ನಾಸರ್‌ನ ಮರಣಾನಂತರ ಇಡೀ ಅರಬ್ ಜಗತ್ತಿನಲ್ಲಿ ಒಂದು ಬಲಿಷ್ಠ ಪ್ರಾದೇಶಿಕ ಶಕ್ತಿಯಾಗಿ ಸೌದಿ ಅರೇಬಿಯಾ ಉಗಮವಾಯಿತು. ಇದನ್ನು ಎಲ್ಲ ಅರಬ್ ದೇಶಗಳ ಮುಖಂಡರು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ೧೯೬೭ರ ಯುದ್ಧದ ನಂತರ, ಸುಡಾನ್ ದೇಶದ ಖಾರ್ ಟೌಮ್ ನಗರದಲ್ಲಿ ಆಯೋಜಿಸಿದ ಸಮ್ಮೇಳನದಲ್ಲಿ ಶಾಂತಿ ಮಾತು ಕತೆಗೆ ಸಂಬಂಧಿಸಿದ ಚರ್ಚೆಯಲ್ಲಿ ಇಸ್ರೇಲ್ ಸರಕಾರ ಯುದ್ಧದಲ್ಲಿ ಆದ ನಷ್ಟವನ್ನು ಅರಬ್ ಸರಕಾರ ಭರಿಸಬೇಕು ಎಂದು ಶರತ್ತು ಹಾಕಿತು. ಮುಖ್ಯವಾಗಿ ಯುದ್ದಕಾಲದ ನಷ್ಟವನ್ನು ಈಜಿಪ್ಟ್ ಅಧ್ಯಕ್ಷ ಅಬ್ದುಲ್ ನಾಸರ್ ನೀಡಬೇಕಿತ್ತು. ಇದಕ್ಕೆ ತಪ್ಪಿದಲ್ಲಿ ಇಸ್ರೇಲ್ ಯುದ್ಧ ಮುಂದುವರಿಸುವುದಾಗಿಯೂ ಬೆದರಿಕೆ ಒಡ್ಡಿತು. ಈಜಿಪ್ಟ್ ಸರಕಾರ ಆಗಲೇ ಹಲವು ಬಗೆಯ ನಷ್ಟವನ್ನು ಅನುಭವಿಸಿದ್ದು, ಯುದ್ಧೋತ್ತರ ದಿನದ ಈಜಿಪ್ಟ್ ಪುನರ್ ಸಂಘಟನೆಗೂ ಮಿಲಿಯಗಟ್ಟಲೆ ಹಣ ಬೇಕಿತ್ತು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಇಸ್ರೇಲ್ ಹಾಕುವ ಶರತ್ತುಗಳನ್ನು ಒಪ್ಪಿಕೊಳ್ಳಲು ಈಜಿಪ್ಟ್ ಸರಕಾರಕ್ಕೆ ಸಾಧ್ಯವಾಗುವುದಿಲ್ಲ. ಇದೇ ಸಂದರ್ಭದಲ್ಲಿ ಸೌದಿ ದೊರೆ ಪೈಸಲ್ ಪೂರಕವಾಗಿ ಬಳಸಿಕೊಳ್ಳುತ್ತಾನೆ.

ಹಿಂದೆ ಇದೇ ನಾಸರ್ ಸೌದಿ ಅರೇಬಿಯಾವನ್ನು ಟೀಕಿಸುತ್ತಾ, ದೊರೆ ಪೈಸಲ್ ಅಮೆರಿಕ ಸಾಮ್ರಾಜ್ಯಶಾಹಿಯ ಕೈಗೊಂಬೆ ಎಂದು ಟೀಕಿಸಿದ್ದಲ್ಲದೆ, ಎಲ್ಲ ತೀವ್ರಗಾಮಿಗಳನ್ನು ಸೌದಿ ಅರಸೊತ್ತಿಗೆ ವಿರುದ್ಧ ಎತ್ತಿ ಕಟ್ಟಿದ್ದನು. ಆದರೆ, ಖಾರ್‌ಟೌಮ್ ಸಮ್ಮೇಳನದಲ್ಲಿ ನಾಸರ್ ಸಂಕಷ್ಟದಲ್ಲಿ ಸಿಲುಕಿದ್ದಾಗ ಸೌದಿ ದೊರೆ ಮಧ್ಯಪ್ರವೇಶ ಮಾಡಿ ಯಾವುದೇ ಶರತ್ತುಗಳಿಲ್ಲದೆ, ಇಸ್ರೇಲ್ ಹಾಕಿದ ಶರತ್ತಿನನ್ವಯ ಯುದ್ಧ ಕಾಲದ ನಷ್ಟವನ್ನು ಸೌದಿ ಖಜನೆಯಿಂದ ಕೊಡುವುದಾಗಿ ಒಪ್ಪಿಕೊಂಡಿತು. ಇದಕ್ಕಿಂತಲೂ ಮೂರು ಅರಬ್ ರಾಷ್ಟ್ರಗಳಾದ ಈಜಿಪ್ಟ್, ಸಿರಿಯಾ ಮತ್ತು ಜೊರ್ಡಾನಿನ ಆರ್ಥಿಕ, ಸೈನಿಕ ಪುನಾರಚನೆಗೆ ಬೇಕಾದ ಮಿಲಿಯದಷ್ಟು ಹಣಕಾಸಿನ ಸಹಾಯವನ್ನು ಸೌದಿ ಸರಕಾರ ನೀಡುವುದಾಗಿ ಪ್ರತಿಜ್ಞೆ ಮಾಡಿತು. ಯಾವುದೇ ಶರತ್ತುಗಳನ್ನು ಹಾಕದೆ, ವಾಪಸ್ಸು ಈ ದೇಶಗಳಿಂದ ಏನನ್ನು ನಿರೀಕ್ಷಿಸದೆ ಮಾಡಿರುವ ಸೌದಿ ದೊರೆಯ ಸಹಾಯ, ಅರಬ್ ಜಗತ್ತಿನಲ್ಲಿ ಅವನ ಕುರಿತು ಒಂದು ಅಭಿಪ್ರಾಯವನ್ನು ಸೃಷ್ಟಿಸಿತು. ಹಾಗಾಗಿ, ೧೯೬೭ರ ಯುದ್ಧದ ನಂತರ ನಿಧಾನವಾಗಿ ದೊರೆ ಪೈಸಲ್‌ನ ಪ್ರಭುತ್ವದ ಪ್ರಭಾವ ವೃದ್ದಿಸುತ್ತಲೇ ಇತ್ತು.

೧೯೭೩ರ ಅರಬ್-ಇಸ್ರೇಲ್ ಯುದ್ಧ ಸೌದಿ ದೊರೆಗೆ ಮತ್ತಷ್ಟು ಹಿರಿಮೆಯನ್ನು ತಂದಿತು. ಇಡೀ ಅರಬ್ ಜಗತ್ತನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಪ್ಯಾಲೇಸ್ತೀನಿ ಅರಬ್ ನಿರಾಶ್ರಿತರ ಸಮಸ್ಯೆಗೆ ಅಂತಾರಾಷ್ಟ್ರೀಯ ಸಮುದಾಯವನ್ನು ಎಚ್ಚರಿಸಲು ತೈಲವನ್ನು ಆರ್ಥಿಕ ಹಾಗೂ ರಾಜಕೀಯ ಅಸ್ತ್ರವನ್ನಾಗಿ ಸೌದಿ ದೊರೆ ಪರಿವರ್ತಿಸಿದನು. ಇದಲ್ಲದೆ, ಸೌದಿ ಅರೇಬಿಯಾ ಜಗತ್ತಿನಲ್ಲಿಯೇ ಅತೀ ಹೆಚ್ಚು ತೈಲ ಸಂಪತ್ತನ್ನು ಹೋರಾಟದ ಮುಂಚೂಣಿಯಲ್ಲಿ ಈಜಿಪ್ಟ್ ಜೊತೆಗೆ ಇಸ್ರೇಲ್ ವಿರುದ್ಧ ಕಾರ್ಯಾಚರಣೆ ನಡೆಸಿದ ಇನ್ನೊಂದು ದೇಶ ಸಿರಿಯಾ. ೧೯೪೯, ೧೯೫೬, ೧೯೬೭ ಮತ್ತು ೧೯೭೩ರಲ್ಲಿ ಆದ ಎಲ್ಲ ನಾಲ್ಕು ಅರಬ್-ಇಸ್ರೇಲ್ ಯುದ್ಧಗಳಲ್ಲಿ ಸಿರಿಯಾದ ಭಾಗವಹಿಸುವಿಕೆ ಇತ್ತು. ಅದಲ್ಲದೆ, ನಿರಂತರವಾಗಿ ಸಿರಿಯಾ ಸರಕಾರ ಶಾಂತಿ ನೆಲೆಸದೇ ಇರಲು ಅಮೆರಿಕ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿತ್ತು. ಹಾಗೇನೆ, ಇಸ್ರೇಲ್ ನೊಂದಿಗೆ ಅದರ ಕಾರ್ಯಾಚರಣೆಯನ್ನು ನಿಲ್ಲಿಸಬೇಕಾದರೆ ಅಮೆರಿಕ ಸರಕಾರ ಅರಬ್ ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಮಾಡುವ ಪ್ರಯತ್ನದ ಕುರಿತು ಅರಬ್ಬರಿಗೆ ಹಸಿರು ನಿಶಾನೆ ತೋರಿಸಬೇಕು. ಅದು ಕಾರ್ಯರೂಪಕ್ಕೂ ಬರಬೇಕು ಎಂಬುದು ಸಿರಿಯಾ ಸರಕಾರದ ಅಭಿಲಾಷೆ.

