ಒಂದು ಕಾಲದ ಪ್ರಭಾವಿ ರಾಜಕಾರಣಿ ಮತ್ತು ಪ್ಯಾಲೇಸ್ತೀನಿ ಸಮಸ್ಯೆಯ ಹರಿಕಾರ ಸಾದತ್ ೧೯೮೧ರ ಅಕ್ಟೋಬರ್ ೬ರಂದು ಮುಸ್ಲಿಂ ತೀವ್ರಗಾಮಿಗಳಿಂದ ಕೊಲೆಯಾದರು ಅದರೊಂದಿಗೆ ಅವನ ಕನಸಾದ ಅರಬ್-ಇಸ್ರೇಲಿ ಸಂಬಂಧವನ್ನು ಸರಿಪಡಿಸಬೇಕೆಂಬ ಆಶಯ ಈಡೇರಲಿಲ್ಲ. ತದನಂತರ ಯಹೂದಿಗಳು ಮತ್ತು ಪ್ಯಾಲ್ಯೇಸ್ತೀನಿಯರು ಪರಸ್ಪರ ಮೊದಲಿನಂತೆಯೇ ವಿರೋಧಿಸುತ್ತಾ ಬಂದರು.

೧೯೮೧ರವರೆಗೆ ಆಕ್ರಮಿತ ಭಾಗದಲ್ಲಿ ಸುಮಾರು ೧೩೦ ಯಹೂದಿ ನೆಲೆಗಳು ಸ್ಥಾಪನೆಯಾದವು. ಯಹೂದಿ ವಸತಿಗಳು ಮತ್ತು ಎಸ್ಟೇಟ್‌ಗಳ ವೃದ್ದಿಯಿಂದ ಜೆರುಸಲೇಂ ನಲ್ಲಿ ಇಸ್ರೇಲಿ ನಗರ ಅಭಿವೃದ್ದಿಗೊಂಡಿತು. ಇದನ್ನು ಗಮನಿಸಿದ ಅನೇಕ ಹಾರ್ಡ್ ಕೋರ್ ಅರಬ್ ಮುಖಂಡರು ಸೈನಿಕ ಕಾರ್ಯಾಚರಣೆಯೇ ಕೊನೆಯ ಅಸ್ತ್ರವೆಂದು ತೀರ್ಮಾನಕ್ಕೆ ಬಂದರು.

ಕ್ಯಾಂಪ್ ಡೇವಿಡ್ ಶಾಂತಿ ಸಂಧಾನಕ್ಕೆ ಸಿರಿಯಾ ಮತ್ತು ಜೋರ್ಡಾನ್ ಪ್ರತಿನಿಧಿಗಳನ್ನು ಆಹ್ವಾನಿಸಿರಲಿಲ್ಲ. ಪ್ಯಾಲೇಸ್ತೀನಿಯರ ಪ್ರತಿಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಈ ಎರಡು ದೇಶಗಳನ್ನು ಗಣನೆಗೆ ತೆಗೆದುಕೊಳ್ಳದೇ ಇದ್ದುದರಿಂದ ಪ್ಯಾಲೇಸ್ತೀನಿ ನಿರಾಶ್ರಿತರ ಸಮಸ್ಯೆ ಹಿನ್ನಡೆ ಕಂಡಿತು. ಸಾದತ್ ಮತ್ತು ಬೆಗಿನ್ ಒಪ್ಪಂದಕ್ಕೆ ಸಹಿ ಹಾಕುವಾಗ ಮೇಲ್ನೋಟಕ್ಕೆ ಅವರು ಪ್ಯಾಲೇಸ್ತೀನಿ ಸಮಸ್ಯೆಗೆ ಅಗ್ರಸ್ಥಾನ ನೀಡಲಾಗಿದೆ ಎಂದು ವಾದಿಸಿದರೂ, ನಿಜವಾಗಿ ಶಾಂತಿ ಸಂಧಾನದಲ್ಲಿ ಆ ಎರಡೂ ದೇಶಗಳ ಸಂಬಂಧವನ್ನು ಗಟ್ಟಿಗೊಳಿಸಲಷ್ಟೇ ಆದ್ಯತೆ ನೀಡಲಾಗಿತ್ತು. ಸಾರ್ವತ್ರಿಕವಾಗಿ ಸಾದತ್ ಶಾಂತಿ ಸಂದಾನದಲ್ಲಿ ಪ್ಯಾಲೇಸ್ತೀನಿ ಸಮಸ್ಯೆಯೊಂದಿಗೆ ರಾಜಕೀಯ ಹೊಂದಾಣಿಕೆಯನ್ನು ಮಾಡಿಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡರೂ, ಆ ನಂತರದ ಬೆಳವಣಿಗೆಗಳಲ್ಲಿ ಸಾದತ್ ಮತ್ತು ಬೆಗಿನ್ ಪ್ಯಾಲೇಸ್ತೀನಿ ಸಮಸ್ಯೆಯನ್ನು ಬೇಕೆಂದೇ ಕೈಬಿಡುವ ಪ್ರಯತ್ನ ನಡೆಸಿರುವುದು ಗೋಚರ ವಾಗುತ್ತದೆ. ಇದಕ್ಕೆ ಕಾರಣವೂ ಇದೆ. ಈಜಿಪ್ಟ್ ಅನೇಕ ವರ್ಷಗಳಿಂದ ತನ್ನ ದೇಶದ ಸಂಪನ್ಮೂಲವನ್ನು ವ್ಯಯಿಸಿ ಪ್ಯಾಲೇಸ್ತೀನಿಯರ ಪರವಾಗಿ ಇಸ್ರೇಲ್ ವಿರುದ್ಧ ನಾಲ್ಕು ಯುದ್ಧವನ್ನು ಘೋಷಿಸಿತ್ತು. ಮುಂದಿನ ದಿನಗಳಿಗೆ ಈಜಿಪ್ಟ್ ಸರಕಾರಕ್ಕೆ ಇದನ್ನು ಮುಂದುವರಿಸಲು ಅಸಾಧ್ಯವೆಂಬುದನ್ನು ಅರಬ್ ಜಗತ್ತಿಗೆ ಸ್ಪಷ್ಟಪಡಿಸುವ ಪ್ರಯತ್ನ ಸಾದತ್‌ನದ್ದು. ಅಲ್ಲದೆ, ಪ್ಯಾಲೇಸ್ತೀನಿ ಅರಬರ ಹೋರಾಟದಿಂದ ಅದು ವಿಮುಕ್ತಿ ಬಯಸಿದೆ ಎಂಬುದು ತಿಳಿಯುತ್ತದೆ. ಅದೇ ಕಾರಣಕ್ಕೆ ಪ್ಯಾಲೇಸ್ತೀನಿ ಸಮಸ್ಯೆ ಬದಿ ಗೊತ್ತಲ್ಪಡುತ್ತದೆ. ಈಜಿಪ್ಟ್ ಸರಕಾರದಂತೆ, ಬೇರೆ ಯಾವ ಅರಬ್ ಸರಕಾರ ಅಷ್ಟೊಂದು ಹುಮ್ಮಸ್ಸಿನಿಂದ ಅವರ ಪರವಾಗಿ ಮುಂಚೂಣಿಯಲ್ಲಿದ್ದು ಹೋರಾಟ ಮಾಡುವ ಆಸಕ್ತಿ ತೋರಲಿಲ್ಲ. ಇಸ್ರೇಲ್‌ಗೆ ಇದು ಒಳ್ಳೆಯ ವಾತಾವರಣವನ್ನು ಸೃಷ್ಟಿಸಿತು. ಈಗ ಅದು ಪ್ಯಾಲೇಸ್ತೀನಿಯರ ವಿರೋಧಕ್ಕೆ ಹೆಚ್ಚು ಆದ್ಯತೆ ನೀಡಬೇಕಾಗಿಲ್ಲ. ಅವರ ಕಟ್ಟಾ ವಿರೋಧಿ ಈಜಿಪ್ಟ್ ಈಗ ನಂಬಿಗಸ್ಥ ಸ್ನೇಹ ರಾಷ್ಟ್ರವಾಗಿ ಪರಿವರ್ತನೆಗೊಂಡಿತು. ಇದನ್ನು ಗಮನಿಸಿ ಇಸ್ರೇಲ್ ಸರಕಾರ ಪಶ್ಚಿಮ ದಂಡೆ ಮತ್ತು ಗಾಝೂ ಪಟ್ಟಿಯಲ್ಲಿ ಹೊಸ ಯಹೂದಿ ನೆಲೆಗಳನ್ನು ಸ್ಥಾಪಿಸಲು ಆತುರದ ನಿರ್ಧಾರವನ್ನು ತೆಗೆದುಕೊಂಡಿತು. ಶಾಂತಿ ಸಂಧಾನದ ಪರಿಣಾಮದಿಂದ ಇಸ್ರೇಲ್ ಧೈರ್ಯದಿಂದ ಪ್ಯಾಲೇಸ್ತೀನಿಯರನ್ನು ಸಂಪೂರ್ಣ ನಿರ್ನಾಮ ಮಾಡಲು ಈಜಿಪ್ಟ್‌ನ ನಿರ್ಲಿಪ್ತ ಧೋರಣೆಯೇ ಕಾರಣವಾಯಿತು. ಮುಖ್ಯವಾಗಿ ಲೆಬನಾನ್‌ನಲ್ಲಿ ಸ್ಥಾಪಿಸಲ್ಪಟ್ಟ ಪ್ಯಾಲೇಸ್ತೀನಿಯರ ಕ್ಯಾಂಪ್‌ಗಳನ್ನು, ತರಬೇತಿ ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡು, ಅವರ ವಿರುದ್ಧ ಸೈನಿಕ ಕಾರ್ಯಾಚರಣೆ ಆರಂಭಿಸಿತು. ಲೆಬನಾನ್ ಮೇಲೆ ಸಂಘಟಿಸಿದ ದಾಳಿ ಬಹುಶಃ ಈಜಿಪ್ಟ್ ನಿರ್ಲಿಪ್ತವಾಗುಳಿಯದಿದ್ದರೆ ಇಸ್ರೇಲ್‌ಗೆ ಧೈರ್ಯ ಬರುತ್ತಿರಲಿಲ್ಲ.

