ವೈಭವ ಮತ್ತು ಆತಿಥ್ಯಕ್ಕೆ ಹೆಸರಾದ ಪೂರ್ವವು ವಸಾಹತು ಪದ್ಧತಿಯನ್ನು ‘‘ಪಶ್ಚಿಮ’’ದ ಸೊಗಸಿನಿಂದ ಮೊದಲು ಸ್ವಾಗತಿಸಿತು. ಈ ನವೀನತೆ ಒಂದು ರೀತಿಯಲ್ಲಿ ವಿಲಕ್ಷಣತೆಯ ಬಗ್ಗೆ ಕುತೂಹಲ ಮತ್ತು ವಿನೋದವೇ ಹೆಚ್ಚಾಗಿತ್ತು. ಬಿಳಿ ಚರ್ಮದ ಅಸಭ್ಯ ಪ್ರದರ್ಶನ, ಚಿತ್ರವಿಚಿತ್ರವಾದ ನಗು ತರಿಸುವಂಥಾ ಉಡುಪುಗಳು, ಅರ್ಥವಾಗದ ಮಾತುಗಳು ಮತ್ತು ಭಾಷೆಗಳನ್ನು ‘‘ಪೂರ್ವ’’ ಎದುರಿಸಿತು. ‘‘ಪಶ್ಚಿಮದ ನಿರಂಕುಶ ಪ್ರಭು’’ವಿನ ಪ್ರಾಬಲ್ಯ ಮತ್ತು ಅಟ್ಟಹಾಸದೆದುರಿಗೆ ಬಾಗಿ, ಹೊಗಳಿ ಈ ಹೊಗಳುಭಟರು ಅವನಿಗೆ ಕಾಣಿಕೆಗಳನ್ನಿತ್ತರು. ಇವು ತಮ್ಮ ಆಸ್ಥಾನಿಕರಿಗೆ ಕೂಡ ನೀಡಲು ಯೋಗ್ಯವಾಗಿರದಂಥ ಕಾಣಿಕೆ(ನಜರಾನಾ)ಗಳಾಗಿದ್ದವು.

೧೭ನೆಯ ಶತಮಾನದ ಈ ದೃಶ್ಯವಿವರ ೧೮ನೆಯ ಶತಮಾನದ ಮಧ್ಯಕಾಲೀನ ಸಮಯಕ್ಕೆ ತೀಕ್ಷ್ಣ ಬದಲಾವಣೆ ಹೊಂದಿತು. ಸಮುದ್ರದಾಚೆಯಿಂದ ಆಶ್ರಯ ಮತ್ತು ವ್ಯಾಪಾರ ನಡೆಸುವುದಕ್ಕೆ ಸಹಾಯ ಯಾಚಿಸಿದ ಅಣಕ ವ್ಯಕ್ತಿಗಳೆಂದು ಯಾರನ್ನು ಕಾಣಲಾಗುತ್ತಿತ್ತೋ, ಅವರು ಅರ್ಧ ಶತಮಾನದ ಅವಧಿಯಲ್ಲಿ ಅಧಿಕಾರ ಕಸಿದುಕೊಳ್ಳುವ, ರಾಜಕೀಯ ಒಳಸಂಚು ನಡೆಸಿ, ಆಸ್ಥಾನದ ನಿರ್ಣಯಗಳಲ್ಲಿ ಹಸ್ತಕ್ಷೇಪ ಮಾಡಿ ಸ್ಥಳೀಯ ರಾಜಕುಮಾರರನ್ನು ಸಿಂಹಾಸನಕ್ಕೇರಿಸುವ ಮತ್ತು ಸಿಂಹಾಸನದಿಂದಿಳಿಸುವಷ್ಟು ಪ್ರಬಲರಾಗಿ ದ್ದರು. ಬಿಳಿವ್ಯಕ್ತಿಯ ವಿಲಕ್ಷಣತೆ ಕಂಡು ಈಗ ಪೂರ್ವದವರು ನಗುತ್ತಿರಲಿಲ್ಲ. ಈಗ ಬಿಳಿಯ, ಹಾಸ್ಯಾಸ್ಪದ ವ್ಯಕ್ತಿಯಾಗಿರುವುದಕ್ಕಿಂತಲೂ ಒಂದು ಗೂಢ ಪ್ರಶ್ನೆಯಾಗಿದ್ದ. ಈ ಬಿಳಿಯ ದೆವ್ವ ಒಂದು ನಿಗೂಢ ಪ್ರಶ್ನೆಯಾಗಿರದೆ ಇದೊಂದು ಸಮಸ್ಯೆಯಾಗಿತ್ತು; ಒಂದು ಒಗಟಾಗಿತ್ತು.

