ಇಂತಹ ಸಮಾಜದಲ್ಲಿ ಸರ್ಕಾರ ಕೂಡ ಇನ್ನೊಂದು ಅರ್ಥದಲ್ಲಿ ಗೌಣ ಎನಿಸಿ ಕೊಳ್ಳುತ್ತದೆ. ಚೀನಾದ ವಿಷಯದಲ್ಲಿ ಇದು ನಿಜ ಎನಿಸುತ್ತದೆ. ಚೀನಾದಲ್ಲಿ ಸಾಮ್ರಾಟನಿದ್ದ. ನಂಬಿಕೆಯ ಮೇರೆಗೆ ಆತ ದೇವಲೋಕದ ಪುತ್ರನಾಗಿದ್ದ. ಸೈದ್ಧಾಂತಿಕವಾಗಿ ಅವನು ಸರ್ವಶಕ್ತ ಹಾಗೂ ಸರ್ವಾಧಿಕಾರ ಉಳ್ಳವನು. ಆದರೆ ವ್ಯವಹಾರದಲ್ಲಿ ಅವನ ಅಧಿಕಾರದ ಬಿಸಿ ಜನರಿಗೆ ಅಪ್ರತ್ಯಕ್ಷವಾಗಿ ತಟ್ಟುತ್ತಿತ್ತು. ಅವನು ಜನರ ಮೇಲೆ ಆಳ್ವಿಕೆ ನಡೆಸಿದ, ಆದರೆ ಜನರ ಅರಸನಾಗಲಿಲ್ಲ. ರಾಜಸ್ಥಾನವು ಇದ್ದು ಸಚಿವರ ಸಮೂಹ ಇರುತ್ತಿತ್ತು. ಸ್ಥಳೀಯ ಪ್ರದೇಶಗಳಿಂದ ಸಂಘಟಿತವಾದ ಅಧಿಕಾರಶಾಹಿ ಆಳ್ವಿಕೆಯಿತ್ತು. ತೆರಿಗೆಯ ಅಧಿಕಾರಿಗಳಿಂದ ಸಂಘಟಿತವಾದ ಅಧಿಕಾರಶಾಹಿ ಆಳ್ವಿಕೆಯಿತ್ತು. ಜನತೆಗೆ ತಿಳಿದಿದ್ದ ಒಬ್ಬನೆಯ ಒಬ್ಬ ಅಧಿಕಾರಿ ಎಂದರೆ ಜಿಲ್ಲಾ ಮ್ಯಾಜಿಸ್ಟ್ರೇಟ್. ಅವನು ಕೂಡ ಸೈದ್ಧಾಂತಿಕ ವಾಗಿ ತನ್ನ ಜಿಲ್ಲೆಯಲ್ಲಿ ಸರ್ವಶಕ್ತನಾಗಿದ್ದ. ಆದರೆ ಪ್ರಾಯೋಗಿಕವಾಗಿ ತೆರಿಗೆ ಸಂಗ್ರಹಣೆಯ ಹೊರತು ಇನ್ನಾವುದೇ ಅಧಿಕಾರ ಇರಲಿಲ್ಲ. ಆಡಳಿತದ ಮೂರು ಅಂಗಗಳು- ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳು- ಅವನಲ್ಲೇ ನಿಹಿತವಾಗಿದ್ದವು. ಕಾನೂನು ಹಾಗೂ ಸುವ್ಯವಸ್ಥೆಯ ಹೊಣೆ ಅವನದು. ಸಾರ್ವಜನಿಕ ಕಾಮಗಾರಿಗಳ ಮೇಲ್ವಿಚಾರಣೆ ಆತನ ಹೊಣೆ. ಆಗೀಗ ಕಾಣಿಸಬಹುದಾಗಿದ್ದ ಸಿವಿಲ್ ಹಾಗೂ ಕ್ರಿಮಿನಲ್ ಅಪರಾಧಗಳ ವಿಚಾರಣೆ ಕೂಡ ಆತನ ಹೊಣೆ. ಆದರೆ ಅವನು ಕೂಡ ತೆರಿಗೆ ಸಂಗ್ರಹಣೆಯ ವಿನಾ ಇನ್ನೇನೂ ಮಾಡುತ್ತಿರಲಿಲ್ಲ. ಅದಷ್ಟನ್ನು ಹೊರತುಪಡಿಸಿದರೆ ಜನರನ್ನು ಅವರ ಪಾಡಿಗೆ ಅವರನ್ನು ಬಿಟ್ಟಿರುತ್ತಿದ್ದ.

ಚೀನಾದಲ್ಲಿ ವ್ಯವಸ್ಥಾಪನೆಯ ಕಾರ್ಯವನ್ನು ನಿರ್ವಹಿಸುತ್ತಿದ್ದ ಎರಡು ಅಂಗಗಳು ಇದ್ದವು. ಅದೆಂದರೆ ಸಂಘಟನೆ ಹಾಗೂ ಕುಟುಂಬ. ಸಾಮಾಜಿಕ ವ್ಯವಸ್ಥೆ ಇವುಗಳ ಮೇಲೆಯೇ ಆಧಾರಿತವಾಗಿತ್ತು. ಈ ಎರಡು ಸಂಸ್ಥೆಗಳೇ ಜನತೆಯಲ್ಲಿ ಪರಸ್ಪರ ಸಂಬಂಧ ವನ್ನು ಪೋಷಿಸುತ್ತಿದ್ದವು. ಅಲಿಖಿತ ಸಂಪ್ರದಾಯದಿಂದ ಬಂಧಿತವಾದ ತತ್ವಗಳಿಂದ ಸಹಜೀವಿಗಳ ಸಂಬಂಧಗಳು ಬೆಸೆದಿದ್ದವು. ಸಾಮಾನ್ಯವಾಗಿ ಯಾವುದೇ ಸಮಾಜದಲ್ಲಿ ಪರಸ್ಪರ ಸಂಬಂಧಗಳು ಎರಡು ಪ್ರವರ್ಗಗಳಲ್ಲಿ ವಿಭಜಿತವಾಗಿರುತ್ತಿತ್ತು. ಮೊದಲನೆಯದಾಗಿ ಸಾರ್ವಜನಿಕ ಸಂಬಂಧಗಳು. ಇವರಲ್ಲಿ ದೈನಂದಿನ ಜೀವನದ ಅಗತ್ಯಗಳ ಉತ್ಪಾದನೆ ಹಾಗೂ ವಿತರಣೆ ಎಂದರೆ ಸ್ವತ್ತಿನ ಬಳಕೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಆರ್ಥಿಕ ವ್ಯವಸ್ಥೆ. ಎರಡನೆಯದಾಗಿ ಖಾಸಗಿ ಬದುಕಿನ ಸಂಬಂಧಗಳು. ಇದರಲ್ಲೆ ಮನುಷ್ಯ ಮನುಷ್ಯರ ನಡುವಣ ಸಂಬಂಧಗಳು, ಮಾನವ ಹಾಗೂ ಸ್ವತ್ತುಗಳ ಸಂರಕ್ಷಣೆ, ಶಾಂತಿ ಪಾಲನೆಯ ಕಾರ್ಯ, ವಿವಾಹ, ಪೋಷಕ, ಕೌಟುಂಬಿಕ ಸಂಬಂಧಗಳು ಸೇರಿರುತ್ತವೆ. ಒಂದು ಸಮಾಜವನ್ನು ಸುವ್ಯವಸ್ಥೆಗೊಳಿಸಲು ಈ ಎರಡು ಅಂಗಗಳೇ ಪ್ರಮುಖ ಕಾರಣ.

ಆರ್ಥಿಕ ವ್ಯವಸ್ಥೆಯನ್ನು ಸಂಘಟನೆ(ಗಿಲ್ಡ್)ಯೇ ನಿಯಂತ್ರಿಸುತ್ತಿತ್ತು. ಸಂಘಟನೆ ಎಂದರೆ ಒಂದೇ ಉದ್ಯೋಗದ ಜನರ ಸಂಘಟನೆ ಎಂದರೆ ವ್ಯಾಪಾರಿಗಳು, ಕುಶಲಕರ್ಮಿಗಳು ಬ್ಯಾಂಕರುಗಳಿಂದ ಹಿಡಿದು ಅಡಿಗೆಯವರು, ನಾವಿಕರು, ಭಿಕ್ಷುಕರು -ಹೀಗೆ ಪ್ರತಿಯೊಬ್ಬರಿಗೂ ಅವರದೇ ಆದ ಸಂಘಟನೆ ಇತ್ತು. ವಿದ್ವತ್ ಜನರು ಹಾಗೂ ಕೃಷಿಕರಲ್ಲಿ ಮಾತ್ರ ಇಂಥ ಸಂಘಟನೆ ಇರಲಿಲ್ಲ. ರೈತರು ಸಾಮಾನ್ಯವಾಗಿ ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ಅವರಲ್ಲಿ ಒಂದು ಅಥವಾ ಎರಡು ಮನೆತನಗಳಲ್ಲಿ ಸಮುದಾಯ ವ್ಯಾಪಿಸಿರುತ್ತಿತ್ತು. ಪ್ರತಿಯೊಂದು ಉದ್ಯೋಗ ಅಥವಾ ವ್ಯವಹಾರದಲ್ಲಿ ಸಂಘಟನೆಯ ನಿಯಂತ್ರಣ ಅತ್ಯಂತ ಮಹತ್ವದ್ದಾಗಿತ್ತು. ಇಲ್ಲಿ ಸರ್ಕಾರ ಸಾಂಕೇತಿಕವಾಗಿ ಇರದೆ ಅದು ಸಕಾರಾತ್ಮಕವಾಗಿ ಹಾಗೂ ಪ್ರತ್ಯಕ್ಷವಾಗಿ ಇರುತ್ತಿತ್ತು.

ಆಯಾ ಸಂಘಟನೆಯು ಸಮುದಾಯ ಹಾಗೂ ಜಿಲ್ಲಾದಂಡಾಧಿಕಾರಿಯ ನಡುವಣ ಕೊಂಡಿಯಂತೆ ಇತ್ತು. ಜನತೆ ಹಾಗೂ ಸರ್ಕಾರದ ನಡುವಣ ಮಧ್ಯಸ್ಥನಂತೆ ಇತ್ತು. ಜಿಲ್ಲೆಗೆ ಅದರಲ್ಲೂ ವಿಶೇಷವಾಗಿ ಜಿಲ್ಲಾ ಕೇಂದ್ರವಾದ ಪಟ್ಟಣಕ್ಕೆ ಮಾರಕವಾಗುವಂತಹ ಯಾವುದೇ ಕ್ರಮಗಳ ಬಗ್ಗೆ ದಂಡಾಧಿಕಾರಿಗೆ ಯೋಚನೆ ಇದ್ದರೆ ಆ ಬಗ್ಗೆ ಆತ ಮೊದಲು ಆಯಾ ಸಂಘಟನೆಗಳ ಪ್ರತಿನಿಧಿಗಳನ್ನು ಸಂಪರ್ಕಿಸುತ್ತಿದ್ದ. ತೆರಿಗೆಗೆ ಸಂಬಂಧಪಟ್ಟ ಕ್ರಮ ಗಳಾದರಂತೂ ಈ ಪದ್ಧತಿ ಇದ್ದೇ ಇತ್ತು. ದಂಡಾಧಿಕಾರಿಯ ಪ್ರಸ್ತಾವನೆ ನ್ಯಾಯೋಚಿತ ಎಂದು ಸಮುದಾಯದ ಪ್ರತಿನಿಧಿಗಳಿಗೆ ಕಂಡುಬಂದರೆ ಅವರು ತಮ್ಮ ಒಪ್ಪಿಗೆಯನ್ನು ಔಪಚಾರಿಕವಾಗಿ ಅಲ್ಲದೆ ಸ್ಪಷ್ಟವಾಗಿ ನೀಡುತ್ತಿದ್ದರು. ತದನಂತರ ಕ್ರಮಗಳನ್ನು ಜರಿ ಗೊಳಿಸಲಾಗುತ್ತಿತ್ತು. ದಂಡಾಧಿಕಾರಿಯ ಸೂಚನೆಗಳು ಅಕಾರಣವಾಗಿ ಅನ್ಯಾಯದ್ದಾಗಿ ಕಂಡುಬಂದರೆ ಅದನ್ನು ಸಂಘಟನೆಗಳು ಎತ್ತಿ ತೋರಿಸುತ್ತಿದ್ದವು, ಅಲ್ಲದೆ ಆ ಬಗ್ಗೆ ಮಾತುಕತೆಗಳು ಆಗುತ್ತಿದ್ದವು. ರಾಜಿಯ ಎಲ್ಲ ಕ್ರಮಗಳು ಸಮಾನವಾದುದು, ಎಂದರೆ ಎಲ್ಲ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಳ್ಳುತ್ತಿದ್ದವು. ಸಾಮುದಾಯಿಕ ಜೀವನಕ್ಕೆ ಧಕ್ಕೆ ಉಂಟಾಗುತ್ತಿತ್ತು. ಇಂತಹ ಅವ್ಯವಸ್ಥೆ ಮೇಲಿನವರ ಗಮನಕ್ಕೆ ಬಂದರೆ ದಂಡಾಧಿಕಾರಿಯನ್ನು ವಜಗೊಳಿಸುವಂತಹ ಶಿಕ್ಷೆಗೆ ಗುರಿಪಡಿಸಲಾಗುತ್ತಿತ್ತು. ಇದನ್ನು ಸಂಘಟನೆಗಳೇ ವಿಧಿಸುತ್ತಿದ್ದುದಲ್ಲದೆ ಇದು ಅವುಗಳ ಮುಖ್ಯ ಪ್ರಕಾರ್ಯಗಳಲ್ಲಿ ಒಂದಾಗಿತ್ತು.

ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ದರನಿಗದಿ ಮಹತ್ವದ ಅಂಶವಾಗಿತ್ತು. ಒಂದು ಸರಕಿನ ಮೇಲೆ ಒಬ್ಬ ವ್ಯಾಪಾರಿ ತನಗೆ ತಿಳಿದಂತೆ ದರ ವಿಧಿಸಬಹುದಾಗಿತ್ತು. ಈ ವಿಷಯದಲ್ಲಿ ಖರೀದಿದಾರ ಜಣತನವನ್ನುಪಯೋಗಿಸದಿದ್ದರೆ ಹಾನಿಗೆ ಈಡಾಗುತ್ತಿದ್ದ. ಆದರೆ ಯಾವ ಒಬ್ಬ ವ್ಯಾಪಾರಿಯೂ ಸಂಘಟನೆಯು ಗೊತ್ತುಪಡಿಸಿದ್ದಕ್ಕಿಂತ ಕಡಿಮೆ ದರ ವಿಧಿಸುವಂತೆ ಇರಲಿಲ್ಲ. ಹೀಗಾಗಿ ಎಲ್ಲರ ಹಿತಾಸಕ್ತಿಯ ದೃಷ್ಟಿಯಿಂದ ಸ್ಪರ್ಧೆಯನ್ನು ತಡೆಗಟ್ಟುವುದು ಚೀನಾದಲ್ಲಿ ಅಗತ್ಯವಿತ್ತು. ದರವನ್ನು ಒಂದು ನಿರ್ದಿಷ್ಟ ಮಟ್ಟಕ್ಕಿಂತ ಕಡಿತಗೊಳಿಸುವುದನ್ನು ನಿಷೇಧಿಸಲಾಗಿತ್ತು. ತಡೆ ಆಜ್ಞೆಯನ್ನು ತೀವ್ರವಾಗಿ ಜರಿಗೊಳಿಸ ಲಾಗುತ್ತಿತ್ತು. ಅಪರಾಧಿಗೆ ದಂಡ ವಿಧಿಸಲಾಗುತ್ತಿತ್ತು. ದಂಡಿತನಾಗುವುದು ಹೆಚ್ಚಿದಂತೆ ಸಂಘಟನೆಯಿಂದ ಹೊರಗೆ ತಳ್ಳಿ ಹೊಟ್ಟೆಪಾಡಿಗೂ ತೊಂದರೆಯಾಗುವಂತಹ ಸ್ಥಿತಿ ಇರುತ್ತಿತ್ತು. ಹೀಗಾಗಿ ಅಪರಾಧದ ಸಂಖ್ಯೆ ಗೌಣವಾಗಿತ್ತು. ಇದರಿಂದ ಕಮ್ಯುನಿಸ್ಟ್ ವಿಚಾರಧಾರೆಗೆ ಚೀನಾ ಹೆಚ್ಚು ಒಗ್ಗಿತು ಎಂಬುದನ್ನು ತಿಳಿಯಬಹುದು. ಹೀಗಾಗಿ ಸ್ವತಂತ್ರ ಉದ್ಯೋಗಕ್ಕೆ ನಿರ್ಬಂಧ ಇರುವುದು ಅವರಿಗೆ ಯಾವುದೇ ವಿಧದಲ್ಲಿ ಆಘಾತಕರವಾಗಿ ತೋರುವುದಿಲ್ಲ. ಅವರಲ್ಲಿ ಸ್ವತಂತ್ರವಾದ ಉದ್ಯಮಗಳೇ ಇಲ್ಲ.

ಸಂಘಟನೆಯು ತನ್ನ ವ್ಯಾಪಾರಕ್ಕೆ ತಾನೆಯ ಅಳತೆ ಹಾಗೂ ತೂಕಗಳು ಮಜೂರಿ ಕೆಲಸದ ಅವಧಿಯನ್ನು ನಿಗದಿಪಡಿಸಿತು. ಉದ್ಯಮ ನಿಯಮಗಳು, ಕಾರ್ಮಿಕರ ಜೊತೆಗಿನ ಸಂಬಂಧದ ವಿಷಯಗಳು, ಸಾಲದ ಷರತ್ತುಗಳು, ದಿವಾಳಿಯೆಂದು ಘೋಷಿಸುವುದಕ್ಕೆ ಕಾರ್ಯ ವಿಧಾನ ಮತ್ತು ವ್ಯಾಪಾರಕ್ಕೆ ಇರುವ ಕಾರ್ಯ ವಿಧಾನ ಇವುಗಳನ್ನು ನಿರ್ಣಯಿಸಿತು. ಒಟ್ಟಾರೆ ಹೇಳುವುದಾದರೆ ಈ ಸಂಘಟನೆ ಆರ್ಥಿಕ ವ್ಯವಸ್ಥೆಯ ಶಾಸನ ಹಾಗೂ ನ್ಯಾಯ ವ್ಯವಸ್ಥೆಯನ್ನು ರೂಪಿಸಿದವು. ವ್ಯಾಪಾರಕ್ಕೆ ಕಾನೂನು ಮಾಡಿ ಅವುಗಳನ್ನು ಜರಿಗೊಳಿಸಿದವು. ಆ ಕ್ಷೇತ್ರದಲ್ಲಿ ಹುಟ್ಟುವ ವಿವಾದಗಳ ನ್ಯಾಯ ನಿರ್ಣಯ ಮಾಡಿದವು. ವ್ಯಾಪಾರ ವಿವಾದಗಳು ಈ ಸಂಘಟನೆಗಳಿಂದ ಏಕರೂಪವಾಗಿ ಇತ್ಯರ್ಥವಾದವು.

ಸಂಘಟನೆಗಳನ್ನು ಪ್ರಜಸತ್ತಾತ್ಮಕ ತತ್ವದ ಮೇಲೆ ನಿಯಂತ್ರಿಸಲಾಗುತ್ತಿತ್ತು. ಸದಸ್ಯ ರಲ್ಲಿ ಪ್ರಮುಖರು ಕಾರ್ಯ ನೀತಿಗಳನ್ನು ರೂಪಿಸುತ್ತಿದ್ದರು. ಅಧಿಕಾರಿಗಳು ಸಾಮಾನ್ಯವಾಗಿ ಶ್ರೀಮಂತ ಸದಸ್ಯರಾಗಿರುತ್ತಿದ್ದರು. ಏಕೆಂದರೆ ಅವರು ಹೆಚ್ಚು ಪ್ರಭಾವಿ ವ್ಯಕ್ತಿಗಳಾಗಿರು ವುದರೊಂದಿಗೆ ಸಂಘದ ಚಟುವಟಿಕೆಗಳಲ್ಲಿ ಹೆಚ್ಚಿನ ಸಮಯ ತೊಡಗಿಸಿಕೊಳ್ಳಬಲ್ಲ ವರಾಗಿದ್ದರು.

ಜನರ ಜೀವನಕ್ಕೆ ಸಂಬಂಧಿಸಿದಂತೆ ಈ ಸಂಘಟನೆ ಸರ್ಕಾರದ ರೀತಿಯಲ್ಲೇ ಕಾರ್ಯನಿರ್ವಹಿಸಿ ದಕ್ಷವಾಗಿ, ಪ್ರಾಮಾಣಿಕವಾಗಿ ಹಾಗೂ ಸಮುದಾಯದ ಅಗತ್ಯಗಳು ಹಾಗೂ ಆಶಯಗಳ ಮೇರೆಗೆ ರಾಜ್ಯದ ಪ್ರಕಾರ್ಯಗಳನ್ನು ನಿರ್ವಹಿಸುತ್ತಿದ್ದವು. ಈ ರೀತಿಯಲ್ಲಿ ಇದು ಒಂದು ಉತ್ತಮ ಸರ್ಕಾರವಾಗಿತ್ತು.

ಕುಟುಂಬದ ಪಾತ್ರ ಏನೆಂಬುದನ್ನು ತಿಳಿದುಕೊಳ್ಳದೆ ಚೀನಾದ ಬಗೆಗೆ ತಿಳಿದುಕೊಳ್ಳುವುದು ಸಾಧ್ಯವೇ ಇಲ್ಲ. ಕುಟುಂಬಕ್ಕೆ ಒಂದೇ ಸಮನಾದ ಮಹತ್ವ ಹಾಗೂ ಅಧಿಕಾರ ಇರು ವುದನ್ನು ಇನ್ನಾವುದೇ ಜನಾಂಗದಲ್ಲೂ ನಾವು ಕಾಣುವುದಿಲ್ಲ. ಚೀನಾದಲ್ಲಿ ಕುಟುಂಬವೇ ಸಮಾಜದ ಅಡಿಪಾಯ. ಜೀವನದ ದೃಷ್ಟಿಯಿಂದಲ್ಲದೆ ಆರ್ಥಿಕವಾಗಿ, ಸಾಮಾಜಿಕವಾಗಿ, ನೈತಿಕವಾಗಿ ಹಾಗೂ ಪಾರಮಾರ್ಥಿಕವಾಗಿದ್ದರೂ ಕುಟುಂಬದ ಸುತ್ತ ಇಡಿಯ ಸಮುದಾಯ ರಚನೆ ನೆಲೆ ನಿಂತಿದೆ ಹಾಗೂ ಸಂಘಟಿತವಾಗಿದೆ. ಇದೇ ಜೀವನಕ್ಕೆ ಏಕತೆಯನ್ನು ಅರ್ಥವನ್ನು ತುಂಬಿತು.

