ಚೀನಾದ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆ

ಸಮಾಜವಾದಿ ಕ್ರಾಂತಿಗೂ ಮೊದಲಿನ ರಷ್ಯಾ ಸರ್ಕಾರವು ಚೀನಾದ ಭೂಭಾಗಗಳನ್ನು ಕಬಳಿಸಿತ್ತು. ಚೀನಾದ ರೈಲ್ವೆ, ಗಣಿ ಮತ್ತು ಅರಣ್ಯ ಪ್ರದೇಶಗಳನ್ನು ತನ್ನ ಹಿಡಿತದಲ್ಲಿಟ್ಟು ಕೊಂಡಿತ್ತು ಹಾಗೂ ಹಲವಾರು ಅಸಮ್ಮತ ಒಪ್ಪಂದಗಳನ್ನು ಚೀನಾದೊಂದಿಗೆ ಮಾಡಿಕೊಂಡು ಅದನ್ನು ಹಿಂಡಿ ಹಿಪ್ಪೆ ಮಾಡುತ್ತಿತ್ತು. ಅಧರೆ, ೧೯೧೭ರಲ್ಲಿ ಅಸ್ತಿತ್ವಕ್ಕೆ ಬಂದ ಕಾರ್ಮಿಕರ ವರ್ಗದ ನೇತೃತ್ವದ ರಷ್ಯಾ ಸರ್ಕಾರ ಚೀನಾದ ಮೇಲೆ ಅಪಾರವಾದ ಪ್ರಭಾವವನ್ನು ಬೀರಿತು. ೧೯೧೯ರ ಜುಲೈನಲ್ಲಿ ಹೊಸ ರಷ್ಯಾದ ಸೋವಿಯತ್ ಸರ್ಕಾರವು ಚೀನಾ ದೇಶದಲ್ಲೆಲ್ಲ ಆಶ್ಚರ್ಯವನ್ನುಂಟು ಮಾಡುವಂತಹ ಬಳುವಳಿಗಳನ್ನು ಚೀನಿ ಜನತೆಗೆ ನೀಡಿತು. ಅದರಲ್ಲಿದ್ದ ಪ್ರಮುಖ ಅಂಶಗಳೆಂದರೆ:

೧. ಮುಂಚಿನ ಸಾಮ್ರಾಜ್ಯಶಾಹಿ ರಷ್ಯಾ ಸರ್ಕಾರವು ಆಕ್ರಮಿಸಿದ್ದ ಚೀನಾದ ಭೂಭಾಗವನ್ನು ವಾಪಸ್ಸು ನೀಡುವುದು.

೨. ಮುಂಚಿನ ಸಾಮ್ರಾಜ್ಯಶಾಹಿ ರಷ್ಯಾ ಸರ್ಕಾರವು ಕಬಳಸಿದ್ದ ಚೀನಾದ ರೈಲ್ವೆ ಮತ್ತು ಗಣಿ ಹಾಗೂ ಅರಣ್ಯಗಳನ್ನು ಯಾವುದೇ ಪರಿಹಾರವಿಲ್ಲದೆ ಚೀನಾದ ಸಾರ್ವಭೌಮತ್ವಕ್ಕೆ ಒಪ್ಪಿಸುವುದು.

೩ ಈ ಮುಂಚೆ ಸಾಮ್ರಾಜ್ಯಶಾಹಿ ರಷ್ಯಾ ಸರ್ಕಾರವು ಮಾಡಿಕೊಂಡಿದ್ದ ಅಸಮ್ಮತ ಒಪ್ಪಂದಗಳೆಲ್ಲವನ್ನು ರದ್ದುಪಡಿಸುವುದು.

ವಿದೇಶಿ ದಾಳಿಗಳಿಂದ ನರಳುತ್ತಿದ್ದ ಚೀನಾ ಜನತೆಗೆ ಅನೇಕ ಸ್ನೇಹಪರ ಕೊಡುಗೆಗಳನ್ನು ಸೋವಿಯತ್ ರಷ್ಯಾ ಸರ್ಕಾರವು ನೀಡಿದ್ದರಿಂದಾಗಿ ಮಾರ್ಕ್ಸ್‌ವಾದವು ಚೀನಾದ ರಾಷ್ಟ್ರಪ್ರೇಮಿ ಬುದ್ದಿಜೀವಿಗಳಲ್ಲಿ ತೀವ್ರತರದ ಆಸಕ್ತಿಯನ್ನು ಕೆರಳಿಸಿತು. ಅಸೆಬರುಕ ಇತರೆ ಸಾಮ್ರಾಜ್ಯಶಾಹಿ ದೇಶಗಳಿಗೆ ಹೋಲಿಸಿದಾಗ ರಷ್ಯಾದ ಕಾರ್ಮಿಕ ಸರ್ಕಾರದ ಈ ಧೋರಣೆಯು ಎಲ್ಲ ಚೀನಿ ರಾಷ್ಟ್ರಾಭಿಮಾನಿಗಳ ಹರ್ಷಕ್ಕೆ ಕಾರಣವಾಗಿ ವಿದ್ಯಾರ್ಥಿಗಳು ಮತ್ತು ಬುದ್ದಿಜೀವಿಗಳು ಅಕ್ಟೋಬರ್ ಕ್ರಾಂತಿಯ ವಿಜಯವನ್ನು ಎಲ್ಲೆಡೆ ಆಚರಿಸುತ್ತಾ ಮಾರ್ಕ್ಸ್‌ವಾದದ ಅಧ್ಯಯನಕ್ಕೆ ಶಾಲೆಗಳನ್ನು ತೆರೆದರು.

ಮಾವೋ ಜೆಡಾಂಗ್ ಹೇಳುವಂತೆ ಚೀನಾ ಜನತೆಯು ಮಾರ್ಕ್ಸ್‌ವಾದವನ್ನು ಕಂಡದ್ದೇ ರಷ್ಯನ್ನರಿಂದ… ಅಕ್ಟೋಬರ್ ಕ್ರಾಂತಿಯ ಯಶಸ್ಸು ಚೀನಾದೊಳಗೆ ಮಾರ್ಕ್ಸ್‌ವಾದ ಲೆನಿನ್ ವಾದವನ್ನು ಕರೆತಂದಿತು.

ವಿಶ್ವದ ಭವಿಷ್ಯತ್ತೆಂದರೆ ಕೆಂಪು ಧ್ವಜದ ಭವಿಷ್ಯತ್ತು ಎಂದು ಪ್ರಗತಿಪರ ಬರಹಗಾರರಾದ ಲುಕ್ಸುನ್ ಅಂದೇ ಹೇಳಿದ್ದರು. ಆದರೆ, ಚೀನಾದ ಆಳ್ವಿಕೆಯು ಮಾರ್ಕ್ಸ್‌ವಾದವನ್ನು ಅಪಾಯಕಾರಿ ಆಲೋಚನೆಯೆಂದು ಪರಿಗಣಿಸಿತ್ತು.

ಚೀನಾದಲ್ಲಿ ೧೯೨೦ರ ವಸಂತ ಕಾಲದಲ್ಲಿ ಕಮ್ಯುನಿಸ್ಟ್ ಗುಂಪುಗಳನ್ನು ರಚನೆ ಮಾಡಲಾಯಿತು. ಚೀನಾದ ಕಮ್ಯುನಿಸ್ಟ್ ಪಕ್ಷವನ್ನು ಅಧಿಕೃತವಾಗಿ ೧೯೨೧ರ ಜುಲೈನಲ್ಲಿ ಸ್ಥಾಪಿಸಲಾಯಿತು. ಅದರ ಪ್ರಥಮ ರಾಷ್ಟ್ರೀಯ ಮಹಾಧಿವೇಶನಕ್ಕೆ ಹ್ಯೂನಾನ್ ಪ್ರಾಂತ್ಯದ ಪ್ರತಿನಿಧಿಯಾಗಿ ಚೀನಾದ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕರಲ್ಲೊಬ್ಬರಾದ ಮಾವೋ ಜೆಡಾಂಗ್ ಅವರು ಬಂದಿದ್ದರು. ನಂತರದಲ್ಲಿ ಅವರನ್ನು ಚೀನಾ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ಹ್ಯೂನಾನ್ ಪ್ರಾಂತ್ಯದ ಕಾರ್ಯದರ್ಶಿಯನ್ನಾಗಿ ಆರಿಸಿ ಕಾರ್ಮಿಕ ಚಳವಳಿಯನ್ನು ಮುನ್ನಡೆಸುವ ಜವಾಬ್ದಾರಿ ನೀಡಲಾಯಿತು. ಒಂದು ವಿಶಾಲವಾದ ಪ್ರಜಸತ್ತಾತ್ಮಕ ವೇದಿಕೆಯನ್ನು ರಚಿಸಿ ಅದರಲ್ಲಿ ದೇಶದಲ್ಲಿನ ಎಲ್ಲ ಸಾಮ್ರಾಜ್ಯಶಾಹಿ ವಿರೋಧಿ ಮತ್ತು ಪಾಳೇಗಾರಿ ವಿರೋಧಿ ಐಕ್ಯತಾ ರಂಗವನ್ನು ನಿರ್ಮಿಸಲು ತೀರ್ಮಾನಿಸಲಾಯಿತು. ಅದರಂತೆ ಡಾ.ಸನ್‌ಯಾತ್ ಸೇನ್ ಅವರ ನಾಯಕತ್ವದ ಕೌಮಿಂಟಾಂಗ್(ಶ್ರೀಮಂತ ವರ್ಗದ ಪಕ್ಷ)ನೊಂದಿಗೆ ಸಹಕರಿಸುವ ನೀತಿಯನ್ನು ಸಿಪಿಸಿಯು ಜರಿಗೆ ತಂದಿತು. ಕಮ್ಯುನಿಸ್ಟ್ ಪಕ್ಷದ ಎಲ್ಲ ಸದಸ್ಯರು ಸಹ ವೈಯಕ್ತಿಕವಾಗಿ ಕೌಮಿಂಟಾಂಗನ್ನು ಸೇರಬೇಕೆಂದು ನಿರ್ಣಯಿಸಲಾಯಿತು. ಕೇಂದ್ರ ಸಮಿತಿಯ ಸದಸ್ಯರಾಗಿ ಮಹಾಧಿವೇಶನದಿಂದ ಆಯ್ಕೆಯಾದ ಮಾವೋ ಜೆಡಾಂಗ್ ಕೇಂದ್ರೀಯ ನಾಯಕತ್ವದಲ್ಲಿ ಪ್ರಮುಖ ಪಾತ್ರ ವಹಿಸಲಾರಂಭಿಸಿದರು.

