“….ರಾತ್ರಿ ಆಯ್ತು ಅಂದ್ರೆ ದುಷ್ಟ ಮೃಗಗಳ ಸಂಚಾರ… ಆದ್ರೂನೂ ಆ ಕ್ರೂರಿ ತಾಯಿ, ಮಗು ಇಡೀ ರೊಟ್ಟಿ ಬೇಕೂಂತ ಹಠ ಮಾಡ್ತದೆ ಅಂತ ಸಿಟ್ಟುಗೊಂಡು, ಆ ಪುಟ್ಟ ಮಗೂನ ಅಂಗ್ಳಕ್ಕೆ ದಬ್ಬಿ, ಅಗ್ಳಿ ಹಾಕ್ಕೊಂಡು ಬಂದು ಮತ್ತೆ ರೊಟ್ಟೀ ತಟ್ಟಕ್ಕೆ… ”
“ಅವ್ವ… ಕಥೆ ಹೇಳೋ ಹೊತ್ಗೆ ಅದ್ಯಾಕೆ ಹಾಗೆ ಅಳ್ತೀಯವ್ವ?”
“ಇಲ್ಲ ಮಗ. ಅಳ್ತ ಇಲ್ಲ ಮಗಾ… ”
ಪಕ್ಕದಲ್ಲಿ ಮಲಗದ್ದ ಮಗ ಶೀನು ಏನು ಹೇಳಿದರು ಕೇಳಲೊಲ್ಲ. ತಾಯಿಯ ಉತ್ತರಕ್ಕಾಗಿ ಒಂದೇ ಸಮನೆ ಪಟ್ಟು ಹಿಡಿದಿದ್ದಾನೆ. ಏನು ಮಾಡಿದರೂ ನಿದ್ದೆ ಹೋಗಲೊಲ್ಲನು. ಕಥೆ ಹೇಳಿ ಹೇಗೆ ತಾನೇ ಸಂತೈಸಿಯಾಳು ಅಬ್ಬಕ್ಕ?
“ಇಕೋ ರಾತ್ರಿ ಮಸ್ತಾಯ್ತು. ಕಥೆ ಕೇಳ್ತ ನಿದ್ದೆ ಮಾಡು ಮಗ. ಆ ಮೇಲೆ ಕೂಸಿಗೆ ಬಾಳ ಭಯ ಆಗಿ… ”
ಇಲ್ಲ ಏನಾರೂ ಶೀನು ಕೇಳನು. ಸೀರೆಯ ಅಂಚಿನಿಂದ ಅಬ್ಬಕ್ಕ ಕಣ್ಣೊರಸಿಕೊಂಡು ಮಗನ ಬೆನ್ನು ಸವರುತ್ತ ಪುಸಲಾಯಿಸುವ ಧ್ವನಿಯಲ್ಲಿ ಹೇಳಿದಳು :
“ಮಾತಾಡಬೇಡ ಮಗಾ. ತೊಟ್ಟಿಲಲ್ಲಿ ಮಲಗಿದ್ದ ಕೂಸೆದ್ದೀತು. ಈಗ ಕಥೇ ಕೇಳು… ಹೇಳ್ತೀನಿ. ಆ ಕೂಸು ಅಷ್ಟು ಗಟ್ಟಿಯಾಗಿ ಅತ್ತರೂ ಆ ಪಾಪಿ ತಾಯಿ… ”
“ಊಹು…. ನಂಗೆ ಕಥೇ ಬೇಡ. ಬೆಳಗ್ನಿಂದ ಯಾಕೆ ಒಂದೇ ಸಮ್ನೆ ಹಾಗೆ ಅಳ್ತಾ ಇದಿ ಹೇಳು. ”
ಎಂಟು ವರ್ಷವಾಗಿದ್ದರೂ ಬಲು ಬುದ್ದಿ ಈ ಹಸುಳೆಗೆ! ತಾಯಿಯೆಂದರೆ ಪ್ರಾಣ.
ಯಾರಿಗಾದರೂ ಎದೆ ತೋಡಿ ತೋರಿಸದೆ ನಿರ್ವಾಹವಿಲ್ಲ. ಅಷ್ಟು ನೋಯುತ್ತಿದೆ ಅಬ್ಬಕ್ಕನ ಹೆತ್ತ ಕರುಳು. ಶೀನುವಿಗಾದರೂ ಹೇಳಬಾರದೇಕೆ?….
ಹೇಳಬಹುದು… ಆದರೆ ಹೇಗೆ?
“ನಿಂಗೊಂದು ಹಿರೀ ಅಣ್ಣ ಇತ್ತು ಮಗಾ… ಇವತ್ತು ಅದ್ರ ಹುಟ್ಟಿದ ಹಬ್ಬ. ”
“ಈಗೆಲ್ಲಿದ್ದಾನವ್ವ, ಅಣ್ಣ… ?”
