“ಬದುಕೆಯರಮನೆಯಲ್ಲು ಬೋಧಿವೃಕ್ಷದ ಸುಯ್ಲು!”
ಎರಡು ವರ್ಷದ ಕೆಳಗೆ, ನಿಮಿಷದಂತೆ ಸರಿದು ನಿಂತ ಎರಡು ವರ್ಷದ ಕೆಳಗೆ, ಇಲ್ಲೆ – ನಸು ಮೈಯುಬ್ಬಿಸಿ ಮಲಗಿದ ಈ ನುಣುಪು ಹೂಚೆಲ್ಲಿದ ಹಾದಿಯಲ್ಲೆ ನಡೆಯುತ್ತಿದ್ದಾಗ…
ಬೆನ್ನ ಹಿಂದೆ ನೀಲಿಯಲ್ಲಿ ಬೆಣ್ಣೆಯಂಥ ಚಂದ್ರ… ಕೌಮುದಿಯ ಮಾಯೆಯಲ್ಲಿ ರಂಗುರಂಗಿನ ಹಾದಿಯನ್ನು ಸವರಿ ಸಾಗಿದ ಅವನ ಪುಟ್ಟ ಕರಿಯ ನೆರಳು – ತಲೆಗೂದಲಿಗೆ ಕಚಕುಳಿಯಿಟ್ಟು, ಮರದ ಎಲೆಯೇರಿ ನಗುತ್ತಿದ್ದ ಕಳ್ಳ ತಂಗಾಳಿ…
ಆದರೆ ಇವೆಲ್ಲವನ್ನೂ ಮರೆಸಿ, ಮನಸ್ಸಿನೆದುರು ಸುಳಿಯುತ್ತಿದ್ದ ಆ ಮುದ್ದು ಮುಖ…
ಸೂಜಿಗಲ್ಲಿನಂತೆ ಹಾದಿಯುದ್ದಕ್ಕೂ ಅವನನ್ನು ಎಳೆಯುತ್ತಿದ್ದ ಆ ಪುಟ್ಟ ಗುಡಿಸಲು – ಎದುರಿನ ಮಲ್ಲಿಗೆ ಮಂಟಪ – ಬಾಗಿಲ ಬಳಿ ಜೋಲಾಡುವ ಗಿಣಿಯ ಪಂಜರದ ಬಳಿ ಚೆಂದುಟಿ ಅದುರಿಸಿ, ನಾಚಿ ನಾಚಿ ಅವನ ಹೆಸರು ಕಲಿಸುತ್ತ, ಸುಯ್ದು ಸುಯ್ದು ದಾರಿ ಕಾಯುತ್ತ ನಿಂತಿರುತ್ತಿದ್ದ ಕಾಮಾಕ್ಷಿ…
ಕಾಮಾಕ್ಷಿ, ಪುಟ್ಟಗುಡಿಸಲು, ಹೂದೋಟ, ಏಕಾಂತ, ಗಿಣಿಯ ಪಂಜರ, ಸ್ವಾತಂತ್ರ್ಯ, ಜನಜಂಗುಳಿಯ ಗೊಂದಲದಿಂದ ದೂರ… ದೂ… ರ?
… ಆಹ್! ಬೆನ್ನಹಿಂದೆ ನಗುವ ಚಂದ್ರ, ದಾರಿ ತುಂಬ ರಂಗುರಂಗು ಪುಟ್ಟ ನೆರಳು, ನಡೆನಡೆದು ಸವೆದ ಹಾದಿ….
– ಸವೆದ ಹಾದಿ?
ಅಲ್ಲಿಯೇ ಕವಲೊಡೆದು ಹಾಯುವ ಇನ್ನೊಂದು ಹಾದಿಯನ್ನು ಯಾರು ನೋಡಿ ಯಾರು?…
ನೋಡಿದರೂ ಯಾರು ನಡೆದಾರು ಕಲ್ಲು ಮುಳ್ಳಿನ ಆ ಕೊರಕಲು ಹಾದಿಯಲ್ಲಿ?….
ಮಲಗಲು ಬರುವ ಮೋಡಗಳಲ್ಲದೆ ಮತ್ತಾರು ಆ ಏಕಾಂತದ ನಡುವೆ ಸುಳಿದಿದ್ದಾರು???…
– ಸುಳಿದಿಲ್ಲವೆ!
ಅವನ ಹೆಸರು ಒಮ್ಮೆ ಅಲ್ಲಿ ಸುಳಿದಿಲ್ಲವೆ? ಪರ್ವತ ಒಮ್ಮೆ ‘ರಾಮೂ’ ಎಂದು ಕೂಗಿ ಕರೆಯಲಿಲ್ಲವೆ?… ”ರಾಮೂ”…. ಏನೂ ಗಂಭೀರವಾಗಿ ಕರೆದಿತ್ತು!!….
ಅಂದೇ…. ಅಂದೇ!… ಈ ಕೊರಕಲು ಹಾದಿ ತುಳಿದು ಪರ್ವತದ ನೆತ್ತಿಗೆ ಧಾವಿಸಬೇಕೆನ್ನಿಸಿತ್ತು!… ‘ರಾ… ಮೂ’…. ಏನು ಮೋಡಿ ಬೀರಿ ಕರೆದಿತ್ತು.
