ಈ ಎಲ್ಲ ಷರತ್ತುಗಳಿಗೆ ಸ್ಪಂದಿಸಲು ಸಿದ್ಧವಿರುವ ಬಂಡವಾಳಶಾಹಿ ರಾಷ್ಟ್ರದೊಂದಿಗೆ ಹಮೀದ್ ಹೊಸ ಸಂಪರ್ಕವನ್ನು ಬೆಳಸಲು ಸಿದ್ಧನಿದ್ದನು. ಇದೇ ಸಮಯದಲ್ಲಿ ಯುರೋಪ್ ಖಂಡದಲ್ಲಿ ಜರ್ಮನಿ ಒಂದು ಬೃಹತ್ ಬಂಡವಾಳಶಾಹಿ ರಾಷ್ಟ್ರವಾಗಿ ಉಗಮವಾಯಿತು ಮತ್ತು ತನ್ನ ಶಕ್ತಿ ಸಾಮರ್ಥ್ಯ ಮತ್ತು ಪ್ರಬುದ್ಧತೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿಯಲು, ಸಾಮ್ರಾಜ್ಯಶಾಹಿ ಚಟುವಟಿಕೆಗಳಲ್ಲಿ ತೊಡಗಲು ವಿಶೇಷ ಆಸಕ್ತಿಯನ್ನು ಹೊಂದಿತ್ತು. ಅದೇ ವೇಳೆಗೆ ಅಬ್ದುಲ್ ಹಮೀದ್ ಹೊಸ ಬಂಡವಾಳಶಾಹಿ ರಷ್ಯಾದ ಅನ್ವೇಷಣೆಯಲ್ಲಿ ತೊಡಗಿದ್ದನು.

೨೦ನೆಯ ಶತಮಾನದ ಆರಂಭದಲ್ಲಿ ಯುರೋಪ್‌ನಲ್ಲಿ ಸಾಮಾನ್ಯವಾಗಿರುವಂತೆ ಜರ್ಮನಿಯು ಆರ್ಥಿಕ ಬಿಕ್ಕಟ್ಟಿನ ವಿವಿಧ ಮುಖಗಳಾದ ಕೈಗಾರಿಕೀಕರಣ, ಅಧಿಕ ಉತ್ಪಾದನೆ, ಹೆಚ್ಚುವರಿ ಬಂಡವಾಳ ಹೂಡಲು ಸ್ಥಳದ ಅಭಾವ, ಮಾರುಕಟ್ಟೆಯ ಅಭಾವ, ಆಹಾರ ಉತ್ಪಾದನೆಯಲ್ಲಿ ಕಡಿತ, ಕೈಗಾರಿಕೆಗಳಿಗೆ ಬೇಕಾದ ಕೃಷಿ ಉತ್ಪನ್ನಗಳ ಕೊರತೆ ಇತ್ಯಾದಿ ಆಂತರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ವಸಾಹತುಶಾಹಿ ಚಟುವಟಿಕೆಗಳ ಕೊನೆಯ ಅಸ್ತ್ರವಾಗಿ ಪಾಲಿಸಿತು. ಈ ಸಮಸ್ಯೆಗಳಿಗೆ ಪರಿಹಾರವಾಗಿ ಜರ್ಮನಿಯು ಏಷ್ಯಾ ಮತ್ತು ಆಫ್ರಿಕಾ ದೇಶಗಳಲ್ಲಿ ಸ್ವತಂತ್ರ ವಸಾಹತುಗಳ ಸ್ಥಾಪನೆಗೆ ವಿಶೇಷ ತಂತ್ರಗಳನ್ನು ನಿರೂಪಿಸಿ ಪ್ರಾದೇಶಿಕ ಮಟ್ಟದಲ್ಲಿ ತನ್ನ ತಂತ್ರಗಳನ್ನು ಒಪ್ಪಿಕೊಳ್ಳಲು ಸಾಮ್ರಾಟರನ್ನು ಮುಂದೆ ನೋಡುತ್ತಿತ್ತು ಮತ್ತು ಅಂತಹವರಲ್ಲಿ ತಾನು ಸಂಪರ್ಕ ಬೆಳೆಸಲು ಕೆಲವೊಂದು ಷರತ್ತುಗಳನ್ನು ಪಾಲಿಸಲು ನಿರ್ಬಂಧವನ್ನು ಕೂಡ ಜರ್ಮನಿ ಹೇರಿತು. ಅವುಗಳಲ್ಲಿ

೧. ಸಾಮ್ರಾಜ್ಯವಾದಿ ವಿಲಿಯಂ ಕೈಸರ್‌ನ ಅಪೇಕ್ಷೆಯಂತೆ ಜರ್ಮನಿಯು ವಸಾಹತುಶಾಹಿ ಚಟುವಟಿಕೆಗಳನ್ನು ಆರಂಭಿಸುವ ಪ್ರದೇಶಗಳ ಏಕಾಧಿಪತ್ಯವನ್ನು ಹೊಂದಿದ ಸಾಮ್ರಾಟನು ಜರ್ಮನಿಯ ಕಡು ವೈರಿಗಳಾದ (ವಸಾಹತುಶಾಹಿ ರಂಗದಲ್ಲಿ) ಬ್ರಿಟನ್, ರಷ್ಯಾ ಮತ್ತು ಫ್ರಾನ್ಸ್ ದೇಶಗಳನ್ನು ವಿರೋಧಿಸುತ್ತಿರಬೇಕು ಮತ್ತು ಯಾವುದೇ ಸಂಪರ್ಕವನ್ನು ಹೊಂದಿರಬಾರದು.

೨. ಅವನು ವಿಸ್ತಾರವಾದ ಮತ್ತು ಫಲವತ್ತಾದ ಭೂಮಿಯ ಒಡೆಯ ನಾಗಿದ್ದು ಜರ್ಮನಿಯ ಹೆಚ್ಚುವರಿ ಬಂಡವಾಳವನ್ನು ಹೂಡಲು ವಿಪುಲ ಅವಕಾಶಗಳನ್ನು ಕಲ್ಪಿಸಬೇಕು.

೩. ಹೊಸ ಮಾರುಕಟ್ಟೆಗಳನ್ನು ತೆರೆದು ಜರ್ಮನ್ ದೇಶ ಹೊಂದಿರುವ ಅಧಿಕ ಉತ್ಪನ್ನಗಳು ಮತ್ತು ಸಿದ್ಧವಸ್ತುಗಳನ್ನು ಹೆಚ್ಚು ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸುವ ಅವಕಾಶ ದೊರೆಯಬೇಕು ಮತ್ತು ಅಲ್ಲಿ ಬೃಹತ್ ಪ್ರಮಾಣದಲ್ಲಿ ಸಿದ್ಧವಸ್ತುಗಳನ್ನು ಕೊಂಡುಕೊಳ್ಳುವ ವರ್ಗವು ಲಭ್ಯವಿರಬೇಕು.

೪. ಮೇಲೆ ಸೂಚಿಸಿದ ಆಸಕ್ತಿಗಳನ್ನು ಈಡೇರಿಸಿಕೊಂಡು ಜರ್ಮನಿ ನಿರ್ದಿಷ್ಟ ಮಟ್ಟದಲ್ಲಿ ಸ್ವತಂತ್ರ ವಸಾಹತುಗಳನ್ನು ಸ್ಥಾಪಿಸಲು ಸಹಕರಿಸಬೇಕು.

ಈ ಎಲ್ಲ ಷರತ್ತುಗಳನ್ನು ಬಿಚ್ಚುಮನಸ್ಸಿನಿಂದ ಪಾಲಿಸಲು ಆಟೋಮನ್ ಸಾಮ್ರಾಟನು ಸರಿ ಹೋಲುವ ವ್ಯಕ್ತಿಯಾಗಿ ಮೂಡಿ ಬರುತ್ತಾನೆ. ಏಕೆಂದರೆ-

೧. ಹಮೀದ್ ವ್ಯಕ್ತಪಡಿಸಿದ ಷರತ್ತುಗಳಂತೆ ಜರ್ಮನಿಯು ಆಟೋಮನ್ ಸರಕಾರ ವಿರೋಧಿಸುವ ಪಶ್ಚಿಮದ ಬಂಡವಾಳಶಾಹಿ ರಾಷ್ಟ್ರಗಳೊಂದಿಗೆ ಯಾವುದೇ ಒಪ್ಪಂದಗಳನ್ನು ಏರ್ಪಡಿಸಿಕೊಂಡಿರದೆ, ವಸಾಹತುಶಾಹಿ ರಂಗದಲ್ಲಿ ಆ ದೇಶಗಳನ್ನು ಜರ್ಮನಿ ನೇರವಾಗಿ ದ್ವೇಷಿಸುತ್ತಿತ್ತು.

೨. ವಸಾಹತುಶಾಹಿ ಪೈಪೋಟಿಯಡಿಯಲ್ಲಿ ಜರ್ಮನಿ ಈ ಎಲ್ಲ ದೇಶಗಳ ವಿರುದ್ಧ ಯುದ್ಧ ಸಾರಲು ಸಿದ್ಧವಾಗಿತ್ತು.

೩. ಹಮೀದ್ ನಿರೀಕ್ಷಿಸುವಂತೆ ಜರ್ಮನಿ ಹೇರಳ ಬಂಡವಾಳವನ್ನು ಹೊಂದಿದ್ದು (ಆಂತರಿಕ ಮಟ್ಟದ ಬಂಡವಾಳ ಹೂಡಿಕೆಯಲ್ಲಿ ಲಾಭಾಂಶ ಇಳಿಕೆ ಇದ್ದುದರಿಂದ) ಅನಭಿವೃದ್ದಿ ಹೊಂದಿದ ಏಷ್ಯಾ ಮತ್ತು ಆಫ್ರಿಕಾ ದೇಶಗಳಿಗೆ ರಫ್ತು ಮಾಡಲು ಪ್ರಯತ್ನಿಸುತ್ತಿತ್ತು.

೪. ಬಂಡವಾಳಶಾಹಿ ರಾಷ್ಟ್ರಗಳಾದ ಬ್ರಿಟನ್, ಫ್ರಾನ್ಸ್, ರಷ್ಯಾದ ವಿರುದ್ಧ ಹಮೀದ್ ಆರಂಭಿಸುವ ಮಿಲಿಟರಿ ಕಾರ್ಯಾಚರಣೆಯಲ್ಲಿ ಜರ್ಮನಿ ಸಕ್ರಿಯವಾಗಿ ಪಾಲ್ಗೊಳ್ಳಲು ಹಸಿರು ನಿಶಾನೆಯನ್ನು ತೋರಿಸಿತು.

ಜರ್ಮನಿಗೂ ಸಹ ತಾನು ನಿರೀಕ್ಷಿಸಿದಂತೆ ಆಟೋಮನ್ ಸರಕಾರದ ಆಪ್ತ ಮಿತ್ರನಾಗಲು ಎಲ್ಲ ಅರ್ಹತೆಯನ್ನು ಹೊಂದಿತು.

೧. ಆಟೋಮನ್ ಸರಕಾರವು ಬ್ರಿಟನ್,  ಫ್ರಾನ್ಸ್ ಮತ್ತು ರಷ್ಯಾದ ದ್ವೇಷಿ,

೨. ಭೌಗೋಳಿಕವಾಗಿ ವಿಸ್ತಾರವಾದ ಭೂಮಿಗೆ ಒಡೆತನ ಹೊಂದಿತ್ತು.

೩. ಜರ್ಮನಿಯ ಮಿಲಿಯಗಟ್ಟಲೆ ಹೆಚ್ಚುವರಿ ಬಂಡವಾಳ ಹೂಡಲು ವಿಪುಲ ಅವಕಾಶಗಳ ಲಭ್ಯ.

೪. ಆರ್ಥಿಕ ಚಟುವಟಿಕೆ ಮತ್ತು ವ್ಯಾಪಾರ ವಹಿವಾಟುಗಳನ್ನು ನಡೆಸಲು ಪ್ರೋ

೫. ಜರ್ಮನಿಯ ಅಪೇಕ್ಷೆಯಂತೆ ಸ್ವತಂತ್ರ ವಸಾಹತುಗಳನ್ನು ಮೆಸಪಟೋಮಿಯ ಮತ್ತು ಗಲ್ಫ್ ಪ್ರದೇಶಗಳಲ್ಲಿ ಸ್ಥಾಪಿಸಲು ಅನುಮತಿ.

