ಬ್ರಿಟಿಷ್ ಪಾರ್ಲಿಮೆಂಟ್‌ನಲ್ಲಿ ೧೯೧೭ರ ಬಾಲ್ಪರ್ ಘೋಷಣೆಯ ಅನುಮೋದನಾ ಪ್ರಕ್ರಿಯೆ, ಹಲವು ವಾದ ವಿವಾದಗಳನ್ನು ಸೃಷ್ಟಿಸಿತು. ಹೌಸ್ ಆಫ್ ಲಾರ್ಡ್ಸ್‌ನ ಹೆಚ್ಚಿನ ಸದಸ್ಯರು ಸರಕಾರದ ನಿರ್ಧಾರವನ್ನು ಟೀಕಿಸಿದರು. ಆದರೆ, ಹೌಸ್ ಆಫ್ ಕಾಮನ್ಸ್‌ನಲ್ಲಿರುವ ಸದಸ್ಯರು ನಿರ್ಧಾರವನ್ನು ಅನುಮೋದಿಸಿದರು. ಬ್ರಿಟಿಷರ ಉದ್ದೇಶ ಸ್ವಾರ್ಥದಿಂದ ಕೂಡಿದ್ದು, ಎಂದು ಕೆಲವು ಸದಸ್ಯರು ಟೀಕಿಸಿದರು. ಬ್ರಿಟಿಷರು ಪ್ಯಾಲೇಸ್ತೀನ್ ಒಂದೇ ಪ್ರದೇಶದಲ್ಲಿ ಎರಡು ಬಲಿಷ್ಠ ಸಮುದಾಯಗಳಾದ ಯಹೂದಿಗಳು ಮತ್ತು ಅರಬರಿಗೆ ಯುದ್ಧಾನಂತರ ಪ್ರಭುತ್ವ ಸ್ಥಾಪಿಸಲು ಅವಕಾಶ ಮಾಡಿಕೊಡುವುದಾಗಿ ಆಶ್ವಾಸನೆ ನೀಡಿತ್ತು. ಅಂದರೆ, ೧೯೧೫ರಲ್ಲಿ ಟರ್ಕಿ ಸರಕಾರದ ವಿರುದ್ಧ ಸೇಡು ತೀರಿಸಿಕೊಳ್ಳಲು, ಬ್ರಿಟಿಷರು ಟರ್ಕಿಯ ಪ್ರಜೆಗಳಾದ ಅರಬ್ಬರನ್ನೇ ಎತ್ತಿಕಟ್ಟಿ ದಂಗೆ ಏಳಲು ಪ್ರಚೋದಿಸಿದ್ದರು. ಬ್ರಿಟಿಷರ ಯುದ್ಧ ಸಮಯದ ಆಸಕ್ತಿಗಳ ಪರವಾಗಿ ಟರ್ಕಿ ಸರಕಾರದ ವಿರುದ್ಧ ಯುದ್ಧ ಸಾರಲು ಅರಬರಿಗೆ ಕರೆ ಕೊಟ್ಟು, ಅದಕ್ಕೆ ಬ್ರಿಟಿಷರು ಕೊಡುಗೆಯಾಗಿ ಯುದ್ಧಾನಂತರ ಪ್ಯಾಲೇಸ್ತೀನಿನಲ್ಲಿ ಸ್ವತಂತ್ರ ಪ್ಯಾಲೇಸ್ತೀನಿ ಅರಬ್ ರಾಷ್ಟ್ರವನ್ನು ಕಟ್ಟಲು ಬೇಕಾದ ಎಲ್ಲ ವಾತಾವರಣವನ್ನು ಬ್ರಿಟೀಷ್ ಸರಕಾರ ಮಾಡುವುದಾಗಿ ಒಪ್ಪಿಗೆ ನೀಡಿತ್ತು. ಆಶ್ವಾಸನೆಯಂತೆ ಯುದ್ಧದ ಸಮಯದಲ್ಲಿ ಬ್ರಿಟೀಷ್ ಸೈನ್ಯ ಪ್ಯಾಲೇಸ್ತೀನನ್ನು ಆಕ್ರಮಿಸುವುದು. ಯುದ್ಧದ ನಂತರ ನಿರೀಕ್ಷಿಸಿದಂತೆ ಅಟ್ಟೋಮನ್ ಸಾಮ್ರಾಜ್ಯ ಅವನತಿ ಹೊಂದುವುದು. ಪ್ಯಾಲೇಸ್ತೀ ನನ್ನು ಅರಬ್ಬರ ಸ್ವತಂತ್ರ ರಾಷ್ಟ್ರವೆಂದು ಘೋಷಿಸಲಾಗುವುದು ಎಂದು ಬ್ರಿಟಿಷ್ ಪ್ರತಿನಿಧಿ ಹೆನ್ರಿ ಮೆಕ್ ಮೋಹನ್ ಮತ್ತು ಅರಬ್ ಮುಖಂಡ ಶರೀಫ್ ಹುಸೇನನೊಂದಿಗೆ ೧೯೧೫ರಲ್ಲಿ ಸಹಿ ಹಾಕಿದ ಒಪ್ಪಂದದಲ್ಲಿ ಭರವಸೆ ನೀಡಲಾಗಿತ್ತು. ಆದ್ದರಿಂದ, ಈ ಒಪ್ಪಂದದ ಪ್ರಕಾರ ಯುದ್ಧದ ಸಮಯದಲ್ಲಿ ಬ್ರಿಟಿಷರ ಪರವಾಗಿ ಅರಬ್ಬರು ಹೋರಾಡಿರುವುದರಿಂದ ಅದರ ಪ್ರತಿಫಲವಾಗಿ ಸ್ವತಂತ್ರ ರಾಷ್ಟ್ರವನ್ನು ಘೋಷಿಸಲಾಗುವುದು. ಇದಕ್ಕೆ ವಿರುದ್ಧವಾಗಿ ೧೯೧೭ರ ಬಾಲ್ಟರ್ ಘೋಷಣೆಯಲ್ಲಿ ಅದೇ ಪ್ಯಾಲೇಸ್ತೀನನಲ್ಲಿ ಯಹೂದಿಗಳಿಗೆ ಸ್ವದೇಶ ಕಟ್ಟಲು ಅವಕಾಶವನ್ನು ಬ್ರಿಟಿಷ್ ಸರಕಾರ ಕಲ್ಪಿಸುವುದೆಂದು ಹೇಳಲಾಗಿದೆ. ಇವೆರಡೂ ಒಪ್ಪಂದಗಳು ಬ್ರಿಟಿಷರು ತಮ್ಮ ಸ್ವಾರ್ಥಕ್ಕಾಗಿ ಮಾಡಿಕೊಂಡ ನಿರ್ಧಾರಗಳು ಮತ್ತು ಒಂದಕ್ಕೊಂದು ವಿರುದ್ಧವಾದವುಗಳು. ಹಾಗಾಗಿ ಇದು ಒಂದು ವಿವಾದವನ್ನು ಹುಟ್ಟು ಹಾಕುತ್ತದೆ.

ಮೇಲ್ನೋಟಕ್ಕೆ ಇದು ವಿವಾದವೆಂದು ಕಂಡರೂ, ಬ್ರಿಟಿಷರು ಬಹಳ ಚಾಣಾಕ್ಷತನದಿಂದ ಬಾಲ್ಪರ್ ಘೋಷಣೆಯನ್ನು ವ್ಯಾಖ್ಯಾನಿಸುತ್ತಾರೆ. ಘೋಷಣೆಯಲ್ಲಿ ಬ್ರಿಟಿಷ್ ಸರಕಾರ ಪ್ಯಾಲೇಸ್ತೀನ್‌ನಲ್ಲಿ ಯಹೂದಿಗಳು ಸ್ವದೇಶ ನಿರ್ಮಿಸುವ ಆಶಯಕ್ಕೆ ಬ್ರಿಟಿಷರು ಕೇವಲ ತಮ್ಮ ಒಪ್ಪಿಗೆ ಸೂಚಿಸಿದ್ದು ಮಾತ್ರ. ಅನುಷ್ಠಾನ ಮಾಡಬೇಕೆಂದು ಇಲ್ಲವಲ್ಲ? ಅಲ್ಪ ಸಂಖ್ಯಾತ ಯಹೂದಿಗಳು ಮತ್ತು ಬಹುಸಂಖ್ಯಾತ ಅರಬ್ಬರು ಶತಮಾನಗಳಿಂದಲೂ ಅಲ್ಲಿ ಸೌಹಾರ್ದದಿಂದ ಬದುಕುತ್ತಿದ್ದಾರೆ ಎಂಬುದೂ ಸತ್ಯ. ಹಾಗಾಗಿ ಯಹೂದಿಗಳು ಪ್ರತ್ಯೇಕವಾಗಿ ಬೇಡಿಕೆ ಸಲ್ಲಿಸಬೇಕೆಂದೇನೂ ಇಲ್ಲ. ಅದೂ ಅಲ್ಲದೇ, ಬ್ರಿಟಿಷರು ಅಪೇಕ್ಷೆ ಸೂಚಿಸಿದ ಮಾತ್ರಕ್ಕೆ ಯಹೂದಿಗಳು ಇಡೀ ಪ್ಯಾಲೇಸ್ತೀನನ್ನು ಆಕ್ರಮಿಸಿ, ಪ್ಯಾಲೇಸ್ತೀನ್ ತಮ್ಮದೇ ಸ್ವತಂತ್ರ ರಾಷ್ಟ್ರವೆಂದು ಪರಿವರ್ತಿಸಬೇಕೆಂಬ ಯಾವ ಭರವಸೆಯನ್ನು ಬ್ರಿಟಿಷರು ನೀಡಿಲ್ಲ. ಹೀಗೆ ವ್ಯಾಖ್ಯಾನಿಸಿ ವಿವಾದವನ್ನು ಗಾಳಿಗೆ ತೂರಿಬಿಟ್ಟರು. ಇಂತಹ ಸಮರ್ಥನೆ ಯನ್ನು ಬ್ರಿಟಿಷರಿಂದ ಯಹೂದಿಗಳು ಆ ತಕ್ಷಣ ನಿರೀಕ್ಷಿಸುತ್ತಿದ್ದರು. ಏಕೆಂದರೆ, ಪೂರ್ಣಪ್ರಮಾಣದ ಸಿದ್ಧತೆಯಿಂದ ಪ್ಯಾಲೇಸ್ತೀನನ್ನು ತಮ್ಮ ರಾಷ್ಟ್ರವೆಂದು ಘೋಷಿಸಲು ಯಹೂದಿಗಳು ಅಲ್ಪಸಂಖ್ಯಾತರು. ಅವರ ಜನಸಂಖ್ಯೆಯಲ್ಲಿ ಏರಿಕೆಯನ್ನು ನೋಡುವುದು ಮತ್ತು ತಾವೇ ಮುಂದೊಂದು ದಿನ ಬಹುಸಂಖ್ಯಾತ ಸಮುದಾಯವಾಗಿ ಮಾರ್ಪಾಡಾಗು ವವರೆಗೆ ತಾಳ್ಮೆಯಿಂದ ಕಾಯಬೇಕು ಎಂಬುದು ಯಹೂದಿಗಳಿಗೆ ಗೊತ್ತಿತ್ತು. ಆದರೆ, ಪ್ಯಾಲೇಸ್ತೀನ್ ಅರಬರಿಗೆ ಬ್ರಿಟಿಷರ ಧೋರಣೆಯ ಉದ್ದೇಶಗಳ ಅರಿವಿದ್ದವು ಮತ್ತು ಅವರ ಪ್ರೋ ಆರಂಭವಾಗಬಹುದಾದ ಯಹೂದಿ ವಸಾಹತೀಕರಣವನ್ನು ವಿರೋಧಿಸಲು ಸನ್ನದ್ಧರಾದರು.

