ಜಾಗತಿಕ ಚರಿತ್ರೆಯಲ್ಲಿ ಬಹುಮುಖ್ಯವಾಗಿ ಗುರುತಿಸಿಕೊಂಡಿರುವ ಆಟೋಮನ್ ಸಾಮ್ರಾಜ್ಯ ೧೮ನೆಯ ಶತಮಾನದವರೆಗೆ ರಾಜಕೀಯ ಸ್ಥಿರತೆಯನ್ನು ಕಾಯ್ದು ಕೊಂಡಿತ್ತು. ೧೮ನೆಯ ಶತಮಾನದ ಬಳಿಕ ಆಂತರಿಕ ಹಾಗೂ ಬಾಹ್ಯ ಕಾರಣಗಳಿಂದಾಗಿ ಅವನತಿಯತ್ತ ಸಾಗಲಾರಂಭಿಸಿತ್ತು. ಯುರೋಪಿನ ಶಕ್ತಿಗಳು ಈ ಸಾಮ್ರಾಜ್ಯದ ಬಿಕ್ಕಟ್ಟಿನ ಲಾಭವನ್ನು ಸರಿಯಾಗಿ ಪಡೆದುಕೊಂಡವು.

ಆಟೋಮನ್ ಸಾಮ್ರಾಜ್ಯ (೧೮ನೆಯ ಶತಮಾನ)

ಇತಿಹಾಸದುದ್ದಕ್ಕೂ ಆಟೋಮನ್ ಸಾಮ್ರಾಜ್ಯದ ಆರ್ಥಿಕ ವ್ಯವಸ್ಥೆಯು ಪಶುಪಾಲಕರ, ರೈತಾಪಿ ಜನರ, ಕೈಕಸುಬುಗಾರರ ಮತ್ತು ವ್ಯಾಪಾರಸ್ಥರ ಚಟುವಟಿಕೆಗಳಿಂದ ಶ್ರೀಮಂತಿಕೆಯನ್ನು ಅನುಭವಿಸುತ್ತಿತ್ತು. ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಪಶುಪಾಲಕರು ಆಳುವ ವರ್ಗ ಮತ್ತು ಸಾಮಾನ್ಯ ಜನರಿಗೆ ಬೇಕಾದ ಮಾಂಸ ಮತ್ತು ಉಣ್ಣೆಯ ಜೊತೆಗೆ, ವ್ಯಾಪಾರ ವರ್ಗದವರಿಗೆ ಸಾರಿಗೆ ಸಂಪನ್ಮೂಲಗಳನ್ನು(ಕುದುರೆ ಮತ್ತು ಒಂಟೆ) ಒದಗಿಸು ತ್ತಿದ್ದರು. ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಸಾರಿಗೆ ವ್ಯವಸ್ಥೆಗಳು ಸಾಕಷ್ಟು ಪ್ರಮಾಣದಲ್ಲಿ ಬೆಳೆದಿದ್ದು ವಲಸೆ ಜನರ ಆರ್ಥಿಕ ಅಭಿವೃದ್ದಿಯು ಪ್ರಾಂತೀಯ ವಾಣಿಜ್ಯ ಚಟುವಟಿಕೆಗಳನ್ನು ಅವಲಂಬಿಸಿತ್ತು. ಕಸುಬುದಾರರು, ವ್ಯಾಪಾರ ವರ್ಗದವರು ಮಾರುಕಟ್ಟೆ ಯಲ್ಲಿನ ಚಟುವಟಿಕೆಗಳಿಗೆ ಸಕ್ರಿಯವಾಗಿ ಸ್ಪಂದಿಸುತ್ತಿದ್ದು, ರೈತರು ಕೃಷಿ ಸಂಪನ್ಮೂಲಗಳನ್ನು ಕ್ಲುಪ್ತ ಸಮಯಕ್ಕೆ ಒದಗಿಸಿ ನಗರೀಕರಣದ ಅಭಿವೃದ್ದಿಗೆ ಶ್ರಮಿಸುತ್ತಿದ್ದರು. ಆಟೋಮನ್ ಏಕಸ್ವಾಮಿತ್ವ ಸರಕಾರದಿಂದ ದೇಶದ ಆರ್ಥಿಕ ಅಭಿವೃದ್ದಿಗೆ ಯಾವ ಬಾಹ್ಯ ಶಕ್ತಿಗಳು ಧಕ್ಕೆ ಒಡ್ಡುತ್ತಿರಲಿಲ್ಲ. ಸಾಮ್ರಾಜ್ಯದೊಳಗೆ ರಾಜಕೀಯ ಒಗ್ಗಟ್ಟನ್ನು ಸ್ಥಾಪಿಸಿ ಪಶ್ಚಿಮ, ಪೂರ್ವ, ಉತ್ತರ ಮತ್ತು ದಕ್ಷಿಣದ ಮುಖ್ಯ ವ್ಯಾಪಾರ ಮಾರ್ಗಗಳ ಮೇಲೆ ಹಿಡಿತ ಸಾಧಿಸಿ ವಾಣಿಜ್ಯ ಚಟುವಟಿಕೆಗಳನ್ನು ಸುಗಮಗೊಳಿಸಿತ್ತು. ಆದರೆ ೧೮ನೆಯ ಶತಮಾನದ ಆರಂಭದಿಂದ ಇದ್ದಕ್ಕಿದ್ದಂತೆ ಆಟೋಮನ್ ಸಾಮ್ರಾಜ್ಯದ ಆರ್ಥಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಗಳು ದುರ್ಬಲಗೊಂಡಿವೆ. ಈ ದುರ್ಬಲತೆಗೆ ಆಟೋಮನ್ ಸಂಸ್ಥೆಗಳು ಮತ್ತು ಅಧಿಕಾರಿ ವರ್ಗವೇ ಕಾರಣವಾದುದರಿಂದ ವಿದೇಶಿಯರ ವಿದ್ಯಮಾನ ಎಂದು ಟೀಕಿಸುವುದು ಅಸಾಧ್ಯ.

೧೮ನೆಯ ಹಾಗೂ ೧೯ನೆಯ ಶತಮಾನದುದ್ದಕ್ಕೂ ಸುಲ್ತಾನನ ಕಚೇರಿ ಭ್ರಷ್ಟಾಚಾರದಿಂದ ತುಂಬಿದ್ದು, ಆಡಳಿತಶಾಹಿ ಆಳುವ ಸಂಸ್ಥೆಗಳನ್ನು ಪ್ರವೇಶಿಸಿ, ಧಾರ್ಮಿಕ ಸಂಸ್ಥೆಗಳನ್ನು ಹಿಡಿತದಲ್ಲಿಟ್ಟುಕೊಂಡಿರುವ ಮುಸ್ಲಿಂ ಪಾದ್ರಿಗಳ ಐಕ್ಯತೆಯನ್ನು ದೂಳಿಪಟ ಮಾಡಿರು ವುದರಿಂದ ಸೈನಿಕ ಶಕ್ತಿಯ ಬಲ ವೃದ್ದಿಸಿ ಆಳುವ ವರ್ಗವು ಕೈಗೊಳ್ಳಬೇಕಾದ ಜನರ ಹಿತರಕ್ಷಣಾ ಕಾರ್ಯಕ್ರಮಕ್ಕೆ ಧಕ್ಕೆ ಉಂಟು ಮಾಡಿತು. ಸ್ಥಳೀಯ ಆಡಳಿತ ವ್ಯವಸ್ಥೆ ಮೂಲೆ ಪಾಲಾದವು. ಕಾರಾವಾನ್ ವ್ಯಾಪಾರ ಮಾರ್ಗಗಳಿಗೆ ಅಡಚಣೆ ಉಂಟಾಯಿತು. ರಸ್ತೆಗಳ ಮತ್ತು ಸೇತುವೆಗಳ ದುರಸ್ತಿ ಕೈಗೊಳ್ಳಲಿಲ್ಲ. ಸಾರ್ವಜನಿಕ ಕಾರ್ಯಕ್ರಮಗಳು ಸ್ಥಗಿತಗೊಂಡವು, ಜನಸೇವೆಯು ಕೆಳಮಟ್ಟಕ್ಕೆ ಧುಮುಕಿ ದಂಗೆಗಳು, ದರೋಡೆ, ಲೂಟಿ ಎಲ್ಲೆಲ್ಲೂ ಪ್ರಾರಂಭವಾದವು. ಪಾಶ್ಚಾತ್ಯ ಜಗತ್ತಿನಲ್ಲಿ ೧೬ನೆಯ, ೧೭ನೆಯ ಮತ್ತು ೧೮ನೆಯ ಶತಮಾನಗಳುದ್ದಕ್ಕೂ ಕ್ರಾಂತಿಕಾರಿ ಬದಲಾವಣೆಗಳು ಬಂದು ಹಳೇ ಸಂಸ್ಥೆಗಳು, ವ್ಯವಸ್ಥೆಗಳೆಲ್ಲ ನಾಶವಾಗಿ ಹೊಸತು ಹುಟ್ಟಿಕೊಂಡು ಅಭಿವೃದ್ದಿಯತ್ತ ಸಾಗುತ್ತಿರುವಾಗ ಆಟೋಮನ್ ಸಮಾಜ ೧೮ನೆಯ ಶತಮಾನದ ಆರಂಭದಿಂದ ಅರಾಜಕತೆ, ರಾಜಕೀಯ ಬಿಕ್ಕಟ್ಟು, ಆರ್ಥಿಕ ಮುಗ್ಗಟ್ಟು ಹಾಗೂ ಇನ್ನಿತರ ಆಂತರಿಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಈ ಬಿಕ್ಕಟ್ಟನ್ನು ಸರಿಪಡಿಸಲು ಕ್ರಾಂತಿಕಾರಿ ಚಿಂತನೆಗಳು ಮತ್ತು ಸಂಸ್ಥೆಗಳನ್ನು ಸ್ಥಾಪಿಸಿ ಚಳವಳಿಯಿಂದಲೇ ನಿರ್ಮೂಲನ ಮಾಡಬೇಕೆಂದು ಪ್ರಭಾವಿ ಚಿಂತಕರು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಐರೋಪ್ಯ ರಾಷ್ಟ್ರಗಳಲ್ಲಿ ಸೃಷ್ಟಿಯಾದ ವಾಣಿಜ್ಯಕ್ರಾಂತಿಯ ಪ್ರಭಾವದಿಂದ ಬ್ಯಾಂಕಿಂಗ್, ಹಣಕಾಸು ಮತ್ತು ಸಹಕಾರಿ ಸಂಸ್ಥೆಗಳು ಹುಟ್ಟಿಕೊಂಡವು. ಕೈಗಾರಿಕಾ ಕ್ರಾಂತಿಯಿಂದ ಸಿದ್ಧ ವಸ್ತುಗಳ ಉತ್ಪಾದನಾ ಮಟ್ಟ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಬೇಡಿಕೆಯ ಮಟ್ಟ ಕುಸಿಯಿತು. ಬಂಡವಾಳಶಾಹಿಗಳ ಮತ್ತು ವ್ಯಾಪಾರಿ ವರ್ಗದವರ ಲಾಭ ಕುಸಿಯಿತು. ಜೊತೆಗೆ ಯುರೋಪಿನ ರಾಷ್ಟ್ರಗಳು ಆಹಾರ ಸಮಸ್ಯೆ, ಕಚ್ಚಾವಸ್ತುಗಳ ಸಮಸ್ಯೆ ಮತ್ತು ಮಾರುಕಟ್ಟೆಗಳ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಈ ಆಂತರಿಕ ಸಮಸ್ಯೆಗಳನ್ನು ಹೋಗಲಾಡಿಸಲು ಏಕಪ್ರಕಾರವಾಗಿ ಅನಭಿವೃದ್ದಿ ಹೊಂದಿದ ಏಷ್ಯಾ ಮತ್ತು ಆಫ್ರಿಕಾ ಖಂಡಗಳಲ್ಲಿ ತಮ್ಮ ವಸಾಹತುಗಳಲ್ಲಿ ಸ್ಥಾಪಿಸಲು ೧೮ನೆಯ ಮತ್ತು ೧೯ನೆಯ ಶತಮಾನದಲ್ಲಿ ಪ್ರಯತ್ನ ನಡೆಸಿದರು. ಪಶ್ಚಿಮ ಏಷ್ಯಾದಲ್ಲಿರುವ ವ್ಯಾಪಾರ ಕೇಂದ್ರಗಳನ್ನು ಸಹ ವಶಪಡಿಸಿಕೊಳ್ಳಲು ಹವಣಿಸತೊಡಗಿದರು. ಈ ರೀತಿಯ ಸಂಬಂಧದಿಂದ ಆಟೋಮನ್ ಸಮಾಜದಲ್ಲಿ ೧೮ನೆಯ ಶತಮಾನದ ಅಂತ್ಯದಲ್ಲಿ ಮತ್ತು ೧೯ನೆಯ ಶತಮಾನದಲ್ಲಿ ಆಧುನಿಕ ವಿಜ್ಞಾನ, ತಂತ್ರಜ್ಞಾನಗಳು, ಆವಿಷ್ಕಾರಗಳು, ಹೊಸ ಶಿಕ್ಷಣ ನೀತಿ ಮತ್ತು ಜ್ಞಾನೋದಯದ ಚಿಂತನೆಗಳು, ಸಂಸ್ಥೆಗಳು ಪ್ರಚಾರಗೊಂಡವು. ಶಿಕ್ಷಣವು ಧಾರ್ಮಿಕ ಶಕ್ತಿಗಳ ಕಪಿಮುಷ್ಟಿಯಿಂದ ಸ್ವತಂತ್ರವಾಗಲು ಕರೆ ಕೊಟ್ಟಿತು. ಆಧುನಿಕ ಬಂಡವಾಳಶಾಹಿಯ ಹೊಸ ಆರ್ಥಿಕ ವ್ಯವಸ್ಥೆಯು ವಾಣಿಜ್ಯ ಮತ್ತು ಉತ್ಪಾದನಾ ಮಾಧ್ಯಮಕ್ಕೆ ಚಾಲನೆ ನೀಡಿತು. ಕೇಂದ್ರೀಕೃತ ರಾಷ್ಟ್ರೀಯ ರಾಜಂಗವು ರಾಜಕೀಯ ಐಕ್ಯತೆಗೆ ಎಡೆ ಮಾಡಿಕೊಟ್ಟಿತು. ಮಧ್ಯಯುಗದ ಸೈನಿಕ ವ್ಯವಸ್ಥೆಯನ್ನು ಸಂಪೂರ್ಣ ನಿರ್ಮೂಲನಗೊಳಿಸಿ ಸ್ವತಂತ್ರ ದೇಶೀಯ ಸೈನ್ಯದ ರಚನೆಗೆ ಸ್ಫೂರ್ತಿ ನೀಡಿತು. ಈ ರೀತಿಯ ಚಿಂತನಾತ್ಮಕ ಸಂಸ್ಥೆಗಳ ಪ್ರಭಾವದಿಂದ ಆಟೋಮನ್ ಸಮಾಜ ಭೌದ್ದಿಕ, ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ರಂಗಗಳನ್ನೇ ಅಭಿವೃದ್ದಿ ಹೊಂದಬಹುದೆಂದು ವಿದ್ಯಾವಂತ ವರ್ಗಗಳ ೧೮ನೆಯ ಶತಮಾನದ ಅಂತ್ಯದಲ್ಲಿ ಕನಸು ಕಂಡಿತು.

ಆದರೆ ಆಟೋಮನ್ ಸಮಾಜದಲ್ಲಿ ಸುಧಾರಣೆಗೆ ವಿರೋಧಿಯಾದ ಧಾರ್ಮಿಕ ಉಲೇಮಗಳಿದ್ದು, ಇಡೀ ವ್ಯವಸ್ಥೆಯು ಅವರ ಅಧಿಪತ್ಯಕ್ಕೆ ಒಳಪಟ್ಟು ಸರಕಾರದ ಎಲ್ಲ ರಂಗದಲ್ಲಿಯೂ ಪ್ರತಿಷ್ಠೆ ಪಡೆದು ಶಿಕ್ಷಣ ವ್ಯವಸ್ಥೆಯನ್ನು ತಾವೇ ನೋಡಿಕೊಂಡುದರಿಂದ ಬೌದ್ದಿಕ ಬೆಳವಣಿಗೆಗೆ ಅವಕಾಶ ತುಂಬಾ ವಿರಳವಿತ್ತು. ಆಟೋಮನ್ ಸೈನಿಕ ಸಂಘಟನೆ ಇಡೀ ಯುರೋಪಿನಲ್ಲಿ ಒಂದು ಕಾಲದಲ್ಲಿ ಪ್ರಸಿದ್ದಿ ಪಡೆದರೂ ಕೂಡ ೧೮ನೆಯ ಶತಮಾನದ ಆರಂಭದಿಂದ ಪ್ರಬಲತೆಯನ್ನು ಉಳಿಸಿಕೊಳ್ಳಲು ಅಸಾಧ್ಯವಾಯಿತು. ಹಳೆ ಹಣಕಾಸು ಮತ್ತು ವಾಣಿಜ್ಯ ಪದ್ಧತಿ ಮತ್ತು ಸಂಸ್ಥೆಗಳನ್ನು ಪಾಲಿಸುತ್ತಿರುವುದರಿಂದ ಆರ್ಥಿಕ ಸ್ಥಿತಿ ಹದಗೆಟ್ಟಿತು. ಬಂಡವಾಳ ಹೂಡುವ ಬಗ್ಗೆಯಾಗಲಿ, ವೃದ್ದಿಸುವ ಬಗ್ಗೆಯಾಗಲಿ ಯಾವುದೇ ಹೊಸ ಪದ್ಧತಿಯನ್ನು ಅಳವಡಿಸುವ ಪ್ರಯತ್ನ ನಡೆಯಲಿಲ್ಲ. ಏಕೆಂದರೆ ಸಂಪತ್ತು ಪಟ್ಟಭದ್ರ ಹಿತಾಸಕ್ತಿಗಳ ಹಿಡಿತದಲ್ಲಿರುವುದರಿಂದ ಈ ನಿಟ್ಟಿನಲ್ಲಿ ಯಾವುದೇ ಕೆಲಸ ಮಾಡಲಿಲ್ಲ.

ಇದಕ್ಕೆ ಹೋಲಿಸಿದರೆ, ಯುರೋಪಿನಲ್ಲಿ ಸರಕಾರವೇ ಪರಿಪೂರ್ಣವಾದ ವಾಣಿಜ್ಯ ನೀತಿಯನ್ನು ಪಾಲಿಸಿರುವುದರಿಂದ ಮಧ್ಯಮವರ್ಗದವರು ದೇಶದ ಆರ್ಥಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಬಂಡವಾಳಶಾಹಿ ವ್ಯವಸ್ಥೆ ಬೆಳವಣಿಗೆಗೆ ಕಾರಣರಾದರು. ಆದರೆ ಆಟೋಮನ್ ಬುರ್ಷ್ವ್ಯಾಗಳು ರಾಷ್ಟ್ರೀಯ ಮತ್ತು ಧಾರ್ಮಿಕ ವರ್ಗಗಳಾಗಿ ವಿಭಜಿಸ ಲ್ಪಟ್ಟಿತ್ತು. ಟರ್ಕಿ ಮಧ್ಯಮ ವರ್ಗದವರು, ಅಧಿಕಾರಿಗಳು ಮತ್ತು ಸರಕಾರದ ವೃತ್ತಿಪರ ವರ್ಗದವರಿಂದ ಕೂಡಿತ್ತು. ಮುಸ್ಲಿಂಯೇತರ ಮಧ್ಯಮ ವರ್ಗದಲ್ಲಿ ಗ್ರೀಕರು, ಆರ್ಮೆನಿಯದವರು, ಯಹೂದಿಗಳಿದ್ದು ವರ್ತಕರಾಗಿದ್ದು ಗುಡಿ ಕೈಗಾರಿಕೆ ಮತ್ತು ವಾಣಿಜ್ಯರಂಗದಲ್ಲಿ ನುರಿತವರಾಗಿದ್ದರು. ಆಟೋಮನ್ ದೇವಾಧಿಪತ್ಯದ ಅಡಿಯಲ್ಲಿ ಕೆಳವರ್ಗದ ಕ್ರಿಶ್ಚಿಯನ್ ಮತ್ತು ಯಹೂದಿಗಳಿಂದ ಕೂಡಿದ ಮುಸ್ಲಿಮೇತರ ಬಂಡವಾಳಶಾಹಿ ವರ್ಗಕ್ಕೆ ದೇಶದ ಆರ್ಥಿಕ ಚಟುವಟಿಕೆಯಲ್ಲಿ(ಯುರೋಪಿನ ಮಧ್ಯಮ ವರ್ಗದವರ ಹಾಗೆ) ಮುಖ್ಯ ಪಾತ್ರ ವಹಿಸಲು ಆಗಲಿಲ್ಲ. ಏಕೆಂದರೆ ಆಟೋಮನ್ ಸಾಮ್ರಾಜ್ಯದ ಆಡಳಿತ ವ್ಯವಸ್ಥೆಯು ಮೇಲು ವರ್ಗದ ಅಧಿಕಾರಿಗಳಿಂದ, ರಾಜವಂಶದ ಸದಸ್ಯರಿಂದ ಧಾರ್ಮಿಕ ಪಾದ್ರಿಗಳಿಂದ ಮತ್ತು ಸೈನಿಕರಿಂದ ಕೆಲಸ ಮಾಡುತ್ತಿತ್ತು. ಬೌದ್ದಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಯುರೋಪ್‌ನೊಂದಿಗೆ ಸ್ಪರ್ಧಿಸಲು ೧೮ನೆಯ ಶತಮಾನದ ಪ್ರಾರಂಭದಲ್ಲಿ ಇದಕ್ಕೆ ಅಸಾಧ್ಯವಾಯಿತು. ಅಲ್ಲದೆ, ಸಾಮ್ರಾಜ್ಯವು ಛಿದ್ರ ಛಿದ್ರ ಆಗುವ ಸಾಧ್ಯತೆ ಇದ್ದು ಸೈನಿಕ ದುರ್ಬಲತೆ ಈ ವಿಚಾರದಲ್ಲಿ ಗಂಭೀರವಾಗಿ ಸಾಮ್ರಾಜ್ಯದ ಮೇಲೆ ಪರಿಣಾಮ ಬೀರಿತು.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯುರೋಪಿನ ಪ್ರಬಲತೆ, ಕ್ರಾಂತಿಕಾರಿ ಬೆಳವಣಿಗೆ ಮತ್ತು ಬೌದ್ದಿಕ ಚಳವಳಿಯ ಪ್ರಭಾವದಿಂದ ಆಟೋಮನ್ ಸಮಾಜದಲ್ಲಿ ೧೮ನೆಯ ಶತಮಾನದ ಮಧ್ಯಭಾಗದಲ್ಲಿ ಹುಟ್ಟಿಕೊಂಡ ಸಣ್ಣ ಅಧಿಕಾರಿ ವರ್ಗವು ಈ ಬಿಕ್ಕಟ್ಟನ್ನು ಪರಿಹರಿಸುವ ಸಲುವಾಗಿ ಪ್ರಯತ್ನ ನಡೆಸಿದರು. ಇವರ ಐರೋಪ್ಯ ರಾಷ್ಟ್ರಗಳ ಬೆದರಿಕೆ, ಆಂತರಿಕ ಸಮಸ್ಯೆಗಳ ಪರಿಹಾರ, ಅನಭಿವೃದ್ದಿ ಮತ್ತು ಸಾಮ್ರಾಜ್ಯದ ದುರ್ಬಲತೆಯನ್ನು ಯುರೋಪ್ ಮಾದರಿಯ ಆಧುನಿಕರಣದಿಂದಲೇ ಸಾಧ್ಯ ಎಂಬ ನಿಲುವಿಗೆ ಬಂದರು. ಕ್ರಾಂತಿಕಾರಿ ಚಿಂತನೆಗಳು, ಸಿದ್ಧಾಂತಗಳು ಮತ್ತು ಸಂಸ್ಥೆಗಳನ್ನು ಅಭಿವೃದ್ದಿ ಹೊಂದಿದ ಐರೋಪ್ಯ ರಾಷ್ಟ್ರಗಳಿಂದ ಆಮದು ಮಾಡಿ ಕ್ರಾಂತಿಕಾರಿ ಬದಲಾವಣೆಗೆ ಸಿದ್ಧತೆಯನ್ನು ೧೮ನೆಯ ಶತಮಾನದ ಎರಡನೇ ಭಾಗದಲ್ಲಿ ಮತ್ತು ೧೯ನೆಯ ಶತಮಾನದುದ್ದಕ್ಕೂ ಕೈಗೊಳ್ಳಲಾಯಿತು.

