ಇಸ್ರೇಲ್ ಸೈನ್ಯದ ನೇತೃತ್ವ ವಹಿಸಿದ ಮೋಷೆ ದಯಾನ್ ಘಟನೆಯ ತೀವ್ರತೆಯನ್ನು ಗಮನಿಸಿ ವಿಶ್ವಸಂಸ್ಥೆ ಮಧ್ಯ ಪ್ರವೇಶ ಮಾಡಿ ಯುದ್ಧ ವಿರಾಮ ಘೋಷಿಸುವ ನಿರೀಕ್ಷೆಯಲ್ಲಿದ್ದರೂ, ಅದಾಗುವ ಮುನ್ನವೇ ಯುದ್ಧಾನುಕೂಲವಿರುವ ಸೂಕ್ಷ್ಮ ಪ್ರದೇಶ ಗಳಲ್ಲಿ ಮತ್ತು ಗಡಿಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಸ್ಥಾಪಿಸಬೇಕೆಂಬ ಆಶಯ ಹೊಂದಿದ್ದನು. ಅದಕ್ಕಾಗಿಯೇ, ಇಸ್ರೇಲ್ ಸೈನಿಕ ಕಾರ್ಯಾಚರಣೆ ಮುಂದುವರಿಯಿತು. ನಿರ್ದಿಷ್ಟ ಗುರಿಯಿಟ್ಟುಕೊಂಡ ಈ ಕಾರ್ಯಾಚರಣೆಯಲ್ಲಿ ಇಸ್ರೇಲ್ ಅರಬ್ ದೇಶಗಳಿಗೆ ಸೇರಿದ ಕೆಲವು ಫಲವತ್ತಾದ ಭೂಮಿಯನ್ನು ಆಕ್ರಮಿಸಿಕೊಂಡಿತು. ಈಜಿಪ್ಟ್‌ಗೆ ಸೇರಿದ ಸಿನೈಯನ್ನು ಭಾಗಶಃ ೧೯೫೬ರ ಎರಡನೆ ಅರಬ್-ಇಸ್ರೇಲ್ ಯುದ್ಧದ ಸಮಯದಲ್ಲಿ ಆಕ್ರಮಿಸಿಕೊಂಡಿತ್ತು. ಈಗ ಅದನ್ನು ಪೂರ್ಣವಾಗಿ ಆಕ್ರಮಿಸಿಕೊಂಡಿತು. ಜೋರ್ಡಾನ್‌ಗೆ ಸೇರಿದ ಪಶ್ಚಿಮ ದಂಡೆಯನ್ನು ಮತ್ತು ಪೂರ್ವ ಜೆರುಸಲೇಂ ಪ್ರದೇಶಗಳನ್ನು ಯಶಸ್ವಿ ಯಾಗಿ ಇಸ್ರೇಲ್ ಆಕ್ರಮಿಸಿಕೊಂಡಿತು. ಈ ಕಾರ್ಯಾಚರಣೆಗಳು ಕೇವಲ ೬ ದಿನಗಳಿಗೆ ಸೀಮಿತಗೊಂಡಿದ್ದು, ಇದೊಂದು ಇಸ್ರೇಲ್ ಸೈನಿಕ ಇತಿಹಾಸದಲ್ಲಿ ಒಂದು ಯಶಸ್ವಿ ಕಾರ್ಯಾಚರಣೆ. ಈ ಯುದ್ಧವು ಕೇವಲ ಆರು ದಿನಗಳಲ್ಲಿ ಮುಗಿದಿರುವುದರಿಂದ ಸಿಕ್ಸ್ ಡೇಸ್ ವಾರ್ ಎಂದೂ ಕರೆಯಲಾಯಿತು. ನಾಸರನ ಸೇನೆ ಸಂಪೂರ್ಣವಾಗಿ ವಿಫಲವಾಯಿತು ಮತ್ತು ಅರಬ್ ಸಮುದಾಯದ ಹೋರಾಟ ದುರ್ಬಲಗೊಂಡಿತು. ಸಿನೈಯಲ್ಲಿರುವ ತೈಲ ಬಾವಿಗಳು ಇಸ್ರೇಲ್ ಕೈ ಸೇರಿತು. ಜೋರ್ಡಾನ್ ಸರಕಾರ ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೇಂನ ಫಲವತ್ತಾದ ಮತ್ತು ಪವಿತ್ರ ಭೂಮಿಯನ್ನು ಕಳೆದುಕೊಂಡಿತು. ಇಸ್ರೇಲ್ ಸೈನಿಕ ಕಾರ್ಯಾಚರಣೆಯಿಂದ ಆಕ್ರಮಿತ ಪ್ರದೇಶದಲ್ಲಿದ್ದ ಸುಮಾರು ೧,೦೦,೦೦೦ದಷ್ಟು ಹೊಸ ಪ್ಯಾಲೇಸ್ತೀನಿ ಅರಬ್ ನಿರಾಶ್ರಿತರಿಗೆ ಜೋರ್ಡಾನ್ ಅಸರೆ ನೀಡಬೇಕಾಯಿತು. ಅವಮಾನಕ್ಕೊಳಗಾದ ಅಬ್ದುಲ್ ನಾಸರ್ ಮತ್ತು ದೊರೆ ಹುಸೇನ್ ಒಂದು ಹೊಸ ಬಗೆಯ ಕತೆಯನ್ನು ರಚಿಸಿ, ಇಸ್ರೇಲ್ ನಡೆಸಿದ ಈ ದಾಳಿಯ ಹಿಂದೆ ಬ್ರಿಟಿಷ್ ಮತ್ತು ಅಮೆರಿಕ ದೇಶಗಳ ಕೈವಾಡವಿದೆ ಎಂದೂ ಆರೋಪಿಸಿದರು. ಇವೆಲ್ಲವೂ ಅರಬ್ ಮುಖಂಡರ ದೌರ್ಬಲ್ಯಗಳೇ. ಅಷ್ಟಾಗಿಯೂ, ಇಸ್ರೇಲ್ ರಾಜ್ಯ ಸ್ವಲ್ಪ ಕಾಲ ನೆಮ್ಮದಿ ಯಿಂದ ಉಸಿರುಬಿಡುವಂತಾಯಿತು.

ಶಾಂತಿ ಮತ್ತು ಯುದ್ಧ ೧೯೬೭೮೩

ಆರು ದಿನಗಳ ಯುದ್ಧಾನಂತರ ಇಸ್ರೇಲ್ ಆಕ್ರಮಿಸಿಕೊಂಡ ಪೂರ್ವ ಜೆರುಸಲೇಂ, ಗಾಝ ಪಟ್ಟಿ, ಪಶ್ಚಿಮ ದಂಡೆ, ಗೋಲ್ಡನ್ ಹೈಟ್ಸ್ ಮತ್ತು ಸಿನೈ ಮರುಭೂಮಿಯನ್ನು ತನ್ನ ಆಡಳಿತ ವ್ಯಾಪ್ತಿಗೆ ತಂದಿತು. ಈ ಆಕ್ರಮಿತ ಪ್ರದೇಶ ಸುಮಾರು ೨೮,೦೦೦ ಚದರ ಮೈಲಿಗಳಷ್ಟು ವಿಸ್ತಾರವಾದ ಭೂಮಿ. ೧೯೪೮ರಲ್ಲಿ ಇಸ್ರೇಲ್ ವಶವಿದ್ದ ಭೂಮಿಗಿಂತ ಮೂರು ಪಟ್ಟು ದೊಡ್ಡದು. ಇಸ್ರೇಲ್ ಸರಕಾರ ಅರಬ್‌ರೊಂದಿಗೆ ಶಾಂತಿ ಮಾತುಕತೆ ಆರಂಭಿಸಿ ಸೌಹಾರ್ದತೆಯಿಂದ ಇರಲು ಅರಬ್ಬರ ಮೇಲೆ ಒತ್ತಾಯ ಹೇರಲು ಈ ಆಕ್ರಮಿತ ಪ್ರದೇಶಗಳನ್ನು ಅಸ್ತ್ರವನ್ನಾಗಿ ಬಳಸಲು ನಿರ್ಧರಿಸಿತು. ಅರಬ್ ಸಮುದಾಯವು ೬೭ರ ಯುದ್ಧದಲ್ಲಿ ಅನುಭವಿಸಿದ ಸೋಲು ಇನ್ನೊಂದು ಅವಮಾನವೆಂದು ತಿಳಿದು, ಇಸ್ರೇಲ್ ಸರಕಾರದೊಂದಿಗೆ ಸಮಾನವಾಗಿ ಮಾತುಕತೆ ಆರಂಭಿಸಲು ಇಷ್ಟ ಪಡುವುದಿಲ್ಲ. ಅದರಲ್ಲೂ ಮುಖ್ಯವಾಗಿ, ಈಜಿಪ್ಟ್ ತನ್ನ ಪ್ರಭಾವವನ್ನು ಪ್ರಾದೇಶಿಕ ಮಟ್ಟದಲ್ಲಿ ಪುನರ್ ಸ್ಥಾಪಿಸಲು ಯೋಜನೆ ಮಾಡಿತು.