೧೯೨೨ರ ಮೇನಲ್ಲಿ ಮಾವೋ ಅವರು ಹ್ಯೂನಾನಾ ಪ್ರಾಂತ್ಯದ ಪಕ್ಷದ ಕಾರ್ಯದರ್ಶಿಯಾಗಿದ್ದಾಗ ಇಪ್ಪತ್ತಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳನ್ನು ಪ್ರಮುಖವಾಗಿ ಗಣಿ, ರೈಲ್ವೆ, ನಗರಸಭೆ, ಪ್ರಿಂಟಿಂಗ್ ಕಾರ್ಮಿಕರ ನಡುವೆ ರಚಿಸಿದರು. ಆಗ ಕಮ್ಯುನಿಸ್ಟ್ ಪಕ್ಷವು ಪ್ರಧಾನವಾಗಿ ವಿದ್ಯಾರ್ಥಿ ಮತ್ತು ಕಾರ್ಮಿಕರ ನಡುವೆ ಕೇಂದ್ರೀಕೃತವಾಗಿದ್ದು ರೈತಾಪಿಯ ನಡುವೆ ಅಷ್ಟಾಗಿ ಬೇರೂರಿರಲಿಲ್ಲ.

ಚೀನಾದ ರಾಷ್ಟ್ರೀಯ ಪಕ್ಷವಾಗಿದ್ದ ಕೌಮಿಂಟಾಂಗ್‌ನ ನಾಯಕರಾದ ಡಾ.ಸನ್ ಯಾತ್ ಸೆನ್ ಅವರು ಸಹಾಯ ಹಸ್ತ ನೀಡಿದ ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಲಕ್ಷ್ಯದಿಂದ ಬೇಸತ್ತಿದ್ದಾಗ, ಲೆನಿನ್ ನಾಯಕತ್ವದ ರಷ್ಯಾದ ಕಮ್ಯುನಿಸ್ಟ್ ಸರ್ಕಾರವು ಬಹು ಅದರದಿಂದ ಅವರೊಂದಿಗೆ ಒಪ್ಪಂದ ಮಾಡಿಕೊಂಡು ರಾಜಕೀ ಮತ್ತು ಆರ್ಥಿಕ ನೆರವು ನೀಡಿತು. ಆ ಸಂದರ್ಭದಲ್ಲಿ ಕೌಮಿಂಟಾಂಗ್ ಆಗಲಿ ಚೀನಾದ ಕಮ್ಯುನಿಸ್ಟ್ ಪಕ್ಷವಾಗಲಿ ಯಾವುದೇ ಅಧಿಕಾರವನ್ನು ಹೊಂದಿರಲಿಲ್ಲ. ಆದರೆ, ವಿದೇಶಿ ಶಕ್ತಿಗಳು ಪ್ರಾಮುಖ್ಯತೆ ನೀಡಿದ್ದ ಮತ್ತು ಉತ್ತರ ಚೀನಾದ ಪಾಳೇಗಾರರು ಬೆಂಬಲಿಸಿದ್ದ ಕೈಗೊಂಬೆ ಪೀಕಿಂಗ್ ಸರ್ಕಾರಕ್ಕೆ ಪರ್ಯಾಯವಾಗಿ ದಕ್ಷಿಣ ಚೀನಾ ಪ್ರಾಂತ್ಯದ ಪಾಳೇಗಾರರು ಡಾ.ಸೆನ್‌ಯಾತ್ ಸೆನ್ ಅವರಿಗೆ ಪ್ರಾಂತೀಯ ಅಖಿಲ ಚೀನಾ ಸರ್ಕಾರವನ್ನು ರಚಿಸಲು ಅವಕಾಶ ನೀಡಿದ್ದರು. ಐಕ್ಯತಾ ಒಪ್ಪಂದದಂತೆ ಕಮ್ಯುನಿಸ್ಟ್ ಪಕ್ಷದ ಕೆಲವು ಯುವ ಸದಸ್ಯರು ಕೌಮಿಂಟಾಂಗನ್ನು ಸೇರಿದ್ದರು. ಡಾ.ಸೆನ್‌ಯಾತ್ ಸೆನ್ ಅವರ ಸಾಮಾಜಿಕ ಕ್ರಾಂತಿಯ ವಿಚಾರಧಾರೆಯು ಅಂದಿನ ವ್ಯವಸ್ಥೆಯ ಸುಧಾರಣೆ ಹಾಗೂ ಸಮಾಜವಾದದ ಮಿಶ್ರಣಗಳಿಂದ ಕೂಡಿತ್ತು. ಚೀನಾದ ಕಮ್ಯುನಿಸ್ಟರು ಡಾ. ಸನ್ ಯಾತ್ ಸೆನ್ ಅವರ ರಾಷ್ಟ್ರೀಯ ಸ್ವಾತಂತ್ರ್ಯ ಕಲ್ಪನೆಗೆ ಬೆಂಬಲ ನೀಡಿದ್ದರೂ ಅವರ ಅಂತಿಮ ಗುರಿ ಸಮಾಜವಾದದ ಸ್ಥಾಪನೆ. ತಾವು ನಂತರ ಸ್ಥಾಪಿಸಲು ಉದ್ದೇಶಿಸಿದ್ದ ಸಮಾಜವಾದಿ ವ್ಯವಸ್ಥೆಗೆ ಮೊದಲು ಡಾ.ಸೆನ್ ಅವರ ಪ್ರಜಸತ್ತಾತ್ಮಕ ಕ್ರಾಂತಿಯನ್ನು ಸಾಧಿಸುವುದು ಅತ್ಯವಶ್ಯವಾದದ್ದೆಂದು ಕಮ್ಯುನಿಸ್ಟರು ಸಂಪೂರ್ಣವಾಗಿ ಮನಗಂಡಿದ್ದರು.

ಕ್ರಾಂತಿಯ ದೀರ್ಘವಧಿ ಕಾಲಘಟ್ಟದಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷವು ನಾಲ್ಕು ಪ್ರಧಾನ ಹಂತಗಳನ್ನು ದಾಟಿ ಬಂದಿತು.

೧. ಕೌಮಿಂಟಾಂಗ್‌ನ ಸಹಕಾರದೊಂದಿಗೆ ಕೈಗೊಂಡ ಉತ್ತರ ದಂಡೆಯಾತ್ರೆ (೧೯೨೪-೨೭)

೨. ರೈತಾಪಿಯ ಕ್ರಾಂತಿಕಾರಿ ಯುದ್ಧ (೧೯೨೭-೩೭)

೩. ಜಪಾನ್ ವಿರುದ್ಧ ಪ್ರತಿರೋಧನಾ ಯುದ್ಧ (೧೯೩೭-೪೫)

೪. ರಾಷ್ಟ್ರವ್ಯಾಪಿ ವಿಮೋಚನಾ ಯುದ್ಧ (೧೯೪೬-೪೯)

ಮೊದಲ ಹಂತದಲ್ಲಿ ಕಮ್ಯುನಿಸ್ಟ್ ಪಕ್ಷವು ಕೌಮಿಂಟಾಂಗ್‌ನೊಂದಿಗೆ ಪರಸ್ಪರ ಸಹಕಾರ ಒಪ್ಪಂದವನ್ನು ಮಾಡಿಕೊಂಡು ಸಾಮ್ರಾಜ್ಯಶಾಹಿಯ ವಿರುದ್ಧ ಯುದ್ಧ ಹೂಡಲು ಯೋಜನೆ ರೂಪಿಸಿತು. ಮೊದಲಿಗೆ ೧೯೨೬ರಲ್ಲಿ ಉತ್ತರ ದಂಡಯಾತ್ರೆಯು ಚಾಲನೆ ಯಲ್ಲಿದ್ದಾಗ ಚೌ ಎನ್ ಲಾಯ್ ಅವರು ತಮ್ಮ ಸೇನೆಯ ತುಕಡಿಯ ಸಮೇತ ಬಂಡಾಯವೆದ್ದು ಶಾಂಗೈ ನಗರವನ್ನು ಆಕ್ರಮಿಸಿಕೊಳ್ಳಲು ಪಕ್ಷವು ನಿರ್ದೇಶನ ನೀಡಿತು. ಬರೇ ಮೂರು ತಿಂಗಳಲ್ಲಿ ಕಮ್ಯುನಿಸ್ಟ್ ಪಕ್ಷವು ೬,೦೦,೦೦೦ ಕಾರ್ಮಿಕರನ್ನು ಸಂಘಟಿಸಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿತು. ಉತ್ತರ ಪ್ರಾಂತ್ಯದ ಪಾಳೆಗಾರರು ಕಾರ್ಮಿಕ ಚಳುವಳಿಯನ್ನು ಹಿಮ್ಮೆಟ್ಟಿಸಲು ಹಲವು ಕಾರ್ಮಿಕರ ಪಾಳೇಗಾರರು ಕಾರ್ಮಿಕ ಚಳುವಳಿಯನ್ನು ಹಿಮ್ಮೆಟ್ಟಿಸಲು ಹಲವು ಕಾರ್ಮಿಕರ ಕೊಲೆಗೈದರೂ ಚೌ ಎನ್ ಲಾಯ್ ಅವರ ನಾಯಕತ್ವದಲ್ಲಿ ಶಾಂಗೈ ಕಾರ್ಮಿಕರ ನಾಯಕರು ೫೦,೦೦೦ ಪಿಕೆಟಿಂಗ್ ನಡೆಸಿದರು. ಪೊಲೀಸ್ ಸ್ಟೇಷನ್ ಗಳನ್ನು ಆಕ್ರಮಿಸಿದರು. ೫,೦೦೦ ಕಾರ್ಮಿಕರು ಶಸ್ತ್ರ ಸನ್ನದ್ಧರಾದರು. ೬ ಬೆಟಾಲಿಯನ್ ಕಾರ್ಮಿಕರ ತಂಡವ್ನು ರಚಿಸಿ ತೀವ್ರತರದ ಹೋರಾಟ ಗಳನ್ನು ನಡೆಸಲಾಯಿತು. ಆದರೆ, ಇಷ್ಟೆಲ್ಲ ಕಾರ್ಮಿಕ ಚಳುವಳೀಯು ಕ್ರಿಯಾತ್ಮಕ ಹೋರಾಟದ ನಡುವೆಯೂ ವಿದೇಶಿ ಮಿಲಿಟರಿ ಸೇನೆಯ ಬೆಂಬಲದೊಂದಿಗೆ ಇವೆಲ್ಲವನ್ನೂ ಹತ್ತಿಕ್ಕಿ ಕಾರ್ಮಿಕ ಚಳುವಳಿಯನ್ನು ಬಗ್ಗುಬಡಿಯಲಾಯಿತು. ೫,೦೦೦ ಕಾರ್ಮಿಕರನ್ನು ನಿರ್ದಾಕ್ಷಿಣ್ಯವಾಗಿ ಕಗ್ಗೊಲೆ ಮಾಡಲಾಯಿತು. ಸಾವಿನ ದವಡೆಗೆ ಸಿಕ್ಕಿದ್ದ ಚೌ ಎನ್ ಲಾಯ್ ಪವಾಡ ಸದೃಶ್ಯವಾಗಿ ಶತ್ರು ಸೇನೆಯಿಂದ ಹೇಗೋ ತಪ್ಪಿಸಿಕೊಂಡು ಬರುವಲ್ಲಿ ಯಶಸ್ವಿಯಾದರು.

