ಪಶ್ಚಿಮ, ಪೂರ್ವ ಮತ್ತು ಆಗ್ನೇಯ ಏಷ್ಯಾ ಹಲವು ದೇಶಗಳ ಸಮ್ಮಿಲನವಾಗಿದ್ದು, ಆಧುನಿಕ ಯುಗದಲ್ಲಿ ಸುಮಾರು ೨೫೦ ವರ್ಷಗಳಷ್ಟು ಕಾಲ ಪಶ್ಚಿಮ ರಾಷ್ಟ್ರಗಳ ಆಳ್ವಿಕೆಗೆ ಒಳಪಟ್ಟಿತ್ತು. ಇವುಗಳಲ್ಲಿ ಕೆಲವು ಭಾಗಗಳು ೧೬ನೆಯ ಶತಮಾನದ ಆರಂಭದಿಂದಲೇ ಪೋರ್ಚುಗೀಸ್ ಮತ್ತು ಸ್ಪೇನಿಷ್ ಸಾಮ್ರಾಜ್ಯಶಾಹಿ ಅಧೀನಕ್ಕೆ ಸೇರಿದ್ದವು. ಇಲ್ಲಿ ಅನೇಕ ಬಾರಿ ಪರಕೀಯರ ದಾಳಿಯಾಗಿದ್ದು, ಕೆಲವರು ಇಲ್ಲಿಯೇ ನೆಲೆಸಿ, ಈ ದೇಶಗಳ ಸಂಸ್ಕೃತಿಗೆ ಹೊಂದಿಕೊಂಡು ರಾಜರಾಗಿ ಆಳಿದ್ದುಂಟು. ಇನ್ನು ಕೆಲವರು ದಾಳಿ ಮಾಡಿ, ಲೂಟಿ ಮಾಡಿದ ಸಂಪತ್ತನ್ನು ತೆಗೆದುಕೊಂಡು ತಮ್ಮ ದೇಶಕ್ಕೆ ಮರಳಿದ್ದೂ ಉಂಟು. ಈ ದೇಶಗಳ ಇತಿಹಾಸದಲ್ಲಿ ಸಾಧನೆಯ ಕಾಲವು, ತಟಸ್ಥ ಕಾಲವೂ ಮತ್ತು ವಿಪತ್ತುಗಳೂ ಇದ್ದವು. ಆದರೆ ಆಧುನಿಕ ಏಷ್ಯಾದಲ್ಲಿ ವಸಾಹತುಶಾಹಿ ಚಟುವಟಿಕೆಗಳನ್ನು ಚರ್ಚಿಸುವಾಗ ಸಾಮಾನ್ಯವಾಗಿ ತೀರ ಇತ್ತೀಚೆಗಿನ ಇತಿಹಾಸಕ್ಕೆ ಮಹತ್ವವನ್ನು ಕೊಡುತ್ತೇವೆ. ಐರೋಪ್ಯ ರಾಷ್ಟ್ರಗಳ ಆಗಮನ, ಅವರ ಸಂಬಂಧದಿಂದಾದ ಪರಿಣಾಮಗಳು, ಬದಲಾವಣೆಗಳು, ಸಾಮ್ರಾಜ್ಯಶಾಹಿ ಆಡಳಿತದ ವಿವಿಧ ಮುಖಗಳು ಮತ್ತು ಅದರ ವಿರುದ್ಧ ಸಂಘಟಿಸಿದ ಚಳುವಳಿಗಳನ್ನು ಹೆಚ್ಚು ಗಮನಿಸುತ್ತೇವೆ. ಈ ಲೇಖನದಲ್ಲಿ ೨೦ನೆಯ ಶತಮಾನದ ವಸಾಹತುಶಾಹಿ ಯುಗವನ್ನು ಚರ್ಚಿಸಲಾಗಿದೆ.

೨೦ನೆಯ ಶತಮಾನದ ವಸಾಹತುಶಾಹಿಯು ಈ ಹಿಂದೆ ಐರೋಪ್ಯ ರಾಷ್ಟ್ರಗಳು ಏಷ್ಯಾ ದೇಶಗಳ ಮೇಲೆ ಹೇರಿರುವ ಸಾಮಾಜಿಕ, ಸಾಂಸ್ಕೃತಿಕ ಭೌತಿಕ ಪ್ರಭುತ್ವವು ಮುಂದುವರಿದು ೨೦ನೆಯ ಶತಮಾನದಲ್ಲಿ ಪರಿವರ್ತನೆಗೊಂಡು ಹೊಸ ವಸಾಹತುಶಾಹಿ ಯುಗವಾಗಿ ಆವಿಷ್ಕಾರವಾಯಿತು. ಈ ಬೆಳವಣಿಗೆ ಐರೋಪ್ಯ ರಾಷ್ಟ್ರಗಳ ಹಿಂದಿನ ಪ್ರಭುತ್ವದ ರಚನೆಯನ್ನೇ ಬದಲಾಯಿಸಿ ಆರ್ಥಿಕ ಮತ್ತು ರಾಜಕೀಯ ಪ್ರಭುತ್ವವನ್ನು ಯಶಸ್ವಿಯಾಗಿ ಸಂಯೋಜಿಸಲಾಯಿತು. ಈ ಅರ್ಥದಲ್ಲಿ ವಿಶ್ಲೇಷಿಸಿದಾಗ ಕೈಗಾರಿಕೆ, ತಂತ್ರಜ್ಞಾನ, ಆರ್ಥಿಕ ಸೈನಿಕ ಮತ್ತು ವಿಜ್ಞಾನ ರಂಗಗಳಲ್ಲಿ ಮುಂದುವರಿದ ರಾಷ್ಟ್ರಗಳು ಅನಭಿವೃದ್ದಿ ಹೊಂದಿದ ವಸಾಹತುಗಳ ಮೇಲೆ ಅಧಿಕಾರ ಹೇರಿ, ಅಲ್ಲಿ ಉತ್ಪಾದನೆಯಾಗುವ ಸಂಪತ್ತನ್ನು ತಮ್ಮ ದೇಶಗಳ ಬೆಳವಣಿಗೆಗೋಸ್ಕರ ಕೊಂಡೊಯ್ಯುವ ಪ್ರಕ್ರಿಯೆಯನ್ನು ವಸಾಹತುಶಾಹಿ ಎಂದು ಕರೆಯಲಾಗುತ್ತದೆ. ಬಂಡವಾಳಶಾಹಿ ರಾಷ್ಟ್ರಗಳು ತಮ್ಮ ಆಸಕ್ತಿಗಳನ್ನು ರಕ್ಷಿಸಿ ಕೊಳ್ಳುವ ದೃಷ್ಟಿಯಿಂದ ತಾವೇ ಸ್ಥಾಪಿಸಿರುವ ವಸಾಹತುಗಳಲ್ಲಿ ವಾಸವಾಗಿರುವ ಜನರ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಕಬಳಿಸಿ, ತಮ್ಮ ದೇಶದ ವ್ಯವಸ್ಥೆ ಮತ್ತು ಸಂಸ್ಕೃತಿಯನ್ನು ನಿರಾತಂಕವಾಗಿ ಹೇರಿದವು. ವಸಾಹತುಗಳಿಗೆ ಬೇರೆ ದಾರಿ ಇಲ್ಲದೆ ಬಂಡವಾಳಶಾಹಿ ದೇಶಗಳಿಗೆ ಎಲ್ಲ ರಂಗದಲ್ಲಿಯೂ ವಿಧೇಯ ರಾಗಿರಬೇಕಾದ ಅನಿವಾರ್ಯತೆಯೂ ಇತ್ತು.

ಐರೋಪ್ಯ ರಾಷ್ಟ್ರಗಳು ಅನಭಿವೃದ್ದಿ ಹೊಂದಿದ ಏಷ್ಯಾ ದೇಶಗಳ ಸಾಮಾಜಿಕ, ಭೌತಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ೨೦ನೆಯ ಶತಮಾನದ ಆರಂಭದವರೆಗೂ ಸಕ್ರಿಯವಾಗಿ ಪಾಲ್ಗೊಂಡಿದ್ದರೂ ಸಹ

೧. ಈ ದೇಶಗಳಲ್ಲಿ ಆರ್ಥಿಕ ಮತ್ತು ರಾಜಕೀಯ ಪ್ರಭುತ್ವದ ಸಂಘಟನೆ ಮಾಡಿ ಸ್ವತಂತ್ರ ವಸಾಹತುಗಳನ್ನಾಗಿ ಪರಿವರ್ತಿಸಲಿಲ್ಲ ಮತ್ತು ಈ ದೇಶಗಳ ಆರ್ಥಿಕ ವ್ಯವಸ್ಥೆ ಮತ್ತು ಬಂಡವಾಳ ಶಾಹಿ ದೇಶಗಳ ಅರ್ಥವ್ಯವಸ್ಥೆಯ ನಡುವೆ ಪರಸ್ಪರ ಸಂಬಂಧ ಏರ್ಪಟ್ಟಿರಲಿಲ್ಲ.

೨. ಏಷ್ಯಾದಲ್ಲಿ ಉತ್ಪಾದನೆಯಾಗುವ ಸಂಪತ್ತುಗಳ ದೋಚು ವಿಕೆ ಇದ್ದರೂ ಕೂಡ, ಈ ದೇಶಗಳ ಮಾರುಕಟ್ಟೆಗಳು ಬಂಡವಾಳಶಾಹಿ ದೇಶಗಳು ಉತ್ಪಾದಿಸುವ ಸಿದ್ಧವಸ್ತುಗಳಿಗೆ ಕಾದಿರಿಸಿರಲಿಲ್ಲ.

೩. ಐರೋಪ್ಯ ರಾಷ್ಟ್ರಗಳು ೧೯ನೆಯ ಶತಮಾನದ(೧೮೭೦ರವರೆಗೂ) ಕೊನೆಯವರೆಗೂ ಕೈಗಾರಿಕೆ, ತಂತ್ರಜ್ಞಾನ ಮತ್ತು ಹಣಕಾಸು ರಂಗಗಳಲ್ಲಿ ಉತ್ಕೃಷ್ಟ ಮಟ್ಟಕ್ಕೆ ಮುಟ್ಟಿರಲಿಲ್ಲ. ಬದಲಾಗಿ ತಮ್ಮ ದೇಶಗಳಲ್ಲಿ ಬಂಡವಾಳಶಾಹಿ ಬೆಳವಣಿಗೆಯ ವೃದ್ದಿಸುವಿಕೆಯನ್ನು ಕಾಯ್ದುಕೊಂಡು ಕೈಗಾರಿಕಾ, ವಾಣಿಜ್ಯ ಮತ್ತು ಕೃಷಿ ಕ್ರಾಂತಿಗೆ ಬೇಕಾದ ಬಂಡವಾಳವನ್ನು ಏಷ್ಯಾದಿಂದಲೇ ಶೇಖರಿಸುವ ಉದ್ದೇಶದಿಂದ ಈ ದೇಶಗಳೊಂದಿಗೆ ಕೇವಲ ವ್ಯಾಪಾರ ಸಂಪರ್ಕವನ್ನಷ್ಟೇ ಇಟ್ಟುಕೊಂಡಿದ್ದವು.

