿಡಿದ ಚೀನಾವನ್ನು ಒಂದು ಪ್ರಬಲ ಶಕ್ತಿಯಾಗಿ ಪರಿವರ್ತಿಸಲು ಕೈ ಹೆಸೆನ್ ಮತ್ತು ಇತರರೊಡಗೂಡಿ ೧೯೧೮ರ ಏಪ್ರಿಲ್ ನಲ್ಲಿ ಹೊಸ ಜನತೆಯ ಸೊಸೈಟಿಯನ್ನು ಸ್ಥಾಪಿಸಿದರು. ಸೊಸೈಟಿ ಸ್ಥಾಪಿಸಿದ ಅಲ್ಪಾವಧಿಯಲ್ಲೇ ಪ್ರಗತಿಪರ ಸದಸ್ಯರು ಮತ್ತು ಇತರೆ ಪ್ರಗತಿಪರ ಯುವಜನರನ್ನು ಫ್ರಾನ್ಸಿಗೆ ಕಳುಹಿಸಲು ಮಾವೋ ಜೆಡಾಂಗ್ ಏರ್ಪಾಡು ಮಾಡಿದರು. ಮಾವೋ ಜೆಡಾಂಗ್ ಪ್ರಥಮ ಬಾರಿಗೆ ಮಾರ್ಕ್ಸ್‌ವಾದದ ಸಂಪರ್ಕಕ್ಕೆ ಬಂದು ಅದನ್ನು ಅಪ್ಪಿಕೊಂಡದ್ದು ಮೇಲೆ ನಾಲ್ಕರ ಚಳುವಳಿಯ(೧೯೧೯) ಸಂದರ್ಭದಲ್ಲಿ. ೧೯೧೯ರಲ್ಲಿ ಪತ್ರಿಕೆಯೊಂದನ್ನು ಹೊರತಂದು ಸಾಂಸ್ಕೃತಿಕ ಅಧ್ಯಯನ ಸೊಸೈಟಿಯನ್ನು ಅವರು ಸ್ಥಾಪಿಸಿದರು.

೧೯೨೦ರ ಚಳಿಗಾಲದಲ್ಲಿ ಕಾರ್ಮಿಕರನ್ನು ರಾಜಕೀಯವಾಗಿ ಸಂಘಟಿಸುತ್ತಾ ಪ್ರಥಮ ಬಾರಿಗೆ ಮಾರ್ಕ್ಸ್‌ವಾದಿ ಸಿದ್ಧಾಂತದ ತಳಹದಿಯ ಮೇಲೆ ಮತ್ತು ರಷ್ಯಾದ ಕ್ರಾಂತಿಯ ಇತಿಹಾಸದ ಆಧಾರದ ಮೇಲೆ ಮಾರ್ಗದರ್ಶನ ನೀಡಲಾರಂಭಿಸಿದರು. ಸೈದ್ಧಾಂತಿಕವಾಗಿ ವಿಚಲಿತರಾಗುತ್ತಿದ್ದ ಮಾವೋ ಅವರಿಗೆ ಸದೃಢ ತಾತ್ವಿಕ ತಳಪಾಯ ಒದಗಿಸಿದ ಪ್ರಮುಖ ಮೂರು ಪುಸ್ತಕಗಳೆಂದರೆ ‘ಕಮ್ಯುನಿಸ್ಟ್ ಮೆನಿಫೆಸ್ಟೋ’, ಕೌಟ್‌ಸ್ಕಿಯವರ ‘ವರ್ಗ ಸಂಘರ್ಷ’ ಮತ್ತು ಕಿರ್ಕುಪ್ ಅವರ ‘ಸಮಾಜವಾದದ ಇತಿಹಾಸ.’ ಅದೇ ವರ್ಷ ಅವರು ಯಾಂಗ್ ಕೈಹು ಎಂಬ ಕಮ್ಯುನಿಸ್ಟ್ ಹೋರಾಟಗಾರ್ತಿಯನ್ನು ಮದುವೆಯಾದರು.