ನಾನು ನೋಡಬೇಕಾಗಿದ್ದ ವೆಂಕಟಕೃಷ್ಣರಾವ್ ಸೆಕ್ಷನ್ನಿನ ಮುಖ್ಯರಾದ್ದರಿಂದ ಕಾರಕೂನರು ಸಾಲಾಗಿ ಕೂತಿದ್ದ ಉದ್ದನೆಯ ಕಾರಿಡಾರಿನ ತುದಿಗೆ ಅಡ್ಡವಾಗಿ ಇಟ್ಟಿದ್ದ ಮೇಜಿನ ಹಿಂದೆ ಫೈಲುಗಳಲ್ಲಿ ಕಣ್ಣು ಹತ್ತಿಸಿ ಕೂತಿದ್ದರು. ಪುಷ್ಟವಾಗಿದ್ದ ಅವರ ಮುಖ ಫೈಲಿನಲ್ಲಿ ಸುಖಪಡುತ್ತಿದ್ದಂತೆ ಕಂಡಿತು. ಸುಮಾರು ನನ್ನ ವಾರಿಗೆಯ ಮನುಷ್ಯ – ನಲವತ್ತಿರಬಹುದು. ಆದರೆ ನೀಟಾಗಿ ಬಾಚಿದ ಕೂದಲಿಗೆ ಬಣ್ಣ ಬಳಿದಂತೆ ತೋರಿದ್ದರಿಂದ ಇರುವುದಕ್ಕಿಂತ ಚಿಕ್ಕವರಾಗಿ ಕಾಣಲು ಅವರುಪ್ರಯತ್ನಿಸಿದಂತೆ ಇತ್ತು. ಕೆಂಪು ಚುಕ್ಕಿಗಳ ಮಿರುಗುವ ಟೆರಿಲೀನ್ ಶರ್ಟ್ ಧರಿಸಿದ್ದರು. ನಸ್ಯದಿಂದ ಕೊಳೆಯಾದ ಕರ್ಚೀಪು, ಫೈಲಿನ ಧೂಳು, ಮಾಸಲು ನಾತ, ಬೆಳ್ಳಿಕಟ್ಟಿನ ದಪ್ಪ ಕನ್ನಡಕ, ಕುರುಚಲು ಬಿಳಿಗಡ್ಡ, ಇಂಕಿನ ಮಸಿಯ ಬೆರಳು, ಗೋಂದಿನ ವಾಸನೆ – ಇತ್ಯಾದಿಗಳು ಮಾತ್ರ ಸಹಜವಾಗಿದ್ದ ಕಛೇರಿ ಪ್ರಪಂಚದಲ್ಲಿ ಕ್ಯಾಂಥರಿಡೀನ್ ಎಣ್ಣೆಯನ್ನು ತಲೆಗೆ ಹಚ್ಚಿ, ಮುಖಕ್ಕೆ ಪ್ರಾಯಶಃ ಆಫ್ಗಾನ್ ಸ್ನೋ ಬಳಿದ ಈ ಸೊಗಸುಗಾರ ವೆಂಕಟಕೃಷ್ಣರಾವ್ ಆಗಿರುತ್ತಾರೆಂದು ನಾನು ಊಹಿಸಿರಲಿಲ್ಲ.

ಮೆತ್ತಗೆ ಕೆಮ್ಮಿ “ಮಿಸ್ಟರ್ ವೆಂಕಟಕೃಷ್ಣರಾವ್ ನೀವೇನ?” ಎಂದೆ.

ಆಸಾಮಿ ಸಾವಧಾನವಾಗಿ ತಲೆಯೆತ್ತಿ, ನನ್ನನ್ನು ನೋಡಿ, ‘ಕೂರಿ’ ಎಂದರು. ಎದುರಿಗಿದ್ದ ಸ್ಟೂಲಿನ ಮೇಲೆ ಕೂತು ನನ್ನ ಪರಿಚಯ ಹೇಳಿಕೊಂಡೆ.

ವೆಂಕಟಕೃಷ್ಣರಾವ್ ಎದ್ದು ನಿಂತು ಕೈಮುಗಿದರು. ಬೆಲ್‌ಮಾಡಿ ಜವಾನನನ್ನು ಕರೆದು ನನಗೊದು ಕುರ್ಚಿ ತರುವಂತೆ ಹೇಳಿದರು. ನಿಂತೇ ಇದ್ದರು. ನೀವು ಕೂರಿ ಎಂದರೆ ಕೂರಲಿಲ್ಲ. ಜವಾನ ತಂದ ಮರದ ಕುರ್ಚಿಯ ಮೇಲೆ ನಾನು ಕೂತ ನಂತರ.

“ನಿಮ್ಮ ಫೈಲಿನ ಕೆಲಸ ಮುಗಿಸಿದ್ದೇನೆ ಸಾರ್. ನಿಜ ಹೇಳಬೇಕೆಂದರೆ ನಿಮಗಾಗಿಯೇ ಕಾದಿದ್ದೆ. ಬರಹಗಾರರೆಂದರೆ ನನಗೆ ತುಂಬ ಗೌರವ ಸಾರ್” ಎಂದು ಹೇಳಿ ಆಮೆಲೆ ಕೂತರು. ನಾನು ಕಟ್ಟಬೇಕೆಂದಿದ್ದ ಮನೆಯ ಪ್ಲಾನನ್ನು ಅಪ್ರೂವ್ ಮಾಡುವ ಆರ್ಡರನ್ನು ಫೈಲುಗಳಿಂದ ಹುಡುಕಿ ತೆಗೆದು ನನ್ನ ಕೈಯಲ್ಲಿ ಕೊಡುತ್ತ,

“ನಿಮ್ಮಿಂದ ನನಗೊಂದು ಉಪಕಾರವಾಗಬೇಕಲ್ಲ ಸಾರ್” ಎಂದರು – ಮೆತ್ತಗಿನ ಫಿತೂರಿ ಧ್ವನಿಯಲ್ಲಿ.

ನನಗೆ ಗಾಬರಿಯಾಯಿತು. ಲಂಚ ಕೇಳಿದರೆ ಹೇಗೆ ತಾನೆ ಕೊಡಲಿ? ಅಥವಾ ಕಾಲೇಜಲ್ಲಿ ಸೀಟು, ಫೈಲಾದ ಮಗನಿಗೆ ಮಾರ್ಕ್ಸ್ – ಏನನ್ನು ಕೇಳಿಬಿಡುತ್ತಾರೋ ಎಂದು ಮುಜುಗರ ಪಡುತ್ತ ಕಪಾಟುಗಳಿಂದ ಹೊರಚಾಚಿದ ಫೈಲುಗಳ ಕಂತೆಗಳನ್ನು ನೋಡುತ್ತ ಕೂತೆ.

ರಾವ್ ನನ್ನ ಸಂಕೋಚವನ್ನು ಗಮನಿಸಿರಬೇಕು. ಅದರಿಂದ ಸಂತೋಷವನ್ನೂ ಪಟ್ಟಿರಬೇಕು. ಇನ್ನೊಬ್ಬರ ಗಮನಸೆಳೆಯಲು ಇದೊಂದು ಅವರ ತಂತ್ರವೆಂಬುದು ಆಮೇಲೆ ನನಗೆ ಗೊತ್ತಾಯಿತು. ಅತ್ಯಂತ ಕಾತರದಿಂದ ನನ್ನನ್ನು ನೋಡುತ್ತ ಅವರು ಕೇಳಿದ್ದು ಮಾತ್ರ,

“ನಮ್ಮ ಮನೆಗೆ ನೀವು ಬರಬೇಕು ಸಾರ್. ಇವತ್ತು. ಈಗಲೇ, ಆಫೀಸು ಬಿಡುವ ಹೊತ್ತಾಯಿತು. ನೇರ ಹೋಗಿ ಬಿಡೋಣ. ಆಗಲ್ಲ ಎನ್ನಬಾರದು” – ಎಂದು,

ನಾನು ‘ಹೂ’ ಎಂದಾದ ಮೇಲೆ ವ್ಯಕ್ತಪಡಿಸಬೇಕಾಗಿದ್ದ ಕೃತಜ್ಞತೆಯನ್ನು ಮುಂಗಡವಾಗಿ ಅವರ ದಪ್ಪವಾದ ಮುಖದಲ್ಲಿ ಹರಡಿಕೊಂಡು ಮಾತಾಡಿದರು. ನನಗೀಗ ಬಿಡುವು ಇಲ್ಲ ಎನ್ನುವುದು ಸಾಧ್ಯವೇ ಇರಲಿಲ್ಲ. ಎರಡು ದಿನಗಳ ಓಡಾಟವಾದರೂ ಅಗತ್ಯವೆಂದುಕೊಂಡಿದ್ದ ನನ್ನ ಕಛೇರಿಯ ಕೆಲಸವನ್ನು ಸ್ವಯಂಪ್ರೇರಣೆಯಿಂದ ಮುಗಿಸಿದ್ದರು ಬೇರೆ. ಸಾಹಿತಿಯೊಬ್ಬನ ಸುಂದರವಾದ ಮಾತುಗಳಲ್ಲಿ ಪಾತ್ರವಾಗಿ ಹಿಗ್ಗುವ ಬಯಕೆಯ ಮನುಷ್ಯನಿರಬೇಕು ಎಂದುಕೊಂಡೆ. ಆಗಲಿ ಎಂದೆ.

