ಜಾಗತಿಕ ಚರಿತ್ರೆಯಲ್ಲಿ ಏಷ್ಯಾದ ಚರಿತ್ರೆ ವಿಶಿಷ್ಟವಾದ ಸ್ಥಾನವನ್ನು ಪಡೆದು ಕೊಂಡಿದೆ. ಏಷ್ಯಾದ ಚರಿತ್ರೆಯ ವಿವಿಧ ಆಯಾಮಗಳ ಅಧ್ಯಯನ ನಡೆಸುವಾಗ ಅದರ ವಿಶೇಷತೆಗಳು ಮನವರಿಕೆಯಾಗುತ್ತವೆ. ಪ್ರಸ್ತುತ ಸಂಪುಟವು ಮೆಸಪಟೋಮಿಯಾದ ನಾಗರಿಕತೆಯಿಂದ ಪ್ರಾದೇಶಿಕ ಒಕ್ಕೂಟಗಳವರೆಗಿನ ಚರಿತ್ರೆಯನ್ನು ಒಳಗೊಂಡಿದೆ. ಏಷ್ಯಾದ ಪ್ರತಿಯೊಂದು ದೇಶವೂ ತನ್ನದೇ ಆದ ಜೀವನಕ್ರಮವನ್ನು ಹೊಂದಿದ್ದು, ಶತಮಾನಗಳಿಂದಲೂ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವುದು ಚರಿತ್ರೆಯ ಪುಟ ಗಳಿಂದ ತಿಳಿದುಬರುತ್ತದೆ. ಯುರೋಪಿಯನ್ನರ ಆಗಮನದವರೆಗಿನ ಏಷ್ಯಾದ ಚರಿತ್ರೆ ಮೇಲ್ನೋಟಕ್ಕೆ ವಿಘಟಿತವಾಗಿ ಕಂಡುಬಂದರೂ, ಗಟ್ಟಿಯಾದ ಸಾಂಸ್ಕೃತಿಕ ಗುರುತುಗಳನ್ನು ಹೊಂದಿತ್ತು. ಈ ಗುರುತುಗಳನ್ನು ಅಳಿಸಿಹಾಕುವ ಪ್ರಯತ್ನ ಆರಂಭಗೊಂಡಿದ್ದು, ವಸಾಹತುಶಾಹಿ ಶಕ್ತಿಗಳು ಪ್ರವೇಶ ಪಡೆದ ಬಳಿಕ. ಯುರೋಪಿಯನ್ನರ ಆಗಮನ ಏಷ್ಯಾದ ಚರಿತ್ರೆಯಲ್ಲಿ ಎಂದೂ ಕಂಡರಿಯದ ಬದಲಾವಣೆಗಳನ್ನು ತಂದಿತು. ಪ್ರಮುಖ ನಾಗರಿಕತೆಗಳನ್ನು ಹೊಂದಿದ ಏಷ್ಯಾವು ಯುರೋಪಿಯನ್ ಮಾದರಿಯ ನಾಗರಿಕತೆಯ ಪ್ರಭಾವಕ್ಕೆ ಸಿಲುಕಿ ತನ್ನತನವನ್ನು ಕಳೆದುಕೊಳ್ಳಬೇಕಾಯಿತು. ಯುರೋಪಿನ ರಾಷ್ಟ್ರಗಳು ತಮ್ಮನ್ನು ಆಧುನಿಕ ಹಾಗೂ ನಾಗರಿಕ ಎಂಬುದಾಗಿ ಘೋಷಿಸಿಕೊಂಡು ಏಷ್ಯಾ ಖಂಡದ ದೇಶಗಳನ್ನು ಅನಾಗರಿಕ ರೀತಿಯಲ್ಲಿ ಲೂಟಿ ಮಾಡಿದವು. ಹೀಗಾಗಿ ಏಷ್ಯಾದ ದೇಶಗಳು ತಮ್ಮ ಅಸ್ತಿತ್ವಕ್ಕಾಗಿ ಪರದಾಡುವ ಸ್ಥಿತಿ ತಲುಪಿದವು. ಆದರೆ ಈ ಸ್ಥಿತಿ ಮುಂದೆ ರಾಷ್ಟ್ರೀಯ ಚಳುವಳಿಯ ಹುಟ್ಟಿಗೂ ಕಾರಣವಾಯಿತು.

