ಸೂಚನೆ ||
ಧರ್ಮಜಂ ಯೌವನಾಶ್ವನನಿದಿರ್ಗೊಂಡು ನೃಪ |
ಧರ್ಮದಿಂ ಕೃಷ್ಣನಂ ದ್ವಾರಕೆಗೆ ಕಳುಹಿ ವರ |
ಧರ್ಮಗಳಂ  ಕೇಳ್ದನೊಲವಿಂದೆ ಸಲೆ ಬಾದರಾಯಣ ಮುನೀಶ್ವರನೊಳು ||

ಸತ್ಸಂಗತಿಯನಾಲಿಸಿನ್ನೆಲೆ ಮಹೀಶ್ವರ ಮ |
ರುತ್ಸುತನ ಮನೆಗೆ ಬೀಳ್ಕೊಟ್ಟನೊಲವಿಂ ಭಕ್ತ |
ವತ್ಸಲಂ ಬಳಿಕಿತ್ತಲರಸಾಳ್ಗಳಾ ಯುಧಿಷ್ಠಿರಭೂಮಿಪತಿಗೆ ಬಂದು ||
ತ್ವತ್ಸವಿಪದ ಸೇವೆಗೋಸುಗಂ ತನ್ನ ಸಂ |
ಪತ್ಸಹಿತಮಾ ಯೌವನಾಶ್ವ ಧರಣೀಂದ್ರನ |
ತ್ಯುತ್ಸವದೊಳೈತಂದನಿದೆ ನಿನ್ನ ಪಟ್ಟಣದ ಬಾಹ್ಯದೇಶದೊಳೆಂದರು ||೧||

ಉಚಿತಮಂ ತೆಗೆದವರ್ಗಿತ್ತು ಬಳಿಕನುಜ ಮಂ |
ತ್ರಿ ಚಮೂಪ ಸಾಮಂತ ಗುರು ಪುರೊಹಿತ ಸುಭಟ |
ನಿಚಯಮಂ ಕರೆಸಿಕೊಂಡಸುರಾರಿಸಹಿತಖಿಳ ಚತುರಂಗಸೈನ್ಯದೊಡನೆ ||
ಅಚಲನಿಭದಿಭದ ಮೇಲಡರಿ ಸಿಂಗರದ ಗುರು |
ಕುಚೆಯರರಸಿಯ ಕೂಡೆ ಬರಲಿ ಗುಡಿತೋರಣದ |
ರಚನೆ ಮೆರೆಯಲಿ ಪುರದೊಳಿನುತೆ ಪೊರಮಟ್ಟನವನಿಪನೊಸಗೆವರೆ ಮಸಗಲು ||೨||

ಸಿಂಗರದೊಳಾ ಹಸ್ತಿನಾವತಿಯೊಳಿರ್ದು ಜನ |
ಜಂಗುಳಿ ಮಹೀಪಾಲನೊಡನೆ ಪೊರಮಟ್ಟ ಬಳಿ |
ಕಂಗನೆಯರಾ ದ್ರುಪದಸುತೆಯ ಪುನ್ನಂದಳದ ಕೂಡೆ ಸಂದಣಿಸಿ ಬರಲು ||
ಮಂಗಳಧ್ಯಾನದಿಂದಲಿವ ಭೇರಿಗಳ ನಾ |
ದಂಗಳೈದಿದುವಷ್ಟದಿಕ್ಪಾಲಕರ ಪಟ್ಟ |
ಣಂಗಳ್ಗೆ ಪಾಂಡವರ ಪುರದ ಸಂಭ್ರಮವನೆಚ್ಚರಿಸಿ ನಾಚಿಸುವಂತಿರೆ ||೩||

ಭದ್ರಗಜಕಂಧರದೊಳರಸನೆಸೆದಿರ್ದಂ ಲ |
ಸದ್ರತ್ನಭೂಷಣಂಗಳ ಕಾಂತಿಯಂ ಮೂಡ |
ಣದ್ರಿಯೊಳ್ ತೊಳಗುವೆನೇಸರೆನೆ ಬಳಿಕಿದಿರ್ಗೊಂಬ ಹರ್ಷವನೆ ಕಂಡು ||
ಭದ್ರಾವತೀಶ್ವರನೆನಿಪ ಯೌವನಾಶ್ವಂ ಜ |
ಗದ್ರಾಜನಾದ ಪಾಂಡುವನೆಡೆಗೆ ಬಂದಂ ಸು |
ಹೃದ್ರಾಗದಿಂ ತನಗೆ ಭೀಮನಭಿಮುಖನಾಗಿ ಬರಲಾತನೊಡನೆ ನಗುತೆ ||೪||

ವಾಯುಸುತನೊಡನೆ ತಾನಿರ್ದ ಪೊರೆಗಾಗಿ ಬ |
ರ್ಪಾಯೌವನಾಶ್ವನಂ ಕಂಡಿಭವನಿಳಿದು ನಿಂ |
ದಾ ಯುಧಿಷ್ಠಿರನರೇಶ್ವರನಡಿಗೆ ಕಾಣಿಕೆಯನಿತ್ತೆರಗಿ ಕೈಮುಗಿಯಲು ||
ಪ್ರೀಯದಿಂದಾತನಂ ತೆಗೆದು ತಕ್ಕೈಸಿ ಮಾ |
ದ್ರೇಯ ಭೀಮಾರ್ಜುನರ ಸಮವೆನಗೆ ನೀನದರಿ |
ನೀ ಯಾದವೇಂದ್ರನಂ ಭಾವಿಸೆಂದರಸಂ ಮುಕುಂದನಂ ತೋರಿಸಿದನು ||೫||

ಬಳಿಕವಂ ಕಂಡನುತ್ಪಲದಳಶ್ಯಾಮ ಕೋ |
ಮಲತರಶರೀರನಂ ನವರತ್ನ ಮಕುಟ ಕುಂ |
ಡಲ ಕನಕ ಕೇಯೂರಹಾರನಂ ಪ್ರಕಟ ಕಟಿಸೂತ್ರ ಮಣಿಮಂಜೀರನಂ ||
ವಿಲಸಿತ ಶ್ರೀವತ್ಸ ಕೌಸ್ತುಭ ಶುಭೋದರನಂ |
ಲಲಿತ ಪೀತಾಂಬರೋಜ್ಜ್ವಲದಲಂಕಾರನಂ |
ಜಲಜಸಮ ಚರಣಯುಗ ಮೋಹನಾಕಾರನಂ ಲಕ್ಷ್ಮೀಮನೋಹಾರನಂ ||೬||

ಅಚ್ಚ್ಯುತನ ಮಂಗಳ ಶ್ರೀಮೂರ್ತಿ ಕಣ್ಮನವ |
ನೊಚ್ಚತಂಗೊಳಲೇಳ್ವ ರೋಮಪುಳಕದೊಳೆ ಮೈ |
ವೆಚ್ಚಿದತಿಹರ್ಷದಿಂದಜ ಭವ ಸುರೇಂದ್ರ ಮುನಿಮುಖ್ಯರ್ಗೆ ಗೋಚರಿಸದ ||
ಸಚ್ಚಿದಾನಂದಮಯನಂ ಕಂಡುದಿದು ಜಗದೊ |
ಳಚ್ಚರಿಯಲಾ ನರರ್ಗೆ ನುತಾನೃಪಾಲಕಂ |
ಬೆಚ್ಚನಸುರಾಂತಕನ ಪದಕೆ ಪೊಸಮಿಸುನಿವೆಳಗೆಸೆವ ಮಕುಟದ ನೊಸಲನು ||೭||

ಕಮಲದಳನಯನ ಕಾಳಿಯಮಥನ ಕಿಸಲಯೋ |
ಪಮಚರಣ ಕೀಸಪತಿಸೇವ್ಯ ಕುಜಹರ ಕೂರ್ಮ |
ಸಮಸತ್ಕಪೋಲ ಕೇಯೂರಧರ ಕೈರವಶ್ಯಾಮ ಕೋಕನದಗೃಹೆಯ ||
ರಮಣ ಕೌಸ್ತುಭಶೋಭ ಕಂಬುಚಕ್ರಗದಾಬ್ಜ |
ವಿಮಲಕರ ಕಸ್ತೂರಿತಿಲಕ ಕಾವುದೆಂ |
ದಮಿತಪ್ರಬಾಮೂರ್ತಿಯಂ ನುತಿಸಲಾತನಂ ಹರಿ ನೆಗಪಿದಂ ಕೃಪೆಯೊಳು ||೮||

ಎದ್ದಾ ನೃಪಂ ಕೃತಾಂಜಲಿಪುಟಾವನತನಾ |
ಗಿದ್ದಾಗ ಭೀಮನಂ ನೋಡಿ ವಿಷಯಂಗಳಂ |
ಗೆದ್ದ ನಿರ್ಮಲತಪಸ್ವಿಗಳ ನಿಶ್ಚಲಹೃದಯಮಧ್ಯ ಪಂಕೇಜಾತದಾ ||
ಗದ್ದುಗೆಯೊಳೆಸೆವ ಚಿದ್ರೂಪನಂ ಜಗವರಿಯೆ |
ದೊದ್ದದೆಯೊಳ್ ಕೂಡಿ ತೇರ್ಗುದುರೆಯಂ ಪೊಡೆವುದಂ |
ಪೊದ್ದಿಸಿದ ಪಾರ್ಥನಾರಿದರೊಳೆನಲರ್ಜುನಂ ಬಂದಾತನಂ ಕಂಡನು ||೯||