ಏನೆಂದು ತಾನೆ ಉತ್ತರ ಹೇಳಿಯಾಳು ಅಬ್ಬಕ್ಕ? ಯೋಚಿಸಿದಂತೆಲ್ಲಾ ‘ಅಮಾಸೆ’ಯ ಕತ್ತಲೇ ಅವಳ ಎದೆ ತುಂಬಿ ಕಪ್ಪು ಹೊಯ್ಯುತ್ತದೆ.
ಅಣ್ಣ ಎಲ್ಲಿ ಹೋದನೆಂದು ಹೇಳಿಯಾಳು? ದಂಡು ಸೇರಿದನೆ? ಎಲ್ಲೋ ದೂರದಲ್ಲಿ ಹೋಟೆಲು ಸೇರಿದನೆ? ಗಿರಣಿ ಸೇರಿದನೆ? ಪೇಟೆಯಲ್ಲಿ ಕಂಡಕಂಡವರ ಸಾಮಾನು ಹೊತ್ತು ಕೂಲಿ ಮಾಡುವನೆ? ದಿಕ್ಕಿರದ ಪರದೇಶಿಯಂತೆ ಪ್ರಾಣಬಿಟ್ಟನೆ? ತಾಯಿಯನ್ನು ತೊರೆದ ಆ ಮಗುವಿಗೆ ಸುಖವೆ, ದುಃಖವೆ? ಏನು? ಏನುತಾನೆ ಹೇಳಿಯಾಳು?
ಅವನನ್ನು ನೋಡದೆ ಎಂಟು ಹತ್ತು ವರ್ಷವಾದರೂ ಈಗಲೂ ತಾಯಿ ಮಗನನ್ನು ಗುರುತಿಸಬಲ್ಲಳು.
ಹೆಸರು ಚೆಲುವನೆಂದು. ಹೆಸರಿನಂತೆಯೇ ನೋಡುವ ದೃಷ್ಟಿ ತಗಲುವಂತಹ ಚೆಲುವನವನು!
ನಸುಗಪ್ಪಿನ ಎತ್ತರದ ಆಳು. ಕೋಲುಮುಖ. ಬೇವಿನೆಸಳಂತಹ ಕುಡಿ ಹುಬ್ಬು. ಹಚ್ಚೆ ಹೊಯ್ದ ಎತ್ತರದ ಹಣೆ. ತುದಿಯಲ್ಲಿ ಬಾಗಿದ ಮೂಗು. ಶಿವನ ಕೈಯಲಗು ಹೊಳೆದಂತಹ ನೋಟದ ಆ ಚಿಕ್ಕ ದುಂಡು ಕಣ್ಣುಗಳು. ಸ್ವಲ್ಪ ಗಾಂಭೀರ್ಯದಿಂದ ತುಸು ಗರ್ವದಿಂದ ಬಿಗಿದ ಮುದ್ರೆಯ ದಪ್ಪ ತುಟಿಗಳು. ಒರಟು ಗುಂಗುರು ಕೂದಲಿನ ಆ ದೊಡ್ಡ ತಲೆ. ನಿದ್ದೆಯಿಂದ ಈಗತಾನೇ ಎದ್ದು ಬಂದಂತೆ ಆ ನಿಧಾನವಾದ ನಡಿಗೆ…
ಎಲ್ಲವೂ ಕಣ್ಣಿಗೆ ಕಟ್ಟಿದಂತಿದೆ ಅಬ್ಬಕ್ಕನಿಗೆ. ಹತ್ತು ಹನ್ನೆರಡು ವರ್ಷ ಕಣ್ಣುಗೊಂಬೆಯಂತೆ ಸಾಕಿದ ಚೆಲುವನ ರೂಪವನ್ನು ಹೇಗೆ ತಾನೆ ಮರೆತಾಳು ಅವಳು?
“ಅಣ್ಣ ಎಲ್ಲಿದ್ದಾನೆ ಹೇಳವ್ವ?”
“ನಿನ್ನ ಅವ್ವನ ಮೇಲೆ ಸಿಟ್ಟು ಮಾಡಿ ದೂರ ಹೊಂಟ್ಹೋದ”
ಇದಕ್ಕಿಂತ ಹೆಚ್ಚು ಅಬ್ಬಕ್ಕ ಹೇಳಲಾರಳು, ಹೇಳಿದರೂ ಹೇಗೆ ತಿಳಿದೀತು ಈ ಮಗುವಿಗೆ?
“ಹೋಗೋದು ಬ್ಯಾಡಾಂತ ನೀಯಾಕೆ ಹೇಳ್ಲಿಲ್ಲವ್ವ?”