ಕ್ರಾಂತಿಕಾರಿ ಸಿದ್ಧಾಂತ ಮತ್ತು ಆಚರಣೆ

ಚೀನಾದ ಪಾಳೆಗಾರಿ ವ್ಯವಸ್ಥೆಗೆ ಕೊಡಲಿ ಪೆಟ್ಟು ನೀಡಿ ಅದನ್ನು ಒಂದು ಸಮಾಜವಾದಿ ಸಮಾಜವನ್ನಾಗಿ ಕ್ರಾಂತಿಕಾರಿ ನೆಲೆಗಟ್ಟಿನಲ್ಲಿ ಪರಿವರ್ತಿಸಲು ಚೀನಿ ಸಮಾಜದ ಆಳವಾದ ಅಧ್ಯಯನದ ಅವಶ್ಯಕತೆ ಅತ್ಯಮತ ಜರೂರಾಗಿತ್ತು. ಮತ್ತು ಅದರ ಆಧಾರದ ಮೇಲೆ ಚೀನಾದ ಕ್ರಾಂತಿಯ ಹಾದಿಯನ್ನು ಕಂಡುಕೊಳ್ಳಬೇಕಿದ್ದಿತ್ತು. ಈ ಪ್ರಮುಖ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸಿ ಜಾಗತಿಕ ದುಡಿಯುವ ವರ್ಗದ ಕ್ರಾಂತಿಯ ಇತಿಹಾಸದಲ್ಲಿ ಮಾವೋ ಅವರು ತಮ್ಮದೇ ಆದ ವಿಶೇಷ ಸ್ಥಾನವನ್ನು ಕಲ್ಪಿಸಿಕೊಂಡಿದ್ದಾರೆ. ಇದಕ್ಕಾಗಿ ಲೆನಿನ್ ಮತ್ತು ಸ್ಟಾಲಿನ್ ಅವರ ಬೋಧನೆಗಳಿಂದ ಮತ್ತು ಸೋವಿಯತ್ ಒಕ್ಕೂಟದ ಅನುಭವದಿಂದ ಆಗಾಧವಾಗಿ ಕಲಿತರು. ಆದರೂ ಸೋವಿಯತ್ ನಿಂದ ಬಂದದ್ದನ್ನೆಲ್ಲ ಯಾಂತ್ರಿಕವಾಗಿ ಪಾಲಿಸಲು ಹೋಗದೆ ಚೀನಾದ ವಾಸ್ತವಿಕ ಪರಿಸ್ಥಿತಿ ಹಾಗೂ ಸ್ವಂತ ಚಳುವಳಿಯ ಅನುಭವಕ್ಕೆ ಅದನ್ನು ಅಳವಡಿಸಿಕೊಂಡರು ಮತ್ತು ಬೆಳೆಸಿದರು.

ಅವರ ಜನಪ್ರಿಯ ಕೃತಿಯಾದ ‘ಚೀನಾದ ಕ್ರಾಂತಿ ಮತ್ತು ಚೀನಾ ಕಮ್ಯುನಿಸ್ಟ್ ಪಕ್ಷ’ದಲ್ಲಿ ಚೀನಾ ಸಮಾಜ ಕುರಿತಂತೆ ಆಳವಾದ ಅಧ್ಯಯನವನ್ನು ಅವರು ಮಾಡಿದ್ದು ಅವರ ಸಂಕ್ಷಿಪ್ತ ವಿಚಾರಧಾರೆ ಕೆಳಕಂಡಂತಿದೆ:

೧. ಚೀನಾದ ಮೇಳೆ ಸಾಮ್ರಾಜ್ಯಶಾಹಿ ಶಕ್ತಿಗಳು ಹಲವಾರು ಆಕ್ರಮಣಗಳನ್ನು ಮಾಡಿವೆ… ಚೀನಾವನ್ನು ಯುದ್ಧದಲ್ಲಿ ಸೋಲಿಸಿದ ನಂತರ ಅವು ಚೀನಾದ ರಕ್ಷಣೆಯಲ್ಲಿದ್ದ ನೆರೆಯ ರಾಷ್ಟ್ರಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ ಅವುಗಳ ಭೂಭಾಗಗಳನ್ನು ಇತರೆ ದೇಶಗಳಿಗೆ ಗುತ್ತಿಗೆ ನೀಡಿವೆ… ಹೀಗೆ ಚೀನಾದ ಬೃಹತ್ ಪಾಳೇಗಾರಿ ಸಾಮ್ರಾಜ್ಯದ ಮೇಲೆ ಬಲವಾದ ಹೊಡೆತಗಳು ಬಿದ್ದಿವೆ.

೨. ಸಾಮ್ರಾಜ್ಯಶಾಹಿ ಶಕ್ತಿಗಳು ಅಸಂಖ್ಯಾತ ಅಸಮಾನ ಒಪ್ಪಂದಗಳಿಗೆ ಚೀನಾವು ಬಲವಂತವಾಗಿ ಸಹಿ ಹಾಕುವಂತೆ ಮಾಡಿ ಚೀನಾದ ಭೂಮಿಯ ಮೇಲೆ ಭೂಸೇನೆ ಮತ್ತು ನೌಕಾಸೇನೆಗಳನ್ನು ಇರಿಸಿ ಚೀನಾದಲ್ಲಿ ತಮ್ಮದೇ ಆಳ್ವಿಕೆಯನ್ನು ನಡೆಸಿವೆ ಮತ್ತು ಇಡೀ ದೇಶವನ್ನು ಸಾಮ್ರಾಜ್ಯಶಾಹಿ ವಲಯಗಳ ಪ್ರಭಾವಕ್ಕೆ ಈಡಾಗುವಂತೆ ಮಾಡಿವೆ.

೩. ಚೀನಾದ ಪ್ರಮುಖ ನೌಕಾ ಕೇಂದ್ರಗಳನ್ನೆಲ್ಲ ಸಾಮ್ರಾಜ್ಯಶಾಹಿ ಶಕ್ತಿಗಳು ತಮ್ಮ ಹಿಡಿತದಲ್ಲಿಟ್ಟುಕೊಂಡಿವೆ… ಅವು ಕಸ್ಟಮ್ಸ್, ವಿದೇಶಿ ವ್ಯಾಪಾರ ಮತ್ತು ಸಂವಹನ ಸಂಪರ್ಕ(ಸಮುದ್ರ, ಭೂಮಿ, ಒಳನಾಡು ಮತ್ತು ವಾಯು)ಗಳನ್ನೂ ಸಹ ತಮ್ಮ ಹಿಡಿತದಲ್ಲಿಟ್ಟುಕೊಂಡಿವೆ. ಹೀಗೆ ತಮ್ಮ ಸರಕುಗಳನ್ನು ಚೀನಾದೊಳಗೆ ತಮದು ಸುರಿದು ತಮ್ಮ ಕೈಗಾರಿಕಾ ಉತ್ಪನ್ನಗಳಿಗೆ ಚೀನಾವನ್ನು ಮಾರುಕಟ್ಟೆಯನ್ನಾಗಿ ಮಾಡಿ ಕೊಂಡಿವೆ. ಅದೇ ವೇಳೆ ಚೀನಾದ ಕೃಷಿಯನ್ನು ತಮ್ಮ ಸಾಮ್ರಾಜ್ಯಶಾಹಿ ಅವಶ್ಯಕತೆಗಳಿಗೆ ಗುಲಾಮನನ್ನಾಗಿ ಮಾಡಿವೆ.

ಹೀಗೆ ಚೀನಾದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಜೀವನದೊಳಗೆ ಸಾಮ್ರಾಜ್ಯಶಾಹಿ ಒಳನುಸುಳುವಿಕೆಯ ಕುರಿತಂತೆ ಹಲವಾರು ವಾಸ್ತವಾಂಶಗಳ ಆಧಾರದ ಮೇಲೆ ಮಾವೋರವರು ಈ ಅಂತಿಮ ಅಭಿಪ್ರಾಯಕ್ಕೆ ಬಂದರು,

ಚೀನಾದ ವಿರುದ್ಧ ಸಾಮ್ರಾಜ್ಯಶಾಹಿಯ ಆಕ್ರಮಣವು ಪಾಳೇಗಾರಿ ಸಮಾಜದ ನಾಶವನ್ನು ಮತ್ತು ಬಂಡವಾಳಶಾಹಿ ಶಕ್ತಿಯ ಬೆಳವಣಿಗೆಯನ್ನು ತೀವ್ರಗೊಳಿಸುತ್ತಿದೆ. ಹಾಗಯೇ ಪಾಳೇಗಾರಿ ಸಮಾಜವನ್ನು ಒಂದು ಅರೆ ಪಾಳೇಗಾರಿ ಸಮಾಜವನ್ನಾಗಿ ಪರಿವರ್ತಿಸುತ್ತಿದೆ.

ಅದೇ ವೇಳೆಗೆ, ಚೀನಾದಲ್ಲಿನ ಸಾಮ್ರಾಜ್ಯಶಾಹಿಯ ಕ್ರೂರ ಆಳ್ವಿಕೆಯು ಒಂದು ಸ್ವತಂತ್ರ ರಾಷ್ಟ್ರವನ್ನು ಒಂದು ಅರೆ ವಸಾಹತು ಮತ್ತು ವಸಾಹತು ರಾಷ್ಟ್ರದ ಮಟ್ಟಕ್ಕಿಳಿಸಿದೆ. ಇಂತಹ ಪ್ರಧಾನವಾದ ಮತ್ತು ಅತ್ಯವಶ್ಯ ಅಧ್ಯಯನದ ಮೂಲಕ ಚೀನಿ ಸಮಾಜದ ರಚನೆಯನ್ನು ಗ್ರಹಿಸಿಕೊಂಡು ಶಕ್ತಿಯ ಬಲಾಬಲಗಳನ್ನು ಅಂದಾಜು ಮಾಡಿ ಚೀನಿ ಕ್ರಾಂತಿಯ ಹಾದಿಯನ್ನು ರೂಪಿಸಲಾಯಿತು.

