ಜಾಗತಿಕ ಮಾರುಕಟ್ಟೆಯಲ್ಲಿ ೧೯೭೩ರ ಅರಬ್-ಇಸ್ರೇಲ್ ಯುದ್ಧದಿಂದ ಸೃಷ್ಟಿಯಾದ ತೈಲ ಕೊರತೆಯ ಸಮಯದಲ್ಲಿ ಇರಾನ್ ಸರಕಾರ ಏಕಪಕ್ಷೀಯವಾಗಿ ಬೆಲೆ ಏರಿಸಿದ್ದನ್ನು ಈ ಕೆಳಗಿನ ಕಾರಣ ಕೊಟ್ಟು ಸಮರ್ಥಿಸಿಕೊಳ್ಳುತ್ತದೆ.

೧. ಕಲ್ಲಿದ್ದಲಿಗಿಂತ ತೈಲಕ್ಕೆ ಕಡಿಮೆ ಬೆಲೆ ಕಟ್ಟುವುದು ಸರಿಯಾದ ನೀತಿಯಲ್ಲ.

೨. ಜಾಗತಿಕ ಮಾರುಕಟ್ಟೆಯಲ್ಲಿ ಉದ್ಭವಿಸಿದ ಹಣದುಬ್ಬರ.

೩. ಪೆಟ್ರೋಲಿಯಂ ಒಂದು ಸುಟ್ಟು ಹೋಗುವ ಅಮೂಲ್ಯ ವಸ್ತು. ಆದ್ದರಿಂದ ಅದರ ಬೆಲೆಯನ್ನು ಹೆಚ್ಚಿಸಲೇಬೇಕು.

೪. ಪೆಟ್ರೋಲಿಯಂ ಅನ್ನು ಪುನಃ ಸೃಷ್ಟಿಸಲಾಗದ ಬೆಲೆ ಬಾಳುವ ವಸ್ತು-ತೈಲ ಉತ್ಪಾದ ಕೇತರ ರಾಷ್ಟ್ರಗಳು ತಮ್ಮ ಕೈಗಾರಿಕಾ ಉದ್ಯಮಕ್ಕೆ ತೈಲ ಸರಬರಾಜಿಗೆ ತಮ್ಮನ್ನೇ ಅವಲಂಬಿಸಿರುವುದರಿಂದ ಲಭಿಸಿರುವ ಅವಕಾಶವನ್ನು ಲೂಟಿ ಮಾಡಿಕೊಳ್ಳಲೇಬೇಕೆಂಬ ಅಹಂಕಾರದ ನೀತಿ.

೫. ವಿದೇಶಿ ತೈಲ ಕಂಪನಿಗಳು ‘ಒಪೆಕ್’ ರಾಷ್ಟ್ರಗಳಿಂದ ಲೂಟಿ ಮಾಡಿದ ಪೆಟ್ರೋಲಿಯಂನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಾಭ ಗಳಿಸುತ್ತಿರು ವುದರಿಂದ ಇರಾನ್‌ನ ಬೆಲೆ ಏರಿಕೆ ನೀತಿ ಸಮಂಜಸ.

ಈ ಕಾರಣಗಳ ಆಧಾರದ ಮೇಲೆ ಇರಾನ್‌ನ ನೀತಿಯನ್ನು ಸಮರ್ಥಿಸಿಕೊಂಡಿರುವುದು ವಿಷಾದನೀಯ. ಜೊತೆಗೆ ಇರಾನ್ ೧೯೭೩ರ ಬೆಲೆಯೇರಿಕೆ ಒಂದು ಸಾಮಾನ್ಯವಾದುದು ಹಾಗೂ ನಿಜವಾದ ಬೆಲೆಯನ್ನು ಇರಾನ್ ಸರಕಾರ ಮುಂದೆ ಪ್ರತ್ಯೇಕವಾಗಿ ಪ್ರಕಟಿಸಿತು. ಇದನ್ನು ಒಪ್ಪಿಕೊಳ್ಳಲು ಆಗಿದಿದ್ದ ಪಕ್ಷದಲ್ಲಿ ಪೆಟ್ರೋಲಿಯಂಗೆ ಸರಿಸಾಟಿಯಾದ ವಸ್ತುವನ್ನು ಕಂಡುಹಿಡಿಯಲು ಬಂಡವಾಳಶಾಹಿ ರಾಷ್ಟ್ರಗಳಿಗೆ ಇರಾನ್‌ನ ದೊರೆ ರೇಝಾಶಾಹ ಸವಾಲ್ ಹಾಕಿದನು. ಆದರೆ ಇದು ಇರಾನ್‌ನ ದೌರ್ಬಲ್ಯ.

ಪರಿಣಾಮಗಳು ಜಾಗತಿಕ ನೆಲೆಯಲ್ಲಿ ಏನೇ ಇದ್ದರೂ ಇರಾನಿನ ಆದಾಯವಂತು ಮುಗಿಲೆತ್ತರಕ್ಕೆ ವೃದ್ದಿಸಿತು. ಉದಾಹರಣೆಗೆ-ಇರಾನಿನ ಒಟ್ಟು ಆದಾಯ ೧೯೭೩ರಲ್ಲಿ ಕೇವಲ ೪ ಮಿಲಿಯನ್ ಡಾಲರ್‌ಗಳಾಗಿತ್ತು. ಇದು ೧೯೭೪ರ ಅಂತ್ಯಕ್ಕೆ ೧೭೦೫ ಮಿಲಿಯನ್ ಡಾಲರ್ ಗೆರೆಯನ್ನು ದಾಟಿತು. ಅಂದರೆ ಅರಬ್-ಇಸ್ರೇಲ್ ಯುದ್ಧದಿಂದ ಸೃಷ್ಟಿಯಾದ ಪರಿಸ್ಥಿತಿಯ ಪೂರ್ಣ ಪ್ರಯೋಜನ ಪಡೆದ ಇರಾನ್ ೧೯೭೦ರ ದಶಕದಲ್ಲಿ ತನ್ನ ಪ್ರಬಲತೆಯನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರ್ಪಡಿಸಿತು. ಇದು ‘ಒಪೆಕ್’ ರಾಷ್ಟ್ರದೊಳಗಿನ ಪೆಟ್ರೋಲಿಯಂ ಪಾಲಿಟಿಕ್ಸ್ ಮತ್ತು ಇಕನೋಮಿಕ್ಸ್.

ಇಷ್ಟಾಗಿದ್ದರೂ ಸಹ ಬಂಡವಾಳಶಾಹಿ ರಾಷ್ಟ್ರಗಳಿಗೆ ಕ್ಲಿಪ್ತ ಸಮಯದಲ್ಲಿ ಸಹಕರಿಸಿ, ಅವುಗಳ ಮನ ಒಲಿಸಿ ತಾನು ಪರೋಪಕಾರಿ ಎಂದು ತೋರ್ಪಡಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಕೃತಕ ತೈಲ ಕೊರತೆಯನ್ನು ಸೃಷ್ಟಿಸಿ ತನ್ನೆಲ್ಲಾ ವೈಯಕ್ತಿಕ ಬೇಡಿಕೆಗಳನ್ನು ‘ಒಪೆಕ್’ ಮತ್ತು ‘ಒಎಪೆಕ್’ ಮೂಲಕ ಈಡೇರಿಸಿಕೊಂಡ ಇರಾನ್ ೧೯೭೪ರ ಕೊನೆಯಲ್ಲಿ ತಿರುಗಿ ಹಳೆಯ ತಂತ್ರವನ್ನು ಪಾಲಿಸಲು ಯತ್ನಿಸಿತು. ಅಮೆರಿಕಾದ ಅಧ್ಯಕ್ಷ ನಿಕ್ಸ್‌ನ್, ಅರಬ್‌ರು ಹೇರಿದ ತೈಲ ಸರಬರಾಜಿನ ಸ್ಥಗಿತವನ್ನು ಹಿಂತೆಗೆದುಕೊಳ್ಳಲು ಅಬರ್ ರಾಷ್ಟ್ರಗಳನ್ನು ಒತ್ತಾಯಿಸುವ ಡಿಪ್ಲೋಮಸಿಯೊಂದಿಗೆ ಪಶ್ಚಿಮ ಏಷ್ಯಾಕ್ಕೆ ಭೇಟಿ ಕೊಟ್ಟಾಗ ಇರಾನ್, ಮುಖಭಂಗವಾದರೂ ಅಮೆರಿಕದ ಪರವಾಗಿ ‘ಒಪೆಕ್’ ಮತ್ತು ‘ಒಎಪೆಕ್’ ರಾಷ್ಟ್ರಗಳಿಗೆ ಹಿಂತೆಗೆದುಕೊಳ್ಳಲು ಒತ್ತಾಯ ಮಾಡುತ್ತಾರೆ. ನಂತರ ‘ಒಎಪೆಕ್’ ತನ್ನ ನೀತಿಯಲ್ಲಿ ಸಡಿಲಿಕೆಯನ್ನು ತೋರಿಸಿ ‘ಆಯಿಲ್ ಎಂಬಾರ್ಗೊ’ವನ್ನು ಹಿಂತೆಗೆದುಕೊಂಡಿತು.

‘ಒಪೆಕ್’ನ ನೀತಿಯಲ್ಲಿ ೧೯೭೪ರ ನಂತರ ಬದಲಾವಣೆ ಆದರೂ ಸಹ, ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳು, ಬಂಡವಾಳಶಾಹಿ ರಾಷ್ಟ್ರಗಳ ಮೇಲೆ ‘ಒಪೆಕ್’ ಹೇರಿರುವ ಶರತ್ತುಗಳನ್ನು ಶ್ಲಾಘಿಸಿದವು. ವಿದೇಶಿ ಕಂಪನಿಗಳಂತೆ ತೃತೀಯ ಜಗತ್ತಿನ ರಾಷ್ಟ್ರಗಳು ಯಾವುದೇ ಕಾರಣಕ್ಕೂ ಲೂಟಿ ಹೊಡೆಯುವ ಪ್ರವೃತ್ತಿಯನ್ನು ಪಾಲಿಸುವುದಿಲ್ಲವೆಂದು ಸಾರಿದವು.