ಅನಂತರ ಸ್ಥಳೀಯ ರಾಜಕುಮಾರರು, ಭೂಮಾಲೀಕರಂಥ ಗಣ್ಯರು, ಗೌರವಾನ್ವಿತರು ಮತ್ತು ಸೈನ್ಯದಲ್ಲಿನ ಪ್ರಮುಖರು ಯುರೋಪಿಯನ್ನರ ಜೊತೆ ಎಚ್ಚರಿಕೆಯಿಂದ ವ್ಯವಹರಿಸ ತೊಡಗಿದರು. ಕೆಲವರು ಯುರೋಪಿಯನ್ನರಿಂದ ಲಾಭ ಪಡೆದುಕೊಂಡರು, ಉಳಿದವರು ಅವರಿಂದ ದೂರ ಉಳಿದರು. ಪೂರ್ವದಲ್ಲಿ ಈ ತೆರನಾದ ಅಹಿತಕರ ಸಂಬಂಧದ ಬೆಳವಣಿಗೆಗೆ, ಯುರೋಪಿಯನ್ನರ ನಿಲುವು, ಕೆಚ್ಚು ಮತ್ತು ಮಹಾದಾಸೆಗಳೇ ಕಾರಣ. ಈ ಘರ್ಷಣೆಯ ಸಮರದಲ್ಲಿ, ಆಳುವ ಮತ್ತು ಶ್ರೀಮಂತ ವರ್ಗದವರು ಸೋಲುವಂತೆ ಕಂಡರು. ರಾಜಕೀಯ, ನ್ಯಾಯಾಂಗ ಮತ್ತು ಕಂದಾಯದ ಅಧಿಕಾರ ಮಟ್ಟದಲ್ಲಿ, ಪರಂಪರಾಗತವಾಗಿ ತೆರಿಗೆ ವಸೂಲಿ ಮಾಡುತ್ತಿದ್ದ ಜಮೀನ್ದಾರರು ಮತ್ತು ಅಂಥ ಕೆಲವರನ್ನು ಬದಲಾಯಿಸಿ ನೇಮಿಸಿದ್ದು ಅವರ ಅಸಮಾಧಾನಗಳನ್ನು ಹೊರಹೊಮ್ಮಿಸಿತು. ಅನೇಕ ಮೇಲ್ವರ್ಗದವರು ಪರಂಪರಾಗತವಾಗಿ ಪಡೆಯುತ್ತಿದ್ದ ಸೌಲಭ್ಯಗಳಿಂದ ವಂಚಿತರಾಗಿದ್ದರಲ್ಲದೆ, ಸ್ಥಳೀಯ ಸಾಮಾಜಿಕ-ಧಾರ್ಮಿಕ ವಿಚಾರಗಳಲ್ಲಿ ಯುರೋಪಿಯನ್ನರು ಹಸ್ತಕ್ಷೇಪ ಮಾಡುವುದು ತೀವ್ರ ಹಾಗೂ ಅಸಂಘಟಿತ ಪ್ರತಿಕ್ರಿಯೆಗೆ ಎಡೆ ಮಾಡಿಕೊಟ್ಟಿತು.

