ಸಾಮ್ರಾಜ್ಯಶಾಹಿ ಯುಗ ಮತ್ತು ದೇಶೀಯ ಬದಲಾವಣೆಗಳು

ಉಲ್ಬಣಿಸುತ್ತಿರುವ ಚೀನಾದ ರಾಜಕೀಯ ಬಿಕ್ಕಟ್ಟಿನ ಪ್ರಯೋಜನವನ್ನು ಪಡೆದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸೈನ್ಯವು ಚೀನಾದ ವಾಣಿಜ್ಯ ಮತ್ತು ವ್ಯಾಪಾರ ಕೇಂದ್ರವಾಗಿ ಕ್ಯಾಂಟೋನ್‌ನ ಮೇಲೆ ಯುದ್ಧ ಸಾರಿತು. ೧೮೩೯-೪೨ರಲ್ಲಿ ನಡೆದ ಈ ಯುದ್ಧಕ್ಕೆ ಮೊದಲ ‘‘ಅಫೀಮು ಯುದ್ಧ’’ವೆಂದು  ಕರೆಯಲಾಯಿತು. ಇದು ವಿದೇಶಿಯರ ಕೈಯಿಂದ ಆಧುನಿಕ ಯುಗದಲ್ಲಿ ಚೀನಾ ಅನುಭವಿಸಿದ ಮೊದಲ ಸೋಲಾಗಿದೆ. ಜೊತೆಗೆ ಒತ್ತಾಯ ಪೂರ್ವಕವಾಗಿ ಚೀನಾದ ಸಮಕಾಲೀನ ವ್ಯಾಪಾರ ಪದ್ಧತಿಯನ್ನು ಕೈಬಿಟ್ಟು ಎಲ್ಲ ಕೇಂದ್ರಗಳಲ್ಲಿ ವಿದೇಶೀಯರಿಗೆ ವ್ಯಾಪಾರ ಮತ್ತು ವಾಣಿಜ್ಯ ಸಂಬಂಧವನ್ನು ಈ ಕಾರಣಕ್ಕಾಗಿ ಬೆಳೆಸಲು ಅವಕಾಶ ಕಲ್ಪಿಸಲಾಯಿತು. ಹಾಂಗ್‌ಕಾಂಗ್, ಕ್ಯಾಂಟೋನ್, ನಿಂಗ್ ಪೋ, ಶಾಂಗೈ, ಪೂಚೋ ಮತ್ತು ಇನ್ನಿತರ ಪ್ರಾದೇಶಿಕ ಕೇಂದ್ರಗಳು ವಿದೇಶೀಯರ ಸ್ವಾಧೀನವಾಯಿತು. ಅಲ್ಲದೆ ಮಿಲಿಯಗಟ್ಟಲೆ ಹಣವನ್ನು ಚೀನಾದ ಸರಕಾರದಿಂದ (ಬ್ರಿಟಿಷರು ಯುದ್ಧದ ಸಮಯದಲ್ಲಿ ಅನುಭವಿಸಿದ ನಷ್ಟದ ಬಾಬ್ತು) ವಸೂಲಿ ಮಾಡಲಾಯಿತು. ಸರಕಾರದ ಬೊಕ್ಕಸದಲ್ಲಿ ಸಾಕಷ್ಟು ಹಣ ಇರದ ಕಾರಣ ಮಾಂಚು ಅಧಿಕಾರಿಗಳು ಹೆಚ್ಚುವರಿ ಕಂದಾಯ ವಸೂಲಿಯನ್ನು ರೈತರ ಮೇಲೆ ಹೇರಿದರು. ಇದು ರೈತರ ವಿರುದ್ಧವಾಗಿರುವುದರಿಂದ ೧೮೫೦ರ ನಂತರ ಅನೇಕ ರೈತರ ಚಳವಳಿಗಳು ಪ್ರಾರಂಭವಾದವು. ಇವುಗಳಲ್ಲಿ ಮುಖ್ಯವಾದವುಗಳು-ತೈಪಿಂಗ್ ರೈತ ಚಳವಳಿ(೧೮೫೦-೧೮೬೪), ನಿಯಾನ್ ದಂಗೆ(೧೮೫೧-೧೮೬೮), ಮುಸ್ಲಿಂ ದಂಗೆ (೧೮೫೫-೧೮೭೩) ಮತ್ತು ತುಂಗನ್ ದಂಗೆ(೧೮೬೨-೧೮೭೮).

ಬಂಡವಾಳಶಾಹಿ ದಬ್ಬಾಳಿಕೆಯಿಂದ, ದೇಶೀಯ ಮಾರುಕಟ್ಟೆಗಳು ವಿದೇಶಿ ಸಿದ್ಧವಸ್ತು ಗಳಿಂದ ತುಂಬಿದ್ದು ಸ್ಥಳೀಯ ವಸ್ತುಗಳ ಬೇಡಿಕೆ ನಿಧಾನವಾಗಿ ಇಳಿಮುಖವಾಯಿತು. ವಿದೇಶಿ ವ್ಯಾಪಾರಿಗಳು ಭಾರತದಿಂದ ತಂದ ಆಫೀಮನ್ನು ಚೀನಾದಲ್ಲಿ ಮಾರಾಟ ಮಾಡಲು ಪ್ರಾರಂಭ ಮಾಡಿದುದರಿಂದ ಉತ್ಪತ್ತಿಯಾಗುವ ಸಂಪತ್ತು ನೆಯರವಾಗಿ ವಿದೇಶಿಯರ ಜೇಬು ಸೇರುತ್ತಿತ್ತು. ಕೃಷಿ ಉತ್ಪನ್ನಗಳನ್ನು, ಆಹಾರ ವಸ್ತುಗಳನ್ನು, ಕಚ್ಚಾ ಸಂಬಾರುಗಳನ್ನು ದೋಚುವುದರೊಂದಿಗೆ ದೇಶೀಯ ಮಾರುಕಟ್ಟೆಯಲ್ಲಿ ವಿದೇಶಿಯರು ತಮ್ಮ ದೇಶದ ಸಿದ್ಧವಸ್ತುಗಳ ನಿರಂಕುಶ ಪ್ರಭುತ್ವವನ್ನು ಸಾಧಿಸಿದರು. ಇದರಿಂದ ಸಾಮಾನ್ಯ ಜನರು ಆಹಾರವಿಲ್ಲದೆ ಉಪವಾಸದಿಂದ ಸಾಯುವ ಪರಿಸ್ಥಿತಿ ಉಂಟಾಯಿತು. ದೇಶೀಯ ಕೈಗಾರಿಕೆಗಳು ಕಚ್ಚಾವಸ್ತುಗಳ ಕೊರತೆಯಿಂದಾಗಿ ನಶಿಸಲು ಪ್ರಾರಂಭಿಸಿದವು. ಕೈ ಕಸುಬುಗಾರರು, ನೆಯಕಾರರು ಮತ್ತು ಗುಡಿಕೈಗಾರಿಕೆಗಳು ತಮ್ಮ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿಲ್ಲದ ಕಾರಣ ಲಾಭಾಂಶದಲ್ಲಿ ಸಾಕಷ್ಟು ಏರುಪೇರು ಉಂಟಾಗಿ ಕಠಿಣ ಸಮಸ್ಯೆಗಳನ್ನು ಎದುರಿಸುವ ಅನಿವಾರ್ಯತೆ ಕಂಡುಬಂದಿತು. ಇದು ಮಾಂಚು ವಂಶೀಯ ಆಡಳಿತದ ದೌರ್ಬಲ್ಯ ಎಂದು ತಿಳಿದ ಜನರು ದೇಶದಾದ್ಯಂತ ದಂಗೆ ಏಳಲು ಪ್ರಾರಂಭಿಸಿ ದರು. ಇದರಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿ ಮಾಂಚು ಆಧಿಪತ್ಯದ ಅಂತ್ಯಕ್ಕೆ ಮೂಲ ಕಾರಣವಾಯಿತು.

ತನ್ನ ಪತನವನ್ನು ರಕ್ಷಿಸಿಕೊಳ್ಳಲು ಮಾಂಚು ಸರಕಾರ ೧೮೬೦ರ ನಂತರ ಸುಧಾರಣಾ ಕಾರ್ಯಕ್ರಮಗಳನ್ನು ಕೈಗೊಂಡಿತು. ಈ ಸುಧಾರಣೆಯು ಕೆಲವೇ ರಂಗಗಳಿಗೆ ಅನ್ವಯಿಸಿದ್ದು ಆಧುನಿಕ ಯುಗದಲ್ಲಿ ವಿದೇಶಿಯರಿಂದ ಮೊಟ್ಟಮೊದಲ ಸೋಲನ್ನು ಚೀನಾ ಎದುರಿಸಿದ್ದು ಮೊದಲ ಆಫೀಮು ಯುದ್ಧದಲ್ಲಿ. ನಂತರ ಚೀನಾ ಸಮಾಜದ ಸರಣಿ ದಂಗೆಗಳನ್ನು ಎದುರಿಸಬೇಕಾಯಿತು. ಚೈನೀ ಅಧಿಕಾರಿಗಳ ಪ್ರಕಾರ ಚೀನಾವು ಸಾಂಸ್ಕೃತಿಕವಾಗಿ, ಆರ್ಥಿಕ ವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ಶ್ರೀಮಂತವಾಗಿದ್ದು ಸೈನಿಕ ಬಲದಲ್ಲಿ ಮಾತ್ರ ಬಹಳ ದುರ್ಬಲವಾಗಿತ್ತು ಎಂಬ ಉದ್ಧಾಟತನ ಹೊರಬಿತ್ತು. ಈ ಕಾರಣಕ್ಕಾಗಿಯೇ ಚೀನಾ ವಿದೇಶಿಯರಿಂದ ಸೋಲನ್ನನುಭವಿಸಬೇಕಾಯಿತು ಮತ್ತು ಆಂತರಿಕ ಮಟ್ಟದಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಸಾಧಿಸಲು ಅಸಾಧ್ಯವಾಯಿತು.

ಈಗಾಗಲೇ ಹೇಳಿದಂತೆ ಮಿಶನರಿಗಳ ಪ್ರಭಾವ ಚೀನಾದ ಜನಸಾಮಾನ್ಯರ ಜೀವನ ಕ್ರಮವನ್ನು ಬದಲಿಸಿ ಅವರ ಚಿಂತನಾಶಕ್ತಿಗೆ ಒಂದು ಚಾಲನೆಯನ್ನು ನೀಡಿತ್ತು. ಇಂಗ್ಲಿಷ್ ಶಿಕ್ಷಣದ ಮೂಲಕ ಮಿಶನರಿಗಳು ವಿದೇಶಿ ಚಿಮತನೆಗಳ ಪ್ರಸಾರವನ್ನು ಈಗಾಗಲೇ ಮಾಡಿದ್ದು ಸಾಂಸ್ಥಿಕ ಮಟ್ಟದಲ್ಲಿ ಬದಲಾವಣೆ ತರಲು ಒತ್ತಡವನ್ನು ಹೇರುತ್ತಿತ್ತು. ಅನೇಕ ವೈಜ್ಞಾನಿಕ ಮತ್ತು ತಾಂತ್ರಿಕ ಪುಸ್ತಕಗಳನ್ನು ವಿದೇಶಿ ಭಾಷೆಯಿಂದ ಚೈನೀ ಭಾಷೆಗೆ ಭಾಷಾಂತರಿಸಲಾಗಿತ್ತು. ಇಂತಹ ಸಮಯದಲ್ಲಿ ಚೀನಾದ ಮಾಂಚು ಅಧಿಕಾರಿಗಳ ಸೈನ್ಯಾಂಗದ ಬದಲಾವಣೆಯ ಅನಿವಾರ್ಯತೆಯನ್ನು ಕಂಡುಕೊಂಡರು. ಈ ಹಿನ್ನೆಲೆಯಲ್ಲಿ ೧೮೬೦ರ ದಶಕದಲ್ಲಿ ಹುಟ್ಟಿಕೊಂಡ ಸುಧಾರಣಾ ಚಲುವಳಿಯನ್ನು ಸೆಲ್ಫ್ ಸ್ಪ್ರೆಂತನಿಂಗ್  ಚಳವಳಿಯೆಂದು ಕರೆಯಲಾಯಿತು. ಈ ಸುಧಾರಣೆಯ ನೀತಿಯ ಪ್ರಕಾರ ಮಾಂಚು ಸರಕಾರವು ತನ್ನ ದೇಶದ ಸೈನಿಕ ಶಕ್ತಿಯನ್ನು ಬಲಪಡಿಸಿಕೊಂಡು ವಿದೇಶಿಯರ ಆಕ್ರಮಣವನ್ನು ಹತ್ತಿಕ್ಕಿ, ದೇಶೀಯ ದಂಗೆಗಳನ್ನು ನಿಗ್ರಹಿಸುವ ಪ್ರಯತ್ನವನ್ನು ಮಾಡಿತು. ಬೇರೆ ಯಾವುದೇ ಸಂಸ್ಥೆಗಳು ಮಾರ್ಪಾಡಿನ ಅವಶ್ಯಕತೆ ಕಂಡುಕೊಳ್ಳಲು ಶಕ್ತಿಹೀನವಾದ ಮಾಂಚು ಅಧಿಕಾರಿ ವರ್ಗ, ಕೇವಲ ಸೈನಿಕರ ತರಬೇತಿ ಮತ್ತು ಉತ್ತಮ ಮಟ್ಟದ ಗುಂಡು ಮದ್ದು ಉತ್ಪಾದನೆಗೆ ಆದ್ಯತೆಯನ್ನು ಕೊಟ್ಟಿತು. ಅನೇಕ ಕಾರ್ಖಾನೆಗಳನ್ನು ತೆಗೆದು ಸಿಡಿಮದ್ದು ಮತ್ತು ಕೋವಿಗಳ ಉತ್ಪಾದನೆ ಯನ್ನು ಮಾಡಲಾಯಿತು. ವಿದೇಶಿ ತರಬೇತಿ ಗಾರರನ್ನು, ಅಧಿಕಾರಿಗಳನ್ನು ಸ್ವಾಗತಿಸಿ ಚೀನಾದ ಸೈನಿಕರ ತರಬೇತಿಯನ್ನು ಕೈಗೊಳ್ಳಲಾಯಿತು. ನೌಕಾದಳ ಮತ್ತು ವಾಯುದಳದ ಬೆಳವಣಿಗೆಗೆ ವಿದೇಶಿಯ ಸಹಾಯವನ್ನು ಪಡೆಯಲಾಯಿತು. ಅನೇಕ ಮಿಲಿಟರಿ ಅಕಾಡೆಮಿಗಳನ್ನು, ಸೈನಿಕ ತರಬೇತಿ ಶಾಲೆಗಳನ್ನು ತೆರೆಯಲಾಯಿತು. ಒಂದರ್ಥದಲ್ಲಿ ಈ ರೀತಿಯ ಕ್ರಾಂತಿಕಾರಿ ಹೆಜ್ಜೆಯಿಂದ ಚೀನಾದ ಸ್ಥಳೀಯ ಸೈನಿಕ ಸಂಸ್ಥೆಗಳು ರೂಪಾಂತರ ಗೊಂಡವು. ವೈಜ್ಞಾನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದರಿಂದ ಚೀನಾದ ಸೈನ್ಯಾಂಗ ರಚನೆಯು ಆಧುನಿಕ ಗುಣಮಟ್ಟವನ್ನು ಹೊಂದಲು ಸಹಕಾರಿಯಾಯಿತು.

