ಪೂರ್ವ ಮತ್ತು ದಕ್ಷಿಣ ಪೂರ್ವ ಏಷ್ಯಾಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದರೂ ಒಂದು ಶತಮಾನದಿಂದ ಮತ್ತೊಂದು ಶತಮಾನಕ್ಕೆ ಅದೆಷ್ಟೋ ಏರುಪೇರುಗಳಿದ್ದವು. ಹಲವು ಬಾರಿ ಈ ಭಾಗಗಳು ಪರಕೀಯರ ದಾಳಿಗೆ ತುತ್ತಾಗಿದ್ದು, ಅದರಲ್ಲಿ ಕೆಲವರು ಇಲ್ಲಿಯೇ ಖಾಯಂ ಆಗಿ ನೆಲೆಸಿ ಇಲ್ಲಿನ ಸಂಸ್ಕೃತಿಗೆ ಹೊಂದಿಕೊಂಡು ರಾಜರಾಗಿ ಈ ದೇಶಗಳನ್ನು ಆಳಿದ್ದಾರೆ. ಮತ್ತೆ ಕೆಲವರು ದಾಳಿ ಮಾಡಿ, ಲೂಟಿ ಮಾಡಿದ ಸಂಪತ್ತನ್ನು ತೆಗೆದು ತಮ್ಮ ದೇಶಕ್ಕೆ ಮರಳಿದ್ದೂ ಉಂಟು. ಇಷ್ಟು ವರ್ಷದ ಇತಿಹಾಸದಲ್ಲಿ ಸಾಧನೆಯ ಕಾಲವೂ, ತಟಸ್ಥ ಕಾಲವೂ ಮತ್ತು ಕೆಲವೊಮ್ಮೆ ವಿಪತ್ತುಗಳಿದ್ದವು. ಆದರೆ ಪೂರ್ವ ಮತ್ತು ದಕ್ಷಿಣಪೂರ್ವ ಏಷ್ಯಾದ ಆಧುನಿಕ ಯುಗದಲ್ಲಿ ಹುಟ್ಟಿಕೊಂಡ ಚಿಂತನೆಗಳು, ಸಂಸ್ಥೆಗಳು, ಸುಧಾರಣೆಗಳು ಮತ್ತು ಚಳವಳಿಗಳ ವಿಚಾರದ ಕುರಿತು ಮಾತನಾಡುವಾಗ ಸಾಮಾನ್ಯವಾಗಿ ತೀರ ಇತ್ತೀಚಿನ ಇತಿಹಾಸಕ್ಕೆ ಮಹತ್ವವನ್ನು ಕೊಡುತ್ತೇವೆ. ಅದರಲ್ಲೂ ಐರೋಪ್ಯ ರಾಷ್ಟ್ರಗಳ ಆಗಮನ, ವಸಾಹತುಶಾಹಿಯ ಸ್ಥಾಪನೆ ಮತ್ತು ಆ ಸಂಬಂಧದಿಂದ ಇಲ್ಲಿನ ಸಮಾಜದ ಮೇಲೆ ಬೀರಿದ ಪರಿಣಾಮಗಳನ್ನು, ಬದಲಾವಣೆಗಳನ್ನು ಮತ್ತು ೧೯ನೆಯ ಶತಮಾನದ ಮಧ್ಯಭಾಗದಿಂದ ಪೂರ್ವ ಏಷ್ಯಾದವರು ಸಾಮ್ರಾಜ್ಯಶಾಹಿ ಧೋರಣೆಯ ವಿರುದ್ಧ ಸಂಘಟಿಸಿದ ಚಳವಳಿಗಳನ್ನು ಹೆಚ್ಚು ಗಮನಿಸಬಹುದು. ಏಕೆಂದರೆ ೧೮ ಮತ್ತು ೧೯ನೆಯ ಶತಮಾನದಲ್ಲಿ ವಸಾಹತುಶಾಹಿಯ ಆಳ್ವಿಕೆಯಿಂದ ಪೂರ್ವ ಮತ್ತು ದಕ್ಷಿಣಪೂರ್ವ ಏಷ್ಯಾದ ಆರ್ಥಿಕ, ರಾಜಕೀಯ, ಸಾಮಾಜಿಕ, ಧಾರ್ಮಿಕ, ಬೌದ್ದಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಸಾಕಷ್ಟು ತಿದ್ದುಪಡಿಯಾಗಿದ್ದು ಹೊಸಯುಗದ ಸೃಷ್ಟಿಯಲ್ಲಿ ಮಹತ್ತರ ಪಾತ್ರ ವಹಿಸಿದೆ.

ಐರೋಪ್ಯ ರಾಷ್ಟ್ರಗಳೊಂದಿಗೆ ಪೂರ್ವ ಮತ್ತು ದಕ್ಷಿಣಪೂರ್ವ ಏಷ್ಯಾ ವ್ಯಾಪಾರ ಸಂಬಂಧವನ್ನು ಸುಮಾರು ೧೬ನೆಯ ಶತಮಾನದ ಆರಂಭದಿಂದಲೇ ಬೆಳೆಸಿಕೊಂಡಿದ್ದರೂ ಕೂಡ, ನಿಜವಾದ ಅವರ ವಸಾಹತುಗಳು ಚೀನಾ, ಮಲೇಶಿಯಾ, ಬರ್ಮಾ ಇಂಡೋನೇಶಿಯಾ, ಇಂಡೋ-ಚೀನಾ ಫಿಲಿಫೈನ್ಸ್‌ಗಳಲ್ಲಿ ೧೯ನೆಯ ಶತಮಾನದ ಪೂವಾರ್ಧ ದಲ್ಲಿ ಸ್ಥಾಪನೆಯಾದವು. ಯುರೋಪಿಯನ್ನರ ಆಳ್ವಿಕೆಯ ಏಕಸ್ವಾಮ್ಯತ್ವದ ಹೇರಿಕೆಯ ಪರಿಣಾಮವಾಗಿ ಪೂರ್ವ ಮತ್ತು ದಕ್ಷಿಣಪೂರ್ವ ಏಷ್ಯಾ ರಾಷ್ಟ್ರಗಳು ಐರೋಪ್ಯ ರಾಷ್ಟ್ರಗಳ ಸಿದ್ಧವಸ್ತುಗಳಿಗೆ ಬೃಹತ್ ಮಾರುಕಟ್ಟೆಯಾಗಿ, ದೊಡ್ಡ ಪ್ರಮಾಣದಲ್ಲಿ ಕಚ್ಚಾವಸ್ತುಗಳನ್ನು ಮತ್ತು ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಒಂದು ಭೂಮಿಕೆಯಾಗಿ ಮತ್ತು ಬಂಡವಾಳ ಹೂಡಲು ಒಂದು ಪ್ರಮುಖ ಸ್ಥಳವಾಗಿ ಪರಿವರ್ತಿಸಿತು. ಸಾಮ್ರಾಜ್ಯ ಶಾಹಿಯ ಹಿತಕ್ಕಾಗಿ ಇಲ್ಲಿನ ವ್ಯವಸಾಯದ ಮೇಲೆ ಭಾರಿ ಪ್ರಮಾಣದ ತೆರಿಗೆಯನ್ನು ಹೇರಲಾಯಿತು. ಕೈಗಾರಿಕಾ ಕ್ರಾಂತಿಯ ಫಲಶ್ರುತವಾಗಿ ಉತ್ಪಾದಿಸಲ್ಪಟ್ಟ ಸಿದ್ಧವಸ್ತುಗಳಿಗೆ ಸ್ವತಂತ್ರ ಮಾರುಕಟ್ಟೆಗಳು ಲಭ್ಯವಾದವು. ಈ ಕಾರಣಕ್ಕಾಗಿ ೧೮ ಮತ್ತು ೧೯ನೆಯ ಶತಮಾನದುದ್ದಕ್ಕೂ ಇಲ್ಲಿಯ ರಸ್ತೆ ಸಾರಿಗೆ ವ್ಯವಸ್ಥೆ, ಆಧುನಿಕ ಗಣಿಕೈಗಾರಿಕೆಗಳು, ವಿದೇಶಿ ವ್ಯಾಪಾರ, ಕರಾವಳಿ ಮತ್ತು ಅಂತಾರಾಷ್ಟ್ರೀಯ ಹಡಗು ಯಾತ್ರೆಗಳು, ಬ್ಯಾಂಕ್‌ಗಳು, ಇನ್ಸೂರೆನ್ಸ್ ಕಂಪನಿ ಗಳೆಲ್ಲವೂ ವಸಾಹತುಶಾಹಿ ರಾಷ್ಟ್ರಗಳ ಆಡಳಿತಕ್ಕೆ ಒಳಪಟ್ಟಿತ್ತು.

