Time present and time past
Are both perhaps present in time future
And time future contained in time past
– T. S. Eliot

“ಹೊರಗೆ ತುಂಬ ಚಳಿಯಿರಬೇಕು”’

ಹಣ್ಣು ಹಣ್ಣು ಮುದುಕ ಮನಸ್ಸಿನಲ್ಲಿಯೇ ಚಳಿಯನ್ನು ಕಲ್ಪಿಸಿ ನಡುಗಿ; ಧಗ ಧಗನೆ ಉರಿಯುತ್ತಿದ್ದ ಅಗ್ಗಿಷ್ಟಿಕೆಯಲ್ಲಿ ಮೈ ಕಾಯಿಸಿಕೊಳ್ಳುತ್ತಾನೆ. ಏನೇನೋ ನೆನಪುಗಳು ಮನಸ್ಸಿನಲ್ಲಿ ಆಡುತ್ತಿವೆ…. ಅದೆಷ್ಟು ವರ್ಷಗಳ ಹಿಂದಿನವೋ ಏನೋ!….

ಕಾಂತಿಯಿಂದ ಬೆಂಕಿಯ ಕೆಂಡದಂತೆ ಹೊಳೆಯುತ್ತವೆ ಅವನ ಆ ಮುದಿ ಕಣ್ಣುಗಳು…..
ಏನೋ ತೃಪ್ತಿ!…..

ದೇವರ ದಯೆ ಎನ್ನಬೇಕು. ಸುಖವಾದ ಬದುಕು. ತುಂಬಿದ ಮನೆ. ವಯಸ್ಸಾಗಿದ್ದರೂ ಮನೇ ವೈವಾಟೆಲ್ಲವನ್ನೂ ಅವನ ಮಗನೇ ನೋಡಿಕೊಂಡು ಹೋಗುತ್ತಾನೆ. ಅವನಿಗೂ ಕೈಗೆ ಬಂದ ನಾಲ್ಕು ಮಕ್ಕಳು. ಎಲ್ಲರಿಗೂ ಲಕ್ಷ್ಮಿಯಂತಹ ಹೆಂಡಿರು… ಮತ್ತೆ ಮುದ್ದು ಮುದ್ದಾಗಿ ಹುಟ್ಟಿರುವ ಆ ಮೊಮ್ಮಕ್ಕಳ ಮಕ್ಕಳು, ಮರಿಮಕ್ಕಳು!!

ಎಂತಹ ಅದೃಷ್ಟವಂತ ಮುದುಕ!

ಎರಡು ಹೊತ್ತೂ ಊಟಕ್ಕಾಗಿ ಮಿಗುವಷ್ಟು ಭತ್ತ ಬೆಳೆಯುತ್ತಿದ್ದ ಹೊಲ!….

ಚಿಕ್ಕದಾಗಿದ್ದರೂ ಉತ್ತಮ ಫಸಲು ಕೊಡುತ್ತಿದ್ದ ಅಡಿಕೆಯ ತೋಟ!…. ತುಂಬ ಕರಾವು….. ಎಲ್ಲ – ಇವೆ.

ಇನ್ನೇನು ಬೇಕು ಹೆಚ್ಚಿಗೆ?

ತೊಂಬತ್ತು ವರ್ಷವಾಗಿದ್ದರೂ ಕಲ್ಲಿನಂತಹ ಮೈ, ಮಗ ಯಜಮಾನಿಕೆ ನೋಡುತ್ತಿದ್ದರೂ ತನ್ನನ್ನು ಕೇಳದೆ ಒಂದು ಕೆಲಸವನ್ನೂ ಮಾಡುವುದಿಲ್ಲ. ಅದಿರಲಿ….. ಎಷ್ಟು ಭಕ್ತಿ ಅವನಿಗೆ! ಇವತ್ತಿಗೂ ತನ್ನನ್ನು ತಲೆಯೆತ್ತಿ ಸಹಾ ನೋಡುವುದು ಇಲ್ಲವಲ್ಲ.. ಇನ್ನು ಹರೆಯದ ಮೊಮ್ಮಕ್ಕಳು… ಈಗಿನ ಕಾಲದವರು. ಆದರೆ ಏನಂತೆ? ಅಜ್ಜಯ್ಯನೆಂದರೆ ಅವರಿಗೆ ಅಪ್ಪಯ್ಯನಿಗಿಂತ ಹೆಚ್ಚು ಪ್ರೀತಿ…

* * *

… ಒಳಗಿನಿಂದ ಲಾಲಿ ಕೇಳಿಬರುತ್ತಿದೆ….

