ಮೊದಲ ಜಾಗತಿಕ ಯುದ್ಧದ ಅಂತ್ಯದವರೆಗೂ ಅರೇಬಿಯಾ ಪ್ರಸ್ಥಭೂಮಿ, ಅಟ್ಟೋಮನ್ ಸಾಮ್ರಾಜ್ಯದ ಅಧೀನದಲ್ಲಿತ್ತು. ಇಂದಿನ ಸೌದಿ ಅರೇಬಿಯಾ, ಇರಾಕ್, ಸಿರಿಯಾ, ಲೆಬನಾನ್, ಪ್ಯಾಲೆಸ್ತೀನ್ ಮತ್ತು ಗಲ್ಫ್ ಪ್ರಾಂತಗಳನ್ನೊಳಗೊಂಡ ಈ ಪ್ರದೇಶ ಭೌಗೋಳಿಕವಾಗಿ ಹೆಚ್ಚು ಮರುಭೂಮಿಯನ್ನು ಆವರಿಸಿಕೊಂಡಿದೆ. ರಾಜಕೀಯವಾಗಿ ಈ ಪ್ರದೇಶವನ್ನು ಒಂದು ಪ್ರಾಂತವನ್ನಾಗಿ ಪರಿಗಣಿಸಿ ಅಟ್ಟೊಮನ್ ಸಾಮ್ರಾಟರು ಆಡಳಿತ ನಡೆಸಿದ್ದರಾದರೂ, ಆರ್ಥಿಕವಾಗಿ ಯಾವುದೇ ಲಾಭವಿಲ್ಲದೆ ಕಾರಣ ಕಡೆಗಣಿಸಲಾಗಿತ್ತು.

೨೦ನೆಯ ಶತಮಾನದ ಆರಂಭದಲ್ಲಿ ಈ ಭೂಭಾಗ ಮೂರು ಪ್ರಮುಖ ಹಾಗೂ ಪ್ರಭಾವಿ ಬುಡಕಟ್ಟು ನಾಯಕರ ಉಗಮವನ್ನು ಕಾಣುತ್ತದೆ. ಪಶ್ಚಿಮದ ಭಾಗದಲ್ಲಿ ಹಿಜಜ್ ಸಾಮ್ರಾಜ್ಯದ ಉದಯವಾಗಿದ್ದು, ಅದೊಂದು ಶಕ್ತಿಶಾಲಿಯಾದ ಬುಡಕಟ್ಟು ಕುಟುಂಬವಾಗಿದ್ದು, ಅವರನ್ನು ಹಷಿಮೈಟ್‌ಗಳೆಂದು ಕರೆದುಕೊಳ್ಳುತ್ತಿದ್ದರು. ಹಿಜಜ್ ಸಾಮ್ರಾಜ್ಯದ ಉತ್ತರಕ್ಕೆ ಹೈಲ್ ಸಾಮ್ರಾಜ್ಯವಿದ್ದು, ಅಲ್ಲಿ ರಶೀದಿ ಕುಟುಂಬದವರು ಪ್ರಭಾವಶಾಲಿಯಾಗಿದ್ದರು. ಇವರು, ಉತ್ತರ ಅರಬ್ ಪ್ರಸ್ಥಭೂಮಿಯ ಹೆಚ್ಚಿನ ಭಾಗಗಳನ್ನು ಮತ್ತು ಮೆಸಪಟೋಮಿಯಾದ ಒಂದು ಭಾಗದಲ್ಲಿ ಆಧಿಪತ್ಯ ಹೊಂದಿದ್ದರು. ಪೂರ್ವ ಮತ್ತು ದಕ್ಷಿಣ ಬಾಗದಲ್ಲಿ ನಜ್ಜಿದಿ ಸಾಮ್ರಾಜ್ಯವಿದ್ದು, ಅಲ್ಲಿ ಸೌದಿ ಕುಟುಂಬದ ವರು ಸಕ್ರಿಯವಾಗಿದ್ದರು. ಅಟ್ಟೊಮನ್ ಸಾಮ್ರಾಜ್ಯದ ವ್ಯಾಪ್ತಿಯಲ್ಲಿ ಸೇರ್ಪಡೆಯಾಗಿರುವ ಈ ಪ್ರಸ್ಥಭೂಮಿ, ನಿಜವಾಗಿ ಸ್ಥಳೀಯ ಮಟ್ಟದಲ್ಲಿ ಪ್ರಭಾವಿಯಾಗಿ ಆಡಳಿತ ಉಸ್ತುವಾರಿ ಗಳನ್ನು ನೋಡಿಕೊಂಡು, ಸ್ಥಳೀಯರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದುದು ಇಲ್ಲಿ ಉಗಮವಾದ ಈ ಮೂರು ಬುಡಕಟ್ಟು ನಾಯಕರು.

೧೯೦೦ರ ನಂತರ ಈ ಪ್ರದೇಶ ಎರಡು ಮುಖ್ಯ ಬೆಳವಣಿಗೆಗಳನ್ನು ಕಾಣುತ್ತದೆ. ಒಂದನೆಯದು, ಬ್ರಿಟಿಷ್ ಅನ್ವೇಷಣೆಗಾರರು ಮತ್ತು ಭೂಗೋಳಶಾಸ್ತ್ರಜ್ಞರು ಇಡೀ ಪ್ರದೇಶದ ಕ್ಷೇತ್ರಕಾರ್ಯ ಮಾಡಿ, ಈ ಪ್ರದೇಶ ತೈಲ ಉತ್ಪನ್ನಗಳನ್ನು ಯಥೇಚ್ಚವಾಗಿ ಹೊಂದಿರುವುದನ್ನು ಕಂಡುಹಿಡಿದರು. ಇದು ಈ ಪ್ರದೇಶಕ್ಕೆ ಬ್ರಿಟಿಷರ ಸಾಮ್ರಾಜ್ಯಶಾಹಿ ವಾದದ ಕ್ರೋಡೀಕರಣಕ್ಕೆ ಬಲವಾದ ಅಡಿಪಾಯವನ್ನು ಹಾಕಲು ಹಿನ್ನೆಲೆಯಾಯಿತು. ಈ ಮೊದಲು ಬ್ರಿಟಿಷರು ಈ ಪ್ರದೇಶಗಳನ್ನು ಅವಲಂಬಿಸಿಕೊಂಡಿರುವುದು ಕೇವಲ ಯುದ್ದಾನುಕೂಲತೆ ಮತ್ತು ವ್ಯಾಪಾರ ದೃಷ್ಟಿಯಿಂದಲೇ ವಿನಃ ಆರ್ಥಿಕ ಆಸಕ್ತಿಗಳಿಂದ ಅಲ್ಲ. ಆದರೆ, ನಿಕ್ಷೇಪಗಳ ಅನ್ವೇಷಣೆ ಬ್ರಿಟಿಷರ ವಸಾಹತು ಆಲೋಚನೆಗಳನ್ನೇ ಪರಿವರ್ತಿಸಿತು.

ಎರಡನೆಯ ಬೆಳವಣಿಗೆ ಸೌದಿ ಕುಟುಂಬಕ್ಕೆ ಸೇರಿದ ನಜ್ಜೀದಿ ಅರಸರ ಉಗಮ. ಈ ಸಮುದಾಯದ ಮುಖಂಡ ಅಬ್ದುಲ್ ಅಜೀಜ್ ಇಬ್ನಸೌದ್, ಸೌದಿ ಮನೆತನದ ಪ್ರಭುತ್ವವನ್ನು ಗಟ್ಟಿಗೊಳಿಸಿ, ಅದಕ್ಕೊಂದು ಇಡೀ ಅರಬ್ ಜಗತ್ತಿನಲ್ಲಿ ಸ್ವತಂತ್ರ ಅನನ್ಯತೆಯನ್ನು ಸಮರ್ಥಿಸುವುದು ಉದ್ದೇಶವಾಗಿತ್ತು. ತನ್ನ ಕುಟುಂಬ ಹೊಂದಿರುವ ಭೂಪ್ರದೇಶದ ವಿಸ್ತಾರವನ್ನು ಒಂದು ಯೋಜನೆಯನ್ನಾಗಿ ಪರಿಗಣಿಸಿ, ೧೯೦೨ ರಿಂದ ರಶೀದಿ ಸಾಮ್ರಾಜ್ಯದ ಮೇಲೆ ದಂಡೆತ್ತಿ ಹೋಗಿ ಅಲ್ಲಿನ ಅರಸರನ್ನು ಉತ್ತರಕ್ಕೆ ಓಡಿಸಿದನು. ರಶೀದಿ ಸಾಮ್ರಾಜ್ಯದ ಪ್ರಾಂತಗಳನ್ನು ಆಕ್ರಮಿಸಿದ ಇಬ್ನಸೌದನು ಸೌದಿ ಸಾಮ್ರಾಜ್ಯವನ್ನು ಪ್ರಾದೇಶಿಕವಾಗಿ ಒಂದು ಮಾದರಿ ಅರಬ್ ಶಕ್ತಿಯನ್ನಾಗಿ ಪರಿವರ್ತಿಸಲು ಯಶಸ್ವಿಯಾದನು. ಇಬ್ನಸೌದನು ಹುಟ್ಟು ಹಾಕಿದ ಪ್ರಭುತ್ವವನ್ನು ಇನ್ನೊಂದು ಅರಬ್ ಸಮುದಾಯವಾದ ಹಷಿಮೈಟ್ ಮುಖಂಡ ಶರೀಫ್ ಹುಸೇನನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಹಾಗಾಗಿ, ಅರಬ್ ಜಗತ್ತಿನ ಮುಖಂಡತ್ವಕ್ಕೆ ಸೌದಿ ಮತ್ತು ಹಷಿಮೈಟ್‌ರ ನಡುವೆ ಸ್ಪರ್ಧೆ ಅನಿವಾರ್ಯವಾಯಿತು.

ಬ್ರಿಟಿಷರು ಸುಮಾರು ೧೯ನೆಯ ಶತಮಾನದ ಆರಂಭದಿಂದಲೇ ಅರಬ್ ಜಗತ್ತಿನ ಬಹುತೇಕ ನಗರಗಳಲ್ಲಿ ವ್ಯಾಪಾರ ಆಸಕ್ತಿಗಳನ್ನು ಬೆಳೆಸಿಕೊಂಡಿದ್ದು, ವಾಣಿಜ್ಯ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿ ಇಡೀ ಅರಬ್ ಜಗತ್ತನ್ನು ತಮ್ಮದೇ ವಸಾಹತನ್ನಾಗಿ ಬೆಳೆಸಲು ಯೋಜನೆಗಳನ್ನು ರೂಪಿಸುತ್ತಿದ್ದರು. ತೈಲ ಉತ್ಪನ್ನಗಳ ಅನ್ವೇಷಣೆ ನಂತರವಂತೂ ಅವರು ಹೆಚ್ಚು ಆಸಕ್ತಿಯನ್ನು ತೋರುತ್ತಿದ್ದರು. ಈ ಮಧ್ಯದಲ್ಲಿ ಜರ್ಮನಿಯ ವಿಲಿಯಂ ಕೈಸರನು ಅಟ್ಟೋಮನ್ ಸುಲ್ತಾನ ಅಬ್ದುಲ್ ಹಮೀದ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡು ರೈಲು ನಿರ್ಮಾಣ ಹಕ್ಕನ್ನು ಪಡೆದನು. ಇದು ಬ್ರಿಟಿಷರ ಸಾಮ್ರಾಜ್ಯಶಾಹಿ ಆಸಕ್ತಿಗಳಿಗೆ ಧಕ್ಕೆ ಬಂದಿರುವುದರಿಂದ ಸುಲ್ತಾನ ಮತ್ತು ಜರ್ಮನಿಯ ವಿಲಿಯಂ ಕೈಸರನ ವಿರುದ್ಧ ಪಿತೂರಿ ನಡೆಸಲು ಆರಂಭಿಸಿದರು. ಅವರ ವಿರುದ್ಧ ಸೈನಿಕ ಕಾರ್ಯಾಚರಣೆ ನಡೆಸುವುದಾದರೆ, ಸ್ಥಳೀಯರ ಸಹಕಾರ ಬೇಕಾಗುವುದೆಂಬ ದೃಷ್ಟಿಯಿಂದ ಬ್ರಿಟಿಷರು ಅರಬ್ ಜಗತ್ತಿನ ಪ್ರಾಂತೀಯ ಅರಸರೊಂದಿಗೆ ಸ್ನೇಹ ಬೆಳೆಸಲು ಆರಂಭಿಸಿದರು. ಇದೇ ಹೊತ್ತಿಗೆ ಸೌದಿ ಮುಖಂಡ ಅಬ್ದುಲ್ ಅಜೀಜ್ ಇಬ್ನಸೌದ್ ಮತ್ತು ಹಷಿಮೈಟ್ ಕುಟುಂಬದ ಖಲೀಫ ಶರೀಪ್ ಹುಸೇನ್‌ನ ನಡುವೆ ಅರಬ ಜಗತ್ತಿನ ಆಧಿಪತ್ಯಕ್ಕೆ ಪೈಪೋಟಿ ಆರಂಭವಾಗುತ್ತದೆ.