ಇವೆಲ್ಲಕ್ಕಿಂತಲೂ ಪ್ರಮುಖವಾದುದೆಂದರೆ, ೧೯ನೆಯ ಶತಮಾನದ ವಸಾಹತುಶಾಹಿ ರಾಷ್ಟ್ರಗಳ ಆಳ್ವಿಕೆಯ ಕಾಲದಲ್ಲಿ ಪೂರ್ವ ಮತ್ತು ದಕ್ಷಿಣಪೂರ್ವ ಏಷ್ಯಾದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗಳೂ, ಸಂಪನ್ಮೂಲಗಳ ಅಭಿವೃದ್ದಿ ಹಾಗೂ ವ್ಯಾಪಾರ ವ್ಯವಹಾರಗಳು ಐರೊಪ್ಯ ರಾಷ್ಟ್ರದ ವ್ಯವಸ್ಥೆಗಿಂತ ಕೀಳಾಗಿತ್ತು. ಇಲ್ಲಿನ ಆರ್ಥಿಕ ವ್ಯವಸ್ಥೆ ಜಾಗತಿಕ ಮಾರುಕಟ್ಟೆಯೊಂದಿಗೆ ವಿಲೀನಗೊಂಡಿದ್ದರೂ ಸಮಾನತೆ ಕಂಡುಬರಲಿಲ್ಲ. ಅಂದರೆ ಆಧುನಿಕ ಯುಗದ ೨೦೦ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಐರೋಪ್ಯ ರಾಷ್ಟ್ರಗಳು ಬೆಳೆಯುತ್ತಿರುವ ಬಂಡವಾಳಶಾಹಿ ರಾಷ್ಟ್ರಗಳಾಗಿ ಪರಿಣಮಿಸಿದರೆ, ಪೂರ್ವ ಮತ್ತು ದಕ್ಷಿಣ ಪೂರ್ವ(ಜಪಾನನ್ನು ಹೊರತುಪಡಿಸಿ) ಏಷ್ಯಾ ದೇಶಗಳೆಲ್ಲವೂ ಇಡೀ ಜಗತ್ತಿನಲ್ಲಿ ಅನಭಿವೃದ್ದಿ ಹೊಂದಿದ. ಹಿಂದುಳಿದ ವಸಾಹತು ರಾಷ್ಟ್ರಗಳಾಗಿ ಬೆಳೆದವು. ಯುರೋಪ್‌ನೊಂದಿಗೆ ಈ ರಾಷ್ಟ್ರಗಳ ಆರ್ಥಿಕ ಸಂಬಂಧವು ವ್ಯಾಪಾರ, ಬಂಡವಾಳ ಮತ್ತು ತಾಂತ್ರಿಕತೆಯನ್ನೊಳಗೊಂಡು ಪೂರ್ವ ಏಷ್ಯಾವು ಒಂದು ಅಲವಂಬನಾ ಮತ್ತು ಅನಭಿವೃದ್ದಿ ವಸಾಹತು ಆಗಿ ಬೆಳೆಯಿತು. ಇಷ್ಟಾಗಿಯೂ, ಈ ಸಂಬಂಧದಿಂದ ಇಲ್ಲಿನ ಜನರು ತಮ್ಮ ಚಿಂತನಾಶಕ್ತಿಯನ್ನು ವೃದ್ದಿಸಿಕೊಂಡು, ತಮ್ಮಲ್ಲಿರುವ ಸಂಸ್ಥೆಗಳನ್ನು ಕ್ರಾಂತಿಕಾರಿಯಾಗಿ ಬದಲಾಯಿಸಿಕೊಂಡು ಸುಮಾರು ೧೯ನೆಯ ಶತಮಾನದ ಮಧ್ಯಭಾಗದಿಂದ ವಸಾಹತುಶಾಹಿ ರಾಷ್ಟ್ರಗಳ ದಬ್ಬಾಳಿಕೆ ಮತ್ತು ಶೋಷಣೆಯ ವಿರುದ್ಧ ಸುಧಾರಣಾತ್ಮಕ, ಕ್ರಾಂತಿಕಾರಿ ಚಳವಳಿಗಳನ್ನು ಸಂಘಟಿಸಿದರು. ಈ ರೀತಿಯ ಬದಲಾವಣೆಗಳನ್ನು ಅಲ್ಲಿನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಕೈಗಾರಿಕಾ, ಕೃಷಿ, ಸಾಂಸ್ಕೃತಿಕ ಮತ್ತು ಬೌದ್ದಿಕರಂಗಗಳಲ್ಲಿ ಗಮನಿಸಬಹುದು.

೧೮ನೆಯ ಶತಮಾನದ ಐರೋಪ್ಯ ರಾಷ್ಟ್ರಗಳು ಮತ್ತು ದೇಶೀಯ ಬದಲಾವಣೆಗಳು: ಪ್ರಾರಂಭದ ಹಂತ

ಪೂರ್ವ ಮತ್ತು ಪಶ್ಚಿಮ ಜಗತ್ತಿನ ನಡುವಿನ ಸಂಪರ್ಕದಿಂದ ಚೀನಾ, ಜಪಾನ್ ಮತ್ತು ದಕ್ಷಿಣಪೂರ್ವ ಏಷ್ಯಾದ ಜನರ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಕಂಡುಬಂದವು. ಪೂರ್ವ ಏಷ್ಯಾ ಅದರಲ್ಲೂ ಮುಖ್ಯವಾಗಿ ಚೀನಾ ಮತ್ತು ಜಪಾನ್ ಅತ್ಯಂತ ಪ್ರಾಚೀನ ಸಂಸ್ಕೃತಿ ಮತ್ತು ನಾಗರಿಕತೆಯ ಇತಿಹಾಸವನ್ನು ಹೊಂದಿದ್ದು, ಪಶ್ಚಿಮ ಜಗತ್ತಿಗೆ ಹೋಲಿಸಿದರೆ ಈ ವಿಚಾರದಲ್ಲಿ ತಾವು ಶ್ರೀಮಂತರು ಎಂಬ ನಂಬಿಕೆಯನ್ನು ಇಟ್ಟುಕೊಂಡಿದ್ದರು. ಈ ಶ್ರೀಮಂತಿಕೆಯನ್ನು ಪಡೆದ ಇವರು ಪಶ್ಚಿಮ ಜಗತ್ತಿನವರು ನಾಗರಿಕತ್ವವಿಲ್ಲದವರೆಂದು ಬಣ್ಣಿಸಿ ಅವರಿಂದ ಯಾವುದೇ ಹೊಸ ಜ್ಞಾನ ಸಂಪತ್ತುಗಳನ್ನಾಗಲಿ, ಹೊಸ ಚಿಂತನೆಗಳನ್ನಾಗಲಿ ಹಾಗೂ ಆರ್ಥಿಕ ನೆರವನ್ನಾಗಲಿ ಪಡೆಯುವ ಅಗತ್ಯತೆ ಪೂರ್ವ ದೇಶದವರಿಗೆ ಬಂದೊದಗಲಿಲ್ಲ ಎಂಬ ಭಾವನೆಯನ್ನು ಬೆಳೆಸಿಕೊಂಡಿದ್ದರು. ೧೮ನೆಯ ಶತಮಾನದುದ್ದಕ್ಕೂ ಚೀನಾ ಮತ್ತು ಜಪಾನ್ ಸ್ವತಂತ್ರ ಹಾಗೂ ಸ್ವಾವಲಂಬನಾ ವ್ಯವಸ್ಥೆಯನ್ನು ಉಳಿಸಿಕೊಂಡಿದದ್ದು, ಇಲ್ಲಿಯ ವಿದ್ವಾಂಸರು ದೇಶೀಯ ತತ್ವಗಳು, ಚಿಂತನೆಗಳು ಮತ್ತು ಸಿದ್ಧಾಂತಗಳಿಗೆ ಮಹತ್ವ ಕೊಟ್ಟು ತಮ್ಮ ದೇಶೀಯ ಧರ್ಮಕ್ಕೆ ಮಿಗಿಲಾದದ್ದು ಇನ್ನೊಂದಿಲ್ಲ ಎಂಬ ನಿಲುವನ್ನು ಪಾಲಿಸುತ್ತಿದ್ದರು. ತಮ್ಮ ದೇಶೀಯ ಸಂಸ್ಥೆಗಳು ಮತ್ತು ಚಿಂತನೆಗಳು ಪರಿಪಕ್ವವಾದವುಗಳಾಗಿದ್ದು, ಪಶ್ಚಿಮ ಜಗತ್ತಿನ ಸಂಸ್ಥೆಗಳು ಮತ್ತು ಚಿಂತನೆಗಳು ಬಲಹೀನವಾದವುಗಳು; ಜೊತೆಗೆ ಅವರಿಂದ ತಮ್ಮ ದೇಶದ ಜನರಿಗೆ ಕಲಿಯಲು ಏನೂ ಉಳಿದಿಲ್ಲ ಎಂಬ ನಿಲುವುಗಳನ್ನು ತೆಗೆದುಕೊಂಡಿದ್ದರು. ಈ ರೀತಿಯ ಸ್ವಾವಲಂಬನಾ ಚಿಂತನೆ ಮತ್ತು ಪಶ್ಚಿಮ ಜಗತ್ತಿ ಪ್ರತ್ಯೇಕತೆಯಿಂದ ಪೂರ್ವ ಏಷ್ಯಾದ ನಾಗರಿಕತೆ ಮತ್ತು ಸಂಸ್ಥೆಗಳು, ಚಿಂತನೆಗಳು ಹಾಗೂ ತತ್ವಗಳು ತಟಸ್ಥವಾಗುಳಿದು ತನ್ನ ಚೇತನಾಶಕ್ತಿಯನ್ನು ಕಳೆದುಕೊಂಡಿತು. ಆದರೆ ಪಶ್ಚಿಮ ರಾಷ್ಟ್ರಗಳು ಇದೇ ಸಮಯದಲ್ಲಿ ಅನೇಕ ಕ್ರಾಂತಿಕಾರಿ ಬದಲಾವಣೆಗಳನ್ನು ತಂದು ಆಧುನಿಕ ಯುಗಕ್ಕೆ ಕಾಲಿಟ್ಟಿತು. ಏಕೆಂದರೆ ೧೫ ಮತ್ತು ೧೬ನೆಯ ಶತಮಾನದಿಂದ ಪಶ್ಚಿಮ ಜಗತ್ತಿನಲ್ಲಿ ಹಲವು ಆವಿಷ್ಕಾರಗಳು ನಡೆದು ಚೇತನಾಶಕ್ತಿಯನ್ನು ಜನರಿಗೆ ಒದಗಿಸಿಕೊಟ್ಟಿತು. ಇದರಿಂದ ಹೊಸ ಚಿಂತನೆಗಳು, ಸಂಸ್ಥೆಗಳ ಪುನರ್ ನಿರ್ಮಾಣ ಮತ್ತು ತತ್ವಗಳು ಹುಟ್ಟಿಕೊಂಡವು. ವೈಜ್ಞಾನಿಕ ಮತ್ತು ತಾಂತ್ರಿಕ ರಂಗದಲ್ಲಿ ಈ ರಾಷ್ಟ್ರಗಳು ಅನೇಕ ಬದಲಾವಣೆಗಳನ್ನು ತಂದುಕೊಂಡವು. ಕೃಷಿ, ಕೈಗಾರಿಕೆ, ವಾಣಿಜ್ಯ, ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ರಂಗಗಳಲ್ಲಿ ಕ್ರಾಂತಿಗಳುಂಟಾದವು. ಕೈಗಾರೀಕರಣದ ಅಭಿವೃದ್ದಿಯಿಂದ ಪಶ್ಚಿಮ ದೇಶಗಳು ತಮ್ಮ ಸಿದ್ಧವಸ್ತುಗಳ ಮಾರಾಟಕ್ಕಾಗಿ ಹೊಸ ವ್ಯಾಪಾರ ಕೇಂದ್ರಗಳ ಅನ್ವೇಷಣೆಯಲ್ಲಿ ತೊಡಗಿದ್ದು ಹೊಸ ಭೂ ಮತ್ತು ಜಲ ಮಾರ್ಗಗಳನ್ನು ಕಂಡುಹಿಡಿದರು. ಇದರಿಂದ ಸುಲಭವಾಗಿ ಹಿಂದುಳಿದ ಪೂರ್ವ ದೇಶಗಳಲ್ಲಿ ತಮ್ಮ ವಸಾಹತನ್ನು ಸ್ಥಾಪಿಸಿ ಮಾರುಕಟ್ಟೆಗಳ ಅನುಕೂಲತೆಯನ್ನು ಸೃಷ್ಟಿಸಿದರು. ಪೂರ್ವ ದೇಶಗಳು ತಟಸ್ಥವಾಗಿದ್ದು ಭ್ರಮಾಲೋಕದಲ್ಲಿ ತೆವಳುತ್ತಿದ್ದು ಪಶ್ಚಿಮ ರಾಷ್ಟ್ರಗಳಿಗೆ ಹೋಲಿಸಿದರೆ ಸೈನಿಕ ಪ್ರಬಲತೆ, ಶಿಸ್ತು, ಆಧುನಿಕ ಆಯುಧಗಳು, ಕೌಶಲ್ಯ ಮತ್ತು ಐಕ್ಯತೆಯ ವಿಷಯದಲ್ಲಿ ಬಹಳ ಹಿಂದುಳಿದಿದ್ದವು. ಚಾಣಾಕ್ಷತನ ಮತ್ತು ತಾಂತ್ರಿಕ ಜ್ಞಾನದ ಫಲಶ್ರುತಿಯಾಗಿ ಪಶ್ಚಿಮ ರಾಷ್ಟ್ರಗಳು ಸುಲಭವಾಗಿ ಪೂರ್ವ ಏಷ್ಯಾದ ದೌರ್ಬಲ್ಯವನ್ನು ಅರಿತು ವ್ಯಾಪಾರ ಸಂಬಂಧವನ್ನು ಯಶಸ್ವಿಯಾಗಿ ಬೆಳೆಸಿಕೊಂಡರು. ಇದಕ್ಕೆ ಅವರ ತಂತ್ರಜ್ಞಾನ, ಪ್ರಾಯೋಜಿತ ಕಂಪನಿಗಳು, ಉತ್ತಮ ಮಟ್ಟದ ಸೈನ್ಯಾಂಗ, ವಿಧೇಯ ಕಮಾಂಡರ್‌ಗಳು, ಹಡಗು ಮತ್ತು ಯುದ್ಧ ನೌಕೆಗಳು ಐರೋಪ್ಯ ರಾಷ್ಟ್ರಗಳ ಸಾಧನೆಗೆ ಬೆನ್ನೆಲುಬಾಗಿದ್ದು, ಚೇತನ ಶಕ್ತಿಯನ್ನು ಒದಗಿಸಿತು. ಈ ಯಶಸ್ಸಿನ ಹಿಂದೆ ಪಶ್ಚಿಮ ರಾಷ್ಟ್ರಗಳ ರಾಜಕೀಯ ಮತ್ತು ವೈಜ್ಞಾನಿಕ ತಂತ್ರಗಳು ಸಫಲವಾಗಿ ಕೆಲಸ ಮಾಡಿರುವುದನ್ನು ತಳ್ಳಿ ಹಾಕಲು ಅಸಾಧ್ಯ. ಈ ಸಾಹಸದ ಫಲಿತಾಂಶದಿಂದ ಐರೋಪ್ಯ ರಾಷ್ಟ್ರಗಳು ತಮ್ಮ ಸಾಮ್ರಾಜ್ಯಶಾಹಿ ಶಕ್ತಿಗಳನ್ನು ಪೂರ್ವ ಏಷ್ಯಾದಲ್ಲಿ ಸಮರ್ಪಕವಾಗಿ ಹೇರಿದರು.

