೨೦ನೆಯ ಶತಮಾನದ ಆರಂಭದಲ್ಲಿ ಉಗಮವಾದ ಯಹೂದಿಗಳ ರಾಷ್ಟ್ರೀಯ ಚಳವಳಿ, ಆರಂಭದಲ್ಲಿ ಇದು ಇಸ್ರೇಲ್ ರಾಷ್ಟ್ರವೆಂದು ಕರೆಯಲ್ಪಡುವ ಭೂಪ್ರದೇಶದಲ್ಲಿ ನಡೆದ ಘಟನೆಯಾಗಿರಲಿಲ್ಲ. ಅದು ಜಾಗತಿಕ ಮಟ್ಟದಲ್ಲಿ ಚದುರಿಹೋದ ಯಹೂದಿಗಳು ಸಂಘಟಿತವಾಗಿ, ತಾವು ಕಳೆದುಕೊಂಡ ಮೂಲಭೂಮಿಯನ್ನು ಪ್ಯಾಲೇಸ್ತೀನಿ ಅರಬರಿಂದ ವಾಪಸ್ಸು ಪಡೆಯಲು ನಡೆಸಿದ ತೀವ್ರ ತೆರನಾದ ಒಂದು ಹೋರಾಟ ಈ ಹೋರಾಟಕ್ಕೆ ಚಾಲನೆ ನೀಡಿರುವ ಘಟನೆಗಳಲ್ಲಿ ೧೯ನೆಯ ಶತಮಾನದಲ್ಲಿ ಯುರೋಪಿನಾದ್ಯಂತ ಯಹೂದಿಗಳು ಎದುರಿಸಿದ ಬಿಕ್ಕಟ್ಟೂ ಒಂದು. ಅದನ್ನು ಯುರೋಪಿನ ಜನರು ಮತ್ತು ಅಲ್ಲಿನ ಸರಕಾರಗಳು ಪಾಲಿಸಿದ ಒಂದು ಧೋರಣೆಯಾದ ‘ಯಾಂಟಿಸೆಮಿಟಿಸಂ’ ಅಥವಾ ಯಹೂದಿ ದ್ವೇಷ ಮನೋಭಾವನೆ ಎಂದು ಕರೆಯಲಾಗುತ್ತದೆ. ಹಾಗಾಗಿ ಜಿಯೋನಿಸಂ ಅಥವಾ ಯಹೂದಿ ರಾಷ್ಟ್ರೀಯ ಚಳವಳಿ, ಯುರೋಪಿಯನ್ನರು ಕಾರ್ಯರೂಪಕ್ಕೆ ತಂದ ‘ಯಾಂಟಿಸೆಮಿಟಿಸಂ’ ಧೋರಣೆಯ ವಿರುದ್ಧ ತಮ್ಮ ರಕ್ಷಣೆಗಾಗಿ ಯಹೂದಿಗಳು ಜಾಗತಿಕ ಮಟ್ಟದಲ್ಲಿ ಆಯೋಜಿಸಿದ ಒಂದು ಬೃಹತ್ ಯೋಜನೆ. ಇಲ್ಲಿ ಉತ್ತರಿಸಬೇಕಾದ ಪ್ರಶ್ನೆಗಳು ಇಂತಿವೆ. ೧. ಯಹೂದಿಗಳು ಯಾರು? ೨. ಯಹೂದಿಗಳು ಜಗತ್ತಿನಾದ್ಯಂತ ಏಕೆ ಚದುರಿ ಹೋದರು? ೩. ಅವರ ಮೂಲಭೂಮಿ ಕೈ ತಪ್ಪಿ ಹೋಗಲು ಕಾರಣವೇನು? ೪. ೧೯ನೆಯ ಶತಮಾನದ ಯುರೋಪಿನಲ್ಲಿ ಯಹೂದಿ ದ್ವೇಷ ಹುಟ್ಟಲು ಹಿನ್ನೆಲೆಗಳೇನು ಮತ್ತು ಅದಕ್ಕುತ್ತರವಾಗಿ ಜಾಗತಿಕ ಮಟ್ಟದಲ್ಲಿ ಯಹೂದಿಗಳ ಸಂಘಟನೆ ಅನಿವಾರ್ಯವಾಗಿ ರೂಪುಗೊಳ್ಳಲು ಸಹಕರಿಸಿದ ಸೈದ್ಧಾಂತಿಕ ನಿಲುವುಗಳ್ಯಾವು? ಈ ಎಲ್ಲ ಪ್ರಶ್ನೆಗಳನ್ನು ಗಂಭೀರವಾಗಿ ತೆಗೆದುಕೊಂಡರೆ ೨೦ನೆಯ ಶತಮಾನದಲ್ಲಿ ಯಹೂದಿಗಳ ತೀವ್ರತೆರನಾದ ಹೋರಾಟದ ಚಿತ್ರಣ ನಮಗೆ ಸಿಗುತ್ತದೆ. ಇವುಗಳನ್ನು ಒಂದೊಂದಾಗಿ ಪರಿಶೀಲಿಸೋಣ.

ಯಹೂದಿಗಳ ಇತಿಹಾಸದ ಮರುನಿರೂಪಣೆಗೆ ಮುಖ್ಯವಾದ ಆಧಾರವೆಂದು ಪರಿಗಣಿಸಲ್ಪಡುವುದು ಬೈಬಲ್‌ನ ಹಳೆ ಒಡಂಬಡಿಕೆ. ಇದನ್ನು ರಚಿಸಿದವರು ಇಸ್ರೇಲೈಟ್ ಪ್ರವಾದಿಗಳು. ಈ ರಚನೆಗಳು ಇಸ್ರೇಲೈಟ್ ಅಥವಾ ಯಹೂದಿಗಳ ಧಾರ್ಮಿಕ ಮತ್ತು ರಾಜಕೀಯ ಜೀವನದ ಕುರಿತು ಬೆಳಕು ಚೆಲ್ಲುತ್ತವೆ. ಆರಂಭದಲ್ಲಿ ಈ ಗುಂಪು/ಕುಲದವರನ್ನು ಹೀಬ್ರೂಗಳೆಂದು ಕರೆಯಲಾಗಿದ್ದು, ಈ ಹೀಬ್ರೂ ಕುಟುಂಬಗಳು ಸಾಮಾನ್ಯವಾಗಿ ಅಲೆಮಾರಿಗಳಾಗಿ ಆಹಾರ ಸಂಗ್ರಹಣೆಗೆ, ಗುಂಪು ಗುಂಪಾಗಿ ತಮ್ಮ ಸಾಕು ಪ್ರಾಣಿಗಳ ಜೊತೆಗೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗಿ, ಡೇರೆಗಳಲ್ಲಿ ಜೀವನ ನಡೆಸುತ್ತಿದ್ದರು. ಇಂದು ಹೀಬ್ರೂ ಎಂಬುದು ಅವರ ಆಡುಭಾಷೆಯ ಹೆಸರು. ಇತಿಹಾಸದಲ್ಲಿ ಯಹೂದಿಗಳ ಪೂರ್ವಜರು ಅರಬ್ ಪ್ರಸ್ಥಭೂಮಿ ಮರಳುಗಾಡಿನಲ್ಲಿ ಗುಂಪಾಗಿ ವಾಸವಾಗಿರುತ್ತಿದ್ದರು ಎಂದು ಗುರುತಿಸಲಾಗಿದೆ. ಅವರನ್ನು ಇಸ್ರೇಲೈಟ್ ಕುಲದವರೆಂದು ಕರೆಯುತ್ತಿದ್ದರು.

ಈ ಅಲೆಮಾರಿ ಗುಂಪಿನಲ್ಲಿ ಮುಖ್ಯವಾದ ವ್ಯಕ್ತಿಯೆಂದು ಐತಿಹಾಸಿಕವಾಗಿ ಗುರುತಿಸಿಕೊಳ್ಳುವವನು ಏಬ್ರಾಹಂ. ಇವನು ಸುಮಾರು ಕ್ರಿ.ಪೂ.೨೦೦೦ದ ಹೊತ್ತಿನಲ್ಲಿ ಹಿಬ್ರೂ ಕುಟುಂಬದ ಯಜಮಾನನಾಗಿದ್ದನು ಎಂದು ಬೈಬಲ್‌ನ ಹಳೆ ಒಡಂಬಡಿಕೆ ಹೇಳುತ್ತದೆ. ಪ್ರಾಯಶಃ ಇವನು ಇತಿಹಾಸ ಪ್ರಸಿದ್ಧ ಬ್ಯಾಬಿಲೋನ್ ದೊರೆ ಹಮ್ಮುರಾಬಿಯ ಸಮಕಾಲೀನನಾಗಿರಬಹುದು. ಇವನು ಕುಟುಂಬದ ಮುಖಂಡನಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಒಂದು ಪ್ರಾಮುಖ್ಯವಾದ ಘಟನೆಯ ಅನುಭವ ಏಬ್ರಾಹಂಗೆ ಆಗುತ್ತದೆ. ಅದು ನಂತರ ಯಹೂದಿಯ ಸಮೃದ್ಧ ಸಮಾಜ ಮತ್ತು ಸಾಮ್ರಾಜ್ಯವನ್ನು ಇಂದಿನ ಪ್ಯಾಲೇಸ್ತೀನಿನಲ್ಲಿ ಕಟ್ಟಲು ಹಿನ್ನೆಲೆ ಎಂದು ಇಂದು ಸಮರ್ಥಿಸಿಕೊಳ್ಳಲಾಗುತ್ತಿದೆ. ಅದೊಂದು ಯಶೋಗಾಥೆಯಾಗಿದ್ದು, ಅದಕ್ಕೆ ಒಂದು ವಿಶೇಷವಾದ ಹಿನ್ನೆಲೆ ಇದೆ. ಇತಿಹಾಸ ಹೇಳುವಂತೆ, ಏಬ್ರಾಹಂ ಮತ್ತು ಅವನ ಕುಟುಂಬ ಒಂದು ಸಂದರ್ಭದಲ್ಲಿ ಇಂದಿನ ಇರಾಕ್ ನಲ್ಲಿ ಹರಿಯುವ ಯುಪ್ರೆಟಿಸ್ ನದಿಯ ದಡದ ತೀರಕ್ಕೆ ಸಮೀಪವಿರುವ ಇಂದಿನ ‘ಉರ್’ ಪಟ್ಟಣದಿಂದ ಇಂದಿನ ಟರ್ಕಿಗೆ ಸಮೀಪವಿರುವ ಹರ್ರ‍ಾನ್‌ಗೆ ವಲಸೆ ಹೋಗಿ ಸ್ವಲ್ಪ ಕಾಲ ನೆಲೆ ನಿಂತರು. ನಮಗಿರುವ ಆಧಾರಗಳ ಪ್ರಕಾರ, ಈ ಪಟ್ಟಣದಲ್ಲಿ ವಾಸಿಸುವಾಗ, ಒಂದು ರಾತ್ರಿ ಏಬ್ರಾಹಂ ಗಾಢ ನಿದ್ರೆಯಲ್ಲಿದ್ದಾಗ ಕನಸಿನಲ್ಲಿ ಅವನಿಗೆ ತಾನು ಪೂಜಿಸುವ ದೇವರು ‘ಯಹೂ’ ಪ್ರತ್ಯಕ್ಷನಾಗಿ ವಿಶೇಷ ಸಂದೇಶವನ್ನು ಪ್ರವಚಿಸುತ್ತಾನೆ. ಆ ಸಂದೇಶದಲ್ಲಿ ೧. ಏಬ್ರಾಹಂನನ್ನು ತನ್ನ ಕುಟುಂಬದ ಸದಸ್ಯರೊಂದಿಗೆ ‘ಕೆನಾನ್’ (ಕೆನಾನ ಎಂಬುದು ಇಂದಿನ ಪ್ಯಾಲೇಸ್ತೀನ್ ಎಂದು ಗುರುತಿಸಲಾಗಿದೆ ಮತ್ತು ಯಹೂದಿಗಳು ಅದನ್ನು ಹಲವು ಆಧಾರಗಳಿಂದ ಸಮರ್ಥಿಸಿಕೊಳ್ಳುತ್ತಾರೆ) ಎಂಬ ಭೂಪ್ರದೇಶಕ್ಕೆ ವಲಸೆ ಹೋಗಿ ಖಾಯಂ ಆಗಿ ವಾಸ್ತವ್ಯ ಹೂಡಲು ವಿನಂತಿಸಿಕೊಳ್ಳಲಾಯಿತು. ೨. ಇದರ ಯಶಸ್ಸಿಗೆ ನಿನ್ನ ಮತ್ತು ನಿನ್ನ ಕುಟುಂಬಕ್ಕೆ ದೇವರ ಆಶೀರ್ವಾದವಿದೆ ಮತ್ತು ಕೆನಾನ್ ಪ್ರದೇಶದಲ್ಲಿ ಈ ಕುಟುಂಬ ಖಾಯಂ ಜೀವನ ಆರಂಭಿಸಿದಂದಿನಿಂದ, ಅದು ಯಹೂದಿಗಳ ಮೂಲಭೂಮಿಯಾಗಿ ಪರಿವರ್ತನೆಗೊಳ್ಳುತ್ತದೆ. ಅದಕ್ಕೂ ದೇವರ ಆಶೀರ್ವಾದವಿದ್ದು, ಅದರಿಂದ ಆ ಪ್ರದೇಶದಲ್ಲಿ ಒಂದು ಮಾದರಿ ಸಮಾಜ ಮತ್ತು ಹೊಸ ನಾಗರಿಕತೆ ಸಮೃದ್ಧವಾಗಿ ಉದ್ಭವವಾಗುತ್ತದೆ. ಅಲ್ಲದೆ ಯಹೂದಿಗಳ ವಾಸ್ತವ್ಯದ ಪರಿಣಾಮವೆಂಬಂತೆ ಕೆನಾನ್ ಅಥವಾ ಪ್ಯಾಲೇಸ್ತೀನ್, ಜಾಗತಿಕ ಮಟ್ಟದಲ್ಲಿ ವ್ಯಾಪಾರ, ಉತ್ಪಾದನೆ, ಕೈಗಾರಿಕಾ, ರಾಜಕೀಯ, ಸಾಂಸ್ಕೃತಿಕ ಜ್ಞಾನೋದಯ ವಿಚಾರಗಳಿಗೆ ಉತ್ಕೃಷ್ಟ ಕೇಂದ್ರವಾಗಿ ಮಾರ್ಪಟ್ಟು, ಅಲ್ಲಿ ಹೊಸ ನಾಗರಿಕ ಸಮಾಜ ನಿರ್ಮಾಣವಾಗುತ್ತದೆ ಎಂದೂ ಹೇಳಲಾಯಿತು. ಜೊತೆಗೆ, ಅದು ಯಹೂದಿಗಳ ಸ್ವತಂತ್ರ ಒಡೆತನ ಹೊಂದಿದ ಭೂ ಪ್ರದೇಶವೂ ಆಗಿ ಈವರೆಗೆ ಅವರು ನಡೆಸಿದ ಅಲೆಮಾರಿ ಜೀವನಕ್ಕೆ ಪರದೆ ಎಳೆದು ಸ್ವತಂತ್ರ ಭೂಮಿಯಲ್ಲಿ ಸ್ವತಂತ್ರ ಸ್ವಾವಲಂಬಿ ಜೀವನವನ್ನು ಆರಂಭಿಸಲು ದೇವರು ಸಹಕರಿಸುತ್ತಾನೆ ಎಂದು ಸಂದೇಶದಲ್ಲಿ ಸ್ಪಷ್ಟವಾಗಿ ನುಡಿಯಲಾಯಿತು. ೩. ಆನಂತರ, ಅಲ್ಲಿ ಯಹೂದಿಗಳು ತಮ್ಮದೇ ಭಾಷೆ, ಸಂಸ್ಕೃತಿ, ಆಹಾರ ಪದ್ದತಿ, ಮಲ್ಯ, ಆಚಾರವಿಚಾರಗಳನ್ನು ಬೆಳೆಸಿಕೊಂಡು ಒಂದು ದೇಶವಾಗಿ ಬೆಳೆಸುತ್ತಾರೆ ಎಂದೂ ತಿಳಿಸಲಾಯಿತು. ೪. ಒಂದು ವೇಳೆ, ಅಂತಹ ಒಂದು ಸಮೃದ್ಧ ದೇಶ ಕಟ್ಟಿದ ನಂತರ ಯಾವುದೇ ಅಚಾನಕ್ ಆಗಿ ಬಾಹ್ಯ ಅಥವಾ ಆಂತರಿಕ ಘಟನೆಗಳಿಂದ ಯಹೂದಿಗಳು ತಾವು ಸ್ಥಾಪಿಸಿರುವ ದೇಶ ಬಿಟ್ಟು ಚದುರಿಹೋದರೆ, ಅಂತಹ ಸಂದರ್ಭದಲ್ಲಿ ಅವರ ದೇವರು ‘ಯಹೂ’ ಯಹೂದಿಗಳನ್ನು ಪುನಃ ಸಂಘಟಿಸಿ ಕಳೆದುಕೊಂಡ ತಮ್ಮ ಮೂಲಸ್ಥಾನವನ್ನು ಹಿಂದಕ್ಕೆ ಪಡೆಯಲು ಸಹಕರಿಸುತ್ತಾನೆ ಮತ್ತು ಅದಕ್ಕೆ ದೇವರ ಆಶೀರ್ವಾದವು ಇದೆ ಎಂದು ಸ್ಪಷ್ಟವಾಗಿ ತಿಳಿಸಲಾಯಿತು.

