ಆಧುನಿಕ ಕಾಲದ ಇರಾನ್‌ನಲ್ಲಿ ಪ್ರಬಲವಾಗಿ ಗುರುತಿಸಲ್ಪಡುವ ರಾಜಂಗದ ಸ್ವರೂಪ, ಧಾರ್ಮಿಕ ಮತ್ತು ಬುಡಕಟ್ಟು ಸಂಸ್ಥೆಗಳು ಸಫಾನಿದ್ ಕಾಲದಿಂದ ಮುಂದು ವರಿದುಕೊಂಡು ಬಂದವುಗಳು. ೧೭೭೯ರಿಂದ ೧೯೨೫ರವರೆಗೆ ಇರಾನ್‌ನನ್ನು ಆಳಿದ ಖಾಜರ್ ರಾಜವಂಶವು ದುರ್ಬಲ ಕೇಂದ್ರೀಯ ಪ್ರಭುತ್ವವನ್ನು ಹೊಂದಿದ್ದು, ಅದು ತನ್ನ ಉಳಿವಿಗಾಗಿ ಬುಡಕಟ್ಟು ಶಕ್ತಿಗಳನ್ನು ಮತ್ತು ಧಾರ್ಮಿಕ ಪ್ರಭುತ್ವವನ್ನೇ ನಿರಂತರವಾಗಿ ಅವಲಂಬಿಸಿರಬೇಕಾಗಿತ್ತು. ೧೯ನೇ ಶತಮಾನದಲ್ಲಿ ನಡೆದ ಯುರೋಪಿನವರ ಆಕ್ರಮಣ, ಅವರ ಸಾಂಸ್ಕೃತಿಕ ಪ್ರಭಾವ ಮತ್ತು ಆರ್ಥಿಕ ನೆಲೆಯಲ್ಲಿ ನಡೆದ ಪ್ರಾಬಲ್ಯವು ಇರಾನ್‌ನ ರಾಜಂಗವನ್ನು ತಲ್ಲಣಗೊಳಿಸಿತು ಮತ್ತು ಅದರ ಪರಿಣಾಮವಾಗಿ ೧೯೦೫ರಲ್ಲಿ ಸಂವಿಧಾನ ರಚನೆಗೋಸ್ಕರ ರಾಜಕೀಯ ಕ್ರಾಂತಿ ಆರಂಭವಾಯಿತು. ಈ ಘಟನೆಯಲ್ಲಿ ವಿದ್ವಾಂಸರು, ಉಲೇಮಾಗಳು, ವರ್ತಕರು ಮತ್ತು ಕರಕುಶಲ ಕರ್ಮಿಗಳು ಒಗ್ಗಟ್ಟಾಗಿ ಪಾರ್ಲಿಮೆಂಟರಿ ವ್ಯವಸ್ಥೆಯನ್ನು ರಚಿಸಲು ಪ್ರಯತ್ನಿಸಿದರು. ೧೯೨೫ರಿಂದ ೧೯೭೯ರವರೆಗೆ ಅಧಿಕಾರದಲ್ಲಿದ್ದ ಪಹಲವಿ ರಾಜವಂಶವು ಕೂಡ ಹಿಂದಿನ ಇತಿಹಾಸವನ್ನು ಪುನರುಚ್ಚರಿಸಿತು. ಹಾಗಾಗಿ, ಕಳೆದ ೨೦೦ ವರ್ಷಗಳ ಇರಾನಿ ಇತಿಹಾಸವು ರಾಜ್ಯ ಮತ್ತು ಉಲೇಮಾಗಳ ನಡುವೆ ನಡೆದ ಸಂಘರ್ಷ ಇತಿಹಾಸವನ್ನೇ ಹೇಳುತ್ತದೆ.

ಪ್ರಭುತ್ವ ಮತ್ತು ಉಲೇಮಾಗಳ ನಡುವಿನ ಸಂಘರ್ಷ

ಈ ಬಗೆಯ ಕಾಲಚಕ್ರ ಆರಂಭವಾದದ್ದು ಖಾಜರ್ ರಾಜವಂಶದವರ ಕಾಲದಲ್ಲಿ, ಈ ರಾಜವಂಶ ಅಧಿಕಾರಕ್ಕೆ ಬಂದಿರುವುದು ಹಲವು ವರ್ಷಗಳ ಬಿಕ್ಕಟ್ಟು ಮತ್ತು ಬುಡಕಟ್ಟು ಸಮುದಾಯಗಳ ನಡುವಿನ ಸಂಘರ್ಷದ ನಂತರ. ಅದು ಅಧಿಕಾರಕ್ಕಾಗಿ ನಡೆದ ಹೋರಾಟವಾದರೂ ಖಾಜರ್ ರಾಜವಂಶದ ಆಧಿಪತ್ಯದ ಕ್ರೋಡೀಕರಣ ಸುಲಭದಲ್ಲಿ ಆಗಿರಲಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ಒಂದು ಕಾಲದಲ್ಲಿ ಅವರ ಸೈನ್ಯದ ಸೈನಿಕರು ಟರ್ಕೊಮಾನ್ ಅಂಗರಕ್ಷಕರಾಗಿದ್ದವರು ಮತ್ತು ಜೋರ್ಜಿಯನ್ ಗುಲಾಮರು. ಕೇಂದ್ರಾಡಳಿತ ತುಂಬಾ ದುರ್ಬಲವಾಗಿದ್ದು, ಸಮರ್ಪಕವಾಗಿ ತೆರಿಗೆ ವಸೂಲಿ ಮಾಡಲಾಗುತ್ತಿರಲಿಲ್ಲ. ಅವರ ಆಡಳಿತದ ವ್ಯಾಪ್ತಿಗೆ ಒಳಪಟ್ಟು ಪ್ರಾಂತ್ಯಗಳನ್ನು ಸಮುದಾಯಗಳು ಆಕ್ರಮಿಸಿಕೊಂಡಿದ್ದು, ಬೇರೆ ಬೇರೆ ಪ್ರಾದೇಶಿಕ ಮುಖಂಡರ ಅಧಿಕಾರದ ವ್ಯಾಪ್ತಿಗೆ ಒಳಪಟ್ಟಿದ್ದರು. ರಾಜಕೀಯ ಸ್ಥಿರತೆ ಕಾಯ್ದುಕೊಳ್ಳಲು ಅಸಾಧ್ಯ ವಾಗುತ್ತಿತ್ತು. ಖಾನ್‌ಗಳು ಈ ಬುಡಕಟ್ಟುಗಳನ್ನು ನಿಯಂತ್ರಿಸುತ್ತಿದ್ದರು. ಸರಕಾರಿ ನೇಮಕಗಳು, ಭೂಒಡೆತನದ ಹಕ್ಕುಗಳು, ತೆರಿಗೆ ವಸೂಲಿ ಹಕ್ಕುಗಳು, ನ್ಯಾಯ ತೀರ್ಮಾನ ಮತ್ತು ಬಿಕ್ಕಟ್ಟು ಪರಿಹಾರದ ಹಕ್ಕುಗಳನ್ನು ಈ ಬುಡಕಟ್ಟು ಮುಖಂಡರೇ ಅನುಭವಿಸುತ್ತಿದ್ದು, ರಾಜಂಗದ ಅಧೀನಕ್ಕೆ ಒಳಪಡುತ್ತಿರಲಿಲ್ಲ. ನಗರಗಳು ಮತ್ತು ವರ್ತಕ ಶ್ರೇಣಿಗಳು ಕೂಡ ಸಾಕಷ್ಟು ರಾಜಕೀಯ ಸ್ವಾಯತ್ತತೆಯನ್ನು ಅನುಭವಿಸುತ್ತಿದ್ದವು. ಸ್ಥಳೀಯ ಮಟ್ಟದಲ್ಲಿ ಖಾಜರ್ ಕಾಲದಲ್ಲಿ ಹೆಚ್ಚಾಗಿ ಬುಡಕಟ್ಟು ಮುಖಂಡ, ಅಧಿಕಾರಿಗಳು, ಭೂಮಾಲೀಕರು ಹೆಚ್ಚು ಅಧಿಕಾರವನ್ನು ಪಡೆದಿದ್ದು, ಬಲಿಷ್ಠ ರಾಜಕೀಯ ಶಕ್ತಿಗಳಾಗಿದ್ದರು. ಹಾಗಾಗಿ ಖಾಜರರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಚ್ಚಾಗಿ ದುರ್ಬಲ ಬುಡಕಟ್ಟು ಮುಖಂಡರ ನಡುವಿನ ಜಗಳದ ಲಾಭ ಪಡೆಯಲು ಹವಣಿಸುತ್ತಿದ್ದರು. ಈ ರೀತಿಯ ಖಾಜರ್ ರಾಜಕೀಯ ಅಭದ್ರತೆಯಿಂದ ಇರಾನಿನ ಧಾರ್ಮಿಕ ಶಕ್ತಿಗಳು ಪ್ರಭಾವಿಗಳಾದರು. ೧೮ ಮತ್ತು ೧೯ನೇ ಶತಮಾನದಲ್ಲಿ ಇವರು ಸಾಕಷ್ಟು ಪ್ರಮಾಣದಲ್ಲಿ ಸ್ವಾಯತ್ತತೆಯನ್ನು ಪಡೆದು ಬಲಿಷ್ಠರಾದರು ಹಾಗೂ ಸಂಘಟಿತರಾದರು. ಉಲೇಮಾಗಳು ಧಾರ್ಮಿಕ ನೆಲೆಯಲ್ಲಿ ಭದ್ರಗೊಳ್ಳುತ್ತ, ಸಮಾಜದ ಮುಖ್ಯವಾಹಿನಿಯಲ್ಲಿ ನ್ಯಾಯ ತೀರ್ಪುಗಾರರು, ಕಾನೂನು ರಚನೆಕಾರರು ಆಗಿ ಪರಿವರ್ತನೆಗೊಂಡರು. ಧಾರ್ಮಿಕ ವಿದ್ವಾಂಸರು ಆಗಿ ಸಮಾಜದ ವಿವಿಧ ವರ್ಗಗಳಿಂದ ಗೌರವಿಸಲ್ಪಟ್ಟರು. ಧಾರ್ಮಿಕ ಶಿಕ್ಷಣದ ಪ್ರಚಾರಕರೂ ಆಗಿ, ಚರ್ಚಿನ ಆಗು ಹೋಗುಗಳನ್ನು ನಿರ್ಧರಿಸುವವರಾದರು. ರಾಜಂಗದ ಭವಿಷ್ಯವೂ ಇವರನ್ನು ಅವಲಂಬಿಸಿತ್ತು.

