ಎರಡನೆಯ ಮಹಾಯುದ್ಧದ ನಂತರ ಸೌದಿ ಅರೇಬಿಯಾ ವಿಭಿನ್ನ ಬಗೆಯ ಅಂತಾರಾಷ್ಟ್ರೀಯ ಘಟನೆಗಳಲ್ಲಿ ನೇರವಾಗಿ ಭಾಗವಹಿಸುತ್ತದೆ. ಸೂಪರ್ ಪವರ್‌ಗಳ ನಡುವಿನ ಸ್ಪರ್ಧೆ, ತೈಲ ಬೆಲೆ ಏರುವಿಕೆ, ಅರಬ್-ಇಸ್ರೇಲಿ ಯುದ್ಧಗಳು ಮತ್ತು ಅವುಗಳಿಗೆ ಸಂಬಂಧಿಸಿದ ಒಪ್ಪಂದಗಳು, ಅಂತರ್ ಅರಬ್ ವೈಷಮ್ಯಗಳು, ಜಾಗತಿಕ ಹಣಕಾಸು ವ್ಯವಸ್ಥೆಯಲ್ಲಿ ಏರುಪೇರು, ಇರಾನಿನಲ್ಲಾದ ಇಸ್ಲಾಮಿಕ್ ಚಳುವಳಿಯ ಪ್ರಭಾವ ಮತ್ತು ಡಜನ್‌ಗಟ್ಟಳೆ ತೃತೀಯ ರಾಷ್ಟ್ರಗಳಿಗೆ ನೀಡುವ ಹಣಕಾಸು ಸಹಕಾರ ಇತ್ಯಾದಿ. ಜಗತ್ತಿನ ಎಲ್ಲ ದೇಶಗಳ ಮುಖಂಡರು, ಪ್ರಧಾನ ಮಂತ್ರಿಗಳು, ವಿದೇಶಾಂಗ ಮಂತ್ರಿಗಳು ದಾಖಲೆ ಮಟ್ಟದಲ್ಲಿ ಸೌದಿ ರಾಜಧಾನಿ ರಿಯಾದಿಗೆ ಭೇಟಿ ನೀಡುತ್ತಿದ್ದರು. ಹಾಗೆಯೇ ಬೇರೆ ಬೇರೆ ಬಂಡವಾಳಶಾಹಿ ದೇಶಗಳಿಂದ ಅನೇಕ ಬ್ಯಾಂಕರ್‌ಗಳು ಮತ್ತು ವಾಣಿಜ್ಯೋದ್ಯಮಿಗಳು.

ತೈಲ ಸಂಪತ್ತು ಹೇರಳವಾಗಿ ಸೌದಿ ಅರೇಬಿಯಾದಲ್ಲಿರುವುದರಿಂದ, ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಸ್ತಕ್ಷೇಪ ಮಾಡಲು ಮುಖ್ಯ ಕಾರಣ. ಜಗತ್ತಿನಲ್ಲೇ ಅತಿ ಹೆಚ್ಚು ತೈಲ ನಿಕ್ಷೇಪ ಹೊಂದಿದ ಸೌದಿ ಅರೇಬಿಯ, ಅತಿ ಕಡಿಮೆ ಖರ್ಚಿನಲ್ಲಿ ೧೯೭೦ರ ದಶಕ ಒಂದರಲ್ಲೆ ಸುಮಾರು ೨೨೫ ಬಿಲಿಯ ಡಾಲರ್ ಆದಾಯ ಗಳಿಸಿತ್ತು. ೧೯೮೦ರ ಒಂದೇ ವರ್ಷದಲ್ಲಿ ತೈಲ ಆದಾಯ ೯೫ ಬಿಲಿಯ ಡಾಲರ್ ತಲುಪಿತ್ತು. ಇವತ್ತಿಗೂ, ಸೌದಿ ಅರೇಬಿಯಾ ಜಗತ್ತಿನಲ್ಲೇ ಅತೀ ಹೆಚ್ಚು ತೈಲ ಸಂಪತ್ತನ್ನು ಹೊಂದಿದ್ದುದರಿಂದ ಅನಿವಾರ್ಯವಾಗಿ ಅಂತಾರಾಷ್ಟ್ರೀಯ ರಾಜಕೀಯದಲ್ಲಿ ನೆಯರವಾಗಿ ಪಾಲ್ಗೊಳ್ಳುತ್ತಿದೆ. ಸೌದಿ ಸಾಮ್ರಾಜ್ಯದ ಅರಸರು ಯಾವುದನ್ನು ಮಾಡುತ್ತಾರೋ ಅಥವಾ ಯಾವುದನ್ನು ಮಾಡಲು ವಿಫಲರಾಗುತ್ತಾರೋ, ಅದರ ಪರಿಣಾಮ ಮಾತ್ರ ಗಂಭೀರವಾಗಿರುತ್ತದೆ. ಈ ದೇಶದಲ್ಲಾಗುವ ಎಲ್ಲ ಘಟಕಗಳು ಜಗತ್ತಿನಾದ್ಯಂತ ಇರುವ ರಾಜಕೀಯ ತಜ್ಞರಿಗೆ, ಬ್ಯಾಂಕುಗಳಿಗೆ, ವಾಣಿಜ್ಯೋದ್ಯಮಿಗಳಿಗೆ ಮತ್ತು ಯುದ್ಧಾನುಕೂಲಸ್ಥರಿಗೆ ನಿಕಟ ಸಂಬಂಧ ಬೆಳೆಸಿಕೊಳ್ಳುತ್ತವೆ.

ಅಮೆರಿಕದವರಿಗೆ ಸೌದಿ ಅರಸೊತ್ತಿಗೆಯೊಂದಿಗಿನ ಸಂಬಂಧ ಬಹಳ ಮುಖ್ಯ. ಅಮೆರಿಕದವರು ಸೌದಿ ಸರಕಾರದ ನೆರವಿನಿಂದ ಪಡೆದಷ್ಟು ಲಾಭವನ್ನು ಜಗತ್ತಿನ ಯಾವುದೇ ರಾಷ್ಟ್ರ ಪಡೆದಿರಲಿಲ್ಲ. ಅಮೆರಿಕದ ತೈಲ ಕಂಪೆನಿಗಳು ಸೌದಿ ದೇಶದಲ್ಲಿ ಅತಿ ಹೆಚ್ಚು ಲಾಭಗಳಿಸಿದ್ದವು. ಅಮೆರಿಕದ ವಾಣಿಜ್ಯೋದ್ಯಮ ಸೌದಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬಂಡವಾಳವನ್ನು ಹೊಂದಿತ್ತು. ಸೌದಿ ಸೈನಿಕ ಶಕ್ತಿಯ ಅಭಿವೃದ್ದಿಯಲ್ಲಿ ಅಮೆರಿಕ ಸೈನ್ಯ ಪ್ರಮುಖ ಪಾತ್ರವಹಿಸಿದೆ. ಸೌದಿ ಅರಸೊತ್ತಿಗೆಯೊಂದಿಗೆ ಅಮೆರಿಕ ರಾಯಭಾರಿಗಳು ಅತೀ ನಿಕಟ ಸಂಪರ್ಕವನ್ನು ಹೊಂದಿದ್ದಾರೆ.

ಇಷ್ಟೆಲ್ಲ ನಿಕಟ ಸಂಪರ್ಕ ಸೌದಿ-ಅಮೆರಿಕ ನಡುವೆ ಇದ್ದರೂ, ಗೊಂದಲಗಳು ಇದ್ದೆ ಇವೆ. ತೈಲ ಬೆಲೆಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿಗದಿಪಡಿಸುವ ಪ್ರಶ್ನೆ, ಪ್ಯಾಲೆಸ್ತೀನಿ ಅರಬ್‌ರ ಬಿಕ್ಕಟ್ಟು ಮತ್ತು ಅದರ ಪರಿಹಾರಕ್ಕೆ ಸಂಬಂಧಿಸಿದ ಪ್ರಶ್ನೆ ಮತ್ತು ಅರಬ್ ಜಗತ್ತಿಗೆ ಸೋವಿಯತ್ ಒಕ್ಕೂಟದಿಂದ ವ್ಯಕ್ತವಾಗುವ ಬೆದರಿಕೆಯನ್ನು ತಡೆಗಟ್ಟಲು ಸೌದಿ ಅರಸೊತ್ತಿಗೆಯ ಪ್ರತಿಕ್ರಿಯೆಯ ವಿಷಯವಾಗಿ ಸೌದಿ ಅರೇಬಿಯಾ ಮತ್ತು ಅಮೆರಿಕ ಪರಸ್ಪರ ವಿರೋಧ ನಿಲುವುಗಳನ್ನು ಹೊಂದಿದ್ದವು. ಕೆಲವೊಮ್ಮೆ ಅವರ ಸಂಬಂಧದಲ್ಲಿ ಕಿರಿಕಿರಿಗಳಾಗಿದ್ದರೂ, ಎರಡೂ ದೇಶಗಳಿಗೆ ಅವಲಂಬನೆಯನ್ನು ತ್ಯಜಿಸಲು ಸಾಧ್ಯವಾಗುತ್ತಿರಲಿಲ್ಲ.

ಸೌದಿ ಅರಸೊತ್ತಿಗೆಗೆ, ಕೆಲವೊಂದು ಗಡಿಯಾಚೆಗಿನ ಘಟನೆಗಳು ಸುಭದ್ರತೆಯ ದೃಷ್ಟಿಯಿಂದ ಪರಿಣಾಮಕಾರಿ ಪ್ರಭಾವವನ್ನು ಬೀರಿದವು. ಅಂತರ್ ಅರಬ್ ರಾಜಕೀಯ ಅರಬ್-ಇಸ್ರೇಲಿ ಯುದ್ಧ, ಸೂಪರ್ ಪವರ್ ಪೈಪೋಟಿ, ತೈಲ ಬೆಲೆ, ಪಶ್ಚಿಮದ ಹಣದುಬ್ಬರ ಇತ್ಯಾದಿ. ಇವೆಲ್ಲವೂ ಒಂದಲ್ಲ ಒಂದು ಕಾರಣದಿಂದ ಸೌದಿ ಸಾಮ್ರಾಜ್ಯದಲ್ಲಿ ಅಭದ್ರತೆಯನ್ನು ಸೃಷ್ಟಿಸುವ ಲಕ್ಷಣವಿದ್ದವು. ಇಂತಹ ಸಮಸ್ಯೆಯನ್ನು ಎದುರಿಸುವ ಸೌದಿ ಅರಸೊತ್ತಿಗೆ, ತನ್ನ ಇರುವಿಕೆಯನ್ನು ಉಳಿಸಿಕೊಳ್ಳಲು, ತನ್ನ ಪ್ರಜೆಗಳ ಆಶೋತ್ತರಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದು ಅನಿವಾರ್ಯವಾಗಿದ್ದು, ಅವರ ವಿದೇಶಾಂಗ ನೀತಿಯಲ್ಲಿ ಹೆಚ್ಚು ಕಮ್ಮಿಯಾಗಿ ಎಡವಿದರೆ, ಅದು ಬಿಕ್ಕಟ್ಟನ್ನೇ ಎದುರಿಸಬಹುದು. ತೈಲ ಸಂಪತ್ತಿನ ಮೇಲಿನ ಅಧಿಕಾರ ಕಳೆದುಕೊಂಡರೆ; ಸಾಮ್ರಾಜ್ಯವನ್ನು ರಕ್ಷಿಸಲು ವಿಫಲವಾದರೆ; ಅಥವಾ ವಿದೇಶ ವಿನಿಮಯವನ್ನು ಸಮರ್ಪವಾಗಿ ನಿರ್ವಹಿಸದಿದ್ದರೆ, ಸೌದಿ ಮನೆತನ ತೀವ್ರತರವಾದ ಅನಾಹುತವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಸೌದಿ ಅರೇಬಿಯಾದ ವಿದೇಶಾಂಗ ನೀತಿಯಲ್ಲಿ ಅಮೆರಿಕ ನಿರ್ಣಾಯಕ ಪಾತ್ರ ವಹಿಸುತ್ತದೆ ಮತ್ತು ಸೌದಿ ಅರಸೊತ್ತಿಗೆಯ ಭವಿಷ್ಯವನ್ನು ನಿರ್ಧರಿಸುತ್ತದೆ.

