ಭಾಗ: ಒಂದು

ರೂತ್ ಕೈ ಬೆಚ್ಚಿಗಿತ್ತು. ನಾನು ತಂದಿದ್ದ ವೈನ್ ಬಾಟಲ್‌ ಕೊಟ್ಟೆ. “ಥ್ಯಾಂಕ್ಸ್, ಆದರೆ ಯಾಕೆ ತಂದೆ? ಸಾಕಷ್ಟು ಡ್ರಿಂಕ್ಸ್ ಇತ್ತು” ಎಂದಳು. ಪ್ಯಾಂಟಿಗೆ, ಶೂಗಳಿಗೆ ಮೆತ್ತಿದ್ದ ಕೆಸರಾದ ಸ್ನೋ ಅನ್ನು ಒರೆಸಿಕೊಂಡೆ. ಕೋಟನ್ನು ಬಿಚ್ಚಲು ಸಹಾಯ ಮಾಡುತ್ತ “ಯಾಕೆ ಇಷ್ಟು ತಡ?” ಎಂದಳು. “ವಿಪರೀತ ಮಂಜು ಬೀಳ್ತ ಇದೆ. ಬಸ್ಸು ಸಿಗಲಿಲ್ಲ” ಎಂದು ಕೋಟನ್ನು ಹ್ಯಾಂಗರಿನಲ್ಲಿ ಸಿಕ್ಕಿಸಿದೆ.

ಕಾರಿಡಾರಿನ ಮಂದವಾದ ಬೆಳಕಿನಲ್ಲಿ ರೂತ್‌ನ ಮುಖ ಮೃದುವಾಗಿ ಕಂಡಿತು. ಬೆಳ್ಳಿಕಟ್ಟಿನ ಕನ್ನಡಕ ತೆಗೆದಾಗ ಅವಳ ಮುಖ ಕೋಮಲವಾಗಿರುತ್ತೆ. ಕೂದಲನ್ನು ಮೇಲೆತ್ತಿ ಕಟ್ಟಿ ನೀಲಿ ಸೀರೆ ಉಟ್ಟಿದ್ದಳು. ಆದರೆ ರವಿಕೆ ಸಡಿಲವಾಗಿತ್ತು. ಯಾವತ್ತೂ ಹೀಗೆ; ಅವಳ ತೊಡಿಗೆಯಲ್ಲಿ ಏನಾದರೊಂದು ಅಸಮರ್ಪಕವಾಗಿರುತ್ತೆ. ಮುಖಕ್ಕೆ ಒಪ್ಪುವಂತಹ ಕನ್ನಡಕದ ಫ್ರೇಮನ್ನು ಕೂಡ ಅವಳು ಆರಿಸಿರಲಿಲ್ಲ.

ಸಿತಾರ್ ಸಂಗೀತದ ನಡುವೆ ನಗು ಕೇಳಿಸಿತು – ರಸುಲ್ ನಗು. ರೂತ್ ಸುಮ್ಮನೆ ನಿಂತಿದ್ದರಿಂದ ಏನಾದರೂ ಅನ್ನಬೇಕೆನ್ನಿಸಿ, “ಪೋಲಿ ಮುದುಕ ಖುಷೀಲಿ ಇರೋ ಹಾಗಿದೆ” ಎಂದೆ. ಎಂದಿನಂತೆ ರೂತ್ ಇದಕ್ಕೆ ಪ್ರೀತಿಯಿಂದ ನಗಲಿಲ್ಲ. “ಮುಂದಿನ ವಾರ ಡೆಲ್ಲಿಯಲ್ಲಿರುತ್ತಿ. ವಿಂಟರ್‌ನಲ್ಲಿ ಡೆಲ್ಲಿ ಚೆನ್ನಾಗಿರುತ್ತೆ” ಎಂದೆ. ಪಾರ್ಟಿಯಲ್ಲಿ ಬೆರೆಯುವುದಕ್ಕೆ ಮುಂಚೆ ರೂತ್ ಹತ್ತಿರ ಏನಾದರೂ ಆಪ್ತವಾಗಿ ಮಾತಾಡಬೇಕೆನ್ನಿಸಿತ್ತು. ಇದಕ್ಕೂ ಅವಳು ಉತ್ತರಿಸದಿದ್ದುದಕ್ಕೆ ಕಾರಣ: ಜರ್ಮನ್ ಹುಡುಗಿಯಲ್ಲವೆ, ಇಂಗ್ಲಿಷಿನಲ್ಲಿ ಹಗುರವಾದ ಸಂಭಾಷಣೆ ಅವಳಿಗೆ ಕಷ್ಟವಾಗುತ್ತೆ ಕೆಲವು ಸಾರಿ ಎಂದುಕೊಂಡೆ. ಸಲಿಗೆಯಿಂದ ಹಾಸ್ಯ ಮಾಡಲು ಪ್ರಯತ್ನಿಸಿದೆ:

“ಹಿಂದೂಸ್ತಾನಿ ಬರುತ್ತೆ. ಆದರೆ ಇನ್ನು ಚಪಾತಿ ಮಾಡೋಕೆ ಕಲೀಬೇಕು. ಇಲ್ಲದಿದ್ದರೆ ನಿನ್ನ ಅತ್ತೆಯಾಗೋಳು ನಿನ್ನನ್ನ ಇಷ್ಟಪಡಲ್ಲ. ”

ನಾನು ಪೆಚ್ಚಾದೆ: ರೂತ್ ನಕ್ಕಿರಲಿಲ್ಲ. ರೂತ್ ತನ್ನನ್ನು ಒಪ್ಪಿಕೊಳ್ಳುವ ರೀತಿ, ನೋಡುವ ರೀತಿ, ಮಾತನ್ನು ಆಲಿಸುವ ರೀತಿ ಆಪ್ತತೆ ಹುಟ್ಟಿಸುವಂತಿದ್ದರೂ ನಾವು ಆಪ್ತರೆಂದು ತಿಳಿದು ಸಲಿಗೆಯಿಂದ ಆಡಿಬಿಡುವ ಯಾವುದೋ ಮಾತಿಗೆ ಅವಳ ಮುಖ ಖಿನ್ನವಾಗಿ ಬಿಡುತ್ತೆ. ನನ್ನ ಜೊತೆ ಮಾತ್ರ ಹೀಗೆ. ರಸುಲ್‌ಗೆ ಏನನ್ನಾದರೂ ಅವಳಿಗೆ ಹೇಳುವ ಸ್ವಾತಂತ್ರ್ಯ ಕೊಟ್ಟಿದ್ದಳು. ಅವಳ ತೆಳು ತುಟಿಗಳು ಹೊಲಿದಂತೆ ಮುಚ್ಚಿಕೊಂಡಾಗ ಅವಳ ಮುಖದ ಭಾವವನ್ನು ಗ್ರಹಿಸುವುದು ಕಠಿಣ. ಅವಳ ಕ್ರಾಂತಿಕಾರಕ ವಿಚಾರಗಳಿಗೆ ಮಾತ್ರ ನಾನು ಕಿವಿಯಾಗಿರಬೇಕೆ? ಯಾವನೋ ನಾನು ನೋಡದ ದಿನೇಶ್, ಅವನನ್ನು ಮದುವೆಯಾಗಲೆಂದು ಇಂಡಿಯಾಕ್ಕೆ ಹೋಗುತ್ತಿದ್ದಾಳೆ. ಅವನಿಗೆ ಇವಳು ಬರುತ್ತಿರುವುದು ಈಗ ತಾನೇ ಗೊತ್ತಾಗಿರುವುದು. ಅವಳ ಯೋಜನೆಯಲ್ಲೆಲ್ಲ ಭಾಗಿಯಾಗಿದ್ದೇನೆ. ಈಗ ನನ್ನ ಮಾತು ಬೇಡಿದ್ದರೆ ಯಾಕೆ ಕಾರಿಡಾರಿನಲ್ಲಿ ಹೀಗೆ ನನ್ನೆದುರಿನಲ್ಲಿ ನಿಂತಿರಬೇಕು? ಪಾರ್ಟಿ ನಡೆಯುತ್ತಿದ್ದ ರೂಮಿನೊಳಗೆ ಕರೆದುಕೊಂಡು ಹೋಗಲು ಯಾಕೆ ಅವಸರ ಮಾಡುತ್ತಿಲ್ಲ?

ನನ್ನ ದೇಶದ ಹೆಣ್ಣಾಗಿದ್ದರೆ ಸೆರಗಿನ ತುದಿಯನ್ನು ಬೆರಳಿಗೆ ಸುತ್ತುತ್ತಲೋ, ಬುಕ್ಕುಮುಖ ಮಾಡಿಯೋ, ಕಣ್ಣುಗಳನ್ನು ಚಂಚಲವಾಗಿ ತಿರುಗಿಸಿ ನೆಲ ನೋಡಿಯೋ ಅಂತೂ ಯಾವುದೋ ಒಳ ಸಂಚು ಪ್ರಯೋಗಿಸಿ – ತನ್ನನ್ನು ಹೊರಗೆಳೆಯಲು ಅವಶ್ಯ ಸೂಚನೆ ಕೊಡುತ್ತಿದ್ದಳು. ಆದರೆ ರೂತ್ ಕೈಗಳನ್ನು ಇಳಿಬಿಟ್ಟು ದೊಗಲೆ ಬ್ಲೌಸಿನಲ್ಲಿ ನನ್ನೆದುರು ನಿಂತಿದ್ದಳು. ಕನ್ನಡಕವಿಲ್ಲದೆ ನನ್ನನ್ನು ನೋಡಲು ಪ್ರಯತ್ನಿಸುತ್ತಿದ್ದ ಕಣ್ಣುಗಳಲ್ಲಿ ಆಯಾಸವಿತ್ತು. ಸೆರಗು ಜಾರಿದೆಯೆಂಬ ಎಗ್ಗಿರಲಿಲ್ಲ. ನನ್ನ ದೇಶದ ಹುಡುಗಿಗೆ ಜಾರುವ ಸೆರಗೂ ಆತ್ಮಪ್ರತ್ಯಯಕ್ಕೆ ಅವಕಾಶವಾಗುತ್ತದೆಂಬುದನ್ನು ರೂತ್ ತಿಳಿಯಳು.

ನನಗೆ ಮುಜುಗರವಾಗಬಾರದೆಂದು ರೂತ್ ಹೀಗೆ ನಿಂತಿದ್ದಾಳೆಂದು ನನಗೆ ಹೇಗೆ ಗೊತ್ತಾಗಬೇಕು? ಹೇಳಿದೆ:

“ಡೆಲ್ಲಿಗೆ ಹೋದಕೂಡಲೆ ಸ್ಕೂಲಲ್ಲಿ ಪಾಠ ಶುರುಮಾಡಬೇಕಲ್ವ? ನಿನ್ನ ಕೇಬಲ್‌ಗೆ ದಿನೇಶ್‌ನಿಂದ ಉತ್ತರ ಬಂತು?”

“ರಸುಲ್ ನಿನಗೆ ಕಾಯ್ತ ಇದಾನೆ ಬಾ. ”

ರೂಮಿನ ಬಾಗಿಲನ್ನು ತಳ್ಳಿ ನಿಂತಳು. ಇದ್ದಕ್ಕಿದ್ದಂತೆ ನಾನೊಬ್ಬ ಅಧಿಕಪ್ರಸಂಗಿ ಎನ್ನಿಸಿಬಟ್ಟಿತು.

ಸ್ನೋ ಬಿದ್ದು ಜಾರುವ ದಾರಿಯಲ್ಲಿ ಕಷ್ಟದಿಂದ ನಡೆದು ಬಂದ ನನಗೆ ಸಿಗರೇಟಿನ ಹೊಗೆ ತುಂಬಿದ ಬೆಚ್ಚನೆಯ ರೂಮು ಹಿತವಾಗಿತ್ತು. ಪ್ರಾಯಶಃ ರೂತ್ ಏನೋ ನೋವಿನಲ್ಲಿದ್ದಾಳೆ, ಮೈಗ್ರೇನ್ ಇರಬಹುದು, ಆಮೇಲೆ ಮಾತಾಡಿದರಾಯಿತು ಎಂದು ಸಮಾಧಾನಪಟ್ಟೆ. ಮೃದುವಾದ ಕಾರ್ಪೆಟ್ ಮೇಲೆ ಕೆಲವರು ಮೊಣಕೈ ಊರಿ ಮಲಗಿದ್ದರೆ, ಇನ್ನು ಕೆಲವರು ಸೋಫಾಗಳ ಮೇಲೆ ಮೈಚೆಲ್ಲಿ ಕೂತಿದ್ದರು. ರಸುಲ್ ಮೂಲೆಯಲ್ಲಿ ಇಬ್ಬರು ತರುಣರ ಜೊತೆ ನಿಂತಿದ್ದ. ಅವರ ಹಾವ ಭಾವಗಳಿಂದ ಪಾರ್ಟಿ ಶುರುವಾಗಿ ಸಾಕಷ್ಟು ಹೊತ್ತಾಗಿರುವಂತೆಕಂಡಿತು.

ರೂತ್‌ನ ಕೋಣೆಯ ಸಜ್ಜಿಕೆ ಅಂತರರಾಷ್ಟ್ರೀಯ. ಬೊಂಬೆಗಳಲ್ಲೋ, ಕರ್ಟನ್‌ಗಳಲ್ಲೋ, ಗೋಡೆಗೆ ನೇತುಹಾಕಿದ ಚಿತ್ರಗಳಲ್ಲೋ, ರೂತ್ ಸಂಪಾದಿಸಿದ ಸ್ನೇಹದ ವೈವಿಧ್ಯತೆಕಾಣುತ್ತಿತ್ತು. ಶಾಂತಿಕೇತನ, ಮಣಿಪುರ, ಜಪಾನು, ಬೇಲೂರು, ನಾನು ತಂದ ಚನ್ನಪಟ್ಟಣ – ಇತ್ಯಾದಿಗಳೆಲ್ಲ ಆ ಕೋಣೆಯ ಬಣ್ಣವನ್ನು ನಿಯೋಜಿಸಿದ್ದುವು. ಬರೆಯುವ ಮೇಜಿನ ಮೇಲೆ ಕ್ಯಾಕ್ಟಸ್ ಕುಂಡವಿತ್ತು; ಸೂರ್ಯನನ್ನು ಕಾಂತಿಯುಕ್ತವಾದ ಮುಖದಂತೆ ಊಹಿಸಿದ ಚಿತ್ರವೊಂದು ಮೇಜಿಗಂಟಿದಂತೆ ಗೋಡೆಯ ಮೇಲಿತ್ತು. ಅದರಮೇಲೆ ಬೆಳ್ಳಿಯ ತಗಡಿನ ಗಣಪತಿ – ದಿನೇಶ ಪೂಜಿಸುತ್ತಿದ್ದುದ್ದಂತೆ. ರೂತ್‌ನ ಈಚಿನ ನಂಬಿಕೆಗಳನ್ನು ಸಾರುವ ಆಕ್ಸ್ ಪ್ಯಾಮಿನ ಹಸಿದ ಮಗು ಚಿತ್ರದ ಪೋಸ್ಟರ್ ಬಾಗಿಲಿಗೆ ಅಂಟಿತ್ತು. ಸ್ನೇಹದ ಇಷ್ಟೊಂದು ಕುರುಹುಗಳ ಮಧ್ಯೆ ಮೈಗ್ರೇನ್ ಸಿಡಿತವನ್ನು ತಾಳಲಾರದೆ ರೂತ್ ನರಳುತ್ತಿದ್ದುದನ್ನು ನಾನು ನೋಡಿದ್ದೇನೆ.

ನಿಜ ಹೇಳಬೇಕೆಂದರೆ ಮೂಲೆಯಲ್ಲಿ ನಿಂತಿದ್ದ ರಸುಲ್ ಹತ್ತಿರ ನಾನು ಹೋಗುತ್ತಿದ್ದಂತೆ ಕ್ರೂರವಾದೊಂದು ವಿಚಾರ ನನಗೆ ಹೊಳೆಯಿತು. ಹೆಣ್ಣಿನಲ್ಲಿ ಸುಖ ಸಿಗಬೇಕಾದರೆ ಅವಳಲ್ಲಿಕಿಂಚಿತ್ತಾದರೂ ಸೂಳೆಯ ಅಂಶ ಇರಬೇಕೆಂದು ಗಂಡು ಬಯಸುತ್ತಾನೆ. ಸುಖವನ್ನು ಕೊಡುವ, ಆಹ್ವಾನಿಸುವ ಭಂಗಿ ಸೀರಿಯಸ್ ಮುಖದ ಹೆಣ್ಣಿಗೆ ಸಾಧ್ಯವೆ ಎಂಬ ಅನುಮಾನ ಪ್ರಾಯಶಃ ಎಲ್ಲ ಗಂಡಿಗೂ ಇರುತ್ತೆ. ಮಿನಿಸ್ಕರ್ಟಿನಲ್ಲಿ ಮೈತುಂಬಿಕೊಂಡ ಜೆನ್ನಿ ತನ್ನಬಟ್ಟಲಿಗೆ ವೈನ್ ಸುರಿದು, ಖಾನನ ಗ್ಲಾಸನ್ನೂ ಭರ್ತಿ ಮಾಡಿದಳು. ರೂತ್‌ಗೆ ಹಿಂದೂಸ್ತಾನಿ ಕಲಿಸುತ್ತಿದ್ದ ಪಾಕಿಸ್ತಾನದ ಖಾನ್‌ಜೆನ್ನಿಗೆ ಅಂಟಿಕೊಂಡಿದ್ದ. ರೂತ್ ಗ್ಯಾಂಗಿನಲ್ಲಿ ಇಂಥವರೆಲ್ಲ ಇದ್ದಾರೆಂದು ಊಹಿಸುವುದು ಕಷ್ಟ.