ಆದರೆ ಕಾಮಾಕ್ಷಿ ನಡುಗಿ ಹೆದರಿ ಕಣ್ಣರಳಿಸಿ ಬೇಡಿಕೊಂಡಳು…. ಹೌದು! ಆ ದಿನ ಪರ್ವತ ಕರೆಯಲಿಲ್ಲ… ಎಂಥ ಹುಚ್ಚು ಕಲ್ಪನೆ. ಕಾಮಾಕ್ಷಿ ಕೂಗಿದಳು ಎಂದು ಪರ್ವತ ಹೇಳಿತ್ತು ಅಷ್ಟೆ!!….
ಆಗ… ಆಗ… ಎಂಥ ದಿನಗಳವು! ಆಗ ಪರ್ವತವೆ ಕಾಮಾಕ್ಷಿ ಕರೆದಳು ಎನ್ನುತ್ತಿತ್ತು. ಬೆಳದಿಂಗಳು ‘ಕಾಮಾಕ್ಷಿ ಎಲ್ಲಿ’ ಎಂದು ನಗುತ್ತಿತ್ತು. ಚಂದ್ರ ‘ಏಕೆ ಕಾಮಾಕ್ಷಿ ಮುಖ ಸಾಲದೆ’ ಎನ್ನುತ್ತಿದ್ದ. ಅರಳಿದ ಹೂಗೊಂಚಲು ಕಾಮಾಕ್ಷಿಯ ಮುಡಿ ಬರಿದಾಗಿದೆ ಎನ್ನುತ್ತಿತ್ತು. ಗಗನವೇ ಗುಡುಗಿ, ಕಾಮಾಕ್ಷಿಯನ್ನು ಬಿಟ್ಟೇಕಿರುವಿ ಎನ್ನುತ್ತಿತ್ತು.
ಆದರೆ ಈ ದಿನ ಏಕೆ ಹೀಗೆ ಮಂಪರು ಬಡಿದು ನಿಂತಿದ್ದಾನೆ? ಸಂಜೆಯ ಶಾಂತಿ ದಿಕ್ಕುದಿಕ್ಕಿಗೂ ಬಣ್ಣ ಚೆಲ್ಲಿದಾಗ, ಈ ಕವಲೊಡೆದ ಹಾದಿ ಅವನ ಎದೆಯನ್ನೇಕೆ ಹೀಗೆ ತಿವಿಯುತ್ತಿದೆ?….
ಕಾಮಾಕ್ಷಿ ಕಾಯುತ್ತ ಗಿಣಿಯ ಪಂಜರದ ಬಳಿ ನಿಂತಿದ್ದಾಳೆ… ಹೋಗಲು ಎಂದಿನಂತೆ ಏಕೆ ಅವಸರವಿಲ್ಲ?… ‘ಇಂದು ಏನಿದು ಬೇಸರ?’
ಕಾಮಾಕ್ಷಿ, ಪುಟ್ಟ ಗುಡಿಸಲು, ಹೂದೋಟ, ಏಕಾಂತ, ಗಿಣಿಯ ಪಂಜರ, ಸ್ವಾತಂತ್ರ್ಯ, ಜನ ಜಂಗುಳಿಯ ಗೊಂದಲದಿಂದ ದೂರ… ದೂ… ರ… ! ಏಕೆ? ಬೇಡವೆ?….
‘ಏನಿದೇನಿದು ತೇಲುಗಣ್ಣಿನ ಹೊರಳು ನೋಟದ ಸೂಚನೆ?
ಯಾವ ಸುಮಧುರ ಯಾತನೆ, ಯಾವ ದಿವ್ಯದ ಯಾಚನೆ?’
ಏನು? ಪರ್ವತ ಕರೆಯುತ್ತಿದೆಯೆ? ಹಿಂದಿನಂತೆ ಕಾಮಾಕ್ಷಿ ಕರೆದಳೆಂದು ಹೇಳುತ್ತಿದೆಯೆ??…. ಅಥವಾ ಮೋಡಗಳಾಡುವ ಏಕಾಂತದ ಶ್ರೀಮಂತ ಒಡಲಿಗೆ ಅವನನ್ನೇ ಎಳೆಯುತ್ತಿದೆಯೆ?? ಕೂಗಿ ಕೂಗಿ ಕರೆಯುತ್ತಿದೆಯೆ??….
ಎದಿರು ಕವಲೊಡೆದ ಹಾದಿ….
ಒಂದು ಕಾಮಾಕ್ಷಿಯ ಮೃದು ಹೃದಯದೆಡೆಗೆ ಒಯ್ಯುವ ಹೂಚೆಲ್ಲಿದ ಹಾದಿ. ಮತ್ತೊಂದು ಕಗ್ಗಲ್ಲಿನ ಕರಿಯೊಡಲಿಗೆ ಒಯ್ಯುವ ಕಲ್ಲು ಮುಳ್ಳೂ ತುಂಬಿದ ಕೊರಕಲು ದಾರಿ… ಎಲ್ಲಿಂದೆಲ್ಲಿಗೆ ಸಂಬಂಧ…
ಆದರೂ ಕೂಗಿ ಕೂಗಿ ಕರೆಯುತ್ತಿದೆಯೆ ಪರ್ವತ?