ಪ್ಯಾಲೇಸ್ತೀನ್ನಲ್ಲಿ ಬ್ರಿಟಿಷರ ಆಡಳಿತ ೧೯೧೯೪೫

ಯುದ್ಧ ಮುಗಿದ ನಂತರ ಅರಬ್ಬರು ತಮ್ಮ ಸಮಸ್ಯೆ ಶಾಂತಿಯುತವಾಗಿ ಬಗೆ ಹರಿಯಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ, ಅದಕ್ಕೆ ವಿರುದ್ಧವಾಗಿ ಬ್ರಿಟಿಷರು ಏಪ್ರಿಲ್ ೧೯೨೦ರಲ್ಲಿ ಲೀಗ್ ಆಫ್ ನೇಶನ್ಸ್‌ನ ಅನುಮೋದನೆಯೊಂದಿಗೆ ಟರ್ಕರಿಂದ ಆಕ್ರಮಿಸಿಕೊಂಡ ಇಡೀ ಅರಬ್ ಪ್ರಸ್ಥಭೂಮಿಯನ್ನು ಫ್ರೆಂಚ್ ಮತ್ತು ಬ್ರಿಟಿಷರ ನಡುವೆ ವಿಭಜನೆ ಮಾಡಲಾಯಿತು. ೧೯೧೬ರಲ್ಲಿ ಬ್ರಿಟಿಷ್ ಮತ್ತು ಫ್ರೆಂಚ್ ಪ್ರತಿನಿಧಿಗಳಾದ ಸರ್ ಜರ್ಜ್ ಸೈಕಸ್ ಮತ್ತು ಮಾರ್ಕ್ ಪಿಕೋಟ್ ನಡುವೆ ಗುಪ್ತವಾಗಿ ನಡೆದ ಅಂಗ್ಲೋ-ಫ್ರೆಂಚ್ ಒಪ್ಪಂದದಂತೆ ಸಿರಿಯಾ ಮತ್ತು ಲೆಬನಾನ್‌ನಲ್ಲಿ ಫ್ರೆಂಚ್ ಮ್ಯಾಂಡೇಟರಿ ಆಡಳಿತವನ್ನೂ; ಇರಾಕ್, ಜೋರ್ಡಾನ್, ಪ್ಯಾಲೇಸ್ತೀನ್, ಗಲ್ಫ್ ಪ್ರದೇಶ ಇತ್ಯಾದಿಗಳಲ್ಲಿ ಬ್ರಿಟಿಷ್ ಮ್ಯಾಂಡೇಟರಿ ಆಡಳಿತವನ್ನೂ ಹೇರಲಾಯಿತು.

ಪ್ಯಾಲೇಸ್ತೀನ್‌ನಲ್ಲಿ ಲೀಗ್ ಆಫ್ ನೇಷನ್ಸ್‌ನ ನಿರ್ಧಾರದಂತೆ, ಬ್ರಿಟಿಷರ ಉಸ್ತುವಾರಿ ಯಲ್ಲಿ ನಿರ್ದಿಷ್ಟ ಸಮಯದವರೆಗೆ ವಸಾಹತುಶಾಹಿ ಆಡಳಿತವನ್ನು ಅನುಷ್ಠಾನಗೊಳಿಸ ಲಾಯಿತು. ಇದಕ್ಕೆ, ಬ್ರಿಟಿಷರು ನೀಡಿರುವ ಕಾರಣ, ಸದ್ಯಕ್ಕೆ ಪ್ಯಾಲೇಸ್ತೀನಿ ಅರಬ್ಬರು ಸ್ವತಂತ್ರ ಸರಕಾರ ರಚಿಸಿ ಆಡಳಿತ ನಡೆಸಲು ಯಾವುದೇ ತರಬೇತಿ ಹೊಂದಿಲ್ಲ. ಅವರು ರಾಜಕೀಯವಾಗಿ, ಬೌದ್ದಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದು, ತಕ್ಷಣ ಸ್ವಾತಂತ್ರ್ಯವನ್ನು ನೀಡಿದರೆ, ಅದನ್ನು ಸ್ವೀಕರಿಸಲು ಅವರು ಸಿದ್ಧರಿಲ್ಲ ಎಂಬ ಸಮರ್ಥನೆಯನ್ನು ಬ್ರಿಟಿಷರು ನೀಡಿದರು. ಆದರೆ, ಲೀಗ್ ಆಫ್ ನೇಷನ್ಸ್ ಹೇರಿರುವ ವಸಾಹತುಶಾಹಿ ಆಡಳಿತ ಖಾಯಂ ಆಗಿ ಮುಂದುವರಿಯದೆ, ಅದೊಂದು ನಿರ್ದಿಷ್ಟ ಸಮಯದವರೆಗೆ ಮಾತ್ರ ಎಂದು ಕಾನೂನನ್ನು ರೂಪಿಸಿತು. ಅದರ ಪ್ರಕಾರ ಪ್ಯಾಲೇಸ್ತೀನಿಯರು ಹಿಂದುಳಿದವರಾಗಿದ್ದು ಪ್ರಜಪ್ರಭುತ್ವ ಸರ್ಕಾರ ರಚನೆ ಮತ್ತು ಅದರ ತರಬೇತಿ ಅವರಿಗೆ ಇಲ್ಲದ ಕಾರಣ ಆ ಹೊಣೆಯನ್ನು ಬ್ರಿಟಿಷರಿಗೆ ವಹಿಸಲಾಯಿತು. ಆಧುನಿಕ ಶಿಕ್ಷಣ ಪದ್ಧತಿಯಡಿಯಲ್ಲಿ ಬ್ರಿಟಿಷರು ಸ್ಥಳೀಯರಿಗೆ ಸ್ವತಂತ್ರ ಸರಕಾರ ರಚನೆ ಮತ್ತು ಅದರ ಕಾರ್ಯದ ಬಗ್ಗೆ ತರಬೇತಿ ನೀಡಬೇಕು. ಯಾವಾಗ ಅವರು ತಮ್ಮದೇ ಸರಕಾರವನ್ನು ಸ್ವತಂತ್ರವಾಗಿ ನಡೆಸಲು ಸಿದ್ಧರಾಗುತ್ತಾರೋ, ಅಂದು ಬ್ರಿಟಿಷರು ಆ ಪ್ರದೇಶದ ಸ್ವಾತಂತ್ರ್ಯವನ್ನು ಘೋಷಿಸಿ ಸಂಬಂಧಪಟ್ಟ ಸಮುದಾಯಕ್ಕೆ ಬಿಟ್ಟುಕೊಡಬೇಕೆಂದು ಲೀಗ್ ಆಫ್ ನೇಷನ್ಸ್ ಶರತ್ತು ಮಾಡಿತು.

ಬ್ರಿಟಿಷರು ಮಾತ್ರ ಅದರಂತೆ ನಡೆದುಕೊಂಡೇ ಇಲ್ಲ. ಪ್ಯಾಲೇಸ್ತೀನಿ ಅರಬರಿಗೆ ಮ್ಯಾಂಡೇಟರಿ ಆಡಳಿತವನ್ನು ಹೇರಿರುವುದು ಅವರ ಆಸಕ್ತಿಗಳಿಗೆ ವಿರುದ್ಧವಾಗಿದೆ. ಇನ್ನೊಂದು ಈ ರೀತಿಯ ನಿಲುವು ಅವರೊಂದಿಗೆ ಬ್ರಿಟಿಷರು ಮಾಡಿಕೊಂಡ ಒಪ್ಪಂದದ ಉಲ್ಲಂಘನೆ ಎಂದು ಬ್ರಿಟಿಷ್ ನಿರ್ಧಾರವನ್ನು ಟೀಕಿಸತೊಡಗಿದರು. ಅವರ ಸಮಸ್ಯೆಯನ್ನು ಬಗೆಹರಿಸಲು ಬ್ರಿಟಿಷರಿಗಿರುವುದು ಒಂದೇ ದಾರಿ. ೧೯೧೫ರಲ್ಲಿ ಮೆಕ್ ಮೋಹನ್ ಆಶ್ವಾಸನೆ ನೀಡಿದಂತೆ ಪ್ಯಾಲೇಸ್ತೀನನ್ನು ಅರಬ್ಬರ ಸ್ವತಂತ್ರ ರಾಷ್ಟ್ರವೆಂದು ಘೋಷಿಸುವುದು. ಇದಕ್ಕೆ ವಿರುದ್ಧವಾಗಿ, ಬ್ರಿಟಿಷರು ಯಹೂದಿಯರ ಪರವಾಗಿ ಮಾಡಿದ ಬಾಲ್ಪರ್ ಘೋಷಣೆಯನ್ನು ಅನುಷ್ಠಾನ ಮಾಡಲು ನಿರ್ಧರಿಸಿದರು. ಇದನ್ನು ಬಳಸಿಕೊಂಡು ಯಹೂದಿಗಳು ಶೀಘ್ರವಾಗಿ ಹೆಚ್ಚು ಸಂಖ್ಯೆಯಲ್ಲಿ ಜಗತ್ತಿನಾದ್ಯಂತ ಇರುವ ಯಹೂದಿಗಳು ಪ್ಯಾಲೇಸ್ತೀನಿಗೆ ಬಂದು ನೆಲೆಸಲು ಆರಂಭಿಸಿದರು. ಹೊಸತಾಗಿ ಆಗಮಿಸಿದ ಯಹೂದಿಗಳಿಗೆ ನೆಲೆಸಲು ಭೂಮಿ ಮತ್ತು ಉದ್ಯೋಗದ ವ್ಯವಸ್ಥೆ ಮಾಡಲು ಬ್ರಿಟಿಷರ ಪ್ರೋ ಅವರದೇ ಏಜೆನ್ಸಿಗಳನ್ನು ತೆರೆದರು. ಇದಕ್ಕೆಲ್ಲ ಸಹಕಾರ ನೀಡಿದವನು ಬ್ರಿಟಿಷರು ಪ್ಯಾಲೇಸ್ತೀನಿನಲ್ಲಿ ನೇಮಿಸಿದ ಸರ್ ಹರ್ಬಟ್ ಸಾಮ್ಯೂಲ್. ಅವನು ಯಹೂದಿ ಸಮುದಾಯಕ್ಕೆ ಸೇರಿದವನಾಗಿದ್ದು ಬ್ರಿಟನ್ನಿನ ಶ್ರೀಮಂತ ಬ್ಯಾಂಕಿಂಗ್ ಯಹೂದಿ ಕುಟುಂಬಕ್ಕೆ ಸೇರಿದ್ದು, ಬ್ರಿಟೀಷ್ ಕ್ಯಾಬಿನೆಟ್‌ನಲ್ಲಿ ಗೌರವದ ಸ್ಥಾನವನ್ನು ಅಲಂಕರಿಸಿದನು. ಅಂತಹ ಬ್ರಿಟಿಷ್ ಅಧಿಕಾರಿಯ ಸಹಕಾರದಿಂದ ಯಹೂದಿಯರು ಬೃಹತ್ ಸಂಖ್ಯೆಯಲ್ಲಿ ಪ್ಯಾಲೇಸ್ತೀನಿಗೆ ವಲಸೆ ಬಂದು ಬೀಡು ಬಿಟ್ಟರು.