ಹೀಗೆ ಉಗಮವಾದ ಜರ್ಮನಿಯ ವಸಾಹತುಶಾಹಿ ಕಾರ್ಯಾಚರಣೆಯು ಪಶ್ಚಿಮ ಏಷ್ಯಾದಲ್ಲಿ ಬ್ರಿಟಿಷರ ವಾಣಿಜ್ಯ, ಆರ್ಥಿಕ ಮತ್ತು ಸೈನಿಕ ಪ್ರಭುತ್ವದ ಅಡಿಪಾಯವನ್ನೇ ಅಲ್ಲಾಡಿಸಿತು. ಬ್ರಿಟಿಷರಿಗೆ ವಸಾಹತು ರಂಗದಲ್ಲಿ ತಂದೊಡ್ಡಿದ ಗಂಭೀರ ಬೆದರಿಕೆಯಾಗಿತ್ತು. ಏಕೆಂದರೆ- ೨೦ನೆಯ ಶತಮಾನದಲ್ಲಿ ಜರ್ಮನಿಯ ಆಗಮನದವರೆಗೆ ಬ್ರಿಟಿಷರು ಮೆಸಪಟೋಮಿಯ ಮತ್ತು ಗಲ್ಫ್ ಮಾರುಕಟ್ಟೆಗಳ ವಾಣಿಜ್ಯ ಚಟುವಟಿಕೆಗಳಲ್ಲಿ ನಿರಂಕುಶ ಪ್ರಭುತ್ವವನ್ನೆ ಸ್ಥಾಪಿಸಿದ್ದರು. ಆದರೆ ಹಮೀದ್-ವಿಲಿಯಂ ಕೈಸರ್‌ನ ನಡುವಿನ ಒಪ್ಪಂದದ ಫಲಿತಾಂಶವಾಗಿ ಜರ್ಮನಿಯ ಆಟೋಮನ್ ಸಾಮ್ರಾಜ್ಯದ ಆರ್ಥಿಕ ಮತ್ತು ರಸ್ತೆ ಸಾರಿಗೆ ಸಂಪರ್ಕಗಳ ಆಧುನೀಕರಣದ ಜವಾಬ್ದಾರಿಯನ್ನು ವಹಿಸಿಕೊಂಡಿತು. ಇದಕ್ಕೆ ಪೂರಕವಾಗಿ ಹಮೀದ್ ಸರಕಾರ ಜರ್ಮನಿಗೆ ಅಂಕಾರ-ಇಜಮತ್ ಅಥವಾ ಬರ್ಲಿನ್-ಬಾಗ್ದಾದ್ ರೈಲು ಮಾರ್ಗ ನಿರ್ಮಾಣ ಕಾರ್ಯಕ್ಕೆ ಅನುಮತಿ ನೀಡಿತು. ಈ ರೈಲು ಮಾರ್ಗ ಪೂರ್ಣಗೊಂಡಾಗ ಜರ್ಮನಿಯು ಮೆಸಪಟೋಮಿಯ ಮತ್ತು ಗಲ್ಫ್ ಪ್ರಾಂತಗಳಲ್ಲಿರುವ ಮಾರುಕಟ್ಟೆಗಳ ನಡುವೆ ನೇರ ಸಾರಿಗೆ ಸಂಪರ್ಕವನ್ನು ತೆರೆಯುತ್ತದೆ. ಈ ಹಿಂದೆ ಬ್ರಿಟಿಷರ ವಾಣಿಜ್ಯ ವಹಿವಾಟಿಗೆ ಲಭ್ಯವಿದ್ದ ಈ ಎಲ್ಲ ನಗರ ಪ್ರದೇಶಗಳು ಜರ್ಮನಿಯ ಹೊಸ ವಾಣಿಜ್ಯ ಚಟುವಟಿಕೆಗಳಿಗೆ ಸ್ಪಂದಿಸತೊಡಗಿದವು.

ಹೀಗೆ ಆರಂಭವಾದ ಜರ್ಮನಿಯ ವಸಾಹತುಶಾಹಿ ಚಟುವಟಿಕೆಗಳು ಬ್ರಿಟಿಷರು ಈ ನಗರಗಳಲ್ಲಿ ಈ ಹಿಂದೆ ಗಳಿಸುತ್ತಿದ್ದ ಲಾಭದ ಮೇಲೆ ಪರಿಣಾಮಕಾರಿ ಹೊಡೆತ ಬಿತ್ತು. ಜರ್ಮನ್ ದೇಶ ನೇರವಾಗಿ ಬ್ರಿಟಿಷರ ವಾಣಿಜ್ಯ ಆಧಿಪತ್ಯವನ್ನು ಹತ್ತಿಕ್ಕಲು ಸೈನಿಕ ಕಾರ್ಯಾಚರಣೆಯ ಬದಲು ಆರ್ಥಿಕ ಮತ್ತು ವಾಣಿಜ್ಯ ಮಾರ್ಗಗಳನ್ನು ಬಳಸಿತು. ಅಂದರೆ ಹಿಂದೆ ಬ್ರಿಟಿಷರು ಈ ಎಲ್ಲ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿರುವ ವಸ್ತುಗಳನ್ನೇ ಜರ್ಮನಿ ಸರಬರಾಜು ಮಾಡಲು ಆರಂಭಿಸಿತು. ಅದರಲ್ಲೂ ಉತ್ತಮ ಗುಣಮಟ್ಟದ (ಬ್ರಿಟಿಷರು ಭಾರತದಿಂದ ಆಮದು ಮಾಡಿ ಮಾರಾಟ ಮಾಡುವ ವಸ್ತುಗಳಿಗೆ ಹೋಲಿಸಿದರೆ) ವಸ್ತುಗಳನ್ನು ಬ್ರಿಟಿಷರ ವಸ್ತುಗಳ ಬೆಲೆಗಿಂತಲೂ ಕಡಿಮೆ ಬೆಲೆಗೆ ಜರ್ಮನ್ ವ್ಯಾಪಾರ ಸಂಸ್ಥೆ ಮಾರಾಟ ಮಾಡಲು ಆರಂಭಿಸಿತು. ಸಿಂಥೆಟಿಕ್, ನೀಲಿ, ಕಾಫಿ, ಸಕ್ಕರೆ, ಗ್ಲಾಸ್, ಚರ್ಮದ ವಸ್ತುಗಳು, ಟೀ, ಹತ್ತಿಬಟ್ಟೆ, ತಾಮ್ರ, ಕಬ್ಬಿಣ, ಖನಿಜ ಮತ್ತು ಔಷಧ ವಸ್ತುಗಳು, ಬ್ರಿಟಿಷರು ಕೂಡ ಇದೇ ವಸ್ತುಗಳನ್ನು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದರು. ಆದರೆ ಈಗ ಜರ್ಮನಿ ಅದೇ ವಸ್ತುಗಳನ್ನು ಗುಣಮಟ್ಟದಲ್ಲಿ ಉತ್ತಮವಾಗಿದ್ದು, ಕಡಿಮೆ ಬೆಲೆಗೆ ಮಾರಾಟ ಮಾಡುವಾಗ ಕೊಳ್ಳುವವರು ಸಾಮಾನ್ಯವಾಗಿ ಜರ್ಮನ್ ವಸ್ತುಗಳಿಗೆ ಮಾರುಹೋಗುವುದು ಸಹಜ. ಇದರಿಂದ ಬ್ರಿಟಿಷರ ವಾಣಿಜ್ಯ ವಹಿವಾಟು ಮತ್ತು ಆಸಕ್ತಿಗಳಿಗೆ ಕಡಿವಾಣ ಬಿತ್ತು ಮತ್ತು ಎರಡು ಬೃಹತ್ ಬಂಡವಾಳ ಶಾಹಿ ರಾಷ್ಟ್ರಗಳಾದ ಬ್ರಿಟನ್ ಮತ್ತು ಜರ್ಮನ್ ನಡುವೆ ವಸಾಹತುಶಾಹಿ ಪೈಪೋಟಿ ಮತ್ತು ವೈಷಮ್ಯ ಪ್ರಾರಂಭವಾಗಿ ಪಶ್ಚಿಮ ಏಷ್ಯಾದಲ್ಲಿ ಹೊಸ ವಸಾಹತುಶಾಹಿ ಯುಗ ಆರಂಭವಾಯಿತು.

ಇನ್ನೊಂದು ಪ್ರಬಲವಾದ ಕಾರಣಕ್ಕೆ ಬ್ರಿಟಿಷರ ಸಾಮ್ರಾಜ್ಯಶಾಹಿ ಪ್ರಭುತ್ವಕ್ಕೆ ಜರ್ಮನಿಯ ಆಗಮನ ಅಡ್ಡಿ ಉಂಟು ಮಾಡುತ್ತದೆ. ಈಗಾಗಲೇ ಪ್ರಸ್ತಾಪಿಸಿರುವಂತೆ ಬ್ರಿಟಿಷರು ಭಾರತವನ್ನು ತಮ್ಮ ಸ್ವತಂತ್ರ ವಸಾಹತುವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಭಾರತಕ್ಕೆ ಉತ್ತರ-ಪಶ್ಚಿಮ ಭಾಗಗಳಿಂದ ಇರಾನ್, ಆಫ್‌ಘಾನಿಸ್ಥಾನ, ಮೆಸಪಟೋಮಿಯ ಮತ್ತು ಗಲ್ಫ್ ಪ್ರಾಂತಗಳಲ್ಲಿ ಬ್ರಿಟಿಷರ ವಸಾಹತು ಚಟುವಟಿಕೆಗಳನ್ನು ರಕ್ಷಿಸುವ ದೃಷ್ಟಿಯಿಂದ ಬಿಗಿ ಬಂದೋಬಸ್ತು ಮತ್ತು ಭದ್ರತೆಯನ್ನು ಕಾಪಾಡಿಕೊಂಡಿತ್ತು. ಈ ಪ್ರಾಂತ್ಯಗಳೊಂದಿಗೆ ಭಾರತ ನೇರ ಸಂಪರ್ಕ ಹೊಂದಿರುವುದರಿಂದ ಬ್ರಿಟಿಷರು ಪಶ್ಚಿಮ ಏಷ್ಯಾ ಕಡೆಯಿಂದ ಭಾರತದಲ್ಲಿ ಬ್ರಿಟಿಷರ ವಸಾಹತುಶಾಹಿ ಆಧಿಪತ್ಯಕ್ಕೆ ಬರಬಹುದಾದ ಎಲ್ಲ ಬೆದರಿಕೆಗಳನ್ನು ಸುಲಭವಾಗಿ ಸದೆಬಡಿಯುತ್ತಿದ್ದರು. ಅಂದರೆ ಬ್ರಿಟಿಷರ ವಸಾಹತು ಆಗಿರುವ ಭಾರತಕ್ಕೆ ಬೇಕಾದ ಭದ್ರತಾ ವ್ಯವಸ್ಥೆಯನ್ನು ಯಶಸ್ವಿಯಾಗಿ ಮೆಸಪಟೋಮಿಯಾ, ಗಲ್ಫ್ ಮತ್ತು ದಕ್ಷಿಣ ಇರಾನ್‌ನಿಂದಲೇ ನಿರ್ವಹಿಸುತ್ತಿದ್ದರು. ಆದರೆ ೨೦ನೆಯ ಶತಮಾನದ ಆರಂಭದಲ್ಲಿ ಅಬ್ದುಲ್ ಹಮೀದ್(ಬ್ರಿಟಿಷರ ದ್ವೇಷಿ)ನ ಸಹಕಾರದಿಂದ ಜರ್ಮನಿ ಗಲ್ಫ್ ಪ್ರದೇಶದವರೆಗೂ ತನ್ನ ವಾಣಿಜ್ಯ ಚಟುವಟಿಕೆಗಳ ವ್ಯಾಪ್ತಿಯನ್ನು ವಿಸ್ತರಿಸಿತ್ತು. ಬ್ರಿಟಿಷರಿಗೆ ಇದು ನುಂಗಲಾರದ ತುತ್ತಾಯಿತು. ಏಕೆಂದರೆ ಗಲ್ಫ್ ಪ್ರಾಂತಗಳಲ್ಲದೆ ಬ್ರಿಟಿಷರು ಇರಾನ್, ಆಫ್‌ಘಾನಿಸ್ತಾನದಲ್ಲಿಯೂ ಅಧಿಕಾರವನ್ನು ಸ್ಥಾಪಿಸಿದ್ದರು. ವಾಣಿಜ್ಯರಂಗದಲ್ಲಿ ಈಗಾಗಲೇ ಬ್ರಿಟನ್-ಜರ್ಮನಿಯ ನಡುವೆ ಪೈಪೋಟಿ ಆರಂಭವಾಗಿದ್ದು, ಈ ಪ್ರಕ್ರಿಯೆಯ ಮುಂದುವರಿಕೆಯಿಂದ ಜರ್ಮನಿ ಗಲ್ಫ್ ಪ್ರಾಂತಗಳಿಂದ ದಕ್ಷಿಣಾಭಿಮುಖವಾಗಿ ವಸಾಹತುಶಾಹಿ ಚಟುವಟಿಕೆಗಳನ್ನು ವೃದ್ದಿಸಿಕೊಂಡರೆ, ಬ್ರಿಟಿಷರು ಅಧಿಕಾರ ಹೊಂದಿರುವ ದಕ್ಷಿಣ ಇರಾನ್, ಆಫ್‌ಘಾನಿಸ್ತಾನ ಮತ್ತು ಸ್ವತಂತ್ರ ವಸಾಹತುವಾದ ಭಾರತದಲ್ಲಿ ಅವರ ಇರುವಿಕೆಯನ್ನೆ ಜರ್ಮನಿ ಕಿತ್ತೆಸೆವ ಸಾಧ್ಯತೆ ವಿಪುಲವಾಗಿವೆ. ಹೀಗೆ ಜರ್ಮನಿಯಿಂದ ಬರಬಹುದಾದ ಒತ್ತಡ ಮತ್ತು ಬೆದರಿಕೆಯನ್ನು ತಡೆಗಟ್ಟಲು ಆರ್ಥಿಕ ಮತ್ತು ರಾಜಕೀಯ ಚಕ್ರಾಧಿಪತ್ಯವನ್ನು ಸ್ಥಾಪಿಸಿ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ಅನಿವಾರ್ಯತೆ ಬ್ರಿಟಿಷರಿಗಿತ್ತು. ಇದು ೨೦ನೆಯ ಶತಮಾನದ ಆರಂಭದಲ್ಲಿ ಪಶ್ಚಿಮ ಏಷ್ಯಾ ಪ್ರಾಂತಗಳಲ್ಲಿ ಹೊಸ ವಸಾಹತುಶಾಹಿ ಯುಗಕ್ಕೆ ಭದ್ರವಾದ ಅಡಿಪಾಯ ಹಾಕಿತು.