ಏಕೆ ಸಾಲದೆ? ಇಷ್ಟೆ ಸಾಲದೆ?? … ಕಾಮಾಕ್ಷಿ, ಪುಟ್ಟ ಗುಡಿಸಲು, ಹೂದೋಟ ಏಕಾಂತ, ಗಿಣಿಯ ಪಂಜರ, ಸ್ವಾತಂತ್ರ್ಯ….
ಸ್ವಾತಂತ್ರ್ಯ?,…. ಎಲ್ಲಿಯ ಸ್ವತಂತ್ರ್ಯ?? … ಗಿಣಿಯ ಪಂಜರ…
ಊಹೂ. ಪಂಜರದ ಗಿಣಿ….
* * *
ಪಂಜರ!ಗಿಣಿ!… ‘ಕಾಮೂ – ರಾಮೂ!’
ಕಾಮುವಿಗೆ ರಾಮು – ರಾಮುವಿಗೆ ಕಾಮೂ…. ಪಂಜರದ ಗಿಣಿ… !
ಪಂಜರದ ಗಿಣಿ ಕೊಕ್ಕು ಚಾಚಿ ಅರಚುತ್ತಿತ್ತು. ಕಾಮುವನ್ನು ಕರೆದು ಕರೆದು ಹೇಳುತ್ತಿತ್ತು. – “ಕಾಮೂ!… ರಾಮು”
ಕಾಮಾಕ್ಷಿ ಹೊರಗೋಡಿಬಂದು ನೋಡಿದಳು… ಅಭ್ಯಾಸ ಬಲದಿಂದ ಸವೆದ ಹಾದಿಯಲ್ಲೇ ನಡೆದು ಬಂದಿದ್ದ ರಾಮು.
ಆದರೆ ಎಂದಿನಂತೆ ಇಂದೇಕೆ ಅವನಿಗೆ ಅವಸರವಿಲ್ಲ? ಅವಳನ್ನು ಬೇಡಿದಳು ಇಂದೇಕೆ ಅವನಿಗೆ ಬೇಡವಾಯಿತು? ಏಕೆ? ಏಕೆ??…
ಕಾಮಾಕ್ಷಿ ಎರಡು ಹೆಜ್ಜೆ ಹಿಂದೆ ಸರಿದು ಹನಿಗೂಡಿದ ಕಣ್ಣೆತ್ತಿ ಮಲ್ಲನೆ ಕರೆದಳು… ‘ರಾಮೂ’….
ಪಂಜರದ ಗಿಣಿ ಹೊರಗಿನಿಂದಲೇ ‘ಕಾಮೂ’ ಎಂದು ಮಾರುತ್ತರ ಕೊಟ್ಟಿತು… ಆದರೆ ಬಳಿಯಲ್ಲೇ ಇದ್ದ ರಾಮು, ‘ಕಾಮೂ’ ಎನ್ನಲಿಲ್ಲ!… ಎಲ್ಲಿ ದೂರ… ದೂರ ಓಡಿದೆ ಅವನ ಮನಸ್ಸು??….
ಪ್ರೇಮದೇವತೆ ನಿಷೇಧೀಸಿದ ಯಾವ ಮರದ ಹಣ್ಣು ತಿಂದು ಬಂದ?…. ಅವಳನ್ನಪೇಕ್ಷಿಸಿದ ಕಣ್ಣು ಮತ್ತಾವ ಜ್ಯೋತಿರ್ಮಯ ಅಂತರಾಳಕ್ಕಿಳಿದು ಕುರುಡಾಯಿತು??….
“ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?”
ಬೆಳಗಿನ ನಸು ಬಿಸಿಲಿನಲ್ಲಿ ಮಲ್ಲಿಗೆ ಮಂಟಪದ ಬಳಿ ಹೆಡೆಯಾಡಿಸಿದ ಹಾವು ಅವನ ಅಂತರಾಳ ಕೆದಕಿಹೋಯಿತೆ? ಏನಾಯಿತು? ಏನಾಯಿತು? ಅವಳ ಜೀವದ ಜೀವಕ್ಕೆ ಏನಾಯಿತು???….
* * *
ಏನಾಗಬೇಕು??
ರಾಮು ದೀರ್ಘನಿಟ್ಟುಸಿರೆಳೆದ… ಇದಕ್ಕಿಂತ ಹೆಚ್ಚಿಗೆ ಏನಾಗಬೇಕು?