ಪುನಃ ಅರಬ್ ಸಮುದಾಯ ಸೂಡಾನ್ ದೇಶದ ನಗರವಾದ ಖಾರ್‌ಟೌಮ್‌ನಲ್ಲಿ ಸಭೆ ಸೇರಿ, ಇಸ್ರೇಲ್ ಸ್ಥಾಪನೆಯನ್ನು ಗೌರವಿಸಬಾರದು. ಅದರೊಂದಿಗೆ ಯಾವುದೇ ಕಾರಣಕ್ಕೂ ಶಾಂತಿ ಮಾತುಕತೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಬಾರದು ಎಂದು ಒಮ್ಮತದ ನಿರ್ಣಯ ತೆಗೆದುಕೊಂಡಿತು. ಈಜಿಪ್ಟ್ ಸಿರಿಯಾ ಮತ್ತು ಜೋರ್ಡಾನ್ ೬೭ರ ಯುದ್ಧದ ಸಮಯದಲ್ಲಿ ಅನುಭವಿಸಿದ ಆರ್ಥಿಕ ನಷ್ಟವನ್ನು ತುಂಬಲು ಮತ್ತು ಆ ದೇಶಗಳ ಅಭಿವೃದ್ದಿಗೆ ಬೇಕಾದ ಸಂಪತ್ತನ್ನು ಸೌದಿ ಅರೇಬಿಯಾ ಮತ್ತು ಕುವೈತ್ ಕೊಡುವುದಾಗಿ ಒಪ್ಪಿಕೊಂಡವು. ರಷ್ಯಾ ಕೂಡ ಈಜಿಪ್ಟ್‌ನ ಸೈನ್ಯದ ಪುನಾರಚನೆಯನ್ನು ಕೈಗೆತ್ತಿಕೊಂಡಿತು. ಸಂಕಷ್ಟದಲ್ಲಿದ್ದ ಅಧ್ಯಕ್ಷ ಅಬ್ದುಲ್ ನಾಸರ್ ಹೆಚ್ಚು ಹೆಚ್ಚು ರಷ್ಯಾ ವನ್ನೇ ಅವಲಂಬಿಸಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ ಅಮೆರಿಕ ತನ್ನ ಇರುವಿಕೆಗೆ ಸಂಚಕಾರ ಬರಬಹುದೆಂಬ ಭಯದಿಂದ ತನ್ನ ಮಿತ್ರ ರಾಜ್ಯವಾದ ಇಸ್ರೇನ್‌ನ ಸೈನ್ಯ ಪುನಾರಚನೆಗೆ ಪ್ರೋ ಪ್ರಾದೇಶಿಕ ನೆಲೆಯ ಎರಡು ಗುಂಪುಗಳಾದ ಯಹೂದಿ ಮತ್ತು ಅರಬ್ಬರ ನಡುವಿನ ಬಿಕ್ಕಟ್ಟನ್ನು ರಷ್ಯಾ ಮತ್ತು ಅಮೆರಿಕ ತಮ್ಮ ಸ್ವಾರ್ಥ ಆಸಕ್ತಿಗಳನ್ನು ಈಡೇರಿಸಿಕೊಳ್ಳಲು ಉಪಯೋಗಿಸಿಕೊಂಡವು. ರಷ್ಯಾ ಮತ್ತು ಅಮೆರಿಕ ದೇಶಗಳ ನಡುವಿನ ಈ ಪೈಪೋಟಿಯು ಜಾಗತಿಕ ಶಾಂತಿಗೆ ಭಂಗ ತರುವಂತಹದ್ದು ಎಂದು ಕೂಡ ಆ ದೇಶಗಳು ಅರಿತಿದ್ದವು. ಆ ಕಾರಣಕ್ಕಾಗಿಯೇ, ಅಮೆರಿಕಾ ಆತುರದಲ್ಲಿ ತಾನು ಶಾಂತಿಪ್ರಿಯ ರಾಷ್ಟ್ರವೆಂದು ಸಮರ್ಥಿಸಿಕೊಳ್ಳಲು, ಮಧ್ಯಪ್ರಾಚ್ಯ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಪ್ರಯತ್ನವನ್ನು ಆರಂಭಿಸಿತು. ಇದಕ್ಕೆ ರಷ್ಯಾ ಯಾವುದೇ ಅಡ್ಡಿಯನ್ನೂ ಮಾಡಿರಲಿಲ್ಲ. ನಾಸರ್ ಕೂಡ ಅಮೆರಿಕದ ನೇತೃತ್ವದಲ್ಲಿ ಶಾಂತಿ ಮಾತುಕತೆಗೆ ಚಾಲನೆ ನೀಡುವುದಕ್ಕೆ ತನ್ನ ಸಮ್ಮತಿ ವ್ಯಕ್ತಪಡಿಸಿದ. ಹಾಗೆಯೇ ಜೋರ್ಡಾನ್ ದೊರೆ ಹುಸೇನ್, ಇದಕ್ಕುತ್ತರವಾಗಿ ಇಸ್ರೇಲ್ ಸರಕಾರ ತನ್ನ ಮಂತ್ರಿಗಳ ಸಭೆ ಕರೆದು ಭವಿಷ್ಯ ದಲ್ಲಿ ಮಾಡಬೇಕಾದ ಕಾರ್ಯ ತಂತ್ರದ ಕುರಿತು ನೀಲಿ ನಕ್ಷೆಯನ್ನು ರಚಿಸಿಕೊಂಡಿತು.

ಇಸ್ರೇಲ್ ರಾಜ್ಯ ಸ್ಥಾಪನೆಯ ನಂತರ ನಡೆದ ಎಲ್ಲ ಅರಬ್-ಇಸ್ರೇಲಿ ಯುದ್ಧದಲ್ಲಿ ಈಜಿಪ್ಟ್, ಜೋರ್ಡಾನ್ ಮುಂಚೂಣಿಯಲ್ಲಿದ್ದು ಹೋರಾಟ ನಡೆಸಿ, ಅತೀ ಹೆಚ್ಚು ನಷ್ಟವನ್ನು ಅನುಭವಿಸಿದ್ದವು. ಅದಕ್ಕಾಗಿಯೇ ಇರಬಹುದು. ಈ ಎರಡು ದೇಶಗಳು ಶಾಂತಿ ಮಾತುಕತೆಗೆ ಪರೋಕ್ಷವಾಗಿ ಹಸಿರು ನಿಶಾನೆ ತೋರಿಸಿರುವುದು. ಈಜಿಪ್ಟ್ ಮತ್ತು ಜೋರ್ಡಾನ್ ರಾಜ್ಯಗಳ ಇಂತಹ ಹಠಾತ್ ಬದಲಾವಣೆಯನ್ನು ಯಾವುದೇ ಅರಬ್ ದೇಶಗಳು ನಿರೀಕ್ಷಿಸಿರಲಿಲ್ಲ. ಹಾಗಾಗಿ, ಉಳಿದ ಅರಬ್ ರಾಷ್ಟ್ರಗಳು ಮತ್ತು ಪ್ಯಾಲೇಸ್ತೀನಿ ನಿರಾಶ್ರಿತರು ತೀವ್ರಗಾಮಿ ನಿಲುವನ್ನು ತೆಗೆದುಕೊಂಡು ಇಸ್ರೇಲ್‌ನೊಂದಿಗೆ ಶಾಂತಿ ಮಾತುಕತೆಗೆ ಸಹಕರಿಸುವ ಲಕ್ಷಣವಿರಲಿಲ್ಲ. ಅಲ್ಲದೆ, ಇಸ್ರೇಲ್ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಘೋಷಿಸಿದವು. ಅರಬ್ ಜಗತ್ತಿಗೆ ವಿಶ್ವಸಂಸ್ಥೆಯ ಸದಸ್ಯರಾಗಿರುವ ತೃತೀಯ ಜಗತ್ತಿನ ಸದಸ್ಯ ರಾಷ್ಟ್ರಗಳ ಬೆಂಬಲವಿತ್ತು. ಅವರೆಲ್ಲರೂ ಪ್ಯಾಲೇಸ್ತೀನಿ ಸಮಸ್ಯೆಯ ಕುರಿತು ಅನುಕಂಪದಿಂದ ನ್ಯಾಯಬದ್ಧವಾದ ಖಾಯಂ ರಾಜಕೀಯ ಪರಿಹಾರಕ್ಕೆ ಬದ್ಧರಾಗಿದ್ದರು.

ತೃತೀಯ ಜಗತ್ತಿನ ಸದಸ್ಯ ರಾಷ್ಟ್ರಗಳ ಒತ್ತಾಯದಿಂದ ವಿಶ್ವಸಂಸ್ಥೆಯ ೨೪೨ ಸಂಖ್ಯೆಯ ಒಂದು ಠರಾವುವನ್ನು ಹೊರಡಿಸಿ

೧. ಅರಬ್ ಪ್ರಾಂತಗಳ ಮೇಲೆ ಇಸ್ರೇಲ್ ಮಾಡಿದ ಆಕ್ರಮಣ ಮತ್ತು ಬಲಾತ್ಕಾರದ ಪ್ರವೇಶವನ್ನು ಅಧಿಕೃತವಾಗಿ ಖಂಡಿಸಿತು.

೨. ಇಸ್ರೇಲ್ ಆಕ್ರಮಿಸಿಕೊಂಡ ಎಲ್ಲ ಪ್ರದೇಶಗಳನ್ನು ಆಯಾಯ ಅರಬ್ ದೇಶಗಳಿಗೆ ಹಿಂದಿರುಗಿಸಬೇಕು ಎಂದು ಸೂಚಿಸಿತು.

೩. ಇಸ್ರೇಲ್ ರಾಜ್ಯವನ್ನು ಗೌರವಿಸಬೇಕು ಎಂದು ಅರಬ್ ಸಮುದಾಯವನ್ನು ಒತ್ತಾಯಿಸಿತು.

೪. ಪ್ಯಾಲೇಸ್ತೀನಿಯರ ಹಕ್ಕುಗಳನ್ನು ರಕ್ಷಿಸಲು ಇಸ್ರೇಲ್ ಸರಕಾರವನ್ನು ಒತ್ತಾಯಿಸಿತು.

