ಕಳೆದನೆಂದು ಹೇಳಲಾಗಿದೆ. ಏಸುವಿನ ತಾಯಿ ಮೇರಿಯನ್ನು ‘ಕನ್ಯೆ ಮೇರಿ’ ಎಂದು ಕ್ರೈಸ್ತರು ಪೂಜಿಸುತ್ತಾರೆ. ಏಸುವು ‘ವರ್ಜಿನ್ ಮೇರಿ’ಗೆ ಜನಿಸಿ ತಂದೆಯಾದ ಜೋಸೆಫ್‌ನ ಬಡಗಿ ಶಾಲೆಯಲ್ಲಿ ಅವನಿಗೆ ಸಹಾಯ ಮಾಡುತ್ತಾ ಕೆಲವು ವರ್ಷಗಳನ್ನು ಕಳೆದಿದ್ದಾನೆ ಎಂದು ದಾಖಲೆಗಳು ತಿಳಿಸುತ್ತವೆ. ೩೦ನೆಯ ವರ್ಷದಲ್ಲಿ ಏಸುವು ಸಾರ್ವಜನಿಕ ಶಿಕ್ಷಕನಾಗಿ ತನ್ನ ಧಾರ್ಮಿಕ ವಿಚಾರಗಳನ್ನು ಬೋಧಿಸುತ್ತಾ ದೇಶದ ಎಲ್ಲೆಡೆ ಸಂಚರಿಸಿ ಅನುಯಾಯಿಗಳನ್ನು ಪಡೆಯುತ್ತಾನೆ. ತನ್ನ ಧಾರ್ಮಿಕ ಹಾಗೂ ದಾರ್ಶನಿಕ ವಿಚಾರಗಳನ್ನು ಒಪ್ಪಿಕೊಳ್ಳುವ ಶಿಷ್ಯರ ಜೊತೆಗೆ ‘ಧರ್ಮರಾಜ್ಯ’ ಕಟ್ಟುತ್ತಾನೆ ಹಾಗೂ ಸುಮಾರು ೨-೩ ವರ್ಷಗಳ ಕಾಲ ಹೊಸಧರ್ಮ ಸಂಸ್ಥಾಪನೆಯ ಕಾರ್ಯ ನಿರ್ವಹಿಸುತ್ತಾನೆ. ಕ್ರಿಸ್ತಶಕ ೨೬ ರಿಂದ ೨೯ರವರೆಗಿನ ಈ ಅವಧಿಯಲ್ಲಿ ಅವನು ತನ್ನ ಬೋಧನೆಗಳಿಂದಾಗಿ ರೋಮನ್ ಆಧಿಪತ್ಯವನ್ನು ಒಪ್ಪಿಕೊಂಡ ಯಹೂದ್ಯ ಧಾರ್ಮಿಕ ಸಂಸ್ಥೆಗಳ ಕಡುವಿರೋಧಕ್ಕೆ ತುತ್ತಾಗುತ್ತಾನೆ. ಅವನ ಆಪ್ತ ಅನುಯಾಯಿಯಾದ ಜುದಾಸ್‌ನಿಂದ ಮೋಸಕ್ಕೆ ಒಳಗಾಗಿ ಸೆರೆ ಹಿಡಿಯಲ್ಪಡುತ್ತಾನೆ. ತನ್ನ ಧಾರ್ಮಿಕ ವಿಚಾರಗಳನ್ನು ಬದಲು ಮಾಡಲು ಒಪ್ಪಿಕೊಳ್ಳದೆ ಇದ್ದುದರಿಂದ ಶಿಲುಬೆಯ ಮೇಲು ಕಾಲು ಕೈಗಳಿಗೆ ಮೊಳೆ ಹೊಡೆಯಲ್ಪಟ್ಟು ಮರಣ ಹೊಂದುತ್ತಾನೆ. ಕ್ರೈಸ್ತಧರ್ಮದ ನಂಬಿಕೆಯಂತೆ ಶಿಲುಬೆಯಿಂದ ಅನುಯಾಯಿಗಳು ಏಸುವಿನ ಶವವನ್ನು ಸಾಗಿಸುತ್ತಿರುವಾಗ ಶವವು ಮಾಯವಾಗಿ ಮುಂದಿನ ೪೦ ದಿನಗಳಲ್ಲಿ ಏಸುವು ೫೩೯ ಜನರಿಗೆ ಪುನಃ ದರ್ಶನ ಕೊಡುತ್ತಾನೆ. ತನ್ನ ಕೊನೆಯ ದರ್ಶನದಲ್ಲಿ ಅವನು ಗಾಳಿಯಲ್ಲಿ ಮಾಯವಾಗಿ ಸ್ವರ್ಗ ವನ್ನು ಪ್ರವೇಶಿಸುತ್ತಾನೆಂದು ಗ್ರಂಥಗಳು ತಿಳಿಸುತ್ತವೆ. ಹೀಗೆ ಏಸುವು ತನ್ನ ದೇಹವನ್ನು ಬದಲಾಯಿಸದೇ ಮಾನವನ ದೈಹಿಕ ರೂಪಕ್ಕೆ ಅಮರತ್ವವನ್ನು ನೀಡುತ್ತಾನೆ ಎಂಬ ಅಂಶವನ್ನು ಗಮನಿಸಬೇಕು.