ಮೆಕ್ಕಾದ ಶರೀಫನು ಬ್ರಿಟಿಷರೊಂದಿಗೆ ಸ್ನೇಹದಿಂದ ಇದ್ದರು, ಸೌದಿ ಅರಸನ ಪ್ರಭಾವವನ್ನು ಗಂಭೀರವಾಗಿಯೇ ಪರಿಶೀಲಿಸುತ್ತಿದ್ದರು. ಇಡೀ ಅರಬ್ ಪ್ರಸ್ಥಭೂಮಿಯೇ ತೈಲ ಸಂಪತ್ತಿಗೆ ಶ್ರೀಮಂತವಾಗಿರುವುದರಿಂದ ಬ್ರಿಟಿಷರು ಯಾರೊಂದಿಗೂ ನಿಷ್ಠುರ ಮಾಡಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಈ ಮಧ್ಯದಲ್ಲಿ ಇಬ್ನಸೌದ್ ಮತ್ತು ಶರೀಫರ ನಡುವೆ ಮೆಕ್ಕಾದ ಶರೀಫನೆಯ ನಂಬಿಗಸ್ಥ ಎಂಬ ಭಾವನೆಯೂ ಬ್ರಿಟಿಷರಿಗಿತ್ತು. ಹಾಗಾಗಿ, ಇವರಿಬ್ಬರ ಪೈಪೋಟಿಯ ಲಾಭವನ್ನು ಪಡೆಯಲು ಪ್ರಯತ್ನ ಮಾಡಿದರು. ಇವರಿಬ್ಬರೂ ಎರಡು ಪ್ರಭಾವಿ ಅರಬ್ ಕುಟುಂಬಗಳನ್ನು ಪ್ರತಿನಿಧಿಸುತ್ತಿದ್ದು, ಇಬ್ಬರೂ ಅರಬ್ ಜಗತ್ತಿನಲ್ಲಿ ಸ್ಥಾಪಿಸಲ್ಪಡುವ ಆಧಿಪತ್ಯವನ್ನು ಹೊಂದಬೇಕೆಂಬ ಆಕಾಂಕ್ಷೆ ಹೊಂದಿ ಒಬ್ಬರನ್ನೊಬ್ಬರು ಟೀಕಿಸುವುದರಲ್ಲಿದ್ದರು. ಇಬ್ನಸೌದನಿಗೆ ಮಧ್ಯ ಮತ್ತು ದಕ್ಷಿಣ ಅರೇಬಿಯಾದ ಬೆದಾಯಿನ್ ಬುಡಕಟ್ಟು ಜನರ ಬೆಂಬಲವಿದ್ದು, ೧೯೦೨ ಮತ್ತು ೧೯೧೨ರ ನಡುವೆ ಅವನು ನಡೆಸಿದ ಸೈನಿಕ ಕಾರ್ಯಾಚರಣೆಯಲ್ಲಿ ತಾನೊಬ್ಬ ಬಲಿಷ್ಠ ಸ್ಥಳೀಯ ಅರಸನೆಂದು ಶ್ರುತಪಡಿಸಿದ್ದ. ಅಲ್ಲದೆ, ಅವನ ಪ್ರಕಾರ ಸೌದಿಗಳು ಹೆಚ್ಚು ಮುಂದುವರಿದವರು ಆಗಿದ್ದು, ನಾಗರಿಕ ವ್ಯವಸ್ಥೆಯ ಹರಿಕಾರರು ಎಂದೇ ಪ್ರತಿಪಾದಿಸಿ ಅರಬ್ ಜಗತ್ತಿನ ಮುಖಂಡತ್ವವನ್ನು ವಹಿಸಿಕೊಳ್ಳುವ ಎಲ್ಲ ಅರ್ಹತೆಯನ್ನು ಸೌದಿ ಕುಟುಂಬ ಹೊಂದಿದೆ ಎಂದು ಪ್ರತಿಪಾದಿಸುತ್ತಾನೆ.

ಇದಕ್ಕೆ ಉತ್ತರವಾಗಿ ಮೆಕ್ಕಾದ ಶರೀಫ ಹುಸೇನನು ಕೂಡ ಇಡೀ ಮುಸ್ಲಿಂ ಸಮುದಾಯಕ್ಕೆ ಪವಿತ್ರವೆಂದು ಗೌರವಿಸಲ್ಪಡುವ ಮೆಕ್ಕ ಮತ್ತು ಮದೀನಾ, ಹಷಿಮೈಟರ ಅಧೀನಕ್ಕೆ ಒಳಪಟ್ಟಿದ್ದು, ಶರೀಫನು ತಾನೆಯ ಖಲೀಫನೆಂದು, ಇಸ್ಲಾಂ ಜಗತ್ತಿನ ಅಧ್ಯಾತ್ಮ ಮುಖಂಡನೆಂದೂ, ಧಾರ್ಮಿಕ ಮುಖಂಡನೆಂದೂ ಹೇಳಿಕೊಂಡು, ಅರಬ್ ಜಗತ್ತಿನ ನೇತೃತ್ವವನ್ನು ವಹಿಸಲು ಹಷಿಮೈಟ್ ಕುಟುಂಬವೇ ಅರ್ಹವಾಗಿದೆ ಎಂದು ಸಮರ್ಥಿಸಿಕೊಂಡನು. ಇದನ್ನು ಅರಿತ ಇಬ್ನಸೌದ್ ತನ್ನ ಸೈನಿಕ ಕಾರ್ಯಾಚರಣೆಯನ್ನು ಮತ್ತಷ್ಟು ಉತ್ತರಾಭಿಮುಖವಾಗಿ ಮುಂದುವರಿಸಿದನು. ಹಷಿಮೈಟರು ಪ್ರಭಾವಿಯಾಗಿರುವ ಪ್ರದೇಶದ ಮೇಲೆಯೇ ದಂಡೆತ್ತಿ ಹೋಗಿ ಮೆಕ್ಕಾ ಮತ್ತು ಮದೀನ ಪಟ್ಟಣಗಳನ್ನು ಸೌದಿ ಮುಖಂಡ ಇಬ್ನಸೌದ್ ಮತ್ತು ಅವನ ಬೆಂಬಲಿಗರು ಆಕ್ರಮಿಸಲು ಪ್ರಯತ್ನಿಸಿದರು.

ಈ ನಡುವೆ ಪ್ರಥಮ ಜಾಗತಿಕ ಯುದ್ಧದ ಘೋಷಣೆ ಆಗಿತ್ತು. ಬ್ರಿಟಿಷರು, ರಷ್ಯನ್ನರು ಮತ್ತು ಫ್ರೆಂಚರು ಒಕ್ಕೂಟ ಕ್ಯಾಂಪಿನಲ್ಲಿದ್ದರೆ, ಸೆಂಟ್ರಲ್ ಕ್ಯಾಂಪ್‌ನಲ್ಲಿ ಮುಖ್ಯವಾಗಿ ಜರ್ಮನಿ, ಅಟ್ಟೋಮನ್ ಸರಕಾರ ಬಲಿಷ್ಠ ದೇಶಗಳಾಗಿದ್ದವು. ೧೮೯೦ರ ದಶಕದಿಂದಲೇ ಬ್ರಿಟಿಷರು ತಮ್ಮ ಸಾಮ್ರಾಜ್ಯಶಾಹಿ ಯೋಜನೆಗೆ ಅಟ್ಟೋಮನ್ ಸುಲ್ತಾನ, ಜರ್ಮನಿಯೊಂದಿಗೆ ಕೈಜೋಡಿಸಿ ಬೆದರಿಕೆ ಒಡ್ಡಿರುವುದನ್ನು ಗಂಭೀರವಾಗಿ ತೆಗೆದುಕೊಂಡ ಬ್ರಿಟಿಷರು ಕ್ಲುಪ್ತ ಸಮಯದಲ್ಲಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದರು. ಜಾಗತಿಕ ಯುದ್ಧ ಅದಕ್ಕೊಂದು ವೇದಿಕೆಯಾಗಿ ದೊರೆಯಿತು. ತೈಲ ಸಂಪತ್ತಿರುವ ಪ್ರದೇಶದಲ್ಲಿ ಅಟ್ಟೋಮನ್ ಆಳ್ವಿಕೆಯನ್ನು ಕೊನೆಗೊಳಿಸುವುದು ಬ್ರಿಟಿಷರ ಮುಖ್ಯ ಉದ್ದೇಶವಾಗಿತ್ತು. ಯುದ್ಧ ಮುಗಿದ ನಂತರ ಶ್ರೀಮಂತ ಸಂಪನ್ಮೂಲದ ಉತ್ಪಾದನೆ ಮಾಡಬೇಕೆಂಬ ಯೋಜನೆ ಇರುವುದರಿಂದ ಮತ್ತು ಅವರ ದಾರಿಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಅಟ್ಟೋಮನ್‌ರ ಅನುಮತಿ ಪಡೆಯುವ ಬದಲು, ಸ್ಥಳೀಯವಾಗಿ ನಿಜವಾಗಿ ಪ್ರಾಂತೀಯ ಆಡಳಿತವನ್ನು ಸೂತ್ರವಾಗಿ ನೋಡಿಕೊಳ್ಳುತ್ತಿರುವ ನಾಯಕರೊಂದಿಗೆ ಒಪ್ಪಂದ ಮಾಡಿಕೊಂಡು ಅವರ ಮುಂದಿನ ಯೋಜನೆಗೆ ಸಿದ್ಧತೆ ನಡೆಸತೊಡಗಿದರು. ಹಷಿಮೈಟರು ಅಟ್ಟೋಮನ್‌ರ ಆಡಳಿತವನ್ನು ಕೊನೆಗೊಳಿಸುವುದಾಗಲಿ, ಸೌದಿಯರ ಪ್ರಭಾವವನ್ನು ನಿಯಂತ್ರಿಸುವುದರಲ್ಲಾಗಲಿ ಸಫಲವಾಗದ ಕಾರಣ ನೆಯರವಾಗಿ ಅಂತದ್ದೊಂದು ರಾಜತಾಂತ್ರಿಕ ಯೋಜನೆಯನ್ನು ರೂಪಿಸಿದರು.

