ಆದರೆ ಕೊರಿಯಾ ಮತ್ತು ತೈವಾನ್ ಹಲವು ಶತಮಾನಗಳಿಂದಲೂ ಚೀನಾದ ಆಡಳಿತ ವ್ಯಾಪ್ತಿಗೆ ಬರುತ್ತಿದ್ದು ಚೈನಿ ಸರಕಾರ ಅಲ್ಲಿನ ರಾಜಕೀಯ ಭದ್ರತೆ, ಆರ್ಥಿಕ ಮತ್ತು ಸೈನಿಕ ಚಟುವಟಿಕೆಗಳ ರೂವಾರಿಯಾಗಿತ್ತು. ಜಪಾನ್‌ನ ಚಟುವಟಿಕೆಗಳು ಕಾನೂನುಬಾಹಿರವೆಂದು ಖಂಡಿಸಿ ಚೀನಾ ವಿರೋಧಿಸತೊಡಗಿತು. ಪರಿಣಾಮವಾಗಿ ೧೮೯೪-೯೫ರಲ್ಲಿ ಚೀನಾ-ಜಪಾನ್ ಯುದ್ಧ. ಈ ಯುದ್ದದಲ್ಲಿ ಯಶಸ್ವಿಯಾಗಿ ಚೀನಾವನ್ನು ಸೋಲಿಸಿದ್ದಲ್ಲದೆ ಕೊರಿಯಾ ಮತ್ತು ತೈವಾನ್ ಪ್ರಾಂತಗಳನ್ನು ತನ್ನ ರಕ್ಷಣಾ ಕಾರ್ಯಚರಣೆಯೊಳಗೆ ಸೇರಿಸಿಕೊಳ್ಳಲು ಚೀನಾ ಸರಕಾರಕ್ಕೆ ಒತ್ತಡ ಹೇರಿ ಯಶಸ್ವಿಯಾಯಿತು. ಇದಲ್ಲದೆ ಚೀನಾದ ಪೂರ್ವ ಕರಾವಳಿಯಲ್ಲಿನ ಮುಖ್ಯ ಬಂದರಾದ ಪೋರ್ಟ್ ಆರ್ಥರ್ ಮತ್ತು ಲಿಯಾವೋತುಂಗ್ ಪ್ರಸ್ಥಭೂಮಿಯ ಸುತ್ತ ಮುತ್ತ ಜಪಾನಿಗೆ ವಾಣಿಜ್ಯ ಮತ್ತು ವ್ಯಾಪಾರ ಚಟುವಟಿಕೆಗಳನ್ನು ಆರಂಬಿಸಲು ಚೀನಾ ಸರಕಾರ ವಿಶೇಷ ಅಧಿಕಾರವನ್ನು ನೀಡಿತು. ಮಾತ್ರವಲ್ಲ, ಅಲ್ಲಿ ಆರ್ಥಿಕ, ಸಾರಿಗೆ ಸಂಪರ್ಕ ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ಕೈಗೊಳ್ಳಲು ಅನುಮತಿ ನೀಡಿತು. ಈ ಎಲ್ಲ ಬೆಳವಣಿಗೆಯಿಂದಾಗಿ ಜಪಾನ್ ಚೀನಾದ ಪೂರ್ವ ಕರಾವಳಿ, ಕೊರಿಯಾ ಮತ್ತು ತೈವಾನ್ ಪ್ರಾಂತಗಳನ್ನು ತನ್ನ ವಸಾಹತುಶಾಹಿ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳುವ ಅವಕಾಶವನ್ನು ಪಡೆಯಿತು.

ಜಪಾನ್‌ನ ಪ್ರಭುತ್ವ ವೃದ್ದಿಯ ಪ್ರಕ್ರಿಯೆ ನೇರವಾಗಿ ಚೀನಾದಲ್ಲಿ ಈಗಾಗಲೇ ತಳವೂರಿರುವ ಐರೋಪ್ಯ ರಾಷ್ಟ್ರಗಳ ಚಟುವಟಿಕೆಗಳಿಗೆ ಅಡ್ಡಿ ಉಂಟುಮಾಡಿತು. ಮುಖ್ಯವಾಗಿ ಬ್ರಿಟಿಷ್, ಫ್ರೆಂಚ್, ಜರ್ಮನಿ ಮತ್ತು ರಷ್ಯಾ, ಜಪಾನ್ ದೇಶದ ವಸಾಹತು ಚಟುವಟಿಕೆಗಳಿಂದ ಬಂದೊದಗುವ ಬೆದರಿಕೆಯನ್ನು ತಡೆಗಟ್ಟಲು ಈ ಎಲ್ಲ ರಾಷ್ಟ್ರಗಳು ತಂತ್ರಗಳು ನಿರೂಪಿಸತೊಡಗಿದವು. ಈ ತಂತ್ರಗಳು ೧. ಜಪಾನ್‌ನ ಹೊಸ ವಸಾಹತುಶಾಹಿ ಚಟುವಟಿಕೆ ಮತ್ತು ಪೂರ್ವ ಏಷ್ಯಾದಲ್ಲಿ ಅದು ಹೇರಿರುವ ರಾಜಕೀಯ, ಆರ್ಥಿಕ ಮತ್ತು ವಾಣಿಜ್ಯ ಅಧಿಕಾರವನ್ನು ಹತ್ತಿಕ್ಕುವ ಗುರಿಯನ್ನು ಹೊಂದಿತ್ತು. ೨. ಮುಖ್ಯವಾಗಿ ರಷ್ಯಾ ಆದಷ್ಟು ಬೇಗ ಜಪಾನಿನ ವಾಣಿಜ್ಯ ಚಟುವಟಿಕೆಗಳ ಕ್ರೋಡೀಕರಣವನ್ನು ಸ್ಥಗಿತಗೊಳಿಸುವ ಆಸಕ್ತಿಯಲ್ಲಿತ್ತು. ಇದಕ್ಕೆ ಮುಖ್ಯ ಕಾರಣವೂ ಇದೆ. ಅ. ಜಪಾನ್ ಈಗ ಚೈನಿ ಸರಕಾರದ ಬೆಂಬಲ ಪಡೆದು ಪೂರ್ವ ಕರಾವಳಿಯ ಆಯಕಟ್ಟಿನ ಬಂದರಾದ ಪೋರ್ಟ್ ಅರ್ಥರ್ ಮತ್ತು ಕೃಷಿ ಉತ್ಪನ್ನಗಳಿಗೆ ಶ್ರೀಮಂತವಾಗಿರುವ ಲಿಯಾವೋತುಂಗ್ ಪ್ರಸ್ಥಭೂಮಿಯನ್ನು ಆಕ್ರಮಿಸಿಕೊಂಡಿತ್ತು. ಆ. ಕೊರಿಯಾ ಮತ್ತು ತೈವಾನ್ ಜಪಾನಿಗೆ ಬಿಟ್ಟು ಕೊಟ್ಟಿರುವುದಲ್ಲದೆ ಅವುಗಳ ಸ್ವಾತಂತ್ರ್ಯವನ್ನು ರಕ್ಷಿಸಲು ಜಪಾನಿಗೆ ವಿಶೇಷ ಅಧಿಕಾರ ದೊರೆಯಿತು. ಈ ಎರಡು ಬೆಳವಣಿಗೆಗಳು ಮುಖ್ಯವಾಗಿ ರಷ್ಯಾದ ಆಸಕ್ತಿಗಳನ್ನು ತಡೆಹಿಡಿದವು. ಹೇಗೆಂದರೆ ಉತ್ತರ-ಪೂರ್ವದಲ್ಲಿರುವ ಮಂಚೂರಿಯ ಪ್ರಾಂತದಲ್ಲಿ ರಷ್ಯಾ ಈಗಾಗಲೇ ತನ್ನ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸಿತ್ತು. ನಿರೀಕ್ಷೆಯಂತೆ ರಷ್ಯಾ ಮಂಚೂರಿಯಾದಲ್ಲಿನ ಲಾಭವನ್ನು ಪಡೆದು ತನ್ನ ವಸಾಹತು ಚಟುವಟಿಕೆಗಳನ್ನು ದಕ್ಷಿಣಾಭಿಮುಖವಾಗಿ ವೃದ್ದಿಸಬೇಕೆಂದು ಹವಣಿಸುತ್ತಿತ್ತು. ಅದಕ್ಕೆ ಮುಖ್ಯವಾಗಿ ಲಿಯಾವೋತುಂಗ್ ಪ್ರಸ್ಥಭೂಮಿಯನ್ನು ಕಬಳಿಸಿ ಪಶ್ಚಿಮ ಕರಾವಳಿಯ ಮುಖ್ಯ ಬಂದರಾದ ಪೋರ್ಟ್ ಆರ್ಥರನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕೆಂದು ಆಶಿಸುತ್ತಿತ್ತು. ಈ ಕಾರ್ಯಾಚರಣೆಯಲ್ಲಿ ರಷ್ಯಾ ಯಶಸ್ಸು ಕಂಡರೆ ಮುಂದೆ ತನ್ನ ಆಸಕ್ತಿಗಳನ್ನು ಮತ್ತು ಪ್ರಭುತ್ವವನ್ನು ಕೊರಿಯಾದಲ್ಲಿ ಹೇರಬೇಕೆಂಬ ತಂತ್ರವನ್ನು ಹೂಡುತ್ತಿತ್ತು. ಅಂದರೆ ಬಂಡವಾಳ ಚಟುವಟಿಕೆಯ ವೃದ್ದಿ ಮುಖ್ಯವಾಗಿತ್ತು. ಶ್ರೀಮಂತವಾಗಿರುವ ಈ ಎಲ್ಲ ಪ್ರಾಂತಗಳನ್ನು ರಷ್ಯಾ ಆಕ್ರಮಿಸಿ ಇಡೀ ಪೂರ್ವ ಏಷ್ಯಾದ ಅಧಿಕಾರಿಯಾಗುವ ಆಸೆಯಲ್ಲಿತ್ತು.