ಚೀನಾದ ಸೈನಿಕ ಸುಧಾರಣೆಯ ಯಶಸ್ಸು ಅಥವಾ ಸೋಲು ೧೮೯೫ರಲ್ಲಿ ನಡೆದ ಸೈನೋ-ಜಪಾನೀಸ್(ಚೀನಾ-ಜಪಾನ್) ಯುದ್ಧದಲ್ಲಿ ಬೆಳಕಿಗೆ ಬಂತು. ಇದರಲ್ಲಿ ಚೀನಾವು ತನ್ನ ಹತ್ತಿರದ ಜಪಾನ್ ದೇಶದ ಎದುರು ಹೀನಾಯ ಸೋಲನ್ನು ಅನುಭವಿಸಿತು. ಜೊತೆಗೆ, ಜಪಾನ್ ದೇಶವು ಚೀನಾದ ಅಧೀನದಲ್ಲಿದ್ದ ಕೊರಿಯಾ ಮತ್ತು ತೈವಾನ್‌ನಲ್ಲಿ ತನ್ನ ಹೊಸ ವಸಾಹತನ್ನು ಸ್ಥಾಪಿಸಿತು. ಜಪಾನಿನ ವಸಾಹತೀಕರಣದ ಸಾಧನೆ ಮತ್ತು ಸ್ವರೂಪವನ್ನು ನೋಡಿದರೆ ಚೀನಾ ಸರಕಾರದ ಸೈನಿಕ ಸುಧಾರಣೆ ನೀತಿಯ ವೈಫಲ್ಯವು ಎದ್ದು ಕಾಣುತ್ತದೆ. ಈ ಸುಧಾರಣೆ ಪರಿಪೂರ್ಣವಾದ ಫಲಿತಾಂಶ ಪಡೆಯಲು ಅಶಕ್ತ ವಾಯಿತು. ಇದನ್ನು ಪರಿಶೀಲಿಸಿದ ಸಮಕಾಲೀನ ಐರೋಪ್ಯ ವಸಾಹತುಶಾಹಿ ರಾಷ್ಟ್ರಗಳು ಜಪಾನ್‌ನಂತೆ ತಮ್ಮ ತಮ್ಮ ವಸಾಹತುಗಳನ್ನು ಕ್ರೋಡೀಕರಿಸಿದವು. ರಷ್ಯಾ ಮಂಚೂರಿಯಾದಲ್ಲಿ, ಇಂಗ್ಲೆಂಡ್ ಮಧ್ಯ ಚೀನಾದಲ್ಲಿ, ಫ್ರಾನ್ಸ್ ದಕ್ಷಿಣ ಚೀನಾದಲ್ಲಿ ಮತ್ತು ಜರ್ಮನಿ ಪೂರ್ವ ಚೀನಾದಲ್ಲಿ ಪ್ರಭುತ್ವವನ್ನು ಸಾಧಿಸಿದವು. ಇದರಿಂದ ಮಾಂಚು ಸರಕಾರ ದೇಶದ ವಿಭಜನೆಗೆ ಎಡೆ ಮಾಡಿದುದಲ್ಲದೆ, ತನ್ನನ್ನು ತಾನು ವಿದೇಶಿಯರಿಗೆ ಮಾರಿಕೊಂಡಿತು. ತನ್ನ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯನ್ನು ಕಳೆದುಕೊಂಡಿತು.

ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಣ್ಣ ವರ್ಗದ ವಿದ್ವಾಂಸರು, ರಾಷ್ಟ್ರೀಯ ಚಳವಳಿಯನ್ನು ಪ್ರಾರಂಭಿಸಿದರು. ಸನ್-ಯಾತ್-ಸೇನ್‌ರಂತಹ ಕ್ರಾಂತಿಕಾರಿ ನೇತಾರರು ಪಾಶ್ಚಾತ್ಯ ಚಿಂತನೆಗಳು ಮತ್ತು ತತ್ವಗಳನ್ನು ಅಳವಡಿಸಿಕೊಂಡು, ಮಾಂಚು ಮತ್ತು ಸಾಮ್ರಾಜ್ಯಶಾಹಿ ವಿರೋಧಿ ಚಳವಳಿಯನ್ನು ದೇಶದ ಉದ್ದಗಲಕ್ಕೂ ಪಸರಿಸಿದರು. ದೇಶಿಯ ಜನರನ್ನು ಸಂಘಟಿಸಿ ಗತಕಾಲದ ಸಂಸ್ಥೆಗಳ ಬದಲಾವಣೆಗೋಸ್ಕರ ಮಾಂಚು ಸರಕಾರದ ಪತನ ಅನಿವಾರ್ಯವೆಂದು ಸಾರಿದರು. ಪ್ರತಿಯೊಬ್ಬ ಪ್ರಜೆಯಲ್ಲಿ ದೇಶದ ಬಿಕ್ಕಟ್ಟಿನ ಬಗ್ಗೆ, ಮಾಂಚು ಅಧಿಕಾರಶಾಹಿ ಮತ್ತು ನಿರಂಕುಶಪ್ರಭುತ್ವ ಆಧಿಪತ್ಯ ಮತ್ತು ವಿದೇಶಿಯರ ಶೋಷಣೆ, ದಬ್ಬಾಳಿಕೆಯ ಬಗ್ಗೆ ಅರಿವು ಮೂಡಿಸಿ ರಾಷ್ಟ್ರೀಯ ಭಾವನೆಯನ್ನು ಮೂಡಿಸಿದರು. ಇದು ರಾಷ್ಟ್ರೀಯವಾದಿ ಚಳವಳಿಯಾಗಿದ್ದು ಆಂತರಿಕ ಸಂಸ್ಥೆಗಳಲ್ಲಿ ಬದಲಾವಣೆ ತರುವುದು ಮೂಲ ಉದ್ದೇಶವಾಗಿತ್ತು. ಊಳಿಗಮಾನ್ಯ ಪದ್ಧತಿ, ವರ್ಗೀಕರಣ ನೀತಿ, ನಿರಂಕುಶ ಪ್ರಭುತ್ವವನ್ನು ನಿರ್ಮೂಲನ ಮಾಡಿ ಪ್ರಜಸತ್ತಾತ್ಮಕ ಸರಕಾರದ ರಚನೆ ಈ ರಾಷ್ಟ್ರೀಯವಾದದ ಉದ್ದೇಶಿತ ಗುರಿಯಾಗಿತ್ತು. ೧೯ನೆಯ ಶತಮಾನದ ಕೊನೆಯ ದಶಕದಲ್ಲಿ ಪ್ರಾರಂಭವಾದ ಈ ಚಳವಳಿಯ ಪ್ರಭಾವವು ದೇಶವ್ಯಾಪಿ ಹರಡಿದ್ದು ಎಲ್ಲ ವರ್ಗದ ಜನರನ್ನು ಸಂಘಟಿಸಿ ಮಾಂಚು ಅಧಿಕಾರದ ಪತನಕ್ಕೆ ಕಾರಣವಾಯಿತು. ಇದು ಯಾವುದೇ ಒಂದು ರಂಗದ ಬದಲಾವಣೆಯ ಪ್ರಯತ್ನವಲ್ಲ, ಬದಲಾಗಿ, ಎಲ್ಲ ಸಂಸ್ಥೆಗಳನ್ನು ರೂಪಾಂತರಗೊಳಿಸಿ ವಿದೇಶಿ ಮಾದರಿಯ ರಾಜಕೀಯ ಸಂಸ್ಥೆಗಳ ಸ್ಥಾಪನೆಯು ಪ್ರಾಮುಖ್ಯವಾಗಿದ್ದು, ಸಾಂವಿಧಾನಿಕ ಮಾದರಿಯ ಸರಕಾರದ ರಚನೆಗೆ ಒಕ್ಕೊರಲ ಧ್ವನಿ ಸೇರಿತ್ತು. ನಂತರದ ದಿನಗಳಲ್ಲಿ ಕಂಡುಬಂದ ಚೀನಾದ ಉಗ್ರ ಚಳವಳಿಗಳ ಸ್ವರೂಪ ಗಮನಾರ್ಹವಾದುದು. ಸೈದ್ಧಾಂತಿಕವಾಗಿ ಬೇರೆ ಬೇರೆ ಚಿಂತನೆಗಳ ಪ್ರಭಾವವನ್ನೂ ಈ ಸಂದರ್ಭದಲ್ಲಿ ನಾವು ನೋಡಬಹುದು.

