ಈಜಿಪ್ಟ್‌ನ ಬದಲಾದ ನಿಲುವು ಮತ್ತು ಅರಬ್ ಜಗತ್ತಿನಿಂದ ಅದರ ಪ್ರತ್ಯೇಕತೆಯಿಂದಾಗಿ ಸೌದಿ ಅರೇಬಿಯಾದ ರಾಜಧಾನಿ ಅರಬ್ ರಾಜಕೀಯ ಚಟುವಟಿಕೆಗಳಿಗೆ ಕೇಂದ್ರವಾಗಿ ಪರಿವರ್ತನೆಗೊಂಡಿತು. ತನ್ನ ಅಸ್ತಿತ್ವವನ್ನು ಮತ್ತು ಸ್ಥಾನವನ್ನು ಗಟ್ಟಿಗೊಳಿಸಿ ಅರಬ್ ಜಗತ್ತಿನಲ್ಲಿಯೇ ಬಲಿಷ್ಠ ದೇಶವಾಗಿ ಹೊರಹೊಮ್ಮಲು ಸೌದಿ ಸರಕಾರ ಒಂದು ಯೋಜನೆಯನ್ನು ರೂಪಿಸಿ ಸುಮಾರು ಏಳು ಪ್ರಮುಖ ಗುರಿಗಳನ್ನು ಈಡೇರಿಸಿಕೊಳ್ಳುವ ಪ್ರಯತ್ನ ಮಾಡಿತು.

೧. ಅರಬ್ ಜಗತ್ತಿನಲ್ಲಿ ಒಗ್ಗಟ್ಟನ್ನು ತನ್ನ ನೇತೃತ್ವದಲ್ಲಿ ಸ್ಥಾಪಿಸಿ, ಅವರೊಳಗೆ ಇರುವ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸುವುದು.

೨. ಇನ್ನೊಂದು ಪೂರ್ಣಪ್ರಮಾಣದ ಅರಬ್-ಇಸ್ರೇಲಿ ಯುದ್ಧ ಆರಂಭವಾಗುವುದನ್ನು ತಡೆಯುವುದು. ಇಂತಹ ಪ್ರಮಾದ ಲಿಬಿಯಾದಿಂದ ಆಗುವ ಎಲ್ಲ ಲಕ್ಷಣಗಳಿದ್ದವು.

೩. ಗಲ್ಫ್ ಮತ್ತು ಕೆಂಪು ಸಮುದ್ರದ ಮೂಲಕ ಹಾದು ಹೋಗುವ ಜಲಮಾರ್ಗವನ್ನು ರಕ್ಷಿಸುವುದು.

೪. ಅಮೆರಿಕದ ಇರುವಿಕೆಗೆ ಅವಕಾಶ ಕೊಡದೆ, ಗಲ್ಫ್‌ನಲ್ಲಿರುವ ತೈಲ ಭಾವಿಗಳನ್ನು ರಕ್ಷಿಸಲು ಸೈನಿಕ ಶಕ್ತಿಯನ್ನು ಅರಬ್ ಸಮುದಾಯವೇ ಸ್ವತಂತ್ರವಾಗಿ ಸಂಯೋಜಿಸಿ ಕೊಳ್ಳುವುದು

೫. ಸೌದಿ ವಿರೋಧಿ ಅರಬ್ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು

೬. ಸೋವಿಯತ್ ಒಕ್ಕೂಟದ ಪ್ರಭಾವ ಮತ್ತು ಆಸಕ್ತಿಗಳನ್ನು ಕಡಿತಗೊಳಿಸುವುದು

೭. ಅರಬ್ -ಇಸ್ರೇಲಿ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವುದು.

ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸೌದಿ ಅರೇಬಿಯಾ ಮೂರು ಮುಖ್ಯ ಉದ್ದೇಶವನ್ನು ರೂಪಿಸಿತು.

೧. ಪ್ಯಾಲೇಸ್ತೀನಿ ಅರಬ್‌ರ ಜನ್ಮಸಿದ್ಧ ಹಕ್ಕನ್ನು ರಕ್ಷಿಸುವುದು.

೨. ೧೯೬೭ರ ಮೂರನೆ ಅರಬ್-ಇಸ್ರೇಲಿ ಯುದ್ಧಕ್ಕೆ ಮೊದಲು ಇದ್ದ ಗಡಿಗೆ ಇಸ್ರೇಲ್‌ನ್ನು ಹಿಂದಕ್ಕೆ ಸರಿಸಲು ನಿರಂತರ ಒತ್ತಾಯ ಹೇರುವುದು.

೩. ಪೂರ್ವ ಜೆರುಸಲೇಂನಲ್ಲಿ ಅರಬ್ ಆಡಳಿತದ ಸ್ಥಾಪನೆ ಆರಂಭಿಸುವುದು.

ಈ ಎಲ್ಲ ಉದ್ದೇಶಗಳನ್ನು ಮತ್ತು ತತ್ವಗಳನ್ನು ಅಳವಡಿಸಿದ ಸೌದಿ ಶಾಂತಿ ಸ್ಥಾಪನಾ ಪ್ರಯತ್ನವನ್ನು ಅಗಸ್ಟ್ ೧೯೮೧ರಲ್ಲಿ ಘೋಷಿಸಲಾಯಿತು. ಅದನ್ನು ಸೌದಿ ರಾಜಕುಮಾರ ಫಾದ್ ಯೋಜನೆ ಎಂದು ಕರೆಯಲಾಯಿತು. ಅನೆಯಕ ಸಾರ್ವತ್ರಿಕ ಹೇಳಿಕೆಗಳಲ್ಲಿ, ಸಂದರ್ಶನಗಳಲ್ಲಿ ಮತ್ತು ಸಮ್ಮೇಳನಗಳಲ್ಲಿ ಸೌದಿ ಅಧಿಕಾರಿಗಳು ಮಧ್ಯ ಪೂರ್ವ ಪ್ರದೇಶದಲ್ಲಿ ಖಾಯಂ ಶಾಂತಿ ಸ್ಥಾಪನೆಗೆ ಬೇಕಾದ ವಾತಾವರಣ ಮತ್ತು ಶರತ್ತುಗಳ ಕುರಿತು ಸವಿವರವಾಗಿ ಮಂಡಿಸಿದರು. ಎಲ್ಲ ಸಂದರ್ಭಗಳಲ್ಲೂ ಅವರ ಪ್ರಯತ್ನವು ಅರಬ್ ರಾಜ್ಯಗಳ ಒಗ್ಗಟ್ಟಿನಿಂದಲೇ ಮಾಡಬೇಕು ಎಂದು ಪ್ರತಿಪಾದಿಸಿದರು. ಅವರ ಆಲೋಚನೆಯಲ್ಲಿ, ಮಾತಿನಲ್ಲಿ ಮತ್ತು ಪ್ರಯತ್ನದಲ್ಲಿ ಈ ಒಗ್ಗಟ್ಟನ್ನು ಕಾಪಾಡಿಕೊಂಡು ಬರಬೇಕು ಎಂದು ಕರೆಕೊಟ್ಟರು. ಅವರ ಪ್ರಕಾರ ಎಲ್ಲಿಯವರೆಗೆ ಅರಬ್ ಪ್ರದೇಶ ಇಸ್ರೇಲಿಗರ ಆಕ್ರಮಣದಲ್ಲಿರುತ್ತದೋ, ಅಲ್ಲಿಯವರೆಗೆ ಶಾಂತಿ ಸಾಧ್ಯವಿಲ್ಲ; ಎಲ್ಲಿಯವರೆಗೆ ಇಸ್ರೇಲಿಗರು ಅರಬ್ ಹಕ್ಕುಗಳನ್ನು ಕಸಿದುಕೊಂಡಿರುತ್ತಾರೋ, ಅಲ್ಲಿಯವರೆಗೆ ಶಾಂತಿ ಸಾಧ್ಯವಿಲ್ಲ ಎಲ್ಲಿಯವರೆಗೆ; ಪ್ಯಾಲೇಸ್ತೀನಿಯರಿಗೆ ನ್ಯಾಯ ಮತ್ತು ಹಕ್ಕುಗಳಿಗೆ ಮಾನ್ಯತೆ ದೊರೆಯುವುದಿಲ್ಲವೋ, ಅಲ್ಲಿಯವರೆಗೆ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಘೋಷಿಸಿ ದರು. ಈಜಿಪ್ಟ್‌ನ ಅಧ್ಯಕ್ಷ ನಾನು ಇಸ್ರೇಲ್ ಜೊತೆ ಶಾಂತಿ ಮಾತುಕತೆಗೆ ಮುಂದಾಗುವಾಗ ಸೌದಿಗಳಿಗೆ ತಿಳಿಸದಿದ್ದರೂ ಕೂಡ, ಸೌದಿ ಶಾಂತಿ ಯೋಜನೆಗೆ ಎಲ್ಲರೂ ತೆರೆದ ಮನಸ್ಸಿ ನಿಂದ ಮುಕ್ತವಾದ ಸಲಹೆ ಸೂಚನೆಗಳನ್ನು ಕೊಡಬಹುದೆಂದು ಸೌದಿ ಸರಕಾರ ಅರಬ್ ಸಮುದಾಯವನ್ನು ಬಹಿರಂಗವಾಗಿ ಕೇಳಿಕೊಂಡಿತು. ಅವರ ನಂಬಿಕೆಯಂತೆ, ಅರಬ್ ದೇಶಗಳ ಆಸಕ್ತಿಗಳನ್ನು, ಶಾಂತಿ ಯೋಜನೆಯ ಅನುಷ್ಠಾನ ಮತ್ತು ಪ್ಯಾಲೇಸ್ತೀನಿ ಅರಬ್‌ರ ಆಕ್ರಮಿತ ಪ್ರದೇಶಗಳನ್ನು ವಾಪಸ್ಸು ಪಡೆಯಲು ಇಡೀ ಅರಬ್ ಜಗತ್ತು ಒಗ್ಗಟ್ಟಿನಿಂದ ಪ್ರಯತ್ನಿಸಬೇಕು. ಸೌದಿ ಅಧಿಕಾರಿ ವರ್ಗ, ಈಜಿಪ್ಟ್ ಅಧ್ಯಕ್ಷ ಅನ್ವರ್ ಸಾಧತ್‌ನ ತೀರ್ಮಾನವನ್ನು ಬಹಿರಂಗವಾಗಿ ಎಲ್ಲಿಯೂ ಟೀಕಿಸಿಲ್ಲ. ಬದಲಾಗಿ, ಪಿಎಲ್‌ಓ ಪ್ಯಾಲೇಸ್ತೀನಿಯರ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುವುದನ್ನು ಗೌರವಿಸಬೇಕು. ಪ್ಯಾಲೇಸ್ತೀನಿಯರ ಬೆಂಬಲವನ್ನು ಎಲ್ಲಿಯವರೆಗೆ ಪಡೆಯುತ್ತದೋ, ಅಲ್ಲಿಯವರೆಗೆ ಎಲ್ಲ ಅರಬ್ ರಾಜ್ಯಗಳು ಪಿಎಲ್‌ಒವನ್ನು ಬೆಂಬಲಿಸಬೇಕು ಎಂದು ಕರೆ ಕೊಟ್ಟಿತು. ಅರಬ್ ಜಗತ್ತಿನಲ್ಲಿ ಶಾಂತಿ ನೆಲೆಸುವಿಕೆಗೆ ಸಂಬಂಧಿಸಿ ಅಮೆರಿಕ ಸರಕಾರ ವಹಿಸಬೇಕಾದ ಪಾತ್ರವನ್ನು ಕುರಿತು ಪ್ರಸ್ತಾಪಿಸಿ ಸೌದಿ ಸರಕಾರ ಹೀಗೆ ಬಣ್ಣಿಸುತ್ತದೆ.

ಮಧ್ಯ ಪ್ರಾಶ್ಚ್ಯದ ಕ್ರಾಂತಿಯೆಂದರೆ ಅದು ಜಗತ್ತಿನ ಶಾಂತಿಯ ಭಾಗ. ಸೂಪರ್ ಪವರ್ ಆಗಿರುವ ಅಮೆರಿಕ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು. ಅದು ಈ ವಿಚಾರದಲ್ಲಿ ಸಮರ್ಥವಾಗಿದೆ. ಇಸ್ರೇಲ್ ತನ್ನ ನೆಲದಲ್ಲಿನ ಎಲ್ಲ ಸಮುದಾಯಗಳನ್ನು ಗೌರವಿಸುವಂತೆ ಹಾಗೂ ರಕ್ಷಣೆ ನೀಡುವಂತೆ ಅಮೆರಿಕ ಮಾಡಬೇಕಾಗಿದೆ.