ಇಂತಹ ತಂತ್ರಗಳಿಗೆ ಜಪಾನ್ ೨೦ನೆಯ ಶತಮಾನದ ಆರಂಭದಲ್ಲಿ ಕಡಿವಾಣ ಹಾಕಿತು. ಇದರಿಂದಾಗಿ ವಸಾಹತುಗಳಿಗಾಗಿ ಪರಸ್ಪರ ಪೈಪೋಟಿ, ಯುದ್ಧಗಳು ಈ ದೇಶಗಳ ನಡುವೆ ಅನಿವಾರ್ಯವಾಯಿತು. ಈ ಅನಿವಾರ್ಯತೆಗೆ ಒಂದರ್ಥದಲ್ಲಿ ರಷ್ಯಾವೇ ಕಾರಣ. ಜಪಾನ್ ದೇಶ ಪೂರ್ವ ಏಷ್ಯಾದಲ್ಲಿ ಹಮ್ಮಿಕೊಂಡ ವಸಾಹತು ಚಟುವಟಿಕೆಗಳಿಗೆ ಬೆದರಿಕೆಯೊಡ್ಡಿದೆ ಎಂಬ ನೆಪವನ್ನು ಮುಂದಿಟ್ಟು ರಷ್ಯಾ ಉಳಿದ ಎಲ್ಲ ಬಂಡವಾಳಶಾಹಿ ರಾಷ್ಟ್ರಗಳಾದ ಬ್ರಿಟನ್, ಫ್ರಾನ್ಸ್, ಜರ್ಮನಿಯೊಂದಿಗೆ ಒಡಂಬಡಿಕೆಯನ್ನು ರಚಿಸಿ ಜಪಾನ್‌ಗೆ ಪಾಠ ಕಲಿಸಲು ಸಂಚು ಹೂಡಿತು. ಉಳಿದ ರಾಷ್ಟ್ರಗಳೂ ಸಹ ಜಪಾನಿ ನಿಂದ ಬಂದೊದಗುವ ಬೆದರಿಕೆಯನ್ನು ಮನಗಂಡು ತಡೆಯಬೇಕೆಂಬ ನಿರೀಕ್ಷೆಯಲ್ಲಿದ್ದರೂ ಯಾವ ರಾಷ್ಟ್ರವೂ ಒಂಟಿಯಾಗಿ ಜಪಾನನ್ನು ಎದುರಿಸುವ ಧೈರ್ಯವಿರಲಿಲ್ಲ. ಈ ಪ್ರಕ್ರಿಯೆಯಲ್ಲಿ ತನ್ನ ವಸಾಹತುಶಾಹಿ ಕಾರ್ಯವ್ಯಾಪ್ತಿಯನ್ನು ವೃದ್ದಿಸಿ, ಕ್ರೋಡೀಕರಿಸಿ ಕೊಳ್ಳುವ ಗುರಿಯನ್ನಿಟ್ಟುಕೊಂಡಿದ್ದರೂ ಕೂಡಾ ರಷ್ಯಾ ಆ ಸಮಸ್ಯೆಯನ್ನು ನೇರವಾಗಿ ಮಂಡಿಸುವುದಿಲ್ಲ. ಇದು ಎಲ್ಲ ವಸಾಹತುಶಾಹಿ ರಾಷ್ಟ್ರಗಳ ಹಣೆಬರಹವೂ ಹೌದು. ಬದಲಾಗಿ ತಾನು ಮಾತ್ರ ಅಲ್ಲದೆ ಇನ್ನುಳಿದ ರಾಷ್ಟ್ರಗಳಿಗೆ ಜಪಾನ್ ಬೆದರಿಕೆಯೊಡ್ಡಿದ್ದನ್ನು ಅರಿತು ಒಂದು ಹೊಸ ತಂತ್ರವನ್ನು ಹೂಡಿತು ಮತ್ತು ಅದಕ್ಕೆ ಉಳಿದ ರಾಷ್ಟ್ರಗಳ ಬೆಂಬಲವನ್ನು ಆಶಿಸಿತು. ರಷ್ಯಾಕ್ಕೆ ಒಟ್ಟಾರೆಯಾಗಿ ಚೀನಾದ ಪೂರ್ವ ಕರಾವಳಿ ಮತ್ತು ಕೊರಿಯಾದ ಮೇಲೆ ಜಪಾನ್ ನ ಪ್ರಭುತ್ವವನ್ನು ಅಥವಾ ಇರುವಿಕೆಯನ್ನು ಪ್ರಶ್ನಿಸಬೇಕು ಮತ್ತು ಅಲ್ಲಿಂದ ಅದನ್ನು ಹೊರಗಟ್ಟಬೇಕು. ೧೮೯೬ರಲ್ಲಿ ಫ್ರೆಂಚ್ ಮತ್ತು ಜರ್ಮನಿ ಅಧಿಕಾರಿಗಳ ಬೆಂಬಲ ಪಡೆದು ‘ತ್ರಿಕೂಟ ಮಧ್ಯಸ್ಥಿಕೆ’ ಎಂಬ ಒಡಂಬಡಿಕೆಯನ್ನು ಮಾಡಿ ಚೀನಾದ ಪರವಾಗಿ ಒಂದು ಪತ್ರವನ್ನು ರವಾನಿಸಿ, ಲಿಯಾವೋತುಂಗ್ ಪ್ರಸ್ಥಭೂಮಿ ಮತ್ತು ಪೋರ್ಟ್ ಆರ್ಥರ್‌ನಲ್ಲಿ ಜಪಾನಿನ ಅಧಿಕಾರಶಾಹಿ ಪ್ರಭುತ್ವದಿಂದ ಇಡೀ ಪೂರ್ವ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ಅಡ್ಡಿ ಉಂಟು ಮಾಡಿದೆ ಎಂದು ಆಪಾದಿಸಿತು. ಆದ್ದರಿಂದ ಈ ಕೂಡಲೇ ಟೋಕಿಯೋ ಸರಕಾರ ಈ ಎರಡು ಪ್ರದೇಶಗಳನ್ನು ಚೀನಾಕ್ಕೆ ಹಿಂತಿರುಗಿಸಿ ಶಾಂತಿ ಸ್ಥಾಪನೆಗೆ ಸಹಕರಿಸಬೇಕೆಂದು ಕೋರಲಾಯಿತು. ಇದಕ್ಕೆ ತಪ್ಪಿದಲ್ಲಿ ತಾವು ಜೊತೆಯಾಗಿ ಕೈಗೊಳ್ಳುವ(ಚೀನಾದ ಪರವಾಗಿ) ಮಿಲಿಟರಿ ಕಾರ್ಯಾಚರಣೆಯನ್ನು ಎದುರಿಸಬೇಕೆಂಬ ಷರತ್ತನ್ನು ಈ ಮೂರು ರಾಷ್ಟ್ರಗಳು ಹಾಕಿದವು.

ಈ ಷರತ್ತಿನ ಸಾಧ್ಯತೆ ಮತ್ತು ಬಾಧ್ಯತೆಗಳನ್ನು ಕೂಲಂಕಷವಾಗಿ ತಿಳಿದು ಜಪಾನ್, ಚೀನಾ ಸರಕಾರಕ್ಕೆ ಪೋರ್ಟ್ ಆರ್ಥರ್ ಮತ್ತು ಲಿಯಾವೋತುಂಗ್ ಪ್ರಸ್ತಭೂಮಿಯನ್ನು ಬಿಟ್ಟುಕೊಟ್ಟಿತು. ಈ ಘಟನೆಗೆ ಮೂಲಭೂತವಾಗಿ ರಷ್ಯಾವೇ ಕಾರಣವೆಂಬುದು ಜಪಾನ್ ಸರಕಾರಕ್ಕೆ ಗೊತ್ತಿದ್ದು, ಇಲ್ಲಿಂದ ಆ ಎರಡು ವಸಾಹತುಶಾಹಿ ರಾಷ್ಟ್ರಗಳ ನಡುವೆ ವೈಷಮ್ಯ ಬೆಳೆಯಿತು. ಚೀನಾದ ಪರವಾಗಿ ಬಂಡವಾಳಶಾಹಿ ರಾಷ್ಟ್ರಗಳು ಹಾಕಿದ ಷರತ್ತನ್ನು ಪಾಲಿಸಿ ಆ ಎರಡು ಪ್ರಾಂತಗಳನ್ನು ಹಿಂತಿರುಗಿಸಿದ ನಂತರ ಚೀನಾದಲ್ಲಿ ನಿಜವಾದ ಹೊಸ ವಸಾಹತುಶಾಹಿ ಚಟುವಟಿಕೆಗಳು ಆರಂಭಗೊಂಡು, ಚೀನಾವು ಪ್ರಭಾವಿ ವರ್ತುಲ ವಲಯ  ಎಂಬ ಹೊಸ ವಿದೇಶಿಯರ ಧೋರಣೆಗೆ ತಲೆಬಾಗಿ ಅವುಗಳ ಸ್ವತಂತ್ರ ವಸಾಹತುಗಳನ್ನು ಅನಿವಾರ್ಯವಾಗಿ ಗೌರವಿಸಬೇಕಾಯಿತು. ಜಪಾನ್ ಪಡೆದ ಎರಡು ಮುಖ್ಯ ಕರಾವಳಿ ಪ್ರಾಂತಗಳನ್ನು ಚೀನಾ ವಾಪಸ್ಸು ಪಡೆಯುವಲ್ಲಿ ರಷ್ಯಾ, ಫ್ರೆಂಚ್ ಮತ್ತು ಜರ್ಮನಿ ಸಹಕರಿಸಿರುವುದರಿಂದ, ಪರಿಹಾರವಾಗಿ ಈ ಮೂರು ರಾಷ್ಟ್ರಗಳಿಗೆ ವಿಶೇಷ ರಿಯಾಯಿತಿಯನ್ನು ಚೀನಾದ ವಿವಿಧ ಪ್ರಾಂತಗಳಲ್ಲಿ ನೀಡಬೇಕೆಂದು ಕೇಳಿಕೊಂಡವು.