ಇದನ್ನೆಲ್ಲ ಗಮನಿಸಿದರೆ ಕ್ಯಾಂಪ್ ಡೇವಿಡ್ ಶಾಂತಿ ಸಂಧಾನವು ಅಮೆರಿಕ ಅಧ್ಯಕ್ಷ ಜಿಮ್ಮಿ ಕಾರ್ಟರ್‌ಗೆ ಸಿಕ್ಕಿದ ವೈಯಕ್ತಿಕ ಯಶಸ್ಸು ಮತ್ತು ಅವನು ಮಧ್ಯಪ್ರಾಚ್ಯ ಪ್ರದೇಶದ ಕುರಿತು ಯೋಚಿಸಿದ ಡಿಪ್ಲಮಸಿಯ ಕೊಡುಗೆ. ಶಾಂತಿ ಸಂಧಾನದುದ್ದಕ್ಕೂ ಹಿಂದೆ ಸರಿಯದೆ, ಕಾರ್ಟರ್ ಈಜಿಪ್ಟ್ ಮತ್ತು ಇಸ್ರೇಲ್ ನಡುವೆ ಇರುವ ಎಲ್ಲ ಭಿನ್ನಾಭಿಪ್ರಾಯ ಗಳನ್ನು ಬದಿಗೊತ್ತಿ ಒಪ್ಪಂದಕ್ಕೆ ಸಹಿ ಹಾಕಿಸುವಲ್ಲಿ ಒಬ್ಬ ಮಧ್ಯವರ್ತಿಯಾಗಿ, ಮಾಹಿತಿ ದಾರನಾಗಿ, ಸಂಧಾನಕಾರನಾಗಿ ಮತ್ತು ತೀರ್ಪುಗಾರನಾಗಿ ಕಾರ್ಯ ನಿರ್ವಹಿಸಿದ್ದನು. ಒಂದಷ್ಟು ರಿಸ್ಕನ್ನು ತೆಗೆದುಕೊಂಡಿದ್ದನು. ಒಂದು ವೇಳೆ ಇದರಲ್ಲಿ ಅವನು ಯಶಸ್ಸು ಕಾಣದೇ ಇದ್ದಿದ್ದರೆ, ಆಂತರಿಕವಾಗಿ/ಬಾಹ್ಯವಾಗಿಯೂ ಮುಜುಗರ ಸನ್ನಿವೇಶವು ಎದುರಿಸಬೇಕಾಗುತ್ತಿತ್ತು.

ಶಾಂತಿ ಸಂಧಾನಕ್ಕಾಗಿ ಅಮೆರಿಕ ಅಮೂಲ್ಯ ಬೆಲ ತೆತ್ತಿತ್ತು. ಪ್ರಾಮಾಣಿಕ ಸಂಧಾನಕಾರ ನಾಗಿ ಅಲ್ಲದೆ, ವಾಷಿಂಗ್ಟನ್, ಈಜಿಪ್ಟ್ ಮತ್ತು ಇಸ್ರೇಲ್‌ಗೆ ಬೃಹತ್ ಪ್ರಮಾಣದ ಸೈನಿಕ ಮತ್ತು ಆರ್ಥಿಕ ನೆರವನ್ನು ನೀಡುವುದಾಗಿ ಪ್ರತಿಜ್ಞೆಯನ್ನು ಮಾಡಿತು. ಒಂದು ಅಧಿಕೃತ ದಾಖಲೆಯ ಪ್ರಕಾರ, ವಾಷಿಂಗ್ಟನ್ ಸುಮಾರು ಐದು ಮಿಲಿಯ ಡಾಲರ್ ನಷ್ಟು ಆರ್ಥಿಕ ಮತ್ತು ಸೈನಿಕ ನೆರವನ್ನು ಈ ಎರಡು ದೇಶಗಳಿಗೆ ಪ್ರತಿ ವರ್ಷ ನೀಡುತ್ತಿತ್ತು. ಇದು ಅಮೆರಿಕ ನಿರಂತರವಾಗಿ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ಬಿಟ್ಟು, ಅದೇ ಸಂದರ್ಭದಲ್ಲಿ ಆ ಎರಡೂ ರಾಷ್ಟ್ರಗಳು ಶಾಂತಿ ಸಂಧಾನದ ಶರತ್ತುಗಳನ್ನು ಉಲ್ಲಂಘನೆ ಮಾಡಲು ಯಾವ ಅವಕಾಶವನ್ನು ಅಮೆರಿಕ ನೀಡಲಿಲ್ಲ. ಅದರ ಅರ್ಥ ವಾಷಿಂಗ್ಟನ್ ನೇರವಾಗಿ ಇಡೀ ಶಾಂತಿ ಸಂಧಾನದ ನಕಾಶೆಯನ್ನು ರಚಿಸಿತ್ತು ಮತ್ತು ಅದನ್ನು ಅನುಷ್ಠಾನಕ್ಕೆ ತಂದಿತು.

ಅಮೆರಿಕ ಸರಕಾರ ಶಾಂತಿ ಸಂಧಾನಕ್ಕೆ ಬೃಹತ್ ಪ್ರಮಾಣದ ಬೆಲೆ ಕೊಟ್ಟರೂ, ಮಧ್ಯಪ್ರಾಚ್ಯ ಪ್ರದೇಶದಲ್ಲಿ ಅದು ರಾಜತಾಂತ್ರಿಕವಾಗಿ ಮಹತ್ವದ ಪಾತ್ರವನ್ನು ವಹಿಸಿತು. ಯಶಸ್ವಿಯಾಗಿ ಸೋವಿಯತ್ ಒಕ್ಕೂಟವನ್ನು ಶಾಂತಿ ಸಂಧಾನದಿಂದ ಹೊರಗಿಟ್ಟಿತು ಮತ್ತು ಈಜಿಪ್ಟ್ ದೇಶವನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡ ಕಾರಣ ಕೈರೋದಲ್ಲಿ ರಷ್ಯದ ಇರುವಿಕೆಗೆ ತೀವ್ರ ಹೊಡೆತ ಬಿತ್ತು. ಇದೊಂದು ಸಣ್ಣ ಕಾರ್ಯವೇನೂ ಅಲ್ಲ. ಏಕೆಂದರೆ, ೧೯೫೦ರಿಂದ ಕೈರೋ ಮತ್ತು ಮಾಸ್ಕೋ ಸುಮಾರು ಮೂರು ದಶಕಗಳ ಕಾಲ ಪರಸ್ಪರ ಅವಲಂಬಿತವಾಗಿ ಸಂಬಂಧವನ್ನು ಬೆಳೆಸಿಕೊಂಡಿದ್ದು, ರಾಜಕೀಯ, ಆರ್ಥಿಕ, ರಾಜತಾಂತ್ರಿಕ ಮತ್ತು ಸೈನಿಕ ರಂಗದಲ್ಲಿ ನೇರ ಸಂಪರ್ಕ ಇಟ್ಟುಕೊಂಡಿದ್ದವು. ೧೯೫೦ರ ದಶಕದಿಂದಲೇ ಈ ಸಂಬಂಧ ಬೆಳೆದಿತ್ತು. ಎಲ್ಲ ಅರಬ್-ಇಸ್ರೇಲಿ ಯುದ್ಧಗಳ ಸಂದರ್ಭದಲ್ಲಿ ಮಾಸ್ಕೋ ಸಾರ್ವತ್ರಿಕವಾಗಿ ಹಾಗೂ ನಿರಂತರವಾಗಿ ಈಜಿಪ್ಟ್‌ಗೆ ಶಸ್ತ್ರಾಸ್ತ್ರಗಳ ಪೂರೈಕೆ ಮಾಡಿತ್ತು. ಆದರೆ, ಕ್ಯಾಂಪ್ ಡೇವಿಡ್ ಶಾಂತಿ ಸಂಧಾನದ ನಂತರದ ಕೈರೋ ಸೋವಿಯತ್ ಒಕ್ಕೂಟದಿಂದ ಏನನ್ನೂ ನಿರೀಕ್ಷಿಸಲಿಲ್ಲ. ಹಾಗೂ ಅರಬ್ ಜಗತ್ತಿನಲ್ಲಿ ಈಜಿಪ್ಟ್ ಕೂಡ ಇಸ್ರೇಲ್, ಸೌದಿ ಅರೇಬಿಯಾ ಮತ್ತು ಅಮೆರಿಕದ ಪರ ಇರುವ ಇತರ ಪ್ರಾದೇಶಿಕ ಪ್ರಭುತ್ವಗಳಂತೆ ಅಮೆರಿಕದ ನಂಬಿಗಸ್ಥ ಮಿತ್ರ ರಾಷ್ಟ್ರವಾಗಿ ಪರಿವರ್ತನೆಗೊಂಡಿತು. ಯುದ್ಧಾನುಕೂಲದ ದೃಷ್ಟಿಯಿಂದ ಇದೊಂದು ಮುಖ್ಯವಾದ ಸಾಧನೆ. ಇದರ ಫಲಿತಾಂಶಗಳನ್ನು ೧೯೯೦ರ ದಶಕದುದ್ದಕ್ಕೂ ನಡೆದ ಗಲ್ಫ್ ಯುದ್ಧದ ಸಂದರ್ಭಗಳಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಬಹುದು. ಕುವೈತ್ ಮೇಲೆ ಇರಾಕ್ ದಾಳಿ ಮಾಡಿ ಆಕ್ರಮಿಸಿಕೊಂಡಾಗ, ಈಜಿಪ್ಟ್ ಅಧ್ಯಕ್ಷ ಹೊಸ್ನಿ ಮುಬಾರಕ್ ಅಮೆರಿಕ ಸರಕಾರಕ್ಕೆ ರಾಜತಾಂತ್ರಿಕ ಹಾಗೂ ಸೈನಿಕ ಕಾರ್ಯಾಚರಣೆಗೆ, ಸಾರ್ವತ್ರಿಕವಾಗಿ ಸಹಕರಿಸಿ, ಕುವೈತ್‌ನ್ನು ಇರಾಕಿ ಆಕ್ರಮಣದಿಂದ ಬಿಡುಗಡೆಗೊಳಿಸಲು ಮಹತ್ವದ ಪಾತ್ರ ವಹಿಸಿತ್ತು. ಈಜಿಪ್ಟ್ ಅಂತಹ ಗಟ್ಟಿ ಮನಸ್ಸು ಮಾಡಿ ಅಮೆರಿಕಕ್ಕೆ ಇರಾಕ್ ಯುದ್ಧ ಬೆಂಬಲ ಸೂಚಿಸದೇ ಹೋಗಿದ್ದರೆ, ಅಮೆರಿಕಾ ಕೂಡ ಅಷ್ಟು ಸುಲಭದಲ್ಲಿ ಇರಾಕ್ ವಿರುದ್ಧ ಯುದ್ಧ ಘೋಷಿಸಲು ಸಾಧ್ಯವಾಗುತ್ತಿರಲಿಲ್ಲ. ಕ್ಯಾಂಪ್ ಡೇವಿಡ್ ಸಂಧಾನದ ಸಂದೇಶಗಳು ಅಮೆರಿಕಕ್ಕೆ ಮುಖ್ಯವಾಗುತ್ತವೆ. ಅವುಗಳೆಂದರೆ,

