ಓದಿ ಮುಗಿಸಿದೆ…

* * *

ಓಹ್! ಏನು ಸೋಜಿಗ!!…

ವಿದ್ಯುತ್ ಸ್ಪರ್ಶನವೆ? ಪುಳಕಿತವಾಗಿ ರೋಮಾಂಚಿತ ದೇಹ ಗಡ ಗಡನೆ ನಡುಗುತ್ತಿದೆ!…..

ಮಹಾ ಪೂರವೆ? ಹೃದಯ ಹಾಲ್ಗಡಲಿನ ತೆರೆತೆರೆಗಳು ನೊರೆನೊರೆಯಾಗಿ ಉಕ್ಕುತ್ತಿವೆ!!

…. ಇದೇನು! ಹೃದಯದಲ್ಲಿ ಅಮೃತ ಮಂಥನವೆ??….

ದಿವ್ಯಾನಂದದ ಅಮೃತ ಮಂಥನವೆ??

ದರ್ಶನವೆ?…. ಆನಂದದಲ್ಲಿ ಜೀವನದ ಸಮಗ್ರ ದರ್ಶನವೇ??….

* * *

ಹಿತವಾಗಿ ಗಾಳಿ ಸುಯ್ಯೆಂದು ಬೀಸಿತು…

ಅಮರ್ತ್ಯವೆನಿಸುತ್ತಿದ್ದ ಮಧುರವಾದ ಧ್ವನಿಯೊಂದು ಕಿವಿಯ ಬಳಿ ಸುಳಿದು ನನ್ನೊಡನೆ ಮಾತಾಡಿತು.

“ಯಾರು ನೀನು” ಎಂದೆ.

“ನಾನು ‘ಜೀವನ’… ಮಾನವರ ಹೃದಯದಲ್ಲಿ ಮಿಡಿದು ಸಂಚರಿಸುವ ಶಕ್ತಿ… ”

“ಇಲ್ಲಿ ಎಲ್ಲಿದ್ದೆ?… ”

“ನೀನು ಓದಿ ಮುಗಿಸಿದ ಆ ಮಹಾ ಕಾದಂಬರಿಯಲ್ಲಿ ಮೂಕವಾಗಿದ್ದೆ. ”

“ಇಲ್ಲಿಗೆ ಹೇಗೆ ಬಂದೆ?”

“ನಿನ್ನ ಹೃದಯಲ್ಲಿ ನಡೆದ ಅಮೃತ ಮಂಥನದಲ್ಲಿ ಮತ್ತೆ ಹುಟ್ಟಿ ಧ್ವನಿ ಪಡೆದು ಬಂದೆ. ”

“ಮುಂಚೆ ಎಲ್ಲಿದ್ದೆ?”

“ನಿನ್ನಂತೆಯೇ ಒಂದು ದೇಹದಲ್ಲಿ ವಾಸಿಸುತ್ತಿದ್ದೆ… ಬಹಳ ಹಿಂದೆ… ”

“ಕೇಳುತ್ತೇನೆ…. ಹೇಳು… ” ಎಂದೆ

“ಬಹಳ ಹಿಂದೆ, ನಿನ್ನಂತೆಯೇ ನಾನು ಬದುಕುತ್ತಿದ್ದಾಗಿನ ವಿಷಯ ನಿನಗೇ ಗೊತ್ತಿದೆ… ”

“ಹೇಗೆ?”

“ನೀನು ಕಾದಂಬರಿಯಲ್ಲಿ ಓದಿದ ಚರಿತ್ರೆ ನನ್ನದೇ… ನಾನು ಬಾಳಿನಲ್ಲಿ ಎಷ್ಟು ದುಃಖಪಟ್ಟೆ ಎಂಬುದನ್ನು ನೀನೆ ಓದಿ ತಿಳಿದಿದ್ದೀಯೆ. ಅದಕ್ಕಿಂತಲೂ ಹಿಂದೆ ನಾನು ಇದ್ದೆ… ಯಾವುದೋ ಭ್ರೂಣನಿದ್ರೆಯಲ್ಲಿ ಕನಸು ಕಾಣುತ್ತಿದ್ದೆ. ಅಲ್ಲಿಂದ ಎಚ್ಚತ್ತು ಆ ದೇಹವನ್ನು ಸೇರಿದೆ. ಪಡಬಾರದ ಕಷ್ಟವನ್ನು ಅನುಭವಿಸಿದೆ…

ಇರಲಿ…. ಆ ವಿಷಯ ನಿನಗೆ ತಿಳಿದೇ ಇದೆಯಲ್ಲ. ಆಸ್ಪತ್ರೆಯಲ್ಲಿ ಮೂಲೆಯ ವಾರ್ಡೊಂದರಲ್ಲ ನನ್ನ ಆವಾಸಸ್ಥಾನವಾಗಿದ್ದ ಆ ದೇಹದಿಂದ ತುಂಬ ನೊಂದು ಅಗಲಿದೆ. ಆಗ ಎಲ್ಲರೂ ನನ್ನನ್ನು ಸತ್ತುಹೋದ ಎಂದು ತಿಳಿದರು.

ಆದರೆ ಅದು ನಿಜವಲ್ಲ. ನಾನು ಇನ್ನೆಷ್ಟೋ ಹೃದಯಗಳಲ್ಲಿ ಬದುಕಿ ಕೊನೆಗೆ ಈ ಅವಸ್ಥೆ ಪಡೆದಿದ್ದೇನೆ. ಆ ನನ್ನ ವಿಚಿತ್ರ ಅನುಭವಗಳನ್ನೇ ಹೇಳುತ್ತೇನೆ… ಕೇಳು…

ನಾನು ಸಾಯುವುದಕ್ಕೆ ಮುಂಚೆ ನನ್ನ ಹಾಸಿಗೆಯ ಬಳಿ ನಾಲ್ಕೈದು ಜನಡಾಕ್ಟರುಗಳು ಸುಳಿಯುತ್ತಿದ್ದರು. ನನಗೇನಾಗಿತ್ತು ಎಂಬುದನ್ನು ಅವರಿಗೆ ಸರಿಯಾಗಿ ಪತ್ತೆ ಹಚ್ಚಲು ಸಾಧ್ಯವೇ ಆಗಲಿಲ್ಲ. ಏನೋ ‘ಪಿಸು ಪಿಸು’ ಅಂತ ಮಾತನಾಡಿಕೊಳ್ಳುತ್ತಿದ್ದರು.

ಅಮಾವಾಸ್ಯೆಯ ರಾತ್ರಿ. ಚರ್ಚಿನ ಗಂಟೆ ಹನ್ನೆರಡು ಬಾರಿಸಿತು. ನಾನು ದೇಹದಿಂದ ಅಗಲಿದೆ…. ಸ್ವತಂತ್ರನಾದೆನೆಂದು ಭಾವಿಸಿ ಹಾರಿದೆ…

ಆದರೆ ಯಾವುದೋ ಬಲವಾದ ಕಬ್ಬಿಣದ ಸರಪಳಿಯಂತಿದ್ದ ಒಂದು ಸುರುಳಿಯಾದ ವಸ್ತು ನನ್ನನ್ನು ಎಳೆದುಕೊಳ್ಳುತ್ತಿತ್ತು.

ನಾನು ಅದೇನು ಎಂಬುದನ್ನು ಅರಿಯುವ ಮುಂಚೆಯೇ ಡಾಕ್ಟರುಗಳ ಮಿದುಳನ್ನು ಹೊಕ್ಕುಬಿಟ್ಟೆ….

ಅಲ್ಲಿ ನಾನು ಯಮಯಾತನೆ ಸಹಿಸಬೇಕಾಯಿತು. ಮರಣದ ಮುನ್ನ ನನ್ನ ರೋಗವೇನೆಂದು ತಿಳಿಯುವುದು ಸಾಧ್ಯವಿಲ್ಲದೇ ಹೋಗಿದ್ದುದರಿಂದ ಡಾಕ್ಟರುಗಳು ಕುತೂಹಲಾವಿಷ್ಟರಾಗಿ ಮೆದುಳಿನಲ್ಲಿ ಹಿಡಿದಿಟ್ಟು ನೂರಾರು ತರಹೆಯ ವೇದನೆಯನ್ನುಂಟು ಮಾಡಿದರು.

