೧೯೪೮ರ ಮೇ ೧೫ರಂದು ಸಿರಿಯಾ, ಟ್ರಾನ್ಸ್ ಜೋರ್ಡಾನ್, ಲೆಬನಾನ್, ಇರಾಕ್ ಮತ್ತು ಈಜಿಪ್ಟ್ ದೇಶಗಳ ಸೈನ್ಯವು ಅತಂತ್ರ ಸ್ಥಿತಿಯಲ್ಲಿದ್ದ ಪ್ಯಾಲೇಸ್ತೀನಿ ಅರಬ್ಬರ ಬೆಂಬಲಕ್ಕೆ ಬಂದು ಹೊಸತಾಗಿ ಘೋಷಿಸಲ್ಪಟ್ಟ ಇಸ್ರೇಲ್ ರಾಜ್ಯದ ಮೇಲೆ ಸೈನಿಕ ಕಾರ್ಯಾಚರಣೆ ಆರಂಭಿಸಿದವು. ಇದೇ ಮೊದಲ ಅರಬ್ ಇಸ್ರೇಲ್ ಯುದ್ಧ (೧೯೪೮-೪೯). ಅರಬ್ ಸಮುದಾಯದ ಸೈನ್ಯವು ತೋರಿಕೆಗೆ ದೊಡ್ಡ ಮಟ್ಟದ್ದಾದರೂ, ಯಹೂದಿಗಳು ಧೈರ್ಯದಿಂದ ಪ್ರತಿ ದಾಳಿ ಆರಂಭಿಸಿದರು. ಆರ್ಥಿಕವಾಗಿ ಅವರು ಶ್ರೀಮಂತರಾಗಿರುವುದರಿಂದ ಉತ್ಕೃಷ್ಟವಾದ ಶಸ್ತ್ರಾಸ್ತ್ರಗಳನ್ನು, ಫಿರಂಗಿಗಳನ್ನು, ಕೋವಿಗಳನ್ನು ಜಕೋಸ್ಲೋವೇಕಿಯಾದಿಂದ ಖರೀದಿಸಿ, ಅರಬ್ ದೇಶಗಳ ಸೈನ್ಯದ ವಿರುದ್ಧ ಹೋರಾಟ ನಡೆಸಿದರು. ಮತ್ತು ಅರಬ್ಬರ ವಿರುದ್ಧ ಸುಲಭ ಜಯವನ್ನು ಸಾಧಿಸಿದರು. ೧೯೪೯ರ ಜೂನ್ ೯ರಂದು, ವಿಶ್ವಸಂಸ್ಥೆ ಮಧ್ಯಸ್ಥಿಕೆ ನಡೆಸಿ, ಯುದ್ಧ ವಿರಾಮ ಘೋಷಿಸಿತು.

ಯುದ್ಧ ವಿರಾಮಕ್ಕೆ ಅರಬ್ಬರು ಸಮ್ಮತ ಸೂಚಿಸಿದ್ದರೂ, ಇಸ್ರೇಲ್ ಜೊತೆಗೆ ಶಾಂತಿ ಮಾತುಕತೆ ಮತ್ತು ಇಸ್ರೇಲ್ ರಾಜ್ಯದ ಸ್ಥಾಪನೆಯನ್ನು ಗೌರವಿಸುವುದನ್ನು ತಿರಸ್ಕರಿಸಿದರು. ಇಸ್ರೇಲ್ ಎಂಬುದು ಯುರೋಪಿನ ಔಟ್‌ಪೋಸ್ಟ್ ಆಗಿದ್ದು, ಅನಾವಶ್ಯಕವಾಗಿ ಅರಬ್ ಜಗತ್ತಿನ ಮೇಲೆ ಯುರೋಪಿನವರು ಹೇರಿ ಅಮೆರಿಕನ್ ಡಾಲರ್‌ನಿಂದ ರಕ್ಷಿಸಲಾಗುತ್ತದೆ ಅರಬ್ ಎಂದು ಅರಬ್ ಸಮುದಾಯ ಟೀಕಿಸತೊಡಗಿತು. ಪ್ರತೀಕಾರವಾಗಿ ಅರಬ್ ಸಮುದಾಯ, ಇಸ್ರೇಲ್ ವಿರುದ್ಧ ಆರ್ಥಿಕ ವಲಯದಲ್ಲಿ ಯುದ್ಧವನ್ನು ಮುಂದುವರಿಸು ವುದಾಗಿ ಘೋಷಿಸಿ, ಸೂಯೆಜ್ ಕಾಲುವೆ ಮೂಲಕ ಇಸ್ರೇಲ್ ಹಡಗುಯಾನವನ್ನು ತಡೆ ಹಿಡಿಯಿತು. ಇದಕ್ಕುತ್ತರವಾಗಿ, ಯುದ್ಧದ ಸಮಯದಲ್ಲಿ ಪ್ಯಾಲೇಸ್ತೀನ್‌ನನ್ನು ಬಿಟ್ಟು ವಲಸೆ ಹೋದ ಸುಮಾರು ಏಳು ಮಿಲಿಯ ಅರಬ್ ನಿರಾಶ್ರಿತರ ವಾಪಸಾತಿಯನ್ನು ಇಸ್ರೇಲ್ ಸರಕಾರ ವಿರೋಧಿಸಿತು. ಹಾಗಾಗಿ, ಅರಬ್ ನಿರಾಶ್ರಿತರ ಸಮಸ್ಯೆ ಒಂದು ಬಿಕ್ಕಟ್ಟಾಗಿ ಪರಿವರ್ತನೆಗೊಂಡಿತು. ಅವರ ರಕ್ಷಣೆಗಾಗಿ ಗಾಝೂ ಪಟ್ಟಿ ಮತ್ತು ಪಶ್ಚಿಮ ದಂಡೆಯಲ್ಲಿ ನಿರಾಶ್ರಿತರ ಶಿಬಿರಗಳನ್ನು ತೆರೆಯಲಾಯಿತು. ೧೯೪೮ರವರೆಗೆ ಯಹೂದಿಗಳು ನೆಲೆ ಇಲ್ಲದ ನಿರಾಶ್ರಿತರಾಗಿದ್ದರು. ಆದರೆ, ಈಗ ಪ್ಯಾಲೇಸ್ತೀನಿನಲ್ಲಿದ್ದ ಅರಬ್ಬರು ದೇಶವಿಲ್ಲದ ಜನರಾದರು. ಅಂದಿನಿಂದ ಈ ನಿರಾಶ್ರಿತರು ಇಸ್ರೇಲ್‌ನ ಭದ್ರತೆ, ಶಾಂತಿ ಮತ್ತು ಸ್ಥಿರತೆಯನ್ನು ವಿರೋಧಿಸುತ್ತಾ ಬಂದರು.

ಇಸ್ರೇಲ್ ರಾಜ್ಯದ ಭದ್ರತೆ ಪ್ಯಾಲೇಸ್ತೀನಿ ಅರಬ್ಬರು ಮತ್ತು ಅವರಿಗೆ ಬೆಂಬಲ ನೀಡುವ ಎಲ್ಲ ಅರಬ್ ರಾಷ್ಟ್ರಗಳಿಂದ ಮಾನ್ಯತೆ ದೊರಕುವವರೆಗೆ, ನಿರಾಶ್ರಿತರನ್ನು ಪ್ಯಾಲೇಸ್ತೀನಿಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲವೆಂದು ಇಸ್ರೇಲ್ ಸರಕಾರ ಹೇಳಿತು. ಅಲ್ಲದೆ ಇಸ್ರೇಲ್ ರಾಜ್ಯ ಸ್ಥಾಪನೆಯ ಮೊದಲ ಎರಡು ವರ್ಷಗಳ ಇರುವಿಕೆಯ ಸಮಯದಲ್ಲಿ ವಿಶ್ವದಾದ್ಯಂತ ಚದುರಿ ಹೋದ ಸುಮಾರು ಅರ್ದ ಮಿಲಿಯ ಯಹೂದಿಗಳನ್ನು ಸ್ವದೇಶಕ್ಕೆ ಸೇರಿಸಿಕೊಂಡಿತು. ಕೆಲವೇ ವರ್ಷಗಳಲ್ಲಿ ಜಗತ್ತಿನಾದ್ಯಂತ ಇರುವ ಶ್ರೀಮಂತ ಯಹೂದಿಗಳ ನೆರವು ಮತ್ತು ಅಮೆರಿಕದ ಹಣಕಾಸಿನ ನೆರವಿನಿಂದ ಇಸ್ರೇಲ್ ದೇಶಕ್ಕೆ ವಲಸೆ ಬಂದ ಯಹೂದಿಗಳಿಗೆ ವಸತಿ ಸೌಕರ್ಯಗಳನ್ನು ಒದಗಿಸಿತು. ಕೃಷಿ ಚಟುವಟಿಕೆಗಳಿಗೆ ಪ್ರೋ ಕೈಗಾರಿಕೀಕರಣ, ಹೊಸ ನಗರಗಳ ಅಭಿವೃದ್ದಿ, ರಸ್ತೆ ಸಾರಿಗೆ ಸಂಪರ್ಕದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಅಭಿವೃದ್ದಿಗೊಳಿಸಿತು. ಆದರೆ ಬಾಹ್ಯವಾಗಿ ಇಸ್ರೇಲ್ ರಾಜ್ಯ ಕೇವಲ ವಿರೋಧಿಗಳನ್ನೇ ಸುತ್ತುವರಿದಿದ್ದು. ಅದರ ಭದ್ರತೆ ಬಹುದೊಡ್ಡ ಸವಾಲಾಗಿ ಅದಕ್ಕೆ ಪರಿಣಮಿಸಿತು.

ಒಂದರ್ಥದಲ್ಲಿ ಪ್ಯಾಲೇಸ್ತೀನಿಯರ ವಲಸೆ, ಯಹೂದಿಯರಿಗೆ ವಸತಿಗಳನ್ನು ಕಲ್ಪಿಸಲು ಅನುಕೂಲವಾಗಿತ್ತಾದರೂ, ಲಕ್ಷಗಟ್ಟಲೆ ಅರಬ್ ನಿರಾಶ್ರಿತರು ಇಸ್ರೇಲ್‌ಗೆ ಆಗಮಿಸುವುದಿರಂದ ಡೇವಿಡ್ ಬೆನ್ ಗುರಿಯನ್ ಸರಕಾರಕ್ಕೆ ಅನೇಕ ಬಗೆಯ ಸಮಸ್ಯೆ ಗಳನ್ನು ಸೃಷ್ಟಿಸಬಹುದೆಂಬ ಅರಿವಿತ್ತು. ಇಸ್ರೇಲ್ ಭೌಗೋಳಿಕವಾಗಿ ಸಣ್ಣ ದೇಶ ವಾಗಿದ್ದು, ಮರುಭೂಮಿ, ಬೆಟ್ಟಗಳ ಮತ್ತು ಇಳಿಜರು ನಿಷ್ಪ್ರಯೋಜಕ ಪ್ರದೇಶವನ್ನೊಳ ಗೊಂಡಿದೆ. ಅದೇ ಭೂಮಿಯ ಉತ್ಪಾದನೆ ಜನರಿಗೆ ಮುಖ್ಯ ಆಹಾರ. ನೈಸರ್ಗಿಕವಾಗಿ ವಿರಳ ಸಂಪತ್ತನ್ನು ಹೊಂದಿದ್ದು, ಕಲ್ಪಿದ್ದಲು ಅಥವಾ ತೈಲ ಸಂಪತ್ತು ಇಲ್ಲದೆ, ಕೆಲವೇ ಕೆಲವು ಖನಿಜ ಸಂಪತ್ತನ್ನು ಹೊಂದಿತ್ತು. ಆದಾಗ್ಯೂ, ಅಲ್ಲಿ ಬಲಿಷ್ಠವಾದ ಕಾರ್ಮಿಕರ ಸಂಘಟನೆಯ ಚಳವಳಿಯು ಇದ್ದು, ಅವರು ತಮ್ಮ ಜೀವನೋಪಾಯಕ್ಕೆ ಹೆಚ್ಚಿನ ಸಂಬಳವನ್ನು ಕೇಳುತ್ತಿದ್ದರು. ಇಸ್ರೇಲಿನ ಆರ್ಥಿಕ ಅಭಿವೃದ್ದಿ ಮತ್ತು ಭದ್ರತೆಯು ಮುಖ್ಯ ವಾಗಿ ವಸ್ತುಗಳನ್ನು, ಶಸ್ತ್ರಾಸ್ತ್ರಗಳನ್ನು ವಿದೇಶದಿಂದ ಖರೀದಿಸುವುದನ್ನು ಅವಲಂಭಿಸಿತ್ತು. ಆದರೆ, ಹೊರ ದೇಶಗಳಿಗೆ ರಫ್ತು ಮಾಡುವ ಯಾವುದೇ ವಸ್ತುಗಳ ಉತ್ಪಾದನೆ ಇಸ್ರೇಲ್‌ನಲ್ಲಿ ಆಗುತ್ತಿರಲಿಲ್ಲ.

ಸರಕಾರ ಕೃಷಿ ಮತ್ತು ಕೈಗಾರಿಕಾ ಅಭಿವೃದ್ದಿಗೆ ಅನೇಕ ಯೋಜನೆಗಳನ್ನು ರೂಪಿಸಿತ್ತು. ಬಂಜರು ಭೂಮಿ ಮತ್ತು ಮರಳು ಭೂಮಿಯಲ್ಲಿ ಕೃಷಿ ಚಟುವಟಿಕೆ ಆರಂಭಿಸಲು ವಿವಿಧ ಪ್ರೋ ಯೋಜನೆಗಳನ್ನು ಸಿದ್ಧಪಡಿಸಿತ್ತು.

