ಚರಿತ್ರೆ ಬರವಣಿಗೆ ಕ್ರಮದಲ್ಲಿ ಮಹತ್ತರ ಬದಲಾವಣೆಯನ್ನು ಕಳೆದ ಶತಮಾನದಲ್ಲಿ ಮತ್ತು ಈ ಶತಮಾನದ ಮೊದಲ ದಶಕದಲ್ಲಿ ನೋಡಬಹುದು. ನಮ್ಮ ದೇಶದ ಅಥವಾ ನಮ್ಮ ಪ್ರದೇಶದ ಚರಿತ್ರೆ ಬರೆಯುವ ಸಂದರ್ಭದಲ್ಲಿ ನಮಗೆ ನಮ್ಮನ್ನು ಅರ್ಥ ಮಾಡಿಕೊಳ್ಳುವ ಚರಿತ್ರೆಯನ್ನು ರೂಪಿಸಲು ಸಾಧ್ಯವಾಗಲಿಲ್ಲವಲ್ಲ ಎಂಬ ವಿಚಾರ ಗಮನಾರ್ಹವಾದುದು. ವಸಾಹತುಶಾಹಿ ಚರಿತ್ರೆಕಾರರು ಹಾಕಿಕೊಟ್ಟ ಚೌಕಟ್ಟಿನೊಳಗೆ ನಮ್ಮ ಬಹುತೇಕ ಚರಿತ್ರೆ ಬರವಣಿಗೆಗಳು ರೂಪಿಸಲ್ಪಟ್ಟಿವೆ. ವಸಾಹತುಶಾಹಿ ಚರಿತ್ರೆ ಬರವಣಿಗೆ ಯನ್ನು ಉಗ್ರವಾಗಿ ಟೀಕಿಸಿದ ರಾಷ್ಟ್ರೀಯವಾದಿಗಳಾಗಲಿ ಅಥವಾ ಈ ಎರಡೂ ಕ್ರಮಗಳನ್ನು ತೀವ್ರವಾಗಿ ವಿಶ್ಲೇಷಣೆಗೆ ಒಳಪಡಿಸಿದ ಮಾರ್ಕ್ಸ್‌ವಾದಿ ಬರವಣಿಗೆ ಕ್ರಮವಾಗಲಿ ಇದಕ್ಕೆ ಹೊರತಲ್ಲ. ವಸಾಹತೋತ್ತರ ದಿನಗಳಲ್ಲಿ ಹೊರಬಂದ ರಾಷ್ಟ್ರೀಯವಾದಿ ಮತ್ತು ಮಾರ್ಕ್ಸ್‌ವಾದಿ ಹಿನ್ನೆಲೆಯ ಅತ್ಯದ್ಭುತ ಕೃತಿಗಳೆಲ್ಲ ಇದಕ್ಕೆ ಸಾಕ್ಷಿಯಾಗಿವೆ. ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವ ಸಂದರ್ಭದಲ್ಲಾಗಲಿ, ವಸಾಹತು ವಿರೋಧಿ ಹೋರಾಟದ ಸಂದರ್ಭದಲ್ಲಾಗಲಿ, ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಾಗಲಿ ಅಥವಾ ಹೊಸ ರಾಷ್ಟ್ರದ ನಿರ್ಮಾಣದ ಸಂದರ್ಭದಲ್ಲಾಗಲಿ ಈ ಕ್ರಮಗಳೆಲ್ಲ ಭಾರತದ ನೆಲದಲ್ಲಿ ಅಥವಾ ಹೊರಗೆ ದೊರೆತ ಎಲ್ಲ ಬಗೆಯ ಲಭ್ಯ ಆಕರಗಳನ್ನು ಆಧರಿಸಿ ಚರಿತ್ರೆಯನ್ನು ಬರೆಯುವ ಪ್ರಯತ್ನವನ್ನು ಮಾಡಿದವು. ಸೈದ್ಧಾಂತಿಕವಾಗಿ ವಿರೋಧಾಭಾಸಗಳಿದ್ದರೂ ರಾಷ್ಟ್ರೀಯವಾದಿ ಹಾಗೂ ಮಾರ್ಕ್ಸ್‌ವಾದಿ ಬರಹಗಳು ಆಯಾ ವಿದ್ವಾಂಸರು ಆಶಿಸಿದ ಭವಿಷ್ಯದ ಭಾರತವನ್ನು ಕಟ್ಟಲು ಚರಿತ್ರೆಯ ಬರವಣಿಗೆಗೆ ಮಾರು ಹೋದದ್ದನ್ನು ಗಮನಿಸಬಹುದು.

