ಪ್ರಾದೇಶಿಕ ಮಟ್ಟದಲ್ಲಿ ಒಕ್ಕೂಟಗಳನ್ನು ರಚಿಸಿಕೊಂಡು ತಮ್ಮೊಳಗಿನ ರಾಜಕೀಯ, ಆರ್ಥಿಕ ಹಾಗೂ ಧಾರ್ಮಿಕ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳುವುದು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳನ್ನು ವ್ಯವಸ್ಥಿತವಾಗಿ ಹಾಗೂ ಯೋಜನಾಬದ್ಧ ವಾಗಿ ಎದುರಿಸುವುದು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಿಗೆ ಅನಿವಾರ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ರಚನೆಗೊಂಡಿರುವ ಒಪೆಕ್, ಇಸ್ಲಾಮಿ ಸಂಘಟನಾ ಸಮ್ಮೇಳನ, ಅರಬ್ ಲೀಗ್, ಸಾರ್ಕ್, ಸೆಂಟೊ ಹಾಗೂ ಸೀಟೊ ಸಂಘಟನೆಗಳ ಕುರಿತು ಇಲ್ಲಿ ವಿಶ್ಲೇಷಿಸಲಾಗಿದೆ.

 

ಪೆಟ್ರೋಲಿಯಂ ರಫ್ತುರಾಷ್ಟ್ರಗಳ ಸಂಘಟನೆ

೧೯೭೦ರ ಸೆಪ್ಟೆಂಬರ್ ೧೪ರಂದು ಹುಟ್ಟಿಕೊಂಡ ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳ ಸಂಘಟನೆಗೆ ‘ಒಪೆಕ್’(ಆರ್ಗನೈಜೇಶನ್ ಫಾರ್ ಪೆಟ್ರೋಲಿಯಂ ಎಕ್ಸ್ ಪೋರ್ಟಿಂಗ್ ಕಂಟ್ರೀಸ್) ಎಂದು ಕರೆಯುತ್ತಾರೆ. ಅಲ್ಜೀರಿಯಾ, ಎಕ್ಸುಠುರ್, ಗಾಬನ್, ಇಂಡೋನೇಶಿಯಾ, ಇರಾನ್, ಇರಾಕ್, ಕುವೈತ್, ಲಿಬಿಯಾ, ನೈಜೀರಿಯಾ, ಕಾತಾರ್, ಸೌದಿ ಅರೇಬಿಯಾ, ಸಂಯುಕ್ತ ಅರಬ್ ಎಮಿರೇಟ್ಸ್ ಮತ್ತು ವೆನೆಜುಲಾ ರಾಷ್ಟ್ರಗಳು ‘ಒಪೆಕ್’ನ ಪ್ರಸ್ತುತ ಸದಸ್ಯರುಗಳು. ಇಲ್ಲಿ ಸಂಕ್ಷಿಪ್ತವಾಗಿ ‘ಒಪೆಕ್’ನ ಬೆಳವಣಿಗೆ ಮತ್ತು ಮುಂದುವರಿದ ಹಾಗೂ ಮುಂದುವರಿಯುವ ರಾಷ್ಟ್ರಗಳೊಂದಿಗೆ ಇರುವ ಸಂಬಂಧವನ್ನು ವಿಶ್ಲೇಷಿಸಲಾಗಿದೆ.

೧೯೫೦ರವರೆಗೆ ಪಶ್ಚಿಮ ಏಷ್ಯಾದಲ್ಲಿ ಆಂಗ್ಲ-ಅಮೆರಿಕ ತೈಲ ಕಂಪನಿಗಳು (ಆಂಗ್ಲೊ ಇರಾನಿಯನ್ ಆಯಿಲ್ ಕಂಪನಿ-ಎಐಒಸಿ) (ಅರೇಬಿಯನ್ ಅಮೆರಿಕನ್ ಆಯಿಲ್ ಕಂಪನಿ) ಇರಾನ್ ಮತ್ತು ಪರ್ಶಿಯನ್ ಗಲ್ಫ್ ತೈಲ ಸಂಪನ್ಮೂಲದ ಏಕಸ್ವಾಮ್ಯ ಗುತ್ತಿಗೆದಾರರಾಗಿದ್ದರು. ಮಹಾಯುದ್ಧದ ಪರಿಣಾಮದಿಂದಾಗಿ ಕೈಗಾರಿಕೀಕರಣ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಚ್ಚಾಗಿದ್ದು, ತೈಲ ಸಂಪನ್ಮೂಲಕ್ಕೆ ಸಾಕಷ್ಟು ಬೇಡಿಕೆ ಉಂಟಾಯಿತು. ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವ ತೈಲ ಕಂಪನಿಗಳು ತೈಲ ಉತ್ಪಾದನೆಯನ್ನು ವೃದ್ದಿಸಿದ್ದು ಅಲ್ಲದೆ ಉಳಿದ ಅರಬ್ ರಾಷ್ಟ್ರಗಳಲ್ಲಿ ಅನ್ವೇಷಣೆ ಮಾಡಿ, ಹೊಸತಾಗಿ ಉತ್ಪಾದನೆಯನ್ನು ಕೈಗೊಂಡವು. ಈ ಪ್ರದೇಶದಲ್ಲಿ ತೈಲ ಬಹಳ ಕಡಿಮೆ ಬೆಲೆಗೆ ದೊರಕುತ್ತಿರುವುದರಿಂದ ಈ ಕಂಪನಿಗಳು ಜಾಗತಿಕ ಮಾರುಕಟ್ಟೆಯಲ್ಲಿ ಮುಗಿಲೆತ್ತರಕ್ಕೆ ಬೆಳೆಯುತ್ತಿರುವ ಬೇಡಿಕೆಗಳನ್ನು ನೀಗಿಸಲು ಗಲ್ಫ್‌ನಲ್ಲಿ ತೈಲ ಉತ್ಪಾದನಾ ಪ್ರಮಾಣವನ್ನು ದ್ವಿಗುಣಗೊಳಿಸಿದವು. ಒಂದು ಬ್ಯಾರಲ್ ತೈಲವನ್ನು ಕೇವಲ ೧೦ ಸೆಂಟ್ಸ್‌ಗೆ ಉತ್ಪಾದಿಸು ತ್ತಿದ್ದರು. ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಇಳಿಮುಖವಾದರೂ ಈ ಕಂಪನಿಗಳು ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುತ್ತಲೇ ಬಂದವು. ಪರಿಣಾಮವಾಗಿ ತೈಲ ಕಂಪನಿಗಳು ಸಾಕಷ್ಟು ಪ್ರಮಾಣದಲ್ಲಿ ತೈಲದ ಸಂಗ್ರಹಣೆ ಮಾಡಿದವು. ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ತೈಲ ಬೇಡಿಕೆಯ ಇಳಿಮುಖಕ್ಕೆ ನಾಲ್ಕು ಬಲವಾದ ಕಾರಣ ಕೊಡಬಹುದು.

೧. ಕಂಪನಿಗಳಿಂದ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ.

೨. ಒಂದನೆಯ ಮಹಾಯುದ್ಧದ ನಂತರ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪುನರ್‌ನಿರ್ಮಾಣ ಮತ್ತು ಕೈಗಾರಿಕೀಕರಣದಲ್ಲಿ ವೃದ್ದಿ.

೩. ಹೊರಗಿನಿಂದ (ಗಲ್ಫ್ ತೈಲ) ಬಂದ ಕಡಿಮೆ ದರದ ತೈಲದಿಂದ ಉದ್ಭವಿಸುವ ಪರಿಣಾಮವನ್ನು ಎದುರಿಸಲು ಅಮೆರಿಕದಂತಹ ರಾಷ್ಟ್ರಗಳ ಆಂತರಿಕ ತೈಲ ಕೈಗಾರಿಕೆಗಳಿಗೆ ರಕ್ಷಣಾತ್ಮಕ ಧೋರಣೆಗಳು.

೪. ತೈಲ ರಫ್ತು ಮಾಡುವ ಪ್ರಬಲ ರಾಷ್ಟ್ರಗಳೊಂದಿಗೆ (ಗತ) ಸೋವಿಯತ್ ಒಕ್ಕೂಟದ ದಿಢೀರ್ ಉಗಮ ಮತ್ತು ಅದು ತೃತೀಯ ಜಗತ್ತಿಗೆ ಆಂಗ್ಲ-ಅಮೆರಿಕಾ ಕಂಪನಿಗಳು ಗೊತ್ತುಮಾಡಿದ ಬೆಲೆಗಿಂತ ೨೫ ಶೇಕಡ ಕಡಿಮೆ ಬೆಲೆಯಲ್ಲಿ ಸರಬರಾಜು ಮಾಡುವ ಭರವಸೆ ನೀಡಿದ್ದು. ಹಾಗೆಯೇ ತೈಲಕ್ಕೆ ಬೇಕಾದ ಹಣವನ್ನು ಪ್ರಾದೇಶಿಕ ಕರೆನ್ಸಿಯಿಂದಲೂ ಅಥವಾ ತೈಲೇತರ ವಸ್ತುಗಳಿಂದಲೂ ಸ್ವೀಕರಿಸುವುದಾಗಿ ಪ್ರಕಟಿಸಿತು.

ಈ ನಾಲ್ಕು ಕಾರಣದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೇಡಿಕೆಯ ಇಳಿಮುಖವಾಯಿತು.