೨೪೨ ಸಂಖ್ಯೆಯ ಠರಾವಿನಲ್ಲಿರುವ ಅಂಶಗಳಿಗೆ ಅರಬ್ ಮತ್ತು ಯಹೂದಿಗಳು ಒಪ್ಪಿಗೆ ಪಡೆಯಲು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಗುನ್ನಾರ್ ಜರಿಂಗ್‌ನು ಮಧ್ಯವರ್ತಿ ಯಾಗಿಯೂ ಪ್ರಯತ್ನ ಮಾಡಿದ. ಆದರೆ ಯಾವುದೇ ಪ್ರತಿಫಲ ದೊರೆಯಲಿಲ್ಲ ಮತ್ತು ೧೯೭೦ರ ಹೊತ್ತಿಗೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಪುನಃ ಇಸ್ರೇಲ್‌ನೊಂದಿಗೆ ಸಂಘರ್ಷಕ್ಕೆ ಅರಬ್ ಜಗತ್ತು ವೇದಿಕೆ ಸಿದ್ಧ ಮಾಡಿತು. ಇದನ್ನು ವಾರ್ ಆಫ್ ಎಟ್ರಿಶನ್ ಎಂದು ಕರೆಯಲಾಯಿತು. ೧೯೭೦ರಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ನಾಸರ್, ಇದ್ದಕ್ಕಿ ದ್ದಂತೆ ದುರ್ಮರಣ ಹೊಂದಿದನು. ಅವನ ಉತ್ತರಾಧಿಕಾರಿಯಾಗಿ, ಅವನ ಸಹೋದ್ಯೋಗಿ ಹಾಗೂ ಅವನೊಂದಿಗೆ ದೀರ್ಘಕಾಲ ಉಪಾಧ್ಯಕ್ಷನಾಗಿ ಸೇವೆಯಲ್ಲಿದ್ದ ಅನ್ವರ್ ಸಾದತ್ ಅಧಿಕಾರವನ್ನು ವಹಿಸಿಕೊಂಡನು. ನಾಸರ್‌ನ ಅಧಿಕಾರಾವಧಿಯಲ್ಲಿ, ಅವನ ಎಲ್ಲ ಸುಧಾರಣೆಗಳಿಗೆ ಸಾಮಾನ್ಯವಾಗಿ ಬೆಂಬಲ ವ್ಯಕ್ತಪಡಿಸಿದ್ದರೂ ಕೂಡ, ಅನ್ವರ ಸಾದತ್‌ಗೆ ಈಜಿಪ್ಟ್‌ನ ಅನನ್ಯತೆಯ ಕುರಿತು(ಅರಬ್ ಜಗತ್ತಿನಲ್ಲಿ) ತನ್ನದೇ ಕೆಲವು ಅಭಿಪ್ರಾಯ ಗಳಿದ್ದವು. ಅವನ ದೃಷ್ಟಿಯಲ್ಲಿ ಈಜಿಪ್ಟ್‌ನ ಆಸಕ್ತಿಗಳಿಗೆ ಮೊದಲು ಪ್ರಾಶಸ್ತ್ಯ ನಂತರದಷ್ಟೆ, ಇತರ ಅರಬ್ ದೇಶಗಳ ಆಸಕ್ತಿಗಳನ್ನು ಪ್ರತಿನಿಧಿಸುವುದು. ಹಾಗಾಗಿ, ಈಜಿಪ್ಟ್‌ನ ಸಂಪತ್ತು ಮೊದಲು ಈಜಿಪ್ಟ್‌ನ ಜನತೆಯ ಅಭಿವೃದ್ದಿಗೆ ಲಭ್ಯವಾಗಬೇಕು. ಜನರ ಸಮಸ್ಯೆಗಳನ್ನು ಬಗೆಹರಿಸಿ ಎಲ್ಲಿಯಾದರೂ ಹೆಚ್ಚುವರಿ ಸಂಪತ್ತು ಉಳಿದರೆ, ಅದು ಇತರ ಅರಬ್ ಸಮುದಾಯದ ಇಷ್ಟಾರ್ಥಗಳನ್ನು ಈಡೇರಿಸಲು ವ್ಯಯಿಸಬಹುದು ಎಂಬುದು ಅವನ ಅಭಿಪ್ರಾಯ. ಅಂದರೆ ೧೯೫೨ರಲ್ಲಾದ ಸಮಾಜವಾದಿ ಕ್ರಾಂತಿ ನಂತರ, ಅಬ್ದುಲ್ ನಾಸರ್ ಅನಾವಶ್ಯಕವಾದ ಈಜಿಪ್ಟ್‌ನ ದೇಶದ ಸಂಪತ್ತನ್ನು ಅರಬ್-ಇಸ್ರೇಲ್ ಯುದ್ಧಗಳಿಗೆ ಬಳಸಿದನು. ಪಾನ್-ಅರಬಿಸಂ ಚಳವಳಿಯ ಹೆಸರಿನಲ್ಲಿ ಹೆಚ್ಚಿನ ಸಂಪತ್ತು ಸೈನ್ಯದ ರಚನೆಗೆ, ಶಸ್ತ್ರಾಸ್ತ್ರಗಳ ಖರೀದಿಗೆ ನಾಸರ್ ಬಳಸುತ್ತಿದ್ದ ಎಂಬುದು ಸಾದತ್‌ನ ವಾದ. ಎಂದಿಗೂ ಅದು ಈಜಿಪ್ಟ್‌ನ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಅಭಿವೃದ್ದಿಗೆ ಲಭಿಸುತ್ತಿರಲಿಲ್ಲ. ತನ್ನ ಪ್ರತಿಷ್ಠೆಯನ್ನು ಅರಬ್ ಜಗತ್ತಿನಲ್ಲಿ ಸಮರ್ಥಿಸಿಕೊಳ್ಳಲು ಈಜಿಪ್ಟ್ ಜನತೆಯ ಆಶೋತ್ತರಗಳನ್ನು ಪ್ಯಾಲೇಸ್ತೀನಿಯರ ಸಮಸ್ಯೆಯ ಹೆಸರಿನಲ್ಲಿ ಮಾಡಿಕೊಂಡ ಎಂಬುದು ಸಾದತ್‌ನ ಅಭಿಪ್ರಾಯ. ಹಾಗಾಗಿ, ಅವನ ಕಾಲ ನಂತರ ಅಧಿಕಾರಕ್ಕೆ ಬಂದ ಅನ್ವರ್ ಸಾದತ್‌ಗೆ ಈಜಿಪ್ಟ್ ಮತ್ತು ಈಜಿಪ್ಟ್ ಜನತೆ ಮೊದಲ ಪ್ರಾಶಸ್ತ್ಯ.

ತನ್ನ ದೇಶದ ಕೈಗಾರಿಕೀಕರಣ, ಆರ್ಥಿಕ ಭದ್ರತೆ ಮತ್ತು ಲಾಭದಾಯಕ ಉದ್ಯಮಗಳನ್ನು ಪ್ರೋ ಅನ್ವರ್ ಸಾದತ್ ವಿದೇಶದಿಂದ ಅಧಿಕ ಪ್ರಮಾಣದ ಬಂಡವಾಳ ನಿರೀಕ್ಷಿಸುತ್ತಿದ್ದ. ಆದ್ದರಿಂದ, ಸಮಾಜವಾದಿ ವ್ಯವಸ್ಥೆ ಮತ್ತು ರಷ್ಯಾದಂತಹ ರಾಷ್ಟ್ರದ ಸ್ನೇಹತ್ವದಿಂದ ದೂರ ಸರಿಯುವುದಕ್ಕೂ ಅವನು ಯಾವುದೇ ಅಂಜಿಕೆ ವ್ಯಕ್ತಪಡಿಸಿಲ್ಲ. ಅದೇ ಸಮಯದಲ್ಲಿ ರಷ್ಯಾ ಮತ್ತು ಅಮೆರಿಕಾ ಸಾದತ್‌ನ ಮೇಲೆ ಒತ್ತಾಯ ಹೇರಿ, ಇಸ್ರೇನ್‌ನೊಂದಿಗೆ ಶಾಂತಿ ಮಾತುಕತೆಗೆ ಇಡೀ ಅರಬ್ ಜಗತ್ತನ್ನು ಒಪ್ಪಿಸಲು ಕರೆ ಕೊಟ್ಟವು. ಮಧ್ಯಪ್ರಾಚ್ಯ ಪ್ರದೇಶದಲ್ಲಿರುವ ಅತಂತ್ರ ರಾಜಕೀಯ ಬಿಕ್ಕಟ್ಟಿಗೆ ಖಾಯಂ ಪರಿಹಾರವನ್ನು ತಮ್ಮ ನೇತೃತ್ವದಲ್ಲಿಯೇ ಸಾಧ್ಯವೆಂಬುದನ್ನು ಅರಬ್ ಜಗತ್ತಿಗೆ ಮನದಟ್ಟು ಮಾಡುವ ಹುನ್ನಾರು ಇದು. ಸಾದತ್ ಮಾತ್ರ ತನ್ನ ದುರ್ಬಲ ಮುಖಂಡತ್ವ ದಡಿಯಲ್ಲಿ ಆ ಪ್ರಯತ್ನಕ್ಕೆ ಕೈ ಹಾಕಲು ಸಿದ್ಧವಾಗಿರಲಿಲ್ಲ. ಅದಕ್ಕೆ ವಿರುದ್ಧವಾಗಿ ತನ್ನ ದೇಶದ ಸೈನ್ಯವನ್ನು ಪುನಾರಚಿಸಲು ಹೆಚ್ಚು ಗಮನ ಹರಿಸಿದನು. ಇದಕ್ಕೆ ಕಾರಣವೂ ಇದೆ. ಸಿನೈ ಮರುಭೂಮಿ ನಿಜವಾಗಿ ಈಜಿಪ್ಟ್‌ಗೆ ಸೇರಿದ್ದು. ನಾಸರ್‌ನ ನೇತೃತ್ವದಲ್ಲಿ ನಡೆದ ಎರಡನೆಯ ಅರಬ್-ಇಸ್ರೇಲಿ ಯುದ್ಧದ ಸಮಯದಲ್ಲಿ ಇಸ್ರೇಲ್ ಸಿನೈ ಪ್ರದೇಶದ ಒಂದು ಭಾಗವನ್ನು ಆಕ್ರಮಿಸಿ, ಅದನ್ನು ವಾಪಾಸ್ಸು ಈಜಿಪ್ಟ್‌ಗೆ ಬಿಟ್ಟು ಕೊಟ್ಟಿರಲಿಲ್ಲ. ೧೯೬೭ರ ಈ ಮೂರನೇ ಅರಬ್-ಇಸ್ರೇಲಿ ಯುದ್ಧದ ಸಮಯದಲ್ಲಿ ಸಿನೈಯನ್ನು ಸಂಪೂರ್ಣವಾಗಿ ಇಸ್ರೇಲನ್ನು ಆಕ್ರಮಿಸಿತು. ಅಲ್ಲದೆ, ಅಲ್ಲಿರುವ ಎಲ್ಲ ತೈಲ ಬಾವಿಗಳನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು. ಈಜಿಪ್ಟ್ ದೇಶಕ್ಕೆ ಬೇಕಾದ ಹೆಚ್ಚಿನ ಪ್ರಮಾಣದ ತೈಲವನ್ನು ಈ ಬಾವಿಗಳಿಂದ ಉತ್ಪಾದಿಸಲಾಗುತ್ತಿತ್ತು. ನಾಸರ್‌ನ ಕಾಲದಲ್ಲಿ ಈಜಿಪ್ಟ್ ಸರಕಾರ ರಷ್ಯಾದಿಂದ ಎಷ್ಟೇ ಸೈನಿಕ, ಆರ್ಥಿಕ ಮತ್ತು ತಾಂತ್ರಿಕ ನೆರವನ್ನು ಪಡೆದಿದ್ದರೂ, ನಾಸರ್‌ಗೆ ಕೈ ತಪ್ಪಿ ಹೋದ ಸಿನೈ ಮರುಭೂಮಿಯನ್ನು ಮರು ಆಕ್ರಮಿಸಿಕೊಳ್ಳ ಲಾಗಲಿಲ್ಲ. ಹಾಗಾಗಿಯೇ, ತನ್ನ ಸೈನ್ಯವನ್ನು ಪುನರ್ ನಿರ್ಮಿಸಲಾರಂಭಿಸಿ ಇಸ್ರೇಲ್‌ನೊಂದಿಗೆ ಹೋರಾಟ ನಡೆಸಿ ಸಿನೈ ಪ್ರಾಂತವನ್ನು ಹಿಂದಕ್ಕೆ ಪಡೆಯಬೇಕೆಂಬ ಹಂಬಲ ಅನ್ವರ್ ಸಾದತ್‌ಗಿತ್ತು. ಇದನ್ನು ಗಮನಿಸಿದ ರಷ್ಯಾದ ಸಲಹೆಗಾರರು ೧೯೭೨ರಲ್ಲಿ ಸಾದತ್‌ನನ್ನು ಪ್ರಶ್ನಿಸಿದರು ಮತ್ತು ಇಸ್ರೇಲ್‌ನೊಂದಿಗೆ ಶಾಂತಿ ಸಂಧಾನಕ್ಕೆ ಸಹಕರಿಸಲು ಒತ್ತಾಯಿಸಿದರು. ಆ ತಕ್ಷಣವೇ ಪ್ರತಿಕ್ರಿಯಿಸಿದ ಸಾದತ್ ರಷ್ಯಾದ ಎಲ್ಲ ಅಧಿಕಾರಿಗಳನ್ನು, ತರಬೇತಿದಾರನ್ನು ಮತ್ತು ಸಲಹೆಗಾರರನ್ನು ಈಜಿಪ್ಟ್‌ನಿಂದ ಹೊರ ಹೋಗಲು ಸರಕಾರಿ ಆಜ್ಞೆ ಹೊರಡಿಸಿದನು.