ಈ ಮೂರು ರಾಷ್ಟ್ರಗಳ ಬೇಡಿಕೆಗಳನ್ನು ತ್ಯಜಿಸಿದರೆ ಚೀನಾ ತುಂಬಲಾರದ ನಷ್ಟವನ್ನು ಅನುಭವಿಸುವ (ಜೊತೆಯಾಗಿ ಯುದ್ಧ ಸಾರುವ ಬೆದರಿಕೆಗಳನ್ನು ಹಾಕಿದ್ದವು) ಸಾಧ್ಯತೆ ಇರುವುದರಿಂದ ಅವುಗಳ ಬೇಡಿಕೆಗಳನ್ನು ಚೀನಾ ಸರಕಾರ ಸ್ವೀಕರಿಸಿತು. ಇದರ ಅನ್ವಯ ರಷ್ಯಾದ ವ್ಯಾಪಾರಿ, ಹಣಕಾಸು ಸಂಸ್ಥೆಗಳು ಮತ್ತು ಬಂಡವಾಳಶಾಹಿಗಳು ಪೂರ್ವ ಕರಾವಳಿಯ ಲಿಯಾವೋತುಂಗ್ ಪ್ರಸ್ಥಭೂಮಿ, ಪೋರ್ಟ್ ಆರ್ಥರ್ ಮತ್ತು ಇಡೀ ಮಂಚೂರಿಯಾ ಪ್ರಾಂತಗಳಲ್ಲಿ ವಿವಿಧ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಅನುಮತಿ ಪಡೆದರು. ಪೂರ್ವದ ಎಲ್ಲ ಪ್ರಾಂತಗಳು ರಷ್ಯಾದ ಪ್ರಭಾವಿ ವರ್ತುಲ ವಲಯ ಆಗಿ ಪರಿವರ್ತನೆಗೊಂಡು ಅಲ್ಲಿ ತನ್ನ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಸ್ವತಂತ್ರವಾಗಿ ವೃದ್ದಿಸಿತು. ಜೊತೆಗೆ ಅಭಿವೃದ್ದಿಯ ದೃಷ್ಟಿಯಿಂದ ಟ್ರಾನ್ಸ್ -ಸೈಬೀರಿಯನ್ ರೈಲು ಮಾರ್ಗ ನಿರ್ಮಾಣಕ್ಕೆ ಚೀನಾ ಸರಕಾರ ಅನುಮತಿ ಕೊಟ್ಟಿತು. ಹಲವು ಬೃಹತ್ ಮತ್ತು ಸಣ್ಣ ಕೈಗಾರಿಕೆಗಳನ್ನು ತೆರೆಯಲು ಸಹ ರಷ್ಯಾ ಅಧಿಕಾರವನ್ನು ಪಡೆಯಿತು. ಒಟ್ಟಿನಲ್ಲಿ ರಷ್ಯಾದ ಆಂತರಿಕ ಬಿಕ್ಕಟ್ಟಿನ ಅಂಗವಾಗಿ ಎದುರಿಸುತ್ತಿರುವ ಸಮಸ್ಯೆಗಳಾದ ಮಾರುಕಟ್ಟೆಗಳ ಅಭಾವ (ಸಿದ್ದವಸ್ತುಗಳಿಗೆ), ಆಹಾರ ಮತ್ತು ಕೃಷಿ ವಸ್ತುಗಳ ಕೊರತೆ, ಉದ್ಯೋಗ ಅವಕಾಶಗಳ ಅಲಭ್ಯ, ಹೆಚ್ಚುವರಿ ಬಂಡವಾಳ ಹೂಡಿಕೆಗೆ ವಿಶಾಲ ಭೂಪ್ರದೇಶಗಳ ಕೊರತೆ ಮತ್ತು ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಸ್ವತಂತ್ರ ವಸಾಹತುಗಳ (ತನ್ನ ಗಡಿರೇಖೆಗಳ ಹೊರಗೆ) ಸ್ಥಾಪನೆಯ ನಿರೀಕ್ಷೆಯಲ್ಲಿರುವಾಗಲೇ ಚೀನಾದಲ್ಲಿ ಆರ್ಥಿಕವಾಗಿ ಶ್ರೀಮಂತವಾಗಿರುವ ಪ್ರಾಂತಗಳಲ್ಲಿ ಪ್ರಭುತ್ವವನ್ನು ಹೇರಿತು. ಇದೇ ರೀತಿಯ ರಿಯಾಯಿತಿಗಳನ್ನು ಫ್ರಾನ್ಸ್, ಬ್ರಿಟನ್ ಮತ್ತು ಜರ್ಮನ್ ದೇಶಗಳಿಗೂ ಕೊಡಬೇಕಾಯಿತು. ಅದರಂತೆ ಫ್ರಾನ್ಸ್ ದಕ್ಷಿಣ ಚೀನಾದ ಕ್ವಾಂಗ್ ತುಂಗ್, ಕ್ವಾಂಗ್ ಶೀ ಬಯಲು ಪ್ರದೇಶ ಮತ್ತು ಯಾಂಗ್ ಸೇ ನದಿ ತೀರಗಳಲ್ಲಿ ಪ್ರಭಾವಿ ವರ್ತುಲ ವಲಯನ್ನು ಆರಂಭಿಸಿತು. ಜರ್ಮನಿಯು ಪೂರ್ವ ಕರಾವಳಿಯ ಶಾಂತುಂಗ್, ಶಾಂಗೈಹ್ ಮತ್ತು ಕಿಯಾವೋ-ಚೋ-ಬೇ ಪ್ರದೇಶಗಳಲ್ಲಿ ಸ್ವತಂತ್ರವಾಗಿ ಪ್ರಭಾವಿ ವರ್ತುಲ ವಲಯವನ್ನು ಸ್ಥಾಪಿಸಿತು ಮತ್ತು ಬ್ರಿಟನ್ ಚೀನಾದ ಮಧ್ಯಭಾಗದಲ್ಲಿ ವಸಾಹತುವನ್ನು ಪ್ರಭಾವಿ ವರ್ತುಲ ವಲಯ ರೂಪದಲ್ಲಿ ಸ್ಥಾಪನೆ ಮಾಡಿದವು. ರಷ್ಯನ್ನರು ತಮ್ಮ ವ್ಯಾಪ್ತಿಯಲ್ಲಿ ಪಡೆದ ಹಕ್ಕುಗಳನ್ನು ಚೈನಿ ಸರಕಾರ ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನ್ ದೇಶಗಳ ಪ್ರಭಾವಿ ವರ್ತುಲ ವಲಯಕ್ಕೂ ಅನ್ವಯಿಸುವಂತೆ ಒಪ್ಪಿಗೆ ನೀಡಿತು. ಹೀಗೆ ೨೦ನೆಯ ಶತಮಾನದ ಆರಂಭದ ಹೊತ್ತಿಗೆ ವಿಶಾಲ ಭೂ ಭಾಗವಾಗಿದ್ದ ಚೀನಾ ಕೇಕ್‌ನಂತೆ ತುಂಡು ತುಂಡಾಗಿ ವಿವಿಧ ಬಂಡವಾಳಶಾಹಿ ದೇಶಗಳ ವಸಾಹತುವಾಗಿ ಪರಿವರ್ತನೆಗೊಂಡಿತು. ಹಲವು ಶತಮಾನಗಳಿಂದಲೂ ತನ್ನ ಸ್ವಾತಂತ್ರ್ಯವನ್ನು ರಕ್ಷಿಸಿಕೊಂಡು ಬಂದ ಚೀನಾ ೨೦ನೆಯ ಶತಮಾನದ ಆರಂಭದಲ್ಲಿ ವಿಭಜನೆಗೊಂಡಿತು. ಬಂಡವಾಳಶಾಹಿ ರಾಷ್ಟ್ರಗಳಿಗೆ ಮಾರುಕಟ್ಟೆಯಾಗಿ, ಬಂಡವಾಳ ಹೂಡಿಕೆಗೆ ಸ್ಥಳವಾಗಿ, ವಿದ್ಯಾವಂತ ವಿದೇಶಿಯರಿಗೆ ಉದ್ಯೋಗ ಪಡೆಯಲು ಕೇಂದ್ರವಾಗಿ, ಪಶ್ಚಿಮ ರಾಷ್ಟ್ರಗಳು ಎದುರಿಸುವ ಆಹಾರ ಸಮಸ್ಯೆಗೆ ಪರಿಹಾರವಾಗಿ ಆಹಾರ ಉತ್ಪಾದನಾ ರಂಗವಾಗಿ, ಕಚ್ಚಾವಸ್ತುಗಳನ್ನು ಒಟ್ಟುಗೂಡಿಸಿ ತಮ್ಮ ದೇಶದ ಕೈಗಾರಿಕೆಗಳನ್ನು ಅಭಿವೃದ್ದಿಗೊಳಿಸಲು ಒಂದು ವಸಾಹತುವಾಗಿ -ಹೀಗೆ ವಿಭಿನ್ನ ಪಾತ್ರವನ್ನು ವಸಾಹತುಯುಗ ಎಂಬ ವೇದಿಕೆಯಲ್ಲಿ ಒತ್ತಾಯದಿಂದ ಅಭಿನಯಿಸಿತು. ಇವೆಲ್ಲಾ ಬೆಳವಣಿಗೆಗಳ ಮಧ್ಯದಲ್ಲಿ ಜಪಾನ್ ಸಹ ತನ್ನ ವಸಾಹತು ಚಟುವಟಿಕೆಗಳನ್ನು ಕೊರಿಯಾ ಮತ್ತು ತೈವಾನ್‌ನಲ್ಲಿ ಮುಂದುರಿಸಿತು. ಜಪಾನ್ ೨೦ನೆಯ ಶತಮಾನದ ಆರಂಭದಲ್ಲಿ ಏಷ್ಯನ್ನರಿಗೆ ಏಷ್ಯಾ ಎಂಬ ಕರೆ ನೀಡಿ ಇಡೀ ಏಷ್ಯಾದ ವಿಮುಕ್ತಿಗೆ ಪ್ರಯತ್ನ ನಡೆಸುವ ಪ್ರಕ್ರಿಯೆಯನ್ನು, ಪಶ್ಚಿಮದ ರಾಷ್ಟ್ರಗಳು ಜಪಾನ್‌ನ ಉಗಮವನ್ನು ವಿರೋಧಿಸಿದವು. ಈ ವಿರೋಧದಿಂದ ಬಂಡವಾಳಶಾಹಿ ರಾಷ್ಟ್ರಗಳ ನಡುವೆ ಹಲವು ಒಡಂಬಡಿಕೆಗಳು ಏರ್ಪಟ್ಟು ಒಂದರ ವಿರುದ್ಧ ಇನ್ನೊಂದು ದೇಶ ಸೇಡು ತೀರಿಸಿಕೊಳ್ಳುವ ತಂತ್ರಗಳು ಹುಟ್ಟಿಕೊಂಡವು. ಇವುಗಳಲ್ಲಿ ಜಪಾನ್-ರಷ್ಯಾ ನಡುವಿನ ಸ್ಪರ್ಧೆ, ಪೈಪೋಟಿ ಮತ್ತು ಪರಸ್ಪರ ಹೋರಾಟ; ಬ್ರಿಟನ್-ರಷ್ಯಾದ ನಡುವೆ ಹುಟ್ಟಿಕೊಂಡ ಅನುಮಾನಗಳು ಮತ್ತು ವೈಷಮ್ಯಗಳಿಂದ ಮೂರನೆ ರಾಷ್ಟ್ರವಾದ ಜಪಾನ್ ಈ ಬಿಕ್ಕಟ್ಟಿನ ಲಾಭ ಪಡೆದ ಫಲವಾಗಿ ಬ್ರಿಟನ್-ಜಪಾನ್ ನಡುವೆ ಒಡಂಬಡಿಕೆ ೧೯೦೨ರಲ್ಲಿ ಏರ್ಪಟ್ಟು, ಈ ಎರಡು ದೇಶಗಳು ಜೊತೆಯಾಗಿ ರಷ್ಯಾದ ವಸಾಹತುಶಾಹಿ ಆಸಕ್ತಿಗಳನ್ನು ಧ್ವಂಸ ಮಾಡಲು ಗುಪ್ತ ತಂತ್ರಗಳನ್ನು ಹೂಡಿಕೊಂಡವು. ನಂತರ ಜಪಾನ್ ಈ ಬೆಳವಣಿಗೆಯ ಸಂಪೂರ್ಣ ಲಾಭ ಪಡೆದು ಜರ್ಮನಿಯ ವಸಾಹತುಗಳನ್ನು ಪ್ರಥಮ ಮಹಾಯುದ್ಧದ ಸಮಯದಲ್ಲಿ ಆಕ್ರಮಿಸಿ, ಇಡೀ ಪೂರ್ವ ಏಷ್ಯಾವನ್ನೇ ತನ್ನದಾಗಿಸಿಕೊಳ್ಳುವ ವಿಫಲ ಪ್ರಯತ್ನ ನಡೆಸಿತು.

೧೯೦೨ರ ಆಂಗ್ಲೋ-ಜಪಾನಿ ಒಡಂಬಡಿಕೆಯು ಜಪಾನಿನ ಮತ್ತು ಬ್ರಿಟಿಷರ ವಸಾಹತು ಧೋರಣೆಯ ಅನುಷ್ಠಾನದಲ್ಲಿ ಒಂದು ಹೊಸ ಅಧ್ಯಾಯವನ್ನು ಆರಂಭಿಸಿತು. ಈ ಬೆಳವಣಿಗೆಯು ಮುಖ್ಯವಾಗಿ ಜಪಾನ್ ಬ್ರಿಟನ್‌ನಂತಹ ಬೃಹತ್ ಬಂಡವಾಳಶಾಹಿ ರಾಷ್ಟ್ರದೊಂದಿಗೆ ಸಂಬಂಧ ಬೆಳೆಸಲು ಮುತುವರ್ಜಿ ವಹಿಸಿತ್ತು. ರಷ್ಯಾ ಸೈನೋ-ಜಪಾನೀಸ್ ಯುದ್ಧದ ನಂತರ ಜಪಾನ್ ವಿರುದ್ಧ ಮಾಡಿದ ಪಿತೂರಿಗೆ ತಕ್ಕ ಪಾಠ ಕಲಿಸಿ ಸೇಡು ತೀರಿಸಿ, ತನ್ನ ಸ್ವತಂತ್ರ ಪ್ರಭುತ್ವವನ್ನು ಪೂರ್ವ ಏಷ್ಯಾದಲ್ಲಿ ಸರಿಪಡಿಸಿಕೊಳ್ಳುವುದು ಅದರ ಮೊದಲ ಗುರಿ. ಈ ಹಿನ್ನೆಲೆಯಲ್ಲಿ ಜಪಾನ್ ರಷ್ಯಾವನ್ನು ವಿರೋಧಿಸಲು ತನ್ನದೇ ಆದ ಪ್ರಬಲ ಕಾರಣವಿದೆ.ಜಪಾನ್ ಚೀನಾದಿಂದ ಪಡೆದ ಪೋರ್ಟ್ ಆರ್ಥರ್ ಮತ್ತು ಲಿಯಾವೋತುಂಗ್ ಪ್ರಸ್ಥಭೂಮಿಯ ವಾಪಸಾತಿಗೆ ರಷ್ಯಾದ ಕುತಂತ್ರವೇ ಆಗಿರುವುದರಿಂದ ಅದರ ಆಕಾಂಕ್ಷೆಗಳನ್ನು ಧೂಳಿಪಟ ಮಾಡುವುದು ದೊಡ್ಡ ಪ್ರಶ್ನೆಯಾತು. ನಂತರದ ದಿನಗಳಲ್ಲಿ ರಷ್ಯಾ ಜಪಾನ್ ಹಿಂದಿರುಗಿಸಿದ ಪ್ರಾಂತ್ಯಗಳನ್ನು ಸೇರಿ ಮಂಚೂರಿಯದಲ್ಲಿ ವಿಶೇಷ ರಿಯಾಯಿತಿಗಳನ್ನು, ಚೈನಿ ಸರಕಾರದಿಂದ ಪಡೆದ ತನ್ನ ವಸಾಹತುಶಾಹಿ ಪ್ರಭುತ್ವವನ್ನು ಶ್ರುತಪಡಿಸಿಕೊಂಡಿತು. ಇದು ಚೀನಾ ದೇಶದ ಎಲ್ಲ ಪ್ರಾಂತಗಳಿಗೆ ತಾನೆಯ ವಸಾಹತುಶಾಹಿ ಒಡೆಯನಾಗಬೇಕೆಂಬ ಜಪಾನಿನ ಆಸೆಗೆ ಮಣ್ಣೆರಚಿದಂತಾಯಿತು. ಏಕೆಂದರೆ ಪ್ರಸ್ತುತ ಜಪಾನ್ ದೇಶಕ್ಕೆ ಬೆಳೆಯುತ್ತಿರುವ ಕೈಗಾರಿಕೆಗಳಿಗೆ ಬೇಕಾಗುವ ಮಾರುಕಟ್ಟೆಗಳು, ಕಚ್ಚಾವಸ್ತುಗಳನ್ನು ತನ್ನ ಗಡಿರೇಖೆಯ ಹೊರಗಿನಿಂದ ಒಗ್ಗೂಡಿಸಲು ಜಪಾನ್ ಕೊರಿಯಾದಿಂದ ಮಂಚೂರಿಯಾದ ಪ್ರದೇಶಗಳಿಗೆ ಆರ್ಥಿಕ ಹಿಡಿತವನ್ನೇ ವೃದ್ದಿಸುವ ಅಂದಾಜಿನಲ್ಲಿತ್ತು. ಕೊರಿಯಾ ಈಗಾಗಲೇ ಜಪಾನಿನ ಅಧಿಕಾರ ವ್ಯಾಪ್ತಿಗೆ ಬಂದಿದ್ದು ಖನಿಜ ಸಂಪನ್ಮೂಲ, ವಾಣಿಜ್ಯ ಚಟುವಟಿಕೆ, ಅಭಿವೃದ್ದಿ ಕಾರ್ಯ ಮತ್ತು ಬಂಡವಾಳ ಹೂಡಿಕೆಗೆ ವಿಪುಲ ಅವಕಾಶಗಳನ್ನು ಕಲ್ಪಿಸುವ ಮಂಚೂರಿಯ ಪ್ರಾಂತ್ಯ ಜಪಾನಿನ ಹೊಸ ಬೇಡಿಕೆಗಳೀಗೆ ತೀರ ಅವಶ್ಯಕವಾಗಿದ್ದಿತು. ಆದರೆ ಅಲ್ಲಿ ರಷ್ಯಾ ತನ್ನದೇ ಪ್ರಭುತ್ವನ್ನು ಹೇರುವುದಲ್ಲದೆ ತನ್ನ ವಸಾಹತು ಎಂದು ಘೋಷಿಸಲು ಯಶಸ್ವಿಯಾಯಿತು.

