ತಿಳಿಯಾಗಲೆಂದು ನಾನು ಮನಸ್ಸನ್ನು ಹರಿಯಲು ಬಿಟ್ಟು ಬಾರಿನ ಸ್ಟೂಲಿನ ಮೇಲೆ ಕೂತಿದ್ದೆ. ಅಪೇಕ್ಷೆಯಿಲ್ಲದೆ ಒಳಗೆ ಹೊರಗೆ ಹರಿಯುತ್ತಿದ್ದ ನನ್ನ ಮನಸ್ಸನ್ನು ಅವನು ಅಷ್ಟೊಂದು ಜನರ ಮಧ್ಯ ಯಾಕೆ ಆರಿಸಿಕೊಂಡನೊ? ಕೈ ನೀಡಿಯೇಬಿಟ್ಟ. ಪರಸ್ಪರ ಪರಿಚಯ ಮಾಡಿಕೊಂಡದ್ದಾಯಿತು. ನನ್ನ ಆವರಿಸಿಕೊಳ್ಳುವಂತೆ ಅವನಿಗೆ ನನ್ನನ್ನು ಒಡ್ಡಿಕೊಳ್ಳಲು ನಾನು ತಯಾರಾಗಿರಲಿಲ್ಲ. ಪಕ್ಕದ ರೂಮಿನ ಸಂಗೀತ, ಹೊರಗಿನ ಜಿಟಿ ಜಿಟಿ ಮಳೆ, ಸೀಲಿಂಗ್‌ನಲ್ಲಿ ಹುದುಗಿದ ದೀಪಗಳು ಕತ್ತಲು ಬೆಳಕು ಮಿಶ್ರಣದ ಕಾಕ್‌ಟೈಲ್ – ತೊದಲುತ್ತಿದ್ದ ನನ್ನ ಅರ್ಧಮೂಕ ಆಲೋಚನೆಗಳಿಗೆ ಸಮರ್ಪಕ ವಾತಾವರಣ ದೊರಕಿಸಿದ್ದುವು.

“ನನಗೆ ಸೈಕಿಕ್ ಶಕ್ತಿಯಿಲ್ಲದಿದ್ದರೆ ನಿನ್ನ ಜೊತೆ ಮಾತಡಬಹುದು ಎಂದು ಯಾಕೆ ಅನ್ನಿಸುತ್ತಿತ್ತು ಹೇಳು? ನನ್ನ ಹೆಂಡತಿ ಶೀಲಳನ್ನು ನಿನಗೆ ಗುರುತು ಮಾಡಿಸುತ್ತೇನೆ. ನನ್ನ ತಾಯಿ ಐರಿಷ್. ನಿನಗೆ ಇಂಗ್ಲಿಷ್ ಬರುತ್ತೊ ಇಲ್ಲವೊ ಅಂತ ಅನುಮಾನಿಸಿದೆ ನಿನಗೆ ಕೈಯೊಡ್ಡಿದ್ದೇನೆ ನೋಡು, ಟಾಮ್ ನನ್ನ ಹೆಸರು…. ”

ಟಾಮ್ ಕುಡಿದಿದ್ದ. ಅವನ ಬೋಳುತಲೆ ಕೆಂಪು ಮುಖ ಹೊಳೆಯುತ್ತಿದ್ದುವು: ಸಣ್ಣು ಕಣ್ಣುಗಳು ಮಿನುಗುತ್ತಿದ್ದುವು. ಅಚ್ಚುಕಟ್ಟಾಗಿ ಹೊಲಿದ ಸೂಟ್ ಧರಿಸಿದ್ದ. ಟಾಮ್ ಕೃಶ ಶರೀರದ ಕುಳ್ಳ ಮನುಷ್ಯ. ಅವನ ಚೂಪಾದ ಉದ್ದ ಮುಖವನ್ನು ನೋಡುತ್ತ ನನಗೇನು ಅನ್ನಿಸುತ್ತಿದೆ ಎಂದು ಸ್ಪಷ್ಟಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ಇವನು ಸೂಕ್ಷ್ಮ ಇಂದ್ರಿಯಗಳ ನಾಯಿಯಂತೆ ಕಾಣುತ್ತಿದ್ದಾನೆ ಎಂದು ಕೊಂಡೆ. ಬೋಳುತಲೆ. ಆದರೆ ಕಿವಿ ತುಂಬ ಕೂದಲು. ಪೊದೆಯಾದ ಹುಬ್ಬು, ಕ್ರೂರವಾಗಬಲ್ಲ ಮುಖ. ಅಷ್ಟೊಂದು ಮಾಟವಾದ ಹಲ್ಲಿನ ಸಾಲುಗಳು ಕೃತಕವಿರಬಹುದು. ಮೊಂಡು ಮುಳ್ಳಿನಂತಿದ್ದ ಟಾಮ್ ನನಗೆ ಬೇಕಿರಲಿಲ್ಲ. ಆದರೆ ಅವನನ್ನು ಸ್ವೀಕರಿಸಿದೆ ವಿಧಿಯಿಲ್ಲವೆಂದೂ ಅನ್ನಿಸಿತು.

ನನಗೂ ವಿಸ್ಕಿ ಹೇಳಿದ. ಯಾವನೋ ಇನ್ನೊಬ್ಬ ಬಿಳಿಯನ ಜೊತೆ ಹರಟುತ್ತಿದ್ದ ಶೀಲಳನ್ನು ಕರೆದ. “ನನ್ನನ್ನು ಬಿಟ್ಟು ಈ ನನ್ನ ಗಂಡ ಇರಲಾರ. ನಿನ್ನ ಹೆಸರು ಭಾರತೀಯ ಅಲ್ಲವೆ?” ಎಂದು ಮೊಣಕೈತನಕ ಬಣ್ಣದ ಗಾಜಿನ ಬಳೆ ತೊಟ್ಟ ಶೀಲ ಕೈಯೊಡ್ಡಿದಳು. ನನ್ನ ಪಕ್ಕಕ್ಕೆ ಇನ್ನೊಂದು ಸ್ಟೂಲ್ ಸರಿಸಿ ಕೂತಳು. ಟಾಮ್ ಮುಂದಿನ ದಾಳಿಕ್ರಮ ಯೋಚಿಸುತ್ತ ನಿಂತಂತಿತ್ತು.

ನಾನು ಉಕ್ಕಲು ಸಿದ್ಧನಿರಲಿಲ್ಲವೆಂಬುದು ಟಾಮ್‌ಗೆ ಸ್ಪಷ್ಟವಾಗಿರಬೇಕು. ಆದರೆ ಭೋಪಾಲಿಗೆ, ಈ ರಾಜದೂತ ಹೋಟಲಿಗೆ, ಹುಡುಕುತ್ತಿದ್ದ ಅವನ ಕಣ್ಣುಗಳಿಗೆ ಹೊಸಬನಾಗಿದ್ದ ನನ್ನನ್ನು ಉತ್ತಿ ಬಿತ್ತಿ ಅಲ್ಲಿ ತಾನು ಫಲವತ್ತಾಗಲು ಅವನು ಆತುರನಾಗಿದ್ದಂತೆ ಕಂಡಿತು. ಇಬ್ಬರ ನಡುವೆ ನಾನು ಪ್ರೇಕ್ಷಕನಾಗಬೇಕೊ? ಗಂಡ ಹೆಂಡಿರ ಚೆಂಡಾಟದ ನಡುವಿನ ನೆಟ್ಟಾಗಬೇಕೊ? ಏನನ್ನು ಸ್ವೀಕರಿಸಲು ಇವನು ನನ್ನನ್ನು ಆಯ್ದುದ್ದು? ತಿಳಿಯದೆ ನನ್ನ ಬಗ್ಗೆ ಹೇಳಿಕೊಂಡೆ. ಯಾಖೆ ಹೇಳಿಕೊಂಡೆ? ನಾನು ಇಂಗ್ಲಿಷ್‌ಟೀಚರ್, ಆದರೆ ಕನ್ನಡದಲ್ಲಿ ಸಾಹಿತಿ. ಇಂಗ್ಲೆಂಡಿನಲ್ಲಿದ್ದೆ. ಭೋಪಾಲಿಗೆ ಸೆಮಿನಾರ‍್ಗೆಂದು ಬಂದಿದ್ದೇನೆ. ಹೇಗೆ ಶೇಪ್ ಇಲ್ಲದೆ ಭೋಪಾಲ್ ಬೆಳೆದಿದೆ ನೋಡಿ. ಮಳೆಯಿಂದ ಬೀದಿಯೆಲ್ಲ ಕೆಸರು. ಕೊಚ್ಚೆ. ನೀವು ಮೈಸೂರಿಗೆ ಬನ್ನಿ. ತುಂಬ ಸುಂದರವಾದ ಊರು. ಇಲ್ಲಿ ಇದು ನನ್ನ ಪ್ರಥಮ ರಾತ್ರಿ. ಹೌದು ಎರಡು ಮಕ್ಕಳು, ಹೆಂಡತಿ ಇದ್ದಾರೆ. ಇತ್ಯಾದಿ ಹೇಳಿಕೊಳ್ಳುವಾಗ ಟಾಮ್ ಮತ್ತು ಶೀಲರಿಗೆ ನಾನು ಸೂಕ್ಷ್ಮ ಮನಸ್ಸಿನ ಟಾರ್ಜೆಟ್ ಆಗಲು ಯಾಕೆ ಒಪ್ಪಿಕೊಂಡೆ? ನೀನೇನು ಕುಡಿಯುತ್ತಿ ಎಂದು ಶೀಲನ್ನ ಕೇಳಿದೆ.

“ಕೋಕ್” ಎಂದು ಟಾಮ್ ಹೇಳಿದ. ”

“ಇಲ್ಲ. ವಿಸ್ಕಿ” ಶೀಲ ಹೇಳಿದಳು.

“ಈ ಐರಿಷ್ ಮಂದಿ ಕುಡುಕರು” ಟಾಮ್ ನಕ್ಕ. ಮೂವರಿಗೂ ವಿಸ್ಕಿ ಹೇಳಿದೆ. ಶೀಲ ಅಂದಳು:

“ನನ್ನ ಗಂಡ ಹೆವಿ ಎಲಕ್ಟ್ರಿಕಲ್ಸ್‌ನಲ್ಲಿ ಎಂಜಿನಿಯರ್. ಇಮಾಜಿನೇಶನ್ ಸೊನ್ನೆ. ಆದರೆ ನಾನು ಐರಿಷ್,”

‘ಹೌದು ನೀನು ಐರಿಷ್ ಕಾವ್ಯ. ಅವನು ಬ್ರಿಟಿಷ್ ಗದ್ಯ’

ನಾನು ಉಕ್ಕಲು ಯಾಕೆ ತಯಾರಾದೆ? ನನ್ನನ್ನು ಒತ್ತಿಕೂತ ಶೀಲ್ ಸುಂದರಿಯಾಗಿದ್ದಳು. ಮಧ್ಯವಯಸ್ಕಳಾಗಿದ್ದರೂ ಮುಖದ ಮೇಲಿನ ಗೆರೆಗಳನ್ನು ಮರೆಸುವ ನಿಲುವು ಅವಳಿಗಿತ್ತು. ಕತ್ತಿನ ಮೇಲೆಇಳಿಬಿಟ್ಟ ಬ್ಲಾಂಡ್ ಕೂದಲಿನ ರಾಶಿ, ಅವಳ ನಗುವ ಕಣ್ಣುಗಳು ಹುಡುಗಿಯಾಗಿದ್ದುವು. ಟಾಮ್‌ಗಿಂತ ಅವಳೇ ಎತ್ತರ. ಧಾರಾಳತನ ಸೂಚಿಸುವ ಮೃದುವಾದ ಮುಖ. ಅವಳಲ್ಲಿ ನನಗೆ ಆಕರ್ಷಕವಾಗಿ ಕಂಡ ಸೊಕ್ಕಿಗೆ ಕಾರಣ ಅವಳು ಟಾಮ್‌ಗಿಂತ ಎತ್ತರವಾದದ್ದು ಇರಬಹುದು; ತೀವ್ರತೆಯಿಲ್ಲದ ಅವಳ ನಿರಂಬಳ ಆರೋಗ್ಯವಿರಬಹುದು. ಅಥವಾ ನನ್ನನ್ನು ಅವಳು ಒತ್ತಿ ಕೂತದ್ದು ಕಾರಣವಿರಬಹುದು.