ಮೂರನೆಯದಾಗಿ ೨೦ನೆಯ ಶತಮಾನದ ಆರಂಭದಲ್ಲಿ ಬ್ರಿಟಿಷ್ ಭೂಗೋಳ ಶಾಸ್ತ್ರಜ್ಞರು ಗುಪ್ತವಾಗಿ ಪಶ್ಚಿಮ ಏಷ್ಯಾ ಪ್ರಾಂತಗಳಾದ ಇರಾನ್, ಗಲ್ಫ್ ಮತ್ತು ಅರೇಬಿಯಾಗಳಲ್ಲಿ ಪೆಟ್ರೋಲಿಯಂ ಅನ್ನು ಕಂಡುಹಿಡಿದರು. ಬ್ರಿಟನ್ ಈಗಾಗಲೇ ಒಂದು ಬಲಿಷ್ಠ ಕೈಗಾರಿಕಾ ರಾಷ್ಟ್ರವಾಗಿದ್ದು ಅಲ್ಲಿನ ಕೈಗಾರಿಕೆಗಳು ಹೆಚ್ಚು ಪ್ರಮಾಣದಲ್ಲಿ ತೈಲವನ್ನು ಉಪಯೋಗಿಸುವ ಶಕ್ತಿಯನ್ನು ಪಡೆದಿದ್ದವು. ಇದು ಉಳಿದ ಯುರೋಪಿನ ಭಾಗಗಳಲ್ಲಿ ವೃದ್ದಿಸುತ್ತಲೇ ಇತ್ತು. ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೇಡಿಕೆ ಗಗನಕ್ಕೇರಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುತ್ತಿರುವ ತೈಲ ಬೆಲೆಯನ್ನು ಗಮನಿಸಿದ ಬ್ರಿಟಿಷರು ಪಶ್ಚಿಮ ಏಷ್ಯಾದ ಪೆಟ್ರೋಲಿಯಂ ಉತ್ಪನ್ನಗಳಿಗೆ ಶ್ರೀಮಂತವಾಗಿರುವ ಮೆಸಪಟೋಮಿಯ ಮತ್ತು ಗಲ್ಫ್ ಪ್ರಾಂತಗಳಲ್ಲಿ(ಜರ್ಮನಿಯ ಆಗಮನದ ಹೊತ್ತಿಗೆ) ಆದಷ್ಟು ಬೇಗ ರಾಜಕೀಯ ಮತ್ತು ಆರ್ಥಿಕ ಪ್ರಭುತ್ವವನ್ನು ಹೇರಲು ಮುಂದಾಯಿತು. ಆದರೆ ಜರ್ಮನಿಯು ತನ್ನ ವ್ಯಾಪಾರ ವಾಣಿಜ್ಯ ವಹಿವಾಟುಗಳನ್ನು ಬ್ರಿಟಿಷರು ಹೊಸದಾಗಿ ತೈಲ ಉತ್ಪನ್ನಗಳನ್ನು ಕಂಡುಹಿಡಿದ ಪ್ರದೇಶಗಳಲ್ಲಿಯೇ ಆರಂಭಿಸಿತ್ತು. ಇದು ಮತ್ತೊಂದು ರೀತಿಯಲ್ಲಿ ಜರ್ಮನಿ ಬ್ರಿಟಿಷ್ ವಸಾಹತು ಸ್ಥಾಪನೆಗೆ ತಂದೊಡ್ಡಿದ ಸವಾಲು. ಬ್ರಿಟಿಷರ ಆಂತರಿಕ ಸಮಸ್ಯೆಗಳಾದ ಮಾರುಕಟ್ಟೆಗಳ ವೃದ್ದಿ, ಅಧಿಕ ಉತ್ಪನ್ನಗಳ ರಫ್ತು, ಹೊಸ ಜಗಗಳಲ್ಲಿ ಬಂಡವಾಳ ಹೂಡಿಕೆ ಇತ್ಯಾದಿ ಗುರಿಗಳನ್ನು ಪಶ್ಚಿಮ ಏಷ್ಯಾದಲ್ಲಿ ಪರಿಹರಿಸಿ ಕೊಳ್ಳಬೇಕೆಂಬ ಆಸಕ್ತಿಗಳಿಗೆ ಜರ್ಮನಿ ಅಡ್ಡಗಾಲು ಹಾಕಿತು. ಇಂತಹ ವಸಾಹತುಶಾಹಿ ಪೈಪೋಟಿ ಮುಂದೆ ಪಶ್ಚಿಮ ಏಷ್ಯಾದಲ್ಲಿ ಸ್ವತಂತ್ರ ವಸಾಹತುಗಳ ಸ್ಥಾಪನೆ ಮತ್ತು ಕ್ರೋಡೀಕರಣಕ್ಕೆ ಚಾಲನೆ ನೀಡಿತು.

ಮೆಸಪಟೋಮಿಯ ಮತ್ತು ಗಲ್ಫ್ ಪ್ರಾಂತಗಳಲ್ಲಿ ಜರ್ಮನಿಯ ಹೊಸ ವಸಾಹತುಶಾಹಿ ಚಟುವಟಿಕೆಗಳು ಬ್ರಿಟಿಷರ ವಾಣಿಜ್ಯ ಆಸಕ್ತಿಗಳನ್ನು ಮಾತ್ರ ಬೆದರಿಕೆಗೆ ಒಟ್ಟಿರಲಿಲ್ಲ. ಬದಲಾಗಿ ಮೆಡಿಟರೇನಿಯನ್ ಜಗತ್ತಿನ ಬಾಲ್ಕನ್ ಸ್ಟ್ರೈಟ್ ಮತ್ತು ಉತ್ತರ ಇರಾನ್ ಪ್ರಾಂತ್ಯಗಳಲ್ಲಿ ರಷ್ಯಾದ ವಾಣಿಜ್ಯ ವ್ಯವಹಾರ ಹಾಗೂ ಸಿರಿಯಾ ಮತ್ತು ಲೆಬನಾನ್ ಪ್ರಾಂತ್ಯದಲ್ಲಿ ಫ್ರೆಂಚರ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೂ ತಡೆ ಒಡ್ಡಿತು. ಬ್ರಿಟಿಷರಂತೆ ರಷ್ಯಾ ಮತ್ತು ಫ್ರಾನ್ಸ್ ಸಹ ೧೯ನೆಯ ಶತಮಾನದ ಆರಂಭದಿಂದಲೇ ಈ ಪ್ರದೇಶದಲ್ಲಿ ವ್ಯಾಪಾರ ಮತ್ತು ಇನ್ನಿತರ ವಸಾಹತು ಶಾಹಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದವು. ೨೦ನೆಯ ಶತಮಾನದಲ್ಲಿ ಜರ್ಮನಿಯ ವ್ಯಾಪಾರ ಚಟುವಟಿಕೆಗಳ ವ್ಯಾಪ್ತಿಗೆ ಸೇರುವ ಮೆಸಪಟೋಮಿಯ ಮತ್ತು ಗಲ್ಫ್ ಮಾರುಕಟ್ಟೆಗಳು ಫ್ರಾನ್ಸ್‌ನ ವಸಾಹತುಗಳಾದ ಸಿರಿಯಾ ಮತ್ತು ಲೆಬನಾನ್ ಹಾಗೂ ರಷ್ಯಾದ ವಸಾಹತುವಾದ ಉತ್ತರ ಇರಾನ್‌ನ ಪ್ರದೇಶಗಳ ಗಡಿರೇಖೆಗಳು ಬಹಳ ಸಮೀಪದಲ್ಲಿವೆ. ಹಾಗಾಗಿ ಜರ್ಮನ್ ವಸಾಹತುಶಾಹಿ ಪ್ರಭುತ್ವವು ಬ್ರಿಟಿಷರ ಇರುವಿಕೆ ಯನ್ನು(ದಕ್ಷಿಣ ಇರಾನ್, ಆಫ್‌ಘಾನಿಸ್ತಾನ, ಮೆಸಪಟೋಮಿಯಾ ಮತ್ತು ಗಲ್ಫ್‌ನಲ್ಲಿ) ಅಸ್ಥಿರಗೊಳಿಸಿದ ಹಾಗೆ ಸಿರಿಯಾ ಮತ್ತು ಲೆಬನಾನ್‌ನಲ್ಲಿ ಫ್ರೆಂಚರ ವಸಾಹತುಶಾಹಿ ಪ್ರಭುತ್ವ ಮತ್ತು ಉತ್ತರ ಇರಾನ್‌ನಲ್ಲಿ ರಷ್ಯಾದ ಇರುವಿಕೆಯನ್ನು ಅಸ್ಥಿರಗೊಳಿಸುತ್ತದೆ.

ಜರ್ಮನಿಯ ಬೆದರಿಕೆಯಿಂದ ಬ್ರಿಟಿಷರ ಪ್ರಭುತ್ವವನ್ನು ರಕ್ಷಿಸಿಕೊಳ್ಳುವುದು ಎಷ್ಟು ಅಗತ್ಯವೋ ಅಷ್ಟೇ ಅಗತ್ಯ ರಷ್ಯಾ ಮತ್ತು ಫ್ರಾನ್ಸ್‌ಗೂ ಇದೆ. ಏಕೆಂದರೆ ಜರ್ಮನಿ ಬಹಳ ತಡವಾಗಿ ಈ ವಸಾಹತುಶಾಹಿ ಕಾರ್ಯಾಚರಣೆಗೆ ಧುಮುಕಿದರೂ ಕೂಡ ಅದು ತನ್ನ ಚಟುವಟಿಕೆಗಳನ್ನು ಪಶ್ಚಿಮ ಏಷ್ಯಾದಲ್ಲಿ ಬಲು ಬೇಗನೆ ಕ್ರೋಡೀಕರಿಸಿಕೊಂಡಿತು. ಮಾತ್ರವಲ್ಲ ಆಟೋಮನ್ ಸರಕಾರದ ವೈಫಲ್ಯವನ್ನು ಉಪಯೋಗಿಸಿಕೊಂಡು ಇಡೀ ಮಧ್ಯ ಪೂರ್ವ ಮತ್ತು ಪಶ್ಚಿಮಏಷ್ಯಾ ಜಗತ್ತಿನಲ್ಲಿ ಏಕಾಧಿಪತ್ಯವನ್ನು ಸ್ಥಾಪಿಸಲು ಮುನ್ನುಗ್ಗಿತು. ಇಂತಹ ಯತ್ನ ಬ್ರಿಟಿಷ್, ಫ್ರೆಂಚ್ ಮತ್ತು ರಷ್ಯಾನ್ನರಿಗೆ ಸ್ವಾಗತಾರ್ಹ ವಾಗಿರಲಿಲ್ಲ. ಮುಖ್ಯವಾಗಿ ಬ್ರಿಟಿಷ್ ಮತ್ತು ರಷ್ಯಾನ್ನರ ಚಟುವಟಿಕೆಗಳ ದೃಷ್ಟಿಯಿಂದ ಗಲ್ಫ್ ಮಾರುಕಟ್ಟೆಗೆ ಬಹಳ ಹತ್ತಿರವಾದ ಮತ್ತು ಆಯಕಟ್ಟಿನ ಪ್ರದೇಶ ಶಟ್-ಅಲ್-ಅರಬ್-ವಾಟರ್. ಹಲವು ಶತಮಾನಗಳಿಂದಲೂ ಈ ಆಯಕಟ್ಟಿ ಪ್ರದೇಶ ಪಶ್ಚಿಮ ಮತ್ತು ಪೂರ್ವ ದೇಶಗಳ ನಡುವಿನ ಒಂದು ಸೇತುವೆಯಾಗಿ, ಸಂಪರ್ಕಕ್ಕೆ ಪ್ರವೇಶ ದ್ವಾರವಾಗಿಯೂ ಕಾರ್ಯ ನಿರ್ವಹಿಸಿತ್ತು. ಮಾತ್ರವಲ್ಲ ಇದು ಇರಾನ್‌ನ ಪಶ್ಚಿಮ ಭಾಗದಲ್ಲಿದ್ದು ದಕ್ಷಿಣ ಮತ್ತು ಉತ್ತರ ಇರಾನ್‌ಗೆ ಮಧ್ಯದಲ್ಲಿ ಗಡಿಯಾಗಿತ್ತು. ಯಾವುದೇ ವಸಾಹತುಶಾಹಿ ರಾಷ್ಟ್ರ ಈ ಪ್ರಾಂತ್ಯದ ಮೇಲೆ ಹಿಡಿತ ಸಾಧಿಸಿದರೆ ಅದು ಬಹಳ ಸುಲಭವಾಗಿ ಗಲ್ಫ್, ಮೆಸಪಟೋಮಿಯ, ದಕ್ಷಿಣ ಮತ್ತು ಉತ್ತರ ಇರಾನ್‌ನಲ್ಲಿ ಮಾರುಕಟ್ಟೆಗಳಿಗೆ ನೇರ ಸಂಪರ್ಕವನ್ನು ಬೆಳೆಸಲು ಯಶಸ್ವಿಯಾಗುತ್ತದೆ. ಈ ಹಿಂದೆ ಚರ್ಚಿಸಿದಂತೆ ಜರ್ಮನಿ ಅಬ್ದುಲ್ ಹಮೀದ್‌ನಿಂದ ಅಂಕಾರ-ಇಜಮತ್ ರೈಲು ಮಾರ್ಗ ನಿರ್ಮಾಣದ ಹಕ್ಕನ್ನು ಪಡೆದು ಬಾಗ್ದಾದ್(ಮೆಸಪಟೋಮಿಯಾದ ಬೃಹತ್ ರೇವು ಪಟ್ಟಣ) ಮತ್ತು ಶಟ್-ಅಲ್ -ಅರಬ್ ವಾಟರ್ ನಡುವೆ ಸಂಪರ್ಕವನ್ನು ಆಧುನೀಕರಿಸಿತು. ಮಾತ್ರವಲ್ಲ ಈ ರೈಲು ದಾರಿಯ ಪ್ರಯೋಜನ ಪಡೆಯಲು ವಿಶೇಷ ಹಕ್ಕನ್ನು ಪಡೆಯಿತು. ಇದರ ಉಪಯೋಗವನ್ನು ಬಳಸಿಕೊಂಡು ಜರ್ಮನಿ ವಾಣಿಜ್ಯ ರಂಗದಲ್ಲಿ ಶಟ್-ಅಲ್-ಅರಬ್-ವಾಟರ್ ಪ್ರದೇಶದ ಮೇಲೆ ತನ್ನದೇ ಹಿಡಿತವನ್ನು ಸಾಧಿಸಿದ್ದು ಅಲ್ಲದೆ ತನ್ನ ವ್ಯಾಪಾರ ಆಸಕ್ತಿಗಳನ್ನು ರಕ್ಷಿಸಿಕೊಳ್ಳಲು ಇಲ್ಲಿ ತನ್ನದೆ ಸ್ವತಂತ್ರ ಸೈನ್ಯವನ್ನು ಸಂಘಟಿಸಿತು. ಈಗ ಜರ್ಮನಿ ಯಾವುದೇ ಸಮಯದಲ್ಲೂ ಈ ಆಯಕಟ್ಟು ಸ್ಥಳದ ಪ್ರಯೋಜನವನ್ನು ಪಡೆದು ಉತ್ತರ ಇರಾಕ್ ಅಥವಾ ದಕ್ಷಿಣ ಇರಾನ್‌ನ ಮೇಲೆ ದಾಳಿ ಮಾಡಬಹುದು ಅಥವಾ ಸುಲಭವಾಗಿ ಆಕ್ರಮಿಸಬಹುದು. ಇಂತಹ ಕಾರ್ಯಚರಣೆ ನೇರವಾಗಿ ಉತ್ತರದಲ್ಲಿ ರಷ್ಯಾನ್ನರನ್ನು ಮತ್ತು ದಕ್ಷಿಣದಲ್ಲಿ ಬ್ರಿಟಿಷರ ಪ್ರಭುತ್ವವನ್ನು ಹತ್ತಿಕ್ಕುತ್ತದೆ.