ಗುಣದೊಳಾ ಯೌವನಾಶ್ವಕ್ಷಿತಿಪನೆರಗಿ ಫಲು |
ಗುಣನ ಮೊಗಮಂ ನೋಡಿ ನೀನಲಾ ತಿಳಿಯಲ್ ತ್ರಿ |
ಗುಣದೊಳೊಂದದ ಘನಶ್ರುತಿಶಿರೋಮಣಿಯನಿಳೆಯರಿಯೆ ನಿಜಭಕ್ತಿಯೆಂಬ ||
ಗುಣದಿಂದೆ ಬಂಧಿಸಿದೆ ಕೋವಿದನದೇಂ ಬಯಲ |
ಗುಣವಿರ್ದರಕಟ ಯೋಗಿಗಳೆಂದು ನರನ ಸ |
ದ್ಗುಣವನುರೆ ಕೊಂಡಾಡಿ ಬಳಿಕ ಸಹದೇವ ನಕುಲಾದ್ಯರಂ ಮನ್ನಿಸಿದನು ||೧೦||

ಬಳಿಕ ಹೊಳೆಹೊಳೆವ ಮಿಂಚಿನ ಗೊಂಚಲೆತ್ತಲುಂ |
ಬಳಸಿ ಕಂಗೊಳಿಸುತಿರಲಡಿಗಡಿಗೆ ಘುಡುಘುಡಿಸಿ |
ಮೊಳಗುವ ಸಿತಾಭ್ರಮಂ ಕುಲಗಿರಿತಟಪ್ರದೇಶಕ್ಕೆ ಸಾರ್ಚುವನಿಲನಂತೆ ||
ಲಲಿತ ಕನಕಾಭರಣಗಳ ಕಾಂತಿಯಿಂ ಸುಗತಿ |
ಗುಲಿವ ಹೊಂಗೆಜ್ಜೆಗಳ ರಭಸದಿಂದೆಸೆವ ನಿ |
ರ‍್ಮಲವಾಜಿಯಂ ಸುವೇಗಂ ತಂದು ನಿಲಿಸಿದಂ ಧರ್ಮಜನ ಸಮ್ಮುಖದೊಳು ||೧೧||

ತುರಗಮೇಧಂಗೆಯ್ಯದೊಂದಿನಿಸು ಕುಂದೆನ್ನ |
ಸಿರದ ಮೇಲಿದೆ ತಾನಿದಂ ತಾಳಲಾರೆ ನೀಂ |
ಪರಿಹರಿಪುದೆಂದು ನಿಜಕೀರ್ತಿ ಹಯರೂಪದಿಂ ಭೂಪನಂ ಬೇಡಿಕೊಳಲು ||
ಪೊರೆಗೆ ಬಮದವೊಲೇಕಕರ್ಣದಸಿತತ್ವದಿಂ |
ಪರಿಶೋಭಿಸುವ ಶುಭ್ರವಾಜಿಯಂ ಕಾಣುತ |
ಚ್ಚರಿವಟ್ಟು ಸಕಲಜನಮೈತಂದು ನೋಡುತಿರ್ದುದು ಬಳಸಿ ದೆಸೆದೆಸೆಯೊಳು ||೧೨||

ಕೊಂಡುಬಂದಾ ಹಯವನೊಪ್ಪಿಸಿ ಯುಧಿಷ್ಠಿರನ |
ಕಂಡಂ ಸುವೇಗನತಿಭಕ್ತಿಯಿಂದೆರಗಿದಂ |
ಪುಂಡರೀಕಾಕ್ಷಂಗೆ ಬಳಿಕರ್ಜುನಾದಿಗಳ್ಗುಚಿತದಿಂ ವಂದಿಸಿದನು |
ಬಂಡಿಪೇರೆತ್ತೊಟ್ಟೆಗಳ ಮೇಲೆ ತಂದಖಿಳ |
ಭಂಡಾರಮಂ ಕರಿರತಾಶ್ವಮಂ ನಾರಿಯರ |
ತಂಡಮಂ ಗೋಮಹಿಷ ಮೊದಲಾದ ವಸ್ತುಗಳನಾ ಕ್ಷಣದೊಳೊಪ್ಪಿಸಿದನು ||೧೩||

ಮೇಲೆ ಪರಿತೋಷದಿಂದಾ ಯೌವನಾಶ್ವಭೂ |
ಪಾಲಕಂ ತನ್ನ ಸರ್ವಸ್ವಮಂ ತಂದು ಲ |
ಕ್ಷ್ಮೀಲೋಲನಂಘ್ರಿಗೊಪ್ಪಿಸಿದ ಬಳಿಕವನೊಡನೆ ಬಂದಿಹ ಸಮಸ್ತಜನರು ||
ನೀಲಮೇಘಶ್ಯಾಮಲನ ಕೋಮಲಾಂಗದ ವಿ |
ಶಾಲತರ ಲಾವನ್ಯಲಹರಿಯ ಸುಧಾಂಬುಧಿಯೊ |
ಳೋಲಾಡುತಿರ್ದರಡಿಗಡಿಗೆ ವಂದಿಸಿ ಜಯಜಯನಿನಾದದಿಂರೆ ||೧೪||

ಇತ್ತಲಾ ಯೌವನಾಶ್ವನ ರಾಣಿ ಕಾಣಿಕೆಯ |
ನಿತ್ತು ಕುಂತಿಗೆ ನಮಿಸಿ ಬಳಿಕ ಪಾಂಚಾಲಭೂ |
ಧೃತನೂಜೆಯ ಚರಣ ಸೀಮೆಗಾನೆಯಾಗಲವಳ ಕಚಭರಮೆಸೆದುದು ||
ಒತ್ತಿಡಿದ ಸಂಜೆಗೆಂಪಿನ ಮೇಲೆ ಕವಿದ ಬ |
ಲ್ಗತ್ತಲೆಯೋ ಶೋಣಗಿರಿತಟಕಿಳಿವ ಕಾರ್ಮುಗಿಲ |
ಮೊತ್ತಮೊ ಕಮಲಕೆರಗುವಳಿಕುಲವೊ ತಳಿರ್ಗೊಂಬಡರ್ದ ಬರ್ಹಿಯೊ ಪೇಳೆನೆ ||೧೫||

ದ್ವೇಷಮಂ ಬಿಟ್ಟು ಕೆಂದಾವರೆಯ ಚೆಲ್ವಿನ ವಿ |
ಶೇಷಮಂ ನೋಡಲ್ ಸವಿಪಮಂ ಸಾರ್ದ ಪೀ |
ಯೂಷಕರಬಿಂಬಮೆನಲಾ ಪ್ರಭಾವತಿಯ ಮೊಗವಂಘ್ರಿದೇಶದೊಳೊಪ್ಪಿರೆ ||
ಭೂಷಣಂ ಚಲಿಸೆ ಮಣಿದೆತ್ತಿ ಬಿಗಿಯಪ್ಪಿ ಸಂ |
ತೋಷದಿಂದವಳನುಪಚರಿಸಿ ತಿರುಗಿದಳಖಿಳ |
ಯೋಷಿಜ್ಜನದೊಳತಿವಿಲಾಸದಿಂ ದ್ರೌಪದಿ ಸುಭದ್ರಾದಿ ಸತಿಯರೊಡನೆ ||೧೬||

ಶೌರಿಸಹಿತರಸಂ ಬಳಿಕ ರಜತಗಿರಿಯಂತೆ |
ಗೌರಾಂಗದಿಂದೆ ಕಣ್ಗೊಳಿಸುವ ತುರಂಗಮದ |
ಸೌರಂಭಮಂ ನೋಡಿ ಬಿಗಿಯಪ್ಪ ಮುಂಡಾಡಿ ಹೈಡಿಂಬಿ ಕರ್ಣಜರನು ||
ಗೌರವಂ ಮಿಗೆ ಯೌವನಾಶ್ವಭೂಪಾಲನಂ |
ಪೌರುಷದೊಳುಪಚರಿಸಿ ತಂದನಿಭಪುರಿಗಖಿಳ |
ಪೌರಜನ ಪರಿಜನದ ರಥನಾಗವಾಜಿಗಳ ಸಂದಣಿಯ ಸಂಭ್ರಮದೊಳು ||೧೭||

ಭೂವಲ್ಲಭಂ ಮದದೊಳಾ ಯೌವನಾಶ್ವನಂ |
ಭಾವಿಸಿದ ಬಳಿಕ ಪಕ್ಷದ್ವಯಂ ಹರಿ ಹಸ್ತಿ |
ನಾವತಿಯೊಳಿರ್ದು ನೃಪವರನೊಳಿಂತೆಂದನೀ ಚೈತ್ರಮಾಸಂ ಪೋದುದು ||
ಈ ವೇಳೆಗಧ್ವರದ ಸಮಯವನುಪಕ್ರಮಿಸ |
ಲಾವಿರಲ್ ಬಂದೊಂದು ವರ್ಷಮಪ್ಪುದು ಮುಂದೆ |
ನೀವು ಕರೆಸಿದೊಡೆ ಬಂದಪೆವಂದಿಗೊದವಿದ ಸಮಸ್ತ ವಸ್ತುಗಳ ಕೊಂಡು ||೧೮||

