ಜಿಯೋನಿಸಂ, ಜಗತ್ತಿನಾದ್ಯಂತ ಯಹೂದಿಗಳು ಆರಂಭಿಸಿರುವ ರಾಷ್ಟ್ರವಾದಿ ಚಳವಳಿ. ಇದರ ಮುಖ್ಯ ಉದ್ದೇಶ ಪ್ಯಾಲೇಸ್ತೀನ್‌ನಲ್ಲಿ ತಮ್ಮ ಪ್ರಭುತ್ವ ವನ್ನು ಸ್ಥಾಪಿಸಿ ತಮ್ಮದೇ ಸ್ವತಂತ್ರ ರಾಷ್ಟ್ರ ನಿರ್ಮಾಣ ಮಾಡುವುದು. ಎಲ್ಲ ಸಮಕಾಲೀನ ಚಳವಳಿಗಳಂತೆ ಜಿಯೋನಿಸಂ ಕೂಡ ಫ್ರೆಂಚ್ ಕ್ರಾಂತಿ ಮತ್ತು ಜ್ಞಾನೋದಯ ಯುಗದ ಲೌಕಿಕ, ತರ್ಕನಿಷ್ಠ, ಸಮಾನತೆ ಮತ್ತು ಪ್ರಜಪ್ರಭುತ್ವ ತತ್ವಗಳಿಂದ ಪ್ರೇರಣೆ ಪಡೆದ ಚಳವಳಿ ಮುಖ್ಯವಾಗಿ ಇದು ಒಂದು ಆಂದೋಲನವಾಗಿ ಯುರೋಪಿನಾದ್ಯಂತ ಯಹೂದಿ ಸಮುದಾಯದ ವಿರುದ್ಧ ಎದ್ದಿರುವ ಜನಾಂಗ ವಿರೋಧಿ ಘಟನೆಗಳಿಗೆ ಪ್ರತಿಕ್ರಿಯೆಯಾಗಿ ಉಗಮವಾಯಿತು. ಯಹೂದಿ ರಾಷ್ಟ್ರ ಪರಿಕಲ್ಪನೆಯು, ಯುರೋಪಿನಲ್ಲಿ ಯಹೂದಿ ಸಮುದಾಯ ಎದುರಿಸುವ ಸಮಸ್ಯೆಗೆ ಪರಿಹಾರವೆಂದು ಪರಿಗಣಿಸಲಾಯಿತು. ಜೊತೆಗೆ, ಅದೊಂದು ಹಲವು ಚಿಂತಕರ, ವಿಚಾರವಾದಿಗಳ, ವ್ಯಕ್ತಿಗಳ ಅನುಭವ ಮತ್ತು ನಂಬಿಕೆಗಳ ಪ್ರಭಾವದಿಂದ ಬೆಳೆದ ಘಟನೆ.

ಆರಂಭದಲ್ಲಿ ಇದು ಫ್ರಾನ್ಸ್ ದೇಶದಲ್ಲಿ ಪ್ರಭಾವಿಯಾಗಿದ್ದು, ನಂತರ ಯುರೋಪಿ ನಾದ್ಯಂತ ಹರಡಿತು. ಒಂದರ್ಥದಲ್ಲಿ ಫ್ರಾನ್ಸ್ ದೇಶದಲ್ಲಿ ಕ್ರಾಂತಿಯ ನಂತರ ೧೭೯೧ ಮತ್ತು ೧೭೯೩ರ ಸಂವಿಧಾನದಲ್ಲಿ ಸೇರ್ಪಡಿಸಿದ ಅಂಶಗಳು, ಅಲ್ಲಿ ಸುಮಾರು ೨೦೦೦ ವರ್ಷಗಳಿಂದ ನೆಲೆಸಿರುವ ಯಹೂದಿ ಸಮುದಾಯಕ್ಕೆ ಮುಳುವಾಗಿತ್ತು. ಸಂವಿಧಾನದ ಪ್ರಕಾರ ಫ್ರಾನ್ಸ್ ದೇಶದಲ್ಲಿ ಒಂದೇ ಭಾಷೆ, ಸಂಸ್ಕೃತಿ, ಪೌರತ್ವ ಮತ್ತು ಅನನ್ಯತೆಯನ್ನು ಅನುಷ್ಠಾನಗೊಳಿಸಿ ಅಭಿವೃದ್ದಿಸಿಕೊಳ್ಳಲು ಸರಕಾರವೇ ಯೋಜನೆಯೊಂದನ್ನು ಸಿದ್ಧಪಡಿಸಿತು. ಈ ಪರಿಕಲ್ಪನೆಯಂತೆ, ಸರಕಾರವು ಯಹೂದಿಗಳನ್ನು ಫ್ರೆಂಚ್ ಬಹುಸಂಸ್ಕೃತಿಯೊಂದಿಗೆ ವಿಲೀನಗೊಳ್ಳಲು ಒಂದು ವಿಶೇಷ ಸುಧಾರಣೆಯನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿತು. ಅದು ನಾಗರಿಕ ವಿಮೋಚನೆ. ಅದರಂತೆ ಅಲ್ಪಸಂಖ್ಯಾತ ಯಹೂದಿ ಸಂಸ್ಕೃತಿ, ಬಹುಸಂಖ್ಯಾತ ಫ್ರೆಂಚ್ ಸಂಸ್ಕೃತಿಯೊಂದಿಗೆ ವಿಲೀನಗೊಳ್ಳಲು ಅವಕಾಶ ನೀಡಿತು. ಏಕೆಂದರೆ, ಸಂವಿಧಾನದ ಅನ್ವಯ ಫ್ರಾನ್ಸ್ ದೇಶದಲ್ಲಿ ಒಂದೇ ಸಂಸ್ಕೃತಿ, ಭಾಷೆ, ಆಚಾರ ವಿಚಾರ, ನಂಬಿಕೆ, ಧರ್ಮ ಮತ್ತು ಪೌರತ್ವ ಇರಲು ಸಾಧ್ಯ. ಎಲ್ಲರನ್ನು ಫ್ರೆಂಚರೆಂದೇ ಕರೆಯಲಾಗುವುದು. ಅವರು ಆಡುವ ಭಾಷೆ ಫ್ರೆಂಚ್, ಅವರು ಪಾಲಿಸುವ ಸಂಸ್ಕೃತಿ ಫ್ರೆಂಚ್, ಅವರ ನಂಬಿಕೆ ಫ್ರೆಂಚ್, ಪೌರತ್ವ ಫ್ರೆಂಚ್, ಫ್ರೆಂಚ್ ಬಿಟ್ಟು ಅನ್ಯ ಸಂಸ್ಕೃತಿ, ಭಾಷೆಗೆ ಅವಕಾಶವಿಲ್ಲ. ಇದು ಒಂದು ಆಂದೋಲನವು ಹೌದು, ಸುಧಾರಣೆಯೂ ಹೌದು.

ಯಹೂದಿಗಳಿಗೆ ಇಂತಹ ಸುಧಾರಣೆ ಆಪತ್ತು ತಂದಿತು. ಸುಮಾರು ೨೦೦೦ ವರ್ಷಗಳ ಕಾಲ ಫ್ರಾನ್ಸ್ ಅವರಿಗೆ ಅಸರೆ ಕೊಟ್ಟ ದೇಶ. ಆ ದೇಶದ ಸರ್ವತೋಮುಖ ಅಭಿವೃದ್ದಿಯಲ್ಲಿ ಯಹೂದಿಯರು ಸಕ್ರಿಯವಾಗಿ ಪಾಲ್ಗೊಂಡರು. ಆ ದೇಶ ಅವರಿಗೆ ಎಲ್ಲ ಅಮೆರಿಕ ರಂಗದಲ್ಲೂ ಸಾಕಷ್ಟು ಸ್ವಾತಂತ್ರ್ಯ, ಸ್ವಾಯತ್ತತೆ ಮತ್ತು ತಮ್ಮದೇ ಅನನ್ಯತೆಯನ್ನು ಉಳಿಸಿಕೊಳ್ಳುವ ಅವಕಾಶ ಮಾಡಿಕೊಟ್ಟಿತು. ಧಾರ್ಮಿಕ ಸ್ವಾಯತ್ತತೆ, ಸಾಮಾಜಿಕ ಸ್ವಾತಂತ್ರ್ಯ ಆರ್ಥಿಕ ಸ್ವಾತಂತ್ರ್ಯವನ್ನು ಮತ್ತು ರಕ್ಷಣೆಯನ್ನು ಫ್ರೆಂಚ್ ಸರಕಾರ ನೀಡಿತ್ತು. ಇದು ಎಲ್ಲ ಆಸರೆ ಕೊಟ್ಟ ದೇಶಗಳು ಯಹೂದಿ ಸಮುದಾಯದ ಪರವಾಗಿ ತೆಗೆದುಕೊಂಡ ನಿರ್ಧಾರ. ಈ ಕಾರಣಕ್ಕಾಗಿಯೇ ಹಿಂದೆ ಚರ್ಚಿಸಿದಂತೆ ಯಹೂದಿಗಳು ಆಯಾಯ ಹೋಸ್ಟ್ ದೇಶಗಳಲ್ಲಿ ಒಂದು ಸಮುದಾಯವಾಗಿ, ತಮ್ಮ ಅನನ್ಯತೆಯನ್ನು ಉಳಿಸಿಕೊಂಡು ಬಂದಿದ್ದರು. ಆ ದೇಶದಲ್ಲಿ ರಾಜಕೀಯವಾಗಿ ಪೌರತ್ವ ಪಡೆಯದಿದ್ದರೂ, ಆ ದೇಶ ಅವರದ್ದಲ್ಲದಿದ್ದರೂ, ಇಂತಹ ಒಳ್ಳೆಯ ವಾತಾವರಣ ಅವರು ಅನುಭವಿಸಿದ್ದರು. ಅವರದ್ದೇ ಭಾಷೆ ಸಂಸ್ಕೃತಿ ನಂಬಿಕೆ, ಆಚಾರ ವಿಚಾರಗಳು, ಆಹಾರ ಪದ್ಧತಿ, ಉಡುಗೆ ತೊಡುಗೆಗಳನ್ನು ನಿರಾತಂಕವಾಗಿ ಪಾಲಿಸಿಕೊಂಡು ಬಂದಿದ್ದರು. ಇದು ಅವರನ್ನು ಆಯಾಯ ಹೋಸ್ಟ್ ದೇಶಗಳಲ್ಲಿ ಮುಖ್ಯವಾಹಿನಿಯಿಂದ ಪ್ರತ್ಯೇಕವಾಗಿರಿಸಿತು.