ರಸುಲ್‌ಗೆ ಸುಮಾರು ಐವತ್ತು ವರ್ಷ. ಪೂರ್ವಬಂಗಾಳದ ಮುಸ್ಲಿಮ್. ಇಂಗ್ಲೆಂಡಿಗೆ ಬಂದು ಮೂವತ್ತು ವರ್ಷಗಳ ಮೇಲಾಗಿತ್ತು. ರೂತ್ ಮೂಲಕ ನನಗವನ ಪರಿಚಯವಾದ್ದು. ಬಲುನೀಟು ಮನುಷ್ಯ. ಕನ್‌ಸರ್ವೇಟಿವ್ ಬ್ರಿಟಿಷನಂತೆ ಪಿನ್ ಸ್ಟ್ರೈಪ್ ತ್ರೀಪೀಸ್ ಸೂಟ್ ತೊಟ್ಟು ಅಬದ್ಧ ವ್ಯಾಕರಣದ ಇಂಗ್ಲಿಷನ್ನು ತುಂಬ ಸಲೀಸಾಗಿ, ಖುಷಿಯಾಗಿ, ಹೇಳಿದ್ದು ಕಣ್ಣಿಗೆ ಕಟ್ಟುವಂತೆ ಮಾತಾಡುತ್ತಿದ್ದ. ತಲೆತುಂಬ ಇದ್ದ ಬಿಳಿಗೂದಲನ್ನು ವಾಸನೆ ಎಣ್ಣೆ ಹಚ್ಚಿ ಎಡಕ್ಕೆ ಬೈತಲೆ ತೆಗೆದು ಚೊಕ್ಕವಾಗಿ ಕೂರಿಸುತ್ತಿದ್ದ. ರಸುಲ್ ಸಾನ್ನಿಧ್ಯದಲ್ಲಿ ಯಾವಾಗಲೂ ಆವರಿಸಿರುತ್ತಿದ್ದ ಈ ಎಣ್ಣೆ ವಾಸನೆಯನ್ನು ನಾನು ಮರೆಯಲಾರೆ. ಬಿಳಿ ಹುಬ್ಬಿನ ಕೆಳಗೆ ಎಷ್ಟಗಲ ಬೇಕಾದರೂ ಅರಳಬಲ್ಲ ಕಣ್ಣುಗಳು. ಚೂಪುಗದ್ದ, ದೊಡ್ಡ ತಲೆ, ಮೊರಗಿವಿಗಳ ಅವನ ಕಪ್ಪು ಮುಖ ತ್ರಿಕೋನದಂತಿತ್ತು. ಎಲ್ಲವನ್ನೂ ಉತ್ಪ್ರೇಕ್ಷಿಸುವ, ತನ್ನ ಇರವನ್ನೆ ಗೇಲಿ ಮಾಡಿಕೊಳ್ಳುವ ಬಫೂನಿನ ಮುಖ ಅದು. ಆದರೆ ಅವನು ಮೌನವಾಗಿ ನಿಂತಾಗ ಅಥವಾ ಕತ್ತನ್ನು ಬಗ್ಗಿಸಿ ನಡೆಯುವಾಗ ದೊಡ್ಡದೊಂದು ಕಂಪೆನಿಯ ಛೇರ್‌ಮನ್ನನಂತೆ ಕಾಣುತ್ತಿದ್ದ. ಚೂರು ಜೀವಂತವಾದೊಡನೆಯೇ ಅವನ ಬೆರಗಳುಗಳು, ಮುಖ, ಕಣ್ಣು, ಕಾಲುಗಳು ಎಲ್ಲ ಅವನ ಮತಿನಲ್ಲಿ ಭಾಗವಹಿಸತೊಡಗಿ ರಸುಲ್ ಬೇರೊಂದು ಅಭಿಪ್ರಾಯವನ್ನೆ ನಮ್ಮಲ್ಲಿ ಹುಟ್ಟಿಸಿ ಬಿಡುತ್ತಿದ್ದ. ಜೊತೆಯವರಿಗೆ ಖುಷಿಯಾಗುವುದಾದರೆ ಪ್ಯಾಂಟ್ ಬಿಚ್ಚಿ ಕುಣಿಯಲೂ ಅವನು ತಯಾರು. ಆಡುವ ಮಾತಿನ ಸ್ವರಯೋಜನೆಯಲ್ಲೇ, ಅನೂಹ್ಯ ಘಾತಪಲ್ಲಟಗಳಲ್ಲೇ, ಆಡಿದ್ದನ್ನು ಹಾಸ್ಯಮಾಡಿಕೊಳ್ಳುವ ಧಾಟಿಯಿರುತ್ತಿದ್ದುದರಿಂದ ಅವನು ಹೇಳಿದ ಯಾವುದೂ ಅವನಿಗೆ ಅಂಟಿಕೊಳ್ಳುತ್ತಿರಲಿಲ್ಲ. ತನ್ನ ಮಾತುಗಳ ತುದಿಯಲ್ಲಿ ತಾನೊಂದು ಬರಿಯ ಆಶ್ಚರ್ಯ ಚಿಹ್ನೆ ಸೂಚಕ ಎನ್ನುವಂತೆ ಉತ್ಪ್ರೇಕ್ಷೆಯಲ್ಲಿ ಹುಬ್ಬುಗಳನ್ನು ಏರಿಸಿ, ಕಣ್ಣು ಹೊರಳಿಸಿ, ಕೈಗಳನ್ನು ಎತ್ತಿ ಕುಳ್ಳಗೆ ತೋರುವಾಗಿ ರಸುಲ್ ನಿಂತಿರುತ್ತಿದ್ದ. ರೂತ್ ಅಥವಾ ನಾನು ಆಡುವ ಮಾತುಗಳು ನಮ್ಮ ಮೈ ಸಂದಿಗಳಲ್ಲಿ ಬೆವರಿಕೊಂಡಂತೆ. ಆದರೆ ಲವಲವಿಕೆಯಲ್ಲಿ ತನ್ನನ್ನು ಹೊಕ್ಕು ಹೊರಡುವ ಮಾತುಗಳನ್ನು ಇವು ಯಾರವೋ ಮಾತೆನ್ನುವಂತೆ ನೋಡಿ ತಾನೇ ಚಕಿತನಾಗುವ ರಸುಲ್‌ನ ನಿರಂಕುಶತೆ ಕೇಳುವವನನ್ನು ಸ್ವತಂತ್ರಗೊಳಿಸುವಂವಂಥದು. ಕೇಳುವವನನ್ನು ಹಂಗಿಗೆ ಸಿಕ್ಕಿಸದಂತೆ, ಅವನಿಂದ ಯಾವ ಆರ್ತ ಪ್ರತಿಕ್ರಿಯೆಯನ್ನೂ ಬಯಸದಂತೆ, ಜವಾಬ್ದಾರಿಗಳನ್ನು ಮರೆಸುವಂತೆ ರಸುಲ್ ಮಾತಾಡಬಲ್ಲ. ಅಂತೂ ಅವನ ಜೊತೆಗಿರುವಷ್ಟು ಹೊತ್ತು ನಾವು ಮೀರಿಮಿಕ್ಕುತ್ತಿದ್ದೇವೆಂಬ ಭ್ರಮೆಯಿರುತ್ತಿತ್ತು. ಚಳಿಯಲ್ಲಿ ಕೆಂಡದ ಒಲೆಯಂತಿದ್ದ ಅವನ ಸುತ್ತ ನಿಂತಿದ್ದ ಇಬ್ಬರು ಯುವಕರು ಸಾಮಾನ್ಯವಾಗಿ ಸೀರಿಯಸ್ ಆಗಿ ಎಲ್ಲರ ಜೊತೆ ವ್ಯವಹರಿಸುವ ನ್ಯೂಲೆಫ್ಟ್ ಧೋರಣೆಯವರು ಸದಾ ಚರ್ಚೆಗೆ ಕಾಲುಕೆರೆದು ಬರುವ ರೊಬನ್ಸ್‌ಮತ್ತು ಸಿಲ್ವರ್ ಮೈಮರೆತು ರಸುಲ್‌ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರೆಂಬುದರಿಂದ ನನಗೆ ಆಶ್ಚರ್ಯವಾಗಲಿಲ್ಲ. ಸ್ವಲ್ಪ ಅದೇ ಸ್ವಭಾವದ ನನಗೂ ರೂತ್‌ಗೂ ಸಹ ಎಲ್ಲವನ್ನೂ ಕಂಡು ನಗುವ ಈ ರಸುಲ್ ಆಪ್ತನಲ್ಲವೆ? ರೂಬನ್ಸ್ ಮತ್ತು ಸಿಲ್ವರ್‌ಗೆ ಜಾನಪದ ಸಾಹಿತ್ಯದಲ್ಲಿ ಆಸಕ್ತಿ ಇದ್ದುದರಿಂದ ರಸುಲ್ ಯಾವುದೋ ಪೋಲಿ ಬಂಗಾಳಿ ಹಾಡನ್ನು ಅವರಿಗೆ ಅವನ ಸ್ವಚ್ಛಂದ ಇಂಗ್ಲಿಷಿನಲ್ಲಿ ಭಾಷಾಂತರಿಸುತ್ತಿದ್ದಿರಬೇಕು. ನಾನು ಕೈಕುಲುಕಿ ಹಲೋ ಎಂದಾಗ ಇಬ್ಬರೂ ಹೊಟ್ಟೆ ತುಂಬ ನಗುತ್ತಿದ್ದರು. ರಸುಲ್‌ನಲ್ಲಿ ಈ ಸರಕು ಮಸ್ತಾಗಿತ್ತೆಂದು ನನಗೆ ಗೊತ್ತು. ರೂತ್ ಶೆರಿಯ ಬಟ್ಟಲನ್ನು ನನ್ನ ಕೈಯಲ್ಲಿಟ್ಟಳು. ಡ್ರೈಶೆರಿ ನನಗೆ ಪ್ರಿಯವೆಂದು ರೂತ್‌ಗೆ ಗೊತ್ತು. ಆಪ್ತವಾಗಿ ಥ್ಯಾಂಕ್ಸ್‌ಎಂದೆ. ‘ಕ್ಷಮಿಸಿ’ ಎಂದುಜೊತೆಗಿದ್ದವರಿಗೆ ಹೇಳಿ, ಖಾಲಿಯಾಗಿದ್ದ ಮೂಲೆಗೆ ನನ್ನನ್ನು ರಸುಲ್ ಕರೆದುಕೊಂಡು ಹೋದ. ಏನೋ ಗೋಪ್ಯವಾದ್ದನ್ನು ರಸುಲ್ ನನಗೆ ಹೇಳುವುದಿತ್ತು ಎನ್ನುವುದು ನನಗೆ ಗೊತ್ತಾಯಿತು.

ಭಾಗ: ಎರಡು

ರಸುಲ್ ನನಗೆ ಮೊದಲು ಪರಿಚಯವಾದ್ದು ಸ್ಟ್ರಿಂಗ್‌ನಲ್ಲಿ. ಅದೊಂದು ಮರೆಯಲಿಕ್ಕಾಗದ ಘಟನೆ. ಯೂನಿವರ್ಸಿಟಿ ರೆಫೆಕ್ಟರಿಯ ಹೊರಗೆ ಇಳಿಜಾರಾದ ಲಾನ್‌ನ ದಿಬ್ಬದ ಮೇಲೆ ಸ್ಯಾಂಡ್ ವಿಚಸ್ ತಿನ್ನುತ್ತ ಸೈಡರ್ ಕುಡಿಯುತ್ತ ನಾನು, ರೂತ್ ಕುಳಿತಿದ್ದೆವು. ರೂತ್ ಪರಿಚಯವಾಗಿ ಸ್ವಲ್ಪ ದಿನವಾಗಿತ್ತು. ತನ್ನ ವಿಷಯವನ್ನೆಲ್ಲ ಹೇಳಿಕೊಂಡಳು. ಅವಳ ಅಪ್ಪ ಅಮ್ಮ ಇಬ್ಬರೂ ಬೇರೆಯಾಗಿದ್ದರು; ಬೇರೆ ಮದುವೆ ಮಾಡಿಕೊಂಡಿದ್ರು. ಅವಳಿಗೆ ತನ್ನವನು ಎನ್ನಿಸುತ್ತಿದ್ದ ಹಳೆಯ ಕಾಲದ ಅಜ್ಜನೂ ತೀರಿಕೊಂಡಿದ್ದ. ಜರ್ಮನಿಗೆ ಮತ್ತೆಹೋಗಬೇಕೆಂದು ಅವಳಿಗೆ ಅನ್ನಿಸುವುದಿಲ್ಲ. ಅಜ್ಜನಿಗೆ ಭರ್ಜರಿ ಗಡ್ಡಮೀಸೆಗಳಿದ್ದುವು. ಒರಟು ಪ್ರೀತಿಯ ಕಂದಾಚಾರದ ಮುದುಕ. ಮೊದಲನೇ ಮಹಾಯುದ್ದದಲ್ಲಿ ಹೋರಾಡಿದವ. ಕ್ಯಾನ್ಸರ‍್ನಿಂದ ಅವನು ಸಾಯುತ್ತಿದ್ದಾಗ ಅವನ ಪಕ್ಕದಲ್ಲಿದ್ದವಳೆಂದರೆ ರೂತ್ ಒಬ್ಬಳೆ. ಅವನಿಗೆ ಹೋಲಿಸಿದರೆ ಲಿಬರಲ್ ಧೋರಣೆಯ ತಾಯಿತಂದೆಯಿರಬ್ಬರೂ ಕಪಟಿಗಳು. ರೂತ್‌ಗೆ ಪಾಶ್ಚಿಮಾತ್ಯ ನಾಗರೀಕತೆಯೆಂದರೆ ಹೇಸಿಗೆಯಾಗಿತ್ತು. ಭಾರತದಲ್ಲಿ ಬದುಕಿಗಿನ್ನೂ ಅರ್ಥವಿದೆಯೆಂದಳು. ನಾನು ಸುಮ್ಮನಿದ್ದೆ. ಅದನ್ನು ಗಮನಿಸಿ ತನಗೆ ಸಮಷ್ಟಿ ಕುಟುಂಬಗಳೆಂದರೆ ಇಷ್ಟ ಎಂದಳು. ದಿನೇಶ್ ಕುಟುಂಬ ದೊಡ್ಡದು. ಅವನ ತಂದೆ ಪಂಜಾಬಿನಲ್ಲಿ ಜಮೀಂದಾರರು. ತಂದೆಯೆಂದರೆ ಅವನಿಗೆ ಭಕ್ತಿ. ಅವನನ್ನು ಅವನ ಕುಟುಂಬದಿಂದ ಬೇರೆ ಮಾಡುವುದು ರೂತ್‌ಗೆ ಇಷ್ಟವಿಲ್ಲ. ಆದ್ದರಿಂದ ಭಾರತದಲ್ಲಿ ಒಂದು ವರ್ಷ ಬದುಕಿ, ಅಲ್ಲಿ ಬದುಕೋದು ತನಗೆ ಸಾಧ್ಯವೋ ನೋಡಿ ದಿನೇಶನನ್ನು ಮದುವೆಯಾಗುವುದೆಂದುಕೊಂಡಿದ್ದಳು. ದಿನೇಶ್ ಡಾಕ್ಟರ್ ಆಗಿ ಊರಿನಲ್ಲಿದ್ದ. ಈಗ ರಸುಲ್ ಪರಿಚಯ ಮಾಡಿಸಿದ ಖಾನ್ ಹತ್ತಿರ ಹಿಂದೂಸ್ತಾನಿ ಕಲಿಯುತ್ತಿದ್ದಳು. ದಿನೇಶ್ ತಾಯಿಗೆ ಇಂಗ್ಲಿಷ್ ಬರುವುದಿಲ್ಲವಂತೆ.

ದಿನೇಶ್‌ಗೆ ರೂತ್ ನಿರ್ಧಾರ ಇನ್ನೂ ತಿಳಿಯದು. ಕಾಗದ ಬರೆಯುತ್ತಿರುತ್ತಾನೆ. ದೆಹಲಿಯ ಸ್ಕೂಲಲ್ಲಿ ತನಗೆ ಕೆಲಸ ಸಿಗಬಹುದೆಂದೂ ಅವನಿಗೆ ಅವಳು ತಿಳಿಸಿಲ್ಲ. ನಿಶ್ಚಯ ಬಲವಾಗದೆ ಹೇಳಬಾರದೆಂದು ಅವಳ ಉದ್ದೇಶ.

ದಿನೇಶ್ ಜೊತೆ ಮೂರು ವರ್ಷದ ಪರಿಚಯ ಅವಳಿಗೆ. ಆಗಲೂ ಜರ್ಮನ್ ಇಲಾಖೆಯಲ್ಲಿ ಸೆಕ್ರೆಟರಿಯಾಗಿದ್ದಳು. ಡಾಕ್ಟರ್ ಪರೀಕ್ಷೆಗೆ ಓದುತ್ತಿದ್ದ ದಿನೇಶ್ ಪರಿಚಯವಾದ್ದು ರಸುಲ್ ಮುಖಾಂತರ. ನನ್ನ ಅನುಮಾನ ಗಮನಿಸಿ ಹೇಳಿದಳು. ದಿನೇಶ್‌ನ ದುರ್ಬಲತೆಗಳೆಲ್ಲ ಅವಳಿಗೆ ಗೊತ್ತು. ಇಂಗ್ಲೆಂಡಲ್ಲಿ ಮದುವೆಯಾಗೋಣೆಂದು ಅವನು ಹಠ ಮಾಡಿದ್ದ. ತನ್ನೂರಿನಲ್ಲಿ ರೂತ್ ಅನ್ನು ಮದುವೆಯಾಗಲು ಅವನಿಗೆ ಹೆದರಿಕೆ. ರೂತ್‌ಗಿದೆಲ್ಲ ಗೊತ್ತು. ಆದರೆ ನಿನ್ನ ದೇಶದಲ್ಲಿ ನಿನ್ನ ಜನರ ಜೊತೆಇರಲು ಸಾಧ್ಯವೆನ್ನಿಸಿದರೆ ಮಾತ್ರ ನಿನ್ನನ್ನು ಮದುವೆಯಾಗ್ತೇನೆ ಎಂದು ದಿನೇಶ್ ಇಂಡಿಯಾಗೆಹೊರಟು ನಿಂತಾಗ ಹೇಳಿದ್ದಳು. ತನ್ನನ್ನು ಮದುವೆಯಾಗಿ ದಿನೇಶ್ ದೇಶದಿಂದ ದೂರವಾಗಿರೋದು ಅವಳಿಗೆ ಖಂಡಿತ ಇಷ್ಟವಿಲ್ಲ. ರೂತ್ ತುಂಬ ನಾಚಿಕೆಯಿಂದ ಇನ್ನೊಂದು ಮಾತು ಸೇರಿಸಿದ್ದಳು. ನನ್ನ ಪ್ರತಿಕ್ರಿಯೆಯನ್ನು ಅನುಮಾನಿಸುತ್ತ,‘ಇಂಡಿಯಾದಲ್ಲಿ ಚೈನಾ’ ಮಾದರಿಯ ಕ್ರಾಂತಿ ನಿನಗೆ ಅವಶ್ಯವೆನ್ನಿಸುವುದಿಲ್ಲವೇ, ಎಂದಿದ್ದಳು. ‘ದಿನೇಶ್‌ಜಮೀಂದಾರನ ಮಗನಲ್ಲವೆ’ ಎಂದು ಕೇಳಿದೆ. ‘ರಸುಲ್‌ಹಾಗೇ ನೀನು ಯೊಚಿಸುತ್ತೀಯ’ ಎಂದಿದ್ದಳು. ‘ದಿನೇಶ್ ಬದಲಾಗಬಲ್ಲ’ ಎಂದು ನಂಬಿಕೆಯಿಂದ ಹೇಳಿದ್ದಳು. “ಇಂಗ್ಲೆಂಡಿಗೆ ಬರುವ ಬಹುಪಾಲು ನಮ್ಮ ಜನ ಸ್ನಾಬ್‌ಗಳೆಂದು ನಿನಗೆ ಗೊತ್ತಿಲ್ಲವೆ” – ಎಂದಿದ್ದೆ. “ಪರವಾಗಿಲ್ಲ ನನಗದೆಲ್ಲ ಮುಖ್ಯವೆನ್ನಿಸುವುದಿಲ್ಲ” ಎಂದು ರೂತ್ ತುಂಬ ಪಕ್ವ ಹುಡುಗಿಯ ಹಾಗೆ ಹೇಳಿದಳು. ಬ್ಯಾಗಿನಿಂದ ಫೋಟೋ ಒಂದನ್ನು ತೆಗೆದು ತೋರಿಸಿದಳು. ಅದರಲ್ಲಿ ದಿನೇಶ್‌ನ ತಾಯಿ ತಂದೆ ಬಂಧುಗಳು ಎಲ್ಲರೂ ಮೂರು ಸಾಲುಗಳಾಗಿ ನಿಂತಿದ್ದರು. ಬೆರಳು ಮಾಡಿ ಎಲ್ಲರ ಹೆಸರನ್ನೂ ಸಂಬಂಧಗಳನ್ನೂ ರೂತ್ ವಿವರಿಸಿದ ಕ್ರಮದಿಂದ ನನಗೆ ನಗು ಬಂತು. ಆದರೆ ಅನುಮಾನಗಳನ್ನೂ ಮೀರಿ ನನಗೆ ಖುಷಿಯಾಗಿತ್ತು.

ಸ್ವತಃ ಕ್ರಾಂತಿಕಾರಕತೆಯನ್ನು ಕಳೆದುಕೊಂಡು ಜೀವನದ ಜೊತೆ ಹೊಂದಿಕೊಳ್ಳತೊಡಗಿದ್ದ ನನಗೆ ರೂತ್‌ನ ಕಳಕಳಿಯನ್ನು ಕಂಡುನನ್ನಂಥವನ ವಿವೇಕ ಮುಖ್ಯವಲ್ಲ ಎನ್ನಿಸಿತ್ತು. ಎದ್ದು ಹೋಗಿ ಇನ್ನೆರಡು ಹಾಫ್ ಪೈಂಟ್ ಸೈಡರ್ ಕೊಂಡೆ. ಬಾರ್‌ಮನ್ ಐರ್ಲೆಂಡಿನವ. ಅವನ ಕೈಯಲ್ಲಿ ಯಾವಾಗಲೂ ವಾತ್ಸ್ಯಾಯನನ ಕಾಮ ಸೂತ್ರ ಪುಸ್ತಕವಿರುತ್ತಿತ್ತು. ಅಸಾಧ್ಯಭಂಗಿಗಳ ವರ್ಣನೆಗಳನ್ನು ನನಗೆ ತೋರಿಸಿ ಮುಖ ಕೆಂಪಾಗುವಂತೆ ಅವನು ನಗುತ್ತಿದ್ದ. ಆತುರದಲ್ಲಿದ್ದ ನನ್ನನ್ನು ನೋಡಿ “ಇನ್ನೊಂದು ಭಂಗಿಯಿದೆ; ಆಮೇಲೆ ಓದಿ ತೋರಿಸುತ್ತೇನೆ” ಎಂದು ಕಣ್ಣು ಮಿಟುಕಿಸಿದ. “ಪ್ರಯೋಗ ಮಾಡಲು ಇಲ್ಲಿ ಸಂಗಾತಿ ಸಿಗಲ್ಲ ಭಾರತಕ್ಕೇ ಬರುತ್ತೇನೆ” ಎಂದ. “ಅಲ್ಲೂ ದೇಹಗಳು ಸೆಟೆದುಕೊಂಡಿವೆ” ಎಂದೆ. ನಕ್ಕ.

ಸೈಡರ್ ತಣ್ಣಗೆ ರುಚಿಯಾಗಿತ್ತು. ನಾವು ಕೂತಿದ್ದ ಪುಟ್ಟ ದಿನ್ನೆಯ ಸುತ್ತಲೂ ಪಾತಿಗಳಲ್ಲಿ ಹೂಗೆಡ್ಡೆಗಳ ಮೊಳಕೆಗಳು ಹಸಿಯಾಗಿ, ಸ್ಫುಟವಾಗಿ ಮಣ್ಣನ್ನು ತೂರಿಕೊಂಡು ಎದ್ದಿದ್ದುವು. ತೊಯ್ದು, ಬಿಸಿಯಾಗಿ, ಊರುವ ಬೇರುಗಳಿಗೆ ಒಪ್ಪಿಕೊಳ್ಳುವ ಮಣ್ಣು. ಇನ್ನೇನು ಒಂದೆರಡು ದಿನಗಳಲ್ಲೆ ಗೌಪ್ಯ ಬಯಲಾದಂತೆ ಕಣ್ಣು ಹಾಯಿಸಿದಲ್ಲಿ ಹೂಚೆಲ್ಲಿಕೊಂಡಿರುತ್ತೆ. ಕಾರ್ಖಾನೆಗಳ ನಗರವಾದ ಬರ್ಮಿಂಗಂನಲ್ಲೂ ಫಾಗ್‌ನಲ್ಲಿ ಮುಸುಕು ಹೊದ್ದು ಮಲಗಿದ ಭೂಮಿ ಚಿರಂಜೀವಿಯಾಗಿ ಬಿಡುತ್ತೆ. ಐಸ್‌ಕ್ರೀಂ ತಿನ್ನುತ್ತ ಮಕ್ಕಳು ಹುಲ್ಲಿನ ಮೇಲೆ ಕುಣಿಯುತ್ತಾರೆ; ಚೆಂಡಾಡುತ್ತಾರೆ. ಬೆಂಚುಗಳ ಮೇಲೆ ಕೂತ ಹಾರುವ ಬಿಳಿಗೂದಲಿನ ಮುದುಕಿಯರ ಸುಕ್ಕುಗಟ್ಟಿದ ಮುಖದಲ್ಲಿ ಕಣ್ಣುಗಳು ಮಿನುಗುತ್ತವೆ. ಚಳಿಗಾಲದಲ್ಲಿ ಹಾತೊರೆದು ನಾನು ಕಾಯುತ್ತಿರುವ ದಿನಗಳು ಇವು.