ಮಲ್ಲಿಗೆ ಮಂಟಪದಲ್ಲಿಯೂ ಹಾವು ಹೆಡೆಯಾಡಿಸುತ್ತದೆ! ಇಂದು ಚೆಲುವಿನ ಪುತ್ಥಳಿಯಾದ ಕಾಮಾಕ್ಷಿಯ ಮುದ್ದು ಕೆನ್ನೆಯನ್ನು, ಬೆಳಕು ತುಂಬಿದ ಕಣ್ಣನ್ನು, ಅಮೃತಮಯ ತುಟಿಯನ್ನು ನಾಳೆ ಕ್ರಿಮಿಕೀಟಗಳು ಉಣ್ಣುತ್ತವೆ! ಸಾವಿನ ಕೋರೆದಾಡೆಯ ಮೇಲೆ ಕುಣಿದು ಮೆರೆಯುವ ಸೌಂದರ್ಯದ ಆಯಸ್ಸೆಷ್ಟು? ಅಶಾಶ್ವತವಾದ ಬದುಕಿನ ನಾಟಕದಲ್ಲಿ ಈ ಆಸೆ, ಈ ಪ್ರೇಮ, ಈ ಹಂಬಲ, ಎಷ್ಟು ಕ್ಷಣಿಕ! ತರುಣರು ಕ್ಷಯಪೀಡಿತರಾಗಿ, ಮುದುಕರು ಜರಾಶೀರ್ಣರಾಗಿ, ದುಃಖಿಗಳು ತಾವೇ ಮೈಮೇಲೆ ಮಣ್ಣೆಳೆದು – ಮರಣ ಮುಖರಾಗಿರುವ ಈ ಜಗತ್ತಿನಲ್ಲಿ ಶಾಂತಿ ಎಲ್ಲಿ? ಸುಖವೆಲ್ಲಿ?? ತೃಪ್ತಿಯೆಲ್ಲಿ??…. ಎಲ್ಲಿ
ಎಲ್ಲಿ??… ಎಲ್ಲಿ???…
ಕಣ್ಣು ಜ್ವಾಲಾಮುಖಿಯಾಗಿ ಹುಡುಕುತ್ತಿತ್ತು… ಎಲ್ಲಿ?ಎಲ್ಲಿ??
– ಸಂಜೆ ಪರ್ವತ ಕರೆದು ಹೇಳಲಿಲ್ಲವೆ?…. ಪರ್ವತದ ನೀರವ ನೆತ್ತಿಯ ತುದಿಯಲ್ಲಿ ಕಾವಿ ತೋಡಿಗೆಯುಟ್ಟು ಮುಗಿಲ ರೂಪವೊಂದು ಸುಳಿಯಲಿಲ್ಲವೆ??
ಹೊರಟು ಹೋಗಲು, ತಿರುಗಿ ನೋಡದೆ ಹೊರಟು ಹೋಗಲು ನವತಾರುಣ್ಯದ ಸೌಂದರ್ಯನಿಧಿ ಕಾಮಾಕ್ಷಿಯ ಬೆಚ್ಚಗಿನ ಅಪ್ಪುಗೆಯನ್ನು ತೊರೆದು ಹೊರಟುಹೋಗಲು, ದೂ… ದೂರ… ರ ತಿರುಗಿ ನೋಡದೆ ಹೊರಟು ಹೋಗಲು ತ್ರಾಣವಿದೆಯೆ?
* * *
ಅಂಗಳದಲ್ಲಿ ಕಾಮಾಕ್ಷಿಯ ಜೊತೆ ನಿಂತವನು ಕತ್ತೆತ್ತಿ ನೋಡಿದ.
ದೇವರ ನೀಲಿ ಅಂಗಳದಲ್ಲಿ ಕೋಟಿ ದೀಪ ಮಿನುಗುತ್ತಿತ್ತು!…
ಮಿನುಗುತ್ತಿತ್ತೆ??… ಹೌದು! ಹಿಂದೆ ಕಾಮಾಕ್ಷಿಯನ್ನಪ್ಪಿ ನೋಡಿದಾಗಲೆಲ್ಲಾ ಹಾಗೆನ್ನಿಸುತ್ತಿತ್ತು. ತನ್ನ ಪ್ರೇಮ ಸಮಾಗಮಕ್ಕೆ ಸಾಕ್ಷಿಯಾಗಿ ತಾರೆಗಳು ಕಣ್ಣರಳಿಸಿ ಕಾದು ನಿಂತಿವೆ ಎನ್ನಿಸುತ್ತಿತ್ತು. ಆದರೆ ಈಗ??….
ವಾಮನನಂತಿದ್ದ ಪ್ರಕೃತಿ ಈಗ ತ್ರಿವಿಕ್ರಮ ರೂಪ ತಾಳಿ ತುಳಿಯುತ್ತಿದೆ. ಆ ಅಪರಂಪಾರ ಜ್ಯೋತಿರ್ಲೋಕಗಳ ಕ್ರೂರ ವಿಸ್ತಾರದ ಅದ್ಭುತದೆದುರು ಈಗ ಅವನೆತ್ತ? ಅವನ ಅರಗಿಣಿ ಕಾಮಾಕ್ಷಿಯೆತ್ತ?
ಕಣ್ಣು ಕೊರೈಸುತ್ತಿದೆ ಆ ದೀಪ್ತ ಬ್ರಹ್ಮಾಂಡಗಳ ಬೆಳಕು. ಏರು ಏರು ಎಂದು ಹೃದಯ ಹಿಂಡುತ್ತಿದೆ ಆ ಪರ್ವತದ ಗಂಭೀರ ಎತ್ತರ.
ಆದರೆ ಎಲ್ಲಿ?… ಎಳೆಯುವ ಈ ನೆಲದಲ್ಲಿ? ಬಡತನ, ರೋಗ, ರುಜಿನ ಹಸಿವು, ಸಂಕಟ, ಹೃದಯದ ತಟವಟ… ಈ ಭವಬಂಧನದ ಕ್ರೂರ ಮಾಯಾಪಾಶ….
ಎಲ್ಲವನ್ನೂ ಮೀರಿ ಎಂದು ನಿಲ್ಲವುದು? ಆ ಪರ್ವತದ ತುದಿಗೆ ಎಂದು ಹಾರುವುದು?? ಎಂದು? ಎಂದು??