ಆದರೆ, ಫ್ರೆಂಚ್ ಸರಕಾರ ಸಂವಿಧಾನದಂತೆ, ಸಿವಿಲ್ ಇಮ್ಯಾನ್ಸಿಪೇಷನ್ ಯೋಜನೆಯಡಿಯಲ್ಲಿ ಒತ್ತಾಯಪೂರ್ವಕವಾಗಿ ಅವರ ಬಹುಸಂಸ್ಕೃತಿಯೊಂದಿಗೆ ವಿಲೀನ ಗೊಳ್ಳಲು ಕರೆ ನೀಡಿರುವ ಕ್ರಮ ಯಹೂದಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿತು ಮತ್ತು ಹಲವು ಆಯಾಮದ ಚರ್ಚೆಯನ್ನು ಹುಟ್ಟು ಹಾಕಿತು. ಈ ಯೋಜನೆಯನ್ನು ಒಪ್ಪಿಕೊಳ್ಳ ದಿರುವುದಕ್ಕೆ ಯಹೂದಿಗಳಿಗೆ ಪ್ರಬಲವಾದ ಕಾರಣಗಳೂ ಇವೆ ತಮ್ಮ ದೇಶವನ್ನು ರೋಮನ್ನರು ಆಕ್ರಮಿಸಿದ ನಂತರ ಬಿಟ್ಟು ಜಗತ್ತಿನಾದ್ಯಂತ ಚದುರಿ ಹೋದ ಯಹೂದಿಗಳು, ಜಗತ್ತಿನ ಯಾವ ಭಾಗದಲ್ಲಿದ್ದರೂ, ಎಲ್ಲ ಯಹೂದಿಗಳು ಸಮಾನ ರೀತಿಯ ಸ್ವಾಯತ್ತ ಜೀವನ ಕ್ರಮವನ್ನು ೨೦೦೦ ಸಾವಿರ ವರ್ಷಗಳ ಕಾಲದುದ್ದಕ್ಕೂ ಪಾಲಿಸಿಕೊಂಡು ಬಂದವರು. ಹಿಬ್ರೂ ಭಾಷೆ ಅವರೆಲ್ಲರಿಗೂ ಸಂಪರ್ಕಕ್ಕೆ ಮಾಧ್ಯಮವಾಗಿತ್ತು. ಆಡುಭಾಷೆಯಾಗಿತ್ತು. ಪ್ರಾರ್ಥನೆಗೆ ಬಳಸುವ ಭಾಷೆಯಾಗಿತ್ತು. ಹಾಗೆಯೇ ಅವರ ಸಂಸ್ಕೃತಿ, ಧರ್ಮ, ಹಾಗಾಗಿ ಈ ೨೦೦೦ ವರ್ಷಗಳ ಗಡಿಪಾರು ಪರಿಸ್ಥಿತಿಯಲ್ಲಿ ಜಗತ್ತಿನ ಯಾವ ಮೂಲೆಯಲ್ಲಿದ್ದರೂ, ಅವರು ೨೦೦೦ ವರ್ಷಗಳ ಹಿಂದೆ ಪ್ಯಾಲೇಸ್ತೀನ್ ಬಿಟ್ಟು ಹೋಗುವಾಗ ಯಾವ ಸಂಸ್ಕೃತಿ ಯನ್ನು, ಭಾಷೆಯನ್ನು, ಧರ್ಮವನ್ನು, ಆಚಾರ ವಿಚಾರವನ್ನು ಪಾಲಿಸುತ್ತಿದ್ದಾರೋ, ಅದನ್ನೇ ನಿರಾತಂಕವಾಗಿ ಈ ಆಸರೆ ನೀಡಿದ ದೇಶಗಳಲ್ಲಿ ಪಾಲಿಸಿದ್ದರು ಮುಂದುವರಿಸಿದ್ದರು ಮತ್ತು ಪ್ರಬುದ್ಧಗೊಳಿಸಿದರು. ಇದಕ್ಕೆ ಅವರ ದೇವರ ಆಶೀರ್ವಾದವಿದೆ ಎಂಬುದು ದೃಢ ನಂಬಿಕೆ. ಈಗ ಫ್ರಾನ್ಸ್‌ನಲ್ಲಿ ಅವರ ಮುಂದಿರುವ ಪ್ರಶ್ನೆ ಫ್ರೆಂಚರ ಬಹು ಸಂಸ್ಕೃತಿಯೊಂದಿಗೆ ವಿಲೀನಗೊಳ್ಳಬೇಕೇ ಎಂಬುದು. ವಿಲೀನಗೊಂಡರೆ ತಮ್ಮ ಸಮುದಾಯ ಉಗಮವಾದಂದಿನಿಂದ ಪಾಲಿಸಿಕೊಂಡ ಸಂಸ್ಕೃತಿ ಯನ್ನು, ಧರ್ಮವನ್ನು, ಭಾಷೆಯನ್ನು, ಆಚಾರ ವಿಚಾರಗಳನ್ನು ತ್ಯಜಿಸಿ ಹೊಸತೊಂದು ಸಂಸ್ಕೃತಿಯೊಂದಿಗೆ ವಿಲೀನಗೊಳ್ಳಬೇಕು ಅಥವಾ ಒಪ್ಪಿಕೊಳ್ಳಬೇಕು. ಇದು ಅಸಾಧ್ಯ. ಏಕೆಂದರೆ, ಹಾಗೇನಾದರೂ ಆದ ಪಕ್ಷದಲ್ಲಿ ಆ ಕ್ರಮ ದೇವರ ಆಶ್ವಾಸನೆಯನ್ನು ಉಲ್ಲಂಘಿಸಿದಂತೆ ಆಗುತ್ತದೆ.

ಇನ್ನೊಂದು ಆಯಾಮದಲ್ಲೂ ಚರ್ಚೆ ಆರಂಭವಾಗುತ್ತದೆ. ಅದೇನೆಂದರೆ, ಬೈಬಲ್‌ನಲ್ಲಿರುವ ಆಧಾರದ ಪ್ರಕಾರ ಮತ್ತು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರು ಮುಂದುವರಿಸಿಕೊಂಡು ಬಂದ ನಂಬಿಕೆಯಂತೆ, ಪ್ಯಾಲೇಸ್ತೀನ್ ಯಾವತ್ತೂ ಅವರ ದೇಶ, ಅವರಿಗೆ ದೇವರು ಕೊಟ್ಟ ಭೂಮಿ. ಅವರು ಅಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಭುತ್ವ ಸ್ಥಾಪಿಸಲಿ, ಸ್ಥಾಪಿಸದಿರಲಿ ಅಥವಾ ತಮ್ಮದೇ ವಸತಿಗಳನ್ನು ಖಾಯಂ ಆಗಿ ಉಳಿಸಿಕೊಳ್ಳಲು ಯಶಸ್ವಿ ಆಗಲೀ/ಆಗದಿರಲಿ, ಎಂದೆಂದಿಗೂ ಪ್ಯಾಲೇಸ್ತೀನ್/ಇಸ್ರೇಲ್ ಅವರ ಮೂಲ ಸ್ಥಾನ. ಅವರ ಸಂಸ್ಕೃತಿಯನ್ನು, ಭಾಷೆಯನ್ನು, ಧರ್ಮವನ್ನು ತಮ್ಮ ರಾಷ್ಟ್ರದ ಸಂಪತ್ತೆಂದು ಪ್ರಬುದ್ಧಗೊಳಿಸುವುದು ಸಾಧ್ಯವಾಗುವುದು. ಆ ದೇವರು ಕೊಟ್ಟ ಭೂಮಿಯಲ್ಲಿ ತಮ್ಮ ಸ್ವತಂತ್ರ ಪ್ರಭುತ್ವವನ್ನು, ಅನನ್ಯತೆಯನ್ನು ಸ್ಥಾಪನೆ ಮಾಡಿದಾಗ ಮಾತ್ರ ಸಾಧ್ಯ. ಆಸರೆ ನೀಡಿದ ದೇಶಗಳಲ್ಲಿ ಎಷ್ಟೇ ಶತಮಾನಗಳ ಕಾಲ ನಿಂತರೂ, ಅವರ ಸ್ವತಂತ್ರ ಇರುವಿಕೆಯನ್ನಾಗಲೀ, ಅನನ್ಯತೆಯನ್ನಾಗಲೀ, ಗಟ್ಟಿಗೊಳಿಸುವುದು ಅಸಾಧ್ಯ. ತಮ್ಮ ಸ್ವತಂತ್ರ ಭಾಷೆ, ಧರ್ಮ ಮತ್ತು ಸಂಸ್ಕೃತಿಯನ್ನು ಫ್ರಾನ್ಸ್ ದೇಶದಲ್ಲಿ ಅಭಿವೃದ್ದಿ ಗೊಳಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಅದು ಅವರ ದೇಶವಲ್ಲ. ಹಾಗಾಗಿ ಪೌರತ್ವ ಹಕ್ಕನ್ನು ಯಹೂದಿಗಳು ಫ್ರಾನ್ಸ್ ದೇಶದಲ್ಲಿ ಪಡೆಯಲು ಆಗುವುದಿಲ್ಲ. ಎಲ್ಲ ಸಮುದಾಯದವರೂ ಆ ಹಕ್ಕನ್ನು ಅನುಭವಿಸುವುದು ತಮ್ಮ ಮೂಲ ದೇಶದಲ್ಲಿ ಮಾತ್ರ. ಫ್ರಾನ್ಸ್ ದೇಶ ಯಾವ ಕಾರಣಕ್ಕೂ ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅವಕಾಶ ಕೊಡುವುದಿಲ್ಲ. ಮತ್ತು ಯಹೂದಿಗಳು ಅಲ್ಲಿ ಅಂತಹ ಪ್ರಯತ್ನ ಮಾಡುವುದು ಕೂಡ ಅವರ ನಂಬಿಕೆಯ ಉಲ್ಲಂಘನೆ ಎಂದು ಸಿವಿಲ್ ಇಮ್ಯಾನ್ಸಿಪೇಷನ್ ಯೋಜನೆಯಡಿಯಲ್ಲಿ ಫ್ರೆಂಚ್ ಸರಕಾರ ಕರೆ ಕೊಟ್ಟಂತೆ, ಫ್ರೆಂಚ್ ಸಂಸ್ಕೃತಿಯೊಂದಿಗೆ ವಿಲೀನಗೊಳ್ಳುವುದನ್ನು ಯಹೂದಿ ಸಮುದಾಯ ತಿರಸ್ಕರಿಸಿತು.

ಯಹೂದಿಗಳ ಪ್ರತಿಕ್ರಿಯೆ, ಫ್ರಾನ್ಸ್‌ನಾದ್ಯಂತ ಅವರ ವಿರುದ್ಧ ದ್ವೇಷ ಭಾವನೆಯನ್ನು ಹುಟ್ಟು ಹಾಕಿತು. ಇದನ್ನು ಜನಾಂಗ ವಿರೋಧಿ ಎಂದೂ ಕರೆಯಲಾಯಿತು. ನಂತರ, ಇಡೀ ಯುರೋಪಿನಾದ್ಯಂತ ಈ ಭಾವನೆ ಹುಟ್ಟಿಕೊಂಡು, ಕಂಡ ಕಂಡಲ್ಲಿ ಯಹೂದಿ ಸಮುದಾಯವನ್ನು ಹಿಂಸಿಸಲಾಯಿತು. ಅವರನ್ನು ಸೆರೆ ಹಿಡಿದು ಶಿಕ್ಷಿಸಲಾಯಿತು. ಅನುಮಾನ ದಿಂದ ನೋಡಲಾಯಿತು ಮತ್ತು ಕೊಲ್ಲಲಾಯಿತು. ಸುಮಾರು ದಶಕಗಳ ಕಾಲ ಈ ಕಾರ್ಯಕ್ರಮ ಮುಂದುವರಿಯಿತು. ಇದರಿಂದ ಯಹೂದಿಗಳು ಹೀನಾಯ ಪರಿಸ್ಥಿತಿಯನ್ನು ತಲುಪಿ, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಪ್ರವೃತ್ತರಾದರು.