“ಲವ್ವಿ” ಎಂದು ರೂತ್ ಸೈಡರನ್ನು ಸೇವಿಸುತ್ತ ಕನ್ನಡಕ ತೆಗೆದಳು. ಮೋಡದೊಳಗೆ ಪಳಗಿಕೊಂಡಿದ್ದ ಸೂರ್ಯ ಇದ್ದಕ್ಕಿದ್ದಂತೆ ಹೊರಬಂದ; ಕಿರಣಗಳು ರೆಫಕ್ಟರಿಯ ಗಾಜಿನ ಕಿಟಕಿಗಳನ್ನು ಸ್ಪರ್ಶಿಸಿ ಜ್ವಾಲೆಯಾಗಿ ಬಿಟ್ಟವು. ಕೆರಳಿ ನಿಂತ ರೆಫಕ್ಟರಿಯನ್ನು ರೂತ್ ನೋಡಿ ಗೆಲುವಿನಿಂದ ಎದ್ದಳು. “ರಸುಲ್‌ನ ಪರಿಚಯ ಮಾಡಿಸಿ ಕೊಡ್ತೇನೆ ಬಾ” ಎಂದಳು.

ಶೇಕ್ಸ್‌ಪಿಯರ್ ಸ್ಟಡಿ ಸೆಂಟರಿದ್ದ ದಾರಿಯಲ್ಲಿ ನಡೆದೆವು. ಕಿರಿದಾದ ದಾರಿ ಹಳ್ಳಿಯ ದಾರಿಯಂತಿತ್ತು: ಎರಡು ಪಕ್ಕಕ್ಕೂ ಮರಗಳ, ಗೌಪ್ಯವಾದ ಆಕರ್ಷಕವಾದ ಡೊಂಕುಗಳು. ಬಳಸಿ ಸುತ್ತಿ ಅದು ಇದು ಮಾತಾಡುತ್ತ ನಡೆಯುವಾಗ ರೂತ್ ವ್ಯಾಗ್ನರ್ ಸಂಗೀತ ತನಗೆ ತುಂಬ ಪ್ರಿಯ ಎಂದಳು. ದಿನೇಶ್‌ಗೆ ಲತಾಮಂಗೇಶ್‌ಕರ್ ಇಷ್ಟ. ಅವಳಿಗೆ ಭಾರತೀಯ ಹಾಡುಗಾರಿಕೆ ಹಿಡಿಸುವುದಿಲ್ಲ. ಪರಿಚಯವಾದ ಪ್ರಾರಂಭದಲ್ಲಿ ದಿನೇಶ್ ಊಟವಾದ ಮೇಲೆ ಪಾತ್ರೆ ತೊಳೆಯುವುದು ಗಂಡಸಿಗೆ ಸಲ್ಲದ ಕೆಲಸ ಎಂದುಕೊಂಡಿದ್ದ.

ರಸುಲ್ ಮನೆಯೆದುರು ಧೂಳು ಒರೆಸದ ಕಾರು ನಿಂತಿತ್ತು. ಹಾಳುಬಿದ್ದ ತೋಟ, ಹಳೆಯಮನೆ. ರೂತ್ ಲಗುಬಗೆಯಿಂದ ಬೆಲ್ ಒತ್ತಿದಳು. ಬಾಗಿಲು ತೆರೆದ ರಸುಲ್ ಕೈಯಲ್ಲಿ ಸಟ್ಟುಗವಿತ್ತು. ಗೆಲುವಿನಿಂದ ಬನ್ನಿ ಎಂದು ಅಡುಗೆ ಮನೆಗೆ ಕರೆದುಕೊಂಡು ಹೋದ. ನಾವು ಹಾದುಹೋದ ರೂಮುಗಳ ತುಂಬ ಹಳೆಯ ಕುರ್ಚಿಗಳು. ಹರಿದ ಬೆಡ್ಡುಗಳು ಇದ್ದವು. ನೆಲದ ಮೇಲೆ ಕೆಸರಿನ ಹೆಜ್ಜೆ ಗುರುತುಗಳಿದ್ದ ಬಣ್ಣಗೆಟ್ಟ ಲಿನೋಲಿಯಂ ಹಾಸಿತ್ತು. ನನ್ನನ್ನು ನೋಡಿ ರಸುಲ್, “ಪಾಕಿಸ್ತಾನಿಗಳಿಗೆ ಇವನ್ನು ಮಾರೋದು ಕೊಳ್ಳೋದು ನನ್ನ ಅನೇಕ ಉದ್ಯಮಗಳಲ್ಲಿ ಒಂದು” ಎಂದ.

ಅಡಿಗೆ ಮನೆಯಲ್ಲಿದ್ದ ಸ್ಟೂಲುಗಳ ಮೇಲೆ ಇಬ್ಬರೂ ಕೂತೆವು. ಗ್ಯಾಸ್ ಒಲೆಯ ಮೇಲೆ ರಸುಲ್ ಮಗಚುತ್ತಿದ್ದುದು ಕೇಸರಿಭಾತಿನಂತಹ ಒಂದು ತಿಂಡಿಯೆಂದು ವಾಸನೆಯಿಂದ ಊಹಿಸಿದೆ. “ನಿನ್ನ ವಿಷಯ ರೂತ್ ಹೇಳ್ತಿರ್ತಾಳೆ. ಇಂಡಿಯಾಕ್ಕೆ ಹೋಗೋ ಹುಚ್ಚನ್ನ ನೀನು ಯಾಕೆ ಅವಳಿಗೆ ಬಿಡಿಸಿಲ್ಲ?” ಎಂದು ರಸುಲ್ ರೂತ್‌ಗೆ ಕಣ್ಣು ಮಿಟುಕಿಸಿದ. ತಿಂಡಿಯನ್ನು ಮಗಚುತ್ತ ಹೇಳಿದ:

“ನೀನು ಬರೋಕೆ ಹತ್ತು ನಿಮಿಷ ಮುಂಚೆ ಒಂದು ಸಂಗತಿ ನಡೀತು. ನಾನು ಇದನ್ನ ಮಗಚುತ್ತ ನಿಂತಿದ್ದೆ. ಒಂದು ಬಂಗಾಳಿ ಕುಟುಂಬಾನ್ನ ಊಟಕ್ಕೆ ಕರ‍್ದಿದ್ದೀನಿ. ಅವರಿಗೆ ಸಣ್ಣ ಮಕ್ಕಳು, ಸಿಹಿಯೆಂದರೆ ಇಷ್ಟ. ಈ ಹಲ್ವಾನ್ನ ಹೀಗೇ ಮಗಚುತ್ತ ಇರೋವಾಗ ಜೇನ್ ಸದ್ದಿಲ್ಲದೆ ನನ್ನ ಹಿಂದೆ ಬಂದು ನಿಂತಳು. ಜೇನ್ ವಿಷಯ ಅನಂತ್‌ಗೆ ಗೊತ್ತಿರಬೇಕಲ್ಲ? ಜೇನ್ ಡೇನಿಷ್ ಹುಡುಗಿ; ಹತ್ತು ವರ್ಷಗಳಿಂದ ನನ್ನ ಜೊತೆ ಮಲಗಿದ್ದಳು. ಏನೂ ಮಾತಾಡದೆ ಯಾಕೆ ಹೀಗೆ ನನ್ನಹಿಂದೆ ನನ್ನ ಡಾರ್ಲಿಂಗ್ ನಿಂತಿದ್ದಾಳೆ ಅಂತ ಆಶ್ಚರ್ಯ ಪಡುತ್ತಿದ್ದಂತೆ ‘ರಸುಲ್’ ಎಂದಳು. ಅರೆ ಇದೇನು ನನ್ನ ಡಾರ್ಲಿಂಗ್ ನನ್ನನ್ನು ಇಷ್ಟು ಮೃದುವಾಗಿ ಕರೀತಿದ್ದಾಳಲ್ಲ ಎಂದು ಇನ್ನಷ್ಟು ಆಶ್ಚರ್ಯಪಡುತ್ತ ಈ ಹಲ್ವಾನ್ನ ಮಗಚುತ್ತಲೇ ನಿಂತೆ. ಇಲ್ಲದಿದ್ದರೆ ತಳಹಿಡಿದು ಕರಟಿ ಬಿಡುತ್ತೇಂತ ನನಗೆ ದಿಗಿಲು. ಕಣ್ಣು ಹನಿಯಾದವಳಂತೆ ಮತ್ತೊಮ್ಮೆ ಗದ್ಗದ ಕಂಠದಿಂದ ‘ರಸುಲ್’ ಎಂದಳು. ನಾನು ಮಗುಚುತ್ತಲೇ ಅವಳ ಕಡೆ ತಿರುಗಿದೆ. “ನಿನ್ನ ಜೊತೆ ನಾನು ಇನ್ನು ಇರಲ್ಲ ರಸುಲ್” ಎಂದು ತತ್ವಜ್ಞಾನಿಯ ಸಮಾಧಾನದಿಂದ ಏನೋ ನನಗೇ ಉಪಕಾರ ಮಾಡುತ್ತಿರುವವಳಂತೆ ಹೇಳಿದಳು. ನಾನು ಈ ಹೆಂಡತಿಯನ್ನು ಮಗುಚುತ್ತಲೇ ಸುಮ್ಮನೆ ನಿಂತೆ. ತಿಂಡಿಯಹದ ನೋಡಿ ಇದಕ್ಕೆ ದ್ರಾಕ್ಷಿ ಏಲಕ್ಕಿ ಸೇರಿಸಬೇಕೆಂಬುದನ್ನು ನೆನಪು ಮಾಡಿಕೊಂಡು. ಈಗ ರುಚಿ ನೋಡಿದರೆ ಜೇನ್ ಕಿಡಿಯಾಗುತ್ತಾಳೆಂದು ನನಗೆ ಗೊತ್ತು. ಆದ್ದರಿಂದ ಸುಮ್ಮನೆ ಅವಳನ್ನು ನೋಡುತ್ತಿದ್ದಂತೆ ಹೇಳಿದಳು. ‘ಮಗಚೋದನ್ನ ಬಿಟ್ಟು ಕೇಳು ರಸುಲ್. ನಮ್ಮ ಸಂಬಂಧ ನನಗೂ ಒಳ್ಳೇದಲ್ಲ, ನಿನಗೂ ಒಳ್ಳೇದಲ್ಲ. ನಿನ್ನಿಂದಾಗಿ ನನ್ನ ವ್ಯಕ್ತಿತ್ವದ ಬೆಳವಣಿಗೆ ನಿಂತುಹೋಗಿದೆ… ’ ಮುದ್ದಿನ ಜೇನ್ ಯಾವುದೋ ಕಾದಂಬರಿ ಓದುತ್ತಿರಬೇಕೆಂದು ನನಗೆ ಖಚಿತವಾಯಿತು. ‘ನಾನು ರಿಚರ್ಡ್‌‌ನನ್ನ ಪ್ರೀತಿಸ್ತೀದೀನಿ’ ಎಂದಳು. ನನ್ನ ಮೌನದಿಂದ ಅವಳಿಗೆ ಇನ್ನಷ್ಟು ಸಿಟ್ಟು ಬಂದು ಕಿರುಚಾಡಿಯಾಳೆಂದು ನಾನು ಹೇಳಿದೆ: ‘ಗೊತ್ತು ಡಾರ್ಲಿಂಗ್ ಜೇನ್’. ನನ್ನ ವಿಷಯ ನಿನಗೇನು ಗೊತ್ತು? ಜೇನ್ನೊಂದು ನಿಟ್ಟುಸಿರಿಟ್ಟಳು. ತಿಂಡಿಯ ರುಚಿ ನೋಡಿದೆ. ಹದವಾಗಲು ಇನ್ನೂ ಒಂದು ನಿಮಿಷ ಮಗಚಬೇಕು, ಪರವಾಗಿಲ್ಲ ಎಂದುಕೊಂಡು ಹೇಳಿದೆ: ‘ನನಗೆಲ್ಲ ಗೊತ್ತು ಜೇನ್. ಆವತ್ತು ಸಾಯಂಕಾಲ ನಾನು ಸಾಮಾನ್ಯವಾಗಿ ಮನೆಗೆ ಬರಬಾರದೆ ಹೊತ್ತಿನಲ್ಲಿ ಬಂದಾಗ ನೀನು ಮತ್ತು ರಿಚರ್ಡ್ ನನ್ನ ಹಾಸಿಗೆ ಮೇಲೆ ಒಟ್ಟಿಗೆ ಮಲಗಿದ್ದಿರಿ ಅಂತಲೂ ಗೊತ್ತು. ’ ತಮ್ಮ ಪ್ರಣಯ ಬಹಳ ಮೇಳುಮಟ್ಟದ್ದು ಎಂಬುದನ್ನು ಇಂಪ್ರೆಸ್ ಮಾಡಿ ಉದಾತ್ತ ಕಾರಣಕ್ಕಾಗಿ ನನ್ನನ್ನು ಬಿಡಬೇಕೆಂದಿದ್ದ ಜೇನ್‌ಗೆ ನಿರಾಸೆಯಾಗಿರಬೇಕು. ‘ನೀನೊಬ್ಬ ಸಿನಿಕ್’ ಎಂದು ಕೂಗಾಡಿದಳು. ‘ನೀನು ಅವನನ್ನು ಇಟ್ಟುಕೊ! ನಮ್ಮ ಹಾಸಿಗೆಯನ್ನೇ ಉಪಯೋಗಿಸು. ನಿನ್ನ ಜೊತೆಯಿರೋದು ನನಗೂ ಅಭ್ಯಾಸವಾಗಿದೆ; ನಿನಗೂ ನನ್ನ ಅಗತ್ಯ ಇದೆ’ ಎಂದು ಗ್ಯಾಸಿನ ಉರಿಯನ್ನು ತಗ್ಗಿಸಿದೆ. ಈ ಸಂಭಾಷಣೆ ಒಂದು ನಿಮಿಷಕ್ಕೂ ಹೆಚ್ಚಾದೀತೆಂದು ನನಗೆ ಭಯ. ಆದರೆ ಜೇನ್ ಸೂಟ್‌ಕೇಸ್‌ಹಿಡಿದು ಹೋಗೇಬಿಟ್ಟಳು. ನಾನೇ ಅವಳನ್ನು ಮದುವೆಯಾಗಿರ್ಲಿಲ್ಲ. ಇನ್ನು ರಿಚರ್ಡ್ ಆಗ್ತಾನೆ? ನೀವು ಬೆಲ್ ಮಾಡಿದಾಗ ಜೇನ್ ಬಂದಳೋ ಅಂತ ಆಸೆಯಾಯ್ತು. ಲೀಗಲ್ ಕಾಂಪ್ಲಿಕೇಶನ್ ಇದ್ದದ್ದರಿಂದ ಅವಳ ಹೆಸರಿಗೆ ನನ್ನ ಒಂದು ಸಾವಿರ ಪೌಂಡನ್ನು ವರ್ಗಾಯಿಸಿದ್ದೆ. ”

ರಸುಲ್ ತಿಂಡಿಯನ್ನು ಕೆಳಗಿಳಿಸಿ ನಮ್ಮೆದುರು ಬಂದು ಕೂತ. ರೂತ್ ಸಹಾನುಭೂತಿಯ ಮಾತಾಡುವ ಪ್ರಯತ್ನದಲ್ಲಿದ್ದುದನ್ನು ಕಂಡು ಹೇಳಿದ. “ಅಯ್ಯೋ ಬಿಡು ನನಗೆ ಹೀಗಾದದ್ದು ಮೊದಲ ಸಲವಲ್ಲ. ಎಷ್ಟೋ ರಿಲೀಫ್ ನಿಜ ಹೇಳೋದಾದ್ರೆ” ಎಂದ. ನಮಗೆ ತಟ್ಟೆಗಳಲ್ಲಿ ತಾನು ತಯಾರಿಸಿದ ಹಲ್ವವನ್ನು ಬಡಿಸಿ ಕೊಟ್ಟು ಕೂರುವ ಕೋಣೆಗೆ ಕರೆದುಕೊಂಡು ಹೋದ. ಮೇಜಿನ ಮೇಲಿದ್ದ ಒಂದು ರಾಶಿ ಕಾಗದ ತೋರಿಸಿ “ನನ್ನ ಆಟೋಬಯಾಗ್ರಫಿ ಬರೀತಿದೀನಿ” ಎಂದು ಒಂದರ ಹಿಂದೆ ಇನ್ನೊಂದರಂತೆ ತನ್ನ ಕತೆಗಳನ್ನು ಪ್ರಾರಂಭಿಸಿದ:

“ಇದೇ ಮೊದಲ ಸಲ ಅಲ್ಲ ಅಂದೆ. ರೂತ್ ನಂಥ ಸೆನ್ಸಿಟೀವ್ ಹುಡುಗಿಯರು ನನ್ನನ್ನು ಪ್ರೀತಿಸಿದ್ದೇ ಇಲ್ಲ. ನಾನು ಇಂಗ್ಲೆಂಡಿಗೆ ಓಡಿ ಬಂದಾಗ ನನಗೆ ಇಪ್ಪತ್ತು ವರ್ಷ. ಹಡಗೊಂದರಲ್ಲಿ ಮುಚ್ಚಿ ಕೂತು ನಾನು ಇಲ್ಲಿಗೆ ಬಂದದ್ದು. ಬಂದವನೇ ಮಸೀದಿಯೊಂದರಲ್ಲಿ ಅದನ್ನು ಕ್ಲೀನಾಗಿಡುವ ಕೆಲಸಕ್ಕೆ ಸೇರಿದೆ. ಬಿಳಿಹೆಣ್ಣು ಅಂದರೆ ಹುಚ್ಚು ಆಗ. ಒಂದು ಐರಿಷ್ ಹುಡುಗಿ – ನನ್ನ ಜೊತೆ ನೆಲ ಒರಸ್ತ ಇದ್ದದ್ದು ನನ್ನ ಜೊತೆ ಮಲಗಲಿಕ್ಕೆ ಶುರುಮಾಡ್ತು. ಮುಖದ ತುಂಬ ಮೊಡವೆ ಅದಕ್ಕೆ. ಯಾವಾಗಲೂ ಚಿವುಟಿಕೋತ ಇರೋದು. ಅವಳ ಅಮ್ಮ ಅವಳ ಅಪ್ಪನ ಮಗಳು. ಸಾರಿ ರೂತ್, ಇವೆಲ್ಲ ನಿಜ. ಅವಳ ಅಪ್ಪನಿಗೆ ಅವಳು ಮಗಳು ಪ್ಲಸ್ ಮೊಮ್ಮಗಳು. ಒಂದು ದಿನ ನನ್ನ ಬಿಟ್ಟು ಓಡಿದಳು – ಪ್ರಾಯಶಃ ಅವಳ ಅಣ್ಣನ ಜೊತೆ ಇರಲಿಕ್ಕೆ. ಇದನ್ನೆಲ್ಲ ಜಾರ್ಜ್ ಬರ್ನಾಡ್‌ಶಾಗೆ ನಾನು ಬರೆದು ತಿಳಿಸಿದ್ದೆ. ನಿನ್ನನ್ನು ನೋಡಬೇಕು ಅಂತ ಬರೆದರೆ ನೋ ಅಂತ ಬರೆದ. ತನ್ನ ಫೋಟೋ ಒಂದರ ಮೇಲೆ ಆಟೋಗ್ರಾಫ್ ಮಾಡಿ ಕಳಿಸಿದ. ನನಗೆ ಯಾಕೆ ಶಾ ಅಷ್ಟು ಇಷ್ಟವಾಗಿದ್ದಾಂತ ಈಗ ನನಗೆ ಅರ್ಥವಾಗ್ತಿದೆ. ನಾವಿಬ್ಬರೂ ಎಕ್ಸಿಬಿಷನಿಸ್ಟರು”.

ರಸುಲ್‌ನನ್ನು ನಾನು ಆಗಾಗ ಹೋಗಿ ನೋಡುತ್ತಿದ್ದೆ. ನಾನು ಒಬ್ಬನೇ ಹೋದಾಗಲೆಲ್ಲ ಅವನು ರೂತ್ ಬಗ್ಗೆ ಮಾತಾಡುತ್ತಿದ್ದ. ಕ್ಯಾನ್‌ಗಳಲ್ಲಿ ಬಿಯರನ್ನು ತಂದು ಈರುಳ್ಳಿ ಪಕೋಡ ಮಾಡುತ್ತಿದ್ದ. ಹಿತ್ತಲಿನಲ್ಲಿ ಕೂತು ಹರಟುತ್ತಿದ್ದೆವು.

“ಖಾನ್ ಜೊತೆ ರೂತ್ ಇನ್ನೂ ಕ್ಲಿಕ್ ಆಗ್ದೇ ಇರೋದು ಆಶ್ಚರ್ಯ”.