ಸಾಮ್ರಾಜ್ಯಶಾಹಿ ದೌರ್ಜನ್ಯಕ್ಕೆ ತಾನೂ ಕೂಡ ಬಲಿಪಶುವಾಗಿದ್ದ ಚೀನಿ ಬಂಡವಾಳ ಶಾಹಿಯ ರಾಷ್ಟ್ರೀಯ ಗುಂಪಿನ ಪಾತ್ರ ಅತ್ಯಂತ ನಿರ್ಣಾಯಕ ವಾಗಿತ್ತು. ೧೯೧೧ರಂತಹ ಕ್ರಾಂತಿಕಾರಿ ಹೋರಾಟದಲ್ಲಿ ಅದು ಪ್ರಧಾನ ಪಾತ್ರವಹಿಸಿತ್ತು ಅಥವಾ ನಾಯಕತ್ವ ನೀಡಿತ್ತು. ಆದರೆ ನಂತರದ ಕಾಲಾವಧಿಯಲ್ಲಿ ಕೌಮಿಂಟಾಂಗ್‌ನ ಮೇಲುಸ್ತರವು ಕೌಮಿಂಟಾಂಗ್ ನೊಳಗೇ ಇದ್ದುಕೊಂಡು ತನ್ನ ಸ್ವಾರ್ಥ ಸಾಧನೆಗಾಗಿ ಚೀನಿ ಜನತೆಯ ವಿರೋಧಿ ಗುಂಪಿಗೆ ಸಹಕಾರ ನೀಡುತ್ತಿತ್ತು. ಅದು ಸಾಮ್ರಾಜ್ಯಶಾಹಿ ಯೊಂದಿಗೆ ರಾಜಿಯಾಗಿ ಭೂಮಾಲೀಕ ವರ್ಗದೊಂದಿಗೆ ಪ್ರತಿಗಾಮಿ ಮೈತ್ರಿಯನ್ನು ರಚಿಸಿ ಅದಕ್ಕೆ ಸಹಾಯ ನೀಡಿದ್ದ ಸ್ನೇಹಿತರಾದ ಕಮ್ಯುನಿಸ್ಟ್ ಪಕ್ಷ, ಕಾರ್ಮಿಕ ವರ್ಗ, ರೈತಾಪಿ ಮತ್ತು ಇತರೆ ಪೆಟ್ಟ ಬೂಜವರ್ಗದ ಜನತೆಗೆ ವಿಶ್ವಾಸದ್ರೋಹವೆಸಗಿತು. ಬಂಡವಾಳ ಶಾಹಿಯ ಈ ಗುಣದಿಂದ ದೃಢಪಟ್ಟ ಅಂಶವೇನೆಂದರೆ ಕ್ರಾಂತಿಕಾರಿ ಶಕ್ತಿಗಳು ಉಕ್ಕಿನ ಶಕ್ತಿಯನ್ನು ಹೊಂದಿರದ ಹೊರತು ಶತ್ರು ಪ್ರದೇಶವನ್ನು ವಶಪಡಿಸಿಕೊಳ್ಳುವುದಿರಲಿ, ತಮ್ಮದೇ ನೆಲೆಗಳನ್ನು ರಕ್ಷಿಸೂ ಸಾಧ್ಯ ವಾಗದು. ಕ್ರಾಂತಿಯು ದೀರ್ಘಾವಧಿಯದಾಗಿರುತ್ತದೆ. ಚೀನಾದ ಕ್ರಾಂತಿಯನ್ನು ಕಣ್ಣು ಮಿಟುಕಿಸುವಷ್ಟರಲ್ಲಿ ಸಾಧಿಸಬಹುದೆನ್ನುವ ಅಥವಾ ರಾತ್ರೋರಾತ್ರಿ ಕ್ರಾಂತಿಕಾರಿ ಹೋರಾಟದಲ್ಲಿ ಗೆದ್ದುಬಿಡಬಹುದೆನ್ನುವ ಚಿಂತನೆ ತಪ್ಪು ಎಂದು ಮಾವೋ ಸ್ಪಷ್ಟವಾಗಿ ಅಂದಾಜು ಮಾಡಿದ್ದರು.

ಕೌಮಿಂಟಾಂಗ್-ಕಮ್ಯುನಿಸ್ಟ್ ಸಹಕಾರದ ಮೈತ್ರಿಯು ಆಚರಣೆಗೆ ಬಂದ ನಂತರ ನಡೆದ ಕೌಮಿಂಟಾಂಗ್‌ನ ಮಹಾಧಿವೇಶಗಳಲ್ಲಿ ಮಾವೋ ಅವರು ಅವರ ಕೇಂದ್ರ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು. ರೈತಾಪಿಯ ನಡುವಿನ ವರ್ಗಸಂಘರ್ಷದ ತೀವ್ರತೆಯ ಕುರಿತು ಅಷ್ಟಾಗಿ ಗ್ರಹಿಸದಿದ್ದ ಮಾವೋ ೧೯೨೫ರ ಮೇ ೩೦ರಂದು ನಡೆದ ರೈತಾಪಿಯ ಸಮರಶೀಲತೆಯನ್ನು ಕಂಡು ಅವರ ಶಕ್ತಿಯ ಬಲಾಬಲವನ್ನು ಅರಿತುಕೊಂಡರು. ಕೆಲವೇ ತಿಂಗಳುಗಳಲ್ಲಿ ೨೦ಕ್ಕೂ ಹೆಚ್ಚು ರೈತ ಸಂಘಟನೆಗಳನ್ನು ರಚಿಸಿ ಭೂಮಾಲೀಕರ ಕೆಂಗಣ್ಣಿಗೆ ಗುರಿಯಾದರು. ಕಮ್ಯುನಿಸ್ಟ್ ಪಕ್ಷದ ರೈತಾಪಿ ಸಂಗಘಟನೆಯಲ್ಲಿ ವಿಶೇಷ ಜವಾಬ್ದಾರಿಗಳನ್ನು ವಹಿಸಿಕೊಂಡು ಮಾವೋ ಸಂಘಟನೆಯನ್ನು ಇನ್ನಷ್ಟು ವಿಸ್ತರಿಸ ತೊಡಗಿದರು. ಅವರು ತಮ್ಮ ಅದುವರೆಗಿನ ಅಧ್ಯಯನ ಮತ್ತು ಹ್ಯೂನಾನ್ ಪ್ರಾಂತ್ಯದ ರೈತಾಪಿ ಸಂಘಟನಾ ಅನುಭವದ ಆಧಾರದ ಮೇಲೆ ‘ಚೀನಾ ಸಮಾಜದ ವಿವಿಧ ವರ್ಗಗಳ ವಿಶ್ಲೇಷಣೆ’ ಎಂಬ ಕೃತಿಯನ್ನು ರಚಿಸಿದರು. ಕಮ್ಯುನಿಸ್ಟ್ ಪಕ್ಷದ ನಾಯಕತ್ವದಲ್ಲಿ ವೈಚಾರಿಕವಾದ ಭೂಮಿ ನೀತಿ ಮತ್ತು ರೈತಾಪಿಯ ಸಂಘಟನೆಯೆಡೆಗೆ ಒತ್ತು ನೀಡ ಬೇಕೆಂದು ಮಾವೋ ಅವರು ಪ್ರತಿಪಾದಿಸುತ್ತಿದ್ದ ಪ್ರಬಂಧವನ್ನು ಕಮ್ಯುನಿಸ್ಟ್ ಪಕ್ಷದ ಅಂದಿನ ನಾಯಕರು ತಿರಸ್ಕರಿಸಿದರು. ಅಂತೆಯೇ ಅದನ್ನು ಕಮ್ಯುನಿಸ್ಟ್ ಕೇಂದ್ರೀಯ ಮುಖವಾಣಿಗಳಲ್ಲಿ ಪ್ರಕಟಿಸಲು ಅವರು ನಿರಾಕರಿಸಿದರು.

ಕೌಮಿಂಟಾಂಗ್‌ನ ಕೇಂದ್ರೀಯ ಪ್ರಕ್ಷೋಭೆ ಇಲಾಖೆಯ ಮುಖ್ಯಸ್ಥರಾಗಿ ಅವರು ಕಾರ್ಯನಿರ್ವಹಿಸುತ್ತಲೇ ‘ರಾಜಕೀಯ ಸಾಪ್ತಾಹಿಕ’ದ ಸಂಪಾದಕರಾಗಿ ರೈತ ಚಳುವಳಿಗೆ ನಿರ್ದೇಶನ ನೀಡುತ್ತಿದ್ದರು. ೧೯೨೬ರಲ್ಲಿ ರೈತ ಚಳವಳಿಯ ಕಾರ್ಯದರ್ಶಿಯಾಗಿ ಮಾವೋ ಅವರನ್ನು ನೇಮಕಗೊಳಿಸಲಾಯಿತು. ೧೯೨೫ ಮತ್ತು ೧೯೨೭ರ ನಡುವೆ ಅವರ ‘ಜಹೋ ಹೆಂಗ್ವಿಯ ವರ್ಗ ತಳಪಾಯ ಮತ್ತು ತಮ್ಮ ಮುಂದಿರುವ ಸವಾಲುಗಳು’ ಮತ್ತು ‘ಹ್ಯೂನಾನ್ ನಲ್ಲಿನ ರೈತ ಚಳವಳಿಯ ಪರಿಶೋಧನಾ ವರದಿ’ ಎಂಬ ಕೃತಿಗಳು ಪ್ರಕಟವಾದವು. ಈ ಕೃತಿಗಳು ಚೀನಾದ ಕ್ರಾಂತಿಗೆ ಸಂಬಂಧಿಸಿದಂತೆ ಮೂಲಭೂತ ಸಮಸ್ಯೆಗಳನ್ನು ವಿವರಿಸುವುದರೊಂದಿಗೆ ಚೀನದಲ್ಲಿ ಹೊಸ ಪ್ರಜಸತ್ತಾತ್ಮಕ ಕ್ರಾಂತಿಯ ಕುರಿತಂತೆ ಮಾವೋ ಅವರ ಮೂಲ ವಿಚಾರಗಳನ್ನು ಪ್ರಚುರಪಡಿಸುತ್ತವೆ. ಚೀನಾ ಕ್ರಾಂತಿಯಲ್ಲಿ ರೈತಾಪಿ ಸಮಸ್ಯೆಯ ಪ್ರಮುಖ ಪಾತ್ರ ಮತ್ತು ರೈತಾಪಿ ಚಳವಳಿಯಲ್ಲಿ ಕಾರ್ಮಿಕ ವರ್ಗದ ನಾಯಕತ್ವದ ಮಹತ್ವವನ್ನು ಈ ಕೃತಿಗಳಲ್ಲಿ ಮಾವೋ ಒತ್ತಿ ಹೇಳಿದ್ದಾರೆ.