೧೯೭೮ರ ಮಾರ್ಚ್ ೯ರಂದು ಸೌದಿ ಅರೇಬಿಯಾ ರಾಜಕುಮಾರ ಫಾದ್ ಕುವೈತ್ ದೈನಿಕದಲ್ಲಿ ನೀಡಿರುವ ಹೇಳಿಕೆಯಲ್ಲಿ, ಮೊದಲ ಬಾರಿಗೆ ಇಸ್ರೇಲ್ ಸ್ವತಂತ್ರ ಇರುವಿಕೆಯನ್ನು ಮಾನ್ಯ ಮಾಡುವ ಸೂಚನೆಯನ್ನು ನೀಡಿದನು.

ಆದರೆ ಅವನ ಪ್ರಕಾರ ಅದು ಸಾಧ್ಯವಾಗುವುದು ಇಸ್ರೇಲ್ ತಾನು ಆಕ್ರಮಿಸಿಕೊಂಡ ಅರಬ್ ಪ್ರದೇಶಗಳಿಂದ ಹಿಂದಕ್ಕೆ ಸರಿದಾಗ ಹಾಗೂ ಪ್ಯಾಲೇಸ್ತೀನಿಯರ ಹಕ್ಕುಗಳನ್ನು ಗೌರವಿಸಿದಾಗ ಮಾತ್ರ. ಇದೂ ಸಹ ಅರಬ್ ರಾಷ್ಟ್ರಗಳ ತೀರ್ಮಾನದ ಚೌಕಟ್ಟಿನಲ್ಲಿಯೇ ನಡೆಯುವಂತದ್ದು.

೧೯೭೮ರ ಸೆಪ್ಟಂಬರ್ ೧೮ರಲ್ಲಿ ಸಹಿ ಹಾಕಿದ ಕ್ಯಾಂಪ್ ಡೇವಿಡ್ ಅಕಾರ್ಡ್ ಒಪ್ಪಂದದಿಂದ ಸೌದಿ – ಈಜಿಪ್ಟ್ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿತು. ಏಕೆಂದರೆ, ಸೌದಿ ಅಧಿಕಾರಿಗಳು ಹೇಳುವಂತೆ, ಸಾದತ್ ಈ ಒಪ್ಪಂದದಲ್ಲಿ ಪ್ಯಾಲೇಸ್ತೀನಿಯರ ಕಾನೂನುಬದ್ಧವಾದ ಹಕ್ಕುಗಳ ಸೂಕ್ತ ಕ್ರಮ ಕೈಗೊಂಡಿಲ್ಲ. ಎಲ್ಲ ಅರಬ್‌ರು ಸೌದಿ ನೇತೃತ್ವದಲ್ಲಿ ಒತ್ತಾಯಿಸುವ ಬೇಡಿಕೆಯಾದ ಪೂರ್ವ ಜೆರುಸಲೇಂನ ಕುರಿತು ಪ್ರಸ್ತಾಪವಿಲ್ಲ. ಇದಕ್ಕೆ ಉತ್ತರವಾಗಿ ೧೯೭೮ರ ಸೆಪ್ಟಂಬರ್ ೧೯ರಂದು ಸೌದಿ ಮಂತ್ರಿಗಳು ಕ್ಯಾಂಪ್ ಡೇವಿಡ್ ಒಪ್ಪಂದವನ್ನು ತಿರಸ್ಕರಿಸಿದರು. ಈ ಶಾಂತಿ ಒಪ್ಪಂದದಲ್ಲಿ ಅರಬ್ ಆಕ್ರಮಿತ ಪ್ರದೇಶದಿಂದ ಇಸ್ರೇಲ್‌ನ ವಾಪಸಾತಿಯನ್ನು ಕೇಳಲು ಮುಖ್ಯ ಜೆರುಸಲೇಂ, ಪಿಎಲ್‌ಓ ನೆಯತೃತ್ವದ ಪ್ಯಾಲೇಸ್ತೀನಿ ರಾಜ್ಯ ರಚನೆಯ ಕುರಿತು ಮತ್ತು ಅರಬ್ ಸಮುದಾಯದ ಆಸಕ್ತಿಗಳನ್ನು ಮತ್ತು ಒಗ್ಗಟ್ಟು ಸ್ಥಾಪನೆಗೆ, ಪ್ರತಿ ಅರಬ್ ರಾಜ್ಯ ಸ್ಪಂದಿಸಬೇಕು ಎಂದು ಒತ್ತಾಯಿಸಿತು.

ಪ್ರಾದೇಶಿಕವಾಗಿ ರಾಜಕೀಯ ವಾತಾವರಣ ತೀರ ಹದಗೆಟ್ಟಿರುವ ಕುರಿತು ಕೂಡ ಸೌದಿಗಳು ಕಾಳಜಿ ವಹಿಸಿದ್ದರು. ಇದರಿಂದ, ಅವರ ಅಸ್ತಿತ್ವಕ್ಕೆ ಕಡಿವಾಣ ಬೀಳಬಹುದು ಎಂಬ ಅಭಿಪ್ರಾಯವಿತ್ತು. ಇಥಿಯೋಪಿಯಾ, ಇರಾನ್, ಲೆಬನಾನ್ ಮತ್ತು ಯಮಾನ್ ದೇಶಗಳಲ್ಲಿ ಆಗಾಗ ಸಂಭವಿಸುವ ಘಟನೆಗಳಿಂದ ತನ್ನ ಇರುವಿಕೆಗೆ ಸಮಸ್ಯೆ ಆಗಬಹು ದೆಂಬ ಭಯವಿತ್ತು. ಅಮೆರಿಕದ ಪ್ರಭಾವ ನಿಧಾನಗತಿಯಲ್ಲಿ ದುರ್ಬಲವಾಗಿ, ಸೋವಿಯತ್ ರಾಜಕೀಯದ ಪ್ರಭಾವ ಜಗತ್ತಿನಲ್ಲಿ ವಿಸ್ತರಿಸಿದ ಪರಿಣಾಮವಾಗಿ, ತೀವ್ರಗಾಮಿಗಳು ಬಲಿಷ್ಠಗೊಂಡು ಅರಸೊತ್ತಿಗೆ ಸವಾಲಾಗುವರು ಎಂಬ ನಂಬಿಕೆ ಕೂಡ ನಿರಂತರವಾಗಿ ಸೌದಿಗಳನ್ನು ಕಾಡುತ್ತಿತ್ತು.

ಆದಾಗ್ಯೂ, ಸೌದಿ ಅರೇಬಿಯಾಕ್ಕೆ ಪೂರಕವಾದ ಕೆಲವೊಂದು ರಾಜತಾಂತ್ರಿಕ ಮತ್ತು ಡಿಪ್ಲಾಮ್ಯಾಟಿಕ್ ಯಶಸ್ಸುಗಳು ಕ್ಯಾಂಪ್ ಡೇವಿಡ್ ನಂತರದ ಎರಡು ವರ್ಷಗಳಲ್ಲಿ ಸಂಭವಿಸಿದ ಕಾರಣ, ಸೌದಿ ಅರೇಬಿಯಾ ಪುನಃ ಅರಬ್ ಮತ್ತು ಅಂತಾರಾಷ್ಟ್ರೀಯ ವಿಚಾರಗಳಲ್ಲಿ ಸಕ್ರಿಯವಾದ ಪಾತ್ರ ವಹಿಸಿತು.

೧. ಸೌದಿ ಸರಕಾರ ಗಂಭೀರ ಸ್ವರೂಪದ ಸಿರಿಯನ್ ಜೋರ್ಡಾನಿನ ಗಡಿ ವಿವಾದವನ್ನು ಮಧ್ಯಸ್ಥಿಕೆ ವಹಿಸಿ ಬಗೆಹರಿಸಿತು.

೨. ಗಲ್ಫ್ ಕಾರ್ಪೊರೇಶನ್ ಕೌನ್ಸಿಲ್ ರಚನೆಯ ರೂಪುರೇಷೆಗಳನ್ನು ಸಿದ್ಧಪಡಿಸಿತು.

೩. ಒಪೆಕ್ ಸಂಘಟನೆಯಲ್ಲಿ ಪ್ರಭಾವಿ ಪಾತ್ರ ವಹಿಸಿ, ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆ ಮತ್ತು ಸರಬರಾಜಿಗೆ ಸಂಬಂಧಿಸಿದ ನಿರ್ಧಾರಗಳನ್ನು ಸೌದಿ ನೇತೃತ್ವದಲ್ಲಿಯೇ ತೆಗೆದುಕೊಳ್ಳುವ ವಾತಾವರಣ ಹುಟ್ಟಿತು.

೪. ೧೯೮೨ರಲ್ಲಿ ಲೆಬನಾನ್‌ನಲ್ಲಿ ಉದ್ಭವಿಸಿದ ನಾಗರಿಕ ಯುದ್ಧ ವಿರಾಮ ಘೋಷಿಸುವಲ್ಲಿ ಸೌದಿ ಸರಕಾರ ಮುಖ್ಯಪಾತ್ರ ವಹಿಸಿತು.

೫. ೮.೫ ಮಿಲಿಯನ್ ಡಾಲರ್‌ನಷ್ಟು ಶಸ್ತ್ರಾಸ್ತ್ರಗಳನ್ನು ಖರೀದಿಸಲು ಅಮೆರಿಕ ಕಾಂಗ್ರೆಸ್ ಒಪ್ಪಿಗೆ ಸೂಚಿಸಿತು.

೬. ಐರೋಪ್ಯ ಸಮುದಾಯವು ಪಶ್ಚಿಮ ಏಷ್ಯಾ ಬಿಕ್ಕಟ್ಟು ಕುರಿತು ಇರುವ ತಪ್ಪು ಗ್ರಹಿಕೆಯನ್ನು ಸರಿಪಡಿಸಲು ಸೌದಿ ಅರೇಬಿಯಾ ಯಶಸ್ವಿಯಾಯಿತು. ಬ್ರಿಟಿಷ್ ಕಾರ್ಯದರ್ಶಿ ಲಾರ್ಡ್ ಕ್ಯಾರಿಂಗ್‌ಟನ್ ಜನವರಿ ೧೯೮೦ ರಲ್ಲಿ ಅರಬ್ ದೇಶಗಳಿಗೆ ಬೇಟಿ ಕೊಟ್ಟ ಸಂದರ್ಭದಲ್ಲಿ ಸೌದಿ ಅಧಿಕಾರಿಗಳು, ಅವನ ಮನ ಒಲಿಸಿ, ಅರಬ್-ಇಸ್ರೇಲಿ ಸಮಸ್ಯೆ ಬಗೆಹರಿಸಲು ನಡೆಯುವ ಶಾಂತಿ ಸಂಧಾನದಲ್ಲಿ ಪಿಎಲ್‌ಓ ಸಕ್ರಿಯ ಪಾತ್ರ ವಹಿಸಲು ಅವಕಾಶ ನೀಡುವುದು ಸೂಕ್ತ ಎಂದು ಹೇಳಿಕೆ ನೀಡಲಿ ಒತ್ತಾಯಿಸಿತು. ಕೊನೆಯದಾಗಿ, ಜುಲೈ ೧೯೮೧ರಲ್ಲಿ ಪಿಎಲ್‌ಓ ಮತ್ತು ಇಸ್ರೇಲ್ ನಡುವೆ ಯುದ್ಧ ವಿರಾಮ ಘೊಷಿಸಲು ಯಶಸ್ವಿಯಾಯಿತು.

ಈ ಎಲ್ಲ ಯಶಸ್ಸು ಗಳಿಸಿ ಆಗಸ್ಟ್ ೧೯೮೧ರಲ್ಲಿ ಸೌದಿ ರಾಜಕುಮಾರ ಫಾದ್ ಎಂಟು ಅಂಶಗಳನ್ನೊಳಗೊಂಡ ಶಾಂತಿ ಯೋಜನೆಯನ್ನು ಪ್ರಕಟಿಸಿದನು. ಸೌದಿಗಳು ನೆಯರವಾಗಿ ಅರಬ್-ಇಸ್ರೇಲ್ ಬಿಕ್ಕಟ್ಟಿಗೆ ಸಂಬಂಧಿಸಿ ಆತುರದ ನಿರ್ಧಾರ ತೆಗೆದುಕೊಂಡು ತಮ್ಮದೇ ಪರ್ಯಾಯ ಶಾಂತಿ ಸಂಧಾನ ಸೂತ್ರಗಳನ್ನು ರಚಿಸಲು ಕೆಲವು ಕಾರಣಗಳಿವೆ.