೧೯೭೮-೮೦ರಲ್ಲಿ ಪಶ್ಚಿಮ ಏಷ್ಯಾದ ಪೆಟ್ರೋಲಿಯಂ ಉತ್ಪಾದನಾ ರಾಷ್ಟ್ರಗಳು ಹೊಸ ಬದಲಾವಣೆಗಳನ್ನು ಅನಿವಾರ್ಯವಾಗಿ ಅನುಭವಿಸಬೇಕಾಯಿತು. ೧೯೭೮-೭೯ರಲ್ಲಿ ಇರಾನಿನ ದೊರೆ ರೇಝಾ ಶಾಹ ಪಹಲವಿ ಸೆರೆ ಹಿಡಿಯಲ್ಪಟ್ಟನು. ನಂತರ ಆಯತುಲ್ಲಾ ಕೊಮೇನಿ ನೇತೃತ್ವದಲ್ಲಿ ಮೂಲಭೂತವಾದಿಗಳು ಅಧಿಕಾರಕ್ಕೆ ಬಂದರು. ಇರಾನ್- ಇರಾಕ್ ಯುದ್ಧ, ಇಸ್ರೇಲ್‌ನ ಅಸಂಗತ, ಅನಾಗರಿಕ ಮತ್ತು ಬರ್ಬರ ಧೋರಣೆಗಳು, ಭಯೋತ್ಪಾದನಾ ಶಕ್ತಿಯ ವೃದ್ದಿ, ಲೆಬನಾನ್‌ನಲ್ಲಿ ಶೀತಲ ಯುದ್ಧ, ಪ್ಯಾಲೆಸ್ತೀನ್ ಪ್ರಶ್ನೆ ಇತ್ಯಾದಿ, ಇವೆಲ್ಲವೂ ಗಂಭೀರ ಪರಿಸ್ಥಿತಿಯನ್ನು ತೈಲ ವ್ಯವಹಾರದ ಕೌಶಲದ ವ್ಯವಸ್ಥೆ ಯಲ್ಲಿ ಸೃಷ್ಟಿಸಿತು. ಇದರಿಂದ ೧೯೮೦ರ ದಶಕದುದ್ದಕ್ಕೂ ಪೆಟ್ರೋಲಿಯಂ ಬೆಲೆ ಏರುತ್ತಾ ಸಾಗಿತು. ಉದಾಹರಣೆಗೆ ೧೨ ಡಾಲರ್ ಬ್ಯಾರಲ್ ಒಂದಕ್ಕೆ ೧೯೭೩ರಲ್ಲಿ ಇದ್ದದ್ದು ಸರಾಸರಿ ೪೦ ಡಾಲರ್ ಬ್ಯಾರಲ್ ಒಂದಕ್ಕೆ ೧೯೮೦ರಲ್ಲಿ ಏರಿತು. ಸರಾಸರಿ ೧೦ ಶೇಕಡಾ ತೈಲವನ್ನು ಉಪಯೋಗಿಸಲು ಶಕ್ತವಾದ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳು ‘ಒಪೆಕ್’ನ ನೀತಿಯಿಂದಾಗಿ ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಯಿತು. ವಿದೇಶಿ ತೈಲ ಕಂಪನಿಗಳು, ಬಂಡವಾಳಶಾಹಿ ರಾಷ್ಟ್ರಗಳಿಗೆ ಯಾವುದೇ ಹಾನಿ ತಂದಿಲ್ಲ. ಏಕೆಂದರೆ ‘ಒಪೆಕ್’ ಮತ್ತು ‘ಒಎಪೆಕ್’ಗಳಲ್ಲಿನ ಪೆಟ್ರೋಲಿಯಂ ಕಂಡುಹಿಡಿಯುವಿಕೆಯಿಂದ ಹಿಡಿದು, ಉತ್ಪಾದನೆಯನ್ನು ಮಾರುಕಟ್ಟೆಗೆ ಸರಬರಾಜು ಮಾಡುವುದು ಮತ್ತು ಅದರಿಂದ ಲಾಭ ಗಳಿಸುವ ಕೆಲಸವನ್ನು ಬಂಡವಾಳಶಾಹಿ ರಾಷ್ಟ್ರಗಳ ಕಂಪನಿಗಳೇ ನಿರ್ವಹಿಸುತ್ತಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಬೆಲೆ ಏರಿದಷ್ಟು, ಉತ್ಪಾದಕರು ಮತ್ತು ಕಂಪನಿಗಳು ಬಳಿಸುವ ಲಾಭ ಉಲ್ಬಣವಾಗುತ್ತದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳೂ ಸಹ ಒಪೆಕ್, ಒಎಪೆಕ್ ಮತ್ತು ಬಂಡವಾಳಶಾಹಿ ರಾಷ್ಟ್ರಗಳ ಪೆಟ್ರೋಲಿಯಂ ಕಂಪನಿ ಗಳೊಂದಿಗೆ ಸ್ನೇಹ ಸಂಬಂಧವನ್ನು ಕಲ್ಪಿಸಿಕೊಂಡಿವೆ ಅಂತಹ ಹಣಕಾಸು ಸಂಸ್ಥೆಗಳ ವಹಿವಾಟುಗಳು ಹೆಚ್ಚಾಗಿ ಈ ಮಾದ್ಯಮಗಳಿಂದಲೆ ಅವಲಂಬಿತವಾಗಿರುವುದರಿಂದ ತೃತೀಯ ರಾಷ್ಟ್ರಗಳ ಆರ್ಥಿಕ ಮುಗ್ಗಟ್ಟನ್ನು ತೈಲ ಬೆಲೆ ಏರಿಕೆಯಿಂದ ರಕ್ಷಿಸಲು ಈ ಅಂತಾರಾಷ್ಟ್ರೀಯ ಸಂಸ್ಥೆಗಳ ಪಾತ್ರ ತುಂಬಾ ಕಡಿಮೆ. ಆದ್ದರಿಂದ ೧೯೭೫-೮೬ರ ನಡುವಿನ ಜಾಗತಿಕ ಮಾರುಕಟ್ಟೆಯ ಪೆಟ್ರೋಲಿಯಂ ವ್ಯವಹಾರ ಕೌಶಲ್ಯದ ಅಡಿಪಾಯಗಳನ್ನು ಮೂರು ಅಂಗ ಸಂಸ್ಥೆಗಳು ನಿರ್ಧರಿಸುತ್ತವೆ. ೧. ‘ಒಪೆಕ್’ ಮತ್ತು ಒಎಪೆಕ್ ೨. ಅಮೆರಿಕ ಮತ್ತು ಜಪಾನ್ ನಂತರ ಬಂಡವಾಳಶಾಹಿ ರಾಷ್ಟ್ರಗಳ ನಿಯಂತ್ರಣದಲ್ಲಿರುವ ಬಹುರಾಷ್ಟ್ರೀಯ ಪೆಟ್ರೋಲಿಯಂ ಕಂಪನಿಗಳು ೩. ಅಂತಾರಾಷ್ಟ್ರೀಯ ಬ್ಯಾಂಕ್.

ಮಿತಿಮೀರಿದ ತೈಲ ಏರಿಕೆಯನ್ನು ಈ ಮೇಲೆ ಹೇಳಿದ ಯೂನಿಟ್‌ಗಳು ಹೀಗೆ ಸಮರ್ಥಿಸಿಕೊಳ್ಳುತ್ತವೆ.

೧. ಬೆಲೆ ಏರಿಕೆಯು ‘ಒಪೆಕ್’ನ ಆರ್ಥಿಕ ಚಟುವಟಿಕೆಗಳನ್ನು ಸುಗಮಗೊಳಿಸುತ್ತದೆ. (ಇಲ್ಲವಾದರೆ ಸ್ಥಗಿತಗೊಳ್ಳುತ್ತದೆ)

೨. ಹೊಸ ಪೆಟ್ರೋಲಿಯಂನ ಅನ್ವೇಷಣೆಯನ್ನು ಉತ್ಪಾದನಾ ಆದಾಯದಿಂದ ಭರಿಸಬೇಕಾದ್ದರಿಂದ ಬೆಲೆ ಸಾಕಷ್ಟು ಏರಿಸದಿದ್ದರೆ ಹೊಸ ಅನ್ವೇಷಣಾ ಕಾರ್ಯವು ಸ್ಥಗಿತಗೊಳ್ಳುತ್ತದೆ.

೩. ಬೆಲೆ ಇಳಿತವು ಒಂದು ಸಣ್ಣಮಟ್ಟದ ಕ್ರಮವಾಗಿದ್ದು ದಿಢೀರ್ ಏರಿಕೆಯ ಪರಿಣಾಮ ಗಂಭೀರವಾಗಿರುತ್ತದೆ. ಆದ್ದರಿಂದ ಪ್ರತಿವರ್ಷ ನಿಧಾನಗತಿಯ ಏರಿಕೆ ಅನಿವಾರ್ಯ.

೪. ಒಂದು ವೇಳೆ ಜಾಗತಿಕ ಮಾರುಕಟ್ಟೆಯಲ್ಲಿ ವಸ್ತುಗಳ ಬೇಡಿಕೆ ಹೆಚ್ಚಾಗಿ ‘ಒಪೆಕ್’ ಇನ್‌ವೆಸ್ಟ್‌ಮೆಂಟ್ ಪ್ರಮಾಣ ಕಡಿಮೆ ಆದರೆ ಜಾಗತಿಕ ಆರ್ಥಿಕ ಅಭಿವೃದ್ದಿ ಕುಸಿಯುತ್ತದೆ.

ಈ ಕಾರಣದಿಂದಾಗಿ ‘ಒಪೆಕ್’ ಮತ್ತು ‘ಒಎಪೆಕ್’ನ ಏಕಪಕ್ಷೀಯ ಬೆಲೆ ಏರಿಸುವಿಕೆಯ ನೀತಿಯು ಸಮಂಜಸ ಎಂದು ಪ್ರಕಟಿಸುತ್ತವೆ.

ನಿಜವಾಗಿ ಹೇಳುವುದಾದರೆ ಈ ಮೇಲಿನ ಯಾವ ವಾದಗಳು ಸಮರ್ಥವಾದವುಗಳಲ್ಲ. ಮತ್ತು ಈ ಸಂಸ್ಥೆಗಳು ತೃತೀಯ ಜಗತ್ತಿನ ಬೇಡಿಕೆಗಳನ್ನು ಈಡೇರಿಸಲು ಆಸಕ್ತವಾಗಿವೆ. ಪೆಟ್ರೋಲಿಯಂ ಬೆಲೆ ಕಂಪನಿಗಳ ಹಾಗೂ ಉತ್ಪಾದನಾ ರಾಷ್ಟ್ರಗಳ ಆರ್ಥಿಕ ವೆಚ್ಚಕ್ಕೆ ಸೀಮಿತವಾಗಿರಬೇಕೆ ವಿನಃ ಅದು, ‘ಒಪೆಕ್ ’ ಅಥವಾ ‘ಒಎಪೆಕ್’ನ ರಾಜಕೀಯ ದಬ್ಬಾಳಿಕೆ, ಬಲಾತ್ಕಾರ ಮತ್ತು ಲೂಟಿ ಆಗಬಾರದು(ಲಿಬಿಯಾ ಮತ್ತು ಇರಾನ್‌ನ ಹಾಗೆ). ಅದರ ಅರ್ಥ(ಸೌದಿ ಅರೇಬಿಯಾದ ಈಗಿನ ನೀತಿ ಪ್ರಕಾರ) ಕೆಲವು ತಿಂಗಳು ಪೆಟ್ರೋಲಿಯಂ ಉತ್ಪಾದನೆ ನಿಲ್ಲಿಸಬೇಕೆಂದು ಮತ್ತು ಉತ್ಪಾದನಾ ಪ್ರಮಾಣದಲ್ಲಿ ಕಡಿತ ಮಾಡ ಬೇಕೆಂದೂ ಅಲ್ಲ. ಅಥವಾ ಇಡೀ ವ್ಯವಸ್ಥೆಯನ್ನು ಅಂದರೆ ಸರಬರಾಜು, ಉತ್ಪಾದನೆ ಮತ್ತು ಬೆಲೆ ಕಟ್ಟುವಿಕೆಯನ್ನು ‘ಒಪೆಕ್’ ಮತ್ತು ‘ಒಎಪೆಕ್’ ಕೈಗೆ ಬಿಟ್ಟುಕೊಡುವುದು ಸೂಕ್ತಕ್ರಮವಲ್ಲ. ಬದಲಾಗಿ ಜಾಗತಿಕ ನೆಲೆಯಲ್ಲಿ ಶಾಂತಿಯುತವಾಗಿ ಬೇಡಿಕೆಯನ್ನು ನಿಭಾಯಿಸುವುದಾದರೆ ಪೆಟ್ರೋಲಿಯಂ ಬೆಲೆಯ ಸುಮಾರು ೧೦ರಿಂದ ೧೩ ಡಾಲರ್ ಬ್ಯಾರೆಲ್ ಒಂದಕ್ಕೆ ನಿರ್ಧರಿಸಬೇಕು. ಇದು ಒಂದು ರೀತಿಯಲ್ಲಿ ಸಮಂಜಸವಾದದ್ದು. ಏಕೆಂದರೆ ಇಂದಿನ ಉತ್ಪಾದನಾ ವೆಚ್ಚವನ್ನು ಗಣನೆಗೆ ತೆಗೆದುಕೊಂಡರೆ ಪ್ರಾಮಾಣಿಕವಾದದ್ದು (ಮೇಲೆ ಸೂಚಿಸಿದ ಬೆಲೆ) ಮತ್ತು ‘ಒಪೆಕ್’, ‘ಒಎಪೆಕ್’ ಹಾಗೂ ತೈಲ ಕಂಪನಿಗಳ ಲಾಭಕ್ಕೂ ಯಾವ ಹಾನಿ ಉಂಟುಮಾಡುವುದಿಲ್ಲ. ಹೀಗೆ ಮಾಡಿದಲ್ಲಿ ಪೆಟ್ರೋಲಿಯಂನ್ನು ಈ ರಾಷ್ಟ್ರಗಳು ಒಂದು ರಾಜಕೀಯ ಆರ್ಥಿಕ ಅಸ್ತ್ರವಾಗಿ ಉಪಯೋಗಿಸಲು ಆಸ್ಪದ ಮಾಡಿ ಕೊಡುವುದಿಲ್ಲ.