ರಾಯ ನೀಂ ಕರೆಸಿದೊಡೆ ನಿನ್ನಯ ಮಹಾಧ್ವರ ಸ |
ಹಾಯಕೆ ಸಮಸ್ತವಸ್ತುವನಖಿಳ ಯಾದವ ನಿ |
ಕಾಯಮಂ ಕೂಡಿಕೊಂಡೈತಪ್ಪೆವನ್ನೆಗಂ ಸುಯ್ದಾನದಿಂ ಹಯವನು ||
ಈ ಯೌವನಾಶ್ವಭೂತಿಸಹಿತ ಕಾವುದೆಂ |
ದಾ ಯಮಸುತಾದಿಗಳನಂದು ಬೀಳ್ಕೊಂಡು ಕಮ |
ಲಾಯತಾಕ್ಷಂ ಬಂಧುಕೃತ್ಯದಿಂ ದ್ವಾರಕಾಪುರಕೆ ಬಿಜಯಂಗೈದನು ||೧೯||

ಇತ್ತಲವನಿಪನಸುರಹರನ ಕಳುಹಿದ ಚಿಂತೆ |
ಗಿತ್ತು ನಿಜಬುದ್ಧಿಯಂ ಮುಂದುವರಿಯದಿರೆ ಬಂದು |
ಮತ್ತೆ ವೇದವ್ಯಾಸಮುನಿ ತಿಳುಹಲಮಲಮಂಟಪವನೋಜೆಯೊಳು ರಚಿಸಿ ||
ತತ್ತುರಗಮಂ ನಿಲಿಸಿ ಬಳಿಕ ಕಾವಲ್ಗೆ ರಥ |
ಮತ್ತಗಜ ಹಯ ಪದಾತಿಗಳ ಸಂದೋಹಮಂ |
ಸುತ್ತಲುಂ ಪರುಠವಿಸಿ ಕೇಳ್ದನಾ ಋಷಿಯೊಳ್ ಮರುತ್ತನೃಪತಿಯ ಕಥೆಯನು ||೨೦||

ವಿಧುಕುಲಲಲಾಮ ಕೇಳ್ ಧರ್ಮಸುತನಾ ತಪೋ |
ನಿಧಿಗೆ ಕೈಮುಗಿದು ಬೆಸಗೊಂಡಂ ಮರುತ್ತನೃಪ |
ನಧಿಕತರ ಯಾಗಮದನಾವ ಋಷಿಮುಖದಿಂದಮಂದು ವಿರಚಿತದನದರ ||
ವಿಧಿಯಂ ತನಗೆ ಪೇಳ್ವುದೆನೆ ಬಾದರಾನಣಂ |
ಮಧುರೋಕ್ತಿ ಯಿಂದವನಿಪತಿಗೆ ವಿಸ್ತರಿಸಿದಂ |
ಬುಧಜನಪ್ರೀತಿಕರಮಾಗಲಾ ರಾಯನ ಮಹಾಕ್ರತುವನೀ ಕ್ರಮದೊಳು ||೨೧||

ಅದೊಡೆ ನರೇಂದ್ರ ಕೇಳಾದಿಯುಗದಲ್ಲಿ ವಿಮ |
ಲಾದಿತ್ಯವಂಶದೊಳ್ ಮೆರೆದರಿಕ್ಷ್ವಾಕು ಮೊದ |
ಲಾದವರ್ ಧರ್ಮ ಕೀರ್ತಿ ಪ್ರತಾಪಂಗಳಿಂದವರ ಪಾರಂಪರೆಯೊಳು ||
ಮೇದಿನೀಪತಿ ಕರಂದಮನೆಂಬವಂ ಸಕಲ |
ಭೂದೇವಕುಲದೊಳುದ್ದಾಮನೆನಿಪಂಗಿರನ |
ನಾದರಿಸಿ ವರಿಸಿ ಹಯಮೇಧಶತಮಂ ಮಾಡಿ ಸುರಪದವಿಯಂ ಪಡೆದನು ||೨೨||

ಆ ಕರಂಧಮನ ಸುತನಾವಿಕ್ಷಿಯೆಂಬ ವಸು |
ಧಾಕಾಂತನಾತನಿಂದುದಯಿಸಿ ಮರುತ್ತಂ ತ್ರಿ |
ಲೋಕವಿಖ್ಯಾತನಾದಂ ಪಗೆಗಳಂ ಗೆಲ್ವೆಡಿಯೊಳುಸುರ್ವಿಡುತಿರಲ್ಕೆ ||
ವ್ಯಾಕೀರ್ಣ ಚಾತುರ್ಬಲಂ ಪುಟ್ಟುತಿಹುದವಂ |
ಬೇಕೆಂದಕಡೆ ಸಾಧ್ಯಮಾಗಿ ಬಹುದೀಧರೆಯ |
ನೇಕಾಧಿಪತ್ಯದಿಂದಾಳ್ದನಂದಮಲಧರ್ಮದ ಮೇರೆ ತಪ್ಪದಂತೆ ||೨೩||

ಪ್ರಾಜ್ಯವೈಭವದಿಂದೆ ರಂಜಿಸುವ ಧರೆಯ ಸಾ |
ಮ್ರಾಜ್ಯಾಧಿಪತ್ಯದ ಮಹಾದಿನಂ ಸುರವಿಪ್ರ |
ಭೋಜ್ಯಮಪ್ಪವೊಲಾ ನೃಪಾಲಕಂ ತುರುಗಮೇದಾಧ್ವರದ ಮಾಳ್ಕೆಗೆಳಸಿ ||
ಯಾಜ್ಯಯಾಜನಕೆ ವರಿಸುವೊಡಂಗಿರನ ಸುತಂ |
ಪೂಜ್ಯನೆಮ್ಮೀಕುಲದವರ್ಗೆಂಬ ನಿಶ್ಚಯದೊ |
ಳಾಜ್ಯಪರ್ಗಾಚಾರ್ಯನಾಗಿಹ ಬೃಹಸ್ಪತಿಯ ಪೊರೆಗೆ ಬಂದಿಂತೆಂದನು ||೨೪||

ಎಲೆ ಬೃಹಸ್ಪತಿ ಮತ್ಪಿತಾಮಹಂ ಕ್ರತುಗಳ್ಗೆ |
ಸಲೆ ನಿನ್ನ ತಾತನಂ ವರಿಸಿರ್ದನದರಿಂದೆ |
ಕುಲಧರ್ಮಮಂ ಬಿಡದೆ ನೀನೆನಗೆ ಯಜ್ಞಮಂ ಮಾಡಿಸೆನಲನೊಪ್ಪಲು ||
ಬಲರಿಪು ಕನಲ್ದು ಮಾನವರ ಮಖಯಾಜನಂ |
ಪೊಲೆ ಸುರರ್ಗುಚಿತಮಲ್ಲೆಂದು ಗುರುವಂ ತಡೆದು |
ನಿಲಿಸಲಾ ನೃಪತಿ ಭಂಗಿತನಾಗಿ ಬರುತೆ ನಾರದಮುನಿಪನಂ ಕಂಡನು ||೨೫||

ದುಗುಡದಿಂದಾನೃಪಂ ನಾರದಂಗೆರಗೆ ನಸು |
ನುಗುತಿದೇನೆಲೆ ರಾಯ ನಿನಗೆ ದುಮ್ಮಾನಮೆನೆ |
ಮಿಗೆ ಬೃಹಸ್ಪತಿ ತನಗೆ ಮಾಡಿದವಮಾನಮಂ ಪೇಳ್ದತಿವಿರಕ್ತಿಯಿಂದೆ ||
ನಗರಮಂ ಪುಗದರಣ್ಯದೊಳುತಪದಿಂದೆ |
ಜಗದೊಳುತ್ಕೃಷ್ಟಪದಮಂ ಪಡೆವೆನೆನೆ ಕೇಳ್ದು |
ವಿಗಡಮುನಿವರನಾಗಳಾ ಮಹೀಪಾಲನಂ ಸಂತೈಸುತಿಂತೆಂದನು ||೨೬||

ಜನಪ ನಿನಗೆಚ್ಚರಿಪೆನಾದಿಯೊಳ್ ಪಂಕಜಾ |
ಸನನ ಮಾನಸಪುತ್ರನಾದನಂಗಿರನವನ |
ತನುಜರ್ ಬೃಹಸ್ಪತಿಯುಮಿನ್ನೂರ್ವ ಸಂವರ್ತನೆಂಬವಂ ಬಳಿಕವರ್ಗೆ ||
ದಿನದಿನಕೆ ದಾಯಾದಮತ್ಸರ ಪೆರ್ಚುತಿರೆ |
ಮನೆವಾಳ್ತೆಯೊಳ್ ಪಸುಗೆಯಂ ಕುಡದೆ ಗುರು ತಗು |
ಳ್ದನುಜನಂ ಪೊರಮಡಿಸೆ ಕಾಶಿಯೊಳ್ ಪೋಗಿರ್ಪನಾತಧೂತನಾಗಿ ||೨೭||