೧೯ನೆಯ ಶತಮಾನದಲ್ಲಿ ಜಪಾನ್

ಚೀನಾಕ್ಕೆ ಹೋಲಿಸಿದರೆ ಜಪಾನ್ ಬಹಳ ಸೂಕ್ಷ್ಮವಾಗಿ, ಸ್ವತಂತ್ರವಾಗಿ ಬೆಳೆದಿತ್ತು. ೧೭ನೆಯ ಶತಮಾನದಿಂದ ೧೯ನೆಯ ಶತಮಾನದ ಮಧ್ಯಭಾಗದವರೆಗೆ ಐರೋಪ್ಯ ರಾಷ್ಟ್ರಗಳು ‘‘ನಿರ್ಮೂಲನ ಮತ್ತು ಪುರ್ನನಿರ್ಮಾಣ’’ಕ್ಕೆ ವಿಶೇಷವಾಗಿ ಮಹತ್ವ ಕೊಟ್ಟಿದ್ದವು. ಆದ್ದರಿಂದ ಜಪಾನ್‌ನ ಸೀಮಿತ ಪ್ರದೇಶಗಳಲ್ಲಿ ಮಿಶನರಿಗಳು ಧರ್ಮಪ್ರಚಾರವನ್ನು ಕೈಕೊಂಡರೂ ಸಹ ೧೯ನೆಯ ಶತಮಾನದ ನಡುವಿನವರೆಗೆ ಪಾಶ್ಚಾತ್ಯ ಸಂಸ್ಕೃತಿಯ ನೆಯರ ವಾದ ದಬ್ಬಾಳಿಕೆ, ಪ್ರಭಾವ ಅಥವಾ ಚಿಂತನೆಗಳ ವೈವಿಧ್ಯ ಜಪಾನ್‌ನಲ್ಲಿ ಕಂಡುಬಂದಿಲ್ಲ. ಏಕೆಂದರೆ ಉಳಿದ ಪೂರ್ವಏಷ್ಯಾ ದೇಶಗಳಿಗೆ ಹೋಲಿಸಿದರೆ ಜಪಾನ್‌ನಲ್ಲಿ ಆಳಿದ ತೊಕ್ಕುಗಾವಾ ಶೋಗುನೆಯಟ್ ವಂಶ ಮತ್ತು ಡೈಮೋ ಪದ್ಧತಿಯು ಸುಮಾರು ಇನ್ನೂರು ವರ್ಷಗಳಷ್ಟು ಕಾಲ ಪಾಶ್ಚಾತ್ಯ ಜಗತ್ತಿನಿಂದ ಪ್ರತ್ಯೇಕವಾಗುಳಿದು ಬದಲಾವಣೆಗೆ ಸ್ಪಂದಿಸಿರಲಿಲ್ಲ. ಇದು ಜಪಾನ್ ಇತಿಹಾಸದಲ್ಲಿ ಅತ್ಯಂತ ವಿಷಮ ದಿನಗಳಾಗಿದ್ದು ಮೇಜಿ ಸರಕಾರಕ್ಕೆ ಹೋಲಿಸಿದರೆ ವೈಭವಯುತವಾಗಿರಲಿಲ್ಲ. ಆದರೆ ಮೇಜಿ ಸರಕಾರ ೧೮೬೮ರಲ್ಲಿ ಅಧಿಕಾರಕ್ಕೆ ಬಂದು ಪಾಶ್ಚಾತ್ಯ ಮಾದರಿಯಲ್ಲಿ ಸಾಂಸ್ಥಿಕ ರಚನೆಯನ್ನು ರೂಪಾಂತರಗೊಳಿಸಿ ಹೊಸ ಸಮಾಜವನ್ನು ಕಟ್ಟಿತ್ತು. ಜಪಾನ್‌ನ ಸ್ವತಂತ್ರ ಬದುಕಿನುದ್ದಕ್ಕೂ (ಶೋಗುನೆಯಟ್ ಕಾಲದಲ್ಲಿ) ಭದ್ರತೆ ಮತ್ತು ಸ್ಥಿರ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯನ್ನು ಕಾಪಾಡಿಕೊಂಡಿದ್ದರಿಂದ ಆಂತರಿಕ ದಂಗೆಗಳು ಬಹಳ ವಿರಳವಾಗಿತ್ತು. ೧೮೦೦ರ ನಂತರ ಬಾಕುಪು ಸರಕಾರದ ರಾಜಕೀಯ ಮತ್ತು ಆರ್ಥಿಕ ರಚನೆಯ ವ್ಯವಸ್ಥೆಯಲ್ಲಿ ಬಿರುಕು ಕಂಡುಬಂತು. ಊಳಿಗಮಾನ್ಯ ಆರ್ಥಿಕ ಸಂಸ್ಥೆಯು ೩೦ರಿಂದ ೪೦ ಮಿಲಿಯನಷ್ಟು ಏರುತ್ತಿರುವ ಜನಸಂಖ್ಯೆಯ ಬೇಡಿಕೆಗೆ ಸ್ಪಂದಿಸಲು ಅಸಾಧ್ಯವಾಯಿತು. ತೊಕ್ಕುಗಾವ ಶೋಗುನೆಯಟ್ ವಂಶೀಯ ಆಧಿಪತ್ಯವು ಜನಸಂಖ್ಯಾ ಬೆಳವಣಿಗೆಗೆ ಸಮಾನವಾಗಿ ಆಹಾರ ವಸ್ತುಗಳ ಉತ್ಪಾದನೆ ಮತ್ತು ಸರಬರಾಜಿನಲ್ಲಿ ಹಿಂದು ಬಿತ್ತು. ಇದರಿಂದಾಗಿ ೧೯ನೆಯ ಶತಮಾನದಲ್ಲಿ ಅನೇಕ ರೀತಿಯ ಸಾಮಾಜಿಕ ಬಿಕ್ಕಟ್ಟುಗಳು ಉದ್ಭವಿಸಿದವು.

ಅತೀ ಹೆಚ್ಚು ಕಂದಾಯ ವಸೂಲಿ ಮತ್ತು ಇನ್ನಿತರ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಬಡ ರೈತ ವರ್ಗವು ಕೃಷಿ ಉತ್ಪಾದನೆಯಲ್ಲಿ ಆಸಕ್ತಿಯನ್ನು ತೋರಿಸದೆ ಇರುವುದರಿಂದ ಆಹಾರ ಉತ್ಪಾದನೆಯ ಪ್ರಮಾಣ ಕಡಿಮೆಯಾಯಿತು. ದೇಶೀಯ ವ್ಯಾಪಾರಿಗಳು ಮನಸ್ಸಿಗೆ ಬಂದ ರೀತಿಯಲ್ಲಿ ರೈತರು ಉತ್ಪಾದಿಸಿದ ವಸ್ತುಗಳ ಮೇಲೆ ಬೆಲೆ ಕಟ್ಟಿ ತಾವೇ ದೋಚಿದರು. ಅದರಲ್ಲಿ ರೇಷ್ಮೆ ಒಂದು ಉತ್ತಮ ಸಂಪನ್ಮೂಲವಾಗಿದ್ದು ಇದಕ್ಕೆ ನಿಜವಾದ ಬೆಲೆ ರೈತರಿಗೆ ದಕ್ಕುತ್ತಿರಲಿಲ್ಲ. ಇದರಿಂದ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಅಸಮತೋಲನ ತಲೆದೋರಿತು.

ಇದಲ್ಲದೆ ೧೮ ಮತ್ತು ೧೯ನೆಯ ಶತಮಾನದುದ್ದಕ್ಕೂ ಜಪಾನಿನ ಸಾಮಾಜಿಕ ವ್ಯವಸ್ಥೆ ವರ್ಗೀಕೃತವಾಗಿದ್ದು ವರ್ಗಗಳ ನಡುವೆ ಭಿನ್ನಾಭಿಪ್ರಾಯ, ಅಪನಂಬಿಕೆ ತಲೆದೋರಲು ಪ್ರಾರಂಭವಾಗಿ ೧೮೬೦ರ ದಶಕದಲ್ಲಿ ಸೈದ್ಧಾಂತಿಕ ನೆಲೆಯಲ್ಲಿ ಒಂದು ಸುಸಂಘಟಿತ ಚಳವಳಿ ಪ್ರಾರಂಭವಾಯಿತು. ಇದು ಶೋಗುನೆಯಟ್ -ದೈಮೋ ಪದ್ಧತಿಯ ಭದ್ರತೆಯನ್ನು ಅಲುಗಾಡಿಸಿತು. ಇದನ್ನು ಆರಿಸ್ಟೋಕ್ರೇಟಿಕ್ ಚಳವಳಿ ಎಂದು ಕರೆಯುತ್ತಾರೆ. ಜೊತೆಗೆ ಇಡೀ ಜಗತ್ತಿನ ಚಳವಳಿಗಳ ಇತಿಹಾಸದಲ್ಲಿ ಇದು ಬಹಳ ಸೂಕ್ಷ್ಮ ಹಾಗೂ ವಿಭಿನ್ನ ವಾಗಿತ್ತು. ಏಕೆಂದರೆ ಈ ಚಳವಳಿಯನ್ನು ಪ್ರಾರಂಭದಲ್ಲಿ ಮೇಲು ವರ್ಗದವರೇ ಪ್ರಚೋದಿಸಿ ಎಲ್ಲ ವರ್ಗಗಳನ್ನು ಒಂದುಗೂಡಿಸಲು ಯಶಸ್ವಿಯಾಯಿತು. ಸಮುರಾಯ್ ವರ್ಗ(ಸೈನಿಕ ವರ್ಗ) ಸಾಮಾಜಿಕವಾಗಿ ಉನ್ನತ ಸ್ಥಾನ ಅಲಂಕರಿಸಿದ್ದರೂ ಆರ್ಥಿಕವಾಗಿ ಅವರ ಸ್ಥಿತಿ ತೀರ ಹದಗೆಟ್ಟಿತ್ತು. ಕೃಷಿ ವ್ಯವಸಾಯದಲ್ಲಿ ಯಾವುದೇ ಜ್ಞಾನವಿಲ್ಲದ ಇವರು ಭೂ ಮಾಲೀಕತ್ವವನ್ನು ಪಡೆದಿರಲಿಲ್ಲ. ಇವರಿಗೆ ಯುದ್ಧದ ಸಮಯದಲ್ಲಿ ವೈರಿಗಳೊಂದಿಗೆ ಹೋರಾಡುವುದು ಸಾಂಪ್ರದಾಯಿಕವಾಗಿ ಬಂದ ಉದ್ಯೋಗವಾಗಿದ್ದು ‘ಫೈಟಿಂಗ್’ ಅನ್ನುವುದು ಇವರ ಆಸಕ್ತಿ. ಆದರೆ, ಜಪಾನ್ ಕಳೆದ ೨೦೦ ವರ್ಷಗಳಿಂದಲೂ ಶಾಂತಿ ಕಾಪಾಡಿಕೊಂಡು ಬಂದಿರುವುದರಿಂದ ಯಾವುದೇ ಯುದ್ಧದಲ್ಲೂ ಪಾಲ್ಗೊಳ್ಳಲು ಸಮುರಾಯ್ ವರ್ಗಕ್ಕೆ ಲಭ್ಯವಿರಲಿಲ್ಲ. ಆದ್ದರಿಂದ ಅವರಿಗೆ ಬರುವ ಭತ್ಯೆಯಲ್ಲಿ ಇಳಿಮುಖವಾಯಿತು. ಅಂದರೆ ಆರ್ಥಿಕ ಸ್ಥಿತಿ ಹದಗೆಟ್ಟು ಉತ್ಪಾದಿಸುವ ವರ್ಗ ಅಥವಾ ಸಂಪತ್ತನ್ನು ಹೊಂದಿ ರುವ ವರ್ಗದ ಮೇಲೆ ಅವರ ಅವಲಂಬನೆ ಖಾಯಂ ಆಯಿತು. ಇದು ವಿಪರ್ಯಾಸ. ಏಕೆಂದರೆ ಸಾಮಾಜಿಕವಾಗಿ ಈ ವರ್ಗವು ವರ್ಗೀಕೃತ ವ್ಯವಸ್ಥೆಯಲ್ಲಿ ಅತ್ಯುನ್ನತ ಸ್ಥಾನ ದಲ್ಲಿದ್ದರೂ ಕೂಡ ಆರ್ಥಿಕವಾಗಿ ಇವರು ಇಡೀ ಸಮಾಜದಲ್ಲಿ ದುರ್ಬಲರು. ಸಾಂಪ್ರದಾಯಿಕವಾಗಿ ಅನುಭವಿಸಿಕೊಂಡು ಬಂದಿರುವ ಸ್ಥಾನ ಬಿಟ್ಟು ಬೇರೆ ಉದ್ಯೋಗ ಹುಡುಕಲು ಈ ವರ್ಗದವರು ಫೈಟಿಂಗ್(ಯುದ್ಧದಲ್ಲಿ) ಬಿಟ್ಟು ಬೇರೆ ಯಾವ ಉದ್ಯೋಗ ದಲ್ಲಿ ಪರಿಣತಿ ಹೊಂದಿರಲಿಲ್ಲ. ಹಾಗಾಗಿ ಈ ರೀತಿಯ ವ್ಯವಸ್ಥೆಯ ನಿರ್ಮೂಲನ ಮಾಡಿ ತಾವು ಸಹ ಸ್ವತಂತ್ರವಾಗಿ ಬದುಕಲು ಮತ್ತೊಂದು ವ್ಯವಸ್ಥೆಯ ನಿರ್ಮಾಣದ ಅನಿವಾರ್ಯತೆಯನ್ನು ಕಂಡುಕೊಂಡರು.

ಸಮುರಾಯ್ ವರ್ಗಕ್ಕೆ ಹೋಲಿಸಿದರೆ ವರ್ತಕರು ಇಡೀ ಜಪಾನಿ ಸಮಾಜದಲ್ಲಿ ಅತ್ಯಂತ ಕೆಳ ಸ್ಥಾನದಲ್ಲಿದ್ದರು. ಆದರೆ ಆರ್ಥಿಕವಾಗಿ ಇವರು ಉಳಿದವರಿಗಿಂತ ಪ್ರಬಲರಾಗಿದ್ದು ಸರಕಾರದೊಡನೆ ನಿಕಟ ಸಂಬಂಧವನ್ನು ಬೆಳೆಸಿಕೊಂಡಿದ್ದರು. ಜೊತೆಗೆ ಪಟ್ಟಣದಲ್ಲಿರುವ ಸಮುರಾಯ್ ವರ್ಗಕ್ಕೂ ಆರ್ಥಿಕವಾಗಿ ನೆರವು ನೀಡುವ ಹೊಣೆಗಾರಿಕೆ ಇವರಿಗಿತ್ತು. ಜಪಾನಿನ ಆರ್ಥಿಕ ಚಟುವಟಿಕೆಗಳಲ್ಲಿ ಇವರು ನಿಪುಣರಾಗಿದ್ದು ಹಣಕಾಸಿನಲ್ಲಿ ಶ್ರೀಮಂತರಾಗಿದ್ದರು. ಆಂತರಿಕ ಮತ್ತು ವಿದೇಶಿ ವ್ಯಾಪಾರ ಸಂಬಂಧದಲ್ಲಿಯೂ ಇವರು ಬಹಳ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಇಷ್ಟಾಗಿಯೂ ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವ ಅವಕಾಶ ಇವರಿಗಿರಲಿಲ್ಲ. ಇದು ಅವರ ಪ್ರಕಾರ ಇಡೀ ವ್ಯವಸ್ಥೆಯ ವೈಫಲ್ಯ. ಹಾಗಾಗಿ ತಮ್ಮ ಶ್ರೀಮಂತಿಕೆಗೆ ಅನುಗುಣವಾಗಿ ಅವರಿಗೆ ಗೌರವವನ್ನು ದಕ್ಕಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಅದು ಕೇವಲ ಕ್ರಾಂತಿಯಿಂದ ಮತ್ತು ಸಮಾಜದ ನಿರ್ಮಾಣದಿಂದ ಮಾತ್ರ ಸಾಧ್ಯ ಎಂದು ಅವರು ನಂಬಿದ್ದರು.

ಈ ಮೇಲೆ ಹೇಳಿದ ಎರಡು ಸಮಸ್ಯೆಗಳಲ್ಲದೆ, ಸಮುರಾಯ್ ವರ್ಗದೊಳಗೆ ಎರಡು ಗುಂಪುಗಳಿದ್ದವು; ಮೇಲು ಸಮುರಾಯ್ ಮತ್ತು ಕೆಳ ಸಮುರಾಯ್. ಈ ಎರಡು ವರ್ಗಗಳ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದವು. ಇಲ್ಲಿ ಮೇಲು ಸಂಮುರೈ ವರ್ಗಕ್ಕೆ ಸೇರಿದವರು ಆಳುವ ವರ್ಗದೊಂದಿಗೆ ನಿಕಟ ಸಂಪರ್ಕವನ್ನು ಬೆಳೆಸಿ, ಆಡಳಿತದಲ್ಲಿರುವ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಆಳುವ ವರ್ಗ ಮತ್ತು ಮೇಲು ಸಂಮುರೈಗಳ ನಡುವೆ ವೈವಾಹಿಕ ಸಂಬಂಧವೂ ಕ್ರಮೇಣ ಬೆಳೆದಿತ್ತು. ಆದರೆ ಪ್ರಾರಂಭದಲ್ಲಿ ಇವರು ಅಲಂಕರಿಸಿದ ಸ್ಥಾನಗಳು, ಹುದ್ದೆಗಳು ವಂಶಪಾರಂಪರ್ಯವಾಗಿರಲಿಲ್ಲ. ನಂತರ ತಮಗಿರುವ ನಿಕಟ ಸಂಬಂಧವನ್ನು ಉಪಯೋಗಿಸಿ ಈ ಹುದ್ದೆಗಳನ್ನು ತಮ್ಮ ವರ್ಗದ ಜನರಿಗೆ ಮೀಸಲಾಗಿಡಲು ಆಳುವ ವರ್ಗದಿಂದ ಮಾಡಿಸಿದರು. ಆದರೆ ಕೆಳವರ್ಗದ ಸಂಮುರೈಗಳು ಕೇವಲ ಕುದುರೆ ಸವಾರರಾಗಿ, ಜವಾನರಾಗಿ ಕಾರ್ಯ ನಿರ್ವಹಿಸುತ್ತಿದ್ದರೂ, ಆರ್ಥಿಕವಾಗಿ ಇವರು ದುರ್ಬಲರಾಗಿದ್ದರು. ಆದರೆ ಮೇಲುವರ್ಗದ ಸಂಮುರೈ ಉನ್ನತ ಹುದ್ದೆಯಲ್ಲಿದ್ದು ಹೆಚ್ಚು ಸಂಬಳ ಪಡೆದು ವೈಭವಯುತ ಜೀವನ ನಡೆಸುತ್ತಿದ್ದರು. ಜೊತೆಗೆ ಅಂತಹ ಹುದ್ದೆಗಳು ಕೆಳವರ್ಗದ ಸಮುರಾಯ್‌ಗಳಿಗೆ ಕೇವಲ ಕನಸೇ ಆಗಿತ್ತು. ಇದರಿಂದ ಸಂಮುರೈ ವರ್ಗದೊಳಗೆ ಎರಡು ಗುಂಪಾಗಿ, ಮೇಲು ಮತ್ತು ಕೆಳ ಸಮುರಾಯ್ ಗುಂಪುಗಳ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಯಿತು. ಈ ರೀತಿಯ ವ್ಯವಸ್ಥೆಯ ಮುಂದುವರಿಸುವಿಕೆಯಿಂದ ಕೆಳ ಸಮುರಾಯ್ ವರ್ಗಕ್ಕೆ ಪೆಟ್ಟು ಬೀಳುವುದೆಂಬ ದೃಷ್ಟಿಯಿಂದ ಅವರು ಇದನ್ನು ನಿರ್ಮೂಲಗೊಳಿಸಿ ಪುನಾರಚನೆಯನ್ನು ಸಮಾನತೆಯ ಆಧಾರದಲ್ಲಿ ಮಾಡಬೇಕೆಂಬ ನಿಲುವನ್ನು ತಳೆದರು.

ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಐರೋಪ್ಯ ರಾಷ್ಟ್ರಗಳು ಜಪಾನಿಗೆ ೧೮೫೩ರಲ್ಲಿ ಪಾದಾರ್ಪಣೆ ಮಾಡಿದರು. ಇದರಿಂದ ವರ್ತಕವರ್ಗಕ್ಕೆ ಲಾಭದಾಯಕವಾಯಿತು. ಈಗಾಗಲೇ ಹೇಳಿದಂತೆ ವರ್ತಕರ ಆರ್ಥಿಕ ಪ್ರಬಲತೆಯ ಬಗ್ಗೆ ಸಮುರಾಯ್ ವರ್ಗಕ್ಕೆ ಅಸಮಾಧಾನ ತಂದಿತು. ಜೊತೆಗೆ ಐರೋಪ್ಯ ರಾಷ್ಟ್ರಗಳ ವಾಣಿಜ್ಯ ಚಟುವಟಿಕೆ ವರ್ತಕರ ಸಂಪತ್ತನ್ನು ವೃದ್ದಿಸಿತು. ಇದನ್ನು ತಿಳಿದ ಮೇಲುವರ್ಗ ಸಂಮುರೈಗಳು ಪರೋಕ್ಷವಾಗಿ ವಿರೋಧಿಸಲು ಧ್ವನಿ ಎತ್ತಿದ್ದರು. ಇಲ್ಲಿ ತಮ್ಮ ವರ್ಗವು ಆಳುವ ವರ್ಗಕ್ಕೆ ಅತ್ಯಂತ ಹತ್ತಿರವಾಗಿದ್ದರಿಂದ ಅವರು ಕೆಳವರ್ಗದ ಸಮುರಾಯ್‌ಗಳಿಗೆ ಕರೆ ಕೊಟ್ಟರು. ಈಗಾಗಲೇ ಕೆಲವರ್ಗದ ಸಮುರಾಯ್‌ಗಳು ಮೇಲುವರ್ಗದ ಸಮುರಾಯ್‌ಗಳೊಂದಿಗೆ ಭಿನ್ನಾಭಿಪ್ರಾಯ ಬೆಳೆಸಿಕೊಂಡಿದ್ದರು. ಜೊತೆಗೆ ಬದಲಾವಣೆಗೂ ಕಾಯುತ್ತಿದ್ದರು. ಈಗ ಅವರ ವರ್ಗಕ್ಕೆ ಸೇರಿದ ಮೇಲುವರ್ಗದ ಸಮುರಾಯ್‌ಗಳು ಕೆಳವರ್ಗದವರನ್ನು ಪ್ರಚೋದಿಸಿ, ನಿಮ್ಮ ಸಮಸ್ಯೆಗೆ ನಾವು ಹೊಣೆಗಾರರಲ್ಲ, ಬದಲಾಗಿ ವರ್ತಕರು ಎಂದು ಅವರಿಗೆ ಬೆರಳಿಟ್ಟು ತೋರಿಸಿದರು. ಜೊತೆಗೆ ಅವರನ್ನು ಉತ್ಪ್ರೇಕ್ಷಿಸಿ ಎಲ್ಲ ವಾಣಿಜ್ಯ ಕೇಂದ್ರದಲ್ಲಿ ವ್ಯಾಪಾರ ಚಟುವಟಿಕೆ ನಡೆಸಿಕೊಂಡು ಬಂದಿರುವ ಐರೋಪಿಯನ್ನರ ಮೇಲೆ ದಾಳಿ ಮಾಡಲು ಆಜ್ಞೆಯನ್ನು ನೀಡಿದರು. ಇದರಿಂದ ಅನೇಕ ವಿದೇಶಿ ವ್ಯಾಪಾರಿಗಳು ಸಾವನ್ನಪ್ಪಿದರು. ಜೊತೆಗೆ ಒಂದು ಅಭದ್ರತಾ ವಾತಾವರಣ ನಿರ್ಮಾಣವಾಯಿತು. ವಿದೇಶಿ ವ್ಯಾಪಾರಿಗಳು ಶೋಗುನೆಯೆಟ್ ಸರಕಾರಕ್ಕೆ ದೂರು ಕೊಟ್ಟರು. ವರ್ತಕರ ಲಾಂಭಾಂಶ ಕಡಿಮೆ ಆಯಿತು. ಈ ಸನ್ನಿವೇಶವನ್ನು ಎಲ್ಲ ವರ್ಗಗಳು ಉಪಯೋಗಿಸಿ ಚಳವಳಿಯನ್ನು ಸಂಘಟಿಸಿದರು. ಇದರಲ್ಲಿ ಎಲ್ಲ ವರ್ಗಗಳು ಭಾಗವಹಿಸಿದವು. ಈ ಚಳವಳಿಯ ಧೋರಣೆ ಮೂಲ ಭೂತವಾಗಿ ‘ಕ್ರಾಂತಿಕಾರಿ ಬದಲಾವಣೆ’, ‘ನಿರ್ಮೂಲನ ಪುನರ್‌ನಿರ್ಮಾಣ’ ‘ಸಮಾನತೆ ಮತ್ತು ಸ್ವತಂತ್ರ’, ‘ಸ್ವಾವಲಂಬನಾ ಸಮಾಜದ ನಿರ್ಮಾಣ’ ಎನ್ನುವಂತಹ ವಿಚಾರಗಳನ್ನು ಒಳ ಗೊಂಡಿತ್ತು. ಇದಕ್ಕೆ ಜಪಾನೀಯರು ‘‘ಅರಿಸ್ಟ್ರೋಕ್ರೇಟಿಕ್ ಚಳವಳಿ’’ ಎಂದು ಕರೆಯುತ್ತಾರೆ.