೧. ಈ ಯೋಜನೆಯಿಂದ ಅರಬ್‌ರ ಸಮಸ್ಯೆಗಳಲ್ಲಿ ಸೌದಿಯ ಹಸ್ತಕ್ಷೇಪವನ್ನು ವಿಸ್ತರಿಸಿ, ತನ್ನ ಪ್ರಾದೇಶಿಕ ಏಕಸ್ವಾಮಿತ್ವವನ್ನು ಶ್ರುತಪಡಿಸುವುದು ಮತ್ತು ಅಂತಾರಾಷ್ಟ್ರೀಯ ವಲಯದಲ್ಲಿ ಅರಬ್ ಸಮಸ್ಯೆಗೆ ಪ್ರತಿನಿಧಿಯಾಗಿ ತಮ್ಮ ಪ್ರಭಾವವನ್ನು ತೋರ್ಪಡಿಸುವುದು.

೨. ಮಧ್ಯಪೂರ್ವ ಪ್ರದೇಶದ ಅನೆಯಕ ದೇಶಗಳಿಗೆ ಸೌದಿಗಳ ಗ್ರಹಿಕೆಯಂತೆ ಅಮೆರಿಕದ ಧೋರಣೆಯ ಕುರಿತು ಅಸಮಾಧಾನವಿದೆ. ಮುಖ್ಯವಾಗಿ ಪ್ಯಾಲೇಸ್ತೀನ್ ಮತ್ತು ಪ್ಯಾಲೇಸ್ತೀನಿ ಅರಬ್‌ರ ಹಕ್ಕುಗಳನ್ನು ರಕ್ಷಿಸುವ ಕುರಿತು ಅನೆಯಕರಿಗೆ ವಿರೋಧವಿದೆ. ಇಸ್ರೇಲ್‌ಗೆ ಅಮೆರಿಕ ಸರಕಾರ ನಿರಂತರವಾಗಿ ಬೆಂಬಲ ನೀಡುವುದನ್ನು ಅರಬ್ ಜಗತ್ತು ತೀವ್ರವಾಗಿ ವಿರೋಧಿಸುತ್ತಿದೆ. ಅಲ್ಲದೆ, ಮಂದಗಾಮಿ ಪ್ರಭುತ್ವಗಳೊಂದಿಗೆ ಅಮೆರಿಕ ನಿಕಟ ಸಂಪರ್ಕ ಇಟ್ಟುಕೊಂಡಿದ್ದುದರಿಂದ ತೀವ್ರಗಾಮಿಗಳ ವಿರೋಧವು ಬಹಳ ಪರಿಣಾಮ ಬೀರುವುದು. ಈ ಬೆಳವಣಿಗೆ ಸೌದಿ ರಾಜತ್ವದ ಭದ್ರತೆ ಮತ್ತು ರಕ್ಷಣೆಗೆ ಸವಾಲು ಆಗಿದೆ. ಅದು ಕೂಡ ಅಮೆರಿಕದ ಆಪ್ತಮಿತ್ರನಾಗಿ ಗುರುತಿಸಿಕೊಂಡಿತ್ತು.

೩. ಕ್ಯಾಂಪ್ ಡೇವಿಡ್ ಒಪ್ಪಂದಕ್ಕೆ ಪರ್ಯಾಯ ಸೂತ್ರ ಕಂಡುಕೊಳ್ಳಬೇಕೆಂಬ ಆಶಯ ವನ್ನು ಅರಬ್ ದೇಶಗಳು ವ್ಯಕ್ತಪಡಿಸಿರುವುದರಿಂದ ಸೌದಿ ನೇತೃತ್ವದಲ್ಲಿ ಶಾಂತಿ ಯೋಜನೆ ರಚಿಸುವುದು ಅವಶ್ಯವಿದೆ. ದೊರೆ ಫಾದ್ ಗ್ರಹಿಕೆಯಂತೆ ಕ್ಯಾಂಪ್ ಡೇವಿಡ್ ಆಕಾರ್ಡ್ ಹಿನ್ನಡೆ ಕಂಡ ಯೋಜನೆ ಮತ್ತು ಹೊಸ ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಮತ್ತು ಅವನ ಆಡಳಿತ, ಸೌದಿ ಅರೇಬಿಯಾ ಕೈಗೊಳ್ಳುವ ಯೋಜನೆಯನ್ನು ಪುರಸ್ಕರಿಸಬಹುದೆಂಬ ಆಶಾವಾದವನ್ನು ಇಟ್ಟುಕೊಂಡಿದ್ದರು.

೪. ಸೌದಿ ಅರೇಬಿಯಾದ ಪ್ರಯತ್ನದಿಂದ ಇಸ್ರೇಲ್‌ನ ಪೂರ್ವಕ್ಕಿರುವ ದೇಶಗಳಾದ ಇರಾಕ್, ಜೋರ್ಡಾನ್, ಪಿಎಲ್‌ಓ, ಸೌದಿ ಅರೇಬಿಯಾ ಮತ್ತು ಸಿರಿಯಾ ದೇಶ ಗಳನ್ನು ಒಂದು ವೇದಿಕೆಗೆ ತರಲು ಸಾಧ್ಯವಾಯಿತು. ಈ ಎಲ್ಲ ದೇಶಗಳು ಕ್ಯಾಂಪ್ ಡೇವಿಡ್ ಶಾಂತಿ ಸಂಧಾನದಲ್ಲಿ ಪಾಲ್ಗೊಂಡಿರಲಿಲ್ಲ. ಮತ್ತು ಸಂಘಟಿತವಾಗಿ ಅರಬ್ ಸಮುದಾಯ ಸೌದಿ ನೇತೃತ್ವದಲ್ಲಿ ಇಸ್ರೇಲ್ ಜೊತೆಗೆ ಮಾತುಕತೆ ಆರಂಭಿಸಬಹುದು ಎಂಬ ದೂರಾಲೋಚನೆ.

ರಾಜಕುಮಾರ ಫಾದ್ ಯೋಜನೆಯ ಅರಬ್ ಮಂದಗಾಮಿತ್ವ ನಿಲುವನ್ನು ವ್ಯಕ್ತ ಪಡಿಸಿದ್ದು, ಅದು ಕ್ಯಾಂಪ್ ಡೇವಿಡ್ ಅಕಾರ್ಡ್ ವಿರುದ್ಧ ಒಂದು ಪರ್ಯಾಯ ಸೂತ್ರವಾಗಿ ರಚಿಸಲಾಗಿತ್ತು. ಅರಬ್-ಇಸ್ರೇಲ್ ಬಿಕ್ಕಟ್ಟಿಗೆ ಸಂಬಂಧಿಸಿ ವಿಶ್ವಸಂಸ್ಥೆ ಹೊರಡಿಸಿದ ಎಲ್ಲ ಠರಾವುಗಳಲ್ಲಿರುವ ಅಂಶಗಳನ್ನು ಆಧರಿಸಿದ ಈ ಪ್ರಯತ್ನದಲ್ಲಿ ೧೯೬೭ರ ಹಿಂದಿನ ಗಡಿಗೆ ಇಸ್ರೇಲ್ ಸರಿಯಬೇಕೆಂದು ಕರೆ ಕೊಟ್ಟಿತು. ಪ್ರಾದೇಶಿಕ ಸಮತೋಲನ ಮತ್ತು ಭದ್ರತೆಗೆ ಸಾಕ್ಷಿಯಾಗಿ ಎಲ್ಲರೂ ಶಾಂತಿಯಿಂದ ಬದುಕುವ ಹಕ್ಕನ್ನು ಇಸ್ರೇಲ್ ಗೌರವಿಸಬೇಕು ಎಂದು ಆಗ್ರಹಿಸಿತು. ಹಾಗಾದರೆ ಮಾತ್ರ ಇಸ್ರೇಲ್‌ನ ಅಸ್ತಿತ್ವವನ್ನು ಅರಬ್ ಸಮುದಾಯ ಗೌರವಿಸುವುದು ಎಂದು ಶರತ್ತು ಹಾಕಿತು. ಈ ಪ್ರಯತ್ನದಲ್ಲಿ ಸುಮಾರು ಎಂಟು ಅಂಶಗಳನ್ನು ಸೇರಿಸಿ, ಅಲ್ಲಿ ಖಾಯಂ ಶಾಂತಿಗೆ ಬುನಾದಿ ಹಾಕಲಾಯಿತು.

೧. ೧೯೬೭ರ ಅರಬ್-ಇಸ್ರೇಲ್ ಯುದ್ಧದ ಸಂದರ್ಭದಲ್ಲಿ ಇಸ್ರೇಲ್ ಆಕ್ರಮಿಸಿಕೊಂಡ ಎಲ್ಲ ಅರಬ್ ಪ್ರಾಂತಗಳನ್ನು ತೆರವುಗೊಳಿಸುವುದು. ಅರಬ್ ಭಾಗದ ಜೆರುಸಲೇಂನ್ನು ಪ್ಯಾಲೇಸ್ತೀನಿಯರಿಗೆ ಬಿಟ್ಟುಕೊಡುವುದು.

೨. ಯುದ್ಧೋತ್ತರ ದಿನಗಳಲ್ಲಿ ಆಕ್ರಮಿತ ಪ್ರದೇಶದಲ್ಲಿ ರಚಿಸಿದ ಯಹೂದಿ ನೆಲೆಗಳನ್ನು ಧ್ವಂಸ ಮಾಡುವುದು.

೩. ಜೆರುಸಲೇಂನ ಪವಿತ್ರ ಪ್ರಾರ್ಥನಾ ಕೇಂದ್ರದಲ್ಲಿ ಎಲ್ಲ ಧರ್ಮದ ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯವನ್ನು ಮಾನ್ಯ ಮಾಡುವುದು.

೪. ಪ್ಯಾಲೇಸ್ತೀನಿ ಅರಬ್‌ರ ಹಕ್ಕುಗಳನ್ನು ಗೌರವಿಸುವುದು ಮತ್ತು ತಮ್ಮ ದೇಶಕ್ಕೆ ಹಿಂತಿರುಗದ ಪ್ಯಾಲೇಸ್ತೀನಿಯರಿಗೆ ಇಸ್ರೇಲ್ ಸರಕಾರ ಪರಿಹಾರ ನೀಡುವುದು.

೫. ವಿಶ್ವಸಂಸ್ಥೆಯ ನೇತೃತ್ವದಲ್ಲಿ ಪಶ್ಚಿಮ ದಂಡೆ ಮತ್ತು ಗಾಝಾ ಪಟ್ಟಿಯನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿ ಕೆಲವೇ ತಿಂಗಳಲ್ಲಿ ಅದನ್ನು ಪೂರ್ಣಗೊಳಿಸುವುದು.

೬. ಪ್ಯಾಲೇಸ್ತಿನ್ ರಾಜ್ಯ ಸ್ಥಾಪನೆ ಮತ್ತು ಪೂರ್ವ ಜೆರುಸಲೇಂ ಅದರ ರಾಜಧಾನಿ ಎಂದು ಘೋಷಿಸುವುದು.

೭. ಪ್ರದೇಶದ ಎಲ್ಲ ಸ್ವಾತಂತ್ರ ರಾಜ್ಯಗಳು ನೆಮ್ಮದಿಯಿಂದ ಬದುಕುವ ಸ್ವಾತಂತ್ರ್ಯವನ್ನು ಮಾನ್ಯ ಮಾಡುವುದು.

೮. ವಿಶ್ವಸಂಸ್ಥೆ ಅಥವಾ ಅದರ ಸದಸ್ಯ ರಾಷ್ಟ್ರಗಳ ಮುಂದಾಳತ್ವದಲ್ಲಿ ಈ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸುವುದು.

ಸೌದಿ ಅರೇಬಿಯಾದ ಈ ಪ್ರಯತ್ನದಲ್ಲಿ ಹೊಸತೇನು ಅಂಶಗಳು ಇಲ್ಲದಿದ್ದರೂ, ಒಗ್ಗಟ್ಟಿನಿಂದ ಅರಬ್‌ರು ಶಾಂತಿ ಸಂಧಾನಕ್ಕೆ ಸ್ಪಂದಿಸಿರುವುದು ಒಳ್ಳೆಯ ಲಕ್ಷಣ. ಅದಲ್ಲದೆ, ಇಸ್ರೇಲನ್ನು ಅರಬ್ ಜಗತ್ತಿನ ಭೂಪಟದಿಂದ ಬೇರ್ಪಡಿಸದೆ ಪರಿಹಾರ ಕಂಡುಕೊಂಡಿರುವುದು ಸಾರ್ವತ್ರಿಕವಾಗಿ ವ್ಯಕ್ತವಾಗದೆ ಧೈರ್ಯದ ನಿಲುವು.