೧೯ನೆಯ ಶತಮಾನದ ಐರೋಪ್ಯ ರಾಷ್ಟ್ರಗಳ ಪ್ರವೇಶ ಮತ್ತು ಸಾಮ್ರಾಜ್ಯದ ವಿಭಜ

೧೮ನೆಯ ಶತಮಾನದ ಅಂತ್ಯದಲ್ಲಿ ಸಾಮ್ರಾಜ್ಯಶಾಹಿ ಇಸ್ಲಾಮಿ ಸಮಾಜದ ಬದಲಾವಣೆಯಲ್ಲಿ ಆಟೋಮನ್ ಸಾಮ್ರಾಜ್ಯದ ಪತನವು ಒಂದು ಗೊಂದಲಮಯವಾದ ಸಂಗತಿ ಆಗಿದೆ. ಆಟೋಮನ್ ಆಧಿಪತ್ಯದ ಅಧೀನಕ್ಕೆ ಹಲವು ಪ್ರಾಂತ್ಯಗಳು ಸೇರಿತ್ತು. ಇವು ಬಾಲ್ಕನ್, ಟರ್ಕಿ, ಅರಬ್ ಜಗತ್ತು, ಈಜಿಪ್ಟ್, ಕೆಂಪು ಸಮುದ್ರ, ಇನ್ನ್‌ರ್ ಏಷ್ಯಾ ಮುಂತಾದುವುಗಳ ಚಕ್ರವರ್ತಿಯಾಗಿತ್ತು. ಅಧಿಕಾರ ವಿಕೇಂದ್ರಿಕರಣವನ್ನು ೧೮ನೆಯ ಶತಮಾನದ ಆರಂಭದಿಂದ ಪ್ರೋ ಸಾಮ್ರಾಜ್ಯ ಈ ಶತಮಾನದ ಕೊನೆಯಲ್ಲಿ ರಾಜಕೀಯ ಮತ್ತು ವಾಣಿಜ್ಯ ರಂಗದಲ್ಲಿ ಇವರಿಗೆ ಸ್ಪರ್ಧೆಗೆ ಅವಕಾಶ ನೀಡಿತು. ಜೊತೆಗೆ ಅಟೋಮನ್ ಸಾಮ್ರಾಜ್ಯ ತನ್ನ ರಾಜಠೀವಿ ಮತ್ತು ಇಸ್ಲಾಮಿ ಸಂಸ್ಥೆಯ ರಚನೆಯನ್ನು ಉಳಿಸಿಕೊಂಡು ೧೯ನೆಯ ಶತಮಾನದಲ್ಲಿ ಅಟೋಮನ್‌ರು ಕೇಂದ್ರಾಡಳಿತದ ರಚನೆಯನ್ನು ಪುನರ್ ಸ್ಥಾಪಿಸಿ ಪ್ರಾಂತ್ಯಗಳ ಮೇಲೆ ಅಧಿಕಾರವನ್ನು ಹೇರಿ ಪರಿಣಾಮಕಾರಿ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸುಧಾರಣೆಗಳ ಮೂಲಕ ಐರೋಪ್ಯ ರಾಷ್ಟ್ರಗಳೊಂದಿಗೆ ಸ್ಪರ್ಧಿಸುವ ಪ್ರಯತ್ನವನ್ನು ನಡೆಸಿತು. ಈ ಹೊತ್ತಿಗೆ ಸಾಮ್ರಾಜ್ಯ ಬಾಹ್ಯ ಶಕ್ತಿಗಳ ಪ್ರಭಾವದಿಂದ ಹೋಳಾಗುವ ಗಂಭೀರ ಸ್ಥಿತಿ ಉಂಟಾಯಿತು. ಐರೋಪ್ಯ ರಾಷ್ಟ್ರಗಳು ಪ್ರಾರಂಭದ ದಿನಗಳಲ್ಲಿ ತಮ್ಮ ಸೈನಿಕ, ಆರ್ಥಿಕ ಮತ್ತು ತಾಂತ್ರಿಕ ಶಕ್ತಿಯನ್ನು ವೃದ್ದಿಸಿ ೧೯ನೇ ಶತಮಾನದ ಸಮಯದಲ್ಲಿ ಆಟೋಮನ್ ಸಾಮ್ರಾಜ್ಯಕ್ಕಿಂತಲೂ ಪ್ರಬಲವಾಗಿದ್ದವು. ಇದರಿಂದಾಗಿ ಆಟೋಮನ್ ಸಾಮ್ರಾಜ್ಯದ ಉಳಿವಿಗೆ ಯುರೋಪಿಯನ್ನರ ಸಮತೋಲನ ಶಕ್ತಿಯನ್ನು ಅವಲಂಬಿಸಿತು. ೧೮೭೮ರವರೆಗೆ ಬ್ರಿಟಿಷ್ ಮತ್ತು ರಷ್ಯನ್ನರು ಪರಸ್ಪರ ಸ್ಪರ್ಧಿಸಿದ್ದುದರಿಂದ ಆಟೋಮನ್ ಶ್ರೇಷ್ಠಾಧಿಕಾರವನ್ನು ರಕ್ಷಿಸಿದರು. ೧೮೭೮ ಮತ್ತು ೧೯೧೪ರ ನಡುವೆ ರಾಷ್ಟ್ರೀಯವಾದದ ಪ್ರಭಾವದಿಂದ ಹಲವು ಪ್ರಾಂತ್ಯಗಳು ಆಟೋಮನ್ ಸ್ವಾಧೀನದಿಂದ ಸ್ವತಂತ್ರವಾದವು.

ಸಾಮ್ರಾಜ್ಯದ ವಿಭಜನೆ : ೧೮ನೆಯ ಶತಮಾನದ ಕೊನೆಯಲ್ಲಿ ಆಟೋಮನ್ ಸಾಮ್ರಾಜ್ಯವು ಬೆಳೆಯುತ್ತಿರುವ ಐರೋಪ್ಯ ದೇಶಗಳ ಸೈನಿಕ ಬಲ ಮತ್ತು ಬಂಡವಾಳಶಾಹಿಯ ಪ್ರವೇಶವನ್ನು ತಡೆಹಿಡಿಯಲು ವಿಫಲವಾಯಿತು. ರಷ್ಯಾವು ಕ್ರಿಮಿಯಾ ಮತ್ತು ಕಪ್ಪು ಸಮುದ್ರವನ್ನು ಸ್ವಾಧೀನ ಮಾಡಿಕೊಂಡಿತು. ಬ್ರಿಟಿಷರು ಮೆಡಿಟರೇನಿಯನ್ ಜಗತ್ತಿನಲ್ಲಿ ಸೈನಿಕ ಮತ್ತು ವಾಣಿಜ್ಯ ಶಕ್ತಿಯ ಒತ್ತಡವನ್ನು ಹೇರಿದರು. ರಷ್ಯಾವು ಬಾಲ್ಕನ್ ಪ್ರದೇಶದಲ್ಲಿರುವ ಪ್ರದೇಶವನ್ನು ಆಟೋಮನ್‌ರ ಸ್ವಾಧೀನದಿಂದ ಕಬಳಿಸಿ ಮೆಡಿಟರೇನಿಯನ್ ಪ್ರದೇಶಕ್ಕೆ ಪ್ರವೇಶಿಸಬೇಕೆಂದು ಹೊಂಚು ಹಾಕುತ್ತಿತ್ತು. ಈ ರೀತಿಯ ಪ್ರವೇಶವನ್ನು ಬ್ರಿಟಿಷ್ ಸರಕಾರ ವಿರೋಧಿಸಿ, ಆಟೋಮನ್ ಏಕಸ್ವಾಮಿತ್ವವನ್ನು ಬೆಂಬಲಿಸಿ ರಷ್ಯನ್ನರ ವಿರುದ್ಧ ತಮ್ಮ ಸ್ವಾರ್ಥ ವಾಣಿಜ್ಯ ಮತ್ತು ಸಾಮ್ರಾಜ್ಯಶಾಹಿ ಆಸಕ್ತಿಗಳನ್ನು ಮೆಡಿಟರೇನಿಯನ್, ಮಧ್ಯಪೂರ್ವ ಮತ್ತು ಭಾರತದಲ್ಲಿ ಈಡೇರಿಸಬೇಕೆಂಬ ಆಸೆಯಿಂದ ಇತ್ತು. ಹೀಗೆ ಆಟೋಮನ್ ಸಾಮ್ರಾಜ್ಯವನ್ನು ಸಂಕಷ್ಟದಿಂದ ಐರೋಪ್ಯ ರಾಷ್ಟ್ರಗಳ ಸಮತೋಲನ ಶಕ್ತಿಯು ರಕ್ಷಿಸಿತು. ಇದು ‘‘ಸಿಕ್ ಮೆನ್ ಆಫ್ ಯುರೋಪ್’’ನ(ಆಟೋಮನ್ ಸಾಮ್ರಾಜ್ಯ) ಪತನಕ್ಕೆ ಸಂಘರ್ಷದ ವೇದಿಕೆಯ ನಿರ್ಮಾಣಕ್ಕೆ ಕಾರಣವಾಯಿತು.

ಐರೋಪ್ಯ ರಾಷ್ಟ್ರಗಳ ಸಮತೋಲನ ಶಕ್ತಿಯ ಮೊದಲ ಪರೀಕ್ಷೆ ೧೮೩೧ರಲ್ಲಿ ಈಜಿಪ್ಟ್‌ನ ರಾಜ್ಯಪಾಲ ಮಹಮದ್ ಆಲಿ(೧೮೦೫-೪೮) ಸಿರಿಯಾವನ್ನು ದಾಳಿ ಮಾಡಿದಾಗ ಬೆಳಕಿಗೆ ಬಂತು. ಇದಕ್ಕೆ ಉತ್ತರವಾಗಿ ಆಟೋಮನ್‌ರು ಜುಲೈ ೧೮೩೩ರಲ್ಲಿ ಅನ್‌ಕಿಯರ್ ಸ್ಕೆಲೆಸ್ಸಿ ಒಪ್ಪಂದ ಮಾಡಿಕೊಂಡು ರಷ್ಯಾದ ವಿರುದ್ಧವಾಗಿ ಡಾರ್ಡ್ ನೆಲ್ಸ್ ಮತ್ತು ಬೋಸ್ಪ್‌ರಸ್‌ಗೆ ಯುದ್ಧನೌಕೆಗಳ ಪ್ರವೇಶವನ್ನು ನಿಷೇಧಿಸಿದರು. ಮೆಡಿಟರೇನಿಯನ್ ಪ್ರಾಂತ್ಯಕ್ಕೆ ರಷ್ಯಾದ ಪ್ರವೇಶ ಭೀತಿಯಿಂದ ಬ್ರಿಟಿಷರು ಚಾಣಾಕ್ಷತನದಿಂದ ಆಟೋಮನ್ ರಿಗೆ ರಷ್ಯಾದ ಬಂಡವಾಳಶಾಹಿ ಧೋರಣೆಯ ವಿರುದ್ಧ ಮತ್ತು ಸಿರಿಯಾದಲ್ಲಿ ಆಟೋಮನ್ ಆಡಳಿತವನ್ನು ಪುನಃ ಸ್ಥಾಪಿಸಲು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ ಆಟೋಮನ್ ಸಾಮ್ರಾಜ್ಯದ ಉಳಿವಿಗೆ ಪ್ರಯತ್ನಿಸಿದರು. ಈ ಹಿನ್ನೆಲೆಯಲ್ಲಿ ೧೮೪೦ರಲ್ಲಿ ರಷ್ಯಾ, ಬ್ರಿಟನ್ ಮತ್ತು ಆಸ್ಟ್ರಿಯಾ ಜೊತೆಗೂಡಿ ಮಹಮದ್ ಆಲಿಯ ಆಡಳಿತವನ್ನು ಸಿರಿಯಾದಿಂದ ಹಿಂತೆಗೆಸುವಲ್ಲಿ ಸಫಲರಾಗಿ ಒಂದು ಕರಾರನ್ನು ಹೊರಡಿಸಿದರು. ಈ ಕರಾರಿನ ಪ್ರಕಾರ: ೧. ಯುದ್ಧನೌಕೆಗಳ ಪ್ರವೇಶವನ್ನು ಸ್ಪ್ರೈಟ್ಸ್‌ನ ಮೂಲಕ ಬೊಸ್ಪರಸ್ ಮತ್ತು ಡಾರ್ಡಾನೆಲ್‌ಗೆ ಶಾಂತಿಯ ಸಮಯದಲ್ಲಿ ನಿಷೇಧಿಸಲಾಯಿತು. ೨. ರಷ್ಯಾ ಮತ್ತು ಬ್ರಿಟನ್ ತಮ್ಮ ಇಚ್ಛಾ ಪ್ರಾಂತ್ಯಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಆಟೋಮನ್ ಸರಕಾರ ಅನುಮತಿ ನೀಡಿತು. ೩. ಮಹಮ್ಮದ್ ಆಲಿಯ ವಂಶ ಪರಂಪರಾಗತ ಆಧಿಪತ್ಯವನ್ನು ಈಜಿಪ್ಟ್‌ನಲ್ಲಿ ಸ್ಥಾಪಿಸಲು ಒಪ್ಪಿಗೆ ಸೂಚಿಸಿತು. ಇಂತಹ ಆಂತರಿಕ ಮತ್ತು ವಿದೇಶಿ ವಿದ್ಯಮಾನಗಳಿಂದ ಐರೋಪ್ಯ ರಾಷ್ಟ್ರಗಳ ಸಮತೋಲನ ಶಕ್ತಿಯ ಪ್ರಭಾವ ವೃದ್ದಿಯಾಗಿ ಆಟೋಮನ್ ಚಟುವಟಿಕೆಗಳನ್ನು ನಿರ್ಧರಿಸುವ ಹೊಣೆಯನ್ನು ಹೊತ್ತಿತ್ತು. ಇದರಿಂದಾಗಿ ಸಾಮ್ರಾಜ್ಯವು ತನ್ನನ್ನು ತಾನೇ ಐರೋಪ್ಯ ದೇಶಗಳಿಗೆ ಒತ್ತೆ ಇರಿಸಿಕೊಂಡು ಬಾಹ್ಯಶಕ್ತಿಗಳಿಂದ ರಕ್ಷಿಸಿಕೊಳ್ಳುವ ಹೀನಾಯ ಪರಿಸ್ಥಿತಿಯನ್ನು ಎದುರಿಸಬೇಕಾಯಿತು.

೧೮೫೪-೫೬ರಲ್ಲಿ ಕ್ರೀಮಿಯನ್ ಯುದ್ಧದಲ್ಲಿ ಸಾಮ್ರಾಜ್ಯದ ಸ್ಥಿರತ್ವ ಮತ್ತು ಯುರೋಪಿನ ಸಮತೋಲನ ಬಲವನ್ನು ಮತ್ತೊಮ್ಮೆ ಪರೀಕ್ಷಿಸಲಾಯಿತು. ಆಟೋಮನ್ ಸ್ವಾಧೀನದಲ್ಲಿರುವ ಜೆರುಸಲೇಮ್‌ನ ಮೇಲೆ ಅಧಿಕಾರ ವಿಸ್ತಾರ ಮತ್ತು ಸಾಮ್ರಾಜ್ಯದ ಎಲ್ಲ ಕ್ರೈಸ್ತ ಸಮುದಾಯದವರ ರಕ್ಷಣೆಯ ಹೊಣೆಯನ್ನು ಹೊರಲು ಹೊರಟ ರಷ್ಯಾದ ಸಾಮ್ರಾಜ್ಯಶಾಹಿ ಧೋರಣೆ ಬ್ರಿಟಿಷ್ ಮತ್ತು ಫ್ರೆಂಚರನ್ನು ಕೆರಳಿಸಿದ ಪರಿಣಾಮವಾಗಿ ಅವು ಆಟೋಮನ್ ಸಾಮ್ರಾಜ್ಯದ ಪರವಾಗಿ ರಷ್ಯಾದ ಮೇಲೆ ಯುದ್ಧ ಸಾರಿದವು (ಕ್ರೀಮಿಯನ್ ಯುದ್ಧ). ೧೮೫೬ರ ಪ್ಯಾರಿಸ್ ಒಪ್ಪಂದದೊಂದಿಗೆ ರಷ್ಯಾ ತನ್ನ ನೌಕಾ ಸೇನೆಯನ್ನು ಕಪ್ಪು ಸಮುದ್ರ ಪ್ರದೇಶದಿಂದ ಹಿಂತೆಗೆದುಕೊಂಡು ಪ್ರಾಂತೀಯ ಐಕ್ಯತೆಯನ್ನು ಪ್ರೋ ಒಪ್ಪಿಗೆ ಕೊಟ್ಟಿತು.

೧೮೭೬ರಲ್ಲಿ ಉದ್ಭವಿಸಿದ ಬೊಸ್‌ನಿಯಾ ಮತ್ತು ಹರ್‌ಜಗೋವಿನಲ್ಲಿ ಆಟೋಮನ್ ಶ್ರೇಷ್ಠಾಧಿಕಾರದ ವಿರುದ್ಧ ಕ್ರೈಸ್ತರು ನಡೆಸಿದ ದಂಗೆಯು ಪುನಃ ಬಿಕ್ಕಟ್ಟನ್ನು ಸೃಷ್ಟಿಸಿತು. ಆಟೋಮನ್‌ರ ವಿರುದ್ದ ಬಾಲ್ಕನ್ ಕ್ರೈಸ್ತರ ರಾಷ್ಟ್ರೀಯ ಚಳುವಳಿಯು ಸರ್‌ಬೀಯಾದ ದಂಗೆಯಿಂದ ಪ್ರಾರಂಭವಾಯಿತು(೧೮೦೪-೧೩). ೧೮೨೧ ಮತ್ತು ೧೮೨೯ರ ನಡುವೆ ಗ್ರೀಸ್ ಸ್ವಾತಂತ್ರ್ಯ ಪಡೆಯಿತು. ಸರ್‌ಬೀಯಾ, ರುಮೇನಿಯಾ ಮತ್ತು ಬಲ್ಗೇರಿಯಾದ ಕ್ರೈಸ್ತ ಸಮುದಾಯದವರು ಸ್ವಾಯತ್ತತೆಯನ್ನು ಕೇಳಿದರು. ಈ ಬಾಲ್ಕನ್ ರಾಷ್ಟ್ರೀಯವಾದದ ಉಗಮದೊಂದಿಗೆ ರಷ್ಯಾದ ಪ್ರವೇಶ ೧೮೭೬ರಲ್ಲಿ ಆಯಿತು. ೧೮೭೭ರ ಸಾನ್‌ಸ್ಪೆಪಾನೋ ಒಪ್ಪಂದದಿಂದ ಆಟೋಮನ್‌ರು ಒತ್ತಾಯಪೂರ್ವಕವಾಗಿ ಬಲ್ಗೇರಿಯಾ, ಸರ್ಬಿಯಾ ರುಮೇನಿಯಾ ಮತ್ತು ಮೊಂಟೆನ್‌ಗ್ರೋ ಪ್ರಾಂತ್ಯಗಳ ಸ್ವಾತಂತ್ರ್ಯವನ್ನು ಒಪ್ಪಿಕೊಂಡಿತು. ರಷ್ಯಾದ ಈ ಪರೋಕ್ಷವಾದ ಲಾಭವು ಉಳಿದ ಐರೋಪ್ಯ ರಾಷ್ಟ್ರಗಳನ್ನು ಅಸಮಧಾನಗೊಳಿಸಿದ್ದು ೧೮೭೮ರಲ್ಲಿ. ಎಲ್ಲ ರಾಷ್ಟ್ರಗಳ ಸಮ್ಮೇಳನವನ್ನು ಬರ್ಲಿನ್‌ನಲ್ಲಿ ಕರೆಯಲಾಯಿತು. ಈ ಸಮ್ಮೇಳನದಲ್ಲಿ ಒಂದು ಹೊಸ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರ ಪ್ರಕಾರ ಬೆಸ್ಸಾರ್‌ಬೀಯಾವನ್ನು ಆಟೋಮನ್ ಸರಕಾರಕ್ಕೆ ಬಿಟ್ಟುಕೊಡಲು ರಷ್ಯಾಕ್ಕೆ ಮನವಿ ಮಾಡಲಾಯಿತು. ಇದಕ್ಕೆ ಪರಿಹಾರವಾಗಿ ಆಸ್ಟ್ರಿಯಾ ತಾತ್ಕಾಲಿಕವಾಗಿ ಬೋಸ್‌ನಿಯಾವನ್ನು ಸ್ವಾದೀನ ಮಾಡಿಕೊಂಡಿತು. ಬ್ರಿಟನ್ ಸಿಪ್ರೆಸ್ಸನ್ನು ವಾಣಿಜ್ಯ ಚಟುವಟಿಕೆಗೆ ವಶಪಡಿಸಿಕೊಂಡಿತು. ಬಲ್ಗೇರಿಯಾದ ಗಾತ್ರವನ್ನು ಸಣ್ಣದಾಗಿಸಿ ಅಲ್ಲಿ ಆಟೋಮನ್ ಶ್ರೇಷ್ಠಾಧಿಕಾರವನ್ನು ಪುನಃ ಸ್ಥಾಪಿಸಲಾಯಿತು. ೧೮೮೨ರಲ್ಲಿ ಬ್ರಿಟಿಷರು ತನ್ನ ಸ್ಪರ್ಧೆಯನ್ನು ಸುಯೇಜ್ ಪ್ರದೇಶದಲ್ಲಿ ರಕ್ಷಿಸಲು ಮತ್ತು ಈಜಿಪ್ಟ್ ಬ್ರಿಟಿಷರಿಂದ ಪಡೆದ ಸಾಲ ಮತ್ತು ಬಾಂಡ್‌ದಾರರ ಹಿತರಕ್ಷಣೆಗೋಸ್ಕರ ಈಜಿಪ್ಟ್‌ನ್ನು ತನ್ನ ಸ್ವಾಧೀನದೊಳಗೆ ತಂದುಕೊಟ್ಟಿತು. ನಂತರ ಬ್ರಿಟಿಷರು ಆಟೋಮನ್ ಸಾಮ್ರಾಜ್ಯದ ವಿಭಜನೆಯ ಬದಲು ಪ್ರಾಂತೀಯ ಐಕ್ಯತೆಗೆ ಮಹತ್ವ ಕೊಟ್ಟರು. ಐರೋಪ್ಯ ರಾಷ್ಟ್ರಗಳ ನಡುವೆ ಸಮತೋಲನವನ್ನು ಕಾಪಾಡಿಕೊಂಡು ಬರಲು ತನ್ನ ಪಶ್ಚಿಮ ಏಷ್ಯಾದ ರಕ್ಷಣಾ ಧೋರಣೆಯನ್ನು ಹಠಾತ್ ಬದಲಿಸಿತು. ಜೊತೆಗೆ ಪಶ್ಚಿಮ ಏಷ್ಯಾದ ಪ್ರಶ್ನೆಯ ವಿಭಾವಣೆಯು ಆಟೋಮನ್ ಆಡಳಿತದ ಪತನಕ್ಕೆ ಮತ್ತಷ್ಟು ಕಾರಣವಾಯಿತು.

೧೮೭೮-೧೯೦೮ರ ನಡುವೆ ಐರೋಪ್ಯ ರಾಷ್ಟ್ರಗಳ ನಡುವಿನ ಕಚ್ಚಾಟದಿಂದ ಸಾಮ್ರಾಜ್ಯದ ವಿಭಜನೆಯನ್ನು ಸ್ವಲ್ಪ ಮಟ್ಟಿಗೆ ಮುಂದೂಡಲಾಯಿತು. ಸಿಪ್ರೆಸ್ ಮತ್ತು ಈಜಿಪ್ಟ್‌ನಲ್ಲಿ ಬ್ರಿಟನ್ ಅಸ್ಥಿರತೆಯನ್ನು ಸಾಧಿಸಿತು. ಜರ್ಮನಿಯು ಸಾಮ್ರಾಜ್ಯದ ಪ್ರಾಂತ್ಯಗಳಲ್ಲಿ ರೈಲು ದಾರಿ ಅಭಿವೃದ್ದಿಯು ಕಾರ್ಯವನ್ನೆತ್ತಿಕೊಂಡು ತನ್ನ ವಸಾಹತುಶಾಹಿ ಪ್ರಬಲತೆಯನ್ನು ಸ್ಥಾಪಿಸಿತು. ಹಾಗೆಯೇ ತನ್ನ ದೇಶದ ಸಲಹೆಗಾರರನ್ನು ಹಾಗೂ ತಾಂತ್ರಿಕ ವಿಜ್ಞಾನಿಗಳನ್ನು ಉಪಯೋಗಿಸಿಕೊಂಡು ಆಟೋಮನ್ ಸೈನಿಕ ಶಕ್ತಿಯ ವೃದ್ದಿಯ ಬಗ್ಗೆ ತರಬೇತಿ ನೀಡಲಾಯಿತು. ಆದರೆ ಬ್ರಿಟಿಷ್, ಫ್ರೆಂಚ್ ಮತ್ತು ರಷ್ಯಾದ ವಸಾಹತುಶಾಹಿ ವ್ಯಾಜ್ಯವು ಬಾಲ್ಕನ್ ಪ್ರದೇಶದಲ್ಲಿ ಕೇಂದ್ರೀಕೃತವಾಗಿತ್ತು. ಜೊತೆಗೆ ಆಸ್ಟ್ರಿಯಾವು ಸರ್ ಬೀಯಾದಲ್ಲಿ ತನ್ನ ರಾಯಭಾರಿ ವ್ಯವಹಾರವನ್ನು ಪ್ರಾರಂಭ ಮಾಡಿ ರುಮೇನಿಯ ಮತ್ತು ಗ್ರೀಸ್ ಜೊತೆ ಸಂಬಂಧವನ್ನು ಬೆಳೆಸಿತು. ಇಷ್ಟಾದರೂ ರಷ್ಯಾವು ಬಲ್ಗೇರಿಯಾದ ರಕ್ಷಣಗಾರನಾಗಿ ಉಳಿಯಿತು. ಆದರೆ ಸರ್‌ಬೀಯಾ, ಗ್ರೀಸ್ ಮತ್ತು ಬಲ್ಗೇರಿಯಾಗಳು ಮೆಸಿಡೋನಿಯಾದ ಸ್ವಾಧೀನಕ್ಕೆ ಪರಸ್ಪರ ಜಗಳವಾಡಲು ಪ್ರಾರಂಭಿಸಿದವು.