ರಸುಲ್ ಮಾತು ನನಗೆ ಅರ್ಥವಾಗಿರಲಿಲ್ಲ.

“ಅಂದರೆ?” ಎಂದೆ.

“ಹಿಂದೂಸ್ತಾನಿ ಕಲಿಸೋಕೆ ನಾನೇ ಅವನನ್ನ ಅವಳಿಗೆ ಪರಿಚಯ ಮಾಡಿಸಿದ್ದು. ನನ್ನ ಉದ್ದೇಶ ಅವಳು ಅವನನ್ನ ಪ್ರೀತಿಸಿದರೆ ಒಳ್ಳೇದು ಅಂತ. ”

ನನಗೆ ಅವನ ಮಾತು ಇಷ್ಟವಾಗಲಿಲ್ಲವೆಂಬುದನ್ನು ಊಹಿಸಿ ರಸುಲ್ ಹೇಳಿದ:

“ನಿನನಗೆ ಗೊತ್ತಿಲ್ಲ. ಅಸಾಧ್ಯವಾದದ್ದನ್ನೇ ರೂತ್ ಬಯಸೋದು. ದಿನೇಶ್ ದುರ್ಬಲ ಮನಸ್ಸಿನ ನಾಚಿಕೆ ಸ್ವಭಾವದ ಹುಡುಗ. ಆದ್ದರಿಂದ ರೂತ್ ಅವನನ್ನ ಪ್ರೀತಿಸಿದಳು. ಅವಳೇನಾದರೂ ಅವನಿಗಾಗಿ ಇಂಡಿಯಾಕ್ಕೆ ಹೋದರೆ ದುರಂತವಾಗುತ್ತೆ. ಬದಲು ದಿನೇಶ್ ಸ್ವಭಾವದವನೇ ಆದ ಖಾನನ್ನು ಅವಳು ಪ್ರೀತಿಸಿದರೆ, ಈ ಪ್ರೀತೀನೂ ವಿಫಲವಾಗಿ ಅವಳು ಪಕ್ವವಾಗುತ್ತಾಳೆ”

ಆಮೇಲೆ ತಿಳಿಯಿತು: ರಸುಲ್ ಹೀಗೆ ಯೋಚಿಸುತ್ತಾನೆಂದು ರೂತ್‌ಗೆ ಗೊತ್ತು. ಆದರೂ ಅವಳಿಗೆ ರಸುಲ್ ಎಂದರೆ ಪ್ರೀತಿ. ನನಗಿಂತ ಅವನೇ ಅವಳಿಗೆ ಹೆಚ್ಚು ಆಪ್ತ. ತನಗೆ ಮುಟ್ಟಿನ ಸಮಯದಲ್ಲಿ ತುಂಬ ನೋವಾಗುತ್ತದೆಂದು ರೂತ್ ನನಗೆ ಹೇಳಿರಲಿಲ್ಲ; ಅವನಿಗೆ ಹೇಳಿದ್ದಳು. ಇಷ್ಟಾದರೂರೂತ್‌ಗಾಗಲೀ ನನಗಾಗಲೀ ರಸುಲ್ ವ್ಯವಹಾರಗಳಲ್ಲಿ ಸಹಾನುಭೂತಿಯಿರಲಿಲ್ಲ. ಪರಿಚಯವಾದ ಮೇಲೆ ಒಂದು ದಿನ ಅವನು ತೋರಿಸಿದ ಅವನ ಅನೇಕ ಲೆಟರ್ ಪ್ಯಾಡುಗಳಿಂದಲೇ ಅವನ ಶೇಡಿ ವ್ಯವಹಾರಗಳನ್ನೆಲ್ಲ ಊಹಿಸಿದ್ದೆ. ಒಂದರಲ್ಲಿ ರಸುಲ್ ಟ್ರಾವಲ್ ಏಜೆಂಟ್; ಇನ್ನೊಂದರಲ್ಲಿ ಇಮಿಗ್ರೇಶನ್ ಕನ್‌ಸಲ್ಟೆಂಟ್ (ಅಂದರೆ ಸುಳ್ಳು ಸರ್ಟಿಫಿಕೇಟು ಒದಗಿಸೋ ಕೆಲಸ); ಮತ್ತೊಂದರಲ್ಲಿ ಎಕ್ಸ್‌ಪೋರ್ಟ್ ಇಂಪೋರ್ಟ್ (ಕಾಳ ಸಂತೆಯಲ್ಲಿ ಪೌಂಡಿನ ಮಾರಾಟ; ಬಂಗಾರದ ಮಾರಾಟ ಇತ್ಯಾದಿ); ಮಗದೊಂದರಲ್ಲಿ ಓಲ್ಡ್ ಫರ್ನಿಚರ್ ಡೀಲರ್, ಆಂಟಿಕ್ ಡೀಲರ್, ಹಿಂದೀ ಫಿಲ್ಮ್ ಡಿಸ್ಟ್ರಿಬ್ಯೂಟರ್ ಇತ್ಯಾದಿ. ರಸುಲ್‌ಗೆ ಈ ಬಗ್ಗೆ ಲಜ್ಜೆಯಿರಲಿಲ್ಲ. ಆದರೆ ಮನುಷ್ಯ ಧಾರಾಳ. ಇಂಡಿಯಾ, ಪಾಕಿಸ್ತಾನಗಳಿಂದ ಬಂದವರಿಗೆ ಕಣ್ಣು ಮುಚ್ಚಿ ಹಣ ಕೊಡುತ್ತಿದ್ದ. ಅವನಿಂದ ಸಾಲ ಪಡೆಯದ ಇಂಡಿಯನ್ ವಿದ್ಯಾರ್ಥಿಗಳೇ ಕಮ್ಮಿ.

ನಾನು ರಸುಲ್ ಹೇಳಿದ್ದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಲಿಲ್ಲ. ರೂತ್ ಇಂಡಿಯಾ, ಚೀನಾಗಳ ಬಗ್ಗೆ ಓದುತ್ತಿದ್ದ ಪುಸ್ತಕಗಳನ್ನು ನೋಡಿದ್ದ ನಾನು ರಸುಲ್‌ಗೆ ತಿಳಿಯದೇ ಇರುವುದೂ ಇದೆ ಎಂದು ಸುಮ್ಮನಾದೆ. ಆದರೆ ಇನ್ನಷ್ಟು ಬಿಯರನ್ನು ನನಗೆ ಒತ್ತಾಯ ಮಾಡುತ್ತಾ ರಸುಲ್ ಹೇಳಿದ:

“ನೀನಾದರೂ ರೂತ್‌ನನ್ನು ಪ್ರೀತಿಸಬಾರದೆ? ಅವಳ ದುರಂತ ಅಂದರೆ ನಿಮ್ಮಂಥವರೇ ಅವಳಿಗೆ ಗಂಟು ಬೀಳೋದು. ಅವಳು ಹೆಣ್ಣು ಅನ್ನೋದನ್ನ ನೀವುಯಾರೂ ತಿಳಿದುಕೊಂಡಿಲ್ಲ. ”

ನಾನು ನಕ್ಕೆ. ಇಂಥ ವಿಷಯಗಳಲ್ಲಿ ರಸುಲ್ ತಿಳಿದದ್ದಕ್ಕಿಂತ ರೂತ್ ಬೇರೆಯೆಂದು ನನ್ನ ನಂಬಿಕೆ. ಬೇಸಿಗೆಯಲ್ಲಿಒಂದು ದಿನ ನಾನು ರೂತ್‌ನ ಪ್ಲ್ಯಾಟಿಗೆ ಹೋಗಿದ್ದೆ. ಬಾಗಿಲು ತೆರೆದಿತ್ತಾದ್ದರಿಂದ ಸೀದ ಒಳಗೆ ಹೋದೆ. ಕಿಟಕಿಗಳನ್ನೆಲ್ಲ ತೆರೆದಿದ್ದಳು. ಬಿಸಿಲಿಗೆ ಮೈಚೆಲ್ಲಿ ಚಾಪೆಯ ಮೇಲೆ ಮಲಗಿದ್ದಳು. ಸಂಪೂರ್ಣ ಬೆತ್ತಲೆಯಾಗಿದ್ದಳು. ನಾನು ‘ಸಾರಿ’ ಎಂದು ಮುಖ ತಿರುಗಿಸಿದೆ. ರೂತ್ ‘ಪರವಾಗಿಲ್ಲ ಬಾ’ ಎಂದು ಹಾಗೇ ಮಲಗಿದ್ದು ಟವಲನ್ನು ಮೈಮೇಲೆ ಎಳೆದುಕೊಂಡಳು. ನಿರ್ವಿಕಾರದಿಂದ ‘ಎಕ್ಸಿಟರ್‌ನಿಂದ ಯಾವಾಗ ಬಂದಿ?’ ಎಂದಳು. ಅವಳನ್ನು ನೋಡಿ ಎಷ್ಟು ಸಣ್ಣ ಹುಡುಗಿಯ ಕತ್ತು ಭುಜ ಇವಳವು ಎನ್ನಿಸಿತು. ಕ್ರಾಂತಿಯ ಬಗ್ಗೆ ನಿದ್ದೆಗೆಟ್ಟು ಓದುತ್ತಿರುವವಳು ಇವಳೇ ಅನ್ನಿಸಿತು. ಇಲ್ಲ – ಕಾಮದ ಒಂದು ವಸ್ತುವೆಂದು ಮಾತ್ರ ರೂತ್‌ನನ್ನು ಪರಿಗಣಿಸುವುದು ಸಾಧ್ಯವೇ ಇರಲಿಲ್ಲ. ಆದರೆ ಹಾಗೆ ಯೊಚಿಸಬಲ್ಲ ರಸುಲ್ ಅವಳಿಗೆ ಪ್ರಿಯ ಸ್ನೇಹಿತನಾಗಿದ್ದ. ನನಗೂ ರಸುಲ್‌ನ ಮಾತಿನಿಂದ ನಿಜವಾಗಿ ಶಾಕ್ ಆಗಿರಲಿಲ್ಲ.

ತನ್ನ ಕಾರಿನಲ್ಲಿ ನನ್ನನ್ನು ಮನೆಗೆ ಬಿಡಲು ಹೋಗುವಾಗ ದಾರಿಯಲ್ಲಿ ರಸುಲ್ “ನಿನಗೆ ಅವಸರವಿಲ್ಲ ತಾನೆ?” ಎಂದು ಸ್ಟ್ರಾಟ್‌ಫರ್ಡ್ ಆನ್ ಏವನ್ನಿಗೆ ಹೋಗುವ ದಾರಿಯಲ್ಲಿ ಕಾರನ್ನು ನಡೆಸಿದ. ಬೇಸಿಗೆಯ ರಾತ್ರೆಯಾದ್ದರಿಂದ ಒಂಬತ್ತು ಗಂಟೆಯಾದರೂ ಬೆಳಕಿತ್ತು. ಹಳ್ಳಿಯೊಂದರ ಹತ್ತಿರ ಕಾರು ನಿಲ್ಲಿಸಿ ಮರದ ಕೆಳಗೆ ಕೂತೆವು. ದಾರಿಯಲ್ಲಿ ಕಟ್ಟಿಸಿ ತಂದಿದ್ದ ಫಿಶ್ ಅಂಡ್ ಚಿಪ್ಸ್‌ನ್ನು ಬಿಚ್ಚಿ, ವೈನ್ ಬಾಟಲನ್ನು ತೆರೆದು ಎರಡು ಗಾಜುಗಳಿಗೆ ಸುರಿದು ಹಾವಭಾವ ಸಹಿತ ಕಥೆ ಪ್ರಾರಂಭಿಸಿದ.

ಅವನು ಆಗ ಹದಿನೆಂಟು ವರ್ಷದ ಹುಡುಗ. ಮನೆಯಲ್ಲಿ ಚಿಕ್ಕ ತಾಯಿಯ ಕಾಟ. ಹಿಂದೂ ಹುಡುಗರ ಸಹವಾಸದಲ್ಲಿ ಕಾಳಿಯ ಬಗ್ಗೆ ಏನೇನೋಕೇಳಿದ್ದರಿಂದ ಕಾಳಿಯನ್ನು ಪ್ರತ್ಯಕ್ಷ ಮಾಡಿಕೊಳ್ಳಬೇಕೆಂಬ ಉಮೇದು ಹುಟ್ಟಿತ್ತು. ಮನೆ ಬಿಡುವುದು ಬೇರೆ ಬೇಕಿತ್ತು. ಇಬ್ಬರು ಹಿಂದೂ ಹುಡುಗರ ಜೊತೆ ಎರಡು ದಿನ ಹಳ್ಳಿಗಳ ಮೂಲಕ ನಡೆದು ಹೋಗಿ ಗುಡ್ಡವೊಂದರ ಮೇಲಿದ್ದ ಕಾಳಿಗುಡಿನ್ನು ಸೇರಿದರು. ಇವನು ಮುಸ್ಲಿಂ ಎನ್ನುವುದು ಇಬ್ಬರು ಹುಡುಗರಿಗೆ ಬಿಟ್ಟರೆ ಹತ್ತಿರದ ಹಳ್ಳಿಯವರಿಗೆ ತಿಳಿಯದು. ಗುಡಿಯ ಎದುರು ಧ್ಯಾನದಲ್ಲಿ ಮೂವರೂ ಕೂತರು. ಹಳ್ಳಿಯವರು ತರುವ ಹಣ್ಣು ಹಂಪಲು ಅಥವಾ ಅಕ್ಕಿ ಬೇಯಿಸಿಕೊಂಡು ಊಟ. ಒಂದು ರಾತ್ರೆ ಉಳಿದಿಬ್ಬರು ಮಲಗಿದಾಗ ತಾನೊಬ್ಬನೇ ಉಚ್ಚೆ ಹೊಯ್ಯಲೆಂದು ಕೆರೆಯೊಂದರ ಬಳಿ ಕೂತಿದ್ದ. ತಾನು ಕೂತಿದ್ದನ್ನು ನೋಡಿದ ಸುಂದರವಾದೊಂದು ಹೆಣ್ಣು ಕೆರೆಯ ಅಂಚಿಗೆ ಹೋಗಿ ಬೀಳುವಂತೆ ಬಗ್ಗಿನಿಂತಳು. ಆದರೆ ಬೀಳಲಿಲ್ಲ. ತಾನು ನೋಡುತ್ತಿದ್ದೇನೆಂದು ಅವಳಿಗೆ ಗೊತ್ತು. ಬೀಳದಂತೆ ತಾನು ತಡೆಯಲೆಂಬ ಆಸೆ. ಮಧ್ಯರಾತ್ರೆ ನಿರ್ಜನ ಪ್ರದೇಶ. ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ ಸುಂದರ ಯುವತಿ. ಕಾಳಿಯನ್ನು ಪ್ರತ್ಯಕ್ಷ ಮಾಡಿಕೊಳ್ಳಲು ತಪಸ್ಸಿನಲ್ಲಿದ್ದ ತಾನು. ಎಲ್ಲ ಅದ್ಭುತ ರಮ್ಯ ಕಥೆಯಂತಿತ್ತು. ತಾನು ಸೀದ ಅವಳಿದ್ದಲ್ಲಿಗೆ ಹೋಗಿ ಕೊಸರಿಕೊಳ್ಳುತ್ತಿದ್ದ ಹೆಣ್ಣನ್ನು ಬಲಾತ್ಕಾರವಾಗಿ ಎತ್ತಿ ಮರವೊಂದರ ಬುಡಕ್ಕೆ ಒಯ್ದ. ಯಥಾಪ್ರಕಾರ ಕಾಡುವ ಅತ್ತೆ. ಇಷ್ಟವಿಲ್ಲದ ಮದುವೆ ಇತ್ಯಾದಿ ಕಥೆಯನ್ನು ಅಳುತ್ತ ಹೇಳಿದಳು. ಸಮಾಧಾನ ಪಡಿಸಲು ತಬ್ಬಿದ. ಮೈಯೆಲ್ಲ ಸವರಿದ. ಅಳುತ್ತಲೇ ಅವಳು ತನ್ನ ವಸ್ತ್ರಗಳನ್ನು ಒಂದೊಂದಾಗಿ ಬಿಚ್ಚಿದಳು. ಒಲ್ಲದ ಗಂಡನಾದರೂ ಅವನಿಂದ ಅನುಭವ ಪಡೆದಿದ್ದ ಹೆಣ್ಣು. ಅವಳು ದುಃಖಿಸುತ್ತ ತಾನು ಸಂತೈಸುತ್ತ ಪರಸ್ಪರ ರುಚಿ ನೋಡಿದ್ದಾಯ್ತು. ಅನುಕಂಪ ಹಾಗೆ ಕ್ರಮೇಣ ಮೈಗೆ ಮೈಯನ್ನು ಹತ್ತಿರ ತರುತ್ತ ಪ್ರಣಯವಾಗಿ ಬಿಡುವ ಸುಖಕ್ಕಿಂತ ಮಿಗಿಲಾದ್ದಿಲ್ಲ. ಆಮೇಲಿಂದ ತನ್ನ ದುಃಖವನ್ನು ಈ ಪರಿಯಲ್ಲಿ ತೋಡಿಕೊಳ್ಳಲು ಮಾರನೇ ದಿನವೂ ಬಂದಳು. ಅದರ ಮಾರನೇ ದಿನ ತಾನೇ ಅವಳ ಮನೆ ಹಿತ್ತಲಿಗೆ ಹೋದ. ಇದು ಉಳಿದಿಬ್ಬರಿಗೆ ಗೊತ್ತಾಯಿತು. ಜಗಳವಾಯಿತು. ಮನೆಗೆ ಹಿಂದಿರುಗಿದ್ದಾಯಿತು. ಬೆನ್ನಿನ ಮೇಲೆ ಅಪ್ಪನ ಏಟು ಬಿದ್ದದ್ದಾಯಿತು.

ರಸುಲ್ ಹೇಳುವ ಕಥೆಯಲ್ಲೆಲ್ಲ ಎಷ್ಟು ಸತ್ಯ, ಎಷ್ಟು ಸುಳ್ಳು ಎಂಬುದು ಅಮುಖ್ಯ. ಅವನು ಜನ್ಮತಃ ಪರ್‌ಫಾರ್ಮರ್. ರುಚಿಯಾಗಲು ಯಥೇಚ್ಛ ಉಪ್ಪುಕಾರ ಸೇರಿಸಲು ಅವನು ಹಿಂಜರಿಯುವವನಲ್ಲ. ತಾನು ಹೇಳಿದ್ದನ್ನೆಲ್ಲ ನಂಬಲೇಬೇಕೆಂಬ ಒತ್ತಾಯವಿಲ್ಲ. ಖುಷಿ ಪಟ್ಟರೆ ಸಾಕು, ಅವನು ಕೃತಾರ್ಥ. ಈ ಕಥೆಯನ್ನು ಅವನು ರೂತ್‌ಗೂ ಹೇಳಿದ್ದನೆಂಬುದು ಆಮೇಲೆ ನನಗೆ ತಿಳಿಯಿತು.

ವೈನ್ ಖಾಲಿಯಾದ ಮೇಲೆ ಇಬ್ಬರೂ ಹಿಂದಕ್ಕೆ ಬಂದೆವು. ದಾರಿಯಲ್ಲಿ ನನಗೆ ರೂತ್‌‌ನನ್ನು ಕೂಡಬೇಕೆಂದು ಒಂದು ಕ್ಷಣ ಅನ್ನಿಸಿದ್ದು ನಿಜ. ಪಕ್ಕದಲ್ಲಿ ಕೂತು ಡ್ರೈವ್ ಮಾಡುತ್ತಿದ್ದ ರಸುಲ್‌ನ ತ್ರಿಕೋಣಾಕಾರದ ಮುಖವನ್ನು ನೋಡಿದೆ. ವಾಸನೆ ಎಣ್ಣೆಯನ್ನು ತಲೆಗೆ ಹಚ್ಚಿದ ರಸುಲ್ ಸಿಹಿಯಾದ ವಾಸನೆಯ ಕೊಳೆಯುವ ಪದಾರ್ಥ ಎನ್ನಿಸಿತು. ನಾವು ಕೊಳೆಯಬಹುದಾದಲ್ಲೆ ನಮ್ಮ ಪರಮ ಸುಖದ ಉಗಮವಿದ್ದರೂ ಇರಬಹುದು. ಗಟ್ಟಿಯಾಗುವ ಪ್ರಯತ್ನವನ್ನು ಹಠದಿಂದ ಬಿಡದ ನನಗೂ ರೂತ್‌ಗೂ ನಮ್ಮ ಸುಖದ ವ್ರಣಗಳನ್ನು ತೋರಿಸಿ ಸ್ವತಂತ್ರಗೊಳಿಸುವುದೇ ರಸುಲ್‌ನ ಗುರಿಯಿರಬಹುದು ಎನ್ನಿಸಿ ಭಯವಾಯಿತು.

ನಾನಿದ್ದ ಪ್ಲ್ಯಾಟಿನ ಹತ್ತಿರ ಕಾರು ನಿಲ್ಲಿಸಿ ರಸುಲ್ ಗಂಭೀರವಾಗಿ ಹೇಳಿದ:

“ನಾನು ಮುದುಕನಾಗಿ ಬಿಟ್ಟೆ. ನೀನು ಮನಸ್ಸು ಮಾಡಿದರೆ ರೂತ್‌ನನ್ನು ಬಚಾವು ಮಾಡಬಹುದು. ಅವಳು ಮದುವೆಯಾಗದ ಹುಡುಗಿ ಎನ್ನೋದನ್ನ ನಾನು ಒಪ್ತೇನೆ. ಆದರೆ ದಿನೇಶ್ ಮತ್ತು ಕ್ರಾಂತಿ ಖಂಡಿತ ಅವಳ ಭವಿಷ್ಯವಾಗಲಾರದು”. ನನಗೆ ಕಸಿವಿಸಿಯಾಗುವಂತೆ ರಸುಲ್ ಮಾತಾಡಿದ್ದನೆಂಬುದು ಸುಳ್ಳಲ್ಲ.