ರಾಜಕುಮಾರ ಫಾದ್‌ನ ಯೋಜನೆ ಅನುಷ್ಠಾನಕ್ಕೆ ತರಲು ಮೂರು ವಿಚಾರಗಳನ್ನು ಒಳಗೊಂಡ ವಾತಾವರಣ ಸೃಷ್ಟಿಯಾಗಬೇಕು. ಒಂದನೆಯದು, ಇಸ್ರೇಲ್ ರಾಜ್ಯಕ್ಕೆ ಅಮೆರಿಕ ಸರಕಾರ ನೀಡುವ ನಿರಂತರ ಬೆಂಬಲವನ್ನು ನಿಲ್ಲಿಸಬೇಕು. ಎರಡನೆಯದು, ಇಸ್ರೇಲ್‌ನ ಭಯೋತ್ಪಾದನಾ ಚಟುವಟಿಕೆಗಳು ಅಲ್ಲಿನ ಪ್ರಧಾನ ಮಂತ್ರಿ ಮ್ಯಾನ್ ಹೆಮ್ ಬೇಗಿನ್ ಸರಕಾರದಡಿಯಲ್ಲಿ ವಿಸ್ತರಿಸಿದ್ದು, ಅದಕ್ಕೆ ಕಡಿವಾಣ ಹಾಕಬೇಕು. ಮೂರನೆಯದಾಗಿ, ಯಾಸರ್ ಅರಾಫತ್ ಹೇಳಿದ ಹಾಗೆ ಪ್ಯಾಲೇಸ್ತೀನಿಯರ ಸಂಖ್ಯೆ ಅರಬ್ ಜಗತ್ತಿನ ಸಮತೋಲನದಲ್ಲಿ ಆಧಾರ ಅಂಶವಾಗಿರಬೇಕು.

೧. ಸಾರ್ವತ್ರಿಕವಾಗಿ ಶಾಂತಿ ಸೂತ್ರವನ್ನು ಪ್ರಕಟಿಸಿದ ಮೇಲೆ ಅಮೆರಿಕ ಸರಕಾರ, ಈ ಯೋಜನೆಯಲ್ಲಿ ಹೊಸತೇನು ಕಂಡುಬರುವುದಿಲ್ಲ ಎಂದು ತಿರಸ್ಕರಿಸಿತು. ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್‌ನ ಒಂದು ಹೇಳಿಕೆ.

ಈ ವಿಚಾರಗಳು ಹೊಸದೇನೂ ಅಲ್ಲ. ಇದು ಸೌದಿ ಅರೇಬಿಯಾದ ಹಳೆಯ ತೀರ್ಮಾನವೇ ಆಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅರಬ್ ಇಸ್ರೇಲ್ ಬಿಕ್ಕಟ್ಟು ಕುರಿತು ನಿರ್ಣಯ ಹಿಂದೆಯೇ ಆಗಿತ್ತು. ಆದರೂ ಶಾಂತಿಯುತ ಪರಿಹಾರವನ್ನೇನಾದರೂ ಕಂಡುಕೊಂಡರೆ ನಾವು ಅದನ್ನು ಸ್ವಾಗತಿಸುತ್ತೇವೆ.

೨. ಸೌದಿ ಅರೇಬಿಯಾ ೧೯೭೮ರಲ್ಲಿ ಅಮೆರಿಕಾದ ಮಧ್ಯಸ್ಥಿಕೆಯಲ್ಲಿ ರಚಿಸಿದ ಕ್ಯಾಂಪ್ ಡೇವಿಡ್ ಅಕಾರ್ಡ್‌ನನ್ನು ಒಪ್ಪದ ಕಾರಣ, ಸೌದಿ ಅರಸನ ಪ್ರಯತ್ನವನ್ನು ಅಮೆರಿಕ ಮಾನ್ಯ ಮಾಡಲಿಲ್ಲ.

೩. ಈಜಿಪ್ಟ್ ಅಧ್ಯಕ್ಷ ಅನ್ವರ್ ಸಾಧತ್, ಸೌದಿ ರಾಜಕುಮಾರನ ಎಂಟು ಅಂಶಗಳ ಶಾಂತಿ ಸೂತ್ರವನ್ನು ತಿರಸ್ಕರಿಸಿದನು. ಸಾಧತ್ ಈ ಸಮಯದಲ್ಲಿ ವಾಷಿಂಗ್ಟನ್ ಡಿಸಿಯಲ್ಲಿದ್ದು ಒಂದು ಹೇಳಿಕೆ ನೀಡಿ, ಸೌದಿ ಸಂಧಾನಕಾರರು ಅವನ ಮುಂದಾಳತ್ವದಲ್ಲಿ ರಚಿಸಿದ ಕ್ಯಾಂಪ್ ಡೇವಿಡ್ ಶಾಂತಿ ಸೂತ್ರದ ಅಂಶಗಳನ್ನು ಪರಿಗಣಿಸಲಿಲ್ಲವೆಂದು ಆರೋಪಿಸು ತ್ತಾನೆ. ಕ್ಯಾಂಪ್ ಡೇವಿಡ್ ಒಪ್ಪಂದದಂತೆ ಇಸ್ರೇಲ್ ಸರಕಾರ ಸಿನ್ಯಾ ಪ್ರಾಂತದಲ್ಲಿ ಯಹೂದಿಗಳ ತೆರವು ಕಾರ್ಯಕ್ರಮ ಆರಂಭವಾಗಿತ್ತು. ಒಂದು ವೇಳೆ ಸೌದಿಗಳ ಸಂದಾನವನ್ನು ಮನ್ನಿಸಿದರೆ, ಇಸ್ರೇಲ್ ಈಗಾಗಲೇ ಆರಂಭಿಸಿದ ತೆರವು ಕಾರ್ಯ ಸ್ಥಗಿತಗೊಳ್ಳುವುದೆಂಬ ಭಯವು ಸಾಧತ್‌ಗಿತ್ತು. ಅಗಷ್ಟೆ ಇಸ್ರೇಲ್‌ನ ಸಂಬಂಧದಲ್ಲಿ ಹೊಸತೊಂದು ಅಧ್ಯಾಯವನ್ನು ಆರಂಭಿಸಿದ ಸಾಧತ್, ಮ್ಯಾನ್‌ಹೆಮ್ ಬೇಗಿನ್‌ರೊಂದಿಗೆ ಮಾತುಕತೆ ಆರಂಭಿಸಿದ್ದು, ಅವನೆಯನಾದರು ಪ್ಯಾಲೇಸ್ತೀನಿ ರಾಜ್ಯ ಸ್ಥಾಪನೆ ಮತ್ತು ಪೂರ್ವ ಜೆರುಸಲೇಂ ಅದರ ರಾಜಧಾನಿ ಎಂದು ಘೋಷಿಸಿದರೆ, ಇಸ್ರೇಲ್ ಮತ್ತು ಅಮೆರಿಕ ದೇಶಗಳೊಂದಿಗೆ ಸಂಬಂಧದಲ್ಲಿ ಬಿರುಕು ಉಂಟಾಗ ಬಹುದೆಂಬ ಭಯವು ಸಾಧತ್‌ಗೆ ಇತ್ತು.

೪. ಅಮೆರಿಕ ಸೆನೆಟ್‌ನಲ್ಲಿ ಸೌದಿ ಅರೇಬಿಯಾಕ್ಕೆ ಸರಬರಾಜು ಮಾಡುವ ಶಸ್ತ್ರಾಸ್ತ್ರಗಳ ಕುರಿತು ವಿಷಯ ಪ್ರಸ್ತಾಪ ಆಗುವ ಸಂಭವ ಅದೇ ಸಮಯದಲ್ಲಿತ್ತು. ರೇಗನ್ ಸರಕಾರ ಸೌದಿ ನೇತೃತ್ವದ ಶಾಂತಿ ಸೂತ್ರಗಳನ್ನು ಅನುಮೋದಿಸುವ ಯಾವ ಇರಾದೆಯು ಇರಲಿಲ್ಲ. ಒಂದು ವೇಳೆ ಅಮೆರಿಕ ಒಪ್ಪಿದರೆ, ನಂಬಿಗಸ್ಥ ಸ್ನೇಹ ರಾಷ್ಟ್ರವಾದ ಇಸ್ರೇಲ್‌ನಿಂದ ದೂರವಿರಬೇಕಾದೀತು ಎಂಬ ಲೆಕ್ಕಾಚಾರವೂ ಅಮೆರಿಕ ಸರಕಾರಕ್ಕೂ ಇದೆ. ಹಾಗಾದಲ್ಲಿ ಶಸ್ತ್ರಾಸ್ತ್ರಗಳ ಖರೀದಿಗೆ ಸಂಬಂಧಿಸಿ ಭರವಸೆ ಪಡೆದುಕೊಳ್ಳಲು ಅಸಾಧ್ಯವೇ ಸರಿ.

೫. ಒಂದು ವೇಳೆ ಸೌದಿ ಯೋಜನೆಯನ್ನು ಅನುಮೋದಿಸಿದರೆ, ಅದೇ ಸರಕಾರಕ್ಕೆ ಕ್ಯಾಂಪ್ ಡೇವಿಡ್ ಅಕಾರ್ಡ್‌ನಲ್ಲಿ ಪ್ರಸ್ತಾಪಿಸಿರುವ ವಿಷಯಗಳಿಗೆ ತಿರಸ್ಕಾರವಿದೆ ಎಂಬ ಭಾವನೆ ಸಾರ್ವತ್ರಿಕವಾಗಿ ವ್ಯಕ್ತವಾಗಬಹುದು. ಅಲ್ಲದೇ, ಪ್ಯಾಲೇಸ್ತೀನಿ ಸ್ವಾಯತ್ತತೆ ಕುರಿತು ಈಜಿಪ್ಟ್ ಮತ್ತು ಇಸ್ರೇಲ್ ನಡುವೆ ಮಾಡಿಕೊಂಡ ಒಪ್ಪಂದದ ಅನುಷ್ಠಾನ ದಲ್ಲಿ ವಿಳಂಬವಾಗಬಹುದು. ಹಾಗಾಗಿ ಅಮೆರಿಕ ಪದೇ ಪದೇ ಕ್ಯಾಂಪ್ ಡೇವಿಡ್ ಅಕಾರ್ಡ್, ಆರಬ್ ಇಸ್ರೇಲಿ ಬಿಕ್ಕಟ್ಟು ಪರಿಹಾರಕ್ಕೆ ಸರಿಯಾದ ಸೂತ್ರವೆಂದು ಸಮರ್ಥಿಸಿಕೊಂಡಿತು.

೬. ಸೌದಿ ಅರೇಬಿಯಾದ ಶಾಂತಿ ಸೂತ್ರದಲ್ಲಿ ಆಕ್ರಮಿತ ಪ್ರದೇಶದಿಂದ ಯಹೂದಿಗಳನ್ನು ತೆರವುಗೊಳಿಸಿ, ಅಲ್ಲಿ ಪ್ಯಾಲೇಸ್ತೀನಿಯರ ರಾಜ್ಯ ಸ್ಥಾಪನೆಗೆ ಆಗ್ರಹಿಸಿರುವುದರಿಂದ ಇಸ್ರೇಲ್ ಸರಕಾರ ತೀವ್ರವಾಗಿ ಫಾದ್ ಪ್ಲಾನ್‌ನನ್ನು ವಿರೋಧಿಸಿತು. ಇದು ನಿಧಾನ ವಾಗಿ ಇಸ್ರೇಲನ್ನು ಭೂಪಟದಿಂದ ಅಳಿಸಿ ಹಾಕುವ ಯೋಜನೆ ಎಂದು ಆರೋಪಿಸಿತು.