ಐರೋಪ್ಯರಾಷ್ಟ್ರಗಳ ವಸಾಹತುಶಾಹಿ ಆಟೋಮನ್ ಸಾಮ್ರಾಜ್ಯವನ್ನು ಹಲವು ಸ್ವತಂತ್ರ ರಾಷ್ಟ್ರಗಳನ್ನಾಗಿ ವಿಭಜಿಸಿ ಪಶ್ಚಿಮ ಏಷ್ಯಾದ ಸಮಾಜ ಹಾಗು ಸ್ವತಂತ್ರ ರಾಷ್ಟ್ರಗಳ ಸಂಘಟನೆ ಮತ್ತು ಸೈದ್ಧಾಂತಿಕ ಗುರುತಿಸುವಿಕೆಗೆ ಹೊಸ ಸ್ವರೂಪ ನೀಡಿತು. ಹೀಗಾಗಿ ೧೯ನೆಯ ಶತಮಾನದ ಅಂತ್ಯದಲ್ಲಿ ಆರಂಭವಾದ ಸುಧಾರಣೆಗಳಿಗೆ ಆಟೋಮನ್ ಸಾಮ್ರಾಜ್ಯದ ಐತಿಹಾಸಿಕ ಸಂಸ್ಥೆ ಮತ್ತು ಸಾಂಸ್ಕೃತಿಕ ರೂಪವನ್ನು ಮುಂದುವರಿಸುವುದು ಮುಖ್ಯ ಗುರಿಯಾಗಿತ್ತು. ವಸಾಹತುಶಾಹಿ ರಾಷ್ಟ್ರಗಳು ತಮ್ಮ ಹಿಡಿತವನ್ನು ಸಾಧಿಸುವ ಸಮಯದಲ್ಲಿ ಅವರ ಪ್ರಭಾವವು ಸಾಮ್ರಾಜ್ಯದ ಆಂತರಿಕ ಸಂಸ್ಥೆಗಳ ಉತ್ಕ್ರಾಂತಿಯ ಮೇಲೆ ಬಹಳವಾಗಿ ಬೀರಿತ್ತು. ಉಳಿದ ಮುಸ್ಲಿಂ ಸಾಮ್ರಾಜ್ಯಕ್ಕೆ ಹೋಲಿಸಿದರೆ ಆಟೋಮನ್‌ರು ತಮ್ಮ ಸ್ವಾವಲಂಬನೆಯನ್ನೇ ಉಳಿಸಿಕೊಂಡು ಆಧುನೀಕರಣ ನೀತಿ ಮತ್ತು ಸುಧಾರಣೆಗಳನ್ನು ಅನುಷ್ಠಾನಕ್ಕೆ ತಂದರು.

೧೯ನೆಯ ಶತಮಾನದ ಸುಧಾರಣೆಗಳು ಮತ್ತು ಚಳುವಳಿಗಳು

ಸುಮಾರು ೧೭ನೆಯ ಶತಮಾನದಿಂದಲೇ ಆಟೋಮನ್ ಸುಧಾರಕರಲ್ಲಿ ರಾಜಕೀಯ ಐಕ್ಯತೆ ಮತ್ತು ಸೈನಿಕ ತರಬೇತಿಯ ಬಗ್ಗೆ ವಾದ ವಿವಾದಗಳು ನಡೆಯುತ್ತಿದ್ದವು. ಇದರಲ್ಲಿ ಎರಡು ಗುಂಪುಗಳಿದ್ದವು. ೧. ಪುನರ್ ಸ್ಥಾಪಕರು; ಇವರು ಬದಲಾವಣೆಗೆ ವಿರೋಧವಾಗಿದ್ದು ಪ್ರಾಚೀನ ಇಸ್ಲಾಂ ಯುಗವನ್ನು ಪುನಃ ಸ್ಥಾಪನೆಗೆ ಒತ್ತಾಯಿಸಿದರು. ಇವರ ಪ್ರಕಾರ ಸಮಾಜದಲ್ಲಿ ಆಧುನಿಕತೆಯನ್ನು ಅಳವಡಿಸಿ ಬದಲಾವಣೆ ತಂದರೆ ಅದು ಐರೋಪ್ಯ ರಾಷ್ಟ್ರ ತಾಂತ್ರಿಕ, ಸೈನಿಕ, ರಾಜಕೀಯ ಮತ್ತು ಆರ್ಥಿಕ ಪ್ರಬಲತೆಗೆ ಕುಮ್ಮಕ್ಕು ನೀಡುತ್ತದೆ ಎಂಬ ಹೆದರಿಕೆ ಇತ್ತು. ೨. ಆಧುನೀಕರಣವನ್ನು ಪ್ರೋ ಗುಂಪು; ಏಕಪ್ರಕಾರವಾಗಿ ಸೈನಿಕ ತರಬೇತಿ, ಸಂಸ್ಥೆಗಳ ಸಂಘಟನೆ, ಆಡಳಿತ ವ್ಯವಸ್ಥೆ, ನಾಗರಿಕ, ಆರ್ಥಿಕ ಮತ್ತು ಶೈಕ್ಷಣಿಕ ರಂಗಗಳಲ್ಲಿ ಐರೋಪ್ಯ ರಾಷ್ಟ್ರಗಳ ಮಾದರಿ ಪದ್ಧತಿಯನ್ನು ಅನುಸರಿಸಿ ಹೊಸ ಸಮಾಜವನ್ನು ಕಟ್ಟುವ ಅಭಿಲಾಷೆಯನ್ನು ಇವರು ಪ್ರಕಟಿಸಿದ್ದರು. ೧೮ ಮತ್ತು ೧೯ನೆಯ ಶತಮಾನದುದ್ದಕ್ಕೂ ಸುಧಾರಣೆಯ ವಿಚಾರದಲ್ಲಿ ಈ ಎರಡೂ ಗುಂಪುಗಳು ಪರಸ್ಪರ ಸ್ಪರ್ಧಿಸುತ್ತಿದ್ದವು. ಆದರೆ ಬಹುಪಾಲು ಮಂದಿ ಯುರೋಪಿನ ಮಾದರಿಯಲ್ಲಿ ಆಧುನೀಕರಣಕ್ಕೆ ಹೆಚ್ಚು ಮಹತ್ವ ನೀಡಿದರು.

ಈಗಾಗಲೇ ೧೮ನೆಯ ಶತಮಾನದ ಎರಡನೇ ಭಾಗದಿಂದ ಐರೋಪ್ಯ ರಾಷ್ಟ್ರಗಳ ಸೈನಿಕ ಸಲಹೆಗಾರರು ಆಟೋಮನ್ ಸಮಾಜದಲ್ಲಿ ಕೆಲಸ ಮಾಡುತ್ತಿದ್ದು ಸೈನ್ಯಾಧಿಕಾರಿಗಳಿಗೆ ತಾಂತ್ರಿಕ ಶಿಕ್ಷಣ ತರಬೇತಿಯನ್ನು ಕೊಡುತ್ತಿದ್ದರು. ಜೊತೆಗೆ ಪ್ರಾಮುಖ್ಯವಾದ ತಾಂತ್ರಿಕ, ಸೈನಿಕ ಮತ್ತು ಭೌಗೋಳಿಕ ವಿಷಯಗಳಿಗೆ ಸಂಬಂಧಪಟ್ಟ ಯುರೋಪಿನ ಪುಸ್ತಕಗಳನ್ನು ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸಿ ಆಟೋಮನ್ ಸಮಾಜದ ಜನರಿಗೆ ಸರಬರಾಜು ಮಾಡಿದರು. ಇದಕ್ಕೆ ಬೇಕಾದ ಆಧುನಿಕ ತಂತ್ರಜ್ಞಾನವನ್ನೊಳಗೊಂಡ ಪ್ರಿಂಟಿಂಗ್ ಪ್ರೆಸ್ ಗಳನ್ನು ತೆರೆಯಲಾಯಿತು. ಮೂರನೇ ಸಲೀಂ ೧೭೮೯-೧೮೦೭ರ ನಡುವೆ ‘‘ಹೊಸ ಸಂಘಟನೆ’’ ಎಂಬ ಹೆಸರಿನಲ್ಲಿ ಮೊದಲ ಬಾರಿಗೆ ಮಹತ್ವಪೂರ್ಣ ಸುಧಾರಣಾ ನೀತಿ ಯನ್ನು ಅನುಷ್ಠಾನಗೊಳಿಸಿದನು. ಈ ಸುಧಾರಣೆಯ ಅಡಿಯಲ್ಲಿ ಆಧುನಿಕ ಸೈನ್ಯಾಂಗದ ರಚನೆ, ತೆರಿಗೆ ಹೆಚ್ಚಳ ಮತ್ತು ತಾಂತ್ರಿಕ ಸಿಬ್ಬಂದಿ ತರಬೇತಿಗಾಗಿ ತಾಂತ್ರಿಕ ವಿಶ್ಯವಿದ್ಯಾಲಯ ಗಳನ್ನು ತೆರೆಯಲು ಆದ್ಯತೆ ನೀಡಿದರು. ಆದರೆ ಸಂಪ್ರದಾಯಸ್ಥ ಪಾದ್ರಿಗಳ ವಿರೋಧದಿಂದ ಸಲೀಂನ ಹೊಸ ಸುಧಾರಣಾ ಚಳುವಳಿಯನ್ನು ಮೂಲೆ ಪಾಲು ಮಾಡಿ, ೧೮೦೭ರಲ್ಲಿ ಅವನನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು.

ನಂತರದ ದಶಕದಲ್ಲಿ ಕೌಕೇಸಸ್‌ನಲ್ಲಿ ರಷ್ಯಾದ ವೃದ್ದಿ, ಈಜಿಪ್ಟ್ ನಲ್ಲಿ ಮಹಮ್ಮದ್ ಆಲಿಯ ಪರಂಪರಾಗತ ಅಧಿಕಾರ ಸ್ಥಾಪನೆ ಮತ್ತು ಗ್ರೀಕರ ಸ್ವಾತಂತ್ರ್ಯ ಚಳುವಳಿಯಿಂದಾಗಿ ಸರಕಾರವು ಶೀಘ್ರದಲ್ಲಿ ಸುಧಾರಣೆಯ ಅನಿವಾರ್ಯ ತೆಯನ್ನು ಕಂಡಿತು. ೧೮೦೭-೩೯ರ ನಡುವೆ ಎರಡನೆ ಮಹಮ್ಮದ್‌ನ ಕಾಲದಲ್ಲಿ ಸುಧಾರಣಾ ಚಳುವಳಿಯನ್ನೇ ಪುನಃ ಚೇತರಿಸಲಾಯಿತು. ಸಲಿಂ ಪ್ರಾರಂಭ ಮಾಡಿದ ಸುಧಾರಣೆಯ ಆಧಾರದ ಮೇಲೆಯೇ ಮಹಮ್ಮದ್‌ನ ಸೈನಿಕ, ಆಡಳಿತ ಮತ್ತು ಶಿಕ್ಷಣ ರಂಗದ ಸುಧಾರಣೆಗಳು ಕಾರ್ಯರೂಪಕ್ಕೆ ತರುವ ಹೊತ್ತಿಗೆ ಹೊಸ ತಂತ್ರಜ್ಞಾನಿಗಳು ಸಮಾಜವನ್ನು ಪ್ರವೇಶಿಸಿ ಕ್ರಾಂತಿಕಾರಿ ಸ್ವರೂಪದಲ್ಲಿ ಸೈನಿಕ ಬಲದ ವೃದ್ದಿ, ಆಡಳಿತ ಸಂಸ್ಥೆಗಳ ಚೇತರಿಕೆ, ಪ್ರಾಂತೀಯ ಅಭಿವೃದ್ದಿ, ಆದಾಯದ ಹೆಚ್ಚಳ ಮತ್ತು ಪಾಶ್ಚಾತ್ಯ ಮಾದರಿಯಲ್ಲಿ ಭದ್ರವಾಗಿ ಮತ್ತು ತೀವ್ರ ನಮೂನೆಯ ಏಕಚಕ್ರಾಧಿಪತ್ಯದ ಕೇಂದ್ರ ಸರಕಾರದ ರಚನೆ ಮಾಡಿದರು. ಆಟೋಮನ್ ದೊರೆಗಳ ನಿರಂಕುಶಪ್ರಭುತ್ವವನ್ನು ಪುನಃ ಸ್ಥಾಪಿಸುವ ಗುರಿಯನ್ನಿಟ್ಟುಕೊಂಡು ಸುಧಾರಣೆಯು ಹೊಸ ವಿದ್ಯಾವಂತ ಚಿಂತಕರ ಬೆಂಬಲವನ್ನು ಪಡೆದಿತ್ತು. ಈ ಇಲೈಟ್ ಗುಂಪು ತಾಂತ್ರಿಕವಾಗಿ ನಿಪುಣವಾಗಿದ್ದು ಅಧಿಕಾರವನ್ನು ಪ್ರತಿಷ್ಠಾಪಿಸಲು ದೃಢಭಕ್ತಿಯುಳ್ಳ ವರಾಗಿದ್ದರು. ಈ ಪರಿಸರದಿಂದ ಸಂಪ್ರದಾಯವಾದಿ ಶಕ್ತಿಗಳ ವಿರೋಧವು ಕುಗ್ಗಿತು. ೧೮೨೬ರಲ್ಲಿ ಜನಿಸಾರಿಸ್ ಸೈನ್ಯಾಂಗವು ಊಳಿಗಮಾನ್ಯ ಗೇಣಿ ಪದ್ಧತಿಯನ್ನು ಭಾಗಶಃ ದುರ್ಬಲಗೊಳಿಸಿದರು. ಇವರು ಧಾರ್ಮಿಕ ಕೇಂದ್ರಗಳ ಮಾನ್ಯವನ್ನು ಹಿಂತೆಗೆದುಕೊಂಡು ಪಾದ್ರಿಗಳ ಸ್ಥಾನಮಾನಗಳನ್ನು ಪ್ರಶ್ನಿಸಲಾಯಿತು. ನ್ಯಾಯಾಲಯಗಳು, ಶಿಕ್ಷಣ ಸಂಸ್ಥೆಗಳು ಸರಕಾರದ ಹೊಸ ಮಂತ್ರಿಮಂಡಲದ ವ್ಯಾಪ್ತಿಗೆ ಬಂದವು. ಜನಿಸಾರಿಸ್(ಸುಲ್ತಾನನ ಖಾಸಗಿ ಸೈನ್ಯ)ನೊಂದಿಗೆ ಶಾಮೀಲಾಗಿರುವ ಬೆಕ್ತಾಶಿ ಧಾರ್ಮಿಕ ವರ್ಗದ ಅಧಿಕಾರವನ್ನು ವಜ ಮಾಡಿದರು. ಆಧುನೀಕರಣ ಧೋರಣೆಗೆ ಎದುರಾಗಿರುವ ವಿರೋಧವನ್ನು ನಾಶ ಮಾಡಿದ್ದರಿಂದ ಮೇಲುವರ್ಗದ ಪಾದ್ರಿಗಳು ಹೀನಾಯ ಸೋಲು ಉಣ್ಣಬೇಕಾಯಿತು.

೧೮೩೯ ಮತ್ತು ೧೮೭೬ರಲ್ಲಿ ನಡುವೆ ಆಧುನೀಕರಣದ ಸ್ವರೂಪವು ಎರಡನೇ ಮಹತ್ವಪೂರ್ಣ ಘಟ್ಟವನ್ನು ತಲುಪಿತು. ಈ ಸುಧಾರಣಾ ಹಂತವನ್ನು (೧೮೩೯-೧೮೭೬) ಪುನರ್ಸಂಘಟನೆ ಅಥವಾ ‘‘ಟಾಂನ್ಸಿಮತ್ ಸುಧಾರಣೆ’’ ಎಂದು ಕರೆಯಲಾಗಿದೆ. ಈ ಕಾಲದಲ್ಲಿ ಸೈನಿಕ ಮತ್ತು ಆಡಳಿತ ರಂಗದ ಸುಧಾರಣೆಯಿಂದ ದೇಶದ ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳ ಸುಧಾರಿಕೆಗೆ ಹೆಚ್ಚು ಮಹತ್ವ ಕೊಡಲಾಯಿತು. ಹೊಸ ಕಾರ್ಖಾನೆಗಳನ್ನು ಸ್ಥಾಪಿಸಿ ಬಟ್ಟೆ, ಪೇಪರ್ ಮತ್ತು ಮದ್ದುಗುಂಡುಗಳನ್ನು ತಯಾರಿಸಲಾಯಿತು. ಕಲ್ಲಿದ್ದಲು, ಕಬ್ಬಿಣ, ಸೀಸ ಮತ್ತು ತಾಮ್ರದ ಗಣಿಗಳನ್ನು ಪ್ರೋ ಸರಕಾರವೇ ಪಾದ್ರಿಗಳ ಮತ್ತು ಧಾರ್ಮಿಕ ಕೇಂದ್ರಗಳ ಅಧೀನದಲ್ಲಿದ್ದ ಫಲವತ್ತಾದ ಭೂಮಿಯನ್ನು ಕಬಳಿಸಿ ಕೃಷಿರಂಗದ ವಿಕಾಸಕ್ಕೆ ಹೊಸ ಭೂಸುಧಾರಣಾ ನೀತಿಯನ್ನು ಜರಿಗೊಳಿಸಿತು. ಟಪ್ಪಾಲು (೧೮೩೪), ದೂರವಾಣಿ (೧೮೫೫) ವ್ಯವಸ್ಥೆ, ಹಡಗು ನಿರ್ಮಾಣ ಮತ್ತು ರೈಲು ದಾರಿಯ ಅಭಿವೃದ್ದಿಯನ್ನು ಕೈಗೆತ್ತಿಕೊಂಡು ತಾಂತ್ರಿಕ ರಂಗದ ಆಧುನೀಕರಣಕ್ಕೆ ಹೆಚ್ಚು ಗಮನ ಹರಿಸಿತು. ಸರಕಾರದ ಏಕಸ್ವಾಮಿತ್ವವನ್ನು ಸಡಿಲುಗೊಳಿಸಿ ಅಂತಾರಾಷ್ಟ್ರೀಯ ವ್ಯಾಪಾರವನ್ನು ವೃದ್ದಿಸಲು ಕಡಿಮೆ ಸುಂಕದ ವ್ಯವಸ್ಥೆ ಮಾಡಿ ಪ್ರೋ ನೀಡಲಾಯಿತು. ವಾಣಿಜ್ಯ ಮತ್ತು ಹಣಕಾಸು ಸಂಸ್ಥೆಗಳ ಆಧುನೀಕರಣದಿಂದ ವಿದೇಶೀ ವ್ಯಾಪಾರಿಗಳನ್ನು ಮತ್ತು ಬಂಡವಾಳಶಾಹಿಗಳನ್ನು ಒಲಿಸಿ ಆಟೋಮನ್ ಆರ್ಥಿಕ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಲು ಪ್ರಯತ್ನಿಸ ಲಾಯಿತು. ಏಕೆಂದರೆ ದೇಶದ ಅಭಿವೃದ್ದಿ ಆರಂಭದಲ್ಲಿ ಉತ್ಪಾದನಾ ರಂಗವನ್ನೇ ಅವಲಂಬಿಸಿತ್ತು.

ನ್ಯಾಯಾಂಗ ಸುಧಾರಣೆಗೂ ಗಮನ ಹರಿಸಲಾಯಿತು. ಹೊಸ ಆಡಳಿತ ಮತ್ತು ಆರ್ಥಿಕ ರಂಗಗಳ ಬೇಡಿಕೆಗಳನ್ನು ಹಾಗೂ ಆಂತರಿಕ ಮತ್ತು ಬಾಹ್ಯ ಶಕ್ತಿಗಳಿಂದ ಉದ್ಭವಿಸುವ ರಾಜಕೀಯ ಒತ್ತಡವನ್ನು ತಡೆಹಿಡಿಯಲು ಪಾಶ್ಚಾತ್ಯ ಮಾದರಿಯ ಕಾನೂನು ಕಾಯ್ದೆಗಳನ್ನು ಅನುಷ್ಠಾನಗೊಳಿಸಲಾಯಿತು. ಭೂಮಾಲೀಕರು ಮತ್ತು ವ್ಯಾಪಾರಿಗಳ ಚಟುವಟಿಕೆಗಳನ್ನು ನಿಯಂತ್ರಿಸಲು ಹೊಸ ಮಾದರಿಯ ಶಿಕ್ಷಾ ಕ್ರಮ ಮತ್ತು ವಾಣಿಜ್ಯ ಕಾನೂನು ಕಾಯ್ದೆಯನ್ನು ಜರಿಗೊಳಿಸಲಾಯಿತು. ೧೮೫೮ರಲ್ಲಿ ಖಾಸಗಿ ಭೂಮಾಲೀಕತ್ವಕ್ಕೆ ಸಂಬಂಧಪಟ್ಟ ವ್ಯಾಜ್ಯವನ್ನು ಕಾನೂನಿನ ಮೂಲಕ ತೀರ್ಮಾನಿಸಲು ನಿರ್ಧರಿಸಲಾಯಿತು ಮತ್ತು ೧೮೭೦ರಲ್ಲಿ ಸಿವಿಲ್ ಕೋಡನ್ನು ಜರಿಗೊಳಿಸಲಾಯಿತು.

ಆಟೋಮನ್ ಶೈಕ್ಷಣಿಕ ಸುಧಾರಣೆಯು ವೃತ್ತಿಪರ ಶಿಕ್ಷಣ ಸಂಸ್ಥೆಗಳಿಂದ ಆರಂಭವಾಗಿ ನಂತರ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಕ್ಕೆ ಪ್ರೋ ಕೊಟ್ಟಿತು. ಉನ್ನತ ತಾಂತ್ರಿಕ ಶಿಕ್ಷಣ ರಂಗದಲ್ಲಿ ವಿದ್ಯಾರ್ಥಿಗಳ ತರಬೇತಿ ಪ್ರಾರಂಭವಾಯಿತು. ೧೯ನೆಯ ಶತಮಾನದ ಮಧ್ಯಭಾಗದವರೆಗೆ ಪ್ರಾಥಮಿಕ ಮತ್ತು ಹೈಸ್ಕೂಲು ಶಿಕ್ಷಣವು ಧಾರ್ಮಿಕ ವಿಚಾರಗಳಿಗೆ ಮಹತ್ವ ಕೊಡುತ್ತಿತ್ತು. ಆದರೆ ೧೮೪೭ರಲ್ಲಿ ಮಂತ್ರಿಮಂಡಲವು ಪರ್ಯಾಯವಾಗಿ ಹೊಸ ಪಾಶ್ಚಾತ್ಯ ಪದ್ಧತಿಯನ್ನು ಅಳವಡಿಸಿತು. ೧೮೫೬ರ ಕ್ರೀಮಿಯನ್ ಯುದ್ಧದ ನಂತರ ಗಣಿತಶಾಸ್ತ್ರ, ಖಗೋಳ ಶಾಸ್ತ್ರ ಮತ್ತು ಆಟೋಮನ್ ಇತಿಹಾಸವನ್ನು ಪಠ್ಯಕ್ರಮವಾಗಿ ಪ್ರಾಥಮಿಕ ಹಂತದಲ್ಲಿ ಬೋಧಿಸಲಾಯಿತು. ೧೮೭೦ರಲ್ಲಿ ಮೊದಲ ಬಾರಿಗೆ ವೃತ್ತಿಪರ, ಮನುಷ್ಯ ತತ್ವಶಾಸ್ತ್ರ ಮತ್ತು ಧಾರ್ಮಿಕ ಅಧ್ಯಯನಗಳಿಗೆ ವಿಶ್ವವಿದ್ಯಾನಿಲಯಗಳನ್ನು ತೆರೆಯಲಾಯಿತು. ಆದಾಗ್ಯೂ ಈ ಎಲ್ಲ ಪ್ರಯತ್ನಗಳು ಬಿಳಿ ಹಾಳೆಯ ಮೇಲೆಯೇ ಇದ್ದು ಕಾರ್ಯರೂಪಕ್ಕೆ ಬರಲಿಲ್ಲ.