ಆರಂಭಿಕ ಪ್ರತಿಕ್ರಿಯೆಗಳು

೧೯ನೆಯ ಶತಮಾನದ ಮೊದಲರ್ಧದ ಅವಧಿಯಲ್ಲಿ ಯುರೋಪಿಯನ್ನರು ಮತ್ತು ಸ್ಥಳೀಯರ ಆಶೋತ್ತರಗಳ ಮಧ್ಯ ನಡೆದ ಘರ್ಷಣೆಗಳು ಸಂಘಟಿತವಾಗಿರದೆ, ಆವೇಗದ ಮೊದಲ ಪ್ರತಿಕ್ರಿಯೆಗಳಾಗಿದ್ದವು. ಸಹಾಯಕ ಸೈನ್ಯಪದ್ಧತಿ ಇರಲಿ, ಅಥವಾ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯೇ ಇರಲಿ ಅಥವಾ ವ್ಯಾಪಾರದಲ್ಲಿ ಹೆಚ್ಚಿನ ಸೌಲಭ್ಯಗಳು ಅಥವಾ ಲೌಕಿಕಕ್ಕೆ ಮೀರಿದ ಹಕ್ಕುಗಳ ವಿಷಯದಲ್ಲಿ, ಅನೇಕ ಸಲ ಯುರೋಪಿಯನ್ನರೇ ಸ್ಥಳೀಯರನ್ನು ಪ್ರಚೋದಿಸಿ ಅವರು ಸಶಸ್ತ್ರ ಹೋರಾಟಕ್ಕಿಳಿಯುವಂತೆ ಮಾಡುತ್ತಿದ್ದರು. ಈ ದಂಗೆಗಳು ಕೂಡ ಯೋಜಿತವಾಗಿ ಅಥವಾ ಸುಸಂಘಟಿತವಾಗಿರುತ್ತಿರಲಿಲ್ಲ. ಅವರು ಯಾವುದೇ ರಾಷ್ಟ್ರೀಯತೆಯ ಭಾವನೆ ಅಥವಾ ಸಾಮ್ರಾಜ್ಯವಾದಕ್ಕೆ ಎದುರಾಗಿ ರಾಷ್ಟ್ರೀಯತೆ, ಪೂರ್ವಕ್ಕೆ ಎದುರಾಗಿ ಪಶ್ಚಿಮ, ಭದ್ರವಾಗಿ ನೆಲೆಸಿದ್ದ ಸಂಪ್ರದಾಯವಾದಕ್ಕೆ ಎದುರಾಗಿ ನುಗ್ಗುತ್ತಿದ್ದ ಆಧುನಿಕತೆ ಮುಂತಾದ ಸಿದ್ಧಾಂತಗಳ ಬಗ್ಗೆ ಕೊಚ್ಚಿಕೊಳ್ಳುತ್ತಿರಲಿಲ್ಲ. ಈ ದಂಗೆಗಳು ಬ್ರಿಟಿಷ್ ವಿರೋಧಿ ಅಥವಾ ಫ್ರೆಂಚ್ ವಿರೋಧಿ ಅಥವಾ ಒಂದು ನಿರ್ದಿಷ್ಟ ಭಾಗದಲ್ಲಿ ಆಳುತ್ತಿದ್ದ ಇತರ ಯುರೋಪಿಯನ್ನರ ವಿರುದ್ಧವಾಗಿರುತ್ತಿತ್ತೆಂಬುದು ಸ್ಪಷ್ಟ.

ಇಂತ ಘಟನೆಗಳು, ಆರಂಭಿಕ ಪ್ರತಿಕ್ರಿಯೆಗಳು, ಇತರ ಎಲ್ಲ ಘಟನೆಗಳು ಮತ್ತು ಬಂಡಾಯಗಳು ಭಾರತದಲ್ಲಿ ೧೮೫೭ರ ಚಳವಳಿಗೆಡೆ ಮಾಡಿಕೊಟ್ಟವಲ್ಲದೆ ಇಂಥ ಚಳವಳಿಗಳ ಉತ್ತಮ ಉದಾಹರಣೆಗಳಾದವು. ಚೀನಾದಲ್ಲಿನ ತೈಪಿಂಗ್ ಬಂಡಾಯ (೧೮೫೧-೬೪), ಇಂಡೋನೇಶಿಯಾದಲ್ಲಿನ ಜವಾ ಮತ್ತು ಪ್ಯಾಡ್ರಿ ಯುದ್ಧ(೧೮೨೦-೨೫)ಗಳು ಮತ್ತು ಜಪಾನದಲ್ಲಿ ವಿವಾದಾತ್ಮಕ ಘಟನೆಯಾದ ಅರಿಸ್ಟ್ರೋಕ್ರ್ಯಾಟಿಕ್ ದಂಗೆ (೧೮೬೮)ಗಳೇ ಇತರ ಉದಾಹರಣೆಗಳು.