ಕಾಲಕ್ಕನುಗುಣವಾಗಿ ಉಲೇಮಾಗಳು ಸಾಮಾನ್ಯ ಜನರೊಂದಿಗೆ ಸಂಬಂಧವನ್ನು ವೃದ್ದಿಸಿಕೊಂಡರು. ಅವರಿಗೆ ನ್ಯಾಯ ಒದಗಿಸುವುದು, ಚಾರಿಟಿಗಳನ್ನು ಮತ್ತು ಟ್ರಸ್ಟ್ ಗಳನ್ನು ನೋಡಿಕೊಳ್ಳುವುದು, ಪ್ರಾರ್ಥನಾ ಸಭೆಗಳಲ್ಲಿ ಮಧ್ಯಸ್ಥಿಕೆ ವಹಿಸುವುದು, ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದರ ಮೂಲಕ ಬಹುಜನರೊಂದಿಗೆ ಸಂಪರ್ಕವನ್ನು ಬೆಳೆಸಿಕೊಂಡರು. ಪಟ್ಟಣ ಜನರೊಂದಿಗೆ, ಕರಕುಶಲ ಕರ್ಮಿಗಳೊಂದಿಗೆ, ಕಾರ್ಮಿಕರೊಂದಿಗೆ ಮತ್ತು ವರ್ತಕರೊಂದಿಗಿನ ಅವರ ಸಂಬಂಧವು ನಿರ್ಣಾಯಕ ಪಾತ್ರ ವಹಿಸಿತು. ಇರಾನ್‌ನ ಹಣಕಾಸು ಭದ್ರತೆ ಉಲೇಮಾಗಳಿಗೆ ಜನರು ನೀಡುವ ದತ್ತಿಯನ್ನು ಹೆಚ್ಚು ಅವಲಂಬಿಸಿತು. ಹಾಗೆ ರಾಜ್ಯ ಭೂಕಂದಾಯ. ಈ ಎಲ್ಲ ಕಾರಣಗಳಿಂದ ಉಲೇಮಾ ಗುಂಪು ಒಂದು ಬಲಿಷ್ಠ ಶಕ್ತಿಯಾಗಿ ಇರಾನಿನ ರಾಜಕೀಯವನ್ನು ನಿಯಂತ್ರಿಸ ತೊಡಗಿತು. ಆಂತರಿಕವಾಗಿ ಸಂಘಟಿಸಲ್ಪಟ್ಟ ಘಟಕವಾಗಿ, ರಾಷ್ಟ್ರ ಮಟ್ಟದಲ್ಲಿ ಸ್ವತಂತ್ರವಾಗಿ, ದೇಶದ ಧಾರ್ಮಿಕ ಮತ್ತು ರಾಜಕೀಯ ಆಗುಹೋಗುಗಳನ್ನು ನಿಯಂತ್ರಿಸುವ ಕಿಂಗ್ ಮೇಕರ್ ಮತ್ತು ಕಿಂಗ್ ಬ್ರೇಕರ್ ಸ್ಥಾನವನ್ನು ಅಲಂಕರಿಸತೊಡಗಿತು.

ಖಾಜರ್ ಆಧಿಪತ್ಯ ಮತ್ತು ಉಲೇಮಾಗಳ ನಡುವಿನ ಸಂಬಂಧವು ಬಹಳ ಸೂಕ್ಷ್ಮವಾದುದು ಎಂದೇ ಹೇಳಬಹುದು. ಖಾಜರರು ದುರ್ಬಲರಾಗಿದ್ದರೂ ಕೂಡ ಅವರ ರಾಜಂಗ ಮತ್ತು ಉಲೇಮಾ ಮುಖಂಡರ ನಡುವಿನ ಒಡಂಬಡಿಕೆಯಲ್ಲಿ ಒಳ್ಳೆಯ ಚಾರಿತ್ರಿಕ ದೃಷ್ಟಾಂತಗಳಿದ್ದವು. ಉಲೇಮಾಗಳು ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳ ದಿದ್ದರೂ, ಖಾಜರ್ ಕಾಲದ ಆಗುಹೋಗುಗಳನ್ನು ನಿರ್ಧರಿಸುವವರಾಗಿದ್ದರು. ಆದಾಗ್ಯೂ ಖಾಜರ್ ಅರಸೊತ್ತಿಗೆಯನ್ನು ಕಡೆಗಣಿಸುವ ಶಕ್ತಿ ಅವರಿಗಿರಲಿಲ್ಲ. ಅವರ ಇಡೀ ಭವಿಷ್ಯವು ಸರಕಾರ ಒದಗಿಸುವ ಸವಲತ್ತುಗಳನ್ನು ಅವಲಂಬಿಸಿದ್ದಿತು. ಅವರ ನೇಮಕಾತಿ ಯಿಂದ ಹಿಡಿದು, ಅವರ ನಿಯಂತ್ರಣಕ್ಕೆ ಒಳಪಡುವ ಧಾರ್ಮಿಕ ಸಂಸ್ಥೆಗಳು, ಮಸೀದಿಗಳು, ಶಿಕ್ಷಣ ಕೇಂದ್ರಗಳಲ್ಲಿ ಅವರ ಪಾಲುಗಾರಿಕೆ, ಅಲ್ಲಿನ ಸಂಪತ್ತಿನ ವಿನಿಯೋಗ ಎಲ್ಲವೂ ಉಲೇಮಾಗಳಿಗೆ ಸಾಧ್ಯವಾಗುವುದು ಸರಕಾರವು ಅವರಿಗೆ ನೀಡುವ ಬೆಂಬಲ. ಪ್ರೋ ಅವರ ಬೆಳವಣಿಗೆಗೆ ಸಂಬಂಧಿಸಿ ಸರಕಾರ ತೆಗೆದುಕೊಳ್ಳುವ ನಿರ್ಣಯವನ್ನು ಅವಲಂಬಿಸಿತ್ತು. ಹಾಗಾಗಿ ಖಾಜರ್ ಸ್ಟೇಟ್ ಮತ್ತು ಉಲೇಮಾಗಳ ಸಂಬಂಧವು ಪರಸ್ಪರ ಇಂಟರ್ ಡಿಪೆಂಡೆಂಟ್ ಆಗಿದ್ದು, ಒಂದನ್ನು ಬಿಟ್ಟು ಮತ್ತೊಂದು ಇರಲು ಸಾಧ್ಯವಾಗದ ನಂಟು.