ಆತನಂ ವರಿಸಿದೊಡೆ ಯಜ್ಞಮಾದಪುದು ನಿನ |
ಗೇತಕಿನ್ನೆಣಿಕೆ ನಡೆ ಕಾಶಿಕಾ ಪಟ್ಟಣದೊ |
ಳಾ ತಪೋನಿಧಿ ನಿನ್ನ ಕಣ್ಗೆ ಗೋಚರಿಸದಿರೆ ಪೊಳಲ ಪೆರ್ಬಾಗಿಲೊಳಗೆ ||
ಘಾತಿಯಾಗಿರ್ದ ಪೆಣನಂ ಬಿಸುಡಿಸದನಖಿಳ |
ಜಾತಿಗಳ್ ತುಳಿದು ಕೊಂಡೆಡೆಯಾಡುತಿರ್ಪುವವ ||
ಧೂತನಾಗಿರ್ದವಂ ಕಂಡು ತೊಲಗಿದೊಡರಿದು ಬೆಂಬಿಡದೆ ಪೋಗೆಂದನು ||೨೮||

ಪೊಕ್ಕಲ್ಲಿ ಪೊಕ್ಕು ಬೆಂಬಿಡದೆ ನೀಂ ಬರೆ ಕಂಡು |
ಸಿಕ್ಕಿದೆತ್ತಣದೆಂದು ಬಯ್ದಪಂ ಪೊಯ್ದಪಂ |
ಮುಕ್ಕಳಿಸಿ ಮೇಲುಗುಳ್ದಪನೇನಾದೊಡಂ ಮಾಡುವಂ ನೀನದಕ್ಕೆ ||
ಹೆಕ್ಕಳಿಸಿ ಹಿಮ್ಮೆಟ್ಟದಿರ್ದೊಡಾರೊರೆದರೆ |
ನ್ನಿಕ್ಕೆಯಂ ಪೇಳೆಮದವಂ ಕೇಳ್ದೊಡೆನ್ನನಿದಿ !
ರಿಕ್ಕಿ ನಾರದನರಿಪಿ ತಾಂ ಕಿಚ್ಚಿನೊಳ್ ಬಿದ್ದನೆಂದುಸಿರ್ ಪೋಗೆಂದನು ||೨೯||

ನಾರದನ ಬುದ್ಧಿಯಂ ಕೇಳ್ದು ಸಂತೋಷದಿಂ |
ಭೂರಮಣನಲ್ಲಿಂದೆ ಬೀಳ್ಕೊಂಡು ಶಶಿಮೌಳಿ |
ತಾರಕಬ್ರಹ್ಮೋಪದೇಶದಿಂದೆ ಪ್ರಾಣಿಗಳ್ಗಾತ್ಮಸಾಯುಜ್ಯವಿವ ||
ಭೂರಿದುರಿತಂಗಳಂ ಕಂಡಮಾತ್ರದೊಳೆ ಸಂ |
ಹಾರಮಂ ಮಾಳ್ಪ ನಿಖಿಳಪ್ರಳಯಬಾಧೆಗಳ್ |
ದೂರಮೆನಿಪವಿಮುಕ್ತ ಕಾಶಿಗೈತಂದು ವಿಶ್ವೇಶಂಗೆ ಪೊಡಮಟ್ಟನು ||೩೦||

ಬಳಿಕಲ್ಲಿ ನಾರದಂ ಪೇಳ್ದಂತೆ ಭೂವರಂ |
ಪೊಳಲ ಪೆರ್ಬಾಗಿಲ್ಗೆ ಕುಣಪಮಂ ತಂದಿರಸ |
ಲುಳಿಯದೆಡೆಯಾಡುತಿರ್ದುದು ಜನಂ ಕಂಡು ಸಂವರ್ತನತ್ತಲೆ ತೊಲಗಲು ||
ಬಳಿವಿಡಿದು ಪೋದೊಡವನೀಶನಂ ಬೈದು ಪೊ |
ಯ್ದಳಲಿಸಿ ಕನಲ್ದುಗುಳ್ದೋಕರಿಸಿ ನೂಕಲದ |
ಕಳುಕದಿರ್ದೊಡೆ ತಾನದಾರೆಂದು ಬಂದೆ ನೀನೆಂದು ನೃಪನಂ ಕೇಳ್ದನು ||೩೧||

ಸುರಪುರೋಹಿತನನುಜನಂಗಿರನ ಸೂನು ಮುನಿ |
ವರಮೌಳಿ ಸಂವರ್ತನೆಂದರಿದು ಬಂದು ನಿ |
ನ್ನಿರವಂ ಪರೀಕ್ಷಿಸಿದೆನೆಂದು ನೃಪನುಸಿರಲವರಾರ್ ನಿನಗೆ ಪೇಳ್ದರೆನಲು ||
ಪರಮರ್ಷಿನಾರದಂ ತನಗೊರೆದು ಕೂಡೆ ತಾ |
ನುರಿಯೊಳ್ ಪ್ರವೇಸಿದನೆನೆ ತಾಪಸಂ ತಿಳಿದು |
ಕರುಣದಿಂದೇತಕೈತಂದೆ ನೀನಾರೆನ್ನೂಳಹ ಕಜ್ಜಮೇನೆಂದನು ||೩೨||

ಆದೊಡೆ ಮರುತನಾ ನಾವಿಕ್ಷಿನೃಪಸುತಂ |
ಮೇದಿನಿಯೊಳೆನಗೆ ಹಯಮೇಧಮಂ ಮಾಡಿಸೆಂ |
ದಾದರಿಸಿ ನಿಮ್ಮಣ್ಣನಂ ಕೇಳ್ದೊಡಾತಂ ತಿರಸ್ಕರಿಸಿದೊಡೆ ನಿನ್ನದು ||
ಆ ದೇವಮುನಿ ನೀನಲ್ಲಡೈತಂದೆನೆನ್ನಧ್ವ |
ರೋದಯಕೆ ನೀನಲ್ಲದನ್ಯರಂ ಕಾಣೆನೆಂ |
ದಾ ದಿನಪಕುಲದರಸನಂದು ಸಂವರ್ತನಂ ಬೇಡಿಕೊಳಲಿಂತೆಂದನು ||೩೩||

ಲೇಸಾದುದೆಲೆ ರಾಯ ನಿನ್ನ ಯಜ್ಞಕ್ಕೆ ತಾ |
ನೋಸರಿಸುವವನಲ್ಲ ಪುರಡಿಂ ಮಮಾಗ್ರಜಂ |
ವಾಸವನ ಮುಖದಿಂದೊಡಂಬಡಿಸಿ ಮಖಕೆ ತಾನಧ್ಯಕ್ಷನಪ್ಪೆನೆಂದು ||
ಆಶೆಯಿಂ ಕೇಳ್ದೊಡೇಗೈವೆ ನೀಂ ಪೇಳೆನಲ್ |
ಭೂಸುರನ ಕೊಂದಗತಿ ತನಗಹುದು ನಿಮ್ಮಂ ಪ್ರ |
ಯಾಸದಿಂ ಬಿಟ್ಟೊಡೆಂದರಸಂ ಪ್ರತಿಜ್ಞೆಯಂ ಮಾಡಲವನಿಂತೆಂದನು ||೩೪||

ಯಾಜಕಂ ತಾನಪ್ಪೆನಧ್ವರಕೆ ನೀನಿನ್ನು |
ರಾಜಿಪ ಹಿಮಾಲಯದೊಳೆಸೆವ ರಜತಾದ್ರಿಯೊಳ್ |
ತೇಜೋಮಯಂ ಸದಾಶಿವನಿರ್ಪ್ಪನಾತನ ಪದಾಬ್ಜಮಂ ಪೋಗಿ ಕಂಡು ||
ಪೂಜೆಗೈದೊಡೆ ಕನಕರಾಶಿಗಳನಿತ್ತಪಂ |
ಮೂಜಗಂ ತಣಿವಂತೆ ವರಮಖಂ ನಡೆವುದೆನ |
ಲಾ ಜನಪನಲ್ಲಿಗೈತಂದು ಗಿರಿಜೇಶನಂ ಪ್ರಾರ್ಥಿಸಿದನರ್ತಿಯಿಂದೆ ||೩೫||

ತರುಣೀಂದುಮೌಳಿಯಂ ಪ್ರಾರ್ಥಿಸಿದೊಡಿತ್ತನತಿ |
ಕರುಣದಿಂದಪರಿಮಿತವಸ್ತುವಂ ಬಳಿಕ ಹಿಮ |
ಗಿರಿತಟದೊಳಾ ನೃಪಂ ಕಟ್ಟಿಸಿದನಧ್ವರದ ಶಾಲೆಯಂ ಕನಕದಿಂದೆ ||
ವರವೈದಿಕ ಪ್ರಮಾನದೊಳಂದು ವಿಪ್ರರಂ |
ಕರೆಸಿ ಸಂವರ್ತನಂ ಕೂಡಿಕೊಂಡುತ್ಸವದೊ |
ಳರಸಂ ಮಹಾಕ್ರತು ಪ್ರಾರಂಭದೊಳ್ ಮೆರೆದನೈಶ್ವರ್ಯವಿಭವದಿಂದೆ ||೩೬||

ಕೇಳ್ದಂ ಬೃಹಸ್ಪತಿ ಮರುತ್ತನ ಮಖೋದಯವ |
ನಾಳ್ದನತಿಚಿಂತೆಯೊಳ್ ಮುಂದೆ ಧನಯುತನಾಗಿ |
ಬಾಳ್ದಪಂ ಸಂವರ್ತನೆಂಬ ಪುರುಡಿಂದುಬ್ಬೆಗಂಬಟ್ಟು ದಿವಿಜಪತಿಗೆ ||
ಪೇಳ್ದೊಡವನಗ್ನಿಯಂ ಕಳಿಪಿದೊಡೆ ದೀಕ್ಷೆಯಂ |
ತಾಳ್ದೆಸೆವ ಭೂಪನೆಡೆಗೈತಂದು ವೃತ್ರನಂ |
ಸೀಳ್ದವಂ ತನ್ನೊಳಾಡಿದಮಾತನಿಂತೆಂದು ವಿವರಿಸಿದನಾ ಕೃಶಾನು ||೩೭||

