ಮೆಸಪಟೋಮಿಯಾದ ನಾಗರಿಕತೆಯನ್ನು ಅರ್ಥ ಮಾಡಿಕೊಳ್ಳಲು ನಮಗೆ ಪ್ರಾಚ್ಯವಸ್ತು ಆಕರಗಳ ಮತ್ತು ಬರವಣಿಗೆಯ ಪ್ರಕಾರದ ಆಧಾರಗಳು ಸಿಗುತ್ತವೆ. ಬರವಣಿಗೆಯ ಆಧಾರಗಳು ನಮಗೆ ಪುರಾತನ ಬೆಬಿಲೋನಿಯ ಮತ್ತು ಅಸ್ಸಿರಿಯ ದಾಖಲೆಗಳಲ್ಲಿ ದೊರೆಯುತ್ತವೆ.

ಮೆಸಪಟೋಮಿಯ ಎಂಬ ಶಬ್ದವನ್ನು ಪುರಾತನ ಗ್ರೀಕರು ಸೃಷ್ಟಿಸಿರುತ್ತಾರೆ. ಗ್ರೀಕ್ ಭಾಷೆಯಲ್ಲಿ ಮೆಸಪಟೋಮಿಯ ಎಂದರೆ ‘‘ನದಿಗಳ ನಡುವಿನ ದೇಶ’’ ಮತ್ತು ಈ ಶಬ್ದವು ‘‘ಸುಮೇರ್’’ಗೆ ಮಾತ್ರ ಅನ್ವಯಿಸದೆ ‘‘ಅಕ್ಕಡ್’’ ಪ್ರದೇಶಗಳಿಗೂ ಅನ್ವಯಿಸುತ್ತದೆ. ಬೆಬಿಲೋನಿಯ ಮತ್ತು ಅಸ್ಸಿರಿಯ ಪ್ರದೇಶಗಳ ಸುತ್ತ, ಪೂರ್ವಕ್ಕೆ ಟೈಗ್ರಿಸ್ ಮತ್ತು ಪಶ್ಚಿಮಕ್ಕೆ ಯುಫ್ರೆಟಿಸ್ ನದಿಗಳು ಹರಿಯುತ್ತಿದ್ದವು.

ಪರಿಸರ

ಈ ಪ್ರದೇಶವು ಉತ್ತರ ಮತ್ತು ಪೂರ್ವದಲ್ಲಿ ಬೆಟ್ಟಗಳಿಂದಲೂ ಮತ್ತು ದಕ್ಷಿಣ ಮತ್ತು ಪಶ್ಚಿಮಕ್ಕೆ ಮರಳುಗಾಡಿನಿಂದಲೂ ಆವೃತ್ತವಾಗಿದೆ. ಆಧುನಿಕ ಇರಾಕ್ ದೇಶಕ್ಕೆ ಈಗ ಇರುವಂತೆಯೇ ಗಡಿಯ ಪ್ರದೇಶವು ಅಂದಿನ ಮೆಸಪಟೋಮಿಯ ದೇಶಕ್ಕೂ ಇತ್ತು. ಆದರೆ ಹವಾಗುಣ ಮಾತ್ರ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾಗಿತ್ತು. ಉತ್ತರಕ್ಕೆ ಹವಾಗುಣವು ಖಂಡಾವೃತ ಮಾದರಿಯದಾಗಿದ್ದು ಸಾಕಷ್ಟು ಮಳೆಯನ್ನು ಪಡೆಯುತ್ತಿದ್ದರಿಂದ, ನಾಲೆಯ ವ್ಯವಸ್ಥೆಯಿಲ್ಲದೆಯೇ ಸಹಜವಾಗಿ ಬೇಸಾಯ ನಡೆಸಲು ಅನುಕೂಲಕರವಾಗಿತ್ತು. ಆದರೆ ಮೊದಲ ನಾಗರಿಕತೆಯು ಹುಟ್ಟಿದ ದಕ್ಷಿಣದಲ್ಲಿ ಹವಾಗುಣ ಒಣಹವೆಯಿಂದ ಕೂಡಿದ್ದರಿಂದ ಮಳೆಯ ಪ್ರಮಾಣ ಕಡಿಮೆಯಿದ್ದು, ನೀರನ್ನು ಶೇಖರಿಸಿದ ಕಾಲುವೆಯ ವ್ಯವಸ್ಥೆಯಿಂದ ಮಾತ್ರ ವ್ಯವಸಾಯ ಸಾಧ್ಯವಿತ್ತು. ದಕ್ಷಿಣ ಮೆಸಪಟೋಮಿಯ ದೇಶದ ಮೇಲ್ಮೈ ಲಕ್ಷಣವನ್ನು ರೂಪಿಸಿದ ಎರಡು ಮಹಾನದಿಗಳಲ್ಲಿ ಯುಫ್ರೆಟಿಸ್ ನದಿಯನ್ನು ತುಂಬ ಮುಖ್ಯವಾದದ್ದೆಂದು ಆದಿಕಾಲದ ನಾಗರಿಕತೆಯಲ್ಲಿ ಪರಿಗಣಿಸಲಾಗಿದೆ. ಏಕೆಂದರೆ ನಿಧಾನವಾಗಿ ಹರಿಯುವ ಈ ನದಿಯ ನೀರನ್ನು ವ್ಯವಸಾಯಕ್ಕೆ ಬಳಸಿಕೊಳ್ಳಬಹುದಿತ್ತು. ಪ್ರಾಚೀನ ಕಾಲದ ನದಿಯು ಮೆಕ್ಕಲು ಮಣ್ಣಿನ ಬಯಲಿಗೆ ಹರಿದು ಬರುವಷ್ಟರಲ್ಲಿ ಕಿರುನದಿಗಳಾಗಿ ಹಂಚಿಕೊಂಡಿತ್ತು. ಇದರ ಮುಖ್ಯ ಭಾಗವೊಂದು ಅದರ ಇಂದಿನ ಮಾರ್ಗದಂತೆ ಸಮತಟ್ಟಾದ ಭೂಮಿಯ ಮಧ್ಯಭಾಗದಲ್ಲಿ ಹಾದು ಹೋಗಿತ್ತು. ಈ ಮುಖ್ಯ ನದಿಯ ಅಂಚಿನಲ್ಲಿಯೇ ಅತಿ ಪ್ರಾಚೀನ ಮಹಾನಗರಗಳು ಹುಟ್ಟಿಕೊಂಡದ್ದು.

ಫಲವತ್ತಾದ ಮೆಕ್ಕುಲುಮಣ್ಣಿನಲ್ಲಿ ಸರಿಯಾಗಿ ವ್ಯವಸಾಯ ಮಾಡಿದಾಗ ಉತ್ತಮ ಬೆಳೆ ಬರುತ್ತಿದ್ದುದು ಆಗತಾನೆಯ ದೊಡ್ಡದಾಗಿ ಬೆಳೆಯುತ್ತಿದ್ದ ಮೊದಲ ನಗರಗಳಲ್ಲಿ ವಾಸಿಸುವ ಹೆಚ್ಚಿನ ಜನಸಂಖ್ಯೆಗೆ ಆಹಾರ ಒದಗಿಸುವಲ್ಲಿ ತುಂಬ ಸಹಕಾರಿಯಾಗಿತ್ತು. ಇದರ ಜತೆಗೆ ಪ್ರವಾಹಗಳು, ಬದಲಾಗುತ್ತಿದ್ದ ನದಿಯ ಮಾರ್ಗಗಳು ಮತ್ತು ಸತ್ವಹೀನ ವಾಗುತ್ತಿದ್ದ ಮಣ್ಣಿನ ಅಪಾಯ ಈ ಎಲ್ಲದರ ಪರಿಣಾಮದಿಂದಾಗಿ ಬೆಳೆಯ ಇಳುವರಿಯಲ್ಲಿ ಉಂಟಾಗುತ್ತಿದ್ದ ಅಪಾಯಗಳನ್ನು ಮತ್ತು ಅಡಚಣೆಗಳನ್ನು ಅಂದಿನ ಜನರು ಎದುರಿಸ ಬೇಕಾಗಿತ್ತು. ಇವೆಲ್ಲ ಸಮಸ್ಯೆಗಳ ನಡುವೆಯೂ ಮೆಸಪಟೋಮಿಯದಲ್ಲಿ ಪ್ರಪಂಚದ ಅತಿ ಹಳೆಯ ನಾಗರಿಕತೆ ಹುಟ್ಟಿಕೊಂಡಿತು. ಹೀಗೆ ಮೆಸಪಟೋಮಿಯಾದ ಹಳೆಯ ಇತಿಹಾಸವನ್ನು ಅರ್ಥ ಮಾಡಿಕೊಳ್ಳಲು, ಮೆಸಪಟೋಮಿಯಾದ ನಾಗರಿಕತೆ ಒಳಗೊಂಡ ಸುಮೇರ್, ಅಕ್ಕಡ್, ಬೆಬಿಲೋನಿಯ ಮತ್ತು ಅಸ್ಸಿರಿಯ ಪ್ರದೇಶಗಳ ಇತಿಹಾಸವನ್ನು ಓದಬೇಕು.