ಈ ಸಂದೇಶದಲ್ಲಿ ದೇವರು ತಾನು ನಿದ್ರಾವಸ್ಥೆಯಲ್ಲಿರುವಾಗ ಕನಸಿನಲ್ಲಿ ಬಂದು ನೀಡಿರುವ ಆಶ್ವಾಸನೆಯನ್ನು ಏಬ್ರಾಹಂ ತನ್ನ ಕುಟುಂಬದ ಸದಸ್ಯರೊಂದಿಗೆ ಹಂಚಿ ಕೊಳ್ಳುತ್ತಾನೆ. ಮತ್ತು ಅದನ್ನು ಅವರು ಬಲವಾಗಿ ನಂಬುತ್ತಾರೆ. ಆ ದೃಢ ನಂಬಿಕೆಯ ಪ್ರತಿಫಲವಾಗಿ ಕೆನಾನ್/ಪ್ಯಾಲೇಸ್ತೀನ್ ದೇವರು ಕೊಟ್ಟ ಪ್ರದೇಶ ಮತ್ತು ಅಲ್ಲಿ ನೆಲೆಸಲು ಯಹೂದಿಗಳಿಗೆ ಮಾತ್ರ ಹಕ್ಕು ಇರುವುದೆಂದು, ಆ ಪ್ರದೇಶದ ಖಾಯಂ ಪ್ರಜೆಗಳನ್ನಾಗಿ ದೇವರೇ ಅವರನ್ನು ಗುರುತಿಸಿರುವುದು ಎಂದು ಪ್ರಚಾರ ಮಾಡಲಾಯಿತು. ಹಾಗಾಗಿ ಪ್ಯಾಲೇಸ್ತೀನ್‌ನನ್ನು ಯಹೂದಿಗಳು ‘ಗಾಡ್ಸ್ ಪ್ರಾಮಿಸ್‌ಡ್ ಲ್ಯಾಂಡ್’  ಎಂದೇ ಸಮರ್ಥಿಸಿ ಕೊಳ್ಳುತ್ತಾರೆ.

ಇದೊಂದು ಪುರಾಣ ಕಥೆಯಾದರೂ, ಯಹೂದಿಗಳು ಇದಕ್ಕೆ ಜೀವಂತಿಕೆ ನೀಡಿ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಪ್ರಚಾರ ಮಾಡುತ್ತಾ ಬಂದಿದ್ದರು. ಇಸ್ರೇಲೈಟ್ ಪ್ರವಾದಿಗಳು ಬೈಬಲ್‌ನ ಹಳೆ ಒಡಂಬಡಿಕೆಯನ್ನು ರಚಿಸುವಾಗ ಏಬ್ರಾಹಂನು ಅನುಭವಿಸಿದ ಈ ಘಟನೆಯ ಸಾರಾಂಶವನ್ನು ಅಳವಡಿಸಿಕೊಂಡಿದ್ದರು. ಇವತ್ತಿಗೂ ಇದು ಅವರಲ್ಲಿ ಬೈಬಲ್ ಬರಹದ ಮೂಲಕ ಪ್ರಚಾರದಲ್ಲಿದೆ ಮತ್ತು ಅದನ್ನು ಯಹೂದಿಗಳು ಸ್ಪಷ್ಟವಾಗಿ ನಂಬಿದ್ದರು. ಆದರೆ, ಇದು ಸರಿಯೇ? ವಾಸ್ತವವೇ? ಅಥವಾ ಪುರಾಣವೇ? ಎಂಬುದು ಬೇರೆಯೇ ಚರ್ಚೆ.

ಏಬ್ರಾಹಂ, ದೇವರು ನೀಡಿರುವ ಆಶ್ವಾಸನೆ/ಸಂದೇಶವನ್ನು ಚಾಚೂ ತಪ್ಪದೆ ಪಾಲಿಸಿ ತನ್ನ ಕುಟುಂಬದೊಂದಿಗೆ ದೇವರು ಸೂಚಿಸಿದ ಕೆನಾನ್/ಪ್ಯಾಲೇಸ್ತೀನ್ ಪ್ರದೇಶದತ್ತ ಹರ್ರ‍ಾನ್ ಪಟ್ಟಣದಿಂದ ಪ್ರಯಾಣ ಆರಂಭಿಸುತ್ತಾನೆ. ಪ್ರಯಾಣ ಸುಖಕರವಾಗಿ ನಿರಂತರವಾಗಿ ಮುಂದುವರಿಯಲಿಲ್ಲ. ಹಠಾತ್ ಸಂಭವಿಸಿದ ಭೀಕರ ಕ್ಷಾಮದಿಂದಾಗಿ ಏಬ್ರಾಹಂ ತನ್ನ ಪ್ರಯಾಣವನ್ನು ಮೊಟಕುಗೊಳಿಸಿ, ಸ್ವಲ್ಪ ಕಾಲ ಈಜಿಪ್ಟ್‌ನಲ್ಲಿ ರಕ್ಷಣೆಗಾಗಿ ನೆಲೆ ನಿಲ್ಲುತ್ತಾನೆ. ಕ್ಷಾಮದ ತೀವ್ರತೆ ಸಡಿಲಾದ ನಂತರ ಪುನಃ ಈಜಿಪ್ಟ್‌ನಿಂದ ಕುಟುಂಬದೊಂದಿಗೆ ಪ್ರಯಾಣವನ್ನು ಮುಂದುವರಿಸುತ್ತಾನೆ. ಕೊನೆಗೊಂದು ದಿನ ಬೈಬಲ್ ಪ್ರಕಾರ, ಕೆನಾನ್ ಪ್ರದೇಶವನ್ನು ತಲುಪುತ್ತಾನೆ ಮತ್ತು ದೇವರು ಕೊಟ್ಟ ಸಂದೇಶದಂತೆ ಅಲೆಮಾರಿ ಜೀವನವನ್ನು ತ್ಯಜಿಸಿ ಖಾಯಂ ಜೀವನವನ್ನು ಆರಂಭಿಸುತ್ತಾನೆ. ಅವನ ಮರಣ ನಂತರ ಕುಟುಂಬ ಸದಸ್ಯರು ಏಬ್ರಾಹಂನ ಶವ ಸಂಸ್ಕಾರವನ್ನು ಇಂದಿನ ಜೋರ್ಡಾನ್ ನದಿ ತೀರದಲ್ಲಿರುವ ಹೇಬ್ರಾನ್ ಪಟ್ಟಣದಲ್ಲಿ ಮಾಡಿದರು.

ಏಬ್ರಾಹಂನ ಮೊಮ್ಮಗ ಜೇಕಬ್. ಅವನಿಗೆ ಹನ್ನೆರಡು ಮಕ್ಕಳೂ, ಪ್ರತಿಯೊಬ್ಬರು ಒಂದೊಂದು ಕುಲದ ಜನಕರಾಗಿ ಪ್ರಚಲಿತರಾದರು. ನಂತರ ಅವರು ಹುಟ್ಟು ಹಾಕಿದ ಕುಲಗಳು ಇಸ್ರೇಲ್‌ನ ಪ್ರಸಿದ್ಧ ಹನ್ನೆರಡು ಕುಲಗಳೆಂದೇ ಖ್ಯಾತಿ ಪಡೆದವು. ಕುಲ-ಕುಲಗಳ ನಡುವೆ ವೈವಾಹಿಕ ಸಂಬಂಧಗಳು ಸಾಮಾನ್ಯವಾಗಿ ರೂಢಿಯಲ್ಲಿದ್ದವು. ಈ ಕುಲಗಳ ವಂಶ ಕ್ರಮವು ಆರಂಭದಿಂದಲೂ ಪುರುಷ ಸಂತತಿಯ ಮೂಲಕ ಸಾಗುವ ವ್ಯವಸ್ಥೆಯನ್ನು ಪಾಲಿಸಿಕೊಂಡು ಬಂದಿರುವುದರಿಂದ, ಈ ಹನ್ನೆರಡು ಕುಲಗಳು ಪರಸ್ಪರ ಹೊಂದಾಣಿಕೆಯಿಂದ ಹಲವು ತಲೆಮಾರುಗಳ ಕಾಲ ತಮ್ಮ ಜೀವಂತಿಕೆಯನ್ನು ಉಳಿಸಿಕೊಂಡವು. ಆ ನಂತರ ಜೇಕಬ್‌ನ ಒಬ್ಬ ಮಗನಾದ ಜೋಸೆಫ್ ಎಂಬುವನು ಪರ್ರ‍ೊ ರಾಜರ ಕಾಲದ ಈಜಿಪ್ಟ್ ಸರಕಾರದ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾನೆ. ಪರ್ರ‍ೊ ದೊರೆ ತನ್ನ ಸರಕಾರದ ಉಸ್ತುವಾರಿ ಮತ್ತು ಈಜಿಪ್ಟ್‌ನ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಲು ಜೋಸೆಫ್ ನಲ್ಲಿ ಮನವಿ ಮಾಡಿಕೊಂಡು, ಈಜಿಪ್ಟ್ ನಿನ್ನ ದೇಶವೆಂದು ತಿಳಿದು ಇಲ್ಲಿನ ಪ್ರಜೆಗಳನ್ನು ರಕ್ಷಿಸಬೇಕೆಂದು ಆದೇಶ ಮಾಡುತ್ತಾನೆ.

ಜೋಸೆಪ್‌ನ ಅಧಿಕಾರದ ಅವಧಿಯಲ್ಲಿ(ಪರ್ರ‍ೊ ರಾಜನ ಪ್ರಧಾನ ಪ್ರತಿನಿಧಿಯಾಗಿ) ಈಜಿಪ್ಟನ್ನು ನಿರಂತರ ಏಳು ವರ್ಷಗಳು ಎದುರಿಸಿದ ಭೀಕರ ಕ್ಷಾಮದಿಂದ ರಕ್ಷಿಸಿದ್ದು ಅಲ್ಲದೆ, ಅವನ ಯಶಸ್ವಿ ಆಡಳಿತ ಸುಧಾರಣೆಯಿಂದಾಗಿ ಈಜಿಪ್ಟ್ ದೇಶ ಸಮೃದ್ಧ ಪ್ರದೇಶವಾಗಿ ಬೆಳೆಯಿತು. ಆವಾಗಲೂ ಜೋಸೆಫ್‌ನ ತಂದೆ ಮತ್ತು ಹನ್ನೊಂದು ಮಂದಿ ಹಾಗೂ ಅವರ ಕುಟುಂಬಗಳು ಕೆನಾನ್(ಪ್ಯಾಲೇಸ್ತೀನ್) ಭೂಪ್ರದೇಶದಲ್ಲೇ ಜೀವಿಸುತ್ತಿದ್ದರು. ಜೋಸೆಫ್, ತನ್ನ ಕುಟುಂದ ಸದಸ್ಯರೊಂದಿಗೆ ಜೊತೆಯಾಗಿರಲು ಬಯಸಿ, ಆ ಎಲ್ಲ ಸದಸ್ಯರನ್ನು ಕೆನಾನ್‌ನಿಂದ ಈಜಿಪ್ಟ್‌ಗೆ ಬಂದು ನೆಲೆಸಲು ಸ್ವಾಗತಿಸುತ್ತಾನೆ. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಸಿದ ಕೆನಾನ್ ಯಹೂದಿ ಕುಲಗಳು, ಈಜಿಪ್ಟ್‌ಗೆ ಬಂದು ನೆಲೆಸಿದ್ದರು. ಪಿತೃಪ್ರಧಾನ ಸಮಾಜವಾದ ಯಹೂದಿ ಕುಲದಲ್ಲಿ ಆರಂಭದಲ್ಲಿ ಕೇವಲ ಎಪ್ಪತ್ತು ಮಂದಿ ಇದ್ದರು. ಪ್ರಾಚೀನ ಕಾಲದ ನೈಲ್ ನದಿ ತೀರದಲ್ಲಿರುವ ಗೋಶೆನ್ ಎಂಬ ಸ್ಥಳದಲ್ಲಿ ಇವರೆಲ್ಲರೂ ಸುಮಾರು ನಾನ್ನೂರು ವರ್ಷಗಳಷ್ಟು ಕಾಲ ಜೀವನ ನಡೆಸಿದ್ದರು. ಅವರು ಈ ಪ್ರದೇಶದಲ್ಲಿ ಆರ್ಥಿಕವಾಗಿ ಬಲಿಷ್ಠರಾಗಿದ್ದು ಅಲ್ಲದೆ, ಒಂದು ಬಲಿಷ್ಠ ಸಮುದಾಯವಾಗಿ ಪರಿವರ್ತನೆಗೊಂಡರು. ಜೊತೆಗೆ, ಈಜಿಪ್ಟ್‌ಗೆ ಬಂದು ಸುಮಾರು ಇನ್ನೂರು ವರ್ಷಗಳಲ್ಲಿಯೇ ಅವರ ಜನಸಂಖ್ಯೆ ಎರಡು ಮಿಲಿಯನ್ ದಾಟಿತು ಎಂದು ಇತಿಹಾಸ ಹೇಳುತ್ತದೆ.