ಪ್ರಸ್ತುತ ಸಂಪುಟವು ವಸಾಹತುಪೂರ್ವ ಹಾಗೂ ವಸಾಹತು ಏಷ್ಯಾದ ಸಾಂಸ್ಕೃತಿಕ ಹಾಗೂ ರಾಜಕೀಯ ಆಯಾಮಗಳ ವಿಶ್ಲೇಷಣೆ ನಡೆಸುವ ಪ್ರಯತ್ನವನ್ನು ಮಾಡಿದೆ. ಪಶ್ಚಿಮ ಏಷ್ಯಾ, ಆಗ್ನೇಯ ಏಷ್ಯಾ ಹಾಗೂ ಪೂರ್ವ ಏಷ್ಯಾಗಳಲ್ಲಿ ಸಮಾಜ ಮತ್ತು ಸಂಸ್ಕೃತಿ ರೂಪುಗೊಂಡ ಬಗೆ ಹಾಗೂ ಈ ದೇಶಗಳು ಪಾಶ್ಚಿಮಾತ್ಯ ದೇಶಗಳೊಂದಿಗೆ ಹೊಂದಿದ್ದ ಸಂಬಂಧಗಳು, ಸಾಮ್ಯತೆಗಳು ಹಾಗೂ ಭಿನ್ನತೆಗಳು ಪರಿಣಾಮಕಾರಿಯಾಗಿ ಇಲ್ಲಿನ ಲೇಖನಗಳಲ್ಲಿ ಮೂಡಿಬಂದಿವೆ. ಅದೇ ರೀತಿ ಆಂತರಿಕವಾಗಿ ಈ ದೇಶಗಳು ಅಧಿಕಾರಕ್ಕಾಗಿ ಪರಸ್ಪರ ನಡೆಸಿದ ಹೋರಾಟಗಳು, ಇಸ್ಲಾಂ ಧರ್ಮದ ಉದಯ, ಅರೇಬಿಯನ್ನರ ಆಕ್ರಮಣ ಮುಂತಾದ ವಿಚಾರಗಳೂ ಇಲ್ಲಿ ಸಾಕಷ್ಟು ಚರ್ಚಿತವಾಗಿವೆ. ಪಶ್ಚಿಮ ಏಷ್ಯಾದ ದೇಶಗಳಾದ ಇರಾಕ್, ಇರಾನ್, ಲೆಬನಾನ್, ಸಿರಿಯಾ, ಸೌದಿ ಅರೇಬಿಯಾ, ಜೋರ್ಡಾನ್ ಹಾಗೂ ಈಜಿಪ್ಟ್, ಆಗ್ನೇಯ ಏಷ್ಯಾದ ದೇಶಗಳಾದ ಬರ್ಮಾ, ಕಾಂಬೋಡಿಯಾ, ವಿಯೆಟ್ನಾಂ, ಥೈಲ್ಯಾಂಡ್, ಲಾವೋಸ್, ಫಿಲಿಫೈನ್ಸ್, ಸಿಂಗಪೂರ್, ಮಲೇಷಿಯಾ ಹಾಗೂ ಬ್ರುನಿ, ಪೂರ್ವ ಏಷ್ಯಾದ ದೇಶಗಳಾದ ಚೀನಾ ಮತ್ತು ಜಪಾನ್ ಈ ದೇಶಗಳಲ್ಲಿ ವಸಾಹತುಶಾಹಿಯ ಆಗಮನದ ಮೊದಲು ಇದ್ದ ಸಾಂಸ್ಕೃತಿಕ ಹಾಗೂ ರಾಜಕೀಯ ಆಯಾಮಗಳು ಹಾಗೂ ವಸಾಹತುಶಾಹಿಯ ಆಗಮನದ ಬಳಿಕ ಕಾಣಿಸಿಕೊಂಡ ವಿದ್ಯಮಾನಗಳು ಅಚ್ಚರಿಯ ಅಧ್ಯಯನಕ್ಕೆ ಎಡೆಮಾಡಿ ಕೊಡುತ್ತವೆ. ಈ ದೇಶಗಳಲ್ಲಿ ೧೮, ೧೯ ಮತ್ತು ೨೦ನೆಯ ಶತಮಾನಗಳಲ್ಲಿ ಕಾಣಿಸಿಕೊಂಡ ಸಾಮ್ರಾಜ್ಯ ಶಾಹಿ ಹಾಗೂ ಅದಕ್ಕೆ ವಿರುದ್ಧದ ರಾಷ್ಟ್ರೀಯವಾದಿ ಹೋರಾಟಗಳ ಸ್ವರೂಪದ ಚಿತ್ರಣವನ್ನು ಈ ಸಂಪುಟದಲ್ಲಿ ನೀಡಲಾಗಿದೆ. ಸಾಮ್ರಾಜ್ಯಶಾಹಿ ಹಾಗೂ ವಸಾಹತುಶಾಹಿ ಧೋರಣೆಗಳು ಯುರೋಪಿಯನ್ನರ ಆಗಮನದ ಆರಂಭಿಕ ಹಂತದಲ್ಲಿ ಇತ್ತಾದರೂ, ಅದು ಶೋಷಕ ಸ್ವರೂಪದ್ದಾಗಿ ಕಂಡುಬಂದದ್ದು ಬಂಡವಾಳಶಾಹಿಯ ಪ್ರವೇಶದೊಂದಿಗೆ. ವಸಾಹತುಗಳನ್ನು ಲೂಟಿ ಮಾಡಿಯೇ ಸಾಮ್ರಾಜ್ಯ ನಿರ್ಮಿಸಬೇಕೆನ್ನುವ ಧೋರಣೆ ನಿಧಾನವಾಗಿ ಕಾಣಿಸಿಕೊಳ್ಳ ಲಾರಂಭಿಸಿತು. ಏಷ್ಯಾದ ದೇಶಗಳ ನಡುವೆಯೂ ಆಂತರಿಕ ಭಿನ್ನಾಭಿಪ್ರಾಯಗಳು ಮನೆ ಮಾಡಿದ್ದು ಯುರೋಪಿಯನ್ನರ ಉದ್ದೇಶ ಈಡೇರಿಕೆಗೆ ನೆರವಾಯಿತು. ಬಂಡವಾಳಶಾಹಿ ದೇಶಗಳು ತಮ್ಮ ಆರ್ಥಿಕ ಬಿಕ್ಕಟ್ಟನ್ನು ವಸಾಹತುಗಳ ಮೂಲಕ ನಿವಾರಿಸಿಕೊಂಡವು.

