ರಾಷ್ಟ್ರ ಎಂಬುದು ಒಂದು ಭಾವಿಸಿದ ರಾಜಕೀಯ ಸಮುದಾಯ ಎಂಬ ಬೆನೆಡಿಕ್ಟ್ ಎಂಡರ್ಸನ್ ಅವರ ವ್ಯಾಖ್ಯಾನ ಏಷ್ಯಾ ಖಂಡಕ್ಕೆ ಸಂಪೂರ್ಣವಾಗಿ ಅನ್ವಯ ವಾಗುತ್ತದೆ. ಅವರ ಪ್ರಕಾರ ರಾಷ್ಟ್ರೀಯತೆ ತನ್ನನ್ನು ಸ್ವಯಂ ಸಾರ್ವಭೌಮನೆಂತಲೂ, ಪರಿಮಿತವೆಂತಲೂ ಭಾವಿಸಿಕೊಂಡಿರುತ್ತದೆ. ಇದೊಂದು ಭಾವಿಸಿದ ರಾಜಕೀಯ ಸಮುದಾಯ ಏಕೆಂದರೆ, ಅತ್ಯಂತ ಸಣ್ಣ ರಾಷ್ಟ್ರವೊಂದರ ಸದಸ್ಯರೂ ಕೂಡ ಅವರ ಹೆಚ್ಚಿನ ಸಹಸದಸ್ಯರ ಬಗ್ಗೆ ವ್ಯಕ್ತಿಗಳ ಪರಿಚಯ ಹೊಂದಿರುವುದಿಲ್ಲ. ಅವರನ್ನು ಎಂದೂ ಭೇಟಿ ಮಾಡುವುದಿಲ್ಲ ಅಥವಾ ಅವರ ಬಗ್ಗೆ ಮಾಹಿತಿಯನ್ನು ಪಡೆಯುವುದಿಲ್ಲ. ಆದರೂ, ಪ್ರತಿಯೊಬ್ಬರೂ ತನ್ನ ಮನಸ್ಸಿನಲ್ಲಿ ಆ ಮಿಕ್ಕುಳಿದವರ ಸಮುದಾಯಕತ್ವದಲ್ಲಿ ಸಾಹಚರ್ಯದಲ್ಲಿ ಬಾಳುತ್ತಿದ್ದೇವೆಂಬ ಭಾವನೆಯನ್ನು ಹೊಂದಿರುತ್ತಾರೆ. ಈ ಭಾವನೆಯೇ ತಾವೆಲ್ಲಾ ಒಂದು ಎಂಬ ಭಾವನಾತ್ಮಕ ಬಾಂಧವ್ಯಕ್ಕೆ ದಾರಿ ಮಾಡಿರುತ್ತದೆ. ಅವರ ಬಹಳ ದೂರದ ಮನೋಪ್ರಪಂಚದಲ್ಲಿ ತಾವೆಲ್ಲಾ ಒಂದೇ ಬಗೆಯ ಜನರು ಎಂಬ ಭಾವನೆಯೂ, ತಾವೆಲ್ಲಾ ಪರಸ್ಪರ ಒಂದೇ ಮೂಲದ ಬದುಕಿಗೆ ಸಂಬಂಧಿಸಲ್ಪಟ್ಟವರೆಂಬ ಭಾವನೆಯೂ ನೆಲೆಗೊಂಡಿರುತ್ತದೆ.

ಈ ಭಾವನಾತ್ಮಕ ಸಂಬಂಧ ಅವರ ನಡುವೆ ಇತಿಹಾಸದ ಒಂದು ನಿರ್ದಿಷ್ಟ ಕಾಲ ಘಟ್ಟದಲ್ಲಿ ಮಾತ್ರವೇ ಏರ್ಪಡಿಸುತ್ತದೆ. ಆದರೆ, ಆ ಸಮುದಾಯದ ಸದಸ್ಯರು ತಮ್ಮ ನಡುವೆ ಈ ಭಾವನಾತ್ಮಕ ಸಂಬಂಧ ಒಂದು ಕಾಲಘಟ್ಟದಲ್ಲಿ ಏರ್ಪಟ್ಟಿತ್ತೆಂಬುದನ್ನು ಗುರುತಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ. ಹಾಗೆಯೇ, ತಮ್ಮನ್ನೊಂದು ರಾಷ್ಟ್ರೀಯತೆಯೆಂದು ಭಾವಿಸಿಕೊಂಡಿರುವ ಜನರು ತಾವು ಅನಾದಿಕಾಲದಿಂದ ಹಾಗೆ ಪರಸ್ಪರ ಸಂಬಂಧಿಸಿದವರೇ ಆಗಿದ್ದೇವೆಂಬ ಭಾವನೆಯಲ್ಲಿ ಇರುತ್ತಾರೆ. ಹೊರಗಿನಿಂದ ನೋಡಿದರೆ ರಾಷ್ಟ್ರೀಯತೆಯ ಭಾವನೆ ಒಂದು ಜನಸಮೂಹದ ಮನಸ್ಸಿನಲ್ಲಿ ನೆಲೆಗೊಳ್ಳುವುದಕ್ಕೆ ಹಲವಾರು ಚಾರಿತ್ರಿಕ, ಭೌತಿಕ ಅಗತ್ಯಗಳು ಪ್ರೇರಕವಾಗಿರುತ್ತವೆ. ಒಂದು ಸಮೂಹ ತನ್ನ ಉದ್ದೇಶಾತ್ಮಕತೆಯ ಬಗ್ಗೆ ಸ್ಪಷ್ಟತೆ ಹೊಂದಿರದೆ, ಆದರೆ ಕೆಲವು ಉದ್ದೇಶಗಳಿಗನುಸಾರವಾಗಿಯೇ ಏರ್ಪಡಿಸಿಕೊಂಡ ಈ ರಾಜಕೀಯ ಭಾವನೆ, ಅವರಲ್ಲಿ ಸ್ವಾಭಾವಿಕವೆಂಬಂತೆ ಪರಿಭಾವಿಸಲ್ಪಟ್ಟಿರುತ್ತದೆ.

