ಮಜಲೀಸ್ ಅರಬ್ ಲೀಗ್‌ನ ಮುಖ್ಯ ಅಂಗವಾಗಿ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಸಮಾನ ಪ್ರತಿನಿಧಿತ್ವವಿದೆ. ವರ್ಷದಲ್ಲಿ ಎರಡು ಸಲ ಇದರ ಸಭೆ ಸೇರುತ್ತದೆ. ಅಲ್ಲದೆ ಕನಿಷ್ಠ ಎರಡು ಸದಸ್ಯ ರಾಷ್ಟ್ರಗಳ ಕೋರಿಕೆಯ ಮೇರೆಗೆ ಲೀಗ್‌ನ ವಿಶೇಷ ಅಧಿವೇಶನವನ್ನು ಕರೆಯಬಹುದು. ಮಜಲೀಸ್ ಸದಸ್ಯರಾಷ್ಟ್ರಗಳ ಬಹುಪಕ್ಷೀಯ ಒಪ್ಪಂದಗಳ ಅನುಷ್ಠಾನವನ್ನು ನಿರೀಕ್ಷಿಸುತ್ತದೆ ಮತ್ತು ಸದಸ್ಯರಾಷ್ಟ್ರಗಳ ನಡುವೆ ಉದ್ಭವಿಸುವ ವ್ಯಾಜ್ಯಗಳನ್ನು ಮಾತುಕತೆಯ ಮೂಲಕ ಶಾಂತಿಯುತವಾಗಿ ಪರಿಹರಿಸಲು ಪ್ರಯತ್ನ ಮಾಡುತ್ತದೆ. ಬೇರೆ ಬೇರೆ ಸಮಿತಿಗಳ ಕಾರ್ಯದೊಂದಿಗೆ ಸಹಕರಿಸುವುದಲ್ಲದೆ ಸದಸ್ಯ ರಾಷ್ಟ್ರಗಳ ರಾಜನೈತಿಕತೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ರಕ್ಷಿಸುತ್ತದೆ. ಲೀಗ್‌ನ ಅಧ್ಯಕ್ಷರು ರೊಟೇಶನ್ ಪ್ರಕಾರ ಸಮಾನತೆ ಕಂಡುಕೊಳ್ಳಲು ಬೇರೆ ಬೇರೆ ರಾಷ್ಟ್ರಕ್ಕೆ ಮುಕ್ತ ಅವಕಾಶ ಇದೆ. ಇದರ ಕಾರ್ಯಾಲಯ ಈಜಿಪ್ಟಿನ ಕೈರೋದಲ್ಲಿದೆ. ಅದಕ್ಕೊಬ್ಬ ಕಾರ್ಯದರ್ಶಿ ಇರುತ್ತಾನೆ. ಲೀಗ್‌ನ ಒಬ್ಬ ಸ್ಥಾಯಿ ನಿರೀಕ್ಷಕನು ನ್ಯೂಯಾರ್ಕ್‌ನ ಸಂಯುಕ್ತ ರಾಷ್ಟ್ರದ ಮುಖ್ಯಾಲಯದಲ್ಲಿ ಅರಬ್‌ರ ನ್ಯಾಯಬದ್ಧ ಹಕ್ಕುಗಳನ್ನು ಪ್ರತಿನಿಧಿಸುತ್ತಾನೆ. ಅಲ್ಲದೆ ಸಂಯುಕ್ತ ರಾಷ್ಟ್ರ ಸಂಘದಂತಹ ಅಂತಾರಾಷ್ಟ್ರೀಯ ಸಂಘಟನೆ ಗಳೊಂದಿಗೆ ಅನೌಪಚಾರಿಕ ಸಂಬಂಧಗಳನ್ನು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂದೇಶವಾಹಕವಾಗಿಯೂ ಕಾರ್ಯ ನಿರ್ವಹಿಸುತ್ತದೆ. ಕೆಲವೊಮ್ಮೆ ಸದಸ್ಯರಾಷ್ಟ್ರಗಳ ನಡುವೆ ಔಪಚಾರಿಕ ಒಪ್ಪಂದಗಳನ್ನೂ ಮಾಡಿಕೊಳ್ಳುತ್ತದೆ. ೧೯೮೬ ಮೇ ತಿಂಗಳಲ್ಲಿ ಹೊಸ ದೆಹಲಿಯೂ ಲೀಗ್ ಪ್ರತಿನಿಧಿಗಳಿಗೆ ತಟಸ್ಥ ರಾಷ್ಟ್ರಗಳ ಮಟ್ಟವನ್ನು ನೀಡಿತು.

ಈ ಎಲ್ಲ ಧೋರಣೆಗಳನ್ನಿಟ್ಟುಕೊಂಡು ಬೆಳೆದ ಅರಬ್ ಲೀಗ್ ಲೆಬೆನಾನ್‌ನ ಏಕೀಕರಣದಲ್ಲಿ, ಲಿಬಿಯಾದ ಸ್ವಾತಂತ್ರ್ಯ ಹೋರಾಟದಲ್ಲಿ, ಅಂಗೋಲ-ಯಮನಿ ವ್ಯಾಜ್ಯ ದಲ್ಲಿ ೧೯೫೪ರ ಜುಲೈಯಲ್ಲಿ ನಡೆದ ಅಂಗ್ಲೋ- ಈಜಿಪ್ಪಿನ ಒಪ್ಪಂದದಲ್ಲಿ, ಫ್ರೆಂಚ್ ವಸಾಹತುಶಾಹಿ ಧೋರಣೆಯನ್ನು ವಿರೋಧಿಸುವಲ್ಲಿ ಬಹಳ ಯಶಸ್ವಿಯಾಗಿ ದುಡಿದಿದೆ. ಮುಖ್ಯವಾಗಿ ಪ್ಯಾಲೇಸ್ತೀನ ಪ್ರೆಶ್ಶಿಯಲ್ಲಿ ಲೀಗ್‌ನ ನೀತಿಯಿಂದಾಗಿ ಎಲ್ಲ ಅರಬ್ ರಾಷ್ಟ್ರಗಳು ಇಸ್ರೇಲ್ ವಿರುದ್ಧ ಒಂದೇ ಬಗೆಯ ಹೋರಾಟ ನಡೆಸಲು ಸಹಕಾರಿಯಾಗಿದೆ. ಈ ವಿಚಾರದಲ್ಲಿ ವಿಶ್ವಸಂಸ್ಥೆಯ ಶ್ವೇತಪತ್ರಗಳನ್ನು(ಇಸ್ರೇಲ್ ಪರವಾಗಿರುವುದನ್ನು ಉದಾಹರಣಗೆ ೨೪೨ ಮತ್ತು ೩೩೮ ನಂಬರಿನ ಸೆಕ್ಯೂರಿಟಿ ಕೌನ್ಸಿಲ್‌ನ ರೆಸೆಲೂಶನ್ಸ್) ಖಂಡಿಸಿದ್ದು ಅಲ್ಲದೆ ಪ್ಯಾಲೇಸ್ತೀನರ ಹೋರಾಟವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವೃದ್ದಿಸಿದೆ. ಉದಾಹರಣೆಗೆ ೧೯೬೫ರಲ್ಲಿ ಲೀಗ್ ಒಂದು ಶ್ವೇತಪತ್ರ ಹೊರಡಿಸಿ ಇಸ್ರೇಲನ್ನು ಗೌರವಿಸುವುದಾಗಲಿ, ಸಹಮತ ಒಪ್ಪಂದವಾಗಲಿ, ಅದರ ಇರುವಿಕೆಯನ್ನು ಮನ್ನಿಸುವುದಾಗಲಿ ಮತ್ತು ಅದರೊಂದಿಗೆ ಸದಸ್ಯರಾಷ್ಟ್ರಗಳ ರಾಜಕೀಯ, ಆರ್ಥಿಕ, ವಾಣಿಜ್ಯ ಸಂಬಂಧಗಳನ್ನು ತಳ್ಳಿಹಾಕಿತು ಮತ್ತು ಪ್ಯಾಲೇಸ್ತೀನ್, ಅರಬರ ರಾಜ್ಯವೆಂದು ಹೇಳಿಕೆ ನೀಡಿತು. ಯಹೂದಿಗಳ ವಸಾಹತುಶಾಹಿ ತತ್ವಗಳನ್ನು ಭಯೋತ್ಪಾದನ ಪ್ರಚೋದಿಸುವಿಕೆಯನ್ನು ಖಂಡಿಸಿತು. ಇಷ್ಟಾಗಿ ಲೀಗ್ ೧೯೬೭ರ ಪ್ಯಾಲೇಸ್ತೀನ್ ಇಸ್ರೇಲ್ ಯುದ್ಧದಲ್ಲಿ ಅರಬರ ಪ್ರಾಂತ್ಯಗಳಾದ ಗೋಲನ್ ಹೈಟ್ಸ್, ಗಾಜ ಸ್ಟ್ಯಾಪ್ಸ್, ವೆಸ್ಟ್ ಬ್ಯಾಂಕ್, ಈಸ್ಟ್ ಜರುಸಲೇಂ, ಸಿನೈ ಮರುಭೂಮಿ, ಇವುಗಳನ್ನು ಇಸ್ರೇಲ್ ವಿರುದ್ಧ ರಕ್ಷಿಸಿಕೊಳ್ಳಲಾಗಿಲ್ಲ. ನಂತರ ಈ ಪ್ರದೇಶದಲ್ಲಿ ಇಸ್ರೇಲ್ ವಸತಿಗ್ರಹಗಳನ್ನು ಅಮೆರಿಕದ ಹಣದ ಸಹಾಯದಿಂದ ಕಟ್ಟುವಾಗ ಲೀಗ್ ಪ್ಯಾಲೇಸ್ತೀನ ನ್ಯಾಯಬದ್ಧ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ. ಇದಕ್ಕೆ ಮುಖ್ಯ ಕಾರಣ ಸದಸ್ಯ ರಾಷ್ಟ್ರದೊಳಗಿರುವ ಆಂತರಿಕ ವ್ಯಾಜ್ಯ, ರಾಜವಂಶಗಳ ಪೈಪೋಟಿ ಮತ್ತು ಈಜಿಪ್ಟ್ ದೇಶದ ಅಧಿಕಾರ ದಾಹ.