ಸುಮಾರು ಇನ್ನೂರು ವರ್ಷಗಳಷ್ಟು ಕಾಲ(೧೮ ಮತ್ತು ೧೯ನೆಯ ಶತಮಾನಗಳು) ನಡೆದ ಪಶ್ಚಿಮ ದೇಶಗಳ ಆಕ್ರಮಣ ಮತ್ತು ಯಶಸ್ವಿ ಪ್ರದೇಶದ ಪ್ರಭಾವದಿಂದ ಪೂರ್ವ ಮತ್ತು ದಕ್ಷಿಣಪೂರ್ವ ಏಷ್ಯಾ ರಾಷ್ಟ್ರಗಳಿಗೆ ತಪ್ಪಿಸಿಕೊಳ್ಳಲು ಅಸಾಧ್ಯವಾಯಿತು. ಸ್ವಾಭಾವಿಕವಾಗಿ ಈ ಇನ್ನೂರು ವರ್ಷಗಳ ಪಾಶ್ಚಾತ್ಯ ಸಂಬಂಧದಿಂದ ಪೂರ್ವ ಏಷ್ಯಾವು ಪರಿಣಾಮಕಾರಿಯಾದ ಬದಲಾವಣೆಗಳನ್ನು ಕಂಡುಕೊಂಡಿದೆ ಮತ್ತು ತಮ್ಮ ಸ್ವಾವಲಂಬನೆ ಹಾಗೂ ತಟಸ್ಥ ನಿಲುವುಗಳಿಗೆ ಒಂದಷ್ಟು ಚಾಲನೆ ಕೊಟ್ಟಿದೆ ಎಂದರೆ ಅದು ಅತಿಶಯೋಕ್ತಿ ಎನಿಸುವುದಿಲ್ಲ. ಈ ಬದಲಾವಣೆಗೆ ಮೂಲಕಾರಣ ೧೮ ಮತ್ತು ೧೯ನೆಯ ಶತಮಾನದಲ್ಲಿ ಪಶ್ಚಿಮ ರಾಷ್ಟ್ರಗಳ ಆಗಮನದಿಂದ ದಿಢೀರನೆಯ ತಮ್ಮ ದೇಶಕ್ಕಿಂತಲೂ ಪ್ರಬಲವಾದ ಸಂಸ್ಕೃತಿ ಮತ್ತು ಸಂಸ್ಥೆಗಳಿವೆ ಎಂಬ ಮನವರಿಕೆ ಪೂರ್ವ ಏಷ್ಯಾದ ಜನರಿಗೆ ಆಗಿ ತಮ್ಮ ತಟಸ್ಥ ನೀತಿಯ ದೌರ್ಬಲ್ಯವನ್ನು ಅರ್ಥ ಮಾಡಿಕೊಂಡರು. ಇದು ಪೂರ್ವ ದೇಶಕ್ಕೆ ಅನಿವಾರ್ಯವಾಗಿತ್ತು. ಏಕೆಂದರೆ ಪಾಶ್ಚಾತ್ಯ ದೇಶಗಳೊಂದಿಗೆ ಸಮಾನತೆಯನ್ನು ಸಾಧಿಸಲು ತಮ್ಮ ದೇಶೀಯ ಸಾಂಪ್ರದಾಯಿಕ ನಿಲುವನ್ನು, ಧೋರಣೆಯನ್ನು ಬದಲಾವಣೆ ಮಾಡಲೇಬೇಕಾದ ಅನಿವಾರ್ಯತೆ ಇತ್ತು. ಇಲ್ಲಿ ಪೂರ್ವ ಏಷ್ಯಾದ ಮೇಲೆ ಪಾಶ್ಚಾತ್ಯ ರಾಷ್ಟ್ರಗಳ ಪ್ರವೇಶದ ಪ್ರಭಾವವನ್ನು ಮೂರು ವಿಭಿನ್ನ ರೀತಿಯಲ್ಲಿ ಕಾಣಬಹುದು. ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ. ಈ ಮೂರು ಪರಿಣಾಮಕಾರಿ ಪ್ರಭಾವದಿಂದ ಪೂರ್ವ ಏಷ್ಯಾದ ದೇಶೀಯ ಚಿಂತನೆಗಳು, ಸಂಸ್ಥೆಗಳು ರಚನೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಹೊಂದಿ ಜನರು ಪಶ್ಚಿಮ ಜಗತ್ತಿನ ಸಾಮ್ರಾಜ್ಯಶಾಹಿ ಮತ್ತು ವಸಾಹತೀಕರಣ ಹಾಗೂ ತಮ್ಮ ಹಿಂದಿನ ಸಾಮಾಜಿಕ, ಆರ್ಥಿಕ, ರಾಜಕೀಯ ಸಂಸ್ಥೆಗಳ ವಿರುದ್ಧ ಚಳವಳಿಗಳನ್ನು ಸಂಘಟಿಸಿದರು.