ಮುಸ್ಲಿಮೇತರ ವರ್ಗಗಳ ಆಡಳಿತದ ಸುಧಾರಣೆಯನ್ನು ಜರಿಗೊಳಿಸಲಾಗಿತ್ತು. ಕ್ರೈಸ್ತ, ಯಹೂದಿ ಮತ್ತು ಅರಬ್ ಸಮುದಾಯದವರು ಇದರಿಂದ ಸ್ವತಂತ್ರ ಧಾರ್ಮಿಕ ಗುಂಪುಗಳಾಗಿ ಪರಿವರ್ತಿಸಿ ತಮ್ಮದೇ ಆದ ಕಾನೂನು ಕ್ರಮಗಳನ್ನು ಪಾಲಿಸಲು ಆಟೋಮನ್ ಸರಕಾರ ಅವಕಾಶ ನೀಡಿತು. ರಾಷ್ಟ್ರೀಯ ದಂಗೆಗಳು ಕ್ರೈಸ್ತ ಸಮುದಾಯದ ಐಕ್ಯತೆಯನ್ನು ಸೃಷ್ಟಿಸಿ ಆಟೋಮನ್ ಆಡಳಿತದ ಸುಧಾರಣೆಯನ್ನು ಸ್ವಾಗತಿಸಿದವು.  ಇದಕ್ಕುತ್ತರವಾಗಿ ಆಟೋಮನ್ ಅಧಿಕಾರಗಳು ಎರಡು ಪ್ರಮುಖ ತತ್ವಗಳನ್ನು ಜರಿ ಗೊಳಿಸಿತು. ಇದರ ಪ್ರಕಾರ ಸಾಮ್ರಾಜ್ಯದೊಳಗಿರುವ ಎಲ್ಲ ವರ್ಗದವರನ್ನು ಮತದವರನ್ನು ಮತ್ತು ಜನಾಂಗದವರನ್ನು ಕಾನೂನುಬದ್ಧವಾಗಿ ಸಮಾನರೆಂದು ಪ್ರಕಟಿಸಿತು. ಮುಸ್ಲಿಮೇತರರಿಗೆ ಸಮಾನ ಹಕ್ಕನ್ನು ಕಲ್ಪಿಸಿ, ಸರಕಾರದ ಸೈನ್ಯಾಂಗಕ್ಕೆ ಸೇರುವ ಅವಕಾಶ ವನ್ನು ಲಭಿಸಲಾಯಿತು. ಕ್ರೈಸ್ತರನ್ನು ಸರಕಾರದ ಕಾರ್ಯಾಂಗಕ್ಕೆ ಸೇರ್ಪಡೆ ಮಾಡಲಾಯಿತು. ತಮ್ಮದೇ ಚುನಾಯಿತ ಪ್ರಾಂತೀಯ ಸಭೆಯನ್ನು ನಡೆಸುವ ಹಕ್ಕನ್ನು ಜರಿಗೊಳಿಸಲಾಯಿತು. ಇದರಿಂದ ಮುಸ್ಲಿಮೇತರ ಸಮುದಾಯವು ರಾಜಕೀಯ ನೆಲೆಯಲ್ಲಿ ಐಕ್ಯತೆಯಾಗಲು ಈ ಬದಲಾವಣೆಗಳು ಸಹಕಾರವಾಯಿತು.

ಆರ್ಥಿಕ ರಂಗದಲ್ಲೂ ಟಾಂನ್ಸಿಮತ್ ಸುಧಾರಣೆಯಿಂದ ಬಹಳಷ್ಟು ಬದಲಾವಣೆಗಳು ಕಂಡುಬಂದುವು. ಶಿಕ್ಷಣ ಮತ್ತು ನ್ಯಾಯಾಂಗ ಸಂಸ್ಥೆಯ ಸ್ವಾಯತ್ತತೆಯನ್ನು ಹಿಂತೆಗೆದು ಕೊಂಡು ಮುಸ್ಲಿಂ ಪಾದ್ರಿಗಳ ಪ್ರಾಬಲ್ಯವನ್ನು ಕುಗ್ಗಿಸಿತು. ದೇಶದ ಹಿತದೃಷ್ಟಿಯಿಂದ ಬೇರೆ ಬೇರೆ ಧಾರ್ಮಿಕ ವರ್ಗಗಳ ಐಕ್ಯತೆಯನ್ನು ಸಾಧಿಸಿ ಮುಸ್ಲಿಂ ಸಮಾಜದಲ್ಲಿ ಮೂಲಭೂತವಾಗಿ ಆಧುನಿಕ ಶೈಲಿಯ ಬದಲಾವಣೆಯನ್ನು ಜತ್ಯತೀತ ತತ್ವಗಳ ಆಧಾರದ ಮೇಲೆ ರಚಿಸಲಾಯಿತು.

ಈ ನಿಟ್ಟಿನಲ್ಲಿ ಸರಕಾರದ ಸುಧಾರಣೆಯು ಕ್ರಾಂತಿಕಾರಿಯಾಗಿತ್ತು. ಏಕೆಂದರೆ ಸಮಾಜದ ಪ್ರತಿಯೊಂದು ಅಂಗವು ಬದಲಾವಣೆಯ ಪ್ರಬಲತೆಯನ್ನು ಕಂಡುಕೊಂಡಿತ್ತು. ಇದರಿಂದ ಸಾಮಾಜಿಕ ರಂಗದಲ್ಲಿ ಹೊಸ ವಿದ್ಯಾವಂತ ಸಮುದಾಯವು ಸೃಷ್ಟಿಯಾಗಿ ಬದಲಾವಣೆಯ ಪದ್ಧತಿಯನ್ನು ಮುಂದುವರಿಸಿತು. ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಿ ಹಳೆಯ ವ್ಯವಸ್ಥೆಯನ್ನು ಕೈಬಿಡಲಾಯಿತು. ಜನಿಸಾರಿಸ್‌ಗಳ ನಿರ್ಮೂಲನ, ಪಾದ್ರಿಗಳ ಅಧಿಕಾರದಲ್ಲಿ ಸಡಿಲಿಕೆ ಮತ್ತು ಕ್ರಾಂತಿಕಾರಿ ಸಂಸ್ಥೆಗಳ ಸಂಯೋಜನೆಯು ಸಂಪ್ರದಾಯಯಸ್ಥರ ಕೈಯಿಂದ ಅಧಿಕಾರವನ್ನು ಆಧುನಿಕ ವಿದ್ಯಾವಂತರ ಕೈಗೆ ಹಸ್ತಾಂತರಿಸಲಾಯಿತು. ಈ ಹೊಸ ವರ್ಗವು ೧೮೬೦ರ ನಂತರ ಸಂಘಟನೆಯ ರೂಪ ತಾಳಿ ‘ಯಂಗ್ ಟರ್ಕ್’ರೆಂಬ ಹೆಸರಿನಡಿಯಲ್ಲಿ ಚಿಂತನಾತ್ಮಕ ಸುಧಾರಣೆಗಳನ್ನು ಮುಂದುವರಿಸಿತು.

ಪರಂಪರೆ ಮತ್ತು ಸುಧಾರಣೆಯ ನಡುವೆ ಸಂಯೋಜನೆಯನ್ನು ಸ್ಥಾಪಿಸಲು ‘ಯಂಗ್ ಆಟೋಮನ್ಸ್’ ಗುಂಪಿನ ನಮಿಕ್ ಕೆಮಾಲ್(೧೮೪೦-೮೮) ಇಬ್ರಾಹಿಂ ಶಿನಾಸಿ(೧೮೨೬-೧೮೭೧) ಮತ್ತು ಜಿಯಾ ಪಾಷಾ(೧೮೨೫-೮೦) ಅವರು ಆಟೋಮನ್ ಶ್ರೇಷ್ಠಾಧಿಪತ್ಯದ ಮುಂದುವರಿಕೆಯನ್ನು ಯುರೋಪ್ ಮಾದರಿಯಲ್ಲಿಯೇ ಮುಂದುವರಿಸುವ ದೃಢ ನಿರ್ಧಾರವನ್ನು ಮಾಡಿದ್ದರು. ಮೊದಲಿಗೆ ಬ್ರಿಟನ್‌ನ ರಾಜಶಾಸನಾನುಸಾರ ಆಧಿಪತ್ಯದ ಯಶಸ್ಸು ಈ ಗುಂಪನ್ನು ಆಕರ್ಷಿಸಿತು. ಅವರ ಪ್ರಕಾರ ಸಾಮ್ರಾಜ್ಯದ ಮಲ್ಯಾಧರಿತ ಆಡಳಿತವು ಪ್ರಜೆಗಳಿಗೆ ಒದಗಿಸಿರುವ ಸ್ವಾತಂತ್ರ್ಯ, ಹಕ್ಕುಗಳು, ಸಾಮಾಜಿಕ ನ್ಯಾಯ, ಸಮಾನತೆ, ಮುಸ್ಲಿಂ ಮತ್ತು ಕ್ರೈಸ್ತರ ನಡುವಿನ ಸಮನ್ವಯಗಳ ಮೇಲೆ ಆಧಾರವಾಗಿರುತ್ತದೆ ಎಂದು ನಂಬಿದ್ದು, ಸಾಮ್ರಾಜ್ಯದ ಅಳಿವು ಮತ್ತು ಉಳಿವು ಜನ ಸಾಮಾನ್ಯರ ಸಹಕಾರದ ಮೇಲೆ ನಿಂತಿರುತ್ತದೆ ಎಂದು ಪ್ರಕಟಿಸಿದರು. ರಾಜಶಾಸನಾನುಸಾರವಾದ ಅಧಿಕಾರವು ಸಹಜವಾದ ರಾಜಕೀಯ ಮತ್ತು ನೈತಿಕ ಮಲ್ಯಗಳ ಚಹರೆಗಳಾಗಿದ್ದು, ಅವು ಇಸ್ಲಾಮಿನ ಸಂಸ್ಥೆಗಳು ಮತ್ತು ಯುರೋಪಿನ ಸಂಸ್ಕೃತಿಯ ದ್ಯೋತಕವಾಗಿರುತ್ತದೆ. ಆದ್ದರಿಂದ ಯಂಗ್ ಆಟೋಮನ್ ಚಿಂತಕರು ಆಧುನಿಕತೆಯ ಗಾಳಿ ತಟ್ಟಿರುವ ಮುಸ್ಲಿಮರಾಗಿದ್ದರು. ಅವರು ಇಸ್ಲಾಂ ಸಂಸ್ಥೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಆಧುನಿಕ ಸಮಾಜದ ಸಂಘಟನೆ ಮತ್ತು ಶಾಸನಾನುಸಾರವಾದ ಸರಕಾರದ ರಚನೆಗೆ ಉಪಯುಕ್ತವಾಗುವಂತೆ ಹೊಂದಾಣಿಕೆ ಮಾಡಿಕೊಳ್ಳುವ ವ್ಯವಸ್ಥೆಯನ್ನು ಸೃಷ್ಟಿಸಿದರು. ಇಸ್ಲಾಂನ ಪಿತ್ರಾರ್ಜಿತ ದೃಷ್ಟಿಕೋನವು ವೈಜ್ಞಾನಿಕ ಮತ್ತು ತಾಂತ್ರಿಕ ಗ್ರಹಿಕೆಯನ್ನು ಪ್ರೋ ನ್ಯಾಯಯುತ ಮಲ್ಯವು ನಂಬಿಕೆಗಳಿಗಿಂತಲೂ ಮಿಗಿಲಾಗಿದ್ದು ಅದು ಮಾನವನ ಸಾಮಾಜಿಕ ಅಭಿವೃದ್ದಿಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂಬ ತತ್ವದ ನೆಲೆಯಲ್ಲಿ ‘ಯಂಗ್ ಆಟೋಮನ್’ರು ಬೆಳೆದರು. ಇಸ್ಲಾಂನ ರಕ್ಷಣೆಗೆ ದೃಢವಾಗಿದ್ದ ಯಂಗ್ ಟರ್ಕ್‌ರು ಆಟೋಮನ್ ವಿದ್ಯಾವಂತ ವರ್ಗ ಮತ್ತು ಸಾಮಾನ್ಯ ಜನರ ನಡುವೆ ಬಾಂಧವ್ಯ ನಿರ್ಮಾಣ ಮಾಡಲು ಟರ್ಕ್ ಭಾಷೆಯನ್ನು ಉಪಯೋಗಿಸಿದರು. ಜೊತೆಗೆ ಆಧುನೀಕರಣದ ತಾಂತ್ರಿಕ, ರಾಜಕೀಯ ಮತ್ತು ನೈತಿಕ ಮಲ್ಯಗಳ ಆಧಾರದಲ್ಲಿ ಆಟೋಮನ್ ಐಡೆಂಟಿಟಿ ಯನ್ನು ಸ್ಥಾಪಿಸಿದರು. ‘ಟಾಂನ್ಸಿಮತ್’ ಸುಧಾರಣೆಯನ್ನು ಟೀಕಿಸಿದ ಇವರು ಆಟೋಮನ್ ಸಮಾಜದ ಎಲ್ಲ ರಂಗಗಳ ಮತ್ತು ವರ್ಗಗಳ ಆಧುನೀಕರಣಕ್ಕೆ ಹೆಚ್ಚು ಒತ್ತಡ ತಂದರು.

೧೮೭೬ರಲ್ಲಿ ರಷ್ಯಾದ ಕೈಯಿಂದ ಅನುಭವಿಸಿದ ಆಟೋಮನ್‌ರ ಸೋಲಿನ ಪ್ರಯೋಜನವನ್ನು ಉಪಯೋಗಿಸಿಕೊಂಡು ‘ಯಂಗ್ ಆಟೋಮನ್’ ರಾಜ ಶಾಸನಾನು ಸಾರಣಕಾರರು ನಿರಂಕುಶ ಪ್ರಭುತ್ವ ಅಧಿಕಾರದ ವಿರುದ್ಧ ದಂಗೆ ಎದ್ದು ಎರಡನೇ ಅಬ್ದುಲ್ ಹಮಿದ್‌ನನ್ನು(೧೮೭೬-೧೯೦೮) ಅಧಿಕಾರಕ್ಕೆ ತಂದು ಒತ್ತಡಪೂರ್ವಕವಾಗಿ ಲಿಖಿತ ಸಂವಿಧಾನವನ್ನು ಅನುಷ್ಠಾನಕ್ಕೆ ತಂದರು. ಆ ಮೂಲಕ ಸುಲ್ತಾನನ ಅಧಿಕಾರದ ಮಿತಿಯನ್ನು ಕಡಿತ ಮಾಡಿ ಚುನಾಯಿತ ಸರಕಾರದ ರಚನೆಗೆ ಆದೇಶ ನೀಡಿ ಅಧಿಕಾರದ ವಿಕೇಂದ್ರೀಕರಣಕ್ಕೆ ಗಮನ ಹರಿಸಿದರು. ಪಾರ್ಲಿಮೆಂಟ್‌ನಲ್ಲಿ ಎಲ್ಲ ವರ್ಗಗಳ, ಧರ್ಮದವರ ಸದಸ್ಯರಿಗೆ ಸಮಾನ ಅವಕಾಶ ಕೊಡಲಾಯಿತು.

ಆದರೆ ಎರಡನೇ ಅಬ್ದುಲ್ ಹಮೀದ್ ಸುಮಾರು ೫೦೦ ವರ್ಷಗಳಿಂದಲೂ ರೂಢಿಯಲ್ಲಿದ್ದ ನಿರಂಕುಶ ಪ್ರಭುತ್ವದ ಶ್ರೇಷ್ಠಾಧಿಕಾರವನ್ನು ಸುಲಭದಲ್ಲಿ ಶರಣಾಗಿಸಲು ಸಿದ್ಧನಿರಲಿಲ್ಲ. ಈ ನಿಟ್ಟಿನಲ್ಲಿ ತನ್ನನ್ನು ಅಧಿಕಾರಕ್ಕೆ ಚುನಾಯಿಸಲು ಸಹಾಯ ಮಾಡಿದ ರಾಜಶಾಸನಾನುಸಾರರ ವಿರುದ್ಧವೇ ನಿಂತು ಪಾರ್ಲಿಮೆಂಟನ್ನು ವಜ ಮಾಡಿ ೧೮೭೬ರ ಸಂವಿಧಾನವನ್ನು ಅಮಾನತಿನಲ್ಲಿಟ್ಟು(೧೮೭೮ರಲ್ಲಿ) ಧಾರ್ಮಿಕ ವರ್ಗಗಳ ಸಹಾಯದಿಂದ ನಿರಂಕುಶಪ್ರಭುತ್ವವನ್ನು ಪುನರ್ ನಿರ್ಮಾಣ ಮಾಡಿದನು. ಈ ಬೆಳವಣಿಗೆ ಯಂಗ್ ಆಟೋಮನ್ ಮತ್ತು ಆಧುನಿಕ ವಿದ್ಯಾವಂತ ವರ್ಗಗಳ ತತ್ವಕ್ಕೆ ಮತ್ತು ನಿರ್ಧಾರಗಳಿಗೆ ವಿರುದ್ಧವಾಗಿತ್ತು. ಏಕೆಂದರೆ ಪ್ರಜಸತ್ತಾತ್ಮಕ ಸರಕಾರದ ವಜ ನಂತರ ಅಬ್ದುಲ್ ಹಮೀದ್‌ನ ಆಧಿಪತ್ಯವು ಸುಲ್ತಾನ್, ಬ್ಯುರೋಕ್ರಸಿ ಮತ್ತು ಪೊಲೀಸ್ ದುರಂಹಕಾರದ ಆಧಾರದಲ್ಲಿ ನಿಂತಿತ್ತು. ಸುಲ್ತಾನನು ಇಸ್ಲಾಮಿ ಸಂಸ್ಥೆಯ ಮುಖ್ಯಸ್ಥನಂತೆ ತೋಪಡಿಸಿ ಜಗತ್ತಿನಾದ್ಯಂತ ವಾಸಿಸುವ ಮುಸ್ಲಿಂ ರಕ್ಷಕನೆಂದು ಸಾರಿದನು.

೧೮೮೦ರಲ್ಲಿ ಟರ್ಕಿಯ ಕ್ರಾಂತಿಕಾರಿ ಚಿಂತಕರು ಸುಲ್ತಾನನ ಏಕಸ್ವಾಮಿತ್ವ ಮತ್ತು ನಿರಂಕುಶಪ್ರಭುತ್ವ ಅಧಿಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ತೋರಿಸಿದರು. ಆರ್ಥಿಕ ಮತ್ತು ಶೈಕ್ಷಣಿಕ ಬೆಳವಣಿಗೆಯಿಂದ ವಿದ್ಯಾವಂತರ ಸಂಖ್ಯೆ ವೃದ್ದಿಸಿತು. ವೃತ್ತಿಪರ, ತಾಂತ್ರಿಕ ರೈಲ್ವೆ ಮತ್ತು ಟೆಲಿಪೋನ್ ವಿಭಾಗದ ಕಾರ್ಮಿಕರ ಸಂಖ್ಯೆಯು ಹೆಚ್ಚಿತು. ದುರ್ಬಲ ಮತ್ತು ಮಧ್ಯಮ ವರ್ಗದ ಕುಟುಂಬಿಕರು ಉದ್ಯೋಗವನ್ನು ಅವಲಂಬಿಸಿದ್ದರು. ಸಂಪರ್ಕ ಮಾಧ್ಯಮದ ಸವಲತ್ತುಗಳನ್ನು ಆಧುನೀಕರಣಗೊಳಿಸಲಾಯಿತು. ಪತ್ರಿಕೋದ್ಯಮವು ಯುರೋಪಿನ ಚಿಂತನೆಗಳನ್ನು ಪಾಲಿಸಿ ವಿಜ್ಞಾನ, ರಾಜಕೀಯ ಮತ್ತು ಪಾಶ್ಚಾತ್ಯ ತತ್ವಗಳನ್ನು ಪ್ರಚಾರ ಮಾಡಿದವು. ರಾಜಧಾನಿಯಿಂದ ವಿದ್ಯಾವಂತರು ಚಿಂತನೆಗಳನ್ನು ಹಳ್ಳಿಯ ಸಾಮಾನ್ಯ ಜನರಿಗೆ ತಿಳಿಸಿದರು. ಈ ನಿಟ್ಟಿನಲ್ಲಿ ಪತ್ರಕರ್ತರು, ಬರವಣಿಗೆಗಾರರು, ಪ್ರಕಾಶಕರು ಮತ್ತು ದಂಗೆಗಾರರು ೧೮೮೯ರಲ್ಲಿ ಒಂದು ಹೊಸ ಸಂಘಟನೆಯನ್ನು ಪೂರ್ವಯೋಜಿತವಾಗಿ ಮಾಡಿದರು. ಅದೇ ‘ಆಟೋಮನ್ ಸೊಸೈಟಿ ಫಾರ್ ಯೂನಿಯನ್ ಅಂಡ್ ಪ್ರೊಗ್ರೆಸ್’ ಯಂಗ್ ಟರ್ಕರು ಆಟೋಮನ್ ವಂಶಕ್ಕೆ ವಿಧೇಯರಾಗಿದ್ದರು ಕೂಡ ಪ್ರಜಸತ್ತಾತ್ಮಕ ಮತ್ತು ರಾಜಶಾಸನಾನುಸಾರ ಆಧಿಪತ್ಯದ ಪುನರ್ ಸ್ಥಾಪನೆಗೆ ಒತ್ತಡ ತರುತ್ತಲೇ ಇದ್ದರು. ಇದು ಕೊನೆಗೆ ೧೯೦೮ರಲ್ಲಿ ಯಂಗ್ ಟರ್ಕ್ ಕ್ರಾಂತಿಯೊಂದಿಗೆ ಯಶಸ್ವಿಯಾಯಿತು.

ಅರಬ್ ಜಗತ್ತು

ಆಧುನಿಕ ಅರಬ್ ಸಮಾಜ, ರಾಜಧಿಕಾರ ಮತ್ತು ರಾಷ್ಟ್ರೀಯ ಚಳುವಳಿಯ ಮೂಲವು ೧೯ನೆಯ ಶತಮಾನದ ಆಟೋಮನ್ ವ್ಯವಸ್ಥೆ ಮತ್ತು ವಸಾಹತುಶಾಹಿಯ ಪ್ರಭಾವದಿಂದ ಪ್ರಬುದ್ಧವಾಗಿರುತ್ತದೆ. ಸುಮಾರು ೧೪ನೆಯ ಶತಮಾನದಿಂದಲೂ ಅರಬ್ ಜಗತ್ತು ಆಟೋಮನ್ ಆಳ್ವಿಕೆಗೆ ಒಳಪಟ್ಟಿದ್ದು ಹಲವಾರು ಪ್ರಾಂತ್ಯಗಳಾಗಿ ವಿಭಜನೆಯಾಗಿತ್ತು. ಇಲ್ಲಿ ಮುಖ್ಯ ನಗರಗಳಾದ ಡೆಮಾಸ್ಕಸ್, ಆಲೆಪ್ಪೊ, ಮೊಸೋಲ್ ಮತ್ತು ಬಾಗ್ದಾದ್ ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳ ದೃಷ್ಟಿಯಿಂದ ಮುಖ್ಯ ನಗರಗಳಾಗಿ ಜನರನ್ನು ಆಕರ್ಷಿಸಿದ್ದು ಪ್ರಾದೇಶಿಕ ಮಟ್ಟದಲ್ಲಿಯೂ ಆಡಳಿತ ಕೇಂದ್ರ ಗಳಾಗಿದ್ದವು. ಸ್ಥಳೀಯ ಪ್ರಾಂತ್ಯಗಳು ಕೆಲವೊಮ್ಮೆ ಸ್ವತಂತ್ರವಾಗಿದ್ದವು. ಪ್ರಾದೇಶಿಕ ನ್ಯಾಯಾಧಿಕಾರವು ಆರ್ಥಿಕ ಬದಲಾವಣೆ ಮತ್ತು ರಾಜಕೀಯ ಸ್ವಪ್ರಜ್ಞೆಯ ವಿಭಿನ್ನ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿದೆ.