೧೯೪೮ರ ದುರ್ಘಟನೆ ಅರಬ್‌ರಿಗೆ ಆದ ಅವಮಾನ, ಹಾಗಾಗಿ ಪಶ್ಚಿಮದ ಸಾಮ್ರಾಜ್ಯಶಾಹಿ ರಾಷ್ಟ್ರಗಳ ಪ್ರವೇಶವನ್ನು ತೀವ್ರವಾಗಿ ವಿರೋಧಿಸಲು ಅರಬ್ ಜಗತ್ತು ಸನ್ನದ್ಧವಾಯಿತು. ಇದಕ್ಕೆ ಅರಬ್ ಮುಖಂಡರ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯಗಳು ಅಂತಹ ಒಗ್ಗಟ್ಟಿಗೆ ಅವಕಾಶ ನೀಡಲಿಲ್ಲ. ಜೋರ್ಡಾನ್ ದೊರೆ ಅಬ್ದುಲ್ಲಾ ಈ ವಿಷಯವಾಗಿ ಸಂಘಟನೆ ಗಟ್ಟಿಗೊಳ್ಳಬೇಕಾದರೆ ಅರಬರು ಹಗಲುಗನಸು ನೋಡುವುದನ್ನು ಬಿಡಬೇಕು ಮತ್ತು ವಾಸ್ತವಕ್ಕೆ ಹತ್ತಿರವಾದುದನ್ನು ನಿರೀಕ್ಷಿಸಬೇಕು ಎಂದು ಅಭಿಪ್ರಾಯ ಪಡುತ್ತಾನೆ. ಯುವ ಪೀಳಿಗೆಯ ಮುಖಂಡರು, ೧೯೪೯ರಲ್ಲಿ ಅರಬರ ಸೋಲಿಗೆ ಅವರ ಮಾರ್ಗದರ್ಶಕರೇ ಕಾರಣವೆಂದು ಹಲುಬತೊಡಗಿದರು. ಅವರೊಳಗಿರುವ ಭಿನ್ನಾಭಿಪ್ರಾಯ, ಸರಿಯಾದ ಸಂಘಟನೆ ರಚನೆಗೆ ವಿಫಲ ಮತ್ತು ಪಶ್ಚಿಮ ರಾಷ್ಟ್ರದೊಂದಿಗೆ, ಅದರಲ್ಲೂ ಬ್ರಿಟಿಷರೊಂದಿಗೆ ಒಳಸಂಚು ಇತ್ಯಾದಿ ಘಟನೆಯ ಫಲಿತಾಂಶ. ೧೯೪೯ರ ನಂತರದ ವರ್ಷಗಳಲ್ಲಿ, ಸಂಪ್ರದಾಯಸ್ಥ ಅರಸರು, ತಮ್ಮ ಅಧಿಕಾರವನ್ನು ನಿಧಾನವಾಗಿ ಯುವ ಮತ್ತು ತೀವ್ರಗಾಮಿ ರಾಷ್ಟ್ರವಾದಿಗಳ ಕೈಗೆ ಹಸ್ತಾಂತರಿಸಿದರು. ಸಾಮಾನ್ಯವಾಗಿ ಅಧಿಕಾರ ಪಡೆದ ಯುವ ಪೀಳಿಗೆಯ ಮುಖಂಡರು ಸೈನ್ಯದಲ್ಲಿ ಸೇವೆ ಸಲ್ಲಿಸಿದರು. ಇವರು ಪ್ಯಾಲೇಸ್ತೀನ್ ಅರಬರು ಯಹೂದಿಯವರಿಂದ ಎದುರಿಸಿದ ಸೋಲನ್ನು ಗಂಭೀರವಾಗಿ ಪರಿಗಣಿಸಿ ಸಂಪ್ರದಾಯವಾದಿಗಳ ಆಡಳಿತದ ಮುಂದುವರಿಕೆಯನ್ನು ವಿರೋಧಿಸಿದರು. ಅಲ್ಲದೆ ಗುರಿ ಇಲ್ಲದೆ ಹೋರಾಡುತ್ತಿರುವ ಅರಬ್ ನಾಗರಿಕರ ಕುರಿತು ಕಳವಳ ವ್ಯಕ್ತಪಡಿಸಿದರು. ೧೯೪೯ರ ನಂತರ ಕಾಲು ಶತಮಾನದಲ್ಲಿ ಅರಬ್ ಜಗತ್ತು ಸರಿ ಸುಮಾರು ೩೦ ಯಶಸ್ವಿ ಕ್ರಾಂತಿಗಳನ್ನು ಮತ್ತು ಹೆಚ್ಚು ಕಡಿಮೆ ೫೦ ಯಶಸ್ವಿ ಕಾಣದ ದಂಗೆಗಳನ್ನು ಕಂಡಿತ್ತು. ಪ್ರಜಪ್ರಭುತ್ವ ಸರಕಾರ ಅರಬ್ ಜಗತ್ತಿನಲ್ಲಿ ಅಷ್ಟೊಂದು ಯಶಸ್ವಿಯಾಗಲಿಲ್ಲ. ಲೆಬನಾನ್ ನಲ್ಲಿ ಅಂತಹ ಪಶ್ಚಿಮ ಶೈಲಿಯ ಪ್ರಜಪ್ರಭುತ್ವ ಸರಕಾರ ರಚನೆಯಾದರೂ, ಅದು ಹಲವು ತರದ ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದೆ.

ಸಿರಿಯಾದಲ್ಲಿ ನಾಗರಿಕ ಸರಕಾರವನ್ನು ೧೯೪೯ರಲ್ಲಿ ಸೈನ್ಯವು ಪದಚ್ಯುತಗೊಳಿಸಿತು. ನಂತರ ಎರಡು ದಂಗೆಗಳು ಒಂದೇ ವರ್ಷದಲ್ಲಿ ನಡೆದು ಕೊನೆಗೆ ಒಬ್ಬ ಸೈನಿಕನೇ ನಿರಂಕುಶ ಪ್ರಭುವಾಗಿ ಅಧಿಕಾರವನ್ನು ಪಡೆದನು. ೧೯೫೧ರಲ್ಲಿ ಜೋರ್ಡಾನ್ ದೊರೆ ಅಬ್ದುಲ್ದಾನನ್ನು ಪ್ಯಾಲೇಸ್ತೀನಿನ ತೀವ್ರಗಾಮಿಯೊಬ್ಬ ಕೊಲೆ ಮಾಡಿದ. ತದನಂತರ ಅಬ್ದುಲ್ಲಾನ ಮೊಮ್ಮಗ ಹುಸ್ಸೇನ್ ಜೋರ್ಡಾನಿನ ಸೈನ್ಯ ಮತ್ತು ಹಷಿಮೈಟ್ ಕುಲದವರ ಸಹಾಯ ಪಡೆದು ಅಧಿಕಾರಕ್ಕೆ ಬಂದ. ಇವೆಲ್ಲಕ್ಕಿಂತಲೂ ಮುಖ್ಯ ಘಟನೆ ೧೯೫೨ರಲ್ಲಿ ಸಮಾಜವಾದಿ ನಾಯಕ ಅಬ್ದುಲ್ ನಾಸರ್‌ನ ಮುಂದಾಳತ್ವದಲ್ಲಿ ನಡೆದ ಈಜಿಪ್ಟ್ ಕ್ರಾಂತಿ (ಕರ್ನಲ್ ಗಮಾಲ್).

ಸೋಮಾರಿ ಮತ್ತು ಅಡಂಬರದ ಜೀವನಕ್ಕೆ ಮನಸೋತ ದೊರೆ ಫಾರೂಕ್‌ನನ್ನು ಈಜಿಪ್ಟ್ ನಿಂದ ಗಡಿಪಾರು ಮಾಡಲಾಯಿತು. ತದನಂತರ ಈಜಿಪ್ಟ್‌ನಲ್ಲಿ ಸಮಾಜವಾದಿ ರಾಜಕೀಯ ವ್ಯವಸ್ಥೆಯನ್ನು ರಚಿಸಿದ ಅಬ್ದುಲ್ ನಾಸರ್ ನಿಜರ್ಥದಲ್ಲಿ ರಾಷ್ಟ್ರನಿರ್ಮಾಣ ಕ್ರಾಂತಿಯನ್ನೇ ಆರಂಭಿಸಿದನು. ಪಾರ್ಲಿಮೆಂಟನ್ನು ವಿಸರ್ಜಿಸಿ ಎಲ್ಲ ರಾಜಕೀಯ ಪಕ್ಷಗಳನ್ನು ನಾಸರ್ ಸರಕಾರ ನಿಷೇಧಿಸಿತು. ಕ್ರಾಂತಿಕಾರಿ ಸ್ವರೂಪದ ಆಡಳಿತಾತ್ಮಕ ಸುಧಾರಣೆಗಳನ್ನು ಕೈಗೊಂಡು ರೈತರಿಗೆ ಭೂಮಿಯನ್ನು ಹಂಚಿ ಕೃಷಿ ಚಟುವಟಿಕೆಗಳಿಗೆ ಪ್ರೋ ನೀಡಲಾಯಿತು. ಹೊಸ ಕೈಗಾರಿಕೋದ್ಯಮವನ್ನು, ಆಧುನಿಕ ಶಿಕ್ಷಣ ಸಂಸ್ಥೆಗಳನ್ನು, ಶಾಲೆಗಳನ್ನು ತೆರೆಯಲಾಯಿತು. ಆಸ್ವಾನ್ ಪ್ರದೇಶದಲ್ಲಿ ಒಂದು ಬೃಹತ್ ಅಣೆಕಟ್ಟನ್ನು ಕಟ್ಟಿ ಈಜಿಪ್ಟ್‌ನ ಆರ್ಥಿಕ ಅಭಿವೃದ್ದಿಯನ್ನು ಕಾಯ್ದುಕೊಳ್ಳಲು ಪ್ರಯತ್ನ ಮಾಡಲಾಯಿತು. ಸೂಯೆಜ್ ಕಾಲುವೆ ಪ್ರದೇಶದಲ್ಲಿ ಬ್ರಿಟಿಷರ ಸೈನಿಕ ನೆಲೆಗಳನ್ನು ತೆರವುಗೊಳಿಸಲು ಬ್ರಿಟಿಷರನ್ನು ಒತ್ತಾಯಿಸಲಾಯಿತು. ಸುಮಾರು ೭೦ ವರ್ಷಗಳಷ್ಟು ಕಾಲ ಅಧಿಕಾರ ನಡೆಸಿದ ಬ್ರಿಟೀಷರು ೧೯೫೬ರಲ್ಲಿ ಅವರ ಸೈನ್ಯವನ್ನು ಸೂಯೆಜ್ ಕಾಲುವೆಯಿಂದ ತೆರವುಗೊಳಿಸಬೇಕಾಯಿತು. ಕಾಲುವೆ ಭದ್ರತೆ ವಿಚಾರವಾಗಿ ಬೆದರಿಕೆ ಬಂದರೆ ಸೈನ್ಯ ಸಮೇತ ವಾಪಸ್ಸು ಬರುವ ಹಕ್ಕನ್ನು ಬ್ರಿಟಿಷರು ಕಾಯ್ದಿರಿಸಿದರು.

ನಾಸರ್ ಮತ್ತು ಇತರ ಹೊಸ ಪೀಳಿಗೆಯ ನೇತಾರರು ಆಗಷ್ಟೇ ಅತ್ಯುನ್ನತ ಘಟ್ಟಕ್ಕೆ ತಲುಪಿದ್ದ ಶೀತಲ ಯುದ್ಧದ ಲಾಭ ಪಡೆಯಲು ಸಿದ್ಧತೆಗಳನ್ನೂ ನಡೆಸಿದರು. ಅಮೆರಿಕವು ಸೋವಿಯತ್ ಒಕ್ಕೂಟ್ಟದ ವೃದ್ದಿಯನ್ನು ಗಂಭೀರವಾಗಿ ಪರಿಗಣಿಸಿ, ಅದನ್ನು ಹತ್ತಿಕ್ಕಲು ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ ತಮ್ಮದೇ ಸ್ವತಂತ್ರ ಸೈನಿಕ ನೆಲೆಯನ್ನು ಸ್ಥಾಪಿಸಲು ಹಂಬಲಿಸಿ ಅನೇಕ ಮಿತ್ರರನ್ನು ಪಡೆಯಲು ಪ್ರಯತ್ನಿಸುತ್ತಿತ್ತು. ಬಾಗ್ದಾದ್ ಫ್ಯಾಕ್ಟ್‌ನ್ನು ಆಯೋಜಿಸಿ ಬ್ರಿಟೀಷರು, ತಮ್ಮ ಮೊದಲಿನ ವಸಾಹತುಗಳು, ಆದರೆ ಈಗ ಸ್ವತಂತ್ರ ರಾಷ್ಟ್ರವಾಗಿ ಪರಿವರ್ತನೆಗೊಂಡ ಇರಾಕ್, ಇರಾನ್, ಟರ್ಕಿ ಮತ್ತು ಪಾಕಿಸ್ತಾನ ದೇಶಗಳನ್ನು  ಒಂದು ವೇದಿಕೆಯಲ್ಲಿ ಒಗ್ಗೂಡಿಸಿ ತಮ್ಮ ಮಿತ್ರರನ್ನಾಗಿ   ಮಾಡಿಕೊಂಡರು. ಹಾಗೆಯೇ, ಸೋವಿಯತ್ ಒಕ್ಕೂಟ ಕೂಡ ಮಧ್ಯಪ್ರಾಚ್ಯದ ಅನೇಕ ರಾಜ್ಯಗಳಿಗೆ ಅನುಕಂಪದಿಂದ ಸಹಾಯ ಹಸ್ತ ನೀಡಲು ಮುಂದಾಯಿತು. ಅದು ತೈಲ ಸಂಪತ್ತುಳ್ಳ ಶ್ರೀಮಂತ ಬಂಡವಾಳಶಾಹಿಪ್ರಿಯ ರಾಷ್ಟ್ರಗಳಾಗಿರಬಹುದು ಅಥವಾ ಸೈನಿಕ ನಿರಂಕುಶ ಪ್ರಭುಗಳೇ ಆಗಿರಬಹುದು. ಸೋವಿಯತ್ ಒಕ್ಕೂಟದಿಂದ ಅರಬ್ ಮುಖಂಡರು ಶಸ್ತ್ರಾಸ್ತ್ರ ಅಥವಾ ಹಣಕಾಸಿನ ಸಹಾಯವನ್ನು ನಿರೀಕ್ಷಿಸಿದರೆ, ಅಮೆರಿಕ ಅದೇ ಅರಬ್ ಮುಖಂಡರನ್ನು ಭ್ರಷ್ಟಾಚಾರ ಅಥವಾ ಒಳ ಸಂಚಿನಿಂದ ತನ್ನತ್ತ ಸೆಳೆಯುವ ಯತ್ನವನ್ನು ಮಾಡಿತು. ಕೆಲವು ಅರಬ್ ಮುಖಂಡರು ವಾತಾವರಣದ ಲಾಭ ಪಡೆಯಲು ಅತ್ಯುತ್ಸಾಹ ತೋರಿಸಿದರು.

