ಬೆನೆಡಿಕ್ಟ್ ಎಂಡರ್ಸನ್‌ರ ‘ಇಮ್ಯಾಜಿನ್ಡ್ ಕಮ್ಯೂನಿಟೀಸ್’ ಎಂಬ ಗ್ರಂಥದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟ ಅಧ್ಯಾಯ ಇಂಡೋನೇಶಿಯಾ ಮತ್ತು ಇಂಡೋಚೈನಾದ ರಾಷ್ಟ್ರೀಯ ಅಂದೋಲನದ ಕುರಿತು. ಇಂಡೋನೇಶಿಯಾ ಡಚ್ಚರ ವಸಾಹತುಶಾಹಿಯಾಗಿ ಕಾರ್ಯ ನಿರ್ವಹಿಸಿದ್ದು, ಇಲ್ಲಿನ ಜನರು ಡಚ್ ವಸಾಹತುಶಾಹಿಯಾಗಿ ಪ್ರಭುತ್ವದ ವಿರುದ್ಧ ಎರಡನೇ ಮಹಾಯುದ್ಧದ ಮೊದಲು ಸಂಘಟಿಸಿದ ಹೋರಾಟದ ಸ್ವರೂಪವನ್ನು ಎಂಡರ್ಸನ್ ಚರ್ಚೆಗೆ ಒಳಪಡಿಸುತ್ತಾರೆ. ಇಂಡೋಚೈನಾದಲ್ಲಿ ಫ್ರೆಂಚ್ ವಸಾಹತುಶಾಹಿ ಪ್ರಭುತ್ವ ಅಸ್ತಿತ್ವದಲ್ಲಿದ್ದು, ಅದರ ಧೋರಣೆ ವಿರುದ್ಧ ಇಂಡೋಚೈನಾದ ಜನರು ನಡೆಸಿದ ಪ್ರತಿಭಟನೆ ಚರ್ಚೆಯ ವಸ್ತುವನ್ನಾಗಿ ಎಂಡರ್ಸನ್ ಬಳಸಿಕೊಳ್ಳುತ್ತಾರೆ. ಇಲ್ಲಿ ಮುಖ್ಯವಾಗಿ ಈ ಎರಡು ರಾಷ್ಟ್ರೀಯ ಅಂದೋಲನ ಎರಡು ಪ್ರಮುಖ ಸಮಕಾಲೀನ ವಸಾಹತುಶಾಹಿ ರಾಷ್ಟ್ರಗಳ ವಿರುದ್ಧ ಏಕಕಾಲದಲ್ಲಿ ನಡೆಯುತ್ತಾದರೂ, ಆ ಆಂದೋಲನಗಳು ಒಂದೇ ಸ್ವರೂಪ ಮತ್ತು ಒಂದೇ ಬಗೆಯ ಫಲಿತಾಂಶವನ್ನು ನೀಡುವುದಿಲ್ಲ. ಪರಸ್ಪರ ಭಿನ್ನ ದಾರಿಯನ್ನು ಹಿಡಿದು ಚಲಿಸುತ್ತವೆ. ಮತ್ತು ಅದರಿಂದ ವ್ಯಕ್ತವಾಗುವ ವ್ಯವಸ್ಥಿತ ಸ್ಥಿತ್ಯಂತರ ವಿಭಿನ್ನವಾಗಿದ್ದವು ಎಂಬುದನ್ನು ಎಂಡರ್ಸನ್ ಗಮನಿಸುತ್ತಾರೆ. ಅವರೇ ಹೇಳುವಂತೆ ಇಂಡೋನೇಶಿಯಾ ರಾಷ್ಟ್ರೀಯ ಚಳುವಳಿಯು ಜನಾಂಗ ಆಧರಿತ ಒಂದುಗೂಡಿಸುವಿಕೆಗೆ ತಿರಸ್ಕರಿಸಿ ಪ್ರತ್ಯೇಕತೆಯನ್ನು ಸಮರ್ಥಿಸುವ ಬಗ್ಗೆ ಉದಾಹರಣೆಯಾಗಿ ಮೂಡಿ ಬರುತ್ತದೆ. ಈ ವಿಭಿನ್ನ ಚಿತ್ರಣವು ವರ್ಗ, ಸೈದ್ಧಾಂತಿಕ ನೆಲೆ ಮತ್ತು ರಾಜಕೀಯ ಅಂಶವನ್ನು ಅವಲಂಬಿಸಿ ಅಲ್ಲ. ಬದಲಾಗಿ ಜನಾಂಗೀಯ ಮತ್ತು ಭೌಗೋಳಿಕ ಲಕ್ಷಣಗಳನ್ನು ಆಧರಿಸಿದ ಘಟನೆಗಳು ಡಚ್ ವಸಾಹತು ಇಂಡೋನೇಶಿಯಾದಲ್ಲಿ ಆಯೋಜಿಸಿದ ರಾಷ್ಟ್ರೀಯ ಆಂದೋಲನವು ಚದುರಿ ಹೋದ ಹಲವು ದ್ವೀಪಗಳನ್ನು ಮತ್ತು ನೂರಾರು ಜನಾಂಗೀಯ ಗುಂಪುಗಳನ್ನು ಒಂದುಗೂಡಿಸಿ ಇಂಡೋನೇಶಿಯಾ ರಾಷ್ಟ್ರೀಯತೆಯನ್ನು ರಚಿಸುವುದನ್ನು ಗುರಿಯಾಗಿಟ್ಟುಕೊಂಡು ವಿಭಿನ್ನತೆಯಲ್ಲಿ ಐಕ್ಯತೆ ಎಂಬ ತತ್ವಕ್ಕೆ ಹೆಚ್ಚು ಒತ್ತು ನೀಡಿರುವುದು ಸ್ಪಷ್ಟವಾಗುತ್ತದೆ. ಆದರೆ, ಇದಕ್ಕೆ ವಿರುದ್ಧವಾಗಿ ಇಂಡೋಚೈನಾದಲ್ಲಿ ಜನಾಂಗೀಯ ಸಂಘರ್ಷ, ವಿಭಜನೆ ಮತ್ತು ದ್ವೀಪ ದ್ವೀಪಗಳಲ್ಲಿನ ಭಿನ್ನಾಭಿಪ್ರಾಯಗಳು ಮುಖ್ಯ ಅಂಶಗಳಾಗಿ ಅವು ಪರಸ್ಪರ ಒಂದುಗೂಡುವ ಪ್ರಕ್ರಿಯೆಗೆ ಸ್ಪಂದಿಸದೆ, ಪ್ರತ್ಯೇಕತೆಗೆ ಹೆಚ್ಚು ಒಲವು ತೋರಿಸಿದ ಕಾರಣ ಹಲವು ದ್ವೀಪಗಳ ಸಮ್ಮಿಲನ ಆಗುವ ಬದಲು ಫ್ರೆಂಚ್ ವಸಾಹತುಶಾಹಿ ವಿರೋಧಿ ಚಳವಳಿಯ ಫಲಿತಾಂಶವಾಗಿ ಇಂಡೋಚೈನಾ ಎಂಬ ಒಂದೇ ರಾಷ್ಟ್ರೀಯತೆ ಹಾಗೂ ರಾಷ್ಟ್ರ ರಚನೆಯಾಗುವ ಬದಲು ವಿಯೆಟ್ನಾಮ್, ಕಾಂಬೋಡಿಯಾ ಮತ್ತು ಲಾವೋಸ್ ಎಂಬ ಮೂರು ರಾಜ್ಯಗಳಾಗಿ ರಚನೆಯಾದವು. ಹಾಗಾಗಿ ಎಂಡರ್ಸನ್ ಇಂಡೋನೇಶಿಯಾ ಮತ್ತು ಇಂಡೋಚೈನೀಯರು ವಸಾಹತುಶಾಹಿ ವಿರುದ್ಧ ನಡೆಸಿದ ಚಳವಳಿಗಳು ಏಕತೆ ಮತ್ತು ಪ್ರತ್ಯೇಕತೆಯ ಸಂಕೇತಗಳೆಂದು ಬಣ್ಣಿಸುತ್ತಾರೆ.

ಎಂಡರ್ಸನ್ ಹೇಳುವ ವಿಭಿನ್ನತೆ ಮತ್ತು ತೌಲನಿಕ ಅಧ್ಯಯನವನ್ನು ಚರ್ಚೆ ಮಾಡಬೇಕಾಗುತ್ತದೆ. ಜೊತೆಗೆ ಈ ಬಗೆಯ ಚಿಂತನೆ ಸೈದ್ಧಾಂತಿಕವಾಗಿ ಎಷ್ಟು ಸಮರ್ಪಕ ವಾದದ್ದು ಎಂಬುದನ್ನು ನಾವು ಗಮನಿಸಬೇಕು. ರಾಷ್ಟ್ರೀಯವಾದ ಪರಿಕಲ್ಪನೆಯ ಹುಟ್ಟಿನ ಕುರಿತು ಇರುವ ಚರ್ಚೆಯ ಸ್ವರೂಪವನ್ನು ಗುರುತಿಸಲು ಕೂಡ ಇಂತಹ ಚಿಂತನೆ ಅಗತ್ಯ ಇದೆ. ಇಲ್ಲಿ ನಡೆಯುವ ಚರ್ಚೆಯ ವಿಷಯ ಎರಡು ಬಗೆಯ ವರ್ಗಗಳನ್ನು ಪ್ರತಿನಿಧಿ ಸುತ್ತವೆ. ಒಂದನೆಯದು, ವಸಾಹತುಪೂರ್ವ ಇತಿಹಾಸದ ಮೂಲವನ್ನಾಧರಿಸಿ ರಾಷ್ಟ್ರೀಯ ಚಳವಳಿ ಆರಂಭಿಸಿದ ಘಟನೆಯಲ್ಲಿ ಜನಾಂಗೀಯ ಮತ್ತು ಭೌಗೋಳಿಕ ಲಕ್ಷಣಗಳಿಗೆ ಹೇಗೆ ಪ್ರಾತಿನಿಧ್ಯ ನೀಡಿತು ಎಂಬುದು, ಎರಡನೆಯದು ಇದೊಂದು ವಸಾಹತುಶಾಹಿ ಪ್ರಭಾವದಿಂದ ಘಟಿಸಿದ ರಾಜಕೀಯ ಚಿಂತನೆಯಾಗಿ ಕೊನೆಯಲ್ಲಿ ವಸಾಹತುಶಾಹಿ ಪ್ರಭಾವ ಮತ್ತು ವಸಾಹತು ಪೂರ್ವ ಲಕ್ಷಣಗಳ ಪರಿಣಾಮಗಳನ್ನಾಧರಿಸಿ ಆಗಿರುವ ಸ್ಥಿತ್ಯಂತರ ಎಂದು ಹೇಳುವ ಪ್ರಯತ್ನ ಮಾಡಲಾಗಿದೆ.

