ಕೆರೆಗೆ ಹಾರಿ ಪ್ರಾಣ ಕಳೆದುಕೊಳ್ಳಬೇಕೆಂದು ಅವಳು ಬಂದದ್ದು. ಆದರೆ ಮನಸ್ಸು ಎಲ್ಲೆಲ್ಲೊ ಆಡುತ್ತಿದೆ. ಈ ದೃಶ್ಯ ಅಸಂಬಂಧವಾಗಿ ಮರುಕಳಿಸತ್ತೆ: ದಾರಿಯಲ್ಲಿ ಕಾರನ್ನು ನಿಧಾನ ಮಾಡಿದಾಗ ಕಂಡದ್ದು; ಹುಲ್ಲು ಹೊದೆಸಿದ ಗುಡಿಸಲು. ಎದುರು ಪೆಟ್ಟಿಗೆ ಗೂಡಿನ ಅಂಗಡಿ. ಅಂಗಡಿಯಲ್ಲಿ ಒಬ್ಬಳು ತೋರವಾದ ಹೆಂಗಸು. ತೊಡೆ ಮೇಲೊಂದು ಮಗು. ನೇತುಹಾಕಿದ ಎಂದು ಬಾಳೆಹಣ್ಣಿನ ಗೊನೆಗಳು. ಕತ್ತದ ತುದಿಯಲ್ಲಿನ ಬೆಂಕಿಯಿಂದ ಒಬ್ಬ ಮುದುಕ ಬೀಡಿ ಹಚ್ಚಿಕೊಳ್ಳುತ್ತಿದ್ದ.

ಅಥವಾ ಕೆರೆಯಲ್ಲಿ ಹಸಿರಾದ ಎಲೆಯ ಈ ಸಸ್ಯ ಹಬ್ಬುತ್ತ ಹಬ್ಬುತ್ತ ಹೋಗೋದು. ಬಲಕ್ಕೆ ಇದ್ದ ಬೆಟ್ಟದಿಂದ ಕಾರೊಂದು ಬೆಳಕು ಚೆಲ್ಲುತ್ತ ಈಗ ಕಾಣಿಸುತ್ತ ಮತ್ತೆ ಮರೆಯಾಗತ್ತ ಬಳಸುದಾರಿಯಲ್ಲಿ ಇಳಿಯುತ್ತಿರೋದು. ಬೆಳದಿಂಗಳಲ್ಲಿ ಕೂಗುವ ಪಕ್ಷಿ – ಇದರ ಹೆಸರೇನೊ? – ಏರಿಕೆಯ ಸ್ವರದಲ್ಲಿ ಕೂಗತ್ತೆ. ಕೆರೆಯಿಂದ ತಂಪಾದ ಗಾಳಿ ಬೀಸತ್ತೆ. ಹೀಗೇ ಕೂತಿದ್ದರೆ ಕಾಣಿಸತ್ತೆ, ಕೇಳಿಸತ್ತೆ, ನಾಳೆ ಬೆಳಗಾಗತ್ತೆ. ಎದುರು ಸೂರ್ಯ ಹುಟ್ಟುತ್ತಾನೆ. ಸತ್ತರೆ ಇಲ್ಲ.

ಕಟುವಾದ ವಾಸನೆ ಎಲೆಯ ಈ ಪೊದೆಯಾಚೆ ಇನ್ನೊಂದು ಪೊದೆಯಿದೆ. ಅದರ ಮರೆಯಲ್ಲಿ ಇನ್ನೊಂದು ವ್ಯಕ್ತಿ ಕೂತಿರಬಹುದು. ಮೊದಲೇ ಬಂದವನಿರಬೇಕು. ಗಂಡಸಿರಬೇಕು. ಅಥವಾ ತನ್ನಂತೆ ಇನ್ನೊಬ್ಬ ಅತಿ ಆಧುನಿಕ ಹೆಣ್ಣಿರಬೇಕು. ತನ್ನ ನಂತರ ಬಂದಿದ್ದರೆ ಹೆಜ್ಜೆ ಸಪ್ಪಳ ಕೇಳಿಸಿರುತ್ತಿತ್ತು. ಈಗ ಅಲ್ಲಿಂದ ಸಿಗರೇಟಿನ ವಾಸನೆ ಬರುತ್ತಿದೆ.

ಬೆನ್ನಿನ ಮೇಲೆ ಚೆಲ್ಲಿದ ಕಪ್ಪುಕೂದಲನ್ನು ಒಟ್ಟುಮಾಡಿ ಸಡಿಲವಾದ ಗಂಟು ಹಾಕಿದಳು. ನೀರಲ್ಲಿ ಮುಳುಗಿ ಸತ್ತ ಹೆಣದ ಮುಖ ಬಾತಿರುತ್ತೆ. ಚಿಕ್ಕವಳಿದ್ದಾಗ ಎಲ್ಲರಿಗೂ ಪ್ರಿಯವಾಗಿದ್ದ ಎಡಗೆನ್ನೆಯ ಮೇಲಿನ ಮಚ್ಚೆ ಬಾತ ಮುಖದಲ್ಲಿ ಕಾಣಿಸಲ್ಲ. ಬೋರಲಾಗಿ ತೇಲತ್ತೆ. ನೀರಿನ ಮೇಲೆ ಕಪ್ಪುಕೂದಲು ಹರಡಿರತ್ತೆ. ತೊಂಡು ಮೇಯಲು ಬಂದ ಯಾವುದೋ ದನ, ದನಗಳು ನೋಡುವ ಹಾಗೆ ಅಸ್ಪಷ್ಟವಾಗಿ ಎತ್ತಲೋ ನೋಡುತ್ತ, ಮೆಲಕು ಹಾಕುತ್ತಿರತ್ತೆ. ನಗ್ನವಾದಾಗ ಗಂಡೋ ಹೆಣ್ಣೊ ಅಷ್ಟು ಸುಲಭವಾಗಿ ತಿಳಿಯಲಾರದು. ಆದರೂ ಚೆಡ್ಡಿಯ ಮೇಲೊಂದು ಚಡ್ಡಿ ಹಾಕಿಕೊಂಡು ಬಂದಿದ್ದಾಳೆ – ಕಪ್ಪು ಬಣ್ಣದ ಚಡ್ಡಿ.