೪. ಸಂಗ್ರಹಿಸಿದ ಲಾಭ, ಸಂಪತ್ತು ಪಶ್ಚಿಮ ದೇಶಗಳ ಅಭಿವೃದ್ದಿಗೆ ನಿರ್ಣಾಯಕ ಪಾತ್ರವಹಿಸಿತು. ಫಲಿತಾಂಶವಾಗಿ ೧೯ನೆಯ ಶತಮಾನದ ಎರಡನೆಯ ಭಾಗ ಮತ್ತು ೨೦ನೆಯ ಶತಮಾನದ ಆರಂಭದಲ್ಲಿ ಪಶ್ಚಿಮ ಯೂರೋಪ್ ಎಲ್ಲ ರಂಗದಲ್ಲೂ ಅಭಿವೃದ್ದಿ ಸಾಧಿಸಿತು. ಇದಕ್ಕುತ್ತರವಾಗಿ ಜಾಗತಿಕ ಮಟ್ಟದಲ್ಲಿ ಬದಲಾದ ಅರ್ಥವ್ಯವಸ್ಥೆಯ ಮುಂದುವರಿಕೆಯು ಆ ದೇಶಗಳು ಏಷ್ಯಾದಿಂದ ಸಂಗ್ರಹಿಸುವ ಸಂಪತ್ತನ್ನು ಅವಲಂಬಿಸಿದ್ದು, ಏಷ್ಯಾ ದೇಶಗಳಲ್ಲಿ ಆ ರಾಷ್ಟ್ರಗಳ ಪ್ರಭುತ್ವದ ರಚನೆಯು ಹೊಸ ರೂಪವನ್ನು ತಾಳಿತು. ವಿದೇಶಿಯರು ಏಷ್ಯಾ ದೇಶಗಳನ್ನು ಹಿಂದೆ ಕೇವಲ ವ್ಯಾಪಾರಕ್ಕೋಸ್ಕರ ಬಳಸಿಕೊಂಡಿದ್ದರು. ಆದರೆ ಪಶ್ಚಿಮ ಯುರೋಪ್‌ನಲ್ಲಾದ ಕೈಗಾರಿಕಾ ಕ್ರಾಂತಿಯಿಂದಾಗಿ ವ್ಯಾಪಾರ ರಂಗದಲ್ಲಿ ಈ ಹಿಂದೆ ತಮ್ಮ ಹಿಡಿತವನ್ನು ಸಾಧಿಸಿ ಬಂಡವಾಳ ಹೆಚ್ಚಿಸುವ ಉದ್ದೇಶ, ಯೂರೋಪಿನ ಬದಲಾದ ವ್ಯವಸ್ಥೆಯಲ್ಲಿ ಸ್ಥಿರತೆ ಮತ್ತು ವೃದ್ದಿಸುವಿಕೆಯನ್ನು ಬೆಂಬಲಿಸಲು ಮತ್ತು ಬಂಡವಾಳಶಾಹಿ ರಾಷ್ಟ್ರಗಳು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸುವಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ. ಆ ಕಾರಣಕ್ಕಾಗಿ ೨೦ನೆಯ ಶತಮಾನದಲ್ಲಿ ವಸಾಹತುಗಳ ಸ್ಥಾಪನೆ ಮತ್ತು ಕ್ರೋಡೀಕರಣವು ಬಂಡವಾಳಶಾಹಿ ದೇಶಗಳು ಎದುರಿಸಿದ ಆರ್ಥಿಕ ಬಿಕ್ಕಟ್ಟನ್ನು ಹೋಗಲಾಡಿಸಲು ಈ ದೇಶದ ಸರ್ಕಾರಗಳು ರಚಿಸಿದ ಹೊಸ ರಾಜತಂತ್ರವೆನ್ನಬಹುದು.

ಬಂಡವಾಳಶಾಹಿ ದೇಶಗಳ ಆರ್ಥಿಕ ಬಿಕ್ಕಟ್ಟು ಮತ್ತು ವಸಾಹತುಶಾಹಿಯ ಉಗಮ ವನ್ನು ಹಲವು ವಿದ್ವಾಂಸರು, ಆರ್ಥಿಕತಜ್ಞರು, ಸಾಮಾಜಿಕ ಮತ್ತು ರಾಜಕೀಯ ವಿಜ್ಞಾನಿಗಳು ತಮ್ಮದೇ ಸಂಶೋಧನಾ ಮಾರ್ಗವನ್ನು ಬಳಸಿ ವಿಶ್ಲೇಷಿಸುತ್ತಾರೆ. ಇವರಲ್ಲಿ ಮುಖ್ಯವಾದವರು : ಜೆ.ಎ.ಹಾಬ್ಸನ್, ರೋಸಾ ಲಕ್ಸಂಬರ್ಗ್, ನಿಕೋಲಾಯ್ ಭುಕಾರಿನ್, ವಿ.ಐ.ಲೆನಿನ್. ಜೋಸೆಫ್ ಏ.ಶಂಪೀಟರ್, ಪೌಲ್ ಬರಾನ್, ಏ.ಜಿ.ಫ್ರಾಂಕ್, ಸಮಿರ್ ಅಮೀನ್, ಅರ್ರಿಗಿ ಇಮ್ಯಾನ್ಯೂಯಲ್, ಪರ್ನಾಡ್ ಬ್ರೌದೆಲ್ ಮತ್ತು ಇಮ್ಯೆನ್ಯೂಯಲ್ ವಲರ್‌ಸ್ಪೈನ್. ಇವರಲ್ಲದೆ ಅನೇಕ ಚಿಂತಕರು ದೇಶೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಸಂಶೋಧನೆಯನ್ನು ನಡೆಸಿ ೧೯ನೆಯ ಶತಮಾನದ ಅಂತ್ಯ ಮತ್ತು ೨೦ನೆಯ ಶತಮಾನದ ಆರಂಭದಲ್ಲಿ ಬಂಡವಾಳಶಾಹಿ ದೇಶಗಳು ಎದುರಿಸಿದ ಆರ್ಥಿಕ ಬಿಕ್ಕಟ್ಟಿನ ವಿವಿಧ ಸ್ತರಗಳನ್ನು ವಿಮರ್ಶಿಸಿ, ೨೦ನೆಯ ಶತಮಾನದಲ್ಲಿ ಉಗಮವಾದ ಹೊಸ ವಸಾಹತುಶಾಹಿಯ ಅನಿವಾರ್ಯತೆಯನ್ನು ಎಳೆ ಎಳೆಯಾಗಿ ಚರ್ಚಿಸಿದ್ದಾರೆ. ಆ ಚರ್ಚೆಯಿಂದ ೨೦ನೆಯ ಶತಮಾನದ ಏಷ್ಯಾದಲ್ಲಿ ಸ್ಥಾಪನೆಯಾದ ವಸಾಹತುಶಾಹಿಯ ವಿವಿಧ ಮುಖಗಳನ್ನು ನಾವು ನೋಡಬಹುದು.

೧. ಐರೋಪ್ಯ ರಾಷ್ಟ್ರಗಳಲ್ಲಿ ಸೃಷ್ಟಿಯಾದ ಬಿಕ್ಕಟ್ಟಿಗೆ ಉತ್ತರವಾಗಿ ೨೦ನೆಯ ಶತಮಾನದ ವಸಾಹತುಶಾಹಿ ಯುಗ ಪ್ರಾರಂಭವಾಯಿತು.

೨. ಈ ಬಿಕ್ಕಟ್ಟು ೧೬ನೆಯ ಶತಮಾನದಿಂದ ೧೯ನೆಯ ಶತಮಾನದವರೆಗೆ ಪಶ್ಚಿಮ ದೇಶಗಳು ಏಷ್ಯಾ ದೇಶಗಳಿಂದ ಸಂಗ್ರಹಿಸಿದ ಬಂಡವಾಳವನ್ನು ತಮ್ಮ ದೇಶದ ಬಂಡವಾಳಶಾಹಿ ಪರಿವರ್ತನೆಗೆ ಯಶಸ್ವಿಯಾಗಿ ಬಳಸಿಕೊಂಡ ಪ್ರತಿಫಲವಾಗಿ ಆ ದೇಶಗಳಲ್ಲಿ ಭದ್ರವಾದ ಆರ್ಥಿಕ, ರಾಜಕೀಯ, ಕೈಗಾರಿಕೆ ಮತ್ತು ಸಾಮಾಜಿಕ ವ್ಯವಸ್ಥೆ ನಿರ್ಮಾಣವಾಯಿತು.