“ಯಾಕಳುವೆ ಎಲೆ ರಂಗ

ಬೇಕಾದ್ದು ನಿನಗೀವೇ..

ನಾಲ್ಕೆಮ್ಮೆ ಕರೆದಾ ನೊರೆಹಾಲು ಸಕ್ಕಾರೇ….

ನೀ ಕೇಳಿದಾಗ ನಾ ಕೊಡುವೇನು

ಉಳ್ಳುಳ್ಳಾಯಿ… ಜೋ ಜೋ!….

ಜೋ ಜೋ!… ಕಂದಾ ಜೋ ಜೋ…. ”’

ಇನ್ನಾರು ಅಷ್ಟು ಚೆನ್ನಾಗಿ ಜೋಗುಳ ಹಾಡುತ್ತಾರೆ? ಅವನ ಮುದುಕಿಯೇ!…. ಆ ಕಿರೀ ಮೊಮ್ಮಗನ ಮಗುವನ್ನು ತೂಗುತ್ತಿರಬೇಕು…

ಹೌದು! ಆ ಮಗುವಿಗೆ ಅವನ ಹೆಸರೇ ಇಟ್ಟಿದ್ದಾರೆ. ಅವನ ಹಾಗೆಯೇ ಮುಖ ಅದರದ್ದು… ಹೂಂ! ಅವನಂತೆಯೇ ಹಟವೂ ಕೂಡ!… ಈಗ ಎಂಬತ್ತೆಂಟು ವರ್ಷಗಳ ಹಿಂದೆ… ಬಹಳಾ ಹಿಂದೆ ಅವನೂ ಹಾಗೆಯೇ ಅಳುತ್ತಿದ್ದ! ಆಗ ಅವನ ಅಜ್ಜಿಯೂ ತೂಗಿ ಲಾಲಿ ಹಾಡುತ್ತಿದ್ದಳು.

‘ಯಾಕಳುವೆ ಎಲೆ ರಂಗ ಬೇಕಾದ್ದು ನಿನಗೀವೆ… ನಾಲ್ಕೆಮ್ಮೆ ಕರೆದಾ ನೊರೆ ಹಾಲು… ’

ಆ ಜೋಗುಳಕ್ಕೆ ಕೊನೆಯೇ ಇಲ್ಲವೋ ಏನೋ!

ಆ ತೊಟ್ಟಿಲಿನಲ್ಲೇ… ಅವನೂ!….

ಅವನ ಮಗನೂ!…

ಮಗನ ಮಗನೂ!…

ಅವನ ಮಗನ ಮಗನ ಮಗನೂ!….

ಆ ತೊಟ್ಟಿಲು ಆಡದೇ ನಿಂತ ದಿನವೇ ಇಲ್ಲ!

ಆ ಜೋಗುಳ ಹಾಡದೇ ಇದ್ದ ದಿನವೂ ಇಲ್ಲ!

ಅವನ ಪಾಲಿಗೆ ಆ ಜೋಗುಳ ಎಷ್ಟು ಸತ್ಯ!

ಅವನ ಮನೆಯಲ್ಲಿ ಹುಟ್ಟಿದ ಮಕ್ಕಳು ಯಾಕಾರು ಆಳಬೇಕು? ಬೇಕಾದ್ದು ಇದೆ ಮನೆಯಲ್ಲಿ! ನಾಲ್ಕೆಮ್ಮೆ ಯಾಕೆ? ಆರೆಮ್ಮೆ ಇದೆ! ಮನೆಯಲ್ಲಿ ಜನ ತುಂಬಿದೆ ಅಂತ ಅವನ ಮಗ ಮೊನ್ನೆ ತಾನೇ ಜಾತ್ರೆಗೆ ಹೋಗಿ ಮತ್ತೊಂದು ಎಮ್ಮೆ ತಂದಿದ್ದಾನೆ.