ಸುಮೇರ್

ಮೆಸಪಟೋಮಿಯಾದ ವಿವಿಧ ಭಾಗಗಳಲ್ಲಿ ನಡೆಸಿರುವ ಭೂ ಶೋಧನೆಯೂ ಕೂಡ ಮೊದಲ ಮಾನವನ ಬೀಡುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುವುದಿಲ್ಲ. ಭೂ ಶೋಧನೆಯ ಆಧಾರದ ಮೇಲೆ ಕ್ರಿ.ಪೂ. ಸುಮಾರು ಸಾವಿರ ವರ್ಷಗಳ ಮೊದಲ ಭಾಗದಲ್ಲಿ ಫಲವತ್ತಾದ ಪ್ರದೇಶಗಳಲ್ಲಿ ಮಾನವನು ಮೊದಲು ನೆಲಸಿದ್ದನೆಂದು ಅಂದಾಜು ಮಾಡಲಾಗಿದೆ. ಈ ಕಾಲವನ್ನು ಪ್ರಾಚ್ಯವಸ್ತುಶಾಸ್ತ್ರದ ಪರಿಭಾಷೆಯಲ್ಲಿ ‘‘ಉಬೈದ್ ಒ’’ ಎಂದು ಕರೆಯುತ್ತಾರೆ.

ಉಬೈದ್ ಒ ಕಾಲವು ವ್ಯವಸಾಯವನ್ನಾಧರಿಸಿದ ಹಳ್ಳಿಗಳ ಕಾಲವನ್ನು ಪ್ರತಿನಿಧಿಸುತ್ತದೆ. ಈ ಕಾಲದಲ್ಲಿ ಇಲ್ಲಿನ ಜನರು ಸುಮಾರಷ್ಟು ಮನೆಗಳನ್ನು ನಿರ್ಮಿಸಿದ್ದರು ಮತ್ತು ಗೋಧಿ ಮತ್ತು ಜವೆ ಧಾನ್ಯಗಳನ್ನು ಬೆಳೆಯುತ್ತಿದ್ದರು. ಈ ಕಾಲದ ಜನರಿಗೆ ಪ್ರಾಣಿಗಳನ್ನು ಸಾಕುವ ವಿಧಾನದ ಪರಿಚಯವಿದ್ದು, ಹಸು, ಕುರಿ, ಆಡು ಮತ್ತು ಹಂದಿಗಳನ್ನು ಸಾಕುತ್ತಿದ್ದರು. ಅತಿ ಮೊದಲ ಮಾನವನ ಬೀಡುಗಳ ಬಗ್ಗೆ ಪ್ರಾಚ್ಯವಸ್ತು ದಾಖಲೆಯ ಕೊರತೆಯಿಂದಾಗಿ ಇನ್ನು ಹೆಚ್ಚಿನದೇನನ್ನೂ ಹೇಳಲಾಗುವುದಿಲ್ಲ.

ಕ್ರಿ.ಪೂ. ೩ ಸಾವಿರ ವರ್ಷಗಳ ವೇಳೆ ಟೈಗ್ರಿಸ್ ಮತ್ತು ಯುಫ್ರೆಟಿಸ್ ನದಿಗಳ ದಕ್ಷಿಣ ಭಾಗದಲ್ಲಿ ಕಣಿವೆಗಳಲ್ಲಿ ನಗರ ರಾಜ್ಯಗಳು ಕಾಣಿಸಿಕೊಳ್ಳಲು ಆರಂಭವಾದವು. ಇಂತಹ ಹಲವು ನಗರ ರಾಜ್ಯಗಳಲ್ಲಿ ಕೆಲವು ಮುಖ್ಯವಾದವುಗಳೆಂದರೆ ಉರ್, ಉರುಕ್ (ವಾಸ್ಕ), ಲಾಸರ್, ಲಗಾಶ್, ನಿಪ್ಪೂರ್, ಕಿಶ್, ಎರಿಡು ಮುಂತಾದವುಗಳು. ಎಲ್ಲ ನಗರ ರಾಜ್ಯಗಳು ಸಮಾನ ವಿಸ್ತ್ರೀರ್ಣವನ್ನು ಹೊಂದಿದ್ದವು. ಉರ್ ಅಥವಾ ಎರಡು ಪ್ರದೇಶದ ಸ್ಮಶಾನವೊಂದು ಬೆಳಕಿಗೆ ಬಂದಿದೆ. ಅಲ್ಲಿ ಸುಮಾರು ಸಾವಿರ ಗೋರಿಗಳನ್ನು ಕಾಣಬಹುದಾಗಿದೆ.

ಉಬೈದ್ ಒ ಕಾಲದ ನಂತರ ಉರುಕ್ ಕಾಲವು ಆರಂಭವಾಯಿತೆಂಬುದು ಸ್ಪಷ್ಟವಾಗಿ ಇನ್ನೂ ತೀರ್ಮಾನವಾಗದ ವಿಷಯವಾಗಿದೆ. ಅಂದಾಜಿನ ಮೇಲೆ ಈ ಸಂಕ್ರಮಣ ಕಾಲವನ್ನು ಸುಮಾರು ಕ್ರಿ.ಪೂ. ೪೫೦೦ ವರ್ಷಗಳಿಗೆ ಗುರುತಿಸಲಾಗಿದೆ. ಈ ಕಾಲದ ಮಡಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಕ್ಕಿರುವುದನ್ನು ಬಿಟ್ಟರೆ ಪ್ರಾಚೀನ ಮತ್ತು ಮಧ್ಯಕಾಲದ ಉರುಕ್ ಬಗ್ಗೆ ಹೆಚ್ಚಿನದೇನನ್ನು ಹೇಳಲು ಸಾಧ್ಯವಿಲ್ಲ. ಸ್ವತಂತ್ರವಾಗಿ ಸಮಾನತೆಯ ಬಾಳ್ವೆಯ ಹಳ್ಳಿ ಜೀವನದ ಕಾಲದಿಂದ ಸಾಮಾಜಿಕವಾಗಿ ಶ್ರೇಣೀಕರಿಸಿದ ನಗರ ರಾಜಕೀಯ ಜೀವನವು ಉಗಮವಾಯಿತು. ಹೀಗೆ ಈ ಕಾಲವು ಪ್ರಪಂಚದ ಮೊದಲ ನಗರ ಜೀವನದ ಹುಟ್ಟನ್ನು ಕಂಡಿತು.

ಈ ಬೆಳವಣಿಗೆಯು ಕ್ರಮೇಣ ಸಂಪೂರ್ಣವಾಗಿ ಬೆಳೆದು ಉರುಕ್ ಪಟ್ಟಣ ಸಮಾಜಕ್ಕೆ ಎಡೆ ಮಾಡಿಕೊಟ್ಟಿತು. ಉರುಕ್ ಪ್ರದೇಶವು ಸುಮಾರು ೨೪೭ ಎಕರೆ ಪ್ರದೇಶವನ್ನು ಆವರಿಸಿತ್ತು. ಮತ್ತು ಅಂದಿನ ಕಾಲಕ್ಕೆ ದಕ್ಷಿಣ ಮೆಸಪಟೋಮಿಯಾದ ಬೃಹತ್ತಾದ ಮತ್ತು ತುಂಬ ಮುಖ್ಯವಾದ ನಗರವಾಗಿತ್ತು. ಈ ಕಾಲವು ಸಾಮಾಜಿಕ ವರ್ಗಗಳ ಬೆಳವಣಿಗೆಯನ್ನು ಕಂಡಿತು. ಈ ನಗರದ ಸಾಮಾಜಿಕ ಬೆಳವಣಿಗೆಯು ಅಧಿಕಾರ, ಆಸ್ತಿ ಮತ್ತು ಸಂಪತ್ತಿನ ಮೂಲಗಳನ್ನು ಅವಲಂಬಿಸಿತ್ತು.