ಕ್ರೈಸ್ತಧರ್ಮದ ಬೋಧನೆಗಳು ಸುಲಭ ಹಾಗೂ ಅತ್ಯಂತ ಪ್ರಾಯೋಗಿಕವಾಗಿವೆ. ಕ್ರೈಸ್ತಧರ್ಮದ ಅತಿಮಹತ್ವದ ಗ್ರಂಥವು ಬೈಬಲ್. ಯಹೂದ್ಯ ಧರ್ಮದ ‘ಹಳೆಯ ಒಡಂಬಡಿಕೆ’ಯಲ್ಲಿರುವ ಅನೆಯಕ ವಿಚಾರಗಳು ‘ಹೊಸ ಒಡಂಬಡಿಕೆ’ಯಲ್ಲಿಯೂ ಹೇಳಲ್ಪಟ್ಟಿವೆ. ಆದರೆ ಇವುಗಳನ್ನು ಅತ್ಯಂತ ಸರಳ, ನೆಯರ ಹಾಗೂ ಜನಪ್ರಿಯ ರೀತಿಯಲ್ಲಿ ಬೋಧಿಸಲಾಗಿದೆ. ಬೈಬಲ್‌ನಲ್ಲಿ ಹೇಳುವಂತೆ ದೇವರನ್ನು ತಂದೆಯೆಂದು ನಿಷ್ಠೆಯಿಂದ ಒಪ್ಪಿಕೊಂಡಾಗ ಸಂತೋಷ, ಸುರಕ್ಷೆ ಮತ್ತು ವಿಶ್ರಾಂತಿಗಳು ಎಲ್ಲಿಯೂ ಲಭ್ಯವಾಗುತ್ತವೆ. ಇಹಜೀವನಕ್ಕೆ ಅತ್ಯಂತ ಮಹತ್ವ ನೀಡಲಾಗಿದೆ. ದೇವರು ಕರುಣಾಮಯಿ. ಅವನು ಎಲ್ಲರ ತಂದೆ. ದೇವದೂತ. ಏಸು ಎಲ್ಲ ಮಾನವರನ್ನು ಪ್ರೀತಿಸುವ ಮಗ.  ಮಾನವರೆಲ್ಲರೂ ತಂದೆಯ ದೃಷ್ಟಿಯಲ್ಲಿ ಸಮಾನರು. ತಂದೆಯ ಪ್ರೀತಿ, ಅಂತಃಕರಣ ಹಾಗೂ ಕೃಪೆ ಎಲ್ಲರಿಗೂ ಪೂರ್ಣವಾಗಿ ಲಭ್ಯವಾಗುವುದು. ಪ್ರೀತಿಯ ಜೀವನದ ಅತ್ಯಂತ ಮಹತ್ವದ ಮಲ್ಯ. ಪ್ರೀತಿಗೆ ಯಾವ ನಿರ್ಬಂಧನೆಗಳೂ ಪೂರ್ವಷರತ್ತುಗಳೂ ಇರಕೂಡದು – ಹಾಗೂ ಸ್ನೇಹಿತರ ಜೊತೆಗೆ ಶತ್ರುಗಳನ್ನು ಪ್ರೀತಿಸಬೇಕು. ದೇವರ ರಾಜ್ಯವು ಒಂದು ಉನ್ನತ ದಾರ್ಶನಿಕ ಅವಸ್ಥೆ. ತಾನು ಮಾಡಿದ ಪಾಪಗಳನ್ನು ಒಪ್ಪಿಕೊಂಡು ಪಶ್ಚಾತ್ತಾಪಪಡುವ ಎಲ್ಲ ವ್ಯಕ್ತಿಗಳನ್ನೂ ದೇವರು ಕ್ಷಮಿಸಿ, ಪ್ರೀತಿಸಿ, ಅವರಿಗೆ ದೇವರ ಸಾಮ್ರಾಜ್ಯದಲ್ಲಿ ಸ್ಥಾನ ನೀಡುತ್ತಾನೆ.

ತಂದೆ, ಮಗ ಹಾಗೂ ಪವಿತ್ರ ಆತ್ಮ ಈ ಮೂರರ ತತ್ವ ಕ್ರೈಸ್ತಧರ್ಮದ ಅತಿ ಪ್ರಮುಖ ವಿಚಾರ. ದೇವರು ಒಬ್ಬನೆಯ. ಅವನು ಅತಿಪವಿತ್ರನೂ, ಸರ್ವಶಕ್ತನೂ ಹಾಗೂ ಮಮತಾಮಯಿಯೂ ಆಗಿರುತ್ತಾನೆ. ಕ್ರೈಸ್ತ ದೇವಾಲಯಗಳು(ಚರ್ಚುಗಳು) ಸರ್ವಶಕ್ತನಾದ ದೇವನ ಆರಾಧನೆಯಲ್ಲಿ ತೊಡಗಲು ವಿಧಿವಿಧಾನಗಳನ್ನು ಹಾಗೂ ಪರಿಕರಗಳನ್ನು ಒದಗಿಸುತ್ತವೆ. ಏಸು ತಾನೆಯ ಸ್ವತಃ ಚರ್ಚಿನ ಪೂಜೆಗಳಲ್ಲಿ ತೊಡಗಿರುತ್ತಿದ್ದನಲ್ಲದೆ, ದಿನನಿತ್ಯದ ಜೀವನದಲ್ಲಿ ಯಹೂದ್ಯರ ಅನೆಯಕ ಮತಾಚರಣೆಗಳನ್ನು ಅನುಸರಿಸಿದ್ದನು. ಯಹೂದ್ಯರ ಧಾರ್ಮಿಕ ಸೂಕ್ತಿಗಳನ್ನು ಏಸು ತನ್ನ ಬೋಧನೆಗಳಲ್ಲಿ ಪುನರುಚ್ಚರಿಸಿದ್ದಾನೆ. ಏಸುವಿನ ನೈತಿಕ ಪಾಠಗಳನ್ನು ಹಾಗೂ ಅವನು ದೇವರ ದೂತನೆಂಬ ಉದ್ಘೋಷಣೆಗಳನ್ನು ಬೇರ್ಪಡಿಸಿ ನೋಡುವುದು ಸೂಕ್ತವಲ್ಲವೆಂಬುದು ತಜ್ಞರ ಮತ. ‘‘ನೀನು ವಿಶ್ವದ ಅಧಿಪತಿಯಾದ ಸರ್ವಶಕ್ತ ದೇವದೂತನೆ?’’ ಎಂಬ ಪ್ರಶ್ನೆಗೆ ಏಸುವು ‘‘ಹೌದು, ನಾನೆಯ ದೇವದೂತ’’ ಎಂದು ಉತ್ತರಿಸಿದ್ದನ್ನು ಇಲ್ಲಿ ಉದಾಹರಿಸಬಹುದು. ಏಸುವಿನ ಪಾಠಗಳು ೪ ಪ್ರವಾದಿಗಳ ಪವಿತ್ರ ಬರಹಗಳ ರೂಪದಲ್ಲಿ ನಮಗೆ ಇಂದು ಲಭ್ಯವಿದೆ. ಏಸುವಿನ ಜೀವಿತಾವಧಿಯಲ್ಲಿ ಅವನ ಪ್ರಮುಖ ಶಿಷ್ಯರಾಗಿದ್ದ ಮ್ಯಾಥ್ಯೂ, ಮಾರ್ಕ್, ಲ್ಯೂಕ್ ಮತ್ತು ಜನ್ ಇವರ ನಾಲ್ಕು ‘ಗಾಸ್ಪೆಲ್’ಗಳ ಮೂಲಕ ಏಸುವಿನ ಧಾರ್ಮಿಕ ವಿಚಾರಗಳನ್ನು ಜಗತ್ತಿಗೆ ನೀಡಿದ್ದಾರೆ.