ಈತನ್ಮಧ್ಯೆ, ಜೋಸೆಫ್ ನಿಧನನಾದನು. ಅದಾದ ನಂತರ ಈಜಿಪ್ಟ್‌ನಲ್ಲಿ ಪರ್ರ‍ೊ ಮನೆತನದ ಹೊಸ ರಾಜವಂಶ ಅಧಿಕಾರ ವಹಿಸಿಕೊಳ್ಳುತ್ತದೆ. ಈ ರಾಜವಂಶ ಯಹೂದಿಗಳು ಸಾಧಿಸಿದ ಯಶಸ್ವಿ ಆರ್ಥಿಕ ಅಭಿವೃದ್ದಿ ಮತ್ತು ಅವರ ಜನಸಂಖ್ಯೆಯಲ್ಲಿ ಆ ವೃದ್ದಿಯನ್ನು ಗಮನಿಸಿ, ಅವರನ್ನು ದಮನಿಸಲು ಅನೆಯಕ ಪ್ರಯತ್ನಗಳನ್ನು ಮಾಡಿತು. ಆದರೆ, ಜೋಸೆಫ್ ಮರಣ ನಂತರ ಇಡೀ ಯಹೂದಿ ಸಮುದಾಯದ ಯಜಮಾನಿಕೆಯ ಉಸ್ತುವಾರಿಕೆಯನ್ನು ಇನ್ನೊಬ್ಬ ಬಲಿಷ್ಠ ನೇತಾರನಾದ ಮೊಸೆಸ್ ವಹಿಸಿಕೊಳ್ಳುತ್ತಾನೆ. ಎಲ್ಲ ರಂಗದಲ್ಲಿಯೂ ಯಶಸ್ಸನ್ನು ಕಂಡುಕೊಂಡ ಯಹೂದಿಗಳ ವಿರುದ್ಧ ಈಜಿಪ್ಟ್ ಸರಕಾರ ನಡೆಸಿದ ಸಂಚುಗಳಿಂದ ತನ್ನ ಕುಲದವರನ್ನು ರಕ್ಷಿಸುವಲ್ಲಿ ಮೊಸೆಸ್ ಸಫಲನಾಗುತ್ತಾನೆ. ಮೊಸೆಸ್ ಕಂಡುಕೊಂಡ ದಾರಿ ಬಹಳ ಸರಳವಾದುದು. ಹೇಗೂ ಕೆನಾನ್ ಯಹೂದಿಗಳಿಗೆ ದೇವರು ಆಶ್ವಾಸನೆ ನೀಡಿದ ಭೂಮಿ ಆಗಿರುವುದರಿಂದ ಈಜಿಪ್ಟ್ ನಲ್ಲಿ ಯಹೂದಿಗಳಿಗೆ ಬೆದರಿಕೆ ವಾತಾವರಣ ಸೃಷ್ಟಿಯಾಗಿರುವುದರಿಂದ ಮೊಸೆಸ್ ಇಲ್ಲಿನ ಕೆನಾನ್ ಕಡೆಗೆ ತನ್ನ ಸಮುದಾಯವನ್ನು ವಲಸೆ ಹೋಗಿ ನೆಲೆಸಲು ಆದೇಶಿಸುತ್ತಾನೆ. ಅದು ಯಶಸ್ವಿಯಾಗಿ ನಡೆಯಿತು. ಇದು ಸುಮಾರು ಕ್ರಿ.ಪೂ.೧೪೯೦ರಲ್ಲಿ ನಡೆದಿದೆ ಎನ್ನಲಾಗಿದೆ. ಈ ಸಮುದಾಯದ ವಲಸೆಯ ಪ್ರಮಾಣ ಸುಮಾರು ನಲ್ವತ್ತು ವರ್ಷಗಳನ್ನು ತೆಗೆದುಕೊಂಡಿತು. ಪ್ರಯಾಣದ ದಾರಿಯಲ್ಲಿ ಸಿಗುವ ಸಿನಾ(ಇಂದು ಈ ಪ್ರದೇಶ ಈಜಿಪ್ಟ್ ದೇಶದ ಅವಿಭಾಜ್ಯ ಅಂಗವಾಗಿದೆ) ಪ್ರಸ್ಥಭೂಮಿಯಲ್ಲಿ ಪ್ರಯಾಣವನ್ನು ಮೊಟುಕುಗೊಳಿಸಿ, ಅಲ್ಲಿ ತನ್ನ ಜನರಿಗೆ ಮೊಸೆಸ್ ಒಬ್ಬ ದೇವರನ್ನು ಪೂಜಿಸುವ ಧರ್ಮವನ್ನು ನೀಡಿದನು ಹಾಗೂ ನೀತಿ ಸಂಹಿತೆಯೊಂದನ್ನು ರೂಪಿಸುವುದರ ಮೂಲಕ ದೇಶದ ವ್ಯಾಪ್ತಿಗೆ ತಂದನು. ಈ ಸಂದರ್ಭ ಬಹಳ ಮುಖ್ಯವಾಗಿರುತ್ತದೆ. ಸುಮಾರು ನಾನ್ನೂರು ವರ್ಷಗಳ ಕಾಲ ಪರ್ರ‍ೊ ದೊರೆಗಳ ಅಧೀನದಲ್ಲಿದ್ದ ಯಹೂದಿಗಳು, ಮೊಸೆಸ್‌ನ ಮುಖಂಡತ್ವದಲ್ಲಿ ನೆಯಶನ್ ಆಫ್ ವಾರ್ಯರ‍್ಸ್ ಆಗಿ ಬೆಳೆದು ನಿಂತರು. ಅವರು ಹೀಗೆ ಹುಟ್ಟು ಹಾಕಿದ ಸೈನ್ಯದಲ್ಲಿ ಆರುನೂರು ಸಾವಿರದಷ್ಟು ಮಂದಿ ಇದ್ದು ಅವರೆಲ್ಲರೂ ಇಪ್ಪತ್ತು ವರ್ಷಕ್ಕಿಂತ ಮೇಲ್ಪಟ್ಟವರು. ಉತ್ತರಾಭಿಮುಖವಾಗಿ ಹೊರಟು ಜೋರ್ಡಾನ್ ನದಿಯ ಪೂರ್ವ ದಂಡೆಯನ್ನು ತಲುಪುವ ನಿರೀಕ್ಷೆಯಿಂದ ಇದ್ದ ಯಹೂದಿ ಸಮೂಹ, ಆ ದಾರಿಯ ಮಧ್ಯದಲ್ಲಿ ಅಮ್ಮೋರೈಟ್ಸ್ ಎಂಬ ರಾಜರಿಂದ ವಿರೋಧವನ್ನು ಎದುರಿಸಿತು. ಆದರೆ, ಯಹೂದಿ ಯಜಮಾನ ಮೊಸೆಸ್, ತನ್ನ ಬಲಿಷ್ಠ ಸೈನ್ಯದಿಂದ ಅಮ್ಮೋರೈಟ್ಸ್ ರಾಜರ ಪ್ರತಿಭಟನೆಯನ್ನು ಸದೆಬಡಿದು, ಅವರ ಸ್ವಾಧೀನದಲ್ಲಿರುವ ಆ ಎಲ್ಲಾ ಭೂಪ್ರದೇಶವನ್ನು ಯಹೂದಿಗಳು ಆಕ್ರಮಿಸಿಕೊಂಡರು (ಜೋರ್ಡಾನ್‌ನ ಪೂರ್ವಕ್ಕಿರುವ ಭೂ ಭಾಗ).

ಅಮ್ಮೋರೈಟ್ಸ್‌ರನ್ನು ಸೋಲಿಸಿದ ಸ್ವಲ್ಪ ಸಮಯದ ನಂತರ ಮೊಸೆಸ್ ಮರಣ ಹೊಂದಿದನು. ಆ ನಂತರ, ಯಹೂದಿ ಸಮುದಾಯವನ್ನು ಮುನ್ನಡೆಸುವ ಹೊಣೆ, ಪಳಗಿದ ಸೈನಿಕ ಮತ್ತು ದೂರಾಲೋಚನೆಯನ್ನಿಟ್ಟುಕೊಂಡ ವ್ಯಕ್ತಿಯಾದ ಜೊಶುವಾಗೆ ಬರುತ್ತದೆ. ಇವನ ನೇತೃತ್ವದಲ್ಲಿ ಯಹೂದಿಗಳು ಜೋರ್ಡಾನ್‌ನನ್ನು ದಾಟಿ ಏಳು ವರ್ಷಗಳ (ಕ್ರಿ.ಪೂ.೧೪೫೧-೪೪ರವರೆಗೆ) ಯಶಸ್ವಿ ಕಾರ್ಯಾಚರಣೆಯಿಂದ ಇಡೀ ಪ್ಯಾಲೇಸ್ತೀನ್‌ನನ್ನು ಆಕ್ರಮಿಸಿಕೊಂಡರು. ಪ್ಯಾಲೇಸ್ತೀನ್‌ನನ್ನು ಇವರು ಕಬಳಿಸಿದರೂ ಇಲ್ಲಿನ ಮೂಲ ನಿವಾಸಿಗಳಾದ ಕೆನಾನೈಟ್ಸ್, ಇಲ್ಲಿನ ಒಂದಷ್ಟು ಭೂಭಾಗದ ಮೇಲೆ ನಿಯಂತ್ರಣ ಸಾಧಿಸಿ ಅಲ್ಲಿಯೇ ತಮ್ಮ ಸಾರ್ವಭೌಮತ್ವವನ್ನು ಪ್ರಸ್ತುತಪಡಿಸಿದರು. ಮತ್ತು ಪ್ಯಾಲೇಸ್ತೀನ್‌ಗೆ ಆಗ್ನೇಯ ಭಾಗದಲ್ಲಿ ಇನ್ನೊಂದು ಮೂಲ ನಿವಾಸಿ ಕುಲವಾದ ಪಿಲಿಸ್ತೈನಿಗಳು ನೆಲೆಸಿದ್ದರು.

ಸುಮಾರು ಕ್ರಿ.ಪೂ.೧೦೯೫ರವರೆಗೆ ಯಹೂದಿಗಳು ತಮ್ಮನ್ನು ಮುನ್ನಡೆಸಲು ಸ್ವತಂತ್ರ ರಾಜನನ್ನು ಆಯ್ಕೆ ಮಾಡಿಕೊಂಡಿರಲಿಲ್ಲ. ಬದಲಾಗಿ, ಮುಖಂಡರೆಂದು ಆಯ್ಕೆ ಮಾಡಿಕೊಳ್ಳುತ್ತಿದ್ದು, ಅವರೇ ನ್ಯಾಯವಾದಿಗಳು ಮತ್ತು ಅವರ ಸೈನ್ಯವನ್ನು ಮುನ್ನಡೆಸಿ ಸಮೂಹದ ಯಜಮಾನಿಕೆಯನ್ನು ನಿರ್ವಹಿಸುತ್ತಿದ್ದರು. ಆದರೆ, ಅವರು ಈ ಸಮಯದಲ್ಲಿ ನೆಲೆ ನಿಂತಿರುವ ಪ್ಯಾಲೇಸ್ತೀನ್‌ನನ್ನು ಸುತ್ತುವರಿದ ಭಾಗಗಳಲ್ಲಿ ಅಂದರೆ ಮೆಸಪಟೇಮಿ ಯಾದಲ್ಲಿ ಮೊಅಬ್ ರಾಜರು, ಪೂರ್ವದಲ್ಲಿರುವ ಮಿದಿಯನ್ ರಾಜರು ಪಶ್ಚಿಮದಲ್ಲಿರುವ ಪಿಲಿಸ್ತೈನಿಗರು, ಅಮ್ಮೋರೈಟ್ಸ್‌ಗಳು ಯಹೂದಿಗಳನ್ನು ನಿರಂತರವಾಗಿ ವಿರೋಧಿಸುತ್ತಿದ್ದರು. ಆ ಕಾರಣಕ್ಕಾಗಿ, ಪ್ಯಾಲೇಸ್ತೀನ್‌ನಲ್ಲಿ ಯಹೂದಿಗಳು ಶಾಂತವಾದ ಸ್ವತಂತ್ರ ಬದುಕನ್ನು ಆರಂಭಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಈ ಸಮಸ್ಯೆಗೆ ಪರಿಹಾರವಾಗಿ ಒಬ್ಬ ರಾಜನನ್ನು ಸಮೂಹದ ಉಸ್ತುವಾರಿ ನೋಡಿಕೊಳ್ಳಲು ನಿರ್ಧರಿಸಿ, ಕ್ರಿ.ಪೂ.೧೦೫೫ರಲ್ಲಿ ಡೇವಿಡ್ ಎಂಬುವವನನ್ನು ರಾಜನೆಂದು ಚುನಾಯಿಸಿ ಅವನನ್ನು ಸಿಂಹಾಸನಕ್ಕೆ ಏರಿಸಲಾಯಿತು. ಅವನ ಕಾಲದಲ್ಲಿ ಯಹೂದಿಗಳು ಅಧಿಕೃತವಾದ ರಾಜಮನೆತನವನ್ನು ಸ್ಥಾಪಿಸಿ, ಆ ಮನೆತನ ಸುಮಾರು(ಡೇವಿಡ್ ರಾಜನ ಅನುಯಾಯಿಗಳು) ನಾನ್ನೂರ ಐವತ್ತು ವರ್ಷಗಳಷ್ಟು ಕಾಲ ಪ್ಯಾಲೇಸ್ತೀನಿನಲ್ಲಿ ಯಶಸ್ವಿ ಆಡಳಿತ ನಡೆಸಿತು.

ಪ್ಯಾಲೇಸ್ತೀನ್, ಇತಿಹಾಸದ ಆಧಾರಕ್ಕೆ ಅನುಗುಣವಾಗಿ ಹೇಳುವುದಾದರೆ, ಅದೊಂದು ಸಣ್ಣ ಭೂ ಭಾಗವಾಗಿದ್ದು ಹತ್ತು ಸಾವಿರ ಚದರ ಮೈಲು ವ್ಯಾಪ್ತಿಗೆ ಹರಡಿತ್ತು. ಆದರೆ, ಯಹೂದಿಗಳ(ಇಸ್ರೇಲೈಟ್ಸ್) ಸಂಸ್ಕೃತಿಯ ಪ್ರಭಾವ ಇಡೀ ಜಗತ್ತಿಗೆ ಹರಡಿತ್ತು. ಅದರಲ್ಲೂ ಯುರೋಪಿನ ಇತಿಹಾಸದಲ್ಲಿ ಐತಿಹಾಸಿಕವಾಗಿ, ಕ್ರೈಸ್ತ ಧರ್ಮ ಯಹೂದಿಗಳ  ಧರ್ಮದಿಂದ ಹುಟ್ಟಿಕೊಂಡಿತು ಎಂದು ಹೇಳಲಾಗಿದ್ದು, ಇಸ್ರೇಲೈಟ್ ಪ್ರವಾದಿಗಳು ರಚಿಸಿದ ಹಳೆ ಒಡಂಬಡಿಕೆಯೇ, ಕ್ರೈಸ್ತ ಧರ್ಮದ ಹೊಸ ಒಡಂಬಡಿಕೆಯೆಂದು ಹೇಳಲಾಗುತ್ತಿದೆ. ಈ ಗ್ರಂಥವು ಹಳೆ ಒಡಂಬಡಿಕೆಯ ಮುಂದುವರಿಕೆಯೇ ಆಗಿದ್ದು, ಸಂಪೂರ್ಣವಾಗಿ ಹೊಸದಾಗಿ ರಚಿಸಲಾಗಿದೆ ಎಂದು ನಂಬಲಾಗಿದೆ. ಪ್ಯಾಲೇಸ್ತೀನ್ ಒಂದು ಸಣ್ಣ ಭೂಪ್ರದೇಶವಾಗಿದ್ದರೂ ಯಹೂದಿಗಳ ಖಾಯಂ ನೆಲೆಯಿಂದಾಗಿ ಶತಮಾನಗಳ ಕಾಲ ಇಲ್ಲಿ ಒಂದು ಪ್ರಬುದ್ಧ ನಾಗರಿಕ ಸಮಾಜ ನಿರ್ಮಾಣಗೊಂಡಿತು ಎನ್ನಲಾಗಿದೆ. ಇದೊಂದು, ಅತ್ಯಂತ ಮುಂದುವರಿದ ಕೇಂದ್ರವಾಗಿದ್ದು ಹಲವು ಮತಗಳು, ನಾಗರಿಕತೆಗಳು ಬಂದು ಸೇರುವ ಜಗವಾಗಿ ಪರಿವರ್ತನೆಗೊಂಡಿತು. ತದನಂತರ ಏಷ್ಯಾ, ಉತ್ತರ ಆಫ್ರಿಕಾ ಮತ್ತು ಯುರೋಪ್ ರಾಜರ ನಡುವೆ ಪಶ್ಚಿಮ ಏಷ್ಯಾದ ಮೇಲೆ ನಿಯಂತ್ರಣ ಸಾಧಿಸಲು ನಡೆಸಿದ ಪೈಪೋಟಿಗೆ ಪ್ಯಾಲೇಸ್ತೀನ್ ಒಂದು ಸ್ಪರ್ಧಾ ಅಖಾಡವೆಂದು ಪರಿಗಣಿಸಲಾಗಿತ್ತು.