ಚೂರಿಯಂತೆ ನೆಡುತ್ತದೆ ಈ ಮಾತು ಅಬ್ಬಕ್ಕನ ಎದೆಯಲ್ಲಿ. ಅವನು ಹಾಗೆ ಹಟ ತೊಟ್ಟು ಹೊರಟೇಬಿಡುತ್ತಾನೆ ಎಂದು ತೋರಿದ್ದರೆ ಅವಳು ಸೆರಗೊಡ್ಡಿ ಬೇಡಿಕೊಳ್ಳುತ್ತಿರಲಿಲ್ಲವೆ? ಏನೋ ಹಾಳು ಸಿಟ್ಟಿನ ಭರದಲ್ಲಿ ಅವಳು ನಾಲ್ಕು ಬಿರುನುಡಿಯಾಡಿದ್ದು ನಿಜ. ಅಷ್ಟಕ್ಕೇನೇ ಅವ…
“ಅಪ್ಪಯ್ಯ ಯಾಕೆ ಬ್ಯಾಡ ಅನ್ಲಿಲ್ಲವ್ವ?”
ಶೀನು ಈ ಮಾತು ಆಡಿದ ಬಳಿಕ ಇನ್ನು ಹೇಳದೆ ವಿಧಿಯಿಲ್ಲ… ಎಷ್ಟು ದಿನವೆಂತ ಈ ಮಗುವಿನಿಂದ ಬಚ್ಚಿಡುವುದು ಸಾಧ್ಯ?
“ನಿನ್ನಪ್ಪಯ್ಯ ಬೇರೆ, ಅವ್ನಪ್ಪಯ್ಯ ಬೇರೆ ಮಗ. ಅವ್ನಪ್ಪಯ್ಯ ಸತ್ತೋದ ಮೇಲೆ… ”
ಬೇರೆ ಕೂಡಿಗೆ ಮಾಡಿಕೊಂಡಳು ಅಬ್ಬಕ್ಕ. ಅವನ ಅಪ್ಪಯ್ಯ ಅವನು ಹುಟ್ಟುವಾಗಲೇ ತೀರಿಕೊಂಡರು. ಆಮೇಲೆ ಹದಿಮೂರು ವರ್ಷವೂ ಎಂತೆಂತಲೋ ಕೂಲಿ ನಾಲಿ ಮಾಡಿ ಒಬ್ಬಂಟಿಯಾಗಿ ಚೆಲುವನನ್ನು ಸಾಕಿದ ಮೇಲೆ ಈ ಕೂಡಿಕೆಯಾದದ್ದು … ಆ ವಿಷಯದಲ್ಲೇ ಅವಳಿಗೂ ಮಗನಿಗೂ ವೈಮನಸ್ಯ ತಲೆದೋರಿ…
ಇವೆಲ್ಲವನ್ನೂ ಹೇಳಿದರೆ ಆ ಮಗು ಶೀನುವಿಗೆ ಹೇಗೆ ತಿಳಿದೀತು? …. ಎಂತಲೇ ಏನೂ ಅರ್ಥವಾಗದೆ ಮಗು ಮಾತನಾಡದೆ ಕಣ್ಣನ್ನು ಪಿಳಿಪಿಳಿ ಬಿಡುತ್ತ ಸುಮ್ಮನಾಗಿದೆ.
ಆಮೇಲೆ… ಒಂಟಿಯಾಗಿ ಬಾಳಲಾರದೆ ಆ ಹೊಸ ಮೋಹಕ್ಕೆ ಸಿಲುಕಿ…
ಹಾಗೆ ತಾನು ಮಾಡಬಾರದಿತ್ತೋ ಏನೋ?
ಆದರೆ ಅವಳ ಜಾತಿಯಲ್ಲದು ಆಗುವುದಿಲ್ಲವೆ? ಸೀತು ಮಾಡಿಕೊಂಡಿಲ್ಲವೆ? ಅಕ್ಕುವಿಗೆ ಮೂರು ಕೂಡಿಕೆಯಾಗಿಲ್ಲವೆ? ಐದು ಮಕ್ಕಳ ತಾಯಿ ಮೀಟಿ ಮೊನ್ನೆ ತಾನೆ ಆಗಲಿಲ್ಲವೆ? ಹೀಗಿದ್ದಾಗ ತನ್ನದು ತಪ್ಪೆ?
ಆದರೆ ಹದಿಮೂರು ವರ್ಷ ಪ್ರಾಯಕ್ಕೆ ಬಂದ ಪ್ರೀತಿಯ ಮಗ ಹೇಳಿದರೂ ಕೇಳದೆ ಆದದ್ದು?