ನಿಶ್ಚಯ ಮಾಡಿದ ಘಳಿಗೆ ಸುಲಭವಾಗಿ ನೆನಪಾಗಲ್ಲ. ಯಾವತ್ತೋ ನಡೆದದ್ದು ಎನ್ನುವಂತೆ, ಅಥವಾ ನಿರಂತರ ಎನ್ನಿಸುವಂತೆ. ಗಂಡ ಕೆನ್ನೆಯ ಮೇಲೆ ಹೊಡೆದದ್ದು ಅಷ್ಟು ದೊಡ್ಡ ವಿಷಯವಲ್ಲ. ಪ್ರೀತಿಯಲ್ಲೂ ಹೊಡೆಯಬಹುದು. ಸಾಯಿ, ಸಾಯಿ, ಸಾಯಿ – ಎಂದು ಅವನು ವಿಚಿತ್ರವಾದ ಸ್ವರದಲ್ಲಿ ಕೂಗಿದ. ಅದು ತನ್ನ ಒಳಗಿಂದಲೇ ಹುಟ್ಟಿದ ಕಿರುಚು ಎನ್ನಿಸಿತಲ್ಲವೆ? ಕೊಲ್ಲುವ ಕ್ರೌರ್ಯದಲ್ಲಿ ಅವನ ಕಣ್ಣುಗಳು ದುರುಗುಟ್ಟಿದವು. ಹೊಡೆದವನು ನೆಲದ ಮೇಲೆ ಕುಸಿದು ಕೂತ. ಮುಖ ಹೆಣದಂತೆ ಬಿಳಿಚಿತ್ತು. ಕಿವಿಯಲ್ಲಿ ಕುಟ್ಟುವ ಶಬ್ದ. ಹೆಂಗಸರಿಗೆ ಈಗಲೂ ಮೋಹಕವಾಗಿದ್ದ ಅವನ ಮೀಸೆ, ದಟ್ಟವಾದ ಬಾಗಿದ ಹುಬ್ಬು, ಪೊದೆಗೂದಲು ಹಾಸ್ಯಾಸ್ಪದವಾಗಿ ಕಂಡವು. ಸದ್ದಿಲ್ಲದೆ ವಿಕಟವಾದ ನಗು ಎದ್ದು ಮಾಯವಾಯಿತು. ಮಗ? ಮಗ ಊಟಿಯ ಸ್ಕೂಲಲ್ಲಿ ಬೆಳೆಯುತ್ತಿದ್ದಾನೆ. ಒಂದು ಕಾಲದಲ್ಲಿ ಟೆನಿಸ್ ಛಾಂಪಿಯನ್ ಆಗಿದ್ದ ಅಪ್ಪನೆಂದರೆ ಅವನಿಗೆ ಪ್ರೀತಿಯಿದೆ. ಹೇಗೋ ಬೆಳೆದು ದೊಡ್ಡವನಾಗುತ್ತಾನೆ. ಎಲ್ಲ ನಿಧಾನವಾಗಿ ಮರೆತುಹೋಗತ್ತೆ.

ಇದರ ಹಿಂದಿನ ಕಾರಣಗಳು? ಗೊತ್ತಾಗಲ್ಲ. ಯಾರ ತಪ್ಪು? ಅವನು ತನ್ನನ್ನು ಪ್ರೀತಿಸಿದ್ದಿಲ್ಲವೆ? ತಂದೆಯ ಜೊತೆ ಜಗಳವಾಡಿ ಮದುವೆಯಾದ. ಅರ್ಧ ಆಸ್ತಿ ಮಾರಿ ಅಮೇರಿಕಾಕ್ಕೆ ಕರೆದುಕೊಂಡು ಹೋಗಿ ಡ್ರಾಮಾ ಸ್ಕೂಲಲ್ಲಿ ಆಕ್ಟಿಂಗ್ ಕಲಿಸಿದ. ಮೊದಲು ತಪ್ಪು ಮಾಡಿದ್ದು ಯಾರು? ಈ ಬಗ್ಗೆ ನೂರಾರು ಸಾರಿ ಜಗಳವಾಡಿದ್ದಾಗಿದೆ. ಒಂದಕ್ಕೊಂದು ಹೆಣೆದುಕೊಳ್ಳುವ ತಪ್ಪುಗಳು – ಹದಿನೈದು ವರ್ಷಗಳ ಕಾಲ ಇಬ್ಬರೂ ಕೂಡಿ ಹೆಣೆದೆವು. ತಾನು ಇಲ್ಲದಾಗ ಈಗಲೂ ಅವನು ಹೇಗೆ ಗಟ್ಟಿಯಾಗಿ ನಗುತ್ತಾನೆ. ಅವನ ಆರೋಗ್ಯವಾದ ಗಟ್ಟಿಯಾದ ಹಲ್ಲುಗಳು ಕಪ್ಪು ಮೀಸೆ, ಕೆಳಗೆ ಹೊಳೆಯುತ್ತಿವೆ. ಇಬ್ಬರಿಗೂ ಪರಿಚಯವಿದ್ದ ಹೆಂಗಸರು ತನ್ನನ್ನೇ ದೂರುವುದು.

ಅವಳಿಗೆ ಬೆರಗಾಯಿತು; ಪ್ರೀತಿಯಷ್ಟೇ ಈ ದ್ವೇಷವೂ ವಿಸ್ಮಯ ಹುಟ್ಟಿಸುವಷ್ಟು ಸ್ಫುಟವಾದ ಶುದ್ಧವಾದ ಭಾವನೆ. ವಜ್ರದಂತೆ.

ಕೂದಲನ್ನು ಬಿಚ್ಚಿ ಬೆನ್ನಿನ ಮೇಲೆ ಬಿಟ್ಟಳು. ಅವಳ ಕಣ್ಣುಗಳು ಬೆಳದಿಂಗಳಲ್ಲಿ ಕಾಂತಿಯಿಂದ ಹೊಳೆದವು. ಕಣ್ಣಿನ ಸುತ್ತ ಗೆರೆಗಳಿವೆ. ಮುವ್ವತ್ತೈದು ವರ್ಷಗಳಾಗಿವೆ. ಸುಮಾರು ಎರಡು ವರ್ಷಗಳಿಂದ ಈ ದೇಹವನ್ನು ಅವನು ಮುಟ್ಟಿಲ್ಲ. ಇನ್ನೂ ಬಿಗಿಯಾಗಿ ಉಳಿದ ಮಾಟವಾದ ದೇಹ. ಕ್ರೂರವಾದ ದ್ವೇಷದಲ್ಲಿ ಅದು ಇನ್ನೊಂದು ಬಗೆಯ ಚೆಲುವನ್ನು ಪಡೆದಿದೆ. ಪರರ ಕಣ್ಣುಗಳು ಅದನ್ನು ಗುರುತಿಸುವುದನ್ನು ಅವಳು ಗಮನಿಸಿದ್ದಾಳೆ. ತಿರಸ್ಕಾರದಲ್ಲಿ ಅದನ್ನು ಅವಳು ತೆರೆದುಕೊಟ್ಟಿರುವುದೂ ಉಂಟು. ಆಗ ಪಡೆದದ್ದು ಸೊಕ್ಕಿನ ಸುಖ. ಗಂಡನಿಗೆ ತನ್ನನ್ನು ಕೊಲ್ಲಬೇಕೆನ್ನಿಸಿದ್ದು.

ಇನ್ನೊಂದು ಪೊದೆಯ ಮರೆಯಲ್ಲಿ ಕೂತವನು ಸೇದಿದ ಸಿಗರೇಟನ್ನು ಆರಿಸದೆ ಎಸೆದ. ಬೆಳದಿಂಗಳಲ್ಲಿ ತುಂಡು ಹೊಗೆಯಾಡುತ್ತಿರಬಹುದು. ಅವಳು ವ್ಯಾನಿಟಿ ಬ್ಯಾಗಿಂದ ಪ್ಯಾಕನ್ನು ತೆರೆದಳು. ಆದರೆ ಬೆಂಕಿಪಟ್ಟಣ ತಂದಿರಲಿಲ್ಲ.