ಆದರೆ, ಐರೋಪ್ಯ ರಾಷ್ಟ್ರಗಳ ಆಗಮನ ಮತ್ತು ಅವರ ಆಕ್ರಮಣವು ಖಾಜರರ ಭವಿಷ್ಯವನ್ನೆ ಬದಲಾಯಿಸಿತು. ಮಾತ್ರವಲ್ಲ ಸ್ಟೇಟ್ ಮತ್ತು ಉಲೇಮಾಗಳ ನಡುವಿನ ಸಂಬಂಧದಲ್ಲಿ ಬಿರುಕು ಬಿಟ್ಟಿತು. ಆರಂಭದಲ್ಲಿ ಯುರೋಪಿನವರು ಇರಾನ್ ನಲ್ಲಿ ಆಕ್ರಮಣಕಾರರಾಗಿ ಪ್ರವೇಶ ಮಾಡಿದರು. ನಂತರ ತಮ್ಮದೇ ವಸಾಹತುಶಾಹಿ ಪ್ರಭುತ್ವವನ್ನು/ವರ್ತುಲ ವಲಯಗಳನ್ನು ಸ್ಥಾಪಿಸತೊಡಗಿದರು. ರಷ್ಯನ್ನರು ಇರಾನ್‌ನ ಉತ್ತರ, ಪಶ್ಚಿಮ ಭಾಗದಲ್ಲಿ ಆಕ್ರಮಣ ಮಾಡಿದರು. ಮುಖ್ಯವಾಗಿ ಜೋರ್ಜಿಯಾ, ದರ್ಬಾಗ್, ಬಾಕು, ಶಿರ್ವಾನ್, ಮತ್ತು ಆರ್ಮೇನಿಯಾದ ಒಂದು ಭಾಗವನ್ನು ತಮ್ಮದಾಗಿಸಿಕೊಂಡರು. ತಾಬ್ರೀಜ ಕೂಡ ಅವರ ಅಧೀನಕ್ಕೆ ಒಳಪಟ್ಟಿತು. ೧೮೨೮ರ ಟರ್ಕ್‌ಮಾಂಚೈ ಒಪ್ಪಂದದ ಮೇರೆಗೆ ಇಡೀ ಅರ್ಮೆಮೇನಿಯಾವನ್ನು ಆಕ್ರಮಿಸಿದರು. ಕ್ಯಾಸ್ಪಿಯನ್ ಸಮುದ್ರ ತೀರ ಅವರದ್ದಾಯಿತು ಮತ್ತು ಈ ಎಲ್ಲ ಪ್ರದೇಶಗಳಲ್ಲಿ ವ್ಯಾಪಾರ ಚಟುವಟಿಕೆಗಳನ್ನು ಸಮೃದ್ಧಗೊಳಿಸಿಕೊಂಡರು. ೧೮೬೪ ಮತ್ತು ೧೮೮೫ರ ನಡುವಿನ ದಿನಗಳಲ್ಲಿ ರಷ್ಯದ ವಸಾಹತುಶಾಹಿ ವೃದ್ದಿ ಮತ್ತಷ್ಟು ನಡೆಯಿತು. ಪರಿಣಾಮವಾಗಿ ಇರಾನ್‌ಗೆ ಹತ್ತಿರವಾಗಿರುವ ಬಹುತೇಕ ಸೆಂಟ್ರಲ್ ಏಷ್ಯಾದಲ್ಲಿ ತಮ್ಮ ಯಜಮಾನಿತ್ವವನ್ನು ಸ್ಥಾಪಿಸಿಕೊಂಡನು. ರಷ್ಯಾಕ್ಕೆ ಹೋಲಿಸಿದಾಗ ಬ್ರಿಟಿಷರೇನು ಕಡಿಮೆ ಇರಲಿಲ್ಲ. ಅವರೂ ಕೂಡ ಅಪಘಾನಿಸ್ತಾ ನವನ್ನು ಆಕ್ರಮಿಸಿ ಭಾರತದಲ್ಲಿನ ಅವರ ಸಾಮ್ರಾಜ್ಯಕ್ಕೆ ರಕ್ಷಣೆ ನೀಡಲು ಒಂದು ರಕ್ಷಣಾ ವ್ಯೂಹವನ್ನೇ ರಚಿಸಿಕೊಂಡರು. ಇದರ ಪ್ರಭಾವವನ್ನು ಗಮನಿಸಿದ ಇರಾನ್ ಬ್ರಿಟಿಷರಿಗೆ ಅನೇಕ ವ್ಯಾಪಾರಿ/ರಾಜಕೀಯ ಹಕ್ಕುಗಳನ್ನು ಬಿಟ್ಟುಕೊಡಬೇಕಾಯಿತು. ಈ ಎಲ್ಲ ಚಟುವಟಿಕೆಗಳ ಪ್ರಭಾವದಿಂದ ಇರಾನ್‌ನ ಉತ್ತರದಲ್ಲಿ ರಷ್ಯಾದ ಪ್ರಭುತ್ವ ಮತ್ತು ದಕ್ಷಿಣದಲ್ಲಿ ಬ್ರಿಟಿಷರ ಏಕಾಧಿಪತ್ಯ ರಚನೆಗೊಂಡು ಇರಾನ್ ಅವೆರಡರ ನಡುವೆ ಸ್ಪಿಯರ್ಸ್ ಆಫ್ ಇನ್‌ಪ್ಲೆಯೆನ್ಸ್ ಆಗಿ ಮಾರ್ಪಟ್ಟಿತು. (ನೇರವಾಗಿ ವಸಾಹತುಶಾಹಿ ಆಡಳಿತ ರಚನೆಗೊಳ್ಳದೆ) ೧೮೫೭ರಲ್ಲಿ ಇರಾನಿ ಸರಕಾರ ಬ್ಯಾರನ್ ಡಿ ರೂಟರ್‌ಗೆ ಹಲವು ರಿಯಾಯಿತಿಗಳನ್ನು ಮಂಜೂರು ಮಾಡಿತು. ಅವುಗಳಲ್ಲಿ ರೂಟರ್‌ಗೆ ಮುಂದಿನ ೨೪ ವರ್ಷಗಳವರೆಗೆ ಕಸ್ಟಮ್ಸ್ ಕಂದಾಯ ವಸೂಲಿ ಹಕ್ಕು, ರೈಲು ಮಾರ್ಗ ನಿರ್ಮಾಣದಲ್ಲಿ ಏಕಸ್ವಾಮಿತ್ವ ಗಣಿ ಉದ್ಯಮವನ್ನು ವೃದ್ದಿಸಲು ಅಧಿಕಾರ, ಕಾಲುವೆ ಮತ್ತು ನೀರಾವರಿ ಯೋಜನೆಯನ್ನು ಅಭಿವೃದ್ದಿ ಪಡಿಸಲು ಹಕ್ಕು, ರಾಷ್ಟ್ರೀಯ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳನ್ನು ತೆರೆಯಲು ಅನುಮತಿ, ರಸ್ತೆ ನಿರ್ಮಾಣ, ಟೆಲಿಪೋನ್ ಸೇವೆಯ ಆರಂಭ ಮತ್ತು ಮಿಲ್‌ಗಳನ್ನು ತೆರೆಯಲು ಅನುಮತಿ, ಇದಕ್ಕೆ ಖಾಜರ್ ಸರಕಾರಕ್ಕೆ ಒಂದಷ್ಟು ಕಂದಾಯ ಸಲ್ಲಿಸುವ ಏರ್ಪಾಡು ಮಾಡಿಕೊಳ್ಳಲಾಯಿತು. ೧೮೮೯ರಲ್ಲಿ ಇಂಪಿರಿಯಲ್ ಬ್ಯಾಂಕ್ ಆಫ್ ಪರ್ಸಿಯ ತೆರೆಯಲಾಯಿತು. ಇದು ಬ್ರಿಟಿಷರ ಹಿಡಿತದಲ್ಲಿತ್ತು. ೧೮೯೦ ರಲ್ಲಿ ಬ್ರಿಟಿಷ್ ಕಂಪನಿಗೆ ಇರಾನಿನಲ್ಲಿ ಹೊಗೆಸೊಪ್ಪು ಉತ್ಪಾದನೆ, ಮಾರಾಟ ಮಾಡಲು ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಖಾನೆಗಳನ್ನು ತೆರೆಯಲು ಅನುಮತಿ ನೀಡಲಾಯಿತು. ಆಂತರಿಕ ಮಾರುಕಟ್ಟೆಗಳನ್ನು ಹೊಗೆಸೊಪ್ಪು ಮಾರಾಟ ಮತ್ತು ರಫ್ತು ಮಾಡುವ ಹಕ್ಕು ಬ್ರಿಟಿಷರಿಗೆ ಬಿಟ್ಟು ಕೊಡಲಾಯಿತು. ಇದಕ್ಕೆ ಸಮಾನವಾದ ರಿಯಾಯಿತಿಗಳನ್ನು ರಷ್ಯಾಕ್ಕೂ ಇರಾನ್ ಸರಕಾರ ಬಿಟ್ಟುಕೊಟ್ಟಿತು. ಕ್ಯಾಸ್ಪಿಯನ್ ಕರಾವಳಿಯಲ್ಲಿ ಮೀನುಗಾರಿಕೆ ಹಕ್ಕು, ಡಿಸ್ಕೌಂಟ್ ಬ್ಯಾಂಕ್ ಆಫ್ ಪರ್ಸಿಯ(ರಷ್ಯಾದ ಅಧೀನಕ್ಕೆ ಒಳಪಟ್ಟ), ತದನಂತರ ಇರಾನ್‌ನಲ್ಲಿ ರಷ್ಯಾ ಮುಖ್ಯ ಬಂಡವಾಳ ಹೂಡಿಕೆಗೆ ಅನುಮತಿ ಪಡೆಯಿತು. ಕೊನೆಗೆ ೧೯೦೭ರಲ್ಲಿ ಆಂಗ್ಲೊ-ರಷ್ಯಾ ಒಪ್ಪಂದದಂತೆ ಇರಾನ್ ಬ್ರಿಟಿಷ್ ರಷ್ಯಾ ನಡುವೆ ವಸಾಹತು ವಾಗಿ ವಿಭಜನೆಗೊಂಡಿತು. ಉತ್ತರ ಇರಾನ್ ರಷ್ಯನ್ನರಿಗೆ, ದಕ್ಷಿಣವು ಬ್ರಿಟಿಷರಿಗೆ ಮತ್ತು ಮಧ್ಯ ಭಾಗ ಅರಸೊತ್ತಿಗೆಯ ಅಧೀನಕ್ಕೊಳ ಪಟ್ಟಿತು. ಬಹುತೇಕವಾಗಿ ಇರಾನ್ ವಸಾಹತುಶಾಹಿ ಪ್ರಭುತ್ವದ ನೆರಳಲ್ಲಿ ಬದುಕನ್ನು ರೂಪಿಸುವ ವಾತಾವರಣ ನಿರ್ಮಾಣವಾಯಿತು.

ರಾಷ್ಟ್ರೀಯ ಆಂದೋಲನದ ಆರಂಭ

ಇರಾನಿ ರಾಷ್ಟ್ರೀಯ ಆಂದೋಲನವು ಆರಂಭವಾದದ್ದು ಈ ಬಗೆಯಲ್ಲಿ ಇರಾನ್ ಸರಕಾರ ಯುರೋಪಿನ ಕೈಗೊಂಬೆಯಾಗಿ ಪರಿವರ್ತನೆಯಾಗಿರುವುದರಿಂದ. ಡಿ ರೂಟರ್‌ಗೆ ನೀಡಿರುವ ರಿಯಾಯಿತಿಗಳು ಆತಂಕಕಾರಿ ಪರಿಣಾಮಗಳನ್ನು ಬೀರತೊಡಗಿದವು. ಇದರಿಂದ ನಿಧಾನಗತಿಯಲ್ಲಿ ಇರಾನ್‌ನ ಆಸಕ್ತಿಗಳನ್ನು ಬ್ರಿಟಿಷರಿಗೆ ಮತ್ತು ರಷ್ಯಾದವರಿಗೆ ಮಾಡಿ ಕೊಳ್ಳುವ ಹುನ್ನಾರು ಎಂದು ಉಲೇಮಾಗಳು ವಿರೋಧಿಸತೊಡಗಿದವು. ಒಂದರ್ಥ ದಲ್ಲಿ ಖಾಜರ್ ಸ್ಟೇಟ್ ಮತ್ತು ಉಲೇಮಾಗಳ ನಡುವಿನ ಸಂಬಂಧ ಹದಗೆಡಲು ಇದು ಮುಖ್ಯ ಕಾರಣವಾಯಿತು. ಸಾಮಾನ್ಯ ಜನರ ಧ್ವನಿಯಾಗಿ ಉಲೇಮಾಗಳು ವಸಾಹತುಶಾಹಿ ವಿರೋಧಿ ಆಂದೋಲನದ ನೇತೃತ್ವವನ್ನು ವಹಿಸಿದರು ಮತ್ತು ಬ್ರಿಟಿಷ್ ರಷ್ಯಾ ದೇಶಗಳಿಗೆ ನೀಡಿರುವ ಎಲ್ಲ ರಿಯಾಯಿತಿಗಳನ್ನು ವಾಪಸ್ಸು ಪಡೆದುಕೊಳ್ಳಲು ಒತ್ತಾಯ ಹೇರಿದರು.