ಇಪ್ಪತ್ತನೆಯ ಶತಮಾನದಲ್ಲಿ ಪ್ರಬಲವಾಗಿ ಕಾಣಿಸಿಕೊಂಡ ವಸಾಹತುಶಾಹಿತ್ವ, ನಿರ್ವಸಾಹತೀಕರಣ ಹಾಗೂ ನವವಸಾಹತುಶಾಹಿ ಧೋರಣೆಗಳ ಕುರಿತಾಗಿ ಪ್ರಸ್ತುತ ಸಂಪುಟದಲ್ಲಿ ವಿವರವಾಗಿ ಚರ್ಚಿಸಲಾಗಿದೆ. ವಸಾಹತುಶಾಹಿ ವ್ಯವಸ್ಥೆಯನ್ನು ನಿರ್ವಸಾಹತೀ ಕರಿಸುವಲ್ಲಿ ಏಷ್ಯಾದ ದೇಶಗಳು ಯಶಸ್ವಿಯಾದರೂ, ನವವಸಾಹತುಶಾಹಿಯ ಹಿಡಿತದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ಇಪ್ಪತ್ತನೆಯ ಶತಮಾನದ ಮೊದಲಾರ್ಧದಲ್ಲಿ ವಸಾಹತುಶಾಹಿಯ ವಿರುದ್ಧ ಕಾಣಿಸಿಕೊಂಡ ರಾಷ್ಟ್ರೀಯ ಚಳವಳಿಗಳು ರಾಜಕೀಯ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದವು. ಏಕೆಂದರೆ ಏಷ್ಯಾದ ದೇಶಗಳು ವಸಾಹತುಶಾಹಿ ಆಳ್ವಿಕೆಯಲ್ಲಿ ಆರ್ಥಿಕವಾಗಿ ಅತ್ಯಂತ ಕೆಳಮಟ್ಟವನ್ನು ತಲುಪಿದ್ದವು. ಈ ಕಾರಣದಿಂದಾಗಿ ನವವಸಾಹತುಶಾಹಿ ಎನ್ನುವ ಹೊಸ ವ್ಯವಸ್ಥೆ ಅಥವಾ ಹಳೆ ವ್ಯವಸ್ಥೆಯ ಪರಿಷ್ಕೃತ ರೂಪ ಏಷ್ಯಾದ ದೇಶಗಳಲ್ಲಿ ಸ್ವತಂತ್ರವಾಗಿ ವ್ಯವಹರಿಸುವಂತಾಯಿತು. ಬಂಡವಾಳಶಾಹಿ ದೇಶಗಳಿಂದ ಮೂರನೆಯ ಜಗತ್ತು ಎಂಬುದಾಗಿ ಗುರುತಿಸಲ್ಪಟ್ಟ ಏಷ್ಯಾ ಆರ್ಥಿಕ ಸ್ವಾತಂತ್ರ್ಯವಿಲ್ಲದೆ ತನ್ನ ಅಸ್ತಿತ್ವಕ್ಕಾಗಿ ಮತ್ತೊಮ್ಮೆ ಪರದಾಡುವ ಸ್ಥಿತಿಯನ್ನು ತಲುಪಬೇಕಾಗಿ ಬಂತು. ಜಗತೀಕರಣ ಹಾಗೂ ಅದರ ಅಂಗ ಸಂಸ್ಥೆಗಳು ನವವಸಾಹತು ಶಾಹಿಯ ಮೂಲಕ ಏಷ್ಯಾದ ದೇಶಗಳನ್ನು ನವವಸಾಹತುಗಳನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದವು. ಏಷ್ಯಾದ ದೇಶಗಳಂತೆ ಆಫ್ರಿಕಾದ ದೇಶಗಳೂ ಪಶ್ಚಿಮದ ಈ ಅವಲಂಬನೆಗೆ ಒಳಗಾದವು. ಏಷ್ಯಾದ ಹಲವಾರು ದೇಶಗಳು ರಾಜಕೀಯ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದರೂ, ಆಂತರಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾದವು. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದ ರಾಜಕಾರಣ ಮೂಲಕಾರಣವಾಯಿತು.