ಅಂದ ಮಾತ್ರಕ್ಕೆ ಈಗಿನ ಪ್ರಚಲಿತ ವ್ಯವಸ್ಥೆಯಲ್ಲಿ ‘ಒಪೆಕ್’ ಮತ್ತು ‘ಒಎಪೆಕ್’ ಪೆಟ್ರೋಲಿಯಂ ವ್ಯವಹಾರ ಕೌಶಲದಲ್ಲಿ ತಮ್ಮ ಪಾತ್ರ ವಹಿಸುತ್ತವೆ ಅಂತೇನೂ ಅಲ್ಲ. ಇದಕ್ಕೆ ಮುಖ್ಯ ಕಾರಣ ಹೊಸ ರಾಷ್ಟ್ರಗಳಲ್ಲಿ ಪೆಟ್ರೋಲಿಯಂ ಕಂಡುಹಿಡಿದಷ್ಟು ಇತ್ತೀಚೆಗೆ ಬೇರೆ ಬೇರೆ ರಾಷ್ಟ್ರಗಳಾದ(ಅಭಿವೃದ್ದಿ ಹೊಂದುತ್ತಿರುವ) ಮಲೇಶಿಯಾ, ಬ್ರೆಜಿಲ್, ಭಾರತ, ಚೀನಾದಲ್ಲಿ ಪೆಟ್ರೋಲಿಯಂ ಕಂಡುಹಿಡಿದು ಉತ್ಪಾದನೆ ಪ್ರಾರಂಭ ಮಾಡಲಾಗಿದೆ. ಈ ಕಾರಣದಿಂದಾಗಿ ‘ಒಪೆಕ್’ ಅಥವಾ ‘ಒಎಪೆಕ್’ ತೈಲ ಬೆಲೆಯೇರಿಕೆ ವಿಚಾರದಲ್ಲಿ ದಬ್ಬಾಳಿಕೆ, ಲೂಟಿತನವನ್ನು ತೋರಿಸಲು ಅಸಾಧ್ಯ. ಎರಡನೆಯದಾಗಿ ಉತ್ಪಾದಕೇತರ ರಾಷ್ಟ್ರಗಳು ಈಗೀಗ ಪೆಟ್ರೋಲಿಯಂಗೆ ಸಮಾನವಾದ ಶಕ್ತಿಯನ್ನು ಕಂಡುಹಿಡಿಯುವಲ್ಲಿ ಬಹಳ ಯಶಸ್ಸನ್ನು ಕಂಡುಕೊಂಡಿದ್ದಾರೆ. ನಿಜವಾಗಿ ಹೇಳುವುದಾದರೆ ಇಂದು ಪೆಟ್ರೋಲಿಯಂ ಉತ್ಪಾದನಾ ಪ್ರಮಾಣ ‘ಒಪೆಕ್’ಕ್ಕಿಂತಲೂ ಒಪೆಕೇತರ ರಾಷ್ಟ್ರಗಳಲ್ಲಿ ಉತ್ಪಾದನಾ ಪ್ರಮಾಣ ಹೆಚ್ಚಾಗಿದೆ. ಉದಾಹರಣೆಗೆ (ಗತ) ಸೋವಿಯತ್ ಒಕ್ಕೂಟ, ಅಮೆರಿಕ, ನಾರ್ವೆ, ಬ್ರಿಟನ್, ಮೆಕ್ಸಿಕೊದಂತ ರಾಷ್ಟ್ರಗಳಲ್ಲಿ ಒಪೆಕ್‌ಗಿಂತಲೂ ಜಸ್ತಿ ಪ್ರಮಾಣದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪೆಟ್ರೋಲಿಯಂ ಸರಬರಾಜು ಮಾಡುತ್ತಿವೆ. ಈ ನಿಟ್ಟಿನಲ್ಲಿ ಈ ಎಲ್ಲ ರಾಷ್ಟ್ರಗಳು ವ್ಯವಹಾರ ಕೌಶಲ್ಯದಲ್ಲಿ ಬಹಳ ಪ್ರಬಲತೆಯನ್ನು ಪಡೆದಿವೆ ಮತ್ತು ಜಾಗತಿಕ ನೆಲೆಯಲ್ಲಿ ಹಿಂದಿನಂತೆ ಪೆಟ್ರೋಲಿಯಂ ಕೊರತೆಯ ಸಮಸ್ಯೆಯನ್ನು ಸಾಕಷ್ಟು ಪ್ರಮಾಣದಲ್ಲಿ ಸಡಿಲಿಸಿವೆ. ೧೯೭೫ರಲ್ಲಿ ಜಗತ್ತಿನ ಒಟ್ಟು ಪೆಟ್ರೋಲಿಯಂ ಉತ್ಪಾದನೆಯಲ್ಲಿ ಸರಾಸರಿ ಶೇ.೫೫ ಒಪೆಕ್‌ನಷ್ಟೇ ಆಗಿತ್ತು. ಆದರೆ ೧೯೮೬ರಲ್ಲಿ ಇದರ ಪ್ರಮಾಣ ಶೇ.೩೦ಗೆ ಇಳಿಮುಖವಾಗಿದೆ. ಇದು ಒಂದು ಗಮನಾರ್ಹ ಬದಲಾವಣೆ. ಇಂದು ರಷ್ಯಾ ಮತ್ತು ಅದರ ಸ್ನೇಹ ರಾಷ್ಟ್ರಗಳು (ಗತ ಸೋವಿಯತ್ ಒಕ್ಕೂಟದಲ್ಲಿದ್ದ ರಾಷ್ಟ್ರಗಳು) ಪೆಟ್ರೋಲಿಯಂ ಉತ್ಪಾದನೆ ಮತ್ತು ಮಾರಾಟದಲ್ಲಿ ಅತ್ಯಂತ ದೊಡ್ಡ ರಾಷ್ಟ್ರವಾಗಿದೆ. ಇದು ಸೌದಿ ಅರೇಬಿಯಾದಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚಾಗಿರುತ್ತದೆ.

ಈ ಹೊಸ ಬೆಳವಣಿಗೆಯಿಂದಾಗಿ ಅರಬ್ ಪೆಟ್ರೋಲಿಯಂ ಉತ್ಪಾದನಾ ರಾಷ್ಟ್ರಗಳು ೧೯೬೦ ಮತ್ತು ೭೦ರ ದಶಕದಲ್ಲಿ ಉಪಯೋಗಿಸಿದ ‘ಆಯಿಲ್ ಎಂಬಾರ್ಗೊ’ವನ್ನು ಹೇರಿ, ಪೆಟ್ರೋಲಿಯಂನ್ನು (ತಮ್ಮ ರಾಜಕೀಯ ಬೇಡಿಕೆಗಳಿಗೆ ದಾರಿ ಹುಡುಕಿಕೊಳ್ಳಲು) ಒಂದು ಅಸ್ತ್ರವಾಗಿ ಮಾರ್ಪಡಿಸಲು ಇನ್ನು ಮುಂದೆ ಸಾಧ್ಯ ಆಗುವುದಿಲ್ಲ. ಏಕೆಂದರೆ : ಒಂದನೆಯದಾಗಿ, ಈ ರಾಷ್ಟ್ರಗಳು ಇಂತಹ ಅಸ್ತ್ರವನ್ನು ಇಸ್ರೇಲ್ ಮತ್ತು ಅದರ ಸ್ನೇಹ ಬಂಡವಾಳಶಾಹಿ ರಾಷ್ಟ್ರಗಳ ಮೇಲೆ ಹೇರುತ್ತಿರುವುದು ಒಂದು ವೇಳೆ ಈ ಪೆಟ್ರೋಲಿಯಂ ಸರಬರಾಜಿನ ಸ್ಥಗಿತ ತುಂಬಾ ಸಮಯ ಮುಂದುವರಿದರೆ, ಅದರಲ್ಲಿ ಉಂಟಾಗುವ ನಷ್ಟದ ಬೆಲೆಯಲ್ಲಿ ಅದೇ ರಾಷ್ಟ್ರಗಳು ಹೊರಬೇಕಾಗುತ್ತದೆ. ಈ ಕ್ರಮ ಎಷ್ಟು ದಿನ ಮುಂದುವರಿಯುತ್ತದೋ ಅಷ್ಟು ದಿನದ ಲಾಭ ಕಡಿಮೆಯಾಗುತ್ತದೆ. ಅಲ್ಲದೆ ಪಶ್ಚಿಮ ಏಷ್ಯಾದ ಶ್ರೀಮಂತ ಅರಬ್ ರಾಷ್ಟ್ರಗಳು ಇಂತಹ ದಬ್ಬಾಳಿಕೆ ನಡೆಸುತ್ತಿರುವುದು ಈ ಪೆಟ್ರೋಲಿಯಂನಿಂದ ಬಂದ ಆದಾಯದಿಂದಲೇ, ಅದಿಲ್ಲದಿದ್ದರೆ ಅವುಗಳಿಗೆ ಬೇರೆ ಯಾವು ಸಂಪನ್ಮೂಲಗಳಿಲ್ಲ. ಇದು ಅಮೆರಿಕಾದಂತಹ ದೈತ್ಯ ರಾಷ್ಟ್ರಗಳಿಗೆ ಹಿಂದೆಯೇ; ಗೊತ್ತಿದ್ದ ವಿಚಾರ.

ಎರಡನೆಯದಾಗಿ, ಅರಬ್ ರಾಷ್ಟ್ರಗಳ ತೈಲಕ್ಕೆ ಸರಿಯದ ಮಾರುಕಟ್ಟೆಯನ್ನು ಒದಗಿಸಿಕೊಡುವುದು ಈ ಬಂಡವಾಳಶಾಹಿ ರಾಷ್ಟ್ರಗಳೆ. ಕೈಗಾರಿಕಾ ಉದ್ಯಮಗಳಿಂದ ಸಾಕಷ್ಟು ಪ್ರಮಾಣದಲ್ಲಿ ಪೆಟ್ರೋಲಿಯಂನ್ನು ಖರ್ಚು ಮಾಡುವುದು ಸಹ ಈ ಬಲವಾದ ರಾಷ್ಟ್ರಗಳು. ಇದಕ್ಕೆ ಈ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಇನ್ನೂ ಎಷ್ಟೋ ವರ್ಷಕ್ಕೆ ಬೇಕಾಗುವಷ್ಟು ಪೆಟ್ರೋಲಿಯಂನ್ನು ಇದೇ ಅರಬ್ ರಾಷ್ಟ್ರಗಳಿಂದ ೧೯೦೯ ಮತ್ತು ೧೯೬೭ರ ನಡುವೆ ಕಡಿಮೆ ಬೆಲೆ ತೆತ್ತು ಸಂಗ್ರಹಿಸಿಟ್ಟುಕೊಂಡಿವೆ. ಆದ್ದರಿಂದ ಪೆಟ್ರೋಲಿಯಂ ವ್ಯವಹಾರದಲ್ಲಿ ‘ಒಎಪೆಕ್’ ಬೆದರಿಕೆಗೋಸ್ಕರ ಸರಬರಾಜು ಸ್ಥಗಿತಗೊಳಿಸಿದರೆ ಬಂಡವಾಳ ಶಾಹಿ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್(ಇಸ್ರೇಲ್ ಸ್ನೇಹ ರಾಷ್ಟ್ರಗಳು)ಗೆ ಆಗುವ ನಷ್ಟಕ್ಕಿಂತಲೂ ‘ಒಪೆಕ್’ಗೆ ತುಂಬಾ ಹಾನಿಕರವಾದುದಾಗಿದೆ.