ಹೊಸ ಸೈನಿಕ ಕಾರ್ಯಾಚರಣೆಯನ್ನು ಆರಂಭಿಸುವಾಗ ಸಾದತ್‌ನದ್ದು ಲೆಕ್ಕಾಚಾರದ ವಹಿವಾಟು. ಸಾರ್ವತ್ರಿಕವಾಗಿ ರಷ್ಯಾ ಮತ್ತು ಅಮೆರಿಕ ದೇಶಗಳು ನಿರಂತರವಾಗಿ ಇಸ್ರೇಲ್ ಮೇಲೆ ಒತ್ತಾಯ ಹೇರುತ್ತಲೆ ಇವೆ. ೧೯೬೭ರಲ್ಲಿ ಆಕ್ರಮಿಸಿಕೊಂಡ ಅರಬ್ ಪ್ರಾಂತ್ಯ ಗಳನ್ನು ಹಿಂದಕ್ಕೆ ನೀಡಿ ೨೪೨ ಸಂಖ್ಯೆಯ ವಿಶ್ವಸಂಸ್ಥೆಯ ಠರಾವುವನ್ನು ಗೌರವಿಸಬೇಕೆಂದು ಇಸ್ರೇಲ್‌ಗೆ ಸೂಚಿಸುತ್ತಲೇ ಇವೆ. ಇಸ್ರೇಲ್ ರಾಜ್ಯ ಮಾತ್ರ ಅರಬ್ ಸಮುದಾಯ ತನ್ನ ಅಸ್ತಿತ್ವಕ್ಕೆ ಮತ್ತು ಭದ್ರತೆಗೆ ಮಾನ್ಯತೆ ಸೂಚಿಸುವವರೆಗೆ, ಯಾವುದೇ ಸ್ಪಷ್ಟ ನಿರ್ಣಯಕ್ಕೆ ಬರಲು ಸಾಧ್ಯವಿಲ್ಲವೆಂದೇ ಹೇಳುತ್ತಿತ್ತು. ಈಜಿಪ್ಟ್‌ನ ಅಧ್ಯಕ್ಷ ಸಾದತ್ ಮಾತ್ರ ಇಸ್ರೇಲ್ ರಾಜ್ಯಕ್ಕೆ ಆಶ್ಚರ್ಯವಾಗುವಂತೆ, ಯುದ್ಧ ಘೋಷಿಸಲು ತಯಾರಿ ನಡೆಸಿದನು. ಯುದ್ಧದ ಫಲಿತಾಂಶ ನೋಡಿ ಅರಬರು ಇಸ್ರೇಲ್‌ನೊಂದಿಗೆ ವ್ಯವಹರಿಸಿ, ಶಾಂತಿ ಒಪ್ಪಂದಕ್ಕೆ ಮುಂದಾಗುವ ಎಂದು ಕರೆ ಕೊಟ್ಟನು. ಒಂದು ವೇಳೆ ಈಜಿಪ್ಟ್ ಸೋತರೂ, ೨೪೨ ಸಂಖ್ಯೆ ಠರಾವಿನ ಶರತ್ತಿನ ಪ್ರಕಾರ ಆಕ್ರಮಿತ ಪ್ರದೇಶದಿಂದ ಇಸ್ರೇಲ್ ಹಿಂದಕ್ಕೆ ಸರಿಯಲೇಬೇಕು ಎಂದು ವಾದಿಸಿದನು. ಇಷ್ಟೆಲ್ಲಾ ಒತ್ತಾಯಗಳ ನಡುವೆಯೂ ಇಸ್ರೇಲ್ ಹಿಂದಕ್ಕೆ ಸರಿಯುವ ಲಕ್ಷಣವೇ ಭಾಸವಾಗಲಿಲ್ಲ. ಆದ ಕಾರಣ ಸಾದತ್‌ಗಿರುವುದು ಒಂದೇ ಅಸ್ತ್ರ ಸೈನಿಕ ಕಾರ್ಯಾಚರಣೆ.

೧೯೭೩ರ ಸೆಪ್ಟೆಂಬರ್‌ನಲ್ಲಿ ಸಾದತ್ ಸಿರಿಯಾದ ಅಧ್ಯಕ್ಷ ಹಫಿಜ್-ಅಲ್ ಅಸಾದ್ ನೊಂದಿಗೆ ಗುಪ್ತ ಒಪ್ಪಂದ ಮಾಡಿಕೊಂಡು ಇಸ್ರೇಲ್ ವಿರುದ್ಧ ಜಂಟಿ ಕಾರ್ಯಾಚರಣೆ ಮಾಡಲು ನಿರ್ಧರಿಸಿದನು. ಅಕ್ಟೋಬರ್ ೬ ಎಲ್ಲ ಯಹೂದಿಗಳಿಗೆ ಪವಿತ್ರ ದಿನವಾಗಿದ್ದು ಆ ದಿನ ಇಡೀ ಇಸ್ರೇಲ್ ರಾಜ್ಯ ಪ್ರಾರ್ಥನೆ ಮತ್ತು ಉಪವಾಸ ಆಚರಣೆಯಲ್ಲಿ ಮುಳು ಗಿದ್ದ ಸಮಯದಲ್ಲಿ ಯಹೂದಿಗಳಿಗೆ ಆಶ್ಚರ್ಯವಾಗುವಂತೆ ಸಾದತ್ ಯುದ್ಧ ಘೋಷಿಸಿದನು. ಧೈರ್ಯದಿಂದ ಅರಬ್ ಸೈನ್ಯ ಹೋರಾಡಿದರೂ ಕೂಡ ಇಸ್ರೇಲ್ ತಕ್ಷಣವೇ ಮರು ಹೋರಾಟವನ್ನು ಸಂಘಟಿಸಿತು. ಅಧಿಕೃತವಾಗಿ ಅಕ್ಟೋಬರ್ ೧೫ರಂದು ಇಸ್ರೇಲ್ ಜನರಲ್ ಹಾಗೂ ಈಗಿನ ಪ್ರಧಾನಿ ಏರಿಯಲ್ ಶರೋನ್ ನೇತೃತ್ವದಲ್ಲಿ ಶಸ್ತ್ರಸಜ್ಜಿತವಾದ ಇಸ್ರೇಲ್ ಸೈನ್ಯ ಅರಬ್ಬರ ವಿರುದ್ದ ಪೂರ್ಣ ಪ್ರಮಾಣದ ಯುದ್ಧ ಆರಂಭಿಸಿತು. ಸುಮಾರು ಎರಡು ವಾರಗಳ ಕಾಲ ಈ ಸಂಘರ್ಷ ಮುಂದುವರಿಯಿತು. ಇಸ್ರೇಲ್ ಯುದ್ಧ ವಿರಾಮವನ್ನು ಘೋಷಿಸುವ ಮೊದಲು ಅರಬ್ ಸೈನ್ಯವನ್ನು ದಮನಿಸಿ ಮೇಲುಗೈ ಸಾಧಿಸಿತು. ಅಕ್ಟೋಬರ್ ೨೪ರಂದು ಯುದ್ಧ ವಿರಾಮ ಘೋಷಿಸಲಾಯಿತು. ಈ ಯುದ್ಧವನ್ನು ಯೋಮ್ ಕಿಪ್ಪೂರ್ ಎಂದು ಕರೆಯಲಾಗಿದೆ.