ಮಿಶನರಿ ಚಟುವಟಿಕೆಗಳು ಮತ್ತು ಸ್ಥಳೀಯ ಸಂಸ್ಥೆಗಳು

ಪಾಶ್ಚಾತ್ಯ ಸಂಸ್ಕೃತಿಯ ಪ್ರವೇಶದ ಪ್ರಭಾವಗಳ ಆಕರಗಳಲ್ಲಿ ಧರ್ಮ ಪ್ರಸಾರಣಾರ್ಥವಾಗಿ ಕಳುಹಿಸಲ್ಪಟ್ಟ ಸುವಾರ್ತಾಪ್ರಸಾರಕ- ‘‘ಮಿಶನರಿ’’ಯ ಚಟುವಟಿಕೆಗಳು ಪೂರ್ವ ಮತ್ತು ದಕ್ಷಿಣಪೂರ್ವ ಏಷ್ಯಾದ ಜನರ ನಿಲುವುಗಳಲ್ಲಿ, ಚಿಂತನೆಗಳಲ್ಲಿ ಮತ್ತು ಜೀವನ ಕ್ರಮ ಗಳಲ್ಲಿ ಮಹತ್ವಪೂರ್ಣ ಬದಲಾವಣೆಯನ್ನು ತರುವಲ್ಲಿ ಯಶಸ್ವಿಯಾಗಿದೆ. ಈ ಮಿಶನರಿಗಳು ದೇಶೀ ಜನರ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಹೊಸ ಚೈತನ್ಯವನ್ನು ಸೃಷ್ಟಿಸಿದೆ. ಚೀನಾದಲ್ಲಿ ಉಳಿದ ಪೂರ್ವ ದೇಶಗಳಿಗೆ ಹೋಲಿಸಿದರೆ ಮಿಶನರಿ ಸ್ಥಾಪನೆಯಿಂದ ಜನರು ರಾಜಕೀಯ ಜೀವನದಲ್ಲಿ ಹೆಚ್ಚು ಪರಿವರ್ತನೆ ತಂದಿತು. ಆರಂಭದಲ್ಲಿ ಮಿಶನರಿಗಳು ಧರ್ಮ ಪ್ರವಾಚಕರಾಗಿದ್ದು ಕ್ರೈಸ್ತ ಧರ್ಮದ ಪ್ರಚಾರದಲ್ಲಿ ಬಹಳ ಸಕ್ರಿಯವಾದ ಪಾತ್ರ ವಹಿಸುತ್ತಿದ್ದು ಅನಧಿಕೃತವಾಗಿ ವ್ಯಾಪಾರ ಸಂಬಂಧವನ್ನು ಈ ದೇಶಗಳೊಂದಿಗೆ ಸಾಧಿಸುವ ಗುಂಗಿನಲ್ಲಿದ್ದವು. ಜನಮಾರ್ಗದ ಮೇಲೆ ಹಿಡಿತವನ್ನು ಸಾಧಿಸಿ ಪೂರ್ವ ಏಷ್ಯಾದೊಡನೆ ನಿಕಟ ಸಂಪರ್ಕವನ್ನು ವೃದ್ದಿಸುವುದು ಸಹ ಅವರ ಮುಖ್ಯ ಉದ್ದೇಶವಾಗಿತ್ತು. ಮೊದಲಿಗೆ ಪೋರ್ಚುಗೀಸರು ಭಾರತದಲ್ಲಿ ಕೇಂದ್ರಗಳನ್ನು ಸ್ಥಾಪಿಸಿ, ಪೂರ್ವ ಏಷ್ಯಾದಲ್ಲಿಯೂ ತಮ್ಮ ಮಿಶನರಿ ಚಟುವಟಿಕೆಗಳನ್ನು ಹರಡಿ, ಕಚ್ಚಾ ಸಂಬಾರು ಪದಾರ್ಥಗಳ ಸಂಗ್ರಹಿಸುವಿಕೆ ಮತ್ತು ಧರ್ಮ ಪ್ರಚಾರದ ಅಭಿಲಾಷೆಯನ್ನು ವ್ಯಕ್ತಪಡಿಸಿದರು. ಹೋದಲ್ಲೆಲ್ಲ ಕ್ರೈಸ್ತ ಧರ್ಮದ ಪ್ರಚಾರವನ್ನು ವೃದ್ದಿಸಿದರು ಮತ್ತು ದೇಶೀಯ ಜನರನ್ನು ತಮ್ಮ ಧರ್ಮಕ್ಕೆ ಮತಾಂತರಿಸಿಕೊಂಡರು.

ಚೀನಾದಲ್ಲಿ ‘ಮಿಶನರಿ’ ಚಳವಳಿಯು ೧೬ನೆಯ ಶತಮಾನದಿಂದಲೇ ಪ್ರಾರಂಭವಾದರೂ ಕೂಡ ೧೯ನೆಯ ಶತಮಾನದವರೆಗೆ ಪರಿಣಾಮಕಾರಿಯಾದ ಚಟುವಟಿಕೆಗಳನ್ನು ನಡೆಸಲು ಅಸಾಧ್ಯವಾಯಿತು. ೧೬ನೆಯ ಶತಮಾನದಲ್ಲಿ ಅವರು ದಕ್ಷಿಣ ಭಾಗದ ಮಕಾವೋದಲ್ಲಿ ತಮ್ಮ ಕೇಂದ್ರವನ್ನು ಸ್ಥಾಪಿಸಿ ಅನೇಕ ಚರ್ಚ್‌ಗಳನ್ನು ತೆರೆದರು. ಜೊತೆಗೆ ಗಣಿತಶಾಸ್ತ್ರ ಮತ್ತು ಜೋತಿಷ್ಯಶಾಸ್ತ್ರದಲ್ಲಿ ಪ್ರಾವೀಣ್ಯತೆ ಪಡೆದ ಮಾತ್ಸುರಿಕ್ಕಿ ತನ್ನ ಅನುಯಾಯಿ ಗಳೊಂದಿಗೆ ದಕ್ಷಿಣ ಚೀನಾದಲ್ಲಿ ಸ್ಥಳೀಯ ಜನರ ಸಂಬಂಧ ಬೆಳೆಸಿ ಧರ್ಮಪ್ರಚಾರ ಪ್ರಾರಂಭ ಮಾಡಿ ಅವರ ಅನುಕಂಪವನ್ನು ಯಶಸ್ವಿಯಾಗಿ ಪಡೆದನು. ತದನಂತರ ಫ್ರೆಂಚ್ ಮಿಶನರಿಗಳು ಆಗಮಿಸಿ ಚೀನಾದ ದೊರೆ ಕಾಂಗ್ ಸೀಯೊಂದಿಗೆ ನಿಕಟ ಸಂಬಂಧವನ್ನು ಏರ್ಪಡಿಸಿಕೊಂಡರು. ಅಲ್ಲದೆ ಚೀನಾ ಸರಕಾರದ ಅನುಮತಿಯೊಂದಿಗೆ ಅನೇಕ ಚರ್ಚ್ ಕಟ್ಟಡಗಳನ್ನು ನಿರ್ಮಿಸಿ ಅವುಗಳ ರಕ್ಷಣಾ ಹಕ್ಕನ್ನು ಪಡೆದು ಪೂಜ ಸ್ವಾತಂತ್ರ್ಯವನ್ನು ಅನುಭವಿಸತೊಡಗಿದರು. ಆದರೆ ಅವರು ಕೈಗೊಂಡ ಮತಾಂಧ ಧೋರಣೆಯ ಪ್ರತಿಫಲವಾಗಿ ಮಿಶನರಿಗಳಿಗೆ ದೇಶೀಯ ಜನರು ಹಿಂಸೆ ಕೊಡಲು ಪ್ರಾರಂಭಿಸಿದರು. ಇದರಿಂದ ಹಲವು ಮಿಶನರಿಗಳು ಚೀನಾವನ್ನು ಬಿಡಬೇಕಾಯಿತು. ಆದರೆ ೧೮೪೨ರಲ್ಲಿ ಮುಗಿದ ‘ಅಫೀಮು ಯುದ್ಧದ’’ ನಂತರ ಮಿಶನರಿಗಳ ಹಿಂಸೆ ಸ್ಥಗಿತಗೊಂಡಿತು. ೧೮೬೦ರ ಪೀಕಿಂಗ್ ಒಪ್ಪಂದದಿಂದ ಕ್ರೈಸ್ತ ಧರ್ಮದ ಪ್ರಚಾರ ಸ್ವಾತಂತ್ರ್ಯವನ್ನು ಕಾನೂನು ಬದ್ಧವಾಗಿ ಮಾಂಚು ಸರಕಾರದಿಂದ ಪಡೆದುಕೊಂಡರು. ಇದರ ಫಲಿತಾಂಶದಿಂದಾಗಿ ರೋಮನ್ ಕೆಥೋಲಿಕ್ ಮತ್ತು ಪ್ರೊಟೆಸ್ಟೆಂಟ್ ಮಿಶನರಿಗಳು ಪ್ರತಿಯೊಂದು ಹಳ್ಳಿ ಮತ್ತು ಪಟ್ಟಣ ಗಳನ್ನು ಆಕ್ರಮಿಸಿ, ಚರ್ಚ್ ಕಟ್ಟಡಗಳನ್ನು, ಶಾಲೆಗಳನ್ನು, ಆಸ್ಪತ್ರೆಗಳನ್ನು ನಿರ್ಮಿಸಿದರು. ಲೋಕೋಪಕಾರಿಗಳಾದ ಈ ಮಿಶನರಿಗಳು ಅನಾಥ ಮಕ್ಕಳ ಬೆಳವಣಿಗೆ, ಬರಗಾಲ ಪೀಡಿತ ಜನರ ಸಹಾಯಕ್ಕೆ ನೆರವಾದರು ಮತ್ತು ಕ್ರೈಸ್ತ ಸಾಹಿತ್ಯದ ಪುಸ್ತಕಗಳನ್ನು ಸ್ಥಳೀಯ ಜನರಿಗೆ ಸರಬರಾಜು ಮಾಡಿದರು. ಈ ಕಾರಣದಿಂದಾಗಿ ಕ್ರೈಸ್ತ ಧರ್ಮದ ಅನುಯಾಯಿಗಳು ಸುಮಾರು ಮೂರು ಮಿಲಿಯದಷ್ಟಾದರು. ಜೊತೆಗೆ ಇವರು ದೇಶದ ರಾಜಕೀಯ ಮತ್ತು ಶಿಕ್ಷಣ ವ್ಯವಸ್ಥೆಯೊಳಗೆ ವಿಲೀನಗೊಂಡು ಬಹುದೊಡ್ಡ ಶಕ್ತಿಯಾಗಿ ಮಾರ್ಪಟ್ಟರು. ಈ ಸಮ್ಮಿಲನದಿಂದಾಗಿ ಜೈನಿಗಳು ಪಾಶ್ಚಾತ್ಯ ಶಿಕ್ಷಣ ಮಾಧ್ಯಮದಲ್ಲಿ ತರಬೇತಿ ಹೊಂದಿದರು. ಶಿಕ್ಷಣ ಒಂದು ಮಾಧ್ಯಮವಾಗಿ ವಿದೇಶಿ ಸಂಸ್ಕೃತಿ, ಆರ್ಥಿಕ ವ್ಯವಸ್ಥೆ, ಕೈಗಾರೀಕರಣ, ವೈಜ್ಞಾನಿಕ ತಂತ್ರಜ್ಞಾನಗಳನ್ನು ಪಡೆಯಲು ಸಹಕಾರಿಯಾಯಿತು. ಜೊತೆಗೆ ಚಿಂತನಾತ್ಮಕ ತತ್ವಗಳು ಚೈನಿ ಸಮಾಜಕ್ಕೆ ಪ್ರವೇಶವಾಗಿತ್ತು. ಇದರಿಂದ ನಿಧಾನವಾಗಿ ದೇಶೀಯ ಸಂಸ್ಥೆಗಳು, ರಚನೆಗಳು ದುರ್ಬಲಗೊಂಡು ಹೊಸ ವ್ಯವಸ್ಥೆಯ ಆಗಮನಕ್ಕೆ ಅನುವು ಮಾಡಿಕೊಟ್ಟಿತು. ಈ ಬದಲಾವಣೆಯು ಕ್ರಾಂತಿರೂಪ ತಾಳಿ ಚಳವಳಿಗಳು ಕ್ರಮೇಣ ದೇಶದಾದ್ಯಂತ ಹುಟ್ಟಿಕೊಂಡವು. ತೈಪಿಂಗ್ ದಂಗೆಯು ಆಧುನಿಕ ಚೀನಾದಲ್ಲಿ ನಡೆದ ಸುಸಂಘಟಿತ ರೈತ ಚಳವಳಿಯು ಈ ಬದಲಾವಣೆಯ ಉದಾಹರಣೆ ಎನ್ನಬಹುದು. ಮಿಶನರಿಗಳಿಂದಲೇ ಶಿಕ್ಷಣ ಪಡೆದ ಸನ್-ಯಾತ್-ಸೇನ್ ಒಬ್ಬ ಕ್ರಾಂತಿಕಾರಿ ಸುಧಾರಕನಾಗಿ ಪರಿವರ್ತನೆಗೊಂಡಿರುವುದು ಈ ಮಿಶನರಿ ಚಟುವಟಿಕೆಯ ಫಲಿತಾಂಶ ಎನ್ನಬಹುದು.