೩. ಈ ಬಿಕ್ಕಟ್ಟಿಗೆ ಮೂಲಭೂತವಾಗಿ ಅಧಿಕ ಉತ್ಪಾದನೆ ಮತ್ತು ಉತ್ಪಾದನೆಗೊಂಡ ಸಿದ್ಧವಸ್ತುಗಳು ಮಾರಾಟವಾಗದೆ ಇರುವುದು ಕೈಗಾರಿಕೀಕರಣ ಒಂದೇ ಸಮನೆ ಮುಂದುವರಿದು ಹಲವು ಬಗೆಯ ಕೈಗಾರಿಕೆಗಳು ಬೆಳೆದು ಸಿದ್ಧವಸ್ತುಗಳ ಉತ್ಪಾದನೆಯ ಮಿತಿ ವೃದ್ದಿಗೊಂಡಿತು. ಆದರೆ ಬಂಡವಾಳಶಾಹಿ ದೇಶದ ಭೌಗೋಳಿಕ ಸರಹದ್ದಿನೊಳಗೆ ಲಭ್ಯವಿರುವ ಮಾರುಕಟ್ಟೆ ಚಿಕ್ಕದಾಗಿದ್ದು, ಅಲ್ಲಿ ಕೊಳ್ಳುವವರ ಅಭಾವ ಇತ್ತು. ಅಂದರೆ ಕೈಗಾರಿಕೆಗಳು ಮಾರುಕಟ್ಟೆಗೆ ಸರಬರಾಜು ಮಾಡುವ ಸಿದ್ಧವಸ್ತುಗಳ ಬೆಲೆಯು ಸಾಮಾನ್ಯವಾಗಿ ಹೆಚ್ಚಾಗಿದ್ದು ಕೊಂಡು ಕೊಳ್ಳುವವರ ಸಂಖ್ಯೆ ಬಹಳ ವಿರಳವಾಗಿತ್ತು. ಹೆಚ್ಚಾಗಿ ರೈತರು, ಕಾರ್ಮಿಕ ವರ್ಗದವರು ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದು ಬಡತನದ ರೇಖೆಯ ಕೆಳಗೆ ಜೀವನ ನಡೆಸುತ್ತಿದ್ದರಲ್ಲದೆ, ಬಂಡವಾಳ ಕೊರತೆಯಿಂದಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಸಿದ್ಧವಸ್ತುಗಳನ್ನು ಕೊಳ್ಳಲು ಅವರಿಗೆ ಶಕ್ತಿ ಇರಲಿಲ್ಲ. ಮಾರುಕಟ್ಟೆಯಲ್ಲಿರುವ ವಸ್ತುಗಳ ಗಿರಾಕಿಗಳು ಈ ವರ್ಗಕ್ಕೆ ಸೇರಿದವರಾಗಿರುವುದರಿಂದ ಕೈಗಾರಿಕೆಗಳ ಮಾಲೀಕರು ನಿರೀಕ್ಷಿಸುವ ಲಾಭದ ಅಂಶ ಅತ್ಯಂತ ಕೆಳಮಟ್ಟಕ್ಕೆ ತಲುಪಿತು. ಅವರ ಈ ಸಮಸ್ಯೆಗೆ ಪ್ರಮುಖ ಕಾರಣ :

೧. ಸರಬರಾಜಗುತ್ತಿರುವ ಸಿದ್ಧವಸ್ತುಗಳಿಗೆ ಮಾರುಕಟ್ಟೆಯ ಅಭಾವ ಮತ್ತು ಹೆಚ್ಚು ಬೆಲೆ ತೆತ್ತು ಕೊಳ್ಳುವ ವರ್ಗ ಇಲ್ಲದಿರುವುದು

೨. ೧೯ನೆಯ ಶತಮಾನದ ಕೊನೆಯಲ್ಲಿ ವ್ಯಾಪಾರಿ ಬಂಡವಾಳಶಾಹಿ ಮತ್ತು ಕೈಗಾರಿಕಾ ಬಂಡವಾಳಶಾಹಿ ಯುಗವು ಹಣಕಾಸು ಬಂಡವಾಳಶಾಹಿ ಯುಗಕ್ಕೆ ಪ್ರವೇಶಿತು.

ಹಣಕಾಸು ಬಂಡವಾಳಶಾಹಿ ಯುಗದಲ್ಲಿ ಬಂಡವಾಳಶಾಹಿ ದೇಶಗಳು ಹಲವು ಸಮಸ್ಯೆಗಳನ್ನು ಎದುರಿಸಿದವು.

೧. ಬಂಡವಾಳದ ಸಂಗ್ರಹಣೆ ಮತ್ತು ಹೂಡುವಿಕೆ ನಿರಂತರವಾಗಿದ್ದರಿಂದ ಎಲ್ಲ ರಂಗದಲ್ಲಿ ಆ ದೇಶಗಳು ಪ್ರಗತಿ ಕಂಡುಕೊಂಡವು. ಆದರೆ ೧೯ನೆಯ ಶತಮಾನದ ಕೊನೆಯ ಎರಡು ದಶಕಗಳಲ್ಲಿ ಎಲ್ಲ ರಂಗಗಳ ಬೆಳವಣಿಗೆ ಉತ್ಕೃಷ್ಟ ಮಟ್ಟಕ್ಕೆ ಮುಟ್ಟಿರುವುದರಿಂದ ಸಂಗ್ರಹಿಸಲ್ಪಡುವ ಬಂಡವಾಳದ ಪುನರ್‌ಹೂಡುವಿಕೆಗೆ ಅವಕಾಶವಿರಲಿಲ್ಲ. ಇದರಿಂದ ಹೆಚ್ಚುವರಿ ಬಂಡವಾಳವನ್ನು ಪುನಃ ಹೂಡಲು ಯಾವುದೇ ಅವಕಾಶಗಳು ಮತ್ತು ಭೂಮಿಯು ಲಭ್ಯವಿರಲಿಲ್ಲ. ಒಂದು ವೇಳೆ ಆ ಹೆಚ್ಚುವರಿ ಬಂಡವಾಳವನ್ನು ಪುನಃ ಬಂಡವಾಳಶಾಹಿ ದೇಶಗಳಲ್ಲಿ ಹೂಡಿದರೆ ಅದರಿಂದ ಹೆಚ್ಚಿನ ಲಾಭಾಂಶವನ್ನು ನಿರೀಕ್ಷಿಸಲು ಅಸಾಧ್ಯ. ಆದ್ದರಿಂದ ಹೆಚ್ಚುವರಿ ಬಂಡವಾಳ ಹೊಂದಿದ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸರಿಯಾದ ಅವಕಾಶಗಳು ಮತ್ತು ಪ್ರದೇಶಗಳನ್ನು ಹುಡುಕಲು ಪ್ರಯತ್ನಿಸಿದರು.

೨. ಮಾರುಕಟ್ಟೆಗಳ ಅಭಾವ ಕೈಗಾರಿಕಾ ಮಾಲೀಕರು ನಿರಾತಂಕವಾಗಿ ಸಿದ್ಧವಸ್ತುಗಳ ಉತ್ಪಾದನೆಯಲ್ಲಿ ತೊಡಗಿದ್ದು ಮಾರುಕಟ್ಟೆಗೆ ಸರಬರಾಜಗುವ ಉತ್ಪಾದನೆ ಏರುತ್ತಲೇ ಇತ್ತು. ಆದರೆ ಇದಕ್ಕೆ ನಿರೀಕ್ಷಿಸಿದಷ್ಟು ಕೊಳ್ಳುವ ವರ್ಗ ಸೃಷ್ಟಿಯಾಗಲಿಲ್ಲ. ಹೆಚ್ಚಾಗಿ ಕಾರ್ಮಿಕ ವರ್ಗದವರು ಇಂತಹ ಕೈಗಾರಿಕೆಯಲ್ಲಿ ದುಡಿಯುತ್ತಿದ್ದು ಮಾಲೀಕರು ಕಡಿಮೆ ಸಂಬಳ ನೀಡಿ ಅದರ ಆರ್ಥಿಕ ಜೀವನಕ್ರಮ ವೃದ್ದಿಯಾಗದಿರಲು ಪ್ರಮುಖ ಪಾತ್ರ ವಹಿಸಿದ್ದರು. ಆದ ಕಾರಣ ಹೆಚ್ಚು ಬೆಲೆಗೆ ಲಭ್ಯವಿರುವ ಇಂತಹ ಉತ್ಪಾದನಾ ಸಿದ್ಧವಸ್ತುಗಳಿಗೆ ಮಾರುಕಟ್ಟೆ ಮತ್ತು ಗಿರಾಕಿಗಳ ಅಭಾವ ಕಂಡುಬಂತು.

೩. ಆಹಾರ ಮತ್ತು ಕೃಷಿ ವಸ್ತುಗಳ ಸಮಸ್ಯೆ-ಕೈಗಾರಿಕೆ ಗಳು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಿಪರೀತವಾಗಿ ವೃದ್ದಿಯಾಗಿ ಅನೇಕ ಉದ್ಯೋಗಗಳನ್ನೇ ಸೃಷ್ಟಿಸಿದವು. ಕೃಷಿರಂಗದಲ್ಲಿ ತಂತ್ರಜ್ಞಾನದ ಅಳವಡಿಕೆಯಿಂದ ತತ್ತರಿಸಿದ ಅನೇಕರು ಉದ್ಯೋಗಕ್ಕಾಗಿ ಅನೇಕ ಕೈಗಾರಿಕೆಗಳಿಗೆ ಬಂದು ಸೇರಿಕೊಂಡರು. ಇದರಿಂದ ನಗರ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಾಯಿತು. ಹಳ್ಳಿಗಳಿಂದ ನಗರಕ್ಕೆ ವಲಸೆಯಾಗುವ ಜನರ ಸಂಖ್ಯೆ ದ್ವಿಗುಣಗೊಂಡವು. ಜೊತೆಗೆ ಅವರು ಆಹಾರ ಸಮಸ್ಯೆಯನ್ನು ಎದುರಿಸತೊಡಗಿದರು. ಅಲ್ಲದೆ ಮುಂದುವರಿದ ವಲಸೆಯಿಂದಾಗಿ ಕೃಷಿರಂಗದಲ್ಲಿ ಕಚ್ಚಾವಸ್ತುಗಳು ಮತ್ತು ಆಹಾರ ವಸ್ತುಗಳ ಉತ್ಪಾದನೆ ಕಡಿತಗೊಂಡಿತು. ಇದರಿಂದ ಹೊಸ ಕೈಗಾರಿಕೆಗಳು ಅತೀ ಹೆಚ್ಚು ಕೃಷಿ ಉತ್ಪನ್ನಗಳನ್ನು ಬಳಸಿ ಸಿದ್ಧವಸ್ತುಗಳನ್ನು ತಯಾರಿಸುವ ಶಕ್ತಿಯನ್ನು ಹೊಂದಿದ್ದರೂ ಇಂತಹ ವಸ್ತುಗಳ ಕೊರತೆ ಬಂಡವಾಳಶಾಹಿ ದೇಶಗಳಲ್ಲಿ ಕಂಡುಬಂತು. ಇವೆಲ್ಲವುಗಳ ಜೊತೆಗೆ ಬಂಡವಾಳಶಾಹಿ ದೇಶಗಳು ಹೆಚ್ಚು ಹೆಚ್ಚು ವಿದ್ಯಾವಂತರನ್ನು ಸೃಷ್ಟಿಸುತ್ತಿದ್ದುದರಿಂದ ಹೊಸ ಉದ್ಯೋಗಗಳನ್ನು ಕೊಡಿಸುವ ಅವಕಾಶಗಳು ವಿರಳವಾಗಿತ್ತು. ಇಂತಹ ಬಿಕ್ಕಟ್ಟನ್ನು ಎದುರಿಸುತ್ತಿರುವ ಬಂಡವಾಳಶಾಹಿ ದೇಶಗಳು ೧೯ನೆಯ ಶತಮಾನ ಮತ್ತು ೨೦ನೆಯ ಶತಮಾನದ ಮೊದಲಾರ್ಧದಲ್ಲಿ ಪರಿಹಾರಗಳನ್ನು ಕಂಡುಕೊಳ್ಳಲು ಯಶಸ್ವಿಯಾದವು. ಇದು ನಿಜವಾದ ವಸಾಹತುಶಾಹಿ ಚಟುವಟಿಕೆಗಳ ಪ್ರಕ್ರಿಯೆಗೆ ಚಾಲನೆ ನೀಡಿತು.