೧೯೦೨-೧೯೧೫ರ ನಡುವೆ ಸುಮಾರು ೫ ಬಾರಿ ದಂಡೆತ್ತಿ ಹೋಗಿ ಇಬ್ನಸೌದ್ ಸೌದಿ ಸಾಮ್ರಾಜ್ಯವನ್ನು ವಿಸ್ತರಿಸಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿದನು. ಅಟ್ಟೋಮನ್ ಸಾಮ್ರಾಜ್ಯದ ಅಧೀನದಿಂದ ಸ್ವತಂತ್ರನಾಗುವ ಹೆಬ್ಬಯಕೆಯನ್ನು ವ್ಯಕ್ತಪಡಿಸುವುದರಿಂದ ಬ್ರಿಟಿಷರು ಅವನೊಂದಿಗೆ ರಾಜತಾಂತ್ರಿಕ ಮಾರ್ಗವನ್ನು ಪಾಲಿಸುತ್ತಾರೆ. ಅವನ ಪ್ರಾಂತದ ವಿಸ್ತರಣೆ, ಹಷಿಮೈಟ್ ಪ್ರದೇಶದತ್ತ ಅವನ ಸೈನಿಕ ಕಾರ್ಯಾಚರಣೆಯನ್ನು ಆ ತಕ್ಷಣ ತಡೆ ಹಿಡಿಯಬೇಕೆಂಬುದು ಬ್ರಿಟಿಷರ ಆಸಕ್ತಿ. ಹಷಿಮೈಟ್ ಮುಖಂಡ ಶರೀಫನು ಈ ದಿಶೆಯಲ್ಲಿ ಯಾವುದೇ ಯಶಸ್ಸು ಸಾದಿಸದ ಕಾರಣ ಬ್ರಿಟಿಷರೇ ನೆಯರವಾಗಿ ಸೌದಿ ಮುಖಂಡನೊಂದಿಗೆ ಒಂದು ಒಪ್ಪಂದವನ್ನು ೧೯೧೫ರಲ್ಲಿ ಮಾಡಿಕೊಳ್ಳುತ್ತಾರೆ. ಬ್ರಿಟಿಷರಿಗೆ ಮುಖ್ಯವಾಗಿ ತಾವು ಸರ್ವೆ ಮಾಡಿ ತೈಲ ಸಂಪತ್ತಿನಲ್ಲಿ ಶ್ರೀಮಂತವಾಗಿರುವ ಗಲ್ಫ್ ಪ್ರಾಂತ, ಇಂದಿನ ಇರಾಕ್, ಪ್ಯಾಲೆಸ್ತೀನ್, ಜೋರ‍್ಡಾನ್, ಕುವೈತ್ ಪ್ರದೇಶಗಳಿಗೆ ಸೌದಿಯ ಪ್ರಭುತ್ವ ವಿಸ್ತರಿಸಬಾರದು ಎಂಬ ಕಾರಣದಿಂದ, ಅಬ್ದುಲ್ ಅಜೀಜ್ ಇಬ್ನಸೌದನ ಜೊತೆಗೆ ಜೆಡ್ಡಾ ಒಪ್ಪಂದವನ್ನು ೧೯೧೫ರಲ್ಲಿ ಮಾಡಿಕೊಂಡರು. ಒಪ್ಪಂದದ ಪ್ರಕಾರ ಸೌದಿ ಅರಸನ ಅಸ್ತಿತ್ವವನ್ನು ಬ್ರಿಟಿಷರು ಗೌರವಿಸಿದರು. ೧೫,೦೦೦ ಪೌಂಡ್ ವರ್ಷಕ್ಕೆ ಸಬ್ಸಿಡಿಯಾಗಿ ಇಬ್ನಸೌದನಿಗೆ ಬ್ರಿಟಿಷರು ಕೊಡುವುದಾಗಿ ಒಪ್ಪಿಕೊಂಡರು. ಸೌದಿ ಕುಟುಂಬವು ಬಲಿಷ್ಠ, ಪ್ರಭಾವಶಾಲಿ ಅರಬ್ ಶಕ್ತಿಯೆಂದು ಅಧಿಕೃತವಾಗಿ ಬ್ರಿಟಿಷರು ಒಪ್ಪಿಕೊಂಡರು. ಇದಕ್ಕುತ್ತರವಾಗಿ ಬ್ರಿಟಿಷರು ಸೌದಿ ಅರಸನಿಗೆ ಕೆಲವು ಶರತ್ತುಗಳನ್ನು ಹಾಕಿದರು. ತನ್ನ ಎಲ್ಲ ಸೈನಿಕ ಕಾರ್ಯಾಚರಣೆಗಳನ್ನು ನಿಲ್ಲಿಸಬೇಕೆಂದೂ, ಹಷಿಮೈಟ್ ಪ್ರಭಾವವಿರುವ ಯಾವುದೇ ಪ್ರದೇಶದ ರಾಜಕೀಯ ಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡಬಾರದೆಂದು, ಬ್ರಿಟಿಷರು ಕಂಡು ಹಿಡಿದ ತೈಲ ನಿಕ್ಷೇಪ ಹೇರಳವಾಗಿರುವ ಇರಾಕ್, ಕುವೈತ್ ಮತ್ತು ಗಲ್ಫ್ ಪ್ರದೇಶದ ಮೇಲೆ ದಾಳಿ ಮಾಡಬಾರದೆಂದೂ ಬ್ರಿಟಿಷರು ಕೇಳಿಕೊಂಡರು. ಇದಕ್ಕೆ ಇಬ್ನಸೌದ್ ಒಪ್ಪಿಗೆ ಸೂಚಿಸಿದ್ದನು. ಸೌದಿ ಕುಟುಂಬಕ್ಕೆ ಅರಬ್ ಜಗತ್ತಿನಲ್ಲಿ ದೀರ್ಘ ಇತಿಹಾಸವಿದ್ದು, ಅದೇ ಕುಟುಂಬ ನ್ಯಾಯೋಚಿತವಾಗಿ ಆಧಿಪತ್ಯದ ಪತಾಕೆ ಹಿಡಿಯಲು ಅರ್ಹತೆ ಹೊಂದಿರುವುದು ಎಂದು ಬ್ರಿಟಿಷರು ಗೌರವಿಸಿದ ಕಾರಣ ಬ್ರಿಟಿಷರಿಗೆ ಸೌದಿ ಕುಟುಂಬದಿಂದ ಲಾಭವೂ ಆಯಿತು. ಅವರು ಭವಿಷ್ಯದಲ್ಲಿ ತೈಲ ಸಂಪನ್ಮೂಲಗಳ ಅಧಿನಾಯಕರೆಂದು ಸಾರ್ವತ್ರಿಕವಾಗಿ ಸಮರ್ಥಿಸಿಕೊಳ್ಳಲು ಸೌದಿ ಕುಟುಂಬದಿಂದ ಇನ್ನು ಮುಂದೆ ಯಾವುದೇ ಸಮಸ್ಯೆ ಉದ್ಭವವಾಗುವುದಿಲ್ಲ ಎಂಬುದನ್ನು ಬ್ರಿಟಿಷರು ಖಾತರಿಪಡಿಸಿಕೊಂಡರು. ಮತ್ತು ಅರಬ್ ಜಗತ್ತಿನ ದಕ್ಷಿಣ ಮತ್ತು ಮಧ್ಯಭಾಗದಲ್ಲಿ ಅಸ್ತಿತ್ವಕ್ಕೆ ಬಂದ ಸೌದಿ ಮನೆತನಕ್ಕೆ ಒಂದು ಅಧಿಕೃತವಾದ ಅಸ್ತಿತ್ವ ಅನನ್ಯತೆ ಬಂದು, ಅವರು ಅರಬ್ ರಾಜಕೀಯ ಚಟುವಟಿಕೆಗಳಿಂದ ಸ್ವತಂತ್ರರಾದರು. ಅದಕ್ಕೆ ಗೌರವವೂ ಕೂಡ ಅಂತಾರಾಷ್ಟ್ರೀಯವಾಗಿ ಬ್ರಿಟಿಷರ ಮೂಲಕ ದೊರೆಯಿತು.

ತನ್ನ ಶಕ್ತಿ ಪ್ರದರ್ಶನದ ಅರಂಭದ ಕಾಲದಲ್ಲಿ ಅಬ್ದುಲ್ ಅಜೀಜ್‌ಗೆ, ತಾನು ಕಟ್ಟಿದ ಸ್ವದೇಶದ ಬಗ್ಗೆ ಅತೀವ ಪ್ರೀತಿ ಇತ್ತು. ಧರ್ಮ ರಕ್ಷಣೆಯ ಬಗ್ಗೆ ಕಾಳಜಿ ಇತ್ತು ಮತ್ತು ತನ್ನ ಪ್ರಭುತ್ವವನ್ನು ಸ್ಥಾಪಿಸಲು ಸಹಕರಿಸಿದ ಬೆಂಬಲಿಗರಿಗೆ ಶಾಂತಿ ಮತ್ತು ಭದ್ರತೆಯನ್ನು ಒದಗಿಸುವುದಕ್ಕೆ ಆದ್ಯತೆ ನೀಡಿದನು. ಹಾಗಾಗಿ, ಅವನ ರಾಜತಾಂತ್ರಿಕ ಚಟುವಟಿಕೆಗಳು ಮುಖ್ಯವಾಗಿ ರಾಷ್ಟ್ರೀಯ ಅದರಲ್ಲೂ ತನ್ನ ವಂಶದ ಆಸಕ್ತಿಯನ್ನು ರಕ್ಷಿಸುವುದಕ್ಕೆ ಒತ್ತು ಕೊಡುತ್ತಿದ್ದ. ಹಷಿಮೈಟ್‌ಗಳ ವಿರುದ್ಧ ಸಾಧಿಸಿದ ಜಯದೊಂದಿಗೆ ಎರಡು ಮುಖ್ಯ ಗುರಿಗಳನ್ನು ರೂಪಿಸಿಕೊಂಡ.

೧. ತನ್ನದೇ ಅಸ್ತಿತ್ವ ಮತ್ತು ಆಧಿಪತ್ಯವನ್ನು ಅಧಿಕೃತವಾಗಿ ಇಡೀ ಅರಬ್ ಜಗತ್ತಿಗೆ ಬಹಿರಂಗಪಡಿಸುವುದು.

೨. ೧೮ನೆಯ ಮತ್ತು ೧೯ನೆಯ ಶತಮಾನ ದಲ್ಲಿ ತನ್ನ ಪೂರ್ವಜರಿಗೆ ಸೇರಿದೆ ಎನ್ನಲಾದ ಭೂಭಾಗವನ್ನು ಆಕ್ರಮಸಿ ಸೌದಿ ವಂಶದ ಪ್ರಭುತ್ವವನ್ನು ಪುನರ್ ಸಂಘಟಿಸುವುದು.

ಮೊದಲ ಉದ್ದೇಶ ಈಡೇರಿಸುವುದು ಸ್ವಲ್ಪ ಕ್ಲಿಷ್ಟವಾಗಿದ್ದರೂ, ಅದರಲ್ಲಿ ಯಶಸ್ವಿ ಯಾಗುತ್ತಾನೆ. ಅಂದರೆ, ತನ್ನದೇ ಆಧಿಪತ್ಯವನ್ನು ಮುಸ್ಲಿಂ ಜಗತ್ತಿನಲ್ಲಿ ಶ್ರುತಪಡಿಸು ವುದೆಂದರೆ, ಕೆಲವು ಸಂಪ್ರದಾಯಸ್ಥ ಪ್ರಭಾವಿ ಧಾರ್ಮಿಕ ಶಕ್ತಿಗಳನ್ನು ಎದುರಿಸಬೇಕಾಗುತ್ತದೆ. ಈಗಿದ್ದ ನಂಬಿಕೆಯಂತೆ ಅಟ್ಟೋಮನ್ ಸುಲ್ತಾನನು ಇಡೀ ಇಸ್ಲಾಮ್ ಜಗತ್ತಿಗೆ ಮುಖಂಡ. ಈಗ ಇಬ್ನಸೌದ್ ಆ ಸ್ಥಾನವನ್ನು ತುಂಬುವನೆಂದು ಆಶಯ ವ್ಯಕ್ತಪಡಿಸಿದರೆ ಸುಲ್ತಾನ ತನ್ನ ಬೆಂಬಲಿಗರೊಂದಿಗೆ ವಿರೋಧಿಸುವ ಸೂಚನೆಗಳೂ ಇದ್ದವು. ಆದರೆ, ಬ್ರಿಟಿಷರ ಜೊತೆಗೆ ಕೈಜೋಡಿಸಿ ಸುಲ್ತಾನನಿಂದ ಬರಬಹುದಾದ ಆಪತ್ತುಗಳನ್ನು ಆತ ತಪ್ಪಿಸಿಕೊಂಡನು. ಹಾಗಾಗಿ ೧೯೧೫ರ ಒಪ್ಪಂದ ಇಬ್ನಸೌದ್ ಮತ್ತು ಬ್ರಿಟಿಷರಿಬ್ಬರಿಗೂ ಅನಿವಾರ್ಯವಾಗಿತ್ತು.

ಇಬ್ನಸೌದ್ ಮತ್ತು ಶರೀಫರ ನಡುವಿನ ಪೈಪೋಟಿಯ ಕೊನೆಯ ಪ್ರದರ್ಶನ ೧೯೨೪ರಲ್ಲಿ ನಡೆಯಿತು. ಶರೀಫನು ಇದ್ದಕ್ಕಿದ್ದಂತೆ ತಾನೆಯ ಇಸ್ಲಾಮ್ ಜಗತ್ತಿಗೆ ಖಲೀಫ ಎಂದು ಘೋಷಿಸಿಕೊಂಡನು. ಇಂಥದೊಂದನ್ನು ಇಬ್ನಸೌದ್ ಮೊದಲೇ ನಿರೀಕ್ಷಿಸಿದ್ದು, ಅವನ ರಾಜಕೀಯ ಆಸಕ್ತಿಗಳನ್ನು ಬಹಿರಂಗಗೊಳಿಸಿದ ಸ್ವಘೋಷಿತ ಖಲೀಪನ ಸಾಮ್ರಾಜ್ಯ ಹಿಜಜ್ ಮೇಲೆ ಆ ತಕ್ಷಣ ಇಬ್ನಸೌದ್ ದಾಳಿ ಆರಂಭಿಸಿದ. ಇಲ್ಲಿಯವರೆಗೂ ಸೌದಿ ಹಷಿಮೈಟ್ ಎರಡೂ ವಂಶಗಳು ಟರ್ಕಿ ಸುಲ್ತಾನನ್ನು ಟೀಕಿಸಿ ಅಸಮರ್ಥ ದೊರೆ ಎಂದೂ ಕರೆಯುತ್ತಿದ್ದರು. ಆದರೆ, ಶರೀಫನು ತಾನೆ ಅನಭಿಷಿಕ್ತ ದೊರೆ ಎಂದೂ ಮುಂದಿನ ದಿನಗಳಲ್ಲಿ ಇಸ್ಲಾಂ ಜಗತ್ತಿನ ಖಲೀಫ ಎಂದು ಘೋಷಿಸಿದ್ದ ಕಾರಣ ಇಬ್ನಸೌದನ ದಂಡಯಾತ್ರೆ ಆರಂಭವಾಯಿತು. ಈ ದಂಡಯಾತ್ರೆಯಲ್ಲಿ ಹಷಿಮೈಟರ ಅಧೀನಕ್ಕೆ ಒಳಪಟ್ಟ ಹಾಗೂ ಇಸ್ಲಾಂ ಧರ್ಮಕ್ಕೆ ಪವಿತ್ರ ಕೇಂದ್ರಗಳಾದ ಮಕ್ಕಾ ಮತ್ತು ಮದೀನಾ ನಗರಗಳನ್ನು ಸೌದಿ ವಂಶ ಆಕ್ರಮಿಸಿಕೊಂಡಿತು.