ಭಾಗ: ಮೂರು

ಆ ದಿನ ರಾತ್ರೆ ಇಂಡಿಯಾಕ್ಕೆ ಹೋಗುವುದಕ್ಕೆ ಪೂರ್ವಭಾವಿಯಾಗಿ ರೂತ್ ಕೊಟ್ಟ ಫೇರ್‌ವೆಲ್ ಪಾರ್ಟಿ ದೊಡ್ಡ ರಾದ್ದಾಂತದಲ್ಲಿ ಕೊನೆಯಾಯಿತು. ನಾನು ರಸುಲ್ ಕೈಕುಲುಕಿ, ರೂಮಲ್ಲಿದ್ದ ಎಲ್ಲರಿಗೂ ಹಲೋ ಹಲೊ ಎಂದೆ. ಜೆನ್ನಿ ಮತ್ತು ಎಲಿಜಬೆತ್ ಅಲಿವ್ ಮತ್ತು ಚೀಸ್‌ಗಳ ತಟ್ಟೆಗಳನ್ನು ಎಲ್ಲರಿಗೂ ಒಡ್ಡುತ್ತ ಓಡಾಡುತ್ತಿದ್ದರು. ಯೂನಿವರ್ಸಿಟಿ ಯೂನಿಯನ್ನಿನ ಪ್ರತಿ ನೃತ್ಯಕ್ಕೂ ಹಾಜರಾಗುತ್ತಿದ್ದ ಹುಡುಗಿಯರು ಇವರು. ಕ್ರಾಂತಿಯಲ್ಲಿ ಭಾಗಿಯಾಗಲು ಸನ್ನಾಹವಾಗುತ್ತಿದ್ದ ರೂತ್‌ಗೆ ಇಂಥ ಗೆಳತಿಯರೂ ಇದ್ದರೆಂದು ಊಹಿಸುವುದೂ ಕಷ್ಟ. ಜಾನ್ ಜೆನ್ನಿಯ ಬೆನ್ನು ಹಿಡಿದಿದ್ದ. ಕಾಶ್ಮೀರಿ ಟೋಪಿ ಹಾಕಿಕೊಂಡಿದ್ದ ಎತ್ತರವಾದ ಸುಂದರ ಬಲಿಷ್ಠ ಯುವಕ, ಬಹಳ ನಿಷ್ಠೆಯಿಂದ ರೂತ್‌ಗೆ ಹಿಂದೂಸ್ತಾನಿ ಕಲಿಸಿದ್ದ. ರೂತ್ ಅವನಿಗೆ ಸ್ವೆಟರ್, ರಿಕಾರ್ಡ್‌‌ಪ್ಲೇಯರ್‌ಗಳನ್ನು ಪ್ರೆಸೆಂಟ್ ಮಾಡಿದ್ದಳು. ಖಾನ್‌ಸ್ನೇಹಪರ ವ್ಯಕ್ತಿ; ಆದರೆ ಗಂಟು ಬೀಳುವ ವಾಚಾಳಿ… ‘ಪ್ಲೈಯಿಂಗ್ ಡಚ್‌ಮನ್’ ರೆಕಾರ್ಡನ್ನು ಬಿಟ್ಟು ಉಳಿದೆಲ್ಲವನ್ನೂ ರೂತ್ ಅವನಿಗೆ ಕೊಡುವೆನೆಂದು ನನಗೆ ಹೇಳಿದ್ದಳು. ಅವನು ಹಾಕಿಕೊಂಡಿದ್ದ ಸ್ವೆಟರ್ ರೂತ್‌ಕೊಟ್ಟಿದ್ದೆಂದು ನನಗೇ ಅವನು ಹತ್ತು ಸಾರಿಯಾದರೂ ಹೇಳಿರಬೇಕು. ಆದ್ದರಿಂದ ರಿಕಾರ್ಡ್‌ಗಳನ್ನು ಪ್ರೆಸೆಂಟ್ ಮಾಡಬೇಕೆಂದಿರುವುದನ್ನು ಮೊದಲೇ ಅವನಿಗೆ ಹೇಳಬೇಡ ಎಂದು ರೂತ್‌ಗೆ ನಾನು ಸೂಚಿಸಿದ್ದೆ. ರಸುಲ್ ಜೊತೆ ಮಾತಾಡುತ್ತ ನಿಂತಿದ್ದ ನ್ಯೂಲೆಫ್ಟ್ ಚಳುವಳಿಯ ರೂಬೆನ್ಸ್‌ಮತ್ತು ಸಿಲ್ವರ್ ಆಕೆಯ ಉಳಿದೆಲ್ಲ ಸಾಮಾನನ್ನೂ ಮಾರುವ ವ್ಯವಸ್ಥೆ ಮಾಡಿದ್ದರು. ರೂತ್‌ನ ಫರ್ನೀಚರನ್ನು ಅವಳು ಬಯಸಿದ್ದಕ್ಕಿಂತ ಹೆಚ್ಚು ಬೆಲೆ ಕೊಟ್ಟು ರಸುಲ್ ಕೊಂಡಿದ್ದ. “ನಿನಗೆ ಯಾವುದರ ಬೆಲೆಯೂ ಗೊತ್ತಿಲ್ಲ. ಪೆದ್ದು ಹುಡುಗಿ. ನನಗೆ ಲಾಭವೇ ಆಗಿದೆ. ನಿನಗೆ ಡೆಲ್ಲಿ ಸ್ಕೂಲ್‌ಕೊಡೊ ಸಂಬಳ ಇಂಡಿಯಾದಲ್ಲಿ ಬದುಕಲು ಯಾವ ಮೂಲೆಗೆ ಸಾಕು?” ಎಂದು ಗದರಿಸಿದ್ದ. ಕಡಿಮೆ ಬೆಲೆಗೆ ಕುವಾಯತ್ ಏರ್ ಲೈನ್ಸ್‌ನಲ್ಲಿ ಅವಳ ಪ್ರಮಾಣ ಏರ್ಪಡಿಸಿದ್ದ. ಅವಳು ಉಳಿಸಿದ್ದ ಪೌಂಡ್‌ಗಳಿಗೆ ಕಾಳಸಂತೆಯಲ್ಲಿ ರೂಪಾಯಿ ಕೊಡಿಸುತ್ತೇನೆಂದು ರಸುಲ್‌ನ ಒತ್ತಾಯವನ್ನು ಮಾತ್ರ ಅವಳು ನಗುತ್ತಲೇ ನಿರಾಕರಿಸಿಬಿಟ್ಟಿದ್ದಳು.

ಆ ರೂಮಿನಲ್ಲಿದ್ದ ಇಬ್ಬರು ದಂಪತಿಗಳು ನನಗೆ ಪರಿಚಯವಿರಲಿಲ್ಲ – ರೂತ್‌ನ ನೆರೆಹೊರೆಯವರು. ‘ಕಲರ್ಡ್’ ಜನರ ಜೊತೆ ಪ್ರಯತ್ನಪೂರ್ವಕವಾಗಿ ಸೌಜನ್ಯದಿಂದ ವರ್ತಿಸಲು ಅವರು ನಿರ್ಧರಿಸಿ ಬಂದಿರುವಂತೆ ಕಂಡಿತು. ಸುಮಾರು ಮಧ್ಯಪ್ರಾಯದ ಹೆಂಗಸೊಬ್ಬಳು – ರಸುಲ್‌ನ ಪರಿಚಯದವಳು – ಅಡಿಗೆ ಮನೆಯಿಂದ ಬಿಸಿ ಬಿಸಿ ಪಂಚನ್ನು ತಂದು ವೈನ್ ಶೆರಿ ಬೇಡಿದವರಿಗೆ ಸುರಿಯುತ್ತಿದ್ದಳು. ವಿಲಾಯತ್ ಖಾನಿನ ‘ತಾಜ್‌ನಲ್ಲೊಂದು ರಾತ್ರೆ’ ಮುದ್ರಿಕೆಯ ಸಿಹಿಯಾದ ಆಲಸ್ಯಕ್ಕೆ ಕಿವಿಗೊಡಲು ಯತ್ನಿಸುತ್ತ ಇಂಗ್ಲಿಷ್ ದಂಪತಿಗಳು ಎಲ್ಲಿ ಪ್ರತಿಕ್ರಿಯಿಸುವುದು ಸರಿ ತಿಳಿಯದೆ ತಲೆ ಹಾಕುತ್ತ ಗೊಂಬೆಗಳಂತೆ ಕೂತಿದ್ದರು.

ಏನೋ ಮಾತಾಡುತ್ತಿದ್ದ ರಸುಲ್ ‘ಕ್ಷಮಿಸಿ’ ಎಂದು ರೂಬೆನ್ಸ್, ಸಿಲ್ವರ್‌ರಿಗೆ ಹೇಳಿ ನನ್ನನ್ನು ಒಂದು ಮೂಲೆಗೆ ಕರೆದುಕೊಂಡು ಹೋದ. ಗುಟ್ಟಾಗಿ ಹೇಳಿದ:

“ನಾನು ಊಹಿಸಿದಂತೆಯೇ ಆಯಿತು. ದಿನೇಶ್‌ಗೆ ರೂತನ್ನ ಮದುವೆಯಾಗೋದು ಇಷ್ಟವಿಲ್ಲ. ”

ಅದೊಂದೇ ಕಾರಣಕ್ಕಾಗಿ ರೂತ್ ಇಂಡಿಯಾಕ್ಕೆ ಹೋಗ್ತಿರೋದಲ್ವಲ್ಲ ಎಂದು ರಸುಲ್‌ಗೆ ನಾನು ಹೇಳೋಣವೆಂದಿದ್ದೆ. ಆದರೆ ರಸುಲ್‌ಮುಂದೆ ಹೇಳಿದ್ದು ಕೇಳಿ ನನಗೆ ಆಶ್ಚರ್ಯವಾಯಿತು:

“ಒಳ್ಳೇದೇ ಆಯ್ತು ಬಿಡು. ರೂತ್ ಕೇಬಲ್ ತಲ್ಪಿದ್ದೇ ಅವನೇ ಇಲ್ಲಿಗೆ ಬಂದು ಬಿಟ್ಟಿದ್ದಾನೆ. ಇವತ್ತು ಸಂಜೆ ನಾನು ಇಲ್ಲಿಗೆ ಎಲ್ಲರಿಗಿಂತ ಮೊದಲು ಬಂದೆ. ಆಗ ಅವನೂ ಕೈಯಲ್ಲೊಂದು ಸೂಟ್‌ಕೇಸ್‌ಹಿಡಿದು ಇಲ್ಲಿ ಹಾಜರಾದ. ಸ್ನಾನ ಮಾಡ್ತ ಇದಾನೆ. ”

ನನಗಾದ ಗಾಬರಿಯನ್ನು ರಸುಲ್ ಗಮನಿಸಿ ಹೇಳಿದ:

“ಅವನು ಬಂದಿರೋದು ಎಲ್ಲರಿಗೂ ಗೊತ್ತು. ಆದರೆ ಯಾಕೆ ಅಂತ ಪ್ರಾಯಶಃ ಗೊತ್ತಿಲ್ಲ. ”

ಈಚೆಗೆ ಎರಡು ತಿಂಗಳಿಂದ ಕುಡಿಯುವುದು ಬಿಟ್ಟಿದ್ದ ರೂತ್ ಕೈಯಲ್ಲಿ ವೈನ್ ಹಿಡಿದು ಸಿಲ್ವರ್ ಹತ್ತಿರ ನಿಂತಿದ್ದಳು. ಅವನು ಏನೋ ಹೇಳುತ್ತಿದ್ದ: ಇವಳು ತಲೆ ಹಾಕುತ್ತಿದ್ದಳು. ನಿಯೋಕಲೋನಿಯಲಿಸಂ ಅನ್ನು ಚರ್ಚಿಸುತ್ತಿದ್ದರೂ ಇರಬಹುದು. ಮತ್ತೆ ಜಾರಿದ್ದ ಸೆರಗಿನ ಪರಿವೆ ಅವಳಿಗಿರಲಿಲ್ಲ. ಪಾರ್ಟಿಯ ಸಂತೋಷ ಕೆಡಬಾರದೆಂಬ ಪ್ರಯತ್ನವೇ? ನನಗೆ ಹೆದರಿಕೆಯಾಯಿತು. ಸಿಗರೇಟ್ ಲೈಟರಿಂದ ನನ್ನ ಸಿಗರೇಟು ಹಚ್ಚುತ್ತ ರಸುಲ್ ನಿರ್ಭಾವದಿಂದ ಹೇಳಿದ:

“ರೂತ್ ಈ ಬಗ್ಗೆ ಮಾತಾಡಲೇ ಇಲ್ಲ. ಟ್ರಾವಲ್ ಕ್ಯಾನ್ಸಲ್ ಮಾಡಿಸಬೇಕು – ಅದು ಸುಲಭ. ರೂತ್ ಕೊಟ್ಟ ರಾಜೀನಾಮೇನ್ನ ಪ್ರೊಫೆಸರ್ ಒಪ್ಪಿಕೊಳ್ಳಲಿಲ್ಲ; ರಜ ಕೊಟ್ಟಿದ್ದಾರೆ. ಮತ್ತೆ ರೂತ್ ಕೆಲಸಕ್ಕೆ ಹಾಜರಾಗಬಹುದು. ನನ್ನ ತಂಗಿ ಮದುವೆ ಆದ ಮೇಲೆ ನಿನ್ನ ಮದುವೆ ಆಗ್ತೀನಿ ಅಂತ ದಿನೇಶ ಬಡಬಡಿಸಿದ. ರೂತ್ ಸುಮ್ನೆ ಇದ್ದಳು. ‘ಥ್ಯಾಂಕ್ಯು. ತೊಂದರೆ ತಗೋ ಬೇಡ’ ಅಂತ ಅವನಿಗೆ ಅವಳು ಹೇಳಿಬಿಡಬೇಕು. ಅಷ್ಟೆ ಈಗ ಮಾಡಬೇಕಾಗಿರೋದು. ಇನ್ನಾದರೂ ರೂತ್ ಮೆಚ್ಯೂರಾದಾಳು ಅಂತ ನನ್ನ ಭರವಸೆ. ”

ಏನು ಹೇಳಬೇಕು ತೋಚದೆ ನಾನು ನಿಂತಿದ್ದೆ. ಕಾರಿಡಾರಿನಲ್ಲಿ ಎದುರಾದ ರೂತ್‌ನ ಮೌನವನ್ನು ಅರ್ಥಮಾಡಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೆ. ಅವಳ ಅವಮಾನವನ್ನು ಸಹ್ಯ ಮಾಡಬಲ್ಲದ್ದೆಂದರೆ ಜೀವನದ ಸಾಮಾನ್ಯತೆಯನ್ನು ತಿಳಿದಿದ್ದ ರಸುಲ್ ಧೋರಣೆಯೊಂದೇ ಎಂದು ಅನ್ನಿಸಿತು. ರಸುಲ್ ನನ್ನ ಜೊತೆ ಮಾತಾಡುತ್ತಿದ್ದುದನ್ನು ಗಮನಿಸಿ ರೂತ್ ಕಣ್ಣೀಗೆ ಕಣ್ಣು ಕೊಡದೆ ಅಡಿಗೆ ಮನೆಗೆ ಹೋದಳು. ಏನೋಯೋಚಿಸುತ್ತಿದ್ದ ರಸುಲ್ ನಿಧಾನವಾಗಿ ಹೇಳಿದ:

“ಖಾನ್ ಇವತ್ತು ಪಾರ್ಟಿಗೆ ಬಂದಿರೋದೇ ನನಗೆ ಭಯ. ದಿನೇಶ್ ಅವನ ಹತ್ತಿರ ಖಂಡಿತ ಜಗಳವಾಡ್ತಾನೆ ಅಂತ ನನಗನ್ನಿಸುತ್ತೆ. ”

ರಸುಲ್ ಭಯ ನಿಜವಾಯಿತು. ರೂತ್‌ಗೆ ಹಿಂದೂಸ್ತಾನಿ ಹೇಳಿಕೊಟ್ಟದ್ದನ್ನು ಜಂಬದಿಂದ ಖಾನ್ ರೂತ್‌ನ ನೆರೆಮನೆಯವರಿಗೆ ವಿವರಿಸುತ್ತಿದ್ದ. ದಂಪತಿಗಳು ಅಕ್ಕಪಕ್ಕ ಕೂತು ಸೌಜನ್ಯದಿಂದ ಕೇಳೀಸಿಕೊಳ್ಳುತ್ತಿದ್ದರು. ದಿನೇಶ್ ಸ್ನಾನ ಮಾಡಿ, ನೀಟಾಗಿ ಸೂಟ್ ಧರಿಸಿ ಒಳಗೆ ಬಂದ – ಅಷ್ಟು ಎತ್ತರವಲ್ಲದ ನಿಲುವಿನ, ಗುಂಡನೆಯ ಮಗುವಿನ ಮುಖದ ಯುವಕ. ರಸುಲ್ ನನಗವನನ್ನು ಪರಿಚಯಮಾಡಿಸಿದ. ನಾನು ಮೈಸೂರಿನಿಂದ ಬಂದವನೆಂದು ತಿಳಿದೊಡನೆಯೇ ಬೃಂದಾವನನ್ನು ಹೊಗಳಿದ. ತಾಯಿ ತಂದೆಯ ಜೊತೆ ತಾವು ಬಂದಾಗ ಮೆಟ್ರೋಪೋಲ್‌ನಲ್ಲಿ ಇಳಿದುಕೊಂಡಿದ್ದೆವು ಎಂದ. “ಮೈಸೂರು ಸುಂದರವಾಗಿದೆ; ಆದರೆ ಚೆನ್ನಾದ ಹೋಟೆಲೇ ಇಲ್ಲ. ಬೆಂಗಳೂರಿನಲ್ಲಿ ಅಶೋಕ್ ಹೋಟೆಲ್ ತಕ್ಕಟ್ಟಿಗಿದೆ” ಎಂದ. ತನ್ನ ತಂದೆಯನ್ನು ಮಿನಿಸ್ಟರ್ ಫಾರ್ ಟೂರಿಸಂ ಅಂಡ್ ಡೆವಲಪ್‌ಮೆಂಟ್ ನೋಡಲು ಬಂದಾಗ ಮೈಸೂರಿನಲ್ಲಿ ಒಂದು ಪಂಚ ತಾರಾ ಹೋಟೆಲನ್ನು ಕಟ್ಟಿಸುವಂತೆ ತಾನು ಹೇಳಿದುದಾಗಿ ನನಗೆ ತಿಳಿಸಿ, ಈಗಿನ ಮಂತ್ರಿಗಳ ಲಂಚ ಕೋರತನ ಪೆದ್ದುತನ ಹಳಿಯುತ್ತ ಕಮ್ಯುನಿಸಂ ಮಾತ್ರ ಇಂಡಿಯಾಕ್ಕೆ ಸರಿಹೋಗಬಹುದು ಎಂದ.

ದಿನೇಶ್‌ನ ಮಾತುಗಳಿಂದ ನನಗೆ ಆಶ್ಚರ್ಯವಾಗಲಿಲ್ಲ. ಆದರೆ ಅವನನ್ನು ಪ್ರೀತಿಸಿದ್ದ ರೂತ್ ನನಗೆ ಸಮಸ್ಯೆಯಾದಳು. ವಿಮಾನದಿಂದ ತಂದ ಡ್ಯೂಟಿಫ್ರೀ ಸಿಗರೇಟನ್ನು ನನಗೆ ಹಿಡಿದ. “ಓ ಸ್ಟೇಟ್ ಎಕ್ಸ್‌ಪ್ರೆಸ್” ಎಂದು ನಾನು ಸಂತೋಷ ಸೂಚಿಸಿದೆ. “ಇಡೀ ಪ್ಯಾಕನ್ನು ಇಟ್ಟಕೊ” ಎಂದು ಕೊಟ್ಟ. ನಾನು “ಥ್ಯಾಂಕ್ಸ್‌ಬೇಡ” ಎಂದೆ. “ಪ್ಲೀಸ್ ಬೇಡ ಎನ್ನಬಾರದು” ಎಂದು ಬಲು ಹಳೆಯ ದೋಸ್ತಿಯಂತೆ ಹೆಗಲ ಮೇಲೆ ಕೈಹಾಕಿ ತಬ್ಬಿದ. ಮುಂದೆ ಹೋಗಿ ರೂಬೆನ್ನಿನ ಜೊತೆ ಮಾತಾಡುತ್ತ ನಿಂತ. ನಾನು ಅಷ್ಟರಲ್ಲೆ ಅವನಿಗೆ ಮರೆತುಹೋಗಿರಲೂ ಬಹುದು. ರಸುಲ್ ಹೇಳಿದ. “ದಿನೇಶ್ ಬ್ರಿಲಿಯಂಟ್ ವಿದ್ಯಾರ್ಥಿ. ಇಲ್ಲಿ ಪರೀಕ್ಷೇಲಿ ರ‍್ಯಾಂಕ್ ತೆಗೆದುಕೊಂಡ. ”

ಖಾನ್ ಗಟ್ಟಿಯಾಗಿ ದಿನೇಶ್‌ಗೆ ಹೇಳುತ್ತಿರೋದು ಕೇಳಿಸಿತು:

“ನಿಮ್ಮ ದೇಶದ ಪಂಡಿತರು ಒಪ್ಪಲಿಕ್ಕಿಲ್ಲ. ಆದರೆ ಒಳ್ಳೆ ಹಿಂದೂಸ್ತಾನಿ ನಿನ್ನ ರೂತ್‌ಗೆ ಕಲಿಸಿದ್ದೀನಿ. ”

ನಾನು ರಸುಲ್ ಜೊತೆಯೇ ನಿಂತಿದ್ದೆ. ರಸುಲ್ ನರ್ವಸ್ಸಾಗಿರುವಂತೆ ಕಂಡಿತು:

“ಖಾನ್‌ಗೆ ಕುಡಿದು ಗೊತ್ತಿಲ್ಲ. ತಲೆಹರಟೆ. ದಿನೇಶ್‌ನ ಪರಿಚಯವಿಲ್ಲ ಅವನಿಗೆ. ” ಖಾನ್ ರೂತ್‌ನನ್ನು ಕೂಗಿ ಕರೆದ:

“ರೂ‌ತ್ ರೂತ್‌ ಎಲ್ಲಿ ಹಿಂದೂಸ್ತಾನೀಲಿ ದಿನೇಶ್ ಜೊತೆ ಮಾತಾಡು”.