೧. ಅಮೆರಿಕ ಸರಕಾರ ಮಧ್ಯಪ್ರಾಚ್ಯ ಪ್ರದೇಶದ ಆಗುಹೋಗುಗಳನ್ನು ಅಧ್ಯಕ್ಷ ಚಾಣಾಕ್ಷ ನಾಗಿದ್ದರೆ ನಿರ್ವಹಿಸಬಲ್ಲ ಎಂಬುದನ್ನು ದೃಢೀಕರಿಸುತ್ತದೆ.

೨. ಅಮೆರಿಕ ಅಧ್ಯಕ್ಷ ಮನಸ್ಸು ಮಾಡಿದರೆ ಯಹೂದಿ ಲಾಬಿಯ ಪ್ರಭಾವವನ್ನು ಮತ್ತು ಚುನಾವಣಾ ಲೆಕ್ಕಾಚಾರಗಳನ್ನು ಗಾಳಿಗೆ ತೂರಿ ಇಸ್ರೇಲ್ ಕುರಿತು ನಿರ್ಧಾರ ತೆಗೆದು ಕೊಳ್ಳುವ ಸಾಮರ್ಥ್ಯವಿದೆ ಎಂಬುದನ್ನು ತೋರ್ಪಡಿಸುತ್ತದೆ.

೩. ಇದರಿಂದ ಅಮೆರಿಕ ಆಡಳಿತ, ಪ್ರಭಾವಿ ಇಸ್ರೇಲಿ ಮಿತ್ರರು ಕಾಂಗ್ರೆಸ್‌ನಲ್ಲಿ ವ್ಯಕ್ತ ಪಡಿಸುವ ವಿರೋಧವನ್ನು ಎದುರಿಸಬೇಕಾಗಬಹುದೆಂಬ ಅರಿವು ಇದ್ದು ಕಾಂಗ್ರೆಸ್‌ನಲ್ಲಿ ಅಧ್ಯಕ್ಷನಿಗೆ ಬೆಂಬಲ ದೊರೆತರೆ ಅವನು ಇಸ್ರೇಲ್ ಕುರಿತು ಹೊರಡಿಸುವ ನಿರ್ಣಯಕ್ಕೆ ಇಸ್ರೇಲ್ ಕೂಡ ತಲೆಭಾಗಬೇಕೆಂಬ ಸಂದೇಶವು ಅಡಗಿದೆ.

೪. ಕ್ಯಾಂಪ್ ಡೇವಿಡ್ ಶಾಂತಿ ಸಂಧಾನದಿಂದ ಇನ್ನೊಂದು ಪಾಠ ಕಲಿತದ್ದು ಏನೆಂದರೆ, ಅಮೆರಿಕ ಸರಕಾರಕ್ಕೆ ರಾಷ್ಟ್ರಮಟ್ಟದಲ್ಲಿ ಒತ್ತಾಯ ಬಂದು ಅದಕ್ಕೆ ಕಾಂಗ್ರೆಸ್‌ನಲ್ಲಿ ಸಾಕಷ್ಟು ಬೆಂಬಲ ವ್ಯಕ್ತವಾದರೆ ಇಸ್ರೇಲ್-ಪ್ಯಾಲೇಸ್ತೀನ್ ಸಮಸ್ಯೆಗೆ ಖಾಯಂ ಪರಿಹಾರ ಕಂಡುಕೊಳ್ಳಲು ಹಿಂಜರಿಯುವುದಿಲ್ಲ ಎಂಬುದು ಅಮೆರಿಕ ತನ್ನ ತಾಕತ್ತನ್ನು ಕಿಸ್ಸಿಂಜರ್‌ನ ಶಟ್ಲ್ ಡಿಪ್ಲಮಸಿ ಯೋಜನೆಯನ್ನು ಕಾರ್ಯರೂಪಕ್ಕೆ ತರುವಾಗ ಮತ್ತು ಕ್ಯಾಂಪ್ ಡೇವಿಡ್ ಶಾಂತಿ ಸಂಧಾನದ ಸಂದರ್ಭದಲ್ಲಿ ಸಮರ್ಥಿಸಿಕೊಂಡಿದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಜಗತ್ತಿನ ಯಾವುದೇ ಭಾಗಕ್ಕೆ ಸಂಬಂಧಿಸಿದ ಅಮೆರಿಕದ ಧೋರಣೆಯು ಅದರ ಸಾಮ್ರಾಜ್ಯಶಾಹಿ ಆಸಕ್ತಿಗಳನ್ನು ಅವಲಂಬಿಸಿ ರಚಿಸಲಾಗುವುದನ್ನು ಬಹಿರಂಗಪಡಿಸುತ್ತದೆ. ಇದು ಇಸ್ರೇಲ್ ವಿಚಾರವಾಗಿಯೂ ಸತ್ಯ.

ರೊನಾಲ್ಡ್ ರೇಗನ್ ಮತ್ತು ಪ್ಯಾಲೇಸ್ತೀನಿ ಸಮಸ್ಯೆ

ಮಾರ್ಚ್ ೧೯೭೯ರಲ್ಲಿ ಇಸ್ರೇಲಿ ಈಜಿಪ್ಟ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮಧ್ಯಪ್ರಾಚ್ಯ ಪ್ರದೇಶಕ್ಕೆ ಸಂಬಂಧಿಸಿ ಯಾವುದೇ ವಿಶೇಷವಾದ ರಾಜತಾಂತ್ರಿಕ ಚಟುವಟಿಕೆಗಳು ನಡೆದಿಲ್ಲ. ಜಿಮ್ಮಿ ಕಾರ್ಟರನ ಉತ್ತರಾಧಿಕಾರಿ, ರೊನಾಲ್ಡ್ ರೇಗನ್ ಇಡೀ ಸಮಸ್ಯೆಯ ಕುರಿತು ಬೇರೆಯೇ ಗ್ರಹಿಕೆಯನ್ನು ಇಟ್ಟುಕೊಂಡಿದ್ದನು. ಬಲಪಂಥೀಯ ಗುಂಪಿನ ಪ್ರತಿನಿಧಿಯಾಗಿದ್ದ ಇವನು, ಸೋವಿಯತಿಸಂ ಮತ್ತು ಕಮ್ಯುನಿಸಂನ ಬದ್ಧ ವಿರೋಧಿಯಾಗಿದ್ದ ರೇಗನ್, ಮಧ್ಯಪ್ರಾಚ್ಯ ಸಮಸ್ಯೆಯನ್ನು ಸೋವಿಯತ್ ಒಕ್ಕೂಟದ ಪ್ರೇರಣೆಯಿಂದ ಸೃಷ್ಟಿಸಲಾಗಿದೆ ಎಂದು ವಾದಿಸಲಾರಂಭಿಸಿದನು. ಅಂದರೆ, ಸಮಸ್ಯೆಯ ತೀವ್ರತೆಯನ್ನು ಗಮನಿಸಿ ಪರಿಹಾರಕ್ಕೆ ಒತ್ತು ಕೊಡುವುದನ್ನು ಬಿಟ್ಟು ರೇಗನ್ ಸೋವಿಯತ್ ಒಕ್ಕೂಟದ ಪ್ರಭಾವವನ್ನು ದುರ್ಬಲಗೊಳಿಸಲು ಯುದ್ಧಾನುಕೂಲಕ್ಕೆ ಒಮ್ಮತದ ವಾತಾವರಣವನ್ನು ಕಂಡುಕೊಳ್ಳಲು ಆರಂಭಿಸಿದನು. ಹಾಗಾಗಿ, ರೇಗನ್ ತನ್ನ ಆಡಳಿತದಲ್ಲಿ ಹೆಚ್ಚಿನ ಸಮಯವನ್ನು ಶಾಂತಿ ನೆಲೆಸುವಿಕೆಗೆ ಒತ್ತು ನೀಡಿರಲಿಲ್ಲ. ಅದು ಅವನಿಗೆ ಅಗತ್ಯವೂ ಇರಲಿಲ್ಲ. ಆದರೆ, ಲೆಬನಾನ್‌ನಲ್ಲಿ ಸಂಭವಿಸಿದ ಅರಬ್ ಇಸ್ರೇಲಿ ಶೀತಲ ಯುದ್ಧವು ಪರಿಸ್ಥಿತಿಯ ಉದ್ವಿಗ್ನತೆಯನ್ನು ಪ್ರಶ್ನಿಸುತ್ತದೆ. ಪರಿಣಾಮವಾಗಿ ರೇಗನ್ ರಾಜತಾಂತ್ರಿಕ ವ್ಯವಹಾರ ಆರಂಭಿಸಿ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಪಿಲಿಪ್ ಹಬಿಬ್‌ನನ್ನು ಮಧ್ಯ ಪ್ರಾಚ್ಯ ಪ್ರದೇಶಕ್ಕೆ ಕಳುಹಿಸಿಕೊಟ್ಟನು. ನಂತರ ಇಸ್ರೇಲ್ ಪರ ಹೋರಾಡಲು ಅಮೆರಿಕ ನೌಕ ಸೈನ್ಯವನ್ನು ನಿಯೋಜಿಸಿದನು. ಆದರೆ, ಲೆಬನಾನ್‌ನಲ್ಲಿ ಸಂಭವಿಸಿದ ಬಾಂಬ್ ದಾಳಿಯಲ್ಲಿ ಅಮೆರಿಕದ ನೌಕಾ ಯೋಧರು ಬಲಿಯಾದರು. ಈ ಕೃತ್ಯವನ್ನು ಪ್ಯಾಲೇಸ್ತೀನಿ ಭಯೋತ್ಪಾದಕರು ಮಾಡಿರುವುದೆಂಬ ಶಂಕೆಯ ಹಿನ್ನೆಲೆಯಲ್ಲಿ ಅಮೆರಿಕ ತನ್ನ ಸೈನ್ಯವನ್ನು ಲೆಬನಾನ್‌ನಿಂದ ವಾಪಸ್ಸು ಕರೆಸಿಕೊಂಡಿತು ಮತ್ತು ಮುಂದೆಂದು ಇಂತಹ ತಪ್ಪು ಮಾಡುವುದಿಲ್ಲವೆಂದು ಘೋಷಿಸಿತು.