ಕ್ರೈಸ್ತ ಧರ್ಮದ ಬೆಳವಣಿಗೆಯ ಇತಿಹಾಸವು ಅನೆಯಕ ಮಹತ್ವದ ಬದಲಾವಣೆಗಳಿಂದ ಕೂಡಿದ್ದು ಅವೆಲ್ಲವನ್ನೂ ಇಲ್ಲಿ ವಿಸ್ತಾರವಾಗಿ ಬರೆಯುವುದು ಸಾಧ್ಯವಿಲ್ಲ. ಬಹುಪ್ರಮುಖವಾಗಿ ಉಲ್ಲೇಖಿಸಬೇಕೆಂದರೆ, ಈ ಧರ್ಮದಲ್ಲಿ ಎರಡು ಮುಖ್ಯ ಪಂಥಗಳು ಇಂದು ಕಂಡುಬರುತ್ತವೆ; ಕ್ಯಾಥೋಲಿಕ್ ಹಾಗೂ ಪ್ರೊಟೆಸ್ಟಂಟ್ ಇವೆರಡೂ ಮೂಲಭೂತವಾಗಿ ಒಂದೇ ಧಾರ್ಮಿಕ ತಳಹದಿಯನ್ನು ಹೊಂದಿದ್ದು, ಜೀವನವನ್ನು ಬೇರೆ ಬೇರೆ ದೃಷ್ಟಿಕೋನದಿಂದ ಅರ್ಥ ಮಾಡಿಕೊಳ್ಳುವ ಪ್ರಯತ್ನವಾಗಿ ಅಭಿವ್ಯಕ್ತಿಗೊಂಡಿವೆ. ಚರ್ಚ್‌ಸಂಪ್ರದಾಯವೂ ಕಾಲಕ್ರಮೇಣ ಸಾಂಪ್ರದಾಯಿಕ ಮತಾಚರಣೆಗಳ ಮೇಲೆ ಒತ್ತು ನೀಡಿದ್ದಲ್ಲದೆ ಪಾರಮಾರ್ಥಿಕ ಸತ್ಯವನ್ನು ಅರಿಯುವಲ್ಲಿ ಹಾಗೂ ಉಳಿಸಿಕೊಳ್ಳುವಲ್ಲಿ ಚರ್ಚು ಸಂಸ್ಥೆಯೊಂದೇ ಪೂರ್ಣ ಜವಾಬ್ದಾರ ಎಂದು ಘೋಷಿಸಿತು. ಸಂತಮೇರಿಯ ವಿಗ್ರಹ ಪೂಜೆಯೂ ಪ್ರಾರಂಭವಾಯಿತು. ರೋಮ್‌ನ ಸರ್ವಶ್ರೇಷ್ಠ ಧರ್ಮಗುರುವಾದ ‘ಪೋಪ್’ನ ಪ್ರಭುತ್ವವನ್ನು ಜಗತ್ತಿನ ಎಲ್ಲ ಕ್ರೈಸ್ತ ಧರ್ಮೀಯರೂ ಒಪ್ಪಿಕೊಳ್ಳಲೇಬೇಕೆಂದು ತಾಕೀತು ಮಾಡಿತು. ಚರ್ಚಿನಲ್ಲಿ ಪೂಜವಿಧಾನಗಳು ಹಾಗೂ ವಿಸ್ತೃತವಾದ ಆಚರಣೆಗಳು ಬಳಕೆಗೆ ಬಂದವು. ೧೫ನೆಯ ಶತಮಾನದಲ್ಲಿ ಯುರೋಪದಲ್ಲಿ ಕೆಲವರು ಕ್ರೈಸ್ತಧರ್ಮದ ಗುಂಪುಗಳು ಇಂಥ ಮತಾಚರಣೆಗಳನ್ನು ವಿರೋಧಿಸಿದವು. ಮೇಲಿನ ಎಲ್ಲ ಅಂಶಗಳನ್ನು ಪ್ರತಿರೋಧಿಸಿದ ಕಾರಣದಿಂದ ಇಂಥ ಪ್ರತಿರೋಧಿ ಗುಂಪನ್ನು ಪ್ರೊಟೆಸ್ಟೆಂಟ್ ಎಂದು ಕರೆಯಲಾಯಿತು. ಪ್ರೊಟೆಸ್ಟೆಂಟ್ ಪಂಥವು ಬೇರೆ ಬೇರೆ ರೂಪಗಳಲ್ಲಿ ಬಳಕೆಗೆ ಬಂದಿತು  ಬಹಳಷ್ಟು ಸಮಾಜಗಳಲ್ಲಿ ಕಾಲಕ್ರಮೇಣ ಕ್ಯಾಥೊಲಿಕ್ ಚರ್ಚುಗಳಲ್ಲಿ ನಡೆಸುವ ಧಾರ್ಮಿಕ ವಿಧಿಗಳು ಸ್ವಲ್ಪ ರೂಪಾಂತರಗಳೊಂದಿಗೆ ಪುನಃ ಬೆಳಕಿಗೆ ಬಂದದ್ದನ್ನು ಗಮನಿಸಬಹುದು. ಲೂಥರ್, ಕ್ಯಾಲ್ವಿನ್ ಮುಂತಾದವರ ಬೋಧನೆಗಳನ್ನು ಈ ಧಾರ್ಮಿಕ ಚಳುವಳಿಯಲ್ಲಿ ಮಹತ್ವದ್ದೆಂದು ಗಣಿಸಲಾಗಿದೆ(ಈ ವಿಚಾರಗಳನ್ನು ಮುಂದಿನ ಅಧ್ಯಾಯದಲ್ಲಿ ವಿವರವಾಗಿ ಚರ್ಚಿಸಲಾಗಿದೆ).

ಇಸ್ಲಾಂ ಧರ್ಮ

ಮಹಮ್ಮದೀಯ ಧರ್ಮ ಅಥವಾ ಇಸ್ಲಾಂ ಧರ್ಮ(ಮುಸಲ್ಮಾನ ಧರ್ಮ)ವು ಇಂದಿನ ಜಗತ್ತಿನ ಅತಿಪ್ರಮುಖ ಧಾರ್ಮಿಕ ನಂಬಿಕೆಯ ವ್ಯವಸ್ಥೆಗಳಲ್ಲಿ ಒಂದು. ಕ್ರೈಸ್ತ ಧರ್ಮವು ಹುಟ್ಟಿದ ಆರು ಶತಮಾನಗಳ ನಂತರದ ಈ ಧರ್ಮವು ತನ್ನ ಕೆಲವು ವಿಶೇಷ ಅಂಶಗಳಿಂದಾಗಿ ಜಗತ್ತಿನ ವಿವಿಧೆಡೆ ಹರಡಿತು. ಯಹೂದಿ ಧರ್ಮದ ‘ಏಕೇಶ್ವರ’ ವಾದದಿಂದಲೇ ಸ್ಫೂರ್ತಿ ಪಡೆದ ಕ್ರೈಸ್ತ ಧರ್ಮವು ಕ್ರಮೇಣ ಯಹೂದ್ಯರ ‘ಮೂರ್ತಿ ಪೂಜೆ’ಯ ನಿರಾಕರಣೆಯನ್ನು ಸರಿಯಾಗಿ ಪಾಲಿಸಲಿಲ್ಲ. ‘‘ಯಾವುದೇ ಕೊರೆದ ವಿಗ್ರಹ, ಅಕಾಶ, ನೀರು, ನೆಲದಲ್ಲಿರುವ ಯಾವುದೇ ವಸ್ತುವಿನ ಪ್ರತಿಕೃತಿಯನ್ನು ನಮಸ್ಕರಿಸಬಾರದು’’ ಎನ್ನುವ ಯಹೂದ್ಯರ ಮಹಾಶಾಸನವು ಕ್ರೈಸ್ತಮತೀಯರಿಂದ ಉಲ್ಲಂಘಿಸಲ್ಪಟ್ಟಿತು ಎಂಬ ಭಾವನೆ ಕೆಲವು ಜನರಲ್ಲಿ ಬೇರೂರಿತು. ಇಂಥ ಸಮಯದಲ್ಲಿ ಈ ಭಾವನೆಗಳಿಗೆ ಸ್ಪಂದಿಸಿ ಇಸ್ಲಾಂ ಧರ್ಮದ ಉದಯವಾಯಿತು.