ರೂತ್ ಸೌಜನ್ಯದಿಂದ ನಕ್ಕಳು. ಖಾನ್ ಪರಿಸ್ಥಿಯನ್ನು ಗ್ರಹಿಸಿದಂತಿರಲಿಲ್ಲ. ಏನೋ ಸುಮ್ಮನೆ ದಿನೇಶ್ ಬಂದಿದ್ದಾನೆ ಎಂದುಕೊಂಡಂತಿತ್ತು. “ಇನ್‌ಸೆನ್ಸಿಟಿವ್ ಫೂಲ್‌”, ರಸುಲ್ ಶಪಿಸುತ್ತ ನನ್ನಜೊತೆ ಬಿಟ್ಟು ಸೀದ ಖಾನ್ ಇದ್ದಲ್ಲಿಗೆ ಹೋದ.

ದಿನೇಶ್ ನಾನಿದ್ದಲ್ಲಿಗೆ ಬಂದು ಹೇಳಿದ:

“ಬಿಟ್ಟಿಗೆ ಸಿಕ್ತು ಅಂತ ಆ ಪಾಕಿಸ್ತಾನದ ಹಂದಿ ಹೇಗೆ ಕುಡೀತಿದಾನೆ ನೋಡು. ಈ ಸಾರಿ ನಾವು ಅವರಿಗೆ ಚೆನ್ನಾಗಿ ಪಾಠ ಕಲ್ಸಿದೀವಿ. ರೂತ್‌ಗೆ ಎಂಥವರ ಜೊತೆ ಸಲಿಗೇಂದ ಇರಬೇಕು ಗೊತ್ತಿಲ್ಲ. ರಸುಲ್ ಬೆಂಗಾಲಿ, ಒಳ್ಳೆಯ ಮನುಷ್ಯ. ಟಾಗೂರನ್ನ ತುಂಬ ಅಡ್ಮೈರ್ ಮಾಡ್ತಾನೆ”.

“ನಿನಗೇನೊ ತೋರಿಸುವುದಿದೆ” ಎಂದು ದಿನೇಶ್ ಹೇಳಿ ಒಳಗೆ ಹೋದ. ಟೈಂಸ್‌ಪತ್ರಿಕೆಯನ್ನು ತಂದು “ನನ್ನ ಹೆಸರು ಇದರಲ್ಲಿ ಬಂದಿದೆ ನೋಡು” ಎಂದು ಗಟ್ಟಿಯಾಗಿ ಓದಿದ. ಸರ್ಜರಿಯನ್ನು ಮುಂದುವರಿಸಲು ರ‍್ಯಾಂಕ್‌ಪಡೆದ ದಿನೇಶ್‌ಗೆ ಬ್ರಿಟಿಷ್ ಸರ್ಕಾರ ಸ್ಕಾಲರ್ ಶಿಪ್ ಕೊಟ್ಟಿರುವುದಾಗಿ ಅದರಲ್ಲಿ ವರದಿಯಾಗಿತ್ತು. ನಾನು ‘ಕಂಗ್ರಾಚುಲೇಶನ್’ ಎಂದ. ದಿನೇಶ್ ಹಿಗ್ಗಿ ಸೀದ ರೂತ್ ಹತ್ತಿರ ಹೋದ. ಅವಳಿಗೂ ಓದಿದ. ಅವಳೂ ಕೇಳಿಸಿಕೊಂಡು ‘ಕಂಗ್ರಾಚುಲೇಶನ್’ ಎಂದಿರಬೇಕು. ದಿನೇಶ್ ಅವಳ ಕೈಯನ್ನು ಹಿಡಿದು ಕುಲುಕಿದ. ಪೇಪರನ್ನು ಬಿಚ್ಚಿಕೊಂಡು ದಿನೇಶ್ ರೂಬೆನ್ಸ್, ಸಿಲ್ವರ್ ರಸುಲ್, ಜೆನ್ನಿ, ಎಲಿಜಬೆತ್ ಎಲ್ಲರ ಹತ್ತಿರವೂ ಹೋಗಿ ತನ್ನ ಹೆಸರನ್ನು ಬೆರಳು ಮಾಡಿ ತೋರಿಸಿ ಗಟ್ಟಿಯಾಗಿ ಓದಿದ. ಖಾನ್ ಏನು ಏನು ಎಂದು ತೂರಾಡುತ್ತ ಎದ್ದು ಬಂದ. ದಿನೇಶ್ ಉತ್ತರ ಕೊಡದೆ ರೂತ್ ಹತ್ತಿರ ಮಾತಾಡುತ್ತ ನಿಂತ. ಮತ್ತೆ ನನ್ನ ಬಳಿ ಬಂದು ಆಪ್ತವಾಗಿ ಹೇಳಿದ:

“ನಾನು ರೂತಳ ಸ್ನೇಹಿತನಂತೆ. ನನ್ನ ಪೋಸ್ಟ್ ಗ್ರಾಜುಯೇಶನ್ ಮುಗಿಸಿ ಇಲ್ಲೆ ನಾನವಳನ್ನ ಖಂಡಿತ ಮದುವೆಯಾಗ್ತಾನೆ. ನಿನಗೆ ಗೊತ್ತಲ್ಲ – ಮೊದಲು ನನ್ನ ತಂಗೀಗೆ ಮದುವೆಯಾಗಬೇಕು. ಅವಳನ್ನು ಇಂಡಿಯಾಕ್ಕೆ ಹೋಗ್ಬೇಡ ಅಂತ ನೀನು ಹೇಳ್ಬೇಕು. ನನಗಾಗಿ ಅವಳಲ್ಲಿ ಹೋಗಿದಾಳೆ ಅಂತ ಗೊತ್ತಾದ್ರೆ ನಿನ್ನ ತಂಗೀಗೆ ಮದುವೆಯಾಗೋದು ಕಷ್ಟ. ಫಾರಿನ್ ಹುಡುಗಿಯರಿಗೆ ಇಂಡಿಯಾದಲ್ಲಿ ಬಹಳ ಕಷ್ಟವಾಗುತ್ತೆ ಅಂತ ನೀನವಳಿಗೆ ಹೇಳಬೇಕು ಪ್ಲೀಸ್”.

“ನಾನು ಕುಡೀತ ಇರೋದು ಇದು ಎರಡನೇ ಸಾರಿ” ಖಾನ್ ಎದ್ದು ನಿಂತು ಗಟ್ಟಿಯಾಗಿ ಘೋಷಿಸಿದ. ಎಲ್ಲರೂ ಮಾತು ನಿಲ್ಲಿಸಿ ಅವನ ಕಡೆಯೇ ನೋಡುತ್ತ ಕೂತರು. : “ನಾನು ಮೌಲ್ವಿಗಳ ದಬ್ಬಾಳಿಕೇನ್ನ ಒಪ್ಪಲ್ಲ. ನನ್ನ ಅಕ್ಕ ಕರಾಚೀಲಿ ಲೆಕ್ಚರರ್ ಆಗಿದ್ದಾಳೆ. ನಾವೆಲ್ಲ ಎಜುಕೇಟೆಡ್. ನನ್ನ ಅಕ್ಕ ವಿದ್ಯಾವಂತರಲ್ಲಿ ದೇವರ ಕಲ್ಪನೆ ಅಂತ ಒಂದು ವಿಷಯದ ಮೇಲೆ ರಿಸರ್ಚ್ ಮಾಡಬೇಕೂಂತ ಇದ್ದಳು. ಮೌಲ್ವಿಗಳು ಬಿಡಲಿಲ್ಲ. ಭುಟ್ಟೋ ಅಧಿಕಾರಕ್ಕೆ ಬಂದ್ರೆ ಖಂಡಿತ ಈ ಮೌಲ್ವಿಗಳನ್ನು ತುಳೀತಾನೆ. ” ಖಾನ್ ಭಾಷಣಕಾರಣನಂತೆ ಮಾತಾಡಿದ್ದ. ಸಿಲ್ವರ್ “ಹಿಯರ್ ಹಿಯರ್” ಎಂದು ನಗುತ್ತ ಚಪ್ಪಾಳೆ ತಟ್ಟಿದ. ದಂಪತಿಗಳನ್ನು ಬಿಟ್ಟು ಎಲ್ಲರೂ ಚಪ್ಪಾಳೆ ತಟ್ಟಿದರು. ಇದರಿಂದ ಉತ್ತೇಜಿತನಾದ ಖಾನ್ ಸಾಮ್ರಾಜ್ಯಶಾಹಿಯ ಬಗ್ಗೆ ಮಾತಾಡಲು ಶುರು ಮಾಡಿದ.

“ಚೈನಾ ಹೇಳೋದನ್ನು ನಾನು ಒಪ್ತೇನೆ. ರೂತ್ ಎಂದರೆ ಅದಕ್ಕೇ ನನಗೆ ಪ್ರೀತಿ. ಬ್ರಿಟಿಷರು ಮುಸ್ಲಿಮರ ಕೈಯಿಂದ ಅಧಿಕಾರ ಕಿತ್ತುಕೊಂಡರು. ನಮ್ಮನ್ನ ತುಳಿದರು. ಇಲ್ದೆ ಇದ್ರೆ ಇಂಡಿಯಾದ ಕಥೇನೇ ಬೇರೆಯಾಗಿರ‍್ತಿತ್ತು. ನಾನು ಅದಕ್ಕೇ ರೂತ್ ಹೇಳೋದನ್ನ ಒಪ್ತೇನೆ. ಹಿಂದುಳಿದ ದೇಶಗಳನ್ನ ಅಮೇರಿಕನ್ ಏಜೆಂಟರು ಆಳ್ತಿರೋ ತನಕ…. ”

ಮತ್ತೆ ಎಲ್ಲರೂ “ಹಿಯರ್ ಹಿಯರ್” ಎಂದು ಚಪ್ಪಾಳೆ ತಟ್ಟಿದರು. ಖಾನ್ ತೂರುತ್ತ ಟೇಬಲ್ಲಿಗೆ ಹೋಗಿ ಗ್ಲಾಸಿನ ತುಂಬ ವೈನ್ ಸುರಿದುಕೊಳ್ಳುವಾಗ ಸ್ವಲ್ಪ ಚೆಲ್ಲಿದ. ಅಲ್ಲೆ ಕೂತಿದ್ದ ಜೆನ್ನಿಯ ತಲೆಯ ಮೇಲೆ ಅದು ಬಿತ್ತು. ಎಲ್ಲರೂ ನಕ್ಕರು. ನನ್ನ ಪಕ್ಕ ಬಂದು ನಿಂತಿದ್ದ ದಿನೇಶ್ “ಸುವರ್” ಎಂದು ಗೊಣಗಿದ. ರೂತ್ ಸುಮ್ಮನೇ ಮೂಲೆಯಲ್ಲಿ ಕೂತಿದ್ದಳು. ಖಾನ್ ಟೇಬಲ್ಲಿನ ಮೇಲಿದ್ದ ತಟ್ಟೆಯಿಂದ ಫ್ರಾನನ್ನು ಒಂದು ಮುಷ್ಟಿ ತೆಗೆದುಕೊಂಡು ಬಾಯಲ್ಲಿ ಹಾಕಿಕೊಂಡು ಜಗಿದ. ವೈನ್ ಗ್ಲಾಸನ್ನೆತ್ತಿ.

“ರೂತ್‌ನ ಯಶಸ್ಸಿಗೆ ಇದು. ಇಂಡಿಯಾದ ಆರ್ಥೊಡಕ್ಸಿಯನ್ನು ರೂತ್‌ನಂಥವರು ನಾಶ ಮಾಡಲಿ” ಎಂದು ಕುಡಿದ. ದಿನೇಶ್ ಇದ್ದಕ್ಕಿದ್ದಂತೆ ಗಟ್ಟಿಯಾಗಿ,

“ಜಿನ್ನಾ ಬ್ರಿಟಿಷರ ಏಜೆಂಟಾಗಿದ್ದ” ಎಂದ.

ಖಾನ್ ಕ್ಷಣ ಸುಮ್ಮನಾಗಿ ಹೇಳಿದ:

“ಹಿಂದೂಗಳು ನಮ್ಮನ್ನು ಶೂದ್ರರು ಅಂತ ತಿಳೀತಾರೆ. ನಮ್ಮ ತಂದೆ ಪಂಜಾಬಲ್ಲಿ ದೊಡ್ಡ ಲಾಯರ್ ಆಗಿದ್ರು. ಭುಟ್ಟೋ ಸ್ನೇಹಿತರು ಅವರು. ಅವರಿಗೆ ತುಂಬ ಹಿಂದೂ ಸ್ನೇಹಿತರು ಇದ್ದರಂತೆ. ನಮ್ಮ ಮನೆಗೆ ಬಂದುಬಿರಿಯಾನಿ ತಿನ್ನೊ ಆಸೆಯಿಂದ ಊಟ ಮಾಡಿ ಹೋಗೋವ್ರಂತೆ. ಆದರೆ ಅವರಲ್ಲಿ ಒಬ್ಬನೂ ತನ್ನ ಊಟದ ಮನೆಯೊಳಗೆ ನನ್ನತಂದೆಯನ್ನು ಸೇರಿಸಿದ್ದಿಲ್ಲ. ಹಿಂದೂಗಳು ಇಂಥ ಸಣ್ಣ ಜನರಲ್ದೆ ಇದ್ದಿದ್ರೆ ನಾವು ಯಾಕೆ ಪಾಕಿಸ್ತಾನ ಬೇಡ್ತಿದ್ವು ಹೇಳಿ? ಈಗ ನಮಗೊಂದು ನೆಲೆ ಇದೆ”.

ದಂಪತಿಗಳು ಎದ್ದು ನಿಂತರು. ರೂತ್‌ನ ಕೈ ಕುಲುಕಿ “ವಂಡರ್ ಫುಲ್ ಪಾರ್ಟಿ. ಆದರೆ ಕ್ಷಮಿಸು. ನಾವು ಹೋಗಬೇಕು” ಎಂದು ಅವಸರದಿಂದ ಎದ್ದು ಹೋಗುವಾಗ ಎಲ್ಲರಿಗೂ “ಸೀಯು ಅಗೈನ್” ಎಂದರು.

ರಸುಲ್ ಎದ್ದು ನಿಂತದ್ದು ನೋಡಿ ನಮಗೆ ಖುಷಿಯಾಯಿತು. ತನ್ನನ್ನೇ ಹಾಸ್ಯ ಮಾಡಿಕೊಳ್ಳುವ ಗಂಭೀರವಾದ ಧ್ವನಿಯಲ್ಲಿ.

“ಈ ಅನುಭವಿ ಮುದುಕ ರಸುಲ್‌ನ ಮಾತನ್ನು ಕೇಳಿ” ಎಂದ.

“ಈ ರಸುಲ್ ಬ್ರಿಟಿಷ್ ಸಾಮ್ರಾಜ್ಯವನ್ನು ಗೆದ್ದ ಕಥೆಯನ್ನು ಹೇಳ್ತಾದಾನೆ. ಇಲ್ಲಿ ಸೇರಿರುವ ಲೆಫ್ಟಿಸ್ಟ್ ಧೋರಣೆಯವರು. ಗಾಂಧಿವಾದಿಗಳು, ಜಿನ್ನಾವಾದಿಗಳು ಎಲ್ಲರೂ ಕೇಳಬೇಕಾದ ಕಥೆಯಿದು”.

ನಾವೆಲ್ಲ ಅವನ ಸುತ್ತ ಕೂತೆವು. ಜೆನ್ನಿ ಎಲ್ಲರ ಬಟ್ಟಲನ್ನು ತುಂಬಿದಳು. ಖಾನ್ ನನ್ನ ಪಕ್ಕ ಬಂದು ಕೂತ. ರೂತ್ ಮಾತ್ರ ಮೂಲೆಯಲ್ಲಿ ನಿಂತಿದ್ದಳು. ದಿನೇಶ್ ಅವಳ ಪಕ್ಕದಲ್ಲೆ ಗೋಡೆಗೆ ಒರಗಿ ನಿಂತ. ದಂಪತಿಗಳು ಹೋದರೆಂದು ಎಲ್ಲರ ಮನಸ್ಸೂ ಹಗುರಾಗಿತ್ತು.