ಆಮೇಲಿನ ಅವರ ಉಪಚಾರ ಹೇಳತೀರದು. ಜವಾನನ್ನು ಓಡಿಸಿ ಕಛೇರಿ ಮೆಟ್ಟಲಿಗೇ ಆಟೊ ತರಿಸಿದರು. ಅದನ್ನು ಅವರ ಮನೆ ಮೆಟ್ಟಲಿಗೆ ಸರಿಯಾಗಿ – ಆಚೇಚೆ ಆಗದಂತೆ ಚಾಲಕನಿಗೆ ಮುಂಚಿನಿಂದಲೇ ಎಚ್ಚರಿಕೆ ಕೊಟ್ಟು – ನಿಲ್ಲಿಸಿದರು. ಮೀಟರಿನ ಹಣವನ್ನು ಮೊದಲೇ ಗಮನಿಸಿಟ್ಟುಕೊಂಡು ಸರಿಯಾದ ಚಿಲ್ಲರೆಯನ್ನು ಸಿದ್ದಪಡಿಸಿಕೊಂಡಿದ್ದು ಚಾಲಕನ ಕೈಯಲ್ಲಿ ಹಣ ತುರುಕಿ ನನ್ನನ್ನು ಒಳಗೆ ಕರೆದುಕೊಂಡು ಹೋದರು. ದೇವರ ಪಟಗಳು. ತಂಬೂರಿ, ಬೆಡ್‌ಶೀಟ್‌ಹೊದೆಸಿದ ಮಡಿಸಿಟ್ಟ ಹಾಸಿಗೆಗಳು, ಆಟದ ಬೊಂಬೆಗಳನ್ನು ನೀಟಾಗಿ ಜೋಡಿಸಿದ ಗಾಜಿನ ಬಾಗಿಲಿನ ಕಪಾಟು – ಇತ್ಯಾದಿಗಳಿಂದ ಕಿಕ್ಕಿರಿದ ಕೋಣೆಯಲ್ಲಿ ನನ್ನನ್ನು ಬಲಾತ್ಕಾರವಾಗಿ ಬಟ್ಟೆಯ ಆರಾಮು ಕುರ್ಚಿಯಲ್ಲಿ ಮಲಗಿಸಿ ತಾನೊಂದು ಮರದ ಕುರ್ಚಿ ಎಳೆದುಕೊಂಡು ಕೂತರು. ಅವರ ಮುಖ ನೋಡಲು ನಾನುಕತ್ತನ್ನು ಎತ್ತಿ ನಿಲ್ಲಿಸಿಕೊಳ್ಳಬೇಕಾದ ಕಷ್ಟ ಅವರಿಗೆ ಕೂಡಲೇ ಹೊಳೆಯಲಿಲ್ಲ. ಮಾತಿಗೆ ಶುರು ಮಾಡಿದರು. ಅವರ ಮಾತುಗಳನ್ನು ತದ್ವತ್ ಬರೆಯುವುದು ಅಸಾಧ್ಯ. ಯಾಕೆಂದರೆ ಆ ಮಾತುಗಳಿಗೆ ಆ ಮುಖ ಬೇಕು, ಆ ಮಿರುಗುವ ಟೆರಿಲೀನ್ ಶರ್ಟ್ ಮತ್ತು ಪ್ಯಾಂಟುಗಳು ಬೇಕು, ದೈನ್ಯದಿಂದ ಮಡಿಸಿದ ಕೈಗಳನ್ನು ತನ್ನ ಮೇಲಿಟ್ಟುಕೊಂಡು ಕುಲುಕುವ ಆ ಪುಟ್ಟ ಹೊಟ್ಟೆಬೇಕು, ಕ್ಯಾಂಥರಡೀನ್ ವಾಸನೆ ಮತ್ತು ಪಾಯಿಂಟೆಡ್ ಶೂಗಳು ಬೇಕು. ಇದು ಫೈಲಿನ ಕಥೆಗೂ ನಿಜ. ಅವರು ಹೇಳಿದ ಇನ್ನೊಂದು ದಾರುಣವಾದ ಕಥೆಗೂ ನಿಜ. ಹಲವು ಸಾರಿಹೇಳಿ ಸವೆದು ನುಣುಪಾದ ಕತೆಗಳು ಅವು ಎಂಬ ನನ್ನ ಲೇಖಕನ ಗರ್ವ ಮಾತ್ರ ಈ ನನ್ನ ಕೊಂಕಿಗೆ ಕಾರಣವಲ್ಲವೆಂದು ನಂಬಿದ್ದೇನೆ. ಕಷ್ಟನಷ್ಟಗಳಿಗೆ ಅವರು ಗುರಿಯಾಗಿದ್ದರೆಂಬುದಂತೂ ನಿಸ್ಸಂದೇಹ.

ಮೊದಲು ಗೋಡೆಯ ಮೇಲಿಂದ ಅವರ ಬಂಧುಬಾಂಧವರ ಪಟಗಳನ್ನೆಲ್ಲ ಕೆಳಗೆ ಇಳಿಸಿ ತೋರಿಸಿದರು. ಅವರ ಹೆಂಡತಿಯ ಒಬ್ಬ ತಂಗಿಯನ್ನು ಮದುವೆಯಾದ ಈತ ಎಂಜಿನಿಯರಿಂಗ್ ಡಿಗ್ರಿ ತೆಗೆದುಕೊಂಡು ಸೆಟೆದು ನಿಂತಿದ್ದ – ಈಗ ದೆಹಲಿಯಲ್ಲಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಆಗಿದ್ದಾನೆ. ಕಾರಿಟ್ಟಿದಾನೆ. ಇನ್ನೊಬ್ಬಳನ್ನು ಮದುವೆಯಾದವ ಇಂಗ್ಲೆಂಡಲ್ಲಿ ಎಫ್. ಆರ್. ಸಿ. ಎಸ್. ಮಾಡಿದ್ದ. ಹೆಂಡತಿ ಹೆಗಲ ಮೇಲೆ ಕೈಯಿಟ್ಟು ತೊಡೆ ಮೇಲೆ ಮಗುವನ್ನು ಕೂರಿಸಿಕೊಂಡು ನಗುತ್ತಿದ್ದ. ಅವನು ಬೆಂಗಳೂರಲ್ಲಿ ನಾಲ್ಕು ಬಂಗಲೆ ಕಟ್ಟಿಸಿದಾನೆ. ಬರೀ ಮೊಸಾಯಿಕ್ ಪ್ಲೋರಿಂಗ್. ಕೊನೆಯವಳ ಗಂಡನೂ ಎಂಜಿನಿಯರ್. ಭೋಪಾಲ್‌ನಲ್ಲಿದ್ದಾನೆ ಆತ ಹಾರ ಹಾಕಿಕೊಂಡು ಹೊಸ ಸೂಟ್ ತೊಟ್ಟು, ಮೈತುಂಬ ಜರಿಯ ಸೀರೆ ಉಟ್ಟ ಹೆಂಡತಿ ಜೊತೆ ಆರತಕ್ಷತೆಗೆ ಕೂತಿದ್ದ. ಈಗ ಅವನ ಹೆಂಡತಿಗೆ ಚೊಚ್ಚಲು ಹೆರಿಗೆ – ಚಿಕ್ಕಮಗಳೂರಲ್ಲಿ ತಾಯಿ ಮನೆಗೆ ಬಂದಿದಾಳೆ. ಆದ್ದರಿಂದ ವೆಂಕಟಕೃಷ್ಣರಾವ್‌ಹೆಂಡತಿ ಮನೆಯಲ್ಲಿಲ್ಲ. ತವರಿಗೆ ಹೋಗಿದ್ದಾಳೆ – ತಾಯಿಗೆ ಸಹಾಯ ಮಾಡಲು. ಮಾವನಿಗೆ ಇನ್ನೆರಡು ತಿಂಗಳಲ್ಲಿ ಷಷ್ಟ್ಯಬ್ಧಿ ಬೇರೆ. ಮುಗಿಸಿಕೊಂಡು ಬರುತ್ತಾಳೆ. ಮನೆಯಲ್ಲಿ ಬಿ. ಎ. ಓದುತ್ತಿರುವ ಮಗಳದೇ ಅಡಿಗೆ. ತಾಯಿಯಷ್ಟಲ್ಲದಿದ್ದರೂ ಚೆನ್ನಾಗಿ ಅಡಿಗೆ ಮಾಡುತ್ತಾಳೆ. ತುಂಬ ಓರಣ, ಒಪ್ಪ, ಕುಟುಂಬದಲ್ಲೆಲ್ಲ ಈ ಹಿರಿಯಳಿಯ ಮಾತ್ರ ಕಾರಕೂನ, ಪೆನ್‌ಪುಶರ್ – ವೆಂಕಟಕೃಷ್ಣರಾವ್ ತನ್ನನ್ನು ಗೇಲಿ ಮಾಡಿಕೊಂಡರು.

“ಎಲ್ಲ ವಿಧಿಯಾಟ” ಎಂದು ನಕ್ಕರು. ಆ ಮುಖ್ಯ ಮಾತನ್ನು ಹೇಳುತ್ತಿದ್ದಂತೆ ಎತ್ತಿಕೊಂಡಿದ್ದ ನನ್ನ ಕತ್ತಿನ ಉಬ್ಬಿದ ನರಗಳು ಅವರ ಕಣ್ಣಿಗೆ ಬಿದ್ದಿರಬೇಕು. ಓಡಿ ಹೋಗಿ ಮಲಗುವ ಕೋಣೆಯಿಂದ ದಿಂಬು ತಂದರು. ಅದರ ಮೇಲಿದ್ದ ನಾಜೂಕಾದ ಕಸೂತಿಯನ್ನು ನಾನು ಗಮನಿಸಿದ್ದು ನೋಡಿ,

“ನನ್ನ ಹೆಂಡತಿ ಹಾಕಿದ್ದು, ಕಣ್ಣು ಹಾಳಾಗತ್ತ ಬೇಡವೆಂದರೂ ಅವಳೆಲ್ಲಿ ನನ್ನ ಮಾತು ಕೇಳ್ತಾಲೆ? ಡೆಲ್ಲಿಯಲ್ಲಿರುವ ನನ್ನ ಷಡ್ಯನಿಗೆ ಒಂದಿಡೀ ದಿಂಬಿನ ಸೆಟ್ ಮಾಡಿ ಕಳಿಸಿಕೊಟ್ಟಳು. ಅಲ್ಲಿ ಅವರ ಸ್ನೇಹಿತರೆಲ್ಲ ತುಂಬ ಮೆಚ್ಚಿಕೊಂಡರಂತೆ”

ಎಂದು ನನ್ನ ಕತ್ತಿಗೆ ದಿಂಬಿಟ್ಟು ‘ಈಗ ಆರಾಮೊ?’ ಎಂದು ಕೂತರು.

ನಾನು ಕೂಡ ಏನಾದರೂ ಹೇಳಬೇಕಿತ್ತಲ್ಲ? ಹೇಳಿದೆ:

“ಮಿಸ್ಟರ್ ವೆಂಕಟಕೃಷ್ಣರಾವ್, ಇವತ್ತು ಕಛೇರೀಲಿ ನನಗೇನು ಅನ್ನಿಸಿತು ಗೊತ್ತ? ನಾವು ಸಾಯದೇ ಇದ್ದಿದ್ದರೆ ಈ ಪ್ರಪಂಚ ಎಷ್ಟು ಅಸಹ್ಯವಾಗಿರ್ತಿತ್ತು ಹೇಳಿ. ಆದರೂ ತಾನು ಶಾಶ್ವತ ಅನ್ನೋ ಭ್ರಮೇಲಿ ಮನುಷ್ಯ ಎಷ್ಟೊಂದು ಜಟಿಲವಾದ ವ್ಯವಸ್ಥೇನ್ನ ಮಾಡಿಕೋತಾನಲ್ಲ! ನೀವು ಆ ಫೈಲುಗಳನ್ನು ಎಂದೂ ಸುಡೋದೇ ಇಲ್ವ?”

