ಭೂಸುಧಾರಣೆಗೆ ಸಂಬಂಧಿಸಿ ವೈಟ್ ರೆವಲ್ಯೂಷನ್ ಹೆಚ್ಚು ಉಲ್ಲೇಖನಾರ್ಹ. ಇರಾನ್‌ನಲ್ಲಿ ಮೂಲತಃ ಭೂಮಾಲೀಕತ್ವ ಕಡಿಮೆ ಕುಟುಂಬಗಳಿಗೆ ಸೀಮಿತವಾಗಿತ್ತು. ರೈತರಿಗೆ ಈ ಹಕ್ಕನ್ನು ಅನುಭವಿಸುವ ಅವಕಾಶ ತೀರ ವಿರಳವಾಗಿತ್ತು. ರೈತರು ಹೆಚ್ಚಾಗಿ ದುಡಿಮೆಗಾರರು ಉತ್ಪಾದನೆಯಲ್ಲಿ ಕೇವಲ ಪಾಲುದಾರರಷ್ಟೇ ಆಗಿದ್ದರು. ನಂತರ ೧೯೬೨-೬೪ ಮತ್ತು ೧೯೬೮ರಲ್ಲಿ ಹೊಸ ಭೂ ಕಾಯ್ದೆಯಡಿಯಲ್ಲಿ ಹೆಚ್ಚುವರಿ ಭೂಮಿಯಲ್ಲಿ ಸಣ್ಣ ಭೂಹಿಡುವಳಿದಾರರು ಮತ್ತು ರೈತರೂ ಕೂಡ ಕಾನೂನಿನಡಿಯಲ್ಲಿ ನೊಂದಾಯಿಸಿ ಕೊಳ್ಳಬೇಕಾಯಿತು. ಇದನ್ನು ಅನುಸರಿಸಿ ಒಂದಷ್ಟು ಹೆಚ್ಚುವರಿ ಭೂಮಿಯನ್ನು ಸ್ಟೇಟ್ ಒತ್ತುವರಿ ಮಾಡಿಕೊಂಡರೂ, ಸಮರ್ಪಕವಾಗಿ ರೈತರಿಗೆ ಅದರ ಮರುಹಂಚಿಕೆ ಸಾಧ್ಯ ಆಗಿರಲಿಲ್ಲ. ಹೀಗೆ ಉಗಮವಾದ ಹೊಸ ಭೂಮಾಲೀಕರಲ್ಲಿ ತಮಗೆ ನೀಡಿದ ಭೂಮಿಯನ್ನು ಅಭಿವೃದ್ದಿಪಡಿಸಲು ಬಂಡವಾಳದ ಕೊರತೆಯೂ ಇತ್ತು. ಜೊತೆಗೆ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಅಭಾವ, ಸಂಘಟನೆಯ ಕೊರತೆಯೂ ಅವರಲ್ಲಿತ್ತು. ಇದಲ್ಲದೆ, ಸರಕಾರ ನೀಡುವ ಸೇವೆಯಿಂದ ಉತ್ಪಾದನೆಯನ್ನು ವೃದ್ದಿಸುವ ಅನಿವಾರ್ಯತೆ ಅವರ ಮುಂದಿತ್ತು. ಭೂಮಿ ಇಲ್ಲದ ಜನತೆಗೆ ಹೊಸದಾಗಿ ಭೂಮಿ ಕೊಳ್ಳಲು ಹಣದ ಅವಶ್ಯಕತೆ ಇತ್ತು. ಆಧುನೀಕರಣದಿಂದ ಕೃಷಿ ಸಮಾಜದಲ್ಲಿ ದುಡಿಮೆಗೆ ಅವಕಾಶಗಳು ದುರ್ಬಲಗೊಂಡ ಹಿನ್ನೆಲೆಯಲ್ಲಿ, ಅವರು ಪಟ್ಟಣಕ್ಕೆ ವಲಸೆ ಹೋಗಲಾರಂಭಿಸಿ ದರು. ಆ ನಂತರ ಬಂದ ಭೂಮಸೂದೆಯು ರೈತರ ಪರವಾಗಿರಲಿಲ್ಲ. ಏಕೆಂದರೆ, ಸ್ವಲ್ಪ ರೈತರು ಭೂಮಾಲೀಕತ್ವ ಹೊಂದಲು ಅವಕಾಶ ಕಲ್ಪಿಸಿದರೂ ಕೂಡ, ಭೂಮಿಯನ್ನೆ ಅವಲಂಬಿಸಿ ತಮ್ಮ ಜೀವನ ರೂಪಿಸಲು ಬೇಕಾದಷ್ಟು ಭೂಮಿ ಅವರಿಗೆ ಲಭ್ಯವಿರಲಿಲ್ಲ.

ನಿಜವಾಗಿ ಹೇಳುವುದಾದರೆ, ರೇಜ ಶಾಹನ ಮುಖ್ಯ ಉದ್ದೇಶ ಕೃಷಿ ಕೇಂದ್ರಿತ ಸುಧಾರಣೆಗಳಿಂದ ರಾಜ್ಯ ಒಡಂಬಡಿಕೆಯಲ್ಲಿ ದೊಡ್ಡ ಪ್ರಮಾಣದ ಕೃಷಿ ತೋಟಗಳನ್ನು ರಚಿಸುವುದು ಮತ್ತು ಖಾಸಗಿ ಕೃಷಿ ವ್ಯವಹಾರವನ್ನು ಬೆಂಬಲಿಸುವುದು. ಈ ರೀತಿಯ ಫಾರ್ಮ್ ಕಾರ್ಪೋರೇಶನ್‌ಗಳನ್ನು ಸ್ಥಾಪಿಸುವಾಗ ರೈತರು ತಮ್ಮಲ್ಲಿದ್ದ ಭೂಮಿಯನ್ನು ಒಟ್ಟಾಗಿ ಬಳಸುವುದು ಮತ್ತು ದೊಡ್ಡ ಉದ್ದಿಮೆಗಳಲ್ಲಿ ಬಂದ ಲಾಭ ಹಂಚಿಕೊಳ್ಳುವುದು ಅನಿವಾರ್ಯವಾಗಿತ್ತು. ಜೊತೆಗೆ ಯಂತ್ರ ಬಳಕೆಯೂ ಹೆಚ್ಚಿದ್ದರಿಂದ ಒಂದಷ್ಟು ರೈತರು ಕೃಷಿ ಚಟುವಟಿಕೆ ಮತ್ತು ಭೂಮಿಯಿಂದ ದೂರವಾಗುವ ಪರಿಸ್ಥಿತಿಯೂ ಇತ್ತು. ಖಾಸಗಿ ಕೃಷಿ ವ್ಯವಹಾರ ಮತ್ತು ಹೆಚ್ಚು ವಿದೇಶಿ ಬಂಡವಾಳದ ಪ್ರವೇಶದಿಂದ, ಬಂಡವಾಳಶಾಹಿ ಕೇಂದ್ರಿತ, ಯಾಂತ್ರೀಕೃತ ಉದ್ದಿಮೆಯು ಕೂಡ ರೈತರನ್ನು ಭೂಮಿಯಿಂದ ದೂರ ಮಾಡಿತು. ಹಾಗಾಗಿ, ಯಾಂತ್ರೀಕೃತ ಕೃಷಿ ಚಟುವಟಿಕೆಗೆ ಮತ್ತು ಬಂಡವಾಳಶಾಹಿಗೆ ಪೂರಕವಾದ ಕೃಷಿ ವ್ಯವಹಾರದಿಂದ ಅನೇಕರು ದುಡಿಮೆ ಇಲ್ಲದೆ ಚಿಂತಾಜನಕ ಪರಿಸ್ಥಿತಿ ಎದುರಿಸುವಂತಾಯಿತು. ಇದರಿಂದ ಬಹುತೇಕ ಗ್ರಾಮೀಣ ಜನರು ಪಟ್ಟಣದತ್ತ ಕೆಲಸ ಹುಡುಕಿಕೊಂಡು ವಲಸೆ ಹೋಗುವಂತಾಯಿತು.