ವರ್ಗೀಕೃತ ಸಮಾಜದ ವ್ಯವಸ್ಥೆ ತೀವ್ರವಾದಂತೆಲ್ಲ. ಆಳುವವನ ಅಧಿಕಾರವೂ ಕೂಡ ಕ್ರಮವಾಗಿ ಹೆಚ್ಚಾಯಿತು. ರಕ್ಷಣಾ ವ್ಯವಸ್ಥೆಯ ಅಂಗವಾಗಿ ನಿರ್ಮಿಸಲಾದ ಕೋಟೆಯ ವ್ಯವಸ್ಥೆಯನ್ನು ನಗರವು ಒಳಗೊಂಡಿತ್ತು. ಈ ಕೋಟೆಯ ಗೋಡೆಯು ಅಕಾರದಲ್ಲಿ ತುಂಬ ದೊಡ್ಡದಾಗಿದ್ದು, ಬೃಹತ್ತಾದ ರೂಪವನ್ನು ಹೊಂದಿತ್ತು. ವ್ಯವಸಾಯ ಪದ್ಧತಿಯು ಇನ್ನು ಸುಧಾರಿಸಿತು ಮತ್ತು ಧಾನ್ಯದ ಇಳುವರಿಯಲ್ಲಿ ಗಣನೀಯವಾಗಿ ಆದಾಯ ಹೆಚ್ಚಾಗಿತ್ತು. ಈ ರೀತಿಯ ಉತ್ಪಾದನೆ, ಬೆಳೆಯುತ್ತಿದ್ದ ನಗರ ಜನಸಂಖ್ಯೆಗೆ ಆಹಾರ ಒದಗಿಸಲು ತುಂಬಾ ಅವಶ್ಯಕವಾಗಿತ್ತು. ಈ ಕಾಲದ ಭೌತಿಕವಾದ ವಸ್ತು ಸಂಸ್ಕೃತಿ ಗಣನೀಯವಾದ ಬದಲಾವಣೆಯನ್ನು ಕಂಡಿತು. ಉಬೈದ್ ಒ ಕಾಲದಲ್ಲಿ ಕೈಯಿಂದ ಮಾಡಿದ ಮಡಿಕೆಗಳಿಗೆ ಬದಲಾಗಿ ಚಕ್ರದ ಸಹಾಯದಿಂದ ಮಾಡಿದ ಮಡಿಕೆಗಳೂ ಬಳಕೆಗೆ ಬಂದವು. ಉರುಕ್ ಕಾಲ ಮುಗಿಯುವ ವೇಳೆಗೆ ರೂಪುರೇಖೆ ಮತ್ತು ಉಬ್ಬುತಗ್ಗುಗಳು ಸ್ಪಷ್ಟವುಳ್ಳ ಪ್ರತಿಮೆಗಳನ್ನು ಕೊರೆಯುವುದು ಮತ್ತು ಜೇಡಿಮಣ್ಣಿನಿಂದ ಮಾಡಿದ, ಆವಿಯಲ್ಲಿ ಸುಟ್ಟ, ದುಂಡಾಕಾರದ ಅಚ್ಚುಗಳನ್ನು ಮಾಡುವುದು ಆರಂಭವಾಗಿತ್ತು. ಭೂ ಶೋಧನೆಯಿಂದ ಹೊರ ತೆಗೆಯಲಾಗಿರುವ ವಸ್ತುಗಳು ಕಲೆಯಲ್ಲಿ ಸಾಧಿಸಲಾಗಿರುವ ಪರಿಣತಿಯನ್ನು ಸ್ಪಷ್ಟಪಡಿಸುತ್ತವೆ. ದುಂಡಾಕಾರದ ಅಚ್ಚುಗಳ ಮೇಲೆ ಕೆತ್ತಲಾಗಿರುವ ದೃಶ್ಯಗಳು, ಈ ವಸ್ತುವಿನ ಒಡೆಯನನ್ನು ಗುರುತಿಸುವಲ್ಲಿ ಸಹಾಯ ಮಾಡುತ್ತವೆ.

ಉರುಕ್ ಕಾಲದಲ್ಲಿ ಬರವಣಿಗೆಯೂ ಆರಂಭವಾಯಿತು. ಪ್ರಾಚೀನ ಕಾಲದಲ್ಲಿ ಸೃಷ್ಟಿಸಿದ ಈ ಲಿಪಿಗಳು ಸುಮಾರು ೧೨೦೦ ಇದ್ದು, ಇವುಗಳನ್ನು ಮಣ್ಣಿನ ಹಲಗೆಗಳ ಮೇಲೆ ರಚಿಸಲಾಗಿದೆ. ಈ ಲಿಪಿಗಳಿಂದ ಬರೆಯಲಾಗಿರುವ ಭಾಷೆ ಸುಮೇರಿಯನ್ ಆಗಿದೆ. ಈ ಬರವಣಿಗೆಗಳು ಮುಖ್ಯವಾಗಿ ವ್ಯಾಪಾರದ ಅಥವಾ ವಾಣಿಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿದೆ.

ಈ ಪ್ರಾಚೀನ ನಗರ-ರಾಜ್ಯಗಳು ತಮ್ಮ ವಾಣಿಜ್ಯ ಮತ್ತು ವ್ಯಾಪಾರದ ವಸಾಹತುಗಳನ್ನು ಇರಾನ್, ಉತ್ತರ ಮೆಸಪಟೋಮಿಯ, ಸಿರಿಯ, ಆನಟೋಲಿಯ ಮತ್ತು ಈಜಿಪ್ಟ್ ರಾಷ್ಟ್ರಗಳಲ್ಲಿ ಸ್ಥಾಪಿಸಿದ್ದವು.

ಹೀಗೆ ದಕ್ಷಿಣ ಮೆಸಪಟೋಮಿಯಾದ ನಗರ-ರಾಜ್ಯಗಳು ಬೆಳವಣಿಗೆಯನ್ನು ಮುಂದು ವರೆಸಿದವು. ಬರವಣಿಗೆಯ ಪದ್ಧತಿಯಲ್ಲಿ ಉಂಟಾದ ತೀವ್ರವಾದ ಬೆಳವಣಿಗೆಯಿಂದಾಗಿ ಲಿಪಿಗಳ ಸಂಖ್ಯೆಯು ಕಡಿಮೆಯಾಯಿತು ಮತ್ತು ಕೆಲವು ಲಿಪಿಗಳು ಸರಳಗೊಂಡವು, ಚಿಕ್ಕದಾದವು. ಟೊಳ್ಳು ಕಡ್ಡಿಯಿಂದ ಒತ್ತಿ ಬರೆಯಲಾದ ರೇಖ ನಾಗರ ಬರವಣಿಗೆಯ ಶೈಲಿಯು ಹುಟ್ಟಿಕೊಂಡಿದ್ದರಿಂದ ಲಿಪಿಗಳಿಗೆ ಸಮಾನ ರೂಪಾಕಾರಗಳನ್ನು ಕೊಡುವುದು ಸಫಲವಾಯಿತು.

ವ್ಯವಸಾಯದಿಂದ ಹೆಚ್ಚಿನ ಆದಾಯವು ನಗರದ ಆಳುವ ವರ್ಗದವರನ್ನು ಶ್ರೀಮಂತರ ನ್ನಾಗಿ ಮಾಡಿತು. ಇವರುಗಳು ತುರ್ಕಿ, ಸಿರಿಯಾ, ಅರೇಬಿಯಾ, ಇರಾನ್, ಅಫಘಾನಿಸ್ತಾನ ಮತ್ತು ಇಂಡಸ್ ಕಣಿವೆಯಿಂದ ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ಉರ್‌ನ ರಾಜಮನೆತನಕ್ಕೆ ಸೇರಿದ ಗೋರಿಗಳ ಭೂ ಶೋಧನೆಯಿಂದ ಹೊರತೆಗೆಯಲಾಗಿರುವ ಪಾತ್ರೆ-ಪಡವಟ್ಟುಗಳು ಚಿನ್ನ, ವಜ್ರ, ಬೆಳ್ಳಿ, ಚಿಪ್ಪಿನ ಹರಳುಗಳಿಂದ ಮತ್ತು ನೀಲೋಪಲ್ಯ, ವೈಡೂರ್ಯಗಳಿಂದ ಶೃಂಗಾರಗೊಂಡಿವೆ. ಇವುಗಳಲ್ಲಿ ಆಮದು ಮಾಡಿಕೊಂಡ ಹರಳುಗಳು ಕೂಡ ಇವೆ.