ಕೈಗಳು ತೊಡೆಯ ಮೇಲೆ ನಿದ್ದೆ ಮಾಡುವ ಹಕ್ಕಿಗಳಂತೆ ನಿಶ್ಚಲವಾದವು. ಪೊದೆಯಾಚೆ ಕೂತವನ ಹತ್ತಿರ ಬೆಂಕಿಪಟ್ಟಣ ಕೇಳುವುದು ಸರಿಯೆ? ಸಾಯುವುದು ಅಪ್ರಸ್ತುತ ಎಂದು ಇದ್ದಕ್ಕಿದ್ದಂತೆ ಅನ್ನಿಸಿತು. ಆದರೆ ಇದು ಈಗ ಅನ್ನಿಸಿದ್ದಲ್ಲ ನಿರಂತರವಾಗಿ ಅನ್ನಿಸುತ್ತ ಬಂದದ್ದು ಎಂದುಕೊಂಡಳು. ಆಶ್ಚರ್ಯಪಡುತ್ತ ನಿಶ್ಚಲವಾಗಿ ಹಾಗೇ ಕೂತಳು. ಇನ್ನೊಂದು ಕಾರು ಬೆಟ್ಟ ಹತ್ತಿ ಹೋಗುತ್ತಿದೆ. ಹಕ್ಕಿ ಮತ್ತೆ ಕೂಗುತ್ತಿದೆ. ಕೆರೆಯ ನೀರು ಬೆಳದಿಂಗಳಿನಲ್ಲಿ ಸೂಕ್ಷ್ಮವಾಗಿ ಕಂಪಿಸುತ್ತಿದೆ. ಮುದುಕ ಬೀಡಿ ಹಚ್ಚುತ್ತ ನಿಂತಿರೋದು ನೆನಪಾಗತ್ತೆ. ಮತ್ತು ತಾನು ಹುಡುಗಿಯಾಗಿದ್ದಾಗ ಬೇಲಿಯಲ್ಲಿ ಬೆಳೆದ ಗಿಡವೊಂದರ ಎಲೆಯನ್ನು ಚಿವುಟಿ ಮೂಸಿದ್ದು. ನಿರ್ಭಾವದಲ್ಲಿ ಚಿತ್ರಗಳು ಹಾಯ್ದು ಹೋಗುತ್ತವೆ. ಬದುಕುವುದಾಗಲೀ, ಸಾಯುವುದಾಗಲೀ ಎರಡೂ ಅಪ್ರಸ್ತುತ. ತಾನು ಇದ್ದೇನೆ ಎಂದು ತಿಳಿದರೆ ಮಾತ್ರ ಈ ಇದ್ದೇನೆ, ಅಲ್ಲವೆ ಎಂದು ಬೆರಗಾಯಿತು.

ಮತ್ತೆ ಅಪರಿಚಿತನಿಂದ ಬೆಂಕಿಪಟ್ಟಣ ಪಡೆದು ಸಿಗರೇಟ್ ಹಚ್ಚಬೇಕೆನ್ನಿಸಿತು. ಆದರೆ ಅಷ್ಟೇನೂ ತೀವ್ರವಾಗಿ ಅನ್ನಿಸದ್ದರಿಂದ ಹಾಗೇ ತೊಡೆಗಳ ಮೇಲೆ ಕೈಗಳನ್ನಿಟ್ಟು, ಸ್ವಲ್ಪ ತಲೆಬಾಗಿ, ಬೆಳದಿಂಗಳಲ್ಲಿ ಮೃದುವಾದ ಕಪ್ಪಿನ ಕೂದಲನ್ನು ಬೆನ್ನಿನ ಮೇಲೆ ಚೆಲ್ಲಿ ಸುಮ್ಮನೇ ಕೂತಳು. ಎಡಕಾಲಿನ ಹೆಬ್ಬೆರಳು ನೆಲದಲ್ಲಿ ಅರ್ಧ ಹೂತ ಸವೆದ ಕಲ್ಲಿನ ಉಂಡೆಯೊಂದನ್ನು ಮಣ್ಣಿಂದ ಎತ್ತಿ ಅದರ ರೂಪವನ್ನು ಗ್ರಹಿಸಲು ಯತ್ನಿಸುತ್ತ ಸುತ್ತಿಸಿತು. ಕಲ್ಲು ಜಾರಿದಾಗ ಬಲಗಾಲಿನ ಬೆರಳು ಆ ಉರುಟು ಕಲ್ಲನ್ನು ಇಕ್ಕಳದಂತೆ ಹಿಡಿಯಲು, ಮಣ್ಣನ್ನು ಉಜ್ಜಿ ತೆಗೆಯಲು ಎಡಗಾಲಿನ ಬೆರಳಿಗೆ ಸಹಾಯ ಮಾಡಿತು.

ಹತ್ತು ವರ್ಷದ ಹುಡುಗಿ. ಎರಡು ಪುಟ್ಟ ಜಡೆಗಳು. ಕೆಂಪು ರಿಬ್ಬನ್‌ಗಳಿಗೆ ಒಪ್ಪುವ ಕೆಂಪು ಫ್ರಾಕು, ಕೆಂಪು ಬೂಟುಗಳು. ಎಲ್ಲರಿಗೂ ಪ್ರಿಯವೆನ್ನಿಸುತ್ತಿದ್ದ ತನ್ನ ಸ್ಥಿತಿಯ ನೆನಪಾಗುತ್ತಿರೋದು, ಈಗ, ಆಶ್ಚರ್ಯ, ಪುಟ್ಟ ಮಚ್ಚೆ ಕಾಣುವ ತುಂಬು ಕೆನ್ನೆಯನ್ನು ಎಲ್ಲರೂ ಚಿವುಟುತ್ತಿದ್ದರು. ಆದರೆ ಆಗ ಕೂಡ ಯಾರಿಗೂ ಹೇಳಲಾರದ ನಾಚಿಕೆಗಳು ದಿಗಿಲುಗಳು ಅವಮಾನಗಳು ತನಗಿದ್ದವು. ತಾನಿರುವುದು ನಿಜವೇ, ಇದು ತನ್ನ ಹೆಸರೇ, ಆಗುತ್ತಿರುವುದು ನಿಜವಾಗಿಯೂ ತನಗೋ – ಇತ್ಯಾದಿ ದಿಗ್ಭ್ರಮೆಗಳನ್ನು ಆಗಲೂ ಅನುಭವಿಸಿದ್ದಿದೆ. ಈಗಿನಂತೆ ಆಗಲೂ ಹಠಮಾರಿ ಕೂಡ.