ಸಿರಿಯಾ ಅಧ್ಯಕ್ಷ ಕಿಸ್ಸಿಂಜರ್‌ನೊಂದಿಗೆ ಸಕಾರಾತ್ಮಕವಾಗಿ ವ್ಯವಹರಿಸಲು ಇನ್ನೊಂದು ಕಾರಣವೂ ಇದೆ. ಈಜಿಪ್ಟ್ ಹಾಗೆ ೧೯೬೭ರ ಯುದ್ಧದ ಸಂದರ್ಭದಲ್ಲಿ ಇಸ್ರೇಲ್ ಸಿರಿಯಾಕ್ಕೆ ಸೇರಿದ ಗೋಲ್ಡನ್ ಹೈಟ್ಸ್ ಮತ್ತು ಗಾಝ ಪಟ್ಟಿಯನ್ನು ಆಕ್ರಮಿಸಿ, ಅವೆರಡನ್ನೂ ಆ ನಂತರ ಇಸ್ರೇಲ್ ಸರಕಾರ ಸಿರಿಯಾಕ್ಕೆ ಬಿಟ್ಟುಕೊಟ್ಟಿರಲಿಲ್ಲ. ಅನ್ವರ್ ಸಾದತ್ ಆಲೋಚಿಸಿದಂತೆ, ಅಸಾದ್ ಕೂಡ, ಈ ಎರಡು ಪ್ರದೇಶಗಳಿಗಾಗಿ ರಷ್ಯಾ ನೀಡುವ ಸಹಾಯ ಸಾಕಾಗುವುದಿಲ್ಲ ಮತ್ತು ಪ್ಯಾಲೇಸ್ತೀನಿ ಅರಬ್ ಪ್ರಶ್ನೆಯನ್ನು ಸರಿಪಡಿಸಲು ಕೇವಲ ರಷ್ಯಾವನ್ನು ಅವಲಂಬಿಸಿದರೂ ಆಗದು ಎಂದು ಅರಿವು ಇತ್ತು. ಅಮೆರಿಕದಂತಹ ದೇಶ ಅಂತಹದ್ದೊಂದು ಪ್ರಯತ್ನ ಮಾಡಿ ಇಸ್ರೇಲ್‌ನೊಂದಿಗೆ ಸೌಹಾರ್ದದಿಂದ ಬದುಕುವ ವಾತಾವರಣ ರಚಿಸಿದರೆ, ಅದೇ ಸಂದರ್ಭದಲ್ಲಿ ಇಸ್ರೇಲ್ ಮೇಲೆ ಒತ್ತಾಯ ಹೇರಿ, ಅದು ಆಕ್ರಮಿಸಿಕೊಂಡ(ಸಿರಿಯಾಕ್ಕೆ ಸೇರಿದ) ಎರಡು ಪ್ರಾಂತ್ಯ ಗಳನ್ನು ಹಿಂದಕ್ಕೆ ಪಡೆಯಬಹುದೆಂಬ ದೂರಾಲೋಚನೆ ಸಿರಿಯಾ ಅಧ್ಯಕ್ಷನದ್ದು.

ಈ ಬೆಳವಣಿಗೆ ಕಿಸ್ಸಿಂಜರ್‌ಗೆ ಪೂರಕವೇ ಆಗಿತ್ತು. ತನ್ನ ಭೇಟಿಯ ಸಂದರ್ಭದಲ್ಲಿ ಶಾಂತಿ ಮಾತುಕತೆಗೆ ಅಮೆರಿಕದ ಬೆಂಬಲವನ್ನು ಮನದಟ್ಟು ಮಾಡಿದ ಮತ್ತು ಆಯಿಲ್ ಎಂಬಾರ್ಗೊ ವಾಪಸಾತಿಗೆ ಸಿರಿಯಾ ಕೂಡ ಬೆಂಬಲ ಸೂಚಿಸಿತು. ಮುಂಚೂಣಿಯಲ್ಲಿದ್ದು ಇಸ್ರೇಲ್ ವಿರುದ್ದ ಹೋರಾಡಿದ ಇನ್ನೊಬ್ಬ ಅರಬ್ ಮುಖಂಡ ಜೋರ್ಡಾನ್ ದೊರೆ ಹುಸೇನ್. ರಾಜಧಾನಿ ಅಮ್ಮನ್‌ಗೆ ಭೇಟಿ ಮಾಡಿದ ಕಿಸ್ಸಿಂಜರ್ ಅದೇ ರೀತಿಯ ಆಶ್ವಾಸನೆಯನ್ನು ದೊರೆ ಹುಸೇನ್‌ಗೂ ಅಮೆರಿಕ ಪರವಾಗಿ ನೀಡುತ್ತಾನೆ. ಹುಸೇನ್‌ಗೆ ತಿರಸ್ಕರಿಸಲು ಅಸಾಧ್ಯವಾಯಿತು. ಏಕೆಂದರೆ, ೧೯೬೭ರ ಅರಬ್ -ಇಸ್ರೇಲಿ ಯುದ್ಧದ ಸಮಯದಲ್ಲಿ ಜೊರ್ಡಾನ್‌ಗೆ ಸೇರಿದ ಫಲವತ್ತಾದ ಭೂಪ್ರದೇಶದ ಪಶ್ಚಿಮ ದಂಡೆಯನ್ನು ಇಸ್ರೇಲ್ ಆಕ್ರಮಿಸಿಕೊಂಡಿದ್ದು, ವಿಶ್ವಸಂಸ್ಥೆಯ ಒತ್ತಾಯದ ನಡುವೆಯೂ ಇಸ್ರೇಲ್ ಆ ಪ್ರದೇಶವನ್ನು ತೆರವುಗೊಳಿಸುವ ಯಾವ ಲಕ್ಷಣವೂ ಜೋರ್ಡಾನ್ ದೊರೆಗೆ ಕಂಡುಬಂದಿಲ್ಲ. ಅದಕ್ಕಾಗಿಯೇ, ದೊರೆ ಹುಸೇನ್ ಕೂಡ ಕಿಸ್ಸಿಂಜರ್ ಯೋಜನೆಗೆ ಹಸಿರು ನಿಶಾನೆ ತೋರಿಸಿದನು.