ಹಾಗಾದರೆ ಚೆಲುವ ಕಂಡ ಕಂಡವರ ಚಾಡಿಗೆ ಒಲಿದು ತನ್ನೆದುರು ನಿಲ್ಲುವುದೆ? ಅದು ಸರಿಯೆ? ಕೈಯಾರೆ ಸಾಕಿದ ತಾಯಿಯ ಎದುರು ಕೈಯೆತ್ತಿ ನಿಲ್ಲುವುದೆ? ತಾಯಿ ಏನೋ ಕೋಪದ ಭರದಲ್ಲಿ ಏನಾದರೂ ಅಂದರೆ ಮನೆ ಬಿಟ್ಟು ಹೊರಟು ಹೋಗುವುದೆ? ಮಗನಾದವನಿಗೆ ಹೇಳಿಸಿದ ವರ್ತನೆಯೆ ಅದು?
ಅಯ್ಯೋ ತಾಯಿಯನ್ನರಿಯದ ಚೆಲುವ! ಅವ್ವನ ಒಲವಿನ ಆಳವನ್ನರಿಯದ ಹಸುಳೆ! ಪ್ರಾಯ ಬಂತೆಂದು ಹೊತ್ತು ಹೆತ್ತವಳನ್ನೂ ತೊರೆದು….
….ಎಂಟೊಂಬತ್ತು ವರ್ಷವಾಯಿತು. ಒಮ್ಮೆಯೂ ಇತ್ತ ಮುಖ ಹಾಕಿಲ್ಲ. ಕಣ್ಣಿನಲ್ಲಿ ಎಣ್ಣೆಯಿಟ್ಟು ಹಾದಿಕಾಯುವ ತಾಯಿಗೊಂದು ಕಾಗದ ಬರೆದಿಲ್ಲ.
ತಾಯಿಯ ಮುಖವನ್ನು ಒಮ್ಮೆಯಾದರೂ ನೋಡುವ ಆಸೆ ಇಲ್ಲದೆ ಹೋಯಿತೆ ಮಗುವಿಗೆ?
“ಅವ್ವ… ಘಟ್ಟದ ಕೆಳಗಿನಿಂದ ಅಪ್ಪಯ್ಯ ಎಂದು ಬರ್ತಾರವ್ವ? … ಅವ್ರು ಬಂದ್ರೆ ನಿಂಗೆ ಹಿಂಗೆ ಅಳೋಕೆ ಬಿಡಲ್ಲ”
– ಎಷ್ಟು ಮುದ್ದಾಗಿ ಮಾತಾಡತ್ತೆ ಈ ಹಸುಳೆ ಶೀನು! ಅದು ಹೇಳುವುದೂ ಸುಳ್ಳಲ್ಲ… ತನ್ನನೊಲಿದು ಕೈಹಿಡಿದವನು ಅಂಥವನೆ. ಎಂದೂ ಕಂಬನಿ ಕರೆಯಲು ಬಿಡುವವನಲ್ಲ, ಇಲ್ಲದಿದ್ದರೆ ತಾನು ಅವನ ಕೈಹಿಡಿಯುತ್ತಿದ್ದಳೆ?
ಅವನ ಆ ತೀಡಿದ ಮೀಸೆ. ಕವಳ ಜಿಗಿದು ಕೆಂಪಾದ ಸದಾ ಮುಗುಳು ನಗುವ ಆ ತುಟಿಗಳು. ಎಲೆವಸ್ತ್ರದ ಮುಂಡಾಸಿನಿಂದ ಇಣುಕಿ ನೋಡುವ ಆ ನೀಳವಾದ ಕೂದಲು. ಆ ಹೊಳೆಯುವ ದೊಡ್ಡ ದೊಡ್ಡ ಒಂಟಿಗಳು. ಕೂಲಿ ಆಳುಗಳ ಜೊತೆ ಅವನು ಸೇರೆಗಾರಿಕೆ ನಡೆಸುವ ಆ ಠೀವಿ.
ದೇವರಂತಹ ಮನುಷ್ಯ…..