ಇಡೀ ಕೃಷಿ ಅವಲಂಬಿತ ಸಮಾಜವೇ ಕುಸಿಯಲಾರಂಭಿಸಿತು. ೧೯೬೦ರ ಮತ್ತು ೭೦ ದಶಕಗಳಲ್ಲಿ ಹೆಚ್ಚು ಹೆಚ್ಚು ಕೈಗಾರಿಕಾ ಅಭಿವೃದ್ದಿಗೆ ಇರಾನ್ ಸರಕಾರ ಒತ್ತು ಕೊಟ್ಟಿತು. ಪರಿಣಾಮವಾಗಿ ಮತ್ತು ಮೊದಲ ಬಾರಿಗೆ ಇರಾನ್, ಕೈಗಾರಿಕಾ ರಂಗದಲ್ಲಿ ಹೆಚ್ಚು ಬದಲಾವಣೆಯನ್ನು ಅನುಭವಿಸಲಾರಂಭಿಸಿತು. ಪ್ರಭುತ್ವವೇ ಮುಂದಾಗಿ, ಬಂಡವಾಳ ಹೂಡಿಕೆಯಲ್ಲಿ ಪಾಲ್ಗೊಂಡ ಕಾರಣ ಅರ್ಧಕ್ಕೆ ಅರ್ಧದಂಶ ಬಂಡವಾಳ ಕೈಗಾರಿಕಾ ರಂಗಕ್ಕೆ ತೊಡಗಿಸಲಾಯಿತು. ಅನೇಕ ಬಗೆಯ ಕೈಗಾರಿಕೆಗಳು, ಕಾರ್ಖಾನೆಗಳು ತೆರೆಯಲ್ಪಟ್ಟವು. ಸ್ಟೀಲ್, ರಬ್ಬರ್, ಕೆಮಿಕಲ್ಸ್, ಕಟ್ಟಡ ಸಾಮಗ್ರಿಗಳನ್ನು ತಯಾರಿಸುವ ಘಟಕಗಳು ಮತ್ತು ಅಟೋಮೊಬೈಲ್ ಕೈಗಾರಿಕೆಗಳು ಹೆಚ್ಚು ಪ್ರೋ ಪಡೆದವು. ೧೯೭೩ರ ನಂತರ ತೈಲ ಉತ್ಪಾದನೆಯಲ್ಲೂ ವೃದ್ದಿಯಾಗಿದ್ದು, ಅದರಿಂದ ಖಜನೆಗೆ ಬರುವ ಆದಾಯದ ಪ್ರಮಾಣ ದ್ವಿಗುಣಗೊಂಡಿತು. ಆದಾಗ್ಯೂ, ಸಮರ್ಪಕವಾದ ಮ್ಯಾನೇಜ್‌ಮೆಂಟ್ ಮತ್ತು ತರಬೇತಿ ಹೊಂದಿದ ಹಾಗೂ ಶಿಕ್ಷಣ ಪಡೆದು ದುಡಿಯುವವರ ಸಂಖ್ಯೆ ಹೆಚ್ಚಿರದ ಕಾರಣ ಇರಾನ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ದುಬಾರಿ ಯಂತ್ರಗಳ ಖರೀದಿ, ಶಸ್ತ್ರಾಸ್ತ್ರಗಳ ಆಮದು ಮತ್ತು ಕೃಷಿ/ಕೈಗಾರಿಕೆಗಳಿಂದ ಆದಾಯದ ಪ್ರಮಾಣದಲ್ಲಿ ಇಳಿಮುಖ, ಇತ್ಯಾದಿ ಸಮಸ್ಯೆಗಳಿಂದ ಇರಾನ್‌ನಲ್ಲಿ ಹಣದುಬ್ಬರ ತಲೆ ಎತ್ತಿತ್ತು.

೨೦ನೆಯ ಶತಮಾನದ ಆರಂಭದಿಂದಲೂ, ಮಹಿಳೆಯರ ವಿಮೋಚನೆಗೆ ಸಂಬಂಧಿಸಿ ಅನೇಕ ಯೋಜನೆ ರೂಪಿಸಿರುವುದು ಸತ್ಯ. ಆದರೆ, ೧೯೫೦ರ ನಂತರ ಸರಕಾರ ಈ ದಿಕ್ಕಿನಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಯಿತು. ಮಹಿಳೆಯರಿಗೆ ಶಿಕ್ಷಣ, ಮತ ಚಲಾವಣೆ ಹಕ್ಕು, ಸರಕಾರಿ ಕಚೇರಿಗಳಲ್ಲಿ ನೌಕರಿ ಇತ್ಯಾದಿ ಅವಕಾಶಗಳನ್ನು ನೀಡಿರುವುದು, ಸಾಮಾಜಿಕ ನೆಲೆಯಲ್ಲಿ ಒಂದು ಕ್ರಾಂತಿಯನ್ನೇ ಮಾಡಿತು. ಸಮಾನತೆಯನ್ನು ಎತ್ತಿ ಹಿಡಿದು ನಾಗರಿಕ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿಯಾಯಿತು.

ಈ ಎಲ್ಲ ಆಧುನೀಕರಣ ಮತ್ತು ಆರ್ಥಿಕ ಅಭಿವೃದ್ದಿಯನ್ನು ಉದ್ದೇಶಿಸಿ ಕೈಗೊಂಡ ಸುಧಾರಣೆಗಳು, ೧೯೭೦ರ ದಶಕದಲ್ಲಿ ಉತ್ತಮ ಫಲಿತಾಂಶ ನೀಡಲಾರಂಭಿಸಿತು. ಸಾಮಾಜಿಕ ಗುಂಪುಗಳು ರಚನೆಯಾದವು. ಅವುಗಳಲ್ಲಿ ಆಧುನಿಕ ಶಿಕ್ಷಣ ಪಡೆದ ಪ್ರಗತಿಪರರು, ಚಿಂತಕರು, ಅಧಿಕಾರಿಗಳು, ಸೈನ್ಯಾಧಿಕಾರಿಗಳು ಮತ್ತು ಸೈನಿಕರು, ವ್ಯವಹಾರಡಳಿತದಲ್ಲಿ ತರಬೇತಿ ಹೊಂದಿದವರು, ತರಬೇತಿ ಹೊಂದಿದ ಕೂಲಿ ಕಾರ್ಮಿಕರು, ರೈತರು, ಇತ್ಯಾದಿ ವರ್ಗಗಳು, ಆಧುನಿಕ ವ್ಯವಸ್ಥೆಯ ಹರಿಕಾರರಾಗಿ ಬೆಳಕಿಗೆ ಬಂದರು. ಇದರ ಜೊತೆಗೆ, ಶಾಹನ ಅರಸೊತ್ತಿಗೆಯ ನಿರಂಕುಶಾಡಳಿತವನ್ನು ತೀವ್ರತರನಾಗಿ ತರಾಟೆಗೆ ಈ ವರ್ಗಗಳು ತೆಗೆದುಕೊಂಡವು. ಮುಖ್ಯವಾಗಿ ಉಲೇಮಾಗಳು, ವರ್ತಕರು, ಕರಕುಶಲಕರ್ಮಿಗಳು, ಎಡಪಂಥೀಯ ಚಿಂತಕರು ಈ ಹೋರಾಟದ ಮಂಚೂಣಿಯಲ್ಲಿದ್ದರು. ಅವರು ನಡೆಸಿದ ಹೋರಾಟವು ರೇಜ ಶಾಹನು ವಿದೇಶಿಯರನ್ನು ಹೆಚ್ಚು ಹೆಚ್ಚು ಅವಲಂಬಿಸಿ, ತನ್ನ ಅಧಿಕಾರವನ್ನು ಕೇಂದ್ರೀಕರಿಸಿಕೊಂಡ ವಿರುದ್ಧವಾಗಿ ಆಧುನೀಕರಣದ ಹೆಸರಿನಲ್ಲಿ ರೈತರನ್ನು ಇಕ್ಕಟ್ಟಿಗೆ ದೂಡಿದ ಕ್ರಮಗಳನ್ನು ಖಂಡಿಸುವುದು. ಕೆಳಮಧ್ಯಮ ವರ್ಗಗಳಿಗೆ ಪ್ರತಿಕೂಲ ವಾತಾವರಣ ನಿರ್ಮಾಣ ಮಾಡಿರುವುದನ್ನು ವಿರೋಧಿಸುವುದು ಮತ್ತು ಕೊನೆಯದಾಗಿ, ಅವರು ಶಾಹನ ನಿರಂಕುಶಾಡಳಿತದ ವಿರುದ್ಧ ಕಿಡಿಕಾರಿದರು.