ಚೀನಾದಲ್ಲಿ ಕುಟುಂಬ ಸಮಾಜದ ಮೂಲ ಘಟಕ. ಆದರೆ ಇದು ಒಂದೇ ಪೀಳಿಗೆಗೆ ಅಥವಾ ಅವರ ಮಕ್ಕಳಿಗೆ ಮಾತ್ರ ಸೀಮಿತವಾಗಿರದೆ ಹಿಂದಿನ ೩-೪ ತಲೆಮಾರುಗಳವರೆಗೂ ಸರಪಳಿಯಂತೆ ಸಾಗಿರುತ್ತದೆ. ಚೀನಾದ ಒಂದು ಕುಟುಂಬದಲ್ಲಿ ತಂದೆ ತಾಯಿ ಅವರ ಮಕ್ಕಳು ಸೊಸೆಯರು ಹಾಗೂ ಅವರ ಮಕ್ಕಳು ಒಟ್ಟಿಗೆ ಬಾಳುತ್ತಾರೆ. ಮಗಳು ತನ್ನ ಪತಿಯ ಮನೆಯ ಸದಸ್ಯಳಾಗುತ್ತಾಳೆ. ಆದರೆ ಈ ವಿಷಯದಲ್ಲಿ ಸಾಕಷ್ಟು ಏರುಪೇರು ಇದ್ದವು. ಬಡವರ್ಗದಲ್ಲಿ ಅದರಲ್ಲೂ ವಿಶೇಷವಾಗಿ ಜಮೀನುಗಳಿರುವ ಮನೆಗಳಲ್ಲಿ ಕುಟುಂಬ ಎಂದರೆ ತಂದೆ ತಾಯಿ ಅವರ ಮಕ್ಕಳು ಹಾಗೂ ತಂದೆಯ ಪಾಲಕರು ಸೇರಿರು ತ್ತಾರೆ.

ಕುಟುಂಬದಲ್ಲಿ ಅದು ಚಿಕ್ಕದಿರಲಿ ಅಥವಾ ಒಂದು ಮನೆತನವಾಗಿರಲಿ ಅಲ್ಲಿ ಹಿರಿಯ ಗಂಡಸು ಕುಟುಂಬದ ಯಜಮಾನ. ಗ್ರಾಮಗಳಲ್ಲಿ ಒಂದು ಮನೆತನ ಇದ್ದರೂ ಅನೌಪಚಾರಿಕವಾದ ಹಿರಿಯರ ಒಂದು ಪರಿಷತ್ತು ಇರುತ್ತದೆ. ಅದು ಗ್ರಾಮದ ಆಡಳಿತ ಮಂಡಳಿ. ಹಳ್ಳಿಯ ಸಾಮುದಾಯಿಕ ಹಾಗೂ ವೈಯಕ್ತಿಕ ವ್ಯವಹಾರಗಳನ್ನೆಲ್ಲ ನಿರ್ವಹಿಸುತ್ತದೆ. ಒಂದು ವಿಧದಲ್ಲಿ ಕೃಷಿಕ ಸಮಾಜ ಹಾಗು ಉದ್ಯೋಗಗಳ ಸಮುದಾಯದ ನಡುವಣ ಕೊಂಡಿಯಂತೆ ಇತ್ತು. ಹಳ್ಳಿಯ ಸಮುದಾಯದ ಹಿರಿಯ ಪ್ರತಿನಿಧಿಗಳು ಇದರಲ್ಲಿ ಇರುತ್ತಿದ್ದರು. ಕುಟುಂಬ ಸಂಗ್ರಹ ರೂಪದಲ್ಲಿದ್ದು ಸ್ವತ್ತು ಕೂಡ ಒಟ್ಟಿನಲ್ಲಿ ಇದ್ದು ವರಮಾನವನ್ನು ಕೇಂದ್ರೀಕರಿಸಿ ವೆಚ್ಚವನ್ನು ಒಂದೆಡೆಯಿಂದ ಭರಿಸಲಾಗುತ್ತಿತ್ತು.

ಇನ್ನೂ ಮಹತ್ವದ ಅಂಶಗಳೆಂದರೆ ಕುಟುಂಬದ ಯಾವೊಬ್ಬ ಸದಸ್ಯನಿಗೂ ತನ್ನ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಪೂರ್ಣ ಅಧಿಕಾರವಿರಲಿಲ್ಲ. ಚಿಕ್ಕ ಕುಟುಂಬದ ಪಾಲಕರಿರಲಿ ಅಥವಾ ದೊಡ್ಡ ಮನೆತನವೊಂದರ ಹಿರಿಯರ ಪರಿಷತ್ತು ಇರಲಿ, ಮನೆಯಲ್ಲಿಯ ಯಾರು ಶಿಕ್ಷಣವನ್ನು ಪಡೆಯಬೇಕು ಅಥವಾ ಪಡೆಯಬಾರದು ಹಾಗೂ ಪ್ರತಿಯೊಬ್ಬ ಸದಸ್ಯನ ಉದ್ಯೋಗ ಯಾವುದಿರಬೇಕು. ಯಾರು ಯಾರನ್ನು ಮದುವೆಯಾಗಬೇಕು ಎಂಬೆಲ್ಲ ವಿಷಯವನ್ನು ಈ ಹಿರಿಯರ ಸಮುದಾಯವೇ ನಿರ್ಧರಿಸುತ್ತಿತ್ತು.

ಹೀಗಾಗಿ ಈ ಒಗ್ಗೂಡಿದ ಕುಟುಂಬದ ಹೊಣೆ ಕೂಡ ಪ್ರತಿಯೊಬ್ಬ ಸದಸ್ಯನ ಹೊಣೆ ಯಾಗಿರುತ್ತದೆ. ಸನ್ನಿವೇಶಗಳು ಏನೇ ಇರಲಿ ಕುಟುಂಬಕ್ಕೆ ಪ್ರತಿಯೊಬ್ಬ ಸದಸ್ಯನ ಬೆಂಬಲ ಇರುತ್ತಿತ್ತು. ಹೀಗಾಗಿ ಕುಟುಂಬ ಎಂದರೆ ಸಾಮಾಜಿಕ ಭದ್ರತೆ ಹಾಗೂ ಪ್ರತಿಯೊಬ್ಬರಿಗೂ ಸುರಕ್ಷತೆ ಸಿಗುವ ಮಟ್ಟಿಗೆ ಭರವಸೆ ಇತ್ತು.

ಕುಟುಂಬ ವ್ಯವಸ್ಥೆಯ ಮತ್ತೊಂದು ಲಕ್ಷಣ ಎಂದರೆ ಹಿರಿಯರ ಪೂಜೆ, ಅದಕ್ಕೆ ಸಂಬಂಧಿಸಿ ಪುತ್ರಧರ್ಮ. ಇವೆರಡೂ ಸೇರಿ ಚೀನಾದ ನೀತಿಸಂಹಿತೆಯ ಮೊದಲನೆಯ ಅಧ್ಯಾಯವಾಗಿದೆ. ಪ್ರತಿಯೊಬ್ಬನೂ ಲೌಕಿಕವಾಗಿ ಹಾಗೂ ಪಾರಲೌಕಿಕವಾಗಿ ತನ್ನ ಹಿರಿಯರಿಗೆ ತಾನು ಸಲ್ಲಿಸಬೇಕಾಗಿರುವ ಕರ್ತವ್ಯಕ್ಕೆ ಬದ್ಧನಾಗಿರುತ್ತಾನೆ. ಜೀವನದುದ್ದಕ್ಕೂ ತಾನು ಮಾಡಿದುದಕ್ಕೆ ಹೊಣೆಗಾರನಾಗಿರುತ್ತಾನೆ ಎಂಬ ಪ್ರಜ್ಞೆ ಆತನಿಗೆ ಇತ್ತು. ಪಾಲಕರಿಗೆ ಹಿರಿಯರಿಗೆ ತೋರುವ ಅಗೌರವೇ ಅವನತಿಯ ಕುರುಹು ಎಂಬ ನಂಬಿಕೆ ಇತ್ತು. ಜನಾಂಗದ ಕತೆಗಳು ಯಾವೊಬ್ಬನ ಯುದ್ಧ ಶೌರ್ಯದ ಸುತ್ತ ಹೆಣೆದಿದ್ದವುಗಳಾಗಿರದೆ ಹಿರಿಯರ ತ್ಯಾಗದ ಕತೆಗಳಾಗಿರುತ್ತಿದ್ದವು. ಇದಕ್ಕೂ ಕೂಡ ಕನ್‌ಫ್ಯೂಶಿಯಸ್ ವ್ಯವಸ್ಥೆಯೇ ತಾಯಿ ಬೇರು. ಕನ್‌ಫ್ಯೂಶಿಯಸ್ ತನ್ನ ಶಿಷ್ಯರಲ್ಲಿ ಬೆಳೆಸಿದ ತತ್ವ ಇದೇ. ಇದೇ ಕುಟುಂಬ ವ್ಯವಸ್ಥೆಯ ಮೂಲ ಮಂತ್ರ ಹಾಗೂ ಕಂಡುಬಂದ ಸತ್ಫಲ. ಚೀನಾದಲ್ಲಿ ಕುಟುಂಬ ವ್ಯವಸ್ಥೆ ಹಾಗೂ ಚೀನಾ ಸಮಾಜದಲ್ಲಿ ಅದರ ಸ್ಥಾನ, ಇದರೊಂದಿಗೆ ಕೆಲವು ಪರಿಣಾಮ ಗಳೂ ಉಂಟಾದವು. ಹಿರಿಯರ ಪೂಜೆ ಎಂಬುದು ಭೂತಕಾಲದ ಉತ್ಪ್ರೇಕ್ಷೆಯಾಗಿ ಪರಿಣಮಿಸಿತು; ಶಿಕ್ಷಣ ಅತಿಯಾದ ಕಟ್ಟುಪಾಡಿನ ಶಿಷ್ಟತೆಗೊಳಪಟ್ಟಿತು. ಕನ್‌ಫ್ಯೂಷಿಯಸ್ ಧರ್ಮದಲ್ಲಿ ಅತಿಯಾದ ಸಂಪ್ರದಾಯಶೀಲತೆ ಕಂಡುಬಂದ ಅಂಶಗಳನ್ನು ಈ ಮೊದಲೇ ತಿಳಿಸಲಾಗಿದೆ. ವೃದ್ಧಾಪ್ಯಕ್ಕೆ ನೀಡಿದ ಹೆಚ್ಚಿನ ಗೌರವದಿಂದಾಗಿ ಇದು ಇನ್ನಷ್ಟು ತೀವ್ರ ಗೊಂಡು, ಮೃತರಾದರು ಎಂಬ ಕಾರಣಕ್ಕೆ ಇದು ಇನ್ನಷ್ಟು ತೀವ್ರವಾಯಿತು. ಅಲ್ಲಿಯ ಜನರಲ್ಲಿ ಗತಿಸಿಹೋದವರ ಬುದ್ದಿಮತ್ತೆಯ ಬಗ್ಗೆ ನಿಸ್ಸಂಶಯವಾದ ನಂಬಿಕೆ ಇದ್ದಿರಬೇಕು. ವರ್ತಮಾನದಲ್ಲಿ ಇರುವುದು ಹಾಗೂ ಭವಿಷ್ಯದಲ್ಲಿ ಇರಬಹುದಾದ ಎಲ್ಲವೂ ಭೂತಕಾಲದಲ್ಲಿ ದೃಷ್ಟಿನೆಟ್ಟು ನಡೆಸಬೇಕು ಎಂಬುದು ಅವರಲ್ಲಿ ಸಹಜವಾಗಿತ್ತು ಅದು ಚೀನಾದವರ ದೌರ್ಬಲ್ಯ. ಇದರಿಂದಾಗಿ ಅವರ ವಿಚಾರಗಳು ಹಾಗೂ ಕಲ್ಪನೆಗಳಲ್ಲಿ ಹೊಸತನ ಇಲ್ಲ. ಹೀಗಾಗಿ ಅವರು ಬದಲಾವಣೆಗಳನ್ನು ಒಪ್ಪಿಕೊಳ್ಳುವ ಮನೋಭಾವ ದವರಾಗಿದ್ದು ಬದಲಾವಣೆಗಳಿಗೆ ಒಳಗಾಗಬೇಕಾಗಿ ಬಂದಾಗ ಅಸ್ಥಿರರು ಹಾಗೂ ಸಮತೋಲನವನ್ನು ಕಳೆದುಕೊಂಡವರಾಗುತ್ತಿದ್ದರು. ಬದಲಾವಣೆಗೆ ಹೊಂದಿಕೊಳ್ಳಲಾಗದ ಮನೋಭಾವವಿರು ವುದರಿಂದ ಸ್ಥಿರತೆಯನ್ನು ಕಳೆದುಕೊಂಡು ಬೌದ್ದಿಕವಾಗಿ ಹಾಗೂ ರಾಜಕೀಯವಾಗಿ ಹೊಣೆಗೇಡಿಗಳಾದರು. ಇದಕ್ಕೆ ನಿದರ್ಶನ ಎಂದರೆ ೧೯೧೧ರಲ್ಲಿ ರಾಜರ ಆಳ್ವಿಕೆ ಅವನತಿ ಹೊಂದಿದ್ದು.