ಅವಳ ಅವ್ವ ಭತ್ತ ಕುಟ್ಟುವಾಗ ಹಾಡುತ್ತಿದ್ದ ಆ ಪದದಲ್ಲಿ ವರ್ಣಿಸಿದಂತೆಯೇ
ಹಾಸಿಗೆಯ ಹಾಸೆಂದ
ಮಲ್ಲಿಗೆಯ ಮುಡಿಯೆಂದ
ಬ್ಯಾಸತ್ತರ ಮಡದಿ ಮಲಗೆಂದ
ಬ್ಯಾಸತ್ತರ ಮಡದಿ ಮಲಗೆಂದ ನನ ನೋಡಿ… ”
ತೌರೂರನ್ನೇ ಏಕೆ? ಪ್ರಪಂಚವನ್ನೇ ಮರೆ ಎಂದ ರಸಿಕ ಅವನು… ಹೌದು! ತುಂಬು ಜವ್ವನದ ತನಗೆ ಆಗ ಎಲ್ಲವೂ ಮರೆತದ್ದು ಆಶ್ಚರ್ಯವಲ್ಲ. ಆ ಮೋಹದಲ್ಲಿ ಮಗನ ಮೇಲಿನ ವಾತ್ಸಲ್ಯವೂ ಕ್ಷಣಕಾಲ ಮರೆಯಿತೋ ಏನೋ? ಅದಕ್ಕೇ ಅಲ್ಲವೇ ಎಂದೂ ದುಡುಕದವಳು ಅಂದು ದುಡುಕಿದ್ದು. ಪ್ರೀತಿಯ ಮಗನನ್ನೂ ಜರಿದು ದೂರಿದ್ದು. ತನ್ನ ಸುಖಕ್ಕೆ ಅಡ್ಡಿಯಾದ ಚೆಲುವನನ್ನು ಧಿಕ್ಕರಿಸಿ ನಡೆದದ್ದು….
ಅಯ್ಯೋ! ತಾನು ಪಾಪಿಯಲ್ಲವೆ? ಅದು ಎಂತಹ ಮೋಹ? ಯಾವ ತಾಯಿಯ ಕರುಳೂ ಹಾಗೆ ಮಾಡಿರಲಿಕ್ಕಿಲ್ಲ. ಆಗ ನಾಲ್ಕು ಜನ ಆಡಿಕೊಂಡಂತೆ ತಾನು ಸೂಳೆಗಿಂತಲೂ ಅತ್ತತ್ತವಾಗಿ ನಡೆಯಲಿಲ್ಲವೇ?
ತನ್ನನ್ನೊಲಿದವನು ಸಭ್ಯಸ್ಥ. ಆದರೆ ಆ ಹಾಳು ಮೋಹದ ದೆಸೆಯಿಂದಲೇ ಈಗ ಕೈತಪ್ಪಿ ಹೋದನಲ್ಲವೇ ಮಗ?
ಎಲ್ಲಿ ಹೋಗುತ್ತ ಯಾವ ಹುಲಿಯ ಬಾಯಿಗೆ ತುತ್ತಾದನೋ? ಯಾವ ಕಳ್ಳ ಕಾಕರ ಕೈಗೆ ಸಿಕ್ಕನೊ. ಯಾವ ನದಿಗೆ ದುಃಖ ತಡೆಯಲಾರದೆ ಹಾರಿಕೊಂಡನೊ? ಎಲ್ಲಿ ಒಬ್ಬಂಟಿಗನಾಗಿ ಹಸಿದು ಒದ್ದಾಡಿದನೊ? ತಾಯಿ ಇದ್ದೂ ಇಲ್ಲದ ಪರದೇಶಿಗೆ ಏನಾಯಿತೊ?
ಇವತ್ತು ಅವನ ಹುಟ್ಟಿದ ಹಬ್ಬ. ಈಗ ಒಡನೆ ಇದ್ದಿದ್ದರೆ ಅವನಿಗೆ ವರ್ಷ ಇಪ್ಪತ್ತೆರಡು. ಸೊಸೆಯನ್ನು ಮನೆಗೆ ತಂದು ಮೊಮ್ಮಗನನ್ನು ಆಡಿಸುವ ಪುಣ್ಯ ನನಗೆಲ್ಲಿ? ತಾನು ತಾಯಿಯೇ?… ಅಲ್ಲ ರಾಕ್ಷಸಿ! ಪಿಶಾಚಿ! ಕಡುಪಾಪಿ!….
“ಅವ್ವ ಅಳಬೇಡಾಂದ್ರೆ ಕೇಳಲ್ವೇನವ್ವ?….. ”
“ನಿಂಗೆ ಇನ್ನೂ ನಿದ್ದೇನೇ ಹತ್ತಿಲ್ವಾ ಮಗಾ?”