ಸುಮಾರು ಕ್ರಿ.ಪೂ. ೨೪೦೦ ವರ್ಷದಿಂದೀಚೆಗೆ ಬರೆಯಲಾಗಿರುವ ಇತಿಹಾಸದ ಬರಹಗಳ ದೊಡ್ಡ ಸಂಗ್ರಹ ಲಗಶ್‌ನ ಗಿರ್ಸು ಎನ್ನುವ ಪ್ರಾಂತದಿಂದ ಬಂದಿರುತ್ತದೆ. ಈ ಬರಹಗಳು ಉಮ್ಮಾ ಎನ್ನುವ ಮತ್ತೊಂದು ನಗರ-ರಾಜ್ಯದೊಡನೆ ನಡೆಯುತ್ತಿದ್ದ ಗಡಿ ವಿವಾದದ ಬಗ್ಗೆ ತಿಳಿಸುತ್ತದೆ. ಕಿಶ್ ಎಂಬುದು ತುಂಬ ಮುಖ್ಯವಾದ ಆಚರಣೆಗಳ ನಗರವಾಗಿ ಬೆಳೆದಿತ್ತು. ಈ ನಗರದಲ್ಲಿ ರಾಜರು ತಮಗೆ ಬೇಕಾದಂತೆ ಕಿಶ್ ದೇಶದ ರಾಜನೆಂದು ಬಿರುದುಗಳನ್ನು ಪಡೆದುಕೊಳ್ಳುತ್ತಿದ್ದರು. ಈ ಕಾಲದಲ್ಲಿ ಸುಮಾರು ರಾಜರು ಸುಮೇರ್ ನಗರ-ರಾಜ್ಯವನ್ನು ಆಳಿದರು. ಕಡೆಯದಾಗಿ ಲುಗಾಲ್ ಝಗ್ಗೇರಿ ಎನ್ನುವವನ ಆಳ್ವಿಕೆಯ ಕಾಲದಲ್ಲಿ ಉಮ್ಮ ನಗರ-ರಾಜ್ಯವು ಉರುಕ್, ಅದಬ್, ಎರಿಡು ಎನ್ನುವ ನಗರ-ರಾಜ್ಯಗಳ ಮೇಲೆ ಅಧಿಕಾರ ಸ್ಥಾಪಿಸುವಲ್ಲಿ ಯಶಸ್ವಿಯಾಯಿತು. ಲುಗಾಲ್ ಝಗ್ಗೇರಿಯು ತನ್ನ ಅಧಿಕಾರವನ್ನು ಸುಮೇರ್‌ನ ಎಲ್ಲಾ ಪ್ರಾಂತ್ಯಗಳಿಗೆ ವಿಸ್ತರಿಸಿ, ಉರುಕ್ ನಗರ-ರಾಜ್ಯವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಇವನು ಸುಮೇರನ್ನು ಆಳಿದ ಕಟ್ಟ ಕಡೆಯವರಲ್ಲಿ ಅತಿ ಪ್ರಮುಖನಾಗಿದ್ದಾನೆ.

ಅಕ್ಕಡಿಯನ್ನರ ಮತ್ತು ಉರ್‌ನ ಮೂರನೆಯ ಸಂತತಿಯವರ ಕಾಲದಲ್ಲಿ ಮೆಸೊ ಪೊಟೋಮಿಯ ದಕ್ಷಿಣ ಪ್ರಾಂತ್ಯದಲ್ಲಿ ಸುಮೇರಿಯನ್ನರು ಅತಿಮುಖ್ಯವಾದ ಜನಾಂಗವಾಗಿ ಉಳಿದುಕೊಂಡಿದ್ದಾಗ, ಸುಮಾರು ಕ್ರಿ.ಪೂ. ೨೭೦೦ರಲ್ಲಿ ಮೆಸಪಟೋಮಿಯಾದ ಉತ್ತರ ಭಾಗವು ಅಕ್ಕಡಿಯನ್ನರೆಂಬುವ ಜನಾಂಗದವರಿಂದ ವಾಸಿಸಲ್ಪಟ್ಟಿತ್ತು. ಅಕ್ಕಡ್ ಎನ್ನುವವರು ಅದೇ ಹೆಸರಿನ ಮೆಸಪಟೋಮಿಯಾದ ಅತಿಮುಖ್ಯವಾದ ನಗರ-ರಾಜ್ಯವೊಂದನ್ನು ಸ್ಥಾಪಿಸಿದರು. ಅಕ್ಕಡ್ ಎನ್ನುವುದೇ ಅದರ ರಾಜಧಾನಿಯೂ ಆಗಿತ್ತು. ಅಕ್ಕಡಿಯನ್ನರೆಂಬುವ ಜನಾಂಗವು ಅಳಿದು ಹೋದ ನಂತರವೂ ಈ ಪ್ರದೇಶವು ಅಕ್ಕಡ ಪ್ರದೇಶವೆಂದೇ ಗುರುತಿಸಲ್ಪಡುತ್ತಿತ್ತು. ಆದರೆ ದಕ್ಷಿಣ ಪ್ರಾಂತ್ಯಕ್ಕೆ ಸುಮೇರ್ ಎನ್ನುವ ಹೆಸರಿತ್ತು. ಅಲೆಮಾರಿ ಜನಾಂಗಕ್ಕೆ ಸೇರಿದವರಾಗಿದ್ದ ಅಕ್ಕಡಿಯನ್ನರು ಸುಮೇರಿಯನ್ನರ ಸಂಸ್ಕೃತಿಯನ್ನೇ ಸ್ವೀಕರಿಸಿ, ನಂತರ ಬೆಳೆಸಿದರು.

ಸರ್ಗೀಯನ್ ಎಂಬುವವನು ಕ್ರಿ.ಪೂ.೨೩೪೦ರ ವೇಳೆಗೆ ಅಕ್ಕಡವನ್ನು ಆಳುವವನಾಗಿ, ಸುಮೇರಿಗೆ ಸೇರಿದ ಎಲ್ಲ ನಗರಗಳನ್ನು ಒಟ್ಟುಗೂಡಿಸಿ ಇಡೀ ಅಕ್ಕಡ ಪ್ರಾಂತ್ಯವನ್ನು ಒಂದೇ ತೆರನಾದ ಆಡಳಿತ ಕ್ರಮಕ್ಕೆ ಒಳಪಡಿಸಿದನು. ನಿಜವಾದ ಅರ್ಥದಲ್ಲಿ ಹೇಳುವುದಾದರೆ ಇವನೆಯ ಅಕ್ಕಡ ಸಂತತಿಯ ಮೂಲಪುರುಷ. ಸರ್ಗೀಯನ್ನನ ರಾಜಕೀಯ ಬಯಕೆಗಳು ಚುಮೇಕ್ ಮತ್ತು ಅಕ್ಕಡ್ ನಗರಗಳಿಂದ ಮಾತ್ರ ಸೀಮಿತವಾಗಿರಲಿಲ್ಲ. ಇವನ ಆಳ್ವಿಕೆಯ ಅಂತಿಮ ಕಾಲಕ್ಕೆ ಒಂದು ಸಾಮ್ರಾಜ್ಯವನ್ನೇ ಕಟ್ಟಿದ್ದನು. ಈ ಸಾಮ್ರಾಜ್ಯಕ್ಕೆ ಉತ್ತರದ ಮೆಸಪಟೋಮಿಯ ಮತ್ತು ಸಿರಿಯಾ ಮತ್ತು ಪಶ್ಚಿಮ ಇರಾನಿನ ಕೆಲವು ಭಾಗಗಳು ಕೂಡ ಸೇರಿದ್ದವು. ಇವನ ಸಾಮ್ರಾಜ್ಯವು ೫೪೦೦ ಸೈನಿಕರನ್ನು ಒಳಗೊಂಡಿತ್ತಾದರೂ ಆಂತರಿಕ ದಂಗೆಗಳು ಆಗಾಗ ಜರುಗುತ್ತಿದ್ದವು. ಇವನ ಮೊಮ್ಮಗನಾದ ನೊರಮ್-ಸಿನ್ನನ ಆಳ್ವಿಕೆಯ ಕಾಲದಲ್ಲಿ ಮಾತ್ರ ಈ ದಂಗೆಗಳನ್ನು ಹತ್ತಿಕ್ಕಲು ಸಾಧ್ಯವಾಯಿತು.

ಕೇಂದ್ರೀಕೃತ ಆಡಳಿತ ಪದ್ಧತಿಯನ್ನು ಸುಧಾರಿಸಲು ನೊರಮ್-ಸಿನ್ ಪ್ರಾದೇಶಿಕ ಆಳ್ವಿಕೆಯ ಪದ್ಧತಿಯನ್ನು ಜರಿಗೆ ತಂದು, ಪ್ರತಿ ಪ್ರದೇಶದಲ್ಲೂ ರಾಜ ಮನೆತನಕ್ಕೆ ಸೇರಿದ ವ್ಯಕ್ತಿಯನ್ನು ಅಲ್ಲಿ ಆಳ್ವಿಕೆದಾರರನ್ನಾಗಿ ಮಾಡಿದನು. ಕೇಂದ್ರೀಕೃತ ಹೊಸ ಆಡಳಿತ ವ್ಯವಸ್ಥೆಯ ಭಾಷೆಯನ್ನು ಅಕ್ಕಡಿಯನ್ನಾಗಿ ಮಾಡಿದನು.