ವಸಾಹತುಗಳಾಗಿ ಆಧುನಿಕ ಯುಗದಲ್ಲಿ ಇಂಡೋನೇಶಿಯಾ ಮತ್ತು ಇಂಡೋಚೈನಾದ ಅನುಭವಗಳು ಬೇರೆ ಬೇರೆಯಾಗಿ ಬಹಿರಂಗಗೊಳ್ಳುತ್ತವೆ. ಈ ಎರಡು ಭೌಗೋಳಿಕ ಸರಹದ್ದಿನ ವ್ಯಾಪ್ತಿಯಲ್ಲಿ ಗುರುತಿಸಲ್ಪಡುವ ನೂರಾರು ದ್ವೀಪಗಳು ಶತಮಾನಗಳಿಂದಲೂ ತಮ್ಮ ಇರುವಿಕೆಯನ್ನು ಸ್ವತಂತ್ರವಾಗಿ ಪ್ರತಿಪಾದಿಸಿಕೊಂಡಿದ್ದವು. ಇತಿಹಾಸದಲ್ಲಿ ಅವು ಗಳೆಂದೂ ಒಂದು ನಿರ್ದಿಷ್ಟ ರಾಜಕೀಯ ವ್ಯವಸ್ಥೆಯಡಿಯಲ್ಲಿ ಏಕೀಕರಣವಾದದ್ದಿಲ್ಲ. ಆದರೆ, ವಸಾಹತುಶಾಹಿ ಪ್ರಭುತ್ವದ ಪ್ರವೇಶ ಮತ್ತು ಅದರ ಧೋರಣೆಯ ಪರಿಣಾಮದಿಂದ ೨೦ನೆಯ ಶತಮಾನದ ಆರಂಭದ ವರ್ಷಗಳಲ್ಲಿ ಇಂಡೋನೇಶೀಯಾ ಮತ್ತು ಇಂಡೋಚೈನಾ ದ್ವೀಪಗಳು ಕ್ರಮವಾಗಿ ಡಚ್ ಮತ್ತು ಪ್ರೆಂಚರ ನೌಕರಶಾಹಿ ರಾಜ್ಯಗಳೊಂದಿಗೆ ವಿಲೀನಗೊಂಡವು. ವಿಭಿನ್ನ ಹಿನ್ನೆಲೆಯುಳ್ಳ ಬೇರೆ ಬೇರೆ ಜನಾಂಗಗಳಿಗೆ, ಸಂಸ್ಕೃತಿಗಳಿಗೆ ಆಶ್ರಯ ನೀಡಿದ ನೂರಾರು ದ್ವೀಪಗಳು ಒಂದೇ ರಾಜಕೀಯ ವ್ಯವಸ್ಥೆಯು ರೂಪಿಸುವ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತವೆ. ಇಂಡೋಚೈನಾದಲ್ಲಿ ಈ ಪ್ರಕ್ರಿಯೆಯು ಆರಂಭವಾದದ್ದು ಸರಿಸುಮಾರು ೧೮೫೯ರಲ್ಲಿ ಫ್ರೆಂಚರು ಸೈಗೋನ್ ದ್ವೀಪವನ್ನು ಆಕ್ರಮಿಸಿದ ನಂತರ. ಮೊಕೊಂಗ್ ಡೆಲ್ಟಾದ ಪೂರ್ವಕ್ಕಿರುವ ಲಾವೋ ದ್ವೀಪವನ್ನು ಫ್ರೆಂಚ್ ವಸಾಹತುಶಾಹಿ ಪ್ರಭುತ್ವ ೧೮೯೩ರಲ್ಲಿ ಆಕ್ರಮಿಸಿಕೊಂಡು ಫ್ರೆಂಚರು ಇಂಡೋಚೈನಾ ಭೂಭಾಗದ ವಸಾಹತೀಕರಣವನ್ನು ಪೂರ್ಣಗೊಳಿಸಿದರು. ಈ ಮಧ್ಯದಲ್ಲಿ ಫ್ರೆಂಚರು ಇಂಡೋಚೈನೀಸ್ ಯೂನಿಯನ್ ಎಂಬ ರಾಜಕೀಯ ರಚನೆಯನ್ನು ೧೮೮೭ರಲ್ಲಿ ಘೋಷಿಸಿ ಬೇರೆ ಬೇರೆ ದ್ವೀಪಗಳನ್ನು ಆಡಳಿತಾತ್ಮಕವಾಗಿ ಏಕೀಕರಣಗೊಳಿಸಿದರು. ಹಾಗೆಯೇ ಒಂದು ನಿರ್ದಿಷ್ಟ ರಾಜಕೀಯ ನಿಯಂತ್ರಣ ವ್ಯಾಪ್ತಿಗೆ ಚದುರಿಕೊಂಡಿರುವ ಎಲ್ಲ ದ್ವೀಪಗಳನ್ನು ಸೇರಿಸಿದರು. ಸುಮಾರು ಒಂದು ದಶಕದ ನಂತರ ಇದೊಂದು ಪರಿಣಾಮಕಾರಿ ರಾಜಕೀಯ ರಚನೆಯಾಗಿ ಗುರುತಿಸಿಕೊಂಡು. ಇದಕ್ಕೆ ಹೋಲಿಸಿದರೆ ಇಂಡೋನೇಶಿಯಾದ ಅನನ್ಯತೆಯು ನಿಧಾನಗತಿಯ ರಚನೆಯಾಗಿದ್ದು ಅದಕ್ಕೆ ಚಾಲನೆ ನೀಡಿದ್ದು ಸುಮಾರು ೧೭ನೆಯ ಶತಮಾನದಲ್ಲಿ, ಆದಾಗ್ಯೂ ೧೮೫೦ರವರೆಗೂ ಇಡೀ ಇಂಡೋನೇಶಿಯಾ ಆರ್ಕಿಪೆಲೊಗೋದಲ್ಲಿ ಜವಾ ದ್ವೀಪ ಮಾತ್ರ ಡಚ್ಚರ ನೇರ ನಿಯಂತ್ರಣಕ್ಕೆ ಒಳಪಟ್ಟಿತ್ತು. ಅಂದರೆ ಇತರ ದೊಡ್ಡ ದೊಡ್ಡ ದ್ವೀಪಗಳಾದ ಸುಮಾತ್ರ, ಬೋರ್ನಿಯೋ, ಸಿಲೆಬೆಲ್ ಮತ್ತು ಡಚ್ಚ್ ನ್ಯೂಘಾನ ಇತ್ಯಾದಿ ದ್ವೀಪಗಳು ಸುಮಾರು ೨೦ನೆಯ ಶತಮಾನದ ಆರಂಭದವರೆಗೂ ಪ್ರತ್ಯೇಕವಾಗಿ ತಮ್ಮ ಸ್ವತಂತ್ರ ಇರುವಿಕೆಯನ್ನು ಉಳಿಸಿಕೊಂಡಿದ್ದವು. ಫ್ರೆಂಚರಿಗೆ ಹೋಲಿಸಿದರೆ ಡಚ್ಚರದ್ದು ಹೆಚ್ಚು ಕೇಂದ್ರೀಕರಿಸಲ್ಪಟ್ಟ ವಸಾಹತುಶಾಹಿ ಸ್ಟೇಟ್ ಆಗಿದ್ದರೂ ಅದು ಪೂರ್ಣ ಪ್ರಮಾಣದ ನೌಕರಶಾಹಿ ಸ್ವರೂಪ ವನ್ನು ಪಡೆದುದು ೧೯೦೧ರ ಎಥಿಕಲ್ ಪಾಲಿಸಿಯನ್ನು ಅನುಷ್ಠಾನಗೊಳಿಸಿದ ನಂತರದ ದಿನಗಳಲ್ಲಿ. ಫ್ರೆಂಚ್ ಇಂಡೋಚೈನಾ ಹೆಚ್ಚಾಗಿ ಫ್ರೆಂಚ್ ವಸಾಹತುಶಾಹಿ ಚಮತ್ಕಾರದ ಪ್ರತಿಬಿಂಬವೆಂದೆ ಗೌರವಿಸಲ್ಪಟ್ಟಿತ್ತು. ಬಹುಶಃ ಈ ಕಾರಣಕ್ಕಾಗಿಯೇ ಮಾರ್ಟಿನ್ ಹೆಝ್ ಅವರು ‘ಎ ಹಿಸ್ಟರಿ ಆಫ್ ಕಾಂಬೋಡಿಯಾ’ ಎಂಬ ಗ್ರಂಥದಲ್ಲಿ ಇಂಡೋಚೈನಾವು ಫ್ರೆಂಚ್‌ರ ಅಪ್ಪಣೆ ಮೇರೆಗೆ ಅಕ್ರಮವಾಗಿ ರಚಿಸಲ್ಪಟ್ಟ ಇರುವಿಕೆ ಎಂದು ಹೇಳುತ್ತಾರೆ. ಜನಾಂಗೀಯ ಮತ್ತು ಭೌಗೋಳಿಕವಾಗಿ ಇಂಡೋಚೈನಾ ಎಂಬ ರಚನೆ ಅಕ್ರಮದ ಸಂಕೇತವೇ ಸರಿ. ಇಲ್ಲಿನ ಸುಮಾರು ೨೦ ಮಿಲಿಯಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಬೇರೆ ಬೇರೆ ಪ್ರಾದೇಶಿಕ ಸಂಸ್ಕೃತಿಯನ್ನು ಪ್ರತಿನಿಧಿಸುವವರು. ಸುಮಾರು ಮೂರನೇ ನಾಲ್ಕು ಭಾಗದಷ್ಟು ವಿಸ್ತೀರ್ಣದ ಭೂಮಿಯ ಗಡಿಯು ೧೮೯೬ರಲ್ಲಿ ಇಂಗ್ಲಿಷರೊಂದಿಗೆ ಫ್ರೆಂಚರ ಪೈಪೋಟಿಯನ್ನು ಸರಿಪಡಿಸಿಕೊಳ್ಳಲು ಮಾಡಿಕೊಂಡ ಒಪ್ಪಂದದಂತೆ ತೀರ್ಮಾನವಾಗಿತ್ತು. ಈ ಗಡಿ ನಿರ್ಧಾರವು ಲಾವೋ ಮತ್ತು ಸೈಯಾಮ್ ನಡುವೆ ಜನಾಂಗೀಯ ವಿಭಜನೆ ಮಾಡಿತು. ಚಾರಿತ್ರಿಕವಾಗಿ ಮೆಕೊಂಗ್ ತಪ್ಪಲಿನಲ್ಲಿ ಪ್ಯಾರಿಸ್ ಮತ್ತು ಬ್ಯಾಂಕಾಕ್ ನಡುವೆಯೂ ವಿಭಜನೆ ಉಂಟಾಯಿತು. ಇವತ್ತು. ಇದರ ಪರಿಣಾಮವಾಗಿ ಲಾವೋ ಜನರೆಂದು ಹೇಳಿಕೊಳ್ಳುವವರು ಲಾವೋದ ಮೂಲನಿವಾಸಿಗಳಲ್ಲ. ಮತ್ತು ಜನಾಂಗೀಯ ನೆಲೆಯಲ್ಲಿ ಹೇಳುವುದಾದರೆ ಮೂಲ ಲಾವೋಗಳು ಇವತ್ತು ಹೆಚ್ಚು ಪ್ರಮಾಣದಲ್ಲಿ ನೆಲೆಸಿರುವುದು ಥೈಲ್ಯಾಂಡ್‌ನಲ್ಲಿ. ಇದೇ ಬಗೆಯ ರಚನೆಯನ್ನು ಡಚ್ಚರ ವಸಾಹತು ಇಂಡೋನೇಶಿಯಾದಲ್ಲಿ ಕಾಣಬಹುದು. ಅದೂ ಕೂಡ ವಸಾಹತೀಕರಣದ ಪ್ರಭಾವದ ಹಿನ್ನೆಲೆಯನ್ನು ಇಂಡೋಚೈನಾದಂತೆ ಹಂಚಿಕೊಳ್ಳುತ್ತದೆ. ಫ್ರೆಂಚ್ ಇಂಡೋಚೈನಾಕ್ಕೆ ಹೋಲಿಸಿದರೆ, ಇಂಡೋನೇಶಿಯಾ ಮೂರುಪಟ್ಟು ವಿಸ್ತಾರದಲ್ಲಿ ದೊಡ್ಡದು. ಜನಸಂಖ್ಯೆ ಯಲ್ಲೂ ವ್ಯತ್ಯಾಸವಿದ್ದು, ಅಲ್ಲಿ ಸುಮಾರು ೪೬೮ರಕ್ಕೂ ಮಿಕ್ಕಿ ಭಾಷೆಯನ್ನಾಡುವ ಬುಡಕಟ್ಟು ಜನಾಂಗಗಳಿವೆ ಎಂಬುದು ಚಾರಿತ್ರಿಕವಾಗಿ ದೃಢಪಟ್ಟಿದೆ. ಉತ್ತರ ಮತ್ತು ಪಶ್ಚಿಮದಲ್ಲಿ ಮಲೇಶಿಯಾ ಜೊತೆ ಅದು ತನ್ನ ಗಡಿಯನ್ನು ಹಂಚಿಕೊಂಡಿದೆ. ಆದಾಗ್ಯೂ ೨೦ನೆಯ ಶತಮಾನದಲ್ಲಿ ಇಂಡೋನೇಶಿಯಾದ ರಾಷ್ಟ್ರೀಯವಾದಿಗಳೂ ತಮ್ಮ ರಾಜಕೀಯ ಅಸ್ತಿತ್ವವನ್ನು ಮತ್ತು ಅನನ್ಯತೆಯನ್ನು ಗಟ್ಟಿಗೊಳಿಸಲು ವಸಾಹತುಪೂರ್ವ ಚಾರಿತ್ರಿಕ ಘಟನಾವಳಿಗಳ ಪ್ರಭಾವವನ್ನು ಕಡೆಗಣಿಸುವುದಿಲ್ಲ. ಉದಾಹರಣೆಗೆ ೧೪ನೆಯ ಶತಮಾನದ ಕಾಲಘಟ್ಟದಲ್ಲಿ ಜವಾ ಕೇಂದ್ರಿತ ಮಜಪಹಿತ್ ಸಾಮ್ರಾಜ್ಯವು ಇಡೀ ಆರ್ಕಿಪೆಲಗೋವನ್ನು ಆವರಿಸಿತ್ತು ಎಂದು ದಾಖಲೆಯನ್ನು ಬಳಸುತ್ತಾನೆ. ಇದು ಐತಿಹಾಸಿಕವಾಗಿ ಸರಿಯಾದ ವಿಶ್ಲೇಷಣಾ ಕ್ರಮವೇ ಎಂಬುದನ್ನು ಚರ್ಚಿಸಬೇಕಾಗುತ್ತದೆ. ಏಕೆಂದರೆ ಇಂಡೋನೇಶಿಯಾ ದಲ್ಲಿ ಮಜಪಹಿತ್ ಸಾಮ್ರಾಜ್ಯದ ಕುರಿತು ಇಂಡೋನೇಶೀಯಾದ ಜನರು ತಿಳಿದು ಕೊಂಡಿರುವುದು ಡಚ್ ವಸಾಹತುಶಾಹಿ ಬರವಣಿಗೆಯಿಂದಲೇ ಹೊರತು ಅಲ್ಲಿನ ಸ್ಥಳೀಯ ಮಖಿಕ ಅಥವಾ ಜನಪದ ಆಕರಗಳಿಂದ ಅಲ್ಲ. ಜವಾ ಸಾಮ್ರಾಜ್ಯದ ಪ್ರಭಾವವೆಂಬುದು ಇಂಡೋನೇಶಿಯಾದ ರಾಷ್ಟ್ರೀಯವಾದಿಗಳಿಗೆ ಭಾವನಾತ್ಮಕವಾದ ಆಕರವೇ ಹೊರತು ಜೀವಂತಿಕೆ ಉಳಿಸಿಕೊಂಡ ನೆನಪುಗಳಲ್ಲ. ಇದಕ್ಕೆ ಹೋಲಿಸಿದರೆ ವಿಯೆಟ್ನಾಮಿ ಸಾಮ್ರಾಜ್ಯದ ವಿಸ್ತರಣೆ(ಮುಖ್ಯವಾಗಿ ಕಾಂಬೋಡಿಯಾ ಮತ್ತು ಲಾವೋ ಪ್ರದೇಶಗಳಲ್ಲಿ) ತೀರ ಇತ್ತೀಚಿನದ್ದು. ಅಂದರೆ ೧೯ನೆಯ ಶತಮಾನದಲ್ಲಿ ನಡೆದದ್ದಾಗಿ, ಫ್ರೆಂಚರ ಅತಿಕ್ರಮಣ ಇದನ್ನೆ ಆಧರಿಸಿ ಗಟ್ಟಿಗೊಂಡಿತ್ತು. ಹಾಗಾಗಿ ಫ್ರೆಂಚರು ಪ್ರೋ ವಿಯೆಟ್ನಾಮಿ ವೃದ್ದಿಯು ಇಂಡೋಚೈನಾ ಒಗ್ಗಟ್ಟಿಗೆ ಅಡ್ಡಿ ಉಂಟುಮಾಡಿತು.

