ಬೆಳಿಗ್ಗೆ ಇನ್ನೂ ೬ ಗಂಟೆ. “ಗುರುಪುರದ ದಲಿತ ಸೇವಾಶ್ರಮಕ್ಕೆ ಇಲ್ಲಿ ಇಳಿಯಿರಿ,” ಎಂದು ಸ್ಟೇಶನ್ನಿನಲ್ಲಿ ಬರೆದಿತ್ತು. ಇಳಿದವನು ನಾನೊಬ್ಬನೆ. ಗುರುಮೂರ್ತಿ ನನ್ನನ್ನು ಕರೆದುಕೊಂಡು ಹೋಗಲು ಬಂದಿರಲಿಲ್ಲ. ಮಾರನೇ ದಿನ ಮದುವೆಯಾಗಲಿದ್ದ ಗಂಡಲ್ಲವೇ ಎಂದು ಸಮಾಧಾನ ಹೇಳಿಕೊಂಡೆ.

ತಂಪಾದ ಗಾಳಿಯ್ಲಿ ಮುದಿಕುದುರೆ ನಿಧಾನವಾಗಿ ಜಟಕಾ ಎಳೆಯಿತು. ಬೋಳು ಬಯಲಿನಲ್ಲಿ ಧೂಳಿನ ರಸ್ತೆ – ಏರು ತಗ್ಗಿಲ್ಲದ ನೇರ ರಸ್ತೆ. ಆಶ್ಚರ್ಯ ತಿರುವು ಮುರುವುಗಳಿಗೆ ಆಸ್ಪದವಿಲ್ಲದ ಬಯಲನ್ನು ದಿಟ್ಟಿಸುತ್ತ ರಾತ್ರೆ ಪ್ರಯಾಣದಿಂದ ಸುಸ್ತಾಗಿದ್ದ ನಾನು ಮಂಕಾದೆ.

ಇಬ್ಬರು ಹೆಂಗಸರು ಬಿರುಸಾಗಿ ನಡೆಯುತ್ತಿದ್ದರು – ತಲೆ ಮೇಲೆ ಬುಟ್ಟಿ ಹೊತ್ತು; ಕೈಗಳನ್ನು ಬೀಸುತ್ತ. ಹಚ್ಚೆ ಕುಚ್ಚಿದ ಕೈಗಳು, ಹಸಿರು ಬಳೆಗಳು. ಮಾತಾಡುತ್ತಿದ್ದವಳ ಕಾಲುಗಳ ಕೆಳಗೆ ಧೂಳಿನ ನೆಲ ಒದ್ದೆಯಾಗುತ್ತಿದ್ದುದರಿಂದ ಅವಳು ನಡೆಯುತ್ತಲೇ ಉಚ್ಚೆ ಹೊಯ್ಯುತ್ತಿರಬೇಕು ಎಂದುಕೊಂಡೆ. ಅಲ್ಲಿ ಇಲ್ಲಿ ಮೊಟ್ಟುಗಳ ಪಕ್ಕ ಕಾದುನಿಂತ ಹಂದಿಗಳು. ಮೊಟ್ಟುಗಳ ಹಿಂದೆ ಗಂಡಸರು, ಹೆಂಗಸರು, ಮಕ್ಕಳು ಕುಕ್ಕುರು ಕೂತು ಮಾತಾಡುತ್ತಿದ್ದುದು ಆಮೇಲೆ ಕಂಡಿತು. ಈ ಊರಿನ ಜನ ವರ್ಣರಂಜಿತ ತೊಗಲು ಬೊಂಬೆಗಳಲ್ಲಿ, ರಾಮಾಯಣ ಭಾರತಗಳನ್ನು ಕಣ್ಣಿಗೆ ಕಟ್ಟಿಸುವುದರಲ್ಲಿ ಪ್ರಸಿದ್ಧರು ಎಂದು ಗುರುಮೂರ್ತಿ ಹೇಳಿದ್ದ.

ಒಂದೇ ಒಂದು ಮರ, ಗಿಡ, ಗುಡ್ಡ – ನೋಡುವಂಥದ್ದು ಏನೂ ದಾರಿಯಲ್ಲಿ ಇರಲಿಲ್ಲ. ಕುದುರೆ ಹೂಸಿತು. ಲದ್ದಿ ಹಾಕಿತು. ಚಾಲಕ ಬೀಡಿ ಹಚ್ಚಿ ಕೆಮ್ಮಿದ. ಗುರುಪುರ ಬಂದದ್ದೇ ಸೀನರಿ ಬದಲಾಯಿತು.

ಕಣ್ಣು ಹಾಯಿಸಿದಲ್ಲೆಲ್ಲ ಮರಗಳು – ಸಂಪಿಗೆ, ಪಾರಿಜಾತ, ಮಾವು, ಹಲಸು, ತೆಂಗು, ಬಿಲ್ವ, ಕಿತ್ತಳೆ, ಸಪೋಟ. ಮರಗಳ ಸಂದಿಯಲ್ಲಿ ನಾಟಿ ಹೆಂಚಿನ ಇಳಿಜಾರಾದ ಸೂರಿನ ಕಟ್ಟಡಗಳು. ಹಸಿರಾದ ಲಾನ್‌ಗಳ ಅಂಚಿನಲ್ಲಿ ಹೂವಿನ ಪಾತಿಗಳು, ಗೇಟಿನ ಎದುರೇ ಒದ್ದೆಯಾದ ಹಸಿರು ನೆಲದ ಮೇಲೆಲ್ಲ ಕೇಸರಿ ತೊಟ್ಟಿನ ಬಿಳಿ ಹೂವನ್ನು ಚೆಲ್ಲಿಕೊಂಡು ಕೊಡೆಯಂತೆ ನಿಂತ ಪಾರಿಜಾತ ಮರ. ತಡವಬೇಕೆನ್ನಿಸುವ ಅದರ ಅಷ್ಟಾವಕ್ರ ನಡು.

ಈ ಆಶ್ರಮಕ್ಕೆ ಹೊಸದಾಗಿ ಬಂದವರಿಗೆಲ್ಲ ಹೀಗೇ ಆಗುತ್ತದೆಂದು ಗುರುಮೂರ್ತಿ ಹೇಳಿದ್ದರೂ ನಾನು ಯಾಕೆ ಗಮನಿಸಲಿಲ್ಲ? ಮಾಸಲು ಬನೀನು ಹಾಕಿ. ಖಾಕಿ ಚಡ್ಡಿ ತೊಟ್ಟವನೊಬ್ಬ, ನನ್ನ ಟ್ರಂಕನ್ನು ಇಸಕೊಂಡು ಮುಂದೆ ನಡೆದ. ನನಗಾಗಿ ಸಿದ್ಧಪಡಿಸಿದ ರೂಮಿನಲ್ಲಿ ಟ್ರಂಕನ್ನಿಟ್ಟು ನಿಂತ. ಅವನಿಗೆ ಭಕ್ಷೀಸು ಕೊಡಬೇಕೋ ಬಾರದೋ ಎಂದು, ಜೇಬಲ್ಲಿ ಕೈಹಾಕಿ ಗೋಡೆಗೆ ಆತು ನಿಂತು, ಅವನನ್ನು ಅಸ್ಪಷ್ಟವಾಗಿ ನೋಡುತ್ತಿದ್ದಾಗಲೂ ನನಗೆ ಯಾಕೆ ಹೊಳೆಯಲಿಲ್ಲ? ಬಲವಾದ ಮಾಂಸಖಂಡಗಳ ಕಾಲು, ತೋಳು, ಚಿಕ್ಕದಾಗಿ ಕತ್ತರಿಸಿದ ಕೂದಲಿನ ತಲೆ, ಗಾಳಿ ಮಳೆ ಬಿಸಿಲುಗಳು ಕಚ್ಚಿದ ಒರಟಾದ ಮುಖ – ನನ್ನಿಂದ ಏನನ್ನೋ ನಿರೀಕ್ಷಿಸುವಂತೆ ಆತ ನಿಂತಿದ್ದಾನೆ? ಕೈ ಚೆಲ್ಲಿ, ಸ್ವಲ್ಪ ತಲೆಬಾಗಿ ನಿಂತ ಆತನ ನಿಲುವು, ಗರ್ವವಾಗಲಿ, ಸ್ವಾಭಿಮಾನವಾಗಲಿ ಇಲ್ಲದ ವ್ಯಕ್ತಿ ಈತ ಎನ್ನಿಸುವ ಹಾಗಿತ್ತು. ನಮ್ಮ ಚಪಲವನ್ನು ಕೆರಳಿಸಬಲ್ಲ ಇಂಥವರು ಆಶ್ರಮದಲ್ಲಿರುವುದು ಸಾಧ್ಯವೇ? ಒಂದು ಕಾಲನ್ನು ತುಸು ಮೇಲಕ್ಕೆತ್ತಿ, ಓಡಾಡುವ ಕಣ್ಣುಗಳಲ್ಲಿ ನನ್ನನ್ನು ತರುತ್ತ ಬಿಡುತ್ತ ನಿಂತಿದ್ದ ಅವನಲ್ಲಿ ಗುರುಮೂರ್ತಿ ಹೇಳದಿದ್ದ ಒಂದು ವಿವರ ಕಂಡದ್ದೇ ನನ್ನ ಸಂದಿಗ್ಧಕ್ಕೆ ಕಾರಣವಿರಬಹುದು; ನನ್ನನ್ನು ನೋಡುವಾಗ ಪ್ರಶ್ನಾರ್ಥಕವಾಗಿ ನೆರಿಗೆಯಾಗುವ ಹಣೆಯ ಮೇಲೆ ಹಚ್ಚೆ ಕುಚ್ಚಿತ್ತು. ಅವನ ಬಲವಾದ ತೋಳುಗಳ ಮೇಲೂ ಹಚ್ಚೆ ಇತ್ತು – ಹೆಣ್ಣಿನ ಚಿತ್ರ. ಪಾಯಶಃ ರಾಧೆಯದು.

“ಪಾರಿಜಾತ ಮರ ನಿಮಗೆ ಇಷ್ಟವಾದಂತೆ ಕಂಡಿತು. ಇಕೊಳ್ಳಿ – ಈ ಕಿಟಕಿಯಿಂದ ಅದು ಕಾಣಿಸುತ್ತೆ. ” – ಎಂದು ಆತ ರೂಮಿನ ಹಿಂದಿನ ಕಿಟಕಿ ಬಾಗಿಲು ತೆರೆಯುತ್ತಿದ್ದಂತೆಯೇ ಆತನ ಸುಸಂಸ್ಕೃತ ಧ್ವನಿ ಕೇಳಿ ನನಗೆ ಅವಮಾನವಾಯಿತು. ಗುರುಮೂರ್ತಿ ಹೇಳಿದ ಕತೆಗಳಲ್ಲಿ ದಿಗ್ಭ್ರಮೆಗೊಂಡ ಮಿಕ್ಕ ಹೊಸಬರಂತೆಯೇ ನಾನೂ ಕೂಡ “ನೀವು – ನೀವು ಚಿದಂಬರ ಸ್ವಾಮಿಗಳು” ಎಂದು ಉದ್ಗಾರ ತೆಗೆದೆ. ಆದರೆ ಕಾಲಿಗೆ ಬೀಳಲಿಲ್ಲ.

ಮೂಲೆಯಲ್ಲಿದ್ದ ಪೊರಕೆ ತಂದು, ಗೋಡೆ ಮೇಲೆ ಕಟ್ಟಿದ್ದ ಜೇಡರಬಲೆ ಗುಡಿಸಿ ಹಾಕುತ್ತ ಆತ ಹೇಳಿದ.

“ಹೌದು – ಹಾಗೆ ನನ್ನ ಕರೀತಾರೆ. ಆದರೆ ನನ್ನ ಹೆಸರು ನಾರಾಯಣ. ಈ ಹೊತ್ತಲ್ಲಿ ಆಶ್ರಮದವರೆಲ್ಲ ಗಿಡಗಳಿಗೆ ನೀರೆತ್ತಿ ಹಾಕುತ್ತಿರುತ್ತಾರೆ. ಸುಲಭವಾದ ಕೆಲಸವೆಂದು ಅತಿಥಿಸತ್ಕಾರ ನನಗೆ ಬಿಡುತ್ತಾರೆ. ನನಗೂ ವಯಸ್ಸಾಯಿತು ನೋಡಿ. ”

ಹೀಗೆ ಹೇಳಿ ಆತ ಕಣ್ಣು ಮಿಟುಕಿಸಿದನೆಂದು ನನಗೆ ಮುಜುಗರವಾಯ್ತು. ಗುರುಮೂರ್ತಿ ಹೇಳಿದ್ದ: ಅವರಿಗೆ ನಿಜವಾಗಿ ಎಪ್ಪತ್ತೈದು ವರ್ಷ. ಆದರೆ ಐವತ್ತಾದವರಂತೆಯೂ ಕಾಣುವುದಿಲ್ಲ.

ನನ್ನ ಮುಜುಗರ ದಿಗ್ಭ್ರಮೆಗಳಿಂದ ಆತ ಸುಖಪಡುತ್ತಿರಬಹುದು ಎಂದು ನನಗೆ ಕಸಿವಿಸಿಯಾಯಿತು. ಹೂಜಿಯಲ್ಲಿ ನೀರಿದೆಯೋ, ಬೆಡ್‌ಶೀಟು ಶುಭ್ರವಾಗಿದೆಯೋ ನೋಡುತ್ತ ಆತ ರೂಮಿನಲ್ಲಿ ಓಡಾಡುತ್ತಿದ್ದ.

“ಬನ್ನಿ, ಕಾಫಿ ಕುಡಿಯಿರಿ. ಆಮೇಲೆ ಸ್ನಾನಮಾಡಿ ತಿಂಡಿ ತಿಂದರಾಯಿತು. ”

ನಾನೇ ಏನಾದರೂ ಮಾತಾಡೋಣವೆಂದರೆ ಆತನೇ ಆಡಿಬಿಡುವುದೇ? ಅವನ ಜೊತೆ ಹೋದೆ. ವಿಶಾಲವಾದ ಶುಭ್ರವಾದ ಭೋಜನ ಶಾಲೆ. ಗೋಡೆಗೆ ಮಣೆಗಳನ್ನು ಅನಿಸಿಟ್ಟಿತ್ತು. ಗೋಡೆಯ ಮೇಲೆ ಯಾವ್ಯಾವ ತರಕಾರಿಯಲ್ಲಿ ಏನೇನು ವಿಟಮಿನ್‌ಗಳಿವೆಯೆಂಬ ಚಿತ್ರಪಟಗಳು. ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ – ಇತ್ಯಾದಿ ಗೀತೆಯ ಸಂದೇಶಗಳು. ಒಳಗೆ ಹೋಗಿ ಚಿದಂಬರ ಸ್ವಾಮಿ – ಊರಿನ ಜನ ಆತನ್ನು ಕರೆಯೋದು ಚಡ್ಡಿ ಸ್ವಾಮಿ – ಹೊಳೆಯುವ ಹಿತ್ತಾಳೆ ಲೋಟದಲ್ಲಿ ಬಿಸಿ ಬಿಸಿ ಫಿಲ್ಟರ್ ಕಾಫಿ ತಂದ. ನಾನು ಕಾಫಿ ಕುಡಿಯುವುದನ್ನು ಇಷ್ಟಪಟ್ಟು ಗಮನಿಸುತ್ತ ನಿಂತ.