ಇದು ಏಷ್ಯಾಯಾದಲ್ಲಿ ವಸಾಹತು ಪದ್ಧತಿಯ ಔನ್ನತ್ಯದ ಕಾಲವಾಗಿತ್ತು. ಆರಂಭಿಕ ಈ ಪ್ರತಿಕ್ರಿಯೆಗಳಲ್ಲಿ ಬಹಳಷ್ಟು ಪ್ರಸಂಗಗಳಲ್ಲಿ ಸಂಘಟನೆ ಇರದ ಕಾರಣ ಅವು ಸ್ಥಳೀಯ ಜನರ ಮನಸ್ಸಿನ ಮೇಲೆ ಗಾಢವಾದ ಗಾಯದ ಕಲೆ ಮಾಡಿದವು. ಅನಂತರದ ಅವಧಿಯು, ಬಿರುಗಾಳಿಯ ಮೋಡಗಳು ಕೂಡುವ ಮೊದಲಿನ ಶಾಂತ ವಾತಾವರಣದಂತಿತ್ತು. ಮೇಲ್ಮೈಯ ಮೇಲೆ ಕಾಣುತ್ತಿದ್ದ ಪ್ರಶಾಂತತೆಯ ಕೆಳಗಡೆ ಚಂಡಮಾರುತ ಅಡಗಿತ್ತು. ಸುಮಾರು ಅರ್ಧಶತಮಾನದವರೆಗೆ ಎರಡೂ ಪಕ್ಷದವರು ಒಪ್ಪಲು ಸಿದ್ಧವಿರದಂಥ ಆತಂಕದ ಯುದ್ಧ ವಿರಾಮ ಕಂಡುಬಂತು. ಇದೇ ಸಮಯಕ್ಕೆ ಪಶ್ಚಿಮ ವಸಾಹತು ಪ್ರದೇಶಗಳ ಮೇಲೆ ತನ್ನ ಪ್ರಭುತ್ವವನ್ನು ಬಿಗಿಗೊಳಿಸಿತಲ್ಲದೆ ಕೆಲವು ಒಪ್ಪಬಹುದಾದ ಮತ್ತು ಕೆಲವು ಒಪ್ಪಲಸಾಧ್ಯವಾದ ತನ್ನ ವಿಚಾರಗಳನ್ನು ಮನಸ್ಸಿರದವರ ಮೇಲೆ ಭದ್ರವಾಗಿ ಹೇರಲೆತ್ನಿಸಿತು. ಹೋರಾಟ ವ್ಯರ್ಥವೆಂದು ಕಂಡುಕೊಂಡ ಕೆಲವು ಸ್ಥಳೀಯರು ವಸಾಹತುಗಾರರ ಜೊತೆಗೆ ಕೈಗೂಡಿಸಿದರಲ್ಲದೆ, ಅವರ ದಾರಿಯನ್ನರಿತುಕೊಂಡರು. ಹೀಗಾಗಿ ವಸಾಹತುಗಾರರ ಸಂಸ್ಥೆಗಳಲ್ಲಿ ಅವರಿಗೆ ಅನುಕೂಲಕರ ಹುದ್ದೆಗಳು ದೊರೆತವು. ಪರಕೀಯರ ಆಳ್ವಿಕೆಯ ಕಟ್ಟಡದ ರಚನೆಯಲ್ಲಿ ಇವರು ಸಹಕಾರಿಗಳೆಂಬ ಹಣೆಪಟ್ಟಿ ತಮಗೆ ಹಚ್ಚುವ ಅಪಾಯವಿದೆಂದು ತಿಳಿದಿದ್ದರೂ, ಅವರು ಎಲ್ಲ ಕೆಲಸಗಳನ್ನು ತಮಗನಿಸಿದಂತೆ ನಡೆಸಲು ದೊರೆತ ಸದವಕಾಶವನ್ನು ಚೆನ್ನಾಗಿ ಬಳಸಿಕೊಂಡು ಲಾಭ ಪಡೆದುಕೊಂಡರು. ಪಶ್ಚಿಮದವರು ತಮ್ಮ ಸಂರಕ್ಷಕರೆಂದು ಪ್ರಾಮಾಣಿಕವಾಗಿ ನಂಬಿದ್ದ ಬಹಳಷ್ಟು ಕೆಂಪು ಬಾಬು (ಭಾರತದ ಸಂದರ್ಭದಲ್ಲಿ)ಗಳೇ ಮೊದಲು ಮನವಿ ಮಾಡಿದ ಸೌಮ್ಯವಾದಿಗಳು.