೭. ಅಮೆರಿಕದ ಯೋಚನೆಯಂತೆ, ಫಾದ್ ಪ್ಲಾನ್‌ನಲ್ಲಿ ಅರಬ್ ಮತ್ತು ಯಹೂದಿಗಳ ನಡುವೆ ನೇರ ಮಾತುಕತೆಗೆ ಪೂರಕವಾಗುವಂತಹ ಅಂಶಗಳನ್ನು ಸೇರಿಸಿಲ್ಲ. ೧೯೬೭ರ ಅರಬ್-ಇಸ್ರೇಲಿ ಯುದ್ಧ ನಂತರ ವಿಶ್ವಸಂಸ್ಥೆಯ ಭದ್ರತಾ ಸಮಿತಿ ೨೪೨ ಸಂಖ್ಯೆಯ ಠರಾವನ್ನು ಹೊರಡಿಸಿ ಆಕ್ರಮಿಸಿ ಪ್ರದೇಶದಿಂದ ಇಸ್ರೇಲ್ ಹಿಂದಕ್ಕೆ ಸರಿಯಬೇಕೆಂದು ಹೇಳಿರುವುದು ಸತ್ಯ. ಆದರೆ ಎಷ್ಟು ಪ್ರದೇಶದಿಂದ ಎಂದು ನಿರ್ದಿಷ್ಟವಾಗಿ ಹೇಳಿಲ್ಲ. ಫಾದ್ ಪ್ಲಾನ್‌ನಲ್ಲಿ ಇದೇ ಅಂಶವನ್ನು ಒತ್ತಿ ಹೇಳಲಾಗಿದ್ದರೂ, ಅರಬ್‌ರ ಪರಿಕಲ್ಪನೆ ಪ್ರಕಾರ ಅದು ಎಲ್ಲ ಅಕ್ರಮಿತ ಪ್ರದೇಶ ದಿಂದ ಇಸ್ರೇಲ್ ಹಿಂದಕ್ಕೆ ಸರಿಯಬೇಕು. ಇಸ್ರೇಲ್, ಇದನ್ನು ವಿರೋಧಿಸಲು ಕಾರಣ, ಅಮೆರಿಕ ಹೇಳಿದಂತೆ ಆಕ್ರಮಿತ ಪ್ರದೇಶದಿಂದ ಎಷ್ಟು ಭೂಭಾಗವನ್ನು ಬಿಟ್ಟುಕೊಡ ಬೇಕು ಎಂದು ಹೇಳಿಲ್ಲ. ಅದಲ್ಲದೆ, ಪೂರ್ವ ಜೆರುಸಲೇಂನ್ನು ತೆರವುಗೊಳಿಸಬೇಕೆಂಬ ಅಂಶ ೨೪೨ ಸಂಖ್ಯೆಯ ಠರಾವಿನಲ್ಲಿ ಇಲ್ಲವೆಂದು ಇಸ್ರೇಲ್ ಅಧಿಕಾರಿ ವರ್ಗ ವಾದಿಸಿತು.

೮. ಅಮೆರಿಕದ ಪ್ರಕಾರ ಸೌದಿ ಪ್ಲಾನ್‌ನನ್ನು ಒಪ್ಪಿಕೊಳ್ಳಲು ಕಾಲ ಪಕ್ವವಾಗಿಲ್ಲ. ಅದಕ್ಕಿರುವ ಚಿಂತೆ, ಎಲ್ಲಿಯಾದರೂ ಇಸ್ರೇಲಿ-ಈಜಿಪ್ಟ್ ಸಂಧಾನ ನಿಂತುಬಿಡುತ್ತದೋ ಎಂದು. ಇಸ್ರೇಲ್ ಈಜಿಪ್ಟ್‌ಗೆ ಆಶ್ವಾಸನೆ ನೀಡಿದಂತೆ ಏಪ್ರಿಲ್ ೧೯೮೨ರ ಒಳಗೆ ಸಿನ್ಯಾಯಿಂದ ತೆರವು ಕಾರ್ಯ ಮುಗಿಯುವವರೆಗೆ ಅಮೆರಿಕ ಸರಕಾರ ಮಧ್ಯ ಪೂರ್ವ ಪ್ರದೇಶದ ಕುರಿತು ತೆಗೆದುಕೊಂಡ ನಿರ್ಧಾರದಲ್ಲಿ ಬದಲಾವಣೆ ತರಲು ನಿರಾಕರಿಸಿತು. ಇಸ್ರೇಲ್ ಸೈನ್ಯ ಸಿನ್ಯಾದಿಂದ ವಾಪಸಾದ ಮೇಲೆ ವಾತಾವರಣ ತಿಳಿಯಾಗುವ ಲಕ್ಷಣವಿದ್ದು, ಆ ನಂತರವೇ ಇದಕ್ಕೆ ಸಂಬಂಧಿಸಿದ ಚರ್ಚೆ ಹೊಸತಾಗಿ ಆರಂಭಿಸೋಣ ಎಂಬುದು ಅಮೆರಿಕದ ಧೋರಣೆ. ಅಷ್ಟು ಹೊತ್ತಿಗೆ ಅಧಿಕೃತ/ಅನಧಿಕೃತವಾಗಿ ಹಿರಿಯ ಮಟ್ಟದ ಅಧಿಕಾರಿಗಳು, ಅಮೆರಿಕ, ಪಿಎಲ್‌ಓ ಸಂಪರ್ಕ ಬೆಳೆಸಿ, ಶಾಂತಿ ಮಾತುಕತೆಗೆ ವೇದಿಕೆ ಸಿದ್ಧಪಡಿಸಿದರೆ, ಅಮೆರಿಕವು ಭಾಗವಹಿಸುವ ಭರವಸೆ ನೀಡಿತು.

ಈ ಬಗೆಯ ವಿರೋಧದ ನಡುವೆಯೂ ಸೌದಿ ಸರಕಾರ ಶಾಂತಿ ಸಂದಾನವನ್ನು ಸಹನೆಯಿಂದ ಮುಂದುವರಿಸಿತು. ೧೯೮೧ ಅಕ್ಟೋಬರ್‌ನಲ್ಲಿ ವಿಶ್ವಸಂಸ್ಥೆಯನ್ನು ಒತ್ತಾಯಿಸಿ ರಾಜಕುಮಾರ ಫಾದ್‌ನ ಎಂಟು ಅಂಶಗಳ ಆಧಾರದ ಮೇಲೆ ಸಾಮಾನ್ಯ ಸಭೆಯಲ್ಲಿ ಒಂದು ಠರಾವುವನ್ನು ಹೊರಡಿಸಲು ವಿನಂತಿಸಿಕೊಂಡಿತು. ಈ ನಡುವೆ ಅನ್ವರ್ ಸಾಧತ್‌ನ ಅಕಾಲ ಮರಣವು ಅರಬ್ ಜಗತ್ತಿನ ರಾಜಕೀಯ ವಲಯದಲ್ಲಿ ಬದಲಾವಣೆ ತಂದಿತು. ಅಮೆರಿಕದ ನಿಲುವಿನಲ್ಲಿ ಬದಲಾವಣೆ ಕಂಡುಬಂತು. ಇದಲ್ಲದೆ, ಅನ್ವರ್ ಸಾಧತ್‌ನ ಉತ್ತರಾಧಿಕಾರಿಯಾಗಿ, ಹೋಸ್‌ನಿ ಮುಭಾರಕ್ ನೆಯಮಕವಾದನು. ಇವನು ಸಾದತ್‌ನಷ್ಟು ನುರಿತ ರಾಜಕಾರಣಿ ಆಗದ ಕಾರಣ, ಕ್ಯಾಂಪ್ ಡೇವಿಡ್ ಶಾಂತಿ ಸಂಧಾನ ಮುಂದುವರಿಯುವ ಲಕ್ಷಣ ದುರ್ಬಲವಾಯಿತು. ಅವನ ವ್ಯಕ್ತಿತ್ವದ ಕುರಿತು ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಹೀಗೆ ಪ್ರಕಟವಾಗಿತ್ತು,

ಮುಭಾರಕನು ಸಾಧತ್‌ನಷ್ಟು ಸಮರ್ಥನಲ್ಲ ಹಾಗೂ ದೂರದೃಷ್ಟಿ ಯನ್ನು ಹೊಂದಿದವನೂ ಅಲ್ಲ. ಆತ ಸಮರ್ಥವಾದ ಧೋರಣೆಯನ್ನು ಹೊಂದಲೇಬೇಕಾಗುತ್ತದೆ. ಈಜಿಪ್ಟ್‌ನಲ್ಲಿನ ರಾಜಕೀಯ ಬೆಳವಣಿಗೆಗಳು ಹಾಗೂ ಈಜಿಪ್ಟ್ ಸೌದಿ ಅರೇಬಿಯಾದ ಜೊತೆ ಹೊಂದಿರುವ ಸಂಬಂಧ ಗಳು ಮಹತ್ವದ್ದಾಗಿದ್ದು, ಎಚ್ಚರಿಕೆಯಿಂದಲೇ ವ್ಯವಹರಿಸಬೇಕಾಗುತ್ತದೆ.

ಅಮೆರಿಕದ ಸಾಮ್ರಾಜ್ಯಶಾಹಿ ಚಟುವಟಿಕೆಗಳ ವಿಸ್ತರಣೆಯ ದೃಷ್ಟಿಯಿಂದ ಸಾದತ್‌ನ ಮರಣವು ತುಂಬಲಾರದ ನಷ್ಟವಾಗಿದ್ದು, ತನ್ನ ಇರುವಿಕೆಯನ್ನು ರಕ್ಷಿಸಿಕೊಳ್ಳಬೇಕಿದ್ದರೆ, ಅಮೆರಿಕ ಹೆಚ್ಚಾಗಿ ಮಂದಗಾಮಿ ಅರಬ್ ಪ್ರಭುತ್ವಗಳಿಗೆ ಹಣಕಾಸಿನ ಬೆಂಬಲ ನೀಡಿ ಅವರ ಸ್ನೇಹ ಸಂಪಾದಿಸಬೇಕಾಗಿದೆ. ಇನ್ನೊಂದು ವಿಚಾರ, ಅಮೆರಿಕದ ದೃಷ್ಟಿಯಲ್ಲಿ ಸಾಧತ್‌ನ ಮರಣವು ಇರಾನ್‌ನಲ್ಲಿ ರೇಜಶಹನು ಅಧಿಕಾರದಿಂದ ಪದಚ್ಯುತಿಗೊಂಡ ನಂತರ ಆದ ಒಂದು ಘಟನೆ. ಸಾಧತ್ ಮತ್ತು ರೇಜಶಹ ಇಬ್ಬರು ನಾಯಕರು ಅಮೆರಿಕದ ನಂಬಿಗಸ್ಥ ಮಿತ್ರರು. ಅವರ ಸಾಮ್ರಾಜ್ಯಶಾಹಿ ಚಟುವಟಿಕೆಗಳು ಈ ಇಬ್ಬರು ನಾಯಕರ ಬೆಂಬಲದಿಂದ ಮುಂದುವರಿದಿತ್ತು. ಅದಕ್ಕಾಗಿ ೧೯೭೦ರ ನಂತರ ಸೌದಿ ಅರೇಬಿಯ(ಅಮೆರಿಕದ ಇನ್ನೊಂದು ಸ್ನೇಹ ರಾಷ್ಟ್ರ) ಹೆಚ್ಚು ಹೆಚ್ಚು ಅರಬ್ ಸಮುದಾಯದೊಂದಿಗೆ ಗುರುತಿಸಿಕೊಂಡು ಇಸ್ರೇಲ್‌ನ್ನು ಖಂಡಿಸಿ, ಅಮೆರಿಕದ ಮೇಲೆ ಸಮಸ್ಯೆ ಬಗೆಹರಿಸಲು ಒತ್ತಾಯಿಸಿದಾಗ ಅಮೆರಿಕ ಸರಕಾರ ಹೆಚ್ಚು ಚಿಂತೆ ಮಾಡಲಿಲ್ಲ. ಅದರ ಆಲೋಚನೆಯಂತೆ, ಒಂದು ವೇಳೆ ಸೌದಿ ಸರಕಾರದ ಬೆಂಬಲ ತಪ್ಪಿಹೋದರೂ ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಸಾಮ್ರಾಜ್ಯಶಾಹಿಗೆ ಆಗ ಈಜಿಪ್ಟ್ ಮತ್ತು ಇರಾನ್ ದೇಶಗಳು ಬೆಂಬಲಿಸಬಹುದೆಂಬ ಧೈರ್ಯವಿತ್ತು. ಆದರೆ, ೧೯೭೯ರ ಇಸ್ಲಾಮಿಕ್ ರೆವಲ್ಯೂಶನ್‌ನಿಂದ ಇರಾನ್‌ನಲ್ಲಿ ಅಮೆರಿಕ ಹಿನ್ನಡೆ ಕಂಡಿತು. ಮತ್ತು ೧೯೮೨ರಲ್ಲಿ ಸಾಧತ್‌ನ ಮರಣದ ನಂತರ ಮತ್ತೊಂದು ದುರಂತ ಕಂಡಿತು. ಈ ಇಬ್ಬರು ನಂಬಿಗಸ್ಥ ನಾಯಕರನ್ನು ಕಳೆದುಕೊಂಡ ನಂತರ ಅಮೆರಿಕ ಸರಕಾರ ತನ್ನ ವಿದೇಶಾಂಗ ನೀತಿಯಲ್ಲಿ ಒಂದಷ್ಟು ಬದಲಾವಣೆಯನ್ನು ತಂದಿತು. ಮುಖ್ಯವಾಗಿ, ಸೌದಿ ಅರೇಬಿಯಾ ದೊಂದಿಗೆ ಹೆಚ್ಚು ಗುರುತಿಸಿಕೊಳ್ಳಲು ಅಮೆರಿಕ ಅಧಿಕಾರಿ ವರ್ಗ ಆತುರಪಡುತ್ತಿತ್ತು. ಈ ಬೆಳವಣಿಗೆ ೧೯೭೦ರಿಂದ ಸೌದಿ-ಅಮೆರಿಕ ಸಂಬಂಧದಲ್ಲಿ ಆದ ಹಿನ್ನಡೆಯನ್ನು ಸರಿಪಡಿಸಿ ಕೊಳ್ಳಲು ಎರಡು ದೇಶಗಳಿಗೆ ಉತ್ತಮ ಅವಕಾಶವನ್ನು ಒದಗಿಸಿತು.