ಅಲ್ಲಿ ಹುಟ್ಟಿದ ಸಾವಿರಾರು ಜಿಜ್ಞಾಸೆಗಳು ನನ್ನ ಹತ್ತಿರ ನಿಂತು ‘ಇವನಿಗೆ ಏನಾಗಿದ್ದಿರಬಹುದು’ ಎಂದು ಕುತೂಹಲದಿಂದ ನೋಡುತ್ತ ‘ಪಟೀರ್’ ಪಟೀರ್’ ಎಂದು ಚಾಟಿಯಿಂದೆಂಬಂತೆ ಹೊಡೆಯತೊಡಗಿದವು. ಅದಾದ ನಂತರ ‘ಹೀಗೆ ಮಾಡಿದ್ದರಾಗಿತ್ತೆ?…. ಹಾಗೆ ಮಾಡಿದ್ದರಾಗಿತ್ತೆ’ ಎಂಬ ಊಹಾಪೋಹಗಳು ತಮ್ಮ ಸರ್ಜರಿ ಚಾಕುಗಳಿಂದ ನನ್ನನ್ನು ಚಪ್ಪಾನು ಚೂರಾಗಿ ಕತ್ತರಿಸಿದುವು. ವಿಷಕ್ಕಿಂತ ಕಹಿಯಾದ ದ್ರಾವಕಗಳನ್ನು ಗಂಟಲಿಗೆ ಹೊಯ್ದವು. ಎಲ್ಲಕ್ಕಿಂತ ಹೆಚ್ಚಿನ ಯಾತನೆಯೆಂದರೆ ಅವರು ತಮ್ಮ ಜೊತೆಯ ಡಾಕ್ಟರುಗಳೊಡನೆ ನನ್ನನ್ನು ಕುರಿತು ಚರ್ಚಿಸುತ್ತ ಇದ್ದಾಗ… ಆಗಲಂತೂ ಒಂದು ಮೆದುಳಿನಿಂದ ಇನ್ನೊಂದು ಮೆದುಳಿಗೆ ಹಾರಿ ಅಲ್ಲೆಲ್ಲ ಇನ್ನೂ ಹೊಸ ರೀತಿಯ ಯಾತನೆ ಸಹಿಸಬೇಕಾಗಿತ್ತು. ನನ್ನ ಮನೋವೇದನೆಯನ್ನರಿಯದ ವಿಜ್ಞಾನಿಗಳ ಜ್ಞಾನದಾಹಕ್ಕೆ ತುತ್ತಾಗಿ ನಾನು ನರಕಹಿಂಸೆಗೆ ಗುರಿಯಾಗಿದ್ದೆ…

ಒಂದು ಪ್ರಾತಃಕಾಲ ನನಗಲ್ಲಿಂದ ಬಿಡುಗಡೆ ಬಂದಿತು. ಅವರ ಮಿದುಳಿನ ಬಳ್ಳಿಯ ಸಂಕೋಲೆ ಮರೆವಿನಲ್ಲಿ ಸಡಿಲವಾಯಿತು. ಅಲ್ಲಿ ಬೇರೊಂದು ಜೀವಿ ಹೊಕ್ಕಿತು. ಅಂತೂ ಬಂತು ಬಿಡುಗಡೆ ಎಂದು ಸಂತೋಷದಿಂದ ಹೊರಬಂದೆ.

ಯಾವುದೋ ಹಿತವಾದ ಗಾಳಿ ಕೈ ಬೀಸಿ ಕರೆಯುತ್ತಿತ್ತು. ಏನೋ ಹಿತವಾದ ಯಾರದೋ ಕನಸು ಕಣ್ಣುಸನ್ನೆ ಮಾಡಿ ಎಳೆಯುತ್ತಿತ್ತು.

ಆದರೆ ಅಪಾರವಾದ ನನ್ನ ನೋವು ಅಷ್ಟಕ್ಕೇ ಕೊನೆಗಾಣಲಿಲ್ಲ. ಬೆಂಕಿಯಂತೆ ಸುಡುತ್ತಿದ್ದ ಬಳ್ಳಿಯೊಂದು ನನ್ನನ್ನು ಸೆಳೆಯುತ್ತಿತ್ತು…

ನಾನಿದ್ದ ಆಸ್ಪತ್ರೆಯಲ್ಲಿ ಒಬ್ಬ ಮತಾಂಧ ಮಲಗಿದ್ದ. ಸಾಯುವಾಗಿನ ನನ್ನ ಗೋಳನ್ನು ಅವನು ಕಣ್ಣಾರೆ ಕಂಡು ನನ್ನನ್ನು ಕುರಿತೇ ಯೋಚಿಸದ್ದ. ಯಾವ ಪೂರ್ವ ಜನ್ಮದ ಪಾಪದಿಂದ ಈತ ಹೀಗೆ ನರಳಿ ಪ್ರಾಣಬಿಟ್ಟಿರಬಹುದು ಎಂಬುದೇ ಅವನ ತರ್ಕ. ಹೀಗಾಗಿ ಡಾಕ್ಟರುಗಳೊಡನೆ ವಿಚಿತ್ರ ಹಿಂಸೆಯಿಂದ ಪಾರಾದವನು ಆ ಮತಾಂಧನ ಮಿದುಳನ್ನು ಸೇರಬೇಕಾಗಿ ಬಂದಿತು.

ಅಲ್ಲಿ ನನಗೆ ಇನ್ನೂ ಕಷ್ಟಕರವಾದ ಕಾಲ ಕಾದಿತ್ತು… ಪಾಪಿಗಳನ್ನು ಆ ಪರಂಧಾಮ ಯಾವ ಯಾವ ರೀತಿಗಳಲ್ಲಿ ಶಿಕ್ಷಿಸಬಹುದೆಂಬ ಯೋಚನೆಯಲ್ಲಿ ಮಗ್ನವಾಗಿದ್ದ ಆ ಮತಾಂಧನ ಮಿದುಳು ಅಲ್ಲಿ ಒಂದು ದೊಡ್ಡ ನರಕವನ್ನೇ ನಿರ್ಮಿಸಿತ್ತು.

ಅಲ್ಲಿ ಕಿಡಿ ಕಾರಿ ಉರಿಯುವ ಬೆಂಕಿ ಹೊಂಡವಿತ್ತು. ಕೆಂಪಾಗಿ ಕರಗುವಗ್ನಿ ಕಂಬಗಳನ್ನು ನೆಟ್ಟಿದ್ದನು. ಕುಟುಕಿ ಕುಟುಕಿ ಜೀವ ತಿನ್ನುವ ಚೇಳುಗಳನ್ನು ಸಾಕಿದ್ದನು. ದೊಡ್ಡ ದೊಡ್ಡ ಬಾಣಲೆಗಳಲ್ಲಿ ಎಣ್ಣೆಯನ್ನು ಕೊಚಕೊಚನೆಂದು ಕುದಿಸುತ್ತಿದ್ದನು.

ಆ ಎಲ್ಲ ಶಿಕ್ಷೆಗೂ ತುತ್ತಾದೆ. ಬೆಂಕಿಯಲ್ಲಿ ಬೆಂದು, ಅಗ್ನಿ ಕಂಬಗಳಿಗೊರಗಿ ನಿಂತು, ಚೇಳುಗಳಿಂದ ಕಡಿಸಿಕೊಂಡು, ಸುಡುವ ಎಣ್ಣೆ ಬಾಣಲೆಗಳಿಗೆ ಬಿದ್ದು ಹೊರಟೆ – ಇನ್ನೇನು ಹೆಚ್ಚಿನದು ಕಾದಿದೆಯೋ ಎಂದು ನರಳಿದೆ. ಅಲ್ಲಿ ಅವನ ಕಲ್ಪನೆಯ ಯಮನ ಇದಿರಿನಲ್ಲಿ ಆ ಆರ್ಭಟಗಳನ್ನು ಕೇಳುತ್ತ ನಿಂತೆ.

ನಾನು ಬಿಡುಗಡೆಗೆ ಕಾತರನಾಗಿದ್ದೆ….

ಒಂದು ದಿನ ಅವನು ತನ್ನ ಸಾವಿನ ಬಗ್ಗೆ ಭಯಗ್ರಸ್ತನಾಗಿ ಕೂತಿದ್ದ. ಆಗ ತಾನೇ ಕಲ್ಪಿಸಿ ಕಟ್ಟಿದ ನರಕದಲ್ಲಿ ಅವನೇ ಹೊರಳಾಡಿ ನರಳುತ್ತಿದ್ದ. ನನ್ನನ್ನು ಕಟ್ಟಿ ಹಿಡಿದಿದ್ದ ಮಿದುಳಿನ ಬಳ್ಳಿ ಸಡಿಲಾದುವು. ನಾನು ಫಕ್ಕನೆ ಹಾರಿಹೋದೆ.

ಅಪಾರ ವೇದನೆಯಿಂದ ಸ್ವಲ್ಪ ವಿಶ್ರಾಂತಿ ಬಯಸಿ ಹಾರಿದೆ. ಆದರೆ ಇನ್ನೊಂದು ಮಹತ್ತಾದ ಪೀಡನೆ ನನ್ನನ್ನು ಬಲಾತ್ಕಾರದಿಂದ ಎಳೆದೊಯ್ದಿತು.