ಚರಿತ್ರೆಯನ್ನು ತಳದಿಂದ ನೋಡಬೇಕು ಎನ್ನುವ ಸಬಾಲ್ಟರ‍್ನ್ ಚರಿತ್ರೆಕಾರರೂ ಇದಕ್ಕೆ ಹೊರತಾಗಿಲ್ಲ. ಸಬಾಲ್ಟರ‍್ನ್ ಚರಿತ್ರೆ ಬಿಟ್ಟು ಉಳಿದೆಲ್ಲ ಚರಿತ್ರೆಗಳು ‘ಎಲೈಟ್’ ಚರಿತ್ರೆ ಎಂದು ಬಲವಾಗಿ ನಂಬಿದ ಸಬಾಲ್ಟರ‍್ನ್ ಚರಿತ್ರೆಕಾರರು ಕೂಡ ಈ ನಿಟ್ಟಿನಲ್ಲಿ ಮಾರ್ಕ್ಸ್‌ವಾದಿ ಚರಿತ್ರೆಕಾರರಂತೆ ‘ಒಪ್ಪಿತ ಚರಿತ್ರೆಗೆ’ ಸವಾಲುಗಳನ್ನು ಹಾಕಿದರು ಮತ್ತು ಸವಾಲುಗಳನ್ನು ಹಾಕಿಸಿಕೊಂಡರು. ಚರಿತ್ರೆ ಬರವಣಿಗೆ ಪರಂಪರೆಯಲ್ಲಿ ಇದೊಂದು ನಿರಂತರ ಪ್ರಕ್ರಿಯೆ.

ಭಾರತದ ಚರಿತ್ರೆಯನ್ನೇ ಪುನಾರಚಿಸಬೇಕೆಂಬ ಪುನರುತ್ಥಾನವಾದಿಗಳಿಗಿಂತ ಭಿನ್ನ ಸೈದ್ಧಾಂತಿಕತೆಯಿರುವ ಅನೇಕ ವಿದ್ವಾಂಸರು ಈ ದಿಸೆಯಲ್ಲಿ ಚರಿತ್ರೆಯ ಘಟನೆಗಳನ್ನು ಮತ್ತು ಚರಿತ್ರೆಕಾರರನ್ನು ತೀವ್ರವಾಗಿ ವಿಶ್ಲೇಷಿಸುತ್ತಾ ಅವರವರ ಬದುಕಿಗೆ ಹತ್ತಿರವಿರುವ ಸತ್ಯಗಳನ್ನು ಹುಡುಕುತ್ತಿರುವುದು ಸರಿಯಷ್ಟೆ. ಭಾರತ ಉಪಖಂಡದ ಚರಿತ್ರೆಯನ್ನು ರೂಪಿಸಲು ಪಡುತ್ತಿರುವ ಸಂಕೀರ್ಣ ಸಂದರ್ಭದಲ್ಲಿ ವಿಶ್ವದ ವಿವಿಧೆಡೆಯ ಚರಿತ್ರೆಯನ್ನು ಕನ್ನಡದಲ್ಲಿ ಚರ್ಚಿಸುವುದರ ಸವಾಲು ಭಿನ್ನ ರೀತಿಯದು. ಪಾಶ್ಚಾತ್ಯರು ಭಾರತವನ್ನು ನೋಡಿದ ರೀತಿಯಲ್ಲಿ ಭಾರತೀಯರು ತಮ್ಮ ಅನುಭವದ ಮೂಲಕ ಪಾಶ್ಚಾತ್ಯರನ್ನು, ಆಫ್ರಿಕಾದವರನ್ನು ನೋಡಬೇಕೆಂಬ ತವಕ ನಮಗಿದ್ದರೂ ಬರವಣಿಗೆ ಕ್ರಮದ ಅನೇಕ ಮಿತಿಗಳು ನಮ್ಮನ್ನು ಬಿಡಲಿಲ್ಲ. ಕನ್ನಡ ವಿಶ್ವವಿದ್ಯಾಲಯದಲ್ಲಿ ಇಂತಹ ಪ್ರಶ್ನೆಗಳು ಎದುರಾದಾಗಲೆಲ್ಲ ಅವುಗಳನ್ನು ಬಗೆಹರಿಸುವುದು ಹೇಗೆ ಎಂಬ ಚಿಂತನೆಯೂ ಆರಂಭವಾಗುತ್ತದೆ. ಇಂತಹ ಚಿಂತನೆಯ ಹಿನ್ನೆಲೆಯಲ್ಲಿ ನಾವು ‘ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ಸಂಪುಟಗಳನ್ನು’ ಹೊರತರುತ್ತಿದ್ದೇವೆ.