೧೮೯೦ರಲ್ಲಿ ಹೊಗೆಸೊಪ್ಪು ಕೇಂದ್ರಿತ ಬ್ರಿಟಿಷ್ ವಸಾಹತುಶಾಹಿ ಏಕಸ್ವಾಮಿತ್ವವನ್ನು ಕೂಡ ಉಲೇಮಾಗಳು ವಿರೋಧಿಸಿದರು. ಈ ಘಟನೆಯಲ್ಲಿ ವರ್ತಕರು, ಉದಾರಿ ವಿದ್ವಾಂಸರು, ಅಧಿಕಾರಿಗಳು ಸಾರ್ವತ್ರಿಕವಾಗಿ ಪ್ರತಿಭಟನೆಯನ್ನು ಯೋಜಿಸಿ ಬ್ರಿಟಿಷರು ಅನುಭವಿಸುತ್ತಿರುವ ಟೊಬ್ಯಾಕೊ ಏಕಸ್ವಾಮ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಬಹಿಷ್ಕರಿಸಲು ತೀರ್ಮಾನಿಸಿದರು. ಉಲೇಮಾ ನೇತೃತ್ವದ ಈ ಪ್ರತಿಭಟನೆಗಳು ಶಿರಾಜ್, ಇಸ್ಪಾಹನ್, ತಾಬ್ರೀಜ್, ಮಾಶಾದ್‌ನಲ್ಲಿ ದೊಡ್ಡ ಮಟ್ಟದಲ್ಲಿಯೇ ನಡೆಯಿತು. ಮಿಜ ಹುಸೇನ್ ಶಿರಾಜ್ ನೇತೃತ್ವದಲ್ಲಿ ಒಂದು ಫತ್ವಾವನ್ನು ಹೊರಡಿಸಿ, ರಾಷ್ಟ್ರ ಮಟ್ಟದಲ್ಲಿ ಹೊಗೆ ಸೊಪ್ಪಿನಿಂದ ಬ್ರಿಟಿಷ್ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡಲಾಯಿತು. ಇದರಿಂದ ಬ್ರಿಟಿಷರ ವಸಾಹತುಶಾಹಿ ಆಧಿಪತ್ಯಕ್ಕೆ ನೇರವಾಗಿ ವಿರೋಧಗಳು ವ್ಯಕ್ತವಾದವು. ಇಲ್ಲಿ ಇದರಿಂದ ಆಗಬಹುದಾದ ಆರ್ಥಿಕ ನಷ್ಟಕ್ಕೆ ಸಂಬಂಧಿಸಿ ಮತ್ತು ವಿದೇಶಿಯರ ನೇರ ಹಸ್ತಕ್ಷೇಪವನ್ನು ಸೈದ್ಧಾಂತಿಕ ನೆಲೆಯಲ್ಲಿ ವಿರೋಧಿಸಿ ಇರಾನಿನ ರಾಜಕೀಯ ಅಸ್ತಿತ್ವಕ್ಕೆ ಎದುರಾದ ಸವಾಲುಗಳನ್ನು ಹತ್ತಿಕ್ಕುವ ಉದ್ದೇಶವಿತ್ತು. ಉಲೇಮಾ ಗಳು ವಿದೇಶಿಯರ ನಿರಂತರ ಆಕ್ರಮಣವನ್ನು ವಿರೋಧಿಸಿದರು. ವರ್ತಕರು, ವಿದೇಶಿ ಉದ್ದಿಮೆಗಾರರು ಮತ್ತು ಇರಾನಿಯರ ನಡುವೆ ಮಧ್ಯವರ್ತಿಗಳಾಗಿ ಬದಲಾಗುವ ಭಯದ ವಾತಾವರಣವಿತ್ತು. ಕರಕುಶಲಕರ್ಮಿಗಳು ಜೀವನೋಪಾಯ ಚಿಂತಾಜನಕವಾಗಿತ್ತು. ಹತ್ತಿ ಬಟ್ಟೆ ತಯಾರಿಕರು ಮತ್ತು ನೇಕಾರರು ವಿದೇಶಿ ಉತ್ಪನಗಳ ಆಮದಿನಿಂದ ನಷ್ಟ ಅನುಭವಿಸಬೇಕಾಯಿತು.

ಉಲೇಮಾಗಳು, ವರ್ತಕರು ಮತ್ತು ಕರಕುಶಲಕರ್ಮಿಗಳು ಯೋಜಿಸಿದ ಪ್ರತಿಭಟನೆಯು ಸಣ್ಣ ಗಾತ್ರದ ಪಾಶ್ಚಾತೀಕರಿಸಲ್ಪಟ್ಟ ವಿದ್ವಾಂಸರು ಮತ್ತು ಇಸ್ಲಾಂ ಚಿಂತಕರಿಂದಲೂ ಬೆಂಬಲ ಪಡೆಯಿತು. ಇವರು ಸೀಕ್ರೆಟ್ ಸೊಸೈಟಿಗಳಿಂದ, ಬರವಣಿಗೆಗಳಿಂದ ಪ್ರಕಟಣೆಗಳಿಂದ ಜನರನ್ನು ಆಕರ್ಷಿಸಿದರು ಮತ್ತು ಜನರಲ್ಲಿ ಅರಿವನ್ನು ಮೂಡಿಸಿದರು. ಈ ತರದ ಹೊಸ ಸಾಮಾಜಿಕ ಗುಂಪುಗಳ ನಡುವಿನ ಸಂಬಂಧದಿಂದ ಖಾಜರ್ ಅರಸೊತ್ತಿಗೆ ವಿರುದ್ಧ ಪ್ರಪ್ರಥಮ ಬಾರಿಗೆ, ರಾಷ್ಟ್ರೀಯ ಮಟ್ಟದಲ್ಲಿ ಚಳವಳಿ ಆರಂಭಗೊಂಡಿತು.

೧೮೯೨-೧೯೦೫ರ ನಡುವೆ ಈ ಸಮುದಾಯಗಳ ನಡುವಿನ ಸಂಬಂಧಗಳು ಗಟ್ಟಿಗೊಂಡವು. ಮತ್ತು ೧೯೦೫-೧೯೧೧ರ ನಡುವಿನ ಸಾಂವಿಧಾನಿಕ ಬಿಕ್ಕಟ್ಟಿನಲ್ಲಿ ಅವರು ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ತಮ್ಮ ಒಗ್ಗಟ್ಟನ್ನು ಪ್ರತಿಪಾದಿಸಿದರು. ೧೮೯೨ರ ನಂತರ ಒಂದಷ್ಟು ಉಲೇಮಾಗಳು ಖಾಜರ್ ಸ್ಟೇಟ್‌ನೊಂದಿಗೆ ರಾಜಕೀಯ ಚಟುವಟಿಕೆಗಳನ್ನು ತಿಳಿಗೊಳಿಸಲು ಪ್ರಯತ್ನಿಸತೊಡಗಿದರು. ಆದರೆ, ಇನ್ನೊಂದಷ್ಟು ಉಲೇಮಾಗಳು, ವ್ಯಾಪಾರಿಗಳು, ವಿದ್ವಾಂಸರು ಭೂಗತರಾದರು ಮತ್ತು ಖಾಜರ್ ಪ್ರಭುತ್ವ ಮತ್ತು ವಿದೇಶಿಯರ ನಡುವಿನ ಸಂಬಂಧದ ಅನಾಹುತಗಳನ್ನು ವಿಮರ್ಶಿಸ ತೊಡಗಿದರು.

ಈ ನಡುವೆ ಶಾಸ್ತ್ರೀಯವಾಗಿ, ಧಾರ್ಮಿಕವಾಗಿ ಮತ್ತು ಆರ್ಥಿಕ ನೆಲೆಯಲ್ಲಿ ಖಾಜರ್ ಸ್ಟೇಟ್‌ನ ಧೋರಣೆಗಳನ್ನು ವಿರೋಧಿಸುವ ಒಂದು ಗುಂಪು ಸಕ್ರಿಯವಾಗಿತ್ತು. ಮತ್ತು ಅವರ ಆಲೋಚನಾ ಕ್ರಮವು ಸಾಂವಿಧಾನಿಕ ಚಿಂತನೆಗಳನ್ನೊಳಗೊಂಡಿದ್ದವು. ಯುರೋಪ್ ಮಾದರಿಯ ಪಾರ್ಲಿಮೆಂಟರಿ ಸ್ಟೇಟ್‌ಗಳು ೧೯೦೪ರಲ್ಲಿ ರಷ್ಯಾ ಮಾದರಿ ಪಾರ್ಲಿಮೆಂಟ್ ಮತ್ತು ಅಟೋಮನ್ ಸಾಮ್ರಾಜ್ಯ ಮತ್ತು ಈಜಿಪ್ಟ್‌ನಲ್ಲಾದ ಆಧುನೀಕರಣವು ಇರಾನಿ ಯರನ್ನು ಎಚ್ಚರಿಸಿತು. ಮತ್ತು ತಮ್ಮ ದೇಶದಲ್ಲಿರುವ ರಾಜಕೀಯ ರಚನೆಯ ನ್ಯೂನತೆಗಳೇನೆಂಬುದನ್ನು ವಿಮರ್ಶಿಸತೊಡಗಿದರು. ರಷ್ಯಾ ಮತ್ತು ನೆರೆ ರಾಜ್ಯಗಳಲ್ಲಿ ಪ್ರಕಟವಾಗಿ ಪ್ರಚಾರದಲ್ಲಿರುವ ಅನೇಕ ಉದಾರಿ ಮತ್ತು ಕ್ರಾಂತಿಕಾರಿ ದೈನಿಕಗಳು ಇರಾನಿ ಸಮಾಜವನ್ನು ಪ್ರವೇಶಿಸಿದವು. ಇವುಗಳ ಓದಿನಿಂದ ಇರಾನ್‌ನಲ್ಲಿ ಹೊಸ ರಾಜಕೀಯ ಅಭಿಪ್ರಾಯಗಳು ಹುಟ್ಟಲಾರಂಭಿಸಿದವು. ಸಾರ್ವತ್ರಿಕ ಸಾರ್ವಭೌಮತ್ವ, ರೂಲ್ ಆಫ್ ಲಾ ಮತ್ತು ದೇಶಾಭಿಮಾನದ ಬಗ್ಗೆ ದೇಶದಲ್ಲೆಡೆ ಚರ್ಚೆ ಆರಂಭಗೊಂಡವು. ಹೊಸ ಚಿಂತನೆಗಳನ್ನು, ಸಿದ್ಧಾಂತಗಳನ್ನು ಪ್ರಚಾರಕರು ತಮ್ಮದೆ ಸಂಘಟನೆಗಳನ್ನು ಗುಪ್ತವಾಗಿ ಸಂಯೋಜಿಸಿದರು. ಇಸ್ಲಾಂ ಧರ್ಮದ ಅಮೆರಿಕನ್ ಮತಾಂತರಗೊಂಡ ಮಾಲ್ ಕುಮ್ ಖಾನ್ ಪ್ಯಾರೀಸ್‌ನಲ್ಲಿ ಶಿಕ್ಷಣ ಮುಗಿಸಿ ಲಂಡನ್ ನಲ್ಲಿ ಖಾನಂ ಎಂಬ ಪತ್ರಿಕೆಯನ್ನು ಆರಂಭಿಸಿ, ಆಧುನೀಕರಣಗೊಳ್ಳುವ ಇರಾನಿ ಸಮಾಜದ ಕುರಿತು ಲೇಖನಗಳನ್ನು ಪ್ರಕಟಿಸಲಾರಂಭಿಸಿದನು. ಅವನ ಬರವಣಿಗೆಯಲ್ಲಿ ಇರಾನ್‌ನಲ್ಲಿ ತಕ್ಷಣ ಬಲಿಷ್ಠ ಮೊನಾರ್ಕಿ ರಚನೆಯಾಗಬೇಕು, ಅದಕ್ಕೊಂದು ಸಲಹಾ ಸಮಿತಿ ಇರಬೇಕು, ಆ ಸಮಿತಿಯ ಸದಸ್ಯರು ಇರಾನ್‌ನಲ್ಲಿ ಪಾಶ್ಚಾತೀಕರಣ ಯೋಜನೆಗಳನ್ನು ಮತ್ತು ಹೊಸ ಶಿಕ್ಷಣ ವ್ಯವಸ್ಥೆಯನ್ನು ಆರಂಭಿಸಲು ಉತ್ತೇಜನ ನೀಡುವ ಕೆಲಸ ಮಾಡಬೇಕೆಂದು ಕರೆ ನೀಡಿದನು. ಈ ಸುಧಾರಣೆಗಳು ಇಸ್ಲಾಂ ಸಂಸ್ಥೆಗಳ ಆಶಯಗಳಿಗೆ ಯಾವುದೇ ಧಕ್ಕೆ ಬರದಂತೆ ನೋಡಬೇಕೆಂದೂ ಕರೆ ಸೂಚಿಸಿದ್ದನು. ಇನ್ನೊಬ್ಬ ವ್ಯಾಪಾರಿ ಅಬ್ದುಲ್-ಅಲ್-ರಹೀಮ್ ತಾಲಿಬೋವ್, ತನ್ನ ಬಹುತೇಕ ದಿನಗಳನ್ನೂ ರಷ್ಯಾದಲ್ಲಿ ಕಳೆದಿದ್ದರೂ, ಅಲ್ಲಿನ ಸಮಾಜವಾದದಿಂದ ಪ್ರಭಾವಿತನಾಗಿ ಇರಾನ್‌ನಲ್ಲಿ ಸಂವಿಧಾನಾತ್ಮಕ ಸರಕಾರ ಮತ್ತು ನಾಗರಿಕ ಸ್ವಾತಂತ್ರ್ಯ ಜನತೆಗೆ ದೊರೆಯಬೇಕೆಂದು ಪ್ರತಿಪಾದಿಸಿದನು. ಸಂವಿಧಾನಾತ್ಮಕ ಚಿಂತನೆಗಳನ್ನು ಮತ್ತು ಆಧುನೀಕರಣವನ್ನು ಪ್ರತಿಪಾದಿಸುವ ಗುಂಪುಗಳು, ಪಾನ್ ಇಸ್ಲಾಮಿ ಪ್ರತಿಭಟನೆಕಾರರ ಬೆಂಬಲವನ್ನು ಪಡೆದರು. ಇವರು ಧಾರ್ಮಿಕ ಭಾಷೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಮತ್ತು ಅವರ ಉದ್ದೇಶವೂ ಕೂಡ ಇರಾನ್‌ನಲ್ಲಿ ಸರ್ವತೋಮುಖ ಅಭಿವೃದ್ದಿ ಆಗಿರಬೇಕೆಂಬುದು. ಜಮಾಲ್-ದಿನ್-ಅಲ್-ಅಘ್‌ಘಾನಿ ಮತ್ತು ಮಿಜ ಅಖಾ ಖಾನ್ ಕಿರ್ಮಾನಿ, ಇಸ್ಲಾಮಿನ ರಾಜಕೀಯ ಮುಖವನ್ನು ಉದ್ದೇಶಿಸಿ, ಸಾಮ್ರಾಜ್ಯಶಾಹಿ ವಿರೋಧಿ ತತ್ವಗಳು, ರಾಷ್ಟ್ರೀಯ ಭಾವನೆಗಳನ್ನು, ಭಾವೈಕ್ಯತೆ ಅಭಿಮಾನವನ್ನು ಮತ್ತು ರಾಷ್ಟ್ರದ ಬಗ್ಗೆ ತಮಗಿರುವ ಹೆಮ್ಮೆಯನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ ಮತ್ತು ಇಡೀ ಇರಾನಿನ ಮುಸ್ಲಿಂ ಬಾಂಧವರನ್ನು ಒಂದುಗೂಡಿಸಿ ವಿದೇಶಿಯರ ಪ್ರದೇಶವನ್ನು ವಿರೋಧಿಸಲು ಒಂದು ವೇದಿಕೆ ಸೃಷ್ಟಿ ಮಾಡುತ್ತದೆ ಎಂದು ಪ್ರತಿಪಾದಿಸಿದರು. ಉದಾರಿ ಉಲೇಮಾಗಳಾದ ಸಯಿದ್ ಮಹಮ್ಮದ್ ತಬಾ ತಬೈ ಕೂಡ ಪಾಶ್ಚಾತ್ಯ ಮತ್ತು ಸೆಕ್ಯುಲರ್ ಸರಕಾರ ರಚನೆಯನ್ನು ಸಮರ್ಥಿಸಿದರು.