ಸೌದಿ ಅರೇಬಿಯಾ ಮತ್ತು ಅಮೆರಿಕ ನಡುವೆ ಭಿನ್ನಾಭಿಪ್ರಾಯ ಹುಟ್ಟಿಕೊಳ್ಳಲು ಆರು ಪ್ರಮುಖ ಕಾರಣಗಳಿವೆ.

೧. ಒಂದನೆಯದು, ಅಮೆರಿಕ ಸರಕಾರ ಪ್ರಮುಖವಾಗಿರುವ ಪ್ಯಾಲೇಸ್ತೀನಿ ಸಮಸ್ಯೆಯನ್ನು ಬಗೆಹರಿಸುವಲ್ಲಿ ಪ್ಯಾಲೇಸ್ತೀನಿಯರ ಸಂಘಟನೆ ಪಿಎಲ್‌ಓವನ್ನು ಅವರ ಪ್ರತಿನಿಧಿಯಾಗಿ ಗೌರವಿಸಲು ಮತ್ತು ಆ ಸಮಸ್ಯೆಗೆ ಸಂಬಂಧಿಸಿ ಅಮೆರಿಕ ಎಲ್ಲರಿಗೂ ಒಪ್ಪಿಗೆಯಾಗು ವಂತಹ ಸೂತ್ರವನ್ನು ಸೂಚಿಸಲು ವಿಫಲವಾಗಿರುವುದು.

೨. ಅಮೆರಿಕ ಸರಕಾರ ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್ ರಾಜ್ಯದ ಅನನ್ಯತೆಯನ್ನು ರಕ್ಷಿಸಿಕೊಳ್ಳಲು ಮತ್ತು ಅದನ್ನು ಪೋತ್ಸಾಹಿಸುವ ಸಲುವಾಗಿ ಇಸ್ರೇಲ್ ಕೈಗೊಂಡ ಭಯೋತ್ಪಾದನಾ ಚಟುವಟಿಕೆಗಳನ್ನು ಖಂಡಿಸಲು ವಿಫಲವಾಗಿರುವುದು ಸೌದಿ ಅಧಿಕಾರಿ ವರ್ಗಕ್ಕೆ ಬೇಸರ ತಂದಿತ್ತು. ಇಸ್ರೇಲ್ ಸರಕಾರ ಇರಾಕಿ ನ್ಯೂಕ್ಲಿಯರ್ ರಿಯಾಕ್ಟರ್ ಮೇಲೆ ದಾಳಿ ಮಾಡಿದಾಗ, ಭೀರತ್ ಮೇಲೆ ವೈಮಾನಿಕ ದಾಳಿ ನಡೆಸಿದಾಗ ಮತ್ತು ೧೯೬೭ರ ನಂತರ ಇಸ್ರೇಲ್ ಆಕ್ರಮಿತ ಪ್ರಾಂತಗಳಲ್ಲಿ ಯಹೂದಿ ನೆಲೆಗಳನ್ನು ಸ್ಥಾಪಿಸುವಾಗ ಅಮೆರಿಕ ಪರೋಕ್ಷವಾಗಿ ಆರ್ಥಿಕ ಮತ್ತು ಸೈನಿಕ ಸಹಾಯ ನೀಡಿತ್ತು. ಇದನ್ನು ಸೌದಿ ನೇತೃತ್ವದಲ್ಲಿ ಅರಬ್ ಸಮುದಾಯ ಖಂಡಿಸಿತ್ತು.

೩. ಅಮೆರಿಕದೊಳಗೆ ಒಂದಷ್ಟು ಜನ ಸೌದಿ, ಸಾಮ್ರಾಜ್ಯದ ಸ್ಥಿರತೆಯ ಬಗ್ಗೆ ಪ್ರಶ್ನಿಸಿ ಆಂತರಿಕ ಮತ್ತು ಬಾಹ್ಯ ಸವಾಲುಗಳನ್ನು ಎದುರಿಸಲು ಸೌದಿ ಅರಸೊತ್ತಿಗೆಗೆ ಇರುವ ಯೋಗ್ಯತೆಯ ಕುರಿತು ವಿಸ್ತೃತ ಚರ್ಚೆ ಆರಂಭವಾಯಿತು. ಒಂದು ಹೆಜ್ಜೆ ಮುಂದೆ ಹೋಗಿ, ಇರಾನ್‌ನಲ್ಲಿ ರೇಜಶಾಹನ ಮತ್ತು ಸೌದಿ ಪ್ರಭುತ್ವವನ್ನು(ಅರಸ ಖಾಲಿದ್‌ನ) ಹೋಲಿಸಿ, ಸೌದಿ ಪ್ರಭುತ್ವ ಸದ್ಯದಲ್ಲೆ ದುರ್ಬಲಗೊಳ್ಳುವುದೆಂಬ ಅಭಿಪ್ರಾಯವನ್ನು ಮಂಡಿಸಲಾಗಿದ್ದು, ಅದು ಸೌದಿ ಅರಸ್ ಖಾಲಿದ್‌ಗೆ ಬೇಸರ ತಂದಿತ್ತು.

೪. ಇರಾನ್‌ನಲ್ಲಿ ರೇಜಶಾಹನ ಪ್ರಭುತ್ವ ತನ್ನ ಅಧಿಕಾರ ಕಳೆದುಕೊಂಡ ನಂತರ, ಅಮೆರಿಕದ ವರ್ತನೆಯನ್ನು ಮತ್ತು ದೃಷ್ಟಿಕೋನವನ್ನು ಗಮನಿಸಿದ ಸೌದಿ ಆಡಳಿತ, ಪ್ರಾದೇಶಿಕ ಮಟ್ಟದಲ್ಲಿ ಅಮೆರಿಕ ಸಾಮ್ರಾಜ್ಯಶಾಹಿಗೆ ನೀಡುವ ಬೆಂಬಲಕ್ಕೂ ಒಂದು ಇತಿಮಿತಿ ಇರಬೇಕು ಎಂದು ಪ್ರತಿಪಾದಿಸತೊಡಗಿತು. ಸೌದಿ ಸರಕಾರವೇ ಈ ತರಹದ ಆಲೋಚನೆ ಮಾಡಿ ಅಲ್ಲಿಯ ರಾಜಕುಮಾರ ಸೌದ್-ಅಲ್-ಪೈಸಲ್ ಹೀಗೆ ಹೇಳುತ್ತಾನೆ.  ನಾವು ಬೃಹತ್ ರಾಷ್ಟ್ರಗಳೊಂದಿಗಿನ ಸಂಬಂಧವು ಸ್ನೇಹಯುತವಾಗಿದೆ ಎಂಬುದಾಗಿ ಪರಿಗಣಿಸಿದರೆ, ಆ ತೀರ್ಮಾನ ನಮ್ಮ ಹಿನ್ನೆಡೆಗೆ ಕಾರಣವಾಗಬಹುದು. ಇದು ಆ ದೇಶಗಳ ಆರಂಭದ ಸಂಬಂಧಕ್ಕಿಂತ ಎಷ್ಟೋ ತೀವ್ರ ಸ್ವರೂಪದಾಗಿದ್ದು, ತಮ್ಮ ಅಸ್ತಿತ್ವಕ್ಕೆ ಎದುರಾಗುವ ಆಂತರಿಕ ಮತ್ತು ಬಾಹ್ಯ ಸವಾಲುಗಳನ್ನು ನಿಭಾಯಿಸಲು ಅಮೆರಿಕದೊಂದಿಗೆ ಅದರ ಸಂಬಂಧ ಫಲ ನೀಡುವುದಿಲ್ಲ ಎಂಬ ಅಭಿಪ್ರಾಯ ಪಡಲಾಯಿತು.

೫. ಗಲ್ಫ್‌ನ ಕುರಿತು ಅಮೆರಿಕ ತನ್ನ ನಿಲುವನ್ನು ತೆಗೆದುಕೊಳ್ಳುವಾಗ, ಸೌದಿ ಅರೇಬಿಯಾ ಅದರ ಪರಿಣಾಮದಿಂದ ಬಿಕ್ಕಟ್ಟು ಎದುರಿಸಬೇಕಾದೀತು ಎಂಬ ವಿಚಾರವನ್ನು ಅಮೆರಿಕ ಅಧಿಕಾರಿ ವರ್ಗಗಳು ಪರಿಗಣಿಸಿಲ್ಲವೆಂಬುದು ಸೌದಿಗಳ ಆರೋಪ. ಶಸ್ತ್ರಸಜ್ಜಿತ ಅಮೆರಿಕ ಸೈನ್ಯದ ಇರುವಿಕೆ ಮತ್ತು ಪ್ರಾದೇಶಿಕ ರಾಜಕೀಯ ವಲಯದಲ್ಲಿ ಪದೇ ಪದೇ ಅಮೆರಿಕದ ಹಸ್ತಕ್ಷೇಪವು ಸೌದಿ ವಿರೋಧಿ ತೀವ್ರಗಾಮಿಗಳನ್ನು ಎಚ್ಚರಿಸುತ್ತಿದ್ದು, ಅದರಿಂದ ಸೌದಿ ಸರಕಾರ ಮುಂದಿನ ದಿನಗಳಲ್ಲಿ ಕಠಿಣ ವಿರೋಧ ಎದುರಿಸಬೇಕಾದೀತು ಎಂಬ ಅರಿವು ಅಮೆರಿಕದ ಸಾಮ್ರಾಜ್ಯಶಾಹಿಗಳಿಗಿಲ್ಲ ಎಂಬುದು ಸೌದಿಗಳ ಆರೋಪ.

೬. ಸೋವಿಯತ್ ಒಕ್ಕೂಟದ ಜೊತೆಗೂ ಸೌದಿ ಅರಸೊತ್ತಿಗೆ ಇತ್ತೀಚೆಗೆ ಸಂಬಂಧವನ್ನು ಸರಿಪಡಿಸಿಕೊಂಡಿರುವುದರಿಂದ, ಅಮೆರಿಕ ಸರಕಾರ ಮಧ್ಯಪೂರ್ವ ಪ್ರದೇಶದಲ್ಲಿ ಸೋವಿಯತ್ ವಿರುದ್ಧ ನಡೆಸುವ ಒಳಸಂಚಿಗೆ ಸೌದಿ ಸರಕಾರ ಬೆಂಬಲ ವ್ಯಕ್ತ ಪಡಿಸಿರಲಿಲ್ಲ. ೧೯೮೧ ಏಪ್ರಿಲ್‌ನಲ್ಲಿ ಅಮೆರಿಕ ಕಾರ್ಯದರ್ಶಿ, ಅಲೆಕ್ಸಾಂಡರ್ ಎಂ. ಹೈಗ್, ಸೌದಿ ಅರೇಬಿಯಾಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಸೌದಿ ರಾಜಕುಮಾರ ಸೌದ್-ಅಲ್-ಪೈಸಲ್, ಒಂದು ಹೇಳಿಕೆ-ನೀಡಿ, ಸೌದಿ ಸಾಮ್ರಾಜ್ಯ ಸೋವಿಯತ್ ಒಕ್ಕೂಟದ ವಿಸ್ತರಣೆಯ ಕುರಿತು ಮಾಹಿತಿ ಇದ್ದರೂ, ಈ ಸಂದರ್ಭದಲ್ಲಿ ಅರಬ್-ಇಸ್ರೇಲಿ ಬಿಕ್ಕಟ್ಟು ಪರಿಹಾರಕ್ಕೆ ಮೊದಲ ಆದ್ಯತೆ ನೀಡುವುದೆಂದು ಪ್ರತಿಪಾದಿಸಲಾಯಿತು. ಈ ವಿಚಾರವೇ ಪ್ರಾದೇಶಿಕ ಅಭದ್ರತೆಗೆ, ಅತಂತ್ರಕ್ಕೆ ಕಾರಣವಾಗಿದೆ. ಸೋವಿಯತ್ ಸವಾಲನ್ನು ಕುರಿತು ಹೇಳುತ್ತಾ ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ನಡುವಿನ ಬಿನ್ನಾಭಿಪ್ರಾಯದ ಇತಿಹಾಸಕ್ಕೆ ಸಂಬಂಧಿಸಿ ಅಮೆರಿಕ ಒಂದು ನಿಲುವನ್ನು ತೆಗೆದುಕೊಂಡಿರಬಹುದು. ಆದರೆ, ಅದೇ ನಿಲುವನ್ನು ಇತರ ದೇಶಗಳು ತೆಗೆದು ಕೊಳ್ಳಬೇಕೆಂದು ಅಮೆರಿಕ ತಿಳಿಯುವುದು ತಪ್ಪಾಗುತ್ತದೆ ಎಂದು ಹೇಳುತ್ತಾನೆ.