ಚರಿತ್ರೆಯು ಪ್ರತಿಯೊಬ್ಬರ ಜೀವನದ ಭಾಗವಾಗಿ ಕೆಲಸ ಮಾಡುತ್ತಿರುವ ಪ್ರತಿ ಸಮುದಾಯ/ವರ್ಗದ ನೆರಳಾಗಿ ಕಾಡುತ್ತಾ, ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತಿರುವ ಜ್ಞಾನಶಿಸ್ತಾಗಿ ರೂಪುಗೊಂಡ ಬಗೆಗಳನ್ನು ಪ್ರಸ್ತುತ ಸಂಪುಟಗಳು ಅನಾವರಣಗೊಳಿಸಲು ಯತ್ನಿಸಿವೆ. ಜನರಲ್ ನಾಲೆಡ್ಜ್‌ನ ಭಾಗವಾಗಿ ಚರಿತ್ರೆಯನ್ನು ನೋಡುವ ಕ್ರಮಕ್ಕಿಂತ ಭಿನ್ನವಾದ ಕ್ರಮ ಇದು. ನಮ್ಮದಲ್ಲದ ಸಂಸ್ಕೃತಿ, ನಾಗರಿಕತೆ, ರಾಜಕೀಯ ಬೆಳವಣಿಗೆಗಳು, ರಾಜ್ಯಗಳ ರೂಪುಗೊಳ್ಳುವಿಕೆ, ವ್ಯವಸ್ಥೆಯ ವಿವಿಧ ಮಜಲುಗಳು, ಸಂಘರ್ಷ, ಹೋರಾಟ ಮುಂತಾದ ಪ್ರಕ್ರಿಯೆಗಳನ್ನು ಏಷ್ಯಾ, ಯುರೋಪ್, ಆಫ್ರಿಕಾಗಳ ಸಂದರ್ಭದಲ್ಲಿ ದಾಖಲಿಸಲು ಪ್ರಸ್ತುತ ಸಂಪುಟಗಳು ಪ್ರಯತ್ನಿಸಿವೆ. ಭಾರತ ಉಪಖಂಡ ಸಂಪುಟಗಳು ಹಾಗೂ ಸಮಕಾಲೀನ ಸಂಪುಟವು ನಮ್ಮೊಳಗಿನ ಸಂಕೀರ್ಣ ವ್ಯವಸ್ಥೆ, ಸಂಘರ್ಷ, ಸೌಹಾರ್ದತೆ ಮತ್ತು ವೈರುಧ್ಯಗಳ ವಿವಿಧ ಆಯಾಮಗಳನ್ನು ಒಳಗೊಳ್ಳುವ ಪ್ರಯತ್ನಗಳನ್ನು ಮಾಡಿವೆ. ಚರಿತ್ರೆ ಬರವಣಿಗೆ ಕ್ರಮ ಮತ್ತು ವಿಧಾನದ ಸಂಪುಟವು ಜಗತ್ತಿನ ಬೇರೆ ಬೇರೆ ಪರಂಪರೆಗಳ ಬೌದ್ದಿಕ ವಾಙ್ಮಯಗಳನ್ನು ಕನ್ನಡದಲ್ಲಿ ಚರ್ಚಿಸುವ ಪ್ರಯತ್ನವನ್ನು ಮಾಡಿದೆ.

ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ. ಎಚ್.ಜೆ.ಲಕ್ಕಪ್ಪಗೌಡ ಅವರ ಸಂದರ್ಭದಲ್ಲಿ (೨೦೦೧ರಲ್ಲಿ) ಬಿಡುಗಡೆಯಾದ ‘ಚರಿತ್ರೆ ವಿಶ್ವಕೋಶ’ಕ್ಕೆ ನಂತರದ ದಿನಗಳಲ್ಲಿ ಅಷ್ಟೊಂದು ಬೇಡಿಕೆ ಇರುತ್ತದೆ ಎಂದು ನಾನಾಗಲಿ ಅಥವಾ ನಮ್ಮ ಸಂಪಾದಕ ಬಳಗದ ಸದಸ್ಯರಾಗಲಿ ಅಂದುಕೊಂಡಿರಲಿಲ್ಲ. ೧೯೯೬ರಲ್ಲಿ ನಮ್ಮ ಆರಂಭಿಕ ಕುಲಪತಿ ಗಳಾಗಿದ್ದ ಡಾ. ಚಂದ್ರಶೇಖರ ಕಂಬಾರ ಹಾಗೂ ಆಗಿನ ಕುಲಸಚಿವರಾಗಿದ್ದ ಡಾ. ಕೆ.