ರಷ್ಯಾ ಕೂಡ ಮಂಚೂರಿಯಾದ ವಿಶೇಷ ರಿಯಾಯಿತಿಗಳನ್ನು ಪಡೆದು ವಸಾಹತು ಚಟುವಟಿಕೆಗಳನ್ನು ಕೊರಿಯಾದ ಕಡೆಗೂ ವೃದ್ದಿಸುವ ಆಕಾಂಕ್ಷೆಯಲ್ಲಿತ್ತು. ಏರುತ್ತಿರುವ ಜನಸಂಖ್ಯೆಗೆ ಮತ್ತು ಕೈಗಾರಿಕೆಗಳ ಅಭಿವೃದ್ದಿಗೆ ಬೇಕಾದ ಆಹಾರ ಮತ್ತು ಕೃಷಿ ಉತ್ಪನ್ನಗಳನ್ನು ಕೊರಿಯಾದಲ್ಲಿ ಹೇರಳವಾಗಿ ಬೆಳೆಯಲಾಗುತ್ತಿದ್ದು ಈ ವಸ್ತುಗಳ ವ್ಯಾಪಾರದಲ್ಲಿಯೂ ಏಕಸ್ವಾಮಿತ್ವವನ್ನು ಹೊಂದುವ ಆಸೆಯಲ್ಲಿತ್ತು. ಆದ್ದರಿಂದ ಆರ್ಥಿಕ ವಾಗಿ ಶ್ರೀಮಂತವಾಗಿರುವ ಮಂಚೂರಿಯಾ ಮತ್ತು ಕೊರಿಯಾ ಪ್ರಾಂತಗಳಲ್ಲಿ ಈ ಎರಡು ವಸಾಹತುಶಾಹಿ ರಾಷ್ಟ್ರಗಳು ಪರಸ್ಪರ ಸ್ಪರ್ಧಿಸಿರುವುದರಿಂದ ಪೈಪೋಟಿ ಸಹಜ.

ಆದರೆ ಜಪಾನ್ ಏಕಪಕ್ಷೀಯವಾಗಿ ರಷ್ಯಾ ವಿರುದ್ಧ ಯುದ್ಧ ಸಾರಲು ಹಿಂಜರಿಯುತ್ತಿತ್ತು. ಬದಲಾಗಿ ಯಾವುದಾದರೂ ಒಂದು ಬಂಡವಾಳಶಾಹಿ ರಾಷ್ಟ್ರದೊಂದಿಗೆ ಸ್ನೇಹ ಬೆಳೆಸಿ ಪರಸ್ಪರ ಗೌರವಿಸಿ, ತಮ್ಮ ತಮ್ಮ ಚಟುವಟಿಕೆಗಳಿಗೆ ಧಕ್ಕೆ ಬಾರದಂತೆ ರಕ್ಷಣೆಯನ್ನು ಕಾಯ್ದುಕೊಂಡು ಆಮೇಲೆ ರಷ್ಯಾದ ಮೇಲೆ ಎರಗುವ ನಿರ್ಧಾರ ತೆಗೆದುಕೊಂಡಿತು ಮತ್ತು ಸಮಬಲದ ಸ್ನೇಹಿತರ ಅನ್ವೇಷಣೆಯಲ್ಲಿ ತೊಡಗಿ ಬ್ರಿಟನ್‌ನ ಒಪ್ಪಿಗೆ ಪಡೆಯಿತು.

ರಷ್ಯಾದ ವಸಾಹತುಶಾಹಿ ಅಧಿಕಾರವು ಮಧ್ಯ ಚೀನಾದಲ್ಲಿರುವ ಬ್ರಿಟಿಷರಿಗೂ ಬೆದರಿಕೆ ಒಡ್ಡಿರುವುದರಿಂದ ೧೯೦೨ರಲ್ಲಿ ಆಂಗ್ಲೋ-ಜಪಾನ್ ಒಪ್ಪಂದಕ್ಕೆ ಸಹಿ ಹಾಕಿಕೊಂಡವು. ಒಡಂಬಡಿಕೆಯಂತೆ

೧. ಎರಡೂ ದೇಶಗಳು ಚೀನಾದಲ್ಲಿ ಸ್ಥಾಪಿಸಿರುವ ಪ್ರಭಾವಿ ವರ್ತುಲ ವಲಯನ್ನು ಗೌರವಿಸಿಕೊಂಡವು.

೨. ಯಾವುದೇ ಕಾರಣಕ್ಕೂ ಒಂದು ದೇಶದ ವಸಾಹತುವಿನಲ್ಲಿ ಇನ್ನೊಂದು ದೇಶದ ಹಸ್ತಕ್ಷೇಪವನ್ನು ನಿರ್ಬಂಧಿಸಲಾಯಿತು.

೩. ಒಂದು ದೇಶ ಮೂರನೆಯ ದೇಶದೊಂದಿಗೆ ಯುದ್ಧ ಸಾರಿದರೆ ಮತ್ತೊಂದು ದೇಶ ನಿರ್ಲಿಪ್ತವಾಗಿರಲು ನಿರ್ಧರಿಸಲಾಯಿತು. ಮತ್ತು

೪. ಒಂದು ವೇಳೆ ಮೂರನೆಯ ರಾಷ್ಟ್ರ ಈ ಎರಡೂ ದೇಶಗಳ ವಸಾಹತುಗಳ ಚುಟವಟಿಕೆಗಳಿಗೆ ಅಡ್ಡಿ ಉಂಟುಮಾಡಿದರೆ ಜೊತೆಯಾಗಿ ಮಿಲಿಟರಿ ಕಾರ್ಯಾಚರಣೆ ಮಾಡಲು ನಿರ್ಧಾರ ತೆಗೆದುಕೊಂಡವು.

ಒಡಂಬಡಿಕೆಯ ನಿರ್ಣಯದಿಂದ ಬ್ರಿಟಿಷ್ ಮತ್ತು ಜಪಾನ್‌ನ ಸಂಬಂಧದಲ್ಲಿ ಮಾತ್ರವಲ್ಲ ಎರಡು ದೇಶಗಳ ವಸಾಹತುಗಳ ಭವಿಷ್ಯವನ್ನೇ ಬದಲಾಯಿಸಿತು. ಜಪಾನ್ ಈಗ ಧೈರ್ಯದಿಂದ ಬೃಹತ್ ರಾಷ್ಟ್ರವಾದ ರಷ್ಯಾದ ಬಲವನ್ನು ಪರೀಕ್ಷಿಸಲು ಮುನ್ನುಗಿತು. ಏಕೆಂದರೆ ಜಗತ್ತಿನಲ್ಲಿಯೇ ಶಕ್ತಿಶಾಲಿಯಾದ ಬ್ರಿಟನ್ ಜಪಾನ್‌ನ ಚಟುವಟಿಕೆ ಗಳಿಗೆ ಅಡ್ಡಿ ಉಂಟುಮಾಡುವುದಿಲ್ಲವೆಂದು ೧೯೦೨ರ ಒಡಂಬಡಿಕೆಯಲ್ಲಿ ಭರವಸೆ ನೀಡಿತು. ಇದರಿಂದ ಪ್ರೇರಿತವಾದ ಜಪಾನ್ ೧೯೦೪-೫ರಲ್ಲಿ ಪೂರ್ಣ ಪ್ರಮಾಣದ ಯುದ್ಧವನ್ನು ರಷ್ಯಾದ ಮೇಲೆ ಘೋಷಿಸಿತು. ಫಲಿತಾಂಶವಾಗಿ ೧೯೦೫ರ ಪೋರ್ಟ್ಸ್‌ಮತ್ ಒಪ್ಪಂದಕ್ಕೆ ಸಹಿ ಹಾಕಿ ರಷ್ಯಾ ತನ್ನ ಸೋಲನ್ನು ಒಪ್ಪಿಕೊಂಡಿತು. ಜೊತೆಗೆ ಚೀನಾದ ಪೂರ್ವ ಕರಾವಳಿ ಮತ್ತು ಮಂಚೂರಿಯಾ ಪ್ರಾಂತಗಳನ್ನೇ ಜಪಾನಿಗೆ ಬಿಟ್ಟುಕೊಟ್ಟಿತು. ಕೊರಿಯಾ ಪ್ರಾಂತದಲ್ಲಿ ಜಪಾನಿನ ಆರ್ಥಿಕ, ಕೈಗಾರಿಕಾ ಚಟುವಟಿಕೆಗಳಿಗೆ ಇರುವ ಅಧಿಕಾರವನ್ನು ಗೌರವಿಸಿ ಆ ಎಲ್ಲ ಪ್ರಾಂತಗಳಲ್ಲಿ ಜಪಾನ್ ದೇಶ ಪ್ರಭಾವಿ ವರ್ತುಲ ವಲಯ ಸ್ಥಾಪಿಸಲು ರಷ್ಯಾದ ಅನುಮತಿಯನ್ನು ಒತ್ತಡದಿಂದ ಒಪ್ಪಿಕೊಂಡಿತು. ರಷ್ಯಾದ ಸೋಲು ಮತ್ತು ಹಿಂಜರಿಕೆಯಿಂದ ಜಪಾನ್ ಇಡೀ ಪೂರ್ವ ಏಷ್ಯಾದಲ್ಲಿಯೇ ಬೃಹತ್ ಬಂಡವಾಳಶಾಹಿ ಮತ್ತು ವಸಾಹತುಶಾಹಿ ರಾಷ್ಟ್ರವಾಗಿ ಉಗಮಗೊಂಡಿತು. ಇಡೀ ಚೀನಾವನ್ನು ತನ್ನ ಸಾಮ್ರಾಜ್ಯಶಾಹಿ ಚಟುವಟಿಕೆಗಳಿಗೆ ಸೀಮಿತಗೊಳಿಸಬೇಕೆಂಬ ಆಸೆ ಭಾಗಶಃ ಯಶಸ್ವಿ ಯಾಯಿತು ಮತ್ತು ರಷ್ಯಾಕ್ಕೆ ಚೆನ್ನಾಗಿ ಪಾಠ ಕಲಿಸಿ ಸೇಡು ತೀರಿಸಿಕೊಂಡಿತು.

ಜಪಾನಿಗೆ ಅನ್ಯಾಯವೆಸಗಿದ ಇನ್ನೊಂದು ಬಂಡವಾಳಶಾಹಿ ರಾಷ್ಟ್ರ ಜರ್ಮನಿ. ೧೯೦೫ರ ನಂತರ ಜಪಾನ್ ಪೂರ್ವ ಏಷ್ಯಾದ ಆಯಕಟ್ಟಿನ ಪ್ರಾಂತಗಳಲ್ಲಿ ವಸಾಹತುಶಾಹಿ ಅಧಿಕಾರವನ್ನು ಭದ್ರಪಡಿಸುವ ಪ್ರಕ್ರಿಯೆ ೧೯೧೪ರವರೆಗೂ ಮುಂದುವರೆಯಿತು. ೧೯೧೪ ರಲ್ಲಿ ಮೊದಲ ಮಹಾಯುದ್ಧ ಘೋಷಣೆಯಾಗಿ ಬ್ರಿಟನ್, ರಷ್ಯಾ ಮತ್ತು ಫ್ರಾನ್ಸ್ ಜರ್ಮನಿಯ ವಿರುದ್ಧ ಯುದ್ಧ ಸಾರಿದವು. ಬ್ರಿಟನ್ ಈಗಾಗಲೇ ಜಪಾನಿನೊಂದಿಗೆ ಸ್ನೇಹ ಸೌಹಾರ್ದತೆ ಯಿಂದಿರುವುದರಿಂದ ಸಿಕ್ಕಿದ ಅವಕಾಶದ ಸಂಪೂರ್ಣ ಲಾಭ ಪಡೆದ ಚೀನಾದ ಪೂರ್ವ ಕರಾವಳಿಯಲ್ಲಿನ ಜರ್ಮನಿ ವಸಾಹತುಗಳಾದ ಶಾಂತುಂಗ್, ಶಾಂಗೈಯ್ ಮತ್ತು ಕಿಯಾವೋ ಚೋ ಬೇಗಳನ್ನು ೧೯೧೫ರಲ್ಲಿ ಆಕ್ರಮಿಸಿತು. ಪರೋಕ್ಷವಾಗಿ ಬ್ರಿಟನ್ ಸಹ ಜಪಾನ್‌ನ ಕಾರ್ಯಾಚರಣೆಗೆ ಒಪ್ಪಿಗೆ ಸೂಚಿಸಿತು. ಪರೋಕ್ಷವಾಗಿ ಬ್ರಿಟನ್ ಸಹ ಜಪಾನ್‌ನ ಕಾರ್ಯಾಚರಣೆಗೆ ಒಪ್ಪಿಗೆ ಸೂಚಿಸಿತು. ಹಾಗಾಗಿ ಜರ್ಮನಿಯ ವಿರುದ್ಧವೂ ಸುಲಭವಾಗಿ ಸೇಡು ತೀರಿಸಿಕೊಂಡಿತು. ಇವೆಲ್ಲವು ಸಾಮ್ರಾಜ್ಯಶಾಹಿಯ ವಿವಿಧ ಮುಖಗಳಾಗಿವೆ.