ಡೇವಿಡ್, ಒಬ್ಬ ಪ್ರಬುದ್ಧ ದೊರೆಯಾಗಿದ್ದು, ಅವನ ಕಾಲದಲ್ಲಿ ಯಹೂದಿಗಳನ್ನು ವಿರೋಧಿಸುವ ಎಲ್ಲ ಬುಡಕಟ್ಟುಗಳನ್ನು ಸದೆಬಡಿದನು. ತನ್ನ ಸಾಮ್ರಾಜ್ಯದ ಗಡಿಯನ್ನು ಯುಪ್ರೆಟಿಸ್ ನದಿ ತೀರದವರೆಗೂ ವಿಸ್ತರಿಸಿದನು. ಇಂದು ವಿವಾದಕ್ಕೊಳಗಾಗಿರುವ ಜೆರುಸಲೇಂನ್ನು ತನ್ನ ರಾಜಧಾನಿಯನ್ನಾಗಿ ಘೋಷಿಸಿದ ಉತ್ತರದಲ್ಲಿ ಇಂದಿನ ಸಿರಿಯಾ ದೇಶದ ರಾಜಧಾನಿಯಾದ ಡೆಮಾಸ್ಕಸ್‌ವರೆಗೂ ವೃದ್ದಿಸಿ ಅಲ್ಲಿ ತನ್ನ ಶಾಶ್ವತ ಸೈನಿಕ ನೆಲೆಯನ್ನು ಸ್ಥಾಪಿಸಿದನು. ಸಾಮ್ರಾಜ್ಯ ಆಗ್ನೇಯ ದಿಕ್ಕಿನಲ್ಲಿ ಈಜಿಪ್ಟ್ ದೇಶದ ಗಡಿಯ ವರೆಗೂ ವಿಸ್ತಾರಗೊಂಡಿತು. ಡೇವಿಡ್‌ನನ್ನು ಇಂದು ಇಸ್ರೇಲ್‌ನ ‘ಸ್ತುತಿ ಗೀತಕಾರ’ನೆಂದು ಹೊಗಳಲಾಗುತ್ತಿದೆ. ಅವನು ರಚಿಸಿದ ಸ್ತೋತ್ರಗಳನ್ನು ಹಳೆ ಒಡಂಬಡಿಕೆಯಲ್ಲಿ ಸೇರಿಸಲಾಗಿದೆ.

ಇವನ ಉತ್ತಾರಾಧಿಕಾರಿಯಾಗಿ ಕ್ರಿ.ಪೂ.೧೦೧೫ರಲ್ಲಿ ಅವನ ಮಗ ಸೊಲೊಮನ್ ಅಧಿಕಾರ ವಹಿಸಿಕೊಂಡನು. ಇವನು ಜಗತ್ಪ್ರಸಿದ್ದಿಯಾಗುತ್ತಾನೆ. ಏಕೆಂದರೆ, ಇವನ ಆಡಳಿತ ಅವಧಿಯಲ್ಲಿ ಪ್ರಸಿದ್ಧ ಹಿಬ್ರೂ ದೇವಾಲಯವನ್ನು ರಚಿಸಿದ್ದನು. ನಂತರ, ಈ ದೇಗುಲವನ್ನು ಚಾಲ್ಡಿಯನ್‌ರು ನಿರ್ನಾಮ ಮಾಡಿದರು. ಇವನ ಕಾಲದಲ್ಲಿ ಪ್ಯಾಲೇಸ್ತೀನಿನ ಯಹೂದಿಗಳು ಸಕ್ರಿಯವಾಗಿ ವಿದೇಶದಲ್ಲಿ ಜಲಮಾರ್ಗದ ಮೂಲಕ ವ್ಯಾಪಾರ ವಹಿವಾಟುಗಳನ್ನು ನಡೆಸಿ ಸಂಪತ್ತನ್ನು ವೃದ್ದಿಸಿಕೊಂಡಿದ್ದರು. ಸೊಲೊಮನನ ಹಡಗುಗಳು, ಮೆಡಿಟರೇನಿಯನ್ ಸಮುದ್ರ ಮತ್ತು ಇಂಡಿಯನ್ ಓಶಿಯನ್‌ನ ಜಲಮಾರ್ಗಗಳ ಮೇಲೆ ಹಿಡಿತ ಸಾಧಿಸಿದ್ದವು.

ಸೊಲೋಮನ್‌ನ ಮರಣ ನಂತರ ಯಹೂದಿಗಳ ದೇಶ ಇಬ್ಭಾಗವಾಗಿ ಪ್ಯಾಲೇಸ್ತೀನಿನ ಉತ್ತರ ಭಾಗದಲ್ಲಿ ಮತ್ತು ದಕ್ಷಿಣ ಭಾಗದಲ್ಲಿ ಎರಡು ಯಹೂದಿಗಳ ಸಾಮ್ರಾಜ್ಯಗಳು ತಲೆ ಎತ್ತಿದವು. ಉತ್ತರದ ಸಾಮಾಜ್ಯವನ್ನು ಇಸ್ರೇಲ್ ಎಂದು ಹೆಸರಿಸಿ, ಅಲ್ಲಿ ಯಹೂದಿಯರ ಹತ್ತು ಕುಲದವರು ಆಳ್ವಿಕೆ ನಡೆಸತೊಡಗಿದರು. ದಕ್ಷಿಣದ ಸಾಮ್ರಾಜ್ಯವನ್ನು ಜೂಡಾ ಎಂದು ಹೆಸರಿಸಿ ಯಹೂದಿಯರ ಎರಡು ಕುಲದವರು ರಾಜ್ಯಭಾರವನ್ನು ಆರಂಭಿಸಿದರು. ಉತ್ತರದ ಸಾಮ್ರಾಜ್ಯ ಸುಮಾರು ಕ್ರಿ.ಪೂ.೯೭೫ ರಿಂದ ಕ್ರಿ.ಪೂ.೭೨೧ರವರೆಗೆ ಅಸ್ತಿತ್ವದಲ್ಲಿದ್ದು, ನಂತರ ಅದನ್ನು ಅಸ್ಸೀರಿಯಾದ ದೊರೆ ಶಾಲ್ಮನೆಯಸರ್ ಎಂಬುವನು ಆಕ್ರಮಿಸಿಕೊಂಡನು. ದಕ್ಷಿಣದಲ್ಲಿರುವ ಯಹೂದಿ ಸಾಮ್ರಾಜ್ಯವು ಕ್ರಿ.ಪೂ. ೫೮೬ರವರೆಗೂ ಮುಂದುವರಿದು, ನಂತರ ಬ್ಯಾಬಿಲೋನಿನ ಚಾಲ್ಡಿಯನ್ ವಂಶದ ಸಾಮ್ರಾಟ ನೆಬುಚಡ್ ನೆಯಝ್ ಆ ಪ್ರದೇಶವನ್ನು ಆಕ್ರಮಿಸಿದನು. ಯಹೂದಿಯರ ಪ್ರಾರ್ಥನಾ ಮಂದಿರವನ್ನು ಕೆಡವಿ ಅಲ್ಲಿದ್ದ ಎರಡು ಯಹೂದಿ ಕುಲಗಳನ್ನು ಗಡಿಪಾರು ಮಾಡಲಾಯಿತು. ನಂತರ ಅವು ಯುಪ್ರೆಟಿಸ್ ನದಿಯಿಂದಾಚೆಗೆ ವಲಸೆ ಹೋದವು. ಆದಾಗ್ಯೂ, ಕೆಲವು ಸಾವಿರ ಯಹೂದಿಗಳು ತಮಗೆ ದೇವರು ನೀಡಿದ ದೇಶವಾದ ಪ್ಯಾಲೇಸ್ತೀನಿನಲ್ಲಿಯೇ ಈ ಆಕ್ರಮಣಕಾರರ ಆಡಳಿತ ವ್ಯಾಪ್ತಿಯಲ್ಲಿಯೇ ಪ್ರಜೆಗಳಾಗಿ ನೆಲೆ ನಿಂತಿದ್ದರು.

ಹೀಗೆ ಯಹೂದಿಗಳ ರಾಷ್ಟ್ರ ಸಂಪೂರ್ಣವಾಗಿ ಅವರ ಕೈ ತಪ್ಪಿತು ಮತ್ತು ಅವರ ರಾಷ್ಟ್ರದ ಇತಿಹಾಸ ಒಂದು ಹೊಸ ತಿರುವನ್ನು ಪಡೆಯಿತು. ಈ ರಾಜಕೀಯ ಬಿಕ್ಕಟ್ಟಿನ ನಡುವೆಯೂ ತಮ್ಮ ಸ್ವತಂತ್ರ ಅಸ್ತಿತ್ವ ಮರು ಸ್ಥಾಪಿಸಲು ಪ್ರಯತ್ನಗಳೂ ನಡೆದಿದ್ದವು. ಇದರಿಂದ ಡೇವಿಡ್ ದೊರೆ ಕಟ್ಟಿದ ಸಾಮ್ರಾಜ್ಯದ ಉತ್ಕೃಷ್ಟತೆಗೆ ತಲುಪಿ ಸಂಪೂರ್ಣ ಸ್ವತಂತ್ರರಾಗದಿದ್ದರೂ, ಸ್ವಲ್ಪ ಮಟ್ಟಿನ ಸ್ವಾಯತ್ತತೆಯನ್ನು ಅವರ ಸಮೂಹ ಪಡೆಯಿತು. ಆದರೆ, ಅದೂ ಕೂಡ ಕ್ರಿ.ಶ.೧೩೫ರ ವೇಳೆಗೆ ಕೈ ಜರಿ ಹೋಯಿತು. ಅವರ ರಾಷ್ಟ್ರೀಯ ಸಂಘಟನೆ ಪ್ಯಾಲೇಸ್ತೀನಿನಲ್ಲಿ ಅಂತ್ಯಗೊಂಡು ಯಹೂದಿಗಳು ದಿಕ್ಕು ದಿಕ್ಕಲ್ಲಿ ಚದುರಿ ಹೋದರು. ಇದು ಹಿಬ್ರೂ ಅಥವಾ ಯಹೂದಿ ಸಮುದಾಯ ಏಬ್ರಾಹಂನ ಕಾಲದಿಂದ ಅನುಭವಿಸಿದ ಯಶೋಗಾಥೆಯ ಒಂದು ಹಂತದ ಅಂತ್ಯ ಮತ್ತು ಇನ್ನೊಂದು ಹಂತದ ಆರಂಭ.

ಸುಮಾರು ಕ್ರಿ.ಪೂ.೬ನೆಯ ಶತಮಾನದಲ್ಲಿ ಮೆಡೊ-ಪರ್ಶಿಯನ್ನರು ಯಹೂದಿಗಳ ಪ್ಯಾಲೇಸ್ತೀನ್‌ನನ್ನು ಆಕ್ರಮಿಸಿ, ಚಾಲ್ಡಿಯನ್ ಸಾಮ್ರಾಜ್ಯದ ಉತ್ತರಾಧಿಕಾರಿಗಳಾಗಿ ಪ್ರಭುತ್ವ ಸ್ಥಾಪಿಸಿದರು. ಪ್ಯಾಲೇಸ್ತೀನ್‌ನಲ್ಲಿ ಪರ್ಶಿಯನ್ನರ ಆಡಳಿತ ಸುಮಾರು ಕ್ರಿ.ಪೂ.೩೩೨ರವರೆಗೂ ಮುಂದುವರಿದಿತ್ತು. ಆದಾಗ್ಯೂ, ಪರ್ಶಿಯಾ ಸಾಮ್ರಾಟರು, ಉದಾರವಾದಿ ಚಿಂತನೆಗಳನ್ನು ಪಾಲಿಸುತ್ತಿದ್ದು, ಎಲ್ಲ ಧರ್ಮದ ಅನುಯಾಯಿಗಳಿಗೂ ಸಮಾನ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಅನುಭವಿಸಲು ಅವಕಾಶ ನೀಡಿದ್ದರು. ಹಾಗಾಗಿ, ಪ್ಯಾಲೇಸ್ತೀನ್‌ನಲ್ಲಿ ಅಲ್ಪ ಸಂಖ್ಯಾತರಾಗಿರುವ ಯಹೂದಿ ಸಮುದಾಯಕ್ಕೆ ಸಾಕಷ್ಟು ಸ್ವಾಯತ್ತತೆಯನ್ನು ನೀಡಿದ್ದರು. ದುರ್ಬಲಗೊಂಡ ಯಹೂದಿ ರಾಜ ಮನೆತನದ ಉನ್ನತಿಗೆ ಸದಾ ದೇವರಲ್ಲಿ ಪ್ರಾರ್ಥಿಸಲು ಯಹೂದಿ ಪಾದ್ರಿಗಳನ್ನು ಪ್ರೋ ಪರ್ಶಿಯ ಸಾಮ್ರಾಟರು, ಚಾಲ್ಡಿಯನ್ನರ ಆಕ್ರಮಣದಿಂದ ಚದುರಿ ಹೋದ ಯಹೂದಿಗಳನ್ನು ಪ್ಯಾಲೇಸ್ತೀನಿಗೆ ವಾಪಸಾಗಲು ಅನುಮತಿ ನೀಡಿದ್ದರು. ಹೀಗೆ ಪರ್ಶಿಯನ್ನರು ಹುಟ್ಟು ಹಾಕಿದ ವಾತಾವರಣವನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಯಹೂದಿ ಮುಖಂಡರು ಪುನಃ ಪ್ಯಾಲೇಸ್ತೀನ್‌ನಲ್ಲಿ ತಮ್ಮದೇ ಪ್ರಭುತ್ವವನ್ನು ಸ್ಥಾಪಿಸಲು ಪ್ರಯತ್ನಗಳನ್ನು ನಡೆಸಿದರು. ಯಹೂದಿ ನಾಯಕರಾದ ಜೆರುಬ್ಬವೆಲ್, ಎಜ ಮತ್ತು ನೆಹಮಯ್ಯರ ನೇತೃತ್ವದಲ್ಲಿ ಸುಮಾರು ೫೦ ಸಾವಿರ ಚದುರಿ ಹೋದ ಯಹೂದಿಗಳು ಪ್ಯಾಲೇಸ್ತೀನಿಗೆ ವಾಪಾಸಾದರು. ಅವರ ಆಗಮನದ ಸಂದರ್ಭದಲ್ಲಿ ಹಣಕಾಸು ಮತ್ತು ವಸ್ತು ರೂಪದಲ್ಲಿ ಪರ್ಶಿಯನ್ನರು ಸಹಕಾರ ನೀಡಿ ಹೊಸ ವಸತಿಗಳನ್ನು ಸ್ಥಾಪಿಸಲು ಪ್ರೋ ನೀಡಿದ್ದರು. ಚಾಲ್ಡಿಯನ್ನರ ಆಕ್ರಮಣದಲ್ಲಿ ಯಹೂದಿಗಳು ಅನುಭವಿಸಿದ(ಆರ್ಥಿಕವಾಗಿ) ನಷ್ಟವನ್ನು ಭರಿಸಲಾಯಿತು. ಅಲ್ಲದೆ, ಯಹೂದಿ ನಾಯಕ ಜೆರುಬ್ಬವೆಲ್‌ನನ್ನು ಜೂಡಿಯಾದ(ಸಾಮ್ರಾಜ್ಯ) ರಾಜ್ಯಪಾಲನನ್ನಾಗಿ ಪರ್ಶಿಯನ್ನರು ನೆಯಮಿಸಿ, ಅವನ ಸಾಮ್ರಾಜ್ಯದ ರಾಜಕೀಯ ಚಟುವಟಿಕೆಗಳಿಗೆ ಜೆರುಸಲೇಂನ್ನು ರಾಜಧಾನಿಯಾಗಿ ಪರಿವರ್ತಿಸಲಾಯಿತು. ನಾಶಗೊಂಡ ಅವರ ಪ್ರಾರ್ಥನಾ ಮಂದಿರವನ್ನು ಪುನಃ ನಿರ್ಮಿಸಲಾಯಿತು. ಮತ್ತು ಜೆರುಸಲೇಂನ ಪ್ರಾರ್ಥನಾ ಮಂದಿರದ ಸುತ್ತು ಗೋಡೆಗಳನ್ನು ಕಟ್ಟಲಾಯಿತು. ಹಾಗಾಗಿ, ಪರ್ಶಿಯ ದೊರೆಗಳ ಪ್ರಭುತ್ವ ಬಲಿಷ್ಠವಾಗಿದ್ದರೂ, ಯಹೂದಿಗಳು ಪ್ಯಾಲೇಸ್ತೀನ್‌ನಲ್ಲಿ ಅವರ ನಾಯಕರ ಅಧೀನಕ್ಕೆ ಒಳಪಟ್ಟು ಪೂರ್ಣ ಪ್ರಮಾಣದ ಸ್ವಾಯತ್ತತೆಯನ್ನು ಪಡೆದರು.