ಆದರೂ ಅರಬ್ ಲೀಗ್‌ನ ಸಾಧನೆಗಳನ್ನು ತಳ್ಳಿಹಾಕುವಂತಿಲ್ಲ. ಏಕೆಂದರೆ ಲೀಗ್‌ನ ಮುಖ್ಯ ಉದ್ದೇಶವೂ ಅರಬ್ ಜಗತ್ತನ್ನು ವಸಾಹತುಶಾಹಿಯಿಂದ ಮುಕ್ತಿಗೊಳಿಸುವುದು. ಇದನ್ನು ರಾಷ್ಟ್ರೀಯ ಮಟ್ಟದಲ್ಲಿ ಲೀಗ್ ಗಿಟ್ಟಿಸಿಕೊಂಡಿದೆ. ಜೊತೆಗೆ ಪಾಶ್ಚಿಮಾತ್ಯ ರಾಷ್ಟ್ರಗಳ ದಬ್ಬಾಳಿಕೆಯನ್ನು ೧೯೫೦ರ ಈಚೆಗೆ ತಡೆಗಟ್ಟುವಲ್ಲಿ ಯಶಸ್ಸನ್ನು ಕಂಡಿದೆ. ಸದಸ್ಯರಾಷ್ಟ್ರಗಳ ನಡುವೆ ಲೀಗ್ ಆರ್ಥಿಕ, ವಾಣಿಜ್ಯ, ಮುಕ್ತ ವ್ಯಾಪಾರಕ್ಕಾಗಿ, ಬಡತನ ನಿರ್ಮೂಲನ, ರಸ್ತೆ ಸಾರಿಗೆ, ಬಾಹ್ಯಯಾನ, ಅಂಚೆ ಮತ್ತು ತಂತಿ-ಹೀಗೆ ಹಲವು ರಂಗ ಗಳಲ್ಲಿ ಒಪ್ಪಂದಗಳನ್ನು ಏರ್ಪಡಿಸಿದೆ. ಸಾಂಸ್ಕೃತಿಕ ಹಾಗೂ ರಾಜಕೀಯ ರಂಗದಲ್ಲಿಯೂ ಅನೇಕ ಒಪ್ಪಂದಗಳಿಗೆ ಸಹಿ ಹಾಕಿ ಅರಬ್ ರಾಷ್ಟ್ರೀಯತೆ ಸಂಸ್ಕೃತಿ ವಸ್ತುಶಿಲ್ಪಗಳ ಬೆಳವಣಿಗೆಗೆ ಶಕ್ತಿಮೀರಿ ದುಡಿದಿದೆ.

ಇಷ್ಟೆಲ್ಲಾ ಸಾಧನೆಗಳಿದ್ದರೂ ಕೂಡ ಅರಬ್ ಜಗತ್ತನ್ನು ಒಂದುಗೂಡಿಸಬೇಕೆಂಬ ಈ ಸಂಘಟನೆಯ ಮೂಲ ಉದ್ದೇಶ ಇಂದಿಗೂ ಸಫಲವಾಗಿಲ್ಲ. ಏಕೆಂದರೆ ಅರಬ್ ಜಗತ್ತಿ ನೊಳಗೆ ರಾಜಕೀಯ ಅಸ್ಥಿರತೆ ಮತ್ತು ಭಿನ್ನಾಭಿಪ್ರಾಯ (ಉದಾಹರಣೆಗೆ ಸೌದಿ ಅರೇಬಿಯಾ, ಮತ್ತು ಇರಾಕ್, ಇರಾನ್ ಮತ್ತು ಸಿರಿಯಾ; ಕುವೈತ್ ಮತ್ತು ಇರಾಕ್), ವೈಯಕ್ತಿಕ ನೆಲೆ ಯಲ್ಲಿ ಪೈಪೋಟಿ, ಐಡಿಯಾಲಜಿಕಲ್ ಸಮಸ್ಯೆಗಳು ಅರಬ್ ಸಂಘಟನೆಯನ್ನು ದುರ್ಬಲ ಮಾಡಿದೆ.

ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ(ಸೌತ್ ಏಶ್ಯನ್ ಅಸೋಸಿಯೇಶನ್ ಫಾರ್ ರೀಜನಲ್ ಕೊ ಅಪರೇಶನ್, ಸಾರ್ಕ್, ೧೯೮೫)

ದಕ್ಷಿಣ ಏಷ್ಯಾದಲ್ಲಿ ಪ್ರಾದೇಶಿಕ ಒಕ್ಕೂಟದ ಸ್ಥಾಪನೆಗೆ ೧೯೮೦ರ ದಶಕದಲ್ಲಿ ಪ್ರಯತ್ನಪಟ್ಟಿರುವುದು ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ಈ ಪ್ರಾಂತ್ಯದ ಬೆಳವಣಿಗೆಗೆ ಒಂದು ಚೌಕಟ್ಟನ್ನು ಒದಗಿಸಿದೆ. ‘ಸಾರ್ಕ್’ ಒಕ್ಕೂಟದ ಗ್ರಹಿಕೆಯನ್ನು ಮೊದಲ ಬಾರಿಗೆ ಮುಂದಿಟ್ಟವರು ಬಾಂಗ್ಲಾದೇಶದ ಮಾಜಿ ರಾಷ್ಟ್ರಪತಿ ಜಿಯಾಪುರ್ ರೆಹಮಾನ್. ೧೯೭೯ರಲ್ಲಿ ಅಧಿಕೃತವಾಗಿ ಸಾರ್ಕ್ ಶೃಂಗಸಭೆಯನ್ನು ಕರೆದು ದಕ್ಷಿಣ ಏಷ್ಯಾದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ವಾಣಿಜ್ಯ, ಧಾರ್ಮಿಕ ಮತ್ತು ಕೈಗಾರಿಕಾ ಅಭಿವೃದ್ದಿಯನ್ನು ಸಾಧಿಸಲು ಏಳು ಸದಸ್ಯ ರಾಷ್ಟ್ರಗಳೊಂದಿಗೆ ಚರ್ಚಿಸಲಾಯಿತು. ಈ ಹಿನ್ನೆಲೆಯಲ್ಲಿ ನವಂಬರ್ ೧೯೮೦ರಲ್ಲಿ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಭೂತಾನ್, ನೇಪಾಳ, ಮಾಲ್ಡೀವ್ಸ್ ಒಟ್ಟಿಗೆ ಸಭೆ ಸೇರಿ ಒಂದು ಶ್ವೇತಪತ್ರವನ್ನು ಹೊರಡಿಸಲಾಯಿತು. ಈ ಪತ್ರದಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಪರಸ್ಪರ ಸಹಕಾರ ಮತ್ತು ಪ್ರಯೋಜನವನ್ನು ಎಲ್ಲ ರಂಗದಲ್ಲಿಯೂ ಸಾಧಿಸುವುದರ ಬಗ್ಗೆ ವ್ಯಾಖ್ಯಾನಿಸಲಾಯಿತು. ಇದರಿಂದ ತಮ್ಮ ನಡುವೆ ಇರುವ ಆಂತರಿಕ ವ್ಯಾಜ್ಯಗಳನ್ನು ಅಭಿವೃದ್ದಿ ಪಥದಲ್ಲಿರುವ ಅಡಚಣೆಗಳನ್ನು, ಗಡಿವಿವಾದಗಳನ್ನು, ವರ್ಣ, ಜನಾಂಗೀಯ ಮತ್ತು ಭಾಷಾವಾರು ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಲು ಒಂದು ವೇದಿಕೆ ನಿರ್ಮಾಣವಾಯಿತು. ನಂತರ ಸಾರ್ಕ್ ಒಕ್ಕೂಟದ ಸ್ಥಾಪನೆಗೆ ಅನೇಕ ಪ್ರಾಥಮಿಕ ಸಭೆಗಳನ್ನು ಕೊಲೊಂಬೊ (೧೯೮೧), ಇಸ್ಲಾಮಾಬಾದ್ (೧೯೮೨) ಮತ್ತು ಢಾಕಾದಲ್ಲಿ(೧೯೮೩) ಏರ್ಪಡಿಸಲಾಯಿತು. ಸದಸ್ಯ ರಾಷ್ಟ್ರಗಳ ಕಾರ್ಯದರ್ಶಿಗಳು ಮತ್ತು ವಿದೇಶಿ ಮಂತ್ರಿಗಳ ಒಕ್ಕೂಟದ ಶೃಂಗಸಭೆಯಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಸಾಧಿಸುವ ಅನೇಕ ಧೋರಣೆಗಳನ್ನು ತೆಗೆದುಕೊಂಡು ಭೌಗೋಳಿಕ ಸರಹದ್ದನ್ನು ಸಹ ನಿರ್ಧರಿಸಲಾಯಿತು.

ಔಪಚಾರಿಕವಾಗಿ ಢಾಕಾದಲ್ಲಿ ೧೯೮೫ರ ಡಿಸೆಂಬರ್ ೮ರ ಶೃಂಗಸಭೆಯಲ್ಲಿ ಸಾರ್ಕ್ ಸ್ಥಾಪನೆಗೊಂಡಿತು. ಇಲ್ಲಿ ಮಂಡಿಸಿದ ದೃಢೀಕರಣ ಪತ್ರ ಮತ್ತು ಶಾಸನದ ಪ್ರಕಾರ ಸಾರ್ಕ್‌ನ ಏಳು ಸದಸ್ಯರಾಷ್ಟ್ರಗಳ ಅಧ್ಯಕ್ಷರು, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿ ರಾಷ್ಟ್ರೀಯ ಮತ್ತು ಕ್ರೋಡೀಕೃತ ಸ್ವಾವಲಂಬನೆಯನ್ನು ವೃದ್ದಿಸಲು, ಶಾಂತಿಪಾಲನೆ, ಅಭಿವೃದ್ದಿ ಮತ್ತು ಸ್ಥಿರತೆಯನ್ನು ದಕ್ಷಿಣ ಏಷ್ಯಾ ಮತ್ತು ಜಾಗತಿಕ ಮಟ್ಟದಲ್ಲಿ ಕಾಪಾಡಿಕೊಳ್ಳುವುದರ ಬಗ್ಗೆ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಮಾತ್ರವಲ್ಲದೆ ಸದಸ್ಯ ರಾಷ್ಟ್ರಗಳ ಮಧ್ಯೆ ಆರ್ಥಿಕ ಹಾಗೂ ಸಾಂಸ್ಕೃತಿಕ ಸಹಯೋಗಕ್ಕಾಗಿ ಒಂದು ನಿಯೋಗರೂಪದಲ್ಲಿ ಕಾರ್ಯ ನಿರ್ವಹಿಸಲು ಸಾರ್ಕ್‌ನ್ನು ರಚಿಸಲಾಯಿತು.

ಸಾರ್ಕ್‌ನ ಮಹತ್ವಪೂರ್ಣ ಅಂಗ ಸಂಸ್ಥೆಗಳು ಹೀಗಿವೆ

೧. ಹ್ಯೂಮನ್ ರಿಸೋರ್ಸ್ ಡೆವೆಲಪ್‌ಮೆಂಟ್ ಸೆಂಟರ್, ಅಲಹಾಬಾದ್.

೨. ರೀಜನಲ್ ಟ್ಯೂಬರ್ ಕ್ಯುಲಾಸಿಸ್ ಸೆಂಟರ್, ಕಠ್ಮಂಡು.

೩. ರೀಜನಲ್ ಡಾಕ್ಯುಮೆಂಟೇಶನ್ ಸೆಂಟರ್, ನವ ದೆಹಲಿ.

೪. ದಿ ಅಗ್ರಿಕಲ್ಚರ್ ಇನ್‌ಫರ್ಮೆಷನ್ ಸೆಂಟರ್, ನವ ದೆಹಲಿ.