ಹೊಸ ವಸಾಹತುಶಾಹಿ ಯುಗದಲ್ಲಿ ಐರೋಪ್ಯ ದೇಶಗಳು ನಿರ್ದಿಷ್ಟ ಧ್ಯೇಯಗಳನ್ನಿಟ್ಟು ಕೊಂಡು ಧುಮುಕಿದವು- ಹೊಸ ಮಾರುಕಟ್ಟೆಗಳ ಸ್ಥಾಪನೆ, ಹೊಸ ಪ್ರದೇಶಗಳನ್ನು ಕಂಡುಹಿಡಿದು ಹೆಚ್ಚುವರಿ ಬಂಡವಾಳವನ್ನು ಹೂಡಿ ಹೆಚ್ಚು ಲಾಭಾಂಶವನ್ನು ಕಬಳಿಸುವ ಆಕಾಂಕ್ಷೆ, ಹೊಸ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಆಹಾರ ಮತ್ತು ಕಚ್ಚಾವಸ್ತುಗಳ ಅಭಾವವನ್ನು ಪರಿಹರಿಸಿಕೊಳ್ಳಲು, ಈ ಎಲ್ಲ ಧೋರಣೆಗಳನ್ನು ಅನುಷ್ಠಾನಗೊಳಿಸಲು ಹೊಸ ಪ್ರದೇಶಗಳನ್ನು ಆಕ್ರಮಿಸಿ ತಮ್ಮದೇ ಆದ ಆರ್ಥಿಕ ಮತ್ತು ರಾಜಕೀಯ ಪ್ರಭುತ್ವವನ್ನು ಹೇರಿ, ಹೊಸ ಸರಕಾರದ ರಚನೆ ಮಾಡಿ ತಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆಗಳನ್ನು ಎದುರಿಸುತ್ತಿರುವ ವಿದ್ಯಾವಂತರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಆಸೆಯು ಮುಖ್ಯ ಧ್ಯೇಯವಾಗಿತ್ತು. ಈ ಎಲ್ಲ ಧ್ಯೇಯಗಳ ಅನುಷ್ಠಾನವು ೨೦ನೆಯ ಶತಮಾನದಲ್ಲಿ ವಸಾಹತುಶಾಹಿಯ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿತು. ಇದನ್ನು ಗಮನಿಸಿದಾಗ ಏಷ್ಯಾ ದೇಶಗಳಲ್ಲಿ ೨೦ನೆಯ ಶತಮಾನದಲ್ಲಿ ಸ್ಥಾಪಿಸಲ್ಪಟ್ಟ ಸ್ವತಂತ್ರ ವಸಾಹತುಗಳು ಐರೋಪ್ಯ ದೇಶಗಳು ಎದುರಿಸಿದ ಆರ್ಥಿಕ ಬಿಕ್ಕಟ್ಟಿಗೆ ಸಮರ್ಪಕ ಪ್ರತಿಕ್ರಿಯೆ ಎಂದು ಹೇಳಬಹುದು. ಆದರೂ ಏಷ್ಯಾ ದೇಶಗಳಲ್ಲಿ ಕಂಡುಬಂದ ವಸಾಹತೀಕರಣದ ಪ್ರಕ್ರಿಯೆಯನ್ನು ನಿಲ್ಲಿಸಬಹುದಿತ್ತು ಅಥವಾ ಏಷ್ಯಾ ದೇಶಗಳಲ್ಲಿ ಐರೋಪ್ಯ ರಾಷ್ಟ್ರಗಳ ರಾಜಕೀಯ ಮತ್ತು ಆರ್ಥಿಕ ಪ್ರಭುತ್ವದ ವೃದ್ದಿಸುವಿಕೆಯನ್ನು ತಪ್ಪಿಸಬಹುದಿತ್ತು.

ಜೆ.ಎ.ಹಾಬ್ಸನ್ ಅವರು ‘ಇಂಪೀರಿಯಲಿಸಂ ಎ ಸ್ಟಡಿ’ ಎಂಬ ಪುಸ್ತಕದಲ್ಲಿ ಬಂಡವಾಳಶಾಹಿ ರಾಷ್ಟ್ರಗಳ ಆರ್ಥಿಕ ಬಿಕ್ಕಟ್ಟಿನ ಸ್ವರೂಪವನ್ನು ಚರ್ಚಿಸಿ, ಆರ್ಥಿಕವಾಗಿ ವೃದ್ದಿಸುವ (ಏಷ್ಯಾ ವನ್ನು ಗುರಿಯಾಗಿಟ್ಟುಕೊಂಡು) ಪ್ರಕ್ರಿಯೆಯನ್ನು ನಿಲ್ಲಿಸಿ ತಮ್ಮಲ್ಲೇ ಪರಿಹರಿಸಬಹುದೆಂದು ಎರಡು ಸುಧಾರಣೆಗಳನ್ನು ಸೂಚಿಸುತ್ತಾರೆ. ಒಂದನೆಯದು (ಅದು ಬ್ರಿಟನ್ ಎದುರಿಸುತ್ತಿರುವ ಸಾಮಾಜಿಕ ಬಿಕ್ಕಟ್ಟಿಗೆ ಸರಿಯಾದ ಮಾರ್ಗ) ಪಶ್ಚಿಮ ಯುರೋಪ್‌ನ ಎಲ್ಲ ಕೈಗಾರಿಕಾ ರಾಷ್ಟ್ರಗಳಲ್ಲಿನ ಬಂಡವಾಶಾಹಿಗಳು ಮತ್ತು ಮಾಲೀಕರು ಅನುಭವಿಸುವ ಲಾಭದ ಒಂದಂಶವನ್ನು ತಮ್ಮ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರೊಂದಿಗೆ ಹಂಚಿಕೊಂಡರೆ (ಸಂಬಳ ಮತ್ತು ಭತ್ಯೆಯನ್ನು ಹೆಚ್ಚಿಸಿದರೆ) ಕಾರ್ಮಿಕ ವರ್ಗವು ಆರ್ಥಿಕ ಸ್ಥಿತಿಗತಿಯನ್ನು ವೃದ್ದಿಸಿ, ಉಳಿದ ಹಣದಿಂದ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿದ್ಧವಸ್ತುಗಳನ್ನು ಹೆಚ್ಚು ಬೆಲೆ ತೆತ್ತು ಕೊಳ್ಳಲು ಸಾಧ್ಯವಾಗುತ್ತದೆ. ಹಾಗಾದಲ್ಲಿ ಕೈಗಾರಿಕೆಗಳು ಮತ್ತು ಅದರ ಮಾಲೀಕರು ಉತ್ಪಾದಿಸುವ ಸಿದ್ಧವಸ್ತುಗಳಿಗೆ ಮಾರುಕಟ್ಟೆಯಲ್ಲಿ ಕೊಳ್ಳುವ ವರ್ಗ ಹುಟ್ಟಿಕೊಳ್ಳುತ್ತದೆ ಮತ್ತು ಅವರು ನಿರೀಕ್ಷಿಸುವ ಲಾಭವು ದಕ್ಕುತ್ತದೆ. ಇದು ಯಶಸ್ವಿಯಾದರೆ ಬಹುತೇಕ ಪಶ್ಚಿಮ ರಾಷ್ಟ್ರಗಳು ತಮ್ಮ ಭೌಗೋಳಿಕ ಸರಹದ್ದನ್ನು ವೃದ್ದಿಸಿ ಹೊಸ ಪ್ರಾಂತಗಳನ್ನು ಆಕ್ರಮಿಸಿ ಹೊಸ ಮಾರುಕಟ್ಟೆಗಳನ್ನು ಸೃಷ್ಟಿ ಮಾಡುವುದಾಗಲಿ, ಹೆಚ್ಚುವರಿ ಸಿದ್ಧವಸ್ತುಗಳನ್ನು ರಫ್ತು ಮಾಡುವುದಾಗಲಿ, ಮತ್ತು ಹೆಚ್ಚುವರಿ ಬಂಡವಾಳವನ್ನು ರಫ್ತು ಮಾಡುವ ಪ್ರಮೇಯವೇ ಉದ್ಭವಿಸುವುದಿಲ್ಲ. ಅಂದರೆ ಈ ಸುಧಾರಣಾ ನೀತಿಯನ್ನು ಐರೋಪ್ಯ ರಾಷ್ಟ್ರಗಳು ಆರ್ಥಿಕ ಬಿಕ್ಕಟ್ಟಿಗೆ ಉತ್ತರವಾಗಿ ಅನುಷ್ಠಾನಗೊಳಿಸಿದರೆ ೨೦ನೆಯ ಶತಮಾನದಲ್ಲಿ ವಸಾಹತೀಕರಣದ ಅಗತ್ಯವಿರುವುದಿಲ್ಲ ಎಂದು ಹಾಬ್ಸನ್ ವಾದಿಸುತ್ತಾರೆ. ಎರಡನೆಯದು ವಸಾಹತೀಕರಣ ಒಂದೇ ಇದಕ್ಕೆ ಸಮರ್ಥವಾದ ಮಾರ್ಗವೆಂದು ತಿಳಿದು ಈಗಿದ್ದ ಭೌಗೋಳಿಕ ಸರಹದ್ದನ್ನು ವೃದ್ದಿಸಿ ಅನಭಿವೃದ್ದಿ ಹೊಂದಿದ ಏಷ್ಯಾ ದೇಶಗಳನ್ನು ಆಕ್ರಮಿಸಿ, ಅವುಗಳ ಸ್ವಾತಂತ್ರ್ಯವನ್ನು ಕಬಳಿಸಿ ತಮ್ಮದೇ ಆರ್ಥಿಕ ಮತ್ತು ರಾಜಕೀಯ ಪ್ರಭುತ್ವವನ್ನು ಹೇರಿ ಸ್ವತಂತ್ರ ವಸಾಹತುಗಳನ್ನು ಸ್ಥಾಪಿಸುವುದು. ಇದರಿಂದ ಹೆಚ್ಚುವರಿ ಬಂಡವಾಳ ಹೂಡುವಿಕೆಗೆ ಅನಭಿವೃದ್ದಿ ಹೊಂದಿದ ಪ್ರದೇಶಗಳಲ್ಲಿ ವಿಪುಲ ಅವಕಾಶಗಳು ಲಭ್ಯವಾದವು. ಅಧಿಕವಾಗಿ ಉತ್ಪಾದನೆಯಾಗುವ ಸಿದ್ಧವಸ್ತುಗಳಿಗೆ ವಿಸ್ತಾರವಾದ ಮಾರುಕಟ್ಟೆ ಗಳು ಮತ್ತು ಕೊಳ್ಳುವವರು ಲಭ್ಯವಾದರು. ಏಕೆಂದರೆ ಈ ಸಮಯದಲ್ಲಿ ಏಷ್ಯಾ ಕೈಗಾರಿಕೆ ಗಳಲ್ಲಿ ಹಿಂದುಳಿದಿದ್ದು, ಇಲ್ಲಿನ ಮಾರುಕಟ್ಟೆಗಳಲ್ಲಿ ವಿದೇಶಿಯರು ಸರಬರಾಜು ಮಾಡುವ ಸಿದ್ಧವಸ್ತುಗಳನ್ನು ಮಾರಾಟ ಮಾಡುವ ವಿಫುಲ ಅವಕಾಶಗಳಿದ್ದವು. ಅಲ್ಲದೆ ಏಷ್ಯಾದ ಹೆಚ್ಚಿನ ಭಾಗಗಳು ನೈಸರ್ಗಿಕವಾಗಿ, ಆರ್ಥಿಕವಾಗಿ ಶ್ರೀಮಂತವಾಗಿದ್ದು ಐರೋಪ್ಯ ರಾಷ್ಟ್ರಗಳು ಅಪೇಕ್ಷೆ ಪಡುವಂತೆ ಆಹಾರ ಸಾಮಗ್ರಿಗಳು, ಕೃಷಿ ಉತ್ಪನ್ನಗಳು ಹೇರಳವಾಗಿ ಸಿಗುತ್ತಿದ್ದವು. ಈ ಎಲ್ಲ ಪ್ರದೇಶಗಳಲ್ಲಿ ವಸಾಹತೀಕರಣಕ್ಕೆ ಗುರಿಪಡಿಸಿ ಬಂಡವಾಳಶಾಹಿ ರಾಷ್ಟ್ರಗಳು ತಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಬಹುದೆಂದು ಹಾಬ್ಸನ್ ಸೂಚಿಸುತ್ತಾರೆ.