ಎದೆಯೋ ಬೆಂಕಿಯ ಕುಂಡ! ಮೇಲೆ – ಉರಿಯುವ ಜ್ಯೋತಿರ್ಲೋಕ! ಮೈ ಕರ್ಪೂರದ ಆರತಿ!!… ಸುತ್ತೆಲ್ಲೆಲ್ಲೂ ಜ್ವಾಲೆ!!…. ಅವನ ತಾಂಡವ ಲೀಲೆ!!
ಎಂಥ ಕ್ರೂರ ಲೀಲೆ?… ಈ ಮಾಂಸದ ಪಂಜರವನ್ನಿತ್ತ ದೇವರೇ ಏಕೆ ತನ್ನ ರುದ್ರ ಸೌಂದರ್ಯದ ಈಟಿ ಎಸೆದು ತಾನಿತ್ತ ಪಂಜರವನ್ನೆ ತಿವಿಯುತ್ತಾನೆ? ಏನು ಲೀಲೆ ಅವನದು??… ಪಂಜರದಲ್ಲಿಟ್ಟು ತಾನೇ ಸಾಕಿ, ಮತ್ತೆ ಹಾರಲು ಪ್ರೇರಿಸುವಷ್ಟು ನಿಷ್ಕರುಣೆಯೆ ಅವನಿಗೆ? ಆ ಪರ್ವತದ ತುದಿಗೆ ಹಾರಬೇಕೆ???….
ಆದರೆ ಅಲ್ಲಿಗೆ ಹೋಗುವಷ್ಟು ಧೈರ್ಯ ಉಂಟೆ?
ಶಕ್ತಿ ಉಂಟೆ??….
– ಆದರೆ… ಪಾಪ ನಂಬಿದ ಮುಗ್ಧ ಕಾಮಾಕ್ಷಿ.. ಕೈ ಹಿಡಿದ ಚೆಲುವಿನ ಪುತ್ಥಳಿ ಅಬಲೆ ಕಾಮಾಕ್ಷಿ… ಮುದ್ದು ಮುಖದ ಕಾಮಾಕ್ಷಿ…
“ಕಾಮೂ… ಕಾಮೂ… ”
* * *
‘ಕಾಮೂ’
ಕಾಮೂ ಪಾಪ ನಿದ್ದೆ ಹೋದಳು… ಪಾಪ೧ ಅಬಲೆ!… ಮುಗ್ಧೆ. ಕೋಮಲ ಹೃದಯಿ ಕಾಮಾಕ್ಷಿ. ಅವಳೇನು ತಪ್ಪುಮಾಡಿದ್ದಾಳು?…. ಚೆಲುವೆಗೇಕೆ ಈ ಶಿಕ್ಷೆ?… ಹೆಣ್ಣು ಜೀವದ ತಾರುಣ್ಯ ನೂರು ರೀತಿ ಸಿಂಗರಿಸಿಕೊಂಡು ಗಂಡು ಜೀವವನ್ನು ಕರೆಯುತ್ತದೆ… ಸೃಷ್ಟಿಯ ಶಕ್ತಿ ಕಾಮಾಕ್ಷಿಯ ಸೌಂದರ್ಯವಾಗಿ ಕರೆಯುತ್ತದೆ….
– ಕರೆಯುತ್ತದೆ? ಯಾವ ತಿಮಿರದ ಪಾತಾಳಕ್ಕೆ ತಳ್ಳುತ್ತಿದೆ? ಸೃಷ್ಟಿಯ ಮಾಯಾಲೀಲೆಗೆ ಬಲಿಯಾಗಿ ಕತ್ತಲಿನ ಮಡುವಿಗೂ ಧುಮುಕಬೇಕೆ? ಇಷ್ಟು ಸಂಕಟ ಇಷ್ಟು ದುಃಖ ತುಂಬಿದ ಈ ಪ್ರಪಂಚಕ್ಕೆ ಮತ್ತೊಂದು ಜೀವಿಯನ್ನು ಪಾಲುಗಾರಿಕೆಗೆ ತರಲು, ಸೃಷ್ಟಿಸಿ ಸಾವಿನ ದವಡೆಗೆ ಮತ್ತೊಂದು ತುತ್ತೀಯಲು ಆ ನಿಷ್ಕರುಣ ಶಕ್ತಿಯ ಲೀಲೆಗೇ ಸಾಧನವಾಗಬೇಕೆ? ಏನೂ ಅರಿಯದ ಮುಗ್ಧೆ ಕಾಮಾಕ್ಷಿಯ ದೇಹದಲ್ಲಿ ಕ್ಷಣಿಕ ಸೌಂದರ್ಯವಾಗಿ ನೆಲಸಿ, ಕರೆಯುವ ಆ ಕ್ರೂರ ಶಕ್ತಿಯ ಕುರುಡು ಪಾಶಕ್ಕೆ ಅವನು ಇಡಿಯ ಬದುಕನ್ನೆ ಒಡ್ಡಬೇಕೆ??…
ಇಲ್ಲ… ಇಲ್ಲ… ಆಗಲಾರ.. ಅವನು ಬಲಿಯಾಗಲಾರ…..