ಉದ್ದನೆಯ ಮ್ಯಾಕ್ಸಿ ತೊಟ್ಟ ಶೀಲ ಸುಂದರವಾದ ತನ್ನ ಬೆತ್ತಲೆ ತೋಳುಗಳನ್ನು ಕೌಂಟರಿನ ಮೇಲೆ ಹಗುರವಾಗಿಟ್ಟು ಮೈಯನ್ನು ಇನ್ನಷ್ಟು ನನಗೆ ಒತ್ತಿ ನನ್ನ ಮಾತಗೆ ಮೌನವಾಗಿ ಸುಖಪಟ್ಟಳು. ಟಾಮ್ ತುಂಟತನಿಂದ ನಕ್ಕ. ಚಿಯರ್ಸ್ ಎಂದು ಕುಡಿದ.

“ಭೋಪಾಲ್ ನಿನಗೆ ಇಷ್ಟವೆ?” ಎಂದು ಶೀಲನ್ನ ಕೇಳಿದೆ. ಇಬ್ಬರನ್ನೂ ಕೂಡಿಸುವಂತೆ ನಾನು ಬೇಕೆಂದೇ ಪ್ರಶ್ನೆ ಹಾಕಲಿಲ್ಲ.

“ಎಸ್ ಅಂಡ್ ನೋ. ಆದರೆ ಮುಂದಿನ ವರ್ಷ ಈ ಊರುಬಿಟ್ಟು ಇಂಗ್ಲೆಂಡಿಗೆ ಹೋದಮೇಲೆ, ನೆನಪಾಗುವ ಭೂಪಾಲ್ ಇದೆಯಲ್ಲ – ಅದು ತುಂಬ ಇಷ್ಟವಾಗಿರುತ್ತ” ಎಂದಳು. ಸಿಗರೇಟ್ ಹಚ್ಚಿದಳು. ಟಾಮ್ ಅತಂತ್ರವಾಗಿ ನಿಂತಿದ್ದನೆಂದು ನನಗೆ ಸಂತೋಷವಾಗಿತ್ತು. ಪಕ್ಕದ ರೂಮಿನಿಂದ ಬರುತ್ತಿದ್ದ ಪಾಪ್‌ಸಾಂಗಿಗೆ ಅವನು ತಾಳಹಾಕುತ್ತಿದ್ದ. ರಾತ್ರೆ ಹನ್ನೊಂದರ ಮೇಲಾಗಿದ್ದರಿಂದ ಬಾರಿನಲ್ಲಿದ್ದ ಜನ ಒಬ್ಬೊಬ್ಬರಾಗಿ ಎದ್ದು ಹೋಗುತ್ತಿದ್ದರು. “ಈ ಭಾರತದ ಜನ ನಮ್ಮ ಐರಿಷ್ ಜನರಿದ್ದಂತೆ” ಎಂದಳು ಶೀಲ. “ನೀನು ಪುನರ್ಜನ್ಮ ನಂಬುತ್ತೀಯ?” ಎಂದು ಥಟ್ಟನೆ ಕೇಳಿ ಉತ್ತರಕ್ಕಾಗಿ ಕಾಯದೆ ಅನ್ಯಮನಸ್ಕಳಾದಳು. ಏನು ಮಾತಾಡೋದು ತಿಳಿಯದೆ ನಾನೊಂದು ಸಿಗರೇಟ್ ಹಚ್ಚಿದೆ. ಆಕ್ರಮಣದ ದಾರಿಗಳನ್ನು ಮೂವರೂ ಹುಡುಕುತ್ತಿದ್ದೇವಲ್ಲವೆ ಎಂದು ಭಾವಿಸಿದೆ. ಶೀಲ ಕೃತಾರ್ಥಳಂತೆ ನೆಮ್ಮದಿಯಿಂದ ಸಿಗರೇಟ್ ಸೇದುತ್ತಿರುವುದು ನೋಡಿ ಟಾಮ್‌ಗೆ ಕಸಿವಿಸಿಯಾಗುತ್ತಿರಬಹುದೆಂದು ಊಹಿಸಿದೆ. ಯಾಕೆಂದರೆ ಅವನ ಮಾತಿನ ಅರ್ಥ ಮುಗ್ಧವಾಗಿ ಕಂಡರೂ ಅದರ ಧಾಟಿಯಲ್ಲಿ ತುರಿಕೆಯಿತ್ತು.

“ಈ ಐರಿಷ್ ಜನಕ್ಕೆ ಇಂಗ್ಲಿಷ್ ಬರಲ್ಲ ಎನ್ನೋಕೆ ಹೇಳ್ತೇನೆ. ಈ ಶೀಲ ಅನಾವಶ್ಯಕವಾಗಿ ಬಟ್ (But) ಉಪಯೋಗಿಸುತ್ತಾಳೆ. ನಾನು ಬರುತ್ತೇನೆ ಬಟ್ ಕಾರನ್ನು ಗರಾಜ್‌ನಿಂದ ತಗೊಂಡು ಬಾ. ಇದು ಸರಿಯೆ? ನೀನು ಇಂಗ್ಲಿಷ್ ಟೀಚರ್ ಹೇಳು. ”

ನಾನು ಮುಗುಳ್ನಕ್ಕೆ. ಟಾಮ್ ಇನ್ನೊಂದು ರೌಂಡ್ ಸ್ಮಾಲ್ ವಿಸ್ಕಿ ಹೇಳಿದ. ಶೀಲ ತನ್ನ ಸುಂದರವಾದ ಕೈಗಳನ್ನು ನನ್ನ ಹೆಗಲಿನ ಮೇಲಿಟ್ಟು ನಕ್ಕಳು.

“ಹಾಗಲ್ಲ ಕೇಳು. ನನ್ನ ಗಂಡ ಬ್ರಿಟಿಷ್ ಬಟ್ ಅವನ ತಾಯಿ ಐರಿಷ್. ಬ್ರಿಟಿಷರಿಗೆ ಇಂಗ್ಲಿಷ್ ಬರಲ್ಲ. ಅವನು ನನ್ನ ಬಾ ಅಂತಾನೆ ಬಟ್ ನೀನ್ ಡ್ರೈವ್ ಮಾಡು ಅಂತಾನೆ ಬಟ್ ನನ್ನ ಡ್ರೈವಿಂಗ್ ಎರಾಟಿಕ್ ಅಂತ ರೇಗ್ತಾನೆ. ” ಶೀಲ, ನಾನು ಟಾಮ್ ಮೂವರೂ ಇದೊಂದು ಆಟವೆಂದು ನಗುತ್ತಿದ್ದೆವು. ಟಾಮ್ ನನ್ನನ್ನು ಬೆರಳಿನಿಂದ ಚುಚ್ಚಿ ಅಂದ:

“ನಾನು ಶೀಲಳಿಗೆ ಹೇಳ್ತೇನೆ. ನನ್ನ ತಾಯಿ ಐರಿಷ್ ಬಟ್, ನನ್ನ ತಂದೆಯ ಕಾಮನ್ ಸೆನ್ಸ್‌ನನಗಿದೆ. ನಾವು ಅಂಡರ್‌ಸ್ಟೇಟ್‌ಮೆಂಟ್ ಜನ. ನಮ್ಮ ಫ್ಯಾಕ್ಟರೀಲಿ ಇವಳ ಕಂಟ್ರಿಮೆನ್ ಕೆಲವರಿದ್ದಾರೆ; ಬಟ್ ಅವರ ಹಾಗೆ ನಾವು ಕೆಲಸ ಕದಿಯೋದಿಲ್ಲ. ನಾವು ಸೋಮಾರಿಗಳಲ್ಲ. ”

ಶೀಲಳ ಸ್ವಾಸ್ಥ್ಯಕೆದಕಿದಂತೆ ಕಾಣಲಿಲ್ಲ. ಮುಗುಳ್ನಗುತ್ತಲೇ ಹೇಳಿದಳು:

ಭಾರತೀಯರಿಗೆ ಇಮ್ಯಾಜಿನೇಶನ್ ಇದೆ. ನಮ್ಮ ಹಾಗೇ ನೀವು ಸ್ನೇಹಪರರು, ಚೆನ್ನಾಗಿ ಮಾತಾಡ್ತೀರಿ. ಬಟ್ ಐರಿಷ್ ಜನರಿಗೆ ಇಂಗ್ಲಿಷ್ ಬರಲ್ಲ ಅನ್ನೋ ಈ ಬ್ರಿಟಿಷ್ ಜನ ಮಾತಾಡೋದನ್ನ ನೀನು ಕೇಳಬೇಕು. ಮಾತಾಡೋಕೆ ಏನಾದರೂ ಇದ್ರೆ ತಾನೆ ಇವರಿಗೆ ಭಾಷೆ ಬರೋದು?”

ಟಾಮ್‌ನ ತಾಯಿಮುಖ ಕ್ರೌರ್ಯದಿಂದ ಇನ್ನಷ್ಟು ಜೋತಿರುವಂತೆ ನನಗೆ ಕಂಡಿತು. ಆದರೆ ಇನ್ನೂ ಹತ್ತು ವರ್ಷಗಳಾಗಲಿ, ಟಾಮ್ ಮಾತ್ರ ಹೀಗೇ ಒಣಗಿಕೊಂಡು ಹುರಿಯಾಗಿರುತ್ತಾನೆ. ಆದರೆ ಶೀಲ ಕುಸಿದಿರುತ್ತಾಳೆ ಅನ್ನಿಸಿತು. ನನ್ನ ಒಲವು ಶೀಲಳ ಕಡೆಗಿರುವುದು ಕಂಡು ಟಾಮ್ ಹೇಳಿದ:

“ಈ ಐರಿಷ್ ಜನ ಜಗಳಗಂಟರು. ಉದಾಹರಣೆಗೆ ನನ್ನ ತಾಯೀನ…. ”

ಶೀಲ ಮಾತು ಬದಲಾಯಿಸಿದಳು.

“ನನಗೆ ಹೈದರಾಬಾದ್‌ನಲ್ಲಿ ಒಬ್ಬ ಗೆಳೆಯನಿದ್ದಾನೆ”

“ಹೈದರಾಬಾದ್ ಅಲ್ಲ – ಸಿಕಂದರಾಬಾದ್, ಇದೇ ಶಿಲಳ ಸಮಸ್ಯೆ ನೋಡು. ಒಂದು ಫ್ಯಾಕ್ಟನ್ನ ಸರಿಯಾಗಿ ನೆನಪಿಟ್ಟುಕೊಳ್ಳಲ್ಲ. ಎಲ್ಲದರಲ್ಲೂ ಹೀಗೆ ಅನ್ ರೀಸನಬಲ್”. ಟಾಮ್ ನನ್ನ ಒಪ್ಪಿಗೆಯನ್ನು ಯಾಚಿಸುವಂತೆ ನೋಡಿದ. ಇನ್ನೊಂದು ಮೂರು ಸ್ಮಾಲ್ ವಿಸ್ಕಿ ಆರ್ಡರ್ ಮಾಡಿದೆ. ಪಕ್ಕದ ರೂಮಿನಿಂದ ಸಂಗೀತದ ಅಬ್ಬರ ಹೆಚ್ಚಾಗಿತ್ತು.