ವಿ.ನಾರಾಯಣ ಅವರ ಒತ್ತಾಸೆಯ ಫಲವೇ ಚರಿತ್ರೆ ವಿಶ್ವಕೋಶ ಎಂದರೆ ಅತಿಶಯೋಕ್ತಿ ಯೇನಲ್ಲ. ನಂತರದ ಕುಲಪತಿಗಳಾಗಿದ್ದ ಡಾ. ಬಿ.ಎ.ವಿವೇಕ ರೈ ಅವರ ಮಾರ್ಗದರ್ಶನದಲ್ಲಿ ಮತ್ತು ಚರಿತ್ರೆ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಕೆ.ಮೋಹನ್‌ಕೃಷ್ಣ ರೈ ಅವರ ಸಹಕಾರದಿಂದ ವಿಭಾಗದ ಯೋಜನೆಯಾಗಿ ಬಲು ಬೇಡಿಕೆಯಿದ್ದ ಚರಿತ್ರೆ ವಿಶ್ವಕೋಶವನ್ನು ಬಿಡಿ ಬಿಡಿ ಪುಸ್ತಕಗಳನ್ನಾಗಿ ತರುವ ಯೋಜನೆಯನ್ನು ೨೦೦೫ರಲ್ಲಿ ಕೈಗೆತ್ತಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂಶೋಧಕರಿಗೆ, ಅಧ್ಯಾಪಕರಿಗೆ ಮತ್ತು ಬಹಳ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಸುಲಭ ಬೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ಸಂಪುಟಗಳು ಸಿಗುವಂತೆ ಯೋಜನೆಯನ್ನು ಕಾರ್ಯಗತಗೊಳಿಸಲಾಯಿತು. ಹೀಗಾಗಿ ಚರಿತ್ರೆ ವಿಶ್ವಕೋಶದ ಪ್ರತಿ ಬಿಡಿ ಭಾಗಗಳನ್ನು ಪರಿಷ್ಕಾರಕ್ಕೆ ಒಳಪಡಿಸಬೇಕೆಂದು ತೀರ್ಮಾನಿಸಿ ಅದಕ್ಕೆ ಸಂಬಂಧಿಸಿದ ಕೆಲಸಗಳನ್ನು ಆರಂಭಿಸಲಾಯಿತು. ಹಾಗೆಯೇ ಅನೇಕ ಬಿಡಿ ಭಾಗಗಳಲ್ಲಿ ತೀರಾ ಅಗತ್ಯವಾಗಿ ಬೇಕಾಗಿದ್ದ ಇನ್ನೂ ಕೆಲವು ಲೇಖನಗಳನ್ನು ಸಿದ್ಧಪಡಿಸಿ ಪ್ರತಿ ಸಂಪುಟವು ಓದುಗರ ಅಪೇಕ್ಷೆಯನ್ನು ಪೂರ್ಣಗೊಳಿಸುವಂತೆ ಅವಿರತ ಶ್ರಮವನ್ನು ಹಾಕಲಾಯಿತು. ಚರಿತ್ರೆ ವಿಶ್ವಕೋಶದ ಸಂಪಾದಕೀಯ ಸಮಿತಿಯಲ್ಲಿದ್ದ ಡಾ. ಕೆ.ಮೋಹನ್‌ಕೃಷ್ಣ ರೈ ಹಾಗೂ ಡಾ. ಎನ್.ಚಿನ್ನಸ್ವಾಮಿ ಸೋಸಲೆ ಅವರೊಂದಿಗೆ ಈ ಯೋಜನೆಯಲ್ಲಿ ಡಾ. ವಿರೂಪಾಕ್ಷಿ ಪೂಜರಹಳ್ಳಿ ಅವರು ಪಾಲ್ಗೊಂಡು ಪರಿಷ್ಕೃತ ಆವೃತ್ತಿಗಳನ್ನು ಯಶಸ್ವಿಯಾಗಿ ಹೊರತರಲು ಶ್ರಮ ವಹಿಸಿದರು. ಈ ಹಿನ್ನೆಲೆಯಲ್ಲಿ ಚರಿತ್ರೆ ಬರವಣಿಗೆ ಕ್ರಮ ಮತ್ತು ವಿಧಾನ, ಭಾರತ ಉಪಖಂಡದ ವಸಾಹತುಪೂರ್ವ ಚರಿತ್ರೆ, ಭಾರತ ಉಪಖಂಡದ ಆಧುನಿಕ ಚರಿತ್ರೆ, ಏಷ್ಯಾ, ಯುರೋಪ್, ಆಫ್ರಿಕಾ, ಅಮೆರಿಕ ಹಾಗೂ ಸಮಕಾಲೀನ ಕರ್ನಾಟಕದ ಮೇಲೆ ವಿವಿಧ ಸಂಪುಟಗಳನ್ನು ಸಿದ್ಧಪಡಿಸಲಾಗಿದೆ. ಏಷ್ಯಾ ಮತ್ತು ಯುರೋಪ್‌ನ ಸಂಪುಟಗಳ ಸಂಪಾದಕರಾಗಿ ಡಾ. ಕೆ.ಮೋಹನ್‌ಕೃಷ್ಣ ರೈ ಅವರು, ಆಫ್ರಿಕಾ ಹಾಗೂ ಸಮಕಾಲೀನ ಕರ್ನಾಟಕ ಸಂಪುಟಗಳ ಸಂಪಾದಕರಾಗಿ ಡಾ. ಎನ್.ಚಿನ್ನಸ್ವಾಮಿ ಸೋಸಲೆ ಅವರು, ಅಮೆರಿಕ ಸಂಪುಟದ ಸಂಪಾದಕರಾಗಿ ಡಾ. ವಿರೂಪಾಕ್ಷಿ ಪೂಜರಹಳ್ಳಿ ಅವರು, ಚರಿತ್ರೆ ಬರವಣಿಗೆ ಕ್ರಮ ಮತ್ತು ವಿಧಾನ ಸಂಪುಟದ ಸಂಪಾದಕರಾಗಿ ಡಾ. ವಿಜಯ್ ಪೂಣಚ್ಚ ತಂಬಂಡ ಮತ್ತು ಡಾ. ವಿರೂಪಾಕ್ಷಿ ಪೂಜರಹಳ್ಳಿ ಅವರು ಹಾಗೂ ಡಾ. ವಿಜಯ್ ಪೂಣಚ್ಚ ತಂಬಂಡ ಸಂಪಾದಕತ್ವದಲ್ಲಿ ‘ಭಾರತ ಉಪಖಂಡ ವಸಾಹತುಪೂರ್ವ ಮತ್ತು ಆಧುನಿಕ ಚರಿತ್ರೆ’ ಎಂಬ ಸಂಪುಟಗಳು ಹೊರಬಂದಿವೆ. ಪ್ರಧಾನ ಸಂಪಾದಕನಾಗಿ ಈ ಎಂಟು ಸಂಪುಟಗಳನ್ನು ಹೊರತರಬೇಕೆಂದು ಹಾಕಿಕೊಂಡ ಯೋಜನೆಯ ಸಫಲತೆಗೆ ಕಾರಣರಾದ ಸಂಪಾದಕ ಮಂಡಳಿಯ ನನ್ನ ಸಹೋದ್ಯೋಗಿಗಳಿಗೆ, ಸಂಪುಟಗಳಲ್ಲಿ ಲೇಖನಗಳನ್ನು ಬರೆದ ಎಲ್ಲ ಲೇಖಕರಿಗೆ ಹಾಗೂ ಅನುವಾದಕರಿಗೆ ನಾನು ಆಭಾರಿಯಾಗಿದ್ದೇನೆ.

ಏಕೀಕರಣಪೂರ್ವ ಕರ್ನಾಟಕ ಚರಿತ್ರೆಯನ್ನು ಕನ್ನಡ ವಿಶ್ವವಿದ್ಯಾಲಯವು ಈಗಾಗಲೇ ಏಳು ಸಂಪುಟಗಳಲ್ಲಿ ಪ್ರಕಟಿಸಿರುವುದರಿಂದ ಅವುಗಳನ್ನು ಇಲ್ಲಿ ಪೂರ್ಣ ಪ್ರಮಾಣದಲ್ಲಿ ಚರ್ಚಿಸಿಲ್ಲ. ಪ್ರಸ್ತುತ ಎಂಟು ಕೃತಿಗಳಲ್ಲಿ ಪ್ರಾಚೀನ ಹಾಗೂ ಮಧ್ಯಯುಗೀನ ಚರಿತ್ರೆಗಳಿಗೆ ಸಂಬಂಧಿಸಿದಂತೆ ಇರುವ ಅನೇಕ ವಿವರಗಳನ್ನು ಮತ್ತು ಚರಿತ್ರೆ ಬರವಣಿಗೆ ಕ್ರಮದಲ್ಲಿನ ಸಮಸ್ಯೆಗಳನ್ನು ಚರ್ಚಿಸಲಾಗಿದೆ. ಭಾರತ ಉಪಖಂಡದ ವಸಾಹತುಪೂರ್ವ ಸಂಪುಟ ಬಿಟ್ಟರೆ ಉಳಿದ ಸಂಪುಟಗಳು ಆಧುನಿಕ ಚರಿತ್ರೆಯನ್ನು ಪ್ರಮುಖವಾಗಿ ವಿಶ್ಲೇಷಿಸಿವೆ. ಸಾಮ್ರಾಜ್ಯಶಾಹಿ ಶಕ್ತಿಗಳು ಬೇರೆ ಬೇರೆ ಖಂಡಗಳ ಅನೇಕ ದೇಶಗಳನ್ನು ವಸಾಹತುಗಳನ್ನಾಗಿ ಮಾಡಿದ ಹಾಗೂ ಆ ವಸಾಹತುಶಾಹಿ ಸರಕಾರಗಳಿಗೆ ವಿರೋಧವಾಗಿ ಜನಾಂದೋಲನಗಳನ್ನು ಸಂಘಟಿಸಿದ ಸ್ಥಳೀಯ ರಾಷ್ಟ್ರೀಯ ಹೋರಾಟಗಳನ್ನು ಇವು ಒಳಗೊಂಡಿವೆ. ಹೋರಾಟದ ಪ್ರತಿಕ್ರಿಯೆಗಳ ಪ್ರಕ್ರಿಯೆಗಳನ್ನು ಈ ಸಂಪುಟಗಳು ವಿವರವಾಗಿ ಚರ್ಚಿಸಲು ಪ್ರಯತ್ನಿಸಿವೆ. ಆಫ್ರಿಕಾ ಮತ್ತು ಅಮೆರಿಕಾಗಳಲ್ಲಿನ ಮೂಲನಿವಾಸಿ ಬುಡಕಟ್ಟುಗಳು ಸಾಮ್ರಾಜ್ಯಶಾಹಿಗಳ ತುಳಿತಕ್ಕೆ ನೇರವಾಗಿ ಬಲಿಯಾದ ಚರಿತ್ರೆಯ ವಿವಿಧ ಘಟ್ಟಗಳನ್ನು ದಾಖಲು ಮಾಡಲು ಪ್ರಯತ್ನಿಸಲಾಗಿದೆ. ಈ  ಮೂಲನಿವಾಸಿಗಳ ಪ್ರತಿಭಟನೆಯನ್ನು ಅವರ ಸಾಂಸ್ಕೃತಿಕ ಗುರುತೇ ಇಲ್ಲದ ರೀತಿಯಲ್ಲಿ ಮಟ್ಟ ಹಾಕಿ ವಸಾಹತುಶಾಹಿಗಳು ಭದ್ರವಾಗಿ ಬೇರುಬಿಟ್ಟ ಬಗೆಗಳನ್ನು ಅರಿಯಲು ಈ ಸಂಪುಟಗಳು ಪ್ರಯತ್ನಿಸಿವೆ.

ವಸಾಹತುಶಾಹಿಗಳು ಇದೇ ರೀತಿಯಲ್ಲಿ ಏಷ್ಯಾದ ದೇಶಗಳನ್ನೂ ಸುಲಿಗೆ ಮಾಡಿ ಜನರ ಹೋರಾಟಗಳನ್ನು ಸುಮಾರು ಒಂದೂವರೆ ಶತಮಾನಗಳ ಕಾಲ ದಮನಿಸಿದವು. ಆದರೂ, ದ್ವಿತೀಯ ಮಹಾಯುದ್ಧದ ನಂತರ ಮುಖ್ಯವಾಗಿ ಏಷ್ಯಾದಲ್ಲಿ ತಮ್ಮದೇ ಗುರುತನ್ನು ಸ್ಥಾಪಿಸಲು ಈ ರಾಷ್ಟ್ರೀಯ ಹೋರಾಟಗಳಿಗೆ ಸಾಧ್ಯವಾಯಿತು. ವಸಾಹತುಶಾಹಿ ಚರಿತ್ರೆಯನ್ನು ವಿಶ್ಲೇಷಿಸು ವುದರೊಂದಿಗೆ ಪ್ರಸಕ್ತ ವಿದ್ಯಮಾನಗಳನ್ನು ಸಂದರ್ಭೋಚಿತವಾಗಿ ನಮ್ಮ ಸಂಪುಟಗಳಲ್ಲಿ ವಿದ್ವಾಂಸರು ಚರ್ಚಿಸಿದ್ದಾರೆ. ಭಿನ್ನ ಭಿನ್ನ ಬೌದ್ದಿಕ ಸಿದ್ಧಾಂತಗಳು, ಸಾಮಾಜಿಕ ಹಾಗೂ ರಾಷ್ಟ್ರೀಯ ಪ್ರಜ್ಞೆಗಳು ಧ್ರುವೀಕರಣಗೊಳ್ಳುವ ಭಿನ್ನ ಭಿನ್ನ ಬಗೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನಗಳನ್ನು