ಅಕ್ಕಡಿಯನ್ನರ ಕಾಲವು, ಅದರಲ್ಲೂ ನೊರಮ್-ಸಿನ್ನನ ಕಾಲವು ಮೆಸಪಟೋಮಿ ಯಾದ ಇತಿಹಾಸದಲ್ಲಿ ಕಲೆಯ ಉನ್ನತ ಸ್ಥಿತಿಯನ್ನು ಪ್ರತಿನಿಧಿಸುತ್ತದೆ. ತಾಮ್ರದ ಪ್ರತಿಮೆಗಳ ಮೇಲೆ ಮಾಡಿರುವ ಕಲಾಕೃತಿ ಮತ್ತು ದುಂಡಾಕಾರದ ಅಚ್ಚುಗಳ ಮೇಲೆ ಮಾಡಿರುವ ಕಲ್ಲಿನ ಕೆತ್ತನೆಗಳು ಕಲೆಯ ಜಗತ್ತಿನಲ್ಲಿ ಸಾಧಿಸಲಾಗಿದ್ದ ಪರಿಣತಿಯನ್ನು ಸೂಚಿಸುತ್ತವೆ.

ನೊರಮ್-ಸಿನ್ನನು ಮಾಡಿದ ಸುಧಾರಣೆಗಳಿದ್ದಾಗ್ಯೂ ಇವನ ಮಗ ಶರ್-ಕಲಿಶರ್ರ‍ಿ (ಕ್ರಿ.ಪೂ.೨೨೧೭-೨೧೯೩)ಯ ಕಾಲದಲ್ಲಿ ಸಾಮ್ರಾಜ್ಯವು ಮುರಿದು ಬೀಳಲು ಆರಂಭವಾಯಿತು. ಜಗರೂಸ್ ಬೆಟ್ಟಗಳಿಂದ ಬಂದ ಗುತಿಯನ್ ಎನ್ನುವ ಬುಡಕಟ್ಟಿನ ಜನಾಂಗವೊಂದು ಅಕ್ಕಡಿಯನ್ ಸಾಮ್ರಾಜ್ಯದ ಅಧಃಪತನದಲ್ಲಿ ಮುಖ್ಯ ಪಾತ್ರವನ್ನು ವಹಿಸಿತು. ದಂಗೆ ಮತ್ತು ಗಲಭೆಗಳು ನಡೆಯುತ್ತಿದ್ದ ಕಾಲದಲ್ಲಿ ಗುತಿಯನ್ನರು ಫಲವತ್ತಾದ ಉತ್ತರದ ಭಾಗವನ್ನು ಆಕ್ರಮಿಸಿಕೊಂಡರು.

ಗುದಿಯ ಕಾಲ ಮತ್ತು ಉರ್ ಮೂರನೆಯ ಸಂತತಿ

ಕ್ರಿಸ್ತಪೂರ್ವ ೨೨ನೆಯ ಶತಮಾನದುದ್ದಕ್ಕೂ ಇರಾನಿನ ನೈರುತ್ಯದಿಂದ ಬಂದ ಗುದಿಯನ್ನರ ಮತ್ತು ಎಲಮೈಟರ ಕಿರುಕುಳ ಹಿಂಸೆಗಳನ್ನು ಅಕ್ಕಡ ಸಹಿಸಿಕೊಳ್ಳಬೇಕಾಯಿತು. ಆದರೆ ಸುಮೇರರನ್ನು, ಅಕ್ಕಡಕ್ಕೆ ಹೋಲಿಸಿ ನೋಡಿದಾಗ, ಶಾಂತವಾಗಿಯೂ, ಸುಭದ್ರ ವಾಗಿಯೂ, ಇರುವುದರ ಜತೆಗೆ ಪ್ರಗತಿಯನ್ನು ಕೂಡಾ ಸಾಧಿಸಿತ್ತು. ಈ ಕಾಲದಲ್ಲಿ ಲಗಾಶ್ ನಗರ ರಾಜ್ಯವು ತನಗಿದ್ದ ಸ್ವಾತಂತ್ರ್ಯವನ್ನು ಬಳಸಿಕೊಂಡು ಅಭಿವೃದ್ದಿಯನ್ನು ಸಾಧಿಸಿತ್ತು. ಗುದಿಯ(ಕ್ರಿ.ಪೂ.೨೧೦೦) ಎಂಬುವವನು ಲಗಾಶ್‌ನ ಮುಖ್ಯ ಆಡಳಿತ ಗಾರನಾದನು. ಇವನ ನಿಜವಾದ ಎತ್ತರದ ಕಪ್ಪು ಕಲ್ಲಿನಲ್ಲಿ ಕೆತ್ತಿರುವ ಸುಮಾರಷ್ಟು ಶಿಲಾಮೂರ್ತಿಗಳು ಗಿರ್ಸು ಎನ್ನುವ ಪ್ರಾಂತ್ಯದಲ್ಲಿ ದೊರೆತಿವೆ. ಈ ಕಪ್ಪು ಕಲ್ಲನ್ನು ಇಂಡಸ್ ಕಣಿವೆಯಿಂದ ಆಮದು ಮಾಡಿಕೊಂಡಿರುವುದರಿಂದ ಸುಮೇರ್ ಮತ್ತು ಇಂಡಸ್ ನಡುವೆ ಈ ಕಾಲದಲ್ಲಿ ಇದ್ದ ವ್ಯಾಪಾರ ಸಂಬಂಧವನ್ನು ತಿಳಿಸುತ್ತದೆ.

ಗುದಿಯನ್ನು ಲಗಾಶನು ಆಳುತ್ತಿದ್ದಾಗ, ಉರುಕ್‌ನ ಉತು-ಹೆಗಲ್ (ಕ್ರಿ.ಪೂ.೨೧೧೯-೨೧೧೩) ಸುಮೇರಿನಿಂದ ಗುದಿಯನ್ನರನ್ನು ಹೊರಕ್ಕೆ ಅಟ್ಟಿ ಮತ್ತು ಹತ್ತಿರದ ಉರ್ ಪ್ರಾಂತವನ್ನು ಆಕ್ರಮಿಸಿಕೊಳ್ಳುವುದರ ಮೂಲಕ ಸುಮೇರ್ ದೇಶವನ್ನು ಪುನಃ ಒಂದುಗೂಡಿಸಲು ಪ್ರಥಮ ಹೆಜ್ಜೆಯಿಟ್ಟನು. ಇವನ ನಂತರ ಆಳ್ವಿಕೆಗೆ ಬಂದ ಇವನ ರಾಜ್ಯಪಾಲ ಉರ್-ನಮ್ಮು ಎಂಬುವವನು ಸುಮೇರ್ ಮತ್ತು ಅಕ್ಕಡ್ ಅನ್ನು ಒಂದುಗೂಡಿಸುವ ಕಾರ್ಯದಲ್ಲಿ ಯಶಸ್ವಿಯಾದನು. ಈ ಕಾರಣಕ್ಕಾಗಿ ಉತ್ತರದ ಭಾಗದಲ್ಲಿ ವಾಸವಾಗಿದ್ದ ಎಲಮೈಟರನ್ನು ಹೊಡೆದು ಓಡಿಸಿದನು. ಇದರಿಂದಾಗಿ ಉರ್ ಎನ್ನುವ ಮೂರನೆಯ ಮುಖ್ಯನಗರವೊಂದು ಅಸ್ತಿತ್ವಕ್ಕೆ ಬಂತು. ಇದು ಸುಮೇರಿಯನ್ ಇತಿಹಾಸದಲ್ಲಿ ಪ್ರಮುಖವಾದ ನಗರವಾಗಿರುತ್ತದೆ. ಇಲ್ಲಿ ತುಂಬ ದೊಡ್ಡ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಉರ್, ನಿಪ್ಪೂರ್ ಮತ್ತು ಎರಿಡು ಎನ್ನುವ ಸ್ಥಳಗಳಲ್ಲಿ ಉರ್ -ನಮ್ಮು ಮತ್ತು ಇವನ ಉತ್ತರಾಧಿಕಾರಿ ಶುಲ್ಗಿ (ಕ್ರಿ.ಪೂ.೨೦೯೪-೨೦೩೭) ಎಂಬುವವನು ಜಿಗುರಾತ್ ಎನ್ನುವ ಬಹು ಅಂತಸ್ತಿನ ದೇವಸ್ಥಾನದ ಮಂಟಪಗಳನ್ನು ನಿರ್ಮಿಸಿದರು. ಈ ದೇವಸ್ಥಾನಗಳು ಉರ್, ನಿಪ್ಪೂರ್ ಮತ್ತು ಉರುಕ್ ಪ್ರಾಂತ್ಯಗಳಲ್ಲಿ ಸುಮಾರು ೧೫೦೦ ವರ್ಷಗಳಿಗೂ ಹೆಚ್ಚು ಕಾಲ ಉಳಿದಿದ್ದವು.