ಕೌಮಿಂಟಾಂಗ್ ನಿಯಂತ್ರಣದಲ್ಲಿದ್ದ ಪ್ರದೇಶಗಳಲ್ಲಿನ ಜೀವನ ಮತ್ತು ಪ್ರತಿಕ್ರಾಂತಿ

ಡಾ. ಸನ್‌ಯಾತ್ ಸೆನ್ ಅವರ ಮರಣಾನಂತರ ಕೌಮಿಂಟಾಂಗ್ ಮತ್ತು ಕಮ್ಯುನಿಸ್ಟರ ನಡುವಿನ ಮೈತ್ರಿಯು ಸಹ ೧೯೨೭ರ ಕೊನೆಯ ಹೊತ್ತಿಗೆ ಅಂತ್ಯ ಕಂಡಿತು. ಕೌಮಿಂಟಾಂಗ್ ನೊಂದಿಗೆ ಕಮ್ಯುನಿಸ್ಟ್ ಪಕ್ಷದ ಪ್ರಮುಖ ನಾಯಕ ಚೆನ್ ಡುಕ್ಸಿಯ ಅವರು ಮಾಡಿಕೊಂಡ ರಾಜಿಗಳು ಮತ್ತು ಅವರಿಗೆ ನೀಡಿದ ವಿನಾಯಿತಿಗಳನ್ನು ಮಾವೋ ಟೀಕಿಸಿದರು. ಅವರ ಅವಕಾಶವಾದಿತನದ ನೀತಿಯನ್ನು ವಿರೋಧಿಸತೊಡಗಿದ ಮಾವೋ ಅವರೊಂದಿಗಿನ ಸಂಪರ್ಕವನ್ನು ಅಂತಿಮವಾಗಿ ೧೯೨೭ರಲ್ಲಿ ಸಂಪೂರ್ಣವಾಗಿ ಕಡಿದುಕೊಂಡರು.

ಕಮ್ಯುನಿಸ್ಟರು ಒತ್ತಾಯಿಸುತ್ತಿದ್ದ ಪ್ರಜಸತ್ತಾತ್ಮಕ ಸುಧಾರಣೆಗಳನ್ನು ಜರಿಗೆ ತರುವ ಬದಲು ಚಿಯಾಂಗ್ ಕೈ ಶೆಕ್ ಆಳ್ವಿಕೆಯಡಿಯಲ್ಲಿ ರಾಷ್ಟ್ರೀಯ ಸರ್ಕಾರವು ಸರ್ವಾಧಿಕಾರಿ ಧೋರಣೆ ತಳೆಯಿತು. ಅಧಿಕಾರವು ವಾಸ್ತವವಾಗಿ ಚಿಯಾಂಗ್ ಕೈ-ಶೆಕ್ ನಾಯಕತ್ವದಲ್ಲಿದ  ‘‘ನಾಲ್ಕು ದೊಡ್ಡ ಕುಟುಂಬಗಳ’’ ಟಿ.ವಿ.ಸೂಂಗ್, ಹೆಚ್.ಹೆಚ್.ಕುಂಗ್(ಇಬ್ಬರೂ ಚಿಯಾಂಗ್ ಅವರ ಷಡ್ಡಕರು) ಮತ್ತು ಚೆನ್ ಸಹೋದರರು ಮತ್ತು ರಾಜಕೀಯ ಪುಢಾರಿಗಳು ಇವರ ಕೈಯಲ್ಲಿತ್ತು. ಯುದ್ಧ ಸಮಯದಲ್ಲಿ ಆರ್ಥಿಕ ಸಂಕಷ್ಟದಲ್ಲಿ ಸರ್ಕಾರವು ಹೆಚ್ಚೆಚ್ಚು ಕಾಗದ ಹಣವನ್ನು ಮುದ್ರಿಸಿ ಹಣದುಬ್ಬರಕ್ಕೆ ಕಾರಣವಾಯಿತು. ೮ ವರ್ಷಗಳ ಜಪಾನ್ ವಿರೋಧಿ ಯುದ್ಧ ಸಮಯದಲ್ಲಿ ಕಾಗದದ ಹಣವು ೫೦೦ ಪಟ್ಟು ಹೆಚ್ಚಿದರೆ, ಸರಕುಗಳ ಬೆಲೆಯು ೨,೫೦೦ ಪಟ್ಟು ಹೆಚ್ಚಿತು. ಸಾಮಾನ್ಯ ಜನಕ್ಕೆ ಇದು ಬಡತನದ ಮೃತ್ಯುಕೂಪವನ್ನು ತಂದರೆ, ಹೆಚ್ಚಿನ ಹಣದುಬ್ಬರವು ನಾಲ್ಕು ದೊಡ್ಡ ಕುಟುಂಬಗಳ ನೇತೃತ್ವದಲ್ಲಿದ್ದ ದೊಡ್ಡ ಬಂಡಾವಾಳಶಾಹಿಗಳಿಗೆ ಅಗಾಧವಾದ ಲಾಭ ತಂದಿತು. ಅಮೆರಿಕಾದ ಬ್ಯಾಂಕುಗಳಲ್ಲಿ ಬೃಹತ್ ಮೊತ್ತದೆ ಠೇವಣಿಗಳನ್ನು ತೊಡಗಿಸಿದ್ದ ಹೆಚ್. ಹೆಚ್. ಕುಂಗ್ ಚೀನಾದ ಅತಿ ದೊಡ್ಡ ಶ್ರೀಮಂತನಾದನು.

ಈ ನಾಲ್ಕು ಕುಟುಂಬಗಳು ಸಾರ್ವಜನಿಕ ಬ್ಯಾಂಕುಗಳ ಮೂಲಕ ಚೀನಾದ ಕರೆನ್ಸಿ ಯನ್ನು ನಿಯಂತ್ರಿಸುವುದರ ಜೊತೆಗೆ ಚೀನಾದ ಬಹುತೇಕ ಎಲ್ಲ ಕೈಗಾರಿಕ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಏಕಸ್ವಾಮ್ಯವನ್ನು ಸಾಧಿಸಿದವು. ಒಂದೆಡೆ ಹತ್ತಿ, ಟೀ, ಹೊಗೆಸೊಪ್ಪು, ಎಣ್ಣೆಗಳಂತಹ ಸರಕುಗಳಿಗೆ ತೀರಾ ಕಡಿಮೆ ಬೆಲೆ ನೀಡಿ ರೈತರಿಂದ ದೋಚುತ್ತಾ ಮತ್ತೊಂದೆಡೆ ಉಪ್ಪು, ಸಕ್ಕರೆ, ಸೋಪು ಮತ್ತು ಬೆಂಕಿಪೊಟ್ಟಣಗಳಂತಹ ದೈನಂದಿನ ಅತ್ಯವಶ್ಯ ವಸ್ತುಗಳಿಗೆ ಅಗಾಧ ಬೆಲೆ ವಿಧಿಸಿ ಗ್ರಾಹಕರನ್ನು ಸುಲಿಗೆ ಮಾಡುತ್ತಿದ್ದವು. ರಫ್ತು ಕ್ಷೇತ್ರದಲ್ಲಿ ಸಂಪೂರ್ಣ ಹಿಡಿತ ಹೊಂದಿದ್ದರೆ ಚೀನಾದ ಶೇ.೭೦ರಷ್ಟು ಬಂಡವಾಳ ಹೂಡಿಕೆಗಳ ಮೇಲೆ ಅವು ನಿಯಂತ್ರಣ ಹೊಂದಿದ್ದವು. ಆಸ್ತಿ ಮತ್ತು ಸಂಪತ್ತಿನ ಅತಿಯಾಸೆಯಿಂದಾಗಿ ಸಂಪತ್ತಿನ ಕೇಂದ್ರೀಕರಣಗೊಂಡು ಶ್ರೀಮಂತರು, ಜೀವನಾಧಾರಕ್ಕಾಗಿ ಸಣ್ಣ ರೈತಾಪಿಯು ಹೊಂದಿದ್ದ ಜಮೀನನ್ನು ಕಡಿಮೆ ಬೆಲೆಗೆ ಕೊಂಡುಕೊಳ್ಳುತ್ತಿದ್ದರು.

ಡಾ. ಸೆನ್‌ಯಾತ್ ಸೆನ್ ಅವರು ರಚಿಸಿದ್ದ ಸಾಮ್ರಾಜ್ಯಶಾಹಿ ವಿರೋಧಿ ಮತ್ತು ಪಾಳೇಗಾರಿ ವಿರೋಧಿ ಕೌಮಿಂಟಾಂಗ್ ಕಮ್ಯುನಿಸ್ಟ್ ಮೈತ್ರಿಗೆ ಕೌಮಿಂಟಾಂಗ್‌ನ ಬಲಪಂಥೀ ಯರನ್ನು ನಿಯಂತ್ರಿಸುತ್ತಿದ್ದ ಚಿಯಾಂಗ್ ಕೈ ಶೆಕ್ ಮತ್ತು ವಾಗ್ ಜಿಂಗ್ವೆ ವಿಶ್ವಾಸ ದ್ರೋಹ ವೆಸಗಿದರು. ಕೌಮಿಂಟಾಂಗ್- ಕಮ್ಯುನಿಸ್ಟ್ ಸಹಕಾರವನ್ನು ಸಂಪೂರ್ಣವಾಗಿ ಪುಡಿಗಟ್ಟಲು ಸತತವಾದ ದಾಳಿಗಳನ್ನು ನಡೆಸಿದರು. ಎಲ್ಲೆಡೆ ವಿದ್ಯಾರ್ಥಿಗಳು ಮತ್ತು ಪ್ರಗತಿಪರರ ಬಂಧನಕ್ಕಾಗಿ ಬೇಹುಗಾರರು ಶೋಧನೆ ನಡೆಸುತ್ತಿದ್ದರು. ಸರ್ಕಾರವು ಶಿಕ್ಷಾ ಶಿಬಿರಗಳನ್ನು ದೊಡ್ಡ ದೊಡ್ಡ ನಗರಗಳಲ್ಲಿ ಸ್ಥಾಪಿಸಿತ್ತು.