ಸಾರ್ಕ್ ಶೃಂಗ ಸಭೆಗಳು

ಸಭೆ ವರ್ಷ ಸ್ಥಳ
ಒಂದನೆಯ ೧೯೮೫ ಢಾಕಾ
ಎರಡನೆಯ ೧೯೮೬ ಬೆಂಗಳೂರು
ಮೂರನೆಯ ೧೯೮೭ ಕಠ್ಮಂಡು
ನಾಲ್ಕನೆಯ ೧೯೮೮ ಇಸ್ಲಾಮಾಬಾದ್
ಐದನೆಯ ೧೯೯೦ ಮಾಲೆ
ಆರನೆಯ ೧೯೯೧ ಕೊಲಂಬೊ
ಏಳನೆಯ ೧೯೯೩ ಢಾಕಾ
ಎಂಟನೆಯ ೧೯೯೫ ನವ ದೆಹಲಿ
ಒಂಬತ್ತನೆಯ ೧೯೯೭ ಡಾಕಾ
ಹತ್ತನೆಯ ೧೯೯೮ ಕೊಲೊಂಬೊ
ಹನ್ನೊಂದನೆಯ ೨೦೦೨ ಕಠ್ಮಂಡು
ಹನ್ನೆರಡನೆಯ ೨೦೦೪ ಇಸ್ಲಾಮಾಬಾದ್
ಹದಿಮೂರನೆಯ ೨೦೦೫ ಡಾಕಾ
ಹದಿನಾಲ್ಕನೆಯ ೨೦೦೭ ನವ ದೆಹಲಿ
ಹದಿನೈದನೆಯ ೨೦೦೮ ಕೊಲೊಂಬೊ
ಹದಿನಾರನೆಯ ಮಾಲೆ

ಈ ಎಲ್ಲ ಶೃಂಗಸಭೆಗಳಲ್ಲಿ ಬಡತನ ನಿವಾರಣೆ, ಭಯೋತ್ಪಾದನೆ ತಡೆಯಲು ಸಹ ಯೋಗ, ಅನಕ್ಷರತೆಯ ನಿರ್ಮೂಲನ, ಆರ್ಥಿಕ ಸಹಯೋಗಗಳ ಬಗೆಗೆ ಚರ್ಚೆಗಳು ನಡೆದವು. ೧೯೯೫ರ ಡಿಸೆಂಬರ್ ೭ರಲ್ಲಿ ಸಾರ್ಕ್ ದೇಶಗಳಲ್ಲಿ ಮುಕ್ತವ್ಯಾಪಾರಕ್ಕಾಗಿ ಒಪ್ಪಂದ ಏರ್ಪಟ್ಟಿತು(ಸಾರ್ಕ್ ಪ್ರಿಪರೆನ್‌ಶ್ಯಲ್ ಟ್ರೇಡ್ ಆಗ್ರಿಮೆಂಟ್)ಪರಸ್ಪರ ವ್ಯಾಪಾರ ವನ್ನು ಸುಗಮಗೊಳಿಸಲು ಈ ವ್ಯವಸ್ಥೆಯಲ್ಲಿ ಆಯಾತ ನಿರ್ಯಾತ ವಸ್ತುಗಳ ಮೇಲೆ ರಿಯಾಯಿತಿ ತೋರಿಸಬೇಕೆಂದು ಒಪ್ಪಂದಕ್ಕೆ ಬರಲಾಯಿತು. ೨೦೦೦ನೆಯ ವರ್ಷದೊಳಗೆ ಅನಕ್ಷರತೆಯ ನಿರ್ಮೂಲನ, ೨೦೦೨ನೆಯ ವರ್ಷದಲ್ಲಿ ಸಂಪೂರ್ಣ ಬಡತನ ನಿರ್ಮೂಲನ, ೧೯೯೧-೨೦೦೦ ಮಕ್ಕಳ ದಶಕವೆಂದು, ೨೦೦೦ದ ಒಳಗೆ ಎಲ್ಲರಿಗೂ ಆಶ್ರಯ ಲಭಿಸುವಂತೆ ಮಾಡುವುದು.

ಸಾರ್ಕ್ ಉದ್ದೇಶಿತ ಕಾರ್ಯಕ್ರಮಗಳು

ಆದರೆ ಸಾರ್ಕ್ ಆರಂಭದಿಂದಲೆ ಹಲವು ಗಂಭೀರ ಸಮಸ್ಯೆಗಳಿಂದಾಗಿ ಮಂದಗತಿಯಲ್ಲಿ ಸಾಗಬೇಕಾಯಿತು. ಉದಾಹರಣೆಗೆ ರಾಜಕೀಯ ಬಿಕ್ಕಟ್ಟು, ಆರ್ಥಿಕ ಮುಗ್ಗಟ್ಟು, ಧಾರ್ಮಿಕ ಭಾಷಾವಾರು ವರ್ಣಭೇದ ಮತ್ತು ಸೈದ್ಧಾಂತಿಕ ಸಮಸ್ಯೆಗಳು. ಇವು ತಲೆ ಎತ್ತಲು ಕಾರಣ

೧. ವಸಾಹತುಶಾಹಿಯ ಮೂಲ

೨. ಹೊಸ ರಾಷ್ಟ್ರಗಳ ಉದ್ಭವ,ಅವುಗಳ ಇರುವಿಕೆ ಮತ್ತು ರಕ್ಷಣೆ ಬಗ್ಗೆ ಇರುವ ಗೊಂದಲ

೩. ಆಂತರಿಕ ವ್ಯಾಜ್ಯವನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ತೃಪ್ತಿದಾಯಕ ಮಾಧ್ಯಮಗಳ ವಿರಳತೆ ಇವು ಸಾರ್ಕ್ ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯ ಹೆಚ್ಚಿಸಿತು. ಇವುಗಳಲ್ಲದೆ ಇಡೀ ದಕ್ಷಿಣ ಏಷ್ಯಾದ ಭೌಗೋಳಿಕ ಸರಹದ್ದು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದೆ.

ಮೊದಲನೆಯದಾಗಿ ಭೌಗೋಳಿಕ ಅಸಮತೋಲನ

ದಕ್ಷಿಣ ಏಷ್ಯಾದಲ್ಲಿ ಭಾರತ ಎದುರಿಸುವಷ್ಟು ಭೌಗೋಳಿಕ ಅಸಮತೋಲನಗಳನ್ನು ಇನ್ಯಾವ ಸದಸ್ಯರಾಷ್ಟ್ರಗಳು ಎದುರಿಸುವುದಿಲ್ಲ. ಏಕೆಂದರೆ ಉಳಿದ ಸಾರ್ಕ್ ರಾಷ್ಟ್ರಗಳಿಗಿಂತ ಭಾರತ ವಿಭಿನ್ನವಾಗಿದ್ದು, ಭೌಗೋಳಿಕವಾಗಿ ವಿಸ್ತಾರವಾಗಿದ್ದು, ಶಕ್ತಿಯುತವಾಗಿ ಎಲ್ಲ ರಂಗದಲ್ಲಿ ಅಭಿವೃದ್ದಿ ಸಾಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಇರುವಿಕೆಯನ್ನು ವಿಶಿಷ್ಟ ರೀತಿಯಲ್ಲಿ ಸೃಷ್ಟಿಸಿಕೊಂಡಿದೆ. ಉಳಿದ ರಾಷ್ಟ್ರಗಳು ಸಾಧಿಸಲು ಇನ್ನೂ ಇದ್ದು ತಮ್ಮ ಇರುವಿಕೆಯನ್ನು ಸ್ಪಷ್ಟಪಡಿಸಲು ಭಾರತವನ್ನು ಮಾದರಿಯಾಗಿ ನೋಡುತ್ತಿವೆ. ಅದರಲ್ಲೂ ಪಾಕಿಸ್ತಾನ, ಭಾರತದ ಅಭಿವೃದ್ದಿಯ ಬಗ್ಗೆ ಪ್ರಾದೇಶಿಕ ಸಮತೋಲನದ ಬಗ್ಗೆ ಹಿಂದಿನಿಂದಲೂ ದ್ವಿಮುಖ ನೀತಿ ತಳೆದುಕೊಂಡು ಬಂದಿದೆ. ಹೀಗಾಗಿ ಅಮೆರಿಕಾದಂಥ ದೈತ್ಯರಾಷ್ಟ್ರ ಇಂದು ಭಾರತದ ಭೌಗೋಳಿಕ ಸರಹದ್ದನ್ನು ಅರಿತು ನೆರೆರಾಷ್ಟ್ರವಾದ ಪಾಕಿಸ್ತಾನಕ್ಕೆ ಪ್ರತ್ಯೇಕವಾಗಿ ಭದ್ರತಾ ವ್ಯವಸ್ಥೆಯಲ್ಲಿ ಸಹಕರಿಸುತ್ತಿರುವುದು.

ಎರಡನೆಯದಾಗಿ, ಪಾಕಿಸ್ತಾನದ ಬೆದರಿಕೆ ಮತ್ತು ಭಾರತದಲ್ಲಿನ ಭಯೋತ್ಪಾದನೆಯಲ್ಲಿ ನೇರವಾದ ಹಸ್ತಕ್ಷೇಪ

ಭಾರತದ ಆಂತರಿಕ ಕಲಹ ಮತ್ತು ಮತೀಯ ಗಲಭೆಯನ್ನು ಉಪಯೋಗಿಸಿಕೊಂಡು ಇಲ್ಲಿನ ರಾಜಕೀಯ ವ್ಯವಸ್ಥೆಯನ್ನು ಅಸ್ಥಿರಗೊಳಿಸುವ ಧೋರಣೆ ಪ್ರಕ್ಷುಬ್ಧ ವಾತಾವರಣವನ್ನು ನಿರ್ಮಿಸಿದೆ. ಒಪ್ಪಂದ ಮತ್ತು ಪರಸ್ಪರ ಮಾತುಕತೆಯ ಆಧಾರದಲ್ಲಿ ತಮ್ಮ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಲಾಗದ ಪಾಕಿಸ್ತಾನ, ಭಾರತದ ಶ್ರೇಷ್ಠತೆಯನ್ನು ನಿಸ್ಸತ್ವ ಮಾಡುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದು ಪ್ರಾದೇಶೀಕರಣಕ್ಕೆ ಕುಮ್ಮಕ್ಕು ನೀಡಿದೆ. ಅದಕ್ಕಾಗಿಯೇ ಸಾರ್ಕ್ ರಾಷ್ಟ್ರಗಳ ಕಠ್ಮಂಡು ಶೃಂಗ ಸಭೆಯಲ್ಲಿ ಭಾರತ ಮಂಡಿಸಿದ ಅನಕ್ಷರತೆ ನಿರ್ಮೂಲನೆ, ಪ್ರಾಂತೀಯ ಸಂಬಂಧದ ವೃದ್ದಿ, ಆಯಾತ-ನಿರ್ಯಾತ ವಸ್ತುಗಳ ಮೇಲೆ ರಿಯಾಯಿತಿ, ನಿಯತಕಾಲಿಕೆ ಮತ್ತು ಪ್ರಿಂಟ್ ಮೀಡಿಯಾದ ಪ್ರಯೋಜನವನ್ನು ಉಳಿದ ರಾಷ್ಟ್ರಗಳು ಗಂಭೀರವಾಗಿ ತೆಗೆದುಕೊಂಡಿಲ್ಲ. ಬದಲಾಗಿ ಬಹುರಾಷ್ಟ್ರೀಯ ಹಣಕಾಸು ಯೋಜನೆಯನ್ನು ಸ್ಥಾಪಿಸಲು ಸಹಮತ ಪ್ರಕಟಿಸಿದವು. ಭಾರತವು ಇದನ್ನು ಗಂಭೀರವಾಗಿ ವಿರೋಧಿಸಿದೆ. ಕಾರಣ, ಇದನ್ನು ಸ್ಥಾಪಿಸಿದರೆ ವಿದೇಶಿ ಬಂಡವಾಳಶಾಹಿ – ಸದಸ್ಯರಾಷ್ಟ್ರಗಳಲ್ಲಿ ಹಣ ಹೂಡಲು ಒಂದು ಮಾಧ್ಯಮವಾಗುವುದಲ್ಲದೇ, ಭಾರತದ ಪ್ರಬಲತೆಗೆ ಅಡಚಣೆ ಉಂಟಾಗುತ್ತದೆ ಎಂಬ ದೃಷ್ಟಿಯಿಂದ.