ಪ್ರಸ್ತುತ ಸಂಪುಟಗಳು ಮಾಡಲು ಪ್ರಯತ್ನಿಸಿವೆ. ಇದರೊಂದಿಗೆ ಪ್ರಥಮ ಮತ್ತು ದ್ವಿತೀಯ ಮಹಾಯುದ್ಧಗಳು, ಶೀತಲಯುದ್ಧ, ಸೋವಿಯತ್ ರಷ್ಯಾದ ವಿಘಟನೆ ಹಾಗೂ ಜಗತೀಕರಣ ಪ್ರಕ್ರಿಯೆಗಳ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಸಂಘರ್ಷಗಳನ್ನು ದಾಖಲಿಸುವ ಯತ್ನವನ್ನು ಮಾಡಲು ನಮ್ಮ ಸಂಪುಟಗಳು ಪ್ರಯತ್ನಿಸಿವೆ. ಹಾಗೆಯೇ ಬೇರೆ ಬೇರೆ ದೇಶಗಳ ಮತ್ತು ಜನರ ಸಾಮಾಜಿಕ, ಆರ್ಥಿಕ ಸಾಮ್ಯತೆಗಳನ್ನು, ಭಿನ್ನತೆಗಳನ್ನು, ಸಾಮರಸ್ಯಗಳನ್ನು, ಸಂಘರ್ಷಗಳನ್ನು ಮತ್ತು ಸಂಕೀರ್ಣ ಸಂಬಂಧಗಳನ್ನು ಪ್ರಸ್ತುತ ಸಂಪುಟಗಳು ವಿಶ್ಲೇಷಿಸುವ ಪ್ರಯತ್ನಗಳನ್ನು ಮಾಡಿವೆ.

ಆಧುನಿಕ ಚರಿತ್ರೆಯ ನಿರ್ಮಾಣ ಪ್ರಕ್ರಿಯೆಯಲ್ಲಿ ಏಷ್ಯಾದ ಚರಿತ್ರೆಯು ತನ್ನ ಪ್ರಭಾವ ವನ್ನು ಅಚ್ಚೊತ್ತಿದೆ. ‘ಪಾಶ್ಚಾತ್ಯ’ ಜಗತ್ತು ಎನ್ನುವ ವಲಯಕ್ಕೆ ‘ಪೌರಾತ್ಯ’ ಎನ್ನುವ ಜಗತ್ತಿಲ್ಲ ದಿದ್ದರೆ ಅರ್ಥವೇ ಇಲ್ಲವೇನೊ ಎನ್ನುವಷ್ಟರ ಮಟ್ಟಿಗೆ ಏಷ್ಯಾದ ಪ್ರಭಾವವು ದಟ್ಟವಾಗಿದೆ. ದಕ್ಷಿಣ ಏಷ್ಯಾಕ್ಕೆ ಸಂಬಂಧಿಸಿದಂತೆ ಎರಡು ಸಂಪುಟಗಳು ಈ ದಿಸೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ಸಂಪುಟಗಳ ಭಾಗವಾಗಿ ಹೊರಬಂದಿರುವುದರಿಂದ ಪಶ್ಚಿಮ ಮತ್ತು ಪೂರ್ವ ಏಷ್ಯಾಗಳ ಸವಿಸ್ತಾರವಾದ ಅಧ್ಯಯನವನ್ನು ಪ್ರಸ್ತುತ ‘‘ಏಷ್ಯಾ- ಚರಿತ್ರೆಯ ವಿವಿಧ ಆಯಾಮಗಳು’’ ಸಂಪುಟವು ಒಳಗೊಂಡಿದೆ. ಬಹುತೇಕವಾಗಿ ವಸಾಹತು ಕಾಲಘಟ್ಟದ ಸಂಕೀರ್ಣತೆಯೊಂದಿಗೆ ಏಷ್ಯಾದಲ್ಲಿ ಉದಯಿಸಿದ ರಾಷ್ಟ್ರೀಯತೆಯ ಅನೇಕ ಮಗ್ಗಲುಗಳನ್ನು ಈ ಸಂಪುಟವು ಅಭ್ಯಸಿಸಲು ಪ್ರಯತ್ನಿಸಿದೆ. ಪ್ರಸ್ತುತ ಸಂಪುಟದ ಸಂಪಾದಕರಾದ ಡಾ.ಕೆ.ಮೋಹನ್‌ಕೃಷ್ಣ ರೈ ಅವರಿಗೆ ಅಭಿನಂದನೆಗಳು.