ಹಾಗೆ ನೋಡಿದರೆ ಮನುಷ್ಯ ಸಮಾಜದ ಯಾವುದೇ ಸಾಂಸ್ಥಿಕ ರೂಪಗಳು, ಸಂರಚನೆ ಗಳು ನಿರುದ್ದಿಶ್ಯಕರವಾದುವುಗಳಲ್ಲ. ಅದರ ಪ್ರತೀ ಸದಸ್ಯನೂ ಹೀಗೆಯೇ ಎಂದು ಸ್ಪಷ್ಟ ವಾಗಿ ಕಂಡರಿಸಲಾಗದ ಕೆಲವು ಉದ್ದೇಶಗಳಿಂದ ಪ್ರೇರಿತನಾಗುತ್ತಾನೆ. ಅದರ ಉದ್ದೇಶಾತ್ಮಕ ವ್ಯಾಪ್ತಿಯ ಹರಹು ತುಂಬಾ ವಿಸ್ತಾರವಾದುದರಿಂದ, ಅದನ್ನು ಎಷ್ಟೇ ಸಲ ತಕ್ಷಣದ ನಿರ್ದಿಷ್ಟ ಲಾಭಗಳೊಂದಿಗೆ ಸಮೀಕರಿಸಲು ಸಾಧ್ಯವಾಗುವುದಿಲ್ಲವಾದ್ದರಿಂದ ರಾಷ್ಟ್ರೀಯತೆಯ ಭಾವನೆಯು ಉನ್ನತ ಆದರ್ಶವಾಗಿ, ಸ್ವಾರ್ಥರಹಿತ ಅಭಿಮಾನವಾಗಿ, ಕೇವಲ ಸಹಜವಾದ ಸಂಬಂಧವಾಗಿ ಮಾತ್ರ ಭಾಸವಾಗುತ್ತದೆ.

ಈ ಭಾವನೆಯ ಭಾವನಾತ್ಮಕತೆ ಎಷ್ಟು ಉದಾತ್ತವೆಂದರೆ, ಅದೇ ಸಮುದಾಯದೊಳಗೆ ಪ್ರತೀ ಸದಸ್ಯರ ನಡುವೆ ಇರಬಹುದಾದ ಅಸಮಾನತೆಗಳು, ಶೋಷಣೆಗಳು ಪರಿಗಣನೆಗೆ ಬಾರದೆ ರಾಷ್ಟ್ರೀಯತ್ವವೆಂಬುದು ಯಾವಾಗಲೂ ಬಹಳ ಗಾಢ ಸಮಾನಾಂತರ ಸ್ವಭಾವದ ಸಂಗಾತಿತನವೆಂಬಂತೆ ಗ್ರಹಿಸಲ್ಪಡುತ್ತದೆ. ಇಂತಹ ಭಾವನಾತ್ಮಕತೆಯಿಂದಲೇ ಕಳೆದ ಎರಡು ಶತಮಾನಗಳಿಂದ ಲಕ್ಷಾಂತರ ಜನರು ತಮ್ಮ ರಾಷ್ಟ್ರಕ್ಕಾಗಿ ಪ್ರಾಣ ಕೊಡಲು ಹಾಗೆಯೇ ತಮ್ಮ ರಾಷ್ಟ್ರತ್ವದವರಲ್ಲದವರನ್ನು ಕೊಲ್ಲಲು ಸ್ವಯಂ ಇಚ್ಛೆಯಿಂದ ಮುಂದೆ ಬಂದಿದ್ದಾರೆ. ಈ ಪರಿಕಲ್ಪನೆ ಇಷ್ಟೊಂದು ಜನರನ್ನು ಬಲಿ ತೆಗೆದುಕೊಳ್ಳಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ‘‘ರಾಷ್ಟ್ರೀಯತೆಯ ಬೇರುಗಳಲ್ಲಿ ಅಡಗಿದೆ’’ ಎಂದು ಬೆನೆಡಿಕ್ಟ್ ಎಂಡರ್ಸನ್ ಹೇಳುತ್ತಾರೆ.

ರಾಷ್ಟ್ರೀಯತ್ವವೆಂಬುದು ರಾಷ್ಟ್ರಗಳು ತಮ್ಮ ಸ್ವಯಮತ್ವದ ಪ್ರಜ್ಞೆಗೆ ಎಚ್ಚರವಾಗು ವುದಲ್ಲ. ಬದಲಿಗೆ ಅದು ‘‘ಇಲ್ಲದ ರಾಷ್ಟ್ರತ್ವವನ್ನು ಸಂಶೋಧಿಸಿಕೊಳ್ಳುವುದಾಗಿದೆ.’’ ಹೀಗೆ ಸಂಶೋಧಿಸಿಕೊಳ್ಳುವಾಗ ತಮ್ಮ ಪುರಾತನ ಬೇರುಗಳು, ಅಸ್ತಿತ್ವದ ಮೂಲಗಳು, ಬದುಕಿನ ಹಾದಿಗಳ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವಂಥಾದ್ದನ್ನು ಭಾವಿಸಿಕೊಳ್ಳುತ್ತದೆ ಅಥವಾ ಜೋಡಿಸಿಕೊಳ್ಳುತ್ತದೆ. ಹೀಗೆ ಭಾವಿಸಿಕೊಂಡ, ಜೋಡಿಸಿಕೊಂಡ ಅತ್ಯಂತ ಪ್ರಾಚೀನವೆನಿಸಿಕೊಳ್ಳುವ ಹೆಮ್ಮೆಗಳು, ತಮ್ಮವರಲ್ಲದವರ ಬಗ್ಗೆ ಮೂದಲಿಕೆಗಳು ಮುಂತಾದುವೆಲ್ಲಾ ರಾಷ್ಟ್ರೀಯತೆಯ ಪರಿಕಲ್ಪನೆಯ ನೇಪಥ್ಯದಲ್ಲಿ ಕೆಲಸ ಮಾಡುತ್ತವೆ.