ಮೂರನೆಯದಾಗಿ ಜನಾಂಗೀಯ ಕಲಹ

ಜನಾಂಗೀಯ ವ್ಯಾಜ್ಯ ಸಾರ್ಕ್ ರಾಷ್ಟ್ರಗಳಲ್ಲಿ ಒಂದು ರೀತಿಯಲ್ಲಿ ಭಾರತದಲ್ಲಿ ಕೇಂದ್ರೀಕೃತವಾಗಿದೆ. ಭಾರತಕ್ಕೆ ತನ್ನದೇ ಆದ ಸೂಕ್ಷ್ಮ ಭೌಗೋಳಿಕ ನೆಲೆಯಿರುವುದರಿಂದ, ಈ ಜನಾಂಗೀಯ ಕಲಹ – ತಮಿಳು ಜನಾಂಗೀಯವಾಗಿರಲಿ, ನೇಪಾಳಿ, ಅಸ್ಸಾಮಿ, ಬಂಗಾಲಿ ಆಗಲಿ, ಹಿಂದು ಮತ್ತು ಮುಸ್ಲಿಂ ಕಲಹ ಆಗಲಿ ಅಥವಾ ಬಂಗಾಲಿ ಉರ್ದು ಭಾಷಾಂಧತೆ ಆಗಲಿ, ಕೊನೆಗೆ ಅದು ಇಂಡೋ-ಪಾಕ್ ನಡುವಿನ ಅಪನಂಬಿಕೆಗಳಿಗೆ ಅನುವು ಮಾಡಿಕೊಡುತ್ತದೆ. ಕೆಲವೊಮ್ಮೆ ಈ ಕಲಹಗಳು ಸಾರ್ಕ್ ರಾಷ್ಟ್ರಗಳ ಗಡಿ ವಿವಾದದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಮತ್ತು ಒಳಜನಾಂಗದವರು ಹೊರ ರಾಷ್ಟ್ರದಿಂದ ಸಹಾಯ ಪಡೆದು ಭಯೋತ್ಪಾದನಾ ಶಕ್ತಿಯನ್ನು ಉಲ್ಬಣಿಸುವ ಮಟ್ಟಕ್ಕೆ ಮುಟ್ಟುತ್ತಾರೆ. ಕಾಶ್ಮೀರ ಅಥವಾ ಮೊದಲ ಪಂಜಬ್ ಇದಕ್ಕೆ ಸೂಕ್ತ ಉದಾಹರಣೆ. ಈ ಕಾರಣದಿಂದಲೇ ಸಾರ್ಕ್ ದೇಶದೊಳಗೆ ಎಲ್ಲರಿಗೂ ಗೋಚರಿಸುವಂತೆ, ಜತ್ಯತೀತ ಮತ್ತು ವಿಶ್ವಭ್ರಾತೃತ್ವ ಧೋರಣೆ ಗಳಿಗಿಂತ ಧಾರ್ಮಿಕ, ಜನಾಂಗೀಯ, ಭಾಷಾವಾರು ಮತ್ತು ಗಡಿವಿವಾದಕ್ಕೆ ಹೆಚ್ಚು ಒತ್ತುಕೊಟ್ಟಿರುವುದು ಗಮನಾರ್ಹ ವಿಚಾರ. ಉದಾಹರಣೆಗೆ – ಪಾಕಿಸ್ತಾನದಲ್ಲಿ ಇಸ್ಲಾಂ ಮತ್ತು ಉರ್ದು; ಶ್ರೀಲಂಕಾದಲ್ಲಿ ಬೌದ್ಧ ಧರ್ಮ ಮತ್ತು ಸಿಂಹಳೀ; ನೇಪಾಳದಲ್ಲಿ ಹಿಂದೂ ಧರ್ಮ; ಬಾಂಗ್ಲಾದೇಶದಲ್ಲಿ ಇಸ್ಲಾಂ ಮತ್ತು ಬಂಗಾಲಿ ಆದರೆ ಭಾರತದಲ್ಲಿ ಜತ್ಯತೀತ ಧೋರಣೆಗಳಿಗೆ ಹೆಚ್ಚು ಒತ್ತು ಕೊಟ್ಟರೂ ಸಹ ಇಲ್ಲಿ ಮತಭೇದ ಕೋಮುವಾದಿ, ಜನಾಂಗೀಯ ಮತ್ತು ಭಾಷಾವಾರು ಗುಂಪುಗಳು ಸಾಕಷ್ಟು ಪ್ರಮಾಣದಲ್ಲಿ ಬೆಳೆದು ನಿಂತಿವೆ. ಈ ಕಾರಣದಿಂದಾಗಿ, ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ವರ್ಗಗಳು ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸುವಲ್ಲಿ ದೇಶದ ಒಳಗೆ ಮತ್ತು ಹೊರಗೆ ವಿಭಿನ್ನ ರೀತಿಯ ರಾಜಕೀಯ ಮಾಡಿ ಆಂತರಿಕ ಕಲಹವನ್ನು ಮತ್ತಷ್ಟು ಪ್ರಕ್ಷುಬ್ಧಗೊಳಿಸುತ್ತಿವೆ. ಈ ಬೆಳವಣಿಗೆಗೆ, ಸಾರ್ಕ್ ರಾಷ್ಟ್ರಗಳ ಮಧ್ಯೆ ಸಂಬಂಧವನ್ನು ಮತ್ತಷ್ಟು ಬಿಗಡಾಯಿಸುವುದಲ್ಲದೆ, ದ್ವಿಪಕ್ಷೀಯ ಒಪ್ಪಂದಕ್ಕೆ ಕಡಿವಾಣ ಹಾಕಿದೆ. ಆದಕಾರಣ ಸಾರ್ಕ್ ಈ ನೆಲೆಯಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಸಮತೋಲನ ಮತ್ತು ಒಗ್ಗಟ್ಟನ್ನು ಬಿಗಿ ಹಾಗೂ ಭದ್ರಗೊಳಿಸಲು ವಿಫಲವಾಗಿದೆ.

ನಾಲ್ಕನೆಯದಾಗಿ ವಿಭಿನ್ನ ರಾಜಕೀಯ ಗ್ರಹಿಕೆಗಳು

ಸಾರ್ಕ್‌ನ ಮೂಲ ಉದ್ದೇಶ ಸದಸ್ಯರಾಷ್ಟ್ರಗಳೊಂದಿಗೆ ಸಂಘಟನಾತ್ಮಕ ಆರ್ಥಿಕ ಪ್ರಯೋಜನವನ್ನು ಪಡೆದುಕೊಳ್ಳುವುದು. ಆದರೆ ಆರ್ಥಿಕ ರಂಗದಲ್ಲಿ ತೆಗೆದುಕೊಳ್ಳುವ ನಿರ್ಣಯಗಳನ್ನು ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳು ನಿರ್ದೇಶಿಸುವುದರಿಂದ ಪ್ರಾದೇಶಿಕ ಮಟ್ಟದಲ್ಲಿ ಆರ್ಥಿಕ ಅಭಿವೃದ್ದಿ ದುರ್ಬಲಗೊಂಡಿದೆ. ಏಕೆಂದರೆ ಸಾರ್ಕ್ ರಾಷ್ಟ್ರಗಳ ರಾಜಕೀಯ ವ್ಯವಸ್ಥೆಯಲ್ಲಿ ಮುಖ್ಯವಾಗಿ ಭಾರತ ಮತ್ತು ಪಾಕಿಸ್ತಾನ ಸಂಬಂಧವು ಕೇಂದ್ರ ಬಿಂದುವಾಗಿರುತ್ತದೆ. ಈ ಎರಡು ಸದಸ್ಯ ರಾಷ್ಟ್ರಗಳ ನಡುವೆ ಯಾವುದೇ ಒಂದು ತೃಪ್ತಿದಾಯಕ ಒಪ್ಪಂದ ಈಡೇರದ ಕಾರಣ ಪರಸ್ಪರ ಭಿನ್ನಾಭಿಪ್ರಾಯ ಮತ್ತು ವೈಷಮ್ಯ ಮುಂದುವರಿಯುತ್ತದೆ. ಇದರಿಂದಾಗಿಯೇ ಬೆಂಗಳೂರು(೧೯೮೬) ಸಾರ್ಕ್ ಶೃಂಗ ಸಭೆಯಲ್ಲಿ ಭಾರತವು ಮಂಡಿಸಿದ ವ್ಯಾಪಾರ, ಕೈಗಾರಿಕಾ ಉತ್ಪಾದನೆ ಮತ್ತು ಹಣಕಾಸು ವಿಚಾರದಲ್ಲಿ ಪರಸ್ಪರ ಹೊಂದಾಣಿಕೆಯನ್ನು ವೃದ್ದಿಸಲು ಕೋರಿಕೊಂಡಾಗ(ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್ – ಭಾರತದ ಗ್ರಹಿಕೆಗೆ ಸಹಮತ ವ್ಯಕ್ತಪಡಿಸಿದರೂ) ಪಾಕಿಸ್ತಾನ ವಿರೋಧಿಸಿದೆ. ಏಕೆಂದರೆ ಪಾಕಿಸ್ತಾನದ ಪ್ರಕಾರ ಸಾರ್ಕ್ ದೇಶಗಳಲ್ಲಿ ಭಾರತವು ಭದ್ರತಾ ವ್ಯವಸ್ಥೆಯಲ್ಲಿ ಮತ್ತು ವೈಜ್ಞಾನಿಕ ನೆಲೆಯಲ್ಲಿ ಮುಂದುವರಿದಿದ್ದು ಪಾಕಿಸ್ತಾನಕ್ಕೆ ಆಗಾಗ ಬೆದರಿಕೆ ಹುಟ್ಟಿಸುತ್ತಿದೆ ಎಂಬುದು ಮುಖ್ಯ ಆರೋಪ (ಶೃಂಗಸಭೆಯಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿ ಜುನೇಜೊ ಅವರ ಹೇಳಿಕೆ). ಆದರೆ ಇದು ಭಾರತಕ್ಕೆ ಅನ್ವಯಿಸದ ಕಾರಣ ರಾಜೀವ್ ಗಾಂಧಿಯವರು ಖಂಡಿಸಿ ಅಲ್ಲಗಳೆದಿದ್ದಾರೆ. ಇಂತಹ ಭಿನ್ನಾಭಿಪ್ರಾಯದಿಂದಾಗಿ ಭಾರತ ಮತ್ತು ಪಾಕಿಸ್ತಾನದ ಮಧ್ಯ ದ್ವಿಪಕ್ಷೀಯ ಒಪ್ಪಂದ ಹಾಗೂ ಶ್ರೀಲಂಕಾದ ಜನಾಂಗೀಯ ಸಮಸ್ಯೆಗೆ ಸಮರ್ಪಕ ನಿರ್ಣಯವನ್ನು ಬೆಂಗಳೂರು ಶೃಂಗಸಭೆ ತೆಗೆದುಕೊಳ್ಳಲು ವಿಫಲವಾಗಿದೆ. ಆದಾಗ್ಯೂ ಈ ಅವಕಾಶವನ್ನು ಉಪಯೋಗಿಸಿಕೊಂಡು ಶ್ರೀಲಂಕಾ ಮತ್ತು ಭಾರತದ ಅಧಿಕಾರಿಗಳು ತಮ್ಮ ಮಧ್ಯೆ ಇರುವ ತಮಿಳು ಜನಾಂಗೀಯ ಕಲಹವನ್ನು ನಿಭಾಯಿಸಲು ಗಂಭೀರವಾಗಿ ಚರ್ಚಿಸಲಾಯಿತು. ಪಾಕಿಸ್ತಾನ, ಶ್ರೀಲಂಕಾ ಮತ್ತು ಭಾರತದ ನಡುವೆ ರಾಜಕೀಯ ಗ್ರಹಿಕೆಯಲ್ಲಿ ವಿಭಿನ್ನತೆ ಇರುವುದರಿಂದ ಸಾರ್ಕ್ ದೇಶಗಳಲ್ಲಿ ಭಯೋತ್ಪಾದನಾಶಕ್ತಿಗೆ ಪ್ರಚೋದನೆ ಸಿಕ್ಕಿದ್ದು ಪ್ರಾದೇಶಿಕ ಭದ್ರತಾ ವ್ಯವಸ್ಥೆಗೆ ತೊಡಕು ಉಂಟುಮಾಡಿದೆ.