ಅರಬ್-ಇಸ್ರೇಲಿ ಸಮಸ್ಯೆಯ ಇನ್ನೊಂದು ಮುಖವಾಗಿ ಪ್ಯಾಲೇಸ್ತೀನಿ ಅರಬ್, ನಿರಾಶ್ರಿತರು ಇಸ್ರೇಲ್ ಗಡಿ ಸುತ್ತ ಇರುವ ಅರಬ್ ರಾಷ್ಟ್ರಗಳಲ್ಲಿ ಪ್ರತ್ಯೇಕ ಕ್ಯಾಂಪ್‌ಗಳನ್ನು ಸ್ಥಾಪಿಸಿ ಅತಂತ್ರ ಜೀವನವನ್ನು ಆರಂಭಿಸಿದರು. ವಿಶ್ವಸಂಸ್ಥೆಯು ಈ ನಿರಾಶ್ರಿತರಿಗೆ ವೈದ್ಯಕೀಯ ಹಾಗೂ ಶಿಕ್ಷಣಕ್ಕೆ ಬೇಕಾದ ನೆರವನ್ನು ನೀಡಲಾರಂಭಿಸಿತು. ಕೆಲವು ನಿರಾಶ್ರಿತರು ಬೇರೆ ಬೇರೆ ಅರಬ್ ರಾಜ್ಯಗಳಲ್ಲಿ ಉದ್ಯೋಗವನ್ನೂ ಪಡೆದರು. ಅವರು ವಿದ್ಯಾವಂತರೂ ಆಗಿದ್ದು, ಅವರ ಪರಿಣತಿಗೆ ಬೇಡಿಕೆ ಕೂಡ ಇತ್ತು. ಯಾಸರ್ ಅರಾಫತ್ ಅಂತವರು ಒಂದಷ್ಟು ಸಮಯ ಈಜಿಪ್ಟ್‌ನಲ್ಲಿ ನಂತರ ಕುವೈತ್‌ನಲ್ಲಿ ಇಂಜಿನಿಯರ್‌ಗಳಾಗಿ ಸೇವೆ ಸಲ್ಲಿಸಿದರು. ಆದರೆ, ಹೆಚ್ಚಿನವರು ಕ್ಯಾಂಪ್‌ಗಳಲ್ಲಿ ಚಿಂತಾಜನಕ ಪರಿಸ್ಥಿತಿ ಎದುರಿಸುತ್ತಿದ್ದು, ಅವರನ್ನು ಈ ಜಗತ್ತೇ ಮರೆತಿರುವಂತೆ ಬಾಸವಾಗುತ್ತಿತ್ತು. ಅಂತಹ ಪರಿಸ್ಥಿತಿಯನ್ನು ಎದುರಿಸಿದ ಪ್ಯಾಲೇಸ್ತೀನಿ ನಿರಾಶ್ರಿತರಲ್ಲಿ ಕೆಲವು ನಿರುದ್ಯೋಗಿ ಯುವಕರಲ್ಲಿ ಛಲವಿತ್ತು ಮತ್ತು ಹಠದಿಂದ ಯಹೂದಿಗಳೊಂದಿಗೆ ಸಂಘರ್ಷಕ್ಕಿಳಿದು, ಕಳೆದುಕೊಂಡ ತಮ್ಮ ಭೂಮಿಯನ್ನು ಮರುಪಡೆಯಲು ಗುಪ್ತವಾಗಿ ಅನೇಕ ಬಗೆಯ ಹುನ್ನಾರ ನಡೆಸಿದರು. ಹಾಗಾಗಿ ನಿರಾಶ್ರಿತರ ಸಮಸ್ಯೆಯಿಂದಲೇ ಅನೇಕ ಭಯೋತ್ಪಾದಕರ ಗುಂಪುಗಳು ಹುಟ್ಟಿಕೊಂಡು, ಅವರು ಕಂಗೆಟ್ಟ ಪ್ಯಾಲೇಸ್ತೀನಿಯರ ಸ್ವಾತಂತ್ರ್ಯ ಹೋರಾಟ ಗಾರರೆಂದೂ ಕರೆದುಕೊಂಡರು. ಮಾತ್ರವಲ್ಲ, ಇಸ್ರೇಲ್‌ನೊಂದಿಗೆ ನೇರ ಹಣಾಹಣಿಗೆ ಇಳಿದರು. ಇದಕ್ಕುತ್ತರಾಗಿ ಇಸ್ರೇಲ್ ಕೂಡಾ ನಿರಾಶ್ರಿತರ ನೆಲೆಗಳು/ಅಡಗುತಾಣಗಳ ಮೇಲೆ ವೈಮಾನಿಕ ದಾಳಿಯನ್ನು ನಿರಂತರವಾಗಿ ಆರಂಭಿಸಿತು. ಗಾಝಪಟ್ಟಿ ಮತ್ತು ಸಿನೈ ಪ್ರದೇಶಗಳು ಇಸ್ರೇಲ್‌ನ ದಾಳಿಗೆ ಹೆಚ್ಚು ಬಲಿಯಾದವು. ಈ ಎರಡು ಪ್ರದೇಶಗಳು ಈಜಿಪ್ಟ್‌ಗೆ ಸಮೀಪವಿರುವ ಕಾರಣ ಈಜಿಪ್ಟ್‌ಗೂ ಶಾಂತಿಯಿಂದ ಇರಲು ಸಾಧ್ಯವಾಗಲಿಲ್ಲ. ೧೯೪೯-೬೭ರ ನಡುವೆ ವಿಶ್ವಸಂಸ್ಥೆಯ ವರದಿಯಂತೆ ಒಂದು ಲಕ್ಷಕ್ಕೂ ಹೆಚ್ಚು ಬಾರಿ ಗಡಿರೇಖೆ ಉಲ್ಲಂಘನೆ ಮಾಡಲಾಗಿದೆ. ಅನೇಕ ಬಾರಿ ಈ ಘಟನೆಗಳಲ್ಲಿ ಪ್ಯಾಲೇಸ್ತೀನಿ ನಿರಾಶ್ರಿತರು ಯಹೂದಿಗಳ ಜಮೀನಿಗೆ ನುಗ್ಗಿ, ಕೃಷಿ ಉತ್ಪನ್ನಗಳನ್ನು, ಅವರಲ್ಲಿರುವ ಅಹಾರ ವಸ್ತುಗಳನ್ನು ಲೂಟಿ ಮಾಡುವ ಯತ್ನ ನಡೆಸಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ಯಾಲೇಸ್ತೀನಿ ಅರಬ್ ನಿರಾಶ್ರಿತರು ಕಳೆದುಕೊಂಡ ದೇಶವನ್ನು ಪುನಃ ಆಕ್ರಮಿಸಲು ಗೆರಿಲ್ಲಾ ಯುದ್ಧಗಳನ್ನು ಇಸ್ರೇಲ್ ವಿರುದ್ಧ ಆರಂಭಿಸಿದರು. ಇದಕ್ಕೆ ಉತ್ತರವಾಗಿ ಇಸ್ರೇಲ್ ರಾಜ್ಯ ಕೂಡ ಕಾರ್ಯಾಚರಣೆ ಆರಂಭಿಸಿತು. ಎರಡೂ ಗುಂಪುಗಳು ಪರಸ್ಪರ ಹೋರಾಟದಲ್ಲಿ ತೊಡಗಿದ್ದು, ಉನ್ನತ ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಮತ್ತು ಇತರ ಮಿತ್ರ ರಾಷ್ಟ್ರಗಳೊಂದಿಗೆ ಸ್ನೇಹತ್ವ ಬೆಳೆಸಲು ಆರಂಭಿಸಿದವು. ಪ್ರಾದೇಶಿಕ ನೆಲೆಯಲ್ಲಿ ಭದ್ರತೆಯನ್ನು ಕಾಪಾಡಲು ಬ್ರಿಟನ್, ಫ್ರಾನ್ಸ್ ಮತ್ತು ಅಮೆರಿಕ ೧೯೫೦ರ ದಶಕದಲ್ಲಿ ಪರಸ್ಪರ ಒಪ್ಪಿ ಒಂದು ತೀರ್ಮಾನಕ್ಕೆ ಬಂದು ಅರಬ್ ಮತ್ತು ಯಹೂದಿ ಎರಡು ಗುಂಪುಗಳಿಗೆ ಸರಬರಾಜು ಮಾಡುತ್ತಿದ್ದ ಶಸ್ತ್ರಾಸ್ತ್ರಗಳ ಪ್ರಮಾಣದಲ್ಲಿ ಕಡಿತಗೊಳಿಸಲಾಯಿತು. ಆದರೂ, ಇಸ್ರೇಲ್ ನಿರಂತರವಾದ ಸವಾಲುಗಳನ್ನು ಎದುರಿಸಿದ ಕಾರಣ ಡೇವಿಡ್ ಬೆನ್‌ಗುರಿಯನ್ ಸರಕಾರ ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲ ತರದ ಶ್ರೇಷ್ಠ ಅಸ್ತ್ರಗಳನ್ನು ಖರೀದಿ ಮಾಡುವುದು ಅನಿವಾರ್ಯ ಎಂಬುದನ್ನು ಸಮರ್ಥಿಸಿಕೊಂಡಿತು. ಪ್ರಾನ್ಸ್ ದೇಶದ ಬೆನ್ ಗುರಿಯನ್‌ಗೆ ಅನುಕಂಪ ತೋರಿಸುವ ಹಲವು ಅಧಿಕಾರಿಗಳಿದ್ದು, ಇಸ್ರೇಲ್ ರಾಜ್ಯದ ಬೇಡಿಕೆಯನ್ನು ಮುಕ್ತವಾಗಿ ಪರಿಗಣಿಸಿತು. ಏಕೆಂದರೆ, ಫ್ರಾನ್ಸ್‌ಗೆ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ನಾಸರ್ ಬಹಳ ದೊಡ್ಡ ಸವಾಲು ಆಗಿದ್ದು ಫ್ರೆಂಚ್ ವಸಾಹತು ಅಲ್ಜೀರಿಯಾದಲ್ಲಿನ ಅವರ ಆಡಳಿತದ ವಿರುದ್ಧ ಅಲ್ಲಿಯ ರಾಷ್ಟ್ರವಾದಿಗಳಿಗೆ ಚಳವಳಿ ನಡೆಸಲು ಪ್ರೋ ಹಾಗಾಗಿ ೧೯೫೫ರಲ್ಲಿ ಫ್ರೆಂಚ್ ಸರಕಾರ ಇಸ್ರೇಲ್‌ಗೆ ಇಡೀ ಯುರೋಪ್‌ನಲ್ಲಿಯೇ ಶ್ರೇಷ್ಠವಾಗಿರುವ ಯುದ್ಧ ವಿಮಾನಗಳನ್ನು ಸರಬರಾಜು ಮಾಡಿತು. ಈಜಿಪ್ಟ್ ಇಡೀ ಅರಬ್ ಜಗತ್ತಿನಲ್ಲಿ ಪ್ಯಾಲೇಸ್ತೀನಿ ಹೋರಾಟದಲ್ಲಿ ಮಂಚೂಣಿಯಲ್ಲಿದ್ದು, ಇಸ್ರೇಲ್‌ನ ಸ್ಥಾಪನೆಯನ್ನು ಖಂಡಿ ಸಿತ್ತು. ಅದೇ ಸಮಯಕ್ಕೆ ಈಜಿಪ್ಟ್ ದೇಶವು ಕಮ್ಯುನಿಸ್ಟ್ ರಾಷ್ಟ್ರಗಳಿಂದ ಶಸ್ತ್ರಾಸ್ತ್ರಗಳ ಖರೀದಿಗೆ ಬೇಡಿಕೆ ಸಲ್ಲಿಸಿತ್ತು. ೧೯೫೫ರಲ್ಲಿ ಗಾಝ ಪಟ್ಟಿಯ ಮೇಲೆ ಇಸ್ರೇಲ್ ದಾಳಿ ಮಾಡಿದ ಸಂದರ್ಭದಲ್ಲಿ ಸುಮಾರು ೩೬ ಈಜಿಪ್ಟ್ ಸೈನಿಕರು ಹತರಾಗಿ ದ್ದರು. ಘಟನೆಯ ತೀವ್ರತೆಯನ್ನು ಗಮನಿಸಿ ಅಬ್ದುಲ್ ನಾಸರ್ ಜೆಕೋಸ್ಲೋವೇಕಿಯಾದೊಂದಿಗೆ ಒಪ್ಪಂದ ಮಾಡಿಕೊಂಡು, ಶಸ್ತ್ರಾಸ್ತ್ರಗಳನ್ನು ಖರೀದಿಸಲು ಆರಂಭಿಸಿದನು. ರಷ್ಯಾದವರೂ ಕೂಡಾ ನಾಸರ್ ನಂತಹ ಅರಬ್ ಮುಖಂಡರ ಸ್ನೇಹ ಬೆಳೆಸಿ ಮಧ್ಯ ಪ್ರಾಚ್ಯ ಪ್ರದೇಶದ ರಾಜಕೀಯ ಆಗುಹೋಗುಗಳ ಮೇಲೆ ಇಸ್ರೇಲ್ ಅನುಭವಿಸುವ ನಿಯಂತ್ರಣವನ್ನು ಸಡಿಲಗೊಳಿಸಲು ಹವಣಿಸುತ್ತಿದ್ದರು. ಇದನ್ನು ಗಮನಿಸಿದ ಈಜಿಪ್ಟ್ ಸರಕಾರ ತಕ್ಷಣವೇ ಸುಮಾರು ೮೦ ಮಿಗ್, ೧೫ ಪೈಟರ್‌ಗಳನ್ನು, ೪೫ ಇಲ್ಯೂಶಿನ್ ೨೮ ಬಾಂಬರ್‌ಗಳನ್ನು ಮತ್ತು ೧೧೫ ರಷ್ಯಾದ ಶ್ರೇಷ್ಠ ಯುದ್ಧ ಟ್ಯಾಂಕರ್‌ಗಳನ್ನು ಖರೀದಿಸಲು ಅಧಿಕೃತ ಬೇಡಿಕೆ ಸಲ್ಲಿಸಿತು. ನಿಜವಾಗಿ ಇವೆಲ್ಲವೂ ಇಸ್ರೇಲ್ ರಾಜ್ಯದ ವಿರುದ್ಧ ಉಪಯೋಗಿಸಲು ಮತ್ತು ಪ್ಯಾಲೇಸ್ತೀನಿಯರ ಹೋರಾಟವನ್ನು ತೀವ್ರಗೊಳಿಸಲೇ ಎಂದು ಯಹೂದಿಗಳಿಗೂ ಅರಿವಿತ್ತು. ಹಾಗಾಗಿ ಪ್ರತಿ ಹೋರಾಟಕ್ಕೆ ಇಸ್ರೇಲ್ ಸದಾ ಸನ್ನದ್ಧವಾಗಿತ್ತು.