ಆಂತಾರಾಷ್ಟ್ರೀಯ ಮಟ್ಟದ ರಾಜಕಾರಣವನ್ನು ಎರಡನೇ ಜಾಗತಿಕ ಯುದ್ಧಾನಂತರದ ಸಂದರ್ಭದಲ್ಲಿ ಕಾಣಬಹುದಾಗಿದೆ. ಇಡೀ ಜಗತ್ತು ಬಂಡವಾಳಶಾಹಿ ಹಾಗೂ ಸಮಾಜವಾದಿ ಬಣಗಳಾಗಿ ವಿಭಜನೆಗೊಂಡು ಶೀತಲ ಸಮರ ಆರಂಭವಾದಾಗಿನಿಂದ ಏಷ್ಯಾದ ದೇಶಗಳು ತಮ್ಮ ಇಷ್ಟಕ್ಕೆ ವಿರುದ್ಧವಾಗಿಯಾದರೂ ಈ ಬಣಗಳಲ್ಲಿ ಯಾವುದಾದರೂ ಒಂದು ಬಣಕ್ಕೆ ಪರವಾಗಿರುವ ಅನಿವಾರ್ಯತೆಗೆ ಅಥವಾ ಬಿಕ್ಕಟ್ಟಿಗೆ ಸಿಲುಕಿದವು. ಏಷ್ಯಾದ ದೇಶಗಳು ಈ ಸಂದಿಗ್ಧತೆಗೆ ಸಿಲುಕಿದ ವಿಚಾರದ ಕುರಿತು ಇಲ್ಲಿನ ಲೇಖನಗಳು ಚರ್ಚಿಸುತ್ತವೆ. ಸೋವಿಯತ್ ಒಕ್ಕೂಟದ ವಿಘಟನೆಯೊಂದಿಗೆ ಅಮೆರಿಕಾ ಪ್ರಪಂಚದ ಏಕೈಕ ಸೂಪರ್ ಪವರ್ ಆಗಿ ಹೊರಹೊಮ್ಮಿದ ಮೇಲಂತೂ ಏಷ್ಯಾದ ರಾಜಕೀಯಕ್ಕೆ ಅಮೆರಿಕಾದ ಹಸ್ತಕ್ಷೇಪ ಅನಿವಾರ್ಯವೇನೋ ಎನ್ನುವ ಭಾವನೆ ಮೂಡುವಂತೆ ಆಯಿತು. ಅಮೆರಿಕಾದ ಯಜಮಾನಿಕೆಯನ್ನು ಒಪ್ಪಿಕೊಳ್ಳುವಂತೆ ಮಾಡಿದ ಅಂತಾರಾಷ್ಟ್ರೀಯ ಜಲ ಹಾಗೂ ಅದು ಬೀಸಿದ ಬಲೆ ಈ ಸಂಪುಟದಲ್ಲಿ ಹೆಚ್ಚು ಚರ್ಚಿತವಾಗಿದೆ. ಅಮೆರಿಕಾ ನಡೆಸಿದ ಅರಬ್ ರಾಜಕೀಯ ಹಲವಾರು ದೇಶಗಳ ಅಸ್ತಿತ್ವವನ್ನೇ ಇಲ್ಲವಾಗಿಸಿತು. ಇಸ್ರೇಲ್ ಒಂದು ರಾಜಕೀಯ ಶಕ್ತಿಯಾಗಿ ರೂಪುಗೊಳ್ಳುವಲ್ಲಿ ಅಮೆರಿಕಾ ಸಹಾಯಹಸ್ತ ನೀಡಿತು. ಆದರೆ ಪ್ಯಾಲೆಸ್ಟೈನ್ ಸಮಸ್ಯೆ ಬಗೆಹರಿಯಲಾಗದ ಹಂತ ತಲುಪಿತು. ಅಮೆರಿಕಾ ಏಷ್ಯಾದಲ್ಲಿ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳುವುದಕ್ಕೋಸ್ಕರ ನಡೆಸಿದ ಅರಬ್ ರಾಜಕೀಯ ಅರಬ್ ದೇಶಗಳಿಗೇ ಮಾರಣಾಂತಿಕವಾಗಿ ಪರಿಣಮಿಸಿತು. ಅಮೆರಿಕಾ ಹುಟ್ಟುಹಾಕಿದ ಆಂತರಿಕ ಬಿಕ್ಕಟ್ಟು ಹಾಗೂ ಅದು ನಡೆಸಿದ ಮಧ್ಯಪ್ರವೇಶ ಏಷ್ಯಾದ ದೇಶಗಳ ಆರ್ಥಿಕ ಸ್ವಾತಂತ್ರ್ಯ ವನ್ನು ಕಬಳಿಸಿದ್ದೇ ಅಲ್ಲದೆ ರಾಜಕೀಯವಾಗಿಯೂ ಯಾವುದೇ ಸ್ಪಷ್ಟ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಕಟ್ಟಿಹಾಕಿತು. ಈ ರೀತಿಯ ಕೆಟ್ಟ ಅನುಭವಗಳಿಗೆ ಒಳಗಾದ ಏಷ್ಯಾದ ದೇಶಗಳೆಂದರೆ ಪಶ್ಚಿಮ ಏಷ್ಯಾದ ದೇಶಗಳು. ಇವು ತಮ್ಮ ಚರಿತ್ರೆಯ ಕರಾಳ ದಿನಗಳನ್ನು ಆಧುನಿಕ ಸಂದರ್ಭದಲ್ಲಿ ಕಾಣಬೇಕಾಗಿ ಬಂದಿರುವುದು ವಿಪರ್ಯಾಸ.