ಜಪಾನ್‌ನಲ್ಲಿ ಅಧಿಕೃತವಾಗಿ ೧೫೪೯ರಲ್ಲಿ ಫ್ರಾನ್ಸಿಸ್ ಕ್ಸೇವಿಯರ್‌ನ ನೇತೃತ್ವದಲ್ಲಿ ಕ್ರೈಸ್ತ ಮಿಶನರಿಗಳ ಆಗಮನವಾದರೂ ಸಹ, ಪರೋಕ್ಷವಾಗಿ ಕ್ರೈಸ್ತಧರ್ಮದ ಪ್ರಚಾರ ಒಂದು ಶತಮಾನಕ್ಕಿಂತಲೂ ಮೊದಲೇ ಪ್ರಚಾರವಾಗುತ್ತಿದ್ದು, ಪಾಶ್ಚಾತ್ಯ ಚಿಂತನೆಗಳ ಪ್ರಭಾವ ಜಪಾನ್ ದೇಶದಲ್ಲಿ ಕಂಡುಬಂದಿತ್ತು. ಆದರೆ ೧೬೩೮ರಲ್ಲಿ ಜಪಾನ್ ಸರಕಾರವು ದೇಶದ ಸ್ವಾವಲಂಬನೆ ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಂಡು ವಿದೇಶಿಯರ ಆಕ್ರಮಣ ವನ್ನು ತಡೆಗಟ್ಟಲು ಪ್ರತ್ಯೇಕ ಕಾನೂನು ಕಾಯ್ದೆಯನ್ನು ಅನುಷ್ಠಾನಗೊಳಿಸಿತು. ಏಕೆಂದರೆ ಮಿಶನರಿಗಳು ಕೈಗೊಳ್ಳುವ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ವಿದೇಶಿ ಸಂಸ್ಕೃತಿಯ ಆಕ್ರಮಣವಾಗಿ ದೇಶೀಯ ಸಂಸ್ಕೃತಿ ಮತ್ತು ನಾಗರಿಕತೆಗೆ ಧಕ್ಕೆ ಉಂಟಾಗಬಹುದೆಂಬ ಭಯದ ವಾತಾವರಣವಿದ್ದು ಮಿಶನರಿ ಚಟುವಟಿಕೆಗಳ ಸೀಮಿತವನ್ನು ಸರಕಾರವು ಕಡಿಮೆ ಮಾಡಿತು. ನಂತರ ೧೯ನೆಯ ಶತಮಾನದ ಮಧ್ಯಭಾಗದಿಂದ ವಿದೇಶಿಯರ ವ್ಯಾಪಾರಕ್ಕೆ ಪುನಃ ಜಪಾನ್ ದೇಶದ ಬಾಗಿಲು ತೆರೆಯಲಾಯಿತು. ಇದು ಕ್ರಿಶ್ಚಿಯನ್ ಮಿಶನರಿಗಳಿಗೆ ಪುನಃ ಶೈಕ್ಷಣಿಕ ಹಾಗೂ ಧಾರ್ಮಿಕ ಚಟುವಟಿಕೆಗಳ ಪ್ರಚಾರ ಕೈಗೊಳ್ಳಲು, ಜಪಾನ್ ‘ಶೋಗುನೆಯಟ್’ ಸರಕಾರದ ಅನುಮತಿ ದೊರೆಯಿತು. ಮಿಶನರಿಗಳ ವಿರುದ್ಧ ದೇಶೀಯ ಮಟ್ಟದಲ್ಲಿ ಆಕ್ರಮಣ ಮುಂದುವರಿದರೂ ಸಹ ವಸಾಹತು ರಾಷ್ಟ್ರಗಳ ಒತ್ತಡದಿಂದ ಜಪಾನ್ ಮೇಜಿ ಸರಕಾರ ೧೮೭೩ರಲ್ಲಿ ಅಧಿಕೃತವಾಗಿ ಕ್ರೈಸ್ತ ಧರ್ಮ ಪ್ರಚಾರಕ್ಕೆ ಅವಕಾಶ ದೊರೆಯಿತು. ನಂತರದ ದಿನಗಳಲ್ಲಿ ವಿದೇಶಿಯರ ಚಟುವಟಿಕೆಗಳು ಕೇವಲ ದೇವಜ್ಞಾನಶಾಸ್ತ್ರ ಚಿಂತನೆಗಳ ಪ್ರಚಾರಕ್ಕೆ ಸೀಮಿತವಾಗಿರದೆ ಚರ್ಚ್ ಸಂಘಟನೆಗಳು ಸಾಮಾಜಿಕ ಕಾರ್ಯಗಳೊಂದಿಗೆ ನೈತಿಕವಾಗಿ ಪರಿಣಾಮಕಾರಿ ಕೆಲಸ ಮಾಡತೊಡಗಿದವು. ಇದರಿಂದ ಜಪಾನಿನಲ್ಲಿ ಪ್ರಚಲಿತವಿದ್ದ ಏಕಪತ್ನಿ ವ್ರತ ಪದ್ಧತಿ, ವ್ಯಕ್ತಿತ್ವದ ಕಲ್ಪನೆ, ಗೌರವ ಮತ್ತು ಸಾಮಾಜಿಕ ಬದುಕಿನ ಮೂಲ ಅರ್ಥ ಎಲ್ಲವೂ ಪಾಶ್ಚಾತ್ಯ ಸಂಸ್ಕೃತಿಯ ಸಂಪರ್ಕದಿಂದ ಆಧುನೀಕರಿಸ ಲ್ಪಟ್ಟವು.

ಫಿಲಿಫೈನ್ಸ್‌ಗೆ ಈ ಯುಗದಲ್ಲಿ ಸ್ಪೈನೀಯರಿಂದ ಪ್ರಚಾರಗೊಂಡ ಕ್ರೈಸ್ತ ಧರ್ಮ ಮತ್ತು ಮತಾಂಧತೆ ಒಂದು ಮಹತ್ವಪೂರ್ಣ ಕೊಡುಗೆಯಾಗಿದೆ. ಫಿಲಿಫೈನಿಯರ ಸಾಮಾನ್ಯ ಸಾಮಾಜಿಕ ಜೀವನಕ್ರಮದೊಂದಿಗೆ ಸ್ಪೈನೀಯರು ಉತ್ತಮವಾಗಿ ಸಂಘಟಿಸಲ್ಪಟ್ಟ ಮತ್ತು ಆಕರ್ಷಕ ರೋಮನ್ ಕೆಥೋಲಿಕ್ ಚರ್ಚ್‌ನ ಸಂಪ್ರದಾಯಗಳನ್ನು ಬೇರೆ ಬೇರೆ ಕಡೆಗಳಲ್ಲಿ ಪ್ರಚಾರ ಮಾಡಿದರು. ಜೊತೆಗೆ ದೊಡ್ಡ ಕಲ್ಲುಗಳನ್ನು ಉಪಯೋಗಿಸಿ ಪ್ರಾರ್ಥನಾ ಮಂದಿರಗಳನ್ನು ಕಟ್ಟಿದರು. ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ದೃಷ್ಟಿಯಿಂದ ಫಿಲಿಪೈನೀ ಜನರ ಮೇಲೆ ಇವು ಉತ್ತಮ ಪರಿಣಾಮ ಬೀರಿದವು. ಇದಲ್ಲದೆ ಸ್ಪೈನೀ ಮಿಶನರಿಗಳು ವಾಸ್ತವಿಕವಾಗಿ ದೇಶೀಯ ಸಂಸ್ಕೃತಿಗಳನ್ನು ಭಾಗಶಃ ನಿರ್ಮೂಲನ ಮಾಡಲು ಪ್ರಯತ್ನ ನಡೆಸಿದರು. ಹಾಗಾಗಿ ಇಂದು ಫಿಲಿಫೈನ್ಸ್ ಒಂದು ಕ್ರಿಶ್ಚಿಯನ್ ರಾಷ್ಟ್ರವಾಗಿ ಬೆಳೆದಿರುವುದು.