ರೇಗನ್ ಲೆಬನಾನ್‌ನಲ್ಲಿ ಹಿನ್ನಡೆ ಕಂಡು ತನ್ನ ಬೆರಳನ್ನೆ ಸುಟ್ಟುಕೊಂಡ ನಂತರ ಮಧ್ಯಪ್ರಾಚ್ಯ ಸಮಸ್ಯೆಯ ಕುರಿತು ಯಾವುದೇ ಆಸಕ್ತಿ ತೋರಿಸಲಿಲ್ಲ. ಅವನ ನಂತರ ಜರ್ಜ್ ಬುಶ್ ಕೂಡ ಹೆಚ್ಚು ಕಡಿಮೆ ಕುವೈತ್ ಮೇಲೆ ಇರಾಕ್ ದಾಳಿ ಮಾಡುವವರೆಗೆ ಯಾವುದೇ ಆತುರದ ಆಸಕ್ತಿಯನ್ನು ತೋರಿಸಿಲ್ಲ.

ಗಲ್ಫ್ ಯುದ್ಧ ಮತ್ತು ನಂತರದ ಘಟನೆಗಳು

ಗಲ್ಫ್ ಯುದ್ಧದ ಸಮಯದಲ್ಲಿ ಅಮೆರಿಕ ಸರಕಾರ ಇರಾಕಿ ಅಧ್ಯಕ್ಷ ಸದ್ದಾಂ ಹುಸೇನನ ವಿರುದ್ಧ ಎಲ್ಲ ಅರಬ್ ರಾಜ್ಯಗಳ ಬೆಂಬಲ ಪಡೆಯಲು ಒಂದು ಕಾರ್ಯತಂತ್ರ ರಚಿಸಿಕೊಂಡಿತು. ಅರಬ್ ರಾಜ್ಯಗಳಾದ ಈಜಿಪ್ಟ್ , ಸಿರಿಯಾ ಮತ್ತು ಸೌದಿ ಅರೇಬಿಯಾ, ಅಮೆರಿಕ ನೇತೃತ್ವದ ಒಕ್ಕೂಟದೊಂದಿಗೆ ಸೇರಿ ಕುವೈತ್‌ನಿಂದ ಇರಾಕ್ ಸೈನ್ಯವನ್ನು ತೆರವುಗೊಳಿಸಲು ಸಹಕರಿಸಿದವು. ಅಮೆರಿಕ ರಚಿಸಿದ ಒಕ್ಕೂಟಕ್ಕೆ ಬೆಂಬಲ ಸೂಚಿಸಲು ಪ್ರತಿ ಅರಬ್ ರಾಜ್ಯಗಳಿಗೆ ಅವುಗಳದ್ದೇ ಕಾರಣಗಳಿದ್ದರೂ ಕೂಡ ಜರ್ಜ್ ಬುಶ್‌ಗೆ ಅವರ ಸಹಾಯಕತೆಯ ಕುರಿತು ಸ್ಪಷ್ಟ ಅರಿವು ಇತ್ತು. ಇಸ್ರೇಲ್‌ನೊಂದಿಗೆ ಆಪ್ತ ಮಿತೃತ್ವವನ್ನು ಹೊಂದಿದ್ದ ಅಮೆರಿಕ ಸರಕಾರಕ್ಕೆ ಸಾರ್ವತ್ರಿಕವಾದ ಬೆಂಬಲ ಸೂಚಿಸಿರುವುದು ಅರಬ್ ರಾಜ್ಯಗಳಿಗೆ ಅಪಾಯವು ಹೌದು. ಹಾಗಾಗಿ ಅಮೆರಿಕವೇ ಮುಂದೆ ಹೋಗಿ ಅರಬ್ -ಇಸ್ರೇಲಿ ಸಮಸ್ಯೆಯನ್ನು ಉದ್ದೇಶಿಸಿ ಮಾತನಾಡುವುದು ಅನಿವಾರ್ಯವು ಹೌದು ಮತ್ತು ವಾಷಿಂಗ್ಟನ್‌ಗೆ ಅದೊಂದು ಲಾಜಿಕ್ ಕೂಡ.

ಗಲ್ಫ್ ಯುದ್ಧದ ಸಂದರ್ಭದಲ್ಲಿ ಇರಾಕಿ ಅಧ್ಯಕ್ಷ ಸದ್ದಾಂ ಹುಸೇನ್ ಹರ ಸಾಹಸ ಮಾಡಿ ಇಸ್ರೇಲನ್ನು ಪ್ರಚೋದಿಸಿ ಯುದ್ಧರಂಗಕ್ಕೆ ಪ್ರವೇಶಿಸಲು ಪ್ರಯತ್ನ ಮಾಡಿ ಇಡೀ ಘಟನೆಯನ್ನು ಅರಬ್-ಇಸ್ರೇಲಿ ಯುದ್ಧವನ್ನಾಗಿ ಪರಿವರ್ತಿಸುವ ಹುನ್ನಾರ ನಡೆಸಿದ್ದನು. ಆದರೆ, ಅವನ ಈ ಕುತಂತ್ರಕ್ಕೆ ಇಸ್ರೇಲ್ ತಲೆಬಾಗದಂತೆ ಅಮೆರಿಕ ಇಸ್ರೇಲ್‌ಗೆ ಬುಲಾವ್ ಮಾಡಿತ್ತು. ಎಲ್ಲಿಯವರೆಗೆ ಅಂದರೆ ಬೇಕೆಂದೇ ಇರಾಕ್, ಇಸ್ರೇಲಿ ನಗರದ ಮೇಲೆ ಸ್ಕಡ್ ಮಿಸೈಲ್ ದಾಳಿ ಮಾಡಿದಾಗ ಇಸ್ರೇಲ್ ಸರಕಾರ ಅದನ್ನು ಸಹಿಸಿಕೊಂಡು ಇರಲು ಅಮೆರಿಕ ನಿರ್ದೇಶನ ನೀಡುತ್ತಿತ್ತು. ಜೊತೆಗೆ, ಇಸ್ರೇಲ್ ಯುದ್ಧದ ಸಮಯದಲ್ಲಿ ತೋರಿದ ಸಹನೆಗೆ ಪೂರಕವಾಗಿ ಅಮೆರಿಕ ಸರಕಾರ ಎಂದಿನಂತೆ ಬೃಹತ್ ಪ್ರಮಾಣದ ಸೈನಿಕ ಮತ್ತು ಆರ್ಥಿಕ ಸಹಾಯವನ್ನು ನೀಡಿತು.

ಕ್ಯಾಂಪ್ ಡೇವಿಡ್ ಪರಂಪರೆ

ಕ್ಯಾಂಪ್ ಡೇವಿಡ್ ಶಾಂತಿ ಸಂಧಾನದಲ್ಲಿ ಎರಡು ಪ್ರಮುಖ ಅಂಶಗಳನ್ನು ಕೈಬಿಡ ಲಾಗಿತ್ತು. ಒಂದು, ಇಸ್ರೇಲ್ ಆಕ್ರಮಿಸಿಕೊಂಡ ಸಿರಿಯಾದ ಗೋಲನ್ ಹೈಟ್ಸ್ ಕುರಿತು ಯಾವುದೇ ತೀರ್ಮಾನ ತೆಗೆದುಕೊಳ್ಳದ ಕಾರಣ ಇಸ್ರೇಲ್ ಮತ್ತು ಸಿರಿಯಾ ನಡುವೆ ಉದ್ವಿಗ್ನತೆ ಉಂಟಾಯಿತು. ಇನ್ನೊಂದು ಪ್ಯಾಲೇಸ್ತೀನಿ ಸಮಸ್ಯೆ ಕುರಿತು ಯಾವುದೇ ಅಧಿಕೃತ ಠರಾವುವನ್ನು ಹೊರಡಿಸದ ಕಾರಣ, ಪ್ರಾದೇಶಿಕವಾಗಿ ಅತಂತ್ರ ರಾಜಕೀಯ ವಾತಾವರಣ ಹುಟ್ಟಿತು. ಜೊತೆಗೆ ಪ್ಯಾಲೇಸ್ತೀನಿ ಅರಬರು ಪಿಎಲ್‌ಓ ನೇತೃತ್ವದಲ್ಲಿ ಸಾರ್ವತ್ರಿಕ ದಂಗೆಯನ್ನು ಇಸ್ರೇಲ್ ವಿರುದ್ಧ ಪಶ್ಚಿಮ ದಂಡೆಯಲ್ಲಿ ಸಂಘಟಿಸಿದರು. ಈ ಘಟನೆಯು ಪ್ಯಾಲೇಸ್ತೀನಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಮೆರಿಕ ಸರಕಾರ ಪರಿಗಣಿಸಲು ಸೂಚನೆಯನ್ನು ನೀಡಿತು.