ಅರಬ್ ರಾಜಧಾನಿಗಳಲ್ಲಿ ಹಂತ ಹಂತವಾಗಿ ಯಶಸ್ಸನ್ನು ಅನುಭವಿಸಿದ ಹೆನ್ರಿ ಕಿಸ್ಸಿಂಜರ್, ಅರಬ್‌ರೊಂದಿಗೆ ಮಾತುಕತೆಗೆ ಸಿದ್ಧವಾಗಲು ಇಸ್ರೇಲ್ ರಾಜ್ಯವನ್ನು ಒಪ್ಪಿಸಲು ಹರಸಾಹಸ ಮಾಡಬೇಕಾಯಿತು. ಕಿಸ್ಸಿಂಜರ್ ಸುಲಭವಾಗಿ ಅರಬ್ ರಾಜಧಾನಿ ಗಳಲ್ಲಿ ತನ್ನ ಯೋಜನೆಗೆ ಒಪ್ಪಿಗೆ ಪಡೆದರೂ, ಇಸ್ರೇಲ್ ಇನ್ನು ಅರಬ್ಬರ ವಿರುದ್ಧ ಸೇಡು ತೀರಿಸಿಕೊಳ್ಳುವ ಯೋಚನೆಯಲ್ಲೇ ತಲ್ಲೀನವಾಗಿತ್ತು. ಹಾಗಾಗಿ ಅವನ ಜೆರುಸಲೇಂ ಭೇಟಿಯ ಸಂದರ್ಭದಲ್ಲಿ ಇಸ್ರೇಲಿ ಮುಖಂಡರನ್ನು ಒಲಿಸಿ ಅರಬ್‌ರೊಂದಿಗೆ ಸೌಹಾರ್ದ ಯುತ ಶಾಂತಿ ಬದುಕನ್ನು ರೂಪಿಸುವ ಅನಿವಾರ್ಯತೆಯನ್ನು ತಿಳಿಸಿ ಅವರ ಸಮಸ್ಯೆ ಪರಿಹಾರವನ್ನು ಅಮೆರಿಕ ಸರಕಾರವೇ ಕಂಡುಕೊಳ್ಳುವುದೆಂಬ ಹೆಬ್ಬಯಕೆಯನ್ನು ವ್ಯಕ್ತಪಡಿಸಿ ದನು. ಆದರೆ, ಇಸ್ರೇಲ್ ಅಮೆರಿಕದ ಈ ಪ್ರಯತ್ನವನ್ನು ಗುಮಾನಿಯಿಂದಲೇ ನೋಡಿತು. ಅದು ಅಮೆರಿಕ ಅರಬ ಮುಖಂಡರ ಮನ ಒಲಿಸಲು, ಇಸ್ರೇಲಿಗರ ಹಕ್ಕುಗಳನ್ನು ಮಾರಲು ಹೊರಟಿದೆ ಎಂಬ ತೀರ್ಮಾನಕ್ಕೂ ಇಸ್ರೇಲ್ ಸರಕಾರ ಬಂತು. ಅದರಲ್ಲೂ ಈಜಿಪ್ಟಿನವರನ್ನು, ಕೊನೆಗೂ ಇಸ್ರೇಲ್ ತನ್ನ ಒಪ್ಪಿಗೆ ಸೂಚಿಸಿತು.

ಕಿಸ್ಸಿಂಜರ್‌ನ ಉದ್ದೇಶ ನಿಧಾನವಾಗಿ ಹೆಜ್ಜೆ ಇಟ್ಟು ಸಮಸ್ಯೆಗೆ ಪರಿಹಾರ ಹುಡುಕುವ ಆಲೋಚನೆ. ಇಂತಹ ಸಮಸ್ಯೆಯನ್ನು ಏಕ ಕಾಲಕ್ಕೆ ಸರಿಪಡಿಸಲಾಗದು ಎಂಬುದು ಅವನಿಗೂ ಗೊತ್ತಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕವು ಶಾಂತಿ ನೆಲೆಸುವಿಕೆಗೆ ಪ್ರಾಮಾಣಿಕ ಪಾತ್ರ ವಹಿಸುವುದೆಂಬ ನಂಬಿಕೆಯನ್ನು ಒಂದು ಅರಬ್ ರಾಜಧಾನಿಯಿಂದ ಇನ್ನೊಂದು ರಾಜಧಾನಿಗೆ, ಅಲ್ಲಿಂದ ಮತ್ತೆ ಜೆರುಸಲೇಂಗೆ ನಿರಂತರವಾಗಿ ಭೇಟಿ ಕೊಟ್ಟು ಎರಡೂ ಗುಂಪಿನಲ್ಲಿ ಆಶಾಭಾವನೆಯನ್ನು ಹುಟ್ಟಿಸಿದನು. ಹಾಗೆ ಮಾಡಿದ ಪ್ರತಿಫಲವಾಗಿ ಎಲ್ಲರೂ, ಇಸ್ರೇಲ್‌ನೊಂದಿಗೆ ಖಾಯಂ ಯುದ್ಧ ವಿರಾಮ ಘೋಷಿಸುವ ಒಪ್ಪಂದಕ್ಕೆ ಬಂದರು. ಮೊದಲಿಗೆ ಈಜಿಪ್ಟ್ ಮತ್ತು ಇಸ್ರೇಲ್ ನಡುವೆ ಅನಂತರ, ಇಸ್ರೇಲ್ ಮತ್ತು ಸಿರಿಯಾದ ನಡುವೆ.

ಅರಬ್ ದೇಶಗಳು ಮತ್ತು ಇಸ್ರೇಲ್ ರಾಜ್ಯದ ನಡುವೆ ನಡೆದ ಈ ಖಾಯಂ ಯುದ್ಧ ವಿರಾಮ ಒಪ್ಪಂದವು ಕಿಸ್ಸಿಂಜರ್‌ನ ವ್ಯಕ್ತಿಗತವಾದ ವಿಜಯ. ಇದೊಂದು ಅಮೆರಿಕದ ರಾಜತಾಂತ್ರಿಕ ಪ್ರಯತ್ನದಲ್ಲಿ ನಡೆದ ಐತಿಹಾಸಿಕ ಘಟನೆ. ಅಲ್ಲಿಯವರೆಗೆ ಯಾವುದೇ ಅಮೆರಿಕದ ಅಧಿಕಾರಿಗಳಿಗೆ ಅರಬ್ ಇಸ್ರೇಲಿ ಪ್ರಶ್ನೆಯನ್ನು ಸಮರ್ಥವಾಗಿ ನಿರ್ವಹಿಸಲಾಗ ಲಿಲ್ಲ. ಅಂತಹ ಸಂದರ್ಭದಲ್ಲಿ ನಿರಂತರವಾಗಿ ಯುದ್ಧದಲ್ಲಿ ಮುಳುಗಿದ್ದ ಗುಂಪುಗಳನ್ನು ಒಂದು ವೇದಿಕೆಯಲ್ಲಿ ಶಾಂತಿ ಒಪ್ಪಂದಕ್ಕೆ ಒಪ್ಪಿಸಿರುವುದು ಅಮೆರಿಕಕ್ಕೆ ಸಂದ ಗೌರವವು ಹೌದು. ಅದು ಮುಂದೆ ಅಮೆರಿಕ ಪ್ರಾಯೋಜಕತ್ವದ ಕ್ಯಾಂಪ್ ಡೇವಿಡ್ ಆಕಾರ್ಡ್‌ಗೆ ಒಂದು ವೇದಿಕೆಯನ್ನು ರಚಿಸಿತು.

೧೯೭೩ರ ಅರಬ್ಇಸ್ರೇಲಿ ಯುದ್ಧದ ಪರಿಣಾಮಗಳು

ಇದೊಂದು ಅರಬ್-ಇಸ್ರೇಲಿ ಸಮಸ್ಯೆಯ ಇತಿಹಾಸದಲ್ಲಿ ಆದ ಮಹತ್ವದ ಮೈಲಿ ಗಲ್ಲು. ಮೊದಲನೆಯದಾಗಿ, ಪ್ರಾದೇಶಿಕ ನೆಲೆಯಲ್ಲಿ ಸೈನ್ಯದ ಸಮತೋಲನವನ್ನು ತಲೆ ಕೆಳಗು ಮಾಡಿತು ಮತ್ತು ಯುದ್ಧದ ಫಲಿತಾಂಶವು ಇಸ್ರೇಲಿ ಸೈನ್ಯವನ್ನು ಸೋಲಿಸಲಾಗದ ಶಕ್ತಿ ಎಂಬುದು ಒಂದು ಮಿಥ್ಯೆ ಎಂಬುದನ್ನು ಸಮರ್ಥಿಸಿತು. ತೈಲವನ್ನು ರಾಜಕೀಯ ಮತ್ತು ಆರ್ಥಿಕ ಅಸ್ತ್ರವಾಗಿ ಅರಬರು ಬಳಸಲಾರಂಭಿಸಿದರು. ಇದನ್ನು ಗಂಭೀರವಾಗಿ ಚಿಂತಿಸಬೇಕಾದ ವಿಚಾರವೆ.