ಆ ನಾಲ್ಕು ಎಮ್ಮೆಯಂತೂ ಅವನ ಮನೆಯಲ್ಲೇ ಹುಟ್ಟಿ ಬೆಳೆದವು… ಅವುಗಳ ತಾಯಿಯ, ತಾಯಿಯ, ತಾಯಿಯ, ಅಜ್ಜಿಯ ಹಾಲನ್ನೋ ಏನೋ ಅವನು ಕುಡಿದು ಬೆಳೆದದ್ದು…

* * *

ಹೂ! ಶುರುವಾಯಿತು ಹಟಕ್ಕೆ! ಅದೇ ಹಿರೇ ಮೊಮ್ಮಗನ ಮಗ!… ಇನ್ನೇನಿರಬೇಕು! ‘ಕಥೆ ಹೇಳು…. ಕಥೆ ಹೇಳು…. ’ ಒಂದೇ ಸ್ವರ! ಅವನ ಮುದುಕಿಗೆ ಪ್ರತಿನಿತ್ಯದ ಗೋಳು… !

ಹೌದು! ಅವನಂತೆಯೇ ಅಲ್ಲವೆ ಅವನ ಮರಿಮಕ್ಕಳು! ‘ಅಜ್ಜನ ಪ್ರತಿಗಳು’ ಅಂತ ಅವರ ತಾಯಂದಿರು ಯಾಕೆ ಮತ್ತೆ ದೂರುತ್ತಿದ್ದುದು?… ಮುದುಕನ ಮುಖ ತೃಪ್ತಿಯಿಂದ ಅರಳುತ್ತದೆ… ಹೌದು! ಅವನೂ ಹಾಗೆಯೇ ಮಾಡುತ್ತಿರಲಿಲ್ಲವೇ ಮಗುವಾಗಿ ಇದ್ದಾಗ? ಅಜ್ಜಿಕಥೆ ಹೇಳಿದ ಹೊರತು ನಿದ್ದೆಗೆ ಹೋದ ದಿನ ಒಂದಾದರೂ ಉಂಟೆ?…

ಆ ಒಂದು ಕಥೆಯನ್ನಂತೂ…. ಹೋ! ಅದೇ! ಅದೇ ಕಥೆ!

ಅವನ ಅಜ್ಜಿ ಅವನಿಗೆ ಹೇಳಿದ ಕಥೆ!….

ಅವನಂತೆಯೇ ಅವನ ಮೊಮ್ಮಗನ ಮಗನೂ ತನ್ನ ಅಜ್ಜಿಯನ್ನು ಪೀಡಿಸಿ ಕಥೆ ಕೇಳುತ್ತಿದ್ದಾನೆ…

ಮುದುಕಿಗೆ ಯಾರು ಆ ಕಥೆ ಹೇಳಿದ್ದು? ಅವನ ಅಜ್ಜಿ ಅವನೊಬ್ಬನಿಗೇ ಹೇಳಿದ ಆ ಕಥೆ ಅವನ ಮುದುಕಿಗೆ ಹೇಗಾರೂ ಗೊತ್ತಾಯಿತು?… ಏನೋ ನೆನಪು ಬರುವುದೇ ಇಲ್ಲ!….

ಅವನೇ ಅಲ್ಲವೇ?….

ಅವತ್ತು!…. ಸುಗ್ಗೀ ಹೊತ್ತಿಗೆ!…. ಹೊಲದಲ್ಲಿ ಬಗ್ಗಿ ಕೆಲಸ ಮಾಡುತ್ತಿದ್ದಾಗ ಅವಳ ಕೆನ್ನೆಗೆ ತನ್ನ ಕೆನ್ನೆ ಸೋಕಿಸುತ್ತಾ…

ಮುದುಕನ ಮುಖ ಸುಕ್ಕಾಗಿದ್ದರೂ ನಾಚಿಕೆಯಿಂದ ಕೆಂಪೇರುತ್ತದೆ! ಮನಸ್ಸಿನಲ್ಲಿಯೇ ಮುಗುಳು ನಗುತ್ತಾನೆ!….