ಗಲ್ಫ್ ಯುದ್ಧದ ನಂತರ ವಾಷಿಂಗ್ಟನ್ ಪ್ರಾದೇಶಿಕವಾಗಿ ಇನ್ನಷ್ಟು ತನ್ನ ಪ್ರಭಾವವನ್ನು ವೃದ್ದಿಸಿಕೊಳ್ಳಬೇಕೆಂಬ ಉದ್ದೇಶದಿಂದ ಪ್ರಾಮಾಣಿಕವಾಗಿ ಕ್ಯಾಂಪ್ ಡೇವಿಡ್ ಶಾಂತಿ ಸಂಧಾನ ಹಾಕಿ ಕೊಟ್ಟ ಪರಂಪರೆಯನ್ನು ಪುನರಾವರ್ತಿಸಲು ಪ್ರಯತ್ನ ನಡೆಸಿತು. ಈ ಹಿನ್ನೆಲೆಯಲ್ಲಿ ಅಮೆರಿಕ ವಿದೇಶಾಂಗ ಸಚಿವ ಜೇಮ್ಸ್ ಬೇಕರ್ ಮಧ್ಯಪ್ರಾಚ್ಯದ ಪ್ರದೇಶಕ್ಕೆ ಸುಮಾರು ಎಂಟು ಬಾರಿ ಭೇಟಿ ಕೊಟ್ಟು ಎಲ್ಲ ಅರಬ್ಬರನ್ನು ಮತ್ತು ಇಸ್ರೇಲ್ ಸರಕಾರವನ್ನು ಒಪ್ಪಿಸಿ ಶಾಂತಿ ಸಮ್ಮೇಳನಕ್ಕೆ ಅಣಿಯಾಗಲು ಬೆಂಬಲ ಪಡೆದನು. ಕಿಸ್ಸಿಂಜರ್‌ನ ಯೋಜನೆಯಂತೆ ಅಲ್ಲದಿದ್ದರೂ, ಜೇಮ್ಸ್ ಬೇಕರ್ ಶಾಂತಿ ಸಮ್ಮೇಳನವನ್ನು ಆಯೋಜಿಸಿ ಅರಬ್-ಇಸ್ರೇಲ್ ಸಮಸ್ಯೆಯ ಕುರಿತು ಹೊಸ ಚರ್ಚೆ ಆರಂಭಿಸುವ ಅನಿವಾರ್ಯತೆಯನ್ನು ಎರಡು ಗುಂಪಿನ ಸದಸ್ಯರಿಗೆ ಮನದಟ್ಟು ಮಾಡಲು ಯಶಸ್ವಿಯಾದನು.

ಹಲವು ಬಗೆಯ ಪ್ರಯತ್ನಗಳಿಂದ ಇಸ್ರೇಲ್ ಮತ್ತು ಅರಬ್ ಪ್ರತಿನಿಧಿಗಳು ಅಮೆರಿಕದ ಸಹಯೋಗದೊಂದಿಗೆ ಆಯೋಜಿಸಿದ ಮ್ಯಾಡ್ರಿಡ್ ಸಮ್ಮೇಳನಕ್ಕೆ ಹಾಜರಾಗಲು ಒಪ್ಪಿಗೆ ಸೂಚಿಸಿದವು. ಆರಂಭದಲ್ಲಿ ಇಸ್ರೇಲ್ ಪಿಎಲ್‌ಓವನ್ನು ಒಂದು ಭಯೋತ್ಪಾದನಾ ಗುಂಪು ಎಂದು ಬ್ರಾಂಡ್ ಮಾಡಿರುವುದರಿಂದ ಪ್ಯಾಲೇಸ್ತೀನಿಯರ ಪರವಾಗಿ ಪಿಎಲ್‌ಓ ಭಾಗವಹಿಸುವಿಕೆಯನ್ನು ವಿರೋಧಿಸಿತು ಮತ್ತು ಪಶ್ಚಿಮ ದಂಡೆಯಲ್ಲಿರುವ ಪ್ಯಾಲೇಸ್ತೀನಿ ಅರಬರು ಯಾವುದೇ ಭಯೋತ್ಪಾದನಾ ಚಟುವಟಿಕೆಯ ಹಿನ್ನೆಲೆ ಇಲ್ಲದ ಕಾರಣ ಅವರನ್ನು ಸಮ್ಮೇಳನಕ್ಕೆ ಪಿಎಲ್‌ಓ ಬದಲು ಆಹ್ವಾನಿಸಬೇಕು ಎಂದು ಪಟ್ಟು ಹಿಡಿಯಿತು. ಅದರ ಅರ್ಥ ಪ್ಯಾಲೇಸ್ತೀನಿಯರ ಪ್ರತಿನಿಧಿಯಾಗಿ ಭಾಗವಹಿಸುವ ಜನರ ಪಟ್ಟಿಯನ್ನು ಮೊದಲ ಇಸ್ರೇಲ್ ಪರಿಶೀಲನೆಗೆ ಒಳಪಡಿಸಿ, ಅದರಿಂದ ಅನುಮತಿ ಪಡೆಯಬೇಕು ಎಂದು ಶರತ್ತು ಹಾಕಿತು. ಅಮೆರಿಕ ಇದಕ್ಕೆ ಸಮ್ಮತಿಯನ್ನು ವ್ಯಕ್ತಪಡಿಸಿತು. ಪಿಎಲ್‌ಓಗೆ ಈ ಬೆಳವಣಿಗೆ ಮುಖಭಂಗ ಉಂಟಾಗಿರುವುದು ಸತ್ಯ. ಲೆಬನಾನ್‌ನ ಶೀತಲ ಯುದ್ಧದಲ್ಲಿ ಸೋಲನ್ನು ಅನುಭವಿಸಿದ ನಂತರ ಪಿಎಲ್‌ಓ ತನ್ನ ಕಾರ್ಯಾಚರಣೆಯನ್ನು ತುನಿಷ್‌ಗೆ ವರ್ಗಾಯಿಸಿಕೊಂಡಿದ್ದು, ಪಶ್ಚಿಮ ದಂಡೆಯಲ್ಲಿ ಅದರ ಪ್ರಭಾವ ಹೇಳುವಂತಹದ್ದೇನು ಇರಲಿಲ್ಲ. ಅದರ ಮುಖ್ಯಸ್ಥ ಯಾಸರ್ ಅರಾಫತ್ ಗಂಭೀರ ಟೀಕೆಗೂ ಒಳಗಾಗಿದ್ದನು. ಗಲ್ಫ್ ಯುದ್ಧದ ಸಂದರ್ಭದಲ್ಲಿ ಪಿಎಲ್‌ಓ ನೇರವಾಗಿ ಸದ್ದಾಂ ಹುಸೇನನು ಕುವೈತ್ ಮೇಲೆ ಮಾಡಿದ ಆಕ್ರಮಣವನ್ನು ಸಮರ್ಥಿಸಿ, ಇರಾಕಿಗೆ ಬೆಂಬಲಿಸಿರುವುದರಿಂದ, ಪಿಎಲ್ ಓ ಪ್ರಭಾವ ಮತ್ತಷ್ಟು ದುರ್ಬಲಗೊಂಡಿತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪಿಎಲ್ ಓಗೆ ಒಂದೇ ಒಂದು ದಾರಿ ಇದ್ದುದು, ತಾನು ಮಾಡಿದ ತಪ್ಪನ್ನು ನುಂಗಿಕೊಳ್ಳುವುದು.