ಅಪ್ಪನ ಜೊತೆ ಜಯಂಟ್ ಮೀಲಿನಲ್ಲಿ ಕೂತಿದ್ದೆ. ಅಪ್ಪ ಸಿಲ್ಕ್ ಜುಬ್ಬ ಹಾಕಿ ಕಚ್ಚೆಪಂಚೆಯುಟ್ಟಿದ್ದರು. ಹಬ್ಬದ ದಿನಗಳಲ್ಲಿ ಅವರು ಹಾಕುತ್ತಿದ್ದ ಡ್ರೆಸ್ ಅದು. ಗಂಧದ ಉಂಡೆಯಿಟ್ಟ ಪೆಟ್ಟಿಗೆಯಿಂದ ತೆಗೆದ ಘಮಘಮಿಸುವ ಸಿಲ್ಕ್ ಜುಬ್ಬ. ತನಗೆ ಕುತೂಹಲ, ಭಯ. ಮೊದಲನೇ ಸಾರಿ ಜಯಂಟ್ ವೀಲಿನಲ್ಲಿ ಕೂತದ್ದು. ತನ್ನ ಘನತೆ ಮರೆತು ಅಪ್ಪನೂ ತನಗಾಗಿ ಕೂತಿದ್ದರು. ಮೇಲಕ್ಕೇರುತ್ತಿದ್ದಂತೆ ಭಯ ಮಗ್ಗಿಯ ಹಾಗೆ ಏರುತ್ತ ಹೋಯಿತು. ತುದಿಗೆ ಏರಿ ಏರಿ ತಲುಪಿ ಆ ತುಟ್ಟ ತುದಿಯಿಂದ ಕೆಳಕ್ಕೆ ವೃತ್ತಾಕಾರದಲ್ಲಿ ರಭಸವಾಗಿ ಇಳಿಯುತ್ತಿದ್ದಂತೆ ತಾನು ಸತ್ತು ಹೋಗುತ್ತಿದ್ದೆನೆ ಎನ್ನಿಸಿ ಅಪ್ಪನನ್ನು ಬಲವಾಗಿ ಹಿಡಿದಳು. ಇಳಿಸು, ಇಳಿಸು ಎಂದು ಕಿರುಚಿದಳು. ಅಪ್ಪ ತಿರುಗುವ ಚಕ್ರವನ್ನು ನಿಲ್ಲಿಸಲಿಲ್ಲ. ಏನನ್ನಾದರೂ ಮಾಡಬಲ್ಲನೆಂದು ತಾನು ತಿಳಿದ ಅಪ್ಪ ಚಕ್ರವನ್ನು ನಿಲ್ಲಿಸಲಾರದೆ ಕೂತಿದ್ದ. ಪ್ರಾಯಶಃ ನಗುತ್ತಿದ್ದ. ಗಟ್ಟಿಯಾಗಿ ಹಿಡಕೊಂಡ. ಲಂಗದಲ್ಲಿ ಗಾಳಿತುಂಬಿ ತೊಡೆಯ ಸಂದಿಯಲ್ಲಿ ಚಳಿಯಾಯಿತು. ಉಚ್ಚೆ ಹೊಯ್ದುಕೊಂಡರೆ ಆಮೇಲೆ ತಾಯಿ ಬಯ್ಯುತ್ತಾಳೆ. ಅಪ್ಪನಿಗೂ ಜೋರು ಮಾಡುತ್ತಾಳೆ. ಆದರೂ ಉಚ್ಚೆ ಹೊಯ್ದುಬಿಡಬಹುದು ಎನ್ನಿಸುತ್ತಿತ್ತು. ಹೊಯ್ಯದಂತೆ ಕೂತಿರಲು ಪ್ರಯತ್ನಿಸುವುದರಲ್ಲೆ ಕ್ರಮೇಣ ತನ್ನ ಭಯ ಕಡಿಮೆಯಾಗಿದ್ದಿರಬಹುದು.

ಅವಳು ಮತ್ತೆ ಅಶ್ಚರ್ಯಪಟ್ಟಳು. ಅಂಗೈಗಳನ್ನು ಬೆವರಿಸುವ ಈ ಹಿಂದಿನ ಘಟನೆ ಈ ಮನಸ್ಥಿತಿಯಲ್ಲಿ ತನಗೇಕೆ ನೆನಪಾಗಬೇಕು. ನಿರ್ಭಾವದ ತನ್ನ ಹಿಂದಿನ ಸ್ಥಿತಿಯನ್ನು ಮತ್ತೆ ಮುಟ್ಟಲು ಯತ್ನಿಸಿದಳು. ಈಗ ಅಪ್ಪ ಮುದುಕರು. ತನ್ನನ್ನು ಅವರು ಪ್ರೀತಿಸುತ್ತಾರೋ ಇಲ್ಲವೋ ಎನ್ನುವ ಪ್ರಶ್ನೆ ಅಪ್ರಸ್ತುತವೆನ್ನಿಸುವಷ್ಟು ಅವರ ಮನಸ್ಸು ಈಗ ಜಳ್ಳಾಗಿದೆ. ಪ್ರತಿವಾರ ತಾನು ಬರೆಯುವ ಕಾಗದ ನಿಂತರೆ ಮಗ ಮಿಸ್ ಮಾಡಬಹುದು – ಅಷ್ಟೆ. ಬೊಂಬಾಯಲ್ಲಿರುವ ತಂಗಿಯ ಮಗಳಿಗೆ ಹುಟ್ಟಿದ ಹಬ್ಬದ ಪ್ರೆಸೆಂಟಾಗಿ ಪ್ಯಾಕ್ ಮಾಡಿಟ್ಟ ಬೆಳ್ಳಿಯ ಗೆಜ್ಜೆಗಳ ಚೈನು ಮೇಜಿನ ಮೇಲಿದೆ. ಉತ್ತರಿಸಬೇಕಾದ ಕಾಗದಗಳಿವೆ. ಫ್ಯಾಮಿಲಿ ಪ್ಲಾನಿಂಗ್ ಕಮಿಟಿ, ಮರಗಳನ್ನು ಬೆಳೆಸುವ ಕಮಿಟಿ, ಕುದುರೆ ಸವಾರರ ಕ್ಲಬ್ಬು – ಇತ್ಯಾದಿಗಳಿಗೆ ಆಹ್ವಾನಗಳು. ಆದರೆ ಎಲ್ಲ ಎಷ್ಟು ಅಪ್ರಸ್ತುತ.

ಬೆಂಕಿಪೊಟ್ಟಣ ಕೇಳುವುದೆಂದು ಎದ್ದು ನಿಂತಳು. ಅವನು ಯಾರೋ? ಸಿಗರೇಟು ಸೇದುವ ಹೆಂಗಸಿನ ಬಗ್ಗೆ ಏನೆಂದುಕೊಳ್ಳುತ್ತಾನೋ ಎಂದು ಸಂಕೋಚ ಪಡುತ್ತ ಅವನತ್ತ ನಡೆದಳು.

* * *

ಅವಳ ಸಂಕೋಚ ಅವನು ಗಮನಿಸಿರಬೇಕು. ತಾನೇ ಕಡ್ಡಿಗೇರಿ ಆಕೆಯ ಸಿಗರೇಟು ಹಚ್ಚುತ್ತ ಹೇಳಿದ :

“ನಿಮ್ಮನ್ನು ನಾನು ನೋಡಿದೀನಿ – ಬೆಳಿಗ್ಗೆ ನೀವು ಕುದುರೆ ಸವಾರಿ ಮಾಡ್ತೀರಿ ಅಲ್ಲ? ಇಂಗ್ಲಿಷ್ ನಾಟಕಗಳಲ್ಲಿ ನೀವು ಆಕ್ಟ್ ಮಾಡೋದನ್ನು ನೋಡಿದೀನಿ…. ”