ಮೂರನೆಯದಾಗಿ, ಅಮೆರಿಕ, ಮೆಕ್ಸಿಕೊ, ಬ್ರೆಜಿಲ್‌ನಂತರ ರಾಷ್ಟ್ರಗಳಲ್ಲಿ ಇಂದು ಪೆಟ್ರೋಲಿಯಂ ಸಾಕಷ್ಟು ಪ್ರಮಾಣದಲ್ಲಿ ದೊರಕುವುದರಿಂದ ಅರಬ್ ದೇಶಗಳು ಜಾಗತಿಕ ನೆಲೆಯಲ್ಲಿ ಕೃತಕ ತೈಲ ಕೊರತೆಯನ್ನು ಸೃಷ್ಟಿಸಲು ೧೯೮೦ರ ಈಚೆಗೆ ವಿಫಲವಾಗಿವೆ. ಆದ್ದರಿಂದ ಅವರ ಪ್ರಭಾವಶಾಲಿ ಅಸ್ತ್ರವಾದ ‘ಆಯಿಲ್ ಎಂಬಾರ್ಗೊ’ ಇಂದು ಮೂಲೆ ಪಾಲಾಗಿದೆ. ಪ್ರಚಲಿತ ಬೆಳವಣಿಗೆಯಲ್ಲಿ ಇದು ಸಾಬೀತಾಗಿದೆ. ಉದಾಹರಣೆಗೆ ೧೯೭೪ರ ನಂತರ ಇಂದಿನವರೆಗೆ ಅರಬ್ ದೇಶಗಳು ೧೯೬೭ ಮತ್ತು ೧೯೭೩ರ ಕ್ರಮಗಳನ್ನು ಹೊರತುಪಡಿಸಿ ಇಸ್ರೇಲ್‌ಗೆ ಸಹಕರಿಸುವ ಬಂಡವಾಳಶಾಹಿ ರಾಷ್ಟ್ರಗಳಿಗೆ ಸರಬರಾಜನ್ನು ಸ್ಥಗಿತಗೊಳಿಸಿಯೇ ಇಲ್ಲ. ೧೯೭೫ ಮತ್ತು ೧೯೮೦ರ ಲೆಬನಾನ್ ಶೀತಲ ಯುದ್ಧದಲ್ಲಿ ಇಸ್ರೇಲ್ ಪ್ಯಾಲೇಸ್ತಿನರ ವಿರುದ್ಧ ಲೆಬೆನಾನ್‌ಗೆ ಸೈನಿಕ ಮತ್ತು ಅಣ್ವಸ್ತ್ರದ ವಿಚಾರದಲ್ಲಿ ಬಹಿರಂಗವಾಗಿ ಸಹಕರಿಸಿದರೂ ‘ಒಪೆಕ್’ ಅಂತಹ ನಿರ್ಧಾರ ಕೈಗೊಂಡಿಲ್ಲ. ನಂತರ ೧೯೯೦-೯೧ರಲ್ಲಿ ನಡೆದ ಗಲ್ಫ್ ಯುದ್ಧದಲ್ಲಿ ‘ಒಪೆಕ್’ ವಿಫಲವಾಗಿದೆ. ಇದು ‘ಒಪೆಕ್’ನ ಪೆಟ್ರೋಲಿಯಂ ನೀತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಫಲವಾಗಿದ್ದು ಮಾತ್ರವಲ್ಲ ಪೆಟ್ರೋಲಿಯಂನ್ನು ಬಂಡವಾಳಶಾಹಿ ಪ್ರಬಲರಾಷ್ಟ್ರಗಳ ವಿರುದ್ಧ ಒಗ್ಗಟ್ಟಿನ ಹೋರಾಟ ಸಲ್ಲದು ಎಂದು ಸಹ ತೋರಿಸಿಕೊಟ್ಟಿದೆ.

ಕೊನೆಯದಾಗಿ ಇಂದು ಅರಬ್ ರಾಷ್ಟ್ರದ ಬೆಳವಣಿಗೆಯ ಎಲ್ಲ ರಂಗದಲ್ಲಿ ಪ್ರಬಲ ಬಂಡವಾಳಶಾಹಿ ರಾಷ್ಟ್ರಗಳ ಕೊಡುಗೆ ಪ್ರಮುಖವಾಗಿದ್ದುದನ್ನು ಅರಬ್ ಪೆಟ್ರೋಲಿಯಂ ಉತ್ಪಾದನಾ ರಾಷ್ಟ್ರಗಳು ತಳ್ಳಿ ಹಾಕುವಂತಿಲ್ಲ. ಅದು ಆರ್ಥಿಕ ರಂಗವಿರಲಿ, ಹೋಟೆಲ್ ಉದ್ಯಮವಿರಲಿ, ಪೆಟ್ರೋಲಿಯಂ ಕೈಗಾರಿಕಾ ಉದ್ಯಮವಿರಲಿ, ಆಧುನೀಕರಣವಿರಲಿ, ಶೈಕ್ಷಣಿಕ ವ್ಯವಸ್ಥೆ ಇರಲಿ, ಭದ್ರತಾ ವ್ಯವಸ್ಥೆ, ಅಣ್ವಸ್ತ್ರಗಳ ಸಂಗ್ರಹಣೆ, ನಗರೀಕರಣ, ವ್ಯಾಪಾರ ಎಲ್ಲವೂ ಬಂಡವಾಳಶಾಹಿ ರಾಷ್ಟ್ರಗಳೇ ನಿರ್ಧರಿಸುತ್ತಿರುವುದು ಗಮನಾರ್ಹ ವಿಚಾರ. ಉದಾಹರಣೆಗೆ ಸೌದಿ ಅರೇಬಿಯಾ; ಇಲ್ಲಿ ಜಗತ್ತಿನಾದ್ಯಂತ ಸಿಗುವ ಎಲ್ಲ ಎಲೆಕ್ಟ್ರಾನಿಕ್ಸ್ ಉಪಕರಣಗಳು ಬೀದಿ ಬೀದಿಯಲ್ಲಿ ಸಿಗುತ್ತಿವೆ. ಅದರ ಅರ್ಥ ಸೌದಿ ಅರೇಬಿಯಾ ಎಲೆಕ್ಟ್ರಾನಿಕ್ ಉದ್ಯಮದಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಮುಂದುವರಿದ ದೇಶ ಎಂದು ಅಲ್ಲ. ನಿಜ ಹೇಳುವುದಾದರೆ ಇಷ್ಟು ಹಣ ಇಲ್ಲಿ ಚೆಲ್ಲುತ್ತಿದ್ದರೂ ಒಂದೇ ಒಂದು ಸಮರ್ಥ ಸ್ವತಂತ್ರ ಎಲೆಕ್ಟ್ರಾನಿಕ್ ಕೈಗಾರಿಕೆಗಳಿಲ್ಲ. ಇದು ಮಾತ್ರವಲ್ಲ ಇಂದು ಇಡೀ ಪಶ್ಚಿಮ ಏಷ್ಯಾದಲ್ಲಿ ಸೈನಿಕ ಮತ್ತು ಭದ್ರತಾ ರಂಗದಲ್ಲಿ ಅತ್ಯಂತ ಆಧುನಿಕ ಶಸ್ತ್ರಾಸ್ತ್ರಗಳು, ಕೆಮಿಕಲ್ ಮತ್ತು ನ್ಯೂಕ್ಲಿಯರ್ ಅಸ್ತ್ರಗಳನ್ನು ಸಂಗ್ರಹಿಸಿಕೊಂಡಿದೆ. ಅದರ ಅರ್ಥ ಇದು ಮಿಲಿಟರಿ ಅಥವಾ ಡಿಫೆನ್ಸ್ ಉದ್ಯಮದಲ್ಲಿ ಮುಂದುವರಿದಿದೆ ಎಂದೇನು ಅಲ್ಲ. ಬದಲಾಗಿ ಸಾಕಷ್ಟು ಪೆಟ್ರೋಲಿಯಂ ಚೆಲ್ಲಾಡುತ್ತಿದ್ದು ಅಮೆರಿಕಾದಂತ ರಾಷ್ಟ್ರದಿಂದ ಎಷ್ಟೇ ಬೆಲೆ ತೆತ್ತಾದರೂ ಸಂಗ್ರಹಿಸಲು ಸಾಧ್ಯವಾಯಿತು. ಇದರಿಂದ ಸೌದಿ ಅರೆಬಿಯಾಕ್ಕೆ ಬಂದ ಹಣವನ್ನು ಖರ್ಚು ಮಾಡಲು ಒಂದು ಮಾಧ್ಯಮವಾಯಿತು. ಮತ್ತು ಅಮೆರಿಕಾದಂತ ದೈತ್ಯ ರಾಷ್ಟ್ರಗಳಿಗೆ ನವವಸಾಹತೀಕರಣದ ಅಡ್ಡಿಯಲ್ಲಿ ತಾವು ತಯಾರಿಸಿದ ಏರ್‌ಕ್ರಾಫ್ಟ್, ಅಣ್ವಸ್ತಗಳನ್ನು ಮಾರಾಟ ಮಾಡಲು ಒಂದು ಮಾರುಕಟ್ಟೆಯ ನಿರ್ಮಾಣವು ಆಯಿತು. ಅದು ಅಲ್ಲದೆ ಇಡೀ ಸೌದಿ ಅರೇಬಿಯಾದ ಪೆಟ್ರೋಲಿಯಂ ಉದ್ಯಮವನ್ನು ೧೯೮೦ರವರೆಗೆ ನಡೆಸುತ್ತಿದ್ದುದು ಅಮೆರಿಕದ ಕಂಪನಿಗಳು. ಉತ್ಪಾದನೆಯಿಂದ ಹಿಡಿದು ಮಾರುಕಟ್ಟೆಗೆ ತಲುಪಿ ಲಾಭ ಗಳಿಸುವವರೆಗೂ ಅಮೆರಿಕಾದ ಅಧಿಕಾರಿಗಳು ನಿರ್ಧರಿಸುತ್ತಿದ್ದರು. ಎಲ್ಲಿಯಾದರೂ ಈ ಎರಡು ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯ ಬಂದರೆ ಸೌದಿ ಅರೇಬಿಯಾದ ಆರ್ಥಿಕ ವ್ಯವಸ್ಥೆಗೆ ಅತೀ ಹೆಚ್ಚು ಪೆಟ್ಟು ಬೀಳುವುದರಲ್ಲಿ ಸಂಶಯವಿಲ್ಲ. ಸೌದಿ ಅರೇಬಿಯಾಕ್ಕೆ ಮಾತ್ರ ಸೀಮಿತವಲ್ಲ. ಇದು ಅರಬ್ ರಾಷ್ಟ್ರಗಳೆಲ್ಲಕ್ಕೂ ಅನ್ವಯಿಸುತ್ತದೆ. ಹೀಗಾಗಿ ಬೆಲೆಯೇರಿಸುವ ತಂತ್ರವನ್ನು ಇಂದು ಬಹಳ ಸೂಕ್ಷ್ಮವಾಗಿ ‘ಒಪೆಕ್’ ಪಾಲಿಸಬೇಕಾಗುತ್ತದೆ.