ಬಾಹ್ಯವಾಗಿ ಹಾಗೂ ಆಂತರಿಕವಾಗಿ ಸೌದಿ ಅರೇಬಿಯಾ ಕೆಲವೊಂದು ಅನಿವಾರ್ಯತೆಯನ್ನು ಎದುರಿಸಿದೆ. ಬಾಹ್ಯವಾಗಿ ತೈಲ ಸಂಪತ್ತು ಸೌದಿ ಭವಿಷ್ಯವನ್ನು, ಶ್ರೀಮಂತಿಕೆಯನ್ನು ಮತ್ತು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಸೌದಿಯರ ಸ್ಥಾನವನ್ನು ಮತ್ತು ಬೇರೆ ಬೇರೆ ಡೈಲಮಾಗಳನ್ನು ಮತ್ತು ಕನ್‌ಸರ್ನ್‌ಗಳನ್ನು ನಿರ್ಧರಿಸಲು ಆಧಾರವಾಗಿದೆ. ಭೌಗೋಳಿಕವಾಗಿ ಸೌದಿ ಸರಕಾರಕ್ಕೆ ಉತ್ತಮ ಅವಕಾಶಗಳಿದ್ದರೂ, ಅದನ್ನು ಸುತ್ತುವರಿದ ಅರಸೊತ್ತಿಗೆ ವಿರೋಧಿ ದೇಶಗಳಿಂದ ಇರುವಿಕೆ ಕಡಿಮೆಗೊಳಿಸಿತ್ತು. ೧೯೫೦ರ ದಶಕದ ಮಧ್ಯ ಭಾಗದವರೆಗೂ ಈ ವ್ಯವಸ್ಥೆ ಮುಂದುವರಿದಿತ್ತು. ಬ್ರಿಟನ್ ಅತ್ಯಂತ ಒಳ್ಳೆಯ ಭದ್ರತಾ ವ್ಯವಸ್ಥೆಯನ್ನು ಪರ್ಶಿಯನ್ ಗಲ್ಫ್, ಇರಾಕ್, ಜೋರ್ಡಾನ್ ಮತ್ತು ಈಜಿಪ್ಟ್‌ನಲ್ಲಿ ಆಯೋಜಿಸಿದ್ದುದು, ಸೌದಿ ಅರೇಬಿಯಾಕ್ಕೆ ಅನುಕೂಲಕರವಾಗಿತ್ತು. ಅಮೆರಿಕದವರು ಟರ್ಕಿ, ಇಥಿಯೋಪಿಯಾ, ಪಾಕಿಸ್ತಾನ ಮತ್ತು ಇರಾನ್‌ನಲ್ಲಿ ಭದ್ರತೆಯನ್ನು ನೋಡಿಕೊಳ್ಳುತ್ತಿದ್ದರು. ಸೋವಿಯತ್ ಒಕ್ಕೂಟದ ಪ್ರಭಾವ ಸದ್ಯಕ್ಕೆ ಎಲ್ಲಿಯೂ ಕಂಡುಬಂದಿರಲಿಲ್ಲ.

ಆದರೆ, ಈ ರೀತಿ ಸಜ್ಜುಗೊಳಿಸಿದ ಪಶ್ಚಿಮ ರಾಷ್ಟ್ರಗಳ ಆಧಿಪತ್ಯದ ಭದ್ರತಾ ವ್ಯವಸ್ಥೆ ಸೌದಿ ಅರೇಬಿಯಾವನ್ನು ಸುತ್ತುವರಿದಿದ್ದು, ಅದು ೧೯೫೫-೫೬ರ ಸಮಯಕ್ಕೆ ನಿಧಾನವಾಗಿ ದುರ್ಬಲಗೊಂಡಿತು. ಇದಕ್ಕೆ ಕಾರಣಗಳು, ಈಜಿಪ್ಟ್‌ನಲ್ಲಿ ಸೋವಿಯತ್ ಒಕ್ಕೂಟದ ಹಸ್ತಕ್ಷೇಪ, ಅರಬ್-ಇಸ್ರೇಲಿ ಯುದ್ಧದ ಮುಂದುವರಿಕೆ ಮತ್ತು ಈಜಿಪ್ಟ್ ಅಧ್ಯಕ್ಷ ಗಮಾಲ್ ಅಬ್ದುಲ್ ನಾಸರ್‌ನ ನೇತೃತ್ವದಲ್ಲಿ ಉಗಮವಾದ ಅರಬ್ ರಾಷ್ಟ್ರವಾದವು ಪ್ರಬಲ ಶಕ್ತಿಯಾಗಿ ಅರಬ್ ಜಗತ್ತಿನ ರಾಜಕೀಯ ರಂಗವನ್ನು ಪ್ರವೇಶಿಸಿತು. ಇದಾದ ಸ್ವಲ್ಪ ಸಮಯದಲ್ಲಿ ಅಂದರೆ, ೧೯೫೮ರಲ್ಲಿ ಸಿರಿಯಾ ಮತ್ತು ಈಜಿಪ್ಟ್ ಜೊತೆಗೂಡಿ ಯುನೈಟೆಡ್ ಅರಬ್ ರಿಪಬ್ಲಿಕ್ ಎಂಬ ಕ್ರಾಂತಿಕಾರಿ ಸಂಘಟನೆಯನ್ನು ಸ್ಥಾಪಿಸಿದವು. ಲೆಬನಾನ್‌ನಲ್ಲಿ ನಾಗರಿಕ ಯುದ್ಧ ಆರಂಭವಾಯಿತು. ಜೋರ್ಡಾನ್ ಹಾಗೂ ಇರಾಕ್‌ನಲ್ಲಿ ಬ್ರಿಟಿಷರ ಪ್ರಭುತ್ವ ದುರ್ಬಲಗೊಂಡಿತು.

ಈ ಎಲ್ಲ ಘಟನೆಗಳು ಸೌದಿ ಅರೇಬಿಯಾದ ದೃಷ್ಟಿಯಿಂದ ಕ್ರಾಂತಿಕಾರಿ ಬೆಳವಣಿಗೆ ಗಳಾಗಿದ್ದು, ಇಡೀ ಅರಬ್ ಜಗತ್ತನ್ನೇ ತನ್ನತ್ತ ಸೆಳೆದುಕೊಳ್ಳುವ ಶಕ್ತಿ ಅವುಗಳಿಗಿತ್ತು. ಮೇಲೆ ಪ್ರಸ್ತಾಪಿಸಿದ ರಾಜಕೀಯ ಶಕ್ತಿಗಳು ಅರಸೊತ್ತಿಗೆ ವಿರೋಧಿಯಾಗಿದ್ದು, ಸೌದಿ ಅರಸೊತ್ತಿಗೆ ಇತಿಹಾಸದ ಬುಟ್ಟಿ ಸೇರುವ ಎಲ್ಲ ಲಕ್ಷಣಗಳಿದ್ದವು. ತಪ್ಪಾಗಿರುವುದು ಎಲ್ಲಿ? ಸೌದಿ ಅರೇಬಿಯಾದ ಪ್ರಕಾರ ಇದಕ್ಕೆ ಎರಡು ಕೆಟ್ಟ ಶಕ್ತಿಗಳು ಕಾರಣವಾಗುತ್ತವೆ. ಒಂದು ಯಹೂದಿಗಳ ರಾಷ್ಟ್ರೀಯ ಅಂದೋಲನ ಜಿಯೋನಿಸಂ ಇನ್ನೊಂದು, ಸೋವಿಯತ್ ಒಕ್ಕೂಟದ ಪ್ರಭಾವದಿಂದ ಉಗಮವಾದ ಕಮ್ಯುನಿಸಂ/ಸಮಾಜವಾದಿ ಪ್ರಭುತ್ವಗಳು, ಸೌದಿಗಳ ಪ್ರಕಾರ, ಅರಬ್ ಸಮುದಾಯ ಪ್ಯಾಲೇಸ್ತೀನಿಯರ ಪ್ರಶ್ನೆಯನ್ನು ಕೇಂದ್ರೀಕರಿಸಿ ಕೊಂಡು ಇಸ್ರೇಲ್‌ನೊಂದಿಗೆ ಸ್ನೇಹದಿಂದಿಲ್ಲ. ಪ್ಯಾಲೇಸ್ತೀನಿಯರಿಗೆ ಆದ ಅನ್ಯಾಯವನ್ನು ಸರಿಪಡಿಸಲು ಸಮಾಜವಾದಿ ಅರಬ್ ರಾಷ್ಟ್ರಗಳಾದ ಈಜಿಪ್ಟ್ ಮತ್ತು ಸಿರಿಯ, ಇಸ್ರೇಲ್ ವಿರುದ್ದ ಸಮರವನ್ನೇ ಸಾರಿದ್ದವು. ಹೋರಾಟವನ್ನು ತೀವ್ರಗೊಳಿಸಲು ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳ ಅಗತ್ಯವಿದ್ದು, ಅದಕ್ಕಾಗಿ ಈ ರಾಷ್ಟ್ರಗಳು ಹೆಚ್ಚು ಹೆಚ್ಚು ಸೋವಿಯತ್ ಒಕ್ಕೂಟದ ಕಡೆಗೆ ವಾಲಿದವು. ಅರಬ್ ಜಗತ್ತಿನಲ್ಲಿ ಸೋವಿಯತ್ ಒಕ್ಕೂಟದ ಪ್ರಭಾವ ವೃದ್ದಿಸುತ್ತಿದ್ದಂತೆ, ತೀವ್ರಗಾಮಿ, ಜತ್ಯತೀತ ಸಿದ್ಧಾಂತಗಳಾದ ನಾಸರಿಸಂ ಮತ್ತು ಸಿರಿಯಾ ಹಾಗೂ ಇರಾಕ್ ದೇಶಗಳ್ಲಲಿ ಉಗಮವಾದ ಬಾತ್ ಸೋಶಲಿಸ್ಟ್ ಪಕ್ಷಗಳು ಹುಟ್ಟು ಹಾಕಿದ ಪಾನ್ -ಅರಬ್ ರಾಷ್ಟ್ರೀಯತ್ವವು ಹೆಚ್ಚು ಪ್ರಚಾರ ಕಂಡುಕೊಳ್ಳುತ್ತವೆ. ಅರಬ್ ಜಗತ್ತಿನಲ್ಲಿ ಇಸ್ರೇಲ್ ದೇಶ ಹುಟ್ಟಿಕೊಳ್ಳದೇ ಇದ್ದಿದ್ದರೆ, ಸೌದಿ ನಾಯಕರ ಲೆಕ್ಕಾಚಾರದಂತೆ, ಈಜಿಪ್ಟ್ ದೇಶದಲ್ಲಿ ಸೋವಿಯತ್ ಪ್ರಭಾವ ಇಷ್ಟೊಂದು ಪ್ರಮಾಣದಲ್ಲಿ ವೃದ್ದಿಸು ತ್ತಿರಲಿಲ್ಲ. ಸೋವಿಯತ್ ರಾಷ್ಟ್ರ ಈಜಿಪ್ಟ್‌ನಲ್ಲಿ ಖಾಯಂ ನೆಲೆ ಕಾಣದೇ ಇದ್ದಿದ್ದರೆ, ಇಡೀ ಮಧ್ಯಪೂರ್ವ ಪ್ರದೇಶದಲ್ಲಿ ಜೀವಂತವಾಗಿರುವ ಅರಸೊತ್ತಿಗೆ ಸರಕಾರಗಳಿಗೆ ಬೆದರಿಕೆ ಬರುತ್ತಿರಲಿಲ್ಲ. ಅದರಲ್ಲೂ ಸೌದಿ ಅರಸೊತ್ತಿಗೆ ಯಾವುದೇ ಧಕ್ಕೆ ಎದುರಿಸು ತ್ತಿರಲಿಲ್ಲ.

೧೯೫೩ರವರೆಗೆ ಹೇಗೋ ಸೌದಿ ಅರೇಬಿಯಾದ ಸಂಸ್ಥಾಪಕ ಅರಸ ಇಬ್ನಸೌದ್, ಸೌದಿ ರಾಜ್ಯದ ರಕ್ಷಣೆಯನ್ನು ನಿರ್ವಹಿಸಿದರು. ಆದರೆ, ಅವನ ಉತ್ತರಾಧಿಕಾರಿಗಳು ಕಠಿಣ ಸವಾಲುಗಳನ್ನು ಎದುರಿಸಬೇಕಾಯಿತು. ಬ್ರಿಟಿಷರ ಅಧಿಪತ್ಯ ಗಲ್ಪ್‌ನಲ್ಲಿ ಕ್ಷೀಣಿಸುತ್ತಿರುವಂತೆ, ಅಮೆರಿಕದವರು ಪ್ರಾದೇಶಿಕ ಭದ್ರತೆಗೆ ಹರಸಾಹಸ ಮಾಡುವ ಸನ್ನಿವೇಶ ಎದುರಾಯಿತು. ಇರಾನ್‌ನಲ್ಲಿ ಅಮೆರಿಕ ಸಾಮ್ರಾಜ್ಯಶಾಹಿಯ ವಿರುದ್ಧ ದಾಳಿಗಳು ಆರಂಭವಾದವು. ಇರಾನ್‌ನ ಇಸ್ಲಾಮಿಕ್ ಚಳವಳಿಯ ತತ್ವಗಳನ್ನು ನೆರೆ ಅರಬ್ ದೇಶಗಳಿಗೆ ರಫ್ತು ಮಾಡಲಾಯಿತು. ಇಥಿಯೋಪಿಯ ಮಾರ್ಕ್ಸ್‌ವಾದಿ ಆಡಳಿತಕ್ಕೆ ಒಳಪಟ್ಟಿತ್ತು. ಟರ್ಕಿಯ ಹೆಚ್ಚು ಕಡಿಮೆ ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಪಾಕಿಸ್ತಾನದ ರಾಜಕೀಯ ಸುಭದ್ರತೆ ಖಾಯಂ ಆಗಿರಲಿಲ್ಲ. ಹಾಗಾಗಿ ಅಮೆರಿಕ ಸಾಮ್ರಾಜ್ಯಶಾಹಿ ಪ್ರಭುತ್ವಕ್ಕೆ ಪ್ರದೇಶದ ಉದ್ದಗಲಕ್ಕೂ ಸವಾಲುಗಳೇ ಕಂಡುಬಂದವು.