ಇದಲ್ಲದೆ ಕ್ರಿಶ್ಚಿಯನ್ ಮಿಶನರಿಗಳು ದಕ್ಷಿಣ ಪೂರ್ವ ಏಷ್ಯಾದ ಎಲ್ಲ ಕಡೆಗಳಲ್ಲಿ ಸ್ಥಾಪಿಸಲ್ಪಟ್ಟು ಧಾರ್ಮಿಕ, ಆಧ್ಯಾತ್ಮಿಕ ಶೈಕ್ಷಣಿಕ ಮತ್ತು ಸಾಮಾಜಿಕ ಕೆಲಸಗಳನ್ನು ಯಶಸ್ವಿಯಾಗಿ ಮಾಡಿದವು. ಆ ಕಾರಣಕ್ಕಾಗಿಯೇ ಪೂರ್ವ ಮತ್ತು ದಕ್ಷಿಣಪೂರ್ವ ಏಷ್ಯಾ ದೇಶಗಳಾದ ಚೀನಾ, ಜಪಾನ್, ಮಲೇಶಿಯಾ, ಇಂಡೋನೇಶಿಯಾ, ಫಿಲಿಪೈನ್ಸ್, ಬರ್ಮಾ, ಇಂಡೋಚೀನಾ ಮತ್ತು ಇತರ ದೇಶಗಳಲ್ಲಿ ಕ್ರಿಶ್ಚಿಯನ್ ಶೈಕ್ಷಣಿಕ ಸಂಸ್ಥೆಗಳು ಇಂದಿಗೂ ಜೀವಂತವಾಗಿ ಉಳಿದಿವೆ ಮತ್ತು ಈ ಸಂಸ್ಥೆಗಳು ೧೮ ಮತ್ತು ೧೯ನೆಯ ಶತಮಾನಗಳಲ್ಲಿ ಈ ಎಲ್ಲ ದೇಶಗಳಲ್ಲಿ ಪಾಶ್ಚಾತ್ಯ ಚಿಂತನೆಗಳು ಸಮರ್ಪಕವಾಗಿ ಬೆಳೆಯಲು ಒಂದು ಮುಖ್ಯವಾದ ಮಾಧ್ಯಮವಾದವು.

ಈ ಮಿಶನರಿ ಚಟುವಟಿಕೆಯಿಂದ ಪೂರ್ವ ಮತ್ತು ದಕ್ಷಿಣಪೂರ್ವ ಏಷ್ಯಾ ದೇಶಗಳಲ್ಲಿ ಇಂಗ್ಲಿಷ್ ಶಿಕ್ಷಣದ ಆಗಮನವಾಯಿತು. ಚೀನಾದಲ್ಲಿ ಪ್ರಾಚೀನ ಕಾಲದಿಂದಲೂ ಅಂದರೆ ಕನ್‌ಫ್ಯೂಶಿಯಸ್‌ನ ಕಾಲದಿಂದಲೂ ಶಿಕ್ಷಣಕ್ಕೆ ಜನರು ಸಾಕಷ್ಟು ಗೌರವ ಕೊಡುತ್ತಿದ್ದರು. ಆದರೆ ಐರೋಪ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಇಲ್ಲಿ ಶಿಕ್ಷಣ ಪದ್ಧತಿಯನ್ನು ಸಮರ್ಪಕವಾದ ಮಾರ್ಗದಲ್ಲಿ ಸಂಘಟಿಸಿರಲಿಲ್ಲ. ಚೀನಾದಲ್ಲಿ ಸಂಪ್ರದಾಯ ಶಿಕ್ಷಣ ಪದ್ಧತಿಯು ಮಾನವನ ವ್ಯಕ್ತಿತ್ವವನ್ನು ವಿಕಸಿಸಿ ಅವನ ಬೌದ್ದಿಕ ಬೆಳವಣಿಗೆಗೆ ಬಹಳಷ್ಟು ಮಹತ್ವವನ್ನು ಕೊಡಲಾಗುತ್ತಿತ್ತು. ಈ ಹೊತ್ತಿಗೆ ಮಿಶನರಿ ಮೂಲಕ ಆಕ್ರಮಿಸಿದ ಪಾಶ್ಚಾತ್ಯ ಶಿಕ್ಷಣ ಪದ್ಧತಿಯು ದೇಶೀಯ ಸಂಪ್ರದಾಯ ಶಿಕ್ಷಣ ಸಂಸ್ಥೆಯನ್ನು ದುರ್ಬಲಗೊಳಿಸಿ ಆಧುನಿಕ ಶೈಲಿಯಲ್ಲಿ ಅನೇಕ ಶಾಲೆ ಕಾಲೇಜುಗಳನ್ನು ಮತ್ತು ತರಬೇತಿಗಳನ್ನು ಸ್ಥಾಪಿಸಿ ಇಂಗ್ಲಿಷ್ ಶಿಕ್ಷಣವನ್ನು ಪ್ರವಚಿಸಲಾಯಿತು. ಮುಖ್ಯ ನಗರಗಳಾದ ಪೀಕಿಂಗ್, ಶಾಂಗೈ, ನಾನ್ ಕಿಂಗ್ ಮತ್ತು ಕ್ಯಾಂಟೋನ್‌ಗಳು ಆಧುನಿಕ ಶಿಕ್ಷಣ ಪ್ರಸಾರದ ಕೇಂದ್ರ ಬಿಂದುಗಳಾಗಿ ಬೆಳೆದವು. ಜಪಾನ್ ಮತ್ತು ಉಳಿದ ಶಿಕ್ಷಣ ಪ್ರಸಾರದ ಕೇಂದ್ರ ಬಿಂದುಗಳಾಗಿ ಬೆಳೆದವು. ಜಪಾನ್ ಮತ್ತು ಉಳಿದ ದಕ್ಷಿಣಪೂರ್ವ ಏಷ್ಯಾದ ಪ್ರದೇಶಗಳಲ್ಲೂ ವಿದೇಶಿ ಕ್ರೈಸ್ತ ಮಿಶನರಿಗಳ ಆಕ್ರಮಣವಾಗಿದ್ದು, ಧರ್ಮಪ್ರಚಾರ ಕಾರ್ಯದಲ್ಲಿ ಕಾರ್ಯಪ್ರವೃತ್ತವಾಗಿದ್ದವು. ಸ್ಥಳೀಯ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುವ ಧ್ಯೇಯ ಧೋರಣೆಯೊಂದಿಗೆ ಹಲವು ಸುಧಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪೂರ್ವ ಮತ್ತು ದಕ್ಷಿಣಪೂರ್ವ ಏಷ್ಯಾ ಜನರ ಜೀವನ ಕ್ರಮದ ಆಧುನೀಕರಣಕ್ಕೆ ಮಿಶನರಿಗಳ ಕೊಡುಗೆ ಅಪಾರವಾದದ್ದು. ಏಕೆಂದರೆ ಐರೋಪ್ಯ ರಾಷ್ಟ್ರಗಳ ಆಗಮನದ ಮೊದಲು ಈ ಎಲ್ಲ ಪ್ರಾಂತ್ಯಗಳಲ್ಲಿ ಊಳಿಗಮಾನ್ಯ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ಸಂಸ್ಥೆಗಳು ಪ್ರಚಲಿತವಿದ್ದು ಜನರು ಗತಕಾಲದ ಪೂರ್ವಗ್ರಹಪೀಡಿತ ಧೋರಣೆಯನ್ನು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡಿದ್ದರು. ಸಾಮಾಜಿಕ ವ್ಯವಸ್ಥೆಯು ಮೇಲುವರ್ಗ ಹಾಗೂ ಕೆಳವರ್ಗ ಎಂಬ ನೀಚ ಪದ್ಧತಿಯಿಂದ ವಿಭಜನೆಗೊಂಡಿತ್ತು. ಸಾಮಾನ್ಯ ಜನರ ಜೀವನ ಕ್ರಮವು ತೀರ ಹದಗೆಟ್ಟಿತ್ತು. ರಾಜಕೀಯ ಮತ್ತು ಆರ್ಥಿಕ ಚಟುವಟಿಕೆಗಳು ಪಟ್ಟಭದ್ರ ಹಿತಾಸಕ್ತಿಗಳ ಹಿಡಿತದಲ್ಲಿದ್ದು ಉತ್ಪಾದಿಸುವ ವರ್ಗವನ್ನು ಶೋಷಿಸುತ್ತಿದ್ದರು. ಐರೋಪ್ಯ ರಾಷ್ಟ್ರಗಳಲ್ಲಿ ಸಂಭವಿಸಿದ ಕ್ರಾಂತಿಕಾರಿ ಬದಲಾವಣೆಗಳು ೧೮ನೆಯ ಶತಮಾನದ ಆರಂಭದವರೆಗೆ ಯಾವುದೇ ರೀತಿಯ ಪ್ರಭಾವ ಬೀರಲಿಲ್ಲ. ವಂಶೀಯ ಆಡಳಿತ ವ್ಯವಸ್ಥೆ ಪ್ರಚಲಿತವಾಗಿತ್ತು, ಸಮಾನತೆಗೆ ಅವಕಾಶ ತುಂಬಾ ವಿರಳವಾಗಿತ್ತು. ನಿರಂಕುಶ ಪ್ರಭುತ್ವ ಸರಕಾರವು ಚಾಲ್ತಿಯಲ್ಲಿದ್ದು, ಸಾಮಾನ್ಯ ವರ್ಗದವರನ್ನು ಸಮಾಜದ ಆರ್ಥಿಕ, ರಾಜಕೀಯ ಚಟುವಟಿಕೆಗಳಿಂದ ದೂರವಿಟ್ಟಿತ್ತು. ಊಳಿಗಮಾನ್ಯ ಸಂಸ್ಥೆಗಳ ಇರುವಿಕೆಯಿಂದ ಆಳುವ ವರ್ಗವು ಸಂಪ್ರದಾಯವಾದಿ ಶಕ್ತಿಗಳ ದಬ್ಬಾಳಿಕೆಯನ್ನು ಪ್ರೋ ಅವರ ಪ್ರಭುತ್ವವನ್ನು ರಕ್ಷಿಸುತ್ತಿತ್ತು. ಪೂರ್ವಗ್ರಹ ಪೀಡಿತ ಆಳುವ ವಂಶ ಮತ್ತು ಅದನ್ನು ರಕ್ಷಿಸುವ ಶಕ್ತಿಗಳು ಆಧುನಿಕತೆಗೆ ಯಾವುದೇ ಪ್ರೋ ನೀಡದೇ ತಮ್ಮ ವೈಭವವನ್ನು ಸಾರುತ್ತಿದ್ದವು. ಸ್ವಾವಲಂಬನೆ, ಸ್ವಾತಂತ್ರ್ಯ ಮತ್ತು ಸಮಾನತೆಗೆ ಯಾವುದೇ ಒತ್ತು ಕೊಡದ ವಂಶೀಯ ಆಡಳಿತ ವ್ಯವಸ್ಥೆಯು ಪ್ರಜಸತ್ತಾತ್ಮಕ ಸರಕಾರದ ರಚನೆಗೆ ಬದಲು ೧೮ನೆಯ ಶತಮಾನ ದಿಂದ ವಿದೇಶೀಯರ ಆಕ್ರಮಣ ಮತ್ತು ಸ್ವಾಧೀನತೆಯನ್ನು ಸಹಿಸಿಕೊಂಡಿತು. ಜೊತೆಗೆ ಬಾಹ್ಯಶಕ್ತಿಗಳೊಂದಿಗೆ ಶಾಮೀಲಾಗಿ ಆಳುವ ವರ್ಗ ಮತ್ತು ಸಾಮಾನ್ಯ ವರ್ಗದ ನಡುವಿನ ಸಂಬಂಧವನ್ನು ಮತ್ತುಷ್ಟು ಬಿಗಡಾಯಿಸಿತು. ಐರೋಪ್ಯ ದೇಶಗಳ ಆಗಮನದಿಂದ ಮತ್ತು ಅವರೊಂದಿಗಿನ ವ್ಯಾಪಾರ ಸಂಬಂಧದ ಲಾಭ ಪಡೆಲು ದೇಶೀಯ ವರ್ತಕರು, ವ್ಯಾಪಾರಿಗಳು ಅತ್ಯಂತ ನಿಕಟ ಸಂಬಂಧವನ್ನು ಬೆಳೆಸಿಕೊಂಡರು. ಈ ಬೆಳವಣಿಗೆಗಳು ಎಲ್ಲಾ ಪೂರ್ವ ಏಷ್ಯಾ ದೇಶಗಳಲ್ಲಿ ನಡೆದಿತ್ತು. ಚೀನಾದಲ್ಲಿ ೧೮೪೦ರ ನಂತರ ಈ ಬದಲಾವಣೆ ಅಧಿಕೃತವಾಗಿ ಪ್ರಾರಂಭವಾಗಿದ್ದು, ಜಪಾನ್‌ನಲ್ಲಿ ೧೮೫೩ ರಿಂದ ಬೆಳೆಯಿತು. ಮಲೇಶಿಯಾದಲ್ಲಿ ಬ್ರಿಟಿಷರು ೧೯೨೪ರಿಂದ, ಇಂಡೋನೇಶಿಯಾದಲ್ಲಿ ಡಚ್ಚರು, ಇಂಡೋ-ಚೀನಾದಲ್ಲಿ ಫ್ರೆಂಚ್, ಫಿಲಿಪೈನ್ಸ್‌ನಲ್ಲಿ ಅಮೇರಿಕನ್ನರು, ಬರ್ಮಾದಲ್ಲಿ ಬ್ರಿಟಿಷರು-ಹೀಗೆ ಎಲ್ಲ ದೇಶಗಳಲ್ಲಿ ತಮ್ಮ ತಮ್ಮ ವ್ಯಾಪಾರ ಕೇಂದ್ರಗಳನ್ನು ತೆರೆದು ವಸಾಹತುಶಾಹಿ ಆಡಳಿತವನ್ನು ಸ್ಥಾಪಿಸಿ ಮಾದರಿ ವ್ಯವಸ್ಥೆಗಳ ಪ್ರಕ್ರಿಯೆ ಪ್ರಾರಂಭಿಸಿದರು.