ಕ್ರಿ.ಪೂ.೩೩೫ರಲ್ಲಿ ಮೆಸಿಡೋನಿಯಾದ ಅಲೆಗ್ಸಾಂಡರನು ಪರ್ಶಿಯಾ ಸಾಮ್ರಾಜ್ಯದ ಮೇಲೆ ದಂಡೆತ್ತಿ ಬಂದು ಪರ್ಶಿಯಾ ಸಾಮ್ರಾಟನನ್ನು ಪದಚ್ಯುತಿಗೊಳಿಸಿದನು, ಮತ್ತು ಪ್ಯಾಲೇಸ್ತೀನ್ ಅಲೆಗ್ಸಾಂಡರನ ಸಾಮ್ರಾಜ್ಯದೊಳಗೆ ವಿಲೀನಗೊಂಡಿತು. ಅವನ ಧೋರಣೆ ಬೇರೆಯೇ ಆಗಿತ್ತು. ಅವನು ತನ್ನ ವಿಶಾಲ ಸಾಮ್ರಾಜ್ಯದಲ್ಲಿ ಹೆಲೆನಿಕ್ ಸಂಸ್ಕೃತಿಯನ್ನು ಪ್ರಚಾರ ಮಾಡಬೇಕೆಂಬ ಮಹತ್ವಾಕಾಂಕ್ಷೆಯಲ್ಲಿದ್ದನು. ಜೊತೆಗೆ, ಅವನ ಸಾಮ್ರಾಜ್ಯದೊಳಗೆ ನೆಲೆಸಿರುವ ಎಲ್ಲ ವರ್ಗದ ಪ್ರಜೆಗಳನ್ನು ಒಂದೇ ಜನ ಸಮುದಾಯವನ್ನಾಗಿ ಪರಿವರ್ತಿಸಲು ಪ್ರಯತ್ನ ನಡೆಸಿದನು. ಆದಾಗ್ಯೂ, ಅಲೆಗ್ಸಾಂಡರನು ಯಹೂದಿ ಪ್ರಭುತ್ವದ ಸ್ವಾಯತ್ತತೆ ಯನ್ನು, ಧಾರ್ಮಿಕ ಸಂಪ್ರದಾಯಗಳನ್ನು ಮತ್ತು ಅವರ ಪವಿತ್ರ ಗ್ರಂಥಗಳನ್ನು ಅತೀವವಾಗಿ ಗೌರವಿಸುತ್ತಿದ್ದನು.

ಪರ್ಶಿಯನ್ನರಿಗೆ ಹೋಲಿಸಿದರೆ ಅಲೆಗ್ಸಾಂಡರನ ನಿಧನ(ಕ್ರಿ.ಪೂ.೩೨೩) ನಂತರ, ಅವನು ಸ್ಥಾಪಿಸಿದ ಸಾಮ್ರಾಜ್ಯ ಇಬ್ಭಾಗವಾಯಿತು. ಪರಿಣಾಮವಾಗಿ, ಯಹೂದಿಗಳು ನೆಲೆ ನಿಂತ ಪ್ಯಾಲೆಸ್ತೀನ್ ಈಜಿಪ್ಟ್‌ನ ಗ್ರೀಕ್ ಟೊಲಮಿಯರ ಕೈ ಸೇರಿತು. ರಾಜಕೀಯವಾಗಿ, ಈ ಬದಲಾವಣೆ ಯಹೂದಿಗಳಿಗೆ ಯಾವುದೇ ತೊಂದರೆ ತಂದೊಡ್ಡಲಿಲ್ಲ. ಅವರು ಆ ನಂತರವೂ ಪಾದ್ರಿ ಆಡಳಿತಗಾರ ಅಧೀನದಲ್ಲೇ ಮುಂದುವರಿದು, ತಾವು ಈ ಹಿಂದೆ ಅನುಭವಿಸುತ್ತಿದ್ದ ಸ್ವಾತಂತ್ರ್ಯವನ್ನು ಉಳಿಸಿಕೊಂಡರು. ಹೆಲೆನೈಜೇಶನ್ ಪ್ರಕ್ರಿಯೆ ಮುಂದುವರಿದಿತ್ತಾದರೂ ಯಹೂದಿಗಳ ಕಟ್ಟುಪಾಡು ಮತ್ತು ಸಂಪ್ರದಾಯಗಳ ಆಚರಣೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಅದಲ್ಲದೆ, ಸ್ವ ಇಚ್ಚೆಯಿಂದ ಅನೆಯಕ ಯಹೂದಿಗಳು ಮೆಡಿಟರೇನಿಯನ್ ತೀರ, ಗ್ರೀಸ್‌ನ ದ್ವೀಪ ಪ್ರದೇಶ ಮತ್ತು ಕಪ್ಪು ಸಮುದ್ರದ ಕರಾವಳಿ ತೀರಕ್ಕೆ ವಲಸೆ ಹೋಗಿ ಜನ ವಸತಿ ನೆಲೆಗಳನ್ನು ಸ್ಥಾಪಿಸಲು ಯಶಸ್ವಿಯಾದರು. ಈಜಿಪ್ಟ್ ನ ಅಲೆಕ್ಸಾಂಡ್ರಿಯಾದಲ್ಲೂ ಯಹೂದಿಗಳು ವಸತಿಗಳನ್ನು ಸ್ಥಾಪಿಸಿ, ಅಲ್ಲಿ ಗ್ರೀಕ್ ಹೆಲೆನಿಕ್ ಸಂಸ್ಕೃತಿಯ ಪ್ರಭಾವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಒಳಗಾದರು.

ಕ್ರಿ.ಪೂ.೧೯೮ರಲ್ಲಿ ಪ್ಯಾಲೇಸ್ತೀನನ್ನು ಗ್ರೀಕ್ ಸೆಲ್ಯೂಸಿಡ್ ಸಿರಿಯನ್ ಸಾಮ್ರಾಟ ಆಕ್ರಮಿಸಿದನಾದರೂ, ಯಹೂದಿಗಳು ಕ್ರಿ.ಪೂ.೧೬೯ರವರೆಗೂ ಸ್ವಾಯತ್ತತೆಯನ್ನು ಉಳಿಸಿ ಕೊಂಡರು. ಆ ನಂತರದ ದಿನಗಳ ರಾಜಕೀಯ ಚಟುವಟಿಕೆಗಳು ಯಹೂದಿಗಳ ಪರವಾಗಿರಲಿಲ್ಲ. ಕ್ರಿ.ಪೂ.೧೬೯ರಲ್ಲಿ ಅಧಿಕಾರಕ್ಕೆ ಬಂದ ಗ್ರೀಕ್ ಸಾಮ್ರಾಟ ಅಂತಿಯೋಕಸ್ ಎಪಿಪೇನ್ಸ್‌ನು, ಯಹೂದಿಗಳನ್ನು ಗ್ರೀಕ್ ಹೆಲೆನಿಕ್ ಸಂಸ್ಕೃತಿಗೆ ಬಲತ್ಕಾರದಿಂದ ಮತಾಂತರಗೊಳಿಸಲು ಪ್ರಯತ್ನಿಸಿದನು. ಈ ಮತಾಂತರ ಪ್ರಕ್ರಿಯೆ ಪ್ಯಾಲೇಸ್ತೀನಿನ ಇನ್ನುಳಿದ ಭಾಗಕ್ಕೂ ಹರಡಿ, ಯಹೂದಿಗಳು ಅನಿವಾರ್ಯವಾಗಿ ಬಲಿಪಶುಗಳಾಗ ಬೇಕಾಯಿತು. ಅಲ್ಲಿಯ ತನಕ ಸಂಪ್ರದಾಯವಾದಿ ಯಹೂದಿಗಳು ಸ್ವತಂತ್ರ ಸಂಸ್ಕೃತಿ, ಭಾಷೆ, ಜೀವನಕ್ರಮ, ಆಚರಣೆ ಮತ್ತು ಧಾರ್ಮಿಕ ಸ್ವಾಯತ್ತತೆಯನ್ನು ಉಳಿಸಿಕೊಂಡು ಬಂದಿದ್ದು, ಗ್ರೀಕರ ಮತಾಂತರ ಚಟುವಟಿಕೆಗಳಿಂದ ತಮ್ಮ ಧರ್ಮ ಸಂಪೂರ್ಣ ನಾಶವಾಗಬಹುದೆಂಬ ಭಯದಿಂದ, ಹೆಲೆನೀಕರಣ ಪ್ರಕ್ರಿಯೆ ಮತ್ತು ಮತಾಂತರವನ್ನು ಯಹೂದಿಗಳು ಸಂಘಟಿತವಾಗಿ ವಿರೋಧಿಸಲು ಸನ್ನದ್ಧರಾದರು. ಇದಕ್ಕುತ್ತರವಾಗಿ, ಗ್ರೀಕ್ ಪ್ರಭುತ್ವ ಬಹಳ ಆಕ್ರಮಣಕಾರಿ ಧೋರಣೆಗಳನ್ನು ಪಾಲಿಸಿ, ಯಹೂದಿಗಳನ್ನು ದಮಿನಿಸಲು ಆರಂಭಿಸಿತು.

ಇಂತಹ ದಮನ ಕಾರ್ಯವನ್ನು ನಂತರ ರೋಮನ್ ಸಾಮ್ರಾಟರು ಮುಂದುವರಿಸಿ ಯಹೂದಿ ದ್ವೇಷಿ ನಿಲುವನ್ನು ಮತ್ತಷ್ಟು ವೃದ್ದಿಸಿದರು. ಇದರಿಂದಾಗಿ, ಪ್ಯಾಲೇಸ್ತೀನ್‌ನಲ್ಲಿ ಕ್ರಿ.ಪೂ.೬ನೆಯ ಶತಮಾನದಲ್ಲಿ, ಪರ್ಶಿಯನ್ ಪ್ರಭುತ್ವದ ಅಡಿಯಲ್ಲಿ ಎರಡನೆಯ ಬಾರಿಗೆ ಸ್ಥಾಪಿಸಿದ ಯಹೂದಿ ಪ್ರಭುತ್ವ ಮತ್ತು ಜೆರುಸಲೇಂನಲ್ಲಿ ನಿರ್ಮಿಸಿದ ಪ್ರಾರ್ಥನಾ ಮಂದಿರ ವಿನಾಶದ ಅಂಚಿಗೆ ತಲುಪಿತು. ಸುಮಾರು ಕ್ರಿ.ಶ.೭೦ರಲ್ಲಿ ಯಹೂದಿಗಳಿರುವ ಪ್ಯಾಲೇಸ್ತೀನ್‌ನನ್ನು ರೋಮನರು ಆಕ್ರಮಿಸಿ ಕ್ರಿ.ಶ.೧೩೫ರ ಹೊತ್ತಿಗೆ ಯಹೂದಿಯರ ಪವಿತ್ರ ಸ್ಥಳವಾದ ಜೆರುಸಲೇಂನನ್ನು ಧ್ವಂಸಗೊಳಿಸಿದರು. ರೋಮನರು ಪಾಲಿಸಿದ ಯಹೂದಿ ದ್ವೇಷ ಭಾವನೆ ನಿರಂತರವಾಗಿ ಮುಂದುವರಿದುದರಿಂದ ಯಹೂದಿ ಸಮುದಾಯ ತಮ್ಮನ್ನು, ತಮ್ಮ ಧರ್ಮ, ಭಾಷೆ, ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳನ್ನು ರಕ್ಷಿಸಿಕೊಳ್ಳಲು ಪ್ಯಾಲೇಸ್ತೀನ್‌ನನ್ನು ಬಿಟ್ಟು ಜಗತ್ತಿನ ವಿವಿಧ ಭಾಗಗಳಿಗೆ ವಲಸೆ ಹೋದರು. ಹೀಗೆ ಚದುರಿ ಹೋದ ಯಹೂದಿಗಳು ಏಷ್ಯಾ, ಆಫ್ರಿಕಾ, ಯುರೋಪ್ ಮತ್ತು ಅಮೆರಿಕದಲ್ಲಿ ತಮ್ಮ ಜನ ವಸತಿಗಳನ್ನು ಸ್ಥಾಪಿಸಿ ಜೀವನ ನಡೆಸತೊಡಗಿದರು. ತಮ್ಮ ಸ್ವತಂತ್ರ ಗುರುತು ಮತ್ತು ಸ್ವಾವಲಂಬಿ ಜೀವನ ಕ್ರಮವನ್ನು ಉಳಿಸಿಕೊಳ್ಳಲು, ಅನಿವಾರ್ಯವಾಗಿ ತಮಗೆ ದೇವರು ಆಶ್ವಾಸನೆ ನೀಡಿದ ದೇಶವನ್ನು ಬಿಟ್ಟು ಹೋದರು. ಇಲ್ಲಿಂದ ಯಹೂದಿಗಳು ಇತಿಹಾಸದ ಮೂರನೆಯ ಹಂತಕ್ಕೆ ಪ್ರವೇಶ ಮಾಡುತ್ತಾರೆ.