ಕೊನೆಯದಾಗಿ ಪರಸ್ಪರ ಅಪನಂಬಿಕೆಗಳು ಇರುವುದರಿಂದ ಪ್ರಾದೇಶಿಕ ಮಟ್ಟದಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಲು ಸಾರ್ಕ್ ವಿಫಲವಾಗಿದೆ. ಉದಾಹರಣೆಗೆ ಜನವರಿ ೧೯೮೫ ರಲ್ಲಿ ಶ್ರೀಲಂಕಾ ಪ್ರಧಾನಮಂತ್ರಿ ಲಲಿತ ಅತುಲತೆ ಮುದಲಿಯವರ ಹೇಳಿಕೆಯಲ್ಲಿ ಸ್ಪಷ್ಟವಾಗಿ, ತಮ್ಮ ಸರ್ಕಾರಕ್ಕೆ (ತಮಿಳು) ಜನಾಂಗೀಯ ಸಮಸ್ಯೆಯನ್ನು ಬಗೆಹರಿಸಲು ವಿದೇಶೀಯರ ಮಾರ್ಗದರ್ಶನ ಬೇಕಾಗಿಲ್ಲ(ಭಾರತವನ್ನು ಗುರಿಯಾಗಿಟ್ಟು ಹೇಳಿದ ಮಾತು)ಎಂಬ ಹೇಳಿಕೆ ಈ ಎರಡು ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯ ಮತ್ತು ಅಪನಂಬಿಕೆ ವೃದ್ದಿಸಲು ಅವಕಾಶ ಮಾಡಿಕೊಟ್ಟಿತು. ಹಾಗೆಯೇ ಪಾಕಿಸ್ತಾನದ ವಿದೇಶಾಂಗ ನೀತಿಯಲ್ಲಿ ಭಾರತ ವಿರೋಧಿ ಧೋರಣೆಗಳನ್ನು ಅದರಲ್ಲೂ ಕಾಶ್ಮೀರ ಮತ್ತು ಅಣುಶಕ್ತಿ ವಿಚಾರದಲ್ಲಿ ತೆಗೆದುಕೊಂಡಿರುವುದು ಭಾರತದ ಮೇಲಿರುವ ಅಪನಂಬಿಕೆಯನ್ನು ವ್ಯಕ್ತಪಡಿಸುತ್ತದೆ.

ಆದುದರಿಂದ ಎಲ್ಲಿಯವರೆಗೆ ಈ ದೇಶಗಳ ನಡುವೆ ರಾಜಕೀಯ ಮತ್ತು ಭದ್ರತಾ ಗ್ರಹಿಕೆಗಳಲ್ಲಿ ಸಮನ್ವಯ ಇರುವುದಿಲ್ಲವೋ ಅಲ್ಲಿಯವರೆಗೆ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ರಂಗದಲ್ಲಿ ಸಮಾನ ಅಭಿವೃದ್ದಿ ಕಾಣುವುದು ಅಸಾಧ್ಯ. ಸಾರ್ಕ್‌ನ ಯಶಸ್ಸು, ಪರಸ್ಪರ ಹೊಂದಾಣಿಕೆ, ಸಹಾನುಭೂತಿ, ಸಹಕಾರದಿಂದಲೆ ಗಡಿಸಮಸ್ಯೆಗಳನ್ನೂ, ಜನಾಂಗೀಯ, ಭಾಷಾವಾರು ಮತ್ತು ಮತೀಯ ಕಲಹಗಳನ್ನು ಬಗೆಹರಿಸಿ ಪ್ರಾದೇಶಿಕ ಮಟ್ಟದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಂಡುಕೊಳ್ಳಬಹುದು.

ಕೇಂದ್ರ ಒಪ್ಪಂದ ಸಂಘಟನೆಸೆಂಟೊ

ಜಾಗತಿಕ ಶೀತಲ ಸಮರ ಹಾಗೂ ಕಮ್ಯುನಿಸ್ಟ್ ವಾದವನ್ನು ಹತ್ತಿಕ್ಕುವ ಅಮೆರಿಕಾದ ನೀತಿಯಿಂದ ಪ್ರೇರಿತಗೊಂಡು ಅಮೆರಿಕ ಸಂಯುಕ್ತ ಸಂಸ್ಥಾನವು ಇರಾನ್‌ನೊಂದಿಗೆ ಕೇಂದ್ರ ಒಪ್ಪಂದ ಸಂಘಟನೆ ಎಂಬ ಒಂದು ಪ್ರಾದೇಶಿಕ ಒಪ್ಪಂದಕ್ಕೆ ಬರುವ ತನ್ನ ಬಯಕೆಯನ್ನು ಮೊಸಾದಿಕ್‌ನ(ಇರಾನಿನ ಪ್ರಧಾನಮಂತ್ರಿ ೧೯೫೦-೫೩) ಪರಾಭವಕ್ಕೆ ಮೊದಲೇ ವ್ಯಕ್ತ ಪಡಿಸಿತ್ತು. ೧೯೫೫ರಲ್ಲಿ ಸಹಿ ಹಾಕಲ್ಪಟ್ಟ ‘ಬಾಗ್‌ದಾದ್’ ಒಡಂಬಡಿಕೆಯೊಂದಿಗೆ ‘ಸೆಂಟೊ’ ಅಸ್ತಿತ್ವಕ್ಕೆ ಬಂತು. ಆರಂಭದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದ ರಾಷ್ಟ್ರಗಳೆಂದರೆ ಇರಾಕ್ ಹಾಗೂ ಟರ್ಕಿ. ಈ ಉಭಯ ರಾಷ್ಟ್ರಗಳು ಭದ್ರತೆ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಪರಸ್ಪರ ಸಹಕರಿಸಿಕೊಳ್ಳುವ ನಿರ್ಧಾರಕ್ಕೆ ಬಂದವು. ಈ ಒಪ್ಪಂದವನ್ನು ನಂತರ ಅರಬ್ ಲೀಗ್ ನಲ್ಲಿ ಸಹಭಾಗಿಯಾಗಿರುವ ಎಲ್ಲ ರಾಷ್ಟ್ರಗಳಿಗೂ ಈ ಪ್ರದೇಶದ ಶಾಂತಿ ಹಾಗೂ ಸಂರಕ್ಷಣೆ ಯಲ್ಲಿ ಕ್ರಿಯಾಶೀಲವಾಗಿರುವ ಎಲ್ಲ ರಾಷ್ಟ್ರಗಳಿಗೂ ತೆರೆದಿಡಲಾಯಿತು. ಅದರಂತೆ ಬ್ರಿಟನ್ ಏಪ್ರಿಲ್ ೧೯೫೫ರಲ್ಲಿ, ಪಾಕಿಸ್ತಾನ ಸೆಪ್ಟೆಂಬರ್ ೧೯೫೫ರಲ್ಲಿ, ಇರಾನ್ ನವೆಂಬರ್ ೧೯೫೫ರಲ್ಲಿ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನ ಮೇ ೧೯೫೬ರಲ್ಲಿ ‘ಬಾಗ್‌ದಾದ್’ ಒಡಂಬಡಿಕೆಗೆ ಸೇರಿದವು. ಇದರಲ್ಲಿ ಅಮೆರಿಕಾದ ಸಹಭಾಗಿತ್ವ ಕೇವಲ ಆರ್ಥಿಕ ವಲಯದ ಸಹಕಾರಕ್ಕಷ್ಟೆ ಸೀಮಿತವಾದದ್ದಾಗಿತ್ತು. ಆದರೆ ೧೯೫೮ರಲ್ಲಿ ಇದನ್ನು ಮಿಲಿಟರಿ ವಲಯಕ್ಕೆ ವಿಸ್ತರಿಸಲಾಯಿತು. ೧೯೫೯ರಲ್ಲಿ ಜನರಲ್ ಖಾಸಿಮ್‌ನ ನೇತೃತ್ವದಲ್ಲಿ ನಡೆದ ಯಶಸ್ವಿ ಕ್ರಾಂತಿಯ ಪ್ರತಿಶ್ರುತಿಯಾಗಿ ಇರಾಕ್ ಈ ಒಡಂಬಡಿಕೆಯಿಂದ ಹಿಂತೆಗೆದು ಕೊಂಡಿತು. ಇರಾಕ್ ಹಿಂತೆಗೆದ ನಂತರ ‘ಬಾಗ್‌ದಾದ್’ ಒಪ್ಪಂದವನ್ನು ‘‘ಕೇಂದ್ರ ಒಪ್ಪಂದ ಸಂಘಟನೆ’’ ಎಂದು ಮರು ನಾಮಕರಣ ಮಾಡಲಾಯಿತು. ಈ ಒಪ್ಪಂದದ ಪ್ರಕಾರ ಇದರ ಸಹಬಾಗಿ ರಾಷ್ಟ್ರಗಳು ಪರಸ್ಪರರ ಭದ್ರತೆ ಹಾಗೂ ರಕ್ಷಣೆಯಲ್ಲಿ ಸಹಕರಿಸಿಕೊಳ್ಳಲು ಮತ್ತು ಅದಕ್ಕೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದವು. ಪರಸ್ಪರರ ಆಂತರಿಕ ವಿಷಯ ಗಳಲ್ಲಿ ಮಾತ್ರ ತಲೆ ಹಾಕುವಂತಿರಲಿಲ್ಲ. ಯಾವುದೇ ಅಂತಾರಾಷ್ಟ್ರೀಯ ಒಡಂಬಡಿಕೆಗಳಿಗೂ ಕೂಡ ಈ ರಾಷ್ಟ್ರಗಳು ಸಹಿ ಹಾಕುವಂತಿರಲಿಲ್ಲ. ಈ ಒಪ್ಪಂದಕ್ಕೆ ಮೊದಲಿಗೆ ಐದು ವರ್ಷಗಳ ಅವಧಿಯನ್ನು ನಿರ್ಧರಿಸಲಾಗಿದ್ದು, ನಂತರ ಪ್ರತಿ ೫ ವರ್ಷಗಳಿಗೊಮ್ಮೆ ಅದನ್ನು ನವೀಕರಿಸಬಹುದಾಗಿತ್ತು.