ಎರಡನೆಯದಾಗಿ, ಸೋವಿಯತ್ ಒಕ್ಕೂಟದ ಪ್ರಭಾವ ದುರ್ಬಲಗೊಂಡಿರುವುದು ಒಂದು ಮಹತ್ವದ ಬೆಳವಣಿಗೆ, ನಾಸರ್ ಆಡಳಿತದ ಕೊನೆಯಲ್ಲಿ ಈ ಹಿನ್ನಡೆ ಬೆಳಕಿಗೆ ಬಂದಿತ್ತು. ಇದು ಮುಂದೆ ಅನ್ವರ್ ಸಾದತ್ ಅವಧಿಯಲ್ಲಿ ದೃಢಪಟ್ಟಿತು. ಅವರ ನಡುವಿನ ಭಿನ್ನಾಭಿಪ್ರಾಯದಿಂದ ಈಜಿಪ್ಟ್ ಅಧ್ಯಕ್ಷ ಸಾದತ್ ರಷ್ಯಾದ ಸೈನಿಕ ತರಬೇತಿದಾರರನ್ನು ಗಡಿಪಾರು ಮಾಡಿದ್ದನು. ಮೂರನೆಯದಾಗಿ, ಅರಬರು, ಅದರಲ್ಲೂ ಈಜಿಪ್ಟಿನವರು ಅರಬ್-ಇಸ್ರೇಲಿ ಶಾಂತಿ ಒಪ್ಪಂದ ನೆರವೇರಲು ಅಮೆರಿಕ ಪ್ರಾಮುಖ್ಯ ಪಾತ್ರ ವಹಿಸಬೇಕೆಂಬುದನ್ನು ಅರಿತರು. ಮಾತ್ರವಲ್ಲ ಇಸ್ರೇಲ್ ಆಕ್ರಮಿಸಿಕೊಂಡು ತಮ್ಮ ಪ್ರಾಂತ ಸಿನ್ಯಾ ಮರುಭೂಮಿ ಹಿಂದಕ್ಕೆ ಪಡೆಯಲು ಅಮೆರಿಕದ ಸಹಕಾರದಿಂದಲೇ ಸಾಧ್ಯವೆಂಬುದು ತಿಳಿಯಿತು. ಆ ನಂತರವು ಮಾಸ್ಕೋ ಸೈನಿಕ, ರಾಜತಾಂತ್ರಿಕ ಮತ್ತು ಆರ್ಥಿಕ ಬೆಂಬಲ ನೀಡಿದ್ದರೂ ಕೂಡ, ಇಸ್ರೇಲ್‌ನೊಂದಿಗಿನ ತನ್ನ ಸಂಬಂಧವನ್ನು ಸಮೃದ್ದಿಗೊಳಿಸಲು ಈಜಿಪ್ಟ್ ಸರಕಾರ ಎಲ್ಲಿಯೂ ಸೋವಿಯತ್ ಒಕ್ಕೂಟಕ್ಕೆ ಅವಕಾಶ ನೀಡಿರಲಿಲ್ಲ.

ನಾಲ್ಕನೆಯದಾಗಿ, ಅರಬ್ ಸಮುದಾಯ ಒಗ್ಗಟ್ಟಿನಿಂದ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಮತ್ತು ಜಪಾನ್ ಮೇಲೆ ಹೇರಿದ್ದ ತೈಲ ನಿರ್ಬಂಧ ಇಡೀ ಅರಬ್-ಇಸ್ರೇಲಿ ಸಮಸ್ಯೆಯ ಸ್ವರೂಪವನ್ನೇ ಬದಲಾಯಿಸಿತು. ಪಶ್ಚಿಮ ಯುರೋಪ್ ಮತ್ತು ಜಪಾನ್ ದೇಶಗಳ ಆರ್ಥಿಕ ಅಭಿವೃದ್ದಿಯ ಅರಬ್ ದೇಶಗಳು ಸರಬರಾಜು ಮಾಡುವ ಕಡಿಮೆ ಬೆಲೆಯ ತೈಲವನ್ನೇ ಅವಲಂಬಿಸಿದ್ದವು. ಹಾಗಾಗಿ ತೈಲ ನಿರ್ಬಂಧ ಪಶ್ಚಿಮದ ದೇಶಗಳಿಗೆ ಆಶ್ಚರ್ಯಕರವಾದ ಪಾಕ್ ಟ್ರೀಟ್‌ಮೆಂಟ್‌ನ್ನು ಕೊಟ್ಟಿತು. ಅಲ್ಲದೆ, ಅಮೆರಿಕ ದಂತಹ ಸಾಮ್ರಾಜ್ಯಶಾಹಿ ದೇಶಗಳಲ್ಲಿ ತೈಲ ಅಭಾವ ಒಂದು ರಾಷ್ಟ್ರೀಯ ಸಮಸ್ಯೆಯಾಗಿ ಹುಟ್ಟಿಕೊಂಡಿತು. ಅಮೆರಿಕದವರು ಬಹುತೇಕ ತೈಲ ಸಂಪತ್ತು ಮತ್ತು ಗ್ಯಾಸನ್ನು ಈ ದೇಶಗಳಿಂದ ಅತೀ ಕಡಿಮೆ ಬೆಲೆ ಕೊಟ್ಟು ಸೂರೆ ಮಾಡುತ್ತಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ ಅಮೆರಿಕದಲ್ಲಿ ಸಾರ್ವಜನಿಕವಾಗಿ ಅಮೆರಿಕ ಸರಕಾರವು ಅರಬ್-ಇಸ್ರೇಲ್ ನಿಲುವಿಗೆ ಸಂಬಂಧಿಸಿದ ನಿರ್ಧಾರಗಳನ್ನು ಪ್ರಶ್ನಿಸಲಾಯಿತು. ಮೊತ್ತ ಮೊದಲ ಬಾರಿಗೆ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಅಮೆರಿಕದ ಇರುವಿಕೆಯನ್ನು ಸಾರ್ವತ್ರಿಕವಾಗಿ ಪ್ರಶ್ನಿಸಲಾಯಿತು. ಇದು ಅರಬ್-ಇಸ್ರೇಲಿ ಬಿಕ್ಕಟ್ಟಿಗೆ ಸಂಬಂಧಿಸಿ ಅಮೆರಿಕದ ದೃಷ್ಟಿಕೋನದಲ್ಲಿ ಬದಲಾವಣೆ ತರಲು ಕಾರಣವೂ ಆಯಿತು. ಯಹೂದಿ ಲಾಬಿಗಳು ಕೂಡ ಯಹೂದಿಯ ರಾಜ್ಯಕ್ಕೆ ಅಮೆರಿಕ ಸರಕಾರ ನೀಡುವ ಬೆಂಬಲ ಕುರಿತು ವಿಮರ್ಶೆ ಮಾಡಲು ಒತ್ತಾಯ ಹೇರಿತು. ಈ ವಿಚಾರದಲ್ಲಿ ಯಹೂದಿಗಳಲ್ಲೂ ಭಿನ್ನಾಭಿಪ್ರಾಯ ಹುಟ್ಟಿಕೊಂಡವು. ಹಾಗಾಗಿ ಸಾದತ್‌ನು ಕಳೆದುಕೊಂಡ ಪ್ರಾಂತವನ್ನು ಮರುಪಡೆಯಲು ಮಾಡಿದ ಪ್ರಯತ್ನ, ಪ್ರದೇಶದ ಆಂತರಿಕ ಮತ್ತು ಬಾಹ್ಯ ವಾತಾವರಣದಲ್ಲಿ ಸಾಕಷ್ಟು ಬದಲಾವಣೆ ಕಾಣಲು ಅನುವು ಮಾಡಿಕೊಟ್ಟಿತು.