ಒಂಟಿಯಾಗಿ ಒಬ್ಬ ಹೆಂಗಸು ಈ ಕೆರೆಯ ದಂಡೆಯ ಮೇಲೆ ನಿರ್ಜನ ಪ್ರದೇಶದಲ್ಲಿ ಊರಿಗೆ ದೂರವಾಗಿ ಇರೋದು ಸಹಜವೆಂಬಂತೆ ಆತ ವರ್ತಿಸಿದ್ದ. ಅವಳು ಥ್ಯಾಂಕ್ಸ್ ಎಂದು ಅವನ ಪಕ್ಕ ಕೂತಳು. ಆಕೆ ಸುಖವಾಗಿ ಕೂರಲೆಂದು ಅವನು ಸ್ವಲ್ಪ ಸರಿದ. ಮಾತು ಬೆಳೆಸುವ ಒತ್ತಾಯ ಅವನು ತೋರಿಸಲಿಲ್ಲ. ಯಾವ ವಿವರಣೆಯನ್ನೂ ಬಯಸದೆ ಸ್ನೇಹದಿಂದ ಇರಬಲ್ಲ ಸಹಜವಾದ ಮೌನ ಅವನಲ್ಲಿರುವಂತೆ ಕಂಡಿತು. ಪರಿಚಯ ಹೇಳಿಕೊಳ್ಳದೆ ತನ್ನನ್ನು ಅವನು ಗುರುತಿಸಿ ಹಗುರವಾಗುವಂತೆ ಮಡಿದನೆಂದು ಅವಳಿಗೆ ಸಮಾಧಾನವಾಯಿತು. ಜೊತೆಗೇ ತನ್ನ ಅನಾಮಧೇಯತೆ ಕಳೆಯಿತೆಂದು ವ್ಯಸನವಾಯಿತು. ಹಿಂದೆ ಲಭ್ಯವಾಗಿದ್ದ ಮನಸ್ಥಿತಿಗೆ ತಿರುಗಿ ಮರಳಲು ಯತ್ನಿಸಿ ವಿಫಲಳಾಗಿ ಸೌಜನ್ಯದಿಂದ ಅವಳೇ ಮೌನ ಮುರಿದಳು:

“ಇದು ಸಣ್ಣ ಪ್ರಪಂಚ”

ಬಹಳ ಹಿಂದಿನ ಪರಿಚಯದವನಂತೆ ಅವನು ಸಹಜವಾಗಿ ಅದಕ್ಕೆ ನಕ್ಕು ಸುಮ್ಮನಾದ. ತನಗೆ ಮೌನ ಬೇಕಾಗಿರುವುದನ್ನು ಗ್ರಹಿಸಿದವನಂತೆ ಕಂಡ. ತಾನು ಇಲ್ಲಿಗೆ ಸಾಯಲು ಬಂದದ್ದು ಎಂಬುದನ್ನು ಆತಳಿಗೆ ಸರಳವಾಗಿ ಹೇಳಿಕೊಂಡು ಬಿಡುವುದು ಸಾಧ್ಯವೆಂದು ಅವಳಿಗೆ ಅನ್ನಿಸಿತು. ಆದರೆ ಹೇಳಿದರೂ ಒಂದೆ, ಬಿಟ್ಟರೂ ಒಂದೆ ಎಂದು ಅವಳು ಸಿಗರೇಟು ಸೇದುತ್ತ ಕೂತಳು. ಆಗ ಬೆಳದಿಂಗಳಿನ ಹಕ್ಕಿ ಆರ್ತವಾದ ಏರಿಕೆಯಲ್ಲಿ ಕೂಗಿ ಇಬ್ಬರನ್ನೂ ಬೆರಗುಗೊಳಿಸಿತು. ಒಟ್ಟಿಗೇ ಮುಖವೆತ್ತಿ ಒಬ್ಬರನ್ನೊಬ್ಬರು ನೋಡಿದರು.

“ಮಿಸೆಸ್….. ”

ಅವನು ವಿಸ್ಮಯಪಟ್ಟವನಂತೆ ತನ್ನನ್ನು ನೋಡುತ್ತ, ತನಗೆ ಮಾತು ಬೇಡದೇ ಇರಬಹುದೆಂದು ಭಾವಿಸಿದವನಂತೆ ಅರ್ಧಕ್ಕೇ ನಿಲ್ಲಿಸಿದ. ಮತ್ತೆ ಅವನು ಹಿಂದಿರುಗದ ಮೌನಕ್ಕಿಳಿದು ಬಿಡಬಹುದೆಂದು ಅವಳಿಗೆ ಅನ್ನಿಸಿತು. ತನಗೆ ಅವನ ಮಾತು ಬೇಕಿರಬಹುದೆಂದು ಗುರುತಿಸಿಕೊಳ್ಳುತ್ತ,

“ನನ್ನನ್ನ ಶೈಲೀಂತ ಕರೆಯಿರಿ” ಎಂದಳು.

ಕಾದಳು. ತನ್ನ ಕೂದಲಿನ ರಾಶಿಯನ್ನು ಮುಂಗೈಯಿಂದ ಎತ್ತಿ ಭುಜದ ಮೇಲೆ ಇಳಿಬಿಟ್ಟು ಮುಖ ಓರೆ ಮಾಡಿ ಸರಳವಾಗಿ ನಕ್ಕಳು. ಗಂಡನ ಜೊತೆ ಕೂತು ಹೀಗೆ ಸರಳವಾಗಿ ನಕ್ಕು ಎಷ್ಟು ವರ್ಷಗಳಗಿ ಬಿಟ್ಟಿತೊ! ಬೆಳದಿಂಗಳಲ್ಲಿ ಮೃದುವಾಗಿ ಕಾಣುವ ನೀಳವಾದ ಅವನ ಮುಖದಲ್ಲಿ ಕಣ್ಣುಗಳು ಅಸ್ಪಷ್ಟವಾಗಿ ಆಡಿದವು:

“ಶೈಲಿ. ನನ್ನ ಹೆಂಡತಿ ಸತ್ತಿರಬಹುದು. ”

ತನ್ನಿಂದ ಅವನು ಉತ್ತರ ಬಯಸಿರಲಿಲ್ಲ. ಆಡಿದ ಮಾತಿನಲ್ಲಿ ಸಹಾನುಭೂತಿ ಯಾಚಿಸುವ ಧಾಟಿಯೂ ಇರಲಿಲ್ಲ. ಅವಳು ಬೆಚ್ಚಿ ಬಿದ್ದಳು. ಸುಮ್ಮನೇ ಕೂತು ಕೇಳಿಸಿಕೊಂಡಳು.