ಆಂತರಿಕ ಅನಿವಾರ್ಯತೆ

೧೯೪೫ರ ನಂತರ ಸೌದಿ ದೊರೆಗಳು ರಚಿಸುವ ವಿದೇಶಾಂಗ ನೀತಿಯೂ ಅಲ್ಲಿನ ಆಂತರಿಕ ಭದ್ರತೆಯನ್ನು ಹೆಚ್ಚು ಅವಲಂಬಿಸಿಕೊಂಡಿತ್ತು. ಸೌದಿ ದೇಶದ ಪರಿಸ್ಥಿತಿ ಮತ್ತು ಅಭಿವೃದ್ದಿ, ಹೆಚ್ಚಾಗಿ ಹೊರಜಗತ್ತನ್ನೇ ಅವಲಂಬಿಸಿತ್ತು. ಸೌದಿ ತೈಲ ಸಂಪತ್ತನ್ನು ಅನ್ವೇಷಣೆ, ಉತ್ಪಾದನೆ ಮತ್ತು ಮಾರಾಟ ಮಾಡುವುದು ವಿದೇಶಿ ಕಂಪೆನಿಗಳು. ಸೌದಿ ರಾಜ್ಯದಲ್ಲಿ ಆರ್ಥಿಕ ಅಭಿವೃದ್ದಿ ಸಾಧಿಸಬೇಕಾದರೆ ವಿದೇಶದಿಂದ ಸರಕುಗಳನ್ನು ಮತ್ತು ಯಂತ್ರೋಪಕರಣಗಳನ್ನು ಖರೀದಿಸಲೇಬೇಕು. ಅಲ್ಲಿನ ಸಾಮಾಜಿಕ ಪರಿವರ್ತನೆಯು, ಶಿಕ್ಷಕರನ್ನು ಮತ್ತು ವೈದ್ಯರನ್ನು ಆಮದು ಮಾಡಿಕೊಳ್ಳುವುದನ್ನು ಅವಲಂಬಿಸಿತ್ತು ಮತ್ತು ಸೌದಿ ವಿದ್ಯಾರ್ಥಿಗಳನ್ನು ತರಬೇತಿ ಪಡೆಯಲು ವಿದೇಶಕ್ಕೆ ಕಳುಹಿಸಬೇಕಿತ್ತು. ಕಟ್ಟಡ ನಿರ್ಮಾಣ ಮತ್ತು ಕೂಲಿ ಕಾರ್ಮಿಕರ ಸರಬರಾಜಿಗೆ ಸಂಬಂಧಿಸಿ, ವಿದೇಶಿಯರನ್ನೇ ಅವಲಂಬಿಸಬೇಕಿದ್ದು, ಅವರು ಸೌದಿ ಕಾರ್ಮಿಕರನ್ನು ಸಂಖ್ಯೆಯಲ್ಲಿ ಮೀರುತ್ತಿದ್ದರು. ಸೈನಿಕ ಆಧುನೀಕರಣವು ಶಸ್ತ್ರಾಸ್ತ್ರಗಳ ಆಮದು, ಸಲಹೆಗಾರರನ್ನು ಮತ್ತು ತರಬೇತಿ ಪಡೆಯಲು ಅಮೆರಿಕ ಮತ್ತು ಯುರೋಪಿನವರನ್ನೇ ಅವಲಂಬಿಸಬೇಕಿತ್ತು.

ಸೌದಿಯವರು ವಿದೇಶಿಯರನ್ನು ಅವಲಂಬಿಸುವುದನ್ನು ನಿಲ್ಲಿಸುವ ಪ್ರಯತ್ನದಲ್ಲಿದ್ದರೂ ಅದು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ಸೌದಿಗಳು ಕೈಗಾರಿಕೀಕರಣದಲ್ಲಿ ಮುಂದುವರಿದ ಪಶ್ಚಿಮ ದೇಶಗಳನ್ನೇ ಯಂತ್ರೋಪಕರಣಕ್ಕೆ, ಸರಕುಗಳಿಗೆ, ಭದ್ರತೆಗೆ ಮತ್ತು ತೈಲಕ್ಕಾಗಿ ಮಾರುಕಟ್ಟೆ ಇತ್ಯಾದಿ ವಿಷಯಗಳಿಗೆ ನಂಬಿಕೊಂಡಿದ್ದರು. ಇದಲ್ಲದೆ ತರಬೇತಿ ಹೊಂದಿದ ಮತ್ತು ಹೊಂದದ ಕಾರ್ಮಿಕರನ್ನು ಇತರ ಅರಬ್ ಮತ್ತು ತೃತೀಯ ರಾಷ್ಟ್ರಗಳನ್ನು ಅವಲಂಬಿಸಿತ್ತು. ಈ ವಿಚಾರವಾಗಿ ಎಲ್ಲಿಯಾದರೂ ಸೌದಿ ಸರಕಾರ ಎಡವಿದರೆ, ಆಂತರಿಕ ವಾಗಿ ಪ್ರತಿಕೂಲ ಪರಿಣಾಮ ಬೀರುವುದುಂಟು.

ಸೌದಿ ಸಮಾಜದ ಅಭಿವೃದ್ದಿ ಮತ್ತು ಭದ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಗಡಿಯಾಚೆಗಿನ ದೇಶಗಳೊಂದಿಗೆ ಸಂಪರ್ಕ ಬೆಳೆಸುವುದು ಅಲ್ಲಿನ ಸರಕಾರಕ್ಕೆ ಅನಿವಾರ್ಯ ವಾಗಿತ್ತು. ಸೌದಿ ಅರಸೊತ್ತಿಗೆಗೆ ಬಾಹ್ಯವಾಗಿ ಬರುವ ಬೆದರಿಕೆಯೇ ತೀವ್ರ ಸ್ವರೂಪದ್ದು ಎಂದು ಅವರಿಗೂ ಅರಿವಿತ್ತು. ಅಂದರೆ, ತಮಗೆ ನೆರೆ ರಾಷ್ಟ್ರಗಳು ಅಥವಾ ಸೋವಿಯತ್ ಒಕ್ಕೂಟದಿಂದ ಬರುವ ಬೆದರಿಕೆಗಳು ಅಷ್ಟೊಂದು ಗಂಭೀರವಾದುದಾಗಿರಲಿಲ್ಲ. ಅವೆಲ್ಲವಕ್ಕಿಂತಲೂ, ಮಧ್ಯಪೂರ್ವ ಪ್ರದೇಶ ಎದುರಿಸುತ್ತಿರುವ ಸಮಸ್ಯೆಗಳಾದ ಅಭದ್ರತೆ, ಒಳಜಗಳ ಮತ್ತು ತೀವ್ರಗಾಮಿ ಸೈದ್ಧಾಂತಿಕ ತತ್ವಗಳು ಸೌದಿ ಅರೇಬಿಯಾದ ಆಂತರಿಕ ಅಭಿವೃದ್ದಿಗೆ ಹೆಚ್ಚು ಪ್ರತಿಕೂಲ ಪರಿಣಾಮ ಬೀರುವುದೆಂಬ ಭಯವಿತ್ತು.

ಈ ನಿಟ್ಟಿನಲ್ಲಿ ೧೯೬೦ರ ದಶಕದ ಆರಂಭದ ವರ್ಷಗಳು, ಸೌದಿ ನಾಯಕರಿಗೆ, ತಮ್ಮ ದೇಶದ ವಿದೇಶಾಂಗ ನೀತಿ ರೂಪಿಸುವಲ್ಲಿ ಮುಖ್ಯವಾಗುತ್ತವೆ. ೧೯೫೮ರಿಂದಲೇ ಅರಬ್ ಜಗತ್ತನ್ನು ತೀವ್ರಗಾಮಿ ಸೈದ್ಧಾಂತಿಕ ಚಳವಳಿಗಳು ಆವರಿಸಿಕೊಂಡಿರುವುದನ್ನು ಸೌದಿ ಅರಸೊತ್ತಿಗೆ ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಈ ಚಟುವಟಿಕೆಗಳು ಈಜಿಪ್ಟ್ ಅಧ್ಯಕ್ಷ ನಾಸರ್‌ನನ್ನು ಕೇಂದ್ರೀಕರಿಸಿತ್ತು. ಇದರ ಜೊತೆಗೆ, ಆಂತರಿಕವಾಗಿ ನಾಯಕತ್ವದ ವಿಚಾರವಾಗಿ ತಲೆದೋರಿದ ಬಿಕ್ಕಟ್ಟು ಅರಾಜಕತೆಗೆ ಎಡೆ ಮಾಡಿಕೊಟ್ಟಿತ್ತು. ೧೯೫೩ರಲ್ಲಿ ಸೌದಿ ರಾಜ್ಯದ ಸ್ಥಾಪಕ ದೊರೆ ಅಬ್ದುಲ್ ಅಜೀಜ್ ಇಬ್ನಸೌದ್ ಮರಣ ಹೊಂದಿದನು. ಅವನ ಉತ್ತಾರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಇಬ್ನಸೌದ್ ಅಬ್ದುಲ್ ಅಜೀಜ್ ನು ಅಸಮರ್ಥವಾಗಿದ್ದು, ಅವನ ಆಂತರಿಕ ಮತ್ತು ವಿದೇಶಾಂಗ ನೀತಿಯಲ್ಲಿ ದುರ್ ನಿರ್ವಹಣೆ, ಸೌದಿ ಕುಟುಂಬದ ಸದಸ್ಯರಿಗೆ ನೋವುಂಟುಮಾಡಿತು. ಅವನ ಅಧಿಕಾರವನ್ನು ಮೊಟಕುಗೊಳಿಸಲು ದೇಶದಾದ್ಯಂತ ವಿರೋಧ ವ್ಯಕ್ತವಾದವು. ಇದು ಸಾಮ್ರಾಜ್ಯದಲ್ಲಿ ದುಸ್ಥಿತಿ ಮತ್ತು ಅಭದ್ರತೆಯನ್ನು ಹುಟ್ಟುಹಾಕಿತು.

ವಿದೇಶಾಂಗ ನೀತಿಯನ್ನು ರೂಪಿಸುವಾಗ ಸೌದಿ ಅಧಿಕಾರಿಗಳು ಈಜಿಪ್ಟ್ ಸರಕಾರಕ್ಕೆ ನೀಡಿದಷ್ಟು ಪ್ರಾಮುಖ್ಯತೆಯನ್ನು ಯಾವ ದೇಶಕ್ಕೂ ನೀಡಿರಲಿಲ್ಲ. ಇದಕ್ಕೆ ಕಾರಣವೂ ಇದೆ. ೧೯೫೦ ಮತ್ತು ೬೦ರ ದಶಕಗಳುದ್ದಕ್ಕೂ ಈಜಿಪ್ಟ್‌ನ ಅಧ್ಯಕ್ಷ ಅಬ್ದುಲ್ ನಾಸರ್, ಸೌದಿ ಅರಸೊತ್ತಿಗೆ ವಿರುದ್ಧ ಸಮರವನ್ನೇ ಸಾರಿದ್ದನು. ಇದು ಮುಂದುವರಿದು ೧೯೬೨-೬೩ರಲ್ಲಿ ಯಮಾನ್ ದೇಶದಲ್ಲಿ ಭುಗಿಲೆದ್ದ ನಾಗರಿಕ ಯುದ್ಧದಲ್ಲಿ ಎರಡೂ ದೇಶಗಳು ಮುಖಾಮುಖಿಯಾದವು. ಇಲ್ಲಿ ಸಮಾಜವಾದಿ ಪರ ಇರುವ ಗುಂಪು ಮತ್ತು ಅರಸೊತ್ತಿಗೆ ಪರ ಇರುವ ಗುಂಪುಗಳ ನಡುವೆ ವೈಷಮ್ಯ ಆರಂಭವಾದಾಗ, ಉತ್ತರ ಭಾಗದ ಯಮಾನ್‌ನಲ್ಲಿರುವ ಸಮಾಜವಾದಿ ಗುಂಪನ್ನು ಈಜಿಪ್ಟ್ ಸರಕಾರ ಬೆಂಬಲಿಸಿದರೆ, ದಕ್ಷಿಣ ಭಾಗದಲ್ಲಿ ಯಮಾನ್‌ನಲ್ಲಿರುವ ಸಮಾಜವಾದಿ ಗುಂಪನ್ನು ಈಜಿಪ್ಟ್ ಸರಕಾರ ಬೆಂಬಲಿಸಿದರೆ, ದಕ್ಷಿಣ ಭಾಗದಲ್ಲಿ ಪ್ರಭಾವಿಯಾಗಿರುವ ಅರಸೊತ್ತಿಗೆ ಪರ ಇರುವ ಗುಂಪನ್ನು ಸೌದಿಗಳು ಬೆಂಬಲಿಸಿದರೆ, ದಕ್ಷಿಣ ಭಾಗದಲ್ಲಿ ಪ್ರಭಾವಿಯಾಗಿರುವ ಅರಸೊತ್ತಿಗೆ ಪರ ಇರುವ ಗುಂಪನ್ನು ಸೌದಿಗಳು ಬೆಂಬಲಿಸಿದರು. ಅಧ್ಯಕ್ಷ ನಾಸರನು ಸಮಾಜವಾದಿ ಸೈದ್ಧಾಂತಿಕ ಚಿಂತನೆಗಳನ್ನು ಪ್ರಚಾರ ಮಾಡಿ, ಇಡೀ ಯಮಾನ್‌ನಲ್ಲಿ ಸಮಾಜವಾದಿ ಸರಕಾರ ರಚಿಸಬೇಕೆಂದು ಇದ್ದರೆ, ಸೌದಿ ಅರೇಬಿಯಾ ಅದನ್ನು ವಿರೋಧಿಸಿ, ಅಲ್ಲಿ ಅರಸೊತ್ತಿಗೆ ಆಡಳಿತವನ್ನು ಉಳಿಸಿಕೊಳ್ಳಲೋಸ್ಕರ ದಕ್ಷಿಣ ಭಾಗದ ಯಮಾನಿಯರಿಗೆ, ಹಣಕಾಸು, ಸೈನಿಕ ಹಾಗೂ ರಾಜತಾಂತ್ರಿಕ ಸಹಕಾರವನ್ನು ನೀಡಿತು. ಈ ಸಮಯದಲ್ಲಿ ಈಜಿಪ್ಟ್ ಹಲವು ಬಾರಿ ಸೌದಿ ಪ್ರದೇಶದ ಮೇಲೆ ಬಾಂಬ್ ದಾಳಿಯನ್ನೂ ಕೂಡ ಮಾಡಿತ್ತು.