೧೯೬೦ರ ಮತ್ತು ೭೦ರ ದಶಕಗಳಲ್ಲಿ, ಇಂತಹ ಅನೇಕ ಹೋರಾಟಗಳು ನಡೆದಿದ್ದವು. ಕುರ್ದಿ ಜನಾಂಗದವರು ಟ್ಯೂಡ ಪಾರ್ಟಿ ಮೂಲಕವೂ ಶಾಹನ ದೋರಣೆಗಳನ್ನು ವಿರೋಧಿಸಿದ್ದರು. ಆದರೆ, ಅವೆಲ್ಲವನ್ನು ಅರಸೊತ್ತಿಗೆ ತನ್ನ ಪುನಾರಚಿಸಿದ ಶಸ್ತ್ರಸಜ್ಜಿತ ಸೇನೆಯಿಂದ ದಮನಿಸಿತ್ತು. ಮಿಲಿಟೆಂಟ್ ಗೆರಿಲ್ಲಾ ಗುಂಪುಗಳು ಮುಖ್ಯವಾಗಿ, ಮಾರ್ಕ್ಸ್‌ವಾದಿ ಪೆದೈಯನ್ ಇ-ಕಾಲ್ಕ ಮತ್ತು ಎಡಪಂಥೀಯ ಮೊಜಬೆದಿನ್- ಇ-ಬಾಲ್ಕ ಗುಂಪುಗಳು ಇಸ್ಲಾಂ ಶಿಯಾವಾದದ ಹೆಸರಿನಲ್ಲಿ ನಿರಂಕುಶ ಪ್ರಭುತ್ವ, ಸಾಮ್ರಾಜ್ಯಶಾಹಿವಾದ ಮತ್ತು ಬಂಡವಾಳಶಾಹಿವಾದವನ್ನು ಹತ್ತಿಕ್ಕುವ ಉದ್ದೇಶವನ್ನಿಟ್ಟುಕೊಂಡು ಚಳವಳಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಆರಂಭಿಸಿದರು. ಇಂತಹ ಸರಕಾರಿ ವಿರೋಧಿ ಚಟುವಟಿಕೆಗಳಿಂದ, ರೇಝೊ ಶಾಹನ ಪ್ರಭುತ್ವವನ್ನು ಅಲ್ಲಾಡಿಸಲಾಗಲಿಲ್ಲ. ಬದಲಾಗಿ, ಸರಕಾರವು ಈ ಗುಂಪುಗಳ ಚಟುವಟಿಕೆಗಳಿಗೆ ಮತ್ತಷ್ಟು ಕಡಿವಾಣ ಹಾಕಲಾರಂಭಿಸಿತು.

ಈ ಕಾಲಘಟ್ಟದಲ್ಲಿ ಉಲೇಮಾಗಳು ಅತ್ಯಂತ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿಕೊಂಡಿದ್ದರು. ೧೯೪೦ರ ದಶಕದಿಂದಲೇ ಇರಾನಿನ ರಾಜಕೀಯ ಸ್ಥಿತ್ಯಂತರವು, ಅವರನ್ನು ರಾಜಕೀಯ ಅಂದೋಲನದ ಮಂಚೂನಿಯಲ್ಲಿ ಗುರುತಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು. ೧೯೪೮-೧೯೫೩ರ ನಡುವಿನ ವರ್ಷಗಳಲ್ಲಿ ಇಂತಹ ಪೂರಕ ವಾತಾವರಣವನ್ನೇ ಬಳಸಿ ಕೊಂಡು ಬೀದಿಗಿಳಿದ ಪ್ರವಾದಿಗಳನ್ನು ಮತ್ತು ಕೆಳಹಂತದಲ್ಲಿದ್ದ ಉಲೇಮಾಗಳ ಬೆಂಬಲ ಪಡೆದು ಆಯತುಲ್ಲಾ ಕೊಮೇನಿಯ ನೇತೃತ್ವದಲ್ಲಿ ನಿರಂಕುಶ ಪ್ರಭುತ್ವದ ವಿರುದ್ಧ ಪ್ರತಿಭಟಿಸಿದ್ದರು. ಹಾಗೆಯೇ ತೈಲ ಕೈಗಾರಿಕೆಯ ರಾಷ್ಟ್ರೀಕರಣದ ಪರವಾಗಿದ್ದು, ಬ್ರಿಟಿಷ್ ಮತ್ತು ಸಾಮ್ರಾಜ್ಯಶಾಹಿ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ೧೯೫೧ರಲ್ಲಿ ಮಸಾದಿಕ್‌ನ ನೇತೃತ್ವದ ಸರಕಾರಕ್ಕೆ ಬೆಂಬಲ ಸೂಚಿಸಿದ್ದರೂ, ಆಯತುಲ್ಲಾ ಕೊಮೇನಿಯ ೧೯೫೩ರಲ್ಲಿ ಮೊಸಾದಿಕ್ ಅರಸೊತ್ತಿಗೆ ಪರವಾಗಿ ನಿಂತು, ಆಗಿರುವ ಗೊಂದಲ ನಿವಾರಣೆ ಮಾಡಲು ಶ್ರಮಿಸಿದ್ದರು.

ಆದರೆ ಮಹಮ್ಮದ್ ಮೊಸಾದಿಕ್‌ನ ಪದಚ್ಯುತಿಯಿಂದ ಉಲೇಮಾಗಳು, ಹೆಚ್ಚಾಗಿ ಪ್ರಭುತ್ವದೊಂದಿಗೆ ಗುರುತಿಸಿಕೊಳ್ಳುತ್ತಾರೆ. ಸರಕಾರವು ಕೂಡ ಉಲೇಮಾಗಳಿಂದ ಬರಬಹುದಾದ ವಿರೋಧವನ್ನು ತಡೆಯಲು ಅವರಿಗೆ ಪೂರಕವಾಗಿ ಮತ್ತು ಅವರನ್ನು ಸಮಾಧಾನಪಡಿಸಿದ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ. ನ್ಯಾಯಾಂಗದಲ್ಲಿ ಅವರಿಗೆ ಪ್ರಾತಿನಿಧ್ಯ ಕೊಡಲಾಗುತ್ತದೆ. ಭೂಮಾಲೀಕರೊಂದಿಗೆ ಅವರ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಮತ್ತು ಈ ಧಾರ್ಮಿಕ ಗುಂಪುಗಳಿಗೆ ಸೇರಿದ ಕೆಲವು ಕುಟುಂಬಗಳು ಮತ್ತು ಶ್ರೀಮಂತ ಭೂಮಾಲೀಕರ ನಡುವೆ ವೈವಾಹಿಕ ಸಂಬಂಧವನ್ನು ಬೆಳೆಸಲು ಅರಸೊತ್ತಿಗೆ ಪ್ರೋ ಸಾರ್ವತ್ರಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಧಾರ್ಮಿಕ ಪ್ರವಚನ ನೀಡಲು ಅವಕಾಶಗಳನ್ನು ಕಲ್ಪಿಸಲಾಯಿತು. ಅವರನ್ನು ಸಂತೋಷಗೊಳಿಸುವ ನೆಪದಲ್ಲಿ ಸಿನೆಮಾ ಮಂದಿರಗಳನ್ನು, ಮಧ್ಯದಂಗಡಿಗಳನ್ನು ಮತ್ತು ಸಾರ್ವಜನಿಕರಿಗೆ ತೆರೆಯುವ ಪಾಶ್ಚಾತ್ಯ ಸಂಗೀತ ಮಂದಿರಗಳನ್ನು, ಕೆಲವೊಮ್ಮೆ ಸರಕಾರ ಮುಚ್ಚಲು ಆಜ್ಞೆ ಹೊರಡಿಸುತ್ತಿತ್ತು. ಇದಕ್ಕುತ್ತರವಾಗಿ, ಸಾಮ್ರಾಜ್ಯಶಾಹಿವಾದವನ್ನು ಪ್ರತಿಪಾದಿಸುವ ಬಾಗ್ದಾದ್ ಫ್ಯಾಕ್ಟ್‌ಗೆ ಅರಸೊತ್ತಿಗೆ ಸೇರುವುದನ್ನು ಉಲೇಮಾಗಳು ಒಪ್ಪಿಕೊಂಡವು. ಮಾತ್ರವಲ್ಲ, ವಿದೇಶಿ ಬಂಡವಾಳಶಾಹಿ ಕಂಪನಿಗಳೊಂದಿಗೆ ಅರಸೊತ್ತಿಗೆ ಮಾಡಿಕೊಳ್ಳುವ ಎಲ್ಲ ಒಡಂಬಡಿಕೆಗೆ ವಿರೋಧ ವ್ಯಕ್ತಪಡಿಸದೆ ಮನ ತಾಳಿದರು. ಆಯಾತುಲ್ಲಾ ಬುರುಜಿರ್ಡಿಯ ನೇತೃತ್ವದಲ್ಲಿ ಉಲೇಮಾಗಳು ರಾಜಕೀಯವಾಗಿ ಮನವಾಗುಳಿದು ಆಂತರಿಕವಾಗಿ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಂಡರು. ೧೯೫೦ ಮತ್ತು ೬೦ರ ದಶಕದು ದ್ದಕ್ಕೂ ಉಲೇಮಾಗಳು ತಮ್ಮ ರಾಷ್ಟ್ರೀಯ ನೆಟ್‌ವರ್ಕ್ ಸಂಪರ್ಕವನ್ನು ಅಭಿವೃದ್ದಿಪಡಿಸಿ ಖುಮ್‌ನಲ್ಲಿ, ಶಿಯಾ ಧಾರ್ಮಿಕ ಕೇಂದ್ರವನ್ನು ಸ್ಥಾಪಿಸಿ, ತಮ್ಮ ಸಂಘಟನೆ ಮತ್ತು ಪ್ರವಚನವನ್ನು ವಿಸ್ತರಿಸಲು ಯಶಸ್ವಿಯಾದರು.