ಮಿಜ ಮಹಮ್ಮದ್ ಹುಸೇನ ನೈನಿ ಬರೆದ ‘ಅಡ್‌ಮೋನಿಶನ್ ಆಂಡ್ ರಿಫೈನ್ ಮೆಂಟ್ ಆಫ್ ದಿ ಪೀಪಲ್’ ಎಂಬ ಗ್ರಂಥದಲ್ಲಿ ಉದಾರಿ ಉಲೇಮಾಗಳ ನಿಲುವುಗಳನ್ನು ಪ್ರಕಟಿಸಲಾಯಿತು. ಈಗಿರುವ ಪ್ರಭುತ್ವದ ನ್ಯೂನ್ಯತೆಗಳು ಅವನ ಪ್ರಕಾರ ನಿರಂಕುಶ ಪ್ರಭುತ್ವ ಗಟ್ಟಿಗೊಳ್ಳಲಷ್ಟೆ ಸಹಕಾರಿಯಾಗುತ್ತದೆ. ಆಡಳಿತ ನಡೆಸುವ ರಾಜರನ್ನು ಹದ್ದುಬಸ್ತಿನಲ್ಲಿಡುವ ಅನಿವಾರ್ಯ ಇದ್ದು, ಅದಕ್ಕೆ ಒಂದೇ ಒಂದು ಮಾರ್ಗ ರಾಷ್ಟ್ರೀಯ ಸಲಹಾ ಸಭೆಯನ್ನು ರಚಿಸಿ ಅವರ ಅಧಿಕಾರ ವ್ಯಾಪ್ತಿಯನ್ನು ನಿಯಂತ್ರಿಸುವುದು. ಆದರೆ, ಇಸ್ಲಾಮಿ ಅಭಿಪ್ರಾಯಗಳು ಮತ್ತು ಪಾಶ್ಚಾತ್ಯ ಸಂವಿಧಾನಾತ್ಮಕ ರಾಜಕೀಯ ಸಂಘಟನೆಗಳ ನಡುವಿನ ಸಂಘರ್ಷ ಸೆಕ್ಯುಲಾರ್ ಕಾನೂನು ಮತ್ತು ಮುಸ್ಲಿಂ ಕಾನೂನು, ನಾಗರಿಕರ ನಡುವೆ ಸಮಾನತೆ ಮತ್ತು ಮುಸ್ಲಿಮೇತರ ಜನರ ಮೇಲೆ ಮುಸ್ಲಿಂರ ವಾಕ್ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸತ್ಯಗಳ ಪ್ರಚಾರ ಇತ್ಯಾದಿಗಳ ನಡುವೆ ಭಿನ್ನಾಭಿಪ್ರಾಯ ತಲೆದೋರದಂತೆ ಪ್ರಯತ್ನ ಅಗತ್ಯ. ಉದಾರಿ ಉಲೇಮಾಗಳು ಸಂವಿಧಾನಾತ್ಮಕ ರಾಜಶಾಸನಾನುಸಾರ ನಿಯಮಗಳನ್ನು ಪ್ರತಿಪಾದಿಸಲು ಅವರದ್ದೆ ಕಾರಣಗಳಿವೆ. ಕೆಲವರು ಸಂವಿಧಾನಾತ್ಮಕ ಸಮಿತಿಯನ್ನು ಇಸ್ಲಾಮಿ ಕೋರ್ಟ್ ಆಫ್ ಜಸ್ಟೀಸ್‌ನಂತೆ ಅಂದುಕೊಂಡಿದ್ದರು. ಇನ್ನು ಕೆಲವರು ಸಂವಿಧಾನಾತ್ಮಕವಾಗಿ ರಚನೆಯಾಗುವ ಸರಕಾರವು ಸ್ಟೇಟ್ ಅಧಿಕಾರದ ವ್ಯಾಪ್ತಿಯನ್ನು ನಿಯಂತ್ರಿಸುತ್ತದೆಂದು ತಿಳಿದಿದ್ದರು. ಮತ್ತು ಅದರಿಂದ ಜನತೆ ಅನುಭವಿಸುವ ಬಿಕ್ಕಟ್ಟು ನಿವಾರಣೆ ಆಗುತ್ತದೆಂದು ತಿಳಿಸಿದ್ದರು ಇನ್ನು ಕೆಲವು ಉಲೇಮಾಗಳು ಹೊಸ ರಚನೆಯು ಅವರ ಅಧಿಕಾರ ವ್ಯಾಪ್ತಿಯನ್ನು ಸಂಸ್ಥೀಕರಿಸುವಿಕೆ ಎಂದು ತಿಳಿದು, ಹೊಸ ಪಾರ್ಲಿಮೆಂಟ್ ಅವರಿಗೆ ದೇಶದ ಆಡಳಿತದಲ್ಲಿ ಮಹತ್ತರ ಪಾತ್ರವಹಿಸಲು ಅವಕಾಶ ಮಾಡಿಕೊಡುತ್ತದೆಂದು ತಿಳಿದಿದ್ದರು. ಸಂವಿಧಾನಾತ್ಮಕ ಸರಕಾರ ಮತ್ತು ಶಾಸ್ತ್ರೀಯವಾಗಿ ನೀಡುವ ಸಲಹಾ ಪದ್ಧತಿ ನಡುವೆ ಮತ್ತು ಇಸ್ಲಾಮಿ ಕಾನೂನನ್ನು ಅನುಷ್ಠಾನಗೊಳಿಸುವ ಸಂಸ್ಥೆಗಳು/ಪ್ರತಿನಿಧಿಗಳಿಂದ ರಚಿಸಲ್ಪಡುವ ಸರಕಾರ ಇತ್ಯಾದಿಗಳ ನಡುವೆ ಇರುವ ಗೊಂದಲಿದಿಂದಾಗಿ ಉಲೇಮಾಗಳು, ಉದಾರಿಗಳು, ವ್ಯಾಪಾರಿಗಳ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಮನಾರ್ಕಿಯನ್ನು ಪ್ರತಿಪಾದಿಸಲು ಮುಂದಾದರು.