ಈ ಒಪ್ಪಂದದ ಪ್ರಕಾರ ರಚಿತವಾದ ಅಂಗ ಸಂಸ್ಥೆಗಳೆಂದರೆ ಶಾಶ್ವತ ಸ್ಥಾಯಿ ಸಮಿತಿ, ಸೈನಿಕ ಸಮಿತಿ, ಆರ್ಥಿಕ ಸಮಿತಿ ಇತ್ಯಾದಿ, ಶಾಶ್ವತ ಸ್ಥಾಯಿ ಸಮಿತಿಯು ಸದಸ್ಯರಾಷ್ಟ್ರಗಳನ್ನು ಪ್ರತಿನಿಧಿಸುವ ಸಚಿವರನ್ನು ಒಳಗೊಂಡಿದ್ದು ಪರಿಣಾಮಕಾರಿ ಸೈನಿಕ ಸುರಕ್ಷತೆಯನ್ನು ಒದಗಿಸುವುದು ಇದರ ಮುಖ್ಯ ಕಾಳಜಿಯಾಗಿತ್ತು. ಇದರೊಂದಿಗೆ ಆರ್ಥಿಕ ಸಮಿತಿಯನ್ನು ರಚಿಸಿ ಈ ಪ್ರದೇಶದ ಆರ್ಥಿಕ ಸಂಪನ್ಮೂಲಗಳನ್ನು ಅಭಿವೃದ್ದಿಗೊಳಿಸುವ ಪ್ರಯತ್ನವನ್ನು ಮಾಡಲಾಯಿತು.

೧೯೫೬ರ ಏಪ್ರಿಲ್‌ನಲ್ಲಿ ತೆಹರಾನ್ (ಇರಾನ್)ನಲ್ಲಿ ನಡೆದ ತನ್ನ ಸಭೆಯಲ್ಲಿ ಶಾಶ್ವತ ಸ್ಥಾಯಿ ಸಮಿತಿಯ ಎರಡು ಅಥವಾ ಹೆಚ್ಚು ಸದಸ್ಯರಾಷ್ಟ್ರಗಳ ಪ್ರಾದೇಶಿಕ ಆರ್ಥಿಕ ಆಸಕ್ತಿಗಳನ್ನು ಮತ್ತು ನಿರೀಕ್ಷೆಗಳನ್ನು ಅಧ್ಯಯನ ಮಾಡಿ ಅವುಗಳನ್ನು ತಾಂತ್ರಿಕ ಹಾಗೂ ಆರ್ಥಿಕ ಸಹಕಾರಗಳೊಂದಿಗೆ ಕಾರ್ಯಗತಗೊಳಿಸಲು ಒಂದು ಕಾರ್ಯಕಾರಿ ಸಮಿತಿಯನ್ನು ರಚಿಸಿತು. ಅಂತಾರಾಷ್ಟ್ರೀಯ ಮಾರ್ಕ್ಸ್‌ವಾದದ ಮೂಲಗುರಿಗಳು ಬದಲಾಗದೆ ಉಳಿದಿದ್ದು, ಸೆಂಟೊದ ಸದಸ್ಯರಾಷ್ಟ್ರಗಳ ಸಂರಕ್ಷಣಾ ಸಾಮರ್ಥ್ಯದಲ್ಲಿ ಯಾವುದೇ ಸಡಿಲಿಕೆಯನ್ನು ಮಾಡಲಾಗದು ಎಂದು ಕೂಡ ಸ್ಥಾಯಿ ಸಮಿತಿ ಅಭಿಪ್ರಾಯ ಪಟ್ಟಿತು.

ಆದರೆ ಸೆಂಟೊ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ಪರಿಣಾಮಕಾರಿ ಸಂಘಟನೆ ಎಂದು ತೋರಿಬರಲಿಲ್ಲ ಹಾಗೂ ತಾನು ರೂಪಿಸಿಕೊಂಡ ಉದ್ದೇಶಗಳನ್ನು ಈಡೇರಿಸುವಲ್ಲಿ ಅದು ವಿಫಲವಾಯಿತು. ಪಶ್ಚಿಮದ ಕಡೆಗೆ ಅಪಾರ ಒಲವಿನ ಟರ್ಕಿ ಹಾಗೂ ವಿಭಜಿತ ಇರಾಕ್‌ನ ಅಡಿಪಾಯದಲ್ಲಿ ಈ ಒಪ್ಪಂದ ಸ್ಥಾಪಿತವಾದದ್ದೇ ಇದಕ್ಕೆ ಮುಖ್ಯ ಕಾರಣ. ಟರ್ಕಿ ಮತ್ತು ಇರಾನ್‌ಗಳಿಗೆ ವ್ಯತಿರಿಕ್ತವಾಗಿ ಇರಾಕ್ ರಷ್ಯಾದ ಯಾವುದೇ ಒತ್ತಡ, ಅತಿಕ್ರಮಣ ಹಾಗೂ ವಶಪಡಿಕೆಗೆ ಒಳಗಾಗಿರಲಿಲ್ಲ. ಹಾಗಾಗಿ ಇರಾನಿನ ಅಧಿಕಾರಶಾಹಿಗೆ ಮತ್ತು ಬುದ್ದಿವಂತ ವರ್ಗಕ್ಕೆ(ಗತ) ಸೋವಿಯತ್ ಒಕ್ಕೂಟದ ಸಾಮಾಜಿಕ ವ್ಯವಸ್ಥೆಯ ಬಗ್ಗೆ ತೀರ ಮಸುಕಾದ ಗ್ರಹಿಕೆಗಳಷ್ಟೇ ಇದ್ದವು. ಆದರೆ ಇತರ ಅರಬ್ ರಾಷ್ಟ್ರಗಳಂತೆ ಅವರು ಟರ್ಕಿ ಹಾಗೂ ಬ್ರಿಟಿಷರ ಆಳ್ವಿಕೆಯನ್ನು ಅನುಭವಿಸಿದ್ದರು. ಹಾಗಾಗಿ ಈ ರಾಷ್ಟ್ರಗಳ ಮತ್ತು ಇರಾನ್‌ನ ಜೊತೆಗೆ ಒಂದು ಮೈತ್ರಿ ಅರಬ್ ರಾಷ್ಟ್ರಗಳಿಗೆ ಅಸ್ವಾಭಾವಿಕ ವಾಗಿದೆ. ಯಾಕೆಂದರೆ ನಿಜವಾಗಿ ಈ ಒಪ್ಪಂದವು ಟರ್ಕಿ, ಪಾಕಿಸ್ತಾನ, ಬ್ರಿಟನ್ ಮತ್ತು ತಮ್ಮ ವೈಯಕ್ತಿಕ ಅದೃಷ್ಟವೂ ಬ್ರಿಟಿಷ್ ನೆರವಿನ ಮೇಲೆ ಹೊಂದಿಕೊಂಡಿದೆ ಎಂದು ಭಾವಿಸಿದ ಬಾಗ್‌ದಾದಿನ ರಾಜಕಾರಣಿಗಳ ಗುಂಪೊಂದರ ನಡುವಿನ ಮೈತ್ರಿಯಲ್ಲದೆ ಬೇರೇನೂ ಆಗಿರಲಿಲ್ಲ. ಆದರೂ ಈ ಒಪ್ಪಂದವನ್ನು ಆಂಗ್ಲೊ-ಅಮೆರಿಕದ ಮಧ್ಯಪೂರ್ವ ರಕ್ಷಣೆಯ ಮೂಲೆಗಲ್ಲು ಎಂದು ಜಹೀರಾತುಗೊಳಿಸಲಾಯಿತು. ಇಲ್ಲಿ ಗಮನಿಸಲೇಬೇಕಾದ ಇನ್ನೊಂದು ಅಂಶವೆಂದರೆ ‘ಸೆಂಟೊ’ ಸೋವಿಯತ್ ಯೂನಿಯನ್‌ನ ವಿರೋಧಿಯಷ್ಟೇ ಅಲ್ಲದೆ, ಇತರ ಅಲಿಪ್ತ ಅರಬ್ ರಾಷ್ಟ್ರಗಳ ವಿರೋಧಿಯೂ ಆಗಿತ್ತು.

ತನ್ನೆಲ್ಲಾ ವಿಫಲತೆಗಳ ಹೊರತಾಗಿಯೂ ‘ಸೆಂಟೊ’ ಅಮೆರಿಕದ ‘ಶಿಶು’ವಾಗಿ ಉಳಿದಿತ್ತು. ಆದರೆ ಅಮೆರಿಕವು ಅಧಿಕೃತವಾಗಿ ಈ ಒಪ್ಪಂದಕ್ಕೆ ಸಹಿ ಹಾಕಿರಲಿಲ್ಲ. ಇದಕ್ಕೆ ಎರಡು ಕಾರಣಗಳಿದ್ದವು.

೧. ತಾನು ಈ ಒಪ್ಪಂದಕ್ಕೆ ಸಹಿ ಹಾಕಿದರೆ ಅದು ಈಜಿಪ್ಟ್ ಮತ್ತು ಅದರ ಪರವಾಗಿರುವ ಅರಬ್ ರಾಷ್ಟ್ರಗಳನ್ನು ತನ್ನಿಂದ ಇನ್ನಷ್ಟು ದೂರ ಒಯ್ಯಬಹುದೆಂದು ಅಮೆರಿಕ ಭಾವಿಸಿತ್ತು.

೨. ಅರಬ್ ಲೀಗ್‌ನ ಸದಸ್ಯನಾಗಿರುವ ಇರಾಕಿನ ಜೊತೆಗೆ ಅಮೆರಿಕದ ಮೈತ್ರಿ ಇಂತಹದೇ ಪ್ರತಿ ಒಕ್ಕೂಟ ಒಂದನ್ನು ಸ್ಥಾಪಿಸುವಂತೆ ಇಸ್ರೇಲನ್ನು ಪ್ರೇರೇಪಿಸಬಹುದು. ಹೀಗಾದಲ್ಲಿ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಇದೊಂದು ಮುಖ್ಯ ವಿವಾದ ವಾಗಬಹುದು ಎಂದು ಅಮೆರಿಕ ಹೆದರಿತ್ತು. ಇಸ್ರೇಲ್‌ನೊಂದಿಗಿನ ಯಾವುದೇ ಮೈತ್ರಿ ಇರಾಕ್ ಸೇರಿದಂತೆ ಎಲ್ಲ ಅರಬ್ ರಾಷ್ಟ್ರಗಳು ಅಮೆರಿಕಾದ ಜೊತೆಗಿನ ಯಾವುದೇ ಒಪ್ಪಂದವನ್ನು ತಿರಸ್ಕರಿಸಿ ಅವುಗಳನ್ನು ಸೋವಿಯತ್ ಒಕ್ಕೂಟದ ಸನಿಹಕ್ಕೆ ಕೊಂಡೊಯ್ಯುವ ಸಾಧ್ಯತೆಯೂ ಇತ್ತು. ತಾನೇ ಮುಖ್ಯ ಪ್ರಾಯೋಜಕನಾಗಿರುವ ಈ ಒಪ್ಪಂದಕ್ಕೆ ಅಧಿಕೃತ ಸದಸ್ಯನಾಗಲೂ ಹಿಂಜರಿಕೆ ಮತ್ತು ಈ ಒಪ್ಪಂದದ ಪ್ರಕಾರ ರಚಿತವಾದ ಯಾವುದೇ ಸಮಿತಿಗಳಿಗೆ ಮಾನ್ಯತೆ ನೀಡಲು ನಿರಾಕರಣೆ ಇವುಗಳು ಮೈತ್ರಿಕೂಟಕ್ಕೆ ಅಮೆರಿಕಾದ ಬದ್ಧತೆಯ ಕುರಿತು ಸಂದೇಹ ಹುಟ್ಟಿಸುವಂತಿತ್ತು.