“ವಿಚಾರಣೆಗೆ ಬಂದಾಗ ಪೊಲೀಸರಿಗೆ ಏನು ಹೇಳ್ತೀನಿ ಅಂತ ಯೋಚಿಸ್ತ ಇದ್ದೆ. ಹೌದು – ಆಮೇಲೆ ಮೊದಲಿದ್ದ ಪ್ರೀತಿ ಮಾಯವಾಗ್ತ ಹೋಯಿತು. ಯಾರ ತಪ್ಪು ಅನ್ನೋದು ಅಪ್ರಕೃತ. ಹೇಳೋಕೂ ಆಗಲ್ಲ. ಪ್ರೀತಿ ಮಾಯವಾಗತ್ತೆ – ಅದೇನೋ ಪರಸ್ಪರ ಕಾಣಿಸತ್ತ ಇರುತ್ತಲ್ಲ. ಒಂದು ಬಗೆ ಮಾಂತ್ರಿಕತೆ, ಅದು ಕಾಣಿಸೋದು ನಿಂತುಹೋಗತ್ತೆ. ಆಗ ಈ ಕೆರೆ, ಈ ಬೆಟ್ಟ,ಈ ಆಕಾಶ ಎಲ್ಲ ಸಾಯ್ತಾವೆ. ತಮಷೆಯಾಗಿ ನಿಮಗೆ ಕಾಣಬಹುದು ಶೈಲಿ – ಆ ಹಕ್ಕಿ ಕೂಗಿದಾಗ ನಾನು ಬೆರಗಾದೆ. ನೀವೂ ಆದಿರಿ. ವಂಡರ್‌ಫುಲ್‌ ಅಲ್ಲ? ಕೂದಲನ್ನ ಎತ್ತಿ ನೀವು ಭುಜದ ಮೇಲೆ ಹಾಕ್ಕೊಂಡು ನಕ್ಕಾಗ, ನ್ನನ ಹೆಂಡತಿಗೂ ಈಚೆಗೆ ಯಾಕೆ ಹಾಗೆ ನಗೋಕೆ ಬರಲ್ಲ ಅಂತ ನನಗೆ ಆಶ್ಚರ್ಯವಾಗಿಬಿಟ್ಟಿತು. ಹೀಗೆಲ್ಲ ಆಶ್ಚರ್ಯ ಆಗೋದು ಕೂಡ ಈಚೆಗೆ ನಿಂತು ಹೋಗ್ತಿದೆ. ಇಲ್ಲದೇ ಇದ್ದಿದ್ರೆ ನಾನು ಪ್ರಾಯಶಃ ಪೈಂಟರ್ ಆಗಿ ಬದುಕೋ ಧೈರ್ಯ ಮಾಡ್ತಿದ್ದೆ. ನನಗೆ ಧೈರ್ಯ ಇದ್ದಿದ್ರೆ ಅವಳು ಅಡ್ಡಿ ಬರ್ತ ಇರ್ತಿರ್ಲಿಲ್ಲ ಅಂತ ನನಗೆ ಗೊತ್ತಿದೆ. ಮದುವೆಯಾದಾಗ ಕಲ್ಲಾದ ಪುಟ್ಟ ಹಾಸಿಗೆ ಮೇಲೆ ಇಬ್ಬರೂ ಮಲಗಿ ನಿದ್ದೆ ಮಾಡ್ತಿದ್ದೆವು. ಆಗ ನಾನು ಬಡವ. ತಲೆ ತುಂಬ ಕನಸು ತುಂಬಿತ್ತು, ಆದರೆ ಎಲ್ಲ ಹೋಯ್ತು. ಹೀಗೆ ಹೋಯ್ತು, ಯಾಕೆ ಹೋಯ್ತು ಗೊತ್ತಿಲ್ಲ ನೋಡಿ. ಆಗಿನ ಅವಮಾನಗಳು ಹೋದವು. ಹೊಟ್ಟೆಕಿಚ್ಚು ಹೋಯ್ತು. ಭಯ ಹೋಯ್ತು. ಜೊತೆಗೇ ನಿಷ್ಕಾರಣವಾಗಿ ಖುಷಿಯಾಗೋದು ಹೋಯ್ತು. ಎಷ್ಟು ಕೂಡಿಸಿದರೂ ಇನ್ನೂ ಬೇಕೂಂತ ಅವಳು ಈಗ ಪರದಾಡ್ತಾಳೆ. ನಾನೂ ಆಸೆ ಬುರುಕ ಆಗಿಲ್ಲಾಂತ್ಲೂ ಅಲ್ಲ…..

ನಾನೇ ನನ್ನ ಹೆಂಡ್ತೀನ್ನ ಇವತ್ತು ಕೊಂಡು ಬಿಡಬಹುದಿತ್ತು. ಜಗಳ ಯಾಕೆ ಶುರುವಾಯ್ತು ಅನ್ನೋದು ಕೂಡ ಮರೆತು ಹೋಗಿದೆ. ಟೆರಿಬಲ್ ಅಲ್ಲ? ಪ್ರಾಣ ಕಳಕೊಳ್ತೀನಿ ಎಂದಳು. ಕಳಕೋ ಎಂದು ಅವಳನ್ನು ಒರಟಾಗಿ ನೂಕಿದೆ. ಸಾಯಿ, ಸಾಯಿ ಎಂದು ಕೂಗಿದೆ. ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಳು. ನನಗೇನೂ ಯಾಕೆ ಅನ್ನಿಸ್ತ ಇಲ್ಲ ಅಂತ ವಿಸ್ಮಯವಾಯ್ತು. ಬಾಗಿಲಿನ ಸಂದೀಂದ ಹಣಿಕಿ ನಾನು ನೋಡ್ತ ಇರೋದನ್ನ ಕುರ್ಚಿ ಹತ್ತಿ ಛಾವಣಿಗೆ ಹಗ್ಗ ಬಿಗಿಯುತ್ತ ಇದ್ದ ಇವಳೂ ನೋಡಿದಳು. ಅಥವಾ ನೋಡಲಿಲ್ಲವೋ ಏನೋ! ಅಂತೂ ಬಾಗಿಲು ಕಡೇನೇ ನೋಡ್ತ ಇದ್ದಳು. ಆಟಕ್ಕೆ ಹೋಗಿದ್ದ ಮಕ್ಕಳು – ನಮಗೆ ಇಬ್ಬರು ಮಕ್ಕಳು, ಒಂದು ಗಂಡು, ಒಂದು ಹೆಣ್ಣು – ಹಿಂದಕ್ಕೆ ಬಂದಾಗ ಅವರಿಗೇನು ಅನ್ನಿಸಬಹುದೂಂತ ನನಗೆ ಸಂಕಟವಾಯ್ತು. ಅವಳಿಗೆ ಅಂಥ ಸಂಕಟ ಆಗ್ತ ಇಲ್ವಲ್ಲ ಅಂತ ಆಶ್ಚರ್ಯಾನೂ ಆಯ್ತು. ಮಕ್ಕಳು ಅಂದ್ರೆ, ಮನೆ ಅಂದ್ರೆ ಅವಳಿಗೆ ತುಂಬ ಅಕ್ಕರೆ. ಅವಳಿಗೆ ಸಾಯಬೇಕೂಂತ ಅನ್ನಿಸೊ ಹಾಕೆ ಆಗಿದೇಂತ ಗೊತ್ತಾಗಿದ್ದು ನನ್ನ ಪ್ರಪಂಚಾನೇ ಬದಲಾಯಿಸಿಬಿಟ್ಟಿತು. ಸೀದಾ ನಡೆದು ಬಂದು ಇಲ್ಲಿ ಕೂತೆ. ಎರಡು ಗಂಟೆಯಾದರೂ ನಡೆದಿರಬೇಕು. ನಡೆಯುತ್ತ ಬರುವಾಗ ಇದು ನಾನಲ್ಲ – ಇನ್ನು ಯಾರೋ ಅಂತ ಅನ್ನಿಸಿಬಿಟ್ಟಿತು.