ಈ ಮಧ್ಯದಲ್ಲಿ, ೧೯೬೦ರ ದಶಕದಲ್ಲಿ ಸರಕಾರದ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಳು ಉಲೇಮಾಗಳ ಪ್ರಚೋದನೆಗೆ ಬೆಂಬಲ ನೀಡಿದವು. ಮುಖ್ಯವಾಗಿ, ಹೊಸ ಭೂಮಸೂದೆಯನ್ನು ಬಹುತೇಕ ಉಲೇಮಾಗಳು ದೊಡ್ಡ ದೊಡ್ಡ ಭೂಮಾಲೀಕರು ಮತ್ತು ವಕ್ಷ್ ಸಂಪತ್ತಿನ ಒಡೆಯರೂ ಆಗಿದ್ದರು. ಹೊಸ ಭೂ ಮಸೂದೆ, ಅವರ ಈ ಹಕ್ಕಿಗೆ ಪ್ರತಿಕೂಲವಾಗಿತ್ತು. ಮಹಿಳಾ ವಿಮೋಚನಾ ಸುಧಾರಣೆ, ಮುಖ್ಯವಾಗಿ, ಅವರಿಗೆ ಮತದಾನದ ಹಕ್ಕನ್ನು ನೀಡುವ ಸರಕಾರದ ನಿರ್ಧಾರವು ಅವರನ್ನು ಕಂಗೆಡಿಸಿತ್ತು. ಅರಸೊತ್ತಿಗೆ ಬರಬರುತ್ತಾ ಸಾಮ್ರಾಜ್ಯಶಾಹಿ ಶಕ್ತಿಯೊಂದಿಗೆ, ಅದರಲ್ಲೂ ಅಮೆರಿಕದೊಂದಿಗೆ ಹೆಚ್ಚು ಸಂಪರ್ಕವಿಟ್ಟುಕೊಂಡಿರುವುದು ಮತ್ತು ಇಸ್ರೇಲ್‌ನೊಂದಿಗಿನ ಅವರ ಸ್ನೇಹವನ್ನು ಗಂಭೀರವಾಗಿ ಉಲೇಮಗಳು ವಿರೋಧಿಸತೊಡಗಿದರು. ಸಾಹಿತ್ಯವಲಯಗಳನ್ನು ತೆರೆದು ಅಲ್ಲಿ ಸೆಕ್ಯುಲರ್ ನಿಲುವುಗಳನ್ನು ಪ್ರತಿಪಾದಿಸುವ ಹೊಸ ವಿದ್ಯಾವಂತ ವರ್ಗದವರನ್ನು ನೇಮಿಸುವ ಅರಸೊತ್ತಿಗೆಯ ನಿರ್ಧಾರ, ಉಲೇಮಗಳ ಟೀಕೆಗೆ ಗುರಿಯಾಯಿತು. ಇದರಿಂದ, ಸಾಹಿತ್ಯ ವಲಯದಲ್ಲಿ ಉಲೇಮಾಗಳು ಭಾಗವಹಿಸುವಿಕೆ ದುರ್ಬಲಗೊಂಡಿತು ಮತ್ತು ಈ ಬಗೆಯ ಬೆಳವಣಿಗೆಯಿಂದ ಗ್ರಾಮೀಣ ಪ್ರದೇಶದಲ್ಲಿ ಅರಸೊತ್ತಿಗೆಯ ಪ್ರಭಾವ ವಿಸ್ತರಿಸಿತು. ಈ ಎಲ್ಲ ವೈಷಮ್ಯ, ವಾದ ವಿವಾದಗಳ ನಡುವೆ ೧೯೬೩ರಲ್ಲಿ ರೇಝಾ ಶಾಹ ಭೂಸುಧಾರಣೆ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಎತ್ತಿರುವ ಚರ್ಚೆ ಮತ್ತು ಪಾರ್ಲಿಮೆಂಟ್ ಒಪ್ಪಿಗೆ ಪಡೆದಿರುವುದು ಸರಕಾರ ಮತ್ತು ಉಲೇಮಾಗಳ ನಡುವೆ ವೈಷಮ್ಯ ಹೆಚ್ಚಿತು. ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಖುಮ್ ಕೇಂದ್ರಿತ ಎಲ್ಲ ಉಲೇಮಾ ಸಂಘಟನೆಗಳನ್ನು ಶಾಹನ ಸಹಕಾರ ದುರ್ಬಲಗೊಳಿಸಿತು. ಇದಕ್ಕೆ ಪ್ರತೀಕಾರ ವಾಗಿ, ೧೯೬೪ರಲ್ಲಿ ಉಲೇಮಾಗಳನ್ನು ಒಗ್ಗೂಡಿಸುವ ಪ್ರಯತ್ನವನ್ನು ಆಯತುಲ್ಲಾ ಕೊಮೇನಿ ಕೈಗೆತ್ತಿಕೊಳ್ಳುವನು. ಬೀದಿ ಬೀದಿಗಳಲ್ಲಿ ಸರಕಾರಿ, ವಿರೋಧಿ ಪ್ರತಿಭಟನೆಗಳನ್ನು ಯೋಜಿಸಿದನು. ಸರಕಾರದ ಕಠಿಣ ನಿಲುವು ಮತ್ತು ಎಲ್ಲ ತರದ ಅರಸೊತ್ತಿಗೆ ವಿರೋಧಿ ಚಟುವಟಿಕೆಗಳನ್ನು, ಪೊಲೀಸರು ಹತ್ತಿಕ್ಕಿದರು. ಅರಸೊತ್ತಿಗೆ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡ ಪ್ರಜೆಗಳನ್ನು ದಿಕ್ಕುತಪ್ಪಿಸುವ ಪಿತೂರಿ ಮಾಡಿದನೆಂದು; ಉಲೇಮಾಗಳನ್ನು ಪ್ರಚೋದಿಸತೊಡಗಿ, ಸರಕಾರಿ ವಿರುದ್ಧ ನಿಂತಿರುವ ಕಾರಣಕ್ಕಾಗಿ ಆಯತುಲ್ಲಾ ಕೊಮೇನಿಯನ್ನು ದೇಶಭ್ರಷ್ಟನೆಂದು ಘೋಷಿಸಿ, ಅವನನ್ನು ಗಡಿಪಾರು ಮಾಡಲಾಯಿತು. ಇದರಿಂದ, ಆಯತುಲ್ಲಾ ಕೊಮೇನಿ ಇರಾಕಿಗೆ ಹೋಗಿ ಆಸರೆ ಪಡೆಯುವ ಅನಿವಾರ್ಯತೆ ಎದುರಾಯಿತು.

ಧಾರ್ಮಿಕ ಸುಧಾರಣೆ ಚಳವಳಿ

೧೯೬೦ರ ದಶಕದಲ್ಲಿ ಪ್ರಭುತ್ವದ ವಿರುದ್ದ ಉಲೇಮಾಗಳ ಪ್ರತಿಭಟನೆಯಷ್ಟೇ ಪ್ರಮುಖವಾದ ಇನ್ನೊಂದು ಘಟನೆ, ಧಾರ್ಮಿಕ ಸುಧಾರಣೆ ಚಳವಳಿ. ೧೯೬೨ರಲ್ಲಿ ಧಾರ್ಮಿಕ ಮುಖಂಡ ಮೆಹದಿ ಬಝರ್‌ಗನ್, ಸಾಮಾಜಿಕ ಸುಧಾರಣೆಯನ್ನು ಪ್ರತಿ ಪಾದಿಸುತ್ತಾ, ಪವಿತ್ರ ಗ್ರಂಥದಲ್ಲಿರುವ ತತ್ವಗಳಿಗನುಗುಣವಾಗಿ, ಉಲೇಮಾಗಳು ರಾಜಕೀಯ ರಂಗದಲ್ಲಿ ಪ್ರಾಮುಖ್ಯ ಪಾತ್ರ ವಹಿಸುವ ಅಗತ್ಯ ಇದೆ ಎಂದು ಘೋಷಿಸು ತ್ತಾನೆ. ಆರಂಭದ ಶಿಯಾ ಧಾರ್ಮಿಕ ನಂಬಿಕೆಗಳು ಇಂದಿಗೂ ಪ್ರಸ್ತುತವಿದೆ ಎಂದು ಹೇಳುತ್ತಾ, ಇಸ್ಲಾಂನ ಗತ ವೈಭವದ ದಿನಗಳನ್ನು ಮರು ನಿರ್ಮಿಸುವುದು ನಮ್ಮ ಆದ್ಯ ಕರ್ತವ್ಯ ವಾಗಬೇಕೆಂದು ಕರೆ ನೀಡಿದನು. ರಾಜಕೀಯ ಸಂಘಟನೆ ಮತ್ತು ಒಗ್ಗಟ್ಟಿನ ಹೋರಾಟದಿಂದ ಒಳ್ಳೆಯ ಸಮಾಜ ನಿರ್ಮಾಣ ಮಾಡುವುದು ಇಸ್ಲಾಂ ಧರ್ಮವನ್ನು ರಕ್ಷಿಸುವ ಮತ್ತು ಅನುಸರಿಸುವುದು ಎಲ್ಲ ಪ್ರಜೆಗಳ ಹೊಣೆ ಎಂದು ಉಲೇಮಾಗಳನ್ನು ಬೆಂಬಲಿಸುತ್ತಾನೆ. ಇಮಾಮನ ಆಗಮನವನ್ನು ಮುಂದೆ ನೋಡುತ್ತಾ ಕುಳಿತುಕೊಳ್ಳುವುದಕ್ಕಿಂತ ಅಂತ ದಿನಗಳು ಮುಂದೆ ಬರಬರಲು ದಾರಿ ಸುಗಮ ಮಾಡುವ ಗುರಿ ಇಟ್ಟುಕೊಂಡು ಕಾರ್ಯ ಪ್ರವೃತ್ತರಾಗಬೇಕು ಎಂದೂ ಹೇಳುತ್ತಾನೆ.