ದಕ್ಷಿಣಪೂರ್ವ ಏಷ್ಯಾದ ಜನತೆಯ ಸಾಂಸ್ಕೃತಿಕ ಚಲನವಲನಗಳನ್ನು ಮುಖ್ಯವಾಗಿ ಇಂಡೋನೇಶಿಯಾ ಮತ್ತು ಮಲೇಶಿಯಾ ಆರ್ಕಿಪೆಲಗೂ ನಡುವಿನ ಸಂಬಂಧದಲ್ಲಿ ವಸಾಹತುಪೂರ್ವದಿಂದಲೇ ಒಂದಷ್ಟು ಸಾಮ್ಯತೆ ಮತ್ತು ಪರಸ್ಪರ ಅನ್ಯೋನತೆ ಇದ್ದದ್ದು ಕಂಡುಬರುತ್ತದೆ. ಜನಾಂಗೀಯ ಮತ್ತು ಸಾಂಸ್ಕೃತಿಕ ರೂಪುರೇಷೆಗಳು ಪರಸ್ಪರ ಸಾಮ್ಯತೆ ಯನ್ನು ಬಹಿರಂಗಗೊಳಿಸಿ ಅವರನ್ನೂ ಒಂದುಗೂಡಿಸುವ ಮಟ್ಟಕ್ಕೂ ಪ್ರಭಾವ ಬೀರುವ ಗುಣಲಕ್ಷಣಗಳನ್ನು ಅವೆರಡು ಭೂಪ್ರದೇಶಗಳು ಹೊಂದಿದ್ದರೂ ಎರಡು ಪ್ರದೇಶಗಳ ನಡುವೆ ಅನಾದಿಕಾಲದಿಂದಲೂ ವ್ಯಾಪಾರ ವಹಿವಾಟುಗಳು ನಿರಂತರವಾಗಿ ನಡೆಯುತ್ತಿದ್ದು, ಮಲಯ ಜನರು ಆಡುವ ಭಾಷೆಯು ಇಡೀ ಇಂಡೋನೇಶಿಯಾದಲ್ಲಿರುವ ದ್ವೀಪಗಳಿಗೆ ಹರಡಿತ್ತು. ಹೆಚ್ಚಿನವರು ಅದೇ ಭಾಷೆಯನ್ನು ಆಧರಿಸಿ ವಹಿವಾಟನ್ನು ಮಾಡುತ್ತಿದ್ದರು. ಸಾಂಸ್ಕೃತಿಕವಾಗಿ ಅನ್ಯೋನ್ಯತೆ ಅವರ ನಡುವೆ ಬೆಳೆದಿತ್ತು. ಆದರೆ ಇದಕ್ಕೆ ವಿರುದ್ಧವಾಗಿ ಮಲೇಶಿಯಾ ಮತ್ತು ಇಂಡೋನೇಶಿಯಾ ಎರಡು ಪ್ರತ್ಯೇಕ ರಾಷ್ಟ್ರಗಳಾಗಿ ರೂಪುಗೊಂಡವು. ಅವೆರಡರ ನಡುವೆ ರಾಜಕೀಯ ಏಕತೆ ಮಾತ್ರ ರೂಪುಗೊಂಡಿರಲಿಲ್ಲ. ಬ್ರಿಟಿಷರು ಮತ್ತು ಡಚ್ಚರು ೧೮೨೪ರ ಸ್ಟ್ರೈಟ್ ಒಪ್ಪಂದದ ಮೇರೆಗೆ ಇಂಡೋನೇಶಿಯಾ ಮತ್ತು ಮಲೇಶಿಯಾ ನಡುವೆ ಗಡಿ ನಿರ್ಧರಿಸಲಾಗಿದ್ದು ಅದೇ ಪ್ರತ್ಯೇಕತೆಯನ್ನು ಇವತ್ತಿಗೂ ಪರಸ್ಪರ ಗೌರವಿಸುತ್ತಿರುವುದು ಗಮನಾರ್ಹ ಅಂಶ. ಹಾಗಾಗದಿದ್ದರೆ, ಇವತ್ತು ಇಂಡೋನೇಶಿಯಾ ಒಂದು ಭೌಗೋಳಿಕ ಸರಹದ್ದಿನೊಳಗೆ ಗುರುತಿಸಲಾಗುತ್ತಿರಲಿಲ್ಲ. ಬದಲಾಗಿ ಸುಮಾರು ೨೦ ಬಲಿಷ್ಠ ಜನಾಂಗಗಳು ಪ್ರತ್ಯೇಕ ರಾಷ್ಟ್ರಗಳನ್ನು ಕಟ್ಟಿಕೊಳ್ಳುತ್ತಿದ್ದರು (ಇಂಡೋಚೈನಾ ದಂತೆ).

ಈ ಬಗೆಯ ಭಾವನಾತ್ಮಕ ಸಂಬಂಧ(ಪ್ರತ್ಯೇಕತಾ ಭಾವನೆಗೆ ವಿರುದ್ಧವಾಗಿ) ವಸಾಹತು ಶಾಹಿ ಬರವಣಿಗೆಯಲ್ಲಿ ವ್ಯಕ್ತವಾಗಿ, ಇಂಡೋನೇಶಿಯಾ ಇತಿಹಾಸ ರಚನೆಯಾಗಿದ್ದು, ಅದು ನಂತರ ರಾಷ್ಟ್ರೀಯವಾದಿ ಇತಿಹಾಸಶಾಸ್ತ್ರದಲ್ಲಿ ಮರುಸೃಷ್ಟಿಯಾಯಿತು. ಬಹುಶಃ ಡಚ್ ವಸಾಹತು ವ್ಯವಸ್ಥೆಯು ಇದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿತು ಎಂದು ಭಾವಿಸಬಹುದು. ಇದಕ್ಕೆ ಮೂಲಭೂತವಾದ ವಾತಾವರಣವನ್ನು ನಿರ್ಮಾಣ ಮಾಡಿರುವುದು ಡಚ್ ವಸಾಹತುಶಾಹಿ ಸ್ಟೇಟ್. ಅದು ಕೇಂದ್ರೀಕೃತ ಆಡಳಿತವಾದರೂ ಇಂಡೋನೇಶಿಯಾದಲ್ಲಿ ಒಂದು ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಜನತೆ ಜನತೆ ನಡುವೆ ಒಂದು ಭಾವನಾತ್ಮಕವಾದ ಸಂಬಂಧವನ್ನು ಬೆಳೆಸಿರುವುದು ಡಚ್ ವಸಾಹತುಶಾಹಿ ಶಿಕ್ಷಣ ಪದ್ಧತಿ. ಹಿಂದೆಯೇ ಪ್ರಸ್ತಾಪಿಸಿರುವಂತೆ ಇಂಡೋನೇಶಿಯಾ ಹಲವಾರು ಚದುರಿ ಹೋದ ದ್ವೀಪಗಳ ಭೂಮಿಕೆಯಾಗಿದ್ದರೂ ಡಚ್ ವಸಾಹತುಶಾಹಿ ಯುಗದಲ್ಲಿ ಆ ಎಲ್ಲಾ ದ್ವೀಪಗಳು ಸಮ್ಮಿಲನಗೊಂಡು, ಅನೇಕ ಜನಾಂಗಗಳ ನಡುವೆ ಏಕೀಕೃತ ವಾತಾವರಣವನ್ನು ನಿರ್ಮಾಣ ಮಾಡಿತು. ಅವರಿಗೊಂದು ಸ್ವತಂತ್ರ ಇರುವಿಕೆಯ ಭಾವನಾತ್ಮಕ ರಚನೆಯನ್ನು ಹುಟ್ಟು ಹಾಕಿದರು. ಈ ಭಾವನಾತ್ಮಕ ಸಂಬಂಧವನ್ನು ಮತ್ತಷ್ಟು ಬಲಗೊಳಿಸಿರುವುದು ಡಚ್ಚರ ಶಿಕ್ಷಣ ಪದ್ಧತಿ. ಇಡೀ ಇಂಡೋನೇಶಿಯಾದ ಉದ್ದಗಲಕ್ಕೂ ಇರುವ ಶಿಕ್ಷಣ ಸಂಸ್ಥೆಗಳಲ್ಲಿ ಒಂದೇ ಬಗೆಯ ಪಠ್ಯಕ್ರಮವನ್ನು ಅಳವಡಿಸಲಾಯಿತು. ಸುಮಾರು ನಾನೂರಕ್ಕೂ ಹೆಚ್ಚು ಭಾಷೆಗಳನ್ನಾಡುವ ಬುಡಕಟ್ಟು ಜನಾಂಗಗಳು ಬೇರೆ ಬೇರೆ ದ್ವೀಪ ಗಳಲ್ಲಿ ಚದುರಿಕೊಂಡಿದ್ದರೂ, ಶೈಕ್ಷಣಿಕವಾಗಿ ಈ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳು ಸೇರ್ಪಡೆ ಪಡೆಯುವ ವಿದ್ಯಾ ಸಂಸ್ಥೆಗಳಲ್ಲಿ ಬೋಧಿಸುವ ಪಠ್ಯಗಳು ಒಂದೇ ತೆರನದ್ದು. ಹಾಗಾಗಿ, ಈ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಜನೆ ಮುಗಿಸಿ ಹೊರ ಬರುವ ವಿದ್ಯಾರ್ಥಿ ಸಮೂಹ ಮುಂದೆ ದೇಶ ರಚಿಸುವ ಆಂದೋಲನದಲ್ಲಿ ಪಾಲ್ಗೊಳ್ಳುವ ಪ್ರಜೆಗಳಾದರು ಮತ್ತು ಅವರೆಲ್ಲರೂ ಸಮಾನ ಮನಸ್ಸಿನವರು. ಅಂದರೆ, ಆರಂಭದಲ್ಲಿ ಈ ಶಿಕ್ಷಣ ಸಂಸ್ಥೆಗೆ ಸೇರುವ ಸಂದರ್ಭದಲ್ಲಿ ಈ ವಿದ್ಯಾರ್ಥಿ ಸಮೂಹ ಬೇರೆ ಬೇರೆ ಹಿನ್ನೆಲೆಯಿಂದ ಬಂದವರಾಗಿರುತ್ತಾರೆ. ಬೇರೆ ಬೇರೆ ದ್ವೀಪಗಳಿಗೆ, ಬುಡಕಟ್ಟು ಸಮುದಾಯ ಗಳಿಗೆ, ಆಚಾರ ವಿಚಾರಗಳಿಗೆ ಸೇರಿದವರಾಗಿರುತ್ತಾರೆ. ಬೇರೆ ಬೇರೆ ಧಾರ್ಮಿಕ ಹಿನ್ನೆಲೆ ಯಿಂದ ಬಂದವರು, ಬೇರೆ ಬೇರೆ ಭಾಷೆಗಳನ್ನಾಡುವವರು. ಆದರೆ ವಸಾಹತುಶಾಹಿ ಶಿಕ್ಷಣ ಸಂಸ್ಥೆಗಳು ಈ ವಿದ್ಯಾರ್ಥಿ ಸಮೂಹಕ್ಕೆ ಒಂದೇ ಬಗೆಯ ವಾತಾವರಣವನ್ನು ಕೊಠಡಿ ಒಳಗೆ ಮತ್ತು ಶಾಲಾ ವಠಾರದೊಳಗೆ ನಿರ್ಮಾಣ ಮಾಡುತ್ತವೆ. ಎಲ್ಲರು ಕಲಿಯುವ ವಿಷಯಗಳು ಒಂದೇ. ಒಂದೇ ಮಾದರಿಯಲ್ಲಿ ಹಾಗು ಒಂದೇ ಭಾಷೆಯಲ್ಲಿ ಬೋಧನೆ ಮಾಡಲಾಗುತ್ತದೆ. ಅದರಲ್ಲೂ, ಎಲ್ಲರಿಗೂ ಸಮಾನವಾದ ಅವಕಾಶಗಳನ್ನು ಅನುಭವಿಸಲು ಪರಿಸ್ಥಿತಿ ನಿರ್ಮಾಣವಾಗುತ್ತದೆ. ಉದಾಹರಣೆಗೆ ಜವಾ ದ್ವೀಪ ಅತ್ಯಂತ ಹೆಚ್ಚು ಪಾಶ್ಚಾತ್ಯೀಕರಿಸಲ್ಪಟ್ಟ ಪ್ರದೇಶ ಮತ್ತು ವಿದೇಶಿ ಸಂಸ್ಕೃತಿಯ ಪ್ರಭಾವ ಹೆಚ್ಚು ಕಾಣ ಬಹುದಾದ ಪ್ರದೇಶವೂ ಹೌದು. ಉಳಿದ ದ್ವೀಪಗಳಿಗಿಂತ ಜವಾ ಹೆಚ್ಚು ಅನುಕೂಲತೆ ಗಳನ್ನು ಅನುಭವಿಸುತ್ತಿರಬಹುದು. ಆದರೆ, ಇಲ್ಲಿರುವ ಶಿಕ್ಷಣ ಸಂಸ್ಥೆಗಳು ಕೇವಲ ಜವಾದ ಪ್ರಜೆಗಳಿಗೆ ಮೀಸಲಿಟ್ಟಿರಲಿಲ್ಲ. ಬದಲಾಗಿ ಇಡೀ ಇಂಡೋನೇಶಿಯಾದ ಮೂಲೆ ಮೂಲೆಗಳಲ್ಲಿ ಚದುರಿಕೊಂಡ ದ್ವೀಪಗಳಿಂದ, ಕುಲಗಳಿಂದ ಬರುವ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳಲು ಸಮಾನ ಹಕ್ಕುಗಳನ್ನು ಹಂಚಿಕೊಳ್ಳುತ್ತಿದ್ದರು. ಹಾಗಾಗಿ ಶಿಕ್ಷಣ ಸಂಸ್ಥೆಯ ಕೊಠಡಿ ಒಳಗೆ ಬಹುಸಂಸ್ಕೃತಿ ಪ್ರಾತಿನಿಧ್ಯ ಎದ್ದು ಕಾಣುತ್ತದೆ. ಅಂದರೆ ಬೇರೆ ಬೇರೆ ಹಿನ್ನೆಲೆಯಿಂದ ಬಂದು ಒಂದೇ ಬಗೆಯ ಪಠ್ಯಕ್ರಮವನ್ನು ಅನುಸರಿಸಿ ತಮ್ಮ ಶಿಕ್ಷಣವನ್ನು ಪಡೆಯುವುದರಿಂದ ಅವರು ಭಾವನಾತ್ಮಕವಾಗಿ ತಾವೆಲ್ಲರೂ ಇಂಡೋನೇಶಿ ಯಾದವರು ಎಂಬ ಐಕ್ಯತಾ ಭಾವನೆ ಮೂಡಲು ಸಾಧ್ಯವಾಗುತ್ತದೆ. ತಾವು ಬಂದಿರುವ ದ್ವೀಪದ ಬಗ್ಗೆ ಪ್ರೀತಿ ಇದ್ದರೂ, ಕೊನೆಗೆ ಎಲ್ಲೊ ಒಂದು ಕಡೆ ನಾವೆಲ್ಲರೂ ಇಂಡೋನೇಶಿಯಾ ರಾಷ್ಟ್ರಕ್ಕೆ ಸೇರಿದವರು ಎಂಬ ಕಲ್ಪನೆ ಹುಟ್ಟುತ್ತದೆ.