ಅವನ ಆ ಅಜ್ಜಿಗೆ ಯಾರು ಹೇಳಿರಬಹುದು?….

ಮತ್ತಾರು?… ಅವನ ಆ ಅಜ್ಜನೇ!…

ಅವನಿಗೆ?…. ಅವನ ಅಜ್ಜಿ!….

ಮುದುಕ ತನ್ನ ಯೋಚನೆಗೆ ತಾನೇ ನಕ್ಕು ಬೆಂಕಿಯನ್ನು ಇನ್ನಷ್ಟು ದೊಡ್ಡದು ಮಾಡಿ ಬೆನ್ನು ಕಾಯಿಸಿಕೊಳ್ಳುತ್ತಾನೆ…

ಹೌದು! ಅದೇ ಕಥೆ… ವಂಶಪಾರಂಪರ್ಯವಾಗಿ ತಾವೆಲ್ಲರೂ ಕೇಳಿಕೊಂಡು ಬಂದ ಕಥೆ! ಅದೇ ಮುಗಿಯದ ಕಥೆ. ಎಂದೆಂದೂ ಮುಗಿಯದ ಕಥೆ!… ಐದು, ಆರು, ಏಳು, ಎಂಟು – ಯಾಕೆ? ವರ್ಷಗಟ್ಟಲೆ ಹೇಳಿದರೂ ಮುಗಿಯದ ಕಥೆ…

ಅವನು ತನ್ನ ಅಜ್ಜಿಯನ್ನು ಕೇಳಿದಾಗಲೆಲ್ಲಾ ಅವಳು ಹೇಳುತ್ತಿದ್ದಳು….

‘ನಾಳೆ ಕೊನೇ ಆಗುತ್ತಾ?…. ’

‘ಉಹು… ’

‘ನಾಡಿದ್ದು?… ’

‘ಊಹು…. ’

‘ಮತ್ಯಾವಾಗ?…. ’

‘ಎಂದೆಂದೂ ಇಲ್ಲ… ’

‘ಯಾಕೆ?’

…ಅವನು ಎಂಬತ್ತೆರಡು ವರ್ಷಗಳ ಹಿಂದೆ ಅವನ ಅಜ್ಜಿಯನ್ನು ಕುತೂಹಲಭರಿತವಾಗಿ ಕೇಳಿದ್ದ.

ಆಗ ಅವಳು ಬಹು ಗಂಭೀರ ಧ್ವನಿಯಲ್ಲಿ ಹೇಳಿದ್ದಳು.

“ಈ ಕಥೆ ಕೊನೇ ಮುಟ್ಟಿದರೆ – ಬೆಳಕಾಗಲ್ಲ, ಕತ್ತಲಾಗಲ್ಲ, ಮರದಲ್ಲಿ ಹಣ್ಣಾಗಲ್ಲ – ಗಿಡದಲ್ಲಿ ಹೂವಾಗಲ್ಲ – ಮೊಮ್ಮಕ್ಕಳಿಗೆ ಕಥೆ ಹೇಳೋ ಅಜ್ಜಿಯೋರು ಬದುಕಲ್ಲ!”

– ಈಗಲೂ ಮುದುಕ ಅಜ್ಜಿಯ ಮಾತಿನಲ್ಲಿ ನಂಬಿಕೆಯಿಟ್ಟಿದ್ದಾನೆ: ಆ ಕಥೆ ಎಂದೂ ಕೊನೆ ಮುಟ್ಟಬಾರದು. ಮುಟ್ಟಿದರೆ?

ಅವನ ಅಜ್ಜಿ ಹೇಳಿರಲಿಲ್ಲವೇ ಏನಾಗುತ್ತೆ ಅಂತ?