ಕ್ಷಾಮ ಪರಿಹಾರ ಆಯೋಗದ ಅಂಕಿ-ಅಂಶದ ಪ್ರಕಾರವೇ, ಇನ್ನೊಂದೆಡೆ ಶತಮಾನದಲ್ಲೇ ಕಂಡರಿಯದ ಭೀಕರ ಬರಗಾಲ ಸ್ಜೆಚುವಾನ್ ಪ್ರಾಂತ್ಯದ ಸುಮಾರು ೬೦ ಜಿಲ್ಲೆಗಳಲ್ಲಿ ೩೦ ಕೋಟಿ ಜನರಿಗೆ ಸಾವಿನ ದೇವತೆಯಾಗಿ ಎರಗಿ ಬಂತು. ಜನರು ಹಸಿವಿನಿಂದ ಕಂಗಾಲಾಗಿ ಮಣ್ಣಿನ ಉಂಡೆ ಮತ್ತು ಹುಲ್ಲುಗಳನ್ನು ತಿನ್ನುತ್ತಿದ್ದರು. ಇದರಿಂದಾಗಿ ಸಾವಿನ ಸಂಖ್ಯೆ ಗಣನೀಯವಾಗಿ ಮತ್ತುಷ್ಟು ಏರುತ್ತಿತ್ತು. ಶೆನ್ಸಿಯ್ಲಿ ೪.೦ ಲಕ್ಷ ನಿರಾಶ್ರಿತರು, ಕಾನ್ಸುವಿನಲ್ಲಿ ೧೦ ಲಕ್ಷ, ಹ್ಯೂನಾನ್‌ನಲ್ಲಿ ೭ ಲಕ್ಷ ಮತ್ತು ಕ್ವಾಚೋವಿನಲ್ಲಿ ೭೦ ಲಕ್ಷ ಜನರು ನಿರಾಶ್ರಿತರಾಗಿ ಹಪಹಪಿಸತೊಡಗಿದ್ದರು. ಅತ್ಯಾಶ್ಚರ್ಯವೆಂದರೆ ಶ್ರೀಮಂತರು ಸಂಪತ್ತಿನ ಸುಖಲೋಲುಪತೆಯಲ್ಲಿ ಮುಳುಗಿಹೋಗಿದ್ದರು. ರೈತರ ಭೂಮಿ, ಪಶು, ಮನೆ ಎಲ್ಲವೂ ತಮ್ಮ ಬೆಲೆ ಕಲೆದುಕೊಂಡಿದ್ದವು. ಬರೇ ೨೫ ಡಾಲರ್‌ಗೆ ಒಂದು ಬೆಟ್ಟವನ್ನೇ ಕೊಂಡುಕೊಳ್ಳಬಹುದೆಂದು ಹೇಳುವ ಅಲ್ಲಿನ ರೈತನ ಮಾತು ಸತ್ಯವಾಗಿತ್ತು. ಆದರೆ ತೆರಿಗೆಯಾಗಿ ೪೦ ಡಾಲರನ್ನು ಅಂತಹ ಬೆಟ್ಟದಲ್ಲಿ ಜಮೀನು ಮಾಡುತ್ತಿದ್ದ ರೈತರಿಗೆ ವಿಧಿಸಲಾಗುತ್ತಿತ್ತು.

ಕೆಂಪು ಸೇನೆಗೆ ಸಹಾಯ ಮಾಡುತ್ತಿದ್ದ ಪ್ರದೇಶಗಳಲ್ಲಿ ಕೌಮಿಂಟಾಂಗ್ ಸೇನೆಯು ಸಾವಿರಾರು ಮಕ್ಕಳನ್ನು ಸೆರೆಮನೆಗೋ ನಗರ ಪ್ರದೇಶಗಳಿಗೋ ದೂಡಿ ಅವರನ್ನು ಅಪ್ರೆಂಡೀಸ್ ಗಳೆಂದು ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು. ಸಾವಿರಾರು ಯುವತಿಯರನ್ನು ಮತ್ತು ಹೆಂಗಸರನ್ನು ಅಪಹರಿಸಿ ಗುಲಾಮಗಿರಿಗಾಗಿ ಮತ್ತು ವೇಶ್ಯವಾಟಿಕೆಗಾಗಿ ಫ್ಯಾಕ್ಟರಿ ಗಳಿಗೆ ಮಾರಾಟ ಮಾಡುತ್ತಿತ್ತು. ಕೌಮಿಂಟಾಂಗ್ ಅಧಿಕಾರಿಗಳು ಮಕ್ಕಳು ಮತ್ತು ಹೆಂಗಸ ರನ್ನು ಅತ್ಯಾಚಾರ ನಡೆಸಿದ ನಂತರ ಹೊಯ್ದು ಮಧ್ಯವರ್ತಿಗಳಿಗೆ ಮಾರುತ್ತಿದ್ದರು. ಅನೇಕ ವೇಳೆ ಮಹಿಳೆಯರು ಮತ್ತು ಯುವತಿಯರನ್ನು ಯಾರು ಇಟ್ಟುಕೊಳ್ಳಬೇಕೆಂಬ ವಿಷಯದ ಮೇಲೆ ಕೌಮಿಂಟಾಂಗ್ ಅಧಿಕಾರಿಗಳ ನಡುವೆ ಜಗಳಗಳಾಗುತ್ತಿದ್ದವು.

ಕೌಮಿಂಟಾಂಗ್ ಸೇನೆಯು ಜಪಾನಿ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡದೆ ಇದ್ದುದರ ಫಲವಾಗಿ ಜಪಾನಿ ದಾಳಿಕೋರರಿಗೆ ಚೀನಾದ ಐದನೇ ಒಂದರಷ್ಟು ಭೂಭಾಗ ವನ್ನು ಶೇ.೪೦ರಷ್ಟು ರೈಲ್ವೆ ಮಾರ್ಗವನ್ನು, ಕಲ್ಲಿದ್ದಲು, ಶೇ.೮೦ರಷ್ಟು ಕಬ್ಬಿಣದ ಅದಿರು, ಶೇ.೩೭ರಷ್ಟು ಅರಣ್ಯ ಮತ್ತು ಶೇ.೪೦ರಷ್ಟು ರಾಷ್ಟ್ರೀಯ ರಫ್ತನ್ನು ಬಿಟ್ಟುಕೊಡಬೇಕಾಯಿತು. ಆದರೆ ಕೌಮಿಂಟಾಂಗ್ ವಿದೇಶಿ ಸಾಮ್ರಾಜ್ಯಶಾಹಿಗಳೊಂದಿಗೆ ಶಾಮೀಲಾಗಿ ಕಮ್ಯುನಿಸ್ಟರ ವಿರುದ್ದ ಕತ್ತಿ ಮಸೆಯುತ್ತ ತನ್ನೆಲ್ಲ ಯುದ್ಧಸಾಮಗ್ರಿ ಮತ್ತು ಸಂಪನ್ಮೂಲಗಳನ್ನು ವ್ಯಯ ಮಾಡುತ್ತಿದ್ದಿತು.

ಸಾಮ್ರಾಜ್ಯಶಾಹಿ, ಭೂಮಾಲೀಕರು ಮತ್ತು ಮಿಲಿಟರಿ ಯುದ್ಧಗಳು ಒಗ್ಗೂಡಿ ಗ್ರಾಮೀಣ ಆರ್ಥಿಕತೆಯ ಮೂಲಾಧಾರವನ್ನೇ ದ್ವಂಸಗೊಳಿಸಿ ಆರ್ಥಿಕ ದಿವಾಳಿಯನ್ನುಂಟು ಮಾಡಿದವು. ಮತ್ತು ಈ ಮೂರು ಪ್ರಧಾನ ಶತ್ರುಗಳನ್ನು ಸದೆಬಡಿಯದೆ ಚೀನಾವನ್ನು ಸರಿಪಡಿಸಲು ಸಾಧ್ಯವಿರಲಿಲ್ಲ.

೧೯೨೭ರಲ್ಲಿ ಕಮ್ಯುನಿಸ್ಟರ ಕ್ರಾಂತಿಯನ್ನು ಚಿವುಟಿ ಹಾಕಲು ದಾಳಿಯನ್ನಾರಂಭಿಸಿ, ಚಿಯಾಂಗ್ ಕೈ ಶೆಕ್ ಅವರ ನಾಯಕತ್ವದಡಿಯಲ್ಲಿ ಸಂಘಟಿತ ಕಾರ್ಮಿಕರ ಸಾಮೂಹಿಕ ಕಗ್ಗೊಲೆ ಮಾಡಲಾಯಿತು. ರೈತರು ಮತ್ತು ಕಾರ್ಮಿಕರು ಬಂಡಾಯವೆದ್ದಾಗ ಸಾವಿರಾರು ರೈತರು ಮತ್ತು ಕಾರ್ಮಿಕರನ್ನು ಪ್ರತಿಗಾಮಿಗಳು ಕೊಂದು ಹಾಕಿದರು. ಕೆಲವೇ ಸಮಯ ದಲ್ಲಿ ಕೌಮಿಂಟಾಂಗ್ ತಾನು ಕಮ್ಯುನಿಸ್ಟರೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಅಂತ್ಯಗೊಳಿಸಿ ಅವರನ್ನು ಸರ್ಕಾರದಿಂದ ಕಿತ್ತೆಸೆಯಿತು. ಈಗ ಕಮ್ಯುನಿಸ್ಟರನ್ನು ಮತ್ತು ಅವರ ಹಿತೈಷಿಗಳನ್ನು ಹುಡುಕಾಡಿ ಕೊಲ್ಲಲಾಯಿತು. ಕಮ್ಯುನಿಸ್ಟರಾಗಿರುವುದು ಮರಣಾರ್ಹ ಅಪರಾಧವಾಗಿತ್ತು ಮತ್ತು ಸಾವಿರಾರು ಸಂಖ್ಯೆಯಲ್ಲಿ ಅದಕ್ಕೆ ದಂಡ ತೆತ್ತರು. ಹಾಗಿದ್ದರೂ, ಕೌಮಿಂಟಾಂಗ್‌ನ ಮಿಲಿಟರಿ ಸರ್ವಾಧಿಕಾರವನ್ನು ಕಿತ್ತೊಗೆಯಲು ಲಕ್ಷಾಂತರ ಸಂಖ್ಯೆಯಲ್ಲಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಸೈನಿಕರು ಸಶಸ್ತ್ರ ಹೋರಾಟ ನಡೆಸಲು ಕೆಂಪು ಸೇನೆಯನ್ನು ಸೇರಿದರು. ರಾಷ್ಟ್ರಪ್ರೇಮಿ ವಿದ್ಯಾರ್ಥಿಗಳು ಸೆರೆಮನೆಗೆ ತಳ್ಳಲ್ಪಡುವುದನ್ನೂ ಲೆಕ್ಕಿಸದೆ, ಸಾವುನೋವುಗಳನ್ನೂ ಬದಿಗಿರಿಸಿ ‘ನಾಗರಿಕ ಯುದ್ಧವನ್ನು ನಿಲ್ಲಿಸಿ ಕಮ್ಯುನಿಸ್ಟ ರೊಂದಿಗೆ ಸೇರಿ ಜಪಾನನ್ನು ಹಿಮ್ಮೆಟ್ಟಿಸಿ! ಚೀನಾ ಉಳಿಸಿ!’ ಎಂಬ ಘೋಷಣೆಗಳೊಂದಿಗೆ ಬೀದಿಗಿಳಿದು ಚಿಯಾಂಗ್ ಕೈ ಶೆಕ್ ನಾಯಕತ್ವದ ಕೌಮಿಂಟಾಂಗ್ ಸೇನೆಯನ್ನು ಗಂಭೀರ ವಾಗಿ ವಿರೋಧಿಸಲಾರಂಭಿಸಿದರು.