ಸಂಭಾಷಣೆಗೆ ತಾತ್ವಿಕ ತಿರುವು ಕೊಡುವ ನನ್ನ ಪ್ರಯತ್ನ ವ್ಯರ್ಥವಾಯಿತು.

“ನಾನು ಕೂಡ ಒಂದು ಫೈಲಾಗಿ ಹತ್ತು ವರ್ಷ ಮೇಜಿಂದ ಮೇಜಿಗೆ ಸುತ್ತಾಡಿದೇನೆ ಸಾರ್. ಅದರ ಕಥೆ ಕೇಳಿ. ” ವೆಂಕಟಕೃಷ್ಣರಾವ್ ಅತಿ ದಾಕ್ಷಿಣ್ಯದ ಗತ್ತು ಬಿಟ್ಟು ಸ್ನೇಹದಿಂದ ತಿಳಿಯಾಗಿ ಮಾತಾಡಿದರೆಂದು ನನಗೆ ಸಂತೋಷವಾಯಿತು.

ಏನೇ ಆಗಲಿ ಕೇಳಿಸಿಕೊಂಡೆ. ಬೇರೆ ಮಾರ್ಗವಿದ್ದರೆ ತಾನೆ? ಉಪ್ಪಿಟ್ಟು, ಬೋರ‍್ನವೀಟ, ರಸಬಾಳೆ ಹಣ್ಣುಗಳನ್ನು ಅವರ ಮಗಳು ತಂದು ಸ್ಟೂಲಿನ ಮೇಲಿಟ್ಟಳು. ಅಂದವಾದ ಹುಡುಗಿ. ನಡುವೆ ಬೈತಲೆ ತೆಗೆದು ದೊಡ್ಡ ಕುಂಕುಮವಿಟ್ಟಿದ್ದಳು. ತಾಯಿಯನ್ನು ಪ್ರಾಯಶಃ ಹೋಲುವಳೇನೊ: ತೆಳುವಾದ ತುಟಿ, ಎಸಳಾದ ಮೂಗು, ಸ್ವಲ್ಪ ಕಪ್ಪು ಬಣ್ಣ – ತಂದೆಯಂತೆ ಕೆಂಪಲ್ಲ – ಲಕ್ಷಣವಾಗಿದ್ದಳು. ಆರಾಮು ಕುರ್ಚಿಯಲ್ಲಿ ಒರಗಿ ಮಲಗುವ ಒತ್ತಾಯತಪ್ಪಿತೆಂದು ಸಂತೋಷವಾಯಿತು. ಹೂಗಿದ್ದವನು ಕುರ್ಚಿಯ ಅಂಚಿನ ಮೇಲೆ ಎದ್ದುಕೂತು ತಿಂಡಿ ತಿಂದೆ. ಈ ಹುಡುಗಿಯನ್ನು ಯಾವನೊ ಒಬ್ಬ ಎಂಜಿನಿಯರಿಗಾಗಿಯೋ, ಡಾಕ್ಟರ್‌ಗಾಗಿಯೊ ಮರ್ಯಾದೆಯಿಂದ ಕಾದಿಡಲಾಗಿದೆ. ಸಂಗೀತ, ಅಡಿಗೆ, ಕಸೂತಿ, ಒಪ್ಪ, ಓರಣ – ಮಡಿಯತ್ತ ಮಾವರಿಗೂ ಸಲ್ಲಬೇಕು, ದೊಡ್ಡ ನಗರದಲ್ಲಿ ಕೆಲಸ ಮಾಡುವ ಗಂಡನಿಗೂ ಸಲ್ಲಬೇಕು, ಇಷ್ಟವಿಲ್ಲದಿದ್ದರೂ ಸಿಹಿಯಾದ ಬೋರ‍್ನವೀಟ ಕುಡಿದೆ. ‘ಥ್ಯಾಂಕ್ಸ್ ಚೆನ್ನಾಗಿದೆ’ ಎಂದು ಹುಡುಗಿಗೆ ಹೇಳಿದೆ. ‘ನಿಮ್ಮ ಕಾದಂಬರಿ ಓದಿದೇನೆ’ ಎಂದು ಮುಗುಳು ನಾಚುತ್ತ ಹೇಳಿದ್ದನ್ನು ವೆಂಕಟಕೃಷ್ಣರಾವ್ ಮೆಚ್ಚುತ್ತ ಗಮನಿಸಿದರು.

ಏಕೀಕರಣವಾದಾಗಿನಿಂದ ಮೇಜಿಂದ ಮೇಜಿಗೆ ಕುಗ್ಗುತ್ತಲೋ ಬೆಳೆಯುತ್ತಲೋ ಸಂಚರಿಸಿದ ಫೈಲು ಅದು. ರೆವಿನ್ಯೂ ಮಂತ್ರಿ ಬೆಳಗಾವಿ ಕಡೆಯುವ. ಆದ್ದರಿಂದ ತಮ್ಮ ಕಡೆಯ ನಲವತ್ತು ಜನರನ್ನು ತಹಸೀಲ್ದಾರರಾಗಿ ಪ್ರೊಮೋಟ್ ಮಾಡಿದ. ತಾವು ಅವರಿಗಿಂತ ಸೀನಿಯರ್ ಎಂದು ವೆಂಕಟಕೃಷ್ಣರಾವ್ ಮತ್ತು ಇತರೆ ಇಪ್ಪತ್ತು ಜನ ಅಬ್ಜೆಕ್ಷನ್ ಹಾಕಿದರು. ‘ಇದು ಹಂಗಾಮಿ ಪ್ರಮೋಶನ್, ಯಾವತ್ತಿನಿಂದಲೋ ಡ್ಯೂ ಆಗಿತ್ತು. ಆಗೋದು ಈಗ ಆಗಿಬಿಡಲಿ, ಇಂಟರ್ ಸ್ಟೇಟ್ ಸೀನಿಯಾರಿಟಿ ಲಿಸ್ಟ್ ತಯಾರಾದಾಗ ಎಲ್ಲವನ್ನೂ ಸಕ್ರಮವಾಗಿ ಸರಿಮಾಡಿದರಾಯಿತು ಎಂದು ಮಂತ್ರಿ ನೋಡ್ ಹಾಕಿದ. ಆಯಿತ? ಕಾದದ್ದೂ ಆಯಿತು; ಸೀನಿಯಾರಿಟಿ ಲಿಸ್ಟ್‌ತಯಾರೂ ಆಯಿತು. ಮತ್ತೆ ಯಥಾಪ್ರಕಾರ ಹುಬ್ಬಳ್ಳಿ ಕಡೆ ಸೆಕ್ರಟರಿ ತನ್ನ ಕಡೆಯವರ ಪಟ್ಟಿಯನ್ನು ಇನ್ನೊಂದು ಹಂಗಾಮಿ ಲಿಸ್ಟ್‌ಎಂದು ಪ್ರಮೋಶನ್‌ಗೆ ಮುಂದಿಟ್ಟ. ಈ ಬಾರಿ ಮಾತ್ರ ವೆಂಕಟಕೃಷ್ಣರಾವ್ ಮತ್ತು ಇತರರು ರಿಟ್ ಹಾಕಿದರು. ಕೋರ್ಟು ಇವರ ಅಬ್ಜೆಕ್ಷನ್ನನ್ನು ಎತ್ತಿ ಹಿಡೀತು. ಡಿಸಿಶನ್ನನ್ನ ರೆವ್ಯೂ ಮಾಡುವಂತೆ ಸರ್ಕಾರಕ್ಕೆ ಸಲಹೆ ಮಾಡಿತು. ಬರಿ ಸಲಹೆ ಮಾಡಿತು – ಅಷ್ಟೆ. ಇವರಿಗೆ ಆತುರ. ಲಾಯರಿಗೆ ಗೊತ್ತಿಲ್ಲ. ಯಾವ್ಯಾದ ಡಿವಿಜನ್ನಿನಲ್ಲಿ ಯಾರ್ಯಾರನ್ನ ಪ್ರೊಮೋಟ್ ಮಾಡಿದ್ದಾರೆಂಬ ದಾಖಲೆ ಸಿಗೋದು ಕಷ್ಟ. ಇಂತಿಂಥ ಕೇಸು ಅಂತ ನಮೂದಿಸಿ ರಿಟ್ ಹಾಕಿದರೆ ಮಾತ್ರ ಆಗ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ ಅಂತ ಕಂಟೆಂಫ್ಟ್ ಪ್ರೊಸೀಡಿಂಗ್ಸ್‌ಸಾಧ್ಯ. ಆದರೆ ಇದಕ್ಕೆಲ್ಲ ತಾಳ್ಮೆ ಬೇಕು. ರಜ ಬೇಕು.

ಕೊನೇಗೆ ಒಬ್ಬ ನಮ್ಮ ಕಡೆ ರೆವಿನ್ಯೂ ಮಂತ್ರಿ ಬಂದರಲ್ಲ ಅಂತ ತಮ್ಮ ಲಿಸ್ಟನ್ನು ಅವರೆದುರು ಇಟ್ಟದಾಯಿತು. ಹೌದ? ಎಷ್ಟು ಅನ್ಯಾಯ ಅಂತ ಅವರು ಅಲ್ಲೆ ಅರ್ಜಿ ಮೇಲೆ ನೋಟ್ ಬರೆದರು. ಬೆಳಗಾವಿ ಧಾರವಾಡ ಕಡೆಯ ಎಂ. ಎಲ್. ಎ. ಗಳು ಚೀಫ್ ಮಿನಿಸ್ಟರಹತ್ತಿರ ದೂರು ಹೋದರು. “ಎಲ್ಲಿ ತಗೊಂಬನ್ನಿ ಲಿಸ್ಟನ್ನ” ಅಂತ ಸಿ. ಎಮ್. ಹೇಳಿದರು. ಹಿಂದೆ ಆಗಿದ್ದ ಅನ್ಯಾಯವೆಲ್ಲ ಅವರಿಗೆಲ್ಲಿ ಗೊತ್ತು? ಪವರ್ ಸ್ಟ್ರಗಲ್‌ನಲ್ಲಿ ಈ ಎಂಎಲ್‌ಎ ಗಳ ಬೆಂಬಲ ಬೇರೆ ಅವರಿಗೆ ಬೇಕು. ಲಿಸ್ಟ್ ಅವರೆದುರು ಬಂತು. ನೋಡ್ತಾರೆ – ಬೆಳಗಾವಿ ಧಾರವಾಡ ಕಡೆಯ ಒಂದೇ ಒಂದು ಹೆಸರು ಲಿಸ್ಟಲ್ಲಿಲ್ಲ. ಆಯ್ತು? ‘ನಾನು ವಿಚಾರಿಸ್ತೇನೆ – – ನೀವು ಹೋಗಿ’ ಎಂದರು.