ಅಂತಾರಾಷ್ಟ್ರೀಯ ವಾತಾವರಣದಲ್ಲಾದ ಬದಲಾವಣೆ

ಶೀತಲ ಯುದ್ಧ ಕೊನೆಗೊಂಡ ನಂತರ ಅಮೆರಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದೇ ಸೂಪರ್ ಪವರ್ ಸ್ಥಾನವನ್ನು ಅಲಂಕರಿಸಿತು. ಸೋವಿಯತ್ ಒಕ್ಕೂಟ ದುರ್ಬಲ ಗೊಂಡ ನಂತರ ಎಷ್ಟರ ಮಟ್ಟಿಗೆ ಅಮೆರಿಕ ಇಸ್ರೇಲ್ ಮೇಲೆ ತನ್ನ ನಿರ್ಧಾರಗಳನ್ನು ಹೇರುತ್ತದೆ ಎಂಬುದು ಕುತೂಹಲಕಾರಿ ಸಂಗತಿ. ಮೊದಲನೆಯದಾಗಿ ಇಸ್ರೇಲ್ ರಾಜ್ಯಕ್ಕೆ ಸೋವಿಯತ್ ಒಕ್ಕೂಟದಿಂದ ಬರುತ್ತಿದ್ದ ಬೆದರಿಕೆಯು ಮಾಯವಾಯಿತು. ಆ ಮೊದಲು ಸೋವಿಯತ್ ಒಕ್ಕೂಟವನ್ನು ಬೊಟ್ಟು ತೋರಿಸಿ, ಅಮೆರಿಕ ಇಸ್ರೇಲ್ ಒತ್ತಾಯ ಹೇರಿ ಶಾಂತಿ ಸಂಧಾನಕ್ಕೆ ಸಜ್ಜುಗೊಳಿಸುತ್ತಿತ್ತು. ಈಗ ಸೋವಿಯತ್ ಒಕ್ಕೂಟದ ಪ್ರಭಾವ ಸಂಪೂರ್ಣ ನಿಂತು ಹೋಯಿತು. ಎರಡನೆಯದಾಗಿ, ಗಲ್ಫ್ ಯುದ್ಧ ನಂತರದ ಅರಬ್ಬರ ಒಳಗೆ ವಿಭಜನೆಯ ಲಕ್ಷಣ ಎದ್ದು ಕಾಣುತ್ತಿತ್ತು. ಇವತ್ತು ಅರಬ್ ಜಗತ್ತು ಒಂದು ಇಬ್ಭಾಗ ವಾದ ಪ್ರದೇಶ. ಪ್ರತಿಯೊಂದು ರಾಜ್ಯ ಒಂದನ್ನೊಂದು ಪರಸ್ಪರ ವಿರೋಧಿಸತೊಡಗಿವೆ. ಈ ಹಿಂದೆ ಇಸ್ರೇಲ್ ವಿಷಯಕ್ಕೆ ಸಂಬಂಧಿಸಿ ಎಲ್ಲ ಅರಬರು ಒಗ್ಗಟ್ಟಾಗುತ್ತಿದ್ದರು. ಆದರೆ, ಈಗ ಅವರಲ್ಲಿಯೇ ವೈಷಮ್ಯ ಹುಟ್ಟಿಕೊಂಡಿತು. ಇರಾಕ್ ಕುವೈತನ್ನು ಬಲಾತ್ಕಾರದಿಂದ ಆಕ್ರಮಿಸಿದ ಘಟನೆ ಸೌದಿ ಅರೇಬಿಯವನ್ನು ಎಚ್ಚರಿಸಿತು. ಏಕೆಂದರೆ ಇರಾಕ್ ಅಧ್ಯಕ್ಷ ಕುವೈತನ್ನು ಆಕ್ರಮಿಸುವಾಗ ಆರಂಭದಿಂದ ಅದು ಇರಾಕ್‌ನ ಅವಿಭಾಜ್ಯ ಅಂಗವೆಂದೇ ಸಮರ್ಥಿಸಿಕೊಂಡಿದ್ದನು. ಕುವೈತ್‌ನ ಸ್ವಾತಂತ್ರ್ಯ ಘೋಷಣೆ ಬ್ರಿಟಿಷರು ತರಾತುರಿಯಲ್ಲಿ ತೆಗೆದುಕೊಂಡ ಬಲಾತ್ಕಾರದ ನಿರ್ಧಾರವೆಂದು ವಾದಿಸಿದನು. ಆದರೂ ೧೯೬೦ರ ದಶಕದಿಂದಲೇ ಒಂದಲ್ಲ ಒಂದು ಕಾರಣ ಹೇಳಿ ಕುವೈತನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವ ಹಲವು ಪ್ರಯತ್ನಗಳನ್ನು ಇರಾಕಿ ಸರಕಾರ ಈ ಹಿಂದೆಯೂ ಮಾಡಿತ್ತು. ಅದನ್ನೇ ಪುನರುಚ್ಚರಿಸಿ ಸದ್ದಾಂ ಕುವೈತ್‌ನ್ನು ಆಕ್ರಮಿಸಿಕೊಂಡಿರುವುದು ಸರಕಾರಕ್ಕೆ ಅರಿವಿತ್ತು. ಸೌದಿ ಅರೇಬಿಯಾಕ್ಕೂ ಇದು ಬೆದರಿಕೆ ಒಡ್ಡುವ ಘಟನೆಯೇ. ಏಕೆಂದರೆ, ಆಧುನಿಕ ಸೌದಿ ಅರೇಬಿಯಾದ ಸಂಸ್ಥಾಪಕ ಅಬ್ದುಲ್ -ಅಜೀಜ್ ಇಬ್ನಸೌದ್ ೧೯೦೨ ರಿಂದ ೧೫ರ ನಡುವೆ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಸಂಬಂಧಿಸಿ ಕೈಗೊಂಡ ಸೈನಿಕ ದಂಡಯಾತ್ರೆಯಲ್ಲಿ ಶರೀಫ್ ಹುಸೇನನು ಪ್ರತಿನಿಧಿಸುವ ಹಷಿಮೈಟ್ ಅರಬ್ ಸಮುದಾಯಕ್ಕೆ ಸೇರಿದ ಹಲವು ಪ್ರಾಂತಗಳನ್ನು ಆಕ್ರಮಿಸಿಕೊಂಡಿತ್ತು. ಅವುಗಳನ್ನು ಇಂದಿಗೂ ಸೌದಿ ಸರಕಾರ ಬಿಟ್ಟು ಕೊಟ್ಟಿಲ್ಲ. ಈ ಆಕ್ರಮಣದಲ್ಲಿ ಮೆಕ್ಕಾ ಮತ್ತು ಮದೀನಾ ಕೂಡ ಸೇರಿತ್ತು. ಹಷಿಮೈಟ್ ಮುಖಂಡ ಶರೀಫ್ ಹುಸೇನ್ ಖಲೀಫನಾಗಿ, ಈ ಎರಡು ಇಸ್ಲಾಂ ಧರ್ಮದ ಪವಿತ್ರ ಪ್ರಾರ್ಥನಾ ಸ್ಥಳಗಳ ಆಡಳಿತವನ್ನು ನಿರ್ವಹಿ ಸುತ್ತಿದ್ದನು. ಬಲಾತ್ಕಾರದಿಂದ ಅವನ ನಿಯಂತ್ರಣದಿಂದ ಬಿಡುಗಡೆಗೊಳಿಸಿ ಮಕ್ಕಾ ಮತ್ತು ಮದೀನಾ ಪವಿತ್ರ ಸ್ಥಳಗಳನ್ನು ಸೌದಿ ಅರೇಬಿಯಾ ಸ್ವಾಧೀನಪಡಿಸಿಕೊಟ್ಟಿತು. ತನ್ನ ನಿಯಂತ್ರಣದಲ್ಲಿಟ್ಟುಕೊಂಡ ಸೌದಿ ಸರಕಾರ ಧರ್ಮದ ಹೆಸರಿನಲ್ಲಿ ಜಾಗತಿಕ ಸಮುದಾಯದ ಧಾರ್ಮಿಕ ಹಾಗೂ ರಾಜಕೀಯ ಮುಖಂಡ ಎಂದು ಪ್ರತಿಪಾದಿಸುತ್ತಿತ್ತು. ಆದರೆ ಕುವೈತ್ ಮೇಲಿನ ಸದ್ದಾಂ ದಾಳಿ ಒಂದು ಸಂದೇಶವನ್ನು ಸೌದಿ ಸರಕಾರಕ್ಕೆ ರವಾನಿಸಿತು. ಸದ್ದಾಂನ ಇರಾಕ್ ಹಷಿಮೈಟ್ ಸಮುದಾಯದ ಅರಬರ ನೆಲೆಬೀಡು ಮತ್ತು ಹಷಿಮೈಟ್ ಅರಬರ ಕಣ್ಮಣಿಯಾಗಿ ಸದ್ದಾಂ ಹುಸೇನ್ ಪ್ರತಿಬಿಂಬಿಸಿಕೊಳ್ಳುತ್ತಿದ್ದು, ಒಂದು ವೇಳೆ ಹಷಿಮೈಟರಿಗೆ ಒಂದು ಕಾಲದಲ್ಲಿ ಸೇರಿದ್ದ ಮಕ್ಕಾ ಮದೀನ ಪವಿತ್ರ ಸ್ಥಳಗಳನ್ನು ಆಕ್ರಮಿಸುವುದಿಲ್ಲ ಎಂಬುದನ್ನು ಸೌದಿ ಸರಕಾರ ತಳ್ಳಿ ಹಾಕುವಂತಿರಲಿಲ್ಲ. ಹಾಗಾಗಿ ಸೌದಿ ಅರೇಬಿಯಾಕ್ಕೆ ಭದ್ರತಾ ವಿಚಾರವಾಗಿ ಸದ್ದಾಂ ಸವಾಲಾಗಿ ಕಾಣುತ್ತಾನೆ.

ಹಾಗೆಯೇ, ಗಲ್ಫ್‌ನಲ್ಲಿರುವ ಅನೇಕ ಶ್ರೀಮಂತ ತೈಲ ಅರಬ್ ರಾಷ್ಟ್ರಗಳು ಅಲ್ಲಿನ ತೈಲ ಸಂಪತ್ತು ಸೌದಿ ಅರೇಬಿಯಾದ ಹಾಗೇ, ಅಮೆರಿಕದ ಬಹುರಾಷ್ಟ್ರೀಯ ಕಂಪೆನಿಗಳ ವ್ಯಾಪ್ತಿಗೆ ಒಳಪಟ್ಟಿತ್ತು. ಅದರ ಅನ್ವೇಷಣೆ, ಉತ್ಪಾದನೆ ಮತ್ತು ಮಾರಟ ಅಮೆರಿಕದ ಸಾಮ್ರಾಜ್ಯಶಾಹಿತ್ವ ಕಂಪನಿಗಳು ನಿರ್ವಹಿಸುತ್ತಿದ್ದವು. ಅದರಿಂದ ಸಂಪತ್ತಿನ ಹೊಳೆಯೇ ಈ ಗಲ್ಫ್ ರಾಷ್ಟ್ರಗಳಿಗೆ ಹರಿದುಬರುತ್ತಿತ್ತು. ಇಲ್ಲಿನ ಅಡಂಬರ ಜೀವನಶೈಲಿ, ಕೃತಕ ಆರ್ಥಿಕ ಅಭಿವೃದ್ದಿ ಅವಲಂಬಿತ ಸೈನಿಕ ಆಧುನೀಕರಣ ಮತ್ತು ಅರಸೊತ್ತಿಗೆಯ ಮುಂದುವರಿಕೆ ಅಮೆರಿಕದ ಸಾಮ್ರಾಜ್ಯಶಾಹಿಯನ್ನೆ ಅವಲಂಬಿಸಿತು. ಸದ್ದಾಂ ಹುಸೇನ್ ಈಗ ಅಮೆರಿಕ ಸಾಮ್ರಾಜ್ಯಶಾಹಿತ್ವ ಪ್ರದೇಶವನ್ನು ವಿರೋಧಿಸುವ ನೆಪದಲ್ಲಿ ಗಲ್ಫ್ ರಾಷ್ಟ್ರಗಳಿಗೂ ಬೆದರಿಕೆಯೊಡ್ಡಬಹುದೆಂಬ ಭೀತಿಯ ವಾತಾವರಣ ಗಲ್ಫ್‌ನಲ್ಲಿ ಹುಟ್ಟಿ ಕೊಂಡಿತು. ತಮ್ಮನ್ನು ರಕ್ಷಿಸಿಕೊಳ್ಳಲು ಅನಿವಾರ್ಯವಾಯಿತು.