ಕಮ್ಯುನಿಸ್ಟ್ ಪಕ್ಷದ ಕ್ಷಿಪ್ರ ಪಡೆಗಳು

ಇದರಿಂದ ದಿಢೀರನೆ ಕಮ್ಯುನಿಸ್ಟ್ ಪಕ್ಷದ ತುರ್ತು ಸಭೆ ಕರೆಯಲಾಯಿತು. ಚೆನ್ ಡುಕ್ಸಿಯರನ್ನು ನಾಯಕತ್ವದಿಂದ ಕಿತ್ತು ಹಾಕಲಾಯಿತು. ರಾಜಕೀಯ ಅಧಿಕಾರವನ್ನು ಪಡೆಯುವುದು ಕ್ರಾಂತಿಕಾರಿ ಸಶಸ್ತ್ರ ಬಲದಿಂದ ಮಾತ್ರವೇ ಸಾಧ್ಯವೆಂದು ಮಾವೋ ಈ ಸಭೆಯಲ್ಲಿ ಪ್ರತಿಪಾದಿಸಿದರು. ಕೇಂದ್ರೀಯ ಸಮಿತಿಯ ಕ್ರಾಂತಿಕಾರಿ ಸೇನೆಯ ಸಂಘಟನೆಯನ್ನು ವಿರೋಧಿಸುತ್ತಿದ್ದರೂ ಮಾವೋ ಅವರ ಅಗತ್ಯತೆಯನ್ನು ಒತ್ತಿ ಹೇಳುತ್ತಾ ಅದರ ಪ್ರಮುಖ್ಯತೆಯನ್ನು ಮನವರಿಕೆ ಮಾಡಿಕೊಟ್ಟರು. ಅದರಂತೆ, ಸಶಸ್ತ್ರ ಕ್ರಾಂತಿಕಾರಿ ಸೇನೆ ಯನ್ನು ಸಜ್ಜುಗೊಳಿಸಿ ಕೌಮಿಂಟಾಂಗ್‌ನ ದಾಳಿಯನ್ನು ಸಮರ್ಥವಾಗಿ ಎದುರಿಸ ಬೇಕೆಂದು ತೀರ್ಮಾನಿಸಲಾಯಿತು. ಮಾವೋ ಅವರನ್ನು ಪಾಲಿಟ್ ಬ್ಯೂರೋ ಸದಸ್ಯರಾಗಿ ಚುನಾಯಿಸಲಾಯಿತು.

ರೈತ ಕಾರ್ಮಿಕರ ಚಳುವಳಿಯನ್ನು ಸಂಘಟಿಸಿ ಐದು ಅಂಶಗಳ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಮಾವೋ ಅವರನ್ನು ಛಾಂಗ್ಸಾ ಪ್ರಾಂತ್ಯಕ್ಕೆ ಕಳುಹಿಸಲಾಯಿತು.

೧. ಕೌಮಿಂಟಾಂಗ್ ನಿಂದ ಆ ಪ್ರಾಂತ್ಯದಲ್ಲಿ ಪಕ್ಷವನ್ನು ಸಂಪೂರ್ಣ ಬೇರ್ಪಡಿಸುವುದು.

೨. ರೈತ ಕಾರ್ಮಿಕರ ಕ್ರಾಂತಿಕಾರಿ ಸೇನಾ ಸಂಘಟನಾ ಕಾರ್ಯ.

೩. ದೊಡ್ಡ ಭುಮಾಲೀಕರ ಆಸ್ತಿಯನ್ನು ಕಿತ್ತುಕೊಳ್ಳುವುದು.

೪. ಹ್ಯೂನಾನ್ ಪ್ರಾಂತ್ಯದಲ್ಲಿ ಕೌಮಿಂಟಾಂಗ್ ಹೊರತುಪಡಿಸಿದ ಸ್ವತಂತ್ರ ಕಮ್ಯುನಿಸ್ಟ್ ಪಕ್ಷದ ಅಧಿಕಾರ ಜರಿ ತರುವುದು.

೫. ಕ್ರಾಂತಿಕಾರಿಗಳ ಸಂಘಟನೆ

ಬೆಳೆ ಕೊಯ್ಲಿನ ಸಮಯದಲ್ಲಿ ನಡೆದ ಈ ಬಂಡಾಯಕ್ಕೆ ನಾಯಕತ್ವ ನೀಡಿದ ಮಾವೋ, ಅಲ್ಲಿ ರೈತಾಪಿ ಕ್ರಾಂತಿಯನ್ನು ನಡೆಸಿ ಚೀನಾದ ಪ್ರಥಮ ಗ್ರಾಮೀಣ ಕ್ರಾಂತಿಕಾರಿ ನೆಲೆಯನ್ನು ಸ್ಥಾಪಿಸಿದರು.

ಮಾವೋ ಅವರ ಮೇಲೆ ದಾಳಿ

ಹೀಗೊಮ್ಮೆ ಅವರು ಗಣಿ ಕಾರ್ಮಿಕರು ಮತ್ತು ರೈತ ಕಾವಲುಗಾರರ ನಡುವೆ ಓಡಾಡುತ್ತಾ ಸೇನೆಯನ್ನು ಸಂಘಟಿಸುತ್ತಿದ್ದಾಗ ಕೌಮಿಂಟಾಂಗ್‌ನ ಸೈನಿಕರು ಅವರನ್ನು ಸೆರೆ ಹಿಡಿದರು. ಕೌಮಿಂಟಾಂಗ್‌ನ ಭಯೋತ್ಪಾದನೆಯು ಅ ಸಂದರ್ಭದಲ್ಲಿ ಉತ್ತುಂಗ ಕ್ಕೇರಿದ್ದು ಕೆಂಪು ಸೇನೆಯನ್ನು ಕಂಡಲ್ಲಿ ಗುಂಡಿಕ್ಕಲಾಗುತ್ತಿತ್ತು. ಮಾವೋ ಅವರನ್ನು ಕೊಲ್ಲುವ ಸಲುವಾಗಿ ಕೇಂದ್ರ ಸ್ಥಾನಕ್ಕೆ ಕರೆದೊಯ್ಯಲು ಆದೇಶ ನೀಡಲಾಯಿತು. ಆದರೆ ಕಾಮ್ರೇಡ್ ಒಬ್ಬರಿಂದ ಕೆಲವು ಡಾಲರ್ ಹಣ ಪಡೆದು ಅದನ್ನು ಕೌಮಿಂಟಾಂಗ್ ಸೈನಿಕರಿಗೆ ಲಂಚವಾಗಿ ನೀಡಿ ಪಾರಾಗಲೆತ್ನಿಸಿದರೂ ಅದರ ಮುಖ್ಯಸ್ಥ ಇವರನ್ನು ಬಿಡುಗಡೆ ಮಾಡಲು ಒಪ್ಪದ ಕಾರಣ ಅಲ್ಲಿಂದ ಹೇಗಾದರು ತಪ್ಪಿಸಿಕೊಳ್ಳಲು ಸಂಚು ನಡೆಸಿದರು.

ಕೊಳವೊಂದರ ಹಿಂದೆ ಬೆಳೆದು ನಿಂತಿದ್ದ ಹುಲ್ಲಿನ ಪೊದೆಯ ಮರೆಯಲ್ಲಿ ಅಡಗಿ ಕುಳಿತ ಮಾವೋ, ಹಲವು ಬಾರಿ ತಮ್ಮನ್ನು ಹುಡುಕಿ ಬಂದ ಸೈನಿಕರ ಕೈಗೆ ಇನ್ನೇನು ಸಿಕ್ಕಿಬೀಳುವುದರಲ್ಲಿದ್ದರು. ಕೊನೆಗೆ ಹೇಗೋ ಅಲ್ಲಿಂದ ದೌಡಾಯಿಸಿ ಗುಡ್ಡ ಕಾಡು ಮೇಡುಗಳಲ್ಲೆಲ್ಲ ಅಲೆದು ಬಟ್ಟೆ, ಆಹಾರ, ನೀರುಗಳಿಲ್ಲದೆ ಹಸಿವಿನಿಂದ ಬಸವಳಿದು ಕೊನೆಗೂ ತಮ್ಮ ಶಿಬಿರ ಸೇರುವಲ್ಲಿ ಯಶಸ್ವಿಯಾದರು.

ಕೆಂಪು ಸೇನೆಯ ವೀರೋಚಿತ ಹೋರಾಟಗಳು

೧೯೨೮ ಏಪ್ರಿಲ್‌ನಲ್ಲಿ ಜು ಡೆ ಅವರ ನಾಯಕತ್ವದ ಸೇನೆಯೊಂದಿಗೆ ಮಾವೋ ಅವರ ಸೇನೆಯನ್ನು ಸೇರಿಸಿ ಕಮ್ಯುನಿಸ್ಟ್ ಪಕ್ಷದ ಪ್ರತಿನಿಧಿ ಮತ್ತು ಕಾರ್ಯದರ್ಶಿಯಾಗಿ ಮಾವೋ ಅವರನ್ನು ಹಾಗೂ ಸೇನಾ ದಂಡನಾಯಕರಾಗಿ ಜು ಡೆ ಅವರನ್ನು ಆಯ್ಕೆ ಮಾಡಿ ಕಾರ್ಮಿಕರು ಮತ್ತ ರೈತರ ಕ್ರಾಂತಿಕಾರಿ ಸೇನೆಯನ್ನು(ಇದನ್ನು ಚೀನಾದ ಕಾರ್ಮಿಕರ ಮತ್ತು ರೈತಾಪಿಯ ಕೆಂಪು ಸೇನೆಯೆಂದು ನಂತರ ಹೆಸರಿಸಲಾಯಿತು) ರಚಿಸಿಲಾಯಿತು. ೩೦ ಮೈಲು ದೂರದವರೆಗೂ ಕಣ್ಣಾಡಿಸಿ ನೋಡಬಲ್ಲ, ಗಾಳಿಯಲ್ಲಿ ಹಾರಬಲ್ಲ, ಟಾವೋ ಮಂತ್ರವನ್ನು ಕರಗತ ಮಾಡಿಕೊಂಡಿರುವ, ಶತ್ರು ಸೇನೆಯ ಮೇಲೆ ಮೋಡದ ಮಳೆಗರೆಯಬಲ್ಲ ಅಥವಾ ಗಾಳಿಯ ದಿಕ್ಕನ್ನೇ ಅವರ ವಿರುದ್ಧ ತಿರುಗಿಸಬಲ್ಲ ಪವಾಡಸದೃಶ ಶಕ್ತಿಗಳನ್ನು ಜು ಡೆಯವರು ಹೊಂದಿದ್ದಾರೆಂದು ಚೀನಾದ ಜನತೆ ಅವರ ಶಕ್ತಿಯ ಬಗ್ಗೆ ಹೆಮ್ಮೆ ಪಡುತ್ತಿದ್ದರು. ಸಾವಿರ ಗುಂಡುಗಳು ದೇಹವನ್ನು ಹೊಕ್ಕರೂ ನಾಶವಾಗದೆ ಉಳಿಯಬಲ್ಲ ಅತ್ಯಾಶ್ಚರ್ಯಕರವಾದ ಶಕ್ತಿ ಅವರಿಗಿದೆ ಎಂದು ಜನಪ್ರಿಯ ಹಲವು ಕಥೆಗಳು ಪ್ರಚಲಿತವಾಗಿದ್ದವು.