ಏಳನೆಯ ಶತಮಾನದಲ್ಲಿ ಹುಟ್ಟಿದ ‘ಇಸ್ಲಾಂ’ ಧರ್ಮವು ‘ಏಕೇಶ್ವರ’ ವಾದದ ಅತ್ಯಂತ ನಿಷ್ಠಾಪೂರ್ಣ ಪಾಲನೆಗೆ ಬದ್ಧವಾಗಿತ್ತು. ದೇವರು (ಅಲ್ಲಾ) ಪೈಗಂಬರನ (ದೇವದೂತ) ಮೂಲಕ ಹೊರಜಗತ್ತಿಗೆ ಪರಿಚಯಿಸಿದ್ದಾನೆ, ‘ಇಸ್ಲಾಂ’ ಶಬ್ದವು ದೇವರಿಗೆ ಪೂರ್ಣ ಶರಣಾಗುವುದರಿಂದ ಸಿಗುವ ಶಾಂತಿ’ ಎಂಬ ಅರ್ಥವನ್ನು ಕೊಡುತ್ತದೆ ಎಂದು ಮಹಮ್ಮದ್ ವಿವರಿಸುತ್ತಾನೆ. ಮುಸಲ್ಮಾನ್ ಜನಾಂಗದವರು ತಮ್ಮ ಧರ್ಮವು ದೇವ ಸೃಷ್ಟಿಯ ಜೊತೆಗೇ ಆಗಿದೆಯೆಂದು ನಂಬಿದ್ದಾರೆ. ಹಳೆ ಹಾಗೂ ಹೊಸ ಒಡಂಬಡಿಕೆಗಳಲ್ಲಿಯೂ ಇದು ದೇವರ ಧರ್ಮ ಎಂದೇ ವರ್ಣಿಸಲ್ಪಟ್ಟಿದೆ. ಮಹಮ್ಮದ್ ಪೈಗಂಬರನ (ಪೈಗಂಬರರಲ್ಲೇ ಕೊನೆಯವರೂ, ಅತ್ಯಂತ ಶ್ರೇಷ್ಠರೂ) ಪವಿತ್ರ ಉಪದೇಶಗಳ ಸಂಗ್ರಹ ಹಾಗೂ ಮುಸಲ್ಮಾನರ ಅತ್ಯಂತ ಪವಿತ್ರ ಗ್ರಂಥವಾದ ‘ಕುರಾನ್’ ಸಹ ಇದನ್ನೇ ಅನುಮೋದಿಸುವುದು. ಮಾನವ ಸಮಾನತೆ, ಸೋದರತ್ವ ಮುಂತಾದ ವಿಷಯಗಳಲ್ಲಿ ‘ಇಸ್ಲಾಂ’ ಧರ್ಮವು ಬಹಳ ವಿಶಾಲವಾದ ಮನೋಧರ್ಮವನ್ನು ಹೊಂದಿದೆ. ಮಾನವ ತನ್ನನ್ನು ತಾನು ಅರಿತುಕೊಳ್ಳುವ ಹಾದಿಯನ್ನು ದೇವರು ದಯಪಾಲಿಸಿದ್ದಾನೆಂದೇ ನಂಬಿಕೆ ಇದೆ.

ಪವಿತ್ರವಾದ ದೈವಾಂಶ ಶಕ್ತಿಯು ವಿಶ್ವದ ಮೊದಲ ಪ್ರವಾದಿ ‘ಆದಮ್ ’ನ ಮೂಲಕ ಮಾನವನಿಗೆ ವಿಶ್ವನಿಯಾಮಕನ ಇಚ್ಛೆಗಳನ್ನು ಪಾಲಿಸುವಂತೆ ಆದೇಶಿಸಿತು. ಆದರೆ ಮಾನವನು ತನ್ನ ಸ್ವಾರ್ಥಸಾಧನೆಯಲ್ಲಿ ಮುಳುಗಿ ದೇವರ ಆದೇಶಗಳನ್ನು ಮರೆತು ಕ್ಷುದ್ರ ಬಯಕೆಗಳನ್ನು ಬಯಸುತ್ತ ಹೋದನು. ಜಗತ್ತಿನ ಒಬ್ಬನೇ ಪ್ರಭುವಾದ ‘ಅಲ್ಲಾಹ’ನನ್ನು ಪೂಜಿಸದೆ ಅನೇಕ ದೇವರುಗಳ ಆರಾಧನೆಯಲ್ಲಿ ತೊಡಗಿದನು. ಈ ರೀತಿಯಿಂದ ಜಗತ್ತಿನಲ್ಲಿ ಏಕೇಶ್ವರವಾದವು ಅಲ್ಲಗಳೆಯಲ್ಪಟ್ಟಿತು. ಅದರಿಂದ ಧರ್ಮಕ್ಕೆ ಸಮಸ್ಯೆ  ಯುಂಟಾದಾಗ ಸರ್ವಶಕ್ತ ‘ಅಲ್ಲಾಹ’ನು ಎರಡನೆಯ ಸಲ ‘ಅಬ್ರಾಹಮ್’ನ ಮೂಲಕ ಮನುಕುಲಕ್ಕೆ ತನ್ನ ಸಂದೇಶ ಪ್ರಕಟಿಸಿದನು. ಎಂದರೆ ಮಾನವನ ದುರ್ನಡತೆಯ ಕಾರಣದಿಂದ ನೈತಿಕ ಅಧಃಪತನ ಹಾಗೂ ಸಾಮಾಜಿಕ ಹಾನಿಯುಂಟಾದಾಗಲೆಲ್ಲ ‘ಅಲ್ಲಾ’ನು ದೇವದೂತರನ್ನು ಕಳುಹಿಸಿ ಮನುಷ್ಯರಲ್ಲಿ ಧರ್ಮಜ್ಞಾನದ ಜಗೃತಿಯನ್ನುಂಟು ಮಾಡಿದನು. ಹೀಗೆ ಕಳುಹಿಸಿದ ೨೮ ದೇವದೂತರುಗಳಲ್ಲಿ ಪ್ರಮುಖರೆನಿಸಿದವರು ಆದಂ, ಅಬ್ರಹಾಮ್, ಮೋಸಿಸ್ ಹಾಗೂ ಏಸು ಆಗಿದ್ದಾರೆ. ಅಬ್ರಾಹಮ್‌ನು ಏಕೇಶ್ವರ ವಾದವನ್ನೂ, ಮೋಸಿಸ್‌ನು ದಶಾಜ್ಞೆಗಳನ್ನು ಮಾನವರಲ್ಲಿ ಪ್ರಚುರಪಡಿಸಿದರು. ಯೇಸು ಮಾನವಪ್ರೇಮ ಹಾಗೂ ತ್ಯಾಗಗಳ ಅಮರತತ್ವಗಳನ್ನು ಜಗತ್ತಿಗೆ ಬೋಧಿಸಿದನು. ಆದರೆ ಕಾಲಕ್ರಮೇಣ ಅವನ ಅನುಯಾಯಿಗಳು ಅವನ ನಿಜವಾದ ತತ್ವವನ್ನು ಬದಿಗಿಟ್ಟು, ಅವನ ಪೂಜೆಗೇ ಹೆಚ್ಚು ಪ್ರಾಧಾನ್ಯತೆ ಕೊಟ್ಟಾಗ ಕೆಲವರು ಪ್ರತಿಭಟಿಸಿದರು. ಹೀಗೆ ಹುಟ್ಟಿದ ‘ಇಸ್ಲಾಂ’ ಧರ್ಮದ ಅನುಯಾಯಿಗಳಿಗೆ ಮುಸಲ್ಮಾನರೆಂದು ಕರೆಯುತ್ತಾರೆ.