ಅರಿಸ್ಟ್ರೋಕ್ರೇಟಿಕ್ ಚಳವಳಿ

ಸಮಾಜದ ಮೇಲು ವರ್ಗದವರೇ ಪ್ರಚೋದಿಸಿ ಚಳವಳಿಯನ್ನು ಸಂಘಟಿಸಿದ್ದು ದಲ್ಲದೆ, ಇದು ಯಾವುದೇ ಒಂದು ವ್ಯವಸ್ಥೆಯ ವಿರುದ್ಧವಾಗಲಿ, ಪಟ್ಟಭದ್ರ ಶಕ್ತಿಗಳ ವಿರುದ್ಧವಾಗಲಿ, ಪ್ರಚಲಿತ ಆಡಳಿತದ ವೈಫಲ್ಯದ ವಿರುದ್ಧವಾಗಲಿ ಆಗಿರಲಿಲ್ಲ. ಬದಲಾಗಿ ಸಮಾಜದ ಎಲ್ಲ ವರ್ಗಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಈ ಚಳವಳಿಯಲ್ಲಿ ಭಾಗವಹಿಸಿದ್ದರು. ‘ಪುನರ್‌ನಿರ್ಮಾಣ’ವು ಎಲ್ಲರ ಘೋಷಣೆಯಾಗಿತ್ತು. ಈ ಅರ್ಥದಲ್ಲಿ ಇಡೀ ಜಗತ್ತಿನ ಇತಿಹಾಸದಲ್ಲಿ ೧೮೬೮ರ ಜಪಾನಿ ಅರಿಸ್ಟ್ರೋಕ್ರೇಟಿಕ್ ಚಳವಳಿ ವಿಭಿನ್ನವಾಗಿದೆ. ಎರಡನೆಯದಾಗಿ, ಜಗತ್ತಿನ ಯಾವುದೇ ಚಳವಳಿಯ ಇತಿಹಾಸವನ್ನು ಗಮನಿಸಿದರೆ ಒಂದಲ್ಲ ಒಂದು ದೃಷ್ಟಿಯಿಂದ, ಶೋಷಿತವರ್ಗವು ಮೇಲು ವರ್ಗದ ದಬ್ಬಾಳಿಕೆ ಅಥವಾ ವಂಶೀಯ ಆಧಿಪತ್ಯದ ವಿರುದ್ಧ ಅಥವಾ ವಸಾಹತುಶಾಹಿ ವಿರುದ್ಧ ಸಂಘಟಿತವಾಗಿರುವುದು ಗಮನಾರ್ಹ. ಆದರೆ ಜಪಾನ್‌ನಲ್ಲಿ ನಡೆದ ಸಂಘಟಿತ ಚಳವಳಿ, ಕೆಳವರ್ಗದ ಜನರಿಂದ ಮೇಲು ವರ್ಗದವರ ಅಥವಾ ಶೋಗುನೆಯಟ್ ವಿರುದ್ಧವಾಗಿರಲಿಲ್ಲ. ಬದಲಾಗಿ ಇದರ ಮುಂದಾಳತ್ವವನ್ನು ಮೇಲು ದರ್ಜೆಯವರೇ ವಹಿಸಿದ್ದು, ನಂತರ ಇಡೀ ಜಪಾನ್ ದೇಶ ಒಂದಾಗಿ ಚಳವಳಿಯನ್ನು ಏಕರೂಪವಾಗಿ ಬದಲಾವಣೆಯತ್ತ ಸಾಗಿಸಿತು. ಇಲ್ಲಿ ಯಾವುದೇ ವರ್ಗವು ಸಾಂಪ್ರದಾಯಿಕವಾಗಿ ಬೆಳೆದು ಬಂದ ಪದ್ಧತಿಯನ್ನು, ಸ್ಥಾನವನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಯಾವುದೇ ಸಾಂಪ್ರದಾಯಿಕ ಶಕ್ತಿಯು ಕೂಡ, ಇಡೀ ವ್ಯವಸ್ಥೆಯನ್ನು ಪುನರ್‌ಸಂಘಟಿಸುವ ಆಶಯವನ್ನು ವಿರೋಧಿಸಲಿಲ್ಲ. ವರ್ಗೀಕೃತ ಸಮಾಜದ ನಿರ್ಮೂಲನ ವನ್ನು ಯಾರೂ ವಿರೋಧಿಸಲಿಲ್ಲ. ಬದಲಾಗಿ ಎಲ್ಲ ವರ್ಗಗಳು ಹೆಚ್ಚು ಕಡಿಮೆ ಸಾಂಪ್ರದಾಯಿಕವಾಗಿ, ಆಧುನಿಕವಾಗಿ, ಸುಧಾರಣಾತ್ಮಕವಾಗಿ ಹಾಗೂ ಕ್ರಾಂತಿಕಾರಿಯಾಗಿದ್ದವು. ಈ ಕಾರಣಕ್ಕೆ ಈ ಚಳವಳಿ ಇಡೀ ಜಗತ್ತಿನಲ್ಲಿಯೇ ವಿಭಿನ್ನವಾದದ್ದಾಗಿದೆ.

ಅರಿಸ್ಟ್ರೋಕ್ರೇಟಿಕ್ ಚಳವಳಿಯ ನಂತರ ಜಪಾನ್ ವಾಸ್ತವಿಕವಾಗಿ ಆಧುನಿಕ ಯುಗಕ್ಕೆ ಪ್ರವೇಶ ಮಾಡಿ, ದೇಶೀಯ ಚಿಂತನೆಗಳಲ್ಲಿ, ಸಂಸ್ಥೆಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿತು. ಸಮಕಾಲೀನ ಐರೋಪ್ಯ ರಾಷ್ಟ್ರಗಳೊಂದಿಗೆ ಸ್ನೇಹ ಒಪ್ಪಂದಗಳನ್ನು ಏರ್ಪಡಿಸಿಕೊಂಡು ಜಪಾನ್ ಪಾಶ್ಚಾತ್ಯ ಮಾದರಿಯ ಸರಕಾರದ ಪುನಾರಚನೆ ಮಾಡಿತು. ಸಂವಿಧಾನವನ್ನು ಅನುಷ್ಠಾನಕ್ಕೆ ತಂದು ಸಮಾನ ಹಕ್ಕನ್ನು ಜನರಿಗೆ ಒದಗಿಸಲಾಯಿತು. ವರ್ಗೀಕೃತ ಸಮಾಜದ ಪದ್ಧತಿಯನ್ನು ಕೈಬಿಡಲಾಯಿತು. ಪಾಶ್ಚಾತ್ಯ ಶಿಕ್ಷಣ ನೀತಿಯನ್ನು ಅನುಸರಿಸಲಾಯಿತು. ಕೈಗಾರೀಕರಣದಲ್ಲಿ ವಿದೇಶಿ ಮಾದರಿಯ ತಂತ್ರಜ್ಞಾನವನ್ನು ಅಳವಡಿಸಲಾಯಿತು. ನ್ಯಾಯಾಂಗದಲ್ಲಿ ಬದಲಾವಣೆಯನ್ನು ತರಲಾಯಿತು. ಹೊಸ ಮಾದರಿಯ ಸೈನ್ಯಾಂಗವನ್ನು ರಚಿಸಿ ಅತ್ಯಂತ ಆಧುನಿಕ ತಂತ್ರವನ್ನು ಉಪಯೋಗಿಸಿ ಉತ್ಪಾದನಾ ಮಟ್ಟವನ್ನು ಹೆಚ್ಚಿಸಲಾಯಿತು. ಕೈಗಾರೀಕರಣಕ್ಕೆ ಬೇಕಾದ ವಿದ್ಯಾವಂತ ವರ್ಗದ ನಿರ್ಮಾಣವನ್ನು ಮಾಡಿ ಕಾರ್ಮಿಕರನ್ನು ಕಾರ್ಖಾನೆಗಳಿಗೆ ಒದಗಿಸಲಾಯಿತು. ಈ ಎಲ್ಲ ಸುಧಾರಣೆಯೂ ಜಪಾನ್‌ನಲ್ಲಿ ೧೮೬೮ರಲ್ಲಿ ಅಧಿಕಾರಕ್ಕೆ ಬಂದ ಮೇಜಿ ಆಡಳಿತದ ಕೊಡುಗೆಯಾಗಿತ್ತು.

ದೇಶೀಯ ಸಂಪನ್ಮೂಲಗಳ ಅಭಿವೃದ್ದಿ ಮತ್ತು ಉತ್ಪಾದನೆಯ ಲಾಭವನ್ನು ಸ್ಥಳೀಯರಿಗೆ ಅಥವಾ ಉತ್ಪಾದಿಸುವ ವರ್ಗಕ್ಕೆ ದೊರಕಿಸಿಕೊಡುವ ದೃಷ್ಟಿಯಿಂದ ಕೃಷಿ ಮತ್ತು ಕೈಗಾರಿಕಾ ರಂಗದ ನಡುವೆ ಅನ್ಯೋನ್ಯ ಸಂಬಂಧವನ್ನು ಕಲ್ಪಿಸಲಾಯಿತು ಉನ್ನತ ವರ್ಗದವರಾದ ಸಂಮುರೈ ವರ್ಗ ಮತ್ತು ವರ್ತಕರಿಗೆ ಪ್ರೋ ನೀಡಿ ದೇಶೀಯ ಕೈಗಾರಿಕೀಕರಣ ಮತ್ತು ಆರ್ಥಿಕ ಅಭಿವೃದ್ದಿಯನ್ನು ಕಂಡುಕೊಳ್ಳಲಾಯಿತು. ದೇಶೀಯ ಮಾರುಕಟ್ಟೆಗಳಲ್ಲಿ ತಮ್ಮ ದೇಶದ ಕೈಗಾರಿಕಾ ಸಿದ್ಧವಸ್ತುಗಳಿಗೆ ಬೇಡಿಕೆ ಸೃಷ್ಟಿಸಲಾಯಿತು. ನಗರೀಕರಣಕ್ಕೆ ಮಹತ್ವ ಕೊಟ್ಟು ಮೇಜಿ ಸರಕಾರ ವಿದೇಶೀಯರ ಸಿದ್ಧವಸ್ತುಗಳು ನಿರಂಕುಶ ಪ್ರಭುತ್ವ ಸಾಧಿಸುವುದನ್ನು ತಡೆಹಿಡಿಯಲಾಯಿತು. ಹೊಸ ಆಡಳಿತದ ಪ್ರಾರಂಭದಲ್ಲಿ ಸರಕಾರವೇ ಸಾರ್ವಜನಿಕ ರಂಗದಲ್ಲಿ ಬಂಡವಾಳ ಹೂಡಿ, ಖಾಸಗಿ ಶಕ್ತಿಗಳ ಸೃಷ್ಟಿಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಟ್ಟಿತು. ಇದರಿಂದಾಗಿ ೧೮೮೦ ಮತ್ತು ೯೦ರ ದಶಕದಲ್ಲಿ ಜಪಾನ್ ನಲ್ಲಿ ಬಂಡವಾಳಶಾಹಿಗಳು ತಲೆ ಎತ್ತಿದವು. ಅದರಲ್ಲೂ, ಅನೇಕ ಹಣಕಾಸು ಸಂಸ್ಥೆಗಳು, ವ್ಯಾಪಾರಿ ವರ್ಗಗಳು, ವರ್ತಕರು, ಉದ್ಯಮ ವರ್ಗಗಳು ಖಾಸಗಿ ರಂಗ ಮತ್ತು ಸಾರ್ವಜನಿಕ ರಂಗದ ಅನೇಕ ಅಭಿವೃದ್ದಿ ಕಾರ್ಯಗಳಲ್ಲಿ ಬಂಡವಾಳ ತೊಡಗಿಸಲು ಮುಂದಾದವು. ಇದರಿಂದಾಗಿ ಇಡೀ ಏಷ್ಯಾ ಖಂಡದಲ್ಲಿಯೇ ೧೯ನೆಯ ಶತಮಾನದ ಕೊನೆಯಲ್ಲಿ ಜಪಾನ್ ಅತ್ಯಂತ ಮುಂದುವರಿದ ರಾಷ್ಟ್ರವಾಗಿ ಪರಿವರ್ತನೆಗೊಂಡಿತು.

ಸಾಂಪ್ರದಾಯಿಕ ಸಂಸ್ಥೆಗಳನ್ನು ನಿರ್ಮೂಲನಗೊಳಿಸಿ ವಿದೇಶಿ ಮಾದರಿಯ ಸಂಸ್ಥೆಗಳನ್ನು ರಚಿಸಿರುವುದರಿಂದ ಜಪಾನ್ ಕೇವಲ ೨೦ ವರ್ಷಗಳಲ್ಲಿ (೧೮೭೦-೯೦) ಪರಿಣಾಮಕಾರಿ ಫಲಿತಾಂಶವನ್ನು ಕಂಡುಕೊಂಡಿತು. ಉಳಿದ ಏಷ್ಯಾ ದೇಶಗಳಿಗೆ ಹೋಲಿಸಿದರೆ ಜಪಾನ್ ಬಹಳ ಸೂಕ್ಷ್ಮವಾಗಿ ಐರೋಪ್ಯ ವಸಾಹತುಶಾಹಿ ರಾಷ್ಟ್ರಗಳೊಂದಿಗೆ ಸಮಾನವಾಗಿ. ಸ್ನೇಹಪೂರ್ವಕವಾಗಿ ವ್ಯವಹರಿಸಿ, ಅವುಗಳಿಂದಲೇ ಹೊಸ ತಂತ್ರಜ್ಞಾನಗಳ ಉಪಯೋಗ ಪಡೆದು ಒಂದು ಹೊಸ ಸಮಾಜದ ನಿರ್ಮಾಣಕ್ಕೆ ಅಡಿಪಾಯ ಹಾಕಿತು. ಚೀನಾಕ್ಕೆ ಹೋಲಿಸಿದರೆ ಜಪಾನ್, ವಿದೇಶೀಯರ ಕೈಗೆ ತನ್ನನ್ನು ತಾನು ಮಾರಿಕೊಳ್ಳದೆ ದೇಶೀಯ ಪುನಾರಚನೆಯಲ್ಲಿ ಆಸಕ್ತಿ ವಹಿಸಿತ್ತು. ಇಲ್ಲಿ ದೇಶೀಯ ಸಂಸ್ಥೆಗಳ ಸುಧಾರಣಾ ನೀತಿಯು ಪರಿಪೂರ್ಣವಾಗಿ ಎಲ್ಲ ರಂಗಕ್ಕೂ ಅವಲಂಬಿಸಿತ್ತು. ತನ್ನ ದೌರ್ಬಲ್ಯ ಮತ್ತು ಪತನದ ಮಿತಿಯನ್ನು ಅರ್ಥೈಸಿಕೊಂಡ ಮೇಜಿ ಸರಕಾರದ ಹೊಸ ನಾಯಕತ್ವವು ಸಾಮಾಜಿಕ, ಆರ್ಥಿಕ, ರಾಜಕೀಯ ರಂಗಗಳಲ್ಲಿ ಪರಿವರ್ತನೆಯನ್ನು ತರುವ ಏಕಮುಖ ಧ್ಯೇಯವನ್ನಿಟ್ಟು ಕೊಂಡಿತ್ತು. ಈ ನಿರ್ಧಾರ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿರದೇ ಇಡೀ ಜಪಾನ್ ದೇಶವು ಒಗ್ಗಟ್ಟಿನಿಂದ ಜಾಗತಿಕ ನೆಲೆಯಲ್ಲಿ ಐರೋಪ್ಯ ರಾಷ್ಟ್ರಗಳೊಂದಿಗೆ ಸ್ಪರ್ಧಿಸಲೋಸ್ಕರ ದೇಶೀಯ ಪದ್ಧತಿಗಳಲ್ಲಿ, ಸಂಸ್ಥೆಗಳಲ್ಲಿ ಬದಲಾವಣೆಗಳು ಅನಿರ್ವಾಯ ಎಂದು ಅರಿತಿತ್ತು. ಎಲ್ಲ ವರ್ಗದ ಒಕ್ಕೊರಲ ಧ್ವನಿಯಾಗಿ ಮೂಡಿಬಂದ ಆಧುನೀಕರಣವು ವಿದೇಶಿಯರು ಒಡ್ಡುವ ಬೆದರಿಕೆಗೆ ಒಂದು ಉತ್ತರವಾಗಿ ಮಾರ್ಪಟ್ಟಿತು.