ಶಾಸನಬದ್ಧ ಸರಕಾರ ರಚನೆಗೋಸ್ಕರ ಚಳವಳಿ ೧೯೦೫ ಮತ್ತು ೦೬ ಸಮಯದಲ್ಲಿ ತೀವ್ರವಾಗಿ ಆರಂಭವಾಯಿತು. ಮುಖ್ಯವಾಗಿ ಖಾಜರ್ ಅರಸ ರೇಜ ಶಾಹ ಪಹಲವಿ ರಷ್ಯಾವನ್ನು ಹೆಚ್ಚು ಹೆಚ್ಚು ಅವಲಂಬಿಸುತ್ತಾನೆ. ವಸಾಹತುಶಾಹಿ ಚಟುವಟಿಕೆಗಳು ಮತ್ತು ಅವರು ರೂಪಿಸಿದ ಯೋಜನೆಗಳನ್ನು ವಿರೋಧಿಸಲು ಸಾರ್ವತ್ರಿಕವಾಗಿ ರಂಗ ಸಜಯಿತು. ಇದಕ್ಕೆ ಪೂರಕವಾಗಿ ೧೯೦೬ರಲ್ಲಿ ರಾಷ್ಟ್ರೀಯ ಮಟ್ಟದ ಶಾಸನ ಸಭೆಯನ್ನು ಕರೆಯಲಾಯಿತು. ಅದರಲ್ಲಿ ೨೬ ಶೇಕಡ ಕರಕುಶಲಕರ್ಮಿಗಳು, ೧೫ ವ್ಯಾಪಾರಿಗಳು ಮತ್ತು ೨೦ ಉಲೇಮಾ ಗಳು. ಈ ಸಭೆಯು ಉಲೇಮಾ, ವ್ಯಾಪಾರಿ ಮತ್ತು ಉದಾರವಾದಿಗಳ ಸಮ್ಮಿಲನವಾಗಿದ್ದು ಸಂವಿಧಾನವನ್ನು ರಚಿಸಲು ನಿರ್ಣಯ ತೆಗೆದುಕೊಳ್ಳಲಾಯಿತು. ಆ ಸಂವಿಧಾನ ೧೯೭೯ ರವರೆಗೂ ಅಧಿಕೃತವಾಗಿ ಚಾಲ್ತಿಯಲ್ಲಿತ್ತು. ಹೊಸ ಶಾಸನದನ್ವಯ ಅರಸನು ಪಾರ್ಲಿಮೆಂಟರಿ ಸರಕಾರಕ್ಕೆ ವಿಧೇಯನಾಗಿರಬೇಕು. ಆದರೆ, ಇಸ್ಲಾಂನ್ನು ಇರಾನ್‌ನ ಅಧಿಕೃತ ಧರ್ಮ ವೆಂದು ಘೋಷಿಸಲಾಯಿತು. ಶರಿಯವನ್ನು ಶಾಸನಬದ್ಧವಾಗಿ ಪಾಲಿಸಲು ಸರಕಾರ ಕ್ರಮ ತೆಗೆದುಕೊಂಡಿತು. ಹಾಗೆಯೇ ಉಲೇಮಾಗಳನ್ನೊಳಗೊಂಡ ಸಮಿತಿ ರಚಿಸಿ ಮುಸ್ಲಿಂ ಕಾನೂನಿಗೆ ಅನುಗುಣವಾಗಿ ಹೊಸ ಕಾನೂನನ್ನು ರೂಪಿಸಲು ತೀರ್ಮಾನ ತೆಗೆದು ಕೊಳ್ಳಲಾಯಿತು.

ಹೊಸ ಸಂವಿಧಾನದ ಘೋಷಣೆಯ ರಾಷ್ಟ್ರೀಯ ಚಳುವಳಿಯ ಮೊದಲ ಹಂತದ ಯಶಸ್ಸು, ಹೊಸ ರಾಜಕೀಯ ವ್ಯವಸ್ಥೆಯ ಹರಿಕಾರರು ಉಲೇಮಾ, ವ್ಯಾಪಾರಿಗಳು, ಕರಕುಶಲ ಕರ್ಮಿಗಳು ಮತ್ತ ಭಕ್ತಿಯಾರಿ ಬುಡಕಟ್ಟು ಸಮುದಾಯದವರ ಬೆಂಬಲ ಪಡೆದಿದ್ದರು. ತಾಬ್ರೀಜ್ ಮತ್ತು ಇಸ್ಪಾಹನ್ ಪ್ರಾಂತಗಳಲ್ಲಿ ಸಾರ್ವತ್ರಿಕವಾಗಿ ಬೆಂಬಲ ವ್ಯಕ್ತವಾಗಿತ್ತು. ಇವರ ಚಳವಳಿಯನ್ನು ರೇಜಶಾಹ, ಸಂಪ್ರದಾಯಸ್ಥ ಉಲೇಮಾ ಮತ್ತು ಶ್ರೀಮಂತ ಭೂಮಾಲೀಕರು ಕಟುವಾಗಿ ಟೀಕಿಸಿದರು ಮತ್ತು ದಮನಿಸಲು ಪ್ರಯತ್ನ ಮಾಡಿದರು. ೧೯೦೭ರಲ್ಲಿ ಮತ್ತು ೧೯೦೮ರಲ್ಲಿ ಶಾಹ, ರಷ್ಯಾ ತರಬೇತಿದಾರರಿಂದ ತರಬೇತಿ ಪಡೆದ ಕೊಸ್ಸಾಕ್ ಬ್ರಿಗೇಡ್ ಸೈನಿಕರಿಂದ ಪಾರ್ಲಿಮೆಂಟನ್ನು ಮುಚ್ಚುವ ಪ್ರಯತ್ನ ಮಾಡಿದರು. ಆದರೆ, ಸಂವಿಧಾನ ಪ್ರತಿಪಾದಕರು ಪುನಃ ೧೯೦೯ ಮತ್ತು ೧೯೧೧ರ ನಡುವೆ ಅಧಿಕಾರದ ಗದ್ದುಗೆಗೇರಿದರು. ಎರಡನೇ ಬಾರಿ ಮಾತ್ರ ಉದಾರವಾದಿ ಸುಧಾರಕರು ಮತ್ತು ಉಲೇಮಾಗಳ ನಡುವಿನ ಒಡಂಬಡಿಕೆಯು ದುರ್ಬಲಗೊಂಡಿತು. ಏಕೆಂದರೆ, ಉದಾರವಾದಿ ಸುಧಾರಕರು ರಾಜಕೀಯದಲ್ಲಿ ಧರ್ಮದ ಪ್ರವೇಶವನ್ನು ವಿರೋಧಿಸಿದರು. ಭೂಮಿ ಹಂಚುವಿಕೆಗೆ ಸಂಬಂಧಿಸಿ ಹಲವು ಯೋಜನೆಗಳನ್ನು ರೂಪಿಸಿದರು ಮತ್ತು ಹೊಸ ವ್ಯವಸ್ಥೆಯಡಿಯಲ್ಲಿ ಸೆಕ್ಯೂಲರ್ ಶಿಕ್ಷಣ ಕ್ರಮ ಜರಿ ಗೊಳಿಸಲು ಪ್ರಯತ್ನ ಮಾಡಿದರು. ಇದರಿಂದ ಉಲೇಮಾಗಳ ಆಸಕ್ತಿಗಳಿಗೆ ಸವಾಲುಗಳು ಎದುರಾದವು. ಈ ಮಧ್ಯದಲ್ಲಿ ೧೯೧೧ರಲ್ಲಿ ರಷ್ಯಾದವರ ಪ್ರದೇಶದಿಂದ ಹೊಸ ರಾಜಕೀಯ ರಚನೆ ನಿರ್ಮಾಣಗೊಂಡಿತು ಮತ್ತು ಶಾಹನ ಸರಕಾರ ಪುನಃ ರಚನೆಯಾಯಿತು.

೧೯೦೫ರಿಂದ ೧೯೧೧ರವರೆಗಿನ ಸಂವಿಧಾನಾತ್ಮಕ ರಾಜಕೀಯ ಬಿಕ್ಕಟ್ಟು ೧೯ನೇ ಶತಮಾನದ ಇರಾನಿನ ಇಸ್ಲಾಮಿ ಸಮಾಜದ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳಲು ಅನುವು ಮಾಡಿಕೊಟ್ಟಿತು. ೧೯ನೇ ಶತಮಾನದ ಉದ್ದಕ್ಕೂ ಉಲೇಮಾಗಳು ಸ್ಟೇಟನ್ನೆ ಅವಲಂಬಿಸಿದ್ದದು ಅಲ್ಲದೆ ಸ್ಟೇಟಿಗೆ ಎಲ್ಲ ಬಗೆಯ ಸಹಕಾರ ನೀಡಿ, ಸರಕಾರದ ನಿವೃತ್ತಿ ವೇತನ, ಗಿಫ್ಟ್‌ಗಳನ್ನು, ನ್ಯಾಯಾಂಗದಲ್ಲಿ ಉನ್ನತ ಸ್ಥಾನ ಅಥವಾ ಸರಕಾರಿ ಕಚೇರಿಗಳಲ್ಲಿ ಉದ್ಯೋಗ ಮತ್ತು ಭೂಮಾಲೀಕರಾಗಿ ಆಡಳಿತ ವರ್ಗದೊಂದಿಗೆ ಹೆಚ್ಚು ಹೆಚ್ಚು ಗುರುತಿಸಿಕೊಂಡರು. ಉಳಿದವರು ಮನವಾಗಿ ನಡೆಯುತ್ತಿರುವ ರಾಜಕೀಯ ಸ್ಥಿತ್ಯಂತರಗಳನ್ನು ಗಮನಿಸುತ್ತಿದ್ದರು. ಆದರೆ, ವಿದೇಶಿಯರ ಆಕ್ರಮಣ, ಆಡಳಿತ ವರ್ಗ ವಸಹಾತುಶಾಹಿಗಳಿಗೆ ನೀಡುತ್ತಿರುವ ಬೆಂಬಲ ಹಾಗೂ ರಿಯಾಯ್ತಿಗಳು, ಅಧಿಕಾರ ಕೇಂದ್ರೀಕರಣ ಮತ್ತು ಪ್ರಭುತ್ವದ ಬಿಗು ಧೋರಣೆಗಳು, ಉಲೇಮಾಗಳನ್ನು ಇರಾನಿ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ದುರ್ಬಲಗೊಳಿಸಿತು. ಇದಕ್ಕಾಗಿ ಅವರು ಪ್ರಭುತ್ವದ ವಿರುದ್ಧ ಪ್ರತಿಭಟನೆಗೆ ಇಳಿದರು. ಇವೆಲ್ಲದರ ನಡುವೆ ಅವರು ಆಶಿಸುವುದು ಸ್ಟೇಟ್‌ನ ಬೆಂಬಲ. ಸ್ಟೇಟ್ ಯೋಜನೆ ರೂಪಿಸಬಾರದೆಂಬುದು ಅವರ ಕಾಳಜಿ.