ಈ ಪೆಟ್ರೋಲಿಯಂ ವ್ಯವಹಾರ ಕೌಶಲದಿಂದಾಗಿ ಇನ್ನೊಂದು ಪರಿಣಾಮಕಾರಿ ಬೆಳವಣಿಗೆಯನ್ನು ಉಲ್ಲೇಖಿಸಬಹುದು. ಇಂದು ಹೆಚ್ಚಿನ ಪಶ್ಚಿಮ ಏಷ್ಯಾ ಮತ್ತು ಭಾರತದಲ್ಲಿ ಹುಟ್ಟಿಕೊಂಡಿರುವ ಭಯೋತ್ಪಾದನೆ, ಮೂಲಭೂತವಾದಿಗಳು, ಅಭದ್ರತಾ ಪರಿಸ್ಥಿತಿ ಮತ್ತು ರಾಜಕೀಯ ಕುತಂತ್ರ ಉಲ್ಬಣವಾಗಲು ಕಾರಣ ಪೆಟ್ರೋಲಿಯಂನಿಂದ ಚೆಲ್ಲುತ್ತಿರುವ ಹಣದಿಂದ ಅದರಲ್ಲೂ ಸೌದಿ ಅರೇಬಿಯಾ, ಲಿಬಿಯಾ, ಇರಾನ್ ಮತ್ತು ಇರಾಕ್ ದೇಶಗಳಿಂದ. ಭಾರತದ ಆರ್ಥಿಕ ಅಭಿವೃದ್ದಿ ಕೈಗಾರಿಕಾ ಉದ್ಯಮ ೧೯೮೮ರ ದಶಕದಲ್ಲಿ ಕುಗ್ಗಲು ಏಕೈಕ ಕಾರಣ ೧೯೭೦-೮೫ರ ನಡುವಿನ ಪೆಟ್ರೋಲಿಯಂ ಬೆಲೆ ಏರಿಕೆ. ಅರಬ್ ದೇಶದಿಂದ ಬರುವ ಹಣದ ಸಹಾಯವು ಭಾರತದಲ್ಲಿ ಮುಸ್ಲಿಂ ಕೋಮುವಾದಕ್ಕೆ ಪ್ರೋ ನೀಡಿದವು ಹಾಗೂ ಇಸ್ಲಾಮಿ ಮೂಲಭೂತವಾದಿಗಳ ಪ್ರಬಲತೆ ಪಶ್ಚಿಮ ಏಷ್ಯಾದಲ್ಲಿ ಹೆಚ್ಚಾಗಲು ಇದೇ ಪ್ರಮುಖ ಪಾತ್ರ ವಹಿಸಿರುವುದು ಗಮನಾರ್ಹ ವಿಚಾರ. ಆದ ಕಾರಣ ಸಾಮಾಜಿಕವಾಗಿ ಪೆಟ್ರೋಲಿಯಂ ಹಣವನ್ನು ಇಡೀ ಉತ್ಪಾದನಾ ಸಮೂಹವೇ ನಿಯಂತ್ರಿಸಿಕೊಂಡು ಜಗತ್ತಿನ ಸಂಪನ್ಮೂಲಗಳನ್ನು ಅಂತಾರಾಷ್ಟ್ರೀಕರಣ ಮಾಡಿದರೆ ಸ್ವಲ್ಪಮಟ್ಟಿಗೆ ಭಯೋತ್ಪಾದನಾ ಶಕ್ತಿಯನ್ನು ನಿಗ್ರಹಿಸಬಹುದು.

ಈ ನೀತಿ ಜಾಗತಿಕ ನೆಲೆಯಲ್ಲಿ ಅಸಾಧ್ಯವಾದುದರಿಂದ, ಭಾರತ ಸರಕಾರ ಸೂಚಿಸಿರು ವಂತೆ, ‘ಒಪೆಕ್’ ಪಾಲಿಸುವ ಆಯಿಲ್ ಡಿಪ್ಲೋಮಸಿಯಲ್ಲಿ ‘ಡ್ಯುಯಲ್ ಪೈಸ್ ಸಿಸ್ಟಮ್’ನ್ನು ಅಳವಡಿಸುವುದು ಸೂಕ್ತ ಸಲಹೆಯಾಗಿರುತ್ತದೆ. ಈ ನೀತಿಯ ಪ್ರಕಾರ ‘ಒಪೆಕ್’ ಪ್ರಾದೇಶಿಕ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಎರಡು ರೀತಿಯ ಬೆಲೆಯನ್ನು ಪಾಲಿಸುವುದು. ಒಂದು ರೀತಿಯ ಶ್ರೀಮಂತ ಬಂಡವಾಳಶಾಹಿ ರಾಷ್ಟ್ರಗಳಿಗೆ (ಉದಾಹರಣೆ- ಸರಾಸರಿ ೪೦ ಡಾಲರ್ ಬ್ಯಾರಲ್ ಒಂದಕ್ಕೆ) ಮತ್ತೊಂದು ನೀತಿ ತೃತೀಯ ಜಗತ್ತಿಗೆ. ಇದು ಕಾರ್ಯರೂಪಕ್ಕೆ ಬಂದರೆ ‘ಪೆಟ್ರೋಲಿಯಂ ರಾಜಕೀಯದಲ್ಲಿ ಮಾರ್ಕ್ಸಿಸಂ’ ‘ಪ್ರಾಕ್ಟೀಸ್’ ಆಗಬಹುದು.

ಇಸ್ಲಾಮಿ ಸಂಘಟನಾ ಸಮ್ಮೇಳನ (ಓಐಸಿ)

ಜಾಗತಿಕ ನೆಲೆಯಲ್ಲಿ ಇಸ್ಲಾಮಿ ಒಕ್ಕೂಟ ಅಥವಾ ಪಾನ್ ಇಸ್ಲಾಮಿಕ್ ಯುನಿಟಿಯ ಅನಿವಾರ್ಯತೆಯನ್ನು ಮೊತ್ತ ಮೊದಲು ೧೮೯೦ರ ದಶಕದಲ್ಲಿ ಆಟೋಮನ್ ಟರ್ಕಿ ಸುಧಾರಕರು ಗ್ರಹಿಸಿದರು. ಆದರೆ ಈ ಚಳುವಳಿ ೧೯೨೩-೨೪ರಲ್ಲಿ ಟರ್ಕರ ಖಲಿಫತ್ ನಿರ್ಮೂಲನದ ದಿಢೀರ್ ನಿರ್ಧಾರದಿಂದ ದುರ್ಬಲಗೊಂಡಿತು. ಇದರಿಂದ ಟರ್ಕರು ೧೯೨೩ರ ನಂತರ ತಮ್ಮ ಗತಕಾಲದ ಇತಿಹಾಸವನ್ನು, ಬಹುರಾಷ್ಟ್ರೀಯತೆಯನ್ನು ತ್ಯಜಿಸಿ ರಾಷ್ಟ್ರೀಯ ಏಕತೆಗೆ ಪ್ರಾಮುಖ್ಯತೆ ಕೊಟ್ಟರು. ಪರಿಣಾಮವಾಗಿ ಇಸ್ಲಾಂ ಜಗತ್ತಿನಲ್ಲಿ ಗತಕಾಲದಿಂದಲೂ ರೂಢಿಯಲ್ಲಿದ್ದ ವಿಶ್ವಭಾತೃತ್ವಕ್ಕೆ ಕಡಿವಾಣ ಬಿತ್ತು. ಅರಬ್ ರಾಷ್ಟ್ರಗಳು ಸಹ ಟರ್ಕಿಯ ಉದಾಹರಣೆಯನ್ನು ಪಾಲಿಸಿ, ತಮ್ಮ ಗತಕಾಲದ ಸಂಸ್ಕೃತಿ ಮತ್ತು ನಾಗರಿಕತೆಯ ಆಧಾರದ ಮೇಲೆ ವಿಭಿನ್ನ ರೀತಿಯ ರಾಷ್ಟ್ರೀಯ ಚಳುವಳಿಯನ್ನು ಪಾನ್ ಅರಬಿಸಂ ಅಬ್ದುಲ್ ನಾಸರ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ನಂತರ ತೀವ್ರ ಸ್ವರೂಪ ತಾಳಿತು. ಮಾತ್ರವಲ್ಲ ಅರಬ್ ರಾಷ್ಟ್ರಗಳ ಸಂಘಟನೆಗೆ ಒಂದು ವೇದಿಕೆ ಮಾಡಿಕೊಟ್ಟಿತು. ಇಂತಹ ಸಂದರ್ಭದಲ್ಲಿ ‘ಸದಾಬಾದ್’ ಒಡಂಬಡಿಕೆಯ ಆಧಾರದ ಮೇಲೆ ಇರಾನಿನ ದೊರೆ (೧೯೫೦ರ ದಶಕದಲ್ಲಿ) ರೇಝೊ ಶಾಹ ಪಹಲವಿ, ಪಾನ್ ಅರಬಿಸಂ  ಚಳುವಳಿಯನ್ನು ದುರ್ಬಲಗೊಳಿಸಲು, ಜಾಗತಿಕ ಮಟ್ಟದಲ್ಲಿ ಇಸ್ಲಾಮಿ ಒಕ್ಕೂಟವನ್ನು ಪುನರ್ ಚೇತನಗೊಳಿಸಿ ಒಂದು ಕ್ರಿಯಾತ್ಮಕ ಒಗ್ಗಟ್ಟಿಗೆ ಕರೆಕೊಟ್ಟಿತು. ಜೊತೆಗೆ ಸೌದಿ ಅರೇಬಿಯಾದ ದೊರೆ ಪೈಜಲ್ ಪಾಕಿಸ್ತಾನದ ಅಧಿಕಾರಿಗಳು ಸಭೆ ಸೇರಿ ಇಸ್ಲಾಮಿ ಒಕ್ಕೂಟಕ್ಕೆ ತಮ್ಮ ಸಹಮತ ವ್ಯಕ್ತಪಡಿಸಿದರು. ಇದಕ್ಕೆ ಪೂರಕವಾಗಿ ೧೯೬೧ರಲ್ಲಿ ಇಂಡೋನೇಶಿಯಾದ ಪ್ರಧಾನಿ ಟೆಂಕು ಅಬ್ದುಲ್ ರೆಹಮಾನ್ ಮತ್ತು ೧೯೬೭-೬೮ರಲ್ಲಿ ಇಂಡೋನೇಶಿಯಾ ಸರಕಾರ ಔಪಚಾರಿಕವಾಗಿ ಇಸ್ಲಾಮಿ ಸಂಘಟನಾ ಸಮ್ಮೇಳನದ ಸ್ಥಾಪನೆಗೆ ಸೂಚನೆ ಮಾಡಿತು.

ಇದೇ ಸಮಯದಲ್ಲಿ ಯಹೂದಿಗಳು ತಮ್ಮ ಸ್ವಾಧೀನದಲ್ಲಿರುವ ಜೆರುಸಲೇಂನಲ್ಲಿ ಅಟ್-ಅಕ್ಸ್ ಮಸೀದಿಯನ್ನು ಸುಟ್ಟು ಧ್ವಂಸ ಮಾಡಿದರು. ಈ ಘಟನೆಯಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಒಂದು ರೀತಿಯ ಅರಾಜಕತೆ ಹುಟ್ಟಿಕೊಂಡಿತು ಮತ್ತು ಯಹೂದಿಗಳ ದಾಳಿಯಿಂದಾಗಿ ಅರಬರ ಪವಿತ್ರ ಸ್ಥಳಗಳು ರಕ್ಷಣೆಗೆ ಅಸ್ಥಿರತೆ ಉಂಟಾಯಿತು. ಈ ಪ್ರಕ್ಷುಬ್ಧ ವಾತಾವರಣವನ್ನು ಉಪಯೋಗಿಸಿಕೊಂಡ. ಆದರೆ, ೨೬, ೧೯೬೯ರಲ್ಲಿ ಹದಿನಾಲ್ಕು ಅರಬ್ ರಾಷ್ಟ್ರಗಳ ವಿದೇಶಿ ಮಂತ್ರಿಗಳು ಈಜಿಪ್ಟ್ ದೇಶದ ರಾಜಧಾನಿಯಾದ ಕೈರೋದಲ್ಲಿ ಸಭೆ ಸೇರಿ ಅರಬ್ ಪ್ರಾಂತ್ಯವನ್ನು ವಸಾಹತುಶಾಹಿಯ ಹಿಡಿತದಿಂದ ಮುಕ್ತಿಗೊಳಿಸಲು, ಇಸ್ರೇಲ್‌ನ್ನು ಸದೆ ಬಡಿಯಲು ಸಂಘಟನಾತ್ಮಕ ಒತ್ತಡ ಒಂದೇ ದಾರಿ ಎಂದು ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಇಸ್ಲಾಮಿ ಒಕ್ಕೂಟ ಸಮ್ಮೇಳನದ ಸ್ಥಾಪನೆಗೆ ಅರಬರ ಬೆಂಬಲ ಪ್ರಕಟವಾಯಿತು. ಈ ಪ್ರಯುಕ್ತ ಸೆಪ್ಟೆಂಬರ್ ೩, ೧೯೬೯ರಲ್ಲಿ ಯು.ಎ.ಇ. (ಯುನೈಟೆಡ್ ಅರಬ್ ಎಮಿರೆಟ್ಸ್), ಜೋರ್ಡಾನ್, ಸಿರಿಯಾ, ಇರಾಕ್ ಮತ್ತು ಸೂಡಾನ್ ದೇಶದ ಅಧಿಕಾರಿಗಳು ಪುನಃ ಕೈರೋದಲ್ಲಿ ಸಭೆ ಸೇರಿ ಇಸ್ರೇಲ್ ವಿರುದ್ಧ ಯುದ್ಧ ಸಾರಲು ಎಲ್ಲ ಅರಬ್ ರಾಷ್ಟ್ರಗಳಿಗೆ ಸಂಪನ್ಮೂಲಗಳನ್ನು ಒಗ್ಗೂಡಿಸಲು ಕರೆ ನೀಡಿದರು. ಈ ಬೆಳವಣಿಗೆಗೆ ಇಸ್ಲಾಮಿ ದೇಶಗಳ ನ್ಯಾಯ ಸಮ್ಮತ ಹೋರಾಟ, ನಾಡಿನ ಸ್ವಾತಂತ್ರ್ಯ ಉಳಿಸಲು ಮತ್ತು ಒಗ್ಗಟ್ಟಿನ ಚಳುವಳಿ ಕೈಗೊಳ್ಳಲು ಪ್ರೇರಣೆ ನೀಡಿತು. ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಸ್ಲಾಮಿ ಸಂಘಟನಾ ಒಕ್ಕೂಟ ಸ್ಥಾಪನೆಯಾಯಿತು.