೧೯೨೯ರಲ್ಲಿ ಮಾವೋ ಮತ್ತು ಜು ಡೆ ಅವರು ಕೆಂಪು ಸೇನೆಯ ಪ್ರಮುಖ ತುಕಡಿ ಯನ್ನು ಬೆಟ್ಟಗಳ ಕೆಳಗಿನ ದಕ್ಷಿಣ ಭಾಗಗಳಲ್ಲಿ ಮುನ್ನಡೆಸಿ ಹೆಚ್ಚೆಚ್ಚು ಕ್ರಾಂತಿಕಾರಿ ನೆಲೆಗಳನ್ನು ಸ್ಥಾಪಿಸಿದರು(ಅವುಗಳನ್ನು ನಂತರದಲ್ಲಿ ಕೇಂದ್ರೀಯ ಕ್ರಾಂತಿಕಾರಿ ನೆಲೆಗಳ ಪ್ರದೇಶವೆಂದು ಕರೆಯಲಾಯಿತು). ವಿರೋಧಿ ಆಳ್ವಿಕೆಯು ಬಲಹೀನವಾಗಿರುವ ಗ್ರಾಮೀಣ ಪ್ರದೇಶಗಳಲ್ಲಿ ಸಶಸ್ತ್ರ ಹೋರಾಟಗಳನ್ನು ನಡೆಸುತ್ತಾ ಗ್ರಾಮೀನ ಪ್ರದೇಶಗಳಿಂದ ನಗರ ಪ್ರದೇಶಗಳನ್ನು ಸುತ್ತುವರಿದು ರಾಷ್ಟ್ರದ ರಾಜಕೀಯ ಅಧಿಕಾರವನ್ನು ಹಿಡಿತಕ್ಕೆ ತೆಗೆದುಕೊಳ್ಳುವಂತಹ ಚೀನಾದ ಗುಣಲಕ್ಷಣಕ್ಕನುಗುಣವಾದ ಕ್ರಾಂತಿಕಾರಿ ಹಾದಿಯನ್ನು ಕಮ್ಯುನಿಸ್ಟರು ಕಂಡುಕೊಂಡರು. ೧೯೨೮ ಮತ್ತು ೧೯೩೦ರ ನಡುವೆ ಮಾವೋ ಬರೆದಂತಹ ‘ಚೀನಾದಲ್ಲೇಕೆ ಕೆಂಪು ರಾಜಕೀಯ ಶಕ್ತಿ ಅಸ್ತಿತ್ವಕ್ಕೆ ಬರಬಲ್ಲದು?’’, ‘ಜಿಂಗ್ಲಾಂಗ್ ಬೆಟ್ಟಗಳಲ್ಲಿನ ಹೋರಾಟ’ ಮತ್ತು ‘ಒಂದೇ ಒಂದು ಕಿಡಿ ಬೆಂಕಿ ಹೊತ್ತಿಸಬಲ್ಲದು’ ಕೃತಿಗಳಲ್ಲಿ ಮೇಲಿನ ಸಾಧ್ಯತೆಯನ್ನು ವೈಚಾರಿಕವಾಗಿ ವಿವರಿಸಿದ್ದಾರೆ. ಮಾವೋ ಜೆಡಾಂಗ್ ಅವರ ಆಯ್ದ ಕೃತಿಗಳಲ್ಲಿ ‘ಪಕ್ಷದಲ್ಲಿ ತಪ್ಪಾದ ವಿಚಾರಗಳನ್ನು ಸರಿಪಡಿಸುವ ಕುರಿತು’ ಭಾಗದಲ್ಲಿ ಕಾಣಬಹುದಾದ ಈ ನಿರ್ಣಯದಲ್ಲಿ ಪ್ರಧಾನವಾಗಿ ರೈತಾಪಿ ಜನರಿಂದ ಹೇಗೆ ಕಟ್ಟುನಿಟ್ಟಾದ ಶಿಸ್ತಿನಿಂದ ತರಬೇಕಾಗಿರುವ ಮತ್ತು ಜನತೆಯೊಂದಿಗೆ ಹತ್ತಿರದ ಮೈತ್ರಿ ಹೊಂದಿರುವ ಒಂದು ಹೊಸ ತರಹದ ರೈತಾಪಿ ಜನತೆಯ ಸೇನೆಯನ್ನು ಸಜ್ಜುಗೊಳಿಸಬಹುದು ಮತ್ತು ಹೇಗೆ ಪಕ್ಷದ ನಿರ್ಮಾಣವನ್ನು ಬಲಗೊಳಿಸಬಹುದೆಂದು ಒತ್ತು ನೀಡಿ ಹೇಳಲಾಗಿದೆ.

೧೯೩೦ರ ಕೊನೆಯಿಂದೀಚೆಗೆ ಮಾವೋ ಜೆಡಾಂಗ್ ಮತ್ತು ಜು ಡೆ ಅವರ ಜಂಟಿ ನಾಯಕತ್ವದಲ್ಲಿ ಕೆಂಪು ಸೇನೆಯು ಕೇಂದ್ರೀಯ ಕ್ರಾಂತಿಕಾರಿ ನೆಲೆಗಳ ವಿರುದ್ಧ ಕೌಮಿಂಟಾಂಗ್ ಸೈನ್ಯದ ತುಕಡಿಗಳು ನಡೆಸಿದ ಹಲವಾರು ಬಾರಿಯು ‘ಮುತ್ತಿಗೆ ಮತ್ತು ಆಕ್ರಮಣಗಳ’ನ್ನು ಸೋಲಿಸಿತು. ರೈತಾಪಿ ಸೇನೆಯು ಒಂದೆಡೆ ಶತ್ರುಗಳೊಂದಿಗೆ ಯುದ್ಧ ನಡೆಸುತ್ತಿರುವಾಗಲೇ ಮತ್ತೊಂದೆಡೆ ಸಾಮಾನ್ಯ ಜನತೆಯ ಕೃಷಿ ಉತ್ಪಾದನೆ, ಕರಕುಶಲ ಕೈಗಾರಿಕೆ, ವಾಣಿಜ್ಯ, ಸಹಕಾರ ಸಂಘ ಮತ್ತು ಸಾಂಸ್ಕೃತಿಕ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕೇಂದ್ರೀಯ ಕ್ರಾಂತಿ ನೆಲೆಗಳಲ್ಲಿ ಅಭಿವೃದ್ದಿಪಡಿಸಲು ಮಾವೋ ಅವರು ನಾಯಕತ್ವ ನೀಡಿದರು. ಇದು ಶತ್ರುವಿನ ತಡೆಗೋಡೆಯನ್ನು ಧೂಳಿಪಟ ಮಾಡಿತು. ಕೆಂಪು ಸೇನೆಗೆ ಅಗತ್ಯ ಸರಬರಾಜನ್ನು ಖಾತರಿಗೊಳಿಸಿತು. ಜನಜೀವನದ ಪರಿಸ್ಥಿತಿಯನ್ನು ಸುಧಾರಿಸಿ ಕ್ರಾಂತಿಕರಿ ಯುದ್ಧವನ್ನು ದೀರ್ಘಕಾಲ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಹೀಗೆ ಒಂದು ಶಿಸ್ತುಬದ್ಧ, ಶಸ್ತ್ರಸಜ್ಜಿತವಾದ ಜನತೆಯ ಹಿತಾಸಕ್ತಿಯೇ ತಮ್ಮ ಅಂತಿಮ ಧ್ಯೇಯವೆಂದು ಪಣತೊಟ್ಟ ಕ್ರಾಂತಿಕಾರಿ ಕೆಂಪು ಸೇನೆಯ ನಿರ್ಮಾಣವಾಯಿತು.

ತನ್ನ ಮನೆ, ಭೂಮಿ ಮತ್ತು ತನ್ನ ರಾಷ್ಟ್ರಕ್ಕಾಗಿ ಹೋರಾಡುತ್ತಿರುವೆವೆಂಬ ಮನೋ ಭಾವವಿದ್ದ ಕೆಂಪು ಸೇನೆಯಲ್ಲಿ ಶೇ.೩೮ರಷ್ಟು ಕಾರ್ಮಿಕ ವರ್ಗದಿಂದ(ಕುಶಲಕಲೆ, ಕೃಷಿ ಕೂಲಿಕಾರರು, ಗ್ರಾಮೋದ್ಯೋಗ ಚಟುವಟಿಕೆಯಲ್ಲಿದ್ದವರು)ದಿಂದ ಬಂದವರಾಗಿದ್ದಾರೆ. ಶೇ.೫೮ರಷ್ಟು ರೈತಾಪಿ ವರ್ಗಹಿನ್ನೆಲೆಯನ್ನು ಹೊಂದಿದ್ದು, ಕೇವಲ ಶೇ.೪ರಷ್ಟು ಮಾತ್ರವೇ ಪೆಟ್ಟಿ ಬಂಡವಾಳಶಾಹಿ(ವ್ಯಾಪಾರದಾರರ, ಬುದ್ದಿಜೀವಿಗಳ, ಸಣ್ಣ ಭೂಮಾಲೀಕರಂತಹ ಮಕ್ಕಳು) ಹಿನ್ನೆಲೆಯಿಂದ ಬಂದಿದ್ದವರಾಗಿದ್ದರು. ಹಲವಾರು ಕಮ್ಯುನಿಸ್ಟರು ಕಮ್ಯುನಿಸ್ಟ್ ಪಕ್ಷ ಮತ್ತು ಕೆಂಪು ಸೇನೆಯಲ್ಲಿ ಒಡಗೂಡಿ ಚೀನಾ ರಿಪಬ್ಲಿಕನ್ನು ಸ್ಥಾಪಿಸಲು ಹೋರಾಡುವಾಗ, ಅವರಲ್ಲೆಲ್ಲ ಇದ್ದ ಸಾಮಾನ್ಯ ತಿಳುವಳಿಕೆಯೇನೆಂದರೆ ಜನತೆಯ ಕ್ರಿಯೆಯಿಂದ ಪಡೆದಂಥ ಸಾಮೂಹಿಕ ರಾಜಕೀಯ ಶಕ್ತಿ ಮಾತ್ರವೇ ಕ್ರಾಂತಿಯನ್ನು ಸಾಕಾರಗೊಳಿಸಲು ಸಾಧ್ಯ ಎನ್ನುವ ವಿಚಾರ