ಈ ಬಗೆಯ ಅವರ ಪ್ರತಿಭಟನೆಯು, ಪ್ರಭುತ್ವದ ನಿಲುವುಗಳ ವಿರುದ್ಧವಾಗಿದ್ದು, ಸಮಾಜದ ಇತರ ಗುಂಪುಗಳ ಜೊತೆಗೆ ಸೇರಿ ಆಂದೋಲನ ನಡೆಸಲಾರಂಭಿಸಿದರು. ಚಾರಿತ್ರಿಕವಾಗಿ ಪ್ರಭುತ್ವ ದುರ್ಬಲವಾಗಿದ್ದು, ಉಲೇಮಾಗಳು ದೇಶದ ಇತರ ಬುಡಕಟ್ಟು ಸಮುದಾಯಗಳನ್ನು, ಶ್ರೇಣಿಗಳನ್ನು ಮತ್ತು ಸ್ಥಳೀಯರನ್ನು ಒಗ್ಗೂಡಿಸಿ ತಮ್ಮದೇ ನೇತೃತ್ವದಲ್ಲಿ ರಾಜಕೀಯ ಸಂಘಟನೆ ರೂಪಿಸಿಕೊಂಡರು. ಪ್ರಭುತ್ವ ರಾಜಕೀಯವಾಗಿ ದುರ್ಬಲಗೊಳ್ಳಲು ಬ್ರಿಟಿಷ್/ರಷ್ಯಾದ ನಿರಂತರ ವಸಾಹತೀಕರಣವೂ ಒಂದು ಕಾರಣ. ಆದರೆ, ಉಲೇಮಾಗಳು ಖಾಜರ ವಂಶದ ವಿರುದ್ಧ ಪ್ರತಿಭಟನೆ ಮಾಡಲು ಜನ ಸಮುದಾಯದ ಬೆಂಬಲವನ್ನು ಪಡೆದು ಬಲಿಷ್ಠಗೊಳ್ಳುತ್ತಾ ಹೋದರು.

ಹಾಗಾಗಿ ೨೦ನೆಯ ಶತಮಾನದ ಆರಂಭದಿಂದಲೇ ಇರಾನ್‌ನಲ್ಲಿ ರಾಜಕೀಯವಾಗಿ ಒಂದು ಚಾರಿತ್ರಿಕ ಬದಲಾವಣೆಯನ್ನು ಗಮನಿಸಬಹುದಾದರೂ, ಪ್ರಭುತ್ವ ಮತ್ತು ಧಾರ್ಮಿಕ ಗುಂಪುಗಳ ನಡುವಿನ ಬಿನ್ನಾಭಿಪ್ರಾಯಗಳು ಪುನಃ ಪುನಃ ಮರುಕಳಿಸುತ್ತಲೆ ಇತ್ತು. ಇದರ ಪರಿಣಾಮವಾಗಿ ಪ್ರಭುತ್ವ ತನ್ನ ಅಧಿಕಾರವನ್ನು ಮತ್ತಷ್ಟು ಬಲಪಡಿಸುವ ನೆಪದಲ್ಲಿ, ಯುರೋಪಿನ ಬಂಡವಾಳಶಾಹಿ ರಾಷ್ಟ್ರಗಳನ್ನೇ ಅವಲಂಬಿಸಿ, ಅನೇಕ ಬಗೆಯ ಅಭಿವೃದ್ದಿ ಯೋಜನೆಗಳನ್ನು ಹಮ್ಮಿಕೊಂಡು, ತಾನು ಜನಪರವಾದಿ ಎಂದು ಸಾರ್ವತ್ರಿಕವಾಗಿ ಸಮರ್ಥಿಸತೊಡಗಿತು. ಇದಕ್ಕುತ್ತರವಾಗಿ ಉಲೇಮಾಗಳು ಸಮಿಶ್ರಗೊಂಡ ಸಾಮಾಜಿಕ ಗುಂಪುಗಳ ಹೋರಾಟದಲ್ಲಿ ಮುಖಂಡತ್ವವನ್ನು ವಹಿಸಿ ರಾಜಕೀಯ ನೆಲೆಯಲ್ಲಿ ಖಾಜರ್ ಆಧಿಪತ್ಯವನ್ನು, ವಿದೇಶಿಯರ ಆಕ್ರಮಣ ಮತ್ತು ಪ್ರಭುತ್ವದ ಜನವಿರೋಧಿ ಧೋರಣೆಯಿಂದ ಇಸ್ಲಾಮಿ ಮಲ್ಯಗಳು ದುರ್ಬಲಗೊಳ್ಳುತ್ತವೆ ಎಂದು ಪ್ರತಿಭಟಿಸುತ್ತಲೇ ಮುಂದುವರಿದವು. ಈ ಬಗೆಯ ಹೋರಾಟವು ೨೦ನೆಯ ಶತಮಾನದಲ್ಲಿ ಸೈದ್ಧಾಂತಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಗಳಿಗನುಗುಣವಾಗಿ ಪರ್ಯಾಯ ಮಾರ್ಗವನ್ನು ಕಂಡುಕೊಂಡಿತು.

ಬಹುಶಃ ಈ ಕಾರಣಕ್ಕಾಗಿ ಇರಾನಿ ಪ್ರಭುತ್ವ ೧೯೧೧ ಮತ್ತು ೨೫ರ ನಡುವಿನ ಅರಾಜಕತೆಯ ವಿರುದ್ಧವಾಗಿ ರಚನೆಗೊಂಡಿರಬೇಕು. ಈ ಕಾಲಘಟ್ಟದಲ್ಲಿ ಯುರೋಪಿನ ಸಾಮ್ರಾಜ್ಯಶಾಹಿ ಚಟುವಟಿಕೆಗಳು ವೃದ್ದಿಯಾದವು. ಪ್ರಥಮ ಜಾಗತಿಕ ಸಮರದ ಹೊತ್ತಿಗೆ ನಿರ್ಧಾರದಂತೆ ರಷ್ಯಾ ಸೈನ್ಯವು ಇರಾನಿನ ಉತ್ತರದ ಪ್ರಾಂತಗಳನ್ನು ಆಕ್ರಮಿಸಿಕೊಂಡವು. ಬ್ರಿಟಿಷ್ ಸೈನ್ಯವು ದಕ್ಷಿಣ ಭಾಗದಲ್ಲಿ ಸಜದವು. ೧೯೧೭ರ ರಷ್ಯಾ ಕ್ರಾಂತಿಯಿಂದ, ಉತ್ತರದಲ್ಲಿ ರಷ್ಯಾದ ಅಸ್ತಿತ್ವ ದುರ್ಬಲಗೊಂಡ ಹಿನ್ನೆಲೆಯಲ್ಲಿ, ಬ್ರಿಟಿಷರು ಇಡೀ ಇರಾನಿನಲ್ಲಿ ಏಕಸ್ವಾಮಿತ್ವವನ್ನು ಹೇರಿದರು. ೧೯೧೯ರ ಆಂಗ್ಲೋ-ಇರಾನಿ ಒಪ್ಪಂದದಂತೆ, ಇಡೀ ಇರಾನ್ ಬ್ರಿಟಿಷರ ರಕ್ಷಣಾವ್ಯೂಹಕ್ಕೆ ಒಳಪಟ್ಟಿತು. ಈ ಒಪ್ಪಂದದಂತೆ ಬ್ರಿಟಿಷರು ಇರಾನಿನ ಸೈನ್ಯಕ್ಕೆ ತರಬೇತಿದಾರರಾದರು. ಅಲ್ಲಿನ ಆರ್ಥಿಕ ಅಭಿವೃದ್ದಿಗೆ ಬೇಕಾದ ಹಣಕಾಸು ಹೂಡಿಕೆಯ ಹಕ್ಕನ್ನು ಪಡೆದರು ಮತ್ತು ತಂತ್ರಜ್ಞಾನದ ವೃದ್ದಿಗೆ ಸಲಹೆಗಾರರಾಗಿ ಕಾರ್ಯಪ್ರವೃತ್ತರಾಗುತ್ತಾರೆ.

ಈ ನಡುವೆ ಸೋವಿಯತ್ ಒಕ್ಕೂಟ ಹಿಂದಿನ ಝಾರ್ ಸರಕಾರ ಮಾಡಿರುವ ಅನಾಹುತಗಳಿಗೆ ಯಾವುದೇ ಗೌರವ ಕೊಡದೆ ವಿದೇಶಾಂಗ ನೀತಿಯನ್ನು ರಚಿಸಿತು. ಬಾಹ್ಯವಾಗಿ ಯಾವುದೇ ಪ್ರದೇಶದ ಮೇಲೆ ವಸಾಹತುಶಾಹಿ ಆಸಕ್ತಿಗಳನ್ನು ತೋರಿಸುವುದಿಲ್ಲ. ರಷ್ಯಾ ಸರಕಾರದ ಆರ್ಥಿಕ ಸಂಪನ್ಮೂಲಗಳ ಲೂಟಿಗೂ ಯಾವುದೇ ಒತ್ತನ್ನು ನೀಡು ವುದಿಲ್ಲ. ಬದಲಾಗಿ ಎಲ್ಲ ಬಗೆಯ ವಸಾಹತುಶಾಹಿ ವಿರೋಧಿ ರಾಷ್ಟ್ರೀಯ ಚಳವಳಿಗಳನ್ನು ಬೆಂಬಲಿಸುವ ನಿಲುವನ್ನು ಪ್ರಕಟಿಸಿತು. ಸೈದ್ಧಾಂತಿಕ, ಆರ್ಥಿಕ, ತಾಂತ್ರಿಕ ಮತ್ತು ಸೈನಿಕ ಬೆಂಬಲವನ್ನು ನೀಡುವ ಆಶ್ವಾಸನೆಯನ್ನು ನೀಡಿತು. ಇರಾನಿನಲ್ಲಿ ಮುಖ್ಯವಾಗಿ ಬ್ರಿಟಿಷ್ ಬಂಡವಾಳಶಾಹಿಗಳನ್ನು ಸದೆಬಡಿಯಲು ಮತ್ತು ಹೊಸತಾಗಿ ಉತ್ತರ ಇರಾನ್‌ನಲ್ಲಿ ಬ್ರಿಟಿಷ್ ಭದ್ರಪಡಿಸಿಕೊಂಡ ಬ್ರಿಟಿಷ್ ವಸಾಹತುಶಾಹಿ ಪ್ರಭುತ್ವದ ವಿರುದ್ಧ ಇರಾನಿಯರನ್ನು ಸಂಘಟಿಸುವ ನೆಪದಲ್ಲಿ, ಸೋವಿಯತ್ ಒಕ್ಕೂಟ ಉತ್ತರ ಇರಾನ್‌ನ ಜಿಲಾನ್, ಅಝರ್ ಬೈದಾನ್, ತಾಬ್ರೀಜ್ ಮತ್ತು ತೆಹರಾನ್ ಪ್ರಾಂತಗಳಲ್ಲಿ ಆರಂಭವಾದ ಪ್ರತ್ಯೇಕ ವಾದಿ ಚಳವಳಿಗಳನ್ನು ಬೆಂಬಲಿಸತೊಡಗಿತು. ಈ ಚಳವಳಿಗಳನ್ನು ಕಮ್ಯುನಿಸ್ಟ್ ಪಾರ್ಟಿ ನೇತೃತ್ವದಲ್ಲಿ ಯೋಜಿಸಲಾಗಿತ್ತು. ಇದಕ್ಕೆ ಪೂರಕವೆಂಬಂತೆ ೧೯೨೧ರಲ್ಲಿ ಇರಾನ್ ಮತ್ತು ಸೋವಿಯತ್ ಯೂನಿಯನ್ ಒಪ್ಪಂದಕ್ಕೆ ಸಹಿ ಹಾಕಿದವು. ಅದರ ಉದ್ದೇಶಗಳು ಇರಾನ್ ಪರವಾಗಿದ್ದವು. ಝಾರ್ ರಷ್ಯಾ, ಜಿಲಾನ್‌ನಲ್ಲಿ ರಚಿಸಿದ ವಸಾಹತುಶಾಹಿ ಪ್ರಭುತ್ವವನ್ನು ಸೋವಿಯತ್ ಒಕ್ಕೂಟ ಹಿಂದಕ್ಕೆ ಪಡೆಯಿತು. ಇರಾನ್‌ಗೆ ರಷ್ಯಾ ನೀಡಿರುವ ಎಲ್ಲ ಸ್ವರೂಪದ ಸಾಲವನ್ನು ಮನ್ನಾ ಮಾಡಿತು. ಆದರೆ ಕ್ಯಾಸ್ಪಿಯನ್ ಸಮುದ್ರದಲ್ಲಿ ರಷ್ಯಾ ಪಡೆದಿರುವ ಮೀನುಗಾರಿಕಾ ಹಕ್ಕನ್ನು ಸೋವಿಯತ್ ಒಕ್ಕೂಟ ಉಳಿಸಿಕೊಂಡಿತು. ಜೊತೆಗೆ ಇರಾನ್ ಒಳಗೆ ಇತರ ಬಂಡವಾಳಶಾಹಿ ರಾಷ್ಟ್ರ ವಸಾಹತುಶಾಹಿ ಹೆಸರಿನಲ್ಲಿ ಪ್ರವೇಶ ಮಾಡಿದರೆ ಅದನ್ನು ಪ್ರತಿಭಟಿಸುವ ಹಕ್ಕನ್ನು ಸೋವಿಯತ್ ಒಕ್ಕೂಟ ಪಡೆಯಿತು.