ಇದಕ್ಕಾಗಿ ಉಲೇಮಾಗಳು ತಮ್ಮದೆ ಸಮಿತಿಗಳನ್ನು ರಚಿಸಿಕೊಳ್ಳಬೇಕು, ತಮ್ಮದೇ ಹಣಕಾಸು ಸಂಸ್ಥೆಗಳನ್ನು ರಚಿಸಬೇಕು ಮತ್ತು ಸರಕಾರದ ಪ್ರಭಾವ ಹಾಗೂ ರಾಜಕೀಯ ಒತ್ತಡದಿಂದ ಇರುವ ಸಲುವಾಗಿ ಉಲೇಮಾಗಳು ತಮ್ಮ ಸ್ವಾಯತ್ತತೆಯನ್ನು ಕಾಪಾಡಿ ಕೊಳ್ಳುವ ದಿಕ್ಕಿನಲ್ಲಿ ಎಲ್ಲ ಧಾರ್ಮಿಕ ಸುಧಾರಕರು ಕೆಲಸ ಮಾಡಬೇಕು ಎಂಬುದು ಅವನ ಆಶಯವಾಗಿತ್ತು. ೧೯೬೭ ಮತ್ತು ೧೯೭೩ರ ನಡುವಿನ ವರ್ಷಗಳಲ್ಲಿ ಧಾರ್ಮಿಕ ಸುಧಾರಣಾ ಚಳುವಳಿ ಡಾ.ಆಲಿ ಶರಿಯತ್‌ನ ಮುಖಂಡತ್ವದಲ್ಲಿ, ಹೊಸ ರೂಪವನ್ನೆ ತಳೆಯಿತು. ಹುಸೇನಿಯ ಇರ್ಷಾದ್ ಸಂಸ್ಥೆಯನ್ನು ಸ್ಥಾಪಿಸಿ, ಅದರ ಮೂಲಕ ಅವನು ಮತ್ತು ಅವನ ಬೆಂಬಲಿಗರು ಇಸ್ಲಾಂ ಧರ್ಮವನ್ನು ಬೋಧಿಸಲಾರಂಭಿಸಿದರು. ಯುರೋಪಿನ ಸಾಮಾಜಿಕ ವಿಜ್ಞಾನದ ಚಿಂತನೆಗಳನ್ನು, ಪ್ರಚಾರ ಮಾಡುತ್ತ ಧಾರ್ಮಿಕ ಗುಂಪುಗಳನ್ನು ದಮನಿಸುವ ಸರಕಾರವನ್ನು ಪದಚ್ಯುತಗೊಳಿಸುವ ಪಣ ತೊಡಬೇಕೆಂದು ಎಲ್ಲರಿಗೂ ಕರೆ ನೀಡಿದರು. ಏಕೆಂದರೆ, ಡಾ.ಶರಿಯತ್ ಪ್ರಕಾರ ಶಿಯೋಯಿಸಂ ಪ್ರತಿಭಟನೆ ನಡೆಸುವ ಧರ್ಮ.

ಈ ನಡುವೆ ಇರಾಕ್‌ನಲ್ಲಿ ಆಸರೆ ಪಡೆದಿರುವ ಆಯತುಲ್ಲಾ ಖೊಮೇನಿ, ಇರಾನಿನ ಅರಸೊತ್ತಿಗೆ ವಿರುದ್ಧ ನಡೆಯುವ ಪ್ರತಿಭಟನೆಯ ಮುಖ್ಯ ಧ್ವನಿಯಾಗಿ ಗಮನ ಸೆಳೆಯು ತ್ತಾನೆ. ೧೯೬೧ರಲ್ಲಿ ಅವನು ಪ್ರಜಪ್ರಭುತ್ವ ಸರಕಾರ ರಚನೆಯನ್ನು ಸಮರ್ಥಿಸಿದರೆ ೧೯೭೧ರ ಹೊತ್ತಿನಲ್ಲಿ, ಅವನು ಪ್ರಕಟ ಮಾಡಿದ ‘ಇಸ್ಲಾಮಿಕ್ ಗರ್ವನ್‌ಮೆಂಟ್’ ಎಂಬ ಪುಸ್ತಕದಲ್ಲಿ ಜಿಹಾದ್ ತತ್ವಗಳನ್ನು ಅನುಸರಿಸಿ, ಒಳ್ಳೆಯದನ್ನು ಪ್ರತಿಪಾದಿಸಬೇಕು ಮತ್ತು ಉಲೇಮಾಗಳು ನಿರಂಕುಶ ಪ್ರಭುತ್ವ ಸರಕಾರದ ವಿರುದ್ಧ ಸದಾ ಪ್ರತಿಭಟಿಸಬೇಕು ಎಂದು ಕರೆ ನೀಡುತ್ತಾನೆ. ಅವನ ಪ್ರಕಾರ ಅರಸೊತ್ತಿಗೆ, ಇಸ್ಲಾಂ ವಿರೋಧಿ ಸಂಸ್ಥೆಯಾಗಿದ್ದು, ರಾಜಕೀಯ ಸಮಾಜದ ಮರು ನಿರ್ಮಾಣದಲ್ಲಿ ಉಲೇಮಾಗಳೂ ಪ್ರಭಾವಿ ಪಾತ್ರ ವಹಿಸ ಬೇಕು. ಅರಸೊತ್ತಿಗೆ ದುರುಪಯೋಗ ಮಾಡುವ ಪ್ರಸಕ್ತ ಸರಕಾರವನ್ನು ಅಧಿಕಾರದಿಂದ ಪದಚ್ಯುತಗೊಳಿಸುವುದು ಇಸ್ಲಾಂ ಧರ್ಮದ ಮೇಲೆ ನಂಬಿಕೆ ಇರುವ ಎಲ್ಲ ಪ್ರಜೆಗಳ ಗುರಿಯಾಗಬೇಕು. ಖೊಮೇನಿಯ ಈ ನಿಲುವು ಬಹಳ ಕ್ರಾಂತಿಕಾರಿಯಾದುದು ಮತ್ತು ಇರಾನ್ ಸಮಾಜವನ್ನು ಏಕಸ್ವಾಮಿತ್ವ, ನಿರಂಕುಶಪ್ರಭುತ್ವ, ಸಾಮ್ರಾಜ್ಯಶಾಹಿತ್ವ ಮತ್ತು ಬಂಡವಾಳಶಾಹಿತ್ವ ವಿರುದ್ಧ ಹೋರಾಡಿ ಮರು ನಿರ್ಮಿಸುವಲ್ಲಿ ಉಲೇಮಾಗಳ ಪಾತ್ರ ವೇನೆಂಬುದನ್ನು ಒತ್ತಿ ಹೇಳುತ್ತಾನೆ.