ಇನ್ನೊಂದು ಪರಿಣಾಮವೆಂದರೆ ಚೀನಿಯರ ವಿಧೇಯತೆಯ ಅಸ್ಥಿರತೆ. ಕುಟುಂಬ, ಚೀನಾ ಸಮಾಜದ ಮೂಲ ಘಟಕವಾಗಿದ್ದು, ವಿಧೇಯತೆ ಹಾಗೂ ಹೊಣೆಗಾರಿಕೆಗೆ ಅದು ಸೀಮಾರೇಖೆಯಾಗಿತ್ತು. ಪ್ರಾಂತ್ಯ ನೆಂಟಸ್ತನ ಬಳಕೆಯಲ್ಲಿದ್ದರೂ ಅದರಲ್ಲಿ ಬಂಧುರತೆ ಇರಲಿಲ್ಲ. ಇದರಿಂದಾಗಿ ಚೀನಾದವರಲ್ಲಿ ದೇಶಾಭಿಮಾನ ಹಾಗೂ ರಾಷ್ಟ್ರೀಯ ಭಾವೈಕ್ಯದ ಕೊರತೆ ಎಂಬುದು ಸಾಮಾನ್ಯ ನಂಬಿಕೆಯಾಗಿದೆ. ಇದು ಉತ್ಪ್ರೇಕ್ಷೆಯೂ ಹೌದು. ಏಕೆಂದರೆ ದೇಶಾಭಿಮಾನ ಎಂಬುದೇ ಪಾಶ್ಚಿಮಾತ್ಯರಿಂದ ಇತ್ತೀಚೆಗೆ ಬಂದ ಪರಿಕಲ್ಪನೆ. ಹೀಗಾಗಿ ಚೀನಾದಲ್ಲಿ ರಾಷ್ಟ್ರೀಯ ಭಾವನೆ ಇಲ್ಲ ಎಂದು ಹೇಳಲಾಗದು. ತಾವು ಚೀನೀಯರು ಎಂಬ ಬಗ್ಗೆ ಅವರಲ್ಲಿ ಸಾಂಸ್ಕೃತಿಕವಾಗಿ ವಿಶೇಷ ಭಾವನೆ ಇದೆ. ತಾವು ಇತರರಿಗಿಂತ ವಿಭಿನ್ನರು ಎಂಬುದು ಅವರಿಗೆ ಚೆನ್ನಾಗಿ ಮನವರಿಕೆ ಆಗಿದೆ. ಇದು ಪ್ರಪಂಚದ ಇತರ ಜನರಲ್ಲಿ ಇರುವಂತಹುದೇ ಭಾವನೆ. ಅವರಿಗೆ ತಮ್ಮ ಬಗ್ಗೆ, ತಮ್ಮ ಇತಿಹಾಸ ಸಂಸ್ಕೃತಿ ಹಾಗೂ ಜನಾಂಗದ ಬಗ್ಗೆ ಅಚಲವಾದ ಅಭಿಮಾನ, ಆದರೆ ಅವರ ತಕ್ಷಣದ ವಿಧೇಯತೆ ಹಾಗೂ ಹೊಣೆ, ಅವರ ಕುಟುಂಬ, ಸ್ಥಳೀಯ ಸಮಾಜ ಹಾಗೂ ಪ್ರಾಂತ್ಯಕ್ಕೆ ಮೊದಲು ಸಲ್ಲುತ್ತದೆ. ೨೦ನೆಯ ಶತಮಾನದ ಪ್ರಾರಂಭದ ವರ್ಷಗಳಿಂದ ಇದರಲ್ಲಿಯೂ ಕೂಡ ಭಿನ್ನತೆ ಕಂಡುಬಂದಿದೆ. ಪಾಶ್ಚಾತ್ಯರಲ್ಲಿರುವಂತಹ ಸ್ವರೂಪದ ರಾಷ್ಟ್ರೀಯ ಪ್ರಜ್ಞೆಯೇ ಇಲ್ಲೂ ಕಂಡುಬರುತ್ತದೆ.

ಕುಟುಂಬ ವ್ಯವಸ್ಥೆ ಕಾರಣದಿಂದಾಗಿ ವೈಯಕ್ತಿಕವಾಗಿ ವ್ಯಕ್ತಿಯು ಉದ್ಯಮಶೀಲನಾಗುವ ಹಾಗೂ ವ್ಯವಸ್ಥೆಯಿಂದ ವಿಭಿನ್ನವಾಗುವ ಪರಿಕಲ್ಪನೆಯೇ ಇರಲಿಲ್ಲ. ಏಕೆಂದರೆ ಸಾಮಾಜಿಕ ಹಾಗೂ ಕೌಟುಂಬಿಕ ಪರಿಸರದಲ್ಲಿ ಭದ್ರತೆಯ ಭರವಸೆ ಇತ್ತು. ಸ್ವಂತದ ಉತ್ಸಾಹವನ್ನು ತೋರ್ಪಡಿಸುವ ಅವಕಾಶ ಇರಲಿಲ್ಲ. ಏಕೆಂದರೆ ಕುಟುಂಬದ ಹಿರಿಯರೇ ಪ್ರತಿಯೊಬ್ಬ ಸದಸ್ಯನ ಜೀವನದ ಬಗ್ಗೆ ನಿರ್ಧರಿಸುತ್ತಿದ್ದರು. ಹೀಗಾಗಿ ಬೆಳವಣಿಗೆಗೆ ಅಭಿಪ್ರಾಯಕ್ಕೆ, ಅಭಿವ್ಯಕ್ತಿಗೆ, ವಿಚಾರಕ್ಕೆ ಮತ್ತು ಕ್ರಿಯೆಗೆ ಅವಕಾಶ ಇರಲಿಲ್ಲ. ಇದಕ್ಕೆ ಪ್ರತಿಯಾಗಿ ಅಂತಹ ಭಾವನೆಗಳಿಗೆ ದಂಡನೆ ಕಾದಿರುತ್ತಿತ್ತು. ಇದರಿಂದಾಗಿ ಕೇವಲ ಭೂತಕಾಲದ ಕುರಿತು ಗೌರವ, ಅನುಸರಣೆ ಹಾಗು ವಿಚಾರ ಹಾಗೂ ಕಲ್ಪನೆಗಳ ಏಕತಾನತೆ ದೈನಂದಿನ ಲಕ್ಷಣ ಗಳಾಗಿದ್ದವು. ಚೀನಾದ ಬಾಹ್ಯ ಜೀವನದಲ್ಲಿ ಕುಟುಂಬ ವ್ಯವಸ್ಥೆ ವಿಭಿನ್ನ ಪರಿಣಾಮ ಬೀರಿತು. ಸರ್ಕಾರದಲ್ಲಿ ವಿಶೇಷವಾಗಿ ಹಾಗೂ ವ್ಯವಹಾರದಲ್ಲಿ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಇವರ ಪ್ರಭಾವ ಉಳಿಯಿತು. ನ್ಯಾಯಾಂಗವನ್ನು ಅಥವಾ ಇತರ ಯಾವುದೇ ರಾಜಕೀಯ ಹುದ್ದೆಯನ್ನು ಪಡೆದ ವ್ಯಕ್ತಿಯು ತಾನು ಕೆಲಸಕ್ಕೆ ಸೇರಿದ ಕೆಲ ವರ್ಷದಲ್ಲಿ ತನ್ನ ಸಂಬಂಧಿಕರನ್ನು ಬಹುಸಂಖ್ಯೆಯಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲಾಗುತ್ತಿತ್ತು. ನೆಂಟಸ್ತಿಕೆ ಸನಿಹದ್ದೇ ಎಂಬುದು ಯಾವುದೂ ಗಣನೆಗೆ ಬಾರದಿರಲಿಲ್ಲ. ವ್ಯವಹಾರ ಕ್ಷೇತ್ರದಲ್ಲೂ ಕೂಡ ಇದೇ ಪದ್ಧತಿ ಇತ್ತು. ಇದು ರೂಢಿಗತ ಮತ್ತು ಕಡ್ಡಾಯವಾದ ಪದ್ಧತಿಯಾಗಿತ್ತು. ರಕ್ತಸಂಬಂಧ ಕಾರಣದಿಂದಾಗಿ ಈ ಪದ್ಧತಿ ಜರಿಯಲ್ಲಿತ್ತು. ಇದರೊಂದಿಗೆ ಸರ್ಕಾರ ಕೂಡ ಅದಕ್ಷ ಹಾಗೂ ವ್ಯರ್ಥಗೊಳ್ಳುತ್ತಿತ್ತು. ದುರ್ಬಲ ಆಡಳಿತಕ್ಕೆ ಐತಿಹಾಸಿಕವಾಗಿ ಇದು ಮುಖ್ಯ ಕಾರಣವಾಗಿ ಕಂಡುಬಂದಿದೆ. ಇದರೊಂದಿಗೆ ರಾಜಕೀಯ ಶೈಥಿಲ್ಯ ಹಾಗೂ ರಾಜ್ಯಗಳ ಅಳಿವು ಘಟಿಸಿವೆ.

ಇಂತಹ ಜೀವನ ಪದ್ಧತಿ ಚೀನಾದಲ್ಲಿ ೨೦೦೦ ವರ್ಷಗಳವರೆಗೆ ಜರಿಯಲ್ಲಿತ್ತು. ತರುವಾಯ ಅದರ ಅಡಿಗಲ್ಲೇ ಅಲ್ಲಾಡುವ ಮಟ್ಟಿಗೆ ಪಾಶ್ಚಾತ್ಯರು ಅಧಿಕಾರವನ್ನು ಕಬಳಿಸಿದರು. ಚೀನಾದ ಮೇಲೆ ಉತ್ತರದ ಕಡೆಯಿಂದ ದಾಳಿಯಾದರೂ ಹಾಗೂ ಅಲ್ಲಿಯ ಸಿಂಹಾಸನವನ್ನು ಪರಕೀಯರು ಆಕ್ರಮಿಸಿ ಚೀನಾದ ಮಹತ್ವದ ಕೇಂದ್ರಸ್ಥಾನಗಳನ್ನು ಆಕ್ರಮಿಸಿದರೂ ಚೀನಾದ ಜೀವನದ ಮೇಲೆ ಇದು ಯಾವುದೇ ವಿಧದ ಪರಿಣಾಮ ಬೀರಲಿಲ್ಲ. ಚೀನಾದ ಮೇಲೆ ನಾಮಮಾತ್ರ ನಿಯಂತ್ರಣ ಹೊಂದಿದ ಆಕ್ರಮಣಕಾರರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಚೀನಾದವರು ತಮ್ಮದೇ ರೂಢಿಗತ ರೀತಿಯಲ್ಲಿ ಬಾಳುತ್ತಿದ್ದರು.