ಸೋವಿಯತ್ ಒಕ್ಕೂಟದೊಂದಿಗೆ ಇರಾನ್ ಮಾಡಿಕೊಂಡ ಲಾಭದಾಯಕ ಒಪ್ಪಂದ ದಿಂದ ಬೀಗಿಕೊಂಡ ಸರಕಾರ ೧೯೧೯ರಲ್ಲಿ ಬ್ರಿಟನ್ ಜೊತೆಗೆ ಮಾಡಿಕೊಂಡ ಒಪ್ಪಂದ ವನ್ನು ತಿರಸ್ಕರಿಸಿತು.

ಆಂತರಿಕವಾಗಿ, ಇರಾನ್ ರಾಜಕೀಯ ಅರಾಜಕತೆಯನ್ನು ಎದುರಿಸುತ್ತಿತ್ತು. ಖಾಜರ್ ದೊರೆಗಳು, ದೇಶೀಯ ದಂಗೆಗಳನ್ನು ಮತ್ತು ವಿದೇಶಿಯರ ಪ್ರವೇಶವನ್ನು ಹತ್ತಿಕ್ಕಲು ಸಫಲರಾಗಲಿಲ್ಲ. ಇದನ್ನೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸೈನ್ಯದ ಮುಖಂಡ ಮತ್ತು ರಕ್ಷಣಾ ಮಂತ್ರಿ ರೇಜಖಾನ್ ಜಾಗೃತವಾಗುತ್ತಾನೆ. ಸೈನ್ಯ ಮತ್ತು ಪೊಲೀಸ್ ವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧಿಸುತ್ತಾನೆ. ಎಲ್ಲ ತರದ ಬುಡಕಟ್ಟು ಜನಾಂದ ಮತ್ತು ಪ್ರಾಂತೀಯ ದಂಗೆಗಳನ್ನು ಸದೆಬಡಿಯುತ್ತಾನೆ. ದೇಶದ ಬಹುತೇಕ ಭಾಗಗಳನ್ನು ಸೈನ್ಯದ ಹಿಡಿತಕ್ಕೆ ಸೇರಿಸುತ್ತಾನೆ. ಮತ್ತು ೧೯೨೫ರಲ್ಲಿ ಕಾನೂನುಬದ್ಧವಾಗಿ ಇರಾನ್‌ನ ಅರಸೊತ್ತಿಗೆಯ ಹರಿಕಾರನೆಂದು ಘೋಷಿಸಿಕೊಂಡು ಹೊಸ ರಾಜಕೀಯ ರಚನೆಯನ್ನು ಪಹಲವಿ ವಂಶದ ಮುಖಂಡತ್ವದಲ್ಲಿ ಸ್ಥಾಪಿಸಲು ಯಶಸ್ವಿಯಾಗುತ್ತಾನೆ. ಈ ವಂಶ ೧೯೭೯ರವರೆಗೂ ಅಧಿಕಾರದಲ್ಲಿ ಮುಂದುವರಿಯಿತು.

ಇರಾನ್‌ನ ರಾಷ್ಟ್ರೀಯವಾದಿ ಹೋರಾಟದ ಒಂದು ಹಂತ ಇಲ್ಲಿಗೆ ಮುಗಿಯಿತು. ಆದರೆ, ಇನ್ನೊಂದು ಹಂತದ ಹೋರಾಟದ ಅನಿವಾರ್ಯತೆಯ ಇರಾನಿಯರ ಮುಂದಿತ್ತು. ಅದಕ್ಕೆ ವೇದಿಕೆಯನ್ನು ನಿರ್ಮಾಣ ಮಾಡಿರುವುದು ೧೯೨೫ರ ನಂತರದ ಘಟನೆಗಳು.

ಪಹಲವಿ ವಂಶಾಡಳಿತದ ಅವಧಿಯಲ್ಲಿ ಇರಾನ್‌ನಲ್ಲಿ ಮೊತ್ತ ಮೊದಲ ಬಾರಿಗೆ ಒಂದು ಭದ್ರ ಕೇಂದ್ರೀಕೃತ ಸರಕಾರ ರಚನೆಗೊಂಡಿತು. ರಾಜ್ಯವು, ರಾಷ್ಟ್ರೀಯತ್ವ ಮತ್ತು ಸೈದ್ಧಾಂತಿಕ ನಿಲುವುಗಳನ್ನು ಪ್ರತಿಪಾದಿಸಿ ಜನಬೆಂಬಲ ಪಡೆದು ಅವರ ನಿರೀಕ್ಷೆಗನುಗುಣವಾದ ಸುಧಾರಣೆಯನ್ನು ಅನುಷ್ಠಾನಗೊಳಿಸಲು ಪಣ ತೊಟ್ಟಿತ್ತು. ವಿಶೇಷವಾಗಿ, ಇರಾನ್‌ನಲ್ಲಿ ಆರ್ಥಿಕ ಆಧುನೀಕರಣ ಮತ್ತು ಸಾಂಸ್ಕೃತಿಕ ರಂಗದಲ್ಲಿ ಪಾಶ್ಚಾತ್ಯೀಕರಣವನ್ನು ಬೆಂಬಲಿಸುವ ಯೋಜನೆಗಳನ್ನು ರೂಪಿಸಲಾಯಿತು. ಹಲವು ಶತಮಾನಗಳ ನಂತರ ಕೇಂದ್ರ ಸರಕಾರದ ಅಧೀನಕ್ಕೆ ಬುಡಕಟ್ಟು ಸಮಾಜಗಳು ಮತ್ತು ಉಲೇಮಾಗಳು ಒಳಪಟ್ಟವು. ಅರಸೊತ್ತಿಗೆಯ ಅಧಿಕಾರವನ್ನು ಪಡೆದ ರೇಝಾ ಶಾಹನು ರಾಷ್ಟ್ರಮಟ್ಟದ ಸೈನ್ಯವನ್ನು ರಚಿಸಲು ಹೆಚ್ಚು ಆದ್ಯತೆ ನೀಡಿದನು. ಖಾಜರ್ ಕಾಲದಲ್ಲಿ ಸೈನಿಕ ಸುಧಾರಣೆಗಳಿಗೆ ಒಲವು ತೋರಲಾಗಿತ್ತಾ ದ್ದರೂ, ಅದು ಹತ್ತು ಹಲವು ಸೈನಿಕ ತುಕ್ಕಡಿಗಳ ನಡುವೆ ಸ್ಪರ್ಧಾ ಮನೋಭಾವನೆಯನ್ನು ಹುಟ್ಟು ಹಾಕಿತ್ತು. ಇದಕ್ಕೆ ವಿರುದ್ಧವಾಗಿ, ರೇಝಾ ಶಾಹ ಬಲಿಷ್ಠ ರಾಷ್ಟ್ರ ಸೈನ್ಯವನ್ನು ಸಜ್ಜುಗೊಳಿಸಿದನು. ಫ್ರೆಂಚ್ ತಂತ್ರಜ್ಞಾನವನ್ನೊಳಗೊಂಡ ಸೈನಿಕ ಪುನಾರಚನೆಗೆ ಹೆಚ್ಚು ಒತ್ತು ಕೊಟ್ಟು ಫ್ರೆಂಚ್ ಅಧಿಕಾರಿಗಳಿಂದ ತರಬೇತಿ ನೀಡಲಾರಂಭಿಸಲಾಯಿತು. ಬಜೆಟ್ ನಿಂದ ಸುಮಾರು ೩೩ ಶೇಕಡಾ ಆದಾಯವನ್ನು ಸೈನ್ಯಾಭಿವೃದ್ದಿಗೆ ಮೀಸಲಿಡಲಾಯಿತು. ಸೈನ್ಯವನ್ನು ಪಶ್ಚಿಮದ ತಂತ್ರಜ್ಞಾನವನ್ನವಲಂಬಿಸಿ ರಚನೆಗೊಳಿಸಲು ಪ್ರಯತ್ನಿಸಲಾಯಿತು. ಅಭಿವೃದ್ದಿ ಕಾರ್ಯಕ್ರಮಗಳು ದುಬಾರಿ ಯಾದುದರಿಂದ ಸಂಪನ್ಮೂಲವನ್ನು ಕ್ರೋಡೀಕರಿಸುವ ಉದ್ದೇಶದಿಂದ ತೈಲ ಸಂಪತ್ತನ್ನೆ ಅವಲಂಬಿಸಲಾಯಿತು ಮತ್ತು ತೈಲ ಆದಾಯವನ್ನು ದ್ವಿಗುಣಗೊಳಿಸಲಾಯಿತು. ಆದಾಗ್ಯೂ, ರಷ್ಯಾ ಮತ್ತು ಬ್ರಿಟನ್ ೧೯೪೧ರಲ್ಲಿ ಇರಾನ್ ಒಳಗೆ ಪ್ರವೇಶಿಸುವುದನ್ನು ಇರಾನ್ ಸೇವೆ ತಡೆಯಲು ಸಾಧ್ಯವಾಗಲಿಲ್ಲ.