ಜರ್ಮನಿಯು ಒಡ್ಡುವ ಬೆದರಿಕೆಯ ಸ್ವರೂಪವನ್ನು ಗಂಭೀರವಾಗಿ ಗಮನಿಸಿ ಬ್ರಿಟನ್, ಫ್ರಾನ್ಸ್ ಮತ್ತು ರಷ್ಯಾ ಸೇಡು ತೀರಿಸಿಕೊಳ್ಳಲು ಸಂಚು ಹೂಡಿದವು. ಆದರೆ ಈ ಮೂರು ರಾಷ್ಟ್ರಗಳು ಬಲಿಷ್ಠವಾಗಿದ್ದರೂ ಕೂಡ ವೈಯಕ್ತಿಕ ನೆಲೆಯಲ್ಲಿ ಬ್ರಿಟನ್ ಆಗಲಿ, ರಷ್ಯಾ ಆಗಲಿ ಅಥವಾ ಫ್ರಾನ್ಸ್ ಆಗಲಿ ಜರ್ಮನಿ ವಿರುದ್ಧ ಸೈನಿಕ ಕಾರ್ಯಾಚರಣೆ ನಡೆಸಿ ಸದೆ ಬಡಿಯುವ ಧೈರ್ಯ ಮಾಡಲಿಲ್ಲ. ಏಕೆಂದರೆ ಈ ಮೂರು ಬಂಡವಾಳಶಾಹಿ ದೇಶಗಳಂತೆ ಜರ್ಮನಿಯು ಸಮಾನವಾಗಿ ಎಲ್ಲ ರಂಗದಲ್ಲಿ ಮುಂದುವರಿದಿದ್ದು, ಬಲಿಷ್ಠ ಹಾಗು ತರಬೇತಿ ಹೊಂದಿದ ವಾಯುದಳ, ಭೂದಳ ಮತ್ತು ನೌಕಾದಳವನ್ನು ಹೊಂದಿದ್ದು, ಯಾವುದೇ ಕ್ಷಣದಲ್ಲಿಯೂ ಈ ದೇಶಗಳಿಗೆ ಪೈಪೋಟಿ ನೀಡಲು ಹಿಂಜರಿ ಯುತ್ತಿರಲಿಲ್ಲ. ಆದರೂ ಮೂರು ದೇಶಗಳಿಗೆ ಏಕೈಕ ಎದುರಾಳಿ ಜರ್ಮನಿ ಒಂದು ಕಡೆಯಾದರೆ, ತಾವು ಸಾಂಪ್ರದಾಯಿಕವಾಗಿ ಅನುಭವಿಸುತ್ತಿದ್ದ ವಾಣಿಜ್ಯ-ವ್ಯಾಪಾರ ಹಕ್ಕುಗಳು ಮತ್ತು ಆರ್ಥಿಕ ಆಸಕ್ತಿಗಳಿಗೆ ಚ್ಯುತಿ ಬರುವಂತೆ ಆಬ್ದುಲ್ ಹಮೀದ್ ಜರ್ಮನಿಯೊಂದಿಗೆ ಬೆಳೆಸಿದ ಒಪ್ಪಂದದಿಂದ ಆಟೋಮನ್ ಸರಕಾರವು ಇನ್ನೊಂದು ಕಡೆಯಿಂದ ವೈರಿಯಾಗಿ ಮೂಡಿಬಂದಿತು. ವಸಾಹತುಶಾಹಿ ರಂಗದಲ್ಲಿ ಹುಟ್ಟಿಕೊಂಡ ಪೈಪೋಟಿ ಮತ್ತು ಬೆದರಿಕೆಯನ್ನು ಮುಖ್ಯವಾಗಿ ರಷ್ಯಾ ಮತ್ತು ಬ್ರಿಟನ್ ಜೊತೆಯಾಗಿ ಎದುರಿಸಲು ಮುಂದಾದವು. ಆ ಎರಡೂ ದೇಶಗಳ ಪ್ರಥಮ ಗುರಿ ಜರ್ಮನಿ ಮತ್ತು ಆಟೋಮನ್ ಸರಕಾರದ ವಿರುದ್ಧ ಸೇಡು ತೀರಿಸಿಕೊಂಡು ಪಶ್ಚಿಮ ಏಷ್ಯಾದ ಎಲ್ಲ ಭಾಗಗಳಲ್ಲಿ ತಮ್ಮದೇ ಸ್ವತಂತ್ರ ವಸಾಹತುಗಳನ್ನು ಸ್ಥಾಪಿಸಿ, ವಸಾಹತುಶಾಹಿ ಪ್ರಭುತ್ವವನ್ನು ಅನುಷ್ಠಾನಗೊಳಿಸುವುದು, ಈ ಸಾಮ್ರಾಜ್ಯಶಾಹಿ ತಂತ್ರ ೧೯೧೪ರಲ್ಲಿ ಪ್ರಥಮ ಮಹಾ ಯುದ್ಧಕ್ಕೆ ಕಾರಣವಾಯಿತು.

ಪೂರ್ವಯೋಜಿತವಾಗಿ ೧೯೦೭ರಲ್ಲಿ ಬ್ರಿಟಿಷರು ಮತ್ತು ರಷ್ಯಾನ್ನರು ಆಂಗ್ಲೋ-ರಷ್ಯಾನ್ ಒಪ್ಪಂದಕ್ಕೆ ಸಹಿ ಹಾಕಿ ಇರಾನ್‌ನಲ್ಲಿ ತಮ್ಮ ತಮ್ಮ ವಸಾಹತುಶಾಹಿ ಚಟುವಟಿಕೆ ಗಳಿಗೆ ಜರ್ಮನಿಯಿಂದ ಬೆದರಿಕೆ ಬಾರದಂತೆ ರಕ್ಷಿಸಲು ಸಂಚು ಹೂಡಿದರು. ಉತ್ತರ ಇರಾನ್ ರಷ್ಯಾನ್ನರಿಗೆ, ದಕ್ಷಿಣ ಇರಾನ್ ಬ್ರಿಟಿಷರಿಗೆಂದು ಒಪ್ಪಂದದಲ್ಲಿ ಷರತ್ತು ಮಾಡಲಾಗಿತ್ತು. ಪರಸ್ಪರ ಸೌಹಾರ್ದತೆಯಿಂದ ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಇನ್ನು ಮುಂದೆ ಬಗೆಹರಿಸಿಕೊಳ್ಳಲು ನಿರ್ಧರಿಸಲಾಯಿತು. ಒಂದು ವೇಳೆ ಬ್ರಿಟನ್ ಮೂರನೆಯ ದೇಶದೊಂದಿಗೆ ಯುದ್ಧಕ್ಕಿಳಿದರೆ, ಒಪ್ಪಂದದ ಪ್ರಕಾರ ರಷ್ಯಾ ನಿರ್ಲಿಪ್ತ ನೀತಿಯನ್ನು ಪಾಲಿಸುವುದು; ಹಾಗೇ ರಷ್ಯಾದವರು. ಆದರೆ ಇರಾನ್ ಪ್ರಾಂತವು ಅಂತಾರಾಷ್ಟ್ರೀಯ ಯುದ್ಧದಲ್ಲಿ ಭಾಗವಹಿಸಿದರೆ ಎರಡೂ ರಾಷ್ಟ್ರಗಳು ಜೊತೆಯಾಗಿ ವೈರಿಯ ವಿರುದ್ಧ ಸೆಣಸಾಡಿ ಶಾಂತಿಯನ್ನು ಪುನರ್‌ಸ್ಥಾಪಿಸಲು ಒಪ್ಪಂದ-ಒಪ್ಪಿಗೆ ನೀಡಿತು. ಬ್ರಿಟಿಷ್ ಮತ್ತು ರಷ್ಯಾ ದೇಶಗಳ ನಡುವಿನ ಈ ಒಪ್ಪಂದ ತಾತ್ಕಾಲಿಕವಾಗಿದ್ದು ಜರ್ಮನ್ ವಸಾಹತುಶಾಹಿ ಹಕ್ಕುಗಳನ್ನು ಗಲ್ಫ್ ಪ್ರಾಂತಕ್ಕೆ ಅದುಮಿ ಅಲ್ಲಿಂದ ವೃದ್ದಿಸದಂತೆ ನೋಡಿಕೊಳ್ಳುವ ಸಂಚು ಇದಾಗಿದೆ. ಈ ನಿರ್ಣಯ ಮುಖ್ಯವಾಗಿ ಬ್ರಿಟಿಷರಿಗೆ ಹೆಚ್ಚು ಸಹಕಾರಿಯಾಗಿತ್ತು. ಏಕೆಂದರೆ ಬ್ರಿಟಿಷರು ಗುಪ್ತವಾಗಿ ಜರ್ಮನಿ ವಿರುದ್ಧ ಸೈನಿಕ ಕಾರ್ಯಾಚರಣೆ ನಡೆಸುವ ಪ್ರಯತ್ನಕ್ಕೆ ಪರೋಕ್ಷವಾಗಿ ರಷ್ಯಾದ ಬೆಂಬಲ ದೊರೆಯಿತು.

ಬ್ರಿಟಿಷರು ಜರ್ಮನಿಯನ್ನು ದ್ವೇಷಿಸಿದಷ್ಟೆ, ಆಟೋಮನ್ ಸರಕಾರವನ್ನು ವಿರೋಧಿಸುತ್ತಿತ್ತು. ಬ್ರಿಟಿಷರಿಗೆ ಆದಷ್ಟು ಬೇಗ ಜರ್ಮನಿಯನ್ನು ಸೋಲಿಸಿ ಆಟೋಮನ್ ಸಾಮ್ರಾಜ್ಯಕ್ಕೆ ಒಳಪಡುವ ಪ್ರದೇಶಗಳಲ್ಲಿ ಆರ್ಥಿಕ ಮತ್ತು ರಾಜಕಿಯ ಪ್ರಭುತ್ವವನ್ನು ಸಾರ್ವತ್ರಿಕವಾಗಿ ಹೇರುವುದು ಅನಿವಾರ್ಯವಾಗಿತ್ತು.

೧. ಮೆಸಪಟೋಮಿಯಾ ಮತ್ತು ಗಲ್ಫ್ ಪ್ರದೇಶಗಳು ಜರ್ಮನ್ ವ್ಯಾಪಾರಿ ಸಂಸ್ಥೆಗಳ ಆಗಮನದ ಮೊದಲು ಬ್ರಿಟಿಷರು ಅಲ್ಲಿನ ವಾಣಿಜ್ಯ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಲಭ್ಯವಾಗಿದ್ದವು ಮತ್ತು ಬ್ರಿಟನ್ ನ ಆಂತರಿಕ ಸಮಸ್ಯೆಗಳಿಗೆ ಸ್ಪಂದಿಸುವ ದೃಷ್ಟಿಯಿಂದ ಈ ಪ್ರದೇಶಗಳಲ್ಲಿ ಬ್ರಿಟಿಷರು ಅಧಿಕಾರವನ್ನು ಭದ್ರಪಡಿಸುವುದು ಒಂದು ಮುಖ್ಯ ಗುರಿ.

೨. ೨೦ನೆಯ ಶತಮಾನದ ಆರಂಭದಲ್ಲೇ ಬ್ರಿಟೀಷ್ ಭೂಗೋಳಶಾಸ್ತ್ರಜ್ಞರು ಈ ಎಲ್ಲ ಪ್ರಾಂತಗಳಲ್ಲಿ ತೈಲ ಬಾವಿಗಳನ್ನು ಕಂಡುಹಿಡಿದಿದ್ದು ಜರ್ಮನಿ ಈ ಬೆಳವಣಿಗೆಯನ್ನು ಗಮನಿಸುವ ಮೊದಲೇ ಬ್ರಿಟಿಷರು ತೈಲದಿಂದ ಶ್ರೀಮಂತವಾಗಿರುವ ಭೂಭಾಗದ ರಾಜಕೀಯ ಮತ್ತು ಆರ್ಥಿಕ ಆಧಿಪತ್ಯವನ್ನು ಸ್ಥಾಪಿಸಲು ಹೆಚ್ಚು ಗಮನ ನೀಡಿದರು.

೩. ಬ್ರಿಟಿಷರ ಈ ಆಸಕ್ತಿಗಳು ಯಶಸ್ಸು ಸಾಧಿಸಲು ಆಟೋಮನ್ ಸಾಮ್ರಾಟ ಅಬ್ದುಲ್ ಹಮೀದ್, ಜರ್ಮನಿಯೊಂದಿಗೆ ಸೇರಿ ಆ ಪ್ರದೇಶಗಳಿಗೆ ಪ್ರವೇಶಿಸದಂತೆ ಸೇನಾ ಕಾರ್ಯಚರಣೆಯಲ್ಲಿ ತೊಡಗಿದರು.