ಕೊನೆಯದಾಗಿ, ಸೋವಿಯತ್ ಒಕ್ಕೂಟಕ್ಕೆ ಸಾದತ್‌ನಿಂದ ಒಂದಷ್ಟು ಬೆದರಿಕೆ ಬಂದರೂ, ಈಜಿಪ್ಟ್‌ಗೆ ಅದು ನೀಡುವ ಬೆಂಬಲ ಮುಂದುವರಿದಿತ್ತು. ಆದಾಗ್ಯೂ, ಸಾದತ್ ಮಾತ್ರ ಅದನ್ನು ಪುರಸ್ಕರಿಸದೇ ಇರುವುದು ಈಜಿಪ್ಟ್‌ನೊಂದಿಗೆ ಅಮೆರಿಕಾದ ದೃಷ್ಟಿಕೋನದಲ್ಲಿ ಪರಿಣಾಮಕಾರಿ ಬದಲಾವಣೆ ಕಂಡುಬಂತು. ಆ ನಂತರ ಅಮೆರಿಕ ಮಧ್ಯಪ್ರಾಚ್ಯಕ್ಕೆ ಸಂಬಂಧಿಸಿದ ಪ್ರತಿಯೊಂದು ನಿರ್ಧಾರಕ್ಕೂ ಸೋವಿಯತ್ ಒಕ್ಕೂಟವನ್ನು ಅವಲಂಬಿಸುವುದನ್ನು ನಿಲ್ಲಿಸಿತು. ಅರಬ್ ಜಗತ್ತಿನಲ್ಲಿ ಸಾಧತ್‌ನನ್ನು ನಂಬಿಗಸ್ಥ ನಾಯಕನನ್ನಾಗಿ ಬೆಳೆಸಲು ಅಮೆರಿಕ ಸರಕಾರ ನಿರ್ಧರಿಸಿತು. ವಾಷಿಂಗ್ಟನ್‌ಗೆ ಈಜಿಪ್ಟ್ ರಾಜಧಾನಿ ಕೈರೋ ಪ್ರಾದೇಶಿಕ ಭದ್ರತೆಯನ್ನು ಕಂಡುಕೊಳ್ಳಲು ಕೇಂದ್ರವಾಗಿ ಪರಿವರ್ತನೆಗೊಂಡಿತು. ಅದು ಸೋವಿಯತ್ ಒಕ್ಕೂಟವನ್ನು ಒಂದು ಸೈದ್ಧಾಂತಿಕ ಚೌಕಟ್ಟಿನಲ್ಲಿ ಇರಿಸಿ ಇಸ್ರೇಲ್ ವಿರುದ್ಧ ಅರಬ್ಬರನ್ನು ಎತ್ತಿ ಕಟ್ಟುವ ಒಳಸಂಚನ್ನು ಮಾಡಲಷ್ಟೇ ಸಾಧ್ಯವೆಂದು ಬಣ್ಣಿಸಿತು. ಅದೇ ಕಾರಣಕ್ಕಾಗಿ ಈಜಿಪ್ಟ್ ಮತ್ತು ಸೋವಿಯತ್ ಒಕ್ಕೂಟದ ನಡುವೆ ವೈಷಮ್ಯ ಬೆಳೆಯುತ್ತಿದ್ದಂತೆ ಅಮೆರಿಕ ಪ್ರವೇಶ ಮಾಡಿ ಪರಿಸ್ಥಿತಿಯ ಪೂರ್ಣ ಲಾಭ ಪಡೆಯಿತು. ಇದನ್ನೇ ಅಮೆರಿಕ ಅವಕಾಶವನ್ನಾಗಿ ಬಳಸಿಕೊಂಡು ಕೈರೋ ಮತ್ತು ಮಾಸ್ಕೋ ನಡುವಿನ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಲು ಯಶಸ್ವಿಯಾಯಿತು.

ಕಿಸ್ಸಿಂಜರ್‌ನ ಶಟ್ಲ್ ಡಿಪ್ಲಮಸಿ ಫಲಿತಾಂಶವನ್ನು ಕೊಡಲಿಕ್ಕೆ ಆರಂಭವಾಗುತ್ತಿದ್ದಂತೆ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ವಾಟರ್‌ಗೇಟ್ ಸ್ಕ್ಯಾಂಡಲ್‌ನಲ್ಲಿ ಸಿಲುಕಿಕೊಂಡು ತನ್ನ ಅಧಿಕಾರವನ್ನು ಕಳೆದುಕೊಂಡನು. ಇದರಿಂದ ಕಿಸ್ಸಿಂಜರ್ ಶಾಂತಿ ಮಾತುಕತೆಗೆ ನಡೆಸಿದ ಪ್ರಯತ್ನಗಳು ವ್ಯರ್ಥವಾದವು. ಅಧ್ಯಕ್ಷ ನಿಕ್ಸನ್‌ನ ಉತ್ತರಾಧಿಕಾರಿ ಜರಾರ್ಡ್ ಪೋರ್ಡ್ ಕೇವಲ ನಾಮನಿರ್ದೇಶನ ಅಧ್ಯಕ್ಷನಾಗಿರುವುದರಿಂದ ಸಾರ್ವತ್ರಿಕ ಬೆಂಬಲ ಪಡೆದು, ಸೂಕ್ಷ್ಮ ವಿಚಾರಗಳಾದ ಇಸ್ರೇಲ್-ಅರಬ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಲಾಗಲಿಲ್ಲ. ಇಂತಹ ಹಠಾತ್ ಆಂತರಿಕ ಬಿಕ್ಕಟ್ಟು ಅಮೆರಿಕ ಪ್ರಾಯೋಜಕತ್ವದ ಶಾಂತಿ ಪ್ರಕ್ರಿಯೆ ಅಲ್ಲಿಗೆ ನಿಂತು ಹೋಯಿತು. ಜಿಮ್ಮಿ ಕಾರ್ಟರ್ ಚುನಾಯಿತ ಅಧ್ಯಕ್ಷನಾಗಿ ನೇಮಕವಾಗುವವರೆಗೂ ಈ ಅರಾಜಕತೆ ಮುಂದುವರಿಯಿತು.

೧೯೭೭ರ ಆರಂಭದಲ್ಲಿ ನೇಮಕವಾದ ಜಿಮ್ಮಿ ಕಾರ್ಟರ್, ತನ್ನ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಇಸ್ರೇಲಿ ಪರ ನಿಲುವನ್ನೇ ಪ್ರಕಟಿಸಿದ್ದನು. ಇದು ಅವನಿಗೆ ಅನಿವಾರ್ಯವು ಹೌದು. ಏಕೆಂದರೆ, ಅಮೆರಿಕದ ಅಧ್ಯಕ್ಷ ಚುನಾವಣೆಯಲ್ಲಿ ಯಹೂದಿ ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಿದ್ದು, ಯಾವುದೇ ಅಭ್ಯರ್ಥಿ ಅವರ ಸಹಾನುಭೂತಿ ಪಡೆಯದೇ ಅಮೆರಿಕದ ಅಧ್ಯಕ್ಷ ಗಾದಿಯನ್ನು ಏರಲು ಅಸಾಧ್ಯ. ಅದರ ಸ್ಪಷ್ಟ ಅರಿವಿದ್ದ ಕಾರ್ಟರ್ ತನ್ನ ಚುನಾವಣಾ ಭಾಷಣದುದ್ದಕ್ಕೂ ಯಹೂದಿ ಪರವಾದ ನಿರ್ಧಾರಗಳನ್ನೇ ಹೆಚ್ಚು ಬೆಂಬಲಿಸುತ್ತಿದ್ದ. ಇದು ಅವನ ಕುತಂತ್ರವೂ ಹೌದು. ಅಂತಹ ನಿಲುವನ್ನು ಪ್ರಕಟಿಸಿ ಇಸ್ರೇಲ್ ರಾಜ್ಯವನ್ನು ಮಧ್ಯವರ್ತಿಯಾಗಿ ಬಳಸಿ ಅಮೆರಿಕದಲ್ಲಿ ನೆಲೆ ನಿಂತ ಶ್ರೀಮಂತ ಯಹೂದಿ ಉದ್ಯಮಿಗಳನ್ನು, ಬ್ಯಾಂಕರ್‌ಗಳನ್ನು ತನ್ನತ್ತ ಸೆಳೆದುಕೊಂಡನು. ಆದರೆ, ಅವನು ಅಧ್ಯಕ್ಷನಾಗಿ ಚುನಾಯಿತನಾದ ತಕ್ಷಣವೇ ರಿಚರ್ಡ್ ನಿಕ್ಸನ್ ತಳೆದ ಧೋರಣೆಯನ್ನೇ ಹೆಚ್ಚು ಪಾಲಿಸುತ್ತಾನೆ. ಶಾಂತಿ ಒಪ್ಪಂದದ ಮುಂದುವರಿಕೆಯ ಕುರಿತು ಎಚ್ಚರಿಸುತ್ತಾನೆ. ಎಲ್ಲರನ್ನು ಚಕಿತಗೊಳಿಸಿ, ಹೋದಲ್ಲೆಲ್ಲ ಪ್ಯಾಲೇಸ್ತೀನಿಯರಿಗೆ ಸ್ವತಂತ್ರ ರಾಜ್ಯ ನಿರ್ಮಾಣಕ್ಕೆ ಹೆಚ್ಚು ಒತ್ತು ಕೊಡುವುದು ಅನಿವಾರ್ಯವೆಂದು ಪದೇ ಪದೇ ಹೇಳಿಕೆ ಕೊಡುತ್ತಾನೆ. ಚುನಾವಣೆ ಸಂದರ್ಭದಲ್ಲಿ ಅವನನ್ನು ಬೆಂಬಲಿಸಿದ ಯಹೂದಿಯರ ನಿರೀಕ್ಷೆಗೆ ವಿರುದ್ಧವಾದ ನಿರ್ಧಾರಗಳನ್ನೇ ಪ್ರಕಟಿಸುತ್ತಾನೆ. ಈ ಯಹೂದಿ ಮತದಾರರು, ಅಮೆರಿಕ ರಾಜಕೀಯದಲ್ಲಾಗುವ ಮೇಲಾಟದ ಅರಿವಿಲ್ಲದವರಂತೆ ಆಶ್ಚರ್ಯ ವ್ಯಕ್ತಪಡಿಸಿದರು. ಬಹುಶಃ ಅವರಿಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾಡುವ ಪ್ರತಿಜ್ಞೆಗಳು ಬೇರೆ, ವಾಸ್ತವದಲ್ಲಿ ರಚಿಸುವ ಅಧಿಕೃತ ನಿರ್ಧಾರಗಳು ಬೇರೆ ಎಂಬುದರ ವ್ಯತ್ಯಾಸ ತಿಳಿದಿರಲಿಕ್ಕಿಲ್ಲ.