“ಕೆಲಸವಿದೆ ಹೋಗ್ತೇನೆ. ಗುರುಮೂರ್ತೀನ್ನ ಕಳಿಸ್ತೇನೆ. ಸೋಮಾರಿ ಇನ್ನೂ ಎದ್ದಿರಲಿಕ್ಕಿಲ್ಲ. ಮದುವೆ ಗಂಡಲ್ಲವ?”

ಚಡ್ಡಿ ಸ್ವಾಮಿ ಮತ್ತೆ ಕಣ್ಣು ಮಿಟುಕಿಸಿದ – ನಾವಿಬ್ಬರೂ ಆಪ್ತ ಗೆಳೆಯರು ಎಂದು ನನಗೆ ಖಾತ್ರಿಯಾಗಿ ಅನ್ನಿಸಬೇಕು – ಹಾಗೆ. ಮರುಕ್ಷಣವೇ ಕಸಕಡ್ಡಿಗಳನ್ನು ಎತ್ತಿ ಹಾಕುತ್ತ ತುದಿಗಾಲಿನಲ್ಲಿ ಓಡಿದ.

ಹೆಗಲಿನ ಮೇಲೆ ಟವೆಲ್ ಎಸೆದುಕೊಂಡು, ಕಣ್ಣುಜ್ಜಕೊಳ್ಳುತ್ತ ರೂಮಿಗೆ ಬಂದ ಗುರುಮೂರ್ತಿಯನ್ನು ನೋಯಿಸಬೇಕೆನ್ನಿಸಿತು. ಎಲ್ಲರಂತೆ ನಾನೂ ಸ್ವಾಮಿಯಿಂದ ಇಂಪ್ರೆಸ್ ಆಗಬೇಕೆಂದೇ ಆತ ಸ್ಟೇಶನ್ನಿಗೆ ಬರದಿರಬಹುದು. ಈ ಸ್ವಾಮಿ ತಬ್ಬಲಿಯಾಗಿದ್ದ ಗುರುಮೂರ್ತಿಯನ್ನು ಸಾಕಿದವನಲ್ಲವೆ? – ಅದಕ್ಕೆ ಚುಚ್ಚುವಂತೆ ಹೇಳಿದೆ:

“ಈ ನಿನ್ನ ಸಂತ ಬೋರ್ ಕಣಯ್ಯ. ಮಿಸ್ಟಿಕಲ್ ಅನುಭವ ಆಗಕ್ಕೂ ಮನುಷ್ಯ ವಕ್ರವಾಗಿರಬೇಕು. ”

ಗುರುಮೂರ್ತಿ ನನ್ನ ಮಾತಿಗೆ ಒಪ್ಪಿಗೆ ಸೂಚಿಸುವಂತೆ ನಕ್ಕು ಬಿಡುವುದೇ? ಆಶ್ರಮದಲ್ಲಿ ಪ್ರತಿವರ್ಷ ಆಗುತ್ತಿರುವ ತೂತುಗಳನ್ನು ವಿವರಿಸಿದ. ಕತ್ತಲಾದ ಮೇಲೆ ಹುಡುಗರು ಕದ್ದು ಹೋಗಿ ಸಿನಿಮಾ ನೋಡುತ್ತಾರೆ; ಹೋಮೋಸೆಕ್ಷ್ಯುಯಲ್ ಆಗುತ್ತಾರೆ; ಕೆಲವು ಹುಡುಗಿಯರು ಕದ್ದು ಬಸುರಾದ್ದೂ ಇದೆ; ಆಶ್ರಮದ ಶಿಸ್ತನ್ನ ಅಧ್ಯಾಪಕ ವರ್ಗ ಇಷ್ಟಪಡಲ್ಲ; ತುಂಬ ರಾಜಕೀಯಾನೂ ಇದೆ – ಇತ್ಯಾದಿ – ನನ್ನ ವಿದ್ಯಾರ್ಥಿಯಾಗಿ ಕವಿತೆ ಬರೆಯಲು ತೊಡಗಿದ ಮೇಲೆ ಬೆಳೆಸಿಕೊಂಡ ಧೋರಣೆಗಳ ಮಾತಾಡಿದ. ಹಾಗೆಲ್ಲ ಆತನೇ ಹಾಸ್ಯ ಮಾಡುವಾಗ, ತನ್ನ ಆದರ್ಶ ಬಿಟ್ಟು ಕೊಡದೆ ನಲವತ್ತು ವರ್ಷಗಳಿಂದ ಒಂದೇ ಸಮನೆ ದುಡಿಯುತ್ತಿರುವ ಚಿದಂಬರ ಸ್ವಾಮಿಯನ್ನು ನಾನು ಹೊಗಳಬಹುದೆಂದು ಗುರುಮೂರ್ತಿ ಆಸೆಪಟ್ಟಿದ್ದಿರಬಹುದೇ? ನನ್ನನ್ನು ಅನುಕರಣೆ ಮಾಡುವ ಅವನ ಮಾತಿನ ಧಾಟಿಯಿಂದ ನನಗಾಗುತ್ತಿರುವ ರಗಳೆಯನ್ನು ಸೂಚಿಸಲು ಸೂಟ್‌ಕೇಸಿನಿಂದ ಟವಲ್, ಸೋಪ್‌ಬಾಕ್ಸ್‌ಗಳನ್ನು ಹುಡುಕುವುದರಲ್ಲಿ ಮಗ್ನನಾದೆ.

ಸ್ನಾನ ಮುಗಿದ ಮೇಲೆ ಉಪಾಹಾರಕ್ಕೆ ಹೋಗಬೇಕಿತ್ತು. ಬಟ್ಟೆ ಬದಲಾಯಿಸುವಾಗ ಗುರುಮೂತಿ ಹೇಳಿದ:

“ನಿಮ್ಮನ್ನ ನೋಡೋಕೆ, ಶ್ರೀಕಂಠಶರ್ಮ ಬರ್ತಿದ್ದಾರೆ. ಆಶ್ರಮದ ವ್ಯವಹಾರವೆಲ್ಲ ಆತನದೇ. ಗ್ರಾಂಟು ಪಾಂಟು, ಪಬ್ಲಿಸಿಟಿ, ರಾಜಕೀಯ – ಎಲ್ಲ, ಬ್ರಹ್ಮಚಾರಿ. ನಾನು ಉತ್ತರಾಧಿಕಾರಿ ಆಗ್ದೇ ಇರೋದರಿಂದ ಮುಂದೆ ಆತನೆ ಆಗೋದು. ಆಶ್ರಮ ಶುರುವಾದಾಗ್ನಿಂದ ಇದ್ದಾನೆ… ಸ್ವಾಮಿಗಳಿಗೆ ಈತ ಕಾಂಟ್ರಾಸ್ಟ್, ಆದರೆ ಆಶ್ರಮ ನಡೆಯೋಕ್ಕೆ ಅಗತ್ಯವಾದ ಕಾಂಟ್ರಾಸ್ಟ್…. ” ಕೊನೆಯ ಮಾತು ನನ್ನ ಭಾಷೆಯ ಅನುಕರಣೆಯಾಗಿತ್ತು.

“ಉಪಾಹರಕ್ಕೆ ಮುಂಚೆ ಆಶ್ರಮ ಸುತ್ತಿ ಬರೋಣ ಬರ್ರಿ‍… ” ಶ್ರೀಕಂಠಶರ್ಮ ರೂಮಲ್ಲಿ ಪ್ರತ್ಯಕ್ಷನಾದ. “ನಾನು ಸ್ನಾನ ಮಾಡಿ ಬರ್ತೀನಿ ಸಾರ್” ಎಂದು ಗುರುಮೂರ್ತಿ ಹೋದ. ಕಡುಕಪ್ಪು ಬಣ್ಣದ ಮುಖದಲ್ಲಿ ಕೆಂಪು ಕಣ್ಣುಗಳು, ಉಬ್ಬಿದ ಕತ್ತು, ಬಲಿಷ್ಠ ತೋಳುಗಳು – ಈ ಶರ್ಮ ಜಟ್ಟಿ ಕೂಡ ಎಂಬುದು ಆಮೇಲೆ ತಿಳಿಯಿತು. ಹಣೆ ಮೇಲೆ ವಿಭೂತಿ, ಕೊರಳಲ್ಲಿ ದೊಡ್ಡ ಗಾತ್ರದ ರುದ್ರಾಕ್ಷಿ ಸರ – ಚಿದಂಬರ ಸ್ವಾಮಿಗೆ ಜನಿವಾರ ವಿರಲಿಲ್ಲ, ಈತನಿಗೆ ಇತ್ತು.

ನಾನು ಊಹಿಸಿದ್ದನ್ನೆಲ್ಲ ಆತ ಮಾಡಿದ. ಆಫೀಸಿಗೆ ಕರೆದುಕೊಂಡು ಹೋಗಿ, ಚಿದಂಬರ ಸ್ವಾಮಿಯನ್ನ ಹೊಗಳಿ ಪತ್ರಿಕೆಗಳಲ್ಲಿ ಬಂದ ಲೇಖನಗಳನ್ನೆಲ್ಲ ತೋರಿಸಿದ. ಉರಿಸಿದ ಊದುಬತ್ತಿ, ಹಸಿಗೋಂದುಗಳು ಬೆರೆತ ವಾಸನೆಯ ಆಫೀಸು ಬಿಟ್ಟ ಮೇಲೆ ಆಶ್ರಮ ಸುತ್ತಿದ್ದಾಯಿತು. ಜ್ಯೂನಿಯರ್ ಕಾಲೇಜಿಗಾಗಿ ಅವನು ಸರ್ಕಾರಾನ್ನ ಕಾಡಿ, ಬೇಡಿ ಸ್ಯಾಂಕ್ಷನ್ ಮಾಡಿಸಿಕೊಂಡ. ಲ್ಯಾಬೊರೇಟರಿ ಉಪಕರಣಗಳು (“ಇಂಥ ಮೈಕ್ರೊಸ್ಕೋಪುಗಳು ಬೇರೆ ಯಾವ ಕಾಲೇಜಿನಲ್ಲೂ ಇರಲ್ಲ ಸಾರ್”), ಪ್ರೈಮರಿ, ಮಿಡಲ್, ಹೈಸ್ಕೂಲ್ ಕಟ್ಟಡಗಳು, ಲೈಬ್ರರಿ, ಉಪಾಧ್ಯಾಯರ ವಸತಿ ಗೃಹಗಳು, ಹಾಸ್ಟೇಲುಗಳು, ಚಿದಂಬರಸ್ವಾಮಿ ತನ್ನ ಮಾತೃಶ್ರೀ ಹೆಸರಲ್ಲಿ ಪತಿತೆಯರ ಸೇವೆಗಾಗಿ ಕಟ್ಟಿದ ‘ಕಲ್ಯಾಣಮ್ಮ ಗೃಹ’, ಗೋಶಾಲೆ, ಅಡಿಗೆಗೆ ಬೇಕಾದ ಗ್ಯಾಸನ್ನೆಲ್ಲ ಕೊಡುವ ಗೋಬರ್ ಗ್ಯಾಸ್ ಪ್ಲಾಂಟ್ – ಇತ್ಯಾದಿ ತೋರಿಸಿದ.

ಚಿದಂಬರ ಸ್ವಾಮಿ ಗೋಶಾಲೆಯಲ್ಲಿ ದನಗಳ ಮೈ ತೊಳೆಯುತ್ತಿದ್ದ. ಶ್ರೀಕಂಠಶರ್ಮ ನನ್ನನ್ನು ಅಲ್ಲಿ ತುಸ ನಿಲ್ಲಿಸಿ. “ಮಹಾ ಕರ್ಮಯೋಗಿ, ಅವರಿಗೆ ಎಪ್ಪತ್ತೈದು ವರ್ಷವೆಂದು ಊಹಿಸುತ್ತೀರಾ?” ಎಂದ. ಪಿಸುಮಾತಿನಲ್ಲಿ – ಆದರೆ ಸ್ವಾಮಿಯ ಗಮನಕ್ಕೂ ಬರಬೇಕು – ಹಾಗೆ. ಆಶ್ರಮದ ಹುಡುಗರೆಲ್ಲ ಶುಭ್ರವಾದ ಮುಂಡು ತೋಳಿನ ಬಿಳಿ ಅಂಗಿ, ಬಿಳಿ ಪಂಚೆ ಉಟ್ಟು, ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಹುಡುಗಿಯರು ಬಿಳಿ ಸೀರೆಯುಟ್ಟು, ಕತ್ತು ಮುಚ್ಚುವ ಬಿಳಿ ಕುಪ್ಪಸ ತೊಟ್ಟು, ಹೆರಳನ್ನು ಬಿಗಿದು ಕಟ್ಟಿ ತೋಟಕ್ಕೆ ನೀರೆರೆಯುತ್ತಿದ್ದರು. ಹುಡುಗರು ಗೊಬ್ಬರ ಹಾಕಿ, ಹುಡುಗಿಯರು ನೀರೆರೆಯುತ್ತಿದ್ದ ಗಿಡಗಳು ಮರಗಳು ಹೂಗಳನ್ನು ಅರಳಿಸಿಕೊಂಡಿದ್ದವು. ಗೊಬ್ಬರದ ವಾಸನೆ ಜೊತೆ ಕೆಂಡಸಂಪಗೆ ವಾಸನೆ ಬೆರೆತಿತ್ತು. ಎರಡು ಕೈಗಳಲ್ಲೂ ಬಕೆಟುಗಳನ್ನು ಎತ್ತಿಕೊಂಡು ನೀರು ತರಲು ಓಡುತ್ತಿದ್ದ ಚಿದಂಬರ ಸ್ವಾಮಿ ನನ್ನ ಹತ್ತಿರ ಶರ್ಮ ಮಾತಾಡುತ್ತಿರುವುದನ್ನು ಗಮನಿಸಿ, ಕಣ್ ಮಿಟುಕಿಸಿದ – ಅವನ ಮಾತಿಗೆ ನಾನು ಬೆಲೆ ಕೊಡಬೇಕಿಲ್ಲ ಎನ್ನುವಂತೆ.

ಆಶ್ರಮವನ್ನು ವಿವರಿಸುತ್ತ ನಡೆಯುವಾಗ ಶ್ರೀಕಂಠಶರ್ಮ ಯಾಕೆ ಅಷ್ಟು ಗಟ್ಟಿಯಾಗಿ ಮಾತಾಡಬೇಕು, ಅಥವಾ ಮಸಲತ್ತು ಮಾಡುವನಂತೆ, ನನ್ನ ಕಿವಿ ಕಚ್ಚು ಹಾಗೆ ಹತ್ತಿರ ಬಂದು ಪಿಸುಗುಟ್ಟಬೇಕು – ಇದಕ್ಕೆ ಇನ್ನೊಂದು ಕಾರಣವೂ ಇದೆ ಎಂಬುದು ಹೊಳೆಯಿತು. ಆತ ಎಡಗಿವಿಯಲ್ಲಿ ಕಿವುಡಾಗಿರಬಹುದು ಎಂಬುದು ಅವನು ಸದಾ ನನ್ನನ್ನು ತನ್ನ ಬಲಗಿವಿಯ ಪಕ್ಕದಲ್ಲೇ ಇರಿಸಿಕೊಳ್ಳಲು ಮಾಡುತ್ತಿದ್ದ ಪ್ರಯತ್ನದಿಂದ ನಾನು ಊಹಿಸಿದೆ.