ಸೋವಿಯತ್ ಯೂನಿಯನ್‌ನ ಧೋರಣೆಯಿಂದಾಗಿ, ಸಾಮ್ರಾಜ್ಯಶಾಹಿ ಕಂಪನಿಗಳು ಭಯಗೊಂಡು, ೧೯೫೯ರ ಜನವರಿ ಮತ್ತು ಜೂನ್ ನಡುವೆ ತೈಲ ಉತ್ಪಾದನಾ ರಾಷ್ಟ್ರದ ಸರಕಾರಗಳ ಗಮನಕ್ಕೆ ತಾರದೆ ಏಕಪಕ್ಷಿಯವಾಗಿ ಜಾಗತಿಕ ಮಾರುಕಟ್ಟೆಯ ಬೆಲೆಯಲ್ಲಿ ಸರಾಸರಿ ೩೨% ಇಳಿಮುಖಗೊಳಿಸಿದವು. ಇದರಿಂದಾಗಿ ತೈಲ ಉತ್ಪಾದನಾ ರಾಷ್ಟ್ರಗಳು ವರ್ಷಾಂತ್ಯದ ಆದಾಯದಲ್ಲಿ ಅತೀ ಹೆಚ್ಚಿನ ನಷ್ಟ ಅನುಭವಿಸಬೇಕಾಯಿತು. ಇದನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡ ಅರಬ್ ಪೆಟ್ರೋಲಿಯಂ ಉತ್ಪಾದನಾ ರಾಷ್ಟ್ರಗಳು ೧೯೬೦ರ ಏಪ್ರಿಲ್ ೧೬-೨೨ರವರೆಗೆ ನಡೆದ ಸಮ್ಮೇಳನದಲ್ಲಿ ವಿದೇಶಿ ಕಂಪನಿಗಳ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿ, ಅರಬ್ ರಾಷ್ಟ್ರೀಯ ಗುಂಪುಗಳು ಒಂದು ನ್ಯಾಯ ಸಮ್ಮತ ಪೆಟ್ರೋಲಿಯಂ ನೀತಿಯನ್ನು ಪಾಲಿಸಲು ಮತ್ತು ತಾವೇ ಸ್ವತಃ (ತೈಲದ ಯಜಮಾನರಾದ್ದರಿಂದ) ಬೆಲೆ ಕಟ್ಟುವ ಹಕ್ಕನ್ನು ಪಡೆದು ಆಂಗ್ಲ-ಅಮೆರಿಕ ಕಂಪನಿಯ ಏಕಪಕ್ಷೀಯ ನೀತಿಯನ್ನು ವಿರೋಧಿಸಲು ಒಂದು ಸಂಘಟನೆಯನ್ನು ಸ್ಥಾಪಿಸಲು ನಿರ್ಣಯಿಸಿದವು.

ಈ ನಿರ್ಣಯದ ಬೆನ್ನಿಗೆ, ೧೯೬೦ರ ಸೆಪ್ಟಂಬರ್ ೧೪ರಲ್ಲಿ ಇರಾನ್(ತನಗಿರುವ ಭಿನ್ನಾ ಭಿಪ್ರಾಯಗಳನ್ನು ಬದಿಗೊತ್ತಿ)ಸೌದಿ ಅರೇಬಿಯಾ, ಇರಾಕ್, ಕುವೈತ್ ಮತ್ತು ವೆನೆಜುಲಾ- ಬಾಗ್‌ದಾದ್‌ನಲ್ಲಿ ಸಭೆ ಸೇರಿ ‘ಒಪೆಕ್’ ಸಂಘಟನೆಯನ್ನು ಸ್ಥಾಪಿಸಿದವು. ಇದರಲ್ಲಿ ಇರಾಕ್ ಮತ್ತು ವೆನೆಜುಲಾ ಕ್ರಾಂತಿಕಾರಿ ಸರಕಾರಗಳು ಒಂದು ಕಡೆಯಿಂದ, ಸೌದಿ ಅರೇಬಿಯಾ ಮತ್ತು ಇರಾನ್ ಪಾಶ್ಚಾತ್ಯ ಪರ ಸರಕಾಗಗಳು ಮತ್ತೊಂದು ಕಡೆಯಿಂದ ಒಂದಾಗಿ ಒಪೆಕ್ ಎಂಬ ಅಂತರ್ ಸರಕಾರವನ್ನು ನಿರ್ಮಿಸಿ ಈ ಕೆಳಗಿನ ಉದ್ದೇಶಗಳನ್ನು ಸಾಧಿಸಲು ಪ್ರಯತ್ನಿಸಿದವು.

೧. ಸದಸ್ಯ ರಾಷ್ಟ್ರಗಳ ನಡುವೆ ಸಹಯೋಗ ಹಾಗೂ ಸಮಾನ ರೀತಿಯ ಪೆಟ್ರೋಲಿಯಂ ನೀತಿಯನ್ನು ಪಾಲಿಸಿ, ಅವುಗಳ ವೈಯಕ್ತಿಕ ಮತ್ತು ಕ್ರೋಡೀಕೃತ ಬೇಡಿಕೆಗಳನ್ನು ರಕ್ಷಿಸಿಕೊಳ್ಳಲು ಮತ್ತು ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆಯನ್ನು ಭದ್ರಗೊಳಿಸುವ ಹೊಣೆಗಾರಿಕೆ.

೨. ಸಮರ್ಥ ಹಾಗೂ ಕ್ರಮಬದ್ಧವಾಗಿ ಪೆಟ್ರೋಲಿಯಂ ಉಪಯೋಗಿಸುವ ರಾಷ್ಟ್ರಗಳಿಗೆ ಸರಬರಾಜು ಮಾಡುವುದು ಮತ್ತು ಪೆಟ್ರೋಲಿಯಂ ಕೈಗಾರಿಕೆಗೆ ಹಣ ತೊಡಗಿಸುವ ರಾಷ್ಟ್ರಗಳೊಂದಿಗೆ ಉತ್ಪಾದನಾ ರಾಷ್ಟ್ರಗಳು ಯಥಾರ್ಥವಾಗಿ ಲಾಭವನ್ನು ಹಂಚಿಕೊಳ್ಳುವುದು.