ಕ್ಯಾಂಪ್ ಡೇವಿಡ್ ಶಾಂತಿ ಸಂಧಾನವು ಸೌದಿ-ಅಮೆರಿಕ ನಡುವಿನ ಸಂಬಂಧದಲ್ಲಿ ಬಿರುಕು ಉಂಟು ಮಾಡಿ, ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆ ಮತ್ತು ಪ್ರಾದೇಶಿಕ ಭದ್ರತೆಯ ಮೇಲೆ ತೀವ್ರ ಪರಿಣಾಮ ಬೀರಿತು. ಈ ಸಂಧಾನವು ಸೌದಿ ಅರೇಬಿಯ ಮತ್ತು ಇತರ ತೈಲ ರಾಷ್ಟ್ರಗಳು ಮುಖ್ಯವಾಗಿ ಬಹರೈನ್, ಕುವೈತ್, ಒಮನ್ ಸೌದಿ ಅರೇಬಿಯ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗಳ ರಾಜಕೀಯ ವಲಯಗಳ ಮೇಲೆ ಪ್ರಭಾವ ಬೀರಿತು. ಈ ಎಲ್ಲ ದೇಶಗಳು ಈಜಿಪ್ಟ್ ಮತ್ತು ಅಮೆರಿಕಗಳಿಂದ ಶಾಂತಿ ಸಂಧಾನವನ್ನು ಒಪ್ಪಿಕೊಳ್ಳಲು ಒತ್ತಾಯ ಎದುರಿಸಬೇಕಾಯಿತು. ಆದರೆ, ತೀವ್ರಗಾಮಿ ಅರಬ್ ಪ್ರಭುತ್ವಗಳು ವಿರೋಧಿಸಿದವು. ಸೌದಿ ಅರೇಬಿಯಾ ಅಮೆರಿಕವನ್ನು ಒತ್ತಾಯಿಸಿ ಈಜಿಪ್ಟ್ ನೊಂದಿಗೆ ಪ್ರತ್ಯೇಕವಾಗಿ ವ್ಯವಹರಿಸಬಾರದೆಂದು ವಿನಂತಿಸಿಕೊಂಡರೂ ಜಿಮ್ಮಿ ಕಾರ್ಟರ್ ಸರಕಾರ ತಿರಸ್ಕಾರ ಭಾವನೆಯಿಂದ ನೋಡಿತು.

ಈ ಸಂಬಂಧ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಅಂಕಣಕಾರ್ ಜಕ್ ಎಂಡರ್ಸ್‌ನ ೧೯೭೯ರ ಮೇ ೭ರಲ್ಲಿ ಬರೆದ ಲೇಖನದಲ್ಲಿ ವಿವರಿಸುತ್ತಾ, ಸೌದಿ ಸರಕಾರವು ಅಮೆರಿಕಕ್ಕೆ ಎಚ್ಚರಿಕೆ ನೀಡಿ, ರೇಜ ಶಾಹ ಇರಾನ್‌ನಲ್ಲಿನ ಆಡಳಿತವನ್ನು ಹೆಚ್ಚು ಅವಲಂಬಿಸಕೂಡದು ಎಂದು ಗುಪ್ತವಾಗಿ ಮಾಹಿತಿ ರವಾನಿಸಿತು. ಇವೆಲ್ಲವನ್ನು ಕಾರ್ಟರ್ ಸರಕಾರ ಕಡೆಗಣಿಸಿತ್ತು ಎಂದು ವರದಿ ಮಾಡುತ್ತಾನೆ. ಇದಕ್ಕುತ್ತರವಾಗಿ ಸೌದಿ ಅರೇಬಿಯಾ, ೧೯೭೯ರ  ಏಪ್ರಿಲ್ ನಲ್ಲಿ ಹರಾರ್ಡ್ ಬ್ರೌನ್ ಎಂಬ ಅಮೆರಿಕ ರಕ್ಷಣಾ ಕಾರ್ಯದರ್ಶಿ, ಸೌದಿ ಅರೇಬಿ ಯಾದಲ್ಲಿ ತೈಲ ಉತ್ಪಾದನೆಯನ್ನು ಹೆಚ್ಚಿಸಲು ಸೈನ್ಯದ ಇರುವಿಕೆಗೆ ಅವಕಾಶವನ್ನು ಕೇಳಿದಾಗ ಸೌದಿ ಅರೇಬಿಯಾ ತಿರಸ್ಕರಿಸಿತು. ಈಜಿಪ್ಟ್-ಇಸ್ರೇಲಿ ಶಾಂತಿ ಒಪ್ಪಂದವನ್ನು ಗೌರವಿಸಲು ನಿರಾಕರಿಸಿತು.

ಈ ಬಗೆಯ ಭಿನ್ನಾಭಿಪ್ರಾಯಗಳು ಸೌದಿಗಳೊಂದಿಗೆ ೧೯೭೦ರ ಉದ್ದಕ್ಕೂ ಇದ್ದುದ ರಿಂದ, ಸೌದಿ ಅರೇಬಿಯಾ ಆಗಲಿ, ಅಮೆರಿಕ ಆಗಲಿ ಪರಸ್ಪರ ಸಂಪರ್ಕ ಇಟ್ಟುಕೊಳ್ಳಲು ಬಯಸಲಿಲ್ಲ. ಆದರೆ, ಅಮೆರಿಕದ ಇಬ್ಬರು ನಂಬಿಗಸ್ಥ ಸ್ನೇಹಿತರಾದ ಇರಾನ್‌ನ ರೇಜ ಶಾಹಾ ಮತ್ತು ಈಜಿಪ್ಟ್‌ನ ಅನ್ವರ್ ಸಾದತ್ ಪಶ್ಚಿಮ ಏಷ್ಯಾದ ರಾಜಕೀಯದಿಂದ ದೂರವಾದ ಮೇಲೆ ಅಮೆರಿಕ ಸಾಮ್ರಾಜ್ಯಶಾಹಿ ನಿಜವಾದ ರಾಜಕೀಯ ಅತಂತ್ರವನ್ನು ಎದುರಿಸಿತು. ತಮ್ಮ ಸಾಮ್ರಾಜ್ಯಶಾಹಿ ಪ್ರಭುತ್ವದ ರಕ್ಷಣೆಗೆ ಬೇರೆ ದಾರಿ ಇಲ್ಲದೆ ಸೌದಿ ಅರಸೊತ್ತಿಗೆಯನ್ನು ಅನಿವಾರ್ಯವಾಗಿ ಅವಲಂಬಿಸಬೇಕಾಯಿತು. ಬದಲಾದ ರಾಜಕೀಯ ವಲಯದಲ್ಲಿ ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಪದೇ ಪದೇ ಸೌದಿ ನೇತೃತ್ವದ ಶಾಂತಿ ಸೂತ್ರಗಳು, ಅರಬ್-ಇಸ್ರೇಲಿ ಸಮಸ್ಯೆಯ ಪರಿಹಾರಕ್ಕೆ ಒಂದು ಉತ್ತಮ ಯೋಜನೆ/ಪ್ಲಾನ್ ಆಗಿದ್ದು, ಅದನ್ನು ಎಲ್ಲರೂ ತುಂಬು ಹೃದಯದಿಂದ ಸ್ವಾಗತಿಸಬೇಕು ಎಂದು ಪ್ರಶಂಸಿಸತೊಡಗಿದನು. ಪತ್ರಿಕಾ ಹೇಳಿಕೆಗಳನ್ನು ಅಮೆರಿಕ ಸರಕಾರದ ವತಿಯಿಂದ ಸೌದಿ ಪ್ಲಾನ್ ಕುರಿತು ಬಿಡುಗಡೆ ಮಾಡಲಾಯಿತು. ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸುವುದಾಗಿ ಸೌದಿ ಸರಕಾರಕ್ಕೆ ಆಶ್ವಾಸನೆ ನೀಡಲಾಯಿತು. ಮತ್ತು ಸೌದಿ ಪ್ಲಾನ್ ನ ಪ್ರಕಾರವೇ ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ಸೌದಿ ಸರ್ಕಾರಕ್ಕೆ ಮನವರಿಕೆ ಮಾಡಲಾಯಿತು.

ಅಮೆರಿಕ ಸಾಮ್ರಾಜ್ಯಶಾಹಿಯ ಬದಲಾದ ನಿಲುವು ಒಂದರ್ಥದಲ್ಲಿ ಸೌದಿಗಳಿಗೆ ನೈತಿಕ ನೆಲೆಯಲ್ಲಿ ದೊರೆತ ವಿಜಯವೆಂದೇ ಹೇಳಬೇಕು. ಚಾಣಾಕ್ಷತನದ ರಾಜಕೀಯ ತಂತ್ರಗಳನ್ನು ಅಳವಡಿಸಿ ಅಮೆರಿಕದಂತಹ ದೈತ್ಯ ಸಾಮ್ರಾಜ್ಯಶಾಹಿ ರಾಷ್ಟ್ರವನ್ನು ಹಲವು ಭಿನ್ನಾಭಿಪ್ರಾಯಗಳ ನಡುವೆಯೂ ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದನ್ನು ಗಮನಿಸುವಾಗ ಸೌದಿ ಅರಸೊತ್ತಿಗೆ ಸಹನೆಯಿಂದ ತನ್ನ ಅನನ್ಯತೆಯನ್ನು ಪ್ರಾದೇಶಿಕ, ಅಂತರ್-ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ರಾಜಕೀಯ ವಲಯದಲ್ಲಿ ಪ್ರದರ್ಶಿಸಿಕೊಂಡಿತು. ಇದು ಮುಖ್ಯವಾಗಿ ಸೌದಿ ಅರೇಬಿಯ ವಿದೇಶಾಂಗ ನೀತಿಯಲ್ಲಿ ಅನುಭವಿಸಿದ ವಿಜಯವೂ ಹೌದು.

ಸಾದತ್‌ನ ಕೊಲೆಯಾದ ನಂತರ, ಅರಬ್ ಪತ್ರಿಕೆಗಳು ಟೀಕಾ ಪ್ರಹಾರವನ್ನೇ ಅವನು ಯೋಜಿಸಿದ ಶಾಂತಿ ಸೂತ್ರಗಳ ಕುರಿತು ನಡೆಸಿದವು. ಎಲ್ಲ ಅರಬ್ ನಾಯಕರು ಮುಂದೇನಾಗಬಹುದೆಂದು ನಿರೀಕ್ಷಿಸತೊಡಗಿದರು. ಅವನ ಉತ್ತರಾಧಿಕಾರಿಯಾಗಿ ಬಂದ ಹೊಸ್‌ನಿ ಮುಬಾರಕ್, ಸಾದತ್‌ನ ನಿಲುವನ್ನೇ ಪ್ರತಿಪಾದಿಸುತ್ತಾನೊ ಅಥವಾ ಅರಬ್ ಜಗತ್ತಿನೊಂದಿಗೆ ಗುರುತಿಸಿಕೊಳ್ಳುತ್ತಾನೊ ಇತ್ಯಾದಿ ಪ್ರಶ್ನೆಗಳು ಅರಬ್ ನಾಯಕರನ್ನು ಕಾಡುತ್ತವೆ. ಎಲ್ಲ ಅರಬ್ ರಾಷ್ಟ್ರಗಳು ಇಸ್ರೇಲ್ ಜೊತೆಗೆ ಶಾಂತಿಯುತವಾಗಿ ಬದುಕಲು ಒಪ್ಪಿಗೆ ಸೂಚಿಸಿದ್ದವು. ಆದರೆ, ಇಂತಹ ಸಂಧಾನದಲ್ಲಿ ಪಿಎಲ್‌ಓ ಸಕ್ರಿಯ ಪಾತ್ರ ವಹಿಸಬೇಕೆಂದು ಪಶ್ಚಿಮ ಪರವಿರುವ ಅರಬ್ ದೇಶಗಳಾದ – ಜೋರ್ಡಾನ್, ಕುವೈತ್, ಸೌದಿ ಅರೇಬಿಯ ಮತ್ತು ಯುನೈಟೆಡ್ ಎಮಿರೇಟ್ಸ್ ಒತ್ತಾಯಿಸಿದ್ದವು. ಮುಬಾರಕ್ ಮಾತ್ರ ಸಾದತ್‌ನ ಎಲ್ಲ ಧೋರಣೆಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ಆರಂಭದಲ್ಲಿ ಹೇಳಿದ್ದನು. ಇದೇ ರೀತಿ ಸಾಧತ್ ಅಧಿಕಾರಕ್ಕೆ ಬಂದಾಗ ತನ್ನ ಸರಕಾರ ಅಬ್ದುಲ್ ನಾಸರನ ಧೋರಣೆಗಳನ್ನೆ ಮುಂದುವರಿಸುವುದಾಗಿ ಹೇಳಿದ್ದನು. ನಂತರ ಅವೆಲ್ಲವನ್ನು ಗಾಳಿಗೆ ತೂರಿ ಅರಬ್ ಜಗತ್ತಿನ ಬದ್ಧ ವೈರಿಯಾದ ಇಸ್ರೇಲ್ ಜೊತೆಗೆ ಕೈಜೋಡಿಸಿದ್ದನು. ಅದೇ ರೀತಿ ಮುಬಾರಕ್ ಏಕೆ ಮಾಡಬಾರದು ಎಂಬ ಪ್ರಶ್ನೆಯು ಅನೆಯಕರಲ್ಲಿ ಮೂಡಿತ್ತು.