ಈ ರೀತಿಯ ಚಿಂತನೆ ಹೆಚ್ಚಾಗಿ ೧೯ನೇ ಶತಮಾನದ ಎರಡನೇ ಭಾಗದಲ್ಲಿ ಬೆಳೆಯಿತು. ಇದು ಇನ್ನೊಂದು ಬಗೆಯ ಸೈದ್ಧಾಂತಿಕ ನೆಲೆಯಲ್ಲಿ ಆದ ಚರ್ಚೆ. ಮುಖ್ಯವಾಗಿ ರಷ್ಯಾ, ಆಸ್ಟ್ರಿಯಾ, ಜರ್ಮನಿ ಮತ್ತು ಫ್ರಾನ್ಸ್ ದೇಶದಲ್ಲಿರುವ ಪ್ರಭಾವಿ ಯಹೂದಿ ವಿಚಾರವಾದಿ ಗಳು, ಅವರ ಜನರನ್ನು ಯುರೋಪಿಯನ್ನರ ಹಿಂಸೆಯಿಂದ ರಕ್ಷಿಸಿಕೊಳ್ಳಲು ಪರ್ಯಾಯ ಯೋಜನೆಗಳ ಕುರಿತು ತೀವ್ರತರನಾದ ಚಿಂತನೆಗಳನ್ನು ಆರಂಭಿಸಿದರು. ಅವರ ಮುಂದಿರುವ ಪ್ರಶ್ನೆ ಈ ಆಶ್ರಯ ಕೊಟ್ಟ ದೇಶಗಳಲ್ಲಿ ಹಿಂಸೆಯನ್ನು ಸಹಿಸಿಕೊಂಡು ಉಳಿಯಬೇಕೆ ಬೇಡವೇ ಎಂಬುದು. ಈ ಸಂದರ್ಭದಲ್ಲಿ ಅವರು ನೆನಪಿಸಿಕೊಂಡಿರುವುದು ತಮ್ಮ ಕುಟುಂಬದ ಸ್ಥಾಪಕ ಎಬ್ರಾಹಾಂಗೆ ದೇವರು ಮಾಡಿದ ಪ್ರತಿಜ್ಞೆ ಮತ್ತು ಅದನ್ನು ಪುನಾರಾವರ್ತಿಸಬೇಕೆಂಬ ಆಶಯ ವ್ಯಕ್ತಪಡಿಸಿದರು. ಹಿಂದೆ ಚರ್ಚಿಸಿದಂತೆ, ಪ್ಯಾಲೇಸ್ತೀನ್ ಅವರಿಗೆ ದೇವರು ಸೂಚಿಸಿರುವ ದೇಶ. ಒಂದು ವೇಳೆ ಅಕಸ್ಮಾತ್ತಾಗಿ ಆ ದೇಶ ಅವರ ಕೈ ತಪ್ಪಿ ಹೋದರೂ. ಮತ್ತೆ ಅದನ್ನು ಪಡೆಯಲು, ಯಹೂದಿಗಳನ್ನು ಒಂದುಗೂಡಿಸಲು ದೇವರ ಆಶೀರ್ವಾದವಿದೆ ಎಂಬ ವಿಷಯ ಬೈಬಲ್‌ನಲ್ಲಿತ್ತು ಮತ್ತು ಅದನ್ನು ಪ್ರತೀ ತಲೆಮಾರು ನೆನಪಿಸಿಕೊಂಡು ಬಂದಿತ್ತು. ಈ ಸಂದರ್ಭದಲ್ಲಿ ಯಹೂದಿಗಳು ಸಂಘಟಿಸಿದ ಜೀಯೋನಿಸಂ ಜಗತ್ತಿನಾದ್ಯಂತ ರಾಷ್ಟ್ರವಾದಿ ಚಳವಳಿಯಾಗಿ ಉಗಮವಾಯಿತು. ಆ ಕಾರಣಕ್ಕಾಗಿಯೇ ಅವರ ಆಂದೋಲನವನ್ನು ಯುರೋಪ್‌ನಲ್ಲಿ ಹುಟ್ಟಿಕೊಂಡ ಜನಾಂಗ ವಿರೋಧಿಗೆ ಪ್ರತಿಕ್ರಿಯೆ ಎಂದು ಬಣ್ಣಿಸಿದರು.

೧೯ನೇ ಶತಮಾನದುದ್ದಕ್ಕೂ ಯಹೂದಿಗಳ ಭವಿಷ್ಯದ ಕುರಿತು ಚಿಂತಿಸಿದ ಯಹೂದಿ ಚಿಂತಕರು ಮತ್ತು ವಿಚಾರವಾದಿಗಳು, ಯುರೋಪಿನಾದ್ಯಂತ ಹರಡಿರುವ ಯಹೂದಿ ದ್ವೇಷ ಭಾವನೆಯಿಂದ ಯಹೂದಿಗಳು ರಕ್ಷಿಸಿಕೊಳ್ಳಲು ಪ್ಯಾಲೇಸ್ತೀನಿಗೆ ವಾಪಸಾಗುವುದು ಒಂದೇ ದಾರಿ ಎಂದು ತೀರ್ಮಾನಿಸಿದರು. ಮೊಸೆಸ್ ಹೆಸ್ ಎಂಬ ಜರ್ಮನ್ ಯಹೂದಿ ಒಂದರ್ಥದಲ್ಲಿ ಆಧುನಿಕ ಜಿಯೋನಿಸಂ ಚಳುವಳಿಯ ಸಂಸ್ಥಾಪಕ. ೧೮೧೨ರಲ್ಲಿ ಇವನು ಬರೆದ ಒಂದು ಕರಪತ್ರದಲ್ಲಿ ಯಹೂದಿಗಳ ಸಮಸ್ಯೆ ಪರಿಹಾರಕ್ಕೆ ಪ್ಯಾಲೇಸ್ತೀನಿನಲ್ಲಿ ಸ್ವಾಯತ್ತ ರಾಷ್ಟ್ರೀಯ ಅನನ್ಯತೆಯನ್ನು ಪುನರ್‌ಜನ್ಮ ನೋಡುವುದೇ ಕೊನೆಯ ಉದ್ದೇಶವಾಗಿರಬೇಕೆಂದು ಕರೆ ಕೊಟ್ಟನು. ಇದು ಅವರ ದೇವರ ನಿರೀಕ್ಷೆಯೂ ಹೌದೆಂದು ಹೆಸ್ ಪ್ರತಿಪಾದಿಸುತ್ತಾನೆ. ಜರ್ಮನಿಯಲ್ಲಿ ಯಹೂದಿಯರು ಎದುರಿಸುತ್ತಿರುವ ಸಾಮಾಜಿಕ ಮತಾಂತರ ತೀವ್ರ ಸ್ವರೂಪದಾಗಿದ್ದು, ಇಂತಹ ದೇಶಗಳಲ್ಲಿ ಯಹೂದಿಗಳು ಎಂದೂ ಆ ದೇಶದ ಜನರ ಮತ್ತು ಸರಕಾರಗಳ ಗೌರವವನ್ನು ಪಡೆಯಲು ಸಾಧ್ಯವೇ ಇಲ್ಲ. ಅವರನ್ನು ಅಲ್ಲಿ ತುಚ್ಛವಾಗಿ, ಎರಡನೇ ದರ್ಜೆ ಪ್ರಜೆಗಳನ್ನಾಗಿಯೇ ನೋಡಲಾಗುತ್ತದೆ. ಹಾಗಾಗಿ ಜಗತ್ತಿನಾದ್ಯಂತ ಎರಡು ಸಾವಿರ ವರ್ಷಗಳಷ್ಟು ಕಾಲ ಚದುರಿ ಅಲೆಮಾರಿ ಜೀವನ ನಡೆಸುವ ಎಲ್ಲ ಯಹೂದಿಗಳು ಒಂದಾಗಬೇಕು. ಸಂಘಟಿತರಾಗಿ ಪ್ಯಾಲೇಸ್ತೀನನ್ನು ಆಕ್ರಮಿಸಿ, ಅಲ್ಲಿ ತಮ್ಮದೇ ಸ್ವತಂತ್ರ ಪ್ರಭುತ್ವವನ್ನು ಸ್ಥಾಪಿಸಬೇಕು. ಅದಕ್ಕೆ ಆಧಾರವಾಗಿ ಅವರದ್ದೇ ಸಾಮಾಜಿಕ ಸಂಸ್ಥೆಗಳನ್ನು ರಚಿಸಬೇಕು ಮತ್ತು ಅವರ ರಾಜಕೀಯ ಚಟುವಟಿಕೆಗಳನ್ನು ಪ್ರೇರೇಪಿಸಲು ಒಂದು ಆಧ್ಯಾತ್ಮಿಕ ಕೇಂದ್ರವನ್ನು ತುರ್ತಾಗಿ ಸ್ಥಾಪಿಸಬೇಕು ಎಂದು ಮೊಸೆಸ್ ಹೆಸ್ ಬರೆದಿರುವ ರೋಮ್ ಆಂಡ್ ಜೆರುಸಲೇಂ ಎಂಬ ಲೇಖನದಲ್ಲಿ ಸೂಚಿಸುತ್ತಾನೆ. ಇದೇ ಯಹೂದಿಗಳಿಗೆ ಕೊನೆಯ ಪರಿಹಾರವೆಂದು ಸಮರ್ಥಿಸಿಕೊಳ್ಳುತ್ತಾನೆ.

ಹೆಸ್ ಅವರ ಈ ಪ್ರಕಟಣೆ, ಯಹೂದಿಯರ ಜ್ಞಾನೋದಯ ಚಳವಳಿಗೆ ಹೊಸ ಆಯಾಮವನ್ನು ನೀಡುತ್ತದೆ ಮತ್ತು ಆ ಚಿಂತನೆ ನಂತರದ ವಿಚಾರವಾದಿಗಳಿಗೆ ಜೀಯೋನಿಸಂ ಚಳವಳಿಯನ್ನು ಬಲಪಡಿಸಲು ಉತ್ತಮ ಅಡಿಪಾಯವನ್ನು ಹಾಕಿಕೊಟ್ಟಿತು.