ರಾಯ ಕೇಳಿಂದ್ರನಾಡಿದಮಾತನೊರೆವೆನಾ |
ನೀ ಯಜ್ಞಮಂ ಬೃಹಸ್ಪತಿಯ ಕೈಯಿಂ ತೊಡಗಿ |
ಸಾಯಸಂಬಟ್ಟು ಸಂವರ್ತನಂ ವರಿಸಬೇಡೆನ್ನಾಜ್ಞೆಯಂ ವಿರ್ದೊಡೆ ||
ವಾಯದಿಂದಧ್ವರಂ ಕೆಡುವಂತೆ ಮಾಡುವೆನ |
ಪಾಯಮಂ ನಿನಗೆಂದು ಪೇಳ್ದಂ ಸುರಪನೆಂಬ |
ವಾಯುಸಖನಂ ನೋಡಿ ನಸುನಗುತೆ ವಿನಯದಿಂ ಭೂಪಾಲನಿಂತೆಂದನು ||೩೮||

ಗುರುವೆ ಕುಲಗುರುವೆಂದು ಮೊದಲೆ ನಾಂ ಪೋಗಿ ವಿ |
ಸ್ತರದಿಂದೆ ಮಾಡಿಸಧ್ವರವನೆಂದಾಡಿದೊಡೆ |
ನರಯಾಜಕ್ಕೊಲ್ಲೆನೆಂದ ಬಳಿಕೈಸಲೇ ಸಂವರ್ತನಂ ಮಖಕ್ಕೆ ||
ವರಿಸಿದೆನಸತ್ಯಮಂ ನುಡಿಯಲಂಜುವೆನಿನ್ನು |
ತುರಗಮೇಧಂ ನಡೆಯದೊಡೆ ಮಾಣಲೆಂದು ಭೂ |
ವರನಗ್ನಿಯಂ ಬೇಡಿಕೊಳುತಿರಲ್ ಕಂಡು ಮುಳಿದಾ ಮುನಿಪನಿಂತೆಂದನು ||೩೬||

ಭೂಕಾಂತ ನಿನಗಿವನೊಳುಪಚಾರಮೇಕಿನ್ನು |
ಸಾಕೀತನಂ ಕಳುಹು ಯಜ್ಞಮಂ ಕಿಡಿಸಿದೊಡೆ |
ನಾಕಮಂ ಕಿಡಿಸುವೆಂ ಸಕಲಮಂ ಸುಡುವನಲನಂ ಸುಡುವೆನೀಕ್ಷಣದೊಳು ||
ಪಾಕಶಾಸನನನೊಡಗೊಂಡು ಬರಲಗ್ನಿಯಂ |
ನೂಕೆಂದು ಸಂವರ್ತನಾಡಲ್ ಬೆದರ್ದು ಸುರ |
ಲೋಕಕ್ಕೆ ಪೋಗಿ ವೈಶ್ವಾನರಂ ವಜ್ರಿಗರುಹಿದೊಡಾತನಿಂತೆಂದನು ||೪೦||

ಇನ್ನೊಂದುಬಾರಿ ನೀಂ ಪೋಗಿ ಪೇಳಾ ನೃಪತಿ |
ಗೆನ್ನ ವಜ್ರಕ್ಕೆ ಗುರಿಯಾಗಬೇಡೆಂದೆನಲ್ |
ತನ್ನ ಕಯ್ಯೊಳ್ ಸಾಗದಂಜುವೆಂ ಸಂವರ್ತನತಿತಪೋಬಲನಿಳೆಯೊಳು ||
ಮುನ್ನ ಭೂಸುರಶಾಪದಿಂದೆ ವಲರಳಿದುಳಿದು |
ಬನ್ನ ಬಟ್ಟವರುಂಟು ಸಾಕೆಂದು ಶಿಖಿ ತೊಲಗೆ |
ಮನ್ನಿಸಿ ಪುರಂದರಂ ಧೃತರಾಷ್ಟ್ರನೆಂಬ ಗಂಧರ್ವಂಗೆ ನೇಮಿಸಿದನು ||೪೧||

ಧೃತರಾಷ್ಟ್ರನೆಂಬ ಗಂಧರ್ವಂರಾಜಂ ಬಂದು |
ಶತಮುಖಂ ಸಂವರ್ತನಂ ಬಿಟ್ಟು ವರಬೃಹ |
ಸ್ಪತಿಯನಧ್ವರಕೆ ವರಿಸದೊಡೀಗ ವಜ್ರದಿಂದರಿದಪಂ ನಿನ್ನನೆಂದು ||
ಕ್ಷಿತಿಪಂಗೆ ಪೇಳ್ದೊಡದ ಕೇಳ್ದಾ ಮುನೀಶ್ವರಂ |
ಖತಿಗೊಂಡೊಡಾತಂ ಮರಳ್ದು ಶಕ್ರಂಗರುಹ |
ಲತುಳಸನ್ನಾಹದಿಂ ಪೊರಮಟ್ಟನಮರೇಂದರನನಿಮಿಷರ ಗಡಣದಿಂದೆ ||೪೨||

ಕೋಪದಿಂದಾಗಳೆತ್ತಿದ ವಜ್ರಹಸ್ತದಿಂ |
ದಾಪುರಂದರನೈದೆ ಕಂಡು ನಡುನಡುಗುತಿಹ |
ಭೂಪನಂ ಸಂತೈಸಿ ಸಂವರ್ತನಿಂದ್ರಾಗ್ನಿ ಮೊದಲಾದಮರಗಣವನು ||
ರೂಪಿಸಿದ ಚಿತ್ರಪಟದಂತಾಗ ನಿಲಿಸಲ್ ಪ್ರ |
ತಾಪಂಗಳುಡುಗಿ ನಿರ್ಜರನಿಕರಮಳವಳಿಯ |
ಲಾ ಪರಮಧಾರ್ಮಿಕ ಮರುತ್ತಂ ತಪಸ್ವಿಯ ಬೇಡಿಕೊಂಡಂ ನಯದೊಳು ||೪೩||

ಎಲೆ ಮುನೀಶ್ವರ ಹವಿರ್ಭಾಗಮಂ ಕೊಂಬಮರ |
ಕುಲಮಿಂತಿರಲ್ ಬಹುದೆ ಪ್ರತ್ಯಕ್ಷಮಾಗಿ ಬಂ |
ದೊಲಿದೆನ್ನಯಾಗದೊಳ್ ವಿನಯದಿಂದೀಸಿಕೊಳಲಾಹುತಿಯ ಪಸುಗೆಗಳನು ||
ಸಲಿಸಬೇಕೆನ್ನ ಬಿನ್ನಪವನೀ ಸುರಪನೊಳ್ |
ಕಲಹಮಂ ಬಿಡಿಸೆಂದು ಭೂವಲ್ಲಭಂ ಕೃತಾಂ |
ಜಲಿಯಿಂದೆ ಸಂವರ್ತನಂ ಪ್ರಾರ್ಥಿಸಿದೊಡಿತ್ತನಾ ನೃಪನ ವಾಂಛಿತವನು ||೪೪||

ಭೂವಿಶ ಕೇಳ್ ಬಳಿಕ ಸಂವರ್ತಮುನಿವರನ |
ಸಾಮರ್ಥ್ಯಮಂ ನೋಡಿ ವೈರಮಂ ಬಿಟ್ಟು ಸು |
ತ್ರಾಮಂ ಸಕಲದಿವಿಜರೊಡಗೂಡಿ ಯಜ್ಞದ ಹವಿರ‍್ಭಾಗಮಂ ಕೊಳಲ್ಕೆ ||
ಪ್ರೇಮದಿಂ ಪ್ರತ್ಯಕ್ಷಮಾಗಿ ಬಂದಿತಿರ್ದ |
ನಾ ಮರುತ್ತಂಗೆ ಸಂತೋಷಂ ನೆಗಳ್ದುದು ಮ |
ಹಾಮಖಂ ನೆರೆದುದು ಸಮಸ್ತ ವೈಭವದ ವಿಸ್ತಾರದಿಂ ಖ್ಯಾತಮಾಗಿ ||೪೫||

ವರ್ತಿಸಿತು ವೈದಿಕವಿಧ್ಯಾನದಿಂದದೆಸೆವ ಸಂ |
ವರ್ತಮುನಿ ಮಾಡಿಸೆ ಮಹಾಧ್ವರಂ ಸಕಲದಿವಿ |
ಜರ್ತಮ್ಮ ತಮ್ಮ ಭಾಗಂಗಳಂ ಪ್ರತ್ಯಕ್ಷಮಾಗಿ ಕೈಕೊಂಡರಿರ್ದು ||
ಮರ್ತ್ಯಲೋಕಂ ಕನಕಮಯಮಾಗೆ ಭೂಮಿಯಮ |
ರರ್ತೆಗೆದು ಹೊತ್ತದಕ್ಷಿಣೆಗಳಿಂ ದಣಿದು ಬಿಸು |
ಟಿರ್ತುಹಿನಗಿರಿಯೊಳಗಣಿತಹೇಮರಾಶಿಗಳನೇನೆಂಬೆನಚ್ಚರಿಯನು ||೪೬||