ನಾಸರ್‌ನ ಈ ತಯಾರಿಯು ಒಂದರ್ಥದಲ್ಲಿ, ಇಸ್ರೇಲಿನ ಕಟ್ಟಾ ರಾಷ್ಟ್ರವಾದಿಗಳ ಅಸ್ತಿತ್ವವನ್ನು ಗಟ್ಟಿಗೊಳಿಸಿತು. ಯಹೂದಿ ಮುಖಂಡರಾದ ಬೆನ್ ಗುರಿಯನ್ ಮತ್ತು ಮೊಷೆ ದಯಾನ್‌ನಂತವರು ಅರಬ್ಬರು ದಾಳಿ ಆರಂಭಿಸುವ ಮೊದಲೇ ಅರಬರ ವಿರುದ್ಧ ಇಸ್ರೇಲ್ ರಾಜ್ಯ ಹೋರಾಟಕ್ಕಿರುವ ಆಶಯವನ್ನು ವ್ಯಕ್ತಪಡಿಸಿದರು. ಈ ರಾಷ್ಟ್ರವಾದಿಗಳು ಪ್ಯಾಲೇಸ್ತೀನಿ ಹೋರಾಟಗಾರರನ್ನೂ ಸದೆಬಡಿದು, ಗಡಿರೇಖೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಅಭಿವೃದ್ದಿಗೊಳಿಸಲು ಯತ್ನಿಸಿದರು. ತಮ್ಮ ಜಮೀನ್ದಾರರ ಕೃಷಿ ಜಮೀನು ಅರಬ್ಬರ ದಾಳಿಗೆ ಆಗಾಗ ತುತ್ತಾಗುವುದನ್ನು ತಡೆಯುವುದು ಮತ್ತು ಸೂಯೆಜ್ ಕಾಲುವೆಯನ್ನು ತಮ್ಮ ದೇಶದ ಹಡಗುಗಳ ಪ್ರವೇಶಕ್ಕೆ ಅನುಮತಿ ಪಡೆಯುವ ಪ್ರಯತ್ನ ಮಾಡಿದರು. ರಷ್ಯಾದ ನುರಿತ ಸೈನಿಕರಿಂದ ಬಾಂಬ್ ದಾಳಿಯನ್ನು ಅರಬ್ಬರು ನಡೆಸುವುದನ್ನು ತಡೆಯಲು ಇಸ್ರೇಲ್, ಇಲಾತ್ ಬಂದರ್‌ನಲ್ಲಿ ಸೈನಿಕ ನೆಲೆಯನ್ನು ಸ್ಥಾಪಿಸಲು ಅಮೆರಿಕದಂತಹ ಮಿತ್ರ ರಾಷ್ಟ್ರದ ಬೆಂಬಲವನ್ನು ನಿರೀಕ್ಷಿಸುತ್ತಿತ್ತು. ಅದಕ್ಕಾಗಿಯೇ, ಬ್ರಿಟನ್ ಮತ್ತು ಕ್ಯಾನ್ ಬೆರಾ ಬಾಂಬರ್‌ಗಳು, ಸೈಪ್ರಸ್‌ನಲ್ಲಿ ನೆಲೆ ನಿಂತು ಇಸ್ರೇಲ್ ಪರ ಸೈನಿಕ ಕಾರ್ಯಾಚರಣೆ ನಡೆಸಲು ಸಿದ್ಧತೆ ಮಾಡಿದ್ದರು. ಆದರೆ, ೧೯೫೫ರಲ್ಲಿ ಬ್ರಿಟಿಷರು ಅರಬ್ ಸಮುದಾಯದ ಪರವಾದ ನಿಲುವನ್ನು ತೆಗೆದುಕೊಂಡ ಕಾರಣ ಇಸ್ರೇಲ್‌ಗೆ ಸಹಕರಿಸುವ ಯಾವ ಕುರುಹು ಕಂಡುಬಂದಿಲ್ಲ.

ಸೂಯೆಜ್ ಯುದ್ಧ (೧೯೫೬)

ಈಜಿಪ್ಟ್ ಅಧ್ಯಕ್ಷ ಕಮ್ಯುನಿಸ್ಟ್ ರಾಷ್ಟ್ರಗಳಿಂದ ಸೈನಿಕ ಸಹಾಯವನ್ನು ಪಡೆಯು ತ್ತಿದ್ದರೂ, ಆರ್ಥಿಕ ಸಹಾಯವನ್ನು ಪಶ್ಚಿಮದಿಂದ ಪಡೆಯಲು ಪ್ರಯತ್ನಿಸುತ್ತಿದ್ದನು. ಈಜಿಪ್ಟ್ ಆರ್ಥಿಕ ಅಭಿವೃದ್ದಿಯಲ್ಲಿ ಆಸ್ವಾನ್ ಅಣೆಕಟ್ಟು ಮತ್ತು ಅದರಿಂದ ಉತ್ಪಾದಿಸಲ್ಪಡುವ ವಿದ್ಯುಚ್ಛಕ್ತಿ ಪ್ರಮುಖ ಪಾತ್ರ ವಹಿಸುತ್ತದೆಂಬ ದೂರಾಲೋಚನೆ ಅಧ್ಯಕ್ಷ ನಾಸರ್ ನಿಗೆ ಇತ್ತು. ಈ ಯೋಜನೆಯನ್ನು ಪೂರ್ಣಗೊಳಿಸಲು ಆರಂಭದಲ್ಲಿ ಬ್ರಿಟನ್, ಅಮೆರಿಕ ಮತ್ತು ವರ್ಲ್ಡ್‌ಬ್ಯಾಂಕ್ ಹಣಕಾಸಿನ ನೆರವು ನೀಡಲು ಒಪ್ಪಿದವು. ಅದೇ ಸಮಯದಲ್ಲಿ ನಾಸರನು ಕಮ್ಯುನಿಸ್ಟ್‌ರೊಂದಿಗೆ ಹಣಕಾಸಿನ ನೆರವನ್ನು ಏರ್ಪಡಿಸಿಕೊಂಡಿದ್ದನು. ಸೋವಿಯತ್ ಒಕ್ಕೂಟದೊಂದಿಗೆ ನಾಸರ್‌ನ ಸಂಬಂಧ ಬೆಳಕಿಗೆ ಬಂದ ತಕ್ಷಣ ಬ್ರಿಟನ್, ಅಮೆರಿಕ ಮತ್ತು ವರ್ಲ್ಡ್‌ಬ್ಯಾಂಕ್ ನೀಡಿರುವ ಆಶ್ವಾಸನೆ ವಾಸಸ್ಸು ಪಡೆದು, ಆಸ್ವಾನ್ ಅಣೆಕಟ್ಟು ಯೋಜನೆಗೆ ಯಾವುವೇ ಕಾರಣಕ್ಕೂ ಹಣವನ್ನು ಬಿಡುಗಡೆ ಮಾಡುವುದಿಲ್ಲವೆಂದು ಘೋಷಿಸಿದವು. ನಾಸರನು ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿ, ಜುಲೈ ೨೬ರಲ್ಲಿ ಹೊರಡಿಸಿದ ಒಂದು ಅಧಿಕೃತ ಆಜ್ಞೆಯಲ್ಲಿ ೧೮೬೯ರಿಂದ ಬ್ರಿಟನ್ ಮತ್ತು ಪ್ರೆಂಚ್ ಮಾಲೀಕತ್ವದಲ್ಲಿದ್ದ ಸೂಯೆಜ್ ಕಾಲುವೆ ಕಂಪೆನಿಯನ್ನು ಈಜಿಪ್ಟ್ ಸರಕಾರ ರಾಷ್ಟ್ರೀಕರಣಗೊಳಿಸಿದೆ ಮತ್ತು ಅದರ ಅಸ್ತಿಯನ್ನು ಮುಟ್ಟುಗೋಲು ಹಾಕಿದೆ ಎಂದು ಬ್ರಿಟಿಷರಿಗೆ ಮಾಹಿತಿ ರವಾನಿಸಿದನು. ಇನ್ನು ಮುಂದೆ ಕಂಪನಿಯು ವಹಿವಾಟನ್ನು ಈಜಿಪ್ಟ್ ಸರಕಾರವೇ ತನ್ನ ದೇಶದ ಆರ್ಥಿಕ ಅಭಿವೃದ್ದಿಗಾಗಿ ನಿರ್ವಹಿಸುವುದಾಗಿಯು ಹೇಳಿತು.

ಬ್ರಿಟನ್‌ಗೆ ಮುಖ್ಯವಾಗಿ ನಾಸರನು ತೆಗೆದುಕೊಂಡ ನಿರ್ಧಾರದ ಸುದ್ದಿ ಬಾಂಬ್ ಹಾಕಿದಷ್ಟು ದಿಗ್ಭ್ರಮೆ ಉಂಟುಮಾಡಿತು. ಅವರಿಗೆ ಇದು ಎರಡನೆ ಬಾರಿಯ ಶಾಕ್, ಮೊದಲನೆಯದು ಇರಾನ್‌ನಲ್ಲಿ ಡಾ. ಮುಸಾದಿಕ್ ನೇತೃತ್ವದಲ್ಲಿ ಬ್ರಿಟಿಷ್ ಮಾಲೀಕತ್ವದ ಆಂಗ್ಲೋ-ಇರಾನಿಯನ್ ಆಯಿಲ್ ಕಂಪನಿಯನ್ನು ಇರಾನ್ ಸರಕಾರ ರಾಷ್ಟ್ರೀಕರಣ ಗೊಳಿಸಿದ್ದು, ಮಿಲಿಯಗಟ್ಟಲೆ ಪೌಂಡನ್ನು ಬ್ರಿಟಿಷರು ಕಳೆದುಕೊಂಡಿದ್ದರು. ಹಾಗೆಯೇ ೧೮೬೯ರಿಂದ ಸೂಯೆಜ್ ಕಾಲುವೆ ಅಭಿವೃದ್ದಿ ಮತ್ತು ಕಂಪನಿಯ ವಹಿವಾಟಿನಲ್ಲೂ ಮಿಲಿಯಗಟ್ಟಲೆ ಪೌಂಡುಗಳನ್ನು ಬ್ರಿಟಿಷರು ಹೂಡಿದ್ದರು. ಕೇವಲ ೫ ವರ್ಷದ ಅಂತರದಲ್ಲಿ ಬ್ರಿಟಿಷರು ಎರಡನೆಯ ಬಾರಿ ಮಧ್ಯ ಪ್ರಾಚ್ಯ ಪ್ರದೇಶದಲ್ಲಿ ಇಂತಹ ನಷ್ಟವನ್ನು ಅನುಭವಿಸುತ್ತಿರುವುದು.

ಈ ಹೊತ್ತಿಗೆ ಇನ್ನೂ ಬ್ರಿಟನ್ ಪೂರ್ವ ಏಷ್ಯಾದ ಕೆಲವು ಭಾಗಗಳಲ್ಲಿ ವಸಾಹತುಶಾಹಿ ಹಾಗೂ ಸೈನಿಕ ನೆಲೆಗಳನ್ನು ಹೊಂದಿತ್ತು. ಪರ್ಶಿಯ ಕೊಲ್ಲಿಯಲ್ಲೂ ಒಂದಷ್ಟು ತೈಲ ಬಾವಿಗಳ ಒಡೆತನ ಹೊಂದಿತ್ತು. ಹಾಗೆಯೇ, ಮಧ್ಯಪ್ರಾಚ್ಯದ ಹಲವು ಪ್ರದೇಶಗಳಲ್ಲಿ ತನ್ನದೇ ಮಿತ್ರರನ್ನು ಹೊಂದಿತ್ತು. ಉದಾಹರಣೆಗೆ ಇರಾಕಿ ಮುಖಂಡ ನೂರಿ-ಎಸ್-ಸೈಯ್ಡ್‌ನು ಬ್ರಿಟಿಷರ ಸ್ನೇಹಿತರು ಮತ್ತು ಬಾಗ್ದಾದ್ ಫ್ಯಾಕ್ಟ್‌ನ ಸಕ್ರಿಯ ಪ್ರತಿನಿಧಿ ಹಾಗೂ ಬ್ರಿಟಿಷರ ಬದ್ಧ ವೈರಿ ನಾಸರನ ವಿರೋಧಿ. ನಾಸರ್ ತೆಗೆದುಕೊಂಡ ನಿರ್ಧಾರದಿಂದ ಬ್ರಿಟೀಷರ ವಸಾಹತುಶಾಹಿ ಆಸಕ್ತಿಗಳಿಗೆ ಮತ್ತು ಅವರ ಸಾಮ್ರಾಜ್ಯಶಾಹಿತ್ವಕ್ಕೆ ಬೆದರಿಕೆ ಉಂಟಾಯಿತು. ನಾಸರನ ನಿಲುವಿನಿಂದ ಕಂಪನಿ ಪಾಲುದಾರರು ನಷ್ಟ ಅನುಭವಿಸಿದರು. ಮತ್ತು ಬ್ರಿಟಿಷ್ ಸರಕಾರ ಪರಿಹಾರ ನೀಡಬೇಕು. ಹಾಗಾಗಿ ಇದು ಬ್ರಿಟಿಷರ ದೃಷ್ಟಿಯಲ್ಲಿ ಕಾನೂನು ಬಾಹಿರ ಮತ್ತು ಆತಂಕಕಾರಿಯಾದುದು. ಬ್ರಿಟಿಷ್ ಪ್ರಧಾನಮಂತ್ರಿ ಆಂತೋನಿ ಇಡೆನ್, ನಾಸರ್‌ನನ್ನು ಫ್ಯಾಸಿಸ್ಟ್ ಡಿಕ್ಟೇಟರ್ ಎಂದು ಕರೆದನು. ಮತ್ತು ಅವನು ಮಧ್ಯಪ್ರಾಚ್ಯ ಪ್ರದೇಶದಲ್ಲಿ ಪಶ್ಚಿಮದ ಸಾಮ್ರಾಜ್ಯಶಾಹಿಗಳ ನಿಲುವುಗಳನ್ನು ಬೆಂಬಲಿಸುವ ಪ್ರಭುತ್ವಗಳ ವೈರಿ ಎಂದು ಬಣ್ಣಿಸಿದರು. ಇದೇ ಕಾರಣವನ್ನು ಮುಂದಿಟ್ಟುಕೊಂಡು ಬ್ರಿಟಿಷರು ಇಸ್ರೇಲ್ ರಾಜ್ಯದೊಂದಿಗೆ ಒಪ್ಪಂದ ಮಾಡಿಕೊಂಡು ನಾಸರನ ಉಚ್ಚಾಟನೆಗೆ ಜಂಟಿ ಹೋರಾಟವನ್ನು ಯೋಜಿಸಿದರು. ಅವರಿಗೆ ಬೇಕಾಗಿರುವುದು ನಾಸರ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ನಡೆಸುವ ಸೈನಿಕ ಕಾರ್ಯಾಚರಣೆಗೆ ಒಂದಷ್ಟು ಭೂಪ್ರದೇಶ. ಅದನ್ನು ಇಸ್ರೇಲ್ ರಾಜ್ಯ ಕೊಡುವುದಾಗಿ ಒಪ್ಪಿಕೊಂಡಿತು.