ಆದರೆ, ಆರಂಭಿಕ ಹಿಬ್ರೂ/ಇಸ್ರೇಲೈಟ್ಸ್ ಅಥವಾ ಯಹೂದಿಗಳು ಪ್ಯಾಲೇಸ್ತೀನಿನೊಂದಿಗೆ ಇಟ್ಟುಕೊಂಡ ಸಂಬಂಧವು ಅವರ ಹುಟ್ಟು ಮತ್ತು ದೀರ್ಘಕಾಲದ ಅವರ ನೆಲೆಸುವಿಕೆಯನ್ನು ಆಧರಿಸಿಕೊಂಡಿಲ್ಲ. ಬದಲಾಗಿ, ಪ್ಯಾಲೇಸ್ತೀನಿನ ಮೇಲೆ ಇತಿಹಾಸದುದ್ದಕ್ಕೂ ಅವರು ದಂಡಯಾತ್ರೆಯ ಮೂಲಕ ಆಕ್ರಮಿಸಿರುವುದು ಕಂಡುಬರುತ್ತದೆ. ಈ ದಂಡಯಾತ್ರೆ ಹಿಬ್ರೂ ಕುಟುಂಬದ ಮುಖಂಡ ಏಬ್ರಾಹಾಂ ಎಲ್ಲೋ ಆರಂಭಿಸಿದ, ನಂತರ ಅವನ ಉತ್ತರಾಧಿಕಾರಿಗಳು ಮುಂದುವರಿಸಿದರು, ಹಾಗೂ ಒಂದಷ್ಟು ಆರಂಭಿಕ ಯಶಸ್ಸನ್ನು ಕಂಡು ನಾಗರಿಕ ಸಮಾಜ ಮತ್ತು ಸುಭದ್ರ ಪ್ರಭುತ್ವವನ್ನು ಯಶಸ್ವಿ ಆಕ್ರಮಣದ ನಂತರ ಪ್ಯಾಲೇಸ್ತೀನ್‌ನಲ್ಲಿ ಸ್ಥಾಪಿಸಿರುವುದನ್ನು ನಾವು ಗಮನಿಸಬಹುದು. ಇದು ಮುಖ್ಯವಾದ ಅಂಶವಾಗಿರುತ್ತದೆ.

ಏಕೆಂದರೆ, ಇವತ್ತಿನ ಪ್ಯಾಲೇಸ್ತೀನಿ ಅರಬರು ಮಾಡುವ ಸಮರ್ಥನೆಗೆ ಪೂರಕವಾಗಿ ಸುಮಾರು ೭ನೆಯ ಶತಮಾನದಿಂದ ಅಲ್ಲಿ ನಿರಂತರವಾಗಿ ನೆಲೆಸಿರುವುದನ್ನು ಐತಿಹಾಸಿಕವಾಗಿ ಸಮರ್ಥಿಸಬಹುದು. ಯಹೂದಿಗಳ ಆಕ್ರಮಣಕ್ಕೆ(ಪ್ಯಾಲೇಸ್ತೀನ್ ಮೇಲೆ) ಹೋಲಿಸಿದರೆ, ಅರಬರು ಅಲ್ಲೇ ಉಗಮವಾಗಿ ಅಲ್ಲೇ ತಮ್ಮ ಪ್ರಭುತ್ವವನ್ನು ಸ್ಥಾಪಿಸಿ ಅದನ್ನೇ ಪುನಃ ಗಟ್ಟಿಗೊಳಿಸಲು ಹೋರಾಡುತ್ತಾರೆ. ಇದು ಯಹೂದಿಗಳ ಪ್ರಯತ್ನಕ್ಕೆ ತದ್ವಿರುದ್ಧವಾಗಿದೆ. ಏಕೆಂದರೆ, ದೀರ್ಘ ಕಾಲದ ಆಕ್ರಮಣದ ಪ್ರಕ್ರಿಯೆಯನ್ನೇ ಗಮನಿಸಿದರೆ ಅದು ಸ್ಪಷ್ಟ ವಾಗುತ್ತದೆ. ಅದು ಈ ಕೆಳಗಿನಂತಿವೆ.

೧. ಕ್ರಿ.ಪೂ. ಎರಡನೆಯ ಸಹಸ್ರಮಾನದಲ್ಲಿ ಸೆಮೈಟ್ ಎಂಬ ಬುಡಕಟ್ಟು ಸಮುದಾಯ, ಮೆಡಿಟರೇನಿಯನ್ ಪೂರ್ವ ಪ್ರದೇಶದಲ್ಲಿ ದಂಡೆತ್ತಿ ಬರುತ್ತದೆ. ಈ ಸಮುದಾಯದ ಸದಸ್ಯರನ್ನು ಹಿಬ್ರೂಗಳೆಂದು ಗುರುತಿಸಲಾಯಿತು. ನಂತರ, ಅವರನ್ನು ಇಸ್ರೆಲೈಟ್ ಗಳೆಂದು ಕರೆಯಲಾಯಿತು. ಮತ್ತು ಅವರು ಅಬ್ರಾಹಂನ ವಂಶಜರಾಗಿದ್ದು, ಅವನ ಮಗ ಜೇಕಬ್‌ನ ಅನುಯಾಯಿಗಳಾಗಿದ್ದು, ಇಸ್ರೇಲ್ ಎಂಬ ಹೆಸರು ಆ ಬುಡಕಟ್ಟು ಸಮುದಾಯದ ಹೆಸರೇ ಆಗಿತ್ತು ಎಂದು ನಂಬಲಾಗಿದೆ.

೨. ಅವರು ಹುಟ್ಟು ಹಾಕಿದ ಸಂಪ್ರದಾಯ ಮತ್ತು ಕಟ್ಟುಪಾಡುಗಳ ಆಧಾರದ ಮೇಲೆ ಹೇಳುವಂತೆ, ಒಂದಷ್ಟು ದಿನ ಈ ಸಮುದಾಯ ಈಜಿಪ್ಟ್‌ಗೆ ವಲಸೆ ಹೋಗಿತ್ತು. ನಂತರ, ಅವರನ್ನು ಮೋಸೆಸ್ ಎಂಬ ಮುಖಂಡ ಪ್ಯಾಲೇಸ್ತೀನ್‌ನಲ್ಲಿ ಬಂದು ನೆಲೆಸಲು ಅವರ ಪ್ರವಾಸದ ನೇತೃತ್ವ ವಹಿಸಿದನೆಂದು ತಿಳಿಯಲಾಗಿದೆ.

೩. ಸುಮಾರು ಕ್ರಿ.ಪೂ.೧೧೦೦ರ ಹೊತ್ತಿಗೆ ಗುಡ್ಡ ಪ್ರದೇಶಗಳಿಂದ ಆವೃತವಾದ ಪ್ಯಾಲೇಸ್ತೀನಿನ ಬಹುತೇಕ ಭಾಗಗಳನ್ನು ಆಕ್ರಮಿಸಿದರೂ, ಇಂತಹ ಚಟುವಟಿಕೆಗಳು ಮಾನವ ಸಮಾಜದ ಹುಟ್ಟಿನ ಆರಂಭದಲ್ಲಿ ಎಲ್ಲ ಬುಡಕಟ್ಟು ಜನರು ಮಾಡುತ್ತಿದ್ದು, ಯಹೂದಿಗಳು ಇದಕ್ಕೆ ಹೊರತಲ್ಲ. ಇದೊಂದು, ಆ ಕಾಲದ ಸಾಮಾನ್ಯ ಲಕ್ಷಣವಾಗಿದ್ದು, ಯಹೂದಿಗಳ ಪ್ಯಾಲೇಸ್ತೀನ್ ಆಕ್ರಮಣ ಅದೇ ಪ್ರಕ್ರಿಯೆಯ ಮುಂದುವರಿಕೆಯಾಗಿತ್ತು.

೪. ಆದಾಗ್ಯೂ ಅವರೊಳಗೆ ಸಾಕಷ್ಟು ಭಿನ್ನಾಭಿಪ್ರಾಯಗಳನ್ನು ಪ್ಯಾಲೇಸ್ತೀನಿನಲ್ಲಿಯೇ ಆರಂಭದಿಂದಲೂ ವಾಸವಾಗಿರುವ ಪಿಲಿಸ್ತೈನಿ ಬಡಕಟ್ಟುಗಳು ನಡೆಸಿದ ಹಿಬ್ರೂ ವಿರೋಧಿ ದಂಗೆಗಳು, ಹಿಬ್ರೂ ಸಮುದಾಯದಲ್ಲಿ ಒಗ್ಗಟ್ಟು ಸೃಷ್ಟಿಸಿ, ಕೊನೆಗೆ ಡೇವಿಡ್ ಸಾಮ್ರಾಟನ(ಕ್ರಿ.ಪೂ.೧೦೧೦-೯೭೦) ನೇತೃತ್ವದಲ್ಲಿ ಹಿಬ್ರೂಗಳು ಅರಸೊತ್ತಿಗೆಯನ್ನು ಸ್ಥಾಪಿಸಿ ಜಾಗೃತರಾದರು. ಆ ರಾಜಕೀಯ ಜಗೃತಿ ಮುಂದುವರಿದು, ಸೊಲೊಮನ್ ದೊರೆ(ಕ್ರಿ.ಪೂ.೯೭೦-೯೩೦)ಯು ಮತ್ತಷ್ಟು ವೃದ್ದಿಸಿ ಒಂದು ಸ್ವತಂತ್ರ ಹಾಗೂ ವಿಶಾಲ ಪ್ರದೇಶವನ್ನು ಆಕ್ರಮಿಸಿಕೊಂಡರು. ಆದರೆ, ಸೊಲೊಮನ್ ನಿಧನ ನಂತರ ಹಿಬ್ರೂ ಪ್ರಭುತ್ವ ದುರ್ಬಲಗೊಂಡಿತು.

೫. ಆಮೇಲೆ ಹೀಬ್ರೂ ಸಾಮ್ರಾಜ್ಯ ಇಬ್ಭಾಗವಾಯಿತು. ಆ ಎರಡೂ ಸಾಮ್ರಾಜ್ಯಗಳೂ ಪರಸ್ಪರ ಪೈಪೋಟಿಯಲ್ಲಿ ತೊಡಗಿದವು. ಉತ್ತರದಲ್ಲಿ ಇಸ್ರೇಲ್ ಸಾಮ್ರಾಜ್ಯವು ಸುಮೇರಿಯವನ್ನು ಕೇಂದ್ರೀಕರಿಸಿದ್ದು, ದಕ್ಷಿಣದಲ್ಲಿ ಜೂಹಾ ಸಾಮ್ರಾಜ್ಯದ ಪ್ರಭುತ್ವ ಸ್ಥಾಪನೆಗೊಂಡಿತು.

೬. ಕ್ರಿ.ಪೂ.೭೨೧ ಮತ್ತು ೭೧೫ರ ನಡುವೆ ಉತ್ತರದ ಹಿಬ್ರೂ ಸಾಮ್ರಾಜ್ಯ ಅಸ್ಸೀರಿಯಾ ಸಾಮ್ರಾಜ್ಯದೊಂದಿಗೆ ವಿಲೀನಗೊಂಡಿತು. ಮತ್ತು ದಕ್ಷಿಣದ ಜುಹಾ ಸಾಮ್ರಾಜ್ಯ ಅಸ್ಸೀರಿಯಾ ಸಾರ್ವಭೌಮತ್ವವನ್ನು ಒಪ್ಪಿಕೊಂಡಿತು.

೭. ಕ್ರಿ.ಪೂ.೫೮೫ರಲ್ಲಿ ಇನ್ನೊಂದು ಹೊಸ ಬ್ಯಾಬಿಲೋನಿಯಾ ಸಾಮ್ರಾಜ್ಯದ ಉಗಮವಾಗಿ, ಅದರ ಸಾಮ್ರಾಟ ನೆಬುಚ್ಚನೆಜರ್ ಜೆರುಸಲೇಂನನ್ನು ಧ್ವಂಸ ಮಾಡಿ, ಅಲ್ಲಿರುವ ಅನೆಯಕ ಹಿಬ್ರೂ ಕುಟುಂಬಗಳನ್ನು ಸೆರೆ ಹಿಡಿದು ಬ್ಯಾಬಿಲೋನಿಗೆ ಕರೆದುಕೊಂಡು ಹೋದನು.

೮. ಕ್ರಿ.ಪೂ.೫೩೯ರಲ್ಲಿ ಸೈರಸ್ ಎಂಬ ಪರ್ಶಿಯನ್ ಸಾಮ್ರಾಟ ಬ್ಯಾಬಿಲೋನನ್ನು ಆಕ್ರಮಿಸಿ, ಅಲ್ಲಿ ಸೆರೆಯಲ್ಲಿದ್ದ ಹಿಬ್ರೂಗಳನ್ನು ಬಿಡುಗಡೆ ಮಾಡಿದನು. ಅಲ್ಲದೆ, ಸುಮಾರು ೪೦ ರಿಂದ ೫೦ ಸಾವಿರ ಹಿಬ್ರೂಗಳನ್ನು ಪ್ಯಾಲೇಸ್ತೀನಿಗೆ ಮರಳಲು ಕರೆ ನೀಡಿದನು. ಮತ್ತು ಒಂದಷ್ಟು ಮಂದಿ ಬ್ಯಾಬಿಲೋನ್‌ನಲ್ಲಿಯೇ ಉಳಿದುಕೊಳ್ಳಲು ಕೇಳಿಕೊಂಡಾಗ ಅದಕ್ಕೆ ಸೈರಸ್ ಒಪ್ಪಿಗೆ ನೀಡಿದನು.

೯. ಪರ್ಶಿಯನ್ನರು ಮತ್ತು ಟೊಲೆಮಿಯನ್ನರ ಆಳ್ವಿಕೆಯ ಕಾಲದಲ್ಲೂ ಹಿಬ್ರೂಗಳ ಸಂಸ್ಕೃತಿ ಉತ್ಕೃಷ್ಟ ಘಟ್ಟಕ್ಕೆ ತಲುಪಿದ್ದರೂ, ಅನೆಯಕ ಬಗೆಯ ಸಂಕಷ್ಟಗಳನ್ನು ಅವರು ಎದುರಿಸಿದರು.

೧೦. ಆದರೆ, ಗ್ರೀಕರು ತಮ್ಮದೇ ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಹಿಬ್ರೂಗಳ ಮೇಲೆ ಹೇರಲು ಪ್ರಯತ್ನ ನಡೆಸಿದಾಗ ಹಿಬ್ರೂಗಳು ದಂಗೆ ಎದ್ದರು. ಕ್ರಿ.ಪೂ.೧೫೦ರ ಹೊತ್ತಿಗೆ ಹಿಬ್ರೂಗಳು ಸೊಲೊಮನ್ ಅಧೀನಕ್ಕೆ ಒಳಪಟ್ಟ ಬಹುತೇಕ ಎಲ್ಲ ಭಾಗಗಳನ್ನು ಆಕ್ರಮಿಸಿಕೊಳ್ಳಲು ಯಶಸ್ವಿಯಾದರು.