ಯೋಮ್ ಕಿಪ್ಪೂರ್ ಯುದ್ಧ ಸುಮಾರು ಮೂರು ವಾರಗಳ ಕಾಲ ನಡೆದು ಇಡೀ ಮಧ್ಯಪ್ರಾಚ್ಯ ಪ್ರದೇಶದ ವಾತಾವರಣವನ್ನು ಬದಲಿಸಿತು. ಈಜಿಪ್ಟ್ ಕೂಡ ಸೂಯೆಜ್ ಕಾಲುವೆಯನ್ನು ದಾಟಿ, ಆರಂಭದ ಯಶಸ್ಸು ಗಳಿಸಿರುವುದಕ್ಕೆ ಹೆಮ್ಮೆಪಟ್ಟಿತು. ಇಸ್ರೇಲ್ ಕೂಡ ನಂತರ ಮೈಲುಗೈ ಸಾಧಿಸಿದ ಕುರಿತು ಸಂತೋಷಪಟ್ಟಿತು ಮತ್ತು ಏರಿಯಲ್ ಶರೋನ್‌ನ ಸಮಯ ಪ್ರಜ್ಞೆ ಮತ್ತು ಚಾಕಚಕ್ಯತೆಯ ಪ್ರಶಂಸೆಗೆ ಒಳಗಾಯಿತು. ಅರಬ್ ಸಮುದಾಯದ ದೃಷ್ಟಿಯಿಂದ ೧೯೭೩ರ ನಾಲ್ಕನೇ ಅರಬ್-ಇಸ್ರೇಲಿ ಯುದ್ಧ ವಿಶೇಷ ವಾದದ್ದು. ಈ ಯುದ್ಧದ ಸಂದರ್ಭದಲ್ಲಿ ಇಸ್ರೇಲ್ ಮತ್ತು ಅದರ ಕಾರ್ಯಾಚರಣೆಗೆ ಪೋತ್ಸಾಹ ನೀಡುವ ಎಲ್ಲ ಸಾಮ್ರಾಜ್ಯಶಾಹಿ ರಾಷ್ಟ್ರಗಳ ಮೇಲೆ ಒತ್ತಾಯ ಹೇರಿ, ಪ್ಯಾಲೇಸ್ತೀನಿ ಪ್ರಶ್ನೆಗೆ ಉತ್ತರ ಹುಡುಕಲು ತೈಲವನ್ನು ಒಂದು ಆರ್ಥಿಕ ಹಾಗೂ ರಾಜಕೀಯ ಅಸ್ತ್ರವನ್ನಾಗಿ ಬಳಸಿದರು. ಈ ಹಿಂದೆ ಅಂತಹ ಅವಕಾಶವಿದ್ದರೂ, ಬಳಸಿ ಕೊಂಡಿರಲಿಲ್ಲ. ತೈಲ ಉತ್ಪಾದನೆ ಮಾಡುವ ಎಲ್ಲ ಅರಬ್ ದೇಶಗಳು ಒಗ್ಗೂಡಿ ಪಶ್ಚಿಮ ಜಗತ್ತಿಗೆ ಅರಬ್ ದೇಶಗಳಿಂದ ಸರಬರಾಜು ಮಾಡುವ ತೈಲ ಪ್ರಮಾಣದ ಒಟ್ಟು ೫ ಶೇಕಡ ಕಡಿತ ಮಾಡಲಾಗುವುದೆಂದೂ, ಅರಬ್ಬರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಹರಿಸದೇ ಹೋದಲ್ಲಿ ತೈಲ ಬೆಲೆಯನ್ನು ಹೆಚ್ಚಿಸುವುದಾಗಿಯೂ ಬೆದರಿಕೆ ಹಾಕಿದವು. ಗಲ್ಫ್‌ನ ತೈಲ ಉತ್ಪಾದನಾ ದೇಶಗಳು ಸುಮಾರು ಶೇಕಡಾ ೭೦ರಷ್ಟು ಬೆಲೆ ಏರಿಸಿದರು. ಸೌದಿ ಅರೇಬಿಯಾ ತನ್ನ ಉತ್ಪಾದನೆಯಲ್ಲಿ ೧೦ ಶೇಕಡ ಇಳಿಸಿತು ಮತ್ತು ಇಸ್ರೇಲನ್ನು ಬೆಂಬಲಿಸುವ ರಾಷ್ಟ್ರಗಳಾದ ಅಮೆರಿಕ, ನೆದರ್‌ಲ್ಯಾಂಡ್ ಮತ್ತು ಇತರ ಇಸ್ರೇಲಿ ಮಿತ್ರ ಐರೋಪ್ಯ ಆರ್ಥಿಕ ಸಮುದಾಯದ ಮೇಲೆ ಒತ್ತಾಯ ಹೇರಿ ಪ್ಯಾಲೇಸ್ತೀನಿಯರ ಬಿಕ್ಕಟ್ಟಿಗೆ ಸಹಾನುಭೂತಿ ತೋರಿಸಲು ಪ್ರಯತ್ನಿಸಲಾಯಿತು. ಈ ರೀತಿಯ ನಿರ್ಧಾರವನ್ನು ಇಡೀ ಅರಬ್ ಸಮುದಾಯ, ಸೌದಿ ಅರೇಬಿಯಾದ ನೇತೃತ್ವದಲ್ಲಿ ತೆಗದುಕೊಳ್ಳಲಾಯಿತು. ಅರಬ್ ತೈಲ ರಾಷ್ಟ್ರಗಳು ತೈಲವನ್ನು ಅಸ್ತ್ರವನ್ನಾಗಿ ಬಳಸಿದ ಪರಿಣಾಮವಾಗಿ ಜಾಗತಿಕ ತೈಲ ಬಿಕ್ಕಟ್ಟು, ತೈಲ ಬೆಲೆ ಹೆಚ್ಚಳ ಮತ್ತು ಆರ್ಥಿಕ ಅಭಿವೃದ್ದಿಗೆ ತೀವ್ರ ಹಾನಿ ಉಂಟು ಮಾಡಿತು. ಸಮಸ್ಯೆಯ ಗಂಭೀರತೆಯನ್ನು ಗಮನಿಸಿದ ಅನೇಕ ಬಂಡವಾಳಶಾಹಿ ರಾಷ್ಟ್ರ ಗಳು, ಅರಬ್ ಸಮುದಾಯ ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಲು ಯೋಜನೆಗಳನ್ನು ರಚಿಸತೊಡಗಿದವು. ಮುಖ್ಯವಾಗಿ ಈ ಎಲ್ಲ ರಾಷ್ಟ್ರಗಳ ಕೈಗಾರಿಕೋದ್ಯಮ, ಅರಬ್ ರಾಷ್ಟ್ರಗಳಲ್ಲಿ ಉತ್ಪಾದನೆ ಆಗುವ ತೈಲ ಸಂಪತ್ತನ್ನು ಅವಲಂಬಿಸಿದ್ದವು. ಅದರಲ್ಲೂ, ಅಮೆರಿಕದಂತಹ ಸಾಮ್ರಾಜ್ಯಶಾಹಿಗಳಿಗೆ ಸೌದಿ ತೈಲ ಮುಖ್ಯವಾದ ಸಂಪತ್ತಾಗಿತ್ತು. ಅದಕ್ಕಾಗಿ ಅರಬ್ ಮುಖಂಡರ ಮನ ಒಲಿಸಲು ಅಮೆರಿಕ ಸರಕಾರ ಕಾರ್ಯಪ್ರವೃತ್ತವಾಗಿ ಅದರ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್‌ನನ್ನು ನೇಮಕ ಮಾಡಿ ಶಾಂತಿ ಸೂತ್ರಗಳನ್ನು ರೂಪಿಸಲು ಆದೇಶಿಸಿತು. ರಷ್ಯಾದ ಒಪ್ಪಿಗೆ ಪಡೆದ ಅಮೆರಿಕ, ಅರಬ್ಬರ ಬೇಡಿಕೆಯಾದ ಪ್ಯಾಲೇಸ್ತೀನಿ ಸಮಸ್ಯೆಗೆ ಪೂರ್ಣ ಪ್ರಮಾಣದ ಪರಿಹಾರ ಯೋಜನೆಯ ಹೊಣೆಯನ್ನು ಕಿಸ್ಸಿಂಜರ್ ವಹಿಸಿದನು.

ಶಟ್ಲ್ ಡಿಪ್ಲಮಸಿ ೧೯೭೪

೧೯೭೩ರ ಅಕ್ಟೋಬರ್‌ನಲ್ಲಿ ನಾಲ್ಕನೇ ಅರಬ್-ಇಸ್ರೇಲಿ ಯುದ್ಧ ಆರಂಭವಾಗುವಾಗ ಹೆನ್ರಿ ಕಿಸ್ಸಿಂಜರ್, ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್‌ಗೆ ರಾಷ್ಟ್ರೀಯ ಭದ್ರತಾ ಮಂಡಳಿಯ ಸಲಹಗೆಗಾರನಾಗಿದ್ದ. ನಂತರ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕಗೊಂಡು ಮಧ್ಯಪ್ರಾಚ್ಯ ಪ್ರದೇಶದ ಘಟನೆಗಳಿಗೆ ಸಂಬಂಧಿಸಿ ಪ್ರಮುಖ ಪಾತ್ರ ವಹಿಸುತ್ತಾನೆ. ಯುದ್ಧ ಆರಂಭವಾಗುವ ಮೊದಲು ಉದ್ವಿಗ್ನ ಪರಿಸ್ಥಿತಿ ಇದ್ದರೂ ಕೂಡ, ಅಮೆರಿಕ ಸರಕಾರಕ್ಕೆ ಮಧ್ಯಪ್ರಾಚ್ಯ ಪ್ರದೇಶದ ವಿಚಾರವಾಗಿ ರಾಜತಾಂತ್ರಿಕ ವ್ಯವಹಾರ ಮಾಡಲು ಸಮಯ ಪೂರಕವಾಗಿಲ್ಲ ಎಂದೇ ಭಾವಿಸಿದ್ದನು. ಹಿಂದಿನ ಅಮೆರಿಕ ಅಧಿಕಾರಿಗಳಿಗಿಂತ ಕಿಸ್ಸಿಂಜರ್ ಮಧ್ಯಪ್ರಾಚ್ಯ ಪ್ರದೇಶದ ಬಿಕ್ಕಟ್ಟನ್ನು ಬೇರೆಯೇ ಆಗಿ ಅರ್ಥೈಸಿಕೊಂಡು, ಯುದ್ಧ ಆರಂಭವಾದ ನಂತರವೇ ಆ ಪ್ರದೇಶಕ್ಕೆ ಪ್ರವೇಶ ಮಾಡುತ್ತಾನೆ.