ಇಷ್ಟೆಲ್ಲಾ ಕಾರ್ಯಾಚರಣೆಯಲ್ಲಿ ಜಪಾನ್ ಮೇಲುಗೈ ಸಾಧಿಸಿ ಚೀನಾದ ಬಹುಪಾಲು ಪ್ರಾಂತಗಳ ಒಡೆಯನಾಗಿ ರಾಜಕೀಯ ಮತ್ತು ಆರ್ಥಿಕ ಪ್ರಭುತ್ವವನ್ನು ಅನುಷ್ಠಾನ ಗೊಳಿಸಿದರೂ ಕೂಡ, ಚೀನಾ ಸರಕಾರದಿಂದ ಅದರ ಇರುವಿಕೆಗೆ ಮಾನ್ಯತೆ ದೊರೆಯಬೇಕೆಂಬ ಆಸಕ್ತಿಯಿಂದ ಚೀನಾದ ಏಕಾಧಿಪತಿಯಾದ ಯುವಾನ್-ಶೀಕಾಂiiಗೆ ೧೯೧೫ರಲ್ಲಿ ಜಪಾನ್ ಸರಕಾರ ೨೧ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿತು. ಈ ಪಟ್ಟಿಯನ್ನು ಜಪಾನ್ ಸ್ವಾಧೀನಪಡಿಸಿಕೊಂಡಿರುವ ಪ್ರಾಂತಗಳಲ್ಲಿ

೧. ಕೈಗಾರಿಕೆ, ವಾಣಿಜ್ಯ, ವ್ಯಾಪಾರ ಮತ್ತು ಬಂಡವಾಳ ಹೂಡುವ ಅಧಿಕಾರವನ್ನು,

೨. ಈ ಎಲ್ಲ ಪ್ರಾಂತಗಳಲ್ಲಿ ಜಪಾನ್ ಸರಕಾರ ಅಭಿವೃದ್ದಿ ಹೆಸರಿನಲ್ಲಿ ಸಾರಿಗೆ ಸಂಪರ್ಕದ ಆಧುನೀಕರಣ ಮಾಡಲು,

೩. ಇಲ್ಲಿರುವ ಖನಿಜ ಸಂಪನ್ಮೂಲಗಳನ್ನು ಜಪಾನ್ ದೇಶದ ಕೈಗಾರಿಕೆಗಳಿಗೆ ಉಪಯೋಗಿಸಿ ಕೊಳ್ಳುವ ವಿಶೇಷ ಹಕ್ಕುಗಳನ್ನು ಮತ್ತು,

೪. ಈ ಎಲ್ಲ ಪ್ರಾಂತಗಳಲ್ಲಿ ಜಪಾನ್ ದೇಶ ಬಿಟ್ಟು ಬೇರೆ ಯಾವ ರಾಷ್ಟ್ರಕ್ಕೂ ಯಾವ ಹಕ್ಕು ಇಲ್ಲ ಎಂದು ಘೋಷಿಸಲು ಚೀನಾ ಸರಕಾರವನ್ನು ಕೋರಲಾಯಿತು. ಯುವಾನ್ ಶೀಕಾಂiiಯ ಸರಕಾರ ಈಗಾಗಲೇ ಹಲವು ಬಿಕ್ಕಟ್ಟುಗಳನ್ನು ಎದುರಿಸಿ ಒತ್ತಡದಿಂದಿರು ವುದರಿಂದ ಮತ್ತು ಜಪಾನ್‌ನಂತಹ ರಾಷ್ಟ್ರದಿಂದ ಯಾವುದೇ ಸೈನಿಕ ಬೆದರಿಕೆಯನ್ನು ಎದುರಿಸುವ ಪರಿಸ್ಥಿತಿಯಲ್ಲಿರದೆ ಇರುವುದರಿಂದ ಜಪಾನ್ ಸಲ್ಲಿಸಿದ ೨೧ ಬೇಡಿಕೆಗಳಿಗೂ ಒಪ್ಪಿಗೆ ಸೂಚಿಸಿತು.

೧೯೧೫-೧೬ರ ಹೊತ್ತಿಗೆ ಜಪಾನ್ ಸಂಪೂರ್ಣವಾಗಿ ಚೀನಾದ ಮೇಲೆ ಹಿಡಿತ ಸಾಧಿಸಿದರೂ ಕೂಡ, ಅದರ ಅಧಿಕಾರವನ್ನು ಐರೋಪ್ಯ ರಾಷ್ಟ್ರಗಳು ಗೌರವಿಸಬೇಕೆಂಬ ಹಟದಲ್ಲಿ ೧೯೧೮ರಲ್ಲಿ ಪ್ಯಾರಿಸ್ ಶಾಂತಿಸಭೆಗೂ ಹಾಜರಾಯಿತು. ಅಲ್ಲಿಯೂ ಮೇಲೆ ಹೇಳಿದ ೨೧ ಬೇಡಿಕೆಗಳನ್ನು ಸಲ್ಲಿಸಿ ಸದಸ್ಯರಿಂದ ಅನುಮತಿ  ಕೋರಿತು. ೧೯೧೯ರಲ್ಲಿ ಲೀಗ್ ಆಫ್ ನೆಯಷನ್ಸ್‌ನ ಎಲ್ಲ ಸದಸ್ಯರು ಜಪಾನಿನ ಈ ಎಲ್ಲ ಬೇಡಿಕೆಗಳನ್ನು ಅನುಮೋದಿಸಿದರು. ಈ ಅನುಮೋದನೆಯಿಂದ ಜಪಾನ್ ಪೂರ್ವ ಏಷ್ಯಾಕ್ಕೆ ಏಕಾಧಿಪತಿಯಾಗಿ ತನ್ನ ನಿರಂಕುಶ ಪ್ರಭುತ್ವ ಆಡಳಿತವನ್ನು ಯಶಸ್ವಿಯಾಗಿ ಹೇರಿತು. ಅಲ್ಲದೆ ಇಡೀ ಪೆಸಿಪಿಕ್ ನ ಜಲಮಾರ್ಗದ ರಕ್ಷಣೆಯ ಹೊಣೆಯನ್ನು ಹೊತ್ತಿತು. ಜಪಾನ್‌ಗೆ ಈ ರೀತಿಯಾಗಿ ದಕ್ಕಿದ ಸ್ವಾತಂತ್ರ್ಯದಿಂದ ದಕ್ಷಿಣ ಪೂರ್ವ ಏಷ್ಯಾದ ಮಾರುಕಟ್ಟೆಗಳಲ್ಲಿಯೂ ಅಧಿಕಾರವನ್ನು ವೃದ್ದಿಸಿಕೊಳ್ಳುವ ಅವಕಾಶವನ್ನು ಕಂಡುಕೊಂಡಿತು.

ಆದರೆ ಬೆಳೆಯುತ್ತಿರುವ ಹೊಸ ವಸಾಹತುಶಾಹಿ ರಾಷ್ಟ್ರವಾದ ಜಪಾನಿನ ಇರುವಿಕೆಯನ್ನು ೧೯೨೦ರ ನಂತರ ಪಶ್ಚಿಮದ ಎಲ್ಲ ರಾಷ್ಟ್ರಗಳು ಪ್ರಶ್ನಿಸಿ ಅದರ ಶಕ್ತಿಯನ್ನು ಹಿಮ್ಮೆಟ್ಟಿಸಲು ಕಾರ್ಯತಂತ್ರಗಳ ಪ್ರಕ್ರಿಯೆಯನ್ನು ಆರಂಭಿಸಿದವು. ಮುಖ್ಯವಾಗಿ ಬ್ರಿಟನ್, ಅಮೆರಿಕ, ಫ್ರಾನ್ಸ್, ಹಾಲೆಂಡ್ ದೇಶಗಳು ಈ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಿದವು. ಈ ಕಾರ್ಯಾಚರಣೆಗೆ ಅವರದ್ದೆ ಆದ ಕಾರಣಗಳಿವೆ.

ಜಪಾನ್ ದೇಶ ಲೀಗ್ ಆಫ್ ನೆಯಷನ್ಸ್‌ನಿಂದ ಅನುಮೋದನೆ ಪಡೆದ ನಂತರ ಇಡೀ ಪೂರ್ವ ಏಷ್ಯಾದ ವಾಣಿಜ್ಯ, ವ್ಯಾಪಾರ, ಕೈಗಾರಿಕಾ ರಂಗಗಳಲ್ಲಿ ಏಕಾಧಿಪತ್ಯವನ್ನು ಹೊಂದಿತು. ಪೆಸಿಪಿಕ್‌ನಲ್ಲಿಯೂ ಅಧಿಕಾರ ಹೊಂದಿರುವುದರಿಂದ ತನ್ನ ವಸಾಹತು ಚಟುವಟಿಕೆಗಳಿಗೆ ಬರಬಹುದಾದ ಬೆದರಿಕೆಗಳನ್ನು ಎದುರಿಸಲು, ಈ ಎಲ್ಲ ಪ್ರಾಂತಗಳ ಆಯಕಟ್ಟಿನ ಜಗ ಮತ್ತು ಕರಾವಳಿ ತೀರದಲ್ಲಿ ತನ್ನದೆ ಭದ್ರತಾ ವ್ಯವಸ್ಥೆಯನ್ನು ನಿರ್ಮಿಸಿಕೊಳ್ಳಬಹುದು. ಪೆಸಿಪಿಕ್‌ನಲ್ಲಿಯೂ ವಿಶೇಷ ಅಧಿಕಾರ ಇರುವುದರಿಂದ ಪೂರ್ವ ಏಷ್ಯಾದ ಎಲ್ಲ ಜಲಮಾರ್ಗಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ತನ್ನದೇ ನೌಕಾದಳವನ್ನು ಇಟ್ಟುಕೊಳ್ಳಬಹುದು ಮತ್ತು ಅವುಗಳ ಸಹಾಯದಿಂದ ಈ ಎಲ್ಲ ಜಲಮಾರ್ಗಗಳಿಗೆ ಇತರ ರಾಷ್ಟ್ರಗಳ ಪ್ರವೇಶವನ್ನು ತಡೆಗಟ್ಟಬಹುದು. ಇದರಿಂದ ಪಶ್ಚಿಮದ ರಾಷ್ಟ್ರಗಳಾದ ಬ್ರಿಟನ್, ಫ್ರಾನ್ಸ್, ಹಾಲೆಂಡ್ ಮತ್ತು ಅಮೆರಿಕ ದೇಶಗಳು ದಕ್ಷಿಣ ಪೂರ್ವ ಏಷ್ಯಾದಲ್ಲಿ ಸ್ಥಾಪಿಸಿಕೊಂಡಿರುವ ವಸಾಹತುಗಳ ಭದ್ರತೆಗೆ ಬೆದರಿಕೆ ತಂದೊಡ್ಡಿತು.