* * *

ಮುದುಕನ ಕಿವಿ ತುಂಬ ಚುರುಕು. ಅವನ ಮುದುಕಿ ಮರಿ ಮಗನಿಗೆ ಹೇಳುತ್ತಿದ್ದ ಕಥೆಯನ್ನು ಕಿವಿಗೊಟ್ಟು ಆಲಿಸುತ್ತಾನೆ.

ತಾನೆ ಮಗುವಾಗಿದ್ದಾಗ ಅಜ್ಜಿಯ ತೊಡೆಯ ಮೇಲೆ ಮಲಗಿ ಆಲಿಸುತ್ತಿದ್ದ ಚಿತ್ರ ಕಣ್ಣೆದುರು ಸುಳಿಯುತ್ತದೆ.

ಅವನಿಗೇಕೋ ಆಶ್ಚರ್ಯವಾಗುತ್ತದೆ. ಅವನ ಮುದುಕಿ ಆ ಕಥೆಯನ್ನು ಇನ್ನೂ ಮುಂದುವರಿಸಿ ಹೇಳುತ್ತಿದ್ದಾಳೆ!…

ನಿಧಾನವಾಗಿ… ಮಗನಿಗೆ ನಿದ್ದೆ ಬರಿಸುವ ಗಂಭೀರವಾದ ನಡುಗುವ ಸ್ವರದಲ್ಲಿ… ಎಲ್ಲೋ ಸ್ವಲ್ಪ ಸ್ವಲ್ಪ ಕೇಳುತ್ತಿದೆ:

“….ಆ ಮೇಲೆ… ಆ ರಾಜಕುಮಾರ ಆ ರಾಜಕುಮಾರಿ ಹೀಗೇ ತುಂಬ ಪ್ರೀತಿಯಿಂದ ಬದುಕುತ್ತಿದ್ದಾಗ…. ಒಂದಾನೊಂದು ದಿನ… ಆಗಿ ಸತ್ತೋದ್ರು… ಸತ್ತು ಹೋದ್ರೂ ಒಟ್ಟಿಗೇ ಇದ್ರು…. ಇಬ್ಬರೂ ಆಕಾಶಕ್ಕೆ ಹೋಗಿ ಎರಡು ಮೋಡವಾಗಿ ಆ ಅಲ್ಲೆಲ್ಲಾ ಸಂಚರಿಸುತ್ತಾ ಸುಖ್ವಾಗಿ ಇದ್ರು… ಒಂದಿನ ಭಾರ ಆಗಿ ಮಳೇ ಆಗಿ ರಾಜಕುಮಾರನ ಮೋಡ ಕೆಳಗೆ ಬಿತ್ತು…. ಒಂದು ಕೊಳದಲ್ಲಿ ನೀರಾಗಿ ಸೇರಿಕೋತು… ಆಗ ರಾಜಕುಮಾರಿ ಆ ಕೊಳದಲ್ಲಿ ಮೀನಾಗಿ ಬಂದು ಜೀವ್ಸಿದ್ಲು… ಆಮೇಲೆ ಹಿಂಗೇ ಇರ್ತ ಒಂದಾನೊಂದು ದಿನ ಒಬ್ಬಾನೊಬ್ಬ ಬೆಸ್ತ ಆ ಮೀನನ್ನು ಹಿಡ್ದು ತಿಂದ್ಹಾಕಿಬಿಟ್ಟ. ನೀರಾಗಿದ್ದ ರಾಜಕುಮಾರ ಕೊರಗೀ ಕೊರಗೀ ಬಡವಾಗಿ ಮೋಡವಾದ… ಮೀನನ್ನು ತಿಂದ ಬೆಸ್ತ ಹೀಗೇ ಇರ್ತಾ ಒಂದಿನ ಸತ್ತು ಮಣ್ಣಾದ… ಆ ಮಣ್ಣಿಂದ ಒಂದು ಸೀಕಂಚಿ ಗಿಡಾ ಹುಟ್ತು. ನೋಡು ಮಗೂ, ಮೀನಾಗಿ ಬೆಸ್ತನ ಹೊಟ್ಟೇ ಸೇರಿದ್ದ ರಾಜಕುಮಾರೀನೇ ಹಾಗಾಗಿದ್ದು…. ಮೋಡಾ ಆದ ರಾಜಕುಮಾರ ಆಗ ಸೀಕಂಚೀ ಗಿಡಕ್ಕೆ ಮಳೆ ಆಗಿ ಸುರ‍್ದ… ಒಂದಿನ ಅಲ್ಲಿಂದ್ಲೂ ಅವ್ರಿಬ್ರಿಗೆ ಅಗಲಿಕೆ ಆಯ್ತು… ರಾಜಕುಮಾರಿ ಚಂದ್ರನ್ನ ಹೋಗಿ ಸೇರಿದ್ಲು… ರಾಜಕುಮಾರ ಸೂರ್ಯನ್ನ ಹೋಗಿ ಸೇರಿದ… ನೋಡು ಮಗು ಅದಕ್ಕೇ ಚಂದ್ರ ರಾಜಕುಮಾರೀನ ಹೊತ್ಕೊಂಡು ಆಕಾಶದಲ್ಲಿ ತಿರುಗ್ತಾನೆ…. ಆಗ ರಾಜಕುಮಾರಿ, ರಾಜಕುಮಾರ ಇಬ್ರೂ ತುಂಬ ದುಃಖದಲ್ಲಿ ಅಳ್ತಾರೆ… ಅದಕ್ಕೆ ಬೆಳಗಿನಜಾವ ಈ ಭೂಮಿ ಮೇಲೆಲ್ಲಾ ಇಬ್ಬನಿ ಹನಿ ಹನಿಯಾಗಿ ಬಿದ್ದಿರೋದು… ”