ಪಾರ್ಥಿವಾಗ್ರಣಿ ಮರುತ್ತಂ ಬಳಿಕ ವಿನಯದಿಂ |
ಪ್ರಾರ್ಥಿಸಿದನಿಂದ್ರಾದಿಗಳನವರ್ ಮುದದೊಳಿ |
ಷ್ಟಾರ್ಥಮಂ ಸಲಿಸಿದರ್ ತಣಿದಲಸಿದರ್ ದ್ವಿಜರ್ ಭೂರಿದಕ್ಷಿಣೆಗಳಿಂದೆ ||
ಸ್ವಾರ್ಥಮೆಲ್ಲಮನಿತ್ತು ಸಂವರ್ತಮುನಿಗೆ ಮಖ |
ತೀರ್ಥದೊಳ್ ಮಿಂದು ಶುಚಿಯಾಗಿ ದೇವರ್ಕಳಿದು |
ಸಾರ್ಥಮೆನೆ ಚಿರಕಾಲಮವನಿಯೊಳವಂ ಬಾಳ್ದು ಪಡೆದನುತ್ತಮಗತಿಯನು ||೪೭||

ರಾಯ ಕೇಳಾ ಯಜ್ಞ ಸಂಗತಿಯನಾ ಬಾದ |
ರಾಯಣಂ ಪೇಳೆ ಬಳಿಕವನಿಪಂ ಧರ್ಮಸಾ |
ರಾಯಮಂ ಕೇಳ್ದನಾ ಮುನಿವರನೊಳಾವ ನರನಾವ ಕೃತ್ಯಂಗೆಯ್ಯಲು ||
ಬೀಯದ ಜಸಂ ಬಳೆವುದಿಲ್ಲಿ ನಾರಕದ ಬಿರು |
ಬೀಯದ ಸುಖಂ ಪರದೊಳೆಂತು ದೊರಕೊಂಬುದೆಂ |
ಬೀಯವಸ್ಥೆಯನೆನಗೆ ವಿಸ್ತರಿಸಿ ಪೇಳ್ವುದೆನೆ ಶುಕತಾತನಿಂತೆಂದನು ||೪೮||

ಸಾರ್ವನಿಗಮಾರ್ಥಮಂ ತಿಳಿದು ಸತ್ಕರ್ಮಮಂ |
ಸಾರ್ವಕಾಲಂಗೆಯ್ದು ಪರವಧೂವಿಷಯಮಂ |
ಸಾರ್ವಕಾಲಂಗೆಯ್ದು ಪರವಧೂವಿಷಯಮಂ |
ಸಾರ್ವ ಚಿಂತೆಯನುಳಿದು ಲೋಕಾಪವಾದಮಂ ಪರಿಯರಿಸಿ ಪರರೊಡವೆಗೆ ||
ಸಾರ್ವನಲ್ಲದೆ ಸದಾಚಾರದಿಂ ನಡೆದೊಡಾ |
ಸಾರ್ವನಿಹದೊಳ್ ಕೀರ್ತಿಪರನಾಗಿ ಬಳಿಕವಂ |
ಸಾರ್ವನುತ್ತಮಗತಿಗೆ ದೇಹಾವಸಾನದೊಳ್ ಛೂಪಾಲ ಕೇಳೆಂದನು ||೪೯||

ಸರ್ವಧರ್ಮಗಳನರಿದೋವಿದೊಡೆ ರಣಕೆ ಬೇ |
ಸರ್ವನಲ್ಲದೊಡಾತ್ಮ ವಿದನಾದೊಡಿಯೊಳ್ ಪೆ |
ಸರ್ವಡೆದು ಕ್ಷತ್ರಿಯಂ ಕಾದಿ ಮಡಿದೊಡೆ ಸೂರೆಗೊಂಬನಮರಾವತಿಯನು ||
ದುರ್ವಚನಮಂ ನುಡಿಯದತಿಥಿಗಳ ಕೆಡೆನುಡಿಯ |
ದುರ್ವಚನಮಂ ಕೂಡಿ ಗೋರಕ್ಷಣಂಮಾಳ್ಪು |
ದುರ್ವರೆಯೊಳಿದು ಕೀರ್ತಿ ವೈಶ್ಯಂಗೆ ಪರಗತಿ ಮುಕುಂದಸೇವೆಯೊಳಪ್ಪುದು ||೫೦||

ದ್ವಿಜರಾಸರಂದಳೆದು ಬೆಸಗೈವ ಶೂದ್ರನುಂ |
ದ್ವಿಜರಾಜವಾಹನಸ್ಮರಣೆಯಿಂದೈದುಮಂ |
ದ್ವಿಜರಾಜಸನ್ನಿಭದ ಸುಗತಿಯಂ ಜಗದೊಳಂತದು ಕುಲಸ್ತ್ರಿಯರೊಳಗೆ ||
ನಿಜನಾಥಭೀತೆ ಸುಚರಿತ್ರೆ ಗುಣವತಿ ಮಾನಿ |
ನಿ ಜನಾಪವಾದವಿರಹಿತೆಯೆನಿಪ ನಾರಿ ನ |
ನ್ನಿ ಜನಾರ್ಧನಾದಿ ನಿರ್ಜರವರ‍್ಯವಿನುತೆಯಹಳೆನಲವಳ ಸುಕೃತಮೆಂತೋ ||೫೧||

ಪತಿ ದೈವಮೆಂದರಿದು ನಡೆದ ಸತಿಗಹುದು ಪರ |
ಗತಿಯಲ್ಲದಂಗನೆಯರತಿಸಾಹಸಿಗಳವರ |
ಕೃತಕಶೀಲಂಗಳಂ ನಂಬಲಾಗದು ಮೇಣ್ ಸ್ವತಂತ್ರಮಂ ಕುಡಲಾಗದು ||
ಪಿತನಿಂದೆ ಬಾಲ್ಯದೊಳ್ ಪತಿಯಿಂದ ಹರೆಯದೊಳ್ |
ಸುತನಿಂದ ವೃದ್ಧಾಪ್ಯದೊಳ್ ಕುಲಸ್ತ್ರಿ ಸುರ |
ಕ್ಷಿತೆಯಾಗದಿರ್ದೊಡವಳಿಂದೆ ನಿಜವಂಶಕುಹಪತಿ ಬಾರದಿರದಿಳೆಯೊಳು ||೫೨||

ವರಯಜ್ಞ ಶಾಲೆಯುಂ ಬಾಲೆಯುಂ ದ್ವಿಜಪಙ |
ಪರಿಶೋಭಿದೊಡೆ ಸತ್ಕವಿತೆಯುಂ ಯುವತಿಯುಂ |
ಚರಣಗತಿ ಸಮತೆವೆತ್ತಿರದೊಡಬ್ಜಾರಿಯುಂ ನಾರಿಯುಂ ಚಾರುತರದ ||
ಕರಭೋರುಕಾಂತಿ ಸಂಯುಕ್ತಮಾಗಿರದಿರ್ದೊ |
ಡರಸಾಳ್ವ ಧರಣಿಯುಂ ತರುಣಿಯುಂ ಶಾಲಿಸುಂ |
ದರಮಾಗಿರದೊಡೆ ಸೌಮಂಗಳ್ಯಮಾಗಿಯುಂ ಮೇಲೆಯುನ್ನತಿಯಪ್ಪುದೆ ||೫೩||

ಮಾವಂಗೆ ಭಾವಂಗೆ ಮೇಣತ್ತೆಗೈದೆ ಸಂ |
ಭಾವಿಸುತೆ ಸೇವಿಸುತೆ ಕಂತಂಗೆ ಸುರತಸಂ |
ಜೂವನವನೀವ ನವಯುವತಿಯಹ ಲಕ್ಷಣಂ ಸುಕೃತಫಲಮಂತಲ್ಲದೆ ||
ಪಾವಿನಂತಾವಿನಂತಡಿಗಡಿಗೆ ಮೊರೆದೆದ್ದು |
ಡಾವರಿಸಿ ಸೀವರಿಸಿ ಮನೆಗೆಲಸಮಂ ಗೆಯ್ಯ |
ದಾವನಿತೆ ಸಾವನಿತೆ ಲೇಸೆನಿಸದಿಹಳೆ ತತ್ಪತಿಗೆ ತದ್ಗುರುಜನಕ್ಕೆ ||೫೪||

ತಾಲುನಾಲಗೆಗಳುಂ ಕಪ್ಪಾಗಿ ಮೇದಿನಿಯ |
ಮೇಲೆ ಕಾಲಂಗುಳಿಗಳೋರಗೆಯೊಳೊಂದದಿರೆ |
ಬಾಲೆಗೀ ಲಕ್ಷಣಂ ಮುತೈದೆತನಮಾಗಲರಿಯದು ವಿಧವೆಯಾದೊಡೆ ||
ಶೀಲಮಾಲಂಬಿಸಿ ತವರ್ಮನೆಯೊಳಿರ್ದನಿತು |
ಕಾಲಮಾಲಸ್ಯಮಿಲ್ಲದೆ ಸದಾಚಾರಕನು |
ಕೂಲೆಯಾಗಿರುತಿರ್ದು ದೇಹಮಂ ದಂಡಿಸಲ್ ಪತಿಲೋಕಮಂ ಪಡೆವಳು ||೫೫||