ಈ ಎಲ್ಲ ಉದ್ದೇಶಗಳು, ಭ್ರಷ್ಟ ಹಾಗೂ ಬಂಡವಾಳಶಾಹಿಪರವಾಗಿದ್ದು ರೇಝಾ ಶಾಹನ ಅರಸೊತ್ತಿಗೆ ವಿರುದ್ಧ, ನಡೆಸುವ ಸಾರ್ವತ್ರಿಕ ಚಳವಳಿಗೆ ಒಂದು ಅಡಿಪಾಯ ಹಾಕುವಂತಹದ್ದು. ಈ ಚಳುವಳಿಕಾರರ ಪ್ರಭಾವವನ್ನು ಗಮನಿಸಿದ ಸರಕಾರ, ೧೯೭೦ರ ದಶಕದಲ್ಲಿ ಅತ್ಯಂತ ಕ್ರೂರವಾಗಿ ಉಲೇಮಾಗಳ ವಿಚಾರದಲ್ಲಿ ವರ್ತಿಸತೊಡಗಿತು. ಸೈನ್ಯ ಮತ್ತು ಗುಪ್ತ ಪೋಲೀಸರು, ಸಮಾಜದಲ್ಲಿ ಭಯದ ವಾತಾವರಣವನ್ನು ಹುಟ್ಟಿಸಿ, ಶಾಹನ ಅರಸೊತ್ತಿಗೆ ಪರವಾಗಿ ತೀವ್ರತರನಾದ ಶೋಧನೆ, ಜನರನ್ನು ಜೈಲಿಗೆ ಕಳುಹಿಸುವುದು, ಚಿತ್ರಹಿಂಸೆ ನೀಡುವುದು ಮತ್ತು ಕಂಡಲ್ಲಿ ಕೊಲ್ಲುವುದು ಇತ್ಯಾದಿ ಪ್ರವೃತ್ತಿಯನ್ನೆ ಪ್ರತಿಭಟನಕಾರರ ವಿರುದ್ಧ ಮಾಡಲಾರಂಭಿಸಿದರು. ಆದರೂ ಪ್ರತಿಭಟನಾಕಾರರು, ಶಾಹನ ಪ್ರಭುತ್ವವು ಅಮೆರಿಕದವರ ಹಣಕಾಸಿನ ಮತ್ತು ಸೈನಿಕ ಬೆಂಬಲದಿಂದಲೇ ಬದುಕಿರು ವುದು. ಸರಕಾರ ಅನುಷ್ಠಾನಗೊಳಿಸಿರುವ ಸುಧಾರಣೆಗಳು ಇರಾನಿನಲ್ಲಿ ಬೆರಳೆಣಿಕೆಯ ಜನರಿಗೆ ಸಹಾಯವಾಗಿರುವುದೆಂದು ತೀಕ್ಷ್ಣವಾಗಿ ಟೀಕಿಸತೊಡಗಿದರು. ಜನರು ಸರಕಾರವನ್ನು ತರಾಟೆಗೆ ತೆಗೆದುಕೊಂಡು, ಅರಸೊತ್ತಿಗೆ ಮೂಲಭೂತವಾಗಿ ಇರಾನ್‌ನನ್ನು ಅಮೆರಿಕದವರಿಗೆ ಮಾರಾಟ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದು, ಇರಾನಿನ ರಾಷ್ಟ್ರೀಯ ಆಸಕ್ತಿ ರಕ್ಷಣೆ, ಅರಸೊತ್ತಿಗೆ ಎಜೆಂಡಾದಲ್ಲಿಲ್ಲ ಎಂದು ಆರೋಪಿಸಿದರು. ದುರಂತ ಎಂದರೆ ತೈಲ ಸಂಪತ್ತಿನ ಅಧಿಕ ಅಂಶ ಕೇವಲ ದುಬಾರಿ ಶಸ್ತ್ರಾಸ್ತ್ರಗಳನ್ನು ಕೊಳ್ಳುವುದಕ್ಕೆ ವ್ಯಯಿಸಲಾಗುತ್ತದೆ.  ಶಾಹನೊಂದಿಗೆ ಗುರುತಿಸಿಕೊಂಡ ಕೆಲವೇ ಕೆಲವು ಗಣ್ಯರಿಗೆ ಅದರಿಂದ ಸಹಾಯವಾಗಿದ್ದು ವಿನಃ ಬಹುಸಂಖ್ಯಾತ ಇರಾನಿಯರು ಅದರ ಫಲಾನುಭವಿಗಳಲ್ಲ ಎಂದು ಕೆಂಡ ಕಾರಿದರು ಪ್ರತಿಭಟನಾಕಾರರು. ಇದರಿಂದ ಹಣದುಬ್ಬರ ರಾಷ್ಟ್ರೀಯ ಸಮಸ್ಯೆಯಾಗಿ ಕಂಡುಬಂತು. ಜನರ ಜೀವನ ಮಟ್ಟದಲ್ಲಿ ಕುಸಿತ ಕಂಡಿತು. ಬಜರ್ ವ್ಯಾಪಾರಿಗಳು, ಕರಕುಶಲಕರ್ಮಿಗಳೂ, ರೈತರು ಮತ್ತು ಕೂಲಿ ಕಾರ್ಮಿಕರು ಗಂಭೀರ ಸ್ವರೂಪದ ಬಿಕ್ಕಟ್ಟನ್ನು ಅನುಭವಿಸಿದನು. ಶಾಹನು ಹಣದುಬ್ಬರವನ್ನು ನಿಯಂತ್ರಿಸುವ ನೆಪದಲ್ಲಿ ಬಜರ್ ವ್ಯಾಪಾರಿಗಳ ಮೇಲೆ ಹೆಚ್ಚುವರಿ ಶುಲ್ಕ ಮತ್ತು ತೆರಿಗೆ ವಿಧಿಸಿದನು. ಅಸಹಾಯಕತೆಯಲ್ಲಿ ಮರುಗುವ ಇವರು ಶುಲ್ಕ ಮತ್ತು ತೆರಿಗೆ ಕಟ್ಟಲು ಸಾಧ್ಯವಾಗದಿದ್ದಲ್ಲಿ ಜೈಲಿಗೆ ಅಟ್ಟುವ ಕ್ರೂರ ಕ್ರಮಗಳನ್ನು, ಜನರು ವಿರೋಧಿಸತೊಡಗಿದರು. ಅತ್ಯಂತ ಹೆಚ್ಚು ಆತಂಕದಲ್ಲಿ ಸಿಲುಕಿಕೊಂಡವರು ರೈತರು. ಭೂಮಸೂದೆಯಿಂದ ಭೂಮಿಯನ್ನು ಕಳೆದುಕೊಂಡರು. ಜೀವನೋಪಾಯಕ್ಕೆ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಕೆಲಸ ಹುಡುಕಲು ವಲಸೆ ಬಂದರು. ಆದರೆ, ಯಾಂತ್ರೀಕರಣದಿಂದ ಅವಕಾಶಗಳು ವಿರಳವಾಗಿದ್ದುದರಿಂದ ಸಂಕಷ್ಟದಲ್ಲಿ ಬದುಕು ರೂಪಿಸುವಂತಾಯಿತು. ಬೇರೆ ಯಾವುದೇ ದಿಕ್ಕಿಲ್ಲದ ಇವರು ಪ್ರತಿಭಟನಾಕಾರರ ಜೊತೆ ಸೇರಿ ಚಳವಳಿಯಲ್ಲಿ ಭಾಗವಹಿಸಿದರು.

ಫಲಿತಾಂಶವಾಗಿ, ೧೯೭೯ರ ಹೊತ್ತಿಗೆ ಅಸಮಾಧಾನಗೊಂಡ ಎಲ್ಲ ವರ್ಗದವರು ಒಂದಾಗಿ ಅರಸೊತ್ತಿಗೆ ವಿರುದ್ಧ ಸಾರ್ವತ್ರಿಕ ಹೋರಾಟವನ್ನು ಕೊಮೇನಿ ನೇತೃತ್ವದಲ್ಲಿ ಪಾಲ್ಗೊಂಡರು. ಎಲ್ಲ ಗುಂಪಿನವರು, ರಾಷ್ಟ್ರ ರಕ್ಷಣೆಯ ಪಣ ತೊಟ್ಟು ವಿದೇಶಿಯರ ಕೈ ಸೇರುವ ಮುನ್ನ ಇರಾನ್‌ನಲ್ಲಿ, ಜಗತ್ತಿನಲ್ಲೆ ಗುರುತಿಸಲ್ಪಟ್ಟ ಇಸ್ಲಾಮಿಕ್ ರೆವಲ್ಯೂಶನ್ ಹೆಸರಿನಲ್ಲಿ ಅರಸೊತ್ತಿಗೆ ವಿರುದ್ಧ ಜಯಭೇರಿ ಹಾಡಿದರು. ಇದು ಆಧುನಿಕ ಇರಾನ್‌ನಲ್ಲಿ ಪ್ರಭುತ್ವ ಮತ್ತು ಉಲೇಮಗಳ ನಡುವೆ ಸಂಭವಿಸಿದ ಕೊನೆಯ ಸಂಘರ್ಷ ಮತ್ತು ಉಲೇಮಾಗಳು ತಮ್ಮ ಪ್ರಾಬಲ್ಯವನ್ನು ವೈಭವೀಕರಿಸಿಕೊಂಡರು.