“ಈ ರಸುಲ್‌ಗೆ ಆಗ ಹದಿನೇಳು ವರ್ಷ. ಕಲ್ಕತ್ತದಲ್ಲಿ ಟೈಲರ್ ಒಬ್ಬನ ಹತ್ತಿರ ಗುಂಡಿ ಹಚ್ಚುವ ಕೆಲಸಕ್ಕೆ ಸೇರಿದ್ದ. ರಸುಲ್‌ಕತ್ತರಿಸಿ ಕೊಟ್ಟ ಬಟ್ಟೆಯನ್ನು ಹೊಲಿಯುವುದನ್ನೂ ಬಹುಬೇಗ ಕಲಿತ. ಹುಡುಗ ಕರ‍್ರಗಿದ್ದರೂ ಲಕ್ಷಣವಾಗಿ ಚುರುಕಾಗಿ ಇದ್ದ. ಬಂಕಿಂಚಂದ್ರರ ಕಾದಂಬರಿಗಳನ್ನೆಲ್ಲ ಓದಿದ್ದ. ಕಲ್ಕತ್ತದಲ್ಲಿ ಒಬ್ಬ ಕಲೆಕ್ಟರ್. ಸ್ಕಾಟ್ಲೆಂಡಿನವ. ಅವನಿಗೊಬ್ಬಳು ಸುಂದರಿಯಾದ ಮಗಳು. ಬ್ಲಾಂಡ್ ಕೂದಲಿನ ನೀಲಿ ಕಣ್ಣಿನ ಹುಡುಗಿ. ಇಪ್ಪತ್ತೆರಡೊ,ಇಪ್ಪತ್ತು ಮೂರೋ ವರ್ಷ – ಅಂದರೆ ರಸುಲ್‌ಗಿಂತ ದೊಡ್ಡವಳು. ಅವಳ ಮದುವೆ ನಿಶ್ಚಯವಾಗಿತ್ತು. ಆದರೆ ಮದುವೆಗೇಂತ ಇಂಗ್ಲೆಂಡಿಂದ ಹೊಲಿಸಿ ತರಿಸಿದ ಡ್ರೆಸ್ಸು ಲೂಸಾಗಿದ್ದರಿಂದ ಅದನ್ನು ಸರಿಯಾದ ಅಳತೆಗೆ ಟೈಟ್ ಮಾಡಬೇಕೆಂದು ನಮಗೆ ಮೇಮ್ ಸಾಹಿಬ್‌ರಿಂದ ಅಪ್ಪಣೆ ಬಂತು. ಯಜಮಾನ ಆಗ ರಸುಲ್‌ನ್ನ ಕರೆದು ಹೇಳಿದ: ‘ರಸುಲ್ ಹೋಗಿ ಅಳತೆ ತಗೊಂಬಾ. ದೊರೆಗಳ ಮನೆ,ಸರಿಯಾಗಿ ನಡೆದುಕೊ’. ರಸುಲ್ ಮೆಶರಿಂಗ್ ಟೇಪ್ ತೆಗೆದುಕೊಂಡು ಹೊಸ ಅಂಗಿ ಚಲ್ಲಾಣ ತೊಟ್ಟು, ಕ್ರಾಪನ್ನು ನೀಟಾಗಿ ಬಾಚಿಕೊಂಡು, ಮುಖಕ್ಕೆ ಸ್ನೋ ಹಚ್ಚಿ, ಗಮಗಮಾಂತ ಕಲೆಕ್ಟರಿನ ಮನೆಗೆ ಹೋದ. ಜವಾನ ರಸುಲ್‌ನನ್ನು ಒಳಗೆ ಕರೆದುಕೊಂಡು ಹೋದ. ಆ ಕಾರ್ಪೆಟ್ ಏನು, ಶಿಕಾರಿ ಚಿತ್ರಗಳೇನು, ಕ್ಯಾಂಡೆಲಾಬ್ರದ ಸೊಗಸೇನು, ಮೆತ್ತನೆಯ ಸುಖಾಸನಗಳೇನು – ರಸುಲ್ ಕಂಡರಿಯದ ಪ್ರಪಂಚ ಅದು. ಹೀಗೇ ಬಾಯಿ ಕಳೆದು ರಸುಲ್ ನೋಡುತ್ತ ನಿಂತಾಗ ಕಲೆಕ್ಟರನ ಮಗಳು ತಾಯಿಯ ಜೊತೆ ಬಂದಳು. ‘ಮೆಶರ್ ಮಾಡೋದು ಈ ಹುಡುಗನೆ?’ ” ಎಂದು ತಿರಸ್ಕಾರದಿಂದ ಮುಖ ಸಿಂಡರಿಸಿ ತಾಯನ್ನು ಕೇಳಿದಳು. ಈ ರಸುಲ್‌ಗೆ ಆಗ ಒಂದಿಷ್ಟು ಹರಕು ಮುರುಕು ಇಂಗ್ಲಿಷ್ ಗೊತ್ತಿತ್ತು. ಆದರೆ ತಿರಸ್ಕಾರದಿಂದ ಸಿಂಡರಿಸಿದ ಬಿಳಿ ಹುಡುಗಿಯ ಚೆಂದದ ಮುಖ ನೋಡಿ ಗೊತ್ತಿದ್ದ ಇಂಗ್ಲಿಷೆಲ್ಲ ಮರೆತೇ ಹೋಯಿತು. ರಸುಲ್ ಅಷ್ಟು ಹತ್ತಿರದಿಂದ ಫಾರಿನ್ ಹೆಣ್ಣನ್ನು ಕಂಡದ್ದೆ ಇಲ್ಲ. ಬಾಯಿ ಕಟ್ಟಿ ಬಿಟ್ಟಿತು. ಈ ರಸುಲ್‌ಗೆ ಜೀವನದಲ್ಲಿ ಬಾಯಿ ಕಟ್ಟಿದ ಏಕಮಾತ್ರ ಘಳಿಗೆಯೆಂದರೆ – ಲೇಡೀಸ್ ಅಂಡ್ ಜಂಟಲ್‌ಮನ್ – ಆ ದಿನ ಮಾತ್ರ. ಹುಡುಗಿ ಒಳಗೆ ಬಾ ಎಂದು ತಿರಸ್ಕಾರದಿಂದ ಕರೆದಳು. ರಸುಲ್‌ಚಕಿತನಾಗಿ ನಿಂತೇ ಇದ್ದ. ಇನ್ನೊಮ್ಮೆ ಕೈ ಸನ್ನೆ ಮಾಡಿ ಕರೆದಳು. ರಸುಲ್‌ಗೆ ಕೈಕಾಲು ಬೆವರಿತ್ತು. ಹಿಂಜರಿಯುತ್ತ ಅವಳ ಹಿಂದೆ ಹೋದ. ಮಹಡಿ ಮೇಲಿದ್ದ ಅವಳ ರೂಮಿಗೆ ಕರೆದುಕೊಂಡು ಹೋದಳು. ಬಾಗಿಲು ಹಾಕಿಕೊಂಡಳು. ರಸುಲ್ ಎದೆ ಹೊಡೆದುಕೊಳ್ಳತೊಡಗಿತು. ಹುಡುಗಿ ಅವನು ನೋಡುತ್ತಿದ್ದಂತೆಯೇ ಬಟ್ಟೆಯನ್ನು ಬದಲಾಯಿಸಿದಳು. ಲೂಸಾಗಿದ್ದ ಮದುವೆ ಡ್ರೆಸ್ಸಿನಲ್ಲಿ ಎದುರು ನಿಂತಳು. “ಅದೇನು ಹಾಗೆ ಕಣ್ಣು ಬಿಡುತ್ತಿದ್ದಿ? ಇಂಗ್ಲಿಷ್ ಬರದ ಈಡಿಯಟ್ಟನ್ನ ಯಾಕೆ ನಿನ್ನಯಜಮಾನ ಕಳಿಸಿದ? ಹೂಂ, ಅಳಗೆ ತಗೊ” ಅಂದಳು. ಸೊಂಟದ ಸುತ್ತ ಸಡಿಲವಾಗಿದೆಯೆಂದು ಸನ್ನೆ ಮಾಡಿ ತೋರಿಸಿದಳು. ಈ ರಸುಲ್ ಬಿಳಿ ಹುಡುಗಿಯನ್ನು ಆತನಕ ಮುಟ್ಟಿದ್ದೇ ಇಲ್ಲ. ಕರ್ಪೂರದ ಬೊಂಬೆಯಂತಿದ್ದ ಅವಳನ್ನು ಕೌತುಕದಿಂದ ನೋಡುತ್ತ ಕೈಯಲ್ಲಿ ಟೇಪ್ ಹಿಡಿದು ನಿಂತೇಬಿಟ್ಟ. ಲಂಗದ ಒಳಗೆ ಎಡಗೈ ತೂರಿಸಿ ಗ್ಯಾದರ್ ಮಾಡುತ್ತ ಬಲಗೈಯಿಂದ ಪಿನ್ನನ್ನು ಚುಚ್ಚಬೇಕೆಂದು ತಿರಿಸ್ಕಾರದಿಂದ, ಸಿಟ್ಟಿನಿಂದ ಮುಖಾಭಿನಯ ಮಾಡಿತೋರಿಸಿದಳು. ಆಮೇಲೆ ನಕ್ಕಳು. ಅವಳು ನಿಂತಿದ್ದಳು. ರಸುಲ್ ಅವಳ ಕಾಲುಬುಡದಲ್ಲಿ ಮೊಣಕಾಲಿನ ಮೇಲೆ ಕೂತ. ಎಡಗೈಯನ್ನು ಲಂಗದ ಒಳಗೆ ಕೆಳಗಿನಿಂದ ತೂರಿಸಿದ. ಸೈಡ್‌ನಿಂದ ಗ್ಯಾದರ್ ಮಾಡುತ್ತ ಪಿನ್‌ಗಳಿಂದ ಚುಚ್ಚಿ, ಭದ್ರ ಪಡಿಸಿದ. ಇರಬಾರದ ಜಾಗದಲ್ಲಿ ಅವನ ಕೈಯಿದೆ ಎಂಬ ಭಾವನೆಯಿಂದ ರಸುಲ್ ನಡುತ್ತಿದ್ದ. ಲೇಡೀಸ್ ಅಂಡ್ ಜಂಟಲ್ ಮನ್ – ರಸುಲ್ ನೀತಿಗೆಟ್ಟವನಾಗಿರಲಿಲ್ಲ. ಇನ್ನಷ್ಟು ಬಿಗಿಯಾಗಬೇಕೆಂದು ಹುಡುಗಿ ಸೂಚಿಸುತ್ತಿದ್ದಳು. ಕೈಯ ಹಿಂಭಾಗ ಅವಳ ನುಣುಪಾದ ಚರ್ಮದ ಹೊಟ್ಟೆಗೆ ಒತ್ತಿಕೊಂಡಿತ್ತು. ‘ನಾಚಿಕೋಬೇಡ’ ಎಂದು ದರ್ಪದಿಂದ ಹೇಳಿದಳು. ನಿನ್ನ ಹೆಸರೇನು ಎಂದಳು. ‘ಇನ್ನೂ ಬಿಗಿಯಾಗಿ’ ಎನ್ನುತ್ತ ಬ್ರಿಟಿಷ್ ಸಾಮ್ರಾಜ್ಯದ ರಾಜಧಾನಿಯಾದ ಅವಳ ನಡುವಿಗೆ ಅವನ ಕೈ ಆದಷ್ಟು ಬೇಗ ಬರುವಂತೆ ಆವರಿಸುತ್ತ ಕಣ್ಣುಗಳನ್ನು ಅರ್ಧ ಮುಚ್ಚಿದಳು. ನಿಂತವಳು ಕಲೆಕ್ಟರ್ ಮಗಳು. ಬ್ರಿಟಿಷ್ ಸಾಮ್ರಾಜ್ಯದ ಪ್ರತಿನಿಧಿಯ ಮಗಳು. ಮಂಡಿಯೂರಿ ಕೂತವನು ಭಾರತದ ಒಬ್ಬ ಯಃಕಶ್ಚಿತ್ ಟೈಲರ್. ಇಂಗ್ಲಿಷ್ ಬರದ ಮೂಕ ಅವಳ ಪಾಲಿಗೆ. ರಸುಲ್‌ನ ಎಡಗೈ ಎಲ್ಲಿ ಸೇರಬೇಕೆಂದು ಅವಳು ಆತುರಪಡುತ್ತ ನಿಂತಿದ್ದಳೋ ಅಲ್ಲಿ ಸೇರಿದಾಗ. ಅವಳ ತೇಲು ಗಣ್ಣುಗಳು ಸಾವಧಾನವಾಗಿ ಮುಚ್ಚಿ,ಅವಸರವಿಲ್ಲದಂತೆ ನಿಧಾನವಾಗಿ ಈ ರಸುಲ್‌ನ ಎಡಗೈ ಎಲ್ಲಿ ಸೇರಬೇಕೆಂದು ಅವಳು ಆತುರಪಡುತ್ತ ನಿಂತಿದ್ದಳೋ ಅಲ್ಲಿ ಸೇರಿದಾಗ. ಅವಳ ತೇಲು ಗಣ್ಣುಗಳು ಸಾವಧಾನವಾಗಿ ಮುಚ್ಚಿ, ಅವಸರವಿಲ್ಲದಂತೆ ನಿಧಾನವಾಗಿ ಈ ರಸುಲ್ ಗ್ಯಾದರನ್ನು ಪಿನ್ನಿಂದ ಚುಚ್ಚುತ್ತಿದ್ದಾಗ ಲೇಡೀಸ್ ಅಂಡ್ ಜಂಟಲ್‌ಮನ್ – ಈ ಬಡಪಾಯ ರಸುಲ್‌ಗೆ ಸೂರ್ಯ ಮುಳುಗದ ಬ್ರಟಿಷ್ ಸಾಮ್ರಾಜ್ಯವನ್ನೆ ಗೆದ್ದ ಅನುಭವವಾಗಿತ್ತು. ”

ರಸುಲ್‌ನ ಮಧ್ಯವಯಸ್ಕ ಗೆಳತಿ ‘ಕೊಳಕು ಮುದುಕ’ ಎಂದು ನಕ್ಕಳು. ಸಿಲ್ವರ್ ಮತ್ತು ರೂಬೆನ್ಸ್ ಜೋರಾಗಿ ಚಪ್ಪಾಳೆ ಕುಟ್ಟಿದರು. ಖಾನ್ ಚಪ್ಪಾಳೆ ತಟ್ಟಿ “ಇಂಗ್ಲಿಷ್ ಹುಡುಗಿಯರು ನಮ್ಮ ದೇಶದವರಂತಲ್ಲ. ನಾಚಿಕೆಗೆಟ್ಟವರು. ಕಲರ‍್ಡ್‌ ಗಂಡಸರೆಂದರೆ ಅವರಿಗೆ ಇಷ್ಟ” ಎಂದು ಗುಟ್ಟಾಗಿ ನನಗೆ ಹೇಳಿದ. ಅವನ ಮಾತನ್ನು ಕೇಳಿಸಿಕೊಳ್ಳದವನಂತೆ ನಾನೂ ಕೂತೆ. “ನೀನೂ ರೂತ್ ಹಾಗೆ ಲೆಫ್ಟಿಸ್ಟ್. ದಿನೇಶ್‌ನಂಥ ಗೊಡ್ಡಲ್ಲ. ನಮ್ಮ ದೇಶ ತೀರಾ ಪ್ಯೂರಿಟಾನಿಕಲ್ ಆಗಿದೆ. ನೆಹರೂನಂಥ ಲೀಡರ್ ಪಡೆದ ನೀವು ಪುಣ್ಯವಂತರು” ಎಂದ. ಜೆನ್ನಿ ಒಬ್ಬಳೇ ಇರುವುದನ್ನು ನೋಡಿ ಅವಳ ಬಳಿ ಹೋಗಿ ಮೈತಾಕಿ ಕೂತ. ರೂತ್‌ಗೆ ತನ್ನ ಬಟ್ಟಲನ್ನು ತುಂಬುವಂತೆ ಕರೆದು ಹೇಳಿದ. ರೂತ್ ಎದ್ದು ಬಂದು ವೈನ್ ಮುಗಿದದ್ದರಿಂದ ಗ್ಲಾಸಿನಲ್ಲಿ ಬಿಯರ್ ಸುರಿದುಕೊಟ್ಟಳು. ದಿನೇಶ್ ಚಡಪಡಿಸುತ್ತ ನನ್ನ ಹತ್ತಿರ ಬಂದು “ಬಿಟ್ಟಿ ಸಿಕ್ಕಿದೇಂತ ಹೇಗೆ ಹೀರ‍್ತಿದಾನೆ ನೋಡು” ಎಂದ. ನಾನು ಮಾತಾಡದ್ದು ನೋಡಿ ಎಲಿಜಬೆತ್‌ ಜೊತೆ ಹೋಗಿ ಕೂತ.

ನಾಜೂಕಾದ ಬಟ್ಟೆ ಹಾಕಿ, ಪಾರ್ಟಿಗೆಂದು ಕೂದಲು ಕೂರಿಸಿಕೊಂಡು ಬಂದಿದ್ದ ಐರೀನ್‌ನ ಹೆಗಲನ್ನು ರಸುಲ್ ಸವರುತ್ತಿದ್ದ. ಅವನ ಕೈನ್ನು ಅವಳು ತಳ್ಳೀದಳು. “ಜೇನ್ ಬಿಟ್ಟು ಹೋದ ಮೇಲೆ ಈ ಮುದುಕ ಅಸಾಧ್ಯನಾಗಿದ್ದಾನೆ” ಎಂದಳು. “ಬಾ ತೊಡೆಯ ಮೇಲೆ ಕೂತುಕೊ. ಈ ಹುಡುಗರಿಗೆ ನಾವು ಮಾದರಿಯಾಗೋಣ” ಎಂದು ರಸುಲ್ ಅವಳನ್ನು ಎಳೆದ. ಎಲ್ಲರೂ ನಕ್ಕರು. “ಈ ಜನಕ್ಕೆ ಮಾರಲ್‌ಸೆನ್ಸ್ ಕಡಿಮೆ” ಎಂದು ದಿನೇಶ್ ನನ್ನ ಹತ್ತಿರ ಗೊಣಗಿದ.

ನಾನು ಎದ್ದು ಹೋಗಿ ಬ್ರಿಟನ್ನಿನ ಜೊತೆ ರೊಡೇಶಿಯಾ ನೀತಿಯನ್ನು ಕಟುವಾಗಿ ಟೀಕಿಸುತ್ತಿದ್ದ ರೂಬೆನ್ಸ್ ಮತ್ತು ಸಿಲ್ವರ್ ಜೊತೆ ಸ್ವಲ್ಪ ಹೊತ್ತು ಸೀರಿಯಸ್ಸಾಗಿ ಮಾತಾಡುತ್ತ ನಿಂತೆ. ರೂತ್ ಒಬ್ಬಳೇ ಬಿಥೋವನ್ ಆಲಿಸುತ್ತ ನಿಂತಿದ್ದಳು. ಅವಳ ಬಳಿ ಹೋದೆ. “ಗಾಳಿಗೆ ಹೋಗಿ ಬರೋಣ ಬಾ” ಎಂದೆ. ರೂತ್ ಕೃತಜ್ಞತೆಯಿಂದ ನನ್ನ ಜತೆ ಬಂದಳು. ಇಬ್ಬರೂ ಕೋಟ್ ಹಾಕಿಕೊಂಡು ಹೊರಗೆ ಹೋದೆವು. ಮಂಜು ಬೀಳುತ್ತಿತ್ತು. ಕಣ್ಣೆದುರಿಗೆ ಏನೂ ಕಾಣಿಸುತ್ತಿರಲಿಲ್ಲ. ದೂರ ದೂರದಲ್ಲಿ ಬೆಳಕಿನ ಸಣ್ಣ ಉಂಡೆಗಗಳಾಗಿ ಬೀದಿ ದೀಪಗಳಿದ್ದುವು. ನಾನು ರೂತ್‌ನ ಕೈ ಹಿಡಿದೆ. ಒಂದಷ್ಟು ದೂರ ಮೌನವಾಗಿ ನಡೆದೆವು. ನಾನು ಮೌನವಾಗಿರುವುದನ್ನು ರೂತ್ ಬಯಸುತ್ತಾಳೆಂದು ನನಗೆ ಗೊತ್ತಾಯಿತು. ನಮ್ಮ ಹೆಜ್ಜೆ ಸಪ್ಪಳ ಬಿಟ್ಟರೆ ಬೇರೇನೂ ಸದ್ದಿರಲಿಲ್ಲ. ನೆಲ ಜಾರುತ್ತಿತ್ತು. ರಾತ್ರೆ ಎರಡು ಗಂಟೆಯಾಗಿರಬೇಕು. ಹತ್ತು ನಿಮಿಷ ನಡೆದುಹಿಂದಕ್ಕೆ ಬಂದೆವು. ರೂತ್ ಪ್ಲ್ಯಾಟಿನಲ್ಲಿ ಮಾತ್ರ ದೀಪ ಉರಿಯುತ್ತಿತ್ತು. ಕೈ ಹಿಡಿದು ಸರಸರನೆ ಮೆಟ್ಟಿಲು ಹತ್ತಿದೆವು. ಮೈ ಬೆಚ್ಚಗಾಗಿತ್ತು. ರೂತ್ ಬಾಗಿಲು ತೆರೆದಳು.

ಕಾರಿಡಾರಿನಲ್ಲಿ ದಿನೇಶ್ ಖಾನನ್ನು ಬಗ್ಗಿಸಿಕೊಂಡು ಬೆನ್ನಿನ ಮೇಲೆ ಜಪ್ಪುತ್ತಿದ್ದ. “ಇಂಥ ಮನೆಗೆ ಬರಲು ನೀನು ಯೋಗ್ಯನಲ್ಲ ಸುವ್ವರ್” ಎಂದು ಒದ್ದು ಬೀಳಿಸಿ ಅವನ ಮೈ ಮೇಲೆ ಬಿದ್ದ. ಖಾನ್ ದಿನೇಶ್‌ನನ್ನು ತಳ್ಳುತ್ತ. “ರೂತ್‌ನಂಥ ಹುಡುಗಿ ನಿನಗೆ ಯೋಗ್ಯಳಲ್ಲ – ಕಾಫರ್” ಎಂದು ಅವನ ಮುಖದ ಮೇಲೆ ಉಗುಳಿದ. ಇಬ್ಬರನ್ನೂ ರಸುಲ್ ಮತ್ತು ಸಿಲ್ವರ್ ಎಳೆದು ದೂರ ಮಾಡಿದರು. ರಸುಲ್‌ನ ಹಿಡಿತದಲ್ಲಿದ್ದ ಖಾನ್ ಕುಸಿದು ವಾಂತಿಮಾಡಲು ಶುರುಮಾಡಿದ. ದಿಣೇಶ್ ಕೊಸರಿಕೊಂಡು ಹೋಗಿ “ಪಾಕಿಸ್ತಾನದ ಹಂದಿ, ಈ ಸಾರಿ ನಾವು ನಿಮಗೆ ಒದ್ದದ್ದು ಸಾಲದ?” ಎಂದು ಒದ್ದ. ಸಿಲ್ವರ್ ಮತ್ತು ರೂಬೆನ್ಸ್ ಸೇರಿ ದಿನೇಶ್‌ನನ್ನು ಎಳೆದು ಹಿಡಿದುಕೊಂಡರು. ಊರಿದ ಕೈ ಮೇಲೇ ಖಾನ್ ವಾಂತಿ ಮಾಡಿಕೊಳ್ಳುತ್ತಿದ್ದ. ಜೆನ್ನಿ ಅವನ ಹಿಂದೆ ನಿಂತು ಅವನನ್ನು ಬೀಳದಂತೆ ಹಿಡಿದು ಬೆನ್ನು ಸವರಿದಳು. ದಿನೇಶ್‌ನ ಸೂಟಿನ ಮೇಲೆ ವಾಂತಿ ಚೆಲ್ಲಿತ್ತು. “ನಿನ್ನ ವಾಂತೀನ್ನ ನೀನೇ ಬಾಚೊ ಸುವ್ವರ್. ಬಿಟ್ಟಿ ಸಿಕ್ತು ಅಂತ ಹಂದಿ ಥರ ಕುಡೀತೀಯ?” ಎಂದು ದಿನೇಶ್ ಸೂಟಿನ ಮೇಲಿನ ವಾಂತಿ ನೋಡಿ ಹೇಸುತ್ತ ಒದರಿದ. ಖಾನ್ ವಾಂತಿ ಮಾಡಿಕೊಂಡ ಮೇಲೆ ಜೆನ್ನಿ ಅವನನ್ನು ತೊಳೆಯಲು ಬಾತ್‌ರೂಮಿಗೆ ಕರೆದುಕೊಂಡು ಹೋದಳು. ನಾನು ರಸುಲ್‌ಮಾಪ್ ತಂದು ಕಾರಿಡಾರನ್ನು ಕ್ಲೀನ್ ಮಾಡಿದೆವು. ಖಾನ್ ಮತ್ತು ದಿನೇಶ್ ಕಾರಿಡಾರಿನ ಎರಡು ತುದಿಗಳಲ್ಲಿ ಬುಸುಗುಡುತ್ತ ಕೂತರು.