ಸೌದಿ ಅಧಿಕಾರಿಗಳು, ಅಧ್ಯಕ್ಷ ನಾಸರ್‌ನನ್ನು ಗಂಭೀರವಾಗಿ ತೆಗೆದುಕೊಳ್ಳಲು ಮುಖ್ಯ ಕಾರಣ – ಅವನು ಅರಬ್ ಜಗತ್ತಿನಲ್ಲಿ ತೀವ್ರಗಾಮಿ ಗುಂಪುಗಳನ್ನು ಪ್ರತಿನಿಧಿಸುತ್ತಿದ್ದನು. ನಾಸರ್ ಪ್ರತಿಪಾದಿಸುವ ಸಮಾಜವಾದಿ ಚಳವಳಿಯು ಅರಬ್ ರಾಷ್ಟ್ರೀಯತ್ವದ ನಾಯಕತ್ವವನ್ನು ಪಡೆಯಬೇಕೆಂಬ ಹಂಬಲವನ್ನು ತೋರಿಸುತ್ತಿತ್ತು. ಹೊಸ ರಾಜಕೀಯ ವಾತಾವರಣವನ್ನು ಹುಟ್ಟು ಹಾಕುವ ಆಶಯವನ್ನು ಹೊಂದಿದ್ದ ನಾಸರನ ತೀವ್ರಗಾಮಿ ಚಳವಳಿಯು ಆರಂಭದಲ್ಲಿ ಅರಬ್ ಸಮುದಾಯದ ಒಗ್ಗಟ್ಟಿಗೆ ಹೆಚ್ಚು ಮಾನ್ಯತೆ ನೀಡಿತ್ತು. ಅದೊಂದು ವಸಾಹತುಶಾಹಿ ಮತ್ತು ಪಶ್ಚಿಮದ ಬಂಡವಾಳಶಾಹಿ ವಿರೋಧಿ ಚಳವಳಿಯಾಗಿ ಉಗಮವಾಗಿರುವುದಲ್ಲದೆ, ಅದು ಪ್ರಧಾನವಾಗಿ, ಜನಸಾಮಾನ್ಯರ ಬೆಂಬಲವನ್ನು ಅರಸುವ ರಾಜಕೀಯ ಚಳವಳಿಯಾಗಿ, ಜತ್ಯತೀತವಾದಿ, ಅರಸೊತ್ತಿಗೆ ವಿರೋಧಿ, ಅಭಿವೃದ್ದಿ ಪರ ಮತ್ತು ಸೋವಿಯತ್ ಒಕ್ಕೂಟ ಪರವಿರುವ ಒಂದು ಸಂಘಟನೆಯ ರಚನೆ. ಆದರೆ, ಸೌದಿ ನಾಯಕತ್ವವು, ಅರಸೊತ್ತಿಗೆ, ಇಸ್ಲಾಂ ಧರ್ಮ ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ಆಧರಿಸಿದ್ದು, ಅವುಗಳ ಮಲ್ಯಗಳಿಂದ ಭದ್ರತೆ ಮತ್ತು ವ್ಯವಸ್ಥೆಯನ್ನು ಕಾಪಾಡಬೇಕು ಎಂದು ಪ್ರತಿಪಾದಿಸುತ್ತಿತ್ತು. ಇವೆಲ್ಲ ಆಲೋಚನೆಗೆ ವಿರುದ್ಧವಾಗಿ ೧೯೫೦ರ ದಶಕದಲ್ಲಿ ಪ್ರವೇಶ ಮಾಡಿದ ಎಡಪಂಥೀಯ ತತ್ವಗಳು ಅರಬ್ ಜಗತ್ತಿನಲ್ಲಿ ಬದಲಾವಣೆಯ ಗಾಳಿಯನ್ನು ಬೀಸಿತು. ಸೌದಿಯಂತಹ ಸಾಂಪ್ರದಾಯಿಕ ಸಮಾಜಗಳಿಗೆ ಇದು ಮಾರಕವಾದುದಾಗಿತ್ತು. ಅದೇ ರೀತಿ ಈ ತೀವ್ರಗಾಮಿ ಶಕ್ತಿಗಳು ಮಧ್ಯಪೂರ್ವ ಪ್ರದೇಶಕ್ಕೆ ಆಗಮಿಸಿ ಖಾಯಂ ನೆಲೆ ನಿಲ್ಲಲು ಆಹ್ವಾನ ಪಡೆದಿರುವುದು ಮತ್ತೂ ಗಂಭೀರವಾದುದು.

೧೯೫೨ರಲ್ಲಿ ಘಟಿಸಿದ ಈಜಿಪ್ಟ್ ಚಳವಳಿಯಿಂದ ಆರಂಭವಾಗಿ, ಸಾಮಾಜಿಕ ನ್ಯಾಯ, ರಾಷ್ಟ್ರೀಯತ್ವ ಮತ್ತು ಜನಸಾಮಾನ್ಯರ ಹೆಸರಿನಲ್ಲಿ ಸರಣಿಯಂತೆ ಅನೇಕ ಉಗ್ರ ರೀತಿಯ ಚಳವಳಿಗಳು ಅರಬ್ ಜಗತ್ತಿನಲ್ಲಿ ನಡೆದಿರುವುದನ್ನು ಸೌದಿ ಅರಸೊತ್ತಿಗೆ ಕುತೂಹಲದಿಂದಲೇ ಗಮನಿಸುತ್ತಿತ್ತು. ಎಲ್ಲ ಸಂದರ್ಭಗಳಲ್ಲೂ ಸಾಂಪ್ರದಾಯಿಕ ಅರಸೊತ್ತಿಗೆಗಳು ಬಲಿಯಾಗಿವೆ. ನಡೆಸುವ ದಾಳಿಗಳನ್ನು ಬೇರೆ ಬೇರೆ ಹೆಸರಿನಲ್ಲಿ ನಡೆಸಲಾಗಿತ್ತು.

ಅರಬ್ ರಾಷ್ಟ್ರೀಯತ್ವ ಒಗ್ಗಟ್ಟು, ಸಾಮಾಜಿಕ ನ್ಯಾಯ ಮತ್ತು ಸಮಾನತೆ

ಈ ತೀವ್ರಗಾಮಿ ಚಳವಳಿಯ ಫಲಿತಾಂಶವು ಪ್ರಶಂಶನೀಯವಾದದ್ದು ಆಗಿದ್ದು, ಅದು ಸೌದಿ ಅರಸೊತ್ತಿಗೆಗೆ ಮಾರಕವಾಗಿ ಕಂಡುಬಂತು. ೧೯೫೨ರಲ್ಲಿ ಈಜಿಪ್ಟ್‌ನಲ್ಲಿ ಅರಸೊತ್ತಿಗೆ ದುರ್ಬಲಗೊಂಡಿತು. ೧೯೫೮ರಲ್ಲಿ ಇರಾಕಿನ ರಾಜ ಮನೆತನ ಅಧಿಕಾರ ಕಳೆದುಕೊಂಡಿತು. ಮತ್ತು ಅಲ್ಲಿ ಹೊಸ ಪ್ರಭುತ್ವದ ರಚನೆಯಾಯಿತು. ರಾಷ್ಟ್ರೀಯವಾದಿಗಳು ಬಾತ್ ಪಾರ್ಟಿಯ ಕಾರ್ಯಕರ್ತರು ಮತ್ತು ಕಮ್ಯುನಿಸ್ಟರು ಅಧಿಕಾರ ವಹಿಸಿಕೊಂಡರು. ೧೯೫೦ರ ಮಧ್ಯದಲ್ಲಿ ಸಿರಿಯಾದ ರಾಜಕೀಯ ಜೀವನ ಹೊಸ ತಿರುವುವನ್ನು ಪಡೆಯಿತು. ಎಡಪಂಥೀಯ ಗುಂಪುಗಳ ಪ್ರವೇಶ ಆಗಿ, ಅವು ಸ್ವಲ್ಪ ಕಾಲ, ಅಂದರೆ ೧೯೫೮ರಿಂದ ೧೯೬೧ರವರೆಗೆ ಈಜಿಪ್ಟ್‌ನ ಸಮಾಜವಾದಿ ಪ್ರಭುತ್ವದೊಂದಿಗೆ ಗುರುತಿಸಿಕೊಂಡಿತು. ಕೊನೆಗೆ ಬಾತ್ ಸಮಾಜವಾದಿ ಆಧಿಪತ್ಯ ರಚನೆಯಾಯಿತು. ೧೯೬೨ರಲ್ಲಿ ಉತ್ತರ ಯಮಾನ್‌ನಲ್ಲಿ ಈಜಿಪ್ಟ್ ಬೆಂಬಲ ಪಡೆದ ಎಡಪಂಥೀಯರು ಅರಸೊತ್ತಿಗೆ ಸರಕಾರವನ್ನು ಪದಚ್ಯುತಿ ಮಾಡಿದರು. ಅದೇ ವರ್ಷ ಅಲ್ಜೀರಿಯದ ಸಮಾಜವಾದಿ ನಾಯಕ ಅಹಮದ್ ಬೆನ್ ಬೆಲ್ಲಾ ನೇತೃತ್ವದಲ್ಲಿ ಫ್ರೆಂಚ್ ವಸಾಹತುಶಾಹಿ ವಿರುದ್ಧ ಯುದ್ಧ ಸಾರಿ ಅಲ್ಜೀರಿಯಾವನ್ನು ಸ್ವತಂತ್ರಗೊಳಿಸಿದನು. ೧೯೬೭ರಲ್ಲಿ ಇಡನ್ ನಲ್ಲಿ ಬ್ರಿಟಿಷರ ಬಾವುಟ ಕೆಳಗಿಳಿದು, ಅಲ್ಲಿನ ಅಧಿಕಾರ ಮಿಲಿಟೆಂಟ್ ಆಗಿರುವ ರಾಷ್ಟ್ರವಾದಿಗಳ ಕೈಗೆ ಹಸ್ತಾಂತರಿಸಿತು. ಅದು ಕೂಡ ಮಾರ್ಕ್ಸ್‌ವಾದಿ ತತ್ವದ ಪ್ರಭಾವದಿಂದಲೆ, ಎರಡು ವರ್ಷಗಳ ನಂತರ (೧೯೬೯) ಲಿಬಿಯಾದಲ್ಲಿ ದೊರೆ ಪ್ರಥಮ ಇಡ್ರೀಸ್‌ನ ಆಧಿಪತ್ಯ ಅಂತ್ಯಗೊಂಡಂತೆ, ಯುವ ರಾಷ್ಟ್ರವಾದಿ ಕರ್ನಲ್ ಗಡಾಫಿ ಗದ್ದುಗೆಗೆ ಏರಿದನು. ಅವನು ತನ್ನ ರಾಜಕೀಯ ಜೀವನದಲ್ಲಿ ನಾಸರ್‌ನ ತತ್ವಗಳನ್ನು ಆದರ್ಶವಾಗಿರಿಸಿಕೊಂಡಿದ್ದನು.

ಈ ಎಲ್ಲ ಘಟನೆಗಳಲ್ಲಿ ಸಾಂಪ್ರದಾಯಿಕ ಹಾಗೂ ಪಶ್ಚಿಮದ ಬಂಡವಾಳಶಾಹಿ ದೇಶಗಳ ಪರ ಇರುವ ಪ್ರಭುತ್ವಗಳು, ಮುಖ್ಯವಾಗಿ ಅರಸೊತ್ತಿಗೆ ಸರಕಾರಗಳು ಬಲಿ ಯಾದವು. ಎಲ್ಲ ಸಂದರ್ಭದಲ್ಲೂ ಸೋವಿಯತ್ ಒಕ್ಕೂಟದ ಪ್ರಭಾವ ಕಂಡುಬಂದಿದ್ದು, ಅದರ ಹಸ್ತಕ್ಷೇಪ ನಿಧಾನವಾಗಿ ವಿಸ್ತರಿಸಿತು. ಸೌದಿ ಅರೇಬಿಯಾಕ್ಕೆ ಇದು ಭಯ ಹುಟ್ಟಿಸುವ ಸಂದರ್ಭಗಳು ಮತ್ತು ಅದು ಆ ಕ್ಷಣ ಜಾಗೃತವಾಗಬೇಕಾಯಿತು. ಒಂದು ವೇಳೆ ಸೌದಿ ಸಾಮ್ರಾಜ್ಯದೊಳಗೆ ಈ ಹೊಸ ಚಳವಳಿಯ ಲಕ್ಷಣಗಳು ಪ್ರವೇಶ ಮಾಡಿದ್ದರೆ, ಸೌದಿ ಅರಸೊತ್ತಿಗೆ ಬಲಿಯಾಗಬೇಕಾಗುತ್ತಿತ್ತು.