ರಾಷ್ಟ್ರೀಯ ಹೋರಾಟದ ಯಶಸ್ಸಿನ ಜೊತೆಗೆ ಅರಸೊತ್ತಿಗೆಯನ್ನು ಕೊನೆಗೊಳಿಸ ಲಾಯಿತು ಮತ್ತು ಇಸ್ಲಾಮಿ ಸರಕಾರ ರಚನೆಗೊಂಡಿತು. ಕೊಮೇನಿ ಅದರ ಮುಂದಾಳತ್ವವನ್ನು ಅಲಂಕರಿಸಿದನು. ಉಲೇಮಾಗಳು ತಮ್ಮ ಪ್ರತಿಸ್ಪರ್ಧಿಗಳಾದ ಲಿಬರಲ್, ರಾಷ್ಟ್ರೀಯವಾದಿ, ತೀವ್ರಗಾಮಿ ಮಾರ್ಕ್ಸ್‌ವಾದಿಗಳನ್ನು ದಮನಿಸಿ, ಇಸ್ಲಾಂನ ಹೆಸರಿನಲ್ಲಿ ಸರಕಾರ ರಚಿಸಿದರು.

೧೯೭೯ರ ಇಸ್ಲಾಮಿ ಚಳುವಳಿಯು, ಸುಮಾರು ೨೦೦ ವರ್ಷಗಳ ಅವಧಿಯಲ್ಲಿ ಪ್ರಭುತ್ವ ಮತ್ತು ಸಂಘಟಿತ ಉಲೇಮಾಗಳ ನಡುವಿನ ಜಿದ್ದಾಜಿದ್ದಿಯ ಫಲಿತಾಂಶವೇ ಎಂದು ತೀರ್ಮಾನಿಸಬಹುದು. ೧೯ನೇ ಶತಮಾನದಲ್ಲಿ ಪ್ರಭುತ್ವ ದುರ್ಬಲವಾದ ಕಾರಣ ಅನೇಕ ಬುಡಕಟ್ಟು ಮತ್ತು ಮತೀಯ ಸಮುದಾಯಗಳು, ರಾಜಕೀಯ ರಂಗದಲ್ಲಿ ಪ್ರಭಾವಿ ಶಕ್ತಿಗಳಾಗಿ ಅರಸೊತ್ತಿಗೆಯನ್ನು ನಿಯಂತ್ರಿಸಲು ಪ್ರಯತ್ನಿಸಿದವು. ಪರಿಸ್ಥಿತಿಯನ್ನು ಅರಿತು ಉಲೇಮಾಗಳು ರಾಜಕೀಯವಾಗಿ ಜಾಗೃತಗೊಂಡು, ಅರಸೊತ್ತಿಗೆ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ದೇಶದಾದ್ಯಂತ ಮಾಡಿದ್ದರು. ನಂತರ, ಅರಸೊತ್ತಿಗೆಯ ಒಡಂಬಡಿಕೆಯಲ್ಲಿ ಜರಿಗೆ ಬಂದ ಆಧುನೀಕರಣ ಪ್ರಕ್ರಿಯೆ ಮತ್ತು ವಿದೇಶಿಯರ ವಸಾಹತುಶಾಹಿ ಆಕ್ರಮಣ ಪುನಃ ಉಲೇಮಾಗಳನ್ನು ಕೆಣಕಿತು. ೧೮೯೧-೯೨ರಲ್ಲಿ ಬ್ರಿಟಿಷರು ಆರಂಭಿಸಿದ ಟೋಬ್ಯಾಕೊ ಏಕಸ್ವಾಮ್ಯ ರಾಷ್ಟ್ರದಾದ್ಯಂತ ಚಳವಳಿ ಆರಂಭವಾಗಲು ಕಾರಣವಾಯಿತು. ಇದರ ನೇತೃತ್ವವನ್ನು ಉಲೇಮಾಗಳೇ ವಹಿಸಿಕೊಂಡು, ಅರಸೊತ್ತಿಗೆಯನ್ನು ಮತ್ತು ಸಾಮ್ರಾಜ್ಯಶಾಹಿ ಶಕ್ತಿಗಳನ್ನು ತಲ್ಲಣಗೊಳಿಸಿದರು. ಬ್ರಿಟಿಷರಿಗೆ ನೀಡಿದ ಹೊಗೆ ಸೊಪ್ಪು ಬೆಳೆಸುವ ಮತ್ತು ಅದರ ಮಾರಾಟದ ಹಕ್ಕನ್ನು ವಾಪಸ್ಸು ಪಡೆಯಲು ಪ್ರಮುಖ ಪಾತ್ರ ವಹಿಸಿದರು. ೧೮೯೪ ಮತ್ತು ೧೯೦೫ರ ನಡುವೆ ನಡೆದ ಹಲವು ಘಟನೆಗಳು- ಸಾಮ್ರಾಜ್ಯಶಾಹಿ ಶಕ್ತಿಗಳಾದ ಬ್ರಿಟಿಷರು ದಕ್ಷಿಣದಲ್ಲಿ, ರಷ್ಯನ್ನರು ಉತ್ತರದಲ್ಲಿ ತಮ್ಮ ತಮ್ಮ ವಸಾಹತುಶಾಹಿ ಪ್ರಭುತ್ವವನ್ನು ಕ್ರೋಡೀಕರಿಸಿಕೊಂಡರು. ಬಂಡವಾಳಶಾಹಿ ಸಂಸ್ಥೆಗಳ ಪ್ರವೇಶ ಮತ್ತು ಖಾಜರ್ ಅರಸರು ವಿದೇಶಿಯರಿಂದ ಅನಾವಶ್ಯಕವಾಗಿ ಸಾಲ ಪಡೆದು ತಮ್ಮ ವೈಯಕ್ತಿಕ ಕಾರಣಗಳಿಗೆ ವಿನಿಯೋಗಿಸಿರುವುದು, ಇತ್ಯಾದಿ ವಿಚಾರಗಳು ಇರಾನಿಯರನ್ನು ಕಂಗೆಡಿಸಿತು. ಹಾಗಾಗಿ, ಪುನಃ ಉಲೇಮಾಗಳ ನೇತೃತ್ವದಲ್ಲಿ, ಎಲ್ಲ ವರ್ಗದವರು ೧೯೦೫-೬ರಲ್ಲಿ ಸಂವಿಧಾನಾತ್ಮಕ ಕ್ರಾಂತಿಯನ್ನು ದೇಶದಾದ್ಯಂತ ನಡೆಸಿದರು. ಅರಸನ ಇತಿಮಿತಿಯನ್ನು ನಿಯಂತ್ರಿಸಲು ಸಂವಿಧಾನವನ್ನು ರಚಿಸಲಾಯಿತು. ವಿದೇಶಿಯ ರೊಂದಿಗೆ ಅರಸನ ಅಧೀನತೆಯನ್ನು ಪ್ರಶ್ನಿಸಲಾಯಿತು ಮತ್ತು ಮುಂದಿನ ಎಲ್ಲ ನಿರ್ಧಾರ ಗಳು ಜನರಿಂದ ಚುನಾಯಿತರಾದ ಸದಸ್ಯರ ಒಪ್ಪಿಗೆ ಪಡೆಯಬೇಕೆಂಬ ಷರತ್ತು ಹಾಕ ಲಾಯಿತು. ಈ ಚಳವಳಿಯಲ್ಲಿ ಭೂಮಾಲೀಕರು ಚಿಂತಕರು, ವ್ಯಾಪಾರಿಗಳು, ಕರಕುಶಲ ಕರ್ಮಿಗಳು, ವಿದ್ಯಾರ್ಥಿಗಳು ಮತ್ತು ಬುಡಕಟ್ಟು ಸಮುದಾಯಗಳು ಭಾಗವಹಿಸಿದ್ದರು.