ಡಾ. ಎಸ್.ಎ.ಬಾರಿ ಹಾಗೂ ಡಾ. ರಾಜರಾಮ ಹೆಗಡೆ ಅವರ ಮಾರ್ಗದರ್ಶನದಲ್ಲಿ ಚರಿತ್ರೆ ವಿಶ್ವಕೋಶವನ್ನು ಸಮರ್ಥವಾಗಿ ರಚಿಸಲು ಸಾಧ್ಯವಾದದ್ದನ್ನು ನಾನು ನೆನಪಿಸಿ ಕೊಳ್ಳಲೇಬೇಕು. ಪ್ರಸ್ತುತ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್.ಎ. ಬಾರಿ ಹಾಗೂ ಚರಿತ್ರೆ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಜರಾಮ ಹೆಗಡೆ ಅವರು ನಮ್ಮ ಸಂಪುಟಗಳ ವಿಷಯತಜ್ಞರಾಗಿ ಸಾಕಷ್ಟು ಸಲಹೆ-ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ಸಂಪುಟಗಳನ್ನು ಯಶಸ್ವಿಯಾಗಿ ಹೊರತರಲು ಸಾಧ್ಯವಾಯಿತು. ಈ ಇಬ್ಬರು ವಿದ್ವಾಂಸರಿಗೆ ಸಂಪಾದಕ ಮಂಡಳಿಯು ಆಭಾರಿಯಾಗಿದೆ.

ಪ್ರಸ್ತುತ ಸಂಪುಟಗಳನ್ನು ಹೊರತರಲು ನಮಗೆ ಎಲ್ಲ ಬಗೆಗಳಿಂದಲೂ ಪ್ರೋ ನೀಡಿದ ಮಾನ್ಯ ಕುಲಪತಿಗಳಾದ ಡಾ. ಎ.ಮುರಿಗೆಪ್ಪ ಅವರಿಗೆ, ಕುಲಸಚಿವರಾದ ಹಾಗೂ ಪ್ರಸಾರಾಂಗದ  ನಿರ್ದೇಶಕರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ, ಹಿಂದಿನ ಕುಲಸಚಿವರಾದ ಡಾ. ಹಿ.ಚಿ.ಬೋರಲಿಂಗಯ್ಯ ಅವರಿಗೆ, ಪ್ರಸಾರಾಂಗದ ಹಿಂದಿನ ನಿರ್ದೇಶಕರಾದ ಡಾ. ಮೋಹನ ಕುಂಟಾರ್ ಅವರಿಗೆ ಸಂಪಾದಕ ಮಂಡಳಿಯ ಪರವಾಗಿ ನಾನು ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ. ಚರಿತ್ರೆ ವಿಭಾಗದ ಮುಖ್ಯಸ್ಥರಾದ ಡಾ. ಎನ್.ಚಿನ್ನಸ್ವಾಮಿ ಸೋಸಲೆ ಅವರ ಸಹಕಾರಕ್ಕಾಗಿ ನಾನು ಆಭಾರಿಯಾಗಿದ್ದೇನೆ. ಪ್ರಸ್ತುತ ಸಂಪುಟ ಹೊರಬರಲು ನಿರಂತರವಾಗಿ ನಮಗೆ ಸಹಕರಿಸಿದ ಚರಿತ್ರೆ ವಿಭಾಗದ ಸಹೋದ್ಯೋಗಿ ಡಾ. ಸಿ.ಆರ್.ಗೋವಿಂದರಾಜು ಹಾಗೂ ಪ್ರೊ. ಲಕ್ಷ್ಮಣ್ ತೆಲಗಾವಿ ಇವರಿಗೆ ಸಂಪಾದಕ ಮಂಡಳಿ ಆಭಾರಿಯಾಗಿದೆ.

ಪ್ರಸ್ತುತ ಸಂಪುಟಗಳ ಪುಟವಿನ್ಯಾಸ ಮಾಡಿದ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರಿಗೆ,  ಮುಖಪುಟ ವಿನ್ಯಾಸ ಮಾಡಿದ ಶ್ರೀ ಯು.ಟಿ.ಸುರೇಶ್ ಅವರಿಗೆ, ಅಕ್ಷರ ಜೋಡಣೆ ಮಾಡಿದ ಶ್ರೀ ಸಾವಳಗಿ ಶಿವಲಿಂಗೇಶ್ವರ ಗ್ರಾಫಿಕ್ಸ್‌ನ ಶ್ರೀಮತಿ ರಶ್ಮಿ ಕೃಪಾಶಂಕರ್ ಅವರಿಗೆ ಹಾಗೂ ಸಂಪುಟಗಳನ್ನು ಮುದ್ರಿಸಿದ  ಲಕ್ಷ್ಮೀಮುದ್ರಣಾಲಯ ದವರಿಗೆ ನನ್ನ ಕೃತಜ್ಞತೆಗಳು.