ಇಸ್ರೇಲ್ ಸರಕಾರ, ಬ್ರಿಟಿಷರು ನಡೆಸುವ ಈ ಕಾರ್ಯಾಚರಣೆಗೆ ಬೇಕಾದ ಭೂಮಿ ಯನ್ನು ಕೊಡುವುದಾಗಿ ಒಪ್ಪಿಕೊಳ್ಳಲು ಕಾರಣವೂ ಇದೆ. ಇಸ್ರೇಲ್ ಒಂದು ಸ್ವತಂತ್ರ ರಾಷ್ಟ್ರವಾಗಿ ಶಾಂತಿಯಿಂದ ಇರಲು ಸಾಧ್ಯವಾಗದೇ ಇರುವುದು ನಾಸರನ ಮುಂದಾಳತ್ವದಲ್ಲಿ ನಡೆಯುವ ಅರಬ್ ನಿರಾಶ್ರಿತರ ಗೆರಿಲ್ಲಾ ಯುದ್ಧ. ಈ ಚಟುವಟಿಕೆಗಳಲ್ಲಿ ನಿರಂತರವಾಗಿ ಯಹೂದಿಗಳ ವಿರುದ್ಧ ನಡೆಸಲು ಈಜಿಪ್ಟ್ ಸರಕಾರ ಅವರಿಗೆ ಎಲ್ಲ ತರದ ನೆರವು ನೀಡಿರುವ ಕಾರಣವೆಂದು ಇಸ್ರೇಲ್‌ಗೂ ಗೊತ್ತಿತ್ತು. ಸಮಯ ನೋಡಿ ಆತನ ವಿರುದ್ಧ ಸೈನಿಕ ಕಾರ್ಯಾಚರಣೆ ನಡೆಸಿ, ಅವನ ಶಕ್ತಿಯನ್ನು ದುರ್ಬಲಗೊಳಿಸುವ ಅವಕಾಶಕ್ಕೆ ಕಾದಿತ್ತು. ಆ ಅವಕಾಶವನ್ನು ೧೯೫೬ರ ಅಕ್ಟೋಬರ್ ೨೩ ಮತ್ತು ೨೪ರಂದು ಪ್ಯಾರಿಸ್ ಹೊರಗೆ ಇರುವ ನಗರ ಸಿವರೆಸ್‌ನಲ್ಲಿ ಗುಪ್ತವಾಗಿ ಸಭೆ ಸೇರಿ, ಅದರಲ್ಲಿ ಬ್ರಿಟಿಷರು, ಫ್ರೆಂಚರು ಪ್ರೋ ಒಂದು ವೇಳೆ ಈಜಿಪ್ಟ್ ಸರಕಾರ ಪ್ಯಾಲೇಸ್ತೀನಿಯರನ್ನು ಬೆಂಬಲಿಸಿ ಮರು ದಾಳಿ ನಡೆಸಿದರೆ ಬ್ರಿಟಿಷ್ ಸೈನ್ಯ ಅದನ್ನು ನಿಯಂತ್ರಿಸುವುದಾಗಿ ನಿರ್ಣಯ ಕೈಗೊಳ್ಳಲಾಯಿತು. ಬ್ರಿಟಿಷ್ ಮತ್ತು ಫ್ರೆಂಚರು, ಮಾತುಕತೆಯಂತೆ ಇಸ್ರೇಲ್ ದಾರಿ ಆರಂಭಿಸಿದ ತಕ್ಷಣ ಸೂಯೇಜ್ ಕಾಲುವೆ ಪ್ರದೇಶವನ್ನು ಆಕ್ರಮಿಸುವ ಯೋಜನೆಯನ್ನೂ ರೂಪಿಸಿಕೊಂಡಿದ್ದರು. ಆ ಮುಖಾಂತರ ನಾಸರ್‌ನನ್ನು ಅಧಿಕಾರದಿಂದ ಪದಚ್ಯುತಗೊಳಿಸುವುದು ಮತ್ತು ಅಲ್ಲಿನ ನೆಲೆಗಳನ್ನು ತಮ್ಮ ಸ್ವಾಧೀನಕ್ಕೆ ಪಡೆಯುವುದು.

೧೯೫೬ರ ಅಕ್ಟೋಬರ್ ೨೯ರಂದು ಈಜಿಪ್ಟ್ ಇಸ್ರೇಲ್ ನಡೆಸಿದ ದಾಳಿಯ ನೇತೃತ್ವ ವನ್ನು ಇಸ್ರೇಲ್‌ನ ಮಾಜಿ ಪ್ರಧಾನಮಂತ್ರಿ ಏರಿಯಲ್ ಶೆರೋನ್ ವಹಿಸಿದ್ದರು. ಇಂತಹ ದಾಳಿ ಅರಬ್‌ರಿಗೂ ಯಹೂದಿಗಳಿಗೂ ಸಾಮಾನ್ಯವಾದುದು. ಇಸ್ರೇಲ್‌ನ ಸೈನಿಕರಲ್ಲಿ ಮುಖ್ಯರಾದ ಮೊಷೆ ದಯಾನ್, ನಾಸರ್ ಮತ್ತು ಈಜಿಪ್ಟ್ ಸರಕಾರ ಆಯೋಜಿಸಿದ ಭದ್ರತೆಯನ್ನು ಭಗ್ನಗೊಳಿಸಲು ಸಜದನು. ನಿರ್ಧಾರದಂತೆ ದಾಳಿಯ ನಂತರ ಕಾಲುವೆ ಎರಡೂ ಭಾಗದಲ್ಲಿ ೧೬ ಕಿ.ಮೀಟರ್‌ನಷ್ಟು ದೂರಕ್ಕೆ ಸರಿಯಲು ಈಜಿಪ್ಟ್‌ಗೆ ಆಜ್ಞೆಯನ್ನು ಮಾಡಲಾಯಿತು.

ಫ್ರಾಂಕೋ-ಬ್ರಿಟಿಷರ ಬೇಡಿಕೆ ಮಾತ್ರ ಅಸಂಬದ್ಧವಾದುದು. ಏಕೆಂದರೆ, ಸೂಯೆಜ್ ಕಾಲುವೆ ಈಜಿಪ್ಟ್‌ನ ಅವಿಭಾಜ್ಯ ಅಂಗವಾಗಿದ್ದು, ಅದರ ಸಂಪೂರ್ಣ ಲಾಭ ಪಡೆಯುವುದು ಈಜಿಪ್ಟ್ ಜನತೆಯ ಹಕ್ಕು. ಅದನ್ನು ಪ್ರಶ್ನಿಸುವ ಅಥವಾ ಆ ಪ್ರದೇಶದ ಮೇಲೆ ತಮ್ಮ ಮಾಲೀಕತ್ವವನ್ನು ಹೇಳುವ ಬ್ರಿಟಿಷರ ಪ್ರಯತ್ನ ಕಾನೂನುಬಾಹಿರ. ಅಮೆರಿಕ ಮಾತ್ರ ಮೂಕವಾಗಿ ಕುತೂಹಲದಿಂದ ವೀಕ್ಷಿಸುತ್ತಿತ್ತು. ಯಾವುದೇ ಸ್ವತಂತ್ರ ಅರಬ್ ರಾಜ್ಯದ ಮೇಲೆ ದಾಳಿಯನ್ನು ಪ್ರೋ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿಯೂ ಬ್ರಿಟಿಷರ ಕಾರ್ಯಾಚರಣೆಯ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾದ ಕಾರಣ ಯುದ್ಧ ನಿಲ್ಲಿಸಲು ಒತ್ತಾಯ ಹೆಚ್ಚಿತ್ತು. ಬ್ರಿಟನ್, ಫ್ರಾನ್ಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳಾಗಿರುವುದರಿಂದ, ಆ ಮಂಡಳಿ ಹೊರಡಿಸಿದ ಠರಾವುವನ್ನು ವಿರೋಧಿಸಬಹುದಿತ್ತು. ಹಾಗೆ ಮಾಡದೆ ಕಾರ್ಯಾಚರಣೆಯನ್ನೇ ಮುಂದುವರಿಸಿದವು. ಆದಾಗ್ಯೂ, ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳಿಗೆ ಜಗತ್ತಿನ ವಿರುದ್ಧ ನಿಲ್ಲಲಾಗದು. ಬ್ರಿಟನ್‌ನಲ್ಲಿಯೂ ಅಭಿಪ್ರಾಯಗಳು ಭಿನ್ನವಾಗಿದ್ದವು. ಕಾಮನ್‌ವೆಲ್ತ್ ಮುಖಂಡರಲ್ಲಿ ಮುಖ್ಯವಾಗಿ ನೆಹರೂ ಪ್ರಬಲವಾಗಿ ವಿರೋಧಿಸಿದರು. ರಷ್ಯಾ ಕೂಡ ಕಾರ್ಯಾಚರಣೆ ಸ್ಥಗಿತಗೊಳಿಸದಿದ್ದರೆ ಮಿಸೈಲ್ ದಾಳಿಯನ್ನು ಲಂಡನ್ ಮೇಲೆ ಮಾಡುವುದಾಗಿಯೂ ಬೆದರಿಸಿತು. ಬ್ರಿಟನ್ ಮೇಲೆ ಅಮೆರಿಕ ಹೇರಿದ ಆರ್ಥಿಕ ನಿರ್ಬಂಧ ಬ್ರಿಟನ್ ಪ್ರಧಾನಿ ಇಡೆನ್‌ನ ಮನಸ್ಸು ಪರಿವರ್ತನೆಗೊಳ್ಳಲು ಮುಖ್ಯವಾಗಿತ್ತು. ಕೊನೆಗೆ ನವೆಂಬರ್ ೬ರಂದು ಯುದ್ಧ ವಿರಾಮವನ್ನು ಘೋಷಿಸಲಾಯಿತು.

ಸೂಯೆಜ್ ಘಟನೆಯಿಂದ ಬ್ರಿಟನ್ ಒಂದು ಜಾಗತಿಕ ರಾಷ್ಟ್ರವಾಗಿ ಮುಂದುವರಿಯಲು ದುರ್ಬಲವಾಯಿತು. ಮತ್ತು ಮಧ್ಯಪ್ರಾಚ್ಯ ಪ್ರದೇಶದ ವಿಪತ್ತುಗಳ ನಿರ್ವಹಣೆ ಹೊರಲು ಅದರ ಅಸಹಾಯಕತೆಯನ್ನು ಬಹಿರಂಗಗೊಳಿಸಿತು. ಬ್ರಿಟಿಷರನ್ನು ವಿರೋಧಿಸಿದ ಅರಬ್ ಸಮುದಾಯ ಜಾಗತಿಕ ಮಟ್ಟದಲ್ಲಿ ತಮ್ಮ ಪರವಾಗಿ ಸೃಷ್ಟಿಯಾದ ಅಭಿಪ್ರಾಯದಿಂದ ಸಂತಸಗೊಂಡರು ಮತ್ತು ರಷ್ಯಾದ ಸಹಾಯ ಮುಂದುವರಿಯಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು. ಇನ್ನು ಬ್ರಿಟಿಷರ ಸಹಾಯವನ್ನು ನಿರೀಕ್ಷಿಸುವ ಅರಬ್ ದೊರೆಗಳು ಸಂಕಷ್ಟಕ್ಕೆ ಸಿಲುಕಿಕೊಂಡರು. ಜೊರ್ಡಾನ್ ದೊರೆ ಹುಸೇನನು ಬ್ರಿಟಿಷ್ ಜನರಲ್ ಮತ್ತು ಸಲಹೆಗಾರ ಸರ್ ಜನ್ ಗ್ಲುಬ್‌ನನ್ನು ಉಚ್ಚಾಟನೆ ಮಾಡಿದನು. ೧೯೫೮ರಲ್ಲಿ ನಡೆದ ಇರಾಕ್ ಸಮಾಜವಾದಿ ಕ್ರಾಂತಿಯಲ್ಲಿ ಅಲ್ಲಿನ ದೊರೆ ದ್ವಿತೀಯ ಪೈಸಲ್ ಮತ್ತು ಬ್ರಿಟೀಷರ ವಿರುದ್ಧ ಪ್ರಧಾನ ಮಂತ್ರಿ ನೂರಿ-ಎಸ್-ಸೈಯ್ಡ್ ಇಬ್ಬರನ್ನೂ ಕೊಲೆ ಮಾಡಲಾಯಿತು. ಈ ಘಟನೆಯನ್ನು ಇರಾಕ್‌ನಲ್ಲಿ ಬ್ರಿಟಿಷರ ಸಾಮ್ರಾಜ್ಯಶಾಹಿ ಪ್ರಭುತ್ವ ಹಿನ್ನಡೆ ಕಂಡಿತು.