ವಿದೇಶಿಯರಿಗೆ ವಸಾಹತು ಸ್ಥಾಪಿಸಲು ಯಾವುದೇ ಅವಕಾಶ ಕೊಡದ ಮೇಜಿ ಸರಕಾರ ಸ್ನೇಹ ಸೌಹಾರ್ದತೆಯಿಂದ ಪಶ್ಚಿಮ ಜಗತ್ತಿನಿಂದ ಆಧುನಿಕ ಚಿಂತನೆಗಳನ್ನು, ಶಿಕ್ಷಣ ಪದ್ಧತಿಯನ್ನು, ಸಂವಿಧಾನಾತ್ಮಕ ರಾಜಕೀಯ ಸಂಸ್ಥೆಗಳನ್ನು ಆಮದು ಮಾಡಿಕೊಂಡ ಜಪಾನ್ ದೇಶವನ್ನು ಏಷ್ಯಾ ಖಂಡದಲ್ಲಿ ಅತ್ಯಂತ ಅಭಿವೃದ್ದಿ ಹೊಂದಿ ರಾಷ್ಟ್ರವನ್ನಾಗಿ ಪರಿವರ್ತಿಸಿತು. ಇದು ಜನಸಾಮಾನ್ಯರಲ್ಲಿ ದೇಶೀಯ ಪ್ರಜ್ಞೆ ಮೂಡಿಸುವಲ್ಲಿ ಫಲಪ್ರದ ವಾಯಿತು. ಏಕೆಂದರೆ ಹೊಸ ಪ್ರಜತಂತ್ರ ಸರಕಾರ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಸಾಮಾನ್ಯ ವರ್ಗಕ್ಕೂ ಕಲ್ಪಿಸಿಕೊಟ್ಟು, ಎಲ್ಲ ವರ್ಗಗಳ ಹಿತರಕ್ಷಣೆಯ ಜೊತೆಗೆ ದೇಶದ ಅಭಿವೃದ್ದಿಗೆ ಮೇಜಿ ಅಧಿಕಾರಿ ವರ್ಗವು ಶ್ರಮಿಸಿತು. ಹೀಗಾಗಿ ಉಳಿದ ಏಷ್ಯಾ ದೇಶಗಳು ವಸಾಹತುಶಾಹಿಗಳ ದಬ್ಬಾಳಿಕೆ, ಶೋಷಣೆ ಮತ್ತು ಸಂಪನ್ಮೂಲಗಳ ಸೂರೆಯಿಂದ ಅನಭಿವೃದ್ದಿಯತ್ತ ನಡೆಯುತ್ತಿದ್ದರೆ, ಜಪಾನ್ ಪೂರ್ವ ಏಷ್ಯಾದಲ್ಲಿ ಮಾತ್ರ ವಲ್ಲ, ಇಡೀ ಏಷ್ಯಾ ಖಂಡದಲ್ಲಿ ಅಭಿವೃದ್ದಿ ಪಥದಲ್ಲಿ ಸಾಗುತ್ತಿದ್ದು ಪಶ್ಚಿಮ ಜಗತ್ತಿನ ವಸಾಹತುಶಾಹಿ ರಾಷ್ಟ್ರಗಳಿಗೆ ಸವಾಲಾಗಿ ನಿಂತಿತು.

ಜಪಾನ್‌ನ ಪರಿಣಾಮಕಾರಿ ಬದಲಾವಣೆ ಮತ್ತು ಪಾಶ್ಚಾತ್ಯ ಮಾದರಿಯ ಆಧುನೀಕರಣ ದಿಂದಾಗಿ ಜಪಾನ್‌ನೊಳಗೆ ಅನೇಕ ರೀತಿಯ ಆಂತರಿಕ ಸಮಸ್ಯೆಗಳು ಉದ್ಭವಿಸಿದವು. ಮುಂದುವರಿದ ಕೈಗಾರಿಕಾ ಕ್ರಾಂತಿಯಿಂದ ೧೮೯೦ರ ದಶಕದಲ್ಲಿ ಉತ್ಪಾದನಾ ಮಟ್ಟ ವೃದ್ದಿಸಿತು. ಸಿದ್ಧವಸ್ತುಗಳು ದೇಶೀಯ ಮಾರುಕಟ್ಟೆಯಲ್ಲಿ ಏಕಸ್ವಾಮಿತ್ವವನ್ನು ಸಾಧಿಸಿತು. ಆರಂಭದಲ್ಲಿ ಉದ್ಯಮಿಗಳಿಗೆ, ವ್ಯಾಪಾರಿಗಳಿಗೆ ಇದು ಲಾಭದಾಯಕವಾದರೂ ನಂತರದ ದಿನಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ತಾವೇ ಸಿದ್ಧಪಡಿಸಿದ ಉತ್ಪನ್ನಗಳಿಗೆ ಬೇಡಿಕೆ ಇಳಿಮುಖವಾಯಿತು. ಇದಕ್ಕೆ ಮೂಲಭೂತವಾಗಿ, ಮಿತವಾದ ಮಾರುಕಟ್ಟೆ, ಬೆಲೆಯಲ್ಲಿ ಇಳಿತ ಮತ್ತು ವ್ಯಯಿಸುವಿಕೆಯಲ್ಲಿ ಇಳಿತದಿಂದಾಗಿ ಕೈಗಾರಿಕೋದ್ಯಮಿಗಳಿಗೆ ಬರುವ ಲಾಭದ ಪ್ರಮಾಣ ಕಡಿಮೆ ಆಗಿತ್ತು. ಜೊತೆಗೆ ಮುಗಿಲೆತ್ತರಕ್ಕೆ ಬೆಳೆಯುತ್ತಿರುವ ಕೈಗಾರಿಕೆಗೆ ಬೇಕಾದ ಕಚ್ಚಾವಸ್ತುಗಳು ಮತ್ತು ಕೃಷಿ ಉತ್ಪನ್ನಗಳ ಬೇಡಿಕೆ ಹೆಚ್ಚಿತು. ಜಪಾನ್‌ನ ಸ್ಥಳೀಯ ಕೃಷಿ ರಂಗವು ಹೆಚ್ಚುತ್ತಿರುವ ಬೇಡಿಕೆಗೆ ಪೂರಕವಾಗಿ ಸ್ಪಂದಿಸುವುದು ಅಸಾಧ್ಯವಾಯಿತು. ಆದ್ದರಿಂದ ಆಹಾರ ವಸ್ತುಗಳು ಮತ್ತು ಕಚ್ಚಾವಸ್ತುಗಳ ಅನ್ವೇಷಣೆ ಪ್ರಾರಂಭವಾಯಿತು ಮತ್ತು ಕಡಿತವಾಗಿರುವ ಲಾಭವನ್ನು ಪುನಶ್ಚೇತನಗೊಳಿಸಲು ದೇಶದ ಹೊರಗೆ ವಸಾಹತುಶಾಹಿಗಳನ್ನು, ಹೊಸ ಮಾರುಕಟ್ಟೆಗಳನ್ನು ಸ್ಥಾಪಿಸಿ ಜಪಾನ್‌ನಲ್ಲಿ ಸಿದ್ಧವಾದ ಕೈಗಾರಿಕಾ ಉತ್ಪನ್ನಗಳನ್ನು ರಫ್ತು ಮಾಡಿ, ಮೇಜಿ ಸರಕಾರ ಕೈಗಾರಿಕೋದ್ಯಮಿಗಳ ಹಾಗೂ ವ್ಯಾಪಾರಿ ವರ್ಗಗಳ ಆಸಕ್ತಿಗಳನ್ನು ಸಮರ್ಪಕವಾಗಿ ರಕ್ಷಿಸಿತು. ಇದು ಕೈಗಾರಿಕಾ ರಂಗದಲ್ಲಿ ಆದ ಒಂದು ಮಹತ್ವಪೂರ್ಣ ಬದಲಾವಣೆ, ಇದರಿಂದಾಗಿಯೇ ಜಪಾನ್ ಅನಿವಾರ್ಯವಾಗಿ, ಕೊರಿಯಾ, ತೈವಾನ್ ಮತ್ತು ಲೀಯಾವೋತುಂಗ್ ಪೆನಿನ್ ಸುಲಾಗಳಲ್ಲಿ ತನ್ನ ವಸಾಹತುಗಳನ್ನು ೧೮೯೦ರ ದಶಕದಲ್ಲಿ ಸ್ಥಾಪಿಸಿತು. ಮಾರುಕಟ್ಟೆಯ ಸವಲತ್ತನ್ನು ಈ ಪ್ರದೇಶದಲ್ಲಿ ಕಂಡುಕೊಂಡ ಜಪಾನ್, ಕೃಷಿ ಉತ್ಪನ್ನಗಳನ್ನು ಮತ್ತು ಆಹಾರ ಸಾಮಗ್ರಿಗಳನ್ನು ಬೆಳೆಸಲು ವಿಶಾಲವಾದ ಹಾಗೂ ಫಲವತ್ತಾದ ಭೂಮಿಯನ್ನು ಈ ಪ್ರದೇಶದಲ್ಲಿ ಕಂಡುಕೊಂಡಿತು. ತನ್ನ ದೇಶೀಯ ಉದ್ಯಮಿಗಳ ಮತ್ತು ವರ್ತಕರ ಬಂಡವಾಳವನ್ನು ಹಿಂದುಳಿದ ಈ ಪ್ರದೇಶದಲ್ಲಿ ಹೂಡಲು ಅವಕಾಶವನ್ನು ಕಂಡುಕೊಂಡಿತು. ಈ ಸಾಂಸ್ಥಿಕ ಬದಲಾವಣೆಯು ಜಪಾನ್ ನ ಸ್ವತಂತ್ರ ನಿರ್ಣಯವಾಗಿದ್ದು ಇಲ್ಲಿ ಪಾಶ್ಚಾತ್ಯ ಸಂಸ್ಥೆಗಳ, ಸಂಸ್ಕೃತಿಗಳ ಪ್ರಭಾವವನ್ನು ತಳ್ಳಿ ಹಾಕುವುದು ಅಸಾಧ್ಯ. ಇದು ಕೈಗಾರಿಕೀಕರಣದಿಂದಾದ ಪರಿಣಾಮ.