ಅರಬ್‌ಸ್ತಾನದ ಮೆಕ್ಕಾ ಎಂಬ ಸ್ಥಳದಲ್ಲಿ ಕ್ರಿ.ಶ.೫೭೦ರಲ್ಲಿ ಮಹಮ್ಮದ್ ಪೈಗಂಬರನು ಹುಟ್ಟಿದನು. ಅಲ್ಲಿಯವರೆಗೆ ಭವ್ಯವಾದ ಇತಿಹಾಸವನ್ನು ಹೊಂದಿದ್ದ ಈಜಿಪ್ಟ್, ಬೆಬಿಲೋನಿಯಾ, ಗ್ರೀಕ್ ಸಾಮ್ರಾಜ್ಯಗಳ ಮಹತ್ವ ಇಷ್ಟರಲ್ಲಿ ಕುಂದತೊಡಗಿತ್ತು. ಯುರೋಪ್ ಖಂಡದಲ್ಲಿ ಕ್ರಿಶ್ಚಿಯನ್ ಧರ್ಮದ ಪ್ರಭಾವವಿತ್ತು. ದಕ್ಷಿಣ ಏಷ್ಯಾದಲ್ಲಿ ಬೌದ್ಧಧರ್ಮ ಹಾಗೂ ವೈದಿಕ ಧರ್ಮಗಳ ಕೇಂದ್ರೀಯ ಆಕರ್ಷಣಶಕ್ತಿ ಕ್ರಮೇಣ ಕಡಿಮೆ ಆಗುತ್ತಿತ್ತು. ಚೀನದಲ್ಲಿ ಬೌದ್ಧಧರ್ಮದ ಕಾರಣದಿಂದಾಗಿ ‘ಕನ್‌ಪ್ಯೂಶಿಯನ್’ ಧರ್ಮ ಬಲಹೀನವಾಗತೊಡಗಿತ್ತು. ಮಧ್ಯ ಏಷ್ಯಾದ ಪ್ರಬಲಶಕ್ತಿಗಳಾದ ಪರ್ಶಿಯನ್, ಬಿಝಾಂಡಿಯಮ್ ಸಾಮ್ರಾಜ್ಯಗಳ ಒಳಜಗಳ, ಯುರೋಪ್, ಅರಬ್‌ಸ್ತಾನದ ಪತನದ ಸೂಚನೆಗಳು ಜೊತೆಗೆ ಒಂದು ರೀತಿಯ ಧಾರ್ಮಿಕ ಮಢ್ಯ ಮುಂತಾದ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ದ್ವಂದ್ವಗಳ ನಡುವೆ ಮಹಮ್ಮದರ ಜನ್ಮ ಉಂಟಾದದ್ದು ದೈವೀ ಸಂಕಲ್ಪವೆಂದೇ ಇಸ್ಲಾಂ ಧರ್ಮದಲ್ಲಿ ತಿಳಿಸಲಾಗಿದೆ. ಅರಬ್‌ಸ್ತಾನದ ಮೆಕ್ಕಾ ಪಟ್ಟಣವು ಸಂಸ್ಕೃತಿ-ಜ್ಞಾನ ಹಾಗೂ ಧರ್ಮದ ದೃಷ್ಟಿಯಿಂದಲ್ಲದೆ, ವಾಣಿಜ್ಯ ಹಾಗೂ ರಾಜಕೀಯ ವಾಗಿಯೂ ಉನ್ನತಿ ಸಾಧಿಸಿತ್ತು. ಆದ್ದರಿಂದಲೇ ಈ ಸ್ಥಾನವು ಮಹಮ್ಮದರ ಚಿಂತನಶೀಲ ವ್ಯಕ್ತಿತ್ವಕ್ಕೆ ಹಾದಿಯಾಯಿತು. ಬಾಲ್ಯದಲ್ಲೇ ತಂದೆ-ತಾಯಿಗಳ ವಿಯೋಗವಾಗಿ, ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದ ಮಹಮ್ಮದರು ತನಗಿಂತ ೧೫ ವರ್ಷ ದೊಡ್ಡವಳಾದ ‘ಖದೀಬಾ’ ಎಂಬ ಶ್ರೀಮಂತ ವಿಧವೆಯನ್ನು ವಿವಾಹವಾಗಿ ಅವರ ಅಪಾರ ಆಸ್ತಿಗೆ ಒಡೆಯರಾದರು ಎಂದು ಇತಿಹಾಸವು ತಿಳಿಸುತ್ತದೆ. ಆದರೆ ಕ್ರಮೇಣ ಐಹಿಕ ಸುಖಗಳಿಂದ ವಿಮುಖರಾಗಿ ಧಾರ್ಮಿಕ ಚಿಂತನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಧರ್ಮದ ರಹಸ್ಯ, ದುಷ್ಟಶಕ್ತಿಗಳ ಸ್ವರೂಪ, ಜೀವಮರಣಗಳತ್ತ, ಪಾಪ-ಪುಣ್ಯಗಳತ್ತ ಚಿಂತಿಸುವುದರಲ್ಲಿ ತಲ್ಲೀನರಾದರು. ಮೆಕ್ಕಾ ಪಟ್ಟಣದ ಹೊರವಲಯದ ‘ಹೀರಾ’ ಎಂಬ ಗುಹೆಯಲ್ಲಿ ಆತ್ಮಶೋಧನೆಗೆ ಪ್ರಾರಂಭಿಸಿದ ಅವರು ಸಮಕಾಲೀನ ಜೀವನದ ದೌರ್ಬಲ್ಯ, ಕ್ಷುದ್ರತೆ, ಕ್ರೌರ್ಯ ಮುಂತಾದವುಗಳಿಂದ ಬೇಸತ್ತು ಆತ್ಮಾನುಭವದ ಮೂಲಕ ದೇವರನ್ನು ತಿಳಿಯುವಲ್ಲಿ ತನ್ನನ್ನು ತಾನೆಯ ತೊಡಗಿಸಿಕೊಂಡರು.