ಮೇಲಿನ ದೀಪ್ತ ಬ್ರಹ್ಮಾಂಡಗಳು ರುದ್ರ ಸೌಂದರ್ಯದ ಈಟಿ ಎಸೆದು ತಿವಿಯುತ್ತಿವೆ. ಅಗೋ! ಆ ಪರ್ವತ ಕರೆಯುತ್ತಿದೆ, ಮಲ್ಲಿಗೆ ಮಂಟಪದ ಬಳಿ ಹಾವು ಸುಳಿದು ಎಚ್ಚರಿಸಿದೆ. ಕೊರಕಲು ಹಾದಿಯಾದರೇನಂತೆ? ಅದರಲ್ಲೆ ನಡೆದರಾಯಿತು… ಪರ್ವತ ಬುದ್ಧನಂತೆ ಕೂತು ಸನ್ನೆ ಮಾಡುತ್ತಿದೆ… ಮುಪ್ಪಿನಲ್ಲಿ ಸುಕ್ಕುಗಟ್ಟಿ ಕೊನೆಗೆ ಮಣ್ಣು ತಿನ್ನುವ ಈ ದೇಹದ ಸುಖಕ್ಕಾಗಿ ಏಕೆ ಹಲುಬಬೇಕು? – ‘ಭಾರ್ಯಾ ಬಿಭ್ಯತಿ ತಸ್ಮಿನ್ ಕಾಯೇ’. ಸರ್ವಭೂತಗಳಿಗೂ ಈಗ ನಿಶೆ ಪ್ರಾಪ್ತವಾಗಿದೆ. ಕತ್ತಲು ಸ್ವಪ್ನಸಾಮ್ರಾಜ್ಯ ನೇಯುತ್ತ ಬದುಕಿನೊಡನೆ ಆಡುತ್ತಿದೆ. ಇದೇ ಜಾಗೃತನಾಗಲು ಸುಸಮಯ… ‘ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿಸಂಯಮೀ’….. ಹೋಗಬೇಕು…. ಮಡದಿ ಮಠ ಮನೆ ಮಾರು ಎಲ್ಲ ಎಲ್ಲ ತೊರೆದು ಹೋಗಬೇಕು… ಹೋಗಬೇಕು…
ರಾಮು ಎದ್ದುನಿಂತ… ಸೌಂದರ್ಯನಿಧಿ ಕಾಮಾಕ್ಷಿನಿದ್ದೆಯಲ್ಲಿದ್ದಳು. ತಿರುಗಿ ನೋಡದೆ ಹೆಜ್ಜೆ ಇಟ್ಟ… ಮತ್ತೊಂದು ಹೆಜ್ಜೆ ಮುಂದುವರಿದು ಗೋಡೆಯ ಮಗ್ಗುಲಿಗೆ ಆನಿಸಿ ಇಟ್ಟಿದ್ದ ಬುದ್ಧನ ವಿಗ್ರಹಕ್ಕೆ ಮುಗಿದು ಆ ಮೂರ್ತಿಯ ಪ್ರಶಾಂತತೆಯನ್ನು ಎದೆಯಲ್ಲಿ ತುಂಬಿಕೊಂಡ… ಹೊರಟ….
ಬುದ್ದ ಬುದ್ದ…
ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ….
* * *
ಎದ್ದವನೆ ಹೊರಬಂದು ಪಂಜರದ ಬಾಗಿಲನ್ನು ತೆರೆದು ಗಿಣಿಯನ್ನು ಹೊರಗೆ ಹಾರಿಸಿದ. ನಿಡುಸುಯ್ದು….. ಪರ್ವತಾಭಿಮುಖವಾಗಿ ಹೊರಟ…
“ಹೊರಟ. ಹೊರಟೇ ಹೊರಟ. ಹೊರಟನೆತ್ತೊ!”…
ಆದರೆ ಹೋಗುತ್ತಿದ್ದವನು ಬೆಚ್ಚಿ ಗಕ್ಕನೆ ನಿಂತು ನೋಡಿದ:
ಹೊರಗೆ ಗಾಢಾಂಧಕಾರ.
ತಿವಿದು ತಿವಿದು ಹಿಂಸಿಸಿದ ನಕ್ಷತ್ರಗಳೆಲ್ಲಿ?… ಬಾಬಾ ಎಂದು ಕರೆದ ಪರ್ವತವೆಲ್ಲಿ??….. ಸ್ಥಿತಪ್ರಜ್ಞ ಬುದ್ಧನೆಲ್ಲಿ???… ಎಲ್ಲಿ?… ಎಲ್ಲಿ??
ಗಾಡಾಂಧಕಾರ… ಪ್ರಳಯದ ಕಪ್ಪು ಕರಿಯ ಅಂಧಕಾರ… ಒಳಗು ಹೊರಗು ಎಲ್ಲೆಲ್ಲೂ ಕತ್ತಲೋ ಕತ್ತಲು!!….
ಆದರೆ ಅಂದು ಬುದ್ದ ಹೊರಟಂದು – ವೈಶಾಖ ಶುದ್ಧಪೂರ್ಣಿಮೆ! ಹೊರಗೆಲ್ಲ ಹಾಲೋ ಹಾಲು.
ಆದರೆ ಅವನ ಮುಂದೆ ಅಂಧಕಾರ… ಗಾಡಾಂಧಕಾರ!