ಸಾಮಾಜಿಕವಾಗಿ ಸಹ ಜಪಾನ್ ದೇಶ ಸಾಕಷ್ಟು ಆಧುನಿಕತೆಯನ್ನು ಕಂಡುಕೊಂಡಿದೆ (೧೯ನೆಯ ಶತಮಾನದಲ್ಲಿ). ಪಶ್ಚಿಮ ಜಗತ್ತಿನ ಮಾದರಿಯಲ್ಲಿ ಅನುಷ್ಠಾನಕ್ಕೆ ಬಂದ ಹೊಸ ಶಿಕ್ಷಣ ನೀತಿಯಿಂದ ವಿದ್ಯಾವಂತ ವರ್ಗವೊಂದು ಸೃಷ್ಟಿಯಾಯಿತು. ಆಧುನಿಕ ಜಪಾನ್ ನ ಏಳಿಗೆಗೆ ಇವರ ಪಾತ್ರ ಅಪೂರ್ವವಾಗಿದ್ದು, ಈ ವರ್ಗವು ದೇಶೀಯವಾದದ ಪ್ರಚಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು. ಜಪಾನ್‌ನ ಯಶಸ್ಸು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಸಾಹತುಶಾಹಿ ಪ್ರತಿಸ್ಪರ್ಧಿಗಳ ಗಮನ ಸೆಳೆದಿದ್ದುದಲ್ಲದೆ, ಇಡೀ ಏಷ್ಯಾ ಖಂಡದ ಸ್ವತಂತ್ರ ಹಾಗೂ ಸ್ವಾವಲಂಬನಾ ಬದುಕಿಗೆ ಒಂದು ಸೈದ್ಧಾಂತಿಕ ನಿಲುವನ್ನು ಕಂಡುಕೊಂಡಿತು. ಜಪಾನ್‌ನ ಏಳಿಗೆಯ ಸಮಯದಲ್ಲಿ ಇಡೀ ಏಷ್ಯಾಖಂಡ ವಸಾಹತೀಕರಣದಿಂದ ಛಿದ್ರ ಛಿದ್ರವಾಗಿತ್ತು. ಅಂತಹ ಸಂದರ್ಭದಲ್ಲಿ ಜಪಾನ್‌ನ ರಾಷ್ಟ್ರೀಯವಾದದ ಅಂತಾರಾಷ್ಟ್ರೀಕರಣದಿಂದಾಗಿ ಏಷ್ಯಾ ಖಂಡವನ್ನು ಐರೋಪ್ಯ ರಾಷ್ಟ್ರಗಳ ಬಿಗಿ ಹಿಡಿತದಿಂದ ಮುಕ್ತಿಗೊಳಿಸುವ ಪ್ರಯತ್ನವನ್ನು ಕೈಗೆತ್ತಿಕೊಂಡಿತು. ಇಂತಹ ಸೈದ್ಧಾಂತಿಕ ನಿಲುವು ಮತ್ತು ಅಭಿವೃದ್ದಿಯಿಂದ, ವಸಾಹತೀಕರಣ ಮತ್ತು ವಿದೇಶೀಯರ ದಬ್ಬಾಳಿಕೆಯಿಂದ ನರಳುತ್ತಿದ್ದ ಉಳಿದ ಏಷ್ಯಾ ದೇಶಗಳು ಎಚ್ಚೆತ್ತು ತಮ್ಮ ದೇಶದೊಳಗೆ ರಾಷ್ಟ್ರೀಯ ಚಳವಳಿಯ ಸಂಘಟನೆ ಮತ್ತು ಹೋರಾಟವನ್ನು ಪ್ರಾರಂಭಿಸಿದವು.

ಉದ್ಯಮಿಗಳು ಮತ್ತು ವ್ಯಾಪಾರಿ ವರ್ಗವು ಸಹ ಆಧುನಿಕ ಯುಗದ ಸೃಷ್ಟಿಯಾಗಿತ್ತು.  ಸರಕಾರವು ರಕ್ಷಣಾತ್ಮಕ ಮತ್ತು ಭದ್ರತಾ ನೀತಿಯನ್ನು ಅನುಸರಿಸಿ ದೇಶದ ಆರ್ಥಿಕ ಅಭಿವೃದ್ದಿಯನ್ನು ಸಾಧಿಸಿತು. ಈ ಅಭಿವೃದ್ದಿಯಲ್ಲಿ ಆರ್ಥಿಕವಾಗಿ ಮುಂದುವರಿದ ವರ್ಗಗಳು ಸಕ್ರಿಯವಾಗಿ ಪಾಲ್ಗೊಂಡಿದ್ದು, ಸರಕಾರವು ಈ ವರ್ಗಗಳ ಆಸಕ್ತಿಯನ್ನು ಅಧಿಕೃತವಾಗಿ ರಕ್ಷಿಸಿತು. ಆದ್ದರಿಂದ ವಿದ್ಯಾವಂತ ವರ್ಗದ ಜೊತೆಗೆ ವ್ಯಾಪಾರಿಗಳು, ಉದ್ಯಮಿಗಳು, ಸ್ಥಳೀಯ ಕಸುಬುಗಾರರು, ವರ್ತಕರು ದೇಶದ ಸರ್ವತೋಮುಖ ಅಭಿವೃದ್ದಿಯಲ್ಲಿ ಯಶಸ್ಸನ್ನು ಸಾಧಿಸಿದ ಜಪಾನ್ ದೇಶವು ಜಾಗತಿಕ ಮಟ್ಟದಲ್ಲಿ ಪ್ರಖ್ಯಾತಿಯನ್ನು ಸಾಧಿಸಿ ಸಮಕಾಲೀನ ವಸಾಹತು ರಾಷ್ಟ್ರಗಳೊಂದಿಗೆ ಹೆಜ್ಜೆಯಿಟ್ಟಿತು. ಕೈಗಾರಿಕೀಕರಣದಿಂದ ಹೊಸ ಕಾರ್ಮಿಕ ವರ್ಗದ ಸೃಷ್ಟಿಯ ಅನಿವಾರ್ಯವಾಗಿತ್ತು. ಈ ವರ್ಗವು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಪಡೆದು ದೇಶದ ಆರ್ಥಿಕ ರಂಗದೊಂದಿಗೆ ಬಹಳ ನಿಕಟ ಸಂಬಂಧವನ್ನು ಏರ್ಪಡಿಸಿಕೊಂಡಿತ್ತು. ಜೊತೆಗೆ ದೇಶದ ಉದ್ದಗಲಕ್ಕೂ ಅನೇಕ ಸಂಘಟನೆಗಳನ್ನು ಸ್ಥಾಪಿಸಿ ರಾಷ್ಟ್ರೀಯ ಮನೋಭಾವನೆ ಬೆಳೆಯುವಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತು.

ಇವೆಲ್ಲವೂ ೧೯ನೆಯ ಶತಮಾನದ ಜಪಾನ್‌ನಲ್ಲಿ ನಡೆದ ಆವಿಷ್ಕಾರಗಳು. ಇದರ ಪ್ರತಿಶ್ರುತವಾಗಿ ಹಳೆಯ ಸಂಬಂಧಗಳನ್ನು, ಸಂಸ್ಥೆಗಳನ್ನು ಮತ್ತು ಚಿಂತನೆಗಳನ್ನು ಕೈಬಿಟ್ಟು ಹೊಸತೊಂದನ್ನು ಹೊರಗಿನಿಂದ ಆಮದು ಮಾಡಿಕೊಂಡು ಆಧುನಿಕ ಸಮಾಜದ ಬೆಳವಣಿಗೆಗೆ ಅಡಿಪಾಯ ಹಾಕಿತು. ಇದು ನಿಧಾನಗತಿಯಲ್ಲಿ ಸಾಧ್ಯವಾಗದ ಕಾರಣ ಜಪಾನ್‌ನ ಮೇಜಿ ಸರಕಾರ ಬಹಳ ಕ್ರಾಂತಿಕಾರಿ ನಿಲುವುಗಳನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಕಂಡುಕೊಂಡಿತು. ಎಲ್ಲ ರಂಗಕ್ಕೂ ಈ ಕ್ರಾಂತಿ ಅವಲಂಬಿಸಿರುವುದರಿಂದ ಆಧುನೀಕರಣವು ಅಥವಾ ಪಾಶ್ಚಾತ್ಯೀಕರಣವು ಒಂದು ಚಳವಳಿಯಾಗಿ ಪರಿವರ್ತನೆಗೊಂಡಿತು.

ಚೀನಾ ಮತ್ತು ಜಪಾನ್‌ನಲ್ಲಿ ನಡೆದ ಸಾಂಸ್ಥಿಕ ಬದಲಾವಣೆಗಳನ್ನು ಮತ್ತು ಚಳವಳಿಗಳನ್ನು ಸೂಕ್ಷ್ಮವಾಗಿ ವಿಮರ್ಶಿಸಿದಾಗ ಭಿನ್ನತೆಯನ್ನು ಕಾಣಬಹುದು. ಇಲ್ಲಿ ಚೀನಾವನ್ನು ಗಮನಿಸಿದರೆ ವಿದೇಶಿ ಮಿಶನರಿಗಳು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಆಧುನಿಕ ಶಿಕ್ಷಣದ ಪ್ರಸಾರವನ್ನು ಕೈಗೊಂಡರೂ ಸಹ ಚೈನೀಯರಲ್ಲಿ ರಾಷ್ಟ್ರೀಯ ಮನೋಭಾವನೆಯನ್ನು ಬೆಳೆಸಲಿಲ್ಲ. ಏಕೆಂದರೆ ೧೮೪೨ರವರೆಗೂ ಚೈನೀಯರು ಪಾಶ್ಚಾತ್ಯ ಸಂಸ್ಕೃತಿಯನ್ನು ಕೀಳು ಎಂದು ಭಾವಿಸಿ ಯಾವುದೇ ಚಿಂತನೆಗಳನ್ನು, ಸಂಸ್ಥೆಗಳನ್ನು ಮತ್ತು ತತ್ವಗಳನ್ನು ಹೊರಗಿನಿಂದ ಆಮದು ಮಾಡಿಕೊಂಡಿರಲಿಲ್ಲ. ಆದರೆ ಮೊದಲ ಅಫೀಮು ಯುದ್ಧದಿಂದ (೧೮೩೯-೪೨) ವಸಾಹತುಶಾಹಿ ಐರೋಪ್ಯ ರಾಷ್ಟ್ರಗಳ ಸೈನಿಕ ಬಲದ ಅರಿವು ಚೀನಾದವರಿಗಾಯಿತು. ಇದರಿಂದಾಗಿ ಹೀನಾಯ ಸೋಲಿನಿಂದ ಚೈನೀ ಮಾಂಚು ಸರಕಾರದ ಸೈನಿಕ ಶಕ್ತಿ ಪತನಗೊಂಡಿತಲ್ಲದೆ ವಿದೇಶಿಯರ ಆಕ್ರಮಣಕಾರಿ ವಸಾಹತುಶಾಹಿ ಸ್ಥಾಪನೆಗೆ ಅವಕಾಶ ಕಲ್ಪಿಸಿತು. ಒಂದು ಕಡೆಯಿಂದ ಚೀನಾ ಸರಕಾರವು ವಿದೇಶಿಯರ ಪ್ರವೇಶವನ್ನು ತಡೆಗಟ್ಟಲು ಹಿಂದಿ ಬಿದ್ದಿತು. ಮತ್ತೊಂದು ಕಡೆಯಿಂದ ಪ್ರಾದೇಶಿಕ ಮಟ್ಟದಲ್ಲಿ ಅನೇಕ ದಂಗೆಗಳು, ಚಳವಳಿಗಳು ಪ್ರಾರಂಭವಾಗಿ ಸ್ಥಿರ ಹಾಗೂ ಭದ್ರ ಸರಕಾರದ ರಚನೆಗೆ ಜನರಲ್ಲಿ ಪ್ರಜ್ಞೆ ಮೂಡಿಸಿತು. ಜೊತೆಗೆ ಮಾಂಚು ಸರಕಾರದ ಮುಂದುವರಿಕೆಗೆ ಬೆದರಿಕೆ ಒಡ್ಡಿತು. ರಾಜಕೀಯ, ಸೈನಿಕ ಮತ್ತು ಆರ್ಥಿಕ ಬಿಕ್ಕಟ್ಟು ಅನಿವಾರ್ಯವಾಗಿ ಕಂಡುಬಂತು. ಮಾಂಚು ಸರಕಾರ ಈ ಅಸ್ಥಿರತೆಗೆ ಮೂಲಭೂತವಾಗಿ ಸೈನಿಕ ಶಕ್ತಿಯ ದುರ್ಬಲತೆ ಎಂದು ಮನಗಂಡಿತು. ಇದನ್ನು ತಪ್ಪಿಸಲು ಪಾಶ್ಚಾತ್ಯ ಸಂಸ್ಕೃತಿಯ ಹೆಗ್ಗಳಿಕೆಯನ್ನು ಗೌರವಿಸಿ ಸಾಂಸ್ಥಿಕ ನೆಲೆಯಲ್ಲಿ ವಿದೇಶಿ ಮಾದರಿಯನ್ನು ಅಳವಡಿಸುವ ಪ್ರಯತ್ನವನ್ನು ಮಾಡಲಾಯಿತು. ಅಂದರೆ ವಿದೇಶಿಯರ ಪ್ರವೇಶ ಮತ್ತು ಸ್ಥಳೀಯ ದಂಗೆಗಳಿಗೆ ಉತ್ತರವಾಗಿ ಮಾಂಚು ಸರಕಾರ ಮೊತ್ತ ಮೊದಲ ಸೈನಿಕ ಶಕ್ತಿಯ ಪುನರ್‌ಸಂಘಟನೆ ಮತ್ತು ಅದರ ಆಧುನೀಕರಣಕ್ಕೆ ಆದ್ಯತೆ ನೀಡಿತು. ೧೮೬೫ ರಿಂದ ೧೮೯೫ರವರಗೆ ಅನುಷ್ಠಾನದಲ್ಲಿದ್ದ ಸೆಲ್ಫ್ ಸ್ಟ್ರೆಂತನಿಂಗ್ ಚಳವಳಿಯ ಮೂಲ ಉದ್ದೇಶವು ಚೀನಾದ ರಾಷ್ಟ್ರೀಯ ಸೈನಿಕ ಬಲವನ್ನು ವೃದ್ದಿಸುವುದಾಗಿತ್ತು. ವಿದೇಶಿ ತಂತ್ರಜ್ಞಾನವನ್ನು ಆಮದು ಮಾಡಿಕೊಂಡು ಅನೇಕ ಮಿಲಿಟರಿ ಕೈಗಾರಿಕೆಗಳನ್ನು, ಶಾಲೆಗಳನ್ನು ಮತ್ತು ಸೈನಿಕ ತರಬೇತಿ ಕೇಂದ್ರಗಳನ್ನು ತೆರೆಯಲಾಯಿತು. ಇದರ ಯಶಸ್ಸು ೧೮೯೪-೯೫ರಲ್ಲಿ ನಡೆದ ಸೈನೋ-ಜಪಾನೀಸ್ ಯುದ್ಧದಲ್ಲಿ ಬೆಳಕಿಗೆ ಬಂತು. ಚೀನಾ ಇದರಲ್ಲಿ ಪುನಃ ಹೀನಾಯ ಸೋಲನ್ನು ಅನುಭವಿಸಿರುವುದಲ್ಲದೆ ಜಪಾನ್‌ಗೆ ತನ್ನ ಪ್ರಾಂತ್ಯಗಳಾದ ಲಿಯಾವೋತುಂಗ್ ಪ್ರಸ್ಥಭೂಮಿ, ಪೋರ್ಟ್ ಆರ್ಥರ್ ಇವುಗಳನ್ನು ಬಿಟ್ಟುಕೊಟ್ಟು ಮಂಚೂರಿಯದಲ್ಲಿ ವ್ಯಾಪಾರ ಕೇಂದ್ರ ಗಳನ್ನು ಸ್ಥಾಪಿಸಲು ಜಪಾನ್‌ಗೆ ಅವಕಾಶ ನೀಡಿತು. ಈ ಸೋಲಿನ ನಂತರ ಮಾಂಚು ಅಧಿಕಾರಿಗಳು ರಾಜಕೀಯ ಸಂಸ್ಥೆಗಳ ಪುನಾರಚನೆಗೆ ಒತ್ತು ಕೊಟ್ಟರು. ನಂತರದ ದಿನಗಳಲ್ಲಿ ವಿದ್ಯಾವಂತ ವರ್ಗವು ವಿದೇಶಿಯರ ವಿರುದ್ಧ ಚೀನಾ ತೆಗೆದುಕೊಂಡ ಧೋರಣೆಯನ್ನು ಖಂಡಿಸಿ ಎಲ್ಲೆಡೆ ರಾಷ್ಟ್ರೀಯವಾದದ ಪ್ರಚಾರಕ್ಕೆ ಕರೆ ಕೊಟ್ಟರು. ಈ ನಿಲುವುಗಳು ಚೀನಾದ ರಾಷ್ಟ್ರೀಯ ಬೆಳವಣಿಗೆ, ಸಾಮಾಜಿಕ ಪರಿವರ್ತನೆ, ಆರ್ಥಿಕ ವೃದ್ದಿ ಮತ್ತು ಐಕ್ಯತೆಯನ್ನು ಸ್ಥಾಪಿಸಿ ಸ್ಥಿರ ಸರಕಾರವನ್ನು ಸ್ಥಾಪಿಸುವುದಕ್ಕೆ ಮಹತ್ವ ನೀಡಿದವು. ಈ ಕಾರಣಕ್ಕಾಗಿ ೧೯ನೆಯ ಶತಮಾನದ ಕೊನೆಯಲ್ಲಿ ಚೀನಾದಲ್ಲಿ ರಾಷ್ಟ್ರೀಯವಾದದ ಉಗಮವಾಗಿ ಕ್ರಾಂತಿಕಾರಿ ಬದಲಾವಣೆಗೆ ದಾರಿ ಮಾಡಿಕೊಟ್ಟಿತು.