ಅದೇ ಸಂದರ್ಭದಲ್ಲಿ ಆಟೋಮನ್ ಆಡಳಿತ ವ್ಯಾಪ್ತಿಗೆ ಒಳಪಡುವ ಅರಬ್ ಪ್ರಾಂತಗಳ ಜನರು ರಾಷ್ಟ್ರೀಯ ಆಂದೋಲನವನ್ನು ರೂಪಿಸಲು ಸನ್ನದ್ಧರಾಗಿದ್ದರು ಮತ್ತು ಯಂಗ್ ಟರ್ಕರು ಹಮೀದ್ ವಿರುದ್ಧ ಕ್ರಾಂತಿ ನಡೆಸಿ ಅವನ ನಿರಂಕುಶ ಪ್ರಭುತ್ವದ ಆಡಳಿತವನ್ನು ನಿರ್ನಾಮ ಮಾಡುವ ನಿರ್ಧಾರದಲ್ಲಿದ್ದರು. ಬ್ರಿಟಿಷರು ಇಂತಹ ಸಾಮಾಜಿಕ ಮತ್ತು ರಾಜಕೀಯ ಬಿಕ್ಕಟ್ಟನ್ನು ಬಳಸಿಕೊಂಡು ಹಲವು ಬಗೆಯ ಯತ್ನಗಳನ್ನು ಮಾಡಲಾರಂಭಿಸಿದರು. ಇಲ್ಲಿ ಜರ್ಮನ್ ಜೊತೆಗೆ ಆಟೋಮನ್ ಸರಕಾರವು ಬ್ರಿಟಿಷರ ವಿರೋಧಿಯಾಗಿರುವುದರಿಂದ ಅಲ್ಲಿನ ಪ್ರಜೆಗಳನ್ನೇ ಎತ್ತಿಕಟ್ಟಿ ಸರಕಾರದ ವಿರುದ್ಧ ದಂಗೆ ಏಳಲು ಪರೋಕ್ಷವಾಗಿ ಬ್ರಿಟಿಷ್ ಸರಕಾರ ಪ್ರೋ ಅಂದರೆ ರಾಜಕೀಯವಾಗಿ ಅರಬ್ ಪ್ರಾಂತಗಳು, ಗಲ್ಫ್ ಪ್ರಾಂತಗಳು ಆಟೋಮನ್ ಸರಕಾರದ ಅಧೀನಕ್ಕೆ ಒಳಪಟ್ಟಿದ್ದರೂ, ಕೂಡ ಬ್ರಿಟಿಷರು ಆ ಪ್ರಾಂತಗಳನ್ನು ಸುಲಭವಾಗಿ ಆಕ್ರಮಿಸಲು ಆಟೋಮನ್ ಸರಕಾರದ ಅನುಮತಿಯನ್ನು ಕೋರುವ ಬದಲು, ಪ್ರಾದೇಶಿಕ ಮಟ್ಟದಲ್ಲಿ ಹುಟ್ಟಿಕೊಂಡ ಪ್ರಬಲ ಅರಬ್ ಮುಖಂಡರೊಂದಿಗೆ ಗುಪ್ತವಾಗಿ ಸಮಾಲೋಚಿಸಿ ಒಪ್ಪಂದಗಳನ್ನು ಮಾಡಿಕೊಳ್ಳಲು ಯತ್ನ ನಡೆಸಿದರು.

ಆಟೋಮನ್ ಸಾಮ್ರಾಜ್ಯ ಬಾಹ್ಯಶಕ್ತಿಗಳ ಹಸ್ತಕ್ಷೇಪದೊಂದಿಗೆ, ರಾಜಕೀಯ ಅಸ್ಥಿರತೆ, ಆರ್ಥಿಕ ಬಿಕ್ಕಟ್ಟು, ಸೈನಿಕ ದುರ್ಬಲತೆ, ಜನಾಂಗೀಯ ಕಲಹ, ಇತ್ಯಾದಿ ಸಮಸ್ಯೆಗಳಿಂದ ತತ್ತರಿಸುವಾಗಲೇ (೧೯ನೆಯ ಶತಮಾನದ ಆರಂಭದಲ್ಲಿ ಬಾಲ್ಕನ್ ಕ್ರೈಸ್ತ ಮತದವರಂತೆ) ಪ್ರಜೆಗಳಾದ ಅರಬ್ ಜನಾಂಗದವರು ತಾವು ವಾಸವಾಗಿರುವ ಭೂಪ್ರದೇಶವನ್ನು ಆಟೋಮನ್ ಆಳ್ವಿಕೆಯಿಂದ ಸ್ವತಂತ್ರಗೊಳಿಸಿ ತಮ್ಮದೇ ರಾಜಂಗ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದರು. ಎರಡು ಅರಬ್ ಕುಟುಂಬದವರು ಅರೇಬಿಯಾದ ಮಧ್ಯೆ ಮತ್ತು ದಕ್ಷಿಣ ಭಾಗದಲ್ಲಿ ಸೌದಿ ಕುಟುಂಬದವರು ಅಬ್ದುಲ್ ಅಜೀಜ್ ಇಬ್ನ ಸೌದ್‌ನ ನೇತೃತ್ವದಲ್ಲಿ ಮತ್ತು ಉತ್ತರ ಭಾಗದಲ್ಲಿ ಹಷಿಮತ್ ಕುಟುಂಬಕ್ಕೆ ಸೇರಿದ ಅರಬರು ಮೆಕ್ಕಾದ ಶರೀಫನಾದ ಹುಸೇನ್‌ನ ಅನುಯಾಯಿಗಳೆಂದು ಗುರುತಿಸಿಕೊಂಡು ಆಟೋಮನ್ ಏಕಾಧಿಪತ್ಯವನ್ನು ವಿರೋಧಿಸಲು ಮುಂದಾದರು.

ತಮ್ಮ ಸಾಮ್ರಾಟನಾದ ಅಬ್ದುಲ್ ಹಮೀದ್‌ನ ದುರಾಡಳಿತ, ದಬ್ಬಾಳಿಕೆ ಮತ್ತು ಶೋಷಣೆಗಳ ವಿರುದ್ಧ ದಂಗೆ ಎದ್ದ ಮುಖಂಡರಲ್ಲಿ ಸೌದಿ ದೊರೆ ಅಬ್ದುಲ್ ಅಜೀಜ್ ಇಬ್ನ ಸೌದ್ ಮೊದಲಿಗನು. ೧೯೦೦ರಿಂದಲೇ ತನ್ನ ಬೆಂಗಲಿಗರೊಂದಿಗೆ ಸೈನಿಕ ಕಾರ್ಯಾಚರಣೆಯಲ್ಲಿ ವ್ಯವಸ್ಥಿತವಾಗಿ ತೊಡಗಿದ್ದು ದಕ್ಷಿನ, ಮಧ್ಯ ಮತ್ತು ಉತ್ತರ ಅರೇಬಿಯಾದ ಪ್ರಾಂತಗಳನ್ನು ಆಕ್ರಮಿಸಿ ಮರೆತುಹೋದ ಅರಬ್ ಸಾಮ್ರಾಜ್ಯದ ಪುನರ್‌ಸ್ಥಾಪನೆಯನ್ನು ೧೯೧೫ರ ಸುಮಾರಿಗೆ ಘೋಷಿಸಿದನು. ಇದಕ್ಕುತ್ತರವಾಗಿ ಉತ್ತರ ಭಾಗದಲ್ಲಿ ಹಷಿಮತ್ ದೊರೆ ಶರೀಫ್ ಹುಸೇನನು ತನ್ನ ಬೆಂಬಲಿಗರೊಂದಿಗೆ ರಾಷ್ಟ್ರೀಯ ವಾದಿ ಚಳುವಳಿಯನ್ನು ಆರಂಭಿಸಿ ಅದರ ಯಶಸ್ಸಿಗೆ ಬಾಹ್ಯಶಕ್ತಿಗಳ ಸಹಕಾರವನ್ನು ಕೋರಿದನು. ಈ ಚಳುವಳಿಯು ಆಟೋಮನ್ ಸರಕಾರದ ವಿರುದ್ಧವಾಗಿದ್ದುದನ್ನು ಗಮನಿಸಿದ ಬ್ರಿಟಿಷರು ಈಜಿಪ್ಟ್‌ನಲ್ಲಿ ಇಂಗ್ಲೆಂಡ್‌ನ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಹೆನ್ರಿ ಮೆಕ್ ಮೋಹನ್‌ನನ್ನು ಶರೀಫ್ ಹುಸೇನನೊಂದಿಗೆ ಸಮಾಲೋಚನೆ ನಡೆಸಿ, ಮೊದಲ ಯುದ್ಧದಲ್ಲಿ ಜರ್ಮನಿ ಮತ್ತು ಆಟೋಮನ್ ಸಾಮ್ರಾಜ್ಯದ ವಿರುದ್ಧ ಒಕ್ಕೂಟ ಶಕ್ತಿಗಳ ಪರವಾಗಿ ಅರಬ್ಬರನ್ನು ಯುದ್ಧ ಸಾರಲು ಸಂಚು ಹೂಡಲು ಕಳುಹಿಸಿ ಕೊಡಲಾಯಿತು. ಇಲ್ಲಿ ಮುಖ್ಯವಾಗಿ ಅರಬ್ ರಾಷ್ಟ್ರೀಯ ಚಳುವಳಿಗೆ ತಮ್ಮ ಸಹಕಾರವನ್ನು ವ್ಯಕ್ತಪಡಿಸಿ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷರ ಹಿತರಕ್ಷಣೆಯನ್ನು ಕಾಪಾಡಲು ಸಹಕರಿಸಿದ ಪ್ರತಿಫಲವಾಗಿ, ಯುದ್ಧ ಮುಗಿದ ಕೂಡಲೇ ಅವರಿಗೆ ಸ್ವತಂತ್ರ ರಾಜಂಗ ನಿರ್ಮಿಸಲು ಅವಕಾಶ ನೀಡುವುದಾಗಿ ಪೊಳ್ಳು ಆಶ್ವಾಸನೆಯನ್ನು ಅರಬ್ ಮುಖಂಡರಿಗೆ ನೀಡಿದರು. ಆದರೆ ಬ್ರಿಟಿಷರ ಮೂಲ ಉದ್ದೇಶ ತೈಲ ಉತ್ಪಾದನೆಗೆ ಶ್ರೀಮಂತವಾಗಿರುವ ಈ ಎಲ್ಲ ಅರಬ್ ಪ್ರಾಂತಗಳನ್ನು ಆದಷ್ಟು ಬೇಗ ಆಕ್ರಮಿಸುವುದು ಮತ್ತು ಸ್ಥಳೀಯ ಅರಬ್ಬರ ಸಹಕಾರದಿಂದ ಅವರ ಸಾಮ್ರಾಟನನ್ನೇ ಹತ್ತಿಕ್ಕುವುದು ಹಾಗೂ ಜರ್ಮನಿಯ ವಸಾಹತುಶಾಹಿ ಚಟುವಟಿಕೆಗಳನ್ನು ನಿರ್ಮೂಲನಗೊಳಿಸಿ ಇಡೀ ಅರಬ್ ಜಗತ್ತಿಗೆ ತಾವೇ ಒಡೆಯರೆಂದು ಘೋಷಿಸಿವುದು. ಶರೀಫ್ ಹುಸೇನ್-ಮೆಕ್ ಮೋಹನ್ ನಡುವೆ ೧೯೧೫ರಲ್ಲಿ ನಡೆದ ಒಪ್ಪಂದದಂತೆ ಮಹಾಯುದ್ಧದಲ್ಲಿ ಬ್ರಿಟಿಷರಿಗೆ ಅರಬ್ಬರು ನೀಡಿದ ಸಹಕಾರದ ಫಲವಾಗಿ ಯುದ್ಧ ಮುಗಿದ ಕೂಡಲೇ ಪ್ಯಾಲೇಸ್ತೀನ್, ಇರಾಕ್, ಕುವೈತ್, ಜೋರ್ಡಾನ್, ಸಿರಿಯಾ, ಲೆಬನಾನ್, ಯಮಾನ್, ಬಹರೈನ್, ಕತಾರ್ ಇತ್ಯಾದಿ ಅರಬ್ ಪ್ರಾಂತಗಳು ಆಟೋಮನ್ ಸಾಮ್ರಾಜ್ಯದ ಆಳ್ವಿಕೆಯಿಂದ ವಿಮುಕ್ತಿ ಹೊಂದಿ ಸ್ವತಂತ್ರ ದೇಶಗಳೆಂದು ತೀರ್ಮಾನಿಸಲಾಗುತ್ತದೆ ಮತ್ತು ಆ ಪ್ರಕ್ರಿಯೆಯನ್ನು ಬ್ರಿಟಿಷ್ ಸರಕಾರ ಗೌರವಿಸುತ್ತದೆ.