ಹೆನ್ರಿ ಕಿಸ್ಸಿಂಜರ್, ‘ಶಟ್ಲ್ ಡಿಪ್ಲಮಸಿ’ ಎಂಬ ಯೋಜನೆಯೊಂದಿಗೆ ಅರಬ್ ದೇಶಗಳ ಬೇರೆ ಬೇರೆ ರಾಜಧಾನಿಗೆ ಭೇಟಿ ನೀಡಿದನು. ೧೯೭೪ ಮತ್ತು ೧೯೭೫ರಲ್ಲಿ ಒಂದು ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡನು. ಅವನ ಮೂಲ ಉದ್ದೇಶ, ಆದಷ್ಟು ಬೇಗ ಅರಬ್ ಮುಖಂಡರನ್ನು ಸಮಧಾನ ಮಾಡಿ ಆಯಿಲ್ ಎಂಬಾರ್ಗೊವನ್ನು ಹಿಂದಕ್ಕೆ ಪಡೆಯಲು ವಾತಾವರಣವನ್ನು ತಿಳಿಗೊಳಿಸುವುದು. ಮತ್ತು ತೈಲ ಸರಬರಾಜು ನಿರಂತರವಾಗಿ ನಡೆಯಲು ನೋಡಿಕೊಳ್ಳವುದು. ಕಿಸ್ಸಿಂಜರ್‌ನ ಗುರಿ ಮುಖ್ಯವಾಗಿ ಈಜಿಪ್ಟ್ ಅಧ್ಯಕ್ಷ ನಾಸರ್, ಸೌದಿ ಅರೇಬಿಯಾದ ದೊರೆ ಪೈಸಲ್, ಸಿರಿಯಾ ಅಧ್ಯಕ್ಷ ಹಪೀಜ್-ಅಲ್-ಅಸಾದ್ ಮತ್ತು ಜೋರ್ಡಾನ್ ದೊರೆ ಹುಸೇನ್‌ರನ್ನು ತನ್ನತ್ತ ಸೆಳೆದುಕೊಳ್ಳುವುದು.

ಮೊದಲಿಗೆ ಅವನು ಈಜಿಪ್ಟ್‌ನ ಅನ್ವರ್ ಸಾದತ್‌ನನ್ನು ರಾಜಧಾನಿ ಕೈರೋದಲ್ಲಿ ಭೇಟಿಯಾದನು. ಸಾದತ್‌ಗೆ ಮೊದಲ ಪ್ರಾಶಸ್ತ್ಯ ನೀಡಲು ಕಾರಣವು ಇದೆ. ಅಬ್ದುಲ್ ನಾಸರ್‌ನ ಕಾಲಾನಂತರ ಸಾದತ್ ಈಜಿಪ್ಟ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದು, ನಾಸರ್ ನಂತೆಯೇ ಅವನು ರಾಜಕೀಯವಾಗಿ ತರಬೇತಿ ಪಡೆದಿರುವುದು ಸಮಾಜವಾದಿ ಪಕ್ಷದ ಕಾರ್ಯಕರ್ತನಾಗಿ. ಆದರೆ, ನಾಸರ್‌ನಂತೆ ಸಾದತ್ ದೈವದತ್ತ ಶಕ್ತಿ ಉಳ್ಳವನಾಗಿರಲಿಲ್ಲ. ಇವನು ಅಧಿಕಾರ ವಹಿಸಿಕೊಂಡಾಗ ಅನೇಕರು ಅವನು ಅಧ್ಯಕ್ಷನಾಗಲು ಅರ್ಹತೆ ಉಳ್ಳವನಲ್ಲವೆಂದು ದಂಗೆ ಎದ್ದಿದ್ದರು. ಅವೆಲ್ಲವನ್ನು ದಮನಿಸಿದ ಸಾದತ್ ಈಜಿಪ್ಟ್ ರಾಜಕೀಯದಲ್ಲಿ ಒಂದು ಶಕ್ತಿಯಾಗಿ ನಿರೀಕ್ಷೆಗೂ ಮೀರಿ ಬೆಳೆದುನಿಂತನು.

ಅಮೆರಿಕದವರು ಗಮನಿಸಿದಂತೆ, ನಾಸರ್‌ನ ನಂಬಿಗಸ್ಥ ಸ್ನೇಹಿತನಾಗಿ, ೧೯೫೦ರ ಆರಂಭದಲ್ಲಿ ಸಮಾಜವಾದಿ ಕ್ರಾಂತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಈಜಿಪ್ಟ್ ಮನಾರ್ಕಿಯನ್ನು ದುರ್ಬಲಗೊಳಿಸಿದವರಲ್ಲಿ ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದರೂ ಕೂಡ ಸಾದತ್ ಮಾತ್ರ ನಾಸರ್‌ನಷ್ಟು, ಕಟು ತೀವ್ರಗಾಮಿ ಅಥವಾ ಪಾನ್-ಅರಬಿಸ್ಟ್ ಕೂಡ ಆಗಿರಲಿಲ್ಲ. ನಾಸರ್‌ನ ಹಾಗೆ ಅರಬ್ ಜಗತ್ತಲ್ಲಿ ಸಂಭವಿಸುವ ಎಲ್ಲ ಘಟನೆಗಳಿಗೆ ಭಾವನಾತ್ಮವಾಗಿ ಮುಂಚೂಣಿಯಲ್ಲಿದ್ದು ಸ್ಪಂದಿಸುತ್ತಿರಲಿಲ್ಲ.

ಅಮೆರಿಕದ ರಾಯಬಾರಿ ಕಿಸ್ಲಿಂಜರ್, ಅವನ ವ್ಯಕ್ತಿತ್ವವನ್ನು ಗಮನಿಸಿದ್ದನು. ಸೋವಿಯತ್ ಒಕ್ಕೂಟದ ಬಗೆಗೆ ತಿರಸ್ಕಾರದ ಭಾವನೆ ಅವನಲ್ಲಿತ್ತು. ಮಾಸ್ಕೊದಿಂದ ನಿರಂತರ ಬೆಂಬಲ ಅರಬ್ ಸಮುದಾಯಕ್ಕೆ ಸಿಗುತ್ತಿದ್ದರೂ, ಇಸ್ರೇಲ್ ಆಕ್ರಮಿತ ಪ್ರದೇಶಗಳನ್ನು ಈಜಿಪ್ಟ್ ವಾಪಸ್ಸು ಪಡೆಯಲು ಸಾಧ್ಯವಾಗಲಿಲ್ಲ ಎಂಬ ಭಾವನೆ ಅವನಿಗಿತ್ತು.