ಈ ವಾತಾವರಣವನ್ನು ನಿರ್ಮಾಣ ಮಾಡಿದವರು ಡಚ್ಚರು ಮತ್ತು ಅವರು ಸ್ಥಾಪಿಸಿದ ವಸಾಹತುಶಾಹಿ ಪ್ರಭುತ್ವ. ಅವರು ಆ ಪ್ರದೇಶವನ್ನು ಮತ್ತು ಅದರ ರಾಷ್ಟ್ರೀಯತೆಯನ್ನು ರಚಿಸಿದ್ದಾರೆ. ಹಾಗಾಗಿ ಈ ಭಾವನೆಯ ಸೃಷ್ಟಿ ಡಚ್ಚರ ಕೊಡುಗೆ ಎಂಬ ವಾದವನ್ನು ಎಂಡರ್ಸನ್ ವಿಸ್ತರಿಸುತ್ತಾನೆ. ಅವನ ಪ್ರಕಾರ ಆಧುನಿಕ ಶಿಕ್ಷಣ ಪಡೆದ ವಿದ್ಯಾವಂತರು ಸಾಮಾನ್ಯ ಅನುಭವಗಳನ್ನು ಹಂಚಿಕೊಳ್ಳುತ್ತ ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಪಾಲುಗೊಳ್ಳು ತ್ತಾರೆ. ಅದೊಂದು ಸಮುದಾಯವಾಗಿ ನಿರ್ಮಾಣವಾಗುತ್ತದೆ. ರಾಜಕೀಯ ನೆಲೆಯಲ್ಲಿ ಅವರು ಭಾವನಾತ್ಮಕವಾಗಿ ಇಂಡೋನೇಶಿಯಾ ನಮ್ಮದು, ಎಂಬ ಕಲ್ಪನೆಯನ್ನು ಹಂಚಿ ಕೊಳ್ಳುತ್ತಾರೆ. ಜವಾದಲ್ಲಿ ಶಿಕ್ಷಣ ಪಡೆದ ಒಬ್ಬ ಸುಮಾತ್ರದ ವಿದ್ಯಾರ್ಥಿ, ತಾನು ಬಂದದ್ದು ಸುಮಾತ್ರ ದ್ವೀಪದಿಂದಾದರೂ, ಅವನು ಪಡೆದ ಶಿಕ್ಷಣದ ಮೂಲಕ ಇಡೀ ಇಂಡೋನೇಶಿಯಾ ಅವನಿಗೆ ಒಂದು ನಿರ್ದಿಷ್ಟ ಭೂಮಿಕೆಯಾಗಿ ಕಂಡುಬರುತ್ತದೆ. ಜೊತೆಗೆ ಭಾವನಾತ್ಮಕವಾಗಿ ಅದು ತನ್ನ ದೇಶವೆಂದು ಪರಿಗಣಿಸುತ್ತಾನೆ. ದ್ವೀಪ, ತನ್ನ ಕುಟುಂಬ, ಬುಡಕಟ್ಟು ಸಂಬಂಧಕ್ಕಿಂತಲೂ ದೇಶದೊಂದಿಗಿನ ತನ್ನ ಸಂಬಂಧ ಪವಿತ್ರವಾದದ್ದು ಎಂಬ ಭಾವನೆ ಎಲ್ಲರೂ ಹಂಚಿಕೊಳ್ಳುವ ಪ್ರಕ್ರಿಯೆ ರಾಷ್ಟ್ರ ನಿರ್ಮಾಣದ ಮೊದಲ ಹಂತವೆಂದು ಎಂಡರ್ಸನ್ ಪ್ರತಿಪಾದಿಸುತ್ತಾರೆ.

ಇದಕ್ಕುತ್ತರವಾಗಿ ಎಂ.ಸಿ. ರೆಕ್ಲಿಪ್ಸ್ , ‘ಹಿಸ್ಟರಿ ಆಫ್ ಮಾಡರ್ನ್ ಇಂಡೋನೇಶಿಯಾ’ ಎಂಬ ಗ್ರಂಥದಲ್ಲಿ ಡಚ್ಚರು ಇಂಡೋನೇಶಿಯಾ ರಾಷ್ಟ್ರ ನಿರ್ಮಿಸಲಿಲ್ಲ, ಬದಲಾಗಿ ಅದರ ಭೌಗೋಳಿಕ ವ್ಯಾಪ್ತಿಯಲ್ಲಿ ವಸಾಹತುಶಾಹಿ ಭಾಷೆಯಲ್ಲಿ ವ್ಯಾಖ್ಯಾನಿಸಿದರು ಎಂದು ಅಭಿಪ್ರಾಯಪಡುತ್ತಾನೆ. ಅದರ ವ್ಯಾಪ್ತಿಯನ್ನು ಗುರುತಿಸುತ್ತಾ ಅವರು ಯಾರು ಇಂಡೋನೇಶಿಯನ್ನರು, ಯಾರು ಅಲ್ಲ ಎಂಬುದನ್ನು ನಿರ್ಧರಿಸುತ್ತಾರೆ. ಹಾಗೆಯೇ ಡಚ್ ವಸಾಹತು ಪ್ರಭುತ್ವದ ರಚನೆಯಾಗುವವರೆಗೆ ಬಾಲಿ ದ್ವೀಪದವರಿಗೆ ಬಟಾಕ್ ದ್ವೀಪದವರ‍್ಯಾರು ಎಂಬ ಅರಿವಿರಲಿಲ್ಲ. ಆದರೆ, ಡಚ್ ಪ್ರಭುತ್ವದ ರಾಜಕೀಯ ಏಕೀಕರಣ ಮತ್ತು ಸಮಾನ ಶಿಕ್ಷಣ ಪದ್ಧತಿಯಿಂದ ಎಲ್ಲ ದ್ವೀಪಗಳಿಗೆ ಸೇರಿದ ವಿದ್ಯಾರ್ಥಿಗಳು ಏಕಕಾಲದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಒಂದಾಗುವ (ತರಗತಿಗಳಲ್ಲಿ) ಅವಕಾಶವನ್ನು ಕಲ್ಪಿಸಿತು. ತಾವೆಲ್ಲರೂ ಬೇರೆ ಬೇರೆ ಹಿನ್ನೆಲೆಯಿಂದ ಬಂದವರಾದರೂ ಇಂಡೋನೇಶಿಯಾ ತಮ್ಮ ದೇಶ ಎಂಬ ಭಾವನೆಯನ್ನು ಅವರೆಲ್ಲರೂ ಪರಸ್ಪರ ಹಂಚಿ ಕೊಳ್ಳಲು ಸಾಧ್ಯವಾಯಿತು ಎಂದು ರೆಕ್ಲಿಪ್ಸ್ ಹೇಳುತ್ತಾ ಜನರು ವಸಾಹತುಶಾಹಿ ಯುಗದಲ್ಲಿ ತಮ್ಮ ದೇಶದ ವ್ಯಾಪ್ತಿಯನ್ನು ಗ್ರಹಿಸಿಕೊಳ್ಳಲು ಸಾಧ್ಯವಾಯಿತು ಎಂದು ಸಮರ್ಥಿಸುತ್ತಾನೆ.

ಆರಂಭದ ರಾಷ್ಟ್ರೀಯವಾದಿ ಚಳವಳಿಕಾರರಿಗೆ ರಾಷ್ಟ್ರದ ಪರಿಕಲ್ಪನೆಯ ಸ್ಪಷ್ಟತೆ ಇಲ್ಲದಿದ್ದರೂ ೧೯೧೨ರಲ್ಲಿ ಹುಟ್ಟಿಕೊಂಡ ಇಂಡಿಯನ್ ಪಾರ್ಟಿ ಎಂಬ ರಾಜಕೀಯ ಸಂಘಟನೆಯ (ವಿದ್ಯಾವಂತರನ್ನೊಳಗೊಂಡ ಸಂಘಟನೆ) ಇಂಡೋನೇಶಿಯಾ ಪರಿಕಲ್ಪನೆಯ ಪ್ರಚಾರವನ್ನು ಆರಂಭಿಸಿತು. ನಂತರ ಸುಕಾರ್ನೊ ಕಟ್ಟಿದ ಇಂಡೋನೇಶಿಯನ್ ನ್ಯಾಶನಲ್ ಪಾರ್ಟಿಯು ವಸಾಹತುಶಾಹಿ ವಿರುದ್ಧ ಸಂಘಟಿತ ಹೋರಾಟ ಆರಂಭಿಸಿತು. ಅದರ ಹಲವು ಕಾರ್ಯಕ್ರಮಗಳಲ್ಲಿ ಡಚ್ಚರ ವಿರುದ್ಧ ಇಡೀ ಇಂಡೋನೇಶಿಯಾದ ಜನರನ್ನು ಒಗ್ಗೂಡಿಸಿ ವಸಾಹತುಶಾಹಿ ಪ್ರಭುತ್ವವನ್ನು ದುರ್ಬಲಗೊಳಿಸುವುದು ಮುಖ್ಯ ಉದ್ದೇಶವಾಯಿತು. ಸುಕಾರ್ನೊ ಈ ಉದ್ದೇಶವನ್ನು ಪ್ರತಿಪಾದಿಸುವಾಗ ಯಾವುದೇ ದ್ವೀಪದ ಒಗ್ಗಟ್ಟು ಗುರಿಯಾಗಿರಲಿಲ್ಲ. ಯಾವುದೇ ಒಂದು ಜನಾಂಗದ ಒಗ್ಗಟ್ಟಿನ ಬಯಕೆ ಅವನದ್ದಾಗಿರಲಿಲ್ಲ. ಬದಲಾಗಿ ಬಹುಸಂಸ್ಕೃತಿಯನ್ನು ಪ್ರತಿನಿಧಿಸುವ ಎಲ್ಲ ಬುಡಕಟ್ಟು ಸಮುದಾಯಗಳನ್ನು, ಬೇರೆ ಬೇರೆ ಭಾಷೆಗಳನ್ನಾಡುವ ಗುಂಪುಗಳನ್ನು ಮುಖ್ಯ ರಾಜಕೀಯ ವಾಹಿನಿಗೆ ತರುವುದು, ಎಲ್ಲರಿಗೂ ಒಂದು ದೇಶ ರಚಿಸುವುದು ಗುರಿಯಾಯಿತು. ಹಾಗಾಗಿ ರಾಷ್ಟ್ರ ಎಂಬುದು ಭಾವಿತ ರಾಜಕೀಯ ಸಮುದಾಯವಾಗಿ ಅವರ ಹೋರಾಟ ಪರಿವರ್ತನೆ ಗೊಂಡಿತು. ಹಾಲೆಂಡ್ ಕಪಿಮುಷ್ಟಿಯಿಂದ ಬಿಡುಗಡೆಗೊಳ್ಳುವುದು ಮುಖ್ಯವಾಗುತ್ತದೆ ಸುಕಾರ್ನೋಗೆ. ಹಾಗಾಗಿ ಇಂಡೋನೇಶಿಯಾ ರಾಷ್ಟ್ರ ರಚನೆಯೂ ಅವರ ಭಾವನೆಯಾಗುತ್ತದೆ. ಈ ಭಾವನೆ ವಸಾಹತುಶಾಹಿ ಪ್ರಭುತ್ವದ ಪರಿಣಾಮದಿಂದ ರಚನೆಯಾದರೂ ಅದೇ ವಸಾಹತುಶಾಹಿ ಪ್ರಭುತ್ವದ ವಿರುದ್ಧ ಆ ಭಾವನೆ ತಿರುಗಿ ಬೀಳುತ್ತದೆ. ಸೃಷ್ಟಿಕರ್ತರ ವಿರುದ್ಧವೇ ತಿರುಗಿ ಬೀಳುವುದು ಒಂದು ವಿಶೇಷವಾದ ಘಟನೆ. ಹೀಗೆ ಇಂಡೋಚೈನಾದಲ್ಲಿ ಆಗುವುದಿಲ್ಲ.