೧೧. ಆದಾಗ್ಯೂ ಕ್ರಿ.ಪೂ.೬೩ರಲ್ಲಿ ಜೆರುಸಲೇಂ ದುರ್ಬಲಗೊಂಡಿತು. ಪ್ಯಾಲೇಸ್ತೀನ್ ರೋಮನ್ ಸಾಮ್ರಾಜ್ಯದ ಅವಿಭಾಜ್ಯ ಅಂಗವಾಗಿ ಸೇರಿ ಹೋಯಿತು. ಆ ನಂತರವೂ, ಹಿಬ್ರೂಗಳು ಅನೆಯಕ ದಂಗೆಗಳನ್ನು ಸಂಘಟಿಸಿದರೂ, ಸುಮಾರು ಕ್ರಿ.ಪೂ.೧೩೫ರ ಹೊತ್ತಿಗೆ ಇಡೀ ಪ್ಯಾಲೇಸ್ತೀನ್‌ನಲ್ಲಿ ಯಹೂದಿ ಪ್ರಭುತ್ವವನ್ನು ಮೊಟಕುಗೊಳಿಸಿ ಜೆರುಸಲೇಂನಲ್ಲಿ ರೋಮನ್‌ರು ನಿಯಂತ್ರಣ ಸಾಧಿಸಿದರು.

ಈ ಮೇಲಿನ ಹನ್ನೊಂದು ಅಂಶಗಳು ಪ್ಯಾಲೇಸ್ತೀನ್‌ನಲ್ಲಿ ಹಿಬ್ರೂ/ಯಹೂದಿ ಸಮುದಾಯದವರು ಆರಂಭದಿಂದ ಪ್ರಭುತ್ವ ಸ್ಥಾಪಿಸಲು ನಡೆಸಿದ ಕಾರ್ಯಾಚರಣೆಯ ಕುರಿತು ಸ್ಥೂಲ ಪರಿಚಯ ನೀಡುತ್ತವೆ. ಇದೊಂದು ನಿರಂತರವಾಗಿ ನಡೆದ ಆಕ್ರಮಣಕಾರಿ ಚಟುವಟಿಕೆಯಾಗಿದ್ದು, ವಿವಿಧ ಹಂತಗಳಲ್ಲಿ ಅನೆಯಕ ಬಗೆಯ ಏರುಪೇರುಗಳನ್ನು ಅನುಭವಿಸಿ ಹಿಬ್ರೂ ಕುಟುಂಬ ದೇವರು ಆಶ್ವಾಸನೆ ನೀಡಿದ ಭೂಭಾಗದಲ್ಲಿ ಒಂದು ಸಮೃದ್ಧ ನಾಗರಿಕ ಸಮಾಜ, ಸ್ವತಂತ್ರ ಧರ್ಮ, ಭಾಷೆ, ಪ್ರಭುತ್ವ ಮತ್ತು ಸ್ವಾವಲಂಬಿ ಬದುಕನ್ನು ನಿರೂಪಿಸಿದರು.

ಆದರೆ, ೧೯೪೮ರಲ್ಲಿ ಪ್ಯಾಲೇಸ್ತೀನ್‌ನ ಒಂದು ಭಾಗದಲ್ಲಿ ಸ್ಥಾಪಿಸಿದ ಇಸ್ರೇಲ್ ಪ್ರಭುತ್ವಕ್ಕೆ, ಯಹೂದಿಗಳು ನೀಡುವ ಸಮರ್ಥನೆ ಮತ್ತು ಆಧಾರಗಳು ಅಚಾರಿತ್ರಿಕ ವಾದವುಗಳು. ಅವರ ನಂಬಿಕೆಯ ಪ್ರಕಾರ ಏಬ್ರಾಹಂ ಮತ್ತು ಅವನ ಹಿಂಬಾಲಕರು, ಆರಂಭದಲ್ಲಿ ಅಲೆಮಾರಿ ಜೀವನ ನಡೆಸುತ್ತ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತಮ್ಮ ವಸತಿಗಳನ್ನು ಸ್ಥಳಾಂತರಿಸುತ್ತಿದ್ದರು. ನಂತರ ದೇವರು ನೀಡಿರುವ ಆಶ್ವಾಸನೆಯಂತೆ ತಮ್ಮ ಪ್ರವಾಸವನ್ನು ಮುಂದುವರಿಸಿ ಕೊನೆಗೆ ಡೇವಿಡ್ ಸಾಮ್ರಾಟನ ಕಾಲದಲ್ಲಿ ಯಹೂದಿಯರ ಪ್ಯಾಲೇಸ್ತೀನ್‌ನ್ನು ಆಕ್ರಮಿಸಿ ಅಲ್ಲಿ ತಮ್ಮ ಪ್ರಭುತ್ವವನ್ನು ಸಂಘಟಿಸಿದರು. ಇದೊಂದು ಚಾರಿತ್ರಿಕವಾಗಿ ಆಕ್ರಮಣವೇ ಆಗಿದ್ದು, ಅಲ್ಲಿರುವ ಮೂಲ ನಿವಾಸಿಗಳನ್ನು ದಮನಿಸಿ ತಮ್ಮ ಇರುವಿಕೆಯನ್ನು ಸಮರ್ಥಿಸಿಕೊಂಡರು. ಹಾಗಾಗಿ, ಒಂದಾನೊಂದು ಕಾಲದಲ್ಲಿ ಯಹೂದಿಗಳ ವಂಶಸ್ಥರು ಇಲ್ಲೆ ನೆಲೆ ನಿಂತಿದ್ದರು ಎಂಬ ದೃಢ ನಂಬಿಕೆಯನ್ನು ಇಟ್ಟುಕೊಂಡು ಕ್ರಿ.ಶ.೧೮೦೦ ರಿಂದ ೧೯೪೮ರ ನಡುವೆ ಜಾಗತಿಕ ಮಟ್ಟದಲ್ಲಿ, ಚದುರಿ ಹೋದ ಯಹೂದಿಗಳನ್ನು ಸಂಘಟಿಸಿ, ಯಶಸ್ವಿಯಾಗಿ ಪ್ಯಾಲೇಸ್ತೀನ್‌ನನ್ನು ವಸಾಹತೀಕರಿಸಿ, ೧೯೪೮ರಲ್ಲಿ ಇಸ್ರೇಲ್ ಎಂಬ ಯಹೂದಿಯರ ಪ್ರಭುತ್ವವನ್ನು ಸ್ಥಾಪಿಸಲಾಯಿತು.

ಯಹೂದಿಗಳು ಪಾಲಿಸಿರುವ ಮಾರ್ಗ ಸರಿಯೆಂದು ಹೇಳುವುದಾದರೆ, ಜಾಗತಿಕ ಇತಿಹಾಸದಲ್ಲಿ ಕಾರ್ಯರೂಪಕ್ಕೆ ತರಬಹುದಾದ ಅನೆಯಕ ಉದಾಹರಣೆಗಳಿವೆ. ಅರಬ್ ಮುಸ್ಲಿಮರು ಸುಮಾರು ೮೦೦ ವರ್ಷಗಳಷ್ಟು ಕಾಲ ಯುರೋಪಿನ ಬಹುತೇಕ ಭಾಗಗಳನ್ನು ಆಕ್ರಮಿಸಿ ತಮ್ಮದೇ ಪ್ರಭುತ್ವವನ್ನು ಸ್ಥಾಪಿಸಿದ್ದರು. ಯುರೋಪಿಯನ್ನರು, ಸ್ಪೇನಿಯಾರ್ಡರು ಮತ್ತು ಪೋರ್ಚುಗೀಸರು ಹೊಸ ಜಲಮಾರ್ಗದ ಮೂಲಕ ದಕ್ಷಿಣ ಮತ್ತು ಮಧ್ಯ ಅಮೆರಿಕಾವನ್ನು ಆಕ್ರಮಿಸಿ ಮೆಕ್ಸಿಕೊ, ಚಿಲಿ, ಇಂಥಕಾ ದ್ವೀಪ ಮತ್ತು ಅಟೆಕ್ ಪ್ರದೇಶಗಳಲ್ಲಿ ತಮ್ಮ ತಮ್ಮ ವಸಾಹತುಗಳನ್ನು ಸ್ಥಾಪಿಸಿದ್ದರು. ಅಲ್ಲದೇ, ೧೬ನೆಯ ಶತಮಾನದಿಂದ ೨೦ನೆಯ ಶತಮಾನದ ಮಧ್ಯ ಭಾಗದವರೆಗೂ, ಯುರೋಪಿನ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಏಷ್ಯಾ, ಆಫ್ರಿಕಾ ದೇಶಗಳನ್ನು ಆಕ್ರಮಿಸಿ ವಸಾಹತುಶಾಹಿ ಪ್ರಭುತ್ವವನ್ನು ಹೇರಿದ್ದರು. ಯಹೂದಿಗಳು ೧೯೪೮ರಲ್ಲಿ ಮಾಡಿದ ಆಕ್ರಮಣಕ್ಕೆ ನೀಡಿರುವ ಸಮರ್ಥನೆಯನ್ನು ಅನುಸರಿಸುವುದಾದರೆ, ಯುರೋಪಿನಲ್ಲಿ ಅರಬರು ಇಂದು ಆಕ್ರಮಣ ಮಾಡಬಹುದಲ್ಲವೇ? ಏಷ್ಯಾ, ಆಫ್ರಿಕಾ ಖಂಡಗಳಲ್ಲಿರುವ ಸ್ವತಂತ್ರ ರಾಷ್ಟ್ರಗಳನ್ನು ಯುರೋಪ್ ದೇಶಗಳು ಆಕ್ರಮಿಸಿ, ಪ್ರಭುತ್ವ ಹೇರಬಹುದಲ್ಲವೇ? ಮುಂದೊಂದು ದಿನ ಇದಕ್ಕೆ ಅವಕಾಶಗಳಿವೆಯೇ? ಆದರೆ, ಇವತ್ತು ಹಾಗೆ ಮಾಡಲು ಸಾಧ್ಯವೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಬೇರೆಯೇ ಚರ್ಚೆಯಾಗುತ್ತದೆ.

ಒಂದನೆಯ ಶತಮಾನದಿಂದ ೧೮ನೆಯ ಶತಮಾನದ ಕೊನೆಯವರೆಗಿನ ಯಹೂದಿಯರ ಪರಿಸ್ಥಿತಿ: ಪ್ಯಾಲೇಸ್ತೀನ್‌ನಲ್ಲಿ ರೋಮನ್ ಪ್ರಭುತ್ವ ಭದ್ರಗೊಂಡ ನಂತರ, ಯಹೂದಿಗಳು ತಮ್ಮ ದೇಶ(ಪ್ರಾಮಿಸ್‌ಡ್ ಲ್ಯಾಂಡ್) ಬಿಟ್ಟು ಹೋಗುವ ಸಂದಿಗ್ಧ ಪರಿಸ್ಥಿತಿ ಎದುರಾಯಿತು. ತಮ್ಮ ರಕ್ಷಣೆ ತಕ್ಷಣ ಬಹಳ ಮುಖ್ಯ ಎಂಬುದು ಅವರು ಅರಿತಿದ್ದು, ವಿಶ್ವದ ಬೇರೆ ಬೇರೆ ಭಾಗಕ್ಕೆ ವಲಸೆ ಹೋದರು. ದೇವರ ಆಶೀರ್ವಾದಂತೆ ಅವರು ಎಲ್ಲ ಇದ್ದರೂ, ಅವರು ನೆಲೆ ನಿಂತಿರುವ ಪ್ರದೇಶ ಸಮೃದ್ದಿ ಹೊಂದುತ್ತದೆ ಎಂಬ ದೃಢ ನಂಬಿಕೆ ಕೂಡ ಅವರಿಗಿತ್ತು. ಹಾಗಾಗಿ ತಮ್ಮ ದೇಶ ಕೈ ತಪ್ಪಿದ ನಂತರ ಏಷ್ಯಾ, ಆಫ್ರಿಕಾ, ಯುರೋಪ್ ಮತ್ತು ಅಮೆರಿಕ ದೇಶಗಳಲ್ಲಿ ಆಸರೆ ಪಡೆದರು. ಹೀಗೆ, ಆಸರೆ ನೀಡಿದ ರಾಷ್ಟ್ರಗಳು, ಯಹೂದಿಗಳಿಗೆ ರಕ್ಷಣೆ ನೀಡಿರುವುದಲ್ಲದೆ, ಆಯಾ ರಾಷ್ಟ್ರಗಳು ಯಹೂದಿ ಜನ ವಸತಿಗಳಲ್ಲಿ ವಾಸಿಸುವ ಸಮುದಾಯಕ್ಕೆ ಎಲ್ಲ ರಂಗದಲ್ಲೂ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ನೀಡಿದವು.

ಆಸರೆ ನೀಡಿದ ದೇಶಗಳ ಸರಕಾರಗಳು ಸೃಷ್ಟಿಸಿದ ವಾತಾವರಣವು ಯಹೂದಿ ಸಮುದಾಯಕ್ಕೆ ಸಕಾರಾತ್ಮಕವಾಗಿಯೇ ಇದ್ದು ಅವರು ತಮ್ಮ ದೇವರು ಪ್ರಾಮಿಸ್ ಮಾಡಿದ ಭೂಮಿಯಲ್ಲಿ ಇಲ್ಲದಿದ್ದರೂ, ಹೋಸ್ಟ್ ದೇಶಗಳಲ್ಲಿ ಸ್ವತಂತ್ರ ಬದುಕನ್ನು, ತಮ್ಮದೇ ಆಚಾರ, ಸಂಪ್ರದಾಯಗಳಿಗನುಗುಣವಾಗಿ ನಿರೂಪಿಸಲು ಸಹಕಾರಿಯಾಯಿತು. ಯಹೂದಿಗಳು ಆರಂಭದಿಂದಲೂ ಶ್ರಮಜೀವಿಗಳಾಗಿದ್ದು, ತಮ್ಮ ಸಂಪ್ರದಾಯ, ಧರ್ಮ ಮತ್ತು ಸಂಸ್ಕೃತಿಯ ಆಧಾರದ ಮೇಲೆ ತಮ್ಮ ಇರುವಿಕೆಯನ್ನು ಹಾಗೂ ಪ್ರಭುತ್ವವನ್ನು ಸಮರ್ಥಿಸಿ ಕೊಂಡಿದ್ದವರು. ಇದನ್ನೇ ಮುಂದುವರಿಸಿಕೊಂಡು ಹೋಗಲು ರೋಮನ್ನರು ಪ್ಯಾಲೇಸ್ತೀನ್‌ನಲ್ಲಿ ಅವಕಾಶ ನೀಡಲಿಲ್ಲ. ಅವರನ್ನು ನಿರಂತರವಾಗಿ ದ್ವೇಷಿಸತೊಡಗಿದ್ದು ದರಿಂದ ಅವರ ಆಕ್ರಮಣಕಾರಿ ನೀತಿಯಿಂದ ರಕ್ಷಿಸಿಕೊಳ್ಳಲೋಸ್ಕರ ತಮ್ಮ ದೇಶವನ್ನೇ ತ್ಯಜಿಸಿ ವಲಸೆ ಹೋದರು.