ಪ್ರಸ್ತುತ ಸಂಪುಟದಲ್ಲಿ ಏಷ್ಯಾದಲ್ಲಿ ಪ್ರಾದೇಶಿಕ ಒಕ್ಕೂಟಗಳು ಅಸ್ತಿತ್ವಕ್ಕೆ ಬಂದಿರುವ ಬಗೆ ಹಾಗೂ ಅವು ಹೊಂದಿದ ಉದ್ದೇಶಗಳ ಕುರಿತಾಗಿ ಚರ್ಚಿಸಲಾಗಿದೆ. ಒಪೆಕ್, ಒಎಪೆಕ್, ಅರಬ್‌ಲೀಗ್, ಸಾರ್ಕ್ ಮುಂತಾದ ಒಕ್ಕೂಟಗಳು ಪರಸ್ಪರ ಸಂಬಂಧಗಳನ್ನು ಬಲಗೊಳಿಸುವ ಹಾಗೂ ಸಹಯೋಗ ನೀತಿಯನ್ನು ಪಾಲಿಸುವ ಉದ್ದೇಶವನ್ನು ಇಟ್ಟು ಕೊಂಡು ಸ್ಥಾಪನೆಯಾದಂತವು. ಆಂತರಿಕ ಬಿಕ್ಕಟ್ಟುಗಳನ್ನು ನಿವಾರಿಸಿಕೊಂಡು ಜಾಗತಿಕ ಮಟ್ಟದಲ್ಲೂ ತಮ್ಮ ವರ್ಚಸ್ಸನ್ನು ಕಾಯ್ದುಕೊಂಡು ಹೋಗುವ ನಿಟ್ಟಿನಲ್ಲಿ ಪ್ರಾದೇಶಿಕ ಒಕ್ಕೂಟಗಳು ತಕ್ಕಮಟ್ಟಿನ ಯಶಸ್ಸನ್ನು ಪಡೆದವು. ಯುರೋಪ್ ಹಾಗೂ ಅಮೆರಿಕಾ ಏಷ್ಯಾದ ದೇಶಗಳ ಮೇಲೆ ತಂದೊಡ್ಡಿದ ಆಪಾಯಗಳೇ ಪ್ರಾದೇಶಿಕ ಒಕ್ಕೂಟಗಳು ರಚನೆಗೊಳ್ಳುವುದಕ್ಕೆ ಮೂಲಕಾರಣವಾಯಿತು. ಹೀಗೆ ಏಷ್ಯಾ ತನ್ನ ಆರಂಭಿಕ ದಿನಗಳಿಂದ ಆಧುನಿಕ ಸಂದರ್ಭದವರೆಗೆ ಹಲವಾರು ರೀತಿಯ ಸ್ಥಿತ್ಯಂತರಗಳಿಗೆ ಒಳಗಾಗಿದ್ದು, ಅವುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಗುರುತಿಸಿ, ಚರ್ಚಿಸುವ ಪ್ರಯತ್ನವನ್ನು ಪ್ರಸ್ತುತ ಸಂಪುಟದ ಲೇಖನಗಳು ಮಾಡಿವೆ.