ಬಡತನದ ಬದುಕನ್ನು ಸಾಗಿಸಲಾರದೇ ಯಾವನೋ ಒಬ್ಬ ಹಣವಂತನಿಂದ ನಾನು ಸ್ವಲ್ಪ ಸಾಲಪಡೆದಿದ್ದೆ. ಆದ್ದರಿಂದ ನನ್ನನ್ನೇ ಕುರಿತು ಯೋಚಿಸುತ್ತಿದ್ದ ಅವನ ಮೆದುಳನ್ನು ಸೇರಲೇಬೇಕಾಗಿ ಬಂದಿತು.

ಅಲ್ಲಿ ನನಗೆ ಮತ್ತೊಂದು ಯಾತನೆ ಕಾದಿತ್ತು! ಹಣದ ದೊಡ್ಡ ದೊಡ್ಡ ಥೈಲಿಗಳ ನಡುವೆ ವಾಸಮಾಡಬೇಕಾಯಿತು. ‘ನಿನಗಿಂತ ನಾನೇ ಈ ಜಗತ್ತಿನಲ್ಲಿ ಹಿರಿದು’ ಎಂದು ಅವು ವಿಕಟವಾಗಿ ಅಣಕಿಸುತ್ತಿದ್ದುವು. ದೇಹದಿಂದ ಬಿಡುಗಡೆ ಹೊಂದಿದ ನನ್ನಿಂದ ಹೇಗೆ ತನ್ನ ಸಾಲವನ್ನು ವಸೂಲು ಮಾಡಬಹುದೆಂದು ಯೋಚಿಸುತ್ತಿದ್ದ ಆ ಮಿದುಳು ಕಾನೂನಿನ ಭಾರಿ ಭಾರಿ ಕಂತೆಗಳನ್ನು ತಂದು ನನಗೆ ಹೊಡೆಯತೊಡಗಿತು. ಅನೇಕ ಲಾಯರುಗಳ ಮುಳ್ಳಿನಂತೆ ಚುಚ್ಚುವ, ಕ್ರೂರವಾದ ಹರಿತವಾದ ಮಿದುಳುಗಳಲ್ಲೆಲ್ಲಾ ಬದುಕಬೇಕಾಯಿತು.

ಆ ಹಣವಂತ ಕಲ್ಪನೆಯಲ್ಲಿ ನೂರಾರು ಸಲ ನನ್ನನ್ನು ಕೋರ್ಟಿಗೆ ಅಲೆಯುವಂತೆ ಮಾಡಿದ. ಕ್ರೂರಿಗಳಾದ ಜಡ್ಜರ ಎದುರು ನಿಲ್ಲಿಸಿ ಸಾವಿರಾರು ತರಹೆಯ ಪ್ರಶ್ನೆಗಳನ್ನು ಹಾಕಿಸಿದ.

ಒಂದು ದಿನ ಮುಳುಗಿಹೋಗಿದ್ದ ತನ್ನ ಆಸ್ತಿಯನ್ನು ನೆನೆಯುತ್ತ ಆ ಹಣವಂತ ಕುಳಿತಿದ್ದ. ಆಗ ಅವನ ಮಿದುಳು ಅರೆಹುಚ್ಚಿನಿಂದ ಬುಡ ಮೇಲಾಗಿ ಹಿಂಜಿತು…. ಫಕ್ಕನೆ ಅಲ್ಲಿಂದ ತಪ್ಪಿಸಿಕೊಂಡೆ.

ಯಾವುದೋ ಹಿತವಾದ ಗಾಳಿ ಕೈ ಬೀಸಿ ಕರೆಯುತ್ತಿತ್ತು. ಏನೋ ಹಿತವಾದ ಯಾರದೋ ಕನಸು ಕಣ್ಣು ಸನ್ನೆ ಮಾಡಿ ಎಳೆಯುತ್ತಿತ್ತು.

ಆದರೆ ನನಗಲ್ಲಿಗೆ ಹೋಗುವ ಇಚ್ಛೆಯಾಗಲಿಲ್ಲ – ನನ್ನ ಪ್ರೇಯಸಿಯನ್ನು ನೋಡಿ ಬರುವ ಆಸೆಯಾಯಿತು.

ಆ ನನ್ನ ಪ್ರೇಯಸಿ! ನನ್ನ ಮುದ್ದಿನ ಅರಗಿಣಿ! ಬದುಕಿದ್ದಾಗ ಒಲವಿಂದ ತನ್ನ ಕಣ್ಣಿನಲ್ಲೇ ಮುತ್ತಿಟ್ಟು ಮೈ ನವಿರೇಳುವಂತೆ ಮಾಡುತ್ತಿದ್ದ ಆ ನನ್ನ ರಾಣಿ! ಆ ನನ್ನ ದೇವತೆ; ಅಪ್ಸರೆ….

…. ನನ್ನ ಒಲವಿನ ಕಥೆ ನೀನೇ ಓದಿದ್ದೇಯಲ್ಲ – ನಾನೇಕೆ ಹೇಳಲಿ;….

ಅವಳ ಬಳಿ ಹೋಗಲು ಇಚ್ಛಿಸಿದೆ. ಅವಳನ್ನು ನೋಡಲು ಹಂಬಲಿಸಿದೆ. ದುಃಖದಲ್ಲಿ ಚಿಮ್ಮುವ ಅವಳ ಕಣ್ಣೀರನ್ನು ಮುತ್ತಿಟ್ಟು ನನ್ನ ತೃಷೆ ಹಿಂಗಿಸಿಕೊಳ್ಳಲು ಕಾತರಿಸಿದೆ. ಅವಳ ತುಂಬಿದ ಎದೆಯಲ್ಲಿ ಸಂಚರಿಸಿ ನನ್ನನ್ನು ಕುರಿತು ಅವಳು ಕಂಡ ಕನಸುಗಳನ್ನೆಲ್ಲಾ ನಾನೇ ಕಣ್ಣಾರೆ ಕಾಣಲು ಆಶಿಸಿದೆ.

ಅವಳಿದ್ದಲ್ಲಿಗೆ ಹೋದೆ…

ಓಹ್‌! ಏನಾಗಿ ಹೋಗಿದ್ದಿತು!

ಎಷ್ಟು ಬೇಗ ನನ್ನನ್ನು ಮರೆತು ಮದುವೆಯಾಗಿದ್ದಳು ಅವಳು!!

ನಾನು ಅತೀವವಾದ ಮನೋವೇದನೆಯಿಂದ ನರಳಿದೆ. ನನಗೆ ಸಹಿಸಲಸಾಧ್ಯವಾದ ಅಸೂಯೆಯೆದ್ದಿತು. ಅವಳ ತೋಳ್ತೆಕ್ಕೆಯಲ್ಲಿ ಮಲಗಿದ್ದ ಆ ಹೊಸಬನ ಮೆದುಳನ್ನು ಕದಡಿ ಹುಚ್ಚು ಹಿಡಿಸಬೇಕೆನಿಸಿತು. ಆದರೂ… ಅವಳ ಹೃದಯದೊಳಗಾದರೂ… ಕಿಂಚಿತ್ತಾದರೂ… ಬಳಲಿದ ನನಗೆ ಸ್ಥಳ ಸಿಗಬಹುದೇ ಎಂದು ಹುಡುಕಿದೆ.

ಆದರೆ ಮದುವೆಯಾದ ಮೇಲೆ ಪರಪುರುಷರನ್ನು ನೆನೆಯುವುದು ಪಾಪವೆಂದು ತಿಳಿದ ಹೆಣ್ಣು ನನಗಾಗಿ ಸ್ವಲ್ಪ ಸ್ಥಳವನ್ನೂ ಅಲ್ಲಿ ಉಳಿಸಿರಲಿಲ್ಲ.

ನನ್ನಲ್ಲಿ ಭಯಂಕರ ಸೇಡಿನ ಜ್ವಾಲೆ ಎದ್ದಿತು… ಅವಳ ಎದೆಯ ಮೇಲೆ ತಲೆಯಿಟ್ಟು ಮಲಗಿದವನ ಮಿದುಳನ್ನು ಹೊಕ್ಕು ಅಲ್ಲಿ ಪ್ರಳಯ ತಾಂಡವ ಮಾಡಿದೆ. ನಿದ್ದೆ ಮಾಡಲು ಸ್ವಲ್ಪ ಅನುಗೊಡದಂತೆ ಹಿಂಸಿಸಿದೆ.

ಗಂಡಹೆಂಡರಿಬ್ಬರೂ ಭಯಗ್ರಸ್ತರಾದರು. ಭೂತಚೇಷ್ಟೆ ಇರಬೇಕೆಂದು ತತ್ತರಿಸಿದರು. ಜೋಯಿಸರ ಆಜ್ಞೆಯಂತೆ ದೇವರ ಗುಡಿಗೆ ಹೋಗಿ ಶಂಖ ಜಾಗಟೆಗಳಿಂದ ನನಗೇ ಭಯವನ್ನುಂಟುಮಾಡಲು ಯತ್ನಿಸಿದರು.