ಉರ್-ನಮ್ಮು ಅಥವಾ ಶುಲ್ಗಿ, ಇಬ್ಬರಲ್ಲಿ ಒಬ್ಬನು ಮೊದಲಿಗೆ ಕಾನೂನುಗಳ ಪಟ್ಟಿ ಮಾಡಿಸಿದನು. ಪ್ರತೀಕಾರದ ಕಾನೂನು ಅಸ್ತಿತ್ವದಲ್ಲಿರಲಿಲ್ಲ. ದೇಹಕ್ಕೆ ಆದ ಗಾಯ ಮತ್ತು ನೋವುಗಳಿಗೆ ಹಣಕಾಸಿನ ಪರಿಹಾರ ನೀಡಲಾಗುತ್ತಿತ್ತು. ಅಂಗ ಊನ ಮಾಡುವ ಅಥವಾ ಮರಣದಂಡನೆ ಇನ್ನೂ ತಿಳಿದಿರಲಿಲ್ಲ.

ಶುಲ್ಗಿಯು ರಾಜ್ಯವನ್ನು ಕೇಂದ್ರೀಕೃತ ಆಡಳಿತಶಾಹಿಯನ್ನಾಗಿ ಪರಿವರ್ತಿಸಿದನು. ರಾಜ್ಯವನ್ನು ಹಲವು ಪ್ರಾಂತಗಳನ್ನಾಗಿ ವಿಂಗಡಿಸಿ, ಸ್ಥಳೀಯ ಆಳುವ ಮನೆತನಗಳ ಜನರನ್ನು ರಾಜ್ಯಪಾಲರನ್ನಾಗಿ ನೆಯಮಿಸಿದನು. ಈ ರಾಜ್ಯಪಾಲರ ಜತೆಗೆ ಸೈನಿಕ ಮುಖ್ಯಸ್ಥರನ್ನು ನೆಯಮಿಸಿ, ಸೈನಿಕ ಮುಖ್ಯಸ್ಥರ ಸ್ಥಾನಕ್ಕೆ ಸ್ಥಳೀಯರಾಗಿರದ ತನಗೆ ನಿಷ್ಠಾವಂತರಾದ ಹೊರಗಿನವರನ್ನು ನೆಯಮಿಸಿದನು. ಹೀಗೆ ಶುಲ್ಗಿಯು ಸ್ಥಳೀಯ ಮುಖ್ಯರನ್ನು ಸಂತಸದಿಂದಿಡುವುದರ ಜತೆಗೆ ಅವರ ಮೇಲೆ ಹತೋಟಿಯನ್ನೂ ಸಾಧಿಸಿದ್ದನು.

ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲ ರೀತಿಯ ಕಡತಗಳನ್ನು ಕರಾರುವಕ್ಕಾಗಿ ಉಳಿಸಿಕೊಂಡು ಬಂದಿದ್ದನು. ಇವನ ಕಾಲದಲ್ಲಿ ಸಾಮ್ರಾಜ್ಯವನ್ನು ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ವಿಸ್ತರಿಸಿದನು ಮತ್ತು ರಾಜ್ಯದ ಮಧ್ಯಭಾಗವನ್ನು ಕ್ಷೇಮದಿಂದಿಡಲು, ಆಡಳಿತ ಕ್ರಮವನ್ನು ಉನ್ನತವಾಗಿಟ್ಟಿರಲು ಇದನ್ನು ಹಲವಾರು ಪ್ರಾಂತಗಳನ್ನಾಗಿ ರಚಿಸಿದ್ದನು. ಪಶ್ಚಿಮದಿಂದ ಬರುತ್ತಿದ್ದ ಅಲೆಮಾರಿ ಬುಡಕಟ್ಟು ಜನರಿಂದ ಶುಲ್ಗಿಯು ಕಷ್ಟವನ್ನು ಅನುಭವಿಸಬೇಕಾಗಿ ಬಂತು. ಈ ರೀತಿಯ ತೊಂದರೆಗಳಿಂದ ರಾಜ್ಯವನ್ನು ರಕ್ಷಿಸಲು ರಾಜ್ಯದ ವಾಯುವ್ಯ ಗಡಿಯುದ್ದಕ್ಕೂ ಕೋಟೆಯನ್ನು ಕಟ್ಟಿಸಿದ್ದನು. ಈ ಗೋಡೆಯು ಬಹುರೀತಿಯಾಗಿ ಜನರಿಗೆ ತಿಳಿದಿದ್ದು, ‘‘ಬೆಟ್ಟಗಳ ಮುಂದಿನ ಗೋಡೆ’’ಯೆಂದು ಪ್ರಸಿದ್ಧವಾಗಿತ್ತು.

ಶುಲ್ಗಿಯ ನಂತರ ಇವನ ಮಗ ೯ ವರ್ಷಗಳ ಕಾಲ ರಾಜ್ಯಭಾರ ಮಾಡಿದನು. ನಂತರ ಇವನ ಚಿಕ್ಕ ತಮ್ಮ ಶೂಶಿನ್ (ಕ್ರಿ.ಪೂ.೨೦೩೭-೨೦೨೯) ಎಂಬುವವನು ರಾಜ್ಯಭಾರ ಮಾಡಿದನು. ಅನಂತರ ಇವನ ಕಿರಿಯ ಮಗ ಇಬ್ಬಿ-ಸಿನ್ (ಕ್ರಿ.ಪೂ.೨೦೨೮-೨೦೦೪) ಎಂಬುವವನು ಅಧಿಕಾರಕ್ಕೆ ಬಂದನು. ಇವನ ಆಳ್ವಿಕೆಯ ೫ನೆಯ ವರ್ಷದಲ್ಲಿ ‘‘ಮರ್ದು’’ ಎನ್ನುವ ಬುಡಕಟ್ಟಿನ ಜನರಿಂದ ರಾಜ್ಯವು ಅನಿರೀಕ್ಷಿತವಾದ ಅನಾಹುತವನ್ನು ಅನುಭವಿಸಿತು. ಇಬ್ಬಿ-ಸಿನ್ನನು ಸುಮಾರು ೨೪ ವರ್ಷಗಳ ಕಾಲ ಆಳ್ವಿಕೆ ನಡೆಸಿದನಾದರೂ, ಇವನ ಆಳ್ವಿಕೆಯ ಐದನೆಯ ವರ್ಷದ ನಂತರ ಉರ್ ಪ್ರಾಂತಕ್ಕಿಂತ ವಿಸ್ತಾರವಾದ ರಾಜ್ಯವನ್ನೇನೂ ಆಳಲಿಲ್ಲ.

ಇಬ್ಬಿ-ಸಿನ್ನನು ತನ್ನ ೧೨ ಅಥವಾ ೧೩ನೆಯ ವರ್ಷದ ಆಳ್ವಿಕೆಯನ್ನು ನಡೆಸುತ್ತಿದ್ದಾಗ ಇವನ ಸಂಸ್ಥಾನಿಕ ಇಶ್ ಬಿ-ಈರ ಎಂಬುವವನು ಇರಿನ್ ಎಂಬ ಪ್ರಾಂತ್ಯವನ್ನು ಕ್ರಿ.ಪೂ.೨೦೧೭ರಲ್ಲಿ ತನ್ನ ಅಧಿಕಾರಕ್ಕೆ ವಶಪಡಿಸಿಕೊಂಡನು. ಸುಮಾರು ಕ್ರಿ.ಪೂ.೨೦೦೪ರ ವೇಳೆಗೆ ಈಲಂ ಎನ್ನುವವರು ಇಬ್ಬಿ-ಸಿನ್ನನ ಮೇಲೆ ದಾಳಿ ಮಾಡಿ, ಅವನನ್ನು ಸೆರೆ ಹಿಡಿದನು. ಇದರ ಜತೆಗೆ ಇಶ್ ಬಿ-ಈರ ಎಂಬುವವರ ಆಳ್ವಿಕೆಯಿಂದ ಸುಮೇರ್ ರಾಜ್ಯವು ಮತ್ತೊಮ್ಮೆ ಕೊನೆಯನ್ನು ಕಂಡಿತು.