ಆಟೋಮನ್ ಸಾಮ್ರಾಜ್ಯದಲ್ಲಿ ಬೆಳೆದ ಚಿಂತನೆಗಳು, ಸಂಸ್ಥೆಗಳು ಮತ್ತು ಚಳುವಳಿಯ ಪ್ರಭಾವದಿಂದ ಕ್ರೈಸ್ತ ಸಮುದಾಯದಂತೆ ಅರಬ್ ಜನಾಂಗದವರು ಈ ಕ್ರಾಂತಿಕಾರಿ ತತ್ವಗಳನ್ನು ಪಾಲಿಸಿ ೧೯ನೆಯ ಶತಮಾನದಲ್ಲಿ ರಾಷ್ಟ್ರೀಯ ಚಳುವಳಿಯನ್ನು ಪ್ರಾರಂಭಿಸಿದರು. ಮೂಲಭೂತವಾಗಿ ಲೆಬನಾನ್ ಈ ಬೆಳವಣಿಗೆಯ ಕೇಂದ್ರ ಬಿಂದುವಾಗಿದ್ದು, ಆಧುನೀಕರಣ ಮತ್ತು ಹೊಸ ರಾಜಕೀಯ ಪ್ರಜ್ಞೆಯ ರಚನೆಯು ಪ್ರತ್ಯಕ್ಷವಾಗಿ ಯುರೋಪಿಯನ್ನರ ವಾಣಿಜ್ಯ ರಾಜಕೀಯ ಮತ್ತು ಶೈಕ್ಷಣಿಕ ಪ್ರಭಾವದಿಂದಾಗಿರುತ್ತದೆ. ಲೆಬನಾನ್ ಮತ್ತು ಸಿರಿಯಾ ಪ್ರಾಚೀನ ಕಾಲದಿಂದಲೂ ವ್ಯಾಪಾರ ಕೇಂದ್ರವಾಗಿದ್ದು ವಾಣಿಜ್ಯ ವಸ್ತುಗಳಾದ ಸಿಲ್ಕ್, ಹತ್ತಿ, ಧಾನ್ಯಗಳ ಉತ್ಪಾದನೆಗೆ ಪ್ರೇರಣೆ ಕೊಟ್ಟಿತ್ತು. ಜನಸಂಖ್ಯೆ ಸ್ಪೋಟ ಮತ್ತು ಆರ್ಥಿಕ ಪರಿಣತಿಯಿಂದ ಕೆಲವು ಉತ್ಪಾದಕರಾದ ನೇಯ್ಗೆಗಾರರು ತಮ್ಮ ಆರ್ಥಿಕ ಸ್ಥಾನವನ್ನು ಬಲಪಡಿಸಿದರು. ಬೆಳ್ಳಿ ಮತ್ತು ಚಿನ್ನದ ಜರಿಯುಳ್ಳ ಸಿರಿಯಾದ ಬಟ್ಟೆಗಳ ಮಾದರಿಗಳ ಪಡಿಯಚ್ಚನ್ನು ಯುರೋಪ್‌ನಲ್ಲಿ ತಯಾರಿಸಿ ಉತ್ತಮ ಗುಣಮಟ್ಟವನ್ನು ಮಾರುಕಟ್ಟೆಯಲ್ಲಿ ಉಳಿಸಿಕೊಂಡಿದ್ದರು. ೧೮೬೦ರ ನಂತರ ಭೀರತ್(ಲೆಬನಾನ್ ರಾಜಧಾನಿ) ಒಂದು ರಫ್ತು ವ್ಯಾಪಾರದ ಕೇಂದ್ರವಾಗಿ ರೂಪಾಂತರಗೊಂಡಿತು. ಲೆಬನಾನ್-ಯುರೋಪಿಯನ್ನರ ವ್ಯಾಪಾರವು ಸಿಲ್ಕ್, ಸಾಬೂನು ಮತ್ತು ಚರ್ಮದ ವಸ್ತುಗಳಿಂದ ಒಳಗೊಂಡಿತ್ತು. ಈ ನಿಟ್ಟಿನಲ್ಲಿ ಕಚ್ಚಾ ಸಾಂಬಾರುಗಳು, ಹಣ್ಣುಗಳು, ಸೋಪ್ಸ್, ಬಟ್ಟೆಗಳು ಮತ್ತು ಚರ್ಮದ ಸಿದ್ಧ ವಸ್ತುಗಳನ್ನು ಒದಗಿಸುತ್ತಿದ್ದ ಬೆದ್ವಾಯಿನ್ಸ್ ಗುಡ್ಡಗಾಡು ಜನರು ಉತ್ಪಾದನೆ ಹೆಚ್ಚಿಸಲು ಮತ್ತಷ್ಟು ಫಲವತ್ತಾದ ಭೂಮಿಯನ್ನು ತಮ್ಮ ಸ್ವಾಧೀನಕ್ಕೆ ತಂದುಕೊಂಡರು. ಆದರೆ ಸ್ಥಳೀಯ ಕೈಕಸುಬುಗಾರರು ಮತ್ತು ವ್ಯಾಪಾರಿಗಳಿಗೆ ಐರೋಪ್ಯ ರಾಷ್ಟ್ರಗಳೊಂದಿಗೆ ಸ್ಪರ್ಧಿಸಲು ಅಸಾಧ್ಯವಾಯಿತು. ಕ್ರೈಸ್ತ ಸಮುದಾಯದ ವ್ಯಾಪಾರಿಗಳು ರಫ್ತು ಮತ್ತು ಆಮದು ನಿರ್ಯಾತಗಳಲ್ಲಿ ಪರಿಣತರಾಗಿದ್ದು ಕ್ರಿಶ್ಚಿಯನ್ ಯುರೋಪ್ ದೇಶಗಳ ಮೇಲೆ ನೇರ ಸಂಬಂಧವನ್ನು ಬೆಳೆಸಿ ಮುಸ್ಲಿಂ ವ್ಯಾಪಾರಿಗಳಿಗಿಂತ ಹೆಚ್ಚು ಲಾಭ ಪಡೆಯುತ್ತಿದ್ದರು.

೧೮ನೆಯ ಶತಮಾನದ ಮಧ್ಯಭಾಗದಿಂದ ಐರೋಪ್ಯ ರಾಷ್ಟ್ರಗಳು ಲೆಬನಾನ್‌ನ ರಕ್ಷಣಾ ವ್ಯವಸ್ಥೆಯನ್ನು ವಹಿಸಿಕೊಂಡರು. ತದನಂತರ ಯುರೋಪಿನ ಬಂಡವಾಳಶಾಹಿಗಳ ಪ್ರವೇಶ, ಆಟೋಮನ್‌ರ ಶ್ರೇಷ್ಠಾಧಿಕಾರ ಮತ್ತು ಸ್ಥಳೀಯ ಸಂಸ್ಥೆಗಳ ಕ್ಷೀಣಿಕೆಯಿಂದ ಶೀತಲ ಸಮರದಂತಹ ಪ್ರಕ್ಷುಬ್ಧ ವಾತಾವರಣವು ನಿರ್ಮಾಣವಾಯಿತು. ಲೆಬನಾನ್ ನ ಮರೋನೈಟ್ ಚರ್ಚ್‌ನಲ್ಲಿ ಆದ ದಿಢೀರ್ ಬದಲಾವಣೆಯೇ ಈ ಶೀತಲ ಸಮರಕ್ಕೆ ಮುಖ್ಯ ಕಾರಣ. ೧೮ನೆಯ ಶತಮಾನದ ಮಧ್ಯಭಾಗದವರೆಗೆ ಈ ಚರ್ಚ್ ಮರೋನೈಟ್ ಕ್ರೈಸ್ತ ಭೂಮಾಲೀಕರ ಹಿಡಿತದಲ್ಲಿದ್ದು ಅವರೇ ಬಿಷಪ್ ಮತ್ತು ಪಾದ್ರಿಗಳ ನೇಮಕ ಮಾಡುತ್ತಿದ್ದರು. ಆದರೆ ರೋಮನಲ್ಲಿ ಶಿಕ್ಷಣ ಪಡೆದ ಚರ್ಚ್‌ನ ಅಧಿಕಾರಿ ವರ್ಗವು ೧೮ನೆಯ ಶತಮಾನದಲ್ಲಿ ಅನುಷ್ಠಾನಗೊಳಿಸಿದ ಕ್ರಾಂತಿಕಾರಿ ಸುಧಾರಣೆಯಿಂದ ಚರ್ಚನ್ನು ಭೂಮಾಲೀಕರ ಹಿಡಿತದಿಂದ ಸ್ವತಂತ್ರಗೊಳಿಸಿದರು. ಈ ಸುಧಾರಕರು ಚರ್ಚ್ ಶಾಲೆಗಳನ್ನು ಚುನಾಯಿತ ಮರೋನೈಟ್ ಸರಕಾರದ ಮೂಲಕ ನಡೆಸುವ ವ್ಯವಸ್ಥೆಯ ಬಗ್ಗೆ ಪ್ರಜ್ಞೆಯನ್ನು ಜನರಲ್ಲಿ ಮೂಡಿಸಿದರು.

ಮರೋನೈಟ್ ಕ್ರಿಶ್ಚಿಯನ್‌ರ ಪುನರುಜ್ಜೀವನದ ಪರಿಣಾಮಗಳು ರಾಜಕೀಯ ಬೆಳವಣಿಗೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ೧೮೨೦ರಲ್ಲಿ ಇಲ್ಲಿ ಭೂಮಾಲೀಕರ ವಿರುದ್ಧ ರೈತರ ದಂಗೆ ಪ್ರಾರಂಭವಾಯಿತು. ಮರೋನೈಟ್ ಕ್ರೈಸ್ತರ ಚಳವಳಿಯಿಂದ ಡ್ರೂಸ್(ಅರಬ್ ಮುಸ್ಲಿಂಮರು) ಸಮುದಾಯದವರ ಮೇಲೆ ಪರಿಣಾಮ ಬೀರಿ ಮರೊನೈಟ್‌ರ ಒತ್ತಡದಿಂದ ಅರಬ್ ಮುಸ್ಲಿಮರು ಸಂಘಟಿತರಾಗಿ ಏಕತೆಯನ್ನು ಸ್ಥಾಪಿಸಲು ಪ್ರಯತ್ನ ನಡೆಸಿದರು. ಇದು ಲೆಬನಾನ್‌ನ ದೊರೆ ಎರಡನೆ ಬಾಷಿಸ್‌ನ (೧೭೮೦-೧೮೪೦) ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿತು. ಏಕೆಂದರೆ ಇವನು ಅಧಿಕಾರವನ್ನು ಕೇಂದ್ರೀಕೃತಗೊಳಿಸಿ ತನ್ನ ಪ್ರತಿಸ್ಪರ್ಧಿಗಳನ್ನು ಅದರಲ್ಲೂ ಡ್ರೂಸ್ ಅಧಿಕಾರಿಗಳನ್ನು ಹತ್ತಿಕ್ಕಿದನು. ೧೮೪೦ರಲ್ಲಿ ಬ್ರಿಟಿಷ್ ಮತ್ತು ಫ್ರೆಂಚರ ಮಧ್ಯಸ್ಥಿಕೆಯಿಂದ ಈಜಿಪ್ಟ್‌ನವರನ್ನು ಕೆಳಗಿಳಿಸಿ ಮರೋನೈಟ್ ಕ್ರೈಸ್ತ ಗುಂಪನ್ನು ಭಾಷಿರ್ ಮತ್ತು ಈಜಿಪ್ಟ್ ನ ಅಧಿಕಾರದ ವಿರುದ್ಧ ದಂಗೆ ಏಳಲು ಪ್ರೋ ನೀಡಲಾಯಿತು. ಭಾಷಿರ್ ಇದರಿಂದ ಅಧಿಕಾರ ಕಳೆದುಕೊಂಡು. ಮರೋನೈಟ್ ಮತ್ತು ಡ್ರೂಜ್ ಜನಾಂಗದವರು ಪ್ರತ್ಯೇಕವಾಗುಳಿ ದದ್ದರಿಂದ ಯಾವುದೇ ಸರಕಾರದ ರಚನೆಗೆ ಅವಕಾಶ ಲಭಿಸಲಿಲ್ಲ. ಮರೊನೈಟ್ ಮತ್ತು ಡ್ರೂಸ್ ಜನಾಂಗದವರ ನಡುವೆ ಯುದ್ಧಗಳು ೧೮೩೮, ೧೮೪೧-೪೨ ಮತ್ತು ೧೮೪೫ರಲ್ಲಿ ಮುಂದುವರಿದಿತ್ತು.

ಆಟೋಮನ್ ಸುಲ್ತಾನನು(ಅಬ್ದುಲ್ ಮಜೀದ್) ೧೮೪೩ರಲ್ಲಿ ಲೆಬನಾನ್‌ನಲ್ಲಿ ಹೊಸ ಸರಕಾರದ ರಚನೆ ಮಾಡಿ ಉತ್ತರ ಮತ್ತು ದಕ್ಷಿಣ ಪ್ರದೇಶದಲ್ಲಿ ಎರಡು ಸ್ವತಂತ್ರ ಆಡಳಿತ ಕೇಂದ್ರಗಳನ್ನು ಸ್ಥಾಪಿಸಿದನು. ಉತ್ತರದಲ್ಲಿ ಮರೋನೈಟ್ ಸಮುದಾಯ ದವರನ್ನು ಗವರ್ನರ್ ಆಗಿ ದಕ್ಷಿಣದಲ್ಲಿ ಡ್ರೂಸ್ ಸಮುದಾಯದವರನ್ನು ಗವರ್ನರ್ ಆಗಿ ನೇಮಕ ಮಾಡಲಾಯಿತು. ಈ ಎರಡು ಕೇಂದ್ರಗಳನ್ನು ಹಿಡಿತದಲ್ಲಿಡಲು ಒಂದು ಮಿಶ್ರಿತ ಮಂಡಳಿಯನ್ನು ಸಹ ರಚಿಸಲಾಯಿತು. ೧೮೫೮ರವರೆಗೆ ಈ ವ್ಯವಸ್ಥೆಯು ಮುಂದುವರಿಯಿತು. ನಂತರ ಮರೋನೈಟ್ ಸಮುದಾಯದವರು ಪುನಃ ಭೂಮಾಲೀಕರ ವಿರುದ್ಧ ದಂಗೆ ಎದ್ದರು. ಇದರೊಂದಿಗೆ ೧೮೫೯ ಮತ್ತು ೧೮೬೦ರಲ್ಲಿ ಡ್ರೂಸ್ ಮುಸ್ಲಿಮರು ಮರೋನೈಟ್‌ರ ಮೇಲೆ ದಾಳಿ ಮಾಡಿ ಮತೀಯ ಗಲಭೆ ಪ್ರಾರಂಭವಾಗಿ ವರ್ಗಗಳ ವ್ಯಾಜ್ಯಕ್ಕೆ ವಿರಾಮ ನೀಡಿತು. ಐರೋಪ್ಯ ರಾಷ್ಟ್ರಗಳು ಪುನಃ ಮಧ್ಯಸ್ಥಿಕೆ ವಹಿಸಿ ಆಟೋಮನ್ ಸರಕಾರವನ್ನು ೧೮೬೧ರಲ್ಲಿ ಒತ್ತಾಯಿಸಿ ಹೊಸ ಕಾನೂನನ್ನು ಅನುಷ್ಠಾನಗೊಳಿಸಿದವು. ಕ್ರೈಸ್ತರ ಪ್ರಾಬಲ್ಯವನ್ನು ಈ ಕಾನೂನು ಗುರುತಿಸಿ ಆಡಳಿತದ ಮುಖ್ಯಸ್ಥನನ್ನು ಕ್ರೈಸ್ತ ಸಮುದಾಯದಿಂದ ಚುನಾಯಿಸಲು ಒಪ್ಪಲಾಯಿತು ಮತ್ತು ಆಡಳಿತ ಮಂಡಳಿಯು ಉಳಿದ ಧಾರ್ಮಿಕ ವರ್ಗವನ್ನು ಪ್ರತಿನಿಧಿಸುವ ಹೊಣೆ ಹೊತ್ತಿತು. ಲೆಬನಾನ್ ಈ ದೃಷ್ಟಿಯಿಂದ ಆಟೋಮನ್ ಸಾಮ್ರಾಜ್ಯದಲ್ಲಿ ಮಾದರಿ ಪ್ರಾಂತ್ಯವಾಗಿ ಪರಿವರ್ತಿಸಿ ಐರೋಪ್ಯ ರಾಷ್ಟ್ರಗಳಿಂದ ಗೌರವಿಸಲ್ಪಟ್ಟಿತು.

ಪ್ರಾಂತೀಯ ರಾಜಕೀಯ ಮತ್ತು ವಾಣಿಜ್ಯ ಚಟುವಟಿಕೆಗಳ ಜೊತೆಗೆ ಶೈಕ್ಷಣಿಕ ರಂಗದ ಬದಲಾವಣೆ ಪ್ರಯತ್ನಗಳಿಗೆ ಯುರೋಪಿನ ಚಿಂತನೆಗಳು, ತತ್ವಗಳು ಮತ್ತು ಸಂಸ್ಥೆಗಳ ಪ್ರಭಾವ ಮುಖ್ಯವಾದವು. ೧೮ನೆಯ ಶತಮಾನದಿಂದಲೇ ಲೆಬನಾನ್‌ನ ಮರೋನೈಟ್ ಕ್ರೈಸ್ತ ಜನಾಂಗದ ಪಾದ್ರಿಗಳು ರೋಮ್‌ನಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಜೊತೆಗೆ ಫ್ರಾನ್ಸ್ ಸಹ ಇಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಮತ್ತು ಸುಧಾರಣಾ ನೀತಿಯನ್ನು ಪ್ರಾಯೋಜಿ ಸಿತ್ತು. ೧೭೭೮ರಲ್ಲಿ ಫ್ರೆಂಚ್ ಮಿಶನರಿಗಳು ಐಂತುರಾದಲ್ಲಿ ಪ್ರಾಥಮಿಕ ಶಾಲೆಯನ್ನು, ೧೭೩೫ರಲ್ಲಿ ಜಿಗಾರ್ರ‍ಾತ್ ಐನ್‌ವರ್ಕಾದಲ್ಲಿ ಮತ್ತು ಮರೋನೈಟ್ ಕಾಲೇಜನ್ನು ಪ್ರಾರಂಭ ಮಾಡಲಾಯಿತು. ಭೀರತ್‌ನಲ್ಲಿ ಸಿರಿಯನ್ ಪ್ರೊಟೆಸ್ಟೆಂಟ್ ಕಾಲೇಜು ಪ್ರಾರಂಭವಾಗಿ ನಂತರ ಅದು ಅಮೆರಿಕನ್ ಯುನಿವರ್ಸಿಟಿಯಾಗಿ ರೂಪಾಂತರಗೊಂಡಿತು. ಜೇಲಾ, ಡೆಮಾಸ್‌ಕಸ್ ಮತ್ತು ಅಲೆಪ್ಪೊದಲ್ಲಿಯೂ ಹೊಸ ಶಾಲೆಗಳು ೧೮೩೯ ಮತ್ತು ೧೮೭೩ರ ನಡುವೆ ಪ್ರಾರಂಭವಾದುವು. ೧೮೭೫ರಲ್ಲಿ ಫ್ರೆಂಚ್ ಪ್ರಾಯೋಜಿತ ಸೈಂಟ್ ಜೋಸೆಫ್ ವಿಶ್ವವಿದ್ಯಾನಿಲಯವನ್ನು ತೆರೆಯಲಾಯಿತು.

ಈ ವಿಚಾರದಲ್ಲಿ ಆಂತರಿಕ ರಾಜಕೀಯ ಮತ್ತು ಆರ್ಥಿಕ ಸುಧಾರಣೆಗಳಿಗಿಂತ ವಿದೇಶಿ ವಾಣಿಜ್ಯ, ಶೈಕ್ಷಣಿಕ ಮತ್ತು ಧಾರ್ಮಿಕ ಸಂಬಂಧಗಳ ಪ್ರಭಾವವು ಹೊಸ ವಿದ್ಯಾವಂತ ಗುಂಪಿನ ರಚನೆಗೆ ಕಾರಣವಾಯಿತು. ಸಾಂಸ್ಕೃತಿಕ ಪುನರುಜ್ಜೀವನದ ಪ್ರಯತ್ನವನ್ನು ಈ ಸಣ್ಣ ವಿದ್ವಾಂಸರಿಂದ ಸಾಧಿಸಲಾಯಿತು. ವಿದ್ಯಾವಂತ ಅರಬ್ಬರು ಪಾಶ್ಚಾತ್ಯ ಚಿಂತನೆಗಳು ಮತ್ತು ತತ್ವಗಳನ್ನು ಅನುಸರಿಸಿರುವುದಲ್ಲದೆ ತಮ್ಮ ಐತಿಹಾಸಿಕ ಹಿನ್ನೆಲೆ ಹಾಗೂ ಅವರ ನಾಗರಿಕತೆಯ ಬಗ್ಗೆ ಸಾಕಷ್ಟು ತಿಳಿದುಕೊಂಡರು. ಈ ನಾಗರಿಕ ಪ್ರಜ್ಞೆಯಿಂದ ಅರಬ್ ಪತ್ರಕರ್ತರು, ಪ್ರಕಾಶಕರು, ವಿದ್ವಾಂಸರು ಮತ್ತು ಚಿಂತಕರು ತಮ್ಮ ಸಾಂಸ್ಕೃತಿಕ ಹೆಗ್ಗಳಿಕೆಯನ್ನು ಪುನರ್ ಸ್ಥಾಪಿಸಿ ಅರಬ್ ಸಾಹಿತ್ಯ ಮತ್ತು ಭಾಷೆಯ ಮಹತ್ವವನ್ನು ಪ್ರಚಾರ ಮಾಡಿದರು. ಹಲವು ಸಂಘಟನೆಗಳನ್ನು ಬೇಡಿಕೆಗಳನ್ನು ನಿರ್ಮಾಣ ಮಾಡಿ ಭಕ್ತಿಭಾವದಿಂದ ಹಗಲಿರುಳು ದುಡಿದು ಅರಬರ ಇತಿಹಾಸ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಪ್ರಚಾರ ಮಾಡಲಾಯಿತು. ಜೊತೆಗೆ ಈ ಚಿಂತಕರು ಅರಬ್ ಸಮಾಜದ ಆಧುನೀಕರಣ ಮತ್ತು ಕ್ರಾಂತಿಕಾರಿ ಬದಲಾವಣೆಗೆ ಕರೆಕೊಟ್ಟರು. ಅವರು ದಿನಪತ್ರಿಕೆಗಳು, ವಾರಪತ್ರಿಕೆಗಳು, ಪಾಶ್ಚಾತ್ಯ ವೈಜ್ಞಾನಿಕ ಜ್ಞಾನ, ರಾಜಕೀಯ ಚಿಂತನೆಗಳನ್ನು ಮತ್ತು ಅರಬರ ಇತಿಹಾಸ, ಭಾಷೆ ಮತ್ತು ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸಿದರು. ಸರಕಾರವು ಜನಪರ ಸುಧಾರಣೆಗಳಾದ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಹಾಗೂ ಇನ್ನಿತರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಪ್ರಚಾರಿಸಿತು.