ಅವಳ ಆ ವರ್ತನೆ ನನಗೆ ಅಸಹ್ಯವೆನಿಸಿತು. ಒಂದು ಕಾಲದಲ್ಲಿ ನನ್ನನ್ನೇ ಸರ್ವಸ್ವವೆಂದು ಪೂಜಿಸುತ್ತಿದ್ದ ಅವಳು ಅಕಾಲ ಮರಣಕ್ಕೆ ತುತ್ತಾದ ನನ್ನನ್ನು ಆ ರೀತಿ ಹಿಂಸಿಸಲು ಪ್ರಯತ್ನಿಸುವುದನ್ನು ನೋಡಿ ನನಗೆ ಅತೀವ ಜಿಗುಪ್ಸೆಯಾಯಿತು…

ಅಲ್ಲಿಂದ ಹೊರಟುಬಿಟ್ಟೆ. ಬದುಕಿದ್ದಾಗ ಜಿಗುಪ್ಸೆಯಾದರೆ ಆತ್ಮಹತ್ಯೆಯ ಮಾರ್ಗವಾದರೂ ಇದೆ. ಆದರೆ ಸತ್ತವನಿಗೇ ಜಿಗುಪ್ಸೆಯಾದರೆ? ಏನು ಮಾಡುವುದೂ ತೋಚಲಿಲ್ಲ.

ಯಾವುದೋ ಹಿತವಾದ ಗಾಳಿ ಕೈ ಬೀಸಿ ಕರೆಯುತ್ತಿತ್ತು. ಏನೋ ಹಿತವಾದ ಯಾರದೋ ಕನಸು ಕಣ್ಣು ಸನ್ನೆ ಮಾಡಿ ಎಳೆಯುತ್ತಿತ್ತು.

ಆದರೆ ನನಗಲ್ಲಿಗೆ ಹೋಗಲು ಇಚ್ಛೆಯಾಗಲಿಲ್ಲ. ಉದ್ವಿಗ್ನವಾಗಿ ಕೆಂಡದಂತೆ ಕಾಯುವ ಮರುಭೂಮಿಗಳಲ್ಲೆಲ್ಲಾ ಸಂಚರಿಸತೊಡಗಿದೆ… ಹೀಗೆಯೇ ಹಲವು ದಿನಗಳು ಉರುಳಿದವು.

ಒಂದು ದಿನ ಬೆಟ್ಟದ ತುದಿಯಲ್ಲಿದ್ದ ಕೋಡುಗಲ್ಲಿನಲ್ಲಿ ಕೂತು ಆಗಿಹೋದ ಜನ್ಮವನ್ನು ಚಿಂತಿಸುತ್ತಿದ್ದೆ.

ಆಗ ಯಾರೋ ನನ್ನ ಬಳಿ ಬಂದು ಪಿಸುಗುಟ್ಟಿ ನುಡಿದಂತಾಯಿತು :

‘ಏಕೆ ಹೀಗೆ ಬಳಲುತ್ತಿದ್ದೀಯೆ? ಜಗತ್ತಿನ ಸರ್ವದುಃಖಿಗಳಿಗೂ ಆಶ್ರಯವಾದ ಕವಿ ಹೃದಯ ಒಂದಿದೆ. ಅಲ್ಲಿ ಹೋಗಿ ಜೀವಪಡೆ…. ’

ಹಿತವಾದ ಪಿಸುಮಾತು… ಅಲ್ಲಿಂದೆದ್ದು ತೇಲಿದೆ.. ಹಿತವಾಗಿ ಕೈಬೀಸಿ ಕರೆಯುವ ಗಾಳಿಯಲ್ಲಿ ತೇಲಿದೆ… ಏನೋ ಹಿತವಾದ, ಕಣ್ಣುಸನ್ನೆಯಿಂದ ಕರೆಯುವ ಕನಸುಗಳ ಅಲೆಗಳಲ್ಲಿ ದೋಣಿಯಂತೆ ತೇಲಿದೆ.

ಶಾಂತಿ!… ಅಪೂರ್ವವಾದ ಶಾಂತಿಯಿಂದ ತೇಲಿದೆ… ಒಂದೆರಡು ಚಣಗಳಲ್ಲಿಯೇ ಒಂದು ಹೃದಯವನ್ನು ಸೇರಿದೆ!…

ನಾನು ಮಲಗಿದ್ದ ವಾರ್ಡಿನಲ್ಲಿ ಮತ್ತೊಂದು ತುದಿಯಲ್ಲಿ ಒಬ್ಬ ಕರುಣಾಪೂರ್ಣನಾದ ವ್ಯಕ್ತಿಯಿದ್ದ. ಸೋತು ಎಲುಬು ಗೂಡಾಗಿದ್ದರೂ ಅವನ ಮೈಯಲ್ಲಿ ಅಮೃತದ ಹೊಳೆಯ ಹರಿಯುತ್ತಿತ್ತು. ಅವನ ನೀಳವಾದ ಕಣ್ಣುಗಳಲ್ಲಿ ವಿಚಿತ್ರ ಕಾಂತಿ ಕುಣಿಯುತ್ತಿತ್ತು.

ನಾನು ಹೋಗಿ ಸೇರಿದುದು ಅವನ ಹೃದಯವನ್ನೇ… ನಾನಲ್ಲಿ ಸೇರುವ ಮುಂಚೆಯೇ ಆತ ನನ್ನ ಜೀವನದ ಬಗ್ಗೆ ಅತಿ ಆಸೆಯಿಂದ ಅಲೆದಲೆದು ಎಲ್ಲ ವಿಷಯವನ್ನು ಸಂಗ್ರಹಿಸಿದ್ದ. ನನ್ನನ್ನು ಕುರಿತು ಅತ್ಯಂತ ಮರುಕದಿಂದ ಅವನ ಹೃದಯದಲ್ಲಿ ನನಗಾಗಿ ದೊಡ್ಡ ಗದ್ದುಗೆಯನ್ನೇ ಕಟ್ಟಿ ಇರಿಸಿದ್ದ.

ನಾನು ಸತ್ತಮೇಲೆ ಅನೇಕ ದಾರುಣವಾದ ಅನುಭವಗಳಲ್ಲಿ ಬೇಯುತ್ತಿದ್ದಾಗ ಜಗತ್ತಿನಲ್ಲೆಲ್ಲಾ ಆ ಹೃದಯ ಒಂದೇ ನನಗಿಂತ ಹೆಚ್ಚಾಗಿ ನೋಯುತ್ತಿದ್ದಿತು.

ಅಲ್ಲಿ ಹೋಗಿ ಸ್ವಲ್ಪ ವಿಶ್ರಮಿಸಿ ಕಣ್ಣುತೆರೆದು ನೋಡಿದೆ…. ಚಕಿತನಾದೆ!

ಓಹ್‌ ಏನು ಅಪಾರವಾದ ಬ್ರಹ್ಮಾಂಡವದು! ಏನು ವಿಶಾಲವಾದ ಸೌಂದರ್ಯ ಪೂರಕವದು! ಏನು ವಿಚಿತ್ರವಾದ ಸೃಷ್ಟಿಯದು!!

ಅಬ್ಬ!… ಏನು ಅದ್ಭುತವಾದ ಅಮರಾವತಿ ಆ ಹೃದಯ!!!