ಎಲ್ಲಿ ನಕ್ಷತ್ರ?… ಎಲ್ಲಿ ಪರ್ವತ?….
ಎಲ್ಲಿ? ಎಲ್ಲಿ ಈಗ ರಾಮೂ?… ಎಲ್ಲಿ ರಾಮೂ!!….
* * *
“ಎಲ್ಲಿ? ಎಲ್ಲಿ ಈಗ ರಾಮೂ?…. ಎಲ್ಲಿ ರಾಮೂ”
ಕಾಮಾಕ್ಷಿ ಚೀರಿ ಹೊರಬಂದು ನೋಡಿದಳು.
‘ಅಯ್ಯೋ ಎಲ್ಲಿ ಹೋದ ರಾಮು?’
ಪಂಜರದಲ್ಲಿ ಗಿಣಿ ಇಲ್ಲ… ಎಲ್ಲಿ? ಎಲ್ಲಿ ಅವಳ ಅರಗಿಣಿ? ಎಲ್ಲಿ ರಾಮು?? ಎಲ್ಲಿ???…..
‘ರಾಮೂ…. ರಾಮೂ…. ’
‘ಗಿಣಿ ಮತ್ತೆ ಹಾರಿಬಂದಿತು… ಆದರೆ ರಾಮು ಎಲ್ಲಿ?… ಅರಗಿಣೀ! ರಾಮು ಎಲ್ಲಿ… ಎಲ್ಲಿ?’
ಕಾಮಾಕ್ಷಿ ಒಳಗೋಡಿ ಬಂದಳು. ಬುದ್ದನ ವಿಗ್ರಹದಿದುರು ಕೈಜೋಡಿಸಿ ನಿಂತಳು. ಬುದ್ಧನಿಗೆ ಎಲ್ಲವೂ ಗೊತ್ತಿದೆಯೋ ಎನ್ನುವಂತೆ ಹಲುಬಿ ಹಲುಬಿ ಕೇಳಿದಳು. ‘ರಾಮು ಎಲ್ಲಿ?’….
ಮಡದಿ ಮಠ ಮನೆ ಮಾರು ತೊರೆದು ಬುದ್ಧನಾದವನನ್ನು ನಡುಗುವ ಕೈಯಲ್ಲಿ ಹಣತೆಯೆತ್ತಿ, ಹನಿಗೂಡಿದ ಕಣ್ಣಿನ ಕುಡಿಬೆಳಕೆತ್ತಿ ನೋಡಿದಳು.
ಚೀರಿದಳು!
ಮಲ್ಲಿಗೆ ಮಂಟಪದಲ್ಲಿ ಹೆಡೆಯಾಡಿಸಿದ ಸರ್ಪವೇ ಬುದ್ಧನ ಶಿರಸ್ಸಿನ ಮೇಲೆಯೂ ಹೆಡೆಬಿಚ್ಚಿ ಕುಳಿತಿತ್ತು!!
ಚೀರಿದಳು ಎದ್ದು ಹೆಜ್ಜೆ ಹಿಂದೆ ಸರಿದು ಅವಾಕ್ಕಾಗಿ ನಿಂತಳು…
ಬುದ್ಧನ ವಿಗ್ರಹ ಬಿದ್ದು ‘ಝಲ್‘ ಎಂದು ಚೂರು ಚೂರಾಯಿತು, – ಹಾವು ಮಿಂಚಿನಂತೆ ಹರಿದು ಹೊರಗೆಲ್ಲೋ ಮಾಯವಾಯಿತು.
ಬೆಂಕಿಯಲ್ಲಿ ಹೊರಳಿದಂತಾಗಿ ಹೊರಗೋಡಿ ಬಂದು ಗಿಣಿಯೊಡನೆ ಚೆಲುವೆ ಕಾಮಾಕ್ಷಿ ಚೀರಿದಳು –
‘ರಾಮೂ… ರಾಮೂ… ’
* * *
‘ರಾಮೂ… ರಾಮೂ’
ಗಾಡಾಂಧಕಾರದಲ್ಲಿ ಎದೆ ನಡುಗುವಂತೆ ಕರೆ ಬರುತ್ತಿದೆ.
‘ರಾಮೂ… ರಾ.. ಮೂ…. !’
ಕತ್ತಲಿನಲ್ಲಿ ಜೀರ್ಣವಾದರೂ ಬುದ್ದನಂತೆ ಕೂತ ಪರ್ವತ ಕರೆಯುತ್ತಿದೆಯೆ? ಪಂಜರದ ಗಿಣಿಯ ಧ್ವನಿಗಿದು ಪ್ರತಿಧ್ವನಿಯೆ? ಪರ್ವತ ನಗುತ್ತಿದೆಯೆ?
‘ರಾ… ಮೂ… ’
ಪರ್ವತ ಕಾಮಾಕ್ಷಿಯ ಬಳಿ ಹೋಗಬೇಡವೆಂದು ಹೆದರಿಸುತ್ತಿದೆಯೆ?