ಈಗ ಅವಳ ಹೆಣ ಹಗ್ಗದಿಂದ ಜೋತುಬಿದ್ದಿರಬಹುದು. ಮಕ್ಕಳು ಅಳುತ್ತಿರಬಹುದು. ಪೊಲೀಸರು ನೋಟ್ ಮಾಡ್ತ ಇರಬಹುದು. ಮೊಹಲ್ಲಾದ ಜನವೆಲ್ಲ ಮನೆ ಮುಂದೆ ಕಿಕ್ಕಿರಿದಿರಬಹುದು. ಆದರೆ ಇವೆಲ್ಲ ಇನ್ನು ಯಾರಿಗೋ ಆಗ್ತಿರೋದು ಅನ್ನಿಸತ್ತೆ…

ಮದುವೆಗೆ ಮುಂಚಿನ ಕಥೆ ಕೇಳಿ. ಅವಳಿಗೆ ಹದಿನೆಂಟು ವರ್ಷ. ಅವರ ಹಳ್ಳಿಗೆ ಹೋಗಿ ನಾಲ್ಕೈದು ದಿನ ಇದ್ದೆ. ಕಾಡಿನಲ್ಲಿ ಅದೊಂದೇ ಮನೆ. ಸುತ್ತ ರಬ್ಬರ್ ತೋಟ. ಹಿಂದೆ ಮುಂದೆ ಬೆಟ್ಟಗಳು. ಒಟ್ಟಿಗೆ ಹೋಗಿ ಸೌದೆ ತರ್ತ ಇದ್ದೆವು. ಅವಳು ನೀರು ಸೇದೋದು, ತರಕಾರಿ ಹೆಚ್ಚೋದು, ಬಟ್ಟೇನ ಕುಕ್ಕಿ ಒಗೆಯೋದು, ಹಾರಿ ಅದನ್ನು ಹಗ್ಗದ ಮೇಲೆ ಒಣಗಿ ಹಾಕೋದು – ಎಲ್ಲ ನೃತ್ಯದಂತೆ ನನಗೆ ಕಾಣಿಸ್ತ ಇದ್ದವು. ಸುಮ್ಮ ಸುಮ್ಮನೆ ನಗ್ಗಿದ್ದೆವು. ತಾಯಿ ಜೊತೆ ಅವಳು ಅಡಿಗೆ ಮಾಡುವಾಗ ನನಗೇನು ಇಷ್ಟ ಇಲ್ಲ ಮಾತಾಡೋದು, ನನಗೆ ಕಾಯಿಸಿದ ನೀರನ್ನ ಸ್ನಾನಕ್ಕೆ ಹವಣ ಮಾಡಿ ಕೊಡೋದು, ತಾಯಿಗೆ ಗೊತ್ತಾಗ್ದೆ ಇದ್ದಂತೆ ಸ್ನಾನ ಮಾಡುವಾಗ ಏನೋ ನವದಿಂದ ಬಂದು ಬೆನ್ನನ್ನು ಉಜ್ಜೋದು, ರಾತ್ರೆ ನಾನು ಒಂದಕ್ಕೇಂತ ಎದ್ದಾಗ ಅವಳೂ ತಾನು ಎದ್ದಿದೀನಿ ಅನ್ನೋದನ್ನ ಕೆಮ್ಮಿಂದ ಸೂಚಿಸೋದು, ಕತ್ತಲಲ್ಲಿ ಕೊಟ್ಟಿಗೆಗೆ ಹೋಗೋ ನೆವದಲ್ಲಿ ನನ್ನನ್ನೂ ಕರಕೊಂಡು ಹೋಗಿ ಮೈಗೆ ಮೈ ತಾಗಿಸಿ ಸುಮ್ಮನೆ ನಿಂತಿರೋದು – ಇವನ್ನೆಲ್ಲ ಮಾಡ್ತ ಇದ್ದೋಳು ಅವಳಲ್ಲ ಅನ್ನಿಸತ್ತೆ.

ಅವಳಿಗೊಬ್ಬ ಅಜ್ಜ ಇದ್ದ. ಕಾಡು ಕಡಿದು ರಬ್ಬರ್ ತೋಟ ಮಾಡಿದವ. ಅವನು ಸತ್ತು ಐದು ವರ್ಷಗಳಾಗಿದ್ದರೂ ಎಲ್ಲರೂ ಅವನ ವಿಷಯ ನಿತ್ಯ ಮಾತಾಡ್ತ ಇದ್ದರು. ಶುದ್ಧ ಪೋಲಿಯಂತೆ. ಪುಂಡ ಕೂಡ. ಅವನು ಪ್ರೇಮ ಪತ್ರಗಳನ್ನು ಬರೆಯೋದರಲ್ಲಿ ನಿಸ್ಸೀಮ. ಹುಡುಗನಾಗಿದ್ದಾಗ ಶುರುವಾದ ಈ ಹವ್ಯಾಸಾನ್ನ ಅವನು ಸಾಯೋ ತನಕ ಮುಂದುವರಿಸಿದ್ದ. ಬರೆಯೋದು ಮಾತ್ರವಲ್ಲ, ಬರೆದದ್ದನ್ನು ತನ್ನ ದಾಖಲೆಗೆಂದು ಕಾಪಿ ತೆಗೆದು ಇಡುತ್ತಿದ್ದ. ಈ ಪತ್ರಗಳ ತುಂಬ ಪೋಲಿ ಮಾತುಗಳು. ಪ್ರೇಯಸಿಯನ್ನು ಸಂಧಿಸಿದಾಗ ಅವರು ಕೂಡಿ ಮಾಡಿದ್ದೆಲ್ಲದರ ವಿವರ ಸಹಿತವಾದ ವರ್ಣನೆ, ಅದನ್ನು ಮತ್ತೆ ಮಾಡಬೇಕೆನ್ನುವ ಆಹ್ವಾನ ಇರುತ್ತಿದ್ದೆವು. ಹೆಣ್ಣಿನ ಸ್ವಭಾವ ಬದಲಾದಂತೆ ಈ ಪತ್ರಗಳ ಮರ್ಜಿಯಲ್ಲೂ ಬದಲಾವಣೆಗಳಾಗುತ್ತಿದ್ದವು. ಬರೀ ಹರದಯ, ಹೂವು, ಚಿಟ್ಟೆ, ಬಿಳಿ ಬಟ್ಟೆಯುಟ್ಟು ಅಪ್ಸರೆಯ ಚಿತ್ರ ತುಂಬಿದ ಪತ್ರಗಳೂ ಇದ್ದವು.

ಅವಳು ಅಟ್ಟಹತ್ತಿ ಹಳೆಕಾಲದ ಪೆಟ್ಟಿಗೆಯೊಂದರಿಂದ ಈ ಕಾಗದಗಳನ್ನೆಲ್ಲ ತಂದು ನನ್ನ ಜೊತೆ ಕೂತು ಓದಿ ನಕ್ಕಿದ್ದಳು. ಅವಳಿಗೊಬ್ಬಳು ಅಜ್ಜಿ – ಈ ಅಜ್ಜನ ಖಾಸ ಹೆಂಡತಿ – ನಮ್ಮ ಬಗ್ಗೆ ಮಹಾ ಕುತೂಹಲದಿಂದ ಸ್ಪೈ ಮಾಡುತ್ತಿದ್ದ ಮುದುಕಿ – ನಾವು ಈ ಕಾಗದಗಳನ್ನು ಓದುತ್ತಿರುವಾಗ ಅವಳು ಒಮ್ಮೆ ಬಂದಳು. ಗಂಡ ತನ್ನ ಬೆನ್ನಿನ ಮೇಲೆ ಹಾಕಿದ ಬರೆಯನ್ನ ಜಂಬದಿಂದ ತೋರಿಸಿದಳು. ಅವನ ಪೋಲಿ ವಿದ್ಯೆಗಳನ್ನ, ಮಾಟ ಮಂತ್ರಗಳಲ್ಲಿನ ಆಸಕ್ತಿಯನ್ನ, ಹಠಮಾರಿತನವನ್ನ, ಅವೆಲ್ಲವನ್ನೂ ತಾನು ಸಹಿಸಿಕೊಂಡು ಅವನನ್ನು ಪಳಗಿಸಿದ್ದನ್ನ ಉತ್ಸಾಹದಿಂದ ಬಣ್ಣಿಸಿ ನಮ್ಮನ್ನ ನಗಿಸಿದಳು. ಶೈಲಿ, ನಿಮ್ಮ ಮುಖ ನೋಡ್ತಿದ್ದಂತೆ ಇವೆಲ್ಲ ಯಾಕೆ ನೆನಪಾಗ್ತಾವೆ ಗೊತ್ತಾಗ್ತ ಇಲ್ಲ. ನನ್ನ ಹೆಂಡತಿ ನಿಮ್ಮ ಹಾಗೆ ಅಲ್ಲ. ಮನೆಯೇ ಅವಳ ಪ್ರಪಂಚ. ಚೆನ್ನಾಗಿ ಹಾಡುತ್ತಿದ್ದಳು. ಈಗ ಅದನ್ನೂ ಬಿಟ್ಟಿದ್ದಾಳೆ.