ಒಂದು ಪ್ರಮುಖ ಬದಲಾವಣೆ ಕಂಡುಬಂತು. ಬ್ರಿಟಿಷರು ತೆರವುಗೊಳಿಸಿದ ಸ್ಥಾನವನ್ನು ರಷ್ಯಾ ಅಲಂಕರಿಸಲು ಎಲ್ಲ ಅರ್ಹತೆಯನ್ನು ಪಡೆದಿತ್ತು ಮತ್ತು ಅದಕ್ಕೆ ಅರಬ್ಬರ ಸಮ್ಮತಿಯು ವ್ಯಕ್ತವಾಗುತ್ತಿತ್ತು. ಇದನ್ನು ಗಮನಿಸಿದ ಅಮೆರಿಕದವರು ತಲ್ಲಣ ಗೊಂಡರು. ಅದಕ್ಕಾಗಿ ಅಮೆರಿಕದ ಅಧ್ಯಕ್ಷ ೧೯೫೮ರಲ್ಲಿ ಒಂದು ಬೃಹತ್ ಯೋಜನೆಯನ್ನು ರೂಪಿಸಿದನು. ಅದನ್ನು ಐಸನ್ ಒವರ್ ಡಾಕ್ಟ್ರಿನ್ ಎಂದು ಅನುಷ್ಠಾನಗೊಳಿಸಲಾಯಿತು. ಇದರ ಉದ್ದೇಶ ಅರಬ್ ಜಗತ್ತಿನಲ್ಲಿ ಸೋವಿಯತ್ ಕಮ್ಯುನಿಸಂನಿಂದ ಬೆದರಿಕೆ ಎದುರಿಸುವ ಎಲ್ಲ ಅರಬ್ ದೇಶಗಳಿಗೆ ಹಣಕಾಸು ಮತ್ತು ಶಸ್ತ್ರಾಸ್ತ್ರಗಳನ್ನು ನೀಡುವ ಯೋಜನೆ ಮತ್ತು ಭವಿಷ್ಯದಲ್ಲಿ ಇಡೀ ಅರಬ್ ಜಗತ್ತನ್ನೇ ತನ್ನ ಸ್ವತ್ತನ್ನಾಗಿ ಪರಿವರ್ತಿ ಸುವ ಆಲೋಚನೆ. ಆದರೆ, ಅರಬ್ ಜಗತ್ತಿನ ಬಹುತೇಕ ದೊರೆಗಳು ರಷ್ಯಾದಿಂದಲೇ ಹಣ/ಶಸ್ತ್ರಾಸ್ತ್ರಗಳನ್ನು ಪಡೆಯಲು ಸಿದ್ಧರಿದ್ದರೆ ವಿನಃ ಅಮೆರಿಕದ ಸಹಾಯವನ್ನು ನಿರೀಕ್ಷಿಸುತ್ತಿರಲಿಲ್ಲ.

ಸೂಯೆಜ್ ಯುದ್ಧದ ನಂತರ ಅರಬ್ ಜಗತ್ತಿನಲ್ಲಿ ಅಬ್ದುಲ್ ನಾಸರ್ ಹೀರೋ ಆಗುತ್ತಾನೆ. ಪಶ್ಚಿಮ ಜಗತ್ತಿನ ಸಾಮ್ರಾಜ್ಯಶಾಹಿ ಪ್ರಭುತ್ವ ಮತ್ತು ಅದನ್ನು ಬೆಂಬಲಿಸುವ ಪ್ರಾದೇಶಿಕ ಶಕ್ತಿಗಳ ವಿರುದ್ಧ ನಡೆಯುವ ಹೋರಾಟದ ಮುಖಂಡತ್ವನ್ನು ನಾಸರ್‌ನ ವ್ಯಕ್ತಿತ್ವದಲ್ಲಿ ಅರಬರು ಕಂಡುಕೊಳ್ಳುತ್ತಾರೆ. ಮೊದಲ ಅರಬ್-ಇಸ್ರೇಲ್ ಯುದ್ಧದಲ್ಲಿ ಅರಬ್ ಸಮುದಾಯ ಎದುರಿಸಿದ ಸೋಲಿನ ಅವಮಾನಕ್ಕೆ ಎರಡನೇ ಅರಬ್-ಇಸ್ರೇಲ್ (೧೯೫೬) ಯುದ್ಧದಲ್ಲಿ ಪ್ರತೀಕಾರ ತೀರಿಸಿಕೊಂಡೆವು ಎಂಬ ಸಮಾಧಾನವು ವ್ಯಕ್ತವಾಯಿತು. ಅದೂ ಕೂಡ ಎರಡು ಬಲಿಷ್ಠ ಸಾಮ್ರಾಜ್ಯಶಾಹಿ ರಾಷ್ಟ್ರಗಳಾದ ಫ್ರಾನ್ಸ್ ಮತ್ತು ಬ್ರಿಟನ್ ಗಳ ವಿರುದ್ಧ ನಾಸರ್ ಅನುಭವಿಸಿದ ಡಿಪ್ಲಾಮ್ಯಾಟಿಕ್ ವಿಕ್ಟರಿ. ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವನ ಗೌರವ ಉತ್ತುಂಗಕ್ಕೇರಿತು. ಇಡೀ ಅರಬ್ ಜಗತ್ತನ್ನೇ ಒಂದುಗೂಡಿಸಿ ಸಾಮ್ರಾಜ್ಯಶಾಹಿಗಳ ಮುಖ್ಯವಾಗಿ ಅಮೆರಿಕದ ವಿರುದ್ಧ ಬಲಿಷ್ಠ ಹೋರಾಟವನ್ನು ಪಾನ್-ಅರಬಿಸಂ ಎಂಬ ಚಳವಳಿಯನ್ನೂ ಆಯೋಜಿಸಿದ. ಆದರೆ, ಅವರವರಲ್ಲಿ ಅನುಮಾನದ ಬೀಜ ಹುಟ್ಟಿಕೊಂಡು ಚಳವಳಿ ಅಂತಹದ್ದೇನು ದೊಡ್ಡದು ಸಾಧಿಸಲಿಲ್ಲ.

ಈಜಿಪ್ಟ್ ಸರಕಾರವೇ ಸ್ವತಂತ್ರವಾಗಿ ಅಲ್ಲಿನ ಆರ್ಥಿಕ ಅಭಿವೃದ್ದಿಯನ್ನು ಗಮನದಲ್ಲಿಟ್ಟು ಕೊಂಡು ಸೂಯೆಜ್ ಕಾಲುವೆ ಕಂಪನಿಯ ವ್ಯವಹಾರವನ್ನು ನೋಡಿಕೊಳ್ಳಲಾರಂಭಿ ಸಿತು. ಇಸ್ರೇಲ್ ರಾಜ್ಯದ ಹಡಗುಗಳ ಪ್ರವೇಶಕ್ಕೆ ಖಾಯಂ ಆಗಿ ಮುಚ್ಚಿತು. ಇಸ್ರೇಲ್ ಯುದ್ಧದ ಸಮಯದಲ್ಲಿ ಏನೆಲ್ಲಾ ಅನುಭವಿಸಿತ್ತೋ, ಅವೆಲ್ಲವನ್ನು ವಾಪಸ್ಸು ನೀಡ ಬೇಕಾಯಿತು. ಎರಡು ಮಾಜಿ ವಸಾಹತುಶಾಹಿ ರಾಷ್ಟ್ರಗಳಾದ ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳೊಂದಿಗೆ ೧೯೫೬ರ ಘಟನೆಯಲ್ಲಿ ಭಾಗಿಯಾಗಿ ಸೂಯೆಜ್ ಕಾಲುವೆಗೆ ಸಂಬಂಧಿಸಿ ಆರಂಭವಾದ ಯುದ್ಧವನ್ನು ೨ನೇ ಅರಬ್-ಇಸ್ರೇಲಿ ಯುದ್ಧವನ್ನಾಗಿ ಪರಿವರ್ತಿಸಿದ ತಪ್ಪಿಗೆ ಇಸ್ರೇಲನ್ನು ಇಡೀ ತೃತೀಯ ಜಗತ್ತು ಕೆಟ್ಟ ದೃಷ್ಟಿಯಿಂದ ನೋಡತೊಡಗಿತು. ಆದಾಗ್ಯೂ ಇಸ್ರೇಲ್ ಪ್ಯಾಲೇಸ್ತೀನಿಯರ ಅನೇಕ ನೆಲೆಗಳನ್ನು ದ್ವಂಸಗೊಳಿಸಿತು. ಮತ್ತು ವಿಶ್ವಸಂಸ್ಥೆಯ ಎಮರ್ಜೆನ್ಸಿ ಪೋರ್ಸ್, ಈಜಿಪ್ಟ್‌ಗೆ ಸೇರಿದ ಸಿನ್ಯಾ ಪ್ರದೇಶಕ್ಕೆ ಪ್ರವೇಶ ಮಾಡುವಾಗಲೇ ತನಗೆ ಎದುರಾಗುವ ಶಕ್ತಿಗಳನ್ನು ಸದೆ ಬಡಿದ ಕಾರಣ ನಂತರದ ಸುಮಾರು ಒಂದು ದಶಕಗಳ ಕಾಲ ಶಾಂತಿಯಿಂದ ಇರಲು ವಾತಾವರಣ ವನ್ನು ನಿರ್ಮಿಸಿಕೊಂಡಿತು.

ಆರು ದಿನಗಳ ಯುದ್ಧ

ಸೂಯೆಜ್ ಯುದ್ಧದ ನಂತರ ಹತ್ತು ವರ್ಷ ಅರಬ್ ಜಗತ್ತು ಅನೇಕ ಆಂತರಿಕ ಅಂತಃ ಕಲಹ, ಬಂಡುಕೋರರ ದಾಳಿ ಮತ್ತು ಪ್ರಾದೇಶಿಕ ಕ್ರಾಂತಿಗಳಿಂದ ವಿಭಜನೆ ಗೊಳಗಾಗಿತ್ತು. ಇರಾಕ್‌ನಲ್ಲಿ ಸೈನಿಕ ನಿರಂಕುಶ ಪ್ರಭುತ್ವವು ದುರ್ಬಲಗೊಂಡು ಇನ್ನೊಂದು ಆಧಿಪತ್ಯ ಸ್ಥಾಪನೆಗೊಂಡಿತು. ಈ ಹೊಸ ಪ್ರಭುತ್ವ ಕುರ್ದಿಗಳ ದಂಗೆಯನ್ನು ಎದುರಿಸಬೇಕಾಯಿತು ಮತ್ತು ಸಿರಿಯಾ ರಾಜ್ಯದೊಂದಿಗೆ ಭಿನ್ನಾಭಿಪ್ರಾಯದ ಸಂಬಂಧ ವೇರ್ಪಟ್ಟಿತು. ಯಮಾನ್‌ನಲ್ಲಿ ೧೯೬೦-೬೩ರ ನಡುವೆ ಸಂಪ್ರದಾಯವಾದಿಗಳು ಮತ್ತು ಸಮಾಜವಾದಿಗಳ ನಡುವೆ ಶೀತಲ ಯುದ್ಧದಲ್ಲಿ ಈಜಿಪ್ಟ್ ಮತ್ತು ಸೌದಿ ಅರೇಬಿಯಾ ಪರಸ್ಪರ ವಿರೋಧಿ ಬಣಗಳಲ್ಲಿ ಗುರುತಿಸಿಕೊಂಡವು. ಅಧ್ಯಕ್ಷ ನಾಸರ್‌ನ ಪಾನ್-ಅರಬಿಸಂ ಚಳವಳಿಯೂ ಮುಂದುವರಿಯಿತು ಮತ್ತು ತನ್ನದೇ ಏಕಸ್ವಾಮಿತ್ವವನ್ನು ಮಧ್ಯಪ್ರಾಚ್ಯ ರಾಜಕೀಯ ರಂಗದಲ್ಲಿ ಹೇರಲು ಆರಂಭಿಕ ಯಶಸ್ಸನ್ನು ಕಂಡನು. ರಷ್ಯಾದಿಂದ ಆರ್ಥಿಕ, ಸೈನಿಕ ಮತ್ತು ತಾಂತ್ರಿಕವಾಗಿ ಸಹಾಯ ಪಡೆದು ತನ್ನ ದೇಶದ ಆರ್ಥಿಕ ಅಭಿವೃದ್ದಿಯನ್ನು ಕಂಡನು. ಆಸ್ವಾನ್ ಅಣೆಕಟ್ಟನ್ನು ನಿರ್ಮಿಸಿದನು ಮತ್ತು ಸೈನ್ಯವನ್ನು ಉತ್ಕೃಷ್ಟ ಮಟ್ಟದ ಶಸ್ತ್ರಾಸ್ತಗಳಿಂದ ಪುನರ್‌ರಚಿಸಿದನು. ರಷ್ಯಾದ ಪ್ರಭಾವವನ್ನು ಅಡಗಿಸುವ ಬಂಡವಾಳಶಾಹಿ ರಾಷ್ಟ್ರಗಳ ಪರವಾಗಿರುವ ಸೌದಿ ಅರೇಬಿಯಾ, ಲೆಬನಾನ್ ಹಾಗೂ ಜೋರ್ಡಾನ್ ರಾಜ್ಯಗಳಿಗೆ ಅಮೆರಿಕ ಸಹಾಯವನ್ನು ನೀಡಲು ಆರಂಭಿಸಿತು. ಇಸ್ರೇಲ್ ರಾಜ್ಯದ ಸ್ಥಾಪನೆ ಮತ್ತು ಅದರ ಸ್ವತಂತ್ರ ಇರುವಿಕೆಯ ಮುಂದು ವರಿಕೆಯು ಅರಬ್‌ರಿಗೆ ಒಂದು ಪ್ರಾಮುಖ್ಯವಾದ ವಿಷಯವಾಗಿದ್ದು, ಎಲ್ಲ ವರ್ಗದ ಅರಬರನ್ನು ಯಹೂದಿಯರ ವಿರುದ್ಧ ಒಗ್ಗೂಡಿಸಲು ಒಂದು ಅಸ್ತ್ರವಾಗಿಯೂ ಪರಿವರ್ತನೆಗೊಂಡಿತು. ಇದೇ ವಿಚಾರ ಎರಡು ಬಲಿಷ್ಠ ಶಕ್ತಿಗಳಾದ ಅಮೆರಿಕಾ ಮತ್ತು ಸೋವಿಯತ್ ಒಕ್ಕೂಟಕ್ಕೆ ದೇಶಿ ವಿಚಾರದಲ್ಲಿ ನಿರಂತರವಾಗಿ ಹಸ್ತಕ್ಷೇಪ ಮಾಡಲು ಅವಕಾಶಗಳನ್ನು ಕಲ್ಪಿಸಿಕೊಟ್ಟನು.