ಅಮೆರಿಕದ ಸಹಯೋಗದೊಂದಿಗೆ ಜಂಟಿ ಸೈನಿಕ ನೆಲೆಯೊಂದನ್ನು ಸ್ಥಾಪಿಸಿ ತನ್ನ ಬಲ ವೃದ್ದಿಸಿಕೊಳ್ಳಲು ಪಾಕಿಸ್ತಾನವು ಪ್ರಯತ್ನಿಸತೊಡಗಿತ್ತು. ಆದರೆ ಅರಬರು ಇದು ತಮ್ಮ ಒಗ್ಗಟ್ಟನ್ನು ಮುರಿಯುವ ಪ್ರಯತ್ನ ಎಂದು ವಿರೋಧಿಸಿದರೆ; ಈಜಿಪ್ಟ್, ಭಾರತ ಮತ್ತು ರಷ್ಯಾಗಳು ಇದಕ್ಕೆ ಪ್ರತಿಕೂಲವಾಗಿದ್ದವು. ವಾಸ್ತವವಾಗಿ ಈ ಹೆಜ್ಜೆಯು ಪೂರ್ವ ಏಷ್ಯಾದ ರಾಷ್ಟ್ರಗಳಲ್ಲಿ ರಷ್ಯಾದ ಪ್ರಭಾವ ಮತ್ತು ಗೌರವವನ್ನು ಹೆಚ್ಚಿಸಿದವು. ೧೯೬೦ರ ಆರಂಭಕಾಲದಲ್ಲಿ ಸೆಂಟೊವಿನ ಎಲ್ಲ ಮೂರು ಮುಸ್ಲಿಂ ಸದಸ್ಯ ರಾಷ್ಟ್ರಗಳು ಪೂರ್ವದ ಬಗೆಗಿನ ತಮ್ಮ ಭಾವನೆಗಳನ್ನು ಸಾಕಷ್ಟು ಮೆದುಗೊಳಿಸಿದವು. ಹಾಗು ಮಾಸ್ಕೋದ ಸನಿಹಕ್ಕೆ ಬಾಗತೊಡಗಿದವು. ಅಮೆರಿಕವು ತನಗೆ ಸಾಕಷ್ಟು ಪ್ರಮಾಣದ ಮಿಲಿಟರಿ ಸಲಕರಣೆಗಳನ್ನು ಒದಗಿಸಿಲ್ಲ ಎಂದು ಇರಾನ್ ಭಾವಿಸಿದರೆ; ಸಿಪ್ರೆಸ್‌ನ ಕುರಿತಾದ ಗ್ರೀಸ್‌ನ ಜೊತೆಗಿನ ತನ್ನ ಜಗಳದಲ್ಲಿ ಅಮೆರಿಕ ಪಾಶ್ಚಿಮಾತ್ಯ ಧೋರಣೆ ತಳೆದಿದೆ ಎಂದು ಟರ್ಕಿ ಆಕ್ಷೇಪ ಮಾಡುತ್ತದೆ. ಭಾರತದ ಜೊತೆಗಿನ ವಿವಾದದಲ್ಲಿ ಪಾಶ್ಚಿಮಾತ್ಯ ನಿಲುವಿನ ಬಗ್ಗೆ ಪಾಕಿಸ್ತಾನ ಕೂಡ ಅಸಮಾಧಾನಗೊಂಡಿತ್ತು. ಹೀಗಾಗಿ ಈ ಮೂರು ರಾಷ್ಟ್ರಗಳು ‘‘ಅಭಿವೃದ್ದಿಗಾಗಿ ಪ್ರಾದೇಶಿಕ ಸಹಕಾರ’’ (ರಿಜನಲ್ ಕೋ-ಅಪರೇಟಿವ್ ಫಾರ್ ಡೆವಲಪ್ ಮೆಂಟ್, ಆರ್.ಸಿ.ಡಿ) ಎಂಬ ಸಮಾನಾಂತರ ಒಕ್ಕೂಟವೊಂದನ್ನು ಸ್ಥಾಪಿಸಿ ಕೊಂಡವು. ಮತ್ತು ಅಮೆರಿಕದೊಂದಿಗೆ ವಿನಾಯಿಸಿದ ರಕ್ಷಣಾ ಮೈತ್ರಿಯೊಂದಕ್ಕೆ ಒತ್ತಾಯಿಸಿದ ಇರಾನ್ ಕೂಡ ೧೯೬೯ರ ಮಾರ್ಚ್‌ನಲ್ಲಿ ಕೇಂದ್ರ ಒಪ್ಪಂದ ಸಂಘಟನೆ (ಸೆಂಟೊ)ಯಿಂದ ಹೊರಬಿದ್ದಿತು.

ಇವೆಲ್ಲದರ ನಡುವೆಯೂ ಸೆಂಟೊ ತನ್ನ ಅಸ್ತಿತ್ವವನ್ನು ಮುಂದುವರಿಸಿತು ಮತ್ತು ಒಂದಷ್ಟು ಶಕ್ತಿಯುಳ್ಳ ಮಿಲಿಟರಿ ಜೀವನವನ್ನು ನಡಿಸಿತು. ೧೯೭೪ರಲ್ಲಿ ಅದರ ನೌಕಾದಳ ಮತ್ತು ವಾಯುದಳಗಳು ಮಿಡ್ ಲಿಂಕ್ ಎಂಬ ಕಾರ್ಯಾಚರಣೆ ಒಂದನ್ನು ನಡೆಸಿತು. ಈ ಕಾರ್ಯಾಚರಣೆಗೆ ಅಮೆರಿಕ ತನ್ನ ಏರ್‌ಕ್ರಾಫ್ಟ್ ವಾಹಕಗಳನ್ನು ನೀಡಿತು. ಇರಾನಿನ ದೊರೆ ಮಹಮ್ಮದ್ ರೇಝಾ ಶಾಹನ ಸೋಲು ಮತ್ತು ೧೯೭೮-೭೯ರಲ್ಲಿ ಅಲ್ಲಿ ನಡೆದ ಮೂಲಭೂತವಾದಿಗಳ ಕ್ರಾಂತಿಯಿಂದಾಗಿ ಅಮೆರಿಕಾ ಪಶ್ಚಿಮ ಏಶಿಯದಲ್ಲಿ ಒಂದು ಮುಖ್ಯ ಸೈನಿಕ ರಾಷ್ಟ್ರದ ಸಹಕಾರವೇ ಬಿದ್ದು ಹೋಯಿತು. ಜೊತೆಗೆ ೧೯೭೯ರ ಮಾರ್ಚ್ ೧೦ರಲ್ಲಿ ಅಮೆರಿಕಾದ ಆಲೋಚನೆಯ ಶಿಶುವಾದ ಸೆಂಟೊ ಯಾವುದೇ ಶೋಕಾಚರಣೆ ಇಲ್ಲದೆ ಸತ್ತು ಹೋಯಿತು. ಸೆಂಟೊ ವಹಿಸಬೇಕಾದ ಪಾತ್ರವನ್ನು ನೇರವಾಗಿ ಅಮೆರಿಕಾವು ತನ್ನ ಕೈಗೆ ತೆಗೆದುಕೊಂಡಿತು. ಮೊದಲಿನಂತೆ ಓರ್ವ ವೀಕ್ಷಕನಾಗಿ ಅಲ್ಲ. ಬದಲಾಗಿ ಟರ್ಕಿ, ಪಾಕಿಸ್ತಾನ, ಇಸ್ರೇಲ್ ಮತ್ತು ಈಜಿಪ್ಟ್‌ಗಳಿಗೆ ಎಲ್ಲ ರೀತಿಯ ಆಯುಧಗಳ, ಅಣ್ವಸ್ತ್ರಗಳ ಮತ್ತು ಹಣಕಾಸಿನ ಸರಬರಾಜುದಾರನಾಗಿ.

ಆಗ್ನೇಯ ಏಷ್ಯಾ ಒಪ್ಪಂದ ಸಂಘಟನೆಸೀಟೊ

ಆಗ್ನೇಯ ಏಷ್ಯಾದಲ್ಲಿ ೧೯೫೨ರ ಕಡೆಗೆ ಅಮೆರಿಕವು ಜಾಗತಿಕ ಕೌಶಲ್ಯದ ಆಲೋಚನೆ ಯನ್ನು ನಿರ್ದೇಶಿಸುವ ರಕ್ಷಣೆಯ ಹೊಂದಾಣಿಕೆಯನ್ನು ವ್ಯವಸ್ಥೆಗೊಳಿಸುವ ನಾಯಕತ್ವವನ್ನು ವಹಿಸಿತು. ಮಾರ್ಕ್ಸ್‌ವಾದಿಗಳು ಹೇರಿದ ಬೆದರಿಕೆಯಿಂದ ಆಗ್ನೇಯ ಏಷ್ಯಾ ದೇಶಗಳ ಪ್ರಜಪ್ರಭುತ್ವವನ್ನು ರಕ್ಷಿಸುವುದೇ ‘ಸೀಟೊ’ವನ್ನು ರಚಿಸಿದ ಮುಖ್ಯ ಕಾರಣವಾಗಿತ್ತು. ಮಾರ್ಕ್ಸ್‌ವಾದಿಗಳು ಸೋವಿಯತ್ ಒಕ್ಕೂಟದ ಸಹಕಾರದಿಂದ ಸಶಕ್ತ ದಂಗೆಕೋರರ ಗುಂಪನ್ನು ದಕ್ಷಿಣಪೂರ್ವ ಏಷ್ಯಾದ ಸ್ವತಂತ್ರ ಸರಕಾರದ ವಿರುದ್ಧ ರಚಿಸಿದ್ದನ್ನು ಗುರುತಿಸಬಹುದು. ಈ ಸಶಸ್ತ್ರ ದಂಗೆಕೋರರ ಗುಂಪು ಭಾರತದಲ್ಲಿ ಫಲಪ್ರದವಾಗದಿದ್ದರೂ ಇದು ಮಹತ್ತರ ಸಮಸ್ಯೆಗಳನ್ನು ಬರ್ಮ, ಮಲೇಶಿಯಾ, ಇಂಡೋ-ಚೈನ ಮತ್ತು ಪಿಲಿಫೈನ್ಸ್‌ಗಳಲ್ಲಿ ಉಂಟುಮಾಡಿತು. ಆದರೆ ಬಹುಶಃ ಅತ್ಯಂತ ದೊಡ್ಡ ಫಲಪ್ರದವನ್ನು ಮಾರ್ಕ್ಸಿಸ್ಟ್ ಚೀನಾದಲ್ಲಿ ಗಳಿಸಿತು. ಅಲ್ಲಿ ಅದು ಅದರದ್ದೇ ಆದ ರಾಜ್ಯಭಾರಕ್ರಮವನ್ನು ಸ್ಥಾಪಿಸಿತು. ರೆಡ್ ಚೀನಾ ಹೊರಬಂದುದು ಒಂದು ಪರಿಣಾಮಕಾರಿ ಘಟನೆಯಾಯಿತು ಮತ್ತು ಅದು ಮಾರಕ ಸೋಂಕಾಗಿ ಪಾಶ್ಚಿಮಾತ್ಯ ಶಕ್ತಿಗಳಿಗೆ ಹರಡಿ ಪ್ರಾಂತೀಯ ಒಂದಾಗಿ ಏಕಶಕ್ತಿಯಾಯಿತು.