ಸರಿಯಾದ ಮಾರ್ಗದರ್ಶನ, ತೈಲ ಉತ್ಪಾದನಾ ರಾಷ್ಟ್ರಗಳಲ್ಲಿ ಒಗ್ಗಟ್ಟು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಎಣಿಸಿದಷ್ಟು ಬೆಂಬಲ ಸಿಗದ ಕಾರಣ ‘ಒಪೆಕ್’ ತನ್ನ ಮೊದಲ ಕೆಲವು ವರ್ಷಗಳಲ್ಲಿ(೧೯೬೦-೬೬) ಸಾಮ್ರಾಜ್ಯಶಾಹಿ ವಿದೇಶಿ ಕಂಪನಿಗಳ ಮೇಲೆ ಒತ್ತಡವನ್ನು ಹೇರುವಲ್ಲಿ ವಿಫಲವಾಯಿತು. ಅದರಲ್ಲೂ ‘ಒಪೆಕ್’ನ ಇರುವಿಕೆಯನ್ನು ಗೊತ್ತುಪಡಿಸುವಲ್ಲಿ ಯಶಸ್ವಿಯಾಗಲಿಲ್ಲ. ಅಂತಹ ವಿದೇಶಿ ಕಂಪನಿಗಳ ತೈಲ ಉತ್ಪಾದನೆ ಯನ್ನು ತಮ್ಮ ರಾಷ್ಟ್ರದಲ್ಲಿ ಕಡಿಮೆ ಮಾಡಿಸುವುದು ಒಪೆಕ್‌ನ ಮುಖ್ಯ ಗುರಿಯಾಗಿದ್ದರೂ, ತೈಲ ಉತ್ಪಾದನೆಯಲ್ಲಿ ಶ್ರೀಮಂತಿಕೆ ಪಡೆದಿರುವ (ಒಪೆಕ್ ಸದಸ್ಯ ರಾಷ್ಟ್ರಗಳು) ಇರಾನ್ ಮತ್ತು ಸೌದಿ ಅರೇಬಿಯಾ ಈ ನಿಟ್ಟಿನಲ್ಲಿ ಮುಂದೆ ಬಂದಿಲ್ಲ. ಏಕೆಂದರೆ ಆರಂಭದಿಂದಲೂ ಈ ಎರಡು ರಾಷ್ಟ್ರಗಳಲ್ಲಿ ಪೆಟ್ರೋಲಿಯಂ ನಂತರ ಅಮೂಲ್ಯ ವಸ್ತುವನ್ನು ಕಂಡುಹಿಡಿದಿರುವ ಅಮೆರಿಕಾ ಮತ್ತು ಬ್ರಿಟನ್‌ನಂತಹ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಪೆಟ್ರೋಲಿಯಂ ಕೈಗಾರಿಕೆಗಳನ್ನು ಸ್ಥಾಪಿಸಿ ಉತ್ಪಾದನೆ ಕೈಗೊಂಡು ಜಾಗತಿಕ ಮಾರುಕಟ್ಟೆಗೆ ಸರಬರಾಜು ಮಾಡುತ್ತಿರುವುದು ಗಮನಾರ್ಹವಾಗಿದೆ. ಜೊತೆಗೆ ಪಶ್ಚಿಮ ಏಷ್ಯಾದ ಪೆಟ್ರೋಲಿಯಂ ಉತ್ಪಾದನಾ ರಾಷ್ಟ್ರಗಳು ತಮ್ಮ ದೇಶದ ಆಧುನೀಕರಣಕ್ಕೆ, ಶಿಕ್ಷಣ ಅಭಿವೃದ್ದಿಗೆ, ರಸ್ತೆ ಸಾರಿಗೆ ಬೆಳವಣಿಗೆಗೆ, ಆರ್ಥಿಕ ಸ್ಥಿತಿ ಸುಧಾರಿಸಲು, ಬೇಕಾದ ತಂತ್ರಜ್ಞಾನವನ್ನು ಖರೀದಿಸಲು ಮತ್ತು ಪೆಟ್ರೋಲಿಯಂ ಕೈಗಾರಿಕೆಗೆ ಬೇಕಾದ ಮಾನವನ ಸಂಪನ್ಮೂಲಗಳನ್ನು ಪಡೆಯಲು ಅಮೆರಿಕ ಮತ್ತು ಬ್ರಿಟನ್ ದೇಶಗಳನ್ನು ಅವಲಂಬಿಸಿಕೊಂಡಿದ್ದವು. ಈ ರೀತಿಯ ಸ್ನೇಹ ಸಂಬಂಧದಿಂದಾಗಿ ಇರಾನ್ ಮತ್ತು ಸೌದಿ ಅರೇಬಿಯಾ ‘ಒಪೆಕ್’ ನಿರೀಕ್ಷಿಸಿದ ಹಾಗೆ, ವಿದೇಶಿ ಕಂಪನಿಗಳ(ಅಮೆರಿಕ ಮತ್ತು ಬ್ರಿಟನ್) ವಿರುದ್ಧ ಯಾವುದೇ ನೀತಿಯನ್ನು ಹೇರಲು ನಿರಾಕರಿಸಿದವು. ಒಂದು ವೇಳೆ ಒಪೆಕ್‌ನ ನೀತಿ ಪಾಲಿಸಿದರೆ, ತಮ್ಮ ದೇಶದ ಆದಾಯಕ್ಕೆ ಕುಂದು ಬರುತ್ತದೆಂಬ ಭೀತಿ ಇತ್ತು. ಇದಕ್ಕೆ ಇನ್ನೊಂದು ಕಾರಣವಿದೆ. ಇರಾನ್ ಮತ್ತು ಸೌದಿ ಅರೇಬಿಯಾ ಪಶ್ಚಿಮ ಏಷ್ಯಾದಲ್ಲಿ ಅತ್ಯಂತ ಹೆಚ್ಚಿನ ಜನಸಂಖ್ಯೆ ಯನ್ನು ಹೊಂದಿದ್ದು, ಅದಕ್ಕನುಗುಣವಾಗಿ ಉತ್ಪಾದನಾ ನೀತಿಯನ್ನು ಪಾಲಿಸಿ ತಮ್ಮ ಆದಾಯವನ್ನು ವೃದ್ದಿಸಿಕೊಂಡವು. ಉಳಿದ ರಾಷ್ಟ್ರಗಳು ಮಾತ್ರ ತಮ್ಮ ಅಸ್ತಿತ್ವಕ್ಕನುಗುಣವಾಗಿ ಉತ್ಪಾದನಾ ನೀತಿಯನ್ನು ಪಾಲಿಸುತ್ತಿರಲಿಲ್ಲ. ಆದರೆ ೧೯೬೨ರ ೪ನೇ ‘ಒಪೆಕ್’ ಸಮ್ಮೇಳನದಲ್ಲಿ ತೈಲ ಉತ್ಪಾದನಾ ರಾಷ್ಟ್ರಗಳಿಗೆ ವಿದೇಶಿ ಕಂಪನಿಗಳು ಯಾವುದೇ ಶರತ್ತಿಲ್ಲದೇ ಒಂದೇ ರೀತಿಯ ರಾಯಲ್ಟಿಯನ್ನು ಕೊಡಬೇಕೆಂದು ನಿರ್ಣಯಿಸಲಾಯಿತು. ೧೯೬೬ರ ಕೊನೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಬೆಲೆಯ ಕಡಿತವನ್ನು ರಕ್ಷಿಸುವಲ್ಲಿ ‘ಒಪೆಕ್’ ಸಫಲವಾಯಿತು. ಹೀಗೆ ೧೯೬೦ ಮತ್ತು ೬೫ರ ಮಧ್ಯೆ ‘ಒಪೆಕ್’ ಚಟುವಟಿಕೆಯಲ್ಲಿ ಏರಿಳಿತ ಕಂಡುಬಂದಿತು.

೧೯೬೩ರ ಜನವರಿಯಲ್ಲಿ ಇರಾನಿನ ದೊರೆ ಮಹಮ್ಮದ್ ರೇಝಾ ಶಾಹ ಪಹಲವಿ ‘‘ಬಿಳಿಕ್ರಾಂತಿ’ಯ ಉದ್ಘಾಟನೆ ಮಾಡಿದನು. ಇದರ ಉದ್ದೇಶಗಳು ಹೀಗಿವೆ :

೧. ತನ್ನ ಆಳ್ವಿಕೆಯನ್ನು ಸದೃಢ ಹಾಗೂ ವಿಸ್ತಾರಗೊಳಿಸಿ ಜನರ ಮನಸ್ಸನ್ನು ಗೆಲ್ಲುವುದು;

೨. ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳನ್ನು ಜನರಿಗೆ ಕಲ್ಪಿಸಿ ಇರಾನ್ ಒಂದು ಆಧುನಿಕ ರಾಷ್ಟ್ರವನ್ನಾಗಿ ಪುನಾರಚಿಸುವುದು;

೩. ಸರಕಾರದ ಮೇಲೆ ಇರುವ ಅಮೆರಿಕಾದ ನಿಯಂತ್ರಣವನ್ನು ಕಡಿಮೆ ಮಾಡಿ ಇರಾನಿನ ಅವಲಂಬನೆಯನ್ನು ಸಡಿಲುಗೊಳಿಸುವುದು.

ರೇಜ ಶಾಹನ ‘‘ಬಿಳಿಕ್ರಾಂತಿ’’ಯ ಗುರಿಗಳನ್ನು ಕಾರ್ಯರೂಪಕ್ಕೆ ತರಲು ತನ್ನ ಸರ್ಕಾರಕ್ಕೆ ಸಾಕಷ್ಟು ಆದಾಯದ ಕೊರತೆ ಕಂಡುಬಂತು. ಅದೇ ಸಮಯಕ್ಕೆ ಸರಿಯಾಗಿ ಪಶ್ಚಿಮ ಏಷ್ಯಾದಲ್ಲಿ ಮೂರನೆಯ ಅರಬ್-ಇಸ್ರೇಲ್ ಯುದ್ಧ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಅರಬ್ ತೈಲ ಉತ್ಪಾದನಾ ರಾಷ್ಟ್ರಗಳು ಹಿಂದೆಂದೂ ಉಪಯೋಗಿಸಿದ ಅಸ್ತ್ರವನ್ನು ಉಪಯೋಗಿಸಿ ಇಸ್ರೇಲ್‌ಗೆ ಸಹಾಯ ಮಾಡುವ ಪಾಶ್ಚಾತ್ಯ ರಾಷ್ಟ್ರಗಳ ಮೇಲೆ ಬೆದರಿಕೆ ಹೇರಿತು. ಏಕೆಂದರೆ ೧೯೫೦ರ ಈಚೆಗೆ ಪಶ್ಚಿಮ ಏಷ್ಯಾದ ಶಾಂತಿಗೆ ಭಂಗ ತರುವಲ್ಲಿ ಅಮೆರಿಕಾದ ಸಾಮ್ರಾಜ್ಯಶಾಹಿ ತತ್ವವೇ ಕಾರಣ. ತನ್ನ ಅಣ್ವಸ್ತ್ರಗಳಿಗೆ ಮಾರುಕಟ್ಟೆಯ ನಿರ್ಮಾಣ ಮಾಡಲು ಮತ್ತು ಕಡಿಮೆ ದರದ ಪೆಟ್ರೋಲಿಯಂನ ಲೂಟಿ ಮಾಡಲು ಅಮೆರಿಕಾ ಪಶ್ಚಿಮ ಏಷ್ಯಾದ ಮೇಲೆ ೧೯೪೦ರಿಂದಲೇ ಕಣ್ಣಿಟ್ಟಿತು. ಅಮೆರಿಕಾವು ೧೯೪೮ರಲ್ಲಿ ಯಹೂದಿಗಳು ಸ್ವತಂತ್ರ ರಾಷ್ಟ್ರ ನಿರ್ಮಾಣ ಮಾಡಿದ ಮೇಲೆ ತಮ್ಮ ಹಿತರಕ್ಷಣೆಯನ್ನು ಕಾಪಾಡಿಕೊಳ್ಳಲು, ಒತ್ತಡ ಸೃಷ್ಟಿಸಿ ಇಸ್ರೇಲನ್ನು ಹಿಡಿತದಲ್ಲಿಟ್ಟುಕೊಂಡಿತು. ಮಾತ್ರವಲ್ಲ ಇಸ್ರೇಲ್ ೧೯೫೦ರ ನಂತರ ಜಗತ್ತಿನ ಮೂಲೆ ಮೂಲೆಯಲ್ಲಿ ವಾಸಿಸುತ್ತಿದ್ದ ಯಹೂದಿಗಳನ್ನು ಹೊಸ ರಾಷ್ಟ್ರಕ್ಕೆ ಸ್ವಾಗತಿಸಿತು. ಇದರಿಂದ ಇಸ್ರೇಲಿಗೆ ಹೊರಗಿನಿಂದ ಬರುವ ಯಹೂದಿಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿತು. ಆದರೆ ಅವರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲು ಇಸ್ರೇಲಿಗೆ ಸ್ಥಳದ ಅಭಾವವಿದ್ದು ಅರಬ್‌ರ ಮತ್ತಷ್ಟು ಸ್ಥಳಗಳನ್ನು ಕಬಳಿಸುವ ಪ್ರಯತ್ನದಲ್ಲಿತ್ತು. ಆ ಸಂದರ್ಭದಲ್ಲಿ ಈಜಿಪ್ಟ್ ದೇಶದ ಅಬ್ದುಲ್ ನಾಸರ್ ಹೊಸ ಅರಬ್ ರಾಷ್ಟ್ರೀಯ ಚಳುವಳಿಯ ನಾಯಕತ್ವವನ್ನು ವಹಿಸಿ, ಪ್ಯಾಲೇಸ್ತೀನ್ ಕೈಯಿಂದ ಪಡೆದುಕೊಳ್ಳಲು ಒಗ್ಗಟ್ಟಿನ ಹೋರಾಟಕ್ಕೆ ಕರೆ ಕೊಟ್ಟನು. ಜೊತೆಗೆ ಇಸ್ರೇಲ್‌ನ ಭಯೋತ್ಪಾದನಾ ಶಕ್ತಿಯನ್ನು ನಾಶಮಾಡುವ ಗುರಿಯಿಂದ ಪ್ಯಾಲೇಸ್ತಿನ ಅರಬರ ಪರವಾಗಿ ಸಿರಿಯಾ, ಈಜಿಪ್ಟ್ ಮತ್ತು ಜೋರ್ಡಾನ್ ಒಟ್ಟಿಗೆ ೧೯೬೭ರಲ್ಲಿ ಇಸ್ರೇಲ್ ವಿರುದ್ಧ ಯುದ್ಧ ಸಾರಿದವು. ಈ ಯುದ್ಧದಲ್ಲಿ ಇಸ್ರೇಲ್ ಸಂಘಟನಾತ್ಮಕವಾಗಿ ಅಮೆರಿಕಾದ ಅಸ್ತ್ರಗಳ ಸರಬರಾಜಿನಿಂದ ದಿಟ್ಟತನದ ಉತ್ತರ ಕೊಟ್ಟು ಅರಬರ ಪ್ರಾಂತ್ಯಗಳಾದ ಗೋಲನ್ ಹೈಟ್ಸ್, ಗಾಜ ಸ್ಟ್ರಾಪ್ಸ್, ಸಿನೈ ಡೆಸ್ಟರ್, ವೆಸ್ಟ್ ಬ್ಯಾಂಕ್ ಮತ್ತು ಈಸ್ಟ್ ಜೆರುಸಲೆಂಗಳನ್ನು ಕಬಳಿಸಿಕೊಂಡಿತು.

ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಅರಬ್ ಪೆಟ್ರೋಲಿಯಂ ಮಂತ್ರಿಗಳ ಸಭೆ ಕರೆದು ಇಸ್ರೇಲ್ ಮತ್ತು ಸಾಮ್ರಾಜ್ಯಶಾಹಿ ರಾಷ್ಟ್ರಗಳ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡಲು ‘ಒಪೆಕ್’ ಸಂಘಟನಾ ರೀತಿಯಲ್ಲಿಯೇ ಮತ್ತೊಂದು ಒಕ್ಕೂಟವನ್ನು ಸ್ಥಾಪಿಸಿತು. ಈ ಹಿನ್ನೆಲೆಯಲ್ಲಿ ಕೇವಲ ಅರಬ್ ಪೆಟ್ರೋಲಿಯಂ ಉತ್ಪಾದನಾ ರಾಷ್ಟ್ರಗಳಿಂದ ಕೂಡಿದ ಸಂಘಟನೆಯನ್ನು ‘ಒಎಪೆಕ್’ ಎಂಬ ನಾಮಾಂಕಿತದಿಂದ ಸ್ಥಾಪನೆಯಾಯಿತು(ಆರ್ಗ ನೈಜೇಶನ್ ಫಾರ್ ಅರಬ್ ಪೆಟ್ರೋಲಿಯಂ ಎಕ್ಸ್‌ಪೋರ್ಟಿಂಗ್ ಕಂಟ್ರೀಸ್). ೧೯೬೭ರ ಕೊನೆಯಲ್ಲಿ ‘ಒಎಪೆಕ್’ ಇಸ್ರೇಲ್ ಮತ್ತು ಅದರ ಸಹಚರರಿಗೆ(ವಿದೇಶಿ ರಾಷ್ಟ್ರಗಳಿಗೆ) ಪೆಟ್ರೋಲಿಯಂನ ಸರಬರಾಜನ್ನು ಏಕಪಕ್ಷೀಯವಾಗಿ ಸ್ಥಗಿತಗೊಳಿಸಿತು. ಈ ಘಟನೆ ಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ದಿಢೀರ್ ಪೆಟ್ರೋಲಿಯಂ ಕೊರತೆ ಉಂಟಾಯಿತು; ವಿದೇಶಿ ಸಾಮ್ರಾಜ್ಯಶಾಹಿ ಪೆಟ್ರೋಲಿಯಂ ಕಂಪನಿಗಳು ಅರಬರ ಒಗ್ಗಟ್ಟಿನ ನಿಲುವಿನಿಂದ ನಿಬ್ಬೆರಗಾದವು.