ಎರಡೂ ಉದ್ದೇಶಗಳನ್ನು ಈಡೇರಿಸಿದ ನಂತರ ಅಬ್ದುಲ್ ಅಜೀಜ್ ಇಬ್ನಸೌದನು ತನ್ನ ಸಾಮ್ರಾಜ್ಯದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವತ್ತ ಗಮನ ನೀಡುತ್ತಾನೆ. ಇಲ್ಲಿ ನಾಲ್ಕು ಉದ್ದೇಶಗಳನ್ನು ಅವನು ಹೊಂದಿದ್ದನು.

೧. ಯುರೋಪಿನ ವಸಾಹತುಶಾಹಿ ರಾಷ್ಟ್ರಗಳಿಂದ ತನ್ನ ಇರುವಿಕೆಯನ್ನು ಗುರುತಿಸಿಕೊಂಡು, ಗೌರವಿಸಿಕೊಳ್ಳುವುದು. ಇದು ಅವನಿಗೆ ಮುಖ್ಯವಾಗುತ್ತದೆ ಏಕೆಂದರೆ, ಶರೀಫ ಹುಸೇನನು ತನ್ನಿಂದ ಅನುಭವಿಸಿದ ಅವಮಾನಕ್ಕೆ ಇವರ ದೇಶದ ನೆರೆಯಲ್ಲಿರುವ, ಆದರೆ, ಹಷಿಮೈಟು ವಂಶಕ್ಕೆ ಸೇರಿದ ಜೋರ್ಡಾನ್ ಮತ್ತು ಇರಾಕ್ ಅರಸರು ಪ್ರತೀಕಾರ ತೆಗೆದುಕೊಳ್ಳಬಹುದೆಂಬ ಭಯವು ಇತ್ತು. ಅದರಲ್ಲೂ ಮಕ್ಕಾ ಮತ್ತು ಮದೀನಾವನ್ನು ಸೌದಿ ವಂಶ ಬಲತ್ಕಾರದಿಂದಲೇ ಹಷಿಮೈಟು ವಂಶದಿಂದ ಕಸಿದುಕೊಂಡಿರುವುದು. ಈ ನಿಟ್ಟಿನಲ್ಲಿ ೧೯೨೬ರಲ್ಲಿ ಸೋವಿಯತ್ ಒಕ್ಕೂಟ, ಸೌದಿ ವಂಶದ ಸ್ವತಂತ್ರ ಇರುವಿಕೆಯನ್ನು ಒಪ್ಪಿಕೊಂಡಿತು. ಅದಕ್ಕಿಂತಲೂ ಮುಖ್ಯವಾದುದು. ೧೯೨೭ರ ಅಂಗ್ಲೋ ಜೆಡ್ಡಾ ಒಪ್ಪಂದ. ೧೯೧೫ರ ಒಪ್ಪಂದಕ್ಕಿಂತಲೂ ಇದು ಭಿನ್ನವಾಗಿದ್ದು. ೧೯೨೭ರ ಒಪ್ಪಂದದಲ್ಲಿ ಬ್ರಿಟಿಷರು ಸೌದಿ ರಾಜ್ಯದ ಸಂಪೂರ್ಣ ಸ್ವಾತಂತ್ರ್ಯವನ್ನು, ಅಬ್ದುಲ್ ಅಜೀಜ್ ಅಧೀನಕ್ಕೆ ಒಳಪಟ್ಟ ಪ್ರದೇಶದಲ್ಲಿ ಅವನ ಪ್ರಭುತ್ವವನ್ನು ಒಪ್ಪಿಕೊಂಡರು.

೨. ೧೯೨೬ರಲ್ಲಿ ಮುಸ್ಲಿಂ ಜಗತ್ತಿನ ಸಮ್ಮೇಳನವನ್ನು ಅಯೋಜಿಸಿ, ಎಲ್ಲ ಅರಬ್ ರಾಷ್ಟ್ರಗಳ ನಿರ್ಲಿಪ್ತತೆಯನ್ನು ಸ್ಪಷ್ಟಪಡಿಸಿಕೊಳ್ಳುವಂತದ್ದು. ಅಲ್ಲದೆ, ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಿದ ಎಲ್ಲ ರಾಷ್ಟ್ರಗಳಿಂದ, ಸೌದಿ ವಂಶವು ಹಷಿಮೈಟು ಪ್ರದೇಶದ ಮೇಲೆ ಸಾಧಿಸಿದ ನಿಯಂತ್ರಣಕ್ಕೆ ಅವರ ಒಪ್ಪಿಗೆ ಪಡೆಯುವುದು ಈ ಸಮ್ಮೇಳನದ ವಾಸ್ತವ ಗುಟ್ಟು.

೩. ಅರಬ್ ರಾಜ್ಯಗಳು ತನ್ನೊಂದಿಗೆ ಅರಬ್ ಜಗತ್ತಿನ ಅಧಿಪತ್ಯಕ್ಕಾಗಿ ಸ್ಪರ್ಧೆಗಿಳಿಯದೇ, ಸೌದಿ ವಂಶದ ಪ್ರಭಾವವನ್ನು ಒಪ್ಪಿಕೊಳ್ಳಲು ವಾತಾವರಣ ಸೃಷ್ಟಿ ಮಾಡುವುದು. ಏಕೆಂದರೆ, ಸೌದಿ ವಂಶದ ಹಾಗೆ ಈಜಿಪ್ಟ್‌ನ ಅರಸ ಫಾರುಕ್‌ನು ಇಂತದ್ದೊಂದು ಪ್ರಯತ್ನದಲ್ಲಿರುವುದು ಸೌದಿಯವರ ಗಮನಕ್ಕೆ ಬಂದಿತ್ತು. ಹಾಗಾಗಿ, ಎಲ್ಲ ಅರಬ್ಬರಿಂದ ತಾನೆಯ ಇಸ್ಲಾಂ ಜಗತ್ತಿಗೆ ಮುಖಂಡ ಎಂದು ಶಹಬಾಸ್ ಗಿರಿ ಮಾಡಿಸಿಕೊಳ್ಳಬೇಕೆಂಬ ದೂರಾಲೋಚನೆ. ಇಲ್ಲಿಯೂ ಕೂಡಾ ಅವನಿಗಿರುವುದು ರಾಜಕೀಯ ಉದ್ದೇಶ. ಒಂದು ವೇಳೆ ಇನ್ನೊಂದು ಪ್ರಭುತ್ವ ಪ್ರಭಾವ ಶಾಲಿಯಾದರೆ, ತನ್ನ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆ ಬರಬಹುದೆಂಬ ಅನುಮಾನ ಕೂಡ ಇತ್ತು.

೪. ಕೊನೆಯದಾಗಿ, ಸಾಮ್ರಾಜ್ಯದ ರಾಜಕೀಯ ಸ್ವಾತಂತ್ರ್ಯವನ್ನು ರಕ್ಷಿಸಿ ತನ್ನ ರಾಜ್ಯದ ರಾಜತಾಂತ್ರಿಕ ಸಂಬಂಧಗಳನ್ನು ಸಮಕಾಲೀನ ಬಂಡವಾಳಶಾಹಿ ರಾಷ್ಟ್ರಗಳೊಂದಿಗೆ ವೃದ್ದಿಸಿಕೊಳ್ಳುವುದು.

ಈಗಾಗಲೇ ಬ್ರಿಟನ್ ಜೊತೆಗೆ ಸೌದಿ ಅರೇಬಿಯಾ ಸ್ನೇಹ ಬೆಳೆಸಿದ್ದರೂ, ಎಷ್ಟು ಸಾಧ್ಯವಾಗುತ್ತದೆ. ಅಷ್ಟು ದೇಶಗಳೊಂದಿಗೆ ಸಂಬಂಧ ಬೆಳೆಸಿಕೊಳ್ಳಬೇಕೆಂಬ ಕನಸು. ಇದಕ್ಕೆ ಮೂರು ಕಾರಣಗಳು ಇದ್ದವು. ಒಂದನೆಯವಾಗಿ, ಇಡೀ ಅರಬ್ ಜಗತ್ತಿನಲ್ಲಿ ಸೌದಿ ವಂಶವು ಮೊದಲ ಸ್ವತಂತ್ರ ರಾಜ್ಯವಾಗಿ ಹುಟ್ಟಿರು ವುದರಿಂದ, ಆರ್ಥಿಕವಾಗಿ ದುರ್ಬಲವಾಗಿತ್ತು. ೧೯೧೫ರಿಂದ ಬ್ರಿಟಿಷರು ಕೊಡುತ್ತಿದ್ದ ಸಬ್ಸಿಡಿಯನ್ನು ನಿಲ್ಲಿಸಿದ್ದರು. ಇನ್ನೊಂದು ಮುಖ್ಯವಾದ ಆದಾಯ ಪ್ರತಿವರ್ಷ ಹಜ್ ಯಾತ್ರೆಗೆ ಬರುವ ಯಾತ್ರಿಕರಿಂದ ವಸೂಲಿ ಮಾಡುವ ಕಂದಾಯ. ಆದರೆ, ೧೯೨೯ರಲ್ಲಿ ಜಾಗತಿಕ ಮಟ್ಟದಲ್ಲಿ ಡಿಪ್ರೆಶನ್ ಸಂಭವಿಸಿರುವುದರಿಂದ, ಹಜ್ಜ್ ಯಾತ್ರೆಗೆ ಬರುವವರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಎರಡನೆಯದು, ಇಟೆಲಿ ಯಮಾನ್ ಜೊತೆ ಒಪ್ಪಂದ ಮಾಡಿಕೊಂಡು ನಂತರ ಹತ್ತಿರದ ಇತಿಯೋಪಿಯಾದ ಮೇಲೆ ದಾಳಿ ಮಾಡಿತ್ತು. ಮೂರನೆಯದಾಗಿ, ಅವನಿಗೆ ಬ್ರಿಟಿಷ ರೊಂದಿಗಿನ ಸಂಬಂಧದ ಬಗ್ಗೆ ಅನುಮಾನವಿತ್ತು. ಅವರ ಸಹಕಾರವನ್ನು ಅವಲಂಬಿಸಿ ಇರಾಕ್, ಪ್ಯಾಲೆಸ್ತೀನ್, ಜೋರ್ಡಾನ್ ಮತ್ತು ಗಲ್ಫ್‌ನಲ್ಲಿರುವ ಹಷಿಮೈಟು ಅರಬ್‌ರ ವಿರೋಧವನ್ನು ಸದೆ ಬಡೆದಿದ್ದರು. ಆದರೆ, ಪ್ಯಾಲೆಸ್ತೀನ್ ಪ್ರಶ್ನೆ ಬಂದಾಗ ಸೌದಿ ಅರಸ ಹೆಚ್ಚು ಅರಬರ ಪರವಾಗಿಯೇ ಇರಬೇಕಾಗು ತ್ತದೆ. ಅಂದರೆ, ಪ್ಯಾಲೆಸ್ತೀನ್ ಬ್ರಿಟಿಷರ ಮ್ಯಾಂಡೇಟರಿ ಆಗಿದ್ದು ಅವರೊಂದಿಗೆ ಸ್ನೇಹ ದಿಂದಿದ್ದರೂ, ಅರಬ್‌ರ ಆಸಕ್ತಿಗಳಿಗೆ ತಾನೇ ಚಾಂಪಿಯನ್ ಎಂದು ಹೇಳಿಕೊಳ್ಳಲು, ಪ್ಯಾಲೇಸ್ತಿನಿಯರಿಗೆ ಬೆಂಬಲ ವ್ಯಕ್ತಪಡಿಸಲೇ ಬೇಕಾದ ಅನಿವಾರ್ಯ ಸೌದಿ ವಂಶದವರಿಗಿತ್ತು. ಎಲ್ಲಿ ಯಾದರೂ ಇದು ಬ್ರಿಟಿಷರಿಗೆ ನೋವನ್ನುಂಟು ಮಾಡಿ, ಸೌದಿಯೊಂದಿಗಿನ ಸಂಬಂಧ ಕಡಿದು ಹೋದರೆ, ತಮ್ಮ ರಕ್ಷಣೆಗಾಗಿ ಬೇರೆ ವಸಾಹತುಶಾಹಿ ರಾಷ್ಟ್ರಗಳೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಳ್ಳಬೇಕೆಂಬ ಹಂಬಲ.