ಜಗತ್ತಿನಾದ್ಯಂತ ಚದುರಿ ಹೋದರೂ, ಆಸರೆ ಪಡೆದ ದೇಶಗಳಲ್ಲಿಯೇ ಯಹೂದಿಗಳು ಪ್ರತ್ಯೇಕವಾದ ಭೂಭಾಗದಲ್ಲಿ ಜನವಸತಿಗನ್ನು ತೆರೆದು ವಿವಿಧ ಅಭಿವೃದ್ದಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಆಸರೆ ನೀಡಿದ ದೇಶಗಳ ಉತ್ಪಾದನಾ, ಕೈಗಾರಿಕಾ, ವ್ಯಾಪಾರ ಚಟುವಟಿಕೆಗಳಲ್ಲಿ ಯಹೂದಿಗಳು ಭಾಗವಹಿಸತೊಡಗಿ, ಆ ದೇಶಗಳ ಸರ್ವ ತೋಮುಖ ಅಭಿವೃದ್ದಿಗೆ ತಮ್ಮದೇ ಕೊಡುಗೆ ನೀಡತೊಡಗಿದರು. ಮತ್ತು ಆ ದೇಶಗಳ ಆರ್ಥಿಕ ಭದ್ರತೆಗೆ ಕಾರಣೀಭೂತರಾದರು. ಇದಲ್ಲದೇ, ಅನೆಯಕ ಆವಿಷ್ಕಾರಗಳು, ಚಿಂತನೆಗಳು, ಸಿದ್ಧಾಂತಗಳು ಮತ್ತು ಭೌತಿಕ ಬೆಳವಣಿಗೆಗೆ ಯಹೂದಿ ಬುದ್ದಿಜೀವಿಗಳು ನೆಯರವಾಗಿ ಕಾರಣರಾದರು.

ಹೋಸ್ಟ್ ದೇಶಗಳು ಯಹೂದಿ ಸಮುದಾಯಕ್ಕೆ ಧಾರ್ಮಿಕ ಸ್ವಾಯತ್ತತೆ ನೀಡಿರು ವುದರಿಂದ ತಮಗೆ ದೇವರು ಪ್ರಾಮಿಸ್ ಮಾಡಿದ ಭೂಮಿಯಲ್ಲಿ ಈ ಮೊದಲು ಯಾವ್ಯಾವ ಸಂಪ್ರದಾಯ, ಆಚಾರ ವಿಚಾರಗಳನ್ನು ಪಾಲಿಸುತ್ತಿದ್ದಾರೋ, ಅವೆಲ್ಲವನ್ನೂ ಯಾವುದೇ ಬದಲಾವಣೆ ಇಲ್ಲದೆ ಯಥಾವತ್ತಾಗಿ ತಮ್ಮದಲ್ಲದ ದೇಶಗಳಲ್ಲಿ ನಿರಾತಂಕವಾಗಿ ಪಾಲಿಸುತ್ತಿದ್ದರು. ರೋಮನ್‌ರ ಆಕ್ರಮಣದ ನಂತರವೂ ಕೆಲವೊಂದು ಯಹೂದಿ ಕುಟುಂಬಗಳು ಪ್ಯಾಲೇಸ್ತೀನಿನಲ್ಲಿಯೇ ಖಾಯಂ ಆಗಿ ನೆಲೆ ನಿಂತಿದ್ದವು. ಈ ಕುಟುಂಬಗಳು ಆಚರಿಸುವ ಹಬ್ಬಗಳು, ಸಂಪ್ರದಾಯ, ಉಡುಗೆ ತೊಡುಗೆ, ಆಹಾರ ಪದ್ಧತಿ ಮತ್ತು ಧಾರ್ಮಿಕ ಆಚರಣೆಗಳನ್ನೇ ಪ್ರಪಂಚದಾದ್ಯಂತ ಚದುರಿ ಹೋದ ಯಹೂದಿ ಕುಟುಂಬಗಳು ಅನುಸರಿಸುತ್ತಿದ್ದರು. ಹಿಬ್ರೂ ಎಂಬುದು ಅವರ ಆಡು ಭಾಷೆಯಾಗಿಯೇ ಮುಂದುವರಿಯಿತು. ಆ ಭಾಷೆ ಅವರು ಜಗತ್ತಿನಾದ್ಯಂತ ಇರುವ ಸದಸ್ಯರೊಂದಿಗೆ ಸಂಪರ್ಕ ಇರಿಸಿಕೊಳ್ಳಲು ಒಂದು ಮಾಧ್ಯಮವು ಆಗಿತ್ತು. ಧಾರ್ಮಿಕ ಆಚರಣೆಗಳಲ್ಲಿ ಮಾಧ್ಯಮವಾಗಿಯೂ ಹಿಬ್ರೂ ಭಾಷೆ ಕಾರ್ಯ ನಿರ್ವಹಿಸುತ್ತಿತ್ತು. ಅಂದರೆ ಪ್ರಪಂಚದ ವಿವಿಧ ಭಾಗಗಳಲ್ಲಿ ವಸತಿಗಳನ್ನು ಹೊಂದಿದ್ದು, ಹೋಸ್ಟ್ ದೇಶಗಳ ಸರಕಾರದ ಅಧೀನಕ್ಕೆ ಒಳಪಟ್ಟಿದ್ದರೂ, ಈ ಹೋಸ್ಟ್ ದೇಶದ ಸಂಸ್ಕೃತಿಯನ್ನಾಗಲಿ, ಭಾಷೆಯನ್ನಾಗಲಿ, ಸಂಪ್ರದಾಯವನ್ನಾಗಲಿ, ಇತ್ಯಾದಿ ವಿಚಾರಗಳಿಗೆ ಯಹೂದಿಗಳು ಮತಾಂತರಗೊಂಡಿಲ್ಲ. ಬದಲಾಗಿ ತಮ್ಮ ವೈಯಕ್ತಿಕ ಐಡೆಂಟಿಟಿ ಮತ್ತು ಪ್ರತ್ಯೇಕತೆಯನ್ನು ರಕ್ಷಿಸಿಕೊಂಡಿದ್ದರು.

ಈ ರೀತಿಯ ಯಹೂದಿ ಜೀವನ ಕ್ರಮ ಸುಮಾರು ಎರಡು ಸಾವಿರ ವರ್ಷಗಳಷ್ಟು ಕಾಲ ಮುಂದುವರಿದಿತ್ತು(೧೯ನೆಯ ಶತಮಾನದವರೆಗೂ). ಆಧುನಿಕ ಯುಗದಲ್ಲಿಯಂತೂ, ಯಹೂದಿಗಳು ಆಸರೆ ಪಡೆದ ದೇಶಗಳ ಆರ್ಥಿಕ ಅಭಿವೃದ್ದಿಯ ನಿರ್ವಾಹಕವಾಗಿಯೇ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ತಮ್ಮದೇ ದೇಶವನ್ನು ಕಳೆದುಕೊಂಡರೂ, ಯಹೂದಿಗಳು ಧೈರ್ಯಗೆಡಲಿಲ್ಲ. ಬದಲಾಗಿ, ಆಸರೆ ಪಡೆದ ದೇಶಗಳಲ್ಲಿ ಶಾಂತಿಯಿಂದ ಜೀವನವನ್ನು ನಡೆಸಿ ಆರ್ಥಿಕ ರಂಗದಲ್ಲಿ ತಮ್ಮ ಪ್ರತಿಭೆ ಮತ್ತು ಪ್ರಭಾವವನ್ನು ಯಶಸ್ವಿಯಾಗಿ ತೋರ್ಪಡಿಸಿದರು. ಬರಬರುತ್ತಾ ತಮ್ಮ ಪ್ರತ್ಯೇಕತೆಯನ್ನು ಉಳಿಸಿಕೊಂಡು ಹೋಸ್ಟ್ ದೇಶಗಳ, ಅದರಲ್ಲೂ ಐರೋಪ್ಯ ರಾಷ್ಟ್ರಗಳ ವಿದೇಶಿ ವ್ಯಾಪಾರ, ಕೈಗಾರಿಕೀಕರಣ, ಹಣಕಾಸಿನ ವಹಿವಾಟು, ರಾಜಕೀಯ, ಸಾಮಾಜಿಕ ರಂಗಗಳಲ್ಲಿ ಯಹೂದಿಗಳು ಮೇಲು ಪಂಕ್ತಿಯಲ್ಲಿದ್ದು ಮುನ್ನಡೆಸುತ್ತಿದ್ದರು. ಇದು ಸುಮಾರು ೧೭೮೯ರ ಫ್ರೆಂಚ್ ಕ್ರಾಂತಿಯವರೆಗೂ ಮುಂದುವರಿಯಿತು.

ಆದರೆ, ೧೮ನೆಯ ಶತಮಾನದ ಉತ್ತರಾರ್ಧದಲ್ಲಿ ಹೋಸ್ಟ್ ದೇಶದ ಪ್ರಜೆಗಳು ಇದ್ದಕ್ಕಿದ್ದಂತೆ ಯಹೂದಿಗಳನ್ನು ದ್ವೇಷಿಸಲು ಆರಂಭಿಸಿದರು. ಇದಕ್ಕೆ ಮುಖ್ಯವಾದ ಕಾರಣವೆಂದರೆ, ಯಹೂದಿಗಳು ಪ್ರತ್ಯೇಕತೆಯನ್ನು ಉಳಿಸಿಕೊಂಡರೂ, ಆ ದೇಶಗಳ ಆರ್ಥಿಕ, ಹಣಕಾಸಿನ, ಉತ್ಪಾದನಾ ಮತ್ತು ಕೈಗಾರಿಕಾ ಹಾಗೂ ವ್ಯಾಪಾರ ರಂಗಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಂಪೂರ್ಣ ಲಾಭ ಪಡೆಯುತ್ತಿದ್ದರು. ಇದರಿಂದ, ನಿಜವಾದ ಜನ ಸಮುದಾಯದ ಭಾಗವಹಿಸುವಿಕೆಯನ್ನು ಮುಖ್ಯವಾಹಿನಿಯಿಂದ ಬೇರ್ಪಡಿಸಲಾಯಿತು.  ತಮ್ಮ ದೇಶದಲ್ಲಿಯೇ ಅವರು ಶೋಷಣೆಗೆ ಒಳಗಾಗತೊಡಗಿದರು. ಹಾಗಾಗಿ ಯುರೋಪಿ ನಾದ್ಯಂತ ಯಹೂದಿ ದ್ವೇಷ ಭಾವನೆ ಹರಡತೊಡಗಿತು. ಏಕೆಂದರೆ, ಯಹೂದಿಗಳು ಈ ದೇಶಗಳಲ್ಲಿ ೨೦೦೦ ವರ್ಷಗಳ ಕಾಲ ಪ್ರತ್ಯೇಕ ಐಡೆಂಟಿಟಿಯನ್ನು ಹಾಗೂ ಸ್ವಾಯತ್ತತೆಯನ್ನು ಅನುಭವಿಸಿ, ಆ ದೇಶಗಳ ಅಭಿವೃದ್ದಿಯ ಸೂತ್ರಧಾರಿಗಳೂ ಆದರು. ಮಾತ್ರವಲ್ಲ ಆ ದೇಶಗಳಲ್ಲಿ ಶ್ರೀಮಂತ ಸಮುದಾಯವಾಗಿಯೂ ಪರಿವರ್ತನೆಗೊಂಡರು. ಹೋಸ್ಟ್ ದೇಶಗಳ ವಿದೇಶಿ ವ್ಯಾಪಾರ ಚಟುವಟಿಕೆಗಳಲ್ಲೂ ಯಹೂದಿಗಳದ್ದೇ ಮೇಲುಗೈ ಆಗಿತ್ತು. ಕೃಷಿ, ಕೈಗಾರಿಕೆ, ಹಣಕಾಸು ಮತ್ತು ಇನ್ನಿತರ ಸಂಸ್ಥೆಗಳಲ್ಲಿ ಯಹೂದಿಗಳೇ ಮಂಚೂಣಿ ಯಲ್ಲಿದ್ದರು. ಅಂದರೆ, ಆ ದೇಶದ ಮೂಲ ನಿವಾಸಿಗಳಾಗಿರದಿದ್ದರೂ, ಪ್ರಜೆಗಳಾಗಿರ ದಿದ್ದರೂ, ಹೋಸ್ಟ್ ದೇಶಗಳಲ್ಲಿ ಯಹೂದಿಗಳು ಶ್ರೀಮಂತರಾಗಿದ್ದುದು, ದ್ವೇಷ ಭಾವನೆ ಹುಟ್ಟಲು ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಯಹೂದಿಗಳು ಜಾಗತಿಕ ಮಟ್ಟದಲ್ಲಿ ಜಾಗೃತ ರಾಗತೊಡಗಿದರು. ಯುರೋಪ್ ಸರಕಾರಗಳೂ(ಹಿಂದೆ ರೋಮನ್ ಸರಕಾರ ಪಾಲಿಸಿದ ಧೋರಣೆಯಂತೆ) ಯಹೂದಿಗಳನ್ನು ತಮ್ಮ ದೇಶದಿಂದ ಓಡಿಸಲು ತೀವ್ರ ಸ್ವರೂಪದ ದಮನ ಕಾರ್ಯದಲ್ಲಿ ತೊಡಗಿದವು. ಇದಕ್ಕೆ ವಿರುದ್ಧವಾಗಿ ಯಹೂದಿಗಳು ಜಿಯೋನಿಸಂ ರಾಷ್ಟ್ರವಾದಿ ಚಳವಳಿಯನ್ನು ಜಗತ್ತಿನಾದ್ಯಂತ ಆರಂಭಿಸಿದರು.

ಪರಾಮರ್ಶನ ಗ್ರಂಥಗಳು

೧. ಡ್ಯೂಪೈ, ಟಿ. ೧೯೭೮. ಇಲ್ಯೂಸಿವ್ ವಿಕ್ಟರಿ : ದಿ ಅರಬ್ ಇಸ್ರೇಲಿ ವಾರ್ಸ್, ೧೯೪೭೧೯೭೪, ನ್ಯೂಯಾರ್ಕ್.

೨. ಹಡ್ಸನ್ ಎಂ., ೧೯೭೭. ಅರಬ್ ಪಾಲಿಟಿಕ್ಸ್ : ದಿ ಸರ್ಚ್ ಫಾರ್ ಲೆಜೆಟಮೆಸಿ, ನೂಯಾರ್ಕ್.

೩. ಹ್ಯೂರ್‌ವಿಜ್ ಜೆ.ಸಿ., ೧೯೭೬. ದಿ ಸ್ಟ್ರಗಲ್ ಫಾರ್ ಪ್ಯಾಲೇಸ್ತೀನ್, ನ್ಯೂಯಾರ್ಕ್.

೪. ಲೇಖರ್ ಡಬ್ಲೂ ಎಂಡ್ ರುಬಿನ್ ಬಿ.(ಸಂ). ೧೯೮೫. ದಿ ಇಸ್ರೇಲ್ ಅರಬ್ ಲೀಡರ್: ಡಾಕ್ಯುಮೆಂಟರಿ ಹಿಸ್ಟರಿ ಆಫ್ ದಿ ಮಿಡ್ಲ್ ಈಸ್ಟ್ ಕಾನಪ್ಲಿಕ್ಟ್, ನ್ಯೂಯಾರ್ಕ್