ಯಹೂದಿಗಳ ಆಗಮನದಿಂದ ಅರಬ್ಬರ ಮಾಲೀಕತ್ವದಲ್ಲಿದ್ದ ಭೂಮಿ ಕೈ ಜರಲು ಆರಂಭವಾಯಿತು. ಯಹೂದಿಗಳು ಆರ್ಥಿಕವಾಗಿ ಶ್ರೀಮಂತರು ಮತ್ತು ಶಿಕ್ಷಣದಲ್ಲಿ ಮುಂದುವರಿದವರು. ಅರಬ್ಬರ ಎಸ್ಟೇಟ್‌ಗಳನ್ನು ಮತ್ತು ವ್ಯಾಪಾರ ವಹಿವಾಟುಗಳನ್ನು ಖರೀದಿಸಿ ಶ್ರೀಮಂತ ಜೀವನವನ್ನು ಆರಂಭಿಸಿದರು. ಇದು ದೇಶದ ಆರ್ಥಿಕ ಅಭಿವೃದ್ದಿ ದೃಷ್ಟಿಯಿಂದ ಒಳ್ಳೆಯ ಲಕ್ಷಣವಾದರೂ, ಅರಬ್ಬರನ್ನು ಅವರ ವಿರುದ್ಧ ದಂಗೆ ಏಳಲು ಪ್ರಚೋದಿಸಿತು.

ಪ್ಯಾಲೇಸ್ತೀನ್ ನಗರಗಳಲ್ಲಿ, ಹಳ್ಳಿಗಳಲ್ಲಿ ಯಹೂದಿಗಳ ವಸಾಹತೀಕರಣದಿಂದ ಅರಬ್-ಯಹೂದಿ ಸಂಬಂಧದಲ್ಲಿ ಬಿರುಕುಂಟಾಯಿತು. ಪರಿಣಾಮವಾಗಿ, ಜೆರುಸಲೇಂನಲ್ಲಿ ಏಪ್ರಿಲ್ ೧೯೨೦ರಲ್ಲಿ ಯಹೂದಿಗಳ ವಿರುದ್ಧ ಅರಬ್ಬರು ದಂಗೆ ಎದ್ದರು. ಇದನ್ನು ಪಾಸ್ ಓವರ್ ರಿಯಾಟ್ಸ್ ಎಂದು ಕರೆಯಲಾಯಿತು. ಬ್ರಿಟಿಷರು ಈ ಹಿಂಸೆಯನ್ನು ತಡೆಯಲು ಯಶಸ್ವಿಯಾಗದ ಕಾರಣ ಯಹೂದಿ ಸಮುದಾಯವೇ ಒಂದು ರಕ್ಷಣಾ ಸೈನ್ಯವನ್ನು ಸಂಘಟಿಸಿ ಅರಬ್ಬರ ದಾಳಿಯನ್ನು ಸದೆ ಬಡಿದರು. ಎರಡು ಕಡೆಗಳಲ್ಲಿ ಸಾವು ನೋವುಗಳ ಅನುಭವವಾಯಿತು. ಹಿಂಸೆಗಳು ಮುಂದುವರಿದವು ಮತ್ತು ದ್ವೇಷ ಮುಂದುವರಿಯಿತು. ಅರಬ್ ಯಹೂದಿಗಳ ನಡುವಿನ ಬಿಕ್ಕಟ್ಟಿಗೆ ಸಂಬಂಧಿಸಿ ಬ್ರಿಟಿಷರು ಮೊತ್ತ ಮೊದಲ ಬಾರಿಗೆ ಅರಬ್ಬರ ಭಯವನ್ನೂ ಮತ್ತು ಯಹೂದಿಗಳ ಬೇಡಿಕೆಯನ್ನು ಪರಿಹರಿಸಲು ೧೯೨೧ರಲ್ಲಿ ಒಂದು ಪ್ರಯತ್ನವನ್ನು ಮಾಡಿದರು. ವಿನ್‌ಸ್ಟನ್ ಚರ್ಚಿಲ್, ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಪ್ಯಾಲೇಸ್ತೀನಿಗೆ ಭೇಟಿ ಕೊಟ್ಟು, ಹಿಂಸೆಗೆ ಕಾರಣಗಳನ್ನು ಅಧ್ಯಯನ ಮಾಡಿದನು ಮತ್ತು ೧೯೨೨ರಲ್ಲಿ ಸರಕಾರದ ಯೋಜನೆಯನ್ನೊಳಗೊಂಡ ಶ್ವೇತಪತ್ರವನ್ನು ಹೊರಡಿಸಿದನು. ಅದರಲ್ಲಿ ಯಹೂದಿಗಳು ಪ್ಯಾಲೇಸ್ತೀನಿನಲ್ಲಿ (ಅರಬ್ಬರ ವಿರೋಧವಿದ್ದರೂ) ಅವರದ್ದೇ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸು ವುದರಲ್ಲಿ ತಪ್ಪಿಲ್ಲ ಎಂದು ಸೂಚಿಸುತ್ತಾನೆ. ಹಿಂದುಳಿದ, ಅಭಿವೃದ್ದಿಯಾಗದ ಪ್ಯಾಲೇಸ್ತೀನಿ ನಲ್ಲಿ ಆರ್ಥಿಕ ಸ್ಥಿರತೆ ಮತ್ತು ಹೊಸ ನಾಗರಿಕತೆಯನ್ನು ಹುಟ್ಟುಹಾಕಲು ಯಹೂದಿಗಳು ಮಾಡುವ ಪ್ರಯತ್ನಗಳ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾನೆ. ಆದರೆ, ಯಹೂದಿಯರಿಗೆ ರಾಜಕೀಯ ಪ್ರಭುತ್ವವನ್ನು ಸ್ಥಾಪಿಸುವ ಹಕ್ಕನ್ನು ನೀಡಲಾಗದು. ಅಥವಾ ಅರಬ್ಬರು ಒತ್ತಾಯಿಸಿದಂತೆ ಚುನಾಯಿತ ಸರಕಾರ/ಸ್ವತಂತ್ರ ದೇಶದ ರಚನೆಗೆ ಅವಕಾಶ ಮಾಡಲಾಗದು ಎಂದು ತಿಳಿಸಿದನು. ಅದರ ಬದಲಾಗಿ ಅರಬ್ಬರು ಮತ್ತು ಯಹೂದಿಗಳು ಪರಸ್ಪರ ಹೊಂದಾಣಿಕೆಯಿಂದ ಹೊಸ ಪ್ಯಾಲೇಸ್ತೀನನ್ನು ರೂಪಿಸಬಹುದು ಎಂದು ಕರೆ ಕೊಡುತ್ತಾನೆ.

ಎಲ್ಲ ವಿಧದಲ್ಲಿ ನೋಡಿದರೂ ಚರ್ಚಿಲ್‌ನ ಅಭಿಪ್ರಾಯಗಳು ಸೂಚ್ಯವಾಗಿದ್ದವು. ಆದರೂ, ಎರಡು ಸಮುದಾಯದವರೂ ತಮಗೆ ನೀಡಿದ ಆಶ್ವಾಸನೆಯನ್ನು ಅನುಷ್ಠಾನಗೊಳಿಸಲು ಪುನಃ ಒತ್ತಾಯಿಸಿದರು. ಈ ಮಧ್ಯದಲ್ಲಿ ಯುರೋಪ್‌ನಲ್ಲಿ ದ್ವೇಷ ಭಾವನೆ ಹುಟ್ಟಿಕೊಂಡ ಕಾರಣ ಸಾವಿರಾರು ಯಹೂದಿಗಳು ಇಂಗ್ಲೆಂಡ್ ಮತ್ತು ಅಮೆರಿಕದಂತ ದೇಶಗಳಿಗೆ ವಲಸೆ ಹೋಗುತ್ತಿದ್ದರು. ಆದರೆ, ಬ್ರಿಟನ್ ಮತ್ತು ಅಮೆರಿಕ ಸರಕಾರಗಳು ಯಹೂದಿಯರ ಪ್ರವೇಶವನ್ನು ನಿರ್ಬಂಧಿಸಿದರು. ಆದ ಕಾರಣ ಪ್ಯಾಲೇಸ್ತೀನಿಗೆ ಬರುವ ಯಹೂದಿಯರ ಸಂಖ್ಯೆ ೧೯೨೪ರ ಹೊತ್ತಿಗೆ ದ್ವಿಗುಣಗೊಂಡಿತು.

ಬ್ರಿಟಿಷ್ ಮ್ಯಾಂಡೇಟರಿ ಆಡಳಿತ, ಪ್ಯಾಲೇಸ್ತೀನಿಗೆ ಬರುವ ಯಹೂದಿಯರ ಪ್ರಮಾಣ ವನ್ನು ಕಡಿತಗೊಳಿಸದಿದ್ದರೆ ದೊಡ್ಡ ಅನಾಹುತವೇ ಆಗಬಹುದೆಂದು ತೀರ್ಮಾನಿಸಿತು. ಇದರಂತೆ ೧೯೨೯ರಲ್ಲಿ ಅರಬ್ಬರು ಮಾಸ್ ಸ್ಕೇಲ್‌ನಲ್ಲಿ ದಂಗೆ ಎದ್ದು ಯಹೂದಿಯರ ವಿರುದ್ಧ ಧರ್ಮಯುದ್ಧ ಸಾರಿದರು. ಈ ದಂಗೆಯಲ್ಲಿ ನೂರಾರು ಯಹೂದಿಯರು ಸಾವನ್ನಪ್ಪಿದರು. ಅದರಲ್ಲಿ ೬೭ ಮಂದಿಯನ್ನು ಹೆಬ್ರಾನ್ ನಗರದಲ್ಲಿ ಕ್ರೂರವಾಗಿ ಹಿಂಸಿಸಿ ಕೊಲ್ಲಲಾಯಿತು. ಬ್ರಿಟಿಷ್ ಸೈನ್ಯ ಈ ದಂಗೆಯನ್ನು ನಿಗ್ರಹಿಸಲು ವಿಫಲವಾದ ಕಾರಣ, ಯಹೂದಿ ಸಮುದಾಯ ತಮ್ಮ ರಕ್ಷಣೆಗಾಗಿ ತಮ್ಮದೇ ರಾಜ್ಯ ನಿರ್ಮಿಸುವ ಯೋಜನೆಗೆ ಚಾಲನೆ ನೀಡಿದರು. ಜರ್ಮನಿಯಲ್ಲಿ ಹಿಟ್ಲರ್‌ನ ನಿರಂಕುಶ ಪ್ರಭುತ್ವದ ರಚನೆ ಪ್ಯಾಲೇಸ್ತೀನಿಗೆ ಯಹೂದಿಯರ ವಲಸೆ ಆಗುವ ಪ್ರಮಾಣದ ಮೇಲೆ ಗಂಭೀರ ಸ್ವರೂಪದ ಪ್ರಭಾವ ಬೀರಿತು. ಹಿಟ್ಲರ್‌ನ ಯಹೂದಿ ದ್ವೇಷಿ ಧೋರಣೆಗಳಿಂದ ಜರ್ಮನಿಯಿಂದ ಅನೇಕ ಯಹೂದಿಗಳು ಪಲಾಯನ ಮಾಡಿ ಪ್ಯಾಲೇಸ್ತೀನತ್ತ ವಲಸೆ ಆರಂಭಿಸಿದರು. ಇಂತಹ ಬಿಕ್ಕಟ್ಟು ಉಳಿದ ಯುರೋಪಿನ ಭಾಗಗಳಲ್ಲೂ ಕಂಡುಬಂದಿದ್ದು, ಪ್ಯಾಲೇಸ್ತೀನಿಗೆ ಬರುವ ಯಹೂದಿಗಳ ಸಂಖ್ಯೆ ಹೆಚ್ಚಾಯಿತು. ಬ್ರಿಟಿಷ್ ಪ್ರಭುತ್ವ, ವಲಸೆ ಸಂಖ್ಯೆಯಲ್ಲಿ ಕಡಿತಗೊಳಿಸಲು ಪ್ರಯತ್ನಿಸಿದ್ದರೂ, ಸಾವಿರಾರು ಯಹೂದಿಗಳು ಪ್ಯಾಲೇಸ್ತೀನಿನೊಳಗೆ ಕಾನೂನುಬಾಹಿರವಾಗಿ ನೆರೆ ರಾಷ್ಟ್ರಗಳ ಗಡಿಗಳಿಂದ ರಾತ್ರಿ ವೇಳೆಯಲ್ಲಿ ನುಗ್ಗಿದರು. ಪರಿಣಾಮವಾಗಿ ಯಹೂದಿಗಳು ಅರಬ್ ಜನಸಂಖ್ಯೆಯನ್ನು ಮೀರುವ ಲಕ್ಷಣಗಳು ಎಲ್ಲೆಡೆ ಕಂಡುಬಂದವು. ಇದಕ್ಕುತ್ತರವಾಗಿ ೧೯೩೬-೩೯ರ ನಡುವೆ ಅರಬ್ಬರು ಹಿಂಸಾತ್ಮಕ ಮಾರ್ಗವನ್ನು ಪಾಲಿಸಿ ಯಹೂದಿಗಳ ವಿರುದ್ಧ ದಂಗೆ ಎದ್ದರು. ಮತ್ತು ಬ್ರಿಟಿಷರ ವಸಾಹತು ಪ್ರಭುತ್ವದ ವಿರುದ್ದ ಗೆರಿಲ್ಲಾ ಯುದ್ಧವನ್ನು ಘೋಷಿಸಿದರು. ಕೊಲೆ, ಸುಲಿಗೆ, ಸಾರ್ವತ್ರಿಕ ಬಂದ್‌ಗಳು, ರೈಲುಗಳ ಮೇಲೆ ದಾಳಿಯಂತಹ ಹಿಂಸಾತ್ಮಕ ಕೃತ್ಯಗಳಲ್ಲಿ ಅರಬ್ಬರು ತಲ್ಲೀನರಾದರು. ಒಮ್ಮೊಮ್ಮೆ ಯಹೂದಿಗಳ ಸೈನಿಕ ಸಂಘಟನೆ ಪ್ರತಿ ದಾಳಿಯನ್ನು ಸಂಘಟಿಸಿ ನೇರವಾದ ಹಣಾಹಣಿಗೆ ಇಳಿದಿದ್ದು ಶಾಂತಿ ಮತ್ತು ಸೌಹಾರ್ದದ ವಾತಾವರಣವನ್ನು ಕೆಡಿಸಿದವು. ಬ್ರಿಟಿಷರು ಕಠಿಣ ಕ್ರಮಗಳನ್ನು ಕೈಗೊಂಡು ಅರಬ್ ಮುಖಂಡರನ್ನು ಕ್ರಾಂತಿಯಲ್ಲಿ ಪಾಲ್ಗೊಂಡವರನ್ನು ಗಡಿಪಾರು ಮಾಡಿದರು. ದಾಖಲೆ ಪ್ರಕಾರ ಮೂರು ವರ್ಷಗಳ ದಂಗೆಯಲ್ಲಿ ಸುಮಾರು ೧೭೮೫ ಮಂದಿ ಸತ್ತಿದ್ದು, ಅದರಲ್ಲಿ ೫೧೭ ಮಂದಿ ಯಹೂದಿಯರು.

ಬ್ರಿಟಿಷ್ ಅಧಿಪತ್ಯದ ವಿರುದ್ಧ ನಡೆದ ದಂಗೆ ಮತ್ತು ಯಹೂದಿಯರ ವಿರುದ್ಧ ನಡೆದ ಯುದ್ಧದ ಆಳವನ್ನು ಗಮನಿಸಿದ ಆಡಳಿತ ಪ್ಯಾಲೇಸ್ತೀನ್ ಭವಿಷ್ಯವನ್ನು ನಿರ್ಧರಿಸಲು ಹೊಸ ಕಾರ್ಯಸೂಚಿಯನ್ನು ತಯಾರಿಸಲು ಬ್ರಿಟಿಷ್ ಪ್ರತಿನಿಧಿ ಲಾರ್ಡ್ ಪೀಲ್‌ಗೆ ಆಜ್ಞೆ ಮಾಡಿತು. ಒಂದು ರಾಯಲ್ ಕಮಿಷನ್‌ನನ್ನು ಲಾರ್ಡ್ ಪೀಲ್ ನೇತೃತ್ವದಲ್ಲಿ ನೇಮಿಸಿ ಪ್ಯಾಲೇಸ್ತೀನಿಗೆ ಭೇಟಿ ನೀಡಿ, ಬಿಕ್ಕಟ್ಟಿನ ಸ್ವರೂಪವನ್ನು ಅಧ್ಯಯನ ಮಾಡಿ, ವರದಿಯೊಂದಿಗೆ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿ ಸೂಚನೆಗಳನ್ನು ನೀಡಬೇಕೆಂದು ನಿರ್ದೇಶನ ನೀಡಿತು. ಕಮಿಷನ್‌ನ ಸದಸ್ಯರು ಘಟನೆಯ ವಿವರಗಳನ್ನು ವಿಚಾರಿಸಿದಾಗ, ಈ ಬಿಕ್ಕಟ್ಟು ಈಗಾಗಲೇ ಬ್ರಿಟಿಷರ ಕೈಮೀರಿ ಹೋಗಿದ್ದು, ಅರಬ್ ಮತ್ತು ಯಹೂದಿಗಳ ವ್ಯಾಜ್ಯ ಕೇವಲ ಆಶ್ವಾಸನೆಗಳನ್ನು ಕೊಟ್ಟು ಪರಿಹಾರ ಮಾಡುವ ಸಮಸ್ಯೆ ಆಗಿ ಉಳಿದಿಲ್ಲವೆಂದು ತೀರ್ಮಾನಿಸಿತು. ಏಕೆಂದರೆ, ಅರಬ್ ಸಮುದಾಯದವರು ಸ್ವತಂತ್ರ ರಾಷ್ಟ್ರ ನಿರ್ಮಿಸುವುದೊಂದೇ ಉದ್ದೇಶವನ್ನು ಹೊಂದಿದ್ದು, ಅವರ ಭೂಮಿಯಲ್ಲಿ ಯಹೂದಿಗಳ ದೇಶ ಸ್ಥಾಪಿಸುವುದನ್ನು ಬಲವಾಗಿ ವಿರೋಧಿಸುತ್ತಿದ್ದರು. ಬ್ರಿಟೀಷ್ ಮ್ಯಾಂಡೇಟರಿ ಆಡಳಿತ ಎರಡೂ ಗುಂಪನ್ನು ಏಕಕಾಲದಲ್ಲಿ ಸಮಾಧಾನಪಡಿಸುವುದಾಗಲಿ, ಅವರ ಬೇಡಿಕೆಗಳನ್ನು ಈಡೇರಿಸಲು ಆಗುವುದಿಲ್ಲ ಎಂದು ವರದಿ ಮಾಡಲಾಯಿತು. ಪೀಲ್ ಕಮೀಷನ್ ಗಮನಿಸಿದಂತೆ ಅರಬ್ ಮತ್ತು ಯಹೂದಿಗಳ ನಡುವಿನ ಬಿಕ್ಕಟ್ಟಿಗೆ ಪ್ಯಾಲೇಸ್ತೀನ್ ವಿಭಜನೆ ಒಂದೇ ಮಾರ್ಗವೆಂದು ಸೂಚಿಸಿತು.

ಆದರೆ, ವಿಭಜನೆ ಮಾಡಿದರೆ ಸಮಸ್ಯೆಗಳು ಉದ್ಭವವಾಗುವುದು ಖಂಡಿತ. ಇಡೀ ಪ್ಯಾಲೇಸ್ತೀನಿನಲ್ಲಿ ಎರಡು ಸಮುದಾಯದ ಜನರು ಚದುರಿ ನೆಲೆಸಿರುವುದರಿಂದ ಇಬ್ಭಾಗವಾದರೆ, ಅರಬ್ ಆಡಳಿತ ವ್ಯಾಪ್ತಿಗೆ ಒಂದಷ್ಟು ಯಹೂದಿಗಳು ಸೇರುತ್ತಾರೆ. ಹಾಗೆಯೇ ಯಹೂದಿಗಳ ಅಧೀನಕ್ಕೆ ಅರಬ್ಬರು ಸೇರ್ಪಡೆಯಾಗಬೇಕಾಗುತ್ತದೆ.  ವಿಭಜನೆಯಾದರೆ, ಹಸ್ತಾಂತರದ ಸಮಯದಲ್ಲಿ ಬ್ರಿಟಿಷರು ಕಠಿಣ ಕ್ರಮಗಳನ್ನು ಪಾಲಿಸಿ ನಿಯಂತ್ರಿಸದಿದ್ದರೆ, ಮತ್ತೊಮ್ಮೆ ಹಿಂಸೆ ಮರುಕಳಿಸುವುದರಲ್ಲಿ ಅನುಮಾನವಿಲ್ಲ. ಎರಡು ಸಮುದಾಯದವರು ಪ್ಯಾಲೇಸ್ತೀನಿನಲ್ಲಿ ತಮ್ಮ ರಾಜ್ಯ ಸ್ಥಾಪಿಸಬೇಕೆಂದೂ, ಇಡೀ ಪ್ರದೇಶವನ್ನು ಆಳಬೇಕೆಂದೂ ಹೋರಾಟ ನಡೆಸುತ್ತಿರುವಾಗ ಇಂತಹ ವಿರೋಧಗಳು ಉದ್ಭವಿಸುವುದರಲ್ಲಿ ಅನುಮಾನಗಳಿಲ್ಲ. ಪರ್ಯಾಯ ವ್ಯವಸ್ಥೆಯನ್ನು ಬ್ರಿಟಿಷ್ ಸರಕಾರ ಕಂಡುಕೊಳ್ಳುವವರೆಗೆ, ಅರಬ್ಬರು ತಮ್ಮದೇ ಬಹುಸಂಖ್ಯಾತ ಸಮುದಾಯದ ಆಡಳಿತ ಸ್ಥಾಪಿಸಲು ಪ್ರಯತ್ನಿಸಿದರೆ, ಯಹೂದಿಗಳು ಆದಷ್ಟು ಬೇಗ ತಮ್ಮ ಸಮುದಾಯದ ಜನಸಂಖ್ಯೆಯನ್ನು ಏರಿಸಿ ತಾವೇ ಬಹುಸಂಖ್ಯಾತರೆಂದು ಸಾರ್ವತ್ರಿಕವಾಗಿ ಪ್ರಸ್ತುತಪಡಿಸಲು ಹವಣಿಸುತ್ತಿದ್ದರು.