ಬೆಬಿಲೋನಿಯ

ಉರ್ ಪ್ರಾಂತ್ಯವನ್ನು ನಾಶಪಡಿಸಿದವರ ಮೇಲೆ ಇರಿನ್ ರಾಜ್ಯದ ಇಶ್ ಬಿ-ಈರ ಸೇಡನ್ನು ತೀರಿಸಿಕೊಳ್ಳುವುದರ ಜತೆಗೆ, ಸುಮೇರ್ ಮತ್ತು ಅಕ್ಕಡನ್ನು ಆಕ್ರಮಿಸಿಕೊಂಡಿದ್ದ ಎಲಮೈಟ್ ಎನ್ನುವ ಬುಡಕಟ್ಟಿನ ಜನರನ್ನು ಅಲ್ಲಿಂದ ಹೊರಗೆ ಓಡಿಸಿದನು. ಎಲಮೈಟರನ್ನು ರಾಜ್ಯದಿಂದ ಹೊರಹಾಕಿದ ನಂತರ ದಕ್ಷಿಣ-ಮೆಕ್ಕಲು ಪ್ರದೇಶವು ಸುಮಾರು ಒಂದು ನೂರುವರ್ಷಗಳ ಕಾಲ ಯಾರಿಂದಲೂ ತೊಂದರೆಗೆ ಒಳಗಾಗದೆ ಕ್ಷೇಮವಾಗಿದ್ದಿತು. ಈ ಕಾಲವು ಇರಿನ್-ಲಾರ್ಸನ ಆಳ್ವಿಕೆಯ ಮೊದಲನೆಯ ಹಂತವಾಗಿತ್ತು. ಆದರೆ ಕ್ರಿ.ಪೂ.ಸುಮಾರು ೨೦ನೆಯ ಶತಮಾನದ ವೇಳೆಗೆ ಅಮೋರೈಟ್ಸ್ ಎನ್ನುವ ಜನರು ವಾಯುವ್ಯ ದಿಕ್ಕನ್ನು ಆವರಿಸಿಕೊಳ್ಳುತ್ತ ಬಂದುದರ ಪರಿಣಾಮವಾಗಿ ಸುಮಾರು ನಗರಗಳು ಅವರ ಆಡಳಿತಕ್ಕೆ ಒಳಪಟ್ಟವು.

ಕ್ರಿ.ಪೂ.೧೯ನೆಯ ಶತಮಾನದ ವೇಳೆಗೆ ಮೆಸಪಟೋಮಿಯಾದ ಪ್ರಸ್ಥಭೂಮಿಯಲ್ಲಿ ಸುಮಾರು ರಾಜ್ಯಗಳು ಅಸ್ತಿತ್ವಕ್ಕೆ ಬಂದಿದ್ದವು. ಅವುಗಳಲ್ಲಿ ಪ್ರಮುಖವಾದುವುಗಳೆಂದರೆ- ಇಸಿನ್, ಲಾಸಕ, ಉರುಕ್ ಮತ್ತು ಬೆಬಿಲೋನಿಯ. ಈ ರಾಜ್ಯಗಳಲ್ಲಿ ಅಮೋರೈಟ್ ಸಂತತಿಯ ರಾಜರೇ ಆಳ್ವಿಕೆ ನಡೆಸುತ್ತಿದ್ದರೂ, ಮೆಸಪಟೋಮಿಯ ಹಳೆಯ ಸಂಪ್ರದಾಯ, ಸಂಸ್ಕೃತಿಗಳನ್ನು ಅನುಸರಿಸುತ್ತಿದ್ದರು.

ಕ್ರಿ.ಪೂ.೧೮ನೆಯ ಶತಮಾನದ ಆರಂಭದ ಕಾಲಕ್ಕೆ ದಕ್ಷಿಣ ಮೆಸಪಟೋಮಿಯಾದ ರಾಜಕೀಯ ವ್ಯವಸ್ಥೆ ತುಂಬ ಸರಳವಾಗಿತ್ತು. ಕ್ರಿ.ಪೂ.೧೯೧೪ರಲ್ಲಿ ಲಾರ್ಸದ ಒಂದನೆಯ ಹಿಸಿನ್ (ಕ್ರಿ.ಪೂ.೧೮೨೨-೧೭೬೩) ಎಂಬುವವನು ಇನ್ ನಗರ ರಾಜ್ಯವನ್ನು (ಕ್ರಿ.ಪೂ. ೧೭೯೪)ರಲ್ಲಿ ಗೆದ್ದುಕೊಂಡ ನಂತರ, ದಕ್ಷಿಣದಲ್ಲಿ ಲಾರ್ಸ್ ನಗರರಾಜ್ಯ ಮತ್ತು ಉತ್ತರದಲ್ಲಿ ಬೆಬಿಲೋನಿಯ ನಗರ-ರಾಜ್ಯವು ಪ್ರಸ್ಥಭೂಮಿಯ ಮೇಲೆ ಅಧಿಕಾರ ಸ್ಥಾಪಿಸಲು ಹೊಡೆದಾಟ ನಡೆಸುತ್ತಿದ್ದವು. ಇದೇ ಕಾಲಕ್ಕೆ ಸರಿಯಾಗಿ ಅಮ್ಮೋರೈಟ್‌ರ ಒಂದನೆಯ ಶಂಸಿ ಆದಬನು (ಕ್ರಿ.ಪೂ.೧೮೧೩-೧೭೮೧) ಉತ್ತರ ಮೆಸಪಟೋಮಿಯಾದಲ್ಲಿ ಯುಫ್ರಟೀಸ್ ನದಿಯಿಂದಿಡಿದು ಜಗ್ರೋಸ್ ಬೆಟ್ಟಗಳ ತನಕ ತನ್ನ ಅಧಿಕಾರವನ್ನು ಸ್ಥಾಪಿಸಿದನು.

ಪ್ರಾಚೀನ ಬೆಬಿಲೋನಿಯದ ಕಾಲ

ಬೆಬಿಲೋನಿಯಾದ ಇತಿಹಾಸದ ಪ್ರಾರಂಭವನ್ನು ಸಾಂಪ್ರದಾಯಿಕವಾಗಿ ಉರ್‌ನ ಮೂರನೆಯ ಸಂತತಿಯ ಅವನತಿಯ ಕಾಲಕ್ಕೆ ಗುರುತಿಸಲಾಗಿದೆ. ಉರ್‌ನ ಮೂರನೆಯ ಸಂತತಿಯವರ ಆಳ್ವಿಕೆಯು ಮುಗಿದ ನಂತರ ದೇಶದ ಉದ್ದಗಲಕ್ಕೆ ಸ್ಥಳೀಯ ಅಮ್ಮೋರೈಟ್ ಸಂತತಿಯು ಹುಟ್ಟಿಕೊಂಡಿತ್ತು. ಕ್ರಿ.ಪೂ.೧೮ನೆಯ ಶತಮಾನದ ಮೊದಲ ಅರ್ಧ ಕಾಲದಲ್ಲಿ ಶಂಸಿ-ಆದಬನ ಸಾವಿನೊಂದಿಗೆ ಅವನ ರಾಜ್ಯಕ್ರಮವು ಅವನತಿ ಹೊಂದಿ, ದಕ್ಷಿಣ ಮೆಸಪಟೋಮಿಯಾದ ಎಲ್ಲ ಪ್ರಾಂತಗಳು ಬೆಬಿಲೋನಿಯ ರಾಜ್ಯಕ್ಕೆ ಸೇರಲ್ಪಟ್ಟವು. ಹೀಗೆ ಎಲ್ಲ ಪ್ರಾಂತಗಳನ್ನು ಒಂದುಗೂಡಿಸಿ ಬೆಬಿಲೋನಿಯ ಸಾಮ್ರಾಜ್ಯವನ್ನು ಕಟ್ಟಿದ ದಕ್ಷ ಆಡಳಿತಗಾರ ಮತ್ತು ಮಹಾ ಪರಾಕ್ರಮಶಾಲಿ ದೊರೆ ಹಮುರಾಬಿ (ಕ್ರಿ.ಪೂ.೧೭೯೨-೧೭೫೦). ಮೆಸಪಟೋಮಿಯಾದ ರಾಜನಾದ ಕೂಡಲೇ ಹಮುರಾಬಿಯು ಬೆಬಿಲೋನನ್ನು ತನ್ನ ಮುಖ್ಯಗುರಿಯನ್ನಾಗಿಟ್ಟುಕೊಂಡನು. ಲಾರ್ಸ (೧೭೬೩), ಈಲಂ(೧೭೬೪), ಮರಿ(೧೭೬೦-೧೭೫೭) ಮತ್ತು ಎಶ್ನುನ್ನ(೧೭೫೫)ಗಳ ಮೇಲೆ ಸುಮಾರು ಬಾರಿ ಯುದ್ಧವನ್ನು ಮಾಡಿದನು.

೧೫,೦೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ದೊರೆತಿರುವ ಮಣ್ಣಿನ ಹಲಗೆಗಳು ಹಮುರಾಬಿಯ ಕಾಲದ ಇತಿಹಾಸವನ್ನು ಪುನಾರಚಿಸಲು ಇರುವ ಬಹುಮುಖ್ಯ ಪ್ರಾಥಮಿಕ ಆಧಾರವಾಗಿವೆ.