ಯಹೂದಿ ವಿಚಾರವಾದಿಗಳು ಅವರ ಸಮುದಾಯದ ಭವಿಷ್ಯದ ಕುರಿತು ನಡೆಸಿದ ಹೊಸ ಚಿಂತನೆಯ ಪ್ರಭಾವವು ೧೮೮೦ರ ದಶಕದ ರಷ್ಯಾದಲ್ಲಿ ಉಲ್ಬಣಗೊಂಡಿತು. ಅಲ್ಲಿನ ಯಹೂದಿಗಳು, ಒಡೆಸ್ಸಾದ ವೈದ್ಯ ಲೀಯೋ ಪಿನ್‌ಸ್ಕರ್ ನೇತೃತ್ವದಲ್ಲಿ ಅಂದೋಲನವನ್ನು ಆರಂಭಿಸಿದರು. ಪಿನ್‌ಸ್ಕರ್ ಪ್ರಕಟಿಸಿದ ಕರಪತ್ರ ಸೆಲ್ಫ್ ಇಮ್ಯಾನ್ಸಿಪೇಶನ್‌ನಲ್ಲಿ ಯಹೂದಿಗಳು ತಮ್ಮ ಭೂಮಿಯನ್ನು ಆಕ್ರಮಿಸಿ ಅಲ್ಲಿ ಅವರದ್ದೇ ಸಮಾಜವನ್ನು ಹೊಸತಾಗಿ ನಿರ್ಮಿಸುವ ಅವಕಾಶ ಬಂದೊದಗಿದೆ. ಈ ಎಲ್ಲ ಆಸರೆ ನೀಡಿದ ದೇಶಗಳಲ್ಲಿ ಅವರನ್ನು ಹೊರಗಿನವರೆಂದೇ ಗ್ರಹಿಸಲಾಗುತ್ತದೆ. ವಿದೇಶಿಯರ ಭೂಮಿ ಎಂದಿಗೂ ತಮ್ಮ ರಾಷ್ಟ್ರವಾಗುವುದಿಲ್ಲ. ತಮ್ಮ ಜೀವನ ನಡೆಸಲು ಈ ಹೋಸ್ಟ್ ದೇಶಗಳಲ್ಲಿ ಯಹೂದಿಗಳು ಭಿಕ್ಷೆ ಬೇಡುವವರಿಗಿಂತಲೂ ಕಳಪೆಯಾಗುತ್ತಾರೆ. ಈ ಎಲ್ಲ ಮಾನಸಿಕ ಹಿಂಸೆಯಿಂದ ರಕ್ಷಿಸಿಕೊಳ್ಳಲು ತಮ್ಮ ಪವಿತ್ರ ಭೂಮಿಯಲ್ಲಿ ತಮ್ಮ ಅಸ್ತಿತ್ವವನ್ನು ಪುನರ್ ಸ್ಥಾಪಿಸುವುದು ಒಂದೇ ದಾರಿ ಎಂದು ಸೂಚಿಸುತ್ತಾನೆ. ರಷ್ಯಾದ ಯಹೂದಿಗಳನ್ನು ಸಂಘಟಿಸಿ ಆಂದೋಲನ ನಡೆಸಲು ಲೀಯೋ ಪಿನ್‌ಸ್ಕರ್ ಆರಂಭದಲ್ಲಿ ಲವರ್ಸ್ ಆಪ್ ಜೀಯೋನ್ ಎಂಬ ಸಂಘಟನೆಯನ್ನು ರಚಿಸಿ, ಒಂದು ವೇದಿಕೆಯನ್ನು ಹುಟ್ಟು ಹಾಕಿ ಜಾಗತಿಕ ಮಟ್ಟದಲ್ಲಿ ಜೀಯೋನಿಸಂ ಚಳವಳಿಯ ಉದ್ದೇಶಗಳನ್ನು ಪ್ರಚಾರ ಆರಂಭಿಸಿದನು. ಬೇರೆ ಬೇರೆ ನಗರಗಳಲ್ಲಿ ಸ್ವತಂತ್ರ ಪ್ರಾಜೆಕ್ಟ್‌ಗಳನ್ನು ಪ್ರೋ ಅವು ಸಂಪನ್ಮೂಲದ ಅಭಾವದಿಂದ, ಅನುಭವ ಮತ್ತು ತರಬೇತಿದಾರರು ಇಲ್ಲದ ಕಾರಣ, ಲವರ್ಸ್ ಆಫ್ ಜೀಯೋನ್ ಸಂಸ್ಥೆ ಅಷ್ಟೊಂದು ಪ್ರಭಾವ ಬೀರಲಿಲ್ಲ. ಆದಾಗ್ಯೂ, ಯಹೂದಿಗಳನ್ನು ಎಚ್ಚರಿಸಿ ತಮ್ಮದೇ ಸ್ವತಂತ್ರ ಭೂಮಿ ಇಲ್ಲದಿದ್ದರೆ, ಆರ್ಥಿಕ ವಲಯದಲ್ಲಿ ಸ್ಪರ್ಧೆಗಿಳಿಯುವಾಗ ಅವರನ್ನು ವಿದೇಶಿಯ ರೆಂಬ ಭಾವನೆಯನ್ನು ಆಸರೆ ನೀಡುವ ದೇಶದ ಬಹುಸಂಖ್ಯಾತರಲ್ಲಿ ಮೂಡಿಸುತ್ತದೆ ಎಂದು ಕರೆ ಕೊಟ್ಟನು. ಅಲ್ಲದೆ, ಯಹೂದಿಗಳು ತಮ್ಮ ಸಮಸ್ಯೆ/ಬಿಕ್ಕಟ್ಟನ್ನು ಪರಿಹರಿಸಲು, ವೈಯಕ್ತಿಕ ಆಸಕ್ತಿ ವಹಿಸಿ ತಾವಾಗಿಯೇ ಪ್ಯಾಲೇಸ್ತೀನಿಗೆ ವಲಸೆ ಹೋಗಿ ದೊಡ್ಡ ಮಟ್ಟದಲ್ಲಿ ವಸತಿಗಳನ್ನು ಸ್ಥಾಪಿಸಿ, ಅವರ ಜನರನ್ನು ಬಹುಸಂಖ್ಯಾತ ಸಮುದಾಯವನ್ನಾಗಿ ಪರಿವರ್ತಿಸಬೇಕು. ತಮ್ಮ ಮೂಲ ದೇಶಕ್ಕೆ ವಲಸೆ ಹೋಗುವುದು ಒಂದು ಮಾಸ್ ಚಳವಳಿಯಾಗಬೇಕು. ಇದು ಕಾರ್ಯರೂಪಕ್ಕೆ ಬರಲು ಸಮುದಾಯದ ಪ್ರತಿಯೊಬ್ಬ ಸದಸ್ಯ ತನ್ನಲ್ಲಾದ ಕೊಡುಗೆಯನ್ನು ನೀಡಬೇಕು ಎಂದು ಅಭಿಪ್ರಾಯಪಟ್ಟನು.

ಇಂತಹ ಅನೇಕ ಪ್ರಯತ್ನಗಳು ಯುರೋಪಿನಾದ್ಯಂತ ನಡೆದಿವೆಯಾದರೂ, ಅವುಗಳ ಪರಿಣಾಮದಿಂದ ಜೀಯೋನಿಸಂ ಒಂದು ರಾಜಕೀಯ ಅಂದೋಲನವಾಗಿ ಪರಿವರ್ತನೆ ಯಾಗಿರಲಿಲ್ಲ. ಅಂತದೊಂದು ಚಳವಳಿ ಯಹೂದಿಗಳಿಗೆ ಅನಿವಾರ್ಯವಾಗಿದ್ದು, ೧೮೯೦ರ ದಶಕದಲ್ಲಿ ಆಸ್ಟ್ರಿಯಾದಲ್ಲಿ ಹುಟ್ಟಿ ಬೆಳೆದು, ಪತ್ರಕರ್ತನಾಗಿ, ವಿಚಾರವಾದಿಯಾಗಿ ಮತ್ತು ಯಹೂದಿ ದ್ವೇಷ, ಪರಿಕಲ್ಪನೆಯ ಆಳವನ್ನು ಹತ್ತಿರದಿಂದಲೇ ಅರ್ಥೈಸಿಕೊಂಡ ಥಿಯೋಡೋರ್ ಹರ್ಸಲ್, ಹೊಸ ತರದ ಚಿಂತನೆಯನ್ನು ಜಾಗತಿಕ ಮಟ್ಟದಲ್ಲಿ ಯಹೂದಿಗಳ ಮುಂದಿಟ್ಟನು. ಯಹೂದಿ ದ್ವೇಷ ಯುರೋಪಿನಾದ್ಯಂತ ಹರಡುವ ಪ್ರಶ್ನೆಗೆ ರಾಜಕೀಯ ನೆಲೆಯಲ್ಲಿ ಉತ್ತರ ಹುಡುಕಲು ಹರ್ಸಲ್ ಪ್ರಯತ್ನ ಮಾಡುತ್ತಾನೆ. ಅನೇಕ ಚಿಂತಕರು ಪ್ರತಿಪಾದಿಸಿದಂತೆ, ಪ್ಯಾಲೇಸ್ತೀನ್‌ನಲ್ಲಿ ಪ್ರಬುದ್ಧ ನಾಗರಿಕತೆಯನ್ನು ಪುನರ್ ಸ್ಥಾಪಿಸಬೇಕು. ಅದು ಈ ಹಿಂದೆ ಯಹೂದಿಗಳ ಮುಂದಾಳತ್ವದಲ್ಲಿ ನಡೆಯಬೇಕು. ಅದನ್ನು ನೆರವೇರಿಸಲು ಬಲಿಷ್ಠ ಏಜನ್ಸಿಗಳನ್ನು ರಚಿಸಬೇಕು. ಬೇಕಾದ ಸಂಪತ್ತನ್ನು ಜಗತ್ತಿನಾದ್ಯಂತ ಹರಡಿರುವ ಶ್ರೀಮಂತ ಯಹೂದಿ ವರ್ತಕರಿಂದ, ಬ್ಯಾಂಕರ್ಸ್‌ಗಳಿಂದ ಸಂಗ್ರಹಿಸಬೇಕು. ಮತ್ತು ಈ ಬೃಹತ್ ಯೋಜನೆ ಕಾರ್ಯರೂಪಕ್ಕೆ ತರಲು ಎಲ್ಲ ಚದುರಿ ಹೋದ ಯಹೂದಿಗಳು ಪ್ಯಾಲೇಸ್ತೀನ್‌ನತ್ತ ವಲಸೆ ಆರಂಭಿಸಬೇಕು. ಎರಡು ಸಾವಿರ ವರ್ಷಗಳ ಹಿಂದೆ ಯಹೂದಿ ಸಮುದಾಯ ಕಳೆದುಕೊಂಡ ದೇಶವನ್ನು ಪುನಃ ಸ್ಥಾಪಿಸಬೇಕು ಎಂಬ ಹರ್ಸಲ್ ಸಮರ್ಥಿಸಿಕೊಳ್ಳುತ್ತಾನೆ. ಯಹೂದಿಯರನ್ನು ಪ್ರಚೋದಿಸುವ ಕಾರಣಕ್ಕೆ ಒಂದು ಸಿದ್ಧಾಂತವನ್ನೇ ಸೃಷ್ಟಿಸುತ್ತಾನೆ. ಅದು ಈಗಿರುವ ಯಹೂದಿಯರ ಸ್ಥಾನಮಾನವನ್ನು ವ್ಯಾಖ್ಯಾನಿಸುತ್ತದೆ ಮತ್ತು ಪ್ಯಾಲೇಸ್ತೀನ್‌ನಲ್ಲಿ ಅವರ ಅಸ್ತಿತ್ವವನ್ನು ವಿಶ್ಲೇಷಿಸುತ್ತದೆ. ತನ್ನ ಪ್ರಭಾವಿ ಬರವಣಿಗೆಗಳನ್ನೊಳಗೊಂಡ ದಿ ಜೂವಿಸ್ ಸ್ಟೇಟ್ ಎಂಬ ಗ್ರಂಥದಲ್ಲಿ ಯಹೂದಿ ಸಮುದಾಯ ಮತ್ತು ಪ್ಯಾಲೇಸ್ತೀನ್ ಸಂಬಂಧ ವನ್ನು ವಿಸ್ತೃತವಾಗಿ ಚರ್ಚಿಸುತ್ತಾನೆ.

ಪ್ಯಾಲೇಸ್ತೀನ್ ಬಗ್ಗೆ ಪ್ರಸ್ತಾಪಿಸುತ್ತಾ, ಥಿಯೋಡೋರ್ ಹರ್ಸಲ್ ‘‘ಪ್ಯಾಲೇಸ್ತೀನ್ ಲ್ಯಾಂಡ್ ವಿಥ್‌ಔಟ್ ಪೀಪಲ್’’ ಎಂದು ವ್ಯಾಖ್ಯಾನಿಸುತ್ತಾನೆ. ಅವನ ಪ್ರಕಾರ ಪ್ಯಾಲೇಸ್ತೀನ್ ಒಂದಾನೊಂದು ಕಾಲದಲ್ಲಿ ದೇವರು ಯಹೂದಿಗಳಿಗೆ ಪ್ರಾಮಿಸ್ ಮಾಡಿದ್ದು, ಅದು ಅವರ ಸ್ವತಂತ್ರ ದೇಶ. ಆ ದೇಶದಲ್ಲಿ ಅಧಿಕೃತವಾಗಿ ವಾಸಿಸಲು ಹಕ್ಕಿರುವುದು ಯಹೂದಿಗಳಿಗೆ ಮಾತ್ರ. ಕಳೆದ ೨೦೦೦ ವರ್ಷಗಳಿಂದ ಯಹೂದಿಗಳು ಜಗತ್ತಿನಾದ್ಯಂತ ಚದುರಿ ಹೋಗಿದ್ದು ತಮ್ಮ ಸ್ವತಂತ್ರ ಇರುವಿಕೆ/ಅನನ್ಯತೆಯನ್ನು ಕಳೆದುಕೊಂಡಿದ್ದಾರೆ. ಆ ದೇಶದ ಅಧಿಕೃತ ಪ್ರಜೆಗಳಿಲ್ಲದೆ ಇರುವುದರಿಂದ ‘‘ಪ್ಯಾಲೇಸ್ತೀನ್ ನನ್ನು ಲ್ಯಾಂಡ್ ವಿದ್ ಔಟ್ ಪೀಪಲ್’’ ಎಂದು ಗ್ರಹಿಸುತ್ತಾನೆ.