ಈ ನಡುವೆ ತೈಲ ಸಂಪತ್ತಿನಿಂದ ಬಂದ ಆದಾಯವು ಅರಬ್ ಜಗತ್ತಿನಲ್ಲಿ ಇನ್ನೊಂದು ಬಗೆಯ ಕ್ರಾಂತಿಗೆ ಕಾರಣವಾಯಿತು. ಮುಖ್ಯವಾಗಿ ಸೌದಿ ಅರೇಬಿಯ ಮತ್ತು ಕುವೈತ್‌ನ ಆರ್ಥಿಕ ಅಭಿವೃದ್ದಿ ಹಾಗೂ ಆಧುನೀಕರಣ ಪ್ರಕ್ರಿಯೆಯಲ್ಲಿ ಮಹತ್ವಪೂರ್ಣ ಪಾತ್ರವಹಿಸಿತು. ೧೯೪೫ರ ನಂತರ ಈ ಪ್ರದೇಶಗಳಲ್ಲಿ ಉತ್ಪಾದನೆಯಾಗುವ ತೈಲ ಸಂಪತ್ತನ್ನು ಅನುಭವಿಸುವ ಆಡಳಿತ ವರ್ಗಗಳು ಪಶ್ಚಿಮದಲ್ಲಿರುವ ಎಲ್ಲ ರೀತಿಯ ಆಡಂಬರದ ಜೀವನ ಶೈಲಿಯನ್ನು ಪ್ರತಿನಿಧಿಸುವ ಸೌಲಭ್ಯಗಳನ್ನು ಸಂಸ್ಕೃತಿಗಳನ್ನು ಹುಟ್ಟು ಹಾಕಿದವು. ೧೯೬೧ರಲ್ಲಿ ರಚನೆಯಾದ ಒಪೆಕ್ ಸಂಘಟನೆಯೊಂದಿಗೆ, ಈ ಅರಬ್ ರಾಷ್ಟ್ರಗಳು ಸಂಯೋಜನೆಗೊಂಡುದರ ಪರಿಣಾಮವಾಗಿ ಶ್ರೀಮಂತ ತೈಲ ಅರಬ್ ರಾಷ್ಟ್ರಗಳನ್ನು ಗೌರವದಿಂದ ಜಗತ್ತೇ ನೋಡುವಂತಾಯಿತು. ಅಲ್ಲದೆ, ಈ ರಾಷ್ಟ್ರಗಳು ಇಸ್ರೇಲ್ ವಿರುದ್ಧದ ಯಾವುದೇ ಅರಬ್ ಪ್ರತಿಭಟನೆಗೆ ಎಷ್ಟು ಹಣ ಬೇಕಾದರೂ ನೀಡುವ ಶಕ್ತಿಯನ್ನು ಪ್ರದರ್ಶಿಸಿದವು.

ಇಸ್ರೇಲ್‌ಗೆ ಅಂತಹ ಯಾವುದೇ ತೈಲ ಸಂಪತ್ತು ಇಲ್ಲ. ಅದರ ಬದುಕು ವಿದೇಶದಲ್ಲಿದ್ದ ಶ್ರೀಮಂತ ಯಹೂದಿಗಳ ಸಹಾಯ ಹಾಗೂ ಅಮೆರಿಕ ಸರಕಾರದ ಬೆಂಬಲದಿಂದ ರೂಪಿಸಬೇಕಿತ್ತು. ೧೯೬೦ರ ದಶಕದ ಆರಂಭದಲ್ಲಿ ಇಸ್ರೇಲ್‌ನ ಕೃಷಿ ಚಟುವಟಿಕೆಗಳನ್ನು ಪ್ರೋ ನಿಟ್ಟಿನಲ್ಲಿ ಇಸ್ರೇಲ್ ರಾಜ್ಯದ ದಕ್ಷಿಣ ಭಾಗದ ನೆಗೆವ್ ಮರುಭೂಮಿಗೆ ನೀರು ಸರಬರಾಜು ಮಾಡಲು ಒಂದು ಬೃಹತ್ ನೀರಾವರಿ ಯೋಜನೆಯನ್ನು ಸಿದ್ಧಪಡಿಸಿತು. ೧೯೬೪ರಲ್ಲಿ ಒಂದು ಇಂಜಿನೀಯರಿಂಗ್ ಪ್ಲಾಂಟನ್ನು ಆರಂಭಿಸಿ, ಇದಕ್ಕೆ ಜೊರ್ಡಾನ್ ನದಿಯಿಂದ ನೀರನ್ನು ಪಂಪ್ ಮಾಡಲು ನಿರ್ಧರಿಸಿತು. ಈ ಯೋಜನೆ ಅರಬ್ ಆಸಕ್ತಿಗಳಿಗೆ ವಿರೋಧವಾಗಿತ್ತು. ಏಕೆಂದರೆ, ಜೋರ್ಡಾನ್ ದೇಶವು ಕೂಡ ಇದೇ ನದಿ ನೀರನ್ನು ಅವಲಂಬಿಸಿತ್ತು. ಹಾಗಾಗಿ, ಅರಬ್ ರಾಜ್ಯಗಳು ತುರ್ತಾಗಿ ಈಜಿಪ್ಟ್ ರಾಜಧಾನಿ ಕೈರೋದಲ್ಲಿ ಅರಬ್ ಲೀಗ್ ಸಮ್ಮೇಳನವನ್ನು ಆಯೋಜಿಸಿ, ಲೆಬನಾನ್ ಮತ್ತು ಸಿರಿಯಾದಲ್ಲಿ, ಜೋರ್ಡಾನ್ ನದಿಯ ಕವಲುಗಳನ್ನು ಜೋಡಿಸಿ ದಿಕ್ಕನ್ನು ಬದಲಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಸುಭದ್ರತೆಗಾಗಿ ಇಸ್ರೇಲ್ ವಿರುದ್ಧ ಅರಬ್ಬರ ಸಹಯೋಗದೊಂದಿಗೆ ಸೈನಿಕ ನೆಲೆಯನ್ನು ಸ್ಥಾಪಿಸಲು ನಿರ್ಧರಿಸಲಾಯಿತು.

ಇದೇ ಸಮ್ಮೇಳನದಲ್ಲಿ ಎಲ್ಲ ಸದಸ್ಯರ ಆಶಯದಂತೆ ಪ್ಯಾಲೇಸ್ತೀನಿ ಲಿಬರೇಶನ್ ಆರ್ಗನೈಜೇಶನ್‌ನನ್ನು(ಪಿಎಲ್‌ಓ) ರಚಿಸಿ, ಎಲ್ಲ ಚದುರಿ ಹೋದ ನಿರಾಶ್ರಿತರನ್ನು ಒಂದೇ ಆಡಳಿತ ಸಂಸ್ಥೆ ಒಳಗೆ ತರುವ ಪ್ರಯತ್ನ ಮಾಡಲಾಯಿತು. ಸೌದಿ ಅರೇಬಿಯಾದ ಹಣಕಾಸಿನ ಸಹಾಯದಿಂದ ಅರಬರು ೧೯೭೦ರಲ್ಲಿ ಜಿಯೋನಿಸ್ಟರ ವಿರುದ್ಧ ಸ್ವಾತಂತ್ರ್ಯದ ಹೋರಾಟವನ್ನು ಆರಂಭಿಸುವ ದಿನಾಂಕವನ್ನು ನಿರ್ಧರಿಸಿದರು.

ಪಿಎಲ್‌ಓದ ಚಟುವಟಿಕೆಗಳು ಮತ್ತು ಅದನ್ನು ಸೇರಿಕೊಂಡ ಅಲ್‌ಪಥಾ ಎಂಬ ಪ್ಯಾಲೇಸ್ತೀನಿಯರ ಗೆರಿಲ್ಲಾ ಗುಂಪುಗಳು ನಿರಂತರವಾಗಿ ಇಸ್ರೇಲ್‌ನ ಭದ್ರತೆಗೆ ಬೆದರಿಕೆ ಯೊಡ್ಡುತ್ತಿದ್ದವು. ಅಲ್‌ಪಥಾ ಗೆರಿಲ್ಲಾ ಗುಂಪು ಯಾಸರ್ ಅರಾಪತ್‌ನ ನೇತೃತ್ವದಲ್ಲಿ ಸಕ್ರಿಯವಾಗಿದ್ದು, ಅವನು ೧೯೬೮ರಲ್ಲಿ ಪಿಎಲ್‌ಓದ ಅಧಿಕೃತ ಅಧ್ಯಕ್ಷನಾಗಿಯೂ ಚುನಾಯಿತನಾದನು. ಅವನ ನೇತೃತ್ವದಲ್ಲಿ ಯುವ ಗೆರಿಲ್ಲಾಗಳು ಯಹೂದಿಗಳನ್ನು, ಅವರ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ಎರ್ರಾಬಿರ್ರಿಯಾಗಿ ದಾಳಿ ಮಾಡಿದವು. ಇಸ್ರೇಲಿಗರು ಕೂಡ ಪ್ಯಾಲೇಸ್ತೀನಿ ಗೆರಿಲ್ಲಾಗಳ ನೆಲೆಗಳು, ಮತ್ತು ಅವರ ತರಬೇತಿ ಕೇಂದ್ರಗಳ ಮೇಲೂ ಪ್ರತಿ ದಾಳಿಗಳನ್ನು ಸಂಘಟಿಸಿದ್ದರು. ಜೋರ್ಡಾನ್ ಮತ್ತು ಸಿರಿಯಾದಲ್ಲಿರುವ ಹಳ್ಳಿಗಳಲ್ಲಿ ರಚಿಸಿದ ನಿರಾಶ್ರಿತರ ನೆಲೆಗಳ ಮೇಲೂ ಇಸ್ರೇಲ್ ದಾಳಿ ಮಾಡಿತು. ಎರಡೂ ಗುಂಪುಗಳಲ್ಲಿ ಅನೇಕ ಮುಗ್ಧ ಜನರು ಇಂತಹ ದಾಳಿಗೆ ಬಲಿಯಾಗ ಬೇಕಾಯಿತು. ಮುಖ್ಯವಾಗಿ, ಯುವ ಜನರು ಹೆಚ್ಚಾಗಿ ದಾಳಿಯ ಮಂಚೂಣಿಯಲ್ಲಿದ್ದು, ಹೋರಾಟ ನಡೆಸಿದ್ದುದರಿಂದ ದ್ವೇಷ ಮತ್ತು ಗಲಭೆಗೆ ಬಲಿಯಾದರು. ವಾತಾವರಣದ ತೀವ್ರತೆಯನ್ನು ಗಮನಿಸಿದ ಅರಬ್ ಮುಖಂಡರು ಎಲ್ಲ ಅರಬ್ ದೇಶಗಳ ರಾಜಧಾನಿಗಳಿಗೂ ಮಾಹಿತಿ ರವಾನಿಸಿ ಇಸ್ರೇಲ್ ರಾಜ್ಯ ಮತ್ತು ಯಹೂದಿಗಳನ್ನು ನಿರ್ನಾಮ ಮಾಡಲು ಕರೆ ನೀಡಿದರು. ದಿನೇ ದಿನೇ ಹೆಚ್ಚುತ್ತಿದ್ದ ಅರಬರ ವಿರೋಧರಿಂದ, ಇಸ್ರೇಲ್ ರಾಜ್ಯ ಬೃಹತ್ ಪ್ರಮಾಣದಲ್ಲಿ ಯುದ್ಧ ವಿಮಾನಗಳನ್ನು ಟ್ಯಾಂಕರ್‌ಗಳನ್ನು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಿಂದ ಖರೀದಿಸತೊಡಗಿತು. ಇದನ್ನು ಪ್ರೋ ಸೈನ್ಯಾಧಿಕಾರಿಗಳು ಇಸ್ರೇಲ್ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಸಂದರ್ಭದಲ್ಲಿ ಇಸ್ರೇಲ್ ರಾಜಧಾನಿ ತೆಲ್ ಅವೀವ್ ಕುರಿತು ವರದಿ ಮಾಡಿದ ಮಾಧ್ಯಮ ಪ್ರತಿನಿಧಿ ಹೀಗೆ ಬರೆಯುತ್ತಾರೆ.

ಈ ದೇಶದ ಬುದ್ದಿವಂತಿಕೆ ಯುದ್ಧಭೂಮಿಗೆ ಬಳಕೆಯಾಗುತ್ತಿದೆ. ಯುದ್ಧ ಟ್ಯಾಂಕ್‌ಗಳು ಹಾಗೂ ಬುಲ್ಡೋಜರ್‌ಗಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿವೆ. ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

೧೯೬೬ ಮತ್ತು ೧೯೬೭ರಲ್ಲಿ ಪರಿಸ್ಥಿತಿ ಗಂಭೀರ ಮಟ್ಟಕ್ಕೆ ತಲುಪಿ, ಎರಡೂ ಕಡೆಯಿಂದ ಬೇಕಾದ ಪೂರ್ವ ತಯಾರಿಯನ್ನು ಪ್ರದರ್ಶಿಸಿಕೊಂಡವು. ಜೋರ್ಡಾನ್ ಮತ್ತು ಸಿರಿಯಾವನ್ನು ಒತ್ತಾಯಿಸಿ, ಈಜಿಪ್ಟ್ ಅಧ್ಯಕ್ಷ ಅಬ್ದುಲ್ ನಾಸರ್, ತನ್ನ ಶಕ್ತಿಯನ್ನು ಜಗತ್ತಿಗೆ ಬಲಾತ್ಕಾರವಾಗಿ ಪಾನ್-ಅರಬಿಸಂ ಹೆಸರಿನಲ್ಲಿ ಪ್ರದರ್ಶಿಸುವ ಅನಿವಾರ್ಯತೆ ಇತ್ತು. ಕೈರೋ ರೇಡಿಯೊ ಮತ್ತು ಪತ್ರಿಕೆಗಳು ಇಸ್ರೇಲ್ ರಾಜ್ಯ ಮತ್ತು ಯಹೂದಿ ಸಮುದಾಯದ ಕುರಿತು ಅವಮಾನಕಾರಿ ಭಾಷೆಗಳಲ್ಲಿ ದೂರುವುದು, ಹೇಳಿಕೆಗಳನ್ನು ಬಿತ್ತರಿಸುವುದನ್ನು ಆರಂಭಿಸಿದವು. ಪೂರ್ವ ಯೋಜನೆಯಂತೆ ನಾಸರ್, ಪ್ಯಾಲೇಸ್ತೀನ್ ಪ್ರದೇಶವನ್ನು ಸ್ವತಂತ್ರಗೊಳಿಸುವುದು ಮತ್ತು ಇಸ್ರೇಲ್ ರಾಜ್ಯವನ್ನು ಧ್ವಂಸ ಮಾಡುವುದು ಎರಡು ಪ್ರಮುಖ ಉದ್ದೇಶಗಳನ್ನಿಟ್ಟುಕೊಂಡಿದ್ದನು. ಆ ಕುರಿತು ಅರಬರ ಮುಂದೆ ಪ್ರತಿಜ್ಞೆಯನ್ನು ನಾಸರ್ ಮಾಡಿದ್ದ. ಅವರ ಹೋರಾಟಕ್ಕೆ ಬೇಕಾದ ಎಲ್ಲ ಸಹಕಾರವನ್ನು ನೀಡುವುದಾಗಿ ಘೋಷಿಸಿದ. ಪಿಎಲ್‌ಓ ಅಧ್ಯಕ್ಷ ಯಾಸರ್ ಅರಾಫತ್ ಭಾವೋದ್ರೇಕದಿಂದ ನಾಸರ್ ನಾಯಕತ್ವದಲ್ಲಿ ಸಂಘಟಿಸುವ ಸೈನಿಕ ಕಾರ್ಯಾಚರಣೆಯಲ್ಲಿ ಬದುಕುಳಿಯುವ ಯಹೂದಿಯರನ್ನು ಅರಬರು ರಕ್ಷಿಸುವರೆಂದು ಹೇಳಿಕೆ ನೀಡಿದ್ದನು. ಅರಾಫತ್‌ನ ದೃಷ್ಟಿಯಲ್ಲಿ ನಾಸರ್ ನಡೆಸುವ ಸೈನಿಕ ಕಾರ್ಯಾಚರಣೆಯಲ್ಲಿ ಯಾವುದೇ ಯಹೂದಿಗಳು ಬದುಕುಳಿಯುವ ಸಾಧ್ಯತೆಯಿಲ್ಲ ಎಂಬುದು ಲೆಕ್ಕಾಚಾರ.