ಚೀನಾದ ಸಂಸ್ಕೃತಿ ಪ್ರಭಾವಿಯಾದದ್ದು ಹಾಗೂ ಸಾಕಷ್ಟು ಮುಂದುವರಿದ ಶ್ರೇಷ್ಠ ಮಟ್ಟದ ಸಂಸ್ಕೃತಿಯಾಗಿತ್ತು. ಇದು ಒಂದು ವಿಧದಲ್ಲಿ ನಿಶ್ಚಲ ಸಂಸ್ಕೃತಿ. ನಿಶ್ಚಲ ಸಮಾಜ ಹಾಗೂ ನಿಶ್ಚಲ ಜೀವನ ವಿಧಾನ. ೧೮ನೆಯ ಶತಮಾನದವರೆಗೂ ಜಗತ್ತಿನ ತುಂಬೆಲ್ಲ ಇದೇ ಪದ್ಧತಿ ಇತ್ತು. ಎಲ್ಲೆಡೆಗೂ ಸರಳವಾದ ಸಾಧನಗಳನ್ನು ಬಳಸಿ ತಮ್ಮ ಭುಜಬಲ ದಿಂದ ಕೃಷಿ ಮಾಡಿ ಜನ ಬದುಕುತ್ತಿದ್ದರು. ಜೀವನ ಬಳಕೆಯ ವಸ್ತುಗಳನ್ನು ಕೈಯಿಂದಲೇ ಸುಲಭ ಸಾಮಗ್ರಿಗಳಿಂದ ತಯಾರಿಸುತ್ತಿದ್ದರು. ಜನ ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ಸ್ವಾವಲಂಬಿಗಳು ತಮ್ಮ ಅಗತ್ಯಗಳನ್ನು ತಾವೇ ಪೂರೈಸಿಕೊಳ್ಳುವಂತಹವರು. ಹಿರಿಯರ ಅಭಿಪ್ರಾಯಗಳ ಆಚರಣೆಯಿಂದ ಜೀವನವನ್ನು ಸುವ್ಯವಸ್ಥಿತಗೊಳಿಸಿಕೊಂಡವರಾಗಿ ದ್ದರು. ಅವರ ಕಾನೂನು ಬರಹದಲ್ಲಿ ಇರಲಿಲ್ಲ. ಪೀಳಿಗೆಯಿಂದ ಪೀಳಿಗೆಗೆ ಸಾಗಿ ಬಂದು ಲಿಖಿತ ಕಾನೂನಿಗಿಂತ ಹೆಚ್ಚಿನ ಸೌಕರ್ಯವನ್ನು ಜನತೆಗೆ ಒದಗಿಸುತ್ತಿತ್ತು. ಈ ಎಲ್ಲ ಕಾರಣಗಳಿಂದಾಗಿ ಹಳ್ಳಿಗಳಲ್ಲಿ ಸ್ವಯಂ ಆಡಳಿತ ಜರಿಯಲ್ಲಿತ್ತು.

ಆಧುನಿಕ ಯುಗದವರೆಗೂ ಈ ಜನ ಪ್ರಕೃತಿಯನ್ನೇ ಆಶ್ರಯಿಸಿದ್ದರು. ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದಿದ್ದರೂ ಪ್ರಕೃತಿಯ ಬಗೆಗಿನ ಅವರ ಅವಲಂಬನೆ ತಗ್ಗಿರಲಿಲ್ಲ. ಕಳೆದ ೨೦೦ ವರ್ಷಗಳವರೆಗೂ ಇತರ ಯಾವುದೇ ದೇಶದಲ್ಲಿ ಬಳಸಲಾದ ವಿಧಾನಗಳನ್ನೆಲ್ಲ ಬಳಸಿ ನಗರದ ಗೋಡೆಗಳನ್ನು, ಜಲಾಶಯಗಳನ್ನು, ಕಾಲುವೆಗಳನ್ನು ಕಟ್ಟಿದರು, ಅರಮನೆಗಳು ರಾಜೋಚಿತವಾಗಿದ್ದು ಇತರ ಯಾವುದೇ ಅರಮನೆಯಷ್ಟೇ ಕಲಾತ್ಮಕವಾಗಿ ರಚಿತವಾಗಿದ್ದವು. ಬಡವರಲ್ಲಾಗಲಿ ಶ್ರೀಮಂತರಲ್ಲಾಗಲಿ ಘನತೆ ತುಂಬಿದ್ದು ಜೀವನ ವಿಧಾನದಲ್ಲಿ ಸಭ್ಯತೆ ಇತ್ತು. ಬಹು ಜನರ ಕಲ್ಯಾಣವೇ ಉತ್ತಮ ಸರ್ಕಾರ ಎನ್ನುವುದಾದರೆ ಚೀನಾದಲ್ಲಿ ಒಳ್ಳೆಯ ಆಳ್ವಿಕೆ ಇರಲಿಲ್ಲ. ಆದರೆ ಹೀಗೆಂದರೆ ಎಲ್ಲಿಯೂ ಉತ್ತಮ ಸರ್ಕಾರ ಇರಲಾರದು. ೧೯ನೆಯ ಶತಮಾನಕ್ಕಿಂತ ಹಿಂದಿನ ೨೦೦೦ ವರ್ಷಗಳ ಅವಧಿಯಲ್ಲಿನ ದೇಶಗಳನ್ನು ಹೋಲಿಸಿ ನೋಡಿದರೆ ಎಲ್ಲೂ ಉತ್ತಮ ಅಳ್ವಿಕೆ ಇರಲಿಲ್ಲ. ಹಕ್ಕುಗಳು ಸವಲತ್ತುಗಳು ಕೆಲವರಿಗೆ ಮಾತ್ರ ಲಭ್ಯವಿದ್ದವು. ಆದರೆ ನ್ಯಾಯಪಾಲನೆ ಇತರ ಕಡೆಗಳಿ ಗಿಂತ ಚೆನ್ನಾಗಿತ್ತು. ಸಾಮಾಜಿಕ ವ್ಯವಸ್ಥೆ ಉತ್ತಮವಾಗಿತ್ತು. ಇತರೆಡೆಗಳಿಗಿಂತ ಕಡಿಮೆ ಪ್ರಮಾಣದಲ್ಲಿ ‘ಅವ್ಯವಸ್ಥೆ ಇತ್ತು’. ಇಡೀ ಪ್ರಪಂಚದಲ್ಲಿ ಚೀನಾ ಅತ್ಯಂತ ದೊಡ್ಡ ನಾಡು. ಮಾನವ ಪ್ರಾಚೀನತೆಯಿಂದ ನಾಗರಿಕತೆಯತ್ತ ಏರುವಲ್ಲಿ ಚೀನಾದ ಕೊಡುಗೆ ಅಪಾರ. ತನ್ನ ಯುಗಧರ್ಮ ಜನಾಂಗದ ಕಾರಣದಿಂದ ಸಾಧಿಸಿದ ಸಂಸ್ಕೃತಿಯ ಗುಣಮಟ್ಟ ವೈಶಿಷ್ಟ್ಯ ಇದೆಲ್ಲ ಚೀನಾವನ್ನು ವೈಶಿಷ್ಟ್ಯಪೂರ್ಣವನ್ನಾಗಿಸಿದೆ.

ಇದೆಲ್ಲ ಚೀನಾ ಹೇಗಿತ್ತು ಎಂಬುದರ ಚಿತ್ರಣ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ೨೦ನೆಯ ಶತಮಾನದ ಪ್ರಾರಂಭದ ವೇಳೆಗೆ ಇತಿಹಾಸದ ಪುಟಗಳು ಮಗುಚಿ ಹೋಗಿ ಮುಂದೆ ಏನಾಗುವುದೋ ಎಂದು ಎಲ್ಲರೂ ಕಾದು ನೋಡುವಂತಾಗಿದೆ.

ಜಪಾನ್ ಪ್ರದೇಶ ಹಾಗೂ ಜನಜೀವನ: ಯುರೋಪಿಯನ್ನರ ಆಗಮನದವರೆಗಿನ ಸಂಸ್ಕೃತಿ ಹಾಗೂ ರಾಜಕೀಯ

ಸೈದ್ಧಾಂತಿಕವಾಗಿಯಾದರೂ ಜಪಾನೀಯರ ಜೀವನ ಚೀನಾದ ಮಾದರಿಯಲ್ಲೇ ಇದೆ. ಆದರೂ ಜಪಾನಿನ ವೈಲಕ್ಷಣಗಳು ಹೇಗಿವೆ ಎಂದರೆ ತನ್ನ ಇತಿಹಾಸದ ಕಾರಣದಿಂದಾಗಿ ಅದು ವೈಶಿಷ್ಟ್ಯಪೂರ್ಣವಾಗಿ ಬೆಳೆದಿದೆ. ಹಳೆಯ ಹಾಗೂ ಹೊಸ ಜಗತ್ತಿನ ರಾಷ್ಟ್ರಗಳಿಗಿಂತ ವಿಭಿನ್ನವಾಗಿ ಅದು ಬೆಳೆದಿದೆ.

ಜಪಾನೀಯರ ಮೂಲವನ್ನು ನೋಡಬೇಕಾದರೆ ಮುಖ್ಯವಾಗಿ ಏಷ್ಯಾದೊಂದಿಗೆ ನೈರುತ್ಯ ಏಷ್ಯಾದ ನಡುಗಡ್ಡೆಗಳ ಮಿಶ್ರಣದೊಂದಿಗೆ ಮಲಯಾದ ಪ್ರಭಾವ ಕಂಡುಬರುತ್ತದೆ. ಮಲಯಾದ ಜನ ಜಪಾನನ್ನು ಹೇಗೆ ಪ್ರವೇಶಿಸಿದರು ಎಂಬುದು ತಿಳಿದುಬಂದಿಲ್ಲ. ಅಲ್ಲಿದ್ದ ಆದಿವಾಸಿಗಳನ್ನು ಉತ್ತರದ ಕಡೆಗೆ ತಳ್ಳಿ ತಾವು ಜಪಾನನ್ನು ಆಕ್ರಮಿಸಿದರು. ಕ್ರಿಸ್ತಶಕೆಯ ಪ್ರಾರಂಭದ ವೇಳೆಗೆ ಅವರು ಜಪಾನಿನ ಮುಖ್ಯ ನಡುಗಡ್ಡೆಗಳನ್ನು ಆಕ್ರಮಿಸಿದರು. ಈಗಿನ ಮನುಷ ನಡುಗಡ್ಡೆಯಲ್ಲಿ ಆಗ ಅವರು ಒಂದು ರಾಜ್ಯವಾಗಿ ಸಂಘಟಿತವಾಗಿದ್ದು ಆಗ ಈ ಭಾಗವನ್ನು ಯಾಮಟೋ ಎಂದು ಕರೆಯಲಾಗುತ್ತಿತ್ತು. ಜಪಾನಿನ ಪ್ರಾರಂಭಿಕ ಇತಿಹಾಸದಲ್ಲಿ ಪುರಾಣಗಳು, ಕತೆಗಳು ತುಂಬಿಕೊಂಡಿವೆ. ಇಸಾನಗಿ ಹಾಗೂ ಇಸಾನುಮ್ ಎಂಬ ದೇವತೆಗಳಿಂದ ಈ ನಡುಗಡ್ಡೆಗಳ ಜನನವಾಯಿತು ಎಂಬ ಪ್ರತೀತಿ ಇದೆ. ಇಲ್ಲಿಯ ಮೊದಲನೆಯ ದೊರೆ ಅಮಟಾರಾಸು ನೊಮಿಕಾಮಿಯ ಮೊಮ್ಮ ನಾಗಿದ್ದ. ಭೂಮಿಯನ್ನು ಆಳಲು ಆತ ನಿಯೋಜಿತವಾಗಿದ್ದ ಎಂಬ ಕತೆ ಪ್ರಚಲಿತವಿದ್ದು ಈ ಕತೆ ಬೇರೆ ಜನರಿಗಿಂತ ಹೆಚ್ಚು ವಿಭಿನ್ನವಾಗಿಲ್ಲ. ಆದರೆ ಇತರ ಕಡೆಗಳಿಗಿಂತ ಇಲ್ಲಿ ಅದಕ್ಕೆ ಹೆಚ್ಚಿನ ತೂಕವನ್ನು ನೀಡಲಾಗಿದೆ. ರಾಜನಿಗೆ ದೈವಾಂಶವನ್ನು ಕಲ್ಪಿಸಿದ್ದು ಇಲ್ಲಿಯ ಪ್ರಚಲಿತ ನಂಬಿಕೆಯ ಆಧಾರ. ಸೂರ್ಯ ದೇವತೆಯ ಮೊಮ್ಮಗನಾದ ಮೊದಲನೆಯ ಸಾಮ್ರಾಟನು ಕ್ರಿಸ್ತಪೂರ್ವ ೬೬೦ರಲ್ಲಿ ರಾಜವಂಶವನ್ನು ಸ್ಥಾಪಿಸಿದನು. ೧೯೪೦ರಲ್ಲಿ ಇದರ ೨೬೦೦ನೆಯ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಇದೆಲ್ಲ ದಂತ ಕತೆ ಎಂಬುದು ಗೊತ್ತಿದ್ದರೂ ಕ್ರಿಸ್ತಶಕ ೮ನೆಯ ಶತಮಾನದಲ್ಲಿ ಒಜುಕಿ ಅಥವಾ ಪ್ರಾಚೀನ ವಿಷಯಗಳ ದಾಖಲೆ ಮತ್ತು ನಿಹೊಂಗಿ ಅಥವಾ ಜಪಾನಿನ ಕಾಲಾನುಕ್ರಮಣಿಕೆಗಳು ಎಂಬ ೨ ಗ್ರಂಥಗಳನ್ನು ಲಿಖಿತ ರೂಪಕ್ಕೆ ತರಲಾಯಿತು. ಕ್ರಿಸ್ತಪೂರ್ವಕ್ಕಿಂತ ಮೊದಲಿನ ಜಪಾನೀಯರ ಇತಿಹಾಸ ಅಧಿಕೃತವಾಗಿ ದೊರಕಿಲ್ಲ. ಪುರಾಣವು ಇತಿಹಾಸದ ಮೇಲೆ ಸಾಧಿಸಿದ ಹಿಡಿತ ಆತಾತ್ವಿಕತೆಯ ಸೂಚನೆ ಅಷ್ಟೆ.