ಈ ಪ್ರಕ್ಷುಬ್ಧ ವಾತಾವರಣದಲ್ಲಿ ಇರಾನಿನ ದೊರೆ ಬಹಳ ಜಾಗೃತವಾಗಿ ವ್ಯವಹಾರದಲ್ಲಿನ ತನ್ನ ಕೌಶಲವನ್ನು ವ್ಯಕ್ತಪಡಿಸುತ್ತಾನೆ. ಈಗಾಗಲೇ ‘‘ಬಿಳಿಕ್ರಾಂತಿ’’ಯ ಗುರಿ ತಲುಪಲು ಹಣದ ಕೊರತೆಯನ್ನು ಎದುರಿಸುತ್ತಿದ್ದ, ರೇಝಾಶಾಹ ‘ಒಪೆಕ್’ ತೆಗೆದುಕೊಂಡ ನೀತಿಯಿಂದ ದೂರವಿದ್ದು, ಅರಬರ ಪೆಟ್ರೋಲಿಯಂ ಸರಬರಾಜಿನ ಸ್ಥಗಿತದ ಧೋರಣೆಯನ್ನು ಪಾಲಿಸಲು ನಿರಾಕರಿಸಿರುವುದಲ್ಲದೆ, ಸಿಕ್ಕಿದ ಅವಕಾಶವನ್ನು ತನ್ನದಾಗಿಸಿಕೊಂಡು ಪೆಟ್ರೋಲಿಯಂನ್ನು ಒಂದು ರಾಜಕೀಯ ಅಸ್ತ್ರವಾಗಿ ಮಾರ್ಪಡಿಸುತ್ತಾನೆ. ಅಂದರೆ ಇರಾನ್ ಒಂದು ದ್ವಿಮುಖ ನೀತಿಯನ್ನು ಪಾಲಿಸಿ ಒಂದು ಕಡೆಯಲ್ಲಿ ಪರೋಕ್ಷವಾಗಿ ಅರಬ್ ರಾಷ್ಟ್ರಗಳನ್ನು ಪ್ರೇರೇಪಿಸಿ ಸರಬರಾಜನ್ನು ಸ್ಥಗಿತಗೊಳಿಸಿತು. ಮತ್ತೊಂದು ಕಡೆ ಇರಾನ್ ಅರಬ್‌ರ ನೀತಿಯಲ್ಲಿ ಸಹಕರಿಸುವುದರಲ್ಲಿ ದೂರವಿದ್ದು, ವಿದೇಶಿ ಪೆಟ್ರೋಲಿಯಂ ಕಂಪನಿಗಳು ಜಾಗತಿಕ ಮಾರುಕಟ್ಟೆಯಲ್ಲಿ ಸ್ವಲ್ಪ ಕೊರತೆ ಎದುರಿಸುವಾಗ ಇರಾನ್ ಸರಕಾರ ‘ಸಾಮ್ರಾಜ್ಯಶಾಹಿ’ ರಾಷ್ಟ್ರಗಳಿಗೆ ಬೇಕಾಗುವಷ್ಟು ತೈಲ ಸರಬರಾಜನ್ನು ಮುಂದುವರಿಸುವ ಭರವಸೆಯನ್ನು ಕೊಟ್ಟು ಪೆಟ್ರೋಲಿಯಂ ಉತ್ಪಾದನೆಯ ಪ್ರಮಾಣವನ್ನು ಸರಾಸರಿ ೨೦ ಶೇಕಡಾ ಹೆಚ್ಚಿಸಿತು(೧೯೬೭ರ ಕೊನೆಯಲ್ಲಿ). ಆದ ಕಾರಣ ೧೯೭೦ರಲ್ಲಿ ಇರಾನಿನ ಪೆಟ್ರೋಲಿಯಂ ಉತ್ಪಾದನೆ ವರ್ಷಕ್ಕೆ ೧೪೦೩.೮ ಮಿಲಿಯ ಬ್ಯಾರಲ್ ಗಳಾಗಿತ್ತು. ಇದು ೧೯೬೭ರಲ್ಲಿ ಕೇವಲ ೬೮೦ ಮಿಲಿಯ ಬ್ಯಾರಲ್ ಆಗಿತ್ತು. ಪ್ರತಿ ವರ್ಷಕ್ಕೆ ಐರೋಪ್ಯ ಮತ್ತು ಪಾಶ್ಚಾತ್ಯ ರಾಷ್ಟ್ರಗಳು ‘ಒಎಪೆಕ್’ನ ಬೆದರಿಕೆ ಎದುರಿಸಿದರೂ ಈಗ ಇರಾನ್ ಸರಕಾರ ಸಾಕಷ್ಟು ಪ್ರಾಮಾಣದಲ್ಲಿ ಪೆಟ್ರೋಲಿಯಂ ಸರಬರಾಜು ಮಾಡಲು ಒಪ್ಪಿಕೊಂಡಿತು. ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ಪೆಟ್ರೋಲಿಯಂ ಕೊರತೆಯನ್ನು ಲೂಟಿ ಮಾಡಿ, ತನ್ನ ರಾಷ್ಟ್ರೀಯ ಆದಾಯವನ್ನು ಹೆಚ್ಚಿಸಿತು. ಕ್ಲುಪ್ತ ಸಮಯವುಳ್ಳ ಸಾಮ್ರಾಜ್ಯಶಾಹಿ ರಾಷ್ಟ್ರಗಳ ಬೇಡಿಕೆಗಳನ್ನು ಈಡೇರಿಸಿ ಅವರ ಮನಸ್ಸನ್ನು ಇರಾನ್ ಗೆದ್ದುಕೊಂಡು ಒಳಗಿಂದ ಒಳಗೆ ಒಂದು ರೀತಿಯ ಸ್ನೇಹ ಸೌಹಾರ್ದತೆಯನ್ನು ಸೃಷ್ಟಿಸಿತು. ಅಲ್ಲದೆ ಇನ್ನೂ ಇಂತಹ ಯುದ್ಧದ ಪರಿಣಾಮ ಬೀರಿದರೆ ಇದೇ ರೀತಿಯ ಸಹಕಾರ ಮುಂದುವರಿಸುವುದೆಂದು ಇರಾನ್ ಅಮೆರಿಕಕ್ಕೆ ಭರವಸೆ ಕೊಟ್ಟಿತು. ಇದು ಪೆಟ್ರೋಲಿಯಂ ಉತ್ಪಾದನಾ ರಾಷ್ಟ್ರ ದೊಳಗಿನ ರಾಜಕೀಯ ಮತ್ತು ವ್ಯವಹಾರ ಕೌಶಲವನ್ನು ವ್ಯಕ್ತಪಡಿಸುತ್ತವೆ. ಈ ರಾಜತಂತ್ರ ವಿದ್ಯೆಯಲ್ಲಿ ‘ಒಪೆಕ್’ ಒಂದು ಉಪಯುಕ್ತ ನಿಯಂತ್ರಣಕಾರಿ ಸಾಧನವಾಗಿ ಇರಾನ್ ಸರಕಾರ ಉಪಯೋಗಿಸಿಕೊಂಡಿತು. ಈ ಕಾರಣಕ್ಕಾಗಿ ‘ಒಪೆಕ್’ ೧೯೬೮ರ ಅಧಿವೇಶನದಲ್ಲಿ ‘ಒಪೆಕ್’ ಪೆಟ್ರೋಲಿಯಂ ರಾಜಕೀಯದಲ್ಲಿ ಇರಾನ್ ಸರಕಾರಕ್ಕೆ ಮಹತ್ವಪೂರ್ಣ ಪಾತ್ರ ವಹಿಸಲು ಅಧಿಕಾರ ಕೊಟ್ಟಿತು. ಜೊತೆಗೆ ಈ ಸಮ್ಮೇಳನದಲ್ಲಿ ಪೆಟ್ರೋಲಿಯಂ ಉತ್ಪಾದನಾ ರಾಷ್ಟ್ರಗಳಿಗೆ ಜಾಗತಿಕ ಮಾರುಕಟ್ಟೆಯ ದರದಲ್ಲಿ ಪಡೆಯುವ, ಲಾಭದ ಆಧಾರದ ಮೇಲೆ ತಮ್ಮ ಆದಾಯವನ್ನು ಹೆಚ್ಚಿಸಲು; ವಿದೇಶಿ ಪೆಟ್ರೋಲಿಯಂ ಕಂಪನಿಗಳ ಮೇಲೆ ಸಾಕಷ್ಟು ನಿಯಂತ್ರಣ ಹೇರಿ ಅವುಗಳ ಲೆಕ್ಕ ಪತ್ರವನ್ನು ಪರಿಶೀಲಿಸುವ ಸ್ವಾತಂತ್ರ್ಯವನ್ನು ಕಲ್ಪಿಸಿತು. ಹಾಗೆಯೇ ಉತ್ಪಾದನಾ ರಾಷ್ಟ್ರಗಳಿಗೆ ಪ್ರಾದೇಶಿಕ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಬೆಲೆಯನ್ನು ನಿರ್ಧರಿಸಿರುವ ಹಕ್ಕನ್ನು ಸಹ ಕೊಟ್ಟಿತು. ಈ ಮಾರ್ಗವನ್ನು ಅನುಸರಿಸಿದ ಲಿಬಿಯಾದ ಅಧ್ಯಕ್ಷ ಜನರಲ್ ಗಢಾಫಿ ಅವರು ಸಾಮ್ರಾಜ್ಯಶಾಹಿ ಪೆಟ್ರೋಲಿಯಂ ಕಂಪನಿಗಳನ್ನು ತಮ್ಮ ದೇಶದಲ್ಲಿ ಮುಚ್ಚಿಸಿ, ತೈಲದ ಬೆಲೆಯನ್ನು ೩೦ ಸೆಂಟ್ಸ್ ಬ್ಯಾರಲ್ ಒಂದಕ್ಕೆ ಪ್ರಾದೇಶಿಕ ಮಾರುಕಟ್ಟೆಯಲ್ಲಿ ವಿಧಿಸಿದನು. ಇರಾನಿನ ದೊರೆ ಗಢಾಫಿಯ ನೀತಿಯನ್ನು ಸ್ವಾಗತಿಸಿ ಬೆಲೆಯೇರಿಸುವುದು ಲಿಬಿಯಾದ ಜನ್ಮಸಿದ್ಧ ಹಕ್ಕು ಎಂದು ಸಾರಿದನು. ಇಲ್ಲಿ ಮತ್ತೆ ಪುನಃ ಇರಾನ್‌ನ ದ್ವಿಮುಖ ನೀತಿಯ ರಾಜಕೀಯ ಬೆಳಕಿಗೆ ಬರುತ್ತದೆ.

೧೯೭೦ರ ಡಿಸೆಂಬರ್‌ನಲ್ಲಿ ನಡೆದ ಕಾರಕಾಸ್ (ವೆನೆಜುಲ) ‘ಒಪೆಕ್’ನ ಸಮ್ಮೇಳನದಲ್ಲಿ ಏಕಪ್ರಕಾರವಾಗಿ ೫ ತತ್ವಗಳನ್ನೊಳಗೊಂಡ ೧೨೦೦ನೇ ದೃಢೀಕರಣ ಪತ್ರ ಒಂದನ್ನು ಮಂಡಿಸಿತು. ಅವು ಹೀಗಿವೆ :

೧. ವಿದೇಶಿ ಪೆಟ್ರೋಲಿಯಂ ಕಂಪನಿಗಳು ಸರಾಸರಿ ೫೫ ಆದಾಯವನ್ನು ‘ಒಪೆಕ್’ನ ಸದಸ್ಯ ರಾಷ್ಟ್ರಗಳಿಗೆ ಹಂಚಬೇಕು;

೨. ಪೆಟ್ರೋಲಿಯಂ ಉತ್ಪಾದನಾ ರಾಷ್ಟ್ರಗಳು ಅನುಸರಿಸುವ ಬೆಲೆ ಮತ್ತು ಜಾಗತಿಕ ಮಾರುಕಟ್ಟೆಯ ಅನುಸರಿಸುವ ಬೆಲೆಯ ನಡುವಿನ ಅಂತರವನ್ನು ಉತ್ಪಾದಕರ ಪರವಾಗಿ ಕೈ ಬಿಡಬೇಕು;

೩. ಆದಾಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವಾಗ ಪ್ರಾದೇಶಿಕ ಮಾರುಕಟ್ಟೆಯಲ್ಲಿ ಅನುಸರಿಸುವ ಬೆಲೆ ಮತ್ತು ನಿಜವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಇರುವ ಬೆಲೆಯ ನಡುವಿನ ಅಂತರದಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕು;

೪. ಎಲ್ಲ ಸದಸ್ಯರಾಷ್ಟ್ರಗಳು (ಒಪೆಕ್‌ನ) ಕಟ್ಟಿದ ಬೆಲೆ ಮತ್ತು ಆದಾಯ ಲೆಕ್ಕ ಗಣನೆಗೆ ತೆಗೆದುಕೊಳ್ಳುವಾಗ ಸಮಾನತೆಯನ್ನು ಕಾಪಾಡಿಕೊಳ್ಳಬೇಕು;

೫. ಪೆಟ್ರೋಲಿಯಂ ಉತ್ಪಾದನಾ ರಾಷ್ಟ್ರಗಳು ವಿದೇಶಿ ತೈಲ ಕಂಪನಿಗಳು ಅನಾವಶ್ಯಕವಾಗಿ ಕೊಡುವ ರಿಯಾಯಿತಿಯನ್ನು ರದ್ದುಗೊಳಿಸ ಬೇಕು. ಹೀಗೆ ಐದು ಪ್ರಾಮುಖ್ಯವಾದ ಶರತ್ತುಗಳನ್ನು ಒಪೆಕ್ ಪಾಶ್ಚಾತ್ಯರಾಷ್ಟ್ರಗಳ ಮೇಲೆ ಹೇರಿತು. ಈ ಧೋರಣೆಗಳು ೧೯೭೧ರ ಜನವರಿ ೨ರಿಂದ ಜರಿಗೊಳಿಸುವುದಾಗಿ ಪ್ರಕಟಿಸಿತು. ‘ಒಪೆಕ್’ನ ಈ ಪರಿಷತ್ ನೀತಿಯನ್ನು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳು ಹೆಚ್ಚಾಗಿ ಸ್ವಾಗತಿಸಿದವು.