ಬ್ರಿಟನ್ ಸೇರಿ ಎಲ್ಲ ಬಂಡವಾಳಶಾಹಿ ರಾಷ್ಟ್ರಗಳು ಸಾಮಾಜಿಕ ಸುಧಾರಣೆಗಳಿಗೆ ಪ್ರೋ ನೀಡಿ ಸಾಮಾನ್ಯ ಜನರ ಹಿತರಕ್ಷಣೆಗೆ ಒತ್ತುಕೊಡದೆ ವಸಾಹತೀಕರಣಕ್ಕೆ ತೀವ್ರ ಗಮನ ಹರಿಸಿ, ಏಷ್ಯಾದ ನಾನಾ ಭಾಗಗಳಲ್ಲಿ ೧೯ನೆಯ ಶತಮಾನದ ಕೊನೆಯ ಎರಡು ದಶಕಗಳಲ್ಲಿ ಮತ್ತು ೨೦ನೆಯ ಶತಮಾನದ ಮೊದಲರ್ಧದಲ್ಲಿ ಹಲವು ವಸಾಹತುಗಳನ್ನು ಸ್ಥಾಪಿಸಿದವು. ಕಡಿಮೆ ಬೆಲೆಗೆ ಭೂಮಿ, ಕಡಿಮೆ ಸಂಬಳಕ್ಕೆ ದುಡಿಯುವ ಕಾರ್ಮಿಕರು, ಫಲವತ್ತಾದ ಭೂಮಿ ಏಷ್ಯಾ ದೇಶಗಳಲ್ಲಿ ಹೇರಳವಾಗಿರುವುದರಿಂದ ಬಂಡವಾಳಶಾಹಿ ರಾಷ್ಟ್ರಗಳಲ್ಲಿರುವ ಕೈಗಾರಿಕೆಗಳು ಎದುರಿಸುವ ಕೃಷಿ ಉತ್ಪನ್ನಗಳ ಅಭಾವ, ಅಲ್ಲಿನ ನಗರ ಜನರು ಎದುರಿಸುವ ಆಹಾರ ಸಮಸ್ಯೆಯನ್ನು ಸರಳವಾಗಿ ಪರಿಹರಿಸಲಾಯಿತು. ಇಂತಹ ವಸ್ತುಗಳನ್ನು ಮತ್ತು ಅಹಾರ ಉತ್ಪನ್ನಗಳನ್ನು ಫಲವತ್ತಾದ ಭೂಮಿಯಲ್ಲಿ ಯಥೇಚ್ಛವಾಗಿ ಬೆಳೆಸಿ ತಮ್ಮ ದೇಶಕ್ಕೆ ಕಳುಹಿಸಿಕೊಡುವ ಪ್ರಕ್ರಿಯೆ ಆರಂಭವಾಯಿತು. ಇದರಿಂದಾಗಿ ೨೦ನೆಯ ಶತಮಾನದ ಆದಿಯಿಂದ ಹೊಸ ವಸಾಹತುಶಾಹಿಯುಗದ ಉಗಮ ಮತ್ತು ಕ್ರೋಡೀಕರಣವಾಯಿತು. ಈ ಹಂತವನ್ನು ಬಂಡವಾಳಶಾಹಿಯ ಅತ್ಯುನ್ನತ ಘಟ್ಟವೆಂದು ಲೆನಿನ್ ಬಣ್ಣಿಸುತ್ತಾನೆ ಮತ್ತು ಇದರ ಅವತಾರಗಳನ್ನು ಏಷ್ಯಾದ ಎಲ್ಲ ಭಾಗಗಳಲ್ಲಿ ನಾವು ಗಮನಿಸಬಹುದು.

ಪಶ್ಚಿಮ, ಪೂರ್ವ ಮತ್ತು ದಕ್ಷಿಣ ಪೂರ್ವ ಏಷ್ಯಾದ ಅವಿಭಾಜ್ಯ ಅಂಗವಾಗಿರುವ ಆಟೋಮನ್ ಸಾಮ್ರಾಜ್ಯ, ಗಲ್ಫ್ ಪ್ರಾಂತಗಳು, ಅರೇಬಿಯಾ ದೇಶಗಳು, ಇರಾನ್ , ಆಫ್ ಘಾನಿಸ್ತಾನ, ಚೀನಾ, ಬರ್ಮಾ, ಮಲೇಶಿಯಾ, ಇಂಡೋನೇಶಿಯಾ, ಸಿಂಗಾಪೂರ್, ಕೊರಿಯಾ, ತೈವಾನ್ ಮತ್ತು ಇಂಡೋಚೀನಾಗಳಲ್ಲಿ ಐರೋಪ್ಯ ರಾಷ್ಟ್ರಗಳಾದ ಗ್ರೇಟ್ ಬ್ರಿಟನ್, ಫ್ರಾನ್ಸ್, ನೆದರ್ಲೆಂಡ್, ಜರ್ಮನಿ ಮತ್ತು ಅಮೆರಿಕಾಗಳು ತಮ್ಮ ತಮ್ಮ ಸ್ವತಂತ್ರ ವಸಾಹತುಗಳನ್ನು ೨೦ನೆಯ ಶತಮಾನದ ಆರಂಭದಲ್ಲಿ ಸ್ಥಾಪಿಸಿದವು. ಈ ವಸಾಹತುಗಳಲ್ಲಿ ಬಂಡವಾಳಶಾಹಿಗಳು ಯಾವುದೇ ಹಿಂಜರಿಕೆ ಇಲ್ಲದೆ ರಾಜಕೀಯ ಮತ್ತು ಆರ್ಥಿಕ ರಂಗಗಳಲ್ಲಿ ತಮ್ಮ ನಿರಂಕುಶ ಪ್ರಭುತ್ವವನ್ನು ಹೇರಿ ತಮ್ಮ ಇರುವಿಕೆಯನ್ನು ಸಂಘಟಿಸಲು ಬೇರೆ ಬೇರೆ ಮಾರ್ಗೋಪಾಯಗಳನ್ನು ಪಾಲಿಸಿದರು. ಬ್ರಿಟಿಷರು ಈಜಿಪ್ಟ್, ಗಲ್ಫ್ ಪ್ರಾಂತಗಳು ಮತ್ತು ಮಲೇಶಿಯದಲ್ಲಿ ಪ್ರೊಟಿಕ್ಟೊರೇಟ್ ಪದ್ಧತಿ ಅಥವಾ ರಾಜ್ಯಪಾಲಕತ್ವ ಪದ್ಧತಿಯನ್ನು ವಸಾಹತುಶಾಹಿ ಅಂಗವಾಗಿ ಅನುಷ್ಠಾನಗೊಳಿಸಿದರೆ, ಪ್ಯಾಲೇಸ್ತೀನ್, ಜೋರ್ಡಾನ್, ಕುವೈತ್ ಮತ್ತು ಇರಾಕ್‌ಗಳಲ್ಲಿ ಆಜ್ಞಾಪಕ ಆಡಳಿತವನ್ನು (ಮ್ಯಾನ್‌ಡೇಟರಿ ಸಿಸ್ಟಮ್) ಜರಿಗೊಳಿಸಿದರು. ಚೀನಾ ಮತ್ತು ಇರಾನ್‌ನಲ್ಲಿ ಅವರು ಸ್ಪೀಯರ‍್ಸ್ ಆಫ್ ಇನ್‌ಪ್ಲುಯೆನ್ಸ್(ಪ್ರಭಾವಿ ವರ್ತುಲ) ಎಂಬ ಪದ್ಧತಿಯನ್ನು ಜರಿಗೊಳಿಸಿದರೆ, ಬರ್ಮಾ ಮತ್ತು ಸಿಂಗಾಪುರಗಳಲ್ಲಿ ವಸಾಹತು ಪದ್ಧತಿಯನ್ನು ಅನುಸರಿಸಿದರು. ರಷ್ಯಾನ್ನರು ಚೀನಾ ಮತ್ತು ಉತ್ತರ ಇರಾನ್‌ನಲ್ಲಿ ಪ್ರಭಾವಿ ವರ್ತುಲ ಪದ್ಧತಿಯನ್ನು ಪಾಲಿಸಿದರು. ಫ್ರೆಂಚರು ಲೆಬನಾನ್ ಮತ್ತು ಸಿರಿಯಾಗಳಲ್ಲಿ ಆಜ್ಞಾಪಕ ಪದ್ಧತಿಯನ್ನು ಅನುಸರಿಸಿ; ಚೀನಾದಲ್ಲಿ ಪ್ರಭಾವಿ ವರ್ತುಲವನ್ನು ಮತ್ತು ವಿಯೆಟ್ನಾಮ್‌ನಲ್ಲಿ ವಸಾಹತನ್ನು ಸ್ಥಾಪಿಸಿದರು.