ಕ್ರಿಸ್ತಶಕೆಯ ಪ್ರಾರಂಭದ ತರುವಾಯದವರೆಗೂ ಜಪಾನ್ ಸಾಕಷ್ಟು ಪ್ರಾಚೀನ ತರವಾದುದೇ ಆಗಿತ್ತು. ಅವರಲ್ಲಿ ಅಸಂಖ್ಯ ಮನೆತನಗಳು ಇದ್ದವು. ಆ ಪೈಕಿ ಉನ್ನತ ಮಟ್ಟದ್ದಾಗಿರುವ ಕುಟುಂಬ ರಾಜಮನೆತನವಾಯಿತು. ಇದರ ಎಲ್ಲ ಪ್ರಾಯೋಗಿಕ ಉದ್ದೇಶಗಳಿಗೆ ಎಲ್ಲ ಮನೆತನಗಳು ಸ್ವತಂತ್ರವೇ ಆಗಿದ್ದರೂ ಆ ಕುಟುಂಬ, ಶ್ರೇಷ್ಠತೆಯ ಗೌರವಕ್ಕೆ ಪಾತ್ರವಾಗಿತ್ತು. ಮನೆತನಗಳಲ್ಲದೆ ಒಂದೇ ಉದ್ಯೋಗದಲ್ಲಿ ತೊಡಗುವ ಸಂಘಟನೆಗಳು ಇದ್ದು ಇವು ಚೀನಾದ ಗಿಲ್ಡ್‌ಗಳನ್ನು ಹೋಲುತ್ತಿದ್ದವು. ಆದರೆ ಸದಸ್ಯತ್ವ ವಂಶಪಾರಂಪರ್ಯವಾದುದಾಗಿತ್ತು. ಜಾತಿಪದ್ಧತಿ ಕಟ್ಟುನಿಟ್ಟಾಗಿದ್ದು ಆಧುನಿಕ ಕಾಲದವರೆಗೂ ಅವರಲ್ಲಿ ಶಿಥಿಲತೆ ಕಂಡುಬಂದಿರಲಿಲ್ಲ. ಜನ ಕೃಷಿಯನ್ನು ರೂಪಿಸಿಕೊಂಡಿದ್ದು ಸಲಕರಣೆಗಳು ಹಳೆಯ ಮಾದರಿಯವಾಗಿದ್ದವು. ಸಮುದ್ರದಿಂದ ಮೀನು ಹಿಡಿಯುತ್ತಿದ್ದರು. ಬಳಕೆಯ ವಸ್ತುಗಳನ್ನು ತಾವೇ ಕೈಯಿಂದ ತಯಾರಿಸುತ್ತಿದ್ದರು. ಇವು ಸೀಮಿತವಾಗಿದ್ದವು ಅಷ್ಟೇ ಅಲ್ಲ ಗುಣಮಟ್ಟದಲ್ಲೂ ಉತ್ತಮವಾಗಿರಲಿಲ್ಲ. ಇಲ್ಲಿಯ ಜೀವನ ಸಂಘಟಿತವಾದುದಾಗಿದ್ದರೂ ಜೀವನ ಹಳೆಯ ರೀತಿಯದಾಗಿತ್ತು.

ಚೀನಾದ ಪ್ರಭಾವ

ಒಂದನೆಯ ಶತಮಾನದ ತರುವಾಯ ಚೀನಾದ ಪ್ರಭಾವ ಕೊರಿಯಾದ ಮೂಲಕವಾಗಿ ಪ್ರವೇಶಿಸಿತು. ಇದು ೭ನೆಯ ಶತಮಾನದವರೆಗೆ ಮುಂದುವರೆದಿತ್ತು. ಚೀನಾದವರ ಲಿಪಿ ಪ್ರಾರಂಭವಾಯಿತು. ಅಲ್ಲಿಯವರೆಗೆ ಜಪಾನೀಯರ ಬರಹ ಹಳೆಯ ತೆರನಾಗಿತ್ತು. ತನ್ಮೂಲಕ ಚೀನಾ ಸಾಹಿತ್ಯ ಹಾಗೂ ಅವರ ವಿಚಾರಧಾರೆಗೂ ಪ್ರವೇಶ ಲಭಿಸಿತು. ಆ ವೇಳೆಗೆ ಬೌದ್ಧಧರ್ಮಕ್ಕೆ ಅನುವು ದೊರೆತು ಚೀನೀಯರಿಗಿಂತ ಜಪಾನೀಯರೇ ಅದರಿಂದ ಹೆಚ್ಚು ಪ್ರಭಾವಿತರಾದರು. ಕೊರಿಯ ಹಾಗೂ ಚೀನಾಗಳಿಗಿಂತ ಅಧಿಕ ಸಂಖ್ಯೆಯಲ್ಲಿ ವಲಸೆಗಾರರು ಬಂದು, ತಮ್ಮೊಂದಿಗೆ ಕಲೆಯ ಉನ್ನತ ಜ್ಞಾನವನ್ನು ತಂದು ತಾಂತ್ರಿಕ ಜ್ಞಾನ ಹಾಗೂ ಪರಿಣತಿಯನ್ನು ಈ ನೆಲದಲ್ಲಿ ಬಿತ್ತಿದರು. ೭ನೆಯ ಶತಮಾನದಲ್ಲಿ ಶೊಟುಕು ತಾಶಾಯಿ ಎಂಬ ರಾಜನ ಆದೇಶದ ಮೇರೆಗೆ ಜರಿಗೊಂಡ ಸುಧಾರಣೆಗಳು ಚೀನಾದ ಮಾದರಿಯಲ್ಲೇ ಇದ್ದವು. ಕನ್‌ಫ್ಯೂಶಿಯಸ್ ವಿಚಾರಧಾರೆ ಹಾಗೂ ಬೌದ್ಧ ವಿಚಾರಧಾರೆಗಳು ಅಧಿಕೃತ ಮನ್ನಣೆ ಪಡೆದಿದ್ದವು. ಚೀನಿ ಕಲೆ ಹಾಗೂ ಸಾಹಿತ್ಯದ ವ್ಯವಸ್ಥಿತ ಅಧ್ಯಯನ ನಡೆಯಿತು. ಆದರೂ ಜಪಾನೀಯರು ಚೀನಾದ ಬಾಹ್ಯರೂಪವನ್ನು ಮಾತ್ರ ಅಂಗೀಕರಿಸಿದರೇ ಹೊರತು ಅದರ ಆತ್ಮವನ್ನು ಅಲ್ಲ. ಚೀನೀಯರ ಜೀವನ, ವಿಚಾರಧಾರೆ ಎಲ್ಲದಕ್ಕೂ ಕನ್‌ಫ್ಯೂಶಿಯಸ್ ಧರ್ಮ ಮೂಲ ಹಾಗೂ ಅದೇ ಮಾರ್ಗದರ್ಶಿ. ಮಾನವೀಯತೆ, ವೈಚಾರಿಕತೆ, ನಿಯಮಪಾಲನೆ, ಪ್ರಜೆಗಳ ಆಸಕ್ತಿಯನ್ನು ಮುಖ್ಯವಾಗಿ ಗಮನದಲ್ಲಿ ಇರಿಸಿ ಕೊಂಡಿರುವುದು ಎಲ್ಲದಕ್ಕೂ ಚೀನಿಯರಿಗೆ ಕನ್‌ಫ್ಯೂಶಿಯಸ್ ವಿಚಾರಧಾರೆ ಆಧಾರ. ಆದರೆ ಜಪಾನ್ ಕನ್‌ಫ್ಯೂಶಿಯಸ್ ವಿಚಾರಧಾರೆಯನ್ನು ಸ್ಥೂಲವಾಗಿ ಮಾತ್ರ ಪರಿಗಣಿಸಿತು.

ಚೀನಾದವರು ಉದ್ಯೋಗಗಳನ್ನು ಆಯ್ದುಕೊಳ್ಳುವಾಗ ಅವರ ಕುಟುಂಬ ಅಥವಾ ಸಾಮಾಜಿಕ ಸ್ಥಾನಮಾನವನ್ನು ಪರಿಗಣಿಸದೆ ಇತಿಹಾಸ ಸಾಹಿತ್ಯ ಮುಂತಾದ ಪರೀಕ್ಷೆಗಳ ಮೂಲಕ ಆಯ್ದುಕೊಳ್ಳುತ್ತಿದ್ದರು. ಆದರೆ ಜಪಾನಿನಲ್ಲಿ ಸೈದ್ಧಾಂತಿಕವಾಗಿ ಕನ್‌ಫ್ಯೂಶಿಯಸ್ ಮಾದರಿಯ ಸರ್ಕಾರ ಇದ್ದರೂ, ಈಗಾಗಲೇ ಸರ್ಕಾರಿ ಹುದ್ದೆಗಳಲ್ಲಿ ಇದ್ದವರ ಮಕ್ಕಳಿಗೆ ಹಾಗೂ ಅವರ ವಂಶಪಾರಂಪರ್ಯಕ್ಕೆ ಮಹತ್ವ ನೀಡಿ ಅಂತಹವರನ್ನು ಆಯ್ಕೆ ಮಾಡಿ ಕೊಳ್ಳುತ್ತಿದ್ದರು. ಅಧಿಕಾರಶಾಹಿತ್ವದ ಹೊರತಾಗಿ ಜನತೆಯ ಬಗ್ಗೆ ಹೆಚ್ಚಿನ ಸಂವೇದನೆ ಇರಲಿಲ್ಲ. ಅಧಿಕಾರದ ಸ್ಥಾನಗಳಲ್ಲಿದ್ದವರು ಹಾಗೂ ಅವರ ಅನುಯಾಯಿಗಳು ಇತರರನ್ನು ತಮ್ಮ ಸುಖ ಜೀವನಕ್ಕೆ ದುಡಿಯುವ ವರ್ಗ ಎಂದು ಮಾತ್ರ ಪರಿಗಣಿಸುತ್ತಿದ್ದರು. ಶಿಕ್ಷಣವನ್ನು ಒಂದು ಗಮನಾರ್ಹ ಒಡವೆ ಎಂಬಂತೆ ಪರಿಗಣಿಸುತ್ತಿದ್ದರು. ಆದರೆ ರಾಜಕೀಯವಾಗಿಯಾಗಲೀ ಅಥವಾ ಸಾಮಾಜಿಕ ಕಾರಣಕ್ಕೆ ಆಗಲೀ ಶಿಕ್ಷಣಕ್ಕೆ ಯಾವುದೇ ಹೆಚ್ಚಿನ ಸ್ಥಾನ ಇರಲಿಲ್ಲ. ಜಪಾನೀಯರಲ್ಲಿ ಹೆಚ್ಚಿನ ಸೌಂದರ್ಯ ಪ್ರಜ್ಞೆ ಇದ್ದರೂ ಅದು ಒಂದು ಆದಿವಾಸಿ ಯೋಧರ ಸಮಾಜವಾಗಿಯೇ ಉಳಿಯಿತು.