ತಾವೊಂದು ನಿರ್ದಿಷ್ಟ ನಿರ್ದಿಷ್ಟ ರಾಷ್ಟ್ರೀಯತ್ವಕ್ಕೆ ಸೇರಿದವರು ಎಂಬ ಭಾವನೆಯನ್ನು ಹಂಚಿಕೊಳ್ಳುವವರು, ತಮ್ಮ ಹೆಮ್ಮೆಯನ್ನು, ತಾವೆಲ್ಲಾ ಚೆನ್ನಾಗಿರಬೇಕು ಎಂಬಲ್ಲಿಗೆ ಮಾತ್ರ ಸೀಮಿತಗೊಳಿಸಿಕೊಳ್ಳುವುದಿಲ್ಲ. ವಾಸ್ತವವಾಗಿ ಪ್ರಬಲ ರಾಷ್ಟ್ರೀಯತ್ವದ ಭಾವನೆಗೆ ಬಿದ್ದ ಪ್ರತೀ ಸಮುದಾಯವೂ ತನ್ನನ್ನು ಇತರೆಲ್ಲರಿಗಿಂತ ಮುಂದಿರಿಸಿಕೊಳ್ಳಲು ಆಕಾಂಕ್ಷಿಸು ತ್ತದೆ. ಹಾಗಾಗಿ ತನ್ನ ರಾಷ್ಟ್ರತ್ವದ ಸದಸ್ಯರೆಲ್ಲರ ಬದುಕನ್ನು ಮತ್ತಷ್ಟು ಸುಸಂಘಟಿತ ಗೊಳಿಸಲು, ಸುಧಾರಿಸಲು ಪ್ರಯತ್ನಿಸುತ್ತದೆ ಅಥವಾ ಹಾಗೆ ಆ ರಾಷ್ಟ್ರತ್ವ ವೆಂಬುದು ಪ್ರಯತ್ನಿಸುತ್ತದೆ ಎಂಬ ನಿರೀಕ್ಷೆ ಅಥವಾ ನಂಬುಗೆ ಅದರ ಎಲ್ಲ ಸದಸ್ಯರ ನಡುವೆ ಹರಡಿರುತ್ತದೆ. ಇದರೊಂದಿಗೆ ತನ್ನ ನೆರೆಯ ಅಥವಾ ಎಷ್ಟೇ ದೂರದ್ದಾಗಿರಲಿ ತನ್ನ ಪ್ರತಿಸ್ಪರ್ದಿ ಎಂದು ಭಾವಿಸಲಾಗುವ ಮತ್ತೊಂದು ರಾಷ್ಟ್ರತ್ವದ ಆಕ್ರಮಣದ ವಿರುದ್ಧ ಇದು ಜಾಗೃತವಾಗಿರುತ್ತದೆ. ಈ ಆಕ್ರಮಣ ಭೌತಿಕ ಸ್ವರೂಪದ್ದೇ ಆಗಿರಬೇಕೆಂದಿಲ್ಲ. ಅದು ಒಂದು ರಾಷ್ಟ್ರೀಯತೆಯ ಸಾಂಸ್ಕೃತಿಕ ಲಾಂಛನಗಳಾದ, ಅದರ ಹೆಮ್ಮೆಯ ಪ್ರತೀಕಗಳಾದ ಯಾವುದೇ ವಿಷಯವನ್ನು ದ್ವಿತೀಯಗೊಳಿಸುವ ಅಥವಾ ಆಧಿಪತ್ಯಕ್ಕೊಳ ಪಡಿಸುವ ಭಯವೂ ಆಗಿರಬಹುದು. ಈ ಬಗೆಯ ಭಯ ಹಲವಾರು ವಾಸ್ತವಾಂಶಗಳಿಂದ ಪ್ರೇರಿತವಾಗಿರುತ್ತದಾದ್ದರಿಂದ ಅಂತಹ ಸಮಯಗಳಲ್ಲಿ ರಾಷ್ಟ್ರತ್ವದ ಬಾಂಧವ್ಯ ಮತ್ತಷ್ಟು ಪ್ರಖರಗೊಳ್ಳುತ್ತದೆ.

ತನ್ನನ್ನು ಹೀಗೆ ಅಗೋಚರ ಸ್ಪರ್ಧೆಗಳಿಂದ ರೂಪಿಸಿಕೊಳ್ಳುವ ರಾಷ್ಟ್ರತ್ವದ ಕಲ್ಪನೆ ತನ್ನ ಸದಸ್ಯರ ರಾಜಕೀಯ ಜೀವನವನ್ನು ಸ್ಪಷ್ಟವಾದ ಸಾರ್ವಭೌಮಿಕತೆಯ ತಳಹದಿಯ ಮೇಲೆ ನೆಲೆಗೊಳಿಸಿಕೊಳ್ಳಲು ಪ್ರಯತ್ನಿಸುತ್ತದೆ. ಭಾವಿತ ಸಮುದಾಯವು ಹೀಗೆ ಸ್ಪಷ್ಟ ರಾಜಕೀಯ ಸುಸಂಘಟನೆಯೊಂದಿಗೆ ಒಂದು ಆಕಾರ, ಒಂದು ಲಾಂಛನ, ಒಂದು ಹೆಸರು ಮುಂತಾದ ಭೌತಿಕ ವಿವರಗಳಿಗೆ ತನ್ನ ಕಲ್ಪನೆಯ ಮೂರ್ತರೂಪವನ್ನು ಆವಾಹನೆಗೊಳಿಸಿ ಅದಕ್ಕೆ ಜಗತ್ತಿನ ಮಾನ್ಯತೆಯನ್ನು ಬಯಸುತ್ತದೆ. ಹಾಗೆ ಮಾನ್ಯಗೊಂಡ ಸಮುದಾಯವು ತನ್ನ ಮಾನ್ಯತೆಯನ್ನು ಸರ್ವೋಚ್ಚಗೊಳಿಸಲು, ಸಾಧ್ಯವಾದರೆ ಇತರರ ಮೇಲೆ ಹೇರಲು ಕೂಡ ಪ್ರಯತ್ನಿಸುತ್ತದೆ.