ಮಗು ಉತ್ಸಾಹದಿಂದ ನಡುವೆ ಕೇಳುತ್ತಿದೆ:

“ಮುಗಿತೇನು ಅಜ್ಜಿ, ಕಥೆ?”

“ಇಲ್ಲ ಮಗು… ”

“ನಾಳೆ ಮುಗ್ಯುತ್ತ?”

“ಎಂದೆಂದೂ ಮುಗ್ಯಲ್ಲ ಮಗು…. ”

“ಯಾಕಜ್ಜಿ?”

ಆ ಮಗು, ಅವನು ಅವನ ಅಜ್ಜಿಯನ್ನು ಪ್ರಶ್ನಿಸಿದಂತೆಯೇ ಈಗ ತನ್ನ ಅಜ್ಜಿಗೆ ಚಂಡೀ ಹಿಡಿದು ಕೇಳುತ್ತಿದೆ… ಹೌದು!… ಅವನ ಅಜ್ಜಿಯ ಉತ್ತರವನ್ನೇ ಈಗ ಅವನ ಮುದುಕಿ ತನ್ನ ಮರಿಮಕ್ಕಳಿಗೆ ಹೇಳುತ್ತಿದ್ದಾಳೆ. ಅವನ ಅಜ್ಜಿಯಂತೆಯೇ ಮುದುಕಿಯೂ ತಿಂಗಳುಗಟ್ಟಲೆ ಆ ಕಥೆಯನ್ನು ಹೊಸ ಹೊಸದಾಗಿ ಕಟ್ಟಿ ಎಳೆದುಕೊಂಡು ಹೋಗುತ್ತಿದ್ದಾಳೆ… ಅವನ ಮನೆಯಲ್ಲಿ ಹುಟ್ಟಿದ ಮಕ್ಕಳೆಲ್ಲಾ ಆ ಮುಗಿಯದ ಕಥೆಯನ್ನು ಕೇಳುತ್ತಲೇ ಎಷ್ಟೋ ದಿನ ನಿದ್ದೆ ಮಾಡಿದ್ದಾರೆ.