ಲಾರ್ಡ್ ಪೀಲ್ ಯೋಜನೆ ಸಮಾಧಾನಕರವಾದ ಸೂಚನೆಯನ್ನು ನೀಡಿದರೂ, ಅದು ಎರಡು ಗುಂಪಿಗೂ ಒಪ್ಪಿಗೆಯಾಗಲಿಲ್ಲ. ಹೆಚ್ಚಿನ ಯಹೂದಿಗಳು ವಿಭಜನೆ ಪ್ಲಾನನ್ನು ಒಪ್ಪಿಕೊಂಡರೂ, ಬ್ರಿಟಿಷರು ಅದಕ್ಕೆ ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲವೆಂದು ತೀರ್ಮಾನಿಸಿತು. ಆದಾಗ್ಯೂ ಯುರೋಪ್‌ನಲ್ಲಿ ಎರಡನೆಯ ಮಹಾಯುದ್ಧ ಆರಂಭವಾಗುವ ಎಲ್ಲ ಸೂಚನೆಗಳಿದ್ದು, ಒಂದು ವೇಳೆ ಅರಬ್ಬರು ಯುದ್ದದ ವೇಳೆ ಬ್ರಿಟಿಷರ ವಿರುದ್ದ ನಿಂತರೆ ಪರ್ಶಿಯನ್ ಗಲ್ಫ್ ತೈಲ ಸರಬರಾಜಿನಲ್ಲಿ ಬ್ರಿಟಿಷರಿಗೆ ತೊಂದರೆಯಾಗಬಹುದೆಂಬ ಭಯವು ಹುಟ್ಟಿತು. ಅದನ್ನು ತಪ್ಪಿಸಲು ೧೯೩೯ರ ಮೇ ೧೭ರಂದು, ಬ್ರಿಟಿಷ್ ಆಡಳಿತ ಒಂದು ಶ್ವೇತಪತ್ರ ಹೊರಡಿಸಿ ಹೊಸ ಧೋರಣೆಯನ್ನು ಘೋಷಿಸಿತು. ಅದರಲ್ಲಿ, ಇನ್ನು ಹತ್ತು ವರ್ಷಗಳಲ್ಲಿ ಸ್ವತಂತ್ರ ಪ್ಯಾಲೇಸ್ತೀನ್ ರಾಷ್ಟ್ರವನ್ನು ಘೋಷಿಸಲಾಗುವುದು. ಅರಬ್ ಮತ್ತು ಯಹೂದಿಗಳ ಆಸಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಧಿಕಾರ-ಹಂಚಿಕೆಯ ಸರಕಾರದ ನಿರ್ಮಾಣ ಮಾಡಲಾಗುವುದು ಎಂದು ಸೂಚಿಸಲಾಯಿತು. ಮುಂದಿನ ೫ ವರ್ಷಗಳವರೆಗೆ ಯಹೂದಿಯರ ಪ್ರವೇಶವನ್ನು ವರ್ಷಕ್ಕೆ ೧೫೦೦೦ಕ್ಕೆ ಕಡಿತಗೊಳಿಸಲಾಗಿದ್ದು, ಆ ನಂತರ ಅವರು ಬರುವುದಾದರೆ, ಅರಬ್ಬರ ಅನುಮತಿ ಪಡೆದು ಅವಕಾಶ ಕಲ್ಪಿಸಲಾಗು ವುದೆಂದು ಅರಬ್ ಮುಖಂಡರಿಗೆ ಭರವಸೆ ನೀಡಲಾಯಿತು. ಕೊನೆಯದಾಗಿ, ಪ್ಯಾಲೇಸ್ತೀನಿ ನಲ್ಲಿ ಯಹೂದಿಗಳು ಅರಬ್ ಭೂಮಿಯನ್ನು ಖರೀದಿಸುವ ಅಧಿಕಾರವಿದ್ದರೂ, ಯಾವುದೇ ಕಾರಣಕ್ಕೂ ಪ್ರತ್ಯೇಕ ಯಹೂದಿ ರಾಜ್ಯ ಸ್ಥಾಪನೆಗೆ ಅವಕಾಶ ನೀಡುವುದಿಲ್ಲವೆಂದು ಬ್ರಿಟಿಷ್ ಆಡಳಿತ ಶ್ವೇತ ಪತ್ರದಲ್ಲಿ ಸ್ಪಷ್ಟಪಡಿಸಿತು.

ಯಹೂದಿ ಮುಖಂಡರು ಮಾತ್ರ ಶ್ವೇತಪತ್ರದ ಅಂಶಗಳನ್ನು ಗಮನಿಸಿ, ಬ್ರಿಟಿಷ್ ಆಡಳಿತ ಬಾಲ್ಪರ್ ಡಿಕ್ಲರೇಶನ್‌ನಲ್ಲಿ ನೀಡಿರುವ ಆಶ್ವಾಸನೆಯಿಂದ ದೂರ ಸರಿಯುತ್ತಿದೆ ಎಂದು ಟೀಕಿಸಿದರು. ಬ್ರಿಟಿಷರ ಬೆಂಬಲ ಪಡೆದು ಯಹೂದಿ ರಾಜ್ಯ ಸ್ಥಾಪಿಸುವ ಕನಸು ನಿಧಾನವಾಗಿ ಕ್ಷೀಣಿಸಿತು. ಅದಕ್ಕಾಗಿ ಅನೇಕ ಯಹೂದಿಯರು ಅಮೆರಿಕದ ಬೆಂಬಲ ಪಡೆಯಲು ಯೋಜನೆ ರೂಪಿಸತೊಡಗಿದರು. ಆದರೆ, ಇದಾದ ಮೂರೇ ತಿಂಗಳಲ್ಲಿ ಎರಡನೇ ಮಹಾಯುದ್ಧ ಆರಂಭವಾಯಿತು.

ಯುದ್ಧದ ಸಮಯದಲ್ಲಿ ಇಟೆಲಿ, ಜರ್ಮನಿ ಮತ್ತು ಜರ್ಮನ್ ಪರವಿರುವ ಇರಾಕಿ ರಾಷ್ಟ್ರೀಯವಾದಿಗಳ ವಿರುದ್ಧ ಬ್ರಿಟಿಷರು ಹೋರಾಟ ನಡೆಸಿದ್ದರೂ, ಮಧ್ಯ ಪ್ರಾಚ್ಯ ಪ್ರದೇಶದಲ್ಲಿ ಅವರ ಪ್ರಭುತ್ವವನ್ನು ಬಲಪಡಿಸಲು ಯಶಸ್ವಿಯಾದರು. ಇದಕ್ಕೆ ಪೂರಕ ವಾಗಿ ೧೯೪೫ರಲ್ಲಿ ಬ್ರಿಟನ್ ಪ್ರತಿನಿಧಿಸಿದ್ದ ಗುಂಪು ಯುದ್ಧದಲ್ಲಿ ಜಯಗಳಿಸಿದ ಕಾರಣ ಬ್ರಿಟಿಷರು ಇಡೀ ಪ್ರದೇಶದಲ್ಲಿ ಪ್ರಭಾವಿ ಶಕ್ತಿಯಾಗಿ ಉಗಮವಾದರು. ಜೊತೆಗೆ ಇಡೀ ಪ್ರದೇಶದಲ್ಲಿ ವಿಪುಲವಾಗಿ ಲಭಿಸುವ ತೈಲ ಸಂಪನ್ಮೂಲಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಏರಿದ್ದು, ತೈಲ ಸಂಪತ್ತಿನಲ್ಲಿ ಶ್ರೀಮಂತವಾಗಿರುವ ಅರಬ್ ರಾಷ್ಟ್ರಗಳು ಉತ್ಪಾದನೆಯಲ್ಲಿ ಏರಿಕೆ ಕಂಡುಕೊಂಡರು. ಈ ಆರ್ಥಿಕ ಸಂಪತ್ತಿಗೆ ಹೊರಗಿನಿಂದ ಬೆದರಿಕೆಗಳು ಬಂದರೆ ಬ್ರಿಟಿಷರು ಕಠಿಣ ಕ್ರಮ ಕೈಗೊಳ್ಳಲು ಸಿದ್ಧವಿದ್ದರು.

ಅರಬ್ ರಾಜ್ಯಗಳು ಕೂಡ ಶಕ್ತಿಯುತವಾಗಿ ಯುದ್ಧೋತ್ತರ ದಿನಗಳಲ್ಲಿ ಹೊರ ಹೊಮ್ಮಿದರು. ಯುದ್ಧದ ಸಮಯದಲ್ಲಿ ಹೆಚ್ಚಿನ ಅರಬ್ ರಾಜ್ಯಗಳು ಬ್ರಿಟನ್ ಪರವಾಗಿಯೇ ಭಾಗವಹಿಸಿರುವುದರಿಂದ (ಜರ್ಮನಿ ವಿರುದ್ಧ ಯುದ್ಧ ಸಾರಿ) ವಿಶ್ವಸಂಸ್ಥೆಯ ಸದಸ್ಯತ್ವವನ್ನು ಸುಲಭವಾಗಿ ಪಡೆದು ಜಾಗತಿಕ ವ್ಯವಹಾರದಲ್ಲಿ ನೇರವಾಗಿ ಪ್ರಾತಿನಿಧ್ಯ ಪಡೆದರು. ಇದಲ್ಲದೆ, ೧೯೪೪ರಲ್ಲಿ ಬಹುತೇಕ ಅರಬ್ ರಾಜ್ಯಗಳು ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ತಮ್ಮದೇ ಸಂಘಟನೆಯನ್ನು ಸ್ಥಾಪಿಸಿದರು. ಅದನ್ನು ಅರಬ್ ಲೀಗ್ ಎಂದು ಕರೆಯಲಾಯಿತು. ಕೈರೋದಲ್ಲಿ ಅದರ ಪ್ರಧಾನ ಕಚೇರಿಯನ್ನು ಸ್ಥಾಪಿಸಿ, ಆರಂಭದಲ್ಲಿ ಎಂಟು ಅರಬ್ ರಾಷ್ಟ್ರಗಳು ಸದಸ್ಯರಾಗಿದ್ದವು. ಈಜಿಪ್ಟ್ ಸಿರಿಯಾ, ಲೆಬನಾನ್, ಇರಾಕ್, ಟ್ರಾನ್ಸ್ ಜೋರ್ಡಾನ್, ಸೌದಿ ಅರೇಬಿಯಾ ಮತ್ತು ನಂತರ ಯಮಾನ್ ಸೇರ್ಪಡೆಗೊಂಡಿತು. ಈ ಸಂಘಟನೆ ಹೊಸದಾಗಿ ಉಗಮವಾದ ಸ್ವತಂತ್ರ ಬಡ ಮತ್ತು ಅಧೀನ ಅಭಿವೃದ್ದಿ ಹೊಂದಿದ ರಾಜ್ಯಗಳ ನಡುವೆ ವೈಜ್ಞಾನಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧ ಅಭಿವೃದ್ದಿಗೆ ಪ್ರೋ ನೀಡಿತು. ಆದರೆ, ರಾಜಕೀಯ ಒಗ್ಗಟ್ಟು ಸಾಧಿಸಲು ಸದಸ್ಯ ರಾಜ್ಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದವು.

ಪ್ಯಾಲೇಸ್ತೀನ್ ಪ್ರಶ್ನೆಯ ಕುರಿತು ಸಂಘಟನೆಯ ಎಲ್ಲ ಸದಸ್ಯ ರಾಜ್ಯಗಳ ನಡುವೆ ಒಮ್ಮತದ ಅಭಿಪ್ರಾಯವನ್ನು ಹಂಚಿಕೊಂಡರು. ಅದೇ ಸಮಯದಲ್ಲಿ ಜೀಯೋನಿಸಂ ಒಂದು ಚಳವಳಿಯಾಗಿ, ಕ್ರಾಂತಿಕಾರಿ ರೂಪವನ್ನು ತಾಳಿತು. ಅದರ ಮುಖ್ಯ ಪ್ರತಿನಿಧಿ ಮಂದಗಾಮಿ ಜೈಮ್ ವೀಜ್‌ಮನ್‌ನ ಸ್ಥಾನವನ್ನು ಶಿಸ್ತುಬದ್ಧ ನಾಯಕ ಕಾರ್ಮಿಕರ ಪ್ರತಿಧ್ವನಿಯಾದ ಡೇವಿಡ್ ಬೆನ್ ಗುರಿಯನ್ ಅಲಂಕರಿಸುತ್ತಾನೆ. ೧೯೪೨ರಲ್ಲಿ ಬೆನ್ ಗುರಿಯನ್ ಸುಮಾರು ೬೦೦ ಅಮೆರಿಕದ ಶ್ರೀಮಂತ ಯಹೂದಿ ಸದಸ್ಯರು ಪಾಲ್ಗೊಂಡ ಸಮ್ಮೇಳನವನ್ನು ನ್ಯೂಯಾರ್ಕ್‌ನ ಬಾಲ್ಟಿಮೋರ್ ಹೋಟೇಲ್‌ನಲ್ಲಿ ಆಯೋಜಿಸಿ, ಪ್ಯಾಲೇಸ್ತೀನಿಗೆ ವಲಸೆಯಾಗುವ ಯಹೂದಿಯರ ಸಂಖ್ಯೆಯನ್ನು ವೃದ್ದಿಸಿ, ಜೀಯೋನಿಸಂ ಮುಖ್ಯ ಉದ್ದೇಶವಾದ ಯಹೂದಿ ರಾಜ್ಯ ಸ್ಥಾಪನೆಗೆ ಸಾರ್ವತ್ರಿಕವಾದ ಪ್ರೋ ಘೋಷಿಸಿದನು. ಬೆನ್ ಗುರಿಯನ್ ಜಗತ್ತಿನ ಎಲ್ಲ ಕಡೆಯಿಂದಲೂ ಯಹೂದಿಗಳನ್ನು ಪ್ಯಾಲೇಸ್ತೀನ್‌ಗೆ ಪ್ರವೇಶ ಮಾಡಲು ಕರೆ ಕೊಟ್ಟಿದ್ದು ಅಲ್ಲದೆ, ಬ್ರಿಟಿಷರ ಕಠಿಣ ನಿಲುವು ಮತ್ತು ಶ್ವೇತಪತ್ರದ ಶರತ್ತುಗಳನ್ನು ಪ್ರಶ್ನಿಸಲು ಸಿದ್ಧತೆಯನ್ನು ನಡೆಸಿದನು.