ಸಂಘಟನೆಯ ಸ್ಥಾಪನೆಗೆ ಸಹಿ ಹಾಕಿದವರು ಒಐಪಿಯ ಚಾರ್ಟರ್ ಪ್ರಕಾರ ಇಸ್ಲಾಂನ ಸಾಮಾಜಿಕ ಮತ್ತು ಆರ್ಥಿಕ ಮಲ್ಯಗಳ ಸುರಕ್ಷತೆಗಾಗಿ ‘ಇಸ್ಲಾಮಿ ಸದಸ್ಯ ರಾಷ್ಟ್ರಗಳನ್ನು ಸಂಘಟಿಸಬೇಕು ಮತ್ತು ವಿಶ್ವಸಂಸ್ಥೆಯ ಮಾನವ ಹಕ್ಕುಗಳನ್ನು ಗೌರವಿಸುವುದಾಗಿ ಪ್ರಕಟಿಸಿದರು. ಒಐಪಿಯ ಮುಖ್ಯ ಧ್ಯೇಯ ಧೋರಣೆಗಳೆಂದರೆ

೧. ಇಸ್ಲಾಮಿ ಸಮನ್ವಯ

೨. ಸದಸ್ಯ ರಾಷ್ಟ್ರಗಳೊಂದಿಗೆ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ರಂಗ ಗಳಲ್ಲಿ ಸಹಕಾರವನ್ನು ಹೆಚ್ಚಿಸುವುದು

೩. ದೇಶೀಯ ಸ್ವಾತಂತ್ರ್ಯ ಮತ್ತು ಪವಿತ್ರ ಸ್ಥಳಗಳ ರಕ್ಷಣೆಯಲ್ಲಿ ಪರಸ್ಪರ ಸಮಾನತೆ ಕಾಪಾಡಿಕೊಳ್ಳುವುದು

೪. ಅಂತಾರಾಷ್ಟ್ರೀಯ ಶಾಂತಿ ಪಾಲನೆ ಮತ್ತು ರಕ್ಷಣೆಗೆ ತಮ್ಮ ಕೊಡುಗೆಯನ್ನು ನೀಡುವುದು

೫. ಜನಾಂಗೀಯ ಕಲಹ, ವಿಭಜನೆ ಮತ್ತು ವಸಾಹತುಶಾಹಿ ತತ್ವಗಳನ್ನು ಒಗ್ಗಟ್ಟಿನಿಂದ ವಿರೋಧಿಸುವುದು.

೬. ಘಟನೆ, ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯನ್ನು ಉಳಿಸಿಕೊಳ್ಳುವುದು ಮತ್ತು

೭. ಪರಸ್ಪರ ಹೊಂದಾಣಿಕೆ ಹಾಗೂ ನ್ಯಾಯ ಸಮ್ಮತವಾದ ಪರಿಸರವನ್ನು ಸೃಷ್ಟಿಸಿ ಸಂಘಟಿತರಾಗುವುದು.

ಒಐಸಿಯ ಚಾರ್ಟರ್ ಸಂಘಟನೆಯ ಚಟುವಟಿಕೆಗಳನ್ನು ಸರಳವಾಗಿ ವ್ಯಾಖ್ಯಾನಿಸಿದೆ.

೧. ಸದಸ್ಯ ರಾಷ್ಟ್ರಗಳ ನಡುವೆ ಪೂರ್ಣ ಮಟ್ಟದ ಸಮಾನತೆ

೨. ಒಬ್ಬರನೊಬ್ಬರು ಗೌರವಿಸುವಿಕೆ ಮತ್ತು ಇನ್ನೊಂದು ಸದಸ್ಯರಾಷ್ಟ್ರದ ಆಂತರಿಕ ವ್ಯವಹಾರ ದಲ್ಲಿ ಹಸ್ತಕ್ಷೇಪ ಮಾಡದಿರುವುದು.

೩. ಸ್ವಾವಲಂಬನೆ, ಸ್ವಾತಂತ್ರ್ಯ ಮತ್ತು ಪ್ರಾಮಾಣಿಕತೆಯನ್ನು ಪರಸ್ಪರ ಗೌರವಿಸುವುದು

೪. ಆಂತರಿಕ ಗಲಭೆ, ಗಡಿ ವಿವಾದವನ್ನು ಒಪ್ಪಂದ, ಮಧ್ಯಸ್ಥಿಕೆ ಹಾಗೂ ಶಾಂತಿ ಪೂರ್ವಕ ವಾಗಿ ಬಗೆಹರಿಸಿಕೊಳ್ಳುವುದು.

೫. ರಾಷ್ಟ್ರದ ಭದ್ರತೆಗೆ ರಾಜಕೀಯ ಸ್ವಾತಂತ್ರ್ಯಕ್ಕೆ ಮತ್ತು ರಾಷ್ಟ್ರೀಯ ಒಗ್ಗಟ್ಟಿಗೆ ಬಾಹ್ಯ ಬೆದರಿಕೆಗಳನ್ನು ಸಂಘಟನಾತ್ಮಕವಾಗಿ ತಡೆಗಟ್ಟುವುದು.

ಸದಸ್ಯ ರಾಷ್ಟ್ರಗಳ ಅಧಿಕಾರಿಗಳ ಮತ್ತು ಸರಕಾರಗಳ ಶೃಂಗ ಸಭೆಯು ಒಐಸಿಯ ಮುಖ್ಯ ಅಂಗವಾಗಿರುತ್ತವೆ. ಇದು ಮುಸ್ಲಿಂ ರಾಷ್ಟ್ರದ ಪ್ರಚಲಿತ ಪರಿಸ್ಥಿತಿಯ ಬಗ್ಗೆ, ಅಂತಾರಾಷ್ಟ್ರೀಯ ಚಟುವಟಿಕೆಯಲ್ಲಿ ತಮ್ಮ ಕೊಡುಗೆಯ ಬಗ್ಗೆ ಕೂಲಂಕಷವಾಗಿ ಚರ್ಚಿಸಬೇಕು. ಮುಸ್ಲಿಂ ರಾಷ್ಟ್ರದ ಉಪಾಯಗಳನ್ನು ಸೃಷ್ಟಿಸುವಲ್ಲಿ ಮತ್ತು ಸಾಧಿಸುವಲ್ಲಿ ಕ್ಲುಪ್ತ ಸಮಯದಲ್ಲಿ ನಿರ್ಣಯ ತೆಗೆದುಕೊಳ್ಳಲು ಸಹ ಇಸ್ಲಾಮಿ ಒಕ್ಕೂಟ ಪ್ರಯತ್ನಪಡುತ್ತದೆ. ೧೯೯೦ರವರೆಗೆ ಒಐಸಿಯ ಸುಮಾರು ಆರು ಶೃಂಗ ಸಭೆಗಳನ್ನು ಕರೆದಿತ್ತು.

ಇಸ್ಲಾಮಿ ಸಂಘಟನಾ ಸಮ್ಮೇಳನ

ಸಭೆ ವರ್ಷ ಸ್ಥಳ
 ಒಂದನೆಯದು ೧೯೬೯ ರಾಬತ್ (ಮೊರೋಕೊ)
 ಎರಡನೆಯದು ೧೯೭೪ ಲಾಹೋರ್ (ಪಾಕಿಸ್ತಾನ)
 ಮೂರನೆಯದು ೧೯೮೧ ಮಕ್ಕಾ ಅಲ್ ಮುಕಾರಾಮ (ಸೌದಿಅರೇಬಿಯಾ)
 ನಾಲ್ಕನೆಯದು ೧೯೮೪ ಕಾಸಾ ಬ್ಲಾಂಕಾ (ಮೊರೋಕೊ)
 ಐದನೆಯದು ೧೯೮೭ ಕುವೈತ್ (ಕುವೈತ್)
 ಆರನೆಯದು ೧೯೯೦ ಸೆನೆಗಾಲ್‌ನಲ್ಲಿ
 ಏಳನೆಯದು ೧೯೯೪ ಕಾಸಾಬ್ಲಾಂಕಾ (ಮೊರೊಕೊ)
 ಮೊದಲ ವಿಶೇಷ ಸಭೆ ೧೯೯೭ ಇಸ್ಲಾಮಾಬಾದ್ (ಪಾಕಿಸ್ತಾನ)
 ಎಂಟನೆಯದು ೧೯೯೭ ತೆಹರಾನ್ (ಇರಾನ್)
 ಒಂಬತ್ತನೆಯದು ೨೦೦೦ ದೋಹಾ (ಕಥಾರ್)
 ಎರಡನೆಯ ವಿಶೇಷ ಸಭೆ ೨೦೦೩ ದೋಹಾ (ಕಥಾರ್)
 ಹತ್ತನೆಯದು ೨೦೦೩ ಪುತ್ರಾಜಯ (ಮಲೇಶಿಯಾ)
 ಮೂರನೆಯ ವಿಶೇಷ ಸಭೆ ೨೦೦೫ ಮಕ್ಕಾ ಅಲ್ ಮುಕಾರಾಮ್ (ಸೌದಿ ಅರೆಬಿಯ)
ಹನ್ನೊಂದನೆಯದು ೨೦೦೮ ಡಾಕಾರ್(ಸೆನೆಗಲ್)

 