‘‘ಕೆಂಪು ಬಣ್ಣದ ಆದರೆ ಬಿಳಿಯ ಮನಸ್ಸಿನ’’ (ಮೆಕಾಲೆ) ಗುಮಾಸ್ತರ ಮತ್ತು ಇತರ ಅಧಿಕಾರಿಗಳ ಸಮೂಹದಲ್ಲಿ ಕೂಡಾ, ಪಶ್ಚಿಮದಲ್ಲಿ ಶಿಕ್ಷಣ ಪಡೆದಿದ್ದ ಕೆಲವು ಸ್ಥಳೀಯರಿಂದ ಅಸ್ಪಷ್ಟ ಪ್ರತಿಭಟನೆಗಳು ಮೊದಲಿಗೆ ಕೇಳಹತ್ತಿದವು. ಪಶ್ಚಿಮದ ಜ್ಞಾನ ಮತ್ತು ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಪ್ರಜರಾಜ್ಯ, ರಾಷ್ಟ್ರೀಯತ್ವ ಮುಂತಾದಂಥ ವಿಚಾರಗಳು ಅಜ್ಞಾನದ ವಿವಿಧ ಮಟ್ಟದಲ್ಲಿ ಸೂಕ್ಷ್ಮವಾಗಿ ಬಸಿಯಹತ್ತಿದವು. ವಸಾಹತು ಪದ್ಧತಿಯ ವಿರುದ್ಧ ಬೆಳೆಯುತ್ತಲಿದ್ದ ಅಸಮಾಧಾನ, ಕೆಲವೊಮ್ಮೆ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ, ಮತ್ತೆ ಕೆಲವೊಮ್ಮೆ ಅಹಿಂಸಾತ್ಮಕ ಸತ್ಯಾಗ್ರಹದಲ್ಲಿ ವ್ಯಕ್ತವಾಗುತ್ತಿತ್ತು. ಇದು ಕಾಲ ಕಾಲಕ್ಕೆ, ಸ್ಥಳದಿಂದ ಸ್ಥಳಕ್ಕೆ ಬೇರೆಯಾಗಿರುತ್ತಿತ್ತು. ಸ್ಥಳೀಯರಿಗೆ ಗಾಂಧೀಜಿ, ಹೊಚಿಮಿನ್, ಚಿಯಾಂಗಕೈಶೆಕ್, ಮಾವೊತ್ಸೆ ತುಂಗ, ಸುಕಾರ್ನೊ, ಮಸ್ಸಾದಿಕ್, ನಾಸ್ಟರ್ ಮತ್ತು ಬೇರೆ ಇಂಥವರು ಮಾದರಿಯಾದರು.

ಈ ಅವಧಿ, ಅದರಲ್ಲೂ ವಿಶೇಷವಾಗಿ ೨೦ನೆಯ ಶತಮಾನದ ಮೊದಲರ್ಧದ ಅವಧಿ ಯಲ್ಲಿ, ರಾಷ್ಟ್ರೀಯತಾಭಾವ ಹೊಂದಿದ್ದು ರಾಷ್ಟ್ರೀಯ ಅನನ್ಯತೆ ಮತ್ತು ರಾಷ್ಟ್ರತ್ವವನ್ನರಸುವ, ಸುಸಂಘಟಿತ ಹಾಗೂ ಸಂಘಟಿತ ಚಳುವಳಿಯೊಂದು ಕಂಡಿತು. ಭಾರತದಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಚೀನಾದಲ್ಲಿ ಕುಮಿನ್ ತಾಂಗ್ ಮತ್ತು ಚೈನೀಸ್ ಕಮ್ಯುನಿಸ್ಟ್ ಪಾರ್ಟಿ, ವಿಯೆಟ್ನಾಮಿನಲ್ಲಿ ವಿಯೆಟ್ಕಾಂಗ್ ಮತ್ತು ಇಂಡೋನೇಶಿಯಾ ದಲ್ಲಿ ಸರ್ಕತ್-ಎ-ಇಸ್ಲಾಮ್‌ಗಳ ಉಗಮದಿಂದಾಗಿ ವಸಾಹತು ಪದ್ಧತಿಯ ಆಳ್ವಿಕೆಯ ಮುಂದುವರಿಕೆಗೆ ತಡೆಯುಂಟಾಯಿತು. ಈಗ ಅದು ಆವೇಗದ ಪ್ರತಿಕ್ರಿಯೆಯಾಗಿ ಉಳಿಯದೆ, ಮೊದಲಿ ಗಿಂತಲೂ ಹೆಚ್ಚು ಯೋಜಿತ ಹಾಗೂ ಸಂಘಟಿತವಾಗಿತ್ತು. ಪಶ್ಚಿಮದಲ್ಲಿ ಶಿಕ್ಷಣ ಪಡೆದಿದ್ದವರೇ ಹೆಚ್ಚು ಕಡಿಮೆ ನಾಯಕತ್ವ ವಹಿಸಿದ್ದರಿಂದ ಅವರು ಪಶ್ಚಿಮದ ವಿಚಾರಗಳನ್ನೇ ಅನುಕರಿಸಿದ್ದುಂಟು.