“ನೀವೊಂದು ಕಾದಂಬರಿ ಬರೀಬಹುದು ಸಾರ್ ಈ ಫೈಲಿನ ಬಗ್ಗೆ”

ವೆಂಕಟಕೃಷ್ಣರಾವ್ ಎದ್ದು ಇನ್ನೊಂದು ಬೆಳ್ಳಿ ತಟ್ಟೆಯಲ್ಲಿ ಎಲೆಯಡಿಕೆ ತಂದರು. ಎಳೆಯ ಮೈಸೂರೆಲೆ. ಬೆಳ್ಳಿ ಬಟ್ಟಲಲ್ಲಿ ಘಮಘಮ ಅಡಿಕೆ, ಏಲಕ್ಕಿ, ಲವಂಗ, ಕೊಬ್ಬರಿ – ಇನ್ನೊಂದು ಬೆಳ್ಳಿಬಟ್ಟಲಲ್ಲಿ, ಬೆಣ್ಣೆಯಂತೆ ಮೃದುವಾದ ಸುಣ್ಣ. ಇಬ್ಬರು ಸಾವಧಾನವಾಗಿ ಎಲೆ ಹಾಕಿಕೊಂಡೆವು – ವೆಂಕಟಕೃಷ್ಣರಾವ್ ಎಲೆ ಮೆಲ್ಲುತ್ತ ಕಥೆ ಮುಂದುವರಿಸಿದರು.

ಆ ಫೈಲು ಎಲ್ಲೆಲ್ಲೋ ಹೋಗಿಬರುತ್ತೆ – ವಿವರವೆಲ್ಲ ನನಗೆ ನೆನಪಿಲ್ಲ. ಅಂತೂ ಕೊನೆಗೆ ಒಬ್ಬ ಧೂರ್ತ ಅಂಡರ್ ಸೆಕ್ರೆಟರಿ ಹತ್ತಿರ ಹೋಗುತ್ತೆ. ಅವನೊಂದು ಕೊಕ್ಕೆ ನೋಟ್ ಹಾಕ್ತಾನೆ. ಕೋರ್ಟಿನ ಡಿಸಿಶನ್ನನ್ನ ಮುಚ್ಚಿಡ್ತಾನೆ. ಇನ್ನೊಬ್ಬ ಈ ಕಡೆ ಅಂಡರ್ ಸೆಕ್ರೆಟರಿ ಅದನ್ನ ಬಿಚ್ಚುತ್ತಾನೆ. ಕೊನೇಗೆ ಚೀಫ್ ಸೆಕ್ರೆಟರಿ ‘ಯಾರನ್ನೂ ಬಿಡಬೇಡ’ ಅಂತ ಬಾಗಿಲು ಹಾಕಿಕೊಂಡು ಚಹಾಕುಡೀತ ಇದ್ದಾಗ ವೆಂಕಟಕೃಷ್ಣರಾವ್ ಒಳಗಿನ ಬಾಗಿಲಿಂದ ನುಗ್ಗಿಯೇ ಬಿಡ್ತಾರೆ. ನಿಂತೇ ಬಿಡ್ತಾರೆ. ಬೈಸಿಕೋತಾರೆ. ಆದರೆ ಜಗ್ಗಲ್ಲ. ಅವರು ಕೊಟ್ಟ ಮೂರು ನಿಮಿಷದಲ್ಲೆ ಹತ್ತು ವರ್ಷದ ಅನ್ಯಾಯವನ್ನೆಲ್ಲ ಸಂಕ್ಷಿಪ್ತವಾಗಿ ಬಡಬಡಾಂತ ಹೇಳೇಬಿಡ್ತಾರೆ. ವೆಂಕಟಕೃಷ್ಣರಾವ್ ಹಿಂದಿನ ಕಾಲದ ಬಿ. ಎಸ್. ಎ. ,ಯಲ್ಲವೆ? – ಇಂಗ್ಲಿಷನ್ನ ನೆಗ್ಲೆಟ್ ಮಾಡಿದವರಲ್ಲ. ಚೀಫ್ ಸೆಕ್ರೆಟರಿಗೆ ಇಂಪ್ರೆಸ್ಸಾಗತ್ತೆ. ನೋಡೋಣ ಅಂತಾನೆ. ನೋಟ್ ಮಾಡಿಕೋತಾನೆ. ಈ ಮಧ್ಯೆ – ವಿಧಿಯಾಟ ನೋಡಿ – ರೆವಿನ್ಯೂ ಮಂತ್ರಿಗೂ, ಚೀಫ್ ಮಿನಿಸ್ಟರಿಗೂ ವಿರಸವಾಗಿ ರೆವಿನ್ಯೂ ಮಂತ್ರಿ ರಾಜಿನಾಮೆ ಕೊಡ್ತಾನೆ.

“ಎಲ್ಲ ವಿಧಿಯಾಟ” – ಎಂದು ವೆಂಕಟಕೃಷ್ಣರಾವ್ ಇನ್ನೊಮ್ಮೆ ಹೇಳಿ ನಿಟ್ಟುಸಿರಿಟ್ಟು ನನ್ನ ಪ್ರತಿಕ್ರಿಯೆಗೆ ಕಾದರು. ಕುರ್ಚಿಯ ಅಂಚಿನ ಮೇಲಿದ್ದ ನಾನು ಆರಾಮಾಗಿ ಕೂತಿಲ್ಲವೆಂಬ ಕಾತರವನ್ನು ಅವರ ಕಣ್ಣಲ್ಲಿ ಕಂಡು ಕೂತಿದ್ದವನು ಮತ್ತೆ ಕಂತಿ ಒರಗಿದೆ. ತನ್ಮಧ್ಯೆದಿಂಬೆಲ್ಲೊ ಬಿದ್ದಿದ್ದರಿಂದ ಅದಕ್ಕಾಗಿ ಕೈಯಿಂದ ಪರದಾಡಿದೆ. ಹಂದುವಂತಿಲ್ಲ – ಒಂದೇ ಭಂಗಿಯಲ್ಲಿ ಮೈಯನ್ನು ತನ್ನ ಆಳದಲ್ಲಿ ಮಡಚಿಟ್ಟುಕೊಳ್ಳುವ ಆರಾಮು ಕುರ್ಚಿಯದು. ವೆಂಕಟಕೃಷ್ಣರಾವ್ ಎದ್ದು ದಿಂಬನ್ನೆತ್ತಿ ಮತ್ತೆ ನನ್ನ ಕತ್ತಿಗೆ ಇಟ್ಟರು. ಮಾತು ಬದಲಾಯಿಸಲು “ನಿಮಗೆ ಮಕ್ಕಳೆಷ್ಟು?” ಎಂದೆ.