ಮತ್ತೊಮ್ಮೆ ‘ಒಪೆಕ್’ನ ಸಮ್ಮೇಳನ ತೆಹರಾನ್(ಇರಾನ್)ನಲ್ಲಿ ಏರ್ಪಡಿಸಿ ೧೩೧ನೆಯ ನಂಬರಿನ ಕರಡು ಪತ್ರವನ್ನು ಹೊರಡಿಸಿ, ಗಲ್ಫ್ ಪ್ರದೇಶದ ಎಲ್ಲ ಒಪೆಕ್ ಸದಸ್ಯ ರಾಷ್ಟ್ರ ಗಳು ಕಾರಕಾಸ್ ಸಮ್ಮೇಳನದ ಕರಡುಪತ್ರದ(೧೨೦ನೆಯ ನಂಬರ್) ಅನ್ವಯ ನಿಗದಿಪಡಿಸಿದ ಎಲ್ಲ ಶರತ್ತುಗಳನ್ನು ಜರಿಗೊಳಿಸಲು ಕಟ್ಟುನಿಟ್ಟಿನ ಆಜ್ಞೆ ಹೊರಡಿಸಿತು. ಯಾವುದೇ ತೈಲ ಕಂಪನಿಗಳು ಈ ನಿಯಮಗಳನ್ನು (ಮೇಲೆ ಸೂಚಿಸಿದ) ಪಾಲಿಸದಿದ್ದಲ್ಲಿ ಅಧಿಕಾರವನ್ನು ಉರ್ಜಿತಗೊಳಿಸಿ ಸರಬರಾಜನ್ನು ಸ್ಥಗಿತಗೊಳಿಸಲಾಗುವುದೆಂದು ಮುನ್ನೆಚ್ಚರಿಕೆ ನೀಡಿತು.

೧೯೭೧ರ ಫೆಬ್ರವರಿ ೧೪ರಲ್ಲಿ ಎಲ್ಲ ವಿದೇಶಿ ಪೆಟ್ರೋಲಿಯಂ ಕಂಪನಿಗಳು ‘ಒಪೆಕ್’ ರಾಷ್ಟ್ರಗಳಿಗೆ ಶರಣಾಗಿ ಒಂದು ವಿಶೇಷ ಒಪ್ಪಂದಕ್ಕೆ ಸಹಿ ಹಾಕಿದವು. ‘ತೆಹರಾನ್ ಒಪ್ಪಂದದ (೧೯೭೧) ಇದರ ಶರತ್ತುಗಳು ಹೀಗಿವೆ :

೧. ಗಲ್ಫ್ ಮಾರುಕಟ್ಟೆಯಲ್ಲಿ ಬ್ಯಾರಲ್ ಒಂದರ ಬೆಲೆ ೩.೫ ಸೆಂಟ್ಸ್‌ನಿಂದ ಸರಾಸರಿ ೨.೧೫ ಡಾಲರ್‌ನಷ್ಟು ಏರಿಕೆ.

೨. ಒಪೆಕ್‌ನ ಆದಾಯದಲ್ಲಿ ಸರಾಸರಿ ೫೫ ಸ್ಥಿರತೆ ಕಾಪಾಡಿಕೊಳ್ಳುವುದು.

೩. ಆದಾಯವನ್ನು ವಸೂಲಿ ಮಾಡುವಾಗ ಗಂಭೀರ ವ್ಯತ್ಯಾಸವಾಗದ ಹಾಗೆ ನೋಡಿಕೊಳ್ಳಲು ಒಂದು ಹೊಸ ನೀತಿ – (ಐದು ವರ್ಷಕ್ಕೊಮ್ಮೆ ಬೆಲೆ ಏರಿಸುವ ತಟಸ್ಥ ನೀತಿ (ಆದರೆ ಈ ನೀತಿಯನ್ನು ನಂತರ ಉಲ್ಲಂಘಿಸಲಾಗಿದೆ)

೪. ಸಂಬಂಧಪಟ್ಟ ಸರಕಾರಗಳಿಂದ ಉತ್ಪಾದನೆ ಮತ್ತು ಬೆಲೆ ಏರಿಸುವಿಕೆಯಲ್ಲಿ ಇನ್ನು ಐದು ವರ್ಷ ಯಾವುದೇ ಬದಲಾವಣೆ ಇಲ್ಲ ಎಂಬ ಭರವಸೆ (ಕಂಪನಿಗಳಿಗೆ). ಈ ಧೋರಣೆ ಯಿಂದಾಗಿ ಪೆಟ್ರೋಲಿಯಂ ಉತ್ಪಾದನಾ ರಾಷ್ಟ್ರಗಳ ಆದಾಯವು ೧೯೭೫ರಲ್ಲಿ ೩ ಬಿಲಿಯಾ ಡಾಲರ್‌ಗಳಷ್ಟಾದವು. ಇದು ೧೯೭೧ರಲ್ಲಿ ಕೇವಲ ೧೨೩೦ ಮಿಲಿಯ ಡಾಲರ್‌ಗಳಾಗಿತ್ತು. ಈ ಕಾರಣದಿಂದಾಗಿ ತೆಹೆರಾನ್ ಒಪ್ಪಂದವು ಪೆಟ್ರೋಲಿಯಂ ಉತ್ಪಾದನಾ ಮತ್ತು ಉತ್ಪಾದಕೇತರ ಸಂಬಂಧದಲ್ಲಿ ಒಂದು ಮೈಲುಗಲ್ಲಾಗಿ ಮಾರ್ಪಟ್ಟಿತು. ಈ ಒಪ್ಪಂದದ ಪರಿಣಾಮಗಳನ್ನು ಹೀಗೆ ಉಲ್ಲೇಖಿಸಬಹುದು:

೧. ಒಪೆಕ್ ಸದಸ್ಯ ರಾಷ್ಟ್ರಗಳು ಮತ್ತು ವಿದೇಶಿ ಪೆಟ್ರೋಲಿಯಂ ಕಂಪನಿಗಳ ನಡುವಿನ ಸಂಬಂಧ ಮತ್ತು ಪೆಟ್ರೋಲಿಯಂ ವ್ಯವಹಾರ ಕೌಶಲ ಹಾಗೂ ಜಗತ್ತಿನ ರಾಜಕೀಯ ತಂತ್ರದಲ್ಲಿ ಮಹತ್ತರ ಪರಿವರ್ತನೆ ಕಂಡುಬಂದಿತು. ಮೊದಲ ಬಾರಿಗೆ ತೈಲ ಉತ್ಪಾದನಾ ರಾಷ್ಟ್ರಗಳ ಹಿತದೃಷ್ಟಿಯಿಂದ ಒಂದು ವೇದಿಕೆ ನಿರ್ಮಾಣವಾಗಿ ಕಂಪನಿಗಳ ಮೇಲೆ ಉತ್ಪಾದನೆ ಮತ್ತು ಬೆಲೆಯ ಏರಿಳಿಕೆಯನ್ನು ನಿಯಂತ್ರಿಸಲು ಒಪೆಕ್ ಸಫಲವಾಯಿತು.

೨. ಬಂಡವಾಳಶಾಹಿ ರಾಷ್ಟ್ರಗಳು ತೈಲ ಉತ್ಪಾದನಾ ರಾಷ್ಟ್ರಗಳಿಗೆ ಅನಿವಾರ್ಯವಿಲ್ಲದೆ ಶರಣಾಗಬೇಕಾಯಿತು ಮತ್ತು ತಮ್ಮ ಕೈಗಾರಿಕೆಗೆ ದಿನನಿತ್ಯದ ಹಾಗೂ ಬೆಲೆಯಲ್ಲಿ ಒಂದು ಸ್ಥಿರತೆಯನ್ನು ಸಾಧಿಸಲು ಒಪೆಕ್‌ನ ಶರತ್ತುಗಳನ್ನು ಒಪ್ಪಿಕೊಳ್ಳಬೇಕಾಯಿತು.

೩. ಒಪೆಕ್ ಇಂದು ವೈಯಕ್ತಿಕ ಹಾಗೂ ಕ್ರೋಡೀಕೃತ ಸಂಪನ್ಮೂಲಗಳ ವ್ಯವಹಾರ ಕೌಶಲದಲ್ಲಿ ಪ್ರಾವೀಣ್ಯತೆ ಪಡೆದು ತೈಲ ಉತ್ಪಾದಕರ ರಕ್ಷಣೆಗೆ ಏಕೈಕ ಸಂಘಟನೆ ಯಾಗಿದೆ.