೧೯ನೆಯ ಶತಮಾನದ ಅಂತ್ಯದಲ್ಲಿ ಶೈಕ್ಷಣಿಕ ಪುನರುಜ್ಜೀವನವು ರಾಜಕೀಯ ಬಿಕ್ಕಟ್ಟಿನ ರೂಪ ತಾಳಿತು. ಇದು ಟರ್ಕ್ ವಿರೋಧಿಯಾಗಿದ್ದು ಟರ್ಕರಿಗಿಂತಲೂ ಅರಬ್ಬರೇ ಪ್ರಭಾವಶಾಲಿಗಳೆಂದು ಸಾರಿತು. ಏಕೆಂದರೆ ೭ನೆಯ ಶತಮಾನದಲ್ಲಿ ಈಗಿನ ಅರಬ್ ಜಗತ್ತಿನಲ್ಲಿ ಮೊದಲಬಾರಿಗೆ ಇಸ್ಲಾಮಿ ಸಾಮ್ರಾಜ್ಯವನ್ನು ರಚಿಸಿ ನಾಗರಿಕ ಜೀವನಕ್ಕೆ ಕಾರಣವಾಗಿದ್ದವರು ಅರಬ್ಬರೇ. ಆದರೆ ೧೪ನೆಯ ಶತಮಾನದಲ್ಲಿ ಈ ಅರಬ್ ಪ್ರಾಬಲ್ಯವನ್ನು ಬದಿಗೊತ್ತಿ ಆಟೋಮನ್ನರು ಅವರ ಪ್ರದೇಶಗಳನ್ನು ಸ್ವಾಧೀನಪಡಿಸಿ ತಮ್ಮ ಆಧಿಪತ್ಯವನ್ನು ಸ್ಥಾಪಿಸಿದರು. ಈ ರಾಜಕೀಯ ಬದಲಾವಣೆಯಿಂದ ಅರಬರು ಎರಡನೇ ದರ್ಜೆ ಪ್ರಜೆಗಳಾಗಿ ರೂಪಾಂತರಗೊಂಡರು. ಆದರೆ ೧೯ನೆಯ ಶತಮಾನದಲ್ಲಿ ಕ್ರಾಂತಿಕಾರಿ ಪಾಶ್ಚಾತ್ಯ ಚಿಂತನೆಗಳಿಂದ ಆಟೋಮನ್ ದಬ್ಬಾಳಿಕೆ, ಭ್ರಷ್ಟಾಚಾರವನ್ನು ವಿರೋಧಿಸಿ ಸ್ವತಂತ್ರ ರಾಷ್ಟ್ರ ಕಟ್ಟುವ ದಿಕ್ಕಿನಲ್ಲಿ ಅರಬ್ಬರು ಸಂಘಟಿತರಾದರು. ‘ಖಲೀಫತ್’ ಸಂಸ್ಥೆಯನ್ನು ಪುನರ್ ಸ್ಥಾಪಿಸಿ ಮೆಕ್ಕಾದ ಶರೀಫ್ ಹುಸೇನನನ್ನು ಸ್ವತಂತ್ರ ಅರಬ್ ರಾಷ್ಟ್ರದ ಸಂಸ್ಥಾಪಕನನ್ನಾಗಿ ಮಾಡುವ ಪ್ರಯತ್ನಗಳು ನಡೆದವು. ಇಸ್ಲಾಮಿನ ಧಾರ್ಮಿಕ ಸಂಸ್ಥೆಗಳನ್ನು ಮೊದಲು ಅರಬ್ಬರು ಸೃಷ್ಟಿಸಿದ್ದು. ಇಸ್ಲಾಮಿನ ಮೊದಲ ಜನಾಂಗದವರು ಅರಬರು. ಖುರಾನ್ ಅವರ ಕೊಡುಗೆಯಾಗಿದ್ದು, ಮೊದಲು ಇದು ಅರಬ್ ಭಾಷೆಯಲ್ಲಿ ಬರೆಯಲಾಗಿತ್ತು. ಮುಸ್ಲಿಂ ಸಮಾಜದ ಬಹಳ ಹೆಗ್ಗಳಿಕೆಯ ದಿನಗಳು ಅರಬ್ ಆಳ್ವಿಕೆಯ ಕಾಲದಲ್ಲಿತ್ತು. ಈ ಎಲ್ಲ ಆಧಾರದ ಮೇಲೆ ಆಟೋಮನ್ ಸಾಮ್ರಾಜ್ಯದಿಂದ ಹೊರಬಂದು ಹೊಸ ದೇಶವನ್ನು ಕಟ್ಟಿ ಅರಬರನ್ನು ಆಟೋಮನ್ ಭ್ರಷ್ಟ ಆಡಳಿತದಿಂದ ಬಿಡುಗಡೆ ಮಾಡಬೇಕೆಂಬುದೇ ಈ ಅರಬ್ ಪುನರುಜ್ಜೀವನದ ಮುಖ್ಯ ಗುರಿಯಾಗಿತ್ತು. ಬೇರೆಯೇ ಕಾರಣಕ್ಕಾಗಿ ರಾಷ್ಟ್ರೀಯ ಚಳುವಳಿಯ ಮೂಲವು ಡೆಮಾಸ್‌ಕಸ್‌ನ್ನು ಕೇಂದ್ರವಾಗಿ ಗುರುತಿಸಿಕೊಂಡಿತು. ಏಕೆಂದರೆ ಈ ಪ್ರಾಂತ್ಯಗಳಲ್ಲಿ (ಸಿರಿಯಾ ಮತ್ತು ಲೆಬಾನಾನ್) ರಾಜಕೀಯ ಸ್ವಾಯತ್ತತೆ ಮತ್ತು ವಾಣಿಜ್ಯ ಬೆಳವಣಿಗೆಗಿಂತಲೂ, ಆಟೋಮನ್ ಪದ್ಧತಿ ಮತ್ತು ಐರೋಪ್ಯ ರಾಷ್ಟ್ರಗಳ ವಸಾಹತುಶಾಹಿಯ ಯಶಸ್ವಿ ಪ್ರವೇಶಕ್ಕೆ ಸಾಕಷ್ಟು ವಿರೋಧವಿತ್ತು. ೧೮೬೦ರ ಮೊದಲು ಡೆಮಾಸ್‌ಕಸ್‌ನ (ಸಿರಿಯಾದ ರಾಜಧಾನಿ) ಅರಬ್ ಮಹನೀಯರು ತಮ್ಮ ಗುಂಪಿನಿಂದ ಪಾದ್ರಿಗಳನ್ನು ಧಾರ್ಮಿಕ ಕೇಂದ್ರಗಳ ಮಪ್ತಿ ಮತ್ತು ಪ್ರವಾಚಕರಾಗಿ ಚುನಾಯಿಸುತ್ತಿದ್ದರು. ಈ ಮಹನೀಯರು ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರದ ಆಡಳಿತ ನಡೆಸುತ್ತಿದ್ದು ವ್ಯಾಪಾರಸ್ಥರ, ಕೈಕಸುಬುಗಾರರ, ೧೮ನೆಯ ಶತಮಾನದ ಎರಡನೇ ಭಾಗ ಮತ್ತು ೧೯ನೆಯ ಶತಮಾನಗಳಲ್ಲಿ ಈ ಕುಟುಂಬದವರು ಸೈನ್ಯಾಧಿಕಾರಿ ಗಳೊಂದಿಗೆ ಸೇರಿಕೊಂಡು ದೊಡ್ಡ ಭೂಮಾಲೀಕರಾಗಿ ಪರಿವರ್ತನೆಗೊಂಡರು. ೧೯ನೆಯ ಶತಮಾನದ ಅಂತ್ಯದಲ್ಲಿ, ಆರ್ಥಿಕ ಸ್ಥಾನವನ್ನು ವೃದ್ದಿಸಿಕೊಂಡು ಈ ಮಹನೀಯರು ತಮ್ಮ ಮಕ್ಕಳನ್ನು ಆಟೋಮನ್ ವೃತ್ತಿಪರ ಶಾಲೆಗಳಿಗೆ ಕಳುಹಿಸಿ ಅವರನ್ನು ತರಬೇತಿಗೊಳಿಸಿ ಆಟೋಮನ್ ಸರಕಾರದ ಸೇವೆಗೆ ಸೇರಲು ಸ್ಪರ್ಧಿಸತೊಡಗಿದರು. ಆದರೆ ಇವರಲ್ಲಿ ಐಕ್ಯತೆ ಇರದೆ ವಿಭಜನೆಗೊಂಡು ಕುಟುಂಬದೊಳಗೆ ಪೈಪೋಟಿ ಪ್ರಾರಂಭವಾಯಿತು.

ಅರಬ್ ಮಹನೀಯರು ಆಟೋಮನ್ ಪ್ರಾಬಲ್ಯವನ್ನು ಪ್ರಶ್ನಿಸಿದರು. ಆಟೋಮನ್ ರಾಜಶಾಸನಾನುಸಾರ ಟಾನ್ಸಿಮತ್ ಸುಧಾರಣೆಗೆ ಧಕ್ಕೆ ಉಂಟಾಗಿಲ್ಲ. ಸಿರಿಯಾವನ್ನು ಈಜಿಪ್ಟ್ ದೊರೆ ಮಹಮದ್ ಆಲಿ ವಶಪಡಿಸಿಕೊಂಡನು. ನಂತರ ಸ್ಥಳೀಯರ ಸ್ವಾತಂತ್ರ್ಯಕ್ಕೆ ಚ್ಯುತಿ ಬಂದು ಕೇಂದ್ರೀಕೃತ ಸರಕಾರದ ರಚನೆಯಾಗಿ ಆರ್ಥಿಕ ಬೆಳವಣಿಗೆ ಮುಂದುವರಿಯಿತು. ಮಹಮದ್ ಆಲಿಯ ಮಗ ಇಬ್ರಾಹಿಂ ಪಾಷಾ ಸ್ಥಳೀಯ ಸೈನಿಕರ ಶಕ್ತಿಯನ್ನು ನಿರ್ಮೂಲನ ಮಾಡಿ, ಉತ್ಪಾದನಾ ರಂಗದಲ್ಲಿ ನಿರಂಕುಶ ಪ್ರಭುತ್ವವನ್ನು ಹೇರಿದನು. ಇದರಿಂದಾಗಿ, ಸಿಲ್ಕ್, ಹತ್ತಿ, ಹೊಗೆಸೊಪ್ಪು ಉತ್ಪಾದನೆಯು ಈಜಿಪ್ಟ್‌ನವರ ಕೈಗೆ ಹಸ್ತಾಂತರವಾಯಿತು. ಮತ್ತು ಕಲ್ಲಿದ್ದಲು ಗಣಿಗಳನ್ನು ತೆರೆಯಲಾಯಿತು.

೧೮೪೧ರಲ್ಲಿ ಸಿರಿಯಾ ಪುನಃ ಆಟೋಮನ್ ಆಡಳಿತದ ಅಧೀನಕ್ಕೆ ಬಂದಾಗ ಕೇಂದ್ರೀಕೃತ ಅಧಿಕಾರವನ್ನು ಮುಂದುವರಿಸಿ ಜನಸಾಮಾನ್ಯರ ಬೆಂಬಲ ಪಡೆಯಲು ಅರಬ್ ಮಹನೀಯರನ್ನು ಬೇರ್ಪಡಿಸಲಾಯಿತು. ನ್ಯಾಯಾಂಗ ಪದ್ಧತಿಯನ್ನು ಅನುಸರಿಸಿ ಮುಸ್ಲಿಂ ಮತ್ತು ಮುಸ್ಲಿಮೇತರರ ನಡುವೆ ಸಮಾನತೆ ಸ್ಥಾಪಿಸಲಾಯಿತು. ಸ್ಥಳೀಯ ಗವರ್ನರ್‌ರನ್ನು ಕಡೆಗಣಿಸಲು ಸ್ಥಳೀಯ ಮಂಡಳಿಗಳನ್ನು ಸ್ಥಾಪಿಸಿ ಅರಬ್ ಮಹನೀಯರಿಗೆ ಹಣಕಾಸು ಮತ್ತು ಆಡಳಿತ ಅಧಿಕಾರವನ್ನು ಕೊಡಲಾಯಿತು.

ಸಿರಿಯಾ ಮತ್ತು ಡೆಮಾಸ್‌ಕಸ್ ಪ್ರದೇಶಗಳಿಗೆ ಸೀಮಿತವಾದ ೧೮ ಮತ್ತು ೧೯ನೆಯ ಶತಮಾನದ ಸುಧಾರಣೆಗಳು, ಚಳುವಳಿಗಳು ಬೇರೆ ಪ್ರದೇಶಕ್ಕೂ ಹರಡಿತು. ಆದರೆ ಈ ಕ್ರಾಂತಿಕಾರಿ ಚಿಂತನೆಗಳು ಮತ್ತು ಚಳುವಳಿಗಳು ಅರಬರಲ್ಲಿ ಒಂದು ಸ್ವತಂತ್ರ ದೇಶ ಕಟ್ಟಲು ಐಕ್ಯತೆಯನ್ನು ಸೃಷ್ಟಿ ಮಾಡಲಾಗಲಿಲ್ಲ. ಪರಸ್ಪರ ಸ್ಪರ್ಧೆ, ಅಸಮಾಧಾನ, ಆಂತರಿಕ ರಂಗದಲ್ಲಿ ಭಿನ್ನಾಭಿಪ್ರಾಯ, ವಿಭಿನ್ನ ರೀತಿಯ ಸಂಸ್ಥೆಗಳ ರಚನೆ, ವಿಭಿನ್ನ ರೀತಿಯ ಪಾಶ್ಚಾತ್ಯ ಚಿಂತನೆಗಳ ಪ್ರಭಾವ ಮತ್ತು ಅನುಭವಗಳಿಂದಾಗಿ ೧೯ನೆಯ ಶತಮಾನದ ಕೊನೆಯಲ್ಲಿ ವಿಭಜನೆಗೊಂಡು ೨೦ನೆಯ ಶತಮಾನದ ೨ನೇ ದಶಕದಲ್ಲಿ ಅರಬ್ ಜಗತ್ತು ಹಲವು ಸ್ವತಂತ್ರ್ಯ ರಾಷ್ಟ್ರಗಳಾಗಿ ಸೃಷ್ಟಿಯಾದವು.

ಇರಾನ್

ಆಧುನಿಕ ಇರಾನ್ ಮೂಲಭೂತವಾಗಿ ಸಫಾವಿದ್(೧೫೦೧-೧೭೨೨) ವಂಶದ ರಾಜ್ಯ ಮತ್ತು ಧಾರ್ಮಿಕ ಸಂಸ್ಥೆಗಳಿಂದ ರಚನೆಯಾಗಿದೆ. ಖಾಜರ್ ವಂಶದವರು ೧೭೭೯ ಮತ್ತು ೧೯೨೫ರ ಮಧ್ಯದಲ್ಲಿ ಆಳ್ವಿಕೆ ಮುಂದುವರಿಸಿದ್ದು ಅದು ಸುಮಾರಿಗೆ ಸಫಾವಿದ್ ಆಡಳಿತ ಕ್ರಮಕ್ಕೆ ಹೋಲಿಕೆಯಾಗಿತ್ತು. ಅದು ಒಂದು ದುರ್ಬಲವಾದ ಕೇಂದ್ರೀಕೃತ ಆಧಿಪತ್ಯ ಆಗಿದ್ದು ಹಲವು ಸ್ಥಳೀಯ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಸ್ವತಂತ್ರ್ಯ ಧಾರ್ಮಿಕ ವರ್ಗದವರ ವಿರೋಧವನ್ನು ಎದುರಿಸಬೇಕಾಯಿತು. ೧೯ನೆಯ ಶತಮಾನದಲ್ಲಿ ಯುರೋಪಿಯನ್ನರ ಪ್ರವೇಶ ಮತ್ತು ಪ್ರಾಂತ್ಯಗಳ ಸ್ವಾಧೀನ, ಸಾಂಸ್ಕೃತಿಕ ಪ್ರಭಾವ ಹಾಗೂ ಬಂಡವಾಳಶಾಹಿ ಪ್ರವೇಶವು ರಾಜ್ಯ ಮತ್ತು ಸಮಾಜವನ್ನು ದುರ್ಬಲಗೊಳಿಸಿ ೧೯೦೫ರಲ್ಲಿ ಶಾಸನಾನುಸಾರ ಚಳುವಳಿಗೆ ಎಡೆಮಾಡಿಕೊಟ್ಟಿತು. ಈ ಚಳುವಳಿಯಲ್ಲಿ ವಿದ್ವಾಂಸರು, ಪಾದ್ರಿಗಳು, ವ್ಯಾಪಾರಿಗಳು ಮತ್ತು ಕಸುಬುಗಾರರು ಒಂದಾಗಿ ಚುನಾಯಿತ ಪ್ರಜಸತ್ತಾತ್ಮಕ ಸರಕಾರದ ರಚನೆಗೆ ಕಾರಣವಾದರು.

ಅಂದರೆ ಆಧುನಿಕ ಚಕ್ರವು ಇರಾನ್‌ನಲ್ಲಿ ಖಾಜರ್ ಆಧಿಪತ್ಯದಿಂದ ಪ್ರಾರಂಭವಾಯಿತು. ಅರಾಜಕತೆ ಮತ್ತು ಮತೀಯ ಗಲಭೆಗಳ ಸಮಯದಲ್ಲಿ ಇರಾನಿನ ರಾಜಂಗವನ್ನು ರಕ್ಷಿಸುವ ಗುರಿಯನ್ನಿಟ್ಟುಕೊಂಡು ಖಾಜರ್ ವಂಶವು ೧೮ನೆಯ ಶತಮಾನದಲ್ಲಿ ಅಧಿಕಾರಕ್ಕೆ ಬಂತು. ಆದರೆ ಅವರ ಆಧಿಪತ್ಯವನ್ನು ಸ್ಥಿರಪಡಿಸಲಾಗಲಿಲ್ಲ. ಅವರ ಸೈನ್ಯಾಂಗವು ಟರ್ಕೊಮಾನ್ ರಕ್ಷಕರು ಮತ್ತು ಜೋರ್ ಜೀಯನ್ ಜೀತದಾಳುಗಳಿಂದ ನಿರ್ಮಾಣವಾಯಿತು. ಕೇಂದ್ರ ಸರಕಾರವು ಆಸ್ಥಾನ ಅಧಿಕಾರಿಗಳ ಹಿಡಿತದಲ್ಲಿದ್ದು ದೇಶದ ಅಭಿವೃದ್ದಿಗೆ ಸರಿಯಾದ ತೆರಿಗೆ ತೆರಿಗೆ ವಸೂಲಿ ಸಂಸ್ಥೆಗಳಿರಲಿಲ್ಲ. ಅವರ ಅಧೀನದಲ್ಲಿರುವ ಪ್ರಾಂತ್ಯಗಳು ಹಲವಾರು ಗುಡ್ಡಗಾಡು ಜನರು, ಜನಾಂಗದವರು ಮತ್ತು ಸ್ಥಳೀಯ ಗುಂಪುಗಳಿಂದ ಕೂಡಿದ್ದು, ಅವರವರ ಅಧಿಕಾರ ನೇತೃತ್ವದಲ್ಲಿ ಆಡಳಿತ ವ್ಯವಸ್ಥೆ ನಡೆಯುತ್ತಿತ್ತು. ಸರಕಾರದ ಅಧಿಕಾರಿಗಳು ಬೇರೆ ಬೇರೆ ವರ್ಗಗಳಿಂದ ರಚನೆಯಾಗಿದ್ದು, ಭೂಮಾಲೀಕತ್ವ, ತೆರಿಗೆ ವಸೂಲಿ ಹಕ್ಕು, ನ್ಯಾಯಾಂಗದ ಆಡಳಿತ ಮತ್ತು ಸ್ಥಳೀಯ ವ್ಯಾಜ್ಯಗಳನ್ನು ಗುಡ್ಡಗಾಡು ನೇತಾರರೇ ನಿರ್ವಹಿಸುತ್ತಿದ್ದರು. ನಗರದಲ್ಲಿ ವ್ಯಾಪಾರಿಗಳು ಮತ್ತು ಗಿಲ್ಡ್‌ಗಳು ಸಾಕಷ್ಟು ಅಧಿಕಾರವನ್ನು ಚಲಾಯಿಸುತ್ತಿದ್ದು ಸ್ವತಂತ್ರರಾಗಿದ್ದರು. ಆದ್ದರಿಂದ ೧೮ನೆಯ ಶತಮಾನದುದ್ದಕ್ಕೂ ಕೇಂದ್ರಾಡಳಿತ ವ್ಯವಸ್ಥೆಯು ಸ್ಥಿರವಾಗಿರಲಿಲ್ಲ ಮತ್ತು ಎಲ್ಲ ಪ್ರದೇಶದ ಮೇಲೆ ಖಾಜರ್ ದೊರೆಗಳಿಗೆ ಹಿಡಿತವನ್ನು ಹೇರಲು ಅಸಾಧ್ಯವಾಯಿತು. ಸ್ಥಳೀಯ ಅಧಿಕಾರವು ಭೂಮಾಲೀಕರು, ವರ್ತಕರು, ಅಧಿಕಾರಿಗಳ ಸ್ವಾಧೀನದಲ್ಲಿದ್ದು ಖಾಜರ್ ದೊರೆಗಳು ದುರ್ಬಲ ವರ್ಗದವರನ್ನು ಮಾತ್ರ ಶೋಷಿಸು ತ್ತಿದ್ದರು. ೧೮ನೆಯ ಶತಮಾನದಲ್ಲಿ ಖಾಜರ್ ವಂಶದವರು ಅನಿಶ್ಚಿತ ಶ್ರೇಷ್ಠಾಧಿಕಾರವನ್ನು ಪಾಲಿಸುತ್ತಿರುವುದರಿಂದ ಧಾರ್ಮಿಕ ವರ್ಗದವರ ಅಧಿಕಾರವು ಬಿಗಿಗೊಂಡಿತು. ಇದರಿಂದ ೧೮ ಮತ್ತು ೧೯ನೆಯ ಶತಮಾನದಲ್ಲಿ ಇರಾನಿನ ಉಲೇಮಗಳು ಯಶಸ್ವಿಯಾಗಿ ಸ್ವಾಯತ್ತತೆಯನ್ನು ಪಡೆದು ಸಂಘಟಿತರಾದರು. ಇವರು ಖಾಜರ ಸಮಾಜದಲ್ಲಿ ಶೈಕ್ಷಣಿಕ ಆರ್ಥಿಕ, ಸಾಮಾಜಿಕ, ಧಾರ್ಮಿಕ ಮತ್ತು ನ್ಯಾಯಾಂಗ ರಂಗದಲ್ಲಿ ಅಧಿಕಾರವನ್ನು ಪಡೆದು ಅತ್ಯಂತ ಬಲಿಷ್ಠ ವರ್ಗವಾಗಿ ಬೆಳೆಯಿತು. ‘ಇಮಾಮ್’ನ ಅನುಪಸ್ಥಿತಿಯಲ್ಲಿ ಇವರೇ ಆ ಸ್ಥಾನವನ್ನು ಅಲಂಕರಿಸುತ್ತಿದ್ದರು.

ಶಿಕ್ಷಣ ಮತ್ತು ಧಾರ್ಮಿಕ ಸಂಸ್ಥೆಗಳ ಆಡಳಿತವನ್ನು ಈ ವರ್ಗವೇ ನೋಡಿಕೊಳ್ಳು ವುದರಿಂದ ಸಾಮಾನ್ಯ ಜನರು ಸಹ ಆಳುವ ವರ್ಗಕ್ಕಿಂತಲೂ ಈ ಉಲೇಮ ಸಮುದಾಯ ವನ್ನು ಗೌರವಿಸುತ್ತಿದ್ದರು. ಇವರು ಉಂಬಳಿ, ದತ್ತಿ ಮತ್ತು ಮಾನ್ಯಗಳಿಂದ ಸಾಕಷ್ಟು ಲಾಭ ಗಳಿಸುತ್ತಿದ್ದು ತಮ್ಮ ಅಧೀನದಲ್ಲಿರುವ ಭೂಮಿಯನ್ನು ರೈತರ ಸಹಾಯದಿಂದ ಕೃಷಿ ಉತ್ಪನ್ನಗಳನ್ನು ಬೆಳೆಸಿ ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದರು. ಈ ಕಾರಣಕ್ಕಾಗಿ ಸ್ಥಳೀಯ ಮಾರುಕಟ್ಟೆಯ ವ್ಯಾಪಾರಿಗಳೇ ಕಾರ್ಮಿಕರು, ಕಸುಬುದಾರರು ಇವರೊಂದಿಗೆ ಸಮನ್ವಯ ಸಂಬಂಧಗಳನ್ನು ಬೆಳೆಸಿಕೊಂಡಿದ್ದು ತಮಗೆ ಬೇಕಾದ ಕೃಷಿ ಉತ್ಪನ್ನಗಳನ್ನು, ಆಹಾರ ವಸ್ತುಗಳನ್ನು ಪಡೆಯುತ್ತಿದ್ದರು. ಇದರಿಂದ ಬರುವ ಆದಾಯವು ತಮ್ಮ ಸಂಪತ್ತನ್ನು ವೃದ್ದಿಸಿರುವುದಲ್ಲದೆ, ಸಮಾಜದಲ್ಲಿ ಆರ್ಥಿಕವಾಗಿ ಬಹಳ ಮುಂದುವರಿದ ವರ್ಗವಾಗಿ ರೂಪಾಂತರಗೊಂಡಿರುತ್ತಾರೆ. ಅಲ್ಲದೆ ಸರಕಾರಕ್ಕೂ ಜನಹಿತ ಕಾರ್ಯಕ್ರಮಕ್ಕೆ ಬೇಕಾದ ಖರ್ಚು ವೆಚ್ಚವನ್ನು ನೋಡಿಕೊಳ್ಳಲು ಆಡಳಿತ ವರ್ಗಕ್ಕೆ ಆರ್ಥಿಕವಾಗಿ ನೆರವಾದರು. ಇದು ಉಲೇಮ ವರ್ಗ ಮತ್ತು ಆಳುವ ವರ್ಗದ ನಡುವಿನ ಸಂಬಂಧವನ್ನು ಮತ್ತಷ್ಟು ಹತ್ತಿರಗೊಳಿಸಿರುವುದರಲ್ಲದೆ ಪಾದ್ರಿ ವರ್ಗವು ತಮ್ಮ ಸಾಮಾಜಿಕ ಸ್ಥಾನವನ್ನು ನಿರ್ಧರಿಸಿಕೊಂಡು ಸ್ವತಂತ್ರ ಸಮುದಾಯವಾಗಿ ಬೆಳೆಯಿತು. ಸ್ವಾಯತ್ತ ಗುಂಪಾಗಿದ್ದ ಇವರ ಸಂಘಟನೆ ಇಡೀ ದೇಶಕ್ಕೆ ಹರಡಿತ್ತು. ಆದ್ದರಿಂದ ಖಾಜರ್ ವಂಶೀಯ ಆಳ್ವಿಕೆಯ ಮೇಲೆ ಧಾರ್ಮಿಕ ಮತ್ತು ರಾಜಕೀಯ ಒತ್ತಡ ತರುವಲ್ಲಿ ಹಲವು ಬಾರಿ ಯಶಸ್ವಿಯಾಗಿದ್ದರು.