ಅಬ್ದುಲ್ ಅಜೀಜ್ ಇಬ್ನಸೌದನು ಹಾಕಿಕೊಂಡ ಯೋಜನೆ ಅಷ್ಟೊಂದು ಸುಗಮ ವಾಗಿರಲಿಲ್ಲ. ಅವನ ಮುಂದಿರುವ ಬಂಡವಾಳಶಾಹಿ ರಾಷ್ಟ್ರಗಳು ಬ್ರಿಟನ್, ಫ್ರಾನ್ಸ್, ಸೋವಿಯತ್ ಒಕ್ಕೂಟ ಮತ್ತು ಅಮೆರಿಕ. ಈ ನಾಲ್ಕು ರಾಷ್ಟ್ರಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡು ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಯಾರು ಹೆಚ್ಚು ತನಗೆ ಸೂಕ್ತ ಎಂಬುದು ಮುಖ್ಯವಾಗುತ್ತದೆ. ಅವನು ಇಡೀ ಅರಬ್ ಜಗತ್ತಿನಲ್ಲಿ ತಾನೆಯ ಸಾರ್ವ ಭೌಮ/ಸ್ಥಳೀಯ ರಾಜಕೀಯದಲ್ಲಿ ಮಹಾನ್ ಶಕ್ತಿ ಎಂದು ಗುರುತಿಸಿಕೊಳ್ಳಬೇಕಾಗಿದೆ. ಈ ದೃಷ್ಟಿಯಿಂದ ಫ್ರೆಂಚ್ ಮತ್ತು ಬ್ರಿಟಿಷರನ್ನು ಹೆಚ್ಚು ಹತ್ತಿರ ಸೇರಿಸಿಕೊಳ್ಳುವುದು ತಪ್ಪಾಗುತ್ತದೆ. ಏಕೆಂದರೆ, ಈ ಎರಡು ವಸಾಹತುಶಾಹಿ ರಾಷ್ಟ್ರಗಳ ವಿರುದ್ಧ ಅರಬರು ಸಾರ್ವತ್ರಿಕವಾಗಿ ರಾಷ್ಟ್ರೀಯ ಅಂದೋಲನವನ್ನೇ ಅರಂಭಿಸಿದ್ದಾರೆ. ಮುಖ್ಯವಾಗಿ, ೧೯೧೫ರ ಮೆಕ್ ಮೋಹನ್ ಸಂವಾದದಲ್ಲಿ ಆಶ್ವಾಸನೆ ನೀಡಿದಂತೆ ಬ್ರಿಟಿಷರು ನಡೆದು ಕೊಂಡಿಲ್ಲ. ಅದರ ಪ್ರಕಾರ ಒಕ್ಕೂಟ(ಬ್ರಿಟಿಷರಿರುವ) ಗುಂಪಿನೊಂದಿಗೆ ಜಾಗತಿಕ ಯುದ್ಧ ದಲ್ಲಿ ಭಾಗವಹಿಸಿ, ಟರ್ಕಿ ಸುಲ್ತಾನ ಮತು ಜರ್ಮನಿ ವಿರುದ್ಧ ಯುದ್ಧ ಘೋಷಿಸಿ ದರೆ, ಯುದ್ಧ ಮುಗಿದ ನಂತರ ಅವರಿಗೆ ಸ್ವತಂತ್ರ ರಾಷ್ಟ್ರವನ್ನು ಬಿಟ್ಟುಕೊಡಲಾಗುವುದು ಎಂದು ಬ್ರಿಟಿಷರು ಆಶ್ವಾಸನೆ ನೀಡಿದ್ದರು.

ಆದರೆ, ಬ್ರಿಟಿಷರು ಅದನ್ನು ಅನುಷ್ಠಾನಕ್ಕೆ ತರದೇ ಲೀಗ್ ಆಫ್ ನೇಷನ್ಸ್‌ನ ಅನುಮತಿಯೊಂದಿಗೆ ಸೌದಿ ಅರೆಬಿಯಾ ಬಿಟ್ಟು ಇನ್ನುಳಿದ ಅರಬ್ ಪ್ರಾಂತಗಳ ಮೇಲೆ ಫ್ರೆಂಚ್ ಮತ್ತು ಬ್ರಿಟಿಷರು ಮ್ಯಾಂಡೇಟರಿ ಆಡಳಿತವನ್ನು ಹೇರಿದರು. ಇದು ಅರಬ್‌ರ ಆಸಕ್ತಿಗಳಿಗೆ ವಿರುದ್ಧವಾದ ನಿರ್ಧಾರ. ಇನ್ನೊಂದು ಮುಖ್ಯವಾದ ಘಟನೆ ಏನೆಂದರೆ, ಪ್ಯಾಲೇಸ್ತಿನ್ ಪ್ರಶ್ನೆ. ಒಪ್ಪಂದದ ಪ್ರಕಾರ ಪ್ಯಾಲೇಸ್ತೀನ್, ಪ್ಯಾಲೇಸ್ತೀನಿ ಅರಬರ ಸ್ವತಂತ್ರ ರಾಷ್ಟ್ರವಾಗಿ ಮೊದಲ ಜಾಗತಿಕ ಯುದ್ಧವಾದ ನಂತರ ಬ್ರಿಟಿಷರು ಘೋಷಿಸಬೇಕಿತ್ತು. ಆದರೆ, ಅದನ್ನು ಮಾಡದೆ ಮ್ಯಾಂಡೇಟರಿ ಆಡಳಿತವನ್ನು ಹೇರಿದ್ದೂ, ಯಹೂದಿಗಳಿಗೆ ವಸಾಹತೀಕರಣ ಮಾಡಲು ಬ್ರಿಟಿಷರು ಅನುಮತಿ ಕೊಟ್ಟರು. ಇದು ಎಲ್ಲ ಅರಬರನ್ನು ಬ್ರಿಟಿಷರ ವಿರುದ್ಧ ಆಂದೋಲನ ಮಾಡಲು ಪ್ರಚೋದಿಸಿತು.

ಸೌದಿ ವಂಶಕ್ಕೆ ತಾವು ಅರಬ್ ಜಗತ್ತಿನ ಅಧಿಪತಿ ಎಂದು ಸಮರ್ಥಿಸಿಕೊಳ್ಳುವಾಗ, ಅರಬ್ ಜಗತ್ತಿಗೆ ಬಂದ ಆಪತ್ತನ್ನು ಹೋಗಲಾಡಿಸಲೇ ಬೇಕಾದ ಒಂದು ಅನಿವಾರ್ಯತೆಯು ಇದೆ. ಇನ್ನೊಂದು, ಎಲ್ಲ ಅರಬರು ತನ್ನ ರಾಜ್ಯವನ್ನು ಗೌರವದಿಂದ ನೋಡಬೇಕೆಂದು ನಿರೀಕ್ಷಿಸುವಾಗ ಅವರ ಸಮಸ್ಯೆಗೆ ಕಾರಣರಾದ ಬ್ರಿಟಿಷರೊಂದಿಗೆ ಫ್ರೆಂಚರೊಂದಿಗೆ ಸ್ನೇಹದಿಂದ ಇದ್ದರೆ, ಬರುವ ಗೌರವವು ಸಿಗುವುದಿಲ್ಲ ಎಂಬ ನಂಬಿಕೆಯಿಂದ ಫ್ರೆಂಚ್/ಬ್ರಿಟಿಷ್ ಸಂಬಂಧವನ್ನು ಅವಲಂಬಿಸಿರುವುದನ್ನು ತ್ಯಜಿಸಲಾಯಿತು.

ಹಾಗೆಯೇ ಫ್ರೆಂಚರು ಮತ್ತು ಬ್ರಿಟಿಷರು ಬಂಡವಾಳಶಾಹಿ ರಾಷ್ಟ್ರಗಳಾಗಿರುವುದರಿಂದ ಅವರು ಅರಬರ ಶ್ರೀಮಂತ ಪ್ರಾಂತಗಳನ್ನು ಆಕ್ರಮಿಸಿ ಆರ್ಥಿಕವಾಗಿ ಸಂಪತ್ತು ದೋಚು ವಿಕೆಯಲ್ಲಿ ತಲ್ಲೀನರಾಗಿದ್ದರು. ಹಾಗಾಗಿ, ಪ್ರಾದೇಶಿಕ ಜನರ ಹಿತಾಸಕ್ತಿ ರಕ್ಷಣೆ ಈ ಎರಡು ಬಂಡವಾಳಶಾಹಿ ರಾಷ್ಟ್ರಗಳಿಗೆ ಇದ್ದಿರಲಿಲ್ಲ. ಅಂತಹ ರಾಷ್ಟ್ರಗಳೊಂದಿಗೆ ಸಂಬಂಧ ಬೆಳೆಸಿದರೆ ತಮ್ಮ ಅಸ್ತಿತ್ವಕ್ಕೆ ತನ್ನವರಿಂದಲೇ ಆತಂಕ ತಪ್ಪಿದಲ್ಲ ಎಂಬ ಅರಿವು ಉಂಟಾಯಿತು.

ಸಮಾಜವಾದಿ ಸರಕಾರ ರಚಿಸಿದ ಸೋವಿಯತ್ ಒಕ್ಕೂಟ ೧೯೧೭ರ ಕ್ರಾಂತಿ ನಂತರ ಹೊಸ ಧೋರಣೆಯನ್ನು ಪಾಲಿಸುತ್ತಿದೆ. ಹಿಂದಿನ ಜರ್ ಸರಕಾರದ ವಿದೇಶಾಂಗ ನೀತಿಯನ್ನು ಖಂಡಿಸಿ, ಅಂತಹ ಸಾಮ್ರಾಜ್ಯಶಾಹಿ ಪ್ರಭುತ್ವವನ್ನು ಎಲ್ಲಿಯೂ ಸ್ಥಾಪಿಸುವುದಿಲ್ಲ ವೆಂದು, ಸೋವಿಯತ್ ಸರಕಾರದ ಮುಖ್ಯ ಉದ್ದೇಶ. ವಸಾಹತು ರಾಷ್ಟ್ರಗಳ ವಿರುದ್ದ ಹೋರಾಟ ನಡೆಸುವ ಎಲ್ಲ ಸಮುದಾಯಕ್ಕೂ ಆರ್ಥಿಕ, ರಾಜಕೀಯ ಮತ್ತು ಸೈನಿಕ ಬೆಂಬಲ ನೀಡುವುದು ಎಂದು ಘೋಷಿಸಿತು. ಇದರಿಂದ, ಸೋವಿಯತ್ ಒಕ್ಕೂಟಕ್ಕೆ ಯಾವುದೇ ಪ್ರಾಂತೀಯ, ಆರ್ಥಿಕ ಆಸಕ್ತಿಗಳಿಲ್ಲದಿರುವುದು ಸೌದಿ ಸರಕಾರವನ್ನು ಆಕರ್ಷಿಸುತ್ತದೆ. ಎರಡನೆಯದು, ಆ ದೇಶದೊಂದಿಗೆ ಒಡಂಬಡಿಕೆ ಮಾಡಿಕೊಂಡು ಸ್ನೇಹ ದಿಂದ ಆ ದೇಶದಲ್ಲಿರುವ ಮುಸ್ಲಿಂ ಬಾಂಧವರನ್ನು ಹಜ್ ಯಾತ್ರೆಯಲ್ಲಿ ಭಾಗವಹಿಸಲು ಪ್ರೋ ನೀಡುವುದು. ಹಾಗೆ ಮಾಡಿದಾಗ ಸೌದಿಯ ವಾರ್ಷಿಕ ಆದಾಯದಲ್ಲಿ ಹೆಚ್ಚಳವಾಗುವುದು.