ಬದಲಾದ ವಾತಾವರಣದಲ್ಲಿ ಹೊಸ ನಮೂನೆಯ ಸೈನಿಕ ಕಾರ್ಯಾಚರಣೆಯನ್ನು ಯಹೂದಿಗಳು ಆಯೋಜಿಸಿ, ಬೆನ್ ಗುರಿಯನ್ ನಿರೀಕ್ಷೆಗೂ ಮೀರಿ ಭಯೋತ್ಪಾದನಾ, ಹಿಂಸಾತ್ಮಕ ಚಟುವಟಿಕೆಗಳನ್ನು ಪ್ಯಾಲೇಸ್ತಿನ್‌ನಲ್ಲಿ ಆರಂಭಿಸಿದರು. ‘ಸ್ಟರ್ನ್‌ಗ್ಯಾಂಗ್’ ಎಂಬ ತರುಣರ ಗುಂಪೊಂದು ಪಣ ತೊಟ್ಟು ಜೀಯೋನಿಸಂನ ಉದ್ದೇಶಗಳನ್ನು ತಡೆಯುವ ಎಲ್ಲ ವ್ಯಕ್ತಿಗಳನ್ನು ದಮನಿಸತೊಡಗಿದರು. ೧೯೪೪ರಲ್ಲಿ ಬ್ರಿಟನ್ ಮಂತ್ರಿ ಲಾರ್ಡ್ ಮೊಯ್ನೆ ಈ ಗುಂಪಿಗೆ ಬಲಿಯಾದನು. ಇನ್ನೊಬ್ಬ ಯಹೂದಿ ಕ್ರಾಂತಿಕಾರಿ ಮುಖಂಡ ಮ್ಯಾನ್‌ಹ್ಯಾಮ್ ಬೇಗಿನ್ ಕೂಡ ಇಂಥದೇ ಕೃತ್ಯಗಳನ್ನು ಆರಂಭಿಸಿದನು. ಈ ಗುಂಪುಗಳು ಅನುಸರಿಸಿದ ಮಾರ್ಗಗಳು ಅನೇಕ ಯಹೂದಿಗಳನ್ನು ಆಶ್ಚರ್ಯಗೊಳಿಸಿತ್ತು

ಇವೆಲ್ಲವುಕ್ಕಿಂತಲೂ, ಯುರೋಪಿನಲ್ಲಿ ನಾಜಿಗಳಿಂದ ಯಹೂದಿಗಳು ಎದುರಿಸಿದ ಬಿಕ್ಕಟ್ಟು ಅವರ ಯಶೋಗಾಥೆಯನ್ನು ಚಿತ್ರಿಸುತ್ತದೆ. ನಾಜಿಗಳಿಂದಲೇ ಸುಮಾರು ೫ರಿಂದ ೬ ಮಿಲಿಯ ಯಹೂದಿಗಳು ಸಾವನ್ನಪ್ಪಿದರು. ಇದಕ್ಕುತ್ತರವಾಗಿ ಯಹೂದಿಗಳ ಭವಿಷ್ಯ ನಿರ್ಮಾಣ ಸಾಧ್ಯ ತಮ್ಮದೇ ಸ್ವತಂತ್ರ ರಾಜ್ಯ ಸ್ಥಾಪನೆಯಾದಾಗ ಮಾತ್ರ ಎಂಬ ತೀರ್ಮಾನವು ಎಲ್ಲೆಡೆ ಹಬ್ಬಿತು. ಅಂತದೊಂದು ರಾಜ್ಯವಿದ್ದರೆ ಭವಿಷ್ಯದಲ್ಲಿ ರಕ್ಷಣೆ ಪಡೆಯಬಹುದು ಮತ್ತು ಎಂತಹ ಬಿಕ್ಕಟ್ಟನ್ನಾದರೂ ಧೈರ್ಯದಿಂದ ಎದುರಿಸಬಹುದು. ಜರ್ಮನಿಯಲ್ಲಿದ್ದ ಅನೇಕ ಯಹೂದಿಯರು ಒಳ್ಳೆಯವರೇ ಆಗಿದ್ದರೂ ಮತ್ತು ಎಂದಿಗೂ ಹಿಟ್ಲರ್‌ನ ಸರಕಾರವನ್ನು ವಿರೋಧಿಸಿದವರಲ್ಲ. ಆದಾಗ್ಯೂ ಅವರನ್ನು ಧ್ವಂಸ ಮಾಡಿದರು. ಈ ಬಗೆಯ ಯಹೂದಿಗಳ ನರಳಾಟಕ್ಕೆ ಜಗತ್ತಿನಾದ್ಯಂತ ಅನುಕಂಪ ವ್ಯಕ್ತವಾಯಿತು. ಅನೇಕ ರಾಷ್ಟ್ರಗಳು, ಹೀಗೆ ಬಿಕ್ಕಟ್ಟನ್ನು ಎದುರಿಸಿದ ಯಹೂದಿಗಳಿಗೆ, ಹಿಂದೆ ಯಾವ ಸಹಕಾರವನ್ನು ನೀಡಲೂ ಆಗಲಿಲ್ಲ ಎಂಬ ಅಸಹಾಯಕತೆಯನ್ನು ವ್ಯಕ್ತಪಡಿಸಿದವು. ಹೀಗೆ ಉಗಮವಾದ ಅನುಕಂಪದ ವಾತಾವರಣವನ್ನು ಬಳಸಿಕೊಂಡು ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಬೇಕೆಂದು ಯಹೂದಿಗಳು ಪುನಃ ಸಂಘಟಿತರಾದರು.

೧೯೪೫ರಲ್ಲಿ ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿಯಾಗಿ ಅರ್ನೆಸ್ಟ್ ಬೆವಿನ್ ನೇಮಕವಾಗಿದ್ದು, ಅವನು ಪ್ಯಾಲೇಸ್ತೀನ್ ಸಮಸ್ಯೆಯನ್ನು ೧೯೩೯ರ ಶ್ವೇತಪತ್ರದ ನಿರ್ದೇಶನದಂತೆ ಬಗೆಹರಿಸಲು ನಿರ್ಧರಿಸಿದನು. ಸರಕಾರವನ್ನು ರಚಿಸಿ, ಯಹೂದಿ ಮತ್ತು ಅರಬ್ ಪ್ರತಿನಿಧಿಗಳ ನಡುವೆ ಅಧಿಕಾರ ಹಂಚಿಕೊಂಡು; ಬಹುಸಂಖ್ಯಾತ ಅರಬ್‌ರ ಸಮುದಾಯದಲ್ಲಿ ಏರುಪೇರು ಆಗದಂತೆ ನೋಡಿಕೊಳ್ಳಲು ಯಹೂದಿಗಳ ಪ್ರವೇಶವನ್ನು ಕಡಿತಗೊಳಿಸುವುದನ್ನು ಅನುಷ್ಠಾನಗೊಳಿಸಲು ಬೇವಿನ್ ನಿರ್ಧರಿಸಿದರು. ಆದರೆ, ಇದು ಕಾರ್ಯರೂಪಕ್ಕೆ ತರಲು ಯಹೂದಿ/ಅರಬ್‌ರ ನಡುವೆ ಭಿನ್ನಾಭಿಪ್ರಾಯಗಳು ಬಲಗೊಂಡವು.

ಅರಬ್ಬರು, ಯಹೂದಿಯರನ್ನು ಸಂಘಟಿತರಾಗಿ ವಿರೋಧಿಸುತ್ತಾ, ಅರಬ್ ಭೂಮಿ ಯಾವುದೇ ಕಾರಣಕ್ಕೂ ಯುರೋಪಿನವರಿಗೆ ಬೇಡದ ಯಹೂದಿಯರನ್ನು ತಂದು ಕೂಡಿ ಹಾಕಲು ಒಂದು ಸ್ಥಳವಾಗಬಾರದು ಮತ್ತು ವಿನಾಕಾರಣಕ್ಕೆ ಅರಬ್ಬರು ಬಲಿಪಶು ಗಳಾಗಬಾರದೆಂದು ಟೀಕಿಸತೊಡಗಿದರು. ಹಾಗಾಗಿ, ಭವಿಷ್ಯದಲ್ಲಿ ಯಾವುದೇ ರೀತಿಯ ಅರಬ್ ಹಿಂಸಾತ್ಮಕ ದಂಗೆಯು ಬ್ರಿಟಿಷರು ಆರಂಭಿಸಬೇಕೆಂಬ ತೈಲ ಉತ್ಪಾದನೆ ಮತ್ತು ಮಾರಾಟ ವಹಿವಾಟಿಗೆ ಬಲವಾದ ಹೊಡೆತ ಬೀಳುವುದು. ಎರಡನೆಯದಾಗಿ, ಶೀತಲ ಯುದ್ಧದ ಪ್ರಭಾವವನ್ನು ಎದುರಿಸಲು ಬ್ರಿಟಿಷರು ರಚಿಸಿಕೊಳ್ಳಬೇಕೆಂದಿರುವ ಯೋಜನೆಗಳಿಗೆ ಧಕ್ಕೆ ಉಂಟು ಮಾಡುವುದು. ಕೊನೆಯದಾಗಿ, ಇಡೀ ಮಧ್ಯಪ್ರಾಚ್ಯ ಪ್ರದೇಶದಲ್ಲಿನ ಬ್ರಿಟಿಷರ ವಸಾಹತುಶಾಹಿ ಆಸಕ್ತಿಗಳ ರಕ್ಷಣೆಗೆ ಪ್ಯಾಲೇಸ್ತೀನನ್ನು ಕೇಂದ್ರವನ್ನಾಗಿ ಪರಿವರ್ತಿಸಿ, ಅಲ್ಲಿ ತಮ್ಮ ಸೈನಿಕ ನೆಲೆಯನ್ನು ಈಗಾಗಲೇ ಆರಂಭಿಸಿರುವುದರಿಂದ, ಬ್ರಿಟಿಷರ ಭವಿಷ್ಯದ ವಸಾಹತು ಯೋಜನೆಗಳು ಭಗ್ನಗೊಳ್ಳುತ್ತವೆ. ಈಗ ಸ್ವಲ್ಪ ಮಟ್ಟಿಗೆ ಜೋರ್ಡಾನ್ ಮತ್ತ ಇರಾಕ್‌ನಲ್ಲಿರುವ ಹಷಿಮೈಟ್ ಅರಸು ಬ್ರಿಟಿಷರ ಪರವಾಗಿದ್ದೇವೆ ಎಂದು ವರ್ತಿಸಿದರೂ ಕೂಡ, ಬಹುತೇಕ ಅರಬ್ ರಾಜ್ಯಗಳು ಬ್ರಿಟಿಷರನ್ನು ಸಾಮ್ರಾಜ್ಯಶಾಹಿ ರಾಷ್ಟ್ರವೆಂದೇ ಘೋಷಿಸಿ ಅವರ ಮೂಲ ಉದ್ದೇಶ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಆಧಿಪತ್ಯ ಸಾಧಿಸು ವುದಾಗಿದ್ದು, ಅದನ್ನು ಈಡೇರಿಸಿಕೊಳ್ಳಲು ಅರಬ್ಬರನ್ನು ಬಲಿಕೊಡುತ್ತಿದ್ದಾರೆ ಎಂದು ಪ್ರತಿಪಾದಿಸಿದರು. ಅದರಂತೆ, ಅನೇಕ ತೃತೀಯ ಜಗತ್ತಿನ ರಾಷ್ಟ್ರಗಳು ಕೂಡ ಅರಬರಿಗೆ ಬೆಂಬಲ ಸೂಚಿಸಿದರು. ಇದನ್ನು ಬ್ರಿಟಿಷರು ಹತ್ತಿರದಿಂದಲೇ ಗಮನಿಸುತ್ತಿದ್ದರು. ಅತ್ತ ಅಮೆರಿಕ ಅಧ್ಯಕ್ಷ ಟ್ರೂಮನ್ ಕೂಡ ಯಹೂದಿಗಳನ್ನು ಬೆಂಬಲಿಸುತ್ತಿದ್ದು, ಕೂಡಲೇ ಒಂದು ಲಕ್ಷ ನಿರಾಶ್ರಿತ ಯಹೂದಿಗಳನ್ನು ಪ್ಯಾಲೇಸ್ತೀನನ್ನು ಪ್ರವೇಶಿಸಲು ಅನುಮತಿ ಕೊಡಲು ಬ್ರಿಟನ್ ಮೇಲೆ ಒತ್ತಾಯ ಹೇರುತ್ತಿದ್ದನು (ಅದರಿಂದ ಯಾವುದೇ ಅನಾಹುತ ಗಳಾದರೂ). ಇನ್ನೊಂದು ಸಂದರ್ಭದಲ್ಲಿ, ಸ್ವತಂತ್ರ ಯಹೂದಿ ರಾಜ್ಯದ ಪರಿಕಲ್ಪನೆಯನ್ನು ತಿರಸ್ಕರಿಸುತ್ತಾನೆ. ಏಕೆಂದರೆ, ನೇರವಾಗಿ ಟ್ರೂಮನ್ ಈ ಬಿಕ್ಕಟ್ಟಿನಲ್ಲಿ ಹೊಣೆಗಾರನಾಗಲು ಹಿಂಜರಿಯುತ್ತಿದ್ದನು.