ರಾಷ್ಟ್ರತ್ವವೆಂಬ ಭಾವಿಸಿದ ಸಮುದಾಯವು ಬಹಳ ಮುಖ್ಯವಾಗಿ ತನ್ನ ಚಾರಿತ್ರಿಕ ಗತಿಯಲ್ಲಿ ಹೊಸದಾಗಿ ರೂಪುಗೊಂಡ ಬಂಡವಾಳಿಗ ವರ್ಗಕ್ಕೆ ತನ್ನ ಮಾರುಕಟ್ಟೆಯ ವಿಸ್ತರಣೆಗೆ ಬಳಕೆಯಾಗುವ ಆಯುಧವಾಯಿತು. ತನ್ನನ್ನು ಬಲಪಡಿಸಿಕೊಳ್ಳಲು, ತನ್ನ ವರ್ಗ ಸ್ವಾರ್ಥವನ್ನು ಬಹಳ ಚೆನ್ನಾಗಿ ಈಡೇರಿಸಿಕೊಳ್ಳಲು ಅದು ರಾಷ್ಟ್ರತ್ವವನ್ನು ಸಂಶೋಧಿಸಿತು, ಆಧರಿಸಿತು. ಈ ಅತಿಕ್ರಮಣ, ಮತ್ತಷ್ಟು ರಾಷ್ಟ್ರತ್ವಗಳು ತಮ್ಮನ್ನು ತಾವು ಪ್ರಜ್ವಲಗೊಳಿಸಿಕೊಳ್ಳಲು ಚಾರಿತ್ರಿಕ ಸಾಧನವಾಯಿತು. ಯುರೋಪಿನ ಅದರಲ್ಲೂ ಪಶ್ಚಿಮ ಯುರೋಪಿನ ದೇಶಗಳ ವಿಷಯದಲ್ಲಿ ಈ ಅಂಶವನ್ನು ನಾವು ಮತ್ತಷ್ಟು ದೃಢವಾಗಿ ಕಾಣಬಹುದು. ಪ್ರಪಂಚದಲ್ಲಿ ಮೊದಲ ಬಾರಿಗೆ ತಮ್ಮನ್ನು ತಾವು ರಾಷ್ಟ್ರ ಗಳೆಂದು ಸಂಶೋಧಿಸಿಕೊಂಡವರಲ್ಲಿ ಅವರೇ ಮೊದಲಿಗರು. ಬೆನಡಿಕ್ಟ್ ಎಂಡರ್ಸನ್ ಅವರು ಸುಮಾರು ೧೮ನೆಯ ಶತಮಾನದ ಯುರೋಪಿನಲ್ಲಿ ರಾಷ್ಟ್ರತ್ವದ ಯುಗದ ಆರಂಭವನ್ನು ತಮ್ಮ ಧಾರ್ಮಿಕ ಚಕ್ರಾಧಿಪತ್ಯಗಳ ಅವಸಾನವನ್ನು ಗುರುತಿಸಬಹುದೆಂದು ಅಭಿಪ್ರಾಯಪಡುತ್ತಾರೆ. ಆ ಪರಿಸ್ಥಿತಿಯನ್ನು ಹೀಗೆ ವಿವರಿಸುತ್ತಾರೆ. ‘‘ಹದಿನೆಂಟನೆಯ ಶತಮಾನದ ಅಂತ್ಯದಲ್ಲಿ ಕಾಣಿಸಿಕೊಂಡ ರಾಷ್ಟ್ರೀಯತ್ವವು ಧಾರ್ಮಿಕ ಚಕ್ರಾಧಿಪತ್ಯಗಳ ವಿನಾಶದಿಂದ ಉತ್ಪನ್ನವಾಯಿತು ಎಂದು ನಾನು ಹೇಳುತ್ತಿಲ್ಲ. ಅಥವಾ ಈ ನಾಶ ಗೊಳ್ಳುವಿಕೆಯ ಅತ್ಯಂತ ಸಂಕೀರ್ಣವಾದ ವಿವರಣೆಯನ್ನು ಬಯಸುತ್ತದೆ ಎಂಬುದನ್ನು ಅಲ್ಲಗಳೆಯುತ್ತಿಲ್ಲ. ಅಥವಾ ರಾಷ್ಟ್ರೀಯತ್ವವೆಂಬುದು ಚಾರಿತ್ರಿಕವಾಗಿ ಧರ್ಮವನ್ನು ಹಿಂದೆ ಬೀಳಿಸುತ್ತದೆಂದೂ ಸೂಚಿಸುತ್ತಿಲ್ಲ. ನಾನು ಸೂಚಿಸುತ್ತಿರುವುದೇನೆಂದರೆ ರಾಷ್ಟ್ರೀಯತ್ವ ವನ್ನು ಪ್ರಜ್ಞಾಪೂರ್ವಕವಾಗಿ ಕೈಗೊಂಡ ರಾಜಕೀಯ ಸಿದ್ಧಾಂತಗಳೊಂದಿಗೆ ಸಮೀಕರಿಸಿ ಅರ್ಥ ಮಾಡಿಕೊಳ್ಳುವುದರ ಬದಲು ಈ ರಾಷ್ಟ್ರತ್ವ ಯಾವುದರ ಉದರದಿಂದ ಹಾಗೂ ಅದೇ ಸಮಯದಲ್ಲಿ ಯಾವುದರ ವಿರುದ್ಧವಾಗಿ ಅವತಾರಗೊಂಡಿತೋ ಅಂತಹ ಪುರಾತನ ಸುವಿಶಾಲ ಸಾಂಸ್ಕೃತಿಕ ವ್ಯವಸ್ಥೆಯೊಂದಿಗೆ ಅದನ್ನು ಅರ್ಥ ಮಾಡಿಕೊಳ್ಳಬೇಕು.’’

ಈ ಹಿಂದೆ ಇಂತಹ ಸುವಿಶಾಲ ಸಾಂಸ್ಕೃತಿಕ ವ್ಯವಸ್ಥೆಗಳು, ಧಾರ್ಮಿಕ ಸಾಮ್ರಾಜ್ಯಗಳು ಅಥವಾ ಮಹೋನ್ನತ ಸಮುದಾಯಗಳು ಪರಿಕಲ್ಪಿತಗೊಳ್ಳಲು ಸಾಧನವಾಗಿ ಬಳಕೆಯಾಗಿದ್ದು ‘ಪವಿತ್ರ ಮೂಕ ಭಾಷೆಗಳು’. ಆ ಭಾಷೆಗಳು ಧಾರ್ಮಿಕ ಕಾರಣಗಳಿಗೆ ಗೌರವಿಸುತ್ತಿದ್ದ ಸಮುದಾಯಗಳಲ್ಲಿ ಯಾವುವೂ ಅದನ್ನು ಬಳಕೆಯ ಭಾಷೆಯಾಗಿ ಹೊಂದಿರಲಿಲ್ಲ. ಆದರೆ ಅವೆಲ್ಲವುಗಳಿಂದಲೂ ಆ ನಿರ್ದಿಷ್ಟ ಭಾಷೆಗಳು ಉದಾಹರಣೆಗೆ ಲ್ಯಾಟಿನ್ ಅಥವಾ ಗ್ರೀಕ್ ನಂತಹವು ಸತ್ಯದ ಭಾಷೆಗಳೆಂದೂ, ಪ್ರಪಂಪಚಕ್ಕೆಲ್ಲಾ ಮಾನ್ಯಗೊಂಡ ಭಾಷೆಗಳೆಂದೂ ಮನ್ನಣೆ ಹೊಂದಿದ್ದವು.