ಹೀಗೆ ಧ್ಯಾನಾಸಕ್ತನಾದ ಮಹಮ್ಮದನಿಗೆ ‘ಹೀರಾ’ದ ಗುಹೆಯಲ್ಲಿಯೇ ದೇವದೂತ ಜುಬ್ರೆಯಲ್‌ನ ಮೂಲಕ ಸಾಕ್ಷಾತ್ಕಾರವಾಯಿತು. ಅಲ್ಲಿಂದ ಮುಂದೆ ಸಂಪೂರ್ಣವಾಗಿ ಮಾನವ ಪ್ರಪಂಚದ ಅಭಿವೃದ್ದಿಯಲ್ಲಿ ತನ್ನನ್ನು ಅರ್ಪಿಸಿಕೊಂಡನು. ಮೂರ್ತಿ ಪೂಜೆಯನ್ನು ಅಲ್ಲಗಳೆದು ಮಹಮ್ಮದನು ಜಗತ್ತಿಗೆಲ್ಲ ಒಬ್ಬನೆಯ ದೇವರು ಎಂದು ಉಪದೇಶಿಸಿದನು. ಪರಿಶುದ್ಧ ಅಂತಃಕರಣದ ಬಲದಿಂದ ಮಾತ್ರವೇ ದೇವರನ್ನು ತಲುಪಬಹುದೆಂದು ತಿಳಿಸಿದನು. ಹೀಗಿರಲಾಗಿ ಯಾಥ್ರಿಬ್ ಪಟ್ಟಣದಿಂದ ಹೊರಟ ಯಾತ್ರಿಕರ ಗುಂಪೊಂದು ಅಹಮ್ಮದನ ಧಾರ್ಮಿಕ ಚಿಂತನೆಯಿಂದ ಗಂಭೀರವಾಗಿ ಪ್ರಭಾವಿಸಲ್ಪಟ್ಟಿತೆಂದು ಐತಿಹ್ಯವೂ ತಿಳಿಸುತ್ತದೆ. ಆ ಕಾರಣದಿಂದ ಆ ಯಾಥ್ರಿಬ್ ಪಟ್ಟಣವು ‘ಪ್ರವಾದಿಯ ಪಟ್ಟಣ’ ಎಂದು ಗುರುತಿಸಲ್ಪಟ್ಟಿತು. ಕಾಲಕ್ರಮೇಣ ಈ ಪಟ್ಟಣವು ಇತಿಹಾಸ ಪ್ರಸಿದ್ಧವಾದ ‘ಮದಿನಾ’ ನಗರವೆಂದು ಪ್ರಸಿದ್ಧವಾಯಿತು. ಮದಿನಾ ಯಾತ್ರಿಕರು ತಮ್ಮನ್ನು ಬಹುವಾಗಿ ಪ್ರಾರ್ಥಿಸಿ ಕೊಂಡಾಗ ಮಹಮ್ಮದನು ‘ಮೆಕ್ಕಾ’ ಬಿಟ್ಟು ‘ಮದೀನಾಕ್ಕೆ’ ಹೊರಡುತ್ತಾನೆ. ಮೆಕ್ಕಾ ನಿವಾಸಿಗಳಿಂದ ತಡೆಯಲ್ಪಟ್ಟಾಗ ಪ್ರವಾದಿಯಿಂದ ಉದ್ಗರಿಸಲ್ಪಟ್ಟ ‘‘ಮುನ್ನಡೆ- ನಮ್ಮ ಜೊತೆಯಲ್ಲಿ ದೇವರಿದ್ದಾನೆ’’ ಎಂಬ ಮಾತು ‘ಸುರಾಹ್’ದಲ್ಲಿ ಉಲ್ಲೇಖಿಸಲ್ಪಟ್ಟು ಪ್ರಸಿದ್ದಿ ಪಡೆದಿದೆ. ಈ ಘಟನೆಯನ್ನು ಇಸ್ಲಾಂ ದಾಖಲೆಗಳಲ್ಲಿ ‘ಹಿಜರಾ’ ಎಂದು ಕರೆಯಲಾಗಿದೆ. ಮಹಮ್ಮದ್ ಪೈಗಂಬರರು ಈ ಘಟನೆಯ ನಂತರ ‘ಮದೀನಾ’ವನ್ನು ತಲುಪಿದ್ದು, ಕ್ರಿ.ಶ.೬೨೨ರಲ್ಲಿ ಎಂದು ಇತಿಹಾಸಕಾರರು ತಿಳಿಸಿದ್ದಾರೆ. ಆದ್ದರಿಂದಲೇ ಈ ದಿನವನ್ನು ಮುಸ್ಲಿಂರ ಹಿಜರಿ ಶಕೆಯ ಪ್ರಾರಂಭ ಎಂದು ಗಣಿಸಲಾಗಿದೆ. ಜಗತ್ತಿನಲ್ಲಿಯೇ ಪ್ರಪ್ರಥಮ ಮುಸಲ್ಮಾನ ಪ್ರಾರಂಭ ಸ್ಥಳ ‘ಮಸೀದಿ’ಯ ಪ್ರತಿಷ್ಠಾಪನೆಯೂ ಕೂಡ ಇದೇ ಸಮಯದಲ್ಲಿ ನಡೆಯಿತು. ಮಸೀದಿಯೇ ಇಸ್ಮಾಂ ಧರ್ಮದ ಸಂಸ್ಕೃತಿಯ ಅಧ್ಯಾತ್ಮ ದರ್ಶನದ ಪ್ರತೀಕವಾಗಿ, ಮುಸಲ್ಮಾನರ ಧಾರ್ಮಿಕ ವ್ಯವಸ್ಥೆಯ ಅತಿಮಹತ್ವದ ಸಂಕೇತವಾಗಿ ಜನ್ಮ ತಾಳಿತು.