ಗಲ್ಫ್ ರಾಷ್ಟ್ರಗಳ ಆರ್ಥಿಕತೆಯ ಭದ್ರತೆಗೆ ಇಸ್ರೇಲ್‌ನಿಂದ ಯಾವುದೇ, ಅಡ್ಡಿ ಆತಂಕ ಗಳು ಬರುವುದಿಲ್ಲ ಎಂಬ ದೃಢ ನಂಬಿಕೆ ಇತ್ತು. ಹಾಗೇ ಅಮೆರಿಕವನ್ನು ಅವಲಂಬಿಸಿರುವ ಇತರ ರಾಷ್ಟ್ರಗಳಿಂದ ಅಂತಹ ಬೆದರಿಕೆ ಬರುವುದಿಲ್ಲ ಎಂಬುದು ಅರಿವಿತ್ತು. ಆದುದರಿಂದ, ಇಡೀ ರಾಜಕೀಯ ಚಿತ್ರಣ ಮತ್ತು ಲೆಕ್ಕಾಚಾರಗಳು ಸಂಪೂರ್ಣವಾಗಿ ಬದಲಾಗಿ ಯಾವಾಗ ಅಂತರ್-ಅರಬ್ ಯುದ್ಧ ಸಂಭವಿಸುತ್ತದೆ ಎಂಬುದನ್ನು ಊಹಿಸಲು ಅಸಾಧ್ಯವಾದ ಪರಿಸ್ಥಿತಿ ಉಂಟಾಯಿತು. ಈಗ ಅರಬ್-ಇಸ್ರೇಲಿ ಯುದ್ಧಕ್ಕೆ ಅವಕಾಶವಿಲ್ಲ. ಹಾಗೇನಾದರೂ ಆದರೆ ಅದು ಅಂತರ್-ಅರಬ್ ಯುದ್ಧ.

ಮೂರನೆಯದಾಗಿ, ಪ್ಯಾಲೇಸ್ತೀನಿಯರು ಅವಮಾನಕ್ಕೆ ಒಳಗಾಗಬೇಕಾಯಿತು. ಈಜಿಪ್ಟ್ ಕೈಕೊಟ್ಟ ನಂತರ ರಾಜಕೀಯ ನೆಲೆಯಲ್ಲಿ ಯಾವುದೇ ಅರಬ್ ಸರಕಾರಗಳು ಪ್ಯಾಲೇಸ್ತೀನಿ ಅರಬರನ್ನು ಬೆಂಬಲಿಸಲು ಮುಂದಾಗಲಿಲ್ಲ. ಶ್ರೀಮಂತ ಅರಬ್ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಕುವೈತ್ ಸರಕಾರಗಳು ಈ ಮೊದಲು ನೀಡುತ್ತಿದ್ದ ಆರ್ಥಿಕ ಸಹಾಯವು ಕೂಡಾ ನಿಂತು ಹೋಯಿತು. ಇದೊಂದು ಹಾಸ್ಯಾಸ್ಪದ. ಸದ್ದಾಂ ಹುಸೇನನು ಕುವೈತಿಗಳ ಸ್ವಾತಂತ್ರ್ಯವನ್ನು ಕಸಿದುಕೊಂಡ ಕ್ರಮಕ್ಕೆ ಬೆಂಬಲ ಸೂಚಿಸಿದ ಪ್ಯಾಲೇಸ್ತೀನಿಯರಿಗೆ ತಮ್ಮ ಸ್ವಾತಂತ್ರ್ಯವನ್ನೇ ಕಳೆದುಕೊಂಡಿದುದು ಮಾತ್ರವಲ್ಲ ಸ್ವತಂತ್ರ ರಾಷ್ಟ್ರ ರಚಿಸುವ ಪ್ರಕ್ರಿಯೆಗೆ ಅರಬ್ ಜಗತ್ತಿನ ಬೆಂಬಲವನ್ನು ಕಳೆದುಕೊಂಡಿತು. ಇದೊಂದು ಅವರೆದುರಿಸಿದ ದುರಂತ. ಕೊನೆಯದಾಗಿ, ಅಮೆರಿಕದ ಅಧ್ಯಕ್ಷನಾಗಿ ಜರ್ಜ್ ಬುಷ್ ಎದುರಿಸಿದ ಸಂದಿಗ್ಧತೆಗಳು. ಎಲ್ಲ ಅಧ್ಯಕ್ಷೀಯ ಚುನಾವಣೆಯಲ್ಲಿ ಯಹೂದಿ ಮತದಾರರ ಲಾಬಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಹಾಗಂತ ಎಲ್ಲ ಅಧ್ಯಕ್ಷರು ಏಕಾಕಿಯಾಗಿ ನಿರ್ಧಾರ ಗಳನ್ನು ತೆಗೆದುಕೊಳ್ಳಲು ಅಸಾಧ್ಯ. ಇಸ್ರೇಲ್-ಅರಬ್ ಸಮಸ್ಯೆಗೆ ಸಂಬಂಧಿಸಿ ಕೆಲವೊಂದು ಬಲಾತ್ಕಾರದ ನಿರ್ಧಾರ ಸಲ್ಲದು, ಪ್ಯಾಲೇಸ್ತೀನಿಯರಿಗೆ ಮತ್ತು ಸಿರಿಯಾ ರಾಜ್ಯಕ್ಕೆ ಹೆಚ್ಚು ರಿಯಾಯಿತಿ ನೀಡಲು ಒತ್ತಾಯಿಸುವುದು ಸುಲಭವಲ್ಲ. ಹೆಚ್ಚು ಒತ್ತಾಯ ಹೇರಿದರೆ ಅಮೆರಿಕ ಕಾಂಗ್ರೆಸ್‌ನಲ್ಲಿರುವ ಯಹೂದಿ ಪ್ರತಿನಿಧಿಗಳು ವಿರೋಧಿಸಬಹುದು. ಹಾಗಾಗಿ, ಅರಬ್-ಇಸ್ರೇಲಿ ಸಮಸ್ಯೆಯಂತಹ ಸೂಕ್ಷ್ಮ ವಿಚಾರಗಳನ್ನು ಎಚ್ಚರಿಕೆಯಿಂದ ಕೈಗೆತ್ತಿ ಕೊಳ್ಳವುದು ಅನಿವಾರ್ಯ ಮತ್ತು ಅಧ್ಯಕ್ಷೀಯ ಚುನಾವಣೆ ಹತ್ತಿರ ಬಂದಾಗ ಅಧ್ಯಕ್ಷೀಯ ಅಭ್ಯರ್ಥಿಗಳು ಇಸ್ರೇಲ್ ವಿರುದ್ಧ ಮೃದು ಧೋರಣೆ ತಳೆಯಲು ಇಸ್ರೇಲಿ ಪರವಿರುವ ಯಹೂದಿ ಲಾಬಿಗಳು ಕೆಲಸ ಮಾಡುತ್ತವೆ.