ಈ ಬಗೆಯ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಲು ಸೌದಿಗಳು ಅನೇಕ ತಂತ್ರಗಳನ್ನು ಬಳಸಿದರು. ಗಡಿಬಿಡಿಯಲ್ಲಿ ಉತ್ತರಿಸದೆ, ಅವಕಾಶಗಳನ್ನು ನಿರೀಕ್ಷಿಸುತ್ತಾ ಕಾದು ನೋಡುವ ಧೋರಣೆ ಪಾಲಿಸಿದರು. ಸೌದಿ ಅರೇಬಿಯಾಕ್ಕೆ ನಾಸರ್‌ನ ಪ್ರಭಾವವನ್ನು ಮಟ್ಟ ಹಾಕಲು ೧೯೬೭ರ ಮೂರನೆಯ ಅರಬ್-ಇಸ್ರೇಲ್ ಯುದ್ಧದ ನಂತರ ಆಯೋಜಿಸಿದ ಕೌಟ್ರಮ್ ಸಮ್ಮೇಳನ ಒಂದು ಅವಕಾಶ ನೀಡಿತು. ಈ ಹಿಂದೆ ಅರಬ್‌ರ ಹೋರಾಟವನ್ನು ನಾಸರ್‌ನ ನಾಯಕತ್ವದಲ್ಲಿ ನಡೆಸಿದ್ದು, ಜೋರ್ಡಾನ್ ಮತ್ತು ಸಿರಿಯಾ ಸರಕಾರಗಳು ಅದಕ್ಕೆ ಎಲ್ಲ ಬಗೆಯ ಬೆಂಬಲ ನೀಡಿದ್ದವು. ಆದರೆ, ಇಸ್ರೇಲ್ ಅರಬ್‌ರ ಹೋರಾಟವನ್ನು ಹತ್ತಿಕ್ಕಲು ಸದಾಕಾಲ ತಯಾರಿಯಲ್ಲಿದ್ದುದರಿಂದ ೧೯೬೭ರ ಯುದ್ಧದಲ್ಲಿ ಕಡಿಮೆ ಅವಧಿಯಲ್ಲಿ ನಾಸರ್ ನೇತೃತ್ವದ ಸೈನ್ಯವನ್ನು ಸೋಲಿಸಿತು. ಮಾತ್ರವಲ್ಲ ಯುದ್ಧ ವಿರಾಮ ಘೋಷಿಸಲು ಕರೆದಿದ್ದ ಕೌಟ್ರಮ್ ಸಮ್ಮೇಳನದಲ್ಲಿ ಇಸ್ರೇಲ್ ಪ್ರತಿನಿಧಿಗಳು ಈಜಿಪ್ಟ್ ಸರಕಾರದಿಂದ ಬೃಹತ್ ಪ್ರಮಾಣದ ಮೊತ್ತವನ್ನು ಯುದ್ಧ ವೆಚ್ಚವಾಗಿ ಕೇಳಿತು. ಇದು ನಾಸರ್‌ನನ್ನು ದಿಗ್ಭ್ರಮೆಗೊಳಿಸಿತು. ಏಕೆಂದರೆ ೧೯೫೨ರಿಂದ ಪ್ಯಾಲೇಸ್ತೀನಿ ಅರಬ್‌ರು ಇಸ್ರೇಲ್ ವಿರುದ್ಧ ನಡೆಸಿದ ಎಲ್ಲ ಹೋರಾಟದಲ್ಲಿ ಈಜಿಪ್ಟ್ ಅಧ್ಯಕ್ಷ ಮುಂಚೂಣಿಯಲ್ಲಿದ್ದು, ಅರಬ್ ಜಗತ್ತಿನ ಒಗ್ಗಟ್ಟನ್ನು ಸಾಧಿಸಿ ಅದರ ಅಧಿಪತಿಯಾಗಿ ಗುರುತಿಸಿಕೊಳ್ಳಬೇಕೆಂಬ ಕನಸಿನಲ್ಲಿದ್ದನು. ತನ್ನ ದೇಶದ ಅರ್ಥವ್ಯವಸ್ಥೆ ಕೃಷಿಯನ್ನೇ ಅವಲಂಬಿಸಿದ್ದು, ಬರುವ ಆದಾಯವನ್ನು ತನ್ನ ಪ್ರತಿಷ್ಠೆ ಮೆರೆಯಲೋಸ್ಕರ ವ್ಯಯಿಸು ತ್ತಿದ್ದನು. ಪರೋಕ್ಷವಾಗಿ ಸೌದಿ ಅರೇಬಿಯಾದಂತ ಶ್ರೀಮಂತ ತೈಲ ರಾಷ್ಟ್ರದೊಂದಿಗೆ ನಾಯಕತ್ವಕ್ಕಾಗಿ ಅವರು ನಡೆಸಿದ ಹೋರಾಟವು ಹೌದು. ಮತ್ತೊಂದು ಅರ್ಥದಲ್ಲಿ ಸೌದಿ ಅರಸ ಪೈಸಲ್ ನೊಂದಿಗೆ ಅವನು ನಡೆಸುವ ವೈಯಕ್ತಿಕ ಹೋರಾಟವು ಆಗಿದ್ದು, ಯಾರು ಅರಬ್ ಜಗತ್ತಿನ ನಾಯಕತ್ವವನ್ನು ಅಲಂಕರಿಸಲು ಪ್ರಬಲರು ಎಂಬ ಪ್ರಶ್ನೆಯನ್ನು ಸುತ್ತುವರಿದಿತ್ತು. ಈ ಯೋಜನೆಯಲ್ಲಿ ಅಬ್ದುಲ್ ನಾಸರ್, ಕೆಲವೊಂದು ಯಶಸ್ಸನ್ನು ೧೯೫೦-೬೦ರ ದಶಕಗಳಲ್ಲಿ ಕಂಡಿದ್ದನ್ನು ಸೌದಿ ಅರಸ ಪೈಸಲ್ ಅರಿತಿದ್ದನು. ನಾಸರ್‌ನು ಅರಬ್ ಸಮುದಾಯವನ್ನು ತನ್ನ ನಾಯಕತ್ವದ ಕಡೆಗೆ ಸೆಳೆದುಕೊಳ್ಳಲು, ಅರಬ್ ಜಗತ್ತಿನಲ್ಲಿ ಗಟ್ಟಿಯಾಗಿರುವ ಅರಸೊತ್ತಿಗೆ ವಿರುದ್ಧ ಧ್ವನಿ ಎತ್ತುತ್ತಾನೆ. ಸಾಮಾಜಿಕ ನ್ಯಾಯ, ಅರಬ್ ಒಗ್ಗಟ್ಟು, ಸಹಯೋಗ, ಸಹಬಾಳ್ವೆಯ ಕುರಿತು ಹೊಸ ಅಲೆಯನ್ನೇ ಎಬ್ಬಿಸಿ, ತನ್ನದೇ ಒಂದಷ್ಟು ಬೆಂಬಲಿಗರನ್ನು ಸೃಷ್ಟಿಸಿ, ಅವನದ್ದೇ ಅನನ್ಯತೆಯನ್ನು ಸ್ಥಾಪಿಸಿಕೊಂಡಿದ್ದನು. ಇದಕ್ಕುತ್ತರವಾಗಿ ಸೌದಿ ದೊರೆ ಕಾದು ನೋಡುತ್ತಾ ಅವಕಾಶಗಳಿಗಾಗಿ ಮುಂದೆ ನೋಡುತ್ತಿದ್ದನು. ಅವರ ಲೆಕ್ಕಾಚಾರ, ತಕ್ಷಣ ಅರಬ್ ಜಗತ್ತು ತೀವ್ರಗಾಮಿಗಳ ಪರವಾಗಿದ್ದು ಅರಸೊತ್ತಿಗೆ ಸರಕಾರಗಳ ಹಸ್ತಕ್ಷೇಪಕ್ಕೆ ಕಾಲ ಪಕ್ವವಾಗಿರಲಿಲ್ಲ.

ಕೌಟ್ರಮ್ ಸಮ್ಮೇಳನದಲ್ಲಿ ಇಸ್ರೇಲ್ ಅಧಿಕಾರಿಗಳು ದೊಡ್ಡ ಮೊತ್ತದ ಬೇಡಿಕೆಯ ನ್ನಿಟ್ಟಾಗ ನಾಸರ್ ಮತ್ತು ಅವನ ಬೆಂಬಲಿಗ ದೇಶಗಳು ಕಂಗೆಟ್ಟವು. ಅಷ್ಟೊಂದು ಮೊತ್ತವನ್ನು ಸಂಗ್ರಹಿಸಲು ಈ ಮೂರು ಅರಬ್ ದೇಶಗಳು (ಈಜಿಪ್ಟ್, ಸಿರಿಯಾ ಮತ್ತು ಜೊರ್ಡಾನ್) ತೈಲ ಸಂಪತ್ತಿನಿಂದ ಶ್ರೀಮಂತವಾಗಿರಲಿಲ್ಲ. ಅವೆಲ್ಲವು ಕೃಷಿ ಪ್ರಧಾನ ಸಮಾಜಗಳೇ ಆಗಿದ್ದವು.

ಇದೇ ಸಂದರ್ಭವನ್ನು ಸೌದಿ ಅರೇಬಿಯಾ ಚಾಣಾಕ್ಷತನದಿಂದ ಬಳಸಿಕೊಂಡು ಕೌಟ್ರಮ್ ಸಮ್ಮೇಳನದಲ್ಲಿ ಇಸ್ರೇಲ್‌ನೊಂದಿಗೆ ರಾಜಿ ಸಂಧಾನ ಮಾಡಲು ಮಧ್ಯವರ್ತಿ ಯಾಗಿ ಪ್ರವೇಶ ಮಾಡಿತು. ಈಜಿಪ್ಟ್, ಸಿರಿಯಾ ಮತ್ತು ಜೋರ್ಡಾನ್ ಸರಕಾಗಳಿಗೆ ಅಚ್ಚರಿಯಾಗುವಂತೆ

೧. ಸೌದಿ ಸರಕಾರ ಇಸ್ರೇಲ್ ಕೇಳಿಕೊಂಡ ಬೃಹತ್ ಮೊತ್ತವನ್ನು ತನ್ನ ಖಜನೆಯಿಂದ ಕೊಡುವುದಾಗಿ ಘೋಷಿಸಿತು.

೨. ಯುದ್ಧೋತ್ತರ ಕಾಲದಲ್ಲಿ ಈಜಿಪ್ಟ್, ಸಿರಿಯಾ ಮತ್ತು ಜೋರ್ಡಾನ್ ದೇಶಗಳ ಆರ್ಥಿಕ, ಸೈನಿಕ ಮತ್ತು ಹಣಕಾಸು ಸಂಸ್ಥೆಗಳ ಪುನರ್ ನಿರ್ಮಾಣಕ್ಕೆ ಬೇಕಾದ ಹಣಕಾಸಿನ ನೆರವನ್ನು ಸೌದಿ ಸರಕಾರವೇ ಭರಿಸುವುದೆಂದು ಆಶ್ವಾಸನೆ ನೀಡಿತು.

ಇಸ್ರೇಲ್ ಸರಕಾರದಿಂದ ಅವಮಾನಕ್ಕೊಳಗಾಗಬೇಕಾಗುವ ಸಂದರ್ಭದಲ್ಲಿ ಸೌದಿ ಅರೇಬಿಯಾ ಭ್ರಾತೃತ್ವವನ್ನು ಮೆರೆದು ನೀಡಿದ ಸಹಕಾರವನ್ನು ಪ್ರಶಂಸಿಸಿ, ಸೌದಿ ಅರಸೊತ್ತಿಗೆಯನ್ನು ಈಜಿಪ್ಟ್ ವಿಶೇಷವಾದ ಗೌರವದಿಂದ ಒಪ್ಪಿಕೊಂಡಿತು. ಈಜಿಪ್ಟ್ ಸುಮಾರು ಇಪ್ಪತ್ತು ವರ್ಷಗಳ ಕಾಲ ಅರಬ್ ಜಗತ್ತಿನ ನಾಯಕತ್ವಕ್ಕಾಗಿ ಸ್ಪರ್ಧಿಸಿದ್ದರೂ, ಸೌದಿ ಅರೇಬಿಯಾ ನೀಡಿದ ಸಹಕಾರ (ಈವರೆಗೆ ಸೌದಿ ಅರಸೊತ್ತಿಗೆಯನ್ನು ವಿರೋಧಿಸಿದ್ದ ಸಂದರ್ಭದಲ್ಲೂ) ಆ ದೇಶದ ಬಗೆಗೆ ಇರುವ ಧೋರಣೆ ಬದಲಾಗುವಂತೆ ಮಾಡಿತು. ಮುಂದಿನ ದಿನಗಳಲ್ಲಿ ಸೌದಿ ಪ್ರಭುತ್ವವನ್ನು ಮೃದುವಾಗಿ ನೋಡಿ ಇಡೀ ಅರಬ್ ಜಗತ್ತಿನ ರಾಜಕೀಯ ಅಗುಹೋಗುಗಳಿಗೆ ಸೌದಿ ದೊರೆ ಪೈಸಲ್ ನಾಯಕನೆಂದು ಈಜಿಪ್ಟ್ ಒಪ್ಪಿಕೊಂಡಿತು ಮತ್ತು ಇತರ ಅರಬ್ ದೇಶಗಳಿಗೂ ಒತ್ತಾಯ ಹೇರಿ, ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಅರಬ್ ವಿಚಾರಗಳ ಪ್ರತಿನಿಧಿಯಾಗಿ ವ್ಯವಹರಿಸಲು ಸೌದಿ ಸರಕಾರವನ್ನು ಗುರುತಿಸಲಾಯಿತು. ಪ್ಯಾಲೇಸ್ತೀನಿ ಅರಬ್ ಸಮಸ್ಯೆಯನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತಿನಿಧಿಸಲು ಸೌದಿ ಅರೇಬಿಯಾವನ್ನು ಈಜಿಪ್ಟ್ ಮತ್ತು ಇತರ ದೇಶಗಳು ಒಪ್ಪಿಕೊಂಡವು.