ಈ ಜಗತ್ತಿನ ದುಃಖಿಗಳೆಲ್ಲರೂ ಅಲ್ಲಿದ್ದರು. ಲಕ್ಷಾಂತರ ವರ್ಷಗಳಿಂದ ಮಾನವ ಕೋಟಿ ಕಟ್ಟಿ ಬೆಳೆಸಿದ ನಾಗರಿಕತೆಯ ಕುರುಹುಗಳು ಅಲ್ಲಿದ್ದುವು. ಪುರಾತನ ಗ್ರೀಸ್ ರೋಮ್, ಹಾಳುಬಿದ್ದ ಭವ್ಯ ಮಂದಿರಗಳು, ಅದ್ಭುತ ಶಿಲ್ಪಗಳು, ಸೌಂದರ್ಯದ ಖಣಿಗಳಂತಿದ್ದ ಪಟ್ಟಣಗಳು, ಎಲ್ಲವೂ ಹೊಸ ಚೇತನ ಪಡೆದು ಹೊಳೆಯುತ್ತಿದ್ದುವು. ಅಲ್ಲಿ ಒಂದೆಡೆ ಆರ್ಯಮಹರ್ಷಿಗಳು, ತಪೋಧನರು ಧ್ಯಾನಮಗ್ನರಾಗಿ ಕುಳಿತಿದ್ದರು. ಹಾಲಾಹಲವ ಕುಡಿದ ನೀಲಕಂಠನೂ, ವಿಷಯದ ಬಟ್ಟಲನ್ನು ಕೈಯಲ್ಲಿ ಹಿಡಿದುಕೊಂಡೇ ತನ್ನ ಒಡನಾಡಿಗಳೊಡನೆ ಚರ್ಚಿಸುತ್ತಿದ್ದ ಸಾಕ್ರಟೀಸನೂ ಅಲ್ಲಿ ಅಕ್ಕಪಕ್ಕದಲ್ಲಿ ಕುಳಿತಿದ್ದರು. ಅಲ್ಲಿ ಶಿಲುಬೆಗೇರಿದ ಕ್ರಿಸ್ತನ ದೇಹದಿಂದ ರಕ್ತ ಇನ್ನೂ ತೊಟ್ಟಿಕ್ಕುತ್ತಲೇ ಇತ್ತು. ಪದ್ಮಾಸನಾಸೀನನಾಗಿದ್ದ ಬುದ್ಧ ಜಗದ ಉದ್ಧಾರಕ್ಕಾಗಿ ಧ್ಯಾನಮಗ್ನನಾಗಿದ್ದ. ಗಾಂಧಿ, ಪೈಗಂಬರರು ಅಲ್ಲಿ ಕೂಡಿ ಶಾಂತಿಮಂತ್ರ ಹಾಡುತ್ತಿದ್ದರು.

ಬಗೆಬಗೆಯ ಚೆಲುವಿನಿಂದ ದಿನದಿನವೂ ಹೊಸತಾಗಿ ಸೂರ್ಯ ಉದಿಸುತ್ತಿದ್ದ – ಚಂದ್ರ ಇನ್ನಷ್ಟು ಶೀತಲನಾಗಿದ್ದ.

ಅಲ್ಲಿ ವಿಧವಿಧವಾದ ಚೆಲುವಿನ ಹೂವುಗಳ ವನಗಳಿದ್ದುವು. ಭಯಂಕರವಾದ ನಿಬಿಡವಾದ ಘೋರಾರಣ್ಯಗಳು ಸುಯ್ಯುತ್ತಿದ್ದುವು.

ಎಲ್ಲೆಲ್ಲೂ ಸುಗಂಧದ ಕಂಪು! ಕಾಜಾಣ ಕೋಗಿಲೆಗಳ ಮಧುರವಾದ ನಿನಾದ! ಮೈಮರೆಯಿಸುವ ಮಾಯೆ! ಹುಟ್ಟು ಸಾವಿನ ಸಮಸ್ಯೆಯ ಅಲೆ ಅಲೆಗಳು ಏಳುತ್ತಿದ್ದುವು. ಎಲುಬು ಗೂಡಿನಲ್ಲಿ ಕೂತು ಬಡತನ ಅಲ್ಲಿ ಘರ್ಜಿಸುತ್ತಿತ್ತು. ಎಲ್ಲ ಪ್ರಶ್ನೆಗಳೂ ಅಲ್ಲಿ ಬಂದು ವಿದ್ಯುತ್‌ಕಾಂತಿಯ ‘ಕ್ಷ’ ಕಿರಣಗಳಿಗೆ ತುತ್ತಾಗಿ ಹೊಸ ಉತ್ತರ ಪಡೆಯುತ್ತಿದ್ದುವು.

ಮಾನವನ ಸುಖಕ್ಕಾಗಿ ಇರುವ ಈ ಜಗತ್ತಿನಲ್ಲಿ, ಆನಂದಸ್ಪಂದದಿಂದ ಹುಟ್ಟಿದ ಈ ಸೃಷ್ಟಿಯಲ್ಲಿ – ನೋವೂ ಇರಬೇಕೆ ಎಂದು ವಿಚಲಿತವಾದ ಕಂಗಾಲಾದ ಮಗುವಿನದೆಂಬಂತಿದ್ದ ಕಣ್ಣುಗಳೆರಡು ದಯಾರ್ದ್ರವಾಗಿ ನಕ್ಷತ್ರದಂತೆ ಅಲ್ಲಿ ಮಿನುಗುತ್ತಿದ್ದುವು.

ಹೊರಗಡೆಯ ನಿಮ್ಮ ಜಗತ್ತಿನಲ್ಲಿ ಸಾಯುವವರೆಷ್ಟೋ ಮಂದಿ ಅಲ್ಲಿಗೆ ಬಂದು ಸೇರಿ ಹೊಸ ಜೀವ ಪಡೆಯುತ್ತಿದ್ದರು. ನಿಸರ್ಗ ನಿಯಮಕ್ಕೆ ಬಾಡಿ ಉದುರಿ ಹೋಗುವ ಹೂವಿನ ರಾಶಿಗಳು ಅಲ್ಲಿ ನಿಯಮೋಲ್ಲಂಘನೆಯ ಸ್ವಾತಂತ್ರ್ಯ ಪಡೆದು ಬಂದು ಬದುಕುತ್ತಿದ್ದುವು.

ಅವನು ಉಸಿರಾಡುವ ಗಾಳಿಯೇ ಅಲ್ಲಿ ಮಂದ ಮಂದವಾಗಿ ಹಿತವಾಗಿ ಚಾಮರದಂತೆ ಬೀಸಿ ನಮ್ಮನ್ನು ಸಾಕುತ್ತಿತ್ತು. ಅವನು ಆಡುವ ಮಾತು ಗಾನದಂತೆ ಅಲ್ಲಿ ಸಂಚರಿಸುತ್ತಿತ್ತು. ಅವನು ನೋಡುವ ನೋಟ ಅಲ್ಲಿಗೆ ವಿಧ ವಿಧದ ಆಗಂತುಕರನ್ನು ತರುತ್ತಿದ್ದಿತು. ಅವನು ಕಾಣುವ ಕನಸು ಅಲ್ಲಿ ಆಕಾಶದ ಬೂರುಗದ ಮುಗಿಲಾಗುತ್ತಿತ್ತು. ಅವನು ಕಿಲಕಿಲನೆ ನಕ್ಕರೆ ಪಾಲ್ಗಡಲು ನೊರೆ ನೊರೆಯಾಗಿ ಉಕ್ಕುತ್ತಿತ್ತು.

ಇಂತಹ ಅಪಾರ ಬ್ರಹ್ಮಾಂಡವನ್ನೇ ಹುದುಗಿಸಿಟ್ಟುಕೊಂಡವನ ಹೃದಯದಲ್ಲಿ ನಾನು ಬಾಳಿದೆ. ಅಲ್ಲಿ ಸೇರಿ ಬದುಕುತ್ತಿದ್ದ ಮಹಾಮಹಿಮರೆಲ್ಲರ ದಿವ್ಯ ಸಂದೇಶಗಳ ಶ್ರವಣ ಮನನದಿಂದ ಪುನೀತನಾದೆ.

ಒಂದು ದಿನ ವಿಚಿತ್ರವೊಂದನ್ನು ಕಂಡೆ… ನನ್ನ ಸನಿಯದಲ್ಲಿ ಕಾಣಿಸಿದಂತೆ ಅದೇನೋ ಸುಳಿಯುತ್ತಿತ್ತು. ನನಗೆ ಅದರ ಇರವಿನ ಮಾಯೆ ಅನುಭವ ಗೋಚರವಾಯಿತು.

ಕುತೂಹಲಾವಿಷ್ಟನಾಗಿ ‘ನೀನಾರು?’ ಎಂದೆ.

‘ನಾನು ಸಂಪಗೆಯ ಕಂಪು’ ಕಾಣಿಸಿಕೊಳ್ಳದಿದ್ದರೂ ಉತ್ತರವಿತ್ತಿತು.

‘ಇಲ್ಲೇನು?… ’

‘ಚಿತ್ರ ಬರೆಯುತ್ತಿದ್ದೇನೆ… ’

‘ಏಕೆ?’

‘ಹೇಳುತ್ತೇನೆ ಕೇಳು… ನಾನು ಒಂದು ಸಂಪಗೆಯ ಹೂವಿನ ಬಟ್ಟಲಲ್ಲಿ ಧ್ಯಾನಮಗ್ನನಾಗಿ ಕುಳಿತಿದ್ದೆ. ಒಂದು ದಿನ ಅಪೂರ್ವ ಅನುಭವವಾಯಿತು. ಕಣ್ತೆರೆದು ನೋಡಿದೆ. ದರ್ಶನವಾಯಿತು. ಸಂಪಗೆಯ ಚೆಲುವಿನ ದರ್ಶನವಾಯಿತು.