ರಾಷ್ಟ್ರ ಎಂಬುದು ಭಾವಿಸಿದ ರಾಜಕೀಯ ಸಮುದಾಯವಾಗಿ ಇಂಡೋನೇಶಿಯಾದಲ್ಲಿ ರಚನೆಯಾದಂತೆ ಇಂಡೋಚೈನಾದಲ್ಲಿ ಆಗುವುದಿಲ್ಲ. ಏಕೆ ಎಂಬ ಪ್ರಶ್ನೆಗೆ ನಂತರ ಉತ್ತರ ಹುಡುಕೋಣ. ಅದಕ್ಕಿಂತ ಮೊದಲು ನಾವು ಗಮನಿಸಬಹುದಾದ ಅಂಶವೇನೆಂದರೆ ಇಂಡೋನೇಶಿಯಾ ವಾಸ್ತವವಾಗಿ ಸಾಮಾನ್ಯವಾದ ವಸಾಹತುಶಾಹಿ ವಿರೋಧಿ ರಾಷ್ಟ್ರೀಯ ವಾದಿ ಚಳವಳಿಯನ್ನೇ ಪ್ರತಿನಿಧಿಸುತ್ತದೆ. ಹಾಗೆ ನೋಡಲಿಕ್ಕೆ ಹೋದರೆ ಏಷ್ಯಾ ಮತ್ತು ಆಫ್ರಿಕಾ ಖಂಡಗಳಲ್ಲಿ ನಡೆದ ಬಹುತೇಕ ಎಲ್ಲ ರಾಷ್ಟ್ರೀಯ ಚಳುವಳಿಗಳು ಏಕೀಕರಣ ಮಾದರಿಯನ್ನೇ ಬೆಂಬಲಿಸಿದವುಗಳು ಮತ್ತು ವಾಸ್ತವದಲ್ಲಿ ಈ ದೇಶಗಳು ಒಂದೊಂದೇ ವಸಾಹತುಶಾಹಿ ಪ್ರಭುತ್ವದ ಅಧೀನಕ್ಕೆ ಒಳಪಟ್ಟವುಗಳು. ಅವು ತಮ್ಮ ರಾಷ್ಟ್ರ ರಚನೆಯು ಭೌಗೋಳಿಕವಾಗಿ, ಆಯಾಯ ವಸಾಹತುಶಾಹಿ ಪ್ರಭುತ್ವ ನಿರ್ಧರಿಸಿದ ಗಡಿರೇಖೆಯ ವ್ಯಾಪ್ತಿ ಒಳಗೆ ನಡೆಯುತ್ತವೆ. ನಿರ್ದಿಷ್ಟ ಜನಾಂಗಗಳ ಏಕಸ್ವಾಮಿತ್ವವನ್ನು ಅವಲಂಬಿಸಿಕೊಂಡೆ ಗಡಿರೇಖೆಯನ್ನು ಹಾಕಲಾಗಿತ್ತು. ಉದಾಹರಣೆಗೆ ಅರಬ್ ಜಗತ್ತಿ ನಲ್ಲಿಯೇ ವಸಾಹತುಶಾಹಿ ಅನುಭವಗಳನ್ನು ನೋಡಬಹುದು. ರಾಷ್ಟ್ರೀಯತೆ ನಿರ್ಮಾಣದಲ್ಲಿ ಈಜಿಪ್ಟ್‌ನ ಬಹುಪಾಲು ಬ್ರಿಟಿಷರದ್ದು, ಅಲ್ಜೀರಿಯಾದಲ್ಲಿ ಫ್ರೆಂಚರದ್ದು, ಇರಾಕ್, ಪ್ಯಾಲೆಸ್ತೀನ್, ಕುವೈತ್, ಸೌದಿ ಅರೇಬಿಯಾ, ಗಲ್ಫ್ ದೇಶಗಳಲ್ಲಿ ಮುಖ್ಯವಾಗಿ ಬ್ರಿಟಿಷರ ಪ್ರಭುತ್ವವನ್ನು ಸ್ಥಾಪಿಸುವಾಗ ಆಯಾಯ ಜನಾಂಗಗಳು ತಮ್ಮ ಅಸ್ತಿತ್ವವನ್ನು ಪ್ರಸ್ತುತಪಡಿಸುವ ಚಲನೆಯನ್ನು ಆಧಾರವಾಗಿ ಬ್ರಿಟಿಷ್ ಗಡಿಗಳನ್ನು ನಿರ್ಧರಿಸಿದರು. ಸೌದಿಗಳು ದಕ್ಷಿಣ ಮತ್ತು ಮಧ್ಯ ಅರೇಬಿಯಾದಲ್ಲಿ ಹೆಚ್ಚು ಸಂಖ್ಯೆಯಲ್ಲಿದ್ದು, ಬ್ರಿಟೀಷರು ಆ ಪ್ರದೇಶವನ್ನು ತಮ್ಮ ವಸಾಹತುಶಾಹಿ ನಿಯಂತ್ರಣಕ್ಕೆ ಒಳಪಡಿಸುವಾಗ ಸೌದಿ ಅರೇಬಿಯಾ ಎಂದು ಪ್ರತ್ಯೇಕ ವಸಾಹತು ಎಂದು ಗುರುತಿಸಿಕೊಂಡಿದ್ದರು. ಹಾಗೆ ಇರಾಕ್ ಇತ್ಯಾದಿ. ಇಲ್ಲಿ ಬೇರೆ ಬೇರೆ ಬುಡಕಟ್ಟು ಸಮುದಾಯಗಳು ತಮ್ಮದೇ ಏಕಸ್ವಾಮಿತ್ವವನ್ನು ಹೊಂದಿದ್ದು, ತಮ್ಮ ಸ್ವತಂತ್ರ ಅನನ್ಯತೆಯನ್ನು ರಕ್ಷಿಸಿಕೊಂಡಿದ್ದರು. ಅದನ್ನಾಧರಿಸಿಯೇ ಬ್ರಿಟಿಷರು ಆಕ್ರಮಿಸಿ ಕೊಳ್ಳುವಾಗ ಗಡಿ ನಿರ್ಧರಿಸಿ ಘೋಷಿಸಿದರು. ಅದೇ ವಸಾಹತುಶಾಹಿ ಪ್ರಭುತ್ವ ಅವರನ್ನು ಪ್ರತ್ಯೇಕತಾ ಭಾವನೆಯನ್ನು ಇಟ್ಟುಕೊಂಡು ಅಲ್ಲಿ ಪ್ರತ್ಯೇಕವಾಗಿ ಆಡಳಿತ ವ್ಯವಸ್ಥೆ ರಚಿಸಿದರು. ಅವರ ಆಕ್ರಮಣಕಾರಿ ಪ್ರಭುತ್ವದ ವಿರುದ್ಧ ಅವರು ರಾಜಕೀಯ ಆಂದೋಲನ ನಡೆಸುವಾಗ ಆಯಾಯ ಬುಡಕಟ್ಟುಗಳನ್ನು ಒಂದುಗೂಡಿಸುವುದು, ಆಯಾಯ ಕುಲಗಳು ಇರುವ ವ್ಯಾಪ್ತಿಯನ್ನು ಆಧರಿಸಿ ರಾಷ್ಟ್ರ ಕಟ್ಟುವ ಆಲೋಚನೆಯನ್ನು ಹಂಚಿಕೊಳ್ಳುತ್ತಾರೆ. ಹಾಗಾಗಿಯೇ, ಇಡೀ ಅರಬ್ ಜಗತ್ತು ಜಾಗತಿಕವಾಗಿ ಅರಬಿಯನ್ನರು ವಾಸಿಸುವ ತಾಣವೆಂದು ಗುರುತಿಸಿದ್ದರೂ, ಆ ಅರಬ್ ಜಗತ್ತಿನೊಳಗೆ ಹಲವು ರಾಷ್ಟ್ರಗಳು ನಿರ್ಮಾಣವಾಗುತ್ತವೆ. ಸೌದಿಗಳು ಸೌದಿ ಅರೇಬಿಯಾ ತಮ್ಮ ರಾಷ್ಟ್ರವೆಂದು  ಘೋಷಿಸಿ ಕೊಳ್ಳುತ್ತಾರೆ. ಇರಾಕಿಗಳು ಇರಾಕ್, ಇತ್ಯಾದಿ. ಆದ್ದರಿಂದ, ಎಲ್ಲೊ ಒಂದು ಕಡೆ ವಸಾಹತುಶಾಹಿ ಪ್ರಭುತ್ವಗಳೇ ಈ ಗಡಿಗಳ ನಿರ್ಮಾಣ ಮಾಡಿರು ವುದರಿಂದ ರಾಷ್ಟ್ರ ರಚನಾ ಪ್ರಕ್ರಿಯೇ ಕೂಡಾ ನಿರ್ದಿಷ್ಟವಾಗಿ ಆಯಾಯ ಪ್ರದೇಶಕ್ಕೆ ಸೀಮಿತಗೊಂಡು ಒಂದು ಬಲಿಷ್ಠ ಜನಾಂಗಗಳು ಸ್ವತಂತ್ರ ರಾಷ್ಟ್ರ ರಚಿಸಲು ಅಮೂಲ್ಯ ಕೊಡುಗೆಗಳನ್ನು ನೀಡುತ್ತವೆ. ಆ ಅರ್ಥದಲ್ಲಿ ಇದು ಸ್ಪಷ್ಟವಾಗಿ ವಸಾಹತೀಕರಣದ ಪ್ರಭಾವದಿಂದಲೇ ಎಂದು ತೀರ್ಮಾನಿಸಬಹುದು. ಅದನ್ನು ಒಪ್ಪುವುದು ಬಿಡುವುದು ಬೇರೆಯೇ ಚರ್ಚೆ. ಕುಲವನ್ನಾಧರಿಸಿ ರಾಷ್ಟ್ರ ರಚನೆಗೆ ಪಾಕಿಸ್ತಾನ, ಬಾಂಗ್ಲಾದೇಶ ಬರ್ಮಾ ಮುಖ್ಯ ಉದಾಹರಣೆಗಳು ಆಗುತ್ತವೆ. ಆರಂಭದಲ್ಲಿ ಬ್ರಿಟಿಷರು ಅವೆಲ್ಲವು ಬ್ರಿಟಿಷ್ ಇಂಡಿಯಾ ಎಂದೇ ಆಡಳಿತಾತ್ಮಕವಾಗಿ ನಿಯಂತ್ರಿಸಲಾಗುತ್ತಿತ್ತು. ನಂತರ ಪ್ರತ್ಯೇಕವಾದವು. ಇಲ್ಲಿ ಕುಲಗಳನ್ನಾಧರಿಸಿದ ಏಕೀಕರಣ ಆಗಿರುವುದು ಸ್ಪಷ್ಟವಾಗುತ್ತದೆ.

ಹಾಗೆಂದು ಒಂದಕ್ಕಿಂತ ಹೆಚ್ಚು ಕುಲಗಳಿರುವಲ್ಲಿ, ರಾಷ್ಟ್ರ ರಚನೆಗೆ ಸಂಬಂಧಿಸಿ ಭಾವನಾತ್ಮಕ ಪ್ರತಿಕ್ರಿಯೆ ಉಂಟಾಗುವುದಿಲ್ಲ ಎಂದೇನು ಅಲ್ಲ. ಎಂಡರ್ಸನ್ ಇಂಡೋನೇಶಿ ಯವನ್ನು ಉದಾಹರಣೆಯಾಗಿ ಅಧ್ಯಯನ ಮಾಡುತ್ತಾರೆ ಮತ್ತು ಇಂಡೋಚೈನಾದ ವಿಚಾರದಲ್ಲಿ ಅವನಿಗೆ ಹಲವು ಕುಲಗಳು ಒಂಧಾಗಿ ಭಾವನಾತ್ಮಕ ಅನುಭವಗಳನ್ನು ಹಂಚಿಕೊಳ್ಳುವ ಬದಲು ಫ್ರೆಂಚ್ ವಸಾಹತುಶಾಹಿ ಆಡಳಿತ ಪ್ರತ್ಯೇಕತೆಯನ್ನು ರಚಿಸುತ್ತದೆ ಎಂಬುದು ಅವರ ವಾದ. ಅದೂ ಕೂಡ ನಿರ್ದಿಷ್ಟವಾದ ಕಾರಣಗಳಿಗಾಗಿ. ಆ ಕಾರಣ ಗಳನ್ನು ಅದೇ ವಸಾಹತುಶಾಹಿ ಪ್ರಭುತ್ವ ಹುಟ್ಟುಹಾಕಿರುವುದೆಂದು ಎಂಡರ್ಸನ್ ಪ್ರತಿ ಪಾದಿಸುತ್ತಾನೆ. ಹಾಗಾಗಿ ಇಂಡೋಚೈನಾ ಎಂಬುದು ಫ್ರೆಂಚ್ ವಸಾಹತುಶಾಹಿ ನಿರ್ಮಾಣ ವಾಗುವಾಗ ಆಡಳಿತಾತ್ಮಕವಾಗಿ ಅದು ವಿಯೆಟ್ನಾಮ್, ಕಾಂಬೋಡಿಯಾ, ಲಾವೋಸ್ ಇತ್ಯಾದಿ ಪ್ರದೇಶಗಳನ್ನು ವಿಯೆಟ್ನಾಮ್ ಕೇಂದ್ರಿತ ಆಡಳಿತದ ವ್ಯಾಪ್ತಿಗೆ ಸೇರಿಸುತ್ತದೆ. ಆದರೆ ಆಡಳಿತದ ಪ್ರಭಾವದಿಂದ ಈ ಸಮ್ಮೀಲನದ ಮುಂದೆ ಏಕೀಕರಣ ಗೊಂಡು ಇಂಡೋಚೈನಾ ಎಂದು ಒಂದು ರಾಷ್ಟ್ರವಾಗಿ ರಚನೆಯಾಗಲಿಲ್ಲ. ಬದಲಾಗಿ ಪ್ರತ್ಯೇಕ ಪ್ರತ್ಯೇಕವಾಗಿ ಕಾಂಬೋಡಿಯಾ ಲಾವೋಸ್, ವಿಯೆಟ್ನಾಮ್ ಎಂದು ಪರಸ್ಪರ ಸ್ವತಂತ್ರ ಗೊಂಡವು. ಇಂಡೋನೇಶಿಯಾದಂತೆ ಇಲ್ಲಿಯೂ ಒಂದು ವಸಾಹತುಶಾಹಿ ಪ್ರಭುತ್ವ ಆಡಳಿತ ನಡೆಸುತ್ತದೆ. ಆದರೆ ಡಚ್ ಪ್ರಭಾವದಿಂದ ಇಂಡೋನೇಶಿಯಾ ಹಲವು ದ್ವೀಪಗಳ, ಕುಲಗಳ ಸಮ್ಮಿಲನದಿಂದ ರಾಷ್ಟ್ರವಾಗಿ ನಿರ್ಮಾಣವಾಯಿತು. ಇದಕ್ಕೆ ವಿರುದ್ಧವಾದ ರಾಜಕೀಯ ಸ್ಥಿತ್ಯಂತರ ಫ್ರೆಂಚ್ ಇಂಡೋ ಚೈನಾದಲ್ಲಿ ಸಂಭವಿಸುತ್ತದೆ ಎಂದು ಎಂಡರ್ಸನ್ ಗುರುತಿಸುತ್ತಾರೆ. ಹಾಗಾಗಿ ಇಂಡೋಚೈನಾದಲ್ಲಿ ಮೂರು ಪ್ರತ್ಯೇಕ ರಾಷ್ಟ್ರ ರಚನೆಯ ಮೂಲ ಹಾಗೂ ಇಂಡೋನೇಶಿಯಾದಲ್ಲಿ ಸಮ್ಮಿಳಿತಗೊಂಡು ಒಂದು ರಾಷ್ಟ್ರ ರಚನೆಗೆ ಪ್ರೇರಣೆ ಯಾವುದೆಂದು ಈಗ ಗಮನಿಸೋಣ.