“ಇದೇ ಉಗುಳು ಸ್ವಾಮಿಗಳ ಸಮಾಧಿ. ”

ಶ್ರೀಕಂಠಶರ್ಮ ಕೈಮುಗಿದು ಕಣ್ ಮುಚ್ಚಿ ನಿಂತ.

ಸುತ್ತಲೂ ಬಿಲ್ವವನ. ಅದರ ಹಿಂದೆ ಬಿಳಲುಗಳನ್ನೆಲ್ಲ ನೆಲಕ್ಕೆ ಕಳಿಸುತ್ತ ಕೆದರಿಕೊಂಡು, ಹರಡಿಕೊಂಡು, ಚಿಗುರುತ್ತ, ಒಣಗುತ್ತ ನಿಂತ ಆಲ. ಅದರ ಪಕ್ಕಕ್ಕೇ ಕೆಮ್ಮಣ್ಣಿನ ಮತ್ತು ಸುಣ್ಣದ ಪಟ್ಟೆಗಳನ್ನು ಎಳೆದ ಗುಡಿ. ಊರಿದ ರಟ್ಟೆಯ ಥರ. ಆಲದ ಬಲವಾದ ಒಂದು ಬಿಳಲು ಗುಡಿಯ ಎಡ ಪಾರ್ಶ್ವವನ್ನು ಅಮುಕುತ್ತಿತ್ತು. ಗುಡಿಯ ಒಳಗೆ ಕೌಪೀನ ಮಾತ್ರ ಧರಿಸಿದವನೊಬ್ಬನ ಫೋಟೊ ಇತ್ತು. ಆತನ ಎರಡು ಕೈಗಳೂ ಮೇಲಕ್ಕೆತ್ತಿದ್ದವು. ಬೆರಳುಗಳು ಯಾವ ಪರಿಚಿತ ಮುದ್ರೆಯಲ್ಲೂ ಇರದೆ, ತಲೆಗೂದಲಂತೆಯೇ ಕೆದರಿದ್ದವು. ಚೂರು ಎತ್ತಿದ ಮುಖದ ಮೇಲೆ ಬೆಳೆದ ಗಡ್ಡ ಜಡೆಗಟ್ಟಿ ಎದೆಯ ಮೇಲೆ ಕಪ್ಪು ಸರ್ಪಗಳಂತೆ ಚಳಿ ಬಿದ್ದಿದ್ದವು. ಎತ್ತಿದ ಕೈಗಳು ಮತ್ತು ಮುಖ ಪರವಶತೆ ಸೂಚಿಸಿದರೆ, ಒಂದು ಕಾಲು ಮುಂದು ಮಾಡಿ, ಆತ ಕೂತ ಭಂಗಿ ಮಾತ್ರ ಇನ್ನೇನು ನೆಗೆದು ಬಿಡುತ್ತಾನೆ ಎನ್ನಿಸುವಂತಿತ್ತು.

ನಾನೊಂದು ಸಭೆ ಎನ್ನಿಸುವ ಥರ, ಶ್ರೀಕಂಠಶರ್ಮ ಗಟ್ಟಿಯಾಗಿ ವ್ಯಾಕರಣ ಬದ್ಧವಾಗಿ ಇದ್ದಕ್ಕಿದ್ದಂತೆ ವಿವರಿಸಲು ಶುರು ಮಾಡಿದ:

ಉಗುಳು ಸ್ವಾಮಿಗಳು ಸಮಾಧಿಯಲ್ಲಿದ್ದಾಗ ಫಾರಿನರ್ ಒಬ್ಬ ಈ ಫೋಟೋ ಹೇಗೆ ತೆಗೆದುಕೊಂಡ ಇತ್ಯಾದಿ – ಅವರು ಹೀಗೆ ಕೂತಿದ್ದಾಗ ಸರ್ಪ ಅವರ ಮೈ ಮೇಲೆ ಹರಿದದ್ದನ್ನು ಕಣ್ಣಾರೆ ಶರ್ಮ ನೋಡಿದ್ದಾನೆ. ಹೆಗಲ ಮೇಲೆ ಹಕ್ಕಿಗಳು ಬಂದು ಕೂಗುತ್ತಿದ್ದುದನ್ನೂ ನೋಡಿದ್ದಾನೆ. ಆದರೆ ಉಗಳು ಸ್ವಾಮಿಗಳು ನಿರ್ವಿಕಲ್ಪ ಸಮಾಧಿಯಲ್ಲಿರುತ್ತಿದ್ದರು – ಈ ಜಗತ್ತಿನ ಪರಿವೆಯೇ ಇಲ್ಲದೆ. ಇವನ ಗುರುವನ್ನ ಚಡ್ಡೀಸ್ವಾಮಿ ಎಂದು ಕರೆದಂತೆ, ಜನ ‘ಈ ಅವಧೂತರನ್ನು ‘ಉಗುಳುಸ್ವಾಮಿ ಅಂತ ಕರೀತಿದ್ದರು. ಅವರ ನಿಜವಾದ ಹೆಸರು ಮುರುಘರಾಜೇಂದ್ರ. ಪೂರ್ವಾಶ್ರಮದ ಹೆಸರಾಗಲೀ, ಇತಿಹಾಸವಾಗಲೀ ಯಾರಿಗೂ ತಿಳಿಯದು. ಅದೊಂದು ರಹಸ್ಯ – “ನಾವದನ್ನು ಕೆದಕಬಾರದು, ಕೆದಬಾರದು, ಋಷಿಮೂಲ, ನದೀಮೂಲ ಹುಡುಕಬಾರದು ಅಂತ ಹಿರಿಯರು ಯಾಕೆ ಹೇಳ್ತಾ ಇದ್ದರು ಹೇಳಿ? ಅವರು ಸಿದ್ಧರು. ಮಹಾನುಭಾವರು – ಅಷ್ಟು ಸಾಕು ನಮಗೆ. ಅಲ್ಲವೇ? ತಿಳಿದವರು ನೀವು – ಹೇಳಿ. ಅವರು ಕೈವಲ್ಯ ಪಡೆದು ಮೂವತ್ತೈದು ವರ್ಷಗಳಾದವು. ಅವತ್ತು ಏಕಾದಶಿ, ಮಾಘಕಾಲ… ”

ನನ್ನ ಗಮನವೆಲ್ಲ ಫೋಟೋದ ಮೇಲಿತ್ತು. ಹುಚ್ಚೋ, ಪರವಶತೆಯೋ, ಉನ್ಮಾದವೋ – ಆ ಬೆರಗಾದ ಕಣ್ಣುಗಳನ್ನು ಏನೆಂದು ತಿಳಿಯುವುದು? ತೆರೆದ ಬಾಯಲ್ಲಿ, ಮೇಲ್ತುಟಿಯನ್ನು ಸ್ವಲ್ಪ ಎತ್ತಿದ ಹಲ್ಲುಗಳು – ಪ್ರಾಣಿಯ ಆರೋಗ್ಯವಾದ ಹಲ್ಲುಗಳು ಅವು. ಎತ್ತಿದ ಸೊಂಟದಲ್ಲಿ ಕೌಪೀನದ ಉಬ್ಬು ಕಣ್ಣನ್ನು ಸೆಳೆಯುವಂತಿತ್ತು. ತಲೆ ಹಿಂದೆ ಬಾಗಿದ್ದರೆ, ಸಪೂರವಾದ ಮೈ ಮುಂದೆ ಮುಗ್ಗರಿಸಿದಂತಿತ್ತು. ನೆಗೆಯಲು ಏಳುತ್ತಿರುವಂತೆ ಕೂತಿದ್ದ. ಎದೆಗೆ ಮಡಿಸಿಕೊಂಡು, ನೆಲವನ್ನು ತುದಿಗಾಲಲ್ಲಿ ಒತ್ತಿದ್ದ ಕಾಲಿನ ಮಾಂಸಖಂಡಗಳು ಕತ್ತದ ಹುರಿಯಂತಿದ್ದವು. ಕೈ ಮುಗಿಯದೆ ಕುತೂಹಲದಿಂದ ನೋಡುತ್ತ ನಿಂತ ನನ್ನ, ಶರ್ಮ ವಾರೆಗಣ್ಣಿಂದ ಪರೀಕ್ಷಿಸುತ್ತ ಹೇಳಿದ :

“ಮಹಾನುಭಾವರು, ನಿಯಮಾತೀತರು, ಅವಧೂತರು. ”

ಉಗಳು ಸ್ವಾಮಿಯ ಹಿಂಸೆಯನ್ನು ವ್ಯಂಗ್ಯದಿಂದ ಗೆಲ್ಲಲು ಯತ್ನಿಸುತ್ತಿದ್ದ ನನ್ನ ಕವಿ ಹತ್ತಿರ ಬಂದು ಗದ್ಯದ ಕಂಠದಿಂದ ಶ್ರೀಕಂಠಶರ್ಮ ಪಿಸುಗುಟ್ಟಿದ:

“ಅವರು ಕಂಡವರ ಮುಖಕ್ಕೆ ಥತ್ ಎಂದು ಉಗಿಯುವುದಂತೆ. ಬಿಟ್ಟರೆ ಮಾತಿಲ್ಲ. ಫಾರಿನರ್ ಕೂಡ ಉಗಿಸಿಕೊಂಡ, ಸ್ವಾಮಿ. ಅದೇ ಅವರ ಪ್ರಸಾದ; ನಮ್ಮ ಪ್ರಶ್ನೆಗಳಿಗೆ ಅವರ ಉತ್ತರ. ” ಈಗಲೂ ಚಡ್ಡೀ ಸ್ವಾಮಿಗಳಿಗೆ ಅವರು ಕನಸಲ್ಲಿ ಕಾಣಿಸಿಕೊಳ್ಳುತ್ತಾರೆ. ಉಗಿಯುತ್ತಾರೆ. ಮತ್ತೆ ಸ್ವಲ್ಪ ದೂರ ನಿಂತು, ವಿಭೂತಿ ಬಳೆದ ಕತ್ತನ್ನು ಹೆಮ್ಮೆಯಲ್ಲಿ ಎತ್ತಿ ರುದ್ರಾಕ್ಷಿಸರವನ್ನು ಸುತ್ತುತ್ತ ಗಟ್ಟಿಯಾಗಿ ವಿವರಿಸಿದ: ವೀರಶೈವ ಧರ್ಮದ ಷಟ್‌‌ಸ್ಥಲಗಳಲ್ಲಿ ಮೇಲಿನ ಸ್ಥಲ ಮುಟ್ಟಿ ಜಾತಿ ಮತಗಳನ್ನೆಲ್ಲ ಮೀರಿದ ಅವಧೂತ ಈ ಉಗುಳುಸ್ವಾಮಿ ಎಂಥವರೆಂದರೆ ಶೂನ್ಯ ಸಿಂಹಾಸನ ಏರಲು ಬಂದ ಅಲ್ಲಮರ ಹಾಗೆ. “ಪ್ರಭುದೇವರು ಹೇಗೆ ಬಂದರು ಹೇಳಿ? ತಿಳಿದ ನಿಮ್ಮಂಥವರಿಗೆ ವಿವರಿಸಬೇಕೆ?” ಆದರೂ ಶರ್ಮ ವಿವರಿಸಿದ. ಕೆದರಿದ ತಲೆಯ, ಮುಕ್ತ ಕೇಶದ, ಹಣೆಯ ಬುಗುಟಿನ, ಎಡಹಿ ಬೊಟ್ಟೊಡದ ಗಾಯದ – ಇತ್ಯಾದಿ ಇತ್ಯಾದಿ. ಎರಡೂ ಕೈಗಳನ್ನೂ ಎತ್ತಿ ಪರವಶನಾದವನಂತೆ ಕಣ್ಣುಮುಚ್ಚಿ ಕೋಟ್ ಮಾಡಿದ “ಉಂಡಾಡಿ ಜಂಗಮರಿಗಾದರೋ ಈ ಪ್ರಭುದೇವರು ಕಂಡದ್ದು ಅನಾಚಾರಿಯಾಗಿ! ಇಲ್ಲಿರೋ ಲಿಮಗಾಯಿತ ಮಠದವರಿಗೂ ಈ ಉಗಳು ಸ್ವಾಮಿ, ಸಾರ್, ಹಾಗೇ ಕಂಡರು. ಮಹತ್ತನ್ನು ಗುರುತಿಸಲೂ ಕಣ್ಣು ಬೇಕಲ್ಲ?” ಇವರ ಚಡ್ಡಿ ಸ್ವಾಮಿಗಳಿಗೆ ಮಾತ್ರ ಬಸವನಿಗಿದ್ದಂಥ ಕಣ್ಣಿತ್ತು. ಗುರುತಿಸಿದರು. ಉಗಿಸಿಕೊಂಡರು. ಆಶ್ರಮ ಕಟ್ಟಿದರು.

“ಆದರೂ ಲಿಂಗಾಯಿತರಿಗೆ ಜಾತಿ ಬುದ್ಧಿ ಎಲ್ಲಿ ಹೋಗುತ್ತೆ – ಹೇಳಿ. ” ನಾನು ಬ್ರಾಹ್ಮಣ ಹಿತೈಷಿಯಾಗಿರಲೇಬೇಕು ಎಂದು ಆತ ಎಣಿಸಿದಂತಿತ್ತು – ಇದ್ದಕಿದ್ದಂತೆ ದನಿ ತಗ್ಗಿಸಿ ಪಿಸುಗುಟ್ಟಿದ ಕ್ರಮದಲ್ಲಿ. ಅವರ ಮಕ್ಕಳಿಗಾಗಿಯೇ ಇವರು ಆಶ್ರಮ ಕಟ್ಟಿದರೂ, ಅವರ ಬ್ರಹ್ಮದ್ವೇಷ ನಾಶವಾಗಲಿಲ್ಲ. ಮೂರು ಸಲ ಚಡ್ಡಿ ಸ್ವಾಮಿಗಳನ್ನು ಕೊಲ್ಲೋಕೆ ಪ್ರಯತ್ನಿಸಿದರು. ಶರ್ಮ ತಪ್ಪಿಸಿದ. ಅದೊಂದು ದೊಡ್ಡ ಕಥೆ – ಅದನ್ನ ಆಮೇಲೆ ಹೇಳ್ತಿನಿ ಎಂದು ಶರ್ಮ ಮುಖ್ಯ ಕಥೆಗೆ ಮತ್ತೆ ತನ್ನ ಉರುಳುಗ ಗಟ್ಟಿ ಮಾತಿನ ಧಾಟಿಯಲ್ಲಿ ಹಿಂದಿರುಗಿದ.

ಚಿದಂಬರ ಸ್ವಾಮಿಗಳನ್ನ ಇಲ್ಲಿಗೆ ಕರೆಸಿಕೊಂಡವರೂ ಈ ಉಗುಳು ಸ್ವಾಮಿಗಳೇ. ಅದನ್ನು ಶರ್ಮ ನನ್ನ ಕಣ್ಣಿಗೆ ಕಟ್ಟಿಸಿದ : ವೈರಾಗ್ಯ ಪ್ರಾಪ್ತಿಯಾಗಿ ಚಡ್ಡಿ ಸ್ವಾಮಿಗಳು ಬದರಿಕಾಶ್ರಮಕ್ಕೆಂದು ಹೊರಟಿದ್ದಾರೆ. ತುಮಕೂರಿನ ಛತ್ರದಲ್ಲಿ ಮಲಗಿದ್ದಾರೆ. ಬ್ರಾಹ್ಮಿ ಮುಹೂರ್ತ. ಆಗ ಅಪ್ಪಣೆಯಾಯಿತು: ಬಾ, ಇಲ್ಲಿ ಕಟ್ಟು. ಉತ್ತರಾಭಿಮುಖವಾಗಿ ನಡೆದು ಬಾ. ಇಲ್ಲೊಂದು ಬಿಲ್ವವನ ಇದೆ. ಆಲದ ಮರ ಹತ್ತಿ ನಾನು ಕೂತಿರುತ್ತೇನೆ. ನಿನಗಾಗಿ ಕಾದಿರುತ್ತೇನೆ.