೧೯೧೬ರಲ್ಲಿ ಬ್ರಿಟಿಷ್, ಫ್ರೆಂಚ್ ಮತ್ತು ರಷ್ಯಾ ದೇಶಗಳೊಂದಿಗೆ ಒಂದು ಗುಪ್ತ ಒಪ್ಪಂದ ನೆರವೇರುತ್ತದೆ-ಸೈಕಸ್-ಪಿಕಾಟ್ ಒಪ್ಪಂದ. ೨೦ನೆಯ ಶತಮಾನದ ಆರಂಭದಿಂದಲೂ ಈ ಮೂರು ಬಂಡವಾಳಶಾಹಿ ದೇಶಗಳು ಪಶ್ಚಿಮ ಏಷ್ಯಾದಲ್ಲಿ ತಮ್ಮ ತಮ್ಮ ಸ್ವತಂತ್ರ ವಸಾಹತುಗಳನ್ನು ಸ್ಥಾಪಿಸುವ ಕನಸಿನಲ್ಲಿದ್ದವು. ಇದಕ್ಕೆ ೧೯೧೬ರ ಸೈಕಸ್-ಪಿಕಾಟ್ ಒಪ್ಪಂದ ಭದ್ರ ಬುನಾದಿ ಹಾಕುತ್ತದೆ. ಈ ಒಪ್ಪಂದದ ಪ್ರಕಾರ (ಈಗಾಗಲೇ ಮೊದಲ ಮಹಾಯುದ್ಧ ಆರಂಭವಾಗಿದೆ. ಯುದ್ಧದ ಸಮಯದಲ್ಲಿ ಆಟೋಮನ್ ಸಾಮ್ರಾಜ್ಯದ ಎಲ್ಲ ಪ್ರದೇಶಗಳನ್ನು ಅಂದರೆ ತೈಲ ಸಂಪನ್ಮೂಲಗಳಿಂದ ಶ್ರೀಮಂತವಾಗಿರುವ ಪ್ರಾಂತಗಳೂ ಸೇರಿ ಎಲ್ಯಾಡ್ ಗುಂಪಿನ ರಾಷ್ಟ್ರಗಳು ಆಕ್ರಮಿಸುತ್ತವೆ) ಆಟೋಮನ್ ಸಾಮ್ರಾಜ್ಯದ ಎಲ್ಲ ಪ್ರಾಂತಗಳನ್ನು ಮೂರು ವಿಭಜನೆ ಮಾಡಿ ಪರಸ್ಪರ ಹಂಚಿಕೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಯಿತು. ಈ ನಿರ್ಧಾರದ ಪ್ರಕಾರ ಸಿರಿಯಾ ಮತ್ತು ಲೆಬನಾನ್ ಫ್ರೆಂಚರ ವಸಾಹತುವಾಗಿ, ಪ್ಯಾಲೇಸ್ತೀನ್, ಕುವೈತ್, ಇರಾಕ್ (ಮೆಸಪಟೋಮಿಯಾ), ಜೋರ್ಡಾನ್ ಮತ್ತು ಗಲ್ಫ್ ಪ್ರಾಂತಗಳು ಬ್ರಿಟಿಷರ ವಸಾಹತುವಾಗಿ ಮತ್ತು ಬಾಲ್ಕನ್ ಸ್ಟ್ರೈಟ್ ರಷ್ಯಾದ ವಸಾಹತುಗಳಾಗಿ ಪರಿವರ್ತನೆಗೊಳ್ಳುತ್ತವೆಂದು ತೀರ್ಮಾನಿಸಲಾಯಿತು. ಇವೆಲ್ಲವು ೨೦ನೆಯ ಶತಮಾನದ ಹೊಸ ವಸಾಹತುಶಾಹಿ ಬೆಳವಣಿಗೆಯ ಹಿಂದು ಹುಟ್ಟಿಕೊಂಡ ರಾಜಕೀಯ. ಏಕೆಂದರೆ ೧೯೧೬ರ ಒಪ್ಪಂದದನ್ವಯ ಫ್ರೆಂಚ್ ಮತ್ತು ಬ್ರಿಟಿಷರು ಯಾವೆಲ್ಲ ಪ್ರಾಂತಗಳನ್ನು ತಮ್ಮ ವಸಾಹತುಗಳೆಂದು ಗುರುತಿಸಿದರೊ ಅವೆಲ್ಲವು ಅರಬ್ಬರು ನೆಲೆನಿಂತಿರುವ ಭೂಭಾಗವಾಗಿದ್ದು, ಬ್ರಿಟಿಷರು ಆ ಎಲ್ಲ ಪ್ರಾಂತಗಳನ್ನು ಯುದ್ದ ಮುಗಿದ ಕೂಡಲೆ ಅರಬ್ಬರು ಸ್ವತಂತ್ರ ರಾಜ್ಯಗಳೆಂದು ಗೌರವಿಸುವುದಾಗಿ ಶರೀಫ್ ಹುಸೇನ್‌ರಿಗೆ ಆಶ್ವಾಸನೆ ನೀಡಿದ್ದರು. ಈ ಆಶ್ವಾಸನೆಯನ್ನು ನಂಬಿಕೊಂಡ ಅರಬ್‌ರು ಸ್ವ ಇಚ್ಛೆಯಿಂದ ೧೯೧೬ರಲ್ಲಿ ಪ್ರಥಮ ಮಹಾಯುದ್ಧದಲ್ಲಿ ಭಾಗವಹಿಸಿ ಜರ್ಮನಿ ಮತ್ತು ಆಟೋಮನ್ ಸರಕಾರದ ವಿರುದ್ಧ ಯುದ್ಧ ಸಾರಿದ್ದರು.

ಪಶ್ಚಿಮ ಏಷ್ಯಾದಲ್ಲಿ ವಸಾಹತುಶಾಹಿ ದೇಶಗಳ ರಾಜಕೀಯ ಇಲ್ಲಿಗೇ ಮುಗಿದಿಲ್ಲ. ೧೯೧೭ರಲ್ಲಿ ಬ್ರಿಟಿಷರು ಮತ್ತೊಂದು ಆಶ್ವಾಸನೆಯಲ್ಲಿ ಸಿಕ್ಕಿ ಹಾಕಿಕೊಂಡರು. ವಿಶ್ವದಾದ್ಯಂತ ನಿರಾಶ್ರಿತರಾಗಿ ನೆಲೆಸಿರುವ ಯಹೂದಿಗಳು ಪಶ್ಚಿಮ ಏಷ್ಯಾದ ಪ್ಯಾಲೇಸ್ತೀನ್ ತಮಗೆ ದೇವರು ವರವಾಗಿ ನೀಡಿದ್ದೆಂದು ಹೇಳಿ, ಅಲ್ಲಿ ತಮ್ಮ ಸ್ವತಂತ್ರ ರಾಜ್ಯ ಸ್ಥಾಪನೆಗೆ ಜಗತ್ತಿನಾದ್ಯಂತ ಒಗ್ಗಟ್ಟು ಆರಂಭಿಸಿದರು. ೧೯೦೦ರಿಂದ ಪ್ಯಾಲೇಸ್ತೀನ್ ಅನ್ನು ಬ್ರಿಟಿಷರು ಆಕ್ರಮಿಸಿಕೊಳ್ಳಬೇಕೆಂಬ ಪ್ರಾಂತ್ಯವಾಗಿದ್ದು, ೧೯೧೫ ಮತ್ತು ೧೬ರಲ್ಲಿ ಬ್ರಿಟಿಷರು ತಮ್ಮ ಆಕ್ರಮಣವನ್ನು ಪೂರ್ಣಗೊಳಿಸಿದ್ದರು. ಯಹೂದಿಗಳು ಶ್ರೀಮಂತ ವರ್ಗದವರಾಗಿದ್ದು ತಮ್ಮ ರಾಜ್ಯವನ್ನು ಪ್ಯಾಲೇಸ್ತೀನ್‌ನಲ್ಲಿಯೇ ಸ್ಥಾಪಿಸುವ ಪಣ ತೊಟ್ಟಿದ್ದು ಎಷ್ಟು ಹಣ ತೆತ್ತಾದರೂ ಕೈಗೂಡಿಸುವ ಸಾಮರ್ಥ್ಯವನ್ನು ಹೊಂದಿದ್ದರು. ಈ ಬೆಳವಣಿಗೆಯ ಸಮಯದಲ್ಲಿ ಬ್ರಿಟಿಷರು ಯುದ್ಧ ಖರ್ಚು ಬರಿಸಲು ಬಂಡವಾಳದ ಕೊರತೆಯನ್ನು ಎದುರಿಸುತ್ತಿದ್ದರು. ಶ್ರೀಮಂತಿಕೆಯನ್ನು ಹೊಂದಿದ್ದ ಯಹೂದಿಯರಿಂದ ಬೇಕಾದ ಬಂಡವಾಳವನ್ನು ಪಡೆಯಲು ೧೯೧೭ರಲ್ಲಿ ಬ್ರಿಟನ್‌ನ ಪ್ರಧಾನಮಂತ್ರಿ ಲಾಯ್ಡ್ ಜರ್ಜ್‌ನ ಬೆಂಬಲವನ್ನು ಪಡೆದು ವಿದೇಶಾಂಗ ಕಾರ್ಯದರ್ಶಿ ಆರ್ಥರ್ ಬಾಲ್ಫ್‌ರ್ ಘೋಷಣೆ ಹೊರಡಿಸಿ, ಬ್ರಿಟನ್ ಸರಕಾರ ಯಹೂದಿಗಳಿಗೆ ಪ್ಯಾಲೇಸ್ತೀನ್‌ನಲ್ಲಿ ಸ್ವತಂತ್ರ ರಾಜ್ಯ ನಿರ್ಮಿಸಲು ಅವಕಾಶ ನೀಡುವುದಾಗಿ ಕರೆ ಕೊಟ್ಟನು. ಇದು ಇನ್ನೊಂದು ರೀತಿಯ ರಾಜಕೀಯ. ಏಕೆಂದರೆ ಬ್ರಿಟಿಷರು ಮಹಾಯುದ್ಧದುದ್ದಕ್ಕೂ ತಮ್ಮ ಸಾಮ್ರಾಜ್ಯಶಾಹಿ ಪ್ರಭುತ್ವವನ್ನು ಭದ್ರಗೊಳಿಸಲು ಅರಬ್ ಜನಾಂಗದವರನ್ನೇ ಎದುರು ಹಾಕಿಕೊಂಡರು. ಒಂದು ವೇಳೆ ಯುದ್ಧದ ನಂತರ ತಮ್ಮ ಪ್ರಭುತ್ವಕ್ಕೆ ಅರಬ್ ವಿರೋಧ ವ್ಯಕ್ತವಾದರೆ, ಪಶ್ಚಿಮ ಏಷ್ಯಾದಲ್ಲಿ ಬ್ರಿಟಿಷರ ಸಾಮ್ರಾಜ್ಯಶಾಹಿ ಆಸಕ್ತಿಗಳಿಗೆ ಬೆಂಬಲವನ್ನು ನಿರೀಕ್ಷಿಸಿ ಯಹೂದಿಯರನ್ನು ಪ್ಯಾಲೇಸ್ತೀನ್‌ನ ಒಡೆಯರೆಂದು ಪರೋಕ್ಷವಾಗಿ ಹೇಳಿಕೊಂಡರು.

ಎಲ್ಲವು ನಿರೀಕ್ಷಿಸಿದಂತೆ ೧೯೧೮ರಲ್ಲಿ ಯುದ್ಧ ಮುಗಿಯಿತು. ಆಟೋಮನ್ ಸಾಮ್ರಾಜ್ಯ ಛಿದ್ರ ಛಿದ್ರವಾಯಿತು. ಬ್ರಿಟಿಷರು ಅರಬ್ ಮುಖಂಡರಿಗೆ ನೀಡಿದ ಆಶ್ವಾಸನೆ ಗಾಳಿಯಲ್ಲಿ ತೂರಿತು. ಹೊಸ ವಸಾಹತುಶಾಹಿ ಯುಗದ ಉದ್ಘಾಟನೆಯನ್ನು ಬ್ರಿಟಿಷರು ಮತ್ತು ಫ್ರೆಂಚರು ಮಾಡಿದರು. ಅದಕ್ಕೆ ಅಮೆರಿಕದವರು ಪ್ರೋ ನೀಡಿದರು. ಜರ್ಮನಿಯ ವಸಾಹತುಶಾಹಿ ಪ್ರಭುತ್ವವನ್ನು ಸಂಪೂರ್ಣ ನಿರ್ನಾಮ ಮಾಡಲಾಯಿತು. ೧೯೨೦ರ ನಂತರ ಪಶ್ಚಿಮ ಏಷ್ಯಾದಲ್ಲಿ ವಸಾಹತುಶಾಹಿ ಪ್ರಭುತ್ವದ ರೂಪವಾಗಿ ಬ್ರಿಟಿಷ್ ಮತ್ತು ಫ್ರೆಂಚ್ ಆಜ್ಞಾನಪೂರ್ವಕ ಆಡಳಿತ ಜರಿಗೊಂಡವು.

೧೯೧೬ರ ಸೈಕಸ್-ಪಿಕಾಟ್ ಒಪ್ಪಂದದಂತೆ, ಸಿರಿಯಾ ಮತ್ತು ಲೆಬಾನನ್‌ನಲ್ಲಿ ಫ್ರೆಂಚ್ ಮ್ಯಾಂಡೇಟರಿ ಆಡಳಿತ ಹೇರಲಾಯಿತು. ಪ್ಯಾಲೇಸ್ತೀನ್, ಜೋರ್ಡಾನ್, ಇರಾಕ್‌ನಲ್ಲಿ ಬ್ರಿಟಿಷ್ ಮ್ಯಾಂಡೇಟರಿ ಆಡಳಿತ, ಗಲ್ಫ್ ಪ್ರಾಂತ್ಯಗಳಲ್ಲಿ ಬ್ರಿಟೀಷ್ ಪ್ರೊಟೆಕ್ಟರೇಟ್ ಪದ್ಧತಿ ಮತ್ತು ಇರಾನ್‌ನಲ್ಲಿ ಪ್ರಭಾವಿ ವರ್ತುಲ ವಲಯ  ಜರಿಗೊಂಡವು. ಈ ಎಲ್ಲ ಆಡಳಿತ ವ್ಯವಸ್ಥೆಯು ಬಂಡವಾಳಶಾಹಿ ದೇಶಗಳ ಧೋರಣೆಗಳನ್ನು, ಸಿದ್ಧಾಂತಗಳನ್ನು ಮತ್ತು ಆಸಕ್ತಿಗಳನ್ನು ರಕ್ಷಿಸುತ್ತದೆ ಮತ್ತು ಅದರ ರಾಜಕೀಯ, ಆರ್ಥಿಕ ಮತ್ತು ಹಣಕಾಸು ಪ್ರಭುತ್ವವನ್ನು ಭದ್ರಗೊಳಿಸುತ್ತದೆ.

ಈ ಪರಿವರ್ತನೆಯಿಂದಾಗಿ ಪಶ್ಚಿಮ ಏಷ್ಯಾವನ್ನು ಪಶ್ಚಿಮದ ಬಂಡವಾಳಶಾಹಿ ರಾಷ್ಟ್ರಗಳು ತಮ್ಮ ಸಿದ್ಧವಸ್ತುಗಳಿಗೆ ಸ್ವತಂತ್ರ ಮಾರುಕಟ್ಟೆಗಳನ್ನಾಗಿ, ದೇಶೀಯ ಕೈಗಾರಿಕೆಗೆ ಬೇಕಾದ ತೈಲ ಉತ್ಪಾದನೆಗೆ ಕೇಂದ್ರವಾಗಿ, ಹೆಚ್ಚುವರಿ ಬಂಡವಾಳ ಹೂಡಿ ಅಧಿಕ ಲಾಭ ಗಳಿಸಲು ಒಂದು ಉತ್ತಮ ಪ್ರದೇಶವಾಗಿ, ಅದೆಷ್ಟೇ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಸ್ಥಳವಾಗಿ ಪುನರ್‌ಸ್ಥಾಪನೆ ಮಾಡಲಾಯಿತು. ಈ ಧ್ಯೇಯ ಮತ್ತು ಗುರಿಯನ್ನು ಯಶಸ್ಸು ಗಳಿಸುವುದರೊಂದಿಗೆ ಇಲ್ಲಿನ ಮಾರುಕಟ್ಟೆಗಳನ್ನು, ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ದೇಶೀಯ ಜನರ ಎಲ್ಲ ಹಕ್ಕುಗಳನ್ನು ಕಿತ್ತುಕೊಂಡರು. ಇದನ್ನು ವ್ಯವಸ್ಥಿತವಾಗಿ ೧೯೩೦ ಮತ್ತು ೪೦ರ ದಶಕದಲ್ಲಿ ವಿರೋಧಿಸಲು ಪಶ್ಚಿಮ ಏಷ್ಯಾದ ಉದ್ದಗಲಕ್ಕೂ ರಾಷ್ಟ್ರೀಯ ಚಳುವಳಿಗಳು ಪ್ರಬಲವಾಗಿ ಸಂಘಟಿಸಲ್ಪಟ್ಟವು. ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ ಇನ್ನಿತರ ಸೈದ್ಧಾಂತಿಕ ಮಲ್ಯಗಳಿಂದ ಪ್ರಭಾವಿತರಾದ ಈ ಚಳುವಳಿಕಾರರು ತಮ್ಮ ತಮ್ಮ ಪ್ರಾಂತಗಳ ಸ್ವಾತಂತ್ರ್ಯ ಹೋರಾಟದಲ್ಲಿ ಸಂಘಟಿತವಾಗಿ ಬಂಡವಾಳಶಾಹಿ ರಾಷ್ಟ್ರಗಳ ಪ್ರಭುತ್ವವನ್ನು ಯಶಸ್ವಿಯಾಗಿ ಎದುರಿಸಿದರು. ಇದು ವಸಾಹತುಶಾಹಿ ಯುಗದ ಅಂತ್ಯಕ್ಕೆ ಅಂತಿಮ ಪರದೆ ಎಳೆಯಿತು.