“ಅಲ್ಲ ಹೈದರಾಬಾದ್” ಶೀಲ ಧ್ವನಿ ಎತ್ತರಿಸಿ ನನ್ನನ್ನು ಯಾಚಿಸುತ್ತ ನೋಡಿದಳು. ಇದ್ದಕ್ಕಿದ್ದಂತೆ ನನಗೆ ಇದೇನೂ ಬೇಡವೆನಿಸಿ ಸುಸ್ತಾಗಿತ್ತು. ಆದರೆ ನನ್ನ ಎಡಗೈಯನ್ನು ಶೀಲ ಮೃದುವಾಗಿ ಒತ್ತುತ್ತಿದ್ದಳು. ಟಾಮ್ ಇದನ್ನು ಗಮನಿಸದವನಂತೆ ಸಂಗೀತಕ್ಕೆ ತಾಲ ಹಾಕುತ್ತ:

“ಅಲ್ಲ ಸಿಕಂದರಾಬಾದ್” ಎಂದು ಗಂಡಿನ ಗಂಭೀರ ಭಾವವಿತ್ತು. ಆದರೆ ಮಾತುಗಳು ತೃಪ್ತ ಮುಖದಲ್ಲಿ ಶೀಲಳ ಅಹಂಕಾರವನ್ನು ಧ್ವಂಸ ಮಾಡಿದ ಭಾವವಿತ್ತು. ಆದರೆ ಮಾತುಗಳು ಮಾತ್ರ ಹುಸಿನಾಟಕದ ಧಾಟಿಯಲ್ಲೇ ಇದ್ದುವು. ಶೀಲಳೂ ನಗುತ್ತ.

“ಯಾವುದೋ ಬಾದ್. ಬಿಡು. ಅಲ್ಲಿಗೆ ಹೋಗೋಣವೆಂದರೆ ಕಾಸು ಬಿಚ್ಚದ ಜುಗ್ಗ ನೀನು” ಎಂದು ಟಾಮ್‌ಗೆ ಹೇಳಿ, ಅದೇ ತಮಾಷೆಯಲ್ಲಿ ನನಗೆ ಹೇಳಿದಳು;

“ಹೈದರಾಬಾದ್‌ನಲ್ಲಿರೋ ನಮ್ಮ ಗೆಳೆಯ – ”

“ಸಿಕಂದರಾಬಾದ್‌ನಲ್ಲಿರೋ ನಮ್ಮ ಗೆಳೆಯ….. ”

ಶೀಲ ನನ್ನ ಬೆನ್ನಿನ ಮೇಲೆ ಹಿಂದಿನಿಂದ ಕೈ ತೂರಿ ಟಾಮನನ್ನು ನೂಕಿ,

“ಓಕೆ. ಸಿಕಂದರಾಬಾದಿನಲ್ಲಿರೋ ನಮ್ಮ ಗೆಳೆಯ, ಮೇಜರ್ ನಾಯರ್ ನಿಜವಾದ ಗಂಡಸು. ಅವನಿಗೆ ಜರ್ಮನ್ ಬರುತ್ತೆ. ಹಾಕಿ ಆಟದಲ್ಲಿ ಎಕ್ಸ್‌ಪರ್ಟ್”

“ಸ್ಕ್ಯಾಂಡಲ್ ಅಂದರೆ ಅವನಿಗೆ ಇಷ್ಟ ಅಂತ ನನ್ನ ಹೆಂಡತಿ ಶೀಲಳಿಗೆ ಅವನೆಂದರೆ ಇಷ್ಟ”

“ನಿಜ ಅಂದರೆ ಅವನ ಸುದ್ದಿ ಎತ್ತಿದರೆ ಟಾಮ್‌ಗೆ ಅಸೂಯೆ. ಇಮ್ಯಾಜಿನೇಶನ್ ಇಲ್ದಿರೋ ಸ್ಟುಪಿಡ್ ಎಂಜಿನಿಯರ್ ಬುದ್ದಿ – ಅಷ್ಟೆ. ಬಟ್ ನಾನು ಐರಿಷ್, ನಾನು ಸ್ವತಂತ್ರಳು. ಮದುವೆ ಆದ್ರೆ ಖಂಡಿತ ನನ್ನ ಮುದ್ದಿನ ಗಂಡನ ಹಾಗೆ ನಾಯರ್ ತನ್ನ ಹೆಂಡತಿ ಸುತ್ತಾನೇ ಸುಳೀತಾ ಇರಲ್ಲ, ಅವ ಶಿಕಾರಿ ಆಡ್ತಾನೆ. ಒಳ್ಳೆ ಜಬರದಸ್ತಿನ ಗಂಡಸು. ”

“ಡಾರ್ಲಿಂಗ್ ಶೀಲ. ನನ್ನ ಮೂರು ಮಕ್ಕಳ ತಾಯಿ ನೀನು. ನಿನಗೆ ನಲವತ್ತು ವರ್ಷ. ಬಟ್ ಮೇಜರ್ ನಾಯರ್ ಇನ್ನು ಚಿಕ್ಕವನು. ನಮ್ಮನೆನಪು ಕೂಡ ಉಂಟೋ ಇಲ್ಲವೋ ಅವನಿಗೆ. ಎರಡು ವರ್ಷಗಳ ಕೆಳಗೆ ಸಿಮ್ಲಾದಲ್ಲಿ ಹೀಗೆ ಕುಡಿಯುವಾಗ ಭೆಟ್ಟಿಯಾದ್ದು. ” ಟಾಮ್ ತತ್ವಜ್ಞಾನಿಯಂತೆ ಮಾತಾಡಿ ಬ್ಯಾಂಡಿನ ರಿದಮ್ಮಿಗೆ ಕಾಲು ಹಾಕಿದ. ಅವನ ಒಣಕಲು ದೇಹ, ಕಣ್ಣುಗಳು ಪಾದರಸದಂತೆ ಚುರುಕಾಗಿದ್ದುವೆಂಬುದನ್ನು ಗಮನಿಸಿದೆ. ಶೀಲಳಿಗೆ ನನ್ನ ಅಗತ್ಯವಿದೆಯೆನ್ನಿಸಿ ಹೇಳಿದೆ:

“ಬಟ್ ಶೀಲ ನನಗೂ ನಲವತ್ತು ವರ್ಷ” ಎಂದು ಟಾಮ್ ಕಡೆ ತಿರುಗಿ “ನಿನ್ನ ಹೆಂಡತಿ ತುಂಬ ಯಂಗ್ ಆಗಿ ಕಾಣಿಸ್ತಾಳೆ. ನೀನು ಲಕ್ಕಿ ಅನ್ನೋದನ್ನ ಮರೀಬೇಡ” ಎಂದೆ. ಶೀಲ ನಾಟಕೀಯವಾಗಿ ನನ್ನ ಹಣೆಗೆ ಮುತ್ತು ಕೊಟ್ಟು ಗಂಡನಿಗೆ “ಕೇಳಿಸಿಕೊ” ಎಂದಳು.

ಟಾಮ್ ನಗುತ್ತ ಹೇಳಿದ:

“ಯಾಕೆ ಐರ್ಲೆಂಡ್ ಬ್ಯಾಕ್‌ವರ್ಡ್ ಅನ್ನೋದು ನಿನ್ನನ್ನ ನೋಡಿದರೆ ಗೊತ್ತಾಗುತ್ತೆ. ”

“ಆಲ್‌ರೈಟ್. ಆದರೆ ಐರ್ಲೆಂಡಿನಲ್ಲಿ ಸಂಗೀತ ಇದೆ. ಕುಣಿತ ಇದೆ. ಭಾರತೀಯರಂತೆ ನಾವೂ ಕ್ಲೈರ್ವೊಯಂಟಿ ಜನ. ನನ್ನ ತಾಯಿ ಸಾಯ್ತ ಇದಾಳೇಂತ ಮಾಂಚೆಸ್ಟರಿನಲ್ಲೇ ನನಗೆ ಅನುಭವವಾಯ್ತು. ತಾಯೀನ್ನ ನೋಡಿ ಬರ್ತೇನೆ ಅಂದೆ. ಆದರೆ ನೀನು ಬಿಡಲಿಲ್ಲ. ”

“ಶೀಲ, ನಿನ್ನ ಮಲತಂದೆ ಮುಖ ಕಂಡರೆ ನಿನಗೆ ಆಗ್ತಿರ್ಲಿಲ್ಲ. ಆ ಬಾಸ್ಟರ್ಡ್ ನಿನ್ನನ್ನೇ ಕೆಡಿಸಕ್ಕೆ ಬಂದಿದ್ದ ಅಲ್ವ – ನೀನು ಹುಡುಗಿಯಾಗಿದ್ದಾಗ? ರೂಮಿಂದ ಕೂಗಿಕೊಂಡು ನೀನು ಹೊರಗೆ ಬಂದಿ. ಆದರೆ ನಿನ್ನ ತಾಯಿ ಆ ಕುಡುಕ ಅಂದ್ರೆ ಹೆದರಿ ಸಾಯ್ತಾ ಇದ್ದಳು. ಇದನ್ನೆಲ್ಲ ನೀನೇ ನನಗೆ ಹೇಳಿದ್ದು. ತಾಯಿ ಮನೆಗೆ ಅಟ್ಟಿದ್ದರೂ ನೀನು ಹೋಗ್ತಿರಲಿಲ್ಲ. ”

ಟಾಮ್ ಬಹಳ ಜವಾಬ್ದಾರಿಯಿಂದ ಎನ್ನೊ ಹಾಗೆ ಮಾತಾಡಿದ್ದ. ಆದರೆ ನನಗೆ ಮುಜುಗರವಾಗಿತ್ತು. ನನ್ನ ಕೈಮೇಲಿದ್ದ ಕೈಯನ್ನು ಶೀಲ ಎಳೆದುಕೊಂಡು ಸಿಗರೇಟ್ ಹಚ್ಚಿದಳು. ಏನೂ ಕೇಳಿಸಿಕೊಳ್ಳದವನಂತೆ ನಾನು ಸುಮ್ಮನೆ ಕೂತೆ. ಮಗುವನ್ನು ತಂದೆ ನೋಡುವಂತೆ ಶೀಲಳನ್ನು ನೋಡುತ್ತಿದ್ದ ಟಾಮ್ ಒಳಗೇ ಹಿಗ್ಗುತ್ತಿದ್ದಾನೆಂದು ನನಗೆ ಗುಮಾನಿಯಿತ್ತು. ನನಗೆ ಭಯವಾಗಲು ಶುರುವಾಗಿತ್ತೆಂದೂ ಹೇಳಬಹುದು. ಟಾಮ್ನ ಕ್ರೌರ್ಯ ನನ್ನದೂ ಆಗಬಹುದಿತ್ತೆಂದು ನಾನು ಹೆದರಿದೆ. ಹಸಿಯಾಗಿ, ಬಿಸಿಯಾಗಿ ನಿರಾಧಾರಳಾಗಿದ್ದ ಶೀಲಳನ್ನು ಕಾಪಾಡುವುದು ಅವಶ್ಯವೆನ್ನಿಸಿತು. ಅವಳು ಹೇಳಿದಳು:

“ಯಾರಿಗೆ ಬೇಕು ಮಕ್ಕಳು, ಮನೆ? ನಾನ್ನೊಬ್ಬಳು ಸಂಗೀತಗಾರಳಾಗ ಬಹುದಿತ್ತು. ”

“ನನಗೇನು ಎಂಜಿನಿಯರಿಂಗ್ ಬೇಕಿತ್ತ? ನಾನು ಬೆಟ್ಟಗಳನ್ನು ಹತ್ತುತ್ತಿದ್ದೆ ಶೀಲ. ”

ನಾನು ನಡುವೆ ಇಲ್ಲವೆನ್ನುವಂತೆ ಇಬ್ಬರೂ ಮಾತಾಡಿದ್ದರು. ನಾನು ಶೀಲಳ ಕೈಯನ್ನು ಹುಡುಕಿ ಒತ್ತಿದೆ. ಇದ್ದಕ್ಕಿದ್ದಂತೆ ಅವಳು ಗೆಲುವಾಗಿ ಹೇಳಿದ್ದು ಕೇಳಿ ನಾನು ತಬ್ಬಿಬ್ಬಾದೆ: “ಇಬ್ಬರೂ ವೇಲ್ಸ್‌ನಲ್ಲಿ ಬೆಟ್ಟ ಹತ್ತುವಾಗ ಭೆಟ್ಟಿಯಾದ್ದು. ನಾನು ಹಾಡುತ್ತೇನೆಂದು ಇವ ನನ್ನ ಒಲಿದದ್ದು. ”

“ಅದು ನನ್ನ ಅತ್ಯಂತ ಮೂರ್ಖ ಗಳಿಗೆ” ಟಾಮ್ ನಗುತ್ತ ಗ್ಲಾಸ್ ಬರಿದು ಮಾಡಿ ಬಾರ್‌ಮನ್‌ಗೆ ಒಡ್ಡಿದ. ನನ್ನದನ್ನೂ ಬರಿದು ಮಾಡಲು ಹೇಳಿದ.

“ನನ್ನ ಅತ್ಯಂತ ಮೂರ್ಖ ಘಳಿಗೆ ಕೂಡ” ಎಂದು ಶೀಲ ತನ್ನ ಗ್ಲಾಸ್‌ಬರಿದು ಮಾಡಿ ಒಡ್ಡಿದಳು. “ನಿನ್ನ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೆಚ್ಚು ಕುಡಿಯಬೇಡ” ಟಾಮ್ ಹೇಳಿದ. “ಇನ್ನೊಂದೇ” ಎಂದು ಶೀಲ ಯಾಚಿಸಿ ಬಾತ್‌ರೂಮಿಗೆ ಹೋದಳು. ನಾನು ಟಾಮ್ ಇಬ್ಬರೇ ಉಳಿದೆವೆಂದು ನನಗೆ ಮುಜುಗರವಾಯಿತು. ಟಾಮ್ ಸ್ನೇಹದಿಂದ ನನ್ನ ಭುಜದ ಮೇಲೆ ಕೈಯಿಟ್ಟು ಹೇಳಿದ:

“ಶೀಲ ನೋಡಲು ಈಗಲೂ ಎಷ್ಟು ಚೆನ್ನಾಗಿದ್ದಾಳೆ ಅಲ್ವ? ನಾಲ್ಕು ಜನ ಸುಂದರ ಯುವಕರನ್ನು ತಿರಸ್ಕರಿಸಿ ನನ್ನನ್ನು ಅವಳು ಮದುವೆಯಾದಳು. ಇಂಗ್ಲಿಷ್ ಹುಡುಗಿಯರಂತಲ್ಲ. ಈ ಐರಿಷ್ ಹುಡುಗಿಗೆ ನಿಜವಾದ ಟೇಸ್ಟ್ ಇದೆ. ಸಂಗೀತ, ಕಾವ್ಯ ಎಲ್ಲದರಲ್ಲೂ ಫಸ್ಟ್‌ಕ್ಲಾಸ್‌ಟೇಸ್ಟ್”

ಶೀಲ ನನಗೂ ಆಕರ್ಷಕವಾಗಿದ್ದಳೆಂದು ಟಾಮ್‌ಗೆ ಖುಷಿಯಾಗಿತ್ತು. ನನ್ನ ಅತಿಶಯೋಕ್ತಿ, ನನ್ನ ಉತ್ಸಾಹ, ನನ್ನ ಸೂಕ್ಷ್ಮಜ್ಞತೆ, ನನ್ನ ಸಾಕ್ಷಿಯಲ್ಲಿ ಟಾಮ್ ಮಿಕ್ಕಲು, ಒಂದಷ್ಟು ಉಬ್ಬಿಕೊಳ್ಳಲು ಸನ್ನಾಹ ಮಾಡುತ್ತಿದ್ದಾನೆಂಬುದು ನನಗೆ ಸಂತೋಷವೂ ಆಯಿತು; ಸಿಟ್ಟೂ ಬಂತು. ನಾನು ಪ್ರತ್ಯೇಕ ಎಂಬುದನ್ನು ಅವನಿಗೆ ತಾಗಿಸುವಂತೆ ಏನು ಹೇಳಬೇಕೆಂದು ಹುಡುಕುತ್ತ ನಿಂತೆ.

“ನೀನು ಆಕೆಗಿಂತ ತುಂಬ ವಯಸ್ಸಾದವನಂತೆ ಕಾಣುತ್ತಿ” ಎಂದೆ. “ಹೌದು ಮಿತ್ರ, ನಾನು ಒಳಗೇ ಬಹಳ ಬಳಲಿದ್ದೇನೆ. ಯಾವುದರಲ್ಲೂ ರುಚಿಯೇ ಇಲ್ಲ” ಎಂದ. ನನಗೆ ನನ್ನ ಬಗ್ಗೆಯೇ ಬಹಳ ಭಯವಾಯಿತು. “ನಿಜವಾದ ಪ್ರೇಮ ಅಸಾಧ್ಯ” ಎಂದೆ. ಟಾಮ್‌ಮಂಕಾಗಿ ತಲೆ ಹಾಕಿದ. ತನ್ನ ಆತ್ಮಜ್ಞಾನವನ್ನು ನಾನು ಶ್ಲಾಘಿಸಿ ತನ್ನನ್ನು ಹಿಗ್ಗಿಸಬೇಕೆಂದು ಅವನು ಬಯಸಿರಬಹುದು. ನನ್ನ ಪ್ರಜ್ಞೆಯಲ್ಲಿ ತನ್ನ ನಿಜವೂ ದಾಖಲಾಗಬೇಕು; ಹೆಚ್ಚಲು ಹವಣಿಸುತ್ತಿರುವ ತನ್ನ ವ್ಯಕ್ತಿತ್ವೂ ಫಲಿಸಬೇಕೆಂಬ ಅವನ ಉಪಾಯಕ್ಕೆ ಬಲಿಯಾಗಬಾರದೆಂದು ಸೆಟೆದುಕೊಂಡೆ. ಪಕ್ಕದ ರೂಮಿನಲ್ಲಿ ಈಗ ಮೃದುವಾಗಿದ್ದ ಸಂಗೀತವೋ, ನೆರಳಿನಿಂದ ಬೆಳಕನ್ನು ಪಳಗಿಸಿದ್ದ ಬಾರೋ, ಹೊರಗೆ ಬೀಳುತ್ತಿದ್ದ ಮಳೆಯೋ, ಶೀಲ ಇಲ್ಲವೆಂಬುದೋ ಅಥವಾ ನನ್ನ ಮುಖದ ಅನಿವಾರ್ಯ ಆಹ್ವಾನವೋ – ಕಾರಣ ಏನೇ ಇರಲಿ, ಟಾಮ್ ತನ್ನ ವ್ಯಕ್ತಿತ್ವದ ಇನ್ನೊಂದು ಮಗ್ಗುಲಿಗೆ ಹೊರಳಿ, ಅಹಂಕಾರವನ್ನೆಲ್ಲ ಕಳಚಿ, ನನ್ನ ಶೋಧನೆಗೆ ಬಯಲಾಗುವ ಸನ್ನಾಹದಲ್ಲಿದ್ದಂತೆ ಕಂಡಿತು. ಅವನ ಪೊದೆ ಹುಬ್ಬಿನ ನಾಯಿ ಮುಖದಲ್ಲಿ ಸಾತ್ವಿಕತೆ ತುಂಬಿಕೊಂಡಿತ್ತು. ಪ್ರಾಯಶಃ ನನ್ನ ಮೂಲಕ ಈ ತನ್ನ ಹೊಸ ಮಗ್ಗುಲನ್ನು ಅವನು ಶೀಲಳಿಗೆ ತಿಳಿಯುವಂತೆ ಮಾಡಲು ಹವಣಿಸುತ್ತಿರಬಹುದು. “ಶೀಲ ಹತಾಶ ಹೆಣ್ಣಿನಂತೆ ಕಾಣುತ್ತಾಳೆ” ಎಂದೆ. “ಇಲ್ಲ ನನ್ನಲ್ಲೆ ಅವಳಿಗೆ ಸುಖ” ಎಂದು ಟಾಮ್ ನನ್ನನ್ನು ಅಣಕಿಸುತ್ತ ನಕ್ಕ.

ಶೀಲ ಮೇಕಪ್ ಮಾಡಿಕೊಂಡು ಬಂದಿರಬೇಕು. ಮತ್ತೇರಿಸುವ ಸುಗಂಧ ಬಳಿದುಕೊಂಡಿದ್ದಳು. ನನ್ನ ಪಕ್ಕಕ್ಕೆಹತ್ತಿಕೊಂಡು ನಿಂತಳು. ವಿಸ್ಕಿಯ ಗ್ಲಾಸ್‌ಎತ್ತಿಕೊಂಡು ರುಚಿನೋಡಿ ಐಸ್ ಹಾಕಿಕೊಂಡಳು. ಟಾಮ್, ‘ಕ್ಷಮಿಸು’ ಎಂದು ನಮ್ಮಿಬ್ಬರನ್ನು ಬಿಟ್ಟು ಬಾತ್‌ರೂಮಿಗೆ ಹೋದ.

ಇಬ್ಬರೇ ಉಳಿದಾಗ ಶೀಲಳಲ್ಲಿ ಮೊದಲಿನ ಆಪ್ತತೆ ಇರಲಿಲ್ಲ. ಅಂಜಿದಂತೆ ಕಂಡಿತು. ದೂರ ಸರಿದು ಕೂತವಳು ಏನೋ ಹೇಳಬೇಕೆಂದು ಹೇಳಿದಳು. ಅವಳು ಹೇಳುವುದನ್ನು ನಾನು ಊಹಿಸಿಬಿಟ್ಟಿದ್ದೆ.