ಅವರ ಮನೇಲಿ ಒಂದು ಆಡು ಇತ್ತು. ಸಿಕ್ಕಿದ್ದನ್ನೆಲ್ಲ ತಿನ್ನುವ ಆಡು. ಕಟ್ಟಿ ಹಾಕಿದ ಕತ್ತದ ಹುರಿಯನ್ನೆ ತಿಂದು ಬಿಡುವ ಆಡು ಅದು. ಒಂದು ಸಾರಿ ಅವಳು ಒಗೆದು ಹಾಕಿದ ನನ್ನ ಕಾಚವನ್ನ ಆಡು ತಿಂದುಹಾಕಿಬಿಟ್ಟಿತ್ತು. ಇದರಿಂದ ಹೊಟ್ಟೆ ಹುಣ್ಣಾಗುವಂತೆ ಅವಳು ನಕ್ಕಳು. ನಗದ ನನ್ನ ಮುಖ ನೋಡಿ ಇನ್ನಷ್ಟು ನಕ್ಕಳು. ನಾನೂ ನಕ್ಕೆ. ನಗು ಅರ್ಥವಾಗದೆ ನಕ್ಕೆ. ಕ್ಷುಲ್ಲಕ ವಿಷಯ. ಸುಮಾರು ಎರಡು ಮೂರು ವರ್ಷ ಈ ವಿಷಯ ನೆನಸಿಕೊಂಡು ನಾವು ನಕ್ಕಿರಬಹುದು.

ಈಗ ನಾನು ನಮ್ಮ ಹತ್ತಿರ ಕೂತು ಮಾತಾಡ್ತ ಇದೇನಲ್ಲ – – ಹೀಗೆ ನಾನು ಮಾತಾಡಬಹುದು, ಯೋಚಿಸಬಹುದು ಅಂತ ಕೂಡ ಅವಳಿಗೆ ಗೊತ್ತಿಲ್ಲ. ಬೆಳೀತಾ ಹೋಗಿದ್ದ ರೋಷದಲ್ಲಿ ಈತನಕ – ನಿಮ್ಮನ್ನ ಇಲ್ಲಿ ನೋಡೋ ವರೆಗೆ – ನನಗೇ ಗೊತ್ತಿರಲಿಲ್ಲ. ”

ಒಂದೇ ಸಮನೆ ಮಾತಾಡಿ ಅವನು ಸುಮ್ಮಗಾದ.

ಅವಳೂ ಸುಮ್ಮನೇ ಕೂತಳು. ಅವನ ಕೈ ಮೇಲೆ ಕೈಯಿಟ್ಟಳು. ಅವಳು ಮತ್ತೆ ಬೆರಗಾಗಿದ್ದಳು. ತೊಯ್ದ ತೆಳು ಮೋಡಗಳು ಚಂದ್ರನನ್ನು ಹಾದು ಹೋದವು. ಗಾಳಿ ಬೀಸಿತು.

“ಬನ್ನಿ ಹೋಗೋಣ” ಎಂದಳು. ಅವನು ಅವಳ ಹಿಂದೆ ಹೋದ. ಕಾರಲ್ಲಿ ಕೂತು ಅವನ ಮನೆ ವಿಳಾಸ ಕೇಳಿ ತಿಳಕೊಂಡಳು. ಹಿಂದಿನ ಸೀಟಿನಲ್ಲಿದ್ದ ವ್ಹಿಸ್ಕಿಯ ಫ್ಲಾಸ್ಕನ್ನು ಎತ್ತಿ ಅವನಿಗೆ ಕೊಟ್ಟು “ಬೇಕಾ?” ಎಂದಳು. ಅವನು ಒಂದು ಗುಟುಕು ಕುಡಿದು “ಥ್ಯಾಂಕ್ಸ್” ಎಂದು ಫ್ಲಾಸ್ಕನ್ನು ಅವಳಿಗೆ ಹಿಡಿದ. ಅವಳು ಅದರ ಮುಚ್ಚಳ ಹಾಕಿ ಪಕ್ಕದಲ್ಲಿಟ್ಟು “ಬೇಕಾದರೆ ಮತ್ತೆ ತಗೊಳ್ಳಿ” ಎಂದು ಕಾರನ್ನು ಸ್ಟಾರ್ಟ್‌ ಮಾಡಿದಳು. ಡ್ರೈವ್ ಮಾಡುವಾಗ ಹೇಳಿದಳು :

“ನಿಮ್ಮ ಹೆಂಡತಿ ಸತ್ತಿರಲಿಕ್ಕಿಲ್ಲ. ”

“ಆದರೆ ಏನೂ ಬದಲಾಗಿರಲ್ಲ” ಎಂದು ಅವನು ಮೃದುವಾಗಿ ಹೇಳಿದ. “ಹೌದು ಪ್ರಾಯಶಃ ಆಗಲ್ಲ” ಎಂದು ತನ್ನ ಬಗ್ಗೆಯೂ ಮನಸ್ಸಿನಲ್ಲಿ ಹೇಳಿಕೊಳ್ಳಬೇಕೆಂದಿದ್ದ ಅವಳು ಅವನ ಸೌಮ್ಯವಾದ ನೀಳವಾದ ಮುಖದಲ್ಲಿ ಬಿಗಿದ ತೆಳು ತುಟಿಗಳನ್ನು ಕಂಡು ಸುಮ್ಮನಾದಳು. ಅವನ ಮನೆ ಎದುರು ಕಾರು ನಿಲ್ಲಿಸಿದಳು. ಮಗ ಶಾಂತವಾಗಿ ಹೋಂವರ್ಕ್‌ಮಾಡುತ್ತ ಕೂತಿರೋದು ಕಾಣಿಸಿತು. ಅವಳ ಕೈಯನ್ನು ಅವನೂ ಒತ್ತಿದ. ಅವಳೂ ಅವನ ಕೈಯನ್ನು ಒತ್ತಿ “ಗುಡ್ ಬೈ” ಎಂದಳು.

ಮೈಸೂರು
೨೧ ಆಗಸ್ಟ್ ೧೯೭೬

* * *