ಈ ಮಧ್ಯದಲ್ಲಿ ನವೆಂಬರ್ ೧೯೭೭ರಲ್ಲಿ ಇಡೀ ಜಗತ್ತನ್ನೇ ಅಲ್ಲೋಲ ಕಲ್ಲೋಲ ಮಾಡುವಂಥ ಹೇಳಿಕೆಯನ್ನು ಈಜಿಪ್ಟ್ ಅಧ್ಯಕ್ಷ ಅನ್ವರ್ ಸಾದತ್ ಬಹಿರಂಗಪಡಿಸುತ್ತಾನೆ. ಅರಬ್ ಜಗತ್ತಿನ ಬದ್ಧವೈರಿಯಾದ ಇಸ್ರೇಲ್ ರಾಜ್ಯದೊಂದಿಗೆ ಶಾಂತಿ ಮಾತುಕತೆಗೆ ಜೆರುಸಲೇಂಗೆ ಭೇಟಿ ನೀಡುವುದಾಗಿ ಪ್ರಕಟಿಸುತ್ತಾನೆ. ಸಾದತ್‌ನ ಈ ನಿರ್ಧಾರ ಆ ಪ್ರದೇಶದ ರಾಜಕೀಯ ರಂಗದಲ್ಲಿ ಉತ್ಸಾಹಕಾರಿ ಚರ್ಚೆಗೂ ವಾತಾವರಣವನ್ನು ರಚಿಸಿತು.

ಇದೊಂದು ಧೈರ್ಯದಿಂದ, ಆಗುವ ಅನಾಹುತಗಳನ್ನು ತಾನೇ ಸ್ವತಂತ್ರವಾಗಿ ಎದುರಿಸಲು ಸಿದ್ಧವಾಗಿಯೇ ತೆಗೆದುಕೊಂಡ ನಿರ್ಧಾರ. ೧೯೪೮ರಿಂದಲೂ ಎಲ್ಲ ಅರಬ್ ರು ಇಸ್ರೇಲ್‌ನೊಂದಿಗೆ ನೇರ ಮಾತುಕತೆಯನ್ನು, ಬಹಿಷ್ಕರಿಸಿವೆ. ಹಾಗಾಗಿ, ಸಾದತ್‌ನ ಈ ನಿರ್ಧಾರ ಅರಬೀ ಆಶೋತ್ತರಗಳ ಉಲ್ಲಂಘನೆ, ಇದರಿಂದ ಸಾದತ್ ಎಲ್ಲ ಅರಬ್ ಮುಖಂಡರ ಟೀಕಾ ಪ್ರಹಾರಗಳಿಗೆ ಬಲಿಯಾಗಬೇಕಾಯಿತು. ಅವನನ್ನು ಮೋಸಗಾರನೆಂದು, ಮಿತ್ರದ್ರೋಹಿ ಎಂಬ ಹಣೆಪಟ್ಟಿಯಿಂದ ಕರೆಯಲಾಯಿತು. ಮಾತ್ರವಲ್ಲ ಎಲ್ಲ ತೀವ್ರ ಗಾಮಿ ಅರಬ್ ಮುಖಂಡರು ಅವನ ನಿರ್ಧಾರವನ್ನು ಖಂಡಿಸಿ ಇಸ್ರೇಲ್‌ನೊಂದಿಗಿನ ಅವನ ವ್ಯವಹಾರವನ್ನು ಕಟುವಾಗಿ ವಿರೋಧಿಸಿದರು. ಇದೇ ವಿಚಾರ ಇಡೀ ಅರಬ್ ಜಗತ್ತಿನಲ್ಲಿ ವಿಭಜನೆ ಉಂಟಾಗಲು ಕಾರಣವಾಯಿತು.

ಸಾದತ್‌ನ ಧೈರ್ಯದ ನಿರ್ಧಾರವನ್ನು ಇಸ್ರೇಲಿ ಪ್ರಧಾನಮಂತ್ರಿ ಮ್ಯಾನ್‌ಹೆಮ್ ಬೇಗಿನ್, ಸ್ವಾಗತಿಸಿದ್ದು ಅಲ್ಲದೆ, ಕೈರೋಗೆ ಭೇಟಿ ನೀಡಿದನು. ಈ ಎರಡು ಭೇಟಿಯಿಂದ ಮಹತ್ವದ್ದು ಏನೂ ಸಾಧಿಸದಿದ್ದರೂ, ಇಸ್ರೇಲ್ ಮತ್ತು ಅರಬ್ ಸಮುದಾಯದ ನಡುವೆ ಇರುವ ಮಾನಸಿಕ ಸಮಸ್ಯೆಯನ್ನು ಮರೆಯಲು ಸಹಕಾರಿಯಾಯಿತು. ಅದೇ ವಾತಾವರಣ ವನ್ನು ಬಳಸಿಕೊಂಡು ಅಮೆರಿಕ ಕೂಡ ಪ್ರಾದೇಶಿಕ ಶಾಂತಿ ಮತ್ತು ಭದ್ರತೆಯನ್ನು ಉದ್ದೇಶಿಸಿ ಸಕ್ರಿಯವಾಗಿ ಭಾಗವಹಿಸಲು ಮುಂದಾಯಿತು. ಅರಬ್ ಜಗತ್ತಿನಲ್ಲಿ ಸಾದತ್‌ನ ಕೈಯನ್ನು ಬಲಪಡಿಸಲು, ಅಮೆರಿಕ ಅಧ್ಯಕ್ಷ, ಬೆಗಿನ್ ಮೇಲೆ ಒತ್ತಾಯ ಹೇರಿ ಈಜಿಪ್ಟ್‌ಗೆ ಹಲವು ಬಗೆಯ ರಿಯಾಯಿತಿ ನೀಡಲು ನಿರ್ದೇಶಿಸಿದನು.

ಈಜಿಪ್ಟ್-ಇಸ್ರೇಲಿ ಶಾಂತಿ ಸಂದಾನದಲ್ಲಿ ಯಾವುದೇ ಬೆಳವಣಿಗೆ ಕಾಣದ ಹಿನ್ನೆಲೆಯಲ್ಲಿ ಅಧ್ಯಕ್ಷ ಕಾರ್ಟರ್, ಸಾದತ್ ಮತ್ತು ಬೆಗಿನ್ ಇಬ್ಬರನ್ನು ಕ್ಯಾಂಪ್ ಡೇವಿಡ್‌ನಲ್ಲಿ ಆಯೋಜಿಸಿದ ಸಭೆಗೆ ಆಹ್ವಾನಿಸಿದನು. ಕ್ಯಾಂಪ್ ಡೇವಿಡ್‌ನ ಭೇಟಿಯಲ್ಲಿ ಅನೇಕ ದಿನಗಳ ಚರ್ಚೆಗಳು ಮುಂದುವರಿದಿದ್ದು, ಈ ಎರಡು ದೇಶಗಳ ರಾಜತಾಂತ್ರಿಕ ಇತಿಹಾಸ ದಲ್ಲಿ ಮರೆಯಾಗದ ಘಟನೆ. ಈ ಭೇಟಿಯಲ್ಲಿ ಯಾವುದೇ ನಿರ್ದಿಷ್ಟ ಅಜೆಂಡಾವನ್ನಿಟ್ಟು ಕೊಂಡಿರದಿದ್ದರೂ, ಈಜಿಪ್ಟ್ ಮತ್ತು ಇಸ್ರೇಲಿ ಮುಖಂಡರು ಕೊನೆಯ ಪಕ್ಷ ಒಂದು ಒಪ್ಪಂದಕ್ಕೆ ಬರಬೇಕು ಎಂಬುದು ಅಮೆರಿಕ ಅಧ್ಯಕ್ಷ ಕಾರ್ಟರ್ ಆಶಯವಾಗಿತ್ತು.