ಇನ್ನು ಅಮೆರಿಕ, ಅರಬ್ ರಾಷ್ಟ್ರಗಳಿಗೆ ಹೊಸ ಪರಿಚಯವಾಗಿದ್ದು ಜಾಗತಿಕ ಯುದ್ಧದ ಸಂದರ್ಭದಲ್ಲಿಯೇ ಮಧ್ಯ ಪ್ರಾಚ್ಯ ಪ್ರದೇಶದ ರಾಜಕೀದಲ್ಲಿ ಪರೋಕ್ಷವಾಗಿ ಪಾಲ್ಗೊಂಡಿತ್ತು. ತಮ್ಮ ವಸಹಾತುಶಾಹಿ ಆಸಕ್ತಿಗಳನ್ನು ವೃದ್ದಿಸಲು ಸ್ನೇಹಿತರನ್ನು ಹುಡುಕುತ್ತ ಇರುವಾಗ ಸೌದಿ ಅರೇಬಿಯಾದಲ್ಲಿ ಇರುವ ಯಥೇಚ್ಚ ತೈಲ ಸಂಪತ್ತು ಅಮೆರಿಕವನ್ನು ಆಕರ್ಷಿಸಿತು. ಲೆಕ್ಕಾಚಾರದ ಪ್ರಕಾರ ಸೌದಿ ಅರೇಬಿಯಾದ ಈ ನೈಸರ್ಗಿಕ ಸಂಪತ್ತನ್ನು ಯಾರೂ ದೋಚಲು ಆರಂಭಿಸಿಲ್ಲ. ಆ ಅವಕಾಶವನ್ನು ಸೌದಿ ಅರಸ ಇಬ್ನಸೌದನಿಂದ ಪಡೆದರೆ, ಮಧ್ಯ ಪ್ರಾಚ್ಯ ಪ್ರದೇಶದಲ್ಲಿ ಅಮೆರಿಕದ ವಸಾಹತುಶಾಹಿ ಪ್ರಭುತ್ವವನ್ನು ಸ್ಥಾಪಿಸಲು ಸ್ನೇಹ ರಾಷ್ಟ್ರವು ದೊರೆಯುವುದು ಖಂಡಿತ. ಅವರ ಲೆಕ್ಕಾಚಾರಕ್ಕೆ ಸೌದಿ ಅರೇಬಿಯಾದಲ್ಲಿ ಸಕಾರಾತ್ಮಕ ವಾತಾವರಣವೂ ಕಂಡುಬಂದಿತ್ತು. ಸೌದಿ ಅರಸ ತಾನು ಹೊಸದಾಗಿ ಭದ್ರಗೊಳಿಸಿದ ಸಾಮ್ರಾಜ್ಯದ ಸ್ವಾತಂತ್ರವನ್ನು ಉಳಿಸಿಕೊಳ್ಳಲು ಆರ್ಥಿಕ ಸಂಪನ್ಮೂಲಗಳ ಕೊರತೆಯನ್ನು ಎದುರಿಸುತ್ತಿದ್ದ. ಇನ್ನೊಂದು, ಸೌದಿ ಅರಸ ಬಂಡವಾಳಶಾಹಿ ರಾಷ್ಟ್ರಗಳೊಂದಿಗೆ ಸಂಬಂಧ ಬೆಳೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಳ್ಳುವ ಬಯಕೆ ಅವನಿಗೆ ಅತೀವವಾಗೇ ಇತ್ತು. ಇದಕ್ಕೆ ಆತ ಅಮೆರಿಕದವರು ಉತ್ತಮ ಸ್ನೇಹರಾಷ್ಟ್ರವೆಂದು ಪರಿಗಣಿಸುತ್ತಾನೆ. ಏಕೆಂದರೆ, ಬ್ರಿಟಿಷರಿಗೆ ಮತ್ತು ಫ್ರೆಂಚರಿಗೆ ಹೋಲಿಸಿದರೆ ಅಮೆರಿಕಾದವರು ಪ್ರಾಂತೀಯ ಆಸಕ್ತಿಗಳನ್ನೇನು ನೆಯರವಾಗಿ ಪ್ರಸ್ತಾಪಿಸಲಿಲ್ಲ. ಅಲ್ಲದೇ ಅರಬ್ ರಾಷ್ಟ್ರದಲ್ಲಿರುವ ಸಂಪತ್ತನ್ನು ಏಕಪಕ್ಷೀಯವಾಗಿ ಸೂರೆ ಮಾಡುವ ಆಸಕ್ತಿಯನ್ನು ಅವರು ಬಹಿರಂಗಪಡಿಸಿರಲಿಲ್ಲ. ಮೂರನೆಯದಾಗಿ, ಅಮೆರಿಕದ ತೈಲ ಕಂಪೆನಿಗಳು, ತೈಲ ಉತ್ಪಾದನೆಯ ಹಕ್ಕನ್ನು ಅಮೆರಿಕಕ್ಕೆ ನೀಡಿದರೆ, ಸರಾಸರಿ ೫೦ ಶೇಕಡಾ ತೈಲ ರಾಯಲ್ಟಿಯನ್ನು ಸೌದಿ ಸರಕಾರಕ್ಕೆ ಕೊಡುವುದಾಗಿಯೂ ಆಶ್ವಾಸನೆ ಕೊಡುತ್ತವೆ. ಇದು ಬ್ರಿಟಿಷರು ಇತರ ಅರಬ್ ರಾಜರಿಗೆ ಕೊಡುವ ತೈಲ ರಾಯಲ್ಟಿಯಾದ ಎರಡಕ್ಕಿಂತ ಎಷ್ಟೋ ಪಟ್ಟು ಹೆಚ್ಚು. ಇದನ್ನು ಗಮನಿಸಿದ ಸೌದಿ ಅರೇಬಿಯಾ ೧೯೩೨ರಲ್ಲಿ ತೈಲ ಮಾರುಕಟ್ಟೆಗೆ ಪ್ರವೇಶ ಮಾಡಿತ್ತು. ಅಮೆರಿಕದ ಮುಂದಾಳತ್ವದಲ್ಲಿ ರಚನೆಯಾದ ಅರೇಬಿಯನ್ ಅಮೆರಿಕನ್ ಆಯಿಲ್ ಕಂಪೆನಿ  ೧೯೩೨ರಲ್ಲಿ ತೈಲ ಅನ್ವೇಷಣೆ, ಉತ್ಪಾದನೆ, ರಪ್ತು ಮತ್ತು ಮಾರಾಟದ ಹಕ್ಕನ್ನು ಪಡೆಯಿತು. ಇದು  ೧೯೩೫ರಿಂದ ತನ್ನ ವ್ಯವಹಾರವನ್ನು ಸೌದಿ ಅರೇಬಿಯಾದಲ್ಲಿ ಆರಂಭ ಮಾಡಿತು.

ಹೀಗೆ ಆರಂಭವಾದ ಅಮೆರಿಕದ ಸಾಮ್ರಾಜ್ಯಶಾಹಿ ಧೋರಣೆ ಸೌದಿ ಅರೇಬಿಯಾದಲ್ಲಿ ಕೇವಲ ತೈಲ ಸಂಪತ್ತಿಗೆ ಮಾತ್ರ ಸೀಮಿತವಾಗಿರಲಿಲ್ಲ. ಸೌದಿಗಳ ದೌರ್ಬಲ್ಯಗಳನ್ನು ಕೂಲಂಕಷವಾಗಿ ಅಭ್ಯಸಿಸಿದ ಅಮೆರಿಕದ ಸಾಮ್ರಾಜ್ಯಶಾಹಿ ಅಧಿಕಾರಿಗಳು ಇಡೀ ಮಧ್ಯ ಪ್ರಾಚ್ಯ ಪ್ರದೇಶದಲ್ಲಿ ತಮ್ಮದೇ ನಿಯಂತ್ರಣವನ್ನು ಸಾಧಿಸಲು ಸೌದಿ ಅರೇಬಿಯಾವನ್ನೇ ವೇದಿಕೆಯನ್ನಾಗಿ ಪರಿವರ್ತಿಸಿಕೊಳ್ಳಲು ಯಶಸ್ವಿಯಾದರು. ಇದು ಅಮೆರಿಕಾದ ಸಾಮ್ರಾಜ್ಯ ಶಾಹಿ ಆಧಿಪತ್ಯದ ಆರಂಭವಷ್ಟೆ.

೧೯೨೬ರಿಂದ ಎರಡನೆಯ ಮಹಾಯುದ್ಧ ಆರಂಭವಾಗುವವರೆಗೆ, ಸೌದಿ ರಾಜ ಇಬ್ನಸೌದ್ ವಿಶೇಷವಾಗಿ ತನ್ನ ವಶಕ್ಕೆ ಸೇರಲ್ಪಟ್ಟ ಭೂಭಾಗ ಮತ್ತು ಆ ಭಾಗದಲ್ಲಿರುವ ಪ್ರಜೆಗಳ ಮೇಲೆ ನಿಯಂತ್ರಣವನ್ನು ಹೇರಲು ಹೆಚ್ಚು ಒತ್ತು ಕೊಟ್ಟನು. ಹೊಸದಾಗಿ ರಚಿಸಿದ ತನ್ನ ಸಾಮ್ರಾಜ್ಯದ ಸ್ವಾತಂತ್ರ್ಯ ಕಾಪಾಡಲು ಅವನಿಗೆ ಈ ವಿಚಾರ ಮುಖ್ಯವಾಗು ತ್ತದೆ. ಈ ಕಾಲಘಟ್ಟದ ಮುಖ್ಯ ಅಂಶವೇನೆಂದರೆ, ಆರಂಭದ ದಿನಗಳಲ್ಲಿ ಸೌದಿ ಸರಕಾರ ವಿದೇಶಾಂಗ ನೀತಿ ರಚಿಸುವಾಗ ಇಸ್ಲಾಂ ಧರ್ಮ ಯಾವುದೇ ಕಾರಣಕ್ಕೂ ಪ್ರವೇಶ ಮಾಡುವುದಿಲ್ಲ. ಹಾಗೆಯೇ, ಸೌದಿಗಳಿಗೆ ನಾಸ್ತಿಕರಾದ ಅಮೆರಿಕ ಮತ್ತು ಸೋವಿಯತ್ ಒಕ್ಕೂಟದೊಂದಿಗೆ ಸ್ನೇಹ ಸಂಬಂಧ ಏರ್ಪಡಿಸಲು ಧರ್ಮ ಎಲ್ಲಿಯೂ ಆಡಚಣೆ ಉಂಟು ಮಾಡಿರಲಿಲ್ಲ.

೧೮೩೨-೫೩ರ ನಡುವಿನ ವರ್ಷಗಳಲ್ಲಿ ಅರಬ್ ಜಗತ್ತು ಹಲವು ಬದಲಾವಣೆಗಳನ್ನು ಕಂಡಿತು. ರಾಜಕೀಯವಾಗಿ ಅನೆಯಕ ಅರಬ್ ಪ್ರದೇಶಗಳು ವಸಾಹತುಶಾಹಿ ಪ್ರಭುತ್ವದ ನಿಯಂತ್ರಣದಿಂದ ಬಿಡುಗಡೆಗೊಂಡು, ಸ್ವತಂತ್ರ ರಾಷ್ಟ್ರಗಳಾಗಿ ಉಗಮವಾದವು. ೧೯೩೮ ರಲ್ಲಿ ಇರಾಕ್ ಬ್ರಿಟಿಷರ ಮ್ಯಾಂಡೇಟರಿ ಆಡಳಿತದಿಂದ ವಿಮುಕ್ತಿ ಪಡೆಯಿತು. ಸಿರಿಯಾ, ಫ್ರೆಂಚರ ಅಧೀನದಿಂದ ಪ್ರತ್ಯೇಕಗೊಂಡಿತು. ಈಜಿಪ್ಟ್ ಕೂಡ ಬ್ರಿಟಿಷರ ನಿಯಂತ್ರಣದಿಂದ ಸ್ವತಂತ್ರಗೊಂಡಿತು. ೧೯೩೨ರಲ್ಲಿ ಸೌದಿ ಅರೇಬಿಯಾ ಅಧಿಕೃತವಾಗಿ ಸ್ವಾತಂತ್ರ ರಾಷ್ಟ್ರ ವೆಂದು ಘೋಷಿಸಿಕೊಂಡಿತು. ಈ ನಾಲ್ಕು ರಾಷ್ಟ್ರಗಳು ನಿಧಾನವಾಗಿ ಪ್ಯಾಲೇಸ್ತೀನಿ ಅರಬ್‌ರ ಹೋರಾಟದ ಮುಖಂಡತ್ವವನ್ನು ವಹಿಸಿಕೊಳ್ಳಲು ಪರಸ್ಪರ ಪೈಪೋಟಿಗಿಳಿದವು. ಆರಂಭದಲ್ಲಿ ಈ ದೇಶಗಳು ಅರಸೊತ್ತಿಗೆ ಸರಕಾರವನ್ನು ಹೊಂದಿದ್ದು, ೧೯೩೦ರ ಮತ್ತು ೪೦ ದಶಕಗಳಲ್ಲಿ ರಾಜಕೀಯವಾಗಿ ಪರಿವರ್ತನೆಗೊಂಡು ಸಮಾಜವಾದಿ ರಿಪಬ್ಲಿಕ್ ಸರಕಾರಗಳನ್ನು ರಚಿಸಿಕೊಂಡವು. ಸೌದಿ ಸಾಮ್ರಾಜ್ಯದಲ್ಲಿ ಮಾತ್ರ ಅರಸೊತ್ತಿಗೆ ಗಟ್ಟಿಯಾಗುತ್ತಾ ಮುಂದುವರಿಯಿತು. ಇದಕ್ಕೆ ವಿರುದ್ಧವಾಗಿ, ಸಿರಿಯಾ, ಇರಾಕ್, ಮತ್ತು ಈಜಿಪ್ಟ್ ದೇಶಗಳಲ್ಲಿ ರಾಷ್ಟ್ರೀಯ ಮಟ್ಟದ ಕ್ರಾಂತಿಯಲ್ಲಿ ಅಲ್ಲಿನ ಜನಸಮುದಾಯ ಪಾಲ್ಗೊಂಡು ವಸಾಹತುಶಾಹಿ ಮ್ಯಾಂಡೇಟರಿ ಪದ್ಧತಿ ಮತ್ತು ಅದನ್ನು ಪ್ರೋ ಅರಸೊತ್ತಿಗೆ ರಾಜ ಮನೆತನಗಳ ವಿರುದ್ಧ ಪ್ರಬಲ ಹೋರಾಟ ನಡೆಸಿದರು. ಆ ಮೂಲಕ ಅಲ್ಲಿ ಹೊಸ ರಾಜಕೀಯ ವಾತಾವರಣವನ್ನು ಹುಟ್ಟು ಹಾಕಿದರು. ಸೈದ್ಧಾಂತಿಕವಾಗಿ ಹೊಸ ರಾಜಕೀಯ ಸಿದ್ಧಾಂತ/ತತ್ವಗಳನ್ನು ಅಳವಡಿಸಿಕೊಂಡು, ರಷ್ಯಾ ಬೆಂಬಲಿತ ಸಮಾಜವಾದಿ ಸರಕಾರಗಳನ್ನು ಬಾತ್ ಸೋಶಲಿಸ್ಟ್ ಪಾರ್ಟಿಯ ನೇತೃತ್ವದಲ್ಲಿ ರಚಿಸಿದರು. ಈ ಪರಿವರ್ತನೆ ಪುನರ್ ಸಂಘಟನೆ ಸಂಪೂರ್ಣವಾಗಿ ಸೋವಿಯತ್ ಒಕ್ಕೂಟದ ಪ್ರಾಯೋಜಕತ್ವ ದಡಿಯಲ್ಲಿ ಯೋಜಿಸಲಾಯಿತು. ಸಮಾಜವಾದಿ ಅರಬ್ ರಾಜ್ಯಗಳು ಸೌದಿ ಸಾಮ್ರಾಜ್ಯದಲ್ಲಿ ಮುಂದುವರಿದಿರುವ ಅರಸೊತ್ತಿಗೆಗೆ ಸಮಾನ ಶಕ್ತಿಯಾಗಿ ಸ್ಪರ್ಧೆಗಿಳಿದವು. ಇವುಗಳ ನಡುವೆ ನಡೆದ ನೇರ ಸ್ಪರ್ಧೆ ನಾಲ್ಕು ಉದ್ದೇಶಗಳನ್ನು ಕೇಂದ್ರೀಕರಿಸಿತ್ತು.