ಪೂರ್ವ ಏಷ್ಯಾ

ಪೂರ್ವ ಮತ್ತು ದಕ್ಷಿಣಪೂರ್ವ ಪ್ರಾಂತಗಳಾದ ಚೀನಾ, ತೈವಾನ್, ಕೊರಿಯಾ, ಸಿಂಗಾಪುರ, ಮಲೇಶಿಯಾ, ಇಂಡೋನೇಶಿಯಾ, ಫಿಲಿಫೈನ್ಸ್, ಇಂಡೋ-ಚೀನಾ ಮತ್ತು ಬರ್ಮಾಗಳಲ್ಲಿಯೂ ಪಶ್ಚಿಮದ ವಸಾಹತುಶಾಹಿಗಳು ಸ್ವತಂತ್ರ ವಸಾಹತುಗಳ ಸ್ಥಾಪನೆಗೆ ಸುದೀರ್ಘ ಪೈಪೋಟಿ ನಡೆಸಿದವು. ಈ ಪೈಪೋಟಿ ೨೦ನೆಯ ಶತಮಾನದ ಆರಂಭದಲ್ಲಿ ದ್ವಿಗುಣಗೊಂಡಿತು. ಪೂರ್ವ ಏಷ್ಯಾದ ಎಲ್ಲ ಪ್ರದೇಶಗಳು ನೈಸರ್ಗಿಕ ಸಂಪನ್ಮೂಲಗಳಿಂದ ಶ್ರೀಮಂತವಾಗಿರುವುದಲ್ಲದೆ ಪಶ್ಚಿಮದ ಬಂಡವಾಳಶಾಹಿ ರಾಷ್ಟ್ರಗಳು ಎದುರಿಸುವ ಆರ್ಥಿಕ ಸಮಸ್ಯೆ ಮತ್ತು ವಸಾಹತುಶಾಹಿ ಆಸಕ್ತಿಗಳನ್ನು ಪರಿಹರಿಸಿಕೊಳ್ಳಲು ವಿಪುಲ ಅವಕಾಶವನ್ನು ಕಲ್ಪಿಸಿದವು. ಪಶ್ಚಿಮ ರಾಷ್ಟ್ರಗಳು ಬಂಡವಾಳಶಾಹಿ ಬೆಳವಣಿಗೆಯನ್ನು ಏಕಪ್ರಕಾರವಾಗಿ ವೃದ್ದಿಸುವ ಸಮಯದಲ್ಲಿ ಪಶ್ಚಿಮ ಏಷ್ಯಾದ ಎಲ್ಲ ಭಾಗಗಳು ರಾಜಕೀಯ, ಸೈನಿಕ, ಆರ್ಥಿಕ, ಕೈಗಾರಿಕಾ ಮತ್ತು ಸಾಂಸ್ಕೃತಿಕ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದವು. ಈ ಬಿಕ್ಕಟ್ಟಿನ ಸ್ವರೂಪವನ್ನು ಚೆನ್ನಾಗಿ ತಿಳಿದ ಪಶ್ಚಿಮದ ಬಂಡವಾಳಶಾಹಿ ರಾಷ್ಟ್ರಗಳು ಈ ದೇಶಗಳನ್ನು ತಮ್ಮ ಸ್ವತಂತ್ರ ವಸಾಹತುಗಳನ್ನಾಗಿ ರೂಪಾಂತರಿಸಿ, ತಮ್ಮ ದೇಶದ ಕೈಗಾರಿಕೆಗಳ ಬೆಳವಣಿಗೆಗೆ ಬೇಕಾದ ಕೃಷಿ ಸಂಪನ್ಮೂಲಗಳ ಉತ್ಪಾದನಾ ಕೇಂದ್ರವಾಗಿ, ಸಿದ್ಧವಸ್ತುಗಳ ಮಾರಾಟಕ್ಕೆ ಮಾರುಕಟ್ಟೆಯಾಗಿ, ತಮ್ಮ ದೇಶದಲ್ಲಿ ಏರುತ್ತಿರುವ ಜನಸಂಖ್ಯೆಗಳಿಗೆ ಆಹಾರ ವಸ್ತುಗಳ ಉತ್ಪಾದನಾ ರಂಗವಾಗಿ, ಹೆಚ್ಚುವರಿ ಬಂಡವಾಳವನ್ನು ಹೂಡಿ ಅಧಿಕ ಲಾಭ ಗಳಿಸಲು ಸ್ಥಳವನ್ನಾಗಿಸಲು ತಮ್ಮ ರಾಜಕೀಯ ಮತ್ತು ಆರ್ಥಿಕ ಪ್ರಭುತ್ವವನ್ನು ಹೇರಿದರು.

೨೦ನೆಯ ಶತಮಾನದ ಆರಂಭದಲ್ಲಿ ಚೀನಾ, ತೈವಾನ್ ಮತ್ತು ಕೊರಿಯಾವನ್ನು ಐರೋಪ್ಯ ರಾಷ್ಟ್ರಗಳಾದ ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ರಷ್ಯಾ ಹಾಗೂ ಈಗಷ್ಟೆ ಏಷ್ಯಾದಲ್ಲಿ ಉಗಮವಾದ ಬಂಡವಾಳಶಾಹಿ ಜಪಾನ್ ಏಕಕಾಲಕ್ಕೆ ವಾಣಿಜ್ಯ, ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಹತ್ತು ಹಲವು ಪ್ರಯತ್ನಗಳನ್ನು ಆರಂಭಿಸಿದವು. ಇದು ಐರೋಪ್ಯ ರಾಷ್ಟ್ರಗಳು ೧೯ನೆಯ ಶತಮಾನದುದ್ದಕ್ಕೂ ಹಮ್ಮಿಕೊಂಡ ವಸಾಹತುಶಾಹಿಯ ಅಂತಿಮ ಘಟ್ಟವೆಂದು ಹೇಳಬಹುದು. ಚೀನಾದಲ್ಲಿ ಒಂದಕ್ಕಿಂತ ಹೆಚ್ಚು ಬಂಡವಾಳಶಾಹಿ ರಾಷ್ಟ್ರಗಳು ಮಾರುಕಟ್ಟೆ ಸ್ಥಾಪಿಸಲು, ಆಹಾರ ಮತ್ತು ಕೃಷಿ ವಸ್ತುಗಳನ್ನು ಉತ್ಪಾದಿಸಿ ತಮ್ಮ ದೇಶಗಳಿಗೆ ರಫ್ತು ಮಾಡಲು, ತಮ್ಮ ದೇಶದ ಅಧಿಕ ಜನಸಂಖ್ಯೆಯನ್ನು ಸ್ಥಳಾಂತರಿಸಲು ಮತ್ತು ಹೆಚ್ಚುವರಿ ಬಂಡವಾಳವನ್ನು ಹೂಡಿ ಅಧಿಕ ಲಾಭವನ್ನು ಪಡೆಯಲು ಆಸಕ್ತಿ ತೋರಿಸಿರುವುದರಿಂದ ಈ ಎಲ್ಲ ರಾಷ್ಟ್ರಗಳು ಚೀನಾದಲ್ಲಿ ವಸಾಹತು, ಪ್ರೊಟೆಕ್ಟರೇಟ್ ಅಥವಾ ಮ್ಯಾಂಡೇಟರಿ ಪದ್ಧತಿಯನ್ನು ಹೇರಲಿಲ್ಲ. ಬದಲಾಗಿ ಪ್ರಭಾವಿ ವರ್ತುಲ ವಲಯ  ಎಂಬ ಹೊಸ ಪದ್ಧತಿಯನ್ನು ಆರಂಭಿಸಿದರು. ಏಕೆಂದರೆ ಚೀನಾ ಭೌಗೋಳಿಕವಾಗಿ ಒಂದು ವಿಸ್ತಾರವಾದ ಭೂಪ್ರದೇಶವಾಗಿದ್ದು ಎಲ್ಲ ದೇಶಗಳನ್ನು ವ್ಯಾಪಾರ, ವಾಣಿಜ್ಯ ಮತ್ತು ವಸಾಹತುಶಾಹಿಗೆ ಸಂಬಂಧಿಸಿದ ಇನ್ನಿತರ ಚಟುವಟಿಕೆಗಳಿಗೆ ಆಕರ್ಷಿಸಿತು. ಈ ಆಕರ್ಷಣೆಯಿಂದಾಗಿ ಚೀನಾದ ಮಾರುಕಟ್ಟೆಗಳು ಕೈಗಾರಿಕೆಗಳಲ್ಲಿ ಮುಂದುವರಿದ ಎಲ್ಲ ಬಂಡವಾಳಶಾಹಿ ದೇಶಗಳ ಸಿದ್ಧವಸ್ತುಗಳಿಂದ ತುಂಬಿ ಹೋದವು. ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳು ಎಲ್ಲ ದೇಶಗಳಿಗೂ ರಫ್ತಾದವು. ಎಲ್ಲ ದೇಶಗಳ ಹೆಚ್ಚುವರಿ ಬಂಡವಾಳ ಹೂಡಿಕೆಗೆ ಭದ್ರವಾದ ಸ್ಥಳವಾಗಿ ಪರಿವರ್ತನೆಗೊಂಡಿತು ಮತ್ತು ಎಲ್ಲ ದೇಶಗಳ ರಾಯಭಾರಿಗಳು, ವ್ಯಾಪಾರಿಗಳು, ಕಂಪನಿಗಳು, ಬಂಡವಾಳಶಾಹಿಗಳು ಮತ್ತು ಸಂಸ್ಥೆಗಳು ತಮ್ಮ ತಮ್ಮ ದೇಶದ ಆಸಕ್ತಿಗಳನ್ನು ರಕ್ಷಿಸಿಕೊಳ್ಳಲು ಚೀನಾದ ವಿಸ್ತಾರ ಭೂಪ್ರದೇಶವನ್ನು ಬಳಸಿಕೊಂಡರು. ಬಂಡವಾಳಶಾಹಿ ರಾಷ್ಟ್ರಗಳ ಗುರಿಗಳನ್ನು ನಿರಂತರವಾಗಿ ಮತ್ತು ವಿರೋಧವಿಲ್ಲದೆ ಸಾಧಸಿಕೊಳ್ಳಲು ಪರಸ್ಪರ ಹೊಂದಾಣಿಕೆ ಹಾಗೂ ಸಹಕಾರದಿಂದ ಕ್ರಮ ಕೈಗೊಂಡರು.

೧೯ನೆಯ ಶತಮಾನದ ಮಧ್ಯಭಾಗದಿಂದ ಬ್ರಿಟಿಷರು, ಫ್ರೆಂಚರು, ರಷ್ಯಾನ್ನರು ಮತ್ತು ಜರ್ಮನಿಯರು (೧೮೬೦ರ ದಶಕದಲ್ಲಿ ಜರ್ಮನಿ ಪ್ರವೇಶಿಸಿತು) ಯಾವುದೇ ಬೆದರಿಕೆಯಿಲ್ಲದೆ ಹೊಂದಾಣಿಕೆಯೊಂದಿಗೆ ಚೀನಾದಲ್ಲಿ ಅಧಿಕಾರವನ್ನು ಹೊಂದಿದ್ದರು. ಬ್ರಿಟಿಷರು ಚೀನಾದ ಮಧ್ಯಭಾಗದಲ್ಲಿ ರಷ್ಯಾನ್ನರು ಪಶ್ಚಿಮ ಪೂರ್ವ ಭಾಗದಲ್ಲಿ, ಫ್ರೆಂಚರು ದಕ್ಷಿಣದಲ್ಲಿ ಮತ್ತು ಜರ್ಮನ್ನರು ಪೂರ್ವಭಾಗದಲ್ಲಿ ಪ್ರಭಾವಿ ವರ್ತುಲ ವಲಯವನ್ನು ಸ್ಥಾಪಿಸಿಕೊಂಡಿದ್ದರು. ಆದರೆ ೧೮೯೫ರ ನಂತರ ಚೀನಾಕ್ಕೆ ತೀರ ಹತ್ತಿರದಲ್ಲಿರುವ ಜಪಾನ್ ಪಶ್ಚಿಮದ ಬಂಡವಾಳಶಾಹಿ ರಾಷ್ಟ್ರಗಳೊಂದಿಗೆ ವಸಾಹತು ಸ್ಥಾಪಿಸುವ ಅನ್ವೇಷಣೆಗೆ ಧುಮುಕಿತು. ಸಹಜವಾಗಿಯೇ ಜಪಾನ್‌ನ ಉಗಮ ಈಗಾಗಲೇ ಚೀನಾದಲ್ಲಿ ಚಟುವಟಿಕೆ ನಡೆಸುತ್ತಿರುವ ಬ್ರಿಟಿಷ್, ಫ್ರೆಂಚ್, ರಷ್ಯಾ ಮತ್ತು ಜರ್ಮನ್ ದೇಶಗಳ ಇರುವಿಕೆಯನ್ನು ಪ್ರಶ್ನಿಸಿತು. ಈ ಕಾರಣಕ್ಕಾಗಿ ೨೦ನೆಯ ಶತಮಾನದ ಆರಂಭದಲ್ಲಿ ಚೀನಾವು ಬಂಡವಾಳಶಾಹಿ ದೇಶಗಳ ವಸಾಹತು ಸ್ಥಾಪನೆಗಾಗಿ ಹುಟ್ಟಿಕೊಂಡ ಪೈಪೋಟಿಗೆ ಒಂದು ವೇದಿಕೆಯಾಯಿತು.