ಪ್ರಸ್ತುತ ಸಂಪುಟವು ಚರಿತ್ರೆ ವಿಶ್ವಕೋಶದಲ್ಲಿ ಒಂದು ಭಾಗವಾಗಿ ಈ ಹಿಂದೆ ಪ್ರಕಟವಾಗಿತ್ತು. ಅಲ್ಲಿದ್ದ ಲೇಖನಗಳನ್ನು ಪರಿಷ್ಕರಿಸಿ ಹಾಗೂ ಕೆಲವು ಹೊಸ ಲೇಖನಗಳನ್ನು ಸೇರಿಸುವುದರ ಮೂಲಕ ಈ ಸಂಪುಟವು ಹೊಸ ಆಲೋಚನೆಗಳೊಂದಿಗೆ ಹೊಸದಾಗಿ ರೂಪುಗೊಂಡಿದೆ. ಚರಿತ್ರೆ ವಿಶ್ವಕೋಶ ಯೋಜನೆಯು ಆರಂಭಗೊಂಡಿದ್ದು ಕನ್ನಡ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾದ ಡಾ.ಚಂದ್ರಶೇಖರ ಕಂಬಾರ ಅವರ ಅವಧಿಯಲ್ಲಿ. ಅವರು ನೀಡಿದ ಸ್ಫೂರ್ತಿಯೇ ಇಂದು ಈ ಸಂಪುಟ ಪ್ರಕಟಗೊಳ್ಳುತ್ತಿರುವುದಕ್ಕೆ ಮೂಲ ಕಾರಣ. ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಪ್ರಸ್ತುತ ಕುಲಪತಿಗಳಾದ ಡಾ.ಎ.ಮುರಿಗೆಪ್ಪ ಅವರು ಈ ಸಂಪುಟವನ್ನು ಹೊರತರುವಲ್ಲಿ ಎಲ್ಲ ರೀತಿಯ ಸಹಕಾರ ನೀಡಿದ್ದು ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಈ ಸಂಪುಟವು ಹೊರ ಬರುವಲ್ಲಿ ನೆರವಾದ ಕುಲಸಚಿವರಾದ ಹಾಗೂ ಪ್ರಸಾರಾಂಗದ ನಿರ್ದೇಶರಾದ ಡಾ.ಮಂಜುನಾಥ ಬೇವಿನಕಟ್ಟಿ ಅವರಿಗೆ ಕೃತಜ್ಞತೆಗಳು. ಚರಿತ್ರೆ ವಿಭಾಗದ ಮುಖ್ಯಸ್ಥರಾದ ಡಾ.ಎನ್.ಚಿನ್ನಸ್ವಾಮಿ ಸೋಸಲೆ ಅವರ ಎಲ್ಲ ರೀತಿಯ ಸಹಕಾರಕ್ಕಾಗಿ ಕೃತಜ್ಞನಾಗಿದ್ದೇನೆ. ಈ ಸಂಪುಟದ ಪ್ರಧಾನ ಸಂಪಾದಕರಾದ ಪ್ರೊ.ತಂಬಂಡ ವಿಜಯ್ ಪೂಣಚ್ಚ ಅವರು ಪ್ರತಿಯೊಂದು ಹಂತದಲ್ಲೂ ಸೂಕ್ತ ಸಲಹೆ ಸೂಚನೆ ಹಾಗೂ ನೆರವನ್ನು ನೀಡಿ ಸಂಪುಟ ರೂಪುಗೊಳ್ಳುವುದಕ್ಕೆ ಕಾರಣರಾಗಿದ್ದಾರೆ. ಅವರಿಗೆ ನಾನು ಆಭಾರಿಯಾಗಿದ್ದೇನೆ. ಈ ಸಂಪುಟದ ವಿಷಯತಜ್ಞರಾಗಿ ಸಾಕಷ್ಟು ಸಲಹೆ ಸೂಚನೆ ನೀಡಿದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಸ್.