ಈ ಪ್ರಶ್ನೆಗೂ ಅವರು ಕಾದಿದ್ದರಬೇಕು. ಹೋದ ವರ್ಷ ಇದೇ ತಾರೀಖು ಅಕಸ್ಮಾತ್ತಾಗಿ ಸತ್ತ ಮಗನ ಕಥೆಯನ್ನು ಅವರು ಶುರುಮಾಡಿದರು. ವಿವರವಾಗಿ. ನನ್ನ ಮನಸ್ಸನ್ನು ಹೊಗಲು ಬೇಕಾದ ವಿವರಗಳನ್ನು ಭಾವಪೂರ್ಣವಾಗಿ ಒತ್ತಿದರು. ಈ ಘಟನೆ ಕೂಡ ಇನ್ನೊಂದು ಫೈಲಾಯಿತೆಂಬುದು ಮುಂದೆ ನನಗೆ ಗೊತ್ತಾದ್ದರಿಂದ ಕೆಲವು ವಿವರಗಳನ್ನು ಅವರು ಕಟ್ಟಿಕೊಂಡಿರಬೇಕೆಂಬ ನನ್ನ ಅನುಮಾನದಿಂದಾಗಿ ಕಿಂಚಿತ್ ಮುಜುಗರ ಪಡುತ್ತ ಕೇಳಿಸಿಕೊಂಡೆ. ಆದರೂ ನೊಂದ ಮನುಷ್ಯ, ಅದರಲ್ಲಿ ಅನುಮಾನವಿಲ್ಲ. ಬಂದದ್ದನ್ನು ಎಲ್ಲರೂ ನುಂಗಲೇಬೇಕಲ್ಲ – ಒಂದಲ್ಲ ಒಂದು ಕ್ರಮದಲ್ಲಿ. ಆದ್ದರಿಂದ ನನ್ನ ವ್ಯಂಗ್ಯದಲ್ಲೂ ನನಗೆ ಅನುಮಾನವಿಲ್ಲದಿಲ್ಲ. ಹಚ್ಚಿಕೊಳ್ಳದೆ ಬದುಕುತ್ತ ಹೋಗುವುದು ಸಾಧ್ಯವಿಲ್ಲ. ಓಡು ಬೆಳೆದೇ ಬೆಳೆಯುತ್ತೆ. ಪ್ರಾಯಶಃ ಯಾಕೆಂದರೆ ನಾನೂ ಮನುಷ್ಯನಲ್ಲವೆ? ನನಗೂ ಮಕ್ಕಳಿಲ್ಲವೆ? ಆದರೂ ಕೂಡ ನುಣುಪಾದ ಮಾತುಗಳು ಹೊಗಲಾರದ ಯಾವುದೋ ಸಂದಿಯಿಂದ ಎಂದು ಅವರಿಗೇ ಅನ್ನಿಸಿದೆ ಎಂದು ನನಗೆ ಪತ್ತೆಯಾಗಿದ್ದರೆ ಈ ಆಕಸ್ಮಿಕ ಭೇಟಿಯಿಂದ ನಾನೂ ಅರಳಬಹುದಿತ್ತು. ಈಚೆಗೆ ನನ್ನ ಆವರಣವನ್ನು – ಈ ಆವರಣ ಕೂಡ ನನ್ನಿಂದ ಹುಟ್ಟಿಕೊಂಡಿದ್ದಲ್ಲವೆ? – ನಾನು ವ್ಯಂಗ್ಯದಿಂದ ಮಾತ್ರ ನಿರ್ವಹಿಸಬಲ್ಲೆ. ಮಾತು ಹೊಗದ ಸಂದಿ ಕಂಡಿದ್ದರೆ ನಾನೂ ಏನಾದರೂ ಸತ್ಯವಾದ್ದನ್ನು ಹೇಳಬಹುದಿತ್ತು. ನನ್ನ ಗಮನ ಹಿಡಿದಿಡುವಷ್ಟೇ, ನನ್ನ ಸಹಾನುಭೂತಿ ಪಡೆಯುವುದಷ್ಟೇ ಅವರ ಉದ್ದೇಶವೆನ್ನಿಸಿದ್ದರಿಂದ ಸಾಹಿತ್ಯಪ್ರಿಯರೆಂದು ಹೇಳಿಕೊಂಡರೂ ಥಟ್ಟನೇ ನೆನಪಿಗೆ ಬಂದ ಅದೊಂದು ಪದ್ಯದ ಬಗ್ಗೆಯಾದರೂ ಹೇಳಬೇಕೆನ್ನಿಸದ್ದನ್ನು ಹೇಳಲ್ಲಿಲ್ಲ. ಹೇಳಬಹುದಿತ್ತು: ನೋಡಿ ಇಲ್ಲಿ ಕಾಡು ಬೆಳೆಯುತ್ತಿದೆ; ಈ ಎತ್ತರ ತಗ್ಗುಗಳ ಹಸಿರು ಬಯಲಿನಲ್ಲಿ ಈ ಹುತ್ತ, ಈ ಪೊದೆಗಳು ಬೆಳೆಯುತ್ತಿವೆ; ಹೀಗೆ ಅನಿಮಿತ್ತವಾಗಿ ಹರಿಯುತ್ತಿರುವುದನ್ನು ನಿಲ್ಲಿಸಬಲ್ಲ, ಹಿಡಿಯಬಲ್ಲ ಮಧ್ಯಬಿಂದು ಇಲ್ಲಿ ಇಲ್ಲ. ಆದರೆ ಇಲ್ಲೊಂದು ಎತ್ತರದ ಜಾಗದಲ್ಲಿ ನಾನು ಈ ಉನ್ಮುಖವಾದ ಚೀನಿಜಾಡಿಯನ್ನು ಇಡುತ್ತೇನೆ ಎನ್ನಿ. ಆವರಣಕ್ಕೆ ಅನ್ಯವಾದ ವಸ್ತು ಇದು. ಆದ್ದರಿಂದಲೇ ಅವಾಂತರವೆನ್ನಿಸಿದ್ದ ಆವರಣಕ್ಕೆ ಅಲಿಪ್ತವಾಗಿದ್ದೂ ಇದು ರೂಪವನ್ನು ದಯಪಾಲಿಸತ್ತೆ – ಚೆಲ್ಲಿದ್ದಕ್ಕೆ, ಚೆಲ್ಲುತ್ತ ಹೋಗುವುದಕ್ಕೆ ಏಕಾಗ್ರತೆ ಬರುತ್ತೆ. ಕೆಲವು ಘಟನೆಗಳು ಹೀಗೆಯೇ ಸುತ್ತುವ ದೈನಿಕಗಳನ್ನು ಹಿಡಿದು ನಿಲ್ಲಿಸಬಲ್ಲವು, ಕಾಣಿಸಬಲ್ಲವು… ಊಟ, ತಿಂಡಿ, ಆಫೀಸು, ಫೈಲು, ಪೂಜೆ – ಈ ನಿತ್ಯಗಳು ಪೋಷಿಸಿದ ಓಡಿನ ರಕ್ಷೆ ಸೀಳೆ….. ನಮ್ಮ ನಿತ್ಯಗಳನ್ನು ಪರವಸ್ತು ಹೀಗೆ ಹಠಾತ್ತನೆ ಕಾಣಿಸಿಕೊಂಡಿತು ಎನ್ನಿ – ಆಗ… ಅಂಥ ಸಂಯೋಗದಿಂದ….

ಆದರೆ ಈ ಕವಿತೆ ಸಮರ್ಪಕವೆಂದು ಅನ್ನಿಸಲಿಲ್ಲ. ಅಂಥ ಏನನ್ನು ಕಾಣಿಸಲು ಕೂಡ ವೆಂಕೃಷ್ಣರಾಯರನ್ನುಹಿಂಸೆ ಮಾಡಬೇಕಾಗಿ ಬರುತ್ತಿತ್ತು. ಅವರ ಷಡ್ಕರ ಪಟಗಳನ್ನೆಲ್ಲ ಕೆಡವಬೇಕಾಗುತ್ತಿತ್ತು. ಮದುವೆ ಸಮಯದಲ್ಲಿ ಅವರ ಮಾವ ಕೊಟ್ಟ (ನಾನು ಉಪ್ಪಿಟ್ಟು ತಿಂದ) ಭಾರವಾದ ಬೆಳ್ಳಿ ತಟ್ಟೆ, ಎಲೆಯಡಿಕೆ ಹರಿವಾಣ, ನೀರಿಟ್ಟ ಬೆಳ್ಳಿ ಚಂಬುಗಳನ್ನು ಹಂಗಿಸಬೇಕಾಗುತ್ತಿತ್ತು. ಫೈಲುಗಳಿಗೆ ಬೆಂಕಿ ಹಾಕಬೇಕಾಗುತ್ತಿತ್ತು. ಆದರೆ ಯಾವ ಘಳಿಗೆಯಾದರೂ ಸಾಯಬಹುದೆಂದು ಗೊತ್ತಿದ್ದೂ ನೂರಾರು ವರ್ಷ ಉಳಿಯುವಂಥ ಕಾಂಕ್ರೀಟಿನ ಮನೆ ಕಟ್ಟಲು ಆರ್ಡರ್ ತರಲೆಂದು ವೆಂಕಟಕೃಷ್ಣರಾಯರನ್ನು ಹುಡುಕಿ ಬಂದಿದ್ದ ನನಗಾದರೂ ಈ ಹಿಂಸೆ ಮಾಡಲು ಏನು ಅಧಿಕಾರ? ಬರೀ ಅರಿವಿನಿಂದ ಏನು ಪ್ರಯೋಜನ? ನನಗೂ ಪ್ರಪಂಚ ನಿಂತದ್ದಿಲ್ಲ. ನನ್ನಂಥವನು ಸಾವನ್ನು ಸುಖ ಎಂದರೆ ಅದು ಕೂಡ ಬರೀ ಮಾತಾಗುತ್ತೆ. ಓಡಿಗೆ ಆತುಕೊಂಡ ಮಾತಾಗುತ್ತೆ.

ವಿಧಿಯಾಟ ತಪ್ಪಿಸಲು ಸಾಧ್ಯವಿಲ್ಲ ಎಂದು ಅವರ ಹದಿನಾಲ್ಕು ವರ್ಷದ ಗೋಪಾಲ ಸತ್ತ ಹಿಂದಿನ ದಿನದಿಂದ ಕಥೆ ಪ್ರಾರಂಭಿಸಿದರು. ಅವರೂ ತಮ್ಮದೇ ಆದ ರೀತಿಯಲ್ಲಿ ಅರ್ಥ ಕಂಡಿರಲಿಲ್ಲವೆಂದಲ್ಲ. ಆದರೆ ಈ ಪಟಗಳು, ದೇವರ ಕ್ಯಾಲೆಂಡರ್ ಚಿತ್ರಗಳು, ತಂಬೂರಿ, ಹಾಸಿಗೆ, ಚಾಪೆ, ಗೋಂದು, ಕೆಂಪು ಮತ್ತು ಕಪ್ಪು ಶಾಯಿ ಮೇಜಿನ ಮೇಲಿದ್ದ ಫೈಲುಗಳು – ಈ ನಿತ್ಯಗಳ ನಡುವೆಯೂ ನಾವಿಬ್ಬರೂ ಬೆರಗಾಗಬಹುದಾಗಿದ್ದ ಮುಹೂರ್ತಕ್ಕೆ ಅವರು ಅವಕಾಶ ಕೊಡದಂತೆ ತಮಗಾದ ಅರ್ಥಕ್ಕೆ ಅಪ್ಪಿಕೊಂಡಿದ್ದರು. ಅವನ ಬಗ್ಗೆಯೇ ಮಾತಾಡುತ್ತಿದ್ದರೂ ನಮ್ಮ ಪಕ್ಕದಲ್ಲೆ ಇದ್ದ ಆ ಅಲಿಪ್ತ ಸಖನನ್ನೆ ನಾವು ಗುರುತಿಸಲಿಲ್ಲ. ನಾನೂ ವಕ್ರನಾದೆ – ಅವರು ಜಿನುಗಿದ್ದರಿಂದ.

ತವರಿನಲ್ಲಿ ಅಜ್ಜನ ಶ್ರಾದ್ಧ ಮಾರನೇ ದಿನ. ಹೆಂಡತಿ ಮಕ್ಕಳು ಬಸ್ಸಿಗಾಗಿ ಹೊರಟು ನಿಂತರು. ಗೋಪಾಳ ಮಾತ್ರ ಹೋಗಲ್ಲ ಎಂದ. ಅಪ್ಪನನ್ನು ಅವ ‘ಅಣ್ಣ’ ಎಂದು ಕರೆಯುವುದು. “ಅಣ್ಣ ನಾನು ಒಂದೇ ಒಂದು ದಿನವೂ ಈ ವರ್ಷ ಸ್ಕೂಲ್‌ತಪ್ಪಿಕೊಳ್ಳೋದಿಲ್ಲ” ಎಂದ. ತನ್ನ ಅಣ್ಣನಿಗಿಂತ ಒಂಭತ್ತನೇ ಸ್ಟ್ಯಾಂಡರ್ಡಿನಲ್ಲಿ ಹೆಚ್ಚು ಮಾರ್ಕ್ಸ್ ತಗೋಬೇಕು ಅಂತ ಅವನ ಛಲ. ಹೆಂಡತಿ ಮಕ್ಕಳಿಗೆ ಬಸ್ಸು ಸಿಗಲಿಲ್ಲ. ಹಿಂದೆ ಬಂದರು. ಅಷ್ಟು ಹೊತ್ತಿಗೆ ಚಿಕ್ಕಮಗಳೂರಿಗೇ ಹೋಗುವವರ ಪರಿಚಯದವರ ಕಾರ್ ಬಂತು. ಕಾರಲ್ಲಾದರೂ ಹೋಗುತ್ತಾನೋ ಎಂದು, “ನಾಳೆ ಮಾರ್ನಿಂಗ್ ಕ್ಲಾಸ್ – ತಪ್ಪಿದರೆ ಅರ್ಧದಿನ ತಪ್ಪತ್ತೆ, ಹೋಗು” ಎಂದು ಎಲ್ಲರೂ ಒತ್ತಾಯ ಮಾಡಿಯಾಯಿತು. ಅದಕ್ಕೂ ಗೋಪಾಲ ಒಲ್ಲೆ ಎಂದ.