ಯಹೂದಿ ಸಮುದಾಯದ ಕುರಿತು ಚರ್ಚಿಸುತ್ತಾ ಹರ್ಸಲ್ ಯಹೂದಿಯರನ್ನು ಪೀಪಲ್ ವಿಥ್‌ಔಟ್ ಲ್ಯಾಂಡ್ ಎಂದು ಘೋಷಿಸುತ್ತಾನೆ. ಇದಕ್ಕೂ ಸರಿಯಾದ ಸಮರ್ಥನೆಯನ್ನು ನೀಡುತ್ತಾನೆ. ಗ್ರೀಕ್ ಮತ್ತು ರೋಮನರು ಪಾಲಿಸಿದ ಹಿಂಸಾತ್ಮಕ ಧೋರಣೆಗಳಿಂದ ರಕ್ಷಣೆಗಾಗಿ ತಮ್ಮ ದೇಶವನ್ನೇ ಬಿಟ್ಟು ಜಗತ್ತಿನ ನಾನಾ ಭಾಗಗಳಿಗೆ ಹೋಗಿ ನೆಲೆಸುತ್ತಾರೆ. ಈ ಅಲೆಮಾರಿ ಜೀವನವನ್ನು ಸುಮಾರು ಎರಡು ಸಾವಿರ ವರ್ಷಗಳ ಕಾಲ ಕಳೆದಿದ್ದರು. ಈ ದೀರ್ಘ ಅವಧಿಯಲ್ಲಿ ಅವರು ಬೇರೆಯವರ ದೇಶದಲ್ಲಿ ವಾಸಿಸುತ್ತಿದ್ದು, ಆ ದೇಶ ಅವರ ಸ್ವಂತ ಆಸ್ತಿ ಎಂದು ಪರಿಗಣಿಸಲಿಲ್ಲ. ಈ ಆಸರೆ ಕೊಟ್ಟ ದೇಶಗಳು ತೋರಿಸಿದ ಔದಾರ್ಯದಿಂದಲೇ ಜೀವಿಸುತ್ತಿದ್ದು, ಅದಕ್ಕಾಗಿ ಅವರನ್ನು ಪೀಪಲ್ ವಿಥ್‌ಔಟ್ ಲ್ಯಾಂಡ್ ಎಂದು ಪ್ರತಿಬಿಂಬಿಸುತ್ತಾನೆ.

ಪ್ಯಾಲೇಸ್ತೀನ್ ಮತ್ತು ಯಹೂದಿ ಸಮುದಾಯದ ಭವಿಷ್ಯವನ್ನು ನಿರ್ಮಿಸುವ ಉದ್ದೇಶದಿಂದ ಥಿಯೋಡರ್ ಹರ್ಸಲ್ ಸ್ವಿಡ್ಜರ್‌ಲ್ಯಾಂಡ್‌ನ ಬಾಸ್ಲೆ ನಗರದಲ್ಲಿ ೧೮೯೭ ರಲ್ಲಿ ‘ವರ್ಲ್ಡ್ ಜೀಯೋನಿಸ್ಟ್ ಕಾಂಗ್ರೆಸ್’ನ್ನು ಸ್ಥಾಪನೆ ಮಾಡಿ ಮೊದಲ ಜಾಗತಿಕ ಸಮ್ಮೇಳನವನ್ನು ಆಯೋಜಿಸುತ್ತಾನೆ. ಈ ಸಮ್ಮೇಳನಕ್ಕೆ ಜಗತ್ತಿನ ನಾನಾ ಭಾಗಗಳಿಂದ ಸುಮಾರು ೨೦೦ ಯಹೂದಿ ಪ್ರತಿನಿಧಿಗಳು ಆಗಮಿಸಿದ್ದರು. ಅವಿರೋಧವಾಗಿ ಥಿಯೋಡರ್ ಹರ್ಸಲ್ ಕಾಂಗ್ರೆಸ್‌ನ ಅಧ್ಯಕ್ಷನಾಗಿ ನೇಮಕನಾಗಿ, ಅವನ ಅಧ್ಯಕ್ಷೀಯ ಭಾಷಣದಲ್ಲಿ ಜೀಯೋನಿಸಂನ ಮುಂದಿನ ಕಾರ್ಯಸೂಚಿಗಳನ್ನು ಮಂಡಿಸಿದನು. ಅದರ ಮುಖ್ಯ ಉದ್ದೇಶ, ಪವಿತ್ರ ಸ್ಥಳವಾದ ಪ್ಯಾಲೇಸ್ತೀನ್‌ನಲ್ಲಿ ಸಾರ್ವತ್ರಿಕವಾಗಿ ಗೌರವಿಸಲ್ಪಡುವ, ಕಾನೂನಿನ ಪ್ರಕಾರ ಸಮ್ಮತವಾಗುವ ಯಹೂದಿ ಪ್ರಭುತ್ವವನ್ನು ಸ್ಥಾಪಿಸಿ ಸ್ವತಂತ್ರ ರಾಷ್ಟ್ರ ಕಟ್ಟುವುದು ಎಂದು ಘೋಷಿಸಿದನು. ‘ಸ್ವದೇಶ’ ಪರಿಕಲ್ಪನೆಯನ್ನು ಬಹಳ ಚಾಣಾಕ್ಷತನದಿಂದ ಬಳಸುತ್ತಾನೆ. ಏಕೆಂದರೆ, ಆ ಹೊತ್ತಿಗೆ ಪ್ಯಾಲೇಸ್ತೀನ್ ಅಟ್ಟೋಮನ್ ಸಾಮ್ರಾಜ್ಯದ ಅಧೀನಕ್ಕೆ ಒಳಪಟ್ಟಿದ್ದು, ಅದರ ಆಡಳಿತದ ನಿರ್ವಹಣೆಯನ್ನು ವಹಿಸಿದ್ದರು. ಮತ್ತು ದಾಖಲೆಗಳ ಪ್ರಕಾರ ಸುಮಾರು ಏಳನೆಯ ಶತಮಾನದಿಂದ ಅದು ಅರಬ್ ಸಮುದಾಯದ ತವರಾಗಿತ್ತು. ಹಾಗಾಗಿ, ನೇರವಾಗಿ ಪ್ಯಾಲೇಸ್ತೀನ್‌ನನ್ನು ಬಲಾತ್ಕಾರದಿಂದ ಆಕ್ರಮಿಸಲು ಯಹೂದಿಗಳಿಗೆ ಸಾಧ್ಯವಾಗುವುದಿಲ್ಲ. ರಾಜತಾಂತ್ರಿಕ ಮಾರ್ಗವೊಂದೇ ಯಹೂದಿಗಳಿಗಿರುವ ಅಸ್ತ್ರ ಎಂದೂ ಪರಿಗಣಿಸಲಾಯಿತು. ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಹೊಸ ರೀತಿಯ ಆಂದೋಲನವನ್ನು ಜಾಗತಿಕ ಮಟ್ಟದಲ್ಲಿ ಆರಂಭಿಸಲು ಇದೇ ಸಮ್ಮೇಳನದಲ್ಲಿ ಅಧಿಕೃತ ಚಾಲನೆ ನೀಡಲಾಗಿದ್ದು, ಅದರ ನೇತೃತ್ವವನ್ನು ಥಿಯೋಡೋರ್ ಹರ್ಸಲ್ ವಹಿಸಿಕೊಳ್ಳಲು ನಿರ್ಣಯ ಒಂದನ್ನು ಮಂಡಿಸಲಾಯಿತು. ಅದಕ್ಕೆ ತಗಲುವ ಖರ್ಚನ್ನು ಭರಿಸಲು ಎಲ್ಲ ಯಹೂದಿ ಸಮಾಜದವರು ಒಪ್ಪಿಗೆ ಸೂಚಿಸಿದರು.

‘ವರ್ಲ್ಡ್ ಜೀಯೋನಿಸ್ಟ್ ಕಾಂಗ್ರೆಸ್’ನ ಅಧ್ಯಕ್ಷನಾದ ಥಿಯೋಡರ್ ಹರ್ಸಲ್‌ನ ಮುಂದೆ ಗಂಭೀರವಾದ ಸವಾಲು ಇರುವ ಅರಿವಿತ್ತು. ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಲು ಆಗದೆಂದು ಹರ್ಸಲ್‌ಗೂ ಗೊತ್ತಿತ್ತು. ಏಕೆಂದರೆ, ಅವರು ಗುರುತಿಸಿದ ಪವಿತ್ರ ಸ್ಥಳ ಈಗ ಅಟ್ಟೋಮನ್ ಸಾಮ್ರಾಟ ದ್ವಿತೀಯ ಅಬ್ದುಲ್ ಹಮೀದನ ಆಳ್ವಿಕೆಗೆ ಒಳಪಟ್ಟಿತು. ತಾನು ಮತ್ತು ತನ್ನ ಬೆಂಬಲಿಗರು ನಿರೀಕ್ಷಿಸುವ ಸ್ವದೇಶ ನಿರ್ಮಾಣ ಕಾರ್ಯಕ್ಕೆ ಹಸಿರು ನಿಶಾನೆ ದೊರಕಬೇಕಾದರೆ ಹಮೀದನ ಮನ ಒಲಿಸಿ, ರಾಜತಾಂತ್ರಿಕವಾಗಿ ಆ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂದು ಹರ್ಸಲ್ ಆಲೋಚಿಸುತ್ತಾನೆ.