ಪ್ರತೀ ಶುಕ್ರವಾರದ ದೇವರ ಸೇವಾ ಕಾರ್ಯ ಮೊಣಕಾಲೂರಿ ನಮಾಜ್ ಮಾಡುವ ಪರಂಪರೆ, ಬಡವರಿಗಾಗಿ ದಾನ-ಧರ್ಮ ಮುಂತಾದವುಗಳು ಮಹಮ್ಮದ್ ಪೈಗಂಬರರ ಉಪದೇಶದ ಪ್ರಕಾರವೇ ಆಚರಣೆಗೆ ಬಂದು ಪ್ರಸಿದ್ಧವಾದವು. ಏಳು ವರ್ಷಗಳ ನಂತರ ‘ಮಕ್ಕಾ’ ಪಟ್ಟಣವು ಸಹ ಮುಸಲ್ಮಾನರ ಆಡಳಿತಕ್ಕೆ ಸೇರಿಸಲ್ಪಟ್ಟಿತು. ಈ ಮೂಲಕ ಅರಬ್‌ಸ್ತಾನದಲ್ಲಿ ಇಸ್ಲಾಂ ಧರ್ಮದ ಸ್ಥಾಪನೆಯಾಯಿತು. ಕೇವಲ ಒಂದು ಶತಮಾನದ ಅವಧಿಯಲ್ಲಿ ಅರಬ್ ಆಡಳಿತಗಾರರು ಸಂಘಟಿತರಾಗಿ ಸುಭದ್ರ ಸಾಮ್ರಾಜ್ಯ ಕಟ್ಟಿದರು. ಜೊತೆಗೆ ಧಾರ್ಮಿಕ ಪರಿವರ್ತನೆಯ ಕಾರ್ಯವೂ ಪ್ರಾರಂಭಗೊಂಡು ಏಷ್ಯಾ ಮತ್ತು ಆಫ್ರಿಕಾದ ಒಳನಾಡುಗಳಲ್ಲಿಯೂ ಇಸ್ಲಾಂ ಧರ್ಮವು ಹಬ್ಬಿ ಹರಡಿತು. ಇರಾಕ್, ಈಜಿಪ್ಟ್, ಸಿರಿಯಾ ದೇಶಗಳಲ್ಲಂತೂ ಉಳಿದ ನಂಬಿಕೆಯ ವ್ಯವಸ್ಥೆಗಳನ್ನು ಅಲ್ಲಗಳೆದು ಇಸ್ಲಾಂ ಧರ್ಮ ಪ್ರಚಾರಕ್ಕೆ ಬಂದಿತು. ಇಸ್ಲಾಂ ಧರ್ಮದ ಪ್ರಭಾವ ಎಷ್ಟು ಬಲವಾಗಿ ತ್ತೆಂದರೆ ಫ್ರಾನ್ಸ್‌ನ ರಾಜನಾದ ಚಾರ್ಲ್ಸ್ ಮಾರ್ಟೆಲ್‌ನು ಕ್ರಿ.ಶ.೭೩೨ರಲ್ಲಿ ಅರಬ್ ಪಡೆಗಳನ್ನು ಸೋಲಿಸದಿದ್ದರೆ ಬಹುಶಃ ಪಶ್ಚಿಮದ ಸಮಾಜಗಳೆಲ್ಲವೂ ಇಸ್ಲಾಂ ಧರ್ಮದಲ್ಲಿ ಸೇರಿ ಹೋಗುತ್ತಿತ್ತು.

ಮಹಮ್ಮದ್ ಪೈಗಂಬರನೆಯ ಸ್ವತಃ ತನ್ನ ಅನುಯಾಯಿಗಳಿಗೆ ತಿಳಿಸಿದಂತೆ ಮುಸ್ಲಿಂ ಜನಾಂಗದವರು ಎಂದೂ ಈ ಪ್ರವಾದಿಯನ್ನು ದೇವರೆಂದು ತಿಳಿದು ಪೂಜಿಸುವಂತಿಲ್ಲ. ಬದಲಾಗಿ ಮಹಮ್ಮದನನ್ನು ದೇವದೂತನೆಂದೂ, ಒಬ್ಬ ಬಹುದೊಡ್ಡ ಸಾಧಕನೆಂದೂ ಗುರುತಿಸಲಾಗಿದೆ. ಅತಿ ಪವಿತ್ರವೆಂದು ನಂಬಲ್ಪಟ್ಟ ‘ಕುರಾನ್’ ಗ್ರಂಥದಲ್ಲಿ ಹೇಳಿದ ವಿಚಾರಗಳು ಕೇವಲ ಪ್ರವಾದಿಯ ಉಪದೇಶಗಳಲ್ಲ, ಬದಲಿಗೆ ಅಗಣಿತ ಬುದ್ದಿಶಕ್ತಿ, ಜ್ಞಾನ, ಕರುಣೆಗಳನ್ನು ಹೊಂದಿದ ಸರ್ವಶಕ್ತ ಅಲ್ಲಾಹನ ಉಪದೇಶವೆಂದು ಭಾವಿಸಲಾಗಿದೆ. ಆದ್ದರಿಂದಲೇ ಮುಂದಿನ ಮುಸ್ಲಿಂ ಶಿಷ್ಯ ಪರಂಪರೆ ಕುರಾನ್ ಅಪ್ರತಿಮ ಗ್ರಂಥವೆಂದು ಬಳಕೆಯಲ್ಲಿ ತಂದಿತು.