ಸಾಮಾನ್ಯವಾಗಿ ರಾಷ್ಟ್ರೀಯವಾದದ ಕುರಿತು ಅಧ್ಯಯನ ಮಾಡಿದ ಆಧುನೀಕರಣವಾದಿ ಗಳೆಂದು ಗುರುತಿಸಲ್ಪಡುವ ಅನೇಕ ಚಿಂತಕರು ರಾಷ್ಟ್ರೀಯವಾದದ ಉಗಮಕ್ಕೆ ಮೂಲ ಕಾರಣಗಳು – ಇತ್ತೀಚೆಗೆ ಇತಿಹಾಸದಲ್ಲಿ ನಡೆದುಬಂದ ಘಟನೆಗಳು, ಋಣಾತ್ಮಕವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ, ಸಾಮಾಜಿಕ ರಂಗದಲ್ಲಿ ಮತ್ತು ರಾಜಕೀಯವಾಗಿ ಆದ ಬದಲಾವಣೆಗಳ ಪ್ರಭಾವವು ಇಂತಹ ವಾತಾವರಣವನ್ನು ಹುಟ್ಟು ಹಾಕುತ್ತದೆ ಎಂದು ಹೇಳುತ್ತಾರೆ. ಇವೆಲ್ಲವು ಆಗುವುದು ಸುಮಾರು ೧೮ನೆಯ ಶತಮಾನದ ನಂತರದ ದಿನ ಗಳಲ್ಲಿ. ಹಾಗಾಗಿ, ರಾಷ್ಟ್ರೀಯವಾದದ ಉಗಮ ತೀರ ಇತ್ತೀಚಿಗಿನ ರಾಜಕೀಯ ಪ್ರಕ್ರಿಯೆ ಎಂದು ಬೆನೆಡಿಕ್ಟ್ ಎಂಡರ್ಸನ್ ಸ್ಪಷ್ಟವಾಗಿ ಹೇಳುತ್ತಾರೆ. ಅವರ ಪ್ರಕಾರ ಮುಖ್ಯವಾಗಿ ಪರಿವರ್ತನೆ ಆಗುವುದು ಸಮೂಹ ಮಾಧ್ಯಮ ಕ್ಷೇತ್ರದಲ್ಲಿ. ಕಮರ್ಶಿಯಲ್ ಪ್ರಿಂಟಿಂಗ್ ಮತ್ತು ಮಾಸ್ ಲಿಟರಸಿಯಿಂದ ಜನರು, ತಾವು ಬಹುದೊಡ್ಡ ಹೆಸರಿಸಲಾಗದ ಅನಾಮಿಕ ಭಾವಿತ ಸಮುದಾಯಕ್ಕೆ ಸೇರಿದವರೆಂಬ ಭಾವನೆಯನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಆ ಸಮುದಾಯ ಒಂದು ನಿರ್ದಿಷ್ಟ ಭೌಗೋಳಿಕ ಸರಹದ್ದಿನೊಳಗೆ ಗುರುತಿಸಿಕೊಳ್ಳುತ್ತದೆ.  ಅಂತಹ ಭಾವನೆಯನ್ನು ಹಂಚಿಕೊಳ್ಳುವ ಪ್ರಕ್ರಿಯೆ ಮುಂದೆ ರಾಷ್ಟ್ರ ರಚನಾ ವಾತಾವರಣವನ್ನು ನಿರ್ಮಿಸುತ್ತದೆ. ಮುದ್ರಿತ ಸುದ್ದಿಗಳನ್ನು ಎಲ್ಲರು ಹಂಚಿಕೊಳ್ಳುತ್ತಾರೆ. ಅದೊಂದು ವಿಶಿಷ್ಟ ಅನುಭವವೂ ಹೌದು. ಬೃಹತ್ ಪ್ರಮಾಣದಲ್ಲಿ ಸುದ್ದಿ ಪ್ರಕಟನೆಯು ರಾಷ್ಟ್ರೀಯ ಭಾವೈಕ್ಯತೆಯನ್ನು ಸೃಷ್ಟಿಸುತ್ತದೆ. ಆ ಸುದ್ದಿಗಳು ನಿರ್ದಿಷ್ಟ ಭೌಗೋಳಿಕ ಸರಹದ್ದನ್ನು ಪ್ರತಿನಿಧಿಸುತ್ತದೆ. ತಾವು ಹಂಚಿಕೊಳ್ಳುವ ಸುದ್ದಿಯು ತಮ್ಮ ಭೂಮಿಯದ್ದು. ಅದು ತಮ್ಮತನವನ್ನು, ಸಂಸ್ಕೃತಿಯನ್ನು ಪ್ರತಿಪಾದಿಸುತ್ತದೆ. ಅದೇ ಆ ಭೂಭಾಗದ ಕುರಿತು ಅವರು ವ್ಯಕ್ತಪಡಿಸುವ ಭಾವನಾತ್ಮಕವಾದ ಪ್ರೀತಿ. ಅದೇ ಮುಂದೆ ತಮ್ಮ ದೇಶದ ಬಗ್ಗೆ ವ್ಯಕ್ತಪಡಿಸುವ ಕಲ್ಪಿತ ಮನೋಭಾವನೆ. ಡಚ್ಚರು ಇಂಡೋನೇಶಿಯಾ ದಲ್ಲಿ ಈ ಮುದ್ರಣ ಬಂಡವಾಳಶಾಹಿಯನ್ನು ಮತ್ತು ವಾಣಿಜ್ಯ ಪ್ರಕಟಣೆಯನ್ನು ದೇಶೀಯ ಭಾಷೆಯ ಮೂಲಕ ಪ್ರಚಾರ ಮಾಡಿದರು. ಇದೇ ಮುಂದೆ ರಾಷ್ಟ್ರ ನಿರ್ಮಾಣಕ್ಕೆ ಭದ್ರ ಅಡಿಪಾಯವನ್ನು ಹಾಕುತ್ತದೆ. ಇಲ್ಲಿ ಮುಖ್ಯವಾಗುವುದು ಡಚ್ಚರ ಶಿಕ್ಷಣ ಪದ್ದತಿ. ಹಿಂದೆ ಅವರು ಪಾಲಿಸಿದ ಒಂದೇ ಮಾದರಿಯ ಪಠ್ಯಕ್ರಮದ ಬಗ್ಗೆ ಚರ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಡಚ್ಚರು ಬೃಹತ್ ಪ್ರಮಾಣದಲ್ಲಿ ಮುದ್ರಣವನ್ನು ಪ್ರೊತ್ಸಾಹಿಸಿದರು. ದೇಶಿ ಚರಿತ್ರೆ, ಸಂಸ್ಕೃತಿ ಮತ್ತು ಧಾರ್ಮಿಕ ವಿಚಾರಗಳು ಪ್ರಕಟವಾಗುವ ಸುದ್ದಿಗಳಲ್ಲಿ ಹೆಚ್ಚಾಗಿ ದೇಶಿ ಭಾಷೆ ಯಲ್ಲಿಯೆ ಜನರಿಗೆ ಲಭಿಸಲಾರಂಭಿಸಿದವು. ಇಂಡೋನೇಶಿಯಾದಲ್ಲಿ ಇದು ಅಭೂತಪೂರ್ವ ಯಶಸ್ಸು ಕಂಡಿತು. ಡಚ್ಚರು ಗೊತ್ತಿದ್ದೋ, ಗೊತ್ತಿಲ್ಲದೆಯೋ ಪ್ರಕಟಿಸುವ ಎಲ್ಲ ವಿಚಾರಗಳಿಗೆ ಆಯ್ಕೆ ಮಾಡಿಕೊಂಡಿರುವುದು ಮಲಯ ಭಾಷೆಯನ್ನು. ಅದಕ್ಕೆ ಪೂರಕವಾದ ವಾತಾವರಣವು ಇಂಡೋನೇಶಿಯಾದಲ್ಲಿತ್ತು. ಶತಮಾನಗಳಿಂದಲೂ ಇಂಡೋನೇಶಿಯಾ ಮತ್ತು ಮಲೇಶಿಯಾ ಅನ್ಯೋನ್ಯವಾದ ಸಂಪರ್ಕವನ್ನು ಬೆಳೆಸಿ ಕೊಂಡಿದ್ದವು. ಮಲಯದ ಹೆಚ್ಚಿನ ವರ್ತಕರು ತಮ್ಮ ವ್ಯಾಪಾರ ವಹಿವಾಟಿಗೆ ಕ್ಷೇತ್ರಗಳನ್ನಾಗಿ ಅಯ್ಕೆ ಮಾಡಿ ಕೊಂಡಿರುವುದು ಇಂಡೋನೇಶಿಯಾ ಭೂಜಗತ್ತಿಗೆ ಸೇರಿರುವ ಅನೇಕ ದ್ವೀಪಗಳನ್ನು ಜವಾ, ಸುಮಾತ್ರ, ಬೋರ್ನಿಯೋ, ಸಿಲೆಬೆಲ್ ಇತ್ಯಾದಿ. ನಿರಂತರ ಹಾಗೂ ನಿಕಟ ಆರ್ಥಿಕ ಸಂಪರ್ಕ ಈ ಎರಡು ಭೂಭಾಗದೊಂದಿಗೆ ಜನರು ಬೆಳೆಸಿಕೊಂಡಿದ್ದರು. ಜೊತೆಗೆ ಅವರ ವ್ಯವಹಾರಗಳಲ್ಲಿ ಹೆಚ್ಚಾಗಿ ಬಳಸಿಕೊಂಡಿರುವ ಭಾಷೆ ಮಲಯನ್ ಭಾಷೆ. ಇದು ಡಚ್ಚರು ಆಗಮಿಸುವ ಮೊದಲೇ ಇದ್ದ ಒಂದು ಸಂಪರ್ಕ ಮಾಧ್ಯಮ. ಇದರಿಂದ ಆ ಭಾಷೆ ಇಂಡೋನೇಶಿಯಾದ ಎಲ್ಲ ದ್ವೀಪಗಳಲ್ಲಿ ಪ್ರಚಾರವಾಗಿತ್ತು. ಪ್ರಾದೇಶಿಕವಾಗಿ ಅಲ್ಲಿನ ಜನರು ಬೇರೆ ಭಾಷೆಯಾಡುವವರಾಗಿದ್ದರೂ ಕೂಡ ಮಲೇಶಿಯನ್ ವ್ಯಾಪಾರಿಗಳೊಂದಿಗೆ ತಮ್ಮ ಸಂಪರ್ಕ ಬೆಳೆಯುವುದು ಮಲಯ ಭಾಷೆಯ ಮೂಲಕವೇ. ಸಾಂಸ್ಕೃತಿಕವಾಗಿ ಇದು ಹೊಸ ಆಯಾಮವನ್ನು ಅವರ ಬದುಕಿಗೆ ನೀಡುತ್ತದೆ.

ಡಚ್ ವಸಾಹತುಶಾಹಿ ಪ್ರಭುತ್ವ ಆರಂಭಿಸಿದ ಶಿಕ್ಷಣ ಅಭಿಯಾನಕ್ಕೆ ಇದು ಪೂರಕ ವಾಗಿ ಕಾರ್ಯನಿರ್ವಹಿಸುತ್ತದೆ. ವಸಾಹತುಶಾಹಿ ನಿಧಾನಗತಿಯಲ್ಲಿ ಈ ದೇಶಿ ಬರವಣಿಗೆಗಳು ಜನರಿಗೆ ತಲುಪುವ ಭಾಷೆಯ ಮೂಲಕ ಲಭಿಸುವ ಉದ್ದೇಶದಿಂದ ಎಲ್ಲರಿಗೂ ಒಪ್ಪಿಗೆಯಾಗುವ ಭಾಷೆಯಲ್ಲಿ ಪ್ರಕಟಿಸಲು ಆರಂಭಿಸಿದರು. ಡಚ್ಚರು ಇಂಡೋನೇಶಿಯಾದ ಬೇರೆ ಬೇರೆ ದ್ವೀಪಗಳಲ್ಲಿ ನಡೆಯುವ ಘಟನೆಗಳು, ಅಲ್ಲಿನ ಸಾಂಸ್ಕೃತಿಕ ಚಿತ್ರಣಗಳು, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಗಳ ಕುರಿತು ಬರೆಯಲಾರಂಭಿಸಿದರು. ಪ್ರಕಟಣೆಗೆ ಬಳಸುವ ಮಾಧ್ಯಮ ಮಲಯನ್ ಭಾಷೆ. ಇಂತಹ ಡಚ್ ಪ್ರಯತ್ನದ ಪ್ರಭಾವ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಫಲಿತಾಂಶ ನೀಡಲಾರಂಭಿಸುತ್ತದೆ. ಉದಾಹರಣೆಗೆ ಹಿಂದೆ ಹೇಳಿದಂತೆ ವಸಾಹತುಶಾಹಿ ಶಿಕ್ಷಣ ಸಂಸ್ಥಗಳು ಎಲ್ಲ ದ್ವೀಪಗಳಿಂದ ಸೇರ್ಪಡೆ ಬಯಸುವ ವಿದ್ಯಾರ್ಥಿಗಳಿಗೆ ಮುಕ್ತವಾಗಿ ತೆರೆದಿಡಲಾಯಿತು. ಹಾಗಾಗಿ ಏಕಕಾಲದಲ್ಲಿ ಶಿಕ್ಷಣ ಸಂಸ್ಥೆಗಳೊಳಗೆ ಬೇರೆ ಬೇರೆ ಚಾರಿತ್ರಿಕ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಅಥವಾ ಜನಾಂಗೀಯ ಹಿನ್ನೆಲೆಯಿಂದ ವಿದ್ಯಾರ್ಥಿಗಳು ಬಂದವರಾದರೂ, ತರಗತಿ ಒಳಗೆ ತಾವೆಲ್ಲ ಒಂದು ಎಂಬ ಭಾವನೆ ಹುಟ್ಟಿಕೊಳ್ಳುತ್ತದೆ. ಅವರವರ ದ್ವೀಪಗಳಲ್ಲಿ ಅವರು ಬೇರೆ ಭಾಷೆಗಳಲ್ಲಿ ವ್ಯವರಿಸಿದರೂ, ತರಗತಿಯೊಳಗೆ ಅವರಿಗೆ ವ್ಯವಹರಿಸಲು ಸಾಧ್ಯ ವಾಗುವುದು ಎಲ್ಲರಿಗೂ ಒಪ್ಪಿಗೆಯಾಗುವ ಮತ್ತು ಬೋಧನೆಗೆ ಬಳಸಿರುವ ಮಲಯ ಭಾಷೆ. ಅದೇ ಭಾಷೆಯಲ್ಲಿ ಅವರಿಗೆ ಪಠ್ಯಕ್ರಮ ನೀಡಲಾಗುತ್ತದೆ. ಅವರಿಗೆ ಒದಗಿಸುವ ದೈನಿಕಗಳಲ್ಲಿ ಪ್ರಕಟವಾಗುವ ಸುದ್ದಿಗಳು ಮಲಯ ಭಾಷೆಯಲ್ಲಿಯೇ ಇರುತ್ತವೆ. ಜಗತ್ತಿನ ಮೂಲೆ ಮೂಲೆಯ ಮಾಹಿತಿಗಳು ತಿಳಿದುಕೊಳ್ಳಲು ಈ ಪ್ರಿಂಟ್ ಮೀಡಿಯಾ ಸಂಪರ್ಕಕೊಂಡಿಯಾಗಿ ಕೆಲಸ ಮಾಡುತ್ತದೆ. ಭಾವನಾತ್ಮಕವಾಗಿ ತಾವೆಲ್ಲರೂ ಒಂದೇ ಜನಸಮುದಾಯಕ್ಕೆ ಮತ್ತು ಒಂದೇ ಭೌಗೋಳಿಕ ಸರಹದ್ದಿಗೆ ಸೇರಿದವರು ಎಂಬ ಕಲ್ಪನೆ ಅವರಲ್ಲಿ ನಿರ್ಮಾಣವಾಗುತ್ತದೆ. ಬೇರೆ ಬೇರೆ ದ್ವೀಪಗಳಿಂದ ಬಂದವರಾದರೂ (ಆರಂಭ ದಿಂದ) ಭಾವೈಕ್ಯತೆಯನ್ನು ಹಂಚಿಕೊಳ್ಳುವಾಗ ಇಂಡೋನೇಶಿಯಾ ರಾಷ್ಟ್ರ ಅವರಿಗೆ ಒಂದು ಭಾವನಾತ್ಮಕ ರಾಜಕೀಯ ಸಮುದಾಯವಾಗಿ ಕಂಡುಬರುತ್ತದೆ. ಇಂತಹ ಭಾವನೆ ನಿರ್ಮಾಣವಾಗುವುದು, ಡಚ್ಚರ ಶಿಕ್ಷಣ ವ್ಯವಸ್ಥೆಯ ಅನುಷ್ಠಾನದಿಂದ.