೧. ಅರಬ್ ಜಗತ್ತಿನ ಅಗು ಹೋಗುಗಳ ನಿರ್ವಹಣೆ ನೋಡಿಕೊಳ್ಳುವ

೨. ಅರಬ್ ರಾಷ್ಟ್ರೀಯತ್ವದ ಹೆಸರಿನಲ್ಲಿ ನಡೆಯುವ ಚಳವಳಿಯ ಉಸ್ತುವಾರಿಯನ್ನು ವಹಿಸಿಕೊಳ್ಳುವ

೩. ಇಡೀ ಅರಬ್ ಜಗತ್ತಿನಲ್ಲಿ ಒಂದು ಬಲಿಷ್ಠ ಪ್ರಾದೇಶಿಕ ಶಕ್ತಿಯಾಗಿ ಅರಬ್ ವಿಷಯಗಳನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿನಿಧಿಸಲು ಅರಬ್‌ನ ಧ್ವನಿಯಾಗಿ

೪. ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ಒಮ್ಮತದ ಅರಬ್ ಹೋರಾಟ ಸಂಘಟಿಸುವ ಗುರಿ.

ಈ ಮಧ್ಯದಲ್ಲಿ ಪ್ರತಿಯೊಂದು ದೇಶಗಳು ದ್ವಂದ್ವ ನಿಲುವುಗಳನ್ನು ಅನುಸರಿಸುತ್ತಿದ್ದವು. ಸಿರಿಯಾ, ಇರಾಕ್ ಮತ್ತು ಈಜಿಪ್ಟ್ ಸಮಾಜವಾದಿ ಸರಕಾರಗಳನ್ನು ರಚಿಸಿಕೊಂಡರೂ, ಆ ಮೂರು ದೇಶಗಳು ಒಂದೇ ವೇದಿಕೆಯಲ್ಲಿ ರಚಿಸಲ್ಪಡುವ ರಾಜಕೀಯ ಸಂಘಟನೆಯಲ್ಲಿ ಒಂದಾಗಿಲ್ಲ. ಅವುಗಳಲ್ಲೇ ಭಿನ್ನಾಭಿಪ್ರಾಯಗಳಿದ್ದವು, ಒಳಜಗಳಗಳಿದ್ದವು. ಈ ಎಲ್ಲ ದೇಶಗಳು ಸೋವಿಯತ್ ಒಕ್ಕೂಟವನ್ನೇ ಅವಲಂಬಿಸಿಕೊಂಡಿದ್ದು, ಸಮಾಜವಾದಿ ತತ್ವಗಳ ಆಧಾರದಲ್ಲಿ ರಾಷ್ಟ್ರ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡವು. ಇದಕ್ಕೆ ಬೇಕಾದ ಹಣಕಾಸಿನ ಸೌಲಭ್ಯ ತಂತ್ರಜ್ಞಾನದ ನೆರವು, ಸೈನಿಕ ನೆರವು ಸೋವಿಯತ್ ಒಕ್ಕೂಟದಿಂದಲೇ ಬರುತ್ತಿತ್ತು. ಸಾಂಸ್ಕೃತಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಅರಬ್ ದೇಶಗಳಾಗಿದ್ದರೂ, ಇಸ್ಲಾಂ ಧರ್ಮವನ್ನೇ ಅನುಸರಿಸುತ್ತಿದ್ದರೂ, ಅರೆಬಿಕ್ ಭಾಷೆಯನ್ನೇ ಆಡುತ್ತಿದ್ದರೂ ಈ ದೇಶಗಳ ನಡುವೆ ಪರಸ್ಪರ ಹೊಂದಾಣಿಕೆ ಇರಲಿಲ್ಲ. ಬದಲಾಗಿ ಪೈಪೋಟಿ ಇತ್ತು. ಮುಖ್ಯವಾಗಿ, ಇಡೀ ಅರಬ್ ಜಗತ್ತಿನಲ್ಲಿ ಸೋವಿಯತ್ ಬೆಂಬಲಿತ ಸಮಾಜವಾದಿ ಅರಬ್ ರಾಷ್ಟ್ರವೊಂದು ಸಮರ್ಥಿಸಿಕೊಳ್ಳುವ ವಿಷಯವಾಗಿ ಸ್ಪರ್ಧೆ ಇತ್ತು. ಅರಬ್ ರಾಷ್ಟ್ರೀಯ ಚಳವಳಿಯ ನೇತೃತ್ವವನ್ನು ಈ ಮೂರು ಸಮಾಜ ವಾದಿ ರಾಷ್ಟ್ರಗಳಲ್ಲಿ ಯಾವುದು ವಹಿಸಿಕೊಳ್ಳಬೇಕು ಎಂಬುದರ ಕುರಿತು ಗೊಂದಲ ಇತ್ತು. ಹಾಗೆಯೇ, ಪ್ರಾದೇಶಿಕ/ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಲಿಷ್ಠ ಅರಬ್ ಮುಖಂಡನಾಗಿ ಅರಬ್ ರಾಷ್ಟ್ರೀಯ ಚಳವಳಿಯ ನೆಯತೃತ್ವವನ್ನು ಯಾರು ವಹಿಸಿಕೊಳ್ಳಬೇಕೆಂಬ ಕುರಿತು ಈ ದೇಶಗಳು ಪರಸ್ಪರ ಸ್ಪರ್ಧಿಸುತ್ತಿದ್ದವು. ಜೊತೆಗೆ ಈ ಮೂರು ರಾಷ್ಟ್ರಗಳು ಸೌದಿ ಸಾಮ್ರಾಜ್ಯದೊಂದಿಗೂ ಸ್ಪರ್ಧೆಗಿಳಿದವು.

ಸೌದಿ ದೊರೆ ಇಬ್ನಸೌದ್‌ನು ತನ್ನ ಸಾಮ್ರಾಜ್ಯದ ಸುತ್ತಲೂ ಘಟಿಸುತ್ತಿರುವ ಘಟನೆಗಳ ತೀವ್ರತೆಯನ್ನು ಹಾಗೂ ಬದಲಾದ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸು ತ್ತಿದ್ದನು. ಹೊಸದಾಗಿ ಉಗಮವಾದ ಸಮಾಜವಾದಿ ಅರಬ್ ಪ್ರಭುತ್ವಗಳು ಅರಸೊತ್ತಿಗೆ ವಿರುದ್ಧ ಧ್ವನಿ ಎತ್ತಿ ಹೋರಾಟ ಆರಂಭಿಸಿರುವುದನ್ನು ಗಮನಿಸಿದ ಸೌದಿ ಸರಕಾರ, ಅಲ್ಲಿನ ಅರಸೊತ್ತಿಗೆಯನ್ನು ರಕ್ಷಿಸಿಕೊಳ್ಳಲು ಜಾಗೃತವಾಯಿತು. ಸಿರಿಯಾ, ಇರಾಕ್ ಮತ್ತು ಈಜಿಪ್ಟ್ ದೇಶಗಳಂತೆ ಸೌದಿ ಅರೇಬಿಯಾ ಕೂಡ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಲಿಷ್ಠ ಅರಬ್ ಶಕ್ತಿಯಾಗಿ ಗುರುತಿಸಿಕೊಳ್ಳುವ ಹಂಬಲವನ್ನಿಟ್ಟುಕೊಂಡಿತ್ತು. ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಸೌದಿ ಅರೇಬಿಯಾ ಈಗಾಗಲೇ ಹಲವು ಬಗೆಯ ಯಶಸ್ಸುಗಳನ್ನು ಪ್ರಾಂತೀಯವಾಗಿ ಸಾಧಿಸಿತ್ತು. ಹಾಗಾಗಿ, ಅದು ಕಾಣುತ್ತಿರುವ ಕನಸನ್ನು ನನಸಾಗಿಸಲು ಸಿರಿಯಾ, ಇರಾಕ್ ಮತ್ತು ಈಜಿಪ್ಟ್ ದೇಶಗಳಿಗಿಂತ ಸೌದಿ ಅರೇಬಿಯಾ ಹೆಚ್ಚು ಅವಕಾಶಗಳನ್ನು ಪಡೆದಿತ್ತು.

ಒಂದನೆಯದಾಗಿ, ಸೌದಿ ಅರೇಬಿಯಾ ಇಡೀ ಅರಬ್ ಜಗತ್ತಿನಲ್ಲಿ ಮೊದಲ ಸ್ವತಂತ್ರ ರಾಷ್ಟ್ರವಾಗಿ ಉಗಮವಾಯಿತು. ಇದಕ್ಕೆ ಸಂಬಂಧಿಸಿ, ಸೌದಿ ವಂಶದ ಮುಖಂಡ ಇಬ್ನ ಸೌದ್ ೧೯೦೨ರಿಂದಲೇ ಕಾರ್ಯಪ್ರವೃತ್ತನಾಗಿ, ಯಾವುದೇ ವಸಾಹತುಶಾಹಿ ಪ್ರಭುತ್ವದ ಅಧೀನಕ್ಕೆ ಒಳಪಡದೆ, ಅಟ್ಟೋಮನ್ ಸಾಮ್ರಾಟನ ಅಧಿಕಾರ ವ್ಯಾಪ್ತಿಯಿಂದ ಅರಬ್ ಪ್ರಸ್ಥಭೂಮಿಯ ದಕ್ಷಿಣ ಭಾಗದಲ್ಲಿ ಸೌದಿ ಕುಟುಂಬಕ್ಕೆ ಸ್ವತಂತ್ರ ಸಾಮ್ರಾಜ್ಯವನ್ನು ನಿರ್ಮಿಸಿದ್ದನು. ರಾಷ್ಟ್ರೀಯ ಅಂದೋಲನವನ್ನು ಸಂಘಟಿಸದರೆ, ಕೇವಲ ಸೈನಿಕ ಕಾರ್ಯಾಚರಣೆಗಳಿಂದ ತನ್ನ ಸಾಮ್ರಾಜ್ಯದ ವಿಸ್ತರಣೆಯನ್ನು ಇಬ್ನಸೌದ್ ಮಾಡಿದ್ದನು. ಇದರಿಂದ ಪ್ರಾದೇಶಿಕವಾಗಿ ಸೌದಿ ಅರೇಬಿಯಾ ಸ್ವತಂತ್ರ ರಾಷ್ಟ್ರವಾಗಿ ೧೯೨೦ರ ದಶಕದಲ್ಲಿ ಉಗಮವಾಯಿತು. ಇದೇ ಹೊತ್ತಿಗೆ ಉಳಿದ ಅರಬ್ ಸಮುದಾಯಗಳು ವಸಾಹತುಶಾಹಿ ಪ್ರಭುತ್ವದ ಅಧೀನಕ್ಕೆ ಒಳಪಟ್ಟವು. ಎರಡನೆಯದಾಗಿ ಒಂದು ಅರಬ್ ಸಮುದಾಯವಾಗಿ, ಉಳಿದ ಸಮುದಾಯಗಳಿಗಿಂತ (ಅಂದರೆ-ಇರಾಕ್, ಸಿರಿಯ, ಈಜಿಪ್ಟ್, ಕುವೈತ್, ಲೆಬನಾನ್, ಜೋರ್ಡಾನ್ ಮತ್ತು ಅನೇಕ ಗಲ್ಫ್ ಅರಬ್ ಸಮುದಾಯಗಳು) ಸೌದಿ ಕುಟುಂಬದ ಮುಖ್ಯ ಅರಬ್ ವಾಹಿನಿಯಲ್ಲಿ ರಾಜಕೀಯ ಹಕ್ಕನ್ನು ಪಡೆದು ಒಂದು ವಂಶದ ಸ್ವತಂತ್ರ ಇರುವಿಕೆಯನ್ನು ಪ್ರಬುದ್ಧಗೊಳಿಸಿಕೊಂಡಿರುವುದು ಸೌದಿವಂಶ. ಇದು ಕೂಡ ಪ್ರಪ್ರಥಮ ಬಾರಿಗೆ ಒಂದು ವಂಶದ ಆಸಕ್ತಿಯನ್ನು ಅಂತರಿಕ ಹಾಗೂ ಬಾಹ್ಯ ಸವಾಲುಗಳಿಂದ ರಕ್ಷಸಿಕೊಳ್ಳಲು ಸೌದಿ ವಂಶ ಯಶಸ್ವಿಯಾಗಿ ತನ್ನ ಅನನ್ಯತೆಯನ್ನು ಅರಬ್ ಜಗತ್ತಿನಲ್ಲಿ ೧೯೨೦ರ ದಶಕದಲ್ಲೇ ಪ್ರಸ್ತುತಪಡಿಸಿಕೊಂಡಿತು.