ಸುಮಾರು ಹದಿಮೂರು ದಿನಗಳ ಸುದೀರ್ಘ ಚರ್ಚೆಯ ನಂತರ ಸೆಪ್ಟೆಂಬರ್ ೧೭, ೧೯೭೮ರಂದು ಮೂರು ಮುಖಂಡರು ಜಿಮ್ಮಿ ಕಾರ್ಟರ್, ಮ್ಯಾನ್‌ಹೆಮ್ ಬೇಗಿನ್ ಮತ್ತು ಅನ್ವರ್ ಸಾದತ್ ಒಂದು ಒಮ್ಮತದ ನಿರ್ಧಾರಕ್ಕೆ ಬಂದರು. ಅದರ ಫಲಿತಾಂಶ ವಾಗಿ, ಶಾಂತಿ ಸಂಧಾನಕ್ಕೆ ಎರಡು ಪ್ರಮುಖ ಚೌಕಟ್ಟನ್ನು ಬಹಿರಂಗಪಡಿಸಲಾಯಿತು. ಒಂದನೆಯದು, ಮಧ್ಯಪ್ರಾಚ್ಯ ಪ್ರದೇಶದಲ್ಲಿ ಶಾಂತಿ ಸ್ಥಾಪನೆಯ ಕುರಿತು. ಎರಡನೆಯದು, ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಶಾಂತಿ ಸಂಧಾನಕ್ಕೆ ಸಹಿ ಹಾಕುವುದು.

ಒಂದನೆಯ ಚೌಕಟ್ಟಿನಂತೆ ಪಶ್ಚಿಮ ದಂಡೆ ಮತ್ತು ಗಾಝ ಪಟ್ಟಿಯಲ್ಲಿ ಸ್ವಾಯತ್ತತಾ ಸರಕಾರ ರಚಿಸುವುದು. ಈ ಎರಡೂ ಪ್ರದೇಶಗಳಲ್ಲಿ ಹೊಸ ಯಹೂದಿ ನೆಲೆಗಳು ಸ್ಥಾಪನೆ ಆಗದಂತೆ ನೋಡಿಕೊಳ್ಳುವುದು. ಇಸ್ರೇಲಿ ಸೈನ್ಯವನ್ನು ವಾಪಸ್ಸು ಕರೆಸಿಕೊಳ್ಳುವುದು. ಪ್ರಭುತ್ವಗಳ ಬದಲಾವಣೆಯ ಹಂತದಲ್ಲಿ ಪಶ್ಚಿಮ ದಂಡೆ ಮತ್ತು ಗಾಝ ಪಟ್ಟಿಯ ಅಸ್ತಿತ್ವಕ್ಕೆ ಧಕ್ಕೆ ಉಂಟಾಗದ ಹಾಗೆ ನೋಡಿಕೊಳ್ಳುವುದು.

ಎರಡನೆಯ ಚೌಕಟ್ಟಿನಂತೆ, ಇಸ್ರೇಲ್ ರಾಜ್ಯ ಮತ್ತು ಈಜಿಪ್ಟ್ ನಡುವೆ ಶಾಂತಿ ಒಪ್ಪಂದಕ್ಕೆ ವೇದಿಕೆ ರೂಪಿಸುವುದು. ಇದರ ಪ್ರಕಾರ ಈಜಿಪ್ಟ್ ಸರಕಾರ ಸುಮಾರು ಮೂರು ವರ್ಷಗಳ ಅವಧಿಯಲ್ಲಿ ಇಡೀ ಸಿನೈ ಮರುಭೂಮಿಯನ್ನು ಇಸ್ರೇಲ್ ಹಿಡಿತ ದಿಂದ ವಾಪಸ್ಸು ಪಡೆಯುವುದು. ಇಡೀ ಪ್ರಾಂತವನ್ನು ಈಜಿಪ್ಟ್ ಅಧೀನಕ್ಕೆ ಒಳಪಡಿಸುವುದು ಇಸ್ರೇಲ್ ಸೈನ್ಯದ ಸಂಖ್ಯೆಯನ್ನು ಕಡಿತಗೊಳಿಸಿ ಭದ್ರತಾ ಕೇಂದ್ರಗಳನ್ನು ತೆರೆದು ವಿಶ್ವಸಂಸ್ಥೆಯ ರಕ್ಷಣಾ ಸೇನೆಯನ್ನು ತೆರವು ಮಾಡಿದ ಪ್ರಾಂತದಲ್ಲಿ ನಿಯೋಜಿಸುವುದು. ಕೊನೆಯದಾಗಿ, ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ರಾಜತಾಂತ್ರಿಕ ಸಂಬಂಧವನ್ನು ವೃದ್ದಿಸಲು ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕುವುದು.

ಕ್ಯಾಂಪ್ ಡೇವಿಡ್ ಅಕಾರ್ಡ್‌ನಿಂದ ಈಜಿಪ್ಟ್ ಹೆಚ್ಚು ಲಾಭ ಗಳಿಸಿತು. ಕೈರೋ ಕಳೆದುಕೊಂಡ ಪ್ರದೇಶವನ್ನು ಶರತ್ತಿಲ್ಲದೆ ಸಿನೈನ ತೈಲ ಬಾವಿಗಳನ್ನು ಸೇರಿ ಎಲ್ಲವನ್ನು ಯಾವುದೇ ಯುದ್ಧದಲ್ಲಿ ಪಾಲ್ಗೊಳ್ಳದೇ ಹಿಂದಕ್ಕೆ ಪಡೆಯಲು ಸೂಯೆಜ್ ಕಾಲುವೆಯನ್ನು ಇಸ್ರೇಲ್ ಹಡಗು ಯಾನಕ್ಕೆ ಮುಕ್ತವಾಗಿ ತೆರೆಯಲಾಯಿತು. ಹಾಗೆಯೇ ಕಾಲುವೆಯನ್ನು ವ್ಯಾಪಾರ ಮತ್ತು ವಾಣಿಜ್ಯ ವ್ಯವಹಾರಕ್ಕೆ ಉಪಯೋಗಿಸಿಕೊಳ್ಳಲು ಇಸ್ರೇಲ್‌ಗೆ ಅನುಮತಿ ನೀಡಲಾಯಿತು.

ಹಿಂದೆ ನಡೆದ ಎಲ್ಲ ಯುದ್ಧಗಳಲ್ಲಿ ಈಜಿಪ್ಟ್ ನಷ್ಟವನ್ನು ಅನುಭವಿಸಿತ್ತು. ಏಕೆಂದರೆ, ಉಳಿದ ಅರಬ್ ರಾಷ್ಟ್ರಗಳಿಗೆ ಹೋಲಿಸಿದರೆ ಪ್ಯಾಲೇಸ್ತೀನಿ ಅರಬರನ್ನು ಪ್ರತಿನಿಧಿಸಿ, ಇಸ್ರೇಲ್ ವಿರುದ್ಧ ಫ್ರಂಟ್‌ಲೈನ್‌ನಲ್ಲಿದ್ದು ಈಜಿಪ್ಟ್ ಹೋರಾಟ ನಡೆಸಿತ್ತು. ಈಜಿಪ್ಟ್ ನ ನಗರಗಳಾದ ಸೂಯೆಜ್ ಇಸ್ತಮತ್ ಮತ್ತು ರಾಜಧಾನಿ ಕೈರೋ ನಿರಂತರವಾದ ಇಸ್ರೇಲ್ ಬಾಂಬ್ ದಾಳಿಗೆ ತುತ್ತಾಗಿದ್ದವು. ಇದರಿಂದಾಗಿ, ಈ ನಗರದಲ್ಲಿದ್ದ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿತ್ತು. ಆರ್ಥಿಕ ಅಭಿವೃದ್ದಿ ಕುಂಠಿತವಾಯಿತು. ಸೈನಿಕ ರಂಗದ ವೆಚ್ಚ ಗಗನಕ್ಕೇರಿತು. ಜನಸಾಮಾನ್ಯರ ನಿರೀಕ್ಷೆಗೆ ಸ್ಪಂದಿಸಲು ಅಸಾಧ್ಯವಾಯಿತು. ಇಡೀ ದೇಶವೇ ಕಂಗೆಟ್ಟು ಅಂತಹ ಯಾವುದೇ ಹೋರಾಟದಲ್ಲಿ ಭಾಗವಹಿಸಲು ಆಸಕ್ತಿಯನ್ನು ಕಳೆದುಕೊಂಡಿತು. ಅರಬ್ ಭ್ರಾತೃತ್ವದ ಬಗ್ಗೆ ಅತೀವ ಪ್ರೇಮವಿದ್ದರೂ, ಇನ್ನು ಮುಂದೆ ಯಾವುದೇ ಯುದ್ಧದಲ್ಲಿ ಪಾಲ್ಗೊಳ್ಳಲು ನಿರಾಸಕ್ತಿಯನ್ನು ವ್ಯಕ್ತಪಡಿಸಿತು. ಹಾಗಾಗಿ, ನಾಸರ್‌ನ ಪಾನ್-ಅರಬಿಸಂ ಸಿದ್ಧಾಂತವನ್ನು ಪಾಲಿಸಿ ಈಜಿಪ್ಟ್ ದಿವಾಳಿ ಆಯಿತು ಮತ್ತು ಆರ್ಥಿಕವಾಗಿ ಸಂಪೂರ್ಣ ನಿರ್ನಾಮದ ಹಂತಕ್ಕೆ ತಲುಪಿತು.