“ನೀನಳ್ತಾ ಇದ್ರೆ ನಾನು ನಿದ್ದೇನೇ ಮಾಡಲ್ಲ”
“ಅಳ್ತಾ ಇಲ್ಲ ಶೀನು…. ನಿದ್ದೆ ಮಾಡು… ”
“ನಿನ್ನ ಬಿಟ್ಟು ಹೋಗಿದ್ದು ಅಣ್ಣಂದೇ ತಪ್ಪು… ನೀನ್ಯಾಕೆ ಅಳಬೇಕವ್ವ?… ಹೋಗ್ಲಿ ಬಿಡು ಆ ಕಥೆ ಮುಂದೇನಾಯ್ತು ಹೇಳು… ಆ ಮಗು ಅಳ್ತಾ ಇದ್ದಾಗ… ”
“….ಅಳ್ತಾ ಇದ್ರೂನೂ ನನ್ನಂಥಾ ಕ್ರೂರಿ ತಾಯಿಗೆ ಕರುಣೆನೇ ಬರ್ಲಿಲ್ಲ… ಆಗ ಬಿದ್ರು ಹಿಂಡ್ಲ ಬುಡ್ದಲ್ಲಿ ಸಟ ಸಟಾಂತ ಶಬ್ದ ಆದ್ಹಂಗೆ ಕೇಳಿಸ್ತು. ಏನೂಂತ ಹೆದ್ರಿಕೇಂದ ಮಗು ಪುಟ್ಟ ಕಣ್ಣನ್ನು ದೊಡ್ಡಕ್ಕೆ ಅರಳಿಸಿ ನೋಡ್ದಾಗ ಒಂದು ಹೆಬ್ಬುಲಿ!
ಕೂಸು ಗಡಗಡ ನಡಗ್ತ ಅದರ ಪುಟ್ಟ ಕೈಯಿಂದ ಬಾಗ್ಲನ್ನ ದಡದಡ ಬಡೀತ ಅದ್ರ ಪೊಟ್ಟು ಪೊಟ್ಟು ಮಾತ್ನಲ್ಲೇ…
‘ಅರ್ಧ ರೊಟ್ಟಿ ಸಾಕವ್ವ – ಬಾಗ್ಲು ತೆಗ್ಯವ್ವ. ಕಣ್ಣು ಪಿಳಿಪಿಳಿ – ಬಾಲ ಪಟಪಟಾ…. ’ ಅಂತ ಬೇಡಿಕೊಳ್ಳಕ್ಕೆ ಶುರುಮಾಡ್ತು.
ಹುಲೀಂತ ಹೇಳಕ್ಕೆ ಪಾಪದ್ದಕ್ಕೆ ಬಾಯಿ ಬರಲ್ಲ. ಆ ನನ್ನಂಥ ಕ್ರೂರಿ ತಾಯಿಗೆ ಕೂಸು ಕಿರುಚಿಕೋತಿದೇಂತ ಎಗ್ಗೂ ಇಲ್ಲ –
‘ಅರ್ಧ ರೊಟ್ಟಿ ಸಾಕವ್ವ – ಬಾಗ್ಲು ತೆಗ್ಯವ್ವ – ಕಣ್ಣು ಪಿಳಿಪಿಳೀ – ಬಾಲ ಪಟಪಟಾ’…
ಹಾಗೇನೇ ಅಳು ನಿಂತಿತು. ಹಠಾನ ಇನ್ನಾರು ನಿಲ್ಲಸ್ತಲ್ಲಾಂತ ರೊಟ್ಟಿ ತಿಂತಾ ಕೂತಿದ್ದ ತಾಯಿ ಹೊರ್ಗೆ ಬಂದು ಬಾಗ್ಲು ತೆಗ್ದು ನೋಡಿದ್ಲು…
ಎಲ್ಲಿದೆ ಹಸುಗೂಸು?,…. ಹುಲಿಯ ಬಾಯಿಯ ಪಾಲು!”
….ನೀಚೆ ತಾಯಿಯ ದೆಸೆಯಿಂದ, ಪಾಪಿ ತಾಯಿಯ ದೆಸೆಯಿಂದ, ದುಷ್ಟೆ ತಾಯಿಯ ದೆಸೆಯಿಂದ, ಮಗ – ಕೈಗೆ ಬಂದ ಮಗ – ಹುಲಿಯ ಬಾಯಿಗೆ ತುತ್ತು.
ಹುಲಿಯ ಬಾಯಿಗೋ?
ಯಾವ ಅಡವಿಯ ಪಾಲಿಗೋ?
ಯಾವ ನದಿಯ ಮಡಲಿಗೋ?
ಎಲ್ಲೊ! ಏನೋ!! ಎಂತೋ!!!
ಅಯ್ಯೋ… ಅಮ್ಮ… ನನ್ನಮ್ಮ…
ಬಂದಾನೋ?…
ಬಾರಾನೋ??…
ಆ ನನ್ನ ಹಿರಿಯ ಮಗ, ನನ್ನ ಕಣ್ಣಿನ ಗೊಂಬೆಯಾಗಿದ್ದ ಆ ಚೆಲುವ, ತಾನೇ ಕೈಯಾರೆ ಮನೆ ಬಿಟ್ಟು ಓಡಿಸಿದ ಆ ಹಸುಳೆ. ಆ ಮುದ್ದು ಮಗ –
ಬಂದಾನೋ?….
ಬಾರಾನೋ??….