ಬಂದರು. ಕೈಂಕರ್ಯ ಆರಂಭವಾಯಿತು. ಮೊದಲು ಅವರ ಸಹಾಯಕ್ಕೆ ಬಂದ ಶರ್ಮನೂ ಒಬ್ಬ ಪರದೇಶಿಯೇ. ಆಚಾರವಂತ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ್ದು, ತಾಯಿ ತಂದೆಯಿಬ್ಬರೂ ಪ್ಲೇಗಲ್ಲಿ ಸತ್ತರು…..

ನನ್ನ ಒಳಗೆ ಏಳುತ್ತಿರಬಹುದಾದ ಪ್ರಶ್ನೆಗಳನ್ನು ತಾನೇ ಕಲ್ಪಿಸಿಕೊಂಡು ತಾನೇ ಉತ್ತರ ಕೊಟ್ಟ : ಹೌದು. ಬರೀ ಉಗುಳೋದು ಮಾತಿಲ್ಲ. ಸ್ವತಃ ತಾನು ಕರ್ಮಾತೀತನಾಗಿ ಇತರರನ್ನು ಫಲಾಪೇಕ್ಷೆಯಿಲ್ಲದ ಕರ್ಮದಲ್ಲಿ ತೊಡಗಿಸುವ ಉಗುಳು ಸ್ವಾಮಿಗಳ ಅಪ್ಪಣೆಯನ್ನೆಲ್ಲ ಈಗಲೂ ಚಡ್ಡಿ ಸ್ವಾಮಿಗಳು ನೆರವೇರಿಸುತ್ತಾರೆ. ಶರ್ಮಾದೂ ಸ್ವಾಮಿಗಳದ್ದೂ ಅದೇ ಥರದ ಇನ್ನೊಂದು ಸಂಬಂಧ ಅಷ್ಟೆ. ಚಡ್ಡಿ ಸ್ವಾಮಿಗಳು ಮೂಲ ವಿಗ್ರಹವಾದರೆ, ಶರ್ಮ ಉತ್ವಸ ಮೂರ್ತಿ. ಬೇಕಲ್ಲ ಆಫೀಸುಗಳನ್ನು ಅಲೆದು ಗ್ರಾಂಟ್ ತರಕ್ಕೆ ಒಬ್ಬರು? “ಇನ್ನೂ ಟಿ. ಸಿ. ಎಚ್. ಟ್ರೈನಿಂಗ್ ಸ್ಕೂಲಿನ ಗ್ರಾಂಟ್‌ಬಂದಿಲ್ಲ ಸಾರ್. ಮಠದವರು ಏನೋ ಕೊಕ್ಕೆ ಹಾಕಿದ್ದಾರೆ. ನಿಮಗೆ ಡಿ. ಪಿ. ಐ. ಗೊತ್ತಂತೆ – ಆಶ್ರಮದ ಸೇವಾರ್ಥ ತಾವೊಂದು ಮಾತು ಹೇಳಬೇಕು. ಡಿ. ಪಿ. ಐ. ಯಾವ ಜನವೋ? ಈಚೆಗೆ ಹೆಸರಿಂದ ಜಾತಿ ಗೊತ್ತಾಗೋದೇ ಇಲ್ಲ. ” ಶರ್ಮ ಸ್ನೇಹ ಜಿಗುಪ್ಸೆಗಳನ್ನು ಬೆರೆಸಿ ನಕ್ಕು ಮುಂದುವರಿಸಿದ :

“ನಮ್ಮ ಸ್ವಾಮಿಗಳಿಗೆ ಈಚಿಗೆ ರಾಜಕೀಯದ ಆಳ ಅಗಲ ಗೊತ್ತಾಗಲ್ಲ – ಸಾರ್, ಮಹಾ ಸಾತ್ವಿಕರು. ಅವರು ಕ್ಷೇತ್ರ ಸಂನ್ಯಾಸ ಸ್ವೀಕರಿಸಿ ಈಗ ಹತ್ತು ವರ್ಷವಾಯ್ತು. ಆಶ್ರಮದ ಗಡಿಬಿಟ್ಟು ಅವರು ಹೋಗುವುದಿಲ್ಲ. ಈ ಗಡಿ ಎಷ್ಟು ಬೆಳೆಯುತ್ತೋ ಅಷ್ಟಕ್ಕೆ ಮಾತ್ರ ಅವರ ಪವಿತ್ರ ಪಾದಗಳ ಸ್ಪರ್ಶ ಲಾಭ. ಈ ಬೆಳಸೋ ಕೆಲಸ ನಮ್ಮ – ನಿಮ್ಮಂಥವರದು.

ಆದರೆ ಕಾಲ ಕೆಟ್ಟಿದೆ ಸಾರ್. ಜನಕ್ಕೆ ಸೇವೆ ಬೇಕು. ಆದರೆ ದುಡ್ಡು ಬಿಚ್ಚಲ್ಲ… ”

ಶ್ರೀಕಂಠಶರ್ಮ ತೀರ ಹತ್ತಿರ ಬಂದು ನನ್ನ ಕೈಹಿಡಿದು ಮತ್ತೆ ನನಗೆ ಬ್ರಾಹ್ಮಣ ಹಿತೈಷಿ ವ್ಯಕ್ತಿತ್ವ ಪ್ರಾಪ್ತವಾಗುವಂತೆ ಪಿಸುಗುಟ್ಟಿದ:

“ನಾವು ಉಗುಳು ಸ್ವಾಮಿಗಳು ಶಿಷ್ಯರಲ್ಲದಿದ್ದರೆ ಈ ಜನಗಳ ಮಧ್ಯೆ ಇಷ್ಟೂ ಮಾಡಕ್ಕೆ ಆಗ್ತಿರ್ಲಿಲ್ಲ ಸಾರ್. ಆದರೂ ಕೇಳಿ – ಈ ಗುಡಿಪೂಜೆ ಹಕ್ಕು ತಮ್ಮದು ಅಂತ ಮಠದಯ್ಯ ಒಬ್ಬ ಇಲ್ಲಿ ಘೇರಾಯಿಸಿಬಿಟ್ಟಿದ್ದ. ಕೋರ್ಟಿಗೆ ಹೋಗಿ ವೆಕೇಟ್ ಮಾಡಿಸಬೇಕಾಯ್ತು. ಒಂದೆರಡಲ್ಲ ಮಠದವರ ತರಲೆ. ನಮ್ಮ ಸಂಸ್ಥೇಲಿ ಕೆಲಸಕ್ಕಿರೋ ತಮ್ಮ ಜನಾಂಗದವರನ್ನು ಎತ್ತಿ ಕಟ್ಟುತ್ತಾರೆ. ಇಲ್ಲಿ ಅಧ್ಯಾಪಕರ ಹತ್ತಿರ ಡೊನೇಶನ್ ತಗೋತೀವಿ. ಆದರೆ ಅದೇನು ನಮ್ಮ ಹೆಂಡರು ಮಕ್ಕಳನ್ನು ಸಾಕೋಕೆ ತಗೊಳ್ಳೋದ?”

ಹೋದ ವರ್ಷ ಗುರುಲಿಂಗಪ್ಪ ಅಂತ ಒಬ್ಬ ಲೆಕ್ಚರರ್ ಡೊನೇಶನ್ ಕೊಡಲ್ಲಾಂತ ಸ್ಟ್ರೈಕ್ ಮಾಡಿಸಕ್ಕೆ ಹೊಂಚು ಹಾಕಿದ್ದನಂತೆ. ಶರ್ಮ ಅವನನ್ನ ವಜಾ ಮಾಡಿದ. ಆತ ದೂರು ತಗೊಂಡು ಹೋಗಿ ಸರ್ಕಾರದ ಗ್ರಾಂಟನ್ನೆ ನಿಲ್ಲಿಸಿ ಬಿಡೋದರಲ್ಲಿದ್ದ. ಆದರೆ ದೇವರ ದಯದಿಂದ ಆಗ ಮಂತ್ರಿಗಳಾದವರು – ಶರ್ಮನ ಧ್ವನಿ ಆಪ್ತವಾಯಿತು – “ನಮ್ಮವರು. ” ಧ್ವನಿ ಮತ್ತೆ ಸಾರ್ವಜನಿಕವಾಯಿತು: ಆ ಗುರುಲಿಂಗಪ್ಪ ಶುದ್ಧ ಫಟಿಂಗ – ಹುಡುಗರಿಗೆಲ್ಲ ಸಿನಿಮಾ ಹುಚ್ಚು ಹಿಡಿಸಿದ್ದ. ಎಲ್ಲ ಭಗವಂತನ ದಯ – ಉಗುಳು ಸ್ವಾಮಿಗಳ ಆಶೀರ್ವಾದ ಬಲ – ಅಂತೂ ಎಲ್ಲ ಸರಾಗವಾಗಿ ನಡೀತಾ ಇದೆ. ತಾನು ಐದು ಲಕ್ಷ ರೂಪಾಯಿ ಸಂಗ್ರಹಿಸಿ, ಫಿಕ್ಸೆಡ್ ಡಿಪಾಜಿಡ್‌ನಲ್ಲಿ ಇಟ್ಟಿದ್ದನ್ನು ಶರ್ಮ ವಿನಯದಿಂದ ಹೇಳಿಕೊಂಡ. ಆಶ್ರಮಕ್ಕೊಂದು ಫಸ್ಟ್ ಗ್ರೇಡ್ ಕಾಲೇಜನ್ನೂ ಸ್ಯಾಂಕ್ಷನ್ ಮಾಡಿಸಿಕೊ ಬೇಕು ಅಂತ ಅವನ ಆಸೆ…

ನಮ್ಮ ಗುರುಮೂರ್ತಿ ನಾಳೆ ಮದುವೆ ಆಗ್ತಿರೋದು ಲಿಂಗಾಯಿತ ಹುಡುಗೀನ್ನ ಎಂಬುದನ್ನು ತೀಕ್ಷ್ಣವಾಗಿ ನನ್ನ ಅವಗಾಹನೆಗೆ ತಂದು, ಶರ್ಮ ಆದರ್ಶವಾದಿಗೆ ತಕ್ಕ ಧ್ವನಿಯಲ್ಲಿ ಸಾರಿದ: ಜಾತಿ ನಾಶವಾಗದೆ ಈ ದೇಶ ಉದ್ಧಾರವಾಗಲ್ಲ. ಈ ಆಶ್ರಮದಲ್ಲಿ ಹರಿಜನರು, ಮುಸ್ಲಿಮರು, ಲಿಂಗಾಯತರು, ಬ್ರಾಹ್ಮಣರು, ಒಕ್ಕಲಿಗರು, ದೇವಾಂಗದವರು – ಎಲ್ಲಾ ಜಾತಿ ಹುಡುಗರೂ ಇದ್ದಾರೆ. ಮತ್ತೆ ಶರ್ಮ ಆಪ್ತನಾದ: “ಬಸವ ಹೇಳಿದ ಜಾತಿ ಭೇದ ನಿವಾರಣೆ ಮಾಡ್ತಿರೋದು ಅವರೋ ನಾವೋ ಈಗ್ಲಾದ್ರೂ ಗೊತ್ತಾಗುತ್ತಲ್ಲ… ” ಮರುಕ್ಷಣವೇ ಆಧುನಿಕ ಉದಾರವಾದಿಯಾಗಿ ಮೆಚ್ಚಿಗೆಯ ಧ್ವನಿಯಲ್ಲಿ ಹೇಳಿದ:

“ಗುರುಮೂರ್ತಿ ನಿಮ್ಮ ಶಿಷ್ಯ ಅಲ್ಲವೇ? ನಿಮ್ಮ ಹಾಗೆ ದೇವರು ದಿಂಡರು ಅಂದ್ರೆ ನಂಬಿಕೆ ಇಲ್ಲ. ಆದರೂ ಈ ಆಶ್ರಮಕ್ಕೆ ಅನೊಬ್ಬ ಆಧಾರ ಸ್ತಂಭ. ಮುಂದಿನ ಸಾರಿ ಚುನಾವಣೇಲಿ ಆತ ನಿಲ್ಲಬೇಕೂಂತ ನನ್ನ ಆಸೆ…. ಏನಾಗುತ್ತೆ ನೋಡುವ. ” ಶರ್ಮನ ಮುಖ ಚಿಂತೆಯಿಂದ ಗಂಭೀರವಾಯಿತು. ನಿಟ್ಟುಸಿರಿಟ್ಟ: “ರಾಜಕೀಯ ಬಲವಿಲ್ಲದೆ ಈ ಆಶ್ರಮಾನ್ನ ನಡಸೋದು ಸಾಧ್ಯವಿಲ್ಲ ಸಾರ್. ದಿನಾ ಸುಮಾರು ನಾನೂರು ಜನರಿಗೆ ಎರಡು ಹೊತ್ತು ಅನ್ನದಾನ ನಡೀಬೇಕು – ನೀವೇ ಲೆಕ್ಕ ಹಾಕಿ ನೋಡಿ…. ”

ನನಗೆ ಹಸಿವಾಗಿತ್ತು. ಊಟದ ಮನೇಲಿ ಬಾಳೆಲೆ ಮೇಲೆ ಬಿಸಿ ಬಿಸಿ ಇಡ್ಲಿ, ಬೆಣ್ಣೆ, ಚಟ್ನಿ, ಬಡಿಸಿದರು. ನಾನು, ಗುರುಮೂರ್ತಿ, ಶ್ರೀಕಂಠಶರ್ಮ ಒಟ್ಟಿಗೆ ಕೂತು ತಿಂದೆವು. “ಇದು ಆಶ್ರಮದ ಕಡೆದ ಬೆಣ್ಣೆ,” “ಇದು ಆಶ್ರಮದಲ್ಲಿ ಬೆಳೆದ ತೆಂಗಿನ ಕಾಯಿ ಚಟ್ಣಿ,” – ಶರ್ಮನ ಉಪಚಾರ ನಡೆಯಿತು. ಸ್ವಾಮಿಗಳದ್ದು ಮಧ್ಯಾಹ್ನ ಒಂದೇ ಊಟವಂತೆ. ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಹಾಲು, ಮಧ್ಯಾಹ್ನ ಮತ್ತೆ ರಾತ್ರೆ ಊಟ, ಮಲಗುವಾಗ ಕಷಾಯವಂತೆ. ಆಶ್ರಮದ ಅಧ್ಯಾಪಕರು ಆಶ್ರಮದ ಅಂಗಡಿಯಿಂದಲೇ ಬಟ್ಟೆ, ತರಕಾರಿ, ಕಾಯಿ, ದವಸ ಧಾನ್ಯಗಳನ್ನು ಕೊಳ್ಳಬೇಕಂತೆ.