ಎ.ಬಾರಿ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಪ್ರಾಧ್ಯಾಪಕರಾದ ಡಾ.ರಾಜರಾಮ ಹೆಗಡೆ ಅವರಿಗೆ ಅಭಾರಿಯಾಗಿದ್ದೇನೆ. ಚರಿತ್ರೆ ವಿಭಾಗದ ನನ್ನ ಸಹೋದ್ಯೋಗಿಗಳಾದ ಪ್ರೊ.ಲಕ್ಷ್ಮಣ್ ತೆಲಗಾವಿ, ಡಾ.ಸಿ.ಆರ್.ಗೋವಿಂದರಾಜು ಹಾಗೂ ಡಾ.ವಿರೂಪಾಕ್ಷಿ ಪೂಜರಹಳ್ಳಿ ಅವರು ನೀಡಿದ ನೆರವನ್ನು ಕೃತಜ್ಞತೆಯಿಂದ ನೆನೆಯುತ್ತೇನೆ. ಈ ಸಂಪುಟದ ಲೇಖನಗಳನ್ನು ಪರಿಷ್ಕರಿಸುವಲ್ಲಿ ನೆರವಾದ ಹಾಗೂ ಏಷ್ಯಾದ ಚರಿತ್ರೆಯ ವಿವಿಧ ಆಯಾಮಗಳನ್ನು ತಮ್ಮ ಲೇಖನಗಳಲ್ಲಿ ಸಮರ್ಥವಾಗಿ ಬಿಂಬಿಸಿದ ಮಂಗಳೂರು ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಪ್ರವಾಚಕರಾದ ಡಾ.ಬಿ.ಉದಯ ಅವರನ್ನು ವಿಶೇಷವಾಗಿ ನೆನೆಯುತ್ತೇನೆ. ಈ ಸಂಪುಟಕ್ಕೆ ಲೇಖನಗಳನ್ನು ಬರೆದುಕೊಟ್ಟ ಎಲ್ಲ ವಿದ್ವಾಂಸರಿಗೆ ಹಾಗೂ ಇಂಗ್ಲಿಶ್ ಲೇಖನಗಳನ್ನು ಕನ್ನಡದಲ್ಲಿ ಅನುವಾದ ಮಾಡಿಕೊಟ್ಟ ಭಾಷಾಂತರಕಾರರಿಗೆ ನಾನು ಕೃತಜ್ಞನಾಗಿದ್ದೇನೆ. ಸಂಪುಟವನ್ನು ಅಚ್ಚುಕಟ್ಟಾಗಿ ಹೊರತರುವಲ್ಲಿ ನೆರವಾದ ಪ್ರಸಾರಾಂಗದ ಹಿಂದಿನ ನಿರ್ದೇಶಕರಾದ ಡಾ.ಎ.ಮೋಹನ ಕುಂಟಾರ್ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಸಂಪುಟದ ಪುಸ್ತಕವಿನ್ಯಾಸ ಮಾಡಿದ ಶ್ರೀ ಬಿ.ಸುಜ್ಞಾನಮೂರ್ತಿ ಅವರಿಗೆ, ಮುಖಪುಟ ವಿನ್ಯಾಸವನ್ನು ಮಾಡಿದ  ಶ್ರೀ ಯು.ಟಿ.ಸುರೇಶ್ ಅವರಿಗೆ ಹಾಗೂ ಅಕ್ಷರ ಸಂಯೋಜನೆ ಮಾಡಿದ ಶ್ರೀಮತಿ ಬಿ.ರಶ್ಮಿ ಕೃಪಾಶಂಕರ್ ಅವರಿಗೆ ಕೃತಜ್ಞತೆಗಳು.