ಹಾಗೆಂದು ಹೇಳಿ, ಸ್ಟೇಟ್ ಮತ್ತು ಧಾರ್ಮಿಕ ಗುಂಪುಗಳು ನಿರಂತರವಾಗಿ ಪರಸ್ಪರ ವಿರೋಧಿ ಬಣಗಳಲ್ಲಿ ಕಾರ್ಯ ನಿರ್ವಹಿಸಿದ್ದರು ಎಂದು ಇರಾನಿನ ಸಂದರ್ಭದಲ್ಲಿ ಹೇಳಲಾಗದು. ಅವರ ನಡುವೆ ಬಿಕ್ಕಟ್ಟುಗಳು ಇದ್ದವು. ಉಲೇಮಾಗಳು ರಾಜ್ಯದ ವಿರುದ್ಧ ಎಲ್ಲ ವರ್ಗದವರನ್ನು ಒಗ್ಗೂಡಿಸಿ ಧ್ವನಿ ಎತ್ತಿರುವುದು ಹೌದು. ಇದಕ್ಕೆ ಸುಮಾರು ೨೦೦ ವರ್ಷಗಳ ಇತಿಹಾಸವಿದೆ. ಆದರೆ ಉಲೇಮಾಗಳು ತಮ್ಮ ದೇಶದ ಹಿತರಕ್ಷಣೆಯನ್ನು ಉದ್ದೇಶಿಸಿ ಸಂದರ್ಭಕ್ಕನುಗುಣವಾಗಿ ಪ್ರಭುತ್ವದ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ೧೯ನೆಯ ಶತಮಾನದಲ್ಲಿ ಇಂತಹ ಹಲವು ಸಂದರ್ಭಗಳು ಅವರನ್ನು ಕೆಣಕಿದವು ಮತ್ತು ಎಲ್ಲ ಸಂದರ್ಭದಲ್ಲೂ ಪ್ರಭುತ್ವ ಮಾಡಿದ ತಪ್ಪು ಅಥವಾ ಎದುರಾದ ಘಟನೆಗಳನ್ನು ಅರಸೊತ್ತಿಗೆ ಸರಿಯಾಗಿ ನಿಭಾಹಿಸಿತು. ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದಾಗ-೧೮೨೦ರ ದಶಕದಲ್ಲಿ ಇರಾನಿನ ಉತ್ತರ ಭಾಗದಲ್ಲಿ ರಷ್ಯ ನಿರಂತರ ಆಕ್ರಮಣ ಮಾಡಿದಾಗ, ಪ್ರಭುತ್ವ ದುರ್ಬಲವಾಗಿತ್ತು. ರಷ್ಯಾದವರೊಂದಿಗೆ ಇರಾನ್ ಆಸಕ್ತಿಗಳ ವಿರುದ್ಧವಾಗಿ ಅನೇಕ ವಸಾಹತುಶಾಹಿತ್ವವನ್ನು ಗಟ್ಟಿಗೊಳಿಸುವ ಒಪ್ಪಂದಗಳಿಗೆ ಸಹಿ ಹಾಕಿದ ಹಿನ್ನೆಲೆಯಲ್ಲಿ, ಉಲೇಮಾಗಳು ದೇಶದಾದ್ಯಂತ ಪ್ರತಿಭಟನೆಯನ್ನು ಅರಸೊತ್ತಿಗೆ ವಿರುದ್ಧ ಹಮ್ಮಿಕೊಂಡವು. ೧೮೭೦ರ ದಶಕದಲ್ಲಿ ಬ್ರಿಟಿಷರು ಸಾಮ್ರಾಜ್ಯಶಾಹಿ ಚಟುವಟಿಕೆಗಳನ್ನು ವೃದ್ದಿಸಲು ಅನೇಕ ಬಗೆಯ ರಿಯಾಯಿತಿಗಳನ್ನು ಖಾಜರ್ ಅರಸ ನೀಡಿದನು. ರೂಟರ್ ರಿಯಾಯಿತಿ ಮುಖ್ಯವಾದುದು. ಇದೂ ಕೂಡ ಉಲೇಮಾಗಳನ್ನು ಪ್ರಚೋದಿಸಿತು ಮತ್ತು ಬಹಿರಂಗವಾಗಿ ಅರಸೊತ್ತಿಗೆ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ೧೮೯೦ರ ದಶಕದಲ್ಲಿ ಹೊಗೆಸೊಪ್ಪು ರಿಯಾಯಿತಿಯಿಂದ ಇಡೀ ದೇಶದ ಸಂಪತ್ತನ್ನೇ ವಿದೇಶಿ ಕಂಪನಿ-ಮೇಜರ್ ತಾಲ್‌ಬಾಟ್ ಒಡೆತನದ ಕಂಪನಿಗೆ ಹಸ್ತಾಂತರಿಸುವ ಹುನ್ನಾರವನ್ನು ಅರಸೊತ್ತಿಗೆ ನಡೆಸಿತ್ತು. ಅದಕ್ಕಾಗಿ ದೊಡ್ಡ ಪ್ರಮಾಣದ ಪ್ರತಿಭಟನೆ ದೇಶಾದ್ಯಂತ ಉಲೇಮಾಗಳೂ ನಡೆಸಿದ್ದರು. ಎಲ್ಲ ವರ್ಗಗಳು, ಸಮುದಾಯಗಳು ಇದರಲ್ಲಿ ಭಾಗವಹಿಸಿ ಅರಸೊತ್ತಿಗೆಯನ್ನು ಪ್ರಶ್ನಿಸಿದ್ದರು. ಅದೇ ರೀತಿ ೨೦ನೆಯ ಶತಮಾನದಲ್ಲಿ ೧೯೦೫-೬ರಲ್ಲಿ ನಡೆದ ಚಳವಳಿ, ೧೯೫೦ ಮತ್ತು ೬೦ರ ದಶಕಗಳಲ್ಲಿ ಪಹಲವಿ ಅರಸರು ಅಭಿವೃದ್ದಿ ಹೆಸರಿನಲ್ಲಿ ನಡೆಸಿದ ಅನಾಚಾರವು ಉಲೇಮಾಗಳನ್ನು ಪ್ರಚೋದಿಸಿದ್ದವು. ಅಮೆರಿಕ ಸಾಮ್ರಾಜ್ಯಶಾಹಿಯೊಂದಿಗಿನ ಒಡಂಬಡಿಕೆ, ನಿರಂಕುಶ ಪ್ರಭುತ್ವ, ಏಕಸ್ವಾಮಿತ್ವ, ಹೊಸ ಭೂಮಸೂದೆ ಕಾಯ್ದೆ ಇತ್ಯಾದಿ ವಿಚಾರಗಳು ಉಲೇಮಾಗಳನ್ನು ಅಸಮಾಧಾನಪಡಿ ಸಿತು. ಕೊನೆಗೆ ೧೯೭೯ರ ಇಸ್ಲಾಮಿ ಚಳವಳಿ ಈ ಎಲ್ಲ ಬಿಕ್ಕಟ್ಟಿಗೆ ನಾಂದಿ ಹಾಡಿತು. ಅದರ ನೇತೃತ್ವವನ್ನು ಉಲೇಮಾಗಳೇ ವಹಿಸಿದ್ದರು. ಹಾಗಾಗಿ ಆಯಾಯಾ ಸಂದರ್ಭಕ್ಕೆ ಸರಿಯಗಿ ಉಲೇಮಾಗಳು ದೇಶದ ರಕ್ಷಣೆಯನ್ನು ಅಜೆಂಡಾವಾಗಿಟ್ಟುಕೊಂಡು ಪ್ರಭುತ್ವದ ವಿರುದ್ಧ ಹೋರಾಟ ನಡೆಸಿದ್ದರೆ ವಿನಃ ಅದು ನಿರಂತರವಾದ ಮತ್ತು ಜಗಳಕಾಯಬೇಕೆಂಬ ಉದ್ದೇಶದಿಂದ ಉಲೇಮಾಗಳು ಪ್ರಭುತ್ವದ ಜೊತೆಗೆ ಹೋರಾಟ ನಡೆಸಿರಲಿಲ್ಲ. ಅದೇ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ನಡೆದ ಚಳುವಳಿಯಲ್ಲಿ ೧೯೭೯ರ ಕೊಮೇನಿ ನೇತೃತ್ವದ ಇಸ್ಲಾಮಿ ಚಳವಳಿ ವಿಶೇಷವಾದದ್ದು.

 

ಪರಾಮರ್ಶನಗ್ರಂಥಗಳು

೧. ಪೀಟರ್ ಅವೇರಿ, ೧೯೬೭. ಮಾಡರ್ನ್ ಇರಾನ್, ಲಂಡನ್.

೨. ರಿಚಾರ್ಡ್ ಕೋಟಂ, ೧೯೭೯. ನ್ಯಾಶನಲಿಸಂ ಇನ್ ಇರಾನ್, ಪಿಟ್ಸ್‌ಬರ್ಗ್.

೩. ಪ್ರೆಡ್ ಹಾಲಿಡೇ, ೧೦೭೯. ಇರಾನ್ : ರೆವಲೂಶನ್ ಆಂಡ್ ಡೆವಲಪ್ಮೆಂಟ್, ಹರಮಂಡ್‌ವರ್ತ್.

೪. ಸೂರೂಶ್ ಇರ್ಪಾನ್, ೧೯೮೩. ರೆವಲೂಶನರಿ ಇಸ್ಲಾಂ ಇನ್ ಇರಾನ್, ಲಂಡನ್.