ಹೀಗೆಯೇ…

ಆ ರಾಜಕುಮಾರ ಕುಮಾರಿಯರ ಕಥೆ ಇನ್ನೂ ಸೊಗಸಾಗಿ ಮುಂದುವರಿದದ್ದು ಕೇಳಿದ್ದಾನೆ ಅವನು… ಪ್ರತಿಸಾರಿಯೂ ಹೇಗೋ ಪ್ರಯತ್ನಿಸಿ ಅಂತೂ ಸೇರುತ್ತಾರೆ… ಹಾಗೆಯೇ ಪ್ರತಿಸಾರಿಯೂ ಬೇರ್ಪಡುತ್ತಾರೆ… ಮತ್ತೆ ಸೇರುತ್ತಾರೆ…

ತುದಿ ಮೊದಲಿಲ್ಲದ ಅನಂತವಾದ ಕಥೆ… ಅನಂತವಾದ ರೂಪಗಳಲ್ಲಿ ಅವರ ಪ್ರೇಮ… ಹೂವಾಗಿ, ಕಾಯಾಗಿ, ನೀರಾಗಿ, ಮೋಡವಾಗಿ, ಗಾಳಿಯಾಗಿ, ಬೆಂಕಿಯಾಗಿ, ಒಂದೆ? ಎರಡೆ?… ಮುಗಿಯದ ಕಥೆ… ಎಂದೆಂದೂ ಮುಗಿಯದ ಕಥೆ!…

ಅವನಿಗೆ ಅನ್ನವಿತ್ತ ಹೊಲದಂತೆಯೇ…
ಅವನನ್ನು ತೂಗಿದ ತೊಟ್ಟಿಲಂತೆಯೇ…
ತನ್ನ ಲಾಲಿಯಲಿ ನಿದ್ದೆ ಬರಿಸಿದ ಆ ಜೋಗುಳದ ಹಾಡಿನಂತೆಯೆ…

ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಎನ್ನದೆ ಸತತವಾಗಿ ಅನಂತವಾಗಿ ಒಬ್ಬರಿಂದ ಒಬ್ಬರಿಗೆ ದಾಟಿಬಂದ ಕಥೆ… ಮುಗಿಯದ ಕಥೆ… ಎಂದೆಂದೂ ಮುಗಿಯದ ಪ್ರೇಮದ ಕಥೆ.

– ಹೌದು! ಅದು ಮುಗಿಯಬಾರದು. ಮುಗಿದರೆ?

– ಅವನ ಹಜ್ಜಿ ಹೇಳಿರಲಿಲ್ಲವೆ ಏನಾಗುತ್ತೆ ಅಂತ.

* * *

….ಮಗುವಿಗೆ ನಿದ್ದೆ ಬಂದಿರಬೇಕು – ಮುದುಕಿ ಚಳಿ ಕಾಯಿಸಿಕೊಳ್ಳಲೆಂದು ಮುದುಕನ ಪಕ್ಕದಲ್ಲಿ ಬಂದು ಕೂರುತ್ತಾಳೆ.

“ತುಂಬಾ ಬೆನ್ನು ತುರಿಕೆ… ”

ಥೂ! ಏನು ಸುಖದ ಮುದುಕಿ! ಗಂಡನೆಂದರೆ ಸ್ವಲ್ಪವೂ ನಾಚಿಕೆ ಬೇಡವೆ? ಆದರೂ ಬೆನ್ನು ತುರಿಸಲು ಕೇಳುತ್ತಾಳೆ; ನಿತ್ಯವೂ….

ಮೊಮ್ಮಕ್ಕಳಿಗೆ ‘ಅರ್ಧರಾಜ್ಯ ಕೊಡ್ತೇನೆ, ಬೆನ್ನು ತುರಿಸಿದರೆ’ ಎಂದು ಪುಸಲಾಯಿಸಿ ತುರಿಸಿಕೊಂಡದ್ದು ಸಾಲದೆ, ಅವನೀಗ ಚಳಿಕಾಯಿಸಿಕೊಳ್ಳುತ್ತಿದ್ದ ಬೆಂಕಿಯ ಮುಂದೆಯೇ ಕೂತು ತನ್ನ ಗಂಡನಿಂದಲೂ ತುರಿಸಿಕೊಳ್ಳುತ್ತಿದ್ದಳು.

ಅವನ ಮುದುಕಿ ಅವನ ಅಜ್ಜಿಯಂತೆಯೇ. ಎಲ್ಲದರಲ್ಲೂ.