ಆದರೆ ಜಪಾನ್‌ನಲ್ಲಿ ಮಾತ್ರ ೧೮೬೮ರಲ್ಲಿ ನಡೆದ ಅರಿಸ್ಟ್ರೋಕ್ರೇಟಿಕ್ ಚಳವಳಿಯ ರಾಷ್ಟ್ರೀಯವಾದದ ಪ್ರಾರಂಭದ ಹಂತವಾಗಿತ್ತು. ಈ ಚಳವಳಿಯು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿರಲಿಲ್ಲ ಮತ್ತು ಜಾಗತಿಕ ಮಟ್ಟದಲ್ಲಿ ಬೇರೆ ಚಳವಳಿಗಳಂತೆ ಇದನ್ನು ಕೆಳವರ್ಗದ ಜನತೆ ಸಂಘಟಿಸಿರುವುದೂ ಅಲ್ಲ(ಉದಾಹರಣೆಗೆ ಫ್ರೆಂಚ್ ಕ್ರಾಂತಿ). ಜಪಾನ್‌ನಲ್ಲಿ ನಡೆದ ಚಳವಳಿಯು ಮೇಲು ವರ್ಗಕ್ಕೆ ಸೇರಿದ ಸಮುರಾಯ್ ಗುಂಪಿನವರು ಮೊದಲು ರಾಷ್ಟ್ರೀಯ ಮಟ್ಟದಲ್ಲಿ ದಂಗೆ ಎದ್ದರು. ನಂತರ ಈ ಕ್ರಾಂತಿಯಲ್ಲಿ ಉಳಿದ ವರ್ಗದವರು ಭಾಗವಹಿಸಿ ಒಂದು ರಾಷ್ಟ್ರೀಯ ಕ್ರಾಂತಿಯಾಗಿ ಪರಿವರ್ತಿಸಿದರು. ಚೀನಾದಲ್ಲಿ ನಡೆದ ತೈಪಿಂಗ್ ಕ್ರಾಂತಿ ರೈತರಿಗೆ ಮಾತ್ರ ಸೀಮಿತವಾಗಿದ್ದಂತೆ, ಜಪಾನ್‌ನ ಕ್ರಾಂತಿ ಯಾವುದೇ ವರ್ಗಕ್ಕೆ ಸೀಮಿತವಾಗಿರಲಿಲ್ಲ ಮತ್ತು ಯಾವುದೇ ವಂಶೀಯ ಆಧಿಪತ್ಯವನ್ನು ವಿರೋಧಿಸಿರಲಿಲ್ಲ. ಬದಲಾಗಿ ಈ ಕ್ರಾಂತಿಯು ಎಲ್ಲ ವರ್ಗದವರದ್ದಾಗಿದ್ದು ಇಡೀ ಜಪಾನ್ ಸಮಾಜದ ಆಧುನೀಕರಣವು ಜನರ ಒಕ್ಕೊರಲ ಧ್ವನಿಯಾಗಿತ್ತು. ಇಲ್ಲಿ ವರ್ಗ ವರ್ಗಗಳ ನಡುವೆ ಭಿನ್ನಾಭಿಪ್ರಾಯವಿರಲಿಲ್ಲ. ವಿರೋಧವಿರಲಿಲ್ಲ. ಇದು ಆಳುವ ಮತ್ತು ಸಾಮಾನ್ಯ ಜನರ ನಡುವೆ ನಡೆದ ವೈಮನಸ್ಸು ಆಗಿರಲಿಲ್ಲ. ಈ ಚಳವಳಿಯಲ್ಲಿ ಯಾವುದೇ ವರ್ಗವು ಹಳೇ ಸಂಸ್ಥೆಗಳನ್ನು ಉಳಿಸಿಕೊಳ್ಳುವ ಪ್ರಯತ್ನವನ್ನೂ ಮಾಡಿರಲಿಲ್ಲ. ಬದಲಾಗಿ ವ್ಯಾಪಾರಿವರ್ಗ, ರೈತರು, ಬಂಡವಾಳಶಾಹಿಗಳೂ, ಆಳುವ ವರ್ಗ (ಶೋಗುನೆಯಟ್ಸ್) ಸಂಮುರೈಗಳೆಲ್ಲವು ಕ್ರಾಂತಿಗೆ ಸಹಮತ ವ್ಯಕ್ತಪಡಿಸಿ ಇಡೀ ವ್ಯವಸ್ಥೆಯ ಪರಿವರ್ತನೆಗೆ ಕಾರಣರಾದರು. ಈ ಪರಿವರ್ತನೆ ಚೀನಾದಲ್ಲಿ ಆದಂತೆ ಯಾವುದೇ ಒಂದು ಅಂಗಕ್ಕೆ ಸೀಮಿತವಾಗಿರಲಿಲ್ಲ. ಬದಲಾವಣೆ ಎಲ್ಲ ರಂಗಕ್ಕೂ ಅನ್ವಯಿಸಿದ್ದು ಹೊರಗಿನ ಬೆದರಿಕೆಗೆ ಹೆದರಿ ಜಪಾನಿನವರು ಆಧುನೀಕರಣಕ್ಕೆ ಕೈಚಾಚಿದ್ದಾಗಿರಲಿಲ್ಲ. ಈ ಕಾರಣಕ್ಕಾಗಿಯೇ ಹೊಸ ನೇತೃತ್ವವು ‘‘ಮೇಜಿ’’ ಕಾಲದಲ್ಲಿ ಕೈಗಾರಿಕೀಕರಣದಲ್ಲಿ ಕ್ರಾಂತಿಯನ್ನು ಅನುಭವಿಸಿತ್ತು. ರಾಜಕೀಯ ಸಂಸ್ಥೆಗಳನ್ನು ಪರಿವರ್ತಿಸಿ ದೇಶದಾದ್ಯಂತ ಆಧುನಿಕ ಶಿಕ್ಷಣವನ್ನು ಪ್ರಸಾರ ಮಾಡಲಾಯಿತು. ವರ್ಗೀಕೃತ ಸಮಾಜದ ವ್ಯವಸ್ಥೆಯನ್ನು ಕೈಬಿಟ್ಟು ಸಮಾನತೆಗೆ ಒತ್ತು ನೀಡಿತು. ಈ ಎಲ್ಲ ಬದಲಾವಣೆಗಳು ವಿದೇಶಿಯರ ಸಹಕಾರದಿಂದಲೇ ನಡೆದರೂ ಜಪಾನ್ ಸರಕಾರ ವಿದೇಶಿಯರಿಗೆ ಯಾವುದೇ ಕಾರಣಕ್ಕೂ ಅವರ ವಸಾಹತುಗಳನ್ನು ಸ್ಥಾಪಿಸಲು ಅವಕಾಶವನ್ನು ಕಲ್ಪಿಸಲಿಲ್ಲ. ಚೀನಾದಲ್ಲಿ ಮಾತ್ರ ಐರೋಪ್ಯ ರಾಷ್ಟ್ರಗಳು ಸಾಕಷ್ಟು ಹಿಡಿತವನ್ನು ಸಾಧಿಸಿದ್ದವು. ಅಂದರೆ ೧೯ನೆಯ ಶತಮಾನದ ಕೊನೆಯಲ್ಲಿ ಜಪಾನ್ ಏಷ್ಯಾ ದಲ್ಲಿಯೇ ಅತ್ಯಂತ ಮುಂದುವರಿದ ದೇಶವಾಗಿ ಬೆಳೆದರೆ, ಚೀನಾವು ಅತ್ಯಂತ ಅನಭಿವೃದ್ದಿ ಹೊಂದಿದ ವಸಾಹತು ಆಗಿ ಮಾರ್ಪಟ್ಟಿತು. ಇದರೆಡೆಯಲ್ಲಿಯೂ ಎರಡೂ ಸಮಾಜದಲ್ಲಿ ದೇಶೀಯ ಸಂಸ್ಥೆಗಳು ವಿದೇಶಿಯರ ಸಂಬಂಧದಿಂದ ಪರಿವರ್ತನೆಗೊಳ್ಳಲ್ಪಟ್ಟು ರಾಷ್ಟ್ರೀಯತೆಯ ಬೆಳವಣಿಗೆಗೆ ಪ್ರೇರಣೆ ನೀಡಿತು.

 

ಪರಾಮರ್ಶನಗ್ರಂಥಗಳು

೧. ನಥೇನಿಯಲ್ ಪೀಪರ್, ೧೯೮೯. ದಿ ಫಾರ್ ಈಸ್ಟ್, ನ್ಯೂಡೆಲ್ಲಿ.

೨. ಜನ್ ಪೇರ್‌ಬ್ಯಾಂಕ್ ಕೆ., ೧೯೬೫. ಈಸ್ಟ್ ಏಷ್ಯಾ : ದಿ ಮಾಡರ್ನ್ ಟ್ರಾನ್ಸ್ ಫೋರ್ಮೇಶನ್, ಯು.ಎಸ್.ಎ.