ಮೊದಲನೆಯದಾಗಿ, ಫ್ರಾನ್ಸ್ ದಕ್ಷಿಣ ಚೀನಾ ಮತ್ತು ಪೂರ್ವ ಏಷ್ಯಾದಲ್ಲಿ ಇಂಡೋ-ಚೀನಾದಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ದಕ್ಷಿಣ ಚೀನಾ ಜಲಮಾರ್ಗದ ಮೂಲಕ ಬೆಳೆಸಿಕೊಂಡಿತ್ತು. ಎರಡನೆಯದಾಗಿ, ಬ್ರಿಟನ್ ದಕ್ಷಿಣ ಪೂರ್ವ ಏಷ್ಯಾದಲ್ಲಿ ಸಿಂಗಾಪುರವನ್ನು ಒಂದು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನಾಗಿ ನಿರ್ಮಿಸಿ ತನ್ನದೆ ನೌಕಾ, ವಾಯು ಮತ್ತು ಭೂದಳವನ್ನು ರಚಿಸಿಕೊಂಡು ಉಳಿದ ಪ್ರಾಂತಗಳಾದ ಮಲೇಶಿಯಾದಲ್ಲಿ ಆರ್ಥಿಕ ಪ್ರಭುತ್ವವನ್ನು ಹೇರಿತ್ತು. ಇದಲ್ಲದೆ ಚೀನಾದಲ್ಲಿಯೂ ಪ್ರಭಾವಿ ವರ್ತುಲ ವಲಯವನ್ನು ಬ್ರಿಟಿಷರು ಹೊಂದಿದ್ದರು. ಆದರೆ ಜಪಾನ್‌ನ ಉಗಮದಿಂದಾಗಿ ಬ್ರಿಟಿಷರು ಅನುಭವಿಸುತ್ತಿದ್ದ ಚೀನಾ-ಭಾರತ, ಭಾರತ-ದಕ್ಷಿಣ ಪೂರ್ವ ಏಷ್ಯಾ, ದಕ್ಷಿಣ ಪೂರ್ವ ಏಷ್ಯಾ-ಚೀನಾದ ನಡುವಿನ ವ್ಯಾಪಾರ ಮತ್ತು ವಾಣಿಜ್ಯ ಸಂಬಂಧಕ್ಕೆ ಅಡ್ಡಿ ಉಂಟುಮಾಡುವ ಸಾಧ್ಯತೆ ದ್ವಿಗುಣಗೊಂಡವು. ಏಕೆಂಧರೆ ಈ ಸಂಬಂಧಕ್ಕೆ ಪೆಸಿಫಿಕ್ ಜಲಮಾರ್ಗವೇ ಸೂತ್ರವಾಗಿತ್ತು. ಆದರೆ ಇಲ್ಲಿ ಜಪಾನ್ ವಿಶೇಷ ಅಧಿಕಾರವನ್ನು ಪಡೆಯಿತು. ಮೂರನೆಯದಾಗಿ, ಹಾಂಕಾಂಗ್, ಹವಾಯ್ ಮತ್ತು ಫಿಲಿಪೈನ್ಸ್‌ಗಳಲ್ಲಿ ಅಮೆರಿಕನ್ ವ್ಯಾಪಾರಿ ಸಂಸ್ಥೆಗಳು, ಬಂಡವಾಳಶಾಹಿಗಳು ವಿಶೇಷ ರಿಯಾಯಿತಿಗಳನ್ನು ಹೊಂದಿದ್ದು ಪೆಸಿಪಿಕ್‌ನ ಮಾರ್ಗದ ಉಪಯೋಗ ಅಮೆರಿಕಕ್ಕೆ ಬಹಳವಿತ್ತು. ಕೊನೆಯದಾಗಿ ಡಚ್ಚರು ೧೮೩೦ರಿಂದಲೇ ಸಮರ್ಪಕವಾಗಿ ಇಂಡೋನೇಶಿಯಾದಲ್ಲಿ ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಮಗ್ನರಾಗಿರುವಾಗಲೂ ಪೆಸಿಪಿಕ್‌ನ ಉಪಯುಕ್ತತೆ ಇತ್ತು. ಹಾಗಾಗಿ ಪೂರ್ವ ಏಷ್ಯಾದಲ್ಲಿ ಈ ಎಲ್ಲ ಬೃಹತ್ ರಾಷ್ಟ್ರಗಳು ತಮ್ಮ ಸಾಮ್ರಾಜ್ಯಶಾಹಿ ಚಟುವಟಿಕೆಗಳಿಗೆ ಜಪಾನ್‌ನಿಂದ ಬಂದೊದಗಿದ ಬೆದರಿಕೆಯನ್ನು ತಡೆಯಲು, ೧೯೨೧ರಲ್ಲಿ ಅಮೆರಿಕಾದ ನೇತೃತ್ವದಲ್ಲಿ ವಾಷಿಂಗ್ಟನ್ ಸಮ್ಮೇಳನವನ್ನು ಒಂಬತ್ತು ರಾಷ್ಟ್ರಗಳ ಒಗ್ಗೂಡುವಿಕೆಯೊಂದಿಗೆ ಏರ್ಪಡಿಸಲಾಯಿತು.

ಈ ಸಮ್ಮೇಳನದಲ್ಲಿ ಮುಖ್ಯವಾಗಿ ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆ ಮತ್ತು ಪೆಸಿಪಿಕ್ ಜಲಮಾರ್ಗದಲ್ಲಿ ಕಾಯ್ದಿರಿಸುವ ನೌಕಾ ದಳದ ಸಂಖ್ಯೆಯನ್ನು ನಿರ್ಧರಿಸಲು ವಿಶೇಷ ಮುತುವರ್ಜಿ ವಹಿಸಲಾಯಿತು. ಒಟ್ಟಾರೆ ಈ ಸಭೆಯಲ್ಲಿ ಮೂರು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ನಾಲ್ಕು, ಐದು ಮತ್ತು ಒಂಬತ್ತು ರಾಷ್ಟ್ರಗಳ ಒಪ್ಪಂದ. ಇವುಗಳಲ್ಲಿ ಮುಖ್ಯವಾದುದು ವಾಷಿಂಗ್ಟನ್ ನೇವಲ್ ಒಪ್ಪಂದವಾಗಿದ್ದು ಅದು ಕ್ರಮವಾಗಿ ೧೦:೧೦:೬ ಅಥವಾ ೫:೫:೩ ರಂತೆ ಅಮೆರಿಕ, ಬ್ರಿಟನ್ ಮತ್ತು ಜಪಾನ್ ದೇಶಗಳಿಗೆ ವ್ಯಾಪಾರಿ ಹಡಗು ಮತ್ತು ಸೈನಿಕ ಹಡಗುಗಳ ಪ್ರವೇಶಕ್ಕೆ ಅನುಮತಿ ನೀಡಲಾಯಿತು. ಈ ನಿರ್ಧಾರದಿಂದ ಪಶ್ಚಿಮ ರಾಷ್ಟ್ರಗಳು ಪೆಸಿಪಿಕ್ ಸಮುದ್ರದಲ್ಲಿ ಜಪಾನಿನ ನೌಕಾ ಮತ್ತು ವಾಯುದಳದ ವೃದ್ದಿಯನ್ನು ಸಡಿಲಿಸಿತು. ಈ ಒಪ್ಪಂದದಲ್ಲಿ ಜಪಾನಿಗೆ ಕಡಿಮೆ ಮಹತ್ವವನ್ನು ನೀಡಲಾಯಿತು. ಅಂದರೆ ಬ್ರಿಟನ್ ಮತ್ತು ಅಮೆರಿಕ ಜೊತೆಯಾಗಿ ಜಪಾನ್ ವಿರುದ್ಧ ಹೋರಾಟ ನಡೆಸುತ್ತಿರುವುದರಿಂದ ಪೆಸಿಪಿಕ್ ಸಮುದ್ರಕ್ಕೆ ಈ ಎರಡು ರಾಷ್ಟ್ರಗಳ ತಲಾ ೨೦ ವ್ಯಾಪಾರಿ ಹಡಗು ಮತ್ತು ೨೦ ನೌಕಾ ಹಡಗುಗಳನ್ನು ಕಾಯ್ದಿರಿಸ ಬಹುದಾಗಿತ್ತು. ಆದರೆ ಜಪಾನ್‌ಗೆ ಕೇವಲ ೧೦ ಹಡಗುಗಳನ್ನು ಮಾತ್ರ. ಈ ನಿರ್ಣಯ ನೇರವಾಗಿ ಜಪಾನಿನ ಭವಿಷ್ಯವನ್ನು ಹಿಮ್ಮೆಟ್ಟಿಸಿತು. ಏಕೆಂದರೆ ಬ್ರಿಟನ್ ಮತ್ತು ಅಮೆರಿಕ ಜೊತೆಯಾಗಿ ೨೦ ಯುದ್ಧ ನೌಕೆಗಳನ್ನು ಪೆಸಿಪಿಕ್‌ನಲ್ಲಿ ಇರಿಸಲು ಅವಕಾಶ ಪಡೆದರೆ, ಜಪಾನ್ ಕೇವಲ ೫ ಯುದ್ಧ ನೌಕೆಗಳನ್ನು ಕಳುಹಿಸಲು ಅವಕಾಶವಿತ್ತು. ಈ ನಿರ್ಧಾರದಿಂದ ಜಪಾನಿನ ಸೈನಿಕ ಸಾಮರ್ಥ್ಯವನ್ನೇ ಸದೆಬಡಿದಂತಾಯಿತು.

ಈಗಾಗಲೇ ಚರ್ಚಿಸಿದಂತೆ ಚೀನಾದ ಪೂರ್ವ ಕರಾವಳಿ ಸಂಪೂರ್ಣವಾಗಿ ಜಪಾನಿನ ಆರ್ಥಿಕ ಅಧಿಕಾರದ ವ್ಯಾಪ್ತಿಗೆ ಒಳಪಟ್ಟಿತ್ತು. ಶ್ರೀಮಂತವಾಗಿರುವ ಈ ಪ್ರಾಂತಗಳು ಮತ್ತು ತೈವಾನ್, ಕೊರಿಯಾದಲ್ಲಿ ಜಪಾನ್ ಯಶಸ್ವಿಯಾಗಿ ಸಾಮ್ರಾಜ್ಯಶಾಹಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿತ್ತು. ಅದರ ನಿರಂಕುಶ ಪ್ರಭುತ್ವಕ್ಕೆ ಯಾವ ರಾಷ್ಟ್ರಗಳಿಂದಲೂ ೧೯೨೧ರವರೆಗೆ ಅಡ್ಡಿ ಆತಂಕ ಬಂದಿರಲಿಲ್ಲ. ಆದರೆ ವಾಷಿಂಗ್ಟನ್ ಸಮ್ಮೇಳನದಲ್ಲಿ ಮಾಡಿಕೊಂಡ ಒಪ್ಪಂದದಿಂದ ಪಶ್ಚಿಮ ರಾಷ್ಟ್ರಗಳು ಯಶಸ್ವಿಯಾಗಿ ಜಪಾನಿನ ನಿರಂಕುಶ ಆಧಿಪತ್ಯವನ್ನು ಪ್ರಶ್ನಿಸಿದ್ದೂ ಅಲ್ಲದೆ ಅದರ ಮುಂದುವರಿಕೆಗೆ ಅಡ್ಡಗಾಲು ಹಾಕಿದವು. ಇದರಿಂದ ಜಪಾನ್‌ನ ಬಂಡವಾಳಶಾಹಿಗಳು, ಉದ್ಯಮಿಗಳು, ರಾಜಕೀಯ ಧುರೀಣರು ಮತ್ತು ಸೈನ್ಯಾಧಿಕಾರಿಗಳು ಇಡೀ ಪೂರ್ವ ಏಷ್ಯಾವನ್ನು ಜಪಾನ್‌ನ ಸ್ವತಂತ್ರ ವಸಾಹತು ಆಸ್ತಿಯೆಂದು ರೂಪಿಸಬೇಕೆಂಬ ಕನಸು ನುಚ್ಚುನೂರಾಯಿತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಪಾನ್ ದೇಶಕ್ಕೆ ಆಗಿರುವ ಮುಖಭಂಗವೆಂದು ಅಧಿಕಾರಿವರ್ಗ, ದೇಶಪ್ರೇಮಿ ಗಳು ಮತ್ತು ಸೈನ್ಯಾಧಿಕಾರಿಗಳು ಪರಿಗಣಿಸಿದರು. ಮಾತ್ರವಲ್ಲ ಆ ದೇಶಕ್ಕೆ ಅವಮಾನ ಮಾಡಿದ ಪಶ್ಚಿಮ ರಾಷ್ಟ್ರಗಳ ವಿರುದ್ಧ ಸಂಘಟಿತವಾಗಿ ಹೋರಾಡಲು ಅಲ್ಲಿನ ಸರಕಾರ ತೀರ್ಮಾನಿಸಿತು.