ಜಮೀನ್ದಾರಿ ಪದ್ಧತಿ

ಜಪಾನಿನ ಅಭಿವೃದ್ದಿಯಲ್ಲಿ ಪ್ರಾರಂಭದಿಂದಲೂ ಒಂದು ವಿಧದ ಕೃತಕತೆ, ಮಾನಸಿಕ ಅನಾರೋಗ್ಯ ಕಂಡುಬರುತ್ತದೆ. ಸಾಮಾನ್ಯವಾಗಿ ಯಾವುದೇ ಜನಾಂಗದ ಬೆಳವಣಿಗೆ ಪ್ರಾಚೀನತೆಯಿಂದ ನಾಗರಿಕತೆಯತ್ತ ಮಂದಗತಿಯಲ್ಲಿ ಇರುತ್ತಿತ್ತು. ಇದು ಉತ್ಕ್ರಾಂತಿಯೇ ಹೊರತು ಬದಲಾವಣೆ ಅಲ್ಲ. ಆದರೆ ಜಪಾನೀಯರಲ್ಲಿ ಇದು ಹಾಗಿಲ್ಲ. ಚೀನೀಯರ ಪ್ರಭಾವ ಇದ್ದರೂ ಅವರಿಬ್ಬರಲ್ಲಿ ಐಕ್ಯಮತ್ಯ ಇರಲಿಲ್ಲ. ಚೀನಾದ ವಾಸ್ತವವನ್ನು ಜಪಾನ್ ಅಳವಡಿಸಿಕೊಂಡಿರಲಿಲ್ಲ. ಜಪಾನನ್ನು ಒಂದೇ ಮಾತಿನಲ್ಲಿ ಪರಿಭಾವಿಸುವುದಾದರೆ ಮಿಲಿಟರಿ ಪದ್ಧತಿಯ ಜಮೀನ್ದಾರಿ ಪದ್ಧತಿ ಎಂದು ಹೇಳಬಹುದು. ಇತಿಹಾಸದುದ್ದಕ್ಕೂ ಇದು ಹಾಗೆಯೇ ಉಳಿದುಬಂದಿದೆ. ೭ನೆಯ ಶತಮಾನದ ತರುವಾಯ ಜಪಾನ್ ಜಮೀನ್ದಾರಿ ಮನೆತನಗಳ ಒಂದು ಸಂಘಟಿತ ಘಟಕವಾಗಿದ್ದು ಆ ವಂಶಗಳ ಪೈಕಿ ಒಬ್ಬ ಸಾಮ್ರಾಟನಾಗಿ ಪ್ರಭುತ್ವವನ್ನು ಸ್ಥಾಪಿಸಿರುತ್ತಿದ್ದನು. ಮೊದಲು ನಾರಾ, ನಂತರ ಕ್ವೊಟೋ ರಾಜಧಾನಿಗಳಾಗಿದ್ದವು. ರಾಷ್ಟ್ರವನ್ನು ಪ್ರಾಂತಗಳಾಗಿ ವಿಭಜಿಸಲಾಗಿದ್ದು ಪ್ರತಿಯೊಂದು ಪ್ರಾಂತಕ್ಕೆ ಒಬ್ಬೊಬ್ಬ ಅಧಿಕಾರಿ ಇದ್ದರೂ ಆ ಅಧಿಕಾರ ವಂಶಪಾರಂಪರ್ಯವಾದ ಹಕ್ಕು ಆಗಿತ್ತು. ಚೀನಾದ ಮಾದರಿಯ ಸರ್ಕಾರವನ್ನು ಅಳವಡಿಸಿಕೊಂಡ ಮೇಲೆ ರಾಜ ಮನೆತನಕ್ಕೆ ಹೆಚ್ಚಿನ ಪ್ರಾಶಸ್ತ್ಯ ದೊರೆತು, ವಾಸ್ತವಿಕ ಅಧಿಕಾರದಲ್ಲಿ ಅದರ ಪ್ರಾಮುಖ್ಯತೆ ಇರದಿದ್ದರೂ, ೧೮೬೮ರವರೆಗೂ ಘನತೆಯ ದೃಷ್ಟಿಯಿಂದ ಅದಕ್ಕೆ ಪ್ರಾಮುಖ್ಯ ಇದ್ದೇ ಇತ್ತು. ಅರೆ ಧಾರ್ಮಿಕವಾಗಿ ಆಧ್ಮಾತ್ಮಿಕವಾಗಿ ಜನಾಂಗ ಮೂಲವಾದ ದೈವಿಕ ಸ್ವರೂಪದ ಮಹತ್ವವನ್ನು ಅದು ಉಳಿಸಿಕೊಂಡಿತ್ತು. ಕಾಲಕ್ರಮೇಣ ದೇಶದ ಆಗು ಹೋಗುಗಳಿಗೆ ಸಂಬಂಧಪಟ್ಟಂತೆ ಅದರ ಸ್ಥಾನ ಅವಗಣನೆಗೆ ಗುರಿಯಾಯಿತು. ಜಪಾನಿನ ಇತಿಹಾಸದುದ್ದಕ್ಕೂ ಅಧಿಕಾರ ಒಬ್ಬರ ಕೈಗೆ ಆದರೂ, ರಾಜ ಮರ್ಯಾದೆ ಒಬ್ಬರಿಗೆ ಎಂಬ ರೀತಿ ನಡೆದುಕೊಂಡು ಬಂದಿದೆ. ೨ನೆಯ ಮಹಾಯುದ್ಧದ ವೇಳೆಗೆ ಸರ್ಕಾರ ಮಿಲಿಟರಿ ನಿಯಂತ್ರಣಕ್ಕೆ ಒಳಪಟ್ಟಿತು. ಮಿಲಿಟರಿ ವಂಶಗಳ ಮಧ್ಯೆ ಕಲಹ ಪ್ರಾರಂಭವಾಗಿ ಅದು ನಿರಂತರವಾಗಿ ಇಲ್ಲದಿದ್ದರೂ ನಡೆದೇ ಇತ್ತು. ಮೊದಲು ಎದುರಾಳಿಗಳಾದ ಎರಡು ವಂಶಗಳೆಂದರೆ ತಾಯಿರಾ ಹಾಗೂ ಮಿಲಿ ಮಟೊ ವಂಶ ಹಾಗೂ ಅವರ ಸಂಗಡಿಗರು. ೨೦ನೆಯ ಶತಮಾನದಲ್ಲಿ ಮಿಲಿಮಟೊ ವಂಶ ಗೆದ್ದು ಅವರು ಜಪಾನಿ ಅರಸರಾಗಿ ಶೋಗುನ್ ಎಂಬ ಹೆಸರನ್ನು ಧರಿಸಿದ್ದರು. ಶೋಗುನ್ ಎಂದರೆ ಮಿಲಿಟರಿ ದಂಡಾಧಿಕಾರಿ. ಇದು ವಂಶಪಾರಂಪರ್ಯವಾಗಿದ್ದು, ಬಹಳ ಕಾಲದವರೆಗೆ ಇದು ಒಜೋ ವಂಶದವರ ಕೈಯ್ಯಲ್ಲಿ ಉಳಿಯಿತು. ಹೀಗೆ ಒಂದಾದ ಮೇಲೆ ಒಂದರಂತೆ ವಂಶಗಳು ಬಂದರೂ ಒಬ್ಬರ ವಿರುದ್ಧ ಒಬ್ಬರ ಮೇಲಾಟ ಇದ್ದೇ ಇರುತ್ತಿತ್ತು. ಬಹಳ ಕಾಲದವರೆಗೆ ಜಪಾನ್ ಪ್ರಪಂಚದ ಇತರ ಭಾಗಗಳಿಗಿಂತ ವಿಚಾರಧಾರೆ ಹಾಗೂ ಬಾಹ್ಯ ಪ್ರಭಾವಗಳಿಂದ ಅಷ್ಟೇ ಅಲ್ಲದೆ ವಾಸ್ತವಿಕ ಸಂಪರ್ಕದಿಂದಲೂ ದೂರ ಉಳಿಯಿತು. ತಮ್ಮ ನಾಡಿನಿಂದ ಸಮುದ್ರ ದಲ್ಲಿ ಹೆಚ್ಚು ದೂರದವರೆಗೆ ಹೋಗುವ ಸಾಹಸ ಮಾಡುವಂತಹ ದೊಡ್ಡ ಹಡಗುಗಳನ್ನು ನಿರ್ಮಿಸುವುದಕ್ಕೂ ನಿಷೇಧ ಇತ್ತು. ಅಪರೂಪಕ್ಕೆ ಒಮ್ಮೆ ಚೀನಿ ವ್ಯಾಪಾರಿಗಳಿಗೆ ಪ್ರವೇಶ ಅನುಮತಿ ದೊರಕುತ್ತಿತ್ತು. ನಾಗಸಾಕಿ ಬಂದರಿನ ಬಳಿ ಒಂದು ಚಿಕ್ಕ ನಡುಗಡ್ಡೆಯಲ್ಲಿ ಡಚ್ಚರ ಒಂದು ವ್ಯಾಪಾರ ಕೇಂದ್ರ ಇತ್ತು.