ಮಾರನೇದಿನ ಶನಿವಾರ – ಡಿವಿಜನಲ್ ಕಮಿಷನರು ಇನ್‌ಸ್ಪೆಕ್ಷನಿಗೆ ಬರುವವರಿದ್ದರು. ಅದಕ್ಕಾಗಿಯೇ ಮಾವನ ತಂದೆಯವರ ಶ್ರಾದ್ಧಕ್ಕೆ ವೆಂಕಟಕೃಷ್ಣರಾಯರು ಹೋಗದೇ ನಿಂತದ್ದು ಆಯಿತ? ಶನಿವಾರ ಊಟ ಮಾಡಿ ಸ್ವಲ್ಪ ನಿದ್ದೆ ಮಾಡಿ ಮೂರು ಗಂಟೆಗೆ ಆಫೀಸಿಗೆಂದು ಸೈಕಲ್‌ತಗೊಂಡು ಹೊರಟರು. ಬರೆಯುತ್ತ ಕೂತಿದ್ದ ಗೋಪಾಲ ಓಡಿ ಬಂದ. ‘ಅಣ್ಣ ಹಾರ್ಲಿಕ್ಸ್‌ಕುಡಿದು ಹೋಗು’ ಎಂದ. ‘ಹಾರ್ಲಿಕ್ಸ್ ಬೇಡ ಕಣೊ, ಆಫೀಸಿಗೆ ಹೊತ್ತಾಯ್ತು’ ಎಂದರು ರಾಯರು. ‘ಇರು ಅಣ್ಣ, ಒಂದೇ ಒಂದು ನಿಮಿಷ. ಫಸ್ಟ್‌ಕ್ಲಾಸ್ ಹಾರ್ಲಿಕ್ಸ್ ಮಾಡಿ ಕೊಡ್ತೀನಿ. ಅಮ್ಮ ನಿತ್ಯಕೊಳ್ಳುವಷ್ಟೇ ಹಾಲನ್ನು ಇವತ್ತೂ ಹಾಕಿಸಿಕೊಂಡಿದ್ದೆ. ಸುಮ್ಮನೇ ಹಾಲು ಹಾಳಾಗೋದು ಬೇಡ’ ಎಂದು ಗೋಪಾಲ ಒತ್ತಾಯ ಮಾಡಿ ಸ್ಟೌವ್ ಹಚ್ಚಲು ಅಡಿಗೆ ಮನೆಗೆ ಓಡಿಯೇಬಿಟ್ಟ. ಆಯತ? ಆಗಲಿ ಎಂದು ರಾಯರು ಕೂತರು. ಹಾರ್ಲಿಕ್ಸ್ ಕುಡಿದು ಆಫೀಸಿಗೆ ಸೈಕಲ್ ಮೇಲೆ ಹೋದರು.

ಆಫೀಸಿಗೆ ಹೋಗಿ ಫೈಲ್‌ನೋಡುತ್ತ ಕಮಿಷನರಿಗೆ ಕಾಯುತ್ತ ಕೂತು ಇನ್ನೂ ಇಪ್ಪತ್ತೊ, ಇಪ್ಪತ್ತೈದು ನಿಮಿಷವಾಗಿರಲಿಲ್ಲ – ಹೊರಗೆ ಮಳೆ ಹೊಯ್ಯುತ್ತಿತ್ತು – ಡಾಕ್ಟರಿಂದ ಫೋನ್ ಬಂತು ನಿಮ್ಮ ಮಗ ಗೋಪಾಲನಿಗೆ ಆಕ್ಸಿಡೆಂಟ್ ಆಗಿದೇಂತ, ‘ಛೇ ಸಾಧ್ಯವೇ ಇಲ್ಲ’ ಎಂದರು ರಾಯರು. ‘ಇಲ್ಲ. ನಿಜ. ಕೂಡಲೇ ಬನ್ನಿ’. ಎಂದರು ಡಾಕ್ಟರ್. ಮಳೆಯಲ್ಲೆ ಸೈಕಲ್ ಮೇಲೆ ರಾಯರು ಹೊರಟರು.

ಅದೇನಾಯಿತು ಗೊತ್ತೋ? ಮಳೆಕತ್ತಲೆಯಾದ್ದನ್ನ ಗೋಪಾಲ ನೋಡಿದ್ದಾನೆ. ರಾತ್ರೆ ಊಟಕ್ಕೆ ಇನ್ನು ಯಾರು ಅನ್ನ ಸಾಂಬಾರು ಪಲ್ಯ ಮಾಡ್ತಾರೆ ಅನ್ನಿಸಿದೆ. ಮನೆಯಲ್ಲಿದ್ದ ರಾಮಾಯಣ, ಭಾರತ, ಭಾಗವತ, ಕಾದಂಬರಿಗಳು – ಹೀಗೆ ಸುಮಾರು ಮುನ್ನೂರು ಪುಸ್ತಕಗಳ ಲಿಸ್ಟ್ ಮಾಡಿ, ಆ ಪುಸ್ತಕಗಳಲ್ಲಿ ಏನೇನಿದೆ ಎಲ್ಲ ಡೀಟೈಲಾಗಿ ಬರೆದಿಡುತ್ತಿದ್ದ ಗೋಪಾಲ್. ಆದ್ದರಿಂದ ಅನ್ನ ಮಾಡಿದರಾಯಿತು, ಯಾಕೆ ಸಮಯ ಹಾಳು ಮಾಡೋದು, ಹೋಟೆಲಿಂದ ಸಾಂಬಾರು ಪಲ್ಯ ತಂದುಬಿಡೋದು – ಅಂತ ಕೊಡೆ ಹಿಡಕೊಂಡು ಪಾತ್ರೆ ತಗೊಂಡು ಗೋಪಾಲ ಹೊರಟ. ಸಾಯಂಕಾಲ ಮಳೆ ಇನ್ನೂ ಜೋರಾಗಿಬಿಡಬಹುದು. ಈಗಲೇ ತಂದು ಬಿಡೋನ, ಆಮೇಲ ಬಿಸಿ ಮಾಡಿ ಬಡಿಸಿದರೆ ಆಯ್ತು ಅಂತ. ನಾನು ತಣ್ಣಗಾದ್ದನ್ನ ತಿನ್ನುವವನಲ್ಲ – ಬಲು ಬಡಿವಾರದ ಪೈಕಿ. ಆಯ್ತ? ಗೋಪಾಲ ಎಲ್ಲದರಲ್ಲೂ ಹೀಗೇ ಕರಾರುವಾಕ್ಕು. ಒಂದು ಸಿನಿಮಾ ಕೂಡ ನೋಡ್ತ ಇರಲಿಲ್ಲ. ಎಲ್ಲರ ಜೊತೆ ನೀನೂ ಸಿನಿಮಾಕ್ಕೆ ಹೋಗಯ್ಯ ಅಂದ್ರೆ ಆ ದುಡ್ಡು ಇಸಕೊಂಡು ಸುಮಾರು ಇನ್ನೂರ ಐವತ್ತು ರೂಪಾಯಿ ಒಟ್ಟು ಮಾಡಿದ್ದ. ಆಯಿತ? ಕೊಡೆ ಹಿಡಕೊಂಡು ಹೊರಟ. ಪಕ್ಕದ ಮನೆ ಹುಡುಗ ನಿದ್ದೆ ಮಾಡಿದ್ದರಿಂದ, ಇನ್ನೊಬ್ಬ ಸ್ನೇಹಿತನನ್ನ ಕರಕೊಂಡು ಹೋಟೆಲಿಗೆ ಹೋಗಿ ಸಾಂಬಾರು ಪಲ್ಯಕೊಂಡುಕೊಂಡ. ಹಿಂದಕ್ಕೆ ಬರೋವಾಗ ಮಳೆ ಶುರುವಾಯ್ತು. ಸ್ನೇಹಿತ ‘ಹೇಳಿದ, ‘ಇಲ್ಲೆ ನಿಂತಿದ್ದು ಮಳೆ ನಿಂತ ಮೇಲೆ ಹೋಗೋಣ ಕಣೊ’ ಅಂತ. ನೋಡಿ ವಿಧಿಯಾಟ ಹೇಗಿದೆ? ‘ಮಳೆ ಇನ್ನೂ ಜೋರಾಗಿ ಬಿಡಬಹುದು ಕಣೊ, ಹೋಗಿ ಬಿಡೋಣ ಸರ‍್ರನೆ’ ಅಂತ ಗೋಪಾಲ ಹೊರಟೇ ಬಿಟ್ಟ – ಮಳೇಲ್ಲೆ. ದಾರೀಲಿ ಬರೋವಾಗ ಒಂದು ಕಾರು ಹಿಂದಿನಿಂದ ಬಂದು ಅವನಿಗೆ ಡ್ಯಾಶ್ ಹೊಡೀತು. ಎತ್ತಿ ಹಾಕಿತು. ಬಾನೆಟ್ ಮೇಲೆ ಬಿದ್ದ. ಕಾರು ಓಡುತ್ತಿತ್ತು. ಬಾನೆಟ್‌ನಿಂದ ಉರುಳಿ ಕೆಳಗೆ ಬಿದ್ದ. ಕಾರು ಅವನ ಮೇಲೆ ಹರಿಯಿತು. ಕಾರಿನವನು ನಿಲ್ಲಲೇ ಇಲ್ಲ – ಓಡಿಹೋಗಿ ಬಿಟ್ಟ. ಆಮೇಲೆ ಸಿಕ್ಕಿದ ಎನ್ನಿ’ – ಅದೇ ಇನ್ನೊಂದು ಕಥೆ.