ಈ ಬೆಳವಣಿಗೆ ವಿದೇಶಿಯರ ರಾಜಕೀಯ ಮತ್ತು ಆರ್ಥಿಕ ಪ್ರಭಾವದಿಂದ ಆಗಿರುತ್ತದೆ. ಇದರಿಂದ ನಿಧಾನಗತಿಯಲ್ಲಿ ದೇಶೀಯ ಸಂಪ್ರದಾಯ ಸಂಸ್ಥೆಗಳ ನಾಶ ಪ್ರಾರಂಭವಾಯಿತು. ಹಳೆಯ ಸಂಬಂಧಗಳು ಮುರಿಯಿತು. ಕಂದಾಯ ಪದ್ಧತಿಗಳು ನಿರ್ಮೂಲನವಾದವು. ರಾಜಕೀಯ ಸಂಸ್ಥೆಗಳು ಪರಿವರ್ತನೆಯಾಗತೊಡಗಿದವು. ಏಕೆಂದರೆ ವಸಾಹತುಶಾಹಿಗಳ ಹೊಸ ಬೇಡಿಕೆಗಳನ್ನು ಈಡೇರಿಸಲು ಪ್ರಾಚೀನ ಸಂಸ್ಥೆಗಳು ಮತ್ತು ಚಿಂತನೆಗಳಿಂದ ಅಸಾಧ್ಯವಾಗಿತ್ತು. ಅಂದರೆ ಪೂರ್ವ ಮತ್ತು ದಕ್ಷಿಣಪೂರ್ವ ಏಷ್ಯಾದಲ್ಲಿ ೧೮ ಮತ್ತು ೧೯ನೆಯ ಶತಮಾನದುದ್ದಕ್ಕೂ ಗಮನಾರ್ಹ ಬದಲಾವಣೆಗಳು ಕಂಡುಬಂದವು. ಒಂದು ಕಡೆಯಿಂದ ಕ್ರೈಸ್ತ ಮಿಶನರಿಗಳು ಧರ್ಮ ಪ್ರಚಾರದೊಂದಿಗೆ ಪಾಶ್ಚಾತ್ಯ ಶಿಕ್ಷಣ ಪ್ರಸಾರದ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡವು. ಸ್ಥಳೀಯ ಜನರಿಗೆ ಆಧುನಿಕ ಚಿಂತನೆಗಳ ಅರಿವಾಗಲು ಇದು ಒಂದು ಮಾಧ್ಯಮವಾಯಿತು. ಇನ್ನೊಂದು ಕಡೆಯಿಂದ ಪಾಶ್ಚಾತ್ಯ ತತ್ವಗಳ ಯಶಸ್ವೀ ಪ್ರವೇಶದಿಂದ ಸ್ಥಳೀಯ ವಿದ್ವಾಂಸರುಗಳು ಐರೋಪ್ಯ ರಾಷ್ಟ್ರಗಳಲ್ಲಾದ ಕ್ರಾಂತಿಕಾರಿ ಚಿಂತನೆಗಳು, ಅಲ್ಲಿ ಹುಟ್ಟಿಕೊಂಡ ಅನೇಕ ಕ್ರಾಂತಿಗಳ ಸ್ವರೂಪ ಮತ್ತು ಸೈದ್ಧಾಂತಿಕ ನಿಲುವುಗಳನ್ನು, ಧೋರಣೆಗಳನ್ನು ತಿಳಿದುಕೊಳ್ಳಲು ಮಿಶನರಿಗಳ ಚಟುವಟಿಕೆಗಳು ಪೂರಕವಾಗಿ ಕೆಲಸ ನಿರ್ವಹಿಸಿದವು. ಈ ರೀತಿಯ ಪ್ರಜ್ಞೆಯಿಂದಾಗಿ ತಮ್ಮ ದೇಶೀಯ ಆಡಳಿತ ವ್ಯವಸ್ಥೆಯ ವೈಫಲ್ಯದ ಬಗ್ಗೆ ಬಹಳಷ್ಟು ವಿಮರ್ಶೆಗಳು ನಡೆದವು. ಇವರು ತಮ್ಮ ದೇಶದೊಳಗೆ ಆಧುನೀಕರಣವನ್ನು ಅನುಷ್ಠಾನ ಗೊಳಿಸುವಲ್ಲಿ ಇರುವ ಅಡಚಣೆಗಳನ್ನು ಕೂಲಂಕಷವಾಗಿ ತಿಳಿದುಕೊಂಡರು ಮತ್ತು ವಿದೇಶಿಯರ ಆರ್ಥಿಕ ಮತ್ತು ರಾಜಕೀಯ ದಬ್ಬಾಳಿಕೆಯಿಂದಾಗಿ ಉಂಟಾದ ಹಾನಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ವಿದೇಶಿ ತತ್ವಗಳನ್ನು, ಚಿಂತನೆಗಳನ್ನು ಆಮದು ಮಾಡಿಕೊಂಡು ದೇಶೀಯ ಸಂಸ್ಥೆಗಳಲ್ಲಿ ಪರಿವರ್ತನೆಗಳನ್ನು ತರುವಲ್ಲಿ ಶ್ರಮಿಸಿದರು. ಈ ಕಾರಣಕ್ಕಾಗಿ ಚೀನಾ, ಜಪಾನ್ ಮತ್ತು ದಕ್ಷಿಣಪೂರ್ವ ಏಷ್ಯಾ ದೇಶಗಳಲ್ಲಿ ಅನೇಕ ದಂಗೆಗಳು, ಸುಧಾರಣಾ ಚಳವಳಿಗಳು ಪ್ರಾರಂಭವಾದವು. ಈ ಬೆಳವಣಿಗೆಗಳು ೧೯ನೆಯ ಶತಮಾನದಲ್ಲಿ ಪ್ರಚಲಿತವಾದವು.