ಆನಂದದಿಂದ ಪುಳಕಿತನಾದೆ. ಮಂದವಾಗಿ ಗಾಳಿ ಸುಳಿಯುತ್ತಿತ್ತು. ಒಲವಿನಿಂದ ನನ್ನ ಮೈ ಹಗುರವಾಯಿತು! ಗಾಳಿಯಲ್ಲಿ ಲೀನವಾಯಿತು. ಅಂದಿನಿಂದ ನನ್ನ ದರ್ಶನದ ಸಂದೇಶವನ್ನು ಹೊತ್ತು ಎಲ್ಲೆಲ್ಲೋ ತಿರುಗಿದೆ. ದುಂಬಿವಿಂಡುಗಳ ನಡುವೆ ಸಂಚರಿಸಿ ಅವುಗಳಿಗೂ ದರ್ಶನ ಭಾಗ್ಯ ದೊರಕಿಸಿದೆ.

ಒಂದು ದಿನ ನನಗೆ ದರ್ಶನವಿತ್ತ ಸಂಪಗೆಯ ಹೂವಿನ ಚೆಲುವು ಮಾಯವಾಗಿ ಸಾರ್ಥಕತೆ ಪಡೆದಂತೆ ಕಾಯಿಯಾಯಿತು. ಆಗ ವಿರಹಿಣಿಯಂತೆ ಸಂಚರಿಸುತ್ತಿದ್ದಾಗ ಈ ಕವಿಯನ್ನು ಕಂಡೆ. ನನ್ನ ಮೂಕ ಸಂದೇಶವನ್ನು ಹೊತ್ತು ಅವನ ಈ ಹೃದಯವನ್ನು ಸೇರಿದೆ.

ಇಲ್ಲಿ ಮತ್ತೆ ನಾನು ಅನುಭವಿಸಿದ ಚೆಲುವಿನ ದರ್ಶನವನ್ನು ಹೃದಯ ಭಿತ್ತಿಯ ಮೇಲೆ ಕೆತ್ತುತ್ತಿದ್ದೇನೆ. ಇಲ್ಲಿ ಹೂ ಕಾಯಾಗದು. ಚೆಲುವಾಗಿಯೇ ಉಳಿಯುತ್ತದೆ. ನಾನು ಆ ಹೂವಿನ ಬಟ್ಟಲಲ್ಲೇ ಮಲಗಿ ಮುಕ್ತಿ ಪಡೆಯುತ್ತೇನೆ. ’

ಸ್ವಲ್ಪ ಹೊತ್ತು ಎವೆಯಿಕ್ಕದೆ ನೋಡುತ್ತಿದ್ದೆ. ಕವಿಯ ಕಲ್ಪನೆಯಿತ್ತ ಶಕ್ತಿಯಿಂದ ಕಂಪು ಅಲ್ಲಿ ಒಂದು ದೊಡ್ಡ ಸಂಪಗೆಯ ಮರವನ್ನೇ ಸೃಷ್ಟಿಸಿತು.

ಅಂದಿನಿಂದ ನಾನು ಪ್ರತಿನಿತ್ಯವೂ ಬಾಡದ ಹೂವಿನ, ಮಾಯವಾಗದ ಕಂಪಿನ – ಆ ಸಂಪಿಗೆಯ ಮರದ ನೆರಳಿನಲ್ಲಿ ಮಲಗಿರುತ್ತಿದ್ದೆ.

ಅವನು ತನ್ನ ಹೃದಯದಲ್ಲಿ ಸೇರಿದ ಸುಂದರ ಪುಷ್ಪಗಳನ್ನು ಬಾಡದಂತೆ ಸಾಕುತ್ತಿದ್ದ. ಅವೆಲ್ಲವೂ ಅವನ ಪಾಲಿಗೆ ಚೆಲುವು ವಿಧ ವಿಧವಾದ ಬಣ್ಣಗಳಲ್ಲಿ ಬರೆದು ಕಳುಹಿಸಿದ ಪ್ರೇಮಪತ್ರಗಳಂತಿದ್ದವು.

ದಿನದಿನವೂ ಅಲ್ಲಿ ಹೊಸ ಶಕ್ತಿ ಪಡೆಯುತ್ತಿದ್ದ ನನಗೆ ಅಪ್ರತಿಮವಾದ ಅನುಭವವೂ ಆಗತೊಡಗಿತು.

ಒಂದು ದಿನ ಸುಗಂಧ ಹೊತ್ತು ವಿಶಾಲವಾಗಿ ಹರಡಿದ್ದ ಮಲ್ಲಿಗೆಯ ಬಳ್ಳಿಯೊಂದರ ಬಳಿ ನಿಂತಿದ್ದೆ.

ಆನಂದದಿಂದ ಕಿಲಕಿಲನೆ ನಕ್ಕು ಆ ಮಲ್ಲಿಗೆಯ ಬಳ್ಳಿ ಮಾತನಾಡಿತು.

‘ಎಂದೋ ಎಲ್ಲೋ ಬಾಡಿ ಒಣಗಿ ಉದುರಿದ್ದ ನಾನು ಇಲ್ಲಿ ಬಂದು ಸೇರಿದೆ. ದಿನದಿನವೂ ಇವನ ಹೃದಯದಲ್ಲಿ ಹೊಸ ಶಕ್ತಿ ಪಡೆದೆ. ಈ ದಿನ ನನಗೆ ಸಂಪೂರ್ಣ ಜೀವದಾನವಾಗಿದೆ. ನಾನು ಹೊರಗೆ ಹೋಗುತ್ತಿದ್ದೇನೆ. ’

‘ನನ್ನನ್ನು ಅಗಲಿ ಹೊರಗೆ ಹೋಗುವಿಯಾ?’ ನಾನು ತುಂಬ ದುಃಖದಿಂದ ಕೇಳಿದೆ.

‘ನೀನೇನೂ ದುಃಖಿಸಬೇಕಾದ್ದಿಲ್ಲ. ನಮ್ಮನ್ನೆಲ್ಲಾ ಇಲ್ಲಿ ತಂದು ಸಾಕಿದ ಅವನಿಗೆ ಇಂದು ಆನಂದವಾಗಿದೆ. ಆದ್ದರಿಂದ ನನಗೆ ಹೊಸ ಜೀವವಿತ್ತು ಇಂದು ಹೃದಯದಿಂದ ಹೊರಗಿಟ್ಟು ನೋಡುತ್ತಾನೆ. ’

ನಮ್ಮಿಬ್ಬರಿಗೂ ಅಗಲಿಕೆಯಾಯಿತು. ಹೀಗೆಯೇ ಪ್ರತಿದಿನವೂ ನಡೆಯುತ್ತಿತ್ತು. ಗಿರಿ ತೊರೆಗಳು, ಸೂರ್ಯೋದಯ ಚಂದ್ರೋದಯಗಳು, ಹೊಸ ಹುಟ್ಟು ಪಡೆದು ನನ್ನನ್ನಗಲಿ ಹೊರಟವು. ಬುದ್ಧ ಕ್ರಿಸ್ತಗಾಂಧಿಯರೂ, ತಪೋಧನ ಮಹರ್ಷಿಗಳೂ ಹೊಸ ಸಂದೇಶ ಹೊತ್ತು ಅಲ್ಲಿಂದ ಹೊರಟರು –

ಹೊರಗೆ ಕಳುಹಿಸುವಾಗ ಅವನೆಷ್ಟು ಆಸಕ್ತಿ ವಹಿಸುತ್ತಿದ್ದ ಎಂಬುದು ನನ್ನನ್ನು ಆಶ್ಚರ್ಯಚಕಿತನನ್ನಾಗಿ ಮಾಡಿತು. ನನ್ನ ಹೃದಯದಲ್ಲಿ ಸಾಕಿದವರನ್ನು ನಿಮ್ಮ ಬಳಿ ಕಳುಹಿಸುವಾಗ ಅವನು ಪ್ರೇಮಸ್ಮಾರಕವಾಗಿ ತಾಜಮಹಲುಗಳನ್ನು ಕಟ್ಟಿಕೊಡುತ್ತಿದ್ದ. ಸುಂದರವಾದ ಶಬ್ದ ಸಂಪತ್ತಿನಿಂದ, ಆಸ್ಥೆ ವಹಿಸಿ ಆಯ್ದ ಮಾತುಗಳಿಂದ ಜೀವರಸವನ್ನು ತುಂಬಿ ಹೊರಗೆ ಕಳುಹಿಸುತ್ತಿದ್ದ….