ಶರ್ಮ ಲೆಕ್ಕಪತ್ರ ನೋಡಿಕೊಳ್ಳಲು ಹೋದ. ಆತನ ಬಗ್ಗೆ ನನಗೇನು ಅನ್ನಿಸಿದೆ ಎಂಬುದು ತನಗೆ ಗೊತ್ತೆನ್ನುವಂತೆ ಗುರುಮೂರ್ತಿ ಮುಗುಳ್ನಕ್ಕ. ಹೊರಗೆ ಬಿಸಿಲು ಜೋರಾಗಿತ್ತು. ರೂಮಿಗೆ ಹೋಗುವಾಗ ಉಗುಳು ಸ್ವಾಮಿಗಳ ಸಮಾಧಿ ಹತ್ತಿರ ಜನರ ಗುಂಪು ಸೇರಿದ್ದು ಕಂಡೆ. “ಸ್ವಾಮಿಗಳು ಊರಿನ ಜನರಿಗೆ ಔಷದ ಕೊಡ್ತಿದ್ದಾರೆ” ಎಂದು ಗುರುಮೂರ್ತಿ ಹೇಳಿದ. ಅವನ ಜೊತೆ ಅಲ್ಲಿಗೆ ಹೋದೆ.

ಉಚ್ಚೆ ಹೊಯ್ಯುತ್ತಲೇ ನಡೆದಿದ್ದ ಹೆಂಗಸೂ ಗುಂಪಿನಲ್ಲಿದ್ದಳು. ಸ್ವಾಮಿಯಂತೆಯೇ ಚಡ್ಡಿ ಹಾಕಿ, ಬನೀನು ತೊಟ್ಟ ಗಂಡಸರು, ಹೆಂಗಸರು, ಮಕ್ಕಳು ಸುಮಾರು ಮುವ್ವತ್ತು ಜನರಾದರೂ ಇದ್ದರು.

ನಡುವೆ ನಿಂತ ಸ್ವಾಮಿ, ಒಬ್ಬೊಬ್ಬರನ್ನೂ ಹೆಸರು ಹಿಡಿದು ಕರೆದು ವಿಚಾರಿಸಿಕೊಳ್ಳುತ್ತಿದ್ದ. ಆತ್ಮೀಯವಾದ ಮಾತಾಡಿದಾಗ ಕಣ್ ಮಿಟುಕಿಸುತ್ತಿದ್ದ. “ಏ ಬಸಕ್ಕ ನಿನ್ನ ತಂಗಿ ಹೇಗಿದೆ?” “ಹೋದ ಸಾರಿ ಬಸಲೆ ಸೊಪ್ಪಿನ ಬಳ್ಳಿ ನಡೆಂದು ಹೇಳಿದ್ದೆ – ನಟ್ಟೆಯಾ ಗಂಗಿ?”, “ಯಾಕೋ ಬೀರ, ನಿನ್ನ ಮಗನ್ನ ಶಾಲೆಗೆ ಕಳಿಸ್ತಿಲ್ಲ?” “ಏ ಗೌರಿ – ಮಗಳ್ನ ಯಾಕೆ ಇನ್ನೂ ಗಂಡನ ಮನೆಗೆ ಕಳಿಸಿಲ್ಲ. ಅವನಿಗೆ ಬುದ್ಧಿ ಹೇಳಿದ್ದೇನೆ. ಉಗುಳು ಸ್ವಾಮಿಗಳ ಎದುರು ಪ್ರಮಾಣ ಮಾಡ್ಸಿದ್ದೇನೆ – ಇನ್ನು ಮುಂದೆ ಹೆಂಡ್ತೀನ ಹೊಡೆಯೊಲ್ಲ ಅಂತ” – ಇತ್ಯಾದಿ ಮಾತಾಡುತ್ತ, ನಗುತ್ತ, ಸಿಟ್ಟಾಗುತ್ತ, ಗದರಿಸುತ್ತ, ಉಲ್ಲಾಸದಿಂದ ಸ್ವಾಮಿ ನೆರೆದವರಿಗೆ ಮದ್ದುಕೊಡುತ್ತಿದ್ದ. ಪ್ರತಿಯೊಬ್ಬರಿಗೂ ಒಂದು ಪೊಟ್ಟಣದಲ್ಲಿ ಔಷಧಿ, ಇನ್ನೊಂದರಲ್ಲಿ ಉಗುಳು ಸ್ವಾಮಿಗಳ ಪ್ರಸಾದವಾದ ಬೂದಿ ಕೊಡುತ್ತಿದ್ದ. ಹೆಂಗಸರು ಸೆರಗನ್ನು ತಲೆ ಮೇಲೆ ಎಳೆದುಕೊಂಡು, ತಮ್ಮ ಮುಟ್ಟಿನ ದೋಷ, ಮಗಳಿಗೆ ಜಲಮಲ ಬಂದಾದದ್ದು, ಸೊಸೆಗೆ ಗರ್ಭ ನಿಲ್ಲದ್ದು – ಇತ್ಯಾದಿ ನಾಚಿಕೆ ಪಡದೆ ನಿವೇದಿಸಿಕೊಳ್ಳುತ್ತಿದ್ದರು. “ಏ ಚಡ್ಡಿ ಸ್ವಾಮಿ ನೀನೆ ಕಾಪಾಡಬೇಕಪ್ಪ” ಎಂದು ಕೊನೆಯಲ್ಲಿ ಅವನ ಕಾಲ ಮುಟ್ಟಿ ನಮಸ್ಕರಿಸುತ್ತಿದ್ದರು.

ಗುರುಮೂರ್ತಿ, ನನ್ನ ಮುಖದ ಮೇಲೆ ಮೂಡಿದ್ದ ಮೆಚ್ಚುಗೆ ಗಮನಿಸಿರಬೇಕು. ಈ ಮೆಚ್ಚಿಗೆಯನ್ನು ಪ್ರೋತ್ಸಾಹಿಸಲು ನನಗೆ ಇಷ್ಟವಾಗುವ ಹಾಸ್ಯದ ಧಾಟಿಯಲ್ಲಿ ಹೇಳಿದ, ನಗುತ್ತ :

“ನಿವೃತ್ತನಾಗು ಅಂತ ಉಗುಳು ಸ್ವಾಮಿಗಳು ಆಗಾಗ ಕನಸಲ್ಲಿ ಬಂದು ಉಗೀತೆ ಇರ್ತಾರಂತೆ. ಅದಕ್ಕಾಗಿ ಒಂದು ಗುಹೆ ಕೂಡ ಕಟ್ಟಿಸಿಕೊಂಡು, ಕಾವಿಶಾಠಿ ಕಮಂಡಲ ಎಲ್ಲ ಸಿದ್ಧಮಾಡಿಸಿಕೊಂಡಿದ್ದಾರೆ. ಆಧರೆ ತೊಟ್ಟ ಚಡ್ಡೀನ ಕಳಚಬಲ್ಲ ಘಳಿಗೆ ಪ್ರಾಪ್ತವಾಗಿಲ್ಲ ಅಂತ ಬೆಳಗಿನಿಂದ ರಾತ್ರೆ ಮಲಗೋ ತನಕ ಏನಾದ್ರೂ ಮಾಡ್ತಾನೇ ಇರ್ತಾರೆ – ಜೇನ್ನೊಣದ ಹಾಗೆ. ”

ಗುರುಮೂರ್ತಿ ನನ್ನ ಅನುಕರಣೆ ಮಾಡುತ್ತಿದ್ದಾನೆಂದು ಕಿರಿಕಿರಿಯಾಯಿತು.

“ಹೋಗಲಿ ಬಿಡು. ನಿನ್ನ ಹುಡುಗೀನ್ನ ತೋರಿಸು. ”

ಗುರುಮೂರ್ತಿಗೆ ಖುಷಿಯಾಯಿತು. ಆಶ್ರಮದಲ್ಲಿ ಪ್ರೇಮ ವ್ಯವಹಾರವೆಂದರೆ ಕಿಡಿಕಿಡಿಯಾಗುವ ಶ್ರೀಕಂಠಶರ್ಮ ತಮ್ಮಿಬ್ಬರ ಬಗ್ಗೆ ತಾಳಿದ ಮೌನ ತನಗಿನ್ನೂ ಅರ್ಥವಾಗಿಲ್ಲವೆಂದು ದಾರೀಲಿ ಹೇಳಿದ. ಅಷ್ಟೇ ಅಲ್ಲ – ಉಮಾ ಇಂಗ್ಲೀಷ್ ಹೇಳಿಸಿಕೊಳ್ಳಲು ಗುರುಮೂರ್ತಿ ರೂಮಿಗೆ ಬರಲು ಶರ್ಮ ಸಂತೋಷದಿಂದಲೇ ಉಪ್ಪಿದನಂತೆ. “ಇಲ್ದೆ ಇದ್ರೆ ನೀನು ಉತ್ತರಾಧಿಕಾರಿಯಾಗ್ತಿದ್ದಿ” – ನಾನು ವ್ಯಂಗ್ಯವಾಗಿ ಹೇಳಿದೆ.

ಉಮಾ ಈಗ ಹುಡುಗಿಯರ ಹಾಸ್ಟೇಲಿನ ವಾರ್ಡನ್. ಮೇಜಿನ ಹಿಂದೆ ಬರೆಯುತ್ತ ಕೂತಿದ್ದಳು. ಪರದೇಶಿಯಾಗಿ ಆಶ್ರಮ ಸೇರಿ ಬೆಳೆದವಳಂತೆ. ಲಕ್ಷಣವಾದ ಹುಡುಗಿ. ಮೂಗುಬೊಟ್ಟು ತೊಟ್ಟ ದೊಡ್ಡ ಕುಂಕುಮವಿಟ್ಟ ಅವಳ ಗುಂಡು ಮುಖ ಮುದ್ದಾಗಿತ್ತು. ಅವಳು ಕೂಡ ಉಳಿದ ಹುಡುಗಿಯರಂತೆಯೇ ಕತ್ತು ಮುಚ್ಚುವ ಬಿಳಿ ಕುಪ್ಪಸ ಹಾಕಿ ಬಿಳಿಸೀರೆಯುಟ್ಟು ದಪ್ಪವಾದ ಜಡೆಯನ್ನು ಬಿಗಿದು ಕಟ್ಟಿದ್ದಳು. ಹಣೆಯ ಮೇಲೆ ವಿಭೂತಿ ಧರಿಸಿದ್ದಳು.

ಎದ್ದು ನಿಂತಳು. ನಾಚಿಕೆಯಿಂದ ಅವಳ ಎಣ್ಣೆಗೆಂಪು ಮುಖ ಅರಳಿತು.

“ನಿಮ್ಮ ಬಗ್ಗೆ ತುಂಬ ಕೇಳಿದ್ದೇನೆ. ನೀವು ಬರೆದದ್ದನ್ನೆಲ್ಲ ಓದಿದ್ದೇನೆ. ಈ ಹೊಸ ಕಾಲಕ್ಕೆ ನಿಮ್ಮ ವಿಚಾರಗಳು….. ”

ಅವಳ ಕೃತಕ ವಾಕ್ಯಗಳಿಂದ ಮುಜುಗರವಾಗಿ ನಾನು ಮಾತು ತಿರುಗಿಸಿದೆ:

“ಮದುವೆ ಸೀರೆ ತಂದಿದ್ದೀಯಾ ಗುರುಮೂರ್ತಿ? ಅಥವಾ ಈ ಸಾದಾ ಉಡುಪಲ್ಲೇ ನಾಳೆ ನಿಮ್ಮ ಮದುವೆಯೋ?”

ಉಮಾ ತುಂಟು ಕಣ್ಣುಗಳಿಂದ ಗುರುಮೂರ್ತೀನ ನೋಡಿ ನಕ್ಕಳು. ನನಗೂ ಹಗುರವೆನ್ನಿಸಿ ನಕ್ಕೆ. ನಾವು ಮೂವರೂ ಹೋಗಿ ಮತ್ತೆ ಕಾಫಿ ಕುಡಿದೆವು. ಚಿದಂಬರ ಸ್ವಾಮಿ ತಮಗೆ ಕಾವಿಯೋಗ ಪ್ರಾಪ್ತವಾಗುವ ದಿನಕ್ಕಾಗಿ ಕಟ್ಟಿಸಿಕೊಂಡ ಗುಹೆ ನೋಡಲು ಹೋದೆವು – ಸುಡುವ ಬಿಸಿಲಲ್ಲೆ.

ಮಂದವಾದ ಬೆಳಕಿನ ತ್ರಿಕೋಣಾಕಾರದ ರೂಮು. ಗೂಟದ ಮೇಲೆ ಹುರಿ ಮಾಡಿ ಸುತ್ತಿದ ಕಾವಿಶಾಠಿ, ಗೋಡೆಯ ಮೇಲೆ ಉಗುಳು ಸ್ವಾಮಿಗಳ ಚಿತ್ರ, ಉರಿಯುತ್ತಿದ್ದ ಊದುಬತ್ತಿ, ಓದಲು ವ್ಯಾಸಪೀಠ, ಉಪನಿಷತ್ತುಗಳು, ಶಿವಾನಂದರ “ಬ್ರಹ್ಮಚರ್ಯವೇ ಜೀವನ, ವೀರ್ಯನಾಶವೇ ಮೃತ್ಯು” ಪುಸ್ತಕ – ಎಲ್ಲ ಸಿದ್ಧವಾಗಿದ್ದವು. ಆದರೆ ಇಲ್ಲೊಂದು ಕ್ಷಣ ಕಳೆಯಲೂ ಸ್ವಾಮಿಗಳಿಗೆ ಪುರುಸೊತ್ತಿಲ್ಲವೆಂದು ಉಮಾ ಅಭಿಮಾನದಿಂದ ಹೇಳಿದಳು. ಹಾಸಿದ ಕೃಷ್ಣಾಜಿನದ ಮೇಲೆ ಕೂತು, ಕವಿಯುವ ಗುಹೆಯಾಕಾರದ ರೂಮನ್ನು ಗಮನಿಸಿದೆ. ಗುರುಮೂರ್ತಿ, ಉಮಾ ಅಕ್ಕಪಕ್ಕ ಪ್ರೀತಿಯಿಂದ ನಿಂತು, ಕೋಪತಾಪ ರಾಗದ್ವೇಷಗಳ ನನ್ನನ್ನು ಸ್ವಾಮಿಯಾಗಿ ಊಹಿಸಿ ನಕ್ಕರು. “ಅದರಲ್ಲಿ ನಗುವುದೇನಿದೆ, ದೇವರ ಬಗ್ಗೆ ಹುಚ್ಚು ಕೂಡ ನಮ್ಮಂಥವರಿಗೆ ಮಾತ್ರ ಹಿಡಿದೀತು, ತೀರಾ ಒಳ್ಳೆಯವರಿಗಲ್ಲ” ಎಂದೆ.

* * *

ಅವತ್ತು ರಾತ್ರೆ ತುಂಬ ಹೊತ್ತು ನಿದ್ದೆ ಬರಲಿಲ್ಲ. ಹೊರಗೆ ತಂಪಾಗಿ ಹಿತವಾಗಿತ್ತೆಂದು ಹೋಗಿ ಸಂಪಗೆ ಮರದಡಿ ನಿಂತೆ. ಕೃಷ್ಣಪಕ್ಷದ ಆಕಾಶದಲ್ಲಿ ನಕ್ಷತ್ರಗಳು ಖಚಿತವಾಗಿ ಮೂಡಿದ್ದವು. ಸಂಪಿಗೆ ಮರದ ಎಲೆಗಳು ಅದರುವುದು ಮೊಗ್ಗು ಬಿರಿಯುವುದು ಕೂಡ ಕೇಳಿಸಬೇಕೆನ್ನಿಸುವ ಆಸೆ ಹುಟ್ಟಿ ಮೌನವಾಗಲು ಪ್ರಯತ್ನಿಸುತ್ತ ನಿಂತೆ. ಸಾಧ್ಯವಾಗಲಿಲ್ಲ. ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡೆ. ಬಾಗಿಲಿಗೆ ಅಗಳಿಯಿರಲಿಲ್ಲ. ಆದ್ದರಿಂದಲೋ ಏನೋ ಇನ್ನಷ್ಟು ತಡವಾಗಿ ನಿದ್ದೆ ಬಂತು.