“ಟಾಮ್‌ ತುಂಬ ಜಾಣ. ಮಕ್ಕಳೆಂದರೆ ಅವನಿಗೆ ತುಂಬ ಆಸೆ. ಇಲ್ಲಿ ಕೆಲಸ ಮಾಡುವವರೆಲ್ಲೆಲ್ಲ ಹೆಚ್ಚು ಸಂಬಳದ ಎಂಜಿನಿಯರ್. ”

ಇಬ್ಬರೂ ಟಾಮ್‌ಗಾಗಿ ಕಾದರೂ ಅವನು ಬರಲೇ ಇಲ್ಲ. ಮೌನದಲ್ಲಿ ಫಲಿಸಬೇಕಾದ್ದನ್ನು ಆಗಗೊಡದಂತೆ ಶೀಲ ಹರಟಲು ಶುರುಮಾಡಿದಳು. ಮೈಸೂರಿನ ಗಂಧ, ದಂತ, ಕಾಶ್ಮೀರದ ಸೌಂದರ್ಯ, ಐರಿಷ್ ರಾಜಕಾರಣದ ಹಾಗಿನ ಭಾರತದ ರಾಜಕಾರಣ, ಪ್ರತಿ ಶನಿವಾರ ಈ ಬಾರಿಗೆ ಕುಡಿದು ಕುಣಿಯಲು ವಿದೇಶಿಯರಾದ ತಾವೆಲ್ಲ ಬರೋದು, ಹೊತ್ತಾಗಿ ಬರೋದು – ಕಾರಣ, ಭಾರತೀಯ ಯುವಕರು ಡಾನ್ಸ್‌ಮಾಡಲು ತಮ್ಮನ್ನು ಸತಾಯಿಸುತ್ತಾರೆ ಎನ್ನೋದು. ಯುರೋಪಿಗೆ ಹೋಗಿ ಬರದ ಭಾರತೀಯರು ಐರೋಪ್ಯ ಹೆಣ್ಣಿನ ಸಲಿಗೆಯನ್ನು ಅಪಾರ್ಥಮಾಡಿಕೋತಾರೆ ಅಲ್ಲವೆ? – ಇತ್ಯಾದಿ ಮಾತುಗಳಿಂದ ಅವಳು, ನಾನು ಭಯಪಡುತ್ತ ಅಪೇಕ್ಷಿಸುತ್ತಿದ್ದುದನ್ನು ತಳ್ಳಿದಳೆಂದು ನನಗೆ ಸಂತೋಷವೇ ಆಯಿತು. ನಾನೂ ನನ್ನ ಬಗ್ಗೆ ಹೇಳಿಕೊಂಡೆ. ಹದಿನಾರು ವರ್ಷಗಳ ತನಕ ನಾನು ರೈಲು, ಎಲೆಕ್ಟ್ರಿಸಿಟಿ ಕಂಡಿರದಿದ್ದ ಹಳ್ಳಿಮುಕ್ಕ. ಉಪನಯನದ ಹಿಂದಿನ ದಿನ ತೊಡೆ ಕೊಯ್ದು ಕಪ್ಪೆ ತುಂಬುತ್ತಾರೆಂದು ಕೇಳಿ ನಾನು ತುಂಬ ಹೆದರಿದ್ದೆ. ಹುಡುಗನಾಗಿದ್ದಾಗ ಬಲು ಆಚಾರವಂತನಾಗಿದ್ದೆ. ಆಮೇಲೆ ಜನಿವಾರ ಕಿತ್ತೆಸೆದೆ. ಐರಿಷ್ ಕ್ಯಾಥೊಲಿಕರಾದ ನಿಮಗೆ ಇಂಥ ಅನುಭವ ಗೊತ್ತಾಗುತ್ತಲ್ಲವೆ? ಶತಮಾನಗಳ ಕಾಲ ಇಲ್ಲಿದ್ದರೂ ಬ್ರಿಟಿಷರು ಇಂಡಿಯಾನ್ನ ತಿಳಿಯಲೇ ಇಲ್ಲ – ಇತ್ಯಾದಿ ನನ್ನ ಮಾತುಗಳನ್ನು ಖುಷಿಯಿಂದ ಶೀಲ ಆಲಿಸಿದಳು.

ತಾನು ಐರ್ಲೆಂಡಿನ ಹುಡುಗಿಯಾಗಿದ್ದಾಗ ಎಂದು ಪ್ರಾರಂಭಿಸಿ ಶೀಲ ಮನೋಹರವಾಗಿ ಮಾತಾಡಿದಳು. ಕೊಳ್ಳಿದೆವ್ವದ ಭಯ, ಅವಳು ಪ್ರೀತಿಸುತ್ತಿದ್ದ ಹಿತ್ತಲಿನಲ್ಲಿ ಒಂದು ಮರ, ತಾಯಿ ಗದರಿಸಿದರೆ ಅದರ ಅಡಿ ಕೂತು ತಾನು ಅಳೋದು, ತಾನು ಪ್ರೀತಿಸಿದ ಹುಡುಗನ ಹೆಸರನ್ನು ಅದರ ತೊಗಟೆಯ ಮೇಲೆ ಬ್ಲೇಡಿನಿಂದ ತಾನು ಕೆತ್ತಿದ್ದು, ಏಕಾಂತ ಬೇಕೆನ್ನಿಸಿದಾಗೆಲ್ಲ ಅದನ್ನು ಹತ್ತಿ ಕೂತು ಸೇಬು ತಿನ್ನುತ್ತಿದ್ದುದ್ದು. ಅದರ ಅಡಿಯಲ್ಲೆ ದಿಗಿಲಿನ ತನ್ನ ಪ್ರಥಮ ಚುಂಬನ. ಆಗ ತನ್ನ ಕೂದಲು ಇನ್ನೂ ಉದ್ದ ಇತ್ತು. ತೆಳು ನೀಲಿಯ ಸ್ಕರ್ಟ್ ತೊಟ್ಟಿದ್ದೆ. ಆ ಹುಡುಗ ಸತ್ತು ಹೋದ, ಎಷ್ಟು ತೀವ್ರವಾಗಿ ನನ್ನ ಇಡೀ ಮೈಯನ್ನು ತಡಕಾಡಿದ್ದ – ಹೀಗೆ ಮಾತಾಡುತ್ತ ಶೀಲ ದಿವ್ಯವಾಗಿ ನಕ್ಕಳು. ತಲೆಯನ್ನು ಹಿಂದಕ್ಕೆ ಬಗ್ಗಿಸಿ ನುಣುಪಾದ ಬ್ಲಾಂಡ್ ಕೂದಲನ್ನು ಕತ್ತಿನಿಂದೆತ್ತಿ ಹಿಡಿದು ಚಿಕ್ಕ ಹುಡುಗಿಯಂತೆ ಪೊಟ್ಟುಮಾತಿನಲ್ಲಿ ‘ಸೆಖೆ’ ಎಂದಿದ್ದಳು. ನನ್ನನ್ನು ಕಾಲದಲ್ಲಿ ಹಿಂದಕ್ಕೆ ತಳ್ಳಿ ಯಾವುದೋ, ಪೂರ್ವದ ನಸುಕಿನಲ್ಲಿ ಶುಭ್ರ ಮಣಿಯಂತೆ ಹೊಳೆದಳು. ಮಕ್ಕಳು, ಗಂಡ, ದಿನಚರಿ, ಕರಕರೆ ಎಲ್ಲವನ್ನೂ ಕಳಚಿ ತುಂಡು ಸ್ಕರ್ಟ್‌‌ತೊಟ್ಟು ಎರಡು ಜಡೆ ಹಾಕಿ ಸ್ಕಿಪ್ಪಿಂಗ್ ಹಗ್ಗದಲ್ಲಿ ಸೀಬೆ ಮರದ ಬುಡದಲ್ಲಿ ಕುಣಿದಳು. ನನ್ನ ಮಗಳು ಕುಣಿಯುವುದು ನನಗೆ ನೆನಪಾಯಿತು. ಈಗ ಶೀಲ ನನ್ನನ್ನು ಅಪ್ಪಿ ನಿಂತು ಪಕ್ಕದ ರೂಮಿನ ಹಾಡಿಗೆ ಮೃದುವಾಗಿ ತುಯ್ದಳು. “ನನ್ನ ಬಾಲ್ಯದ ಬಗ್ಗೆ ಮಾತಾಡಿದರೆ ಟಾಮ್ ಬೋರಾಗುತ್ತಾನೆ” ಎಂದಳು. “ನಮ್ಮವರೆಲ್ಲ ಪಕ್ಕದ ರೂಮಿನಲ್ಲಿ ಕುಣಿಯುತ್ತಿದ್ದಾರೆ. ನಾನು ಹೋಗದಿದ್ದರೆ ತಪ್ಪು ತಿಳಿಯುತ್ತಾರೆ. ಹಾಳು ಬ್ರಿಟಿಷ್ ಜನ. ಒಬ್ಬನೇ ಒಬ್ಬ ಅವರಲ್ಲಿ ಸೆನ್ಸಿಟೀವ್ ಅಲ್ಲ. ನೀನೂ ಬಾ. ಬೋರಾದರೆ ಕ್ಷಮಿಸು. ಆದರೆ ಬಾ” ಎಂದು ಎದ್ದಳು. ನಮ್ಮಿಬ್ಬರನ್ನೇ ಜೊತೆಯಲ್ಲಿ ಬಿಟ್ಟು ಟಾಮ್ ಏನೋ ಮಸಲತ್ತು ಮಾಡಿರಬಹುದೆಂದು ಅನುಮಾನವಾಯಿತು. ನಮ್ಮಿಬ್ಬರ ಗ್ಲಾಸನ್ನೂ ತುಂಬಿಸಿ ಶೀಲಳ ಜೊತೆ ನಾನೂ ಹೊರಟು ನಿಂತೆ.

* * *

ಬಾಗಿಲು ತೆರೆದೊಡನೆ ಬ್ಯಾಂಡಿನ ಅಬ್ಬರ ಕಪ್ಪು ಸೂಟಿನಲ್ಲಿ ಅರಳಿದ ಬಿಳಿಮುಖಗಳು, ಕುಣಿತ, ಕೇಕೆ. ಖುಷಿ – ಹಸಿದ ಮುಖಗಳ, ಕೊಚ್ಚೆ ಬೀದಿಗಳ ಭೂಪಾಲಿನಲ್ಲಿ ಇದು ಇನ್ನೊಂದು ಪ್ರಪಂಚ. ಎಲ್ಲ ಕನಸಿನಂತಿತ್ತು. ಶೀಲ ಇದನ್ನೆಲ್ಲ ಕಡೆಗಾಣಿಸಿ ನನ್ನ ಎರಡು ಭುಜಗಳ ಮೇಲೂ ಕೈಯಿಟ್ಟು ಮೈತಾಗುವಂತೆ ಎದುರು ನಿಂತು ಹೇಳಿದಳು: “ಆ ಮರದಲ್ಲೊಂದು ಪೊಟರೆ ಇತ್ತು. ಅಲ್ಲೊಂದು ಹಕ್ಕಿ ಗೂಡಿತ್ತು. ಗೂಡಿನಲ್ಲೊಂದು ಪುಟ್ಟ ಮರಿಯಿತ್ತು. ಇವೆಲ್ಲ ನನಗೆ ಮಾತ್ರ ಗೊತ್ತ. ಯಾರಿಗೂ ಹೇಳಿಲ್ಲ. ಸತ್ತು ಹೋದನಲ್ಲ ಆ ಹುಡುಗನಿಗೆ ಮಾತ್ರ ಹೇಳಿದ್ದೆ. ಈಗ ನಿನಗೆ. ಆ ಪುಟ್ಟ ಹಕ್ಕಿಮರಿ ಬಾಯಿ ತೆರೆದಾಗ… ”