ಬೆನೆಡಿಕ್ಟ್ ಎಂಡರ್ಸನ್‌ನ ಪ್ರಕಾರ ಲ್ಯಾಟಿನ್ ಭಾಷೆಯ ಪತನವೆಂಬುದು, ಹಳೆಯ ಪವಿತ್ರ ಭಾಷೆಗಳ ಮುಖಾಂತರ ಸಂಯೋಜಿಸಲ್ಪಟ್ಟಿದ್ದ ಪವಿತ್ರ ಸಮುದಾಯಗಳು ಕ್ರಮೇಣ ಛಿದ್ರಗೊಂಡ, ಬಹುತ್ವಗೊಂಡ ಹಾಗೂ ಪ್ರಾದೇಶಿಕಗೊಂಡ ವಿಸ್ತೃತ ಪ್ರಕ್ರಿಯೆಯು ವಿವರಿಸುತ್ತದೆ. ಹೀಗೆ ವಿಶ್ವಸಮುದಾಯಗಳು ಬೇರ್ಪಟ್ಟು ತಮ್ಮ ತಮ್ಮ ನಡುವಿನ ವ್ಯತ್ಯಾಸಗಳನ್ನು, ವೈವಿಧ್ಯತೆಗಳನ್ನು ಪ್ರತಿಪಾದಿಸಿದ್ದೇ ಅಲ್ಲದೆ ಅವುಗಳನ್ನು ಅನ್ಯರಿಗೆ ಅಮುಕ್ತವನ್ನಾಗಿಸಿದವು. ಈ ಪರಿವರ್ತನೆಯು ರಾಷ್ಟ್ರತ್ವದ ಉಗಮವನ್ನು ಘೋಷಿಸಿತು. ಈ ಪ್ರಕ್ರಿಯೆಯು ಹದಿನೆಂಟನೆಯ ಶತಮಾನದ ಯುರೋಪಿನಲ್ಲಿ ಭಾವಿತ ಸಮುದಾಯದ ಮೂರ್ತೀಕರಣಕ್ಕೆ ನೆರವಾಯಿತು.

ಕಾದಂಬರಿ ಹಾಗೂ ವೃತ್ತಪತ್ರಿಕೆಗಳು ಒಂದು ಭಾವಿಸಿದ ಸಮೂದಾಯವನ್ನು ಮರು ನಿರೂಪಿಸಲು ಅಗತ್ಯವಾದ ತಾಂತ್ರಿಕ ಸಾಧನವಾಗಿ ಒದಗಿದವು. ಭಾವಿತ ಸಮುದಾಯವೊಂದು ತನ್ನ ಸಾಮಾನ್ಯ ರಾಷ್ಟ್ರತ್ವದಲ್ಲಿ ಪಾಲ್ಗೊಂಡಿರುವ ಇತರ ಸದಸ್ಯರ ಬಗ್ಗೆ ಒಂದು ಪರಿಕಲ್ಪನಾತ್ಮಕ ಭಾವನೆಯನ್ನು ತಳೆಯಲು ಕಾದಂಬರಿ ಹಾಗೂ ವೃತ್ತಪತ್ರಿಕೆಗಳೇ ಯುರೋಪಿನ ಸಂದರ್ಭದಲ್ಲಿ ಬಹಳ ಮುಖ್ಯ ಸಾಧನಗಳಾಗಿದ್ದವೆಂದು ಎಂಡರ್ಸನ್ ಪ್ರತಿಪಾದಿಸುತ್ತಾರೆ. ‘ಹಾಗೆ ಹೇಳಬೇಕೆಂದರೆ ಇವು ಭಾತೃತ್ವವನ್ನು, ಅಧಿಕಾರವನ್ನು ಹಾಗೂ ಕಾಲವನ್ನು ಅರ್ಥಪೂರ್ಣವಾಗಿ ಸಂಯೋಜಿಸಲು ಹೊಸ ಹಾದಿಯೊದಗಿಸಿದವು. ಮುದ್ರಣ ಬಂಡವಾಳಶಾಹಿಗಿಂತ ಚೆನ್ನಾಗಿ ಬೇರೆ ಯಾವುವೂ ಈ ಹೊಸ ಹುಡುಕಾಟವನ್ನು ಅಷ್ಟು ಅರ್ಥಪೂರ್ಣ ಹಾಗೂ ಫಲಪ್ರದಗೊಳಿಸಲು ಸಾಧ್ಯವಾಗಿರಲಿಲ್ಲ. ಅದು ಹೆಚ್ಚುತ್ತಲೇ ಹೋದ ಜನರ ಸಂಖ್ಯೆಗೆ ತಮ್ಮ ಬಗ್ಗೆ ತಾವು ಆಲೋಚಿಸಲು ಹಾಗೂ ಇತರೊಂದಿಗೆ ತಮ್ಮನ್ನು ತಾವು ಭಾವಿಸಿಕೊಳ್ಳಲು ಅದ್ಭುತವಾದ ಹೊಸ ಹಾದಿಗಳನ್ನು ಕಲ್ಪಿಸಿತು.

ಮುದ್ರಣ ಬಂಡವಾಳಶಾಹಿ ವರ್ಗದ ಅವತಾರದೊಂದಿಗೆ ಯುರೋಪ್‌ನ ಸ್ಥಾನಿಕ ಭಾಷೆಗಳೆಂದು ಹಿಂದೆ ಕರೆಸಿಕೊಳ್ಳಲ್ಪಟ್ಟ ಇಂಗ್ಲಿಷ್ ಮುಂತಾದ ಭಾಷೆಗಳು ಅವುಗಳ ಆಧುನಿಕ ರೂಪವನ್ನು ಧರಿಸಿಕೊಂಡವು. ಅದನ್ನು ಬೇರೆ ಮಾತುಗಳಲ್ಲಿ ಹೇಳಬೇಕೆಂದರೆ ಇತ್ತೀಚಿನ ಮುನ್ನೂರು ವರ್ಷಗಳಿಂದ ಆ ಮುದ್ರಿತ ಭಾಷೆಗಳೂ ತಮ್ಮ ರೂಪಕ್ಕೆ ಗಾಢವಾದ ಮೆರುಗನ್ನು ಪಡೆದುಕೊಂಡವು. ಇಂದು ಹೇಳಬೇಕೆಂದರೆ ಎಲ್ಲಾ ಆಧುನಿಕ ಸ್ವಯಂ-ಗ್ರಹೀತ ರಾಷ್ಟ್ರಗಳು ಹಾಗೂ ರಾಷ್ಟ್ರ ಪ್ರಭುತ್ವಗಳು ತಮ್ಮ ರಾಷ್ಟ್ರೀಯ ಮುದ್ರಿತ ಭಾಷೆಗಳನ್ನು ಹೊಂದಿವೆ. ಒಂದು ಮುದ್ರಿತ ಭಾಷೆಯು ಇಂದಿನ ರಾಷ್ಟ್ರ ಪ್ರಭುತ್ವಗಳಿಗೆ ಬಹಳ ನಿರ್ಣಾಯಕವಾದ ಸತ್ವಾಂಶವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಹಾದಿಯಲ್ಲಿ ಪಶ್ಚಿಮದ ಭೂಗೋಳವು ೧೭೭೬ರಿಂದ ೧೮೩೮ರ ನಡುವಿನಲ್ಲಿ ತನ್ನನ್ನು ತಾನು ಸ್ವಯಂಪ್ರಜ್ಞೆಯಿಂದ ರಾಷ್ಟ್ರವಾಗಿ ನಿರ್ವಚಿಸಿಕೊಂಡಿತು.