ಡಾಕ್ಟರ್ ಶಾಪಿನ ಹತ್ತಿರಾನೆ ಈ ಆಕ್ಸಿಡೆಂಟ್ ನಡೆದದ್ದು – ಡಾಕ್ಟರ್ ನೋಡ್ತಾರೆ. ಮೈಮೇಲೆ ಚೂರು ರಕ್ತ ಇಲ್ಲ. ‘ಕೂಡಲೇ ನೀವು ಇವನನ್ನು ಮೈಸೂರಿಗೆ ಕರಕೊಂಡು ಹೋಗಬೇಕು’ ಅಂದರು. ಗೋಪಾಲನಿಗೆ ಜ್ಞಾನ ತಪ್ಪಿರಲಿಲ್ಲ. “ಅಣ್ಣ – ಬಟ್ಟೆ ಒಣಗಿಹಾಕಿದ್ದು ಹೊರಗೇ ಇದೆ. ಮನೇ ಒಳಗೆ ತರಬೇಕು” ಎಂದು ಜೇಬಿನಿಂದ ಮನೆ ಬೀಗದ ಕೈ ತೆಗೆದುಕೊಟ್ಟ. ಅಷ್ಟೊಂದು ನಿಗದ ಹುಡುಗ ಅವನು. ಒಂದರ್ಧ ಗಂಟೇಲಿ ಅಲ್ಲಿಂದ ಇಲ್ಲಿಂದ ಅಂತ ಎಂಟುನೂರು ರೂಪಾಯಿ ಒಟ್ಟು ಮಾಡಿದ್ದಾಯಿತು. ಮೈಸೂರಿಗೆ ಹೋಗುವುದಲ್ಲ – ಏನಕ್ಕಾದರೂ ಬೇಕಾದರೆ ಅಂತ. ಕಾರೂ ಸಿಕ್ಕಿತು. ಡಾಕ್ಟರ್‌ರೂ ಜೊತೆಗೆ ಬಂದರು. ಮೈಸೂರು ಆಸ್ಪತ್ರೇಲಿ ಆಡ್ಮಿಟ್ ಮಾಡಿದ್ದೂ ಆಯಿತು. ಆಪರೇಶನ್ ಮಾಡಬೇಕೆಂದು ಮೂರು ಇಂಜಕ್ಷನ್ ಕೊಟ್ಟರು. ಮೂರನೇ ಇಂಜಕ್ಷನ್ ಕೊಡುವಾಗ ಒಂದೇ ಉಸಿರಿಗೆ ‘ಅಮ್ಮ’ ಎಂದ. ಕಣ್ಣು ಮುಚ್ಚಿಬಿಟ್ಟ.

ಅವನ ಬಾಡಿ ನೋಡಿಕೊಳ್ಳುವ ವ್ಯವಸ್ಥೆ ಮಾಡಿ ಅದೇ ಕಾರಲ್ಲಿ ಚಿಕ್ಕಮಗಳೂರಿಗೆ ಸೀದ ಹೊರಟದ್ದಾಯಿತು. ಕತ್ತಲು, ಜೇಬಲ್ಲಿ ಎಂಟುನೂರು ರೂಪಾಯಿಯಿದೆ. ಮಳೆ ಬರುತ್ತಿದೆ. ದಾರಿಯಲ್ಲಿ ನರಹುಳ ಕಾಣಿಸಿದಲು. ಕಾರನ್ನು ಜೋರು ಓಡಿಸಬೇಡ ಮರಾಯ ಎಂದೆ. ಹೆದರಿಕೆಯಾಗಿತ್ತು, ನಡೂರಸ್ತೆಯಲ್ಲಿ ಒಂದು ಕೆಂಬೂತ ಪಕ್ಷಿ. ಅದು ಇದ್ದಕ್ಕಿದ್ದಂತೆ ನಡೂರಸ್ತೆಯಲ್ಲಿ ಕೂತಲ್ಲಿಂದಲೆ ಮೇಲಕ್ಕೆ ಧಿಗ್ಗನೆ ಹಾರಿ ಬಿಡುವುದೆ? ಒಂದು ಕಾಡುಬೆಕ್ಕು ಬಲದಿಂದ ಎಡಕ್ಕೆ ಓಡಿಬಿಡುವುದೆ? ಈ ಕಾರು ಚಿಕ್ಕಮಗಳೂರು ತಲ್ಪತ್ತೊ, ಇಲ್ಲವೊ – ನಿಧಾನವಾಗಿಹೋಗಯ್ಯ ಎಂದೆ.

ಹೆಂಡತಿ ಮಾವ ಎಲ್ಲ ‘ಅದೇನು ಬಂದದ್ದು ಇದ್ದಕ್ಕಿದ್ದಂತೆ ಎಂದರು. ’ ಗೋಪಾಲನಿಗೆ ಆಕ್ಸಿಡೆಂಟ್ ಆಗಿ ಸ್ವಲ್ಪ ನೋವಾಗಿದೆ. ನಿನ್ನನ್ನ ಕರಕೊಂಡು ಮೈಸೂರಿಗೆ ಹೋಗೋಣಾಂತ ಬಂದೆ ಎಂದೆ. ಅವಳು ತುಂಬ ಡೆಲಿಕೇಟು. ಹೇಗೆ ಬಾಯಾರೆ ಹೇಳಲಿ? ಸುಳ್ಳೇ ಸುಳ್ಳು ಎಂದಳು. ಮಧ್ಯಾಹ್ನದಿಂದ ಹೊಟ್ಟೇಲಿ ಬೆಂಕಿ ಬಿದ್ದಂತೆ ಆಗ್ತಿತ್ತು ಎಂದಳು. ಸುಳ್ಳಲ್ಲ ಅಂತ ತೋರಿಸಲಿಕ್ಕಾಗಿ ಶ್ರಾದ್ಧದ ವಡೆ ತಿಂದೆ. ಪಾಯಸ ಕುಡಿದೆ, ನಾಳೆ ಬೆಳಿಗ್ಗೆ ಹೋದರಾಯಿತು ಎಂದೆ. ‘ಇಲ್ಲ ಈಗಲೇ ಹೋಗೋಣ’ ಅಂತ ಅವಳು ಪಟ್ಟು ಹಿಡಿದಳು. ‘ಬೇಡ ಮಾರಾಯ್ತಿ, ಡ್ರೈವರಿಗೆ ಸುಸ್ತಾಗಿದೆ. ಅವನು ನಿದ್ದೆ ಮಾಡೋದು ಬೇಡವೆ? ದಾರಿಯಲ್ಲಿ ನಿದ್ದೆ ಬಂದು ಬಿಟ್ಟರೆ ಏನುಗತಿ?’ ಎಂದೆ. ‘ಆಕ್ಸಿಡೆಂಟಾದ ಮಗನ್ನ ನೀವು ಹೀಗೆ ಬಿಟ್ಟು ಬರೋದು ಸುಳ್ಳು, ಖಂಡಿತಾ ಏನೋ ಆಗಿದೆ, ಇನ್ನೊಂದು ಕಾರು ಬಾಡಿಗೆಗೆ ಮಾಡಿಕೊಂಡು ಹೋಗೋಣ’ ಎಂದಳು. ‘ಅದರ’ ಅಗತ್ಯವಿಲ್ಲ ಮಾರಾಯಿತಿ ಎಂದೆ. ‘ನಿಮಗೆ ದುಡ್ಡಿನ ಮೇಲೆ ಆಸೆ’ ಎಂದು ರೇಗಿ ತಾನು ಕೊಡಿಸಿಟ್ಟ ಹಣವನ್ನೆಲ್ಲ ಕೊಡಲು ಬಂದಳು. ‘ಇಗೊ ಇಲ್ಲಿ ಇಲ್ಲಿ ಎಂಟುನೂರು ಇದೆ. ನೀನೇ ಇಟ್ಟುಕೋ. ಬೆಳಿಗ್ಗೆ ಹೋದರೆ ಆಯಿತು. ತಂದ ಕಾರೇ ಇದೆಯಲ್ಲ’ ಎಂದು ಅಂತೂ ಕೊನೆಗೆ ಅವಳನ್ನು ಒಪ್ಪಿಸಿದ್ದಾಯಿತು. ಬೆಳಿಗ್ಗೆ ಐದು ಗಂಟೆಗೇ ಎದ್ದು ಮುಖ ತೊಳೆದು, ಕಾಫಿ ಕುಡಿದು ಹೊರಟೆವು. ಊರಿಂದ ನನ್ನ ಜೊತೆ ಮೈಸೂರಿಗೆ ಬಂದಿದ್ದ ಡಾಕ್ಟರ್ ಅವರ ಭಾವ ಎಕ್ಸಿಕ್ಯುಟಿವ್ ಎಂಜಿನಿಯರ್ ಮನೇಲಿ ಉಳಿದಿದ್ದರು. ಲಕ್ಷ್ಮೀಪುರಂನಲ್ಲಿ ಮನೆ. ಸೀದಾ ಅವರಿದ್ದಲ್ಲಿಗೆ ಹೋದೆ. ಇದೇನು ನೇರವಾಗಿ ನಾವು ಆಸ್ಪತ್ರೆಗೆ ಹೋಗುತ್ತಿಲ್ಲ ಎಂದು ಇವಳು ಕೇಳಿದಳು. ಇರು, ಬಂದೆ – ಎಂದು ನಾನು ಡಾಕ್ಟರ್ ಹತ್ತಿರ ಹೋಗಿ, ‘ಮಾರಾಯರೆ ನೀವೇ ಅವಳಿಗೆ ಹೇಳಬೇಕು. ಅವಳು ಡೆಲಿಕೇಟು’ ಎಂದೆ. ಹಾ ಎಂದರು. ಹೇಳಿದರು. ಕೇಳಿದ್ದೇ ‘ಮುಖ ನೋಡಬೇಕು’ ಎಂದಳು. ಅಷ್ಟೆ. ಆದರೆ ನೋಡೋದು ಏನು ಉಳಿದಿತ್ತು? ನೋಡಿದಳು.