ಸಾದತ್‌ನ ಕೊಲೆ ಬಹುಶಃ ಕ್ಯಾಂಪ್ ಡೇವಿಡ್ ಶಾಂತಿ ಸಂಧಾನದ ಮುಂದುವರಿಕೆಗೆ ಕಡಿವಾಣ ಹಾಕಿದ್ದು, ಸೌದಿಗಳ ಪ್ರಭಾವವನ್ನು ಉತ್ತುಂಗಗೇರಿಸಿತ್ತು. ಇದನ್ನು ಅಮೆರಿಕ ಸಾಮ್ರಾಜ್ಯಶಾಹಿಯು ಒಪ್ಪಿಕೊಂಡಿತು. ಇಷ್ಟಾಗಿಯೂ, ಒಂದು ವಿಷಯವನ್ನು ಪಶ್ಚಿಮ ಏಷ್ಯಾದ ಬದಲಾದ, ಬದಲಾಗುತ್ತಿರುವ ಮತ್ತು ಮತ್ತು ಮುಂದಿನ ದಿನಗಳಲ್ಲಿ ಬದಲಾಗಬಹುದಾದ ರಾಜಕೀಯ ವಲಯವನ್ನು ಕುರಿತು ಹೇಳಬೇಕಾಗುತ್ತದೆ. ಅದೇನೆಂದರೆ, ಸಾಧತ್‌ನ ಅಕಾಲಿಕ ಮರಣವು ವಿಶೇಷವಾದ ಘಟನೆ ನಿಜವಾದರೂ, ಅರಬ್‌ರಿಗೆ ಇದೇನು ಹೊಸತಲ್ಲ. ಹಾಗಾಗಿ ಈ ಘಟನೆಯಿಂದ ಅರಬ್ ಜಗತ್ತೇ ಬಿಕ್ಕಟ್ಟಿನಲ್ಲಿ ಸಿಲುಕಿ ಕೊಳ್ಳುತ್ತದೆ ಎಂದು ಹೇಳಲಾಗದು. ಇಂತಹ ಘಟನೆಗಳನ್ನು ಹೀಗೆ ಅವಲೋಕಿಸಬಹುದು.

೧೯೪೮ರಲ್ಲಿ ಪ್ಯಾಲೇಸ್ತೀನಿನಲ್ಲಿ ಯಹೂದಿಗಳು ೫೦ ವರ್ಷಗಳ ಕಾಲ ಸತತ ಹೋರಾಟ ನಡೆಸಿ ತಮ್ಮದೇ ಸ್ವತಂತ್ರ್ಯ ರಾಜ್ಯ ಸ್ಥಾಪನೆ ಮಾಡಿದ ಕಾರಣ ಅಲ್ಲಿ ಸುಮಾರು ೭ನೆಯ ಶತಮಾನದಿಂದಲೇ ವಾಸಿಸುತ್ತಿದ್ದ ಪ್ಯಾಲೇಸ್ತೀನಿ ಅರಬ್‌ರು ಅನುಭವಿಸಿದ ದುರಂತ. ೧೯೫೧ರಲ್ಲಿ ಜೋರ‍್ಡಾನ್ ದೊರೆ ಅಬ್ದುಲ್ಲಾನನ್ನು ಜೆರುಸಲೇಂನಲ್ಲಿ ಕೊಲೆ ಮಾಡಲಾಯಿತು. ೧೯೫೨ರಲ್ಲಿ ಈಜಿಪ್ಟ್ ಅರಸೊತ್ತಿಗೆಯನ್ನು ಪದಚ್ಯುತಗೊಳಿಸಲಾಯಿತು. ೧೯೫೭ರಲ್ಲಿ ಸೂಯೆಜ್ ಕಾಲುವೆ ಸಂಬಂಧ ಎರಡನೆಯ ಅರಬ್ ಇಸ್ರೇಲಿ ಯುದ್ಧ ಆರಂಭ ವಾಯಿತು. ೧೯೫೮ರಲ್ಲಿ ಇರಾಕ್‌ನಲ್ಲಿ ಹಷಿಮೈಟ್ ಅರಸೊತ್ತಿಗೆಯನ್ನು ಪದಚ್ಯುತ ಗೊಳಿಸಲಾಯಿತು. ೧೯೬೧ರಲ್ಲಿ ಯಮಾನ್‌ನಲ್ಲಿ ಅರಸೊತ್ತಿಗೆಯನ್ನು ಮೂಲೆಗುಂಪು ಮಾಡಲಾಯಿತು. ೧೯೬೧-೬೭ರವರೆಗೆ ಅನೇಕ ನಾಗರಿಕ ಯುದ್ಧಗಳು ಸಿರಿಯಾದಲ್ಲಿ ನಡೆದವು. ೧೯೬೭ರಲ್ಲಿ ಮೂರನೆಯ ಅರಬ್ ಇಸ್ರೇಲಿ ಯುದ್ಧ ಆರಂಭವಾಯಿತು. ೧೯೬೯ರಲ್ಲಿ ಲಿಬಿಯಾದಲ್ಲಿ ಸಾನುಸುಯಿ ಅರಸೊತ್ತಿಗೆಯನ್ನು ಅಧಿಕಾರದಿಂದ ಇಳಿಸಲಾಯಿತು. ೧೯೭೦ರ ಸೆಪ್ಟೆಂಬರ್‌ನಲ್ಲಿ ಜೋರ‍್ಡಾನ್‌ನಲ್ಲಿ ನಾಗರಿಕ ಯುದ್ಧ ನಡೆಯಿತು. ೧೯೭೨ರಲ್ಲಿ ಜೋರ‍್ಡಾನಿನ ಪ್ರಧಾನಮಂತ್ರಿ ವಸ್ಪಿ ಅಲ್ ತಾಲ್‌ನನ್ನು ಕೈರೋದಲ್ಲಿ ಕೊಲೆ ಮಾಡಲಾಯಿತು. ಅಕ್ಟೋಬರ್ ೧೯೭೩ರಲ್ಲಿ ನಾಲ್ಕನೆಯ ಅರಬ್ ಇಸ್ರೇಲಿ ಯುದ್ಧ ಆರಂಭವಾಯಿತು. ೧೯೭೩-೭೪ರಲ್ಲಿ ಇಸ್ರೇಲ್ ಪರವಿರುವ ಪಶ್ಚಿಮ ರಾಷ್ಟ್ರಗಳ ವಿರುದ್ಧ ಸೌದಿ ನೇತೃತ್ವದಲ್ಲಿ ಅರಬ್ ಸಮುದಾಯ ಆಯಿಲ್ ಎಂಬಾರ್ಗೂವನ್ನು ಹೇರಿತು. ೧೯೭೫-೭೬ರಲ್ಲಿ ಲೆಬನಾನ್‌ನಲ್ಲಿ ಇನ್ನೊಂದು ನಾಗರಿಕ ಯುದ್ಧ ಆರಂಭವಾಯಿತು. ೧೯೭೯ರಲ್ಲಿ ಇರಾನ್‌ನಲ್ಲಿ ಇಸ್ಲಾಮಿಕ್ ರೆವಲ್ಯೂಶನ್ ನಡೆಯಿತು ಮತ್ತು ೧೯೮೧ರಲ್ಲಿ ಅನ್ವರ್ ಸಾಧತ್‌ನನ್ನು ಕೈರೋದಲ್ಲಿ ಕೊಲೆ ಮಾಡಲಾಯಿತು. ಈ ಎಲ್ಲ ಘಟನೆಗಳು ಒಂದಲ್ಲ ಒಂದು ರೀತಿಯಲ್ಲಿ ಪ್ಯಾಲೇಸ್ತೀನಿ ಸಮಸ್ಯೆಯನ್ನು ಆವರಿಸಿಕೊಂಡಿವೆ. ಆದರೂ ಪ್ಯಾಲೇಸ್ತೀನಿ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದ್ದು, ಇದರಿಂದ ನಿರಂತರವಾದ ನಷ್ಟ, ನೋವು ಮತ್ತು ನರಳಿಕೆಯನ್ನು ಅರಬ್ ಸಮುದಾಯ ಎದುರಿಸುತ್ತಲೇ ಇದೆ.

ಪಶ್ಚಿಮದ ದೇಶಗಳು ಈ ಘಟನೆಗಳ ತೀವ್ರತೆಯನ್ನು ಮರೆಯಬಹುದು. ಆದರೆ, ಅರಬ್ ಮಂದಗಾಮಿಗಳು ಮರೆಯುವಂತಿಲ್ಲ. ಈ ಎಲ್ಲ ಪ್ರಭುತ್ವಗಳನ್ನು, ರಾಜಕೀಯ ಒಗ್ಗಟ್ಟು ಸಾಧಿಸಲು ಪ್ಯಾಲೇಸ್ತೀನ್ ಪ್ರಶ್ನೆ ಒಂದು ಪವಿತ್ರರಂಗ. ಹಾಗಾಗಿ ಸೌದಿ ಅರೇಬಿಯಾ ಅರಂಭಿಸಿದ ಶಾಂತಿ ಸಂಧಾನ ಪ್ರಕ್ರಿಯೆ ಖಾಯಂ ಶಾಂತಿ ನೆಲೆಸುವಿಕೆಯನ್ನು ಕುರಿತು ಚರ್ಚಿಸುವ ಅಧಿಕಾರಿ ವರ್ಗಗಳಿಗೆ ಮುಖ್ಯವಾಗುತ್ತದೆ. ಅದಕ್ಕಾಗಿಯೇ ಅಮೆರಿಕ ಕೂಡ ಆರಂಭದಲ್ಲಿ ವಿರೋಧ ಮಾಡಿದರೂ, ನಂತರ ಸೌದಿಗಳ ಪ್ರಯತ್ನವನ್ನು ಗೌರವಿಸಿತು. ಈ ರೀತಿಯ ಗೌರವ ಸೌದಿ ಅರಸೊತ್ತಿಗೆಗೆ ದಕ್ಕಿದೆ ಎಂದರೆ ಅದು ಅವರ ರಾಜತಾಂತ್ರಿಕ ಚಾಣಾಕ್ಷತನವೇ ಸರಿ ಮತ್ತು ತಮ್ಮ ಇರುವಿಕೆಯ ಸುತ್ತ ಅವರು ಹೆಣೆದಿರುವ ಕಥಾ ಸಾರಾಂಶ.

 

ಪರಾಮರ್ಶನಗ್ರಂಥಗಳು

೧. ಫ್ಯಾನ್ಸಿ ಎಂ., ೧೯೯೯. ಸೌದಿ ಅರೆಬಿಯಾ ಆಂಡ್ ದಿ ಪಾಲಿಟಿಕ್ಸ್ ಆಫ್ ಡೀಸೆಂಟ್, ನ್ಯೂಯಾರ್ಕ್.

೨. ಸಪ್ರಾನ್ ಎನ್., ೧೯೮೬. ಸೌದಿ ಅರೆಬೀಯಾ: ದಿ ಸೀಸ್ಲೆಸ್ ಕ್ವಸ್ಟ್ ಫಾರ್ ಸೆಕ್ಯೂರಿಟಿ, ಕೇಂಬ್ರಿಡ್ಜ್.

೩. ಇಸ್‌ಮೈಲ್ ಟಿ.ವೈ., ೧೯೮೬. ಇಂಟರ್ನ್ಯಾಷನಲ್ ರಿಲೇಶನ್ಸ್ ಆಫ್ ದಿ ಕಂಟೆಂಪರರಿ ಮಿಡ್ಲ್ ಈಸ್ಟ್: ಸ್ಟಡಿ ಇನ್ ವರ್ಲ್ಡ್ ಪಾಲಿಟಿಕ್ಸ್.