ಉಲೇಮಾಗಳ ಮತ್ತು ಖಾಜರ್ ಆಧಿಪತ್ಯದ ಸಂಬಂಧವು ಬಹಳ ಸೂಕ್ಷ್ಮವಾದು ದಾಗಿದೆ. ಶೇಷ್ಠಾಧಿಕಾರಿ ದುರ್ಬಲವಾಗಿದ್ದರೂ ಕೂಡ ರಾಜ್ಯ ಮತ್ತು ಪಾದ್ರಿ ವರ್ಗಗಳ ಸಂಬಂಧದಲ್ಲಿ ಮಹತ್ವಪೂರ್ಣ ಐತಿಹಾಸಿಕ ದೃಷ್ಟಾಂತವಿದೆ. ಏಕೆಂದರೆ ನೂರಾರು ವರ್ಷಗಳವರೆಗೆ ಉಲೇಮಗಳು ದೇಶದ ರಾಜಕೀಯ ವ್ಯವಹಾರದಲ್ಲಿ ಸಕ್ರಿಯವಾಗಿ ಪಾಲುಗೊಳ್ಳುತ್ತಿರಲಿಲ್ಲ. ಅವರ ನೀತಿಶಾಸ್ತ್ರದ ಪ್ರಕಾರ ಉಲೇಮಗಳು ದೇವಜ್ಞಾನ ಶಾಸ್ತ್ರ ಮತ್ತು ಧಾರ್ಮಿಕ ವ್ಯವಹಾರಗಳಿಗೆ ಮಾತ್ರ ಸೀಮಿತಗೊಂಡು ತಮ್ಮ ಜೀವನೋಪಾಯಕ್ಕೆ ಸಂಬಳಕ್ಕೆ, ಮಾನ್ಯಗಳಿಗೆ ಮತ್ತು ತಾವು ನಡೆಸುವ ಧಾರ್ಮಿಕ ಕೇಂದ್ರ ಮತ್ತು ಶಿಕ್ಷಣ ಸಂಸ್ಥೆಗಳ ಅಭಿವೃದ್ದಿಗೆ ಬೇಕಾದ ಆರ್ಥಿಕ ಸಹಾಯಕ್ಕೆ ಆಡಳಿತ ವರ್ಗವನ್ನೆ ಅವಲಂಬಿಸಿತ್ತು. ಆದರೆ ಹದಿನೆಂಟನೆಯ ಶತಮಾನದ ಕೊನೆಯಲ್ಲಿ ಖಾಜರ್ ದೊರೆ ಫಾತ್ ಆಲಿಶಾಹನು (೧೭೯೭-೧೮೩೪) ಧಾರ್ಮಿಕ ಕೇಂದ್ರಗಳ ಪುನರ್ ಸಂಘಟನೆ ಮಾಡಿ ಪರಿಣತ ಹಾಗೂ ನುರಿತ ಉಲೇಮಗಳಿಗೆ ಪ್ರತ್ಯಕ್ಷವಾಗಿ ಅಧಿಕಾರ ವಹಿಸಿಕೊಟ್ಟ ಅವರನ್ನು ಸರಕಾರ ಮತ್ತು ಸಾಮಾನ್ಯ ಜನರ ನಡುವಿನ ಮಧ್ಯವರ್ತಿಗಳನ್ನಾಗಿ ರೂಪಾಂತರಗೊಳಿಸಿದನು. ಮುಸ್ಲಿಂ ವರ್ಗದ ಮಹನೀಯರ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಗೌರವಿಸಿದ ಘಾತ್ ಆಲಿಶಾಹ, ಅವರಿಗೆ ಸಾಕಷ್ಟು ಭೂಮಿಯನ್ನು ದತ್ತಿ ರೂಪದಲ್ಲಿ ಬಿಟ್ಟು ಕೊಟ್ಟನು. ಅದರಿಂದ ಬಂದ ಆದಾಯವನ್ನು ತಮ್ಮ ಯೋಗಕ್ಷೇಮಕ್ಕೆ ಉಪಯೋಗಿಸಲು ಅವಕಾಶ ಮಾಡಿಕೊಟ್ಟು ತಮ್ಮದೇ ಆದ ಸೈನ್ಯವನ್ನು ನಿರ್ಮಿಸಿಕೊಳ್ಳುವ ಆದೇಶ ಹೊರಡಿಸಿದನು. ಇದರಿಂದ ಫಾತ್ ಆಲಿಶಾಹನ ರಾಜಕೀಯ ಪ್ರಾವೀಣ್ಯತೆಯ ದೌರ್ಬಲ್ಯವನ್ನು ಎತ್ತಿ ಹಿಡಿಯಿತು. ಇದರ ಪರಿಣಾಮವಾಗಿ ಆಡಳಿತ ವರ್ಗ ತನ್ನ ಉಳಿವಿಗೆ ಈ ಉಲೇಮ ವರ್ಗವನ್ನು ಅವಲಂಬಿಸಬೇಕಾಗಿ ಬಂದು, ನಂತರ ಅವರನ್ನು ಸ್ವತಂತ್ರ ಹಾಗೂ ಪ್ರಬಲ ವರ್ಗವೆಂದು ರಾಜಂಗ ಮನ್ನಿಸಿತು.

ಈ ಮಧ್ಯದಲ್ಲಿ ಐರೋಪ್ಯ ರಾಷ್ಟ್ರಗಳ ಪ್ರವೇಶವು ಖಾಜರ್ ವಂಶದ ಅಸ್ತಿತ್ವವನ್ನು ರೂಪಾಂತರಗೊಳಿಸಿ ರಾಜಂಗ ಮತ್ತು ಉಲೇಮ ವರ್ಗಗಳ ನಡುವಿನ ಸಂಬಂಧದಲ್ಲಿ ಬಿರುಕನ್ನು ಸೃಷ್ಟಿಸಿತು. ಯುರೋಪಿನ ಆಕ್ರಮಣವು ಮೊದಲ ಹಂತದಲ್ಲಿ ವಶಪಡಿಸಿಕೊಳ್ಳುವಿಕೆ ಮತ್ತು ವಸಾಹತನ್ನು ಸೃಷ್ಟಿಸುವ ಗುರಿ ಇಟ್ಟುಕೊಂಡಿತ್ತು. ೧೮ನೆಯ ಮತ್ತು ೧೯ನೆಯ ಶತಮಾನದುದ್ದಕ್ಕೂ ಉತ್ತರ ಭಾಗದ ಇರಾನ್‌ನ್ನು ರಷ್ಯಾದವರು ಸ್ವಾಧೀನಪಡಿಸಿಕೊಂಡರು. ೧೮೧೩ರ ‘ಗುಲಿಸ್ಥಾನ್ ಒಪ್ಪಂದವು’ ಜೋರ್‌ಜಿಯಾ, ದರಾಬಾಂಡ್, ಭಾಕು, ಶಿರ್‌ವಾನ್ ಮತ್ತು ಉಳಿದ ಅರ್‌ಮೇನಿಯಾ ಭಾಗಗಳ ಮೇಲೆ ರಷ್ಯಾದ ಹಿಡಿತವನ್ನು ಇರಾನ್ ಒಪ್ಪಿಕೊಂಡಿತು. ೧೮೨೬ರಲ್ಲಿ ರಷ್ಯನ್ನರು ತಾಬ್ರೀಜ್‌ನ್ನು ಸ್ವಾಧೀನಕ್ಕೆ ತಂದುಕೊಂಡರು. ೧೮೨೮ರ ‘ಟರ್ಕ್ ಮಾಂಚಯ್ ಒಪ್ಪಂದದ’ ಪ್ರಕಾರ ಇರಾನ್ ಸರಕಾರ ಇಡೀ ಅರ್‌ಮೇನಿಯಾ ಮತ್ತು ಕ್ಯಾಸ್‌ಪಿಯನ್ ಸಮುದ್ರವನ್ನು ರಷ್ಯಾಕ್ಕೆ ಬಿಟ್ಟುಕೊಟ್ಟು ಇರಾನಿನಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಬೆಳೆಸಲು ಅವಕಾಶ ಕೊಟ್ಟಿತು. ೧೮೬೪ ಮತ್ತು ೧೮೮೫ರ ನಡುವೆ ಹೊಸ ರೀತಿಯಲ್ಲಿ ರಷ್ಯಾದ ಪ್ರವೇಶ ಪ್ರಾರಂಭವಾಗಿ ಇರಾನಿನ ಸೆಂಟ್ರಲ್ ಏಷ್ಯಾದ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿತು. ರಷ್ಯಾದವರು ಉತ್ತರ ಇರಾನ್‌ನ ಆಕ್ರಮಣದಲ್ಲಿ ತೊಡಗಿದ್ದಾಗ ಬ್ರಿಟಿಷರು ದಕ್ಷಿಣ ಭಾಗದಲ್ಲಿ ಪ್ರವೇಶಿಸಿ ೧೮೫೬ರಲ್ಲಿ ಆಫ್‌ಘಾನಿಸ್ಥಾನವನ್ನು ವಶಪಡಿಸಿಕೊಂಡು ಅದರ ಸ್ವಾತಂತ್ರ್ಯವನ್ನು ಗೌರವಿಸಲು ಖಾಜರ್ ದೊರೆಗಳಿಗೆ ಒತ್ತಡ ಹೇರಲಾಯಿತು. ಹೀಗಾಗಿ ಬ್ರಿಟಿಷರಿಗೆ ದಕ್ಷಿಣ ಇರಾನ್ ನಲ್ಲಿ ರಾಜಕೀಯ ಮತ್ತು ವಾಣಿಜ್ಯ ಹಕ್ಕುಗಳನ್ನು ಕಲ್ಪಿಸಲಾಯಿತು. ಬ್ರಿಟಿಷರ ಧೋರಣೆ ಯಿಂದಾಗಿ ೧೯ನೆಯ ಶತಮಾನದ ಮಧ್ಯಭಾಗದಿಂದ ಬ್ರಿಟಿಷರು ದಕ್ಷಿಣ ಇರಾನ್ ಮತ್ತು ಆಫ್ ಘಾನಿಸ್ಥಾನಗಳಲ್ಲಿ ವಸಾಹತುಗಳಲ್ಲಿ ಸ್ಥಾಪಿಸಿದರು. ರಷ್ಯಾವು ಸೆಂಟ್ರಲ್ ಏಷ್ಯಾ ಮತ್ತು ಉಳಿದ ಉತ್ತರ ಇರಾನ್‌ನಲ್ಲಿ ವಸಾಹತನ್ನು ಸ್ಥಾಪಿಸಿತು. ಇಷ್ಟಾದರೂ ಈ ಎರಡು ರಾಷ್ಟ್ರಗಳು ಪ್ರತ್ಯಕ್ಷ ಆಳ್ವಿಕೆಯನ್ನು ಕೈಗೆತ್ತಿಕೊಳ್ಳದೆ ಇರಾನನ್ನು ತಮ್ಮ ‘‘ಸ್ವಭಾವ ವರ್ತುಲ’’ ಎಂದು ಸಾರಿದರು.

೧೮೫೭ರ ನಂತರದ ರಷ್ಯಾ ಮತ್ತು ಬ್ರಿಟಿಷರ ವಸಾಹತುಶಾಹಿ ಧೋರಣೆಯು ಆರ್ಥಿಕ ಲಾಭ ಗಳಿಸುವುದಾಗಿತ್ತು. ೧೮೭೨ರಲ್ಲಿ ಇರಾನ್ ಸರಕಾರ ಇವರಿಗೆ ಸಾಕಷ್ಟು ರಿಯಾಯಿತಿ ಗಳನ್ನು ಕೊಟ್ಟಿತು. ದಕ್ಷಿಣ ಭಾಗದ ಕರಾವಳಿ ಪ್ರದೇಶದ ಸುಂಕದ ವಸೂಲಿ ಹಕ್ಕನ್ನು ೨೪ ವರ್ಷದವರೆಗೆ ಒತ್ತೆ ಇಡಲಾಯಿತು. ರೈಲುದಾರಿ ನಿರ್ಮಾಣ, ಗಣಿಗಳ ಸ್ಥಾಪನೆ, ಕಾಲುವೆಗಳನ್ನು ನಿರ್ಮಿಸಿ ನೀರಾವರಿ ಯೋಜನೆಯ ಬೆಳವಣಿಗೆಗೆ, ಹಣಕಾಸು ಸಂಸ್ಥೆಗಳ ತೆರವು, ಟೆಲಿಗ್ರಾಫ್ ಮತ್ತು ರಸ್ತೆ ನಿರ್ಮಾಣದ ಹಕ್ಕನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟು ಒಂದಷ್ಟು ಲಾಭದ ಆದಾಯವನ್ನು ಇರಾನ್ ಸರಕಾರಕ್ಕೆ ಕಳುಹಿಸಿ ಕೊಡುವ ಪದ್ಧತಿಯನ್ನು ಅನುಷ್ಠಾನಕ್ಕೆ ತರಲಾಯಿತು. ಬ್ರಿಟಿಷರು ೧೮೮೯ರಲ್ಲಿ ‘‘ಇಂಪೀರಿಯಲ್ ಬ್ಯಾಂಕ್ ಆಫ್ ಪರ್ಸಿಯಾವನ್ನು’’ ತೆರೆದರು. ಬ್ರಿಟಿಷ್ ತಾಲ್‌ಬಾಟ್ ಕಂಪನಿಯು ಇರಾನಿನಲ್ಲಿ ಹೊಗೆಸೊಪ್ಪು ಉತ್ಪಾದನೆ ಮತ್ತು ಅದನ್ನು ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸರಬರಾಜು ಮಾಡಿ ಲಾಭ ಗಳಿಸುವ ಹಕ್ಕನ್ನು ಬಿಟ್ಟುಕೊಟ್ಟರು. ಇದಕ್ಕುತ್ತರವಾಗಿ ರಷ್ಯನ್ನರು ಕ್ಯಾಸ್‌ಪಿಯನ್ ಸಮುದ್ರದ ಮೀನುಗಾರಿಕೆ ಹಕ್ಕನ್ನು ಪಡೆದರು(೧೮೮೮) ಮತ್ತು ಅವರದ್ದೇ ಆದ ಹಣಕಾಸು ಸಂಸ್ಥೆಗಳನ್ನು ತೆರೆಯಲು ಇರಾನ್ ಸರಕಾರ ಒಪ್ಪಿಗೆ ನೀಡಿತು(೧೮೯೧). ಹೀಗಾಗಿ ೧೮೯೦ರ ದಶಕದಲ್ಲಿ ಇರಾನ್‌ನ ಉತ್ತರಭಾಗದ ವಾಣಿಜ್ಯ, ವ್ಯಾಪಾರ ಮತ್ತು ಕೃಷಿ ರಂಗದಲ್ಲಿ ಸಾಕಷ್ಟು ಬಂಡವಾಳವನ್ನು ಹೂಡಿ ಪ್ರಬಲ ರಾಷ್ಟ್ರವಾಗಿ ಬೆಳೆಯಿತು. ಈಗಾಗಲೇ ಹೇಳಿದ ಹಾಗೆ ಬ್ರಿಟನ್ ದಕ್ಷಿಣ ಭಾಗದಲ್ಲಿ ತನ್ನ ಆಧಿಪತ್ಯವನ್ನು ಸ್ಥಾಪಿಸಿ, ಇರಾನ್ ಸಂಪನ್ಮೂಲಗಳನ್ನು ಸೂರೆಗೊಳ್ಳುವ ಪ್ರಯತ್ನವನ್ನು ಅನುಷ್ಠಾನಕ್ಕೆ ತಂದಿತು. ಈ ರೀತಿಯ ವಸಾಹತೀಕರಣದಲ್ಲಿ ಬ್ರಿಟಿಷ್ ಮತ್ತು ರಷ್ಯನ್ನರು ಪರೋಕ್ಷವಾಗಿ ಸಮಾನತೆಯನ್ನು ಪಾಲಿಸಿ ವ್ಯಾಪಾರ ಕೇಂದ್ರಗಳಲ್ಲಿ ತಮ್ಮ ದೇಶದ ಸಿದ್ಧವಸ್ತುಗಳ ಮಾರಾಟವನ್ನು ಕೈಗೊಳ್ಳುವ ಜೊತೆಗೆ ಇರಾನಿನಲ್ಲಿರುವ ನೈಸರ್ಗಿಕ ಸಂಪನ್ಮೂಲಗಳನ್ನು ತಮ್ಮ ದೇಶಕ್ಕೆ ಇರಾನಿನಿಂದ ರಫ್ತು ಮಾಡಲಾಯಿತು. ಈ ಬೆಳವಣಿಗೆಯಲ್ಲಿ ಬ್ರಿಟಿಷರು ಮತ್ತು ರಷ್ಯನ್ನರು ಕಾನೂನುಬದ್ಧವಾಗಿ ತಮ್ಮ ಅಲಿಪ್ತ ಧೋರಣೆಯನ್ನು ಗೌರವಿಸಿ ತಮ್ಮ ತಮ್ಮ ಪ್ರದೇಶದಲ್ಲಿ ಪರಿಣಾಮಕಾರಿಯಗಿ ಕಾರ್ಯ ನಿರ್ವಹಿಸಲು ೧೯೦೭ರಲ್ಲಿ ಒಂದು ಸ್ನೇಹ ಸಂಬಂಧವನ್ನು ಬೆಳಸಲು ‘‘ಆಂಗ್ಲೋ-ರಷ್ಯನ್ ಒಪ್ಪಂದಕ್ಕೆ’’ ಸಹಿ ಹಾಕಿದರು. ಈ ಒಪ್ಪಂದದಿಂದ ಇಡೀ ಇರಾನ್ ದೇಶವು ವಸಾಹತೀಕರಣಗೊಂಡು ಇಬ್ಭಾಗವಾಯಿತು. ಇರಾನ್ ಇವರ ‘‘ಪ್ರಭಾವ ವರ್ತುಲ’ ಆಗಿ ವಿಭಜನೆಗೊಂಡವು. ಉತ್ತರಭಾಗವು ಕಾನೂನುಬದ್ಧವಾಗಿ ರಷ್ಯಾದ ಅಧೀನಕ್ಕೆ ಬಂದು, ದಕ್ಷಿಣ ಭಾಗದ ಬ್ರಿಟಿಷರ ಸ್ವಾಧೀನವಾಯಿತು. ಮಧ್ಯಭಾಗವನ್ನು ‘ಸೆಂಟ್ರಲ್ ಜೋನ್’ ಎಂದು ಪ್ರಕಟಿಸಿ ಖಾಜರ್ ಆಧಿಪತ್ಯದಡಿಯಲ್ಲಿ ಆಡಳಿತ ನಡೆಸುವ ತೀರ್ಮಾನಕ್ಕೆ ಬಂದರು. ಈ ಎರಡು ವಸಾಹತುಶಾಹಿ ರಾಷ್ಟ್ರಗಳ ನಡುವಿನ ವ್ಯಾಜ್ಯದಿಂದ ಯುರೋಪ್ ನಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗಬಹುದೆಂಬ ಭಯದಿಂದ ಇರಾನನ್ನು ಸ್ವತಂತ್ರ ವಾಗುಳಿಸಿ ಮೊನಾರ್ಕಿಯನ್ನು ಮುಂದುವರಿಸಿ ಆಧಿಪತ್ಯವನ್ನು ನಡೆಸಲು ಪರಸ್ಪರ ಒಪ್ಪಿಗೆ ಸೂಚಿಸಿದರು.

ಆಟೋಮನ್ ಸಾಮ್ರಾಜ್ಯದಂತೆ ಯುರೋಪಿಯನ್ನರ ರಾಜಕೀಯ ಮತ್ತು ಆರ್ಥಿಕ ಪ್ರವೇಶದಿಂದ ಇರಾನ್ ಸರಕಾರವು ಆಧುನೀಕರಣವನ್ನು ಕೈಗೆತ್ತಿಕೊಂಡು ರಾಜಕೀಯ ಸಂಸ್ಥೆಗಳ ಬದಲಾವಣೆಗೆ ಮಹತ್ವ ನೀಡಿತು. ಪಾಶ್ಚಾತ್ಯ ರಾಷ್ಟ್ರಗಳ ಪ್ರಭಾವದಿಂದ ಹೊಸ ಮೇಲುವರ್ಗ ಅಧಿಕಾರಿಗಳ ಗುಂಪು ಸರಕಾರದ ಮಟ್ಟದಲ್ಲಿ ಬೆಳೆದು ಸೈನಿಕ ಮತ್ತು ಸರಕಾರದ ವಿವಿಧ ಸಂಸ್ಥೆಗಳನ್ನು (ಐರೋಪ್ಯ ಮಾದರಿಯಲ್ಲಿ) ಆಧುನೀಕರಣಗೊಳಿಸಲು ಸುಧಾರಣಾ ನೀತಿಯನ್ನು ಅನುಷ್ಠಾನಗೊಳಿಸಿದವು. ೧೮೨೬ರಲ್ಲಿ ಒಂದು ಹೊಸ ಸೈನ್ಯಾಂಗವನ್ನು ರಚಿಸಲಾಯಿತು. ಆದರೆ ಉಲೇಮಾಗಳ ವಿರೋಧದಿಂದ ನಿರ್ಧಾರವನ್ನು ಹಿಂತೆಗೆದುಕೊಳ್ಳಲಾಯಿತು. ೧೮೪೮-೯೬ರ ನಡುವೆ ಆಡಳಿತವು ಪುನಃ ಸೈನ್ಯಾಂಗವನ್ನು ಪುನರ್ರಚನೆಗೆ ಆದೇಶ ನೀಡಿ ಅದಕ್ಕೆ ಬೇಕಾದ ಸಂಪನ್ಮೂಲವನ್ನು ನಗರ ಮತ್ತು ಹಳ್ಳಿ ಪ್ರದೇಶದ ಜನರಿಂದ ಕಂದಾಯದ ಮೂಲಕ ವಸೂಲಿ ಮಾಡಬೇಕೆಂಬ ತೀರ್ಮಾನ ತೆಗೆದುಕೊಂಡರು. ಸ್ಥಳೀಯ ಅಧಿಕಾರಿಗಳ, ಮಾಲೀಕರ ಮೇಲೆ ಇರುವ ಸರಕಾರದ ಅವಲಂಬನೆಯನ್ನು ಸಡಿಲುಗೊಳಿಸಲು ರಷ್ಯಾ ಮಾದರಿಯ ಆಡಳಿತದ ಪುನರ್ರ‍ಚನೆಗೆ ಆದೇಶ ನೀಡಲಾಯಿತು. ೧೮೫೧ರಲ್ಲಿ ತಾಂತ್ರಿಕ ವಿದ್ಯಾಲಯವನ್ನು ಸ್ಥಾಪಿಸಿ ಸೈನಿಕ ಮತ್ತು ಸರಕಾರದ ಅಧಿಕಾರಿಗಳಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಲಾಯಿತು. ನಂತರದ ದಶಕದಲ್ಲಿ ಪಾಶ್ಚಾತ್ಯ ಮಾದರಿಯ ತಂತ್ರಜ್ಞಾನಗಳ ಬೋಧನೆಯನ್ನು, ಶಾಂತಿ ಕಾಲೇಜು ಗಳನ್ನು ವಿದೇಶಿ ಮಿಶನರಿಗಳ ಮೂಲಕ ಪ್ರಸಾರ ಮಾಡಲಾಯಿತು. ೧೮೭೮-೧೮೮೦ರ ನಡುವೆ ಆಸ್ಟ್ರಿಯ ಮತ್ತು ರಷ್ಯಾ ದೇಶಗಳ ಸಲಹೆಗಾರರು ಅಶ್ವಸೇನೆ ಮತ್ತು ಸೈನ್ಯಾಧಿಪತಿ ಗಳಿಗೆ ತರಬೇತಿ ನೀಡಿದರು.

ಮೇಲೆ ಪ್ರಸ್ತಾಪಿಸಲಾದ ೧೯ನೆಯ ಶತಮಾನದ ಸುಧಾರಣೆಗಳು ಆಧುನಿಕ ಇಸ್ಲಾಮಿ ಚಿಂತಕರು ಮತ್ತು ಪಾಶ್ಚಾತ್ಯೀಕರಣಗೊಂಡ ವಿದ್ವಾಂಸರ ಗುಂಪನ್ನು ಸೃಷ್ಟಿ ಮಾಡಿತು. ಇವರು ಇರಾನಿನ ಆಧುನೀಕರಣಕ್ಕೆ ಬೆಂಬಲ ವ್ಯಕ್ತಪಡಿಸಿ, ಪರಕೀಯರ ದಾಳಿ, ಪ್ರವೇಶ ಮತ್ತು ಲೂಟಿಯನ್ನು ತಡೆ ಹಿಡಿಯಲು ಮತ್ತು ಜನರ ಜೀವನಕ್ರಮವನ್ನು ವೃದ್ದಿಸಲು ದೇಶೀಯ ಸಂಸ್ಥೆಗಳ ಆಧುನೀಕರಣ ಒಂದೇ ಮಾರ್ಗ ಎಂದು ಪರಿಗಣಿಸಿದರು. ಐರೋಪ್ಯ ರಾಷ್ಟ್ರದಲ್ಲಿ ಶಿಕ್ಷಣ ಪಡೆದ ವಿದ್ಯಾವಂತರು, ವಿದೇಶಿ ರಾಷ್ಟ್ರಗಳೊಂದಿಗೆ ಅನ್ಯೋನ್ಯ ಸಂಬಂಧ ಬೆಳೆಸಿಕೊಂಡ ಮೇಲು ವರ್ಗದ ಸರಕಾರಿ ಅಧಿಕಾರಿಗಳು ಮತ್ತು ಕ್ರಾಂತಿಕಾರಿ ಚಿಂತನೆಗಳಿಂದ ಪ್ರಭಾವಿತರಾದ ಹಲವು ಧಾರ್ಮಿಕ ವರ್ಗದವರು ಈ ಹೊಸ ಗುಂಪಿನ ಸದಸ್ಯರಾಗಿದ್ದರು. ಜೊತೆಗೆ ಇರಾನ್‌ನಲ್ಲಿ ಸೃಷ್ಟಿಯಾದ ಬುರ್ಷ್ವಾ ವರ್ಗವು ಸಹ ವಿದೇಶಿ ಬಂಡವಾಳಶಾಹಿಗಳ ಮತ್ತು ವ್ಯಾಪಾರಿಗಳ ವಾಣಿಜ್ಯ ಚಟುವಟಿಕೆಗಳಿಂದಲೇ ಪ್ರಭಾವಿತರಾಗಿ ಇರಾನ್ ಮತ್ತು ವಿದೇಶಿ ಮಾರುಕಟ್ಟೆಯ ನಡುವಿನ ವ್ಯಾಪಾರದಲ್ಲಿ ಮಧ್ಯವರ್ತಿಗಳಾಗಿದ್ದರು.