೧೯೭೩ರ ಯುದ್ಧಾನಂತರ, ವಿಶ್ವಸಂಸ್ಥೆ ಯುದ್ಧ ವಿರಾಮವನ್ನು ಘೋಷಿಸಿ ೩೩೮ ಸಂಖ್ಯೆಯ ಠರಾವುವನ್ನು ಹೊರಡಿಸಿತು. ಅದರಲ್ಲಿ ಇಸ್ರೇಲ್‌ನ ಮೇಲೆ ಒತ್ತಾಯ ಹೇರಿ ಅರಬ್ ಆಕ್ರಮಿತ ಪ್ರದೇಶಗಳನ್ನು ತೆರವುಗೊಳಿಸಲು ಕರೆ ನೀಡಿತು. ಇದನ್ನು ಉಲ್ಲೇಖಿಸಿ ಕಿಸ್ಸಿಂಜರ್ ತನ್ನ ಕೈರೋ ಬೇಟಿಯ ಸಂದರ್ಭದಲ್ಲಿ ೧. ಸಾದತ್ ಗೆ ಆಶ್ವಾಸನೆಯೊಂದನ್ನು ನೀಡಿ, ಅಮೆರಿಕ ಸರಕಾರ ಈಗ ನಿಜವಾಗಿಯೂ ಅರಬ್ -ಇಸ್ರೇಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಸಕ್ತಿಯಿಂದ ಇದೆ ಎಂಬುದನ್ನು ಮನದಟ್ಟು ಮಾಡಿದನು. ೨. ಕಿಸ್ಸಿಂಜರ್‌ನು ಬುದ್ದಿವಂತಿಕೆಯಿಂದ ಸಾದತ್‌ಗೆ, ಅರಬ್-ಇಸ್ರೇಲಿ ಸಮಸ್ಯೆಯ ಕುರಿತು ವಿಶ್ವಸಂಸ್ಥೆಯು ತೆಗೆದುಕೊಳ್ಳುವ ನಿರ್ಧಾರದಲ್ಲಿ ಅಮೆರಿಕ ಪ್ರಭಾವಿ ಪಾತ್ರ ವಹಿಸುತ್ತದೆ ಎಂಬ ವಿಚಾರವನ್ನು ತಲುಪಿಸಲಾಗಿತ್ತು. ೩. ಮಾಸ್ಕೊದಿಂದ ಬರುವ ಧನ ಸಹಾಯ ಮತ್ತು ಸೈನಿಕ ಸಹಾಯ ಈಜಿಪ್ಟ್ ಕಳೆದುಕೊಂಡ ಸಿನೈ ಪ್ರದೇಶವನ್ನು ಇಸ್ರೇಲಿನಿಂದ ಹಿಂದಕ್ಕೆ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸುವುದು ಕಿಸ್ಸಿಂಜರ್ ಕೆಲಸವಾಗಿತ್ತು. ಅದನ್ನು ಸಮರ್ಥಿಸುತ್ತಾ ಈಜಿಪ್ಟ್‌ನ ಬೇಡಿಕೆ ಈಡೇರಬೇಕಾದರೆ ಸಾದತ್ ಹೆಚ್ಚು ಹೆಚ್ಚು ಅಮೆರಿಕವನ್ನು ಅವಲಂಬಿಸಬೇಕು. ಮತ್ತು ಬಿಕ್ಕಟ್ಟಿಗೆ ಒಂದು ವಾತಾವರಣವನ್ನು ರಚಿಸಬೇಕು. ಅದು ಅಮೆರಿಕಾದ ಒಡಂಬಡಿಕೆಯಿಂದ ಮಾತ್ರ ಸಾಧ್ಯ ಎಂಬುದನ್ನು ಕಿಸ್ಸಿಂಜರ್ ಸಾದತ್‌ಗೆ ತಿಳಿಸುತ್ತಾನೆ. ಅದಾಗ ಬೇಕಿದ್ದರೆ ಅಮೆರಿಕ ಹಾಕುವ ಒಂದು ಶರತ್ತನ್ನು ಈಜಿಪ್ಟ್ ಪಾಲಿಸಬೇಕು. ಅದೇನೆಂದರೆ, ಎಲ್ಲ ಅರಬ್ ತೈಲ ರಾಷ್ಟ್ರಗಳು ಆಯಿಲ್ ಎಂಬಾರ್ಗೊವನ್ನು ಹಿಂದಕ್ಕೆ ಪಡೆಯಲು ಸಾದತ್‌ನನ್ನು ಒಪ್ಪಿಸಬೇಕು. ಅದಕ್ಕಾಗಿ, ಅವನು ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಕಿಸ್ಸಿಂಜರ್ ಒತ್ತಾಯಿಸಿದನು. ನಿಜವಾದ ಕಿಸ್ಸಿಂಜರ್ ಬಂದಿರುವುದೇ ಈ ಕೆಲಸಕ್ಕೆ ಅದಕ್ಕೆ ಒಪ್ಪಿಗೆಯನ್ನು ಸಾದತ್‌ನಿಂದ ಪಡೆದನು.

ಸಾದತ್ ಅಲ್ಲದೆ, ಕಿಸ್ಸಿಂಜರ್ ತನ್ನ ಶಟ್ಲ್ ಡಿಪ್ಲಮಸಿಯಲ್ಲಿ ಸೌದಿ ಅರೇಬಿಯಾದ ದೊರೆ ಪೈಸಲ್‌ನನ್ನು ಗುರಿ ಮಾಡಿಕೊಂಡಿದ್ದನು. ಎರಡನೆಯ ಜಾಗತಿಕ ಯುದ್ಧದ ನಂತರ ಅಮೆರಿಕ ಸಾಮ್ರಾಜ್ಯಶಾಹಿ ಪ್ರಭುತ್ವ ಬೇರೂರಲು ಸೌದಿ ಅರೇಬಿಯ ಒಂದು ಪ್ರಬಲ ಪ್ರಾದೇಶಿಕ ಶಕ್ತಿಯಾಗಿ ಕಾರಣವಾಗಿತ್ತು. ರಾಜಕೀಯ ಮತ್ತು ರಾಜತಾಂತ್ರಿಕ ಸಂಬಂಧವನ್ನು ಸೌದಿ ಅರಸೊತ್ತಿಗೆ ಅಮೆರಿಕದೊಂದಿಗೆ ಬೆಳೆಸಿಕೊಂಡಿತ್ತು. ಇದನ್ನು ನಾಸರ್‌ನಂತಹ ತೀವ್ರಗಾಮಿ ಸಮಾಜವಾದಿ ಮುಖಂಡರು ವಿರೋಧಿಸುತ್ತಲೇ ಇದ್ದರು. ಆ ಎಲ್ಲ ಸಂದರ್ಭಗಳಲ್ಲಿ ಅಮೆರಿಕ ಸರಕಾರ ಸೌದಿ ಅರಸೊತ್ತಿಗೆಗೆ ಸೈನಿಕ ಸಹಾಯವನ್ನು ನೀಡಿ ಅಂತಹ ಅರಸೊತ್ತಿಗೆ ವಿರೋಧಿ ಚಟುವಟಿಕೆಗಳನ್ನು ಅಡಗಿಸಲು ಯಶಸ್ವಿಯಾಗಿತ್ತು. ಸೌದಿಗೂ ತಮ್ಮ ಅರಸೊತ್ತಿಗೆ ಮುಂದುವರಿಯಲು ಅಮೆರಿಕದ ಸಾಮ್ರಾಜ್ಯಶಾಹಿ ಬೆಂಬಲವೇ ಕಾರಣವೆಂದು ತಿಳಿದಿತ್ತು.

ರಾಜಕೀಯ ಮತ್ತು ರಾಜತಾಂತ್ರಿಕ ಸಂಬಂಧದ ಜೊತೆಗೆ ಅಮೆರಿಕ ಸೌದಿ ಅರೇಬಿಯ ನಡುವೆ ಆರ್ಥಿಕ ಸಂಬಂಧವು ಗಟ್ಟಿಯಾಗಿತ್ತು. ಅಮೆರಿಕದ ತೈಲ ಕಂಪೆನಿಗಳು ಸೌದಿ ಅರೇಬಿಯಾದಲ್ಲಿ ಬಿಲಿಯಗಟ್ಟಲೆ ಬಂಡವಾಳವನ್ನು ಹೂಡಿ ತೈಲ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದ್ದರೂ ಅಲ್ಲದೆ, ಇತರ ವಹಿವಾಟಿನಲ್ಲಿ ಸಕ್ರಿಯ ಪಾಲುದಾರನಾಗಿತ್ತು. ಇದಲ್ಲದೆ, ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳು ತೈಲ ಶ್ರೀಮಂತ ಸೌದಿ ಅರೇಬಿಯಾದಲ್ಲಿ ಕಟ್ಟಡಗಳ ನಿರ್ಮಾಣ, ಹೋಟೆಲ್ ಉದ್ಯಮ ಮತ್ತು ಇತರ ಅಭಿವೃದ್ದಿ ಕಾರ್ಯದಲ್ಲಿ ತೊಡಗಿದ್ದವು. ಸೌದಿ ತೈಲ ಉತ್ಪಾದನೆಯನ್ನು ಮತ್ತು ಮಾರಾಟವನ್ನು ಅಮೆರಿಕ ಉದ್ಯಮಿಗಳು ನಿರ್ವಹಿಸುತ್ತಿದ್ದರು. ಸೌದಿ ಅರೇಬಿಯಾ ಕೂಡ ಅಮೆರಿಕವನ್ನು ಅವಲಂಬಿಸಿ ಎಲ್ಲ ತರದ ಆಧುನಿಕ ಸಿದ್ಧ ವಸ್ತುಗಳನ್ನು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿತ್ತು ಹಾಗಾಗಿ, ಅಮೆರಿಕ ಮತ್ತು ಸೌದಿ ಅರೇಬಿಯ ಪರಸ್ಪರ ಅವಲಂಬಿತವಾಗಿದ್ದು, ಆ ಸಂಬಂಧ ಇಬ್ಬರಿಗೂ ಲಾಭದಾಯಕವಾಗಿದ್ದವು.