ಒಂದು ರಾಷ್ಟ್ರ, ರಾಷ್ಟ್ರೀಯ ಅನನ್ಯತೆ ಮತ್ತು ರಾಷ್ಟ್ರೀಯತೆಯ ವಿಚಾರ, ಪರಕೀಯರ ಆಳ್ವಿಕೆ ಮತ್ತು ಸ್ಥಳೀಯ ಅನನ್ಯತೆಯ ಅಭಾವವನ್ನು ಕುರಿತು ಪ್ರಶ್ನಿಸತೊಡಗಿದರು. ೨೦ನೆಯ ಶತಮಾನದ ಪ್ರಾರಂಭ ಮತ್ತು ಮಧ್ಯಭಾಗದಲ್ಲಿ, ಪ್ರಸಂಗಕ್ಕನುಸಾರವಾಗಿ, ಮೂಲತಃ ಬ್ರಿಟಿಷ್ ವಿರೋಧಿ ಅಥವಾ ಫ್ರೆಂಚ್ ವಿರೋಧಿಯಾದ ರಾಷ್ಟ್ರೀಯ ಪ್ರಜ್ಞೆ ಹೊರಹೊಮ್ಮಿತು. ರಾಷ್ಟ್ರೀಯ ಚಳವಳಿ ಅಥವಾ ಸ್ವಾತಂತ್ರ್ಯ ಹೋರಾಟಗಳ ಸಂಭ್ರಮದ ಆ ಕ್ಷಣದಲ್ಲಿ ಸಂಕುಚಿತ ಭೇದ ಭಾವಗಳು ಕರಗಿದವೆಂದೆನಿಸಿತು. ರಾಷ್ಟ್ರೀಯತಾವಾದಿಗಳ ಅಲೆಯನ್ನು ಬುಡಮೇಲು ಮಾಡಲು ಮತ್ತು ಅಡಗಿಸಲು ಯುರೋಪಿಯನ್ನರು ತಮಗೆ ಸಾಧ್ಯವಾದ ಎಲ್ಲ ರೀತಿಯಲ್ಲಿ ಪ್ರಯತ್ನಿಸಿದರು. ಅವರು ಅಧಿಕಾರದಲ್ಲುಳಿದುಕೊಳ್ಳಲು ಎಲ್ಲ ಸಮಂಜಸ ಅಥವಾ ಅಸಮಂಜಸ ಮಾರ್ಗಗಳನ್ನನುಸರಿಸಿದರಾದರೂ, ಕೊನೆಗೆ ಎರಡನೆಯ ಜಾಗತಿಕ ಯುದ್ಧದ ನಂತರ, ಸ್ಥಳೀಯ ಜನರ ಆಶೋತ್ತರಗಳಿಗೆ ಮಣಿದು ಹಿಂದೆಗೆದುಕೊಳ್ಳಬೇಕಾಯಿತು. ಅವರ ಮರಳಿಕೆಯ ಜಡಿನಲ್ಲಿ ಏಶಿಯಾದ ಎಷ್ಟೋ ಭಾಗಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಆಶೆ ಮತ್ತು ಆಶೋತ್ತರಗಳು ಛಿದ್ರಗೊಂಡಂಥ ಪ್ರಸಂಗಗಳು ಕಂಡುಬಂದವು. ನಿರ್ವಸಾಹತೀಕರಣದ ನಂತರ ಸ್ವತಂತ್ರ ರಾಷ್ಟ್ರಗಳ ಭವಿಷ್ಯ ನಿರ್ಮಾಣದಲ್ಲಿ ಭದ್ರವಾದ ವಾಸ್ತವಿಕತೆಗಳು, ಅತೃಪ್ತಿ ಮತ್ತು ತಮ್ಮ ಮಧ್ಯದ ಭಿನ್ನಾಭಿಪ್ರಾಯಗಳಿಂದಾಗಿ ಅವರಿಗೆ ಭ್ರಾಂತಿ ನಿವಾರಣೆಯಾಯಿತು. ಎಷ್ಟೋ ನಿಷ್ಪ್ರಮಾಣದ ಮತ್ತು ಸ್ವಾರ್ಥ ನಿರ್ಣಯಗಳಿಂದಾಗಿ ಹಳೆಯ ನಾಗರಿಕತೆಗಳಿಗೆ ಧಕ್ಕೆ ತಗುಲಿ, ದೇಶಗಳ ವಿಭಜನೆಯಾಯಿತಲ್ಲದೆ ಜನರು ಮನೆಮಾರು ಕಳೆದುಕೊಂಡರು. ಇದು ನಿರ್ವಸಾಹತೀ ಕರಣದ ದುರಂತ.