ದಕ್ಷಿಣಪೂರ್ವ ಏಷ್ಯಾದಲ್ಲಿ ಅಮೆರಿಕದ ಪ್ರಬಲತೆಯನ್ನು ಸ್ಥಾಪಿಸಲು ಒಂದು ಪರಿಣಾಮಕಾರಿಯಾದ ನಾಯಕತ್ವ ಈ ಪ್ರದೇಶದಲ್ಲಿ ಇಲ್ಲದಿರುವುದೇ ಮುಖ್ಯ ಅಡಚಣೆ ಯಾಗಿದೆ. ಈ ಅಡ್ಡಿಯನ್ನು ತೆಗೆದು ಹಾಕುವುದಕ್ಕೆ ಅಮೆರಿಕವು ಪಾಕಿಸ್ತಾನವನ್ನು ಉಪಯೋಗಿಸಿಕೊಂಡು, ಮತ್ತು ಅದಕ್ಕೆ ಭಾರತದೊಂದಿಗಿರುವ ವೈಷಮ್ಯದ ಕಾರಣವನ್ನು ತನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ೧೯೫೪ರಲ್ಲಿ ಪಾಕ್-ಅಮೆರಿಕ ಒಡಂಬಡಿಕೆಯನ್ನು ಮಾಡಲಾಯಿತು. ಈ ಮಧ್ಯದಲ್ಲಿ ವಿಯೇಟ್ನಾಮ್‌ನಲ್ಲಿ ಫ್ರಾನ್ಸ್‌ನ ಸೈನಿಕ ವ್ಯವಸ್ಥೆ ದುರ್ಬಲಗೊಂಡಿತು. ಈ ಅವಕಾಶದ ಪ್ರಯೋಜನವನ್ನು ಅಮೆರಿಕ ಪಡೆದು ಆಗ್ನೇಯ ಏಶಿಯಾದ ಸಂರಕ್ಷಣಾ ವ್ಯವಸ್ಥೆಯನ್ನು ತನ್ನ ಕೈಗೆತ್ತಿಕೊಂಡಿತು. ಬರ್ಮ, ಶ್ರೀಲಂಕಾ, ಭಾರತ ಮತ್ತು ಇಂಡೋನೇಶೀಯಾ ರಾಷ್ಟ್ರಗಳು ತಮ್ಮ ಅಲಿಪ್ತ ಚಳುವಳಿಯ ಧೋರಣೆಯ ಹಿನ್ನೆಲೆಯಲ್ಲಿ ಅಮೆರಿಕದ ಈ ಉಪಾಯದಿಂದ ದೂರ ಉಳಿದವು.

ಎಂಟು ರಾಷ್ಟ್ರಗಳು – ಅಮೆರಿಕಾ, ಬ್ರಿಟನ್, ಫ್ರಾನ್ಸ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಪಾಕಿಸ್ತಾನ, ಪಿಲಿಫೈನ್ಸ್ ಮತ್ತು ಥಾಯ್‌ಲ್ಯಾಂಡ್‌ಗಳು ಮನಿಲಾದಲ್ಲಿ ಸಭೆ ಸೇರಿ ಆಗ್ನೇಯ ಏಷ್ಯಾದಲ್ಲಿ ಸಂಭವಿಸಿದ ಆಕ್ರಮಣ ಮತ್ತು ಕ್ರಾಂತಿಯ ಬೆಳವಣಿಗೆಯನ್ನು ಸಂಯುಕ್ತವಾಗಿ ಹಿಡಿತದಲ್ಲಿಡಲು ಒಂದು ಒಪ್ಪಂದಕ್ಕೆ ಸಹಿ ಹಾಕಿದವು. ಇದು ದಕ್ಷಿಣಪೂರ್ವ ಒಪ್ಪಂದ ಸಂಘಟನೆಯಾಗಿ ೧೯೫೪ರಲ್ಲಿ ಸ್ಥಾಪನೆಯಾಯಿತು. ಹನ್ನೊಂದು ಪರಿಚ್ಛೇದಗಳನ್ನೊಳಗೊಂಡ ಈ ಸಂಘಟನೆ ಶಾಂತಿ ಮತ್ತು ಸಂರಕ್ಷಣೆಗಾಗಿ ಸಂಯುಕ್ತ ರಾಷ್ಟ್ರದ ಚಾರ್ಟರ್ ಶಾಂತಿಪೂರ್ವ ಸಾಧನೆಗಳು, ಮಾನವೀಯ ಅಧಿಕಾರಿಗಳು, ಸ್ವಯಂ ನಿರ್ಣಯ ಹಾಗೂ ಸಾಮೂಹಿಕ ಏಕತೆಗಳಲ್ಲಿ ಸಕ್ರಿಯವಾಗಿ ಪಾಲುಗೊಳ್ಳುವ ಉದ್ದೇಶವನ್ನು ಪ್ರಕಟಿಸಿತು. ಈ ಒಪ್ಪಂದವು ವಿಶ್ವಸಂಸ್ಥೆಯ ಚಾರ್ಟರ್ ಅಡಿಯಲ್ಲಿ ಕೆಲಸ ಮಾಡುವುದಾಗಿ ಮತ್ತು ಇದರ ಉದ್ದೇಶಗಳನ್ನು ಸಾಧಿಸುವಲ್ಲಿ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಸಮಾನ ಹಕ್ಕು ಕಲ್ಪಿಸಿಕೊಡಲಾಯಿತು. ಇದು ಸಾಮಾನ್ಯವಾಗಿ ಆಗ್ನೇಯ ಏಷ್ಯಾದ ಎಲ್ಲ ಪ್ರಾಂತ್ಯಗಳಿಗೂ ಅನ್ವಯಿಸುವುದು. ಆದರೆ ಈ ಭೌಗೋಳಿಕ ಸರಹದ್ದಿನ ಪ್ರಜಪ್ರಭುತ್ವ ವ್ಯವಸ್ಥೆಯು ಮಾರ್ಕ್ಸ್‌ವಾದಿಗಳ ಆಕ್ರಮಣಕ್ಕೊಳಗಾದಲ್ಲಿ ಒಪ್ಪಂದದ ಪ್ರಕಾರ ಅಮೆರಿಕವು ನೇರವಾಗಿ ಹಸ್ತಕ್ಷೇಪ ಮಾಡಿ ಅಂತಹ ಬೆಳವಣಿಗೆಯನ್ನು ತಡೆಗಟ್ಟಬಹುದು. ಒಂದು ವೇಳೆ, ಪ್ರಾಂತ್ಯವು ಆಂತರಿಕ ದಂಗೆಗೆ ತುತ್ತಾದರೆ, ಸೀಟೊ ಸದಸ್ಯ ರಾಷ್ಟ್ರಗಳ ನಡುವೆ ಸಮಾಲೋಚನೆಯ ಮೂಲಕ ಶಾಂತಿ ಪೂರ್ವಕವಾಗಿ ಬಗೆಹರಿಸುವುದಾಗಿ ಪ್ರಕಟಿಸಿತು.

ಸೀಟೊದ ಅನುಚ್ಛೇದ ೫ರ ಪ್ರಕಾರ ಒಂದು ಸ್ಥಾಯಿ ಸಮಿತಿಯನ್ನು ಸ್ಥಾಪಿಸಲಾಯಿತು. ಇದು ಒಪ್ಪಂದದ ಉದ್ದೇಶಗಳನ್ನು ಅನುಷ್ಠಾನಕ್ಕೆ ತರಲು ಪರಿಶೀಲಿಸುತ್ತದೆ ಹಾಗೂ ಸೀಟೊದ ಭೌಗೋಳಿಕ ಸರಹದ್ದಿನೊಳಗೆ ಉದ್ಭವಿಸುವ ಬದಲಾವಣೆಗೆ ಅನುಸಾರವಾಗಿ ದೈನ್ಯ ಮತ್ತು ಭದ್ರತಾ ಯೋಜನೆಗೆ ಸಂಬಂಧಿಸಿದ ಪರಾಮರ್ಶೆ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಸದಸ್ಯ ರಾಷ್ಟ್ರಗಳ ಸಚಿವರು ಪಾಲುಗೊಳ್ಳುವ ಸೀಟೊದ ಸಮಿತಿ ವರ್ಷಕ್ಕೆ ಒಂದು ಬಾರಿ ಸಭೆ ಸೇರುತ್ತದೆ ಮತ್ತು ಸೈನಿಕ ಪರಾಮರ್ಶೆಗೆ ಪ್ರತಿ ಸದಸ್ಯ ರಾಷ್ಟ್ರವು ಪ್ರತ್ಯೇಕ ಪ್ರತಿನಿಧಿಯನ್ನು ಸಮಿತಿಗೆ ಕಳುಹಿಸುವ ಸ್ವಾತಂತ್ರ್ಯವನ್ನು ಪಡೆದಿರುತ್ತದೆ. ಆದರೆ ಸೀಟೊದ ಆರ್ಥಿಕ ವಿಶೇಷಜ್ಞರು ಆಗಾಗ್ಗೆ ಸಭೆ ಸೇರುತ್ತಾರೆ. ಅದರೆ ಪ್ರಸ್ತುತ ಸೀಟೊ ಸದಸ್ಯ ರಾಷ್ಟ್ರಗಳೊಂದಿಗೆ ವ್ಯವಹಾರದಲ್ಲಿ ದುರ್ಬಲವಾಗಿದ್ದು ಮಾತ್ರವಲ್ಲ ಅದರ ಪಾತ್ರ ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌಣವಾಗಿದೆ.

 

ಪರಾಮರ್ಶನಗ್ರಂಥಗಳು

೧. ರವಿಂದರ್ ಕುಮಾರ್, ಮದನ್, ೧೯೯೭. ಸಾರ್ಕ್ : ಆರಿಜಿನ್, ಡೆವಲಪ್ಮೆಂಟ್ ಆಂಡ್ ಪ್ರೋ ನ್ಯೂಡೆಲ್ಲಿ.

೨. ಪೌಲ್ ಹಾಲ್‌ವುಡ್, ೧೯೮೧. ಆಯಿಲ್, ಡೇಟ್ ಆಂಡ್ ಡೆವಲಪ್ಮೆಂಟ್ : ಓಪೆಕ್ ಇನ್ ದಿ ಥರ್ಡ್ ವರ್ಲ್ಡ್, ಲಂಡನ್.

೩. ನಿಕೋಲಸ್ ಟಾರ್‌ಲಿಂಗ್, ೧೯೯೨. ದಿ ಕೇಂಬ್ರಿಡ್ಜ್ ಹಿಸ್ಟರಿ ಆಫ್ ಸೌತ್ ಈಸ್ಟ್ ಏಷ್ಯಾ, ಸಂಪುಟ-೨.

೪. ಇರಾ ಲಿಪಿಡಸ್ ಎಂ., ೧೯೮೮. ಮಾಡರ್ನ್ ಹಿಸ್ಟರಿ ಆಫ್ ಇಸ್ಲಾಂಮಿಕ್ ಸೊಸೈಟೀಸ್, ಕೇಂಬ್ರಿಡ್ಜ್.