ಬಂಡವಾಳಶಾಹಿ ರಾಷ್ಟ್ರಗಳು ಏಷ್ಯಾ ದೇಶಗಳಲ್ಲಿನ ಭೌಗೋಳಿಕ ಲಕ್ಷಣಗಳಿಗನು ಗುಣವಾಗಿ, ಸಂಪನ್ಮೂಲಗಳ ಪ್ರಾಮುಖ್ಯತೆಯನ್ನು ಅರಿತು, ಇಲ್ಲಿಯ ಜನರ ಆಸೆ ಆಕಾಂಕ್ಷೆಗಳಿಗೆ ಪೂರಕವಾಗಿ ಮತ್ತು ತಮ್ಮ ಸ್ವಹಿತ ರಕ್ಷಣೆ ಹಾಗೂ ತಮ್ಮ ದೇಶಗಳಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ವೃದ್ದಿಸುವಿಕೆಯನ್ನು ಕಾಯ್ದುಕೊಳ್ಳಲು ಅವರು ತಮ್ಮ ವಸಾಹತುಗಳಲ್ಲಿ ವಿಭಿನ್ನ ಧೋರಣೆಗಳನ್ನು ಪಾಲಿಸಿದರು.

ಪಶ್ಚಿಮ ಏಷ್ಯಾ

ಪಶ್ಚಿಮ ಏಷ್ಯಾ ಭೌಗೋಳಿಕವಾಗಿ ಒಂದು ಪ್ರತ್ಯೇಕ ಜಗತ್ತು ಎಂದು ಪರಿಗಣಿಸಿದರೆ ಇಲ್ಲಿ ಬ್ರಿಟಿಷ್, ಫ್ರೆಂಚ್, ರಷ್ಯಾ, ಜರ್ಮನಿ, ಇಟಲಿ ಮತ್ತು ಅಮೆರಿಕನ್ ವಸಾಹತುಗಳನ್ನು ಸ್ಥಾಪಿಸಿದ್ದು ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಈ ಭೂಭಾಗದ ಸಾಮಾಜಿಕ, ಆರ್ಥಿಕ, ವಾಣಿಜ್ಯ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ವಿವಿಧ ನಮೂನೆಯ ವಸಾಹತೀಕರಣ ವನ್ನು ಕಾಣಬಹುದು. ಜೊತೆಗೆ ೨೦ನೆಯ ಶತಮಾನದ ಆರಂಭದಲ್ಲಿ ಇಲ್ಲಿನ ಬಹುಭಾಗಗಳು ಐರೋಪ್ಯ ರಾಷ್ಟ್ರಗಳ ಆರ್ಥಿಕ ಮತ್ತು ಸಾಂಸ್ಕೃತಿಕ ಆಸಕ್ತಿಗಳನ್ನೇ ಯಶಸ್ವಿಯಾಗಿ ಕೈಗೂಡಿಸಿಕೊಳ್ಳಲು ಸ್ಪಂದಿಸಿದ್ದವು. ಈ ಯಶಸ್ಸಿನ ಹಿಂದೆ ಸುಮಾರು ಒಂದು ಶತಮಾನದ ಇತಿಹಾಸವಿದೆ. ೧೮೦೦-೧೯೦೦ರವರೆಗೆ ಪಶ್ಚಿಮ ಏಷ್ಯಾದ ನಗರ ಮತ್ತು ಪಟ್ಟಣಗಳಲ್ಲಿ ಬ್ರಿಟಿಷರು, ಫ್ರೆಂಚರು ಮತ್ತು ರಷ್ಯಾನ್ನರು ವ್ಯಾಪಾರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಮೆಡಿಟರೇನಿಯನ್ ಪ್ರದೇಶಗಳು, ಈಜಿಪ್ಟ್, ಮೆಸಪಟೋಮಿಯಾ, ಕೆಂಪು ಮತ್ತು ಕಪ್ಪು ಸಮುದ್ರದ ಆಯಕಟ್ಟಿನ ಜಗಗಳು, ಪರ್ಷಿಯಾ, ಅರೇಬಿಯಾ ಮತ್ತು ಗಲ್ಫ್ ಪ್ರದೇಶ ಗಳಲ್ಲಿನ ಮಾರುಕಟ್ಟೆಗಳು ಐರೋಪ್ಯ ರಾಷ್ಟ್ರಗಳಿಗೆ ವ್ಯಾಪಾರ ನಡೆಸಲು ಉತ್ತಮ ಅಕವಾಶಗಳನ್ನು ಕಲ್ಪಿಸಿದ್ದವು. ಆಟೋಮನ್ ಸಾಮ್ರಾಟರ ನೆರವಿನಿಂದ ಅನೇಕ ವ್ಯಾಪಾರ ಒಪ್ಪಂದಗಳನ್ನು ವಿದೇಶಿಯರು ಮಾಡಿಕೊಂಡಿದ್ದರು. ಎಲ್ಲ ದೇಶಗಳು ೧೯ನೆಯ ಶತಮಾನದವರೆಗೂ ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮರ್ಪಕವಾಗಿ ವ್ಯಾಪಾರ ರಂಗದಲ್ಲಿ ನಿರಾತಂಕವಾಗಿ ಯಶಸ್ಸನ್ನು ಕಂಡಿದ್ದರು. ಆದರೆ ಆ ಶತಮಾನದ ಅಂತ್ಯದಲ್ಲಿ ಈ ಪ್ರದೇಶಗಳಲ್ಲಿರುವ ಆಯಕಟ್ಟಿನ ಜಗ ಮತ್ತು ಮಾರುಕಟ್ಟೆಗಳಲ್ಲಿ ಲಭ್ಯವಿರುವ ವಿಪುಲ ವ್ಯಾಪಾರ ಅವಕಾಶಗಳ ಲಾಭ ಪಡೆಯಲು; ಆರ್ಥಿಕ ಬಿಕ್ಕಟ್ಟಿಗೆ ಪರಿಹಾರವಾಗಿ ಮತ್ತು ಬ್ರಿಟಿಷರು ಈ ಪ್ರಾಂತ್ಯಗಳಲ್ಲಿ ಲಭ್ಯವಿರುವ ಹಲವು ನಗರಗಳಲ್ಲಿ ಹಲವು ದಶಕಗಳಿಂದ ಅನುಭವಿಸುತ್ತಿರುವ ನಿರಂಕುಶ ಪ್ರಭುತ್ವವನ್ನು ಹತ್ತಿಕ್ಕುವ ಗುರಿಯೊಂದಿಗೆ ಜರ್ಮನಿಯ ಸಾಮ್ರಾಜ್ಯವಾದಿ ವಿಲಿಯಂ ಕೈಸರ್ ಪಶ್ಚಿಮ ಏಷ್ಯಾದ ಮೇಲೆ ಆರ್ಥಿಕ ಆಸಕ್ತಿಗಳನ್ನು ಬೆಳೆಸಲು ಪ್ರಯತ್ನಿಸಿದನು. ಇದು ೨೦ನೆಯ ಶತಮಾನದ ಆರಂಭದಲ್ಲಿ ವಸಾಹತುಶಾಹಿ ರಾಷ್ಟ್ರಗಳ ಧೋರಣೆಗಳಲ್ಲಿ ಬದಲಾವಣೆ ತರಲು ಮುಖ್ಯ ಘಟನೆಯಾಗಿದೆ ಮತ್ತು ಸಾಂಪ್ರದಾಯಿಕ ಬಂಡವಾಳಶಾಹಿ ರಾಷ್ಟ್ರಗಳಾದ ಬ್ರಿಟಿಷ್, ಫ್ರೆಂಚ್ ಮತ್ತು ರಷ್ಯಾನ್ನರು ತಾವು ವ್ಯಾಪಾರ ವಹಿವಾಟು ಮಾಡುತ್ತಿರುವ ಪಶ್ಚಿಮ ಏಷ್ಯಾದ ಪ್ರದೇಶಗಳ ಮೇಲೆ ರಾಜಕೀಯ ಮತ್ತು ಆರ್ಥಿಕ ಆಧಿಪತ್ಯವನ್ನು ಹೇರಲು ಜರ್ಮನಿಯ ಹೊಸ ವಸಾಹತುಶಾಹಿ ಧೋರಣೆಗಳು ಜಾಗೃತಗೊಳಿಸುತ್ತದೆ. ಮುಖ್ಯವಾಗಿ ಪಶ್ಚಿಮ ಏಷ್ಯಾಕ್ಕೆ ಜರ್ಮನಿಯ ಅಗಮನವನ್ನು ರಷ್ಯಾ ಮತ್ತು ಬ್ರಿಟನ್ ಗಂಭೀರವಾಗಿ ಪರಿಗಣಿಸುತ್ತವೆ. ಏಕೆಂದರೆ ಪಶ್ಚಿಮ ಏಷ್ಯಾದ ಆಯಕಟ್ಟಿನ ಪ್ರದೇಶಗಳಲ್ಲಿ ಜರ್ಮನಿಯ ವಸಾಹತುಶಾಹಿ ಚಟುವಟಿಕೆಗಳು ಮತ್ತು ಪ್ರಭುತ್ವ ನೇರವಾಗಿ ಬ್ರಿಟನ್ ಮತ್ತು ರಷ್ಯಾನ್ನರು ಸುಮಾರು ಎರಡು ಶತಮಾನಗಳಿಂದಲೂ ಅನುಭವಿಸಿಕೊಂಡು ಬಂದಿರುವ ಆರ್ಥಿಕ ಪ್ರಭುತ್ವ ಮತ್ತು ಆಸಕ್ತಿಗಳಿಗೆ ಬೆದರಿಕೆ ಹಾಕಿದಂತಾಗುತ್ತದೆ. ಬ್ರಿಟಿಷ್ ಮತ್ತು ರಷ್ಯಾದವರಂತೆ ಜರ್ಮನಿಯ ವ್ಯಾಪಾರಿ ಸಂಸ್ಥೆಗಳು ಇಲ್ಲಿಯ ನಗರಗಳಲ್ಲಿ ವ್ಯಾಪಾರ ಚಟುವಟಿಕೆಗಳನ್ನು ವೃದ್ದಿಸಿಕೊಳ್ಳಲು ಮತ್ತು ಇಲ್ಲಿನ ಸಂಪನ್ಮೂಲಗಳ ಲಾಭ ಪಡೆಯಲು ಜರ್ಮನ್ ಸರಕಾರ ಆಟೋಮನ್ ಸರಕಾರದೊಂದಿಗೆ ಪ್ರತ್ಯೇಕ ಒಪ್ಪಂದವನ್ನು ಮಾಡಿ ಕೊಂಡಿತ್ತು (೧೮೮೦ ಮತ್ತು ೯೦ರ ದಶಕಗಳಲ್ಲಿ). ಆಟೋಮನ್ ಸಾಮ್ರಾಟ ಮತ್ತು ಜರ್ಮನಿಯ ವಿಲಿಯಂ ಕೈಸರ್ ನಡುವಿನ ಸ್ನೇಹ ಸೌಹಾರ್ದತೆ ಮತ್ತು ವ್ಯಾಪಾರಿ ಸಂಬಂಧಗಳಿಂದ ಬ್ರಿಟಿಷರ ಆಸಕ್ತಿಗಳನ್ನು ಕ್ಷೀಣಿಸುವ ಪ್ರಕ್ರಿಯೆಯಾಗಿ ಪರಿವರ್ತನೆಗೊಂಡಿತು. ಈ ಘಟನೆ ೨೦ನೆಯ ಶತಮಾನದ ಆರಂಭದಲ್ಲಿ ಬಂಡವಾಳಶಾಹಿ ರಾಷ್ಟ್ರಗಳಿಗೆ ಸ್ವತಂತ್ರ ವಸಾಹತುಗಳನ್ನು ಸ್ಥಾಪಿಸಲು ಪರೋಕ್ಷವಾದ ಸೂತ್ರವಾಯಿತು. ಇದರಿಂದ ವಸಾಹತುಗಳಿಗಾಗಿ ಬೃಹತ್ ಬಂಡವಾಳಶಾಹಿ ರಾಷ್ಟ್ರಗಳ ನಡುವೆ ನೇರ ಪೈಪೋಟಿ ಸೃಷ್ಟಿಯಾಗಿ ೧೯೧೪ರಲ್ಲಿ ಮಹಾಯುದ್ಧಕ್ಕೆ ಕಾರಣವಾಯಿತು.