೪. ಬೆಳವಣಿಗೆ ಹೊಂದುತ್ತಿರುವ (ತೈಲ ಸಂಪನ್ಮೂಲ ಇಲ್ಲದಿರುವ) ತೃತೀಯ ಜಗತ್ತಿನ ರಾಷ್ಟ್ರಗಳಿಗೆ ತಮ್ಮ ಸಂಪನ್ಮೂಲಗಳನ್ನು ರಾಷ್ಟ್ರೀಯ ಅಭಿವೃದ್ದಿಗೆ ಉಪಯೋಗಿಸಿ ಕೊಳ್ಳಲು ವಸಾಹತುಶಾಹಿಯ ದಬ್ಬಾಳಿಕೆ ಮತ್ತು ಶೋಷಣೆ ಧೋರಣೆಗಳನ್ನು ಹತ್ತಿಕ್ಕಲು ಇಂದು ‘ಒಪೆಕ್’ ಒಂದು ‘ಮಾರ್ಗದರ್ಶಿ’ಯಾಗಿದೆ.

೫. ತೆಹೆರಾನ್ ಒಪ್ಪಂದವು ಒಪೆಕ್‌ನ ಆರ್ಥಿಕ ಹಾಗೂ ರಾಜಕೀಯ ವಿಜಯ ಅಲ್ಲದೆ ನೈತಿಕ ವಿಜಯವೆಂದು ತೃತೀಯ ಜಗತ್ತು ವರ್ಣಿಸಿದೆ.

೬. ಕೊನೆಯದಾಗಿ ಈ ತೆಹರಾನ್ ಒಪ್ಪಂದದಿಂದಾಗಿ ಅಮೆರಿಕಾ ಮತ್ತು ಲಿಬಿಯಾದ ನಡುವೆ ಖಾಯಂ ಆದ ದ್ವೇಷ ಬೆಳೆಯಿತು. ಇದರ ಪರಿಣಾಮವಾಗಿ ೧೯೮೬ ಮಾರ್ಚ್‌ನಲ್ಲಿ ಲಿಬಿಯಾ ಅಮೆರಿಕಾದ ದಾಳಿಗೆ ತುತ್ತಾಗಬೇಕಾಯಿತು. ಏಕೆಂದರೆ ಈ ರೀತಿಯ ಪರಿಸ್ಥಿತಿಯನ್ನು ಮಧ್ಯ ಪೂರ್ವ ಜಗತ್ತಿನಲ್ಲಿ ಮೊದಲು ಸೃಷ್ಟಿಸಿದ್ದು ಲಿಬಿಯಾ. ಅದನ್ನು ನಂತರ ಒಪೆಕ್ ಪಾಲಿಸಿ ತೆಹೆರಾನ್ ಒಪ್ಪಂದದ ಮೂಲಕ ತನ್ನ ಪ್ರಬಲತೆಯನ್ನು ಸಾಮ್ರಾಜ್ಯಶಾಹಿ ವಿದೇಶಿ ತೈಲ ಕಂಪನಿಗಳಿಗೆ ಗೊತ್ತುಪಡಿಸಿತು. ಈ ಮೇಲಿನ ಕಾರಣದಿಂದಾಗಿ ತೆಹೆರಾನ್ ಒಪ್ಪಂದವು ಒಪೆಕ್‌ನ ಇತಿಹಾಸದಲ್ಲೇ ಪ್ರಮುಖವಾದುದು ಎಂದು ಹೇಳಬಹುದು.

ತೆಹೆರಾನ್ ಒಪ್ಪಂದದ ಪ್ರೇರಣೆಯಿಂದ ಅಲ್ಜೀರಿಯಾ ಫ್ರಾನ್ಸ್‌ನ ತೈಲ ಉತ್ಪಾದನಾ ರಿಯಾಯಿತಿಯಲ್ಲಿ(೧೯೭೧ರ ಫೆಬ್ರವರಿ ೨೪ರಲ್ಲಿ)೫೧ ಶೇಕಡಾವನ್ನು ರಾಷ್ಟ್ರೀಕರಣ ಗೊಳಿಸಿತು. ಇರಾಕ್ ಸಹ ೧೯೭೨ರಲ್ಲಿ ಕಿರ್‌ಕುಕಿಯಲ್ಲಿ ಆಡಳಿತ ನಡೆಯುತ್ತಿರುವ ವಿದೇಶಿ ಪೆಟ್ರೋಲಿಯಂ ಕಂಪನಿಯನ್ನು ರಾಷ್ಟ್ರೀಕರಣ ಮಾಡಿತು. ಆದರೆ ಇರಾನ್ ಯಾವ ವಿದೇಶಿ ಕಂಪನಿಯ ವಿರುದ್ಧವು ಕ್ರಮ ತೆಗೆದುಕೊಳ್ಳಲಿಲ್ಲ. ಒಂದು ಅರ್ಥದಲ್ಲಿ ಇರಾನ್‌ನ ದೊರೆ ಈ ವಿಚಾರದಲ್ಲಿ ಸುತ್ತಮುತ್ತಲಿನ ಉಗ್ರಗಾಮಿ ನಾಯಕರನ್ನು ಪರೋಕ್ಷವಾಗಿ ಉತ್ಪ್ರೇಕ್ಷಿಸಿದ್ದು ಬಿಟ್ಟರೆ, ತನ್ನ ಸರಕಾರ ಯಾವ ಉಗ್ರನೀತಿಯನ್ನು ಕೈಗೊಳ್ಳಲಿಲ್ಲ. ಇದು ಅದರ ದ್ವಿಮುಖ ನೀತಿಯ ಮತ್ತೊಂದು ಮುಖ.

ಈ ರೀತಿಯ ಇಬ್ಬಗೆ ನೀತಿಯನ್ನು ಅನುಸರಿಸುತ್ತಾ ಬಂದ ಇರಾನ್ ‘ಒಪೆಕ್’ನ್ನು ಪ್ರೇರೇಪಿಸಿ ನಾನಾ ರೀತಿಯ ಉಗ್ರ ಕ್ರಮಗಳನ್ನು ತೆಗೆದುಕೊಳ್ಳಲು ಯಶಸ್ವಿಯಾಯಿತು. ಹಾಗೂ ಇರಾನ್ ವಿದೇಶಿಯರಿಗೆ ಸ್ನೇಹಪರ ರಾಷ್ಟ್ರವಾಗಿ ಪರಿಣಮಿಸಿತು. ಉದಾಹರಣೆಗೆ: ೧೯೭೩ರಲ್ಲಿ ‘ಒಪೆಕ್’ ಉತ್ಪಾದನಾ ರಾಷ್ಟ್ರಗಳ ತೈಲಕ್ಕೆ ಸರಿಯಾದ ಮತ್ತು ಶಾಶ್ವತವಾದ ಬೆಲೆಯನ್ನು ಪ್ರಾದೇಶಿಕ ಮಾರುಕಟ್ಟೆಯಲ್ಲಿ ಅನುಸರಿಸಲು ಕರೆ ಕೊಟ್ಟಿತು. ೧೯೭೩ರ ಸೆಪ್ಟೆಂಬರ್ ೧೬ರಲ್ಲಿ ಪುನಃ ಗಲ್ಫ್‌ನ ತೈಲ ಉತ್ಪಾದನಾ ರಾಷ್ಟ್ರಗಳಿಗೆ ಕ್ರೋಡೀಕೃತ ಹಾಗೂ ವೈಯಕ್ತಿಕ ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯ ಸ್ಥಿತಿಗೆ ಅನುಸರಿಸಿ ಬೆಳೆಯುತ್ತಿರುವ ತೈಲ ಬೇಡಿಕೆ ಮತ್ತು ಬೆಲೆ ಏರಿಕೆಗಳ ಕೂಡ ಒಡೆಯಲು ಒಪೆಕ್ ಅನುಮತಿ ನೀಡಿತು. ಈ ತೈಲವನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆ. ಅದರಲ್ಲೂ ಇರಾನಿನ ತೈಲವನ್ನೇ ಬ್ಯಾರಲ್ ಒಂದಕ್ಕೆ ೧೭.೮೦ ಡಾಲರ್ ಕೊಟ್ಟು ಖರೀದಿಸಲು ಒಪೆಕ್ ಮುಂದೆ ಬಂತು. ಇದಾದ ದಿನಗಳಲ್ಲಿ ಅರಬ್ ರಾಷ್ಟ್ರಗಳು ಒಂದುಗೂಡಿ ನಾಲ್ಕನೆ ಅರಬ್‌ನ ಇಸ್ರೇಲ್ ಯುದ್ಧಕ್ಕೆ ಕರೆ ನೀಡಿತು. ಪರಿಣಾಮವಾಗಿ ಉತ್ಪಾದನಾ ರಾಷ್ಟ್ರಗಳು(ಒಎಪೆಕ್) ಇಸ್ರೇಲ್ ಮತ್ತು ಅದಕ್ಕೆ ಸಹಕರಿಸುವ ವಿದೇಶಿ ರಾಷ್ಟ್ರಗಳಾದ ಅಮೆರಿಕ ಮತ್ತು ನೆದರ್ ಲ್ಯಾಂಡ್‌ಗಳ ಮಾರುಕಟ್ಟೆಗೆ ತೈಲ ಸರಬರಾಜನ್ನು ಸ್ಥಗಿತಗೊಳಿಸಿದವು. ಹಿಂದೆ ಹೇಳಿದ ಹಾಗೆ ಅಮೆರಿಕವು ಒಂದು ಬಲಿಷ್ಠ ರಾಷ್ಟ್ರವಾಗಿದ್ದು ಇಸ್ರೇಲ್‌ಗೆ ಮಾಮೂಲಿನಂತೆ ಕೆಮಿಕಲ್ ಅಸ್ತ್ರಗಳನ್ನು ಸರಬರಾಜು ಮಾಡುತ್ತಿದ್ದು, ಪಶ್ಚಿಮ ಏಷ್ಯಾದಲ್ಲಿ ನವ ವಸಾಹತೀಕರಣವನ್ನು ಸ್ಥಾಪಿಸಿತ್ತು. ಇಸ್ರೇಲ್‌ಗೆ ಹಣದ ವಿಚಾರದಲ್ಲಿ, ವ್ಯಾಪಾರ ಸೈನಿಕ, ಕಚ್ಚಾವಸ್ತುಗಳ ಸರಬರಾಜಿನಲ್ಲಿ ಸಹಕರಿಸುತ್ತಿದ್ದು ಅಮೆರಿಕವು ತನ್ನದೇ ಆದ ಮಾರುಕಟ್ಟೆ ಯನ್ನು, ರಾಜಕೀಯ ಪ್ರಬಲತೆಯನ್ನು ಅರಬ್ ರಾಷ್ಟ್ರಗಳ ಮೇಲೆ ಹೇರಿತ್ತು. ಅದನ್ನು ಪ್ರತಿಭಟಿಸುವ ಮುನ್ನೆಚ್ಚರಿಕೆಯ ಮೇರೆಗೆ ಅರಬರು ಬಹಳ ದೀರ್ಘ ಕಾಲದವರೆಗೆ ತಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ತೈಲ ಸರಬರಾಜನ್ನು ನಿಲ್ಲಿಸಿದ್ದು ಅಲ್ಲದೆ, ಉತ್ಪಾದನೆಯನ್ನು ಕಡಿಮೆ ಮಾಡುವುದಾಗಿ ವಿದೇಶಿ ಕಂಪನಿಗಳಿಗೆ ಬೆದರಿಕೆ ಒಡ್ಡಿತು.