ಈ ಮಧ್ಯದಲ್ಲಿ ಯಹೂದಿ ನಿರಾಶ್ರಿತರ ಸಂಖ್ಯೆಯು ವೃದ್ದಿಸುತ್ತಿದ್ದು, ಅವರೆಲ್ಲರು ಬ್ರಿಟಿಷರ ಅನುಮತಿಗಾಗಿ ಕಾಯುತ್ತಿದ್ದರು. ಪರಿಸ್ಥಿತಿಯ ಪ್ರಕ್ಷುಬ್ಧತೆಯನ್ನು ಅರಿತು ಅರ್ನೆಸ್ಟ್ ಬೇವಿನ್ ಅಮೆರಿಕ ಅಧ್ಯಕ್ಷ ಟ್ರೂಮನ್ ಸಹಕಾರವನ್ನು ಕೋರಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದನು. ಇದಕ್ಕೆ ಸ್ಪಂದಿಸಿದ ಅಮೆರಿಕ ಅಧ್ಯಕ್ಷ, ಆರು ಅಮೆರಿಕನ್ನರು ಮತ್ತು ಆರು ಮಂದಿ ಬ್ರಿಟಿಷರನ್ನೊಳಗೊಂಡ ಜಂಟಿ ಸಮಿತಿಯನ್ನು ರಚಿಸಿತು. ಸಮಿತಿ ಸದಸ್ಯರು ಪ್ಯಾಲೇಸ್ತೀನಿಗೆ ಭೇಟಿ ನೀಡಿ, ಅರಬ್ಬರ/ಯಹೂದಿಯರ ಅಹವಾಲುಗಳನ್ನು ಸ್ವೀಕರಿಸಿ ರಿಪೋರ್ಟನ್ನು ಏಪ್ರಿಲ್ ೧೯೪೬ರಲ್ಲಿ ಒಪ್ಪಿಸಿತು. ವರದಿಯ ಆಧಾರದ ಮೇಲೆ ತುರ್ತಾಗಿ ಸುಮಾರು ಒಂದು ಲಕ್ಷ ನಿರಾಶ್ರಿತ ಯಹೂದಿಯರನ್ನು ಪ್ಯಾಲೇಸ್ತೀನಿಗೆ ಸೇರಿಸಿಕೊಳ್ಳಲು ಟ್ರೂಮನ್ ಬ್ರಿಟಿಷ್ ಆಡಳಿತಕ್ಕೆ ಆದೇಶಿಸಿದನು. ಇದಲ್ಲದೆ, ಸಮಿತಿ ಅಭಿಪ್ರಾಯಪಟ್ಟಂತೆ, ಬ್ರಿಟಿಷ್ ಆಡಳಿತವನ್ನು ಮುಂದುವರಿಸಿ ಪರಿಸ್ಥಿತಿಯನ್ನು ನಿಯಂತ್ರಣ ದಲ್ಲಿರಿಸಿಕೊಳ್ಳಲು ಕೂಡ ಸೂಚಿಸಿದನು. ಈ ಸಲಹೆಗಳು ಅರಬ್ಬರನ್ನಾಗಲಿ, ಯಹೂದಿ ಗಳನ್ನಾಗಲಿ ಸಮಾಧಾನಪಡಿಸಲಿಲ್ಲ. ಬದಲಾಗಿ, ಬ್ರಿಟಿಷ್ ಆಧಿಪತ್ಯ ದುರ್ಬಲವಾಗುವ ಮೊದಲು ಪ್ಯಾಲೇಸ್ತೀನಿನ ಮೇಲೆ ಪ್ರಭುತ್ವ ಸ್ಥಾಪಿಸಬೇಕೆಂದು ಎರಡೂ ಸಮುದಾಯದವರು ವಿಶೇಷ ಪ್ರಯತ್ನಗಳನ್ನು ಮಾಡಿದರು. ಪರಿಣಾಮವಾಗಿ ಹಿಂಸೆ, ದಂಗೆ, ಲೂಟಿ, ಸುಲಿಗೆ ಪುನಃ ಮರುಕಳಿಸಿತು. ಅರ್ನಸ್ಟ್ ಬೇವಿನ್ ಇದಕ್ಕುತ್ತರ ವಾಗಿ ಈ ಸಮಸ್ಯೆಯಿಂದ ದೂರ ಸರಿಯಬೇಕೆಂದು ನಿರ್ಧರಿಸಿದನು.

೧೯೪೭ರ ಫೆಬ್ರವರಿಯಲ್ಲಿ ಬ್ರಿಟಿಷ್ ಸರಕಾರ ಪ್ಯಾಲೇಸ್ತೀನ್ ಪ್ರಶ್ನೆಯನ್ನು ವಿಶ್ವಸಂಸ್ಥೆಗೆ ಒಪ್ಪಿಸುವುದಾಗಿ ಘೋಷಿಸಿತು. ೧೯೪೭ರ ಏಪ್ರಿಲ್ ೨ರಂದು ಬ್ರಿಟನ್ ವಿಶ್ವಸಂಸ್ಥೆಯ ಕಾರ್ಯದರ್ಶಿಯನ್ನು ಮನವಿ ಮಾಡಿ, ಸಾಮಾನ್ಯ ಸಭೆಯಲ್ಲಿ ಚರ್ಚಿಸುವ ಮುಖ್ಯ ವಿಷಯಗಳಲ್ಲಿ ಪ್ಯಾಲೇಸ್ತೀನ್ ಪ್ರಶ್ನೆಯನ್ನು ಸೇರಿಸಲು ಕೇಳಿಕೊಂಡಿತು. ಅಲ್ಲದೆ, ವಿಶೇಷ ಸಮಿತಿಯನ್ನು ರಚಿಸಿ ಈ ಪ್ರಶ್ನೆಯನ್ನು ಅಧ್ಯಯನ ಮಾಡಿ ತೀರ್ಮಾನ ನೀಡಬೇಕೆಂದು ಆಶಿಸಿತು. ಸಾಮಾನ್ಯ ಸಭೆಯ ಸದಸ್ಯರ ಬೆಂಬಲ ಪಡೆದು ವಿಶ್ವಸಂಸ್ಥೆಯ ಕಾರ್ಯದರ್ಶಿ ೧೯೪೭ರ ಏಪ್ರಿಲ್ ೨೮ರಲ್ಲಿ ತುರ್ತಾಗಿ ವಿಶೇಷ ಸಾಮಾನ್ಯ ಸಭೆಯನ್ನು ಕರೆದು ಪ್ಯಾಲೇಸ್ತೀನ್ ವಿಚಾರವಾಗಿ ವಿಶೇಷ ಸಮಿತಿಯನ್ನು ರಚಿಸಿದನು. ಈ ಸಮಿತಿಯಲ್ಲಿ ೧೧ ಸದಸ್ಯ ರಾಷ್ಟ್ರಗಳು ಸದಸ್ಯರನ್ನಾಗಿ ನೇಮಿಸಿತು. ನಿರೀಕ್ಷೆಯಂತೆ ಯಹೂದಿಗಳು ಈ ಬೆಳವಣಿಗೆಯನ್ನು ಸ್ವಾಗತಿಸಿದರು. ಆದರೆ, ಅರಬ್ಬರು ತಿರಸ್ಕರಿಸಿ ಯಹೂದಿಗಳಿಗೆ ತಮ್ಮ ನೆಲವನ್ನು ಮೆಟ್ಟಲು ಯಾವುದೇ ಅರ್ಹತೆಯಿಲ್ಲವೆಂದು ಖಂಡಿಸಿದರು. ಸಮಿತಿಯ ವರದಿಯಲ್ಲಿ ಪ್ಯಾಲೇಸ್ತೀನನ್ನು ವಿಭಜನೆ ಮಾಡಲು ಬೃಹತ್ ಯೋಜನೆಯೊಂದನ್ನು ರೂಪಿಸಿ ಪ್ಯಾಲೇಸ್ತೀನನ್ನು ಮೂರು ಭಾಗಗಳನ್ನಾಗಿ ವಿಂಗಡಿಸುವುದಾಗಿ ತೀರ್ಮಾನಿಸಿತು. ಒಂದು ಭಾಗ ಅರಬರಿಗೆ, ಇನ್ನೊಂದು ಭಾಗ ಯಹೂದಿಯರಿಗೆ ಮತ್ತು ಮೂರನೇ ಭಾಗ ಜೆರುಸಲೇಂನ್ನು ಅಂತಾರಾಷ್ಟ್ರೀಯ ಸಂಘಟನೆಯ ಅಧೀನಕ್ಕೆ ಒಳಪಡಿಸುವುದೆಂದು ತೀರ್ಮಾನಿಸಲಾಯಿತು.