ಜಪಾನ್ ಮತ್ತು ಐರೊಪ್ಯ ರಾಷ್ಟ್ರಗಳ ನಡುವೆ ಚೀನಾದ ವಿಷಯವಾಗಿ ಪೈಪೋಟಿ, ಸ್ಪರ್ಧೆ ಮತ್ತು ಭಿನ್ನಾಭಿಪ್ರಾಯಗಳು ೧೮೯೫ರ ಸೈನೋ ಜಪಾನೀಸ್ ಯುದ್ಧದಿಂದಲೇ ಆರಂಭವಾಗಿ ೧೯೦೦ರ ನಂತರ ಅದರ ಪಕ್ವತೆಯನ್ನು ಹೊರಹೊಮ್ಮಿತು ಎಂದು ಹೇಳಬಹುದು. ಇಲ್ಲಿ ಈ ಎರಡು ಗುಂಪುಗಳ (ಯುರೋಪಿಯನ್ನರು – ಜಪಾನ್ ) ನಡುವೆ ವೈಷಮ್ಯ ಹುಟ್ಟಿಕೊಳ್ಳಲು ಮೂಲಭೂತವಾಗಿ ಜಪಾನ್‌ಗೆ ಸೈನೋ ಜಪಾನೀಸ್ ಯುದ್ಧದ ನಂತರ ೧೮೯೫ರ ಏಪ್ರಿಲ್ ೨೭ರಂದು ಸಹಿ ಹಾಕಿದ ಶಿಮೋನೋಸರೆ ಒಪ್ಪಂದದಂತೆ ಚೀನಾಪೋರ್ಟ್ ಆರ್ಥರ್, ಲಿಯಾವೋತುಂಗ್ ಪ್ರಸ್ಥಭೂಮಿಯನ್ನು ಬಿಟ್ಟುಕೊಟ್ಟು ಜಪಾನ್‌ನ ಒತ್ತಾಯಕ್ಕೆ ಮಣಿದು ಕೊರಿಯಾ ಮತ್ತು ತೈವಾನ್‌ನ ಸ್ವಾತಂತ್ರ್ಯವನ್ನು ಗೌರವಿಸಿರುವುದು ಪಶ್ಚಿಮದ ರಾಷ್ಟ್ರಗಳ ಹುಬ್ಬೇರಿಸಿತು.

ಜಪಾನ್ ಸುಮಾರು ೧೮೬೮ರವರೆಗೂ ಹಿಂದುಳಿದ ಪ್ರಾಂತವಾಗಿದ್ದು ೧೮೬೮ರ ಅರಿಸ್ಟೋಕ್ರೆಟಿಕ್ ಕ್ರಾಂತಿಯಿಂದಾಗಿ ಹೊಸ ಸಮಾಜದ ಉಗಮವಾಯಿತು. ಮೇಜಿ ಸರಕಾರವು ೧೮೭೦ರ ನಂತರ ಅನೇಕ ಕ್ರಾಂತಿಕಾರಿ ಸುಧಾರಣೆಗಳನ್ನು ಅನುಷ್ಠಾನಗೊಳಿಸಿ ಜಪಾನ್ ದೇಶವನ್ನು ಬೃಹತ್ ಕೈಗಾರಿಕೆ ಮತ್ತು ಬಂಡವಾಳಶಾಹಿ ದೇಶವನ್ನಾಗಿ ಪುನಾರಚಿಸಿತು. ೧೮೯೦ರ ಹೊತ್ತಿಗೆ ಜಪಾನ್ ಐರೋಪ್ಯ ರಾಷ್ಟ್ರಗಳೊಂದಿಗೆ ಸಮಾನವಾಗಿ ಎಲ್ಲ ರಂಗದಲ್ಲಿಯೂ ಬೆಳವಣಿಗೆಯನ್ನು ಕಂಡುಕೊಂಡಿತು. ಪಶ್ಚಿಮ ರಾಷ್ಟ್ರಗಳಂತೆ ಜಪಾನ್ ಕೈಗಾರಿಕೆ, ಕೃಷಿ, ವಾಣಿಜ್ಯ, ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ರಂಗಗಳಲ್ಲಿ ಸ್ಥಿರತೆ ಮತ್ತು ಭದ್ರತೆಯನ್ನು ಕಂಡುಕೊಂಡಿತು. ಮೇಜಿ ಸರಕಾರ, ಅಧಿಕಾರಿ ವರ್ಗ ಮತ್ತು ದೇಶಪ್ರೇಮಿಗಳು ಜಪಾನನ್ನು ಇಡೀ ಏಷ್ಯಾಖಂಡದಲ್ಲಿಯೇ ಒಂದು ಮಾದರಿ ಬಂಡವಾಳಶಾಹಿ ದೇಶವನ್ನಾಗಿ ಮಾರ್ಪಡಿಸಿದರು. ಇಂತಹ ಸಂಘಟಿತ ಹೋರಾಟದಿಂದ ಜಪಾನ್ ಸರ್ವಾತ್ಮಕವಾಗಿ ಪಶ್ಚಿಮ ರಾಷ್ಟ್ರಗಳೊಂದಿಗೆ ಪೈಪೋಟಿಗೆ ಇಳಿಯಿತು.

ಹಣಕಾಸು ಮತ್ತು ಸೈನಿಕ ರಂಗದಲ್ಲಿಯೂ ಇಡೀ ಏಷ್ಯಾದಲ್ಲಿಯೇ ಮುಂದುವರಿದ ದೇಶವಾಗಿ ಉಗಮವಾಗಿ, ಪಶ್ಚಿಮ ರಾಷ್ಟ್ರಗಳಿಗೆ ತನ್ನ ಭೌಗೋಳಿಕ ಸರಹದ್ದಿನೊಳಗೆ ಹಸ್ತಕ್ಷೇಪ ಮಾಡಲು ಯಾವುದೇ ಅವಕಾಶ ಕಲ್ಪಿಸಲಿಲ್ಲ. ಬದಲಾಗಿ ನೇರವಾಗಿ ಏಷ್ಯಾ ಎಂಬ ಹೊಸ ಧೋರಣೆಯನ್ನು ಸೃಷ್ಟಿಸಿ, ಪಶ್ಚಿಮ ರಾಷ್ಟ್ರಗಳ ಸಾಮ್ರಾಜ್ಯಶಾಹಿ ಆಡಳಿತದಿಂದ ಏಷ್ಯಾವನ್ನು ವಿಮುಕ್ತಿಗೊಳಿಸಲು ಪ್ರಯತ್ನಗಳನ್ನು ದಿಢೀರನೆ ಆರಂಭಿಸಿತು. ಜಪಾನಿನ ಈ ಪ್ರಯತ್ನ ಪಶ್ಚಿಮ ಪ್ರಯತ್ನಗಳನ್ನು ದಿಢೀರನೆ ಆರಂಭಿಸಿತು. ಜಪಾನಿನ ಈ ಪ್ರಯತ್ನ ಪಶ್ಚಿಮ ರಾಷ್ಟ್ರಗಳು ಈಗಾಗಲೇ ಚೀನಾದಲ್ಲಿ ಅನುಭವಿಸುತ್ತಿರುವ ಹಕ್ಕುಗಳಿಗೆ ಬೆದರಿಕೆ ತಂದೊಡ್ಡಿತು. ಮಾತ್ರವಲ್ಲ ವಸಾಹತುಶಾಹಿ ಆಡಳಿತಕ್ಕೆ ಒಂದು ಹೊಸ ಆಯಾಮವನ್ನು ನೀಡಿತು.

೧೯ನೆಯ ಶತಮಾನದಲ್ಲಿ ಪಶ್ಚಿಮದ ಬಂಡವಾಳಶಾಹಿ ರಾಷ್ಟ್ರಗಳು ಎದುರಿಸಿದಂತಹ ಸಮಸ್ಯೆಗಳ ಅನುಕರಣೆ ಜಪಾನ್‌ನಲ್ಲಿ ಆ ಶತಮಾನದ ಕೊನೆಯ ದಶಕ ಮತ್ತು ೨೦ನೆಯ ಶತಮಾನದ ಆರಂಭದಲ್ಲಿ ಕಂಡುಬಂದವು. ಅಧಿಕವಾಗಿ ಉತ್ಪಾದಿಸಿದ ಸಿದ್ಧವಸ್ತುಗಳಿಗೆ ಮಾರುಕಟ್ಟೆಗಳ ಅಭಾವ, ಏರುತ್ತಿರುವ ಜನಸಂಖ್ಯೆಗೆ ವಸತಿ ಸೌಕರ್ಯ ಮತ್ತು ಆಹಾರ ವಸ್ತುಗಳ ಕೊರತೆ, ನಿರುದ್ಯೋಗ ಮತ್ತು ಕಚ್ಚಾವಸ್ತುಗಳ ಅಭಾವ ಇತ್ಯಾದಿ. ಇವೆಲ್ಲವು ಗಳ ಜೊತೆಗೆ ತಮ್ಮ ರಾಷ್ಟ್ರಪ್ರೇಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲು ಮತ್ತು ಜಪಾನಿಗೆ ಆ ಮಟ್ಟದಲ್ಲಿ ಗೌರವ ದಕ್ಕಿಸಲು ದೇಶದ ಹೊರಗೆ ಸ್ವತಂತ್ರ ವಸಾಹತುಗಳನ್ನೇ ಸ್ಥಾಪಿಸಬೇಕೆಂಬ ಹಂಬಲದಿಂದ ಬಂಡವಾಳಶಾಹಿಗಳು, ವಾಣಿಜ್ಯ ಮತ್ತು ಹಣಕಾಸು ಸಂಸ್ಥೆಗಳು, ಕೈಗಾರಿಕೆಗಳ ಮಾಲೀಕರು ಮತ್ತು ಅಧಿಕಾರಶಾಹಿಗಳು ಜಪಾನಿನ ವಿದೇಶಾಂಗ ನೀತಿಯಲ್ಲಿ ಬದಲಾವಣೆಯನ್ನು ತಂದುಕೊಂಡರು. ವ್ಯಾಪಾರ, ವಾಣಿಜ್ಯ ಮತ್ತು ವಸಾಹತು ಚಟುವಟಿಕೆಗಳಿಗೆ ಇಡೀ ದೇಶದಾದ್ಯಂತ ಬೆಂಬಲ ದೊರಕಿದ್ದು ಅಲ್ಲದೆ ಜಪಾನಿನ ರಾಷ್ಟ್ರೀಯ ಭೂ, ವಾಯು ಮತ್ತು ನೌಕಾದಳವು ಸರಕಾರದ ಕನಸನ್ನು ನನಸಾಗಿಸಲು ರಾತ್ರಿ ಹಗಲು ದುಡಿಯತೊಡಗಿದವು.

ಪಶ್ಚಿಮ ರಾಷ್ಟ್ರಗಳ ಪ್ರಭುತ್ವವನ್ನು ಪ್ರಶ್ನಿಸುವುದು ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಅವರೊಂದಿಗೆ ಸ್ಪರ್ಧಿಸಿ ತನ್ನ ಪ್ರಭುತ್ವವನ್ನು ಮೆರೆದಾಡಬೇಕೆಂಬ ಆಸಕ್ತಿಯಿಂದ ಪಶ್ಚಿಮದ ಬಂಡವಾಳಶಾಹಿಗಳು ನಿರಾತಂಕವಾಗಿ ವಾಣಿಜ್ಯ ಮತ್ತು ವ್ಯಾಪಾರ ಚಟುವಟಿಕೆಗಳನ್ನು ಬೆಳೆಸಿಕೊಂಡಿರುವ ಪೂರ್ವ ಏಷ್ಯಾದ ಚೀನಾ, ತೈವಾನ್ ಮತ್ತು ಕೊರಿಯಾ ಪ್ರಾಂತಗಳಲ್ಲಿಯೇ ತನ್ನ ಆಸಕ್ತಿಗಳನ್ನು ಶ್ರೀಮಂತವಾಗಿರುವ ಕೊರಿಯ ಮತ್ತು ತೈವಾನ್‌ನಲ್ಲಿ ಮೊದಲು ಜಪಾನ್ ತನ್ನ ವಸಾಹತು ಚಟುವಟಿಕೆಗಳನ್ನು ವೃದ್ದಿಸಲು ಆರಂಭಿಸಿತು. ಈ ಎರಡು ಪ್ರಾಂತಗಳನ್ನು ಜಪಾನ್ ಆಕ್ರಮಿಸಿ ಸ್ವತಂತ್ರ ವಸಾಹತುಗಳನ್ನಾಗಿ ಪೋಷಿಸಿದರೆ ಜಪಾನ್‌ಗೆ ಮಾರುಕಟ್ಟೆಗಳು, ಆಹಾರ ಸಂಪನ್ಮೂಲಗಳು ಮತ್ತು ಖನಿಜ ಸಂಪತ್ತು ಅತ್ಯಂತ ಕಡಿಮೆ ಬೆಲೆಗೆ ಉತ್ಪಾದಿಸಿ ತನ್ನ ದೇಶಕ್ಕೆ ಕಳುಹಿಸಲು ಸಾಧ್ಯವಾಗುತ್ತದೆ. ಜೊತೆಗೆ ತನ್ನ ದೇಶದ ಹೆಚ್ಚುವರಿ ಜನಸಂಖ್ಯೆಗೆ ಉದ್ಯೋಗ ಮತ್ತು ವಸ್ತು ಸೌಕರ್ಯವನ್ನು ಒದಗಿಸಲು ಸುಲಭವಾಗುತ್ತದೆ.