ಇಸ್ರೇಲ್ ರಾಜ್ಯವು ಕೂಡ ಇಂತಹ ಅವಕಾಶವನ್ನು ಮುಂದೆ ನೋಡುತ್ತಿತ್ತು. ೧೮೯೮ರಲ್ಲಿ ಆರಂಭವಾದ ಅವರ ರಾಷ್ಟ್ರೀಯ ಅಂದೋಲನ ಎರಡು ಯೋಜನೆಗಳನ್ನಿಟ್ಟು ಕೊಂಡಿತ್ತು. ಒಂದನೆಯದು, ಜಗತ್ತಿನಾದ್ಯಂತ ಚದುರಿಹೋದ ಯಹೂದಿಗಳನ್ನು ಒಂದುಗೂಡಿಸಿ ೨೦೦೦ ವರ್ಷಗಳಷ್ಟು ಹಿಂದೆ ತಮ್ಮ ಕೈ ತಪ್ಪಿಹೋದ ತಮ್ಮ ದೇಶಕ್ಕೆ ಮರಳುವುದು ಮತ್ತು ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿ ಪ್ಯಾಲೇಸ್ತೀನ್‌ನಲ್ಲಿ ಹೊಸ ಆರ್ಥಿಕ, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನವನ್ನು ಆರಂಭಿಸಿ ಪ್ಯಾಲೇಸ್ತೀನ್‌ನನ್ನು ಶ್ರೀಮಂತಗೊಳಿಸುವುದು. ಈ ಗುರಿಯನ್ನು ೧೯೪೮ರ ಮೇ ೧೪ರಂದು ಈಡೇರಿಸಿಕೊಂಡರು. ಎರಡನೆಯ ಯೋಜನೆ, ಹೊಸದಾಗಿ ಸ್ಥಾಪಿಸುವ ರಾಜ್ಯದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳು ವುದು, ಅದನ್ನು ಸುತ್ತುವರಿದ ವೈರಿಗಳನ್ನು ಧೈರ್ಯದಿಂದ ಎದುರಿಸುವುದು ಮತ್ತು ನಿಧಾನವಾಗಿ ಬೌಗೋಳಿಕವಾಗಿ ಗಡಿಯನ್ನು ವೃದ್ದಿಸಿಕೊಳ್ಳುವುದು, ಗಡಿರೇಖೆಯನ್ನು ವೃದ್ದಿಸಿ ಹೊಸ ಪ್ರದೇಶಗಳ ಆಕ್ರಮಣ ಇಸ್ರೇಲ್ ರಾಜ್ಯಕ್ಕೆ ೧೯೪೮ರ ನಂತರ ಅನಿವಾರ್ಯವೂ ಆಗಿತ್ತು. ಇದಕ್ಕೆ ಕಾರಣ, ಯಹೂದಿಗಳು ೧೯೪೮ರಲ್ಲಿ ತಮ್ಮದೇ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿದ ನಂತರ ಜಗತ್ತಿನಾದ್ಯಂತ ಇರುವ ಯಹೂದಿಗಳನ್ನು ಆಹ್ವಾನಿಸಿ ತಮ್ಮದೇ ದೇಶದಲ್ಲಿ ಬಂದು ನೆಲೆಸಲು ಸರಕಾರ ಒಂದು ಆಜ್ಞೆ ಹೊರಡಿಸಿತು. ಸುಮಾರು ಎರಡು ಸಾವಿರ ವರ್ಷಗಳಷ್ಟು ಕಾಲ ನಾಗರಿಕ ಹಕ್ಕುಗಳನ್ನು ಕಳೆದುಕೊಂಡವರು ಆ ಹಕ್ಕುಗಳನ್ನು ಅಧಿಕೃತವಾಗಿ ಅನುಭವಿಸಲು ತಮ್ಮದೇ ದೇಶಕ್ಕೆ ಲಕ್ಷಗಟ್ಟಲೆ  ಯಹೂದಿ ನಾಗರಿಕರು ಆಗಮಿಸತೊಡಗಿದರು. ಹೀಗೆ ಆಗಮಿಸುವ ನಾಗರಿಕರನ್ನು ಸ್ವಾಗತಿಸಿ ಇಸ್ರೇಲ್ ಒಳಗೆ ಸೇರಿಸಿಕೊಳ್ಳುವುದು, ಅವರ ಬದುಕನ್ನು ಹೊಸದಾಗಿ ರೂಪಿಸಲು ಬೇಕಾದ ವಾತಾವರಣವನ್ನು ರಚಿಸುವುದು ಮತ್ತು ವಸತಿ ಸೌಕರ್ಯ ಏರ್ಪಡಿಸುವುದು ಇಸ್ರೇಲ್ ಸರಕಾರಕ್ಕೆ ಸವಾಲಾಗಿಯೇ ಪರಿಣಮಿಸಿತ್ತು. ಇಸ್ರೇಲ್ ಇಡೀ ಮಧ್ಯಪ್ರಾಚ್ಯ ಪ್ರದೇಶದಲ್ಲಿಯೇ ಅತೀ ಸಣ್ಣ ರಾಷ್ಟ್ರವಾಗಿರುವುದರಿಂದ ಯಹೂದಿ ನಾಗರಿಕರಿಗೆ ವಸತಿ ಸೌಕರ್ಯ ಮತ್ತು ಭೂಮಿಯನ್ನು ಹಂಚುವುದು ಕಷ್ಟ ಸಾಧ್ಯವಾಯಿತು. ಅದೇ ಕಾರಣಕ್ಕೆ ಹೊಸ ಪ್ರದೇಶಗಳ ಆಕ್ರಮಣಕ್ಕೆ ಅವಕಾಶಕ್ಕಾಗಿ ಇಸ್ರೇಲ್ ಸರಕಾರ ನಿರೀಕ್ಷಿಸುತ್ತಿತ್ತು. ಆ ಅವಕಾಶವನ್ನು ಅಬ್ದುಲ್ ನಾಸರ್ ಸೃಷ್ಟಿಸಿದಾಗ ಅವರ ಸಂಪೂರ್ಣ ಲಾಭ ಪಡೆಯಲು ಇಸ್ರೇಲ್ ಹಿಂಜರಿಯಲಿಲ್ಲ.

೧೯೬೭ರ ಮೇ ೧೬ರಂದು ನಾಸರ್ ವಿಶ್ವಸಂಸ್ಥೆಯ ಎಮರ್ಜೆನ್ಸಿ ಪೋರ್ಸ್‌ನ್ನು ಈಜಿಪ್ಟ್‌ನ್ನು ಅವಿಭಾಜ್ಯ ಅಂಗವಾಗಿರುವ ಸಿನೈಯಿಂದ ವಾಪಾಸ್ಸು ಕರೆಯಿಸಿಕೊಂಡು ೧೯೫೬ ರಿಂದ ಇಸ್ರೇಲ್ ಆಕ್ರಮಿಸಿಕೊಂಡ ಈ ಪ್ರದೇಶವನ್ನು ತೆರವುಗೊಳಿಸುವ ಒಂದು ಆಜ್ಞೆಯನ್ನು ಹೊರಡಿಸಿದನು. ಪೂರ್ವಬಾವಿಯಾಗಿ, ಈಜಿಪ್ಟ್‌ನ ಸೇನೆ, ಶರ್ಮ, ಎಲ್ .ಶೇಖ್ ಪ್ರದೇಶವನ್ನು ಆಕ್ರಮಿಸಿ ಇಸ್ರೇಲ್‌ನ ಸರಕು ಸಾಗಾಟಕ್ಕೆ ಪ್ರಮುಖ ಬಂದರಾದ ಇಲಾಥ್‌ಗೆ ಯಾವುದೇ ಸೈನಿಕ ತುಕ್ಕಡಿಯ ಪ್ರವೇಶವನ್ನು ನಿಷೇಧಿಸಿತು. ಇದನ್ನು ಗಮನಿಸಿದ ಇಸ್ರೇಲ್ ರಾಜ್ಯ, ತಮ್ಮ ಇರುವಿಕೆಯನ್ನು ರಕ್ಷಿಸಿಕೊಳ್ಳಲು ಅರಬ್ಬರ ವಿರುದ್ಧ ಹೋರಾಟಲೇ ಬೇಕು ಎಂಬ ದೃಢ ನಿರ್ಧಾರಕ್ಕೆ ಬಂತು. ಅದಕ್ಕೆ, ಜೂನ್ ೨ ರಂದು ಇಸ್ರೇಲ್ ಸರಕಾರ ಮೊಷೆ ದಯಾನ್‌ನನ್ನು ರಕ್ಷಣ ಸಚಿವನ್ನಾಗಿ ನೇಮಿಸಿ ಅವನಿಗೆ ಕಾರ್ಯಾಚರಣೆಯ ಉಸ್ತುವಾರಿಯನ್ನು ವಹಿಸಲಾಯಿತು. ಇದೇ ಸಮಯವನ್ನು ಕಾಯುತ್ತಿದ್ದ ಇಸ್ರೇಲಿಗರು ಖಾಯಂ ಆಗಿ ಗಡಿಯನ್ನು ಬದಲಿಸಬೇಕೆಂದು ನಿರ್ಧಾರಕ್ಕೆ ಬಂದು ಅರಬ್ ಭೂಮಿಯನ್ನು ಆಕ್ರಮಿಸತೊಡಗಿತು.

೧೯೪೮ರ ನಂತರ ಅತೀ ದೊಡ್ಡ ಮಟ್ಟದಲ್ಲಿ ನಡೆದ ಸೈನಿಕ ಕಾರ್ಯಾಚರಣೆ ಇದಾಗಿದ್ದು, ಯಹೂದಿಗಳು ಇದನ್ನು ಸವಾಲಾಗಿ ಸ್ವೀಕರಿಸಿದರು. ಸಿರಿಯಾ, ಜೋರ್ಡಾನ್ ಮತ್ತು ಈಜಿಪ್ಟ್ ದೇಶಗಳಿಂದ ಏಕಕಾಲದಲ್ಲಿ ಮೂರೂ ದಿಕ್ಕಿನಿಂದ ಅರಬ್ ಸಮುದಾಯ ಕಾರ್ಯಾಚರಣೆ ಆರಂಭಿಸಬಹುದೆಂಬ ಮಾಹಿತಿ ಇಸ್ರೇಲ್‌ಗೆ ಇತ್ತು. ಅವರ ಕಡೆಯಿಂದ ದಾಳಿ ಖಚಿತವೆಂಬುದನ್ನು ದೃಢೀಕರಿಸಿ, ಅರಬರು ದಾಳಿಯನ್ನು ಮೊದಲು ಆರಂಭಿಸಲಿ ಎಂದು ಕಾದು ನೋಡದೇ, ಇಸ್ರೇಲ್ ಸರಕಾರವೇ ಅರಬರ ಮೇಲೆ ಮೊದಲು ದಾಳಿಯನ್ನು ಆರಂಭಿಸಿತು. ಇದು ಮೂರನೆ ಅರಬ್-ಇಸ್ರೇಲ್ ಯುದ್ಧಕ್ಕೆ ಚಾಲನೆ ನೀಡಿತು. ಮೇ ೫ರ ಬೆಳಿಗ್ಗೆ ಇಸ್ರೇಲ್ ಸೈನ್ಯ ಅರಬ್‌ರಿಗೆ ಸೇರಿದ ಸುಮಾರು ಹತ್ತು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿತು. ಮೊದಲು ಅವರು ಬಳಸುವ ರನ್ ವೇಗಳನ್ನು ದ್ವಂಸ ಮಾಡಲಾಯಿತು. ನಂತರ ಅನೇಕ ಮಿಗ್ ಪೈಟರ್ ಗಳನ್ನು ನಾಶಪಡಿಸಲಾಯಿತು. ಕಾರ್ಯಾಚರಣೆ ಆರಂಭವಾಗಿ ಮೂರು ಗಂಟೆಯೊಳಗೆ ಈಜಿಪ್ಟ್‌ಗೆ ಸೇರಿದ ೩೦೦ ಯುದ್ಧ ವಿಮಾನಗಳನ್ನು ಧ್ವಂಸ ಮಾಡಲಾಯಿತು. ಅದೇ ಸಮಯದಲ್ಲಿ ಸಿರಿಯಾ, ಜೋರ್ಡಾನ್ ಮತ್ತು ಇರಾಕ್‌ನಲ್ಲೂ ದಾಳಿಯನ್ನು ಇಸ್ರೇಲ್ ಸೈನ್ಯ ಯೋಜಿಸಿತ್ತು. ಒಟ್ಟಿಗೆ ಅರಬ್‌ರಿಗೆ ಸೇರಿದ ೪೦೦ ವಿಮಾನಗಳನ್ನು ಒಂದೇ ದಿನ ಬೆಳಿಗ್ಗೆ ಇಸ್ರೇಲ್ ನಾಶ ಮಾಡಿದ್ದು, ಇಸ್ರೇಲ್ ತನ್ನ ೨೬ ವಿಮಾನಗಳನ್ನು ಕಳೆದುಕೊಂಡಿತು. ಯುದ್ಧದ ಫಲಿತಾಂಶವನ್ನು ಕೆಲವೇ ಗಂಟೆಗಳ ಕಾರ್ಯಾಚರಣೆ ನಿರ್ಧರಿಸಿತು.