ಸಂಗೀತದ ಲಯ ತೀವ್ರವಾದ್ದರಿಂದ ಅವಳು ಅಷ್ಟಕ್ಕೆ ಮಾತು ನಿಲ್ಲಿಸಿ ನನ್ನನ್ನು ಮೃದುವಾಗಿ ನೋಡತೊಡಗಿದಳು. ಅವಳ ಬೆರಳುಗಳು ಹಿತವಾಗಿ ನನ್ನ ಭುಜಗಳನ್ನು ಸವರುತ್ತಿದ್ದವು. ತೇವವಾಗಿ ಹೊಳೆಯುತ್ತ ಯಾಚಿಸುತ್ತಿದ್ದ ಅವಳ ಕಣ್ಣುಗಳಲ್ಲಿ ನಾನು ಹಕ್ಕಿಮರಿಯ ತೆರೆದ ಪುಟಾಣಿಕೊಕ್ಕು, ಅದರೊಳಗಿನ ಕೆಂಪು, ಹಕ್ಕಿಯ ಆರ್ತ ಚೀರು. ಗುಪ್ತವಾಗಿ ಬೆಚ್ಚಗೆ ಮುದುಡಿ ಅದು ಕೂತ ರೀತಿ, ಮುಟ್ಟಬೇಕೆನ್ನಿಸುವ, ಆದರೆ ಮುಟ್ಟಲು ದಿಗಿಲಾಗುವ ಅದರ ತುಪ್ಪಳ. ಪುಟಾಣಿ ರೆಕ್ಕೆ, ಡೊಂಕಿದ ಪುಟಾಣಿ ಕಾಲುಗಳು, ಕೊಕ್ಕು ತೆರೆದಾಗ ಉಬ್ಬಿದ ಕತ್ತು ಎಲ್ಲವನ್ನೂ ಊಹಿಸುತ್ತ ರೋಮಾಂಚಗೊಂಡೆ. ಅವಳ ಸೊಂಟ ಬಳಸಿ ಕಣ್ಣು ಮುಚ್ಚಿ ಮೈಗೆ ಮೈ ಇನ್ನಷ್ಟು ಒತ್ತಿ ನಿಂತೆ. “ನಾನು ಮದುವೆಯಾಗಿ ಇಪ್ಪತ್ತು ವರ್ಷವಾಯ್ತು. ನನ್ನ ಮಗಳಿಗೆ ಈಗ ಡೇಟ್ ಮಾಡುವ ವಯಸ್ಸು. ಆದರೆ ಈ ಬ್ರಿಟಿಷ್ ಜನ, ಅವರ ಮಕ್ಕಳು ಚೂರೂ ಇಮ್ಯಾಜಿನೇಶನ್ ಇಲ್ಲದವರು. ಐರ್ಲೆಂಡನ್ನು ಹೇಗೆ ಇವರು ತುಳಿಯುತ್ತಿದ್ದಾರೆ. ನೋಡು. ಪೇಪರ್‌ನಲ್ಲಿ ನೀನು ಓದುತ್ತಿರಬಹುದು. ಟಾಮ್ ಪೇಪರ್ ಓದೋದೇ ಇಲ್ಲ” ಎಂದು ರಾಜಕೀಯ ಚರ್ಚೆಯಲ್ಲಿ ನನ್ನನ್ನು ತೊಡಗಿಸಿ ಕುರ್ಚಿಯೊಂದರ ಮೇಲೆ ಕೂತಳು. ನಾನು ನಿಂತಿದ್ದೆ. ಟಾಮ್ ಎಲ್ಲಿಂದಲೋ ಪ್ರತ್ಯಕ್ಷನಾದ. ಅವನ ಕಣ್ಣುಗಳು ಕುಹಕದಿಂದ ನಗುತ್ತಿದ್ದವು.

ವೇದಿಕೆಯ ಮೇಲೆ ಮೈಕನ್ನು ಕೈಯಲ್ಲಿ ಹಿಡಿದು, ಇನ್ನೊಂದು ಕೈಯನ್ನು ಎದೆಯ ಮೇಲಿಟ್ಟು ನೀಳ ನಿಲುವಿನ ಯುವಕನೊಬ್ಬ ಹಾಡುತ್ತಿದ್ದ. ಹುಲುಸಾಗಿ ಮೀಸೆ ಬೆಳೆಸಿದ ಅವನ ಮುಖ ಹೋತದ ಮುಖದಂತೆ ಉದ್ದವಾಗಿತ್ತು. ನೋಡಲು ಆಕರ್ಷಕವಾಗಿದ್ದ. ಹಾಡಿಗೆ ಕುಣಿಯುತ್ತಿದ್ದ ಒಂದು ಹುಡುಗಿಯನ್ನು ತೋರಿಸಿ “ಬ್ರಿಸ್ಟಲ್ ಹುಡುಗಿ ಅವನ ಹೆಂಡತಿ. ಜಗಳ ಗಂಟಿ. ಆದರೆ ಅವನು ಐರಿಷ್. ಹಾಡುವುದರಲ್ಲೆ ತಿಳಿಯುತ್ತದಲ್ಲವೆ? ಐರಿಷ್ ಮಾತ್ರವಲ್ಲ ರಿಪಬ್ಲಿಕ್ ಐರಿಷ್” ಎಂದು ಶೀಲ ಅವನ ಗಮನ ಸೆಳೆಯುವಂತೆ ಅವನ ಕಡೆಗೇ ನೋಡಿದಳು.

“ಐರ್ಲೆಂಡನ್ನು ಹೊಗಳುವುದು ಮಾತ್ರ. ಆದರೆ ಇರಲು ಬಯಸೋದು ಇಂಗ್ಲೆಂಡಲ್ಲಿ. ಅಪ್ರಮಾಣಿಕ ಜನ” ಎಂದು ಟಾಮ್ ಹೆಂಡತಿಯನ್ನು ಹಂಗಿಸಿದ. ಅವಳು ಗಮನ ಕೊಡದೇ ಹಾಡುತ್ತಿದ್ದವನನ್ನೇ ನೋಡಿದಳು. “ನೋಡು, ನಾನಿಲ್ಲಿದ್ದೀನಿ ಅಂತ ತಿಳಿದ ಕೂಡಲೇ ಈ ಹುಡುಗ ಐರಿಷ್ ಹಾಡೊಂದನ್ನು ಹಾಡ್ತಾನೆ. ನಾನು ಚಿಕ್ಕವಳಾಗಿದ್ದಾಗ ಇಷ್ಟಪಟ್ಟಿದ್ದ ಹಾಡು. ನನಗಾಗಿ ಅದನ್ನ ಯಾವಾಗಲೂ ಅವ ಹಾಡ್ತಾನೆ. ಅದನ್ನ ಕೇಳಿಸಿಕೊಂಡರೆ ನನಗೆ ಈ ಕಾಲ ಈ ಪ್ರಪಂಚ ಎಲ್ಲ ಮರೆಯುತ್ತೆ. ” ಟಾಮ್ ಆ ಹಾಡನ್ನು ವಕ್ರವಾಗಿ ಅಣಕಿಸುತ್ತ ಶೀಲಳ ಮುಖಕ್ಕೆ ತನ್ನಮುಖ ತಿವಿದು ಪಶುವಿನಂತೆ ಬಗ್ಗೆ ಕುಣಿದ. “ಹಂದಿ, ತೊಲಗಾಚೆ” ಎಂದು ಶೀಲ ಅವನನ್ನು ತಳ್ಳಿದಳು.

“ಕೇಳು, ಕೇಳು” ಎಂದು ಸಂಭ್ರಮದಲ್ಲಿ ನನಗೆ ಹೇಳಿದಳು. ಆಡಿನ ಮುಖದ ಹುಡುಗ ಇವಳ ಹಾಡನ್ನು ಹಾಡಲು ಪ್ರಾರಂಭಿಸಿದ್ದ. ವ್ಯಾಕುಲವಾದ ಹಾಡು. ನನಗೂ ನನ್ನ ಹಳ್ಳಿ, ದನಕಾಯುವವನ ದೂರದ ಕೊಳಲು, ತುಂಬೆ ಹೂವನ್ನು ಉಂಗುರದಂತೆ ಪೋಣಿಸುತ್ತ ನಾನು ನಿಂತಿರುತ್ತಿದ್ದುದು, ಆರಾಧನೆಗೆಂದು ಬೆಳಗಿನ ಝಾವ ನಾನು ಚೂಟಿ ಕೊಯ್ಯುತ್ತಿದ್ದ ಇಬ್ಬನಿಯಿಂದ ಒದ್ದೆಯಾದ ದೂರ್ವೆ ಇತ್ಯಾದಿಗಳೆಲ್ಲ ನೆನಪಾಗಿ ಶೀಲಳಿಗೆ ಹೇಳಬೇಕೆನ್ನಿಸಿತು. ಆದರೆ ಟಾಮ್ ಕುಣಿಯಲು ಬಾ ಎಂದು ಶೀಲಳನ್ನು ಯಾಚಿಸುತ್ತಿದ್ದ. ಶೀಲ ತನ್ನ ಚಪ್ಪಲಿಯನ್ನು ಸರಿ ಮಾಡಿಕೊಳ್ಳುವುದನ್ನೂ ಟಾಮ್ ಲೆಕ್ಕಿಸದೆ, ಚುರುಕಾದ ಕೋತಿಯಂತೆ ಕುಣಿಯಲು ಪ್ರಾರಂಭಿಸಿದ್ದ. ಇದ್ದಕ್ಕಿದ್ದಂತೆ ಅವನಲ್ಲಿ ಉಕ್ಕಿದ್ದ ಉನ್ಮಾದದಿಂದ ನಾನು ಚಕಿತನಾದೆ. ಕುಣಿಯುತ್ತಿದ್ದ ಉಳಿದವರೂ ನಿಂತು ಬೆರಗಾಗಿ ಟಾಮ್‌ನ ಕುಣಿತಕ್ಕೆ ತಾಳ ಹಾಕಲು ಶುರುಮಾಡಿದರು.

ನನ್ನ ಜೊತೆ ಮಾತಿನಿಂದ ಆರ್ದ್ರಳಾದ ಶೀಲ ಇದರಿಂದೆಲ್ಲ ಹೊರಗುಳಿಯುತ್ತಾಳೆಂದು ಆಶಿಸಿದೆ. ಒಳಗೇ ಹಾಗೆ ಯಾಚಿಸುತ್ತಾ ಪ್ರಾರ್ಥಿಸಿದೆ. ಆದರೆ ಅವಳೂ ಉನ್ಮತ್ತಳಾಗಿ ಟಾಮ್ ಹೆಜ್ಜೆ ಅನುಸರಿಸಿ ಹೆಜ್ಜೆಯಿಟ್ಟಳು. ಮುಖಕ್ಕೆ ಪ್ರತಿಮುಖ, ಸೊಂಟದ ಬಳುಕಿಗೆ ಪ್ರತಿ ಬಳುಕು, ಈಗ ತಿರಸ್ಕಾರ, ಮರುಕ್ಷಣದ ಒಪ್ಪಿಗೆ ಎನ್ನುವಂತೆ ಕುಣಿದಳು. ಈಗ ದಾಳಿ ಮಾಡಿದಳು. ಮತ್ತೆ ಹಿಮ್ಮೆಟ್ಟಿದಳು. ಹಾಡುವವನೂ ಉನ್ಮತ್ತನಾಗುತ್ತ ಹೋದ. ನಾನು ಹೊರಗೆಲ್ಲೋ ಉಳಿದುಕಂಡಿಯಿಂದ ಇಣುಕುವವನಂತೆ ನೋಡುತ್ತ ಕುಳಿತೆ. ಶೀಲಳ ತೋರವಾದ ನಿತಂಬ, ಟಾಮ್‌ನ ಹುರಿಯಾದ ಸೊಂಟ ಮಂತುವಿನಂತೆ ವೇಗವಾಗಿ ಸುತ್ತುತ್ತ ಗಾಳಿಯನ್ನು ಕಡೆದುವು. ಬ್ಯಾಂಡು ಕಂಚಿನ ತಾಳ, ಪ್ರೇಕ್ಷಕರ ಸಿಳ್ಳೆ, ಲಯಬದ್ದ ಚಪ್ಪಾಳೆಗಳಲ್ಲಿ ಮಂಥಿಸುವ ಈ ಸೊಂಟಗಳು ನನ್ನನ್ನು ತಿರಸ್ಕರಿಸುತ್ತಿದ್ದಾವೆ ಎಂದು ಒಳಗೆ ನಾನು ಮುದುಡಿಕೊಳ್ಳುತ್ತಿದ್ದಂತೆಯೇ ನನಗೆ ತಿಳಿಯದಂತೆ ನನ್ನನ್ನು ಬದಲಿಸಿಬಿಟ್ಟವು. ರಕ್ತದಿಂದ ಬಿಗಿದ ಮುಷ್ಟಿಯಂತಾದೆ. ಕ್ಷಣ ಮಾತ್ರ. ಸಂಗೀತ ನಿಂತು ಮನುಷ್ಯರ ನಗು ಕೇಳಿಸಿತು. ನನ್ನ ಬಳಿ ಏದುತ್ತ ಬಂದ ಶೀಲ, “ಎಷ್ಟಾದರೂ ಟಾಮಿನ ತಾಯಿ ಐರಿಷ್ ಅಲ್ಲವೆ?” ಎಂದಳು: ನನ್ನ ಮುನಿಸನ್ನು ಮುಚ್ಚಿಟ್ಟು ನಾನು ನಕ್ಕೆ. ಊರಿಗೆ ಹೋದಮೇಲೆ ನನ್ನ ದೈನಂದಿನ ವಾಸ್ತವ ಕಾದಿರುತ್ತದೆ ಎಂದು ನೆನಪು ಮಾಡಿಕೊಂಡು ಸಿಗರೇಟ್ ಹಚ್ಚಿ ಶೀಲಳಿಗೂ ಕೊಟ್ಟೆ.

