ಒಂದೇ ಒಂದೇ, ನಾವೆಲ್ಲರು ಒಂದೇ
ಈ ದೇಶದೊಳೆಲ್ಲಿದ್ದರು
ಭಾರತ ನಮಗೊಂದೇ ||

ಹಲವು ಕೊಂಬೆಗಳ ಚಾಚಿಕೊಂಡರೂ
ಮರಕ್ಕೆ ಬುಡ ಒಂದೇ
ಸಾವಿರ ನದಿಗಳು ಹೇಗೆ ಹರಿದರೂ
ಕೂಡುವ ಕಡಲೊಂದೇ.

ಇರುಳಿಗೆ ಸಾಸಿರ ಚಿಕ್ಕೆಗಳಿದ್ದರು
ಹಗಲಿಗೆ ರವಿ ಒಂದೇ
ಅಗಣಿತ ಗ್ರಹಮಂಡಲಗಳ ಚಲನೆಗೆ
ಆಕಾಶವು ಒಂದೇ.

ನೂರು ಬಗೆಯ ಆರಾಧನೆಯಿದ್ದರು
ದೇವರು ಎಲ್ಲರಿಗೊಂದೇ
ಹಲವು ಬಣ್ಣಗಳ ಹಸುಗಳು ಕರೆಯುವ
ಹಾಲಿನ ಬಿಳುಪೊಂದೇ.

ನಡೆ-ನುಡಿ ಭೇದಗಳೆಷ್ಟೇ ಇದ್ದರು
ಬದುಕುವ ಜನ ಒಂದೇ
ನೆಳಲು-ಬೆಳಕುಗಳ ರೆಕ್ಕೆಯ ಬಿಚ್ಚುತ
ಹಾರಾಡುವ ಧ್ವಜ ಒಂದೇ.