ಹೀಗೆಂದ ಮಾತ್ರಕ್ಕೆ ಪ್ರಪಂಚದಲ್ಲಿ ಆಧುನಿಕ ರಾಷ್ಟ್ರಗಳಾಗಿ ರೂಪುಗೊಂಡ ಪಶ್ಚಿಮದ ದೇಶಗಳೆಲ್ಲ ತಮ್ಮ ಹಿಂದಿನ ಸಾಮ್ರಾಜ್ಯ ಕೇಂದ್ರಗಳಿಂದ ಬೇರ್ಪಡುವಾಗ ತಮ್ಮನ್ನು ತಾವು ಭಾಷಾಧಾರಿತವಾಗಿ ವಿಭೇದೀಕರಿಸಿಕೊಂಡವು ಎಂದುಕೊಳ್ಳಬೇಕಾಗಿಲ್ಲ. ಮೊದಲ ಹಂತದಲ್ಲಿ ಬ್ರೆಜಿಲ್, ಅಮೆರಿಕಾ ಅಥವಾ ಸ್ಪೇನ್‌ನ ಮಾಜಿ ವಸಾಹತುಗಳು ಯಾವುವೂ ಭಾಷೆಯನ್ನು ತಮ್ಮ ವಿಭೇದೀಕರಣದ ಅಂಶವನ್ನಾಗಿ ತೆಗೆದುಕೊಂಡಿರಲಿಲ್ಲ. ಅಮೆರಿಕಾವನ್ನೂ ಒಳಗೊಂಡಂತೆ ಈ ಎಲ್ಲವು ನೆಲೆಸಿಗ ರಾಷ್ಟ್ರಗಳಾಗಿದ್ದು, ಒಂದು ಸಾಮಾನ್ಯ ಭಾಷೆಯನ್ನು ಹಾಗೂ ತಾವು ಯಾರ ವಿರುದ್ಧ ಹೋರಾಡುತ್ತಿದ್ದರೋ ಅವರ ವಿರುದ್ಧ ಒಂದು ಸಾಮಾನ್ಯ ವಾರಸುದಾರಿಕೆಯನ್ನು ಪಡೆದುಕೊಂಡಿದ್ದಂತಹ ಜನರಿಂದ ಮುನ್ನಡೆಸಲ್ಪಟ್ಟವು. ಆದರೆ, ರಾಷ್ಟ್ರೀಯ ವಿಮೋಚನೆಯ ಈ ಆರಂಭಿಕ ಹೋರಾಟಗಳಲ್ಲಿ ಭಾಷೆಯೆಂಬುದು ಒಂದು ಅಂಶ ಕೂಡ ಆಗಿರಲಿಲ್ಲ ಎಂದರೆ ತಪ್ಪಾಗಲಾರದು.

ವಾಸ್ತವವಾಗಿ, ಭಾವಿತ ಧಾರ್ಮಿಕ ಸಮುದಾಯಗಳು ಮುದ್ರಣಪೂರ್ವ ಯುಗದಲ್ಲಿ ಅಗಣಿತ, ಅವಿರತ ಪ್ರವಾಸಗಳ ಮೇಲೆ ಅವಲಂಬಿಸಿದ್ದವು. ಆಗ ಇದೊಂದೆ ಸಂಪರ್ಕ ಮಾಧ್ಯಮದಿಂದ ಬೇರೆ ಬೇರೆ ಪ್ರಾಂತಗಳಲ್ಲಿ ವಾಸ ಮಾಡುತ್ತಿದ್ದ ಜನರ ನಡುವೆ ಒಂದು ಸಾಮುದಾಯಿಕ ಕಲ್ಪನಾಭಾವವನ್ನು ತುಂಬುವುದಕ್ಕೆ ಸಾಧ್ಯವಾಗುತ್ತಿತ್ತು. ಇದರಿಂದ ಧಾರ್ಮಿಕ ಪ್ರವಚನಗಳ ಮೂಲಕ, ವಾಣಿಜ್ಯ ಸಂಬಂಧಗಳ ಮೂಲಕ ಒಬ್ಬರಿಗೊಬ್ಬರು ಸಂಬಂಧಿಸಿದ್ದೇವೆಂಬ ಮಾನಸಿಕ ಮನೋಭಾವನೆ ನಿರ್ಮಾಣವಾಗುತ್ತಿತ್ತು. ಅಂದರೆ ತಾವು ಅವಲಂಬಿಸಿದಂತಹುದೇ ಧಾರ್ಮಿಕ ನಂಬಿಕೆಗಳನ್ನು ಆಚಾರ ವಿಚಾರಗಳನ್ನು ಹಂಚಿಕೊಂಡ ವರು ಮತ್ತೆಲ್ಲೋ ಇದ್ದಾರೆಂಬ ಕಲ್ಪನೆ ಅವರನ್ನೆಲ್ಲ ಒಂದು ಸುವಿಶಾಲ ಪವಿತ್ರ ಸಮುದಾಯದ ಸದಸ್ಯರನ್ನಾಗಿ ಪ್ರಭಾವಿಸುತ್ತಿತ್ತು.