ವಿಟಗೋಷ್ಠಿಯೊಳ್ ಭೋಗಮಂ ಬಯಸಿ ಕಾಮಲಂ |
ಪಟೆಯಾಗಿ ಮೇಣರ್ಥಮಂ ಗಳಿಸಿ ಗರ್ವದಿಂ |
ಜಟರಮಂ ಪೊರೆಯುತ್ತೆ ಗರಿಯೊಗೆದುರಗಿವೊಲಿಹ ದುಷ್ಟವಿಧವೆಯರ ರತಿಯು ||
ಘಟಿಪುದಾವಂಗವನುಮವಳುಮವಳಾಣ್ಮ ನುಂ |
ಸಟೆಯಲ್ಲ ಮೂವರಂ ಪತಿತರದರಿಂದೆ ಸಂ |
ಕಟದೊಳಂ ನೋಡಲಾಗದು ಪರಸ್ತ್ರೀಯರಂ ನೆರೆದೊಡುಕ್ಕುಲಮಪ್ಪುದೆ ||೫೬||

ಗೃಹಕೃತ್ಯಮಂ ಬಿಟ್ಟು ನೆರೆಮನೆ ತವರ್ಮನೆಯೊ |
ಳಿಹಳೆಳೆಯರಂ ಚುಂಬಿಸುವಳೊಲಿದು ಪಾಡುವಳ್ |
ಗಹಗಹಿಸಿ ಬರಿದೆ ನಗುವಳ್ ಬೀದಿಗರನೈದೆ ಬಾಗಿಲೊಳ್ ನೋಡುತಿಹಳು ||
ಬಹುಜನದ ಮುಂದೆ ಮುಳಿವಳ್ ನಾಡಮಾತಂ ಗ |
ಳಿಹುವವಳ್ ತರುವಲಿಗಳೊಡನಾಡುವಳ್ ತನ್ನ |
ಸಹಜಮಲ್ಲದೆ ಪಿರಿದಲಂಕರಿಸಿ ಕೊಂಬುವಳ್ ನಿಲ್ವಳೇ ಶಿಕ್ಷಿಸಿದೊಡೆ ||೫೭||

ನರ್ತಕಿಯ ನಾಪಿತೆಯ ಪರ್ಣವಿಕ್ರಯಿಯ ಪ್ರ |
ವರ್ತಕಿಯ ದಾಸಿಯ ಬುರುಂಡೆಯ ಕಪಾಲಿನಿಯ |
ಭರ್ತಾರನುಳಿದವಳ ಮಾಲೆಗಾತಿಯ ಜಟಿಯ ಸೂತಕಿಯ ಸೈರಂದ್ರಿಯ ||
ಕರ್ತವ್ಯದಿಂದಿನಿಬರೊಡನಾಡಿದೊಡೆ ಬಾಲೆ |
ಯರ್ತದ ದುರಾಚಾರಮಂ ಕಲಿವರದರಿಂ ಬು |
ಧರ್ತರುಣಿಯರ ನಡೆವಳಿಗೆ ಭಂಗಮಂಕುರಿಸದಂತೆ ಪಾಲಿಸವೇಳ್ವುದು ||೫೮||

ಪುರುಷಾಂತರಕ್ಕೆಳಿಸಿ ಪುಷ್ಪ ಶರತಾಪದಿಂ |
ಕರಗಿ ಕಾತರಿಸಿ ಮೆಲ್ಲನೆ ದೂತಿಯೊರ್ವಳಂ |
ಕರೆದೊಡಂಬಡಿಸಿ ಬೇಡಿದನಿತ್ತು ಸತ್ಕರಿಸಿ ಪೊತ್ತುವೇಳೆಗಳನಸರಸಿ ||
ನೆರೆಹೊರೆಯರಿಯದಂತೆ ಪತಿಯಂ ಮರೆಸಿ ಮನೆಯ |
ವರನೆಲ್ಲರಂ ಟೊಣೆದು ಮದನಕೇಳಿಗೆ ಸಂದು |
ಮರಳಿ ಮಾನಿನಿಯರಂತಿರಬಲ್ಲರವರೆ ಜಾರೆಯರವರನೋವಬಹುದೆ ||೫೯||

ಸೋಲ್ದನು ಕಂಡು ಕಣ್ಗೊನೆಗೊಲೆದು ನೋಟಮಂ |
ಜೋಲ್ದುರುಬನೊಂದಿಸುವ ನೆವದಿಂದೆ ಕೈನೆಗಪಿ |
ಸಾಲ್ದ ಮೇಲುದನೋಸರಿಸಿ ಮೊಲೆಗೆಲದ ಪೊಗರ್ದೋರಿ ಪುಸಿಲಜ್ಜೆಯಿಂದೆ ||
ತೇಲ್ದವಳ ತೆರದಿಂದೆ ನಸುನಗೆಯ ಪಸರಿಸುತೆ |
ಕಾಲ್ದೆಗೆಯದೊಯ್ಯನೊಯ್ಯನೆ ನಡೆವ ಭಂಗಿಯಂ |
ನಾಲ್ದೆಸೆಗೆ ಕಾಣಿಸುವ ಮೈಸಿರಿಯ ಕಾಮಿನಿಯರವರೆ ಜಾರೆಯರೆನಿಪರು ||೬೦||

ಚಪಲೆ ಚಮಚಲೆ ಚಾಟುವತಿ ಚಂಡಿ ಚಲವಾದಿ |
ಕುಪಿತೆ ಕುತ್ಸಿತೆ ಕುಹಕೆ ಕುಜೆ ಕುಟಿಲೆ ಕುಲಗೇಡಿ |
ಕಪಟಿ ಕಂಡಕಿ ಕಟಕಿ ಕಡುದುಷ್ಟೆ ಕಲಹಾರ್ಥಿ ವಿರಸೆ ಪರವಶೆ ಪಾದರಿ ||
ವಿಫಲೆ ವಿಹ್ವಲೆ ವಿಷಮೆ ವಿರಹಿ ವಿಪರೀತೆ ಮಿಗೆ |
ತಪಿತೆ ತಸ್ಕರ ತವಕಿ ತವೆ ತಂದ್ರಿ ತಾಮಸಿಯೆ |
ನಿಪ ವನಿತೆಯರ ನಿಜಕೆ ನಿಲಿಸಿ ನಿಶ್ಚೈಸಿದೊಡೆ ಬಳಿಕ ಬಳಲಿಕೆ ಬಾರದೆ ||೬೧||

ಹಲವು ಮಾತೇನರಸ ಚಿತ್ರದೊಳ್ ಬರೆದ ಕೋ |
ಮಲೆಯರಂ ನಂಬಬಾರದು ನಿರುತಮೆನಲವರ |
ಪೊಲಬುಗಂಡವರುಂಟೆ ಸಾಕದಂತಿರಲಿ ಪರಿಕಲ್ಪಿತವ್ರತ ಸಮಾಧಿ ||
ಸಲೆ ತೀರ್ಥಯಾತ್ರೆ ಜಪತಪನಿಷ್ಠೆ ಬೇಕೆಂಬ |
ವಿಲಗವಿಲ್ಲಾತ್ಮಪತಿಸೇವೆಯಂ ಪ್ರತಿದಿನದೊ |
ಳಲಸದೆ ನೆಗಳ್ಚಿದೊಡೆ ಸತಿಯರ್ಗೆ ಕೀರ್ತಿಸುಗತಿಗಳಪ್ಪುವಿಹಪರದೊಳು ||೬೨||

ಭೂಪಾಲ ಕೇಳ್ ಧರ್ಮಸಾರಮಿದು ಜಗದೊಳ್ ಮ |
ಹೀಪತಿಗಳರ್ಥಲೋಲುಪ್ತಿಯಿಂ ತಮ್ಮಯ ಸ |
ವಿಪದೊಳ್ ದ್ಯೂತರತರಂ ನಾಸ್ತಿಕರನೈದೆ ಪಿಸುಣರನಸೂಯಕರನು ||
ಸೋಪಚಾರದೊಳಿರಿಸಿಕೊಂಡಿರುತಿರಲ್ ಪ್ರಜಾ |
ಲೋಪಮಪ್ಪುದು ರಾಜ್ಯಮದರಿನಪಕೀರ್ತಿಯಿಂ |
ಪಾಪದಿಂದರಸುಗಳ್ಗಿಹಪರಂ ಕಿಡುಗುಮಿದನರಿಯದಿರಬಹುದೆ ನೃಪರು ||೬೩||

ಆಚಾರಧರ್ಮದಿಂ ನಡೆಯಲರಿಯದ ವಿಪ್ರ |
ನೇ ಚಕ್ರಿಯಾಜ್ಞೆಯಂ ವಿರಿದವನವನಿಂದೆ |
ನೀಚನೆ ಹರಿಪ್ರಿಯ ಮಾಧವನ ಪೂಜೆಗೆಯ್ಯದವಂಗೆ ಸುಗತಿಯುಂಟೆ ||
ಈ ಚತುರ್ದಶ ಜಗದೊಳಂತಿರಲದಿನ್ನು ಸಲೆ |
ಸೂಚಿಪೆಂ ನಿನಗೆ ಬೆಸಗೊಂಬುದೆನೆ ರಮೆ ನೆಲಸಿ |
ಗೋಚರಿಪಳಾವನ ಮನೆಯೊಳೆಂದು ಭೂವರಂ ಕೇಳ್ದೊಡಾ ಮುನಿ ನುಡಿದನು ||೬೪||