ಇನ್ನೊಂದು ಕಾರಣಕ್ಕೂ ಸೌದಿ ಅರೇಬಿಯಾವನ್ನು ಅಮೆರಿಕ ಗಂಭೀರವಾಗಿ ಪರಿಗಣಿ ಸಿತ್ತು. ಸೌದಿ ದೊರೆ ಪೈಸಲ್ ಇದೇ ಅರಬ್ ಜಗತ್ತಿನಲ್ಲಿರುವ ಸಂಪ್ರದಾಯವಾದಿ ಶಕ್ತಿಗಳಿಗೆ ಪ್ರಭಾವಿ ಮುಖಂಡನಾಗಿದ್ದು, ಮನಾರ್ಕಿಯ ಮುಂದುವರಿಕೆಯನ್ನು ಖಚಿತಪಡಿಸಿ ಕೊಂಡನು. ಅನೇಕ ವರ್ಷಗಳ ಕಾಲ ತೀವ್ರಗಾಮಿ ಸಮಾಜವಾದಿ ನಾಸರ್ ಮತ್ತು ಪೈಸಲ್ ಪರಸ್ಪರ ದ್ವೇಷಿಸುತ್ತಿದ್ದರು. ನಾಸರ್ ನಿರಂತರವಾಗಿ ಪೈಸಲ್‌ನನ್ನು ಸಂಪ್ರದಾಯವಾದಿ ಎಂದು ಟೀಕಿಸಿ, ಅಮೆರಿಕದ ಸಾಮ್ರಾಜ್ಯಶಾಹಿಯ ಬಾತ್ಮಿದಾರನೆಂದೂ, ಮತ್ತು ಅರಬ್ ಜಗತ್ತಿನಲ್ಲಿ ಅಮೆರಿಕ ಅಷ್ಟೊಂದು ಬೆಳೆಯಲು ಸೌದಿ ಅರೇಬಿಯಾದ ದೊರೆಯೇ ಕಾರಣವೆಂದು ಸಾರ್ವತ್ರಿಕವಾಗಿ ಖಂಡಿಸುತ್ತಿದ್ದನು. ಅದೇ ಬಗೆಯ ಟೀಕೆಯನ್ನು ನಾಸರ್ ಕುರಿತು ಪೈಸಲ್ ಕೂಡ ಮಾಡುತ್ತಿದ್ದರು. ನಾಸರನ್ನು ಎಲ್ಲ ತೀವ್ರಗಾಮಿ ಸಮಾಜವಾದಿಗಳ ಒಕ್ಕೂಟವನ್ನು ಪ್ರತಿನಿಧಿಸಿ ಅರಬ್ ಜಗತ್ತಿನಲ್ಲಿ ಅರಸೊತ್ತಿಗೆ ಸರಕಾರದ ವಿರುದ್ಧ ಚಳವಳೀಯನ್ನೇ ಆರಂಭಿಸಿ ಇಡೀ ಅರಬ್ ಜಗತ್ತಿನಲ್ಲಿ ಸಮಾಜ ವಾದಿ ಪ್ರಭುತ್ವವನ್ನು ಸ್ಥಾಪಿಸುವ ಆಶಯ ಇಟ್ಟುಕೊಂಡವನು. ಅದರ ಯಶಸ್ಸಿಗೆ ಅವನು ಹೆಚ್ಚು ಹೆಚ್ಚು ಸೋವಿಯತ್ ಒಕ್ಕೂಟವನ್ನು ಅವಲಂಬಿಸುತ್ತಿದ್ದನು. ಅವನ ಯೋಜನೆ ಅರಸೊತ್ತಿಗೆ ವಿರುದ್ಧವಾಗಿದ್ದು, ಸೌದಿ ಅರಸೊತ್ತಿಗೆಯನ್ನು ಉರುಳಿಸುವುದಾಗಿತ್ತು. ಹಾಗಾಗಿ, ದೊರೆ ಪೈಸಲ್, ನಾಸರ್‌ನನ್ನು ಕಮ್ಯುನಿಸ್ಟ್‌ಗಳ ಕೈಗೊಂಬೆ ಎಂದೂ, ಸೋವಿಯತ್ ಒಕ್ಕೂಟದ ಏಜೆಂಟ್ ಎಂದೂ ಲೇಬಲ್ ಮಾಡಿದ್ದನು. ನಾಸರನು ತೀವ್ರಗಾಮಿ ಶಕ್ತಿಗಳ ಪ್ರತಿನಿಧಿ ಯಾದ ಪೈಸಲ್ ಎಲ್ಲ ಸಂಪ್ರದಾಯವಾದಿಗಳನ್ನು, ಪಶ್ಚಿಮದ/ಅಮೆರಿಕ ಪರವಿರುವ ಪ್ರಾದೇಶಿಕ ಗುಂಪುಗಳನ್ನು ಒಂದುಗೂಡಿಸಿ ಅರಬ್ ರಾಜಕೀಯವನ್ನು ಕೆಡಿಸುವ ನಾಸರ್ ಮತ್ತು ಅವನ ಬೆಂಬಲಿಗರನ್ನು ವಿರೋದಿಸಲಾರಂಭಿಸಿದನು.

ಅಮೆರಿಕ ಮತ್ತು ಸೌದಿ ಅರೇಬಿಯಾ ನಡುವೆ ಒಳ್ಳೆಯ ಸಂಬಂಧ ಮುಂದುವರಿದರೂ, ಅರಬ್-ಇಸ್ರೇಲಿ ಬಿಕ್ಕಟ್ಟು ಆ ಎರಡು ದೇಶಗಳ ನಡುವೆ ನಿಧಾನವಾಗಿ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಿತು. ಇದೊಂದು ದೌರ್ಬಲ್ಯದ ಸಂಗತಿ ಈ ಎರಡು ದೇಶಗಳ ನಡುವೆ. ಅರಬ್ ಜಗತ್ತಿನಲ್ಲಿ ತೀವ್ರಗಾಮಿ ಮುಖಂಡರಿಗೆ ಇದನ್ನು ಒಳ್ಳೆಯ ಅವಕಾಶವನ್ನಾಗಿ ಬಳಸಿಕೊಂಡು ಸಂಪ್ರದಾಯವಾದಿ ಸೌದಿ ಪ್ರಭುತ್ವವನ್ನು ಖಂಡಿಸುವುದು ಮತ್ತು ಶಕ್ತಿ ಮೀರಿ ವಿರೋಧಿ ಸುವುದು ಅನಿವಾರ್ಯವಾಯಿತು. ಅವರ ದೃಷ್ಟಿಯಲ್ಲಿ ಪ್ಯಾಲ್ಯೇಸ್ತಿನಿಯರ ಸಮಸ್ಯೆ ಅಮೆರಿಕ ಸಾಮ್ರಾಜ್ಯಶಾಹಿ ನಿಲುವಿನಿಂದ ಉಲ್ಬಣಗೊಂಡಿದ್ದು, ಆ ದೇಶದೊಂದಿಗೆ ಅರಬ್ ರಾಷ್ಟ್ರವಾದ ಸೌದಿ ಅರೇಬಿಯಾ ಒಳ್ಳೆಯ ಸಂಬಂಧವಿಟ್ಟಿರುವುದನ್ನು ಸಹಿಸಲಾಗು ತ್ತಿರಲಿಲ್ಲ. ಮತ್ತು ಅಷ್ಟೊಂದು ಅನ್ಯೋನ್ಯತೆ ಇದ್ದರೂ ಸೌದಿ ಸರಕಾರ ಅಮೆರಿಕದ ಮೇಲೆ ಒತ್ತಾಯ ಹೇರಿ ಇಸ್ರೇಲಿಗರೇ ಭಯೋತ್ಪಾದನಾ ಚಟುವಟಿಕೆಯನ್ನು ನಿಯಂತ್ರಿಸು ವುದಾಗಲಿ, ಪ್ಯಾಲೇಸ್ತೀನಿ ಸಮಸ್ಯೆ ಪರಿಹಾರಕ್ಕೆ ಅಮೆರಿಕವನ್ನು ಎಚ್ಚರಿಸುವುದಾಗಲಿ ಮಾಡಲಿಲ್ಲ ಎಂದು ನಾಸರ್‌ನಂತೆ ಸಮಾಜವಾದಿ ಮುಖಂಡರು ದೂರುತ್ತಿದ್ದರು. ಸೌದಿ ಅರೇಬಿಯ ತನ್ನ ಅಮೆರಿಕ ಪರ ನಿಲುವಿನ ಕುರಿತು ಬಂದ ಚಟುವಟಿಕೆಗಳನ್ನು ಸರಿಪಡಿಸಿ ಕೊಳ್ಳಲು, ದೊರೆ ಪೈಸಲ್ ೧೯೭೩ರ ಅರಬ್-ಇಸ್ರೇಲಿ ಯುದ್ಧವನ್ನು ಅಸ್ತ್ರ ವನ್ನಾಗಿ ಬಳಸಿಕೊಳ್ಳುತ್ತಾನೆ. ಅವನ ಆಲೋಚನೆ ತನಗೆ ಬರುವ ಟೀಕೆಗಳನ್ನು ನಿಲ್ಲಿಸುವುದು. ಇಲ್ಲಿಯವರೆಗೆ ಪ್ಯಾಲೇಸ್ತೀನಿಯರ ಹಕ್ಕುಗಳ ರಕ್ಷಣೆಯ ಕುರಿತು ಸೌದಿಗಳು ಏನನ್ನೂ ಕೊಡುಗೆಯಾಗಿ ಕೊಟ್ಟಿಲ್ಲ ಎಂಬ ಆಪಾದನೆಯನ್ನು ಸರಿಪಡಿಸಬೇಕು. ಅದಕ್ಕಾಗಿಯೇ ತೈಲ ಸಂಪತ್ತಿನಲ್ಲಿ ಶ್ರೀಮಂತವಾಗಿರುವ ಸೌದಿ ಅರೇಬಿಯಾ ಅರಬ್ ರಾಷ್ಟ್ರಗಳ ಬೆಂಬಲದೊಂದಿಗೆ ಪಶ್ಚಿಮದ ರಾಷ್ಟ್ರಗಳಿಗೆ, ಇಸ್ರೇಲ್‌ಗೆ ಬೆಂಬಲ ಸೂಚಿಸುವ ಐರೋಪ್ಯ ರಾಷ್ಟ್ರಗಳಿಗೆ ತೈಲ ಸರಬರಾಜನ್ನು ನಿಷೇಧಿಸಲಾಯಿತು. ಇದು ಸೌದಿ ದೊರೆ ಫೈಸಲ್‌ನ ನೇತೃತ್ವದಲ್ಲಿ ತೆಗೆದುಕೊಂಡ ನಿರ್ಧಾರವಾಗಿದ್ದು ಸೌದಿ ಅರೇಬಿಯಾದ ನಂಬಿಗಸ್ಥ ಸಾಮ್ರಾಜ್ಯಶಾಹಿ ಅಮೆರಿಕಕ್ಕೂ ಅನ್ವಯಿಸಿತು. ಇದು ಸೌದಿ ಅರೇಬಿಯಾದ ಚಾಣಾಕ್ಷತನವೂ ಹೌದು. ಹೆಚ್ಚು ಹೆಚ್ಚು ಇಸ್ರೇಲ್ ವಿರೋಧಿ ನಿಲುವನ್ನು ಫೈಸಲ್ ಬಹಿರಂಗಪಡಿಸಿದ ಹಾಗೆ ಅಷ್ಟೇ ಪ್ರಚಾರವು ಅವನಿಗೆ ದೊರೆಯಿತು. ಮತ್ತು ಅಮೆರಿಕವನ್ನು ಒತ್ತಾಯಿಸಿ ಅದರ ಇಸ್ರೇಲ್ ಪರ ನಿಲುವಿನಲ್ಲಿ ಸಡಿಲಿಕೆ ಮಾಡಿಕೊಳ್ಳಲು ನೇರವಾಗಿಯೇ ಅಮೆರಿಕ ಸರಕಾರಕ್ಕೆ ಹೇಳಿತು. ಈ ಬದಲಾದ ಸೌದಿಯ ನಿಲುವು ಅಮೆರಿಕವನ್ನು ದಿಗ್ಭ್ರಮೆಗೊಳಿಸಿರುವುದು ನಿಜ.