ಸೌದಿ ಅರೇಬಿಯಾಕ್ಕೆ ಅರಬ್ ರಾಜಕೀಯ ರಂಗದಲ್ಲಿ ಆದ ಈ ಬದಲಾವಣೆ ಬಯಸದೆ ಬಂದ ಭಾಗ್ಯ. ಯಾವುದೇ ಯುದ್ಧದಲ್ಲಿ ತನ್ನ ವಿರೋಧಿ ಬಣಗಳೊಂದಿಗೆ ಪಾಲ್ಗೊಳ್ಳದೆ ತಾಳ್ಮೆಯಿಂದ ಕಾದು ಸುಮಾರು ೨೦ ವರ್ಷಗಳ ತೀವ್ರಗಾಮಿ ಚಟುವಟಿಕೆಗಳ ವಿರುದ್ಧ ೧೯೭೦ರ ಆರಂಭದಲ್ಲಿ ಸೌದಿಗೆ ಈ ಮನ್ನಣೆ ದೊರೆಯಿತು. ಇದು ಆ ದೇಶದ ರಾಜತಾಂತ್ರಿಕ ಪ್ರತಿಭೆಯನ್ನು ಮತ್ತು ಹಣಕಾಸು ಭದ್ರತೆಯನ್ನು ಬಹಿರಂಗಪಡಿಸುತ್ತದೆ. ಆರಂಭದಿಂದಲೇ ಸೌದಿ ಅರೇಬಿಯಾ ಇಂತಹ ಯಶಸ್ಸನ್ನು ಕಂಡುಕೊಳ್ಳುತ್ತಿತ್ತು. ಪ್ರಥಮ ಸ್ವತಂತ್ರ ಅರಬ್ ರಾಷ್ಟ್ರ ಎಂಬ ಹೆಗ್ಗಳಿಕೆ; ಇತರ ಅರಬ್ ದೇಶಗಳು ವಸಾಹತುಶಾಹಿ ಅಧೀನಕ್ಕೆ ಒಳಪಟ್ಟಾಗ ಸೌದಿ ಅರೇಬಿಯಾ ಯಶಸ್ವಿಯಾಗಿ ಆಧುನಿಕ ಅಂಶಗಳನ್ನು ಅಳವಡಿಸಿಕೊಂಡು ರಾಷ್ಟ್ರ ನಿರ್ಮಾಣ ಮಾಡಿಕೊಂಡಿತು. ಆದಾಯವನ್ನು ವೃದ್ದಿಸಲು ತೈಲ ಸಂಪತ್ತಿನ ಉತ್ಪಾದನಾ ಹಕ್ಕನ್ನು ಅಮೆರಿಕ ಕಂಪೆನಿಗಳಿಗೆ ವಹಿಸಿಕೊಟ್ಟು, ಆರ್ಥಿಕ ಸುಭದ್ರತೆಯನ್ನು ಸಾಧಿಸಿತು. ಜಗತ್ತಿನ ಎಲ್ಲ ರಾಷ್ಟ್ರಗಳು ಹೊಸ ರಾಜಕೀಯ ತತ್ವ ಗಳನ್ನಾಧರಿಸಿ ಪರಿವರ್ತನೆ ಕಾಣುವ ಸಂದರ್ಭದಲ್ಲಿ ಸೌದಿ ಅರೇಬಿಯಾ ಅರಸೊತ್ತಿಗೆಯನ್ನು ರಕ್ಷಿಸಿ, ಗಟ್ಟಿಗೊಳಿಸಿ ತನ್ನ ಅನನ್ಯತೆಯನ್ನು ಜಾಗತಿಕ ಮುಸ್ಲಿಂ ಸಮೂದಾಯದೊಂದಿಗೆ ಗುರುತಿಸಿಕೊಂಡಿತು. ರಾಜತಾಂತ್ರಿಕ ರಂಗದಲ್ಲೂ ತೀವ್ರಗಾಮಿಗಳಿಂದ ಹದಗೆಟ್ಟ ರಾಜಕೀಯ ವ್ಯವಸ್ಥೆಯಲ್ಲಿ ನಾಸರ್‌ನಂತಹ ನಾಯಕರಿಂದಲೇ ಅರಬ್ ಜಗತ್ತಿನ ಅಧಿಪತಿ ಪಟ್ಟವನ್ನು ಸಹನೆಯ ರಾಜಕಾರಣದಿಂದ ಅಲಂಕರಿಸಿರುವುದು. ಇವೆಲ್ಲವು ಸೌದಿ ಅರೇಬಿಯಾ ಪ್ರಭುತ್ವಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಗೌರವ ಹೆಚ್ಚಿಸಿದ ಘಟನೆಗಳು. ತನಗೆ ಲಭಿಸಿದ ಗೌರವವನ್ನು ರಕ್ಷಿಸಿಕೊಳ್ಳಬೇಕೆಂಬ ಆಶಯದಿಂದ ಸೌದಿ ಅರೇಬಿಯಾ ೧೯೭೦ರ ದಶಕದಲ್ಲಿ ಸಕ್ರಿಯವಾಗಿ ಅರಬ್ ಸಮುದಾಯದ ಚಟುವಟಿಕೆಗಳಿಗೆ ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪಂದಿಸತೊಡಗಿತು. ಇದರಿಂದ, ಒಂದಷ್ಟು ಕಾಲ ತನ್ನ ಅರಸೊತ್ತಿಗೆಗೆ ಬರಬಹುದಾದ ಆಪತ್ತುಗಳನ್ನು ಮುಂದೂಡಿತು ಮತ್ತು ತನ್ನ ಪ್ರಭಾವದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಅರಬ್ ಜಗತ್ತಿನಲ್ಲಿ ಪ್ರಾದೇಶಿಕ ಸೂಪರ್ ಪವರ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಇಂತಹ ತಂತ್ರಗಳನ್ನು ಬಳಸಿ ಸೌದಿ ಅರಸ ಪೈಸಲ್ ತನ್ನನ್ನು ಸುತ್ತುವರಿದಿದ್ದ ವೈರಿಗಳನ್ನು ಮಟ್ಟ ಹಾಕಿದನು. ಇದಕ್ಕೆ ಸಕಾರಾತ್ಮಕವಾದ ಫಲಿತಾಂಶ ಸೌದಿ ಅರೇಬಿಯಾಕ್ಕೆ ೧೯೭೦ರ ದಶಕದುದ್ದಕ್ಕೂ ದೊರಕಿತು. ಈ ದಶಕದಲ್ಲಿ ಅರಬ್ ರಾಜಕೀಯ ವಾತಾವರಣ ಗಂಭೀರ ಬಿಕ್ಕಟ್ಟನ್ನು ಎದುರಿಸಿದ್ದು, ಅದು ಸೌದಿ ಅರೇಬಿಯಾದ ಪ್ರಭಾವ ವಿಸ್ತರಣೆಗೆ ಪೂರಕವಾಗಿಯೇ ಇತ್ತು. ೧೯೭೦ರ ಸೆಪ್ಟೆಂಬರ್ ತಿಂಗಳಲ್ಲಿ ಅಬ್ದುಲ್ ನಾಸರ್‌ನನ್ನು ಹತ್ಯೆ ಮಾಡಲಾಯಿತು. ಈಜಿಪ್ಟ್‌ನ ಅಧ್ಯಕ್ಷನಾಗಿ ಅನ್ವರ್ ಸಾದತ್ ಅಧಿಕಾರಕ್ಕೆ ಬಂದನು. ಸ್ವಲ್ಪ ದಿನಗಳಲ್ಲೇ ಸಿರಿಯಾದಲ್ಲಿ ಸಲಾಹ ಜದಿದ್ ನಾಯಕತ್ವದ ಎಡಪಂಥೀಯ ಪ್ರಭುತ್ವವನ್ನು ಪದಚ್ಯುತಗೊಳಿಸಿ ಹಠವಾದಿ ನಾಯಕ ಹಪೀಜ್ ಅಲ್-ಅಸಾದ್ ಅಧಿಕಾರಕ್ಕೆ ಬಂದನು. ಈ ಘಟನೆಗಳಲ್ಲಿ ಸೌದಿ ಅರೇಬಿಯಾ ಸೋವಿಯತ್ ಒಕ್ಕೂಟ ವನ್ನು ವಿರೋಧಿಸುವ ಗುಂಪನ್ನು ಪ್ರೋ ತನ್ನ ಪ್ರಭಾವವನ್ನು ಮೆರೆಯಿತು. ಮತ್ತು ಅವೆಲ್ಲವು ಸೌದಿಗೆ ವಿಧೇಯವಾಗಿ ವ್ಯವಹರಿಸಲು ಆರಂಭಿಸಿದವು. ಇದಕ್ಕೆ ಪೂರಕವೆಂಬಂತೆ, ಸೌದಿ ಅರೇಬಿಯಾದ ಖಜನೆಗೆ ತೈಲ ಉತ್ಪಾದನೆಯಿಂದ ಬರುವ ಆದಾಯವು ಎಡೆಬಿಡದೆ ಏರಿತು. ಇದನ್ನು ಗಮನಿಸಿದ ಅರಬ್ ಸಮುದಾಯ ಹೆಚ್ಚು ಹೆಚ್ಚು ಸೌದಿ ಅರಸೊತ್ತಿಗೆ ಯೊಂದಿಗೆ ಗುರುತಿಸಿಕೊಂಡು, ಆರ್ಥಿಕ ಸಹಾಯವನ್ನು ನಿರೀಕ್ಷಿಸಿದವು. ಉದಾಹರಣೆಗೆ ೧೯೭೨ರಲ್ಲಿ ಈಜಿಪ್ಟ್‌ನ ಮಂದಗಾಮಿ ನಾಯಕ ಅನ್ವರ್ ಸಾದತ್, ತನ್ನ ದೇಶದಿಂದ ಸೋವಿಯತ್ ಒಕ್ಕೂಟದ ಸಲಹೆಗಾರರನ್ನು ಗಡಿಪಾರು ಮಾಡಿರುವುದು ಸೌದಿ ಅರೇಬಿಯಾದಲ್ಲಿ ಸಂತಸದ ವಾತಾವರಣವನ್ನು ಹುಟ್ಟಿಸಿತು. ಮತ್ತು ಈಜಿಪ್ಟ್‌ನ್ನು ಒಂದು ನಂಬಿಗಸ್ಥ ಸ್ನೇಹಿತ ದೇಶವೆಂದು ಪರಿಗಣಿಸಿ, ಸೌದಿ ಅರೇಬಿಯಾ, ಆರ್ಥಿಕ ಸಹಕಾರವನ್ನು ನೀಡತೊಡಗಿತು.