ನನ್ನನ್ನು ಒಲಿದವನು ಎಂದು ನನಗೂ ಜೀವವಿತ್ತು ‘ನಿಮ್ಮೊಡನೆ ಬದುಕಲು’ ಕಳುಹಿಸುತ್ತಾನೆ ಎಂದು ನಾನು ಪ್ರೇಮಾತುರದಿಂದ ಕಾಯುತ್ತಿದ್ದೆ. ‘ನಿಮ್ಮೊಡನೆ ಬದುಕಲು’ ಎಂದು ಏಕೆ ಹೇಳಿದೆ ಗೊತ್ತೆ? ಅವನು ನಮ್ಮೆಲ್ಲರನ್ನೂ ಹೃದಯದಲ್ಲಿ ಸಾಕುತ್ತಿದ್ದುದು ನಿಮಗಾಗಿಯೆ; ಬದುಕುತ್ತಿರುವ ಮಾನವ ಜೀವಗಳಿಗಾಗಿಯೆ… ನಮ್ಮ ಮೇಲಿನದಕ್ಕಿಂತ ಅಧಿಕಾರ ಪ್ರೀತಿ ಅವನಿಗೆ ನಿಮ್ಮ ಮೇಲಿತ್ತು…

ನನಗೂ ಜೀವ ಪಡೆಯುವ ಕಾಲ ಬಂದಿತು. ಅವನ ಕಲ್ಪನೆಯ ಅದ್ಭುತ ಶಕ್ತಿಯಲ್ಲಿ ನಾನು ದಿನ ದಿನವೂ ಹೊಸ ಜೀವ ಪಡೆದು ಕಡೆಗೆ ಇಡೀ ಮಾನವ ಕೋಟಿಯ ಪ್ರತಿನಿಧಿಯಾದೆ. ಕಾಲಾಂತರಗಳಿಂದ ಪ್ರವಾಹದಂತೆ ಹರಿಯುತ್ತಿರುವ ಜೀವ ಕೋಟಿಯ ಶಕ್ತಿಯಾದೆ.

ಮಾತಿನಲ್ಲಿ ಮುಕ್ತಿ ಪಡೆದು ಹೊರಬಂದೆ… ಶಬ್ದಗಳಲ್ಲಿ ಜೀವಪಡೆದು ಕಾಗದದ ಮೇಲಿನ ಬರಹವಾದೆ…

ಹೊರಗೆ ಬಂದವನು ಅವನ ಮುಖವನ್ನು ಅತ್ಯಂತ ಮಮತೆಯಿಂದ ನೋಡಿದೆ. ಮಗುವಿಗೆ ಜನ್ಮವಿತ್ತ ತಾಯಿಯಂತೆ ಆನಂದಾತಿಶಯದಿಂದ ಅವನು ನನ್ನನ್ನು ಕುರಿತು ಚಿಂತಿಸುತ್ತಿದ್ದ.

ಅವನ ಬಳಲಿದ ಮುಖದಲ್ಲಿ ಕಾಂತಿ ಉಕ್ಕೇರುತ್ತಿತ್ತು. ಗಾಳಿಯಲ್ಲಿ ಕುಣಿಯುತ್ತ ಕುರುಳುಗಳು ಅವನ ವಿಶಾಲವಾದ ಹಣೆಯನ್ನು ಮುದ್ದಿಡುತ್ತಿದ್ದುವು.

ನೋಡುನೋಡುತ್ತಿದ್ದಂತೆ ನನಗೂ ಅವನಿಗೂ ಇರುವ ಬಾಂಧವ್ಯ ಹೆಚ್ಚು ಹೆಚ್ಚಾಗುತ್ತಿದ್ದಂತೆ ತೋರಿತು.

ಆದರೆ ಅವನು ಮನಸ್ಸಿನಲ್ಲಿಯೇ ನುಡಿದ… “ಇನ್ನು ನಿನಗೂ ನನಗೂ ಇದ್ದ ಬಾಂಧವ್ಯ ತೀರಿತು. ಜೀವ ತುಂಬಿ ಕಳುಹಿಸಿದ್ದೇನೆ. ಈ ಜಗತ್ತಿನ ನಡುವೆ ನಿಂತು ಬಾಳು. ಮಾನವ ವರ್ಗದ ಕಲ್ಯಾಣವನ್ನು ನೀನು ಹೊತ್ತ ಸಂದೇಶದಿಂದ ಸಾಧಿಸು. ನಾನು ಒಲುಮೆಯಿಂದ ತುಂಬಿದ ಜೀವ ನಿನ್ನನ್ನು ಚಿರಂಜೀವಿಯಾಗಿ ಉಳಿಸಲು ಸಾಕೆಂದೆನಿಸಿದೆ ನನಗೆ”….

ಹೊರಗಿನಿಂದ ಗಾಳಿ ಬೀಸುತ್ತಿತ್ತು. ನನ್ನ ಜೀವರಸ ತುಂಬಿಕೊಂಡಿದ್ದ ಹಾಳೆಗಳು ರೋಮಾಂಚಿತವಾಗಿ ಪಟಪಟನೆ ಅದುರಿದವು.

ಪ್ರತಿನಿತ್ಯವೂ ನನ್ನನ್ನು ಹೊತ್ತು ಅವನೆಲ್ಲೆಲ್ಲೋ ಸುತ್ತುತ್ತಿದ್ದ. ನಿಮ್ಮೊಡನೆ ನಾನು ಸೇರುವಂತಾಗಬೇಕೆಂದು ಪಡಬಾರದ ಕಷ್ಟಪಟ್ಟ. ಆ ಬಡತನದಲ್ಲಿ, ದಾರುಣ ನೋವಿನಲ್ಲಿ – ನನಗಾಗಿ ಅವನು ಸರ್ವತ್ಯಾಗ ಮಾಡಲೂ ಸಿದ್ಧನಾಗಿದ್ದ.

ಆದರೆ ಎಲ್ಲವೂ ವಿಫಲವಾಯಿತು! ಒಂದು ದಿನ ಅವನ ತೋಳ್ತೆಕ್ಕೆಯಲ್ಲಿ ಮಲಗಿದ್ದಾಗ ಅವನು ಅನಂತತೆಯಲ್ಲಿ ಮಾಯವಾದ. ಅವನ ನೆನಪನ್ನು ಚಿರಾಯುವಾಗಿ ಉಳಿಸಲು ನಾನು ಉಳಿದೆ.

ಒಬ್ಬನೇ ಉಳಿದೆ. ಮೂಕವಾಗಿ ಇಲ್ಲಿ ನಿರ್ಜೀವಿ ಎಂಬಂತೆ ಬಿದ್ದಿದ್ದೆ. ಅದೆಷ್ಟೋ ಮಾತುಗಳ ಭಾರದಿಂದ ಮಲಗಿದೆ. ಇಡೀ ಮಾನವ ಕೋಟಿಯ ಮಧ್ಯೆ ನಾನು ಸೇರಬೇಕೆಂದು ಅವನು ಪಟ್ಟ ಆಸೆ ಅದೆಷ್ಟೋ ದಿನಗಳಿಂದ ನಿರರ್ಥಕವಾಗಿಯೇ ಉಳಯಿತು. ನನ್ನ ತಂದೆಯನ್ನಗಲಿದ ನಾನೂ ವಿರಹಿಯಾಗಿ ಒಂಟಿಯಾಗಿ ಇಷ್ಟು ದಿನವೂ ಉಪಯೋಗವಿಲ್ಲದ ಬಾಳು ಬದುಕಿದೆ.

ಮೂಕವಾಗಿದ್ದ ನನ್ನೊಡನೆ ಮಾತನಾಡಬಲ್ಲ ಸಹೃದಯ ಬೇಕಾಗಿತ್ತು. ಆ ನನ್ನ ಆಸೆ ಇಂದು ಸಫಲವಾಯಿತು. ನಿನ್ನ ಹೃದಯದ ಅಮೃತಮಂಥನದಲ್ಲಿ ನನಗೆ ಮತ್ತೆ ಹೊಸ ಜೀವ ಬಂತು…

ನನ್ನ ಬದುಕಿನ ಕಥೆಯನ್ನು ಓದಿದ್ದೀಯ. ನನಗೆ ಹೊಸ ಸೃಷ್ಟಿ ಪ್ರಾಪ್ತವಾದುದು ಹೇಗೆ ಎಂಬುದನ್ನು ನಾನು ಹೇಳಿದ್ದೇನೆ… ಇನ್ನು ನನ್ನನ್ನು ಜೀವಂತವಾಗಿ ಪ್ರತಿದಿನವೂ ಮಾನವಕೋಟಿಯ ಮನಸ್ಸಿನಲ್ಲಿ ಬದುಕವಂತೆ ಮಾಡುವಂತೆ ನಿನ್ನ ಕರ್ತವ್ಯ….