ಹೊರಗೆಲ್ಲ ಗಾಡಾಂಧಕಾರ… ಒಳಗೂ ಅಂಧಕಾರ ಒಳಗಿನಾಳದೊಳಗೂ ಅಂಧಕಾರ… ಬುದ್ಧ ಎಲ್ಲಿ ಹೋದ? ಅವನು ಹೊರಟ ದಿನ ವೈಶಾಖ ಶುದ್ಧ ಪೂರ್ಣಿಮೆ. ಹೊರಗೆಲ್ಲ ಹಾಲೋಹಾಲು… ಆದರೆ ಇಂದು ಅಂಧಕಾರ. ಎಷ್ಟು ಜನುಮಜನುಮವನ್ನೆತ್ತಿ ವೈಶಾಖ ಶುದ್ಧ ಪೂರ್ಣಿಮೆಗಾಗಿ ಕಾಯಬೇಕು? ಎಷ್ಟು ಜನುಮಗಳ ತನಕ ಸಹಿಸಬೇಕು, ಈ ಮಾಯಾಪಾಶ… ಈ ಗಾಢಾಂಧಕಾರ….
ಈ ಗಾಡಾಂಧಕಾರ….
ಓಹ್ ಅಲ್ಲ ಅಲ್ಲ.. ಬೆಳಕು. ಬೆಳಕು… ಅವನ ಜೀವನದ ಏಕಮಾತ್ರ ಬೆಳಕು ಕಾಮಾಕ್ಷಿ – ಎದಿರು ಓಡಿ ಬಂದು ನಿಂತಿರುವ ಅಬಲೆ ಕಾಮಾಕ್ಷಿ…
* * *
ಹೇಗೆ ನಡುಗುತ್ತ ಬಾಲೆ ಕಾಮಾಕ್ಷಿ ಅವನನ್ನಪ್ಪಿ ಎಡೆಯ ಮೇಲೆ ಮುಖವಿಟ್ಟು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.
ರಾಮು ಅವಳ ಕಣ್ಣೊರಸಿ ಮೆಲ್ಲನೆ ಗುಡಿಸಲಿನ ಕಡೆ ನಡೆದ…. ಹೂ ಚೆಲ್ಲಿದ ಸವೆದ ಹಾದಿಯಲ್ಲಿ ಕಾಮಾಕ್ಷಿಯ ಜೊತೆ ನಡೆಯುತ್ತ ಗಗನದೆಡೆ ನೋಡಿದ… ಗಾಡಾಂಧಕಾರ!…. ‘ಎಲ್ಲಿ ಹೋದ ಬುದ್ದ?’
‘ಬುದ್ಧ ಒಡೆದು… ಚೂರು.. ಚೂರು’
ಕಾಮಾಕ್ಷಿ ಬಿಕ್ಕುತ್ತ ಹಗುರವಾದ ಎದೆಯಿಂದ ನುಡಿದಳು…
ಆದರೆ ರಾಮು ಭಾರವಾದ ಎದೆಯಿಂದ ನಿಟ್ಟುಸಿರಿಟ್ಟು ಮೆಲ್ಲಗೆ ನುಡಿದ
“ಹೌದು ಎರಡು ಕ್ಷಣವಿದ್ದು ಹೊರಟುಹೋದ… ಈಗ ಚೂರು… ಚೂರು”
ಕಾಮಾಕ್ಷಿ ಮೆಲ್ಲನೆ ಅವನನ್ನಪ್ಪಿ ಸಂತೈಕೆಯ ಧ್ವನಿಯಲ್ಲಿ ಹೇಳಿದಳು –
“ಮಲ್ಲಿಗೆ ಮಂಪದ ಬಳಿ ಹೆಡೆಯಾಡಿಸಿದ ಸರ್ಪವೇ ಬುದ್ಧನ ಶಿರಸ್ಸಿನ ಮೇಲೂ ಹೆಡೆಯಾಡಿಸುತ್ತಿತ್ತು… ”
– ಏನೋ ಅರ್ಥವಾದಂತಾಗಿ ನಡುಗಿ, ರಾಮು ಕಾಮಾಕ್ಷಿಯ ಜೊತೆ ಗುಡಿಸಲಿಗೆ ಬಂದು ಪಂಜರದ ಕಡೆ ನೋಡಿಸ…
* * *
ಹಾರಲು ಮರೆತ ಹಕ್ಕು ಪಂಜರದ ಮೇಲೆ ಕೂತಿತ್ತು.
ಗಿಣಿಯನ್ನು ಪಂಜರದ ಒಳಗಿಟ್ಟು ಬಾಗಿಲನ್ನು ನಿಧಾನವಾಗಿ ಹಾಕಿ ಕಾಮಾಕ್ಷಿಯ ಜೊತೆ ಒಳಗೆ ಹೋಗಿ ಗುಡಿಸಲಿನ ಬಾಗಿಲನ್ನು ಹಾಕಿಕೊಂಡು.. ‘ಪಂಜರದ ಗಿಣಿ’ ಎಂದು ತನ್ನಲ್ಲೇ ಅಂದುಕೊಂಡು ಒಡೆದ ಚೂರು ಚೂರಾದ ಬುದ್ಧನೆಡೆ ನೋಡಿದ….
ಬಳಿಯಲ್ಲಿ ನಿಂತಿದ್ದ ಕಾಮಾಕ್ಷಿಯ ಕಡೆ ಮೆಲ್ಲನೆ ಮುಖ ತಿರುಗಿಸಿದ….
ನಿಧಾನವಾಗಿ ನಿಟ್ಟುಸಿರೆಳೆದ….
* * *
Leave A Comment