ಸೌದಿ ಸರಕಾರ ಈಜಿಪ್ಟ್, ಸಿರಿಯಾ ಮತ್ತು ಜೋರ್ಡಾನ್ ದೇಶಗಳ ಕುರಿತು ಮೃದು ಧೋರಣೆ ಪಾಲಿಸುತ್ತಿದ್ದಂತೆ, ಅರಬ್-ಇಸ್ರೇಲಿ ಸಮಸ್ಯೆಗೆ ಸಂಬಂಧಿಸಿ ಸೌದಿ ಅರೇಬಿಯಾ ಹೊಸತೊಂದು ಸವಾಲನ್ನು ಎದುರಿಸಿತು. ೧೯೬೭ರ ಮೂರನೆಯ ಅರಬ್ -ಇಸ್ರೇಲಿ ಯುದ್ಧ ನಂತರ ಪ್ಯಾಲೇಸ್ತೀನಿಯರ ವಿರುದ್ಧ ಇಸ್ರೇಲ್ ಮುಂದುವರಿಸಿದ ಭಯೋತ್ಪಾದನಾ ಚಟುವಟಿಕೆಗಳನ್ನು ಪುನಃ ಈಜಿಪ್ಟ್, ಸಿರಿಯಾ ಮತ್ತು ಇತರ ಅರಬ್ ದೇಶಗಳು ವಿರೋಧಿಸತೊಡಗಿದವು. ೧೯೭೨ರ ಹೊತ್ತಿಗೆ ಇತರ ಸೌದಿ ಅರಸೊತ್ತಿಗೆ ನೀಡಿದ ಆರ್ಥಿಕ ಬೆಂಬಲದಿಂದ ಈಜಿಪ್ಟ್‌ನ ಪುನರ್ ನಿರ್ಮಾಣವು ಯಶಸ್ವಿಯಾಗಿ ಮುಗಿದಿದ್ದು, ಅಧ್ಯಕ್ಷ ಅನ್ವರ್ ಸಾದತ್, ಸಿರಿಯಾ ಅಧ್ಯಕ್ಷನೊಂದಿಗೆ ಒಡಂಬಡಿಕೆ ಮಾಡಿಕೊಂಡು ಇಸ್ರೇಲ್ ವಿರುದ್ಧ ಸಮರಕ್ಕಿಳಿಯುವ ವೇದಿಕೆ ಸಿದ್ಧ ಮಾಡುತ್ತಿದ್ದನು. ಸೌದಿ ಅರಸೊತ್ತಿಗೆಗೆ ಈ ಉದ್ರಿಕ್ತ ವಾತಾವರಣ ಒಂದಷ್ಟು ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡಲು ಅವಕಾಶ ಕಲ್ಪಿಸಿತು. ಅನ್ವರ್ ಸಾದತ್ ಮತ್ತು ಹಪೀಜ್-ಅಲ್-ಅಸಾದ್ ಅವರು ಯುದ್ಧ ಘೋಷಿಸುವುದನ್ನು ಮುಂದೆ ನೋಡುತ್ತಿದ್ದರು. ಸೌದಿಗಳು ಜಣ್ಮೆಯಿಂದ ಪ್ಯಾಲೇಸ್ತೀನಿಯರ ಬಿಕ್ಕಟ್ಟು ಪರಿಹರಿಸಲು ಇಸ್ರೇಲ್ ಪರವಿರುವ ಎಲ್ಲ ಪಶ್ಚಿಮದ ಬಂಡವಾಳಶಾಹಿ ದೇಶಗಳ ವಿರುದ್ಧ ತೈಲವನ್ನು ಆರ್ಥಿಕ ಮತ್ತು ರಾಜಕೀಯ ಅಸ್ತ್ರವನ್ನಾಗಿ ಬಳಸಲು ಯೋಚನೆ ಮಾಡುತ್ತಿದ್ದರು. ಏಕೆಂದರೆ, ಸೌದಿಗಳಿಗೆ ಯುದ್ಧ ಘೋಷಣೆ ಅಷ್ಟೊಂದು ಫಲಕಾರಿ ಯಾಗದು. ಅವರ ಲೆಕ್ಕಾಚಾರದಂತೆ, ಯುದ್ಧದಲ್ಲಿ ಅರಬ್ ಸಮುದಾಯ ಇನ್ನೊಮ್ಮೆ ಸೋಲನ್ನು ಅನುಭವಿಸಿದರೆ, ತೀವ್ರಗಾಮಿ ಗುಂಪುಗಳ ಪ್ರವೇಶ ಅರಬ್ ರಾಜಕೀಯದಲ್ಲಿ ಆಗುತ್ತದೆ. ಸೋವಿಯತ್ ಒಕ್ಕೂಟದ ಪ್ರಭಾವವು ವೃದ್ದಿಸುತ್ತದೆ. ಪಶ್ಚಿಮದ ಪರವಿರುವ ಅರಬ್ ದೇಶಗಳು ಇನ್ನಷ್ಟು ಒತ್ತಾಯವನ್ನು ಎದುರಿಸಬೇಕಾಗುತ್ತದೆ. ಒಂದು ವೇಳೆ ಅರಬ್ ರಾಜಕೀಯದಿಂದ ಸೌದಿ ಅರೇಬಿಯಾ ದೂರವಿದ್ದು, ಈಜಿಪ್ಟ್ ಮತ್ತು ಸಿರಿಯಾವನ್ನು ಮುಂದೆ ಬಿಟ್ಟರೆ ಸೌದಿಗಳು ಅರಬ್ ಜಗತ್ತಿನ ವಿರೋಧ ಎದುರಿಸ ಬೇಕಾಗುತ್ತದೆ. ಅದರಲ್ಲೂ ಸಾಮ್ರಾಜ್ಯಶಾಹಿ ಮತ್ತು ಯಹೂದಿ ಭಯೋತ್ಪಾದನೆಯನ್ನು ಖಂಡಿಸಲು ಮುಂದಾಗದಿದ್ದರೆ ಸೌದಿ ಅರೇಬಿಯಾ ಅರಬ್ ಜಗತ್ತಿನೊಂದಿಗೆ ಗುರುತಿಸಿ ಕೊಳ್ಳಲು ಸಾಧ್ಯವಾಗುವುದಿಲ್ಲ.

ಸಮಕಾಲೀನ ರಾಜಕೀಯ ಒತ್ತಡವನ್ನು ಗಮನಿಸಿ ಸೌದಿ ಅರೇಬಿಯಾ ಪ್ಯಾಲೇಸ್ತೀನಿಯರ ಪರ ತಮ್ಮ ನಿಲುವನ್ನು ಸಾರ್ವತ್ರಿಕವಾಗಿ ಪ್ರಕಟಿಸುತ್ತದೆ. ಇದೊಂದು ಚಾಣಾಕ್ಷತನದ ನಿರ್ಧಾರವೂ ಹೌದು. ಏಕೆಂದರೆ, ಸೌದಿ ಅರೇಬಿಯಾ ಆರಂಭದಿಂದಲೇ ಅಮೆರಿಕ ಸಾಮ್ರಾಜ್ಯಶಾಹಿಯೊಂದಿಗೆ ಸೌಹಾರ್ದದಿಂದ ಇದ್ದು ಪ್ಯಾಲೇಸ್ತೀನಿಯರ ಸಮಸ್ಯೆ ಪರಿಹಾರಕ್ಕೆ ಅಮೆರಿಕ ಸರಕಾರದ ಮೇಲೆ ಯಾವುದೇ ಒತ್ತಡ ಹೇರಲಿಲ್ಲ ಎಂದು ಸೌದಿ ಅರಸೊತ್ತಿಗೆಯನ್ನು ಅರಬ್ ಜಗತ್ತು ಕಟುವಾಗಿ ಟೀಕಿಸುತ್ತಿತ್ತು. ಎಲ್ಲ ರಂಗದಲ್ಲೂ ಪ್ರಾದೇಶಿಕ ಶಕ್ತಿಯಾಗಿ ಗುರುತಿಸಬೇಕೆಂಬ ಸೌದಿ ಅರೇಬಿಯಾ ೧೯೭೦ರ ದಶಕದಲ್ಲಿ ಅರಬ್ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಅರಬ್ ಸಮುದಾಯದ ಮುಖಂಡನಾಗಿ ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವಿ ಅರಬ್ ದೇಶವಾಗಿ ಕಾರ್ಯ ನಿರ್ವಹಿಸಲು ಆರಂಭಿಸಿತು. ೧೯೭೩ರ ಅರಬ್ -ಇಸ್ರೇಲ್ ಯುದ್ಧವೇ ಸೌದಿ ಸರಕಾರಕ್ಕೆ ಒಂದು ವೇದಿಕೆ ಮಾಡಿಕೊಟ್ಟಿತು. ಇದನ್ನೇ ನಿರೀಕ್ಷಿಸುತ್ತಿದ್ದ ಸೌದಿ ಸರಕಾರ, ನಿರಂತರವಾಗಿ ಅರಬ್‌ರ ಮೇಲೆ ಬಂಡವಾಳಶಾಹಿ ದೇಶಗಳ ಸೈನಿಕ ಸಹಾಯ ಪಡೆದು ಇಸ್ರೇಲ್ ಮಾಡುತ್ತಿರುವ ದಾಳಿಯನ್ನು ತಡೆಯಲು, ಎಲ್ಲ ಅರಬ್ ದೇಶಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಸ್ರೇಲ್ ಪರವಿರುವ ಬಂಡವಾಳಶಾಹಿ ದೇಶಗಳಿಗೆ ತೈಲ ಸರಬರಾಜನ್ನು ಸ್ಥಗಿತಗೊಳಿಸಲಾಯಿತು.

ಸೌದಿ ನೇತೃತ್ವದಲ್ಲಿ ಇಡೀ ಅರಬ್ ಸಮುದಾಯ ಹೇರಿರುವ ಆಯಿಲ್ ಎಂಬಾರ್ಗೊ ಪಶ್ಚಿಮದ ಬಂಡವಾಳಶಾಹಿ ರಾಷ್ಟ್ರಗಳನ್ನು ತಲ್ಲಣಗೊಳಿಸಿತು. ಜಾಗತಿಕ ತೈಲ ಮಾರುಕಟ್ಟೆ ಯಲ್ಲಿ ತೈಲ ಬೆಲೆ ಗಗನಕ್ಕೇರಿತು. ಸೌದಿ ಸ್ನೇಹ ರಾಷ್ಟ್ರವಾಗಿ ಗುರುತಿಸಿಕೊಂಡ ದೇಶಗಳು, ಮುಖ್ಯವಾಗಿ ಅಮೆರಿಕ ಸರಕಾರದ ಮೇಲೆ ಜಾಗತಿಕ ಸಮುದಾಯದ ಒತ್ತಡ ಬಂತು. ಅವರ ಆಶಯದಂತೆ ಅರಬ್ ಸಮುದಾಯವನ್ನು ಸಮಾಧಾನಗೊಳಿಸಿ ತೈಲ ಸರಬರಾಜು ಸ್ಥಗಿತ ನಿರ್ಧಾರವನ್ನು ಹಿಂದಕ್ಕೆ ಪಡೆಯುವಂತೆ ರಾಜತಾಂತ್ರಿಕ ಪ್ರಯತ್ನವನ್ನು ಅಮೆರಿಕ ಸರಕಾರ ಮಾಡಬೇಕು. ಇದಕ್ಕೆ ಅರಬ್ ಸಮುದಾಯದ ಶರತ್ತು ತೈಲ ನಿರ್ಬಂಧ ನಿರ್ಧಾರವನ್ನು ವಾಪಸ್ಸು ಪಡೆಯಬೇಕಾದರೆ, ಪ್ಯಾಲೆಸ್ತೀನಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಅಮೆರಿಕದಿಂದ ಆಶ್ವಾಸನೆ ಸಿಗಬೇಕು ಎಂಬುದು.

ಇದಕ್ಕಾಗಿಯೇ ಅಮೆರಿಕ ಸರಕಾರದ ಸಂಧಾನಕಾರನಾಗಿ ಹೆನ್ರಿ ಕಿಸ್ಸಿಂಜರ್ ಅರಬ್ ರಾಜಧಾನಿಗಳಿಗೆ ಭೇಟಿ ನೀಡಿ, ಪ್ಯಾಲೇಸ್ತೀನಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಮೆರಿಕ ಸರಕಾರ ಆಸಕ್ತಿ ತೋರಿಸಿದ್ದು, ಸದ್ಯದಲ್ಲೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಕರೆಯಲಾಗದೆಂದು, ಅದರಲ್ಲಿ ಈ ಸಮಸ್ಯೆಗೆ ಎಲ್ಲರಿಗೂ ಒಪ್ಪಿಗೆಯಾಗುವ ಸೂತ್ರವನ್ನು ಕಂಡುಕೊಳ್ಳಲಾಗುವುದೆಂದು ಕಿಸ್ಸಿಂಜರ್ ಅರಬ್ ನಾಯಕರಿಗೆ ಆಶ್ವಾಸನೆ ನೀಡಿದನು. ಆಶ್ವಾಸನೆಯಂತೆ ಅಕ್ಟೋಬರ್ ೧೯೭೭ರಲ್ಲಿ ಜಿನೆಯವಾದಲ್ಲಿ ಇಂತಹದ್ದೊಂದು ಸಭೆ ಕರೆಯಲಾಗುವುದೆಂದು ತಿಳಿಸಲಾಗಿದ್ದು, ಇದಕ್ಕುತ್ತರವಾಗಿ ಸೌದಿ ನೇತೃತ್ವದ ಅರಬ್ ಸಮುದಾಯ ಆಯಿಲ್ ಎಂಬಾರ್ಗೊವನ್ನು ಹಿಂದಕ್ಕೆ ಪಡೆಯಿತು.