ರಸುಲ್ ನಮ್ಮನ್ನು ಒಳಕ್ಕೆ ಕರೆದ. ಎಲಿಜಬೆತ್ ಮತ್ತು ಜೆನ್ನಿಯ ಪ್ಲ್ಯಾಟುಗಳು ಪಕ್ಕದ ಬಿಲ್ಡಿಂಗ್‌ನಲ್ಲಿ ಇದ್ದುವು. ಎಲಿಜಬೆತ್‌ಗೆ ದಿನೇಶ್‌ನನ್ನೂ, ಜೆನ್ನಿಗೆ ಖಾನನ್ನೂ ತಮ್ಮ ಪ್ಲ್ಯಾಟಿನಲ್ಲಿ ಮಲಗಿಸಿಕೊಳ್ಳುವಂತೆ ರಸುಲ್ ಸೂಚಿಸಿದ. ಇಬ್ಬರು ಹುಡುಗಿಯರೂ ಒಪ್ಪಿದರು. ಖಾನ್ ಮತ್ತು ದಿನೇಶ್ ಮಾತಿಲ್ಲದೆ ಎದ್ದು ಹುಡುಗಿಯರ ಜೊತೆ ಹೋದರು. ಐರೀನ್ ರಸುಲ್‌ಗೆ ‘ಬೈ’ ಎಂದು ಸಿಲ್ವರ್ ಮತ್ತು ರೂಬೆನ್ಸ್‌ರ ಜೊತೆ ಹೋದಳು. ಅವಳ ಮನೆ ಹತ್ತಿರದಲ್ಲೆ ಇತ್ತು. ಅವಳನ್ನು ಬಿಟ್ಟು ಸಿಲ್ವರ್ ಮತ್ತು ರೂಬೆನ್ಸ್ ಹಾಸ್ಟೆಲಿಗೆ ಹೋಗುವೆವೆಂದರು.

ರೂತ್ ತನ್ನ ಮಲಗುವ ಕೋಣೆಯಲ್ಲಿದ್ದಿರಬೇಕು – ರೂಮಿನಲ್ಲಿ ನಾನು, ರಸುಲ್ ನಿಂತವು. ಮುಂದೇನು ಹೇಳಬೇಕೆಂಬುದನ್ನು ಮರೆತ ಸೂತ್ರಧಾರಿಯಂತೆ ರಸುಲ್ ನಿಂತಿದ್ದ. ರೂಮು ಅಸ್ತವ್ಯಸ್ಥವಾಗಿತ್ತು. ಕಾರ್ಪೆಟ್ ಮೇಲೆ ಸಿಗರೇಟಿನ ತುಂಡುಗಳು. ಕ್ರಿಸ್ಟ್‌ಗಳು, ಗ್ಲಾಸುಗಳು, ಖಾಲಿಯಾದ ವೈನ್ ಸೀಸೆಗಳು ಚೆಲ್ಲಾಪಿಲ್ಲಿ ಬಿದ್ದಿದ್ದುವು. ರಸುಲ್ ರೂತ್‌ಗೆ ಪ್ರಿಯವಾದ್ದು “ಪ್ಟೈಯಿಂಗ್ ಡಚ್‌ಮನ್” ರಿಕಾರ್ಡ್‌ಹಾಕಿದ. ‘ಮುಗ್ದತೆ ಅಪಾಯಕಾರಿ’ ಎಂದು ನನ್ನನ್ನು ಅರ್ಥಪೂರ್ಣವಾಗಿ ಅಣಕಿಸುವಂತೆ ರಸುಲ್ ನೋಡಿ ರೂಮಿನಲ್ಲಿ ಅಸ್ತವ್ಯಸ್ತವಾಗಿದ್ದ ಫರ್ನೀಚರುಗಳನ್ನೆಲ್ಲ ಸರಿಮಾಡಿದ. ನಾನು ಕಾರ್ಪೆಟ್ ಮೇಲೆ ಬಿದ್ದಿದ್ದ ಚೂರು ಪಾರುಗಳನ್ನೆತ್ತಿ ವೇಸ್ಟ್ ಬ್ಯಾಸ್ಕೆಟ್ಟಿಗೆ ತುಂಬಿದೆ.

“ರೂತನ್ನು ಬಿಟ್ಟುಹೋಗಬೇ. ಈ ರಾತ್ರೆ ನೀನು ಅವಳ ಜೊತೆಗಿರಬೇಕು”.

ರಸುಲ್ ಪ್ರಶ್ನಾರ್ಥಕವಾಗಿ ನನ್ನನ್ನು ನೋಡಿದ.

“ಈ ಕ್ಷುದ್ರ ರಾತ್ರೆಯ ನಂತರ ರೂತ್‌ಗೆ ಇಂಡಿಯಾಕ್ಕೆ ಹೋಗುವ ಹುಚ್ಚು ಇಳಿದಿದ್ದರೆ ಕ್ಷೇಮ. ನೀನು ಈಗ ಮೆಚೂರಾಗಿ ನಡಕೊಬೇಕು” ಎಂದು ರಸುಲ್‌ ಹೇಳಿ ಹೊರಟು ನಿಂತ. “ಹೋಗುತ್ತೇನೆ ರೂತ್” ಎಂದು ಗಟ್ಟಿಯಾಗಿ ಹೇಳಿದ. ಅವನ ಬಾಗಿದ ಬೆನ್ನನ್ನು ನೋಡುತ್ತ ನಾನುನಿಂತೆ. ರಸುಲ್ ಉತ್ತರಕ್ಕಾಗಿ ಕಾಯದೆ ಹೊರಟು ಹೋದ.

ನಾನೊಬ್ಬನೇ ಉಳಿದೆ. ಹೊರಗೆ ಸ್ನೋ ಬೀಳುತ್ತಲೇ ಇರಬಹುದು. ಬೆಳಿಗ್ಗೆ ಎದ್ದಾಗ ಕಾಣುವ ಪ್ರಪಂಚ ಯಾವ ವೈವಿಧ್ಯವೂ ಇಲ್ಲದೆ ಬೆಳ್ಳಗೆ ಬಿಕೊ ಎನ್ನುತ್ತಿರುತ್ತೆ. ಸಂಗೀತದ ಅಲೆಗಳು ಖಾಲಿ ಕೋಣೆಯನ್ನು ತುಂಬುತ್ತಿದ್ದುವು. ನಡೆದದ್ದೆಲ್ಲ ಒಟ್ಟು ಎಷ್ಟು ಕ್ಷುದ್ರ ಎನ್ನಿಸಿತ್ತು. ರಸುಲ್‌ನ ಭಂಡತನ ಮಾತ್ರ ಜೀವನದ ಕ್ಷುಲ್ಲಕತೆಗೆ ಸರಿಯಾದ ಪ್ರತಿಕ್ರಿಯೆಯಿರಬಹುದು. ಅಪಕ್ವವಾಗಿ ಉಳಿದಿರುವುದು ಅಪರಾಧ. ರೂತ್‌ನ ಭ್ರಮೆಗಳಿಗೆ ನಾನು ಪೋಷಕನಾಗಕೂಡದು ಎಂದುಕೊಳ್ಳುತ್ತ ಅವಳು ಮಲಗುವ ಕೋಣೆ ಎದುರು ನಿಂತು ಬಾಗಿಲು ತಟ್ಟಿದೆ. ಆದರೆ ಒಬ್ಬರನ್ನೊಬ್ಬರು ಪ್ರೀತಿಸಬೇಕಾದ ಅಗತ್ಯ ಬೀಳುವುದಕ್ಕೂ ಈ ಅಪಕ್ವತೆ ಕಾರಣವಿರಬಹುದು. ಇನ್ನೊಮ್ಮೆ ತಟ್ಟಿದೆ. ಬಾ ಎಂದಳು. ಒಳಗೆ ಹೋಗಿ ನಿಂತೆ. ಪಾರ್ಟಿಗೆಂದು ಮೇಲೆತ್ತಿ ಕಟ್ಟಿದ್ದ ಕೂದಲನ್ನು ಬಿಚ್ಚಿದಳು. ಗಂಭೀರವಾಗಿ ಕುರ್ಚಿಯ ಮೇಲೆ ಕೂತಿದ್ದಳು. ಗಾಢವಾದ ಯೋಚನೆಯಲ್ಲಿ ಕೂತಿದ್ದಂತೆ ಕಂಡ ರೂತ್‌ಗೆ ಸಮಾಧಾನದ ಮಾತುಗಳನ್ನು ಹೇಳುವುದು ಕೃತಕ ಎನ್ನಿಸಿತ್ತು. ಮೌನವಾಗಿ ನಿಂತಿದ್ದು. “ಸ್ನಾನ ಮಾಡ್ತೀಯ? ಬಾತ್‌ನಲ್ಲಿ ನೀರನ್ನು ತುಂಬಲೆ?” ಎಂದೆ. ತುಮಬ ಸರಳವಾಗಿ “ಥ್ಯಾಂಕ್ಸ್‌” ಎಂದಳು. ದಿನೇಶ್‌ಸ್ನಾನ ಮಾಡಿದ ಮೇಲೆ ಬಾತನ್ನು ತೊಳೆದಿರಲಿಲ್ಲ. ತೊಳೆದು ಶುಭ್ರಮಾಡಿ, ಬಾತ್‌ಗೆ ಬಿಸಿನೀರನ್ನು ತುಂಬಿಸಿ ಕೋಣೆಗೆ ಹೋಗಿ, “ರೂತ್‌ನೀರು ರೆಡಿಯಾಗಿದೆ ಏಳು” ಎಂದೆ. ರೂತ್ ಎದ್ದಳು.

ರೂತ್ ಸ್ನಾನ ಮಾಡುವಾಗ ನಾನು ಅವಳ ರೂಮಲ್ಲೆ ಕೂತಿದ್ದೆ. ಭಾರತದ ಬಡತನದ ಬಗ್ಗೆ, ಚೈನಾ ಕ್ರಾಂತಿ ಬಗ್ಗೆ ಹಾಸಿಗೆ ಪಕ್ಕದಲ್ಲಿದ್ದ ಟೇಬಲಿನ ಮೇಲೆ ಪುಸ್ತಕಗಳಿದ್ದುವು. ಮಂಚಕ್ಕೆ ಎದುರಾಗಿ ಗೋಡೆಯ ಮೇಲೆ ಒಂದು ಬೆಳ್ಳಿಯ ಕ್ರಾಸ್ ಇತ್ತು. ಟೇಬಲಿನ ಮೇಲೆ ಸುರುವಾಲ ಹಾಕಿ ಜುಬ್ಬ ತೊಟ್ಟ ದಿನೇಶ್‌ನ ಚಿತ್ರವಿತ್ತು. ಅಲ್ಲೆ ಇದ್ದ ಅಲ್ಬಮ್ ಅನ್ನು ತೆರೆದು ನೋಡುತ್ತ ಹೋದೆ. ರೂತ್ ಪುಟ್ಟ ಹುಡುಗಿಯಾಗಿದ್ದಾಗಿನ ಚಿತ್ರಗಳು. ಅಜ್ಜನ ತೊಡೆಯ ಮೇಲೆ ಬೆಚ್ಚಗಾಗುವಂತೆ ನುಸುಳಿ ಕೂತಿದ್ದ ಚಿತ್ರವೊಂದು ನನಗೆ ತುಂಬ ಹಿಡಿಸಿತು. ಸ್ನಾನ ಮಾಡಿಬಂದ ರೂತ್‌ಗೆ ಏನು ಹೇಳಬೇಕೆಂದು ಮನಸ್ಸಿನಲ್ಲಿ ಬಗೆ ಬಗೆಯ ವಾಕ್ಯಗಳನ್ನು ಕಟ್ಟಿದೆ. ರಸುಲ್ ಎಲ್ಲ ಸರಿ ಮಾಡ್ತಾನೆ. ಯೋಚಿಸಬೇಡ. ಇಲ್ಲೆ ಇರು. ಡಿಪಾರ್ಟ್‌‌ಮೆಂಟಿನಲ್ಲಿ ಮತ್ತೆ ಕೆಲಸ ಮಾಡಬಹುದು. ಒಂದು ವಾರ ರಜ ಹಾಕಿ ಎಲ್ಲಾದರೂಹೋಗಿರು. ನಾನೂ ನಿನ್ನ ಜೊತೆ ಬೇಕಾದರೆ ಬರ್ತೇನೆ. ರಸುಲನ್ನೂ ನಿನಗಿಷ್ಟವಾದರೆ ಕರೆದುಕೊಂಡು ಹೋಗೋಣ. ದಿನೇಶ್‌ನನ್ನ ಮರೆತುಬಿಡು. ಅವನು ದುರ್ಬಲ. ಕೊಳಕ. ಇಂಥದು ಸಾಮಾನ್ಯವಾಗಿ ಆಗುತ್ತೆ. ನೀನಿನ್ನೂ ಅಪಕ್ವ ರೂತ್. ಇಂಡಿಯಾದಲ್ಲಿ ಬದುಕಿನ ಕ್ಷುಲ್ಲಕತೇನ್ನ ನೀನು ಎದುರಿಸಲಾರೆ. ಕಂಗಾಲಾಗಿ ಬಿಡುತ್ತಿ. ನಾವು ದರಿದ್ರರು, ನಾವು ಕೊಳಕರು. ಅಥವಾ ಹೊಟ್ಟಿಗಿಲ್ಲದೆ ನರಳುವವರ ಮಧ್ಯೆ ಮೆರೆಯುವ ಡಾಂಭಿಕರು. ಈ ಡಾಂಭಿಕರ ಕೈಯಲ್ಲಿ ನೀನು ಸಿಕ್ಕಿಬೀಳೋದು ಖಂಡಿತ. ರಸುಲ್‌ಇದಾನಲ್ಲ – ಅವನಿಗೆ ಇಂಡಿಯಾ ಗೊತ್ತು. ಎಲ್ಲವನ್ನೂ ಕೊರೆಯೊ ಹುಳಾನ್ನ ಅವ ಕಂಡಿದಾನೆ. ಪಾಕಕ್ಕೆ ಬಂದಿದಾನೆ. ಅವನೊಬ್ಬ ಭಂಡ ಯೋಗಿ. ಎಲ್ಲ ಕ್ಷುದ್ರಾಂತ ತಿಳಿದುನಗ್ತಾನೆ. ಸುಕ್ಕುಗಟ್ಟದ ಮಗುವಿನ ಮುಖದ ನಾವು ಹೊಸದೇನೂ ಕಲಿಯಲ್ಲ; ಹಳೇದೇನೂ ಮರೆಯಲ್ಲ. ಹೀಗೇ ಏನೇನೋ ಅಸ್ಪಷ್ಟವಾಗಿ ಯೋಚಿಸುತ್ತ, ಪರಿಸ್ಥಿತಿಯನ್ನು ನಾನು ಉತ್ಪ್ರೇಕ್ಷಿಸುತ್ತಿರಬಹುದೆಂದು ಅನುಮಾನಿಸುತ್ತ ಕೂತೆ. ರೂತ್‌ನ ಮೌನ ಪ್ರಾಯಶಃ ನನ್ನ ಸಂಕಟಕ್ಕೆ ಮುಖ್ಯ ಕಾರಣವಿರಬಹುದು.

ಅವಳ ಮಲಗುವ ಕೋಣೆಯಲ್ಲಿ ನಾನು ಕೂತಿರುತ್ತೇನೆಂದು ರೂತ್ ಪ್ರಾಯಶಃ ಊಹಿಸಿರಲಿಲ್ಲ. ಟವಲನ್ನು ಸುತ್ತಿಕೊಂಡು ಬೆತ್ತಲೆ ಬಂದಳು. ಎಷ್ಟು ಎಳೆಸಾದ ದೇಹ ಎನ್ನಿಸಿತು. ಅವಳ ನಡಿಗೆ, ನೋಟ, ಮಾತುಗಳು ನಿರ್ದಿಷ್ಟತೆಗೂ ಆ ದೇಹಕ್ಕೂ ಸಂಬಂಧವಿಲ್ಲವೆನ್ನಿಸಿ ನನ್ನ ಅಂತಃಕರಣ ಮಿಡಿಯಿತು. ಬಗ್ಗಿ ಎರಡು ಡ್ರೆಸ್ಸಿಂಗ್ ಗೌನ್‌ಗಳನ್ನು ಪೆಟ್ಟಿಗೆಯಿಂದ ತೆಗೆದಳು. ಒಂದನ್ನು ತಾನು ತೊಟ್ಟು ಇನ್ನೊಂದನ್ನು ನನಗೆ ಕೊಟ್ಟಳು. ಹಬೆಯೇಳುತ್ತಿದ್ದ ಶಾಂಪೂ ಮಾಡಿದ ಅವಳ ಶುಭ್ರವಾದ ಕೂದಲಿನ ವಾಸನೆ ಹಿತವಾಗಿತ್ತು. ಮೃದುವಾದ ರೇಷ್ಮೆಯ ಗೌನನ್ನು ಕೈಯಲ್ಲಿ ಹಿಡಿದು ಎದ್ದೆ; ಪ್ರಾಯಶಃ ಕಾಶ್ಮೀರದಿಂದ ದಿನೇಶ್ ಅವಳಿಗೆ ತಂದುಕೊಟ್ಟ ಗೌನಿರಬೇಕು. “ಡ್ರಾಯಿಂಗ್‌ರೂಮಿನ ಬೆಡ್ಡನ್ನು ನಿನಗೆ ಮಲಗಲು ರೆಡಿ ಮಾಡುತ್ತೇನೆ ಬಾ” ಎಂದು ಕಬರ್ಡ್‌ನಿಂದ ಬಿಳಿಯ ಶೀಟ್‌ಗಳನ್ನೂ ರಗ್ಗನ್ನೂ ತೆಗೆದಳು.

ಬಾಟಲಲ್ಲಿ ಒಂದಷ್ಟು ವ್ಹಿಸ್ಕಿ ಉಳಿದಿತ್ತು. ಸಂಗೀತ ನಿಂತಿತ್ತು. ವ್ಹಿಸ್ಕಿಯನ್ನು ಒಂದು ಗ್ಲಾಸಿಗೆ ಹೊಯ್ದುಕೊಂಡು ‘ನಿನಗಷ್ಟು ಕೊಡಲೆ’ ಎಂದೆ. ಬೇಡ ಎಂದಳು. ಮತ್ತೆ ‘ಎಸ್ ಪ್ಲೀಸ್‌’ ಎಂದಳು. ಅವಳಿಗೂ ಸುರಿದೆ. ನಾನು ರಸುಲ್ ಸೇರಿ ರೂಮನ್ನು ಕ್ಲೀನ್ ಮಾಡಿರುವುದನ್ನು ಕೃತಜ್ಞತೆಯಿಂದ ಗಮನಿಸಿದಳು. ಒದ್ದೆ ಕೂದಲಿನ ಸಿಕ್ಕು ಬಿಡಿಸುತ್ತ ನಿಧಾನವಾಗಿ ಹೇಳಿದಳು:

“ನಾನು ಇಂಡಿಯಾಕ್ಕೆ ಹೋಗ್ತಿದೇನೆ”.

ನಾನು ಅವಳ ಮುಖವನ್ನೇ ದಿಟ್ಟಿಸಿ ನೋಡಿದೆ. ರಸುಲ್ ಹೇಳಿದ್ದನ್ನು ನಾನು ಮರೆತಿರಲಿಲ್ಲ ಅವಳು ಹೋಗುವ ಅವಶ್ಯಕತೆಯಿಲ್ಲವೆಂದೆ. ರೂತ್ ಮಾತಾಡಲಿಲ್ಲ. ಅನುಭವದ ಗೆರೆಗಳಿಲ್ಲದ ಹುಡುಗಿಯ ಮುಖ; ತೆಳುವಾದ ಸೂಕ್ಷ್ಮ ತುಟಿಗಳು, ಗುಲಾಬಿ ಹೂಗಳ ಚಿತ್ರವಿದ್ದ ಪಿಂಕ್ ಬಣ್ಣದ ಗೌನಿನಲ್ಲಿ ಸುಂದರವಾಗಿ ಕಂಡಳು. ಇಂಡಿಯಾದ ಧೂಳು ತುಂಬಿದ ಗಾಡಿ ರಸ್ತೆಗಳು, ಬಿಸಿಲಿನಲ್ಲಿ ತಲೆಗೆದರಿ ಅಳುತ್ತ ಕೂತ ಬೆತ್ತಲೆ ಮಕ್ಕಳು ನಡುವೆ ಅವಳನ್ನು ಊಹಿಸಿಕೊಳ್ಳುವುದು ಕಠಿಣವೆನ್ನಿಸಿತ್ತು. ನೀನು ಸೋಲಬಹುದು ರೂತ್ ಎಂದು ಹೇಳಲು ಪ್ರಯತ್ನಿಸುತ್ತ ಅವಳ ಗಂಭೀರವಾದ ಮುಖ ಮುದ್ರೆಯನ್ನು ನೋಡಿದೆ. ಆದರೆ ಜೀವನದ ಸತ್ಯದಗಳಿಗೆ ಹೊಂದಿಕೊಳ್ಳಬೇಕೆನ್ನುವ ವಿವೇಕದ ಮಾತುಗಳು ನನ್ನ ಗಂಟಲಲ್ಲೆ ಉಳಿದವು. ಅವಳ ನಿರ್ಧಾರದಿಂದ ನನಗೆ ಸಂತೋಷವಾಗಿತ್ತೆಂಬುದು ನಿಜ. ಕೃತಜ್ಞತೆಯಿಂದ ಅವಳನ್ನು ನೋಡುತ್ತ ಗ್ಲಾಸನ್ನೆತ್ತಿ “ಚಿಯರ್ಸ್” ಎಂದೆ.

* * *