ಅರಬ್ಬಿ ಭಾಷೆಯಲ್ಲಿ ಬರೆಯಲ್ಪಟ್ಟಿರುವ ಕುರಾನ್‌ನ ನೈತಿಕ-ತಾತ್ವಿಕ ವಿಚಾರಗಳೊಂದಿಗೆ ಯಹೂದ್ಯರ (ಜೂ ಧರ್ಮ) ಹಾಗೂ ಕ್ರೈಸ್ತಧರ್ಮ ಚಿಂತನೆಗಳ ಸಹಮತವಿದೆ. ಉದಾಹರಣೆಗೆ, ಕುರಾನ್ ತಿಳಿಸಿದಂತೆ, ಕಾರ್ಯ ಸಫಲವಾಗಬೇಕಾದರೆ ಕರ್ತವ್ಯದಲ್ಲಿ ಶ್ರದ್ಧೆ ಅತಿ ಮುಖ್ಯ. ಭಗವಂತನಲ್ಲಿ ಮನುಷ್ಯನು ಇಡುವ ಅಪಾರ ಶ್ರದ್ಧೆಯಿಂದಲೇ ಮುಕ್ತಿ ಸಾಧ್ಯ ಮುಂತಾದ ವಿಷಯಗಳನ್ನು ಈ ಪವಿತ್ರ ಗ್ರಂಥವು ಒತ್ತಿ ಹೇಳುತ್ತದೆ. ಈ ಪ್ರಪಂಚದಲ್ಲಿ ವ್ಯಕ್ತಿಯು ದೇವರ ಪ್ರತಿನಿಧಿ. ದೈವೀ ಸಂಕಲ್ಪವೇ ಜೀವಾತ್ಮನನ್ನು ಅವನ ದಾರಿಯಲ್ಲಿ ನಡೆಸುವುದು. ಮಾನವನ ಜೀವನದ ಮೇಲೆ ಪೂರ್ಣ ಅಧಿಕಾರವೂ ಆ ಭಗವಂತನಿಗೇ ಇದೆ. ಈ ರೀತಿ ಸಮಸ್ತ ಜೀವಗಳನ್ನು ನಡೆಸುವ ದೈವೀ ಸಂಕಲ್ಪವೇ ‘ತಕ್ಧೀರ್’ ಅಥವಾ ‘ವಿಧಿ’ ಎಂದು ಮುಸಲ್ಮಾನರು ನಂಬುತ್ತಾರೆ.

ಇಸ್ಲಾಂ ಧರ್ಮದಲ್ಲಿ ಮೂರು ಪ್ರಮುಖ ಮತಭೇದಗಳನ್ನು ಕಾಣಬಹುದು. ‘ಸುನ್ನತ್ ಜಮತಾ’ ಎಂದರೆ ಸಂಪ್ರದಾಯಬದ್ಧ ಅನುಯಾಯಿಗಳು. ‘ಷಿಯಾ’ ಮುಸಲ್ಮಾನರನ್ನು ಕಡಿಮೆ ಧಾರ್ಮಿಕ ವಿಧಿಗಳನ್ನು ಅನುಸರಿಸುವವರು ಎನ್ನಬಹುದು. ‘ವಹಾಬೀ’ಗಳು ಅಥವಾ ‘ಅಹ್‌ಲೆ ಹದೀ’ಗಳನ್ನು ಇಸ್ಲಾಂ ಧರ್ಮದ ಕಠಿಣ ನಿಯಮವಾದಿಗಳು ಎಂದು ಗುರುತಿಸಲಾಗಿದೆ. ಕೇವಲ ಬಾಹ್ಯಾಚರಣೆಗಳಲ್ಲಿ ಮಾತ್ರ ಈ ಮತಭೇದ ಕಾಣಬಹುದೇ ಹೊರತು ಕುರಾನ್ ಹಾಗೂ ಮಹಮ್ಮದ್ ಪೈಗಂಬರನ ಕುರಿತು ಶ್ರದ್ಧೆ ಎಲ್ಲರಲ್ಲೂ ಒಂದೇ ತೆರನಾಗಿ ಕಾಣುತ್ತದೆ. ಇಸ್ಲಾಂ ಧರ್ಮೀಯರ ಪ್ರಕಾರ ಮದುವೆ ಒಂದು ಸಾಮಾಜಿಕ ಒಪ್ಪಂದ. ‘ಬಕ್ರೀದ್’(ಈದ್ -ಎ-ಸುಹಾ) ಹಾಗೂ ‘ರಮ್ ಜನ್’ ಇದರ ಪ್ರಮುಖ ಹಬ್ಬಗಳು. ಇಮಾಮ್ ಹುಸೇನನ ಕೊಲೆಯ ಶೋಕದ ನೆನಪಿಗಾಗಿ ಆಚರಿಸುವ ‘ಮೊಹರಂ’ ಹಬ್ಬವು ಮಹತ್ವದ್ದೆಂದು ತಿಳಿಯಲ್ಪಟುತ್ತದೆ. ಪರದಾ ಅಥವಾ ಬುರ್ಖಾ ಪದ್ಧತಿ, ಶವವನ್ನು ಹುಗಿಯುವುದು, ಹಿರಿಯರ ಸ್ಮರಣಾರ್ಥದ ‘ಬರ್‌ಸೀ’ ಇವೆಲ್ಲವೂ ಮುಸಲ್ಮಾನ್ ಧರ್ಮದ ವೈಶಿಷ್ಟ್ಯವಾಗಿದೆ.

ಇಂದು ಇಸ್ಲಾಂ ಧರ್ಮವು ಜಗತ್ತಿನ ಅತಿ ಬಲಾಢ್ಯ ಹಾಗೂ ಅತಿ ಪ್ರಮುಖ ಧರ್ಮ ವ್ಯವಸ್ಥೆಗಳಲ್ಲಿ ಒಂದಾಗಿದೆಯೆನ್ನುವುದು ನಿರ್ವಿವಾದದ ಸಂಗತಿ. ಧರ್ಮ ಹಾಗೂ ರಾಜಕೀಯ ಶಕ್ತಿಗಳೆರಡನ್ನೂ ಒಟ್ಟಾಗಿ ಜನರಲ್ಲಿ ಪ್ರೇರೇಪಿಸುವ ಕಾರಣದಿಂದ ಇಸ್ಲಾಂ ಧರ್ಮದ ವಿಸ್ತರಣೆ ಹಾಗೂ ಮುಸಲ್ಮಾನ್ ಅರಸರ ರಾಜ್ಯವಿಸ್ತರಣೆಗಳು ಜಗತ್ತಿನ ಇತಿಹಾಸದಲ್ಲಿ ಒಟ್ಟಾಗಿಯೇ ಕಾಣಸಿಗುತ್ತವೆ.

 

ಪರಾಮರ್ಶನಗ್ರಂಥಗಳು

೧. ಎಲ್ಯಾಡ್, ಮಿರ್‌ಸ್ಯ(ಸಂ). ೧೯೮೭. ದಿ ಎನ್ಸೈಕ್ಲೋಪೀಡಿಯಾ ಆಫ್ ರಿಲೀಜನ್, ಲಂಡನ್: ಮೆಕ್‌ಮಿಲನ್.

೨. ಹಾರ್ಡಿ, ಫ್ರೀಡೆಮ್(ಸಂ). ೧೯೯೦. ದಿ ರಿಲೀಜನ್ಸ್ ಆಫ್ ಏಷ್ಯಾ, ಲಂಡನ್ : ರೂಟ್ಲೆಡ್ಜ್.