ಆಗಲಿ… ಇನ್ನು ಸಾಕು…

ನಾನು ಹೇಳಿದ ಕಥೆ, ನನ್ನ ಬದುಕಿನ ಕಥೆಗೊಂದು ಉತ್ತಮವಾದ ಹಿನ್ನುಡಿಯಾಗಲಾರದೇ? …. ಬೇಕಾದರೆ ಬರೆದಿಡು…”

* * *

ಅಮರ್ತ್ಯವೆನಿಸುತ್ತಿದ್ದ ಮಧುರವಾದ ಧ್ವನಿ ಹಾಗೆಯೇ ಕರಗಿ ಮಾಯವಾಯಿತ… ಕುಹೂ ಕುಹೂ ಎಂದು ಅಲೆಯುವ ಸ್ವರ್ಗೀಯ ನಿನಾದ ಕಿಟಕಿಯ ಬಳಿ ಸುಳಿದು ದೂರದೂರವಾಗಿ ಎಲ್ಲೋ ಯಾವ ಕಣಿವೆಗಳ ಆಳದಲ್ಲೋ ಸಂಚರಿಸಿ ಮಾಯವಾಯಿತು.

ದರ್ಶನವಾಗಿತ್ತು!

ಜೀವನದ ಸಮಗ್ರ ದರ್ಶನವಾಗಿತ್ತು!!

ಕವಿಯ ಹೃದಯದ ಪವಿತ್ರದರ್ಶನವಾಗಿತ್ತು!!!

ನನ್ನ ಹೃದಯದಲ್ಲಿ ನಡೆಯುತ್ತಿದ್ದ ಅಮೃತಮಂಥನ ಶಾಂತವಾಗಿ ಕಣ್ಣಿನಿಂದ ನೀರು ಧಾರಾಕಾರವಾಗಿ ಸುರಿಯಿತು…

ಕಣ್ತೆರೆದು ನೋಡಿದೆ…

ಆನಂದದ ಅಮೃತಮಂಥನದಲ್ಲಿ ಉದಿಸಿದ ಬೆಣ್ಣೆಯಂತೆ ಬಾನಿನ ನೀಲಿಯಲ್ಲಿ ಚಂದ್ರೋದಯವಾಗಿತ್ತು….

ಓಹ್‌! ಎಂತಹ ಚೆಲುವು!!

ಎವೆಯಿಕ್ಕದೆ ನೋಡಿದೆ… ಮುಗಿಲುಗಳ ವಿಚಿತ್ರವಾದ ಚೆಲುವಿನ ಪ್ರತಿಮೆಗಳಲ್ಲಿ ದೇವರು ಗಗನದಲ್ಲಿ ತನ್ನ ಮಹಾ ಕಾವ್ಯವನ್ನು ಬರೆದಿದ್ದ…. ಅಮೃತ ಮಂಥನದಲ್ಲಿ ಹುಟ್ಟಿದ ಹಾಲಾಹಲವನ್ನೆಲ್ಲಾ ಕುಡಿದ ನೀಲಕಂಠನಂತೆ ಮೇಘದ ರಾಶಿಯೆಂದು ಬಾನಿನ ತುದಿಯಲ್ಲಿ ಧ್ಯಾನಸ್ಥನಾಗಿ ಕುಳಿತಿತ್ತು.

ನೋಡುತ್ತಲೇ ಇದ್ದೆ!… ಮೈಮರೆತೆ!…. ಬಾಹ್ಯಶೂನ್ಯನಾದೆ!….

ಕವಿಯಿಂದ ಜೀವನದ ದರ್ಶನ!

ಮತ್ತೆ ಕವಿಯ ಹೃದಯದ ದರ್ಶನ!!

ತನ್ಮೂಲಕ ದೇವರ ಮಹಾಕಾವ್ಯದ ದರ್ಶನ!!!

ಚೆಲುವಿನ ದರ್ಶನ!!!!

ಓಹ್‌!! ಎಂತಹ ಭಾಗ್ಯವಂತನಾದೆ!!…..

* * *

ಆನಂದದಲ್ಲಿ ಲೀನವಾಗಿದ್ದೆ. ಎಚ್ಚೆತ್ತು ನೋಡಿದಾಗ ಬೆಳಗಾಗಿತ್ತು. ನನ್ನ ತಲೆದೆಸೆಯಲ್ಲಿ ನಾನು ಓದಿ ಮುಗಿಸಿದ್ದ ಆ ಮಹಾ ಕಾದಂಬರಿಯಿತ್ತು.

ಅಚ್ಚಾಗದೇ ಉಳಿದದ್ದ ನನ್ನ ಗೆಳೆಯ ಕವಿ ಬರೆದ ಆ ಮಹಾ ಕಾದಂಬರಿ!!

ಯಾರದೋ ಕಾಲಿನ ಸಪ್ಪಳವಾಯಿತು. ತಿರುಗಿ ನೋಡಿದೆ. ಕವಿಯ ತಾಯಿ ನನ್ನ ಬಳಿ ನಿಂತಿದ್ದರು.

“ನೋಡಿ ಈಗ ನಿಮ್ಮ ಕೈಲಿರೋ ಪುಸ್ತಕಾನೇ ಅವ್ನು ಸಾಯೋಕಿಂತ ಸ್ವಲ್ಪ ದಿನ ಮುಂಚೆ ಬರ್ದು ಮುಗ್ಸಿದ್ದು. ”

ಮಗನ ನೆನಪಿನಿಂದ ತಾಯಿಯ ಕಣ್ಣಲ್ಲಿ ನೀರೂರಿತು. ಏನೋ ನೆನಸಿಕೊಂಡು ಮತ್ತೆ –

“ನೀವು ಇಲ್ಲಿಂದ ಹೋಗಿ ಆರೇಳು ವರ್ಷ ಆಯ್ತಲ್ವ? ಅವತ್ನಿಂದ ಅವನು ಒಂದೇ ಸಮನೆ ಬರ್ಯೋದಕ್ಕೆ ಶುರ್ಮಾಡ್ದ. ಏನೇನೋ ಕಂತೆಗಟ್ಲೆ ಬರ್ದು ಹಾಕಿದ್ದೆ” ಎಂದು ನನ್ನೆದುರು ಒಂದು ರಾಶಿ ಪುಸ್ತಕಗಳನ್ನು ತಂದಿಟ್ಟರು.

“ಒಂದೂ ಅಚ್ಚಾಗಿಲ್ವೆ?”

ನನ್ನ ಪ್ರಶ್ನೆ ಕೇಳಿ ಅವರು ಕಣ್ಣೀರೊರೆಸಿಕೊಂಡು :

“ಎಲ್ಲಿಂದ ಆಗ್ಬೇಕಪ್ಪ? ಬದ್ಕಿದ್ದಾಗ ಎಲ್ಲಾ ಕೆಲ್ಸಕ್ಕೂ ನಾಲಾಯಕ್ಕಾದ. ಯಾವತ್ತೂ ಖಾಹಿಲೆ ಹಿಡಿದು ನರಳಿದ. ಅಂತೂ ಏನೇನೊ ಬರೀತಿದ್ದ. ಅದ್ರಲ್ಲೂ ಅವ್ನಿಗೆ ನಾಲ್ಕು ಕಾಸೂ ಆಗ್ಲಿಲ್ಲ. ಕಡೇವರ್ಗು ಅರೆಹೊಟ್ಟೇನೇ ಗತಿಯಾಯ್ತು…. ಅದ್ರಲ್ಲೇ ಸಾವು ಬಂದಿತು… ”

ನನ್ನ ಗೆಳೆಯನ ಮರಣ ಸಂಭವಿಸಿದ ರೀತಿ ಕೇಳಿ ಕಣ್ಣಿನಲ್ಲಿ ನೀರು ಒತ್ತರಿಸಿ ಬಂದಿತು.

“ನೀವೂ ಕೈಲಿ ಹಿಡ್ಕೊಂಡಿರೋ ಪುಸ್ತಕಾನ ಅವ್ನು ತುಂಬಾ ಪ್ರೀತಿಸ್ತಿದ್ದ. ಸಾಯೋ ಘಳಿಗೇಲೂ ಅದು ಅವನ ಮಗ್ಗುಲಲ್ಲೇ ಇತ್ತು. ”

ತಾಯಿಗೆ ನಮಸ್ಕರಿಸಿ ಆ ಮಹಾ ಕಾದಂಬರಿಯನ್ನು ಎತ್ತಿಕೊಂಡೆ. ನನ್ನ ಹಿಂದಿನ ರಾತ್ರಿಯ ಪವಿತ್ರ ಅನುಭವಗಳನ್ನೆಲ್ಲ ಕಾದಂಬರಿಯ ಕೊನೆಯಲ್ಲಿ ಹಿನ್ನುಡಿಯಾಗಿ ಬರೆದೆ.

ಏಕೋ ಭಾರವಾದ ಎದೆಯಿಂದ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಅಚ್ಚಿನ ಮನೆ ಹುಡುಕುತ್ತಾ ಅಲೆದೆ….

* * *