ಸ್ವಲ್ಪ ಮಟ್ಟಿಗೆ ರೂಪದಲ್ಲೂ

….ಏನೋ ಕಿಲ ಕಿಲನೆ ಮೊಮ್ಮಗ, ಅವನ ಹೆಂಡತಿ.

ಇನ್ನೇನು?…. ಪಗಡೆ ಆಟವಿರಬೇಕು…. ಮೂರು ಹೊತ್ತೂ ಅದೇ ಚೆಲ್ಲಾಟ…. ಎಷ್ಟು ಧೈರ್ಯದಿಂದ ಗಟ್ಟಿಯಾಗಿ ನಗುತ್ತಾರೆ!…. ಏನು ಮುದ್ದೋ ಏನೊ?…

ಗೊಣಗುತ್ತ ಮುದುಕ ನಸುನಗುತ್ತಾನೆ.

ಪಾಪ… ಇನ್ನೂ ಎಳೆಯರು… ಮದುವೆಯಾಗಿ ಇನ್ನೂ ಹೆಚ್ಚು ದಿನವಾಗಿಲ್ಲ…. ಮುದುಕ ನಗುತ್ತಾ ದೂರತ್ತಾನೆ.

ಮುದುಕಿ ನಾಚಿ, ಬೆಂಕಿಯ ಎದುರು ಮದುವಣಗಿತ್ತಿಯಂತೆ ಮುದುಕನ ಜೊತೆ ಕೂತು, ಮುಗುಳು ನಗುತ್ತಾಳೆ.

ಮೊಮ್ಮಕ್ಕಳನ್ನು ಯಾಕಾರೂ ದೂರಬೇಕು?… ಏನು ಕಳ್ಳ ಆ ಮುದುಕ!…. ಮುದುಕಿಯ ನಾಚಿ ಕೆಂಪೇರಿದ ಮುಖ ನೋಡಿದರೆ ಗೊತ್ತಾಗುವುದಿಲ್ಲವೆ?… ಬಹಳ ಹಿಂದೆ… ಅವರಿಬ್ಬರೂ ಪಗಡೆಯಾಡದೆ, ಆಡುತ್ತ ಜಗಳವಾಡದೆ, ಮಲಗಲು ಹೋದ ದಿನ ಒಂದಾದರೂ ಉಂಟೆ?

ಅದೇ ದಾಳ.

ಅದೇ ಹಾಸು.

ಅದೇ ಕಾಯಿಗಳು.

ಮುದುಕನ ಅಜ್ಜಿ, ಮತ್ತೆ ಆ ಮುದುಕ, ಆಮೇಲೆ ಅವನ ಮಗ, ಈಗ ಮೊಮ್ಮಗ, ಎಲ್ಲರೂ ಅವುಗಳಲ್ಲೇ ತಮ್ಮ ಪ್ರೇಮದ ಆಟ ಆಡಿದ್ದಾರೆ…

ಜೀವನದ ಪ್ರವಾಹ ನಿರರ್ಗಳವಾಗಿಹರಿಯುತ್ತಿದೆ…

ಇದು ಎಂದಾದರೂ ಮುಗಿದೀತೆ?

ಊಹೂ!…. ಎಂದೆಂದಿಗೂ ಇಲ್ಲ…

ಆ ಕಥೆಯಂತೆಯೇ ಈ ಪ್ರೇಮದ ಆಟವೂ ಎಂದೆಂದೂ ಮುಗಿಯುವುದಿಲ್ಲ. ಎಲ್ಲಾದರೂ ಮುಗಿದರೆ… ?…

– ಅವನ ಅಜ್ಜಿ ಹೇಳಿರಲಿಲ್ಲವೇ ಏನಾಗುತ್ತೆ ಅಂತ?

“ಆಗ ಬೆಳಕಾಗಲ್ಲ – ಕತ್ತಲಾಗಲ್ಲ – ಮರದಲ್ಲಿ ಹಣ್ಣಾಗಲ್ಲ – ಗಿಡದಲ್ಲಿ ಹೂವಾಗಲ್ಲ… ”

* * *