ಆದುದರಿಂದ ನಾಸರ್‌ನಂತೆ ಸಾದತ್ ಅರಬ್ ಭ್ರಾತೃತ್ವದ ಹೆಸರಿನಲ್ಲಿ ಈಜಿಪ್ಟ್ ರಾಷ್ಟ್ರೀಯ ಆಸಕ್ತಿಗಳನ್ನು ಗಾಳಿಗೆ ತೂರಲು ತಯಾರಾಗಿರಲಿಲ್ಲ. ನಾಸರನ ಉತ್ತಾರಾಧಿಕಾರಿ ಹೊಸ್ನಿ ಮುಬಾರಕ್ ಕೂಡ ಇದೇ ನಿಲುವನ್ನು ಪಾಲಿಸಿ ಇಸ್ರೇಲ್‌ನೊಂದಿಗೆ ಸೌಹಾರ್ದದಿಂದ ಬದುಕಲು ಒತ್ತು ಕೊಟ್ಟನು. ಇದು ಈಜಿಪ್ಟ್ ಇನ್ನು ಮುಂದು ಯಾವುದೇ ಕಾರಣಕ್ಕೆ ನಾಸರನ ಕಾಲದ ಪಾನ್-ಅರಬಿಸಂ ರಾಜಕೀಯಕ್ಕೆ ಮರಳುವ ಯಾವ ಸೂಚನೆಯನ್ನು ಖಡಾಖಂಡಿತವಾಗಿ ತಳ್ಳಿ ಹಾಕಿತು.

ಆದಾಗ್ಯೂ ಇಸ್ರೇಲ್‌ನೊಂದಿಗೆ ಪ್ರತ್ಯೇಕ ಶಾಂತಿ ಸಂಧಾನಕ್ಕೆ ಸಹಿ ಹಾಕಿರುವುದರಿಂದ, ಅರಬ್ ರಾಜಕೀಯದ ಮುಖ್ಯ ವಾಹಿನಿಯಿಂದ ಬೇರ್ಪಟ್ಟಿರುವುದನ್ನು ತಳ್ಳಿ ಹಾಕಲಾಗದು. ಬಹುಶಃ ಇದರಿಂದ ಪಡೆದ ಲಾಭ ಅಮೂಲ್ಯವಾದುದು ಹೌದು. ಅದಕ್ಕೆ ಬೆಲೆ ಕಟ್ಟಲು ಅಸಾಧ್ಯ. ಇಸ್ರೇಲ್ ಕೂಡ ಶಾಂತಿ ಸಂಧಾನದಿಂದ ಒಂದಷ್ಟು ಸಮಾಧಾನ ಪಟ್ಟಿತು. ಈಜಿಪ್ಟ್ ಈಗ ನಿರ್ಲಿಪ್ತ ಧೋರಣೆ ತಳೆದಿರುವುದರಿಂದ ಸದ್ಯಕ್ಕೆ ಯುದ್ಧದ ಭೀತಿ ಇಲ್ಲದೆ ಇಸ್ರೇಲ್ ರಾಜ್ಯ ನಿಟ್ಟುಸಿರು ಬಿಡುವಂತಾಯಿತು. ಹಿಂದಿನ ಎಲ್ಲ ಘಟನೆಗಳು ಈಜಿಪ್ಟ್‌ನ ನೇತೃತ್ವದಲ್ಲಿ ನಡೆದಿರುವುದು. ಈಜಿಪ್ಟ್ ಈಗ ಬೇರ್ಪಟ್ಟಿರುವುದರಿಂದ ಉಳಿದ ಯಾವ ಅರಬ್ ರಾಜ್ಯಕ್ಕೆ ಮುಂದೆ ನಿಂತು ಇಸ್ರೇಲ್ ವಿರುದ್ಧ ಯುದ್ಧ ಸಾರುವ ಧೈರ್ಯ ಇಲ್ಲ. ಹಾಗಾಗಿ ಇಸ್ರೇಲ್ ನಿಜಕ್ಕೂ ಹೆಚ್ಚು ಲಾಭ ಪಡೆದಿತ್ತು.

ಕ್ಯಾಂಪ್ ಡೇವಿಡ್ ಒಪ್ಪಂದದಲ್ಲಿ ಕೆಲವು ಮುಖ್ಯ ವಿಷಯಗಳನ್ನು ಕೈ ಬಿಡಲಾಗಿತ್ತು. ಪಿಎಲ್‌ಓ, ಜೆರುಸಲೇಂ ಮತ್ತು ಗೊಲ್ಡನ್ ಹೈಟ್ಸ್‌ಗೆ ಸಂಬಂಧಿಸಿ ಯಾವುದೇ ಪ್ರಸ್ತಾಪವಿರಲಿಲ್ಲ. ಅದರಲ್ಲೂ ಮುಖ್ಯವಾಗಿ ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ವೃದ್ದಿಸುತ್ತಿರುವ ಯಹೂದಿ ನೆಲೆಗಳನ್ನು ನಿಲ್ಲಿಸುವ/ನಾಶಪಡಿಸುವ ಕುರಿತು ಒಮ್ಮತದ ನಿರ್ಣಯ ಈ ಒಪ್ಪಂದದಲ್ಲಿ ಸೇರಿಸಿರಲಿಲ್ಲ. ಅದು ಭವಿಷ್ಯದ ಕೆಲವು ಆಚರಣೆಗಳನ್ನು ತಿಳಿಸುತ್ತದೆ. ಇವೆಲ್ಲವುಗಳ ನಡುವೆ ಕಾರ್ಟರ್ ಅತ್ಯಂತ ಹೆಚ್ಚು ಯಶಸ್ಸನ್ನು ಸಾಧಿಸುತ್ತಾನೆ. ಅವನ ಒತ್ತಾಯದ ಮೇರೆಗೆ ಗಡಸು ಸ್ವಭಾವದ ಇಸ್ರೇಲ್ ರಾಜ್ಯ ತನ್ನ ನಿಲುವಿನಲ್ಲಿ ಸಡಿಲಿಕೆ ತೋರಿಸಿ ಒಂದಷ್ಟು ಅಕ್ರಮಿತ ಪ್ರದೇಶವನ್ನು ಈಜಿಪ್ಟ್ ಗೆ ಬಿಟ್ಟುಕೊಡಲೊಪ್ಪಿತು. ೧೯೭೯ರ ಮಾರ್ಚ್ ೨೬ರಂದು ಈ ಸಂಬಂಧಿ ಈಜಿಪ್ಟ್ /ಇಸ್ರೇಲ್ ನಡುವೆ ವಾಷಿಂಗ್ಟನ್ ನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಮೇ ಹೊತ್ತಿಗೆ ಇಸ್ರೇಲ್ ರಾಜ್ಯ ಸಿನೈಯಿಂದ ತೆರವು ಕಾರ್ಯಕ್ರಮವನ್ನೂ ಆರಂಭಿಸಿತು. ೧೯೮೨ರ ಹೊತ್ತಿಗೆ ಅದನ್ನು ಪೂರ್ಣಗೊಳಿಸಿತು. ಇಸ್ರೇಲ್ ರಾಜ್ಯ ಇವೆಲ್ಲವುಗಳ ನಡುವೆ ವಿರೋಧವನ್ನು ಎದುರಿಸಿಯೂ, ತನ್ನ ಸೈನ್ಯದ ಸಹಾಯದಿಂದ ಸಿನ್ಯಾಯದಲ್ಲಿನ ಹೊಸ ಕಟ್ಟಡಗಳನ್ನು ಯಹೂದಿ ನೆಲೆಗಳನ್ನು ನೆಲಸಮ ಮಾಡಿತು. ಇಸ್ರೇಲ್ ತನ್ನ ಆಕ್ರಮಿತ ಪ್ರದೇಶವನ್ನು ಬಳಸಿಕೊಂಡು ತನ್ನ ಭದ್ರತೆಯನ್ನು ಗಟ್ಟಿಗೊಳಿಸಿತು ಮತ್ತು ಶಾಂತಿಯಿಂದ ಬದುಕುವ ವಾತಾವರಣವನ್ನು ಹುಟ್ಟುಹಾಕಿತು.