ಇದಕ್ಕೆ ಅನುಕೂಲಕರವಾದ ವಾತಾವರಣವನ್ನು ಅಟ್ಟೋಮನ್ ಸಾಮ್ರಾಜ್ಯದಲ್ಲಿ ಹರ್ಸಲ್ ಕಂಡುಕೊಳ್ಳುತ್ತಾನೆ. ಈ ಸಮಯದಲ್ಲಿಯೇ ಅಟ್ಟೋಮನ್ ಸಾಮ್ರಾಟ ಒಂದು ಬೃಹತ್ ಸುಧಾರಣಾ ಯೋಜನೆಯನ್ನು ಅನುಷ್ಠಾನಗೊಳಿಸಿದ್ದನು. ಜರ್ಮನ್ ಸಾಮ್ರಾಜ್ಯ ಶಾಹಿ ವಿಲಿಯಂ ಕೈಸರ್ ಈ ಯೋಜನೆಗೆ ಹಣಕಾಸಿನ ನೆರವನ್ನು ಘೋಷಿಸಿದ್ದನು. ಅಂದರೆ, ಆಧುನೀಕರಣ ಸುಧಾರಣೆಗೆ ಬೇಕಾದ ಸಂಪತ್ತಿನ ಒಂದು ಭಾಗವನ್ನು ಶ್ರೀಮಂತ ವಾಗಿರುವ ಯಹೂದಿ ಸಮುದಾಯ ಕೊಡುವುದೆಂಬ ಭರವಸೆ ಅಬ್ದುಲ್ ಹಮೀದ್‌ಗೆ ನೀಡಿದರೆ ತಮ್ಮ ಬೇಡಿಕೆ ಮನ್ನಿಸಬಹುದೆಂಬ ಆಶಯದೊಂದಿಗೆ ಹರ್ಸಲ್ ಕಾರ್ಯ ಪ್ರವೃತ್ತನಾಗುತ್ತಾನೆ. ಆ ತಕ್ಷಣದಲ್ಲಿ ಪ್ಯಾಲೇಸ್ತೀನ್‌ನಲ್ಲಿ ಯಹೂದಿಗಳು ಅಲ್ಪಸಂಖ್ಯಾತ ರಾಗಿರುವುದರಿಂದ ಸ್ವದೇಶ ನಿರ್ಮಾಣ ಬೇಡಿಕೆಯನ್ನು ಅಧಿಕೃತವಾಗಿ ಘೋಷಿಸಲು ಅಸಾಧ್ಯವಾಗಿತ್ತು. ಹಾಗಾಗಿ, ಪ್ಯಾಲೇಸ್ತೀನ್‌ಗೆ ಯಹೂದಿಯರ ಪ್ರವೇಶಕ್ಕೆ ಅವಕಾಶವನ್ನು ಕಲ್ಪಿಸಿಕೊಳ್ಳುವುದು ತುರ್ತಾಗಿ ಮಾಡಬೇಕಾದ ಕಾರ್ಯವಾದುದರಿಂದ ಯಹೂದಿಯರ ಮುಖಂಡ ಹರ್ಸಲ್, ಜರ್ಮನ್ ಸಾಮ್ರಾಜ್ಯವಾದಿ ವಿಲಿಯಂ ಕೈಸರ್‌ನ ಮೂಲಕ ಅಬ್ದುಲ್ ಹಮೀದ್‌ನನ್ನು ಭೇಟಿ ಮಾಡುತ್ತಾನೆ. ಚರ್ಚೆಯಲ್ಲಿ ಹಮೀದನ ಆರ್ಥಿಕ ಸುಧಾರಣೆಗೆ ಬೇಕಾದ ಒಂದಷ್ಟು ಹಣಕಾಸಿನ ನೆರವನ್ನು ಯಹೂದಿಯರಿಂದ ಕೊಡಿಸುವುದಾಗಿ ಹರ್ಸಲ್ ಆಶ್ವಾಸನೆ ನೀಡುತ್ತಾನೆ. ಅದಕ್ಕುತ್ತರವಾಗಿ ಯಹೂದಿಗಳಿಗೆ ಪ್ಯಾಲೇಸ್ತೀನ್‌ನಲ್ಲಿ ವಸತಿಗಳನ್ನು ಸ್ಥಾಪಿಸಿ ನೆಲೆಸಲು ಅವಕಾಶ ಕೊಡಬೇಕೆಂದು ಹರ್ಸಲ್ ಒತ್ತಾಯಿಸುತ್ತಾನೆ. ವಿಲಿಯಂ ಕೈಸರನ ಮಧ್ಯಸ್ಥಿಕೆಯಲ್ಲಿ ಅಬ್ದುಲ್ ಹಮೀದ್, ಹರ್ಸಲ್‌ನ ಬೇಡಿಕೆಗೆ ಸಕಾರಾತ್ಮಕವಾಗಿ ೧೯೦೧ರಲ್ಲಿ ಪ್ರತಿಕ್ರಿಯಿಸುತ್ತಾನೆ. ಇದು ಯಹೂದಿ ಜೀಯೋನಿಸಂ ಆಂದೋಲನಕ್ಕೆ ಹೊಸ ತಿರುವನ್ನೆ ತಂದು ಕೊಡುತ್ತದೆ.

ಆದಾಗ್ಯೂ, ೧೯೦೨ರಲ್ಲಿ ಅಬ್ದುಲ್ ಹಮೀದ್ ಇದ್ದಕ್ಕಿದ್ದಂತೆ ಯಹೂದಿಯರ ಪ್ರವೇಶವನ್ನು ತಡೆ ಹಿಡಿಯುತ್ತಾನೆ. ಇದಕ್ಕೆ ಕಾರಣವೂ ಇದೆ. ೧೯ನೆಯ ಶತಮಾನದ ಉದ್ದಕ್ಕೂ ಅಟ್ಟೋಮನ್ ಸಾಮ್ರಾಜ್ಯದ ಅಧೀನಕ್ಕೆ ಒಳಪಟ್ಟ ಟರ್ಕೇತರ ರಾಷ್ಟ್ರೀಯ, ಜನಾಂಗೀಯ, ಧಾರ್ಮಿಕ ಗುಂಪುಗಳು ಮುಖ್ಯವಾಗಿ ಬಾಲ್ಕನ್‌ನಲ್ಲಿನ ಕ್ರೈಸ್ತ ಸಮುದಾಯ ದವರು, ಅಟ್ಟೋಮನ್ ಸಾಮ್ರಾಜ್ಯದ ವಿರುದ್ಧ ರಾಷ್ಟ್ರೀಯ ಆಂದೋಲನ ನಡೆಸಿ ಒಟ್ಟೋಮನ್‌ರಿಂದ ಸ್ವತಂತ್ರಗೊಂಡಿದ್ದರು. ೧೯ನೇ ಶತಮಾನದ ಕೊನೆಯಲ್ಲಿ ಇದೇ ರಾಜಕೀಯ ಅಸ್ತ್ರವನ್ನು ಅರಬ್ ಸಮುದಾಯದವರೂ ಪಾಲಿಸಿ ತಮಗೂ ಸ್ವತಂತ್ರ ರಾಷ್ಟ್ರವನ್ನು ಕಟ್ಟಲು ಅವಕಾಶಗಳನ್ನು ಅಬ್ದುಲ್ ಹಮೀದ್‌ನಲ್ಲಿ ಕೇಳುತ್ತಿದ್ದರು. ಈ ಹೋರಾಟಗಳ ಯಶಸ್ಸಿನಿಂದ ಅಟ್ಟೋಮನ್ ಸಾಮ್ರಾಜ್ಯದ ಪ್ರಾಂತೀಯ ವ್ಯಾಪ್ತಿ ಕುಗ್ಗುತ್ತಾ ಬಂತು. ಅನೇಕ ಪ್ರದೇಶಗಳು ಕೈ ತಪ್ಪಿ ಹೋದವು. ಹಿಂದೆ ಅವು ಅಟ್ಟೋಮನ್ ರ ಪ್ರಾಂತಗಳಾಗಿದ್ದರೆ, ಈಗ ಸ್ವತಂತ್ರಗೊಂಡು ನೆರೆ ರಾಷ್ಟ್ರಗಳಾಗಿವೆ. ಯಹೂದಿಗಳ ಕುರಿತ ಅಬ್ದುಲ್ ಹಮೀದ್‌ನಿಗಿರುವ ಹೆದರಿಕೆ ಏನೆಂದರೆ, ಈ ಹಿಂದೆ ಕ್ರೈಸ್ತ ಸಮುದಾಯಗಳಂತೆ, ಅರಬ್ ಸಮುದಾಯದವರಂತೆ, ಮುಂದೆ ಯಹೂದಿಗಳು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿ, ಅವರೂ ಕೂಡ ಪ್ರತ್ಯೇಕ ರಾಜ್ಯವನ್ನು ಕೇಳಬಹುದೆಂಬ ಭಯದಿಂದ ಯಹೂದಿಗಳ ಪ್ರವೇಶವನ್ನು ತಡೆಹಿಡಿದನು.

ಈ ಮಧ್ಯದಲ್ಲಿ ಯಹೂದಿಯರ ಮುಖಂಡ ಥಿಯೋಡೋರ್ ಹರ್ಸಲ್ ಮರಣ ಹೊಂದುತ್ತಾನೆ. ಅವನ ಉತ್ತರಾಧಿಕಾರಿಯಾಗಿ ರಷ್ಯಾದಿಂದ ವಲಸೆ ಬಂದ ವಿಜ್ಞಾನಿ ಡಾ.ಚೈಮ್ ವೀಜ್‌ಮನ್ ಜೀಯೋನಿಸಂ ಆಂದೋಲನದ ನೇತೃತ್ವವನ್ನು ವಹಿಸಿಕೊಂಡು ಅದರ ಕಾರ್ಯವೈಖರಿಯನ್ನು ಮತ್ತಷ್ಟು ತೀವ್ರಗೊಳಿಸಿದನು. ರಷ್ಯಾವನ್ನು ತೊರೆದು ಬ್ರಿಟನ್‌ಗೆ ಬಂದು ನೆಲೆಸಿದ ವೀಜ್‌ಮನ್, ಬ್ರಿಟಿಷ್ ರಾಜಕಾರಣಿಗಳೊಂದಿಗೆ ಅನ್ಯೋನ್ಯ ಸಂಪರ್ಕವನ್ನು ಬೆಳೆಸಿಕೊಂಡಿದ್ದನು.

೧೯೦೪ ಮತ್ತು ೧೯೧೪ರ ನಡುವಿನ ವರ್ಷಗಳಲ್ಲಿ ಯಹೂದಿಗಳು ಪ್ಯಾಲೇಸ್ತೀನಿಗೆ ಸಾಕಷ್ಟು ಸಂಖ್ಯೆಯಲ್ಲಿ ಕಾನೂನನ್ನು ಉಲ್ಲಂಘಿಸಿ ನುಗ್ಗಿದ್ದರು. ೧೯೦೪ರಲ್ಲಿ ಪ್ಯಾಲೇಸ್ತೀನಿ ನಲ್ಲಿ ಕೇವಲ ೪೦,೦೦೦ ಇದ್ದು ಯಹೂದಿಯರ ಜನಸಂಖ್ಯೆ, ೧೯೧೪ರ ಹೊತ್ತಿಗೆ ಅದು ೮೦,೦೦೦ ದಾಟಿತ್ತು. ಇದೊಂದು ಸಣ್ಣ ಗುಂಪಷ್ಟೇ ಆಗಿದ್ದು, ಆಗಿನ ಪ್ಯಾಲೇಸ್ತೀನಿನ ಒಟ್ಟು ಜನಸಂಖ್ಯೆಯ ೮ನೇ ಒಂದಷ್ಟು ಆಗಿತ್ತು. ಅವರು ಅಲ್ಪಸಂಖ್ಯಾತ ಸಮುದಾಯವೆಂದು ಗುರುತಿಸಿಕೊಂಡರೂ, ಅವರು ಬಹಳ ಸಕ್ರಿಯರಾಗಿದ್ದರು. ಸ್ವದೇಶವನ್ನು ಕಟ್ಟುವ, ಬೆಳೆಸುವ ಛಲ ಅವರಿಗಿತ್ತು. ಕಠಿಣ ಶ್ರಮ ಪಟ್ಟರೆ, ಪ್ಯಾಲೇಸ್ತೀನ್ ಭೂಮಿಯಲ್ಲಿ ಹಾಲನ್ನು ಮತ್ತು ಜೇನುತುಪ್ಪವನ್ನೇ ಹರಿಸಬಹುದು ಎಂಬ ದೃಢ ನಂಬಿಕೆ ಇತ್ತು. ಅವರ ಚಟುವಟಿಕೆಗಳು ಅರಬ್ಬರಲ್ಲಿ ಅನುಮಾನಗಳನ್ನು ಹುಟ್ಟಿಸಿದವು. ಶತಮಾನಗಳಿಂದಲೂ ಪ್ಯಾಲೇಸ್ತೀನ್‌ನಲ್ಲಿ ಬಹುಸಂಖ್ಯಾತ ಅರಬ್ಬರು ಮತ್ತು ಅಲ್ಪಸಂಖ್ಯಾತ ಯಹೂದಿಯರು ಸೌಹಾರ್ದಯುತವಾಗಿ ನೆಲೆಸಿದ್ದರು. ಆದರೆ, ಯುರೋಪಿನಿಂದ ಆಗಮಿಸಿದ ಯಹೂದಿಗಳು ಕೈಗೊಂಡ ವಸಾಹತೀಕರಣ ಚಟುವಟಿಕೆಗಳು ಮತ್ತು ಅವರ ಸಂಖ್ಯೆಯಲ್ಲಾದ ಏರಿಕೆ ಅರಬ್ ರೊಂದಿಗಿನ ಸಮತೋಲನದಲ್ಲಿ ಬದಲಾವಣೆಯಾದವು. ಪ್ಯಾಲೇಸ್ತೀನಿನಲ್ಲಿದ್ದ ಒಬ್ಬ ಅರಬ್ ರೈತನಿಗೆ ಹೊಸತಾಗಿ ಬಂದ ಯಹೂದಿ ವಿದೇಶಿಯನೆಂಬ ಭಾವನೆ ಹುಟ್ಟುತ್ತದೆ. ಶೈಕ್ಷಣಿಕವಾಗಿ, ತಂತ್ರಗಾರಿಕೆ ಮತ್ತು ಜ್ಞಾನಗಳಿಗೆ ಹೊಲಿಸಿದರೆ ಯಹೂದಿಗಳು ಭಿನ್ನರಾಗಿ ಕಾಣುತ್ತಾರೆ. ಇದು ಶಾಂತಿ ಮತ್ತು ಸೌಹಾರ್ದತೆಯಿಂದಿರುವ ಅರಬ್-ಯಹೂದಿಯರ ಮೇಲೆ ಪ್ರತಿಕೂಲ ವಾತಾವರಣವನ್ನು ಸೃಷ್ಟಿಸುತ್ತದೆ.