ಬೆಬಿಲೋನಿಯಾದ ಅತಿಮುಖ್ಯವಾದ ಪ್ರಾಚ್ಯವಸ್ತು ಎಂದರೆ ಹಮುರಾಬಿಯ ಶಾಸನಗಳನ್ನು ಕೆತ್ತಲಾಗಿರುವ ಹರಳುಗಳುಳ್ಳ ಕಪ್ಪುಬಣ್ನದ ಪಾರದರ್ಶಿಕೆಯ ಕಲ್ಲು. ಇರಾನಿನ ಸುಸ ಎಂಬುವಲ್ಲಿ ಪಾಳು ಬಿದ್ದಿದ್ದ ಅವಶೇಷದಲ್ಲಿ ಇದು ಸಿಕ್ಕಿದೆ. ಈ ಕಲ್ಲನ್ನು ಕ್ರಿ.ಪೂ. ೧೨ನೆಯ ಶತಮಾನದಲ್ಲಿ ನಡೆದ ಯುದ್ಧವೊಂದರ ಫಲಕವನ್ನಾಗಿ ಸ್ವೀಕರಿಸಲಾಗಿತ್ತು. ಈ ಶಿಲಾಸ್ತಂಭವು ಸುಮಾರು ೭.೫ ಅಡಿ (೨.೩ಮೀ. ಎತ್ತರವಾಗಿದ್ದು) ರಾಜ್ಯವನ್ನೆಲ್ಲ ಒಂದುಗೂಡಿಸಿದ ನಂತರ ಬೆಬಿಲೋನಿಯದಲ್ಲಿ ಕೆತ್ತಿಸಲಾಗಿದೆ. ಈ ಶಿಲಾಶಾಸನದಲ್ಲಿನ ಪ್ರಸ್ತಾವನೆಯು ರಾಜ್ಯವು ತನ್ನ ಉತ್ತುಂಗ ಸ್ಥಿತಿಯಲ್ಲಿದ್ದಾಗಿನ ಕಾಲವನ್ನು ಸೂಚಿಸುತ್ತದೆ. ಈ ಕಾಲದಲ್ಲಿ ಹಮುರಾಬಿಯ ಅಧಿಕಾರವು ಟೈಗ್ರಿಸ್ ನದಿಯಾಚೆಗಿನ ನಿನೆವೆಲ್ ಮತ್ತು ಯುಫ್ರೆಟಿಸ್ ನದಿಯಾಚೆಗಿನ ಟುಟ್ಟುಲ್ ಹಾಗೂ ಯುಫ್ರಟಿಸ್ ಮತ್ತು ಬಾಲಿಹ್ ನದಿಗಳ ಸಂಗಮದಿಂದಾಚೆಗಿನ ಪ್ರಾಂತಗಳಿಗೆ ಹಬ್ಬಿತ್ತು. ಶಿಲಾಶಾಸನದ ಪ್ರಸ್ತಾವನೆಯು ಬೆಬಿಲೋನಿಯ ಉನ್ನತ ಸ್ಥಿತಿಯಲ್ಲಿರಲು ಸಹಕಾರಿಯಾಗಿದ್ದ ಧಾರ್ಮಿಕ ಸ್ಥಿತಿಯನ್ನು ತಿಳಿಸುತ್ತದೆ; ಮಹಾದೇವತೆಗಳಾದ ಅನು ಮತ್ತು ಮನು ಎಂಟಿಲ್ ಎನ್ನುವವರುಗಳು ಮನುಕುಲಕ್ಕೆ ಸಂಬಂಧಿಸಿದ ಎಂಟಿಲ್‌ನ ಎಲ್ಲ ಅಧಿಕಾರಗಳನ್ನು ಬಿಬಿಲೋನಿಯಾದ ಅತಿಮುಖ್ಯ ದೇವತೆಯಾದ ಮರ್ಡುಕ್‌ಗೆ ಒಪ್ಪಿಸಿದ್ದವು.

ಆರಂಭದ ಶಾಸನ ಸಂಹಿತೆಗಳು ಉರ್, ಐಸಿನ್ ಮತ್ತು ಎಶ್ನುನ್ನ ಎಂಬ ರಾಜ್ಯಗಳಿಂದ ಬಂದಿದ್ದವು. ಈ ತೆರನಾದ ಸಂಹಿತೆಗಳು ದಿನನಿತ್ಯದ ನ್ಯಾಯಪಾಲನೆಗಿಂತ ಮಿಗಿಲಾಗಿ ಒಂದು ಆದರ್ಶಪ್ರಾಯವಾದ ಸಮಾಜದ ಕೈಗನ್ನಡಿಯಂತಿವೆ. ಹಮುರಾಬಿ ಶಾಸನದ ಪ್ರತಿಗಳನ್ನು ರಾಜ್ಯದ ಮುಖ್ಯ ನಗರಗಳಲ್ಲಿ ಇಡಲಾಗಿತ್ತು. ಹೀಗೆ ಹಮುರಾಬಿ ಶಾಸನವು ಅತಿ ಪ್ರಾಚೀನವಾದ ಮತ್ತು ಸುದೀರ್ಘವಾದ ಶಾಸನಗಳ ಸಂಹಿತೆಯಾಗಿದ್ದು, ಅಂದಿನ ಸಮಾಜದ ಕೈಗನ್ನಡಿಯಂತಿದೆ.

ಹಮುರಾಬಿಯ ನಂತರ ಅವನ ತುಂಬಾ ದುರ್ಬಲನಾದ ಮಗ ಸಂಸುಯಿಲೂನನು ಪಟ್ಟಕ್ಕೆ ಬಂದನು. ಇವನು ನಿಸರ್ಗದತ್ತವಾದ ಮತ್ತು ಕಠಿನ ರಾಜಕೀಯವಾದ ಸಮಸ್ಯೆಗಳನ್ನು ತನ್ನ ಕಾಲದಲ್ಲಿ ಎದುರಿಸಬೇಕಾಗಿ ಬಂತು. ಯುಫ್ರೆಟಿಸ್ ನದಿಯ ಪಥವು ಪಶ್ಚಿಮ ದಿಕ್ಕಿಗೆ ಬದಲಾದ ಕಾರಣದಿಂದಾಗಿ ಜನರು ತುಂಬ ಮುಖ್ಯವಾದ ದಕ್ಷಿಣದ ಮತ್ತು ಮಧ್ಯಪ್ರಸ್ಥಭೂಮಿಯಲ್ಲಿನ ನಗರಗಳನ್ನು ತೊರೆಯಬೇಕಾಯಿತು.

ಹದಿನೆಯಳನೆಯ ಶತಮಾನದುದ್ದಕ್ಕೂ ಬೆಬಿಲೋನಿಯ ಸಾಮ್ರಾಜ್ಯವು ದಿನೆಯ ದಿನೆಯ ಕ್ಷೀಣವಾಗುತ್ತಿದ್ದರೂ ಉಳಿದಿತ್ತು. ಕ್ರಮೇಣ ಹಿಟ್ಟೈಟ್‌ನ ರಾಜ ಒಂದನೆಯ ಮುರ್ಸಿಲಿಸ್ ಕ್ರಿ.ಪೂ.೧೫೯೫ರಲ್ಲಿ ಬೆಬಿಲೋನಿನ ಮೇಲೆ ದಾಳಿ ಮಾಡಿ ತನ್ನ ಆಳ್ವಿಕೆ ಆರಂಭಿಸಿದನು. ಸೀಲಾಂಡ್ ಎನ್ನುವ ಸಂತತಿಗೆ ಸೇರಿದ ರಾಜರು ದಕ್ಷಿಣದ ಅಂಚಿನಲ್ಲಿ ಹುಟ್ಟಿಕೊಂಡು, ಕ್ರಿ.ಪೂ.೧೮ನೆಯ ಶತಮಾನದ ಅಂತ್ಯಭಾಗದಲ್ಲಿ ಸ್ವಲ್ಪ ಕಾಲದವರೆಗೆ ಬೆಬಿಲೋನನ್ನು ಉತ್ತರದಲ್ಲಿ ನಿಪ್ಪೂರ್‌ವರೆಗೆ ಆಳಿದರು. ಸುಮಾರು ರಾಜರುಗಳು ಆಶ್ಚರ್ಯಪಡುವಂತೆ ಸುಮೇರಿಯಾದ ಹೆಸರುಗಳನ್ನು ಹೊಂದಿದ್ದು, ಹಿಟ್ಟೈಟ್ ಸಂತತಿಯವರು ಬೆಬಿಲೋನನ್ನು ಧಾಳಿ ಮಾಡಿದ ನಂತರ ಸ್ವಲ್ಪಕಾಲ ಬೆಬಿಲೋನನ್ನು ಆಳಿರುವಂತೆ ಕಾಣಿಸುತ್ತದೆ. ಹಿಟ್ಟೈಟ್ ಸಂತತಿಯವರು ಬೆಬಿಲೋನನ್ನು ದಾಳಿ ಮಾಡಿದ ನಂತರ ಸುಮಾರು ೧೫೦ ವರ್ಷಗಳ ಕಾಲ ಅವರ ರಾಜ್ಯಕ್ಕೆ ಮತ್ತು ಬೆಬಿಲೋನಿಗೆ ಏನಾಯಿತೆಂಬುದರ ಯಾವ ಸುದ್ದಿಯೂ ತಿಳಿದಿಲ್ಲ.