ರಾತ್ರೆ ಒಂದು ಗಂಟೆಯ ಮೇಲಾಗಿತ್ತು. ಹೊರಗೆ ಮಳೆ ಜೋರಾಗಿ ಬೀಳುತ್ತಿದ್ದ ಸದ್ದು ಸಂಗೀತ ನಿಂತದ್ದೆ ಕೇಳಿಸಿತು. ದೇಶಾದ್ಯಂತ ಬರಗಾಲ, ದನಕರು ಜನ ಸಾಯುತ್ತಿದ್ದಾರೆ, ಈ ಮಳೆ ಅವಶ್ಯಕ ಎಂದು ನನ್ನ ಅಕ್ಕಪಕ್ಕ ಕೂತ ಟಾಮ್, ಶೀಲಗೆ ಹೇಳಿದೆ. ಎಲ್ಲರೂ ಕುಡಿಯುತ್ತ ನಗುತ್ತ ಇದ್ದರು. ಬ್ಯಾಂಡ್ ಬಾರಿಸುತ್ತಿದ್ದ ಉದ್ದ ಕೂದಲಿನ ಭಾರತೀಯ ಸಿಗರೇಟು ಹಚ್ಚಿ ವಿಶ್ರಮಿಸುತ್ತಿದ್ದ. ಯಾವನೋ ಇಂಗ್ಲಿಷ್ ಮನ್ ಅವನ ಬಳಿಹೋಗಿ “ಮೇಮ್ ಸಾಬ್ ಕೊನೆಯ ಹಾಡನ್ನು ಮತ್ತೆ ಬೇಡುತ್ತಿದ್ದಾರೆ” ಎಂದದ್ದು ಶೀಲಳಿಗೆ ಕೇಳಿಸಿತು. “ಮೇಮ್ ಸಾಹಿಬ್, ಕೇಳಿದಿಯಾ? ಹೇಳು ಅವರಿಗೆ,‘ನಾವು ಬ್ರಿಟಿಷರನ್ನು ಅಟ್ಟಿದ್ದೇವೆ. ಈಗ ಇಲ್ಲಿ “ಮೇಮ್ ಸಾಹಿಬ್‌ಗಳು ಇಲ್ಲ’ ಅಂತ. ನೋಡು ಟಾಮ್ ನಿನ್ನ ಜನ ಎಂಥ ಕೊಳಕರು ಅಂತ. ಆ ಬ್ರಿಸ್ಟಲ್ ಪೆದ್ದಿ ಮೇಮ್ ಸಾಹಿಬ್ ಅಂತೆ. ”

ಅವಳು ಜರಿದದ್ದು ಹೋತದ ಮುಖದವನಹೆಂಡತಿಯನ್ನು ಎಂಬುದು ತಿಳಿಯಿತು. ಟಾಮ್ “ಅವಳನ್ನೇಕೆ ಬಯ್ಯುತ್ತಿ” ಎಂದ. ಇಬ್ಬರ ನಡುವೆ ಮತ್ತೆ ವೃಥಾ ವಾದ ಶುರುವಾಯಿತು. ನನಗೆ ಇಬ್ಬರೂ ತಮ್ಮ ಕಳಕಳಿಯ ವಿಚಾರಗಳನ್ನು ನಿವೇದಿಸಿಕೊಳ್ಳುವ ನಾಟಕ ಪುನಃ ಶುರುವಾದಂತೆ ತನ್ನ ಪೆಟ್ಟಿಗೆಯಲ್ಲಿದ್ದ ಒಂದು ದೊಡ್ಡ ಕರಡಿಗೆಯನ್ನು ನಾನು ಪ್ರೀತಿಸಿದ್ದ ಹುಡುಗಿ ತೋರಿಸಿದ್ದನ್ನು ನೆನೆದೆ. ಅದರಲ್ಲಿ ಅವಳು ಬಾಲಕಿಯಾಗಿದ್ದಾಗ ಉಪಯೋಗಿಸುತ್ತಿದ್ದ ಒಂದು ಮೊಂಡು ಪೆನ್ಸಿಲ್‌, ಕಪ್ಪೆಚಿಪ್ಪು, ಪುಟಾಣಿ ಶಂಖಗಳು, ಮಣಿಸರ, ಒಂದು ಹರಿದ ಟೋಪಿಯ ಬೊಂಬೆ, ಹಾಳೆಗಳು ಹಸಿರಾದ ಸಂಗೀತದ ನೋಟ್ ಬುಕ್ಕು ಇದ್ದುವು. ನಾನು ನಕ್ಕಿದ್ದೆ – ನಮ್ಮ ಸ್ನೇಹದ ಪ್ರಾರಂಭದ ದಿನಗಳು ಅವು – ಒಬ್ಬರಿಗೊಬ್ಬರು ರಹಸ್ಯವೆನ್ನಿಸುತ್ತಿದ್ದ ದಿನಗಳು. ಅವಳೂ ನಕ್ಕಿದ್ದಳು. ಆ ನಗುವಿನಲ್ಲಿ ಆಹ್ವಾನವಿತ್ತು. ಯಾಕೆ ಈ ರಹಸ್ಯವನ್ನು ಹೊಕ್ಕುನೋಡು ಎನ್ನುವ ಆಹ್ವಾನ? ‘ಆದರೆ ರಚ್ಚು ಉಳಿದೇಬಿಡುತ್ತೆ. ’ ಕುಣಿಯುವ ನನ್ನ ಮಗಳೂ ಬೆಳೆಯುತ್ತಾಳೆ. ಅವಳ ರಹಸ್ಯವನ್ನು ಯಾವನೋ ಒಬ್ಬ ಹೀಗೆ ಕೊಲ್ಲುತ್ತಾನೆ. ಆದರೆ ಬಾಲ್ಯದಲ್ಲಿ ತನ್ನ ಗೂಢವನ್ನೆಲ್ಲಾ ಬಚ್ಚಿಡಲು ಅವಳೂ ಹೀಗೇ ಯತ್ನಿಸುತ್ತಾಲೆ. “ಯಾಕೆ ಭಾರತದ ಜವಾನರೂ ಇಂಗ್ಲಿಷ್ ಮಾತನಾಡಬೇಕೆಂದು ಈಗ ನಿನ್ನ ಜನ ಬಯಸಬೇಕು ಹೇಳು? ಇದೇ ದುರಹಂಕಾರ ಅನ್ನೋದು” ಎಂದು ಶೀಲ ಉಮೇದಿನಿಂದ ವಾದಿಸಿದಳು. ಸ್ಕಿಪ್ಪಿಂಗ್ ರೋಪ್ ಬೀಸುತ್ತಾ ಕುಣಿಯುವ ನನ್ನ ಮಗಳ ಬಗ್ಗೆ ಹೇಳಬೇಕೆಂದರೆ ಶೀಲ ಗಂಡನ ಜೊತೆ ಮತ್ತೆ ಗುದ್ದಾಡುತ್ತಿದ್ದಳು. ಸಮಸ್ಯೆಯ ಮೂಲವಿರುವುದು ಪ್ರಾಯಶಃ ಆಪ್ತತೆಯಲ್ಲೇ. ಆಕ್ರಮಿಸಿಬಿಡುವ ಆಪ್ತತೆಯಲ್ಲೆ. ಆದರೆ ಬಯಸದೇ ಇರುವುದೂ ಅಸಾಧ್ಯ. “ಶೀಲ ಪ್ರೀತಿ ಅಸಾಧ್ಯ” ಎಂದೆ. ಆದರೆ ಟಾಮ್ ಇನ್ನೊಂದು ಹಾಡಿಗೆ ಅವಳನ್ನು ಕುಣಿಯಲು ಕರೆಯುತ್ತಿದ್ದ. ಈ ಬಾರಿ ವಿಳಂಬ ಗತಿಯ ಹಾಡಿಗೆ ಹಗುರವಾದ ಹೆಜ್ಜೆ ಹಾಕುತ್ತ ಕುಣಿದವು. ಟಾಮ್‌ನ ಬಡಿವಾರ, ಬಿಂಕಗಳಿಂದ ನನಗೆ ನಾಚಿಕೆಯೇ ಆಯಿತು. ಯಾವನೋ ಫ್ರೆಂಚ್ ಮನ್ “ಸಾಂಚಿಗೆ ಇಲ್ಲಿಂದ ಎಷ್ಟು ಮೈಲೆಂದು” ಕೇಳಿದ. ನಾನು ಇಲ್ಲಿಗೆ ಹೊಸಬ ಎಂದೆ. ಗೋಡೆಗಳ ಮೇಲಿದ್ದ ಮೈಥುನದ ಚಿತ್ರಗಳನ್ನು ತೋರಿಸಿ. “ಈ ದೇವಸ್ಥಾನವಿರುವ ಊರಿಗೆ ಹೇಗೆ ಹೋಗುವುದು ಗೊತ್ತೆ” ಎಂದ. ನಾನು ‘ಸಾರಿ’ ಎಂದೆ. ಭೂಪಾಲಿನ ವಿಶಿಷ್ಟವಾದದ್ದನ್ನೇನಾದರೂ ಮಗಳಿಗೆ ಕೊಳ್ಳಬೇಕೆಂದುಕೊಂಡೆ.