ಜಪಾನ್ ಸರಕಾರ ೧೯೨೦ರ ದಶಕದಲ್ಲಿ ಪಶ್ಚಿಮ ರಾಷ್ಟ್ರಗಳು ಬಲವಂತವಾಗಿ ಹೇರಿದ ದಿಗ್ಭಂಧನವನ್ನು ಎದುರಿಸುವ ಸ್ಥಿತಿಯಲ್ಲಿರಲಿಲ್ಲ. ಪ್ರಾದೇಶಿಕವಾಗಿ ಕೈಗಾರಿಕೆಗಳ ವೃದ್ದಿ ಮುಂದುವರಿಯುತ್ತಿದ್ದು ಸಿದ್ಧವಸ್ತುಗಳಿಗೆ ಮಾರುಕಟ್ಟೆಗಳ ಮತ್ತು ಕಚ್ಚಾವಸ್ತುಗಳ ಅಭಾವವು ಬೃಹದಾಕಾರವಾಗಿ ಬೆಳೆಯುತ್ತಿತ್ತು. ಉದ್ಯೋಗಾವಕಾಶಗಳು ವಿರಳವಾಗಿತ್ತು. ಜೊತೆಗೆ ಜಪಾನಿನ ಜನಸಂಖ್ಯೆಯು ಉಲ್ಬಣಿಸುತ್ತಿದ್ದು ಈಗಾಗಲೇ ಜಪಾನ್ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವ ವಸಾಹತುಗಳನ್ನು, ತಕ್ಷಣದಿಂದಲೇ ಸೇನಾ ಕಾರ್ಯಾ ಚರಣೆಯಿಂದ ಆಕ್ರಮಿಸಿ ರಾಜಕೀಯ ಪ್ರಭುತ್ವವನ್ನು ಹೇರಿ ತನ್ನ ಸ್ವತಂತ್ರ ಪ್ರಾಂತಗಳೆಂದು ಘೋಷಿಸುವ ಅನಿವಾರ್ಯವಿತ್ತು. ಈ ಎಲ್ಲ ಸಮಸ್ಯೆಗಳನ್ನು ನಿಭಾಯಿಸುವುದರ ಜೊತೆಗೆ, ಪಶ್ಚಿಮ ರಾಷ್ಟ್ರಗಳು ಮಾಡಿದ ಅವಮಾನಗಳಿಗೆ ತನ್ನ ಪ್ರತಿಕ್ರಿಯೆ ತೋರ್ಪಡಿಸುವುದಕ್ಕೆ ಪೂರಕವಾಗಿ ಜಪಾನಿನ ಸೈನ್ಯ ೧೯೩೧ರಲ್ಲಿ ಯಶಸ್ವಿಯಾಗಿ ಪೂರ್ವ ಚೀನಾದ ಮಂಚೂರಿ ಯಾವನ್ನು ಆಕ್ರಮಿಸಿ ತನ್ನ ಸ್ವತಂತ್ರ ಆಸ್ತಿಯೆಂದು ಘೋಷಿಸಿಕೊಂಡಿತು. ಮಾತ್ರವಲ್ಲ ಮಂಚೂರಿಯಾ ರಾಜಕೀಯ ನೆಲೆಯಲ್ಲಿ ಚೀನಾದ ಆಡಳಿತ ವ್ಯಾಪ್ತಿಗೆ ಒಳಪಟ್ಟರೂ ಕೂಡ ಜಪಾನ್ ಮಿಲಿಟರಿ ಕಾರ್ಯಾಚರಣೆಯ ನಂತರ ತನ್ನ ರಾಜಕೀಯ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿ ಮಂಚೂರಿಯಾ ಜಪಾನ್ ದೇಶದ ಅವಿಭಾಜ್ಯ ಅಂಗವೆಂದು ಹೇಳಿಕೆ ನೀಡಿತು. ಇದು ಚೀನಾದ ಐಕ್ಯತೆ, ಏಕಾಗ್ರತೆ ಮತ್ತು ಶಾಂತಿಯನ್ನು ಅಸ್ಥಿರಗೊಳಿಸಿದರೂ ಕೂಡ ಜಪಾನ್‌ನ ಮುಖ್ಯ ಗುರಿ ಪಶ್ಚಿಮ ರಾಷ್ಟ್ರಗಳು ಪೂರ್ವ ಏಷ್ಯಾದಲ್ಲಿ ಅನುಭವಿ ಸುತ್ತಿರುವ ಆರ್ಥಿಕ ಪ್ರಭುತ್ವವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಮಂಚೂರಿಯ ಘಟನೆ ಬ್ರಿಟಿಷ್ ಮತ್ತು ಅಮೆರಿಕ ದೇಶಗಳನ್ನು ಪ್ರತ್ಯಕ್ಷವಾಗಿ ದಿಗ್ಭ್ರಮೆಗೊಳಿಸಿದರೂ, ಇದು ಚೀನಾ ಮತ್ತು ಜಪಾನ್ ನಡುವಿನ ಆಂತರಿಕ ಸಮಸ್ಯೆ ಯಾಗಿದ್ದು ಪಶ್ಚಿಮ ರಾಷ್ಟ್ರಗಳಿಗೆ ನೇರವಾಗಿ ಜಪಾನ್‌ನ ಕೃತ್ಯಕ್ಕೆ ಕಾರ್ಯಾಚರಣೆ ನಡೆಸಲು ಅಸಾಧ್ಯವಾಯಿತು. ಅದಕ್ಕಾಗಿ ಆ ರಾಷ್ಟ್ರಗಳು ಚೀನಾವನ್ನು ಪ್ರೋ ಜಪಾನ್‌ನ ಆಕ್ರಮಣದ ವಿಚಾರವಾಗಿ ಲೀಗ್ ಆಫ್ ನೇಷನ್ಸ್‌ಗೆ ದೂರು ಕೊಡಲು ಸಲಹೆ ಮಾಡಿದವು. ಜಪಾನ್ ಸಹ ಈ ಸಂಸ್ಥೆಯ ಸದಸ್ಯ ರಾಷ್ಟ್ರವಾಗಿದ್ದು ಪೂರ್ವ ಏಷ್ಯಾದ ಶಾಂತಿಪಾಲನೆಗೆ ಭಂಗ ತಂದಿರುವುದು ಖಂಡನಾರ್ಹವೆಂದು ಬ್ರಿಟನ್ ಮತ್ತು ಅಮೆರಿಕ ತಿಳಿದಿದ್ದವು. ಜೊತೆಗೆ ವಾಷಿಂಗ್ಟನ್ ಸಮ್ಮೇಳನದಲ್ಲಿ ಪೂರ್ವ ಏಷ್ಯಾದ ಶಾಂತಿ ಮತ್ತು ಸ್ಥಿರತೆಗೆ ಸಹರಿಸಲು ಜಪಾನ್ ಸಹ ಒಪ್ಪಿಗೆ ನೀಡಿದ್ದು, ಮಂಚೂರಿಯಾದಲ್ಲಿನ ಆಕ್ರಮಣ ಆ ತೀರ್ಮಾನಕ್ಕೆ ವಿರುದ್ಧವಾಗಿರುತ್ತದೆ ಮತ್ತು ಅಲ್ಲಿ ತೆಗೆದುಕೊಂಡ ತೀರ್ಮಾನದ ಉಲ್ಲಂಘನೆ ಎಂದು ತಿಳಿದು ಜಪಾನ್‌ಗೆ ಸರಿಯಾದ ಶಿಕ್ಷೆ ನೀಡಲು ಚೀನಾದ ಮೂಲಕ ಲೀಗ್ ಆಫ್ ನೇಷನ್ಸ್‌ಗೆ ದೂರು ಸಲ್ಲಿಸಲಾಯಿತು. ಲೀಗ್ ಆಫ್ ನೇಷನ್ಸ್ ಈ ಬಗ್ಗೆ ಒಂದು ಸಮಿತಿ ರಚಿಸಿ ಘಟನೆಯ ವಿವರದ ಬಗ್ಗೆ ಸಮೀಕ್ಷೆ ನಡೆಸಿ ಮಂಚೂರಿಯಾದಿಂದ ಸೈನ್ಯವನ್ನು ವಾಪಸ್ಸು ಕರೆಸಿಕೊಳ್ಳಲು ಟೋಕಿಯೋ ಸರಕಾರಕ್ಕೆ ಆಜ್ಞೆ ಹೊರಡಿಸಿತು. ಆದರೆ ಚೀನಾ, ಬ್ರಿಟನ್ ಮತ್ತು ಅಮೆರಿಕಾ ನಿರೀಕ್ಷಿಸಿದಂತೆ ಜಪಾನ್‌ನ ಕಾರ್ಯಾಚರಣೆಯನ್ನು ಗಂಭೀರವಾಗಿ ಪರಿಗಣಿಸಿ ಆ ದೇಶವನ್ನು ಆಕ್ರಮಣಕಾರಿ ಎಂದು ಕರೆಯುವ ಯಾವ ನಿರ್ಧಾರವನ್ನೂ ಲೀಗ್ ಆಫ್ ನೇಷನ್ಸ್ ತೆಗೆದುಕೊಂಡಿಲ್ಲ. ಈ ನಿರ್ಧಾರ ಜಪಾನಿಗೆ ಪರೋಕ್ಷವಾಗಿ ದೊರೆತ ವಿಜಯವೂ ಹೌದು. ಏಕೆಂದರೆ ಜಪಾನ್ ಲೀಗ್ ಆಫ್ ನೇಷನ್ಸನ್ನು ಕೇಳಿಕೊಂಡಂತೆ ಸೈನ್ಯವನ್ನು ವಾಪಸ್ಸು ಕರೆಸಿಕೊಳ್ಳಲಿಲ್ಲ. ಬದಲಾಗಿ ತನ್ನ ಅಧಿಕಾರವನ್ನು ಸ್ವತಂತ್ರವಾಗಿ ಮುಂದುವರಿಸಿತು. ಇದಕ್ಕುತ್ತರವಾಗಿ ಜಪಾನ್‌ನ ಸದಸ್ಯತ್ವವನ್ನು ಲೀಗ್ ಆಫ್ ನೇಷನ್ಸ್ ಅಮಾನತುಗೊಳಿಸಿತೇ ವಿನಃ ಯಾವುದೇ ಗಂಭೀರ ಶಿಕ್ಷೆಯನ್ನು ಜಪಾನ್ ದೇಶಕ್ಕೆ ವಿಧಿಸಿರಲಿಲ್ಲ. ಜಪಾನ್ ಸರಕಾರ ಪಶ್ಚಿಮ ರಾಷ್ಟ್ರಗಳಿಗೆ ನೀಡಿದ ಯಶಸ್ವಿ ಉತ್ತರವೆಂದು ತಿಳಿದುಕೊಂಡಿರುವುದಲ್ಲದೆ ಸ್ವತಂತ್ರವಾಗಿ ಪಶ್ಚಿಮ ರಾಷ್ಟ್ರಗಳ ಸಾಮ್ರಾಜ್ಯಶಾಹಿ ಚಟುವಟಿಕೆಗಳ ವಿರುದ್ಧ ಸಮಗ್ರ ಹೋರಾಟವನ್ನು ಆರಂಭಿಸಿತು.