ಉದಾಹರಣೆಗೆ, ೧೯೯೨ರ ಸೆಪ್ಟೆಂಬರ್‌ನಲ್ಲಿ ಇಸ್ರೇಲ್ ಸರಕಾರ ಒಂದು ಬೇಡಿಕೆಯನ್ನು ವಾಷಿಂಗ್ಟ್‌ನ್‌ಗೆ ಕಳುಹಿಸಿ ೧೦ ಮಿಲಿಯ ಡಾಲರ್ ಸಾಲವನ್ನು ಕೇಳಿತು. ಸೋವಿಯತ್ ನಿಂದ ಆಗಮಿಸುವ ಯಹೂದಿ ವಲಸೆಗಾರರಿಗೆ ಪುನರ್ವಸತಿ ನಿರ್ಮಿಸಲು ಬೇಕಾದ ಖರ್ಚನ್ನು ಭರಿಸಲು ಈ ಬೇಡಿಕೆಯನ್ನು ಜರ್ಜ್ ಬುಷ್ ಆಡಳಿತದ ಮುಂದಿಟ್ಟಿತು. ಜರ್ಜ್ ಬುಷ್ ಆಡಳಿತ ಹಮ್ಮಿಕೊಂಡ ಶಾಂತಿ ಸಮ್ಮೇಳನ ಮುಗಿಯುವವರೆಗೆ ಈ ವಿಚಾರವಾಗಿ ಯಾವುದೇ ಒತ್ತಡ ಹೇರದಿರಲು ಇಸ್ರೇಲ್ ಸರಕಾರಕ್ಕೆ ಸಂದೇಶ ಕಳುಹಿಸಲಾಯಿತು. ಆದಾಗ್ಯೂ, ಕಾಂಗ್ರೆಸ್ ಸಭೆಯಲ್ಲಿ ಸೆನೆಟರುಗಳು ಮತ್ತು ಇತರ ಸದಸ್ಯರು ಇಸ್ರೇಲ್ ಬೇಡಿಕೆಯ ಪರವಾಗಿ ಸಭೆಯಲ್ಲಿ ಒಂದು ಠರಾವುವನ್ನು ಹೊರಡಿಸಿ ಇಸ್ರೇಲ್‌ನ ಬೇಡಿಕೆಯನ್ನು ಸಮ್ಮತಿಸಲು ಸೂಚಿಸಲಾಯಿತು. ಇದಕ್ಕೆ ಉತ್ತರವಾಗಿ ಜರ್ಜ್ ಬುಷ್ ಬೆದರಿಕೆ ಒಡ್ಡಿ, ಮಸೂದೆಯನ್ನು ತಡೆಯಲಾಗುವುದೆಂದೂ ಹೇಳಿಕೆ ನೀಡಿದನು. ಕೊನೆಗೂ, ಇಸ್ರೇಲಿಗರ ಪರ ಇದ್ದ ಸೆನೆಟರುಗಳು ಕಾಂಗ್ರೆಸ್‌ನಲ್ಲಿ ಬಹುಮತ ಪಡೆದು ಅಧ್ಯಕ್ಷರು ಬಳಸುವ ವಿಟೋ ಅಧಿಕಾರವನ್ನು ಪ್ರಶ್ನಿಸಿದರು. ನಂತರ ಅಧ್ಯಕ್ಷನು ಒತ್ತಾಯಕ್ಕೆ ಮಣಿದು ೧೯೯೨ರಲ್ಲಿ ಇಸ್ರೇಲ್‌ನ ಬೇಡಿಕೆಯನ್ನು ಪರಿಗಣಿಸಿದನು. ಇದು ಅಮೆರಿಕ ಆಡಳಿತದಲ್ಲಿ ಯಹೂದಿ ಲಾಬಿಯ ಪ್ರಭಾವ. ಹಾಗಿರುವಾಗ, ಅಮೆರಿಕ ಅಧ್ಯಕ್ಷನು ಪ್ಯಾಲೇಸ್ತೀನಿ ಸಮಸ್ಯೆಯ ಕುರಿತು ಚಾಣಾಕ್ಷತನದಿಂದ ವ್ಯವಹರಿಸಬೇಕು.

ಶಾಂತಿ ಸಮ್ಮೇಳನ

೧೯೯೧ರ ಅಕ್ಟೋಬರ್ ೩೦ರಲ್ಲಿ ಸ್ಪೇನ್ ರಾಜಧಾನಿ ಮ್ಯಾಡ್ರಿಡ್‌ನಲ್ಲಿ ಶಾಂತಿ ಸಮ್ಮೇಳನ ಜರುಗಿತು. ಅಲ್ಲಿ ಅಂತದ್ದೇನು ಮಿರ್ಯಾಕಲ್ ನಡೆದಿಲ್ಲ. ಆದರೆ ಮೊತ್ತ ಮೊದಲ ಬಾರಿಗೆ ಇಸ್ರೆಲ್ ಮತ್ತು ಅರಬ್ ಪ್ರತಿನಿಧಿಗಳು ಚರ್ಚೆಯಲ್ಲಿ ಪಾಲ್ಗೊಂಡರು. ಇದು ಅವರೊಳಗೆ ಈವರೆಗೆ ಇದ್ದ ಮಾನಸಿಕ ಅಡೆತಡೆಗಳನ್ನು ತೊಡೆದು ಹಾಕಲು ಸಹಕಾರಿಯಾಯಿತು. ಎರಡನೇ ಹಂತದ ಮಾತುಕತೆ ನಿರ್ಧರಿಸಿದಂತೆ ಡಿಸೆಂಬರ್‌ನಲ್ಲಿ ವಾಷಿಂಗ್ಟನ್‌ನಲ್ಲಿ ಕರೆಯಲಾಯಿತು.

ಪ್ಯಾಲೇಸ್ತೀನಿಯರು ಒಂದು ರೀತಿ ಸ್ವಾಯತ್ತತೆಯನ್ನು ಬಯಸಿ, ಪಶ್ಚಿಮ ದಂಡೆ ಮತ್ತು ಗಾಝಾ ಪಟ್ಟಿಯಲ್ಲಿ ತಮ್ಮದೇ ಸ್ವಾಯತ್ತತಾ ಸರಕಾರ ರಚಿಸಲು ಮುಂದಾಗಿದ್ದು, ಅದು ಅವರಿಗೆ ಮುಂದೆ, ಸ್ವತಂತ್ರ ರಾಜ್ಯ ಸ್ಥಾಪನೆಗೆ ವೇದಿಕೆ ರಚಿಸುವುದೆಂಬ ನಂಬಿಕೆ ಇತ್ತು. ಆದರೆ ಜೂಡಿಯಾ ಮತ್ತು ಸುಮೇರಿಯಾ ಪ್ರದೇಶಗಳು ಯಹೂದಿಗಳಿಗೆ ದೇವರು ಕೊಟ್ಟ ಭೂಮಿ ಆಗಿರುವುದರಿಂದ ಪ್ಯಾಲೇಸ್ತೀನಿಯರ ಈ ಬೇಡಿಕೆಗೆ ಒಪ್ಪಿಗೆ ಸೂಚಿಸಲಿಲ್ಲ. ಅಲ್ಲದೆ, ೧೯೬೭ರಿಂದ ಬಿಲಿಯಾದಷ್ಟು ಬಂಡವಾಳ ಹೂಡಿ, ಪಶ್ಚಿಮ ದಂಡೆಯಲ್ಲಿ ಯಹೂದಿಗಳಿಗೆ ಪುನರ್ವಸತಿ ಯೋಜನೆ ರೂಪಿಸಿರುವುದರಿಂದ ಅದನ್ನು ಧ್ವಂಸ ಮಾಡುವ ಯಾವ ಇರಾದೆಯನ್ನು ಇಸ್ರೇಲ್ ತೋರಿಸಲಿಲ್ಲ. ಕ್ಯಾಂಪ್ ಡೇವಿಡ್ ಶಾಂತಿ ಸಂಧಾನದ ನಂತರ ಇಸ್ರೇಲ್ ಇಲ್ಲಿ ವಸತಿಗಳ ನೆಲೆಗಳನ್ನು ಮೂರು ಪಟ್ಟು ವೃದ್ದಿಸಿತ್ತು. ೧೯೯೨ರ ಹೊತ್ತಿಗೆ ಪಶ್ಚಿಮ ದಂಡೆಯಲ್ಲಿ ಸುಮಾರು ೧೦೦,೦೦೦ದಷ್ಟು ಯಹೂದಿಗಳು ನೆಲೆಸಿದ್ದರು. ೧೯೭೯ರಲ್ಲಿ ಸಿನೈದಿಂದ ಸುಮಾರು ೭,೦೦೦ ಯಹೂದಿ ಕುಟುಂಬಗಳನ್ನು ಸ್ಥಳಾಂತರಿಸುವಾಗ ಪರಿಹಾರವಾಗಿ ಬಿಲಿಯ ಡಾಲರ್ ವ್ಯಯಿಸಿತು. ಈಗ ಪಶ್ಚಿಮ ದಂಡೆಯಿಂದ ತೆರವು ಗೊಳಿಸಲು ಯಹೂದಿಯರಿಗೆ ಇಸ್ರೇಲ್ ಸರಕಾರಕ್ಕೆ ಸುಮಾರು ೩೫ ಬಿಲಿಯ ಡಾಲರ್ ಬೇಕಾಗಿರುವುದು. ಇದನ್ನು ಅಮೆರಿಕ ಸರಕಾರ ನೀಡಬಲ್ಲುದೇ ಎಂಬುದು ಪ್ರಶ್ನೆ? ಕೊನೆಯ ಪಕ್ಷ, ಪಶ್ಚಿಮ ದಂಡೆಯಲ್ಲಿರುವ ಪ್ಯಾಲೇಸ್ತೀನಿಯರಿಗೆ ಒಂದಷ್ಟು ಸ್ವಾಯತ್ತತೆ ಯನ್ನು ನೀಡಿ ಯಹೂದಿಯರೊಂದಿಗೆ ಪ್ಯಾಲೇಸ್ತೀನಿಯರು ಹೊಂದಿಕೊಂಡು ಸಹಬಾಳ್ವೆ ನಡೆಸಲು ಅವಕಾಶ ನೀಡಬಹುದಷ್ಟೆ. ಈ ರೀತಿಯ ತೀರ್ಮಾನಗಳೂ ಕೂಡ ಹಲವು ಬಗೆಯ ಭಾವನಾತ್ಮಕ ಹಾಗೂ ವಾಸ್ತವ ಸಮಸ್ಯೆಗಳನ್ನು ಸೃಷ್ಟಿಸಬಹುದು.

 

ಪರಾಮರ್ಶನಗ್ರಂಥಗಳು

೧. ಜರ್ಜ್ ಅಂತೋನಿ, ೧೯೩೮.ದಿ ಅರಬ್ ಅವೇಕ್ಯನಿಂಗ್ : ದಿ ಸ್ಟೋರಿ ಆಫ್ ದಿ ಅರಬ್ ನೇಶನಲ್ ಮೂವ್ಮೆಂಟ್, ಲಂಡನ್.

೨. ಇಸೈಯಾ ಪ್ರೀಡ್‌ಮನ್, ೧೯೭೩. ದಿ ಕ್ವೆಷನ್ ಆಫ್ ಪ್ಯಾಲೇಸ್ತೀನ್, ಲಂಡನ್.

೩. ವಾಲ್ಟರ್ ಲೇಖರ್, ೧೯೭೬. ದಿ ಇಸ್ರೇಲ್ ಅರಬ್ ರೀಡರ್, ನ್ಯೂಯಾರ್ಕ್.

೪. ಡೇವಿಡ್ ವಿಟಲ್, ೧೯೭೫. ದಿ ಒರಿಜಿನ್ಸ್ ಆಫ್ ಜಿಯೋನಿಸಂ, ಆಕ್ಸ್ಫರ್ಡ್.