ಆದರೆ ಸರಕಾರದ ಮತ್ತು ಬೌದ್ದಿಕ ಸುಧಾರಕರು ದೇಶದ ವಿಸ್ತರಣೆಗೆ ಹೋಲಿಸಿದರೆ ಅವರ ಪ್ರಭಾವವು ತುಂಬಾ ಸೀಮಿತವಾಗಿತ್ತು. ಅಧಿಕಾರ ವಿಕೇಂದ್ರಿಕರಣಕ್ಕೆ ಮಹತ್ವ ಕೊಡುತ್ತಿರುವ ಇರಾನ್‌ನಲ್ಲಿ ಸರಕಾರ ಪುನರ್ರಚನೆಯಿಂದ ಕೇಂದ್ರೀಕೃತ ರಾಜಂಗವನ್ನು ಸೃಷ್ಟಿಸುವುದು ಜಟಿಲವಾದುದಾಗಿದೆ. ಏಕೆಂದರೆ ಬೌದ್ದಿಕ ಸುಧಾರಣೆಯು ಆಸ್ಥಾನದ ಕೆಲವು ಅಧಿಕಾರಿಗಳು ಮತ್ತು ಪಾಶ್ಚಾತ್ಯ ವಿದ್ಯಾವಂತ ಇರಾನಿ ಪತ್ರಕರ್ತರಿಗೆ ಮಾತ್ರ ಸೀಮಿತ ವಾಗಿತ್ತು. ಈ ಪ್ರಭಾವವು ಜನಸಾಮಾನ್ಯರನ್ನು ತಲುಪದೆ ಸುಧಾರಣೆ ನೀತಿಯ ಅನುಷ್ಠಾನದ ಮಾರ್ಗದಲ್ಲಿ ಅಡಚಣೆ ಉಂಟಾಗಿತ್ತು. ಏಕೆಂದರೆ ಖಾಜರ್ ವಂಶದವರೇ ತಮ್ಮ ಅಧಿಕಾರಾಧಿಪತ್ಯದಲ್ಲಿ ಹಂಚುವಿಕೆಯನ್ನು ಎದುರಿಸಬೇಕೆಂಬ ಭಯದ ವಾತಾವರಣ ವಿದ್ದುದರಿಂದ ಅವರು ತಮ್ಮ ಶ್ರೇಷ್ಠಾಧಿಕಾರವನ್ನು ರಕ್ಷಿಸಿಕೊಳ್ಳಲು ಬ್ರಿಟಿಷ್ ಮತ್ತು ರಷ್ಯಾದ ವಸಾಹತುಗಾರರನ್ನು ಅವಲಂಬಿಸಿದ್ದರು. ಜನಸಾಮಾನ್ಯರಲ್ಲಿಯೂ ಈ ಹೊತ್ತಿಗೆ ರಾಜಕೀಯ ಪ್ರಜ್ಞೆ ಮೂಡಿರುವ ಹಿನ್ನೆಲೆಯಲ್ಲಿ ಅವರಿಂದ ರಾಜಂಗದ ಪರವಾಗಿ ಹೆಚ್ಚುವರಿ ಆದಾಯ ಅಥವಾ ಕಂದಾಯ ರೂಪದಲ್ಲಿ ವಸೂಲಿ ಮಾಡಲು ಸಾಧ್ಯವಾಗಲಿಲ್ಲ ಮತ್ತು ದೇಶದ ಸಂಪತ್ತನ್ನು ತಮ್ಮದಾಗಿ ರೂಪಾಂತರಗೊಳಿಸಲು ಸಹ ಖಾಜರ್ ಅಧಿಕಾರಿಗಳು ವಿಫಲರಾದರು. ಜೊತೆಗೆ ಬೇರೆ ಬೇರೆ ಕುಲದ ಅಧಿಕಾರಿಗಳು ಸೈನ್ಯಾಂಗದ ಕೇಂದ್ರೀಕರಣವನ್ನು ವಿರೋಧಿಸಿದರು. ಅಲ್ಲದೆ, ಸರಕಾರದ ಬೆನ್ನೆಲುಬಾದ ಪಾದ್ರಿಗಳು ಜತ್ಯತೀತತೆಯನ್ನು ಸಂಘಟನಾತ್ಮಕವಾಗಿ ವಿರೋಧಿಸಿದರು. ರಷ್ಯಾ ದೇಶದ ಬಂಡವಾಳ ಶಾಹಿಗಳು ನಿರ್ಮಿಸುವ ರೈಲು ದಾರಿಯ ಕಾರ್ಯವು ಹಿನ್ನಡೆಯನ್ನು ಕಂಡುಕೊಂಡಿತು. ಇಂತಹ ಒತ್ತಡದಿಂದ ಖಾಜರ್ ದೊರೆಗಳ ಸುಧಾರಣೆಯು ರಾಜಂಗದ ಕೇಂದ್ರೀಕರಣಕ್ಕೆ ಮತ್ತು ವಿದೇಶೀಯರ ಪ್ರವೇಶ ಹಾಗೂ ಆಕ್ರಮಣವನ್ನು ತಡೆಹಿಡಿಯಲು ಯಶಸ್ವಿಯಾಗಲಿಲ್ಲ.

ಈ ದೃಷ್ಟಿಯಲ್ಲಿ ವಿಫಲತೆ ಕಂಡುಬಂದರೂ ಸಹ ವಿದೇಶಿಯರ ಪ್ರವೇಶ ಮತ್ತು ಕ್ರಾಂತಿಕಾರಿ ಸುಧಾರಣೆಯು ಹಳ್ಳಿ ಮತ್ತು ನಗರ ಪ್ರದೇಶದಲ್ಲಿ ಚಳುವಳಿಯ ವಾತಾವರಣವನ್ನು ಸೃಷ್ಟಿಸಿತು. ಪಾಶ್ಚಾತ್ಯೀಕರಣದಿಂದ ಪ್ರಭಾವಕ್ಕೊಳಗಾದ ವಿದ್ವಾಂಸರು ಖಾಜರ್ ಆಧಿಪತ್ಯದ ಭ್ರಷ್ಟಾಚಾರವನ್ನು ವಿರೋಧಿಸಿ ನಿರಂಕುಶಪ್ರಭುತ್ವ ಆಡಳಿತಕ್ರಮವನ್ನು ಬೇರ್ಪಡಿಸಲು ಕರೆ ನೀಡಿದರು. ಸ್ಥಳೀಯ ವ್ಯಾಪಾರಿಗಳು, ಕಸುಬುದಾರರು, ವಿದೇಶಿಯರು ಪ್ರವೇಶ ಮತ್ತು ಪೈಪೋಟಿಯಿಂದ ತೊಂದರೆಯನ್ನು ಎದುರಿಸಬೇಕಾಯಿತು. ಹಾಗೆಯೇ, ರಾಜಂಗ ಪ್ರಾಯೋಜಿತ ಏಕಸ್ವಾಮಿತ್ವ ಪಡೆದ ಗುಂಪುಗಳು ಮತ್ತು ಉಲೇಮಗಳು, ಬಾಹ್ಯಶಕ್ತಿಗಳು ಮತ್ತು ಖಾಜರ್ ಸರಕಾರದ ನೀತಿಗಳ ವಿರುದ್ಧ ದಂಗೆ ಏಳಲು ಸಿದ್ದರಾದರು. ವಿದೇಶಿಯರ ದಬ್ಬಾಳಿಕೆ, ಶೋಷಣೆ, ಲೂಟಿ ಮತ್ತು ಅದರೊಂದಿಗೆ ಖಾಜರ್ ರಾಜಂಗದ ಸಂಮಿಲನವನ್ನು ವಿರೋಧಿಸುವಲ್ಲಿ ಉಲೇಮಗಳು ಮುಂದಾಳತ್ವ ವನ್ನು ವಹಿಸಿದರು. ೧೮೨೬ರಲ್ಲಿಯೇ ಪಾಶ್ಚಾತ್ಯ ಮಾದರಿಯ ಸೈನ್ಯಾಂಗವನ್ನು ಸ್ಥಾಪಿಸುವ ಅಭಿಪ್ರಾಯವು ಉಲೇಮ ವರ್ಗಗಳನ್ನು ಕೆರಳಿಸಿದ್ದು ನಂತರ ಅವರ ಒತ್ತಡದಿಂದ ಸರಕಾರವು ನಿರ್ಧಾರವನ್ನು ಕೈಬಿಟ್ಟಿತ್ತು ಮತ್ತು ೧೮೨೮ರ ಕೌಕೇಶೀಯದಲ್ಲಿನ ರಷ್ಯಾದ ವಸಾಹತುಗಾರರ ಪ್ರದೇಶದ ವಿರುದ್ಧ ಇದೇ ಉಲೇಮಗಳು ದೇಶದಾದ್ಯಂತ ಪ್ರಕ್ಷುಬ್ಧ ವಾತಾವರಣವನ್ನು ಸೃಷ್ಟಿಸಿ ವಿರೋಧಿ ಚಳುವಳಿಯನ್ನು ಪ್ರಾಯೋಜಿಸಿದ್ದರು. ಜೊತೆಗೆ ಮಹಮದ್ ಶಾಹ(ಖಾಜದ್ ದೊರೆ ೧೮೩೪-೪೮)ನ ಉಲೇಮ ವಿರೋಧ ಕಾಯ್ದೆಗಳು ಹಾಗೂ ಪಾಶ್ಚಾತ್ಯ ಮಾದರಿಯ ಸರಕಾರದ ಪುನರ್ರಚನಾ ಪ್ರಯತ್ನವು ವಾತಾವರಣವನ್ನು ಮನ್ನಷ್ಟು ಹದಗೊಳಿಸಿತು. ರಾಜಂಗದ ವ್ಯವಸ್ಥೆಯ ಕೇಂದ್ರೀಕರಣ ಉಲೇಮಗಳನ್ನು, ಧಾರ್ಮಿಕ ನೇಕಾರರು, ಸಂಪ್ರದಾಯವಾದಿಗಳು ಮತ್ತು ಸ್ಥಳೀಯ ಮಹನೀಯರ ಮನಸ್ಸನ್ನು ಕೆಣಕಿತು.

ರಾಜಂಗ ಮತ್ತು ಉಲೇಮಗಳ ನಡುವಿನ ವ್ಯಾಜ್ಯವು ನಾಸಿರ್-ಅಲ್-ದಿನ್ ಶಾಹನ ಕಾಲದಲ್ಲಿ ಉಲ್ಬಣಗೊಂಡಿತು. ಏಕೆಂದರೆ ಇವನ ಅಧಿಕಾರದಲ್ಲಿ ಉಲೇಮಗಳ ಅಧಿಕಾರ ವನ್ನು ಸೀಮಿತಗೊಳಿಸಿ ರಾಜಂಗದ ಆಧಿಪತ್ಯದಿಂದ ಧರ್ಮವನ್ನು ಬೇರ್ಪಡಿಸಿ ಪ್ರಬಲಗೊಳಿಸುವ ಸಲುವಾಗಿ ಹೊಸ ನ್ಯಾಯಾಲಯಗಳನ್ನು ತೆರೆಯಲಾಯಿತು. ಮಸೀದಿ ಗಳಲ್ಲಿ, ಧಾರ್ಮಿಕ ಕೇಂದ್ರಗಳಲ್ಲಿ ಮತ್ತು ಪವಿತ್ರ ಸ್ಥಳಗಳ ಮಾನ್ಯಗಳು ಮತ್ತು ಭೂಮಿಯ ಮೇಲಿರುವ ಉಲೇಮಗಳ ಹಿಡಿತ ಮತ್ತು ಹಕ್ಕನ್ನು ಏಕಾ ಏಕೀ ಹಿಂದಕ್ಕೆ ತೆಗೆದುಕೊಂಡು ಅವರ ಭತ್ಯೆಗಳನ್ನು ಕಡಿತಗೊಳಿಸಿ ಜತ್ಯತೀತ ಶಿಕ್ಷಣ ಸಂಸ್ಥೆಗಳನ್ನು ಸರಕಾರದ ಮೂಲಕ ಪ್ರಾಯೋಜಿಸಲಾಯಿತು. ಇದರಿಂದ ಉಲೇಮ ವರ್ಗಗಳ ರಾಜಕೀಯ ಮತ್ತು ಆರ್ಥಿಕ ಸ್ಥಿತಿ ಮತ್ತಷ್ಟು ಕುಗ್ಗಿತು.

ಇದಕ್ಕುತ್ತರವಾಗಿ ೧೯ನೆಯ ಶತಮಾನದ ಮಧ್ಯಭಾಗದಿಂದ ಉಲೇಮ ವರ್ಗಗಳು ಖಾಜರ್ ವಂಶದ ಶ್ರೇಷ್ಠಾಧಿಪತ್ಯದ ವಿರುದ್ಧ ಸುಸಂಘಟಿತ ಹೊಸ ಧಾರ್ಮಿಕ ಚಳುವಳಿಗಳನ್ನು ದೇಶದಾದ್ಯಂತ ಪ್ರಾರಂಭಿಸಿದರು. ಇರಾನ್ ಸರಕಾರವು ೧೮೭೦ರ ದಶಕದಲ್ಲಿ ವಿದೇಶಿಯರಿಗೆ ಕೊಟ್ಟ ರಿಯಾಯಿತಿಗಳ ಅನುಷ್ಠಾನದ ಹೊತ್ತಿಗೆ ವಿದೇಶೀ ವಿರೋಧಿ ಪ್ರಜ್ಞೆ ಉಲೇಮ ವರ್ಗದಲ್ಲಿ ಹುಟ್ಟಿಕೊಂಡು ಚಳುವಳಿಯನ್ನು ಪ್ರಾರಂಭಿಸಿದರು. ಇದರಿಂದಾಗಿ ಉಲೇಮ ವರ್ಗ ಮತ್ತು ಖಾಜರ್ ಶ್ರೇಷ್ಠಾಧಿಪತ್ಯದ ನಡುವಿನ ವ್ಯಾಜ್ಯದ ಮೂಲವು ಹೊರಬಿತ್ತು. ಇಂತಹ ರಿಯಾಯಿತಿಗಳನ್ನು ವಿದೇಶಿಯರಿಗೆ ಕೊಟ್ಟಿದ್ದನ್ನು ವಿರೋಧಿಸಿದ ಉಲೇಮಗಳು ಇದು ದೇಶವನ್ನು ವಿದೇಶಿಯರಿಗೆ ಮಾರಾಟ ಮಾಡುವ ಧೋರಣೆ ಎಂದು ಬಣ್ಣಿಸಿದರು. ಆದರೆ ಖಾಜರ್ ಸರಕಾರ ಒತ್ತಡದ ಪರಿಣಾಮವನ್ನು ಅರ್ಥೈಸಿಕೊಂಡು ೧೮೭೩ರಲ್ಲಿ ವಿದೇಶಿಯರಿಗೆ ಕೊಟ್ಟ ರಿಯಾಯಿತಿಗಳನ್ನು ಹಿಂತೆಗೆದು ಕೊಂಡಿತು. ವಿದೇಶಿ ವಿರೋಧಿ ಚಳುವಳಿಗಳು ಮುಂದುವರಿದು, ೧೮೯೦ರಲ್ಲಿ ವಿದೇಶಿಯರು ಗಿಟ್ಟಿಸಿಕೊಂಡ ಹೊಗೆಸೊಪ್ಪು ಉತ್ಪಾದನೆ ಮತ್ತು ಮಾರಾಟದ ಏಕಸ್ವಾಮಿತ್ವ ವನ್ನು ಉಲೇಮಗಳು, ವ್ಯಾಪಾರಿಗಳು, ವರ್ತಕರು, ರೈತರು ಸಂಘಟಿತರಾಗಿ ದೇಶದ ಉದ್ದಗಲಕ್ಕೂ ಸಂಘಟನಾತ್ಮಕವಾಗಿ ಚಳುವಳಿಯನ್ನು ಪ್ರಾರಂಭ ಮಾಡಿದರು. ಇದು ಆಧುನಿಕ ಯುಗದಲ್ಲಿ ಮೊದಲ ಬಾರಿಗೆ ಉಲೇಮಗಳ ಮುಂದಾಳತ್ವದಲ್ಲಿ ನಡೆದ ಮೊದಲ ಚಳುವಳಿಯಾಗಿ, ಜಗತ್ತಿನಾದ್ಯಂತ ಸಂಪ್ರದಾಯ ಮುಸ್ಲಿಂ ಜನರನ್ನು ಎಚ್ಚರಿಸಿತು.

ಈ ಚಳುವಳಿಯು ತೀವ್ರರೂಪ ತಾಳಲು ಸರಕಾರ ಮತ್ತು ವಿದೇಶಿ ತಾಲ್‌ಬಾಟ್ ಕಂಪನಿಯೇ ಕಾರಣವಾಗಿತ್ತು. ಅಂದರೆ ಬ್ರಿಟಿಷ್ ‘ತಾಲ್‌ಬಾಟ್’ ಕಂಪನಿಯ ಹೊಗೆಸೊಪ್ಪು ಉತ್ಪಾದನೆ ಮತ್ತು ಮಾರಾಟದಲ್ಲಿ ಅನುಭವಿಸುವ ಏಕಸ್ವಾಮಿತ್ವವು ಇರಾನ್‌ನ ಎಲ್ಲಾ ವರ್ಗಕ್ಕೂ ಗಂಭೀರವಾದ ತೊಂದರೆಯನ್ನು ತಂದೊಡ್ಡಿದೆ. ಈ ರಿಯಾಯಿತಿಯ ಪ್ರಕಾರ ಕಂಪನಿಯು ಇರಾನ್‌ನಲ್ಲಿ(ದಕ್ಷಿಣ ಭಾಗದಲ್ಲಿ) ಹೊಗೆಸೊಪ್ಪನ್ನು ಬೆಳೆಸಿ ಅದನ್ನು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಹಕ್ಕನ್ನು ಪಡೆದುಕೊಂಡಿತು. ಇದಕ್ಕೆ ಬೇಕಾದ ಫಲವತ್ತಾದ ಕೃಷಿ ಭೂಮಿಯನ್ನು ಇರಾನ್ ಸರಕಾರವೇ ಕಂಪನಿಗೆ ಬಿಟ್ಟು ಕೊಡುವುದಾಗಿ ಒಪ್ಪಿಕೊಂಡು ತಾಲ್‌ಬಾಟ್ ಕಂಪನಿಯು ಬಾಡಿಗೆಯಾಗಿ ಸುಮಾರು ೧೫,೦೦೦ ಪೌಂಡನ್ನು ಇರಾನ್ ಸರಕಾರಕ್ಕೆ ಸಲ್ಲಿಸುತ್ತಿತ್ತು. ಈ ರೀತಿಯ ಸುಮಾರು ವಸಾಹತುಶಾಹಿ ಕಾರ್ಯಾಚರಣೆಯು ನಂತರ ದರೋಡೆ, ಲೂಟಿ ಮತ್ತು ಶೋಷಣೆಗಳಿಗೆ ಅವಕಾಶ ಕಲ್ಪಿಸಿತು. ಇದು ಇರಾನ್ ಸಮಾಜದ ಎಲ್ಲ ವರ್ಗದವರಿಗೆ ಅಸಮಾಧಾನ ಉಂಟುಮಾಡಿ ಚಳುವಳಿಗಿಳಿಯುಂತೆ ಮಾಡಿತು. ಮೂಲಭೂತವಾಗಿ ಇರಾನ್ ಸರಕಾರ ಮತ್ತು ತಾಲ್‌ಬಾಟ್ ಕಂಪನಿಯ ಒಪ್ಪಂದದ ಪ್ರಕಾರ ಇರಾನ್ ಯಾವ ಬಂಡವಾಳ ಹೂಡದೆಯೂ ವರ್ಷಕ್ಕೆ ೧೫,೦೦೦ ಪೌಂಡನ್ನು ವಿದೇಶಿಯರಿಂದ ಪಡೆಯುತ್ತಿತ್ತು. ಆದರೆ ಕಂಪನಿಯ ಒಟ್ಟು ವರ್ಷದ ನಿವ್ವಳ ಲಾಭ ೫ ಮಿಲಿಯ ಪೌಂಡ್. ಇದಕ್ಕೆ ಹೋಲಿಸಿದರೆ ಕಂಪನಿ ಕೊಡುವ ಬಾಡಿಗೆ ೧೫,೦೦೦ ಪೌಂಡ್ ಒಂದು ಜುಜುಬಿ ಮೊತ್ತವಾಗಿತ್ತು. ಈ ರೀತಿಯ ಅಸಮತೋಲನ ಧೋರಣೆಯನ್ನು ಉಲೇಮಗಳು ಮೊತ್ತ ಮೊದಲ ಬಾರಿಗೆ ಸಂಘಟನೆಯ ರೂಪದಲ್ಲಿ ವಿರೋಧಿಸಿದರು. ಇವರ ಮುಂದಾಳತ್ವವನ್ನು ಪ್ರೋ ಭೂಮಾಲೀಕರು, ವ್ಯಾಪಾರಿಗಳು, ವರ್ತಕರು ರೈತಾಪಿ ಜನರ ಚಳುವಳಿಯು ಕ್ರಾಂತಿಕಾರಿ ರೂಪ ತಾಳಲು ವಿಶೇಷ ಆಸಕ್ತಿಯನ್ನು ತೆಗೆದುಕೊಂಡು ಖಾಜರ್ ವಂಶೀಯ ಆಧಿಪತ್ಯದ ಅವನತಿಗೆ ಕಾರಣರಾದರು. ಇದರ ಜೊತೆಗೆ ಈಗಾಗಲೇ ಹೇಳಿದ ಹಾಗೆ ವಿದೇಶಿಯರ ಪ್ರವೇಶದೊಂದಿಗೆ ದೇಶೀಯ ಚಿಂತನೆಗಳು, ಸಂಸ್ಥೆಗಳು ರೂಪಾಂತರಗೊಂಡವು. ಬದಲಾದ ಈ ವಾತಾವರಣದಲ್ಲಿ ವಿದ್ಯಾವಂತ ವಗರದ ಪ್ರಭಾವದಿಂದ ಹಳೆ ಪದ್ಧತಿಗಳನ್ನು, ಆಳ್ವಿಕೆಯ ಕ್ರಮವನ್ನು, ರಾಜಂಗ ನೀತಿಯನ್ನು ಕೈಬಿಟ್ಟು ಹೊಸ ಸಮಾಜ ಕಟ್ಟುವ ನಿರ್ಧಾರವು ದೇಶದ ಎಲ್ಲ ವರ್ಗಗಳ ಒಕ್ಕೊರಲ ಧ್ವನಿಯಾಗಿ ೨೦ನೆಯ ಶತಮಾನದ ಮೊದಲ ಭಾಗದಲ್ಲಿ ಕ್ರಾಂತಿಯ ರೂಪ ತಾಳಿತು.

 

ಪರಾಮರ್ಶನಗ್ರಂಥಗಳು

೧. ಹಾಲ್ಟ್ ಪಿ.ಎಂ., ೧೯೭೮. ದಿ ಕೇಂಬ್ರಿಡ್ಜ್ ಹಿಸ್ಟರಿ ಆಫ್ ಇಸ್ಲಾಂ, ಕೇಂಬ್ರಿಡ್ಜ್

೨. ಅಲನ್ ರಿಚರ್ಡ್, ೧೯೭೪. ಇಂಪೀರೀಯಲಿಸಂ ಆಂಡ್ ನೇಶನಾಲಿಸಂ ಇನ್ ದಿ ಫರ್ಟೈಲ್ ಕ್ರೆಸೆಂಟ್, ನ್ಯೂಯಾರ್ಕ್