ವಸಾಹತುಶಾಹಿ ಪೈಪೋಟಿಗೆ ಕಾರಣ

ಜರ್ಮನ್ ದೇಶ ತನ್ನ ವಸಾಹತುಶಾಹಿ ಆಸಕ್ತಿ ಮತ್ತು ಚಟುವಟಿಕೆಗಳನ್ನು ಪಶ್ಚಿಮ ಏಷ್ಯಾದಲ್ಲಿ ಪೂರ್ಣ ಪ್ರಮಾಣವಾಗಿ ಸ್ಥಾಪಿಸುವ ಮೊದಲು, ಇಲ್ಲಿನ ಬಹುಭಾಗ ಬ್ರಿಟಿಷರ ಆರ್ಥಿಕ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಲಭ್ಯವಿದ್ದಿದ್ದವು. ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ವ್ಯಾಪಾರಿಗಳು ಸಹಜವಾಗಿ ಮೆಸಪಟೋಮಿಯಾ ಮತ್ತು ಗಲ್ಫ್ ಮಾರುಕಟ್ಟೆಗಳ ಸಾಮ್ರಾಟರಾಗಿದ್ದರು. ಪೂರ್ವ ದೇಶಗಳಿಂದ ಸಂಗ್ರಹಿಸಿದ ಕಚ್ಚಾ ವಸ್ತುಗಳು, ಚಹಾ, ಕಾಫಿ, ಸಕ್ಕರೆ, ನೀಲಿ, ಗನ್ನೀಸ್. ಹತ್ತಿಬಟ್ಟೆಗಳು, ಔಷಧಿ ವಸ್ತುಗಳು, ತಾಮ್ರ, ಕಬ್ಬಿಣ ಮತ್ತು ಖನಿಜ ಸಂಪನ್ಮೂಲಗಳನ್ನು ಬ್ರಿಟಿಷರು ಭಾರತದ ದಾರಿಯಾಗಿ ಈ ಮಾರುಕಟ್ಟೆಗಳಿಗೆ ಸರಬರಾಜು ಮಾಡುತ್ತಿದ್ದರು. ಹಾಗೆ ಬಾಗ್ದಾದ್‌ನಿಂದ ಭಾರತಕ್ಕೆ ಗ್ಲಾಸ್, ಅಲ್‌ಮೊಂಡ್ಸ್, ಸಿಲ್ಕ್, ಖರ್ಜೂರ, ಒಣ ಹಣ್ಣುಹಂಪಲು ಮತ್ತು ಅಫೀಮು ಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಭಾರತ ಮತ್ತು ಗಲ್ಫ್ ಮಾರುಕಟ್ಟೆಗಳ ನಡುವೆ ಬ್ರಿಟಿಷ್ ವ್ಯಾಪಾರಿಗಳು ತಮ್ಮದೇ ಪ್ರಭುತ್ವವನ್ನು ಸಾಧಿಸಿ ಹೆಚ್ಚು ಲಾಭವನ್ನು ಗಳಿಸುತ್ತಿದ್ದರು. ಈ ರೀತಿಯ ವ್ಯಾಪಾರ ಚಟುವಟಿಕೆಗಳಲ್ಲದೆ ಗಲ್ಫ್ ಮತ್ತು ಮೆಡಿಟರೇನಿಯನ್ ಪ್ರದೇಶಗಳ ಪ್ರಭುತ್ವದಿಂದಾಗಿ ತಮ್ಮ ಸ್ವಾಧೀನದಲ್ಲಿರುವ ಆಯಕಟ್ಟಿನ ಜಗಗಳಲ್ಲಿ ಬ್ರಿಟಿಷರು ತಮ್ಮದೇ ಆದ ಸ್ವತಂತ್ರ ಸೇನೆಗಳನ್ನಿಟ್ಟು ವ್ಯಾಪಾರಕ್ಕಾಗಿ ಬಳಸುವ ಮಾರ್ಗಗಳನ್ನು ಮತ್ತು ಮಾರುಕಟ್ಟೆಗಳನ್ನು ನಿರಾತಂಕವಾಗಿ ರಕ್ಷಿಸಿಕೊಂಡಿದ್ದರು. ಮೆಡಿಟರೇನಿಯನ್‌ನಿಂದ ಹಿಡಿದು ಪೂರ್ವ ಮತ್ತು ದಕ್ಷಿಣಾಭಿಮುಖ ವಾಗಿ ಸಿಗುವ ಪ್ರದೇಶ ಗಳಾದ ಕ್ರೆಟ್, ಸಿಪ್ರಸ್, ಅನಟೋಲಿಯ, ಇಸ್ತಾಂಬೂಲ್, ಏಷ್ಯಾ ಮೈನರ್, ಪರ್ಟೈಲ್ ಕ್ರೆಸೆಂಟ್, ಮೆಸಪಟೋಮಿಯ, ಗಲ್ಫ್ ಪ್ರಾಂತಗಳು, ದಕ್ಷಿಣ ಭಾಗದ ಇರಾನ್, ಅಫ್‌ಘಾನಿಸ್ತಾನ ಪ್ರಾಂತಗಳಲ್ಲಿ ಬ್ರಿಟಿಷರು ತಮ್ಮ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದರು. ಇದರಿಂದಾಗಿ ಭಾರತದಲ್ಲಿನ ಬ್ರಿಟಿಷ್ ವಸಾಹತುಶಾಹಿ ಸರಕಾರವು ಉತ್ತರ ಪಶ್ಚಿಮ ಭಾಗದಿಂದ ಪಶ್ಚಿಮ ಏಷ್ಯಾದೊಂದಿಗೆ ನಿಕಟ ಸಂಪರ್ಕವನ್ನು ಬೆಳೆಸಿಕೊಂಡಿತ್ತು. ಆ ಕಾರಣಕ್ಕಾಗಿ ಪಶ್ಚಿಮ ಏಷ್ಯಾದಲ್ಲಿ ಬ್ರಿಟಿಷರ ಆರ್ಥಿಕ ಮತ್ತು ವ್ಯಾಪಾರಿ ಹಕ್ಕುಗಳು ರಕ್ಷಿಸಲ್ಪಟ್ಟರೆ ಅವರ ವಸಾಹತು ಆಗಿರುವ ಭಾರತದ ಹಿತರಕ್ಷಣೆಗೆ ಸಹಕಾರಿಯಾಗುತ್ತದೆ. ಅಂದರೆ ಈಗಾಗಲೇ ಬ್ರಿಟಿಷರು ತಮ್ಮ ದೇಶದ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರವಾಗಿ ಭಾರತದ ಸ್ಥಾನವನ್ನು ಪರಿವರ್ತನೆಗೊಳಿಸಿ ಸ್ವತಂತ್ರ ವಸಾಹತುವೆಂದು ನೆಯಮಿಸಿದ್ದು, ಅದರ ಭದ್ರತಾ ದೃಷ್ಟಿಯಿಂದ ಬ್ರಿಟಿಷರು ಪಶ್ಚಿಮ ಏಷ್ಯಾದ ಪ್ರದೇಶಗಳಲ್ಲಿ ಹಿಡಿತವನ್ನು ಭದ್ರಗೊಳಿಸುವ ಆಕಾಂಕ್ಷೆಯಲ್ಲಿರುವಾಗಲೇ ಜರ್ಮನಿಯ ವ್ಯಾಪಾರಿ ಚಟುವಟಿಕೆಗಳು ಮೆಸಪಟೋಮಿಯಾ ಮತ್ತು ಗಲ್ಫ್ ಪ್ರದೇಶಗಳ ನಗರಗಳಲ್ಲಿ ಆರಂಭಗೊಂಡವು. ಜರ್ಮನಿಯು ಈ ಕಾರ್ಯಾಚರಣೆಯಲ್ಲಿ ಯಶಸ್ಸು ಸಾಧಿಸಿತು. ಏಕೆಂದರೆ ಜರ್ಮನಿಯ ವಿಲಿಯಂ ಕೈಸರ್ ಮತ್ತು ಆಟೋಮನ್ ಸಾಮ್ರಾಟ ಅಬ್ದುಲ್ ಹಮೀದ್ ಪರಸ್ಪರ ಸ್ನೇಹಿತರು ಮಾತ್ರವಲ್ಲದೆ, ಅಬ್ದುಲ್ ಹಮೀದ್ ತನ್ನ ಅಧಿಕಾರದ ಪ್ರಭುತ್ವವನ್ನು ಜನರ ಮೇಲೆ ಹೇರುವ ಸಲುವಾಗಿ ಹಲವು ಸುಧಾರಣೆಗಳನ್ನು ಅನುಷ್ಠಾನಗೊಳಿಸಿದನು. ಇಂತಹ ಸುಧಾರಣೆಗಳ ಪ್ರಸ್ತುತತೆಯ ಅನಿವಾರ್ಯ ಅಬ್ದುಲ್ ಹಮೀದ್‌ಗೆ ಈ ಸಮಯದಲ್ಲಿತ್ತು. ಅವನೆಯ ವ್ಯಾಖ್ಯಾನಿಸುವಂತೆ ೧೯ನೆಯ ಶತಮಾನದುದ್ದಕ್ಕೂ ಅಟೋಮನ್ ಸಾಮ್ರಾಜ್ಯದ ಆರ್ಥಿಕ ಮತ್ತು ಹಣಕಾಸು ವ್ಯವಸ್ಥೆ ತೀರ ಹದಗೆಡಲು ಮೂಲಭೂತವಾಗಿ