ವತ್ಸ ಕೇಳಾದೊಡೀ ಧರೆಯೊಳಖಿಳಪ್ರಾಣಿ |
ವತ್ಸಲನ ಸತ್ಯಶೌಚಾನ್ವಿತನ ಮನೆಗೆ ಶ್ರೀ |
ವತ್ಸಲಾಂಛನನರಸಿ ತೊಡವೆನಿಪಳಾವಗಂ ಪತಿ ಪರಾಯಣೆಯಾಗಿಹ ||
ಸತ್ಸತಿಯದೆಲ್ಲಿ ಮೇಣುನ್ಮುಖಾನಂಗವಿಕ |
ಸತ್ಸರೋಜಾಸ್ತ್ರಕಳೂಕದ ಪುರುಷನೆಲ್ಲಿ ವಿಲ |
ಸತ್ಸಮುದ್ರಾತ್ಮಜೆ ಸರಾಗದಿಂದಲ್ಲಿ ಸುಸ್ಥಿರೆಯಾಗಿ ನೆಲಸಿರ್ಪಳು ||೬೫||

ರನ್ನದಿಂ ಧಾನ್ಯಮೆ ವಿಶೇಷಮೆಂದೊದವಿಸುವ |
ನನ್ನಮೇ ಕರಿಸದಿಂ ಕಡೆಯೆಂದು ವೆಚ್ಚಿಸುವ |
ನುನ್ನಿಸಲ್ ಬಾಲಕನುಮತಿಥಿಯುಂ ಸರಿಯೆಂದು ಸತ್ಕರಿಪನಾವನವನ ||
ತನ್ನ ತಾಯ್ತಂದೆ ಸೋದರ ಬಂಧು ಬಳಗಮಂ |
ಮನ್ನಿಸುವನಾವನಾತನ ಸದಾಚಾರಸಂ |
ಪನ್ನನಾವನವನ ಮಂದಿರದೊಳೈಶ್ವರ್ಯ ಲಕ್ಷ್ಮಿನೆಲೆಯಾಗಿರ್ಪಳು ||೬೬||

ಮಧುರವಾನಿಯ ಕೃತಜ್ಞನ ದಾನಪರನ ಪರ |
ವಧುವಿನೊಲ್ಮೆಯ ಬೇಟಕೊಳಗಾಗದನ ಮಾನ |
ನಿಧಿಯೆನಿಸುವನ ತೀರ್ಥಸಂಗತನ ಸಲೆ ಕೂಟಸಾಕ್ಷ್ಯವಂ ನುಡಿಯದವನ ||
ವಿದಿತಕರ್ಮದ ಮಾಳ್ಕೆಯಂ ಮಾಜದಾತನ ವ |
ಸುಧೆಯೊಳಿಷ್ಟಾರ್ಥವಂ ತವೆ ನೆಗಳ್ಚುವನ ಬಹು |
ವಿಧದ ಧರ‍್ಮಂಗಳಂ ರಚಿಸುವನ ಮನೆಯೊಳಿಂದಿರೆ ಬಿಡದೆ ನೆಲಸಿರ್ಪಳು ||೬೭||

ಹೊಸ್ತಿಲೊರಳೊನಕೆಗಳ ಮೇಲೆ ಕುಳ್ಳಿರ್ಪವನ |
ಮಸ್ತಕವನೆರಡುಕಯ್ಯಿಂ ತುರಸಿಕೊಂಬವನ |
ವಿಸ್ತರದ ಜೂಜುಗಳ್ಗೆಳಸುವನ ಪಿರಿದುಂಬುವನ ನಿಂದು ನೀರ್ಗುಡಿವನ ||
ಅಸ್ತಮಯದುದಯ ಕಾಲದೆ ನಿದ್ರೆಗೈವನಾ |
ತ್ಮಸ್ತುತಿಯ ಪರನಿಂದೆಯವನ ಸಾಧಿಸಿ ಪರರ |
ವಸ್ತುವಂ ಕಳುವನ ನಿರುದ್ಯೋಗದವನ ಸಿರಿ ತೊಲಗಿದಲ್ಲದೆ ಮಾಣ್ಬಳೆ ||೬೮||

ಜಡನ ಮೂರ್ಖನ ಶಠನ ತಾಮಸನ ನಿಷ್ಠುರದ |
ನುಡಿಯವನ ಪಿಸುಣನ ಕೃತಘ್ನನ ಕರುಬನ ಬಾ |
ಯ್ಬಡಿಕನ ಕುಚೇಷ್ಟಕನ ಕಾಮುಕನ ಹಿಂಸಕನ ಡಾಂಭಿಕನ ಪಾಷಂಡಿಯ ||
ಕಡುಕೋಪದವನ ಬಹುಭಕ್ಷನ ಖೂಳನನ |
ದೃಢನ ಕುತ್ಸಿತನ ಕುಹಕನ ದುರಾಚಾರದಿಂ |
ನಡೆವವನ ವಿಶ್ವಾಸಘಾತಕನ ಪಾತಕನ ಲಕ್ಷ್ಮಿತೊಲಗದೆ ಮಾಣ್ಬಳೆ ||೬೯||

ಈ ಪರಿಯೊಳಾ ಮುನಿ ಸಮಸ್ತಧರ್ಮಂಗಳಂ |
ಭೂಪತಿಗೆ ವಿಸ್ತರಿಸಿ ಬಳಿಕ ಮಖಕಾಲಂ ಸ |
ವಿಪಮಾದಪುದಿನ್ನು ಹಿಮಗಿರಿಯೊಳಿರ್ಪ ಧನಮಂ ತರಿಸವೇಳ್ಪುದೆಂದು ||
ಆ ಪರಾಶರಸುತಂ ನೇಮಿಸಿದೊಡರಸಂ ಚ |
ಮೂಪರಂ ಕರೆಸಿ ಪೊರೆಮಟ್ಟು ನಡೆಗೊಂಡಂ ಪ್ರ |
ತಾಪದಿಂ ಪಯಣಪಯಣಕೆ ಬಿಡುವ ಬೀಡುಬೀಡುಗಳ ಸನ್ನಾಹದಿಂದೆ ||೭೦||

ಸವ್ಯಸಾಚಿಪ್ರಮುಖರೊಡಗೂಡಿ ಹಿಮಗಿರಿಯ |
ದಿವ್ಯಸ್ಥಳಂಗಳಂ ನೋಡುತೊಲವಿಂದೆ ವೇ |
ದವ್ಯಾಸಮುನಿವೆರಸಿ ವಿಪ್ರರೊಡಗೂಡಿ ಮರುತಾಧ್ವರದೊಳಂದು ಬಿಸುಟ ||
ದ್ರವ್ಯದೆಡೆಗೈತಂದು ಗಂಧಾಕ್ಷತೆಗಳಿಂದೆ |
ನವ್ಯಕುಸುಮೋತ್ಕರಸುಧೂಪದೀಪಂಗಳಿಂ |
ಗವ್ಯಮಧುಶರ್ಕರಾದ್ಯುಪಹಾರದಿಂ ನೃಪಂ ಧನದನಂ ಪೂಜಿಸಿದನು ||೭೧||

ಅಷ್ಟದಿಕ್ಪಾಲರ್ಗೆ ಪೂಜೆಯಂ ಮಾಡಿ ಚೌ |
ಷಷ್ಟಿಯೋಗಿನಿರ್ಗೆ ಬಲಿಗೊಟ್ಟು ಭೂತಸಂ |
ತುಷ್ಟಿಯಪ್ಪಂತೆ ಕುರಿಕೋಣಂಗಳಂ ಪೊಯ್ಸಿ ಬಣ್ಣಗೂಳಂ ಪಸರಿಸಿ ||
ದೃಷ್ಟಮಾಧಖಿಳಧನಮಂ ತೆಗೆಸಿ ಭೂಪನು |
ತ್ಕೃಷ್ಟಮಖಮಿನ್ನು ಸಂಪೂರ್ತಿಯಾದಪುದೆಂಬ |
ಹೃಷ್ಟತೆಯೊಳರ್ಥಮಂ ಸಾಗಿಸಿದನಿಭಪುರಿಗೆ ಪೆರ್ವೊರೆಗಳಿಟ್ಟಣಿಸಲು ||೭೨||

ಪೊರೆಯಾಳ್ಗಳೊಟ್ಟೆಪೇಸರಮೆತ್ತು ಬಂಡಿಗಳ್ |
ನೆರೆಕನಕಭಾರದಿಂದೈದಿದುವು ಮಾರ್ಗದೊಳ್ |
ತೆರೆಪಿಲ್ಲಮೆನೆ ಕೋಟಿಸಂಖ್ಯೆಯಿಂ ಕೃಷ್ಣ ಮುನಿಸಹಿತ ನೃಪನುತ್ಸವದೊಳು ||
ಮೆರೆವ ನಿಜನಗರಪ್ರವೇಶಮಂ ಮಾಡುತ |
ಕ್ಕರೊಳಂದು ಭೀಮನಂ ಕಳುಹಿದಂ ದೇವಪುರ |
ದೆರೆಯ ಲಕ್ಷ್ಮೀಶನಂ ದ್ವಾರಕಿಗೆ ಪೋಗಿ ಬಿಜಯಂಗೈಸಿ ತರ್ಪ್ಪುದೆಂದು ||೭೩||