ಇರಾನ್ ಮಾತ್ರ ಪಶ್ಚಿಮ ಏಷ್ಯಾದ ಬೆಳವಣಿಗೆಯನ್ನು ಗಣನೆಗೆ ತೆಗೆದುಕೊಂಡು ೧೯೬೭ರ ಹಾಗೆ ಪುನಃ ಪ್ರಮುಖ ಪಾತ್ರವನ್ನು ವಹಿಸಿ ನಾಟಕವಾಡಿತು. ೧೯೭೩ರ ‘ಅರಬ್ ಆಯಿಲ್ ಎಂಬಾರ್ಗೊ’ಗೆ ಯಾವ ಪ್ರತಿಕ್ರಿಯೆಯು ವ್ಯಕ್ತಪಡಿಸದೆ, ಪರೋಕ್ಷವಾಗಿ ಅರಬ್ ತೈಲ ರಾಷ್ಟ್ರಗಳನ್ನು(ಒಪೆಕ್) ಏಕಪಕ್ಷೀಯವಾಗಿ ಬೆಲೆಯೇರಿಸುವುದಕ್ಕೆ ಒತ್ತಾಯಿ ಸಿತು. ಅದೇ ಪ್ರಕಾರ ‘ಒಪೆಕ್’ ಅಕ್ಟೋಬರ್ ೧೬ಕ್ಕೆ ಸರಾಸರಿ ೭೦ ಶೇಕಡ ಬೆಲೆಯನ್ನು ಪ್ರಾದೇಶಿಕ ಮಾರುಕಟ್ಟೆಯಲ್ಲಿ ಏರಿಸಿತು. (ಹಿಂದಿನಿಂದ ಇರಾನ್ ಸರಕಾರ ನಾಯಕತ್ವವನ್ನು ವಹಸಿತ್ತು) ಒಂದು ವೇಳೆ ವಿದೇಶಿ ಕಂಪನಿಗಳು ‘ಒಪೆಕ್’ನ ಹೊಸ ಬೆಲೆಯಲ್ಲಿ ತೈಲ ಖರೀದಿಸದೇ ಇದ್ದಲ್ಲಿ, ಗಲ್ಫ್ ರಾಷ್ಟ್ರಗಳು ತಮ್ಮ ತೈಲವನ್ನು ಜಗತ್ತಿನ ಯಾವುದೇ ದೇಶದ ಗಿರಾಕಿಗೆ ಸರಬರಾಜು ಮಾಡುವ ಹಕ್ಕನ್ನು ಅನುಸರಿಸುತ್ತದೆ ಎಂದು ಇರಾನ್ ಸರಕಾರ ಅರಬ್‌ರ ಮೂಲಕ ಬೆದರಿಕೆ ಒಡ್ಡಿತು. ಆದರೆ ಸಾರ್ವಜನಿಕವಾಗಿ ವಿದೇಶಿ ದೇಶಗಳ ಸ್ನೇಹ ಸಂಪಾದಿಸಲಿಕ್ಕೋಸ್ಕರ ಅರಬ್ ತೈಲ ಉತ್ಪಾದನಾ ರಾಷ್ಟ್ರಗಳ ಕಠಿಣ ನೀತಿಯಲ್ಲಿ ಇರಾನ್ ಸರಕಾರದ ಕೈವಾಡವೇನೂ ಇಲ್ಲವೆಂದು ಪ್ರಕಟಿಸಿತು. ಮಾತ್ರವಲ್ಲದೆ ‘ಒಎಪೆಕ್’ನ ಏಕಪಕ್ಷೀಯ ಬೆಲೆಯೇರಿಸುವಿಕೆ, ತೈಲ ಉತ್ಪಾದನಾ ಪ್ರಮಾಣದಲ್ಲಿ ಕಡಿತ, ಮತ್ತು ಅವರು ಹೇರಿದ ‘ಆಯಿಲ್ ಎಂಬಾರ್ಗೊ’ಗಳಿಗೆ ತಾನು ಹೊಣೆಯಲ್ಲ ಎಂದು ರೇಜ ಶಾಹನು ತನ್ನ ಒಟ್ಟಾರೆ ನಿಲುವನ್ನು ಬಹಿರಂಗಗೊಳಿಸಿದನು. ಒಂದು ಕಡೆಯಿಂದ ಈ ನೀತಿ ಇರಾನ್ ದೊರೆಯ ಪ್ರೌಢಿಮೆ, ರಾಜಕೀಯ ಕುತಂತ್ರ ಹಾಗೂ ವ್ಯವಹಾರ ಕೌಶಲ್ಯವನ್ನು ವ್ಯಕ್ತಪಡಿಸಿದರೆ, ಮತ್ತೊಂದು ಕಡೆಯಲ್ಲಿ ರೇಝಾ ದ್ವಿಮುಖ ನೀತಿಯೊಂದಿಗೆ ಅವನ ಹಿಪೊಕ್ರಸಿಯನ್ನು ಬೆಳಕಿಗೆ ತರುತ್ತದೆ.

೧೯೭೩ರ ಅರಬ್ ರಾಷ್ಟ್ರಗಳ ‘ತೈಲ ಸರಬರಾಜಿನ ಸ್ಥಗಿತ’ದಿಂದ ಜಗತ್ತಿನಾದ್ಯಂತ ತೈಲ ಕೊರತೆ ಉಂಟಾಯಿತು. ಮುಂದುವರಿದ ಹಾಗೂ ಮುಂದುವರಿಯುತ್ತಿರುವ ರಾಷ್ಟ್ರಗಳ ಕೈಗಾರಿಕೆ ಉದ್ಯಮಕ್ಕೆ ಗಂಭೀರವಾದ ತೊಡಕನ್ನುಂಟುಮಾಡಿತು. ಆದಾಗ್ಯೂ ಅಮೆರಿಕಾ, ಬ್ರಿಟನ್, ಜಪಾನ್‌ನಂತಹ ಮುಂದುವರಿದ ಬಂಡವಾಳಶಾಹಿ ರಾಷ್ಟ್ರಗಳು ಕೈಗಾರಿಕಾ ಉದ್ಯಮಕ್ಕೆ ಬೇಕಾದ ತೈಲವನ್ನು ಇರಾನ್‌ನಿಂದ ಆಮದು ಮಾಡಿಕೊಂಡವು. ಏರುತ್ತಿರುವ ಬೇಡಿಕೆಗಳಿಗನುಗುಣವಾಗಿ ಇರಾನ್ ಸರಕಾರ ತೈಲ ಬೆಲೆಯನ್ನು ಬ್ಯಾರೆಲ್ ಒಂದಕ್ಕೆ ೧೨ ಡಾಲರ್‌ನಿಂದ(೧೯೭೩ರ ಆರಂಭದ ಬೆಲೆ) ೧೫ ಡಾಲರಿಗೆ ಏರಿಸಿತು. ಅಮೇರಿಕ ಈ ನೀತಿಯನ್ನು ಟೀಕಿಸಿದರೂ, ‘ಒಪೆಕ್’ ನಿರ್ಧರಿಸಿದ ಬೆಲೆ ೫.೧೧ ಡಾಲರ್ (ಬ್ಯಾರೆಲ್ ಒಂದಕ್ಕೆ)ನಿಂದ ೧೧.೬೫ ಡಾಲರ್‌ಗೆ ಏರಿಸಿದ್ದನ್ನು ಮರು ಪರಿಶೀಲಿಸಲೇ ಇಲ್ಲ. ‘ಒಪೆಕ್’ನ ಹೊಸ ಬೆಲೆ (ಯುದ್ಧದ ಸಮಯದಲ್ಲಿ ನಿರ್ಣಯಿಸಿದ್ದು) ೧೯೭೪ರ ಜನವರಿ ೧ರ ವಿಶೇಷ ಸಭೆಯಲ್ಲಿ ಸ್ವೀಕೃತವಾಯಿತು.