ದಾರಿ ಕಾದು ಕಾದು ಬೇಸತ್ತಿದ್ದಾಳೆ ಅಬ್ಬಕ್ಕ…. ತನ್ನ ಹಟ್ಟಿಯ ಹೊರಗೆ, ಹಾವಿನಂತೆ ಸುರುಳಿ ಸುರುಳಿಯಾಗಿ ಸುತ್ತಿ ಬೆಟ್ಟಗುಡ್ಡಗಳ ಕಾಡು ಮೇಡುಗಳ ನಡುವೆ ಬಳಸಿ ಎಲ್ಲಿಗೋ, ದೂರ, ದೂ… ರ… ತನ್ನ ಮಗನನ್ನು ಒಯ್ದ ದಾರಿಯನ್ನು ಕಾಯ್ದು ಕಾಯ್ದು ಕಣ್ಣೀರೆರೆದು ಹಂಬಲಿಸಿದ್ದಾಳೆ….
ಬಂದಾನೋ?….
ಬಾರಾನೋ??….
ಬಂದರೆ ತಿನ್ನಲು ಮಾಡಿಟ್ಟ ಹಲಸಿನ ಹಣ್ಣಿನ ಚೆಟ್ಟು ಕೊಡುತ್ತಾಳೆ. ಉಡಲು ಒಳ್ಳೆಯ ವಸ್ತ್ರತಂದು ಕೊಡುತ್ತಾಳೆ… ತನ್ನದೆಂದು ಕೂಡಿಟ್ಟ ಆ ಬೆಳ್ಳಿಯ ಮುನ್ನೂರು ರೂಪಾಯಿಗಳನ್ನು ಖರ್ಚುಮಾಡಿ ಮದುವೆ ಮಾಡಿಸುತ್ತಾಳೆ… ಅವನು ಮನೆಯಲ್ಲೇ ಕೂತು ತಿಂದರೂ ಸರಿಯೆ ತನ್ನ ಗಂಡನಿಂದ ಒಂದು ಬಿರು ನುಡಿಯೂ ಬರದಂತೆ ನೋಡಿಕೊಳ್ಳುತ್ತಾಳೆ… ಆದರೆ ಚೆಲುವ…
ಬಂದಾನೋ?….
ಬಾರಾನೋ??….
ಆ ತನ್ನ ಮುದ್ದು ಹಸುಳೆ…
ಬಂದಾನೋ?…. ಬಾರಾನೋ??… ಬಂ …. ದಾ … ನೋ … ಬಾ .. ರಾ …. ನೋ?… ಬಂದಾ… ???
…. ಏನಿದು ಹೊರಗೆ ಶಬ್ದ??
“ಅವ್ವ… ಅವ್ವಾ…. ಅವ್ವಾ… ”
…. ಯಾರ ಧ್ವನಿ?….
ಮಧ್ಯಾಹ್ನದ ರಣರಣ ಬಿಸಿಲಿಗೆ ದಣಿದ ಧ್ವನಿ!… ಮೃದುವಾದ ಪ್ರೇಮಮಯವಾದ ಬಳಲಿದ ‘ಅವ್ವಾ’ ಎನ್ನುವ ಧ್ವನಿ!
ಅಯ್ಯೋ ಬಾಗಿಲು ತೆರೆಯುವದರೊಳಗೆ ಏಕೆ ಹೀಗೆ ಎದೆ…
….ಆಹ್! ನೀ ಬಂದೆಯಾ ಕಂದ… ಈಸು ದಿನದ ಮೇಲಾದರೂ ಬಂದೆಯಾ ಮಗನೆ… ನಿನ್ನ ಅವ್ವನ ತಪ್ಪನ್ನು ಕ್ಷಮಿಸಿದೆಯಾ ಚೆಲುವ…
ಕೂತುಕೋ ಮಗನೆ…. ಎಷ್ಟು ಬಡವಾಗಿದೆ ನಿನ್ನ ದೇಹ!
ನೀರಡಿಸಿ ಬಂದೆಯಾ?… ಹಸಿದು ಬಂದೆಯಾ?…. ಎಲ್ಲಿ ಎಲ್ಲಿ ಪರದೇಸಿಯಂತೆ ಅಲೆಯಿತು ನನ್ನ ಕಂದ? … ನನ್ನ ಮುದ್ದು ಚೆಲುವ?….
ಎಣ್ಣೆ ಹಚ್ಚಿ ಮೀಯಿಸುವೆ ಮಗನೆ. ನನ್ನ ಬಿಟ್ಟು ಎಲ್ಲಿಗೂ ಹೋಗಬೇಡ… ತಾಯಿಯ ಹೆತ್ತ ಕರುಳಿಗೆ ಬೆಂಕಿಯಿಕ್ಕಬೇಡ, ಕಂಡೆಯಾ?…. ನಿನ್ನ ತೊರೆದು ನಾನಿನ್ನು ಈ ಜೀವ ತೇಯಲಾರೆ….