ಆಯ್ತ? – ವಿಧಿಯಾಟ ಎನ್ನೋದಕ್ಕೆ ಹೇಳ್ತೀನಿ. ಆ ಕಾರನ್ನ ಡ್ರೈವ್ ಮಾಡ್ತ ಇದ್ದವನು ಆಗ ತಾನೇ ಮದುವೆಯಾಗಿ ಹಠಹಿಡಿದು ಮಾವನಿಂದ ಕಾರ್ ತೆಗೆಸಿಕೊಂಡಿದ್ದ. ಅವನಿಗೆ ಡ್ರೈವಿಂಗ್‌ಗೊತ್ತಿರಲಿಲ್ಲ. ಅವನ ಅಪ್ಪ ‘ನಿನಗೆ ಕಾರ್ ಅಲ್ಲದೆ ಜೊತೆಗೆ ಮುನ್ನೂರು ರೂಪಾಯಿ ಸಂಬಳದ ಡ್ರೈವರೂ ಬೇಕೊ’ ಎಂದು ರೇಗಿದನೆಂದು ಅವನೇ ಕಾರನ್ನು ಡ್ರೈವ್ ಮಾಡಿಕೊಂಡು ಬಂದು ನನ್ನ ಮಗನ್ನ ಕೊಂದ. ಹಿಂದಿನಿಂದ ಬಂದು ಕೊಂದ. ದೊಡ್ಡವರ ಮಗ ನೋಡಿ. ಡ್ರೈವ್ ಮಾಡ್ತಾ ಇದ್ದದ್ದು ಅವ ಅಲ್ಲವೇ ಅಲ್ಲ – ಇನ್ನು ಯಾರೋ ಲೈಸೆನ್ಸ್ ಇದ್ದವ ಅಂತ ಕೇಸನ್ನೆ ಬದಲಾಯಿಸಲು ಅವರು ಶತಾಯ ಗತಾಯ ಸಾಹಸಪಟ್ಟರು.

ಅದು ಹೇಗೆ ತಪ್ಪಿತು ಗೊತ್ತೆ? ಅದು ಇನ್ನೊಂದು ಕಥೆ. ಡಿ. ಐ. ಜಿ. ಭಾವನವರ ಒಂದು ಫೈಲಿತ್ತು. ಎಷ್ಟು ತಿಂಗಳು ಕಳೆದರೂ ಆ ಕೇಸ್ ವಿಲೇವಾರಿಯಾಗಿರಲಿಲ್ಲ. ನಾಟಕ ವ್ಯಾಪಾರಕ್ಕೆ ಸಂಬಂಧ ಪಟ್ಟ ಆ ಫೈಲು ಕೊನೇಗೆ ನನ್ನ ಹತ್ತಿರ ಬಂತು. ನಾನದನ್ನ ಒಂದೇ ದಿನದಲ್ಲಿ ಸಾಲ್ವ್ ಮಾಡಿದೆ. ಒಂದು ದಿನ ಹೀಗೇನಾನು ನನ್ನ ಪ್ರಮೋಶನ್ ಸಂಬಂಧವಾಗಿ ಎಂ. ಎಲ್. ಎ. ಒಬ್ಬರನ್ನ ನೋಡೋಣಾಂತ ಹೋಗ್ತ ಇದ್ದೆ. ದಾರೀಲಿ ಯಾರೋ ನನ್ನ ಚಪ್ಪಾಳೆ ತಟ್ಟಿ ಕರೆದ್ರು. ಹಿಂದೆ ನೋಡಿದೆ. ಒಬ್ಬ ಜವಾನ, ‘ಡಿ. ಐ. ಜಿ. ಕರೀತ ಇದಾರೆ’ ಅಂದ. ಏನು ಗ್ರಹಚಾರ ಬಂತಪ್ಪ ಅಂತ ಹೋದೆ. ನೋಡಿದ್ರೆ ಅಲ್ಲಿ ಅವರು, ಅವರ ಭಾವ ಇದಾರೆ. ‘ಇವರೇ ವೆಂಕಟಕೃಷ್ಣ ರಾಯರು. ನಮ್ಮ ಫೈಲನ್ನು ವಿಲೇವಾರಿ ಮಾಡಿದವರು’ ಅಂತ ಭಾವ ಪರಿಚಯ ಮಾಡಿಕೊಟ್ಟರು. ಡಿ. ಐ. ಜಿಗೆ ನನ್ನ ಮಗನ ವಿಷಯ ಅರಿಕೆ ಮಾಡಿಕೊಂಡೆ. ದೊಡ್ಡ ಮನುಷ್ಯ – ಕೂಡಲೇ ಸಕ್ಲ್ ಇನ್ಸ್‌ಸ್ಪೆಕ್ಟರಿಗೆ ನನ್ನೆದುರೇ ಫೋನ್ ಮಾಡಿದರು. ಕೇಸನ್ನೇ‌ನಾದರೂ ಬದಲಾಯಿಸಿದರೆ ಹುಷಾರ್ ಅಂತ ಗದರಿಸಿದರು.

ಆಯ್ತ? ಈಗ ನಾನು ಸಿವಿಲ್ ಕೇಸ್ ಹಾಕಿದ್ದೇನೆ. ನನ್ನ ಮಗ ಬದುಕಿದ್ದರೆ ಇಷ್ಟು ದುಡಿಯುತ್ತಿದ್ದ, ಇಷ್ಟು ನನಗೆ ಕೊಡುತ್ತಿದ್ದ, ಇಷ್ಟು ನನಗೆಲಾಸ್ ಆಗಿದೇಂತ ಲೇಖ್ಖ ತೋರಿಸಿ ಒಂದು ಲಕ್ಷ ರೂಪಾಯಿಗೆ ಕಾರಿನ ಯಜಮಾನನ ವಿರುದ್ಧ ದಾವಾ ಹಾಕಿದೇನೆ. ಉತ್ಪ್ರೇಕ್ಷೆಯಲ್ಲ. ಗೋಪಾಲ ತುಂಬ ಜಾಣ, ಅದಕ್ಕಿಂತ ಹೆಚ್ಚು ದುಡಿದು ಎಲ್ಲ ಹಣವನ್ನೂ ‘ತಗೋ ಅಣ್ಣ’ ಎಂದು ನನ್ನ ಕೈಮೇಲೆ ಇಡುತ್ತಿದ್ದ, ನಿಸ್ಸಂಶಯವಾಗಿ.

ಈಗೇನೋ ಕಾಂಪ್ರಮೈಸ್‌ಗೆ ಪ್ರಯತ್ನ ಮಾಡ್ತಾ ಇದಾರೆ ಅನ್ನಿ. ಆ ಕಾರಿನ ಯಜಮಾನರು ಈಗಿನ ರೆವಿನ್ಯೂ ಮಂತ್ರಿಗಳ ಕುಟುಂಬದವರು. ನನ್ನನ್ನ ತಹಸೀಲ್ದಾರಾಗಿ ಪ್ರೊಮೋಶನ್ ಮಾಡಿಸ್ತೀನಿ ಅಂತಲೂ ಹೇಳ್ತಿದಾರೆ. ನೋಡೋಣ.

ವೆಂಕಟಕೃಷ್ಣರಾವ್ ಎದ್ದುನಿಂತರು. ಕೆಳಗೆ ತೆಗೆದಿದ್ದ ಪಟಗಳನ್ನೆಲ್ಲ ಆಯಾಯ ಜಾಗದಲ್ಲಿ ತೂಗುಹಾಕಿದರು. ಒಳಗಿಂದ ಒಂದು ಆಟೋಗ್ರಾಫ್ ಬುಕ್ಕು ತಂದರು.

“ಗೋಪಾಲ ಒಂದು ನೂರು ಜನ ಲೇಖಕರ ಸಹಿ ಸಂಗ್ರಹಣೆ ಮಾಡಬೇಕೂಂತ ಇದ್ದ. ಸುಮಾರು ತೊಂಬ್ಬತ್ತನ್ನು ಅವನು ಮಾಡಿ ಮುಗಿಸಿದ್ದ. ಉಳಿದ ಒಂಬತ್ತನ್ನ ನಾನು ಹಾಕಿಸಿಕೊಂಡೆ. ಇವತ್ತಿಗೆ ಒಂದು ವರ್ಷ, ಸಂಯೋಗ ಹೇಗಿದೆ ನೋಡಿ, ನೋವೊಂದು ಸಹಿ ಹಾಕಿದರೆ ನೂರಾಗುತ್ತೆ. ಅವನ ಆತ್ಮಕ್ಕೆ ಶಾಂತಿಯಾಗುತ್ತೆ. ವಿಧಿಯಾಟ – ಇವತ್ತೆ ನೀವು ಬರಬೇಕೆ?” ಎಂದು ಪುಸ್ತಕ ಕೊಟ್ಟರು.

ಏನು ಬರೆಯುವುದು ಹೊಳೆಯಲಿಲ್ಲ. ಪುಸ್ತಕದ ತುಂಬ ಉಳಿದವರು ಬರೆದ ಆಣಿ ಮುತ್ತುಗಳಿಗಿಂತ ದೊಡ್ಡ ಯಾವ ಮಾತನ್ನು ನೂರನೇ ಲೇಖಕನಾಗಿ ನಾನು ಬರೆಯಲಿ? ಹೀಗೆ ಬರೆದು ಸಹಿಹಾಕಿದೆ.

“ದಾರಿಯಲ್ಲಿ ಬರುವಾಗ ನಾನು ಸಾಯಬಹುದಿತ್ತು. ಆಗ ಈ ಮಾತುಗಳನ್ನು ಬರೆಯುವುದು ಸಾಧ್ಯವಿರುತ್ತಿರಲಿಲ್ಲ. ಆದರೆ ಬದುಕಿರುವುದಕ್ಕೆ ನಾನು ಕೃತಜ್ಞನಾಗಿರಬೇಕೇ? ಯಾರಿಗೆ – ತಿಳಿಯದು. ”

ಪುಸ್ತಕ ಮುಚ್ಚಿ ಎದ್ದು ನಿಂತೆ. ನೀಟಾಗಿ ತಲೆ ಬಾಚಿದ್ದರೂ ತುಂಟು ಕಣ್ಣುಗಳಲ್ಲಿ ನಗುತ್ತಿದ್ದ ಗೋಪಾಲನ ಫೋಟೋವನ್ನು ವೆಂಕಟಕೃಷ್ಣರಾಯರು ತೋರಿಸಿದರು. ನನಗಾಗಿ ಆಟೊ ತರಲು ನಾನೆಷ್ಟು ಬೇಡವೆಂದರೂ ಅವರೇ ಹೋದರು.

ಮೈಸೂರು
೧೦ ಜುಲೈ ೧೯೭೬

* * *