ಸ್ವಾತಂತ್ರ್ಯ ಬರುತ್ತಿದ್ದಂತೆ, ಸ್ಥಳೀಯ ಸ್ಥಾನಿಕ ಸರಕಾರಗಳು ತಮ್ಮ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ನಿರ್ವಹಿಸುವುದು ಭಗೀರಥ ಪ್ರಯತ್ನವೆಂಬುದನ್ನು ಮನ ಗಂಡವಲ್ಲದೆ, ಸಮಾಜದಲ್ಲಿ ಕಂಡುಬಂದ ಭಿನ್ನಾಭಿಪ್ರಾಯಗಳ ಜೊತೆ ಹೆಣಗಾಡು ವಂತಾಯಿತು. ಇದರಿಂದಾಗಿ ರಾಜಕೀಯ ಅನನುಭವ, ಸಾಮಾಜಿಕ ಅಶಾಂತಿ, ಆರ್ಥಿಕ ಅವಲಂಬನೆ ಅತಿಯಾದವು. ಹೀಗಾಗಿ ಹೊಸ ಸ್ವತಂತ್ರ ರಾಷ್ಟ್ರಗಳು ಅಸ್ಥಿರತೆ ಮತ್ತು ವಿಚ್ಛಿದ್ರತೆಯ ಅಪಾಯ ಎದುರಿಸಬೇಕಾಯಿತು. ಅಭಿವೃದ್ದಿಶೀಲತೆ ಮತ್ತು ಅಸ್ಥಿರತೆಯಿಂದಾಗಿ ಹೊಸ ರಾಷ್ಟ್ರಗಳು ಆರ್ಥಿಕ ಹಾಗೂ ರಕ್ಷಣೆಗಾಗಿ ಪಶ್ಚಿಮ ಮತ್ತು ಮುಂದುವರೆದ ರಾಷ್ಟ್ರಗಳ ಸಹಾಯ ಯಾಚಿಸಬೇಕಾಯಿತು. ಇದರ ಫಲವೆಂದರೆ, ರಾಜಕೀಯ ಸ್ವಾತಂತ್ರ್ಯ ಪಡೆದುಕೊಂಡದ್ದಾಗಿದ್ದರೂ ಆರ್ಥಿಕ ಮತ್ತು ರಕ್ಷಣಾ ಬೇಡಿಕೆಗಳಿಗಾಗಿ ಮತ್ತೆ ಪಶ್ಚಿಮವನ್ನವಲಂಬಿಸಬೇಕಾಯಿತು. ಆಫ್ರಿಕಾ ಮತ್ತು ಏಷ್ಯಾದ ದೇಶಗಳ ಪಶ್ಚಿಮದ ಮೇಲಿನ ಈ ಹೊಸ ಅವಲಂಬನೆಯಿಂದಾಗಿ, ಹಳೆಯ ವಸಾಹತು ಪದ್ಧತಿಯ ಒಡೆಯರು ಹೊಸರೀತಿ ಅಥವಾ ಹೊಸವೇಷದಲ್ಲಿ ಈ ಭಾಗಕ್ಕೆ ಮರಳಿ ಬಂದರು.

ಎರಡನೆಯ ಸಲದ ಈ ಆಗಮನದ ಹೆಚ್ಚು ಸೂಕ್ಷ್ಮ ಹಾಗೂ ಆಧುನಿಕವಾಗಿದ್ದು, ಇದು ಕೇವಲ ಅಪ್ರತ್ಯಕ್ಷವಾಗಿ ಪ್ರಭಾವ ಬೀರುವ ಮತ್ತು ನಿಯಂತ್ರಿಸುವಂಥದ್ದಾಗಿತ್ತು. ಆರ್ಥಿಕ ಸಹಾಯ ಮತ್ತು ಸೈನಿಕ ಸಾಮಗ್ರಿಗಳ ಪೂರೈಕೆಯ ಅವಕಾಶದಿಂದಾಗಿ ಹೊಸ ರಾಷ್ಟ್ರಗಳು ಪಶ್ಚಿಮಕ್ಕೆ ಉಪಕೃತವಾದವಲ್ಲದೆ ಅವಲಂಬಿತ ಕೂಡಾ ಆದವು. ಇದರಿಂದಾಗಿ ಹಳೆಯ ವಸಾಹತು ಪ್ರದೇಶಗಳ ಬೆಳವಣಿಗೆಗೆ ಮತ್ತು ಅಭಿವೃದ್ದಿಗೆ ಪಶ್ಚಿಮ ಮತ್ತೆ ಅನಿವಾರ್ಯ ವಾಯಿತು. ಇದಕ್ಕಾಗಿ ಜಾಗತಿಕ ವ್ಯಾಪಾರ ವಿನಿಮಯ ಮತ್ತು ಆರ್ಥಿಕ ನಿಯಂತ್ರಣ ಪಶ್ಚಿಮದ ವಶವಾಗುವಂತೆ ಬೆಂಬಲಿಸಿದ್ದು ಅವರು ತೆತ್ತಬೆಲೆ. ಅಂತಾರಾಷ್ಟ್ರೀಯ ಸಭೆಗಳಲ್ಲಿ ಕೂಡಾ ಈ ಅಧೀನ ಹಾಗೂ ಅಭಿವೃದ್ದಿಶೀಲ ದೇಶಗಳಿಗೆ ಬೆಂಬಲದ ಆಶ್ವಾಸನೆ ನೀಡಲಾಯಿತು. ಹೀಗಾಗಿ ಪಶ್ಚಿಮವು ತನ್ನೆಲ್ಲ ಶೋಷಣೆಯ ಕೌಶಲದಿಂದ ಮರಳಿತು. ಆದರೆ ಈ ಸಲ ಸ್ಥಳೀಯರ ರಾಜಕೀಯ ಯಂತ್ರ ಇಷ್ಟಪಟ್ಟೋ ಅಥವಾ ಇಷ್ಟವಿಲ್ಲದೆಯೋ ಅವರು ತಮ್ಮ ಶೋಷಣೆಯ ಕಾರ್ಯ ನಡೆಸುವುದಕ್ಕೆಡೆ ಮಾಡಿಕೊಟ್ಟಿತು.