ಜಪಾನಿನ ಹೋರಾಟ ೧೯೩೬ರ ನಂತರ ಹೊಸ ತಿರುವನ್ನು ಪಡೆಯಿತು. ಏಷ್ಯನ್ನರಿಗೆ ಏಷ್ಯಾ ಎಂಬುದು ಜಪಾನಿನ ಹೊಸ ತಂತ್ರದ ಇನ್ನೊಂದು ಮುಖವಾದರೂ ಸಾರ್ವತ್ರಿಕವಾಗಿ ಏಷ್ಯಾದ ವಿಮುಕ್ತಿಗಾಗಿ ತನ್ನ ಹೋರಾಟವೆಂದು ಹೇಳಿಕೊಂಡಿತು ಮತ್ತು ಹೋರಾಟದ ನೇತೃತ್ವವನ್ನು ತಾನೆಯ ವಹಿಸಿತು. ತಕ್ಷಣ ಈ ಹೋರಾಟದ ವಿವಿಧ ಮುಖಗಳ ಪರಿಣಾಮಗಳು ಪೂರ್ವ ಮತ್ತು ದಕ್ಷಿಣ ಪೂರ್ವ ಏಷ್ಯಾಕ್ಕೆ ಸೀಮಿತವಾಗಿತ್ತು. ಇದಕ್ಕೆ ಕಾರಣವೂ ಇದೆ. ೧೯೨೧ರ ವಾಷಿಂಗ್ಟನ್ ಸಮ್ಮೇಳನದಲ್ಲಿ ಬ್ರಿಟನ್ ಮತ್ತು ಅಮೆರಿಕ ಜಪಾನ್‌ಗೆ ವಿರುದ್ಧವಾಗಿ ನಿರ್ಣಯ ತೆಗೆದುಕೊಂಡರೂ ಉಳಿದ ವಸಾಹತುಶಾಹಿ ರಾಷ್ಟ್ರಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಈ ಎರಡು ಬೃಹತ್ ಬಂಡವಾಳಶಾಹಿ ರಾಷ್ಟ್ರಗಳಿಗೆ ಸಹಕರಿಸಿದ್ದವು. ಅದರಲ್ಲೂ ಮುಖ್ಯವಾಗಿ ಫ್ರಾನ್ಸ್ ಮತ್ತು ಹಾಲೆಂಡ್. ಒಟ್ಟಾರೆಯಾಗಿ ಬ್ರಿಟನ್, ಅಮೆರಿಕ, ಫ್ರಾನ್ಸ್ ಮತ್ತು ಹಾಲೆಂಡ್ ಸಾರಾಸಗಟಾಗಿ ಪೂರ್ವ ಮತ್ತು ದಕ್ಷಿಣ ಪೂರ್ವ ಏಷ್ಯಾದ ಸಂಪತ್ತು ಮತ್ತು ಮಾರುಕಟ್ಟೆಗಳನ್ನು ಜೊತೆಯಾಗಿ ದೋಚುತ್ತಿದ್ದವು. ಹಾಗಾಗಿ ಈ ಎಲ್ಲ ಪ್ರಾಂತಗಳು ಆ ರಾಷ್ಟ್ರಗಳ ವಸಾಹತುಶಾಹಿ ಚಟುವಟಿಕೆಗಳಿಗೆ ಅವಿಭಾಜ್ಯ ಅಂಗವಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಸುಮಾರು ೧೫೦ ವರ್ಷಗಳಷ್ಟು ಕಾಲ ಈ ಪ್ರಾಂತಗಳ ಜನರು ತೀವ್ರ ರೀತಿಯ ದಬ್ಬಾಳಿಕೆ, ನಿರಂಕುಶ ಆಡಳಿತ ಮತ್ತು ಆರ್ಥಿಕ ಸಂಪನ್ಮೂಲಗಳ ದೋಚುವಿಕೆಯಿಂದ ಬಳಲುತ್ತಿದ್ದವು. ಇದೇ ಸಂದರ್ಭದಲ್ಲಿ ಜಪಾನ್ ಏಷ್ಯಾದ ವಿಮುಕ್ತಿಗೆ ಪಣ ತೊಟ್ಟಿತು. ಪರಿಣಾಮವಾಗಿ ೧೯೪೦-೪೩ರ ನಡುವೆ ಜಪಾನ್‌ನ ಸೈನ್ಯವು ಸಂಪೂರ್ಣವಾಗಿ ಪೂರ್ವ ಮತ್ತು ದಕ್ಷಿಣ ಪೂರ್ವ ಏಷ್ಯಾದ ಪ್ರಾಂತಗಳಾದ ಇಂಡೋಚೀನಾ, ಬರ್ಮಾ, ಮಲೇಶಿಯಾ, ಇಂಡೋನೇಶಿಯಾ ಮತ್ತು ಫಿಲಿಫೈನ್ಸ್‌ಗಳನ್ನು ಆಕ್ರಮಿಸಿ ಆ ದೇಶಗಳ ಸ್ವಾತಂತ್ರ ಹೋರಾಟಕ್ಕೆ ಪ್ರೇರಣೆ ನೀಡಿದ್ದಲ್ಲದೆ ಭಾಗಶಃ ಆ ದೇಶಗಳನ್ನು ಐರೋಪ್ಯ ರಾಷ್ಟ್ರಗಳ ಸಾಮ್ರಾಜ್ಯಶಾಹಿ ಆಡಳಿತದಿಂದ ವಿಮುಕ್ತಿಗೊಳಿಸಿತು. ಹಿಂದೆ ಈ ಎಲ್ಲ ಪ್ರಾಂತಗಳು ಕ್ರಮವಾಗಿ- ಫ್ರಾನ್ಸ್, ಬ್ರಿಟಿಷ್, ಡಚ್ ಮತ್ತು ಅಮೆರಿಕನ್ನರ ವಸಾಹತುಗಳಾಗಿದ್ದವು. ಒಂದರ್ಥದಲ್ಲಿ ಪಶ್ಚಿಮ ರಾಷ್ಟ್ರಗಳ ಸಾಮ್ರಾಜ್ಯಶಾಹಿ ಯುಗಕ್ಕೆ ಜಪಾನಿನ ಮಿಲಿಟರಿ ಕಾರ್ಯಾಚರಣೆ ಮಂಗಳ ಹಾಡಿತ್ತು. ಅಲ್ಲದೆ ಈ ಘಟನೆ ನಂತರ ಪಶ್ಚಿಮ ರಾಷ್ಟ್ರಗಳು ತಮ್ಮ ವಸಾಹತು ಚಟುವಟಿಕೆಗಳನ್ನು ಪುನರ್ ಸ್ಥಾಪಿಸಲು ಯಾವುದೇ ಯಶಸ್ಸನ್ನು ಕಂಡಿರಲಿಲ್ಲ. ಆದರೂ ಜಪಾನ್‌ನ ಅಧಿಕಾರ ಈ ಪ್ರಾಂತಗಳಲ್ಲಿ ಹೆಚ್ಚು ಕಾಲ ಮುಂದುವರಿಯಲಿಲ್ಲ. ೧೯೪೫ರಲ್ಲಿ ಎರಡನೆ ಮಹಾಯುದ್ಧದ ಮುಕ್ತಾಯದ ಜೊತೆಗೆ ಜಪಾನ್ ತಾನು ದಕ್ಷಿಣ ಪೂರ್ವ ಏಷ್ಯಾದಲ್ಲಿ ಆಕ್ರಮಿಸಿಕೊಂಡ ಎಲ್ಲ ಪ್ರಾಂತಗಳನ್ನು ಎಲ್ವಾಡ್ ಪವರ್ಸ್‌ಗಳಿಗೆ ಹಿಂದಿರುಗಿಸ ಬೇಕಾಯಿತು. ತಕ್ಷಣ ಈ ಪ್ರಾಂತಗಳಲ್ಲಿ ರಾಷ್ಟ್ರೀಯ ಹೋರಾಟ ಚುರುಕುಗೊಂಡಿರು ವುದರಿಂದ ಎಲ್ವಾಡ್ ಪವರ್ಸ್ ಸಹ ಬೇರೆ ದಾರಿ ಇಲ್ಲದೆ ಅವುಗಳ ಸ್ವಾತಂತ್ರ್ಯವನ್ನು ಗೌರವಿಸಲೇ ಬೇಕಾಯಿತು. ಇದರಿಂದ ವಸಾಹತುಶಾಹಿ ಯುಗ ಅಂತ್ಯಗೊಂಡು ಏಷ್ಯಾ ದೇಶದ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿತು.

ನಿರ್ವಸಾಹತೀಕರಣ

೧೯೪೧-೪೫ರ ನಡುವೆ ಜಪಾನ್ ದೇಶವು ಸಾಮ್ರಾಜ್ಯಶಾಹಿ ವೃದ್ದಿಯಿಂದ ಹಿಂದೆ ಸರಿದದ್ದನ್ನು ಹೊರತುಪಡಿಸಿದರೆ ಐರೋಪ್ಯ ರಾಷ್ಟ್ರಗಳು ಕೈಗಾರಿಕಾ ನಾಗರಿಕತೆಯ ಆರಂಭದಿಂದ ಹಿಡಿದು ಅಣುಯುಗದವರೆಗೂ ಪಶ್ಚಿಮ, ಪೂರ್ವ ಮತ್ತು ದಕ್ಷಿಣ ಪೂರ್ವ ಏಷ್ಯಾ ದೇಶಗಳನ್ನು ಆಳಿದ್ದವು. ಎರಡನೆಯ ಮಹಾಯುದ್ಧವು ನಿರ್ವಸಾಹತೀಕರಣ ಯುಗಕ್ಕೆ ಚಾಲನೆ ನೀಡಿತು. ಇವುಗಳಲ್ಲಿ ಸ್ವಾತಂತ್ರ್ಯ ಪಡೆದ ಮೊದಲ ರಾಷ್ಟ್ರ ಟರ್ಕಿ ಯಾದರೆ (೧೯೨೩) ಕೊನೆಯ ರಾಷ್ಟ್ರ ಮಲಯಾ (೧೯೫೭ರಲ್ಲಿ) ಎಂದು ಹೇಳಬಹುದು. ಇಂಡೋನೇಶಿಯಾದ ದ್ವೀಪಗಳಲ್ಲೊಂದಾದ ತೀಮೋರ್ ದ್ವೀಪ ಮತ್ತು ಗಾನಾದಲ್ಲಿ ಡಚ್ಚರ ಪ್ರಭುತ್ವವನ್ನು ಬಿಟ್ಟರೆ, ಪಶ್ಚಿಮ ರಾಷ್ಟ್ರಗಳ ವಸಾಹತುಶಾಹಿ ಆಡಳಿತ ಮತ್ತು ಪ್ರಭುತ್ವವು ಸುಮಾರು ಇದೇ ಕಾಲಕ್ಕೆ ಮುಗಿದಿತ್ತು. ಈ ಎಲ್ಲ ರಾಷ್ಟ್ರಗಳು ಇನ್ನೂ ವಸಾಹತುಶಾಹಿ ಆಡಳಿತದ ವಿವಿಧ ಮಜಲನ್ನು ಅನುಭವಿಸುತ್ತಿದ್ದರೂ, ಯಶಸ್ವಿಯಾಗಿ ಸಂಘಟಿತ ಹೋರಾಟದಿಂದ ಸ್ವಾತಂತ್ರ್ಯ ಯುಗಕ್ಕೆ ಕಾಲಿಟ್ಟವು.

ನಿರ್ವಸಾಹತೀಕರಣ ಯುಗದ ಆರಂಭಕ್ಕೆ ಮೊದಲು, ಈ ಪ್ರಾಂತಗಳಲ್ಲಿ ವಿವಿಧ ಬಂಡವಾಳಶಾಹಿ ದೇಶಗಳ ವಿಭಿನ್ನ ವಸಾಹತು ಪದ್ಧತಿಗಳು ಕಾರ್ಯ ನಿರ್ವಹಿಸಿದ್ದವು. ಅವುಗಳೆಂದರೆ ಬ್ರಿಟಿಷ್, ಫ್ರೆಂಚ್, ರಷ್ಯಾ, ಜರ್ಮನಿ, ಜಪಾನ್ ಮತ್ತು ಅಮೆರಿಕ. ಈ ಎಲ್ಲ ದೇಶಗಳು ಆಯಾಯ ವಸಾಹತುಗಳಲ್ಲಿ ದೊಡ್ಡ ಅಥವಾ ಸಣ್ಣ ಪ್ರಯತ್ನದಿಂದ ಪಶ್ಚಿಮ ದೇಶಗಳಲ್ಲಿ ಕೈಗಾರಿಕ ಯುಗದ ಸಮಯದಲ್ಲಿ ಹೆಚ್ಚು ಪ್ರಚಾರಗೊಂಡ ಚಿಂತನೆ ಗಳು ಮತ್ತು ಸಂಸ್ಥೆಗಳಾದ- ವಿಚಾರ, ವ್ಯಕ್ತಿ ಸ್ವಾತಂತ್ರ್ಯ ಮತ್ತು ವ್ಯಕ್ತಿಗತವಲ್ಲದ ಕಾನೂನು ವ್ಯವಸ್ಥೆಯನ್ನು ಪ್ರಾರಂಭಿಸಿದವು. ಇದರಿಂದ ಆಧುನಿಕ ಮತ್ತು ಸಾಂಪ್ರದಾಯಿಕ ವ್ಯವಸ್ಥೆ ಗಳು, ಚಿಂತನೆಗಳು ಮತ್ತು ಸಂಸ್ಥೆಗಳ ನಡುವೆ ಘರ್ಷಣೆ ಉಗಮವಾಗುವುದು ಅನಿವಾರ್ಯವಾಯಿತು. ಏಕೆಂದರೆ ಪ್ರಾದೇಶಿಕ ವ್ಯವಸ್ಥೆಯ ಧರ್ಮ, ವ್ಯಕ್ತಿಗತವಾದ ಹಕ್ಕು ಮತ್ತು ಸಾಂಪ್ರದಾಯಿಕ ಕರ್ತವ್ಯಗಳೊಂದಿಗೆ ಒಂದಕ್ಕೊಂದು ಹೆಣೆದುಕೊಂಡಿವೆ. ಈ ಘರ್ಷಣೆ ಇನ್ನೂ ಮುಗಿದಿಲ್ಲ. ಆಧುನಿಕ ಯುಗದ ಸವ್ಯಸಾಚಿಗಳು ಎಲ್ಲಿಯವರೆಗೆ ತಮ್ಮ ವಸಾಹತುಶಾಹಿ ಗುರಿಗಳನ್ನು ಅನುಸರಿಸುತ್ತಿರುತ್ತವೋ ಅಲ್ಲಿಯವರೆಗೆ ಇಂತಹ ಘರ್ಷಣೆಯ ವಿರುದ್ಧ ಸಂಘಟಿತ ಹೋರಾಟ ಅಸಾಧ್ಯ. ಏಕೆಂದರೆ ವಸಾಹತುಶಾಹಿ ಪ್ರಭುತ್ವವು ಸಾರ್ವತ್ರಿಕವಾಗಿ ಬೆಂಬಲ ಪಡೆದಿಲ್ಲ ಮತ್ತು ಆ ಕಾರಣಕ್ಕಾಗಿ ಅದು ಪರಿಣಾಮಕಾರಿ ಸುಧಾರಣೆ ತಂದು ಬದಲಿ ವ್ಯವಸ್ಥೆಯನ್ನು ಹೇರಲು ಧೈರ್ಯವನ್ನು ಕಳೆದುಕೊಂಡಿದೆ. ಸಂಪ್ರದಾಯವಾದಿ ವಸಾಹತು ಸಮಾಜ ಬಾಂಧವರ ಬೆಂಬಲ ಮತ್ತು ತನ್ನ ಪ್ರಭುತ್ವಕ್ಕೆ ಉಂಟಾಗಬಹುದಾದ ಸಂದರ್ಭಗಳನ್ನು ನಿಯಂತ್ರಿಸಿ, ಸಂಪ್ರದಾಯವಾದಿ ಮತ್ತು ಆಧುನಿಕ ವ್ಯವಸ್ಥೆಯ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ದಾಹದಲ್ಲಿ ಅದು ಜಾಗೃತವಾಗಿ ತನ್ನನ್ನು ತಾನೆಯ ಸಂರಕ್ಷಿಸಿಕೊಳ್ಳುವ ನಿಲುವನ್ನು ಪಾಲಿಸುತ್ತದೆ.