೧೯೧೪ರಲ್ಲಿ ಆರಂಭವಾದ ಮೊದಲ ಜಾಗತಿಕ ಯುದ್ಧದ ಸಮಯದಲ್ಲಿ ಪ್ಯಾಲೇಸ್ತೀನ್ ಆಡಳಿತವನ್ನು ನೋಡಿಕೊಳ್ಳಲು ಟರ್ಕಿ ಅಧಿಕಾರಿಗಳು ಬ್ರಿಟಿಷರ ವೈರಿಗಳಾಗುತ್ತಾರೆ. ಮತ್ತು ಪ್ಯಾಲೇಸ್ತೀನಿನ ಮೇಲೆ ಬ್ರಿಟಿಷರು ತೀವ್ರ ಆಸಕ್ತಿ ತೋರಿಸಿ ಆಕ್ರಮಿಸಲು ಹುನ್ನಾರ ನಡೆಸುತ್ತಿರುವುದನ್ನು ಬ್ರಿಟನ್‌ನಲ್ಲಿರುವ ಅನೇಕ ಯಹೂದಿ ಮುಖಂಡರು ಗಮನಿಸುತ್ತಿದ್ದರು. ಜಿಯೋನಿಸಂನ ಮುಖಂಡ ಚೈಮ್ ವೀಜ್‌ಮನ್ ಮತ್ತು ಇತರ ಜೀಯೋನಿಸ್ಟ್‌ರು, ಹೊಸ ಆಶಯದೊಂದಿಗೆ ಬ್ರಿಟಿಷರ ಬೆಂಬಲ ಮತ್ತು ಸಹಕಾರವನ್ನು ಪಡೆಯಲು ರಾಜತಾಂತ್ರಿಕ ಪ್ರಯತ್ನ ನಡೆಸಲಾರಂಭಿಸಿದರು. ಇದಕ್ಕೆ ಬ್ರಿಟನ್ ರಾಜಕೀಯ ರಂಗದಲ್ಲಿ ಮತ್ತು ಸರಕಾರದಲ್ಲಿರುವ ಅನೇಕ ವ್ಯಕ್ತಿಗಳು, ಯಹೂದಿಗಳ ಸಮಸ್ಯೆಗೆ ಅನುಕಂಪವನ್ನು ತೋರಿಸಿದರು. ಬ್ರಿಟಿಷ್ ಯಹೂದಿ ರಾಜಕಾರಣಿ ಹರ್ಬರ್ಟ್ ಸ್ಯಾಮ್ಯುಯಲ್ ಸರಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರ ಬೇಡಿಕೆಗಳನ್ನು ಬ್ರಿಟಿಷ್ ಸರಕಾರಕ್ಕೆ ಮನವರಿಕೆ ಮಾಡಲು ಶಕ್ತನಾಗಿದ್ದನು. ೧೯೧೬ರಲ್ಲಿ ಚುನಾಯಿತನಾದ ಪ್ರಧಾನಮಂತ್ರಿ ಡೇವಿಡ್ ಲೊಯ್ಡ್ ಜರ್ಜ್ ಮತ್ತು ಅವನ ಸರಕಾರದ ವಿದೇಶಾಂಗ ಕಾರ್ಯದರ್ಶಿ ಆರ್ಥರ್ ಬಾಲ್ಪರ್ ಕೂಡ ಯಹೂದಿ ಜನಸಮುದಾಯದ ಮುಖಂಡರೊಂದಿಗೆ ಸ್ನೇಹದಿಂದಿದ್ದು, ನಿಕಟ ಸಂಪರ್ಕವನ್ನು ಬೆಳೆಸಿಕೊಂಡಿದ್ದರು. ೧೯೧೭ರಲ್ಲಿ ಬ್ರಿಟಿಷ್ ಸರಕಾರಕ್ಕೆ ಯಹೂದಿ ಗಳನ್ನು ಸಾರ್ವತ್ರಿಕವಾಗಿ ಬೆಂಬಲಿಸಲು ಒಂದು ಬಲವಾದ ರಾಜಕೀಯ ಕಾರಣವು ಇತ್ತು. ಅದೇ ವರ್ಷ ಅಮೆರಿಕ ಪ್ರಥಮ ಜಾಗತಿಕ ಯುದ್ಧದಲ್ಲಿ ನೇರವಾಗಿ ಪಾಲ್ಗೊಂಡಿದ್ದು, ಅಮೆರಿಕದಲ್ಲಿರುವ ಮತದಾರರನ್ನು ತನ್ನತ್ತ ಆಕರ್ಷಿಸಲು ಪ್ರಯತ್ನಿಸಿತು. ಜಗತ್ತಿನ ಬೇರೆ ಬೇರೆ ಪ್ರದೇಶದಲ್ಲಿ ಚದರಿ ಹೋದಂತೆ ಅಮೇರಿಕಕ್ಕೂ ಎರಡು ಸಾವಿರ ವರ್ಷಗಳ ಹಿಂದೆ ಸಾವಿರಾರು ಯಹೂದಿಗಳು ಪ್ಯಾಲೇಸ್ತೀನಿಂದ ಹೋಗಿ ನೆಲೆಸಿದ್ದರು. ಅಲ್ಲಿ, ಅವರು ಹಲವು ಉದ್ಯಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಆರ್ಥಿಕವಾಗಿ ಬಲಿಷ್ಟರಾಗಿದ್ದುದು ಮಾತ್ರವಲ್ಲ ಪ್ರತಿ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕದ ಯಹೂದಿ ಮತದಾರರು ಪ್ರಭಾವಿ ಪಾತ್ರವನ್ನು ವಹಿಸುತ್ತಿದ್ದರು. ಅವರು ಶ್ರೀಮಂತರಾಗಿದ್ದು, ಪ್ಯಾಲೇಸ್ತೀನ್‌ನಲ್ಲಿ ಯಹೂದಿಯರ ರಾಷ್ಟ್ರೀಯ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಹಣಕಾಸಿನ ನೆರವನ್ನು ನೀಡುತ್ತಿದ್ದರು. ಬ್ರಿಟಿಷರು ೧೯೧೭ರ ಹೊತ್ತಿಗೆ ಯುದ್ಧದ ಖರ್ಚನ್ನು ಭರಿಸಲು ಹಣದ ಅಭಾವವನ್ನು ಎದುರಿಸುತ್ತಿದ್ದು, ಯಹೂದಿಗಳ ಬೇಡಿಕೆಗೆ ಬೆಂಬಲವನ್ನು ಅಧಿಕೃತವಾಗಿ ಬ್ರಿಟಿಷ್ ಸರಕಾರ ಘೋಷಿಸಿದರೆ, ಅವರಿಂದ ಒಂದಷ್ಟು ಹಣಕಾಸಿನ ನೆರವನ್ನು ಪಡೆಯಬಹುದೆಂಬ ಆಶಯವಿತ್ತು. ಇನ್ನೊಂದು ರೀತಿಯಲ್ಲಿ ಬ್ರಿಟಿಷರು ಅಮೇರಿಕ ಸರಕಾರ ಮಧ್ಯ ಪ್ರಾಚ್ಯ ರಾಷ್ಟ್ರದಲ್ಲಿ ಬ್ರಿಟಿಷ್ ಮುಖಂಡತ್ವದ ಒಕ್ಕೂಟ ಶಕ್ತಿಗಳು ಯುದ್ಧಾಸಕ್ತಿಗಳನ್ನು ಬೆಂಬಲಿಸಬೇಕೆಂದು ನಿರೀಕ್ಷಿಸುತ್ತಿದ್ದರು. ಅಮೆರಿಕ ಅಧ್ಯಕ್ಷ ವುಡ್ರೋ ವಿಲ್ಸನ್ ರಾಷ್ಟ್ರೀಯ ಸ್ವಯಂ ನಿರ್ಧಾರಾಧಿಕಾರ ಪರಿಕಲ್ಪನೆಯನ್ನು ಸಮರ್ಥಿಸುತ್ತಿದ್ದು ಯಹೂದಿಯರ ಹಕ್ಕುಗಳಿಗೆ ಅಮೆರಿಕದ ಬೆಂಬಲ ಪಡೆಯಲು ಬ್ರಿಟಿಷರಿಗೆ ಉತ್ತಮ ಅವಕಾಶವೂ ಲಭಿಸಿತು. ಇದನ್ನು, ಬ್ರಿಟಿಷರು ನೇರವಾಗಿ ಅಮೆರಿಕ ಸರಕಾರಕ್ಕೆ ಹೇಳುವ ಬದಲು, ಅಲ್ಲಿನ ಯಹೂದಿ ಮತದಾರರ ಮೇಲೆ ಒತ್ತಾಯವನ್ನು ಹೇರಿ ಬ್ರಿಟಿಷರ ಆಶೋತ್ತರಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲು ತಂತ್ರಗಳನ್ನು ಹೂಡಿದರು. ಅದರಲ್ಲಿ ಯಶಸ್ಸನ್ನು ಕಂಡರು. ರಷ್ಯಾದಲ್ಲಿ ೧೯೧೭ರ ಚಳವಳಿಯಿಂದ ಸಮಾಜವಾದಿ ಚಿಂತಕರಾದ ಟ್ರೊಟಸ್ಕಿಯಂತವರಿಂದ ಬ್ರಿಟಿಷರ ಯುದ್ಧ ಸಮಯದ ಆಸಕ್ತಿಯ ಪರವಾಗಿರಲು ಸಹಕಾರಿಯಾಯಿತು. ಕೊನೆಯದಾಗಿ, ಪ್ಯಾಲೇಸ್ತೀನ್‌ನಲ್ಲಿ ಅನೇಕ ಯಹೂದಿಯರು ಬ್ರಿಟಿಷ್ ಅಧಿಕಾರಿಗಳೊಂದಿಗೆ ಸ್ನೇಹಿತರಾಗಿದ್ದು, ಬ್ರಿಟಿಷ್ ಆಸಕ್ತಿಯ ಪ್ಯಾಲೇಸ್ತೀನ್, ಈಜಿಪ್ಟ್ ಮತ್ತು ಸೂಯೇಜ್ ಕಾಲುವೆಗೆ ಸಿರಿಯಾದಲ್ಲಿರುವ ಫ್ರೆಂಚರಿಂದ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳಲು ಮತ್ತು ಭವಿಷ್ಯದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಆಸಕ್ತಿಗಳನ್ನು ರಕ್ಷಿಸಿಕೊಳ್ಳಲು ಯಹೂದಿಗಳು ಬಲಿಷ್ಠ ಶಕ್ತಿಗಳಾಗಿ, ಮಧ್ಯ ಪ್ರಾಚ್ಯ ರಾಷ್ಟ್ರದಲ್ಲಿ ಅವರ ಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸಬಹುದೆಂಬ ನಂಬಿಕೆಯಿಂದ, ಯಹೂದಿ ರಾಷ್ಟ್ರ ಸ್ಥಾಪನೆಗೆ ನೇರವಾಗಿ ಸಹಕಾರವನ್ನು ಬ್ರಿಟಿಷ್ ಸರಕಾರ ಘೋಷಿಸಲು ತೀರ್ಮಾನಿಸಿತು.