ಆರ್ಥಿಕ ನೀತಿ, ರಕ್ಷಣಾ ತಂತ್ರ ಮತ್ತು ಅಂತಾರಾಷ್ಟ್ರೀಯ ನಿರ್ಣಯಗಳಿಗೆ ಸಂಬಂಧಿಸಿ ದಂತೆ ತೃತೀಯ ಜಗತ್ತು ಎರಡನೆಯ ಅಥವಾ ಮೂರನೆಯ ಪಾತ್ರ ವಹಿಸಿ ತನ್ನ ಬೆಂಬಲ ಸೂಚಿಸುತ್ತಿರುವುದು, ಈ ನೀತಿಯ ಅಂತಾರಾಷ್ಟ್ರೀಯ ಕವಲೊಡೆಯುವಿಕೆಗೆ ನಿದರ್ಶನ. ವಸಾಹತು ಪದ್ಧತಿಯ ಮನೋಭಾವ ಇನ್ನೂ ಮುಖ್ಯ ಪಾತ್ರವಹಿಸುತ್ತಿರುವಲ್ಲಿ, ವಸಾಹತು ನಂತರದ ಅನನ್ಯತೆಗೆ ಇದು ಸಾಕಷ್ಟು ಭಂಗ ತಂದಿದೆ. ಹೀಗಾಗಿ, ಹೆಚ್ಚು ಮುಂದುವರಿದ ಹಾಗೂ ಯೋಜಿತ ನಿರ್ವಹಣೆ ಮತ್ತು ವಿಶ್ವದಾದ್ಯಂತ ಸಂಪನ್ಮೂಲ ಶೇಖರಣೆ ಮಾಡ ಬಲ್ಲ ಶ್ರೀಮಂತ ಮತ್ತು ಅಭಿವೃದ್ದಿ ದೇಶಗಳದೇ ಇಲ್ಲಿ ಮುಖ್ಯ ಪಾತ್ರ. ಇದು ತೃತೀಯ ಜಗತ್ತು ತೆರುತ್ತಿರುವ ಬೆಲೆ. ವಿಧಿ ವಿಡಂಬನೆಯೆಂದರೆ, ಹಿಂದಿನ ವಸಾಹತು ಪ್ರದೇಶಗಳು ಶೋಷಣೆಯ ಈ ಹೊಸ ಆಟದಲ್ಲಿ ಮನಃಪೂರ್ವಕವಾಗಿ ಪ್ರತ್ಯಕ್ಷ ಹಾಗೂ ಅಪ್ರತ್ಯಕ್ಷವಾಗಿ ಪಾಲುದಾರರಾಗಿವೆಯಲ್ಲದೆ ತಮ್ಮ ಬೆಂಬಲ ಸೂಚಿಸುತ್ತವೆ.

 

ಪರಾಮರ್ಶನಗ್ರಂಥಗಳು

೧. ಲೆನಿನ್ ವಿ.ಐ., ೧೯೪೭. ಇಂಪೀರಿಯಲಿಸಂ ದಿ ಹೈಯೆಸ್ಟ್ ಸ್ಟೇಜ್ ಆಫ್ ಕ್ಯಾಪಿಟಲಿಸಂ, ಮಾಸ್ಕೊ.

೨. ಫೀಲ್ಡ್‌ಹೌಸ್ ಡಿ.ಕೆ., ೧೯೬೭. ದಿ ಥಿಯರಿ ಆಫ್ ಕ್ಯಾಪಿಟಲಿಸ್ಟ್ ಇಂಪೀರಿಯಲಿಸಂ, ಲಂಡನ್.