ಇನ್ನೊಂದು ಪೂರಕವಾದ ಅಂಶ ಇದರ ಜೊತೆಗೆ ಕೆಲಸ ಮಾಡುತ್ತದೆ. ಅದೇನೆಂದರೆ, ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಶಿಕ್ಷಣ ಮುಗಿಸಿ ಹೊರ ಬಂದಾಗ ಅವರದ್ದೊಂದು ವಿದ್ಯಾವಂತ ಇಲೈಟ್ ಗುಂಪಾಗಿ ಸಾಮಾಜಿಕವಾಗಿ ಮುಖ್ಯವಾಹಿನಿಯಲ್ಲಿ ಗುರುತಿಸಿ ಕೊಳ್ಳುತ್ತದೆ. ಸರಕಾರಿ ಕೆಲಸವನ್ನು ಪಡೆಯುವ ಆಕಾಂಕ್ಷಿಗಳು ಅವರಾಗುತ್ತಾರೆ. ಇದಕ್ಕೆ ಸಂಬಂಧಿಸಿ ಡಚ್ ನೌಕರಶಾಹಿಯು ಕೆಳಹಂತದಲ್ಲಿ ಒಂದಷ್ಟು ಹುದ್ದೆಗಳನ್ನು ಸೃಷ್ಟಿ ಮಾಡುತ್ತದೆ. ಅದು ಡಚ್ ವಸಾಹತುಶಾಹಿ ರಾಜಧಾನಿ ಜಕಾರ್ತದಲ್ಲಿಯೇ ಇರಬಹುದು ಅಥವಾ ಇತರ ನಗರಗಳಾದ ಜವಾ, ಸುಮಾತ್ರ ಇತ್ಯಾದಿ ಕೇಂದ್ರಗಳಲ್ಲೂ ಇರಬಹುದು. ಎಲ್ಲಿಯೇ ಆದರೂ, ಹುದ್ದೆಗಳು ಎಲ್ಲಿಯೇ ಇದ್ದರೂ, ಆ ಹುದ್ದೆಗಳು ಶಿಕ್ಷಣ ಪಡೆದು ಹೊರಗೆ ಬಂದ ಇಡೀ ವಿದ್ಯಾವಂತ ಸಮುದಾಯಕ್ಕೆ ಮುಕ್ತವಾಗಿ ತೆರೆದಿಡಲಾಯಿತು. ಎಲ್ಲರಿಗೂ ಆ ಹುದ್ದೆಗಳನ್ನು ಅಲಂಕರಿಸಲು ಅವಕಾಶಗಳಿದ್ದವು. ಉದಾಹರಣೆಗೆ ಜವಾದಲ್ಲಿ ಒಂದಷ್ಟು ಹುದ್ದೆಗಳನ್ನು ಸರಕಾರ ಪ್ರಕಟಿಸಿದರೆ, ಅದು ಕೇವಲ ಜವಾ ದ್ವೀಪದವರಿಗೇ ಸಿಗಬೇಕೆಂದು ಕಾನೂನು ಇಲ್ಲ. ಅಂದರೆ, ಜವಾದ ಒಂದು ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಒಬ್ಬ ವಿದ್ಯಾವಂತ ಇಡೀ ಇಂಡೋನೇಶಿಯಾದ ಉದ್ದ ಗಲಕ್ಕೂ ಲಭ್ಯವಿರುವ ಹುದ್ದೆಗೆ ಅರ್ಹತೆ ಪಡೆಯುತ್ತಾನೆ. ಹಾಗಾಗಿ ಈ ಬಗೆಯ ವಸಾಹತುಶಾಹಿ ಧೋರಣೆಯಿಂದ ನಿರ್ದಿಷ್ಟ ದ್ವೀಪಕೇಂದ್ರಿತ ಆಲೋಚನೆ ಹುಟ್ಟಲು ಅವಕಾಶ ಮಾಡಿಕೊಡುವುದಿಲ್ಲ. ಬದಲಾಗಿ ಜೀವನೋಪಾಯಕ್ಕೆ ಬೇಕಾದ ಸರಕಾರಿ ಹುದ್ದೆ ಪಡೆಯಲು ಇಡೀ ಇಂಡೋನೇಶಿಯಾವೇ ಒಂದು ಭೂಮಿಕೆಯಾಗುತ್ತದೆ. ಭಾವನಾತ್ಮಕವಾಗಿ ಈ ಅನುಭವವನ್ನು ಅವರು ಹಂಚಿಕೊಳ್ಳುತ್ತಾರೆ. ಹಾಗಾಗಿ ಇಲ್ಲಿಯೂ ಕೂಡ ರಾಷ್ಟ್ರ ಒಂದು ಭಾವಿತ ಸಮುದಾಯ ಎಂಬ ಅನುಭವವನ್ನು ಹಂಚಿಕೊಳ್ಳಲು ಅವಕಾಶಗಳಿವೆ ಎಂದು ಎಂಡರ್ಸನ್ ಪ್ರತಿಪಾದಿಸುತ್ತಾರೆ. ಈ ಭಾವನೆ ಹುಟ್ಟಿಕೊಳ್ಳುವುದೇ ಶಿಕ್ಷಣ ಸಂಸ್ಥೆಗಳಲ್ಲಿ. ರಾಷ್ಟ್ರ ಎಂಬುದು ಭಾವಿಸಿದ ಸಮುದಾಯ ಎಂಬ ಅಭಿಪ್ರಾಯ ತರಗತಿ ಯಲ್ಲಿಯೇ ಹಂಚಿಕೊಳ್ಳುತ್ತಾರೆ. ಬಹುಸಂಸ್ಕೃತಿ, ಜನಾಂಗ ಮತ್ತು ದ್ವೀಪಗಳಿಂದ ಬಂದಂತ ವಿದ್ಯಾರ್ಥಿಗಳಿಗೆ ಕಲಿಸುವಾಗ, ತೋರಿಸುವ ಭೂಪಟ ಇಡೀ ಇಂಡೋನೇಶಿಯಾ ಭೂಖಂಡದ್ದು. ಅದಕ್ಕೆ ನೀವು ಸೇರಿದವರು, ಕಾನೂನುಬದ್ಧವಾಗಿ ನೀವು ಪ್ರಜೆಗಳೆಂದು, ನಾಗರಿಕರೆಂದು ಗುರುತಿಸಿಕೊಳ್ಳುವುದು ಈ ಭೂಖಂಡದ ಮೂಲಕ. ಇದು ನಿಮ್ಮ ದೇಶ. ಪ್ರಜೆಯೆಂಬ ಅರ್ಹತೆ ನೀವು ದಕ್ಕಿಸಿಕೊಳ್ಳುವಂತಹದ್ದು ತಮ್ಮನ್ನು ತಾವು ಇದೊಂದಿಗೆ ಭಾವನಾತ್ಮಕವಾಗಿ ಮಿಲನಗೊಂಡಾಗ ಎಂಬ ಅಭಿಪ್ರಾಯವನ್ನು ಅವರಿಗೆ ಹಂಚಿಕೊಳ್ಳಲು ಅವಕಾಶಗಳನ್ನು ನಿರ್ಮಾಣ ಮಾಡಲಾಗುತ್ತದೆ. ನೀವು ಮೊದಲು ವಿಧೇಯರಾಗಿರುವುದು ನಿಮ್ಮ ದೇಶಕ್ಕೆ. ಆ ನಂತರ ನಿಮ್ಮ ಪ್ರದೇಶಕ್ಕೆ, ಜನಾಂಗಕ್ಕೆ ಮತ್ತು ಭಾಷೆಗೆ ಇತ್ಯಾದಿ. ಇಂತಹ ಅಭಿಪ್ರಾಯಗಳನ್ನು ಅವರು ಹಂಚಿಕೊಳ್ಳುವುದು ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ. ಹಾಗಾಗಿ ಎಂಡರ್ಸನ್ ಹೇಳುವಂತೆ ರಾಷ್ಟ್ರ ಅನ್ನುವುದು ಭಾವಿಸಿದ ರಾಜಕೀಯ ಸಮುದಾಯ. ಜೊತೆಗೆ ವಸಾಹತುಶಾಹಿ ಪ್ರಭುತ್ವದ ಪ್ರಭಾವದಿಂದ ಅಲ್ಲಿ ಏಕೀಕರಣಕ್ಕೆ ಬೇಕಾದ ರಚನೆಗಳು ಆರಂಭಗೊಂಡವು. ಇಂಡೋನೇಶಿಯ ರಾಷ್ಟ್ರೀಯತೆ ನಿಧಾನವಾಗಿ ಬೆಳೆಯಲಾರಂಭಿಸಿತು. ಈ ಬಗೆಯ ಏಕತಾ ಭಾವನೆ ಇಂಡೋಚೈನಾದಲ್ಲಿ ಕಂಡುಬರಲು ಅಸಾಧ್ಯ. ಅದಕ್ಕೆ ವಸಾಹತುಶಾಹಿ ಪ್ರಭುತ್ವವೇ ಕಾರಣವೆಂದು ಎಂಡರ್ಸನ್ ಪ್ರತಿಪಾದಿ ಸುತ್ತಾರೆ.

ರಾಷ್ಟ್ರ ರಚನೆಗೆ ಸಂಬಂಧಿಸಿದಂತೆ ಇಂಡೋನೇಶಿಯಾ ಜನರು ಅನುಭವಿಸಿದ ವಾತಾವರಣಕ್ಕೆ ಹೋಲಿಸಿದರೆ ಫ್ರೆಂಚರ ವಸಾಹತು ಇಂಡೋಚೈನಾ ಮೂಲಭೂತವಾಗಿ ಆರಂಭದಿಂದಲೂ ಒಂದು ರಾಜ್ಯವಾಗಿ ರೂಪುಗೊಳ್ಳಲೇ ಇಲ್ಲ. ರಾಜಕೀಯವಾಗಿ ಅದೊಂದು ಐದು ಪ್ರದೇಶಗಳನ್ನೊಳಗೊಂಡ ಸಂಯುಕ್ತ ಸಂಸ್ಥಾನವಾಗಿ ರಚನೆಯಾಗಿತ್ತು. – ಕೊಚೀನ್‌ಚೈನಾ, ಅನ್ನಾಮ್, ಟೋಗ್‌ಕಿಂಗ್, ಕಾಂಬೋಡಿಯ ಮತ್ತು ಲಾವೋಸ್. ಫ್ರೆಂಚ್ ವಸಾಹತು ಸರಕಾರದ ಅಸ್ತಿತ್ವ ಇದ್ದುದ್ದು ಹನೋಯ್‌ನಲ್ಲಿ. ಇಲ್ಲಿನ ರಾಜ್ಯಪಾಲನಿಗೆ ಈ ಐದು ಸಂಸ್ಥಾನಗಳು ತಮ್ಮದೇ ಆಡಳಿತ ವ್ಯೂಹವನ್ನು ರಚಿಸಿ ಕೊಂಡಿದ್ದವು. ಫ್ರೆಂಚರು ೧೮೬೭ರಲ್ಲಿ ಕೋಚಿನ್‌ಚೈನಾವನ್ನು ಆಕ್ರಮಿಸಿಕೊಂಡು ತಮ್ಮ ನೇರ ವಸಾಹತುಶಾಹಿ ನಿಯಂತ್ರಣವನ್ನು ಹೇರುತ್ತಾರೆ. ಅನ್ನಾಮ್ ಮತ್ತು ಟೋಗ್‌ಕಿಂಗ್ ಸಂಸ್ಥಾನಗಳಲ್ಲಿ ಮಾತ್ರ ಫ್ರೆಂಚರು ಅಸ್ತಿತ್ವದಲ್ಲಿರುವ ವಿಯೆಟ್ನಾಮಿ ರಾಜಕೀಯ ರಚನೆಯನ್ನು ಸ್ವಲ್ಪ ಮಾರ್ಪಾಡು ಮಾಡಿ ಅಧಿಕಾರದಲ್ಲಿ ಮುಂದುವರಿಯಲು ಅನುಮತಿ ನೀಡಿದರು. ಅನ್ನಾಮ್‌ನಲ್ಲಿ ಪರೋಕ್ಷವಾಗಿ ಫ್ರೆಂಚ್ ಅಧಿಪತ್ಯದ ಪ್ರಭಾವ ಕಂಡುಬಂದರೂ ಅಲ್ಲಿನ ಸಾಮ್ರಾಟನೆ ನಿರಂಕುಶಾಧಿಕಾರಿಯಾಗಿ ಎಲ್ಲ ಅಧಿಕಾರವನ್ನು ಅನುಭವಿಸುತ್ತಾನೆ. ಕಾಂಬೋಡಿಯಾ ಮತ್ತು ಲಾವೋ ಸಂಸ್ಥಾನಗಳಲ್ಲಿ ಫ್ರೆಂಚರು ಅಲ್ಲಿರುವ ಅರಸೊತ್ತಿಗೆಯನ್ನು ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡಿ ಅದಕ್ಕೆ ಬೇಕಾದ ರಕ್ಷಣೆ ಮಾತ್ರ ಒದಗಿಸುವ ರಾಜಕೀಯ ರಚನೆಗೆ ನಾಂದಿ ಹಾಡಿದರು. ಇದಲ್ಲದೆ, ಪ್ರತಿ ಸಂಸ್ಥಾನಗಳಲ್ಲಿರುವ ಸ್ಥಳೀಯ ಸಂಸ್ಥೆಗಳ ಅಸ್ತಿತ್ವವನ್ನು ಮುಂದುವರಿಸಿ ಪ್ರಾದೇಶಿಕ ಸಭೆಯಲ್ಲಿ ಸ್ಥಳೀಯರಿಗೆ ಹೆಚ್ಚು ಪ್ರಾತಿನಿಧ್ಯ ನೀಡಲಾಯಿತು. ಸ್ಥಳೀಯಾಡಳಿತ ಮುಖ್ಯವಾಗಿ ಪ್ರಾದೇಶಿಕತ್ವವನ್ನು ಪ್ರತಿಪಾದಿಸಲು ಮತ್ತು ಸ್ಥಳೀಯರೇ ಅಧಿಕಾರದಲ್ಲಿ ಮುಂದುವರಿಯಲು ಫ್ರೆಂಚ್ ವಸಾಹತೀಕರಣ ಯಾವುದೇ ಅಡ್ಡಿ ಆತಂಕ ಮಾಡಿರಲಿಲ್ಲ.