* * *

ಬೆಳಿಗ್ಗೆ ಐದು ಗಂಟೆಗೇ ಇಡೀ ಆಶ್ರಮ ಬಯಲಿನಲ್ಲಿ ನೆರೆಯಿತು. ಬಿಳಿ ಬಟ್ಟೆ ತೊಟ್ಟ ಹುಡುಗರು ಹುಡುಗಿಯರು ಸಾಲಾಗಿ ಕೂತರು. ಎದುರು ವೇದಿಕೆಯ ಮೇಲೆ ಬರಿ ಚಡ್ಡಿ ತೊಟ್ಟ ಚಿದಂಬರ ಸ್ವಾಮಿ ಕೂತ. ಆಸನಗಳ ಕಾರ್ಯಕ್ರಮ ಮೊದಲು. ಪದ್ಮಾಸನ, ವೃಶ್ಚಿಕಾಸನ, ಮಯೂರಾಸನ, ಹಲಾಸನ, ಸರ್ವಾಂಗಾಸನ, ಶವಾಸನ – ಇತ್ಯಾದಿಗಳಲ್ಲಿ ಚುರುಕಾದ ಏಕಾಗ್ರತೆಯಿಂದ ಹಿಡಿದು ಹೆಣದಂತೆ ಮೈ ಚೆಲ್ಲಿದ ಶೂನ್ಯ ಸ್ಥಿತಿಯ ತನಕ, ಚೇಳು, ನವಿಲು, ಕಪ್ಪೆ, ನೇಗಿಲು ಮುಂತಾದ ರೂಪಗಳಲ್ಲಿ ಬೆಳಗಿನ ಆಕಾಶ ಭೂಮಿಗಳ ನಡುವಿನ ಸಾರವನ್ನು ಸಭೆ ಯಥೇಚ್ಛ ಹೀರಿತು. ಶ್ರೀಕಂಠಶರ್ಮ ತಪ್ಪಾಗಿ ಆಸನ ಹಾಕುತ್ತಿದ್ದವರನ್ನು ತಿದ್ದುತ್ತ ಓಡಾಡಿದ. ಮದುವೆಯಾಗಲಿದ್ದ ಹೆಣ್ಣು ಗಂಡುಗಳೂ ಆಸನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆಮೇಲೆ ಪ್ರಾರ್ಥನೆಯಲ್ಲಿ ಸರ್ವಧರ್ಮ ಸಮನ್ವಯವಾಯಿತು. ಎರಡು ನಿಮಿಷಗಳ ಮೌನದಲ್ಲಿ ಚಿತ್ತಿವೃತ್ತಿ ನಿರೋಧ ಮಾಡಿದ್ದಾಯಿತು. ಚಿದಂಬರ ಸ್ವಾಮಿ ಶಿಸ್ತು, ಸಂಯಮ, ದೇಶ ಸೇವೆಗಳ ಬಗ್ಗೆ ಐದು ನಿಮಿಷ ಮಾತಾಡಿದ. ಶ್ರೀಕಂಠಶರ್ಮ ವೇದಿಕೆ ಹತ್ತಿ, ಸಾದಾ ಬಿಳಿ ಬಟ್ಟೆ ತೊಟ್ಟ ಗುರುಮೂರ್ತಿ ಉಮಾರನ್ನು ಕರೆದ. ಧರ್ಮೇಚ, ಅರ್ಥೇಚ, ಕಾಮೇಚ ನಾತಿ ಚರಾಮಿ ಹೇಳಿಸಿ ತಾಳಿಕಟ್ಟಿಸಿದ. ಗುರುಮೂರ್ತಿ ಉಮಾ ಸ್ವಾಮಿಯ ಕಾಲು ಮುಟ್ಟಿ ನಮಸ್ಕರಿಸಿದರು. ನಾನು ಗುರುಮೂರ್ತಿ ಕೈಕುಲುಕಿ, “ಒಂದು ವಾರಾನಾದ್ರೂ ಎಲ್ಲಾದರೂ ಹೋಗಿದ್ದು ಬನ್ನಿ” ಎಂದು ಕಿವಿಯಲ್ಲಿ ಹೇಳಿ ಅಭಿನಂದಿಸಿದೆ.

ಸಭೆ ಇನ್ನೇನು ಬರಕಸ್ತಾಗಬೇಕು – ಆಗ ಮೂವರು ಪ್ರತ್ಯಕ್ಷರಾದರು. ಅವರು ಪ್ಯಾಂಟ್ ಹಾಕಿ ಜುಬ್ಬ ತೊಟ್ಟಿದ್ದರು; ಉದ್ದ ಕೂದಲು ಬಿಟ್ಟಿದ್ದರು; ಅವರಲ್ಲಿ ಇಬ್ಬರು ಗಡ್ಡ ಬಿಟ್ಟಿದ್ದರು. ವಯಸ್ಸು ಸುಮಾರು ಮುವ್ವತ್ತರ ಒಳಗಿರಬಹುದು – ಗಂಟಾದ ಮುಖಗಳ, ಹೊಳೆಯುವ ಕಣ್ಣುಗಳ, ಬಿಗಿದ ತುಟಿಯ ಯುವಕರು. ಮೂವರೂ ನೇರವಾಗಿ ವೇದಿಕೆಯ ಹತ್ತಿರ ನಡದು ಬರುತ್ತಿದ್ದಂತೆ, ‘ನಮಸ್ತೆ ಸಾರ್’ ಎಂದು ಹುಡುಗ ಹುಡುಗಿಯರಿಂದ ಸೊಲ್ಲೆದ್ದು ತಕ್ಷಣ ಅಡಗಿತ್ತು. ಹಿಂದೆ ಕೂತಿದ್ದ ಆಶ್ರಮದ ಅಧ್ಯಾಪಕರು ಮುಂದೆ ಬಂದರು. ಶ್ರೀಕಂಠಶರ್ಮ ವೇದಿಕೆಯಿಂದ ಬಿರುಸಾಗಿ ಅವರ ಕಡೆ ನುಗ್ಗಿದ. ಚಿದಂಬರ ಸ್ವಾಮಿ ಅವನ ಬನೀನು ಹಿಡಿದು ಹಿಂದಕ್ಕೆ ಎಳೆದರೂ ಶರ್ಮ ಕೈಗಳನ್ನು ಚಾಚಿ, ವೇದಿಕೆ ಏರಲಿದ್ದ ಮೂವರನ್ನೂ ತಡೆದು ನಿಲ್ಲಿಸಿದ.

ಮೂವರಲ್ಲಿ ಮುಂದಿದ್ದವನು ಹೋದವರ್ಷ ಲೆಕ್ಚರರ್ ಕೆಲಸದಿಂದ ವಜಾ ಆದ ಗುರುಲಿಂಗಪ್ಪನೆಂದೂ, ಆತ ಈಗ ತಮ್ಮ ವೈರಿಗಳಾದ ಲಿಂಗಾಯಿತ ಮಠದ ಕಾಲೇಜೊಂದರಲ್ಲಿ ಇದ್ದಾನೆಂದೂ ಗುರುಮೂರ್ತಿ ತನ್ನ ಕಿವೀಲಿ ಹೇಳಿದ. ಗುರುಲಿಂಗಪ್ಪನದು ಗಲ್ಲದ ಮೂಳೆ ಎದ್ದು ಕಾಣುವ ಬಿರುಸಾದ ಉದ್ದ ಮುಖ, ಮುಖದ ಮೇಲೆ ಹುರಿಮಾಡಿದ ಮೀಸೆ, ನಡುಗುವ ಕೈಗಳಿಂದ ಶರ್ಮವನ್ನು ತಳ್ಳುತ್ತ ಅವನು ಕೀರಲು ಧ್ವನಿಯಲ್ಲಿ ಮಾತಾಡಿದ :

“ಬಿಡ್ರೀ, ನಾನು ಸ್ವಾಮಿಗಳ ಹತ್ರ ಮಾತಾಡೋದಿದೆ. ಗೂಂಡಾಗಿರಿ ಮಾಡಬೇಡಿ”

“ನಡೆಯಯ್ಯಾ, ನಿನ್ನ ಇಲ್ಲಿ ಯಾರು ಕರೆದಿದ್ರು?” ಶ್ರೀಕಂಠಶರ್ಮ ಅಬ್ಬರಿಸಿದ. ಹುಡುಗರು ಎದ್ದು ನಿಂತರು.

“ಅವರನ್ನು ತಡೀಬೇಡಿ. ಮೇಲೆ ಬರಲಿ – ಬಿಡಿ. ”

ಚಿದಂಬರ ಸ್ವಾಮಿ ಕೈಕಟ್ಟಿ ನಿಂತು ಹೇಳಿದ. ಶರ್ಮ ಕ್ರೂರವಾಗಿ ನೋಡುತ್ತ ಸರಿದುನಿಂತ.

ಗುರುಲಿಂಗಪ್ಪನ ಹಿಂದಿನಿಂದ, ಗಡ್ಡಬಿಟ್ಟ ಇಬ್ಬರೂ ವೇದಿಕೆ ಹತ್ತಿ ಶರ್ಮನ ಅಕ್ಕಪಕ್ಕ ನಿಂತರು. ಗುರುಲಿಂಗಪ್ಪ ಆವೇಶದಿಂದ ಉಸಿರಾಡುತ್ತ ಹೇಳಿದ :

“ಸ್ವಾಮಿಗಳೆ – ನಾವು ವಿಚಾರವಾದಿಗಳು. ಸತ್ಯವನ್ನು ಬಯಲು ಮಾಡಲು ಬಂದಿದ್ದೇವೆ. ನಿಮ್ಮ ಹೆಸರೇನು – ನಿಜ ಹೇಳಿ. ”

“ನಾರಾಯಣ”.

“ಹೌದು ನಾರಾಯಣ. ಆದರೆ ನೀವು ನಿಜವಾಗಿ ಯಾರು?” : ಗುರುಲಿಂಗಪ್ಪ ತಡವರಿಸಿದ.

“ನಾನು ಯಾರು? ಒಬ್ಬ ಸಾಮಾನ್ಯ ಜನ ಸೇವಕ. ”

“ಈ ಉತ್ತರಗಳೆಲ್ಲ ನನಗೆ ಗೊತ್ತಿರೋದೇ ಕಂಡ್ರಿ. ನಿಮಗೆಷ್ಟು ವಯಸ್ಸು ಹೇಳ್ರಿ? ಎಪ್ಪತ್ತೈದು ವರ್ಷ ಆಗಿರೋದು ನಿಜವೇನ್ರಿ?”

“ನಾನೇನೂ ನನ್ನ ಬಗ್ಗೆ ಹೇಳಿಕೊಂಡಿಲ್ಲ. ”

“ಉಳಿದವರು ಹೇಳೋ ಸುಳ್ಳನ್ನ ಮತ್ತೆ ಯಾಕೆ ಸಪೋರ್ಟ್‌ ಮಾಡ್ತೀರ‍್ರೀ?”

“ನಿಮಗೆ ಗೊತ್ತಿರೋ ನಿಜಾನ್ನ ನೀವು ಹೇಳೋಕೆ ನಾನೇನೂ ಅಡ್ಡಿ ಮಾಡ್ತಾ ಇಲ್ವಲ್ಲ?”

ಅಷ್ಟರಲ್ಲಿ ಶರ್ಮ ಕೈ ಎತ್ತಿ ಬಿಳುಚಿದ ಮುಖದ ಗುರುಲಿಂಗಪ್ಪನ ಕಡೆ ನುಗಿದ.

“ನೀನು ಈಗ ಯಾರ ಹತ್ರ ಕೆಲಸಕ್ಕಿರೋದು ಗೊತ್ತಯ್ಯ” – ಇಬ್ಬರು ಯುವಕರು ಶರ್ಮನ ಎತ್ತಿದ ಕೈಗಳನ್ನು ಜಗ್ಗಿದರು. ಕೊಸರಿಕೊಳ್ಳುತ್ತ ಕೋಪದಲ್ಲಿ ಉಬ್ಬಿದಕತ್ತಿನಿಂದ ಶರ್ಮ ಕೂಗಾಡಿದ :

“ನಿನ್ನ ಅಪಪ್ರಚಾರಕ್ಕೆ ಮಠ ಮತ್ತು ನಿಮ್ಮ ಜಾತಿ ಜಮೀಂದಾರರ ಬೆಂಬಲ ಇದೆಯೋ ಇಲ್ವೊ ಹೇಳು? ಸತ್ಯಾನ್ನ ಬೊಗಳು. ”

“ಈ ದರಿದ್ರ ದೇಶದಲ್ಲಿ ಹೊಟ್ಟೆಪಾಡಿಗೆ ನಾನು ಇನ್ನೇನು ಮಾಡಬೇಕು ಹೇಳಿ. ನಾನು ಜಾತೀನ ನಂಬಲ್ಲ. ಆದರೆ ನೀವು ಕೆಲಸದಿಂದ ತೆಗೆದು ಹಾಕಿದಾಗ ನನ್ನ ಜಾತಿಯವರಲ್ಲದೆ ನನಗೆ ಬೇರೆ ಯಾರು ಕೆಲಸ ಕೊಡ್ತಾರೆ, ಹೇಳಿ?”

ಗುರುಲಿಂಗಪ್ಪ ಗಂಭೀರವಾಗಿ ಶರ್ಮನಿಗೆ ಉತ್ತರಿಸಿ, ಸ್ವಾಮಿ ಕಡೆ ತಿರುಗಿದ. ಸಭೆಯಲ್ಲಿದ್ದವರು ಪದ್ಮಾಸನ ಬದಲಾಯಿಸಿ ನೆಲದ ಮೇಲೆ ಕೈಯೂರಿ ಪರಸ್ಪರರ ತಲೆಗಳು ಅಡ್ಡವಾಗದಂತೆ ಎತ್ತರವಾಗಿ ಕೂರಲು ಪ್ರಯತ್ನಿಸಿದರು.

ಗುರುಲಿಂಗಪ್ಪ ವ್ಯಂಗ್ಯವಾಗಿ ಸ್ವಾಮೀನ್ನ ನೋಡುತ್ತ ಹೇಳಿದ :

“ನಾರಾಯಣರಾವ್………. ”

ಈಗ ಕೂತವರು ಎದ್ದು ನಿಂತರು. ನಿಂತ ಹಲವರ ಕಣ್ಣುಗಳು ಹೊಳೆದವು. ನಾನು ಸ್ಫೋಟಕ್ಕಾಗಿ ಹಸಿದು ಕಾದೆ.