ವಿದೇಶಿ ಮಂತ್ರಿಗಳ ವಾರ್ಷಿಕ ಇಸ್ಲಾಮಿ ಸಮ್ಮೇಳನ ಒಐಸಿಯ ಎರಡನೇ ಅಂಗ ವಾಗಿದೆ. ಅಂತಾರಾಷ್ಟ್ರೀಯ ಬೆಳವಣಿಗೆ ಬಗ್ಗೆ ಚರ್ಚಿಸುವುದು, ಸದಸ್ಯ ರಾಷ್ಟ್ರಗಳ ಮೇಲೆ ಅವುಗಳು ಬೀರುವ ಪರಿಣಾಮ ಮತ್ತು ಜಾಗತಿಕ ನೆಲೆಯಲ್ಲಿ, ಮುಸ್ಲಿಂ ರಾಷ್ಟ್ರದ ರಾಜಕೀಯ ಮತ್ತು ಆರ್ಥಿಕ ಬದಲಾವಣೆಯ ಪ್ರಸ್ತಾವನೆ ಈ ವಿದೇಶಿ ಮಂತ್ರಿಗಳ ಶೃಂಗಸಭೆಯ ಮೂಲ ಉದ್ದೇಶ. ಅಲ್ಲದೆ ವಸಾಹತುಶಾಹಿಯ ಬಿಗಿ ಹಿಡಿತದಿಂದ ಇಸ್ಲಾಮಿ ರಾಷ್ಟ್ರಗಳಲ್ಲಿ ಉದ್ಭವಿಸಿದ ವಾತಾವರಣದ ಬಗ್ಗೆ ತೀವ್ರ ಗಮನ ಸೆಳೆಯುವುದು ಮತ್ತು ಪರಿಹಾರ ಹುಡುಕಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ತರುವುದು, ಉದಾಹರಣೆಗೆ ಪ್ಯಾಲೇಸ್ತೀನ್ ಪ್ರಶ್ನೆ, ಜೆರುಸಲೇಂ ಸ್ಥಿತಿ, ಪಶ್ಚಿಮ ಏಷ್ಯಾ ಆಂತರಿಕ ವ್ಯಾಜ್ಯ, ಆಪಘಾನಿಸ್ತಾನದಲ್ಲಿ(ಗತ) ಸೋವಿಯತ್ ಹಸ್ತಕ್ಷೇಪ, ಇರಾನ್-ಇರಾಕ್ ಯುದ್ಧ ಮತ್ತು ದಕ್ಷಿಣ ಆಫ್ರಿಕಾದಲ್ಲಿನ ಜನಾಂಗೀಯ ಕಲಹ. ಈ ಸಂಘಟನೆಯು ಮುಸ್ಲಿಂ ಜಗತ್ತಿನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು, ಸದಸ್ಯ ಮತ್ತು ಸದಸ್ಯರಲ್ಲದ ರಾಷ್ಟ್ರದೊಂದಿಗೆ ಆರ್ಥಿಕ ಸಂಬಂಧವನ್ನು, ಇಸ್ಲಾಮಿ ಸಂಘಟನೆಯ, ಬೆಳವಣಿಗೆಯನ್ನು ಸದಸ್ಯ ರಾಷ್ಟ್ರಗಳೊಂದಿಗೆ ವ್ಯಾಪಾರ ಸಂಬಂಧವನ್ನು ಯಶಸ್ವಿಯಾಗಿ ಸಾಧಿಸಲು ಒಐಸಿಯ ವಿದೇಶಿ ಮಂತ್ರಿಗಳ ಸಭೆ ಕೆಲಸ ಮಾಡುತ್ತದೆ.

ಜನರಲ್ ಸೆಕ್ರೆಟೇರಿಯಟ್ ಒಐಸಿಯ ಇನ್ನೊಂದು ಅಂಗವಾಗಿ ಕಾರ್ಯ ನಿರ್ವಹಿಸುತ್ತದೆ. ಸೆಕ್ರೆಟರಿ ಜನರಲ್ ಈ ಅಂಗದ ನಿರ್ದೇಶಕನಾಗಿರುತ್ತಾನೆ. ಒಐಸಿಯ ಬ್ರಾಂಚ್‌ಗಳನ್ನು, ಏಜನ್ಸಿಗಳನ್ನು ಮತ್ತು ಕೇಂದ್ರಗಳನ್ನು ವಿವಿಧ ರಾಷ್ಟ್ರಗಳಲ್ಲಿ ತೆರೆಯಲಾಗಿದೆ. ನಾಲ್ಕು ವರ್ಷಕ್ಕೊಮ್ಮೆ ಚುನಾಯಿಸಲ್ಪಡುವ ಈ ಹುದ್ದೆ ಯಾವ ಕಾರಣಕ್ಕೂ ಆಯ್ಕೆಗೆ ಆಸ್ಪದ ವಿಲ್ಲ. ಒಐಸಿಯ ಚಾರ್ಟರ್ ಪ್ರಕಾರ ಹೊರಡಿಸುವ ಧೋರಣೆಗಳನ್ನು, ಶೃಂಗಸಭೆ ಯಲ್ಲಿ ಕೈಗೊಂಡ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರುವುದು ಮತ್ತು ಇಸ್ಲಾಮಿ ಮಲ್ಯಗಲನ್ನು ಸದಸ್ಯ ರಾಷ್ಟ್ರಗಳು ಉಲ್ಲಂಘಿಸದಿರುವುದನ್ನು ನೋಡಿಕೊಳ್ಳುವುದು ಸೆಕ್ರೆಟರಿ ಜನರಲ್‌ರ ಮುಖ್ಯ ಉದ್ದೇಶವಾಗಿದೆ.

ಅಂತಾರಾಷ್ಟ್ರೀಯ ಇಸ್ಲಾಮಿ ನ್ಯಾಯಾಲಯವು ಒಐಸಿಯ ಮುಖ್ಯ ಅಂಗವಾಗಿದ್ದು ಪರಸ್ಪರ ಭಿನ್ನಾಭಿಪ್ರಾಯ, ಆಂತರಿಕ ವ್ಯಾಜ್ಯ, ಗಡಿವಿವಾದಗಳನ್ನು ಕಾನೂನಿನ ಚೌಕಟ್ಟಿನಲ್ಲಿ ನಿಭಾಯಿಸಲು ಸಹಕರಿಸುತ್ತದೆ. ಸುಮಾರು ಎರಡು ದಶಕದಷ್ಟು ಹಳೆಯದಾದ ಈ ಸಂಘಟನೆ ಇಂದು ಹಲವು ಉಪವಿಭಾಗಗಳನ್ನು ನುರಿತ ಏಜನ್ಸಿಗಳನ್ನು ಹೊಂದಿಕೊಂಡು ಸದಸ್ಯ ರಾಷ್ಟ್ರಗಳ ನಡುವೆ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಪರಸ್ಪರ ಸಮಾನತೆ, ಸಹಕಾರವನ್ನು ನಿರ್ಮಿಸಿದೆ. ಅವು ಹೀಗಿವೆ

೧. ಇಸ್ಲಾಮಿ ಸಮನ್ವಯ ನಿಧಿ

೨. ಅಲ್ ಕುದ್ಸ್ ಮತ್ತು ವಕ್ಫ್ ನಿಧಿ

೩. ಇಸ್ಲಾಮಿ ಉನ್ನತ ಶೈಕ್ಷಣಿಕ ಸಂಸ್ಥೆ

೪. ಇಸ್ಲಾಂಬುಲ್‌ನಲ್ಲಿ ಇಸ್ಲಾಮಿ ಇತಿಹಾಸ, ಕಲೆ ಮತ್ತು ಸಂಸ್ಕೃತಿ ಸಂಶೋಧನಾ ಕೇಂದ್ರ

೫. ಅಂಕಾರಾದಲ್ಲಿ ಇಸ್ಲಾಮಿ ರಾಷ್ಟ್ರಗಳ ಸಂಖ್ಯಾಶಾಸ್ತ್ರೀಯ, ಆರ್ಥಿಕ, ಸಾಮಾಜಿಕ ಸಂಶೋಧನಾ ಮತ್ತು ತರಬೇತಿ ಕೇಂದ್ರ

೬. ಕಾಸಾ ಬ್ಲಾಂಕಾದಲ್ಲಿ ಇಸ್ಲಾಮಿ ರಾಷ್ಟ್ರಗಳ ವಾಣಿಜ್ಯ ಅಭಿವೃದ್ದಿ ಕೇಂದ್ರ

೭. ಢಾಕಾದಲ್ಲಿ ಇಸ್ಲಾಂ ದೇಶಗಳ ತಾಂತ್ರಿಕ ಮತ್ತು ವೃತ್ತಿಪರ ತರಬೇತಿ ಹಾಗೂ ಸಂಶೋಧನಾ ಕೇಂದ್ರ

ಇವಿಷ್ಟು ಸಂಸ್ಥೆಗಳು ಇಸ್ಲಾಂ ಜಗತ್ತಿನ ಬೆಳವಣಿಗೆಗೆ ಸಹಾಯಕವಾಗಿರುವ ಅಂಗ ಗಳಾಗಿವೆ. ಒಐಸಿಯ ಆಡಳಿತಕ್ಕೆ ಒಳಪಟ್ಟ ಇನ್ನೂ ಹಲವು ಅಂಗೀಕೃತ ಸಂಸ್ಥೆಗಳು ವಿಶಿಷ್ಟ ರೀತಿಯಲ್ಲಿ ಸಂಘಟನೆಗೆ ಸಹಕರಿಸುತ್ತವೆ. ಅವು ಹೀಗಿವೆ

೧. ಇಸ್ಲಾಂ ರಾಷ್ಟ್ರಗಳ ವಾರ್ತಾ ಮತ್ತು ಪ್ರಚಾರ ಸಂಸ್ಥೆ ಇದರ ಕೇಂದ್ರ ಸ್ಥಾನ ಜೆಡ್ಡಾದಲ್ಲಿದೆ.

೨. ರಾಬತ್‌ನಲ್ಲಿ ಇಸ್ಲಾಂ ರಾಷ್ಟ್ರಗಳ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ

೩. ಕರಾಚಿಯಲ್ಲಿ ವಾಣಿಜ್ಯ, ಕೈಗಾರಿಕಾ ಮತ್ತು ನಿರ್ಯಾತ ವಸ್ತುಗಳ ಸಂಸ್ಥೆ

ಇವುಗಳಲ್ಲದೆ ವಿಶ್ವಬ್ಯಾಂಕ್‌ನ ಮಾದರಿಯಲ್ಲಿ ಸಾಮಾಜಿಕ, ಆರ್ಥಿಕ, ವಾಣಿಜ್ಯ ಅಭಿವೃದ್ದಿಗಾಗಿ ಇಸ್ಲಾಂ ರಾಷ್ಟ್ರಗಳ ಅಭಿವೃದ್ದಿ ಬ್ಯಾಂಕನ್ನು ಜೆಡ್ಡಾದಲ್ಲಿ ತೆರೆಯಲಾಗಿದೆ. ಇವುಗಳ ಜೊತೆಯಲ್ಲಿ ಒಐಸಿಯ ಸದಸ್ಯ ರಾಷ್ಟ್ರಗಳಾದ, ಮಲೇಶಿಯಾ, ಪಾಕಿಸ್ತಾನ, ಬಾಂಗ್ಲಾದೇಶ, ನೈಜೀರಿಯಾ ಮತ್ತು ಉಗಾಂಡಾದಲ್ಲಿ ಹಲವಾರು ಅಂತಾರಾಷ್ಟ್ರೀಯ ಗುಣಮಟ್ಟದ ಇಸ್ಲಾಮಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದ್ದು, ಆಧುನಿಕ, ವೈಜ್ಞಾನಿಕ, ಧಾರ್ಮಿಕ ಶಿಕ್ಷಣವನ್ನು ಪ್ರಚಾರ ಮಾಡುವಲ್ಲಿ ಯಶಸ್ಸು ಸಾಧಿಸಿವೆ.