ರಾಜಕೀಯವಾಗಿ ಒಂದು ಬಲಿಷ್ಠ ಲೆಜಿಸ್ಲೇಟಿವ್ ಅಸೆಂಬ್ಲಿಯನ್ನು ೧೯೨೮ರವರೆಗೂ ಇಂಡೋಚೈನಾದಲ್ಲಿ ಫ್ರೆಂಚರು ನಿರ್ಮಾಣ ಮಾಡಿರಲಿಲ್ಲ. ಬಹುಶಃ ಐದು ಸಂಸ್ಥಾನಗಳು ಪರಸ್ಪರ ಏಕೀಕರಣಗೊಳ್ಳಲು ಇಂತಹ ರಾಜಕೀಯ ವೇದಿಕೆ ನಿರ್ಣಾಯಕ ಪಾತ್ರ ವಹಿಸು ತ್ತಿತ್ತೇನೋ, ಇಂಡೋನೇಶಿಯಾದಲ್ಲಿ ಇಂತಹದ್ದಕ್ಕೆ ಅವಕಾಶವನ್ನು ಡಚ್ಚರು ಕಲ್ಪಿಸಿದ್ದರು. ವೋಲ್ಕ್ ಶ್ರಾದ್ ಅಥವಾ ಪೀಪಲ್ಸ್ ಕೌನ್ಸಿಲನ್ನು ಡಚ್ಚರು ಸುಮಾರು ೧೯೧೮ರಲ್ಲಿ ರಚಿಸಿದ್ದರು. ಇದರ ಸದಸ್ಯರಾಗಿ ಬಹುತೇಕ ಎಲ್ಲ ದ್ವೀಪಗಳಿಂದ ರಾಷ್ಟ್ರೀಯವಾದಿಗಳು ನೇಮಕವಾಗುತ್ತಾರೆ. ಇದೊಂದು ವೇದಿಕೆಯಾಗಿ ರಾಷ್ಟ್ರೀಯ ಮಟ್ಟದಲ್ಲಿ ಅವರು ಒಂದು ಸಾಮಾನ್ಯ ಉದ್ದೇಶಕ್ಕಾಗಿ, ಮತ್ತು ಸಾಮಾನ್ಯ ಅನನ್ಯತೆಯೊಂದಿಗೆ ಡಚ್ಚರ ವಿರುದ್ಧ ಹೋರಾಟ ನಡೆಸಲು ಸಂಘಟನೆ ಆಗಿ ಹೊರಹೊಮ್ಮಿತು. ಫ್ರೆಂಚರಿಗೆ ಹೋಲಿಸಿದರೆ, ಡಚ್ಚರು ಈ ವೇದಿಕೆಯಲ್ಲಿ ಬೇರೆ ಬೇರೆ ದ್ವೀಪದ ರಾಜಕಾರಣಿಗಳನ್ನು ಒಂದುಗೂಡಲು ರಚನಾತ್ಮಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ಇಂತಹ ಸಾಮಾನ್ಯ ರಾಜಕೀಯ ವೇದಿಕೆ ಫ್ರೆಂಚರು ಇಂಡೋಚೈನಾದ ಜನತೆಗೆ ಒದಗಿಸಲಿಲ್ಲ. ಹಾಗಾಗಿ ಎಲ್ಲಾ ಸಂಸ್ಥಾನಗಳು ಏಕೀಕರಣ ಕೇಂದ್ರಿತ ರಾಷ್ಟ್ರೀಯವಾದವನ್ನು ಆರಂಭಿಸಲು ಸಾಧ್ಯವಾಗುವುದಿಲ್ಲ. ಐಕ್ಯತಾ ಭಾವನೆಗಳು ಹುಟ್ಟುವ ಬದಲು ಪ್ರೆಂಚರ ಪ್ರಭಾವವು ಪ್ರಾದೇಶಿಕತ್ವ/ಪ್ರತ್ಯೇಕತಾ ಭಾವನೆಗಳು ಉಗಮವಾಗಲು ಮಹತ್ತರ ಪಾತ್ರ ವಹಿಸುತ್ತದೆ. ಏಕೆಂದರೆ ಡಚ್ಚರು ಇಂಡೋನೇಶಿಯಾದಲ್ಲಿ ತೀರ್ಮಾನಿಸಿದ ಹಾಗೆ, ಇಂಡೋಚೈನಾದಲ್ಲಿ ಫ್ರೆಂಚರು ಆಧುನಿಕ ಶಿಕ್ಷಣ ಪದ್ಧತಿಯನ್ನು ಪ್ರಚಾರ ಮಾಡಿದ್ದರು. ದೇಶಿ ಭಾಷೆಯನ್ನು ಪ್ರೋ ಆದರೇ ಇಂಡೋಚೈನಿಗರ ಅನುಭವ ಇಂಡೋನೇಶಿಯರಿಗಿಂತ ಭಿನ್ನವಾದುದು. ಏಕೆಂದರೇ ಪ್ರೆಂಚರು ಆಯಾಯ ಸಂಸ್ಥಾನಗಳಲ್ಲಿ ಆಯಾಯಾ ಭಾಷೆ ಯಗಳನ್ನೇ ಪ್ರೋ ವಿನಃ ಐದು ಸಂಸ್ಥಾನಗಳ ಜನರಿಗೆ ಒಪ್ಪಿಗೆ ಆಗುವ ಒಂದು ಭಾಷೆಯನ್ನು ಸಮೂಹ ಮಾಧ್ಯಮದ ಪ್ರಚಾರದಲ್ಲಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿಯೆಟ್ನಾಮ್ ನಲ್ಲಿ ಅಲ್ಲಿನ ಪ್ರಾದೇಶಿಕ ಭಾಷೆಗೆ ಒಟ್ಟು ಕೊಟ್ಟರೆ, ಕಾಂಬೋಡಿಯಾದಲ್ಲಿ ಅಲ್ಲಿನ ಸ್ಥಳೀಯ ಭಾಷೆಗೆ ಪ್ರೋ ನೀಡುತ್ತಾರೆ. ಇದರಿಂದ ಆಯಾಯ ಸಂಸ್ಥಾನ ಗಳೊಂದಿಗೆ ಜನರು ಏಕತೆಯನ್ನು, ಒಗ್ಗಟ್ಟನ್ನು ನಿರೀಕ್ಷಿಸುತ್ತಾರೆ  ಮತ್ತು ಪ್ರತ್ಯೇಕತೆಯನ್ನು ಸಂಸ್ಕೃತಿ/ಭಾಷೆ/ಧರ್ಮ/ನಂಬಿಕೆಗಳಿಗನುಗುಣವಾಗಿ ಬಯಸುತ್ತಾರೆ. ಸ್ವತಂತ್ರ ರಾಜಕೀಯ ಅಸ್ತಿತ್ವಕ್ಕೆ ಹೆಚ್ಚು ಗಮನ ಹರಿಸುತ್ತಾರೆ. ಉದಾಹರಣೆಗೆ ಫ್ರೆಂಚ್ ಶಿಕ್ಷಣ ಪದ್ಧತಿ, ಕಾಂಬೋಡಿಯಾ ವಿಯೆಟ್ನಾಮ್, ಕೋಚಿನ್‌ಚೈನಾ, ಟೋಗ್‌ಕಿಂಗ್ ಮತ್ತು ಲಾವೋಸ್ ಬೇರೆ ಬೇರೆ ಸಂಸ್ಥಾನಗಳಾಗಿ ಗುರುತಿಸಿಕೊಂಡು ಬೇರೆ ಬೇರೆ ಪಠ್ಯಕ್ರಮಗಳಲ್ಲಿ ಆಯಾಯ ಪ್ರದೇಶದ ವಿದ್ಯಾರ್ಥಿಗಳನ್ನು ಆಕರ್ಷಿಸಿದವು. ಆಯಾಯ ಸಂಸ್ಥಾನದ ಚರಿತ್ರೆ, ಸಾಹಿತ್ಯ, ಧಾರ್ಮಿಕ ಸಾಮಾಜಿಕ ಪರಂಪರೆಗಳನ್ನು ಆಯಾಯ ಕೇಂದ್ರದ ವ್ಯಾಪ್ತಿಗೆ ಬರುವ ಜನರಿಗೆ ಪರಿಚಯಿ ಸುವ ಪ್ರಕ್ರಿಯೆ ಆರಂಭವಾಯ್ತು. ಅವರು ಒಂದು ಧಾರ್ಮಿಕ, ಚಾರಿತ್ರಿಕ, ಸಾಮಾಜಿಕ ಮತ್ತು ರಾಜಕೀಯ ಹಿನ್ನೆಲೆಯನ್ನು ಹಂಚಿಕೊಳ್ಳುವವರು. ಆ ಪ್ರದೇಶದ ವ್ಯಾಪ್ತಿಯಲ್ಲಿರುವ ಭಾಷೆಯನ್ನು ಆಡುವ ಜನ ಸಮುದಾಯವೆಂದು ಗುರುತಿಸಿಕೊಂಡು ಅದೇ ಪ್ರದೇಶದ ಐಕ್ಯತೆ ಮತ್ತು ಅಲ್ಲಿಯೇ ತಮ್ಮ ರಾಜಕೀಯ ಅಸ್ತಿತ್ವವನ್ನು ಗಟ್ಟಿಗೊಳಿಸುವ ಆಂದೋಲ ನದಲ್ಲಿ ಪಾಲ್ಗೊಳ್ಳುವರು. ಹಾಗಾಗಿ, ಫ್ರೆಂಚ್ ಇಂಡೋಚೈನಾ ಎಂಬ ಒಂದು ರಾಷ್ಟ್ರ ನಿರ್ಮಾಣವಾಗದೇ ಐದು ಬೇರೆ ಬೇರೆ ರಾಷ್ಟ್ರ ರಚನೆಗೆ ಜನರು ಸಿದ್ಧರಾದರು.

ಇನ್ನೊಂದು ಅಂಶವನ್ನು ನಾವಿಲ್ಲಿ ಗಮನಿಸಬಹುದು. ಫ್ರೆಂಚ್ ವಸಾಹತುಶಾಹಿಯು ಕಾಂಬೋಡಿಯಾ ಮತ್ತು ಲಾವೋ ಸಂಸ್ಥಾನಗಳಲ್ಲಿ ವಿಯೆಟ್ನಾಮಿಯರ ನೆಲೆಗಳನ್ನು ಸ್ಥಾಪಿಸಲಾರಂಭಿಸಿದರು. ಅಂದರೆ ಫ್ರೆಂಚರ ಬಹುತೇಕ ಚಟುವಟಿಕೆಗಳು ವಿಯೆಟ್ನಾಮನ್ನು ಕೇಂದ್ರೀಕರಿಸಿತ್ತು. ಪರಿಣಾಮವಾಗಿ ಉಳಿದ ಸಂಸ್ಥಾನಗಳ ಆಡಳಿತವನ್ನು ನೋಡಿಕೊಳ್ಳಲು ವಿಯೆಟ್ನಾಮಿನವರಿಗೆ ಒಂದಷ್ಟು ರಾಜಕೀಯ ತರಬೇತಿ ನೀಡಿ ಕಾಂಬೋಡಿಯಾ ಮತ್ತು ಲಾವೋ ಸಂಸ್ಥಾನಗಳಿಗೆ ತಮ್ಮ ರಾಜಕೀಯ ಪ್ರತಿನಿಧಿಗಳೆಂದು ನೇಮಕ ಮಾಡಿ ಕಳುಹಿಸಿದರು. ಅಲ್ಲದೆ, ವಿಯೆಟ್ನಾಮಿನಿಂದ ಜನರನ್ನು ಕಾಂಬೋಡಿಯಾ ಮತ್ತು ಲಾವೋಗೆ ವಲಸೆ ಹೋಗಿ ಖಾಯಂ ಆಗಿ ನೆಲೆಸಲು ಪ್ರೋ ನೀಡಿದರು. ಇದರಿಂದ ಕಾಂಬೋಡಿಯಾ ಮತ್ತು ಲಾವೊ ಜನರು ತಾವು ಎರಡು ಬಾರಿ ವಸಾಹತೀಕರಣಕ್ಕೆ ಒಳಪಡುವಂತಾಯಿತು ಎಂದು ಅಭಿಪ್ರಾಯಪಡುತ್ತಾರೆ. ಒಂದನೆಯದು ಫ್ರೆಂಚರ ಆಕ್ರಮಣದಿಂದ ಇನ್ನೊಂದು ವಿಯೆಟ್ನಾಮಿಯರ ಪ್ರವೇಶದಿಂದ ತಮ್ಮ ಸ್ವತಂತ್ರ ಅಸ್ತಿತ್ವಕ್ಕೆ ಅಡ್ಡಿ ಉಂಟು ಮಾಡಿತೆಂಬ ಅರಿವಾಗುತ್ತದೆ. ಇದರಿಂದಾಗಿ, ಆರಂಭದ ಅಂದರೆ ಎರಡನೆಯ ಜಾಗತಿಕ ಯುದ್ಧದ ಮೊದಲಿನ ದಿನಗಳಲ್ಲಿ ಕಾಂಬೋಡಿಯಾ ಮತ್ತು ಲಾವೋ ರಾಷ್ಟ್ರೀಯ ಚಳವಳಿಗಳು ಫ್ರೆಂಚ್ ವಸಾಹತುಶಾಹಿ ವಿರೋಧಿಯಾಗಿ ಉಗಮವಾಗಲಿಲ್ಲ. ಬದಲಾಗಿ ವಿಯೆಟ್ನಾಮಿಯರ ಪ್ರವೇಶ ಮತ್ತು ಅದರ ದಬ್ಬಾಳಿಕೆಯ ವಿರುದ್ಧ ನಡೆಸಿದ ಕಾರ್ಯಾಚರಣೆಯಾಯಿತು. ತಮ್ಮ ಅಸ್ತಿತ್ವಕ್ಕೆ ಧಕ್ಕೆ ಉಂಟಾದ್ದನ್ನು ಗಮನಿಸಿ ಜಾಗೃತರಾಗಲು ಪ್ರಯತ್ನಿಸುತ್ತಾರೆ. ಇಲ್ಲಿ ವಿಯೆಟ್ನಾಮಿಯರು ತಮ್ಮದೇ ಪ್ರತ್ಯೇಕ ರಾಷ್ಟ್ರೀಯತೆಯನ್ನು ನಿರ್ಮಿಸಲು ಹೆಚ್ಚು ಒತ್ತು ಕೊಡುತ್ತಾರೆ ಹೊರತು ಇಂಡೋಚೈನೀಸ್ ಎಂಬ ರಾಷ್ಟ್ರೀಯತೆ ಯನ್ನು ಅಲ್ಲ. ಹಾಗೆಯೇ ಅದರ ಮುಂದಿರುವ ಆಯ್ಕೆ ಕಾಂಬೋಡಿಯನ್/ ಲಾವೋಸ್ ರಾಷ್ಟ್ರೀಯತೆಯು ಕೂಡ ಅಲ್ಲ. ಒಂದು ವೇಳೆ ಇಂತಹದೊಂದು ಆಯ್ಕೆ ಅವರದ್ದಾಗುತ್ತಿದ್ದರೆ, ಇಂಡೋಚೈನಾ ಎಂದು ರಚಿಸಲ್ಪಡುವ ರಾಷ್ಟ್ರದೊಳಗೆ ವಿಯ್ನೆಟ್ನಾಮಿ ಜನಾಂಗದವರು ಬಹುಸಂಖ್ಯಾತ ಗುಂಪಾಗಿ ಗುರುತಿಸಿಕೊಳ್ಳುತ್ತಿದ್ದರು. ಅಂತಹ ಐಕ್ಯತೆಗೆ ಅವರು ಅವಕಾಶ ನೀಡದೆ ಕಾಂಬೋಡಿಯಾ ಮತ್ತು ಲಾವೋದವರಿಂದ ಬೇರೆಯೇ ಆಗಿ ಉಳಿಯಲು ಆಶಿಸುತ್ತಾರೆ ಮತ್ತು ಅದಕ್ಕನುಗುಣವಾಗಿ ವಿಯೆಟ್ನಾಮಿನೊಳಗೆ ರಾಜಕೀಯ ಸ್ಥಿರತೆಯನ್ನು ಕಾಯ್ದುಕೊಳ್ಳಲು ಕಾರ್ಯ ಪ್ರವೃತ್ತರಾಗುತ್ತಾರೆ.

 

ಪರಾಮರ್ಶನಗ್ರಂಥಗಳು

೧. ಬೆನೆಡಿಕ್ಟ್ ಎಂಡರ‍್ಸನ್, ೧೯೮೯, ಇಮ್ಯಾಜಿನ್ಡ್ ಕಮ್ಯೂನಿಟಿ

೨. ಕ್ರಿಸ್ಟಿ ಸಿ.ಜೆ., ೧೯೯೬. ಮಾಡರ್ನ್ ಹಿಸ್ಟರಿ ಆಫ್ ಸೌತ್ ಈಸ್ಟ್ ಏಷ್ಯಾ, ಲಂಡನ್.

೩. ರೆಕ್ಲಿಪ್ಸ್, ೧೯೯೯. ಹಿಸ್ಟರಿ ಆಫ್ ಮಾಡರ್ನ್ ಇಂಡೋನೇಶಿಯಾ, ಲಂಡನ್.

೪. ಸಿಕೋಲಸ್ ಟಾರ್ಲಿಂಗ್ (ಸಂ), ೧೯೯೨. ಕೇಂಬ್ರಿಡ್ಜ್ ಹಿಸ್ಟರಿ ಆಫ್ ಸೌತ್ ಈಸ್ಟ್ ಏಷ್ಯಾ, ಸಂಪುಟ , ಕೇಂಬ್ರಿಡ್ಜ್.