“ನಾರಾಯಣರಾವ್, ನೀವು ನಿಜವಾಗಿ ಯಾರು? ಇಲ್ಲಿಗೆ ಬರೋ ಮುಂಚೆ ನಿಮಗೆ ವಯಸ್ಸೆಷ್ಟು? ನಿಮ್ಮ ಜಾತಿ ವೃತ್ತಿ ಯಾವುದಾಗಿತ್ತು? ಯಾವ ಊರಿಂದ ಬಂದಿರಿ? ಏನು ಹುಡುಕಿಕೊಂಡು ಬಂದಿರಿ? ನಿಮ್ಮ ಚರಿತ್ರೆ ಮುಚ್ಚಿಕೊಳ್ಳಲು ಏನೇನು ಮಾಡಿದಿರಿ? ಯಾಕೆ? ನಿಮ್ಮ ತಾಯಿ ಯಾರು? ತಾಯಿ ಹೆಸರಲ್ಲಿ ಈ ಪತಿತೆಯರ ಗೃಹ ಯಾಕೆ ಕಟ್ಟಿಸಿದಿರಿ? – ಎಲ್ಲ ನಾವು ಪತ್ತೆ ಮಾಡಿದ್ದೀವಿ. ಇವೆಲ್ಲ ಗೊತ್ತಿರೋ ಇನ್ನೊಬ್ಬನೆಂದರೆ ಆಶ್ರಮದ ರಾಜಕಾರಣಿ ಶರ್ಮ. ನೀವು ಸತ್ಯಾನ್ನ ಒಪ್ಪಿಕೊಂಡು ಸ್ವತಂತ್ರರಾಗಬೇಕೂಂತ ನಮ್ಮ ಆಸೆ. ಸತ್ಯದ ಆಧಾರದ ಮೇಲೆ ನಿಮ್ಮ ಒಳ್ಳೆ ಕೆಲಸಗಳನ್ನು ಮಾಡಬೇಕೂಂತ ಆಸೆ. ನಾವು ವಿಚಾರವಾದಿಗಳು. ಪರಾಣಗಳ ಮೇಲೆ ಪುರಾಣಗಳನ್ನ ಕಟ್ಟಿ ಈ ದೇಶ ಮೂಢನಂಬಿಕೇಲಿ ನರಳ್ತ ಇದೆ. ಪುರಾಣಗಳಿಂದ ಕಳಚಿಕೊಳ್ಳದೇ ಜನ ಈ ದೇಶದಲ್ಲಿ ಅರಳಲ್ಲ. ಆದ್ದರಿಂದ ನೀವೇ ಬಾಯ್ಬಿಟ್ಟು ನೀವು ಯಾರು ಅನ್ನೋದನ್ನ ಈ ಸಭೆಗೆ ಹೇಳಿ. ಆಗ ನೀವೂ ಅರಳಿಕೋತೀರಿ – ಜನಾನೂ ಅರಳ್ತಾರೆ… ”

ಗುರುಲಿಂಗಪ್ಪ ಬೆವರುತ್ತ ನಡುಗುತ್ತ ಮಾತಾಡಿದ. ಅವನ ಕೀರಲು ಧ್ವನಿ ಹಾಸ್ಯಾಸ್ಪದವಾಗಿತ್ತು. ಮಾತುಗಳು ಬಾಯಿಪಾಠ ಮಾಡಿಕೊಂಡು ಬಂದಂತೆ ಕಂಡವು. ಆದರೂ ನಾನು ಅವನ ಮಾತಿಗೆ ತಲೆಯಾಡಿಸಿದ. ಚಿದಂಬರ ಸ್ವಾಮಿ ಕೈ ಕಟ್ಟಿ ನಿಂತು ಯಾರ ಕಡೆಯೂ ನೋಡದೆ ಮುಖವನ್ನು ಮೇಲಕ್ಕೆತ್ತಿ ಮೃದುವಾಗಿ ಹೇಳಿದ:

“ಈ ಜೀವ ಆಶ್ರಮಕ್ಕೆ ಸೇರಿದ್ದು. ಇದಕ್ಕೆ ಪೂರ್ವವಾದ್ದು ಈಗ ಏನೂ ಉಳಿದಿಲ್ಲ. ಉಗುಳು ಸ್ವಾಮಿಗಳು ಎಲ್ಲಾನೂ ಉಗಿದು ಅಳಿಸಿ ಹಾಕಿದ್ದಾರೆ. ನೀವೂ ಉಗಿಯುತ್ತಿದ್ದೀರಿ – ಆದರೆ ಅಹಂಕಾರದಿಂದ. ಆಶ್ರಮಕ್ಕೆ ಬೇಡವಾದ ದಿನ ನಾನು ಹೊರಟು ಹೋಗ್ತೀನಿ. ”

ಉಮಾ ಕಣ್ಣೊರಸಿ ಕೊಂಡಳು. ಜನರ ತೀರ್ಮಾನಕ್ಕಾಗಿ ಕಾದಿರುವವನಂತೆ ಚಿದಂಬರ ಸ್ವಾಮಿ ಕೈಮುಗಿದು ತಲೆಬಾಗಿ ನಿಂತ.

“ಆ ಉಗುಳು ಸ್ವಾಮಿಯೊಬ್ಬ ಹುಚ್ಚ – ಇಂಥ ಮೋಸ ಮಾಡದೆ ಒಳ್ಳೆ ಕೆಲಸ ಮಾಡೋಕೆ ಸಾಧ್ಯವಿಲ್ಲೇನ್ರಿ?”

ಗುರುಲಿಂಗಪ್ಪ ನಿರಾಶೆಯಿಂದ ಹೇಳಿದ.

“ಉಗುಳುಸ್ವಾಮಿ ಅವರನ್ನ ಜರಿತೀಯೇನೋ? ನಿನ್ನ ನಾಲಿಗೇಲಿ ಹುಳ ಬೀಳುತ್ತೆ – ಬಿದ್ದೇ ಬೀಳತ್ತೆ. ತಿಳ್ಕೋ, ನಾಯಿ. ”

ಶ್ರೀಕಂಠಶರ್ಮ ಆವೇಶದಿಂದ ನುಗ್ಗಿ ಗುರುಲಿಂಗಪ್ಪನ ಕತ್ತು ಹಿಡಿದ. ಗಡ್ಡ ಬಿಟ್ಟ ಯುವಕರು ಶರ್ಮನ ರುದ್ರಾಕ್ಷಿ ಸರ ಬನೀನುಗಳನ್ನು ಹಿಡಿದು ಜಗ್ಗಿದರು. ಎಳೆದರು, ಚಿದಂಬರ ಸ್ವಾಮಿ ಶಾಂತಿ ಶಾಂತಿ ಎಂದು ಪ್ರಾರ್ಥಿಸಿದ :

“ಶ್ರೀಕಂಠ – ಹಿಂಸೆಗೆ ಈ ಆಶ್ರಮದಲ್ಲಿ ಅವಕಾಶ ಇಲ್ಲ. ಉಗುಳು ಸ್ವಾಮಿಗಳಿಂದ ಉಗುಳಿಸಿಕೊಂಡ ನನಗೆ ಗರ್ವವಿಲ್ಲ. ಅವಮಾನವಿಲ್ಲ… ” ಒಂದು ನಾಟಕ ನೋಡುವ ಥರ ನನ್ನ ಮನಸ್ಸು ತಟಸ್ಥವಾಗಿ ಬಿಟ್ಟಿತು. ವೇದಿಕೆಗೆ ಹಲವರು ನುಗ್ಗಿದರು. ಜಗ್ಗಾಡಿದರು. ಆದರೆ ‘ನಾನು ಆಸೆಪಟ್ಟು ಕಾದ ಸ್ಫೋಟ’ ಇದಾಗಿರಲಿಲ್ಲ.

ಶ್ರೀಕಂಠಶರ್ಮ ಬುಸುಗುಡುತ್ತ ಸುಮ್ಮನಾದ. ಗುರುಲಿಂಗಪ್ಪ ವೇದಿಕೆಯಿಂದ ನಿಧಾನವಾಗಿ ಮಾತಾಡಿದ :

“ನಮಗೆ ನಿಜ ಗೊತ್ತು…. ಆದರೆ ಅದನ್ನ ನಾವು ಹೇಳಿ ಪ್ರಯೋಜನವಿಲ್ಲ. ನೀವೇ ಹೇಳಿಕೊಳ್ಳಬಹುದು ಅನ್ನೊವಷ್ಟು ಗೌರವ ನಮಗೆ ನಿಮ್ಮ ಮೇಲಿತ್ತು. ಅದನ್ನೂ ಈಗ ಕಳಕೊಂಡೆವು. ಈಗ ಈ ಆಶ್ರಮದ ರಾಜಕೀಯ, ಗುರುಮೂರ್ತಿ ಮದುವೆ ಮುಖಾಂತರ ಹೊಸ ಆಯಾಮ ಪಡೀತ ಇದೆ. ನೀವು ಸತ್ಯಾನ್ನ ಒಪ್ಪಿಕೊಳ್ಳಲೇಬೇಕಾಗೋ ಹಾಗೆ ಮಾಡೋ ಮಾರ್ಗ ನಾವು ಹುಡುಕಬೇಕಾಗುತ್ತೆ. ಹುಡುಕ್ತೀವಿ – ಬಿಡಲ್ಲ…. ”

ಚಿದಂಬರ ಸ್ವಾಮಿ ಕೈಕಟ್ಟಿ ನಿಂತೇ ಇದ್ದ. ಗುರುಲಿಂಗಪ್ಪ ಮತ್ತು ಸಂಗಡಿಗರು ವೇದಿಕೆಯಿಂದ ಇಳಿದು ಗಂಭೀರವಾಗಿ ಹೊರಟು ಹೋದರು. ಹುಡುಗರು ಹುಡುಗಿಯರು ಹಾಲು ಕುಡಿದು ತೋಟದ ಕೆಲಸ ಶುರು ಮಾಡಿದರು. ಶರ್ಮ ಆಫೀಸಿಗೆ ಹೋದ.

ಅಸ್ಪಷ್ಟವಾದ ನಿರಾಶೆಯಿಂದ ಬಿಲ್ವವನದಲ್ಲಿ ಅಡ್ಡಾಡುತ್ತಿದ್ದ ನನ್ನ ಹುಡುಕಿಕೊಂಡು ಬಂದು ಗುರುಮೂರ್ತಿ : “ಇದೆಲ್ಲ ಮಠದ ರಾಜಕೀಯ, ಹಲ್ಕಾಗಳು” ಎಂದ. ಆರ್ತನಾದ ಒದ್ದೆ ಕಣ್ಣುಗಳಿಂದ ನನ್ನನ್ನು ಎವೆಯಿಕ್ಕದೆ ನೋಡಿದ. ಅವನ ಭಾವನೆಯನ್ನು ನಿಜ ಮಾಡುವಂತೆ ಅವನ ಕಣ್ಣುಗಳು ನನ್ನ ಯಾಚಿಸಿದವು. ನಾನು ಏನೂ ಹೇಳದೆ ಮುಂದೆ ನಡೆದೆ. ಗುರುಮೂರ್ತಿ ನನ್ನ ಹಿಂದೆಯೇ ಬಂದ. ಅವನಿಗೆ ನೋವಾಗುವಂತೆ ಏನನ್ನಾದರೂ ಹೇಳಬೇಕೆಂದೂ ಅನ್ನಿಸಿದ್ದನ್ನು ತಡೆದುಕೊಂಡೆ.

ಮಧ್ಯಾಹ್ನ ಊಟ ಮುಗಿಸಿ ಸಿಗರೇಟು ಸೇದುತ್ತ ಮಲಗಿದ್ದೆ. ಈ ಆಶ್ರಮದಲ್ಲಿ ನಾನೇ ಪ್ರಾಯಶಃ ಮೊದಲು ಸಿಗರೇಟು ಸೇದಿದವನಿರಬಹುದು ಎಂದ ಗುರುಮೂರ್ತಿ. ಬಾಗಿಲು ತಟ್ಟಿದ ಸದ್ದಾಯಿತು. ಹುಡುಗನೊಬ್ಬನ ಹತ್ತಿರ ನನಗೆ ಬರುವಂತೆ ಗುರುಲಿಂಗಪ್ಪ ಹೇಳಿಕಳುಹಿಸಿದ್ದ. “ಅವನ ಧಿಮಾಕು ನೋಡಿ” ಎಂದು ಗುರುಮೂರ್ತಿ ನನ್ನ ತಡೆದರೂ ಹೋದೆ. ಆಶ್ರಮದ ಹೊರಗೆ ಸುಮಾರು ಎರಡು ಫರ್ಲಾಂಗಿನ ಆಚೆ ಉರಿಯುವ ಬಿಸಿಲಲ್ಲಿ ಗುರುಲಿಂಗಪ್ಪ ತನ್ನ ಸಂಗಡಿಗರ ಜೊತೆ ಕೂತಿದ್ದ. ಬೆಣಚು ಕಲ್ಲಿನ ಬೋಳು ಬಯಲಿನಲ್ಲಿ ಅಲ್ಲೊಂದು ಇಲ್ಲೊಂದು ಕುರುಚಲು ಮೊಟ್ಟಿನ ಪಕ್ಕ ಮಸಿಚೆಲ್ಲಿದಂತೆ ಚೂರು ಚೂರು ನೆರಳು – ಕೂರುವಷ್ಟಲ್ಲ. ಗುರುಲಿಂಗಪ್ಪ ಕೂತಿದ್ದದ್ದು ಒಂದು ಕಲ್ಲು ಚಪ್ಪಡಿ ಮೇಲೆ – ನೆಲ ಮತ್ತು ಆಕಾಶ ಎರಡು ಬೆಂಕಿಗಳ ನಡುವೆ. ಅವನ ಒಬ್ಬ ಸಂಗಡಿಗ ಬೆಣಚುಕಲ್ಲುಗಳ ಮೇಲೆ ಚೀಲ ಹಾಸಿ ಕೂತಿದ್ದ – ಕಡ್ಡಿಯಿಂದ ಹೂತ ಕಲ್ಲುಗಳನ್ನು ಕೀಳುತ್ತ, ಇನ್ನೊಬ್ಬ ನಿಂತು ಬೀಡಿ ಸೇದುತ್ತಿದ್ದ.

ನಾನಿನ್ನೂ ಹತ್ತಿರವಾಗುವ ಮುಂಚೆಯೇ ಗುರುಲಿಂಗಪ್ಪ ಹೀಯಾಳಿಸುತ್ತ ಹೆಳಿದ:

“ನಿಮ್ಮಂಥವರೂ ಇಂಥ ಆಶ್ರಮಕ್ಕೆ ಬೆಂಬಲ ಕೊಡೋದ್ರಿಂದ ಜನಕ್ಕೆ ಮೋಸ ಮಾಡಿದ ಹಾಗಾಗುತ್ತೆ – ಇದು ಸರಿಯೇನ್ರಿ? ಆ ಕಂತ್ರಿ ಹುಡುಗ ಗುರುಮೂರ್ತಿ ಅಂದ್ರೆ ನಿಮಗೆ ಇಷ್ಟವಂತೆ – ನಿಜವೇನ್ರಿ?”