ಈ ಎಲ್ಲ ಸಾಧನೆಗಳಿದ್ದರೂ ಸಹ, ೧೯೬೯ರಲ್ಲಿ ಸ್ಥಾಪನೆಯಾದ ಇಸ್ಲಾಮಿ ಸಂಘಟನಾ ಸಮ್ಮೇಳನ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಪ್ರಕ್ರಿಯೆಗಿಂತ ರಾಜಕೀಯೇತರ ಚಟುವಟಿಕೆಯಲ್ಲಿ ಉತ್ತಮ ಸೇವೆ ಸಲ್ಲಿಸಿದೆ. ಶ್ರೀಮಂತ ಅರಬ್ ರಾಷ್ಟ್ರಗಳಲ್ಲಿ ತೈಲದಿಂದ ಹರಿಯುವ ಹಣವನ್ನು ಒಗ್ಗೂಡಿಸಿ ಇಸ್ಲಾಂ ರಾಷ್ಟ್ರಗಳ ಆರ್ಥಿಕ, ಧಾರ್ಮಿಕ ಹಾಗೂ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಿಲು ದೊಡ್ಡ ಕೊಡುಗೆ ಕೊಟ್ಟಿದೆ. ಅದರಲ್ಲೂ ಮುಖ್ಯವಾಗಿ ಭಾರತದ ವಿರುದ್ಧ ಪಾಕಿಸ್ತಾನದ ಅಣುಶಕ್ತಿಯನ್ನು ವೃದ್ದಿಸುವಲ್ಲಿ ಒಐಸಿಯು ಪ್ರಮುಖ ಪಾತ್ರ ವಹಿಸಿದೆ. ಸದಸ್ಯ ರಾಷ್ಟ್ರಗಳ ಆಧುನೀಕರಣದಲ್ಲಿ, ವೈಜ್ಞಾನಿಕ ಬೆಳವಣಿಗೆಯಲ್ಲಿ, ಸಾಮಾಜಿಕ ಬದಲಾವಣೆಗಳಲ್ಲಿ, ಶೈಕ್ಷಣಿಕ ವ್ಯವಸ್ಥೆಯಲ್ಲಿ ಈ ಸಂಘಟನೆ ಹಣಕಾಸಿನ ಸಹಾಯ ಸಲ್ಲಿಸಿದೆ. ಆದರೆ ರಾಜಕೀಯ ರಂಗದಲ್ಲಿ ಒಐಸಿಯ ಶಾಸನದ ಪ್ರಕಾರ ಇಸ್ಲಾಮಿ ರಾಷ್ಟ್ರಗಳ ಒಗ್ಗಟ್ಟನ್ನು ಸಾಧಿಸಲು ಹಿಂದೆ ಬಿದ್ದಿದೆ. ಆದಾಗ್ಯೂ ಈ ರಾಷ್ಟ್ರಗಳ ಸಮನ್ವಯ ಮತ್ತು ಸಮಾನ ಅಭಿವೃದ್ದಿ ಸಾಧಿಸಲು ಪ್ರಯತ್ನಿಸುತ್ತಿದೆ. ಆದ್ದರಿಂದ ಈ ಸಂಘಟನೆ ಅಂತಾರಾಷ್ಟ್ರೀಯ ಮಟ್ಟದ ರಾಜಕೀಯ ರಂಗದಲ್ಲಿ ನಿಜಂಶಕ್ಕಿಂತಲೂ ಕಾಲ್ಪನಿಕವಾಗಿರುವುದು ಗಮನಿಸಬೇಕಾದ ಸಂಗತಿ. ಉದಾಹರಣೆ: ಒಐಸಿ ಎರಡು ಪ್ರಬಲ ಸದಸ್ಯ ರಾಷ್ಟ್ರಗಳಾದ ಇರಾನ್ ಮತ್ತು ಇರಾಕ್ ನಡುವಿನ ದುರಾದೃಷ್ಟಕರವಾದ ಸಮರ, ವಿಶ್ವಸಂಸ್ಥೆ ಸೇನೆಯ ವಿರುದ್ಧ(ಅಮೆರಿಕ ಎನ್ನುವುದು ತುಂಬಾ ಉಚಿತ) ಇತ್ತೀಚೆಗೆ ಗಲ್ಫ್‌ನಲ್ಲಿ ಇರಾಕ್ ಪ್ರಧಾನಿ ಸದ್ದಾಂ ಹುಸೇನ್(ಒಐಸಿಯ ಸದಸ್ಯ ರಾಷ್ಟ್ರ) ಯುದ್ಧ ಸಾರಿದಾಗ ಒಐಸಿಯ ಸದಸ್ಯ ರಾಷ್ಟ್ರಗಳಾದ ಸೌದಿ ಅರೇಬಿಯಾ, ಕುವೈತ್, ಈಜಿಪ್ಟ್, ಟರ್ಕಿಯಂತ ಪ್ರಬಲ ಇಸ್ಲಾಮಿ ರಾಷ್ಟ್ರಗಳು ಮುಸ್ಲಿಂ ರಾಷ್ಟ್ರೀಯತೆ, ಸ್ವಾತಂತ್ರ್ಯ, ಸ್ವಾವಲಂಬನೆ ಮತ್ತು ಸ್ವಾಯತ್ತತೆಯನ್ನು ರಕ್ಷಿಸುವ ಬದಲು ಸಾಮ್ರಾಜ್ಯಶಾಹಿ ತತ್ವಗಳನ್ನು ಪಾಲಿಸಿರುವುದು ವಿಪರ್ಯಾಸ. ಈ ಘಟನೆಗಳು ಒಐಸಿಗೆ ನಿಜವಾಗಿ ಶಾಸನದಲ್ಲಿ ಕ್ರೋಡೀಕರಿಸಿರುವ ಧೋರಣೆಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಲು ಅಡಚಣೆ ಉಂಟುಮಾಡಿದೆ ಮತ್ತು ಮಾರಕವಾಗಿದೆ. ಆದಾಗಿಯೂ ಇಸ್ಲಾಂನ ಸಿದ್ಧಾಂತದ ಪ್ರಕಾರ ವಿಶ್ವ ಸಹೋದರತ್ವವನ್ನು ಬೆಳೆಸುವಲ್ಲಿ ಆಮೆ ನಡಿಗೆ ಯಿಟ್ಟರೂ ಒಐಸಿಯು ಮುಂದೊಂದು ದಿನ ಸಾಧಿಸುವುದು ಖಚಿತ. ಏಕೆಂದರೆ ಈಗಾಗಲೆ ಒಐಸಿ ಸುಮಾರು ಎರಡು ದಶಕಗಳು ಸತತವಾಗಿ ಒಕ್ಕೂಟದ ಹಾದಿಯಲ್ಲಿ ದುಡಿದು ಮೊದಲ ಬಾರಿಗೆ ಎಲ್ಲ ಮುಸ್ಲಿಂ ರಾಷ್ಟ್ರಗಳಾದ ಅರಬ್ ಮತ್ತು ಅರಬೇತರ, ಆಫ್ರಿಕ ಮತ್ತು ಏಷ್ಯಾದ ಮುಸ್ಲಿಮರನ್ನು ಒಂದು ಸಂಘಟನೆಯ ದಾರಿಯಲ್ಲಿ ಕೊಂಡೊಯ್ಯುತ್ತಿದೆ. ಇದು ಒಂದು ಪ್ರಚಲಿತ ಜಾಗತಿಕ ಬೆಳವಣಿಗೆಯಲ್ಲಿ ಗಮನಾರ್ಹ ವಿಚಾರ ಹಾಗೂ ಕೆಳಮಟ್ಟದ ಸಾಧನೆಯೇನೂ ಅಲ್ಲ. ಈ ಮಾತು ತುಂಬಾ ಸಮರ್ಪಕವಾದುದು. ಏಕೆಂದರೆ ಶತಶತಮಾನಗಳಿಂದಲೂ ಆಂತರಿಕ ಗಲಭೆಯಲ್ಲಿ, ವ್ಯಾಜ್ಯದಲ್ಲಿ, ವಿಭಜನೆಗಳಲ್ಲಿ ಒಡೆದು ಆಳುವಿಕೆಯಲ್ಲಿ ಮುಳುಗಿದ ಮುಸ್ಲಿಂ ದೇಶಗಳು ಒಂದಾಗಿ ಸಾಧನೆಯ ಪಥವನ್ನು ೨೦ನೆಯ ಶತಮಾನದಲ್ಲಿ ಮುನ್ನಡೆಯುತ್ತಿರುವುದು ಒಐಸಿಯ ಶ್ರಮದ ಫಲ ಎನ್ನುವುದರಲ್ಲಿ ಅತಿಶಯೋಕ್ತಿ ಏನಲ್ಲ.

ಅರಬ್ ಲೀಗ್ (೧೯೪೫)

ಪಶ್ಚಿಮ ಏಶಿಯಾದಲ್ಲಿ ಅರಬ್ ಲೀಗ್ ಎಂದು ಬೃಹತ್ ಸಂಘಟನೆಯಾಗಿದೆ. ಒಂದನೆಯ ಮಹಾಯುದ್ಧದ ನಂತರ ಯಹೂದಿಗಳು ಅರಬ್ ಪ್ರಾಂತ್ಯದಲ್ಲಿ ಹುಟ್ಟಿಸಿದ ಭಯೋತ್ಪಾದನಾ ಶಕ್ತಿ ವಸಾಹತುಶಾಹಿ ಧೋರಣೆ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ಪ್ರಚೋದನೆಯಿಂದಾಗಿ ಪ್ಯಾಲೇಸ್ತಿನ್ ಅರಬ್‌ರು ಅಸ್ಥಿರತೆಯನ್ನು ಎದುರಿಸಬೇಕಾಯಿತು. ಮತ್ತು ಅವರ ನ್ಯಾಯಬದ್ಧ ಹಕ್ಕುಗಳಿಗೆ ಚ್ಯುತಿ ಬಂತು. ಇದನ್ನು ಅರಿತ ಪ್ರಬಲ ಅರಬ್ ರಾಷ್ಟ್ರಗಳು ಅರಬ್-ಭ್ರಾತೃತ್ವದ ಆಧಾರದಲ್ಲಿ ಒಂದು ಒಗ್ಗಟ್ಟನ್ನು ಎರಡನೆಯ ಮಹಾ ಯುದ್ಧದ ಸಮಯದಲ್ಲಿ ಸ್ಥಾಪಿಸಲು ಕರೆಕೊಟ್ಟರು. ಇದು ನಂತರ ಅರಬ್ ಲೀಗ್ ಎಂಬ ಸಂಘಟನಾ ರೂಪ ತಾಳಿತು(೧೯೪೫ರ ಮಾರ್ಚ್ ೨೨ರಲ್ಲಿ). ಮೊದಲು ಈಜಿಪ್ಟ್, ಸಿರಿಯಾ, ಲೆಬನಾನ್, ಇರಾಕ್, ಜೋರ್ಡಾನ್, ಸೌದಿ ಅರೇಬಿಯಾ ಮತ್ತು ಯಮಾನ್ ಈ ಒಪ್ಪಂದಕ್ಕೆ ಸಹಿ ಹಾಕಿದವು. ನಂತರ ಅಲ್ಜೀರಿಯಾ, ಕುವೈತ್, ಲಿಬಿಯಾ, ಮೊರೋಕೊ, ಸುಡಾನ್, ಮ್ಯುನಿಶಿಯಾ, ಓಮಾನ್, ಕತಾರ್, ಸೋಮಾಲಿಯಾ, ದಕ್ಷಿಣ ಯಮನ್, ಸಂಯುಕ್ತ ಅರಬ್ ಎಮಿರೇಟ್ಸ್, ಬಹ್ರೈನ್ ಇತ್ಯಾದಿ ರಾಷ್ಟ್ರಗಳು ಇದರಲ್ಲಿ ವಿಲೀನಗೊಂಡವು. ಪ್ರಸ್ತುತ ಇದರಲ್ಲಿ ೨೨ ಸದಸ್ಯ ರಾಷ್ಟ್ರಗಳಿವೆ.

ಅರಬ್ ಲೀಗ್‌ನ ಮುಖ್ಯ ಉದ್ದೇಶಗಳೆಂದರೆ ಸದಸ್ಯ ರಾಷ್ಟ್ರಗಳ ನಡುವೆ ಸಂಬಂಧ ಗಳನ್ನು ಸದೃಢಗೊಳಿಸುವುದು, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಸಂಚಾರ, ಆರೋಗ್ಯ ಮತ್ತು ರಾಷ್ಟ್ರೀಯತೆಯ ಸಮಸ್ಯೆಗಳ ಸಂದರ್ಭಗಳಲ್ಲಿ ಸದಸ್ಯ ರಾಷ್ಟ್ರಗಳ ಸಹಯೋಗ ತರಲು ಅವುಗಳ ನೀತಿಗಳಲ್ಲಿ ಸಾಮರಸ್ಯ ಉಂಟು ಮಾಡುವುದು ಮತ್ತು ಅವುಗಳ ಸ್ವತಂತ್ರತೆ, ಪ್ರಭುತ್ವಗಳನ್ನು ರಕ್ಷಿಸುವುದು.