ಜಪಾನ್ ಹೀಗೆ ಪ್ರತಿಬಂಧಿತವಾಗುವುದಕ್ಕೆ ಅವರಿಗೆ ಮುಖ್ಯ ಭಯ ಯುರೋಪಿ ನದ್ದಾಗಿತ್ತು. ಏಕೆಂದರೆ ಯುರೋಪ್ ಈಗಾಗಲೇ ಏಷ್ಯಾವನ್ನು ಪ್ರವೇಶಿಸಿತ್ತು. ಜಪಾನ್ ಹೀಗೆ ಇತರರಿಂದ ವಿಭಿನ್ನವಾಗಿ ಉಳಿಯುವುದಕ್ಕೆ ಇದ್ದ ಇನ್ನೊಂದು ಕಾರಣ ಎಂದರೆ ಸರ್ವಾಧಿಕಾರತ್ವವನ್ನು ಸ್ಥಾಪಿಸಿದ ಟೊಕುಗಾವಾ ವಂಶದ ಮಿಲಿಟರಿ ಆಧಿಪತ್ಯ. ೨ನೆಯ ಮಹಾಯುದ್ಧದ ಮೊದಲಿನ ಅವಧಿಯಲ್ಲಿ ಜಪಾನೀಯರ ವಿಚಾರಧಾರೆ ಹಾಗೂ ಕೃತ್ಯಗಳ ಮೇಲೆ ತೀವ್ರ ನಿಯಂತ್ರಣ ಇದ್ದು ಜಪಾನ್ ಫ್ಯಾಸಿಸ್ಟ್ ತತ್ವಗಳಿಗೆ ಬದ್ಧವಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದು ಕೇವಲ ಮೇಲ್ನೋಟದ ಮಾತಾಗಿತ್ತು. ಟೊಕುಗಾವಾ ಟೋಕಿಯೋವನ್ನು ತಮ್ಮ ರಾಜಧಾನಿಯನ್ನಾಗಿಸಿಕೊಂಡಿದ್ದರು. ದೇಶದ ಬಹುಭಾಗವನ್ನು ಟೋಕುಗಾವಾದ ಸಂಗಡಿಗರಾದ ಡಿಮಿಯೊ ಎಂಬ ಜಮೀನ್ದಾರಿ ಆಳರಸರು ಆಳುತ್ತಿದ್ದು ಅವರು ಟೊಕುಗಾವಾರ ಪ್ರಭುತ್ವವನ್ನು ಅಂಗೀಕರಿಸಿತು. ಯಾವನೆಯ ಜಮೀನ್ದಾರನು ದಂಗೆ ಏಳುವುದಕ್ಕೆ ಅವಕಾಶ ಇಲ್ಲದಂತೆ ಅವನ ಮೇಲೆ ಬಿಗಿ ನಿಯಂತ್ರಣವನ್ನು ಸಾಧಿಸಲಾಗಿತ್ತು. ಯಾವುದೇ ಅಂದೋಲನಕ್ಕೆ ಆಸ್ಪದ ಇಲ್ಲದಂತೆ ಜಿಲ್ಲೆಗಳ ಸುತ್ತಮುತ್ತೆಲ್ಲ ಬಿಗಿಯಾದ ಮೇಲ್ವಿಚಾರಣೆ ಇತ್ತು. ಜಪಾನಿನ ಸಮಾಜದ ವ್ಯವಸ್ಥೆ ಈ ಮುಂದಿನಂತೆ ಇತ್ತು. ಸೈನಿಕರು, ಕುಶಲಕರ್ಮಿಗಳು, ರೈತರು ಹಾಗೂ ವ್ಯಾಪಾರಿಗಳು. ವಾಸ್ತವವಾಗಿ ಡೈಮಿಯೊ ಹಾಗೂ ಸಾಮುರಾಯಿಯ ಎಂಬ ಎರಡು ವಿಭಾಗಗಳು ಇದ್ದವು. ಟೋಕುಗಾವಾ ಪ್ರಭುತ್ವದಲ್ಲಿ ಸೈನಿಕನೆಯ ಪ್ರಭು. ಆತನಿಗೆ ಕೆಲಸ ಏನೂ ಇರಲಿಲ್ಲ. ಎಲ್ಲೆಲ್ಲೂ ಶಾಂತತೆ ಇದ್ದುದರಿಂದ ಅವನಿಗೆ ಹೋರಾಟಕ್ಕೆ ಅವಕಾಶ ಇಲ್ಲದೆ ಈ ಆಲಸ್ಯವೇ ಅವನತಿಗೆ ಕಾರಣವಾಯಿತು. ಸಾಮುರಾಯಿಗಳಿಗೆ ಸಂಹಿತೆ ಇದ್ದು ಬುಶಿಡೊ ಎಂದು ಅವರನ್ನು ಕರೆಯಲಾಗುತ್ತಿತ್ತು, ಎಂದರೆ ಸರದಾರರ ಜೀವನ ರೀತಿ. ಯೋಧರು ನಡೆದುಕೊಳ್ಳಬೇಕಾದ ರೀತಿ ನೀತಿಗಳನ್ನು ಅದರಲ್ಲಿ ನಿಖರವಾಗಿ ತಿಳಿಸಲಾಗಿತ್ತು. ಟೋಕುಗಾವಾರ ಕಾಲದಲ್ಲಿ ಈ ಸಂಹಿತೆಯೇ ಪ್ರಭು ಹಾಗೂ ಯೋಧರು ಇಬ್ಬರ ಮೇಲೂ ಹಿಡಿತ ಸಾಧಿಸಿತು. ಅವರಿಗೆ ಮಾತ್ರ ಖಡ್ಗ ಹಿಡಿಯುವ ಅಧಿಕಾರ ಇದ್ದು, ಅದೇ ಅವರನ್ನು ಇತರರಿಗಿಂತ ಮೇಲ್ದರ್ಜೆಗೆ ಏರಿಸಿತು.

ಚೀನಾದಲ್ಲಿ ಕನ್‌ಫ್ಯೂಶಿಯಸ್ ವಿಚಾರಧಾರೆಯ ಪ್ರಭಾವ ಪ್ರತಿಯೊಂದು ಹಂತದಲ್ಲೂ ಎದ್ದು ಕಾಣುವಂತದ್ದು. ಜಪಾನಿನಲ್ಲಿ ಊಳಿಗಮಾನ್ಯ ಪದ್ಧತಿ ಹಾಗೂ ಮಿಲಿಟರಿ ಪ್ರಭಾವ ಅಧಿಕವಾಗಿತ್ತು. ಮೊದಲಿನಿಂದಲೂ ಜಪಾನಿನಲ್ಲಿ ಎಂದರೆ ಅದು ರಾಷ್ಟ್ರದ ಸ್ವರೂಪವನ್ನು ಪಡೆಯುವುದಕ್ಕೂ ಪೂರ್ವದಿಂದಲೂ ಮಿಲಿಟರಿ ಜಪಾನಿನ ವಾಡಿಕೆಯ ಲಕ್ಷಣವೇ ಆಗಿತ್ತು. ಟೋಜೋಗಳಾಗಲಿ ಹಾಗೂ ಅವರಂತಹವರಾಗಲೀ ಜಪಾನನ್ನು ಮಿಲಿಟರಿ ಸ್ವರೂಪದ್ದನ್ನಾಗಿಸಿರದೆ ಮಿಲಿಟರಿ ಪದ್ಧತಿಯೇ ಅವರನ್ನು ಆ ರೀತಿಯಾಗಿಸಿದೆ.

ಊಳಿಗಮಾನ್ಯ ಪದ್ಧತಿ ಜಪಾನಿನ ಇನ್ನೊಂದು ಪ್ರಮುಖ ಲಕ್ಷಣ. ಯುರೋಪಿಗಿಂತ ಜಪಾನಿನ ಊಳಿಗಮಾನ್ಯ ಪದ್ಧತಿ ಹೆಚ್ಚು ಕಟ್ಟುನಿಟ್ಟಿನದ್ದಾಗಿತ್ತು. ಕ್ರೈಸ್ತಧರ್ಮದ ಪ್ರಭಾವ ದೊಂದಿಗೆ ಯುರೋಪಿನ ಜಮೀನ್ದಾರಿ ಪದ್ಧತಿಯಲ್ಲಿ ಅಲ್ಪ ಸ್ವಲ್ಪ ಮಾನವೀಯ ಗುಣಗಳು ಎದ್ದು ಕಾಣುತ್ತಿದ್ದವು. ಆದರೆ ಜಪಾನಿನ ಜಮೀನ್ದಾರಿ ಪದ್ಧತಿಯಲ್ಲಿ ಜಮೀನ್ದಾರನು ಸರ್ವಶಕ್ತನಾಗಿದ್ದ. ರೈತ ಅವನ ಆಜ್ಞಾಧಾರಕನಾಗಿರಬೇಕಿತ್ತು. ರೈತನ ವಿಷಯಕ್ಕೆ ಸಂಬಂಧಿಸಿದಂತೆ ತುಸುವಾದರೂ ಕೃಪೆ ತೋರಿದರೆ ಅದು ಕೇವಲ ವೈಯಕ್ತಿಕ ದಯಾಳುತನದ ಕಾರಣದಿಂದಾಗಿರುತ್ತಿತ್ತು. ಜಪಾನೀಯರ ವಿಧೇಯತೆ ನಿಜವಾಗಲೂ ಆಶ್ಚರ್ಯಕರವಾದುದು. ಜಪಾನಿನ ಜಮೀನ್ದಾರಿ ಪದ್ಧತಿಯ ಮುಖ್ಯ ಲಕ್ಷಣ ಎಂದರೆ ವಿಧೇಯತೆ ಹಾಗೂ ಸ್ವಾಮಿ ನಿಷ್ಠೆ. ಇದಕ್ಕೆ ಪರ್ಯಾಯವಾಗಿ ರೈತರಿಗೆ ಸುಭದ್ರತೆ ದೊರಕಬೇಕು. ಆದರೆ ಹೊಣೆಯನ್ನು ಪಾಲಿಸುವುದೇ ಸಂಶಯಾಸ್ಪದವಾಗಿತ್ತು. ಏಕೆಂದರೆ ಕರ್ತವ್ಯವನ್ನು ಪಾಲಿಸಬೇಕಾದವರಿಗೆ ಅದಕ್ಕೆ ಬೇಕಾದ ಅಧಿಕಾರ ಇರಲಿಲ್ಲ. ಜಮೀನ್ದಾರಿ ಪದ್ಧತಿ ೧೮೬೮ರಲ್ಲಿ ನಿವಾರಣೆಯಾಗಿ ಬೇರೆಯೇ ಮಾದರಿಯ ಸರ್ಕಾರ ಹಾಗೂ ಸಾಮಾಜಿಕ ವ್ಯವಸ್ಥೆ ರೂಪುಗೊಂಡರೂ ಜಮೀನ್ದಾರಿ ಪದ್ಧತಿಯೊಂದಿಗೆ ರಕ್ತಗತವಾಗಿರುವ ಗುಣಗಳನ್ನು ಕಿತ್ತು ಎಸೆಯುವುದು ಸುಲಭವಾಗಿರಲಿಲ್ಲ. ಅಲ್ಲಿ ಸಂವಿಧಾನ ಹಾಗೂ ಸಂಸತ್ತು ಜರಿಗೊಂಡರೂ ಅದು ಕೇವಲ ಬರಹದಲ್ಲಿ ಮಾತ್ರ. ಪ್ರಭುವಿನ ರಕ್ತಗತವಾಗಿದ್ದ ಪ್ರಭುತ್ವದ ಅಧಿಕಾರವೇ ವಾಸ್ತವ. ಇದೇ ಪ್ರಕೃತಿಯ ಇಷ್ಟ ಎಂದು ಅವರು ಭಾವಿಸಿದ್ದರು.

 

ಪರಾಮರ್ಶನಗ್ರಂಥಗಳು

೧. ಪೇರ್ ಬ್ಯಾಂಕ್ ಜನ್ ಕೆ.(ಸಂ), ೧೯೭೫. ಈಸ್ಟ್ ಏಷ್ಯಾ, ಟ್ರೆಡೀಶನ್ ಆಂಡ್ ಟ್ರಾನ್ಸ್ಫಾಮೇರ್ಶನ್: ಹಿಸ್ಟರಿ ಆಫ್ ಈಸ್ಟ್ ಏಷ್ಯನ್ ಸಿವಿಲಿಜೇಶನ್, ಸಂಪುಟ-೧, ಎರಡನೆಯ ಆವೃತ್ತಿ, ಲಂಡನ್.

೨. ಕಿಮ್ ಕೂ.ಕೇ.(ಸಂ), ೧೯೭೭.  ದಿ ಹಿಸ್ಟರಿ ಆಫ್ ಸೌತ್ ಈಸ್ಟ್, ಸೌತ್ ಆಂಡ್ ಈಸ್ಟ್ ಏಷ್ಯಾ, ಕೌಲಾಲಂಪುರ.