೧. ಸಾಂಪ್ರದಾಯಿಕ ಐರೋಪ್ಯ ರಾಷ್ಟ್ರಗಳಾದ ಬ್ರಿಟಿಷ್, ರಷ್ಯಾ ಮತ್ತು ಫ್ರಾನ್ಸ್ ದೇಶಗಳ ವಸಾಹತುಶಾಹಿ ಚಟುವಟಿಕೆ, ಪ್ರಭುತ್ವ ಮತ್ತು ಪೈಪೋಟಿ ಮತ್ತು

೨. ಆಟೋಮನ್ ಸರಕಾರದ ಆಡಳಿತಕ್ಕೆ ಒಳಪಟ್ಟು ಬಾಲ್ಕನ್ ಕ್ರಿಶ್ಚಿಯನ್‌ರಲ್ಲಿ ರಾಷ್ಟ್ರೀಯ ವಾದದ ಬೀಜ ಬಿತ್ತಿ ಅವರು ಆರಂಭಿಸಿದ ಚಳುವಳಿ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಬ್ರಿಟಿಷ್, ಫ್ರೆಂಚ್ ಮತ್ತು ರಷ್ಯಾನ್ನರ ನೇರ ಹಸ್ತಕ್ಷೇಪವೇ ಮುಖ್ಯ ಕಾರಣಗಳೆಂದು ಅಬ್ದುಲ್ ಹಮೀದ್ ಗ್ರಹಿಸುತ್ತಾನೆ.

೧೮೦೦ರಿಂದ ೧೮೭೬ರವರೆಗೆ ಪಶ್ಚಿಮ ರಾಷ್ಟ್ರಗಳ ಸಕ್ರಿಯ ಹಸ್ತಕ್ಷೇಪದಿಂದ ಆಟೋಮನ್ ಸರಕಾರ ಹಲವು ಪ್ರಾಂತಗಳನ್ನು ಬಾಲ್ಕನ್ ಕ್ರಿಶ್ಚಿಯನ್ನರಿಗೆ ಬಿಟ್ಟುಕೊಟ್ಟು ಅವರ ಸ್ವತಂತ್ರ ರಾಜ್ಯಗಳನ್ನು ಗೌರವಿಸಬೇಕಾಯಿತು. ಅಲ್ಲದೆ ಸಾಮ್ರಾಜ್ಯದ ಉದ್ದಗಲಕ್ಕೂ ಆರ್ಥಿಕ, ಸಾಮಾಜಿಕ, ರಾಜಕೀಯ ಕುಸಿತ, ಸೈನಿಕ ದುರ್ಬಲತೆ, ಜನಾಂಗೀಯ ಕಲಹ ಮತ್ತು ವರ್ಗ ಸಂಘರ್ಷಣೆಗೆ ಕುಮ್ಮಕ್ಕು ನೀಡಿದರು. ಇದರಿಂದಾಗಿ ಆಟೋಮನ್ ಸರಕಾರ ಸುಮಾರು ೧೫ನೆಯ ಶತಮಾನದ ಆದಿಯಿಂದಲೂ ರಕ್ಷಿಸಿಕೊಂಡು ಬಂದ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಒಗ್ಗಟ್ಟು ವಿದೇಶಿಯರ ಸವಾಲುಗಳಿಂದ ತತ್ತರಿಸಿ ಹೋಯಿತು. ಇದನ್ನು ಸರಿಪಡಿಸಿ ಸಾಮ್ರಾಜ್ಯದೊಳಗೆ ಆರ್ಥಿಕ, ರಾಜಕೀಯ, ಸಾಮಾಜಿಕ ಒಗ್ಗಟ್ಟು ಮತ್ತು ಸೈನಿಕ ಭದ್ರತೆಯನ್ನು ಪುನರ್‌ಸ್ಥಾಪಿಸುವ ಗುರಿಯೊಂದಿಗೆ ಅಬ್ದುಲ್ ಹಮೀದ್ ಅನೇಕ ಸುಧಾರಣೆಗಳನ್ನು ಹಮ್ಮಿಕೊಂಡನು. ಆದರೆ ಅಂತಹ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮಿಲಿಯಗಟ್ಟಲೆ ಬಂಡವಾಳದ ಕೊರತೆ, ತಂತ್ರಜ್ಞಾನದ ಅಭಾವವನ್ನು ಅವನ ಸರಕಾರ ಎದುರಿಸಬೇಕಾಯಿತು.

ಸಾಮ್ರಾಜ್ಯದ ಈಗಿನ ದುಸ್ಥಿತಿಗೆ ಬ್ರಿಟಿಷ್, ರಷ್ಯಾ ಮತ್ತು ಫ್ರಾನ್ಸ್ ದೇಶಗಳೇ ಹೊಣೆಯಾಗಿರುವುದರಿಂದ ಅಬ್ದುಲ್ ಹಮೀದ್ ಹಮ್ಮಿಕೊಂಡ ಸುಧಾರಣೆಗಳನ್ನು ಅನುಷ್ಠಾನಗೊಳಿಸಲು ಬೇಕಾದ ಬಂಡವಾಳ ಮತ್ತು ತಂತ್ರಜ್ಞಾನವನ್ನು ಆ ಮೂರು ರಾಷ್ಟ್ರಗಳಿಂದ ಪಡೆಯಲು ನಿರಾಕರಿಸಿದನು. ಈ ನಿರಾಕರಣೆ ಮುಖ್ಯವಾಗಿ ಬ್ರಿಟಿಷರ ಆಧಿಪತ್ಯಕ್ಕೆ ಬೆದರಿಕೆ ತಂದೊಡ್ಡಿತು. ಏಕೆಂದರೆ ಹಮೀದ್ ತನ್ನ ಸಾಮ್ರಾಜ್ಯದ ಬಿಕ್ಕಟ್ಟಿಗೆ ಕಾರಣರಾಗಿರುವ ಈ ಮೂರು ವಿದೇಶಿ ವೈರಿಗಳನ್ನು ಸಾಮ್ರಾಜ್ಯದಿಂದ ಹೊರಗಟ್ಟಲು ಮತ್ತು ತಾನು ಆಶಿಸುವ ಬಂಡವಾಳ ಕೊರತೆಯನ್ನು ನೀಗಿಸಲು, ಅದೇ ಕಾಲದಲ್ಲಿ ಉಗಮವಾದ ಹೊಸ ಬಂಡವಾಳಶಾಹಿ ರಾಷ್ಟ್ರದೊಂದಿಗೆ ಸ್ನೇಹ ಸಂಬಂಧವನ್ನು ಬೆಳೆಸಿ ತನ್ನ ಆಸೆಗಳನ್ನು ನೆರವೇರಿಸಿಕೊಳ್ಳುವ ಪ್ರಯತ್ನದಲ್ಲಿದ್ದನು. ಆದರೆ ತಾನು ಸಂಬಂಧ ಬೆಳೆಸುವ ರಾಷ್ಟ್ರವು ಕೆಲವೊಂದು ಷರತ್ತುಗಳನ್ನು ಪಾಲಿಸಬೇಕು.

೧. ತನ್ನ ಸಾಮ್ರಾಜ್ಯದ ಬಿಕ್ಕಟ್ಟಿಗೆ ಕಾರಣರಾದ ವಸಾಹತುಶಾಹಿ ರಾಷ್ಟ್ರಗಳೊಂದಿಗೆ ಯಾವುದೇ ಸ್ನೇಹ ಸಂಬಂಧವನ್ನು ಹೊಂದಿರಬಾರದು, ಬದಲಾಗಿ ದ್ವೇಷಿಸುತ್ತಿರಬೇಕು.

೨. ತನ್ನ ಸರಕಾರ ಕೈಗೊಳ್ಳುವ ಅನೇಕ ಆರ್ಥಿಕ ಬೆಳವಣಿಗೆಗೆ ಬೇಕಾಗುವ, (ಸಹಕಾರವನ್ನು) ಬಂಡವಾಳ ಮತ್ತು ತಂತ್ರಜ್ಞಾನವನ್ನು ಒದಗಿಸಿ, ಹೊಸ ಸೈನ್ಯದ ರಚನೆ, ಸಾರಿಗೆ ಸಂಪರ್ಕಗಳ ಆಧುನೀಕರಣ, ಕೈಗಾರಿಕೆಗಳ ಬೆಳವಣಿಗೆಗೆ ಮಾರ್ಗದರ್ಶನ ನೀಡಲು ಸಮರ್ಥವಾಗಿರಬೇಕು.

೩. ಬ್ರಿಟನ್, ಫ್ರಾನ್ಸ್ ಮತ್ತು ರಷ್ಯಾ ದೇಶಗಳು ಸಾಮ್ರಾಜ್ಯದ ಬಿಕ್ಕಟ್ಟಿಗೆ ಸಮಾನ ಪಾಲುದಾರ ರಾದ್ದರಿಂದ ಆ ದೇಶಗಳ ವಿರುದ್ಧ ಹಮೀದ್‌ನ ಸರಕಾರ ಕೈಗೊಳ್ಳಬಹುದಾದ ಸೈನಿಕ ಕಾರ್ಯಚರಣೆಗೆ ವಿಶೇಷವಾಗಿ ಸಹಕರಿಸಲು ಮುಂದೆ ಬರಬೇಕು.