೧೯೧೭ರ ನವೆಂಬರ್ ೨ರಂದು ಆರ್ಥರ್ ಬಾಲ್ಪರ್, ಬ್ರಿಟಿಷ್ ಯಹೂದಿ ಮುಖಂಡ ರೋಥ್ ಚೈಲ್ಡ್‌ಗೆ ಒಂದು ಪತ್ರವನ್ನು ಬರೆದು ಬ್ರಿಟಿಷ್ ಸರಕಾರದ ನಿಲುವನ್ನು ಘೋಷಿಸುತ್ತಾನೆ. ಆ ಘೋಷಣೆ ಈ ಕೆಳಗಿನಂತಿದೆ.

ಬ್ರಿಟಿಷ್ ಸರ್ಕಾರ ಪ್ಯಾಲೇಸ್ತೀನಿನಲ್ಲಿ ಯಹೂದಿ ರಾಜ್ಯ ರಚನೆಗೆ ಸಂಬಂಧಿಸಿದಂತೆ ಪರವಾದ ನಿರ್ಣಯ ಕೈಗೊಳ್ಳುತ್ತದೆ. ಈ ನಿರ್ಣಯ ಪ್ಯಾಲೇಸ್ತೀನಿನಲ್ಲಿರುವ ಯಹೂದಿಯೇತರ ಜನಸಮುದಾಯಗಳ ನಾಗರಿಕ ಹಾಗೂ ಧಾರ್ಮಿಕ ಹಕ್ಕುಗಳ ವಿರುದ್ಧವಾಗಿರುವುದಿಲ್ಲ ಅಥವಾ ಇತರ ರಾಷ್ಟ್ರಗಳಲ್ಲಿರುವ ಯಹೂದಿಗಳ ಹಕ್ಕುಗಳಿಗೆ ಚ್ಯುತಿ ಬರುವಂತೆಯೂ ಇರುವುದಿಲ್ಲ.

ಇದನ್ನು, ಬಾಲ್ಪರ್ ಡಿಕ್ಲರೇಷನ್ ಎಂದೇ ಕರೆಯಲಾಗಿದ್ದು, ಇದರಲ್ಲಿ ಯಹೂದಿಗಳು ತಮ್ಮ ಪ್ರಭುತ್ವ ಸ್ಥಾಪನೆಗಾಗಿ ಪ್ಯಾಲೇಸ್ತೀನ್‌ನಲ್ಲಿ ಮಾಡಬೇಕಾದ ಪ್ರಯತ್ನಗಳು ಮತ್ತು ಅದನ್ನು ಅನುಷ್ಠಾನಕ್ಕೆ ತರಲು ಬ್ರಿಟಿಷರ ಪ್ರೋ ಘೋಷಿಸಲಾಗಿದೆ. ಯಹೂದಿಗಳು ಒಂದು ಸಮುದಾಯವಾಗಿ, ಮೊದಲ ಜಾಗತಿಕ ಯುದ್ಧದ ಸಂದರ್ಭದಲ್ಲಿ ಬ್ರಿಟಿಷರು ನೀಡಿದ ಅವಕಾಶವನ್ನು ಬಳಸಿಕೊಂಡು ಥಿಯೋಡೋರ್ ಹರ್ಸಲ್ ಕನಸನ್ನು ಬ್ರಿಟಿಷ್ ಸಹಕಾರದಿಂದ ನನಸಾಗಿಸಲು ಯೋಜನೆಯನ್ನು ಸಿದ್ಧಪಡಿಸಿ ಎಲ್ಯಾಡ್ ಗುಂಪುಗಳಿಗೆ ಬೆಂಬಲವನ್ನು ವ್ಯಕ್ತಪಡಿಸಿದರು. ಯಹೂದಿಗಳ ಸೇವೆ ಯಾವ ಮಟ್ಟದ್ದು ಎಂಬುದಕ್ಕೆ ಬಿನ್ನಾಭಿಪ್ರಾಯವಿದೆ.

ಆದರೆ, ಬ್ರಿಟಿಷರ ಯುದ್ದ ಸಮಯದ ಸಾಮ್ರಾಜ್ಯಶಾಹಿ ಆಸಕ್ತಿಗಳನ್ನು ಕ್ರೋಡೀಕರಿಸಲು ಅರಬ್ಬರು ನೀಡಿರುವ ಸಹಕಾರ ಮತ್ತು ಅವರ ಪರವಾಗಿ ಅಟ್ಟೋಮನ್ ಸರಕಾರದ ವಿರುದ್ಧ ಸಂಘಟಿಸಿದ ೧೯೧೬ರ ಅರಬ್ಬರ ದಂಗೆ (ಬ್ರಿಟಿಷರ ದೃಷ್ಟಿಯಿಂದ) ರಾಜಕೀಯ ಮತ್ತು ಸೈನಿಕ ನೆಲೆಯಲ್ಲಿ ಮುಖ್ಯವಾಗುತ್ತದೆ. ಯುದ್ಧ ಸಮಯದಲ್ಲಿ ಅಲ್ಯಾಡ್ ಗುಂಪಿಗೆ ನೀಡಿದ ಅರಬ್ಬರ ಸಹಕಾರದ ಬೆಲೆ ಏನು ಎಂದು ನಿರ್ಧರಿಸುವುದು ಅಸಾಧ್ಯ ಮತ್ತು ಹಾಗೇ ಮಾಡಿದರೆ, ಅದೊಂದು ಅಭಿಪ್ರಾಯವಾಗಿಯೇ ಉಳಿಯುವುದು. ಸೈನಿಕ ಕಾರ್ಯಾಚರಣೆ ದೃಷ್ಟಿಯಿಂದ ಮತ್ತು ರಾಜಕೀಯ ದೃಷ್ಟಿಯಿಂದ ಟರ್ಕಿ ವಿರುದ್ಧ ಅರಬ್ಬರ ದಂಗೆ, ಬ್ರಿಟಿಷರ ಯುದ್ಧ ಕಾಲದ ಪ್ರಯತ್ನಗಳಿಗೆ ಪ್ರಭಾವಿ ಪರಿಣಾಮವಾಗಿದೆ. ಈ ದಂಗೆ ಟರ್ಕಿ ಸರಕಾರದ ಕಾರ್ಯಾಚರಣೆಯ ದಿಕ್ಕು ತಪ್ಪಿಸಿತ್ತಲ್ಲದೆ, ಸೆಂಟ್ರಲ್ ಪೋರ್ಸ್‌ಗೆ ಸರಬರಾಜಗುವ ಶಸ್ತ್ರಾಸ್ತ್ರಗಳ ಪ್ರಮಾಣವನ್ನು ನಿಯಂತ್ರಿಸಿತು. ಜೊತೆಗೆ ಅಟ್ಟೋಮನ್ ಸರಕಾರದ ಆಡಳಿತಕ್ಕೆ ಒಳಪಟ್ಟ ಪ್ಯಾಲೇಸ್ತೀನನ್ನು ಬ್ರಿಟಿಷರು, ಅರಬ್ಬರ ಸಹಕಾರದಿಂದ ಸುಲಭವಾಗಿ ಆಕ್ರಮಿಸಿಕೊಂಡು, ಕೆಂಪು ಸಮುದ್ರದ ಸುತ್ತ ಜರ್ಮನಿಯು ತನ್ನದೇ ಏಕಸ್ವಾಮಿತ್ವವನ್ನು ಹೇರಬೇಕೆಂಬ ಕನಸನ್ನು ಭಗ್ನಗೊಳಿಸುತ್ತದೆ.  ಅರಬ್ಬರು ಬ್ರಿಟಿಷರ ಪರವಾದುದ್ದರಿಂದ ಎಲ್ಯಾಡ್ ಪವರ್ಸ್‌ಗಳು ನಿಯಂತ್ರಣ ಹೊಂದಿದ ಪ್ರದೇಶಗಳ ಮೇಲೆ ಟರ್ಕಿ ಸುಲ್ತಾನ ಧರ್ಮ ಯುದ್ಧ ಸಾರಬೇಕೆಂಬ ಆಸೆಯನ್ನು ನುಚ್ಚುನೂರು ಮಾಡುತ್ತದೆ. ಉತ್ತರಾಭಿಮುಖ ವಾಗಿ ಲಿವ್ಯಾಂಟ್ ಪ್ರದೇಶದ ಕಡೆಗೆ ಅರಬ್ಬರ ದಂಗೆ ವೃದ್ದಿಸುತ್ತಾ ಹೋದ ಹಾಗೆ, ಬ್ರಿಟಿಷರ ಪ್ರಭುತ್ವದ ವ್ಯಾಪ್ತಿಯು ವೃದ್ದಿಸಿತು. ಇದು ಎಲ್ಯಾಡ್ ಪೋರ್ಸ್‌ಗಳಿಗೆ ಮತ್ತಷ್ಟು ಬಲ ತಂದಿತು. ಎಲ್ಯಾಡ್ ಗುಂಪನ್ನು ಪ್ರತಿನಿಧಿಸುವ ಉಚ್ಚ ಸಮಿತಿಯು ಗುಪ್ತವಾಗಿ ೧೯೧೯ ಮಾರ್ಚ್ ೨೦ರಂದು ಪ್ಯಾರೀಸ್‌ನಲ್ಲಿ ಸಭೆ ಸೇರಿ, ಅರಬ್ಬರ ಸಹಕಾರದಿಂದ ಎಲ್ಯಾಡ್ ಗುಂಪು ಅಟ್ಟೋಮನ್ ಆಡಳಿತಕ್ಕೊಳಪಟ್ಟು ಪ್ಯಾಲೇಸ್ತೀನ್, ಸಿರಿಯಾ ಮತ್ತು ಲೆಬನಾನ್‌ಗಳನ್ನು ಆಕ್ರಮಿಸಿಕೊಂಡಿರುವುದನ್ನು ದಾಖಲಿಸಿಕೊಂಡಿತು. ಇದಕ್ಕೆ ಅರಬ್ಬರು ನೀಡಿರುವ ಸಹಕಾರವನ್ನು ಎಂದಿಗೂ ಮರೆಯ ಲಾಗದು ಎಂದು ಹೇಳಲಾಯಿತು. ಬ್ರಿಟಿಷ್ ಪ್ರಧಾನಿ ಡೇವಿಡ್ ಲಾಯ್ಡ್ ಚಾರ್ಜ್ ಒಂದು ಹೇಳಿಕೆ ನೀಡಿ ಶರೀಫ್ ಹುಸೇನ್‌ನಿಗೆ ಹೆನ್ರಿ ಮೆಕ್ ಮೋಹನ್ ನೀಡಿರುವ ಆಶ್ವಾಸನೆಯ ಆಧಾರದ ಮೇಲೆ ಬ್ರಿಟಿಷರು ತಮ್ಮಲ್ಲಿರುವ ಸಂಪತ್ತನ್ನು ಹೂಡಿ ಯುದ್ಧದಲ್ಲಿ ಯಶಸ್ವಿಯಾಗಿ ಗೆಲುವನ್ನು ಅನುಭವಿಸಲು ಸಹಕಾರಿಯಾಯಿತು ಎಂದು ಸಮರ್ಥಿಸಿಕೊಂಡನು.