ಎರಡನೆಯದು, ಸಮಕಾಲೀನ ಬಂಡವಾಳಶಾಹಿ ರಾಷ್ಟ್ರಗಳೊಂದಿಗೆ ಸೌಹಾರ್ದಯುತ ಸಂಪರ್ಕವನ್ನು ಬೆಳೆಸಿ ಆ ದೇಶಗಳಲ್ಲಿ ನೆಲೆಸಿರುವ ಮುಸಲ್ಮಾನ್ ಬಾಂಧವರನ್ನು ಸೌದಿ ಆಡಳಿತಕ್ಕೆ ಒಳಪಟ್ಟ ಪವಿತ್ರ ಸ್ಥಳಗಳಾದ ಮಕ್ಕಾ ಮತ್ತು ಮದೀನಕ್ಕೆ ಯಾತ್ರಿಕವಾಗಿ ಬೇಟಿ ನೀಡಲು ಪ್ರೇರಣೆ ನೀಡಿತು. ಇದರಿಂದಲೂ ಸೌದಿ ಖಜನೆಗೆ ಸಂಪತ್ತು ಹರಿದು ಬರತೊಡಗಿತು. ಹಾಗಾಗಿ ಆರ್ಥಿಕ ರಂಗದಲ್ಲೂ ಉಳಿದ ಅರಬ್ ಸಮಾಜಗಳಿಗಿಂತ ಸೌದಿ ಅರೇಬಿಯಾ ಬಲಿಷ್ಠವಾಗಿ ಪ್ರತಿಬಿಂಬಿತವಾಯಿತು.

ಮೂರನೆಯದಾಗಿ, ಸೌದಿ ಅರೇಬಿಯಾ ಒಂದು ಸ್ವತಂತ್ರ ರಾಷ್ಟ್ರವಾಗಿ ತನ್ನ ಉಳಿವುಗಳನ್ನು ಸಮರ್ಥಿಸಿಕೊಂಡು ಬಾಹ್ಯವಾಗಿ ಬರಬಹುದಾದ ಆಪತ್ತುಗಳನ್ನು ಎದುರಿಸಲು ಆರ್ಥಿಕ ಸುಭದ್ರತೆಯನ್ನು ೧೯೩೦ರ ದಶಕದಲ್ಲಿ ಕಂಡುಕೊಂಡಿತು. ಪ್ರಾದೇಶಿಕವಾಗಿ, ತೈಲ ಸಂಪನ್ಮೂಲದಿಂದ ಆದಾಯವನ್ನು ವೃದ್ದಿಸಿಕೊಳ್ಳಲು ಅಮೆರಿಕದಂತಹ ರಾಷ್ಟ್ರಗಳ ತೈಲ ಕಂಪೆನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ಇದರಿಂದ ಸೌದಿ ಖಜನೆಗೆ ನಿರಂತರ ವಾಗಿ ಸಂಪತ್ತು ಹರಿದು ಬರುವಂತಾಯಿತು.

ನಾಲ್ಕನೆಯದಾಗಿ, ತೈಲ ಸಂಪತ್ತು ಮತ್ತು ಹಜ್ಜ್ ಯಾತ್ರಿಕರಿಂದ ಸಂಗ್ರಹಿಸಿದ ಹೇರಳ ಸಂಪತ್ತನ್ನು ಚಾಣಾಕ್ಷತನದಿಂದ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಯಶಸ್ವಿಯಾಗಿ ವ್ಯಹಿಸಿ ಸಂಪ್ರದಾಯಸ್ತ ಸೌದಿ ಇಸ್ಲಾಮಿ ಸಮಾಜದಲ್ಲೂ ಆಧುನೀಕರಣ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಶಿಕ್ಷಣ ರಂಗದಲ್ಲಿ ಆಧುನೀಕರಣ, ಸಾರಿಗೆ ಸಂಪರ್ಕದ ವೃದ್ದಿ ಮತ್ತು ಸಾಮಾಜಿಕ ಸುಧಾರಣೆಗಳ ಅನುಷ್ಠಾನದಿಂದಾಗಿ ಸೌದಿ ಸಮಾಜದ ಪರಿವರ್ತನೆ ಆರಂಭ ವಾಯಿತು. ಇದಕ್ಕೆ ಯಾವ ಅಡ್ಡಿ ಆತಂಕಗಳಿರಲಿಲ್ಲ.

ಐದನೆಯದಾಗಿ, ೧೯೧೫ರ ಸುಮಾರಿಗೆ ಇಬ್ನಸೌದ್ ಕೈಗೊಂಡ ದಂಡಯಾತ್ರೆಯ ಸಂದರ್ಭದಲ್ಲಿ ಹಷಿಮೈಟ್ ಕುಟುಂಬದ ಅಧೀನಕ್ಕೆ ಒಳಪಟ್ಟ ಎರಡು ಪವಿತ್ರ ಕೇಂದ್ರಗಳಾದ ಮಕ್ಕಾ ಮತ್ತು ಮದೀನಾಗಳನ್ನು ಆಕ್ರಮಿಸಿಕೊಂಡಿದ್ದನು. ಇಡೀ ಜಗತ್ತಿನ ಮುಸ್ಲಿಂ ಸಮುದಾಯಕ್ಕೆ ಈ ಎರಡು ಧಾರ್ಮಿಕ ಕೇಂದ್ರಗಳು ಪವಿತ್ರವಾಗಿದ್ದು, ಅದರ ಆಡಳಿತ ಮತ್ತು ರಕ್ಷಣೆಯ ಉಸ್ತುವಾರಿ ವಹಿಸಿಕೊಂಡ ಸೌದಿ ಕುಟುಂಬಕ್ಕೆ ವಿಶೇಷ ಗೌರವ ತಂದುಕೊಟ್ಟಿತು. ಈ ಎರಡು ಧಾರ್ಮಿಕ ಕೇಂದ್ರಗಳ ಹೆಸರಿನಲ್ಲಿ ಜಾಗತಿಕ ಮಟ್ಟದಲ್ಲಿ ಇಸ್ಲಾಂ ಧರ್ಮದ ರಕ್ಷಕನೆಂದು, ಜಾಗತಿಕ ಸಮುದಾಯದ ಧಾರ್ಮಿಕ, ಆಧ್ಯಾತ್ಮಿಕ ಮುಖಂಡನೆಂದು ಸೌದಿ ಅರಸೊತ್ತಿಗೆ ಮನ್ನಣೆ ಪಡೆಯಿತು.

ಕೊನೆಯದಾಗಿ, ಉಳಿದೆಲ್ಲ ಅರಬ್ ಸಮಾಜಗಳು ರಾಜಕೀಯ ಬಿಕ್ಕಟ್ಟನ್ನು ಎದುರಿ ಸುತ್ತಿದ್ದ ಸಂದರ್ಭದಲ್ಲಿ ಸೌದಿ ಅರಸೊತ್ತಿಗೆ ಎಲ್ಲ ರಂಗದಲ್ಲೂ ತನ್ನ ಸ್ವತಂತ್ರ ಇರುವಿಕೆ ಯನ್ನು ಪ್ರಸ್ತುತಪಡಿಸಿಕೊಂಡಿತು. ಜೊತೆಗೆ, ಪ್ರಾದೇಶಿಕ ಮಟ್ಟದಲ್ಲಿ ತನ್ನ ಪ್ರಭಾವವನ್ನು ವೃದ್ದಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸೌದಿ ಕುಟುಂಬ ಸಕ್ರಿಯವಾಗಿ ಭಾಗವಹಿಸ ತೊಡಗಿತು. ಇದನ್ನು ಗಮನಿಸಿದ ಬಹುತೇಕ ಎಲ್ಲ ಬಂಡವಾಳಶಾಹಿ ರಾಷ್ಟ್ರಗಳು ಸೌದಿ ರಾಜ್ಯವನ್ನು ಗೌರವಿಸಿದವು. ಇದು ಸೌದಿ ಅರಸೊತ್ತಿಗೆಯು ಕೈಗೊಳ್ಳುವ ರಾಷ್ಟ್ರ ಕಟ್ಟುವ ಚಟುವಟಿಕೆಗಳಿಗೆ ಮತ್ತಷ್ಟು ಪ್ರೇರಣೆ ನೀಡಿತು.

ಈ ಎಲ್ಲ ಯಶಸ್ವಿ ಸಾಧನೆಗಳನ್ನು ಅನುಭವಿಸಿದ ಸೌದಿ ಅರಸೊತ್ತಿಗೆ ಪ್ರಾದೇಶಿಕ ಮಟ್ಟದಲ್ಲಿ ಪ್ರಭಾವಿ ಶಕ್ತಿಯಾಗಿ ಹೊರಹೊಮ್ಮಲು ಆಶಯ ವ್ಯಕ್ತಪಡಿಸಿತು ಮತ್ತು ಅದಕ್ಕೊಂದು ಯೋಜನೆ ರೂಪಿಸತೊಡಗಿತು. ಒಟ್ಟಾರೆಯಾಗಿ ತನ್ನ ಪ್ರತಿಸ್ಪರ್ಧಿಗಳು ತನ್ನ ಅರಸೊತ್ತಿಗೆ ಮೇಲೆ ಕಣ್ಣಿಟ್ಟುಕೊಂಡಿದ್ದರೂ, ಉಪಾಯದಿಂದ ಅವರನ್ನು ಎದುರಿಸಿ ಅವರಿಂದಲೇ ಶಹಭಾಷ್ ಎನ್ನಿಸಿಕೊಳ್ಳಬೇಕೆಂಬ ಹಂಬಲ ಸೌದಿ ಸರಕಾರದ್ದು. ಇಲ್ಲಿ ಸೌದಿ ಅರಸೊತ್ತಿಗೆಯ ವಿದೇಶಾಂಗ ನೀತಿ ನಿರ್ಣಾಯಕ ಪಾತ್ರ ವಹಿಸುತ್ತದೆ.

 

ಪರಾಮರ್ಶನಗ್ರಂಥಗಳು

೧. ಹೈಮ್ ಅರ್ನೆಸ್ಟ್, ೧೯೬೨. ಅರಬ್ ನೆಯಶನಲಿಸಂ : ಎನ್ ಎಂತೋಲಜಿ

೨. ಪೋರಾತ್ ಎಹೋಶುವಾ, ೧೯೮೬. ಇನ್ ಸರ್ಚ್ ಫಾರ್ ಅರಬ್ ಯುನಿಟಿ, ಲಂಡನ್.

೩. ಮನ್‌ಸನ್ ಹೆನ್ರಿ, ೧೯೮೮. ಇಸ್ಲಾಂ ಆಂಡ್ ರೆವಲೂಶನ್ ಇನ್ ದಿ ಮಾಡರ್ನ್ ಮಿಡ್ಲ್ ಈಸ್ಟ್, ಲಂಡನ್.

೪. ಸಿವಾನ್ ಇಮ್ಯೂನ್ಪುಲ್, ೧೯೯೦. ರಿಲೀಜಿಯಸ್ ್ಯಾಡಿಕ್ಯಾಲಿಸಂ ಆಂಡ್ ಪಾಲಿಟಿಕ್ಸ್ ಇನ್ ಮಿಡ್ಲ್ ಈಸ್ಟ್, ನ್ಯೂಯಾರ್ಕ್.