ಅಯ್ಯೋ!… ಅಯ್ಯೋ!….
ಇದೇನು ಕಂದಾ? ಮತ್ತೆಲ್ಲಿಗೆ ಹೊರಟು ನಿಂತಿ?,…. ಅವ್ವನನ್ನು ಯಾಕಾರೂ ತೊರೆಯುವೆ ಮಗನೇ? ಅದೇಕೆ ಹಾಗೆ ದೂರ ದೂರ ಮಂಜಿನಂತೆ ಕರಗಿ ಕರಗಿ ಮಾಯವಾಗುತ್ತಿದ್ದೀಯಾ ಚೆಲುವಾ? ನಾ ನಿನಗೆ ಬ್ಯಾಡವೇ??….
ಯಾಕೆ ಹಾಗೆ ನಿನ್ನ ಕಣ್ಣಲ್ಲಿ ತಿರಸ್ಕಾರ?… ಬೇಡ… ಹಾಗೆ ದುರುಗುಟ್ಟಿ ನೋಡಬೇಡ ಮಗನೆ… ನಿನಗಾಗಿ ಅವರನ್ನು, ನನ್ನ ಪ್ರಾಣವಾದ ಅವರನ್ನು ಬೇಕಾದರೂ ತೊರೆಯುವ ಚೆಲುವ… ಆದರೆ ಇವು… ಈ ಎರಡು ಹಸುಗಳೆಗಳೂ ನನ್ನ ಹೊಟ್ಟೆಯಲ್ಲಿ ಹುಟ್ಟಿದವು. ನಿನ್ನಂತೆಯೇ ನನ್ನ ಮಕ್ಕಳು…. ನಿನ್ನ ತಮ್ಮಂದಿರು, ಚೆಲುವಾ… ನಿನ್ನನ್ನು ಅಣ್ಣನೆಂದು ಪ್ರೀತಿಸುತ್ತಾರೆ ಕಂದಾ… ತುಂಬ ತುಂಬ ಪ್ರೀತಿಸುತ್ತಾರೆ ಚೆಲುವಾ… ಇವುಗಳನ್ನು ಖಂಡಿತ ತೊರೆಯಲಾರೆ ಮಗನೇ… ನನಗಾಗಿ.. ನಿನ್ನ ದಮ್ಮಯ್ಯ!…..
ನನಗಾಗಿ ನಿಲ್ಲು…. ಕಂದಾ… ನನ್ನಾಣೆ ನಿಲ್ಲು…. ನಿಲ್ಲು… ಚೆಲುವಾ!…… ಚೆ……. ಲು….
“ಅವ್ವಾ… ಅವ್ವಾ…. ಅವ್ವಾ…. ಇದ್ಯಾಕವ್ವ ನಿದ್ದೇಲಿ ಹಿಂಗೆ ಹಂಬಲಿಸ್ತಿ? ನಿನಗೇನಾಯ್ತವ್ವ?”
ಪಕ್ಕದಲ್ಲಿ ಆಗತಾನೆ ಜೊಂಪು ಹತ್ತಿ ಮಲಗಿದ್ದ ಎಂಟು ವರ್ಷ ಹಸುಳೆ ಶೀನು ಧಿಗ್ಗನೆದ್ದು ಅಬ್ಬಕ್ಕನ ಮೈಯಲುಗಿಸಿ ಕರೆಯುತ್ತದೆ…. ತೊಟ್ಟಿಲಿನಲ್ಲಿನ ಹಸುಗೂಸು ತಾಯಿಯ ಹಾಲಿಗಾಗಿ ಹಂಬಲಿಸಿ ಅಳುತ್ತದೆ…
ಅಬ್ಬಕ್ಕ ಉಕ್ಕಿ ಹರಿಯುವ ಕಣ್ಣೀರನ್ನು ಸೀರೆಯ ಸೆರಗಿನಿಂದ ಒರೆಸಿಕೊಳ್ಳಲು ಯತ್ನಿಸುತ್ತ ಮಗುವಿಗೆ ಮೊಲೆಯುಣಿಸುತ್ತಾಳೆ….
ಆ ನೀರವ, ಗಂಭೀರ ಕತ್ತಲಿನಲ್ಲಿ… ದುಃಖತಪ್ತ ಎದೆಯಿಂದ ಹಾಲು ಹರಿಯುತ್ತದೆ. ಸಿಹಿಯಾದ ಹಾಲು.
ಆದರೆ ತಾಯಿಯ ಕಣ್ಣಿನಿಂದ ನೀರೂ ಸುರಿಯುತ್ತದೆ. ಉಪ್ಪಾದ ನೀರು.
ಅನಂತವಾಗಿ….
* * *
Leave A Comment