ವಾಸ್ತವವಾಗಿ ಈ ರಾಷ್ಟ್ರತ್ವವೆಂಬ ಭಾವಿತ ಸಮುದಾಯವು ತನ್ನ ಗಡಿರೇಖೆಗಳನ್ನು ರಾಷ್ಟ್ರೀಯತೆಯ ಆಧಾರದಲ್ಲಿ ರೂಪಿಸಿಕೊಂಡಿದ್ದು, ಒಂದು ಪರಿಮಿತತ್ವವನ್ನು ಸ್ವಯಂ ಜರಿಗೊಳಿಸಿಕೊಂಡಿದ್ದು. ಯಾಕೆಂದರೆ ತನ್ನ ಆಂತರಿಕ ಶ್ರಮ ಹಾಗೂ ಸಂಪನ್ಮೂಲ ಮಾರುಕಟ್ಟೆಯನ್ನು, ತನ್ನದೇ ಕಲ್ಪಿತ ಸಮುದಾಯದ ಬಂಡವಾಳಿಗ ವರ್ಗದ ಕಾರ್ಯಾಚರಣೆಗೆ ಸುರಕ್ಷಿತ ಕಾರ್ಯಕ್ಷೇತ್ರವನ್ನಾಗಿಸುವುದಕ್ಕಾಗಿತ್ತು.

ಹದಿನೆಂಟನೆಯ ಶತಮಾನದಿಂದ ಆರಂಭವಾದ ಈ ಪ್ರಕ್ರಿಯೆಗೆ ಬಹುತೇಕ ಹಳೆಯ ಚಕ್ರಾಧಿಪತ್ಯಗಳೆಲ್ಲ ದುರ್ಬಲಗೊಂಡು, ಅಲ್ಲಿ ರಾಷ್ಟ್ರಗಳು ಉಗಮವಾದವು. ೨೦ನೇ ಶತಮಾನದ ಮೊದಲ ಎರಡು ದಶಕಗಳಲ್ಲಿ ರಾಷ್ಟ್ರತ್ವದ ಕೊನೆಯ ಅಲೆ ಎಂಬಂತೆ ಏಷ್ಯಾದ ಬೇರೆ ಬೇರೆ ಭಾಗಗಳಲ್ಲಿ ಕಾಣಿಸಿಕೊಂಡಿತು. ಇದು ಕೈಗಾರಿಕಾ ಬಂಡವಾಳಶಾಹಿಯ ಸಾಧನೆಗಳ ಮುಖಾಂತರ ಜರಿಗೊಂಡಿದ್ದ ಹೊಸ ಶೈಲಿಯ ವಿಶ್ವ ಸಾಮ್ರಾಜ್ಯಶಾಹಿ ಲೂಟಿಗೆ ವಿರುದ್ಧದ ಪ್ರತಿಕ್ರಿಯೆ ಎಂಬಂತೆ ಉಗಮಗೊಂಡಿತು. ಇದರ ಪರಿಣಾಮದಿಂದ ಅಟ್ಟೊಮನ್ ಸಾಮ್ರಾಜ್ಯದಂತಹ ಪ್ರಭುತ್ವಗಳು ಗತಕಾಲದ ವಿಷಯವಾಗಿ ಹೋದವು.

ಎಂಡರ್ಸನ್ ಅವರು ಮಂಡಿಸುವ ರಾಷ್ಟ್ರದ ಪರಿಕಲ್ಪನೆಯ ರೂಪುರೇಷೆಗಳು ಪಶ್ಚಿಮ ಏಷ್ಯಾದ ಏಷ್ಯಾದ ಅವಿಭಾಜ್ಯ ಅಂಗವಾಗಿರುವ ಅರಬ್ ಜಗತ್ತಿನಲ್ಲಿ ೧೯೨೦ರ ನಂತರ ಕಂಡುಬರುತ್ತದೆ. ಈ ಜಗತ್ತಿನಲ್ಲಿ ಬೇರೆ ಬೇರೆ ತರದ ಭಾವಿತ ರಾಜಕೀಯ ಸಮುದಾಯ ಗಳು ಪರಸ್ಪರ ಸ್ಪರ್ಧೆಗಿಳಿದು, ಅರಬ್ ವಿಧೇಯತೆಯನ್ನು ತಮ್ಮತ್ತ ಸೆಳೆಯುವಲ್ಲಿ ಆಧುನಿಕ ಕಾಲದಲ್ಲಿ ಪ್ರಯತ್ನಿಸಿರುವುದು ಗಮನಕ್ಕೆ ಬರುತ್ತದೆ. ಅದು ಪ್ರಾದೇಶಿಕ ರಾಷ್ಟ್ರೀಯತೆ, ರಾಷ್ಟ್ರ-ರಾಜ್ಯ ರಾಷ್ಟ್ರೀಯತೆ ಮತ್ತು ವಿಶಾಲ ಅರ್ಥವನ್ನಿಟ್ಟುಕೊಂಡ ಇಸ್ಲಾಮಿ ಅಥವಾ ಧಾರ್ಮಿಕ ಅನನ್ಯತೆಗಳಾಗಿರಬಹುದು. ಆದರೆ, ಇಂತಹ ಭಾವನೆಗಳು ಯಾವುವು ಅರಬ್ ಜಗತ್ತಿನಲ್ಲಿ ಭೌಗೋಳಿಕ ಮತ್ತು ಧಾರ್ಮಿಕ ಗಡಿಗಳನ್ನು ಮೀರಿ ಸಾಂಸ್ಕೃತಿಕ – ಭಾಷಾ ಮಲ್ಯಗಳನಿಟ್ಟುಕೊಂಡು ಒಂದು ಅರಬ್ ಸಮುದಾಯದ ರಚನೆ ಮಾಡಲು ಸಾಧ್ಯವಾಗಲಿಲ್ಲ. ಏಕಕಾಲದಲ್ಲಿ ಒಂದೇ ಸಂಘಟನೆ, ನೇತೃತ್ವ ಮತ್ತು ಸೈದ್ಧಾಂತಿಕ ಚೌಕಟ್ಟಿನೊಳಗೆ ಇಡೀ ಅರಬ್ ಜಗತ್ತನ್ನು ಒಂದು ರಾಷ್ಟ್ರವನ್ನಾಗಿ ನಿರ್ಮಿಸುವ ಗುರಿ ಇಟ್ಟುಕೊಂಡ ಅರಬ್ ರಾಷ್ಟ್ರವಾದ ಎಂಬ ಚಳವಳಿಯನ್ನು ಆರಂಭಿಸಲು ಸಾಧ್ಯ ವಾಗಲಿಲ್ಲ.