೧೯ನೆಯ ಶತಮಾನದಲ್ಲಿ ಚೀನಾ

ಮಿಶನರಿ ಚಟುವಟಿಕೆಗಳ ಮೂಲಕ ಚೀನಾ ದೇಶ ಐರೋಪ್ಯ ರಾಷ್ಟ್ರಗಳೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದರೂ ಕೂಡ, ನಿಜವಾದ ಅರ್ಥದಲ್ಲಿ ವಸಾಹತುಶಾಹಿಯ ಕೇಂದ್ರಗಳು ಪೂರ್ವ ಏಷ್ಯಾದಲ್ಲಿ(ಚೀನಾದಲ್ಲಿ) ಪ್ರಾರಂಭವಾಗಿರುವುದು ೧೯ನೆಯ ಶತಮಾನದ ಎರಡನೆಯ ಭಾಗದಿಂದ. ೧೮೩೯-೪೨ರ ನಡುವೆ ನಡೆದ ಮೊದಲ ಅಫೀಮು ಯುದ್ಧದ ಸೋಲಿನಿಂದಾಗಿ ಮಾಂಚು ವಂಶದ ಅವನತಿಯ ಜೊತೆಗೆ ಪಾಶ್ಚಾತ್ಯ ಚಿಂತನೆಗಳು ಪ್ರವೇಶ ಮಾಡಿ ಚೀನಾದ ಸಮಾಜ, ದೇಶೀಯ ಸಂಸ್ಥೆಗಳು ಮತ್ತು ವಂಶೀಯ ಆಧಿಪತ್ಯದ ಪತನಕ್ಕೆ ಅಡಿಪಾಯ ಹಾಕಿತು. ಈ ಹೊತ್ತಿಗೆ ಐರೋಪ್ಯ ರಾಷ್ಟ್ರಗಳ ಸಾಮ್ರಾಜ್ಯಶಾಹಿ ಧೋರಣೆಯು ಮಾಂಚು ವಂಶದವರನ್ನು ಸಾಮಾನ್ಯ ಜನರಿಂದ ದೂರ ಮಾಡಿತು. ಈ ವಂಶೀಯ ಆಡಳಿತ ಚಕ್ರವು ಒಂದು ಕಾಲದಲ್ಲಿ ಮಾಂಚು ದೊರೆಗಳನ್ನು ಉತ್ತುಂಗಕ್ಕೆ ಏರಿಸಿದ್ದರೂ ಕೂಡ ಅದೇ ಚಕ್ರ ಅವರನ್ನು ದಿಢೀರನೆಯ ಕೆಳದರ್ಜೆಗೆ ತಳ್ಳಿತು.

೧೯ನೆಯ ಶತಮಾನದ ಮೊದಲರ್ಧದವರೆಗೂ ಚೀನಾದ ಆಡಳಿತ ವ್ಯವಸ್ಥೆಯು ಭ್ರಷ್ಟಾಚಾರದಿಂದ ಕೂಡಿತ್ತು. ಶೋಷಣೆ, ದಬ್ಬಾಳಿಕೆ ಮತ್ತು ಲಂಚಕೋರತನವು ಆಡಳಿತ ಪದ್ಧತಿಯ ಕಲೆ ಹಾಗೂ ಸಂಸ್ಥೆಯಾಗಿ ಬೆಳೆದಿತ್ತು. ಭಿನ್ನಾಭಿಪ್ರಾಯ ಮತ್ತು ಪರಸ್ಪರ ಅಪನಂಬಿಕೆಯಿಂದಾಗಿ ರಾಜಕೀಯ ರಂಗದಲ್ಲಿ ಅಭದ್ರತಾ ವಾತಾವರಣ ನಿರ್ಮಾಣವಾಗಿ ಮಾಂಚು ವಂಶದ ಆಧಿಪತ್ಯಕ್ಕೆ ಧಕ್ಕೆ ಉಂಟುಮಾಡಿತ್ತು. ಈ ಕಾರಣದಿಂದ ರಾಜಂಗವನ್ನು ಪಟ್ಟಭದ್ರ ಹಿತಾಸಕ್ತಿಗಳಿಗೆ ಮಾರಿಕೊಳ್ಳುವ ಸಂದಿಗ್ಧ ಪರಿಸ್ಥಿತಿ ಸೃಷ್ಟಿಯಾಗಿದ್ದು, ಕೌಶಲ್ಯದ ಬದಲು ಆರ್ಥಿಕ ಬಲದ ಮೇಲೆ ಎಲ್ಲವೂ ನಿರ್ಧರಿಸಲ್ಪಟ್ಟಿತ್ತು. ಅಧರ್ಮ, ಒಳಸಂಚು, ದುಂದುವೆಚ್ಚ, ಹೊಣೆಗೇಡಿತನ ಮತ್ತು ಬೇಜವಾಬ್ದಾರಿಯಿಂದ ಕೂಡಿದ್ದ ಆಸ್ಥಾನದ ಅಧಿಕಾರಿಗಳು ಭ್ರಮೆ ಮತ್ತು ಕಲ್ಪನಾಲೋಕದಲ್ಲಿ ಮುಳುಗಿದ್ದು, ಕೆಳದರ್ಜೆಯ ಅಧಿಕಾರಿಗಳು ಸಹ ಅದನ್ನೇ ಪಾಲಿಸುತ್ತಿದ್ದರು. ನಗರಾಡಳಿತವು ಪ್ರಾಂತೀಯ ಆಡಳಿತಕ್ಕೆ ಯಾವುದೇ ವ್ಯತ್ಯಾಸವಿಲ್ಲದೆ ಅಭಿವೃದ್ದಿಯತ್ತ ಗಮನ ಹರಿಸದಿದ್ದುದರಿಂದ ಬದಲಾಗುತ್ತಿರುವ ಸಮಾಜದ ಬೇಡಿಕೆಗಳಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸಲಿಲ್ಲ.

ಸಾಮಾಜಿಕ ಮತ್ತು ಆರ್ಥಿಕ ದುರ್ಬಲತೆಯು ಸಹ ಮಾಂಚು ವಂಶದ ಅವನತಿಗೆ ಕಾರಣವಾಗಿತ್ತು. ಬರಗಾಲ, ನೆರೆ ಹಾವಳಿ, ಅನಾವೃಷ್ಟಿ, ಉಪವಾಸ, ಕಾಯಿಲೆಗಳು ಮತ್ತು ಭ್ರಷ್ಟಾಚಾರದಿಂದಾಗಿ ಪ್ರಾದೇಶಿಕ ಮಟ್ಟದಲ್ಲಿ ದಂಗೆಗಳು, ವಿರೋಧಿ ಚಳವಳಿಗಳು ಪ್ರಾರಂಭವಾಗಿ ವಿಭಿನ್ನ ರೀತಿಯ ಗುಪ್ತಚಾರಿ ಗುಂಪುಗಳು ೧೯ನೆಯ ಶತಮಾನದಲ್ಲಿ ಹುಟ್ಟಿಕೊಂಡವು.

ಮಾಂಚುಗಳ ನಿರಂಕುಶ ಪ್ರಭುತ್ವದ ಪ್ರಭಾವ ಮತ್ತು ಉಪಯುಕ್ತವಲ್ಲದ ಶಿಕ್ಷಣ ಪದ್ಧತಿಯಿಂದ ಚೀನಾದ ಒಟ್ಟು ಬೌದ್ದಿಕ ಬೆಳವಣಿಗೆ ಕುಂಠಿತವಾಗಿ ಅದು ನಿಷ್ಪ್ರಯೋಜಕ ವಾಯಿತು. ಉಲ್ಬಣಿಸುತ್ತಿರುವ ಸಮಸ್ಯೆಗಳಿಗೆ ಮಾಂಚು ಅಧಿಕಾರಿ ವರ್ಗವು ಗತಕಾಲದ ವೈಭವದ ಬಗ್ಗೆ ನಂಬಿಕೆಯಿಟ್ಟು ಸಾಂಪ್ರದಾಯಿಕ ಸುಧಾರಣೆ ಪದ್ಧತಿಯನ್ನು ಅನುಸರಿಸಿ ದೇಶ ಎದುರಿಸುತ್ತಿರುವ ಪ್ರಚಲಿತ ವಿದ್ಯಮಾನಗಳಿಗೆ ಉತ್ತರಿಸತೊಡಗಿತು. ಪರಿಪಕ್ವವಾದ ಮತ್ತು ಆಡಳಿತಾತ್ಮಕ ನೇತೃತ್ವ ಇಲ್ಲದ ಕಾರಣ ಆಡಳಿತ ವರ್ಗಗಳ ಸುಧಾರಣ ನೀತಿ ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸಿ ಕ್ರಾಂತಿಕಾರಿ ಚಳವಳಿಗಳಿಗೆ ಪ್ರೇರಣೆ ಕೊಟ್ಟಿತು.

ಮಾಂಚು ಅಧಿಕಾರಿಗಳ ಅಭದ್ರತಾ ನೀತಿ ಮತ್ತು ದುರಾಡಳಿತವು ದೇಶದ ಎಲ್ಲೆಡೆ ಅಪಸ್ವರ ಎಬ್ಬಿಸಿದ್ದು ಬಹಪಾಲು ಜನರು ಚಳವಳಿಯೇ ಇದಕ್ಕೆ ಉತ್ತರವೆಂದು ೧೯ನೆಯ ಶತಮಾನದ ಆರಂಭದಿಂದಲೇ ಕಂಡುಕೊಂಡಿದ್ದರು. ಏಕೆಂದರೆ ಪ್ರಭಾವಿತ ವಿದೇಶಿ ಬಂಡವಾಳಶಾಹಿಯ ಪ್ರವೇಶದ ಸಮಯದಲ್ಲಿ ಚೀನಾದ ಸಮಾಜವು ಸಂಪೂರ್ಣವಾಗಿ ರಾಜಕೀಯ ದುರ್ಬಲತೆಯ ಹೊಸಯುಗದ ಅಂಚಿನಲ್ಲಿತ್ತು. ನಂತರದ ದಿನಗಳಲ್ಲಿ ಐರೋಪ್ಯ ರಾಷ್ಟ್ರಗಳ ಅಗಮನದಿಂದಾಗಿ ಚೀನಾದಲ್ಲಿನ ವರ್ಗೀಕೃತ ಸಾಮಾಜಿಕ ವ್ಯವಸ್ಥೆಯು ರೂಪಾಂತರಗೊಂಡು ಆಂತರಿಕ ಸಮಸ್ಯೆಗಳನ್ನು ಮತ್ತಷ್ಟು ಜಟಿಲಗೊಳಿಸಿತು. ಅವರ ಆಗಮನದಿಂದ ಜನರು ಹೊಸ ವಿದ್ಯಮಾನಗಳ ಫಲಿತಾಂಶಗಳನ್ನು ಅನುಭವಿಸಿದ್ದಲ್ಲದೆ, ಸಮಾಜದ ಸಮಸ್ಯೆಗಳಿಗೆ ಸರಿಯಾದ ಪರಿಹಾರಗಳನ್ನು ಕಂಡುಕೊಳ್ಳಲು ಶಕ್ತರಾದರು.