ಹೋತದ ಮುಖದ ಐರಿಷ್‌ಮನ್ನಿನ ಹೆಂಡತಿ ಈಗ ಹಾಡುತ್ತಿದ್ದಳು. “ಹೇಗೆ ಹಾಡುತ್ತಿದ್ದಾಳೆ ನೋಡು” ಎಂದು ವ್ಯಂಗ್ಯವಾಗಿ ನಗುತ್ತಾ ನನಗೆ ಒತ್ತಿನಿಂತ ಶೀಲ ಸಿಗರೇಟ್ ಹತ್ತಿಸಿಕೊಳ್ಳಲು ಬಗ್ಗಿದಳು. “ಯಾಕೆ? ಚೆನ್ನಾಗಿಯೇಹಾಡುತ್ತಿದ್ದಾಳೆ” ಎಂದು ಟಾಮ್ ಸಿಟ್ಟಿನಿಂದ ಹೇಳಿದ. “ಇನ್ನೊಂದು ಡ್ರಿಂಕ್” ಎಂದು ಶೀಲ ಎದ್ದಳು. ಟಾಮ್ ಮತ್ತು ನಾನು ಪಕ್ಕದಲ್ಲಿದ್ದ ಬಾರಿಗೆ ಅವಳ ಹಿಂದೆ ಹೋದೆವು. ಟಾಮ್ ನನಗೆ ಹಣಕೊಡಲು ಬಿಡದೆ ತಾನೆ ಕೊಟ್ಟ. ಬಾರಿನಲ್ಲಿಯಾರೂ ಇರಲಿಲ್ಲ. ಬಾರ್‌ಮನ್ ನಿದ್ದೆಗಣ್ಣಲ್ಲಿ ಗೊಣಗುತ್ತ ವಿಸ್ಕಿ ಸುರಿದು ಕೊಟ್ಟಿದ್ದ. ಎರಡು ಗಂಟೆಯ ಮೇಲಾಗಿತ್ತು: ಬಾಗಿಲು ತೆರೆದಿದ್ದರಿಂದ ಸಂಗೀತ ಜೋರಾಗಿ ಕೇಳಿಸುತ್ತಿತ್ತು. ಬಾರಿನ ದೀಪಗಳೆಲ್ಲ ಆರಿ ಒಂದು ಟ್ಯೂಬ್‌ಲೈಟ್ ಮತ್ತು ಉರಿಯುತ್ತಿತ್ತು. ನಾನು ಆಕಳಿಸುತ್ತ ಬಾತ್ ರೂಮಿಗೆ ಹೋದೆ. ಹೊರಗೆ ಬಂದುಬಾಗಿಲು ತೆರೆದು ಕೆಸರಿನ ಬೀದಿಯಲ್ಲಿ ನಿಂತೆ. ಮಳೆ ನಿಂತಿತ್ತು. ಬಿಸಿಯಾದ ಮುಖದ ಮೇಲೆ ಉರಿಯುವ ಕಣ್ಣುಗಳ ಮೇಲೆ ತಂಗಾಳಿ ಹಿತವಾಗಿತ್ತು.

ಮಳೆಯ ಭಾರ ಚೆಲ್ಲಿಕೊಂಡು ಯಾವ ಮಾಲಿನ್ಯವೂ ಇಲ್ಲದ ಆಕಾಶದ ನೀಲಿಯಲ್ಲಿ ಹಗುರವಾದ ನಕ್ಷತ್ರಗಳು ಮಣಿಗಳಂತೆ ಹೊಳೆಯುತ್ತಿದ್ದುವು. ನನ್ನೊಳಗೆ ಗುದ್ದಾಡಿದ, ಸೊಂಟಗಳಿಂದ ಮಂಥಿಸಿದ ಟಾಮ್, ಶೀಲರು ಒಂದು ಕ್ಷಣ ಅಪ್ರಸ್ತುತವೆನಿಸಿದರು. ಯಾವುದೋ ಒಂದು ಕೃಷ್ಣಾಷ್ಟಮಿ, ಹುಡುಗನಾಗಿದ್ದಾಗ ಪೆಟ್ಟಲಿಗೆಂದು ಬಿದಿರು ಹುಡುಕುತ್ತ ಮೊಟ್ಟೊಂದನ್ನು ಹೊಕ್ಕಾಗ ಕಂದು ಬೆಳಕಲ್ಲಿ ಗಮ್ಮೆನ್ನುವ ಒದ್ದೆ ಕೇದಗೆ ಕಂಡದ್ದು, ಅಚ್ಚರಿಯಾದ್ದು, ಹಾವಿರಬಹುದೆಂದು ಭಯವಾದ್ದು, ಈಗ ಯಾಕೆ ಮರುಕಳಿಸಬೇಕು? ಕುಡಿದಿದ್ದರ ಅಮಲೆ? ನಾನೇ ನನಗೆ ಒಂದು ರಹಸ್ಯವೆನಿಸಿ ಸಂತೋಷವಾಗಿ ಖುಜುರಹೋದ ಮೈಥುನ ಚಿತ್ರಗಳನ್ನು ಕೊರೆದಿದ್ದ ಕೋಣೆಯಲ್ಲಿ ಪ್ರೇಕ್ಷಕನಿಲ್ಲದೆ ಟಾಮ್, ಶೀಲರ ರಿಚುಯಲ್ ಹೇಗೆ ಸಾಗಿರಬಹುದೆಂದು ಊಹಿಸುತ್ತ ಹಿಂದಕ್ಕೆ ಹೋದೆ. ಬಾರಿನಲ್ಲಿ ಇಬ್ಬರೇ ಕುಣಿಯುತ್ತಿದ್ದವರು ಥಟ್ಟನೆ ನಿಂತರು, ನಾನು ಬಾಗಿಲಲ್ಲಿ ನಿಂತು ಅವಾಕ್ಕಾದೆ.

ಟಾಮ್ ಕೂಗುತ್ತಿದ್ದ “ನಿನಗೇನಾಗಿದೆ? ಕೂತುಕೊ”

ಶೀಲಳ ಕಣ್ಣುಗಳು ಕ್ರೂರವಾಗಿ ನಗುತ್ತಿದ್ದವು.

“ಕೂರಲ್ಲ”

“ಕೂತುಕೊ”

ಈಗ ಶೀಲಳೂ ಹಾಗೆ ನಗುತ್ತ ಕಿರುಚಿದಳು:

“ಕೂರಲ್ಲ”

ಟಾಮ್ ಅವಳ ಕಪಾಳಕ್ಕೊಂದು ಬಿಗಿದ:

“ನಾನು ನಿನ್ನ ಬಿಟ್ಟುಹೋಗ್ತೇನೆ”

ಶೀಲ ಇನ್ನೂ ಕ್ರೂರವಾಗಿ ನಗುತ್ತ ಕೂಗಿದಳು:

“ತೊಲಗು”

ಟಾಮ್ ನಡುಗುತ್ತ ನನ್ನನ್ನು ಹಾದು ದಡದಡನೆ ಮೆಟ್ಟಿಲಿಳಿದ. ನನ್ನನ್ನು ಗಮನಿಸಿದಂತೆ ಕಾಣಲಿಲ್ಲ. ಸಂಗೀತ ನಿಂತಿತ್ತು. ಆದರೂ ಪಕ್ಕದ ರೂಮಿನಲ್ಲಿದ್ದ ಗಂಡು ಹೆಣ್ಣುಗಳು ತಮ್ಮ ಪಾಡಿಗೆ ತಾವು ಹರಟುತ್ತಲೋ ಕುಡಿಯುತ್ತಲೋ ಮೃದುವಾಗಿ ಒಳಗಿನಿಂದ ಕೇಳಿಸಿಕೊಳ್ಳುವ ಹಾಡಿಗೆ ತುಯ್ಯುತ್ತಲೋ ಇದ್ದರು. ಖುಜರಾಹೋದ ಮೈಥುನ ಚಿತ್ರಗಳು ಮುದ್ದೆಯಾದ ಮಾಂಸದ ರಾಶಿಗಳಂತೆ ಕಂಡವು. ವಿವಿಧ ಬಗೆಗಳಿಂದ ಮಾಂಸವನ್ನು ಮಾಂಸಕ್ಕೆ ಗಂಟು ಹಾಕುವ ಗೋಜಲಾಗುವ ಮೈಥುನ. ಎಲ್ಲಿಯೋ ಕೈ. ಎಲ್ಲಿಯೋ ಕಾಲು, ಎಲ್ಲಿಯೋ ಮುಖ. ಮತ್ತೆ ನಮ್ಮದೇ ಎಳೆಗಳನ್ನು ಏಕಾಂತದಲ್ಲಿ ಹುಡುಕುತ್ತ ಬಿಡಿಯಾಗುವ, ಇಡಿಯಾಗುವ ಅನಿವಾರ್ಯ ಇದ್ದೇ ಇದೆಯಲ್ಲ. ವಿಚಿತ್ರ ನೆಮ್ಮದಿಯಿಂದ ಸ್ಟೂಲಿನ ಮೇಲೆ ನೆಟ್ಟಗೆ ಮೌನವಾಗಿ ಕೂತ ಶೀಲಳ ಹತ್ತಿರಹೋಗಬೇಕೇ, ಹೋಗಬಾರದೆ ತಿಳಿಯದೆ ಮುಜುಗರದಲ್ಲಿ ದೂರ ನಿಂತೆ. ಆದರೆ ಅವಳು ನನಗಾಗಿ ಕಾಯುತ್ತಿರಬಹುದುಎಂದು ಅನುಮಾನವಾಗಿ ಬಚ್ಚಿಟ್ಟ ರಹಸ್ಯದಂತಿದ್ದ ಅವಳ ಹತ್ತಿರ ಧೈರ್ಯ ಮಾಡಿ ಮೃದು ಹೆಜ್ಜೆಯಿಟ್ಟು ಹೋದೆ. ಹಗಲಿನ ಪ್ರಖರ ಬೆಳಕಿನಲ್ಲಿ ಅವಳ ಮುಖದ ಮೇಲಿನ ವಯಸ್ಸಿನ ಗೆರೆಗಳು ಕ್ರೂರವಾಗಿ ಕಂಡಾವು. ಹತ್ತಿರ ನಿಂತರೂ ನನ್ನನ್ನು ಅವಳು ಗಮನಿಸಿದಂತೆ ಕಾಣಲಿಲ್ಲ. ಗಂಭೀರವಾಗಿ ಕೂತಳು. ನನ್ನ ಮನಸ್ಸಿನಲ್ಲಿ ಪಡೆಯಬೇಕೆಂದಿದ್ದ ತನ್ನ ರೂಪವನ್ನು ಅವಳಿಗೆ ಸಾಧಿಸಿದ್ದೇನೆಂಬ ತೃಪ್ತಿಯಿದ್ದಂತೇ ಕಂಡಿತು. ತೀವ್ರತೆಯಿಲ್ಲದೆ ನನ್ನನ್ನು ನೋಡಿ ಕೈಯಲ್ಲಿ ಕೈಯಿಟ್ಟಳು. ಸ್ನೇಹದಿಂದ ಅದುಮಿದೆ. “ಕಾರಿಗೆ ಪೆಟ್ರೋಲ್ ತುಂಬಿಸಿಕೊಂಡು ಬರಲು ಟಾಮ್ ಹೋಗಿದ್ದಾನೆ – ಅಷ್ಟೆ” ಎಂದಳು. ನಾನು ಸುಮ್ಮನೆ ಮಾತಾಡದೆ ಅವಳ ಜೊತೆ ಜೊತೆ ಕೂತೆ. ಸಿಗರೇಟ್ ಕೊಟ್ಟೆ. ಕೂದಲನ್ನು ಕತ್ತಿನಿಂದೆತ್ತಿ ‘ಸೆಖೆ’ ಎಂದಳು. ‘ಬೈ’ ಎಂದು ಒಬ್ಬೊಬ್ಬರೇ ಹೋದರು. ಟಾಮ್ ಬಂದ. “ಪೆಟ್ರೋಲ್ ಹಾಕಿಸಿಕೊಂಡು ಬಂದೆ ಬಾ” ಎಂದ. ಇಬ್ಬರೂ ನನ್ನ ಕೈಕುಲುಕಿ “ಮತ್ತೇ ನೋಡುವ” ಎಂದು ಹೋದರು.

೧೯೭೩

* * *