ಅಮೆರಿಕದಂತಹ ದೈತ್ಯ ಬಂಡವಾಳಶಾಹಿ ರಾಷ್ಟ್ರವನ್ನೇ ಮನವೊಲಿಸಿ ಪ್ಯಾಲೇಸ್ತೀನಿಯರ ಸಮಸ್ಯೆಯ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸಂಧಾನಕ್ಕೆ ಚಾಲನೆ ನೀಡಿರುವುದು ಸೌದಿ ನಾಯಕತ್ವಕ್ಕೆ ದೊರಕಿರುವ ಯಶಸ್ಸು, ಇದನ್ನೇ ಪ್ರೇರಣೆಯಾಗಿ ಉಪಯೋಗಿಸಿಕೊಂಡು ಇಡೀ ಅರಬ್ ಸಮುದಾಯವನ್ನು ತನ್ನ ಮುಖಂಡತ್ವದಡಿಯಲ್ಲಿ ಮುನ್ನಡೆಸಬೇಕೆಂಬ ಸಮಯದಲ್ಲೇ, ಈಜಿಪ್ಟ್ ಅಧ್ಯಕ್ಷ ಅನ್ವರ್ ಸಾಧತ್ ೧೯೭೭ರಲ್ಲಿ ಇಸ್ರೇಲ್‌ಗೆ ಬೇಟಿ ನೀಡುತ್ತಾನೆ ಮತ್ತು ಇಸ್ರೇಲ್‌ನೊಂದಿಗೆ ಪ್ರತ್ಯೇಕ ಶಾಂತಿ ಸಂಧಾನವನ್ನು ಆರಂಭಿಸುತ್ತಾನೆ. ಈ ಘಟನೆ ಎಲ್ಲರನ್ನು ಚಕಿತಗೊಳಿಸುತ್ತದೆಯಾದರೂ ಸೌದಿ ಅರೇಬಿಯಾ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಪ್ರತಿಕ್ರಿಯಿಸುತ್ತದೆ. ಸಾಧತ್‌ಗೆ ವಿರುದ್ಧವಾಗಿ ಸೌದಿ ಒಡಂಬಡಿಕೆಯ ಶಾಂತಿ ಸಂಧಾನ ಪ್ರಕ್ರಿಯೆ ಆರಂಭವಾಯಿತು.

ಸೌದಿ ನಾಯಕತ್ವದಡಿಯಲ್ಲಿ ಶಾಂತಿ ಸಂಧಾನ

೧೯೭೩-೭೪ರಲ್ಲಿ ಇಸ್ರೇಲ್ ಪರ ಇರುವ ಪಶ್ಚಿಮದ ಕೈಗಾರಿಕಾ ರಾಷ್ಟ್ರಗಳಿಗೆ ತೈಲ ಸರಬರಾಜು ಸ್ಥಗಿತದ ಕುರಿತು ತೆಗೆದುಕೊಂಡ ನಿರ್ಣಯ ತದನಂತರ ಜಾಗತಿಕ ಮಾರುಕಟ್ಟೆ ಯಲ್ಲಿ ಉಗಮವಾದ ತೈಲ ಬೆಲೆ ಹೆಚ್ಚಳವೂ ಸೌದಿ ಅರೇಬಿಯಾದ ಪ್ರಭಾವವನ್ನು ಅರಬ್ ಜಗತ್ತು ಮತ್ತು ಅಂತಾರಾಷ್ಟ್ರೀಯ ರಾಜಕೀಯ ವಲಯದಲ್ಲಿ ವೃದ್ದಿಸಿತು. ಯುದ್ಧೋತ್ತರದ ದಿನಗಳಲ್ಲಿ ಸಿರಿಯಾ, ಜೋರ್ಡಾನ್ ಮತ್ತು ಈಜಿಪ್ಟ್‌ನ ಅಭಿವೃದ್ದಿಯನ್ನು ಸೌದಿ ಅರೇಬಿಯಾ ಜಾಗತಿಕ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಜೊತೆಯಾಗಿ ನಿರ್ವಹಿಸುವುದಾಗಿ ಒಪ್ಪಿಕೊಳ್ಳಲಾಯಿತು. ರಿಯಾದ್-ಡೆಮಾಸ್ಕಸ್-ಕೈರೋ, ಮೂರು ರಾಜಧಾನಿಗಳ ನಡುವಿನ ಸಂಬಂಧವು ಗಟ್ಟಿಯಾಗಿ, ಅದೊಂದು ಸಂಘಟನೆಯಾಗಿ ಪರಿವರ್ತನೆಗೊಳ್ಳುವ ಎಲ್ಲ ಲಕ್ಷಣಗಳು ಅರಬ್ ಜಗತ್ತಿನಲ್ಲಿ ಕಂಡುಬಂದಿತು.

ಹೆನ್ರಿ ಕಿಸ್ಸಿಂಜರ್ ನೀಡಿರುವ ಆಶ್ವಾಸನೆಯಂತೆ ಅಕ್ಟೋಬರ್ ೧೯೭೭ರಲ್ಲಿ ಪ್ಯಾಲೇಸ್ತೀನ್ ಸಮಸ್ಯೆಯನ್ನು ಉದ್ದೇಶಿಸಿ ಜಿನೇವಾ ಸಮ್ಮೇಳನ ತುರ್ತಾಗಿ ಏರ್ಪಟ್ಟರೆ, ಸೌದಿ ನೇತೃತ್ವ ದಲ್ಲಿ ಅರಬ್‌ರು, ಪಿಎಲ್‌ಓದ ಭಾಗವಹಿಸುವಿಕೆಗೆ ಒತ್ತಾಯ ಹೇರಲು ಪ್ರಯತ್ನ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಯಿತು. ಇದಕ್ಕೆ ಪೂರಕವೆಂಬಂತೆ, ೧೯೭೭ರ ಅಕ್ಟೋಬರ್ ೧ರಂದು ಅಮೆರಿಕ ಮತ್ತು ಸೋವಿಯತ್ ಒಕ್ಕೂಟ ಒಂದು ಬಹಿರಂಗ ಹೇಳಿಕೆ ನೀಡಿ, ಅರಬ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ಒತ್ತಿ ಹೇಳಿದವು. ಸೌದಿ ಸರಕಾರಕ್ಕೆ ಸಮಸ್ಯೆಯನ್ನು ಖಾಯಂ ಆಗಿ ಬಗೆಹರಿಸಲು ಮುಖ್ಯವಾದ ಶರತ್ತು-ಪಶ್ಚಿಮ ದಂಡೆಯಲ್ಲಿ ಸ್ವತಂತ್ರ ಪ್ಯಾಲೇಸ್ತೀನಿ ರಾಜ್ಯ ಸ್ಥಾಪನೆ. ಮತ್ತು ಅರಬ್ ದೇಶಗಳ ಆರ್ಥಿಕ ಸಂಪತ್ತಿನ ಸಹಾಯದಿಂದ ಆ ರಾಜ್ಯವನ್ನು ಉಳಿಸಿಕೊಳ್ಳುವುದು. ಅವರ ನಿರೀಕ್ಷೆಯಂತೆ, ಹೊಸ ಪ್ಯಾಲೇಸ್ತೀನಿ ರಾಜ್ಯ ಯಾವುದೇ ಕಾರಣಕ್ಕೂ ಸೋವಿಯತ್ ಒಕ್ಕೂಟದ ವಸಾಹತುವಾಗಬಾರದು. ಅಲ್ಲದೆ, ೧೯೬೭ರ ಹಿಂದೆ ಇದ್ದ ಗಡಿಗೆ ಇಸ್ರೇಲ್ ಸರಿದರೆ, ಈಜಿಪ್ಟ್, ಜೋರ್ಡಾನ್ ಮತ್ತು ಸಿರಿಯಾ ದೇಶಗಳು ಇಸ್ರೇಲ್ ರಾಜ್ಯದೊಂದಿಗೆ ಶಾಂತಿ ಮಾತುಕತೆಗೆ ಸಿದ್ಧವೆಂದು ಸೌದಿ ಅರೇಬಿಯಾ ಅಭಿಪ್ರಾಯ ಪಟ್ಟಿತು. ಈ ಶರತ್ತುಗಳಿಗೆ ಸಕಾರಾತ್ಮಕವಾಗಿ ಒಪ್ಪಿಗೆ ಸೂಚಿಸದಿದ್ದರೆ (ಅಮೆರಿಕ ಮತ್ತು ಇಸ್ರೇಲ್), ಹೊಸದಾಗಿ ಇಸ್ರೇಲ್ ವಿರುದ್ದ ಸೈನಿಕ ಕಾರ್ಯಾಚರಣೆ ಆರಂಭಿಸಲು ಸಿದ್ಧತೆಗಳನ್ನು ಮಾಡುವುದಾಗಿ ಹೇಳಿತು.

೧೯೭೭ರ ನವೆಂಬರ್ ೧೮ರಂದು ಜೆರುಸಲೇಂಗೆ ಅನ್ವರ್ ಸಾದತ್‌ನ ದಿಢೀರ್ ಭೇಟಿ, ಸೌದಿ ಅರೇಬಿಯಾದ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿತು. ಪ್ರಾದೇಶಿಕ ರಾಜಕೀಯ ವಲಯದಲ್ಲಿ ಈ ಭೇಟಿಯ ಪ್ರಭಾವವು ಭಿನ್ನವಾದ ಬದಲಾವಣೆಗಳನ್ನು ತಂದಿತು. ಜಿನೆಯವಾ ಸಮ್ಮೇಳನವನ್ನು ಕೈಬಿಡಲಾಯಿತು. ನಂತರ ಮಧ್ಯಪೂರ್ವ ಇತಿಹಾಸವು ತೀವ್ರತರನಾದ ತಿರುವುವನ್ನು ಪಡೆಯಿತು. ಈಜಿಪ್ಟ್‌ನ ಬದಲಾದ ನಿಲುವಿನ ಕುರಿತು ಸೌದಿ ಸರಕಾರ ಜಗರೂಕತೆಯಿಂದ ಪ್ರತಿಕ್ರಿಯಿಸಿತು. ಸಾದತ್‌ನ ಈ ದಿಢೀರ್ ಬೇಟಿಯನ್ನು ಕುತೂಹಲಕಾರಿಯಾಗಿ ಕಾದು ನೋಡಿ, ಅಧ್ಯಯನ ಮಾಡಿ ಪ್ರತಿಕ್ರಿಯೆ ನೀಡುವ ನಿಲುವನ್ನು ಕೂಡ ಸೌದಿ ಸರಕಾರ ಘೋಷಿಸಿತು. ನಂತರ ಬಿಡುಗಡೆ ಮಾಡಿದ ಅವರ ಅಧಿಕೃತ ಹೇಳಿಕೆಯಲ್ಲಿ ಸೌದಿ ಸರಕಾರ ಸಾದತ್‌ನ ಈ ಭೇಟಿಯ ಬಗ್ಗೆ ಆಶ್ಚರ್ಯ ಪಟ್ಟಿದಲ್ಲದೆ, ಪ್ಯಾಲೇಸ್ತೀನ್ ಸಮಸ್ಯೆ ಪರಿಹಾರಕ್ಕೆ ಇಡೀ ಅರಬ್ ಜಗತ್ತಿನ ಒಮ್ಮತದ ನಿರ್ಧಾರವಾಗಬೇಕೇ ವಿನಃ ವ್ಯಕ್ತಿಗತವಾಗಿರಬಾರದು ಎಂದು ಹೇಳಿತು. ಯಾವುದೇ ಪ್ರಯತ್ನವು ಒಗ್ಗಟ್ಟಿನಿಂದ ಆಗಬೇಕು ಎಂದು ಒತ್ತಾಯಿಸಿತು. ಸೌದಿ ಅರೇಬಿಯಾದ ಅಭಿಪ್ರಾಯದಂತೆ, ಅವರು ಒಂದು ವೇಳೆ ಸಾಧತ್ ಜೊತೆ ಸೇರಿದರೆ, ಅರಬ್ ಜಗತ್ತಿನ ಮುಖ್ಯವಾಹಿನಿಯಿಂದ ಬೇರ್ಪಡಿಸಲ್ಪಡುತ್ತಾರೆ ಎಂಬ ಅರಿವು ಇತ್ತು. ಮುಖ್ಯವಾಗಿ ಸಿರಿಯಾ, ಪಿಎಲ್‌ಓ ಮತ್ತು ಇತರ ಅರಬ್ ರಾಷ್ಟ್ರಗಳೊಂದಿಗೆ ಸಂಬಂಧ ಕಡಿದು ಹೋಗ ಬಹುದೆಂಬ ಅರಿವು ಅವರಿಗಿತ್ತು. ಸದ್ಯಕ್ಕೆ ಇಡೀ ಜಗತ್ತಿನಲ್ಲಿ ಒಂದರ್ಥದಲ್ಲಿ ತಮ್ಮದೇ ಏಕಸ್ವಾಮಿತ್ವವನ್ನು ಸ್ಥಾಪಿಸಿಕೊಂಡಿದ್ದರು. ಈಜಿಪ್ಟ್ ಉಳಿದ ದೇಶಗಳಿಂದ ಬೇರ್ಪಟ್ಟರೆ, ಅದರ ಲಾಭ ಸೌದಿ ಅರೇಬಿಯಾ ಅನುಭವಿಸಬಹುದೆಂಬ ಲೆಕ್ಕಾಚಾರ, ಮಾತ್ರವಲ್ಲ ಈಜಿಪ್ಟ್‌ನೊಂದಿಗೆ ಗುರುತಿಸಿಕೊಳ್ಳದೇ ಅದರ ನಿಲುವುಗಳನ್ನು ಬೆಂಬಲಿಸದಿದ್ದರೆ, ಅಂತರ-ಅರಬ್ ಚಟುವಟಿಕೆಗಳಲ್ಲಿ ವಿಶೇಷ ಗೌರವವನ್ನು ಪಡೆಯಬಹುದೆಂಬ ಆಲೋಚನೆಯೂ ಇತ್ತು. ಅರಬ್ ಜಗತ್ತಿನ ಒಗ್ಗಟ್ಟು ಸೌದಿ ಮುಖಂಡತ್ವದಲ್ಲಿ ವೃದ್ದಿಸ ಬೇಕೆಂಬ ವಾತಾವರಣವನ್ನು ಅವರು ಸೃಷ್ಟಿಸಿದರು.