ಅವನ ಸಂಗಡಿಗರು ನಕ್ಕರು. ಉತ್ತೇಜಕವಾಗಿ, ನಾನು ಮೌನವಾಗಿ ನಿಂತಿದ್ದರಿಂದ ಗುರುಲಿಂಗಪ್ಪನಿಗೆ ಮುಜುಗರವಾಗಿರಬೇಕು. ಎದ್ದು ನಿಂತ. ‘ಕ್ರೂರೀ’ ಎಂದು ಕೈಹಿಡಿದು ಕೂರಿಸಿದ – ಉರಿಯುವ ಕಲ್ಲಿನ ಮೇಲೆ. ನನ್ನ ಅಂಡುಗಳು ಒಲ್ಲದೆ ಹಠಾತ್ತನೆ ಮೇಲಕ್ಕೆದ್ದವು. ಗುರುಲಿಂಗಪ್ಪ ಅವನ ಬಗಲಿನ ಚೀಲ ಹಾಸಿದ. ಅವನ ವಿನಯದ ವರ್ತನೆ,ಒರಟಾದ ಮಾತು, ಕೀರಲು ಧ್ವನಿ, ರೋಪು ಹಾಕುವ ಕಣ್ಣುಗಳು – ಈ ಬೆರಕೆಯಿಂದಾಗಿ ಅವನ ಮಾತುಗಳ ಬದಲು ಅವನೇ ನನಗೆ ಕುತೂಹಲದಿಂದ ಸಂಗತಿಯಾದ :

“ನೋಡ್ರಿ, ಉಗುಳು ಸ್ವಾಮಿ ಬರಿ ಹುಚ್ಚ ಕಂಡ್ರಿ. ಪ್ಲೇನ್ ಅಂಡ್ ಸಿಂಪಲ್ ಹುಚ್ಚ. ಆದರೆ ಸ್ಥಳದ ಲಿಂಗಾಯತರ ಬೆಂಬಲ ಬೇಕಲ್ಲ – ಅದಕ್ಕಾಗಿ ಆ ಹುಚ್ಚನನ್ನ ಉಪಯೋಗಿಸಿ ಕೊಂಡು ಈ ಚಿದಂಬರ ಸ್ವಾಮಿ ಇಲ್ಲಿ ಆಶ್ರಮ ಕಟ್ಟಿದ… ಲಿಂಗಾಯತರೂ ರಾಸ್ಕಲ್ಸೇ ಬಿಡಿ. ಎಲ್ಲಾ ಎಕ್ಸ್‌ಪ್ಲಾಯಿಟರ್ಸೇ… ನೆಕ್ಸ್ಟ್ ಅವರನ್ನ ನಾವು ತರಾಟೆಗೆ ತಗೋತೀವಿ, ಬಿಡಲ್ಲ. ”

ಚೀಲದಿಂದಲೂ ಕಾವು ಏರಿ ಅಂಡನ್ನು ಬೇಯಿಸುತ್ತಿದ್ದುದರಿಂದ ನಾನು ಎಡಕ್ಕೂ ಬಲಕ್ಕೂ ವಾಲುತ್ತ ತೀರ ಉರಿಯುವ ಭಾಗಗಳನ್ನು ಕೈಗಳಿಂದ ಉಜ್ಜಿ ಸಮಾಧಾನಪಡಿಸಲು ಪ್ರಯತ್ನಿಸಿದೆ. ಸ್ವಲ್ಪ ಸ್ವಲ್ಪ ಭಾಗವನ್ನೇ ಕ್ರಮೇಣ ಶಾಖಕ್ಕೆ ಒಡ್ಡುತ್ತ, ಒಗ್ಗಿಸುತ್ತ ಹದವಾಗಿ ರೋಸ್ಟ್ ಮಾಡಿದಂತಿತ್ತು – ಹೀಗೆ ಕೂರಲು ಕಲಿಯುವ ಅನುಭವ. ಆಕಾಶದಲ್ಲಿ ನೆರಳಿನಂತೆ ಕಂಡ ಒಂದು ಚುಕ್ಕೆಯನ್ನು ಗಮನಿಸುತ್ತ ಗುರುಲಿಂಗಪ್ಪನ ಮಾತಿಗೆ ತಲೆ ಹಾಕಿದೆ :

“ಈ ಚಿದಂಬರ ಸ್ವಾಮಿ ಯಾಕೆ ಇದೆಲ್ಲ ಕಟ್ಟಿದ್ದು ಗೊತ್ತೇನ್ರಿ? ಏನನ್ನ ಮುಚ್ಚಿಡಕ್ಕೆ ಸಂತನಾದ ಗೊತ್ತೇನ್ರಿ? ಈ ನಾರಾಯಣರಾವ್ ಜಾತೀಲಿ, ವೃತ್ತೀಲಿ…. ”

ಗುರುಲಿಂಗಪ್ಪ ಯಾಕೋ ಬಾಯಿಕಟ್ಟಿದವನಂತೆ ಕ್ಷಣ ಸುಮ್ಮನಿದ್ದೆ. ಅವನಿಗೆ ಮುಂದಿನದನ್ನು ಹೇಳಲು ಕಷ್ಟವಾಗಿರಬಹುದು ಎನ್ನುವುದು ನನ್ನ ಊಹೆಯಿರಬಹುದೆ? ಅಂತೂ ತೊದಲಿದ:

“ಸೂ…. ಸೂಳೇರವ ಕಂಡ್ರೀ. ಆತ ಸುಳೇರವನಾಗಿರೋದು ತಪ್ಪೂಂತ ನಾನು ಹೇಳೋದಿಲ್ಲಾರಿ. ತಾಯಿ ಸತ್ತ ಮೇಲೆ ಏನು ಮಾಡ್ತಿದ್ದ ಗೊತ್ತ? ಸ್ವಂತ ತಂಗೀ ತಲೆ ಹಿಡೀತಿದ್ದ. ಅವಳು ತುಮಕೂರಿನ ಸಾಹುಕಾರನೊಬ್ಬನ ಜೊತೆ ಓಡಿಹೋದ್ಲಂತೆ. ಈ ಪ್ರಾಣಿ ಆಕೇನ ಹುಡುಕ್ತ ಹೊರಟ. ಹುಡುಕಿದ, ಹುಡುಕಿದ, ಊರೂರು ಕೇರಿ ಕೇರಿ ಹುಡುಕಿದ – ಸಿಗಲಿಲ್ಲ. ಅಲೀತ ಅಲೀತ ಈ ಪ್ರದೇಶಕ್ಕೆ ಕಾಲು ಬೆಳೆಸಿದ. ಇಲ್ಲಿಂದ ತುಮಕೂರಿಗೆ ಹೋಗೋದರಲ್ಲಿದ್ದ. ಹೋಗಿದ್ದರೆ ಅವಳು ಇವನ ಜೊತೆ ಬರ್ತಾ ಇದ್ದಳ? ಹೋದನೋ ಬಿಟ್ಟನೋ ಗೊತ್ತಿಲ್ಲ ಅನ್ನಿ. ಅಂತೂ ಇಲ್ಲೇ ಅಂಡೂರಿ ಆಶ್ರಮ ಕಟ್ಟಿದ. ಯೋಗಾಸನ ಕಲಿಸಿದ. ಜಾತೀನ್ನ ವಯಸ್ಸನ್ನ ಮುಚ್ಚಿಟ್ಟ. ಮುಚ್ಚಿಡೋದಕ್ಕಾಗಿ ಇವೆಲ್ಲ ಆಡಂಬರ ಮಾಡಿದ – ರ‍್ಯಾಸ್ಕಲ್… ”

ಗುರುಲಿಂಗಪ್ಪ ಸಿಗರೇಟನ್ನು ಮುಷ್ಟಿಯಲ್ಲಿ ಸಿಕ್ಕಿಸಿ ದಮ್ಮೆಳೆಯುತ್ತ ನಾಟಕೀಯವಾಗಿ ಮಾತಾಡಿದ. ಚಿಟಿಕೆ ಹೊಡೆದು ಬೂದಿ ಕೊಡವಿ ನಕ್ಕ :

“ತಾನು ಭಗವಂತನ ತಲೆ ಹಿಡುಕ ಅಂತ ಕೆಲವು ವಚನಗಳನ್ನ ಬರೆದಿದ್ದಾನೆ – ಈ ಅಲ್ಲಮಪ್ರಭು ಕಮ್ ಸಿದ್ಧರಾಮ. ಓದಿಲ್ವಾ ನಿವು? ನಿಮ್ಮಂಥ ಕವಿ ಸಿಕ್ಕರೆ ಕೊರೀದೇ ಬಿಡ್ತಾನ ಅವ? ಅಲ್ಲಾರಿ – ಈ ತಲೆಹಿಡುಕ ಅದು ಹೇಗೆ ಸಂತನಾಗಿ ಬಿಟ್ಟಾರಿ? – ಹೇಳಿ”.

ಅಂಡಿನಲ್ಲಿ ಬೇಯದೇ ಉಳಿದ ಭಾಗ ಮಿಕ್ಕಿರಲಿಲ್ಲ. ಎದ್ದು ನಿಂತೆ. ದೂರದಲ್ಲಿ ನೆರಳಿನಂತಿದ್ದ ಚುಕ್ಕೆ ದೊಡ್ಡದಾಗಿತ್ತು. “ಹೇಳಿ” ಎಂದು ನನ್ನ ಮುಖವನ್ನೇ ದಿಟ್ಟಿಸುತ್ತಿದ್ದನಲ್ಲ – ಅದಕ್ಕಾಗಿ ಹೇಳಿದೆ:

“ಯಾಕಾಗಬಾರದು ಮಿಸ್ಟರ ಗುರುಲಿಂಗಪ್ಪ? ಎರಡೂ ಅಹಂಕಾರವಿಲ್ಲದ ಅವಸ್ಥೆಗಳಲ್ಲವ?”

ಗಡ್ಡ ಬಿಟ್ಟ ಸಂಗಡಿಗರು ಒಪ್ಪುವಂತೆ ನಕ್ಕರು – ವ್ಯಂಗ್ಯವಾಗಿ. ಗುರುಲಿಂಗಪ್ಪ ಕೊಟ್ಟ ಸಿಗರೇಟು ಹಚ್ಚಿದೆ. ತನ್ನ ಕೋಪದಿಂದ ಮೂಲ ಮಾತ್ರ ಸ್ವಚ್ಛವೆಂದು ತಿಳಿಯಬೇಕೆಂದು ಅವನು ಉದ್ವೇಗದಿಂದ ವಾದಿಸಿದ. ಅಂಡು ಬದಲಾಯಿಸದೆ ಅವನು ಚಪ್ಪಡಿ ಮೇಲೆ ಕೂತ ಏಕಾಗ್ರತೆ ನನಗೆ ಆಶ್ಚರ್ಯವೆನ್ನಿಸಿತು :

“ಕೆಲಸದಿಂದ ಇವರು ನನ್ನ ವಜಾ ಮಾಡಿದ್ರೂಂತ ಸೇಡಿಗೆ ನಾವು ಇದನ್ನ ಮಾಡ್ತಿರೋದಲ್ಲಾರಿ. ನಾವು ವಿಚಾರವಾದಿಗಳು. ಈ ದೇಶಾನ್ನ…. ”

ಸಂಗಡಿಗರ ಮೆಚ್ಚಿಗೆಯಿಂದ ಉತ್ತೇಜಿತವಾಗಿ ಮಾತಾಡಿದ. ‘ಸರಿಯೆ’ ಎಂದೆ. ಪ್ರಾಮಾಣಿಕವಾಗಿಯೇ, ಆದರೆ ಆಸಕ್ತಿ ಇಲ್ಲದೆ. ಕತ್ತಿನ ಮೇಲೆ ಬಿಸಿಲು ನನ್ನ ಚುರು ಚುರು ಸುಡುತ್ತಿತ್ತು – ಕ್ರಾಪು ಮತ್ತು ಕಾಲರ್‌ಗಳ ನಡುವೆ. ದೂರದ ಚುಕ್ಕೆ ಪಕ್ಷಿಯಾಗಿ ತೇಲುತ್ತಿತ್ತು. ರೆಕ್ಕೆಗಳನ್ನು ಬೀಸಾಗಿಹರಡಿ, ಶುಭ್ರವಾದ ಆಕಾಶದಲ್ಲಿ ಗರುಡನಿರಬಹುಉದ. ಇಂಥ ಮೌನದಲ್ಲಿ ನಾನು ಖಿನ್ನನಾಗಿ ಬಿಡುತ್ತೇನೆ, ನಿಷ್ಟಾಕರಣವಾಗಿ.

ಆದರೂ ನನ್ನ ದಿಗ್ಭ್ರಮೆ, ಅನುಮಾನ, ವ್ಯಂಗ್ಯ, ಗೌರವ – ಮುಖ್ಯವಾಗಿ ಬರಿದಾಗಿ ಉಳಿಯುವ ಆ ಗುಹೆಯ ಬಗ್ಗೆ ನನಗೆ ಅನ್ನಿಸಿದ ವ್ಯಾಕುಲ – ಅಷ್ಟಿಷ್ಟು ಹೇಳಲು ಪ್ರಯತ್ನಿಸಿದೆ. ಆದರೆ ನನಗೇ ಉತ್ಸಾಹ ಸಾಲದಾಯಿತು. ಗುರುಲಿಂಗಪ್ಪ ಅಸಹನೆಯಿಂದ ಎದ್ದು ನಿಂತ. ಅಂಡನ್ನು ‘ಉಶ್’ ಎನ್ನುತ್ತ ಉಜ್ಜಿಕೊಂಡು ಕತ್ತನ್ನು ಬಗ್ಗಿಸಿ ಜುಬ್ಬದೊಳಗೆ ಊದಿಕೊಂಡ. ಬಿಚ್ಚಿದ ಗುಂಡಿಗಳಲ್ಲಿ ಕಂಡ ಅವನ ಕೃಶವಾದ ಎದೆ, ಮತ್ತು ಬಳಕುವ ನೀಳವಾದ ಕತ್ತು ಬಾಲಿಶವಾಗಿ ತೋರಿದವು. ಬೋಳಾಗಲು ಶುರುವಾಗಿದ್ದ ನೆತ್ತಿಯನ್ನು ಮುಚ್ಚುವಂತೆ ಉದ್ದವಾಗಿ ಬೆಳೆಸಿದ್ದ ಕೂದಲನ್ನು ಬಾಚಿದ್ದ. ನನ್ನನ್ನು ಹಂಗಿಸುವಂತೆ ಹೇಳಿದ – ಬಗಲಿಗೆ ಚೀಲ ಏರಿಸಿ : “ವೈಜ್ಞಾನಿಕ ದೃಷ್ಟಿ ಬಗ್ಗೆ ನಾಳೆ ನೀವು ಭಾಷಣ ಮಾಡ್ತಿದೀರಂತೆ ಆಶ್ರಮದಲ್ಲಿ?”

ನಾನು ಮಾತಾಡದೆ ಮೂವರನ್ನೂ ನೋಡಿದೆ. ಅವರು ದೂರದ ಧೂಳಿನ ರಸ್ತೆಯತ್ತ ನಡೆದರು, ವೇಗವಾಗಿ. ನಾನು ತಿರುಗಿದೆ. ಬಿಸಿಲಿನ ಝಳ ಅಸಹನೀಯವಾಗಿದ್ದರಿಂದ ಕೈಯನ್ನು ಕಣ್ಣಿಗೆ ಅಡ್ಡ ಮಾಡಿದ ನಡೆದೆ.

ಆಶ್ರಮದೊಳಗೆ ಬರುವಾಗ ನನಗೆ ದೂರದಲ್ಲಿ ಚಿದಂಬರ ಸ್ವಾಮಿ ಸಗಣಿ ಬೆರೆಸಿದ ನೀರನ್ನು ಎರಡು ಬಕೆಟುಗಳಲ್ಲೂ ಎತ್ತಿಕೊಂಡು ತುದಿಗಾಲಲ್ಲಿ ಓಡುತ್ತಿರೋದು ಕಾಣಿಸಿತು.

ಆಗಸ್ಟ್ ೧೯೭೭

* * *