ಪ್ರಥಮ ಜಾಗತಿಕ ಯುದ್ಧ ನಂತರದ ಒಪ್ಪಂದಗಳು ಮತ್ತು ಅಟ್ಟೊಮನ್ ಸಾಮ್ರಾಜ್ಯದ ಪತನದ ಪರಿಣಾಮದಿಂದ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಹೊಸ ರಾಜಕೀಯ ಚಟುವಟಿಕೆಗಳು ಹುಟ್ಟಿಕೊಂಡು, ಅವು ಅರಬ್ ಮಧ್ಯಪೂರ್ವದಲ್ಲಿ ಆಧುನಿಕ ಪ್ರಭುತ್ವಗಳ ಬೆಳವಣಿಗೆಗೆ ಕಾರಣವಾಯಿತು. ಅಟ್ಟೊಮನ್ ಸಾಮ್ರಾಜ್ಯ ಪತನವಾದ ನಂತರ ಟರ್ಕರು ಮತ್ತು ಅರಬ್‌ರು ಹೊಸದಾಗಿ ಹೇರಿದ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ನಿಭಾಯಿಸಲು ತಯಾರಿಲ್ಲದಿದ್ದರೂ ಅವರು ಅನಿವಾರ್ಯವಾಗಿ ರಾಷ್ಟ್ರ-ಪ್ರಭುತ್ವ ಸ್ಥಾಪನೆಗೆ ಸಜಗಲು ಪ್ರೇರಣೆ ನೀಡಿತು. ಅರಬ್ ಜಗತ್ತಿನಲ್ಲಿ ಈಗಾಗಲೇ ಅಟ್ಟೊಮನ್ ಕಾಲದ ಸುಧಾರಣೆಯ ಅನುಭವದ ಪ್ರತಿಫಲವಾಗಿ ರಾಜತಂತ್ರದ ಲಕ್ಷಣ ಬೆಳೆದಿದ್ದವು. ೧೯೧೯ರ ಹೊತ್ತಿಗೆ ಅರಬ್ಬರು ಪ್ರಭುತ್ವ ಸ್ಥಾಪನೆಯ ಯೋಜನೆಗೆ ಸಿದ್ಧತೆ ನಡೆಸುತ್ತಿದ್ದರೂ ಕೂಡ, ರಾಜತಂತ್ರಕ್ಕೆ ಸಂಬಂಧಿಸಿದ ಯಾವುದೇ ಅನುಭವವಿರದಿರುವ ಒಂದು ಮುಖ್ಯ ಕೊರತೆ ಅವರಲ್ಲಿ ಕಾಡುತ್ತಿತ್ತು. ಅಟ್ಟೊಮನ್‌ರ ಕಾಲದಲ್ಲಿ ಅರಬ್ ಜಗತ್ತಿನೊಂದಿಗೆ ಯುರೋಪಿನವರ ಸಂಬಂಧ ಏರ್ಪಡಲು ಬಹುತೇಕ ಇಸ್ತಮಬುಲ್ ಒಂದು ವಾಣಿಜ್ಯ ಕೇಂದ್ರವಾಗಿ, ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿರುವುದು. ಅದಲ್ಲದೆ, ಅರಬ್ ಭೂಭಾಗವು ಒಂದು ಬಲಿಷ್ಠ ಸಾಮ್ರಾಜ್ಯದ ಅವಿಭಾಜ್ಯ ಅಂಗವಾಗಿತ್ತೇ ವಿನಃ ಅವು ಪ್ರತ್ಯೇಕ ಗಡಿಗಳೊಂದಿಗೆ ಸ್ವತಂತ್ರ ರಾಜ್ಯಗಳಾಗಿರಲಿಲ್ಲ. ಹಾಗಾಗಿ, ಇತರ ಅರಬ್ ಸಮುದಾಯಗಳನ್ನು ವಿದೇಶಿಯರೆಂದು ಪರಿಗಣಿಸಿದ ಯಾವುದೇ ಅನುಭವವೂ ಇಲ್ಲ. ಯುದ್ಧಾನಂತರ ಲೀಗ್ ಆಫ್ ನೇಷನ್ಸ್‌ನ ನೇತೃತ್ವದಲ್ಲಿ ಇಡೀ ಅರಬ್ ಭೂಭಾಗವನ್ನು ವಿಭಜಿಸಿ ಅವುಗಳನ್ನು ವಿಜಯೋತ್ಸವವನ್ನಾಚರಿಸುತ್ತಿದ್ದ ವಸಾಹತುಶಾಹಿ ರಾಷ್ಟ್ರಗಳಿಗೆ ಹಂಚಿ, ಅಲ್ಲಿ ಹೊಸ ವಸಾಹತುಶಾಹಿ ಪ್ರಭುತ್ವವನ್ನು ಸ್ಥಾಪಿಸಿದಾಗ ಅರಬ್ ಸಮುದಾಯ ಗಳು ತೀವ್ರವಾಗಿ ವಿರೋಧಿಸತೊಡಗಿದವು. ಅದೊಂದು ರಾಷ್ಟ್ರತ್ವದ ಹೆಸರಿನಲ್ಲಿ ಉಗಮವಾದ ಚಳುವಳಿಯಾಗಿದ್ದು, ವಸಾಹತುಶಾಹಿ ಪ್ರಭುತ್ವದ ವಿರುದ್ಧ ನಡೆದ ಘಟನೆ ಯಾಗಿದ್ದು, ಅರಬ್ಬರಲ್ಲಿ ಒಗ್ಗಟ್ಟು, ಸ್ಥಾಪನೆ ಮತ್ತು ಸ್ವಾತಂತ್ರ ಪ್ರಭುತ್ವ ಸ್ಥಾಪನೆ ಮುಖ್ಯ ಉದ್ದೇಶವನ್ನಿಟ್ಟುಕೊಂಡಿತ್ತು.

 

ಪರಾಮರ್ಶನಗ್ರಂಥಗಳು

೧. ಹಾಲ್ಟೆ ಪಿ.ಎಂ., ೧೯೭೦. ದಿ ಕೇಂಬ್ರಿಡ್ಜ್ ಹಿಸ್ಟರಿ ಆಫ್ ಇಸ್ಲಾಂ(ಎರಡು ಸಂಪುಟಗಳು), ಕೇಂಬ್ರಿಡ್ಜ್.

೨. ಅರ್ನೊಲ್ಡ್ ಹೊಟೆಂಜರ್, ದಿ ಅರಬ್ಸ್ : ದೆಯರ್ ಹಿಸ್ಟರಿ ಕಲ್ಚರ್ ಆಂಡ್ ಪ್ಲೇಸ್ ಇನ್ ದಿ ಮಾಡರ್ನ್ ವಲ್ಡ್.

೩. ಆಲಬರ್ಟ್ ಹೌರಾನಿ, ೧೯೭೦. ಅರಬ್ ಥಾಟ್ ಇನ್ ದಿ ಲಿಬರಲ್ ಏಜ್, ಲಂಡನ್.