ಯಹೂದಿಗಳು ತಕರಾರಿಲ್ಲದೆ ವಿಶ್ವಸಂಸ್ಥೆಯ ಸಲಹೆಯನ್ನು ಸ್ವೀಕರಿಸಿದರು. ಏಕೆಂದರೆ ಕೊನೆಗೂ ಅವರದ್ದೇ ಆದ ರಾಜ್ಯವನ್ನು ಸ್ಥಾಪಿಸಲು ಒಂದು ಭೂಭಾಗವನ್ನು ಸೂಚಿಸಲಾಗಿದ್ದು, ಅಲ್ಲಿ ತಮ್ಮ ಕನಸಾದ ಸ್ವತಂತ್ರ ರಾಷ್ಟ್ರವನ್ನು ಘೋಷಿಸಬಹುದೆಂಬ ಭರವಸೆ ದೊರೆಯಿತು. ಅರಬ್ಬರು ಮಾತ್ರ ಇಡೀ ವಿಭಜನೆ ಯೋಜನೆಯನ್ನು ತಿರಸ್ಕರಿಸಿ, ಶ್ರೀಮಂತ ಅರಬ್ ರಾಷ್ಟ್ರಗಳು ಮತ್ತು ಅರಬ್ ಲೀಗ್ ಸದಸ್ಯ ರಾಷ್ಟ್ರಗಳ ಸಹಯೋಗ ದೊಂದಿಗೆ ಯಹೂದಿಗಳ ವಿರುದ್ಧ ಸೈನಿಕ ಕಾರ್ಯಾಚರಣೆ ನಡೆಸಿ ಜಯ ಸಾಧಿಸಬಹುದೆಂಬ ಧೈರ್ಯವಿತ್ತು. ಅವರ ಈ ಪ್ರತಿಕ್ರಿಯೆ ಸಮಂಜಸವಾದುದು ಹೌದು. ವಿಶ್ವಸಂಸ್ಥೆಯ ಯೋಜನೆಯನ್ನೇ ಅಧ್ಯಯನ ಮಾಡಿದರೆ, ಅರಬ್ಬರು ತಿರಸ್ಕರಿಸಿರುವುದಕ್ಕೆ ಕಾರಣಗಳು ದೊರೆಯುತ್ತವೆ. ೧೯೪೭ರಲ್ಲಿ ಪ್ಯಾಲೇಸ್ತೀನಿನಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಯಹೂದಿಗಳು ಕೇವಲ ೬೦೮೦೦೦ ಮಾತ್ರ. ಆದರೆ, ಅರಬ್ಬರು ೧,೩೨೭,೦೦೦ ರಷ್ಟಿದ್ದು ಅವರೇ ಬಹುಸಂಖ್ಯಾತ ಸಮುದಾಯ. ಭೂಮಿಯ ಒಡೆತನದಲ್ಲಿ ಯಹೂದಿಗಳು ಕೇವಲ ೧೦.೬ ದಷ್ಟು ಭೂಮಿಯ ಮಾಲೀಕರಾಗಿದ್ದರು. ಆದರೆ, ಅರಬ್ಬರು ೮೯.೪ದಷ್ಟು ಭೂಮಿಯ ಮಾಲೀಕರಾಗಿದ್ದರು. ವಿಶ್ವಸಂಸ್ಥೆ ಸೂಚಸಿದ ಒಟ್ಟು ಭೂಭಾಗ ಯಹೂದಿಗಳಿಗೆ ೫೬.೫, ಆದರೆ, ಅರಬರಿಗೆ ಕೇವಲ ೪೩.೫ದಷ್ಟು ಮಾತ್ರ ಈ ಅಂಕೆ ಸಂಖ್ಯೆಗಳು ಅಸಮತೋಲನ ವಾಗಿದ್ದು ಅರಬ್ಬರು ವಿರೋಧಿಸಲು ಸಮರ್ಥನೆಯನ್ನು ನೀಡುತ್ತವೆ.

ಸಮಿತಿ ಒಪ್ಪಿಸಿದ ವರದಿಯನ್ನು ವಿಶ್ವಸಂಸ್ಥೆ ಅನುಮೋದಿಸಿದ ನಂತರ ಬ್ರಿಟಿಷರು ಒಂದು ಘೋಷಣೆಯನ್ನು ಮಾಡಿ, ೧೯೪೮ರ ಮೇ ೧೫ರೊಳಗೆ ಪ್ಯಾಲೇಸ್ತಿನಿನಲ್ಲಿ ಮ್ಯಾಂಡೇಟರಿ ಆಡಳಿತವನ್ನು ವಜಗೊಳಿಸಿ, ವಾಪಸಾಗುವುದಾಗಿ ಹೇಳಿದರು ಮತ್ತು ಯೋಜನೆಯನ್ನು ಅನುಷ್ಠಾನ ಮಾಡಲು ಸೂಕ್ತ ವಾತಾವರಣವನ್ನು ಅರಬ್/ಯಹೂದಿಗಳಿಗೆ ಕಲ್ಪಿಸಲು ಈ ನಿರ್ಧಾರ ಅನಿವಾರ್ಯವೆಂದೂ ಒಪ್ಪಿಕೊಂಡರು. ಇದನ್ನು ಗಮನಿಸಿದ ಎರಡೂ ಸಮುದಾಯದವರು ಪರಸ್ಪರ ಸ್ಪರ್ಧೆಗಿಳಿದು, ಅದು ಹಿಂಸಾ ರೂಪವನ್ನು ತಾಳಿತು. ಎರಡೂ ಕಡೆಯಿಂದ ಸಾಕಷ್ಟು ಸಾವು ನೋವು ಉಂಟಾಯಿತು. ಪ್ರತೀ ಹಳ್ಳಿ ಯಲ್ಳೂ ಹಿಂಸೆಯ ಪ್ರಭಾವ ತಟ್ಟಿತು. ಯಹೂದಿಗಳು ಆರಂಭದಿಂದಲೇ ಮೇಲುಗೈ ಸಾಧಿಸಿದ್ದು, ಸಾವಿರಾರು ಮುಗ್ಧ ಅರಬ್ ಕುಟುಂಬಗಳು ಹಿಂಸೆಯನ್ನು ಎದುರಿಸಲಾಗದೆ, ನೆರೆ ರಾಷ್ಟ್ರಗಳಿಗೆ ಪಲಾಯಗೈದರು. ಕೆಲವರು ಯಹೂದಿಗಳ ವಿರುದ್ಧ ಸೆಣಸಾಡಿ ಸಾವನ್ನಪ್ಪಿದರು. ಇಡೀ ಏಪ್ರಿಲ್ ತಿಂಗಳು(೧೯೪೮) ಪ್ಯಾಲೇಸ್ತೀನ್ ಮತ್ತು ಪ್ಯಾಲೇಸ್ತೀನಿ ಯರು ಭೀಕರವಾದ ಹಿಂಸೆಯನ್ನು ಕಂಡಿತು.

೧೯೪೮ರ ಕೊನೆಯ ವೇಳೆಗೆ ಸರಿಸುಮಾರು ಅರ್ಧ ಮಿಲಿಯ ಅರಬ್ಬರು ರಕ್ಷಣೆಗಾಗಿ ಜೀವ ಭಯದಿಂದ ಪ್ಯಾಲೇಸ್ತೀನ್ ಬಿಟ್ಟು ಬೇರೆ ದೇಶಕ್ಕೆ ವಲಸೆ ಹೋದರು. ಪ್ಯಾಲೇಸ್ತೀನಿ ಅರಬ್ಬರ ದೃಷ್ಟಿಯಿಂದ ಇದೊಂದು ಹೊಸ ಅಧ್ಯಾಯದ ಆರಂಭ-ಪ್ಯಾಲೇಸ್ತೀನಿ ನಿರಾಶ್ರಿತರ ಸಮಸ್ಯೆ ಉಗಮವಾಯಿತು. ಯಹೂದಿಗಳು, ರೋಮನರು ಅವರ ವಿರುದ್ಧ ಆರಂಭಿಸಿದ ಹಿಂಸೆಯಿಂದ(ಅವರು ಹೇಳಿಕೊಳ್ಳುವಂತೆ) ರಕ್ಷಿಸಿಕೊಳ್ಳಲು ದೇಶ ಬಿಟ್ಟು ಬೇರೆ ದೇಶಗಳಲ್ಲಿ ನಿರಾಶ್ರಿತರಾಗಿ ಸುಮಾರು ೨೦೦೦ ವರ್ಷ ಬದುಕಿದ್ದರೂ, ಬದುಕಿನ ಕಹಿ ನೆನಪುಗಳನ್ನು ೧೯೪೮ರಲ್ಲಿ ಅರಬರಿಗೆ ಹಸ್ತಾಂತರಿಸಿದರು.

೧೯೪೮ರ ಮೇ ೧೪ರ ಮಧ್ಯರಾತ್ರಿ ಪ್ಯಾಲೇಸ್ತೀನಿನ ಒಂದು ಭಾಗ ಯಹೂದಿ ರಾಷ್ಟ್ರವಾಗಿ ಇಸ್ರೇಲ್ ಹುಟ್ಟಿಕೊಂಡಿತು. ಹಲವು ದಶಕಗಳ ಸತತ ಪರಿಶ್ರಮದಿಂದ ಈ ಒಂದು ಕನಸನ್ನು ಕಾರ್ಯರೂಪಕ್ಕೆ ತಂದೆವು ಎಂಬ ಹೆಮ್ಮೆಯಿಂದ ಈ ಘಟನೆಯನ್ನು ವಿಜೃಂಭಣೆಯಿಂದ ಆಚರಿಸಿದರು. ಮರುದಿನವೇ ಬ್ರಿಟಿಷ್ ಹೈ ಕಮಿಶನರ್ ವಾಪಸಾದನು. ಹೊಸ ರಾಜ್ಯ ಎಂದು ಯಹೂದಿಯರು ಇಸ್ರೇಲ ಡೇವಿಡ್ ಬೆನ್ ಗುರಿಯನ್ ಘೋಷಿಸಿ ದರು. ಅವನೇ ಮೊದಲ ಪ್ರಧಾನಮಂತ್ರಿಯಾಗಿ ನೇಮಕವಾದರೆ, ಜೈಮ್ ವೀಜ್‌ಮನ್ ಇಸ್ರೇಲ್‌ನ ಪ್ರಥಮ ಅಧ್ಯಕ್ಷನಾದನು. ೫೦ ವರ್ಷಗಳ ಜಿಯೋನಿಸಂ ಚಳವಳಿಯ ಫಲಿತಾಂಶವಾಗಿ ಯಹೂದಿಗಳು ತಮ್ಮದೇ ದೇಶವನ್ನು ಹೊಂದಿದರು.

 

ಪರಾಮರ್ಶನಗ್ರಂಥಗಳು

೧. ಡೇವಿಡ್ ವಿಟಲ್, ೧೯೮೨. ಜಿಯೋನಿಸಂ : ದಿ ಪಾರ್ಮೆಟಿವ್ ಇಯರ್ಸ್, ಆಕ್ಸ್‌ಫರ್ಡ್.

೨. ಜಕ್ಕ ನೆವಕಿವಿ, ೧೯೬೯. ಬ್ರಿಟನ್ಫ್ರಾನ್ಸ್ ಆಂಡ್ ದಿ ಅರಬ್ ಮಿಡ್ಲ್ಈಸ್ಟ್, ೧೯೧೪೧೯೨೦

೩. ಪೀಟರ್ ಮ್ಯಾನ್ಸ್‌ಪೀಲ್ಡ್, ೧೯೭೮. ದಿ ಅರಬ್, ಲಂಡನ್

೪. ಪೀಟರ್ ಮ್ಯಾನ್ಸ್‌ಪೀಲ್ಡ್, ದಿ ಅರಬ್ಸ್ ಆಂಡ್ ಜೀವಿಷ್ ನೇಶನ್ಯಾಲಿಸಂ.